ಪೂಕ್ಕಳಂ ಕೇರಳದ ದೇಶೀಯ ಹಬ್ಬ ಓಣಂನ ಆಚರಣೆಯ ಅಂಗವಾಗಿ ಪೊಕ್ಕಳಂ (ಹೂವಿನ ರಂಗೋಲಿ) ಪ್ರತ್ಯಕ್ಷವಾಗುತ್ತದೆ. ಇದನ್ನು ಓಣಪೂಕ್ಕಳಂ ಎಂದೂ ಅತ್ತಪ್ಪೂಕ್ಕಳಂ ಎಂದೂ ಕರೆಯುತ್ತಾರೆ. ಸಿಂಹಮಾಸದ (ಅತ್ತ = ಹಸ್ತ ನಕ್ಷತ್ರದ ಹೆಸರು) ದಿನ ಮೊದಲ್ಗೊಂಡು ತಿರುವೋಣಂವರೆಗಿನ ಹತ್ತು ದಿನಗಳಲ್ಲಿ ಕೇರಳೀಯರು ಓಣವನ್ನು ಆಚರಿಸುತ್ತಾರೆ. ಈ ಮನೆಯ ಅಂಗಳದಲ್ಲಿ ಅತ್ತಪ್ಪೂಕ್ಕಳಂ ರಚಿಸುತ್ತಾರೆ. ಸಾಮಾನ್ಯವಾಗಿ ಇದರ ರಚನೆಯಲ್ಲಿ ಮಕ್ಕಳೂ ಸ್ತ್ರೀಯರೂ ಪಾಲ್ಗೊಳ್ಳುತ್ತಾರೆ.

ಹಿಂದಿನ ದಿನವೇ ಮಕ್ಕಳು ಬಯಲುಗಳಲ್ಲೂ ಗುಡ್ಡಗಳಲ್ಲಿಯೂ ಸಿಗುವ ನಾನಾ ಆಕಾರದ ನಾನಾ ಬಣ್ಣದ ಹೂಗಳನ್ನು ಕೊಯ್ದು ಸಂಗ್ರಹಿಸುತ್ತಾರೆ. ಮರುದಿನ ಬೆಳಗ್ಗೆ ಅಂಗಳವನ್ನು ಗುಡಿಸಿ ಶುಚಿಗೊಳಿಸಿ ಪೂಕ್ಕಳಂ ಬಾಕುವ ಜಾಗದಲ್ಲಿ ಸೆಗಣಿ ಸಾರಿಸುತ್ತಾರೆ. ಬಳಿಕ ಪೂಕಳವನ್ನು ಬರೆಯುತ್ತಾರೆ. ಬರೆದ ಕಳಂಗಳಲ್ಲಿ ಬಣ್ಣಗಳ ಹೊಂದಾಣಿಕೆಗನುಸಾರವಾಗಿ ಹೂಗಳನ್ನು ವಿನ್ಯಾಸಗೊಳಿಸುತ್ತಾರೆ. ಸಾಮಾನ್ಯವಾಗಿ ಪೂಕ್ಕಳಂ ವೃತ್ತಾಕೃತಿಯಲ್ಲಿ ರಚನೆಯಾಗುತ್ತದೆ. ವೃತ್ತದೊಳಗೆ ಕಿರುವೃತ್ತಗಳು, ವಿವಿಧ ವಿನ್ಯಾಸಗಳು ಕೋನಗಳು ಮುಂತಾದವು ರಚನೆಯಾಗುತ್ತವೆ. ಮಧ್ಯದಲ್ಲಿ ದೊಡ್ಡ ಒಂದು ಹೂವನ್ನಿಡುವ ಪದ್ಧತಿಯಿದೆ. ಇದು ನೈದಿಲೆ ಅಥವಾ ತಾವರೆಯಾಗಬಹುದು. ಕೆಲವೆಡೆ ತುಂಬೆ ಹೂವಿನ ಒಂದು ಸಣ್ಣರಾಶಿ ಪೂಕ್ಕಳಂನ ಮಧ್ಯದಲ್ಲಿ ಪ್ರತ್ಯಕ್ಷವಾಗುತ್ತದೆ.

ಕೊಚ್ಚಿ ಪ್ರದೇಶದಲ್ಲಿ ಪೂಕ್ಕಳಂಗಳ ಮಧ್ಯೆ ತೃಕ್ಕಾಕರಪ್ಪನ (ಶಿವ) ಪ್ರತೀಕವಾದ ಸ್ತೂಪಬಿಂಬಗಳನ್ನು ಇರಿಸುತ್ತಾರೆ. ಇನ್ನು ಕೆಲವೆಡೆ ಪೂಕ್ಕಳಂಗಳ ಹೊರಗೆ ತೃಕ್ಕಾಕರಪ್ಪನಿಗೆ ಜಾಗ ನೀಡುತ್ತಾರೆ. ಕೇರಳದ ದಕ್ಷಿಣ ಭಾಗಗಳಲ್ಲಿ ಪರಂಪರೆಯಿಂದ ತೃಕ್ಕಾಕರಪ್ಪನ ಬಿಂಬಗಳನ್ನು ಇಡುವುದಿಲ್ಲ. ತಿರುವೋಣಂ ದಿವಸ ಕೆಲವು ಮನೆಗಳಲ್ಲಿ ಪೂಕ್ಕಳಂ ಹತ್ತಿರ ಹೂಗೊಂಚಲೊಂದಿಗೆ ಬತ್ತ ತುಂಬಿದ ಕಳಸಿಗೆ (ಹತ್ತೂವರೆ ಬಳ್ಳದ ಅಳತೆಯ ಮರದ ಸಾಧನ), ಉರಿಸಿದ ದೀಪ ಇಡುತ್ತಾರೆ.

ಹೂಗಳನ್ನು ಶೇಖರಿಸಲು ಹೋಗುವಾಗ ಮಕ್ಕಳು ಹಾಡುವ ಪದ್ಯಕ್ಕೆ ‘ಪೂಪರಿಕ್ಕಲ್ ಪಾಟ್ಟ್’ (ಹೂಕೊಯ್ಯುವ ಹಾಡು) ಎಂದು ಹೆಸರು. ಬೇರೆ ಬೇರೆ ಹೂಗಳ ಹೆಸರುಗಳನ್ನು ಮಾಲೆಯಂರೆ ಸೇರಿಸಿ ಹಾಡಲಾಗುತ್ತದೆ. ಕಾಗೆ ಹೂ, ಅಕ್ಕಿ ಹೂ, ಹಳದಿ ಬಣ್ಣದ ಓಣಹೂ, ಚೇರಣೆ (ಮ.) ಹೂ, ಕೋಳಂಬಿ (ಮ.) ಹೂ, ತೆಚ್ಚಿ (ಮ.) ಹೂ, ಶಂಖಪುಷ್ಟ, ಸೇವಂತಿಗೆ ಉಪಯೋಗಿಸುತ್ತಾರಾದರೂ ತುಂಬೆಹೂ ಪೂಕ್ಕಳವೊಂದರಲ್ಲಿ ಉಪಯೋಗಿಸಲ್ಪಡಲೇಬೇಕೆಂಬ ಕಡ್ಡಾಯ ಕೆಲವು ಕಡೆಗಳಲ್ಲಿದೆ. ಜೇಡಿ ಅಥವಾ ಆವೆಮಣ್ಣು ಇಲ್ಲವೇ ಅಕ್ಕಿಹಿಟ್ಟಿನಿಂದ ‘ಕಳಂ’ಗಳನ್ನು ಮೊದಲು ರಚಿಸಿಕೊಂಡು ಅದರಲ್ಲಿ ಹೂಗಳನ್ನು ಹಾಕುವ ಕ್ರಮವೂ ಕೆಲವು ಕಡೆಗಳಲ್ಲಿವೆ.

ಮಧ್ಯ ತಿರುವಾಂಕೂರಿನ ಕೆಲವು ಗ್ರಾಮಗಳಲ್ಲಿ ಕಂಡು ಬರುವ ಒಂದು ವೈಶಿಷ್ಟ್ಯಪೂರ್ಣ ಆಚರಣೆ ‘ಹೂ ಬಾಚುವುದು’ (ಪೂವಾರಲ್. ಮ.) ವರ್ಷವೊಂದರಲ್ಲಿ ಕೊನೆಯ ಬಾರಿಗೆ ಪೂಕ್ಕಳಂ ರಚಿಸುವುದೆಂದರೆ ತಿರುವೋಣಂ ದಿವಸ. ಅಂದು ರಾತ್ರಿ ‘ತಿರುವೋಣಂ ಪೂಕ್ಕಳಂ’ನ ಹೂಗಳನ್ನು ಬಾಚುವುದೇ ಪ್ರಸ್ತುತ ಆಚರಣೆ. ಒಬ್ಬ ಬಾಲಕನಾಗಲಿ ಬಾಲಿಕೆಯಾಗಲಿ ಪೂಕ್ಕಳಂನ ಬಳಿ ಬಂದು ಕುಳಿತು ಕೊಳ್ಳುತ್ತಾನೆ/ಳೆ. ಸುತ್ತಲೂ ಇರುವವರು ಕೂಗಾಗಿ ಗುಲ್ಲೆಬ್ಬಿಸುತ್ತಾ ಇರುತ್ತಾರೆ. ಈ ಗಲಭೆಯ ಮಧ್ಯೆ ಯಾವಾಗಲೋ ಬಾಲಕನಾಗಲಿ ಬಾಲಿಕೆಯಾಗಲಿ ಆವೇಶದಿಂದ ಕುಣಿದು ಪೂಕ್ಕಳಂನ ಹೂಗಳನ್ನು ಬಾಚಿ ಎಸೆಯುತ್ತಾನೆ/ಳೆ.

ರೂಢಿಯಲ್ಲಿ ಪೂಕ್ಕಳಂ ವೃತ್ತಾಕಾರದಲ್ಲಿರುವುದಾದರೂ ಕೆಲವರು ಪ್ರಯೋಗವೆಂದೋ ಪರಿಷ್ಕಾರವೆಂದೋ ಇತರ ಆಕೃತಿಗಳನ್ನು ಬರೆದು ಪೂಕ್ಕಳಂ ರಚಿಸುತ್ತಾರೆ. ಪತಂಗ, ಆನೆ, ಕಳಸಿಗೆ, ಕಾಲುದೂಪ, ಕೇರಳದ ಭೂಪಟ ಇತ್ಯಾದಿ ರೇಖಾಚಿತ್ರಗಳನ್ನು ರಚಿಸಿ ಅದರಲ್ಲಿ ಹೂಗಳನ್ನು ತುಂಬುವುದನ್ನು ಇಂದು ಕಾಣುತ್ತೇವೆ. ಓಣಮಿಗೆ ಸಂಬಂಧಿಸಿದಂತೆ ಬಹಳ ವ್ಯಾಪಕವಾಗಿ ಇಂದಿಗೂ ಪೂಕ್ಕಳಂ ರಚನೆಯ ರೂಢಿ ಒಂದು ಸಂಪ್ರದಾಯವೇ ಆಗಿ ಬಿಟ್ಟಿದೆ. ಓಣಂ ಕಾಲದಲ್ಲಿ ವಿವಿಧ ಸಂಘ ಸಂಸ್ಥೆಗಳೂ ಕಛೇರಿಗಳೂ ‘ಅತ್ತಪ್ಪೂಕ್ಕಳಂ’ ಸ್ಪರ್ಧೆಯನ್ನು ಏರ್ಪಾಡು ಮಾಡುತ್ತವೆ. ಇಂದು ಕೇರಳದಲ್ಲಿ ಹೂಗಳು ಕಡಿಮೆಯಾಗಿರುವ ಕಾರಣಕ್ಕೆ ಇತರ ರಾಜ್ಯಗಳಿಂದ ಹೂಗಳನ್ನು ತರಿಸಿಕೊಳ್ಳಲಾಗುತ್ತದೆ. ದೊಡ್ಡ ದೊಡ್ಡ ಸಂಸ್ಥೆಗಳು ಓಣಂ ಕಾಲದಲ್ಲಿ ತಮ್ಮ ಹೆಗ್ಗಳಿಕೆಯನ್ನು ಮೆರೆಸುವುದಕ್ಕಾಗಿ ಹತ್ತಾರು ಸಾವಿರ ರೂಪಾಯಿಗಳ ಹೂಗಳನ್ನು ಖರೀದಿಸಿ ವೃತ್ತಿ ಕಲಾವಿದರಿಂದ/ ಪರಿಣತರಿಂದ ಪೂಕ್ಕಳವನ್ನು ರಚನೆ ಮಾಡಿಸುತ್ತಾರೆ.

ಪೂಕ್ಕಳದ ಮೂಲಕ ಬೆಳಕಿಗೆ ಬರುವ ವಿಚಾರವೆಂದರೆ ಜನಪದರಿಗೆ ಬಣ್ಣಗಳ ಮೇಲೆ ಇರುವ ಅತೀವ ಆಸಕ್ತಿ ಎನ್ನಬಹುದು. ಗ್ರಾಮೀಣ ಜನತೆಯ ಕಲಾಪರಿಣತಿ, ವರ್ಣಕೌಶಲ, ಶಿಲ್ಪಚಾತುರ್ಯ, ಕೈಚಳಕ ಮುಂತಾದವುಗಳಿಗೆ ಪ್ರತಿಯೊಂದು ಪೂಕ್ಕಳಂಗಳು ಉತ್ಕೃಷ್ಟ ಉದಾಹರಣೆಗಳಾಗಿವೆ.

.ಕೆ.ಎನ್. ಅನುವಾದ ಕೆ.ಕೆ.

 

ಪೂಚ್ಚಿಯಮ್ಮನ್ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಸತ್ತವರನ್ನು ದೇವರಂತೆ ಪೂಜಿಸುವ ಕ್ರಮ ರೂಢಿಯಲ್ಲಿರುವುದನ್ನು ಗುರುತಿಸಬಹುದು. ಅಂದರೆ ಅಂತರ್ಜಾತಿ ಪ್ರೇಮದಿಂದ ಪ್ರೇಮಿಗಳು ಕೊಲೆಯಾಗಿ ಅನಂತರ ಅವರು ದೇವರಾಗಿರುವವರಲ್ಲಿ ಪೂಚ್ಚಿಯಮ್ಮನ್ ಸಹ ಒಬ್ಬಳಾಗಿದ್ದಾಳೆ.

ಪೂಚ್ಚಿಯಮ್ಮನ್‌ ಮತ್ತು ಪಟ್ಟುವರಾಯನ್ ಅಂತರ್ಜಾತಿ ಪ್ರೇಮಕ್ಕಾಗಿ ಕೊಲೆಯಾಗುತ್ತಾರೆ. ಅನಂತರ ಇವರು ದೇವರಾಗುತ್ತಾರೆ. ಉಳುಕ್ಕುಡಿ ಎಂಬ ಗ್ರಾಮದಲ್ಲಿ ಇವರ ದೇಗುಲವಿದೆ. ಇಲ್ಲಿ ಕೋನಾರ್‌ ಸಮಾಜದವರು ಈ ದೇವರನ್ನು ಪೂಜಿಸಿಕೊಂಡು ಬರುತ್ತಿದ್ದಾರೆ. ಉಳಕ್ಕುಡಿ ಗ್ರಾಮಕ್ಕೆ ಸಮೀಪವಿರುವ ಆಲಂದಾ ಎಂಬ ಗ್ರಾಮದಲ್ಲೂ ಪೂಚ್ಚಿಯಮ್ಮನಿಗೆ ದೇವಸ್ಥಾನವಿದೆ. ಆಲಂದಾ ಗ್ರಾಮದಲ್ಲಿ ಈ ದೇವರನ್ನು ದೇವೇಂದ್ರಕುಲ ವೇಳಾಳರ್ ಸಮಾಜದವರು ಪೂಜಿಸಿಕೊಂಡು ಬರುತ್ತಿದ್ದಾರೆ.

ಈ ದೇಗುಲದಲ್ಲಿ ವರ್ಷ ಬಿಟ್ಟು ವರ್ಷ ಜಾತ್ರೆ ನಡೆಯುವುದು ರೂಢಿಯಲ್ಲಿದೆ. ಎರಡು ಜಾತಿಯವರಿಗೆ ಬೇರೆ ಬೇರೆ ದೇಗುಲ ಇರುವುದರಿಂದ ಜಾತ್ರೆ ಉತ್ಸವಗಳನ್ನು ಬೇರೆ ಬೇರೆಯಾಗಿಯೇ ನಡೆಸುತ್ತಾರೆ. ದೇಗುಲದ ಛತ್ರದಲ್ಲಿ ಪೊಯ್ಲಾಪೂಚ್ಚಿಯಮ್ಮನ್, ಪಟ್ಟವರಾಯಸ್ವಾಮಿ ಕುರಿತ ಕತೆಯನ್ನು ವಿಲ್ಲುಪ್ಪಾಟ್ಟಾಗಿ ಪ್ರದರ್ಶಿಸುತ್ತಾರೆ. ಇದರಲ್ಲಿ ‘ಪಡಕಳಮ್’ ಎಂಬ ಆಚರಣೆ ಮುಖ್ಯವಾದುದಾಗಿದೆ. ಕಥೆಯಲ್ಲಿ ಪೂಚ್ಚಿಯಮ್ಮನ ಶಿರವನ್ನು ಕತ್ತರಿಸುವುದರಿಂದ ಆ ಶಿರ ಉರುಳಿ, ಮುತ್ತೈಯ್ಯ ಪಾಂಡಿಯನ್ ತಲೆ ಕತ್ತರಿಸಲ್ಪಟ್ಟ ಭಾಗಕ್ಕೆ ಬರುತ್ತದೆ. ಇದನ್ನು ಪ್ರದರ್ಶಿಸಿ ತೋರಿಸುವ ಹೆಣ್ಣು ವೇಷದವರು ಮೈಮೇಲೆ ದೇವರು ಬಂದ ಹಾಗೆ ಸ್ವಲ್ಪ ದೂರ ಉರುಳಿ ಬರುತ್ತಾರೆ.

ಕೊಡೈಹಬ್ಬವನ್ನು ತಮಿಳು ತಿಂಗಳಿನ ಪ್ರಕಾರ ಅನಿ (ಜ್ಯೇಷ್ಠಮಾಸ) ತಿಂಗಳ ಸೋಮವಾರ ಮತ್ತು ಮಂಗಳವಾರ ನಡೆಸಲಾಗುತ್ತದೆ. ಬೆಳಗಿನ ಜಾತ್ರೆಯಲ್ಲಿ ಊರಿನಲ್ಲಿರುವ ಹೆಂಗಸರು ಊರಿನ ನಾಯಕನ ಆಡನ್ನು ಬಲಿಕೊಡುತ್ತಾರೆ. ಕೋನಾರ್‌ಸಮಾಜದವರ ದೇಗುಲಗಳಲ್ಲಿ ನೂರಕ್ಕು ಹೆಚ್ಚು ಆಡುಗಳನ್ನು ಬಲಿ ಕೊಡಲಾಗುತ್ತದೆ. ದೇವೇಂದ್ರ ಕುಲ ವೇಳಾಳರ್ ಸಮಾಜದವರ ದೇಗುಲದಲ್ಲಿ ಅರವತ್ತಕ್ಕೂ ಮೇಲ್ಪಟ್ಟು ಆಡುಗಳನ್ನು ಬಲಿಕೊಡುತ್ತಾರೆ. ಇದಲ್ಲದೆ ಮಕ್ಕಳಿಗೆ ಮುಡಿಕೊಡುವುದು, ಕಿವಿ ಚುಚ್ಚುವುದು ಮೊದಲಾದ ಆಚರಣೆಗಳು ಕೋವಿಲ್ ಜಾತ್ರೆಯ ಸಂದರ್ಭದಲ್ಲಿ ಜರುಗುತ್ತದೆ.

ಪೂಚ್ಚಿಯಮ್ಮನ್ ಮತ್ತು ಪಟ್ಟವರಾಯರ ಪ್ರೇಮ ವೃತ್ತಾಂತ : ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ವಲ್ಲನಾಡು ಎಂಬ ಗ್ರಾಮದಲ್ಲಿ ಪಟ್ಟವರಾಯನ್ ಎಂಬ ‘ಮರವರ್’ ಜಾತಿಯ ಯುವಕ ದನದ ವ್ಯಾಪಾರವನ್ನು ಮಾಡಿಕೊಂಡು ಇರುತ್ತಾನೆ. ವ್ಯಾಪಾರದ ನಿಮಿತ್ತ ಪಾವೂರ್ ಎಂಬ ಗ್ರಾಮ್ಕಕೆ ಹೋದಾಗ ‘ಪೊಯ್ಲಾಪೂಚ್ಚಿ’ ಎಂಬ ದೇವೇಂದ್ರ ಕುಲ ವೇಳಾಳರ ಜಾತಿಯ ಹುಡುಗಿಚಯನ್ನು ನೋಡಿ ಅವಳ ಸೌಂದರ್ಯಕ್ಕೆ ಮಾರುಹೋಗುತ್ತಾನೆ. ಅವಳನ್ನು ಪಡೆಯಬೇಕೆಂಬ ಬಯಕೆಯಿಂದ ಅವಳ ಪೋಷಕರೊಡನೆ ಒಡನಾಟ ಇಟ್ಟುಕೊಂಡಿರುತ್ತಾನೆ. ಅನಮತರ ಒಂದು ದಿನ ಯಾರಿಗೂ ತಿಳಿಯದ ಹಾಗೆ ಪೊಯ್ಲಾಪೂಚ್ಚಿಯನ್ನು ಕರೆದುಕೊಂಡು ಬರುತ್ತಾನೆ. ಜೊತೆಗೆ ಪೂಚ್ಚಿ, ಆಚ್ಚಿ ಎಂಬ ಎರಡು ನಾಯಿಗಳನ್ನು ಕರೆದುಕೊಂಡು ಬರುತ್ತಾನೆ. ಅವರು ಉಳಕ್ಕುಡಿ ಎಂಬ ಗ್ರಾಮಕ್ಕೆ ಹತ್ತಿರವಿರುವ ಜಾಲಿಮರದ ದಟ್ಟ ಕಾಡಿನಲ್ಲಿ ತಂಗುತ್ತಾರೆ. ಪಟ್ಟವರಾಯನು ಜೀವನೋಪಾಯಕ್ಕಾಗಿ ಆ ಭಾಗದಲ್ಲಿ ಮೇಯುವ ಆಡುಗಳಲ್ಲಿ ಒಂದನ್ನು ಕದ್ದು ತಂದು ಬೇಯಿಸಿ ತಿನ್ನುವುದನ್ನು ರೂಢಿ ಮಾಡಿಕೊಳ್ಳುತ್ತಾನೆ.

ಅತ್ತ ಪೊಯ್ಲಾಪೂಚ್ಚಿಯನ್ನು ಹುಡುಕಿಕೊಂಡು ಅವಳ ಏಳು ಮಂದಿ ಅಣ್ಣಂದಿರು ಅಲೆಯುತ್ತಾರೆ. ಅನಂತರ ಆಡು ದನ ಮೇಯಿಸುವರ ಹತ್ತಿರ ತಮ್ಮ ತಂಗಿಯ ಬಗ್ಗೆ ವಿಚಾತಿಸುತ್ತಾರೆ. ಅದಕ್ಕೆ ಆಯರುಗಳು (ದನಕುರಿ ಮೇಯಿಸುವರು) “ಇಲ್ಲಿ ಬೇರೆ ಯಾರನ್ನು ನಾವು ನೋಡಿಲ್ಲ; ಆದರೆ ಪ್ರತಿನಿತ್ಯವೂ ನಮ್ಮ ಆಡೊಂದು ಕಾಣದೆ ಹೋಗುತ್ತದೆ. ಅದಲ್ಲದೆ ಕಾಡಿನ ಮಧ್ಯೆ ಮಧ್ಯಾಹ್ನದ ವೇಳೆಯಲ್ಲಿ ಒಲೆ ಉರಿಯುತ್ತದೆ. ನೀವು ಅಲ್ಲಿ ಹೋಗಿ ನೋಡಿ” ಎಂದು ಹೇಳುತ್ತಾರೆ.

ಆಯರುಗಳು ತೋರಿಸಿದ ಕಾಡಿನ ಭಾಗಕ್ಕೆ ಪೊಯ್ಲಾಪೂಚ್ಚಿಯ ಅಣ್ಣಂದಿರು ಬರುತ್ತಾರೆ. ಅಲ್ಲಿ ಪೊಯ್ಲಾಪೂಚ್ಚಿಯ ಮಡಿಲಿನಲ್ಲಿ ಪಟ್ಟವರಾಯನು ಮಲಗಿರುತ್ತಾನೆ. ಅಂತೆಯೇ ಹತ್ತಿರದಲ್ಲಿ ಎರಡು ನಾಯಿಗಳು ಸಹ ನಿದ್ರಿಸುತ್ತಿರುತ್ತವೆ. ಪೊಯ್ಲಾವಿನ ಅಣ್ಣಂದಿರು ಕೋಪದಿಂದ ನಿದ್ರಿಸುತ್ತಿದ್ದ ಪಟ್ಟವರಾಯನನ್ನು ಈಟಿಯಿಂದ ಚುಚ್ಚಿಕೊಲ್ಲುತ್ತಾರೆ. ಎರಡು ನಾಯಿಗಳನ್ನು ಸಹ ಕೊಲ್ಲುತ್ತಾರೆ. ತಂಗಿಯನ್ನು ತಮ್ಮೊಡನೆ ಊರಿಗೆ ಬರುವಂತೆ ಬಲವಂತಪಡಿಸುತ್ತಾರೆ. ಆದರೆ ಅವಳು ತಿರಸ್ಕರಿಸಿ ತನ್ನ ಕತ್ತನ್ನು ಕತ್ತರಿಸಿಕೊಂಡು ಮರಣವನ್ನಪ್ಪುತ್ತಾಳೆ.

ಕೊನೆಗೆ ಪೊಯ್ಲಾಪೂಚ್ಚಿಯ ಅಣ್ಣಂದಿರು ಪೊಯ್ಲಾಪೂಚ್ಚಿ, ಪಟ್ಟವರಾಯ ಮತ್ತು ಎರಡು ನಾಯಿಗಳನ್ನು ಒಟ್ಟಿಗೆ ಇಟ್ಟು ಬೆಂಕಿ ಹಚ್ಚುತ್ತಾರೆ. ಉರಿದ ದೇಹದ ಭಸ್ಮವನ್ನು ನದಿಯಲ್ಲಿ ತೇಲಿಬಿಟ್ಟು ತಮ್ಮ ಊರಿಗೆ ಹಿಂತಿರುಗುತ್ತಾರೆ.

ಪೊಯ್ಲಾಳ ಅಣ್ಣಂದಿರು ಹಿಂದಿರುಗುವಾಗ ದಾರಿಯಲ್ಲಿ ಎಲ್ಲರು ಮರಣವನ್ನು ಅಪ್ಪುತ್ತಾರೆ. ಪ್ರೇಮಿಗಳಿರುವ ಸ್ಥಳಗಳನ್ನು ತೋರಿಸಿ ಕೊಟ್ಟ ಆಯರುಗಳ ಆಡುಗಳು ಸಹ ರೋಗಕ್ಕೆ ಸಿಲುಕಿ ಸತ್ತು ಹೋಗುತ್ತವೆ. ಅದಕ್ಕೆ ಪರಿಹಾರಾರ್ಥವಾಗಿ ಪಟ್ಟವರಾಯ ಮತ್ತು ಪೊಯ್ಲಾಪೂಚ್ಚಿಗೆ ಅಲ್ಲಿ ದೇಗುಲ ಕಟ್ಟಿ ನಿಗದಿತ ಸಮಾಜದವರು ಪೂಜಿಸಿಕೊಂಡು ಬರುತ್ತಿದ್ದಾರೆ.

ಪೂಚ್ಚಿಯಮ್ಮನಿಗೆ ಕಾಡಿನಲ್ಲಿ ಅಡುಗೆ ಮಾಡಲು ಪಾತ್ರೆಗಳನ್ನು ಕೊಟ್ಟು ಸಹಕರಿಸಿದ ದೇವೇಂದ್ರ ಕುಲ ವೇಳಾಳ ಸಮಾಜದವರು ಉಳಕ್ಕುಡಿ ಮತ್ತು ಆಲಂದಾ ಗ್ರಾಮಗಳ ಮಧ್ಯೆ ದೇಗುಲ ನಿರ್ಮಿಸಿ ಪೂಜಿಸಲು ಆರಂಭಿಸಿದರು. ಇದುವೇ ಪೊಯ್ಲಾ ಪೂಚ್ಚಿ ಎಂಬ ಯುವತಿ ಪೂಚ್ಚಿಯಮ್ಮನ್ ಎಂಬ ದೇವತೆಯಾಗಿಯೂ ಮತ್ತು ಪಟ್ಟಬಿರಾನ್ ಎಂಬ ಯುವಕ ಪಟ್ಟವರಾಯ ಎಂಬ ದೇವನಾಗಿ ಬದಲಾದ ಕಥೆಯಾಗಿದೆ.

ತಮಿಳುನಾಡಿನಲ್ಲಿ ಭಯಾನಕ ರೀತಿಯಲ್ಲಿ ಅಂದರೆ ಆತ್ಮಹತ್ಯೆ ಮಾಡಿಕೊಂಡೋ, ಕೊಲೆ ಮಾಡಲ್ಪಟ್ಟೋ ಯಾರಾದರೂ ಸತ್ತರೆ ಅವರ ಆತ್ಮ ಮುಕ್ತಿ ಹೊಂದರೆ ಅಲೆದು ಕೊಂಡಿರುತ್ತದೆ ಎಂಬ ನಂಬಿಕೆ ಜನರ ಮಧ್ಯೆ ಇಂದಿಗೂ ಇದೆ. ಅಲ್ಲದೆ ಆಯುಷ್ಯ ಮುಗಿದೆ ಸಾವನ್ನಪ್ಪಿದ್ದರಿಂದ ಪಿಶಾಚಿಯಾಗಿ ಅಲೆದು ತಮಗೆ ಕಷ್ಟಕೊಡುತ್ತದೆ ಎಂಬ ನಂಬಿಕೆಯನ್ನು ಜನರು ಬೆಳೆಸಿಕೊಂಡಿದ್ದಾರೆ.

ಪಟ್ಟಾರಸ್ವಾಮಿ-ಪೊಯ್ಲಾಪೂಚ್ಚಿ ಕಥೆ ಅಂತರ್ಜಾತಿ ಪ್ರೇಮವನ್ನು ಕಟ್ಟಿಕೊಡುತ್ತದೆ. ದಕ್ಷಿಣ ತಮಿಳುನಾಡಿನಲ್ಲಿ ಬಹು ಹೆಚ್ಚಾಗಿರುವ ದೇವರ್ ಜಾತಿಗೆ ಸೇರಿದ ಯುವಕ, ದೇವೇಂದ್ರಕುಲ ವೇಳಾಳರ ಜಾತಿಗೆ ಸೇರಿದ ಹೆಣ್ಣೊಂದನ್ನು ಪ್ರೇಮಿಸಿದುದರಿಂದ ಹೆಣ್ಣಿನ ಸಹೋದರರಿಂದ ಇಬ್ಬರು ಕೊಲ್ಲಲ್ಪಟ್ಟರು. ಅಲ್ಲದೆ ಮೇಲೆ ತಿಳಿಸಿದ ಜನರ ನಂಬಿಕೆಯ ಹಿನ್ನೆಲೆಯಲ್ಲಿ ಇವರು ದೇವರಾಗಿ ಪೂಜಿಸಿಕೊಂಡು ಬರುತ್ತಿದ್ದಾರೆ. ಈ ರೀತಿಯ ದೇವರು ತಮಿಳುನಾಡಿನಲ್ಲಿ ಹೇರಳವಾಗಿವೆ.

ಟಿ.ಜಿ. ಅನುವಾದ ಆರ್.ಎಸ್.

 

ಪೂಜಾಕುಣಿತ ಶಕ್ತಿ ದೇವತೆಗಳಿಗೆ ಸಂಬಂಧಿಸಿದ ಕುಣಿತ. ಒಳ್ಳೆಯ ಮನರಂಜನೆ ನೀಡುವ ಕಲೆ. ಬೆಂಗಳೂರು, ಮಂಡ್ಯ, ಕೋಲಾರ, ತುಮಕೂರು ಜಿಲ್ಲೆಗಳಲ್ಲಿ ಇದು ಹೆಚ್ಚು ಪ್ರಚಲಿತದಲ್ಲಿದೆ. ಹಬ್ಬದ ಸಂದರ್ಭದಲ್ಲಿ ಗುಡಿಯೊಳಗಿನ ದೇವತೆ ‘ಪೂಜೆ’ಯ ರೂಪದಲ್ಲಿ ಹೊರಬರುತ್ತಾಳೆಂಬ ನಂಬಿಕೆಯಿಂದಾಗಿ, ದೇವತೆಯ ಮುಖವಾಡವನ್ನು ಬಿದಿರಿನ ತಳಿಯ ಮಧ್ಯೆ ಕಟ್ಟಿ ಅದನ್ನು ಹೊತ್ತು ಕುಣಿಯುವುದಕ್ಕೆ ‘ಪೂಜಾಕುಣಿತ’ ಎನ್ನುವರು.

ಪೂಜೆಯನ್ನು ಸುಮಾರು ೫ ಅಡಿ ಉದ್ದ, ೪ ಅಡಿ ಅಗಲವಿರುವ ಬಿದಿರಿನ ದಬ್ಬೆಗಳನ್ನು ಜೋಡಿಸಿ, ಸಿದ್ಧಪಡಿಸಲಾಗುತ್ತದೆ. ಮಂಡ್ಯ ಜಿಲ್ಲೆಯಲ್ಲಿ ಈ ವಿಧಾನಕ್ಕೆ ‘ತಳಿ’ ಎಂದು ಕರೆಯುವುದು ವಾಡಿಕೆ. ಇದರ ಮಧ್ಯಭಾಗದಲ್ಲಿ ಮರದ ಹಲಗೆಯನ್ನು ಜೋಡಿಸಿ ಅದಕ್ಕೆ ದೇವತೆಯ ಮುಖವಾಡವನ್ನು ಕಟ್ಟುತ್ತಾರೆ. ಇದರ ಎರಡೂ ಕಥೆಗಳಲ್ಲಿ ತಳಿಯ ಉದ್ದಕ್ಕೂ ಮೇಲ್ತುದಿಯ ಕಳಸದ ಕತ್ತಿನಿಂದ ಭಕ್ತರು ಹರಕೆ ಹೊತ್ತು ಸಲ್ಲಿಸಿರುವ ಬಣ್ಣದ ಸೀರೆಗಳನ್ನು ಇಳಿಬಿಟ್ಟಿರುತ್ತಾರೆ. ತಳಿಯ ನೆತ್ತಿಯನ್ನು ಏಳು ಅಥವಾ ಒಂಬತ್ತು ಹಿತ್ತಾಳೆ ಇಲ್ಲವೆ ಬೆಳ್ಳಿಯ ಕಳಸಗಳಿಂದ ಅಲಂಕರಿಸಿರುತ್ತಾರೆ. ಬೆಳ್ಳಿಯ ಮುಖಸಿರಿ ಹಾಕಿದ ಮುಖವಾಡಕ್ಕೆ ಸೇರಿದಂತೆ ತಳಿಯ ಮೇಲ್ಭಾಗಕ್ಕೆ ತಳಿಯ ಎರಡೂ ಕಡೆಗಳಲ್ಲಿ ಪೂರ್ಣಚಂದ್ರನ ಆಕಾರದ ಹಿತ್ತಾಳೆ ಪಟ್ಟಿಗಳನ್ನು ಕಟ್ಟಿರುತ್ತಾರೆ. ತಳಿಯ ಒಳಗಡೆ ಮುಖವಾಡದ ಎರಡೂ ಬದಿಗೂ ಭಕ್ತಾದಿಗಳು ಹರಕೆ ಹೊತ್ತು ಸಲ್ಲಿಸಿರುವ ಕಡಗ, ಕಾಲುಮುರಿ, ಹಸ್ತ, ಓಲೆ, ಡಾಬು ಮೊದಲಾದ ಆಭರಣಗಳನ್ನಿಟ್ಟು ಅಲಂಕರಿಸಿ, ದೇವಿಯ ವಿಗ್ರಹಕ್ಕೆ ಹೂವಿನ ಹಾರ ಹಾಕಿ ಇಡೀ ತಳಿಯನ್ನು ಹೂವಿನ ಮಾಲೆಯಿಂದ ಅಲಂಕರಿಸಿರುತ್ತಾರೆ. ತಳಿಯ ಹಿಂಬದಿಗೆ ‘ಬೆನ್‌ಬಟ್ಟೆ’ ಕಟ್ಟಿರುತ್ತಾರೆ. ತಳಿಯ ತಳಭಾಗದ ಮಧ್ಯಭಾಗದಲ್ಲಿ ಇದನ್ನು ಹೊತ್ತು ಕುಣಿಯಲು ಅನುಕೂಲವಾಗುವಂತೆ ಕಂಚು ಅಥವಾ ಹಿತ್ತಾಳೆಯ ಒಂದು ಗಿಂಡಿಯನ್ನು ಸೇರಿಸಿ ಬಿಗಿದಿರುತ್ತಾರೆ. ಇದು ತಲೆಯ ಮೇಲೆ ಅಲುಗಾಡದಂತೆ ಕುಳಿತು ಕೊಳ್ಳುತ್ತದೆ. ಈ ಪೂಜೆಯ ಮಧ್ಯಭಾಗದಲ್ಲಿ ಮಾರಮ್ಮ, ಚೌಡಮ್ಮ, ಮುತ್ಯಾಲಮ್ಮ, ಗೌಡಚಂದ್ರಮ್ಮ ಮುಂತಾದ ಸ್ಥಳೀಯ ಗ್ರಾಮದೇವತೆಯರ ವಿಗ್ರಹಗಳನ್ನಿರಿಸಿ ಅಯಾದೇವರ ಪೂಜಾ ಕುಣಿತ ಮಾಡುತ್ತಾರೆ. ಈ ಎಲ್ಲ ದೇವತೆಗಳಿಗೂ ಒಬ್ಬೊಬ್ಬ ಗುಡ್ಡ (ಪೂಜಾರಿ) ನೇಮಕವಾಗಿರುತ್ತಾನೆ. ಈತ ದೇವತೆಯರ ಪೂಜಾರಿ ಮಾತ್ರ. ಪೂಜೆಯನ್ನು ಹೊತ್ತು ಕುಣಿಯುವವರು ಬೇರೆ ಇರುತ್ತಾರೆ.

22_70A_DBJK-KUH

ಹಬ್ಬ ಹರಿದಿನಗಳಲ್ಲಿ ಊರ ದೇವರ ದೇವತೆಯ ಉತ್ಸವಗಳಲ್ಲಿ ಮಾತ್ರವಲ್ಲದೆ ಭಕ್ತಾದಿಗಳು ಹರಕೆ ಮಾಡಿಕೊಂಡಾಗಲೂ ಪೂಜಾ ಕುಣಿತವನ್ನು ಪ್ರದರ್ಶಿಸುತ್ತಾರೆ. ಪೂಜಾ ಕುಣಿತದ ಕಲಾವಿದರ ತಮ್ಮ ಹಳ್ಳಿಯ ವಿಶಾಲವಾದ ಬಯಲು ಅಥವಾ ದೇವರ ಗುಣ ಮುಂಭಾಗದಲ್ಲಿ ಸ್ಥಳದಲ್ಲಿ ಪ್ರದರ್ಶನ ನೀಡುತ್ತಾರೆ. ಪೂಜೆಯನ್ನು ಹೊತ್ತು ಕುಣಿಯುವ ಕಲಾವಿದರು ಹಣೆಗೆ ಕುಂಕುಮ ಇಟ್ಟು, ಬಿಳಿ ಬಣ್ಣ ಬನೀನು, ನಿಕ್ಕರ್ ಅಥವಾ ವೀರಗಾಸೆ ರೀತಿಯಲ್ಲಿ ಪಂಚೆ ಧರಿಸಿ. ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ತಮಟೆ, ನಗಾರಿ, ಡೋಲು ಬಡಿತಕ್ಕೆ ಅನುಗುಣವಾಗಿ ಮೂರ‍್ಹೆಜ್ಜೆ, ನಾಲ್ಕೆಜ್ಜೆ, ಐದ್ಹೆಜ್ಜೆ, ಆರ‍್ಹೆಜ್ಜೆ, ಎಂಟ್ಹೆಜ್ಜೆ, ಹದಿನಾಲ್ಕೆಜ್ಜೆ ಹೀಗೆ ವಿವಿಧ ಲಯಗಳಲ್ಲಿ ಕಲಾವಿದರು ಅನೇಕ ಭಾವಭಂಗಿಗಳಲ್ಲಿ ಬಾಗುತ್ತಾ ಬಳುಕುತ್ತಾ ಕುಣಿಯುತ್ತಾರೆ. ಪರಿಣಿತ ಕಲಾವಿದರು ಪೂಜಾ ಕುಣಿತದಲ್ಲಿ ಅನೇಕ ಚಮತ್ಕಾರಗಳನ್ನು ತೋರುತ್ತಾರೆ. ಕುಶಲ ಕಲಾವಿದ ವಾದ್ಯದ ಬಡಿತಕ್ಕೆ ತಕ್ಕಂತೆ ಪೂಜೆಯನ್ನು ತನ್ನ ಕತ್ತಿನಿಂದಲೇ ಒಂದೊಂದೇ ದಿಕ್ಕಿಗೆ ತಿರುಗಿಸುತ್ತಾನೆ. ಅವನು ಮಾತ್ರ ಸ್ಥಿರವಾಗಿ ಒಂದೇ ದಿಕ್ಕಿಗೆ ಮುಖ ಮಾಡಿಕೊಂಡು ನಿಂತು, ಪೂಜೆ ಮಾತ್ರ ಒಂದು ಸುತ್ತು ಕತ್ತಿನ ಮೇಲೆ ತಿರುಗುವಂತೆ ಮಾಡುವುದು ಬಹಳ ಸೊಗಸಾಗಿರುತ್ತದೆ.

ಭಾರವಾದ ಪೂಜೆಯನ್ನು ಹೊತ್ತು ಸಾಲಾಗಿ ಬೋರಲಿಟ್ಟ ಮಡಿಗಳ ಮೇಲೆ ಅವು ಒಡೆಯದಂತೆ ತಾಳಕ್ಕೆ ತಕ್ಕಂತೆ ಒಂದೊಂದೇ ಹೆಜ್ಜೆ ಇಟ್ಟುಕೊಂಡು ನಡೆಯುವುದಂತೂ ಸೋಜಿಗವೆನಿಸುತ್ತದೆ. ಸಾಮಾನ್ಯವಾಗಿ ಈ ಸಂದರ್ಭದಲ್ಲಿ ಚರ್ಮ ವಾದ್ಯವನ್ನು ಹೊಲೆಯರು ನುಡಿಸುತ್ತಾರೆ. ಜೊತೆಗೆ ಗ್ರಾಮದೇವತೆಯ ಮೇಲೆ ಹಾಡುಗಳನ್ನು ವಿವಿಧ ಜಾತಿಯವರು ಹಾಡುತ್ತಿರುತ್ತಾರೆ.

ಪೂಜಾ ಕುಣಿತದಲ್ಲಿ ಅನೇಕ ವಿಧಗಳಿಗೆ. ತೊಟ್ಟಿಲು ಕುಣಿತ, ಹೆಜ್ಜೆ ಕುಣಿತ, ಗೆಜ್ಜೆ ಕುಣಿತ, ಸುತ್ತು ಕುಣಿತ, ಎದುರು ಕುಣಿತ ಮುಂತಾದವುಗಳಿವೆ. ಕೆಲವು ಪ್ರದೇಶಗಳಲ್ಲಿ ಪೂಜಾ ಕುಣಿತದ ಸಂದರ್ಭದಲ್ಲಿ ಐದಾರು ಜನ ತಮಟೆ ಬಾರಿಸುವವರಿರುತ್ತಾರೆ. ಪೂಜೆ ಹೊತ್ತವರಲ್ಲಿ ಕೆಲವರು ಎಂಟು ಅಥವಾ ಹತ್ತು ವರುಷದ ಬಾಲಕರನ್ನು ಎರಡು ಕಡೆಯ ನಡುವಿನ ಮೇಲೆ ಕೂರಿಸಿಕೊಂಡು ಇಲ್ಲವೆ ಎರಡು ಕೈಯಲ್ಲೂ ಎರಡು ‘ಪಟ’ ಹಿಡಿದುಕೊಂಡು ಕುಣಿಯುವ ಸಾಹಸವನ್ನು ತೋರುತ್ತಾರೆ. ಇದಲ್ಲದೆ ಪೂಜೆ ಹೊತ್ತು ಹಗ್ಗದ ಮೇಲೆ ನಡೆಯುವುದು, ನೆಲದ ಮೇಲಿರಿಸಿದ ನೋಟನ್ನು ತುಟಿಯಿಂದ ಕಚ್ಚಿ ಮೇಲೆತ್ತುವುದರ ಮೂಲಕ ಹಲವು ವಿಶೇಷತೆಗಳನ್ನು ನುರಿತ ಕೆಲವೇ ಕಲಾವಿದರು ಪ್ರದರ್ಶಿಸುತ್ತಾರೆ. ಕೆಲವೊಮ್ಮೆ ಪೂಜಾ ಕುಣಿತಕ್ಕೆ ಒನಕೆ ಕುಣಿತವೂ ಸೇರ್ಪಡೆಯಾಗುತ್ತದೆ. ಇದರಲ್ಲಿ ಪರಿಣತಿ ಹೊಂದಿದ ವ್ಯಕ್ತಿ ಒನಕೆಯನ್ನು ತಲೆಯ ಮೇಲಿಟ್ಟು ಸಮತೋಲನ ಕಾಪಾಡಿಕೊಂಡು ಕುಣಿಯುವುದು ಪೂಜಾ ಕುಣಿತಕ್ಕಿಂತಲೂ ಭಿನ್ನ ಹಾಗೂ ವಿಶಿಷ್ಟವೆನಿಸುತ್ತದೆ.

ಪೂಜಾ ಕುಣಿತ ಗ್ರಾಮ ದೇವತೆಗಳ ಹಬ್ಬ – ಹರಿದಿನ, ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಪೂಜಾ ಕುಣಿತಕ್ಕೆ ಭಯ, ಭಕ್ತಿ, ನೇಮ ನಿಷ್ಠೆಗಳಿವೆ. ಪೂಜೆ ಹೊತ್ತು ಕುಣಿಯುವವರನ್ನು ದೇವರ ಅವತಾರ ಪುರುಷರೆಂದು ಭಾವಿಸಿ ಅವರಿಗೆ ಅಪಾರ ಗೌರವಾದರಗಳು ಸಲ್ಲುತ್ತವೆ. ಹಲವು ಹಬ್ಬಗಳಲ್ಲಿ ಇತರೆ ಊರುಗಳಿಂದ ಆಹ್ವಾನಿಸಲಾದ ಹತ್ತಾರು ದೇವತೆಗಳು ಒಂದೆಡೆ ಸೇರಿ ಹತ್ತಾರು ಪೂಜಾ ಕುಣಿತ ತಂಡಗಳ ನಡುವೆ ಸ್ಪರ್ಧೆ, ಪೈಪೋಟಿ ಏರ್ಪಡುವುದರಿಂದ ಈ ಸ್ಪರ್ಧಾತ್ಮಕ ಕುಣಿತ ನೋಡುವುದು ಕಣ್ಣಿಗೆ ಹಬ್ಬವೆನಿಸುತ್ತದೆ.

ವಿ.ಎಂ.

 

ಪೂತನುಂ ತಿರಯುಂ ಕೇರಳದ ವಳ್ಳುವನಾಡು ಪ್ರದೇಶದಲ್ಲಿ ಪ್ರಚಲಿತವಾಗಿರುವ ಆರಾಧನ ಕಲೆಯೇ ಪೂತನುಂ ತಿರಯುಂ. ಮಲಪ್ಪುರ ಜಿಲ್ಲೆಯ ಪೆರಿಂದಲ್ ಮಣ್ಣ, ಪೊನ್ನಾನಿ, ಪಾಲಕಾಡು ಜಿಲ್ಲೆಯ ಒಟ್ಟಪಾಲಂ, ತ್ರಿಶ್ಶೂರು ಜಿಲ್ಲೆಯ ತಲಪಿಳ್ಳಿ ತಾಲೂಕುಗಳಲ್ಲಿ ಪ್ರಾಚೀನ ವಳ್ಳುವ ನಾಡಿನ ವ್ಯಾಪ್ತಿಯಿದೆ. ಈ ಪ್ರದೇಶದ ಕಾವುಗಳ ವಾರ್ಷಿಕ ಜಾತ್ರೆ, ಪೂರಂ ಹಬ್ಬದ ಸಂದರ್ಭಗಳಲ್ಲಿ ಈ ಕಲಾರೂಪವು ಜರುಗುತ್ತದೆ. ಆರ‍್ಯಂಗಾವ್, ಶೈಲಿಯಾಟ್ ಕಾವ್, ಚೇನಕಳತ್ತೂರುಕಾವು, ಪರಕೋಟ್ ಕಾವ್, ಮುಳಯಂಗಾವ್, ಮುಲ್ಲಂಬರತ್ತುಕಾವು, ಆತ್ಮಕಾವು ಮೊದಲಾದವುಗಳ ಪ್ರತಿಷ್ಠೆಯಾಗಿರುವ ಕಾಳಿಯನ್ನು ತೃಪ್ತಿಪಡಿಸಲು ಈ ಆರಾಧನೆಯ ಕಲೆಯನ್ನು ನಡೆಸಲಾಗುತ್ತದೆ. ಮಕರ, ಕುಂಭ, ಮೀನ, ಮಾಘ ಮಾಸಗಳಲ್ಲಿ ಈ ಕಾವುಗಳ ಉತ್ಸವಗಳು ಜರುಗುತ್ತವೆ. ಈ ಸಂದರ್ಭಗಳಲ್ಲಿ ದೇಲವರವ್ (ಕಾಣಿಕೆಯ ವಸ್ತುಗಳನ್ನು ಮೆರವಣಿಗೆಯ ಮೂಲಕ ತರುವುದು) ನಡೆಯುತ್ತದೆ. ಪೂತನುಂ ತಿರಯುಂ ಈ ಸಂದರ್ಭದಲ್ಲಿ ಜರುಗುತ್ತದೆ.

ಕಾಳಿ ಮತ್ತು ದಾರಿಕಾಸುರನ ಯುದ್ಧದ ಕಥೆಯು ಈ ಕಲೆಗೆ ಆಧಾರ. ಬ್ರಹ್ಮನ ವರದಿಂದ ವಿಜೃಂಭಿಸುತ್ತಿದ್ದ ದಾರಿಕಾಸುರನು ದೇವತೆಗಳಿಗೂ, ಮನುಷ್ಯರಿಗೂ ತಲೆನೋವಾಗಿ ಪರಿಣಮಿಸಿದ. ದೇವತೆಗಳೆಲ್ಲ ಶಿವನನ್ನು ಬೇಡಿಕೊಳ್ಳುತ್ತಾರೆ. ರೋಷಾಕುಲನಾದ ಶಿವನ ಹಣೆಗಣ್ಣಿನಿಂದ ಕಾಳಿ ಹುಟ್ಟಿ ಬಂದು, ದಾರಿಕಾಸುರನನ್ನು ವಧಿಸುತ್ತಾಳೆ. ಸಿಟ್ಟಿನ ಆವೇಶ ಇಳಿಯದ ಕಾಳಿಯನ್ನು ಸಂತುಷ್ಟಿಗೊಳಿಸಲು ಶಿವಗಣಗಳು ಪ್ರಯತ್ನಿಸುತ್ತವೆ. ಅವರ ಆಟಗಳಿಂದ ಕಾಳಿಯು ಶಾಂತಳಾದಳು ಎಂಬುದು ಪುರಾಣಕದ ಕಥೆ. ಪೂಜಾ ಮತ್ತು ತಿರ ಪ್ರಕಾರದ ಹಿಂದೆ ಈ ಪುರಾಣದ ಕಲ್ಪನೆ ಇದೆ. ದಾರುಕಾಸುರನನ್ನು ವಧಿಸಿದ ಬರುವ ಕಾಳಿಯೇ ತಿರ. ಕಾಳಿಯನ್ನು ಶಾಂತಗೊಳಿಸಲು ಪ್ರಯತ್ನಿಸುವ ಶಿವನ ಭೂತಗಣಗಳೇ ‘ಪೂತಂ’. ಈ ನಂಬಿಕೆಯ ಹಿನ್ನೆಲೆಯಲ್ಲಿ ‘ಪೂತನುಂ ತಿರಯುಂ’ ಕಾವುಗಳಲ್ಲಿ ಪ್ರದರ್ಶನಗೊಳ್ಳುತ್ತವೆ.

23_70A_DBJK-KUH

ವಣ್ಣಾನ್ ಅಥವಾ ಮಣ್ಣನ್ ಸಮುದಾಯದವರು ಈ ಕೋಲಗಳನ್ನು ಕಟ್ಟುತ್ತಾರೆ. ಭೂತವನ್ನು ‘ಮಣ್ಣಾಂಪೂತಂ’ ಎಂದೇ ಕರೆಯುತ್ತಾರೆ. ವಣ್ಣಾನ್ ಮಾತ್ರವಲ್ಲದೆ ಪರಯರೂ, ಪಾಣರೂ ‘ಪೂತಂ’ ಕೋಲವನ್ನು ಕಟ್ಟುತ್ತಾರೆ. ಪುರುಷರು ಈ ಕೋಲಗಳನ್ನು ಕಟ್ಟುವರು. ಪೂತಂ ಕೋಲವನ್ನು ಯುವಕರೂ, ತಿರ ಕೋಲವನ್ನು ಹಿರಿಯರೂ ಕಟ್ಟುತ್ತಾರೆ.

‘ತಿರಯುಂ ಪೂತನುಂ’ ಜನಪದ ಕುಣಿತಗಳಾಗಿವೆ. ಮಯಿಲಾಟ, ಚಿಲಂಬಾಟ, ಕೋಳಿಯಂಕ, ತಿರಕೋಲ್, ಓದಿರಮರಿಯಲ್ ಮೊದಲಾದ ಕಲೆಗಳು ಇದರಲ್ಲಿ ಸಮಾವೇಶಗೊಂಡಿವೆ. ಆಂಗಿಕಾಭಿನಯ ಈ ಕಲೆಯಲ್ಲಿ ಬಹಳ ಕಡಿಮೆ. ಪೂತಂ ಕೋಲ ಆಕರ್ಷಕ ವೇಷವಿಧಾನವನ್ನು ಧರಿಸುವುದು. ದೊಡ್ಡ ಕಣ್ಣುಗಳಿಂದ ಕೂಡಿದ, ನಾಲಗೆ ಹೊರಚಾಚಿದ ಮುಖವಾಡವನ್ನು ಪೂತಂ ಧರಿಸುತ್ತದೆ ಮುಖವಾಡದ ಹಿಂಭಾಗದಲ್ಲಿ ಬಟ್ಟೆ, ನವಿಲುಗರಿಗಳಿಂದ ಅಲಂಕರಿಸಲಾಗಿರುತ್ತದೆ. ಬಣ್ಣದ ವಸ್ತ್ರ, ನೆರಿಗೆ ವಸ್ತ್ರ, ಕೈ ಹಾಗೂ ಕಾಲುಗಳಿಗೆ ಆಭರಣವನ್ನು ಧರಿಸುತ್ತದೆ.

ತಿರ ಮುಖವಾಡ ಧರಿಸುವುದಿಲ್ಲ. ಅಕ್ಕಿ ಹಿಟ್ಟು ಹಾಗೂ ಅರಸಿನ ಕಲಸಿದ ಬಣ್ಣದಿಂದ ಮುಖವರ್ಣಿಕೆ ಇರುತ್ತದೆ. ದೇಹದಲ್ಲಿ ಅರಳಿನ ಬೊಟ್ಟಿಡುತ್ತಾರೆ. ತಿರ ಕೋಲವು ತಲೆಯಲ್ಲಿ ಧರಿಸುವ ಕಿರೀಟಕ್ಕೆ ‘ತಿರ’ ಎಂದು ಹೆಸರು. ತೆಳುವಾದ ಹಲಸಿನ ಹಲಗೆಯ ಹದಿನಾರು ತುಂಡುಗಳಿಂದ ಈ ಕಿರೀಟವನ್ನು ನಿರ್ಮಿಸುತ್ತಾರೆ. ಸರ್ಪದ ಆಕೃತಿ ಹಾಗೂ ಕಾಳಿಯ ಮುಖವನ್ನು ಕಿರೀಟದಲ್ಲಿ ಕೆತ್ತಿರುತ್ತಾರೆ. ಈ ಕಿರೀಟದಿಂದ ಕೋಲಧಾರಿ ಹಿಡಿದುಕೊಳ್ಳಲು ಬಟ್ಟೆಯನ್ನು ಇಳಿಬಿಟ್ಟಿರುತ್ತಾರೆ. ಕಿರೀಟವನ್ನು ಹೂಗಳಿಂದ ಅಲಂಕರಿಸುತ್ತಾರೆ. ತಿರವೇಷದ ಸೊಂಟದ ಸುತ್ತಲೂ ವಸ್ತ್ರದ ತುಂಡುಗಳನ್ನು ನೇತಾಡಿಸುವರು. ಕೈ, ಕಿವಿಗಳಿಗೆ ಆಭರಣಗಳನ್ನು ಧರಿಸುತ್ತಾರೆ.

ಕಾವುಗಳಲ್ಲಿ ಪೂರಂ ದಿನಾಂಕ ನಿಗದಿಯಾದಾಗ, ಪೂತಂ ಹಾಗೂ ತಿರ ಕೋಲಧಾರಿಗಳು ಆಯಾ ಹಳ್ಳಿಯ ಎಲ್ಲ ಮನೆಗಳನ್ನು ಸಂದರ್ಶಿಸುತ್ತವೆ. ಮನೆಗೆ ಆಗಮಿಸುವ ಕೋಲಗಳನ್ನು ದೀಪ ಬೆಳಗಿಸಿ ಜನರು ಸ್ವಾಗರಿಸುವರು. ಕೋಲಧಾರಿಗಳು ಅಂಗಳದಲ್ಲಿ ಕುಣಿದು, ಮನೆಯವರಿಗೆ ಜಾನುವಾರುಗಳಿಗೆ ಅಕ್ಕಿ ಕಾಳು ಎಸೆದು ಆಶೀರ್ವದಿಸುತ್ತಾರೆ. ಅನಂತರ ಮನೆಯವರು ಕೊಡುವ ಅಕ್ಕಿ, ಭತ್ತ, ತೆಂಗಿನಕಾಯಿಗಳನ್ನು ಸ್ವೀಕರಿಸಿ ಹಿಂದಿರುಗುತ್ತಾರೆ. ದುಡಿ ಹಿನ್ನೆಲೆ ವಾದನವಾಗಿದೆ. ತಿರಕೋಲಕ್ಕೆ ಪರ, ಚೆಂಡೆ, ತಾಳಗಳನ್ನು ಬಳಸುತ್ತಾರೆ. ಹಳ್ಳಿಯ ಸಮೃದ್ಧಿ ಸಂತೋಷ, ಮಳೆ, ಬೆಳೆ, ರೋಗ ನಿವಾರಣೆ, ಜಾನುವಾರುಗಳ ರಕ್ಷಣೆಗಾಗಿ ಪೂತನುಂತಿರಯುಂ ಆರಾಧನೆ ನಡೆಯುತ್ತದೆ.

ಎಸ್.ಕೆ. ಅನುವಾದ ಎನ್.ಎಸ್

 

ಪೂಪ್ಪುಚ್ಚಡಂಗ್ ಹೆಣ್ಣು ಮೊದಲಬಾರಿಗೆ ಪುಷ್ಪವತಿಯಾದಾಗ ತಮಿಳುನಾಡಿನಲ್ಲಿ ನಡೆಸುವ ಕೆಲವು ಸಂಪ್ರದಾಯಗಳ್ನು ಪೂಪ್ಪುಚಡಂಗ್ ಎಂದು ಕರೆಯುತ್ತಾರೆ. ‘ಪೂಪ್ಪು’ ಎಂಬುದು ‘ಹೂ ಅರಳುವ’ ಎಂಬುದನ್ನೂ ‘ತಿಂಗಳು ಹೊರಗಾಗುವ’ ಎಂಬುದನ್ನೂ ಸಂಕೇತಿಸುತ್ತದೆ. ಹೆಣ್ಣಿನ ದೇಹ ತಾಯ್ತನಕ್ಕೆ ಸಿದ್ಧಗೊಳ್ಳುವ, ಪಕ್ವನೆಲೆಗೆ ಬರುವ ಸ್ಥಿತಿಯನ್ನು ‘ಮೈನೆರೆಯುವ’ ಕ್ರಿಯೆ ಸೂಚಿಸುತ್ತದೆ. ಹೆಣ್ಣು ಮಕ್ಕಳು ಮೈನೆರೆಯುವುದನ್ನು ಪುಷ್ಟಿಸುವುದು, ಕುವರಿಯಾಗುವುದು, ದೊಡ್ಡವಳಾಗುವುದು, ಎರೆದುಕೊಳ್ಳುವುದ, ವಯಸ್ಸಿಗೆ ಬರುವುದು, ಋತುವಾಗುವುದು ಮುಂತಾಗಿ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಮುಖ್ಯವಾಗಿ, ಈ ರೀತಿಯ ಆಚರಣೆ ಎಂದರೆ ಮೈನೆರೆಯುವ ಸಂದರ್ಭದ ಆಚರಣೆ ಎಂಬುದನ್ನೇ ಕುರಿತದ್ದಾಗಿರುತ್ತದೆ.

ಮೈನೆರೆಯುವುದನ್ನು ಕುರಿತಂತೆ ನಂಬಿಕೆಗಳು :

೧. ಪುಷ್ಪಿಸುವ ಈ ಕಾಲ ಅಶುದ್ಧವಾದದ್ದು.

೨. ಈ ಸಮಯದಲ್ಲಿ ದುಷ್ಟಶಕ್ತಿಗಳು ಹಿಡಿದುಕೊಳ್ಳುತ್ತವೆ.

೩. ದೇವಸ್ಥಾನ, ನೀರುತಾಣಗಳು, ಹೊಲಗದ್ದೆ ಮುಂತಾದ ಸ್ಥಳಗಳಲ್ಲಿ ಬರಬಾರದು. ಅವುಗಳ ಪಾವಿತ್ರ‍್ಯ ಕೆಡುತ್ತದೆ.

೪. ಮನೆಯೊಳಗೆ ಪ್ರವೇಶಿಸಬಾರದು. ಅದು ವಿಷಪೂರಿತ ಜಂತುಗಳು ಪ್ರವೇಶಿಸಲು ಕಾರಣವಾಗುತ್ತದೆ.

೫. ಅವರು ಪ್ರತ್ಯೇಕ ಪಾತ್ರೆಗಳನ್ನೇ ಊಟಕ್ಕೆ ಬಳಸಬೇಕು.

೬. ಬುಧವಾರ ಋತುಮತಿಯಾದರೆ ಒಳ್ಳೆಯದು.

೭. ಆಷಾಢ ಮಾಸದಲ್ಲಿ ಋತುಮತಿಯಾಗುವುದು ಒಳ್ಳೆಯದಲ್ಲ. ಅದು ಮನೆಯನ್ನು ತಲ್ಲಣಗೊಳಿಸುತ್ತದೆ.

೮. ಈ ಸಮಯದಲ್ಲಿ ಗಂಡಸರನ್ನು ನೋಡಿದರೆ ಮುಖದಲ್ಲಿ ಗುಳ್ಳೆಗಳು ಏಳುತ್ತವೆ.

೯. ಸೂರ್ಯನನ್ನು ನೋಡುವುದು ಒಳ್ಳೆಯದಲ್ಲ.

೧೦. ಚೈತ್ರ, ಆಷಾಢ ಮಾಸಗಳಲ್ಲಿ ಮೈನೆರೆಯುವ ಸಂಬಂಧದ ಆಚರಣೆಗಳನ್ನು ಮಾಡಬಾರದು.

೧೧. ಮೈನೆರೆಯುವ ಸಂಬಂಧಾಚರಣೆಗಳನ್ನು ನೆರವೇರಿಸಿದರೆ ಮದುವೆ ಬೇಗ ಆಗುತ್ತದೆ.

೧೨. ಮೈನೆರೆದ ಸಂದರ್ಭದಲ್ಲಿಂದ ೩, ೧೧ ದಿನಗಳು ಲೆಕ್ಕಾಚಾರ ಪ್ರಕಾರ ಆಚರಣೆ ನಡೆಯುತ್ತದೆ.

೧೩. ಮೈನೆರೆದವಳಿಗೆ ಗುಡಿಸಿಲನ್ನು ತಾಯಿ ಸಹೋದರನೇ ಕಟ್ಟಬೇಕು.

೧೪. ಮೈನೆರೆದವರಿಗೆ ಸಂಪ್ರದಾಯ ನಡೆಸಿದ್ದ ಗುಡಿಸಿಲನ್ನು ಸುಟ್ಟುಬಿಡಬೇಕು.

೧೫. ಗುಡಿಸಿಲಲ್ಲಿ ವಾಸವಿದ್ದ ಮೈನೆರೆದ ಹೆಣ್ಣು ಮಗಳೊಂದಿಗೆ ಕಬ್ಬಿಣವನ್ನೂ, ಅವಳ ಕೈಯಲ್ಲಿ ಕೂದಲಗಂಟನ್ನೂ ಕೊಟ್ಟಿರಬೇಕು. ಇದರಿಂದ ದೆವ್ಬಭೂತಗಳು ಅವಳ ಸನಿಹ ಬರುವುದಿಲ್ಲ.

೧೬. ಗುಡಿಸಿಲನ್ನು ತೆಂಗಿನಗರಿಯಿಂದ ತಾಯಿ ಸಹೋದರನ ನೆರವಿನಿಂದಲೇ ಕಟ್ಟಬೇಕು.

೧೭. ಗುಡಿಸಿಲಲ್ಲಿ ಬೇವಿನಸೊಪ್ಪನ್ನೂ ಕಟ್ಟಬೇಕು.

೧೮. ಮೈನೆರೆದವರು ಕರಿಬೇವು, ತುಳಸಿ ಮುಂತಾದ ಗಿಡಗಳನ್ನು ಮುಟ್ಟಿಸಿಕೊಳ್ಳಬಾರದು. ಅವುಗಳ ಪಾವಿತ್ರ‍್ಯ ಹಾಳಾಗುತ್ತದೆ.

ಈ ರೀತಿಯ ನಂಬಿಕೆಗಳು, ಕಟ್ಟುಪಾಡುಗಳು ಮೈನೆರೆಯುವ ಸಂದರ್ಭದ ಕುರಿತಂತೆ ಪ್ರಚಲಿತವಾಗಿವೆ. ಈ ರೀತಿಯ ನಂಬಿಕೆ ಮತ್ತು ಕಟ್ಟುಪಾಡುಗಳು ಮೈನೆರೆಯುವ ಕಾಲದ ರಕ್ತ ಅಶುದ್ಧವಾಗಿರುತ್ತದೆ ಎಂಬ ಕಾರಣದಿಂದ ಹುಟ್ಟಿಕೊಂಡಿವೆ. ಈ ರೀತಿಯ ನಂಬಿಕೆಗಳೂ ಕಟ್ಟುಪಾಡುಗಳೂ ಎಲ್ಲ ಪ್ರದೇಶಗಳಲ್ಲಿಯೂ ವ್ಯಾಪಕವಾಗಿ ಹರಡಿಕೊಂಡಿರುವುದನ್ನು ಕಾಣಬಹುದು

ಗುಡಿಸಿಲಲ್ಲಿ ಬಿಡುವುದು : ಹೆಣ್ಣು ಮೈನೆರೆದಾಗ ತಾಯಿಯ ಸಹೋದರನಿಗೆ ಹೇಳಿ ಕಳುಹಿಸುತ್ತಾರೆ. ಇದನ್ನು ‘ಸಿಹಿಸುದ್ದಿ’ ಕಳುಹಿಸುವುದು, ಶುಭ ಕಳುಹುವುದು ಎಂದು ಹೇಳುತ್ತಾರೆ. ಅಗಸನಿಗೂ ಹೆಣ್ಣು ಮೈನೆರೆದ ಸುದ್ದಿ ಹೇಳಿಕಳುಹಿಸುತ್ತಾರೆ. ಈ ಸಂದರ್ಭದಲ್ಲಿ ತೊಡಗಿಕೊಳ್ಳಲು ಸಂಬಂಧಪಟ್ಟ ಸೋದರಮಾಮ ಅಥವಾ ಅವರ ಮಕ್ಕಳು ಕೆಮ್ಮಣ್ಣು, ಬಿದಿರು ತಡಿಕೆ ಅಥವಾ ತೆಂಗಿನಗರಿಗಳ ತಡಿಕೆಗಳಿಂದ ಗುಡಿಸಿಲು ಹಾಕುತ್ತಾರೆ. ಇದನ್ನು ‘ಹಸಿಗುಡಿಸಿಲು’ ಎನ್ನುತ್ತಾರೆ. ಅಲ್ಲಿ ನೆಲ್ಲನ್ನು ಹರಡಿ ಅದರ ಮೇಲೆ ಕವೆಗೋಲುಗಳನ್ನು ಹರಡುತ್ತಾರೆ. ಶುಭಮುಹೂರ್ತದಲ್ಲಿ ನೆಲ್ಲನ್ನೂ ಅದರೊಳಗೆ ವೀಳೆಯದೆಲೆಯನ್ನೂ ಇಟ್ಟು, ಕೀರೆ ಸೊಪ್ಪಿನ ಚೂರುಗಳನ್ನೂ ಹಾಕಿಡುವುದುಂಟು. ಇದರೊಂದಿಗೆ, ಕತ್ತಿ, ಕಬ್ಬಿಣ, ಪೊರಕೆ, ಒರಳು, ಕುಟ್ಟಾಣಿ ಮುಂತಾದವುಗಳನ್ನೂ ಇಡುತ್ತಾರೆ. ಇದಾದ ಅನಂತರ ಅಗಸನಿಗೆ ಸುದ್ದಿ ಕಳುಹಿಸುತ್ತಾರೆ. ಅಗಸ ಬದಲಿ ಬಟ್ಟೆಯನ್ನು ತರುತ್ತಾನೆ. ಅದನ್ನು ಉಟ್ಟುಕೊಂಡ ಮೇಲೆ ‘ನೀರು ಹಾಕುವ’ ಕಾರ್ಯ ನಡೆಯುತ್ತದೆ. ಸೋದರಮಾವನ ಹೆಂಡತಿ ಮೂರು ಚೆಂಬು ನೀರನ್ನು ಹೆಣ್ಣಿಗೆ ಎರೆಯುತ್ತಾಳೆ. ಆಗ ಅಲ್ಲಿ ನೆರೆದ ಹೆಣ್ಣು ಮಕ್ಕಳು ತಮ್ಮ ಕುಲಸಂಬಂಧಿಯಾದ ಕೂಗುಗದ್ದಲಗಳನ್ನು ಎಬ್ಬಿಸಿ ಅನಂತರ ಸಂಪ್ರದಾಯದ ಹಾಡುಗಳನ್ನು ಹಾಡುತ್ತಾಳೆ. ಇದಾದ ಅನಂತರ ಸುಮಂಗಲಿಯರು ಮೈನೆರೆದ ಹೆಣ್ಣಿನ ಮೈಗೆ ಅರಿಸಿನ ಹಚ್ಚಿ ತಲೆಗೆ ಸೀಗೆಕಾಯಿ ಇಟ್ಟು ನೀರೆರೆಯುತ್ತಾರೆ. ಅನಂತರ ಸೋದರಮಾವ ತಂದ ಹೊಸಬಟ್ಟೆಗಳನ್ನುಡಿಸುತ್ತಾರೆ. ಸೋದರಮಾವನ ಮಡದಿ ಹೆಣ್ಣಿನ ಉಡಿಯಲ್ಲಿ ಮಡಿಲು ತುಂಬುವ ಸಾಮಗ್ರಿಗಳನ್ನೂ ಅಲಂಕಾರ ಸಾಮಗ್ರಿಗಳನ್ನೂ ತುಂಬಿ ಆಶೀರ್ವದಿಸುತ್ತಾಳೆ. ಇದಲ್ಲದೆ ಎಲೆ ಅಡಕೆಯೊಂದಿಗೆ ಒಂದು ರೂಪಾಯಿ ನಾಟ್ಯವಿಟ್ಟು ಅದನ್ನು ಹುಡುಗಿಯ ಸೆರಗಿನ ತುದಿಗೆ ಕಟ್ಟಿಕೊಳ್ಳುಲು ಕೊಡುತ್ತಾಳೆ. ಇದು ಹೆಣ್ಣಿಗೆ ಸೋದರಮಾವ ಕೊಡುವ ಸಾಂಕೇತಿಕ ಕೊಡುಗೆಯಾಗಿರುತ್ತದೆ. ಇದನ್ನು ಮೈನೆರೆದ ದಿನದಿಂದ ೧೬ನೇ ದಿನದವರೆಗೆ ಅವಳು ಬಿಚ್ಚಬಾರದು. ಈ ಎಲ್ಲ ಸಂಪ್ರದಾಯಗಳನ್ನೂ ಜನಪದ ಗೀತೆಗಳು ಸವಿವರವಾಗಿ ನೀಡುತ್ತವೆ.

ಮುಯ್ಯಿ ಮಾಡುವುದು : ಗುಡಿಸಿಲಲ್ಲಿ ಹನ್ನೊಂದು ದಿನಗಳು ಒಂಟಿಯಾಗಿ ಕಳೆಯುವ ಹೆಣ್ಣಿಗೆ ಸಂಬಂಧಿಕರು ತಂತಮ್ಮ ಸಂಬಂಧಗಳಿಗನುಗುಣವಾಗಿ ಔತಣ ನೀಡುತ್ತಾರೆ. ಇದನ್ನು ‘ಮುಯ್ಯಿ ಸಂಪ್ರದಾಯ ಆಚರಣೆ’ಯೆನ್ನುತ್ತಾರೆ. ಬೆಳಗ್ಗೆ, ಮಧ್ಯಾಹ್ನ, ರಾತ್ರಿ – ಹೀಗೆ ಮೂರು ಹೊತ್ತು, ಮೈನೆರೆದ ಹುಡುಗಿಗೆ ಸಸ್ಯಾಹಾರ, ಮಾಂಸಾಹಾರಗಳನ್ನು ಪುಷ್ಕಳವಾಗಿ ತಿನ್ನಿಸುವುದು ವಾಡಿಕೆ. ಅಕ್ಕಿಯಿಂದ ಮಾಡಿದ ಪಣ್ಯಾರಗಳನ್ನು ನೀಡುವುದೂ ಇದೆ. ಇದಕ್ಕೆ ‘ಅತ್ತೆಪಣ್ಯಾರ’ ಎಂದೂ ಹೇಳುತ್ತಾರೆ. ಈ ರೀತಿಯ ಮುಯ್ಯಿ ನೆರವೇರಿಸುವುದರ ಹಿಂದೆ ಮೈನೆರೆದ ಹೆಣ್ಣಿನ ಬೆಳವಣಿಗೆಗೂ, ಮುಂದೆ ಅವಳು ತಾಯ್ತನವನ್ನು ಹೊಂದುವುದಕ್ಕೂ ಸಹಕಾರಿಯಾಗಿರುತ್ತದೆಂಬ ಆಲೋಚನೆ ಇದೆ.

ಮೈನೆರೆಯುವುದಕ್ಕೆ ಸಂಬಂಧಿಸಿದ ಆಚರಣೆಗಳು : ಮೈನೆರೆದ ಹನ್ನೊಂದನೇ ಅಥವಾ ಹದಿನಾರನೇ ದಿನ ನಡೆಸುವ ಆಚರಣೆಯನ್ನೇ ‘ಮೈನೆರೆವ ಸಂಪ್ರದಾಯ’ ಎನ್ನುತ್ತಾರೆ. ಈ ಸಂಭ್ರಮಾಚರಣೆಗೆ ಕರೆಯೋಲೆಯನ್ನು ಅಚ್ಚುಹಾಕಿಸಿ ಸಂಬಂಧಿಕರನ್ನು ಆಹ್ವಾನಿಸುವುದು ವಾಡಿಕೆ. ಅದರಲ್ಲಿ ಮೈನೆರೆದವರಿಗೆ ‘ನೀರೆರೆಯುವ ಆಚರಣೆ’ಯೆಂದು ವಿಶೇಷವಾಗಿ ಅಚ್ಚು ಹಾಕುತ್ತಾರೆ. ಮೊದಲ ದಿನ ನೀರೆರೆಯುವ ಸೋದರ ಮಾವನ ಹೆಂಡತಿಯೇ ೧೧ನೇ ದಿನವೂ ಅರಿಸಿನ ಹಾಗೂ ಬೇವಿನೆಲೆಗಳನ್ನು ಕಲೆಸಿದ ನೀರನ್ನು ಹುಡುಗಿಗೆ ಎರೆಯುತ್ತಾಳೆ. ಬಹುತೇಕ ಇದನ್ನು ರಾತ್ರಿ ಹೊತ್ತೇ ನಡೆಸಲಾಗುತ್ತದೆ. ಅದಾದ ಬಳಿಕ ಸೋದರ ಮಾವನ ಹುಡುಗಿಗೆ ರೇಷ್ಮೆಸೀರೆ, ಬಳೆ, ಸರ ಇತ್ಯಾದಿಗಳನ್ನು ನೀಡಿ ಮದುವಣಗಿತ್ತಿಯಂತೆ ಅವಳನ್ನು ಅಲಂಕರಿಸಲು ಸಹಕರಿಸುತ್ತಾರೆ. ಹೀಗೆ ಅಲಂಕರಿಸಿದ ಹುಡುಗಿಯನ್ನು ಮುಕ್ಕಾಲಿಯ ಮೇಲೆ ಅಗಸ ತಂದ ಬಟ್ಟೆಯನ್ನು ಹರಡಿ ಕುಳ್ಳಿರಿಸುತ್ತಾರೆ. ಅನಂತರ ಅವಳ ಮುಂದೆ ವೀಳ್ಯದೆಲೆ ಹಾಗೂ ಬತ್ತಗಳನ್ನಿಟ್ಟು ತಂಬಿಗೆಯನ್ನು ಇಡುತ್ತಾರೆ. ದೀಪಾಲೆಕಂಬಗಳನ್ನು ಬೆಳಗಿಸಿ, ಎಲೆ, ಅಡಕೆ, ಹೂ, ಹಣ್ಣು, ತೆಂಗಿನಕಾಯಿ, ನೀರು ತುಂಬಿದ ಎರಡು ತಾಮ್ರದ ಕಳಶಗಳು ಮುಂತಾದವುಗಳನ್ನಿಡುತ್ತಾರೆ. ಅನಂತರ ಮೈನೆರೆದ ಸೂತಕವನ್ನು ಕಳೆಯುವ ಕಾರ್ಯಗಳು ನೆರವೇರುತ್ತವೆ. ಮತ್ತೆ ಮುಯ್ಯಿ ಮಾಡಿ, ಪೊಂಗಲನ್ನು ಇಟ್ಟು, ಕಾಲಿಗೆ ಅರಿಸಿನ ಎಣ್ಣೆಯನ್ನು ಬಳಿಯುವ ‘ನಲಂಗ್’ ಎಂಬ ಕಾರ್ಯವನ್ನು ನೆರವೇರಿಸುತ್ತಾರೆ. ಮದುವಣಗಿತ್ತಿಗೆ ನಡೆಸುವ ಈ ಎಲ್ಲ ಮಂಗಲಾಚರಣೆಗಳನ್ನು ಅವಳಿಗೂ ಮಾಡುತ್ತಾರೆ.

ಸೂತಕ ಕಳೆಯುವುದು : ದೃಷ್ಟಿ ತೆಗೆಯುವುದನ್ನೇ ಮುಖ್ಯ ಗುರಿಯನ್ನಾಗಿಟ್ಟುಕೊಂಡು ಸೂತಕ ಕಳೆಯುವ ಕಾರ್ಯಗಳು ನಡೆಯುತ್ತವೆ. ಈ ಸಂದರ್ಭದಲ್ಲಿ ಚೆನ್ನಾಗಿ ಬಾಗುವ ಒಂದು ಬಳ್ಳಿಯನ್ನು ತಂದು ಸುತ್ತುತ್ತಾರೆ. ಇದರ ಹಿಂದೆ, ಆ ಹೆಣ್ಣೂ ಬಳ್ಳಿಯಂತೆಯೇ ಬಾಗಿ, ಬೇಕಾದಂತೆ ಸಂದರ್ಭಕ್ಕೆ ತಕ್ಕಂತೆ ತಗ್ಗಿಬಗ್ಗಿ ಇರುವವಳಾಗಿದ್ದು, ಬಳ್ಳಿಯಂತೆಯೇ ಚಿಗುರುತ್ತಾ ಕುಟುಂಬವನ್ನು ಬೆಳೆಸಲಿ ಎಂಬ ಆಶಯವಿದೆ. ಅನಂತರ ಬತ್ತ ತುಂಬಿದ ಕುಕ್ಕೆಯಲ್ಲಿ ಹುಡುಗಿಯನ್ನು ಕೂರಿಸಿ ಸೋದರಮಾವ ಅದನ್ನೆತ್ತಿಕೊಂಡು ಮೂರು ಸಲ ಮೇಲಕ್ಕೂ ಕೆಳಗೂ ಹತ್ತಿಳಿಸಿ ನೀವಾಳಿಸುತ್ತಾನೆ. ಅನ್ನವನ್ನು ಅರಿಸಿನ, ಕಪ್ಪು, ಬಿಳಿ ಬಣ್ಣಗಳ ಏಳು ಉಂಡೆಗಳನ್ನಾಗಿ ಮಾಡಿ ಹುಡುಗಿಯ ತಲೆ, ತೋಳು ಹಾಗೂ ತೊಡೆಗಳ ಮೇಲಿಟ್ಟು ಒಂದು ಕಡ್ಡಿಯಿಂದ ಅವನ್ನು ಹೊಡೆದು ಛಿದ್ರಗೊಳಿಸುತ್ತಾರೆ. ಅನಂತರ ಹುಡುಗಿಯನ್ನು ಮನೆಯೊಳಗೆ ಕರೆದೊಯ್ದು ಅಲಂಕರಿಸಿಕುಳ್ಳಿರಿಸುತ್ತಾರೆ. ಅವಳ ಮುಂದೆ ದೀಪಾಲೆಕಂಬಗಳನ್ನಿಟ್ಟು ಬೆಳಗಿಸಿ ತಾಮ್ರದ ಕೊಡದಲ್ಲಿ ಅಥವಾ ತಂಬಿಗೆಯಲ್ಲಿ ತೆಂಗಿನಕಾಯಿ ಇಟ್ಟು ಕಳಶವನ್ನಾಗಿಸಿ ಪೂಜೆ ಮಾಡುತ್ತಾರೆ. ಆ ಸಂದರ್ಭಕ್ಕೆ ಬಂದ ನೆಂಟರು, ಹಿರಿಯರು, ಹಡುಗಿಯ ಕಾಲನ್ನು ಮುಟ್ಟಿ ನಮಸ್ಕರಿಸುವುದುಂಟು. ತಮ್ಮ ಕುಟುಂಬದ ಗೌರವವನ್ನೂ, ಪಾರಂಪರ್ಯವನ್ನೂ, ಅಭಿಮಾನವನ್ನು ಕಾಪಾಡುವುದು, ಬೆಳೆಸುವುದು ಅವಳ ಕೈಯಲ್ಲಿದೆ ಎಂಬುದೇ ಈ ನಡವಳಿಕೆಯ ಆಶಯವಾಗಿರುತ್ತದೆ. ಅದನ್ನು ಒಪ್ಪಿಕೊಂಡ ಕುರುಹಾಗಿ ಆ ಹುಡುಗಿಯೂ ಬದಲಿಗೆ ಅವರುಗಳನನ್ನು ಹಾಗೆಯೇ ನಮಸ್ಕರಿಸುವುದು ವಾಡಿಕೆ.

ಮುಯ್ಯಿಗೆ ಆಹ್ವಾನಿಸುವುದು : ಮುಯ್ಯಿ ಸಂಪ್ರದಾಯವನ್ನು ಸಾಮಾನ್ಯವಾಗಿ ರಾತ್ರಿಯ ಹೊತ್ತೇ ನೆರವೇರಿಸುವುದು ವಾಡಿಕೆ. ಸೋದರ ಮಾವ ಮಾಡುವ ಮುಯ್ಯಿಗೆ ಈ ಸಂಪ್ರದಾಯದಲ್ಲಿ ವಿಶೇಷ ಗೌರವ. ಸೋದರಮಾವನ ಕೊಡುಗೆಯಾಗಿ ಕಡಾಯಿ, ಅಕ್ಕಿ, ತೆಂಗಿನಕಾಯಿ, ಹಣ್ಣು, ಹೂ, ಪಾತ್ರೆಪಡಗಗಳು, ಹೊಸಬಟ್ಟೆ ಮುಂತಾದವುಗಳನ್ನು ನೀಡಲಾಗುತ್ತದೆ. ಸೋದರ ಮಾವನಲ್ಲದೆ ಇತರ ಸಂಬಂಧಿಗಳು, ಅದರಲ್ಲೂ ಮುಖ್ಯವಾಗಿ ಆ ಹೆಣ್ಣನ್ನು ‘ತಂದುಕೊಳ್ಳಲು’ ಬಯಸುವ ಕುಟುಂಬದವರು ಅಲಂಕಾರ ಸಾಮಗ್ರಿಗಳು, ಪಾತ್ರೆಗಳು, ಕೆಲವೊಮ್ಮೆ ಬಂಗಾರದ ಒಡವೆಗಳನ್ನು ತುರುವುದುಂಟು. ಅನೇಕ ವೇಳೆ ಮಂಗಳವಾದ್ಯ ದೊಂದಿಗೆ, ಪಟಾಕಿ ಸಂಭ್ರಮಗಳನ್ನೂ ನಡೆಸುವುದುಂಟು. ಈ ಆಚರಣೆ, ಸಂಬಂಧಿಸಿದ ಮನೆಯವರ ಜನಬಲ, ಧನಬಲ, ಸ್ವತ್ತುಗಳನ್ನು ನಿರೂಪಿಸುವ ಸಂದರ್ಭವೂ ಆಗಿರುತ್ತದೆ. ಇತರರು ನೀಡುವ ಮುಯ್ಯಿ ಗೌರವಗಳಿಗಿಂತ, ಹೆಣ್ಣಿನ ಸೋದರಮಾವ ಮಾಡುವ ಮುಯ್ಯಿ ಹಾಗೂ ಹುಡುಗಿಯನ್ನು ಮದುವೆಯಾಗಲು ಬಯಸುವ ಕುಟುಂಬದವರು ನೀಡುವ ಮುಯ್ಯಿಗಳಿಗೆ ವಿಶೇಷ ಗೌರವ ಇರುತ್ತದೆ.

ಪೊಂಗಲ್ ಇಡುವುದು : ಪೊಂಗಲ್ ಮಾಡುವ ಪಾತ್ರೆಯಲ್ಲಿ ಮೈನೆರೆದ ಹುಡುಗಿ ಮೂರು ಹಿಡಿ ಅಕ್ಕಿಯನ್ನು ಮೂರು ಬಾರಿ ಹಾಕುತ್ತಳೆ. ಅನಂತರ ಹಾಲನ್ನು ಹುಯ್ಯುತ್ತಾಳೆ. ಅದು ಬೆಂದು ಪೊಂಗಲ್ ಆದ ಮೇಲೆ ಅದನ್ನು ಮೂರು ಭಾಗವಾಗಿಸಿ ಎಡೆಯಿಡುತ್ತಾರೆ. ಆ ದಿನ ಪೂರ್ತಿ ಮೈನೆರೆದ ಹುಡುಗಿ ವ್ರತಾಚರಣೆಯಲ್ಲಿರುತ್ತಾಳೆ. ಆ ದಿನ ಅಲ್ಲಿರುವ ಪುರೋಹಿತ (ದಾಸ) ಆ ಹುಡುಗಿಯನ್ನು ‘ದಿನಪೂರ್ತಿ ‘ಶಂದಿ’ (ಉಪವಾಸವ್ರತ) ಇದ್ದೆಯಾ?’ ಎಂದು ಕೇಳುತ್ತಾನೆ. ಅವಳು ‘ಹೌದು’ ಎಂದ ಮೇಲೆ ಮೂರು ಭಾಗವಾಗಿಸಿದ್ದ ಎಡೆಯಲ್ಲಿ ಒಂದನ್ನು ಅವಳಿಗೂ ಮತ್ತೊಂದನ್ನು ದೇವರಿಗೂ ಇನ್ನೊಂದನ್ನು ನೆರೆದವರಿಗೂ ಹಂಚುತ್ತಾರೆ. ಈ ಕ್ರಿಯೆ, ಸೂತಕದಲ್ಲಿದ್ದ ಹೆಣ್ಣನ್ನು ಪವಿತ್ರವಾಗಿಸುತ್ತದೆ ಎಂಬ ನಂಬಿಕೆಯಿದೆ. ಹಾಗೆಯೇ ಪೊಂಗಲ್ ತಯಾರಿಸುವಾಗ ಅದು ಚೆನ್ನಾಗಿ ಉಕ್ಕಿದರೆ ಹುಡುಗಿಯ ಬಾಳೂ ಹಾಗೆಯೇ ಸಮೃದ್ಧಿಯಾಗಿ ಉಕ್ಕಿ ಹರಿಯುತ್ತದೆ ಎಂಬ ನಂಬಿಕೆ ಇದೆ. ಪೊಂಗಲ್ ಇಡುವುದು ಸಮೃದ್ಧಿಯನ್ನು ಸೂಚಿಸುವ ಮಂಗಳಾಚರಣೆಯಾಗಿದೆ.

ಅಣಕು ಮದುವೆ : ಮೈನೆರೆದ ಹುಡುಗಿಯನ್ನು ಮದುವಣಗಿತ್ತಿಯಾಗಿಯೂ ನಾದಿನಿಯಾಗಬಹುದಾದ ಸಂಭವವುಳ್ಳ ಒಂದು ಹುಡುಗಿಯನ್ನು ಪಂಚೆ, ಅಂಗಿ, ಶಲ್ಯಗಳಿಂದ ಅಲಂಕರಿಸಿ ಮದುವಣಿಗನನ್ನಾಗಿಸಿಯೂ ನಡೆಸುವ ಮದುವೆ, ಅಣಕು ಮದುವೆಯಾಗುತ್ತದೆ. ಮೈನೆರೆದ ಹುಡುಗಿಯೂ ನಕಲು ಮದುವಣಿಗನೂ ಮಾಲೆಯನ್ನು ಧರಿಸಿ ಜೋಡಿಯಾಗಿ ಕುಳಿತ ಬಳಿಕ, ಅವರಿಗೆ ದೃಷ್ಟಿ ತೆಗೆದು, ಪ್ರಸ್ತದ ಕೋಣೆಯಲ್ಲಿ ಬಿಡುವುದು ನಡೆಯುತ್ತದೆ. ಇದು ಮೈನೆರೆದ ಹುಡುಗಿಗೆ ಬೇಗ ಮದುವೆಯಾಗುತ್ತದೆ ಎಂಬ ನಂಬಿಕೆಯನ್ನೂ ‘ಬೇಗ ಆಗಲಿ’ ಎಂಬ ಹಾರೈಕೆಯನ್ನೂ ಸಂಕೇತಿಸುತ್ತದೆ.

.ಬಿ. ಅನುವಾದ ಜಿ.ಎನ್.