ಬಾಲನಾಗಮ್ಮ ಕಥ ಅದ್ಭುತ ಕಥಾ ಸಾಹಿತ್ಯ ಪ್ರಕಾರದ ಜನಪ್ರಿಯ ಕಥನ ಗೀತೆ. ಆಂಧ್ರಪ್ರದೇಶದ ಎಲ್ಲ ಪ್ರಾಂತಗಳಲ್ಲೂ ಬಹಳ ಪ್ರಚಾರದಲ್ಲಿರುವ ಜಾನಪದ ಅದ್ಭುತ ಕಥೆ. ಇದು ಮೌಖಿಕ ಮಾಧ್ಯಮದಲ್ಲೇ ಅಲ್ಲದೆ ಲಿಖಿತ ಮಾಧ್ಯಮದಲ್ಲೂ ಸ್ಥಾನವನ್ನು ಪಡೆದಿದೆ. ಇದು ವಚನ, ಗಾಯನ, ರೂಪಕ ಈ ಮೂರೂ ರೂಪಗಳಲ್ಲಿಯೂ ಕಾಣಿಸಿಕೊಳ್ಳುತ್ತದೆ. ಈ ಕಥೆ ಕೆಲವು ವ್ಯತ್ಯಾಸಗಳೊಂದಿಗೆ ಹೆಸರುಗಳ ಬದಲಾವಣೆಗಳೊಂದಿಗೆ ದಕ್ಷಿಣ ಭಾರತದ ಉಳಿದ ಪ್ರಾಂತಗಳಲ್ಲೂ ಸಹ ಇದೆ. ಬಾಲನಾಗಮ್ಮ ಕಥೆ ನಾಟಕ ರೂಪದಲ್ಲೂ ಇದೆ. ಈ ನಾಟಕ ಬಂದುದರಿಂದಲೇ ತುಂಬಾ ಕೀರ್ತಿ ಪ್ರತಿಷ್ಠೆಗಳನ್ನು ಪಡೆದ ನಟರು, ನಾಟಕ ಸಂಘಗಳು ಈಗಲೂ ಇವೆ. ಈ ಕಥೆ ಯಕ್ಷಗಾನ ರೂಪದಲ್ಲೂ ಲಭ್ಯವಿದೆ. ಬಾಲನಾಗಮ್ಮ ಕಥೆ ಎರಡು ಬಾರಿ ಬೆಳ್ಳಿ ತೆರೆಯ ಮೇಲೂ ತುಂಬ ಯಶಸ್ಸು ಪಡೆದಿದೆ. ಇದೆಲ್ಲ ಈ ಕಥೆಗೆ ಇರುವ ಬಹುಮುಖ ಪ್ರಾಮುಖ್ಯವನ್ನು ತಿಳಿಸುತ್ತದೆ. ಬಾಲನಾಗಮ್ಮ ಪಾತ್ರ ಈ ಕಥೆಯಲ್ಲಿ ಪಡುವ ಕಷ್ಟಗಳು ತೆಲುಗು ಮಹಿಳಾ ಲೋಕದ ಕಣ್ಣನ್ನು ಒದ್ದೆಮಾಡಿವೆ. ಇದು ಅತ್ಯಂತ ಪ್ರಿಯವಾದ ಕಥೆಗಳಲ್ಲಿ ಒಂದಾಗಿದೆ. ಬಾಲನಾಗಮ್ಮನ ಪಾತ್ರಕ್ಕೂ ರಾಮಾಯಣದ ಸೀತೆ ಪಾತ್ರಕ್ಕೂ ಹೋಲಿಕೆ ಇರುವುದು ಒಂದು ವಿಶೇಷ. ಬಾಲನಾಗಮ್ಮನ ಕಥೆಯನ್ನು ಪ್ರಚಾರ ಮಾಡಿದ, ಈಗಲೂ ಮಾಡುತ್ತಿರುವ ಒಂದು ಜನಪದ ಕಲಾ ರೂಪವಿದೆ. ಇದು ಶಾರದ ಕಥೆ. ತೆಲುಗಿನವರು ಜನಪದ ಪ್ರದರ್ಶನ ಕಲೆಗಳಲ್ಲಿ ಶಾರದ ಕಥೆ ತುಂಬಾ ಪ್ರಮುಖವಾದುದು.

ಈ ಕಥೆ ಹೇಳುವವರನ್ನು ಶಾರದಗಾರರು (ತಂಬೂರಿಯವರು) ಎಂದು ಕರೆಯುವರು. ಇವರು ತೆಲಂಗಾಣದ ಅನೇಕ ಜಿಲ್ಲೆಗಳಲ್ಲಿ ಕಂಡುಬರುತ್ತಾರೆ. ಇವರನ್ನು ಜಂಗಾಲರು ಎಂದು ಕರೆಯುತ್ತಾರೆ. ಮೂರು ಜನ ಕಲಾವಿದರು ಇದರಲ್ಲಿದ್ದು, ಇವರು ಹೇಳುವ ರೀತಿ ಬುರ‍್ರ ಕಥೆಯ ಕಲಾರೂಪವಿದು. ಒಬ್ಬ ವ್ಯಕ್ತಿ ಮಧ್ಯದಲ್ಲಿ ಇದ್ದು ಶಾರದ (ತಂಬೂರಿ) ಬಾರಿಸುತ್ತಾ ಕಥೆ ಹೇಳುತ್ತಾ ಹಾಡುತ್ತಾ ಇದ್ದರೆ ಇಬ್ಬರು ಹಿಮ್ಮೇಳದವರು ಡಕ್ಕೆ ಬಾರಿಸುತ್ತಾ (ಸ್ತ್ರೀಯರು ಕಥೆಗಾರನ ಹೆಂಡತಿಯರು ಆಗಿರಬಹುದು) ಕಥೆಯನ್ನು ಹೇಳುವರು. ತಂಬೂರಿನವರು, ಇನ್ನೂ ದೇಶಿಂಗು ರಾಜನ ಕಥೆ, ಮಾಂಧಾತನ ಕಥೆಯಂತಹ ಇತರ ಕಥೆಗಳನ್ನು ಹೇಳಿದರೂ ಇವರ ಪ್ರದರ್ಶನಗಳಲ್ಲಿ ಬಾಲನಾಗಮ್ಮನ ಕಥೆಯೇ ತುಂಬಾ ಜನಪ್ರಿಯತೆಯನ್ನು ಹೊಂದಿರುವುದು. ಇದರಲ್ಲಿ ಸ್ವಲ್ಪ ಅಸ್ಪಷ್ಟವಾದ ಚಾರಿತ್ರಿಕ ಅಂಶಗಳು ಕಾಣಿಸಿಕೊಳ್ಳುತ್ತವೆ. ಮೌಲಾಲಿಗಟ್ಟು, ಪಾನುಗಂಟಿಪಟ್ನಂ, ಡಿಲ್ಲಿನವಾಬ ಮೊದಲಾದ ಹೆಸರುಗಳು ಚಾರಿತ್ರಿಕ ಅಂಶಗಳಾಗಿ ಕಂಡರೂ ಇದನ್ನು ಸಂಪೂರ್ಣವಾಗಿ ಚಾರಿತ್ರಿಕವಾದುದೆಂದು ರುಜುವಾತು ಮಾಡಲು ಬರುವುದಿಲ್ಲ. ತೆಲುಗರಿಗೆ ಅತ್ಯಂತ ಪ್ರಿಯವಾದ, ಇತರ ಭಾಷೆಗಳಲ್ಲೂ ಇರುವ ಈ ಕಥೆಯನ್ನು ಸಂಕ್ಷಿಪ್ತವಾಗಿ ನೋಡಬಹುದು.

ಭೂ ಚಕ್ರ ಪಟ್ಟಣವನ್ನು ಭೋಜರಾಜ ಆಳುತ್ತಿದ್ದಾನೆ. ಆ ರಾಜನ ಹೆಂಡತಿ ಭೂ ಲಕ್ಷ್ಮಿದೇವಮ್ಮ ಎಷ್ಟು ವ್ರತಗಳನ್ನು ಆಚರಿಸಿದರೂ ಸಂತಾನ ಪ್ರಾಪ್ತಿಯಾಗಲಿಲ್ಲ. ಕೊನೆಗೆ ಜಟಂಗ ಮುನಿ ಪರ್ವತಕ್ಕೆ ಹೋಗಿ ಘೋರವಾದ ತಪಸ್ಸನ್ನು ಮಾಡಿದಳು. ಆ ಮುನಿ ಕೊನೆಗೆ ಪ್ರತ್ಯಕ್ಷವಾಗಿ ಆಕೆಯನ್ನು ಕರುಣಿಸಿ ದೂರದಲ್ಲಿದ್ದ ಎಳೆಯ ಮಾವಿನ ಮರದ ಬಳಿಗೆ ಹೋಗಿ ಏಳು ಮಾವಿನ ಹಣ್ಣುಗಳನ್ನು ಕೊಯ್ದುಕೊಂಡು ನಿಷ್ಠೆಯಿಂದ ಸೂರ್ಯ ನಮಸ್ಕಾರ ಮಾಡಿ ಏಳು ಹಣ್ಣುಗಳನ್ನು ತಿನ್ನುವಂತೆ ತಿಳಿಸುತ್ತಾರೆ. ಆದರೆ ಆಕೆ ಮುನಿ ನಿಯಮವನ್ನು ಬಿಟ್ಟು ನಾಗೇಂದ್ರ ಹುತ್ತದ ಮೇಲೆ ಕಾಲನ್ನಿಟ್ಟು ಬುಟ್ಟಿ ತುಂಬ ಕಾಯಿಗಳನ್ನು ಕೊಯ್ಯುತ್ತಾಳೆ. ಆದರೆ ಕೊನೆಗೆ ಏಳು ಕಾಯಿಗಳು ಮತ್ರ ಅವಳ ಮಡಲಿನಲ್ಲಿ ಉಳಿಯುತ್ತವೆ. ಹೀಗೆ ಮೂರು ಸಾರಿ ಮಾಡುವಷ್ಟರಲ್ಲಿ ಹುತ್ತದಲ್ಲಿದ್ದ ನಾಗೇಂದ್ರ ಬುಸ್ಸೆಂದು ಹೊರಕ್ಕೆ ಒಂದು ಆಕೆಯನ್ನು ಕಚ್ಚಲು ಹೋಗುತ್ತಾನೆ. ನನಗೆ ಮಕ್ಕಳಾದ ಮೇಲೆ ಆರು ತಿಂಗಳ ಬಳಿಕ ಬರುತ್ತೇನೆಂದು ತಿಳಿಸಿ, ಆಗ ಕಚ್ಚಬೇಕೆಂದು ಒಪ್ಪಿಸಿ, ಮನೆಗೆ ತೆರಳಿ ಏಳು ಜನ ಹೆಣ್ಣು ಮಕ್ಕಳನ್ನು ಪಡೆದಳು. ಅವರು ಸೂರ್ಯನಾಗಮ್ಮ, ಚಂದ್ರನಾಗಮ್ಮ, ಉತ್ತರಕನ್ಯ, ದಕ್ಷಿಣ ಕನ್ಯ, ಪಗಡಾಲನಾಗಮ್ಮ, ಮುನಿಕನ್ಯ, ಕೊನೆಯ ಮಗಳು ಬಾಲನಾಗಮ್ಮ.

ಆರು ತಿಂಗಳಲ್ಲಿ ತನ್ನನ್ನು ನಾಗೇಂದ್ರ ಕಚ್ಚುವ ವಿಷಯವನ್ನು ಮನೆಯಲ್ಲಿ ತಿಳಿಸುತ್ತಾಳೆ. ರಾಜ ಆ ದುಃಖದಿಂದ ಎಷ್ಟು ಕಟ್ಟುಪಾಡುಗಳನ್ನು ಮಾಡಿದರೂ ನಾಗೇಂದ್ರ ಆಕೆಯ ಬಳಿ ಬಂದು ಕಚ್ಚಿ ಪ್ರಾಣವನ್ನು ತೆಗೆದುಕೊಳ್ಳುತ್ತಾನೆ. ಭೂ ಲಕ್ಷ್ಮೀದೇವಿಯ ಏಳು ಜನ ಮಕ್ಕಳು ತಾಯಿ ಇಲ್ಲದ ತಬ್ಬಲಿಗಳಾಗುತ್ತವೆ. ಆರಂಭದಲ್ಲಿ ನವ ಭೋಜರಾಜನು ಮತ್ತೆ ಮದುವೆ ಮಾಡಿಕೊಳ್ಳಲು ಒಪ್ಪದೆ ಕೂತರೂ ಅನಂತರ ಎಲ್ಲರ ಒತ್ತಡಕ್ಕೆ ಮಣಿದು ಮದುವೆ ಮಾಡಿಕೊಳ್ಳುತ್ತಾನೆ. ಆ ಸವತಿ (ಮಲತಾಯಿ) ತಾಯಿಯ ಹೆಸರು ಮಾಣಿಕ್ಯಾಲದೇವಿ. ಹೆಂಡತಿಗೆ ತಿಂಗಳ ಭತ್ಯೆಯನ್ನು ನೀಡುತ್ತಾ ಹೆಣ್ಣು ಮಕ್ಕಳೊಂದಿಗೆ ಬೇರೆ ಮಹಡಿಯಲ್ಲಿ ಇದ್ದುಕೊಂಡು ಮಕ್ಕಳನ್ನೇ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾನೆ. ಇದರಿಂದ ಸವತಿ ತಾಯಿಗೆ ಕಣ್ಣುರಿ, ಹೊಟ್ಟೆಉರಿ ಬಂದಿತು. ಸಮಯಕ್ಕಾಗಿ ಕಾದು ನೋಡಿದಳು. ರಾಜನು ದೆಹಲಿಗೆ ಜಮಾಬಂದಿಗೆ ಹೋದ ಸಂದರ್ಭದಲ್ಲಿ, ಏಳು ಜನ ಮಕ್ಕಳನ್ನು ಅನೇಕ ರೀತಿಯಲ್ಲಿ ಮಲತಾಯಿ ಕಷ್ಟಕ್ಕೆ ಗುರಿ ಮಾಡಿದಳು. ಕೊನೆಗೆ ರಾಜ ತಿರುಗಿ ಬಂದ ಮೇಲೆ ಅವನಿಗೆ ವಶೀಕರಣ ಔಷಧ ಕೊಟ್ಟು ತನ್ನಂತೆ ಮಾಡಿಕೊಂಡಳು. ಏಳು ಮಕ್ಕಳನ್ನು ಅಡವಿಯಲ್ಲಿ ಬಿಟ್ಟು ಬರುವಂತೆ ತಿಳಿಸಿದಳು. ರಾಜ ಹಾಗೆಯೇ ಮಾಡುತ್ತಾನೆ. ಆ ಅಡವಿಗೆ ಬೇಟೆಗೆ ಬಂದ ಏಳು ಜನ ಹೆಣ್ಣು ಮಕ್ಕಳ ಸೋದರಮಾವಂದಿರು ಪಾನುಗಂಟಿ ಪಟ್ಟಣವನ್ನು ಆಳುವ ವರ್ಧಿರಾಜರು ಆ ಬಾಲನಾಗಮ್ಮನನ್ನು ಆಕೆಯ ಆರು ಜನ ಅಕ್ಕಂದಿರನ್ನು ಕರೆದುಕೊಂಡು ಹೊರಡುತ್ತಾರೆ. ಅಲ್ಲಿ ಅವರು ಬೆಳೆದ ಮೇಲೆ ಆ ರಾಜರು ಏಳು ಜನ ಅಕ್ಕ ತಂಗಿಯರನ್ನು ಮದುವೆ ಮಾಡಿಕೊಳ್ಳುತ್ತಾರೆ. ಆ ಏಳು ಜನರಲ್ಲಿ ಬಾಲನಾಗಮ್ಮನಿಗೆ ಗಂಡು ಮಗು ಜನಿಸುತ್ತದೆ. ಹಾಗೆ ಕಾಲಕಳೆಯುತ್ತಿರಲು ಒಂದು ದಿನ ವರ್ಧಿರಾಜರು ಗಂಡಿ ಕೋಟೆಗೆ ಕಾರ್ಯನಿಮಿತ್ತ ಹೊರಡುತ್ತಾರೆ. ಹಾಗೆ ಹೋಗುತ್ತಾ ಬಾಲನಾಗಮ್ಮನ ಮಹಡಿಯ ಮುಂದೆ ಏಳು ಗೆರೆಗಳನ್ನು ಎಳೆದು ಅವುಗಳನ್ನು ದಾಟಬಾರದೆಂದು ಹೇಳಿ ಹೊರಡುತ್ತಾರೆ.

ನಾಗಳ್ಲಪೂಡಿಗಟ್ಟುವಿನ ಮಾಯಫಕೀರನು ತನ್ನ ಸೂಳೆಯೊಡನೆ ಜಗಳವಾಡಿ ಆಕೆಗಿಂತ ಸುಂದರವಾದ ಹೆಣ್ಣನ್ನು ತರುತ್ತೇನೆಂದು ಹೇಳಿ ಅಂಜನ ಹಾಕಿ ನೋಡಿ ಬಾಲನಾಗಮ್ಮನನ್ನು ಕಂಡು ಇತ್ತ ಕೋಟೆಗೆ ಬರುತ್ತಾನೆ. ಕೋಟೆಯ ಗುಮ್ಮಟದ ಹತ್ತಿರವಿದ್ದ ತಲಾರಿ ರಾಮನನ್ನು ಮೋಸಗೊಳಿಸಿ, ಕೋಟೆ ಪ್ರವೇಶಿಸಿ, ಬಾಲನಾಗಮ್ಮನನ್ನು ಕಪ್ಪು ನಾಯಿಯನ್ನಾಗಿ ಮಾಡಿ ತೆಗೆದುಕೊಂಡು ಹೋಗುತ್ತಾನೆ. ಬಾಲನಾಗಮ್ಮನನ್ನು ಬಿಡಿಸಿಕೊಂಡು ಬರಲು ಫಕೀರನ ಮೇಲೆ ಯುದ್ಧಕ್ಕೆ ಹೋದ ರಾಜನನ್ನು ಕಲ್ಲಾಗಿ ಮಾರ್ಪಡಿಸುತ್ತಾನೆ. ಹಾಗೆ ಹನ್ನೆರಡು ವರ್ಷಗಳಿಗೆ ಬಾಲಕನು ದೊಡ್ಡವನಾಗಿ ತನ್ನ ತಂದೆ ತಾಯಿಗಳಿಗೆ ಆದ ಅನ್ಯಾಯವನ್ನು ತಿಳಿದುಕೊಂಡು ಫಕೀರನ ಬಳಿ ಹೋಗಿ ತಾಯಿಯನ್ನು ಮರಳಿ ತರಬೇಕೆಂದು, ತಂದೆಯನ್ನು ಬದುಕಿಸಿಕೊಳ್ಳಬೇಕೆಂದು ಪ್ರಯಾಣ ಬೆಳೆಸುತ್ತಾನೆ. ದಾರಿಯಲ್ಲಿ ಪುಲಿರಾಜ ಪಟ್ಟಣದಲ್ಲಿ ಹುಲಿಯನ್ನು ಗೆದ್ದು, ಆ ರಾಜಕುಮಾರಿ ಮದುವೆಗೆ ಅನುಮತಿ ಪಡೆಯುತ್ತಾನೆ. ಆಮೇಲೆ ಚಿಲುಕವಾಡಿ ಪಟ್ಟಣಕ್ಕೆ ಬಂದು ಅಲ್ಲಿ ರಾಜನ ಹುಣ್ಣನ್ನು ವಾಸಿ ಮಾಡಿ ಆ ರಾಜನ ಮಗಳನ್ನು ಬಹುಮಾನವಾಗಿ ಪಡೆಯುತ್ತಾನೆ. ಅಲ್ಲಿಂದ ನಾಗಳ್ಲಪೂಡಿಗಟ್ಟಕ್ಕೆ ಬಂದು ಅಲ್ಲಿ ಒಬ್ಬ ‘ತಮ್ಮಳ್ಳ ಪೆದ್ದಮ್ಮ’ನ ಮನೆಯಲ್ಲಿ ಮೊಮ್ಮಗನೆಂದು ಹೇಳಿ ಸೇರುತ್ತಾನೆ. ಆಕೆಯ ಮೂಲಕ ಫಕೀರನ ಕೋಟೆಯೊಳಗೆ ಹೋಗಿ ಅಲ್ಲಿ ತಾಯಿಯನ್ನು ಕಂಡು ಗುಟ್ಟಾಗಿ ಫಕೀರನ ಪ್ರಾಣ ರಹಸ್ಯವನ್ನು ಕಂಡುಕೊಳ್ಳುವಂತೆ ತಿಳಿಸುತ್ತಾನೆ. ಹಾಗೆ ಫಕೀರನ ಪ್ರಾಣ ರಹಸ್ಯವನ್ನು ಬಾಲನಾಗಮ್ಮ ತಿಳಿದುಕೊಂಡು ಬಾಲಕನಿಗೆ ಮುಟ್ಟಸುತ್ತಾಳೆ. ಆ ಪ್ರಕಾರ ಸಪ್ತ ಸಮುದ್ರಗಳನ್ನು ದಾಟಬೇಕು. ಗಂಡಭೇರುಂಡ ಪಕ್ಷಿಯ ಮರಿಗಳನ್ನು ರಕ್ಷಿಸಿ, ಅದರ ಕೃತಜ್ಞತೆಗಾಗಿ ಆ ಪಕ್ಷಿಯ ಮೇಲೆ ಕುಳಿತುಕೊಂಡು ಸಪ್ತ ಸಮುದ್ರಗಳನ್ನು ದಾಟಿ ದಡವನ್ನು ಸೇರಿಕೊಂಡು ಅಲ್ಲಿಯ ಆಲದ ಮರದ ಪೊಟರೆಯಲ್ಲಿ ಇದ್ದ ಪಂಜರದೊಳಗಿದ್ದ ಗಿಳಿಯನ್ನು ಬಂಧಿಸಿ ತೆಗೆದುಕೊಂಡು ಬರುತ್ತಾನೆ. ಫಕೀರನು ವಿಧಿಯಿಲ್ಲದೆ ಹೊರಗೆ ಬರುತ್ತಾನೆ. ಫಕೀರನ ಮೂಲಕವೇ ಕಲ್ಲಾಗಿದ್ದ ತನ್ನ ತಂದೆಯನ್ನು ಮತ್ತೆ ಪ್ರಾಣ ಬರಿಸಿ ಕೊನೆಗೆ ಗಿಳಿಯನ್ನು ಸಾಯಿಸಿ ಫಕೀರನನ್ನು ವಧಿಸುತ್ತಾನೆ (ಬಾಲಕ). ಅಲ್ಲಿಂದ ಎಲ್ಲರೂ ಪ್ರಯಾಣ ಬೆಳೆಸಿ ದಾರಿಯಲ್ಲಿ ಚಿಲುಕವಾಡಿ ಪಟ್ಟಣದ ರಾಜಕುಮಾರಿಯನ್ನು ಪುಲಿರಾಜ ಪಟ್ಟಣದ ರಾಜಕುಮಾರಿಯನ್ನು ವಿವಾಹವಾಗಿ ಪಾನುಗಂಟಿ ಪಟ್ಟಣಕ್ಕೆ ಬರುತ್ತಾರೆ. ಅನಂತರ ಬಾಲವರ‍್ಧಿ ರಾಜನಿಗೆ ಪಟ್ಟಾಭಿಷೇಕವಾಗುತ್ತದೆ. ಹೀಗೆ ಎಷ್ಟೋ ತಿರುವುಗಳನ್ನು ಪಡೆಯುತ್ತಾ ಮಾಯ, ಮಂತ್ರ, ಶೌರ್ಯ ಮುಂತಾದ ಅದ್ಭುತಗಳಿಂದ ರಸವತ್ತಾಗಿ ಸಾಗುತ್ತದೆ. ಅದ್ಭುತ ಕಥೆಗಳಿಗೆ ಇರಬೇಕಾದ ಉತ್ಕೃಷ್ಟವಾದ ತಂತ್ರ ಈ ಕಥೆಗೆ ಇದೆ. ಇಲ್ಲಿಯ ಪ್ರಮುಖ ಪಾತ್ರಗಳು : ಬಾಲನಾಗಮ್ಮ, ಮಾಯಲ ಫಕೀರು, ಬಾಲವರ‍್ಧಿರಾಜ, ತೆಲುಗರ ಮನಸ್ಸಿನಲ್ಲಿ ಅಚಲವಾದ ಮುದ್ರೆಯನ್ನು ಒತ್ತಿ ಈಗಲೂ ನಿಂತುಬಿಟ್ಟಿವೆ. ಬಾಲನಾಗಮ್ಮ ನಾಟಕವನ್ನು ಸುರಭಿನಾಟಕ ಸಮಾಜದವರು ಈಗಲೂ ಪ್ರದರ್ಶಿಸುವರು. ಬಾಲನಾಗಮ್ಮನ ಕಥೆಗೆ ವ್ಲಾದಿಮಿರ್ ಪ್ರಾತ್ ಪ್ರತಿಪಾದಿಸಿದ ಅದ್ಭುತ ಕಥಾನಿರ್ಮಾಣ ಚೆನ್ನಾಗಿ ಸರಿ ಹೊಂದುತ್ತದೆಂದು ವಿಶ್ಲೇಷಿಸಲಾಗಿದೆ. ಬಾಲನಾಗಮ್ಮನ ಕಥೆ ಜನಪ್ರಿಯ ಸಾಹತಿಯಕ್ಕೆ, ಅದ್ಭುತ ಕಥೆಯ ಪ್ರಕ್ರಿಯೆಗೆ ಉತ್ತಮ ಉದಾಹರಣೆಗೆ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ಬಾಲ ಬಸಪ್ಪಗಳ ಸಂಪ್ರದಾಯ ಸುಮಾರು ೧೬ನೇ ಶತಮಾನದಲ್ಲಿ ಕೊಟ್ಟೂರು ಗುರುಬಸವೇಶ್ವರನ (೧೫೬೦) ನಾಯಕತ್ವದಲ್ಲಿ ಈ ಚಳವಳಿ ನಡೆದಿದೆ. ಕಲ್ಯಾಣದ ಕ್ರಾಂತಿಯಾದ ಮೇಲೆ ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದಲ್ಲಿ ವಚನ ಪರಂಪರೆಯ ವಿಭಿನ್ನ ಧಾರೆಗಳು ಕಲೆಗಳಾಗಿ ಬೆಳೆದಿರುವುದನ್ನು, ಸಮುದಾಯಗಳು ಇವುಗಳಿಗೆ ನಡೆದುಕೊಳ್ಳುವುದನ್ನು, ಇತ್ತೀಚಿನ ಅಧ್ಯಯನದಲ್ಲಿ ಗುರುತಿಸಲಾಗಿದೆ. ಆದರೆ ಮಧ್ಯ ಕರ್ನಾಟಕದಲ್ಲಿ ಬಹುದೊಡ್ಡ ಸಾಂಸ್ಕೃತಿಕ ವಿದ್ಯಮಾನವಾಗಿ ಪಂಚಗಣಾಧೀಶ್ವರ ಚಳವಳಿ ಹುಟ್ಟಿಕೊಂಡಿದೆ. ಈ ಪರಂಪರೆ ತನ್ನ ಚಲನೆಗೆ ಮುಖ್ಯವಾಗಿ ಮೌಖಿಕ ಧಾರೆಗಳನ್ನು ಅವಲಂಬಿಸಿದೆ. ಆದರೆ ಕೊಟ್ಟೂರು ಗುರಬಸವೇಶ್ವರನನ್ನು ಕುರಿತು ಶಿಷ್ಟ ಕಾವ್ಯಗಳಾದ ಸಿದ್ಧನಂಜೇಶನ ಗುರು ಬಸವರಾಜ ಚಾರಿತ್ರ (೧೫೩೦), ಬಸವಲಿಂಗ ಕವಿಯ ಶ್ರೀ ಕೊಟ್ಟೂರು ಬಸವೇಶ್ವರ ಚಾರಿತ್ರ (೧೬೭೮), ಚೀಲಾಳ ಸ್ವಾಮಿಯ ಷಟ್ಸ್ಥಲ ಶಿವಾಯಣ (೧೭೦೦)ದಲ್ಲಿ ಕುರಿತ ಪ್ರಸ್ತಾಪವಿದೆ. ಇಷ್ಟೆಲ್ಲ ಚಾರಿತ್ರಿಕ ಆಧಾರಗಳು ಕೊಟ್ಟೂರೇಶ್ವರನನ್ನು ಕುರಿತು ಇದೆ. ಆದರೂ ೧೯ನೇ ಶತಮಾನದಲ್ಲಿ ವೀರಶೈವ ಸಾಂಸ್ಕೃತಿಕ ಅನನ್ಯತೆಗಳನ್ನು ಕಟ್ಟಿಕೊಳ್ಳುವಾಗ ಈ ಪರಂಪರೆಯನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಲಿಲ್ಲ. ಈ ಕಾರಣದಿಂದಲೇ ಅದು ಜನಪದ ಪರಂಪರೆಯಲ್ಲಿ ಬಹುದೊಡ್ಡ ಪರಂಪರೆಯಾಗಿ ಬೆಳೆಯಲು ಕಾರಣವಾಗಿದೆ. ಪಂಚಗಣಾಧೀಶ್ವರರು ಎಂಬುದು ಶುದ್ಧಾಂಗವಾಗಿ ಜನಪದ ಪರಿಕಲ್ಪನೆಯಲ್ಲ. ಪಂಚಾಚರ್ಯರಲ್ಲಿ ಕೇದಾರದ ಪಂಡಿತಾರಾಧ್ಯ, ಕಾಶಿಯ ವಿಶ್ವಾರಾಧ್ಯ ಇದೇ ಕಾಲದವರು ಎಂಬುದಕ್ಕೆ ಆಧಾರಗಳಿಲ್ಲವೋ ಹಾಗೇ ಇಲ್ಲಿಯೂ ಕೋಲಶಾಂತೇಶ, ಹರಪನಹಳ್ಳಿ ಕೆಂಪೇಶ ಈ ಕಾಲಕ್ಕೆ ಒಗ್ಗುವ ವ್ಯಕ್ತಿಗಳಾಗಿಲ್ಲ. ಶಿಷ್ಟ ಸಾಹಿತ್ಯ ಹೇಗೆ ಕಟ್ಟುವ ಪ್ರಯತ್ನ ಮಾಡಿತ್ತೋ ಹಾಗೇ ಜನಪದವು ಕಟ್ಟುವ ಕೆಲಸ ಮಾಡುತ್ತದೆ. ಕೊಟ್ಟೂರು ಗುರುಬಸವ, ಕೋಲಹಳ್ಳಿ ಮದ್ದಾನೇಶ, ನಾಯಕನ ಹಟ್ಟಿ ತಿಪ್ಪೇಶರು ಮಾತ್ರ ಚಾರಿತ್ರಿಕ ವ್ಯಕ್ತಿಗಳಾಗಿ ಕಾಣಿಸಿಕೊಳ್ಳುತ್ತಾರೆ. ಅರಸಿಕೆರೆ ಕೋಲಶಾಂತೇಶ, ಹರಪನಳ್ಳಿ ಕೆಂಪೇಶ ಇವರು ಇದೇ ಕಾಲದವರು ಎಂಬುದಕ್ಕೆ ಆಕರಗಳು ಇಲ್ಲ. ಇವರೆಲ್ಲ ಇವರ ಹೆಸರಿನ ಮುಂದೆ ಇರುವ ಊರುಗಳಲ್ಲಿ ಐಕ್ಯವಾಗಿದ್ದಾರೆ. ಎಲ್ಲಾ ಶರಣರು ಸಮಾಧಿಯಾಗಿರುವ ಸ್ಥಳಗಳಲ್ಲಿ ಜಾತ್ರೆ ಉತ್ಸವಗಳು ನಡೆಯುತ್ತವೆ. (ಹೆಚ್ಚಿನ ಮಾಹಿತಿಗಾಗಿ ಪಂಚಗಣಾಧೀಶ್ವರರು ಒಂದು ಅಧ್ಯಯನ, ಸತೀಶ ಪಾಟೀಲ, ಕನ್ನಡ ವಿಶ್ವವಿದ್ಯಾಲಯ, ಹಂಪಿ)

ಹೀಗೆ ಕೊಟ್ಟೂರು ಗುರುಬಸವೇಶ್ವರನ ನಾಯಕತ್ವದಲ್ಲಿ ನಡೆದ ಈ ವೀರಶೈವ ಶರಣ ಚಳವಳಿಯೊಳಗೆ ಒಂದು ಸಂಕರಶೀಲ ಸಂಗತಿಯೊಂದು ಸೇರಿಕೊಂಡಿದೆ. ಅದೇನೆಂದರೆ ಐದು ಮಂದಿ ಶರಣರಲ್ಲಿ ಒಬ್ಬನಾದ ಮದ್ದಾನೇಶ್ವರ ದೇವದಾಸಿಯಾಗಿದ್ದ ಬೇಡರ ಕನಕಮ್ಮನನ್ನು ಮದುವೆಯಾಗುತ್ತಾನೆ. ಇದರಿಂದ ಅವನು ಈ ಶಿಷ್ಟ ವೀರಶೈವದಿಂದ ಬಿಡುಗಡೆಗೊಂಡು ಜನಪದ ದೈವವಾಗುತ್ತಾನೆ. ಹೀಗೆ ಹೊರಗಾದ ವ್ಯಕ್ತಿಯನ್ನೆ ಕೇಂದ್ರವಾಗಿಸಿಕೊಂಡು ಆ ಸಮುದಾಯಗಳು ಈ ಪರಂಪರೆಯಲ್ಲಿ ಪ್ರವೇಶ ಪಡೆಯುತ್ತವೆ. ಬೇಡ ಸಮುದಾಯದವರು ಪಂಚಗಣಾಧೀಶ್ವರರಾದ ಇವರಿಗೆ ನಡೆದುಕೊಳ್ಳುತ್ತಾರೆ. ಹಾಗೂ ಅಸ್ಪೃಶ್ಯರಾದ ಬಾಲಬಸವ ಸಮುದಾಯದವರು ಈ ಸಾಂಸ್ಕೃತಿಕ ನಾಯಕರನ್ನು ತಮ್ಮ ಪೂರ್ವಿಕರೆಂದು ಕರೆದುಕೊಂಡು ಅವನ ಜೀವನ ವಿವರಗಳನ್ನು ಕತೆ ಕಟ್ಟಿ ಹಾಡುವುದರ ಮೂಲಕ ಒಂದು ಮೌಖಿಕ ಪರಂಪರೆಯನ್ನು ಬೆಳೆಸುತ್ತಾರೆ. ಇದರ ಪರಿಣಾಮವಾಗಿ ಹುಟ್ಟಿದ ಕಾವ್ಯಗಳಲ್ಲಿ ಗೋಣಿಬಸಪ್ಪನ ಕಾವ್ಯವೂ ಒಂದಾಗಿದೆ. ಗೋಣಿಬಸಪ್ಪನ ಕಾವ್ಯ ಪಂಗಣಾಧೀಶ್ವರರ ಎರಡನೇ ತಲೆಮಾರಿನ ಕತೆ. ಪಂಚಗಣಾಧೀಶ್ವರರಲ್ಲಿ ಒಬ್ಬನಾದ ಮದ್ದಾನೇಶ್ವರ, ಗೋಣಿಬಸವನ ತಂದೆ, ತಾಯಿ ಬೇಡರ ಕನಕಮ್ಮ ಇವರಿಬ್ಬರಿಗೆ ಹುಟ್ಟಿದವನೇ ಗೋಣಿಬಸವ. ಜಾತೀಯತೆ ಪ್ರಬಲವಾಗಿದ್ದ ಹದಿನೈದನೇ ಶತಮಾನದಲ್ಲಿ ಈ ರೀತಿಯ ಒಂದು ವಿದ್ಯಮಾನ ಮುಂದಿನ ವೀರಶೈವ ಪಠ್ಯಗಳಿಗೆ ತುಂಬ ಮುಜುಗರದ ಸಂತಿಯಾಗಿ ಕಾಡಿದೆ. ಅವರಿಗೆ ಹದಿನಾರನೇ ಶತಮಾನದ ವೀರಶೈವ ಸಂಘಟಕನಾದ ಕೊಟ್ಟೂರೇಶ್ವರ ಬೇಕು. ಆದರೆ, ಆ ಪಟ್ಟಿಯೊಳಗೆ ಈ ರೀತಿ ಕುಲಗೆಟ್ಟ ಮದ್ದಾನೇಶ್ವರ ಇದ್ದಾನೆ. ಶಿಷ್ಟ ವೀರಶೈವ ಕವಿಗಳಿಗೆ ಈ ಸಂಕರಶೀಲತೆಯನ್ನು ವಿರಚಿಸುವುದು. ಕಷ್ಟದ ಸಂಗತಿಯಾಗಿ ಶಿಷ್ಟ ಕಾವ್ಯಗಳಲ್ಲಿ ಈ ಪ್ರಸಂಗವನ್ನು ಕೈ ಬಿಟ್ಟಿದ್ದಾರೆ. ಆದ್ದರಿಂದ ಹದಿನಾರನೇ ಶತಮಾನದಲ್ಲಿ ಹುಟ್ಟಿದ ಈ ಬಹುದೊಡ್ಡ ಚಳವಳಿ ಮುನ್ನೆಲೆಗೆ ಬರಲೇ ಇಲ್ಲ. ಆದರೆ ಮೌಖಿಕ ಪರಂಪರೆ ಇದನ್ನೇ ಕೇಂದ್ರವಾಗಿಸಿಕೊಂಡಿದೆ. ಒಟ್ಟು ಈ ಪರಂಪರೆಯಲ್ಲಿ ಮೂರು ಕುಲಗಳ ಸೇರ್ಪಡೆಯಾಗಿರುವುದರಿಂದ ಒಂದೊಂದು ಸಮುದಾಯ ಒಂದೊಂದು ಅನನ್ಯತೆಯ ಮೂಲಕ ತನ್ನ ಪ್ರವೇಶವನ್ನು ಉಳಿಸಿಕೊಂಡಿದೆ. ಕನಕಮ್ಮ ಬೇಡರ ಸಮುದಾಯದಲ್ಲಿದ್ದ ದೇವದಾಸಿ ಪದ್ಧತಿಯ ಪ್ರತೀಕವಾಗಿ ಬರುತ್ತಾಳೆ. ದೇವದಾಸಿ ಪದ್ಧತಿಯನ್ನು ಆಚರಣೆಯಲ್ಲಿ ಇಟ್ಟುಕೊಂಡಿರುವ ಮಾದಿಗ ಕುಲದವರು ಈ ದೈವಕ್ಕೆ ಭಕ್ತರು. ಗೋಣಿಬಸವನ ತಂದೆ ಲಿಂಗಾಯಿತ, ತಾಯಿ ಬೇಡತಿ, ಹೆಂಡತಿ ಕುರುಬರವಳು. ಈ ಕಾರಣದಿಂದ ಕುರುಬರ ಸೇರ್ಪಡೆ. ಇಷ್ಟೆಲ್ಲ ಸಂಕಷ್ಟಗಳನ್ನು ನಿಭಾಯಿಸಿಕೊಂಡ ದೈವವಾದ ಗೋಣಿಬಸವನ ಜೀವನ ವಿವರವೇ ಗೋಣಿಬಸವನ ಕಾವ್ಯ.

ಬಾಲಬಸವ ಮೂಲತಃ ಮಾದಿಗ ಕುಲದವರು. ಬಸವಣ್ಣನ ದತ್ತು ಪುತ್ರರೆಂದು ಕರೆದುಕೊಳ್ಳುತ್ತಾರೆ. ಇವರು ಯಾವ ಕಾಲಘಟ್ಟದಲ್ಲಿ ವೀರಶೈವ ಧರ್ಮಕ್ಕೆ ಸೇರಿಕೊಂಡರು ಎಂಬುದು ತಿಳಿದು ಬಂದಿಲ್ಲ. ಕಲ್ಯಾಣದ ಕ್ರಾಂತಿಯ ಅನಂತರ ಅದರ ಪ್ರಭಾವಕ್ಕೆ ಒಳಗಾದ ಮಾದಿಗರ ಒಂದು ಕುಲ ತನ್ನ ಜೀವನ ಕ್ರಮದಲ್ಲಿ ವೀರಶೈವರನ್ನು ಅನುಸರಿಸಿಕೊಂಡು ತಾನೆ ಲಿಂಗಧಾರಣೆಯನ್ನು ಮಾಡಿಕೊಂಡು, ಮಾಂಸಾಹಾರವನ್ನು ತ್ಯಜಿಸಿ, ಮಾದಿಗರ ಮನೆಯಲ್ಲಿ ಉಣ್ಣುವುದನ್ನು ಬಿಟ್ಟು, ಹೆಣ್ಣನ್ನು ತಂದು ಅವಳನ್ನು ಲಿಂಗಾಯಿತೀಕರಿಸಿಕೊಂಡು ಮದುವೆ ಮಾಡಿಕೊಳ್ಳುವುದು. ಆ ಮೂಲಕ ಮಾದಿಗ ಕುಲದಿಂದ ಪ್ರತ್ಯೇಕವಾಗುವುದು. ವೃತ್ತಿಯಿಂದ ಇವರು ಕಾಲಜ್ಞಾನವನ್ನು ಸಾರುವ ಹಾಡುವ ಕುಲದವರು. ಆ ಮೂಲಕ ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದವರು. ಬಸವಪೂರ್ವದಲ್ಲೂ ಇದೇ ವೃತ್ತಿಯನ್ನು ಅನುಸರಿಸುತ್ತಿದ್ದರು ಎಂದು ಊಹೆ ಮಾಡಬಹುದು. ಬಸವಣ್ಣನ ಕಲ್ಯಾಣದ ಕ್ರಾಂತಿಯ ಬಳಿಕ ಇವರು ತಮ್ಮ ಕುಲ ವೃತ್ತಿಯನ್ನು ಉಳಿಸಿಕೊಳ್ಳಲು ಅನಿವಾರ್ಯವಾಗಿ ಜೀವನ ಕ್ರಮವನ್ನು ಬದಲಿಸಿಕೊಳ್ಳಬೇಕಾದಾಗ ಒತ್ತಡ ಬಂದಾಗ ವೀರಶೈವರಂತೆ ದೀಕ್ಷಿತರಾಗಿ ತಾವೇ ವೀರಶೈವೀಕರಣಗೊಂಡಿದ್ದಾರೆ. ಈ ತರಹದ ಒಂದು ಜೀವನ ಕ್ರಮಕ್ಕೆ ಈಡಾದಾಗ ಸಹಜವಾಗಿ ಮಾದಿಗ ಸಮುದಾಯದಿಂದ ಪ್ರತ್ಯೇಕೀಕರಣಗೊಂಡು ಅವರಿಗೆ ಗುರುಸ್ಥಾನದಲ್ಲಿದ್ದಾರೆ. ಕಾಲಜ್ಞಾನ ಸಾರುವ ವೃತ್ತಿ ಇದ್ದುದರಿಂದ ಲಿಮಗಾಯಿತರಿಂದಲೂ ಸಾಂಸ್ಕೃತಿಕ ಮನ್ನಣೆ ಪಡೆದು ಅವರಿಂದ ಭಿಕ್ಷೆಗೆ ಅರ್ಹರಾಗಿದ್ದಾರೆ. ಈ ಬಗೆಯ ಬಾಹ್ಯಬದಲಾವಣೆ ಇವರು ವೃತ್ತಿಗೊಂದು ಚಾಲನೆಯನ್ನು ತಂದುಕೊಟ್ಟಿದ್ದರೆ, ಅವರ ವೈವಾಹಿಕ ಸಂಬಂದಗಳಲ್ಲಿ ಬಹುದೊಡ್ಡ ಇಕ್ಕಟ್ಟನ್ನು ಉಂಟುಮಾಡಿದೆ. ಅದೇನೆಂದರೆ ಇವರು ವೀರಶೈವರಾಗಿ ಪರಿವರ್ತನೆಗೊಂಡಿದ್ದರೂ ಇವರಿಗೆ ವೀರಶೈವರಾರು ಹೆಣ್ಣು ಕೊಡುವುದಿಲ್ಲ. ಇಲ್ಲಿ ಮಾದಿಗ ಸಮುದಾಯದವರು ಇವರು ಗುರುಸ್ಥಾನದಲ್ಲಿರುವುದರಿಂದ ಅವರು ಇವರೊಟ್ಟಿಗೆ ವೈವಾಹಿಕ ಸಂಬಂಧಗಳನ್ನು ಮಾಡಲು ಹೆದರಿದ್ದಾರೆ. ಇಂಥ ಇಕ್ಕಟ್ಟಿನಲ್ಲಿ ಕೊನೆಗೆ ಬಾಲಬಸಪ್ಪಗಳು ಒಂದು ರಾಜಿ ಸೂತ್ರಕ್ಕೆ ಬರಬೇಕಾಯಿತು. ಅದೇನೆಂದರೆ ಮಾದಿಗರ ಮನೆಯಿಂದ ಹೆಣ್ಣು ಪಡೆದು ಅವಳನ್ನು ವೀರಶೈವೀಕರಣಗೊಳಿಸಿಕೊಂಡು ಗಂಡು ಮಕ್ಕಳಿಗೆ ಮದುವೆ ಮಾಡಿಕೊಂಡರು. ಆದರೆ ಇವರ ಹೆಣ್ಣು ಮಕ್ಕಳನ್ನು ಮಾದಿಗರು ಮದುವೆ ಮಾಡಿಕೊಂಡು ಮಾದಿಗೀಕರಣಗೊಳಿಸುವ ಅಗತ್ಯ ಬರಲಿಲ್ಲ. ಆದ್ದರಿಂದ ಬಾಲಬಸಪ್ಪಗಳಿಗೆ ಹುಟ್ಟಿದ ಹೆಣ್ಣುಸಂತಾನವೆಲ್ಲ, ದೇವದಾಸಿಯಾಗಿರುವುದು ಒಂದು ಪದ್ಧತಿಯಂತೆ ಬೆಳೆದು ಬಂದಿದೆ. ಇವರನ್ನು ಬಾಲ ಬಸವಿಯರೆಂದು ಕರೆಯುತ್ತಾರೆ. ದೇವದಾಸಿ ಪದ್ಧತಿ ಕರ್ನಾಟಕದಾದ್ಯಂತ ಚಾಲ್ತಿಯಲ್ಲಿದ್ದ ಚಾಲ್ತಿಯಲ್ಲಿದ್ದ ಪುರಾತನ ಪದ್ಧತಿ, ಅದರಲ್ಲೂ ಮುಖ್ಯವಾಗಿ ಬೇಡರಲ್ಲಿ, ಹೊಲೆಮಾದಿಗರಲ್ಲಿ ಹೆಚ್ಚು. ಬಾಲಬಸಪ್ಪಗಳಿಗೆ ಈ ಪ್ರಾಚೀನ ದ್ಧತಿಗೆ ಮರಳುವುದು ಅನಿವಾರ್ಯವಾಗಿದೆ.

ಕಾಲಜ್ಞಾನ ಸಾರುವುದು ಮತ್ತು ಮಧ್ಯಕಾಲೀನ ಶರಣರ ಜೀವನವನ್ನು, ಮುಖ್ಯ ಘಟನೆಗಳನ್ನು ಕಥನವಾಗಿ ಕಟ್ಟಿ ಹಾಡುವುದು (ಊರಾಡುವುದು) ಇವರ ಕಸುಬಾಗಿದೆ. ತಮ್ಮ ಕುಲದಲ್ಲಿ ನಡೆದ ಈ ರೀತಿಯ ಒಂದು ವಿಘಟನೆಯಿಂದ ತೀರ ಅಲ್ಪಸಂಖ್ಯಾತರಾಗಿರುವ ಇವರು ಅಸಂಘಟಿತರಾಗಿದ್ದಾರೆ. ಈ ಸಂಪ್ರದಾಯವನ್ನು ಬಿಡುವ ಬಗ್ಗೆಯೂ ಕೆಲವು ಅಕ್ಷರಸ್ಥರು ಅಸಕ್ತರಾಗಿದ್ದಾರೆ. ಈ ಕತೆಯನ್ನು ಹಾಡಿರುವ ತುಮನೆಪ್ಪನ ಮಗ ಬಾಲಬಸವ ದೀಕ್ಷೆ ಪಡೆದಿಲ್ಲ. ಅದಕ್ಕೆ ಮುಖ್ಯ ಕಾರಣ ಅವನಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಅವರನ್ನು ಬಸವಿಯಾಗಿ ಬೆಳೆಸಲು ವೈಯಕ್ತಿಕವಾಗಿ ಅವನಿಗೆ ಇಷ್ಟವಿಲ್ಲ. ಆದ್ದರಿಂದ ಅವನು ಮಾದೀಗ ಸಮುದಾಯದಲ್ಲೇ ಉಳಿದುಕೊಳ್ಳಲು ಅಸಕ್ತನಾಗಿದ್ದಾನೆ. ಇದೊಂದು ಧರ್ಮ ಸಂಕಟದ ಸಂಗತಿ,ಪುರಾತನ ಕಾಲದಿಂದಲೂ ಭಿಕ್ಷೆ ಮತ್ತು ಊರಾಡುವ ಕ್ರಮದಿಂದ ಬಾಲ ಬಸವರು ಸಂಪ್ರದಾಯಕ್ಕೆ ಒಗ್ಗಿ ಹೋಗಿದ್ದಾರೆ. ಇವರಿಗೆ ತಕ್ಷಣಕ್ಕೆ ಮತ್ತೊಂದು ಜೀವನ ವಿಧಾನಕ್ಕೆ ಒಗ್ಗಿಕೊಳ್ಳುಉದು ಕಷ್ಟವಾಗಿದೆ. ಕೂಲಿ ಮತ್ತು ದುಡಿಮೆ ಇವರಿಗೆ ಕಷ್ಟದ ಕೆಲಸ. ವರ್ಷಕ್ಕೆ ಒಂದು ಬಾರಿ ಸುಗ್ಗಿಯ ಕಾಲದಲ್ಲಿ ಊರಾಡಿಕೊಂಡು ಬಂದರೆ (ಲಿಂಗಾಯಿತರು, ಕುರುಬರು, ಬೇಡರು ಮತ್ತು ಮಾದಿಗರು ಇವರಿಗೆ ಭಿಕಷೆ ಕೊಡುತ್ತಾರೆ) ಅದು ಅವರ ವರ್ಷದ ಊಟದ ಸಮಸ್ಯೆಯನ್ನು ಪರಿಹಾರ ಮಾಡುತ್ತಿತ್ತು. ಇದಕ್ಕಿಂತಲೂ ಮುಖ್ಯವಾದ ಸಾಂಸ್ಕೃತಿಕ ಜೀವನ ವಿಧಾನವೊಂದು ರೂಪಗೊಂಡಿದೆ. ಅದನ್ನು ತುಂಬಿಕೊಳ್ಳುವುದು ಹೇಗೆ? ಆಧುನಿಕ ಜೀವನ ವಿಧಾನದಲ್ಲಿ ಇದನ್ನು ಹೇಗೋ ತುಂಬಿಕೊಳ್ಳಬಹುದು. ಆದರೆ ಅವರಲ್ಲಿ ಅಕ್ಷರಸ್ಥರ ಸಂಖ್ಯೆ ಬೆರಳೆಣಿಕೆಯಷ್ಟು ಮಾತ್ರ ಇದೆ. ಜೀವನ ನಿರ್ವಹಣೆಗೆ ಅವರಿಗೆ ಈ ಪದ್ಧತಿಯಿಂದ ಕಷ್ಟವೇ ಉಂಟಾಗಿಲ್ಲ. ಭಕ್ತರು ಇವರನ್ನು ತುಂಬ ಭಯ ಭಕ್ತಿಯಿಂದ ನಡೆಸಿಕೊಂಡಿದ್ದಾರೆ. ಕೆರೆಕೊಂಡಾಪುರದಲ್ಲಿ ಇರುವ ಒಂದು ಕುಟುಂಬಲದಲ್ಲಿ ಬಾಲಬಸಪ್ಪ ಧನಂಜಯ ಎಂಬವರಿಗೆ ಶಾಸ್ತ್ರೀಗಳೆಂದೇ ಹಸರಿದೆ. ಊರಿನ ಎಲ್ಲಾ ಜಾತಿಯವರು ಇವರಿಗೆ ಶಾಸ್ತ್ರ ಕೇಳುವುದು, ಲಗ್ನ ಕಟ್ಟಿಸುವುದು ಮಾಡಿಸುತ್ತಾರೆ. ಅಷ್ಟು ಸಾಂಸ್ಕೃತಿಕ ಮನ್ನಣೆ ಇವರಿಗೆ ಇದೆ. ತುಮನೆಪ್ಪ ಹಾಡುವ ಗೋಣಿಬಸವನ ಕತೆ ಈ ಕುಲದ ಎಲ್ಲ ವೈರುಧ್ಯಗಳನ್ನು ಒಳಗೊಂಡಿದೆ.

ಇವರು ಉತ್ತರ ಕರ್ನಾಟಕದ ಬಳ್ಳಾರಿ, ದಾವಣಗೆರೆ, ಹಾವೇರಿ, ಗದಗ, ಧಾರವಾಡ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಇವರ ಪೂರ್ವದ ಊರುಗಳು ಕನಕಗಿರಿ, ಚಿತ್ರದುರ್ಗ, ಆಂಧ್ರಪ್ರದೇಶದ ರಾಯಲ ಸೀಮೆಯಾಗಿದೆ. ಮೊಳಕಾಲ್ಮೂರು ತಾಲೂಕು ಕೊಂಡಾಪುರದಲ್ಲಿ ಎಂಟು ಮನೆಗಳಿವೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕು ಹೀಲದ ಹಳ್ಳಿಯಲ್ಲಿ ಹದಿನೆಂಟು ಮನೆಗಳಿವೆ. ಗದಗ ಜಿಲ್ಲೆ ಹರಲಾಪುರದಲ್ಲಿ ಇಪ್ಪತ್ತೈದು ಮನೆಗಳಿವೆ. ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕು ಭೈರದೇವರ ಗುಡ್ಡದಲ್ಲಿ ಆರು ಮನೆಗಳಿವೆ. ಶಿವಮೊಗ್ಗ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಗಂಜನಳ್ಳಿಯಲ್ಲಿ ಒಂದು ಮನೆತನವಿದೆ. ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನ ದೊಗ್ಗಳ್ಳಿಯಲ್ಲಿ ಎರಡು ಮನೆತನಗಳು ಇವೆ. ಹರಲಾಪುರದಲ್ಲಿ ಇವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹೀಲದಳ್ಳಿಯಲ್ಲಿ ಹದಿನೆಂಟು ಮನೆಗಳಿವೆ. ಕಂಬದಮ್ಮ ಇವರ ಕುಲದೈವ. ಈ ದೇವತೆಗೆ ಪ್ರತಿ ಅಮಾವಾಸ್ಯೆಗೆ ಮೂರು ದಿನ ಮೊದಲು ಜಾತ್ರೆಯಾಗುತ್ತದೆ. ತಮ್ಮ ಕುಲದೇವತೆಗೆ ಸಸ್ಯಾಹಾರವನ್ನು ಮಾತ್ರ ಎಡೆ ಹಾಕುತ್ತಾರೆ. ಆದರೆ ತಾವು ಮಾತ್ರ ಮಾಂಸಾಹಾರ ಸೇವನೆ ಮಾಡುವುದಾಗಿ ತಿಳಿಸಿದ್ದಾರೆ. ಇದೊಂದು ಊರನ್ನು ಬಿಟ್ಟರೆ ಉಳಿದ ಎಲ್ಲ ಊರಿನಲ್ಲಿರುವ ಬಾಲಬಸಪ್ಪಗಳು ಸಸ್ಯಾಹಾರಿಗಳು.

ಗೋಣಿ ಬಸಪ್ಪನ ಕತೆಯಲ್ಲಿ ಬಾಲ ಬಸಪ್ಪನ ಪಾತ್ರ ತುಂಬ ಕಡಿಮೆ. ಚಿಗಟೇರಿ ಶಿವನಯ್ಯ ಮಾಟದ ಅಂಗಿ ಹೊಲಿಸಿ ಅದನ್ನು ಗೋಣಿ ಬಸಪ್ಪನಿಗೆ ತೊಡಿಸಿ ಸಾಯಿಸಿ ಬಿಡುತ್ತಾನೆ. ಆಗ ಸನ್ಯಾಸಿ ತೋಟದಲ್ಲಿ ವಾಸವಾಗಿದ್ದ ಬಾಲ ಬಸವನಿಗೆ ಇದು ಗೋಚರವಾಗಿ ಅವನು ಕೂಲಹಳ್ಳಿ ಮಠಕ್ಕೆ ಬಂದು ಹಾವಿನ ರೂಪ ತಾಳಿ (ಏಕೆ ಹಾವಿನ ರೂಪವೆಂದರೆ ಅದು ಲಿಂಗಾಯಿತರ ಮಠ ಮಾದಿಗರಿಗೆ ಪ್ರವೇಶ ಇಲ್ಲ) ಅವನ ಹೆಬ್ಬೆಟ್ಟನ್ನು ಕಚ್ಚಿ ವಿಷ ತೆಗೆದುಬಿಡುತ್ತಾನೆ. ಈ ಉಪಕಾರಕ್ಕೆ ಗೋಣಿ ಬಸಪ್ಪ ನಿನಗೆ ಯಾವ ವರ ಬೇಕು ಎನ್ನುತ್ತಾನೆ. ಬಾಲಬಸಪ್ಪ ಎರಡು ವರ ಕೇಳುತ್ತಾನೆ. ಒಂದು : ಕೂಲಳ್ಳಿ ಜಾತ್ರೆಗೆ ಬಂದಾಗ ನಿನ್ನ ಮಠದ ಮುಂದೆ ಇರುವ ಜಂಬಯ್ಯನ ಗುಡಿಯ ಮುಂದೆ ಬಾಲ ಬಸಪ್ಪಗಳು ನೆರೆಯುತ್ತಾರೆ. ಅವರಿಗೆ ಅನ್ನ ಬುತ್ತಿ ಎರೆಯಬೇಕು, ಮೂರು ವರ್ಷಕ್ಕೆ ಒಮ್ಮೆ ಒಂದು ಬಾಲದಾನ (ಹಸು ಕೊಡಬೇಕು). ಜಾತ್ರೆಯಲ್ಲಿ ಬಂದ ಹಾಲುಮಾಲು (ಆದಾಯ)ನಲ್ಲಿ ನಾಕಾಣಿಭಾಗ ಕೊಡಬೇಕು. ನೀನು ಊಟಕ್ಕೆ ಕುಂತಾಗ ನನ್ನ ಸಬ್ದ ನಿನ್ನ ಕಿವಿಯಾಗೆ ಬಿದ್ದರೆ, ತುತ್ತ ಎತ್ತಬಾರದು ನನಗೆ ಮೊದಲು ನೀಡಿ, ಹಿಂದುಗಡೆ ನೀನು ಊಟಮಾಡಬೇಕು ಮತ್ತು ಹರಪನಹಳ್ಳಿ ಸನ್ಯಾಸಿ ತೋಟ ಬಿಟ್ಟು ಬಂದ್ವೀನಿ, ನಿನ್ನ ಮಠದಾಗ ಎಡಗಡೆ ಒಂದು ತೊಲೆಯಾಗಿ ಇರುತ್ತೇನೆ. ನರ ಮಾನವರ ಕಣ್ಣಿಗೆ ಬೀಳದಂಗೆ ಒಂದಿ ಇಡಿಗ್ವಾಡ ಕಟ್ಟಿಸಿಕೊಡು. ಎರಡು : ಮದ್ದಾನಸ್ವಾಮಿ ನಿನ್ನ ಕಿವಿಯಲ್ಲಿ ಧರಿಸಿರುವ ಕರ್ಣಕುಂಡಲಿನಿಗಳನ್ನು ಕೊಡು ಎನ್ನುತ್ತಾನೆ. ಬಾಲಬಸಪ್ಪನಿಗೆ ಕಣ್ಣ ಕುಂಡಲಿನಿಗಳನ್ನು ಕೊಟ್ಟು ಇದನ್ನು ಧರಿಸಿಕೊಂಡು ನೀನು ನುಡಿದದ್ದೆಲ್ಲ ಸತ್ಯವಾಗುತ್ತದೆ ಎನ್ನುತ್ತಾನೆ. ಇದರ ಶಕ್ತಿ ಮದ್ಯಾನದವರೆಗೆ ಮಾತ್ರ ಇರುತ್ತದೆ. ಆದ್ದರಿಂದ ಬಾಲ ಬಸಪ್ಪಗಳು ಮದ್ಯಾನದ ಮೇಲೆ ಊರಾಡುವುದಿಲ್ಲ. ಎರಡನೇ ವರವನ್ನು ತುಮನೆಪ್ಪ ಕತೆಯಲ್ಲಿ ಹಾಡಲಿಲ್ಲ, ಮೌಖಿಕವಾಗಿ ಹೇಳಿದ. ಇಷ್ಟೇ ಕತೆಯ ವಿವರದಲ್ಲಿ ಅಸ್ಪೃಶ್ಯತೆ, ಹಸಿವು, ಸಾಂಸ್ಕೃತಿಕ ಗುರುತಿನ ಹಕ್ಕೊತ್ತಾಯಗಳು ಎದ್ದುಕಾಣುತ್ತವೆ. ಕಾವ್ಯದಲ್ಲಿ ಈ ಬಗೆಯ ಒಂದು ಉಯಿಲು (ವಿಲ್) ಇದ್ದರೂ ಪ್ರಸ್ತುತ ಕೂಲಳ್ಳಿ ಜಾತ್ರೆಯಲ್ಲಿ ಇದಾವುದೂ ನಡೆಯುವುದಿಲ್ಲ. ಗೋಣಿ ಬಸಪ್ಪನ ಜೀವನವನ್ನು ಕುರಿತಂತೆ ಇರುವ ಸುದೀರ್ಘ ಕಥಾನಕ ಬಾಲಬಸಪ್ಪನನ್ನು ಕುರಿತು ಇಲ್ಲ. ಸೋಗಿಯ ಹರಿಜನ ಕಾಲೋನಿಯಲ್ಲಿ ಬಾಲ ಬಸಪ್ಪನ ಸಮಾಧಿಯಿದೆ ಎನ್ನುತ್ತಾರೆ. ಆದರೆ ಜಾತ್ರೆ ಇಲ್ಲ, ಬಾಲ ಬಸಪ್ಪಗಳಿಗೆ ಗೋಣಿಬಸಪ್ಪನು ದೈವವಾಗಿರುವುದಕ್ಕೆ ದೇವದಾಸಿ ಪದಧತಿ ಎರಡು ಪರಂಪರೆಯಲ್ಲಿರುವುದೇ ಕಾರಣವಾಗಿರಬಹುದು.

ವಿ.ಐ.

 

ಬಾಲೆಸಾಂತು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬಹುಸಮುದಾಯಗಳ ಬಹುಸಂಸ್ಕೃತಿಯಲ್ಲಿ ಕಾಣಬರುವ ಆಟಿಕಳೆಂಜ, ಜೋಗಿ ಪುರುಷ, ಮಾದಿರ ಕುಣಿತ, ಪಿಲಿಪಂಜಿ ಕುಣಿತ, ಸಿದ್ಧವೇಷಗಳಂಥ ಜನಪದ ಕುಣಿತಗಳಂತೆಯೇ ಮರಾಟಿ -ನಾಯ್ಕರ ಬಾಲೆಸಾಂತು ಕುಣಿತವೂ ಒಂದು. ಒಂದು ಕಾಲದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಪ್ರಚಲಿತದಲ್ಲಿದ್ದ ಬಾಲೆಸಾಂತು ಕುಣಿತ ಇಂದು ಸಂಪೂರ್ಣ ಕಣ್ಮರೆಯಾಗಿದೆ. ಹದಿನೈದು ವರ್ಷಗಳ ಹಿಂದೆ ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ, ಅಡ್ಯನಡ್ಯ ಪರಿಸರದಲ್ಲಿ ಮರಾಟಿ-ನಾಯ್ಕರು ಇತರೆ ಸಮುದಾಯದವರೊಂದಿಗೆ ಸೇರಿ ಆಚರಿಸಿರುವುದು ವರದಿಯಾಗಿದೆ.

ಬಾಲೆಸಾಂತು ಕುಣಿತದ ಹಿನ್ನೆಲೆಯಾಗಿ ಜನಪದ ಕತೆಯೊಂದು ಪ್ರಚಲಿತದಲ್ಲಿದೆ. ಬಾಲಮ್ಮ ಎಂಬ ಮರಾಟಿ-ನಾಯ್ಕ ಸಮುದಾಯದ ಅನಾಥ ಹುಡುಗಿಯೊಬ್ಬಳಿಗೆ ಕನಸಿನಲ್ಲಿ ಶೃಂಗೇರಿಯ ಶ್ರೀಶಾರದಾಂಬೆಯು ಕಾಣಿಸಿಕೊಂಡು ಬದುಕಿನ ದಾರಿ ತೋರಿಸಿ ಹರಸಿದಳು. ಬಾಲಮ್ಮ ಶೃಂಗೇರಿಗೆ ಬಂದು ಶ್ರೀಶಾರದಾಂಬೆಯ ದರ್ಶನಮಾಡಿ ಗುರುಗಳನ್ನು ಕಂಡು ಅವರ ಅಪ್ಪಣೆಯಂತೆ ಘಟ್ಟದ ಮೆಲೆ ಬಂದು ಓರ್ವನನ್ನು ಮದುವೆಯಾಗಿ ಸುಖದಿಂದಿದ್ದಳು. ಸುಖ ಸಂಸಾರದ ಗುಂಗಿನಲ್ಲಿ ಪ್ರತಿವರ್ಷ ಮಾಯಿ (ಫೆಬ್ರವರಿ) ತಿಂಗಳ ಹುಣ್ಣಿಮೆಯಂದು ಶೃಂಗೇರಿಗೆ ಬರುವೆನೆಂಬ ಕೊಟ್ಟ ಮಾತನ್ನು ಮರೆಯುತ್ತಾಳೆ. ಅದನ್ನು ನೆನಪಿಸುವುದಕ್ಕೋಸ್ಕರ ಶೃಂಗೇರಿಯ ಗುರುಗಳು ಇಬ್ಬರು ಸನ್ಯಾಸಿಗಳನ್ನು ಬಾಲಮ್ಮನ ಮನೆಗೆ ಕಳುಹಿಸುತ್ತಾರೆ. ‘ಶೃಂಗೇರಿಯಿಂದ ಭಿಕ್ಷೆಗಾಗಿ ಬಂದಿದ್ದೇವೆ’ ಎಂದು ಹೇಳಿದರೂ, ಬಾಲಮ್ಮ ಅವರನ್ನು ತನ್ನ ಮನೆಯ ಕೆಲಸಕ್ಕೆ ನೇಮಿಸಿಕೊಳ್ಳುತ್ತಾಳೆ. ಶೃಂಗೇರಿಯ ಗುರಗಳು ಕೊರಗ ದಂಪತಿಯರನ್ನು, ಪುರೋಹಿತರನ್ನು, ಕೋತಿ ಕುಣಿಸುವವರನ್ನು, ಓಲೆಕಾರರನ್ನು ಹಾಗೂ ಭೂತದ ದರ್ಶನ ಪಾತ್ರಿಯವರನ್ನು ಕಳುಹಿಸಿದಾಗಲೆಲ್ಲ ಬಾಲಮ್ಮ ತನ್ನ ಮನೆ, ತೋಟದ ಕೆಲಸಕ್ಕೆ ನೇಮಿಸಿಕೊಳ್ಳುತ್ತಾಳೆ. ಇದನ್ನರಿತ ಗುರುಗಳು ಕೋಪಗೊಂಡು ಮಾಯಿ ಹುಣ್ಣಿಮೆಯಂದು ವೇಷತೊಟ್ಟು ಬಾಲಮ್ಮನ ಮನೆಗೆ ಬರುತ್ತಾರೆ. ಮಾರುವೇಷದಲ್ಲಿದ್ದ ಗುರುಗಳನ್ನು ಕಂಡು ತನ್ನ ತಪ್ಪಿನ ಅರಿವಾಯಿತು. ಬಾಲಮ್ಮ ತನ್ನ ತಪ್ಪನ್ನು ಮನ್ನಿಸಬೇಕೆಂದು ಪ್ರಾರ್ಥಿಸುತ್ತಾಳೆ. ಕೋಪೋದ್ರಿಕ್ತ ಗುರುಗಳು ‘ನಿನ್ನನ್ನು ಮಾಯ ಮಾಡುತ್ತೇನೆಂದು’ ಹೇಳುತ್ತಾರೆ. ಮಾಯ ಮಾಡಿದರೂ ನನ್ನ ಹೆಸರು ಶಾಶ್ವತವಾಗಿರುವಂತೆ ಮಾಡಲು ಕೋರುತ್ತಾಳೆ. ‘ಬಾಲೆಸಾಂತು ಎಂಬ ಹೆಸರಲ್ಲಿ ಮಾಯಾವಿಯಾಗಿರು. ನಾನು ಯಾವ ರೀತಿ ವೇಷ ಹಾಕಿದೆನೋ ಅದೇ ರೀತಿ ಮಾಯಿ ತಿಂಗಳಲ್ಲಿ ವೇಷತೊಟ್ಟು ಮನೆಮನೆಗೆ ಹೋಗಿ ಭಿಕ್ಷೆ ಬೇಡುವ ಮೂಲಕ ಶ್ರೀಶಾರದಾಂಬೆಯನ್ನು ಆರಾಧಿಸಿದರೆ ಕಷ್ಟನಷ್ಟಗಳು, ಊರಿನ ಅನಿಷ್ಟಗಳು ದೂರವಾಗಿ ಸಮೃದ್ಧಿಯಾಗುವುದೆಂದು’ ಹೇಳಿ ಗುರುಗಳು ಬಾಲಮ್ಮಳನ್ನು ಅದೃಶ್ಯ ಮಾಡುತ್ತಾರೆ. ಬಾಲಮ್ಮನನ್ನು ಎಚ್ಚರಿಸಲು ಬಂದಂಥ ಎಲ್ಲಾ ವರ್ಗದವರೂ ವೇಷಗಾರರೂ ಕುಣಿತದಲ್ಲಿ ಸಂಕೇತಿಸಲ್ಪಡುತ್ತಾರೆ.

ಫೆಬ್ರವರಿ (ಮಾಯಿ) ತಿಂಗಳಿನ ಚತುರ್ಥಿಯಂದು ಎಲ್ಲರೂ ಸೇರಿ ಗೊತ್ತುಪಡಿಸಿದ ಸ್ಥಳದಲ್ಲಿ ಕಾಸರಕನ ಮರದ ಬುಡದಲ್ಲಿ ಕಲ್ಲೊಂದನ್ನು ಪ್ರತಿಷ್ಠಾಪಿಸಿ ಶೃಂಗೇರಿ ಶಾರದಾಂಬೆಯ ಹೆಸರಲ್ಲಿ ಪ್ರಾರ್ಥನೆ ಮಾಡುತ್ತಾರೆ. ಸ್ಥಾಪಿತ ಕಲ್ಲಿಗೆ ಮೂರು ಬಾರಿ ಪ್ರದಕ್ಷಣೆ ಹಾಕಿ ಮರಾಠಿ ಭಾಷೆಯಲ್ಲಿಯ ಹಾಡನ್ನು ಹಾಡುತ್ತಾ ಮನೆಮನೆಗೆ ಹೊರಡುತ್ತಾರೆ. ತಂಡದ ನಾಯಕ

ಶೃಂಗೇರಿಚೆ ಶಿಷ್ಯರಮಿ
ಬಾಲ್‌ಬಾಲ್ಯೊ ಬಾಲೆಸಾಂತು
ಕಾಟ್‌ಮಠೊ ಜೋಗಿರಮಿ
ಬಾಲ್‌ಬಾಲ್ಕೊ ಬಾಲೆಸಾಂತು

ಎಂದು ಹಾಡಿದಾಗ ಸಂಗಡಿಗರು ‘ಬಾಲ್‌ಬಾಲ್ಯೊ ಬಾಲೆಸಾಂತು’ ಎಂಬ ಸೊಲ್ಲನ್ನು ಹಾಡುತ್ತಾ ಕುಣಿಯುತಾರೆ. ಶ್ರೀಶಾರದಾಂಬೆಯ ಪ್ರಭಾವಳಿಯನ್ನು ಮನೆಯ ತುಳಸಿ ಕಟ್ಟೆಯ ಎದುರಿಗಿಟ್ಟು ಪೂಜಾರಿ ಪೂಜೆ ಆರಂಭಿಸುತ್ತಾನೆ. ಇತರೆ ವೇಷಗಾರರು ತಮ್ಮ ಪಾತ್ರಕ್ಕೆ ತಕ್ಕಂತೆ ಮನೋರಂಜನೆಯನ್ನು ಪ್ರದರ್ಶಿಸುತ್ತಾರೆ. ಪೂಜಾರಿ ಮಂಗಳಾರತಿ ಮಾಡಿ ಪ್ರಸಾದ ವಿತರಿಸುತ್ತಾನೆ. ಹಾಡು, ಕುಣಿತ, ವಿನೋದಗಳನ್ನು ಮನೆ ಮಂದಿಯೆಲ್ಲ ನೋಡಿ ಸಂತಸದಿಂದ ಅಕ್ಕಿ, ಬತ್ತ, ಅಡಿಕೆ, ತೆಂಗಿನಕಾಯಿ, ಹಣ ಇತ್ಯಾದಿಗಳನ್ನು ಭಿಕ್ಷೆಯಾಗಿ ನೀಡುತ್ತಾರೆ. ಹೀಗೆ ಸಂಗ್ರಹಿಸಿದ ದವಸ-ಧಾನ್ಯಗಳನ್ನು ನಿರ್ದಿಷ್ಟಪಡಿಸಿದ ಮನೆಯಲ್ಲಿಟ್ಟು ಪ್ರತಿಷ್ಠಾಪಿಸಿದ ಕಲ್ಲಿನ ಹತ್ತಿರ ಬಂದು ತೆಂಗಿನಕಾಯಿ ಒಡೆದು ವೇಷ ಕಳಚುತ್ತಾರೆ. ಇದೇ ರೀತಿ ಏಳು, ಒಂಬತ್ತು ಅಥವಾ ಹನ್ನೊಂದು ದಿನಗಳವರೆಗೆ ನಡೆಯುತ್ತದೆ.

ಹುಣ್ಣಿಮೆಯ ದಿನದಂದು ಸಂಗ್ರಹಿಸಿದ ದವಸ-ಧಾನ್ಯಗಳನ್ನೆಲ್ಲ ಒಟ್ಟಾಗಿಸುತ್ತಾರೆ. ಊರಿನ ಮನೆ-ಮನೆಯವರು ಅಕ್ಕಿರೊಟ್ಟಿ ಮಾಡಿ ತರತ್ತಾರೆ. ಸೂರ್ಯಾಸ್ತವಾದ ಮೇಲೆ ಊರವರೆಲ್ಲದ ಸಮಕ್ಷಮದಲ್ಲಿ ಪೂಜಾಕಾರ್ಯ ಆರಂಭಗೊಳ್ಳುತ್ತದೆ. ಶ್ರೀಶಾರದಾಂಬೆಯ ಹೆಸರಲ್ಲಿ ನಲುವತ್ತೆಂಟು ಎಡೆಗಳನ್ನು ಹಾಕುತ್ತಾರೆ. ಹೋಮ ಮಾಡಿ, ವೇಷಗಾರರೆಲ್ಲ ಎಡೆ-ಹೋಮ ಕುಂಡಕ್ಕೆ ಮೂರು ಬಾರಿ ಪ್ರದಕ್ಷಿಣಿ ಹಾಕುತ್ತಾರೆ. ಅಂತಿಮವಾಗಿ ಸ್ಥಾಪಿಸಿದ ಕಲ್ಲನ್ನು ತೆಗೆದು ಊರಿನ ಗಡಿಯಲ್ಲಿರುವ ಕಾಸರಕನ ಮರದ ಬುಡಕ್ಕೆ ವರ್ಗಾಯಿಸುತ್ತಾರೆ. ವೇಷಗಾರರು ವೇಷ ಕಳಚಿ ಹತ್ತಿರದ ಹೊಳೆಯಲ್ಲಿ ಸ್ನಾನ ಮಾಡಿ ರಾಶಿ ಹಾಕಿದ ಕೋಲ್‌ತ್ರಿ (ದೀವಟಿಗೆ)ಗಳನ್ನು ಹಾರಿ ಬರುತ್ತಾರೆ. ಪ್ರಸಾದ ವಿತರಣೆಯೊಂದಿಗೆ ಬಾಲೆಸಾಂತು ಉತ್ಸವ ಕೊನೆಗೊಳ್ಳುತ್ತದೆ.

ಅದೃಶ್ಯ ಅಥವಾ ಮಾಯ ಮಾಡುವ ಪ್ರಕ್ರಿಯೆಗಳು ನಮ್ಮ ಬಹುತೇಕ ಜನಪದ ಕತೆ, ಕಾವ್ಯಗಳಲ್ಲಿ ಕಾಣಬಹುದು. ತುಳು ಸಂಸ್ಕೃತಿಯಲ್ಲಿ ಇದು ಪ್ರಧಾನವಾಗಿ ಕಂಡುಬರುತ್ತದೆ. ಜಾತಿ-ಜಾತಿಗಳ ಮಧ್ಯೆ, ಧರ್ಮ-ಧರ್ಮಗಳ ಮಧ್ಯೆ ಸಂಘರ್ಷ, ವೈಷಮ್ಯ ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಸಹೋದರತ್ವ, ಭಾವೈಕ್ಯತೆಯನ್ನು ಬೆಳೆಸುವ ನಿಟ್ಟಿನಲ್ಲಿ ಇಂತಹ ಆಚರಣೆಗಳು ಪ್ರಧಾನ ಪಾತ್ರವಹಿಸುತ್ತವೆ.

ಎಸ್.ಎಂ.

 

ಬಾಳ ಸಂತೋಷರು ಕರ್ನಾಟಕದ ಉತ್ತರ ಭಾಗದಲ್ಲಿ ಕಂಡು ಬರುವ ವೃತ್ತಿಗಾಯಕರು. ಇವರು ಇರುವ ಒಂದೊಂದು ಪ್ರದೇಶದಲ್ಲೂ ಒಂದೊಂದು ಹೆಸರಿನಿಂದ ಕರೆಯಲ್ಪಡುತ್ತಾರೆ. ಬಳ್ಳಾರಿ ಪ್ರದೇಶದಲ್ಲಿ ‘ಕಾಡಸಿದ್ಧರು’, ಹೈದರಾಬಾದ್ ಕರ್ನಾಟಕದ ಪ್ರದೇಶದಲ್ಲಿ ‘ವೇಷಗಾರರು’, ‘ಬೈರೂಪದೋರು’ ಮತ್ತು ‘ಬಾಳಸಂತೋಷರು’, ಮುಂಬೈ ಕರ್ನಾಟಕದಲ್ಲಿ ‘ನಿರಂಜಿಗಳು’ ಅಥವಾ ‘ನಿರಂಜಗಳು’ ಎಂಬ ಹೆಸರುಗಳಿದ್ದವು. ಅವೆಲ್ಲ ಕಮಲುಗಳು. ಮೂಲ ಹೆಸರು ‘ಜಂಗಾಲು’ ಅಥವಾ ‘ಸಿರಿಜಂಗಾಲು’.

ಬಾಳ ಸಂತೋಷರು ಎಂದು ಹೆಸರು ಬಂದದ್ದು ಪುರಾಣ ಮೂಲದ ಲಕ್ಷ್ಮಣನಿಂದ ಎಂಬುದು ಇವರ ನಂಬಿಕೆ. ಇವರು ಸಾಂಪ್ರದಾಯಿಕವಾಗಿ ಕಾಣಿಸಿಕೊಳ್ಳುವ ವೇಷ ಭೂಷಣಗಳು ಕೂಡ ಲಕ್ಷ್ಮಣ ತಮಗೆ ಕೊಟ್ಟಂಥವು ಎಂಬುದು ಇವರ ನಂಬಿಕೆ.

ವೇಷಭೂಷಣಗಳು ಹೀಗಿರುತ್ತವೆ : ಉದ್ದನೆಯ ನಿಲುವಂಗಿಯಂಥ ತೊಡುಗೆ ‘ಭಗುವ’, ತಲೆಗೆ ಮೊದಲು ‘ದಾಗಡಬಳ್ಳಿ’ಯಿಂದ ರೂಪಿಸಿದ ‘ಕಿರೀಟ’ ಇದ್ದದು, ಈಗ ರುಮಾಲಿನಿಂದ ರೂಪಿಸಿದ ‘ಪಟಗ’, ಹೆಗಲಿಗೆ ಇಳಿಬಿದ್ದ ಬೆರಳಿನ ಗಾತ್ರದ ಹಗ್ಗದ ಒಂದು ತುದಿಯಲ್ಲಿ ಗಂಟೆ, ಇನ್ನೊಂದು ತುದಿಯಲ್ಲಿ ಶಂಖ, ಹೆಗಲ ಮೇಲಿನ ಇನ್ನೊಂದು ವಸ್ತುವೆಂದರೆ ಎರಡೂ ತುದಿಗಳಲ್ಲಿ ಜೋಳಿಗೆಗಳಿರುವ ‘ಕಾಳಿಕಾವಡಿ’, ಕಟಗಿಮಣಿ, ಕರಿಬೇವಿನ ಬೀಜ, ಗಾಜಿನ ಮಣಿ ಇವನ್ನು ನಡುನಡುವೆ ಪೋಣಿಸಿ ರೂಪಿಸಿದ ರುದ್ರಾಕ್ಷಿಸರ ಕತ್ತಿನಲ್ಲಿ, ಇದರ ಜೊತೆಗೆ ಅಲಂಕಾರಕ್ಕಾಗಿ ಹವಳದ ಸರ ಇತ್ಯಾದಿ ಸರಗಳು, ಕಿವಿಗೆ ಹತ್ತಕಡಕು ಓಲೆ ಇತ್ಯಾದಿ, ಹಣೆ ಕಣ್ಣಿನ ಮೇಲುರೆಪ್ಪೆ, ಕತ್ತು, ಕಿವಿಯ ನಡುಭಾಗ ಇಲ್ಲೆಲ್ಲ ವಿಭೂತಿ, ಹಣೆಯ ವಿಭೂತಿಯ ನಡುವೆ ಕುಂಕುಮದ ಅಥವಾ ಗಂಧದ ಬೊಟ್ಟು. ಸೊಂಟದಿಂದ ಕೆಳಕ್ಕೆ ಕಚ್ಚೆ.

ಈ ವೇಷಭೂಷಣಗಳೆಲ್ಲ ಲಕ್ಷ್ಮಣ ಸೀತೆಯನ್ನು ಕಾಡಿನಲ್ಲಿ ಪತ್ತೆ ಹಚ್ಚಿ ಸಂತೋಷದಿಂದ ವಾಪಸ್ಸು ಬರುತ್ತಿದ್ದಾಗ ಹೊಲ ಉಳುತ್ತಿದ್ದವರನ್ನು ಹತ್ತಿರ ಕರೆದು ಅವರಿಗೆ ಕೊಟ್ಟು ಕಾರ್ಯ ಸಾಧನೆಗಾಗಿ ಹೀಗೆ ಹೀಗೆ ಮಾಡಿರಿ ಎಂದು ಬೋಧಿಸಿದ. ಅಣ್ಣ ಶ್ರೀರಾಮನ ಅಣತಿಯಂತೆ ಗರ್ಭಿಣಿಯಾದ ಸೀತೆಯನ್ನು ಒಯ್ದು ಕಾಡಿಗೆ ಬಿಟ್ಟು ಬಂದಿದ್ದ ಲಕ್ಷ್ಮಣ ಮತ್ತೆ ಆಕೆಯನ್ನು ಹುಡುಕಿಕೊಂಡು ಹೋದಾಗ ಈ ಮೇಲಿನ ವೇಷಭೂಷಣಗಳಿಂದ ಅಲಂಕೃತನಾಗಿದ್ದ.

ಹರ ಹರಾ
ರಾಮ ರಾಮ
ಸಿರಿರಾಮ
ಮಕ್ಕಳ ಫಲವಾಗಿ
ಜೋಗಳಾ ಫಲವಾಗಿ
ಜೋಡ ಮಕ್ಕಳಾಗಿ
ಆಡೋ ಮಕ್ಕಳಾಗಿ
ತೂಗೋ ತೊಟ್ಟಿಲಾಗಿ
ಬಂದಂತ ಗಂಡಂತ್ರ ಬೈಲಾಗಿ
ಮಬ್ಬು ಮೈಲಿಗಿ
ಕಿಸಿರಿ ಕಿಂಕಿಣಿ
ಕಾಮಿಣಿ ಸೋಕುಣಿ
ದೋಷ ಕರ್ಮಗಳು ಹಿಂದಾಗಲಿ
ಬಂದಂತ ಗಾಚರ ಬೈಲಾಗಲಿ
ಬಾಳಸಂತಯ್ಯ ಬರತಾನ (ಬಂದಾನ)
ಎದ್ದೋಗಿ ಧರ್ಮ ಕುಡರಮ್ಮಾ

ಇದು ಲಕ್ಷಣ ಹಾಡುತ್ತಿದ್ದುದು. ವೇಷಭೂಷಣಗಳೊಂದಿಗೆ ಈ ಹಾಡನ್ನೂ ಕೊಟ್ಟು ಆಶೀರ್ವದಿಸಿದ. ಹೀಗೆ ಬಾಳಸಂತೋಷರು ರೂಪುಗೊಂಡರು. ರಾತ್ರಿ ಮೂರು ತಾಸಿನಾಗ ಬೀದಿಯಲ್ಲಿ ಹಾಡಿಕೊಂಡು ಹೋಗಬೆಕಾದ ರೀತಿನೀತಿಗಳನ್ನು ಉಪದೇಶ ಮಾಡಿ, ಮೇಲಿನ ಬೆಡಗುಗಳನ್ನು ಕೊಟ್ಟ ಲಕ್ಷ್ಮಣ. ಅಂದಿನಿಂದ ಇವರನ್ನು ‘ಬಾಳಸಂತೋಷರು’ ಎಂದು ಜನ ಗುರುತಿಸತೊಡಗಿದರು.

ಭಿಕ್ಷೆಗೆ ಹೊರಟಾಗ ಯಾರಾದರೂ ಸೀತರೆ ಸ್ವಲ್ಪ ಹೊತ್ತು ಕುಳಿತು ಆಮೇಲೆ ಮುಂದೆ ಹೋಗುತ್ತಾರೆ. ಬೆಕ್ಕು ಅಡ್ಡಬಂದರೆ ಹೋಗುವದೇ ಇಲ್ಲ. ನುಷ್ಟರು, ಬ್ಯಾಡರು, ಅಗಸರು ಮುಂತಾದವರ ಮನೆಗಳಲ್ಲಿ ಉಣ್ಣುವುದಿಲ್ಲ.

ಮಗು ಹುಟ್ಟಿದ ಮೂರು ದಿನಕ್ಕೆ ‘ಈರ‍್ಲು’ ಎಂಬ ಶಾಸ್ತ್ರ ಮಾಡುತ್ತಾರೆ. ನ್ಯಾಯ ಪದ್ಧತಿಗೆ ‘ಕಡ್ಡಿಹಾಕುವುದು’ ಎಂಬ ಹೆಸರಿದೆ. ‘ಕಡ್ಡಿ’ ಒಂದು ಬಗೆಯ ಠೇವಣಿ. ಅದು ಚಿನ್ನ, ಬೆಳ್ಳಿ, ಹಣ ಆಗಿರಬಹುದು. ತೀರಾ ಬಡವರಾದರೆ ಅಕ್ಷರಶಃ ಒಂದು ಕಡ್ಡಿಯನ್ನೇ ಠೇವಣಿಯನ್ನಾಗಿ ಇಡಬಹುದು. ಇದು ಪಂಥಾಹ್ವಾನದ ಸಂಕೇತ.

ಇವರಲ್ಲಿ ಮೂರು ಬಗೆಯ ಮದುವೆಗಳಿವೆ : ದೊಡ್ಡ ಲಗ್ನ, ಪಾಲಾರ್‌ಲಗ್ನ, ಗಾಂದಾರ್‌ಲಗ್ನ, ವಿಶೇಷ ಸಂದರ್ಭಗಳಲ್ಲಿ ”ಪತಾಣಿಲಗ್ನ’ ಎಂಬ ನಾಲ್ಕನೆಯದೂ ಇದೆ. ಮದುವೆಗೆ ಸಂಬಂಧಿಸಿದಂತೆ ಇವರಲ್ಲಿ ಒಂದು ವಿಚಿತ್ರ ಪದ್ಧತಿ ಇದೆ. ಮದುವೆ ಆಗುವವನು, ಹೆಣ್ಣು ಕೊಡಲಿರುವ ಮಾವನ ಮನೆಯಲ್ಲಿ ಮೂರು ವರ್ಷಗಳ ಕಾಲ ಜೀತ ಮಾಡಬೇಕು. ಈ ‘ಜೀತ’ಕ್ಕೆ ‘ಮಾನವ ಹಿಂದೆ ಬೀಳುವುದು’ ಎನ್ನುತ್ತಾರೆ.

ಸಾವು ಉಂಟಾದಾಗ ಹೂಳುವ ಪದ್ಧತಿ ಇದೆ. ಸಮಾಧಿ ಮಾಡುವ ರೀತಿಯ ‘ಕ್ರಿಯಾಸಮಾಧಿ’ಯನ್ನು ಹೋಲುತ್ತದೆ. ಹೆಣಕ್ಕೆ ಮಣ್ಣು ಸೋಂಕುವಂತಿಲ್ಲ.

ಗೋರ‍್ಕನಾಥ ಎಂಬುವನು ಬಾಳಸಂತೋಷರ ಮೂಲ ಪುರುಷನೆಂದು ಹೇಳಲಾಗುತ್ತದೆ. ಈ ಸಂಪ್ರದಾಯ ಆಂಧ್ರ ಮೂಲದ್ದು.

ಕೆ.ಆರ್.