ಬುಡುಬುಡಿಕೆಯವರು‘ಬುಡುಬುಡಿಕೆಯವರು’ ಎನ್ನುವ ಜಾನಪದ ವೃತ್ತಿಗಾಯಕ ಅಥವಾ ಕಲಾವೃತ್ತಿಯವರನ್ನು ಬಹುತೇಕ ಕರ್ನಾಟಕಾದ್ಯಂತ ಕಾಣುತ್ತೇವೆ. ಇವರಿಗೆ ಬೆಳವಲ ಸೀಮೆಯಲ್ಲಿ ‘ಗೂಳಿಗಾರ’ ಎಂದೂ ಮಹಾರಾಷ್ಟ್ರದ ಸಮೀಪ ಸುಡುಬುಡಿಕೆ ಎಂದೂ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಹಕ್ಕಿನರಸಣ್ಣ ಎಂದೂ ಹೆಸರಿದೆ. ಇವರು ಗೊಂದಲಿಗರ ಪಂಗಡದಿಂದ ಬೇರ್ಪಟ್ಟು ಬುಡುಬುಡಿಕೆಯ ವೃತ್ತಿ ಮಾಡುತ್ತಾರೆ.

ಇವರನ್ನು ಕುರಿತು ಸ್ವಾರಸ್ಯಕರ ಕಥೆಯೊಂದಿದೆ. ಪುರಾತನ ಕಾಲದಲ್ಲಿ ತಾರಕಾಸುರ, ಮಕರಾಸುರ, ಯುದ್ದಮಾರಿ ಎಂಬ ರಾಕ್ಷಸರಿದ್ದರು. ಇವರು ತಮ್ಮ ಪತ್ನಿಯರ ಪತಿವ್ರತಾ ಬಲದಿಂದ ದೇವತೆಗಳನ್ನು ಜಯಿಸಿ ಅವರನ್ನು ಅಡಿಯಾಳಾಗಿ ಮಾಡಿಕೊಂಡಿದ್ದರು. ನಾರದರಿಂದ ದೇವತೆಗಳ ಕಷ್ಟ ತಿಳಿದ ತ್ರಿಮೂರ್ತಿಗಳು ಶ್ರೀಕೃಷ್ಣನ ಸಹಾಯದಿಂದ ಅವರ ಪತ್ನಿಯರ ಪಾತಿವ್ರತ್ಯವನ್ನು ಭಂಗಮಾಡಲು ಯೋಜನೆ ರೂಪಿಸಿದರು. ಕೃಷ್ಣ ಮಾರಮ್ಮನ ಕಾಶಿ ಭಂಡಾರ ವನ್ನಾಧರಿಸಿ ಕೆಂಪುಪೇಟ, ತಲೆಯಿಂದ ಗಡ್ಡದವರೆಗೆ ಅಡ್ಡಪಟ್ಟಿ ಕಚ್ಚೆ ಪಂಚೆ, ಅಂಗಿ, ಹೆಗಲಮೇಲೆ ವಿವಿಧ ಬಣ್ಣಗಳ ಬಟ್ಟೆ, ಸೊಂಟಕ್ಕೆ ಕೆಂಪು ವಸ್ತ್ರ, ಹಣೆಗೆ ಕುಂಕುಮ ವಿಭೂತಿ ಧರಿಸಿ ಕೈಯಲ್ಲಿ ಡಮರುಗ ರೂಪದ ಬುಡುಬುಡಿಕೆ ಹಿಡಿದು ಮಾರುವೇಷದಲ್ಲಿ ರಾಕ್ಷಸರ ರಾಜ್ಯ ಪ್ರವೇಶಿಸಿ, ಮಕ್ಕಳಿಲ್ಲದ ರಾಕ್ಷಸರ ಪತ್ನಿಯರಿಗೆ ಮರವನ್ನು ತಬ್ಬಿದರೆ ಮಗುವಾಗುತ್ತದೆ ಎಂದು ತಿಳಿಸಿ, ತಾನೇ ಸ್ವತಃ ಮರದ ರೂಪ ತಾಳಿ ನಿಲ್ಲುತ್ತಾನೆ. ಮಕ್ಕಳಿಗಾಗಿ ಹಂಬಲಿಸುತ್ತಿದ್ದ ರಾಕ್ಷ ಪತ್ನಿಯರು ಮರವನ್ನು ತಬ್ಬುತ್ತಾರೆ. ಅವರ ಪಾತಿವ್ರತ್ಯ ಭಂಗವಾಗುತ್ತದೆ. ಕೃಷ್ಣನಿಂದ ರಾಕ್ಷಸರು ಹತರಾಗುತ್ತಾರೆ. ಬುಡುಬುಡಿಕೆ ವೇಷದಲ್ಲಿದ್ದ ಕೃಷ್ಣನ ವೇಷದಿಂದ ಆಕರ್ಷಿತನಾದ ವ್ಯಕ್ತಿಯೊಬ್ಬ “ಸ್ವಾಮಿ ಬುಡುಬುಡಿಕೆ ಕೊಡಿ ನಿಮ್ಮ ಹೆಸರು ಹೇಳಿಕೊಂಡು ಬದುಕುತ್ತೇನೆ” ಎಂದು ಕೇಳಿಕೊಂಡನು. ಕೃಷ್ಣನು ಆ ಉಡುಗೆ ತೊಡುಗೆಗಳನ್ನು ಆತನಿಗೆ ಕೊಟ್ಟು ನೀನು ಭೂಲೋಕದಲ್ಲಿ ಸೂರ್ಯಚಂದ್ರರು ಇರುವ ತನಕ ಈ ವೃತ್ತಿ ನಡೆಸು. ನಿನ್ನ ವಂಶಸ್ಥರು ಬುಡುಬುಡಿಯವರೆಂದೇ ಪ್ರಸಿದ್ಧರಾಗಲಿ ಎಂದು ಹಾರೈಸುತ್ತಾನೆ.

ಬುಡುಬುಡಿಕೆಯವರ ಸಂಸ್ಕೃತಿ, ಪರಂಪರೆ, ಸಂಬಂಧ ಇವುಗಳಲ್ಲೇ ಗೊಂದಲಗಳಿವೆ. ಗೊಂದಲಿಗರು ಇರುವೆಡೆಯಲ್ಲೆಲ್ಲ ಇವರೂ ಇರುವರು. ಜನರಾಡುವ ಮಾತುಗಳಲ್ಲಿ ಬುಡುಬುಡಿಕೆಯವರ ಬಗ್ಗೆ ಪ್ರಾದೇಶಿಕವಾಗಿ ಕೇಳುವ ಮಾತುಗಳು ಹೀಗಿವೆ :

‘ಬುಡುಬುಡಿಕ್ಯಾನ ಮಾತು ಬುಡುತನಕ ಖರೆ
ಬುಡುಬುಡಿಕ್ಯಾನ ಮಾತು ಬುಡತನಕ ಸುಳ್ಳು
ದೋಷಿಗ್ಯಾನ ಹೆಣತಿ ಹಾಸಿಗ್ಯಾಗ ಅಂತ
ಲೋಕ ಭವಿಷ್ಯಾಬಲ್ಲ ಬುಡುಬುಡಕ್ಕೂ ಯಾಕ ತಿರಗತಾನ’

ಬುಡುಬುಡಿಕೆ ವಾದ್ಯ : ಇದು ಶಿವನ ಪವಿತ್ರ ವಾದ್ಯವೆಂಬುದು ಇವರು ತಿಳಿಸುತ್ತಾರೆ. ಉತ್ತರ ಕರ್ನಾಟಕದಲ್ಲಿ ಸಂಚರಿಸುವ ಬುಡುಬುಡಿಕೆಯವರು ಶಿವಶಕ್ತಿಯರು. ತಮ್ಮ ನಾಮ ನಂಬಿಕೆಗಳನ್ನು ಮಾನವರಿಗೆ ಕಲಿಸಲು ತಮಗೆ ವರವಾಗುತ್ತಿದ್ದರೆಂದು ಅನೇಕ ಬಗೆಯ ಘಟನೆಗಳನ್ನು ಪೌರಾಣಿಕ ವಸ್ತುಗಳಂತೆ ನುಡಿಯುತ್ತಾರೆ. ಬುಡುಬುಡಿಕೆಯನ್ನು ಸಹಜವಾಗಿ ಅಲುಗಾಡಿಸಿ ಶ್ರುತಿ, ಲಯ, ತಾಳಗಳ ಮೇಳ ಮಾಡಿ ಬಾರಿಸಲು ಬರುತ್ತದೆ. ರಾತ್ರಿ ಪಣ ಕಟ್ಟಿದ ಬಳಿಕ ಗ್ರಾಮಗಳಲ್ಲಿ ದೇವರ ನಾಮಗಳನ್ನು ಸ್ತುತಿಸುತ್ತಾ ಬುಡುಬುಡಿಕೆ ಬಾರಿಸುತ್ತಾ ತಿರುಗುತ್ತಾರೆ.

ಪಂಡರಪುರದ ಪಾಂಡುರಂಗs
ಉಳವಿಯ ಬಸವಣ್ಣ
ದೇವಲೋಕದ ಬುಡುಬುಡಿಕ್ಯಾs

ವೇಷ-ಭೂಷಣ : ಇವರು ತಲೆಗೆ ರುಮಾಲು ಸುತ್ತಿಕೊಂಡು ತಮಗೆ ಸಿಕ್ಕ ಬಹುಮಾನದ ಬೆರಗುಗಳನ್ನು ಹಣೆಯ ಮೇಲ್ಗಡೆಯ ರುಮಾಲಿಗೆ ಸಿಕ್ಕಿಸಿ ಕೊಂಡಿರುತ್ತಾರೆ. ಕೆಲವರು ಸಣ್ಣದಾದ ನವಿಲುಗರಿಯನ್ನು ಸಿಕ್ಕಿಸಿ ಕೊಂಡಿರುತ್ತಾರೆ. ಇನ್ನೂ ಕೆಲವರು ಬೆಳ್ಳಿಯಿಂದ ಚಂದ್ರನ ಪ್ರತೀಕ ಮಾಡಿಸಿ ಬಲಗಡೆಯ ಹುಬ್ಬಿನ ಮೇಲಿನ ರುಮಾಲಿಗೆ ಸಿಕ್ಕಿಸಿ ಕೊಂಡಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಧೋತ್ರ, ಅಂಗಿ, ಮೇಲೊಂದು ಉಣ್ಣೆಯ ಕೋಟು, ತಲೆಗೆ ರುಮಾಲು ಧರಿಸುತ್ತಾರೆ. ಅದರಲ್ಲಿ ಬೆಳ್ಳಿಯ ತಾಯಿತ, ಪದಕ, ಚಂದ್ರನ ಪ್ರತೀಕ, ಬೆಳ್ಳಿಯ ಸರಗಳನ್ನು ಹಾಕಿರುತ್ತಾರೆ. ಕಡ್ಡಿಯಿಂದ ಹಣೆಗೆ ಕೊರಳಿಗೆ ನಾಮ ಹಾಕಿರುತ್ತಾರೆ. ಕೊರಳ ಮೇಲೊಂದು ಕೆಂಪು ಶಲ್ಯ ಇಳಿಬಿಟ್ಟಿರುತ್ತಾರೆ. ಒಂದು ಬಿದಿರು ಬಡಿಗೆ ಬಗಲಲ್ಲಿ ಇದ್ದು ಕಾಲಲ್ಲಿ ಚಪ್ಪಲಿ ಮೆಟ್ಟುತ್ತಾರೆ.

ಪರಿಕರಗಳು : ಬುಡುಬುಡಿಕೆ, ಹೊತ್ತಿಗೆ, ವನಸ್ಪತಿ ಔಷಧಗಳು, ಬಾಣಂತಿ ಹೆಣದ ಕೈ, ತಾಮ್ರದ ತಾಯಿತಗಳು, ಕರಿದಾರದ ಉಂಡೆ ಇತ್ಯಾದಿ ಪರಿಕರಗಳು ಇವರ ಬಳಿ ಇರುತ್ತವೆ. ಇವರ ಹೊತ್ತಿಗೆಯನ್ನು ‘ನೀಲಿ ಹೊತ್ತಿಗೆ’ ಎನ್ನುವರು. ಇದರಲ್ಲಿ ೩೦ ಎಲೆಗಳ ಅಂದರೆ ೬೦ ಪುಟಗಳ ಅಥವಾ ೨೫ ಎಲೆಗಳ ಅಂದರೆ ೫೦ ಪುಟಗಳ ಸಚಿತ್ರ ವಿವರ ಇರುವುದು. ಚಿತ್ರಗಳಲ್ಲಿ ವಿವರಣೆ ಶುಭ, ಅಶುಭ ಪರಿಹಾರ ಸಂಗತಿಗಳನ್ನೆಲ್ಲಾ ಬರೆದಿರುವರು.

ಧಾರ್ಮಿಕತೆ : ಇವರು ಮುಖ್ಯವಾಗಿ ಶಕ್ತಿಯ ಉಪಾಸಕರು. ಸವದತ್ತಿ ಮಲ್ಲಮ್ಮ, ತುಳಜಾಪೂರ ಅಂಬಾಬಾಯಿ, ಕೊಲ್ಲಾಪುರ ಮಹಾಲಕ್ಷ್ಮಿ ಇವರನ್ನು ಸ್ತುತಿಸುವರು. ಮೈಸೂರಿನ ಚಾಮುಂಡಿ, ಗ್ರಾಮ ದೇವತೆಗಳಾದ ದುರ್ಗಾ, ಶಾಂತಿದುರ್ಗಾ, ಲಕ್ಕಪ್ಪ ದುರಗಮ್ಮ, ಮಾರಮ್ಮ, ಮಾಕಾಳಿ ಮೊದಲಾದ ದೇವತೆಗಳನ್ನು ಪೂಜಿಸುತ್ತಾರೆ. ದಾನ ಧರ್ಮಗಳಲ್ಲಿ ನಂಬಿಕೆಯಿರುವ ಇವರು ವಿವಾಹ ಪ್ರಸಂಗಗಳಲ್ಲಿ ‘ದೇವರ ಊಟ’ ಮಾಡುವ ಸಂಪ್ರದಾಯ ವಿಟ್ಟುಕೊಂಡಿದ್ದಾರೆ. ದೇವರನ್ನು ನಂಬಿಕೊಂಡಷ್ಟೇ ಬಲವಾಗಿ ತುಳಸಿ ಹಾಗೂ ತುಳಸಿ ಕಟ್ಟೆಯನ್ನು ನಂಬುತ್ತಾರೆ. ಆಷಾಢ ಮಾಸದಲ್ಲಿ ದೇವಿಯ ಜಾತ್ರೆಯನ್ನು ಎಲ್ಲರೂ ಸೇರಿ ಮಾಡುವುದಲ್ಲದೆ ಯುಗಾದಿ, ಹೋಳಿ ಹುಣ್ಣಿಮೆ, ಆಷಾಢಮಾಸ, ನವರಾತ್ರಿ, ದೀಪಾವಳಿ ಹಬ್ಬಗಳನ್ನು ಆಚರಿಸುತ್ತಾರೆ.

ಜೀವನಕ್ರಮ : ಬುಡುಬುಡಿಕೆಯವರು ಗುಂಪಾಗಿಯೇ ಸಂಚರಿಸುತ್ತಾರೆ. ಗ್ರಾಮಗಳಲ್ಲಿ ಇವರು ಜಾವಡಿ, ಧರ್ಮಶಾಲೆ, ಗುಡಿ ಗುಂಡಾರ, ಆಗಸೆ ದೇವರ ಗುಡಿಗಳಲ್ಲಿ ಇರುತ್ತಾರೆ. ಇವರು ಕೌದಿ ಹೊಲಿಯುತ್ತಾರೆ.

ವಿವಾಹ : ಹಿಂದೂ ಧರ್ಮದಂತೆಯೇ ಮದುವೆ ನಡೆಯುತ್ತದೆ. ಹೆಣ್ಣು ಮಗಳ ಮನೆಯಲ್ಲಿ ಮದುವೆಯಾಗುತ್ತದೆ. ಗಂಡಿನವರೇ ದಿಬ್ಬಣದೊಂದಿಗೆ ಹೆಣ್ಣಿನ ಮನೆಗೆ ಬರಬೇಕು. ಮದುವೆಯಲ್ಲಿ ಐರಾಣಿ, ಹಾಲಗಂಬ, ಸುಳಿದಾಳಿ ತರುವ ಪದ್ಧತಿಗಳುಂಟು. ಹುಟ್ಟಿದ ಮಗುವಿಗೆ ಹಣೆಬರಹ ಸೆಟವಿ (ಸೆಟ್ಟಪ್ಪ) ಬರೆಯುವ ನಂಬಿಕೆ ಇವರಲ್ಲಿದೆ.

ಕಸುಬು : ಗ್ರಾಮ ಅಥವಾ ಪಟ್ಟಣಗಳಲ್ಲಿ ಪ್ರಮುಖ ವ್ಯಕ್ತಿಯಿಂದ ಒಪ್ಪಿಗೆ ಪಡೆದು ಪಣ ಕಟ್ಟಿ ರಾತ್ರಿ ವೇಳೆ ಗ್ರಾಮದ ಓಣಿಗಳಲ್ಲಿ ಪ್ರದಕ್ಷಿಣೆ ಹಾಕುವನು. ಮುಂಜಾವು ಓಣಿಯಲ್ಲಿ ಮನೆಯಿಂದ ಮನೆಗೆ ಹೋಗುವಾಗ ದೇವರ ಸ್ತುತಿ ಪದಗಳನ್ನು ಹೇಳುವನು. ತನ್ನ ಆಕರ್ಷಕ ಮಾತುಗಳಿಂದ ಜನರನ್ನು ತನ್ನಡೆಗೆ ಸೆಳೆದು ಭವಿಷ್ಯ ಹೇಳುತ್ತಾನೆ. ಇವರ ಮಾತಿಗೆ ಸೋತಜನ ತಮ್ಮ ಹಾಗೂ ಮಕ್ಕಳ ಭವಿಷ್ಯ ಕೇಳಿ, ಸಂತೋಷಗೊಂಡು ಇವನಿಗೆ ಕುರಿ, ಕೋಳಿ, ಆಕಳು, ಟಗರು, ಬಟ್ಟೆ ದವಸ ಧಾನ್ಯಗಳ ಕಾಣಿಕೆ ನೀಡುತ್ತಾರೆ. ಇವರು ಔಷಧಿಗಳನ್ನು ನೀಡುತ್ತಾರೆ. ಆದರೆ ಔಷಧಿಗಳ ಹೆಸರನ್ನು ಯಾರಿಗೂ ಹೇಳುವುದಿಲ್ಲ.

ಹಲ್ಲಿಯ ನುಡಿಯುವಿಕೆ, ಗೂಗೆಯ ಕೂಗುವಿಕೆಯ ಬಗೆಗೆ ಶಕುನಗಳನ್ನು ಹೇಳುತ್ತಾರೆ. ಇವುಗಳಿಗೆಲ್ಲ ಸಂಕೇತಗಳ ಕಲ್ಪನೆ, ಅಶುಭದ ಪರಿಹಾರಕ್ಕೆ ಮನೆಯಲ್ಲಿ ಕಟ್ಟಲು ತೆಂಗಿನ ಕಾಯಿ, ತಾಯಿತದ ಗಂಟು ಕೊಡುವನು. ಭೂತದ ಕಾಟ ಎಂದು ತಿಳಿದವರಿಗೆ ಮಂತ್ರದ ಪರಿಹಾರ ನೀಡುವನು.

ಇತ್ತೀಚೆಗೆ ಜನ ಎಚ್ಚೆತ್ತುಕೊಂಡಿದ್ದರೂ ಬೆಳಗಿನ ಜಾವ ಬುಡಬುಡಿಕೆಯವನು ಏನಾದರೂ ಕಣಿ ಹೇಳಿಕೊಂಡು ಬೀದಿಯಲ್ಲಿ ಹೋದನೆಂದರೆ ಏನೋ ಭಯ ಅವರಲ್ಲಿ ಆವರಿಸಿರುತ್ತದೆ. ಮಾನವ ಎಷ್ಟೇ ಬುದ್ದಿಜೀವಿಯಾದರೂ ಇಂಥ ವಿಚಾರಗಳಲ್ಲಿರುವ ನಂಬಿಕೆ ಅವರಿಂದ ದೂರವಾಗದೆ ಇರುವುದು ವಿಪರ್ಯಾಸವೇ ಸರಿ.

ಸಿ.ಎಸ್.ಪಿ.

30_70A_DBJK-KUH

 

ಬುಡುಬುಡುಕಲು        ತೆಲುಗರ ‘ಬುಡುಬುಡುಕಲು’ (ಬುಡುಬುಡಿಕೆ) ಚರ್ಮ ವಾದ್ಯಗಳಲ್ಲಿ ತುಂಬ ಚಿಕ್ಕದು. ಇದನ್ನು ಬುಡುಬುಡಿಕೆಯವರು, ಹಾವಾಡಿಗರು ಹಾಗೂ ದೊಂಬರು ಬಳಸುತ್ತಾರೆ. ಸುಮಾರು ೪-೫ ಅಂಗುಲ ಉದ್ದವಿರುವ ಮರದ ಡಮರುಕದ ಎರಡು ಬಾಯಿಗಳಿಗೂ ಕಪ್ಪೆಯ ಚರ್ಮವನ್ನು ದಾರಗಳ ಸಹಾಯದಿಂದ ಹೊದಿಸಿ, ಡಮರುಕದ ಮಧ್ಯಭಾಗಕ್ಕೆ ಎರಡು ಸಣ್ಣ ಬಟ್ಟೆಯ ಗಂಟುಗಳಿರುವ ದಾರವನ್ನು ಕಟ್ಟುತ್ತಾರೆ. ಕಳಸಿನ ನಡುವೆ ಬೆರಳುಗಳಿಂದ ಹಿಡಿದು ಕೈ ಚಳಕದಿಂದ ಈ ವಾದ್ಯವನ್ನು ವೇಗವಾಗಿ ಅಲಗಾಡಿಸಿದಾಗ ದಾರಗಳು ಚರ್ಮದ ಭಾಗಗಳಿಗೆ ಬಡಿದು ನಾದ ಬರುತ್ತದೆ. ‘ಬುಡುಕ್, ಬುಡುಕ್’ ಎಂಬ ನಾದದಿಂದ ಈ ವಾದ್ಯಕ್ಕೆ ಬುಡು ಬುಡುಕಲೆಂಬ ಹೆಸರು ಬಂದಿದೆ. ಈ ವಾದ್ಯವನ್ನು ಕರ್ನಾಟಕದಲ್ಲಿಯೂ ‘ಬುಡುಬುಡಿಕೆ’ಯೆಂದು ಕರೆಯುತ್ತಾರೆ.

ಜಿ.ಎಸ್.ಎಂ.

 

ಬುರ‍್ರಕಥೆ ಕರ್ನಾಟಕದ ಗಡಿ ಪ್ರದೇಶಗಳಾದ ಕೋಲಾರ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯಲ್ಲಿ ಕಂಡುಬರುವ ಒಂದು ವೃತ್ತಿಗಾಯಕ ಸಂಪ್ರದಾಯ. ಆಂಧ್ರದಲ್ಲಿ ‘ಬುರ‍್ರಕಥಾ’ ಎಂಬ ವೃತ್ತಿಗಾಯಕ ಪರಂಪರೆಯೇ ಇದೆ. ಬುರ‍್ರಕಥೆಯವರನ್ನು ಅಲ್ಲಿ ಸಂಚಾರಿ ಗಾಯಕ ಭಿಕ್ಷುಕರು (minstrels) ಎನ್ನುತ್ತಾರೆ. ಕರ್ನಾಟಕದ ಕರಪಾಲ ಮೇಳವನ್ನು ಹೋಲುವ ಒಂದು ಕಲೆ ಇದು.

ಬುರ‍್ರ ಎಂದರೆ ತೆಲುಗಿನಲ್ಲಿ ಬುರುಡೆ ಎಂದು ಅರ್ಥ. ಆಕಾರದಲ್ಲಿ ದುಂಡಗಿದ್ದು ಒಳಗಡೆ ಟೊಳ್ಳಾಗಿರುವ ವಸ್ತು (ಸೋರೆಬುರುಡೆ). ಬುರ‍್ರಕಥೆಯಲ್ಲಿ ಬಳಸುವ ವಾದ್ಯಗಳೆಂದರೆ ತಂಬೂರಿ ಮತ್ತು ಗುಮಟೆ. ಇವು ಬುರ‍್ರ ಎಂಬ ವಾದ್ಯಕ್ಕೆ ಹೊಂದಿಕೆಯಾಗುವಂಥವು. ತಂಬೂರಿಯ ಬುಡದ ಅರ್ಧಭಾಗ ಗುಂಡಾಗಿ ಒಳಗೆ ಟೊಳ್ಳಾಗಿರುತ್ತದೆ. ಬುರ‍್ರಕಥಾ ಮೇಳದಲ್ಲಿ ಮೂವರು ಕಲಾವಿದರು ಇರುತ್ತಾರೆ. ಮುಮ್ಮೇಳದ ಮುಖ್ಯಕಥೆಗಾರ ಹಾಗೂ ಹಿಮ್ಮೇಳದ ಸಹಕಲಾವಿದರಿಬ್ಬರು. ಹಿಮ್ಮೇಳದವರು ಮುಖ್ಯ ಕಥೆಗಾರನ ಅಕ್ಕಪಕ್ಕದಲ್ಲಿ ಎರಡು ಗುಮ್ಮಟಗಳನ್ನು ಹಿಡಿದಿರುತ್ತಾರೆ. ಅವು ಬುರುಡೆಯ ಆಕಾರದಲ್ಲಿರುವಂಥವು. ಗುಮ್ಮಟೆ ಮತ್ತು ಬುರ‍್ರ- ಎಂಬ ಬುರುಡೆಗಳನ್ನು ಹಿಡಿದು ಬಡಿಯುತ್ತ ಹಾಡುತ್ತ ಕುಣಿಯುವುದರಿಂದ ಆಟಕ್ಕೆ ‘ಬುರ‍್ರಕಥಾ’ ಎಂಬ ಹೆಸರು ಬಂದಿರಬಹುದು. ಇದನ್ನು ಕೆಲವು ಪ್ರದೇಶಗಳಲ್ಲಿ ತಂಬೂರಿಕಥೆ ಎಂತಲೂ ಕರೆಯುತ್ತಾರೆ.

ಕಾಲಬಡೂತಗೆಯಲ್ಲಿ ಹಾರ್ಮೋನಿಯಂ, ಕೊಳಲು, ತಬಲ ಇತ್ಯಾದಿ ಪಕ್ಕವಾದ್ಯಗಳನ್ನು ಬಳಸುವುದುಂಟು. ಮೂವರು ಕಲಾವಿದರಲ್ಲಿ ಒಬ್ಬ ಮುಖ್ಯ ಕಥೆಗಾರನಾಗಿದ್ದರೆ ಉಳಿದಿಬ್ಬರು ಆತನಿಗೆ ನೆರವಾಗುತ್ತಾರೆ. ಬುರ‍್ರಕಥಾಮೇಳವನ್ನು ಸಾಮಾನ್ಯವಾಗಿ ಪೂಸಲಿನವರು ನಡೆಸಿಕೊಂಡು ಬರುತ್ತಿದ್ದರು. ಪ್ರಸ್ತುತ ದಿನಮಾನಗಳಲ್ಲಿ ಇದರ ಆಕರ್ಷಣೆಗೆ ಒಳಗಾದ ಯಾರು ಬೇಕಾದರೂ ಮೇಳವನ್ನ ನಡೆಸಬಹುದು ಎನ್ನುವಂತಾಗಿದೆ. ಮುಖ್ಯ ಕಥೆಗಾರನ ವೇಷಭೂಷಣ ಭರ್ಜರಿಯಾಗಿರುತ್ತದೆ. ಉಳಿದವರು ಸಾಧಾರಣ ಉಡುಗೆ, ತಲೆಗೆ ಜರಿರುಮಾಲು, ಪೇಟ, ನಿಲುವಂಗಿ, ಕರಿಯ ಕೋಟು, ಹೆಗಲಿಗೆ ಜರಿಯಶಲ್ಯ, ಬಿಳಿಕಚ್ಚೆಪಂಚೆ ಕಾಲಲ್ಲಿ ಗೆಜ್ಜೆ, ಎಡಗೈಯ ಹೆಬ್ಬೆರಳು ತೋರುಬೆರಳಿಗೆ ಗಗ್ಗರ ಬಲಗೈಯಲ್ಲಿ ತಂಬೂರಿ ಹಿಡಿದು ಮುಖ್ಯಕಥೆಗಾರ ಹಾಡಿಕೊಂಡು ಕುಣಿಯುತ್ತಾನೆ. ಹಿಮ್ಮೇಳದವರು ಗುಮ್ಟಗಳನ್ನು ಬಾರಿಸುತ್ತ ಮುಖ್ಯ ಕಥೆಗಾರನಿಗೆ ಸ್ಪೂರ್ತಿ ನೀಡುವರು.

ಬುರ‍್ರಕಥಾ ಮೇಳದ ಯಶ್ಸು ನಿಂತಿರುವುದೇ ಮುಖ್ಯಕಥೆಗಾರನ ಮೇಲೆ. ಇಲ್ಲಿ ಕಥೆ ಮುಖ್ಯವಲ್ಲ, ನಿರೂಪಣೆ ಹಾವಭಾವ ಭಂಗಿ, ಧ್ವನಿಯ ಏರಿಳಿತಗಳು – ಇವೆಲ್ಲ ನೋಡುಗರ ಮೇಲೆ ಪ್ರಭಾವ ಬೀರುತ್ತವೆ. ಸಹನೃತ್ಯದವರು ಪುರುಷರಾಗಲಿ ಅಥವಾ ಸ್ತ್ರೀಯರಾಗಲಿ ಸಂದರ್ಭಕ್ಕನುಸಾರವಾಗಿ ಹೆಜ್ಜೆ ಹಾಕಿದರೆ ಮೇಳ ಕಳೆಗಟ್ಟುತ್ತದೆ.

ಬುರ‍್ರಕಥೆಯವರು ಊರಿಂದೂರಿಗೆ ಅಲೆಯುತ್ತ ಜೀವನ ನಿರ್ವಹಣೆಗಾಗಿ ಬುರ‍್ರಕಥಾ ಮೇಳಗಳನ್ನು ನಡೆಸುವುದುಂಟು. ಆಹ್ವಾನದ ಮೇರೆಗೆ ಹೋಗಿ ಕತೆಗಳನ್ನು ನಡೆಸುತ್ತಾರೆ. ಇವರಿಗೆ ನಿರ್ದಿಷ್ಟ ವೇದಿಕೆ ಎಂಬುದಿಲ್ಲ. ಎತ್ತರವಾದ ಜಾಗವೊಂದಿದ್ದರೆ ಸಾಕು, ಅದೇ ಅವರಿಗೆ ವೇದಿಕೆಯಾಗಿಬಿಡುತ್ತದೆ. ಏನೂ ಇಲ್ಲದಿದ್ದರೆ ಕಲಾವಿದರೇ ಒಂದು ವೇದಿಕೆ ನಿರ್ಮಾಣ ಮಾಡಿ ಅದನ್ನೇ ರಂಗಮಂದಿರವನ್ನಾಗಿ ಪರಿವರ್ತಿಸಿಬಿಡುತ್ತಾರೆ. ಧಾರ್ಮಿಕ ಸಂದರ್ಭಗಳಲ್ಲಿಯೂ ಬುರ‍್ರಕಥೆಯನ್ನು ನಡೆಸಿಕೊಂಡು ವುದುಂಟು. ಇದರಿಂದ ಮಳೆ ಬಂದು ಬೆಳೆಯಾಗಿ ಊರಿಗೆ ಊರೇ ಸುಖವಾಗಿರುತ್ತದೆಂದು ನಂಬಿಕೆಯೂ ಇದೆ. ಮಂಗಳ ಹಾಡುವಾಗ ಅಥವಾ ಕತೆಯ ನಡುನಡುವೆ ‘ಗೋವಿಂದ’, ‘ಹರಹರ ಮಹಾದೇವ’ ಎನ್ನಲಾಗುತ್ತದೆ. ಆಗ ಪ್ರೇಕ್ಷಕರೂ ಇದಕ್ಕೆ ದನಿಗೂಡಿಸುತ್ತಾರೆ.

ಬುರ‍್ರಕತೆಯವರು ಮಾಡುವ ಬಹುಪಾಲು ಕತೆಗಳು ತೆಲುಗು ಭಾಷೆಯವು. ಗದ್ಯ ಪದ್ಯ ಮಿಶ್ರಿತವಾದಂಥವು. ಅಂಟಿಕೆ ಚಂಪೂ ಧಾಟಿಯವು. ಕಾಟಮರಾಜಕಥೆ, ಮುಗ್ಗುರು ಬೊಬ್ಬಿಲಿರಾಜ, ದೇಸಿಂಗರಾಜ, ಬಲ್ಲಾಳ ರಾಜ, ಬಾಲನಾಗಮ್ಮ, ಕುಮಾರರಾಮ – ಇತ್ಯಾದಿ. ನಡುನಡುವೆ ಹಾಸ್ಯಭರಿತ ಉಪಕತೆಗಳಿರುವುದರಿಂದ ಕೇಳುಗರು ಕುತೂಹಲಿಗಳಾಗಿರಲು ಸಾಧ್ಯವಾಗಿದೆ. ಆಧುನಿಕ ವಿಚಾರಗಳನ್ನು, ಪ್ರಚಾರ ಮಾಡುವುದಕ್ಕೂ, ಬುರ‍್ರಕಥೆ ಸಮರ್ಥ ಮಾಧ್ಯಮವಾಗಿದೆ. ಮೇಲೆ ಹೆಸರಿಸಿದ ಕತೆಗಳೇನೂ ಒಂದೇ ರಾತ್ರಿಗೆ ಮುಗಿಯುವಂಥವೇನೂ ಅಲ್ಲ. ಒಂದೊಂದಕ್ಕೂ ಎರಡು ಮೂರು ರಾತ್ರಿಗಳು ಬೇಕು. ಇವುಗಳ ಜೊತೆಗೆ ದ್ರೋಣ ಪರ್ವ, ವಿರಾಟಪರ್ವ, ರಾಮಾಯಣ, ಮುಂತಾದ ಪೌರಾಣಿಕ ಪ್ರಸಂಗಗಳನ್ನು ಪ್ರದರ್ಶಿಸುವುದಿದೆ. ಜಂಗಮಕಥೆಗಳನ್ನು ಮಾಡುವವರನ್ನು ಸಾಂಪ್ರದಾಯಿಕ ಬುರ‍್ರಕಥೆಯವರೆಂದರೆ ರಾಜಕೀಯ ಉದ್ದೇಶಕ್ಕಾಗಿ ಬಳಕೆಗೊಳ್ಳುವ ಬುರ‍್ರಕಥೆ ಮೇಳವನ್ನು ಆಧುನಿಕ ಬುರ‍್ರಕಥೆಯವರೆಂದೂ ಕರೆಯುವುದುಂಟು.

ಸಾಸಲು ಚಿನ್ನಮ್ಮ, ಮುಗ್ಗುರು ಮರಾಟಲು – ಮುಂತಾದುವು ದೀರ್ಘಕಾವ್ಯಗಳು. ಆದ್ದರಿಂದಲೇ ಇವುಗಳ ಬಳಕೆ ಹೆಚ್ಚು. ನಡುನಡುವೆ ಗದ್ಯದ ಪ್ರಸ್ತಾಪ ಬರುತ್ತದೆ.

ಕಾಂಬೋಜರಾಜ ಕಥೆ :

ಸತ್ಯವಾದಿ ಕಾಂಬೋಜಿಯಮರಾಜ
ಶಾಮಾಪುರ ಪಟ್ಣಮಂದುನ
ಗೊಲ್ಲ ಕುಲಮುಲೋ ಪುಟ್ಟಿ
ಎಂಚವೇಡು ಲಗ್ನಾಲು ಆಟನ್ನಾಡು

ಏಳುಟರಾಜ್ಯಮು ಎಕ್ಕಟವನಿಗೆ
ಪೆದ್ದ ಬಾರ್ಯಲು ಮುಟುಲದೇವಿ
ಚಿನ್ನ ಬಾರ್ಯಮಲ್ಲಪದೇವಿ
ಅರದೇವಿ, ಗುರುದೇವಿ ಸೂರಬುದೇವಿ ಸುಂಕದೇವಿ
ಅರಿಗರಿಕೆ ಚಿನ್ನಭಾರ್ಯಲು ಸಿರಿದೇವಿ
ಎಂಚವೇಡು ಪೆಂಡಿಂಡ್ನಾಡಿನ ಕಾನಿ ಬಿಡ್ಲುಲೇರು...

ಹೀಗೆ ಕಾವ್ಯ ಮುಂದುವರಿಯುತ್ತದೆ. ವಿವರಣೆ ಬೇಕೆನಿಸಿದಾಗ ಗದ್ಯವನ್ನು ಬಳಸುತ್ತಾರೆ.

ಉದಾ : ಅಯ್ಯಾ ಕಾಂಬೋಜರಾಜ ಇಕ್ಕಡೋಬಾಯಿಲೊ ದುಮುಕಿ ಪ್ರಾಣಾಲಿಡಿಸಿನ ಫಲಮುಲೇಡು, ಮೀ ಪಟ್ನಾನಿಕಿ ಪೋಯಿ ಮೀ ಪಟ್ನಮುಲೋ ಕಲಕೋಗಿ ವಿಷಮುಲು ತಾಗಿ ಪ್ರಾಣಾಲಿಡಂಡಿ ಅಪ್ಪುಡು ಕಾಂಬೋ ಜರಾಜ ಗಂಗಾದೇವಿ ಮಾಟಲು ವಿನಿ ಈ ಏಡುಗರು ತೊಡುಕೋನಿ ಪಟ್ಣಾನಿಕ ವಚ್ಚ.

ಹೀಗೆ ಗದ್ಯಪದ್ಯ ಮಿಶ್ರಿತವಾದ್ದರಿಂದಲೇ ಮಿಶ್ರಕಥೆಯನ್ನು ಸಮ್ಮಿಶ್ರ ಕಲೆ ಎಂದರು. ಪಾಂಡವಪುರದ ಜಯಮ್ಮ ಎಂಬ ಮಹಿಳೆ ಕನ್ನಡದಲ್ಲಿ ಬುರ‍್ರಕಥಾ ಮಾಡುತ್ತಾರೆ. ಅವರು ಮೂಲತಃ ತೆಲುಗರಾಗಿದ್ದು ಅಲ್ಲಿಯ ಪ್ರಭಾವದಿಂದ ಕನ್ನಡದಲ್ಲಿ ಬುರ‍್ರಕಥೆ ಮಾಡುತ್ತಾರೆ.

ಜಿ.ಆರ್.ಟಿ.

 

ಬೇಡರ ಕುಣಿತ ವಿಶೇಷವಾಗಿ ಕರ್ನಾಟಕ ರಾಜ್ಯದ ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರಚಲಿತವಿರುವ ಜನಪದ ಕಲೆ. ಮುಂಡಗೋಡ, ಶಿರಸಿ, ಸಿದ್ದಾಪುರ ಮೊದಲಾದ ಪ್ರದೇಶಗಳಲ್ಲಿ ಈ ಕಲೆ ಉಳಿದುಕೊಂಡಿದೆ. ಈ ಕುಣಿತ ಕುರಿತಂತೆ ಒಂದು ದಂತ ಕಥೆಯೂ ಪ್ರಚಲಿತದಲ್ಲಿದೆ. ಬೇಡರ ಜಾತಿಯ ಬೆಳ್ಳನೆಂಬ ಕಳ್ಳ ಸ್ವಾದಿ ಅರಸರ ಕಾಲದಲ್ಲಿದ್ದ. ಆತ ಜನರನ್ನು ಬೆದರಿಸಿ ಕೊಲೆ ಸುಲಿಗೆ ಮಾಡುತ್ತಿದ್ದನಂತೆ. ಅರಸನಿಗೆ ಆತನನ್ನು ಬಂಧಿಸಲು ಸಾಧ್ಯವಾಗುತ್ತಿರಲಿಲ್ಲವಂತೆ. ಅದಕ್ಕಾಗಿ ಬೆಳ್ಳನೆ ಪ್ರೇಯಸಿಯಾದ ಚರ್ಮಗಾರ ಜಾತಿಯ ವಿಧವೆಯೋರ್ವಳ ಸಹಾಯ ಪಡೆಯುತ್ತಾನೆ. ಹೋಳಿ ಹಬ್ಬದ ರಾತ್ರಿಯಲ್ಲಿ ಯಾರಿಗೂ ತಿಳಿಯದ ರೀತಿಯಲ್ಲಿ ಬೇಡ ಹಗರಣ ವೇಷಧಾರಿಯಾಗಿ, ಹಗರಣ ವೇಷಗಳನ್ನು ನೋಡುತ್ತಾ ಬಂದು ಪ್ರೇಯಸಿಯ ಮನೆ ಪ್ರವೇಶಿಸುವಾಗ, ಆತನನ್ನು ಸೆರೆಹಿಡಿಯುತ್ತಾರೆ. ಸೆರೆಹಿಡಿಯುವ ಸಂದರ್ಭದಲ್ಲಿ ಬೆಳ್ಳನ ತೋಳುಗಳಿಗೆ ಹಗ್ಗ ಬಿಗಿದು ಬಂಧಿಸುವಾಗ ಆತ ವೀರಾವೇಶದಿಂದ ವರ್ತಿಸಿದ ರೀತಿಯನ್ನು ಅನುಕರಿಸಿಯೇ ಬೇಡರ ಕುಣಿತ ನಡೆಯುತ್ತಿದೆ ಎಂಬ ವಿಚಾರ ಪ್ರಚಲಿತದಲ್ಲಿದೆ.

ರಾತ್ರಿಯ ವೇಳೆಯಲ್ಲಿ ಈ ಕುಣಿತ ನೋಡಲು ಹೆಚ್ಚು ಆಕರ್ಷಕವಾಗಿರುತ್ತದೆ. ಬೇಡ ವೇಷಧಾರಿಯ ಸೊಂಟಕ್ಕೆ ಹಗ್ಗ ಕಟ್ಟಿ ಮೂರು ನಾಲ್ಕು ಜನ ಹಿಡಿದು ಕೊಂಡಿರುತ್ತಾರೆ. ಆಗ ಆತನ ವೇಷಭೂಷಣ, ಆವೇಶದಿಂದ ಅಬ್ಬರಿಸುವ ರೀತಿ,ಕೋಪದಿಂದ ದೃಷ್ಟಿಸುತ್ತಾ, ನೃತ್ಯ ಮಾಡುವ ಭಂಗಿ – ಇದನ್ನೆಲ್ಲ ಗಮನಿಸಿದಾಗ ಬಂಧನಕ್ಕೆ ಒಳಗಾದ ಬೇಡರಾಜನ ಹಿನ್ನೆಲೆ ಇರಬಹುದೇನೋ ಅನಿಸುವಂತಿರುತ್ತದೆ. ಮೊದಲ್ಲೆಲ್ಲಾ ಚರ್ಮಗಾರರು ಮತ್ತು ಮಚ್ಚೆಗಾರರು ಮಾತ್ರ ಈ ಕುಣಿತವನ್ನು ಪ್ರದರ್ಶಿಸುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮನೋರಂಜನೆಗಾಗಿ ಇತರ ಜಾತಿಯವರು ಬೇಡರ ವೇಷವನ್ನು ಧರಿಸಿ ಕುಣಿಯುತ್ತಾರೆ. ಹೋಳಿ ಹಬ್ಬದ ಸಂದರ್ಭದಲ್ಲಿ ರಾತ್ರಿ ಕಾಮ ವಿಗ್ರಹವನ್ನು ಸ್ಥಾಪಿಸಿ, ನಾಲ್ಕೈದು ದಿನಗಳವರೆಗೆ ರಾತ್ರಿ ಎಂಟು ಗಂಟೆಯಿಂದ ಮುಂಜಾನೆ ಮೂರು ಗಂಟೆಯವರೆಗೆ ಕುಣಿಯುತ್ತಾರೆ. ಇಂತಹ ಪ್ರದರ್ಶನದ ಸಂದರ್ಭದಲ್ಲಿ ಬೇಡರ ಕುಣಿತದ ಆಕರ್ಷಣೆಗೆ ಒಳಗಾದವರು ನೋಟಿನ ಮಾಲೆಯನ್ನು ಹಾಕಿ ತಮ್ಮ ಸಂತೋಷವನ್ನು ವ್ಯಕ್ತಪಡಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜಾತ್ರೆ ಉತ್ಸವ ಸಂದರ್ಭಗಳಲ್ಲಿಯೂ ಕೂಡ ಬೇಡರ ಕುಣಿತ ಪ್ರದರ್ಶನಗೊಳ್ಳುತ್ತಿದೆ.

ಬೇಡರ ಕುಣಿತದ ವೇಷ ನೋಡಲು ತುಂಬ ಸುಂದರವಾಗಿರುತ್ತದೆ. ವೇಷಧಾರಿ ಮುಖಕ್ಕೆ ಕೆಂಪು, ಬಿಳಿ, ಕಪ್ಪು ಬಣ್ಣಗಳನ್ನು ಬೇರೆ ಬೇರೆ ರೀತಿಯಲ್ಲಿ ಹಾಕಿಕೊಂಡಿರುತ್ತಾನೆ. ಆತನ ಗಡ್ಡಮೀಸೆ ಉದ್ದವಾಗಿದ್ದು, ತಲೆಯ ಮೇಲೆ ನವಿಲುಗರಿಗಳನ್ನು ಹೊಂದಿಸಿದ ಮುತ್ತಿನ ಮಣಿಗಳಿಂದ ಅಲಂಕಾರಗೊಂಡ ಕಿರೀಟವಿರುತ್ತದೆ. ಬಣ್ಣದ ವಸ್ತ್ರವನ್ನು ಸೊಂಟಕ್ಕೆ ಧರಿಸಿ ಕೆಂಪು ವಸ್ತ್ರವನ್ನು ಮುಂಗೈಗೆ ಕಟ್ಟಿರುತ್ತಾನೆ. ಆಕರ್ಷಕವಾಗಿ ನವಿಲುಗರಿಗಳನ್ನು ಬೆನ್ನಹಿಂದೆ ಕಟ್ಟಿರುತ್ತಾನೆ. ಹೂಮಾಲೆಯನ್ನು ಕೊರಳಿಗೆ ಧರಿಸಿರುತ್ತಾನೆ. ಕತ್ತಿನ್ನು ಬಲಗೈಯಲ್ಲಿ, ಢಾಲನ್ನು ಎಡಗೈಯಲ್ಲಿ ಹಿಡಿದಿರುತ್ತಾನೆ. ಇಷ್ಟೆಲ್ಲ ಅಲಂಕಾರ ಮಾಡಿಕೊಂಡ ಅನಂತರ ವೇಷಧಾರಿಯ ಎರಡೂ ತೋಳುಗಳಿಗೆ ಹಗ್ಗವನ್ನು ಬಿಗಿದು ಗಟ್ಟಿಯಾಗಿ ಇಬ್ಬರೂ ಹಿಡಿದುಕೊಂಡಿರುತ್ತಾರೆ. ಅವರ ಹಿಡಿತ ಬೇಡರ ಕುಣಿತಧಾರಿಯ ಆವೇಶಕ್ಕೆ ಅನುಗುಣವಾಗಿ ಇರುತ್ತದೆ. ರಣಹಲಿಗೆಯ ಶಬ್ದ ಜಾಸ್ತಿಯಾದಂತೆ ಕುಣಿತಧಾರಿಯ ಆವೇಶ ಹೆಚ್ಚಾಗುತ್ತಾ ಇರುತ್ತದೆ. ಇದಕ್ಕಾಗಿಯೇ ರಣಹಲಿಗೆಯನ್ನು ಬಾರಿಸಲು ನಾಲ್ಕು ಮಂದಿ ವಾದಕರಿರುತ್ತಾರೆ. ವೇಷಧಾರಿ ಕುಣಿಯುತ್ತಾ ಹೋಗಬೇಕಾದರೆ ಅವನ ಮುಂದೆ ವಿಧವೆಯೊಬ್ಬಳು ಬಾಯಿ ಬಡಿದುಕೊಂಡು ಕೂಗುತ್ತಾಳೆ. ಹಾಗೆಯೇ ಅಕ್ಕಪಕ್ಕದಲ್ಲಿ ಹತ್ತಿಪ್ಪತ್ತು ಕಲಾವಿದರು ಅವಳಂತೆಯೇ ಬಾಯಿಬಡಿದುಕೊಳ್ಳುತ್ತಾ ಕೂಗುತ್ತಿರುತ್ತಾರೆ. ವೇಷಧಾರಿಯ ಆವೇಶದ ಕುಣಿತ, ತಮಟೆಯ ಶಬ್ದ, ವಿಧವೆ ಮತ್ತು ಕಲಾವಿದರ ಕೂಗಾಟ ಎಲ್ಲವೂ ಸೇರಿ ವಾತಾವರಣವೇ ಅದ್ಭುತವಾಗಿರುತ್ತದೆ.

ಬಿ.ಪಿ.ಎ.

 

ಬೈಗುಳ ಕೋಪೋದ್ರಿಕ್ತರಾದಾಗ ಅದಕ್ಕೆ ಕಾರಣನಾದ ವ್ಯಕ್ತಿಯನ್ನು ನಿಂದಿಸಲು, ದೂಷಿಸಲು, ಬಳಸುವ ಶಬ್ದಗಳೇ ಬೈಗುಳಗಳು. ಇವು ಜಾನಪದರ ಬದುಕಿನ ಅವಿಭಾಜ್ಯ ಅಂಗವಾಗಿ ಬೆಳೆದು ಬಂದಿವೆ.

ಬೈಗುಳ ಎಂದರೆ ನಿಂದೆ ಅಥವಾ ದೂಷಣೆ ಎಂದರ್ಥ. ಒಬ್ಬರು ಮತ್ತೊಬ್ಬರಿಗೆ, ಮತ್ತೊಬ್ಬರು ಮಗದೊಬ್ಬರಿಗೆ, ಅವರು ಇವರಿಗೆ ಇವರು ಅವರಿಗೆ ಬೈಯುವುದು ಒಂದಲ್ಲ ಒಂದು ಸಂದರ್ಭದಲ್ಲಿ ಸಾಗಿಯೇ ಇರುತ್ತದೆ. ಬೈಗುಳಿಲ್ಲದ ಬದುಕಿಲ್ಲ; ಬೈಗುಳಬಾರದ ಮನುಷ್ಯನಿಲ್ಲ; ಬೈಯ್ಯದ ವ್ಯಕ್ತಿಯಿಲ್ಲ; ಬೈಸಿಕೊಳ್ಳದ ಜನರೇ ಇಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದು.

ಬೈಗುಳ ಎಂತಹುದು ? ಯಾಕೆ ಬೈಯುತ್ತಾರೆ ? ಯಾವಾಗ ಬೈಯ್ಯುತ್ತಾರೆ ? ಬೈಗುಳದಿಂದಾಗುವ ಪ್ರಯೋಜನ ಏನು ? ಬೈಗುಳ ಅನಿವಾರ್ಯವೇ ? ಮುಂತಾಗಿ ಪ್ರಶ್ನೆಗಳನ್ನು ಹಾಕಿಕೊಂಡಾಗ ನೂರಾರು ಬಗೆಯ ಬೈಗುಳದ ಪರಿಚಯ ನಮಗಾಗುತ್ತದೆ. ಬೈಗುಳದವಿಷಯವೇ ಅಶ್ಲೀಲವಾದದ್ದು, ನಿಷಿದ್ಧವಾದದ್ದು, ಅವಾಚ್ಯವಾದದ್ದು, ನಿಕೃಷ್ಟವಾದದ್ದು, ಶಾಪಯುಕ್ತವಾದದ್ದು, ದುಃಖಿತಗೊಳಿಸುವಂಥದ್ದು, ದುರಾಲೋಚನೆಯಿಂದ ಕೂಡಿದ್ದು ಇತ್ಯಾದಿ ಇತ್ಯಾದಿ ಆಗಿರುತ್ತದೆ. ಕೆಲವು ಸಲ ಪ್ರೀತಿಯುತ, ನೀತಿಯುತ, ಹೊಗಳಿಕೆಯುಕ್ತ, ಸೌಮ್ಯಯುಕ್ತ, ಸವಾಲುಯುಕ್ತ, ಕೊಡುಕೊಳ್ಳುವಿಕೆಯ ಸಂಬಂಧಯುಕ್ತವೂ ಆಗಿರುತ್ತದೆ. ಒಟ್ಟಿನಲ್ಲಿ ಬೈಗುಳದ ಮಾತಿನಲ್ಲಿ ಕೆಟ್ಟದ್ದರ ದೃಷ್ಟಿ ಜಾಸ್ತಿ, ಒಳ್ಳೆಯದರ ದೃಷ್ಟಿ ಕಡಿಮೆ. ತುಚ್ಛವಾಗಿ, ಕಡೆಗಣಿಸಿ ನೋಡುವ ಪ್ರವೃತ್ತಿಯೇ ಹೆಚ್ಚು. ಸಂದರ್ಭಕ್ಕೆ ತಕ್ಕಂತೆ ಎಚ್ಚರಿಕೆ ನೀಡಲು ಬೈಯ್ಯುವಾಗ ಅಲ್ಲಿಯ ಉದ್ದೇಶವೇ ಒಳ್ಳೆಯತನದಿಂದ ಕೂಡಿರುತ್ತದೆ. ‘ಬೈಯ್ತಾ ಹೇಳೋರು ಬದ್ಕಾಕೆ ಹೇಳಿದ್ರು’ ಅನ್ನುವ ಮಾತು ಇದಕ್ಕೆ ಅನ್ವಯಿಸುತ್ತದೆ.

ಸಂದರ್ಭ : ಖುಷಿಗೆ, ಸಿಟ್ಟಿಗೆ, ದ್ವೇಷಕ್ಕೆ, ಅನಾಹುತಕ್ಕೆ, ತೊಂದರೆಗೆ, ದಬ್ಬಾಳಿಕೆಗೆ, ದೌಲತ್ತಿಗೆ, ಒಳ್ಳೆಯದಕ್ಕೆ, ಛೇಡಿಸಿದಕ್ಕೆ, ಸಣ್ಣಪುಟ್ಟ ಸಮಸ್ಯೆಗಳಿಗೆ, ದೊಡ್ಡ ಜಗಳಕ್ಕೆ ಒಳಗಾಗಿ ಇಕ್ಕಟ್ಟಿಗೆ ಸಿಕ್ಕಿಸಲಿಕ್ಕೆ, ಸಂತೋಷಕ್ಕೆ ಬೈಗುಳಗಳು ತನ್ನದೇ ಆದ ಸ್ಥಾನವನ್ನು ಪಡೆದುಕೊಳ್ಳುತ್ತವೆ. ಕೆಲವೊಮ್ಮೆ ಸುಮ್ಮ ಸುಮ್ಮನೆ ಬೈಯುತ್ತಿರುವಾಗ, ಸಂತೋಷ ಉಕ್ಕಿ ಹರಿದಾಗ, ಅತ್ಯಂತ ದುಃಖಿತರಾದಾಗ, ಅತೀ ತೊಂದರೆ ಕೊಡುತ್ತಿದ್ದಾಗ, ವಸ್ತು ವಗೈರೆ ಕಳೆದುಹೋದಾಗ, ದೇವರನ್ನು ನಂಬಿ ಕೆಲಸ ಆಗದೇ ಹೋದಾಗ, ಏನು ಮಾಡಬೇಕು ಎಂಬುದು ಗೊತ್ತಿಲ್ಲದೆ ಪರದಾಡುತ್ತಿದ್ದಾಗ ಬೈಗುಳಗಳ ಮಹಾಪೂರವೇ ಹರಿದುಬರತ್ತಿರುತ್ತದೆ. ಹಾಗೆ ನೋಡಿದರೆ ಮಾತಿನ ಸೊಗಸಿಗೋಸ್ಕರ ಬೈಯ್ಯುವುದು, ಸಹಜವಾಗಿಯೇ ಬೈಯ್ಯುವುದು, ಅಸಾಂದರ್ಭಿಕ ಹಿನ್ನೆಲೆಯಲ್ಲಿಯೂ ಬೈಯ್ಯುವುದು ಮನುಷ್ಯನಲ್ಲಿರುವ ಸ್ವಭಾವಜನ್ಯ ಹಾಗೂ ಪರಿಸರ ಜನ್ಯ ಸಂಪ್ರದಾಯವಾಗಿ ಬಿಟ್ಟಿದೆ.

ಬೈಗುಳಗಳಿಂದಾಗುವ ಪ್ರಯೋಜನಗಳೇನು? ಇಲ್ಲ ಇದೆ- ಎಂದು ಎರಡನ್ನೂ ಹೇಳಬಹುದು. ಆದರೆ ಇದರಿಂದ ಹೆಚ್ಚಿನ ಉಪಯೋಗವಂತೂ ಕಂಡುಬರುವುದಿಲ್ಲ. ‘ಸಗಣಿ ಹೊತ್ತವನ ಜೊತೆ ಸರಸ ಆಡುವುದಕ್ಕಿಂತ ಗಂಧ ಹೊತ್ತವನ ಜೊತೆ ಜಗಳ ಆಡುವುದು ಲೇಸು’ ಎಂಬ ಗಾದೆಮಾತು ಜಗಳಕ್ಕೆ ಹೋಗದೇ ಇರುವುದನ್ನು ನಿರ್ದಿಷ್ಟಗೊಳಿಸುತ್ತದೆ. ಜಗಳ ಪ್ರಾರಂಭ ಆದ್ರ ಬೈಗುಳ ಶುರುವಾಗದೇ ಇರುವುದೇ? ಒಂದು ಮಾತಿಗೆ ಮತ್ತೊಂದು ಮಾತು ಬೆಳೆಯುತ್ತಾ ಹೋಗಿ ಹೊಡೆದಾಟ, ಕೊಲೆ, ಸಾವುಗಳಲ್ಲಿ ಪರ್ಯವಸಾನಗೊಳ್ಳಬಹುದು. ‘ಮಾತು ಬಲ್ಲವನಿಗೆ ಜಗಳವಿಲ್ಲ, ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತು ಜಗಳ ಆಡಬಾರದು ಸಿಕ್ಕಿದ್ದನ್ನೆಲ್ಲ ತಿಂದು ಆರೋಗ್ಯ ಕೆಡಿಸಿಕೊಳ್ಳಬಾರದು ಎಂದು ನೀತಿಯನ್ನು ಎತ್ತಿ ಸಾರುತ್ತದೆ. ಬೈಯ್ಯುವುದರಿಂದ ಪ್ರಯೋಜನ ಆಗಬೇಕಾದರೆ ಬೈಯ್ಯುವ ವಿಧಾನದಲ್ಲಿ ಸುಧಾರಣೆ ಮಾಡಿಕೊಂಡಿರಬೇಕು. ಬೈಯ್ಯಬೇಕು ಅಂತಲೇ ಬೈಯ್ಯಬಾರದು, ಬೈಯ್ಯಬಾರದು ಅಂತ ಇದ್ದಾಗಲೂ ಬೈಯ್ಯಬಾರದು, ಬೈಯ್ದೇತೀರಬೇಕು ಅಂತಿರುವಾಗಲೂ ಬೈಯ್ಯಬಾರದು, ಬೈಯ್ಯುವುದರಿಂದ ಸ್ವಲ್ಪವಾದರೂ ಪ್ರಯೋಜನವಿದ್ದಲ್ಲಿ ಬೈಯ್ಯುವ ಕ್ರಮದಲ್ಲಿ ಯೋಚಿಸಿ ಬೈಯ್ಯಬೇಕು. ಅನಿವಾರ್ಯ ಅನ್ನಿಸಿದರೆ ಬೈಯ್ಯಬೇಕು.

ಬೈಗುಳ ಕೂಡ ಒಂದು ಕಲೆ. ಸಂಪ್ರದಾಯ, ನಂಬಿಕೆ, ಆಚಾರ-ವಿಚಾರಗಳಲ್ಲಿ ಬೆರೆತುಕೊಂಡೇ ಇರುವ ಬೈಗುಳಗಳು ಪ್ರತಿನಿತ್ಯ, ಪ್ರತಿಕ್ಷಣ, ಪ್ರತಿ ಸಂದರ್ಭಗಳಲ್ಲಿ ಇಣಿಕು ಹಾಕುತ್ತಲೇ ಇರುತ್ತವೆ. ‘ಆಚಾರ ಹೇಳೋನ ಮನೇಲಿ ಹನ್ನೆಲ್ಡ್ ಜನ ಮುಂಡೇರು’ ಅನ್ನುವಾಗ ತಾನು ಪರಿಶುದ್ಧ ಎಂದುಕೊಳ್ಳುವ ವ್ಯಕ್ತಿಯನ್ನೂ ಬಿಟ್ಟಿಲ್ಲ, ದೇವರನ್ನೇ ಬೈದು ಒಲಿಸಿಕೊಳ್ಳುವ ಆಚರಣೆ ಜನಪದರಲ್ಲಿದೆ. ನಟಿಕೆ ಮುರಿದು, ಮಣ್ಣು ಬೂದಿ ಎರಚಿ, ಶಾಪ ಹಾಕಿ ಬೈಯ್ದು, ಎದುರಾಳಿಯನ್ನು ಪ್ರತಿಭಟಿಸುವ ತಂತ್ರಗಾರಿಕೆ ಇಲ್ಲಿದೆ.

ಬೈಗುಳಗಳ ಮುಖ್ಯಾಶಯ ವ್ಯಭಿಚಾರ ಮತ್ತು ಅದರ ಬಗೆಗಿನ ತಿರಸ್ಕಾರಗಳು, ವಿಶ್ವಾಸ ದ್ರೋಹ, ಸೋಮಾರಿತನ, ದಡ್ಡತನ, ಕಳ್ಳತನ ಇವುಗಳ ಬಗ್ಗೆ ಅಸಹನೆ ಮತ್ತು ತೀವ್ರ ಹೊಟ್ಟೆಕಿಚ್ಚು ಸೇರಿಸಿಕೊಂಡಿರುವುದು. ದೈಹಿಕ ವ್ಯಭಿಚಾರಕ್ಕೆ ಸಂಬಂಧಿಸಿದ ಬೈಗುಳಗಳೇ ಜಾಸ್ತಿ. ಗಾದೆಗಳ ಇಡೀಭಾಗವನ್ನೇ ಗಮನಿಸಿದಾಗ ಅಲ್ಲಿ ಕಾಣುವ ಬೈಗುಳಗಳ ಪಾಲು ಲೈಂಗಿಕ ವ್ಯಭಿಚಾರ ಹಾಗೂ ಅಡ್ಡದಾರಿ ಹಿಡಿದ ಬಗೆಗಿನ ವಿವರಣೆಗಳನ್ನು ಒಳಗೊಂಡಿರುತ್ತವೆನ್ನಬಹುದು. ಎಂ. ಚಿದಾನಂದಮೂರ್ತಿ ಅವರು ಬೈಗುಳಗಳ ಮನೋಭೂಮಿಕೆಯನ್ವಯ ಕೆಲವೊಂದು ಅಂಶಗಳನ್ನು ಹೀಗೆ ಗುರುತಿಸುತ್ತಾರೆ.

೧. ವ್ಯಭಿಚಾರ ಮತ್ತು ಅದರಿಂದ ಉತ್ಪತ್ತಿಯಾದ ಸಂತಾನದ ಬಗೆಗಿನ ಸಾಮಾಜಿಕ ತಿರಸ್ಕಾರವಿರುವ ಬೈಗುಳಗಳು. ಉದಾ : ಅಪ್ಪನಿಗೆ ಹುಟ್ಟಿದೋನಾದ್ರೆ ಎದ್ರಿಗೆ ಬಾರೆಲೆ ಬೋಸುಡಿಕೆ.

೨. ವಿವಾಹಿತ ಸ್ತ್ರೀಯೊಡನೆ ಸಂಪರ್ಕ ಹೊಂದಿರುವುದು. ಇಲ್ಲಿ ಸಮಾಜದ ದೃಷ್ಟಿಯಲ್ಲಿ ಹೆಣ್ಣು ಕೀಳೆನಿಸಿದರೆ, ಗಂಡು ಇವಳನ್ನು ಒಲಿಸಿಕೊಂಡು ಹೆಮ್ಮೆಯಲ್ಲಿ ಬೀಗುತ್ತಾನೆ.

೩. ವ್ಯಭಿಚಾರದ ನಂತರದ ಕೀಳು ಕೆಲಸವೆಂದರೆ ವಿಶ್ವಾಸದ್ರೋಹ.

೪. ಸಮಾಜ ಸೋಮಾರಿಗಳನ್ನು ಸಹಿಸಲಾರದು. ಹಾಗಾಗಿ ಅವನಿಗೆ ದಾಂಡಿಗ, ಕೂಳುಬಾಕ, ಸೋಂಬೇರಿ, ಮೈಗಳ್ಳ ಎನ್ನುತ್ತದೆ.

೫. ಹೇಡಿತನ, ನಿರ್ವೀರ್ಯತೆ ಇದ್ದವನಿಗೆ – ಹೇತ್ಲಾಂಡಿ, ಪುಕಣೀಯ, ರಣಹೇಡಿ ಎನ್ನುತ್ತಾರೆ.

೬. ಹೊಟ್ಟೆಕಿಚ್ಚು ಬೈಗುಳದಲ್ಲಿ ಜಾಸ್ತಿ – ಇದರ ಮೂಲ ಆಶಯ ಪೂರ್ಣ ನಾಶವಾಗು ಎನ್ನುವುದು. ಉದಾ : ನಿನ್‌ಬಸಿರು ಇಂಗಿ ಹೋಗಾ!

೭. ಮುತ್ತೈದೆತನ ಹಾಳಾಗಬಾರದು; ಇದರಿಂದ ಗಂಡನಿಗೆ ತೊಂದರೆ ಎನ್ನಬಹುದು. ಅದಕ್ಕಾಗಿ ತಾಳಿ ಹರೀಲಿ,ವಾಲಿ ಹರೀಲಿ ಅಂತ ಬಯ್ಯುತ್ತಾರೆ.

೮. ಕೆಲವು ಬೈಗುಳಗಳು ಮೂಲದ ಅರ್ಥ ಕಳೆದುಕೊಂಡು ಚಾಲ್ತಿಯಲ್ಲಿವೆ. ಉದಾ: ದಿಕ್ಕೇಡಿ, ನಿರ್ವಾಣಿ.

ಬೈಗುಳಗಳಲ್ಲಿ ಕೇವಲ ಕನ್ನಡ ಪದಗಳಿಲ್ಲ. ಹಿಂದಿ, ಉರ್ದು, ಇಂಗ್ಲಿಷ್, ಸಂಸ್ಕೃತ, ಪಾರ್ಸಿ ಭಾಷೆಗೆ ಸಂಬಂಧಿಸಿದ ಶಬ್ದಗಳು ಅಡಕಗೊಂಡಿವೆ. ಹಾಗಾಗಿ ಇವುಗಳನ್ನು ರಚನೆಯ ದೃಷ್ಟಿಯಿಂದ ಮೂಲ ಬೈಗುಳ, ಜನ ಬೈಗುಳ, ಸಂಯುಕ್ತ ಬೈಗುಳಗಳೆಂದು ವಿಂಗಡಿಸಿಕೊಳ್ಳಬಹುದು. ಮೂಲ ಬೈಗುಗಳಲ್ಲಿಯ ಆಶಯ ಒಂದೇ ಮೂಲದಿಂದ ಬಂದಿರುತ್ತದೆ. ಉದಾ : ಕತ್ತೆ, ನಾಯಿ, ಸುವರ್, ಕಳ್ಳ ಇತ್ಯಾದಿ. ಜನ್ಯ ಬೈಗುಳಗಳಲ್ಲಿ ಇತರೆ ಶಬ್ದಗಳೊಂದಿಗೆ ಮೂಲ ಶಬ್ದಗಳು ಸೇರಿ ಆಗಿರುತ್ತದೆ ಉದಾ ಕತ್ತೆ ಮುಂಡೇದು, ಕಳ್ಳನನ್ನ ಮಗನೆ, ಇನ್ನು ಸಂಯುಕ್ತ ಬೈಗುಳಗಳು ಹೆಚ್ಚಾಗಿ ಮೂಲ, ಜನ್ಯ ಬೈಗುಳಗಳನ್ನು ಸೇರಿಕೊಂಡು ಹುಟ್ಟಿಕೊಂಡಿರುತ್ತವೆ. ಉದಾ : ಕಳ್ಳ + ಬಡವ, ಹೊಲಸನನ ಮಗನೆ, ಹಲ್ಕಾ ರಂಡೆಗಂಡ.

ಬೈಗುಳಗಳ ವ್ಯಾಪ್ತಿ ಇಷ್ಟೇ ಎಂದು ಹೇಳಲಿಕ್ಕಾಗದು. ಬದುಕಿನ ನಾನಾ ಸಂದರ್ಭಗಳಲ್ಲಿ, ನಾನಾ ಸನ್ನಿವೇಶಗಳಲ್ಲಿ, ಗಂಡು-ಹೆಣ್ಣಿನ ಜೀವನದಲ್ಲಿ ಹಾಸುಹೊಕ್ಕಾಗಿ ಬೆರೆತುಕೊಂಡು ಬಂದಿದೆ. ಸಹಜವಾಗಿ ಬೈಗುಳದ ಪ್ರಮಾಣ ಹೆಂಗಸಿನಲ್ಲಿ ಜಾಸ್ತಿ ಎಂಬುದು ಹಲವರ ಅಭಿಮತ. ಹೆಣ್ಣು ದಿನನಿತ್ಯ ಮನೆ, ಮನೆಯ ಸುತ್ತಲಿನ ಪರಿಸರದಲ್ಲಿಯೇ ಬಾಳಬೇಕಾಗಿರುವುದರಿಂದ ಪರಿಸ್ಥಿತಿಗೆ ಒಗ್ಗಿ ಕೊಳ್ಳಲಾಗದೇ ಹೋದಾಗ ಬೈಗುಳದ ಮೂಲಕ ತನ್ನ ಆಕ್ರೋಶವನ್ನು ಎದುರಿಗಿರುವವರೆಲ್ಲರ ಮೇಲೂ ತೋರಿಸಿಕೊಳ್ಳುತ್ತಾರೆ. ಅದೇ ಗಂಡು ಯಾವುದೇ ನಿಶ್ಚಿಂತೆಯಿಲ್ಲದೆ ಹೊರಗೆ ಹೋಗಿ ಬರುತ್ತಾನಲ್ಲದೆ ಬೇರೆಯವರೊಡನೆ ಅತಿ ನಿಕಟವಾದ ಸಂಪರ್ಕ ಹೊಂದದೆ ತನ್ನ ಪಾಡಿಗೆ ತಾನು ಕೆಲಸ ನಿರ್ವಹಿಸುತ್ತಾ ಬರುತ್ತಾನೆ. ಆದರೂ ಅಲ್ಲಿಯ ಸನ್ನಿವೇಶಗಳು ಅವನಿಗೆ ಕಿರಿಕಿರಿಯುಂಟು ಮಾಡದೇ ಬಿಡಲಾರವು. ಆತನೂ ಕೂಡ ಜಗಳದ ಹಾದಿ ತುಳಿದು ಬೈಗುಳದ ಹಂತ ತಲುಪಬಹುದು.ಅತಿಯಾದ ಒತ್ತಡ ಇರುವುದು ಹೆಣ್ಣಿಗೇ ಹೊರತು ಗಂಡಿಗಲ್ಲ, ಹಾಗಾಗಿ ಹೆಂಗಸಿನ ಬೈಗುಳಗಳೇ ಜಾಸ್ತಿಯಾಗಿ ಕಂಡುಬರುತ್ತವೆ.

ಉದಾಹರಣೆಗಳನ್ನು ಗಮನಿಸಬಹುದು : ಹಸಿವು ಎಂದು ಪದೇ ಪದೇ ಹೇಳುವ ಮಗುವಿಗೆ ತಾಯಿ, ಅದೆಂಥ ಹೊಟ್ಟೆಬಾಕನೊ ನೀನು? ಈಗ ತಿಂದಿದ್ಯಲ್ಲೊ ಒಂದ್ ತಟ್ಟೆ ಕೂಳು ನಿನ್ನದು ಹೊಟ್ಟೇನೋ ಕನ್ನಂಬಾಡಿ ಕಟ್ಟೇನೋ! ಎನ್ನುತ್ತಾಳೆ. ಮುಸ್ಸಂಜೆ ಹೊತ್ತಿನಲ್ಲಿ ಯಾರಾದರೂ ತಿನ್ನಲಿಕ್ಕೆ ಕುಳಿತಿದ್ದರೆ ದೆವ್ವ ತಿನ್ನೊ ಹೊತ್ನ್ಯಾಗೆ ತಿಂತೀಯಲ್ಲೊ. ದೆವ್ವ ತಿಂದಂಗೆ ಯಾಕೆ ತಂತಿ ಹೋಗು ಅಂತ ಎಚ್ಚರಿಸುತ್ತಾಳೆ. ಏನಾದರೂ ಅವಳಿಗೆ ಸಿಟ್ಟು ಬಂದು ನೆತ್ತಿಗೇರಿದ್ದರೆ ತಡೆಯಲು ಸಾಧ್ಯವೆ? ‘ನಿನ್ನ ಗಂಟ್ಲು ಸೇದ್ಹೋಗ!’, ‘ನೀನ್‌ಮನಿ ಹಾಳಾಗಿ ಹೋಗ!’, ‘ನಿನ್ನ ಹೆಜ್ಜೆಡಗ್ಲಿ!’, ‘ನಿನ್ ಉಸರಡಗ್ಲಿ’ ಅಂತೆಲ್ಲಾ ಬೈಯ್ಯುವುದುಂಟು. ಬಾಯಿದ್ದೋಳು ಬರ‍್ಗಾಲ್ದಲ್ಲು ಗೆದ್ಲು ಅನ್ನಂಗೆ ಬಾಯಿ ಮಾಡಿ ಮಾಡಿ ಮತ್ತೊಬ್ಬಳು ಮಾತಾಡದಂಗೆ ಮಾಡುವವರು ಬೈಗುಳಗಳ ಮೂಲಕವೇ ಖ್ಯಾತಿ ಹೊಂದಿರುತ್ತಾರೆ.

ಹಲವಾರು ಗಾದೆ ಮಾತುಗಳಲ್ಲಿ ನೋಡುವ ಹಾಗೆ ಬೈಗುಳಗಳ ಮಹಾಪೂರವೇ ಇಲ್ಲಿ ಕಂಡುಬರುತ್ತದೆ. ಇಲ್ಲೆಲ್ಲ ವ್ಯಕ್ತಿಯ ಹಾದರತನ, ಲೈಂಗಿಕ ಕೌರ್ಯ, ಅಡ್ಡದಾರಿ ಹಿಡಿದಿರುವ ನೂರೆಂಟು ಸಂದರ್ಭಗಳ ವಿಶ್ಲೇಷಣೆ ಇರುತ್ತದೆ.

ಗಂಡ ಸತ್ತೋಳು ಉಲ್ದಾಡುತಿದ್ರೆ
ಮಿಂಡ ಬಂದು ಅವಚ್ಕಂದು ಉಲ್ದಾಡ್ಡ
ಭಂಡ್ರಿಗೆ ಊರೆಲ್ಲಾ ಅಂಡು
ಹಳೆ ಅರ‍್ವಿಗೆ ದಾರದಂಡ
ಮೈಗಳ್ಳಗೆ ಕೂಳುದಂಡ

ಹಾದ್ರಗಿತ್ತಿಗೆ ಹಸ್ನಾದ ಸಾವು
ಪತಿವ್ರತೆಗೆ ಪಡಿಪಾಟ್ಲ ಸಾವು

ಸುಳ್ಳು ಒದ್ರೋನು ಸೂಳೆಮಗ
ನಿಜ ಹೇಳೋನು ದೇವ್ರಮಗ

ಅವಸ್ರಾದಾಗ ಮಾವ ಸೊಸೇನ ಕೆಡಿಕ್ಕಂಡ
ಅವ್ವನು ಸೂಳೆ ಮಗ್ಳೂಸೂಳೆ

ದೇವ್ರ ಬಾರ ಹೊರೊರ್ಯಾರು?
ಅಟ್ಗಳನ ಮದ್ವೆಗೆ ಮೋಟ್ಗಿತ್ತೋರು ನೆರತ್ರು

ಬೈಗುಳಗಳಲ್ಲಿ ಬಳಸುವ ಪದಗಳೆಲ್ಲಾ ಅಶ್ಲೀಲವಾದವುಗಳೇ. ಬೈಗುಳಗಳಲ್ಲಿ ಕೆಟ್ಟದ್ದು. ಒಳ್ಳೆಯದು ಎರಡೂ ಇದ್ದರೂ ಇವುಗಳಲ್ಲಿ ಸುಸಂಸ್ಕೃತಿ ಎದ್ದು ಕಾಣುವುದಿಲ್ಲ. ಆದರೂ ಜನಪದರ ಬದುಕು ಸಾಂಕೃತಿಕ ಚೌಕಟ್ಟಿಗೆ ಒಳಪಟ್ಟಿರುವುದರಿಂದ, ಜನಪದ ಸಂಸ್ಕೃತಿಯ ಭಾಗಗಳೇ ಆಗಿರುವ ಬೈಗುಳಗಳಿಗೆ ತನ್ನದೇ ಆದ ವೈಶಿಷ್ಟ್ಯವಿದೆ, ವಿಶ್ಲೇಷಣೆಗೊಳಪಡಬೇಕಾದ ಅನಿವಾರ್ಯತೆಯಿದೆ.

ಜಿ.ಎಸ್.