ಪೀಲಿಯಾಟ್ ಕರ್ನಾಟಕದ ಕೊಡಗಿನ ವಿಶಿಷ್ಟ ಜನಪದ ಪುರುಷ ಪ್ರಧಾನ ಕುಣಿತಗಳಲ್ಲಿ ಒಂದು. ತಮಿಳುನಾಡಿನಲ್ಲೂ ಇದು ಹೆಚ್ಚು ಮುರುಗನ ‘ಪೀಲಿಕಾವಡಿ’ ಕುಣಿತವಾಗಿ ಪ್ರಸಿದ್ಧವಾಗಿದೆ. ‘ಪೀಲಿ’ ಎಂದರೆ ‘ನವಿಲುಗರಿ’. ನವಿಲುಗರಿಯ ಗುಚ್ಛಗಳನ್ನು ಹಿಡಿದು ಅಥವಾ ಅವನ್ನು ಒಂದು ಕಟ್ಟಿಗೆಗೆ ವೃತ್ತಾಕಾರವಾಗಿ ಕಟ್ಟಿಬಿಗಿದು ಅದನ್ನು ಹೆಗಲಮೇಲೆ ಹೊತ್ತು ದೈವಾರಾಧನ ಕ್ರಮವಾಗಿ ಕುಣಿತದ ಸೇವೆ ಸಲ್ಲಿಸುವುದಿದೆ. ವಿಶೇಷವಾಗಿ ಹರಕೆ ಹೊತ್ತು ಪೀಲಿಪಂಚಗಳನ್ನು ಹೊರುವುದುಂಟು. ಊರದೇವರ ಹಬ್ಬದ ಸಂದರ್ಭ ೫ರಿಂದ ೧೨ ದಿನಗಳವರೆಗೆ ಪೀಲಿಕಾವಡಿಗಳನ್ನುಹೊತ್ತು ಪ್ರೌಢಾವಸ್ಥೆಯ ಪುರುಷರು ಪೀಲಿಯಾಟ ನಡೆಸುತ್ತಾರೆ. ನಿರ್ದಿಷ್ಟ ಸಂಖ್ಯೆ ಕಲಾವಿದರ ಅಗತ್ಯವೇನಿಲ್ಲದಿದ್ದರೂ ಕಿರಿಯರಿಗೆ ಇದು ಕಡ್ಡಾಯವಿಲ್ಲ. ಗ್ರಾಮದ ಪ್ರತಿಮನೆಗೂ ಒಬ್ಬ ತರುಣನಂತೆ ಈ ದೈವಾರಾಧನೆಯಲ್ಲಿ ತೊಡಗಿಸಿಕೊಳ್ಳಬೇಕೆಂಬ, ತಪ್ಪಿದರೆ ‘ತಪ್ಪುಹಣ’ವಾಗಿ ದಂಡ ಕಟ್ಟಬೇಕೆಂಬ ವಿಧಿಯಿದೆ.

ತಮಿಳುನಾಡಿನ ಸುಬ್ರಹ್ಮಣ್ಯನ ಪ್ರೀತ್ಯರ್ಥ ನಡೆಸುವ ‘ಪೀಲಿಕಾವಡಿ’ಯಲ್ಲಿ ಸುಬ್ರಹ್ಮಣ್ಯ ಎಲೆತೋಟದ ವಳ್ಳಿಯನ್ನು ಪ್ರೀತಿಸಿ ಅವಳನ್ನು ಆಕರ್ಷಿಸಲು ನಡೆಸಿದ ನವಿಲುಗರಿ ಹೊತ್ತ ಕುಣಿತದ ಹಾಡುಗಳಿವೆ. ಕೊಡಗಿನಲ್ಲಿ ಕಾಡುಪ್ರಾಣಿಗಳ ಬೇಟೆಯಲ್ಲಿ ಯಶಸ್ವಿಯಾದ ತರುಣ, ತನ್ನ ಜಯವನ್ನು ಸಾರಲು ನವಿಲುಗರಿಗಳನ್ನು ಹೊತ್ತುತಂದು ಕುಣಿಯುತ್ತ ಗ್ರಾಮದೈವಕ್ಕೆ ಧನ್ಯವಾದ ಸಮರ್ಪಿಸಿದ ಕುರಿತ ವಿವರಗಳಿವೆ. ಕಾಲಸಂದಂತೆ ಗ್ರಾಮೀಣ ಪರಿಸರದ ಈ ವಿವರ ನಾಡಜನರ ದೈವಿಕ ಸಮಾರಂಭವಾಗಿ ಆಚರಣೆಯಲ್ಲಿದೆ. ಕೊಡಗಿನಲ್ಲಿ, ಪೀಲಿಯಾಟ್‌ನಲ್ಲಿ ಭಾಗವಹಿಸುವ ಕಲಾವಿದರು ಮದ್ಯಮಾಂಸ ವರ್ಜಿತರಾಗಿ ಶುದ್ಧವಾಗಿರಬೇಕೆಂಬ ಹಾಗೂ ಆ ವ್ರತಾಚರಣೆಯಲ್ಲಿ ತೊಡಗಿಕೊಳ್ಳುವವರೆಗೆ ಹೆಂಗಸರಿಂದ ದೂರವಿದ್ದು ಮನೆಯ ಹೊರಗಡೆಯೇ ಮಲಗಬೇಕೆಂಬ ವಿಧಿ ಇದೆ. ಮನೆಯ ಹೊರಗೆ ಚಾಪೆಯ ಮೇಲೆ ಮಲಗಿದ್ದು ಬೆಳಿಗ್ಗೆ ಸ್ನಾನಾನಂತರ ನೃತ್ಯ ಸೇವೆ ಮುಗಿಯುವವರಗೆ ಮೌನ ವ್ರತಾಚರಣೆಯಲ್ಲಿರಬೇಕು ಎಂಬ ಕಟ್ಟುನಿಟ್ಟಿನ ಸಂಪ್ರದಾಯವಿದೆ. ಸೊಂಟಕ್ಕೆ ಕಟ್ಟಿದ ಬಿಳಿದಟ್ಟಿ ಮತ್ತು ಚೇಲೆ (ಸೇಲೆ) ಸುತ್ತಿ ಕೊಂಡು ಕೈಯಲ್ಲಿ ನವಿಲುಗರಿಯ ಗುಚ್ಛವನ್ನು ಹಿಡಿದಿರುತ್ತಾರೆ. ಕೆಲವರು ಸೋಲೆಗೆ ಬದಲು ಬಿಳಿಕುಪ್ಪಸ ಧರಿಸಿ ಕುಪ್ಪುಸದ ಬಲಗೈಯಲ್ಲಿ ತೋಳನ್ನು ತೂರಿಸದೆ, ಅದನ್ನು ಸೊಂಟ ಪಟ್ಟಿಯಲ್ಲಿ ತೂರಿಸಿರುತ್ತಾರೆ.

ಪೀಲಿಯಾಟವನ್ನು ವೃತ್ತಾಕಾರವಾಗಿ ಕುಣಿಯುತ್ತಾ ದುಡಿಯಲಕ್ಕನುಗುಣವಾಗಿ ಪದಗತಿ ಬದಲಿಸುತ್ತಾ, ದೇವರ ಪದವನ್ನು ಹಾಡುತ್ತಾರೆ. ಇಲ್ಲಿ ಪ್ರತಿನಿತ್ಯ ಸೂರ್ಯ ನಮಸ್ಕಾರದಿಂದ ಮೊದಲುಗೊಂಡು ಮಲಗುವವರೆಗಿನ ಮನುಷ್ಯನ ಎಲ್ಲ ಕಾರ್ಯಗಳನ್ನು ಮೂಕಾಭಿನಯದಿಂದಲೇ ಅಭಿನಯಿಸಿ ಅವೆಲ್ಲವನ್ನೂ ದೈವಕ್ಕೆ ಸಮರ್ಪಿಸಲಾಗುವ ವಿವರಗಳಿರುತ್ತವೆ. ಒಟ್ಟು ೧೦೮ ಭಂಗಿಗಳಲ್ಲಿ ಈ ಕುಣಿತದ ಪದಗತಿ ಬದಲಾಗುತ್ತಿರುತ್ತದೆ. ನೃತ್ಯದ ಗತಿ ತೀವ್ರವಾಗುತ್ತಿದಂತೆ ಆವೇಶ ಮೇರೆ ಮೀರಿ ‘ದೇವರು ಬಂದ’ವನಾದ ‘ತಿರೋಳಕ್ಕಾರ’ ವರ್ತುಲದ ನಡುವೆ ನಿಂತು ಕುಣಿಯಲಾರಂಭಿಸುತ್ತಾನೆ. ಇವನು ಕೆಂಪುಬಣ್ಣದ ಕೊಡವ ಸಾಂಪ್ರಾದಾಯಿಕ ಶೈಲಿಯ ಉಡುಪನ್ನು ಧರಿಸಿದ್ದು ನೃತ್ಯದ ಗತಿ ಬೇರಾಗುವುದರ ಸೂಚನೆಯೂ ಆಗಿರುತ್ತಾನೆ. ಅವನು ವೃತ್ತದೊಳಕ್ಕೆ ಬರುತ್ತಿದ್ದಂತೆ ಸುತ್ತ ಕುಣಿಯುವ ಕಲಾವಿದರು ಪೀಲಿಯನ್ನು ಬೀಸದೆ ಬೇರೆ ಪದಗತಿಯನ್ನು ಅನುಸರಿಸುತ್ತಾರೆ. ಉತ್ತರ ಕೊಡಗಿನಾದ್ಯಂತ ಮಲೆದೈವಗಳನ್ನು ಪೂಜಿಸುವ ಬುಡಕಟ್ಟಿನ ಮಂದಿಯಲ್ಲಿ ಉಡುಪಿನ ಕುರಿತಂತೆ ಕೊಡವರಲ್ಲಿರುಷ್ಟು ನವೀನರೀತಿಯ ಸಾಂಪ್ರದಾಯಿಕತೆ ಅನುಸರಿಸುವುದು ಕಂಡಬರುವುದಿಲ್ಲ. ತಮಿಳುನಾಡಿನ ಕಡೆಯ ಪೀಲಿಯಾಟ್ಟಂ ಅಥವಾ ಪೀಲಿಕಾವಡಿ ಹಾಡುಗಳಲ್ಲಿ ಸುಬ್ರಹ್ಮಣ್ಯನ ಮಲೆಕಾಡುವಾಸಿಗಳ ರಕ್ಷಣೆಯ ರೀತಿನೀತಿಗಳ ವರ್ಣನೆಯಿರುತ್ತದೆ.

ಜಿ.ಎನ್.

 

ಪುಕ್ಕನ್ ಮಲಬಾರಿನ ರೈತರಲ್ಲಿ ಒಂದು ಕಾಲದ ಮುಖ್ಯ ಆಹಾರ. ಬೆಳಗ್ಗೆ ಹೊಲಗಳಿಗೆ ಹೋಗುವಾಗ ತಂಗುಳನ್ನದ ‘ತೆಳಿ’ ನೀರನೊಂದಿಗೆ ಇದನ್ನು ಸೇವಿಸುತ್ತಿದ್ದರು. ಅನೇಕ ದಿವಸಗಳವರೆಗೆ ಹಾಳಾಗದಂತೆ ಇದನ್ನು ಇರಿಸುತ್ತಿದ್ದರು.

ಅಕ್ಕಿ ತೊಳೆದ ನೀರನ್ನು ಹುಳಿ ಬರಿಸಿ, ಅದಕ್ಕೆ ಅಕ್ಕಿ ತೌಡನ್ನು ಸೇರಿಸುವರು. ನಾಲ್ಕರಿಂದ ಐದು ದಿವಸಗಳವರೆಗೆ ‘ಕಿಂಞೂಚಿ’ ಎಂಬ ಮಣ್ಣಿನ ಪಾತ್ರೆಯಲ್ಲಿರಿಸಿ ಹುಳಿ ಬರಿಸುವರು. ಹುಳಿ ಪಾಕವಾದಾಗ, ಅದನ್ನು ಒಲೆಯಲ್ಲಿರಿಸಿ ಬೇಯಿಸುತ್ತಾರೆ. ಸರಿಯಾಗಿ ಕುದಿಸಿದ ನಂತರ ಇಳಿಸಿ, ತಣಿದ ನಂತರ ಸೇವಿಸುತ್ತಾರೆ. ಹುಳಿಯನ್ನು ಕಡಿಮೆಮಾಡಿ, ಪಾಕ್ಕಕೆ ಅಗತ್ಯವಿರುವಷ್ಟು ಉಪ್ಪು ಸೇರಿಸಿ ಬಳಸುತ್ತಾರೆ. ಇದನ್ನು ಹಲವು ಬಗೆಯಲ್ಲಿ ತಯಾರಿಸುತ್ತಾರೆ. ಕೆಲವರು ಕುದಿಸಿ ಆರಿಸಿ, ತುಂಡು ಮಾಡಿ ತಿನ್ನುತ್ತಾರೆ. ಇನ್ನು ಕೆಲವರು ಪಾಯಸದಂತೆ ದಪ್ಪ ತುಂಡು ಮಾಡಿ ತಿನ್ನುತ್ತಾರೆ. ಇನ್ನು ಕೆಲವರು ಪಾಯಸದಂತೆ ದಪ್ಪವಾಗಿ ಕುದಿಸಿ, ಮೆಣಸು ನುರಿದು ಸೇವಿಸುತ್ತಾರೆ. ಇದು ಔಷಧೀಯ ಗುಣವಿರುವ ಆಹಾರವೆಂದು ಜನಪದರು ಭಾವಿಸಿದ್ದಾರೆ.

ಬರಗಾಲದ ಸಂದರ್ಭದಲ್ಲಿ ಗ್ರಾಮೀಣ ಜನತೆ ಅಕ್ಕಿ ತೊಳೆದ ನೀರನ್ನು ಕೂಡ ಸಂಸ್ಕರಿಸಿ ಆಹಾರವಾಗಿ ಬಳಸಿದ ರೀತಿಯನ್ನು ಇಲ್ಲಿ ಕಾಣಬಹುದು. ಸಾಮಾನ್ಯವ ಅಕ್ಕಿ ತೊಳೆದ ನೀರು ಹಾಗೂ ಅಕ್ಕಿ ತೌಡು ಜಾನುವಾರುಗಳ ಆಹಾರವಾಗಿದೆ. ಆದರೆ ಬರಗಾಲದಂತಹ ಪ್ರಕೃತಿ ವಿಕೋಪಗಳು ಮನುಷ್ಯನನ್ನು ಆಹಾರದ ವಿಷಯದಲ್ಲಿ ಹೇಗೆ ಜಾಗೃತಗೊಳಿಸುತ್ತವೆ ಎಂಬುದನ್ನು ಇದರಿಂದ ತಿಳಿದುಕೊಳ್ಳಬಹುದು. ಅನೇಕ ವಿಟಮಿನ್ ಹಾಗೂ ಪ್ರೋಟೀನ್‌ಗಳಿಂದ ಕೂಡಿರುವ ಪುಕ್ಕನ್‌ಗೆ ‘ಕಾಡಿಕಂಞಿ’ ಎಂದೂ ಹೇಳುತ್ತಾರೆ. ‘ಕಾಡಿಕಂಞಿ ಮೂಡಿಕುಡಿಕ್ಕಣಂ’ (ಕಾಡಿಗಂಜಿಯನ್ನು ಮುಚ್ಚಿ ಕುಡಿಯಬೇಕು) ಎಂಬುದು ಒಂದು ಗಾದೆ ಮಾತು. ತನ್ನ ಹೊಲದಲ್ಲಿ ಬೆಳೆದ ಬತ್ತವನ್ನು ಕುಟ್ಟಿ ಅಕ್ಕಿ ಮಾಡಿದ ರೈತ ಅದರ ಕಚ್ಚಾವಸ್ತುಗಳನ್ನು ಕೂಡ ಆಹಾರವಾಗಿ ಬಳಸಿಕೊಳ್ಳುವ ನಿಷ್ಠೆ ಈ ಅದರ ಕಚ್ಚಾವಸ್ತುಗಳನ್ನು ಕೂಡ ಆಹಾರವಾಗಿ ಬಳಸಿಕೊಳ್ಳುವ ನಿಷ್ಠೆ ಈ ಆಹಾರ ವೈವಿಧ್ಯದಲ್ಲಿದೆ. ಈಗ ಕೃಷಿ ಸಂಸ್ಕೃತಿ ಇಲ್ಲ. ಹೀಗಾಗಿ ಪುಕ್ಕನ್ ಎಂಬ ಆಹಾರದ ವಿಧಾನವೂ ಬಳಕೆಯಲಿಲ್ಲ.

.ವಿ.ಎ. ಅನುವಾದ ಎನ್.ಎಸ್.

 

ಪುಟ್ಟ್‌ ಇದು ಕೇರಳದ ಒಂದು ಬಹುಮುಖ್ಯ ತಿನಿಸು. ಕೇರಳೀಯರಿಗೆ ಅದು ಹೊಂದಿಕೊಂಡ ರೀತಿ, ಅದರ ಸ್ವಭಾವಗಳಿಂದಾಗಿ ಅವರದನ್ನು ತುಂಬ ಸ್ವಾದಿಷ್ಟವಾದ ಖಾದ್ಯವಾಗಿ ಭಾವಿಸಿಕೊಂಡಿದ್ದಾರೆ. ಇದು ಅವರ ಬಹುಮುಖ್ಯ ಬೆಳಗಿನ ಆಹಾರ. ಪುಟ್ಟನ್ನು ತಯಾರಿಸುವ ಪ್ರಕ್ರಿಯೆ ಮಾತ್ರ ತುಂಬ ಸಂಕೀರ್ಣವಾದುದು.

ತಯಾರಿಸಲು ಬಳಸುವ ಉಪಕರಣಗಳ ಮತ್ತು ಅದಕ್ಕೆ ಬಳಸುವ ವಸ್ತುಗಳ ಆಧಾರದಲ್ಲಿ ಹಲವು ವೈವಿಧ್ಯ ರೀತಿಯ ಪುಟ್ಟುಗಳನ್ನು ಕೇರಳದಲ್ಲಿ ಕಾಣಬಹುದು. ತೆಂಗಿನಕಾಯಿಯ ಗೆರಟೆ(ಚಿಪ್ಪು)ಯಲ್ಲಿ ಹಿಟ್ಟು ಹಾಕಿ ಬೇಯಿಸಿ ಮಾಡುವ ಪುಟ್ಟಿಗೆ ‘ಚಿರಟ್ಟಪುಟ್ಟ’ (ಗೆರಟೆ ಪುಟ್ಟು), ಬಿದಿರಿನ ಕೊಳವೆಯಲ್ಲಿ ಹಿಟ್ಟು ಹಾಕಿ ಬೇಯಿಸುವ ಪುಟ್ಟಿಗೆ ‘ಒಂಡಪುಟ್ಟು’ (ಕೊಳವೆಪುಟ್ಟು), ಪಾತ್ರೆಯ ಬಾಯಿಗೆ ಬಟ್ಟೆಚೂರನ್ನು ಕಟ್ಟಿ ಆವಿಯಲ್ಲಿ ಬೇಯಿಸುವ ‘ಮಣಿಪುಟ್ಟ’ ಇತ್ಯಾದಿಗಳು ಹೆಚ್ಚಾಗಿ ಕಾಣಸಿಗುವ ಪುಟ್ಟುಗಳು. ಇವುಗಳಲ್ಲದೆ ಬಳಸುವ ಹಿಟ್ಟು ಮತ್ತು ವಸ್ತುಗಳನ್ನು ಆಧರಿಸಿ ಅಕ್ಕಿಪುಟ್ಟ, ಗೋಧಿಪುಟ್ಟು, ರಾಗಿಪುಟ್ಟ, ನುಗ್ಗೆಯೆಲೆಪುಟ್ಟು ಮೀನುಪುಟ್ಟು, ಮಾಂಸಪುಟ್ಟು, ಬೆಲ್ಲದ ಪುಟ್ಟು-ಹೀಗೆ ಹಲವು ಬಗೆಯ ಪುಟ್ಟುಗಳು ಇವೆ.

ಐದೋ ಆರೋ ಗಂಟೆಗಳ ಕಾಲ ನೀರಲ್ಲಿ ನೆನೆಸಿ ತೆಗೆದ ಬೆಳ್ತಿಗೆ ಅಕ್ಕಿಯನ್ನು ಬಳಸಿ ಒಣಗಿಸಲಾಗುತ್ತದೆ. ಚೆನ್ನಾಗಿ ಒಣಗುವುದಕ್ಕಿಂತ ಮೊದಲೇ ಅದನ್ನುಹುಡಿಮಾಡುತ್ತಾರೆ. ಧೂಳಿನಷ್ಟು ನಯವಾಗಿ ಹುಡಿಯಾಗದಂತೆ ಎಚ್ಚರವಹಿಸಬೇಕು. ಅಕ್ಕಿರವದಂತಿರಬೇಕು. ಹಾಗೆ ಹುಡಿಮಾಡದ ಅಕ್ಕಿರವೆಯನ್ನು ಬಾಣಲೆಯಲ್ಲಿ ಹಾಕಿ ಹುರಿಯಬೇಕು. ತಣ್ಣಗಾದ ಬಳಿಕ ಉಪ್ಪು ನೀರು ಚಿಮುಕಿಸಿ ಹಿಟ್ಟನ್ನು ಒದ್ದೆಮಾಡಬೇಕು. ಹಿಟ್ಟು ಹೆಚ್ಚು ಮುದ್ದೆಯಾಗಬಾರದು. ಮುಂದೆ ಪುಟ್ಟು ಬೇಯಿಸುವುದಕ್ಕೆಂದೇ ತಯಾರಿಸಿದ ತೂತುಗಳಿರುವ ಚಿಪ್ಪಿನಲ್ಲೋ ಬಿದಿರನ ಕೊಳವೆಯಾದರೆ ಅದರ ತಳಭಾಗದಲ್ಲಿ ತೂತು ಮಾಡಿದ ಚಿಪ್ಪಿನ ತಂಡನ್ನು ಇಟ್ಟು ನಂತರ ಮೇಲಿನಂತೆ ತೆಂಗಿನ ತುರಿ, ಹಿಟ್ಟುಗಳನ್ನು ತುಂಬಿಸಬೇಕು. ಕೊಳವೆಯಲ್ಲಿ ಬೇಯಿಸಿದ ಹಿಟ್ಟನ್ನು ಸುಲಭವಾಗಿ ತುಂಡರಿಸುವುದಕ್ಕಾಗಿ ಮಧ್ಯೆ ಮಧ್ಯೆ ತೆಂಗಿನಕಾಯಿ ತುರಿಯನ್ನು ಹಾಕಲಾಗುತ್ತದೆ. ಹೀಗೆ ಇಟ್ಟು ತುಂಬಿದ ಬಿದಿರಿನ ಕೊಳವೆ ಅಥವಾ ತೆಂಗಿನ ಚಿಪ್ಪನ್ನು ಒಲೆಯಲ್ಲಿಟ್ಟ ಆವಿ ಪಾತ್ರೆಯಲ್ಲಿ ಬೇಯಿಸಿ ತೆಗೆಯುದು. ಕೊಳವೆಯ ತಳದಿಂದ ಮೇಲಿನವರೆಗೂ ಆವಿ ಏರಿ ಸ್ವಲ್ಪ ಹೊತ್ತಾದ ಬಳಿಕ ಆವಿ ಪಾತ್ರೆಯಿಂದ ಕೊಳವೆಯನ್ನು ಹೊರ ತೆಗೆದು ಕೊಳವೆಯ ತಳದಿಂದ ಬೆಂದ ಪುಟ್ಟನ್ನು ನೂಕಿ ಹೊರ ತೆಗೆದು ಪಾತ್ರೆಯಲ್ಲಿ ಹಾಕಿಡುತ್ತಾರೆ. ಚಿಪ್ಪುಪುಟ್ಟಾದರೆ ಚಿಪ್ಪಿನಿಂದ ಪುಟ್ಟನ್ನು ಬೇರ್ಪಡಿಸುತ್ತಾರೆ.

ಅಕ್ಕಿಯ ಬದಲು ಗೋಧಿ ಹಿಟ್ಟನ್ನು ಬಳಸಿ ಮಾಡುವ ಪುಟ್ಟು ‘ಗೋಧಿಪುಟ್ಟು’; ರಾಗಿಯನ್ನು ಬಳಸಿ ಮಾಡುವ ಪುಟ್ಟನ್ನು ‘ರಾಗಿಪುಟ್ಟು”; ರವ ಬಳಸಿ ಮಾಡುವ ಪುಟ್ಟು ‘ರವಪುಟ್ಟು’ ಅಂತ ಕರೆಯಲ್ಪಡುತ್ತದೆ. ಪುಟ್ಟಿನ ಕೊಳವೆಯೊಳಗೆ ತೆಂಗಿನಕಾಯಿ ತುರಿಯ ಬದಲು ಬೇಯಿಸಿದ ಸೊಪ್ಪನ್ನು ಅಥವಾ ಬೆಲ್ಲವನ್ನು ಬಳಸುವುದಿದೆ. ಇವುಗಳನ್ನು ಕ್ರಮವಾಗಿ ನುಗ್ಗೆಯೆಲೆಪುಟ್ಟು, ಬೆಲ್ಲದ ಪುಟ್ಟು ಎನ್ನುತ್ತಾರೆ.

ಇವುಗಳಲ್ಲದೆ ಹಲಸಿನ ಹಣ್ಣಿನಿಂದ ಮಾಡುವ ಪುಟ್ಟನ್ನು ಹಲಸಿನಪುಟ್ಟು (ಚಿಕ್ಕಪುಟ್ಟು) ಎನ್ನುತ್ತಾರೆ. ಹುರಿದ ಅಕ್ಕಿಹುಡಿಯ ಜತೆ ಹಲಸಿನ ಹಣ್ಣನ್ನು ಸೇರಿಸಿ, ಅರಿಸಿನ ಎಲೆಯಲ್ಲಿ ಮಡಿಸಿ, ಆವಿಯಲ್ಲಿ ಬೇಯಿಸಿತೆಗೆದು ಹಲಸಿನಪುಟ್ಟು ಮಾಡುವುದಿದೆ. ಇವುಗಳಿಗೆ ತುಪ್ಪಸೇರಿಸಿ ತಿನ್ನಲು ಕೊಡುತ್ತಾರೆ.

ಮೀನು ಪುಟ್ಟು, ಮಾಂಸಪುಟ್ಟುಗಳನ್ನು ಹೆಚ್ಚಾಗಿ ಮುಸ್ಲಿಮರ ಮತ್ತು ಕ್ರೈಸ್ತರ ಮನೆಗಳಲ್ಲಿ ಮಾಡುತ್ತಾರೆ. ಮಸಾಲೆಗಳನ್ನು ಹಾಕಿ ಬೇಯಿಸಿದ ಮೀನು ಅಥವಾ ಮಾಂಸವನ್ನು ಅಕ್ಕಿ ಹುಡಿಯಲ್ಲಿ ಮಿಶ್ರಣ ಮಾಡಿ ತೆಂಗಿನ ಕಾಯಿಯ ತುರಿಯ ಬದಲಾಗಿ ಪುಟ್ಟುಕೊಳವೆಯೊಳಗೆ ತುಂಬಿ ಈ ರೀತಿಯ ಪುಟ್ಟುಗಳನ್ನು ಮಾಡುತ್ತಾರೆ.

ಕೇರಳದಲ್ಲಿ ಹಿಂದಿನಿಂದಲೂ ತೆಂಗಿನ ಚಿಪ್ಪು (ಗೆರಟೆ) ಅಥವಾ ಬಿದಿರಿನ ಕೊಳವೆಗಳಲ್ಲೇ ಪುಟ್ಟುಗಳನ್ನು ಮಾಡಲಾಗುತ್ತಿತ್ತು. ಅದನ್ನು ಆವಿಯಲ್ಲಿ ಬೇಯಿಸಲು ‘ಪುಟ್ಟುಪಾನಿ’ ಎಂಬ ವಿಶೇಷ ರೀತಿಯ ಮಣ್ಣಿನ ಪಾತ್ರೆಯಿರುತ್ತಿತ್ತು. ಇಂದು ಅಲ್ಯೂಮಿನಿಯಮ್ ಅಥವಾ ಸ್ಟೀಲಿನ ಪುಟ್ಟುಪಾತ್ರೆಗಳು ಅಂಗಡಿಗಳಲ್ಲಿ ಸಿಗುತ್ತವೆ. ಪುಟ್ಟು ಬೇಯಿಸಲು ಕುಕ್ಕರ್‌ಗಳನ್ನು ಬಳಸುವುದೂ ಇದೆ.

ಪುಟ್ಟಿನ ಬಗ್ಗೆಹಲವು ಲೇಖನಗಳೂ ಚಿಂತನೆಗಳೂ ಪ್ರಕಟವಾಗಿವೆ. ಪುಟ್ಟು ಮತ್ತು ಕೇರಳದ ಸಂಸ್ಕೃತಿ, ಪುಟ್ಟು ಮತ್ತು ಫಲವತ್ತತೆ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ, ‘ಆಹಾರ ಎಂಬ ಪ್ರತೀಕ ವ್ಯವಸ್ಥೆ’ ಎಂಬ ಲೇಕನದಲ್ಲಿ ಜಾನಪದ ವಿದ್ವಾಂಸರಾದ ಡಾ. ರಾಘವನ್ ಪಯ್ಯನಾಡ್ ಅವರು ವಿವರಿಸಿದ್ದಾರೆ.

ಸಿ.ಕೆ.ಜಿ. ಅನುವಾದ ವಿ.ಸಿ.

 

ಪುಡವ ಜರಿಸಮೇತವಾದ ಮಹಿಳಾವಸ್ತ್ರವನ್ನಷ್ಟೆ ಹಿಂದಿನ ಕಾಲದಲ್ಲಿ ಪುಡವ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಜರಿಪುಡವ (ಕಸವ್ ಪುಡವ) ಎಂದೂ ಇದಕ್ಕೆ ಹೆಸರಿದೆ. ಅದನ್ನುಉಡುತ್ತಿದ್ದುದು ಮೇಲ್ವರ್ಗದ ಸ್ತ್ರೀಯರು. ಪುಡ ಎಂದೂ ಇದನ್ನು ಕರೆಯುತ್ತಿದ್ದರು. ದಕ್ಷಿಣ ತಿರುವಾಂಕೂರಿನಲ್ಲಿ ಈಳವ ಸ್ತ್ರೀಯರು ನಾಯರ್ ಸ್ತ್ರೀಯರಿಗಾಗಿ ತಯಾರಿಸುತ್ತಿದ್ದ ಬಟ್ಟೆಗೆ ‘ಅಡಿಪ್ಪುಡವ’ ಎಂದು ಹೆಸರಿಟ್ಟಿದ್ದರು. ಅದು ಒಂದು ಪಂಚೆ ಮಾತ್ರವಾಗಿತ್ತು. ಅಚ್ಚಿ ಎಂಬ ಪದಕ್ಕೆ ನಾಯರ್ ಸ್ತ್ರೀ ಎಂದೂ ಅರ್ಥವಿದೆ. ಕಾಯಂಕುಳನಲ್ಲಿ ‘ಅಚ್ಚಿಪುಡವ’ ಧರಿಸಿ ನಡೆದ ಈಳವ ಮಹಿಳೆಯನ್ನು ಆ ಬಟ್ಟೆ ಬಿಚ್ಚಿಸಿದ ಘಟನೆ ಕೂಡ ನಡೆದಿತ್ತು. ಕೆಳವರ್ಗದ ಮಹಿಳೆಯರು ಉಡುತ್ತಿದ್ದ ಬಟ್ಟೆಯನ್ನು ಪುಡವ ಎಂದುಕರೆಯುತ್ತಲೇ ಇರಲಿಲ್ಲ.

ಮೇಲ್ಜಾತಿಯವರ ಮದುವೆಗೆ (ವಿಶೇಷವಾಗಿ ನಾಯರ್ ವಿಭಾಗ) ‘ಪುಡವಕ್ಕೊಡ’ ‘ಪುಡ ಮುರಿ’ ಎಂದು ಮುಂತಾಗಿ ಹೆಸರುಗಳಿದ್ದವು. ವರನು ವಧುವಿಗೆ ಪುಡವ ಕೊಡುವುದು ಎಂಬುದು ಮುಖ್ಯ ಕಾರ್ಯಕ್ರಮವಾಗಿ ಇಂದೂ ಹಿಂದೂ ವಿಭಾಗಕ್ಕೆ ಸೇರಿದವರಲ್ಲಿ ರೂಢಿಯಲ್ಲಿದೆ. ಹಿಂದೆ ಪುಡವ ಮತ್ತು ಕವಣಿ ಎಂದು ಮದುವೆಯ ಬಟ್ಟೆಗೆ ಒಂದು ಹೆಸರಿತ್ತು. ಕಲ್ಯಾಣ ಪುಡವ (ಮದುವೆಯ ಪಡುವ) ಎಂಬ ಹೆಸರು ಇಂದಿಗೂ ಪ್ರಯೋಗವಾಗುತ್ತಿದೆ. ಅದೇ ರೀತಿ ಓಣಪ್ಪುಡವಕ್ಕೂ ಪ್ರಾಮುಖ್ಯವಿತ್ತು. ಉಡುವ ಮುಂಡು (ಒಂಟಿಪಂಚೆ) ಮತ್ತು ಎರಡನೇ ಮುಂಡು (ರಂಡಾಂಮುಂಡ್. ಮ.) ಸೇರಿ ‘ಇಣಪ್ಪುಡವ’ ಎಂದೂ ಹೆಸರಿತ್ತು. ಈಗ ಅದನ್ನು ಮುಖ್ಯವಾಗಿ ಮುಂಡು ಮತ್ತು ನೇರ್ಯದ್(ಮ.) ಎಂದು ಕರೆಯಲಾಗುತ್ತದೆ. ಅಲ್ಲದೆ ಸೆಟ್ಟ್‌ಸಾರಿ, ಸೆಟ್ಟ್‌ ಮುಂಡ್ ಎಂದು ಮುಂತಾಗಿಯೂ ಅವಕ್ಕೆ ಹೆಸರಾಗಿದೆ. ಇದರ ಬಣ್ಣವು ಚಿನ್ನದ್ದು. ಕೇರಳೀಯರ ವೈಶಿಷ್ಟ್ಯವನ್ನು ತಿಳಿಸಿಕೊಡುವ ಕಾರ್ಯಕ್ರಮಗಳಲ್ಲಿ ಸ್ತ್ರೀಯರನ್ನು ಗುರುತಿಸುವ ಬಟ್ಟೆಯಾಗಿ ಪರಿಗಣಿತವಾಗಿರುವುದು-ಇದೇ ಪುಡವ. ‘ಕೇರಳ ಸಾರಿ’ಯ ಪೂರ್ವರೂಪವನ್ನು ಪುಡವ ಎಂದು ಕರೆದಿದ್ದರು. ಹಿಂದಿನ ಕಾಲದಲ್ಲಿ ರೇಷ್ಮೆ ಬಟ್ಟೆಯನ್ನೂ ಪುಡವ ಎಂಬ ಸಂಕೇತದಲ್ಲಿ ಸೇರಿಸಿಕೊಂಡಿದ್ದರು. ಓಣಂ ದೇಶೀಯ ಹಬ್ಬವಾಗಿ ಆಚರಣೆಗೆ ಬಂದಾಗ ಈ ಬಟ್ಟೆಗೆ ಹೆಚ್ಚು ಪ್ರಚಾರ ಲಭಿಸಿತು.

‘ಕೌಟುಂಬಶ್ರೀ’ಯಂಥ ವ್ಯವಸ್ಥೆಗಳಲ್ಲಿಕೆಲಸ ಮಾಡುವವರೂ ನವೆಂಬರ ಒಂದರ ಆಚರಣೆಯ ಸಂದರ್ಭದಲ್ಲಿ ಭಾಗವಹಿಸುವವರೂ ಕೇರಳಸಾರಿ ಎಂಬ ಪುಡವವನ್ನು ಉಟ್ಟುಕೊಳ್ಳುತ್ತಾರೆ. ಬಾಲರಾಮಪುರಂ, ಕುತ್ತಾಂಬುಳ್ಳಿ ಮುಂತಾದ ಪ್ರದೇಶಗಳಲ್ಲಿ ಸೆಟ್ಟ್‌ಮುಂಡುಗಳನ್ನು ತಯಾರಿಸುತ್ತಾರೆ. ಅವಕ್ಕೆ ಒಳ್ಳೆಯ ಬೇಡಿಕೆಯಿದೆ. ಬಟ್ಟೆ ತಯಾರಿಸುವ ಕಂಪೆನಿಗಳಲ್ಲಿ ತಯಾರಾಗುವ ಪುಡವಗಳಿಗೆ ಬೆಲೆ ಕಮ್ಮಿಯಾಗಿದ್ದರೂ ಕಂಪೆನಿಗಳಲ್ಲಿ ತಯಾರಾಗುವ ಪುಡವಗಳಿಗೆ ಬೆಲೆ ಕಮ್ಮಿಯಾಗಿದ್ದರೂ ಗುಡಿಕೈಗಾರಿಕೆಗಳಲ್ಲಿ ತಯಾರಾಗುವ ಪುಡವಗಳಿಗಷ್ಟೆ ಗುಣಮಟ್ಟವೂ ಅಂದಚಂದವೂ ಹೆಚ್ಚಾಗಿರುತ್ತದೆ.

ಇಂದು, ಸಮಾಜದಲ್ಲಿ ಪುಡವ ಎಂಬ ಮಾತಿಗೆ ಒಂದು ವಿಶೇಷ ಉಡುಪಿನ ಪ್ರಯೋಗ ಎಂಬ ತೆರನ ಅರ್ಥಮಾತ್ರ ಇದೆ. ಬದಲಿಗೆ ಸಾರಿ ಎಂಬ ಪದ ಬಳಕೆಗೆ ಬಂತು. ಗ್ರಾಮೀಣ ಪ್ರದೇಶಗಳಲ್ಲಿ ಕೂಡ ‘ಕಲ್ಯಾಣಸಾರಿ’ (ಮದುವೆ ಸೀರೆ) ಎಂಬ ಮಾತೇ ಬಳಕೆಗೆ ಬಂದುಬಿಟ್ಟಿದೆ. ಈಗೀಗ ರೇಷ್ಮೆಸೀರೆಗೆ ಪ್ರಾಧಾನ್ಯವು ಹೆಚ್ಚುತ್ತಿದೆ. ಸೆಟ್ಟ್‌ಸಾರಿ, ಕೇರಳ ಸಾರಿ, ಮುಂತಾದ ಹೆಸರುಗಳನ್ನು ಉಪಯೋಗಿಸುತ್ತಾರೆ. ಪಡುವಮುರಿ, ಪುಡವಕ್ಕೊಡ, ‘ವೇಳಿ’ ಪುಡವ (ವೇಳಿ=ನಂಬೂದಿರಿಗಳ ಮದುವೆ) ಮುಂತಾದ ಪ್ರಯೋಗಗಳು ಇಂದು ವಯೋವೃದ್ಧರಲ್ಲಿ ಮಾತ್ರ ಬಳಕೆಯಲ್ಲಿದೆ. ಇವಕ್ಕೆ ಬದಲಾಗಿ ಕಲ್ಯಾಣಂ, ವಿವಾಹಂ ಎಂಬ ಮಾತುಗಳು ಪ್ರಯೋಗದಲ್ಲಿವೆ. ‘ಓಣನಿಲಾವಿಲ್ ಪುಡವ’ (ಓಣಂ ಬೆಳದಿಂಗಳಲ್ಲಿ ಪುಡವ=ಮದುವೆ) ಮುಂತಾಗಿ ಇಪ್ಪತ್ತೈದು ವರ್ಷಗಳ ಹಿಂದೆ ಕವಿಗಳು ಬಳಸುತ್ತಿದ್ದರು. ಕಲ್ಯಾಣಪ್ಪುಡವ ವೇಣಂ (ಮದುವೆಯ ಸೀರೆ ಬೇಕು) ಎಂಬ ಸಿನೆಮಾ ಹಾಡೂ ಬಂದು ಇಪ್ಪತ್ತೈದು ವರ್ಷ ಕಾಲ ಸರಿದು ಹೋಯಿತು. ವಿವಾಹ ಮುಂತಾದ ಆಚಾರನುಷ್ಠಾನಗಳಿಗೆ ಸಂಬಂಧಿಸಿದಂತೆ ಮಾತ್ರ ಪುಡವ ಎಂಬ ಪದವು ಪ್ರಚಾರದಲ್ಲಿತ್ತು ಎಂದು ಅನುಮಾನಿಸಬಹುದಾಗಿದೆ. ಬಟ್ಟೆಬರೆಗೆ ಸಂಬಂಧಿಸಿದಂತೆ ನೂತನ ಕಾಲಮಾನದಲ್ಲಿ ಬಂದಿರುವ ಬದಲಾವಣೆಗಳು ಪುಡವ ಎಂಬ ಮಹಿಳಾ ಬಟ್ಟೆಯಲ್ಲೂ ಬದಲಾವಣೆಗಳನ್ನು ತಂದಿವೆ. ದಲಿತ ವಿಭಾಗದವರ ಮಧ್ಯೆ ಮತ್ತು ಕ್ರಿಶ್ಚಿಯನ್ ಮುಸ್ಲಿಂ ವಿಭಾಗದವರ ಮಧ್ಯೆ ಕೂಡ ಪುಡವ ಎಂಬ ಪದವು ಎಂದೂ ಚಲಾವಣೆಯಲ್ಲಿರಲಿಲ್ಲ.

ಬಿ.ಬಿ. ಅನುವಾದ ಕೆ.ಕೆ.

ಪುದಿರ್‌ಕದೈ ಒಗಟಿನ ರೀತಿಯ ತಮಿಳು ಜನಪದ ಪ್ರಕಾರ. ಒಗಟು ಎಂಬುದು ಒಳಗೆ ಅರ್ಥ ಹುದುಗಿಕೊಂಡಿರುವ ಒಂದು ಜನಪದ ಸಾಹಿತ್ಯ ಪ್ರಕಾರ. ಪುದಿರ್‌ಕದೈ ‘ಒಗಟು-ಉತ್ತರ’ (ಸವಾಲ್-ಜವಾಬ್ ರೀತಿ) ಎಂಬ ರೀತಿಯಲ್ಲಿ ರೂಪು ಪಡೆದಿರುವ ಒಂದು ಬಗೆಯಾಗಿದೆ. ಒಗಟನ್ನು ಹೇಳಬಹುದಾದ ಸಂದರ್ಭದಲ್ಲಿ ಒಬ್ಬರು ಒಂದು ಒಗಟನ್ನು ಹೇಳುವರು. ಅದನ್ನು ಕೇಳುವವರು ಅದಕ್ಕೆ ಉತ್ತರ ಹೇಳಬೇಕು. ಆಗ ಹೇಳುವ ಉತ್ತರ ಆ ಒಗಟಿಗೆ ಸರಿಹೊಂದಿದರೆ ಅದನ್ನು ಒಗಟೆಂದು ಸ್ವೀಕರಿಸಲಾಗುವುದು. ಕೆಲವು ಒಗಟುಗಳು ಕೆಲವೊಮ್ಮೆ ಒಂದೇ ಸುತ್ತಿನಲ್ಲಿ ರೂಪುಗೊಳ್ಳುತ್ತವೆ. ಒಗಟಿನ ವಿವರ ಹೇಳುವವರು, ಕೇಳುವವರ ಮನೋಸ್ಥಿತಿಗೆ ಅನುಗುಣವಾಗಿ ಒಗಟು ಕಟ್ಟಿಕೊಳ್ಳುವಿಕೆ ನಡೆಯುತ್ತದೆ. ಯಾವುದೇ ರೂಪದಲ್ಲಿ ಇದ್ದರೂ ಒಗಟುಗಳನ್ನು ಹೇಳುವವರು ಒಗಟಿನ ಹೊರನೋಟವನ್ನು ಅದಕ್ಕೆ ಸಂಬಂಧಿಸಿದ ಬೇರೆ ಬೇರೆ ಅಂಶಗಳನ್ನು ಬಹಳ ಚೌಕಚಕ್ಯತೆಯಿಂದ ಹೊರಗೆಡಹುತ್ತಾರೆ. ಅಲ್ಲದೆ ಬೇರೊಂದು ಹೆಸರನ್ನು ಕೊಡುವುದು, ಹೆಚ್ಚಿನ ವಿವರಗಳನ್ನು ಗುಪ್ತವಾಗಿಡುವುದು ಮುಂತಾದ ಯುಕ್ತಿಗಳಿಂದ ಒಗಟಿಗೊಂದು ಪ್ರತ್ಯೇಕತೆಯನ್ನು ಕೊಡುತ್ತಾರೆ.

ಒಗಟು ಎಂಬ ಜನಪದ ಸಾಹಿತ್ಯ ಪ್ರಕಾರದಲ್ಲಿ ಉತ್ತರ ಹೇಳುವುದು ಕಡ್ಡಾಯವಾಗಿರುವುದರಿಂದ ಉತ್ತರ ಒಂದು ಪದದಲ್ಲೊ ಇಲ್ಲವೇ ಅದಕ್ಕಿಂತ ಹೆಚ್ಚೊ ಇರುತ್ತದೆ. ಒಂದೊಂದೇ ಹಂತದಲ್ಲಿ ಉತ್ತರಗಳು ಬಿಚ್ಚಿಕೊಳ್ಳುವ ರೀತಿಯಲ್ಲಿ ಇರುತ್ತವೆ. ಕೆಲವೊಮ್ಮೆ ಕತೆಯ ಜೋಡಣೆಯಲ್ಲೇ ಉತ್ತರ ಸೇರಿಕೊಂಡಿರುತ್ತದೆ. ಈ ರೀತಿಯ ಒಗಟುಗಳನ್ನು ರೂಪಿಸುವಾಗ, ಅದರ ನಿರ್ಮಾರ್ತೃ ತನ್ನ ಮನಸ್ಸಿನಲ್ಲಿ ಹುದುಗಿಕೊಂಡಿರುವ ವಿವಿಧ ರೀತಿಯ ಕಲಾ ಸಾಹಿತ್ಯ ವಿವರಗಳು, ತಾನು ವಾಸಿಸುತ್ತಿರುವ ಸಮುದಾಯದ ಆಚಾರ ವಿಚಾರಗಳು, ವಿಧಿ ವಿಧಾನಗಳು, ನಂಬಿಕೆಗಳು, ಮುಂತಾದವನ್ನು ಒಂದರೊಡನೊಂದು ಸೇರಿಸಿಕೊಂಡು ಮುಂದುವರಿಯುತ್ತಾರೆ. ಇದರೊಂದಿಗೆ ತನ್ನಕಲ್ಪನೆಯನ್ನು ಸೇರಿಸಿ ಕುತೂಹಲ ಮೂಡಿಸಿ ಒಗಟನ್ನು ಸೂಕ್ತ ಕಾಲದಲ್ಲಿ ಬಹಿರಂಗಗೊಳಿಸುತ್ತಾರೆ.

ಎದುರು ಕಥೆಗಳನ್ನು, ಒಗಟುಗಳನ್ನು ಹೇಳುವಾಗ ವಯಸ್ಸಿನಲ್ಲಿ ಹಿರಿಯರು ಪರಸ್ಪರ ಎದುರಾಗುತ್ತಾರೆ. ತಮ್ಮ ಜಾಣ್ಮೆಯಿಂದ ಎದುರಾಳಿಯನ್ನು ಸೋಲಿಸುವ ಉದ್ದೇಶದಲ್ಲಿ ಇಂತಹ ಒಗಟುಗಳನ್ನು ಆಯ್ದುಕೊಳ್ಳುತ್ತಾರೆ.

ಕಥೆಯನ್ನು ಒಳಗೊಂಡ ಎದಿರುಕಥೆ ಒಗಟು ಸ್ಪರ್ಧೆಯಲ್ಲಿ ಕಥೆ ಹೇಳುವ ಸಂಪ್ರದಾಯದ ಹಿನ್ನೆಲೆ ಬಗ್ಗೆಯೂ ಕಥೆಯಂತೆ ಹೇಳಲಾಗುತ್ತದೆ. ಆ ಕಥೆಯಲ್ಲಿ ಕಥೆಯನ್ನು ಹೇಳುವವರು ಇರುತ್ತಾರೆ. ಮುಂದುವರಿಯುತ್ತ ಹೋಗುವ ಇದು ಧಾರಾವಾಹಿಯಂತಿರುತ್ತದೆ. ಎದುರು ಕಥೆಯ ಮುಕ್ತಾಯದಲ್ಲಿ ಜಾಣ್ಮೆಯನ್ನು ಪರೀಕ್ಷಿಸುವ ಪ್ರಶ್ನೆ ಎತ್ತಲಾಗುತ್ತದೆ. ಉದಾಹರಣೆಗೆ ಯಾರುದೊಡ್ಡವರು? ಯಾರು ಅರ್ಹತೆಯುಳ್ಳವರು? ಹೇಗೆ ಕಂಡುಹಿಡಿದ? ಹೇಗೆ ಹಿಡಿಯಲ್ಪಟ್ಟ? ಯಾರ ಮೇಲೆ ಆರೋಪ? ಇತ್ಯಾದಿ ಪ್ರಶ್ನೆಗಳನ್ನು ಎತ್ತಲಾಗುತ್ತದೆ. ಪ್ರಶ್ನೆಗಳಿಗೆ ಉತ್ತರ ಹೇಳಲಾದ ಕಥೆಯಲ್ಲಿ ಹುಡುಕಿ ತೆಗೆಯುವಂತೆ ಅದನ್ನು ಕಟ್ಟಲಾಗುತ್ತದೆ. ಅದಕ್ಕೊಂದು ಮಾದರಿ ಇಲ್ಲಿದೆ.

“ಒಂದು ಊರಿನಲ್ಲಿ ಒಬ್ಬ ಅಗಸನಿದ್ದನು. ಆ ಊರಿಗೆಲ್ಲ ಅವನೇ ಬಟ್ಟೆ ಒಗೆದು ತರುತ್ತಿದ್ದನು. ಹಾಗೆಯೇ ಒಂದು ದಿನ ಬಟ್ಟೆಯ ಮೂಟೆಯನ್ನು ಕತ್ತೆಯ ಬೆನ್ನಿನ ಮೇಲೆ ಹೇರಿಕೊಂಡು ಒಗೆಯಲು ಹಳ್ಳದ ಬಳಿಗೆ ಹೋದ. ಹೋಗುವ ದಾರಿಯಲ್ಲಿ ಭಾರ ತಡೆಯಲಾಗದೆ ಕತ್ತೆ ಕೆಳಗೆ ಬಿದ್ದಿತು. ಕೆಳಗೆ ಬಿದ್ದ ಕತ್ತೆಗೆ ಮೇಲಕ್ಕೆದ್ದು ನಡೆಯಲು ಸಾಧ್ಯವಾಗಲಿಲ್ಲ. ಆದ ಕಾರಣ ಅಗಸ ಬಟ್ಟೆಯ ಮೂಟೆಯನ್ನು ತಲೆ ಮೇಲಿಟ್ಟು, ಕತ್ತೆಯನ್ನು ಅಲ್ಲೇ ಬಿಟ್ಟು ಬಟ್ಟೆ ಒಗೆಯಲು ಹೋದನು. ಆ ದಾರಿಯಲ್ಲಿ ಬೆಣ್ಣೆ ಮಾರುವ ಮುದುಕಿಯೊಬ್ಬಳು ಬೆಣ್ಣೆಯನ್ನು ತೆಗೆದುಕೊಂಡು ಬರುತ್ತಿದ್ದಳು. ಕತ್ತೆ ಕಾಲು ಒಡೆದು ಬಿದ್ದಿರುವುದನ್ನು ನೋಡಿದ ಮುದುಕಿಗೆ ಕರುಣೆ ಮೂಡಿಬಂತು. ‘ಅಯ್ಯೋ ಪಾಪ! ಕತ್ತೆ ಹೀಗೆ ಕಾಲು ಮುರಿದು ಬಿದ್ದಿದೆಯಲ್ಲ, ಏನು ಮಾಡುವುದೆಂದು ಯೋಚಿಸಿತು. ಸರಿ… ನಮ್ಮಿಂದ ಸಾಧ್ಯವಾದುದನ್ನು ಮಾಡೋಣವೆಂದು ಯೋಚಿಸಿ ಕತ್ತೆಯ ಗಾಯವಾದ ಕಾಲಿಗೆ ಬೆಣ್ಣೆ ಹಚ್ಚಿ ಬಟ್ಟಿಯಿಂದ ಅದನ್ನು ಕಟ್ಟಿ ಅಲ್ಲಿಂದ ಹೋದಳು. ಬೆಣ್ಣೆಯ ಮುದುಕಿ ಹಾಗೆ ಕಟ್ಟಿದ ಸ್ವಲ್ಪ ಹೊತ್ತಿನಲ್ಲೆ ಕತ್ತೆಗೆ ಶಕ್ತಿ ಬಂತು. ಎದ್ದು ನಡೆಯತೊಡಗಿತು. ಸ್ವಲ್ಪ ನಡೆದ ಮೇಲೆ ಇನ್ನಷ್ಟು ಬಲ ಬಂದು ಕುಂಟುತ್ತ ಕುಂಟುತ್ತ ನಡೆದು ಮನೆಗೆ ಹೊರಟಿತು. ಹಾಗೆ ಮನೆಗೆ ಬರುವ ದಾರಿಯಲ್ಲಿ ಒಂದೆಡೆ ಬತ್ತ ಬೇಯಿಸಿದ ಒಲೆಯಲ್ಲಿ ಬೂದಿ ಇರುವುದನ್ನು ನೋಡಿತು. ಬೂದಿಯನ್ನು ನೋಡಿದ ತಕ್ಷಣ ಅದರಲ್ಲಿ ಬಿದ್ದು ಹೊರಳಬೇಕೆಂದು ಕತ್ತೆಗೆ ಆಸೆಯಾಯಿತು. ಕತ್ತೆ ಬೂದಿ ಎಂದು ಭಾವಿಸಿದ್ದು ಕೇವಲ ಬೂದಿಯಲ್ಲ. ಬತ್ತ ಬೇಯಿಸಿ ಒಲೆಯ ಬೆಂಕಿಯನ್ನು ಆರಿಸದೆ ಸೌದೆ ಬೂದಿಯಾಗಿ ಬಿದ್ದಿತು. ಕತ್ತೆ ಕೇವಲ ಬೂದಿಯೆಂದು ಭಾವಿಸಿ ಮಲಗಿ ಹೊರಳಾಡಿತು. ಬರೀಬೂದಿಯಾದರೆ ಏನೂ ಆಗುತ್ತಿರಲಿಲ್ಲ. ಅದರಲ್ಲಿ ಕೆಂಡವಿದೆ. ಕೆಂಡ ತುಪ್ಪ ಸುರಿದು ಬಟ್ಟೆಗೆ ತಗುಲಿತು. ಬೆಂಕಿ ಹತ್ತಿಕೊಂಡು ಬಟ್ಟೆಗೆ ತಗುಲಿತು. ಬೆಂಕಿ ಹತ್ತಿಕೊಂಡು ಅದು ಕತ್ತೆಯ ದೇಹಕ್ಕೆ ತಗುಲಿತು. ಅದರ ನೋವನ್ನು ತಾಳಲಾರದೆ ಕತ್ತೆ ಕಾಲು…ಕಾಲು…ಎಂದು ಬೊಬ್ಬಿಡುತ್ತ ಓಡಿ ಹೋಯಿತು. ಪಕ್ಕದಲ್ಲಿಯೇ ಒಂದು ಬಣವೆ ಇತ್ತು. ಅದನ್ನು ನೋಡಿದ ಕೂಡಲೇ ನೋವನ್ನು ತಡೆಯಲಾಗದೆ ಕತ್ತೆ ಅದರ ಮೇಲೆ ಬಿದ್ದಿತು. ಕ್ಷಣ ಮಾತ್ರದಲ್ಲಿ ಆ ಬಣವೆಗೂ ಬೆಂಕಿ ಹತ್ತಿಕೊಂಡಿತು. ಅಲ್ಲಿದ್ದ ಬಣವೆಗೆ ಬೆಂಕಿ ತಗುಲಿದ್ದನ್ನು ಕಂಡ ಬಣವೆಯವನು ಓಡಿ ಬಂದು ಬೆಂಕಿಯನ್ನು ಆರಿಸಿದ. ಹಾಗಿದ್ದರೂ ಬಣವೆ ಅರ್ಧಕ್ಕೂ ಹೆಚ್ಚು ಬೆಂಕಿಯಿಂದ ನಾಶವಾಯಿತು. ಬಣವೆಯವ ನಷ್ಟ ಅನುಭವಿಸಿದನು. ಆದ್ದರಿಂದ ಕತ್ತೆಯ ಯಜಮಾನ ಅಗಸನನ್ನು ನಾವು ಸುಮ್ಮನೆ ಬಿಡಬಾರದು. ಅವನು ಕತ್ತೆಯನ್ನು ಬಿಟ್ಟಿದ್ದರಿಂದ ತಾನೇ ಹುಲ್ಲಿನ ರಾಶಿ ಬೆಂಕಿಯಲ್ಲಿ ಸುಟ್ಟು ಹೋಯಿತೆಂದು ಹೇಳುತ್ತ ಪಂಚಾಯಿತಿಗೆ ಕರೆದ. ಪಂಚಾಯಿತಿಗೆ ಎಲ್ಲರೂ ಸೇರಿದರು. ಈಗ ಪಂಚಾಯಿತಿಯವರು ಯಾರ ಮೇಲೆ ತಪ್ಪು ಹೊರಿಸುತ್ತಾರೆ? ಕತ್ತೆಗೆ ಯಜಮಾನನಾದ ಅಗಸನ ಮೇಲೆಯೇ? ಬತ್ತ ಬೇಯಿಸಿ ಒಲೆಯಲ್ಲಿದ್ದ ಬೆಂಕಿಯನ್ನು ಆರಿಸದೆ ಹೋದ ಹೆಂಗಸಿನ ಮೇಲೆಯೇ? ಇಲ್ಲ, ಅಲ್ಲಿರಿಸಿದ್ದ ಬಣವೆಗೆ ಬೇಲಿ ಹಾಕಿ ಭದ್ರವಾಗಿ ಇರಿಸದ ಬಣವೆಗಾರನ ಮೇಲೆಯೇ? ಪಂಚಾಯಿತಿದಾರರು ಯಾರ ವಿರುದ್ಧ ಆರೋಪ ಹೊರಿಸುತ್ತಾರೆ? ಹೇಳೀ ನೋಡೋಣ” ಎಂಬುದಾಗಿ ಎದುರುಕಥೆ ಹೇಳುವವರು ಪ್ರಶ್ನೆಗಳೊಂದಿಗೆ ಅದನ್ನು ಮುಕ್ತಾಯಗೊಳಿಸಿದರು.

ಕಥೆಗಾರರು ಈ ಎದುರು ಕಥೆಯ ಪ್ರಶ್ನೆಗಳಿಗೆ ಉತ್ತರಗಳನ್ನು ಕೇಳುಗರಿಂದ ನಿರೀಕ್ಷಿಸಿದರು. ಅವರಿಗೆ ಉತ್ತರ ಹೇಳಲು ಸಾಧ್ಯವಾಗದಿರುವುದರಿಂದ ಬಣವೆಗಾರನದು ತಪ್ಪು. ಯಾಕೆಂದರೆ ಬಣವೆಗೆ ಅವನು ಬೇಲಿಹಾಕಿದ್ದರೆ ಕತ್ತೆ ಅದರಲ್ಲಿ ಹೋಗಿ ಬೀಳುತ್ತಿತ್ತೆ? ಎಂದು ನಿರ್ವಾಹಕರು ಉತ್ತರ ಹೇಳಿದರು. ಈ ಒಗಟಿಗೆ ಅದರ ಒಳಗಿನಿಂದಲೆ ಕಂಡು ಹಿಡಿಯುವ ರೀತಿಯಲ್ಲಿ ಈ ಎದುರು ಕಥೆಯನ್ನು ಕಟ್ಟಲಾಗಿದೆ ಎಂಬುದನ್ನು ಗಮನಿಸಬೇಕು.

ಇದಕ್ಕೆ ಇನ್ನೊಂದು ಉದಾಹರಣೆಯನ್ನು ಹೇಳಬಹುದು. ಸೆಲ್ವಂ ಎಂಬಾತ ಎದುರು ಕಥೆ ವೇದಿಕೆಯಲ್ಲಿ ಇದನ್ನು ಪ್ರಸ್ತುತಪಡಿಸಿದ್ದಾರೆ.

“ಒಂದು ಊರಿನಲ್ಲಿ ಒಬ್ಬಾತ ತನ್ನ ಹೆಂಡತಿಯೊಂದಿಗೆ ಜೀವಿಸುತ್ತಿದ್ದನು. ಆ ಮಹಿಳೆ ಬೆಳಗ್ಗೆ ಎದ್ದು ಗುಡಿಸುತ್ತಿದ್ದಳು. ಆ ಕಾಲದಲ್ಲಿ ಮಹಿಳೆಯರು ಮೂಗಿಗೆ ಮೂಗುತಿಯುಂಗುರ ಹಾಕುತ್ತಿದ್ದರು. ಈ ಮಹಿಳೆ ಹೊಸದಾಗಿ ಮದುವೆಯಾದವಳು. ಎಲ್ಲ ಬಗೆಯ ಆಭರಣ ಧರಿಸಿದ್ದಳು. ಗಂಡ ಬಿಲ್ಲು ಪ್ರಯೋಗದಲ್ಲಿ ನಿಪುಣನಾಗಿದ್ದನು. ದಿನವೂ ಆ ಮಹಿಳೆ ಬಾಗಿಲು ಗುಡಿಸುತ್ತಿದ್ದಳು. ಗಂಡ ಬಿಲ್ಲು ಪ್ರಯೋಗಿಸುತ್ತಿದ್ದನು. ಬಿಲ್ಲು ಆ ಹೆಂಗಸು ಹಾಕಿದ್ದ ಮೂಗುತಿಯುಂಗುರ ಒಳಹೊಕ್ಕು ಹೋಯಿತಂತೆ. ಹಾಗೆ ಒಂದು ದಿನ ಆತ ಬಿಲ್ಲು ಪ್ರಯೋಗಿಸಿದ್ದಾನೆ. ಅದು ಮೂಗುಂಗುರದ ಒಳಹೊಕ್ಕು ಹೋಯಿತಂತೆ. ಇದನ್ನು ಅವನ ಭಾವ ನೋಡಿದನಂತೆ. ಅವನು ನಂಟನಾಗಿ ಸಮ್ಮಾನಕ್ಕೆ ಬಂದವನು. ಬಂದವನು ತಂಗಿ ಹಾಕಿರುವ ಮೂಗುಂಗುರದಲ್ಲಿ ಬಿಲ್ಲು ಹಾಕು ಹೋದುದನ್ನು ನೋಡಿ ದಿಗಿಲುಗೊಂಡನು. ಇವನನ್ನು ಹೀಗೆಯೇ ಬಿಟ್ಟರೆ ನಮ್ಮ ತಂಗಿಯನ್ನು ಕೊಂದೇ ಹಾಕುತ್ತಾನೆ. ಆದ್ದರಿಂದ ಇವನಿಗೆ ಏನಾದರೂ ಒಂದು ಕಡಿವಾಣ ಹಾಕಬೇಕೆಂದು ಯೋಚಿಸಿ, ‘ಲೇ, ನೀನೇನು ದೊಡ್ಡ ಚಾಣಾಕ್ಷ. ಚತುರನಾದವನು ಲೋಕದಲ್ಲಿ ಇದ್ದೇ ಇದ್ದಾನೆ. ಹೋಗಿ ನೋಡು’ ಎಂದು ಹೇಳಿದ. ಅದಕ್ಕೆ ಅವನು ‘ಏನಪ್ಪಾ ಇದು! ಒಬ್ಬನನ್ನು ಮೀರಿಸುವ ಇನ್ನೊಬ್ಬ ಲೋಕದಲ್ಲಿ ಇದ್ದಾನೆಯೋ? ನಾವು ಇಷ್ಟು ನಿಖರವಾಗಿ ಬಿಲ್ಲು ಪ್ರಯೋಗ ಮಾಡುತ್ತೇನೆ. ನಮ್ಮನ್ನು ಮೀರಿಸುವವನು ಯಾವನಿದ್ದಾನೆ? ಅದನ್ನು ನಾನು ಹೋಗಿ ನೋಡಬೇಕೆಂದು ಯೋಚಿಸಿ ಹೆಂಡತಿಗೆ ತಿಳಿಸಿ ಅಲ್ಲಿಂದ ಹೊರಟನು. ದಾರಿಯಲ್ಲಿ ಒಬ್ಬಾತ ಕಣ್ಣಿಗೆ ಕಾಣದಷ್ಟು ಎತ್ತರದಲ್ಲಿ ಹಾರುವ ಹಕ್ಕಿಗಳಿಗೆ ಆಕಾಶದಲ್ಲೆ ಬಲೆಯನ್ನು ಬೀಸಿದ್ದಾನಂತೆ. ಅವನನ್ನು ನೋಡಿ ‘ಇದೇನು ಆಶ್ಚರ್ಯವಾಗಿದೆ! ವೀರನಿಗೆ ಇನ್ನೊಬ್ಬ ವೀರ ಲೋಕದಲ್ಲಿ ಇರುತ್ತಾನಂತೆ. ಅಲ್ಲಿ ಹೋಗಿ ನೋಡು’ ಎಂದನಂತೆ. ಅದಕ್ಕೆ ಅವನು, ‘ಎನ್‌ಲಾ, ನಾನು ಕಣ್ಣಿಗೆ ಕಾಣದಂತೆ ಹೋಗುವ ಹಕ್ಕಿಗಳಿಗೆ ಆಕಾಶದಲ್ಲಿ ಬಲೆ ಕಟ್ಟಿದ್ದೇನೆ. ನನಗಿಂತ ಬಲಶಾಲಿ ಯಾರಿದ್ದಾರೆ ಹೋಗಿ ನೋಡೋಣ’ ಎಂದು ಇಬ್ಬರೂ ಹೊರಟು ಹೋದರು.

ಇಬ್ಬರೂ ತುಂಬ ದೂರ ನಡೆದರು. ಆಗ ಒಬ್ಬಾತ ಎರೆಹುಳಕ್ಕೆ ಬದಲಾಗಿ ಆನೆಯನ್ನು ಗಾಳಕ್ಕೆ ಸಿಕ್ಕಿಸಿದ್ದಾನೆ, ಅವನು ಮನುಷ್ಯನಾಗಿರಲಾರ. ‘ಏ… ಏನಿದು! ಇವನೇನು ಇಂತಹ ಮನುಷ್ಯನಿದ್ದಾನೆ’ ಎಂದು ಲೆಕ್ಕ ಹಾಕಿ ಇಬ್ಬರೂ ಅವನನ್ನು ನೋಡಿ, ‘ಲೇ ! ನೀವೇನು ದೊಡ್ಡ ಬಲಶಾಲಿಯೇ ? ಒಬ್ಬ ಚಾಣಾಕ್ಷನಿಗೆ ಎದುರು ಇನ್ನೊಬ್ಬನಿದ್ದಾನೆ, ಅಲ್ಲಿ ಹೋಗಿ ನೋಡು ಎಂದರು. ಏನಪ್ಪಾ ಇದು… ಗಾಳದ ಕುಣಿಕೆಗೆ ಹುಳದ ಬದಲಾಗಿ ಆನೆಯನ್ನು ಸಿಲುಕಿಸಿ ಗಾಳ ಹಾಕುತ್ತಿದ್ದೇನೆ ನಾನು. ನನಗಿಂತ ಬುದ್ಧಿವಂತ ಯಾರಿದ್ದಾನೆ. ಬನ್ನಿ, ಹೋಗಿ ನೋಡೋಣ ಎಂದು ಹೇಳಿದ್ದಾನೆ ಗಾಳಹಾಕುವಾತ. ಕೂಡಲೇ ಮೂವರೂ ಹೊರಟು ಹೋಗುತ್ತಾರೆ. ಒಂದು ಊರಿನ ಒಳಗೆ ತಲುಪುವಾಗ ಕತ್ತಲಾಯಿತು. ಆದ್ದರಿಂದ ಅವರು ಆ ಊರಿನಲ್ಲಿ ಉಳಿದುಕೊಂಡರು.

ಆ ಊರಿನಲ್ಲಿ ಒಬ್ಬ ರಾಜ. ಅವನಿಗೆ ಒಬ್ಬಳು ಮಗಳು. ಬಹಳ ದಿನಗಳಾದರೂ ಅವಳಿಗೆ ಮದುವೆಯಾಗಲಿಲ್ಲ. ಆ ರಾಜನಿಗೆ ಏಳು ಮಹಡಿ ಅರಮನೆ. ಏಳನೇ ಮಹಡಿಯಲ್ಲಿ ರಾಜನ ಮಗಳು ವಾಸಿಸುತ್ತಿದ್ದಾಳಂತೆ. ಏಳು ಕಡಲಿನ ಆಚೆ ಬದಿಯಲ್ಲಿ ಒಂದು ತಾವರೆ ಹೂ ಅರಳಿದೆ. ಆ ತಾವರೆ ಹೂವನ್ನು ನಾಗ ಕಾಯುತ್ತಿದೆ. ಆ ತಾವರೆ ಹೂವನ್ನು ಯಾರು ಕೊಯ್ದು ತರುತ್ತಾರೋ ಅವನಿಗೆ ನಾನು ಹಾರ ಹಾಕುತ್ತೇನೆಂದು ಹೇಳಿ ಆ ಹುಡುಗಿ ಏಳನೇ ಮಹಡಿಯಲ್ಲಿ ಕುಳಿತಿದ್ದಾಳೆಯಂತೆ. ಆ ಹುಡುಗಿ ಬಹಳ ಸುಂದರಿ. ಆದರೆ ಬಹಳ ಮಂದಿ ರಾಜರು ಬಂದರೂ ಆ ಹೂವನ್ನು ಕೊಯ್ಯಲು ಸಾಧ್ಯವಾಗಿಲ್ಲ. ಆ ಸುದ್ದಿ ಈ ಮೂವರ ಕಿವಿಗೂ ಬಿತ್ತು. ಏನಪ್ಪಾ, ನಾವು ಹೋದರೆ ಹೇಗೆ? ಆಕಾಶದಲ್ಲಿ ಬಲೆ ಕಟ್ಟಿದವನು, ಆನೆಯನ್ನು ಕಟ್ಟಿ ಕಡಲಿಗೆ ಗಾಳ ಹಾಕುವವನು, ಗುರಿಯಿಟ್ಟು ಬಾಣ ಬಿಡುವವನು – ಮೂರು ಮಂದಿಯಿರುವಾಗ ಏನಿದು ಬಹಳ ಆಶ್ಚಯವಾಗಿದೆ ಎಂದು ಮುವರೂ ಯೋಚಿಸಿದರು. ಕೂಡಲೇ ಹೋಗಿ ರಾಜನನ್ನು ನೋಡಿ, ಇವರು ತಮ್ಮ ಅಭಿಪ್ರಾಯ ತಿಳಿಸಿದಾಗ, ರಾಜ ಅದಕ್ಕೆ ‘ಸರಿ’ ಎಂದನು. ಹಾಗಿದ್ದರೆ ಈ ಕಡಲಲ್ಲಿ ಗಾಳ ಹಾಕಿದವನಿದ್ದಾನಲ್ವೆ? – ಅವನು ಯೋಚಿಸಿದ, ನಾನು ಹೋಗಿ ಕೊಯ್ದುತಂದರೆ ಹೇಗೆ?’ ನಮಗೇನು, ಕಡಲು ಲೀಲಾಜಾಲವಾದುದು. ಹಾಗೆ ಅವನು ಲೆಕ್ಕಹಾಕಿದ. ಆದರೆ, ಈವರಿಗೆ ಹೋದವರು ಯಾರೂ ಹಿಂದಿರುಗಿ ಬಂದಿಲ್ಲ. ತಾವರೆ ಹೂವನ್ನು ಕೊಯ್ಯಲು ಹೋದವರನ್ನು ಆಕಾಶದಿಂದ ನಾಗನು ಬಂದು ಕಡಿಯುತ್ತದಂತೆ. ಆದ್ದರಿಂದ ಹೋದವರಲೆಲ ಸಾಯುತ್ತಾರಂತೆ. ಆ ಕಾರಣದಿಂದಾಗಿ ಮೂವರೂ ಹೋಗಿದ್ದಾರೆ. ತಾವರೆ ಹೂವಿನ ಬಳಿಗೆ ಹೋಗುತ್ತಾರೆ. ಹೋಗಿ ಹೂವನ್ನು ಕೊಯ್ಯಲು ಹೋದಾಗ ಆಕಾಶದಲ್ಲಿ ಕಣ್ಣಿಗೆ ಕಾಣಿಸದಂತೆ ಹೋಗುವ ಹಕ್ಕಿಗಳಿಗೆ ಬಲೆ ಕಟ್ಟಿದವನಿದ್ದಾನಲ್ವೆ? ಅವನು ಕಣ್ಣಿಗೆ ನಾಗರಹಾವು ಹೋದುದು ತಿಳಿಯಿತು. ತಕ್ಷಣ ಅವನು ಆಹಾ ! ಅದು ಹೊರಟಿತಲ್ಲ. ಕೇವಲ ನಾಗರಹಾವಂತೆ, ನಮ್ಮನ್ನು ಕಡಿಯಲು ಬರುತ್ತದೆ ಎಂದು ಎಚ್ಚರಿಕೆ ನೀಡಿದ. ಕೂಡಲೇ ಬಿಲ್ಲುಗಾರ, ಅಷ್ಟೂ ನಾಗರಹಾವುಗಳನ್ನು ಗುರಿಯಿಟ್ಟು ಕೊಂದುಹಾಕಿದ. ಹಾವುಗಳೆಲ್ಲ ಸತ್ತವು. ಆ ಹೂವನ್ನು ಕಡಲಿಗೆ ಗಾಳ ಹಾಕುವವನು ಕೊಯ್ದುಬಿಟ್ಟನು. ಮೂವರೂ ರಾಜನ ಮನೆಗೆ ಬಂದರು. ನಮಗೆ ಹುಡುಗಿಯನ್ನು ವಿವಾಹ ಮಾಡಿಕೊಡು ಎಂದು ಕೇಳುತ್ತಾರೆ. ಕಡಲಿಗೆ ಗಾಳ ಹಾಕುವವನು ಹೇಳುತ್ತಾನೆ. ನಾನಲ್ಲವೇ ಹೂವು ಕೊಯ್ದದು. ಆದ್ದರಿಂದ ನನಗೇ ಹುಡುಗಿಯನ್ನು ಕೊಡಬೇಕೆಂದು ಆಕಾಶದಲ್ಲಿ ಬಲೆ ಬೀಸಿದವನು ಹೇಳಿದ, ಹೂವನ್ನು ಕೊಯ್ಯಲು ಬಿಡದೆ ಮೇಲಕ್ಕೆ ಹಾವು ಬಂದುದನ್ನು ನಾನಲ್ಲವೆ ನೋಡಿ ಹೇಳಿದುದು. ಆದ್ದರಿಂದ ನನಗೇ ಆ ಹುಡುಗಿ ಎಂದನು. ಬಿಲ್ಲುಗಾರ ಹೇಳುತ್ತಾನೆ, ನಾನಲ್ಲವೆ ಎಲ್ಲ ಹಾವುಗಳನ್ನು ಬಿಲ್ಲಿನಿಂದ ಹೊಡೆದು ಕೊಂದುದು. ಹಾಗಿರುವುದರಿಂದ, ಆ ಹುಡುಗಿ ನನಗೇ ಸಿಗಬೇಕು ಎಂದ. ಈಗ ರಾಜ ತನ್ನ ಮಗಳನ್ನು ಯಾರಿಗೆ ಮದುವೆ ಮಾಡಿಕೊಡುತ್ತಾನೆ? ಆ ಹುಡುಗಿ ಯಾರಿಗೆ ಹಾರ ಹಾಕುತ್ತಾಳೆ ? ಇವರಲ್ಲಿ ಯಾರು ವೀರರು ? ಹೇಗೆ ಈ ಸಮಸ್ಯೆಯನ್ನು ತೀರಿಸುವುದು ? ಇದನ್ನು ಪರಿಹರಿಸಿ ನೋಡೋಣ” ಎಂದು ಹೇಳಿ ನಿರ್ವಾಹಕ ಎದುರು ಕಥೆಯನ್ನು ಮುಕ್ತಾಯ ಮಾಡಿದ. ಕೇಳುತ್ತಿದ್ದವರು ಈ ಕಥೆಗೆ ಏನು ಉತ್ತರ ನೀಡುತ್ತಾರೆಂದು ಅವರತ್ತ ನೋಡಿದ. ಕೇಳುಗರು ಬೇರೆ ಬೇರೆ ರೀತಿಯಲ್ಲಿ ಉತ್ತರಿಸಿದರು. ಆದರೆ ಉತ್ತರ ಸರಿಹೊಂದದ ಕಾರಣ ನಿರ್ವಾಹಕ ಈ ಎದುರು ಕಥೆಗೆ ತಾನೇ ಉತ್ತರ ನೀಡಿದ. “ರಾಜ ಮೂವರನ್ನೂ ನೋಡಿ ನೀವು ಮೂವರೂ ಗಟ್ಟಿಗರು. ಆದರೆ ನೀವು ಮೂವರನ್ನೂ ಜೊತೆಯಾಗಿ ಕಳುಹಿಸಿದೆ. ಒಬ್ಬ ಮಾತ್ರ ಚಾಣಾಕ್ಷ : ಬುದ್ಧಿಶಾಲಿ ಅವನಿಗೆ ನನ್ನ ಮಗಳನ್ನು ಮದುವೆ ಮಾಡಿಕೊಡುತ್ತೇನೆಂದು ಹೇಳಿದ” ಎಂದು ಪ್ರಸಂಗಕಾರ ಉತ್ತರವನ್ನು ಹೇಳಿದನು. ಈ ಉತ್ತರವನ್ನು ಕಥೆಯ ಒಳಗಿನಿಂದಲೇ ಕಂಡುಹಿಡಿಯುವಂತೆ ಜಾಣ್ಮೆ ಕಥೆಯನ್ನು ಹೆಣೆಯಲಾಗಿದೆ.

ಇನ್ನೊಂದು ಒಗಟಿನ ಕಥೆ ಹಾಗೂ ಅದರ ಉತ್ತರ ಈ ರೀತಿ ಇದೆ :

ಕಡಲೈಯುಂ ತೊವರೈಯುಂ ಕಲಂದುವೆದಚ್ಚ
ಕಣಕ್ಕ ಪಿಳ್ಳೈ ಇಂಗಿರುಕ್ಕ
ವಡಕ್ಕರುಂದು ವಂದ ಮಡಕ್ಕುಳುವೈ
ಕಡಲೈಯ ವಿಟ್ಟು ತ್ತೊವರೈಯ ತಿಂಗುದು

ಎಂಬ ಒಗಟಿನ ಮಹಿಳಾ ಪ್ರಸಂಗಕಾರ್ತಿಯೊಬ್ಬರು ಈ ಜಾಣ್ಮೆ ಕಥೆಯನ್ನು ಹೇಳಿದುದು ಹೀಗೆ :

‘ಒಂದು ಊರಿನಲ್ಲಿ ಒಬ್ಬ ರಾಜನಿದ್ದ. ಅವರ ಬಳಿ ಒಬ್ಬ ಗುಮಾಸ್ತ ಕೆಲಸ ಮಾಡುತ್ತಿದ್ದನು. ಒಂದು ದಿನ ಅಕಸ್ಮಾತ್ತಾಗಿ ಗುಮಾಸ್ತನ ಹೆಂಡತಿಯನ್ನು ರಾಜ ನೋಡುತ್ತಾನೆ. ಆಹಾ ! ಎಷ್ಟು ಸುಂದರವಾಗಿದ್ದಾಳೆ ಇವಳು. ನಮ್ಮ ಗುಮಾಸ್ತನಿಗೆ ಇಷ್ಟು ಚೆಂದದ ಹೆಂಡತಿಯೇ ಎಂದು ಅವಳನ್ನು ನೋಡಿದ ರಾಜ ಅವಳ ಸೌಂದರ್ಯಕ್ಕೆ ಮಾರು ಹೋದನು. ಅವಳನ್ನು ಹೆಂಡತಿಯಾಗಿ ಪಡೆಯಬೇಕೆಂದು ನಿರ್ಧರಿಸಿಯೇ ಬಿಟ್ಟ. ಈ ಪ್ರಾಂತಕ್ಕೇ ರಾಜ ನಾನು. ನಮಗೆ ಇವಳು ಹೆಂಡತಿಯಾಗದೆ ಇರುವಳೇ ಎಂದು ನೆನೆದು ಒಂದು ಉಪಾಯ ಹೂಡುತ್ತಾನೆ. ಅದರಂತೆ ಅರಮನೆಯಲ್ಲಿ ಬಹಳಷ್ಟು ಕೆಲಸವನ್ನು ಮಾಡುವಂತೆ ಗುಮಾಸ್ತನಿಗೆ ಹೇಳುತ್ತಾನೆ. ಅರಮನೆ ಬಿಟ್ಟು ಎರಡು ದಿವಸ ಹೊರಗೆ ಹೋಗಲು ಸಾಧ್ಯವಾಗದಂತೆ ಕೆಲಸಗಳನ್ನು ಕೊಟ್ಟು ರಾಜ ಗುಮಾಸ್ತನಿಗೆ ತಿಳಿಯದಂತೆ ಅವರ ಮನೆಗೆ ಹೋಗುವನು. ಮನೆಯಲ್ಲಿ ಗುಮಾಸ್ತನ ಹೆಂಡತಿ ಇದ್ದಾಳೆ. ಅವಳಿಗೆ ರಾಜನು ಬಂದ ಉದ್ದೇಶ ತಿಳಿಯುತ್ತದೆ. ಗುಮಾಸ್ತನ ಹೆಂಡತಿ ಏನು ಮಾಡುವುದೆಂದು ಯೋಚಿಸುತ್ತಾಳೆ. ತಕ್ಷಣ ಅವಗಳಿಗೊಂದು ಉಪಾಯ ಹೊಳೆಯುತ್ತದೆ. ಅದರಂತೆ ತನ್ನ ಮನೆಗೆಲಸದಾಕೆಯನ್ನು ಕರೆದು ತನ್ನಂತೆಯೇ ಅಲಂಕರಿಸುತ್ತಾಳೆ. ತಾನು ಹಾಕಿಕೊಂಡಿದ್ದ ಆಭರಣಗಳನ್ನು ತೆಗೆದು ಕೆಲಸದಾಕೆಗೆ ತೊಡಿಸುತ್ತಾಳೆ. ತನ್ನಂತೆ ನಟಿಸುವಂತೆ ಸೂಚಿಸುತ್ತಾಳೆ. ಕೆಲಸದಾಕೆ ಹಾಗೆಯೇ ಮಾಡುತ್ತಾಳೆ. ಗುಮಾಸ್ತನ ಹೆಂಡತಿಯನ್ನು ರಾಜ ಒಮ್ಮೆ ನೋಡಿದ್ದ. ಹಾಗಾಗಿ ಬಂದಿರುವುದು ಗುಮಾಸ್ತನ ಹೆಂಡತಿಯೆಂದು ಭಾವಿಸಿ ಅವಳನ್ನು ಸಂತೋಷದಿಂದ ಸುಖಿಸುತ್ತಾನೆ.

ಇತ್ತ ಅರಮನೆಯಲ್ಲಿ ರಾಜ ಹೇಳಿದ ಕೆಲಸವನ್ನೆಲ್ಲ ಆತ ಮುಗಿಸುತ್ತಾನೆ. ಎರಡು ದಿನ ಕಳೆದ ಮೇಲೆ ಅಬ್ಬಬ್ಬ ಎಂದು ಕೈಕಾಲು ಬಿದ್ದು ಮನೆಗೆ ಬರುತ್ತಾನೆ ಗುಮಾಸ್ತ. ಮನೆಗೆ ಬಂದಾಗ ಅವನ ಹೆಂಡತಿ ನಡೆದ ವಿಷಯವನ್ನೆಲ್ಲ ತಿಳಿಸುತ್ತಾಳೆ. ರಾಜ ಬಂದಿದ್ದ ಉದ್ದೇಶವನ್ನೂ ಬುದ್ಧಿವಂತಿಕೆಯಿಂದ ತಾನು ತಪ್ಪಿಸಿಕೊಂಡ ಬಗೆಯನ್ನು ಹೇಳುತ್ತಾಳೆ. ಇದನ್ನು ಕೇಳಿದ ಗುಮಾಸ್ತನಿಗೆ ಏನಾಗಬೇಡ. ವಿಪರೀತ ಕೋಪ ಬಂತು. ರಾಜ ಅವನ ಕುತಂತ್ರವನ್ನು ನನ್ನಲ್ಲೇ ತೋರಿಸುತ್ತನಲ್ಲ. ಅರಮನೆಯಲ್ಲಿ ಅಷ್ಟೆಲ್ಲ ಕೆಲಸಕೊಟ್ಟು ನಮ್ಮ ಮನೆಯನ್ನೇ ಕೆಡಿಸಲು ಯೋಚಿಸಿರುವನಲ್ಲ. ಇವನನ್ನು ಸುಮ್ಮನೆ ಬಿಡಬಾರದು. ಸುಮ್ಮನೆ ಬಿಟ್ಟರೆ ನಾವು ಮನುಷ್ಯರಲ್ಲ. ಇವನಿಗೆ ತಕ್ಕ ಪಾಠ ಕಲಿಸಬೇಕೆಂದು ನಿರ್ಧರಿಸಿದ. ಹೆಂಡತಿಯನ್ನು ನೋಡಿ, ‘ಸಮಯ ಚೆನ್ನಾಗಿತ್ತು, ತಪ್ಪಿಸಿಕೊಂಡೆ. ನಾನೊಬ್ಬ ಮುಠ್ಠಾಳನೆಂದು ರಾಜ ತಿಳಿದುಕೊಂಡಿದ್ದನೆ. ಅವನನ್ನು ವಿಚಾರಿಸಿಕೊಳ್ತೇನೆ ಚಿಂತೆ ಮಾಡಬೇಡ ಎಂದು ಹೆಂಡತಿಗೆ ಸಮಾಧಾನ ಹೇಳಿ ಗುಮಾಸ್ತ ಆ ಬಗ್ಗೆ ಯೋಚಿಸುತ್ತಿದ್ದ.

ಗುಮಾಸ್ತ ತನ್ನೆ ಹೆಂಡತಿಗೆ ಹಾಗೆ ಹೇಳಿದ್ದೇನೊ ಸರಿ, ಆದರೆ ರಾಜನ ಬಳಿ ಈ ಬಗ್ಗೆ ಹೇಗೆ ಮಾತನಾಡುವುದೆಂದು ಅವನಿಗೆ ತಿಳಿಯಲಿಲ್ಲ. ರಾಜ, ತಾನು ಅನುಭವಿಸಿದ್ದು ಗುಮಾಸ್ತನ ಹೆಂಡತಿಯನ್ನು ಎಂದು ನೆನೆಯುತ್ತ ಸಂತೋಷಪಡುತ್ತಿದ್ದಾನೆ. ಇದು ಎಷ್ಟು ಅವಮಾನ ನಮಗೆ. ಹೀಗೆಯೇ ಬಿಟ್ಟರೆ ನಾವು ಮನುಷ್ಯರಲ್ಲ, ಹೇಗಾದರೂ ಮಾಡಿ ರಾಜನಿಗೆ ಹೇಳಲೇಬೇಕು. ನೀವು ಅನುಭವಿಸಿದ್ದು ನನ್ನ ಹೆಂಡತಿಯನ್ನಲ್ಲ; ಕೆಲಸದವಳನ್ನು ಎಂದು ಹೇಳಲೇಬೇಕು. ಇದಕ್ಕೇನು ದಾರಿ ಎಂದು ರಾತ್ರಿಯಿಡೀ ಯೋಚಿಸುತ್ತಿದ್ದನು. ತಲೆ ಕೆಟ್ಟು ಹೋಗಿ ಮರುದಿನ ಗುಮಾಸ್ತ ಕೆಲಸಕ್ಕೆ ಹೋಗುತ್ತಾನೆ. ಅರಮನೆಗೆ ಹೋಗುವ ದಾರಿಯಲ್ಲಿ ಅವನಿಗೊಂದು ಯೋಚನೆ ಹೊಳೆಯಿತು. ಕೂಡಲೇ ರಾಜನಲ್ಲಿಗೆ ಹೋಗುವನು. ರಾಜನನ್ನು ಕಂಡು, ಈ ಜಾಣ್ಮೆ ಕಥೆಯನ್ನು ಹೇಳುತ್ತಾನೆ. ಈ ಕಥೆಯನ್ನು ಬಿಡಿಸಿದರೆ ಮಾತ್ರ ನಾನು ಇನ್ನು ಮುಂದೆ ಕೆಲಸಕ್ಕೆ ಬರುತ್ತೇನೆ. ಇಲ್ಲದಿದ್ದರೆ ಕೆಲಸಕ್ಕೆ ಬರುವುದಿಲ್ಲ ಎಂದು ಹೇಳಿ ಮನೆಗೆ ಬರುತ್ತೇನೆ’ ಎಂಬ ನಿಬಂಧನೆಯೊಂದಿಗೆ ಜಾಣ್ಮೆಯ ಉತ್ತರ ಕಥೆಯಾಗಿಯೇ ಮುಕ್ತಾಯವಾಗುತ್ತದೆ.

ಇಲ್ಲಿ ‘ಜಾಣ್ಮೆ ಕಥೆಯು- ಅದಕ್ಕೆ ಉತ್ತರವೂ ಹೊಂದುವಂತೆ ಕಾಣಿಸಲಾಗಿದೆ. ಒಗಟಿನಲ್ಲಿ ‘ಕಡಲೆಯನ್ನು ಬಿಟ್ಟು ತೊಗರಿಯನ್ನು ತಿನ್ನು’ ಎಂಬ ಬುದ್ಧಿವಂತಿಕೆಗೆ ಸರಿಹೊಂದುವ ಘಟನೆಗಳು ಉತ್ತರವಾಗಿ ಕಥೆಯಲ್ಲಿ ಬರುತ್ತವೆ. ಆದ್ದರಿಂದ ಕೇಳುಗರು ಒಗಟನ್ನು ಹೇಳುವ ವೇದಿಕೆಯಲ್ಲಿ ಈ ಕಥೆಯನ್ನು ಪ್ರಸ್ತುಪಡಿಸಬಹುದೆಂದು ಅದನ್ನು ಸ್ವೀಕರಿಸಿದರು.

ಒಟ್ಟಿನಲ್ಲಿ ಜಾಣ್ಮೆ ಕಥೆ ಎಂಬುದು ಒಗಟು ಹೇಳುವ ಜಾಗದಲ್ಲಿ ಕಥೆ ಹೇಳುವಂತೆ ಪ್ರಸ್ತುತಗೊಳ್ಳುತ್ತದೆ. ಹಾಗಿದ್ದರೂ ಆ ಸಂದರ್ಭದಲ್ಲಿ ಕೇಳುಗರು ಕಥೆಯ ಅಂತ್ಯವನ್ನು ಕಥೆ ಹೇಳುವವರು ಮುಕ್ತಾಯ ಮಾಡುವುದನ್ನು ನಿರೀಕ್ಷಿಸುವುದಿಲ್ಲ. ಬದಲಾಗಿ ಒಗಟು ಬಿಡಿಸಲಾಗಿದೆಯೆ ? ಒಗಟಿನಲ್ಲಿ ಜಾಗ ಪಡೆದುಕೊಂಡಿರುವ ನವೀನತೆಯೂ ಅದನ್ನು ಬಿಡಿಸಲು ಹೇಳಲಾದ ಕಥೆಯೂ ಹೊಂದಿಕೊಳ್ಳುವಂತೆ ಇದೆಯೆ? ಉತ್ತರ ಸ್ವೀಕರಿಸಲು ಅನುಕೂಲಕರವಾಗಿದೆಯೆ? ಎಂಬುದನ್ನು ಹೆಚ್ಚಾಗಿ ಗಮನಿಸುತ್ತಾರೆ. ಒಂದು ಸಭೆಯಲ್ಲಿ ಪ್ರಸ್ತುಪಡಿಸುವ ಕಥೆಯ ರೂಪದ ಜಾಣ್ಮೆಕಥೆ ಅಥವಾ ಉತ್ತರವಾಗಿ ಹೇಳಲಾಗುವ ಕಥೆ ಯಾವುದೇ ಇದ್ದರೂ ಅದನ್ನು ಅರ್ಥಮಾಡಿಕೊಂಡಲ್ಲಿ ಆ ಒಗಟೂ ಉತ್ತರವೂ ಕೊನೆಯಾಯಿತೆಂದು ತಿಳಿಯಲಾಗುವುದು. ಕಥೆಯ ಮುಕ್ತಾಯದ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಇಲ್ಲಿ ಹೇಳಲಾದ ಜಾಣ್ಮೆ ಕಥೆಗಳು ಕಥೆಯನ್ನು ಹೇಳುವ ಸಭೆಯಲ್ಲಿ ಅದೇ ನಿರ್ವಾಹಕರಿಂದ ಕಥೆಯಾಗಿ ಮಂಡನೆಯಾಗುತ್ತದೆ. ಆಗ ಕಥೆಗೆ ಮುಕ್ತಾಯ ಹೇಳಲಾಗುತ್ತದೆ. ಹೇಳುವವರ ಜಾಣ್ಮೆಯಿಂದಾಗಿ ಒಗಟು ಬಿಡಿಸಿಕೊಳ್ಳುವುದರಿಂದ ಕಥೆ ಮತ್ತಷ್ಟು ಬೆಳೆದು ಅಂತ್ಯಗೊಳ್ಳುತ್ತದೆ.

.ಕೆ. ಅನುವಾದ ಬಿ.ಎಸ್.ಎಸ್.