ಬಿಳಿಗಿರಿ ರಂಗ ಕರ್ನಾಟಕದ ದಕ್ಷಿಣ ಗಡಿಯ ಬೆಟ್ಟಶ್ರೇಣಿಯಲ್ಲಿ ನೆಲೆಗೊಂಡಿರುವ ಅತ್ಯಂತ ಜನಪ್ರಿಯ ಹಾಗೂ ಪ್ರಸಿದ್ಧ ದೇವತೆಗಳಲ್ಲಿ ಒಬ್ಬ. ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿಗೆ ಸೇರಿಕೊಂಡಿರುವ ಬಿಳಿಗಿರಿ ಬೆಟ್ಟ ಪ್ರದೇಶದಲ್ಲಿ ‘ರಂಗ’ ಎಂಬ ದೇವತೆ ನೆಲೆಗೊಂಡು ಪ್ರಸಿದ್ಧನಾದುದರಿಂದ ಇಲ್ಲಿಯ ಜನರು ಅವನಿಗೆ ‘ಬಿಳಿಗಿರಿರಂಗ’ ಎಂದು ಕರೆಯುತ್ತಾರೆ. ಹೀಗೆ ಜನ ಆತನ, ಮೂಲಕ ಬೆಟ್ಟವನ್ನು ಗುರುತಿಸುವುದರೊಂದಿಗೆ ಅದನ್ನು ‘ಬಿಳಿಗಿರಿರಂಗನಬೆಟ್ಟ’ ಎಂದು ಕರೆದರು. ಇದು ಸಮುದ್ರ ಮಟ್ಟದಿಂದ ೫,೦೯೧ ಅಡಿ ಎತ್ತರದಲ್ಲಿದೆ. ಈ ಬೆಟ್ಟದ ಮೇಲಿರುವ ದೇವಸ್ಥಾನದ ಬಳಿ ಇರುವ ಕಮರಿಕಲ್ಲು ಬೆಳ್ಳಗಿರುವುದರಿಂದ ಇದನ್ನು ಬಿಳಿಗಿರಿ ಎಂದು ಕರೆಯುವ ಪ್ರತೀತಿ. ಶಿಷ್ಟರು ಬಿಳಿಗಿರಿರಂಗನನ್ನು ರಂಗನಾಥ, ರಂಗನಾಥಸ್ವಾಮಿ, ವಿಷ್ಣು, ವೆಂಕಟೇಶ್ವರ ಎಂಬೆಲ್ಲ ಹೆಸರುಗಳಿಂದ ಕರೆದರೆ; ಜನಪದ ಪಾಲಿಗೆ ರಂಗ, ಬಿಳಿಗಿರಿರಂಗ, ರಂಗಪ್ಪ, ರಂಗಸ್ವಾಮಿಯಾಗಿ ಅವರ ಭಾವಪೂರ್ಣ ಭಕ್ತಿ – ಪ್ರೀತಿಗಳಿಗೆ – ಪಾತ್ರನಾಗಿದ್ದಾನೆ. ಬಿಳಿಗಿರಿರಂಗನಿಗೆ ಕೆಲವು ಸಂದರ್ಭಗಳಲ್ಲಿ ಶಿಷ್ಟ ಪರಂಪರೆಯ ನಿತ್ಯೋತ್ಸವ ಹಾಗೂ ವಿಶಿಷ್ಟ ಆರಾಧನೆಗಳು ನಡೆಯುವ ಹಾಗೆ ಜನಪದ ಪರಂಪರೆಯ ಆಚರಣೆಗಳೂ ನಡೆಯುತ್ತವೆ. ಈ ರೀತಿಯಾಗಿ ಬಿಳಿಗಿರಿರಂಗನಲ್ಲಿ ಎರಡು ಮಾದರಿಯ ಆರಾಧನಾ ಸ್ವರೂಪ ಅಸ್ತಿತ್ವದಲ್ಲಿರುವುದನ್ನು ಗಮನಿಸಬಹುದು.

ಬಿಳಿಗಿರಿರಂಗ ನೆಲೆಗೊಂಡಿರುವ ಈ ಬೆಟ್ಟವನ್ನು ೧೬೬೭ರ ಹದಿನಾಡಿನ ಮುದ್ದು ದೊರೆಯ ದಾನ ಶಾಸನದಲ್ಲಿ ‘ಬಿಳೀಕಲ್ ಬೆಟ್ಟ’ ಎಂದು ಹೆಸರಸಲಾಗಿದೆ. ಇಲ್ಲಿಯ ಬಿಳಿಗಿರಿರಂಗನಾಥ ಸ್ವಾಮಿಯನ್ನು ‘ಚೋಳ ಪ್ರತಿಷ್ಠೆ’ ಎಂದು ಕರೆಯುತ್ತಾರೆ. ಬಿಳಿಗಿರಿರಂಗನ ಬೆಟ್ಟವನ್ನು ದಕ್ಷಿಣ ತಿರುಪತಿ ಎಂದು ಕರೆಯುವ ವಾಡಿಕೆ ಇದೆ. ತಿರುಪತಿಗೆ ಹೋಗಲು ಆರ್ಥಿಕ ಚೈತನ್ಯ ಮತ್ತು ದೈಹಿಕ ಸಾಮರ್ಥ್ಯ ಇಲ್ಲದವರು ಇದನ್ನೇ ದಕ್ಷಿಣ ತಿರುಪತಿ ಎಂದು ಭಾವಿಸಿ ಬಿಳಿಗಿರಿರಂಗನಿಗೆ ನಡೆದುಕೊಳ್ಳುವ ಪದ್ಧತಿ ಇದೆ. ಇವನ ಭಕ್ತರನ್ನು ದಾಸರು ಅಥವಾ ದಾಸಯ್ಯಗಳೆಂದು ಕರೆಯುತ್ತಾರೆ. ಈ ಭಾಗದ ಎಲ್ಲಾ ಜಾತಿ ಸಮುದಾಯದವರ ಮನೆ ಮತ್ತು ಮನಸ್ಸಿನಲ್ಲಿ ಬಿಳಿಗಿರಿರಂಗ ಮನೆ ಮಾಡಿಕೊಂಡಿರುವುದರಿಂದ ತಮ್ಮ ಆರಾಧ್ಯ ದೈವ ರಂಗನ ಸದಾ ಸೇವೆಗಾಗಿ ಬಿಳಿಗಿರಿರಂಗನ ಬೆಟ್ಟದ ದೊಡ್ಡ ತೇರು ಬೀದಿಯ ಆಜುಬಾಜಿನಲ್ಲಿ ಒಂದೊಂದು ಮಂಟಪಗಳನ್ನು ಕಟ್ಟಿಕೊಂಡಿದ್ದಾರೆ. ಶ್ರಾವಣ ಮಾಸದಲ್ಲಿ ಪ್ರತಿಯೊಬ್ಬ ದಾಸನು ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿ ಬಿಳಿಗಿರಿರಂಗನನ್ನು ಭಕ್ತಿಯಿಂದ ಸ್ಮರಿಸುತ್ತಾರೆ. ಸಂಕ್ರಾಂತಿಯ ಸಂದರ್ಭದಲ್ಲಿ ಚಿಕ್ಕಜಾತ್ರೆ ನಡೆದರೆ, ಮೇ ತಿಂಗಳಿನಲ್ಲಿ ಇಲ್ಲಿಯ ದೊಡ್ಡಜಾತ್ರೆ ಬಹಳ ವಿಜೃಂಭಣೆಯಿಂದ ನಡೆಯುತ್ತದೆ. ೧೯೩೦ರ ಮೈಸೂರು ಗೆಜೆಟಿಯರ್‌ನಲ್ಲಿ ಬಿಳಿಗಿರಿರಂಗನ ದೊಡ್ಡ ಜಾತ್ರೆಗೆ ಹತ್ತು ಸಾವಿರ ಜನ ಸೇರುತ್ತಿದ್ದರೆಂಬ ಉಲ್ಲೇಖವಿದೆ.

ಪ್ರಚಲಿತವಾಗಿರುವ ಕಥೆಯೊಂದರ ಪ್ರಕಾರ ಒಮ್ಮೆ ವೆಂಕಟೇಶ್ವರ ಪತ್ನಿ ‘ಅಲಮೇಲು ಮಂಗಮ್ಮ’ ಅರ್ಭ್ಯಂಗಸ್ನಾನ ಮಾಡುವ ಆಸೆಯಿಂದ ಸೀಗೆಕಾಯಿ ತರಲು ಪತಿದೇವನಿಗೆ ಕೇಳಿಕೊಂಡಳು. ಅದರಂತೆ ಸೀಗೆಕಾಯಿ ತರಲು ಶ್ವೇತಾದ್ರಿ ಅರಣ್ಯಕ್ಕೆ ಬಂದ ರಂಗನಾಥ ಅಲ್ಲಿಯ ಸೋಲಿಗರ ಕನ್ಯೆ ಕುಸುಮಾಲೆಯನ್ನು ಕಂಡು ಮೋಹಿತನಾಗಿ ಅವಳನ್ನು ಮದುವೆಯಾಗಿ ಅಲ್ಲಿಯ ನೆಲೆಸಿದನೆಂಬ ಕಥೆ ಜನಪ್ರಿಯವಾಗಿದೆ. ಬಿಳಿಗಿರಿರಂಗನನ್ನು ಆರಾಧಿಸುವ ಜನರಲ್ಲಿ ಸೋಲಿಗರು ಪ್ರಮುಖರು. ಇವರು ಬಿಳಿಗಿರಿರಂಗನ ಬೆಟ್ಟದಲ್ಲಿ ವಾಸವಾಗಿರುವ ಮೂಲ ನಿವಾಸಿಗಳು. ಬಿಳಿಗಿರಿರಂಗನ ಕಾವ್ಯದಲ್ಲಿ ಬರುವ ಕಥೆಯ ಪ್ರಕಾರ ಸೋಲಿಗರ ಯಜಮಾನ ಬೊಮ್ಮೆಗೌಡನಿಗೆ ಏಳು ಮಂದಿ ಹೆಣ್ಣುಮಕ್ಕಳು. ಅವರಲ್ಲಿ ಕಿರಿಯವಳಾದ ಕಡು ಚೆಲುವೆ ಕುಸುಮಾಲೆಗೆ ಮನ ಸೋತ ಬಿಳಿಗಿರಿರಂಗ ಅವಳಲ್ಲಿ ಅನುರಕ್ತನಾದ. ತನ್ನ ಪ್ರೀತಿಯನ್ನು ಅವಳ ಮುಂದೆ ಹೇಳಿಕೊಳ್ಳುವುದಕ್ಕಾಗಿ ಅವನು ಒಂದು ಉಪಾಯವನ್ನು ಹೂಡಿ; ತನ್ನ ಮಾಯಾವಿ ದೃಷ್ಟಿಯಿಂದ ನಡು ರಾತ್ರಿಯನ್‌ಉ ಹಗಲು ಮಾಡಿಬಿಟ್ಟ. ಕುಸುಮಾಲೆ ಬೆಳಗಾಯಿತೆಂದು ತಿಳಿದು ನೀರನ್ನು ತರಲು ಹರವಿಯನ್ನು ಎತ್ತುಕೊಂಡು ಗುರುವಿನ ಗದ್ದೆ ಕಡೆ ನಡೆದಳು. ಆಗ ಬಿಳಿಗಿರಿರಂಗನ ಒಬ್ಬ ಯುವ ಸೋಲಿಗನಾಗಿ ಅವಳ ಮುಂದೆ ಎದುರಾದ. ಅವಳು ಅವನ ರೂಪು, ಲಾವಣ್ಯ, ಮೋಹಕ ನಗೆಗೆ ಬೆರಗಾಗಿ ಅವನನ್ನು ಒಪ್ಪಿಕೊಂಡಳು.

ಹೀಗೆ ತನ್ನ ಜೊತೆಗೆ ಓಡಿ ಬಂದ ಕುಸುಮಾಲೆಯನ್ನ ಬಿಳಿಗಿರಿರಂಗ ಗಾಂಧರ್ವ ವಿಧಿಯಿಂದ ಮದುವೆ ಮಾಡಿಕೊಂಡು ‘ಗವಿ ಒಡ್ಡು ಎನ್ನುವ ಜಾಗದಲ್ಲಿ ತಂದು ಇಟ್ಟುಕೊಂಡನು. ಅನಂತರ ಇವರು ಕಾಡಿಗೆ ಹೋಗಿ ಬರುವ ಸೋಲಿಗರಿಗೆ ಬೆಟ್ಟಗುಡ್ಡ, ಬಿದಿರುಮೆಳೆ, ದೊಡ್ಡ ಸಂಪಿಗೆ, ಹೇಮಗಲ್ಲು, ಜೇನುಬರೆ ಮತ್ತು ಸೋಮಅರಸಿನಕೆರೆ ಮುಂತಾದ ಕಡೆ ಎಲ್ಲೆಂದರಲ್ಲಿ ಕಾಣಿಸತೊಡಗಿದರು. ಮರ್ಯಾದಸ್ಥನಾದ ಕುಸುಮಾಲೆ ತಂದೆ ಬೊಮ್ಮೇಗೌಡ ಇವರಿಬ್ಬರನ್ನು ಹಿಡಿಯಲು ಸೋಲಿಗರ ದಂಡನ್ನೇ ಕಳುಹಿಸಿ ವಿಫಲನಾದನು. ಕೊನೆಗೆ ಬಿಳಿಗಿರಿರಂಗ ಮತ್ತು ಕುಸುಮಾಲೆ ಓಡಿ ಹೋಗಿ ಬೆಟ್ಟದ ಮೇಲಿನ ದೇವಸ್ಥಾನಕ್ಕೆ ಸೇರಿಕೊಂಡರು. ಬೊಮ್ಮೆಗೌಡನ ಆದಿಯಾಗಿ ಸೋಲಿಗರೆಲ್ಲರೂ ಹುಡುಕಿದರೂ ಅವರ ಕಣ್ಣಿಗೆ ಯಾರೂ ಕಾಣಲಿಲ್ಲ. ಕುಸುಮಾಲೆ ರಂಗನ ಒಳಗಾದಳು. ನಮ್ಮ ಹೆಣ್ಣನ್ನು ರಂಗ ವರಸಿದ್ದರಿಂದ ‘ಬಿಳಿಗಿರಿರಂಗ ನಮಗೀಗ ಭಾವ’ ಎನ್ನುತ್ತಾ ಸೋಲಿಗರೆಲ್ಲಾ ಕುಣಿದಾಡತೊಡಗಿದರು. ಅಂದಿನಿಂದ ಬಿಳಿಗಿರಿರಂಗನಿಗೂ ಸೋಲಿಗರಿಗೂ ನೆಂಟಸ್ತಿಕೆ ಶುರುವಾಯಿತು. ಇದರ ಸಂಕೇತವಾಗಿ ಜಾತ್ರೆಯ ಸಂದರ್ಭದಲ್ಲಿ ಸೋಲಿಗರ ಹಿರಿಯ ಯಜಮಾನನಿಗೆ ಬೆಳ್ಳಿಯ ಮುದ್ರೆಯನ್ನು ಕೊಡಲಾಗುತ್ತದೆ.

ಬಹಳ ಹಿಂದೆ ಬಿಳಿಗಿರಿರಂಗನ ಒಕ್ಕಲಿಗ ಸೇರಿದ ಕೆಲವು ಗುಂಪಿನ ಜನ ತಮ್ಮ ಹೆಣ್ಣುಮಕ್ಕಳನ್ನು ದೇವದಾಸಿಯರನ್ನಾಗಿ ಬಿಡುತ್ತಿದ್ದರು. ‘ನಿನ್ನ ಹೆಸರಿನಲ್ಲಿ ತಾಳಿಕಟ್ಟಿಸಿ ಬಿಡ್ತೀನಿ’ ಎಂದು ಹೇಳಿ ಅನೇಕ ಮಂದಿ ಭಕ್ತರು ಹರಕೆ ಹೊತ್ತುಕೊಳ್ಳುತ್ತಿದ್ದುದುಂಟು. ಈ ರೀತಿಯಾಗಿ ಸೂಳೆ ಬಿಡುವುದಕ್ಕೆ ಬಿಳಿಗಿರಿರಂಗನ ಬೆಟ್ಟದ ದೇವಸ್ಥಾನಕ್ಕೆ ನಿಗದಿತ ಶುಲ್ಕವನ್ನು ಸಂದಾಯ ಮಾಡುತ್ತಿದ್ದರೆಂಬ ಉಲ್ಲೇಖಗಳು ದೇವಸ್ಥಾನದ ಕಪ್ಪು ಕಡತಗಳಿಂದ ತಿಳಿದು ಬರುತ್ತದೆ. ಬಿಳಿಗಿರಿರಂಗನ ಪಟ್ಟದ ಹೆಂಡತಿ ಲಕ್ಷ್ಮೀದೇವಿ, ಎರಡನೆಯವಳು ತುಳಸಮ್ಮ, ಮೂರನೆಯವಳೇ ಕಾಡುಸೋಲಿಗರ ಕುಸುಮಾಲೆ. ದೇವಾಲಯದಲ್ಲಿ ನಡೆಯುವ ವಿಶೇಷ ಸಂದರ್ಭಗಳ ಸೇವೆಗಳನ್ನು ಸೋಲಿಗರು ಇಂದಿಗೂ ಚಿಟ್ಟೆಯಾಗಿ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮ ನೆಂಟ ಭಾವನ ಸೇವೆ ಮಾಡುವುದು ನಮಗೆ ಪುಣ್ಯದ ಕೆಲಸ ಎಂದು ಅವರು ತಿಳಿದುಕೊಂಡಿದ್ದಾರೆ.

ಸಾಂಸ್ಕೃತಿಕ ನಾಯಕ ಬಿಳಿಗಿರಿರಂಗ ಮಹಾ ರಸಿಕ. ಆತನನ್ನು ಒಂದು ಕಡೆ ಹಿಡಿದಿಟ್ಟುಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಈ ಬೆಳ್ಳಿ ಬೆಟ್ಟದ ಒಡೆಯನನ್ನು ಕದ್ದು ನೋಡಲು ಸೂಳೆಯರ ದಂಡು ಕಾಯ್ದುಕೊಳ್ಳುತ್ತಿತ್ತು. ಸೂಳೆ ಚಿಕ್ಕರಂಗಿ ಮನೆಗೆ ಹೋಗಲು ಆಡಿದ ಆಟ ಹೂಡಿದ ತಂತ್ರಗಳು ಕಡಿಮೆಯಲ್ಲ. ಮನೆಯಲ್ಲಿ ಲಕ್ಷ್ಮೀದೇವಿ ಮತ್ತು ತುಳಸಮ್ಮ ಎಂಬ ಇಬ್ಬರು ಹೆಂಡತಿಯರನ್ನು ಇಟ್ಟುಕೊಂಡಿದ್ದರೂ ಹೊರಗಿನ ಸಹವಾಸಕ್ಕೆ ಮನಸೋತು, ಮಡದಿಯರ ಕಣ್ಣು ತಪ್ಪಿಸಿ ಅಲ್ಲಿಗೆ ತೆರಳುವ ಸಂಚುಗಳೆಲ್ಲ ಕಾವ್ಯದಲ್ಲಿ ರಂಜನೀಯವಾಗಿ ವರ್ಣಿತವಾಗಿದೆ. ಬಿಳಿಗಿರಿರಂಗನ ಸಾಂಸ್ಕೃತಿಕ ಬದುಕಿನ ಚಿತ್ರಣ ಬಹುಮುಖಿಯಾಗಿ ಅನಾವರಣಗೊಂಡಿದೆ.

ಬಿಳಿಗಿರಿರಂಗ ರಾತ್ರಿಯಲ್ಲಿ ಅರಣ್ಯ ಸಂಚಾರಕ್ಕೆ ಹೋಗುತ್ತಿದ್ದ. ಈ ಹಿನ್ನೆಲೆಯಲ್ಲಿ ಚಾಮರಾಜನಗರ ತಾಲ್ಲೂಕಿನ ಬೂದಿತಿಟ್ಟಿನ ಮಾದಿಗರು ಆತನಿಗೆ ಪಾದರಕ್ಷೆಯನ್ನು ಮಾಡಿಕೊಡುವ ಪದ್ಧತಿ ಬೆಳೆಯಿತು. ಜನಪದ ಸಮಾಜ ಅವನನ್ನು ಬೇಟೆ ರಾಯ ಎಂದೇ ಒಪ್ಪಿಕೊಂಡಿರುವುದರಿಂದ ಜಾತ್ರೆಯ ಸಂದರ್ಭದಲ್ಲಿ ‘ಬೇಟೆ ಮಣೆ ಸೇವೆ’ ಮಾಡಿಸುವ ಸಂಪ್ರದಾಯ ರೂಢಿಯಲ್ಲಿದೆ. ಬೇಟೆಗಾರನಾದ ಬಿಳಿಗಿರಿರಂಗ ತಾನೊಲಿದು ತಂದು ಗವಿಯಲ್ಲಿರಿಸಿಕೊಂಡಿದ್ದ ಕುಸುಮಾಲೆಗೆ ಆಹಾರದ ಅಗತ್ಯವಿದ್ದಾಗ, ಬೇಟೆಯಾಡಿ ಹಣ್ಣು-ಹಂಪಲು, ಗೆಡ್ಡೆ-ಗೆಣಸು ತಂದು ಕೊಡುತ್ತಿದ್ದ. ಹೀಗೆ ಸೋಲಿಗರೆ ಹಾಡುವ ಬಿಳಿಗಿರಿರಂಗನ ಕಾವ್ಯದಲ್ಲಿ ಕುಸುಮಾಲೆಯ ಕಥೆ ಒಂದು ವಿಶಿಷ್ಟ ಲೋಕವನ್ನು ತೆರೆದಿಟ್ಟಿದೆ. ಈ ಹಿನ್ನೆಲೆಯಲ್ಲಿ ಬಿಳಿಗಿರಿರಂಗನನ್ನು ಕುರಿತ ಮೌಖಿಕ ಕಾವ್ಯ ಸೋಲಿಗ ಸಮುದಾಯದ ಚರಿತ್ರೆಯನ್ನು ಕಟ್ಟಿಕೊಡುತ್ತದೆ. ಆ ಮೂಲಕ ಅದರಲ್ಲಿರುವ ಸಾಂಸ್ಕೃತಿಕ ಅನನ್ಯತೆಯನ್ನು ತಿಳಿದುಕೊಳ್ಳುವ ಸಾಧ್ಯವಿದೆ.

ಎಂ.ಎನ್.ಎಚ್.

 

ಬೀರೇದೇವರು ಬೀರಪ್ಪ ದೇವರನ್ನು ಕುರುಬರು ತಮ್ಮ ಗುರು ಎಂದು ನಂಬಿದ್ದಾರೆ. ಬೀರಪ್ಪ ಒಬ್ಬ ಪಶುಪಾಲಕ ದೇವರು. ಕರ್ನಾಟಕದ ಕುರುಬರು ಮೂಲತಃ ಕುರಿಕಾಯುವ ವೃತ್ತಿ ಹೊಂದಿದ್ದವರು ಕಾಲಾಂತರದಲ್ಲಿ ಕುರಿ ಮೇಯಿಸುವ ಕೆಲಸವನ್ನು ಕಾಡುಗೊಲ್ಲರಿಗೆ ವಹಿಸಿ ಕುರಿಯ ತುಪ್ಪಳದಿಂದ ಕಂಬಳಿ ನೇಯುವ ಹಾಗೂ ಅದನ್ನು ತಲೆಯ ಮೇಲೆ ಹೊತ್ತು ಊರೂರು ತಿರುಗಿ ಮಾರಾಟ ಮಾಡುವ ವೃತ್ತಿಯಲ್ಲಿ ತೊಡಗಿಕೊಂಡಿದ್ದಾರೆ.

ಹಾಲುಮತ ಮಹಾಕಾವ್ಯ ಎಂಬುದು ಕುರುಬರ ಕುಲಪುರಾಣವನ್ನು ವಿವರಿಸುವ ಜನಪದ ಮಹಾಕಾವ್ಯ. ಈ ಜನಪದ ಮಹಾಕಾವ್ಯದ ಜನಪದ ವೀರನಾಯಕ ಬೀರಪ್ಪ. ಆತ ಕುರುಬರ ಸಾಂಸ್ಕೃತಿಕ ವೀರ. ಆತನ ಆದರ್ಶಗುಣಗಳು ಈ ಮಹಾಕಾವ್ಯದ ಉದ್ದಕ್ಕೂ ವೈಭವೀಕೃತವಾಗಿ ವಿವರಿಸಲ್ಪಟ್ಟಿದೆ. ಆತನನ್ನು ಒಬ್ಬ ದೈವಾಂಶ ಸಂಭೂತನಂತೆ ಚಿತ್ರಿಸಲಾಗಿದ್ದು ಆತನ ಹೋರಾಟದ ಬದುಕಿನಲ್ಲಿ ಎಲ್ಲಿಯೂ ಆತ ಸೋಲುವುದಿಲ್ಲ. ಬೀರಪ್ಪನ ಹುಟ್ಟು ಒಂದು ಅತಿಮಾನುಷವಾದ ಹಾಗೂ ಪವಾಡರೂಪದಲ್ಲಿ ಘಟಿಸುತ್ತದೆ. ಜನಪದ ಮಹಾಕಾವ್ಯದ ಹಾಡುಗಾರ ಆ ಕಾವ್ಯದ ಮತ್ತೊಂದು ಪಾತ್ರವಾದ ಮಾಯವ್ವಳ ಅಣ್ಣನಾಗಿ ಬೀರಪ್ಪನ ಸಾಹಸಗಳ ಕುರಿತು ಹಾಡುತ್ತಿದ್ದರೆ ಜನಪದ ಮಹಿಳೆಯರು ಆತನನ್ನು ತಮ್ಮ ದೈನಂದಿನ ಗೋಳು ನಿವಾರಿಸುವ ಸ್ವಂತ ಅಣ್ಣನೆಂದೇ ಭಾವಿಸುತ್ತಾ ತಮ್ಮ ನೋವನ್ನು ನಿವೇದಿಸಿಕೊಳ್ಳುತ್ತಾರೆ. ಆತನ ಬಾಲ್ಯದ ದಿನಗಳ ವಿವರವನ್ನು ಹಾಡುಗಾರ ಹಾಡುತ್ತ ಹಾಡುತ್ತ ಆತನನ್ನು ಮನೆಯ ಮಗನೆಂದು ವಿವರಿಸಿದರೆ ಜನಪದ ತಾಯಂದಿರು ಆತನನ್ನು ತಮ್ಮ ಮನೆ ಮಗನೆಂದು ಹಾಡಿ ಕಾಮವ್ವೆಯ ಪ್ರಿಯತಮನೆಂದೂ ಚಿತ್ರಿಸಲಾಗಿದೆ. ಅನಂತರದಲ್ಲಿ ಆತನು ಇಡೀ ಸಮುದಾಯದ ಸಾಂಸ್ಕೃತಿಕ ವೀರನಾಗಿ, ಮಾಳಿಂಗರಾಯನ ಗುರುವಾಗಿ ಚಿತ್ರಿಸುವ ಮೂಲಕ ಇಡೀ ಸಮುದಾಯದ ಗುರುವಾಗಿ ಹಾಗೂ ಕೊನೆಯಲ್ಲಿ ಆ ಗುರುವನ್ನು ದೈವತ್ವಕ್ಕೇರಿಸುವ ಮೂಲಕ ಬೀರೇದೇವರಾಗಿ ಬೀರಪ್ಪನನ್ನು ಚಿತ್ರಿಸಲಾಗಿದೆ.

ಬೀರಪ್ಪನು ಶಿವನ ಬೆವರಿನಿಂದ ಜನಿಸಿದವನು ಎಂದು ನಂಬಲಾಗಿದೆ. ಈ ಭೂಮಿಯಲ್ಲಿ ಆತನು ಬಾಲ ಭರಮ ಎಂಬುವನ ಮಗನಾಗಿ ಜನಿಸಿದನೆಂದೂ, ಈ ಬಾಲ ಭರಮನು ಶಿವನ ಮಾನಸಪುತ್ರನೆಂದೂ ಪುರಾಣದಲ್ಲಿ ಹೇಳಲ್ಪಟ್ಟಿದೆ. ಶಿವನು ಕಮಲಾದೇವಿಯಲ್ಲಿ ತನ್ನ ಲೀಲೆಯನ್ನು ತೋರುವಾಗ ಬಾಲಭರಮನು ಜನಿಸುತ್ತಾನೆ. ಬಾಲ ಭರಮನ ಹೆಂಡತಿ ಸೂರಮ್ಮ ದೇವಿ. ಆಕೆ ಕಲಿನಾರಾಯಣನ ತಂಗಿ. ಕಲಿನಾರಾಯಣನು ಬಂಜೆಯೆಂಬ ಕಾರಣಕ್ಕೆ ಸೂರಮ್ಮದೇವಿ ಹಾಗೂ ಆಕೆಯ ಗಂಡ ಬಾಲ ಭರಮನನ್ನು ಹಂಗಿಸುತ್ತಾನೆ. ಘಾಸಿಗೊಂಡ ಸೂರಮ್ಮದೇವಿ ಮಕ್ಕಳ ಫಲಕ್ಕಾಗಿ ಶಿವನ ಕುರಿತು ತಪಸ್ಸು ಮಾಡುತ್ತಾಳೆ. ಶಿವನು ಆಕೆಯ ಜಾತಕವನ್ನು ನೋಡಿದಾಗ ಆಕೆಗೆ ಸ್ವಂತ ಮಕ್ಕಳನ್ನು ಪಡೆಯುವ ಯೋಗ ಇಲ್ಲವೆಂಬುದನ್ನು ಗುರುತಿಸುತ್ತಾನೆ. ಆದರೆ ಅವಳ ತಪಸ್ಸಿನ ತೀವ್ರತೆಗೆ ಭಯಗೊಂಡು ತನ್ನ ಬೆವರಿನ ಕೆಲವು ಹನಿಗಳನ್ನು ಆ ದಂಪತಿಗಳಿಗೆ ಕೊಡುತ್ತಾನೆ. ಅದನ್ನು ದಂಪತಿಗಳಿಬ್ಬರೂ ನುಂಗಿದ್ದರಿಂದ ಸೂರಮ್ಮ ದೇವಿ ಗರ್ಭವತಿಯಾಗುತ್ತಾಳೆ. ಬಯಕೆ ಊಟದ ಸೀಮಂತದ ಹಬ್ಬಕ್ಕೆ ಕಲಿನಾರಾಯಣನಿಗೆ ವಿಷ ಬೆರೆಸಿದ ಖಾದ್ಯಗಳನ್ನು ಆಕೆಗೆ ಉಡುಗೊರೆಯಾಗಿ ತರುತ್ತಾನೆ. ಸೂರಮ್ಮ ದೇವಿ ನಿದ್ರಿಸುತ್ತಿರುವಾಗ ಬೀರಪ್ಪ ಆಕೆಯ ಗರ್ಭದಿಂದಲೇ ಆಕೆಯೊಂದಿಗೆ ಮಾತನಾಡಿ ತನ್ನ ಮಾವನ ಕಲಿನಾರಾಯಣ ವಿಷಪೂರಿತ ಆಹಾರ ತರುತ್ತಿರುವ ಸುದ್ದಿ ತಿಳಿಸುತ್ತಾನೆ. ಸೂರಮ್ಮನಿಗೆ ಕಲಿನಾರಾಯಣ ಆಹಾರದ ಉಡುಗೊರೆ ನೀಡಿದೊಡನೆ ಆಕೆ ಅಲ್ಲಿದ್ದ ತಮ್ಮ ಮನೆಯ ನಾಯಿ ಬೆಕ್ಕುಗಳಿಗೆ ಆ ಆಹಾರವನ್ನು ಹಾಕುತ್ತಾಳೆ. ಅದನ್ನು ತಿಂದ ನಾಯಿ ಬೆಕ್ಕುಗಳೆರಡೂ ಸತ್ತು ಬೀಳುತ್ತವೆ. ಆಕೆ ಕೋಪದಿಂದ ಆ ಆಹಾರದ ಪೊಟ್ಟಣವನ್ನು ಎಸೆಯುತ್ತಾಳೆ. ಅದನ್ನು ಗುರು ರೇವಣಸಿದ್ಧನು ಕಲಿನಾರಾಯಣನ ಎಮ್ಮೆಗಳಿಗೆ ತಿನ್ನಿಸುತ್ತಾನೆ. ಅವು ಸತ್ತು ಬೀಳುತ್ತವೆ. ಹೀಗೆ ತಾಯಿಗರ್ಭದಲ್ಲಿರುವಾಗಲೇ ಬೀರಪ್ಪನು ತನ್ನ ಪವಾಡಗಳನ್ನು ತೋರಿಸಲಾರಂಭಿಸುತ್ತಾನೆ. ಕಲಿನಾರಾಯಣನಿಗೆ ಇದೆಲ್ಲ ಗರ್ಭದಲ್ಲಿರುವ ಮಗುವಿನ ಶಕ್ತಿಯಿಂದಾಗಿಯೇ ಹೀಗೆ ನಡೆದಿದೆ ಎಂದು ಅರಿವಾಗಿ ಅದನ್ನು ಕೊಲ್ಲಲು ವಿವಿಧ ಉಪಾಯಗಳನ್ನು ಯೋಜಿಸುತ್ತಾನೆ. ಸೂರಮ್ಮ ದೇವಿಗೆ ಹೆರಿಗೆ ನೋವು ಆರಂಭವಾದಾಗ ಅವಳಿಗೆ ಅನುಕೂಲವಾಗಲೆಂದು ಇಬ್ಬರು ಸೂಲಗಿತ್ತಿಯರನ್ನು ಕಳುಹಿಸುತ್ತಾನೆ. ಅವರು ಆಸೆಬುರುಕುತನದಿಂದ ಹೆಚ್ಚಿನ ಹಣದ ಆಸೆಗಾಗಿ ಆಗ ತಾನೆ ಹುಟ್ಟುವ ಮಗುವನ್ನು ಕೊಲ್ಲಲು ಒಪ್ಪಿಕೊಳ್ಳುತ್ತಾರೆ. ಅವರು ಕೈಗಳಿಗೆ ಉಕ್ಕಿನ ಮೊಳೆಗಳನ್ನು ಸಿಕ್ಕಿಸಿಕೊಂಡು ಹುಟ್ಟುವ ಮಗುವನ್ನು ಕೊಲ್ಲಲು ಕಾಯುತ್ತಿರುತ್ತಾರೆ. ಬೀರಪ್ಪನು ಅಸಹಜ ಹುಟ್ಟು ಪಡೆದು ತಾಯಿಯ ಹೊಟ್ಟೆ ಸೀಳಿಕೊಂಡು ಹೊರಬಂದು ಆ ಸೂಲಗಿತ್ತಿಯರಿಗೆ ಝಾಢಿಸಿ ಒದೆಯುತ್ತಾನೆ. ಅವರು ಭಯಗೊಂಡು ಓಡಿಹೋಗುತ್ತಾರೆ. ಬೀರಪ್ಪ ಚಿಕ್ಕ ಮಗುವಾಗಿ ತಾಯಿಯ ಮಡಿಲಲ್ಲಿ ಮುಗ್ಧನಂತೆ ಮಲಗಿ ನಿದ್ರಿಸುತ್ತಾನೆ.

ಸೋದರಮಾವ ಕಲಿನಾರಾಯಣ ಬೀರಪ್ಪನನ್ನು ಕೊಲ್ಲಲು ಅನೇಕ ಪ್ರಯತ್ನಗಳನ್ನು ಮಾಡುತ್ತಾನೆ. ಆತನು ಸೂರಮ್ಮ ದೇವಿಯ ಮನೆಗೆ ಬಂದು ಮಗುವಿನ ಜಾತಕವನ್ನು ಓದಿ ಈ ಮಗು ಮುಂದೆ ತಂದೆ, ತಾಯಿ, ಸೋದರಮಾವಂದಿರಿಗೆ ವಿಪತ್ತು ತರುತ್ತದೆಂದೂ ಈತನಿಂದ ಹಾಗೂ ಗುಡಿಪ್ರದೇಶಕ್ಕೆ ಕೂಡ ಹಾನಿಯಾಗುತ್ತದೆಂದೂ ತಿಳಿಸುತ್ತಾನೆ. ಈ ಮಾತಿನಿಂದ ಭಯಗೊಂಡ ಸೂರಮ್ಮದೇವಿ ಅದಕ್ಕೆ ಪರಿಹಾರವೇನೆಂದು ಕೇಳುತ್ತಾಳೆ. ಕಲಿನಾರಾಯಣನು ಪರಿಹಾರವಾಗಿ ಈ ಮಗುವನ್ನು ದಟ್ಟಕಾಡಿನಲ್ಲಿ ಒಂಟಿಯಾಗಿ ಬಿಟ್ಟು ಬರುವಂತೆ ತಿಳಿಸುತ್ತಾನೆ. ಸೂರಮ್ಮ ದೇವಿಯ ಮಗು ಮಲಗಿದ ತೊಟ್ಟಿಲಲ್ಲಿ ಕೆಲವು ಆಹಾರದ ಪೊಟ್ಟಣಗಳನ್ನು ಇರಿಸುತ್ತಾಳೆ. ಕಲಿನಾರಾಯಣನು ಬಾಡಿಗೆ ಹಂತಕರನ್ನು ಮಗುವನ್ನು ಕೊಲ್ಲಲು ಗೊತ್ತುಪಡಿಸುತ್ತಾನೆ. ಅವರು ತೊಟ್ಟಿಲನ್ನು ಹೊತ್ತೊಯ್ಯಲು ಪ್ರಯತ್ನಿಸಿದಾಗ ಮಗು ಬೀರಪ್ಪ ತೋರಿದ ಪವಾಡದಿಂದಾಗಿ ಆ ತೊಟ್ಟಿಲ ತೂಕ ಹೆಚ್ಚಾಗಿ ಅವರಿಗೆ ಅದನ್ನು ಎತ್ತಲು ಸಾಧ್ಯವಾಗಲೇ ಇಲ್ಲ. ಅದೇ ತಾಯಿ ಸೂರಮ್ಮ ಆ ತೊಟ್ಟಿಲನ್ನು ಹಿಡಿದೊಡನೆ ಅದು ಸಲೀಸಾಗಿ ಎತ್ತಲು ಸಾಧ್ಯವಾಯಿತು. ಅವರು ಆ ತೊಟ್ಟಿಲನ್ನು ದಟ್ಟ ಕಾಡಿನಲ್ಲಿ ಬಿಟ್ಟರು. ಆ ಸಮಯದಲ್ಲಿ ಅವರಿಗೆ ಬಹಳ ಹಸಿವಾಯಿತು. ತೊಟ್ಟಿಲ ಮಗುವಿನ ಪಕ್ಕದಲ್ಲಿದ್ದ ಆಹಾರದ ಪೊಟ್ಟಣ ನೋಡಿ ಅವರು ಅದನ್ನು ಹೊಟ್ಟೆ ತುಂಬಾ ತಿಂದರು. ಅದರಿಂದ ಅವರಿಗೆ ಮಗುವಿನ ಋಣ ತಮ್ಮ ಮೇಲಿದೆ ಎನ್ನಿಸಿ ಮಗುವನ್ನು ಕೊಲ್ಲುವ ಮನಸ್ಸು ಬಾರದೇ ಒಂದು ಮರದ ಟೊಂಗೆಗೆ ತೊಟ್ಟಿಲನ್ನು ಕಟ್ಟಿಬಂದು ಲಿನಾರಾಯಣನಿಗೆ ಮಗುವನ್ನು ಕೊಂದು ಬಂದೆವೆಂದು ಸುಳ್ಳು ವರದಿ ನೀಡಿದರು. ಶಿವ ಪಾರ್ವತಿಯರು ಆ ಮಗುವನ್ನು ನೋಡಿಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿದರು. ಸರ್ಪಗಳು ಹಾಗೂ ಇರುವೆಗಳು ಮಗುವನ್ನು ರಕ್ಷಿಸಿದವು. ಅಕ್ಕವ್ವ ಮತ್ತು ಮಾಯವ್ವ ಎಂಬ ಕುರುಬ ಕನ್ಯೆಯರು ಈ ಮಗುವಿನ ಅಳು ಕೇಳಿ ಅಲ್ಲಿಗೆ ಬರುತ್ತಾರೆ. ಅಕ್ಕವ್ವ ಮಗುವನ್ನು ತೊಟ್ಟಿಲಿನಿಂದ ಎತ್ತಲು ಪ್ರಯತ್ನಪಟ್ಟಾಗ ಸರ್ಪ, ಇರುವೆ ಹಾಗೂ ಕೋಗಿಲೆಗಳು ಅವಳಿಗೆ ಮಗುವಿನ ಸಮೀಪ ಸುಳಿಯಲೂ ಅವಕಾಶ ಮಾಡಿಕೊಡುವುದಿಲ್ಲ. ಮಾಯವ್ವ ಮಗುವನ್ನು ಎತ್ತಿಕೊಳ್ಳಲು ಬಂದಾಗ ಅವು ದೂರ ಸರಿದು ದಾರಿಮಾಡಿಕೊಡುತ್ತವೆ. ಆಗ ಅವರಿಬ್ಬರ ನಡುವೆ ಮಗು ಯಾರಿಗೆ ಸೇರಿದ್ದೆಂಬ ಬಗ್ಗೆ ವಾಗ್ವಾದ ಆರಂಭವಾಗುತ್ತದೆ. ಆಗ ಅವರೇ ತಮ್ಮ ನಡುವೆ ಒಂದು ಪರೀಕ್ಷೆ ಏರ್ಪಡಿಸಿಕೊಳ್ಳುತ್ತಾರೆ. ಅದರ ಪ್ರಕಾರ ಅವರು ಕ್ರಮವಾಗಿ ಮೂರು ಸುತ್ತು ತೊಟ್ಟಿಲನ್ನು ಸುತ್ತಬೇಕು. ಯಾರ ಮೊಲೆಯಿಂದ ಹಾಲು ಸುರಿಯುತ್ತದೆಯೋ ಅವರಿಗೆ ಮಗು ಸೇರಿದ್ದೆಂದು ತೀರ್ಮಾನಿಸುತ್ತಾರೆ. ಮಾಯವ್ವಳ ಮೊಲೆಯಿಂದ ಹಾಲು ಸುರಿದದ್ದರಿಂದ ಮಗು ಅವಳಿಗೆ ಸೇರುತ್ತದೆ. ಆಗಿನಿಂದ ಮಾಯವ್ವಳನ್ನು ಬೀರಪ್ಪನ ಅಕ್ಕ ಎಂದು ಪರಿಗಣಿಸಲಾಗಿದೆ.

ತನ್ನ ಬಾಲ್ಯಾವಸ್ಥೆಯಲ್ಲಿ ಬೀರಪ್ಪ ತನ್ನ ಅಕ್ಕ ಮಾಯವ್ವಳೊಂದಿಗೆ ಚಂದನಗಿರಿಯಲ್ಲಿ ಬೆಳೆಯುತ್ತಾನೆ. ತುಂಟ ಬಾಲಕನಾದ ಈತ ಹಳ್ಳಿಗರನ್ನು ತನ್ನೊಂದಿಗೆ ಚಿನ್ನಿ ದಾಂಡಿನ ಆಟ ಆಡಲು ಕರೆಯುತ್ತಾನೆ. ಇಡೀ ಹಳ್ಳಿ ಒಂದಾಗಿ ಆತನ ವಿರುದ್ಧ ಆಟದಲ್ಲಿ ಪೈಪೋಟಿಗೆ ಇಳಿದರೂ ಆತ ಏಕಾಂಗಿಯಾಗಿ ಪಂದ್ಯ ಗೆಲ್ಲುತ್ತಾನೆ. ಲಗೋರಿ ಆಟದಲ್ಲೂ ಆತ ಗೆಲ್ಲುತ್ತಾನೆ. ಆ ಆಟದಲ್ಲಿ ಈತ ಚೆಂಡನ್ನು ಏಳು ಸ್ಥಳಗಳಲ್ಲಿ ಹೊಡೆದನೆಂದೂ ಆ ಸ್ಥಳಗಳಲ್ಲಿ ಏಳು ಗುರುಮಠಗಳು ಸ್ಥಾಪನೆಗೊಂಡವೆಂದೂ ಭಕ್ತರು ನಂಬಿದ್ದಾರೆ. ಈ ಆಟ ನಡೆಯುವಾಗ ಬೀರಪ್ಪ ಚೆಂಡನ್ನು ಬಲವಾಗಿ ಬಾರಿಸಿದಾಗ ಆ ಚೆಂಡು ತಗುಲಿ ಆ ಹಳ್ಳಿಯ ಯಜಮಾನನ ಮಗನೊಬ್ಬ ಸತ್ತುಬಿಟ್ಟ. ಆಗ ಮಾಯವ್ವ ಆ ಹಳ್ಳಿಯನ್ನು ಬಿಟ್ಟು ಬೆಳ್ಳಿಗೆರೆ ಎಂಬ ಹಳ್ಳಿಯಲ್ಲಿ ನೆಲೆನಿಂತಳು. ಬೀರಪ್ಪ ಈ ಹಳ್ಳಿಯಲ್ಲಿ ಬಿಲ್ಲು ಬಾಣದ ಆಟದ ಆರಂಭಿಸಿ ಹರೆಯದ ಹುಡುಗಿಯರ ನೀರಿನ ಕೊಡಗಳನ್ನು ಒಡೆದು ಹಾಕಿದ. ಅವರೆಲ್ಲಾ ಮಾಯವ್ವನಿಗೆ ದೂರುನೀಡಿದರಲ್ಲದೆ ಬೀರಪ್ಪನನ್ನು ಯಾರೂ ದಿಕ್ಕಿಲ್ಲದ ತಂದೆತಾಯಿಯಿಲ್ಲದ ಅನಾಥ ಎಂದು ಜರೆದರು. ಅವರು ಮಾಯವ್ವನಿಗೆ ಆತನಿಗೆ ಬೇಗ ಮದುವೆ ಮಾಡೆಂದು ಸಲಹೆ ನೀಡಿದರು. ಮನನೊಂದ ಬೀರಪ್ಪ ತನ್ನ ತಂದೆ ತಾಯಿಯರು ಯಾರೆಂದು ಕೇಳಿದ. ಮಾಯವ್ವ ಆತನ ತಂದೆತಾಯಿಯರ ಕುರಿತು ತನಗೇನೂ ತಿಳಿಯದೆಂದಳು. ಆಕೆ ಆತನಿಗೆ ಯಾರನ್ನಾದರೂ ಮದುವೆ ಮಾಡಿಕೋ ಎಂದು ಹೇಳಿದಾಗ ತನ್ನ ಸೋದರ ಮಾವನ ಮಗಳಲ್ಲದೇ ಬೇರೆ ಎಲ್ಲರೂ ತನಗೆ ಅಕ್ಕ ತಂಗಿಯರಂತೆ ಕಾಣುತ್ತಾರೆ ಎಂದು ತುಂಬಾ ಮುಗ್ಧ ಹಾಗೂ ಗಂಭೀರವಾಗಿ ಹೇಳಿದ. ಅಲ್ಲದೆ ತನ್ನ ಸೋದರ ಮಾವ ಯಾರು ಎಂಬುದನ್ನು ಪತ್ತೆ ಹಚ್ಚಬೇಕೆಂದು ಬಯಸಿದ. ಕೊನೆಗೆ ನಗರಿ ಟ್ಟಣದ ಕಲಿನಾರಾಯಣ ತನ್ನ ಸೋದರಮಾವ ಎಂಬುದನ್ನು ಪತ್ತೆ ಹ್ಚಿದ. ತನ್ನ ಚತುರತನದಿಂದ ಕಲಿನಾರಾಯಣನ ಮಗಳಾದ ಕನ್ನಿ ಕಾಮವ್ವಳನ್ನು ಮದುವೆಯಾದ. ಕಲಿನಾರಾಯಣ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ. ಬೀರಪ್ಪ ಆನಂತರ ತನ್ನ ಹೆಂಡತಿ ಕನ್ನಿ ಕಾಮವ್ವ ಹಾಗೂ ಅಕ್ಕ ಮಾಯವ್ವರ ಜೊತೆ ಬೆಳ್ಳಿಗೆರೆಯಲ್ಲಿ ಸುಖವಾಗಿ ವಾಸಿಸುತ್ತಾನೆ.

ಬೀರಪ್ಪ ಅನೇಕ ಚಮತ್ಕಾರಿ ಪವಾಡಗಳನ್ನು ಮಾಡುತ್ತಾನೆ. ಮುಂಗಿಯ ರಾಜಕುಮಾರಿಗೆ ಬೆನ್ನೆಲುಬಿಗೆ ಹುಣ್ಣು ಬರುವಂತೆ ಮಾಡಿ ತಾನೇ ಇದನ್ನು ವಾಸಿ ಮಾಡಲು ಬೇಕಾದ ಔಷಧ ನೀಡಿ ಅನೇಕ ಬಹುಮಾನಗಳನ್ನು ಪಡೆಯುತ್ತಾನೆ. ಕೊಂಕಣದ ಭಂಗನಾಥನನ್ನು ಯುದ್ಧದಲ್ಲಿ ಗೆಲ್ಲುತ್ತಾನೆ. ಕ್ವಾಣೇಶ್ವರ ರಾಕ್ಷಸನನ್ನು ಕೊಲ್ಲುತ್ತಾನೆ. ಚಿಂತನಸೂರಿನ ಕಾಡಿನ ಕ್ರೂರ ದೈವವೊಂದನ್ನು ಕೊಲ್ಲುತ್ತಾನೆ. ಮಾಯವ್ವ ಚಂಚನಸೂರಿನಲ್ಲಿ ನೆಲೆಗೊಳ್ಳುತ್ತಾಳೆ ಮತ್ತು ತನ್ನೆಲ್ಲ ಕುರಿ ಮಂದೆಯನ್ನು ಆಕೆ ಬೀರಪ್ಪನಿಗೆ ಕೊಟ್ಟುಬಿಡುತ್ತಾಳೆ. ತನ್ನ ಸ್ನೇಹಿತ ಬಸಣ್ಣನ ಸಹಾಯದಿಂದ ಬೀರಪ್ಪ ಆ ಕುರಿಗಳನ್ನು ಕಾಯುತ್ತಿರುತ್ತಾನೆ. ಬೀರಪ್ಪ ಒಮ್ಮೆ ತಪಸ್ಸಿಗೆ ಕುಳಿತುಬಿಡುತ್ತಾನೆ. ಆತನ ಸುತ್ತ ಹುತ್ತ ಬೆಳೆಯುತ್ತದೆ. ಶಿವ ಆತನೆದುರು ಪ್ರತ್ಯಕ್ಷನಾದಾಗ ತನಗೊಬ್ಬ ಶಿಷ್ಯನನ್ನು ದಯಪಾಲಿಸುವಂತೆ ಬೀರಪ್ಪ ಕೋರುತ್ತಾನೆ. ಶಿವನು ಮಾಳಿಂಗರಾಯನನ್ನು ಆತನ ಶಿಷ್ಯನೆಂದು ಪರಿಚಯಿಸುತ್ತಾನೆ. ಬೀರಪ್ಪ ಆತನನ್ನು ಬಗೆಬಗೆಯಾಗಿ ಪರೀಕ್ಷಿಸಿ ಶಿಷ್ಯನೆಂದು ಒಪ್ಪಿಕೊಳ್ಳುತ್ತಾನೆ. ಒಮ್ಮೆ ಬೀರಪ್ಪ ತನ್ನ ಪೀಠದಿಂದೆದ್ದು ಸರ್ಪ ರೂಪ ಧರಿಸುತ್ತಾನೆ. ಮಾಳಿಂಗ ರಾಯನಿಗೆ ಗುರು ಕಾಣದಿರುವುದರಿಂದ ಅತೀವ ಕೋಪ ಬರುತ್ತದೆ. ಹೆಂಡತಿಮಕ್ಕಳನ್ನು ತೊರೆದು ಆತ ಕೂಡಲೇ ಗುರುವಿದ್ದ ಕಡೆಗೆ ಬರುತ್ತಾನೆ. ಕೂಡಲೇ ಬೀರಪ್ಪ ನಿಜರೂಪದಿಂದ ಆತನೆದುರು ಕಾಣಿಸಿಕೊಂಡು ಪೂಜೆ ಸ್ವೀಕರಿಸುತ್ತಾನೆ. ತನ್ನ ದಿವ್ಯ ಶಕ್ತಿಯಿಂದ ಮಾಳಿಂಗರಾಯನಿಗೆ ವಿಶೇಷ ಗೌರವವಾದರದಿಂದ ಸ್ಥಾನವೊಂದನ್ನು ಕಲ್ಪಿಸಿಕೊಡುತ್ತಾನೆ. ಹಾಲುಮತ ಮಹಾಕಾವ್ಯದ ಪ್ರಕಾರ ಬೀರಪ್ಪ ಕುರುಬನೆಂದೂ ಮಾಳಿಂಗರಾಯನು ಗೊಲ್ಲನೆಂದೂ, ಮಾಳಿಂಗರಾಯನು ಶಿವನ ವರಪ್ರಸಾದದಿಂದ ಜನಿಸಿದವನೆಂದೂ ಆತನ ತಂದೆ ತಾಯಿಯರ ಹೆಸರು ಸೋಮರಾಯ ಮತ್ತು ಕಣಬಾಯಿ ಎಂದೂ ತಿಳಿದುಬರುತ್ತದೆ. ಗೋರಖನಾಥನು ಆತನ ಆರಂಭಕಾಲದ ಗುರು. ಮಾಳಿಂಗರಾಯನು ಈರಮ್ಮ ಶರಣಮ್ಮ ಇಬ್ಬರನ್ನು ಒಂದೇ ದಿನ ಮದುವೆಯಾಗುತ್ತಾನೆ. ಗುರು-ಶಿಷ್ಯ ಸಂಬಂಧದ ಶ್ರೇಷ್ಠತೆ ಮತ್ತು ಉಪಯುಕ್ತತೆ ಕುರಿತು ಈ ಕಾವ್ಯ ಬಹಳ ವಿವರಗಳನ್ನು ನೀಡುತ್ತದೆ. ಗುರುವಿನ ಶ್ರೇಷ್ಠತೆ ಹಾಗೂ ಶಿಷ್ಯನ ವೀರೋಚಿತ ಸಾಧನೆಗಳ ಕುರಿತು ಈ ಕಾವ್ಯ ಬಹಳಷ್ಟು ವಿವರಗಳನ್ನು ನೀಡುತ್ತದೆ. ಈ ಕಾವ್ಯದಲ್ಲೂ ಮಹಾಭಾರತದ ಕಥೆ ಮಿಳಿತಗೊಂಡಿದೆ. ಮಾಳಿಂಗರಾಯನನ್ನು ಪರೀಕ್ಷಿಸಲೆಂದು ಒಮ್ಮೆ ಬೀರಪ್ಪ ಗುರು ಭೀಮನಿಗೆ ಸಂಜ್ಞೆ ಮಾಡುತ್ತಾನೆ. ಭೀಮನು ಮಾಳನನ್ನು ಕಳ್ಳನೆಂದು ಸೆರೆಹಿಡಿದು ಬಿಡುತ್ತಾನೆ. ಆದರೆ ಧರ್ಮರಾಯ ಆತನನ್ನು ಗುರು ಬೀರಪ್ಪನ ಶಿಷ್ಯನೆಂದು ಗುರುತಿಸಿ ತನ್ನ ಪಕ್ಕದಲ್ಲಿ ಆತನ ಗದ್ದುಗೆ ಹಾಕಿಕೊಂಡು ಕುಳಿತುಕೊಳ್ಳುವಂತೆ ಕೋರಿ ಗೌರವ ಸೂಚಿಸುತ್ತಾನೆ. ಪುರಾಣವಷ್ಟೇ ಅಲ್ಲದೆ ಇತಿಹಾಸದೊಂದಿಗೂ ಈ ಕಥೆ ಸಂಬಂಧ ಹೊಂದಿದೆ. ಮಾಳಿಂಗರಾ ಹಾಗೂ ಷೇಖ್ ಸೈಯದ್ ನಡುವಣ ಘಟನೆಗಳು ಬಿಜಾಪುರದಲ್ಲಿದ್ದ ಬಹಮನಿ ಸುಲ್ತಾನರ ಚಾರಿತ್ರಿಕ ಪ್ರಭಾವಗಳಿಂದಾಗಿರಬಹುದೆಂದು ಊಹಿಸಲಾಗಿದ್ದು ಹೆಚ್ಚಿನ ಸಂಶೋಧನೆಗೆ ಇಲ್ಲಿ ಅವಕಾಶವಿದೆ. ಅಮೋಘ ಸಿದ್ಧಿಯು ತಾನೇ ವಿಶ್ವದ ಅತಿ ಶ್ರೇಷ್ಠ ಭಕ್ತನೆಂದು ಗರ್ವಿತನಾಗಿದ್ದ. ಆದರೆ ಶಿವನು ಆತನಿಗೆ ಬೀರಪ್ಪನ ಭಕ್ತ ಮಾಳಿಂಗರಾಯನ ಕುರಿತು ತಿಳಿಸಿದ. ಇದರಿಂದ ಕೋಪಗೊಂಡ ಅಮೋಘ ಸಿದ್ಧಿ ಮಾಳನಿಗೆ ಅನೇಕ ರೀತಿಯ ತೊಂದರೆಗಳನ್ನು ನೀಡಿದ. ಆದರೆ ಮಾಳಿಂಗರಾಯನೇ ಆ ಸ್ಪರ್ಧೆಯಲ್ಲಿ ವಿಜಯಿಯಾದ. ಅನಂತರ ಪಾಂಡುರಂಗನೆಂಬ ಇನ್ನೋರ್ವ ಭಕ್ತ ಆತನನ್ನು ಸೇರಿಕೊಳ್ಳುತ್ತಾನೆ. ಆತ ಮಾಳಿಂಗರಾಯನಿಂದ ಲಿಂಗವೊಂದನ್ನು ಪಡೆಯುವ ಉದ್ದೇಶದಿಂದ ಅವರಿದ್ದಲ್ಲಿಗೆ ಬರುತ್ತಾನೆ. ಬೀರಪ್ಪನು ಮಾಳಿಂಗರಾಯನ ಆಶಯದಂತೆ ಲಿಂಗರೂಪ ಧರಿಸಿ ಹಾಲುಹಳ್ಳದ ದಡದಲ್ಲಿ ಅವತರಿಸುತ್ತಾನೆ. ಪಾಂಡುರಂಗ ಆ ಲಿಂಗವನ್ನು ಅಲ್ಲಿಂದ ಎತ್ತಿ ಒಯ್ಯಲು ಪ್ರಯತ್ನಿಸಿ ಸೋಲುತ್ತಾನೆ. ಆ ಸಮಯಕ್ಕೆ ಮಾಳಿಂಗರಾಯನೂ ಅಲ್ಲಿಗೆ ಬರುತ್ತಾನೆ. ಕೊನೆಗೆ ಆ ಮೂವರೂ ಆ ಸ್ಥಳದಲ್ಲಿಯೇ ನೆಲೆಗೊಳ್ಳ ಬಯಸುತ್ತಾರೆ. ಅಲ್ಲಿಯ ಹಳ್ಳಿಗರು ಈ ಸುದ್ದಿ ಕೇಳಿ ಪುಳಕಿತಗೊಳ್ಳುತ್ತಾರೆ. ಅಂದಿನಿಂದ ಬೀರಪ್ಪನ ಗದ್ದುಗೆಗೆ ಪೂಜೆ ಸಲ್ಲಿಸುವ ಪರಿಪಾಠ ಕುರುಬರಲ್ಲಿ ಚಾಲ್ತಿಗೆ ಬಂದಿದೆ.

ಇದು ಬೀರಪ್ಪನ ವೃತ್ತಾಂತ; ಈತ ಕುರುಬರ ಗುರು. ಪಶುಪಾಲಕ ದೇವರು. ಆದರೆ ಕುರುಬರು ದೇವರೂಪನೆಂದು ಈತನನ್ನು ಪೂಜಿಸಿದರೂ ಆತನನ್ನು ತಮ್ಮ ಗುರುವೆಂದೇ ಭಾವಿಸಿದ್ದಾರೆ. ಇತ್ತೀಚೆಗೆ ಅತಿ ಪ್ರಚಾರಕ್ಕೆ ಬರುತ್ತಿರುವ ಬೀರೇಶ್ವರ ಡೊಳ್ಳಿನ ಸಂಘಗಳು ಪಾರಂಪರಿಕವಾಗಿ ಬೀರೇಶ್ವರನ ಪೂಜೆ ಕುರುಬರಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದಿದೆ ಎಂಬುದನ್ನು ಪ್ರತಿಬಿಂಬಿಸುತ್ತವೆ.

ಎಂ.ಎನ್.ವಿ.

 

ಬುಟ್ಟ ಬೊಮ್ಮಲಾಟ ಇದು ತೆಲುಗು ಜನಪದ ಪ್ರದರ್ಶನ ಕಲೆ (ಗಾರುಡಿ ಗೊಂಬೆ). ಮನರಂಜನಾ ಪ್ರಧಾನವಾದ ಇದು ಪ್ರಾಚೀನ ಜನಪದ ಕಲೆಗಳಲ್ಲಿ ಒಂದು. ರಾಜ, ರಾಣಿ, ರೈತ, ರೈತನ ಹೆಂಡತಿ, ಕುದುರೆ, ರಥೆ, ಅಶ್ವಕ, ಮೊದಲಾದ ರೂಪಗಳಲ್ಲಿ ಗೊಂಬೆಗಳನ್ನು ತಯಾರಿಸಿ ಅವುಗಳಿಗೆ ಹೊಂದುವಂಥ ಬಟ್ಟೆಗಳನ್ನು ತೊಡಿಸಿ, ತಕ್ಕ ವೇಷ ಭೂಷಣಗಳಿಂದ ಅಲಂಕರಿಸುತ್ತಾರೆ. ಅನಂತರ ತಮಟೆವಾದನಕ್ಕೆ ಅನುಗುಣವಾಗಿ ಗೊಂಬೆಗಳನ್ನು ಆಡಿಸುತ್ತಾ ಹೆಜ್ಜೆ ಹಾಕಿ ನೃತ್ಯ ಮಾಡುವುದೇ ಬುಟ್ಟಬೊಮ್ಮಲಾಟದ ಪ್ರದರ್ಶನ. ಬುಟ್ಟಿಯಂತೆ ತುಂಬಿದಾಕಾರದಲ್ಲಿ ಇರುವ ಗೊಂಬೆಗಳನ್ನು ಆಡಿಸುವ ಪ್ರದರ್ಶನವಾದುದರಿಂದ ಇದಕ್ಕೆ “ಬುಟ್ಟ ಬೊಮ್ಮಲಾಟ” ಎಂಬ ಹೆಸರು ಸಹಜವಾಗಿಯೇ ಬಂದಿದೆ.

ಈ ಆಟವನ್ನು ಗ್ರಾಮದೇವತೆಯ ಉತ್ಸವ, ಮೆರೆವಣಿಗೆಯಲ್ಲಿ, ಹಬ್ಬದ ಸಂದರ್ಭಗಳಲ್ಲಿ, ಜಾತ್ರೆಯ ವೇಳೆ, ದಸರಾ, ವಿನಾಯಕ ಚತುರ್ಥಿ ಮೊದಲಾದ ಸಂದರ್ಭಗಳಲ್ಲಿ ಸಾಮಾನ್ಯವಾಗಿ ರಾತ್ರಿ ವೇಳೆ ಪ್ರದರ್ಶಿಸುತ್ತಾರೆ. ಕೆಲವು ವಿಶೇಷ ಸಂದರ್ಭಗಳಲ್ಲಿ ಹಗಲೂ ಪ್ರದರ್ಶಿಸುವುದುಂಟು. ಈ ಪ್ರದರ್ಶನದಲ್ಲಿ ಅನುಕರಣೆಗೆ ಪ್ರಾಧಾನ್ಯ ಹೆಚ್ಚು. ಎರಡು, ಮೂರು ತಮಟೆಗಳು ಈ ಕಲೆಯಲ್ಲಿ ಬಳಕೆಗೊಳ್ಳುತ್ತವೆ.

28_70A_DBJK-KUH

ತಮಟೆಯ ಧ್ವನಿಗೆ ಅನುಗುಣವಾಗಿ ಹೆಜ್ಜೆ ಹಾಕುತ್ತಾ ನೋಡುಗರನ್ನು ಆನಂದ ಪರವಶರನ್ನಾಗಿಸುತ್ತಾರೆ. ಈ ಟದಲ್ಲಿ ನಡುಕ ಹುಟ್ಟಿಸುವ ವಿನ್ಯಾಸಗಳು, ನೈಪುಣ್ಯದಿಂದ ಕೂಡಿದ ನಾಟ್ಯವಿರುತ್ತದೆ. ಗಾರುಡಿ ಗೊಂಬೆಗಳು ನೈಜವಾಗಿ ನಾಟ್ಯ ಮಾಡುತ್ತಿರುವಂತೆ ನಂಬಿಸುವ ಕಲಾನೈಪುಣ್ಯ ಈ ಕಲಾವಿದರಿಗೆ ಕರಗತವಾಗಿದೆ. ಕಲಾವಿದನ ಪ್ರತಿಭೆ ಇಲ್ಲಿ ಪ್ರತಿಬಿಂಬಿತವಾಗುತ್ತದೆ.

ಹಿಂದೆ ಇಂತಹ ಗೊಂಬೆಗಳನ್ನು ಬಿದಿರು ದಬ್ಬೆಗಳಿಂದಲೂ ಕಾಗದದಿಂದಲೂ ಹುಣೆಸೆ ಬೀಜದ ಹಿಂಡಿಯನ್ನು ಬೆರಸಿ ತಯಾರಿಸುತ್ತಿದ್ದರು. ಆದರೆ ಈಗ ಪಾಶ್ಚಾತ್ಯ ವಾತಾವರಣಕ್ಕೆ ಅನುಗುಣವಾಗಿ ಪ್ರತ್ಯೇಕವಾದ ಮುಖವಾಡಗಳನ್ನು ಉಪಯೋಗಿಸುತ್ತಾರೆ. ರಾಜನ ಪಾತ್ರಕ್ಕೆ ತಕ್ಕ ಕಿರೀಟ ವೇಷ ಭೂಷಣ ರಾಣಿ ಪಾತ್ರಕ್ಕೆ ಅವರದೇ ವಸ್ತ್ರ ಧಾರಣೆ ಇರುತ್ತದೆ. ಇಲ್ಲಿ ರಾಜ ರಾಣಿ ಪಾತ್ರಗಳನ್ನು ಗಂಡಸರೇ ಮಾಡುತ್ತಾರೆ. ದೊರೆಯ ಪಾತ್ರಕ್ಕೆ ಕೋಟು ಟೈ, ಕನ್ನಡಕ, ಟೋಪಿ ಬೇಕು. ದೊರೆಸಾನಿ ಪಾತ್ರಕ್ಕೆ ಗೌನು ತಾಮ್ರ ಬಣ್ಣದ ಕೂದಲು ಟೋಪಿ ಇರುತ್ತದೆ. ರೈತ ಮತ್ತು ಅವನ ಹೆಂಡತಿಯ ಉಡುಪು ಸಾಧಾರಣವಾದುದು. ರೈತ ತಲೆಗೆ ರುಮಾಲು, ಪಂಚೆ, ಹೆಂಡತಿ ತಲೆಗೆ ಗಂಟು, ಮೂಗಿಗೆ ನತ್ತು ಇತ್ಯಾದಿ ಧರಿಸಿರುತ್ತಾಳೆ. ಕುದುರೆ, ರೈತನ ಪ್ರದರ್ಶನ ಹೆಸರಿಸತಕ್ಕದ್ದು. ಕುದುರೆ ಸಹಜವಾಗಿಯೇ ಇರುತ್ತದೆ. ರಾಜನ ಪಾತ್ರದಲ್ಲಿ ಕುದುರೆ ಕಡ್ಡಾಯ. ಇಲ್ಲಿಯ ಕುದುರೆಗೆ ಎರಡೇ ಕಾಲು. ಈ ಪಾತ್ರವನ್ನು ಒಬ್ಬ ಕಲಾವಿದನಿಂದ ಮಾಡಿಸುತ್ತಾರೆ.

ರಾಜ, ರಾಣಿ, ದೊರೆ, ದೊರೆಸಾನಿ, ಪಾತ್ರಗಳು ತಮಟೆ ವಾದ್ಯಕ್ಕೆ ತಕ್ಕಂತೆ ಗಿರಗಿರ ಸುತ್ತುತ್ತಾ ಸ್ವಲ್ಪ ಸಮಯ, ಕೈ ಕೈ ಹಿಡಿದು, ಸ್ವಲ್ಪ ಸಮಯ ಎದುರು ಬದುರಾಗಿ ಹತ್ತಿರವಾಗುವುದು ಆಗಾಗ ದೂರವಾಗುವುದು, ಪರಸ್ಪರ ಅಪ್ಪಿಕೊಳ್ಳುವುದು, ಕೋಪದಿಂದ ಹಿಂತಿರುಗುವುದು, ಮುನಿಸಿಕೊಳ್ಳುವುದು ಹೀಗೆ ಸ್ವಲ್ಪ ಸ್ವಲ್ಪ ಸಮಯ ವಿಭಿನ್ನ ವರಸೆಗಳನ್ನು ತೋರಿಸುತ್ತಾ ಮನರಂಜನೆಯನ್ನು ಒದಗಿಸುವರು. ಇದರಲ್ಲಿ ಹಾಸ್ಯ ಆಗಾಗ ಸ್ಥಾನ ಪಡೆಯುತ್ತದೆ. ಕುದುರೆ ಸವಾರಿ ಪ್ರದರ್ಶನದಲ್ಲಿ ಆಗಾಗ ಅದು ಜಾಡಿಸಿ ಒದೆಯುವುದು, ಇದ್ದಕ್ಕಿದ್ದಂತೆ ಓಡುವುದು, ಗಿರ‍್ರನೆ ಸುತ್ತುವುದು ಮುಂತಾದ ಭಂಗಿಗಳಲ್ಲಿ ಗೊಂಬೆಗಳನ್ನು ಪ್ರದರ್ಶಿಸಿ ಪ್ರಾಚೀನ ಕಲೆಯ ವೈಶಿಷ್ಟ್ಯವನ್ನು ಸಂಸ್ಕೃತಿಯ ಪ್ರಾಚೀನತೆಯನ್ನು ನೆನಪಿಗೆ ತರುತ್ತವೆ. ಗಾರುಡಿಗೊಂಬೆ ಆಟಗಳನ್ನು ಆಂಧ್ರ ಪ್ರದೇಶದಲ್ಲಲ್ಲದೆ ತಮಿಳುನಾಡು ಕರ್ನಾಟಕದಲ್ಲೂ ಕಾಣಬಹುದು.

ಟಿ.ಎಸ್.ಎನ್. ಅನುವಾದ ಎನ್.ಆರ್.