ಬೊಬ್ಬಿಲಿ ಕಥ ತೆಲುಗಿನ ಅತ್ಯಂತ ಜನಪ್ರಿಯ ವೀರ ಕಾವ್ಯಗಳಲ್ಲಿ ಒಂದು. ತೆಲುಗರ ಧೈರ್ಯ ಸಾಹಸಗಳು, ವೀರವಿಕ್ರಮಗಳು ಅತ್ಯಂತ ಅಭಿಮಾನದಿಂದ ವರ್ಣಿತವಾಗಿರುವ ಜನಪದ ವೀರ ಕಾವ್ಯವೆಂದರೆ ಬೊಬ್ಬಿಲಿ ಕಥ. ಜನಪದವೀರ ಕಾವ್ಯಗಳಿಗೆ ಇರಬೇಕಾದ ಎಲ್ಲಾ ಲಕ್ಷಣಗಳು ಕೂಡಿ ಬಂದಿರುವ ಕಾವ್ಯವೂ ಇದೇ. ನುಡಿಗಟ್ಟುಗಳು, ಭಾಷೆ, ಭಾವ, ರೀತಿ, ಜನಪದರಿಗೆ ಸೇರಿದಂತೆ ಮೂಡಿ ಬಂದಿರುವ ಕಾವ್ಯವಿದು.

೧೭೫೭ ಜನವರಿ ೨೪ನೆಯ ತಾರೀಕು ಶುಕ್ರವಾರದಂದು ಫ್ರೆಂಚ್ ವೀರ ಬುಸ್ಸಿ ದೊರೆ ವಿಜಯನಗರದ ಸಂಸ್ಥಾನದ ವಿಜಯರಾಮರಾಜನೊಂದಿಗೆ ಸೇರಿ ಶ್ರೀಕಾಕುಳಂ ಜಿಲ್ಲೆಯ ಬೊಬ್ಬಿಲಿಗೆ ಮುತ್ತಿಗೆ ಹಾಕಿದ ಕತೆ ಇದರಲ್ಲಿದೆ. ಆಗ ರಂಗಾರಾವ್ ಬೊಬ್ಬಿಲಿಯ ರಾಜನಾಗಿದ್ದ. ವಿಜಯನಗರ ಮತ್ತು ಬೊಬ್ಬಿಲಿ ಸಂಸ್ಥಾನಗಳು ನಿಜಾಮ್ ಅರಸರಿಗೆ ಸಾಮಂತ ರಾಜ್ಯಗಳಾಗಿದ್ದವು. ಆಗ ನಿಜಾಮ್‌ ರಾಜ್ಯವನ್ನು ಅಸಫ್‌ಜಾಹೀ ವಂಶದ ನಿಜಾಮ್ ಅಲಿಖಾನ್ ಆಳುತ್ತಿದ್ದ. ಆಗ ಹೈದ್ರಾಬಾದಿನಲ್ಲಿ ಫ್ರೆಂಚ್‌ರ ಪ್ರಭಾವ ಹೆಚ್ಚಾಗಿತ್ತು. ನಿಜಾಮ್ ಆಲಿಖಾನ್ ಕಳಿಂಗ ಸರ್ಕಾರ್‌ಗಳನ್ನು ಫ್ರೆಂಚ್‌ರಿಗೆ ಕೊಟ್ಟುಬಿಟ್ಟ. ಅವುಗಳ ಮೇಲ್ವಿಚಾರಣೆ ನಡೆಸಿ ತೆರಿಗೆ ವಸೂಲು ಮಾಡಲು ಬುಸ್ಸಿ ದೊರೆ ಬಂದ. ಆತ ರಾಜಮಹೇಂದ್ರವರ ತಲುಪುವ ವೇಳೆಗೆ ವಿಜಯರಾಮರಾಜ ಬೇರೆ ಸಂಸ್ಥಾನಾಧೀಶರೊಂದಿಗೆ ಬುಸ್ಸಿ ದೊರೆಯನ್ನು ಎದುರಿಸಿದ. ಆದರೆ ಬೊಬ್ಬಿಲಿ ರಂಗಾರಾವ್ ಮಾತ್ರ ಬರಲಿಲ್ಲ. ವಿಜಯನಗರ ಮತ್ತು ಬೊಬ್ಬಿಲಿ ನಡುವೆ ಯಾವಾಗಲೂ ವಿರೋಧಭಾವನೆ ಇತ್ತು. ಆದ್ದರಿಂದ ವಿಜಯರಾಮರಾಜನೊಂದಿಗೆ ಬಂದು ಬುಸ್ಸಿಯನ್ನು ಭೇಟಿ ಮಾಡಲು ರಂಗಾರಾವ್‌ಗೆ ಇಷ್ಟವಿರಲಿಲ್ಲ. ಈ ಅವಕಾಶವನ್ನು ಉಪಯೋಗಿಸಿಕೊಂಡು ವಜಯರಾಮರಾಜ ಬೊಬ್ಬಿಲಿ ಅರಸರ ಮೇಲ ಬುಸ್ಸಿಗೆ ಚಾಡಿ ಹೇಳಿದ. ರಂಗಾರಾವ್ ಕಳುಹಿಸಿದ ರಾಯಭಾರ ವಿಫಲವಾಗುವಂತೆ ಮಾಡಿದ. ಹೀಗಾಗಿ ಬುಸ್ಸಿ ಬೊಬ್ಬಿಲಿ ಕೋಟೆಗೆ ಮುತ್ತಿಗೆ ಹಾಕುವಂತೆ ಮಾಡಿದ.

ಬೊಬ್ಬಿಲಿ ಕೋಟೆಯನ್ನು ಖಾಲಿ ಮಾಡಿ ವಿಜಯರಾಮರಾಜನಿಗೆ ಕೊಡಬೇಕೆಂದು ಅದರ ಬದಲಾಗಿ ಹೆಚ್ಚು ವಿಸ್ತಾರವಾಗಿರುವ ಪಾಲಕೊಂಡ ಸಂಸ್ಥಾನವನ್ನು ಕೊಡುವುದಾಗಿ ಬುಸ್ಸಿ ರಂಗಾರಾವ್‌ಗೆ ಪತ್ರ ಬರೆದ. ಆದರೆ ಅನೇಕ ತಲೆಮಾರುಗಳಿಂದ ಆಳುತ್ತಿರುವ ಬೊಬ್ಬಿಲಿಯನ್ನು ಬಿಡಲು ರಂಗಾರಾವ್ ಅಂಗೀಕರಿಸಲಿಲ್ಲ. ಆದರೆ ಕೊನೆಗೆ ವಿಜಯರಾಮ ರಾಜನಿಗಲ್ಲದೇ ಬೇರೆ ಯಾರಿಗಾದರೂ ಬೊಬ್ಬಿಲಿಯನ್ನು ಕೊಡುವುದಾಗಿ ಹೇಳಿದ. ಹೀಗಾಗಿ ಯುದ್ಧ ಅನಿವಾರ್ಯವಾಯಿತು. ವಿಜಯರಾಮರಾಜನ ಸೈನ್ಯದಲ್ಲಿ ಹತ್ತುಸಾವಿರ ಜನ ಇದ್ದರು. ಬುಸ್ಸಿ ದೊರೆಯ ಸೈನ್ಯದಲ್ಲಿ ಹನ್ನೊಂದು ಸಾವಿರ ಜನ ಇದ್ದರು. ಅವರಲ್ಲಿ ೨೫೦ ಜನ ರಾವುತರು, ೭೫೦ ಜನ ಯುರೋಪಿಯನ್ ಸೈನಿಕರು ಮತ್ತು ೪ ಫಿರಂಗಿಗಳಿದ್ದವು. ಬೊಬ್ಬಿಲಿ ಸೈನಿಕರು ವೀರಾವೇಶದಿಂದ ಹೋರಾಡಿದರು. ಬೆಳಗಿನ ಜಾವದಿಂದ ಮಧ್ಯಾಹ್ನ ಎರಡು ಗಂಟೆಯವರೆಗೆ ಯುದ್ಧ ವಿಜೃಂಭಣೆಯಿಂದ ಸಾಗಿತ್ತು. ಮಧ್ಯಾಹ್ನ ೨ ಗಂಟೆಯವರೆಗೆ ಒಬ್ಬ ಶತ್ರು ಸೈನಿಕನೂ ಬೊಬ್ಬಿಲಿ ಕೋಟೆಗೋಡೆಯನ್ನು ಹತ್ತಲು ಸಾಧ್ಯವಾಗಿಲ್ಲ. ಬೊಬ್ಬಿಲಿ ವೀರರ ಪೌರುಷ ಮತ್ತು ಯುದ್ಧ ನೈಪುಣ್ಯಕ್ಕೆ ಇದೊಂದು ನಿದರ್ಶನ. ಕೊನೆಗೆ ಬುಸ್ಸಿ ಫಿರಂಗಿಗಳನ್ನು ಪ್ರಯೋಗಿಸಿದ. ಬೊಬ್ಬಿಲಿ ವೀರರಿಗೂ ಕೋಟೆಯನ್ನು ಕಾಪಾಡುವುದು ಅಸಾಧ್ಯವೆಂದು ತಿಳಿಯಿತು. ಪ್ರಾಣಕ್ಕಿಂತ ಮಾನ ಹೆಚ್ಚು ಎಂದು ಭಾವಿಸಿದ ಆ ಮಹಾವೀರರು ತಮ್ಮ ಅಂತಃಪುರ ಸ್ತ್ರೀಯರು ಶತ್ರುಗಳಿಗೆ ಸಿಕ್ಕಬಾರದೆಂದು ಅವರ ತಲೆಗಳನ್ನು ಕತ್ತರಿಸಿ ಬೆಂಕಿಗೆ ಹಾಕಿದರು. ಚಿಕ್ಕ ಮಕ್ಕಳು ಕೂಡ ಅಸುನೀಗಿದರು. ಇದನ್ನು ನೋಡಿ ಶತ್ರುಗಳು ಕೂಡ ಕಣ್ಣೀರು ಸುರಿಸಿದರು. ಸಂಜೆಯವರೆಗೆ ಹೇಳಲಾಗದಷ್ಟು ಮಹಾವೇಶದಿಂದ ಶತ್ರುಗಳನ್ನು ಎದುರಿಸಿದ ಬೊಬ್ಬಿಲಿ ಸೈನಿಕರು ಕೊನೆಗೆ ಕೋಟೆಯನ್ನು ಬುಸ್ಸಿಗೆ ಕೊಡಬೇಕಾಯಿತು. ಮಾನಕ್ಕಾಗಿ ಪ್ರಾಣವನ್ನು ತೃಣಪ್ರಾಯವೆಂದು ಭಾವಿಸಿದ ಬೊಬ್ಬಿಲಿ ವೀರರ ಸಾಹಸ ಜನಪದಗಾಯಕರನ್ನು ಆಕರ್ಷಿಸಿತು.

ಬೊಬ್ಬಿಲಿಯಲ್ಲಿ ನಡೆದ ಘಟನೆಗಳನ್ನು ಜನಪದ ಗಾಯಕರು ಕೆಲವು ಮಾರ್ಪಾಡುಗಳೊಂದಿಗೆ ಅತಿಶಯೋಕ್ತಿಗಳನ್ನು ಜೋಡಿಸಿ ಕಾವ್ಯ ರೂಪದಲ್ಲಿ ಹೇಳಿದ್ದಾರೆ. ಬೊಬ್ಬಿಲಿ ಕೋಟೆ ವಶವಾದ ಮೇಲೆ ವಿಜಯ ಗರ್ವದಿಂದ ಮೆರೆಯುತ್ತಿದ್ದ ವಿಜಯರಾಮರಾಜನ ಬಳಿಗೆ ರಂಗರಾಯನ ಭಾವಮೈದುನ ತಾಂಡ್ರಪಾಪಾರಾಯನೆಂಬವನು ಬಂದು ಹೋರಾಡಿದ. ಆ ಹೋರಾದಲ್ಲಿ ಇಬ್ಬರು ಸತ್ತು ಹೋದರು. ಕೈಫಿಯತ್ತುಗಳಲ್ಲಿರುವ ಈ ಕತೆ ಜನಪದ ಗಾಯಕರ ಬಾಯಲ್ಲಿ ಬೇರೆ ರೀತಿ ಕೇಳಿಬರುತ್ತಿದೆ. ಅದರ ಪ್ರಕಾರ ತಾಂಡ್ರಪಾಪಾರಾಯ ವಿಜಯ ರಾಮರಾಜನನ್ನು ಕೊಂದು, ಆ ಸೇಡು ತೀರಿಸಿಕೊಂಡು ಆಮೇಲೆ ತಾನೂ, ಆತ್ಮಹತ್ಯೆ ಮಾಡಿಕೊಂಡನು. ಇದು ಜನಪದರ ಕಲ್ಪನೆಯಾಗಿರಬಹುದು. ನ್ಯಾಯ, ಧರ್ಮ ಬೊಬ್ಬಿಲಿಯವರ ಕಡೆ ಇದ್ದುವು. ಆದರೆ ವಿಜಯರಾಮರಾಜ ಜನಪದ ವೀರಕಾವ್ಯದಲ್ಲಿ ಚಿತ್ರಿತವಾದಂತೆ ಒಬ್ಬ ಹೇಡಿ, ಪೌರುಷಹೀನ ಮತ್ತು ಕ್ರೂರನಾಗಿರಲಿಲ್ಲ. ಜನಪದ ಕವಿ ಚಾರಿತ್ರಿಕ ಅಂಶಗಳನ್ನು ಸ್ವೀಕರಿಸಿ, ಕೆಲವು ಕಲ್ಪನೆಗಳನ್ನು ಮಾಡಿ ಬೊಬ್ಬಿಲಿ ವೀರರ ಶೌರ್ಯವನ್ನು ಅತಿಶಯವಾಗಿ ವರ್ಣಿಸಿದ ನೆಂಬುದರಲ್ಲಿ ಸಂದೇಹವಿಲ್ಲ.

ಬೊಬ್ಬಿಲಿಕಥ ತೆಲುಗಿನ ಅತ್ಯುತ್ತಮ ವೀರಕಾವ್ಯಗಳಲ್ಲಿ ಒಂದು. ಇದನ್ನು ಕಾವ್ಯರೂಪಕ್ಕೆ ತಂದವನು ಬುಸ್ಸಿ ಸೈನ್ಯದಲ್ಲೇ ಇದ್ದು ಒಂದೊಂದು ಘಟನೆಯನ್ನು ನೋಡಿ ಹಾಡಿದನೇನೋ ಎನ್ನಿಸುತ್ತದೆ. ಆದರೆ ಕವಿ ಇದನ್ನು ದುರಂತ ಕಥೆಯನ್ನಾಗಿ ಮಾಡಲು ಕೆಲವು ಐತಿಹಾಸಿಕ ವಿಷಯಗಳನ್ನು ಬದಲಾಯಿಸಿರಬಹುದು ಎನ್ನಿಸುತ್ತದೆ. ಬೊಬ್ಬಿಲಿ ಯುದ್ಧ ರಾತ್ರಿ ಪ್ರಾರಂಭವಾಯಿತೆಂದು ಹೇಳುವುದು, ವೆಂಗಳರಾವ್ (ರಂಗಾರಾವ್ ತಮ್ಮ) ಆತ್ಮಹತ್ಯೆ ಮಾಡಿಕೊಂಡವನೆಂದು ಹೇಳುವುದು, ಹೈದರ್‌ಜಂಗ್ ಆತ್ಮಹತ್ಯೆ ಮುಂತಾದವೆಲ್ಲ ಕವಿಯ ಕಲ್ಪನೆಗಳು. ಇತಿಹಾಸದ ಪ್ರಕಾರ ಯುದ್ಧ ಬೆಳಗಿನ ಜಾವ ಪ್ರಾರಂಭವಾಗಿ ಸಂಜೆಯವರೆಗೆ ನಡೆಯಿತು. ಹೈದರ್‌ಜಂಗ್ ಯುದ್ಧ ನಡೆದ ಮೇಲೆ ಬುಸ್ಸಿ ಕತೆ ಔರಂಗಾಬಾದ್‌ಗೆ ಹೋದ. ಅಲ್ಲಿ ಸಲಾಬತ್‌ಜಂಗ್ ಸೋದರನಾದ ನಿಜಾಮಲಿ ಹೈದರ್‌ಜಂಗನ್ನು ಕೊಂದ.

ಜನಪದ ವೀರಕಾವ್ಯಗಳಲ್ಲಿ ಎಲ್ಲಾ ಇತಿಹಾಸದ ವಿಷಯಗಳೂ ಹಾಗೆಯೇ ಇರುತ್ತವೆಂದು ಹೇಳಲಾಗುವುದಿಲ್ಲ. ಜನರ ಅಭಿಪ್ರಾಯವನ್ನು, ಕವಿಯ ಅಭಿಪ್ರಾಯವನ್ನು, ವೀರಕಾವ್ಯಗಳ ಸಾಮಾನ್ಯಗುಣವಾದ ದುರಂತವನ್ನು ಪ್ರತಿಬಿಂಬಿಸುವಂತೆ ಇವುಗಳನ್ನು ಕಲ್ಪಿಸಲಾಗುತ್ತದೆ. ಸಾಮಾನ್ಯವಾಗಿ ತೆಲುಗು ವೀರ ಕಾವ್ಯಗಳನ್ನು ಕುರಿತು ಹೇಳುವಾಗ ‘ಇದು ಬೊಬ್ಬಿಲಿಕಥದಂಥ ವೀರಕಾವ್ಯ’ ಎಂದು ಹೇಳುವುದು ರೂಢಿ. ಅಷ್ಟರಮಟ್ಟಿಗೆ ಈ ವೀರಕಾವ್ಯ ಪ್ರಶಸ್ತಿವೆನಿಸಿ ಕೊಂಡಿದೆ.

ಬೊಬ್ಬಿಲಿ ಕಥದಲ್ಲಿ ವೀರಕಾವ್ಯಗಳಲ್ಲಿರುವ ಆವೇಶ, ಉದ್ವೇಗ, ಪೌರುಷ ಮುಂತಾದವು ಅನೇಕ ಸ್ಥಳಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತವಾಗಿವೆ. ವಿಜಯರಾಮರಾಜ ತನ್ನ ಕೋಟೆಯನ್ನು ವಶಪಡಿಸಿಕೊಳ್ಳಲು ಬಂದಾಗ ರಂಗಾರಾವ್ ತನ್ನ ಭಾವ ಮೈದುನನ್ನು ನೆನೆದು ‘ತಾಂಡ್ರಪಾಪಯ್ಯನೇ ಇಲ್ಲಿ ಇದ್ದಿದ್ದರೆ ಏಳು ವರ್ಷ ಹೋರಾಡಿದರೂ ಇದು ವಶವಾಗುತ್ತಿರಲಿಲ್ಲ’ ಎಂದು ಕೊಳ್ಳುತ್ತಾನೆ. ಆಗ ರಂಗಾರಾವ್ ತಮ್ಮ ವೆಂಗಳರಾವ್ ಹೀಗೆನ್ನುತ್ತಾನೆ :

ಪ್ರಭುಗಳೇ ಹೇಡಿಯ ಮಾತುಗಳಾಡುತ್ತೀರಿ
ನನಗೆ ಅಪ್ಪಣೆ ಕೊಡಿ ಎಂದ ತಮ್ಮ ವೆಂಗಳ್ರಾವು
ಅಪ್ಪಣೆ ಕೊಟ್ಟರೆ ಬೂಸಿಗೆ ಗೋರಿ ಕಟ್ಟಿಸುವೆ
ಗೋರಿಯ ಮೇಲೆ ಸುಣ್ಣದ ನೀರು ಚೆಲ್ಲಿಸಿ ಬಿಡುವೆ
ನದಿಯ ದಾಟ ಏಲೂರಿನವರೆಗೆ ಬಯಲು ಮಾಡುವೆ
ರಾಜಮಹೇಂದ್ರಿಯ ಗೋದಾವರಿಯಲಿ ಈಟಿ ತೊಳೆಯುವೆ
ವಿಜಯನಗರದ ಬಾಗಿಲುಗಳನ್ನು ಒಡೆದು ಹಾಕಿಸುವೆ
ಅಣ್ಣ! ವಿಜಯನಗರದ ರಾಜರನ್ನು ದಹನವ ಮಾಡುವೆ

ಬೊಬ್ಬಿಲಿ ವೀರರ ನೈಪುಣ್ಯ, ಚುರುಕು, ಶೌರ್ಯ ಮುಂತಾದವನ್ನು ವರ್ಣಿಸುವ ಅನೇಕ ಪ್ರಸಂಗಗಳು ಈ ಕಥೆಯಲ್ಲಿವೆ. ಶತ್ರು ಸೈನ್ಯವನ್ನು ರಾತ್ರಿ ಹಗಲು ಕಾವಲು ಕಾಯುತ್ತಿದ್ದ ‘ತೆಲುಗು ಮಕ್ಕಳು’ ಒಮ್ಮೆ ಸ್ವಲ್ಪ ನಿದ್ದೆ ಮಾಡಿದರು. ಆಗ ಕುದುರೆಗಳ ಸದ್ದು ಕೇಳಿಸಿತು. ಹಾಗೆ ಕೇಳಿಸಿದ ತಕ್ಷಣ ನಿದ್ದೆಯಲ್ಲೇ ಅವರು ಯುದ್ಧಕ್ಕೆ ಸಿದ್ಧರಾದರೆಂದು ಕವಿ ವರ್ಣಿಸುತ್ತಾನೆ.

ರಂಗಾರಾಯರ ಹೆಂಡತಿ ರಾಣಿ ಮಲ್ಲಮ್ಮದೇವಿ ವಿಜಯರಾಮರಾಜನಿಗೆ ಪತ್ರ ಬರೆಯುತ್ತಾಳೆ. ಅದರಲ್ಲಿ ಆಕೆ ವಿಜಯರಾಮರಾಜ ತನ್ನ ಶತ್ರುವಾದರೂ ಅಣ್ಣನೆಂದೇ ಭಾವಿಸಿ ತಮಗೆ ಅನ್ಯಾಯ ಮಾಡಬಾರದೆಂದು ಬೇಡಿಕೊಳ್ಳುತ್ತಾಳೆ.

ವಿಜಯನಗರ ಬೊಬ್ಬಿಲಿ ಕೋಟೆ ಕಾವಡಿ ಇದ್ದಂತೆ
ಕಾವಡಿಯ ಸರಿತೂಕ ತಪ್ಪಿಸಬೇಡಿ ತಂದೆ!
ಕರಿಯಬಳೆ ಕರಿಮಣಿ ತಪ್ಪಿಸಬೇಡಿಯಣ್ಣ!
ಬೊಟ್ಟು ಕಾಡಿಗೆ ಹೋಗದಂತೆ ಕಾಪಾಡಣ್ಣ ನನಗೆ
ಅರಿಸಿನ ಕುಂಕುಮ ನಿಲ್ಲಿಸಯ್ಯ ವಿಜಯ ರಾಮರಾಜ!
ಪೂಸಪಾಟಿ ಮನೆತನವೇ ತವರೆಂದು ಭಾವಿಸುವೆ
ದಾಮರ್ಲ ಸಂಸ್ಥಾನವನ್ನೇ ಮರೆತಿರುವೆ ನಾನು.

ಹೀಗೆ ದಯನೀಯವಾಗಿ ಮಲ್ಲಮ್ಮ ಪತ್ರ ಬರೆದರೆ ವಿಜಯರಾಮರಾಜ ಶತ್ರು ಭಾವವನ್ನು ಬಿಡದೆ ಹೀಗೆ ಉತ್ತರ ಕೊಟ್ಟ :

ಬೊಟ್ಟು ಕಾಡಿಗೆ ನಿಲ್ಲಿಸಲು ಸಾಧ್ಯವಿಲ್ಲ ತಾಯಿ
ಮುಂಡೆಯಾದರೆ ಮೂರು ಹಳ್ಳಿ ನಿನಗೆ ಇನಾಂ ಕೊಡುವೆ
ಮುಂಡೆ ಸೀರೆಯನು ಮೊದಲೆ ಕೊಡುವೆ ಮಲ್ಲಮ್ಮ ನಿನಗೆ
ಮೊದಲ ಪಲ್ಯ ಮೊದಲ ಅನ್ನ ನಿನಗೇ ಎಂದ ಅವನು.

ಬೊಬ್ಬಿಲಿ ವಶವಾದ ಮೇಲೆ ವಂಶದ ಆಧಾರವಾದ ಹಸುಳೆ ವೆಂಕಟರಾಯನಿಗೆ ಕೊನೆಯ ಬಾರಿ ಹಾಲು ಕೊಟ್ಟು ಲಕ್ಷ್ಮಮ್ಮನೆಂಬ ಗೆಳತಿಯ ಜೊತೆ ಮಗುವನ್ನು ಕಳುಹಿಸಲು ಮಲ್ಲಮ್ಮ ಪ್ರಯತ್ನ ಮಾಡಿದಳು. ಆದರೆ ಅವರು ಬುಸ್ಸಿಗೆ ಸಿಕ್ಕಿಇದ್ದರು. ಮಗು ರಾಜವಂಶದವನೇ ಅಲ್ಲವೆ ಎಂಬುದನ್ನು ಪರೀಕ್ಷಿಸಲು ಬುಸ್ಸಿ ಮಗುವಿನ ಮುಂದೆ ಹೆಣ್ಣು, ಹಣ, ಒಂದು ಕತ್ತಿ ಇಟ್ಟ. ಆಗ ಮಗು ಹಣ್ಣು ಮುಟ್ಟಲಿಲ್ಲ. ಹಣವನ್ನು ನೋಡಲಿಲ್ಲ, ನೇರವಾಗಿ ಚಂದ್ರಾಯುಧವನ್ನೇ ಕೈಯಲ್ಲಿ ಹಿಡಿದ. ಅದನ್ನು ನೋಡಿ ಬುಸ್ಸಿಗೆ ಆಶ್ಚರ್ಯವಾಯಿತು. ಆತ ಮಗುವಿಗೆ ರಕ್ಷಣೆಕೊಟ್ಟು ಭದ್ರವಾಗಿ ಕಳುಹಿಸಿಕೊಟ್ಟ. ಹೀಗೆ ಶತ್ರುಗಳನ್ನು ಆಕರ್ಷಿಸುವಂಥ ಶೌರ್ಯ ಬೊಬ್ಬಿಲಿವೀರರದು.

ಬೊಬ್ಬಿಲಿ ವೀರರ ಆತ್ಮಾಭಿಮಾನಕ್ಕೆ ಮೇರೆಯೇ ಇರಲಿಲ್ಲ. ಶತ್ರುಗಳಿಗೆ ವಶವಾದಾಗ ರಾಣಿಯರನ್ನು ಕೊಲ್ಲುವುದು, ಗರ್ಭಿಣಿ ಸ್ತ್ರೀಯರು ತಮ್ಮನ್ನು ತಾವೇ ಕತ್ತಿಯಿಂದ ಕತ್ತರಿಸಿಕೊಂಡು ಸಾಯುವುದು, ಗರ್ಭಸ್ಥ ಪಿಂಡಗಳನ್ನು ನಾಶಮಾಡುವುದು, ತಲೆಗಳನ್ನು ಕತ್ತರಿಸಿ ಬೆಂಕಿಗೆ ಹಾಕುವುದು – ಇವೆಲ್ಲ ಪೌರುಷದ ಅತಿರೇಕಗಳಾಗಿ ಕಾಣಿಸುತ್ತವೆ. ಬೊಬ್ಬಿಲಿ ವೀರರ ಯುದ್ಧವನ್ನು ಕವಿ ಅತ್ಯಂತ ಆಕರ್ಷಕವಾಗಿ, ಅಭಿಮಾನದಿಂದ ವರ್ಣಿಸಿದ್ದಾನೆ. ಅಮಿತ ಪರಾಕ್ರಮಿ, ಮಾನಧನ, ಮೂರ್ತಿವೆತ್ತ ವೀರನಾಗಿದ್ದ ರಂಗಾರಾಯನ ಸಾಹಸವನ್ನು ಕವಿ ಅದ್ಭುತವಾಗಿ ವರ್ಣಿಸಿದ. ಗಂಡಸರಿಗೆ ಮುಖದಲ್ಲಿ ಮೀಸೆ ಇರುವುದು ಸಹಜ. ಆದರೆ ‘ಮುಂಗೈಯಲ್ಲಿ ಮೀಸೆಯಿದೆ ರಂಗಾರಾಯನಿಗೆ’ ಎನ್ನುತ್ತಾನೆ ಕವಿ. ಕತ್ತಿ ಹಿಡಿದ ಕೈಗೆ ಪೌರುಷವಿರುತ್ತದೆಂದು ಹೇಳಲು ಕವಿ ಈ ರೀತಿ ವರ್ಣಿಸುತ್ತಾನೆ.

ಫಿರಂಗಿಯ ಏಟಿನಿಂದ ಅಸುನೀಗಿದ ರಂಗಾರಾಯನನ್ನು ಸಮೀಪಿಸಲು ಶತ್ರುಗಳಿಗೆ ಭಯವಾಯಿತು. ಅವನ ಶೌರ್ಯವನ್ನು, ಶರೀರ ಸೌಷ್ಠವನ್ನು ನೋಡಿ, ‘ಬೆನ್ನಿನಲ್ಲಿ ಚಾಮರ, ಹೊಕ್ಕುಳಲ್ಲಿ ಚಿಂತಾಮಣಿ’ಯಂಥ ಭಾಗ್ಯದ ರೇಖೆಗಳನ್ನು ನೋಡಿ ಬುಸ್ಸಿಗೆ ಆಶ್ಚರ್ಯವಾಯಿತೆಂತೆ!

‘ಹಿಸ್ಟರಿ ಆಫ್ ಹಿಂದೂಸ್ಥಾನ್ ಎಂಬ ಪುಸ್ತಕದಲ್ಲಿ ಬೊಬ್ಬಿಲಿಯುದ್ಧ ನಡೆದ ಕಾಲದಲ್ಲೇ (೨೪.೧.೧೭೫೭) ಬದುಕಿದ್ದ ರಾಬರ್ಟ್ ಆರ್ಮ್ (೧೭೨೮-೧೮೦೧) ಎಂಬ ಇತಿಹಾಸಕಾರ ಈ ಯುದ್ಧವನ್ನು ಸಂಪೂರ್ಣವಾಗಿ ದಾಖಲಿಸಿದ್ದಾನೆ.

ಟಿ.ವಿ.ಎಸ್. ಅನುವಾದ ಎ.ಎಂ.ಡಿ.

 

ಬೊಮ್ಮೈ ನಡನಮ್ ತಮಿಳುನಾಡಿನ ಜನಪದ ಕುಣಿತಗಳಲ್ಲಿ ಗೊಂಬೆವೇಷದ ಕುಣಿತ ಮುಖ್ಯವಾದುದು. ಕಲಾವಿದರು ಹಾಸ್ಯಕ್ಕಾಗಿಯೇ ಈ ಕುಣಿತವನ್ನು ಹಲವು ರೀತಿಗಳಲ್ಲಿ ಕೈಗೊಳ್ಳುತ್ತಾರೆ. ಕಲಾವಿದರು ತಮ್ಮ ಸಹಜ ವೇಷವನ್ನು ಮರೆಮಾಚಿ ಗೊಂಬೆ ಮುಖವಾಡವನ್ನು ಧರಿಸಿಕೊಂಡು ಜನರನ್ನು ರಂಜಿಸುತ್ತಾರೆ. ಗೊಂಬೆ ವೇಷದ ಕಲಾವಿದರು ಚಿಕ್ಕ ದೇಹದ ಆಕಾರಕ್ಕೆ ದೊಡ್ಡ ರುಮಾಲನ್ನು ಕಟ್ಟಿಕೊಂಡು ದೊಡ್ಡ ಹೊಟ್ಟೆಯವರಾಗಿ ಕಾಣುತ್ತಾರೆ. ಇವರು ದೊಡ್ಡ ಹೊಟ್ಟೆಯ ಜೊತೆಗೆ ದೊಡ್ಡ ತಲೆಯನ್ನು ಹೊಂದಿರುತ್ತಾರೆ. ಇವರು ದೊಡ್ಡ ಹೊಟ್ಟೆಯನ್ನು ಅಲ್ಲಾಡಿಸಿಕೊಂಡು ಕುಣಿಯುತ್ತಾ ಬರುತ್ತಾರೆ. ಮಹಿಳಾ ಕಲಾವಿದರು ಲಂಗ ದಾವಣಿ ಹಾಕಿಕೊಂಡು ತೋರುಬೆರಳನ್ನು ಕೆನ್ನೆಯ ಮೇಲೆ ಇಟ್ಟುಕೊಂಡು ಸ್ವಾರಸ್ಯವಾಗಿ ಹಾಡಿ ಹಾಸ್ಯದ ಹೊನಲನ್ನು ಉಂಟು ಮಾಡುತ್ತಾರೆ.

ತಮಿಳುನಾಡಿನ ಜನಪದ ಕುಣಿತಗಳಲ್ಲಿ ಇತ್ತೀಚಿನ ಕಾಲದಲ್ಲಿ ಬೆಳಕಿಗೆ ಬಂದ ಗೊಂಬೆ ವೇಷ ಕುಣಿತ ಗೋವಾ ರಾಜ್ಯದಿಂದ ಇಲ್ಲಿಗೆ ಬಂದ ಜನಪದ ಕಲೆಯಾಗಿದೆ. ೧೯೭೬ರಲ್ಲಿ ದೆಹಲಿಯಲ್ಲಿ ಜರುಗಿದ ಗಣ ರಾಜ್ಯೋತ್ಸವದಲ್ಲಿ ಭಾಗವಹಿಸಲು ಗೋವದಿಂದ ಬಂದ ಜನಪದ ಕುಣಿತಗಳಲ್ಲಿ ಇದು ಒಂದಾಗಿದೆ. ಆ ಸಮಾರಂಭದಲ್ಲಿ ಭಾಗವಹಿಸಿದ ಈ ಜನಪದ ಕಲಾವಿದರು ತಮಿಳುನಾಡಿಗೆ ಹಿಂದಿರುಗಿದ ಮೇಲೆ ದೊಡ್ಡ ದೊಡ್ಡ ಮುಖವಾಡದ ಗೊಂಬೆಗಳನ್ನು ತಯಾರಿಸಿಕೊಂಡು, ತಮಿಳು ಪರಿಸರಕ್ಕೆ ತಕ್ಕಂತೆ ವಯಸ್ಸಾದ ಸಿರಿವಂತರಾಗಿ ತೋರುವ ಶೆಟ್ಟರೊಬ್ಬರು, ಯುವತಿಯೊಬ್ಬಳನ್ನು ಇಷ್ಟಪಟ್ಟು ಅವಳ ಮೇಲೆ ಪ್ರೇಮಗೊಳ್ಳುವುದು, ಮೊದಮೊದಲಲ್ಲಿ ತಿರಸ್ಕರಿಸುವ ಯುವತಿ, ಕೊನೆಯಲ್ಲಿ ಹಣಕ್ಕೆ ಆಸೆಪಟ್ಟು ಅವನನ್ನು ಮದುವೆಯಾಗುವುದಕ್ಕೆ ಸಮ್ಮತಿಸುವುದು. ಇದು ಬರಿಯ ನಟನೆಯಿಂದ ಮಾತ್ರ ನಡೆಯುವ ಮೂಕ ದೃಶ್ಯವಾಗಿದೆ. ಇವರು ನಯ್ಯಾಂಡಿ ಮೇಳದ ಸಂಗೀತಕ್ಕೆ ತಕ್ಕಂತೆ ಆಡುತ್ತಾರೆ.

ಸಾಧಾರಣ ಮನುಷ್ಯನ ತಲೆಗಿಂತ ಮೂರು ನಾಲ್ಕು ಪಟ್ಟು ದೊಡ್ಡದಾಗಿರುವ ಮಾನವ ತಲೆಯ ರೂಪವನ್ನು ಜೇಡಿಮಣ್ಣು, ಕಾಗದ, ಹುಣಿಸೆಗೋಂದು, ಗೋಣಿಚೀಲ, ಕೋರಾಬಟ್ಟೆ, ಗೋಣಿಚೀಲದ ಪೌಡರು ಮೊದಲಾದವುಗಳಿಂದ ತಯಾರಿಸಿ ಅದರ ಮೇಲೆ ಚಿತ್ರಗಳನ್ನು ಬಿಡಿಸಿ, ಬಣ್ಣವನ್ನು ಹಚ್ಚಿ ತಯಾರಿಸಿದ ತಲೆಯ ರೂಪಿನ ತಳಭಾಗ ತುದಿಯನ್ನು ಸೇರಿಸಿ ಹೊಲೆದ ಕೆಂಪುಬಟ್ಟೆಯ ಈ ಗೊಂಬೆಯ ಮುಖವಾಡವನ್ನು ತಮ್ಮ ತಲೆಯಲ್ಲಿ ಹಾಕಿಕೊಂಡು ಕಲಾವಿದರು ಆಡುತ್ತಾರೆ. ಈ ಮುಖವಾಡದ ತೆರದ ಬಾಯಿಯ ಕೊನೆಯಲ್ಲಿ ಕಲಾವಿದರ ಕಣ್ಣುಗಳನ್ನು ಹೊಂದಿಸಿ ಹೊರಗೆ ಇರುವ ವಸ್ತುಗಳನ್ನು ನೋಡುವ ರೀತಿಯಲ್ಲಿ ವ್ಯವಸ್ಥೆ ಮಾಡಿರುತ್ತಾರೆ. ಗಂಡು ಮುಖವಾಡದ ನುಣ್ಣನೆಯ ತಲೆಯಲ್ಲಿ ಬಿಳಿ, ಕೆಂಪು ಬಣ್ಣದಿಂದ ದೊಡ್ಡ ನಾಮವನ್ನು ಎಳೆದಿರುತ್ತಾರೆ.

ಮಹಿಳಾ ಮುಖವಾಡವನ್ನು ಸಹ ಮೇಲಿನಂತೆಯೇ ಅಲಂಕರಿಸಲಾಗುತ್ತದೆ. ಗಂಡಿನ ನುಣ್ಣನೆಯ ತಲೆಗೆ ಭಿನ್ನವಾಗಿ ಹೆಂಗಸಿನ ಮುಖವಾಡದಲ್ಲಿ ಜಡೆಯ ರೂಪವನ್ನು ಮಾಡಿ ಕಪ್ಪುಬಣ್ಣ ಹಚ್ಚಿರುತ್ತಾರೆ. ಕಿವಿಯಲ್ಲಿ ಓಲೆ, ಜುಮುಕಿಗಳನ್ನು ಮೂಗಿನಲ್ಲಿ ಮೂಗುತಿಯನ್ನು ರಬ್ಬರಿನಲ್ಲಿ ಮಾಡಿ ಚಿನ್ನದ ಲೇಪನ ಹಚ್ಚಿರುತ್ತಾರೆ.

ಗೊಂಬೆ ವೇಷಧಾರಿಗಳ ಉಡುಪು: ವೃದ್ಧರ ತಲೆ ಗೊಂಬೆಗೆ ತಕ್ಕಂತೆ ಅವರು ಡೊಳ್ಳು ಹೊಟ್ಟೆಯವನಂತೆ ತೋರಲು, ಕಲಾವಿದರ ದೊಡ್ಡದಾದ ಜುಬ್ಬ ಮತ್ತು ರೇಷ್ಮೆ ಪಂಚೆ ಧರಿಸಿರುತ್ತಾರೆ. ದೇಹದ ಮೇಲೆ ಬೀಸಣಿಗೆ ಮಡಚುವಿಕೆಯಂತೆ ಅಂಗವಸ್ತ್ರವನ್ನು ಧರಿಸಿರುವರು. ಕತ್ತಿನಲ್ಲಿ ಎರಡು ಕಡೆ ಹಾರ ಹಾಕುವಂತೆ ಹಾಕಿದ ಉದ್ದನೆಯ ಅಂಗವಸ್ತ್ರದ ಎರಡು ತುದಿಗಳನ್ನು ಎರಡು ಕೈಗಳಲ್ಲಿ ಹಿಡಿದುಕೊಂಡು ನಲಿದು ನಲಿದು ಕುಣಿಯುತ್ತಾ ಬರುತ್ತಾರೆ.

ಹೆಂಗಸರ ಮುಖವಾಡದ ರೂಪಕ್ಕೂ, ಹೆಂಗಸಿನ ಸಹಜವಾದ ದೇಹದ ರೂಪಕ್ಕೂ ಸಂಬಂಧವೇ ಇಲ್ಲದಂತೆ ಕಾಣಲು ರೇಷ್ಮೆಲಂಗ, ಜಾಕೆಟ್ಟು, ದಾವಣಿ ಹಾಕಿರುತ್ತಾಳೆ.

ಈ ಕಲಾವಿದರ ದೃಶ್ಯಾವಳಿಗಳನ್ನು ನೋಡಿಯೇ ಹಾಸ್ಯರಸ ಉಂಟಾಗುತ್ತದೆ. ಅಂದರೆ ಒಂದು ವಯಸ್ಸಾದ ಡೊಳ್ಳು ಹೊಟ್ಟೆಯವನಂತೆ ವೇಷಧರಿಸಿ ನುಣ್ಣನೆಯ ತಲೆಯ ಹಣೆಯಲ್ಲಿ ದೊಡ್ಡ ನಾಮವೊಂದನ್ನು ಎಳೆದಿರುವ ದೊಡ್ಡ ತಲೆಯ ಮುಖವಾಡವನ್ನು ತನ್ನ ತಲೆಯಲ್ಲಿ ಹಾಕಿಕೊಂಡು ಕಲಾವಿದರು ಬರುತ್ತಾರೆ. ಇವನು ಹೆಣ್ಣಿನ ಸೌಂದರ್ಯಕ್ಕೆ ಸೋತು ಅವಳನ್ನು ಇಷ್ಟಪಟ್ಟು ಎಳೆದುಕೊಂಡು ಆಡುತ್ತಾನೆ. ಆತನ ವೃದ್ಧತನ, ಡೊಳ್ಳು ಹೊಟ್ಟೆ, ದೊಡ್ಡ ಆಕಾರವನ್ನು ನೋಡಿ ಮೊದಲು ತಿರಸ್ಕರಿಸಿ ಕೊನೆಯಲ್ಲಿ ವೃದ್ಧನ ಆಸ್ತಿಯ ಮೇಲೆ ಆಸೆಪಟ್ಟು ಅವನನ್ನು ಮದುವೆಯಾಗುತ್ತಾಳೆ. ಮದುವೆಯಾದ ಮೇಲೆ ಮುದುಕ ಹೆಣ್ಣಿನೊಂದಿಗೆ ಸೇರಲು ಹೋದಾಗ ಕೆನ್ನೆಗೆ ಹೊಡೆದು ನೂಕಿ ಬಿಡುತ್ತಾಳೆ. ಆದರೆ ಮುದುಕ ತನ್ನ ಪ್ರೇಮ ಚೇಷ್ಟೆಗಳನ್ನು ಅವಳ ಮೇಲೆ ತೋರಿಸುತ್ತಾನೆ. ಅಂದರೆ ಅವಳ ಕೆನ್ನೆಗೆ ಮುತ್ತು ಕೊಡಲು ಬಂದಾಗ ಹೊಡೆಯುವ ದೃಶ್ಯ, ತಬ್ಬುವುದಕ್ಕೆ ಹತ್ತಿರ ಬಂದಾಗ ತಳ್ಳಿ ಬಿಡುವ ದೃಶ್ಯ, ಮುದುಕನಿಗೆ ಆಸೆ ತೋರಿಸಿ ಅವನು ಹತ್ತಿರ ಬಂದಾಗ ದೂರ ಓಡಿ ಹೋಗುವ ದೃಶ್ಯ ಹೀಗೆ ನಾನಾ ರೀತಿಯ ಮೂಕಾಭಿನಯದಿಂದ ನಟಿಸಿ ಪ್ರೆಕ್ಷಕರನ್ನು ಬಿದ್ದು ಬಿದ್ದು ನಕ್ಕು ಹೊಟ್ಟೆ ಹುಣ್ಣಾಗಿಸುತ್ತಾರೆ.

ಕೆ.ಎಂ. ಅನುವಾದ ಆರ್.ಎಸ್.

 

ಬ್ರಾಹ್ಮಣಿಗಳು ದೇವಾಲಯಗಳಲ್ಲಿ ಪೂಜೆಗೆ ಅಗತ್ಯವಾದ ಹೂಗಳನ್ನು ಸಿದ್ಧಪಡಿಸುವ, ಹೂಮಾಲೆ ಕಟ್ಟುವ ಕಸುಬನ್ನು ಉಪಜೀವನವಾಗಿ ಅಂಗೀಕರಿಸಿದ ಸಮುದಾಯಕ್ಕೆ ಸೇರಿದ ಹೆಂಗಸರನ್ನು ಬ್ರಾಹ್ಮಣಿಗಳೆಂದು ಕರೆಯುತ್ತಾರೆ. ಬ್ರಾಹ್ಮಣಯಮ್ಮ, ಬ್ರಾಹ್ಮಣಿ ಹೆಂಗಸು, ಪುಷ್ಪಿಣಿ, ಮರೋಳಮ್ಮ ಎಂಬೀ ಹೆಸರುಗಳಿಂದಲೂ ಇವರನ್ನು ಕರೆಯುತ್ತಾರೆ.

ನಂಬೀಶನ್‌, ಉಣ್ಣಿ, ಪುಷ್ಪಿಣಿ ಎಂಬ ಜಾತಿಯವರನ್ನು ಮುಖ್ಯವಾಗಿ ಪುಷ್ಪಕರು ಎಂದು ಕರೆಯುತ್ತಾರೆ. ದೇವಾಲಯಕ್ಕೆ ಸಂಬಂಧಿಸಿದ ಕೆಲಸಗಳನ್ನು ಮಾಡುವುದರಿಂದ ಅವರನ್ನು ‘ಅಂಬಲವಾಸಿಗಳು’ ಎಂದು ಕರೆಯುತ್ತಾರೆ. ಕೇರಳದ ಜಾತಿವ್ಯವಸ್ಥೆಯಲ್ಲಿ ಬ್ರಾಹ್ಮಣರು ಮತ್ತು ನಾಯಕರ ಮಧ್ಯೆ ಇವರ ಸ್ಥಾನ. ಮಲಬಾರು ಮತ್ತು ಕೊಚ್ಚಿ ಪ್ರದೇಶಗಳಲ್ಲಿ ನಂಬೀಶನ್‌ರು ಇದ್ದಾರೆ. ‘ನಂಬೀಯಶ್ಶನ್’ ಎಂಬ ಹೆಸರೂ ಇವರಿಗಿದೆ. ನಂಬೂದಿರಿಯವರ ಹತ್ತಿರ ಇರುವವರು ಎಂದು ತೋರಿಸುವುದಕ್ಕಿರಬೇಕು ‘ನಂಬಿ’ ಹೆಸರನ್ನು ಸ್ವೀಕರಿಸಿದುದು. ದೇವಾಲಯಗಳಲ್ಲಿ ಹೂಗಳನ್ನು ಸಿದ್ಧಪಡಿಸುವುದು, ಮಾಲೆಕಟ್ಟುವುದು ಮುಂತಾದವುಗಳ ಹೊರತಾಗಿ ದೇವರ ಮೆರವಣಿಗೆಯಲ್ಲಿ ದೀಪ ಹಿಡಿಯುವ ಹಕ್ಕು ನಂಬೀಶ ಜಾತಿಯವರಿಗಿದೆ. ಹಳೆಯ ಕೊಚ್ಚಿರಾಜ್ಯದಲ್ಲೂ ತಿರುವಾಂಕೂರು ರಾಜ್ಯದಲ್ಲೂ ಇರುವ ಪುಷ್ಪಕ ಸಮುದಾಯದವರಲ್ಲಿ ‘ಉಣ್ಣಿಗಳು’, ‘ಪುಷ್ಟ ಕನುಣ್ಣಿ’, ‘ತೀಚ್ಚಾಟ್ಟುಣ್ಣಿ’ ಎಂಬ ಆಂತರಿಕ ಭೇದ. ಹೂಗಳನ್ನು ಸಿದ್ಧಪಡಿಸುವುದು ಮತ್ತು ಮಾಲೆ ಕಟ್ಟುವುದು ಪುಷ್ಪಕನುಣ್ಣಿ ವಿಭಾಗದವರ ಕುಲಕಸುಬು. ಭದ್ರಕಾಳಿ ಗುಡಿಗಳಲ್ಲಿ ‘ತೀಯ್ಯಾಟ್ಟ್’ ಎಂಬ ಧಾರ್ಮಿಕ ಕರ್ಮವನ್ನು ನಡೆಸುವವರು ತೀಚ್ಚಾಟ್ಟುಣ್ಣಿಗಳು. ಆಲಪ್ಪುಯ ಜಿಲ್ಲೆಯಲ್ಲಿ ಮಾತ್ರವೇ ಇರುವ ಪುಷ್ಪಕ ವಿಭಾಗದವರು ಪೂಪ್ಪಳ್ಳಿಗಳು. ಪುಷ್ಪಕ ಸ್ತ್ರೀಯರನ್ನು ಸಾಮಾನ್ಯವಾಗಿ ಹಾಗೆ ಹೇಳುವುದಾದರೂ ನಂಬೀಶ ಸ್ತ್ರೀಯರನ್ನು ಮುಖ್ಯವಾಗಿ ‘ಬ್ರಾಹ್ಮಣಿ’ಗಳು ಎಂದು ಕರೆಯಲಾಗುತ್ತದೆ.

ಬ್ರಾಹ್ಮಣಿಗಳು ನಡೆಸುವ ಧಾರ್ಮಿಕ ಕ್ರಿಯೆಗಳಲ್ಲೊಂದು ಬ್ರಾಹ್ಮಣಿಪ್ಪಾಟ್ಟ್‌. ಮಧ್ಯಕೇರಳದಲ್ಲಿ ಅದರಲ್ಲೂ ತ್ರಿಶ್ಶೂರು ಜಿಲ್ಲೆಯಲ್ಲಿ ಇದು ಹೆಚ್ಚಾಗಿ ಆಚರಣೆಯಲ್ಲಿದೆ. ದೇವೀ ದೇವಾಲಯಗಳಲ್ಲೂ ಬ್ರಾಹ್ಮಣರ ಮತ್ತು ಪುಷ್ಪಕರ ಮನೆಗಳಲ್ಲೂ ಈ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಕೆಲವು ನಾಯರ್ ತರವಾಡುಗಳಲ್ಲೂ ಬ್ರಾಹ್ಮಣಪಾಟ್ಟ್‌ ನಡೆಯುತ್ತದೆ. ತಿರುಎರಾಣಿಕುಳಂ ದೇವೀ ದೇವಾಲಯದಲ್ಲಿ (ಎರ್ನಾಕುಲಂ ಜಿಲ್ಲೆ) ಪುಷ್ಪಿಣಿಪಾಟ್ಟ್ ಎಂಬ ಹೆಸರಲ್ಲಿ ಈ ಧಾರ್ಮಿಕ ಕಲಾಪವನ್ನು ನಡೆಸುತ್ತಾರೆ.

ಬ್ರಾಹ್ಮಣಿಪಾಟ್ಟ್‌ನಲ್ಲಿ ಕಾಳೀ ಸ್ತುತಿಗಳನ್ನು ಹೇಳುತ್ತಾರೆ ಎಂಬ ಕಾರಣಕ್ಕೆ ಭಗವತೀ ಪಾಟ್ಟು ಮುಖ್ಯವಾಗುತ್ತದೆ. ಹಾಡಿನ ಮತ್ತು ಕಲಾಪದ ದೀರ್ಘತೆಗೆ ಅನುಸಾರವಾಗಿ ಸಣ್ಣಪಾಟ್ಟು, ದೊಡ್ಡಪಾಟ್ಟು ಎಂಬ ಪ್ರಭೇದಗಳಿವೆ. ಅರ್ಧ ದಿನ ಅಥವಾ ಒಂದು ದಿನದವರೆಗಿನ ಕಾಲಾವಧಿಯ ಕ್ರಿಯೆಗಳಿಂದ ಕೂಡಿದ ಪಾಟ್ಟ್‌ಗೆ ‘ಚೆರಿಯಪಾಟ್ಟ್‌’ (ಸಣ್ಣಪಾಟ್ಟ್) ಎಂದು ಕರೆಯುತ್ತಾರೆ. ಇದಕ್ಕೆ ಹದಿನಾರು ಅಡಿ ಸುತ್ತಳತೆಯುಳ್ಳ ಚೌಕಾಕೃತಿಯ ಸಣ್ಣಚಪ್ಪರ ಕಟ್ಟುತ್ತಾರೆ. ಕೊಡುಂಗಲ್ಲೂರು ಅಮ್ಮನನ್ನು ಸ್ತುತಿಸುವ ಹಾಡುಗಳನ್ನು ಮಾತ್ರ ಹಾಡಲಾಗುತ್ತದೆ. ಮೂರು ದಿನಗಳವರೆಗೆ ಲಂಬಿಸುವ ಈ ಹಾಡನ್ನು ವಲಿಯಪಾಟ್ಟ್ (ದೊಡ್ಡಪಾಟ್ಟ್) ಎಂದು ಕರೆಯುತ್ತಾರೆ. ಇದನ್ನು ಹರಕೆಯ ರೂಪದಲ್ಲಿ ನಡೆಸುತ್ತಾರೆ. ಅರವತ್ನಾಲ್ಕು ಅಡಿ ಸುತ್ತಳತೆಯ ಚೌಕಾಕೃತಿಯ ಚಪ್ಪರ ರಚನೆಯಾಗುತ್ತದೆ. ನಾಲ್ಕು ಮೂಲೆಗಳಲ್ಲಿಯೂ ಕಂಬಗಳನ್ನು ನಾಟಿ ಅದರ ಮೇಲೆ ‘ಮರಚಟ್ಟಂ’ (ಮರದ ಚೌಕಟ್ಟು) ಹಾಕುತ್ತಾರೆ. ದನಕರುಗಳನ್ನು ಪರಸ್ಪರ ಬಂಧಿಸುವ ರೀತಿಯಲ್ಲಿ ಹಗ್ಗಗಳನ್ನುತ್ತಾರೆ. ತೆಂಗಿನ ಎಳೆಯಗರಿ, ಆಲದ ಎಲೆ, ಕಂಗಿನ ಹಿಂಗಾರ ಇತ್ಯಾದಿಗಳಿಂದ ಚಪ್ಪರ ಅಲಂಕಾರವಾಗುತ್ತದೆ. ಅಕ್ಕಿಯ ಹಿಟ್ಟಿನಿಂದ ನೆಲಬರೆದು ಅದರಲ್ಲಿ ಬೆಳ್ತಿಗೆ ಅಕ್ಕಿಯಿಂದ ವೃತ್ತವನ್ನು ರಚಿಸಿ ಮೂರು ಪೀಠಗಳನ್ನು ಇರಿಸುತ್ತಾರೆ. ಒಂದೊಂದು ಪೀಠದಲ್ಲೂ ಬೆಳ್ತಿಗೆ ಅಕ್ಕಿ, ತೆಂಗಿನ ಕಾಯಿ, ವಾಲ್‌ಕನ್ನಾಡಿ (ಹಿಡಿಕೆಯುಳ್ಳ ಕನ್ನಡಿ), ಕೆಂಪು ರೇಷ್ಮೆ ವಸ್ತ್ರ ಮುಂತಾದುವನ್ನು ಇರಿಸುವುದಲ್ಲದೆ ಪೀಠಕ್ಕೆ ಒರಗಿಸಿ ಒಂದು ಖಡ್ಗವನ್ನೂ ಇರಿಸಬೇಕು. ಇದಕ್ಕೆ ಸಂಬಂಧಿಸಿದಂತೆ ದೇವಾಲಯದಲ್ಲಿ ದೈವಾವೇಶದ ಕುಣಿತ ಕುಣಿದು ಬರಬೇಕು ಮತ್ತು ‘ನುಡಿ’ ಕೊಡುವ ಪರಿಪಾಠವೂ ಇದೆ.

ಬ್ರಾಹ್ಮಣಿಪಾಟ್ಟ್‌ಗೆ ಮೂರು ಭಾಗಗಳಿವೆ – ಎತ್ತತ್ತಮಡ (ಹಗಲಸ್ತುತಿ), ಉಚ್ಚಕ್ಕಲತ್ತಮಡ, ಅಂತ್ಯಕ್ಕಲತ್ತೆಮಡ (ರಾತ್ರಿಸ್ತುತಿ). ಗಣಪತಿ, ಸರಸ್ವತಿ, ಯಶೋಧ, ಬಾಲುಮೆಯರ ಪೊಲಿಚ್ಚಿಪಾಟ್ಟ (ಮು)ಗಳನ್ನು ಎದ್ರ್‌ತ್ತಮಡದಲ್ಲಿ ಹೇಳಲಾಗುತ್ತದೆ. ಇದಾದ ಬಳಿಕ ಬ್ರಾಹ್ಮಣಿಯು ಕಚ್ಚೆಯುಟ್ಟು, ಕಣ್ಣಿಗೆ ದೀರ್ಘವಾಗಿ ಕಾಡಿಗೆ ಬರೆದು, ಬೊಟ್ಟಿಟ್ಟು, ಕೂದಲು ಬಾಚಿ ಕಟ್ಟಿ, ‘ದಶಪುಷ್ಪಗ’ಗಳನ್ನು ಮುಡಿದು, ಉತ್ತರೀಯ ಕಟ್ಟಿ, ಪೀಠವನ್ನು ದೃಷ್ಟಿಸುತ್ತ ನಿಲ್ಲಬೇಕು. ಎರಡು ಕೈಗಳಲ್ಲೂ ಒಂದಿಷ್ಟು ಅಕ್ಕಿಕಾಳು ಹಾಕಿದ ಹೂವಿನ ತಟ್ಟೆಗಳಿರುತ್ತವೆ. ಉಳಿದ ಬ್ರಾಹ್ಮಣಿಯರು ಕಂಚಿನ ಬಟ್ಟಲನ್ನು ಕತ್ತಿಯಿಂದ ಬಡಿಯುತ್ತ ‘ಭದ್ರಕಾಳಿಯ ಜನನ’ವನ್ನು ಹಾಡುತ್ತಾರೆ. ಈ ಸಂದರ್ಭದಲ್ಲಿ ಚೆಂಡೆ, ಮದ್ದಳೆ, ಕೊಂಬುವಾದ್ಯ, ಕೊಳಲು, ಚಕ್ರತಾಳ – ಇತ್ಯಾದಿ ವಾದ್ಯಗಳ ಮೇಳವೂ ಇರುವ ರೂಢಿಯಿದೆ.

ಸಂಜೆಯಾಗುವ ಮೊದಲು ‘ಉಚ್ಚಕಲತ್ತೆಮಡ’ ಆರಂಭ. ಕಾಳಿಯ ಜನನ, ದುರ್ಗೆಯ ಜನನ, ಮಹಾಮಾಯೆ – ದಾರಿಕರ ಪ್ರತಾಪಗಳು ಮುಂತಾದುವನ್ನು ಈ ಸಂದರ್ಭದಲ್ಲಿ ಹಾಡಲಾಗುತ್ತದೆ. ‘ಮಹಾಮಾಯೆ’ ಎಂಬ ಭಾಗವನ್ನು ಹಾಡುವಾಗ ವಾದ್ಯಮೇಳವು ಇದ್ದೇ ಇರುತ್ತದೆ. ಬಳಿಕ ಪೊಂಙುರಡಿ ಎಂಬ ಕಾರ್ಯಕ್ರಮವನ್ನು ನಡೆಸುತ್ತಾರೆ.

ಬ್ರಾಹ್ಮಣಿಪಾಟ್ಟ್‌ನ ಕೊನೆಯ ಭಾಗ – ‘ಅಂತ್ಯಕ್ಕಲತ್ತೆಮಡ’. ಧರ್ಮದೈವದ ಉದ್ವಸನ (ಮರಳಿ ಕಳುಹಿಸುವುದು) ಎಂಬ ಸಂಕಲ್ಪದಂತೆ ‘ಕಾಳಿಯೂ ದಾರಿಕನೂ’ ಎಂಬ ಯುದ್ಧಭಾಗವನ್ನು ಕಾಳೀ ಸ್ತುತಿಯನ್ನೂ ಹಾಡಲಾಗುತ್ತದೆ. ಬಳಿಕ ‘ಕಾಳಿಯ’ ‘ಪುನರಾಗಮನ’ ಎಂಬ ಹಾಡನ್ನು ಬ್ರಾಹ್ಮಣಿಯರು ಬಟ್ಟಲು ಬಡಿದು ಹಾಡುತ್ತಾರೆ. ಈ ಸಂದರ್ಭದಲ್ಲಿ ಚೆಂಡೆಮೇಳ ಇರುತ್ತದೆ. ಅಂಗಣದ ಚಪ್ಪರದೊಳಗೆ ನಿಂತಿರುವ ಹೆಂಗಸು ಹಾಡು ಮುಗಿಯುತ್ತಿದ್ದಂತೆ ಆವೇಶಗೊಂಡು ‘ನುಡಿಕೊಡುವುದು’ ಕೂಡ ಇದೆ. ಕೊನೆಗೆ ‘ಶ್ರೀಭಗವತೀ’ ಎಂಬ ಹಾಡನ್ನು ಹಾಡುತ್ತಾರೆ. ಅದರ ಬಳಿಕ ಪೂಜಾರಿಯು ಪ್ರವೇಶಿಸಿ ವಾಲ್‌ಕನ್ನಾಡಿ, ಖಡ್ಗಗಳನ್ನು ಪೀಠದಿಂದ ತೆಗೆದು ಇರಿಸುವುದರೊಂದಿಗೆ ಕಾರ್ಯಕ್ರಮವು ಮುಗಿಯುತ್ತದೆ. ಇಷ್ಟಕಾರ್ಯಪ್ರಾಪ್ತಿ, ರೋಗ ನಿವಾರಣೆ, ಕೌಟುಂಬಿಕ ಕ್ಷೇಮ ಇತ್ಯಾದಿಗಳಿಗಾಗಿ ಬ್ರಾಹ್ಮಣಿಪಾಟ್ಟನ್ನು ನಡೆಸುತ್ತಾರೆ. ದೊಡ್ಡ ‌ಪ್ರಮಾಣದಲ್ಲಲ್ಲವಾದರೂ ಇಂದು ಈ ಧಾರ್ಮಿಕಾಚರಣೆ ನಡೆಯುತ್ತಿದೆ.

ಎಸ್.ಕೆ. ಅನುವಾದ ಕೆ.ಕೆ.

 

ಭಗತ ಈ ಬುಡಕಟ್ಟು ಸಂಖ್ಯೆಯಲ್ಲೂ, ಸಾಂಸ್ಕೃತಿಕವಾಗಿಯೂ ಬಹುಮುಖ್ಯ ಸಮುದಾಯ. ಆಂಧ್ರದ ವಿಶಾಖ, ವಿಜಯನಗರಂ ಮತ್ತು ಶ್ರೀಕಾಕುಳಂ ಜಿಲ್ಲೆಗಳಲ್ಲಿ ಇವರು ವಾಸವಾಗಿದ್ದಾರೆ. ಇವರ ಮಾತೃಭಾಷೆ ತೆಲುಗು. ಜಮೀನ್ದಾರರಿಗೆ ಹಣವನ್ನು ವಸೂಲಿ ಮಾಡಿ ಕೊಡುವ ಕೆಲಸ ಇವರದು. ಗಂಡು ಹೆಣ್ಣಿನ ಕೊಡುಕೊಳ್ಳುವಿಕೆ ಸಂಪ್ರದಾಯಬದ್ಧವಾಗಿದೆ. ಅವಿಭಕ್ತ ಕುಟುಂಬಕ್ಕಿಂತ ಸಣ್ಣ ಕುಟುಂಬಗಳೇ ಹೆಚ್ಚು. ಇವರದು ಪಿತೃಪ್ರಧಾನ ಕುಟುಂಬ. ಗಂಡುಮಕ್ಕಳಿಗೆ ಆಸ್ತಿಯ ಪಾಲನ್ನು ನೀಡುತ್ತಾರೆ. ಗಂಡು ಮಕ್ಕಳಿಲ್ಲದಿದ್ದರೆ ಹೆಣ್ಣು ಮಕ್ಕಳಿಗೆ ಆಸ್ತಿಯನ್ನು ಹಂಚುತ್ತಾರೆ. ಓಲಿ ವ್ಯವಸ್ಥೆ ಇವರಲ್ಲಿದೆ. ಏಕಪತ್ನಿ ವಿಧಾನವಿದೆ. ಕೆಲವು ಪ್ರಾಂತಗಳಲ್ಲಿ ಬಹುಪತ್ನಿತ್ವ ಜಾತಿಯಲ್ಲಿದೆ. ವಿವಾಹ ವಿಚ್ಛೇದನಕ್ಕೆ ಸಾಮಾಜಿಕ ಒಪ್ಪಿಗೆಯನ್ನು ಪಡೆಯುತ್ತಾರೆ. ಕೊರ‍್ರ (ಸೂರ್ಯ) ಕಿಲ್ಲೋ ಇಲ್ಲವೆ ಭಾಫಾ (ಹುಲಿ), ಗೊಲ್ಲರಿ (ಮಂಗ), ಪಂಗಿ (ಗಾಳಿಪಟ) ಎಂಬ ಗೋತ್ರಗಳು ಈ ಸಮುದಾಯದಲ್ಲಿವೆ. ಆದರೆ ಎಲ್ಲ ಗೋತ್ರದವರು ತಾವು ಒಂದೇ ಅವಿಭಕ್ತ ಪೂರ್ವಿಕರ ಕುಟುಂಬದಿಂದ ಬಂದುದಾಗಿ ನಂಬುತ್ತಾರೆ. ಗೋತ್ರಗಳು ಅನೇಕ ಮನೆತನದ ಹೆಸರುಗಳಾಗಿಯೂ ಚಾಲ್ತಿಯಲ್ಲಿವೆ.

ಅಣ್ಣ ತೀರಿಕೊಂಡರೆ ಆತನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವ ಹಕ್ಕನ್ನು ತಮ್ಮ ಪಡೆದಿರುತ್ತಾನೆ. ಆಕೆಯ ಇಷ್ಟದಂತೆಯೇ ಹನ್ನೊಂದನೆಯ ದಿನ ಆಕೆಗೆ ಹೊಸಸೀರೆ, ಬಳೆಗಳನ್ನು ಕೊಡುತ್ತಾರೆ. ಇದನ್ನೇ ‘ಮುಸುಗು ಹಾಕುವುದು’ ಎನ್ನುತ್ತಾರೆ. ಗರ್ಭಿಣಿಯರು ಏಳು ತಿಂಗಳು ತುಂಬಿದ ಬಳಿಕ ಕಾಡಿಗೆ ಹೋಗಬಾರದು. ಶುಭಕಾರ್ಯಗಳಿಗೆ ಹೋಗುವುದು ಸಹ ಅಪರಾಧ, ನಿಷೇಧ. ಹೆರಿಗೆಯನ್ನು ಮನೆಯಲ್ಲಿಯೇ ಮಾಡುತ್ತಾರೆ. ಐದನೆಯ ಇಲ್ಲವೇ ಏಳನೆಯ ದಿನ ಶಿಶುವಿಗೆ ನಾಮಕರಣ ಮಾಡುತ್ತಾರೆ. ಅನಂತರ ಆಕೆ ಒಂದು ಕೆರೆಗೋ ಇಲ್ಲವೆ ಬಾವಿಯ ಹತ್ತಿರಕ್ಕೂ ಹೋಗಿ ಸ್ನಾನ ಮಾಡಿಕೊಂಡು ಬಟ್ಟೆಗಳನ್ನು ಒಗೆದುಕೊಂಡು ಬಂದ ಮೇಲೆ ಮನೆಯೊಳಗೆ ಕರೆದುಕೊಳ್ಳುತ್ತಾರೆ. ಹುಡುಗಿ ಮೈನೆರೆತರೆ ತಕ್ಷಣ ಆಕೆಗೆ ಒಂದು ಚಾಪೆ, ಲೋಟ, ಪ್ಲೇಟು ಕೊಟ್ಟು ಆರು ದಿನಗಳ ಕಾಲ ಹೊರಗೆ ಕೂಡಿಸಿ ಏಳನೆಯ ದಿನ ಅರಿಸಿಣ, ಕುಂಕುಮ ಹಚ್ಚಿ ತಲೆಸ್ನಾನ ಮಾಡಿಸುತ್ತಾರೆ. ಹೊಸ ಬಟ್ಟೆಗಳನ್ನು ಹಾಕುತ್ತಾರೆ. ಚಪ್ಪರದ ಕೆಳಗೆ ಕೂಡಿಸಿ ಎಲ್ಲರೂ ಆಶೀರ್ವಾದ ಮಾಡುತ್ತಾರೆ. ಆ ದಿನ ರಾತ್ರಿ ದಿಂಸಾ ನೃತ್ಯ ಮಾಡುತ್ತಾರೆ. ಮಾಂಸಾಹಾರ, ಸಾರಾಯಿ ಕಡ್ಡಾಯ.

ಭಗತರು ಶಂಕುದೇವತೆ (ಗ್ರಾಮ ದೇವತೆ)ಯಾಗಿ, ಜಕರ ದೇವತೆ (ಮಳೆಗೂ, ಬೆಳೆಗೂ ದೇವತೆ)ಯಾಗಿ ಬಾಲಿ ದೇವತೆ(ಮುಟ್ಟುಚಟ್ಟಿನ ದೇವತೆ)ಯಾಗಿ, ದುರ್ಗನಂದಿ ದೇವತೆಯಂಥವರನ್ನು ಪೂಜಿಸುತ್ತಾರೆ. ಹೊಸ ನವಣೆಯ ಹಬ್ಬ (ಕೊರ‍್ರ ಕೊತ್ತ ಪಂಡುಗ), ಹೊಸ ತೊಗರಿಯ ಹಬ್ಬ (ಕಂದಿಕೊತ್ತ ಪಂಡುಗ), ಹೊಸ ಮಾವಿನ ಹಬ್ಬ (ಮಾಮಿಡಿ ಕೊತ್ತ ಪಂಡುಗ)ಗಳನ್ನು ಆಚರಿಸುತ್ತಾರೆ. ಮುಖಂಡರೆಂದು ಕರೆಯಲ್ಪಡುವ ಹಳ್ಳಿಯ ಯಜಮಾನರ ಮುಂದೆಯೇ ಜಗಳಗಳ ಪರಿಷ್ಕಾರ ನಡೆಯುವುದುಂಟು.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೧,೩೩,೪೩೭. ಅಂದರೆ ಶೇಕಡಾ. ೨.೬೫.

ಬಿ.ಕೆ.ಆರ್. ಅನುವಾದ್ ಕೆ.ಎಸ್.

 

ಭಗವತಿ ‘ಪಾಟ್ಟು’ ಮತ್ತು ಪಂಜಿನ ಕುಣಿತ  ಕೇರಳದ ‘ಶ್ರೀಕುರುಂಬಾ’ ದೇವೀ ಸನ್ನಿಧಿಗಳಲ್ಲಿ ‘ಕದಿರೊಕೂಟ್ಟುಕಳಂ’ ಎಂಬ ಉತ್ಸವಾಚರಣೆಯ ಭಾಗವಾಗಿ ಭಗವತಿ ‘ಪಾಟ್ಟು’ ಮತ್ತು ಪಂಜಿನ ಕುಣಿತಗಳು ನಡೆಯುತ್ತವೆ. ಐದು ತರದ ಬಣ್ಣದ ಹುಡಿಗಳಿಂದ ಭಗವತಿಯನ್ನು ಸಂಕೇತಿಸುವ ತಾಂತ್ರಿಕ ಮಂಡಲಗಳನ್ನು ರಚಿಸಿ, ಪೂಜೆಯ ಭಾಗವಾಗಿ ‘ಪಾಟ್ಟು’ (ಸ್ತುತಿಗೀತೆ) ಮತ್ತು ಪಂಜಿನ ಕುಣಿತಗಳು ನಡೆಯುತ್ತವೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ಮಣ್ಣಾನ್ (ವೇಲನ್) ಸಮುದಾಯಕ್ಕೆ ಸೇರಿದವರು ಇದನ್ನು ನಡೆಸುತ್ತಾರೆ. ಕೃಷಿ ಸಂಸ್ಕೃತಿಯ ಆಚರಣೆಗಳ ಭಾಗವಾಗಿ ಗುಡಿಗಳಲ್ಲಿ ನಡೆಯುವ ‘ಕದಿರ್‌ಕೂಟ್ಟ್‌ಕಳಂ’ನ ಸಂದರ್ಭದಲ್ಲಿ ರೈತರು ವರ್ಷದ ಹೊಸ ಬೆಳೆಗಳನ್ನು ಕಾಣಿಕೆಯಾಗಿ ಸಮರ್ಪಿಸುತ್ತಾರೆ. ಫಲವತ್ತತೆ, ಸಮೃದ್ಧಿಗಳೇ ಈ ಉತ್ಸವಾಚರಣೆಯ ಉದ್ದೇಶವಾಗಿದೆ. ಕೆಲವು ಮನೆಗಳಲ್ಲೂ ನಡೆಯುವುದಿದೆ.

‘ಭಗವತಿ ಕಳಂ’ ಎಂಬ ಚೌಕಾಕಾರದ ತಾಂತ್ರಿಕ ಮಂಡಲವನ್ನು ಮೊದಲು ರಚಿಸುತ್ತಾರೆ. ಇಲ್ಲಿ ಯಾವುದೇ ದೇವರ ರೂಪಗಳಿರುವುದಿಲ್ಲ. ಹಲವು ನಿರ್ದಿಷ್ಟ ಕೋನ, ತ್ರಿಕೋನಗಳ ವಿನ್ಯಾಸಗಳಿಂದ ಕೂಡಿದ ಮಂಡಲಗಳಿರುತ್ತವೆ. ಮಧ್ಯದಲ್ಲಿರುವ ಒಂಭತ್ತು ಖಂಡಗಳ ಮಂಡಲದಲ್ಲಿ ಹಿತ್ತಾಳೆಯ ಕಲಶಪಾತ್ರೆ ‘ಗಿಂಡಿ’ಯನ್ನು ಇಟ್ಟು ಪ್ರತಿಷ್ಠಾಪಿಸುತ್ತಾರೆ. ಮುಂದೆ ಈ ಮಂಡಲದ ಎದುರು ಚೆಂಡೆಯ ತಾಳಕ್ಕನುಗುಣವಾಗಿ ಪಂಜಿನ ಕುಣಿತ ನಡೆಯುತ್ತದೆ. ಕೆಂಪು ಬಣ್ಣದ ಬಟ್ಟೆ ಧರಿಸಿದ, ಸೊಂಟಕ್ಕೆ ಶಬ್ದಿಸುವ ಮಣಿಗಳುಳ್ಳ ಡಾಬುಗಳನ್ನೂ, ಕಾಲಿಗೆ ಗೆಜ್ಜೆಗಳನ್ನೂ ಧರಿಸಿ ತಲೆಗೆ ಕೆಂಪು ರುಮಾಲನ್ನು ಸುತ್ತಿ, ಕೈಯಲ್ಲಿ ಉರಿಯುವ ಪಂಜು ಹಿಡಿದು ಮಂಡಲದ ಸುತ್ತಲೂ ಹೆಜ್ಜೆ ಹಾಕಿ ಕುಣಿಯುತ್ತಾರೆ. ಈ ಕುಣಿತದಲ್ಲಿ ಏಳು ವಿಭಿನ್ನ ರೀತಿಯ ಪಾದಗತಿಗಳು ಇರುತ್ತವೆ. ಈ ಏಳೂ ತರದ ಕುಣಿತಗಳು ಮುಗಿಯಲು ಸುಮಾರು ಎರಡು ಗಂಟೆಗಳ ಅವಧಿ ಬೇಕಾಗುತ್ತದೆ.

ಪಂಜಿನ ಕುಣಿತ ಮುಗಿದ ಬಳಿಕ ಭಗವತಿ ಪಾಟ್ಟು ಆರಂಭವಾಗುತ್ತದೆ. ಭಗವತಿಯನ್ನು ಸ್ತುತಿಸುವ ಸಾವಿರಾರು ಸಾಲುಗಳ ಲಾವಣಿರೂಪದ ಸ್ತುತಿಗೀತೆಯಿದು. ಇದು ಮುಗಿಯಲು ಸುಮಾರು ಮೂರು ದಿನಗಳೇ ಬೇಕಾಗುವುದು. ಇದರಲ್ಲಿ ೯೬ ತಾಳಗಳ ಹಾಡುಗಳಿವೆ. (ಒಂದು ಹಾಡಿಗೆ ಒಂದು ತಾಳ),೩೬ ಗದ್ಯಭಾಗಗಳೂ ಇವೆ. ಇದರ ವಿಷಯ ಕೊಡಂಗಲ್ಲೂರಿನ ಭಗವತಿಯ ಪುರಾಣಕ್ಕೆ ಸಂಬಂಧಿಸಿದುದೆಂದು ಭಗವತಿಯ ಮೂಲ ಮತ್ತು ಕೊಡುಂಗಲ್ಲೂರಿನಲ್ಲಿ ಭಗವತಿಯ ನೆಲೆ ನಿಂತ ಕತೆಯ ವಿವಿಧ ಘಟ್ಟಗಳನ್ನು ಇದು ಒಳಗೊಂಡಿದೆ. ಕೇರಳ, ತಮಿಳುನಾಡುಗಳಲ್ಲಿ ಪ್ರಸಿದ್ಧವಾದ ಕಣ್ಣಗಿ ದೇವಿಯ ಚರಿತ್ರೆಯೂ ಇದರಲ್ಲಿದೆ.

ಪಾಟ್ಟು ಮುಗಿದ ಬಳಿಕ, ಅದಾಗಲೇ ರಚಿಸಲಾದ ಮಂಡಲದ ಪಕ್ಕದಲ್ಲೇ ೧೬ ಖಂಡಗಳಿರುವ ಮತ್ತೊಂದು ಬಲಿಮಂಡಲವನ್ನು ರಚಿಸುತ್ತಾರೆ. ಅದಕ್ಕೆ ಸೇರಿಕೊಂಡೇ ಎರಡು ಕೋಳಿಗಳ ತಲೆಯ ಚಿತ್ರವಿರುವ ಕೋಳಿ ಮಂಡಲವನ್ನೂ ರಚಿಸುತ್ತಾರೆ. ಇಲ್ಲಿ ಮತ್ತೊಂದು ಬಗೆಯ ಪಾಟ್ಟು (ಸ್ತುತಿಗೀತೆ) ನಡೆಯುತ್ತದೆ. ಇದಕ್ಕೆ ತೇರೇಟ್‌ಪಾಟ್ಟು ಎನ್ನುತ್ತಾರೆ. ಭಗವತಿಯ ಜತೆಗಿನ ಸಹದೇವತೆಗಳನ್ನು ಆವಾಹಿಸಿ ತೃಪ್ತಿಪಡಿಸುವ ಕ್ರಿಯೆಯಿದು. ಇಲ್ಲಿಗೆ ಆಚರಣೆಗಳು ಮುಗಿಯುತ್ತವೆ.

ಹಿಂದೆಲ್ಲಾ ಈ ತರದ ಭಗವತಿ ಪಾಟ್ಟಿನ ಜತೆ ‘ಬೇಟೆ’ಗೆ ಸಂಬಂಧಿಸಿದ ಮತ್ತೊಂದು ಆಚರಣೆಯೂ ನಡೆಯಲ್ಪಡುತ್ತಿತ್ತು. ಪಾಟ್ಟು ಮುಗಿದ ಮೇಲೆ ಸಂಬಂಧಪಟ್ಟವರೆಲ್ಲರೂ ಮಧ್ಯ ರಾತ್ರಿಯಲ್ಲಿ ವಾದ್ಯಘೋಷಗಳೊಂದಿಗೆ ಸಮೀಪದ ಸ್ಮಶಾನಕ್ಕೆ ತೆರಳುತ್ತಿದ್ದರು. ಅಲ್ಲಿ ಒಬ್ಬನನ್ನು ಚಟ್ಟದಲ್ಲಿ ಮಲಗಿಸಿ ಮರಣಾ ನಂತರದ ಕ್ರಿಯೆಗಳನ್ನು ನಡೆಸುತ್ತಿದ್ದರು. ಮಲಗಿರುವ ಮನುಷ್ಯನ ತಲೆಯ ಬಳಿ ಕುರಿಯೊಂದನ್ನು ಬಲಿ ಕೊಟ್ಟು ಬಳಿಕ ಮಲಗಿದವರನ್ನು ಎಬ್ಬಿಸಿ ಎಲ್ಲರೂ ವಾಪಾಸಾಗುತ್ತಿದ್ದರು. ಇದು ನರಬಲಿಯನ್ನು ಸಂಕೇತಿಸುವ ಆಚರಣೆಯಾಗಿತ್ತು. ಈಗ ಆ ಆಚರಣೆಯು ತೀರಾ ಅಪರೂಪವಾಗಿದೆ.

ಭಗವತಿ ಪಾಟ್ಟು ಮತ್ತು ಪಂಜಿನ ಕುಣಿತಗಳಿಗೆ ಸಂಬಂಧಿಸಿದ ಆಚರಣೆಗಳೆಲ್ಲವೂ ನಡೆಯುವುದು ರಾತ್ರಿಯಲ್ಲೇ ಆಗಿದೆ. ಪಾಟ್ಟು ಮಾತ್ರ ಹಗಲು ರಾತ್ರಿ ನಿರಂತರವಾಗಿ ನಡೆಯುತ್ತದೆ. ಪಾಟ್ಟಿನ ಜತೆ ತಾಳ, ತಂಬೂರಿಗಳನ್ನು ಪಕ್ಕವಾದ್ಯಗಳಾಗಿ ಬಳಸುತ್ತಾರೆ. ಪಾಲಕ್ಕಾಡ್ ಜಿಲ್ಲೆಯ ಹಲವು ದೇವೀ ಗುಡಿಗಳಲ್ಲಿ ಈ ಆಚರಣೆಯು ಇಂದಿಗೂ ನಡೆಯುತ್ತವೆ. ಇದಕ್ಕೆ ಸಮಾನವಾದ ಆಚರಣೆಗಳು ಕಣ್ಣೂರು, ಕಾಸರಗೋಡು ಜಿಲ್ಲೆಗಳ ಚೀರುಂಬಾ ಭಗವತಿ ಗುಡಿಗಳಲ್ಲಿ ‘ತಾಲಪ್ಪೊಲಿ’ ಉತ್ಸವದ ಸಂದರ್ಭಗಳಲ್ಲಿ ನಡೆಯುವುದಿದೆ.

ಪಿ.ಆರ್.ಕೆ. ಅನುವಾದ ವಿ.ಸಿ.