ಬಂಡಿವೇಷ ಇದು ವಿನೋದ ಪ್ರಧಾನವಾದ ಜಾನಪದ ಪ್ರದರ್ಶನ ಕಲೆ. ಇದು ಆಂಧ್ರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಅದರಗೊಳ್ಳುತ್ತಿರುವ ಪ್ರದರ್ಶನ ಕಲೆ. ದಷ್ಟಪುಷ್ಟ ಕಲಾಗಾರರು, ದೇವ, ದೇವತೆಗಳ ವೇಷಗಳನ್ನು ಧರಿಸಿಕೊಂಡು ಗಾಡಿಗಳ ಮೇಲೆ ಪ್ರದರ್ಶಿಸುವ ಕಲೆಯೆ ಬಂಡಿ ವೇಷ. ವೇಷ ಹಾಕಿಕೊಂಡು ಪೀಠದ ಮೇಲೆ ಪ್ರದರ್ಶಿಸುವುದರಿಂದಾಗಿ ಗಾಡಿಗಳ ಮೇಲಿನ ವೇಷಗಳು ಎಂಬ ಹೆಸರು ಸಹಜವಾಗಿಯೇ ನೆಲೆನಿಂತಿದೆ. ಇದು ಜನಪದರನ್ನು ತುಂಬಾ ಆಕರ್ಷಿಸುತ್ತದೆ. ಏಕೆಂದರೆ ಗುಡಿಯಲ್ಲಿರುವ ವಿಗ್ರಹದಂತೆ ಮನುಷ್ಯರು ದೇವತೆಗಳ ವೆಷದಲ್ಲಿ ನಿಶ್ಚಲವಾಗಿ ನಿಂತಿರಬೇಕಾಗುತ್ತದಾದ್ದರಿಂದ ಇವರು ಹೊಸದೊಂದು ಪವಾಡವನ್ನು ಕಂಡಂತೆ ಆನಂದಿಸುತ್ತಾರೆ. ಈ ವೇಷಗಳನ್ನು ಗ್ರಾಮದೇವತೆಗಳ ಜಾತ್ರೆಗಳಲ್ಲೂ ಮೆರೆವಣಿಗೆಗಳಲ್ಲೂ ಸಾಕಷ್ಟು ಪ್ರದರ್ಶಿಸುತ್ತಾರೆ. ಪ್ರಧಾನವಾಗಿ ದಸರಾ ಉತ್ಸವದಲ್ಲಿ, ವಿನಾಯಕನ ವಿಸರ್ಜನೆಯ ಸಂದರ್ಭದಲ್ಲಿ, ಬೇತಾಳ ಉತ್ಸವ ಮೆರೆವಣಿಗೆಗಳಲ್ಲಿ, ಬೆಳೆಗಳ ಜಾತ್ರೆಗಳಲ್ಲಿ, ಪೀಠದ ವೇಷಗಳನ್ನು ತಪ್ಪದೆ ಪ್ರದರ್ಶಿಸುತ್ತಾರೆ.

ಇದನ್ನು ಹಗಲು ರಾತ್ರಿಗಳೆನ್ನದೆ ಪ್ರದರ್ಶಿಸುತ್ತಾರೆ. ಮುಖ್ಯವಾಗಿ ಹೆಸರಿಸತಕ್ಕವು ಸೀತಾರಾಮ ಕಲ್ಯಾಣ ಪ್ರಸಂಗ, ಆದಿಶೇಷನ ಶಯನ ಪ್ರಸಂಗ, ಸೀತೆಯ ಅಗ್ನಿ ಪ್ರವೇಶ, ಶಿವ ಪಾರ್ವತಿಯರ ಸಮಾವೇಶದ ಪ್ರಸಂಗ, ದ್ರೌಪದಿಯ ವಸ್ತ್ರಾಪಹರಣ ಪ್ರಸಂಗ, ಕಾಳಿಕಾ ರಕ್ತಲೋಚನ ಪ್ರಸಂಗ, ಪಾಂಡವರ ಸಮಾವೇಶ ಪ್ರಸಂಗ, ಶಿರಡಿ ಸಾಯಿಬಾಬಾ ಮೊದಲಾದವು. ಇವಲ್ಲದೆ ಅಲ್ಲೂರಿ ಸೀತಾರಾಮರಾಜು, ಭಾರತಮಾತಾ, ಗಾಂಧಿ ಮೊದಲಾದ ಗಣ್ಯರನ್ನು ಗಾಡಿ ಮೇಲಿನ ವೇಷಗಳಲ್ಲಿ ಸೇರಿಸಬಹುದು. ಈ ವೇಷಗಳನ್ನು ಧರಿಸಿದ ಕಲಾವಿದರಿಗೆ ಸಹನೆ, ತಾಳ್ಮೆ, ತುಂಬಾ ಅವಶ್ಯಕ. ಎಷ್ಟು ಸಮಯವಾದರೂ ನಿಂತೋ, ಕುಳಿತೋ ಇರಬೇಕಾಗುತ್ತದೆ. ಒಂದೊಂದು ಸಂದರ್ಭದಲ್ಲಿ ಜಾತ್ರೆಗೆ ಬಂದವರು ಇವರ ಏಕಾಗ್ರತೆಯನ್ನು ಕೆಡಿಸಲು ಎಷ್ಟೇ ಪ್ರಯತ್ನಿಸಿದರು ಅಲುಗಾಡದಂತೆ ಆ ಪಾತ್ರಕ್ಕೂ, ವೇಷಕ್ಕೂ ನ್ಯಾಯ ಒದಗಿಸಿ ಗಾಡಿ ಮೇಲಿನ ವೇಷಗಳಿಗೆ ಕೀರ್ತಿಯನ್ನು ಗಳಿಸಿಕೊಡುತ್ತಾರೆ. ಪೌರಾಣಿಕ ನಾಟಕಗಳ ಜನಪ್ರಿಯತೆ ಕಡಿಮೆಯಾದುದರಂದ ಕೆಲವರು ಪೌರಾಣಿಕ ಪಾತ್ರಗಳಲ್ಲಿ ಗಾಡಿ ಮೇಲಿನ ವೇಷಗಳನ್ನು ಮಾಡುತ್ತಾ ಜೀವನ ನಿರ್ವಹಣೆ ಮಾಡುತ್ತಿದ್ದಾರೆ. ಇವು ಹೆಚ್ಚಾಗಿ ಉಭಯ ಗೋದಾವರಿ ಜಿಲ್ಲೆಗಳಲ್ಲಿ, ಜನಪ್ರಿಯತೆಯನ್ನು ಪಡೆದಿವೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

ಬಂದರು ಕಲಂಕಾರಿ ಆಂಧ್ರದ ಬಂದುರ (ಮಚಿಲಿಪಟ್ನಂ) ಎಂಬ ಪ್ರದೇಶದ ಕಲಾಪ್ರಕಾರ. ಬಾಟಿಕ್, ಕಲೆ ಎಂದು ಪ್ರಸಿದ್ಧವಾಗಿರುವ ವಸ್ತ್ರಗಳ ಅಲಂಕರಣವನ್ನು ಕಲಂಕಾರಿ ಎಂದು ಹೇಳುತ್ತಾರೆ. ಪ್ರಕೃತಿಯಲ್ಲಿ ತಯಾರು ಮಾಡಿ ಲೇಖನಿ (ಕಲಂ)ಯಿಂದ ವಸ್ತ್ರಗಳ ಮೇಲೆ ಚಿತ್ರಿಸುವುದರಿಂದ ಮತ್ತು ಮುದ್ರಿಸುವುದರಿಂದ ಸುಂದರವಾದ ಸೀರೆಗಳು ತಯಾರಾಗುತ್ತವೆ.

ಬಂದರಿನ ಕಲಂಕಾರಿ ಚಿತ್ರಕಲೆ ಅತ್ಯಂತ ಪ್ರಾಚೀನವಾದುದು. ಈಜಿಪ್ಟ್‌ನ ‘ಮಮ್ಮಿ’ಗಳಿಗೆ ಬಂದರಿನಲ್ಲಿ ತಯಾರಾದ ವಸ್ತ್ರಗಳನ್ನು ಸುತ್ತುತ್ತಿದ್ದರೆಂದು ಹೇಳುತ್ತಾರೆ. ಈ ಕಲಾವಿದರಿಗೆ ಶಾತವಾಹನರು ಭೂಮಿಯನ್ನು ದಾನ ಮಾಡಿದ್ದರೆಂದು ಶಾಸನಗಳಲ್ಲಿದೆ. ಪೂರ್ವ ಚಾಲುಕ್ಯರ ಕಾಲದಲ್ಲಿ ಮತ್ತು ರೆಡ್ಡಿ ರಾಜರ ಕಾಲದಲ್ಲಿ ಬಣ್ಣ ಹಚ್ಚುವ ಕಲೆ ಬಹಳ ಪ್ರಸಿದ್ಧವಾಗಿತ್ತೆಂದು, ಬಣ್ಣದ ಬಟ್ಟೆಗಳನ್ನು ವಿದೇಶಗಳಿಗೂ ಕಳುಹಿಸುತ್ತಿದ್ದರೆಂದು ಸಾಹಿತ್ಯದ ಆಧಾರಗಳು ಹೇಳುತ್ತವೆ. ಕಾಕತೀಯರ ಕಾಲದಲ್ಲೂ ತೆಲುಗುನಾಡು ಬಣ್ಣದ ವಸ್ತ್ರಗಳಿಗೆ ಪ್ರಸಿದ್ಧಿ ಪಡೆದಿತ್ತು. ರೆಡ್ಡಿ ರಾಜರ ಕಾಲದಲ್ಲಿ ಸೀರೆಗಳ ಮೇಲೆ ರಾಮಾಯಣ, ಮಹಾಭಾರತ ಮತ್ತು ಭಾಗವತದ ಚಿತ್ರಗಳನ್ನು ಬರೆಯುತ್ತಿದ್ದರೆಂದು, ವಿವಿಧ ಪ್ರಾಣಿಗಳ ಚಿತ್ರಗಳನ್ನೂ ಬಿಡಿಸುತ್ತಿದ್ದರೆಂದು ಹೇಳಲಾಗಿದೆ. ಬರ್ಮ, ಮಲಯ, ಇಂಡೋನೇಶಿಯ, ಚೀನಾ, ಪರ್ಷಿಯ ಮತ್ತು ಅರೇಬಿಯ ದೇಶಗಳೊಂದಿಗೆ ವ್ಯಾಪಾರ ನಡೆಸುತ್ತಿದ್ದರೆಂದು ತಿಳಿಯುತ್ತದೆ. ವಿಜಯನಗರದ ಆಳ್ವಿಕೆಯ ಕಾಲದಲ್ಲೂ ಈ ವ್ಯಾಪಾರ ಮುಂದುವರಿಯಿತು. ಮುಖ್ಯವಾಗಿ ಪಾರಸಿಕರ ಜೊತೆಗೆ ವಾಣಿಜ್ಯ ಅಭಿವೃದ್ಧಿಯಾದ ಕಾಲದಲ್ಲಿ ಕಲಂಕಾರಿ ಎಂಬ ಹೆಸರು ಬಳಕೆಗೆ ಬಂದಿತೆಂದು ತಿಳಿಯುತ್ತದೆ.

ಕಲಂಕಾರಿ ಚಿತ್ರಕಲೆ ಗುಜರಾತ್, ರಾಜಸ್ಥಾನ್, ಮಧುರೈ, ಶ್ರೀಕಾಳಹಸ್ತಿ ಮುಂತಾದ ಪ್ರದೇಶಗಳಲ್ಲೂ ಪ್ರಚಲಿತವಾಗಿದ್ದರೂ ಬಂದರಿನ ಕಲಂಕಾರಿಗೆ ಹೆಚ್ಚಿನ ಪ್ರಾಶಸ್ತ್ರ‍್ಯ ಲಭಿಸಿದೆ. ಈ ಕಲೆಯಲ್ಲಿ ಲೇಖನಿಗಳಿಂದ ಚಿತ್ರಗಳನ್ನು ಬರೆಯುವುದನ್ನೇ ಕಲಂಕಾರಿ ಎಂದು ಹೇಳಲಾಗಿದೆ. ಆದರೆ ಅನಂತರ ಕಾಲದಲ್ಲಿ ಚಿತ್ರಗಳನ್ನು ಮರದಿಂದ ಕೆತ್ತಿ ಮುದ್ರಿಸುವ ವಿಧಾನ ಬಳಕೆಗೆ ಬಂತು. ಮುದ್ರಣಕ್ಕಾಗಿ ಕೆತ್ತನೆ ಮಾಡುವುದರಲ್ಲಿ ಬಂದರಿನ ಕಲಾವಿದರು ತುಂಬ ನಿಪುಣರಾಗಿದ್ದಾರೆ. ತುಂಬ ಸೂಕ್ಷ್ಮದ ವಿನ್ಯಾಸಗಳನ್ನು ರೂಪಿಸುವುದರಲ್ಲಿ ಬಂದರಿನ ರಂಗರಾಜರು ಅಥವಾ ರಂಗರೇಜಿಗಳು ನಿಪುಣರು. ಕೆತ್ತನೆಗಾಗಿ ಇವರು ತೇಗದ ಮರ ಬಳಸುತ್ತಾರೆ.

ಕಲಂಕಾರಿಯಲ್ಲಿ ಉಪಯೋಗಿಸುವ ಬಣ್ಣಗಳಲ್ಲಿ ನೀಲಿ, ಕಪ್ಪು, ಕೆಂಪು ಮತ್ತು ಹಳದಿ ಮುಖ್ಯವಾದವು. ಇವುಗಳನ್ನು ತಯಾರು ಮಾಡುವಾಗ ಪ್ರಕೃತಿಯಲ್ಲಿ ಲಭಿಸುವ ಮೂಲಿಕೆಗಳನ್ನು, ಎಲೆಗಳನ್ನು, ಹೂವುಗಳನ್ನು, ತೊಗಟೆಯನ್ನು ಬಳಸುತ್ತಾರೆ. ಸಾಂಪ್ರದಾಯಿಕವಾದ ನಾಲ್ಕು ಬಣ್ಣಗಳನ್ನಲ್ಲದೆ ಈಗ ಮೂವತ್ತು ತರಹದ ಬಣ್ಣಗಳನ್ನು ಇವರು ಬಳಸುತ್ತಿದ್ದಾರೆ. ಆದರೆ ಇವಕ್ಕೆ ರಾಸಾಯನಿಕಗಳನ್ನು ಬಳಸದೆ ಪ್ರಕೃತಿಯ ಪದಾರ್ಥಗಳನ್ನೇ ಬಳಸುತ್ತಿರುವುದು ಗಮನಾರ್ಹ. ಬಣ್ಣಗಳು ಮತ್ತು ಪಡಿಯಚ್ಚುಗಳು ಸಿದ್ಧವಾದ ಮೇಲೆ ಕಲಾವಿದರು ಬಣ್ಣ ಹಾಕಲು ಕುಂಚಗಳನ್ನು ಸಿದ್ಧಮಾಡಿಕೊಳ್ಳುತ್ತಾರೆ. ಈಚಲು ಕಡ್ಡಿಗಳಿಗೆ ಕಂಬಳಿಯ ಚೂರುಗಳನ್ನು ಸುತ್ತಿ ಬಣ್ಣ ಹಾಕಲು ಬಳಸುತ್ತಾರೆ. ಬಿದಿರಿನ ಕಡ್ಡಿಗೆ ಕೂದಲನ್ನು ಅಥವಾ ದಾರವನ್ನು ಸುತ್ತಿ ಕುಂಚದಂತೆ ಬಳಸುವುದುಂಟು. ಬಟ್ಟೆಯ ಮೇಲೆ ಮಾದರಿ ಚಿತ್ರವನ್ನು ಬರೆಯುವ ಮೊದಲು ೧೫ ಸಲ ಒಗೆಯುತ್ತಾರೆ. ಒಂದು ಕಲಂಕಾರಿ ವಸ್ತ್ರವನ್ನು ತಯಾರು ಮಾಡಲು ಸುಮಾರು ಒಂದು ತಿಂಗಳು ಹಿಡಿಯುತ್ತದೆ. ಕಲಂಕಾರಿಯಲ್ಲಿ ಬಣ್ಣ, ಪ್ರದೇಶ ಮುಂತಾದವುಗಳನ್ನು ಆಧರಿಸಿ ರಂಗುಪಾನಿ, ಮುಲ್ತಾನ್, ಪರ್ಷಿಯನ್, ಚುಂಗಡಿ, ಎಣ್ಣೆಕಾವಿ ಮುಂತಾದ ಪ್ರಭೇದಗಳಿವೆ. ಕಲಂಕಾರಿ ಚಿತ್ರಗಳಲ್ಲಿ ಗೆರೆಗಳು ಮತ್ತು ವೃತ್ತಗಳ ಜೊತೆಗೆ ಹಂಸ, ಗಿಳಿ, ಆನೆ, ಅಂಬಾರಿ ಅಷ್ಟದಳಪದ್ಮ ಮುಂತಾದವು ಇರುತ್ತವೆ. ಇವಲ್ಲದೆ ಕೃಷ್ಣ, ಆಂಜನೇಯ, ರಾಮ ಮುಂತಾದ ಪೌರಾಣಿಕ ದೇವತೆಗಳ ಚಿತ್ರಗಳೂ ಇರುತ್ತವೆ. ಕೆಲವು ಪರ್ಶಿಯನ್ ಚಿತ್ರಗಳನ್ನು ಹೋಲುತ್ತವೆ.

ಕಲಂಕಾರಿ ಚಿತ್ರಗಳಿಗೆ ರಾಸಾಯನಿಕ ಬಣ್ಣಗಳನ್ನು ಬಳಸದೆ ಪ್ರಕೃತಿ ಮೂಲದ ಬಣ್ಣಗಳನ್ನು ಬಳಸುವುದರಿಂದ ಆರೋಗ್ಯ ದೃಷ್ಟಿಯಿಂದ ಅವು ಉತ್ತಮವಾದುವೆಂದು ಹೇಳಬಹುದು. ಬಣ್ಣಗಳಿಗೆ ಬಳಸುವ ಅನೇಕ ಪದಾರ್ಥಗಳು ವೈದ್ಯಕೀಯ ಗುಣ ಇರುವಂಥವೇ ಆಗಿವೆ. ಇವುಗಳಲ್ಲಿ ಹಲವು ಕ್ರಿಮಿ ಕೀಟಗಳನ್ನು, ಸೂಕ್ಷ್ಮಾಣುಗಳನ್ನು ದೂರವಿಟ್ಟು ಚರ್ಮರೋಗಗಳನ್ನು ಗುಣಪಡಿಸುತ್ತವೆಂದು ಹೇಳಲಾಗಿದೆ. ಬಣ್ಣ ಬಣ್ಣದ ಕಲಂಕಾರಿ ಹತ್ತಿ ಬಟ್ಟೆಗಳನ್ನು ಯಾವ ಋತುವಿನಲ್ಲಾದರೂ ಧರಿಸಬಹುದು. ಸೌಂದರ್ಯ ಪ್ರಧಾನವಾಗಿರುವುದಲ್ಲದೆ ಆರೋಗ್ಯದ ದೃಷ್ಟಿಯಿಂದ ಮತ್ತು ಸಾಂಸ್ಕೃತಿಕ ಕಾರಣಗಳಿಂದ ಕಲಂಕಾರಿ ಬಟ್ಟೆಗಳು ಶ್ರೇಷ್ಠವಾದವು.

ಆರ್.ಪಿ. ಅನುವಾದ ಎ.ಎಂ.ಡಿ.

 

ಬಕೀರ್ ಷಾ ಪಾಟ್ಟು ತಮಿಳುನಾಡಿನ ಮುಸ್ಲಿಮರ ಹಾಡು. ಮುಸ್ಲಿಂ ಸಮುದಾಯದಲ್ಲಿ ಬಕೀರ್ ಷಾಗಳು ತಮ್ಮದೇ ಆದ ಸಂಸ್ಕೃತಿಯನ್ನು ಹೊಂದಿರುವ ಜನ. ಇವರು ಹಸಿರು ಬಟ್ಟೆಯಿಂದಾದ ದೊಡ್ಡ ಪೇಟವನ್ನು ತೊಟ್ಟಿರುತ್ತಾರೆ. ಕತ್ತಿನಲ್ಲಿ ರಾಶಿರಾಶಿಯಾಗಿ ಹವಳದ ಮಣಿಹಾರಗಳನ್ನು ಧರಿಸಿ ಕೈಯಲ್ಲಿ ‘ತಾಹಿರಾ’ ಎಂಬ ವಾದ್ಯವನ್ನು ಹಿಡಿದಿರುತ್ತಾರೆ. ಈ ವಾದ್ಯವನ್ನು ಬಾರಿಸಿದಾಗ ವಾದ್ಯದ ಶಬ್ದ ಜೊತೆಗೆ ಗೆಜ್ಜೆನಾದವೂ ಬೆರೆತ ಹೊಸ ಬಗೆಯ ಸಂಗೀತ ಹೊರಹೊಮ್ಮುತ್ತದೆ. ಈ ಸಂಗೀತದ ಹಿನ್ನೆಲೆಯಲ್ಲಿ ಬಕೀರ್ ಷಾಗಳು ಹಾಡಲಾರಂಭಿಸುತ್ತಾರೆ.

ಇವರು ಸಾಮಾನ್ಯವಾಗಿ ದೇವರನ್ನು (ಅಲ್ಲಾಹ್) ಸ್ತುತಿಸಿ, ದೇವದೂತರಾದ ಮಹಮದ್ ನಬಿ (ಸಲ್) ಅವರನ್ನು ಕೊಂಡಾಡಿ ಸಂತರ ಬಗ್ಗೆ ಅಥವಾ ಮುಸ್ಲಿಮರ ಜೀವನಕ್ರಮದ ಬಗ್ಗೆ ಹಾಡುಗಳನ್ನು ಹಾಡುತ್ತಾರೆ.

ಬಕೀರ್‌ಷಾಗಳು ಮುಸ್ಲಿಮರು ವಾಸಿಸುತ್ತಿರುವ ಮನೆಗಳ ಎದುರು ಮನೆಯಂಗಳದಲ್ಲಿ ನಿಂತು ತಮ್ಮ ಕೈಯಲ್ಲಿರುವ ‘ತಾಹಿರಾ’ ಎಂಬ ವಾದ್ಯವನ್ನು ಬಾರಿಸುತ್ತಾ ಹಾಡುತ್ತಾರೆ. ಇವರು ಹಾಡಲಾರಂಭಿಸಿದ ಕೂಡಲೆ ಮನೆಯಲ್ಲಿ ಇರುವವರು ಹೊರಗೆ ಬಂದು ಬಶೀರ್‌ಷಾಗೆ ದವಸಧಾನ್ಯಗಳನ್ನು ಅಥವಾ ಹಣವನ್ನು ಕಾಣಿಕೆಯಾಗಿ ನೀಡುತ್ತಾರೆ.

ಬಕೀರ್‌ಷಾಗಳು ಸಾಮಾನ್ಯವಾಗಿ ದರ್ಗಾಗಳು ಮತ್ತು ಮಸೀದಿಗಳ ಸುತ್ತಮುತ್ತ ಜೀವನ ಮಾಡುತ್ತಾರೆ. ದರ್ಗಾಗಳಲ್ಲಿ ನಡೆಯುವ ‘ಕಂದೂರಿ’ ಹಬ್ಬದ ಸಂದರ್ಭದಲ್ಲಿ ಬಕೀರ್‌ಷಾಗಳ ಸಂಗೀತ ಕಛೇರಿ ನಡೆಯುತ್ತದೆ. ರಂಜಾನ್ ತಿಂಗಳು ಪೂರ್ತಿ ಮುಸ್ಲಿಮರು ವ್ರತಾಚರಣೆ ಮಾಡುತ್ತಾರೆ. ವ್ರತ ಆಚರಿಸುವವರು ಮುಂಜಾನೆ ಮೂರು ಗಂಟೆಗೆ ಏಳುವರು. ಸ್ತ್ರೀಯರು ಅಡುಗೆ ಮುಂತಾದ ಕೆಲಸ ಕಾರ್ಯಗಳನ್ನು ಮಾಡುತ್ತಾರೆ. ಇವರನ್ನು ಮುಂಜಾನೆ ಹೊತ್ತು ಎಬ್ಬಿಸುವುದಕ್ಕಾಗಿ ಬಕೀರ್‌ಷಾಗಳು ರಂಜಾನ್ ತಿಂಗಳು ಪೂರ್ತಿ ಮುಸ್ಲಿಮರು ಹೆಚ್ಚಾಗಿ ವಾಸಿಸುವ ಬೀದಿಗಳಿಗೆ ಹೊಗಿ ಹಾಡುವರು.

ಉದಾಹರಣೆಗೆ ಕೆಲವು ಬಕೀರ್‌ಷಾ ಹಾಡುಗಳು :

೧. ದೇವರನ್ನು ಸ್ತುತಿಸಿ/ಭಜಿಸಿ ಹಾಡುವ ಹಡು

ನಾಳೆಯೆಂಬ ಆಚರಣೆಯನ್ನಿಟ್ಟುಕೊಂಡು
ದಿನಗಳನ್ನು ನಡೆಸುವ ಯಾ ಅಲ್ಲಾ!
ನಾನೂ ಒಂದು ದಿನ ಅಲ್ಲಿಗೆ ಬರುವೆ
ಒಳಿತನ್ನು ಮಾಡಿ ಯಾ ಅಲ್ಲಾ!

೨. ನಬಿ ನಾಯಕರನ್ನು ಹೊಗಳಿ ಹಾಡುವ ಹಾಡು

ನೆನಪೆಲ್ಲವೂ ನಿಮ್ಮ ಮೇಲೆ ಯಾ ರಸೂಲಲ್ಲಾ
ನೀವಿಲ್ಲದೆ ನಾವಿಲ್ಲ ಯಾ ರಸೂಲಲ್ಲಾ
ಆರದ ಜಗಜ್ಯೋತಿಯಾಗಿ ಉದಿಸಿ
ಓಕದೆಲ್ಲೆಡೆ ಬೆಳಕು ಹರಿಸಿದ ಯಾ ರಸೂಲಲ್ಲಾ

ಕೆ.ಯು. ಅನುವಾದ ಐ.ಎಸ್.

 

ಬಣಜಿಗರು ವ್ಯಾಪಾರವನ್ನು ಪ್ರಧಾನ ವೃತ್ತಿಯನ್ನಾಗಿ ರೂಢಿಸಿಕೊಂಡು ಬಂದಿರುವ ಈ ಸಮುದಾಯ ಕರ್ನಾಟಕದ ಎಲ್ಲೆಡೆ ಕಂಡು ಬರುತ್ತದೆ. ಸಂಸ್ಕೃತದ ‘ವಣಿಕೆ’ ಎಂಬ ಪದದಿಂದ ನಿಷ್ಪತ್ತಿಯಾಗಿರುವ ‘ಬಣಜಿಗ’ ವ್ಯಾಪಾರ ವೃತ್ತಿಯನ್ನು ಸೂಚಿಸುತ್ತದೆ. ಇವರಲ್ಲಿ ಪ್ರಧಾನವಾಗಿ ಎರಡು ಪಂಗಡಗಳಿವೆ. ಶೈವಾನುಯಾಯಿ ಮತ್ತು ವೈಷ್ಣವಾನುಯಾಯಿ ಬಣಜಿಗರು.

ಶೈವಾನುಯಾಯಿಗಳು ಸಸ್ಯಾಹಾರಿಗಳು. ಇವರ ಮಾತೃಭಾಷೆ ಕನ್ನಡ. ವಿಶೇಷವಾಗಿ ಉತ್ತರ ಕರ್ನಾಟಕದ ಭಾಗಗಳಲ್ಲಿ ನೆಲಸಿರುವ ಶೈವ ಬಣಜಿಗರು. ವ್ಯಾಪಾರದ ಜೊತೆಗೆ ಕೃಷಿಯನ್ನು ಅವಲಂಬಿಸಿದ್ದಾರೆ. ಪಟ್ಟಣಶೆಟ್ಟಿಯೆಂದು ಇವರನ್ನು ಕರೆಯುವುದು ಸಾಮಾನ್ಯ. ಇವರು ವೀರಶೈವ ಸಮುದಾಯದಲ್ಲಿ ಒಳಪಂಗಡವಾಗಿದ್ದಾರೆ. ವೈಷ್ಣವಾನುಯಾಯಿ ಬಣಜಿಗರು ಆಂಧ್ರಪ್ರದೇಶದಿಂದ ವಲಸೆ ಬಂದವರೆಂದು ಹೇಳಲಾಗಿದ್ದು ಇವರು ಬಳಸುವುದ ಉಹೆಚ್ಚಾಗಿ ತೆಲುಗು ಭಾಷೆಯನ್ನು. ಇವರಲ್ಲಿ ಸಸ್ಯಾಹಾರಿಗಳು ಹಾಗೂ ಮಾಂಸಾಹಾರಿಗಳು ಇಬ್ಬರೂ ಕಂಡು ಬರುತ್ತಾರೆ. ಇವರು ವಿಜಯನಗರದ ಕಾಲದಲ್ಲಿ ಕರ್ನಾಟಕಕ್ಕೆ ವಲಸೆ ಬಂದು ಶ್ರೀರಾಮಾನುಜಾಚಾರ್ಯರನ್ನು ಗುರುಗಳನ್ನಾಗಿ ಸ್ವೀಕರಿಸಿ ಮುದ್ರಾಧಾರಣೆ ಮಾಡಿಸಿಕೊಂಡರೆಂಬ ಪ್ರತೀತಿ ಇದೆ. ಶ್ರೀವೈಷ್ಣವ ಸಂಪ್ರದಾಯ ಆಚರಣೆಗಳನ್ನು ದಕ್ಷಿಣ ಕರ್ನಾಟಕದ ಬಣಜಿಗರಲ್ಲಿ ಇಂದಿಗೂ ಕಾಣುತ್ತೇವೆ. ಪಂಗಡ ಸೂಚಕವಾದ ನಾಮಧಾರಣೆ ಇಂದಿಗೂ ಆಚರಣೆಯಲ್ಲಿದೆ.

ಕನ್ನಡ ಸಾಹಿತ್ಯದ ಪ್ರಾಚೀನ ಗ್ರಂಥಗಳಲ್ಲಿ ಬಣಜಿಗ ಪದ ಬಳಕೆಯಲ್ಲಿದೆ. ಕನ್ನಡದ ರತ್ನತ್ರಯದಲ್ಲಿ ರನ್ನ ಕವಿ ತನ್ನ ಪೂರ್ವಿಕರು ಬಳೆ ಮಾರುವ ವೃತ್ತಿಯವರೆಂದು ಕೃತಿಯಲ್ಲಿ ಹೇಳಿಕೊಂಡಿದ್ದಾರೆ.

ಬಣಜಿಗ ಕುಟುಂಬಗಳಲ್ಲಿ ಕುಲಗುರುಗಳು ಹಾಗೂ ಕುಲದೇವತೆಗಳೂ ಇದ್ದಾರೆ. ಸಾಮಾನ್ಯವಾಗಿ ವೈಷ್ಣವ ಬಣಜಿಗರು ತಾವು ನೆಲಸಿರುವ ಪರಿಸರದ ದೇವರುಗಳನ್ನೇ ತಮ್ಮ ಆರಾಧ್ಯ ದೇವವನ್ನಾಗಿ ಮಾಡಿಕೊಂಡಿದ್ದಾರೆ. ಬಿಳಿಗಿರಿರಂಗನಾಥ ಸ್ವಾಮಿ, ಮೇಲುಕೋಟೆ ಚೆಲುವರಾಯಸ್ವಾಮಿ, ಮಾಗಡಿ ರಂಗನಾಥಸ್ವಾಮಿ ಹೀಗೆ ಈ ವೈದಿಕ ಸಂಪ್ರದಾಯದ ಆಚರಣೆಗಳನ್ನು ಸಾಮಾನ್ಯವಾಗಿ ಆಚರಿಸುತ್ತಾರೆ.

ಇವರಲ್ಲಿ ಮಗು ಹುಟ್ಟಿದ ಹನ್ನೊಂದನೇ ದಿನಕ್ಕೆ ಸೂತಕ ಕಳೆದುಕೊಳ್ಳುತ್ತಾರೆ. ಅಂದೇ ಅಥವಾ ಒಂದು ವರ್ಷದೊಳಗಾಗಿ ನಾಮಕರಣಶಾಸ್ತ್ರ ಮಾಡುವ ರೂಢಿ ಇದೆ. ಮಗುವಿಗೆ ಐದು ಅಥವಾ ಹನ್ನೊಂದನೇ ತಿಂಗಳಲ್ಲಿ ಅಥವಾ ಮೂರು ವರ್ಷದ ಒಳಗೆ ಮನೆ ದೇವರಲ್ಲಿ ಹೋಗಿ ಮುಡಿ ತೆಗೆಸುವ ಶಾಸ್ತ್ರ ಮಾಡುತ್ತಾರೆ. ಋತುಮತಿಯಾದವಳನ್ನು ಮೂರರಿಂದ ಒಂಬತ್ತು ದಿನಗಳವರೆಗೆ ಪ್ರತ್ಯೇಕ ಸ್ಥಳದಲ್ಲಿ ಕೂರಿಸಿ ಸಾಂಪ್ರದಾಯಿಕ ವಿಧಿಗಳನ್ನು ನಡೆಸುತ್ತಾರೆ. ವಿವಾಹ ಸಾಮಾನ್ಯವಾಗಿ ಹೆಣ್ಣಿನ ಮನೆಯಲ್ಲಿ ನಡೆಯುವುದು ವಾಡಿಕೆ. ಬ್ರಾಹ್ಮಣ ಪುರೋಹಿತರು ಇವರ ಧಾರ್ಮಿಕ ಆಚರಣೆಗಳನ್ನು ನೆರವೇರಿಸಿ ಕೊಡುವ ರೂಢಿ ಇದೆ. ಜಾತಿ ಪಂಚಾಯಿತಿ ಇವರಲ್ಲಿದ್ದು ಸಮಾಜದ ಮುಖಂಡ ಅವರ ವಿವಾದಗಳನ್ನು ಬಗೆಹರಿಸುತ್ತಾನೆ. ದತ್ತು ಸಂಪ್ರದಾಯ ಹಾಗೂ ಅವಿಭಕ್ತ ಕುಟುಂಬಗಳು ಇವೆ. ಸ್ವಾತಂತ್ರ‍್ಯಪೂರ್ವದಲ್ಲಿ ವಿಶಿಷ್ಟವಾದ ಜೀವನಕ್ರಮವನ್ನು ಹೊಂದಿದ್ದ ಇವರಲ್ಲಿ ಮಹಿಳೆಗೆ ವಿಶೇಷ ಪ್ರಾತಿನಿಧ್ಯವಿತ್ತು. ಹುಟ್ಟು-ಸಾವು ಮೊದಲಾದ ಸಂದರ್ಭಗಳಲ್ಲಿ ಇತರರ ಹಾಗೆ ಇವರೂ ಸೂತಕಾಚರಣೆ ನಡೆಸಿದರೂ ನಾಮಕರಣ, ಮೈನೆರೆದಾಗಿನ ಒಸಗೆ, ಗೆಜ್ಜೆಪೂಜೆ, ವಿವಾಹ ಆಚರಣೆಗಳು ಇವರಿಗೆ ಮಾತ್ರವೇ ವಿಶಿಷ್ಟವಾಗಿದ್ದವು.

ಶವವನ್ನು ಹೂಳುವ ಇಲ್ಲವೆ ಸುಡುವ ಸಂಪ್ರದಾಯ ಮತ್ತು ಸಾವಿನ ಹನ್ನೊಂದನೆಯ ದಿನದ ಪುಣ್ಯಾಹ ಮತ್ತು ವೈಕುಂಠ ಸಮಾರಾಧನೆ ಮಾಡುವ ಪದ್ಧತಿ ಇದೆ. ಈ ಆಚರಣೆಗಳಂದು ದಾಸ ಬಣಜಿಗರು ದಾಸಪ್ಪನನ್ನು ಕರೆಸುವ ಪದ್ಧತಿ ರೂಢಿಯಲ್ಲಿದೆ. ಅನಂತರ ಕೈವಾರ, ತಿರುಪತಿ ಮೊದಲಾದ ತೀರ್ಥಕ್ಷೇತ್ರಗಳಿಗೆ ಹೋಗಿ ಬರುತ್ತಾರೆ. ಎಲ್ಲ ಹಿಂದೂ ಹಬ್ಬಗಳನ್ನು ಆಚರಿಸುವ ಇವರು ದೀಪಾವಳಿ, ಯುಗಾದಿ ಹಾಗೂ ಸಂಕ್ರಾಂತಿಗಳನ್ನು ವಿಶೇಷವಾಗಿ ಆಚರಿಸುತ್ತಾರೆ.

ಎನ್.ಆರ್.

 

ಬಯಲಾಟ ಆಂಧ್ರಪ್ರದೇಶದಲ್ಲಿ ಬಯಲಲ್ಲಿ ಆಡುವ ಜನಪದ ಪ್ರದರ್ಶನ ಕಲೆ. ಇದು ಅಪ್ಪಟವಾದ ನಾಟಕ. ಬಯಲಾಟವನ್ನು ಆಡಲು ಒಂದು ನಿರ್ದಿಷ್ಟವಾದ ರಂಗಮಂಟಪ ಇದ್ದಂತೆ ಕಂಡು ಬರುವುದಿಲ್ಲ. ಇದಕ್ಕೆ ಕಾರಣ ಸಾಧಾರಣವಾಗಿ ಗ್ರಾಮೀಣರು ತಾವು ನಾಟಕವನ್ನು ಮಾಡಬೇಕೆಂದಾಗ ಆಗಿಂದಾಗ್ಗೆ ರಂಗ ಮಂಟಪವನ್ನು ನಿರ್ಮಿಸಿ, ಆಟ ಮುಗಿದ ನಂತರ ಅದನ್ನು ತೆಗೆದು ಹಾಕುತ್ತಾರೆ. ನಾಲ್ಕು ಕಂಬಗಳನ್ನು ನೆಟ್ಟು, ಆ ಕಂಬಗಳ ಮಧ್ಯೆ ಸ್ವಲ್ಪ ಎತ್ತರದಲ್ಲಿ ಹಲಗೆಗಳನ್ನು ಜೋಡಿಸಿ ಮಂಟಪವನ್ನು ನಿರ್ಮಿಸುತ್ತಾರೆ. ಸಾಧಾರಣವಾಗಿ ಈ ಮಂಟಪ ೧೮ ಅಡಿ ಉದ್ದ, ೯ ಅಡಿ ಅಗಲವಿರುತ್ತದೆ. ಮಂಟಪದ ಮೇಲೆ ಹಲಗೆಗಳು ಜೋಡಿಸಿದ ಕಾರಣದಿಂದ ಪಾತ್ರಧಾರಿಗಳು ಕುಣಿಯಲು ಅನುಕೂಲವಾಗಿರುತ್ತದೆ. ಪ್ರೇಕ್ಷಕರು ಮಂಟಪದ ಮುಂದೆ, ಎಡ ಬಲದಲ್ಲಿ ಕುಳಿತು ನಾಟಕವನ್ನು ವೀಕ್ಷಿಸಲು ಅನುಕೂಲವಾಗಿರುವಂತೆ ಮಂಟಪವನ್ನು ನಿರ್ಮಿಸುತ್ತಾರೆ. ಆದರೂ ಸಾಮಾನ್ಯವಾಗಿ ಗ್ರಾಮಗಳಲ್ಲಿ ಎತ್ತರವಾದ ಪ್ರದೇಶಗಳಲ್ಲಿ (ಮಹಡಿಯ ಮೇಲೆ ನಿಂತುಕೊಂಡಾಗಲಿ, ಹಜಾರ ಅಥವಾ ಚಾವಡಿಕಟ್ಟೆಗಳ ಮೇಲೆ ಕುಳಿತುಕೊಂಡಾಗಲಿ) ಕುಳಿತುಕೊಂಡು ಬಯಲಾಟವನ್ನು ವೀಕ್ಷಿಸುವುದನ್ನು ಗಮನಿಸಬಹುದು.

ಸರ್ವೇ ಸಾಧಾರಣವಾಗಿ ಬಯಲಾಟ ಮಂಟಪವನ್ನು ಯಾವುದಾದರೂ ‘ಒಂದು ದೇವಾಲಯದ ಸಮೀಪದಲ್ಲಾಗಲಿ, ಊರ ಮಧ್ಯಭಾಗದ ‘ಚಾವಡಿ’ ಪ್ರದೇಶಕ್ಕೆ ಹತ್ತಿರದಲ್ಲಾಗಲಿ ನಿರ್ಮಿಸುತ್ತಾರೆ. ದೇವಾಲಯಕ್ಕೆ ಸಮೀಪದಲ್ಲಿ ಇರುವುದರಿಂದ ಆಯಾ ಪಾತ್ರಗಳು ಗುಡಿಯಿಂದ ರಂಗಮಂಟಪಕ್ಕೆ ಹೊರಟು, ತಮ್ಮ ಪಾತ್ರ ಭಾಗ ಮುಗಿಸಿದ ತಕ್ಷಣ ಹಿಂತಿರುಗಿ ಗುಡಿಯೊಳಗೆ ಪ್ರವೇಶಿಸುತ್ತವೆ. ಸಾಧಾರಣವಾಗಿ ದುಷ್ಟ ಪಾತ್ರಗಳು ಇಲ್ಲವೇ ಪೌರಾಣಿಕ ಪಾತ್ರಗಳು ಗುಡಿಯಿಂದ ತಮಟೆಗಳೊಂದಿಗೆ ರಂಗ ಮಂಟಪಕ್ಕೆ ಪ್ರವೇಶಿಸುತ್ತವೆ. ಹೀಗೆ ಪಾತ್ರಗಳು ಗುಡಿಯಿಂದ ಮಂಟಪವನ್ನು ಪ್ರವೇಶಿಸಿ ತಿರುಗಿ ಗುಡಿಗೆ ಹಿಂತಿರುಗಿ ಹೋಗುವುದರಲ್ಲಿ ಆಂತರ್ಯವಿಲ್ಲದೇ ಇಲ್ಲ. ಎಂ.ಎಸ್. ಸುಂಕಾಪುರ ಹೇಳುವಂತೆ ದೇವಾಲಯವೇ ಮೊಟ್ಟಮೊದಲ ರಂಗಸ್ಥಲವಾಗಿದ್ದು, ಕಾಲಕಳೆದಂತೆ ಅದು ಪ್ರೇಕ್ಷಕ ವರ್ಗಕ್ಕೆ ಸಣ್ಣದಾಯಿತೆನಿಸಿದಾಗ, ಬಯಲಿಗೆ ಬಂದು ಅದು ಬಯಲಾಟವಾಯಿತೆನ್ನುವುದರಲ್ಲಿ ಸಂದೇಹವಿಲ್ಲ. ಅಂದು ದೇವಾಲಯಗಳಲ್ಲೇ ಪ್ರಾಥಮಿಕ ಶಿಕ್ಷಣ, ಸಂಗೀತ, ನೃತ್ಯ, ವಾದ್ಯಗೋಷ್ಠಿ ಮೊದಲಾದ ಕಲಾಪ್ರಕಾರಗಳು ನಡೆಯುತ್ತಿದ್ದು, ಪಂಚಾಯಿತಿ ತೀರ್ಪುಗಳು ಸಹಿತ ಗುಡಿಗಳಲ್ಲೇ ನಡೆಯುತ್ತಿದ್ದವೆಂದೂ ಹಾಗಾಗಿ ಗುಡಿಯೇ ಬಯಲಾಟಕ್ಕೆ ರಂಗಸ್ಥಳವಾಗಿ ಪರಿಣಿಸಿತೆಂದೂ ಅಂದಿನ ಪದ್ಧತಿಗಳೇ ರಂಗಸ್ಥಳವಾಗಿ ಪರಿಣಿಸಿತೆಂದೂ ಅಂದಿನ ಪದ್ಧತಿಗಳೇ ಬಯಲಾಟದಲ್ಲಿ ಬಂದು ಸೇರಿದವೆಂದೂ ಸುಂಕಾಪುರ ಅಭಿಪ್ರಾಯಪಡುತ್ತಾರೆ. ಇಂದಿನ ಬಯಲಾಟ ರಂಗಸ್ಥಳಗಳು ಊರ ನಡುವೆ, ದೇವಾಲಯಕ್ಕೆ ಅತಿ ಸಮೀಪದಲ್ಲಿ ಆಗಿಂದಾಗ್ಗೆ ತೆಗೆದುಹಾಕುವುದೇ ಇದಕ್ಕೆ ಪ್ರಬಲ ಸಾಕ್ಷ್ಯ. (ಅನಂತಪುರ ಜಿಲ್ಲೆ, ಕಲ್ಯಾಣ ದುರ್ಗ ತಾಲ್ಲೂಕು, ಮಲಯನೂರು ಗ್ರಾಮದಲ್ಲಿ ಇಂದಿಗೂ ವೇಣುಗೋಪಾಲಸ್ವಾಮಿ ಆಲಯದ ಬಳಿ ಬಯಲಾಟದ ರಂಗಮಂಟಪವನ್ನು ಕಟ್ಟುವುದು, ಗುಡಿಯಿಂದ ದುಷ್ಟಪಾತ್ರಗಳು ತಮಟೆಗಳೊಂದಿಗೆ ರಂಗಸ್ಥಳವನ್ನು ಪ್ರವೇಶಿಸಿ, ತಿರುಗಿ ಗುಡಿಗೆ ಸೇರುವುದು ಮೊದಲಾದವು ಪ್ರತ್ಯಕ್ಷ ನಿದರ್ಶನಗಳು.) ಸಾಧಾರಣವಾಗಿ ಊರ ನಡುವೆ ವಿಶಾಲವಾದ ಪ್ರದೇಶದಲ್ಲಿ ಬಯಲಾಟ ನಡೆಯುವುದನ್ನು ಗಮನಿಸಬಹುದು.

ಬಯಲಾಟಗಳಲ್ಲಿ ಪೌರಾಣಿಕ ಕಥೆಗಳೇ ಅಧಿಕ. ವೀರ, ರೌದ್ರ, ಭಯಾನಕ ರಸಗಳು ಇವುಗಳಲ್ಲಿ ಎಡೆಮಾಡಿಕೊಂಡಿವೆ. ಪಾತ್ರಗಳಿಗೆ ಅನುಗುಣವಾದ ವೇಷಭೂಷಣಗಳು ಬಯಲಾಟವನ್ನು ಶೋಭಾಯಮಾನಗೊಳಿಸುತ್ತವೆ. “Drama of any sort calls for the creation of a play world by the players generally through the use of conventional symbolic objects-masks, costumes, a special area for playing- and conventional styized action.”

ಬಯಲಾಟದಲ್ಲಿನ ಪಾತ್ರಗಳನ್ನು ವೇಷಭೂಷಣ ಗಳಿಗುನುಗುಣವಾಗಿ ೧. ರಾಜರ ಪಾತ್ರಗಳು ೨. ದೇವತೆಗಳ ಪಾತ್ರಗಳು ೩. ರಾಕ್ಷಸ ಪಾತ್ರಗಳು ೪. ಹಾಸ್ಯಪಾತ್ರಗಳು ಎಂದು ವಿಂಗಡಿಸಬಹುದು. ರಾಜನ ಪಾತ್ರ ಕಿರೀಟವನ್ನು ಧರಿಸಿಯೇ ತೀರಬೇಕೆಂಬ ನಿಯಮವಿದೆ. ರಾಣಿಪಾತ್ರ ಸಹಿ ಅರ್ಧಚಂದ್ರಾಕೃತಿ (ಬಿದಿಗೆ ಚಂದ್ರಮ) ಕಿರೀಟವನ್ನು ಧರಿಸುತ್ತದೆ. ಸಾಧಾರಣವಾಗಿ ಶಿರಸ್ಸಿನ ಮುಂದಿನ ಭಾಗದಲ್ಲಿ, ಇಲ್ಲವೇ ಹಿಂಬದಿಯಲ್ಲಿ ಈ ಕಿರೀಟವನ್ನು ಕಟ್ಟುತ್ತಾರೆ. ಸೀರೆ, ಅದಕ್ಕೆ ತಕ್ಕ ಬಣ್ಣಗಳ ಕುಪ್ಪಸ, ಕಿವಿಗಳಿಗೆ ಓಲೆಗಳು, ಮೂಗುತಿಇ, ಸೊಂಟಕ್ಕೆ ಒಡ್ಯಾಣ, ಕುತ್ತಿಗೆಗೆ ಬಂಗಾರ ಇಲ್ಲವೇ ಮುತ್ತುಗಳ ಹಾರಗಳು, ಕಾಲಿಗೆ ಗೆಜ್ಜೆಗಳು, ಉಂಗುರಗಳು, ಕೈಗಳಿಗೆ ಕಡಗಗಳು, ಬಳೆಗಳನ್ನು ಧರಿಸುತ್ತಾರೆ. ರಾಜರಿಗೆ ಸೇವಕರು, ವಂದಿಮಾಗಧಿರಿರುವಂತೆಯೇ, ರಾಣಿಯರಿಗೆ ದಾಸೀ ಜನರಿರುತ್ತಾರೆ. ಪುರುಷ ಪಾತ್ರಗಳು, ಭುಜಕೀರ್ತಿಗಳು, ಕಿರೀಟ. ಗದೆ, ಕಂಕಣಗಳು, ಗೆಜ್ಜೆಗಳು ಕಾಶೀಧೋತ್ರ, ಉತ್ತರೀಯ, ವಕ್ಷಕವಚಂ ಇತ್ಯಾದಿ ಆಭರಣಗಳನ್ನು ಧರಿಸುತ್ತವೆ. ಸಾಧಾರಣವಾಗಿ ಸ್ತ್ರೀ ಪಾತ್ರಗಳನ್ನು ಪುರುಷರೇ ಧರಿಸುವುದು ಪರಿಪಾಠ. ಪಾತ್ರಗಳಿಗೆ ಪ್ರಸಾಧನ ಮಾಡುವುದೂ ಒಂದು ಕಲೆ. ಆಯಾ ಪಾತ್ರಗಳ ಭಾವಗಳಿಗೆ, ಭಾಷೆಗಳಿಗೆ ತಕ್ಕಂತಹ ಬಣ್ಣಗಳನ್ನು ಹಾಕುವುದು ಬಯಲಾಟದಲ್ಲಿಯ ಪ್ರತ್ಯೇಕತೆ.

ಪಾತ್ರಗಳ ಸಂಭಾಷಣೆಯಲ್ಲಿ ಚಾತುರ್ಯ, ಹಾಡಿನಲ್ಲಿ ಕಂಠ ಮಾಧುರ್ಯ, ಕುಣಿತ ನೆಗೆತಗಳ್ಲಿ ದೇಹ ದಾರ್ಢ್ಯತೆ ಮೊದಲಾದವು ಪ್ರೇಕ್ಷಕರನ್ನು ಆಕರ್ಷಿಸುವ ಅಂಶಗಳು. ಬಯಲಾಟ ಸಂಗೀತ, ಸಾಹಿತ್ಯ, ಸಂಭಾಷಣೆ, ನೃತ್ಯ ಕಲಾ ಸಮ್ಮಿಲನ. ಬಯಲಾಟವೇ ಬೀದಿನಾಟಕ. ಇದೇ ಕಾಲ ಕ್ರಮೇಣ ಯಕ್ಷಗಾನ ಪ್ರಕಾರವಾಗಿ ರೂಪತಳೆದಿತೆನ್ನಬಹುದು. ಬಯಲಾಟ ಸಾಧಾರಣವಾಗಿ ರಾತ್ರಿ ಹತ್ತುಗಂಟೆ ಸಮಯದಲ್ಲಿ ಆರಂಭವಾಗಿ ಮಾರನೆಯ ದಿನ ಮುಂಜಾನೆ ೫-೬ ಗಂಟೆಗಳಿಗೆ ಮುಕ್ತಾಯಗೊಳ್ಳುತ್ತದೆ. ಬಯಲಾಟ ವಿನೋದಾತ್ಮಕ ಪ್ರಕಾರವಾದ್ದರಿಂದ ಪ್ರೇಕ್ಷಕರಿಗೆ ಹಿಂಸೆಯಾಗುವುದಿಲ್ಲ.

ಆಟ ಪ್ರಾರಂಭವಾಗುವುದಕ್ಕೂ ಮುನ್ನ ರಂಗಸ್ಥಲಕ್ಕೆ ತೆಂಗಿನಕಾಯಿ ಒಡೆದು ಪೂಜೆ ನಡೆಸುತ್ತಾರೆ. ನಿಂಬೆಹಣ್ಣು ಹೆಚ್ಚಿ ಒಂದು ಭಾಗವನ್ನು ಸೂರಿಗೂ, ಒಂದು ಭಾಗವನ್ನು ಭೂಮಿಗೂ ಎಸೆಯುತ್ತಾರೆ. ಎದುರಾಳಿಗಳು ಮಂತ್ರ ಪ್ರಯೋಗವನ್ನು ಮಾಡಬಹುದೆಂದು, ‘ರಾಹು’ವು ಹಿಡಿಯಬಾರದೆಂದು, ಇಂತಹ ಶಾಂತಿಯನ್ನು ಮಾಡುತ್ತಾರೆ. ಮೃದಂಗ, ಮುಖವೀಣೆ, ಹಾರ‍್ಮೋನಿಯಂ, ಬಯಲಾಟಗಳಲ್ಲಿ ಉಪಯೋಗಿಸುವ ವಾದ್ಯವಿಶೇಷಗಳು. ಪಾತ್ರಗಳು ಕುಣಿಯುತ್ತಾ ಅಭಿನಯಿಸುವಾಗ, ಆ ಕುಣಿತಕ್ಕೆ ತಕ್ಕಂತೆ ವಾದ್ಯಗಳನ್ನು ಪ್ರಯೋಗಿಸುತ್ತಾರೆ. ವಿಘ್ನೇಶ್ವರ ಸ್ತೋತ್ರದಿಂದ ನಾಟಕ ಆರಂಭವಾಗುತ್ತದೆ. ಸೂತ್ರಧಾರ, ಸಂಗೀತವಾದ್ಯಕಾರ ಇದನ್ನು ನಿರ್ವಹಿಸುತ್ತಾರೆ. ಸೂತ್ರಧಾರನನ್ನು ‘ಅಯ್ಯನವರು’ (ರಾಯಲಸೀಮೆ ಮತ್ತು ಅನಂತಪುರ ಜಿಲ್ಲೆಗಳಲ್ಲಿ) ಎಂದು ಕರೆಯುತ್ತಾರೆ. ವಿಘ್ನೇಶ್ವರ ಸ್ತೋತ್ರವಾದ ಕೂಡಲೇ ಗುರುಸ್ತೋತ್ರ ಮಾಡುತ್ತಾರೆ. ಈ ನಾಟಕದಲ್ಲಿ ತಪ್ಪುಗಳಿದ್ದರೆ ಅವುಗಳಲ್ಲಿ ಲೇಖಕನ ತಪ್ಪುಗಳೆಂದು ಭಾವಿಸಲು ಕೋರುತ್ತಾರೆ. ಹಿಂದೆಯೇ ಶಾರದಾಸ್ತೋತ್ರ. ಬಯಲಾಟದ ಅಂತ್ಯದಲ್ಲಿ ಮಂಗಳವನ್ನು ಹಾಡುತ್ತಾರೆ. ಬಯಲಾಟದ ಹಾಡುಗಳಲ್ಲಿ ರಾಗತಾಳಗಳ ಪ್ರಯೋಗವಿರುತ್ತದೆ.

ಸೂತ್ರಧಾರನೇ ಭಾಗವತ. ‘ಸಾರಥಿ’ ಪಾತ್ರ ಹಾಸ್ಯಪಾತ್ರದಂತೆ. ಪಾತ್ರಗಳನ್ನು ಹಾಸ್ಯೋಕ್ತಿಗಳಿಂದ ಪರಿಚಯ ಮಾಡುತ್ತಿರುತ್ತಾನೆ. ಯಾವ ಬಯಲಾಟದಲ್ಲಾದರೂ ಗೋಪಾಲಕೃಷ್ಣನ ಪಾತ್ರ ತಪ್ಪದೇ ಇರಬೇಕು. ಆ ಪಾತ್ರದ ಹಿಂದೆಯೇ ಮಿಕ್ಕ ಪಾತ್ರಗಳು ರಂಗಸ್ಥಳಕ್ಕೆ ಬರುತ್ತವೆ. ಬಯಲಾಟ ಜಾನಪದರ ಜೀವನದ ಅತ್ಯಂತ ಪ್ರಧಾನವಾದ ಪ್ರದರ್ಶನ ಜಾನಪದ ಕಲಾರೂಪ. ಸಾಧಾರಣ ನಾಟಕಗಳಿಗೆ ಪ್ರೇಕ್ಷಕರು ಹಣವನ್ನು ತೆತ್ತು ನಾಟಕವನ್ನು ನೋಡುವುದು ರೂಢಿ. ಆದರೆ ಗ್ರಾಮಗಳಲ್ಲಿ ನಾಟಕಗಳ ಮೇಲೆ ಅಭಿರುಚಿ ಇರುವ ನಟರು, ತಮಗೆ ತಾವೇ ಚಂದಾ ಹಾಕಿಕೊಂಡು, ನಾಟಕಗಳನ್ನು ಕಂಠಸ್ಥ ಮಾಡಿ ಪ್ರದರ್ಶನವನ್ನು ನೀಡುತ್ತಾರೆ. ಬಯಲಾಟವನ್ನು ಗೀತರೂಪಕವೆನ್ನಬಹುದು. ಹಾಡುತ್ತಾ ಕುಣಿಯುವುದು, ಕುಣಿಯುತ್ತಾ ಹಾಡುವುದು ಇದರಲ್ಲಿಯ ವಿಶೇಷ. ಬಯಲಾಟ ಪದ್ಯಗದ್ಯಮಯವಾಗಿ ನಾಟಕೀಯತೆಯಿಂದ ಕೂಡಿರುವ ಕಾರಣಕ್ಕಾಗಿಯೇ ಇದನ್ನು ಜಾನಪದ ನಾಟಕವೆನ್ನುತ್ತೇವೆ.

ಬಯಲಾಟ ಪ್ರದರ್ಶನದಲ್ಲಿ ವಾರ ನಿಷೇಧವಿದೆ. ಮಂಗಳವಾರಗಳಲ್ಲಿ ಪೂರ್ವಾಭಿಮುಖವಾಗಿ ಬಯಲಾಟವನ್ನು ಪ್ರದರ್ಶಿಸಬಹುದು. ಹಾಗೆ ಪ್ರದರ್ಶಿಸಿದ್ದೇ ಆದರೆ ಸೂತ್ರಧಾರನಿಗೆ, ಪಾತ್ರಧಾರಿಗಳಿಗೆ, ಸಂಗೀತ ವಾದ್ಯದವರಿಗೆ ಅಪಾಯ ಸಂಭವಿಸುತ್ತದೆಂಬ ನಂಬಿಕೆ ಇದೆ. ನಾಟಕ ನಿಂತುಹೋಗುವಂತಹ ಪ್ರಮಾದವೂ ಹೆಚ್ಚು. ಬುಧ, ಗುರುವಾರಗಳಲ್ಲಿ ದಕ್ಷಿಣಾಭಿಮುಖವಾಗಿ ಪ್ರದರ್ಶಿಸಬಹುದು. ಶುಕ್ರ, ಶನಿವಾರಗಳಲ್ಲಿ ಪಶ್ಚಿಮಾಭಿಮುಖವಾಗಿ ಬಯಲಾಟವನ್ನು ಆಡಬಹುದು.

ಬಯಲಾಟಕ್ಕೆ ಮೂಲ ‘ಬೊಂಬೆಯಾಟ’ ಅನ್ನುವ ಅಭಿಪ್ರಾಯವಿದೆ. ಬೊಂಬೆಗಳನ್ನು ಆಡಿಸುತ್ತಾ ಕಥೆಯನ್ನು ನಡೆಸುವವನೇ ದೇವಸ್ಥಾನದಲ್ಲಿ ಸೂತ್ರಧಾರನಾದ. ಬೊಂಬೆಗಳನ್ನು ಆಡಿಸಿ ವಿವಿಧ ಪಾತ್ರಗಳ ಹಾವಭಾವಗಳನ್ನು ಪ್ರದರ್ಶಿಸುವ ಸೂತ್ರಧಾರನೇ ಬಯಲಾಟದಲ್ಲಿ ಕಥೆ ನಡೆಸುವ ಭಾಗವತ. ಸಂಸ್ಕೃತ ನಾಟಕಗಳಿಗೂ ಬೊಂಬೆಯಾಟವೇ ಮೂಲವೆಂದು ಕೆಲವರ ಅಭಿಪ್ರಾಯ. ‘Puppet is the source of Sanskrit drama and that more over has spread over the world’. Shyam Parmar ಸಹಾ ಇದೇ ಅಭಿಪ್ರಾಯವನ್ನು ಹೇಳಿದ್ದಾನೆ. It was perhaps the primitive urge of the people for creating life-like movement through figures which later developed into a theatre form, imbibing elements of all arts painting, sculpture dance, drama and music.”

ರಾಯಲಸೀಮೆಯಲ್ಲಿ ಬಯಲಾಟಗಳ ಪ್ರದರ್ಶನಗಳು ಅಧಿಕ. ಅನಂತಪುರ ಮಂಡಲದಲ್ಲಿ, ಪೆನುಗೊಂಡ, ಹಿಂದೂಪುರ, ಕಲ್ಯಾಣದುರ್ಗ ತಾಲ್ಲೂಕುಗಳಲ್ಲಿ ಇಂತಹ ಪ್ರದರ್ಶನಗಳು ಕಂಡುಬರುತ್ತವೆ. ಅನೇಕ ಸಂದರ್ಭಗಳಲ್ಲಿ ಬಯಲಾಟಗಳು ಕನ್ನಡ ಪ್ರಾಂತ್ಯದಲ್ಲೇ ಅಧಿಕ. ಕನ್ನಡ ಪ್ರಾಂತ್ಯಕ್ಕೆ ಹತ್ತಿರದಲ್ಲಿರುವುದರಿಂದ ಬಯಲಾಟಗಳು ಆಂಧ್ರಪ್ರದೇಶದಲ್ಲೂ ಪ್ರವೇಶಿಸಿರುವ ಸಾಧ್ಯತೆಗಳಿವೆ. ಕನ್ನಡದಲ್ಲಿ ಈ ನಾಟಕಗಳನ್ನು ಬಯಲಾಟಗಳೆಂದೇ ಕರೆಯುತ್ತಾರೆ. ಈ ಪ್ರಕಾರ ಎಲ್ಲಾ ವಿಧಗಳಲ್ಲೂ ಕನ್ನಡ ಬಯಲಾಟಗಳನ್ನೇ ಹೋಲುತ್ತವೆ. ಈ ಬಯಲಾಟಗಳನ್ನೇ ಕೆಲವು ಸ್ಥಳಗಳಲ್ಲಿ ಯಕ್ಷಗಾನಗಳೆಂದು ಕರೆಯುತ್ತಾರೆ. ಆದರೂ ಬಯಲಾಟ ಯಕ್ಷಗಾನಕ್ಕಿಂತ ಪ್ರಾಚೀನವಾದುದು.

ಅನಂತಪುರ ಮಂಡದಲ್ಲಿ ಪ್ರಸಿದ್ಧವಾದ ಬಯಲಾಟಗಳಲ್ಲಿ ಕನಕತಾರ, ಲವಕುಶ, ವಾಲಿ-ಸುಗ್ರೀವರ ಕಥೆ, ವೀರಾಭಿಮನ್ಯು, ದ್ರೌಪದೀ ವಸ್ತ್ರಾಪಹರಣ ಮೊದಲಾದವು ಪ್ರಮುಖ. ಕನ್ನಡದಲ್ಲಿ ಪ್ರದರ್ಶಿಸಲ್ಪಡುವ ಬಯಲಾಟಗಳಲ್ಲಿ ಗಯೋಪಾಖ್ಯಾನ, ಕೃಷ್ಣಾರ್ಜುನಯುದ್ಧ, ಚಿತ್ರಕೇತು ಮಹಾರಾಜನ ಕಥೆ, ಮಯೂರಧ್ವಜ, ಕರಿಬಂಟನ ಕಥೆ ಮೊದಲಾದವು ಹೆಸರಿಸುವಂಥವು.

ಜಿ.ಎಸ್.ಎಂ. ಅನುವಾದ ಎಸ್.ಎಲ್.ಡಿ.