ಬುಡಕಟ್ಟು ಕಲೆ ಶಿರಾಡಿ, ಚರ್ಮಾಡಿ, ನಾಗೋಡಿ, ಆಗುಂಬೆ, ಅರಬೈಲ್, ನಾಗವಳ್ಳಿ, ಗೇರುಸೊಪ್ಪ, ಮಲೆಮನೆ, ದೇವಿಮನೆ, ಮುಂತಾದ ಘಟ್ಟ ಪ್ರದೇಶಗಳು; ಕಾವೇರಿ, ಚಂದ್ರಗಿರಿ, ಬರಪೊಳೆ, ನೇತ್ರಾವತಿ, ಸೀತಾ, ಗಂಗಾವಳಿ, ಶರಾವತಿ ಬೇಡ್ತಿ, ಅಘನಾಶಿನಿ ಮುಂತಾದ ನದಿಗಳು ಈ ಎಲ್ಲವನ್ನೂ ಒಳಗೊಂಡ ಕರ್ನಾಟಕದ ಪಶ್ಚಿಮ ಘಟ್ಟ ಹಾಗೂ ಕರಾವಳಿಯ ನಡುವಿನ ವೈವಿಧ್ಯಮಯ ಭೂಪ್ರದೇಶಗಳಾದ ಕೊಡಗು, ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕಂಡುಬರುವ ಸೋಲಿಗರು, ಯರವರು, ಕುಡುಬಿಯರು, ಕಾಡು ಕುರುಬರು, ಗೊಂಡರು, ಕುಣಬಿಯರು, ಹಸಲರು, ಸಿದ್ದಿಯರು, ಗೌಳಿಗರು, ಹಾಲಕ್ಕಿ ಒಕ್ಕಲಿಗರು, ಕೊರಗರು, ಮಲೆಕುಡಿಯರು, ಮೇರರು, ಮನ್ಸರು ಮತ್ತು ಭೈರರು ಮುಂತಾದಂತೆ ಹತ್ತು ಹಲವು ರೀತಿಯ ಬುಡಕಟ್ಟುಗಳು ತಮ್ಮದೇ ಆದ ರೀತಿಯಲ್ಲಿ ಇಂದೂ ಬದುಕು ಸಾಗಿಸುತ್ತಿದ್ದಾರೆ. ಈ ಬುಡುಕಟ್ಟುಗಳಲ್ಲಿ ಎರಡು ವರ್ಗಗಳನ್ನು ಗುರುತಿಸಬಹುದು. ಅನಾದಿ ಕಾಲದಿಂದ ಸಹ್ಯಾದ್ರಿಯ ಆಜುಬಾಜಿನಲ್ಲಿ ವಾಸವಿದ್ದ ಮೂಲ ನಿವಾಸಿಗಳದ್ದು ಒಂದು ವರ್ಗವಾದರೆ, ನಾನ ಕಾರಣಗಳಿಗಾಗಿ ಬೇರೆ ಬೇರೆ ಪ್ರದೇಶಗಳಿಂದ ವಲಸೆ ಬಂದು ನೆಲೆನಿಂತ ಜನವರ್ಗಗಳೂ ಇಲ್ಲಿವೆ. ಆಹಾರ ಸಂಗ್ರಹಣೆ ಬೇಟೆ, ಹೈನುಗಾರಿಕೆ, ಕೃಷಿ ಕೂಲಿ ಕಸೂತಿ ಹಾಗೂ ಕುಶಲಕಲೆ ಇವರು ಜೀವನೋಪಾಯಕ್ಕಾಗಿ ಆರಿಸಿಕೊಂಡ ಮಾರ್ಗಗಳು. ಕನ್ನಡವಲ್ವೆ ಕೊಡವ, ಯರವ, ತುಳು, ಕೊಂಕಣಿ, ಮರಾಠಿ ಇವರ ಮಾತೃ ಭಾಷೆಗಳಾಗಿವೆ. ಭಾಷೆಗಳ ಸಮ್ಮಿಶ್ರ ಬಳಕೆಯಿಂದಾಗಿ ಉಪಭಾಷೆಗಳೂ ಸೃಷ್ಟಿಯಾಗಿವೆ.

ನಿತ್ಯ ಹರಿದ್ವರ್ಣದ ಕಾಡುಗಳೆನಿಸಿದ ಪಶ್ಚಿಮ ಘಟ್ಟದ ಅರಣ್ಯಗಳು ಪ್ರಪಂಚದಲ್ಲಿಯೇ ಅಪರೂಪದ ಸಸ್ಯರಾಶಿಗಳನ್ನು ಪಡೆದವಾಗಿದ್ದು ಜೀವ ಜಗತ್ತಿನ ಎಲ್ಲ ವಿಸ್ಮಯಗಳನ್ನು ಪ್ರತಿಬಿಂಬಿಸುವ ತಾಣಗಳಾಗಿವೆ. ಹೊನ್ನೆ, ನಂದಿ, ಸಾಗಡೆ, ತಡಸಿರಿ, ನೇರಳೆ, ಜಂಬೆ, ಬೂರಗ, ಮಾಕಾಳಿ, ದೂಪ, ಧೂಮ, ಹಲಸು, ಹೆಬ್ಬಲಸು, ಸಳ್ಳೆ, ಸಾತಿ ಮುಂತಾದ ನೂರಾರು ರೀತೀಯ ಭೀಮಕಾಯದ ಮರಗಳು ಪಶ್ಚಿಮಘಟ್ಟದ ಸಮೃದ್ಧಿಗೆ ಸಾಕ್ಷಿಯಾಗಿವೆ. ಭೂಮ್ಯಾಕಾಶಗಳನ್ನು ಒಂದು ಮಾಡಿ ಸೂರ್ಯಕಿರಣಗಳನ್ನು ನುಂಗಿ ಭೂಮಿಯನ್ನು ತಣ್ಣಗಿಟ್ಟು ಅದರಲ್ಲಿ ಮತ್ತೆ ನಾನಾ ವಿಧವಾದ ಅಣಬೆ ಅರ್ಕಿಡ್‌ಗಳು ಬೆಳೆಯಲು ಸಹಕಾರಿಯಾಗಿ ಜೊತೆಗೇ ಬಿದಿರು, ಬೆತ್ತ ಹಾಗೂ ಹತ್ತಾರು ಬಗೆಯ ಬಳ್ಳಿಗಳು ಹಬ್ಬಿ ಹೆಣೆದುಕೊಂಡಿವೆ. ಅಡಿಕೆ, ತೆಂಗು, ಬೈನೆ, ಈಚಲು ಮುಂತಾದ ಸಸ್ಯಗಳಲ್ಲದೆ ಕಾಫಿ, ಟೀ, ಏಲಕ್ಕಿ, ಲವಂಗ, ಮೆಣಸು, ಕೋಕೋ ಹಾಗೂ ಕಿತ್ತಳೆಗಳಂತಹ ವಾಣಿಜ್ಯ ಬೆಳೆಗಳಾಗಿ ಪರಿವರ್ತಿತವಾಗಿವೆ.

ಒಂದು ಕಾಲಕ್ಕೆ ತಮ್ಮ ಕುಲ ಹಾಗೂ ಪಂಗಡಗಳಿಗೆ ಗಿಡಮರಗಳ ಹೆಸರನ್ನೆ ಇಟ್ಟುಕೊಂಡು ಅವುಗಳ ಮೂಲಕವೇ ತಮ್ಮ ಅಸ್ತಿತ್ವವನ್ನು ಗುರುತಿಸಿಕೊಂಡ ಹತ್ತಾರು ಬುಡಕಟ್ಟುಗಳು ಇಂದಿಗೂ ಈ ಸಂಪ್ರದಾಯವನ್ನು ಅನುಸರಿಸುತ್ತಿವೆ. ದೇವರ ಹೆಸರಿನಲ್ಲಿ ಮೀಸಲಿಟ್ಟ ಕಾಡುಗಳು ಇಂದಿಗೂ ದೇವರ ಕಾಡುಗಳಾಗಿ ಉಳಿದು ಬಂದಿವೆ. ಮೀಸಲಿಲ್ಲದ ಕಾಡಿನಲ್ಲೂ ಒಂದು ಮರ ಕಡಿಯಬೇಕಾದ ಅನಿವಾರ್ಯ ಪ್ರಸಂಗ ಬಂದರೆ ಅದನ್ನು ಪೂಜಿಸಿ ಅತ್ಯಂತ ಗೌರವದಿಂದ ಮರಗಳನ್ನು ಕಡಿಯುತ್ತಿದ್ದ ಬುಡಕಟ್ಟುಗಳ ಮೌಲ್ಯ ಆದರ್ಶಪ್ರಾಯ.

ಸಸ್ಯಾರಾಧನೆ, ಪ್ರಾಣಿಯಾರಾಧನೆ ಹಾಗೂ ಪ್ರಕೃತಿ ಆರಾಧನೆಯನ್ನು ಇಂದಿಗೂ ಗಿರಿಜನರಲ್ಲಿ ನಿಚ್ಚಳವಾಗಿ ಕಾಣಲು ಸಾಧ್ಯವಿದೆ. ಬೆಟ್ಟಗುಡ್ಡ, ನದಿ, ಸಮುದ್ರಗಳನ್ನು ಆರಾಧಿಸುವ ಜನರಿದ್ದಾರೆ. ಎಮ್ಮೆ, ಎತ್ತು, ನಾಗ, ಹುಲಿ, ಹಂದಿ, ಆನೆಗಳನ್ನು ಆರಾಧಿಸುವ ಜನರಿದ್ದಾರೆ. ತಮ್ಮ ನಡುವಿನ ನಾನಾ ವಿಧವಾದ ಸಸ್ಯಗಳನ್ನು ಆರಾಧಿಸುವ ಜನರಿದ್ದಾರೆ. ಹಾಗೆಯೇ ತಮ್ಮ ಪರಿಸರದ ಪಕ್ಷಿಗಳನ್ನು ತಮ್ಮ ಕುಲದೊಡನೆ ಗುರುತಿಸಿಕೊಂಡ ಜನರೂ ಇದ್ದಾರೆ. ಅವರ ಬುಡಕಟ್ಟಿನ ರಕ್ಷಣೆಗಾಗಿ ಹೋರಾಡಿದ ಅನೇಕ ವೀರರು ಅವರ ಜಟ್ಟಿಗರಾಗಿ, ದೇವರುಗಳಾಗಿ ಪರಿವರ್ತಿತವಾಗಿ ಪೂಜೆಗೊಳ್ಳುತ್ತಿದ್ದಾರೆ. ಪ್ರಾಣಾರ್ಪಣೆ ಮಾಡಿದ ಹೆಂಗಸರೂ ವಿವಿಧ ರೀತಿಯಲ್ಲಿ ಪೂಜೆಗೊಳ್ಳುತ್ತಿದ್ದಾರೆ. ಆದರೆ ಬಹುಶಃ ಹತ್ತನೇ ಶತಮಾನದಿಂದ ಈಚೆಗೆ ಕರ್ನಾಟಕದಲ್ಲಿ ನಡೆದ ಹಲವು ಧಾರ್ಮಿಕ ಚಳವಳಿಗಳ ಪ್ರಭಾವವೂ ಈ ಬುಡಕಟ್ಟುಗಳ ಮೇಲೆ ಆಗದೇ ಇಲ್ಲ. ಮೂಲದಲ್ಲಿ ಸಸ್ಯಾರಾಧನೆ, ಪ್ರಾಣಿಯಾರಾಧನೆ ಮತ್ತು ಕುಲದ ವೀರರ ಆರಾಧನೆಯಲ್ಲಿ ಮಾತ್ರ ತೊಡಗಿದ್ದ ಇವರ ಮೇಲೆ ಬಸವಣ್ಣ, ಮಲೆಮಾದೇಶ್ವರ, ಮಂಟೇಸ್ವಾಮಿ, ಬಿಳಿಗಿರಿರಂಗ, ಧರ್ಮಸ್ಥಳದ ಮಂಜುನಾಥ ಹಾಗೂ ತಿರುಪತಿ ವೆಂಕಟರಮಣನಾದಿಯಾಗಿ ಹಲವು ದೇವರ ಪ್ರಭಾವ ಆಗುತ್ತಾ ಬಂದಿದೆ. ಇತ್ತೀಚೆಗೆ ರಾಘವೇಂದ್ರನೂ ಮಲೆನಾಡಿಗೆ ಪ್ರವೇಶ ಮಾಡಿದ್ದಾನೆ. ಅಪಾರ ಸಂಖ್ಯೆಯಲ್ಲಿರುವ ಹಾಲಕ್ಕಿ ಒಕ್ಕಲಿಗರು, ಗೊಂಡರು ಮತ್ತು ಸೋಲಿಗರ ಮೇಲೆ ಅಧಿಕವಾದ ವೈಷ್ಣವ ಪ್ರಭಾವ ಆಗಿರುವುದಕ್ಕೂ ರಾಮನುಜಾಚಾರ್ಯ, ವೈಷ್ಣವೀರರಣಕ್ಕೂ ಸಂಬಂಧವಿರುವಂತಿದೆ. ಕೇವಲ ಬುಡಕಟ್ಟುಗಳಲ್ಲದೆ ಮಲೆನಾಡಿನ ಹಲವಾರು ಜನವರ್ಗಗಳೇ ಈ ಸಂದರ್ಭದಲ್ಲಿ ‘ನಾಮಧಾರಿ’ಗಳಾಗಿ ಪರಿವರ್ತಿತರಾಗಿದ್ದಾರೆ. ಹಲವಾರು ಬುಡಕಟ್ಟುಗಳು ಕ್ರಮೇಣ ತಮ್ಮ ಅಸ್ತಿತ್ವ ಕಳೆದುಕೊಂಡು ಜಮೀನುದಾರರ ಅವಲಂಬಿಗಳಾಗತೊಡಗಿದ ಮೇಲೆ ಆಯಾ ಪ್ರದೇಶದ ಪ್ರಭಾವಿ ಜನವರ್ಗಗಳ ಆರಾಧನೆಯ ಪ್ರಭಾವವೂ ಈ ಜನರ ಮೇಲಾಯಿತು. ಇಷ್ಟೆಲ್ಲದರ ನಡುವೆಯೂ ಬುಡಕಟ್ಟುಗಳ ವಿಶೇಷವೆಂದರೆ ಅವರ ಮೂಲ ದೈವಾರಾಧನೆಯ ಕ್ರಮಗಳನ್ನು ಬಿಟ್ಟಿಲ್ಲ ಎಂಬುದೇ ಆಗಿದೆ. ಅವರ ದೈವಾರಾಧನೆಯ ಕ್ರಮದಲ್ಲಿ ಅವಸ್ಥಾಂತರಗಳೇನೋ ಆಗಿವೆ. ಮೂರನೆಯ ಹಂತದ ಪ್ರಭಾವದಲ್ಲಿ ಅವರ ವೈದಿಕೀಕರಣದ ಸಂದರ್ಭಗಳೂ ಆಗಿ ಹೋಗಿವೆ. ಆದರೂ ಈ ಬುಡಕಟ್ಟು ಜನ ಸಸ್ಯಾರಾಧನೆ, ಪ್ರಾಣಿಯಾರಾಧನೆ ಹಾಗೂ ತಮ್ಮೊಳಗಿನ ಸಾಂಸ್ಕೃತಿಕ ವ್ಯಕ್ತಿಗಳ ಆರಾಧನೆಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಗೊಂಡರ ‘ಜಟ್ಟಿಗ’ ಹಾಲಕ್ಕಿಗಳ ‘ಬೀರ’, ಸಿದ್ದಿಯರ ‘ಸಿದ್ಧಿನಾಸ’, ಕುಣಬಿಯರ ‘ತುಳಸಿ’ ಹಸಲರ ‘ಭೂಮಿ ಹುಣ್ಣೀಮೆ’ ಮೇರರ ‘ಕಾಡ್ಯ’ ಮಲೆಕುಡಿಯರ ‘ಐತಪ್ಪ’ ಗೌಳಿಗರ ‘ಎಮ್ಮೆ’ ಕುಡಿಯರ ‘ಐಯ್ಯಪ್ಪ’ ಬೆಟ್ಟಕುರುಬರ ‘ಬೆಟ್ಟದ ಚಿಕ್ಕಮ್ಮ’ ಇವೆಲ್ಲ ಅವರ ಮಹತ್ತ್ವ ಸಾಂಸ್ಕೃತಿಕ ಪಳೆಯುಳಿಕೆಗಳಾಗಿ ಇನ್ನೂ ಉಳಿದಿವೆ.

ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಮಹತ್ತ್ವದ ಹಬ್ಬ. ಈ ಸಂದರ್ಭದಲ್ಲಿ ಅವರು ಪ್ರದರ್ಶಿಸುವ ಕೋಲು ಕುಣಿತ ಮತ್ತು ಕುಂಚದ ಕುಣಿತವಾಗಲೀ, ಕುಣಿತದ ಸಂದರ್ಭದಲ್ಲಿ ಹಿನ್ನೆಲೆಯಾಗಿ ಬಳಸುವ ತಮಟೆ ವಾದ್ಯವಾಗಲೀ ಅವರದೇ ಆದ ವಿಶೇಷಗಳನ್ನು ಹೊಂದಿದೆ. ಸುಗ್ಗಿ ಹಬ್ಬಗಳಲ್ಲಿ ಇವರು ಆಚರಿಸುವ ಹಗರಣ ಎಂಬ ಭಾವೈಕ್ಯದ ಮೇಳ ತುಂಬ ವಿಶಿಷ್ಟವಾದುದು. ಇದೇ ಉತ್ತರ ಕನ್ನಡದ ಗೊಂಡರು ತಮ್ಮ ಕೋಗ್ತಿ ಹಬ್ಬದಲ್ಲಿ ಮಾಡುವ ಮಂಡಲ ಕುಣಿತ ಅವರದೇ ಆದ ವೈಶಿಷ್ಟ್ಯ ಪಡೆದಿದೆ. ಇವರೇ ಮಾಡುವ ತಿರುಪತಿ ವೆಂಕಟರಮಣದ ಆರಾಧನೆಯಾದ ‘ಹರಿಸೇವೆ ಕುಣಿತ’ ಕೂಡ ಅನಂತರದ ಸಾಂಸ್ಕೃತಿಕ ಸೇರ್ಪಡೆಯಾಗಿ ಉಳಿದು ಬಂದಿದೆ. ಇದೇ ಜಿಲ್ಲೆಯ ಸಿದ್ದ ಜನರ ಡಮಾಮಿ ಕುಣಿತ, ಗೌಳಿಗರ ಹೋಳಿ ನೃತ್ಯ, ಕುಣಬಿಯರ ಹೋಳಿ ಸಿಗ್ಮಾ ಕಲೆಗಳು ಕೂಡ ಆಯಾ ಜನಾಂಗದ ವೈಶಿಷ್ಟ್ಯವಾಗಿ ಕಂಡು ಬರುತ್ತವೆ. ಶಿವಮೊಗ್ಗ ಜಿಲ್ಲೆಯ ಹಸಲರ ಕೋಲಾಟ ಮತ್ತು ಅಂಟಿಕೆಪಂಟಿಕೆ, ದಕ್ಷಿಣ ಕನ್ಡದ ಕೊರಗರ ಡೋಲುಮೇಳ, ಕುಡುಬಿಯರ ಹೋಳಿ, ಮೇರರ ಕಾಡ್ಯನಾಟ ಹಾಗೂ ಆಟಿಕಳಂಜ, ಮನ್ಸರ ಕರಂಗೋಲು, ಪಾಣಾರರ ಭೂತನೃತ್ಯ ಮತ್ತು ಇನ್ನಿತರೆ ಹಲವು ಜನವರ್ಗಗಳ ದುಡಿಮೇಳ ಸಾಂಸ್ಕೃತಿಕವಾಗಿ ಮಹತ್ತ್ವದ ಸಂಗತಿಗಳು. ಕೊಡಗಿನ ಯರವರ ದುಡಿ ಮತ್ತು ಜೀನಿವಾದ್ಯ ಹಾಗೂ ಕುಡಿಯರ ಕುಡಿಯಾಟ, ಜೇನುಕುರುಬರು ಮತ್ತು ಬೆಟ್ಟದ ಕುರುಬರ ಕೋಲಾಟ, ಸೋಲಿಗರ ಹಾಡು ಕುಣಿತಗಳು ಕೂಡ ಮುಖ್ಯವಾದವು.

ಇನ್ನು ಗಿರಿಜನರ ಸಾಹಿತ್ಯದ ಬಗ್ಗೆ ಹೇಳುವುದಾದರೆ ಸಹ್ಯಾದ್ರಿಯ ಗುಡ್ಡಗಾಡು ಜನಾಂಗದ ಸಾಹಿತ್ಯ ಬಹುಮಟ್ಟಿಗೆ ಲಭ್ಯವಿಲ್ಲ. ಕುಡಿಯರು ಕೊಡವ ಭಾಷೆ, ಮಲೆಕುಡಿಯರು ತುಳು, ಯರವರು ಯರವ, ಮೇರಮನ್ಸರು ತುಳು, ಕೊರಗರು ಕೊರಗ, ಕುಣಬಿಯರು ಕೊಂಕಣಿ ಮಿಶ್ರಿತ ಮರಾಠಿ, ಗೌಳಿಗರು ಮರಾಠಿ – ಹೀಗೆ ಕನ್ನಡ ಮಾತನಾಡುವವರ ಸಂಖ್ಯೆ ತುಂಬಾ ಕಡಿಮೆ ಎಂದೇ ಹೇಳಬೇಕು. ನಿಜವಾದ ಸಾಹಿತ್ಯದ ಅಧ್ಯನ ಆಗಬೇಕಾದರೆ ಮೊದಲು ಈ ಉಪಭಾಷೆಗಳಲ್ಲಿಯ ಜನಪದ ಸಾಹಿತ್ಯದ ಸಂಗ್ರಹವಾಗಬೇಕು. ಯರವರಲ್ಲಿ ಬಾಯನ ಎಂಬ ಮಹಾಕಾವ್ಯವೇ ಇದೆ ಎಂದು ಹೇಳುತ್ತಾರೆ. ಆದರೆ ಈ ಯರವ ಭಾಷೆಯ ಸಾಹಿತ್ಯವನ್ನು ಸಮಗ್ರವಾಗಿ ಸಂಗ್ರಹಿಸಿಲ್ಲ. ಮೊದಲು ಈ ಎಲ್ಲ ಸಾಹಿತ್ಯವನ್ನು ಸಂಗ್ರಹಿಸಿ, ಸಾಧ್ಯವಾದರೆ ಅದನ್ನು ಕನ್ನಡಕ್ಕೆ ಭಾಷಾಂತರಿಸುವ ಕೆಲಸವಾದರೆ ಇಡೀ ಈ ಸಮುದಾಯದ ಸಂಸ್ಕೃತಿಯ ಅಧ್ಯಯನ ಸಾಧ್ಯವಾಗುತ್ತದೆ. ಅದಾಗದೇ ಇಲ್ಲಿಯವರೆಗೆ ನಡೆದ ಗಿರಿಜನರನ್ನು ಕುರಿತ ಅಧ್ಯಯನಗಳು ಅಷ್ಟರಮಟ್ಟಿಗೆ ಪರಿಪೂರ್ಣವಲ್ಲ ಎನ್ನಬಹುದು.

ಒಟ್ಟಾರೆಯಾಗಿ ಹೇಳುವುದಾದರೆ ಗಿರಿಜನರ ಕಲೆ ಮತ್ತು ಸಾಹಿತ್ಯ ಹಾಗೂ ಆಚರಣೆಗಳನ್ನು ಅಧ್ಯಯನ ಮಾಡುವ ಮೂಲಕ ಇಡೀ ನಾಡಿನ ಸಂಸ್ಕೃತಿಗೆ ಹೊಸ ವ್ಯಾಖ್ಯಾನ ಸಾಧ್ಯ. ಎಲ್ಲ ಧರ್ಮಗಳ ಪ್ರಭಾವದ ಮೊದಲು ಭಾರತದ ಮನುಷ್ಯಧರ್ಮ ಹಾಗೂ ಜೀವನ ಹೇಗಿತ್ತು ಎಂಬುದರ ಕಲ್ಪನೆಗಾದರೂ ಈ ಅಧ್ಯಯನ ಇಂಬು ಕೊಡುತ್ತದೆ.

ಬಹಳ ಹಿಂದೆಯೇ ಇದೇ ಉತ್ತರ ಕನ್ನಡ ಮಂಚಿಕೇರಿಯ ರಾಜರಾಜೇಶ್ವರಿ ರಂಗ ವಿಭಾಗ ಸಿದ್ದಿಯರ ಕಲೆಗಳಿಗೆ ಇಂಥ ಶಿಸ್ತು ತಂದುಕೊಟ್ಟಿದೆ. ಮೇಘಾನೆಯ ಕುಣಬಿಯರ ಕಲೆಗಳಿಗೆ ಕರೀಂಖಾನರ ಕಾಲದಲ್ಲಿ ಜಾನಪದ ಅಕಾಡೆಮಿ ಮೂಲಕ ಅಂಥ ಒಂದು ಶಿಸ್ತು ತರಲು ಪ್ರಯತ್ನಿಸಲಾಗಿದೆ.

ಇಷ್ಟೆಲ್ಲ ಹೇಳಿದ್ದಕ್ಕೆ ಒಂದು ಕಾರಣವಿದೆ. ಆಧುನಿಕತೆಯ ಬಿರುಗಾಳಿಯಲ್ಲಿ ಕಲೆಗಳು ತಮ್ಮ ಸ್ವರೂಪ ಮತ್ತು ಅಸ್ತಿತ್ವ ಕಳೆದುಕೊಳ್ಳುವುದಿಲ್ಲ. ಅಥವಾ ಅವರ ಬಾಹ್ಯರೂಪದ ಬದಲಾವಣೆ ಆಗಬೇಕಾಗಿಲ್ಲ. ಆಗಬೇಕಾದ್ದು ಆಂತರಿಕ ವಿಕಾಸ. ನಮ್ಮ ಗಿರಿಜನರ ಕಲೆಗಳನ್ನು ಇಂಥ ಆಂತರಿಕ ವಿಕಸನದ ಪ್ರಕ್ರಿಯೆಗೆ ಒಳಪಡಿಸುವ ಕೆಲಸವಾಗಬೇಕು. ಹೀಗೆ ಆಂತರಿಕ ವಿಕಾಸದ ಅಂಗವಾಗಿಯೇ ಕಲೆ ಸ್ವಲ್ಪ ಭಿನ್ನರೂಪ ತಳೆದರೂ ಅದಕ್ಕೆ ಬೆಲೆಯೂ ಇರುತ್ತದೆ. ಕಲೆಯೂ ಉಳಿಯುತ್ತದೆ.

ಇನ್ನು ಮುಂದೆ ವಿವಿಧ ಬುಡಕಟ್ಟು ಸಮುದಾಯಗಳ ಪ್ರಮುಖ ಕಲೆಗಳ ಸ್ವರೂಪವನ್ನು ಸಂಕ್ಷಿಪ್ತವಾಗಿ ನೀಡಲಾಗಿದೆ.

ಹಾಲಕ್ಕಿ ಸುಗ್ಗಿ ಕುಣಿತ : ಬಯಲು ನಾಡಿನ ಅನೇಕ ಗ್ರಾಮದೇವತೆಗಳ ಜಾತ್ರೆಗಳು ಸುಗ್ಗಿ ಸಂಭ್ರಮದ ಜೊತೆಗೆ ತಳಕು ಹಾಕಿಕೊಂಡಿವೆ. ಹೋಳಿ ಹಬ್ಬಕ್ಕೂ ಸುಗ್ಗಿಯ ಆಚರಣೆಗಳಿಗೂ ಅಂಥ ವ್ಯತ್ಯಾಸಗಳೇನೂ ಇಲ್ಲ. ಈ ಎಲ್ಲ ಹಬ್ಬ ಜಾತ್ರೆಗಳ ಹಿನ್ನೆಲೆಯಲ್ಲಿಯೇ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವನ್ನು ನಾವು ನೋಡಬೇಕಾಗುತ್ತದೆ. ಹೊನ್ನಾವರ, ಕುಮಟಾ, ಗೋಕರ್ಣ, ಅಂಕೋಲ ಹಾಗೂ ಕಾರವಾರ ಪ್ರದೇಶದ ಕಿರುಗುಡ್ಡ, ಕುರುಚಲು ಕಾಡು, ನದಿಯ ತಿರುವು ಮತ್ತು ಸಮುದ್ರದ ಕಿನಾರೆಗಳಲ್ಲಿ ಗೊಪ್ಪೆ ಗೊಪ್ಪೆಯಾದ ಮನೆಗಳ ಸಮೂಹದ ಕೊಪ್ಪಗಳಲ್ಲಿ ಈ ಜನ ವಾಸವಾಗಿದ್ದಾರೆ. ಹಾಲಕ್ಕಿ ಒಕ್ಕಲಿಗರ ಸುಗ್ಗಿ ರಾಗ ರಂಗುಗಳ ವರ್ಣರಂಜಿತ ಸಮಾವೇಶ. ಇದೇ ಉತ್ತರ ಕನ್ನಡ ಜಿಲ್ಲೆಯ ಇತರ ಜನಾಂಗಗಳಾದ ನಾಯಕರು (ನಾಮಧಾರಿಗಳು) ಕೊಮಾರ ಪಂಥರು. ಮುಕ್ರಿಯರು ಹಾಗೂ ಮರಾಠಿ ಜನಾಂಗಗಳಲ್ಲಿ ಕೂಡ ಸುಗ್ಗಿ ಹಬ್ಬ ಮತ್ತು ಕುಣಿತ ಚಾಲ್ತಿಯಲ್ಲಿದೆಯಾದರೂ ಹಾಲಕ್ಕಿಯವರು ಈ ಕಲೆಯಲ್ಲಿ ತಮ್ಮನ್ನು ಗುರುತಿಸಿಕೊಂಡಂತೆ ಮತ್ತಾರೂ ಗುರುತಿಸಿಕೊಂಡಿಲ್ಲ. ಸುಗ್ಗಿ ಕುಣಿತ ಹಾಲಕ್ಕಿಯವರಿಗೇ ಯಾಕೆ ಒಲಿಯಿತು ಎಂಬುದಕ್ಕೆ ಒಂದೆರಡು ದಂತಕಥೆಗಳಿವೆ.

ಸುಗ್ಗಿ ಕುಣಿತದ ಕಲಾತಂಡದಲ್ಲಿ ತುರಾಯಿ ಕಟ್ಟಿದ ಕಲಾವಿದರು, ನಾಲ್ಕು ಗೆರೆ (ಜೋಡಿ)ಯಿಂದ ಹನ್ನೆರಡು ಗೆರೆಯವರೆಗಿರುತ್ತಾರೆ. ಕಡವಾಡ ಸೀಮೆಯ ಸುಗ್ಗಿಯ ಮೇಳದಲ್ಲಿ ಸುಗ್ಗಿದೇವನನ್ನು ಒಯ್ಯುವ ಸಂಪ್ರದಾಯವಿದೆ. ತುರಾಯಿಕಟ್ಟಿದ ಕಲಾವಿದರ ಹೊರತಾಗಿ, ಕೈಯಲ್ಲಿ ಖಡ್ಗ ಹಿಡಿದ ಕರಡಿ ಹನುಮಂತ, ಕಳ್ಳ – ಪೊಲೀಸ್, ಋಷಿ – ಮುನಿ, ಬ್ರಿಟಿಷ್ ಹಾಗೂ ಮುಸಲ್ಮಾನ ವೇಷಗಳು ಮತ್ತು ಯಕ್ಷಗಾನ ಪಗಡೆ ಕಟ್ಟಿದ ಹಲವಾರು ವೇಷಗಳಿರುತ್ತವೆ. ಸುಮಾರು ಎರಡಡಿಯಿಂದ ನಾಲ್ಕಡಿಯವರೆಗೆ ಎತ್ತರವಾದ ಮರಕಾಲುಗಳನ್ನು ಕಟ್ಟಿಕೊಂಡು ಕುಣಿಯುವವರು, ಪದಗಾರರು, ವಾದ್ಯಗಾರರು, ಹೊಯ್ಲಗಾರರು, ಜಾತಿಯ ಮುಖಂಡರು ಇವರೆಲ್ಲರಿಂದ ಹಿರಿಸುಗ್ಗಿಯ ಮೇಳ ಹಿರಿದಾಗಿಯೇ ಇರುತ್ತದೆ. ಇಷ್ಟು ದೊಡ್ಡ ಮೇಳಕ್ಕೆ ಕನಿಷ್ಠ ನಲ್ವತ್ತು (ಐವತ್ತು) ಜನರಾದರೂ ಬೇಕು. ಇಂಥ ಮೇಳ ಪ್ರತಿ ಹಾಲಕ್ಕಿ ಕೊಪ್ಪದಲ್ಲೂ ಇರುತ್ತದೆ. ಪ್ರತಿ ಮನೆಯಿಂದ ಕನಿಷ್ಠ ಒಬ್ಬನಾದರೂ ಸುಗ್ಗಿಯ ಮೇಳದ ಕಲಾವಿದನಾಗಿರುತ್ತಾನೆ.

ಸುಗ್ಗಿಯ ವೇಷಭೂಷಣಗಳನ್ನು ಧರಿಸಿದ ಕೋಲು ಮೇಳದ ಕಲಾವಿದರು ಕೈಗಳಲ್ಲಿ ಕೋಲುಗಳನ್ನು ಹಿಡಿದು ಹಿಮ್ಮೇಳದ ವಾದ್ಯದ ಗತ್ತಿಗನುಗುಣವಾಗಿ ಪದಗಾರರು ಹಾಡಿದ ಪದಗಳನ್ನು ಪುನರಾವರ್ತನೆಗೊಳಿಸುತ್ತಾ ಕೋಲಾಡಿ ಕುಣಿಯುತ್ತಾರೆ. ಹಿಮ್ಮೇಳದ ತಾಳ ಲಯಗಳಿಗನುಗುಣವಾಗಿ ಕುಣಿಯುವವರ ಕುಣಿತ ಹಾಗೂ ಅಂಗಾಂಗ ವಿನ್ಯಾಸ ಭಂಗಿಯೂ ಬದಲಾಗುತ್ತದೆ. ಕೋಲು ಪದಗಳ ಗತಿ, ಗಮಕ, ಅಂಗಾಂಗ ಚಲನೆಯ ವಿನ್ಯಾಸ, ನಿಲ್ಲುವ ಕ್ರಮ ವ್ಯತ್ಯಾಸಗಳಿಗನುಸಾರವಾಗಿ ಹಲವು ಬಗೆಯ ಕೋಲಾಟಗಳು ರೂಪುಗೊಳ್ಳುತ್ತವೆ. ಚಿನ್ನದ, ರನ್ನದ, ಬೆಳ್ಳಿಯ, ಕಂಚಿನ ಕೋಲುಗಳು, ಸಂಪಿಗೆ, ಮಲ್ಲಿಗೆ ಹೂವಿನ ಕೋಲುಗಳು, ಸೋಗೆನವಿಲು, ಕತ್ತರಿ, ಜಡೆಕೋಲು ಹೀಗೆ ಹಲವು ಬಗೆಯ ಕೋಲಾಟಗಳಿರುತ್ತವೆ. ಕಲಾವಿದರು ಸಮಾಂತರ, ವರ್ತುಲ, ಚೌಕಾಕಾರಗಳಲ್ಲಿ ನಿಂತು ಬೇಟೆಯಾಡಿದಂತೆ, ಕೋಟೆ ಭೇದಿಸಿದಂತೆ ಹಾಸುಹೊಕ್ಕು ಹೆಣೆದಂತೆ, ಸಂಕೀರ್ಣಗತಿಯಲ್ಲಿ ಹೊಕ್ಕಾಡಿ ಕುಣಿದು ಕೋಲಾಡುವುದು ಚಿತ್ತಾಕರ್ಷಕವಾಗಿರುತ್ತದೆ.

ಕುಂಚದ ಮೇಳದವರು ನವಿಲುಗರಿಯಿಂದ ತಯಾರಿಸಿದ ಕುಂಚವನ್ನು ಎಡಗೈಯಲ್ಲಿ ಹಿಡಿದು ಬಲಗೈ ಕೋಲಿನಿಂದ ಕುಂಚದ ಬುಡಕ್ಕೆ ಮೆಲ್ಲನೆ ಲಯಬದ್ಧವಾಗಿ ಕುಟ್ಟುತ್ತ ವಾದ್ಯಮೇಳದ ಲಯಗತಿಗನುಗುಣವಾಗಿ ಚೋಹೋಚೋ, ಸೋಹೋಸೋ, ಓಹೋಸಾ, ದಯ್ಯೋ, ದಯ್ಯೋ ಎಂದು ಮುಂತಾಗಿ ಹೊಯ್ಲು ಹಾಕುತ್ತ ವಿವಿಧ ಭಂಗಿಯಲ್ಲಿ ಕುಣಿಯುತ್ತಾರೆ. ಪದದ ಏರಿಳಿತ ಅಂಗಾಂಗ ಚಲನಾ ವಿನ್ಯಾಸ, ಹೊಯ್ಲಗಾರನ ಸಂಜ್ಞೆಗನುಗುಣವಾಗಿ ಕುಣಿತ ಭಿನ್ನ ಸ್ವರೂಪವನ್ನು ಪಡೆಯುತ್ತದೆ. ಕಲಾವಿದರ ಸರಪಳಿಯಂತೆ ಹೆಣೆದುಕೊಂಡೋ, ವರ್ತುಲ ಉಪವರ್ತುಗಲಗಳಲ್ಲಿ ನಿಂತೋ, ತಾಳ, ಮದ್ದಳೆ, ಗುಮಟೆಗಳ ತಾರ-ಮಂದ್ರ ಸ್ವರಕ್ಕೆ ತಕ್ಕಂತೆ ಹೊಯ್ಲು ಹಾಕಿ ಕುಣಿಯುತ್ತಾರೆ.

ಹಾಲಕ್ಕಿ ಹೆಂಗಸರ ತಾರ್ಲೆ ಕುಣಿತ : ತಾರ್ಲೆ ಕುಣಿತವು ಹಾಲಕ್ಕಿ ಒಕ್ಕಲಿಗರ ಹೆಣ್ಣುಮಕ್ಕಳ ಒಂದು ಪ್ರದರ್ಶನಾತ್ಮಕ ಕಲೆ. ಹೊನ್ನಾವರ, ಕುಮಟಾ, ಗೋಕರ್ಣ ಅಂಕೋಲ, ಕಾರವಾರಗಳಲ್ಲಿರುವ ಹಾಲಕ್ಕಿಗಳ ಹೆಣ್ಣುಮಕ್ಕಳು ಮಳೆ ಬಾರದಿದ್ದಾಗ ಈ ಕುಣಿತವನ್ನು ಪ್ರದರ್ಶಿಸುತ್ತಾರೆ.

ಜಡೆ ಹೆಣೆದು ಮತ್ತೆ ಕಟ್ಟಿದ ಚಕ್ರತುರುಬಿಗೆ ಬಣ್ಣದ ಹೂವು, ಕುಪ್ಪಸವಿಲ್ಲದ ಎದೆಗೆ ಇಳಿಬಿಟ್ಟ ರಂಗುರಂಗಿನ ಹತ್ತಾರು ಮಣಿಸರಗಳ ಮಾಲೆ, ತೋಳುಗಳಿಗೆ ನಾಕಾರು ತೋಳುಬಂದಿಗಳ ಜೋಡಣೆ, ಮುಂಗೈಗೆ ಬೆಳ್ಳಿ ಕಡಗ, ಕಾಲಿಗೂ ಕಡಗ, ಕಿವಿಗೆ ಕಡಕು, ಮೂಗಿಗೆ ಮೂಗುತಿ, ಹಣೆಗೆ ಕೆಂಪು ತಿಲಕ ಇವು ಹಾಲಕ್ಕಿ ಹೆಣ್ಣು ಮಕ್ಕಳ ಸಾಂಪ್ರದಾಯಿಕ ಉಡುಗೆ ತೊಡುಗೆಗಳು. ನಿತ್ಯದ ಉಡುಗೆಯಾದ ಬಣ್ಣದ ಸೀರೆಯ ನಿರಿಗೆಯನ್ನು ಹಿಂದಕ್ಕೆ ಬಿಟ್ಟು ವರ್ತುಲಾಕರವಾಗಿ ಇವರು ಕುಣಿಯುವಾಗ ನವಿಲಿನ ನೃತ್ಯ ನೆನಪಿಗೆ ಬರುತ್ತದೆ. ಕೇರಿಯ ಹೆಂಗಸರೂ ಹುಡುಗಿಯರೂ ಬಿತ್ತಿಗೆಯ ಸ್ಥಳಕ್ಕೆ ಹೋಗಿ ವರ್ತುಲಾಕಾರವಾಗಿ ನಿಂತುಕೊಳ್ಳುತ್ತಾರೆ. ಒಬ್ಬರ ಕೈಯನ್ನೊಬ್ಬರು ಹಿಡಿದುಕೊಂಡು ಮಂಡಲಾಕರದಲ್ಲಿ ಸುತ್ತ ತೊಡಗುತ್ತಾರೆ. ಹಾಡುಗಾರ್ತಿಯೊಬ್ಬಳು ಹಾಡಿನ ಮೊದಲ ಸೊಲ್ಲೊಂದನ್ನು ಹೇಳುತ್ತಾಳೆ. ಕೂಡಲೇ ಉಳಿದವರು ಮುಂದಕ್ಕೆ ಹಾರಿ, ಬಾಗಿ ಪುನಃ ಹಿಂದಕ್ಕೆ ಜೀಕಿ ನಿಂತು ‘ತಾಲೆ’ ಎಂದು ಸಾಮೂಹಿಕವಾಗಿ ಹೇಳುತ್ತಾರೆ.

ಆಟಿಕಳೆಂಜ : ಸಾಮಾನ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಂಡುಬರುವ ಈ ಕುಣಿತವನ್ನು ತುಳು ತಿಂಗಳಾದ ಆಟಿ (ಆಷಾಢ – ಜುಲೈ-ಆಗಸ್ಟ್‌)ಯಲ್ಲಿ ಹುಣ್ಣಿಮೆಯ ಸಂದರ್ಭದಲ್ಲಿ ನಡೆಸುತ್ತಾರೆ. ಮೂರು, ಐದು ಅಥವಾ ಏಳು ದಿನಸಗಳ ಕಾಲ ಅಸ್ಪೃಶ್ ಜಾತಿಗಳಾದ ನಲಿಕೆ ಹಾಗೂ ಮೇರರು ಇದನ್ನು ನಡೆಸುತ್ತಾರೆ. ಇಲ್ಲಿ ಇಬ್ಬರು ವ್ಯಕ್ತಿಗಳು ಬಹಳ ಮುಖ್ಯರಾಗುತ್ತಾರೆ. ಒಬ್ಬ ಆಟಿಕಳೆಂಜ ಹಾಗೂ ಇನ್ನೊಬ್ಬ ತೆಂಬರೆಯವ. ಈತ ತೆಂಬರೆಯನ್ನು ಬಡಿಯುತ್ತಾ ಕಳೆಂಜನ ಹಾಡನ್ನು ಹಾಡುತ್ತಾನೆ. ಆಟಿ ತಿಂಗಳು ಬರುವಾಗ ಇವರು ತಮ್ಮ ಗುರಿಕಾರನ ಮನೆಯಲ್ಲಿ ಸೇರಿ ಕಳೆಂಜ ಕಟ್ಟುವ ಬಗ್ಗೆ ನಿರ್ಧಾರವನ್ನು ಮಾಡುತ್ತಾರೆ. ಆಟಿ ತಿಂಗಳ ಹುಣ್ಣಿಮೆಯ ಮೊದಲ ದಿನದಂದು ಕಳೆಂಜವನ್ನು ಕಟ್ಟುತ್ತಾರೆ.

ಸುಳ್ಯ ತಾಲೂಕಿನ ಕನ್ನಿಕಳೆಂಜ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ಕಂಡುಬರುವ ಬಿರ್ಮರೆಮಾಣಿಲು ಆಟಿಕಳೆಂಜನ ಭಿನ್ನರೂಪಗಳು. ಇವೆಲ್ಲದರ ಆಶಯವೊಂದೇ ಆಗಿರುವುದರಿಂದ ಆ ಕಲೆಗಳ ಬಗೆಗೂ ಇಲ್ಲಿ ಪ್ರಸ್ತಾಪಿಸಲಾಗಿದೆ.

ಕನ್ನಿಕಳೆಂಜದಲ್ಲಿ ಎರಡು ವೇಷಗಳಿರುತ್ತವೆ : ೧. ಕಳೆಂಜ, ಕನ್ನಿ. ಸೊಂಟಕ್ಕೆ ತುಂಡುವಸ್ತ್ರ ಸುತ್ತಿ ಅದರ ಮೇಲೆ ಎಳೆತೆಂಗಿನ ಸೋಗೆಯನ್ನು ಇಬ್ಭಾಗ ಸೀಳಿ, ಸೀಳು ಸೋಗೆಯನ್ನು ಮೈಗೆ ಸುತ್ತಿಕೊಳ್ಳಲಾಗುತ್ತದೆ. ಕಪ್ಪು ಅಥವಾ ಬಿಳಿಯ ಉದ್ದತೋಳಿನ ಅಂಗಿ, ಮಣ್ಣಿಕಟ್ಟಿಗೆ ಮತ್ತು ತೋಳಿಗೆ ತೆಂಗಿನಗರಿಯಿಂದ ಮಾಡಿದ ಪುಂಡಯೆ, ಎದೆಗೆ ಮತ್ತು ಮೈಗೆ ಪೂರ್ತಿಯಾಗಿ ತೆಂಗಿನ ಎಳೆಗರಿಗಳ ಅಡ್ಡ ಸುತ್ತು, ತಲೆಗೆ ಅಡಿಕೆ ಹಾಳೆಯ ದೊಡ್ಡ ಟೊಪ್ಪಿ (ಗೋಂಪಾರು), ಅದರ ಮೇಲೆ ಓಟೆ ಬಿದಿರಿನಿಂದ ಹೆಣೆದು ಮಾಡಿದ ಟೊಪ್ಪಿ, ಆ ಟೊಪ್ಪಿಗೆ ಅಂಬಳೆ ಹೂವು ಮತ್ತು ದಾಸಸವಾಳ ಹೂವಿನ ಅಲಂಕಾರ, ಹರಕು ಬಟ್ಟೆಯಿಂದ ಮಾಡಿದ ಮೀಸೆ ಮತ್ತು ಗಡ್ಡ, ಓಟೆ ಬಿದಿರಿನಿಂದ ಮಾಡಿದ ಕೋರೆಹಲ್ಲು, ಕೈಯಲ್ಲಿ ಕೋಲು ಮತ್ತು ಪನೆತತ್ರ, ಮುಖಕ್ಕೆ ಮಸಿ ಹಾಗೂ ಸುಣ್ಣದ ಬೊಟ್ಟು, ಕಣ್ಣಿಗೆ ಕನ್ನಡಕದ ರೀತಿಯಲ್ಲಿ ಹಗ್ಗದಿಂದ ಕಟ್ಟಿಕೊಳ್ಳಲಾದ ಕಪ್ಪು-ಬಿಳಿ ವೃತ್ತಗಳು ಕಳೆಂಜ ವೇಷಧಾರಿಯ ವೇಷಭೂಷಣಗಳು.

‘ಕನ್ನಿ’ ಎಂಬಾಕೆ ಕಳೆಂಜನೊಂದಿಗೆ ಕುಣಿಯುವ ಹೆಣ್ಣು. ಈ ವೇಷವನ್ನು ಸಣ್ಣ ಹುಡುಗರು ಮಾಡುತ್ತಾರೆ. ಮುಖಕ್ಕೆ ಅರ್ಧಾಳ, ಕಣ್ಣಿಗೆ ಕಾಡಿಗೆ ಮತ್ತು ಕೆಂಪುಬೊಟ್ಟು, ಸೀರೆ-ರವಿಕೆ, ಕುತ್ತಿಗೆಗೆ ಹಾರ, ತುರುಬಿಗೆ ತೆಂಗಿನ ಎಳೆಗರಿಯಿಂದ ಮಾಡಿದ ರಾಕುಟಿ ಹೂವು, ಕೈಯಲ್ಲಿ ನೆಕ್ಕಿ ಸೊಪ್ಪು – ಇವಿಷ್ಟು ಕನ್ನಿಯ ಉಡುಗೆ ತೊಡುಗೆಗಳು. ತೆಂಬರೆಯ ಬಡಿತದೊಂದಿಗೆ ಕನ್ನಿ ಕಳೆಂಜನ ಹಾಡು ಹೇಳುವಾಗ ಆ ಲಯಕ್ಕನುಸಾರವಾಗಿ ಕಳೆಂಜ ದೊಡ್ಡ ದೊಡ್ಡ ಹೆಜ್ಜೆಯನ್ನಿಟ್ಟು ನಿಧಾನವಾಗಿ ಸುತ್ತು ತಿರುಗುತ್ತಾನೆ. ಪನೆತತ್ರ ತಿರುಗಿಸುತ್ತಾನೆ. ಕೋಲೂರಿ ಹೆಜ್ಜೆ ತೆಗೆಯುತ್ತಾನೆ. ಈ ಕನ್ನಿ ನಿಧಾನವಾಗಿ ಹೆಜ್ಜೆ ಹಾಕುತ್ತಾ ಸಣ್ಣ ವೃತ್ತದಲ್ಲಿ ತಿರುಗುತ್ತಾಳೆ. ಈ ಕುಣಿತವನ್ನು ಆಟಿ ತಿಂಗಳಲ್ಲಿ ಮೂರು ದಿವಸದಿಂದ ಹದಿನೈದು ದಿವಸಗಳವರೆಗೆ ಹಗಲು ನಡೆಸುತ್ತಾರೆ.

ಗುರಿಕಾರನ ಮನೆಯಲ್ಲಿ ಕುಣಿತ ಆದ ಅನಂತರ ಬೇರೆಬೇರೆ ಮನೆಗಳಿಗೆ ಕುಣಿತದವರು ಹೋಗುತ್ತಾರೆ. ಹೋದ ಮನೆಗಳಲ್ಲಿ ಕೊಟ್ಟ ಅಕ್ಕಿ, ಕಾಯಿ ಮುಂತಾದವುಗಳನ್ನು ಹಿಡಿದುಕೊಳ್ಳಲು ಕಳೆಂಜನೊಂದಿಗೆ ಮೂರುನಾಲ್ಕು ಜನ ಇರುತ್ತಾರೆ. ಬೇರೊಂದು ಮನೆಗೆ ಹೋಗಿ ಕಳೆಂಜ ಬಂದ ಎಂದು ಹೇಳಿ ಮನೆಯ ಯಜಮಾನನಲ್ಲಿ ಕುಣಿಯಲು ಒಪ್ಪಿಗೆಯನ್ನು ಕೇಳುತ್ತಾನೆ. ಹೀಗೆ ಕುಣಿತ ಮುಗಿಸಿದ ಅನಂತರ ಮನೆಯವರು ಕಳೆಂಜನಿಗೆ ಒಂದು ಗೆರಸೆಯಲ್ಲಿ ಅಕ್ಕಿ, ತೆಂಗಿನಕಾಯಿ, ಹಣ ಮತ್ತು ಉಪ್ಪು, ಹುಳಿ, ಮೆಣಸನ್ನು ಕೊಡುತ್ತಾರೆ. ಗೆರಸೆಯನ್ನು ಹಿಂದಕ್ಕೆ ಕೊಡುವಾಗ ಎಲ್ಲ ವಸ್ತುಗಳನ್ನು ಸ್ವಲ್ಪ ಸ್ವಲ್ಪ ಉಳಿಸಿಕೊಂಡಿರುತ್ತಾರೆ. ಇದನ್ನು ಮನೆಯವರೆಲ್ಲಾ ಕಳೆಂಜನ ಪ್ರಸಾದವೆಂದು ಸ್ವೀಕರಿಸುತ್ತಾರೆ.

ಕರಂಗೋಲು ಕುಣಿತ : ಕರಂಗೋಲು ಕುಣಿತವನ್ನು ಒಂದು ನಿರ್ದಿಷ್ಟ ಸಂದರ್ಭದಲ್ಲಿ ಎಂದರೆ ಸುಗ್ಗಿ ಹುಣ್ಣಿಮೆ (ಮೀನ ಮಾಸದ ಹುಣ್ಣಿಮೆ)ಯ ಮೊದಲ ದಿವಸ ಅಂದರೆ ತುಳುವಿನ ಪೂವೆಯಿಂದ ಪ್ರಾರಂಭಿಸಿ ಒಂದು ವಾರದ ತನಕ (ಏಪ್ರಿಲ್ ಮೊದಲ ವಾರ) ವರ್ಷದಲ್ಲಿ ಒಂದು ಸಲ ಮಾತ್ರ ನಡೆಸುತ್ತಾರೆ. ಈ ಕುಣಿತ ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲ್ಲೂಕುಗಳಲ್ಲಿ ಕಂಡುಬರುತ್ತದೆ. ಮನ್ಸ ಜನ ಸಮೂಹಕ್ಕೆ ಈ ಕುಣಿತವನ್ನು ನಡೆಸಿಕೊಡುತ್ತಾರೆ. ಇವರು ತಮ್ಮನ್ನ ‘ಮೂಲೊದಕುಲು’ (ಮೂಲನಿವಾಸಿಗಳು) ಎಂದು ಕರೆದುಕೊಳ್ಳುತ್ತಾರೆ. ಇವರಿಗೂ ಬೇಸಾಯಕ್ಕೂ ಗಾಢ ಸಂಬಂಧವಿದೆ. ಪ್ರಾಚೀನ ಕಾಲದಿಂದಲೂ ಇವರು ಕೃಷಿ ಕಾರ್ಮಿಕರಾಗಿದ್ದಾರೆ. ಇವರು ಕಂಬಳ, ಬೇಟೆ, ಆರಾಧನೆ, ಮದುವೆ, ಹಬ್ಬಗಳಲ್ಲಿ ಸಾಂಸ್ಕೃತಿಕವಾಗಿ ಮೇಲ್ಜಾತಿಗಳೊಂದಿಗೆ ಭಾಗವಾಹಿಸುತ್ತಾರಾದರೂ ದಕ್ಷಿಣ ಕನ್ನಡದ ಅಸ್ಪೃಶ್ಯರಲ್ಲಿ ಇವರೂ ಪ್ರಮುಖರಾದವರು.

ಒಟ್ಟು ನಾಲ್ಕು ಜನ ಗಂಡಸರು ಮಾತ್ರ ಭಾಗವಹಿಸುವ ಈ ಕಲಾವಿದರು ಸೊಂಟಕ್ಕೆ ಬಿಳಿಪಂಚೆಯುಟ್ಟು ಇಳಿಬಿಟ್ಟಿರುತ್ತಾರೆ. ತಲೆಗೆ ಬಿಳಿಯ ಮುಂಡಾಸು ಇರುತ್ತದೆ. ಇಲ್ಲವೇ ಬಿಳಿಯ ಲಾಡಿಯನ್ನು ತಲೆಯಸುತ್ತ ಮತ್ತು ಬೈತಲೆಗೆ ಕಟ್ಟಿಕೊಂಡಿರುತ್ತಾರೆ. ಬೇಡಿಮಣ್ಣನ್ನು ಅರೆದು ಬಿದಿರು ಕೋಲಿನ ಕೊಳವೆಯ ಮೂಲಕ ಮುಖ, ಎದೆ, ಬೆನ್ನು, ಹೊಟ್ಟೆ ಹೀಗೆ ಮೈಗೆಲ್ಲಾ ವರ್ತುಲಗಳನ್ನು ಬಿಡಿಸಿಕೊಂಡಿರುತ್ತಾರೆ. ಮುಖಕ್ಕೆ ಚುಕ್ಕಿ ಹಾಕಿಕೊಂಡಿರುತ್ತಾರೆ. ಎದೆ, ಬೆನ್ನು ಮತ್ತು ಹೊಟ್ಟೆಗೆ ಸಮಾನಾಂತರ ಗೆರೆಗಳನ್ನು ಎಳೆದುಕೊಳ್ಳುತ್ತಾರೆ. ಇದನ್ನು ‘ಗೇಂಟಿ ಕಟ್ಟುವುದು’ ಎನ್ನುತ್ತಾರೆ. ಕೈ ಕಾಲುಗಳಿಗೆ ವೃತ್ತಗಳನ್ನು ಹಾಕಿಕೊಂಡಿರುತ್ತಾರೆ. ಇದನ್ನು ‘ದಂಡೆ ಹಾಕುವುದು’ ಎನ್ನುತ್ತಾರೆ. ಕೈಯಲ್ಲಿ ನೆಕ್ಕಿಸೊಪ್ಪಿನ ಸೂಡಿ ಇರುತ್ತದೆ.

ಈ ಕುಣಿತ ಪ್ರಾದೇಶಿಕವಾಗಿ ಸ್ವಲ್ಪ ಭಿನ್ನತೆ ಪಡೆದಿರುತ್ತದೆ. ಪುತ್ತೂರು ತಾಲ್ಲೂಕಿನ ತಂಡದವರ ಜೊತೆ ಒಬ್ಬ ಮುದುಕನಿರುತ್ತಾನೆ. ಈತನ ಸೊಂಟಕ್ಕೆ ಪಂಚೆ, ತಲೆಗೆ ಮುಂಡಾಸು ಇರುತ್ತದೆ. ಗಲ್ಲಕ್ಕೆ ಹತ್ತಿಯಿಂದ ಮಾಡಿದ ಗಡ್ಡ ಮೀಸೆಯನ್ನು ಅಂಟಿಸಿಕೊಂಡಿರುತ್ತಾನೆ. ಈತ ದೇಹಕ್ಕೆ ಬಣ್ಣ ಬಳಿದುಕೊಂಡಿರುವುದಿಲ್ಲ. ಕೈಯಲ್ಲಿ ಬಿದಿರಿನ ದಂಟೆ ಇರುತ್ತದೆ. ಬೆಳ್ತಂಗಡಿ ಕಡೆಯ ತಂಡಗಳಲ್ಲಿ ಒಂದು ಕೊರಗೆ ವೇಷವಿರುತ್ತದೆ. ಆತ ಮೈಯೆಲ್ಲಾ ಮಸಿ ಬಳಿದುಕೊಂಡು ಮುಖಕ್ಕೆ ಜೇಡಿಯ ಚುಕ್ಕಿ ಹಾಕಿಕೊಂಡಿರುತ್ತಾನೆ. ತಲೆಗೆಕೋಂಟು ಮುಟ್ಟಾಳೆ (ಎರಡು ಕಡೆ ಕಟ್ಟುಹಾಕಿದ ಕಂಗಿನ ಹಾಳೆಯ ಟೊಪ್ಪಿ) ಇಟ್ಟುಕೊಂಡಿರುತ್ತಾನೆ. ಕೈಯಲ್ಲಿ ಕೋಲು ಇರುತ್ತದೆ. ಸೊಂಟಕ್ಕೆ ಕಪ್ಪು ಬಟ್ಟೆ, ಅದರ ಮೇಲೆ ಗೆಜ್ಜೆ ಕಟ್ಟಿಕೊಂಡಿರುತ್ತಾನೆ. ಕುತ್ತಿಗೆಯಲ್ಲಿ ಹೂವಿನ ಹಾರವಿರುತ್ತದೆ. ಸುಳ್ಯ ತಾಲೂಕಿನ ಕುಣಿತದ ತಂಡದಲ್ಲಿ ಮದುಮಗ-ಮದುಮಗಳ ವೇಷವಿರುತ್ತದೆ. ತಲೆಗೆ ಮುಂಡಾಸು, ಸೊಂಟಕ್ಕೆ ಪಂಚೆ, ಉದ್ದ ತೋಳಿನ ಅಂಗಿ, ಇದು ಮದುಮಗನ ವೇಷ. ಸೀರೆ ರವಿಕೆ ತೊಟ್ಟು ಜಡೆ ಹೆಣೆದು, ಹೂ ಮುಡಿದು ಕುತ್ತಿಗೆಗೆ ಆಭರಣ ಧರಿಸಿಕೊಂಡ ವೇಷ ಮದುಮಗಳದ್ದು.

ಗ್ರಾಮ ಸಂಚಾರದ ಅವಧಿಯಲ್ಲಿ ತಂಡದ ಸದಸ್ಯರು ಶುದ್ಧದಲ್ಲಿರಬೇಕು. ತಂಡದ ಮುಖ್ಯಸ್ಥ ಮನೆಯ ಅಂಗಳದಲ್ಲಿ ನಿಂತು ‘ಪೊಲಿದೆತ್ತೊಂದು ಬತ್ತೋ’ (ಸಂಪತ್ತನ್ನು ಕರೆದುಕೊಂಡು ಬಂದಿದ್ದೇವೆ) ಎನ್ನುತ್ತಾನೆ. ಆಗ ಮನೆಯವರು ಎದ್ದು ಕುಣಿತಕ್ಕೆ ಬೆಳಕಿನ ವ್ಯವಸ್ಥೆ ಮಾಡಿ ಅನುಮತಿ ನೀಡುತ್ತಾರೆ. ಘಂಟಾಮಣಿಯನ್ನೊಮ್ಮೆ ಜೋರಾಗಿ ಬಾರಿಸಿ ಹಾಡಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ಕುಣಿತಗಾರರು ಎರಡು ಸಾಲಲ್ಲಿ ನಿಂತು ಒಂದು ಹೆಜ್ಜೆ ಮುಂದು ಮುಂದಕ್ಕೆ ಬಂದು ಹಾಗೇ ಹೆಜ್ಜೆ ಹಿಂದಕ್ಕಿಟ್ಟು ಅದಕ್ಕೆ ಸರಿಯಾಗಿ ಎರಡು ಕೈಯಲ್ಲೂ ನೆಕ್ಕಿ ಸೊಪ್ಪಿನ ಸೂಡಿ ಹಿಡಿದುಕೊಂಡು ಹಿಂದೆ ಮುಂದೆ ಬೀಸಿ ನಡೆಯುತ್ತಾರೆ. ಮುಂದೆ ಹೋಗಿ ತಿರುಗಿ ತಮ್ಮ ದಿಕ್ಕು ಬದಲಾಯಿಸುವ ಕ್ರಮ ಕೂಡಾ ಹಾಗೆಯೇ ಇರುತ್ತದೆ. ಒಬ್ಬಾತ ಹಾಡು ಹೇಳುತ್ತಾ ಡೋಲು ಬಡಿಯುತ್ತಿರುತ್ತಾನೆ ಅಥವಾ ಡೋಲು ಬಡಿಯಲು ಬೇರೆ ಜನರೂ ಇರುತ್ತಾರೆ.

ಕುದುರೆ ಕೋಲ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಸುಳ್ಯ ತಾಲೂಕುಗಳಲ್ಲಿ ಕಂಡುಬರುವ ಈ ಕಲೆಯನ್ನು ನಲಿಕೆ (ನಲ್ಕೆ)ಯವರು ನಡೆಸುತ್ತಾರೆ. ಇದೊಂದು ಆರಾಧನಾತ್ಮಕ ಕಲೆ. ಸುಗ್ಗಿ ಬೇಸಾಯ ಪ್ರಾರಂಭಿಸುವ ಮೊದಲು ಈ ಕುಣಿತವನ್ನು ನಡೆಸುತ್ತಾರೆ.

ಈ ಆಚರಣೆ ದೊಡ್ಡ ದೊಡ್ಡ ಬೇಸಾಯಗಾರರಾದ ಅರಸರು, ಬಲ್ಲಾಳರು, ಬೂಡಿನವರು, ಗುತ್ತಿನವರಲ್ಲಿ ವಿಜೃಂಭಣೆಯಿಂದ ನಡೆಯುತ್ತದೆ. ಗದ್ದೆ ಕೋರಿ ಆದ ಬಳಿಕ ಗದ್ದೆ ಮಧ್ಯೆ ಪೂಕರೆ ಹಾಕುವ ಕ್ರಮವಿದೆ. (ಪೂಕರೆ ಎಂದರೆ ಅಡಿಕೆ ಮರದ ಸುತ್ತ ಅಂಕಣ ಅಂಕಣವಾಗಿ ಸಲಿಕೆಯ ತುಂಡುಗಳನ್ನು ಜೋಡಿಸಿ ಗೋಪುರಾಕೃತಿಯಲ್ಲಿ ಕಟ್ಟಿದ ಒಂದು ಆಕೃತಿ). ಇದನ್ನು ಸಮಸ್ತ ಜನರ ಸಮ್ಮುಖದಲ್ಲಿ ಕೊಂಬುವಾಲಗದ ಹಿಮ್ಮೇಳದಲ್ಲಿ ಕೊಂಡುಹೋಗಿ ಗದ್ದೆಯ ಮಧ್ಯೆ ನೆಡುವ ಕ್ರಮಕ್ಕೆ ಪೂಕರೆ ಹಾಕುವುದು ಎನ್ನುತ್ತಾರೆ. ಗದ್ದೆ ಕೋರಿ ಆದ ಬಳಿಕ ಪೂಕರೆ ಹಾಕುವ ಮೊದಲು ಕುದುರೆಕೋಲು ನಡೆಯುತ್ತದೆ.

ಬಿದಿರಿನ ಸಲಿಕೆಗಳಿಂದ ಮಾಡಿದ ಕುದುರೆಯ ದೇಹದ ಆಕೃತಿಯೊಂದು ಇರುತ್ತದೆ. ಅದರ ಮುಖಕ್ಕೆ ಕಂಗಿನ ಹಾಳೆಯಿಂದ ಮಾಡಿದ ಕುದುರೆಯ ಮುಖವಾಡ ಕಟ್ಟಿರುತ್ತಾರೆ. ಹಿಂದೆ ತೆಂಗಿನ ತಿರಿಯಿಂದ ಮಾಡಿದ ಬಾಲದ ರಚನೆ ಇರುತ್ತದೆ. ಈ ಆಕೃತಿಯನ್ನು ನಾಗಬ್ರಹ್ಮ ವೇಷಧಾರಿ ತನ್ನ ಸೊಂಟಕ್ಕೆ ಕಟ್ಟುಕೊಳ್ಳುತ್ತಾನೆ. ಆಕೃತಿಯು ಆತನ ಸೊಂಟವನ್ನು ಸುತ್ತುವರಿಯುವುದರಿಂದ ಆತ ಕುದುರೆಯ ಮೇಲೆ ಕುಳಿತಂತೆ ಕಾಣುತ್ತದೆ. ಕುದುರೆಯ ದೇಹದ ಇತರ ಭಾಗವನ್ನು ಬಟ್ಟೆಯಿಂದ ಮುಚ್ಚಲಾಗುತ್ತದೆ. ಲಯಬದ್ಧವಾದ ಕುಣಿತ ಮಾಡುವಾಗ ಕುದುರೆಯ ಸವಾರಿಯಂತೆ ಇರುತ್ತದೆ. ಇದು ಕೀಲುಕುದುರೆ ಕುಣಿತವನ್ನೇ ಹೋಲುತ್ತದೆ.

ಪಿಲಿಪಂಜಿ ಕುಣಿತ : ದಕ್ಷಿಣ ಕನ್ನಡದ ಮೊಗೇರರು (ಮೇರರು) ವರ್ಷಕ್ಕೆ ಒಂದಾವರ್ತಿ ಸುಗ್ಗಿ ಹುಣ್ಣಿಮೆಯಿಂದ ಒಂದು ವಾರದ ಕಾಲ ಈ ಕುಣಿತವನ್ನು ನಡೆಸುತ್ತಾರೆ. ತಂಡದಲ್ಲಿ ಮುಖ್ಯವಾಗಿ ಒಂದು ಹುಲಿವೇಷ, ಒಂದು ಹಂದಿವೇಷ, ಎರಡು ಜಿಂಕೆಗಳ ವೇಷಗಳು ಹಾಗೂ ಒಬ್ಬ ಬೇಟೆಗಾರನಿರುತ್ತಾನೆ. ಒಬ್ಬ ದುಡಿ ಬಾರಿಸುತ್ತಾ ಹಾಡು ಹೇಳಿದರೆ, ಇನ್ನೊಬ್ಬ ಇದಕ್ಕೆ ಧ್ವನಿಗೂಡಿಸುತ್ತಾನೆ. ಹೀಗೆ ತಂಡದಲ್ಲಿ ಒಟ್ಟು ಏಳು ಮಂದಿ ಇರುತ್ತಾರೆ. ಆಯಾ ವೇಷಧಾರಿಗಳು ಆಯಾ ಪ್ರಾಣಿಗಳ ಸಾಂಕೇತಿಕ ಮುಖವಾಡವನ್ನು ತಲೆಗೆ ಕಟ್ಟಿಕೊಂಡಿರುತ್ತಾರೆ.

ಹೀಗೆ ವೇಷ ಹಾಕಿದ ಅನಂತರ ಗುರಿಕಾರನ ಮನೆಯಲ್ಲಿ ಆರಂಭದ ಕುಣಿತ ನಡೆಯುತ್ತದೆ. ಒಬ್ಬ ದುಡಿ ಬಾರಿಸುತ್ತಾ ಪಿಲಿಪಂಜಿ ಪಾಡ್ದನ (ಹಾಡನ್ನು) ಹೇಳುತ್ತಾನೆ. ಇನ್ನೊಬ್ಬ ಅದನ್ನು ಪುನರಾವರ್ತಿಸುತ್ತಾನೆ. ಕುಣಿತದಲ್ಲಿ ಹಾಡು ನಿಧಾನಗತಿಯಿಂದ ಸಾಗುತ್ತದೆ. ಜಿಂಕೆ ವೇಷದವರು ಕೈಕಾಲುಗಳನ್ನೂರಿ ಕುಪ್ಪಳಿಸುತ್ತಾರೆ. ಹುಲಿ ಮತ್ತು ಹಂದಿ ಎದುರುಬದುರಾಗಿ ನಿಂತು ಬೆನ್ನನ್ನು ಪೂರ್ತಿ ಬಗ್ಗಿಸಿ ಕೈಕಾಲುಗಳನ್ನು ಸಮಾನಾಂತರವಾಗಿ ಬೀಸಿ ಮುಂದಕ್ಕೆ ಹಿಂದಕ್ಕೆ ಕುಣಿಯುತ್ತಿರುತ್ತಾರೆ. ಬೇಟೆಗಾರ ಹುಲಿ, ಹಂದಿಗಳಿಗೆ ಆಗಾಗ ಗುರಿ ಇಡುತ್ತಾನೆ. ಪ್ರಾಣಿಗಳು ತಪ್ಪಿಸಿಕೊಳ್ಳುತ್ತವೆ. ಕುಣಿತದ ಸಂದರ್ಭದಲ್ಲಿ ಆಯಾ ಪ್ರಾಣಿಗಳು ತಮ್ಮ ತಮ್ಮ ಧ್ವನಿಯಲ್ಲಿ ಆರಚುತ್ತಿರುತ್ತವೆ. ಇದೊಂದು ಆಚರಣಾತ್ಮಕ ಕಲೆ.

ಕೊರಗರ ಕುಣಿತ: ಕೊರಗರು ದಕ್ಷಿಣ ಕನ್ನಡದ ಮೂಲನಿವಾಸಿಗಳಲ್ಲಿ ಬಹು ಮುಖ್ಯವಾದ ಒಂದು ಪಂಗಡ. ದಕ್ಷಿಣ ಕನ್ನಡದ ಎಲ್ಲ ತಾಲ್ಲೂಕುಗಳಲ್ಲಿಯೂ ಕೊರಗರು ಕಂಡುಬರುತ್ತಾರೆ.

ಚುಣ್ಣ ಎಂಬ ಕಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದರಲ್ಲೂ ಹೆಚ್ಚಾಗಿ ಕುಂದಾಪುರ ತಾಲೂಕಿನಲ್ಲಿ ಕಂಡುಬರುತ್ತದೆ. ಇದನ್ನು ಆದಿವಾಸಿ ಜನಾಂಗವಾದ ಕೊರಗರು ನಡೆಸುತ್ತಾರೆ. ಇತರರು ಈ ಕುಣಿತದಲ್ಲಿ ಪಾಲ್ಗೊಳ್ಳುವುದಿಲ್ಲ. ಕೊಡಿ ತಿಂಗಳಲ್ಲಿ ಬರುವ ಮಾರಣ ಕಟ್ಟೆಯ ಹಬ್ಬದಂದು ‘ಚುಣ್ಣ’ ಕಟ್ಟಿಕೊಂಡು ಮನೆ ಮನೆಗೆ ಬಂದು ‘ಪಡಿ’ ಬೇಡುತ್ತಾರೆ. ಅಲ್ಲದೆ ಕಂಬಳಕ್ಕೆ ಕೋಣಗಳನ್ನು ಕೊಂಡೊಯ್ಯುವ ಸಂದರ್ಭದಲ್ಲಿ ತಮ್ಮ ಕೋಣಗಳ ಜೊತೆಗೆ ಚುಣ್ಣ ಕಟ್ಟಿಕೊಂಡು ಬರುವಂತೆ ಕೊರಗರನ್ನು ಆಹ್ವಾನಿಸುತ್ತಾರೆ. ಕಂಬಳದ ಸಂದರ್ಭಗಳಲ್ಲಿ ಕೊರಗರು ‘ಚುಣ್ಣ ಕಟ್ಟಿ’ ಕೊಳ್ಳುತ್ತಾ ಡೋಲು ಬಾರಿಸುತ್ತಾ ಇರುತ್ತಾರೆ. ಇದೊಂದು ಧಾರ್ಮಿಕ ಹಾಗೂ ಆಚರಣಾತ್ಮಕ ಕಲೆ. ಇದಲ್ಲದೆ ಕೊರಗರ ಡೋಲು ಮೇಳ ಅತ್ಯಂತ ಆಕರ್ಷಕವಾದದ್ದು. ಹತ್ತಾರು ಜನಸೇರಿ ನುಡಿಸುವ ಡೋಲು ಮೇಳ ಅವರ ಪ್ರತಿಭಾ ಶಕ್ತಿಗೆ ಹಿಡಿದ ಕನ್ನಡಿ.

ನಲ್ಕೆಯವರ ಕೊರಗ ತನಿಯ: ಈ ಕುಣಿತದಲ್ಲಿ ಒಬ್ಬ ಕಲಾವಿದ (ನರ್ತಕ) ಹಾಗೂ ಒಬ್ಬ ತೆಂಬರೆಯವನಿರುತ್ತಾನೆ. ನರ್ತಕ ಕಪ್ಪು ಬಟ್ಟೆಯನ್ನು ಸೊಂಟಕ್ಕೆ ಕಟ್ಟಿಕೊಂಡಿರುತ್ತಾನೆ. ಇದನ್ನು ‘ಕಾಂಗ್’ ಎನ್ನುತ್ತಾರೆ. ಮೈಗೆ ಸಂಪೂರ್ಣವಾಗಿ ಮಸಿ ಬಳಿದುಕೊಳ್ಳುತ್ತಾನೆ. ಅನಂತರ ಸೊಂಟಕ್ಕೆ ತೆಂಗಿನ ‘ತಿರಿ’ಯನ್ನು ಕಟ್ಟಿಕೊಳ್ಳುತ್ತಾನೆ. ಮುಖಕ್ಕೆ ಸುಣ್ಣ ಚುಕ್ಕಿಯನ್ನು ವಿರಳವಾಗಿ ಇಟ್ಟುಕೊಳ್ಳುತ್ತಾನೆ. ತಲೆಗೆ ಎರಡು ಕಡೆ ಕಟ್ಟು ಹಾಕಿದ ಹಾಳೆಯ ಟೊಪ್ಪಿಯನ್ನು (ಗೋಂಪಾರ) ಇಟ್ಟುಕೊಳ್ಳುತ್ತಾನೆ. ಕಾಲಿಗೆ ಗಗ್ಗರ, ಕುತ್ತಿಗೆಗೆ ಹೂವಿನಹಾರ ಹಾಗೂ ಕೈಯಲ್ಲೊಂದು ದೊಣ್ಣೆ – ಇವಿಷ್ಟು ಕೊರಗನ ವೇಷಭೂಷಣಗಳು.

ಕುಣಿತದ ಸಂದರ್ಭದಲ್ಲಿ ಕೊರಗ ತನಿಯನ ಪಾಡ್ದನವನ್ನು ತೆಂಬರೆಯ ಬಡಿತದೊಂದಿಗೆ ಹೇಳಲಾಗುತ್ತದೆ. ಭೂತದ ಕೋಲದ (ಕೊರಗತನಿಯ) ಸಂದರ್ಭದಲ್ಲಿ ಹಾಡುವ ಪಾಡ್ದನವನ್ನೇ ಇಲ್ಲಿಯೂ ಸ್ವಲ್ಪ ಭಾಗ ಹಾಡುತ್ತಾರೆ. ಕೆಲವು ಕಡೆ ಬೇರೆ ಹಾಡುಗಳನ್ನು ಹಾಡುವುದೂ ಉಂಟು.

ಕುಡುಬಿಯರ ಕುಣಿತ : ಕುಡುಬಿಯರು ದಕ್ಷಿಣ ಕನ್ನಡ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಕಂಡುಬರುವ ಬುಡಕಟ್ಟು ಜನ. ಕಲುವಾಡಿ ಎಂಬ ಹೆಸರನ್ನೇ ಇವರು ಜಾತಿಸೂಚಕವಾಗಿ ಬಳಸಿಕೊಳ್ಳುತ್ತಾರೆ. ಅರೆ, ಗೋವ, ಜೋಗಿ, ಕೊಡಿಯಾಲ, ಕರಿಯ ಎಂಬ ಒಳಪಂಗಡಗಳು ಇವೆ. ಇವರು ಕೊಂಕಣಿ ಮತ್ತು ಅದರ ಒಂದು ಉಪಭಾಷೆಯನ್ನು ಆಡುತ್ತಾರೆ.

ಗೋವೆದೇವರ ಪ್ರೀತ್ಯರ್ಥವಾಗಿ ಐದು ದಿನಗಳ ಕಾಲ ನಡೆವ ನೃತ್ಯ ರೂಪದ ಆಚರಣೆ ಇವರಲ್ಲಿದೆ. ಶಿವರಾತ್ರಿಯ ಮುಂದಿನ ಏಕಾದಶಿಯ ದಿನ ಹಾಡಿಯ ಹಿರಿಯನ ಮನೆಯಲ್ಲಿ ಆರಂಭವಾಗುತ್ತದೆ. ಇಂತಹ ಮನೆಗಳಿಗೆ ‘ಮೇಳದ ಮನೆ’ ಎನ್ನಲಾಗುತ್ತದೆ. ಒಂದೊಂದು ಮೇಳದಲ್ಲಿ ಐವತ್ತರಿಂದ ಇನ್ನೂರು ಜನ ಪಾಲ್ಗೊಳ್ಳುವುದು ಉಂಟು.

29_70A_DBJK-KUH

ಕಾಲಿಗೆ ಗೆಜ್ಜೆ (ಗಗ್ಗರ್) ಸೊಂಟದ ಕೆಳಗೆ ಇಜಾರ್, ಅದರ ಮೇಲೆ ಚೌಕಳಿ ಸೀರೆಯನ್ನು ಕತ್ತರಿಯಾಗಿ ಉಡುತ್ತಾರೆ, ಮೇಲೆ ನೆರಿಯಂಗಿ, ಕೊರಳಿಗೆ ಬೆಳ್ಳಿಯ ನೇವಳದ (ಮೂಂಜೆ) ಸರ, ಬಿಳಿಯ ನೆರಿಯಂಗಿಯ ಮೇಲೆ ಬಿಗಿದ ಶಾಲು. ಕೈಗೆ ಬಳೆ, ತಲೆಗೆ ಕೆಂಪು ಪಟ್ಟಿಯ ಬಿಳಿ ಮುಂಡಾಸು. ಅದರ ಮೇಲೆ ಕನಕಾಂಬರ (ಅಬ್ಬಲಿಗೆ) ಹೂವಿನ ದಂಡೆ. ಮುಂಡಾಸಿಗೆ ಸಿಕ್ಕಿಸಿದ ಸೊಗಸಾದ ಹೆಂಟೆ ಗೊದ್ದದ (ಹಟ್ಟಿ ಮುದ್ದಪಕ್ಷ) ಗರಿ – ಇವಿಷ್ಟು ಅವರ ಅಲಂಕಾರ. ಇಷ್ಟು ದಿನ ತೂಗು ಹಾಕಿದ ಮಣ್ಣಿನ ಮಡಿಯಾಕೃತಿಯ ಗುಮ್ಟಿ (ಗುಮಟೆ) ಈಗ ಸಾಲು ಸಾಲಾಗಿ ಅಂಗಳಗ ಬದಿಯಲ್ಲಿ ಸೇರ್ಪಡುತ್ತವೆ. ಎಲ್ಲರ ಕೈಯಲ್ಲೂ ಕಾಡುಸುರಗಿ ಮರದ ಎರಡು ಕೋಲುಗಳು. ಮಂಡ್ಕಾರ ಅರತಿಯೆತ್ತಿ ಪೂಜೆ ಮುಗಿಸಿದೊಡನೆ ಕೋಲಾಟಕ್ಕೆ ತೊಡುಗತ್ತಾರೆ. ನರ್ತನದೊಂದಿಗೆ ಹಾಡು ಹೇಳುತ್ತಾರೆ. ಮಂಡಲಾಕಾರದಲ್ಲಿ ಒಳಗೊಂದು ಸುತ್ತು ಹೊರಗೊಂದು ಸುತ್ತು ತೆಗೆಯುತ್ತಾ, ಎದುರೆದುರು ಬಂದವರು ಕೋಲು ಬಡಿಯುತ್ತಾ ನಿಲ್ಲದೆ ಸಾಗುತ್ತಿರುತ್ತಾರೆ. ಕೊಂಕಣಿ ಭಾಷೆಗೆ ತೀರ ಸಮೀಪವಾಗಿರುವ ಈ ಹಾಡಿನಲ್ಲಿ ಗೋವೆಯ ಹತ್ತಾರು ದೇವರ ಸ್ತುತಿ ಇದೆ. ಜೊತೆಗೆ ಸುತ್ತಲಿನ ಮಂದರ್ತಿ, ಕೊಲ್ಲೂರು, ಪೆರ್ಡೂರು ಮುಂತಾದ ದೇವರ ಹೊಗಳಿಕೆಯೂ ಇರುತ್ತದೆ.

ಮೇರರ ದುಡಿಕುಣಿತ : ದುಡಿ ಮೇರರೇ ತಯಾರಿಸುವ ಒಂದು ವಿಶೇಷ ಜನಪದ ವಾದ್ಯ. ದುಡಿಗೆ ಮೇರರ ಸಾಂಸ್ಕೃತಿಕ ಲೋಕದಲ್ಲಿ ವಿಶಿಷ್ಟ ಮನ್ನಣೆ ಇದೆ.

ದುಡಿ ಕುಣಿತವನ್ನು ಮನರಂಜನೆ, ಆರಾಧನೆ ಮತ್ತು ಸಂಪ್ರದಾಯಗಳ ಸಂದರ್ಭಗಳಲ್ಲಿ ಪ್ರದರ್ಶಿಸಲಾಗುತ್ತದೆ. ಸಂಜೆಯ ವಿಶ್ರಾಂತಿ ಸಂದರ್ಭದಲ್ಲಿ ಹಾಗೂ ನೆಂಟರಿಷ್ಟರು ಮನೆಗೆ ಬಂದಾಗ ದುಡಿ ನುಡಿತವಿರುತ್ತದೆ. ಆರಾಧನೆಯ ಸಂದರ್ಭವೆಂದರೆ ಚೆನ್ನುನಲಿಕೆ ಮತ್ತು ಮೋಗೇರರ ಕೋಲಗಳಲ್ಲಿ ದುಡಿ ಕುಣಿತವಿರುತ್ತದೆ. ಮದುವೆಯೇ ಮೊದಲಾದ ಸಂಪ್ರದಾಯಗಳಲ್ಲಿಯೂ ದುಡಿ ನುಡಿತವಿರುತ್ತದೆ.

ದುಡಿ ನುಡಿತದಲ್ಲಿ ಅದರ ಲಯ ಮತ್ತು ನುಡಿಸುವಿಕೆಯ ವಿಧಾನಕ್ಕನುಗುಣವಾಗಿ ಕೆಲವೊಂದು ಪ್ರಕಾರಗಳಿವೆ. ಬಾಣೆ ಪಾಡುನ, ಒತ್ತುಕೋಲು, ಕರಂಡ ಮೊದಲಾದವು ಅವುಗಳಲ್ಲಿ ಮುಖ್ಯವಾದವು. ಸಾಂಪ್ರದಾಯಿಕವಾಗಿ ಎದುರು ಬದುರು ನಿಂತು ದುಡಿ ನುಡಿಸಿ ಪಂಥಾಹ್ವಾನ ನೀಡುತ್ತಾ ದಿನಗಟ್ಟಲೆ ಬಾರಿಸುವ ದುಡಿ ವೀರರಿದ್ದಾರೆ. ಕರಂಡೆ ಬಾರಿಸಿದಾಗ ದುಡಿಯು ಹುಲಿ ಮೊರೆಯುವಂತೆ ಮೊರೆಯುತ್ತದೆ ಎಂದೂ ಹೇಳಲಾಗುತ್ತದೆ.

ದುಡಿ ಕೇವಲ ಮೇರರಲ್ಲಿ ಮಾತ್ರವಲ್ಲದೆ ದಕ್ಷಿಣ ಕನ್ನಡದ ಬುಡಕಟ್ಟುಗಳಾದ ಮನ್ಸ, ಮಾಯಿಲರಲ್ಲಿಯೂ ಇದೆ. ಹಾಗೆಯೇ ಕೊಡವರಲ್ಲಿಯೂ ದುಡಿ ಕುಣಿತವಿದೆ. ಇದೂ ಅಲ್ಲದೆ ಇನ್ನಿತರ ಬುಡಕಟ್ಟುಗಳೂ ತಮ್ಮದೇ ಆದ ದುಡಿಯನ್ನು ಹೊಂದಿದ್ದು ವಿಶಿಷ್ಟವಾಗಿ ನುಡಿಸುತ್ತಾರೆ.

ಕುಡಿಯರ ಕುಣಿತ : ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಪರ್ವತ ಶ್ರೇಣಿಯಲ್ಲಿ ಆಗುಂಬೆಯಿಂದ ಬ್ರಹ್ಮಗಿರಿಯವರೆಗೆ ಹರಡಿಕೊಂಡಿರುವ ಒಂದು ಪ್ರಾಚೀನ ಸಮೂಹ.

ಪೀಲಿಯಾಟ್ ಕಲೆಯನ್ನು ಕೊಡಗಿನ ಕುಡಿಯ ಗಂಡಸರು ಪ್ರತ್ಯೇಕವಾಗಿ ಮತ್ತು ಹೆಂಗಸರನ್ನೂ ಸೇರಿದಂತೆ ಒಟ್ಟಾಗಿ ಪ್ರದರ್ಶಿಸುವುದುಂಟು. ಕೊಡವರ ರೀತಿಯಲ್ಲಿ ಬಿಳಿಯ ನಿಲುವಂಗಿ, ಪಾಯಿಜಾಮ, ನಡುವಿಗೆ ವಸ್ತ್ರ, ತಲೆಗೆ ತೊಟ್ಟು ಗಂಡಸರು ಸಿದ್ಧರಾಗುತ್ತಾರೆ. ಹೆಂಗಸರಿಗಾದರೆ ಕೊಡವ ಮಹಿಳೆಯರಂತೆ ದೈನಂದಿನ ಉಡುಪುಗಳಿರುತ್ತವೆ. ಎರಡೂ ತೋಳುಗಳನ್ನೆತ್ತಿ ಕೈಗಳನ್ನು ಬಾಗಿಸುತ್ತಾ ಬಗ್ಗಿ, ಎದ್ದು, ಹಿಂದೆ ಮುಂದೆ ತಿರುಗುತ್ತಾ ಆಕರ್ಷಕವಾಗಿ ನರ್ತಿಸುವಾಗ ಒಬ್ಬ ಹಿಮ್ಮೇಳವಾಗಿ ಡೋಲನ್ನು ನುಡಿಸುತ್ತಾನೆ. ಕೊಡವರ ಕೊಂಬಾಟ್ ಪೀಲಿಯಾಟಗಳಂತೆ ಇದು ಕಂಡು ಬರುವುದಾದರೂ ಬಿರುಸಾದ ನರ್ತನ ಇಲ್ಲಿಯ ವಿಶೇಷ. ಕೊಡಗಿನ ಕುಣಿತಗಳಿಗೆ ಈ ಕುಡಿಯರ ಕುಣಿತವೇ ಮೂಲ ಎಂದೂ ಹೇಳಲಾಗುತ್ತದೆ.

ಯರವರ ಕುಣಿತ : ಅಮ್ಮತ್ತಿ, ಪೊನ್ನಂಪೇಟೆ, ಗೋಣಿಕೊಪ್ಪ ಮತ್ತು ಶ್ರೀಮಂಗಲವೂ ಸೇರಿದಂತೆ ವಿರಾಜಪೇಟೆಯ ಬಹುತೇಕ ಕಾಡುಗಳಲ್ಲಿ ಅಲ್ಲಲ್ಲಿ ನೆಲೆನಿಂತಿರುವ ಯವರು ಒಂದು ವಿಶಿಷ್ಟ ಬುಡುಕಟ್ಟು.

ಯರವರು ದುಡಿತದ ದಣಿವಾರಿಸಿಕೊಳ್ಳಲು, ನೋವುಗಳನ್ನು ಮರೆಯಲು ರಾತ್ರಿ ಹೊತ್ತು ಸಾಮೂಹಿಕ ಕುಣಿತ ಮತ್ತು ಹಾಡುಗಳಿಗೆ ಪರವಶರಾಗುತ್ತಾರೆ. ಯರವರ ಕುಣಿತದ ವಿಶೇಷವೆಂದರೆ ಕುಣಿತದಲ್ಲಿ ಇಷ್ಟೇ ಜನರಿರಬೇಕೆಂದಾಗಲೀ, ಇಂಥವರೇ ಇರಬೇಕೆಂದಾಗಲೀ ಯಾವುದೇ ಕಟ್ಟುಪಾಡುಗಳಿಲ್ಲ. ಹಿನ್ನೆಲೆಗೆ ಪ್ರಧಾನವಾಗಿ ಬಳಸುವುದು ‘ದುಡಿ’ ಮತ್ತು ‘ಚೀನಿವಾದ್ಯ’, ದುಡಿ ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕೊಡಗಿನ ಗಿರಿಜನರಲ್ಲಿ ಬಳಕೆಯಲ್ಲಿರುವ ಜನಪ್ರಿಯ ಚರ್ಮವಾದ್ಯ. ಆದರೆ ಯರವರ ‘ಚೀನಿ’ ತುಂಬಾ ವಿಶೇಷವಾದ ಗಾಳಿವಾದ್ಯ. ಶ್ರುತಿ ಮೊದಲುಗೊಂಡು ಇದನ್ನು ಪೂರ್ಣ ಮರದಿಂದಲೇ ಮಾಡಿರುತ್ತಾರೆ. ಒಂದು ರೀತಿಯ ಗುಂಗು ತುಂಬುವ ನಾದವಿಶೇಷ. ಇದನ್ನು ಯರವರೇ ತಯಾರು ಮಾಡಿಕೊಳ್ಳುತ್ತಾರೆ. ದುಡಿಯ ಲಯಬದ್ಧ ಬಡಿತಕ್ಕೆ ಬಾಗಿ ಬಾಗಿ ಜೋಲಿ ಹೊಡೆಯುತ್ತಾ ಕುಣಿಯುತ್ತಾರೆ. ಮಹಿಳೆಯರು ಮತ್ತು ಮಕ್ಕಳು, ಪುರುಷರನ್ನೊಳಗೊಂಡ ಸಾಮೂಹಿಕ ನೃತ್ಯವಿದು. ಯರವರ ಗಂಡಸರೇ ಕುಣಿಯುವ ಕೊಡವ ನೃತ್ಯದ ಮಾದರಿಯಾದ ‘ಯರವಾಟ್’ ನೃತ್ಯವೂ ಬಳಕೆಯಲ್ಲಿ ಇದೆ.

ಸಿದ್ದಿಯರ ಕುಣಿತಗಳು : ಆಫ್ರಿಕಾ ಮೂಲದ ಸಿದ್ದಿಗಳು ಪೋಚುಗೀಸರ ಕಾಲದಲ್ಲಿ ಗೋವಾದ ಮೂಲಕ ಕರ್ನಾಟಕ ತಲುಪಿದರು. ಪೋರ್ಚುಗೀಸರ ಕಾಲದಲ್ಲಿ ಗುಲಾಮರಾಗಿ ಸಾಗಿಸಲಾದ ಇವರು ಇದೀಗ ಉತ್ತರ ಕನ್ನಡದ ಅನೇಕ ತಾಲ್ಲೂಕುಗಳಲ್ಲಿ ಕಂಡುಬರುತ್ತಾರೆ. ಮುಖ್ಯವಾಗಿ ಯಲ್ಲಾಪುರ ತಾಲೂಕಿನಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ.

ಸಿದ್ದಿಯರ ಸ್ವಂತಿಕೆಯನ್ನು ಹೆಚ್ಚು ತೋರಿಸುವ ಒಂದು ಪ್ರಮುಖ ಕಲೆ. ‘ಡಮಾಮಿ ಕುಣಿತ’. ಪುಗಡಿ ಕುಣಿತವನ್ನು ಗಣೇಶನ ಹಬ್ಬದಲ್ಲಿ ಕುಣಿದರೆ ಡಮಾಮಿ ನವರಾತ್ರಿಯ ಕಲೆ ಎಂದು ಅವರೇ ಹೇಳುತ್ತಾರೆ. ಆದರೆ ಈ ಡಮಾಮಿ ಕುಣಿತ ಅವರ ಹಿರಿಯರ ಹಬ್ಬಗಳಲ್ಲೂ, ಇತರೆ ಮನರಂಜನೆಯ ಸಂದರ್ಭಗಳಲ್ಲೂ ಪ್ರದರ್ಶಿಸಲ್ಪಡುತ್ತದೆ. ಈ ಕಲೆಯಲ್ಲಿ ಸಿದ್ದಿಗಳ ಸ್ವಂತಿಕೆ ಹೆಚ್ಚಿದೆ ಎಂದು ಹೇಳಲು ಈ ಪ್ರದರ್ಶನ ಕಂಡುಬರುತ್ತದೆ. ಅಲ್ಲದೆ, ಇವರ ‘ಡಮಾಮಿ’ ಎಂಬ ಚರ್ಮವಾದ್ಯ ಇಲ್ಲಿ ಇತರ ಯಾವ ಜನರಲ್ಲೂ ಬಳಕೆಯಲಿಲ್ಲ. ಬಹುಶಃ ಇದಕ್ಕೆ ಆಫ್ರಿಕಾದ ಮೂಲವಿರಬಹುದು ಎಂದು ಸಂಶಯಗಳಿವೆ. ಹಿಮ್ಮೇಳದಲ್ಲಿ ಒಬ್ಬನು ಡಮಾಮಿ ಬಡಿಯುವಾಗ ಇಬ್ಬರು ಮಹಿಳೆಯರು ಅಥವಾ ಸೀರೆಯುಟ್ಟು ಗಂಡಸರು ನವಿಲುಗರಿ ಮತ್ತು ತೆಂಗಿನಕಾಯಿಯ ಬುರುಡೆ ಹಿಡಿದು ಕುಣಿಯುತ್ತಾರೆ. ನವಿಲುಗರಿ ನಮ್ಮ ಕೊಡುಗೆಯಾದರೂ ತೆಂಗಿನಕಾಯಿಯ ಬುರುಡೆಯನ್ನು ಅಲ್ಲಾಡಿಸುತ್ತಾ ಕುಣಿಯುವುದು ಸಿದ್ದಿಯರ ಸ್ವಂತ ಕೊಡುಗೆ. ಹೀಗಾಗಿ ಮೂರು ಅಂಶಗಳು ಮುಖ್ಯವಾಗಿ ಈ ಕಲೆಯನ್ನು ಆಫ್ರಿಕಾದ ಕಡೆಗೆ ಸೆಳೆಯುತ್ತವೆ. ಒಂದು ಹಿರಿಯರ ಪೂಜೆಯ ಸಂದರ್ಭದಲ್ಲಿ ಈ ಕುಣಿತ ನಡೆಯುವುದು. ಎರಡು – ಡಮಾಮಿ ಎಂಬ ಅಪರೂಪದ ವಾದ್ಯ ವಿಶೇಷ. ಮೂರು ‘ಮುಚಾಕೆ’ ಎಂಬ ತೆಂಗಿನಕಾಯಿಯ ಬುರುಡೆ. ಈ ಕುಣಿತದ ಸಂದರ್ಭದಲ್ಲಿ ಭಾವಾವೇಶಕ್ಕೆ ಒಳಗಾದವರಿಗೆ ‘ಮೈಮೇಲೆ’ ಬರುವುದೂ ಉಂಟು. ಅಂಥ ಸಂದರ್ಭದಲ್ಲಿ ಸಮಸ್ಯೆಗಳಿಗೆ ಪರಿಹಾರ ಕೇಳುವ ಪ್ರತೀತಿಯೂ ಉಂಟು. ಒಬ್ಬಿಬ್ಬರಿಂದ ಆರಂಭವಾಗಿ ಕುಣಿತ ಮುಗಿಯುವಾಗ ಹತ್ತಾರು ಜನರನ್ನು ಒಳಗೊಳ್ಳುವುದು ಈ ಕಲೆಯ ವಿಶೇಷ.

ಗೌಳಿಗರ ಕುಣಿತಗಳು : ಇವರು ಮೂಲತಃ ಮಹಾರಾಷ್ಟ್ರ ಮತ್ತು ಗೋವಾದವರು. ಪಶುಪಾಲಕ ವೃತ್ತಿಯವರಾದ ಇವರು ಮಹಾರಾಷ್ಟ್ರದ ಅಜ್ಮೀರ್, ಕೊಲ್ಲಾಪುರ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ವಲಸೆ ಬಂದವರು. ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಬೆಳಗಾಂ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಂಡುಬರುತ್ತಾರೆ.

ಹೋಳಿಹುಣ್ಣಿಮೆ, ದೀಪಾವಳಿ ಮತ್ತು ದಸರಾ ಹಬ್ಬಗಳಲ್ಲಿ ಇವರ ಜಗಾ ಕುಣಿತವಿರುತ್ತದೆ. ಜಗಾ ಧರಿಸಿ ಕುಣಿಯುವುದರಿಂದಲೇ ಇದಕ್ಕೆ ಈ ಹೆಸರು. ಬೆನ್ನಲ್ಲಿ ಚಂದ್ರಾಕಾರದ ಕಸೂತಿ ಇರುವ ನೀಲಿ ವರ್ಣದ ನಿಲುವಂಗಿ, ಕಾಸೆ, ತಲೆಗೆ ಪಾಗೋಟು, ಕಾಲಿಗೆ ಗೆಜ್ಜೆ, ಕೈಯಲ್ಲಿ ತಲ್ವಾರ್ ಇವು ಜಗಾ ಕುಣಿತದ ವೇಷಭೂಷಣಗಳು. ಡೋಲು ಈ ಕುಣಿತದ ಹಿಮ್ಮೇಳ ವಾದ್ಯ. ಇದರೊಂದಿಗೆ ಜಾಗಟೆಯೂ ಇರುತ್ತದೆ. ಸುಮಾರು ಹತ್ತರಿಂದ ಹದಿನೈದು ಜನ ಗಂಡಸರು ಈ ಕುಣಿತದಲ್ಲಿ ಪಾಲ್ಗೊಳ್ಳುತ್ತಾರೆ. ಕುಣಿತದ ನಡು ನಡುವೆ ‘ಛಾಂಗ್ ಭಲಾ’ ಎನ್ನುತ್ತಿರುತ್ತಾರೆ. ಇದು ಕೂಡ ಪುರುಷರದೇ ಕುಣಿತ.

ಜಿಮ್ಮಾ ಕುಣಿತ : ಗೌಳಿಗರ ಹೆಣ್ಣುಮಕ್ಕಳ ಕುಣಿತ. ಇದರಲ್ಲಿ ಎರಡು, ಆರು ಅಥವಾ ಎಂಟು ಮಂದಿಯಿರುತ್ತಾರೆ. ಒಬ್ಬರೆದುರು ಇನ್ನೊಬ್ಬರು ನಿಂತು ಚಪ್ಪಾಳೆ ಕೊಡುತ್ತಾ ತಾಳಬದ್ಧವಾಗಿ ಸುತ್ತುತ್ತಾರೆ. ಜತೆ ಜತೆಗೆ ಹಾಡೂ ಇರುತ್ತದೆ. ಇದರಲ್ಲಿ ಇಬ್ಬರು ನಾಲ್ವರು ಆಡುವ ನೃತ್ಯಗಳೂ ಇರುತ್ತವೆ. ಭುಜದ ಮೇಲಕ್ಕೆ ಕೈಗಳನ್ನು ರೆಕ್ಕೆಯಂತೆ ಎತ್ತರಿಸಿ ಪರಸ್ಪರ ಏರಿ ಹೋಗಿ ಚಪ್ಪಾಳೆ ತಟ್ಟುವುದು, ತೊಡೆಗಳ ಮೇಲೆ ಕೈ ಅಪ್ಪಳಿಸಿ ಹಿಂದೆ ಮುಂದೆ ತೂಗುತ್ತ ಚಪ್ಪಾಳೆ ಕೊಡುವುದು ಇದರ ವೈಶಿಷ್ಟ್ಯಗಳು.

ಕಿನ್ನರಿ ಜೋಗಿ ಮೇಳ : ಕರ್ನಾಟಕದ ಜನಪದ ಗಾಯಕರಲ್ಲಿ ಅತ್ಯಂತ ಜನಪ್ರಿಯರೆನಿಸಿದ ಕಲಾವಿದರೆಂದರೆ ಕಿನ್ನರಿಜೋಗಿಗಳು. ಮಲೆನಾಡು, ಬಯಲುನಾಡುಗಳೆರಡರಲ್ಲೂ ಇವರು ಕಾಣಬರುತ್ತಾರೆ. ಧಾರ್ಮಿಕ ಉದ್ದೇಶದಿಂದ ಪವಿತ್ರವಾದ ದೀಕ್ಷೆಯನ್ನು ಪಡೆದು ಲಾಂಛನಗಳನ್ನು ಧರಿಸಿ, ಭಕ್ತರ ಮನೆಗಳ ಧಾರ್ಮಿಕ ಕ್ರಿಯೆಗಳಲ್ಲಿ ಭಾಗವಹಿಸಿ ಅವುಗಳನ್ನು ನಡೆಸಿಕೊಡುವ, ದೇವರ ಮತ್ತು ಭಕ್ತರ ನಡುವಿನ ‘ದೇವರ ಮಕ್ಕಳು’ ಇವರು.

ತಲೆ ಬಣ್ಣದ ಮುಂಡಾಸು, ಅದಕ್ಕೊಂದು ತ್ರಿಶೂಲ, ಮುಂಡಾಸಿನ ಸುತ್ತ ಗಾಜಿನ ಕಡ್ಡಿಯ ಗುಳೋಪು, ಕಚ್ಚೆ ಪಂಚೆ, ಕರಿಯ ನಿಲುವಂಗಿ, ನೇತಾಡುವ ಮುತ್ತಿನಸರ, ನಿಲುವಂಗಿ ಮೇಲೆ ಅಡ್ಡ ಶಲ್ಯ, ಕಿವಿಗೆ ಕರ್ಣಕುಂಡಲ ಮತ್ತು ಕಾಪಾಲಿ, ಕೈಯಲ್ಲಿ ಕಿನ್ನರಿ, ಕಾಲಿಗೆ ಗೆಜ್ಜೆ, ಹೆಗಲಿಗೆ ಜೋಳಿಗೆ – ಇವು ಜೋಗಿಯ ವೇಷಗಳು.

ಕಿನ್ನರಿ ಒಂದು ತಂತಿ ವಾದ್ಯ. ಬಿದಿರಿನ ಗಳಕ್ಕೆ ಮೂರು ಸೋರೆ ಬುರುಡೆ, ಎರಡು ದೊಡ್ಡವು, ಒಂದು ಚಿಕ್ಕದು. ಬಿದಿರಿನ ಹೊರಮೈ ಮೇಲೆ ಮುಳ್ಳು ಹಂದಿಯ ಚಿಪ್ಪಿನಿಂದ ಮಾಡಿದ ಹತ್ತು ಮೆಟ್ಟಿಲು. ಇವುಗಳನ್ನು ‘ಸಾರೆ’ ಎನ್ನುತ್ತಾರೆ. ಈ ಸಾರೆಗಳನ್ನು ಜೇನು ಮೇಣದಿಂದ ಅಂಟಿಸುತ್ತಾರೆ. ಬಿದಿರಿನ ಒಂದು ತುದಿಯ ತಿರುಪುಳ್ಳ ಶೂಲದ ಕಡ್ಡಿಯನ್ನು ಬಂಧಿಸಿ ಸಾರೆಗಳ ಮೇಲಿಂದ ಹಾದು ಬಂದ ತಂತಿಗಳು ಇನ್ನೊಂದು ತುದಿಯ ಮರದ ಗಿಣಿಯನ್ನು ಸುತ್ತುವರಿಯುತ್ತದೆ. ಈ ಶೂಲದ ಕಡ್ಡಿಗಳನ್ನು ತಿರುಗಿಸಿ ಶೃತಿ ಮಾಡಿಕೊಳ್ಳಬಹುದು. ಶೂಲದ ಕಡ್ಡಿಯ ಅನಂತರ ಬಿದಿರಿನ ತುದಿಗೆ ನವಿಲುಗರಿಯನ್ನು ಸಿಕ್ಕಿಸಿ ಮತ್ತಷ್ಟು ಅಂದಗೊಳಿಸುತ್ತಾರೆ. ಕಿನ್ನರಿ ಹಿಡಿದು ನರ್ತಿಸುತ್ತಾ ಅನೇಕ ಕುಣಿತಗಳನ್ನು ಪ್ರಸ್ತುತಪಡಿಸುತ್ತಾರೆ.

ಕಿನ್ನರಿ ಜೋಗಿಗಳು ಕೇವಲ ಅರ್ಜುನ ಜೋಗಿ ಹಾಡಿಗೆ ಮಾತ್ರ ಸೀಮಿತವಾಗಿಲ್ಲ. ಮಹಾಭಾರತದ ವಿವಿಧ ಪರ್ವಗಳನ್ನು ಅನೇಕ ರಾತ್ರಿಗಳವರೆಗೆ ಹಾಡಬಲ್ಲ ಇವರು, ಶಿವ – ಪಾರ್ವತಿ, ಗಂಗೆ – ಗೌರಿ, ಭೈರವ – ಮಾಳವ್ವ, ಭೈರವ – ಕಾಳಿ ಮುಂತಾದ ಕಥನ ಗೀತೆಗಳನ್ನೂ ಹಾಡುತ್ತಾರೆ. ಆದರೆ ಇವರ ಮಹಾಭಾರತವಾಗಲೀ, ಶಿವಪುರಾಣವಾಗಲೀ ಶಿಷ್ಟ ಪಂಥದ ರಚನೆಗಳಂಥಲ್ಲ. ಇಲ್ಲಿ ನಾಯಕರು, ನಾಯಕಿಯರು ಅಥವಾ ಯಾವುದೇ ಪಾತ್ರ ಜನಸಾಮಾನ್ಯರ ನಡುವಿನ ಪಾತ್ರಗಳು. ಅವರದೇ ಆದ ರೀತಿಯ ಜನಪರವಾದ ಹಾಗೂ ಡಾಂಭಿಕತನವಿಲ್ಲದ ಸರಳ ಕಾವ್ಯಗಳನ್ನೂ ಇವರು ಹಾಡುತ್ತಾರೆ. ಇವಲ್ಲದೆ ವೈವಿಧ್ಯಮಯವಾದ ಹತ್ತಾರು ಲೌಕಿಕ ಕಾವ್ಯಗಳನ್ನು ಹಾಡುತ್ತಾರೆ. ಅವುಗಳಲ್ಲಿ ಮುಖ್ಯವಾದವುಗಳೆಂದರೆ ರಾಜಹಂಸ-ಪರಮಹಂಸ, ಶಿವಶಂಕಿನ ಕುಮಾರ, ಆಶಾವತಿ, ಶಾಮಸೇನ, ಚಿತ್ರಶೇಖರ – ಸೋಮಶೇಖರ, ಬಸವಕುಮಾರ – ಲೋಹಿತಕುಮಾರ, ಸತಿಶೀಲಾವತಿ, ವೀರಸೇನ – ಕೋಕಿಲೆ, ಗೋಪಮ್ಮನ ಕತೆ ಇತ್ಯಾದಿ.

ಹೆಳವರು : ಹೆಳವರು ವಂಶಾವಳಿ ಹೇಳುವುದನ್ನೇ ವೃತ್ತಿಯಾಗಿಸಿಕೊಂಡವರು. ಕರ್ನಾಟಕದ ಬೀದರ್, ಗುಲ್ಬರ್ಗ, ರಾಯಚೂರು, ಬಳ್ಳಾರಿ, ಶಿವಮೊಗ್ಗ, ಧಾರವಾಡ, ಬೆಳಗಾಂ, ಮಂಡ್ಯ, ಮೈಸೂರು ಮುಂತಾಗಿ ಎಲ್ಲ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಆಂಧ್ರ ಪ್ರದೇಶದಲ್ಲಿಯೂ ಇವರನ್ನು ಕಾಣಬಹುದು. ಹೆಳವರಿಗೆ ತೆಲುಗಿನಲ್ಲಿ ‘ಪಿಚ್ಚುಕಕುಂಟವಾಳ್ಳು’ ಎಂದು ಕರೆಯುತ್ತಾರೆ. ಅವರು ತಮ್ಮನ್ನು ತಾವು ‘ಮಲ್ಲಬತ್ಲು’ ಎಂದು ಕರೆದುಕೊಳ್ಳುತ್ತಾರೆ. ತಮ್ಮ ವಂಶದ ಮೂಲವನ್ನು ಕುರಿತು ಹೇಳುವಾಗ ಹಿರಿಯ ಹೆಳವನೊಬ್ಬನ ಕುರಿತು ಉಲ್ಲೇಖಿಸುತ್ತಾರೆ. ಆದರೆ ಇದರಿಂದ ಶಬ್ದ ನಿಷ್ಪತ್ತಿಯನ್ನು ಸಾಧಿಸಲು ಬರುವುದಿಲ್ಲ. ‘ಹೇಳುವವ’ನಿಂದ ಹೆಳವ ಶಬ್ದ ಬಂದಿರಬೇಕು ಎಂಬುದು ಹೆಚ್ಚಿನ ಅಧ್ಯಯನಗಳ ನಿರ್ಧಾರ.

ಹೆಳವರು ಕುಲ ಕೊಂಡಾಡುವುದರೊಂದಿಗೆ ಅನೇಕ ಮಹಾಕಾವ್ಯಗಳನ್ನು ಹಾಡುತ್ತಾರೆ. ಅವುಗಳೆಂದರೆ : ಚಾಮುಂಡಿ ಪುರಾಣ ಅಥವಾ ನಂಜಯ್ಯನ ಕತೆ, ಮಾಗಡಿ ಕೆಂಪೇಗೌಡ ಲಾವಣಿ, ಯಮುದಾಳು ದೇವಮ್ಮ, ಹೊಂಗೆ ಲಕ್ಷ್ಮಮ್ಮ, ಮಾವಿನ ಕೆರೆಯಮ್ಮ, ಕರಿಬಂಟನ ಕತೆ, ಬೆಳಗಲಿ ನರಸಿಂಹಸ್ವಾಮಿ, ಲಕ್ಷ್ಮೀದೇವಿ, ಹುಲಿಕೆರೆಯಮ್ಮ, ಚುಂಚನಗಿರಿ ಭೈರವ, ಮಾಳವ್ವ, ಕಗ್ಗಲಿ ಅಮ್ಮ, ಕೊಣ್ಣಚ್ಚಿ ಲಕ್ಕಮ್ಮ, ಹೆಳವೇಗೌಡ, ಯಮದೋರು, ಬೇವಿನಹಟ್ಟಿ ಕಾಳಿ ಅಥವಾ ಮಾದೇಶ್ವರನ ಕಥೆ, ದೊಡ್ಡ ಬೆಳ್ಳಿ ಚಿಕ್ಕಬೆಳ್ಳಿ ಅಥವಾ ಬಸವಣ್ಣನ ಕಥೆ, ಕುಲವೊಂದು ಕುಲವಯ್ಯ, ಗೋವಿಂದನ ಹಾಡು, ಹರದಹಳ್ಳಿ ಲಕ್ಕಮ್ಮನ ಕಥೆ ಮತ್ತು ಹಾಲುಮತ ಪುರಾಣ.

ಹೆಳವರು ಹರಿಜನರನ್ನುಳಿದು ಅನೇಕ ಕುಲದವರ ಕುರಿತು ಹಾಡುತ್ತಾರೆ. ಜಾತಿ ವ್ಯವಸ್ಥೆ ಸಂಕೀರ್ಣಗೊಂಡ ಕಾಲ ಘಟ್ಟದಲ್ಲಿ ಹೆಳವರು ಈ ವೃತ್ತಿಯನ್ನು ಆರಂಭಿಸಿರಬೇಕು. ‘ಹೆಳವ’ ಪದ ನಿಷ್ಪತ್ತಿಯ ಕುರಿತಾಗಿ ಮಾಡಿರುವ ವಿಶ್ಲೇಷಣೆಯಿಂದ ಕೆಲವೊಂದು ಅಂಶಗಳು ಸ್ಪಷ್ಟವಾಗುತ್ತವೆ. ಮೂಲತಃ ಇವರದು ಭಿಕ್ಷಾಟನೆಯಾಗಿತ್ತು. ಮುಂದೆ ಜಾತಿ ವ್ಯವಸ್ಥೆ ಸಂಕೀರ್ಣಗೊಂಡ ಹಂತದಲ್ಲಿ ಇವರು ಭಿಕ್ಷಾಟನೆಯೊಂದಿಗೆ ಕುಲ ಕೊಂಡಾಡುವುದನ್ನು ಉಪವೃತ್ತಿಯಾಗಿಸಿಕೊಂಡು ಅನಂತರ ಅದನ್ನೇ ಪ್ರಧಾನವೃತ್ತಿಯಾಗಿಸಿಕೊಂಡರು. ಈಗ ಹಿಂದಿದ್ದ ಮೂಲವೃತ್ತಿ ಉಪವೃತ್ತಿಯ ಸ್ಥಾನ ಪಡೆದುಕೊಂಡಿವೆ.

ಗೊಂಡರ ಕುಣಿತ : ಶಿವಮೊಗ್ಗ ಹಾಗೂ ಉತ್ತರ ಕನ್ನಡದ ಗೊಂಡ ಜನರ ಹೋಳಿ ಆಚರಣೆಯನ್ನು ‘ಹೋಳಿ ಹಳಬು’ ಎಂದು ಕರೆಯಲಾಗುತ್ತದೆ. ಅದೊಂದು ಆಕರ್ಷಕ ನೃತ್ಯಪ್ರಕಾರ. ತಂಡದಲ್ಲಿ ಸುಮಾರು ೧೪ ಜನರಿರುತ್ತಾರೆ. ಪ್ರತಿಯೊಬ್ಬರಲ್ಲಿಯೂ ಢಕ್ಕೆ ಇರುತ್ತದೆ. ತಲೆಗೆ ಕೆಂಪು ಪೇಟ, ಹೂವಿನ ‘ತಲೆದೊಡಿಗೆ’ ಧರಿಸಿರುತ್ತಾರೆ. ಸೊಂಟಕ್ಕೆ ಬಣ್ಣದ ಪಂಚೆ, ಬೆಳ್ಳಿಯ ಉಡುದಾರ, ಕಾಲುಗಳಿಗೆ ಕಾಲ್ಕಡಗಗಳಿರುತ್ತವೆ.

ಇಬ್ಬರು ಕಮಂಗಿ ವೇಷದವರಿರುತ್ತಾರೆ. ಇವರು ಕಪ್ಪು ನೀಲಿ ಬಣ್ಣದ ಉದ್ದನೆಯ ನಿಲುವಂಗಿ ಧರಿಸಿರುತ್ತಾರೆ. ಆ ನಿಲುವಂಗಿಗೆ ಮುಖದ ಹತ್ತಿರ ಆನೆಯ ಮುಖವಾಡದ ನಮೂನೆಯೊಂದಿರುತ್ತದೆ. ಅಂಗಿಯ ಅನೇಕ ಕಡೆ ಕೆಂಪು ಮತ್ತು ಬಿಳಿಯ ಪಟ್ಟಿಗಳಿರುತ್ತದೆ. ಕಮಂಗಿಗಳು ಉದ್ದವಾದ ಮರದ ದಟ್ಟಿಯನ್ನು ಹಿಡಿದುಕೊಂಡಿರುತ್ತಾರೆ. ಇದು ಕಮಂಗಿ ಜಲ್ಲಿ. ಇವರು ಢಕ್ಕೆಯ ನುಡಿತಕ್ಕೆ ಸರಿಯಾಗಿ ಹೆಜ್ಜೆ ಹಾಕುತ್ತಾರೆ. ಇದು ಶಿವರಾತ್ರಿಯಿಂದ ಮೂರು ದಿವಸ ಮಾತ್ರ ಆಚರಿಸುವ ಕಲೆ.

ಕುಡುಬಿ – ಮರಾಠಿಯವರ ಹೋಳಿ ಕುಣಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುತ್ತವೆ. ಹಿಂದೆ ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಕಂಡುಬರುತ್ತಿದ್ದ ಈ ಕುಣಿತ ಜನರ ವಲಸೆಯಿಂದಾಗಿ ಈಗ ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಂಡುಬರುತ್ತಿದೆ. ಮಹಾಶಿವರಾತ್ರಿಯ ಮುಂದಿನ ಏಕಾದಶಿಯಿಂದ ಪ್ರಾರಂಭಿಸಿ ಹೋಳಿ ಹುಣ್ಣಿಮೆಯ ಪಾಡ್ಯದ ರಾತ್ರಿಯಂದು ಕುಣಿತವನ್ನು ಮುಕ್ತಾಯಗೊಳಿಸುತ್ತಾರೆ. ವರ್ಷದಲ್ಲಿ ಒಂದೇ ಸಲ ಈ ಕುಣಿತ ನಡೆಯುತ್ತದೆ. ಕುಣಿತ ನಾಲ್ಕೈದು ದಿನ ಹಗಲು ರಾತ್ರಿ ನಡೆಯುತ್ತದೆ. ಏಕಾದಶಿಯಂದು ಯಜಮಾನನ ಮನೆಯಲ್ಲಿ ಮೇಳ ಏರ್ಪಟ್ಟು ಹೋಳಿ ಹುಣ್ಣಿಮೆಯಂದು ಆತನ ಮನೆಯಲ್ಲಿಯೇ ಕುಣಿತ ಮುಕ್ತಾಯವಾಗುತ್ತದೆ. ಮರಾಠಿ ಜನರಲ್ಲಿ ಮಾರಿಯಮ್ಮನ ಪೂಜೆ ಕುಣಿತಕ್ಕೆ ಮೊದಲು ಹಾಗೂ ಮುಕ್ತಾಯದ ಸಂದರ್ಭದಲ್ಲಿ ಈ ಕುಣಿತ ನಡೆಯುತ್ತದೆ.

ಕಾಡುಗೊಲ್ಲರ ಗಣೇಪದ : ಗಣೇಪದವು ಕಾಡುಗೊಲ್ಲರಿಗೆ ವಿಶಿಷ್ಟವಾದ ಒಂದು ಕಲೆಯಾಗಿದೆ. ತುಮಕೂರು, ಚಿತ್ರದುರ್ಗ, ಬೆಂಗಳೂರು, ಬಳ್ಳಾರಿ, ಹಾಸನ ಜಿಲ್ಲೆಗಳಲ್ಲಿ ಇದು ಪ್ರದರ್ಶಿತವಾಗುತ್ತದೆ. ಕಾಡುಗೊಲ್ಲರು ಆಂಧ್ರಪ್ರದೇಶದಲ್ಲಿಯೂ ಕಂಡುಬರುವುದರಿಂದ ಮಡಕಸಿರಾ, ಕಲ್ಯಾಣದುರ್ಗ ಹಾಗೂ ರಾಯದುರ್ಗ ಜಿಲ್ಲೆಗಳಲ್ಲಿಯೂ ಈ ಕಲೆ ಅಸ್ತಿತ್ವದಲ್ಲಿದೆ.

ಹೆಸರೇ ಹೇಳುವಂತೆ ಈ ಕಲೆಯ ‘ಗಣೆ’ ಎನ್ನುವ ವಾದ್ಯಕ್ಕೆ ಸಂಬಂಧಿಯಾದುದು. ಗಾತ್ರದಲ್ಲಿ ಕೊಳಲಿಗಿಂತ ಹಿರಿದಾದ ಆದರೆ ರಚನೆಯಲ್ಲಿ ಕೊಳಲನ್ನೇ ಈ ವಾದ್ಯ ಹೋಲುತ್ತದೆ. ‘ಗಳೇ’ ಪದ ವರ್ಣ ಪಲ್ಲಟದಿಂದ ‘ಗಣೇ’ಯಾಗಿದೆ. ‘ಗಳೇ’ ಎಂದರೆ ಬಿದಿರಕೋಲು(ಗಳು) ಎಂದರ್ಥ.

ಕಾಡುಗೊಲ್ಲರ ದೇವರಾದ ಜುಂಜಪ್ಪನಿಗೂ ಈ ಕಲೆಗೂ ಸಂಬಂಧವಿದೆ. ಜುಂಜಪ್ಪನು ದನ ಕಾಯುತ್ತಿದ್ದಾಗ ಗಣೆಯನ್ನು ಊದುತ್ತಿದ್ದು, ಮುಂದೆ ಅವನು ಸತ್ತ ಮೇಲೆ ಅವನ ಪರಂಪರೆಯವರು ಅದನ್ನು ಮುಂದುವರಿಸಿದರು. ಮುಖ್ಯವಾಗಿ ಗಣೆಯ ಮೂಲಕ ಆತನ ಮಹಿಮೆಯನ್ನು ಹಾಡಿದರು ಎಂದು ಹೇಳಲಾಗುತ್ತದೆ. ಆದ್ದರಿಂದಲೇ ಇದನ್ನು ‘ಜುಂಜಪ್ಪನ ಗಣೆ’ ಎಂದೇ ಕರೆಯುವುದು ವಾಡಿಕೆ.

ತಮಗೆ ಅತ್ಯಂತ ಪ್ರಮುಖವಾದ ಹಾಲು ಹೊಯ್ಯುವ ಹಬ್ಬದಂದು ಸ್ವಾಮಿಯ (ದೇವರ) ಮುಂದೆ ವಿಶಾಲವಾದ ಬಯಲಲ್ಲಿ ಕಂಬಳಿ (ಗದ್ದಿಗೆ)ಯನ್ನು ಹಾಸಿ ಗಣೆ ನುಡಿಸುತ್ತಾರೆ. ಕೃಷ್ಣ, ಜುಂಜಪ್ಪ ದೇವರುಗಳ ಹಾಡುಗಳಲ್ಲದೆ ಕಾಟಮದೇವರು, ಕ್ಯಾತಪ್ಪ ಈರಬಡಪ್ಪ, ಹಾಗೂ ಅನೇಕ ದೇವಾನುದೇವತೆಗಳ ಸುದೀರ್ಘ ಕಾವ್ಯಗಳನ್ನು ಇವರು ಹಾಡುತ್ತಾರೆ.

ಲಂಬಾಣಿ ಕುಣಿತ : ಒಂದು ಕಾಲಕ್ಕೆ ಅಲೆಮಾರಿಗಳಾಗಿದ್ದು ಈಗ ದೇಶದ ನಾನಾ ಮೂಲೆಗಳಲ್ಲಿ ನೆಲೆನಿಂತಿರುವ ಲಂಬಾಣಿ ಜನವರ್ಗವನ್ನು ಮೂಲತಃ ರಾಜಾಸ್ಥಾನಿಗಳು ಎಂದು ಗುರುತಿಸಲಾಗಿದೆ.

ಉತ್ತರ ಭಾರತದಿಂದ ವಲಸೆ ಬಂದ ಜನವರ್ಗ ಇದಾದುದರಿಂದ ಸಹಜವಾಗಿ ‘ಹೋಳಿ’ ಇವರ ಪ್ರಮುಖ ಹಬ್ಬ. ತಾಂಡಾದ ಗಂಡಸರು ಇದನ್ನು ಅದ್ಧೂರಿಯಾಗಿ ಆಚರಿಸುತ್ತಾರಾದರೂ ಕಡೆಯ ‘ಫಾಗ್’ (ಬಣ್ಣ ಎರಚುವುದು) ಆಚರಣೆಯಲ್ಲಿ ಹೆಂಗಸರೂ ಸೇರುತ್ತಾರೆ. ರಾತ್ರಾನುರಾತ್ರಿ ಕುಣಿದು, ಬಣ್ಣ ಎರಚಿ, ‘ಗೇರ್’ ಆಚರಿಸಿ (ಹೋತದ ಬಲಿ) ಹಬ್ಬ ಮುಗಿಸುತ್ತಾರೆ.

ಲಂಬಾಣಿ ಜನರ ಇನ್ನೊಂದು ಪ್ರಮುಖ ಹಬ್ಬ ದೀಪಾವಳಿ, ಇದು ಮಹಿಳೆಯರ ಹಬ್ಬ. ಈ ಹಬ್ಬದಲ್ಲಿ ಎರಡು ವಿಶಿಷ್ಟಾಂಶಗಳನ್ನು ಗುರುತಿಸಲಾಗಿದೆ. ಒಂದನೆಯದು, ಈ ಹಬ್ಬದಲ್ಲಿ ಲಂಬಾಣಿಗರು ಪಿತೃಗಳಿಗೆ ಎಡೆ ಅರ್ಪಿಸುತ್ತಾರೆ. ಎರಡನೆಯದು, ವಿಶೇಷ ಗೋಪೂಜೆ ಮಾಡುತ್ತಾರೆ. ದೀಪಾವಳಿ ಅಮಾವಾಸ್ಯೆಯನ್ನು ಇವರು ‘ಕಾಳಿ ಅಮಾಸ್’ ಎಂದು ಕರೆಯುತ್ತಾರೆ. ರಾತ್ರಿ ಹೆಣ್ಣು ಮಕ್ಕಳು ಹಣತೆ ಹಿಡಿದು ಮನೆಮನೆಗೆ ಹೋಗಿ ಕುಲದೇವರು ಹಾಗೂ ಬಂಧುವರ್ಗಕ್ಕೆ ಆರತಿ ಬೆಳಗುತ್ತಾರೆ. ಈ ಆರತಿ ಬೆಳಗುವ ‘ಮೇರಕರೇರೋ’ ಹಾಡು ತುಂಬ ವಿಶಿಷ್ಟವಾದುದು.

ಲಂಬಾಣಿಗರ ಕುಣಿತಗಳಲ್ಲಿ ಮಹಿಳೆಯರಿಗೆ ಪ್ರಾಮುಖ್ಯತೆ. ಲಂಬಾಣಿ ಮಹಿಳೆಯರ ವೇಷಭೂಷಣಗಳು ಬುಡಕಟ್ಟೊಂದರ ವೈಶಿಷ್ಟ್ಯವನ್ನು ಬಿಂಬಿಸುವ ಪ್ರತ್ಯೇಕ ಮಾಹಿತಿಗಳು ಎಂದರೂ ತಪ್ಪಾಗಲಾರದು. ಕಸೂತಿಯೇ ಪ್ರಧಾನವಾದದ್ದು ‘ಪೇಟಿಯಾ’ ಎಂಬ ಕೆಂಪು ಲಂಗದ ಮೇಲೆಲ್ಲ ಗಾಜಿನ ಬಿಲ್ಲೆಗಳು. ‘ಕಾಂಚೋಳಿ’ ಎಂಬ ಕಸೂತಿಯ ಕುಪ್ಪಸ, ತಲೆಯ ಮೇಲಿಂದ ಇಳಿ ಬಿಟ್ಟ ರಂಗು ರಂಗಿನ ಮೇಲುವಸ್ತ್ರ ‘ಛಲ್ಯ’ ಅಥವಾ ‘ಚೂಡಿ’ ಎಂಬ ದಂತದ ಬಳೆಗಳು, ಬೆರಳುಗಳಿಗೆ ಉಂಗುರ, ಕೊರಳಿಗೆ ‘ರಫಿಯಾಹಾರ್’ ಎಂಬ ಹಾರ, ಮುತ್ತಿನ ಮೂಗುತಿ ಇವು ವಿಶೇಷ ಭೂಷಣಗಳು. ಲಂಬಾಣಿ ಹೆಣ್ಣುಮಕ್ಕಳ ಕೇಶಶೃಂಗಾರವೂ ವಿಶೇಷವೇ. ಬಾಚಿದ ಉದ್ದನೆಯ ಕೂದಲನ್ನು ಕೆನ್ನೆಯ ಮೇಲಿಂದ ಇಳಿಸಿ ಜಡೆಯ ತುದಿಗೆ ಬಣ್ಣದ ಕುಚ್ಚು ಕಟ್ಟುತ್ತಾರೆ. ತಲೆಯನ್ನೂ ಹಲವು ಲೋಹದ ವಡವೆಗಳಿಂದ ಶೃಂಗರಿಸುತ್ತಾರೆ. ಇವೆಲ್ಲಕ್ಕೆ ಪೂರಕವಾಗಿ ತೋಳು ಹಣೆ ಮತ್ತು ಕೆನ್ನೆಯ ಮೇಲೆ ಹಚ್ಚೆಯ ಚಿತ್ತಾರಗಳು.

ಲಂಬಾಣಿ ಮಹಿಳೆಯರು ಅನೇಕ ಸಂದರ್ಭಗಳಲ್ಲಿ ಹಾಡಿ ಕುಣಿಯುತ್ತಾರೆ. ಆದರೆ ತೀಜ್ ಅವರ ಕುಣಿತಕ್ಕೆ ಪ್ರಮುಖ ಸಂದರ್ಭ. ಮಂಡಲಾಕಾರದಲ್ಲಿ ನಿಂತು, ಕೈಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸುತ್ತಾ ಬಗ್ಗಿ ಬಗ್ಗಿ ಏಳುವಾಗ ವಾಸರ ತಪ್ಪದಂತೆ ಕುಣಿಯುವ ಭಂಗಿ ವಿಶೇಷ ರೀತಿಯದು. ಬಹುತೇಕ ಬುಡಕಟ್ಟುಗಳಂತೆ ಪಾರಂಪರಿಕ ಹಾಗೂ ಪ್ರಾಚೀನ ಶೈಲಿ ಹಲವು ಮಜಲುಗಳನ್ನು ಹೊಂದಿದ ಈ ನೃತ್ಯ ಸಮೃದ್ಧಿಯ ಹಾಗೂ ಶಾಂತಿಯ ಆಶಯವಾಗಿ ಕಾಣಿಸಿಕೊಳ್ಳುತ್ತದೆ. ನಗಾರಿಯ ಗತ್ತಿಗೆ, ಹಲಗೆಯ ಗತ್ತಿಗೆ ಹಾಗೂ ಕೆಲವೊಮ್ಮೆ ಹಾಡಿನ ಗತ್ತುಗಳಿಗೆ ಅನುಸಾರವಾಗಿ ಹೆಜ್ಜೆಗಳನ್ನಿಡುತ್ತಾ ಬಿರುಸಾಗಿ ಸಾಗುವ ಈ ನೃತ್ಯ ಮೈಬೆವರಿನ ಕಾಣಿಕೆ ಪಡೆದು ಕೊನೆಗೊಳ್ಳುತ್ತದೆ.

ಲಂಬಾಣಿ ಗಂಡಸರು ಸಾಮಾನ್ಯವಾಗಿ ಕೋಲಾಟಗಳನ್ನು ಪ್ರದರ್ಶಿಸುತ್ತಾರೆ. ಮಹಿಳೆಯರ ಕುಣಿತಗಳಿಗೆ ಹಲಗೆ, ನಗಾರಿಯನ್ನು ಬಾರಿಸುತ್ತಾರೆ. ಕೆಲವು ಆಚರಣೆಗಳಲ್ಲಿ ಗಂಡಸರ ಪ್ರಾಮುಖ್ಯ ಇದೆಯಾದರೂ ಕುಣಿತದಲ್ಲಿ ಹೆಂಗಸರದೇ ಮೇಲುಗೈ.

ಬುಡಬುಡಕಿ : ಬುಡಬುಡಕಿ ಕಲೆ ಗೊಂದಲಿಗೆ ಪಂಗಡಕ್ಕೆ ಸೇರಿದ ಮರಾಠಿಗಳಲ್ಲಿ ಕಂಡುಬರುತ್ತದೆ. ಈ ಕಲಾವಿದರ ನಾಡಿನ ಬಹುತೇಕ ಕಡೆಗಳಲ್ಲಿ ಸಿಗುತ್ತಾರೆ. ಶಕುನ ಹೇಳಿಕೊಂಡು ಜೀವನ ಸಾಗಿಸುವ ಈ ಕಲಾವಿದರಿಗೆ ನರಸಣ್ಣ ಎಂದೂ ಕರೆಯುತ್ತಾರೆ. ಇವರು ತಮ್ಮ ಕಲೆಯಲ್ಲಿ ಮುಖ್ಯವಾಗಿ ಪುಟ್ಟ ಡಮರುಗದ ಆಕೃತಿಯ ಚರ್ಮವಾದ್ಯವನ್ನು ಬಳಸುತ್ತಾರೆ. ಬಡುಬುಡಿಕೆ ಎಂಬ ಹೆಸರು ಅನುಕರಣ ಪದ ಎಂದೆನಿಸುತ್ತದೆ.

ತಲೆಗೆ ಪೇಟ, ಉದ್ದನೆ ನಿಲುವಂಗಿ, ಕೋಟು, ಕಚ್ಚೆಪಂಚೆ, ಸೊಂಟಕ್ಕೆ ವಸ್ತ್ರ, ಕಂಕುಳಲ್ಲಿ ಹಿಂದು ಮುಂದು ಇಳಿಬಿಟ್ಟಿರುವ ಜೋಳಿಗೆ ಚೀಲಗಳು, ಹೆಬ್ಬೆರಳಿನಲ್ಲಿ ಗಗ್ಗರ, ಕೈಗೆ ಕಡಗ ಅಥವಾ ಗೆಜ್ಜೆ, ಉದ್ದನೆಯ ನಾಮ ಇವಿಷ್ಟು ಬುಡುಬುಡಿಕೆಯ ವೇಷ ಭೂಷಣಗಳು. ತಮ್ಮ ತಮ್ಮಲ್ಲಿಯೇ ಊರುಗಳನ್ನು ಹಂಚಿ ಕೊಂಡಿರುತ್ತಾರೆ. ತಮಗೆ ಸಂಬಂಧಿಸಿದ ಗೌಡ ಕುಲಕರ್ಣಿ, ಪಟೇಲ ಮೊದಲಾದವರಿಗೆ ಪಣಕಟ್ಟಲು ಒಪ್ಪಿಗೆ ಪಡೆಯುತ್ತಾರೆ. ಬುಡುಬುಡಿಕೆ ಯವರು ಪ್ರತಿನಿತ್ಯ ಕೋಳಿ ಕೂಗುವ ಮೊದಲೇ ಎದ್ದು, ದೇವರನ್ನು ಪೂಜಿಸಿ, ವೇಷಧರಿಸಿ, ಹಳ್ಳಿಹಳ್ಳಿಗೆ ಹೋಗಿ ಶಕುನ ನುಡಿಯುತ್ತಾರೆ. ಈ ಶಕುನವನ್ನು ‘ಹಾಲಕ್ಕಿ ಶಾಸ್ತ್ರ’ ಎಂದು ಹೇಳುತ್ತಾರೆ. ಈ ಶಾಸ್ತ್ರ ಸತ್ಯವಾಗುತ್ತದೆ ಎಂಬ ನಂಬಿಕೆ ಕಲಾವಿದರದು. ಪ್ರತಿ ಮನೆಯ ಬಾಗಿಲಿಗೆ ಹೋಗಿ ತಮ್ಮ ವಾದ್ಯ ನುಡಿಸಿಕೊಳ್ಳುತ್ತಾ ‘ಜಯವಾಗಲಿ ಸ್ವಾಮಿ, ಜಯವಾಗಲಿ ಸ್ವಾಮಿ’ ಎಂದು ಶುಭವನ್ನು ಹಾರೈಸುತ್ತಾ ಶಕುನ ನುಡಿಯುತ್ತಾರೆ. ‘ಶ್ರೀಕೃಷ್ಣ ನುಡಿಸಿದಂತೆ ನುಡಿಯುತ್ತೇವೆ’ ಎನ್ನುತ್ತಾರೆ. ಜನರ ಶುಭಾಶುಭಗಳನ್ನು ಬಹು ಜಾಣ್ಮೆಯಿಂದ ಹೇಳುವ ಇವರು ಅಶುಭ ಇದ್ದಾಗ ಅದಕ್ಕೆ ಶಾಂತಿಪರಿಹಾರವನ್ನು ಸೂಚಿಸಬಲ್ಲರು. ಜನರು ನೀಡುವ ದವಸ ಧಾನ್ಯ, ಹಣ ಬಟ್ಟೆಗಳಿಂದಲೇ ಜೀವನ.

ದೇವನ್‌ ಬುಲಾವೊ : ಇದು ಹಕ್ಕಿ ಪಿಕ್ಕಿಯವರ ಒಂದು ಧಾರ್ಮಿಕ ಕಲೆ. ಮೈಸೂರು, ಮಂಡ್ಯ, ಶಿವಮೊಗ್ಗ, ಬೆಂಗಳೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಹಕ್ಕಿಪಕ್ಕಿಗಳು ಈ ಕಲೆಯನ್ನು ಪ್ರದರ್ಶಿಸುತ್ತಾರೆ.

ಇದೊಂದು ರೀತಿಯ ಧಾರ್ಮಿಕ ಉತ್ಸವ, ದೇವನ್ ಬುಲಾವೊ ಎಂದರೆ ‘ದೇವರನ್ನು ಕರೆ’ಯುವುದು ಎಂದರ್ಥ. ಮೊದಲಿಗೆ ದೇವರ ಕಟ್ಟೆಯ ಎದುರು ಮೂರು ಕಲ್ಲುಗಳನ್ನು ಹೂಡಿ ‘ಖವಾಳಿ’ಯನ್ನು ಮಾಡುತ್ತಾರೆ. ಖವಾಳಿ ಎಂದರೆ ಪವಿತ್ರವಾದ ಆಹಾರ. ‘ದೇವಾಯು’ (ದೇವರು ಮೈ ಮೇಲೆ ಬಂದವನು) ಕಡಾಯಿಯಿಂದ ಒಂಬತ್ತು ಖವಾಳಿಗಳನ್ನು ತೆರೆಯುತ್ತಾನೆ. ಈ ಉತ್ಸವ ರಾತ್ರಿಯಲ್ಲಿ ನಡೆಯುವುದರಿಂದ ಅವನು ರಾತ್ರಿಯೇ ತಿನ್ನುವಂತಿಲ್ಲ ಅದನ್ನು ಮರುದಿವಸ ತಿನ್ನಬೇಕಾಗುವುದು.

ದೇವರನ್ನು ಕರೆಯಲು ಪುರೋಹಿತ ವರ್ಗವಿರುತ್ತದೆ. ದೇವರನ್ನು ಕರೆಯುವ ವ್ಯಕ್ತಿ ನಡುಮನೆಯಲ್ಲಿ ದೇವರ ಕಟ್ಟೆಯ ಮೇಲೆ ನಿಲ್ಲುವನು. ಆಗ ವ್ಯಕ್ತಿಗೆ ದೇವರು ಮೈಮೇಲೆ ಬರುತ್ತದೆ. ವ್ಯಕ್ತಿಗೆ ದೇವರು ಬಂದ ಮೆಲೆ ಒಂದಿಷ್ಟು ಗುಲಗಂಜಿಯನ್ನು ಹಿಡಿಯಲ್ಲಿ ತೆಗೆದು ದೇವರ ಕಟ್ಟೆಯ ಮುಂಭಾಗದಲ್ಲಿರುವ ಪವಿತ್ರ ಬಟ್ಟೆಗೆ ಹಾಕುತ್ತಾರೆ. ಇದರಲ್ಲಿ ಸರಿ ಸಂಖ್ಯೆಯ ಗುಲಗಂಜಿ ಬಂದರೆ ಕೆಟ್ಟದೆಂದೂ ಬೆಸ ಸಂಖ್ಯೆಯಲ್ಲಿ ಬಂದರೆ ಒಳ್ಳೆಯದೆಂದೂ ನಂಬುತ್ತಾರೆ.

ಸುಡುಗಾಡು ಸಿದ್ಧರ ಕೈ ಚಳಕ : ಈ ಕಲೆಯನ್ನು ಸುಡುಗಾರು ಸಿದ್ಧರು ಮಾಡುತ್ತಾರೆ. ಈ ಸಮುದಾಯದವರು ತಮ್ಮ ಕಲೆಗೆ ಸಂಬಂಧಿಸಿದಂತೆ ಸುಡುಗಾಡಿನಲ್ಲಿದ್ದು ಕೆಲವೊಂದು ವಿದ್ಯೆಯನ್ನು ಸಿದ್ಧಿ ಮಾಡಿಕೊಳ್ಳುವುದರಿಂದ ಇವರಿಗೆ ‘ಸುಡುಗಾಡು’ (ಶ್ಮಶಾನ) ಸಿದ್ಧರೆಂದು ಹೆಸರು ಬಂದಿದೆ. ಸುಡುಗಾಡು ಸಿದ್ಧರು ತೋರಿಸುವ ಜಾದು ರಾಜಮೋಡಿಯ ಗುಂಪಿಗೆ ಸೇರಿದ್ದಾಗಿದ್ದು ಹಬ್ಬ, ಜಾತ್ರೆ, ಸಂತೆಗಳ ಸಂದರ್ಭದಲ್ಲಿ ಕಂಡುಬರುತ್ತದೆ. ಸುಡುಗಾಡು ಸಿದ್ದರೂ ಬುಡುಬುಡಿಕಿಯವರಂತೆ ಹಕ್ಕಿ ಶಕುನ ಹೇಳುವರು.

ಸುಡುಗಾಡು ಸಿದ್ಧರು ಜಾದು ಮಾಡುವ ವಿದ್ಯೆಯಲ್ಲಿ ತುಂಬಾ ಪಳಗಿದವರು. ಜಾದು ಕಲೆಗಾರಿಕೆಯಲ್ಲಿ ಒಬ್ಬನು ಮುಖ್ಯ ಕಲಾಕಾರನಾಗಿದ್ದು ಅವನಿಗೆ ಸಹಾಯಕನಾಗಿ ಮತ್ತೊಬ್ಬನಿರುತ್ತಾನೆ. ಉದ್ದನೆಯ ನಿಲುವಂಗಿ ‘ಗೀಲೀಪು’ ಸುತ್ತಿದ ರುಮಾಲಿನ ಮೇಲೆ ಸಣ್ಣ ರುದ್ರಾಕ್ಷಿ ಅಥವಾ ಮಣಿಸರ, ರುಮಾಲಿನ ಮುಂಭಾಗದ ತುದಿಗೆ ಸಿಕ್ಕಿಸಿದ ನವಿಲುಗರಿ, ಕಾಲಿಗೆ ತಾಮ್ರದ ಬಳೆ, ಕೈಯಲ್ಲಿ ಕಮಂಡಲ, ಭಸ್ಮಧಾರಣೆ, ಬಗಲಿಗೆ ಉದ್ದವಾದ ಜೋಳಿಗೆ ಇವು ಸಿದ್ಧರ ವೇಷಭೂಷಣಗಳು. ಜೋಳಿಗೆ ಇವರ ಜಾದು ಭಂಡಾರ ಆಗಿರುತ್ತದೆ. ಜೋಳಿಗೆಯಲ್ಲಿ ಕವಡೆ, ಗಜ್ಜುಗ, ಬೆನಕ, ಲಿಂಗ, ನಾಣ್ಯ, ಮುಳ್ಳು, ಮೊಳೆ, ಬಟ್ಟೆಯ ತುಂಡು ಮುಂತಾದ ಪ್ರದರ್ಶನಕ್ಕೆ ಸಂಬಂಧಿಸಿದ ವಸ್ತುಗಳಿರುತ್ತವೆ. ಕೈಯ್ಯಲ್ಲಿ ಮಂತ್ರದಂಡವನ್ನು ಹಿಡಿದಿರುತ್ತಾರೆ.

ಸುಡುಗಾಡು ಸಿದ್ಧರು ತಮ್ಮ ಜಾದು ಆರಂಭಿಸುವುದಕ್ಕೆ ಮುನ್ನ ತಮ್ಮ ದೇವರಾದ ಮಲ್ಲಿಕಾರ್ಜುನನನ್ನು ನೆನೆಯುತ್ತಾರೆ. ತಮ್ಮ ಜಾದು ಆಟದಲ್ಲಿ ಕಲಾವಿದ ಜೋಳಿಗೆಯಿಂದ ಒಂದು ಗಜ್ಜುಗ ತೆಗೆದು ಬಾಯಿಗೆ ಹಾಕಿಕೊಳ್ಳುತ್ತಾನೆ. ಬಾಯಿ ತೆಗೆದರೆ ಗಜ್ಜುಗ ಕಾಣಿಸುವುದಿಲ್ಲ. ಕಡೆಗೆ ಬಾಯಿಂದ ೨೦-೩೦ ಗಜ್ಜುಗಗಳನ್ನು ಹೊರಗೆ ತೆಗೆಯುತ್ತಾನೆ. ಇದೇ ರೀತಿ ಹತ್ತಾರು ಬೆನಕಗಳನ್ನು ನುಂಗಿ ಮತ್ತೆ ತೆಗೆಯುತ್ತಾನೆ. ನಾಣ್ಯವನ್ನು ನೋಟು ಮಾಡುವುದು, ಇಸ್ಪೀಟ್, ಎಲೆಗಳನ್ನು ರೈಲು ಟಿಕೀಟು ಮಾಡುವುದು. ಸಣ್ಣ ಸಣ್ಣ ಬಸವಣ್ಣನ ವಿಗ್ರಹ, ಲಿಂಗಗಳನ್ನು ಬಾಯಿಂದ ಹೊರಗೆ ತೆಗೆಯುವುದು. ದಾರದ ಮಧ್ಯೆ ಒಣ ಬುರುಡೆಯನ್ನು ನಿಲ್ಲಿಸುವುದು, ಕಣ್ಣಲ್ಲಿ ಹೊಗೆ ಬಿಡುವುದು, ಬರೀ ಕೈಯಲ್ಲಿ ಹಾವು ಮಾಡಿತೋರಿಸುವುದು, ಚಿಗರೆ ಚರ್ಮವನ್ನು ಶಬ್ದ ಮಾಡುವಂತೆ ಮಾಡುವುದು ಹೀಗೆ ಹಲವಾರು ಜಾದು ವಿದ್ಯೆಗಳನ್ನು ತೋರಿಸಿ ಪ್ರೇಕ್ಷಕರನ್ನು ಬೆರಗುಗೊಳಿಸುತ್ತಾನೆ. ಪ್ರದರ್ಶನದ ಸಂದರ್ಭದಲ್ಲಿ ‘ಮಲ್ಲಾಡದ ಚಾಡಿ’ ಎಂಬ ವಿಶಿಷ್ಟ ಪಕ್ಷಿಯನ್ನು ಅವರು ತೋರಿಸುತ್ತಾರೆ.

ಇರುಳಿಗರ ಕಣಿ : ಇರುಳಿಗರು ಬೆಂಗಳೂರು ಮತ್ತು ಮೈಸೂರು ಜಿಲ್ಲೆಯ ಕೆಲವು ಭಾಗಗಳಲ್ಲಿ ಕಂಡು ಬರುವ ಬುಡಕಟ್ಟು ಜನ. ಕನ್ನಡ, ತೆಲುಗು, ತಮಿಳು ಭಾಷೆಗಳ ಮಿಶ್ರಿತ ರೂಪವೊಂದು ಇವರ ಮಾತೃಭಾಷೆಯಾಗಿದೆ. ಕಾಡು ಸೋಲಿಗರೆಂದೂ ಇವರನ್ನು ಕರೆಯುತ್ತಾರೆ. ಕಣಿ ಹೇಳುವುದು ಇವರ ಕಲೆ. ಕಣಿ ಹೇಳುವ ಕಲಾವಿದ ಸಾಮಾನ್ಯವಾಗಿ ಆ ಮುಖ್ಯಸ್ಥನೇ ಆಗಿರುತ್ತಾನೆ. ಕಣಿ ಹೇಳುವ ದಿನದಂದು ಕಲಾವಿದ ಉಪವಾಸವಿರುತ್ತಾನೆ. ಸ್ನಾನಮಾಡಿ, ದಟ್ಟಿ ಪಂಚೆಯನ್ನು ಕಟ್ಟಿಕೊಂಡು ಬರಿಮೈಯಲ್ಲಿರುತ್ತಾನೆ. ಕಣಿ ಹೇಳುವಾಗ ದೇವರನ್ನು ಆವೇಶದಿಂದ ಧ್ಯಾನಿಸುತ್ತಾ, ತಮಟೆಯನ್ನು ಪಕ್ಕ ವಾದ್ಯವನ್ನಾಗಿಸಿಕೊಂಡು ಕಣಿ ಹೇಳುತ್ತಾನೆ. ಸಾಮಾನ್ಯವಾಗಿ ಜನರಿಗೆ ಕಷ್ಟ ಬಂದಾಗ ರಾತ್ರಿ ಸಮಯದಲ್ಲಿ ದೇವತೆಯ ಗುಡಿ ಮುಂದೆ ಗುಂಪು ಗೂಡಿದಾಗ ಕಣಿ ಹೇಳಲಾಗುತ್ತದೆ.

ಇರುಳಿಗರಲ್ಲಿ ಕಣಿ ಹೇಳುವುದು ಒಂದು ಸಂಪ್ರದಾಯ. ಇದನ್ನು ದೇವರೇ ಮೈದುಂಬಿ ನಡೆಸುತ್ತಾನೆಂಬ ನಂಬಿಕೆ ಅವರಲ್ಲಿದೆ. ಶಾಸ್ತ್ರದ ಮೂಲಕ ಭವಿಷ್ಯ ನುಡಿದು ಶಾಂತಿಯನ್ನು ಸೂಚಿಸಲಾಗುತ್ತದೆ. ಕಣಿ ಹೇಳಿ ಮುಗಿದ ಮೇಲೆ ಕೊನೆಯಲ್ಲಿ ಮಾದೇವಮ್ಮ ದೇವತೆಯ ಪೂಜೆ ನಡೆಯುತ್ತದೆ. ಇದು ಇರುಳಿಗರ ಆಚರಣೆ ಎಂದರೂ ನಡೆಯುತ್ತದೆ.

ಎಚ್.ಸಿ.ಬಿ.