ಪೋರಾಟ್ ನಾಟಕಂ ಸಮಾಜದಿಂದ ದೂರ ಇರಿಸಲ್ಪಟ್ಟ, ಅಸ್ಪೃಶ್ಯರಾದ ಕೇರಳದ ಕೆಳವರ್ಗದವರ ಕಲೆಯಾಗಿದೆ ಪೋರಾಟ್. ಈ ಕಲೆಯನ್ನು ಅಸ್ಪೃಶ್ಯರ ಆಟವಾಗಿ ಜನರು ಕಂಡಿದ್ದರು. ಆದುದರಿಂದಲೇ ಇದಕ್ಕೆ ಪೋರಾಟ್ ಎಂಬ ಹೆಸರು ಬಂದಿರಬೇಕು. ಸಮಾಜದ ಮೇಲ್ವರ್ಗದವರು ಈ ಕಲೆಯೊಂದಿಗೆ ಬೆರೆಯುತ್ತಿರಲಿಲ್ಲ. ಹುಟ್ಟು ಹಾಡುಗಾರರಾದ ಪಾಣರ ಕಲೆಯಾಗಿ ಪಾಲಕ್ಕಾಡ್ ಜಿಲ್ಲೆಯ ಪೂರ್ವವಲಯಗಳಲ್ಲಿ ಈ ಕಲೆಯು ನೆಲೆ ನಿಂತಿತು. ಈ ಕಲೆಯನ್ನು ನಡೆಸುವವರು ಕೆಳಜಾತಿಯವರಾಗಿದ್ದಾರೆ. ಅವರ ಬದುಕು, ಸಮಸ್ಯೆಗಳು ಹಾಗೂ ಕೊರತೆಗಳನ್ನು ಹಾಸ್ಯದೊಂದಿಗೆ ನಾಟಕ ರೂಪದಲ್ಲಿ ಪ್ರದರ್ಶಿಸುವಾಗ ಆಬಾಲವೃದ್ಧರು ನೋಡಿ ಆನಂದಿಸುತ್ತಿದ್ದರು. ಹೀಗೆ ಸ್ವಂತಭಾಷೆಯಲ್ಲಿ ಹಾಡು, ಅಭಿನಯಗಳೊಂದಿಗೆ ಪ್ರದರ್ಶನಗೊಳ್ಳುವ ಪೋರಾಟ್ ನಿಜವಾದ ಅರ್ಥದಲ್ಲಿ ಸಂಗೀತ ನೃತ್ಯ ನಾಟಕವಾಗಿದೆ. ಸಮಾಜ ವಿಮರ್ಶೆ ಈ ಕಲೆಯ ಮುಖ್ಯ ವೈಶಿಷ್ಟ್ಯ. ಈ ಕಲೆಯ ಪ್ರತಿಯೊಂದು ಪೋರಾಟುಗಳೂ ಪರಿಪೂರ್ಣ ಏಕಾಂಕಗಳಾಗಿವೆ. ಇದರ ಕಥಾಪಾತ್ರಗಳೆಲ್ಲ ಬದುಕಿನೊಂದಿಗೆ ನಿಕಟ ಸಂಬಂಧವಿರುವ ಕಾರ್ಮಿಕರಾಗಿರುತ್ತಾರೆ.

ಪೋರಾಟುಗಳು : ನಿಲಕೂತ್ ಎಂದೇ ಪ್ರಸಿದ್ಧವಾಗಿರುವ ತೆರುಕೂತ್ ಮಾದರಿಯಲ್ಲಿ ರೂಪಿಸಿದ ಕಲೆಯಾಗಿದೆ ಪೋರಾಟ್‌ ಕಳಿ. ಅಲ್ಲಿನ ಉಡುಗೆತೊಡುಗೆಗಳನ್ನು ಕೈಬಿಟ್ಟು, ಇಲ್ಲಿ ಪಾತ್ರಗಳಿಗೆ ಯೋಗ್ಯವಾದ, ಜಾನಪದೀಯವಾದ ವೇಷವಿಧಾನಗಳನ್ನು ಬಳಸಲಾಯಿತು. ಹೀಗೆ ಪೋರಾಟುವೇಷಗಳು ಜನರಿಗೆ ಹತ್ತಿರವಾದುವು. ಸಾಮಾನ್ಯವಾಗಿ ಪಾಣಸಮುದಾಯದವರ ಈ ಕಲೆಯನ್ನು ಪಾಣಪೋರಾಟು ಎಂದೇ ಕರೆಯುತ್ತಿದ್ದರು.

ಸಾಮಾನ್ಯವಾಗಿ ಒಂದು ಪ್ರದರ್ಶನದಲ್ಲಿ ಹತ್ತು ಪೊರಾಟ್‌ಗಳನ್ನು ಅಳವಡಿಸುತ್ತಿದ್ದರು. ಕೆಲವು ತಂಡದವರು ಹೊಸ ಪೊರಾಟುಗಳನ್ನು ಆವಿಷ್ಕರಿಸಿ ಪ್ರದರ್ಶಿಸುತ್ತಿದ್ದರು. ದಾಸಿ, ಚಕ್ಕಿಲಿಯನ್, ಚಕ್ಕಿಲಾಚಿ, ತೊಟ್ಟಿಯನ್ – ತೊಟ್ಟಿಚ್ಚಿ, ಕುರವನ್ -ಕುರತ್ತಿ, ಮಣ್ಣಾನ್-ಮಣ್ಣಾತ್ತಿ, ಶವರ-ಕವರಿಚ್ಚಿ, ಚೆರುಮನ್-ಚೆರುಮಿ, ಮಾತುಚ್ಚಿ, ಹೂವಾಡಗಿತ್ತಿ, ಕುಂಬಾರ, ಮಾಪಿಳ – ಮಾಪಿಳಚ್ಚಿ ಇವುಗಳು ಪ್ರಮುಖ ಪೊರಾಟುಗಳು.

ದಾಸಿ ಎಂಬುದು ದೇವದಾಸಿಯ ಹೆಸರಾಗಿದೆ. ಅವಳು ಹಾಡುತ್ತಾ ಕುಣಿಯುತ್ತಾ ಬಹುಮಾನಗಳನ್ನು ಸ್ವೀಕರಿಸಿಕೊಳ್ಳುತ್ತಾ ಪ್ರವೇಶಿಸುತ್ತಾಳೆ. ಅವಳ ಊರು ತಂಜಾವೂರು. ತಮಿಳು ಶೈಲಿಯ ಲಂಗ, ದಾವಣಿ ಅವಳ ವೇಷ. ಅವಳ ರಂಗಪ್ರವೇಶಕ್ಕೆ ಮುಂಚಿತವಾಗಿ ಗಾಯಕರು ಆಗಮನವನ್ನು ತಿಳಿಸುವ ಹಾಡನ್ನು ಹಾಡುತ್ತಾರೆ. ವೇದಿಕೆಗೆ ಬಂದ ದಾಸಿ ಕೈಯಲ್ಲಿ ಕರವಸ್ತ್ರವನ್ನು ವಯ್ಯಾರವಾಗಿ ತಿರುಗಿಸುತ್ತಾ ಕುಣಿಯುತ್ತಾ, ದೇವದಾಸಿಯ ಮಹಿಮೆಯನ್ನು, ಹಿನ್ನೆಲೆಯನ್ನು ವಿವರಿಸುವಳು. ದಾಸಿಯ ವಯ್ಯಾರದ ಅಭಿನಯದ ಅದ್ಭುತವಾಗಿರುತ್ತದೆ.

ಮಣ್ಣಾನ್ ಅಗಸರಾಗಿದ್ದಾರೆ. ಕೇರಳದ ಸಾಮಾಜಿಕ ಬದುಕಿನಲ್ಲ ಸಂಸ್ಕಾರವಿಧಿಗಳ ಸಂದರ್ಭಗಳಲ್ಲಿ ಇವರು ನೀಡುವ ಶುದ್ಧಿವಸ್ತ್ರ (ಮಾಚ್ಚ್) ಮುಖ್ಯವಾಗಿದೆ. ಮದುವೆ, ಹೆರಿಗೆ, ಮರಣ, ಋತುಮತಿ ಮೊದಲಾದ ಸಂದರ್ಭಗಳಲ್ಲಿ ಈ ಶುದ್ಧಿ ವಸ್ತ್ರಕ್ಕೆ ಮಹತ್ವವಿದೆ. ಮಾಟ್ಟ್ ಎಂದರೆ ಬದಲಾಯಿಸುವ ವಸ್ತ್ರ ಎಂದರ್ಥ. ದಂಪತಿಗಳ ಪ್ರವೇಶದಲ್ಲಿ ಮೊದಲು ಸ್ತ್ರೀಪಾತ್ರವೇ ಪ್ರವೇಶ ಮಾಡುವುದು.

ಮೊಣಕಾಲಿನವರೆಗೆ ಕಚ್ಚೆ, ಕೈಗಳಿಗೆ ತಾಮ್ರದ ಬಳೆಗಳು, ಕೈಯಲ್ಲಿ ಪೊರಕೆ ಹಿಡಿದು ರಂಗ ಪ್ರವೇಶಿಸುವ ಛಿರುಮ ಮತ್ತು ಚೆರುಮಿ ಪಾತ್ರಗಳು ಪಾಲಕಾಡಿನ ಮಣ್ಣಿನ ಮಕ್ಕಳಾದ ಕೃಷಿಕರನ್ನು ಪ್ರತಿನಿಧಿಸುತ್ತವೆ. ಚೆರುಮಿ ಮೊದಲು ರಂಗಪ್ರವೇಶ ಮಾಡಿ ಸಭೆಯೊಂದಿಗೆ ಮಾತನಾಡುತ್ತಾಳೆ. ಅನಂತರ ಸೂತ್ರಧಾರನೊಂದಿಗೆ ಮಾತನಾಡುವಳು. ತನ್ನನ್ನು ಅಗಲಿರುವ ಚೆರುಮನನ್ನು ಹುಡುಕುವಳು. ಅನಂತರ ಚೆರುಮನು ರಂಗಪ್ರವೇಶ ಮಾಡುತ್ತಾನೆ. ಇವರಿಬ್ಬರೂ ಭೇಟಿಯಾದಾಗ ಪ್ರಣಯ ಕಲಹ ಆರಂಭವಾಗುತ್ತದೆ. ಕೊನೆಗೆ ಪ್ರೀತಿಯಿಂದ ಮರಳುವರು.

ಬ್ರಾಹ್ಮಣರ ಅಗ್ರಹಾರಗಳು ಸಾಕಷ್ಟು ಇರುವ ಪಾಲಕಾಡಿಗೆ ತಮಿಳುನಾಡಿನಿಂದ ಬರುವ ಹೂವಿನ ವ್ಯಾಪಾರಿಣಿ ಪೂಕಾರಿ. ಸೂತ್ರಧಾರನೊಂದಿಗೆ ವ್ಯಾಪಾರ ಕುದುರಿಸುವ ಹೂವಾಡಗಿತ್ತಿಯ ನಟನೆಯಿಂದ ವೇದಿಕೆ ಸಂಭ್ರಮಿಸುತ್ತದೆ.

ಚಕ್ಕಿಲಿಚ್ಚಿ ಮೊದಲಿಗೆ ರಂಗವನ್ನು ಪ್ರವೇಶಿಸಿ ತಾನು ಬಂದ ಕಾರಣವನ್ನು ವಿವರಿಸುವಳು. ಚಪ್ಪಲಿ ಮಾಡುವ ತನ್ನ ಬದುಕಿನ ವಿವರಗಳನ್ನು ತಿಳಿಸುವಳು.

ತಿರುವನಂತಪುರದಿಂದ ಪಾಲಕಾಡ್ ಜಿಲ್ಲೆಗೆ ಕೊಯ್ಲಿನ ಸಂದರ್ಭದಲ್ಲಿ ಆಗಮಿಸುವ ಕುರುವ ಮತ್ತು ಕುರತ್ತಿ ಹಸ್ತಶಾಸ್ತ್ರ ಪಕ್ಷಿಶಾಸ್ತ್ರಗಳ ಮೂಲಕ ಭವಿಷ್ಯವನ್ನು ಹೇಳುತ್ತಾರೆ. ಸೌಂದರ್ಯವರ್ಧಕ ವಸ್ತುಗಳನ್ನು ವ್ಯಾಪಾರ ಮಾಡುವರು. ಸುಂದರಿಯಾದ ಕೊರವಂಜಿ ವೇದಿಎಕಗೆ ಬಂದು ಕುರವನ್ ದೂರವಾದ ಬಗೆಯನ್ನು ವಿವರಿಸುತ್ತಾಳೆ. ಸೂತ್ರಧಾರನ ಸಹಾಯದೊಂದಿಗೆ ಗಂಡನನ್ನು ಭೇಟಿಯಾಗುವುದರೊಂದಿಗೆ ಪ್ರೇಮಕಲಹ ಆರಂಭವಾಗುತ್ತದೆ. ಇಬ್ಬರು ಹೆಂಡಿರು ಇರುವ ಈತನ ಕತೆ ಕಷ್ಟಕರ ಎಂದು ಸೂತ್ರಧಾರ ಹೇಳುತ್ತಾನೆ. ಲಕ್ಷ್ಮಿ, ಮಾಧವಿ ಎಂಬ ಪತ್ನಿಯರ ಪ್ರಶ್ನೋತ್ತರಗಳೊಂದಿಗೆ ಪೊರಾಟ್ ಮುಂದುವರಿಯುತ್ತದೆ. ಕುರತ್ತಿಯ ಪ್ರಸ್ತಾವನೆಯೊಂದಿಗೆ ಈ ಭಾಗ ಮುಗಿಯುತ್ತದೆ.

ಕುಂಬಾರ, ಕುಶವನ್ ಎಂಬ ಹೆಸರುಗಳಿಂದ ತಿಳಿಯುವ ಮಣ್ಣಿನ ಪಾತ್ರೆಗಳನ್ನು ನಿರ್ಮಿಸುವ ಸಮುದಾಯವು ಕೇರಳಕ್ಕೆ ವಲಸೆ ಬಂದು ನೆಲೆಸಿರು. ಈ ಕಥಾಪಾತ್ರವು ಕುಂಬಾರರ ಬದುಕಿನ ಸಂಕಷ್ಟಗಳ ಕಥೆಗಳನ್ನು ಪ್ರಸ್ತುಪಡಿಸುವುದು.

ಪಾಕನಾರ ವಂಶದವರೆಂದು ಹೇಳಿಕೊಳ್ಳುವ, ಕಾಡಿನಲ್ಲಿ ವಾಸಿಸುವ ಕವರರು ಬಿದಿರನ್ನು ಸೀಳಿ, ಬುಟ್ಟಿ, ಗೆರಸೆ, ಮೊದಲಾದ ವಸ್ತುಗಳನ್ನು ನಿರ್ಮಿಸುವರು. ಇವರ ಭಾಷೆ, ಜೀವನ ವಿಧಾನ ವ್ಯತ್ಯಸ್ತವಾಗಿದೆ. ಈ ಪಾತ್ರದ ಆಗಮನವು ಕ್ಷಿಪ್ರ ನಡೆಯೊಂದಿಗೆ ಆಗಿದೆ. ಕತೆ ಮತ್ತು ಉಪಕತೆಗಳನ್ನು ಹೇಳುತ್ತಾ ಕವರಚ್ಚಿ ಆಗಮಿಸುವಳು. ಅನಂತರ ಕಲಹ, ಪ್ರೀತಿಯೊಂದಿಗೆ ನಿರ್ಗಮಿಸುವರು.

ಕೊಯ್ಲು ಸಂದರ್ಭದಲ್ಲಿ ಪಾಲಕಾಡು ಪ್ರದೇಶಕ್ಕೆ ತೊಟ್ಟಿಯನ್ ತೊಟ್ಟಿಚ್ಚಿ ಬರುತ್ತಾರೆ. ಸೌಂದರ್ಯವರ್ಧಕ ವಸ್ತುಗಳನ್ನು ಮಾರಾಟ ಮಾಡುವರು. ತನ್ನ ಜತೆಯಲ್ಲಿ ದೊಡ್ಡ ಜನಸಮೂಹವೇ ಬಂದಿದೆ ಎಂದು ಹೇಳುತ್ತಾಳೆ.

ಅಚ್ಚಿ, ಅಚ್ಚನ್ ಎಂಬುದು ಅಕ್ಕ, ಅಣ್ಣ ಎಂಬಹ ಗೌರಸೂಚಕ ಪದವಾಗಿದೆ. ಪಾಲಕಾಡು ಜಿಲ್ಲೆಯ ಈಟಿವರ ಪ್ರತಿನಿಧಿಯಾದ ಮಾತುಚ್ಚಿ ಪ್ರತ್ಯೇಕ ಭಾಷೆಯನ್ನಾಡುತ್ತಾಳೆ. ಬತ್ತ ಬೇಸಾಯದ ಅನೇಕ ವಿವರಗಳು ಈ ಪೊರಾಟ್‌ನಲ್ಲಿದೆ.

ಇಸ್ಲಾಂ ಮತಕ್ಕೆ ಸೇರಿದ ಮಾಪಿಳ ಪಾತ್ರವು ಕೇರಳದ ಸಾಮಾಜಿಕ ಹಿನ್ನೆಲೆಯ ಕುತೂಹಲದ ಕಥೆಯನ್ನು ಹೇಳುತ್ತದೆ. ವಿಶಿಷ್ಯ ಹಾಡಿನೊಂದಿಗೆ, ಕುಣಿತದೊಂದಿಗೆ ಸೂತ್ರಧಾರ ಹಾಗೂ ಮಾಪಿಳ ಪಾತ್ರಗಳು ಪ್ರೇಕ್ಷಕರನ್ನು ರಂಜಿಸುತ್ತವೆ.

ಪ್ರದರ್ಶನ ರೀತಿ : ರಾತ್ರಿ ಎಂಟು ಗಂಟೆಗೆ ‘ಕೇಳಿಕೊಟ್ಟು’ ನಡೆಯುವುದು. ಚೆಂಡೆ, ಚಕ್ರತಾಳಗಳನ್ನು ಬಳಸುತ್ತಾರೆ. ಆರೂವರೆ ಅಡಿ ಎತ್ತರದ ದೊಡ್ಡ ಚಪ್ಪರ, ಹಿಂದೆ ನೇಪಥ್ಯ, ದೀಪ, ಹಿಮ್ಮೇಳ ವಾದನಕ್ಕೆ ವ್ಯವಸ್ಥೆ, ಗಾಯಕರು ರಂಗವೇದಿಕೆಯಲ್ಲಿರುತ್ತಾರೆ. ಪ್ರತಿಯೊಂದು ಪಾತ್ರವು ವೇದಿಕೆಗೆ ಬರುವ ಮುಂಚಿತವಾಗಿ ಆ ಪೊರಾಟಿನ ವೈಶಿಷ್ಟ್ಯವನ್ನು ಹಾಡಿನ ಮೂಲಕ ತಿಳಿಸುವರು, ಪಾತ್ರಗಳು ನೇಪಥ್ಯದಿಂದ ಹಾಡುತ್ತಾ, ರಂಗದಲ್ಲಿ ಹಾಡನ್ನು ಮುಗಿಸುತ್ತವೆ. ಸ್ತ್ರೀಪಾತ್ರಧಾರಿಗಳೂ ಪುರುಷರೇ ಆಗಿರುತ್ತಾರೆ. ಪ್ರೇಕ್ಷಕರು ಕಲಾವಿದರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸುವ ಕ್ರಮವಿದೆ.

ಆಧುನಿಕ ಕಾಲದಲ್ಲಿ ಪೊರಾಟ್ ಕಳಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಸಮಕಾಲೀನ ಘಟನೆಗಳ ಕುರಿತು ಹಾಡುಗಳನ್ನು ಹೆಣೆದು ಪೊರಾಟಿನಲ್ಲಿ ಸೇರಿಸಲಾಗುತ್ತದೆ. ಇಡೀ ರಾತ್ರಿ ಪೊರಾಟ್ ನಡೆಯುತ್ತಿತ್ತು. ಈಗ ಕಾಲಮಿತಿಯ ಪೊರಾಟುಗಳು ನಡೆಯುತ್ತವೆ. ಪಾಲಕ್ಕಾಡು ಜಿಲ್ಲೆಯಲ್ಲಿ ಸದ್ಯ ಹತ್ತರಷ್ಟು ಪೊರಾಟ್ ತಂಡಗಳಿವೆ.

ಕೆ.ವಿ.ಸಿ. ಅನುವಾದ ಎನ್.ಎಸ್.

 

ಪೋರ್ಕುಳಂ ಕುದಿರವೇಲ ತ್ರಿಚ್ಚೂರು ಜಿಲ್ಲೆಯ ತಲಪ್ಪಿಳ್ಳಿ ತಾಲೂಕಿನ ಪೋರ್ಕುಳಂ ಎಂಬ ಊರಿನ ‘ಕುದಿರವೇಲ’ವು (ಕುದುರೆ ಕೆಲಸ) ಎಷ್ಟು ಪುರಾತನ ಎಂದು ಹೇಳಲು ಸಾಧ್ಯವಿಲ. ಕುಂಭಮಾಸದ ರೇವತಿಯೆಂದು ಇದು ನಡೆಯುತ್ತದೆ. ಇದು ಒಂದು ಧಾರ್ಮಿಕ ಕಾರ್ಯಕ್ರಮವಾದರೂ ಪೋರ್ಕುಳಂ, ತಿರುತ್ತಿಕ್ಕಾಡ್, ವೇದಕ್ಕಾಡ್ ಮುಂತಾದ ಊರುಗಳು ಒಟ್ಟಾಗಿ ಸೇರಿ ಒಟ್ಟಾಗಿ ದುಡಿಯುವುದರ ಫಲರೂಪವಾಗಿ ಈ ಕಾರ್ಯಕ್ರಮ ನಡೆಯುತ್ತದೆ. ಈ ಮಹೋತ್ಸವ ಕಳೆದು ಒಂದು ದಿನ ಕಳೆದರೆ ಕುಂಭ ಮಾಸದ ಭರಣಿ ಮಹೋತ್ಸವ ಆರಂಭಗೊಳ್ಳುತ್ತದೆ. ಕುಂಭ ಭರಣಿ (ಪೂರಂ) ಉತ್ಸವದ ನಾಂದಿ ಕುದಿರವೇಲಂದಿ ಆರಂಭವಾಗುತ್ತದೆ.

ತೇಗದ ಕಟ್ಟಿಗೆಯಿಂದ ಕುದುರೆಯ ರೂಪವನ್ನು ಮಾಡಿ ಬೈಹುಲ್ಲು, ಬಿದಿರು, ತೆಂಗಿನ ಹುರಿಹಗ್ಗ, ಬಟ್ಟೆ ಮುಂತಾದುವನ್ನು ಬಳಸಿಕೊಂಡು ಕಟ್ಟಲೆಗೆ ಅನುಸಾರವಾಗಿ ಅದರ ಅಧಿಕಾರ ಹೊಂದಿದವರು ಕುದುರೆಯನ್ನು ತಯಾರಿಸಿ ಆಚರಿಸುವ ಒಂದು ಉತ್ಸವವಿದು. ಸುಮಾರು ಇಪ್ಪತ್ತೈದು ಅಡಿ ಎತ್ತರದ ಮೂರು ಕುದುರೆಗಳು ಈ ಉತ್ಸವಕ್ಕಾಗಿ ನಿರ್ಮಾಣವಾಗುತ್ತವೆ. ಅಂತೆಯೇ ಅವನ್ನು ಅಪ್ಪ ಕುದುರೆ, ಅಮ್ಮ ಕುದುರೆ, ಮಗ ಕುದುರೆ ಎಂದು ಕರೆಯುತ್ತಾರೆ. ನಾಲ್ಕು ಕಿಲೋ ಮೀಟರ್ ಪಡುದಿಕ್ಕಿನ ಪೋರ್ಕುಳದಿಂದ ರೇವತಿ ದಿನದಂದು ಮುಂಜಾನೆ ಪಂಜುಗಳ ಬೆಳಕಲ್ಲಿ ಇವನ್ನು ತರುವ ಕಾರ್ಯಕ್ರಮವೇ ವೇಲ ಮಹೋತ್ಸವ. ಈ ಮೂರು ಕುದುರೆಗಳನ್ನು ತೇಗದ ಕಟ್ಟಿಗೆಯಿಂದ ಚೌಕಟ್ಟು ತಯಾರಿಸಿ ಬೈಹುಲ್ಲು ತುಂಬಿಸಿ ಹುರಿಹಗ್ಗದಿಂದ ಕಟ್ಟಿ ಬಿಳಿವಸ್ತ್ರದಿಂದ ಕಲಾತ್ಮಕವಾಗಿ ಸಿದ್ಧಪಡಿಸುತ್ತಾರೆ.

ಈ ಕುದುರೆಗಳು ಅರಸರ ಆಡಳಿತ ಕಾಲದಲ್ಲಿಯೇ ಸಿದ್ಧವಾಗುತ್ತಿದ್ದುವೆನ್ನುತ್ತಾರೆ. ಪುನ್ನತ್ತೂರು ರಾಜವಂಶ ಮತ್ತು ಕಕ್ಕಾಡ್ ಕಾರಣೋಪ್ಪಾಡು ಮನೆತನಗಳು ಮಹಾರಾಜರ ಸಾಮಂತ ರಾಜರಾಗಿದ್ದ ‘ಅಯಿನಿಕ್ಕೂರ್ ಸ್ವರೂಪ’ಕ್ಕೆ ಸೇರಿದವುಗಳೆಂದು ತಿಳಿದು ಬರುತ್ತದೆ. ಕೊಚ್ಚಿರಾಜರ ಆಸ್ಥಾನದಲ್ಲಿ ಸದಸ್ಯರಾಗಿದ್ದ ಪಯೂರು ಪಟ್ಟೇರಿಯರವರ ಇಲ್ಲಂ (ಬ್ರಾಹ್ಮಣ ಮನೆ) ಪೋರ್ಕುಳದಲ್ಲಿ ಇತ್ತು ಎನ್ನುತ್ತಾರೆ. ಪಯ್ಯೂರ್ ಇಲ್ಲಂನಲ್ಲಿ ಗಂಡುಮಕ್ಕಳು ಇಲ್ಲದ್ದರಿಂದ ದೇವಾಲಯಕ್ಕೆ ಹರಕೆಯಾಗಿ ಮೂರು ಕುದುರೆಗಳನ್ನು ಕಟ್ಟಿಸಿ ಒಪ್ಪಿಸಿದರು ಎನ್ನಲಾಗುತ್ತದೆ. ರಾಜರ ಕಾಲ ಮುಗಿದು ಹೋದಾಗ ಪುನ್ನತ್ತೂರ್ ರಾಜವಂಶವೂ ಕಕ್ಕಾಡ್ ಕಾರಣೋಪ್ಪಾಡುಗಳೂ ತಂತಮ್ಮ ಕುದುರೆಗಳನ್ನು ಕಟ್ಟಿ ದೇವಾಲಯಕ್ಕೆ ಹರಕೆ ಸಲ್ಲಿಸುವ ಹಕ್ಕು ಪೋರ್ಕುಳದಲ್ಲಿದ್ದ ಒಂದು ಪ್ರಶಸ್ತ ಕುಟುಂಬದವರಿಗೆ ನೀಡಿದರು. ಕಾಲಕ್ರಮೇಣ ಈ ಕುಟುಂಬವು ಕುದುರೆಗಳನ್ನು ಊರವರಿಗೆ ಬಿಟ್ಟುಕೊಟ್ಟಾಗಲೂ ಪಯೂರ್ ಕುಟುಂಬವು ಅವರ ಕುದುರೆಗಳನ್ನು ಯಾರಿಗೂ ಬಿಟ್ಟು ಕೊಡಲಿಲ್ಲ. ಕಾಲ ಕ್ರಮೇಣ ಅದೂ ಒಂದು ಊರವರಿಗೆ ಹೋಯಿತು. ತಂದೆ ಕುದುರೆಯೆಂದು ತಿಳಿಯಲಾಗುತ್ತಿದ್ದ ಪುನ್ನತ್ತೂರ್ ಕುದುರೆಯನ್ನು ಪೋರ್ಕುಳಂ ಊರವರಿಗೂ ತಾಯಿ ಕುದುರೆಯನ್ನು ತಿರುತ್ತಿಕ್ಕಾಡ್‌ನವರಿಗೂ ಮಗ ಕುದುರೆಯಾಗಿದ್ದ ಪಯ್ಯೂರ್ ಕುದುರೆಯನ್ನು ಪೋರ್ಕುಳಂ ಮೂಡು ‘ಮುರಿ’ (ಮನೆ)ಗೂ ಕೊಡುವಂತಾಯಿತು.

ಪಂಥ ಪೌರುಷಗಳೊಂದಿಗೆ ಊರಿನ ಎಲ್ಲ ಜನರೂ (ಗಂಡಸರು) ಪುಂಜಪ್ಪಾಡತ್ತು (ಸುಗ್ಗಿಗದ್ದೆಗಳವರು)ರ ಹರಕೆ (ಮೂರು ಕುದುರೆಗಳು)ಯನ್ನು ಭಕ್ತರು ಹೆಗಲಲ್ಲೇರಿಸಿ ಕಂಗಿನ ಒಣಸೀಳುಗಳು, ತೆಂಗಿನ ಒಣಗಿದ ಗರಿಗಳು – ಇವುಗಳಿಂದ ಮಾಡಿದ ದೊಂದಿಯನ್ನು ಉರಿಸಿ ಅದರ ಬೆಳಕಲ್ಲಿ ರೇವತೀ ದಿನ ಮುಂಜಾನೆ ಪರಯೆಡುಪ್ಪ್‌ನ ಬಳಿಕ ಆವೇಶದಿಂದ ಕುಣಿಯುತ್ತಿರುವ ದೈವಪಾತ್ರಿಯಿಂದ ಸಿಗುವ ದೇವಿಯ ಅಪ್ಪಣೆಯಂತೆ ಕುದುರೆಗಳನ್ನು ದೇವಾಲಯಕ್ಕೆ ಸಾಗಿಸಲಾಗುತ್ತದೆ. ಉರಿಸಿದ ದೊಂದಿಗಳೊಂದಿಗೆ ದಾರಿಯಲ್ಲಿ ಅನೇಕ ಜನ ಅದನ್ನು ಸ್ವಾಗತಿಸಲು ಗುಂಪು ಸೇರಿರುತ್ತಾರೆ. ಬಳಿಕ ಅಲ್ಲಿ ನಡೆಯುವ ಕೆಲವು ಕಾರ್ಯಕ್ರಮಗಳೊಂದಿಗೆ ಮೆರವಣಿಗೆ ಮುಗಿಯುತ್ತದೆ.

ಕುಂಭಮಾಸದ ಭರಣಿ ದಿನಗಳಲ್ಲಿ ದೇವಾಲಯದ ಜಾತ್ರೆ. ಜಾತ್ರೆಯು ಆನೆಗಳ ಬೆನ್ನ ಮೇಲೆ ಪ್ರಾರಂಭಗೊಂಡ ಬಳಿಕ ಮುಂಗಾಡ್‌ಭಗವತೀ ದೇವಾಲಯದಲ್ಲಿ ತಂದಿರಿಸಿದ ಹರಕೆ ಕಾಣಿಕೆಗಳಾದ ಕುದುರೆಗಳ ಚೌಕಟ್ಟನ್ನು ಹೊರತು ಪಡಿಸಿದ ವಸ್ತುಗಳನ್ನು ಹೊರತೆಗೆದು ಮುಂದಿನ ಮೀನ ಮಾಸದ ಭರಣಿಯವರೆಗೆ ದೇವಾಲಯದ ಆವರಣದಲ್ಲಿ ನಿಲ್ಲಿಸಲಾಗುತ್ತದೆ. ಮೂಕಾಂಬಿಕೆಯೊಂದಿಗೂ ಕೊಡುಂಗಲ್ಲೂರಮ್ಮ ನೊಂದಿಗೂ ಸಂಬಂಧವುಳ್ಳ ಭಗವತೀ ಚೈತನ್ಯವು ಕೊಡುಂಗಲ್ಲೂರ್ ಭಗವತಿಯ ದೇವಾಲಯಕ್ಕೆ ಸಾಗುವ ಪ್ರಯಾಣದಲ್ಲಿ ಕುದುರೆಗಳನ್ನು ದೇವಿಯ ಸೇನಾಧಿಪತಿಯಾದ ಕಾರಾಳನಿಗೆ ದಕ್ಷಿಣೆಯಾಗಿ ಊರವರು ಬಿಟ್ಟು ಕೊಡುತ್ತಾರೆ. ಎಂದು ಐತಿಹ್ಯವಿದೆ.

ಕುದುರಿವೇಲ ಜಾಗದಿಂದ ಬಂದ ದೇವೀ ಚೈತನ್ಯವೇ ಭದ್ರಕಾಳಿಯಾದ ಮಂಗಾಡ್ ಭಗವತಿ ಎನ್ನಲಾಗುತ್ತಿದೆ. ತಿರುತ್ತಿಕ್ಕಾಡ್, ಪೋರ್ಕುಳಂ, ಕೀವಿಕ್ಕ್‌ಮುರಿ ಮುಂತಾದ ಊರವರು ಕುದರೆಯನ್ನು ಮುಂಗಾಡ್ ಭಗವತೀ ದೇವಾಲಯಕ್ಕೆ ತಲುಪಿಸುತ್ತಾರೆ. ಮುಂಜಾನೆ ನಡೆಯುವ ಕುದುರೆ ಮಹೋತ್ಸವಕ್ಕೆ ಒಂದು ರಾತ್ರಿಯಿಡೀ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.

ಕಾವುಗಳ ಬಗೆಗೆ ಸಾಕಷ್ಟು ಅಧ್ಯಯನಗಳು ನಡೆದಿದೆ. ಡಾ. ಎಂ.ವಿ. ವಿಷ್ಣುನಂಬೂದಿರಿಯವರ ತೋಟ್ಟಂಪಾಟ್ಟುಗಳ್ ಒರು ಪಠನಂ, ಫೋಕ್‌ಲೋರ್ ನಿಘಂಟು, ಡಾ. ರಾಘವನ್ ಪಯ್ಯನಾಡ್‌ರ ಫೋಕ್‌ಲೋರ್‌ನೊರು ಪಠನಪದ್ಧತಿ, ಡಾ. ಇ. ಉಣ್ಣಿಕೃಷ್ಣನ್‌ರ ಉತ್ತರ ಕೇರಳತ್ತಿಲೆ ವಿಶುದ್ಧಿ ವನಂಙಳ್, ಎಂ.ಎಸ್. ನಾಯಕರ ಮಾಡಾಯಿಕ್ಳಾವ್-ಒರುಪಠನಂ ಮುಂತಾದವು ಕಾವುಗಳ ಕುರಿತಾದ ವಿಶದ ವಿವರಗಳನ್ನು ಒಳಗೊಂಡಿದೆ.

ಕೆ.ಯು.ಎಚ್. ಅನುವಾದ ಕೆ.ಕೆ.

 

ಪೋರ್ಜಾ ಆಂಧ್ರದ ವಿಶಾಖ ಜಿಲ್ಲೆಯಲ್ಲಿರುವ ಬುಡಕಟ್ಟು. ಇವರ ಜನಸಂಖ್ಯೆ ತುಂಬಾ ಕಡಿಮೆ. ಸ್ವತಂತ್ರ ಉಪಭಾಷೆಯಿದ್ದು ತೆಲುಗು, ಒರಿಯಾ ಭಾಷೆಗಳನ್ನು ಮಾತಾಡುತ್ತಾರೆ. ೧. ಪಾರಂಗಿ ಪೊರ‍್ಜಾ, ೨. ರೋಡಿಯೋ ಪೊರ್ಜಾ ೩. ಗದಬ ಪೊರ್ಜಾ, ೪. ಬನಂಗ್ ಪೊಜಾ, ೫. ಪಂಗು ಪೊರ್ಜಾ, ೬. ಕೊಲ್ಲಾಯಿ ಪೊರ್ಜಾ, ೭. ಉದೋಯಿ ಪೊರ್ಜಾ ಎಂಬ ಉಪ ಭೇದಗಳಿವೆ. ಗೋತ್ರಗಳಲ್ಲಿ ೧. ಕಿಲ್ಲೋ (ಹಿಲಿ), ೨. ಕಿಮುಡು (ಕರಡಿ), ೩. ಕೊರ‍್ರ (ನವಣೆ) ೪. ರಂಬಿ (ಪಕ್ಷಿ), ೫. ಪಂಗಿ (ಗಾಳಿಪಟ), ೬. ಗಲ್ಲೊರಿ (ಮಂಗ) ಎಂಬುದಾಗಿವೆ. ವ್ಯಕ್ತಿಗಳ ಹೆಸರಿನ ಮುಂದೆ ನಾಮಗೋತ್ರಗಳನ್ನು ಸೇರಿಸಲಾಗುತ್ತದೆ.

ಮದುವೆಯಾದ ಹೆಣ್ಣು ತನ್ನ ಗಂಡನ ಗೋತ್ರನಾಮವನ್ನೇ ಪಡೆಯುತ್ತಾಳೆ. ಪೊರ್ಜಾಗಳ ಕುಟುಂಬಗಳು ತುಂಬಾ ಚಿಕ್ಕವು. ಪಿತೃಪ್ರಧಾನ ವ್ಯವಸ್ಥೆಯಿದೆ. ಏಕಪತ್ನಿತ್ವದ ನಿಬಂಧನೆಯುಂಟು. ಮಾತುಕತೆಗಳ ಮೂಲಕ ನಡೆಯುವ ಮದುವೆ ಅತ್ಯಂತ ಗೌರವಾನ್ವಿತವಾದ ಸಾಮಾಜಿಕ ಮನ್ನಣೆ ಪಡೆದ ಪದ್ಧತಿಯಾಗಿ ಚಾಲ್ತಿಯಲ್ಲಿದೆ. ಪ್ರೀತಿಯ ವಿವಾಹಗಳಲ್ಲಿ ಹುಡುಗ ಹುಡುಗಿಯನ್ನು ಸಂತೆಯಲ್ಲಿಯೋ, ಬಜಾರದಲ್ಲಿಯೋ ಅಪಹರಿಸಿ ಆತನ ಗೆಳೆಯರ ಮೂಲಕ ಆ ಗ್ರಾಮದ ಹಿರಿಯರಿಗೆ ತಿಳಿಸುತ್ತಾನೆ. ಅನಂತರ ಹುಡುಗಿಯ ತಂದೆತಾಯಿಗಳಿಗೆ ವಿಷಯವನ್ನು ತಿಳಿಸುತ್ತಾರೆ. ಹುಡುಗಿಗೆ ಇಷ್ಟವಾದರೆ ಒಂದು ಬಾವಿ ಇಲ್ಲವೆ ಕಾಲುವೆಯ ಬಳಿಗೆ ಹೋಗಿ ಸ್ನಾನ ಮಾಡಿ ಕೊಡದಿಂದ ನೀರು ತುಂಬಿಕೊಂಡು ಬಂದು ಅಡುಗೆ ಮಾಡಿ ಊರಿನ ಹಿರಿಯರಿಗೆ ಬಡಿಸುತ್ತಾರೆ. ಹುಡುಗಿಯ ತಂದೆತಾಯಿಯರು ಹುಡುಗನ ತಂದೆತಾಯಿಗಳೊಂದಿಗೆ ಜಗಳಕ್ಕಿಳಿಯುತ್ತಾರೆ. ಅನಂತರ ಓಲಿಯನ್ನು ನಿರ್ಣಯಿಸುತ್ತಾರೆ. ಪೊರ್ಜಾರ ನಾಯಕರು ಸಮುದಾಯದ ಯಜಮಾನನಾಗಿ ವ್ಯವಹರಿಸುತ್ತಾನೆ. ಈತನಿಗೆ ಈ ಹಕ್ಕು ವಂಶಪಾರಂಪರ್ಯವಾಗಿ ಬರುತ್ತದೆ. ಪೂರ್ಜಾಗಳು ಒಣ ಬೇಸಾಯವನ್ನು ಮಾಡುತ್ತಾರೆ. ಕಾಡಿನ ಉತ್ಸವಗಳನ್ನು ಮಾರಿ ಜೀವನ ಸಾಗಿಸುತ್ತಾರೆ. ಹಾರೆ, ಕೊಡಲಿ, ಕೈಗೊಡಲಿ ಇಂತಹವುಗಳನ್ನು ಬಳಸುತ್ತಾರೆ. ಪೊರ್ಜಾಗಳು ಮಾಂಸಾಹಾರಿಗಳು. ಅವರು ದನದ ಮಾಂಸ, ಹಂದಿಯ ಮಾಂಸವನ್ನು ತಿನ್ನುತ್ತಾರೆ. ತೀರಿಕೊಂಡವರ ಮೃತದೇಹಗಳನ್ನು ಸುಡುವುದು ಇಲ್ಲವೆ ಹೂಳುವುದು ಮಾಡುತ್ತಾರೆ. ಹತ್ತು ದಿನಗಳ ಕಾಲ ಮೈಲಿಗೆಯಿಂದ ನಡೆದುಕೊಳ್ಳುತ್ತಾರೆ. ಅವರ ಪೂರ್ವಿಕರನ್ನು ಪೂಜಿಸಿ ಪ್ರಾಣಿಬಲಿ ನೀಡುತ್ತಾರೆ. ಗಿಲಿಯಾಬ್ ಪೊರ್ಜಾ (ಬೇಟೆಯ ಹಬ್ಬ), ಪೊಡುಜ (ಬಿತ್ತು ಹಬ್ಬ), ಗೊಟ್ನಾಕಿಯಾ (ಉಳುವಹಬ್ಬ)ಗಳಲ್ಲದೆ ಬಲಿದೇವತಾ ಹಬ್ಬಗಳನ್ನು ಆಚರಿಸುತ್ತಾರೆ. ಪೊರ್ಜಾಗಳ ಜಿಲ್ಲಿನಾಟ್ ನೃತ್ಯವನ್ನು ಪ್ರದರ್ಶಿಸುತ್ತಾರೆ.

೨೦೦೧ ರ ಜನಗಣತಿಯ ಪ್ರಕಾರ ಅವರ ಒಟ್ಟು ಜನಸಂಖ್ಯೆ ೩೨,೬೬೯. ಅಂದರೆ ಶೇಕಡಾ ೦.೪೭.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಪೋಲಾಲ ಅಮಾವಾಸ್ಯ ತೆಲುಗರು ಶ್ರಾವಣ ಮಾಸದಲ್ಲಿ ಅಮಾವಾಸ್ಯೆಯೆಂದು ಆಚರಿಸಿಕೊಳ್ಳುವ ಹಬ್ಬದ ಇದು. ಪೋಲಾಲ (ಭೂಮಿ) ಅಮಾವಾಸೆ ಎಂದು ಜನ ಇದನ್ನು ಕರೆಯುತ್ತಾರೆ. ಗೋದಾವರಿ ಪ್ರಾಂತ್ಯದಲ್ಲಿ ಕೂಡ ಪೋಲಾಲಮಾವಾಸ್ಯೆ ಎನ್ನುತ್ತಾರೆ. ಆಂಧ್ರಪ್ರದೇಶದ ಅನೇಕ ಭಾಗಗಳಲ್ಲಿ ಈ ಹಬ್ಬದಂದು ‘ಪೋಲಾಂಬ’ ವ್ರತ ಎಂದು ಆಚರಿಸುತ್ತಾರೆ. ಕಂದ ಗೊಡಗು ಇರಿಸಿ ಪೂಜಿಸುವುದು (ಕಂದಗೆಡ್ಡೆಯ ಗಿಡದಿಂದ ಮಾಡಿದ ಕೊಡೆ) ತೆಲುಗರಲ್ಲಿ ಕಂಡುಬರುತ್ತವೆ. ಇಂತಹ ಪೂಜೆಯಿಂದ ಮಕ್ಕಳು ಅಕಾಲ ಮೃತ್ಯುವಿನಿಂದ ಪಾರಾಗುತ್ತಾರೆ. ಎಂಬುದು ಇವರ ನಂಬಿಕೆ. ತಾಯಿ ಪೋಲೇರಮ್ಮನ ಕೃಪೆಯಿಂದ ಅಕಾಲ ಮೃತ್ಯುವಿನ ಭಯವಿರುವುದಿಲ್ಲ ಎಂದು ಜನ ಭಾವಿಸುತ್ತಾರೆ.

ಇದನ್ನು ಮಗಡಿ ಪಂಡಗ (ಗಂಡನನ್ನು ಪೂಜಿಸುವ ಹಬ್ಬ) ಎಂದು ಅಮಾವಾಸ್ಯೆ ದಿನ ಆಚರಿಸುತ್ತಾರೆ. ಮದುವೆಯಾಗದ ಹೆಣ್ಣು ಮಗಳು ಈ ಪೂಜೆ ಮಾಡಿದರೆ ಬೇಗನೆ ಮದುವೆಯಾಗುತ್ತಾರೆಂದು ಇವರ ನಂಬಿಕೆ. ಜೇಡಿಮಣ್ಣಿನಿಂದ ತಯಾರಿಸಿದ ಎರಡು ಗೊಂಬೆಗಳನ್ನು ಮನೆಯಲ್ಲಿಟ್ಟು ಪೂಜಿಸಿ ಕೈಗೆ ದಾರವನ್ನು ಕಟ್ಟಿಕೊಳ್ಳುತ್ತದೆ. ಹಣ್ಣು ಹಂಪಲು ಮತ್ತು ಪೊಂಗಲ್‌ಗಳಿಂದ ಈ ಗೊಂಬೆಗಳಿಗೆ ನೈವೇದ್ಯ ಮಾಡುತ್ತಾರೆ. ಎಷ್ಟು ಹೆಣ್ಣು ಮಕ್ಕಳು ಮನೆಯಲ್ಲಿದ್ದರೆ ಅಷ್ಟ ಜೊತೆ ಗೊಂಬೆಗಳನ್ನು ಪೂಜೆಗೆ ಕೂರಿಸಿರುತ್ತಾರೆ. ಅದರಲ್ಲಿ ಒಂದು ಗೊಂಬೆಯನ್ನು ಶಿವನೆಂದು ಇನ್ನೊಂದು ಗೊಂಬೆಯನ್ನು ಪಾರ್ವತಿ ಎಂದು ಕರೆಯುತ್ತಾರೆ. ಹೀಗೆ ಪೂಜೆ ಮಾಡಿದರೆ ಒಳ್ಳೆಯ ಗಂಡ ದೊರೆಯುತ್ತಾನೆಂದೂ ಗಂಡನ ಆಯುಸ್ಸು ಹೆಚ್ಚಾಗುತ್ತದೆಂದೂ ಐತಿಹ್ಯವಿದೆ ಎನ್ನುತ್ತಾರೆ.

ಪಿ.ಆರ್.ಎಚ್. ಅನುವಾದ ವಿ.ಅರ್.

 

ಪ್ರಧಾನ್ ಪ್ರಧಾನರು ತೆಲಂಗಾಣದ ಆದಿಲಾಬಾದ್ ಜಿಲ್ಲೆಯಲ್ಲಿ ವಾಸಿಸುತ್ತಾರೆ. ಇವರು ಗೊಂಡರಿಗ ಎಸಲಹೆಗಾರರು. ಸಾಂಪ್ರದಾಯಿಕವಾಗಿ ಗೋಡು ಬುಡಕಟ್ಟಿಗೆ ಆಸ್ಥಾನ ಕವಿಗಳಿರುತ್ತಿದ್ದರು. ಇವರು ಗೊಂಡು ರಾಜರ ಪೂರ್ವಚರಿತ್ರೆಯನ್ನು, ದೇವತೆಗಳ ಕಥೆಗಳನ್ನು ಕ್ರಿಂಗಿ ಎಂಬ ವಾದ್ಯದೊಂದಿಗೆ ಹಾಡುತ್ತಾರೆ. ಇವರ ಜ್ಞಾಪಕ ಶಕ್ತಿ ಅಮೋಘವಾದುದು. ಗೋಂಡು ಸಂಸ್ಕೃತಿಗೆ ಇವರು ಕಾವಲುಗಾರರು. ಇವರ ಮಾತೃಭಾಷೆ ಮರಾಠಿ. ಆದರೆ ವ್ಯಾವಹಾರಿಕ ಭಾಷೆ ಕೋಯ. ಗೋಂಡರು ಇವರನ್ನು “ಪಾಟಿಡಿ” (ಹಾಡುಗಾರ) ಎಂದು ಕರೆಯುತ್ತಾರೆ. ಇವರ ಗೋತ್ರಗಳು.

೧. ಸತಾದೇವಿ (ಸಪ್ತದೇವಿ ಸಮೂಹ)
೨. ಸಹದೇವಿ (ಷಟ್‌ದೇವಿ ಸಮೂಹ)
೩. ಪಜಾದೇವಿ (ಪಂಚದೇವಿ ಸಮೂಹ)
೪. ಚೌದೇವಿ (ಚತುರ್‌ದೇವಿ ಸಮೂಹ)

ಏಕಪತ್ನಿತ್ವ ಜಾರಿಯಲ್ಲಿದೆ. ಅವರು ವೈವಾಹಿಕ ಸಂಬಂಧ ಬೆಳೆಸಲು ಮುಂದೆ ಹೇಳಲಾದ ವಿಧಾನಗಳನ್ನು ಅನುಸರಿಸುತ್ತಾರೆ.

೧. ಖಾಜಾ ಖೋಬ್ರ (ಮಾತುಕತೆ)
೨. ದುರುರಣ್ ತಕ್ತ್‌ನಾ (ಪರಿಗ್ರಹಣ)
೩. ಷರ‍್ಜವೇ ಲಗಾನ್ (ಸೇವೆಯ ಮೂಲಕ)
೪. ಸಿವಾರ್ ಜಾವಾ (ಅನಾರುತ ವಿವಾಹ)
೫. ದುರುಣ್ ಪಂಲಾ (ಪ್ರೀತಿ ಪ್ರೇಮ)
೬. ಪಿಲಾಡ್ ಬೋಡಿಂಗ್ (ವಿನಿಮಯ)

ವಿಧವಾ ವಿವಾಹವನ್ನು ‘ಪಾಟ್’ ಎಂದು ಕರೆಯುತ್ತಾರೆ. ಪ್ರಧಾನ್‌ರಲ್ಲಿ ಅಣ್ಣ ಸತ್ತರೆ ಅತ್ತಿಗೆಯನ್ನು ತಮ್ಮನೇ ಮದುವೆ ಮಾಡಿಕೊಳ್ಳಬೇಕಾಗುತ್ತದೆ. ಆಕೆಯ ಗಂಡನಿಗೆ ತಮ್ಮಂದಿರು ಯರೂ ಇಲ್ಲದಿದ್ದ ಪಕ್ಷದಲ್ಲಿ ಆಕೆ ಸತ್ತ ತನ್ನ ಗಂಡನ ಗೋತ್ರಕ್ಕೆ ಸೇರಿದ ಮತ್ಯಾರನ್ನಾದರೂ ಮದುವೆ ಮಾಡಿಕೊಳ್ಳಬಹುದು. ವಿವಾಹ ವಿಚ್ಛೇದನ ಸರ್ವೇ ಸಾಧಾರಣ. ಅವರ ಕುಲ ಪಂಚಾಯತ್ ಪಂಚ್ ವಿಚ್ಛೇದನಕ್ಕೆ ಅನುಮತಿ ನೀಡುತ್ತದೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಿದೆ. ಪೋಷಕರಾದ ಗೋಂಡುಗಳನ್ನೇ ಪರಧಾನ್‌ರು ಅವಲಂಬಿಸಿರುತ್ತಾರೆ. ಇಂದು ಪ್ರಧಾನ್‌ರು ಸ್ಥಿರ ನಿವಾಗಳನ್ನೇರ್ಪಡಿಸಿಕೊಳ್ಳುತ್ತಾ ಬೇಸಾಯ ಮಾಡುತ್ತಿದ್ದಾರೆ. ಹತ್ತಿ, ಜೋಳ, ತೊಗರಿ, ಹೆಸರು ಮೊದಲಾದ ಬೆಳೆಗಳನ್ನು ಬೆಳೆಯುವುದರ ಜೊತೆಗೆ ರೇಷ್ಮೆ ಹುಳುವಿನ ಸಾಕಾಣಿಕೆಯಲ್ಲಿ ನಿಮಗ್ನರಾಗಿದ್ದಾರೆ. ಅವರ ಮುಖ್ಯ ಆಹಾರ ಜೋಳ. ದನದ ಮಾಂಸವನ್ನು ತಿನ್ನುತ್ತಾರೆ. ಸಮುದಾಯವನ್ನು ನಿಯಂತ್ರಿಸುವ ಸಂಘವನ್ನು ‘ಪಂಚ್’ ಎಂದು ಕರೆಯುತ್ತಾರೆ. ಅದರಲ್ಲಿ ಪಟೇಲ್‌, ಮಹಾಜನ್ ದೇವರಿ (ಪೂಜಾರಿ), ಹಮಲ್ದಾರ್ (ಸೇವಕ), ಕರ್‌ಚಾರಿ (ಕಡತಗಳನ್ನು ನೋಡಿಕೊಳ್ಳುವವನು) ಸದಸ್ಯರಿರುತ್ತಾರೆ. ಪಟೇಲ್, ಮಹಾಜನ್‌ರ ದರ್ಜೆ ವಂಶಪಾರಂಪರ್ಯವಾಗಿ ಬರುತ್ತದೆ. ಹುಡುಗಿ ಮೈನೆರೆದ ಮೇಲೆ ಮನೆಯಿಂದ ಹೊರಗೆ ಬರುವಂತಿಲ್ಲ. ಮನೆಯ ವಸ್ತುಗಳನ್ನು ಮುಟ್ಟುವಂತಿಲ್ಲ. ಐದನೆಯ ದಿನ ಸ್ನಾನ ಮಾಡಿಸುತ್ತಾರೆ. ಔತಣವಿರುತ್ತದೆ.

೨೦೦೧ರ ಜನಗಣತಿಯ ಪ್ರಕಾರ ಒಟ್ಟು ಜನಸಂಖ್ಯೆ ೨೩,೭೨೪. ಅಂದರೆ ಶೇಕಡಾ ೦.೪೭.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಪ್ರಪಂಚದ ಹುಟ್ಟು ಹುಟ್ಟು ಪ್ರಕೃತಿಯ ಗರ್ಭದಲ್ಲಿಯ ಅಗೋಚರ ವಿಚಾರ. ಇದು ಯಾರಿಗೂ ತಿಳಿಯದ ಸೃಷ್ಟಿ ರಹಸ್ಯ. ಆದರೆ ಮನುಷ್ಯನಿಗೆ ಮಾತ್ರ ಹುಟ್ಟಿನ ರಹಸ್ಯ ತಿಳಿಯುವ ಕೌತುಕ. ಜಗತ್ತಿನ ಹುಟ್ಟು ಹೇಗಾಯಿತು? ಎಂಬ ಬಗ್ಗೆ ಎಲ್ಲ ಜನರು, ಭಾಷಿಕರು, ಬುಡಕಟ್ಟುಗಳಲ್ಲಿಯ ಜನರು ಅವರವರದೇ ಆದ ಒಂದೊಂದು ಕೆಯನ್ನು ಕಟ್ಟಿ ಹೇಳುತ್ತಾರೆ. ಇದರಿಂದ ಈ ಎಲ್ಲ ಕತೆಗಳಲ್ಲಿಯೂ ಸಾಮ್ಯವಿರುವುದನ್ನು ಗಮನಿಸಬಹುದಾಗಿದೆ.

ಮಧ್ಯ ಭಾರತದಲ್ಲಿ ವಾಸಿಸುವ ‘ಭಿಲ್’ ಎಂಬ ಬುಡಕಟ್ಟು ಜನರಲ್ಲಿ ಇರುವ ಒಂದು ಪುರಾಣ ಕತೆ ಕೆಳಕಂಡಂತಿದೆ :

ಭಗವಂತನು ಮಣ್ಣಿನಿಂದ ಅಗಸ – ಅಗಸಗಿತ್ತಿ ಎಂಬ ಅಣ್ಣ – ತಂಗಿ ಇಬ್ಬರನ್ನು ಹುಟ್ಟಿಸಿದನು. ಅವರು ಸಂತೋಷದಿಂದ ಇದ್ದು ಸಹಬಾಳ್ವೆ ನಡೆಸುತ್ತಿದ್ದರು. ಅಗಸಗಿತ್ತಿ ನೀರಿಗೆ ಹೋಗುವಾಗೆಲ್ಲ ತನ್ನೊಂದಿಗೆ ಆಹಾರ ಕೊಂಡು ಹೋಗಿ ಮೀನುಗಳಿಗೆ ಹಾಕುತ್ತಿದ್ದಳು. ಹೀಗಿರಲು ಒಂದು ದಿನ ಆ ಮೀನು ಈ ಪ್ರಪಂಚ ನೀರಿನಲ್ಲಿ ಮುಳುಗಿ ಹೋಗುತ್ತದೆ. ಕುಂಬಳಕಾಯಿಯಲ್ಲಿರುವ ಬೀಜವನ್ನೆಲ್ಲ ತೆಗೆದು ಅಲ್ಲಿ ನೀನು, ನಿನ್ನ ಅಣ್ಣನೂ ಇರಿ, ಜೊತೆಗೆ ಒಂದು ಹುಂಜವನ್ನು ಮರೆಯದೆ ತೆಗೆದುಕೊಂಡು ಹೋಗಿ ಎಂದಿತು.

“ಭಯಂಕರ ಮಳೆ ಹೊಯ್ದು ಭೂಮಿ ಮತ್ತು ಬಾನು ಒಂದಾಗಿತ್ತು. ದೇವರು ‘ನಾನು ಪ್ರಪಂಚವನ್ನು ಮುಳುಗಿಸಿ ಬಿಟ್ಟೆ, ಆದರೆ ಹುಂಜ ಕೂಗುವ ಸದ್ದು ಕೇಳುತ್ತಿದೆಯಲ್ಲ, ಯಾರೋ ಜೀವಂತವಿದ್ದಾರೆ’ ಎಂದು ಭಾವಿಸಿಕೊಂಡು ತನಗೆ ಗೊತ್ತಿದ್ದರೂ ಕುಂಬಳಕಾಯಿಯ ಹತ್ತಿರ ಬಂದು ‘ಯಾರು ಒಳಗಿರುವುದು?’ ಎನ್ನಲು ಆ ಹೆಣ್ಣು ನಾನೂ, ನನ್ನಣ್ಣ ಎಂದಳು. ಅವರ ಉಳಿವಿಗೆ ಮೀನು ಕಾರಣವಾದ್ದರಿಂದ ದೇವರು ಮೀನನ್ನು ಕೇಳಲು ಅದು ಸುಳ್ಳು ಹೇಳಿತು. ಅದರಿಂದ ಕೋಪಗೊಂಡ ದೇವರು ಮೀನಿನ ನಾಲಿಗೆಯನ್ನು ಕಿತ್ತು ಬಿಸುಟ. ಅಂದಿನಿಂದ ಈ ತನಕ ಮೀನಿಗೆ ನಾಲಿಗೆಯೇ ಇಲ್ಲ.

ಭಗವಂತನು ಹೆಣ್ಣನ್ನು ಪಶ್ಚಿಮ ದಿಕ್ಕಿಗೂ, ಅಣ್ಣನನ್ನು ಪೂರ್ವ ದಿಕ್ಕಿಗೂ ನಿಲ್ಲಲು ಹೇಳಿ ಮತ್ತೆ ತಿರುಗಿಸಿ ಪರಸ್ಪರ ಇವರಿಬ್ಬರನ್ನು ಕಂಡು ಇದು ಯಾರು ಎಂದು ಕೇಳಲು ಅಣ್ಣ ತನ್ನ ತಂಗಿಯನ್ನೇ ‘ಇವಳೇ ನನ್ನ ಹೆಂಡತಿ’ ಎಂದನು. ಅದೇ ರೀತಿ ತಂಗಿಯನ್ನು ಕೇಳಲು ‘ಇವರು ನನ್ನ ಗಂಡ’ ಎಂದಳು. ಹೀಗೆ ದೇವರ ಈ ನಿರ‍್ಮಾಣದಿಂದ ಪ್ರಪಂಚದ ಜನರ ಹುಟ್ಟಿಗೆ ಈ ಅಣ್ಣ – ತಂಗಯರು ಕಾರಣರಾದರು. ಇದರಿಂದ ಮುಂದೆ ಭಾಷೆ, ಸಂಸ್ಕೃತಿ, ರೀತಿ – ರಿವಾಜು ಹಂತ ಹಂತವಾಗಿ ರೂಪುಗೊಂಡಿತು.

ಇದೇ ಕತೆಯ ಮತ್ತೊಂದು ರೂಪ ತಮಿಳಿನಲ್ಲಿ ಕಾಣಸಿಗುತ್ತದೆ. ‘ಪ್ರಪಂಚ ನಾಶವಾಗುವ ಸಮಯದಲ್ಲಿ ಅಪ್ಪ – ಮಗಳು ಒಂದು ದೊಡ್ಡ ಸೋರೆಕಾಯಿಯ ಬುರುಡೆಯ (ನೀರು ಕುಡಿಯಲು ಬಳಸುವ ಸಾಧನ) ಒಳಗಡೆ ಇದ್ದರು. ಪ್ರಪಂಚ ನಾಶವಾಯಿತು; ಆದರೆ ಆ ಸೋರೆ ಬುರುಡೆ ಮಾತ್ರ ತೇಲುತ್ತಿತ್ತು. ಇದನ್ನು ಅರಿತ ದೇವರು ಒಂದು ಪಕ್ಷಿಯನ್ನು ನೋಡಿಕೊಂಡು ಬರುವಂತೆ ಹೇಳಿ ಕಳುಹಿಸಲು, ಅದು ಅವರ ಹತ್ತಿರ ಹೋಗಿ ‘ಒಳಗೆ ಯಾರೋ ಇರುವಂತಿದೆ ಎಂದಿತು’ ದೇವರು ಆ ಬುರುಡೆಯನ್ನು ಎತ್ತಿಕೊಂಡು ಬರುವಂತೆ ಆಜ್ಞಾಪಿಸಿದ. ಆ ಪಕ್ಷಿ ಅದನ್ನು ತೆಗೆದುಕೊಂಡು ಬಂದಿತು. ದೇವರು ಅವರನ್ನು ಹೊರಗೆ ಬನ್ನಿ ಎಂದು ಹೇಳಿ, ‘ನೀವು ಯಾರು?’ ಎಂದು ಕೇಳಲು, ಅವನು ‘ನಾನು ತಂದೆ, ಇವಳು ನನ್ನ ಮಗಳು’ ಅಂದ. ದೇವರು ಜೀವಿಯ ಉಗಮಕ್ಕಗಿ ಅವರಿಬ್ಬರನ್ನು ಪಶ್ಚಿಮ ಪೂರ್ವ ದಿಕ್ಕಿಗೆ ನಿಲ್ಲಿಸಿ; ಪುನಃ ‘ಪರಸ್ಪರ ನೀವಿಬ್ರೂ ಯಾರು?’ ಎನ್ನಲು, ಅವನು ‘ನಾನು ಗಂಡ, ಅವಳು ನನ್ ಹೆಂಡ್ತಿ’ ಎಂದನು. ದೇವರು ಅವರನ್ನು ಆಶೀರ್ವದಿಸಿ ಮರೆಯಾದ. ಇವರು ದಿನನಿತ್ಯ ಮಕ್ಕಳನ್ನು ಹೊತ್ತು ಇಡೀ ಪ್ರಪಂಚವನ್ನೇ ಹುಟ್ಟಿಸಿದರಂತೆ ಮುಂದೆ ಮುಂದೆ ಜಾತಿಗಳೂ ಹುಟ್ಟಿಕೊಂಡವಂತೆ.

ಮೇಲೆ ಹೇಳಲಾಗಿರುವ ಈ ಎರಡೂ ರೀತಿಯ ರೂಪಕಗಳು ಸರಳವಾಗಿ ಅರ್ಥವಾಗುತ್ತವೆ. ಇವುಗಳಂತೆಯೇ ಪ್ರಪಂಚದ ಹುಟ್ಟಿನ ಬಗ್ಗೆ ಬೇರೆ ಬೇರೆ ಕಥಾರೂಪಗಳು ಸಿಗುತ್ತವೆ.

ಎಸ್.ವಿ. ಅನುವಾದ ಆರ್.ಎಸ್.