ಪನಸಕಥ ಆಂಧ್ರದ ಪ್ರದರ್ಶನ ಕಲೆ. ಪನಸಲು ಎನ್ನುವುದು ಒಂದು ಕುಲದ ಹೆಸರು; ಪನಸಕಥೆ ಅವರು ಪ್ರದರ್ಶಿಸುವ ಕಲೆ ಹೆಸರು. ಪನಸಲು ಎನ್ನುವವರು ವಿಶ್ವಕರ್ಮ ಕುಲದವರಿಗೂ ಸಹ ಆಶ್ರಿತ ಕಥಾಗಯಕರು. ಪನಸಗಳಲ್ಲಿ ಆದಿನಸರು, ಕೋಮಟಿ ಪನಸರು ಎನ್ನುವ ಎರಡು ಪಂಗಡಗಳು ಇರುವಂತೆ ಕ್ಷೇತ್ರ ಸಂಶೋಧನೆಯಿಂದ ತಿಳಿದುಬಂದಿದೆ. ಆದರೆ ಕೋಮಟಿ ಪನಸಲು ಎಲ್ಲಿಯೂ ಕಂಡುಬರುವುದಿಲ್ಲ. ಆದಿ ಪನಸರಿಗೆ ಸೇರಿದವರು ಒಂದೊ ಎರಡೊ ಕುಟುಂಬದವರು ಖಮ್ಮಂ ಜಿಲ್ಲೆಯ ಡೋರ‍್ನ್‌ಕಲ್ ಮಂಡಲ ಗ್ರಾಮದಲ್ಲಿ ಇದ್ದಾರೆ. ಇದರಲ್ಲಿಯ ಕೊನೆಯ ಕಥಾನಾಯಕನಾದ ಅಗ್ನಿ ನಾಗಭೂಷಣಂ ಇತ್ತೀಚಿಗೆ ನಿಧನರಾದರು. ಇವರೊಂದಿಗೆ ಈ ಕಥೆಯ ಸಂಪ್ರದಾಯ ಪೂರ್ತಿಯಾಗಿ ಅಂತ್ಯ ಕಂಡಿತು ಎಂದು ಭಾವಿಸಬಹುದು. ಇವರ ವಾರಸುದಾರರು ಯಾರೂ ಈ ಕಥೆಯ ಗಾಯನವನ್ನು ಮಾಡುತ್ತಿಲ್ಲ. ಪನಸರದು ಪೂರ್ತಿ ಪ್ರದರ್ಶನ ಕಲೆಯಲ್ಲ, ಅವರು ಅವರಿಗೆ ದಾತರಾದ ವಿಶ್ವಕರ್ಮ ಕುಲದವರ ಮನೆಗಳಿಗೆ ಬಂದು ಅವರ ಹತ್ತಿರ ಇದ್ದ ಓಲೆಗರಿಗಳನ್ನು ಬಿಚ್ಚಿ ಯಜಮಾನನಿಗೆ ಅವರ ಕುಲಪುರಾಣವಾದ ವಿಶ್ವಕರ್ಮ ಪುರಾಣವನ್ನು ಕೇಳಿಸುತ್ತಾರೆ. ಅವರ ಗೋತ್ರಗಳನ್ನು, ಕುಲದವರು ಪಾಲಿಸಬೇಕಾದ ವಿವಿಧ ಆಚಾರಗಳನ್ನು ಕಲಿತು ವಿವರಿಸುತ್ತಾರೆ. ಇವರು ಹೊರಗೆ ಓಡಾಡುವಾಗ ಮಾಮೂಲು ಉಡುಪುಗಳಲ್ಲಿದ್ದರೂ ಪುರಾಣವನ್ನು ಹೇಳುವಾಗ ಪೌರಾಣಿಕ ವೇಷದಲ್ಲಿರುತ್ತಾರೆ. ಪಂಚೆ, ಜನಿವಾರ ಮತ್ತು ಅವರ ಭಾಷೆ ಪೂರ್ತಿಯಾಗಿ ಪೌರಾಣಿಕನನ್ನು ಹೋಲುವಂತೆ ಇರುತ್ತವೆ. ಇವರು ಕಥೆಯ ಗಾಯನವನ್ನು ಪದ್ಯಗದ್ಯಗಳ ರೂಪದಲ್ಲಿ ಮಾಡುತ್ತಾರೆ. ಪುರಾಣಗಳನ್ನು ಹಾಡುವಾಗ ಹಾರ‍್ಮೋನಿಯಂವನ್ನು ಶ್ರುತಿಗಾಗಿ ಬಳಸುವರು. ರಾಗ ಸಹಿತವಾಗಿ, ಪುರಾಣವನ್ನು ವಿವರಿಸುತ್ತಾರೆ. ಇವರು ಆರ್ಶರಯದಾತರಿಂದ ದವಸಧಾನ್ಯ, ವಸ್ತ್ರಗಳಂತಹ ದಾನಗಳನ್ನು, ಮತ್ತಿತರ ಸಹಾಯಗಳನ್ನು ಪಡೆಯುತ್ತಾರೆ.

ವಿಶ್ವಕರ್ಮವನ್ನು ಲಯಗೊಳಿಸಬೇಕೆಂದು ಅಗ್ನಿಮುಖ ಬ್ರಹ್ಮಯಜ್ಞ ಮಾಡುತ್ತಾನೆ. ಅದರೊಳಗಿನ ಅಗ್ನಿ ಮಹಾದೇವಿಯಾಗಿ ಜನಿಸುತ್ತಾನೆ. ಆಕೆ ಅಗ್ನಿಮುಖ ಬ್ರಹ್ಮನನ್ನು ಮೋಹಿಸಿ ತನ್ನ ಬಯಕೆಯನ್ನು ಈಡೇರಿಸಬೇಕೆಂದು ಕೇಳುತ್ತಾಲೆ. ನೀನು ನನ್ನ ಯಜ್ಞದಲ್ಲಿ ಜನಿಸಿದ್ದೀಯೆ. ಆದ್ದರಿಂದ ನನಗೆ ಮಗಳಾಗುತ್ತಿಯೆ ಎಂದು ಹೇಳಿ ಯಾವ ವಿಶ್ವಕರ್ಮನ ಕಾರಣದಿಂದ ನೀನು ಜನಿಸಿದೆಯೋ ಆ ವಿಶ್ವಕರ್ಮನನ್ನು ಸೇರಿಕೊ ಎಂದು ಹೇಳುತ್ತಾನೆ. ತಪಸ್ಸು ಮಾಡುತ್ತಿದ್ದ ವಿಶ್ವಕರ್ಮನನ್ನು ಹಿಂಭಾಗದಿಂದ ನೋಡಿ ತಾತಾ ಎಂದು ಸಂಬೋಧಿಸಿದಳು. ಆಗ ವಿಶ್ವಕರ್ಮನು ಸಂತಾನ ಪ್ರಾಪ್ತಿರಸ್ತು ಎಂದು ಆಶೀರ್ವದಿಸಿದನು. ‘ಇದೇನು ತಾತಯ್ಯನವರೆ ನಾನು, ಗಂಡ ಬೇಕೆಂದು ಕೇಳೋಣವೆಂದು ನಿಮ್ಮ ಹತ್ತಿರ ಬಂದರೆ ನನಗೆ ಸಂತಾನವನ್ನು ಕೊಟ್ಟಿದ್ದೀಯೆ’ ಎಂದು ಕೇಳುತ್ತಾಳೆ. ಆಗ ಅವನು ದೊಡ್ಡ ತೋಟದ ಮಾರ್ಗದಲ್ಲಿ ಹಲಸಿನ ವನದಲ್ಲಿ ಪ್ರಸವಿಸಿ ಬಾ ಎಂದನು. ಆಕೆ ಹಾಗೆಯೇ ಹಲಸಿನ ವನದಲ್ಲಿ ಗಂಡು ಮಗುವನ್ನು ಹೆತ್ತು ಅವನಿಗೆ ಹಲಸಿನ ಹಾಲು ಸಿಗುವಂತೆ ಮಾಡಿ ಅಲ್ಲಿಯೇ ಮಗುವನ್ನಿಟ್ಟು ವಿಶ್ವಕರ್ಮನ ಬಳಿಹೋದಳು. ಅವನುನೀನು ನನ್ನ ಶತ್ರುವಿನ ಯಜ್ಞದಲ್ಲಿ ಜನಿಸಿರುವುದರಿಂದ, ನೀನು ನನ್ನ ಶತ್ರುವೇ ಎಂದು ಸ್ವಲ್ಪ ಜಲಗಂಗೆಯನ್ನು ತೆಗೆದು ಆಕೆಯ ಮೇಲೆ ಎರಚಿಸಿದನು. ಆಕೆ ಸಮುದ್ರದಲ್ಲಿ ನೊರೆಯಾಗಿ ಬದಲಾದಳು. ಅನಂತರ ವಿಶ್ವಕರ್ಮನು ಹಣ್ಣಿನ ತೋಟಕ್ಕೆ ಹೋಗುತ್ತಾ ಮಾರ್ಗ ಮಧ್ಯದಲ್ಲಿದ್ದ ಹಲಸಿನ ಬನದಲ್ಲಿದ್ದ ಬಾಲಕನನ್ನು ಕಂಡು ಆಶೀರ್ವದಿಸಿ ವಿಶ್ವಕರ್ಮ ಕುಲದವರು ನಿನಗೆ ಪೋಷಕರಾಗುತ್ತಾರೆ, ಅವರಿಗೆ ಅವರ ಪುರಾಣ ಕಥೆಗಳನ್ನು ಕೇಳಿಸಿ ಜೀವಿಸು ಎಂದು ಹೇಳುತ್ತಾನೆ. ಅಂದಿನಿಂದ ಆ ಹಲಸಿನ ಬಾಲಕ ಮತ್ತು ಆತನ ವಾರಸುದಾರರು (ಪನಸಕುಲಂ) ಹಲಸಿನ ಕುಲದವರಾಗಿ ವಿಶ್ವಕರ್ಮದವರಿಗೆ ಆಶ್ರಿತಗಾಯಕ ಕುಲದವರಾದರು. ಇದು ಅತ್ಯಂತ ಸಂಕ್ಷಿಪ್ತವಾದ ಹಲಸಿನವರ ಪುರಾಣ ಕಥೆ.

ಇದನ್ನು ಸಹ ವಿಶ್ವಕರ್ಮ ಪುರಾಣದಲ್ಲಿ ಒಂದು ಭಾಗವಾಗಿ ಹೇಳುತ್ತಾರೆ. ಈ ಕಥೆಯನ್ನು ವಿವರಿಸುವ ಹಿತ್ತಾಳೆ ಶಾಸನ ಈ ಹಲಸಿನ ಗಾಯಕರ ಬಳಿ ಇದೆ. ಇದನ್ನು ಆರ್ಶರಯ ದಾತರಿಗೆ ತೋರಿಸಿ ನಮಗೆ ಅವರನ್ನು ಯಾಚಿಸುವ ಹಕ್ಕು ಇದೆಯೆಂದು ವಿವರಿಸುತ್ತಾ ಕಥೆಯನ್ನು ಹೇಳುತ್ತಾರೆ. ೧೫ನೆಯ ಶತಮಾನಕ್ಕೆ ಸೇರಿದ ಇಂತಹ ಒಂದು ಹಿತ್ತಾಲೆ ಶಾಸನ ಲಭಿಸಿದೆ. ಇದರಲ್ಲಿ ಹಲಸಿಗರ ಕಥೆ ಮಾತ್ರವೇ ಅಲ್ಲದೆ, ಆ ಕಾಲದ ಕುತುಬ್‌ಶಾಹಿ ರಾಜಕುಟುಂಬಕ್ಕೆ ಸೇರಿದ ಚಾರಿತ್ರಿಕ ವಿಷಯಗಳು ಸಹ ದೊರೆಯುತ್ತವೆ. ಈ ಶಸನದಲ್ಲಿ ಇನ್ನೂ ಕೆಲವು ವಿಶೇಷಗಳಿವೆ. ನಿಜಾಂ ನವಾಬನ ಬಳಿ ಕೆಲಸ ಮಾಡುವ ಕೆಲವು ಗಣಿಕರು ವೈಶ್ಯ ಕುಲಕ್ಕೆ ಸೇರಿದ (ಕೋಮಟಿಗರಲ್ಲಿ ಪ್ರತ್ಯೇಕ ಪಂಗಡದವರು) ಲೆಕ್ಕಗಳಲ್ಲಿ ಅದಲುಬದಲು ಮಾಡಿದಾಗ ಅವರಿಗೆ ನವಾಬ ಶಿಕ್ಷೆ ನೀಡಿದ ಸಂದರ್ಭದಲ್ಲಿ, ಅಲ್ಲಿ ಸೇವೆಯಲ್ಲಿದ್ದ ವಿಶ್ವ ಬ್ರಾಹ್ಮಣ ಶಿಲ್ಪಿಗಳು ಸಲ್ಲಿಸಬೇಕಾದ ಹಣವನ್ನು ಸಲ್ಲಿಸಿ ಅವರನ್ನು ಶಿಕಷೆಯಿಂದ ತಪ್ಪಿಸಿ ರಕ್ಷಿಸಿದರೆಂದು, ಆಗಿಂದ ಆ ವಂಶದವರ ಆಶ್ರಯದಾತರು ಕೋಮಟಿ ಹಲಸಿಗರು ಎನ್ನುವ ಕುಲದವರೊಂದಿಗೆ ತಮ್ಮಾಶ್ರಯದಾತರಾದ ವಿಶ್ವಕರ್ಮ ಕುಲದವರ ಬಳಿ ಆಶ್ರಿತಗಾಯಕರಾಗಿ ಪುರಾಣಗಳನ್ನು ಹೇಳಲು ಪ್ರಾರಂಭಿಸಿದರೆಂದು ಅದರಲ್ಲಿದೆ. ಕೋಮಟಿ ಹಲಸಿಗರ ಕುಲಕ್ಕೆ ಸೇರಿದವರು ಇದ್ದರೂ ಈಗ ಎಲ್ಲಿಯೂ ಕಂಡು ಬರುವುದಿಲ್ಲ. ಆದಿ ಹಲಸಿಗರಲ್ಲೂ ಸಹ ಕಥಾಗಾಯನ ಮಾಡುವವರಿಲ್ಲದೆ, ಈ ದಿನ ಹಲಸಿಗರ ಈ ಪುರಾಣ ಕಥಾ ಸಂಪ್ರದಾಯ ಪೂರ್ತಿಯಾಗಿ ಅಂತ್ಯಗೊಂಡಿದೆ. ಈ ಕುಲಗಳಿಗೆ ಸೇರಿದ ಎರಡು ಕುಟುಂಬದವರು ಇದ್ದರೂ ಕಥಾಗಾಯನ ಮಾಡುವವರು ಇಲ್ಲ. ಇದು ಒಂದು ಅಪರೂಪವಾದ ಜನಪದ ಪೌರಾಣಿಕ ಕಲೆ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ಪನೈಯುಂ ಪನೈಪೊರುಟ್ಕಳುಂ ತಮಿಳುನಾಡಿನ ದಕ್ಷಿಣ ಜಿಲ್ಲೆಗಳು ಹಾಗೂ ಸೇಲಂ, ಕೊಯಮತ್ತೂರು, ತಂಜಾವೂರು ಜಿಲ್ಲೆಗಳ ಕೆಲವು ಪ್ರದೇಶಗಳಲ್ಲಿ ಕಂಡು ಬರುವ ಪನೆಮರ ಏಷ್ಯಾ ವರ್ಗದ Borassie Flabellifer ಎಂಬ ಸಸ್ಯ ಕುಟುಂಬಕ್ಕೆ ಸೇರಿದ್ದು, ಕೇರಳ ರಾಜ್ಯದ ದಕ್ಷಿಣ ಭಾಗ ಹಾಗೂ ಶ್ರೀಲಂಕಾದ ಈಶಾನ್ಯ ಭಾಗದಲ್ಲೂ ಹೆಚ್ಚಾಗಿ ಕಂಡು ಬರುತ್ತದೆ. ಪನೆಮರ ಹಾಗೂ ಅದರ ಉತ್ಪನ್ನಗಳು ಅನೇಕ ಬಗೆಯ ಉದ್ಯೋಗಾವಕಾಶಗಳನ್ನು ನೀಡುತ್ತವೆ. ಬಹೂಪಯೋಗಿ ಪನೆಮರವನ್ನು ಜನಪದರ ಪಾಲಿನ ‘ಕಲ್ಪವೃಕ್ಷ’ ಎಂದೂ ಕರೆಯಲಾಗುತ್ತದೆ. ಪನೆಮರದಿಂದ ಸುಮಾರು ಎಪ್ಪತ್ತಕ್ಕೂ ಹೆಚ್ಚು ಉಪಯೋಗಗಳಿವೆ.

ಪನೆಮರ ತೀವ್ರ ಬರವನ್ನು ಕೂಡ ಸಹಿಸಿಕೊಳ್ಳುವ ವೃಕ್ಷ. ಆದರೂ ಪನೆಮರ ಬಹಳ ಕಡಿಮೆ ವೇಗದಲ್ಲಿ ಬೆಳೆಯುತ್ತದೆ. ಹದಿನೈದು-ಮೂವತ್ತು ವರ್ಷಗಳ ಬೆಳವಣಿಗೆಯಾದ ಮೇಲೆ ಪನೆಮರ ಪೂರ್ಣವಾಗಿ ಫಲಕೊಡಲಾರಂಭಿಸುತ್ತದೆ. ಪೂರ್ಣ ಬೆಳೆದ ಮರ ಮೂವತ್ತು ಮೀಟರ್ ಎತ್ತರ ಹಾಗೂ ಒಂದೂವರೆ ಮೀಟರ್ ಅಗಲ ಹೊಂದಿರುತ್ತದೆ. ಪನೆಮರದ ಜೀವಿತಾವಧಿ ಸುಮಾರು ೧೨೧ ವರ್ಷಗಳು.

ಪನೆಮರದ ಮುಖ್ಯ ಭಾಗಗಳೆಂದರೆ ಮರ, ಎಲೆ, ಹೂವು ಮತ್ತು ಸುಮಾರು ೪೫ ವರ್ಷಗಳು ಬೆಳೆದ ಪನೆವೃಕ್ಷದ ಕಾಂಡ ಒಳ್ಳೆಯ ಟಿಂಬರ್ ಆಗಿ ಬಳಕೆ ಆಗುತ್ತದೆ. ಈ ಪ್ರಾಯದ ಮರಗಳನ್ನು ವಜ್ರಕಾಯ ಎಂದು ಕರೆಯುವರು. ಈ ಮರವನ್ನು ಅಳತೆಗೆ ತಕ್ಕಂತೆ ಕಡಿದು ಹೆಂಚಿನ ಮನೆಗಳ ನಿರ್ಮಾಣಕ್ಕೆ ಸಾಮಾನುಗಳಾಗಿ ಬಳಸಲಾಗುತ್ತದೆ. ಪನೆಮರದಲ್ಲಿ ಗಂಡುಮರ ಮತ್ತು ಹೆಣ್ಣು ಮರ ಎಂದುಎರಡು ಬಗೆಗಳಿವೆ. ಗಂಡು ಪನೆಯನ್ನು ‘ಕಟ್ಟು ಪನೈ’ ಎಂದೂ ಹೆಣ್ಣು ಪನೆಯನ್ನು ‘ಪರುತ್ತಪನೈ’ ಎಂದೂ ಕರೆಯುತ್ತಾರೆ. ಗಂಡು ಪನೆ ಒಂದು ಋತುವಿಗೆ ಎಂಟು ಹೂಗಳುಳ್ಳ ಗೊಂಚಲನ್ನು ಬಿಡುತ್ತದೆ. ಅವುಪ್ರತಿಯೊಂದು ಎರಡು ಬೆರಳಿನಷ್ಟು ಗಾತ್ರದಲ್ಲಿ ಉದ್ದವಾದ ಕೋಲಿನಂತೆ ಗೊಂಚಲವಾಗಿ ಇಳಿ ಬಿದ್ದಿರುತ್ತವೆ. ಈ ಹೂವುಗಳನ್ನು ಪ್ರಾರಂಭದ ಹಂತದಲ್ಲೇ ಪತ್ತೆ ಮಾಡಿ ‘ಹಿಡಿಕೆ’ ಎಂಬ ಸಾಧನದಿಂದ ಸಂಸ್ಕರಿಸಿ ನೀರಾ ಇಳಿಸಲಾಗುತ್ತದೆ. ಹೀಗೆಯೇ ಗಂಡು ಪನೆಯಲ್ಲೂ ತುಸು ಭಿನ್ನವಾದ ಹೂಗಳು ಅರಳುತ್ತವೆ. ಇವುಗಳನ್ನು ಹಿಡಿಕೆಯಿಂದ ಸಂಸ್ಕರಿಸಿ ನೀರಾ ಇಳಿಸಲಾಗುತ್ತದೆ. ಗಂಡು ಪನೆಗಿಂತ ಹೆಣ್ಣು ಪನೆಯಲ್ಲಿ ನೀರಾ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹ ಮಾಡಲಾಗುತ್ತದೆ.

ಹದವಾಗಿ ಕಾಯಿಸಿದ ನೀರಾ ಪಾಕಗೊಂಡಾಗ ಅದನ್ನು ಅಚ್ಚುಗಳಿಗೆ ರವಾನಿಸಿ ಘನೀಕರಿಸಲಾಗುತ್ತದೆ. ಇದನ್ನು ಪನೆ ಬೆಲ್ಲ ಎಂದು ಕರೆಯುತ್ತಾರೆ. ಪನೆ ಬೆಲ್ಲವನ್ನು ಮನೆ ಉಪಯೋಗಕ್ಕೆ ಹಾಗೂ ಸಿಹಿ ತಿಂಡಿಗಳನ್ನು ತಯಾರಿಸುವ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಶುಂಠಿ ಸೇರಿಸಿದ ಪನೆಬೆಲ್ಲ ಔಷಧೀಯ ಗುಣಗಳನ್ನು ಹೊಂದಿದೆ.

ನಿಂಗು/ತಾಟಿನಿಂಗು(ನುಂಗು): ಹೆಣ್ಣು ಪನೆಯ ಹೂವುಗಳನ್ನು ನೀರಾ ಇಳಿಸಲು ಬಳಸದಿದ್ದಲ್ಲಿ ಅವು ಬೆಳೆದು ಕಾಯಿಯಾಗಿ ನಿಂಗು ನುಂಗು ಹಂತವನ್ನು ತಲುಪುತ್ತವೆ. ಇದರ ಮೇಲ್ಭಾಗವನ್ನು ಕತ್ತರಿಸಿದಾಗ ತಂಪಾದ ಮಂಜುಗಡ್ಡೆಯಂತಹ ಅಂಟು ಗುಣವುಳ್ಳ ವಸ್ತು ಸಿಗುತ್ತದೆ. ಇದೇ ನಿಂಗು. ಇದು ಅತ್ಯುತ್ತಮ ತಂಪು ಪಾನೀಯ. ಇದು ಸಿಡುಬು ರೋಗಕ್ಕೆ ಒಳ್ಳೆಯ ಔಷಧಿ. ಇದು ಅನೇಕ ಬಗೆಯ ಪೌಷ್ಠಿಕಾಂಶ ಹಾಗೂ ಜೀವಸತ್ವಗಳನ್ನು ಹೊಂದಿರುವ ಆಹಾರ.

ಪನೆಗಡ್ಡೆ: ನಿಂಗು ಕೊಯ್ಲು ಮಾಡಿದ್ದರೆ ಕಾಯಿ ಮಾಗಿ ಹಣ್ಣಾಗುತ್ತದೆ. ಚೆನ್ನಾಗಿ ಮಾಗಿದ ಪನೆ ಹಣ್ಣಿನಿಂದ ಸಿಹಿಯಾದ ಪನೆಹಣ್ಣಿನ ರಸವನ್ನು ತೆಗೆಯಲಾಗುತ್ತದೆ. ಪನೆ ಹೆಣ್ಣಿನ ಸಿಪ್ಪೆಯನ್ನು ತೆಗೆದು ಈ ರಸವನ್ನು ಪಡೆಯಬಹುದು. ಇದನ್ನು ನೇರವಾಗಿ ಸೇವಿಸಬಹುದು. ಘನೀಕರಿಸಿ, ಸಂಸ್ಕರಿಸಿ ಬಹಳ ದಿನಗಳವರೆಗೆ ಬಳಸಬಹುದು. ಅಲ್ಲದೆ, ಮಾಗಿದ ಪನೆಹಣ್ಣಿನ ಬೀಜಗಳನ್ನು ಮರಳಿನಲ್ಲಿ ನೆಟ್ಟರೆ, ಮೂರು-ನಾಲ್ಕು ತಿಂಗಳಿನಲ್ಲಿ ಮೊಳಕೆಯೊಡೆದು ನಾರಿನಾಂಶದಿಂದ ಕೂಡಿದ ಪೌಷ್ಟಿಕವಾದ ಪನೆಗೆಡ್ಡೆಯನ್ನು ಪಡೆಯಬಹುದು. ಪನೆಗೆಡ್ಡೆಯ ಸಿಪ್ಪೆಯನ್ನು ತೆಗೆದು ಒಳಗಿರುವ ಗಡ್ಡೆಯನ್ನು ಒಣಗಿಸಿ ಅಥವಾ ಬೇಯಿಸಿ ಆಹಾರವನ್ನಾಗಿ ಬಳಸಬಹುದು. ಬೇಯಿಸಿದ ಮೇಲೆ ಹಿಸುಕಿ ಗಂಜಿಯಂತೆ ಮಾಡಿ ಒಣಮೆಣಸಿನಕಾಯಿ ಹಾಗೂ ಮೀನಿನ ಜೊತೆ ಸೇರಿಸಿ ತಿನ್ನಬಹುದು. ಪನೆ ಬೀಜದಿಂದ ಒಂದು ಬಗೆಯ ಎಣ್ಣೆಯನ್ನು ತೆಗೆಯಲಾಗುತ್ತದೆ. ಇದನ್ನು ಮೂಳೆಮುರಿತಕ್ಕೆ ಔಷಧಿಯನ್ನಾಗಿ ಬಳಸಲಾಗುತ್ತದೆ.

ಪನೆಮಟ್ಟೆ: ಪನೆಮಟ್ಟೆ ಎಂಬುದು ಬೀಸಣಿಗೆಯಾಕಾರದ ಪನೆ ಎಲೆ ಮತ್ತು ಮರಕ್ಕೆ ಸಂಪರ್ಕ ಕಲ್ಪಿಸುವ ಒಂದು ಮೀಟರ್ ಉದ್ದದ ಕಾಂಡ. ಇದರ ಎರಡು ಬದಿಗಳಲ್ಲೂ ಗರಗಸದಂತೆ ಚೂಪಾದ ಮುಳ್ಳುಗಳು ಕಂಡು ಬರುತ್ತವೆ. ಮುಳ್ಳು ನೀಗಿಸಲ್ಪಡದ ಮಟ್ಟೆಯನ್ನು ಬೇಲಿಯಾಗಿ ಬಳಸಲಾಗುತ್ತದೆ. ಮಟ್ಟೆಯ ಎರಡೂ ಬದಿಗಳಲ್ಲೂ ಇರುವ ನಾರನ್ನು ಹಗ್ಗ ಮಾಡಿಮಂಚ ಮುಂತಾದ ದಿನಬಳಕೆ ವಸ್ತುಗಳ ತಯಾರಿಕೆಗೆ ಬಳಸಲಾಗುತ್ತದೆ.

ಪನೆಗರಿ: ಪನೆಮರದ ಮತ್ತೊಂದು ಉಪಯುಕ್ತ ವಸ್ತು ಅದರ ಗರಿ. ಒಂದು ಪನೆಮರದಲ್ಲಿ ಸುಮಾರು ೨೦ರಿಂದ ೩೦ಗರಿಗಳು ಇರುತ್ತವೆ. ಅದರ ಬೆಳವಣಿಗೆಗೆ ತಕ್ಕಂತೆ ಒಂದು ವರ್ಷಕ್ಕೆ ೧೦ರಿಂದ ೧೨ ಗರಿಗಳನ್ನು ಕಡಿಯಬಹುದು. ಪನೆಮರದ ಗರಿಗಳು ಸುಮಾರು ಒಂದು ಮೀಟರ್ ಉದ್ದಕ್ಕೆ ಬೀಸಣಿಗೆಯಾಕಾರದಲ್ಲಿರುತ್ತವೆ. ಪನೆಗರಿಗಳನ್ನು ಬಿಡಿಸಿ ಬುಟ್ಟಿ, ಪೆಟ್ಟಿಗೆ ಮುಂತಾದ ಮನೆ ಬಳಕೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಪನೆಗರಿಯನ್ನು ಗುಡಿಸಲುಗಳಿಗೆ ಮೇಲ್ಛಾವಣಿಯಾಗಿ ಬಳಸುತ್ತಾರೆ. ಹಲವಾರು ಕರಕುಶಲ ವಸ್ತುಗಳ ತಯಾರಿಕೆಯಲ್ಲಿ ಪನೆಗರಿಗಳು ಬಳಕೆಯಾಗುತ್ತವೆ. ಪನೆ ಗರಿಗಳು ತಮಿಳರ ಜೀವನ ಮತ್ತು ಆಚರಣೆಗೆ ಸಂಬಂಧಿಸಿದ ವಸ್ತುಗಳ ತಯಾರಿಕೆಗೆ ಉಪಯುಕ್ತವಾಗಿವೆ.

ತಮಿಳುನಾಡು ಸರ್ಕಾರ ಪನೆಮರವನ್ನು ‘ರಾಜವೃಕ್ಷ’ ಎಂದು ಘೋಷಿಸಿ ಅದಕ್ಕೆ ಪ್ರತ್ಯೇಕ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದೆ. ಆದರೆ ಪನೆಮರವನ್ನು ಅವಲಂಬಿಸಿರುವ ಕಾರ್ಮಿಕರ ವೃತ್ತಿಗೆ ಸಂಬಂಧಿಸಿದ ಸಾಂಸ್ಕೃತಿಕ ಮೌಲ್ಯಗಳು ನಶಿಸುವ ಸಂದರ್ಭಗಳು ಒದಗುತ್ತಿವೆ. ಸಕ್ಕರೆ ಕಾರ್ಖಾನೆಗಳ ಆಧಿಪತ್ಯ ಪನೆ ಉದ್ಯಮವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.

ಎನ್.ಜೆ.ಎಸ್.ಅನುವಾದ ಐ.ಎಸ್.

 

ಪನ್ನಿಪುರತ್ ಚಾಮುಂಡಿ ವೇಲ ಸಮುದಾಯದ ಮುಖ್ಯ ತೆಯ್ಯಂ ಪನ್ನಿಪುರತ್ ಚಾಮುಂಡಿ. ಕಣ್ಣಿಗೆ ಕಾಡಿಗೆ, ಮುಖಕ್ಕೆ ಚಾಯಿಲ್ಯಂ (ಅರ್ದಾಲ), ಹಣೆಯಲ್ಲಿ ಚಂದ್ರಕಲೆ, ಗಲ್ಲಕ್ಕೆ ವಿಶಿಷ್ಟ ಬರವಣಿಗೆಗಳಿರುವ ಈ ತೆಯ್ಯಾಂ ವಿಶಿಷ್ಟ ಆಹಾರ್ಯದಿಂದ ಶೋಭಿಸುತ್ತದೆ.

ಕೊಡಿಯೆಲೆ ಸ್ವೀಕರಿಸುವುದರೊಂದಿಗೆ ಈ ತೆಯ್ಯಂ ಆರಂಭವಾಗುತ್ತದೆ. ‘ವರವಿಳಿ’ಯೊಂದಿಗೆ ಈ ತೆಯ್ಯಂ ಆವೇಶಗೊಳ್ಳುವುದು. ಬಾರಣೆ, ಕೋಳಿ ಬಲಿ ಮೊದಲಾದ ವಿಧಿಯಾಚರಣೆಗಳಿವೆ. ಮೂರು ಕೋಳಿಗಳನ್ನು ಬಲಿಕೊಡುವುದು ಸಂಪ್ರದಾಯ. ಒಂದುಕೋಳಿಯನ್ನು ಕತ್ತುಕೊಯ್ದು ತೆಯ್ಯಂಕೋಲದ ಕಾಲ ಬಲಿ ಹಾಕುವರು. ಇನ್ನೊಂದು ಕೋಳಿಯನ್ನು ಕೈಯಲ್ಲಿ ಕೊಡುವರು. ಮೂರನೇ ಕೋಳಿಯನ್ನು ಕೋಲಧಾರಿ ಸಿಗಿದು ಬಲಿಕೊಡುವವನು. ಕೋಳಿಯ ರಕ್ತವನ್ನು ಕೋಲಧಾರಿ ಹೀರುವನು. ಅನಂತರ ತೆಂಗಿನಕಾಯಿ ಒಡೆದು ಲಕ್ಷಣ ಹೇಳುವ ಆಚರಣೆ. ಭಕ್ತರಿಗೆ ಅಕ್ಕಿಕಾಳು ಹಾಗೂ ಅರಿಶಿನ ಹುಡಿ ಪ್ರಸಾದವನ್ನು ಕೊಡಲಾಗುವುದು. ಸನ್ನಿಪುಟ್ ಚಾಮುಂಡಿಗೆ ‘ವೆಳ್ಳಾಟ’ ಇಲ್ಲ. ಅಭೀಷ್ಟ ಸಿದ್ಧಿಗಾಗಿ ಈ ತೆಯ್ಯಂ ಕೋಲ ಆಚರಣೆಗಳು ನಡೆಯುತ್ತವೆ.

ಪಿ.ವಿ.ಎ. ಅನುವಾದ ಎನ್.ಎಸ್.

 

ಪರನೇಟ್ಟು ಕೇರಳದ ತಿರುವನಂತಪುರ ಜಿಲ್ಲೆಯಲ್ಲಿ ಪರನೇಟ್ಟು ಆಚರಣೆಯಲ್ಲಿದೆ. ಸುಗ್ಗಿಯ ನಂತರ ಕುಂಭ ಮಾಸದ ಆರಂಭದಿಂದ ಮೇಘಮಾಸ ೧೦ರ ತನಕ ಇದನ್ನು ಆಚರಿಸಲಾಗುತ್ತದೆ. ಈ ಆಚರಣೆಯಲ್ಲಿ ಕಾಳಿಯ ಕಿರೀಟವನ್ನು ನಿಗದಿತ ಪ್ರದೇಶದಿಂದ ತಾತ್ಕಾಲಿಕ ಪ್ರದೇಶಕ್ಕೆ ಸ್ಥಳಾಂತರಿಸಲಾಗುತ್ತದೆ. ಕಾಳಿ ಮತ್ತು ದಾರಕರನ್ನು ಕುರಿತ ಐತಿಹ್ಯವನ್ನು ಆಧರಿಸಿ ಸಂಪೂರ್ಣ ಪರನ್ನೇಟ್ಟು ನಡೆಯುತ್ತದೆ.

ದೇವ ಮತ್ತು ಅಸುರರ ನಡುವಣ ಯುದ್ಧದಲ್ಲಿ ಅಸುರರು ಸೋಲುತ್ತಾರೆ. ಅವರಲ್ಲಿ ಹೆಚ್ಚಿನವರು ಸಾವನ್ನಪ್ಪುತ್ತಾರೆ. ಉಳಿದವರು ತಮ್ಮ ಭೂಮಿಯನ್ನು ಬಿಟ್ಟು ಓಡುತ್ತಾರೆ. ಅಸುರ ಸ್ತ್ರೀಯರು ಆಶ್ರಯ ಕೇಳಿದರು. ಅವರಲ್ಲಿ ಇಬ್ಬರ ಹೆಸರು ದಾನಾವತಿ ಮತ್ತು ದಾರಾಮತಿ. ಅವರು ತಮಗಾದ ಅನ್ಯಾಯಕ್ಕೆ ಪ್ರತೀಕಾರ ತೋರಿಸಬೇಕೆಂದು ಬಯಸಿದರು. ಅದಕ್ಕಾಗಿ ಬ್ರಹ್ಮದೇವನನ್ನು ಪೂಜಿಸಿದರು. ಗಾಢವಾದ ತಪಸ್ಸು ಆಚರಿಸಿದರು. ಬ್ರಹ್ಮನ ವರದಿಂದ ದಾರಕ ಹಾಗೂ ದಾನವ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು. ಅವರಲ್ಲಿ ದಾರುಕ ಹಾಗೂ ದಾನವ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದರು. ಅವರಲ್ಲಿ ದಾರುಕ ಬ್ರಹ್ಮನನ್ನು ಪೂಜಿಸಿ ಗಾಢ ತಪಸ್ಸನ್ನಾಚರಿಸಿದನು. ಬ್ರಹ್ಮ ಪ್ರತ್ಯಕ್ಷನಾಗದಿದ್ದಾಗ, ತನ್ನ ಕುತ್ತಿಗೆಯನ್ನು ಕತ್ತರಿಸ ತೊಡಗಿದ. ಹಾಗಾಗಿ ಬ್ರಹ್ಮ ಪ್ರತ್ಯಕ್ಷನಾಗದಿದ್ದಾಗ, ತನ್ನ ಕುತ್ತಿಗೆಯನ್ನು ಕತ್ತರಿಸಿ ತೊಡಗಿದ. ಹಾಗಾಗಿ ಬ್ರಹ್ಮ ಬೇರೆ ದಾರಿ ಕಾಣದೆ ಅವನ ಮುಂದೆ ಪ್ರತ್ಯಕ್ಷನಾದನು. ದಾರುಕನನ್ನು ಅನುಗ್ರಹಿಸಿ ಕೆಲವು ಮಂತ್ರಗಳನ್ನು ಉಪದೇಶಿಸಿದನು. ಆದರೆ ಸ್ತ್ರೀಯೊಬ್ಬಳಿಂದ ಸಾವು ಬರುವುದೆಂದು ಹೇಳಿದನು. ಬ್ರಹ್ಮನ ಅನುಗ್ರಹದಿಂದ ಆತ ದೇವತೆಗಳಷ್ಟೆ ಶಕ್ತಿಶಾಲಿಯಾದನು. ಅವರು ನಾರದ ಋಷಿಯ ಮೂಲಕ ಶಿವನಿಗೆ ದೂರಿತ್ತರು. ದಾರುಕನಿಗೆ ಸ್ತ್ರೀಯಿಂದ ಮಾತ್ರ ಸಾವು ಬರುತ್ತದೆ ಎಂದು ಶಿವನು ತಿಳಿಸಿದನು. ಇದರಿಂದಾಗಿ ಪ್ರತಿಯೊಬ್ಬ ದೇವನೂ ತಮ್ಮ ಇಚ್ಛಾಶಕ್ತಿಯಿಂದ ದೇವತೆಗಳನ್ನು ಸೃಷ್ಟಿಸಿದರು. ಬ್ರಹ್ಮನಿಂದ ಬ್ರಾಹ್ಮಿ, ಶಿವನಿಂದ ಮಹೇಶ್ವರಿ, ವಿಷ್ಣುವಿನಿಂದ ವೈಷ್ಣವಿ, ಸುಬ್ರಹ್ಮಣ್ಯನಿಂದ ಕೌಮಾರಿ, ಯಮನಿಂದ ವಾರಾಹಿ ಹಾಗೂ ಇಂದ್ರನಿಂದ ಇಂದ್ರಾಣಿ ಸೃಷ್ಟಿಯಾದರು. ಅವರು ಒಬ್ಬರಾಗಿ ದಾರುಕನೊಂದಿಗೆ ಹೋರಾಡಿ ಸೋಲನುಭವಿಸಿದರು. ಇದರಿಂದ ದಾರುಕ ಮತ್ತಷ್ಟು ನೀಚನಾದ. ಮತ್ತೊಮ್ಮೆ ದೇವತೆಗಳು ಶಿವನಿಗೆ ದೂರಿದರು. ಶಿವನ ಇನ್ನಷ್ಟು ಕುಪಿತನಾದನು. ಶಿವನ ಮೂರನೇ ಕಣ್ಣಿನಿಂದ ಕಾಳಿಯು ಜನಿಸಿ ದಾರುಕನನ್ನು ಕೊಂದಳು.

ಪರನ್ನೇಟ್ಟು ಆಚರಣೆಯಲ್ಲಿ ಕಳನ್‌ಕಾವಲ್, ಉಚ್ಚ ಬಲಿ, ದಿಕ್ಕುಬಲಿ, ಪರನ್ನೇಟ್ಟು, ನೀಲಾದಿಪೋರ್, ಗುರುಶಿ ಹಾಗೂ ಆರಾಟ್ಟು ನಡೆಯುತ್ತವೆ. ಇದಕ್ಕಾಗಿ ತಾತ್ಕಾಲಿಕ ಚಪ್ಪರವೊಂದನ್ನು ನಿರ್ಮಿಸಲಾಗುತ್ತದೆ. ಅಲ್ಲಿ ಕಾಳಿಯನ್ನು ಆರಾಧಿಸಲಾಗುತ್ತದೆ. ಈ ತಾತ್ಕಾಲಿಕ ಚಪ್ಪರವೇ ಮುಡಿಪ್ಪುರ. ಕಾಳಿ ಹಾಗೂ ದಾರುಕನ ಐತಿಹ್ಯವನ್ನು ವ್ಯಾಖ್ಯಾನಿಸುವ ತೋಟ್ಟಂಪಾಟ್ಟುವನ್ನು ಪ್ರಸ್ತುತ ಪಡಿಸಲಾಗುತ್ತದೆ. ಇದರಲ್ಲಿ ಮುಖ್ಯ ಅರ್ಚಕನನ್ನು ವಾದಿ ಎಂದು ಕರೆಯಲಾಗುತ್ತದೆ.

ಕಾಳಿಯ ಸುತ್ತ ರಕ್ಷಣೆಗಾಗಿ ಕಳಂಕಾವಲ್ ಇರುತ್ತದೆ. ಕಳಂಕಾವಲ್ ನಂತರ ಗುರುಟಿಯನ್ನು ನೆರವೇರಿಸಲಾಗುತ್ತದೆ. ಗುರುಟಿಯನ್ನು ತನ್ನ ಮಗಳಿಗಾಗಿ ಶಿವನು ನೆರವೇರಿಸುತ್ತಾನೆಂದು ನಂಬಲಾಗಿದೆ. ಅದಾದ ನಂತರ ಪೂಪ್ಪಾಡ ವರಾಲ್, ಕಾಪ್ಪುಕೇಟ್ಟಲರ್, ಕಳಸಂ ನಡೆಯುವುದು. ವಾದಿಯು ಪವಿತ್ರ ದಾರ (ಕಾಪ್ಪು)ವನ್ನು ಉಳ್ಳಾಡನ್ (ಗಿರಿಜನ)ಗೆ ಕಟ್ಟುತ್ತಾನೆ. ಇದುವೇ ಕಾಪ್ಪು ಕೇಟ್ಟಲ್. ವಾದಿಯು ಕಳಸವನ್ನು ತಯಾರಿಸುತ್ತಾನೆ. ಪರನ್ನೇಟ್ಟು ಮುಕ್ತಾಯಗೊಳ್ಳುವ ತನಕ ವಾದಿಯು ಚಪ್ಪರವನ್ನು ಬಿಟ್ಟು ಹೋಗುವಂತಿಲ್ಲ. ಆತ ಕಾಳಿ ಹೋಗುವಲ್ಲೆಲ್ಲ ಜತೆಗೆ ಹೋಗಬೇಕು. ಕಾಳಿಯ ಮುಂಭಾಗದಲ್ಲಿ ಕೈಯಲ್ಲಿ ತೊಟೆ (ಒಣ ತೆಂಗಿನ ಗರಿಯಿಂದ ಮಾಡಿದ ದೀಪ) ಹಾಗೂ ತಲೆಯಲ್ಲಿ ಕಳಸವನ್ನು ಹೊತ್ತು ಉಳ್ಳಾಡನ್ ಹೋಗುವನು. ಗುರುಟಿ ನಂತರ ಉಚ್ಚಬಲಿ ನಡೆಯುತ್ತದೆ. ಇದಕ್ಕಾಗಿ ಕಳಂವೊಂದನ್ನು ರಚಿಸಲಾಗುತ್ತದೆ. ಆ ಕಳಂವನ್ನು ಹಾನಿಗೊಳಿಸಲು ದಾರುಕ ಸೈನಿಕನೊಬ್ಬನನ್ನು ಕಳುಹಿಸುತ್ತಾನೆ. ಆತನನ್ನು ಕಾಳಿ ಕೊಲ್ಲುವುದರೊಂದಿಗೆ ಉಚ್ಚಬಲಿ ನಡೆಯುತ್ತದೆ. ಅದಕ್ಕೂ ಮುನ್ನ ಆ ಪ್ರದೇಶದಲ್ಲಿ ಕಾಳಿಯು ದಾರುಕನನ್ನು ಹುಡುಕುತ್ತಾಳೆ. ಇದನ್ನು ದಿಕ್ಕುಬಲಿ ಎನ್ನುತ್ತಾರೆ. ಕಾಳಿ ಆ ಪ್ರದೇಶದಲ್ಲಿರುವ ಎಲ್ಲ ಮನೆಗಳಿಗೆ ಭೇಟಿ ನೀಡಿ ದೇವಾಲಯಕ್ಕಾಗಿ ಸಂಪತ್ತು ಹಾಗೂ ಬೆಳೆಯನ್ನು ಸಂಗ್ರಹಿಸುತ್ತಾಳೆ. ಈ ಎಲ್ಲಾ ಕಾರ್ಯಕ್ರಮದ ನಂತರ ದೇವಿಯು ಎತ್ತರದ ವೇದಿಕೆಯನ್ನು ಏರುತ್ತಾಲೆ. ಇದನ್ನು ಪರನ್ನೇಟ್ಟು ಎನ್ನುತ್ತಾರೆ. ಈ ವೇದಿಕೆಯನ್ನು ತೆಂಗಿನ ಮರಗಳಿಂದ ನಿರ್ಮಿಸುತ್ತಾರೆ. ಇದು ಸುಮಾರು ೨೫ರಿಂದ ೩೦ ಅಡಿ ಎತ್ತರವಿರುತ್ತದೆ. ಇದನ್ನು ಚೌಕಾಕಾರದಲ್ಲಿ ನಿರ್ಮಿಸಲಾಗುತ್ತದೆ. ಅದಕ್ಕೆ ಅಡಿಕೆ ಮರವನ್ನು ಬಳಸುವರು. ಇದು ಸ್ವಲ್ಪ ಚಿಕ್ಕದಾಗಿರುತ್ತದೆ. ದೊಡ್ಡ ಪರನ್ನು ಕಾಳಿಗೂ, ಚಿಕ್ಕದು ದಾರುಕನಿಗೂ ನಿರ್ಮಿತವಾಗುತ್ತದೆ. ಪೂಜಾ ವಿಧಿಗಳ ನಂತರ ಸಂಜೆಯ ವೇಳೆ ಕಾಳಿಯ ಕಿರೀಟವನ್ನು ಮೆರವಣಿಗೆ ಮೂಲು ದೊಡ್ಡ ಪರನ್ನುವಿನ ಹತ್ತಿರಕ್ಕೆ ತರಲಾಗುವುದು. ಭೂಮಿಯಲ್ಲಿ ಎಲ್ಲೆಡೆ ದಾರುಕನನ್ನು ಹುಡುಕಾಡಿದ ನಂತರ ಕಾಳಿಯು ಆಕಾಶಕ್ಕೆ ತೆರಳುತ್ತಾಳೆಂಬ ನಂಬಿಕೆಯಿದೆ. ಕಾಳಿಯು ಪರನ್ನು (ವೇದಿಕೆಯ ಸ್ತಂಭ)ವನ್ನು ಹತ್ತಿ ಆಕಾಶದಲ್ಲಿ ದಾರುಕನನ್ನು ಹುಡುಕುತ್ತಾಳೆ. ಇದಾದ ನಂತರ ದಾರಿಕನೂ ಪರನುವನ್ನು ಹತ್ತುತ್ತಾನೆ. ಪರನುವಿನಲ್ಲಿ ಕಾಳಿ ಹಾಗೂದಾರಿಕನ ಕಥೆಯನ್ನು ಹೇಳಳಾಗುತ್ತದೆ. ಹಾಡುಗಾರರು ದಾರಿಕನ ವೇದಿಕೆಯಲ್ಲಿ ಕುಳಿತು ಕೊಳ್ಳುವರು. ಕಾಳಿಯು ಆ ಕಡೆಯಿಂದ ದಾರಿಕನಿಗೆ ಸವಾಲು ಹಾಕುವಳು. ಆ ಬಳಿಕ ಕಾಳಿಯು ಭೂಮಿಗೆ ತ್ರಿಶೂಲ ಎಸೆದು ಯುದ್ಧಕ್ಕೆ ಜಾಗ ನಿಗಧಿ ಮಾಡುವಳು. ಇಬ್ಬರೂ ಪರನ್ನುವಿನಿಂದ ಕೆಳಗಿಳಿಯವರು.

ಭೂಮಿಯ ಮೇಲೆ ಅಂಗಳದಲ್ಲಿ ನಡೆಯುವ ಯುದ್ಧವೇ ನೀಲತ್ತಿಪೋರ್ (ನೆಲದಲ್ಲಿ ಕಾಳಗ) ಇದು ಏಳು ಹಂತಗಳಲ್ಲಿ ನಡೆಯುವುದು. ಕಾಳಿಯೊಂದಿಗಿನ ಯುದ್ಧಕ್ಕೆ ಮುನ್ನ ಆರು ದೇವತೆಗಳು ದಾರಿಕನೊಂದಿಗೆ ಹೋರಾಡುವರು. ಆ ಆರು ಮಂದಿಯೇ ಬ್ರಾಹ್ಮಿ, ಮಾಹೇಶ್ವರಿ, ಕೌಮಾರಿ, ವೈಷ್ಣವಿ, ವಾರಾಹಿ ಹಾಗೂ ಇಂದ್ರಾಣಿ, ಅವರು ದಾರಿಕನೊಂದಿಗೆ ಹೋರಾಡಿ ಸೋಲುವರು. ಕೊನೆಗೆ ಕಾಳಿಯು ಕಣಕ್ಕೆ ಬರುವಳು. ದೀರ್ಘ ಹೋರಾಟದ ನಂತರ ಆತನ ಕಿರೀಟವನ್ನು ತೆಗೆಯುವಳು. ಅಲ್ಲಿಗೆ ದಾರುಕ ಸಾವನ್ನಪ್ಪಿದ ಎಂದು ತಿಳಿಯಲಾಗುವುದು.

ಇದಾದ ನಂತರ ಗುರುತಿ ಆಚರಿಸಲಾಗುವುದು. ವಾದಿಯು ಗುರುಸಿಯ ಮುಂದಾಳುತ್ವ ವಹಿಸುವರು. ಅನಂತರ ಕಿರೀಟವನ್ನು ಪುಣ್ಯಸ್ನಾನಕ್ಕಾಗಿ ಚಿರಮುಡಿ ಕೊಳಕ್ಕೆ ಕೊಂಡೊಯ್ಯಲಾಗುವುದು. ಇದನ್ನು ಆರಾಟ್ಟ್ ಎನ್ನುವರು. ಆರಾಟ್ಟ್ ನಂತರ ಕಾಳಿಯು ತನ್ನ ತಾತ್ಕಾಲಿಕ ಆಲಯದಿಂದ ಖಾಯಂ ಗರ್ಭಗುಡಿಗೆ ತೆರಳುವಳು. ಇದರೊಂದಿಗೆ ಪರನೇಟ್ಟು ಆಚರಣೆಯ ಎಲ್ಲ ವಿಧಿಗಳು ಮುಕ್ತಾಯಗೊಳ್ಳುತ್ತವೆ. ಕೆಲವು ದೇವಾಲಯಗಳಲ್ಲಿ ೧೨ ವರ್ಷಗಳಿಗೊಮ್ಮೆ ಈ ಪರನೇಟ್ಟುವನ್ನು ಆಚರಿಸುತ್ತಾರೆ.

ಸಿ.ಕೆ.ಜಿ. ಅನುವಾದ ಬಿ.ಎಸ್.ಎಸ್.

 

ಪರಯರ್ ಕೇರಳದ ಜಾತಿ ಶ್ರೇಣಿಕೃತ ವ್ಯವಸ್ಥೆಯಲ್ಲಿ ಅತ್ಯಂತ ಕೆಳಸ್ತರದಲ್ಲಿರುವವರು ಪರಯರು. ಕೇರಳ ಐತಿಹ್ಯದಲ್ಲಿ ಪ್ರಸಿದ್ಧವಾಗಿರುವ ಪಾಕನಾರ್ ಎಂಬ ವ್ಯಕ್ತಿಯ ವಂಶದವರೆಂದು ನಂಬಲಾಗಿದೆ. ಆದುದರಿಂದ ದಕ್ಷಿಣ ಕೇರಳದಲ್ಲಿ ಇವರನ್ನು ಪರಯಪಾಕನಾರ್ ಎಂದು ಕರೆಯುತ್ತಾರೆ. ತ್ರಿಶ್ಯೂರು, ಮಲಪುರಂ ಜಿಲ್ಲೆಗಳಲ್ಲಿ ಇವರನ್ನು ಪರಯರ್ ಎಂದು ಕರೆಯುತ್ತಾರೆ.

ಮಹಾವಿಷ್ಣು ರೋಗಪೀಡಿತನಾದಾಗ ಪಾಕನಾರ್ ಮತ್ತು ಪಾಕತ್ತಿಯಾರ್ ‘ಪರೆ’ ಬಡಿದು ಮಂತ್ರವಾದ ಮಾಡಿ, ಬಾಧೆಯನ್ನು ಬಿಡಿಸಿದರೆಂದೊ, ಆದುದರಿಂದ ಅವರಿಗೆ ಮಂತ್ರವಾದ ಸಿದ್ಧಿ ಲಭಿಸಿತೆಂದೂ ಐತಿಹ್ಯಗಳು ತಿಳಿಸುತ್ತವೆ. ಪರಯರದಲ್ಲಿ ಅನೇಕ ಮಂತ್ರವಾದಿಗಳಿದ್ದಾರೆ. ಉಗ್ರಮೂರ್ತಿಗಳನ್ನು ಆರಾಧಿಸಿ ಮಂತ್ರವಾದವನ್ನು ನಡೆಸುತ್ತಿದ್ದ ಕೇರಳದ ಒಂದೇ ಜಾತಿ ಪರಯರದಾಗಿತ್ತು. ಅದೇ ರೀತಿ ಅವರು ತಾಳವಾದ್ಯದಲ್ಲಿ ಪರಿಣತರಾಗಿದ್ದರು. ಇವೆಲ್ಲವೂ ಪರಯರಿಗೆ ದೇವತಾನುಗ್ರಹದಿಂದ ಲಭಿಸಿರುವುದು. ಬುಟ್ಟಿ, ಚಾಪೆ, ಗೆರಸೆ ಮೊದಲಾದ ವಸ್ತುಗಳನ್ನು ನಿರ್ಮಿಸಿ ಅವರು ಬದುಕು ಸಾಗಿಸುತ್ತಿದ್ದರು. ಪರಯ ಸಮುದಾಯದಲ್ಲಿ ಗಂಡುಮಗು ಹುಟ್ಟಿದರೆ ಕೂಗು ಹಾಕಿ ತಿಳಿಸುತ್ತಾರೆ. ಹೆಣ್ಣು ಮಗು ಹುಟ್ಟಿದರೆ ಗೆರಸೆಗೆ ಬಡಿದು ಶಬ್ದ ಮಾಡಿ ತಿಳಿಸುತ್ತಾರೆ. ಪರಯರಿಗೆ ಸ್ವಂತ ರಹಸ್ಯ ಭಾಷೆ ಇದೆ. ಪರಯರ ‘ಮಲವಾಳಿಯಾಟ’ ಎಂಬ ಕಲಾಪ್ರದರ್ಶನದಲ್ಲಿ ಈ ಭಾಷೆ ಬಳಕೆಯಾಗುತ್ತದೆ. ಮಲವಾಳಿಯಾಟದ ಸಂಭಾಷಣೆಗಳು ಇತರರಿಗೆ ಅರ್ಥವಾಗದಿರಲು ಇದುವೇ ಕಾರಣ. ಹುಟ್ಟಿನಿಂದ ಸಾವಿನವರೆಗಿನ ಜೀವನಾವರ್ತಗಳಲ್ಲಿ ಪರಯರಿಗೆ ಪ್ರತ್ಯೇಕವಾದ ಹಾಡು, ಕುಣಿತಗಳಿವೆ. ಜನನದ ಇಪ್ಪತ್ತೆಂಟನೇ ದಿನ, ಋತುಮತಿ ಮದುವೆ ಮೊದಲಾದ ವೇಳೆಗಳಲ್ಲಿ ಹಾಡು, ಕುಣಿತಗಳಿರುತ್ತವೆ. ಪರಯರು ಮರಂ, ಕೊಳಲು, ಚೆಂಡೆ, ತಾಳಗಳನ್ನು ವಾದ್ಯೋಪಕರಣಗಳಾಗಿ ಬಳಸುತ್ತಾರೆ.

ಹಿಂದಿನ ಕಾಲದಲ್ಲಿ ಅನಾರೋಗ್ಯ ಪೀಡಿತರಾದ ಪರಯರೂ ವೈದ್ಯರ ಸಹಾಯವನ್ನು ಪಡೆಯುತ್ತಿರಲಿಲ್ಲ. ಕುಟುಂಬ ಹಿರಿಯರ ಬಳಿಗೆ ಹೋಗಿ ಮಂತ್ರಿಸಿದ ನೂಲನ್ನು ಕಟ್ಟುತ್ತಿದ್ದರು. ‘ಅರಿಯೆರಿಯುಗ’ (ಅಕ್ಕಿ ಎಸೆತ) ಎಂಬುದು ರೋಗ ನಿವಾರಣೆಯ ಒಂದು ಆಚರಣೆ. ಅಕ್ಕಿ, ಭತ್ತ, ಹೂವು ಹಾಗೂ ಭಸ್ಮವನ್ನು ನೀರಿನಲ್ಲಿ ಪ್ರೋಕ್ಷಿಸಿ ರೋಗಿಯ ದೇಹಕ್ಕೆ ಸಿಂಪಡಿಸುವುದನ್ನು ‘ಅರಿಯೆರಿಯುಗ’ ಎನ್ನುತ್ತಾರೆ.

ಪರಯರ ಕುರಿತಾಗಿರುವ ನಾಣ್ಣುಡಿಗಳೂ, ಗಾದೆ ಮಾತುಗಳೂ ಅವರು ತಂತ್ರಶಾಲಿಗಳೆಂದು ಹೇಳುತ್ತವೆ. ‘ಪಟ್ಟಿಟ್ಟಡ್ ತಿನ್ನಾಲ್ ಪರಯನುಂ, ಎಟ್ಟಿ ತಿನ್ನಾಲ್ ಪರುಂದುಂ’ (ವಶೀಕರಿಸಿ ತಿನ್ನುವುದು ಪರಯನ ಲಕ್ಷಣ. ಆಕ್ರಮಿಸಿ ತಿನ್ನುವುದು ಹದ್ದಿನ ಲಕ್ಷಣ). ಸ್ತ್ರೀಯರನ್ನು ವಶೀಕರಿಸುವ ವಿದ್ಯೆ ಪರಯರಿಗೆ ತಿಳಿದಿದೆ ಎಂಬುದು ನಂಬಿಕೆ. ಹಿಂದಿನ ಕಾಲದಲ್ಲಿ ಯಾವುದಾದರೂ ಮನೆಯಲ್ಲಿ ಜಾನುವಾರುಗಳು ಸತ್ತ ಪರಯರಿಗೆ ಕರೆ ಹೋಗುತ್ತಿತ್ತು. ಅವರು ಗುಂಪಿನೊಂದಿಗೆ ಬಂದು ಸತ್ತ ದನದ ಮಾಂಸವನ್ನು ಹಂಚಿ ತಿನ್ನುತ್ತಿದ್ದರು. ಚರ್ಮವನ್ನು ತಮ್ಮ ವಾದ್ಯಗಳಿಗೆ ಬಳಸುತ್ತಿದ್ದರು. ಪರಯರ ಆರಾಧನೆಯ ದೇವತೆ ಭದ್ರಕಾಳಿ.

ಸೂತಕ, ಋತುಮತಿ, ಮದುವೆ ಮೊದಲಾದ ವಿಧಿಗಳನ್ನು ವಿವಿಧ ಆಚರಣೆಗಳೊಂದಿಗೆ ನಡೆಸುತ್ತಾರೆ. ಅದೇ ರೀತಿ ಸತ್ತವರ ಪ್ರೇತಗಳನ್ನು ನೆಲೆಗೊಳಿಸುವ ‘ಜಾಕಾಡ್’ ಎಂಬ ಆಚರಣೆ ಇದೆ. ಮದುವೆಗೆ ‘ಕಿರಿಯಂ’ (ಗೋತ್ರ) ನೋಡಿ, ಹೆಣ್ಣು ಗಂಡು ಸಂಬಂಧ ಮಾಡುವರು. ಒಂದೇ ‘ಕಿರಿಯಂ’ದ ಹೆಣ್ಣು ಗಂಡುಗಳೊಂದಿಗೆ ವಿವಾಹ ನಿಷಿದ್ಧ. ಇದನ್ನು ಮೀರಿದರೆ ಅಂಥವರು ಜಾತಿ ಭ್ರಷ್ಟರಾಗುವರು.

‘ಎಣಂಗಾನ್’ ಎಂಬುದು ಪರಯ ಸಮುದಾಯದಲ್ಲಿ ಒಂದು ಪದವಿ. ಮಾವನ ನಂತರ ಸಮುದಾಯದಲ್ಲಿ ಎಣಂಗಾನಿಗೆ ಪ್ರಮುಖ ಸ್ಥಾನ. ಪರಯ ಸಮುದಾಯದಲ್ಲಿ ಸಮರ್ಥರಾದವರನ್ನು ಈ ಪದವಿಗೆ ಆರಿಸುತ್ತಾರೆ. ‘ಕೊಟ್ಟಿಪಾಡಲ್’ ಎಂಬುದು ಪರಯರ ಇನ್ನೊಂದು ಆಚರಣೆ. ವಿಶೇಷ ಸಂದರ್ಭಗಳಲ್ಲಿ ಒಟ್ಟು ಸೇರಿ, ಹಾಡು ಕುಣಿತಗಳೊಂದಿಗೆ ಪರಯರು ಒಗ್ಗೂಡುತ್ತಾರೆ. ಮನೆಯ ಕಾರ್ಯಕ್ರಮ, ಕುಟುಂಬದ ಆಚರಣೆ ಅಥವಾ ನಾಡಿನ ಹಾಡು ಕುಣಿತಗಳೊಂದಿಗೆ ಒಟ್ಟು ಸೇರುತ್ತಾರೆ. ಇದನ್ನು ‘ತೆಯ್ಯಾರ್’ ಎಂದು ಹೇಳುತ್ತಾರೆ. ಶೇಂದಿ, ಕೋಳಿ ಮಾಂಸ ತೆಯ್ಯಾರ್ ಆಚರಣೆಯ ವಿಶಿಷ್ಟ ಆಹಾರ. ಶೇಂದಿ ಕುಡಿದು ಮರಂ, ಕೊಳಲು, ಚೆಂಡೆಗಳನ್ನು ಬಡಿಯುತ್ತಾ ಪರಯರು ಕುಣಿಯುತ್ತಾರೆ. ದೈವ ದೇವರುಗಳನ್ನು, ಪೂರ್ವಿಕರನ್ನು ಸ್ಮರಿಸುವುದು ಈ ಆಚರಣೆಯ ಉದ್ದೇಶ.

ಕೆ.ಯು.ಎಚ್. ಅನುವಾದ ಎನ್.ಎಸ್.

 

ಪರಯರ ಕರಕೌಶಲ ಪರಯ ಸಮುದಾಯದ ಕರಕೌಶಲದಿಂದ ಅನೇಕ ಗೃಹೋಪಯೋಗಿ ಸಾಮಗ್ರಿಗಳು ನಿರ್ಮಾಣವಾಗುತ್ತವೆ. ವಟ್ಟೋರಂ, ಕೊಂಬೊರಂ, ಕುಟ್ಟ, ಚೊಟೂಟ್ಟ ಮೊದಲಾದ ಹೆಸರುಗಳ ಬುಟ್ಟಿಗಳನ್ನು ಗೆರಸೆಗಳನ್ನೂ ಆಕರ್ಷಕವಾಗಿ ಅವರು ಹೆಣೆಯುತ್ತಾರೆ.

ಕೊಂಬೋರಂ ಎಂದರೆ ಅಕ್ಕಿ, ಬತ್ತ ಮೊದಲಾದುವುಗಳನ್ನು ಗೋರುವ ದೊಡ್ಡ ಗೆರಸೆ. ಬಿದಿರಿನ ಸೀಳುಗಳಿಂದ ಇದನ್ನು ನಿರ್ಮಿಸುತ್ತಾರೆ. ಅಕ್ಕಿ ಮತ್ತು ಬತ್ತವ್ನನು ಬೇರ್ಪಡಿಸಲು ಉಪಯೋಗಿಸುವ ವಟ್ಟೋರಂ ಬಿದಿರಿನ ಸೀಳುಗಳಿಂದ ನಿರ್ಮಾಣವಾಗುತ್ತದೆ. ಬೇಯಿಸಿದ ಭತ್ತವನ್ನು ಗೋರಲು ಚೋಟುಟ್ಟವನ್ನು ಬಳಸುತ್ತಾರೆ.

ಪರಯ ಮಹಿಳೆಯರು ಗುಡಿ ಕೈಗಾರಿಕೆಗಳಂತೆ ಕರಕೌಶಲದ ಸಾಮಗ್ರಿಗಳನ್ನು ನಿರ್ಮಿಸುತ್ತಾರೆ. ಒಂದು ಕಾಳದಲ್ಲಿ ಕರಕೌಶಲ ವಸ್ತುಗಳು ಅವರ ಉಪಜೀವನ ಮಾರ್ಗವಾಗಿತ್ತು. ಉಳಿದ ಜಾತಿಯವರು ಇಂತಹ ಸಾಮಗ್ರಿಗಳನ್ನು ನಿರ್ಮಿಸಿದರೂ, ಪರಯರು ನಿರ್ಮಿಸುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿತ್ತು.

ಕೆ.ಯು.ಎಚ್. ಅನುವಾದ ಎನ್.ಎಸ್.