ಬಯಲಾಟಗಳು ಜನಪದ ರಂಗಭೂಮಿಯ ವಿಶಿಷ್ಟ ಪ್ರಕಾರಗಳಲ್ಲಿ ಬಯಲಾಟಗಳು ಅತಿ ಪ್ರಮುಖವಾದುವು. ಹೆಸರೇ ಸೂಚಿಸುವಂತೆ ಇವೆಲ್ಲವೂ ಬಯಿನಲ್ಲಿ ಆಡುವ ಆಟಗಳು. ಕರ್ನಾಟಕದ ವಿವಿಧ ಭಾಗಗಳಲ್ಲಿ ಅದರ ಹಲವಾರು ರೂಪಗಳನ್ನು ಕಾಣಬಹುದಾಗಿದೆ. ಇವೆಲ್ಲವೂ ಪ್ರಾದೇಶಿಕವಾದ ವೈಶಿಷ್ಟ್ಯಗಳೊಂದಿಗೆ ಪ್ರಾದೇಶಿಕ ಭಿನ್ನತೆಯನ್ನೂ ಹೊಂದಿರುವಂಥವು. ಪ್ರಾದೇಶಿಕವಾಗಿ ಇವುಗಳನ್ನು ಬೇರೆ ಬೇರೆ ಹೆಸರುಗಳಲ್ಲಿ ಕರೆದಿದ್ದರೂ ಅವುಗಳ ಅಂತಃಸ್ಸತ್ವ ಒಂದೇ.

ಕರ್ನಾಟಕದ ಬಯಲಾಟಗಳನ್ನು ಪ್ರಾದೇಶಿಕವಾಗಿ ಗುರುತಿಸಿ ಹೀಗೆ ಹೆಸರಿಸಲಾಗಿದೆ: ಯಕ್ಷಗಾನ ಬಯಲಾಟ, ಮೂಡಲಪಾಯ ಯಕ್ಷಗಾನ, ದೊಡ್ಡಾಟ, ಸಣ್ಣಾಟ, ಘಟ್ಟದ ಕೋರೆ, ಶ್ರೀಕೃಷ್ಣ ಪಾರಿಜಾತ. ಇವುಗಳಲ್ಲಿ ಕೆಲ ಒಳ ಪ್ರಭೇದಗಳೂ ಇವೆ.

ಬಯಲಾಟಗಳ ಪ್ರಾಚೀನತೆಯ ಬಗ್ಗೆ ಹೆಚ್ಚು ನಿಖರವಾದ ಮಾಹಿತಿ ದೊರೆಯುವುದಿಲ್ಲವಾದರೂ, ಸಿಕ್ಕಿರುವ ಕೆಲವೊಂದು ಆಧಾರಗಳಿಂದ ಹದಿನೈದನೆಯ ಶತಮಾನದವರೆಗೆ ಎಳೆಯಬಹುದಾದ ಸಾಧ್ಯತೆಯನ್ನು ವಿದ್ವಾಂಸರು ಮುಂದಿಟ್ಟಿದ್ದಾರೆ.

ಬಯಲಾಟ ಒಂದು ಸಂಮಿಶ್ರ ಕಲೆ. ಇದರಲ್ಲಿ ಸಂಗೀತ, ಸಾಹಿತ್ಯ, ನೃತ್ಯ, ಅಭಿನಯ, ಚಿತ್ರ ಹೀಗೆ ಹಲವಾರು ಕಲೆಗಳು ಸಮ್ಮಿಲನಗೊಂಡಿವೆ. ಪ್ರದರ್ಶನಕ್ಕೆ ಸಂಬಂಧಿಸಿದಂತೆ ಇದರಲ್ಲಿ ಎರಡು ಭಾಗಗಳನ್ನು ಗುರುತಿಸಲಾಗಿದೆ. ಒಂದು ಪೂರ್ವರಂಗ; ಮತ್ತೊಂದು ಆರಿಸಿಕೊಂಡ ಕಥಾಭಾಗ. ಮೊದಲನೆಯದಕ್ಕೆ ಸಭಾಲಕ್ಷಣ ಎಂದೂ ಕರೆಯಲಾಗಿದೆ.

ಬಯಲಾಟದ ರೂಪಗಳು ಹಲವಿವೆ. ಅವುಗಳಲ್ಲಿ ‘ಯಕ್ಷಗಾನ ಬಯಲಾಟ’ ಒಂದು. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶಿವಮೊಗ್ಗ ಜಿಲ್ಲೆಯ ಮಲೆನಾಡು ಗರ್ಭ ಪ್ರದೇಶದಲ್ಲಿ ಇದು ವ್ಯಾಪಕವಾಗಿ ಹರಡಿದೆ. ಇದನ್ನೇ ಪಡುವಲಪಾಯ ಎಂಬ ಹೆಸರಿನಲ್ಲಿಯೂ ಕರೆಯಲಾಗಿದೆ. ಬಯಲಾಟದ ಎಲ್ಲ ಲಕ್ಷಣಗಳನ್ನು ಹೊಂದಿರುವ ಈ ಪ್ರಕಾರ ಯಕ್ಷಗಾನ ಶೈಲಿಯನ್ನು ಮೈಗೂಡಿಸಿಕೊಂಡಿದ್ದರಿಂದ ‘ಯಕ್ಷಗಾನ ಬಯಲಾಟ’ ಎಂಬ ಅನ್ವರ್ಥನಾಮದಲ್ಲಿ ಇದನ್ನು ಕರೆಯಲಾಗಿದೆ. ಉಳಿದ ಭಾಗಗಳ ಬಯಲಾಟಗಳಿಗೆ ಹೋಲಿಸಿದರೆ ಈ ಭಾಗದ ಯಕ್ಷಗಾನ ಬಯಲಾಟ ತುಂಬ ಭಿನ್ನವಾಗಿ ತೋರುವುದಂತೂ ನಿಜ. ಇದಕ್ಕೆ ಅದರದ್ದೇ ಆದ ಪ್ರಾದೇಶಿಕ ಕಾರಣಗಳು ಇವೆ ಎಂಬುದನ್ನೂ ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ಕರಾವಳಿ ಭಾಗದ ಈ ಬಯಲಾಟವನ್ನು ಪ್ರತ್ಯೇಕವಾಗಿ ವರ್ಗೀಕರಿಸಿ ಅದನ್ನು ಉಳಿದ ಬಯಲಾಟಗಳಿಂದ ದೂರವಿಡುವ ಮಾತುಗಳೂ ಕೇಳಿಬಂದಿವೆ. ಇದರಲ್ಲಿ ತೆಂಕುತಿಟ್ಟು, ಬಡಗುತಿಟ್ಟು ಎಂಬ ಎರಡು ಪ್ರಮುಖ ಪ್ರಭೇದಗಳನ್ನೂ ವಿದ್ವಾಂಸರು ಗುರುತಿಸಿದ್ದಾರೆ. ಆದರೆ ಇದರಲ್ಲಿ ಒಮ್ಮತವಿದ್ದಂತಿಲ್ಲ.

ಕರಾವಳಿಯ ‘ಯಕ್ಷಗಾನ ಬಯಲಾಟ’ ಅತ್ಯಂತ ಶ್ರೀಮಂತವಾಗಿ ಬೆಳೆದಿರುವ, ಬೆಳೆದು ಬರುತ್ತಿರುವ ಒಂದು ಕಲೆ. ಯಶಸ್ವೀ ಮನರಂಜನೆಯ ಕಲೆಯಾಗಿ ಇದು ಜನಪ್ರಿಯತೆಯನ್ನು ಗಳಿಸಿದೆ. ಕುಣಿತ, ಅಭಿನಯ, ವೇಷ ಭೂಷಣ, ಭಾಗವಂತಿಕೆ – ಈ ಎಲ್ಲದರಲ್ಲಿಯೂ ಅದು ನಾವೀನ್ಯತೆಯನ್ನು ತೋರಿದೆ. ಕಲಿತವರ್ಗ ಅದರಲ್ಲಿ ಹೆಚ್ಚು ಹೆಚ್ಚು ಪಾಲ್ಗೊಳ್ಳುತ್ತಿರುವುದರಿಂದ ಎಲ್ಲದರಲ್ಲಿಯೂ ಶಿಸ್ತು ಹೆಚ್ಚಾಗಿದ್ದು ಪ್ರದರ್ಶನ ಆಧುನಿಕರನ್ನೂ ಸೆರೆಹಿಡಿಯುವಂತಾಗಿದೆ. ಪ್ರಸಂಗ ಸಾಹಿತ್ಯ – ರಾಮಾಯಣ, ಮಹಾಭಾರತ, ಭಾಗವತದ್ದೇ ಆದರೂ ಪ್ರದರ್ಶಿಸುವಲ್ಲಿಯ ಅಂದಗಾರಿಕೆ ಅದಕ್ಕೊಂದು ಹೆಚ್ಚಿನ ಮೆರಗನ್ನೂ ಮೋಹಕತೆಯನ್ನೂ ತಂದುಕೊಟ್ಟಿದೆ. ಕರಾವಳಿಯ ‘ಯಕ್ಷಗಾನ ಬಯಲಾಟ’ ಶಿಷ್ಯವೇ – ಜಾನಪದವೇ? ಎಂಬ ಪ್ರಶ್ನೆಯನ್ನು ಹುಟ್ಟು ಹಾಕುವಷ್ಟು ಭಿನ್ನತೆಯನ್ನು ತೋರುವುದು ಅದರ ಭಿನ್ನ ಸ್ವರೂಪಕ್ಕೆ ಸಾಕ್ಷಿಯಾಗಿದೆ.

ಇದನ್ನು ಬಿಟ್ಟರೆ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕ ಭಾಗದ ಬಯಲಾಟಗಳನ್ನು ಪರಿಶೀಲಿಸುವಾಗ – ದೊಡ್ಡಾಟ, ಅಟ್ಟದಾಟ, ಬಯಲಾಟ, ಸಣ್ಣಾಟ, ಘಟ್ಟದ ಕೋರೆ ಎಂಬ ವಿವಿಧ ಹೆಸರುಗಳಲ್ಲಿ ಗುರುತಿಸಲ್ಪಟ್ಟಿರುವ ಬಯಲಾಟದ ಪ್ರಕಾರಗಳಿವೆ. ಇವನ್ನು ಒಟ್ಟಾರೆಯಾಗಿ ಮೂಡಲಪಾಯ ಎಂಬ ಹೆಸರಿನಲ್ಲಿಯೂ ಕರೆಯಲಾಗಿದೆ.

ದಕ್ಷಿಣ ಕರ್ನಾಟಕದ ಭಾಗದಲ್ಲಿ ಪ್ರಚಲಿತವಾಗಿರುವ ಬಯಲಾಟಕ್ಕೆ ಹಲವು ಹೆಸರುಗಳಿವೆ : ಮೂಡಲ ಪಾಯ ಯಕ್ಷಗಾನ, ಅಟ್ಟದಾಟ, ಪ್ರಸಂಗ, ಬಯಲಾಟ, ಯಕ್ಷಗಾನ ಬಯಲಾಟ ಇತ್ಯಾದಿ. ಪ್ರಸಂಗ ಸಾಹಿತ್ಯದ ವಸ್ತು ಇವೆಲ್ಲವುಗಳಿಗೂ ಒಂದೇ ಆದರೂ ರಚನೆಯಲ್ಲಿ ವ್ಯತ್ಯಾಸ ಕಂಡುಬರುತ್ತದೆ. ಪಡುವಲಪಾಯ ಯಕ್ಷಗಾನದಲ್ಲಿ ಪ್ರಸಂಗ ಸಾಹಿತ್ಯದ ಪದ್ಯಭಾಗ ಮಾತ್ರ ಕವಿನಿರ್ಮಿತವಾದುದಾಗಿದ್ದು, ಗದ್ಯಭಾಗ ಪಾತ್ರಧಾರಿಗಳಿಂದ ರಂಗದ ಮೇಲೆಯೇ ಮೂಲ ಪದ್ಯವನ್ನು ಅನುಸರಿಸಿ ರಚನೆಯಾಗುತ್ತದೆ. ಆದರೆ ಮೂಡಲಪಾಯದಲ್ಲಿ ಗದ್ಯ-ಪದ್ಯಗಳೆರಡೂ ಕವಿನಿರ್ಮಿತವಾಗಿದ್ದು ಪಾತ್ರಧಾರಿ ಅವೆರಡನ್ನೂ ಕಂಠಪಾಠಮಾಡಿ ಒಪ್ಪಿಸುತ್ತಾನೆ. ಇದರಂತೆಯೇ – ವೇಷಭೂಷಣ, ವಾದ್ಯವಿಶೇಷ, ಕುಣಿತಗಳಲ್ಲಿಯೂ ಗಮನಾರ್ಹವಾದ ವ್ಯತ್ಯಾಸಗಳು ಕಂಡುಬರುತ್ತವೆ. ಮೂಲತಃ ಇವೆಲ್ಲವೂ ಒಂದೇ ಮೂಲವಾದ ಕಲೆಗಳಾಗಿದ್ದು ಪ್ರಾದೇಶಿಕ ವ್ಯತ್ಯಾಸದ ಕಾರಣಗಳಿಂದಾಗಿ ಈ ವೈದೃಶ್ಯ ತಲೆದೋರಿರುವುದು ಸಹಜವೆನಿಸುತ್ತದೆ.

ಉತ್ತರ ಕರ್ನಾಟಕ ಭಾಗದ ‘ದೊಡ್ಡಾಟ’ ಹೆಸರಿಗನುಗುಣವಾಗಿ ಎಲ್ಲ ಪ್ರಕಾರಗಳಲ್ಲಿಯೂ ದೊಡ್ಡದಾಗಿದ್ದು, ಹೆಚ್ಚಾಗಿ ದಕ್ಷಿಣ ಕರ್ನಾಟಕದ ಬಯಲಾಟವನ್ನೇ ಹೋಲುತ್ತದೆ. ವೇಷಭೂಷಣ, ವಾದ್ಯ ವಿಶೇಷ, ಭಾಗವಂತಿಕೆಯಲ್ಲಿಯ ಹಿಮ್ಮೇಳ ಈ ಎಲ್ಲ ವಿಭಾಗಗಳ್ಲಿಯೂ ದೊಡ್ಡಾಟ ದೊಡ್ಡಾಟವಾಗಿಯೇ ಅನ್ವರ್ಥವಾಗಿ ಉಳಿಯುತ್ತದೆ. ವಿಶೇಷವೆಂದರೆ ಇವೆರಡೂ ಕರಾವಳಿಯ ಯಕ್ಷಗಾನ ಬಯಲಾಟದಿಂದ ಭಿನ್ನವಾಗಿ ತೋರುವುದು.

ಮೂಡಲಪಾಯ ಮತ್ತು ಪಡುವಲಪಾಯದ ಬಯಲಾಟಗಳನ್ನು ಗಮನಿಸುವಾಗ ಮೂಡಲಪಾಯದ ಕಲಾವಿದರು ವೃತ್ತಿಪರರಲ್ಲ. ನಿಜವಾದ ಜನಪದ ಕಲಾವಿದರು. ಅನಕ್ಷರಸ್ಥರು. ತಮಗೆ ಖುಷಿ ಎನಿಸಿದಾಗ ಆಟ ಕಲಿತು ಒಂದು ದಿನ ಕುಣಿದು ಮತ್ತೆ ನೆನಪಾದಾಗ ಯಾವಾಗಲೋ ಬಣ್ಣ ಹಾಕಿ ರಂಗದ ಮೇಲೆ ಬರುವವರು. ಪಡುವಲಪಾಯದ ಕಲಾವಿದರಂತೆ ವೃತ್ತಿಪರರೆನಿಸಿ ಅದಕ್ಕೇ ಅರ್ಪಿಸಿಕೊಂಡ ಕಲಾವಿದರು ಇಲ್ಲಿ ಕಂಡುಬರುವುದಿಲ್ಲ. ಇದರಿಂದಾಗಿ ಪ್ರದರ್ಶನದಲ್ಲಿಯ ಗುಣಾತ್ಮಕತೆ ಇಲ್ಲಿ ವ್ಯಕ್ತವಾಗುತ್ತದೆ. ಆದರೂ ಒಂದರಲ್ಲಿಯ ಕೆಲವೊಂದು ದೋಷಗಳು ಮತ್ತೊಂದರಲ್ಲಿಯ ಗುಣಗಳಾಗಿಯೂ ಮತ್ತೊಂದರಲ್ಲಿಯ ದೋಷಗಳು ಇನ್ನೊಂದರಲ್ಲಯ ಗುಣಗಳಾಗಿಯೂ ತೋರುತ್ತವೆ ಎಂಬುದು ಗಮನಾರ್ಹ. ಉದಾಹರಣೆಗೆ : ಇವೆರಡರ ಪ್ರಸಂಗ ಸಾಹಿತ್ಯ ರಚನೆಯನ್ನು ಗಮನಿಸಬಹುದು. ಮೂಡಲಪಾಯದ ಪ್ರಸಂಗ ರಚನೆಯಲ್ಲಿ ಗದ್ಯ-ಪದ್ಯಗಳೆರಡೂ ಕವಿನಿರ್ಮಿತವಾಗಿದ್ದು ಪಾತ್ರಧಾರಿ ಎರಡನ್ನೂ ಕಂಠಪಾಠಮಾಡಿ ರಂಗದ ಮೇಲೆ ಒಪ್ಪಿಸುತ್ತಾನೆ. ಇಲ್ಲಿಯ ಗದ್ಯಭಾಗ ಪ್ರಾಸಬದ್ಧವಾಗಿದ್ದು, ಸಂಸ್ಕೃತಭೂಯಿಷ್ಠವಾಗಿರುತ್ತದೆ. ಅಷ್ಟನ್ನು ಬಿಟ್ಟು ಅವನು ಹೆಚ್ಚಿಗೇನನ್ನೂ ಹೇಳುವಂತಿರುವುದಿಲ್ಲ. ಆದರೆ ಪಡುವಲಪಾಯದ ಪಾತ್ರಧಾರಿ ಪದ್ಯವನ್ನು ಅನುಸರಿಸಿ ತಾನೇ ಸಂಭಾಷಣೆಯನ್ನು ಕಟ್ಟಿಬೆಳೆಸುತ್ತಾ ಹೋಗುತ್ತಾನೆ. ಇದರಿಂದ ಉದ್ದನೆಯ ಸಂಭಾಷಣೆ ಇಲ್ಲಿ ಸಾಧ್ಯವಾಗುತ್ತದೆ. ಅದನ್ನು ಕೇಳಿ ಸವಿಯುವ ಜನ ಅಲ್ಲಿದ್ದಾರೆ. ಅದು ಕೆಲವೊಮ್ಮೆ ಬೆಳೆದು ತರ್ಕರೂಪವನ್ನು ತಾಳಿ ಭಾಷಣದ ಸ್ವರೂಪವನ್ನು ಪಡೆಯುವ ಸಾಧ್ಯತೆಯೂ ಇರುತ್ತದೆ.

27_70A_DBJK-KUH

ವಾದ್ಯ ವಿಶೇಷಗಳಿಗೆ ಸಂಬಂಧಿಸಿದಂತೆ ನೋಡುವಾಗಲೂ ಪಡುವಲಪಾಯ ಯಕ್ಷಗಾನದಲ್ಲಿ ಕಾಣುವ ಜಾಗಟೆ, ಚಂಡೆಗಳ ಬಳಕೆ ಮೂಡಲಪಾಯದಲ್ಲಿ ಕಂಡುಬರುವುದಿಲ್ಲ. ಹಾಗೆಯೇ ಮೂಡಲಪಾಯದಲ್ಲಿ ಬಳಕೆಯಾಗುವ ಮುಖವೀಣೆ ಅಲ್ಲಿ ಗೋಚರಿಸುವುದಿಲ್ಲ.

‘ಘಟ್ಟದ ಕೋರೆ’ ಮತ್ತೊಂದು ವಿಶಿಷ್ಟ ಪ್ರಕಾರವಾಗಿ ಬಯಲಾಟದಲ್ಲಿ ಗೋಚರಿಸಿದೆ. ಇತ್ತು ಇತ್ತೀಚೆಗೆ ಬೆಳಕಿಗೆ ಬಂದ ಒಂದು ಪ್ರಕಾರ. ಮೂಡಲಪಾಯ ಮತ್ತು ಪಡುವಲಪಾಯಗಳೆರಡರ ಸಾರವನ್ನೂ ಸೂರೆಗೊಂಡು, ಮಲೆನಾಡು ಮತ್ತು ಬಯಲುನಾಡುಗಳ ಸೆರಗಿನಲ್ಲಿ ರೂಪುಗೊಂಡಿರುವ ಈ ಪ್ರಕಾರ ಹೊಸ ಹುಟ್ಟನ್ನೇ ಪಡೆದಿದೆ. ಮೈಸೂರು ಜಿಲ್ಲೆಯ ಕೊಳ್ಳೇಗಾಲ ಹಾಗೂ ಮಂಡ್ಯ ಜಿಲ್ಲೆಯ ಹೊಸಹೊಳಲು ಭಾಗಗಳಲ್ಲಿ ಈ ಸಂಪ್ರದಾಯದ ಕಲೆ ವಿಶಿಷ್ಟ ರೀತಿಯಲ್ಲಿ ಕಾಣಿಸಿಕೊಂಡಿದೆ. ಘಟ್ಟದ ಕೆಳಗಿನ ಯಕ್ಷಗಾನ ಸಂಪ್ರದಾಯ ಹಾಗೂ ಮೂಡಲಪಾಯದ ಯಕ್ಷಗಾನದಲ್ಲಿ ಕೆಲವಂಶಗಳನ್ನು ಗರ್ಭೀಕರಿಸಿಕೊಂಡು ಅಸ್ತಿತ್ವಕ್ಕೆ ಬಂದಿರುವ ಈ ಕಲೆ ತನ್ನದೇ ಆದ ಸ್ವರೂಪವನ್ನು ಪಡೆದುಕೊಂಡಿದೆ. ಮೂಡಲಪಾಯ ಮತ್ತು ಪಡುವಲಪಾಯ ಯಕ್ಷಗಾನಗಳ ಮಿಶ್ರಣ ಘಟ್ಟದ ಕೋರೆ ಯಕ್ಷಗಾನದಲ್ಲಿ ಎದ್ದು ಕಾಣುತ್ತದೆ. ಪ್ರತ್ಯೇಕವಾಗಿ ಗುರುತಿಸುಷ್ಟು ಅವೆರಡನ್ನೂ ಅದು ಮೈದುಂಬಿಕೊಂಡು ವಿಶಿಷ್ಟರೂಪವನ್ನು ಹೊಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿಯ ‘ಸಣ್ಣಾಟ’, ಶ್ರೀಕೃಷ್ಣ ಪಾರಿಜಾತ, ಸಂಗ್ಯಾಬಾಳ್ಯ ಮುಂತಾದ ಪ್ರಕಾರಗಳು ಇತ್ತೀಚಿನ ನಾಟಕಗಳಾದರೂ ತಮ್ಮ ಜನಪ್ರಿಯತೆಯಿಂದಾಗಿ ಬಯಲಾಟದ ಚೌಕಟ್ಟಿಗೆ ಪ್ರಮುಖವಾಗಿ ಹೊಂದಿರುವ ‘ಸಾಮಗಾನ’ ಪ್ರಕಾರ ಕೂಡ ಇದಕ್ಕೆ ಹತ್ತಿರವಾಗಿ ನಿಲ್ಲುತ್ತದೆ. ಒಂದಲ್ಲ ಒಂದು ರೀತಿಯಲ್ಲಿ ಇವೆಲ್ಲ ಪರಸ್ಪರ ಪ್ರಭಾವಕ್ಕೆ ಒಳಗಾದವುಗಳೇ; ಬಯಲಿನಲ್ಲಿ ನಡೆಯುವ ಸಂಪ್ರದಾಯಕ್ಕೆ ಕಟ್ಟುಬಿದ್ದವುಗಳೇ ಆಗಿವೆ.

ಬಯಲಾಟದಲ್ಲಿ ಕಂಡುಬರುವ ಈ ಎಲ್ಲ ಪರಕಾರಗಳನ್ನು ಕೂಲಂಕಷವಾದ ಪರೀಕ್ಷೆಗೆ ಒಡ್ಡಿದರೆ ಇವೆಲ್ಲವುಗಳ ಮೂಲ ಒಂದೇ ಆಗಿರುವುದರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲ, ಇವೆಲ್ಲವೂ ದ್ರಾವಿಡ ಮೂಲದ ಕಲೆಗಳು ಎಂಬ ಅಭಿಪ್ರಾಯವೂ ಇದೆ. ಆದರೆ ಪ್ರಾದೇಶಿಕ ಭಿನ್ನತೆ, ಕಾಲದ ಅಂತರ ಇವುಗಳಲ್ಲಿ ಭಿನ್ನತೆಯನ್ನು ಉಂಟುಮಾಡಿದೆ. ಆ ಭಿನ್ನತೆಯೇ ಅವುಗಳ ವೈಶಿಷ್ಟ್ಯವಾಗಿ ಬೆಳೆದಿರುವುದನ್ನು ಕಾಣಬಹುದು. ಆದರೆ ಅವೆಲ್ಲದರಲ್ಲಿಯೂ ಜಾನಪದ ಸತ್ವ ನಶಿಸದೆ ಇರುವುದು ಅವುಗಳ ಹೆಚ್ಚುಗಾರಿಕೆ. ಆ ಸೊಗಡು ಮತ್ತು ಸೊಗಸು ಅವುಗಳನ್ನು ಇಂದಿಗೂ ಜೀವಂತವಾಗಿಸಿದೆ.

ಡಿ.ಕೆ.ಆರ್.

 

ಬಯಲಾಟಗಳಲ್ಲಿ ಸಂಗೀತ ನಮ್ಮಲ್ಲಿರುವ ಬಯಲಾಟಗಳಲ್ಲಿ ಎಣಿಕೆಯ ಪ್ರಕಾರ ಏಳು ಪ್ರಕಾರದ ಬಯಲಾಟಗಳಿವೆ :

೧. ದಾಸರಾಟ, ೨. ಸಣ್ಣಾಟ- ಇದರಲ್ಲೇ ವೈಷ್ಣವ ಸಣ್ಣಾಟ, ಶೈವ ಸಣ್ಣಾಟ ಹಾಗೂ ಸಾಮಾಜಿಕ ಸಣ್ಣಾಟಗಳೆಂದು ಮೂರು ವಿಧಗಳಿವೆ. ೩. ಪಾರಿಜಾತ, ೪. ದೊಡ್ಡಾಟ, ೫. ಯಕ್ಷಗಾನ, ೬. ತೊಗಲು ಬೊಂಬೆಯಾಟ, ೭. ಸೂತ್ರದ ಬೊಂಬೆಯಾಟ.

ಈ ಎಲ್ಲ ಪ್ರಕಾರಗಳಲ್ಲಿ ಬರುವ ಶಿಷ್ಟತೆಯನ್ನು ಗಮನಿಸಿ ತೊಗಲು ಬೊಂಬೆಯಾಟದ ಸಂಗೀತವನ್ನು ದಾಸರಾಟದ ಸಂಗೀತದೊಂದಿಗೇ ಅಧ್ಯಯನ ಮಾಡಬಹುದು.

ಈ ಏಳು ಪ್ರಕಾರಗಳ ಸಂಗೀತಕ್ಕೆ ಕೆಲವು ಸಾಮಾನ್ಯ ಲಕ್ಷಣಗಳಿವೆ; ಉದ್ದೇಶಗಳಿವೆ :

೧. ಸಂಗೀತ ಹಾಗೂ ಸಾಹಿತ್ಯಗಳು ಬೇರ್ಪಡದಷ್ಟು ಭದ್ರವಾಗಿ ಪರಸ್ಪರ ಬೆಸೆದುಕೊಂಡಿರುತ್ತವೆ. ಕಲಿಯುವಾಗ ಸಾಹಿತ್ಯವನ್ನು ಮೊದಲು ಕಂಠಪಾಠ ಮಾಡಿ ಆಮೇಲೆ ಯಾರೂ ಸಂಗೀತ ರೂಢಿಸಿಕೊಳ್ಳುವುದಿಲ್ಲ. ಬರೆಯುವವರು ಕೂಡ ಮೊದಲು ಛಂದಸ್ಸಿನಲ್ಲಿ ಬರೆದು ಧಾಟಿ ಸೇರಿಸುವ ಅವಕಾಶಗಳನ್ನು ಇನ್ನೊಬ್ಬರಿಗೆ ಬಿಡುವುದಿಲ್ಲ. ಶಬ್ದ ಹಾಗೂ ಸಂಗೀತ ಎರಡನ್ನೂ ಏಕಕಾಲಕ್ಕೆ ಯೋಚಿಸುತ್ತ ರಚಿಸಿರುತ್ತಾರೆ. ಬಯಲಾಟಗಳ ಬಹುತೇಕ ಕವಿಗಳು ನಿರ್ದೇಶಕರೂ (ಸೂತ್ರಧಾರ) ಆಗಿರುವುದರಿಂದ ಸಾಹಿತ್ಯ ಸಂಗೀತಗಳು ಒಟ್ಟುಗೂಡಿ ರಸಾಸ್ವಾದನೆ ಒದಗುವ ಹಾಗೆ ನಿಯೋಜಿಸಲ್ಪಟ್ಟಿರುತ್ತವೆ.

೨. ಆ ಹಾಡಾಗಲಿ ಅಥವಾ ಆ ಸಂಗೀತವಾಗಲಿ ನಿರ್ದಿಷ್ಟ ಸಂದರ್ಭ ಕ್ಕಾಗಿಯೇ ಹುಟ್ಟಿಕೊಂಡಿರುತ್ತವೆ. ಆ ಸಂದರ್ಭದಿಂದ ಅವುಗಳನ್ನು ಹೊರತುಪಡಿಸಿದರೆ ಅವಕ್ಕೆ ಅರ್ಥವೇ ಇರುವುದಿಲ್ಲ.

೩. ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಜನಪದ ಸಾಹಿತ್ಯದಲ್ಲಿರುವಂತೆ ಸಂಗೀತದಲ್ಲಿಯೂ ಆಯಾ ಪ್ರಕಾರಕ್ಕೆ ವಿಶಿಷ್ಟವಾದ ಫಾರ್ಮುಲಾಗಳಿರುತ್ತವೆ. ದೊಡ್ಡಾಟ, ಯಕ್ಷಗಾನ ಹಾಗೂ ಸೂತ್ರದ ಗೊಂಬೆಯಾಟಗಳಂಥ ಶಿಷ್ಟ ಪ್ರಕಾರಗಳಲ್ಲಿ ಹೊಸ ಫಾರ್ಮುಲಾಗಳು ಸೇರಿಕೊಳ್ಳುವ ಅವಕಾಶ ಕಡಿಮೆ. ಯಾಕೆಂದರೆ ಇವುಗಳ ವಸ್ತು ರಾಮಾಯಣ, ಭಾರತ, ಭಾಗವತಗಳಿಗೆ ಸಂಬಂಧಪಟ್ಟದ್ದಿದ್ದು ಅಲ್ಲಿಯ ಭಾವಭಾವನೆಗಳು ನಿರ್ದಿಷ್ಟವಾಗಿರುತ್ತವೆ. ಹಿಟ್ಲರನ ಬಗ್ಗೆ ಒಂದು ದೊಡ್ಡಾಟವನ್ನೇನೋ ಆಡಿದರು. ಆದರೆ ಹಿಟ್ಲರನ ಕಾಳಗಕ್ಕೂ ರಾಮಾಯಣ ಭಾರತಗಳ ಕಾಳಗಕ್ಕೂ ವ್ಯತ್ಯಾಸವಿರಲಿಲ್ಲವಾದ್ದರಿಂದ ಎರಡರ ಅನುಭವಗಳನ್ನು ಒಂದೇ ಎಂಬಂತೆ ಪರಿಭಾವಿಸಿದ್ದರಿಂದ ಹೊಸ ಸಂಗೀತದ ಫಾರ್ಮುಲಾಗಳ ಅಗತ್ಯ ಅವನಿಗನ್ನಿಸಲಿಲ್ಲ. ಅಂದರೆ ಹಿಟ್ಲರ್‌ರಾವಣನಂತೇ ಕುಣಿಯುತ್ತಿದ್ದನು. ಹಾಡುತ್ತಿದ್ದನು ಮತ್ತು ಮಾತನಾಡುತ್ತಿದ್ದನು.

ಶಿಷ್ಟತೆಯಿಲ್ಲದ ಸಣ್ಣಾಟ ದಾಸರಾಟಗಳಲ್ಲಿ ಮಾತ್ರ ಹೊಸ ಫಾರ್ಮುಲಾಗಳಿಗೆ ಅವಕಾಶ ಹೆಚ್ಚು. ಜನಪ್ರಿಯ ಸಿನಿಮಾ ಹಾಡುಗಳನ್ನು ಸೇರಿಸಿದ ಉದಾಹರಣೆಗಳೂ ಇವೆ. ‘ಜಗನ್ಮೋಹಿನಿ’ ಚಿತ್ರದ ‘ಎಂದೋ ಎಂದೋ ನಿನ್ನ ದರುಶನ’ ಎಂಬ ಹಾಡನ್ನು ‘ಸಂಗ್ಯಾಬಾಳ್ಯ’ದಲ್ಲಿ ಗಂಗಿಯ ವಿರಹಗೀತೆಯಾಗಿ ಬಳಸಿಕೊಂಡಿದ್ದುಂಟು. ಹಿಂದಿನ ಕವ್ವಾಲಿ ಹಾಡುಗಳನ್ನು ಪಾರಿಜಾತದಲ್ಲಿ ಬಳಸಿದ ಉದಾಹರಣೆಗಳೂ ಇವೆ.

೪. ಬಯಲಾಟಗಳ ಸಂಗೀತ ನೃತ್ಯಗಳಿಗೆ ಅನುಕೂಲವಾಗಿಯೇ ಇರುತ್ತದೆ ಅಥವಾ ನೃತ್ಯದ ಹೆಜ್ಜೆಯ ನಾದವನ್ನು ಮನಸ್ಸಿನಲ್ಲಿಟ್ಟುಕೊಂಡೇ ಹುಟ್ಟಿರುತ್ತದೆ. ಅಲ್ಲದೇ ನೃತ್ಯಕ್ಕಾಗಿಯೇ ಹಾಡಿನ ಕೆಲವು ಭಾಗಗಳನ್ನು, ಆಲಾಪದ ಕೆಲವು ಭಾಗಗಳನ್ನು ಮೀಸಲಿಡುವುದುಂಟು. ರಿಪೀಟ್ ಮಾಡುವುದುಂಟು. ಉದಾಹರಣೆಗೆ ‘ಹೋಗಬ್ಯಾಡೋ ಗೋಪಾಲ ಗೋಪಿಯ ತೊರೆದೂ’ ಎಂಬ ಹಾಡನ್ನು ಮೆಳದವರು ಹತ್ತು ಸಲ ರಿಪೀಟ್ ಮಾಡಬಹುದು. ಹತ್ತು ಸಲವೂ ಪಾತ್ರಧಾರಿ ಭಿನ್ನವಾಗಿ ಕುಣಿಯಬಹುದು. ಅಂದರೆ ಮೇಳದವರು ಒಮ್ಮೆ ‘ಹೋಗಬ್ಯಾಡೊ’ ಎಂದು ಹಾಡಿದರೆ ಪಾತ್ರಧಾರಿ ರಾಮಾವತಾರ ಅಭಿನಯಿಸಿ ‘ತೊರೆದಾ’ ಎನ್ನುವಲ್ಲಿಗೆ ಮುಗಿಸಬಹುದು. ಅಂದರೆ ರಾಮಾವತಾರ ತಾಳಿದ ಕೃಷ್ಣನೇ ಹೋಗಬೇಡ ಎಂದರ್ಥ. ಹೀಗೆ ಮೇಳದವರು ಹತ್ತು ಸಲ ಹಾಡಿದರೆ ಪಾತ್ರಧಾರಿ ಹತ್ತು ಅವತಾರಗಳನ್ನು ಅಭಿನಯಿಸಬಹುದು.

ಹೀಗೆ ರಿಪೀಟ್ ಮಾಡುವುದಕ್ಕೆ ಮುಖ್ಯಕಾರಣವೆಂದರೆ ಬಯಲಾಟದ ಪ್ರೇಕ್ಷಕರು ಅಟ್ಟದ ಮುರು ಕಡೆ ಕೂತಿರುತ್ತಾರೆ. ಅಂದರೆ ರಂಗದ ಒಂದು ಮಗ್ಗುಲಿಗೆ ಹಾಡಿದ ಹಾಡಿನ ತುಂಡನ್ನು, ಮಾಡಿದ ನೃತ್ಯದ ತುಂಡನ್ನು ಇನ್ನೊಂದು ಮಗ್ಗಲಿನ ಪ್ರೇಕ್ಷಕರಿಗೂ ತೋರಿಸಬೇಕಾಗುತ್ತದೆ.

೫. ಮೇಳದ ಕಲ್ಪನೆ ಉತ್ತರ ಕರ್ನಾಟಕದಲ್ಲಿರುವಂತೆ ಯಕ್ಷಗಾನ, ಸೂತ್ರದ ಗೊಂಬೆಯಾಟಗಳಲ್ಲಿ ಬೆಳವಣಿಗೆಗೊಂಡಿಲ್ಲ. ಉತ್ತರ ಕರ್ನಾಟಕದ ಬಯಲಾಟಗಳಲ್ಲಿ ಮೇಳ ಎರಡು ಭಾಗವಾಗಿದ್ದು ಸೂತ್ರಧಾರ (ಮೇಟಿ ತಾಳ) ಮತ್ತು ಹಾಡುತ್ತಿರುವ ಪಾತ್ರಧಾರಿ ಇವರು ‘ಮುಮ್ಮೇಳ’ವಾದರೆ ಇವರ ಹಿಂದೆ ನಿಂತು ಅದನ್ನೇ ರಿಪೀಟ್‌ಮಾಡುವವರು ‘ಹಿಮ್ಮೇಳ’ವಾಗುತ್ತಾರೆ. ಈ ಹಿಮ್ಮೇಳ ದಾಸರಾಟವಾದರೆ ಮೂರು ಜನ, ಸಣ್ಣಾಟವಾದರೆ ಐದು ಜನ, ದೊಡ್ಡಾಟವಾದರೆ ಏಳು ಜನ ಗುಂಪಾಗಿ ನಿಂತಿರುತ್ತಾರೆ. ದೊಡ್ಡಾಟದ ಏಳು ಜನರು ಅನುಕ್ರಮವಾಗಿ ಸರಿಗಮಪದನಿಯ ಶೃತಿಯಲ್ಲಿಯೇ ಹಾಡುವುದೊಂದು ವಿಶೇಷ. ಇವರು ರಿಪೇಟ್ ಮಾಡುತ್ತಿದ್ದಾಗ ಪಾತ್ರಧಾರಿ ನೃತ್ಯ ಮಾಡುತ್ತಾನೆ. ವಾದ್ಯಗಳ ಬದಲು (ಅಥವಾ ವಾದ್ಯಗಳೇ ಇಲ್ಲದಿದ್ದಾಗ) ಮನುಷ್ಯನ ಸ್ವರಗಳನ್ನೇ ನಿಯೋಜಿಸಿಕೊಂಡ ದೊಡ್ಡಾಟದ ಸಂಗೀತ ಕಲ್ಪನೆ ತುಂಬ ಅದ್ಭುತವಾದುದಾಗಿದೆ. ಅದರ ಪ್ರಾಚೀನತೆಗೂ ಸಾಕ್ಷಿಯಾಗಿದೆ.

೬. ಭಾರತೀಯ ಕಲೆಗಳಂತೆ ಬಯಲಾಟಗಳ ಗುರಿಯೂ ಆರಾಧನೆಯ ನೆಪದಲ್ಲಿಯ ನಿರುದ್ದಿಶ್ಯ ರಸಾಸ್ವಾದನೆಯಾಗಿದೆ. ಇದು ಸಾಧ್ಯವಾಗುವುದು ಲೋಕಚರಿತ ಹಾಗೂ ರಂಗದ ಮೇಲಿನ ಕ್ರಿಯೆಗಳ ಮಧ್ಯೆ ಅಂತರ (Distanciation) ಸೃಷ್ಟಿಸುವುದರಿಂದ. ನೃತ್ಯದಂತೆ ಸಂಗೀತವೂ ಇಂಥ ಅಂತರ ಸೃಷ್ಟಿಸಿ ಪ್ರೇಕ್ಷಕರ ತೊಡಗುವಿಕೆಯನ್ನು ನಿವಾರಿಸುತ್ತದೆ. ದುಶ್ಯಾಸನ ದ್ರೌಪದಿಯ ಸೀರೆಯನ್ನು ಹಾಡುತ್ತ ಕುಣಿಯುತ್ತ ಸೆಳೆಯುವುದರಿಂದ ಅಲ್ಲಿ ಪ್ರೇಕ್ಷಕರಿಗೆ ಕರುಣರಸದ ಅನುಭವವಾಗುತ್ತದೆ. ಇಂಥ ದೃಶ್ಯ ರಸ್ತೆಯ ಮೇಲೆ ವಾಸ್ತವಿಕವಾಗಿ ನೈಜರೂಪದಲ್ಲಿ ನಡೆದರೆ ಪ್ರೇಕ್ಷಕರು ಕ್ರಿಯೆಯಲ್ಲಿ ಪಾಲ್ಗೊಳ್ಳುವುದು ಸಹಜ.

೭. ಘಟನೆಯ ಇಕ್ಕಟ್ಟಿನಲ್ಲಿ ಸಿಕ್ಕ ವ್ಯಕ್ತಿ ಹೇಗೆ ಸ್ಪಂದಿಸುತ್ತಾನೆ ಎಂಬುದರ ಮೂಲಕ ಆ ವ್ಯಕ್ತಿಯ ನಿಜ ದರ್ಶನ ಮಾಡಿಸುವದು ಶಿಷ್ಟ ನಾಟಕದ ಸ್ಥೂಲವಾದ ಗುರಿ. ಒಂದು ಜೀವನಮಾನದ ಇಡೀ ಕಥೆಯೊಂದರ ಮೂಲಕ ರಸಾಸ್ವಾದನೆ ಮಾಡಿಸುವುದು ಬಯಲಾಟಗಳ ಗುರಿ. ರಂಗದ ಮೇಲೆ ಇಡೀ ಕಥೆಯನ್ನು ಗೊತ್ತುಪಡಿಸಿದ ಅವಧಿಯಲ್ಲಿ ತೋರಿಸುವುದು ಅಸಾಧ್ಯ. ಆದ್ದರಿಂದ ಕಥೆಗೆ ಪೋಷಕವಾದ ಕೆಲವು ಲಕ್ಷಣಗಳನ್ನು ಆಯ್ದು ಹೆಣೆಯಬೇಕಗುತ್ತದೆ. ಕಾರ್ಯಕಾರಣ ರೂಪದಲ್ಲಿ ಬಯಲಾಟದ ಕವಿ ಕಥೆ ಹೇಳುವಾಗ ಸಾಹಿತ್ಯದಂತೆ ನೃತ್ಯ, ಸಂಗೀತಗಳನ್ನು ನಿರೂಪಣೆಗಾಗಿ ಬಳಸುತ್ತಾನೆ ಹಾಗೂ ನಿರೂಪಣೆಯಲ್ಲಿ ಬಳಸುವ ಹಾಡುಗಳು ಸಾಮಾನ್ಯವಾಗಿ Third person ನಲ್ಲಿದ್ದರೆ ಸಂಗೀತ ನಿರ್ಲಿಪ್ತವಾಗಿರುತ್ತದೆ. ಇಂದ್ರಕೀಲ ಪರ್ವತಕ್ಕೆ ಅರ್ಜುನ ಹೊರಟರೆ ಬಯಲಾಟ ನಿರ್ದೇಶಕ ಅವನು ಹೊರಟ ಹಾಗೂ ಇಂದ್ರಕೀಲ ಪರ್ವತಕ್ಕೆ ತಲುಪಿದ ಎರಡು ಕ್ಷಣಗಳನ್ನಾಯ್ದು ಬೆಸೆಯುತ್ತಾನೆ. ಬಯಲಾಟದ ಕಥೆ ದೃಶ್ಯಗಳಾಗಿ ವಿಭಜಿಸಲ್ಪಟ್ಟಿದ್ದು ಅಂಥ ಎರಡು ದೃಶ್ಯಗಳನ್ನು ಬೆಸೆಯುವುದೂ ಸಂಗೀತವೇ.

೮. ರಿಪಿಟೇಶನ್ ಒಟ್ಟು ಜನಪದ ಸಾಹಿತ್ಯ ಸಂಗೀತಗಳ ಮುಖ್ಯ ಲಕ್ಷಣವೇನೋ ನಿಜ. ಬಯಲಾಟಗಳ ಹಾಡಿನಲ್ಲಿಯ ಇದರ ಉದ್ದೇಶ ಮಾತ್ರ ಸ್ಪಷ್ಟವಾಗಿದೆ. ಅಟ್ಟದ ಮೂರು ಬದಿಗೆ ಪ್ರೇಕ್ಷಕರು ಕೂತಿರುವುದರಿಂದ ನೃತ್ಯ ಸಂಗೀತದ ಯಾವ ಭಾಗವು ಕೊನೆಪಕ್ಷ ಎರಡು ಮೂರು ಸಲ ರಿಪೀಟ್ ಆಗುವುದು ಅನಿವಾರ್ಯವಾಗುತ್ತದೆ. ನೃತ್ಯ ಸಂಗೀತಗಳ ಬಂಧ ಈ ರಿಪೀಟೇಶನ್ ಅನ್ನು ಅವಲಂಬಿಸಿರುವುದೂ ಅನಿವಾರ್ಯವಾಗಿರುತ್ತದೆ.

ಸಂಗೀತ ಮುಖ್ಯವಾಗಿ ಕಥೆಯ ಅಲಂಕರಣಕ್ಕಾಗಿ ಬರುತ್ತದೆ. ಅಂದರೆ ಕಥೆ ಹಾಡಿನ ಮುಖಾಂತರ ಮುಂದುವರಿಯುವುದಿಲ್ಲ. ಮಾತಿನ ಮುಖಾಂತರ ಹಾಡನ್ನು ಹೇಳಿಯಾದ ಮೇಲೆ ಮಾತಿನಲ್ಲಿ ಅದರ ವಿವರಣೆಯಾಗುವುದರಿಂದ ಹಾಡಿಗೆ ಮುನ್ನ ಕಥೆ ಎಲ್ಲಿತ್ತೋ ಅಲ್ಲೇ ಇರುತ್ತದೆ. (ಯಕ್ಷಗಾನದಲ್ಲಿ ತದ್ವಿರುದ್ಧ) ಅಂದರೆ ಹಾಡು ಮಾತುಗಳ ಭಾವವನ್ನು ಅಲಂಕರಿಸಲಿಕ್ಕೆ ಮಾತ್ರ ಸಂಗೀತ ಬರುತ್ತದೆ. ಪಕ್ಕವಾದ್ಯಗಳ ಬಳಕೆಯೂ ಇದೆ ಕಾರಣಕ್ಕಾಗಿ ಇದೆ. ಯಕ್ಷಗಾನದಲ್ಲಿ ಸಂಗೀತ, ಸಾಹಿತ್ಯಗಳಿಂದ ಕತೆ ಮುಂದುವರಿದು ಮಾತು ಸಂವಹನೆಗೋಸ್ಕರ, ಅಲಂಕರಣಕ್ಕೋಸ್ಕರ ಬಳಕೆಯಾಗುತ್ತದೆ.

ಬಯಲಾಟಗಳಲ್ಲಿ ಸಂಗೀತ ಮೇಲಿನ ಒಂಬತ್ತು ಕಾರಣಗಳಿಗಾಗಿ ಬಳಕೆಯಾಗುತ್ತದೆಂದು ಅನಿಸುತ್ತದೆ.

ಸಿ.ಕೆ.

 

ಬಲಿಕಳ ಉತ್ತರ ಕೇರಳದಲ್ಲ, ಅದರಲ್ಲಿಯೂ ಕಲ್ಲಿಕೋಟೆ ಜಿಲ್ಲೆಯಲ್ಲಿ ಗರ್ಭಿಣಿಯರಿಗಾಗಿ ನಡೆಸುವ ಧಾರ್ಮಿಕ ಆಚರಣಾತ್ಮಕ ಕ್ರಿಯೆ. ಗರ್ಭಿಣಿಯರಿಗೆ ಬಾಧಿಸುವ ದುಷ್ಟಶಕ್ತಿಗಳನ್ನು ಉಚ್ಛಾಟಿಸಲು ಬಲಿಕಳವನ್ನು ನಡೆಸುವರು. ಇದು ನಾಲ್ಕು ವಿಧ.

೧. ಪ್ರೇತ ಬಲಿಕಳ
೨. ಗರ್ಭಿಣಿಯರಿಗಿರುವ ಬಲಿಕಳ
೩. ಬಾಲ ಬಲಿಕಳ
೪. ತರವಾಡಿನ ಹಿರಿಯರಿಗಿರುವ ಬಲಿಕಳ

ನಾಲ್ಕು ವಿಧದ ಬಲಿಕಳಗಳ ಕ್ರಿಯಾ ವಿಧಿಗಳೆಲ್ಲಾ ಒಂದೇ ರೀತಿ ಆಗಿವೆ. ಪಂಚವರ್ಣದ ಹುಡಿಗಳಿಂದ ನಿರ್ದಿಷ್ಟ ದೇವತಾ ಶಕ್ತಿಗಳ ರೂಪವನ್ನು ಬರೆದು, ಬಾಧೆಗೊಳಗಾದ ವ್ಯಕ್ತಿಯನ್ನು ಕಳಚಿತ್ರದ ಮುಂಭಾಗದಲ್ಲಿ ಕೂರಿಸುವರು. ಕರ್ಮಿಗಳು ಬಲಿಕಳ ತೋಟ್ಟಂ ಹಾಡುವರು. ಭದ್ರಕಾಳಿ, ಗಂಧರ್ವ, ಗುಳಿಗ, ಕುಟ್ಟಿಚಾತ, ದೇವಕನ್ನಿ ಎಂಬ ಪಂಚಮೂರ್ತಿಗಳನ್ನು ತೋಟ್ಟಂಪಾಟಿನಲ್ಲಿ ಸ್ತುತಿಸುವರು. ಕ್ರಿಯಾವಿಧಿಗಳ ಕೊನೆಯಲ್ಲಿ ದೀಪ ನಿವಾಳಿಸಿ, ಬಲಿಕರ್ಮ ಹಾಗೂ ‘ಕಳಂಕುರಿ’ ಎಂಬ ವಿಧಿಯನ್ನು ನೆರವೇರಿಸುತ್ತಾರೆ. ಹೀಗಾಗಿ ಈ ವಿಧಿಗೆ ಬಲಿಕಳ ಎಂಬ ಹೆಸರು ಬಂದಿರಬೇಕು.

. ಪ್ರೇತ ಬಲಿಕಳ : ಸವರ್ಣ ಜಾತಿಯ ಮಹಿಳೆಯರಿಗಾಗಿ ತರವಾಡುಗಳಲ್ಲಿ ಅಥವಾ ‘ಕೋವಿಲಗಂ’ಗಳಲ್ಲಿ ನಡೆಸುವ ಬಲಿಕಳವನ್ನು ಪ್ರೇತ ಬಲಿಕಳ ಎನ್ನುವರು. ಮಹಿಳೆಯರು ಕೆಲವು ದೇವತೆಗಳನ್ನು ಮನಸ್ಸಿನಲ್ಲಿ ಧ್ಯಾನಿಸುತ್ತಾರೆ. ಪ್ರಾಯವಾದಂತೆ ಈ ದೇವತೆಗಳು ಪ್ರೇತವಾಗಿ ಬಾಧಿಸುತ್ತವೆ. ಇವುಗಳ ಉಚ್ಛಾಟನೆಗಾಗಿ ಪ್ರೇತ ಬಲಿಕಳವನ್ನು ನಡೆಸುವರು. ಪಾಣನ್ ಸಮುದಾಯದವರು ಇದರ ವಿಧಿಯಾಚರಣೆಗಳನ್ನು ನೆರವೇರಿಸುವರು.

. ಗರ್ಭಿಣಿಯರಿಗೆ ನಡೆಸುವ ಬಲಿಕಳ : ಮದುವೆ ಕಳೆದು ಗರ್ಭಧರಿಸದ ಅಥವಾ ಗರ್ಭಪಾತವಾಗುವ ಮಹಿಳೆಯರಿಗೆ ದುಷ್ಟ ಶಕ್ತಿಗಳ ಬಾಧೆಯಿದೆ ಎಂಬುದು ನಂಬಿಕೆ. ಬಲಿನೀಡಿ, ಕಳಂಬರೆದು, ಹಾಡು ಹಾಡಿ, ಕೋಲ ಕಟ್ಟಿ ಪ್ರದರ್ಶಿಸಿ ಈ ಬಾಧೆಗಳನ್ನು ದೂರವಿಡಬಹುದೆಂದು ಜನರು ನಂಬಿದ್ದಾರೆ. ಕಳಂಪಾಟು, ಕ್ರೋಂದಾನ್‌ಪಾಟು, ಗಂಧರ್ವತುಳ್ಳಲ್‌, ಕನಲ್‌ಕೂತ್‌ಬಲಿಕಳ, ತೆಯ್ಯಾಟಂ, ಮಲಿಯನ್‌ಕೆಟ್ಟ್, ಕೋಲಂತುಳ್ಳಲ್ ಮೊದಲಾದವು ಗರ್ಭಬಲಿ ಉಚ್ಛಾಟನೆಯ ಕಲೆಗಳಾಗಿವೆ.

ಗರ್ಭಿಣಿ ಮಹಿಳೆಯರಿಗೆ ಏಳು ಅಥವಾ ಒಂಬತ್ತನೇ ತಿಂಗಳು ಅವರ ಮನೆಯಲ್ಲಿ ನಡೆಸುವ ಬಲಿಕಳವನ್ನು ಪುಳಿಕಡಿ ಬಲಿಕಳ ಎಂದು ಕರೆಯುವರು. ದೈವಾನುಗ್ರಹಕ್ಕಾಗಿ, ಆರೋಗ್ಯವಂತ ಮಗುವಿಗಾಗಿ, ಜ್ಞಾನವೃದ್ಧಿಗಾಗಿ ಆಯಾ ದೇವತೆಗಳನ್ನು ಬಲಿಕಳದ ಮೂಲಕ ಆರಾಧಿಸುತ್ತಾರೆ. ಮನೆಯ ಪಡಿಞಾಟ (ಪಶ್ಚಿಮ ದಿಕ್ಕಿನ ಕೋಣೆ)ದಲ್ಲಿ ಬಾಧೆಗೊಳಗಾದ ಮಹಿಳೆಯನ್ನು ಅಲಂಕರಿಸಿ, ಪಂಚವರ್ಣ ಹುಡಿಗಳಿಂದ ಚಿತ್ರವನ್ನು ಬರೆಯುತ್ತಾರೆ. ಗರ್ಭಿಣಿ ಕೈಯಲ್ಲಿ ದೀಪವನ್ನು ಹಿಡಿದುಕೊಂಡು ಕಳಂ ಚಿತ್ರಕ್ಕೆ ಪ್ರದಕ್ಷಿಣೆ ಮಾಡಿ ಕುಳಿತುಕೊಳ್ಳುತ್ತಾಳೆ. ಕರ್ಮಿ ತೋಟ್ಟಂ ಹಾಡುತ್ತಾನೆ. ಈ ಹಾಡುಗಳನ್ನು ಕೇಳಿ ಕುಳಿತ ಗರ್ಭಿಣಿಗೆ ಆವೇಶ ಬರುವುದು. ರಾತ್ರಿ ಎಂಟರಿಂದ ಬೆಳಗ್ಗಿನ ಏಳು ಗಂಟೆಯವರೆಗೆ ಈ ವಿಧಿ ಆಚರಣೆಗಳು ನಡೆಯುತ್ತವೆ. ಗರ್ಭಿಣಿ ಮಹಿಳೆಗೆ ಕಳದಲ್ಲಿ ಕುಳಿತುಕೊಳ್ಳಲು ಮತ್ತು ಮಲಗಲು ಅವಕಾಶವಿರುವುದು. ಬೆಳಗ್ಗೆ ದೃಷ್ಟಿ ನಿವಾಳಿಸಿ, ತೆಂಗಿನಕಾಯಿ ಒಡೆಯುತ್ತಾಳೆ. ತೆಂಗಿನ ಕಾಯಿಯ ಹೋಳುಗಳನ್ನು ನೋಡಿ, ಕರ್ಮಿ ಮಗು ಗಂಡೋ ಹೆಣ್ಣೋ ಎಂದು ಭವಿಷ್ಯ ಹೇಳುತ್ತಾನೆ. ಗರ್ಭಿಣಿ ಮಹಿಳೆ ಈ ಆಚರಣೆಗಾಗಿ ವ್ರತಾಚರಣೆಯಲ್ಲಿರಬೇಕು. ಆರ್ಥಿಕವಾಗಿ ಉನ್ನತ ಸ್ಥಿತಿಯಲ್ಲಿರುವ ಕೆಲವರು ಈ ಆಚರಣೆಯ ಜತೆಗೆ ತೆಯ್ಯಾಟವನ್ನು ನಡೆಸುವರು. ತರವಾಡಿನ ಹಾಗೂ ಕುಟುಂಬದ ಸದಸ್ಯರಿಗೆ ಒಟ್ಟು ಸೇರುವ ಒಂದು ಸಂದರ್ಭವಾಗಿಯೂ ಇಂಥ ಅಚರಣೆಗಳಿಗೆ ಮಹತ್ತ್ವವಿದೆ.

. ಬಾಲ ಬಲಿಕಳ : ಇದು ಕುಟುಂಬದ ಮಕ್ಕಳ ಉನ್ನತಿಗಾಗಿ ನಡೆಸುವ ಆಚರಣೆಯಾಗಿದೆ. ಪಂಚವರ್ಣ ಹುಡಿಗಳಿಂದ ಚಿತ್ರ ಬರೆದು, ತೆಂಗಿನಗರಿಗಳಿಂದ ಕಳಂ ಅಲಂಕರಿಸಿ, ಪಂಚಮೂರ್ತಿಗಳಲ್ಲಿ ಒಂದಾದ ಕುಟ್ಟಿಚಾತನನ್ನು ಆರಾಧಿಸುವುದು ಇದರ ಮುಖ್ಯ ವಿಧಿಯಾಗಿದೆ.

. ತರವಾಡಿನ ಹಿರಿಯರಿಗೆ ನಡೆಸುವ ಬಲಿಕಳ : ಕುಟುಂಬದ ಶ್ರೇಯಸ್ಸಿಗಾಗಿ ತರವಾಡಿನ ಹಿರಿಯ ವ್ಯಕ್ತಿಗಳಿಗೆ ನಡೆಸುವ ಬಲಿಕಳವಾಗಿದೆ ಇದು. ‘ತೋಲುಳಿಗ’ ಎಂಬ ಹೆಸರೂ ಇದಕ್ಕಿದೆ. ಉಳಿದ ಬಲಿಕಳಗಳಂತೆಯೇ ಇದರ ಆಚರಣೆಗಳಿವೆ. ವೃಶ್ಚಿಕ ಮಾಸವನ್ನು ಬಿಟ್ಟು ಉಳಿದ ಉತ್ಸವ ಕಾಲಗಳಲ್ಲಿ ಬಲಿಕಳಗಳನ್ನು ನಡೆಸುತ್ತಾರೆ. ವಣ್ಣಾನ್, ಮಲಯನ್, ಪುಳ್ಳುವನ್, ಕಣಿಯನ್‌ ಮೊದಲಾದ ಸಮುದಾಯದವರು ಬಲಿಕಳವನ್ನು ನಡೆಸುತ್ತಾರೆ. ಆದರೆ ವರ್ತಮಾನ ಕಾಲದಲ್ಲಿ ಇಂತಹ ಆಚರಣೆಗಳು ಮರೆಯಾಗುತ್ತಿವೆ. ಪ್ರವಾಸೋದ್ಯಮದ ಅಂಗವಾಗಿ ಪ್ರದರ್ಶನಕ್ಕಾಗಿ ಈಗ ಇಂತಹ ಆಚರಣೆಗಳನ್ನು ನಡೆಸುತ್ತಾರೆ. ವಿಜೃಂಭಣೆಯಿಂದ ನಡೆಯುತ್ತಿದ್ದ ಬಲಿಕಳವನ್ನು ಕೆಲವು ತರವಾಡು ಮನೆಗಳಲ್ಲಿ ಅತ್ಯಂತ ಸರಳವಾಗಿ ನಡೆಸುತ್ತಿದ್ದಾರೆ. ಒಂದು ಬಲಿಪೀಠವನ್ನು ನಿರ್ಮಿಸಿ, ತೆಂಗಿನ ಕಾಯಿ ಒಡೆದ ನಿಮಿತ್ತವನ್ನು ಹೇಳುವ ಆಚರಣೆಯಾಗಿ ಬಲಿಕಳ ಬದಲಾಗಿದೆ.

.ವಿ.ಆರ್. ಅನುವಾದ ಎನ್.ಎಸ್.

 

ಬಲೀಂದ್ರ ಕೃಷಿ ಸಮುದಾಯದವರು ಆರಾಧಿಸುವ ದೈವ. ನಿರ್ದಿಷ್ಟ ರೂಪವಿಲ್ಲದ, ಬಹುತ್ವವನ್ನು ಸಂಕೇತಿಸುವ, ಶುದ್ಧ ಸಸ್ಯಾಹಾರಿ ದೈವವಾಗಿದೆ. ಆಹಾರೋತ್ಪತ್ತಿಯಲ್ಲಿ ಹಾಗೂ ಸಂರಕ್ಷಣೆಯಲ್ಲಿ ಬಳಕೆಯಾಗುವ ಉಪಕರಣಗಳ ಗುಚ್ಛವೇ ಬಲೀಂದ್ರ. ಶಿವಮೊಗ್ಗ ಜಿಲ್ಲೆಯ ಮಲೆನಾಡು, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುತ್ತದೆ. ಬಲೀಂದ್ರನನ್ನು ಕೃಷಿ ರಾಜ್ಯದ ಚಕ್ರವರ್ತಿ ಎಂದೇ ಭಾವಿಸಲಾಗುತ್ತದೆ. ವರ್ಷಕ್ಕೆ ಒಂದು ಸಾರಿ ಬರುವ ದೀಪಾವಳಿ ಹಬ್ಬದಂದು ತನ್ನ ರಾಜ್ಯ ನೋಡಿ ಹೋಗುತ್ತಾನೆ. ಕೃಷಿಕರ ಬೆಳೆ ರಕ್ಷಕ ದೈವವಾದ ಬಲೀಂದ್ರ ಕತ್ತಲು ರಾತ್ರಿಯಲ್ಲಿ ಬರುತ್ತಾನೆ. ಬಲೀಂದ್ರನನ್ನು ಸ್ವಾಗತಿಸುವುದಕ್ಕಾಗಿ ಸಾಲು ದೀಪಗಳು, ಫಲ, ಪುಷ್ಪಗಳು, ವಿವಿಧ ಬಗೆಯ ಸಸ್ಯಗಳ ತಳಿರು ತೋರಣಗಳು ಸಿದ್ಧಮಾಡಿ ಕೃಷಿ ಕಾಯಕ ಚಟುವಟಿಕೆಗಳ ಬಗೆಗೆ ಕಾಳಜಿ ವಹಿಸುವಂತೆ ಎಚ್ಚರಿಸುವುದು ಕಂಡುಬರುತ್ತದೆ.

ವ್ಯವಸಾಯಕ್ಕೆ ಬಳಸುವ ವಸ್ತುಗಳು, ಗೃಹಪಯೋಗಿ ವಸ್ತುಗಳಾದ ಬೀಸುವ ಕಲ್ಲು, ಕಡಗೋಲು, ಕತ್ತಿಗಳು, ಕಡಿಯುವ ಕಲ್ಲು, ಮೊರ, ಗೆರಸಿ, ಸಾರಣಿಗೆ, ಕೊಳಗ, ತಕ್ಕಡಿ, ಇತ್ಯಾದಿಗಳನ್ನು ಅಲ್ಲದೇ ಕೋವಿ, ಬ್ಯಾಟ್‌ಗತ್ತಿ ಇತ್ಯಾದಿಗಳನ್ನು ತೊಳೆದು, ಒರೆಸಿ, ಮನೆಯ ಜಗುಲಿಯಲ್ಲಿ ಒಂದೆಡೆ ಓರಣವಾಗಿ ಕೂಡಿಡುತ್ತಾರೆ. ಅವುಗಳಿಗೆ ಜೇಡಿಮಣ್ಣು ಕೆಮ್ಮಣ್ಣುಗಳಿಂದ ಪಟ್ಟಿ ಬರೆಯುತ್ತಾರೆ. ಬಲೀಂದ್ರನ ಮೇಲು ಚಪ್ಪರವನ್ನು ಅಂಬಾಡಿ ಎಲೆ, ಮಾವು, ಹಲವು, ಏಲಕ್ಕಿ ಕರೆ, ಪಚ್ಚೆತೆನೆ, ಅಡಕೆ ಹಿಂಗಾರ, ನೆಲ್ಲಿ ಸೊಪ್ಪು, ಬಾಳೆಗೊನೆ, ಸೌತೆಕಾಯಿ, ತೆಂಗಿನಕಾಯಿ, ಅಡಕೆ ಕಾಯಿ, ಕಕ್ಕೇಕಾಯಿ, ಲಿಂಬೆಕಾಯಿ, ಕಿತ್ತಳೆಸೊಪ್ಪು, ಹಲಸಿನಸೊಪ್ಪು, ಹಲಸಿನಕಾಯಿ, ಲಿಂಬೆಸೊಪ್ಪು, ಉತ್ತರಾಣಿ ಕಡ್ಡಿ ಇತ್ಯಾದಿಗಳನ್ನು ಕಟ್ಟುತ್ತಾರೆ. ವಿವಿಧ ರೀತಿಯ ಹೂಗಳಿಂದ ಶೃಂಗರಿಸುತ್ತಾರೆ. ಉಪಕರಣಗಳ ಎದುರು ಬಾಳೆಯ ಎಲೆಯ ಮೇಲೆ ಸಗಣಿಯ ಸಣ್ಣ ವೇದಿಕೆ ನಿರ್ಮಿಸಿ, ಕಲಶ ಪ್ರತಿಷ್ಠಾಪಿಸುತ್ತಾರೆ. ಕಲಶದ ಒಂದು ಮಗ್ಗುಲಲ್ಲಿ ಸಗಣಿಯಿಂದ ಮಾಡಿದ (ಗಣಪ) ಬೆನಕನನ್ನು ಇನ್ನೊಂದು ಭಾಗದಲ್ಲಿ ಉರಿಯುತ್ತಿರುವ ಹಣತೆಯನ್ನು ಇಡುತ್ತಾರೆ. ಸಸ್ಯ, ಜಲ, ಮಣ್ಣು ಹಾಗೂ ದೀಪಗಳು ಬಲೀಂದ್ರನನ್ನು ಸಂಕೇತಿಸಿವೆ. ಹೊಲ, ತೋಟಗಳೇ ಬಲೀಂದ್ರನ ರಾಜ್ಯವೆಂದು ಭಾವಿಸಲಾಗುತ್ತದೆ.

ಬಲಿಯನ್ನು ಪೂಜಿಸುವ ದಿನ ಅವನ ಕೋಟೆಯ ಪ್ರತಿಕೃತಿಯನ್ನು ಪೂಜಿಸುವುದು ರೂಢಿಯಲ್ಲಿದೆ. ಬಲಿಯ ಸಲುವಾಗಿ ಸಗಣಿಯಿಂದ ಕೆರಕಲುಗಳನ್ನು ಮಾಡುವರು. ಕುಡಿಬಾಳೆಯ ಎಲೆಯ ಮೇಲೆ ಬೇರೆ ಬೇರೆ ಆಕಾರಗಳಲ್ಲಿ ಸಗಣಿಯಟ್ಟು ಹುಚ್ಚೆಳ್ಳು, ಚೆಂಡುಹೂ, ಉಗನೆಕಾಯಿ, ಹಣ್ಣಡಿಕೆ ಕಾಯಿ, ಪಚ್ಚೆತೆನೆ, ಉತ್ರಾಣಿ ಕಡ್ಡಿ, ಕಿತ್ತಳೆಸೊಪ್ಪು, ದರ್ಬೆ, ಹಿಂಗಾರ, ಮಾವಿನ ಎಲೆ, ಹಲಸಿನ ಎಲೆಗಳಿಂದ ಕೆರಕಲುಗಳನ್ನು ಅಲಂಕರಿಸುತ್ತಾರೆ. ಇವು ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಮನೆ, ಕೊಟ್ಟಿಗೆ, ಸ್ನಾನದ ಮನೆಗಳು ಬಾಗಿಲುಗಳಲ್ಲಿ ನಿರ್ಮಿಸುವ ಕೆರಕಲುಗಳು ಗಾತ್ರದಲ್ಲಿ ಚಿಕ್ಕವಾಗಿರುತ್ತವೆ. ಬಲೀಂದ್ರ, ಪಣತ, ಕಣ, ತುಳಸಿಕಟ್ಟೆ ಇತ್ಯಾದಿಗಳಲ್ಲಿ ದೊಡ್ಡ ಕೆರಕಲುಗಳನ್ನು ನಿರ್ಮಿಸುತ್ತಾರೆ.

ಬಲೀಂದ್ರ, ಗೋಪೂಜೆ, ಕಣಪೂಜೆ ನಡೆಸುವ ಸಂದರ್ಭದಲ್ಲಿ ಕೆರಕಲುಗಳಿಗೂ ಪೂಜಿಸಿ, ಎಡೆ ಇಟ್ಟು ಭಕ್ತಿ ಸಲ್ಲಿಸುತ್ತಾರೆ. ಅಂದಿನಿಂದ ಮೂರು ದಿನಗಳವರೆಗೆ ವಿನೋದಾತ್ಮಕ ಪೂಜೆ, ಗಣಿತಾತ್ಮಕವೂ ಆದ ಮಾತಿನ ಆಟ ಕೆರಕ ಕೊಡುವದು ನಡೆಯುತ್ತದೆ. ಅತ್ತೆ – ಅಳಿಯ, ಅತ್ತಿಗೆ-ಮೈದುನ, ಸೊಸೆ-ಮಾವ, ಇವರ ನಡುವೆ ಏರ್ಪಡುವಂಥ ಸರಸ ವಿನೋದದ ಸಂದರ್ಭವಿದು. ಮಾತನಾಡುವಾಗ ಆ-ಓ ಎಂದು ಬಳಸಬಾರದೆಂಬ ನಿಯಮವಿದೆ. ಮಾತನಾಡುವಾಗ ಆ-ಓ ಬಳಸಿದರೆ ‘ಕೆರ‍್ಕ’ ಎಂದು ಹೇಳುತ್ತಾರೆ. ಕೆರ‍್ಕವನ್ನು ಹೊತ್ತುಕೊಂಡವನು ಮಾತಿನ ಮೂಲಕವೇ ತೀರಿಸಬೇಕೆಂದು ನಿಯಮ ಸೋತರೆ, ಗೆದ್ದವನು ಸೋತವನನ್ನು ಕೆರೆಯುತ್ತಾನೆ. ಪಾಡ್ಯದ ಹಬ್ಬವನ್ನು ಶ್ರೀಕೃಷ್ಣನು ನರಕಾಸುರನನ್ನು ಕೊಂದ ಸ್ಮರಣೆಗಾಗಿ ಆಚರಿಸಲಾಗುತ್ತದೆ ಎಂದು ನಂಬಲಾಗಿದೆ. ಅಪಮೃತ್ಯುವಿನ ನಿವಾರಣಾರ್ಥವಾಗಿ ಅಂಗಳದ ತುಳಸಿದೇವರಿಗೆ ದೀಪ ಬೆಳಗುತ್ತಾರೆ. ಹೆಂಗಸರು ‘ಗೌರಿ’ ಪೂಜೆ ನಿರ್ವಹಿಸಿ ಹೊಸ ಮಣ್ಣಿನ ಕೊಡದಲ್ಲಿ ನೀರು ತಂದು ಅಂದಿನ ಅಡುಗೆಗಾಗಿ ಸಿದ್ಧತೆ ನಡೆಸುತ್ತಾರೆ. ಗೋಪೂಜೆಗಾಗಿ ಸಪ್ಪೆರೊಟ್ಟಿಗಳನ್ನು ತಯಾರಿಸಿ ರೊಟ್ಟಿ ಮಾಲೆಗಳನ್ನು ರಚಿಸುತ್ತಾರೆ. ಈ ಮಾಲೆಗಳಿಗೆ ಮಾವು, ಹಲಸು, ಪಚ್ಚೆತೆನೆ, ಹಿಂಗಾರ, ಹಣ್ಣಡಕೆಕಾಯಿ, ದರ್ಬೆ, ಉತ್ರಾಣಿಕಡ್ಡಿ, ಎಲೆ, ಚೆಂಡು ಹೂ, ಬಾಳೆಹಣ್ಣು ಇತ್ಯಾದಿಗಳನ್ನು ಸೇರಿಸುತ್ತಾರೆ. ಗಂಡಸರು ತುಳಸಿ ಅಂಗಳ, ಕೊಟ್ಟಿಗೆಗೆ ಹೋಗುವ ದಾರಿಗಳನ್ನು ಸಗಣಿಯಿಂದ ಸಾರಿಸಿ ಜೇಡಿ ಕೆಮ್ಮಣ್ಣು ಪಟ್ಟಿ ಹಾಕುತ್ತಾರೆ. ದನಕರುಗಳಿಗೆಲ್ಲ ಜೇಡಿ ಕೆಮ್ಮಣ್ಣು ಮುದ್ರೆ ಹಾಕಿ, ಉಗನೆಸರ, ಗಂಟೆ, ಗಿಲಕಿ ಸರಗಳನ್ನು ಕೊರಳಿಗೆ ಹಾಕಿ ಅಲಂಕರಿಸುತ್ತಾರೆ. ಮನೆಯ ಹಿರಿಯ ಹೆಂಗಸು ದನಕರುಗಳಿಗೆ ಕುಂಕುಮದ ಬೊಟ್ಟು ಇಟ್ಟು, ಕುಡಿಯಲು ಸಿಹಿ ಪಾಯಸ, ಕೊಟ್ಟು ನೆನೆಯಕ್ಕಿ ತಿನ್ನಿಸತ್ತಾರೆ. ದನಕರುಗಳನ್ನು ಹೊಸ ಕಣ್ಣಿಗಳಿಂದ ಕಟ್ಟಿ, ಚೆಂಡು ಹೂವ ಮಾಲೆಹಾಕಿ, ಸಪ್ಪೆ ರೊಟ್ಟಿ ಮಾಲೆ ಕಟ್ಟಿ, ಪೂಜಿಸಿ, ಮಂಗಳಾರತಿ ಮಾಡುತ್ತಾರೆ. ಕೊಟ್ಟಿಗೆಯ ಬಾಗಿಲಲ್ಲಿ ಒನಕೆ ಅಡ್ಡಲಾಗಿಟ್ಟು ದನಕರುಗಳನ್ನು ಬಿಟ್ಟು, ಜಾಗಟೆ, ಸಿಡಿಮದ್ದನ್ನು ಸಿಡಿಸಿ ಓಡಿಸುತ್ತಾರೆ. ಅಂದು ಸಂಜೆ ದನಕರುಗಳನ್ನು ಒನಕೆ ಮೇಲೆ ದಾಟಿಸಿ, ಸ್ವಾಗತಿಸುತ್ತಾರೆ. ಅಂದು ದನಕರುಗಳಿಗೆ ಕಡಬು, ಬೆಲ್ಲ, ಹಾಲು, ಚೂಪುಗಳನ್ನು ಸೇರಿಸಿ ನೈವೇದ್ಯ ಅರ್ಪಿಸಿ, ಅದನ್ನು ಅವುಗಳಿಗೆ ತಿನ್ನಲು ಕೊಡುತ್ತಾರೆ.

ಗೋಪೂಜೆ ನಡೆದ ದಿನ ಮಧ್ಯಾಹ್ನದ ಹೊತ್ತಿಗೆ ತುಳಸಿ, ಬಲೀಂದ್ರ, ಕಣ್ಣ ಕೊಟ್ಟಿಗೆ, ಗೊಲ್ಲರ ಗುಂಡಿ, ಕಡಗೋಲುಗಳು ಬಾವಿ ಇತ್ಯಾದಿಗಳಿಗೆ ಎಡೆ ಸಲ್ಲಿಸಿ, ಪೂಜಿಸುತ್ತಾರೆ. ಆಗಲೇ ಸಿದ್ಧಪಡಿಸಿಕೊಂಡ ದೊಂದಿ ಹಾಗೂ ಕೋಲುದೀಪಗಳನ್ನು ಹಿಡಿದು ಗದ್ದೆಗಳಿಗೆ ಹೊರಡುತ್ತಾರೆ. ಪ್ರತಿಯೊಬ್ಬರು ತಮ್ಮ ತಮ್ಮ ಗದ್ದೆಗಳ ಮೂಲೆಯಲ್ಲಿ ಕೋಲು ನೆಟ್ಟು ದೀಪ ಬೆಳಗಿ ‘ದೀಪೋಳ್ಗೆ ದೇವರ ದೀವೋಳ್ಗೆ’ ಎಂದು ರಾಗವಾಗಿ ಹಾಡುತ್ತಾರೆ. ಇದು ಬಲೀಶ್ವರನ ಸ್ವಾಗತಕ್ಕಾಗಿ ಬೆಳಗುವ ದೀಪವೆಂದು ಭಾವಿಸಲಾಗುತ್ತದೆ. ಕರಾವಳಿಯಲ್ಲಿ ‘ಕಡಲ್‌ಗ್‌ ಪಾಂಪಾನಗ ಬೊನೊಗ್ ಲೆಂಟಿ ಅನಗ, ಗುರ‍್ಗುಂಜಿದ ಕಪ್ಪು, ಮೋಜಿನಗ, ಮಜಲಕ್ಕೆ ಮೈ ಪಾಡ್ನಗ, ಕೊಟ್ರುಂಜ ಕೊಡಿ ಏಕ್ನಗ, ಉಪ್ಪು ಗೋಪುರಾನಗ, ಬೊರ್ಗಲ್ಲ್ ಪೂತಾನಗ, ಆಟಿಡ್ ಬತ್ತಿ, ಅಮಾಸಿ, ಸೋಣೊಡ್ ಬತ್ತಿ ಸಂಕ್ರಾಂದಿ, ಬೊಂತೆಲ್‌ಡ್‌ ಬತ್ತಿ ಕೊಡಿ ಪರ್ಬ ಈ ಮಾಜಿ ದಿನತ ಬಲಿ ಕೊನೊದ್ ಬಲ್ತ್‌ಡ್ಲ ಬಲೀಂದ್ರ’ (ಸಮುದ್ರಕ್ಕೆ ಸೇತುವೆಯಾದಾಗ, ಆಕಾಶಕ್ಕೆ ಏಣಿಯಾದಾಗ, ಗುಲಗುಂಜಿ ಕಪ್ಪು ಚುಕ್ಕಿ ಮಾಸಿ ಹೋದಾಗ, ಮಜಲು ಹಕ್ಕಿ ಕಾಡಿಗೆ ಹಾಕುವಾಗ, ಕೊಟ್ಟುಂಜ ಕೊಡಿ ಏರುವಾಗ, ಉಪ್ಪಿನ ಗೋಪುರವಾದಾಗ, ಬೊರ್ಗಲ್ಲು ಹೂವಾದಾಗ ಆಟಿ ತಿಂಗಳಲ್ಲಿ ಬರುವ ಅಮಾವಾಸ್ಯೆ, ಸೋಣ ತಿಂಗಳಲ್ಲಿ ಬರುವ ಸಂಕ್ರಮಣ, ಬೊಂತೆಲ್ ತಿಂಗಳಲ್ಲಿ ಬರುವ ಕೂಡಿ ಹಬ್ಬ, ಈ ಮೂರರ ಬಲಿ ಕೊಂಡು ಓಡಿ ಹೋಗುವ ಬಲೀಂದ್ರ) ಎಂದು ಹೇಳಿ ಕೊನೆಯಲ್ಲಿ ಕೂ ಎಂದು ರಾಗವಾಗಿ ಕೂಗುತ್ತಾರೆ.

ಗದ್ದೆಗಳಿಗೆ ದೀಪ ಬೆಳಗಿದ ಅನಂತರ ಕಣದಲ್ಲಿನ ಬಣವೆ, ಅಂಗಳದ ಮಧ್ಯದಲ್ಲಿ ಸಿದ್ಧಪಡಿಸಿದ ‘ಪಡಿಮಂಚ’ ಅದರ ಮೇಲೆ ಇರಿಸಿದ ವೀಳ್ಯೆ, ಅಡಕೆ, ತೆಂಗಿನಕಾಯಿ ಹೋಳಿ, ಜಗಾಮ ಸೊಪ್ಪು, ಕೋಲ ನಿನೆ ಬೆಳಗಿ ಬಲೀಂದ್ರನ ಸ್ಮರಣೆ ಮಾಡುತ್ತಾರೆ. ಅಲ್ಲದೆ ರಾಶಿಯಲ್ಲೂ ಕೋಲುನಿನೆ ಇರಿಸಿ, ದೀಪ ಬೆಳಗುತ್ತಾರೆ. ತುಳಸಿಗೆ ‘ಪೊಮ್ಮಾಬಜಿಲ್’ ಹಾಕುತ್ತಾರೆ. ನೈವೇದ್ಯವಾಗಿ ತೆಂಗಿನ ಹೋಳು, ಪಾನಕ, ಅವಲಕ್ಕಿ, ಅಡಕೆ, ವೀಳ್ಯ ಇತ್ಯಾದಿಗಳನ್ನು ಅರ್ಪಿಸುತ್ತಾರೆ. ಅಂದು ಮುಡಿಪು ಕಾಣಿಕೆ ಕಟ್ಟುತ್ತಾರೆ. ಮಲೆನಾಡು ಭಾಗದಲ್ಲಿ ಅಂದು ಸಂಜೆ ‘ಕೊಲೆಗಿಡುವ’ ಪದ್ಧತಿ ನಡೆಯುತ್ತದೆ. ಜಕ್ಕಣಿಗಳಿಗೆ ಅಂದರೆ ಮನೆಯ ಪಿತೃಗಳಿಗೆ ಎಡೆ ಸಲ್ಲಿಸಲಾಗಿದೆ ಎಂದರ್ಥ. ಹೋಳಿಗೆ ಇತ್ಯಾದಿ ಸಿಹಿ ಭಕ್ಷ್ಯಗಳ ಜೊತೆಯಲ್ಲಿ ಐದು ಬಗೆಯ ಪಲ್ಯಗಳನ್ನು ಬಡಿಸಿ, ಪಿತೃಗಳಿಗೆ ಧೂಪ ಹಾಕಿ ದೀಪ ಬೆಳಗುತ್ತಾರೆ. ಎರಡು ಎಡೆಗಳನ್ನೂ ಗುಳ್ಳಿಗೆ ಹೊರಗಿಟ್ಟು ಮಿಕ್ಕದ್ದನ್ನು ಒಂದೇ ಪಂಕ್ತಿಯಲ್ಲಿ ಕುಳಿತು ಊಟ ಮಾಡುತ್ತಾರೆ. ಅಂದು ಕೊಟ್ಟಿಗೆ, ಮನೆ ಬಾಗಿಲುಗಳ ಇಕ್ಕೆಲಗಳಲ್ಲೂ ಉರಿಯುವ ಹಣತೆಗಳನ್ನು ಇಡುವುದು ಸಂಪ್ರದಾಯ. ಬಲೀಂದ್ರ ಹಾಗೂ ತುಳಸಿಗೆ ಗೂಡುದೀಪ ಬೆಳಗಿ ಮನೆಯ ಎಲ್ಲ ಸದಸ್ಯರು ಸೇರಿ ರಾಗವಾಗಿ ‘ದೀಪ್ ದೀಪ್ ದೀಪೋಳ್ಗೆ’ ಎಂದು ಒಕ್ಕೊರಲಿನಿಂದ ಕೂಗುತ್ತಾರೆ. ಅಂದಿನಿಂದ ಮೂರು ದಿನಗಳವರೆಗೆ ರಾತ್ರಿ ಮನೆಯಿಂದ ಮನೆಗೆ ದೀಪ ನೀಡುವ ಸಂಪ್ರದಾಯ ಆರಂಭವಾಗುತ್ತದೆ. ಊರಿನ ತರುಣರೆಲ್ಲ ಸೇರಿ ‘ಅಂಟಿಕೆ-ಪಂಟಿಗೆ’ ಎಂದು ಗೀತ ಮೇಳ ಕಟ್ಟಿಕೊಳ್ಳುತ್ತಾರೆ. ಎಲ್ಲ ಸಿದ್ಧತೆಗಳೊಂದಿಗೆ ದೇವರ ಗುಡಿಗೆ ಬಂದು ಅಲ್ಲಿನ ದೀಪದಿಂದ ಹಣತೆಯನ್ನು ಹಚ್ಚಿಕೊಂಡು ಹಾಡು ಹಾಡುತ್ತಾರೆ. ‘ಮಣ್ಣಾಲಿ ಹಟ್ಟೀದೆ ಮಣ್ಣಾಲಿ ಬೆಳೆದೆ, ಎಣ್ಣೇಲಿ ಕಣ್ಣಾ ಬಿಟ್ಟೀದೆ – ಜಗಜ್ಯೋತಿ, ಸತ್ಯಾದಿಂದುರಿಯೇ ಜಗಜ್ಯೋತಿ.’ ಅನಂತರ ಮನೆ ಮನೆಗೂ ದೀಪ ನೀಡಿ, ಬತ್ತ, ಅಡಕೆ, ಅಕ್ಕಿ, ಎಲೆ, ದುಡ್ಡು ಇತ್ಯಾದಿಗಳನ್ನು ಪಡೆಯುತ್ತಾರೆ. ಸಂಗ್ರಹವಾದ ದವಸ ಮತ್ತು ಹಣದಲ್ಲಿ ‘ಅಂಟಿಕೆ-ಪಂಟಿಗೆ ಔಂತ್ಲ’ (ಔತಣಕೂಟ) ಏರ್ಪಡಿಸಿ, ತಮ್ಮ ಸುತ್ತಿನ ಎಲ್ಲ ಜನರನ್ನೂ ಆಹ್ವಾನಿಸಿ ವನಭೋಜನ ನಡೆಸುತ್ತಾರೆ.

ಬಲೀಂದ್ರ ಪೂಜೆಯ ಎರಡನೆ ದಿನವನ್ನು ಕರಿದಿನವನ್ನಾಗಿ ಆಚರಿಸುತ್ತಾರೆ. ಅಂದು ಬಲೀಂದ್ರ ಸತ್ತ ದಿನ. ಅವನ ಶವಸಂಸ್ಕಾರ ಕ್ರಿಯೆಯನ್ನು ಸಾಂಕೇತಿಕವಾಗಿ ನಡೆಸುವುದೇ ಕರಿ. ಬಲಿ ಪಾಡ್ಯಮಿಯ ದಿನ ಹೂಡಿದ್ದ ಕೆರಕಲುಗಳನ್ನು ದೂರ ಎಸೆದು ಸೆಗಣಿ ಸಾರಣೆ ಮಾಡುತ್ತಾರೆ. ಅಂದು ಬಲೀಂದ್ರನಿಗೆ ಎಡೆ ಇಡುವುದಿಲ್ಲ. ಹಾಲು ಹಣ್ಣಿನ ಸೇವೆ ಮಾತ್ರ ಇರುತ್ತದೆ.

ಕರಿಯ ಮಾರನೇ ದಿನ ‘ವರ್ಷತೊಡಕು’ ಆಚರಣೆ ನಡೆಯುತ್ತದೆ. ಕರಿ ದಿವಸ ಮೃತನಾದ ಬಲೀಂದ್ರನಿಗೆ ವರ್ಷ ತೊಡಕಿನ ದಿನ ತಿಥಿ ನಡೆಸುತ್ತಾರೆ. ಅಂದು ಹೊಸ ಕೆರಕಲುಗಳನ್ನು ತಯಾರಿಸುತ್ತಾರೆ. ಬಲೀಂದ್ರನ ‘ಬಜ್ಜದ ಕಡಬು’ ಅಂದು ರಾತ್ರಿ ನಡೆಯುತ್ತದೆ. ಕಾಯಿ ಕಡುಬಿನ ನೈವೇದ್ಯ ಅರ್ಪಿಸಿ, ಎಲ್ ಕೆರಕಲುಗಳಿಗೂ ಒಂದೊಂದರಂತೆ ಎಡೆ ತೋರಿಸಿ ಪೂಜಿಸುತ್ತಾರೆ. ಕೊನೆಯಲ್ಲಿ ತುಳಸಿ ದೇವರಿಗೆ ಪೂಜೆ ಸಲ್ಲಿಸಿ ಜಿಕ್ಕಣಿಗಳಿಗೆ ಎಡೆ ಇಟಟು, ಪೂಜಿಸುತ್ತಾರೆ. ಊಟಕ್ಕೆ ಮೊದಲು ಬಲೀಂದ್ರನಿಗೆ ಹಾಗೂ ತುಳಸಿ ದೇವರಿಗೆ ಸಾಲು ಹಣತೆ ಬೆಳಗಿ, ಎಲ್ಲರೂ ಒಟ್ಟಾಗಿ ದೀಪ್, ದೀಪ್ ದೀವೋಳ್ಗೆ ಎಂದು ಕೂಗುತ್ತಾರೆ. ಅಲ್ಲಿಗೆ ಹಬ್ಬದ ವಿಧಿಗಳು ಮುಗಿದಂತೆ. ಹಬ್ಬದ ಮರುದಿನ ಕೆರಕಲು ಹಾಗೂ ಬಲೀಂದ್ರನನ್ನು ವಿಸರ್ಜಿಸಲಾಗುತ್ತದೆ.

ಬಲೀಂದ್ರ ಪೂಜೆಯನ್ನು ತುಳುವರು ಇದ್ದವರ ಹಬ್ಬ ಎಂದು ಕರೆಯುತ್ತಾರೆ. ಬೆಳೆ – ಬೇಸಾಯದ ಆರಾಧನೆಯೇ ಬಲೀಂದ್ರ ಪೂಜೆ. ಭೂಮಿ ತಾಯಿಯ ಪುತ್ರನೇ ಬಲೀಂದ್ರ. ಪ್ರತಿ ಮನೆಯ ಅಂಗಳದಲ್ಲಿ ಮರವನ್ನು ನೆಟ್ಟು ಅದರ ತುದಿಯಲ್ಲಿ ದೀಪ ಬೆಳಗುವುದೇ ಬಲೀಂದ್ರ. ಅಂದು ಎಲ್ಲರೂ ಬಲೀಂದ್ರನ ಬಗೆಗಿನ ಪಾಡ್ದನ ಹಾಡುತ್ತಾರೆ. ಮಲಯಾಳಿ ಭೋವಿ ಜನವರ್ಗದವರು ಭಗವತಿ ಆರಾಧನೆಯಲ್ಲಿ ಬಲೀಂದ್ರನನ್ನೂ ಪೂಜಿಸುತ್ತಾರೆ. ಹೂ ಹಾರಗಳಿಂದ ಸಿಂಗರಿಸಿದ ಧ್ವಜ ಸ್ತಂಭವೇ ಬಲೀಂದ್ರ. ನೈವೇದ್ಯಕ್ಕಾಗಿ ಹೊಸ ಅವಲಕ್ಕಿ ತಿನಿಸನ್ನು ಅರ್ಪಿಸುತ್ತಾರೆ. ನೈವೇದ್ಯ ಅರ್ಪಿಸಿ, ಧ್ವಜಸ್ತಂಭಕ್ಕೆ ಪ್ರದಕ್ಷಿಣೆ ಬರುತ್ತಾರೆ. ಬಲೀಂದ್ರನ ಪಾಡ್ದನ ಹಾಡಿ, ಮಧ್ಯೆ ಮಧ್ಯೆ ಕೂ ಎಂದು ಕೂಗಿ ಧ್ವಜ ಸ್ತಂಭಕ್ಕೆ ಅಕ್ಷತೆ ಹಾಕುತ್ತಾರೆ. “ಬಲಿಯಾಗಿ ಏಳು ಸಮುದ್ರಗಳಾಚೆಗೆ ದೋಣಿಯಲ್ಲಿ ನೂಕಲ್ಪಟ್ಟುವನೆಂದೂ, ತನ್ನ ರಾಜ್ಯಕ್ಕೆ ವರ್ಷಕ್ಕೆ ಒಂದು ಸಾರಿ ದೀಪವಾಳಿಯಂದು ಬಂದು ಹೋಗುತ್ತಾನೆಂದು, ಆತನಿಗಾಗಿ ಹೊಸ ನೈವೇದ್ಯ ಸಲ್ಲಿಸಲಾಗುತ್ತಿದೆಯೆಂದು ಪಾಡ್ದನವು ದಾಖಲಿಸಿದೆ.” ಹಾಗೆ ಬಂದವನು ಗದ್ದೆಗಳನ್ನು, ತೋಟಗಳನ್ನು ನೋಡುತ್ತಾನೆ. ಈ ಹಿನ್ನೆಲೆಯಲ್ಲಿ ಗದ್ದೆಯ ಮಧ್ಯೆ ‘ಬಲೀಂದ್ರ ಕಂಬ’ ನಿಲ್ಲಿಸಿ, ಅದರ ಪಕ್ಕೆಗಳಿಗೆ ಅಡ್ಡಪಟ್ಟಿಗಳನ್ನು ಕಟ್ಟಿ, ಅವುಗಳಿಗೆ ದೀಪ ಹಚ್ಚಿ, ಪಾಡ್ದನಗಳನ್ನು ಹಾಡಿ ‘ಕೂ’ ಎನ್ನುವುದು ರೂಢಿಗೆ ಬಂದಿದೆ.

ದೀಪಾವಳಿಯಂದು ಬಲೀಂದ್ರನನ್ನು ಕರಾವಳಿಯ ಬುಡಕಟ್ಟುಗಳವರು ವಿಶೇಷವಾಗಿ ಪೂಜಿಸುತ್ತಾರೆ. ಹಾಲಕ್ಕಿಗಳು ಬಲೀಂದ್ರನನ್ನು ತಮ್ಮ ವಂಶದ ಹಿರಿಯನೆಂದು ಗೌರವಿಸುತ್ತಾರೆ. ಕರೆ ವಕ್ಕಲರ ಬಲೀಂದ್ರನು ಕಣ್ಣು, ಮೂಗು ಬರೆದ ಸೌತೆಕಾಯಿ ಹಾಗೂ ಮಾಗಿ ಕಾಯಿಗಳಾಗಿವೆ. ಅಂದು ಅವರ ಹೆಣ್ಣು ಮಕ್ಕಳು ಹೇಳುವ ಹಾಡುಗಳು ಬಲೀಂದ್ರನ ಆಡಳಿತ, ಸಮೃದ್ಧಿ ಇತ್ಯಾದಿಗಳನ್ನು ವರ್ಣಿಸುತ್ತವೆ. ಗಾಮೊಕ್ಕಲುಗಳು ಬಲೀಂದ್ರನನ್ನು ಬಲೀಂದ್ರಜ್ಜ ಹಾಗೂ ಅಜ್ಜಿ ಎಂದು ಕರೆಯುತ್ತಾರೆ. ಬಲೀಂದ್ರನನ್ನು ಪಶ್ಚಿಮಕ್ಕೆ ಮುಖ ಮಾಡಿ ಪ್ರತಿಷ್ಠಾಪಿಸುವುದು ರೂಢಿ. ಅಡಕೆ, ವೀಳ್ಯದೆಲೆ, ಸಿಂಗಾರ, ಮಾವಿನ ಸೊಪ್ಪು, ವಿವಿಧ ಬಗೆಯ ಹೂವುಗಳ ದುಂಬಾಲಿ ಕಟ್ಟುತ್ತಾರೆ.ಮರಾಟ ನಾಯಕರು, ಗೊಂಡರು, ಹರಿಕಾಂತರು, ಮುಕ್ರಿಯರು, ಹಸಲರು ಇತ್ಯಾದಿ ಬುಡಕಟ್ಟುಗಳಲ್ಲಿ ಬಲೀಂದ್ರ ಆರಾಧನೆಯನ್ನು ಕಾಣಬಹುದಾಗಿದೆ.

ಎಸ್.ಸಿ.ಆರ್.