ಭಗವತಿಯಾಟ್ ಕೇರಳದ ಪ್ರಾಚೀನ ಪ್ರಾಂತವಾಗಿದ್ದ ವೆಚ್ಚತ್ತುನಾಡಿನಲ್ಲಿ ಪ್ರಚಲಿತವಾಗಿರುವ ಆರಾಧನಕಲೆಯೇ ಭಗವತಿಯಾಟ್. ಮಲಪುರಂ ಜಿಲ್ಲೆಯ ವೆಟ್ಟಂ, ತಲಕಾಡ್, ತೃಪ್ರಂಗಾಡ್, ಪುರತ್ತೂರ್‌, ತೃಕಂಡಿಯೂರ್, ತಾನೂರು, ತಾನಳೂರ್‌, ಒಳೂರ್, ಕ್ಲಾರಿ, ಕಲ್ಪಕಂಚೇರಿ, ನಿರಮರತೂರ್‌, ಪಚ್ಚಾಟಿರಿ, ರಾಯಿರಮಂಗಲಂ ಮೊದಲಾದ ಪ್ರದೇಶಗಳಲ್ಲಿ ಭಗವತಿಯಾಟ್ ನಡೆಯುತ್ತದೆ. ನಾಯರ್, ತೀಯ, ಪೆರುವಣ್ಣನ್ ಮೊದಲಾದ ಸಮುದಾಯಗಳ ತರ, ಮಂಡಗಂ, ಕೋಟಗಳಲ್ಲಿ ‘ಭಗವತಿಯಾಟ್’ ನಡೆಯುತ್ತದೆ. ಈ ಆರಾಧನ ಕೇಂದ್ರಗಳಲ್ಲಿ ನಾಯರ್ ಸಮುದಾಯದವರಿಗೆ ಅಧಿಕಾರ. ಭಗವತಿಯಾಟದ ಪೂಜಾವಿಧಿಗಳನ್ನು ಅವರೇ ನಿರ್ವಹಿಸುತ್ತಾರೆ. ಅವರಿಗೆ ‘ವೆಳ್ಳರಿಕಮ್ಮಳ್’ ಎಂದು ಹೆಸರು. ಭಗವತಿಯ ಕೋಲವನ್ನು ಕಟ್ಟುವವರು ಪೆರುವಣ್ಣಾನ್ ಸಮುದಾಯದವರು.

‘ಭಗವತಿಯಾಟ್’ ಎಂಬ ಪದದ ಅರ್ಥ ಭಗವತಿ ಕೋಲವನ್ನು ಧರಿಸಿ ಆಡುವುದು ಎಂದಾಗಿದೆ. ಭಗವತಿ ದೇವಿಯ ಅವತಾರ ತಣ್ಣೀರ್ ಭಗವತಿ. ಶಾಂತಸ್ವರೂಪಿಣಿಯಾದ ಈ ದೇವಿಯ ಸಂತುಷ್ಟಿಗಾಗಿ ಈ ಆರಾಧನೆಯನ್ನು ನಡೆಸುವರು. ತಣ್ಣೀರ್‌ಭಗವತಿ ವೆಟ್ಟತ್ತುನಾಡಿನ ಮುಖ್ಯದೈವ. ಒಂದು ಐತಿಹ್ಯದ ಪ್ರಕಾರ ವೆಟ್ಟತ್ತುರಾಜನು ಒಂದು ಬಾರಿ ನಾಡಿನ ಸಂಪತ್ತಿಗಾಗಿ ತಪಸ್ಸು ಮಾಡಿದನಂತೆ. ರಾಜನ ತಪಸ್ಸಿಗೆ ಮೆಚ್ಚಿನ ದೇವಿಯು ಪ್ರತ್ಯಕ್ಷಳಾಗಿ ಏನು ಬೇಕೆಂದು ವರವನ್ನು ಕೇಳುತ್ತಾಳೆ. ಪತ್ನಿಯಾಗಿ ಜತೆಯಲ್ಲಿ ಬರಬೇಕೆಂದು ರಾಜ ಹೇಳುತ್ತಾನೆ. ದೇವಿ ಕೆಲವು ಶರತ್ತುಗಳೊಂದಿಗೆ ಒಪ್ಪುತ್ತಾಳೆ. ರಾಜ ಮುಂದೆ ನಡೆಯಬೇಕೆಂದೂ ತಾನು ಹಿಂದಿನಿಂದ ಬರುವನೆಂದೂ ಹೇಳಿದ ದೇವಿ ಒಮ್ಮೆಯೂ ದಾರಿಯಲ್ಲಿ ತಿರುಗಿ ನೋಡಬಾರದೆಂದು ರಾಜನಿಗೆ ಶರತ್ತು ವಿಧಿಸಿದಳು. ಕಾಡುದಾರಿಯಲ್ಲಿ ನಡೆದು, ಕಡಲದಾರಿಯನ್ನು ದಾಟಿ ಅವರಿಬ್ಬರೂ ವೆಟ್ಟತ್ತುನಾಡಿಗೆ ತಲುಪುತ್ತಾರೆ. ಭಗವತಿ ವೆಟ್ಟತ್ತುನಾಡಿಗೆ ಕಾಲಿರಿಸಿದಾಗ, ಗೆಜ್ಜೆಯ ಶಬ್ದವಾಗುತ್ತಾರೆ. ಆಗ ರಾಜ ತಿರುಗಿ ನೋಡುತ್ತಾನೆ. ಕೂಡಲೇ ದೇವಿ ರಾಜನನ್ನು ಆಶೀರ್ವದಿಸಿ ಮರೆಯಾಗುವಳು. ಆಗ ರಾಜನ ದೇಹದ ಎಡಭಾಗ ಕಂಪಿಸುತ್ತದೆ. ಜ್ಯೋತಿಷಿಯನ್ನು ಸಂಪರ್ಕಿಸಿದಾಗ ದೇವಿ ರಾಜನ ದೇಹವನ್ನು ಆವರಿಸಿರುವುದಾಗಿ ತಿಳಿಯುತ್ತದೆ. ಭಗವತಿಯ ಚೈತನ್ಯವನ್ನು ರಾಜನಿಂದ ಹೊರದೆಗೆಯಲು ಪೆರುವಣ್ಣಾನಿಗೆ ಮಾತ್ರ ಸಾಧ್ಯ ಎಂದು ತಿಳಿಯುತ್ತದೆ. ಹೀಗೆ ಪೆರುವಣ್ಣಾನಿಗೆ ಮಾತ್ರ ಸಾಧ್ಯ ಎಂದು ತಿಳಿಯುತ್ತದೆ. ಹೀಗೆ ಪೆರುವಣ್ಣಾನ್ ಬಂದು ಕೆಲವು ವಿಧಿಗಳನ್ನು ನಡೆಸಿ, ತಣ್ಣೀರ್‌ಭಗವತಿಯನ್ನು ಸ್ವೀಕರಿಸುವನು. ಹೀಗೆ ಪ್ರತಿವರ್ಷ ಪೆರುವಣ್ಣಾನ್ ಭಗವತಿಯ ಕೋಲವನ್ನು ಕಟ್ಟಿ ಪ್ರದರ್ಶಿಸಬೇಕೆಂದು ನಿರ್ಧಾರವಾಗುತ್ತದೆ.

ವೆಟ್ಟತ್ತುನಾಡಿನ ೭೨ ಕೇಂದ್ರಗಳಲ್ಲಿ ಭಗವತಿಯಾಟ್ ನಡೆಯುತ್ತದೆ. ತುಲಾಮಾಸ ಹತ್ತರಿಂದ ವೃಷಭೂ ಮಾಸದ ಮಧ್ಯದವರೆಗೆ ಈ ಆರಾಧನೆ ನಡೆಯುವುದು. ಮಲಬಾರಿನ ಪ್ರಧಾನ ಕಾವು ಆಗಿರುವ ಮೂನ್ನಿಯೂರ್ ಕಳಿಯಾಟ ಕಾವಿನಲ್ಲಿ ಬೇಸಾಯಕ್ಕೆ ಮೊದಲೇ ಭಗವತಿಯಾಟುಗಳು ಮುಗಿಯಬೇಕೆಂಬ ಬದ್ಧತೆ ಇದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರಗಳಲ್ಲಿ ಹಿರಿಯೂರು ದಿನಾಂಕ ನಿಶ್ಚಯಿಸಿ ಭಗವತಿಯಾಟವನ್ನು ನಡೆಸುತ್ತಾರೆ.

ಭಗವತಿಯಾಟವು ಅನೇಕ ವಿಧಿಯಾಚರಣೆಗಳೊಂದಿಗೆ ನಡೆಯುವುದು. ಬೆಳಗ್ಗಿನ ಪೂಜೆ, ಮಧ್ಯಾಹ್ನ ಪೂಜೆ, ಆಟ್ಟಂ ಉಣರ್ತಲ್, ತೋಟ್ಟಂ, ತಾಲಟ್ಟಲಿ, ಮೆರವಣಿಗೆ, ವೆಳಿಚ್ಚಪಾಡ್, ಕೋಲ, ಕ್ಷೇತ್ರಪಾಲಕನ ಕೋಲ, ಗುರುದಿ, ಕೋಳಿಬಲಿ, ವೆಳಿಚ್ಚ ಪಾಡನ ನುಡಿಗಟ್ಟು, ಮುಡಿಯಾಟಂ, ಆಟ್‌ಕೂಡಲ್ ಎಂಬ ಕ್ರಮದಲ್ಲಿ ಆಚರಣೆಗಳು ನಡೆಯುತ್ತವೆ. ಭಗವತಿ ಕೋಲದ ಮುಂಚಿತವಾಗಿ ಕೆಲವೆಡೆಗಳಲ್ಲಿ ಮನರಂಜನೆಯ ಅಂಗವಾಗಿ ಪೊರಾಟ್‌ನಡೆಸುವ ಕ್ರಮವಿದೆ. ಭಗವತಿ ಕೋಲದ ಮುಡಿಯ ಹಿಂಭಾಗದಲ್ಲಿ ನವಿಲುಗರಿಯನ್ನು ಅಳವಡಿಸಿರುತ್ತಾರೆ. ಆದುದರಿಂದ ಮುಡಿಯಾಟವು ಮಯಿಲಾಟ (ನವಿಲಾಟ)ವನ್ನು ಹೋಲುವುದು.

ಭಗವತಿಯಾಟವು ವೆಟ್ಟತ್ತುನಾಡಿನ ಸಮೃದ್ಧಿಗಾಗಿ ಜರುಗುತ್ತದೆ. ರೋಗ ನಿವಾರಣೆ, ಬೆಳೆ ಹಾಗೂ ಜಾನುವಾರುಗಳ ರಕ್ಷಣೆ, ಸಂಪತ್ತಿನ ವೃದ್ಧಿ ಈ ಆರಾಧನೆಯ ಹಿಂದಿರುವ ಉದ್ದೇಶಗಳಾಗಿವೆ. ಅನೇಕ ಕೇಂದ್ರಗಳಲ್ಲಿ ಭಗವತಿಯಾಟ್ ನಿಂತು ಹೋಗಿದೆ. ಇನ್ನು ಕೆಲವೆಡೆ ಧಾರ್ಮಿಕ ಆರಾಧನೆಯಾಗಿ ಉಳಿದುಕೊಂಡಿದೆ.

ಎಸ್.ಕೆ. ಅನುವಾದ ಎನ್.ಎಸ್.

 

ಭರಣಿಪಾಟ್ ಮಧ್ಯಕೇರಳವಾದ ತ್ರಿಶೂರು ಜಿಲ್ಲೆಯ ಕೊಡಂಗಲ್ಲೂರು ಕುರುಂಬಾ ಭಗವತಿ ಕ್ಷೇತ್ರದಲ್ಲಿ ಭರಣಿ ಉತ್ಸವ ಸಂದರ್ಭದಲ್ಲಿ ಭಕ್ತರು ಹಾಡುವ ಹಾಡುಗಳನ್ನು ‘ಭರಣಿಪಾಟು’ ಎನ್ನುವರು. ಮೀನಮಾಸದ ರೇವತಿ ನಕ್ಷತ್ರ ಹಾಗೂ ಆಶ್ವತಿ ನಕ್ಷತ್ರ ದಿವಸಗಳಲ್ಲಿ ಭಕ್ತರು ಭರಣಿಪಾಟು ಹಾಡುವರು. ಈ ಭಕ್ತರನ್ನು ‘ಭರಣಿಕಾರ್’ ಎಂದು ಕರೆಯುವರು.

ಕಾಳಿ ಮತ್ತು ದಾರಿಕ ಯುದ್ಧ ಕಥೆ ಭರಣಿಪಾಟುಗಳ ವಸ್ತುವಾದರೂ, ಕಾಳಿಸ್ತುತಿ, ರಾವಣೋದ್ಭವ, ಮಾರ್ಕಂಡೇಯ ಪುರಾಣಗಳನ್ನು ಅಳವಡಿಸುವ ಕ್ರಮವಿದೆ. ಪುರಾಣಕಥೆಗಳ ಜತೆಗೆ ಸಮಕಾಲೀನ ಸಾಮಾಜಿಕ ರಾಜಕೀಯ ಸಂಗತಿಗಳೂ, ಅಶ್ಲೀಲವಾದ ಲೈಂಗಿಕ ವಿಚಾರಗಳೂ ಈ ಹಾಡುಗಳಲ್ಲಿ ಕಾಣಿಸುತ್ತವೆ. ಆದುದರಿಂದ ಇವುಗಳನ್ನು ಬೈಗುಳದ ಹಾಡುಗಳು ಎಂದೂ ಕರೆಯುತ್ತಾರೆ.

ಭರಣಿಕಾರರು ತಂಡ ತಂಡವಾಗಿ ವೃತ್ತಾಕಾರದಲ್ಲಿ ನಿಂತು ಹಾಡುತ್ತಾರೆ. ಒಬ್ಬ ಮೊದಲಿಗೆ ಹಾಡುವಾಗ, ಉಳಿದವರು ದನಿಗೂಡಿಸುತ್ತಾರೆ. ಹಾಡುವವರ ಕೈಗಳಲ್ಲಿ ಒಂದು ಅಡಿ ಉದ್ದವಿರುವ ಮರದ ಎರಡು ಕೋಲುಗಳಿರುತ್ತವೆ. ಹಾಡಿನ ತಾಳಕ್ಕನುಸಾರವಾಗಿ ಈ ಕೋಲುಗಳನ್ನು ಪರಸ್ಪರ ಬಡಿದು ಶಬ್ದ ಮಾಡುತ್ತಾರೆ. ತಂಡದಲ್ಲಿ ಒಬ್ಬ ಸಾಹಿಯವನ್ನು ಹಾಡುವಾಗ ಉಟ್ಟಿದವರು ‘ತಾನಾರೊ…. ತಾನಾದೋ ತಕ… ತಾನಾರೋ ತಾನಾರೋ…’ ಎಂದು ಪಲ್ಲವಿಯನ್ನು ಹಾಡುವರು. ಆಬಾಲವೃದ್ಧರಾಗಿಯಾಗಿ ಎಲ್ಲರೂ ಈ ಹಾಡುವ ವಿಧಿಯಲ್ಲಿ ಪಾ‌ಲ್ಗೊಳ್ಳುತ್ತಾರೆ.

ಭಗವತಿಯ ಸಂತುಷ್ಟಿಗಾಗಿ, ವಿಧಿಯಾಚರಣೆಯ ಅಂಗವಾಗಿ ಬೈಗುಳದ ಹಾಡುಗಳನ್ನು ಹಾಡುವರು. ಭಗ, ಲಿಂಗ ಮೊದಲಾದ ಶಬ್ದಗಳಿಂದ ಕೂಡಿದ ಇಂತಹ ಹಾಡುಗಳು ದೆವಿಗೆ ತುಂಬ ಪ್ರಿಯವಾದುವು ಎಂಬುದು ನಂಬಿಕೆ. ಪ್ರಾಚೀನ ಕಾಲದಲ್ಲಿ ಭರಣಿ ಪಾಟುಗಳನ್ನು ಹಾಡುತ್ತಾ ಭಕ್ತರು ಕೊಡಂಗಲ್ಲೂರು ಯಾತ್ರೆಯನ್ನು ಮಾಡುತ್ತಿದ್ದರು. ೧೯೫೪ ರಿಂದ ದೇವಸ್ಥಾನದ ಹೊರಗೆ ಅಶ್ಲೀಲ ಹಾಡುಗಳನ್ನು ಹಾಡುವುದಕ್ಕೆ ನಿಷೇಧವಿದೆ.

ಕೆ.ವಿ.ಎಸ್. ಅನುವಾದ ಎನ್.ಎಸ್.

 

ಭಿಲ್ಲರು ಅತಿ ದೊಡ್ಡ ಬುಡಕಟ್ಟು ಸಮುದಾಯದವಾದ ಭಿಲ್ಲಜನ ಮಧ್ಯಭಾರತದಲ್ಲೆಲ್ಲಾ ಹರಡಿಕೊಂಡಿದ್ದಾರೆ. ರಾಜಸ್ಥಾನ ಮತ್ತು ಗುಜರಾತ್ ರಾಜ್ಯಗಳಲ್ಲಿಯೂ ವಾಸವಾಗಿದ್ದಾರೆ. ಆಂಧ್ರ ರಾಜ್ಯದಲ್ಲಿ ಇವರ ಸಂಖ್ಯೆ ವಿರಳ. ಸಾಕ್ಷರತೆಯ ಪ್ರಮಾಣ ತುಂಬಾ ಕಡಿಮೆ.

ಭಾರತ ದೇಶದ ಅನೇಕ ಪುರಾಣಗಳಲ್ಲಿ ಇವರ ಉಲ್ಲೇಖವಿದೆ. ರಾಮಾಯಣ ಮಹಾಭಾರತ ಕಾಲಗಳಿಂದಲೂ ಇವರು ಭಾರತದ ಕಾಡುಗಳಲ್ಲಿ ವಾಸಮಾಡುತ್ತಿದ್ದರೆಂದು ತಿಳಿದುಬರುತ್ತದೆ. ತೆಲುಗು ಸಾಹಿತ್ಯದಲ್ಲೂ ಅನೇಕ ಕಡೆ ಇವರ ಬಗೆಗಿನ ಉಲ್ಲೇಖಗಳು ಕಂಡುಬರುತ್ತವೆ. ಇವರ ಮುಖ್ಯವೃತ್ತಿ ಬೇಟೆ. ಆಂಧ್ರದಲ್ಲಿ ಈಗ ಇವರ ಸಂಖ್ಯೆ ಬಹಳಷ್ಟು ಕಡಮೆಯಾಗಿದೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೪೧೨. ಅಂದರೆ ಶೇಕಡಾ ೦.೦೦೮.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಭೂತವೈದ್ಯಂ ಆಕಾಲದಲ್ಲಿ ಸಾವನ್ನಪ್ಪಿದವರ ಆತ್ಮಗಳು ಪ್ರೇತಾತ್ಮಗಳಾಗುತ್ತವೆಂದು ಗ್ರಾಮೀಣ ಜನ ನಂಬುತ್ತಾರೆ. ಇಂತಹ ಪ್ರೇತಾತ್ಮಗಳನ್ನು ಭೂತ, ದೆವ್ವ, ಗಾಳಿ ಎಂದು ಹೇಳುತ್ತಾರೆ. ಈ ರೀತಿಯ ಪ್ರೇತಾತ್ಮಗಳು ಮನುಷ್ಯರೆಂದರೆ ವೈರಿಗಳೆಂದು ತಿಳಿಯುತ್ತವೆ. ಆದ್ದರಿಂದ ಮನುಷ್ಯರನ್ನು ವಿವಿಧ ರೀತಿ ಪೀಡಿಸಿ, ಹಿಡಿಯುವುದಕ್ಕೆ ಪ್ರಯತ್ನ ಮಾಡುತ್ತವೆ. ಸಾಮಾನ್ಯವಾಗಿ ಗಂಡಸರನ್ನು ಹೆಣ್ಣು ದೆವ್ವಗಳು, ಹೆಂಗಸರನ್ನು ಗಂಡು ದೆವ್ವಗಳು ಹಿಡಿಯುತ್ತವೆ. ಹೀಗೆ ಹಿಡಿದ ನಂತರ ಅವರನ್ನು ಕಾಮಿಸಿ ತಮ್ಮ ಜೊತೆಗೆ ತೆಗೆದುಕೊಂಡು ಹೋಗುತ್ತವೆ. ಎಂದು ಜನ ನಂಬುತ್ತಾರೆ. ಹೀಗೆ ದೆವ್ವ ಹಿಡಿದವರಿಗೆ ಮಾಡುವ ವೈದ್ಯವೆ ಭೂತವೈದ್ಯ. ದೆವ್ವ ಹಿಡಿದವರಲ್ಲಿ ಕೆಲವು ಲಕ್ಷಣಗಳು ಕಾಣಿಸುತ್ತವೆ. ತಲೆಯ ಕೂದಲು ಕೆದರಿರುವುದು, ಕಣ್ಣಿನ ಗುಡ್ಡೆಯನ್ನು ದೊಡ್ಡದಾಗಿ ಮಾಡುವುದು, ಕುಳಿತಿರುವ ಜಾಗದಲ್ಲೆ ಹೀಗೆ ಹಾಗೆ ತೂರಾಡುವುದು, ಅಸಂಬದ್ಧವಾದ ಮಾತು, ಆಳುವುದು, ನಗುವುದು, ಯಾರಾದರೂ ‘ನೀನ್ಯಾರೆಂದು’ ಕೇಳಿದರೆ ಇಂತಹವರ ಆತ್ಮ ಎಂದು ಹೇಳುವುದು ಜಾಸ್ತಿ ಊಟ ಮಾಡುವುದು ಇಲ್ಲದಿದ್ದರೆ ಏನನ್ನೂ ತಿನ್ನದೇ ಇರುವುದು ಇದ್ದಕ್ಕೆ ಇದ್ದ ಹಾಗೆ ಅವಾಹನೆ ಆಗುವುದು, ಮತ್ತೆ ಬಿಟ್ಟು ಹೋಗುವುದು ಆಗುತ್ತದೆ. ದೆವ್ವ ಬಿಟ್ಟ ನಂತರ ನಿದ್ರೆಯಿಂದ ಎದ್ದವರ ಹಾಗೆ ಎದ್ದು ಕೂರುವುದು, ಮೈಯೆಲ್ಲಾ ಹಿಂಡಿದಂತೆ ಆಗುತ್ತದೆ ಎಂದು ಹೇಳುವಂಥ ಲಕ್ಷಣಗಳು ಕಾಣಿಸುತ್ತವೆ. ಇವಲ್ಲದೆ ಇವರ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಯಾವಾಗಲೂ ಏನೋ ಯೋಚನೆ ಮಾಡುತ್ತಿರುವ ಹಾಗೆ ಕುಳಿತಿರುತ್ತಾರೆ. ಕೆಲಸದ ಮೇಲೆ ಆಸಕ್ತಿ ಇರುವುದಿಲ್ಲ. ಯಾರು ಮಾತನಾಡಸಿದರೂ ಕೋಪ ಮಾಡಿಕೊಳ್ಳುತ್ತಾರೆ. ಸರಿಯಾಗಿ ಮಾತನಾಡುವುದಿಲ್ಲ. ಶಾರೀರಿಕವಾಗಿ ಬಲಹೀನರಾಗುತ್ತಾರೆ. ಇಂತಹ ಸಂದರ್ಭಗಳಲ್ಲಿ ಭೂತವೈದ್ಯರ ಅಗತ್ಯ ಗ್ರಾಮೀಣ ಜನರಿಗೆ ಜ್ಞಾಪಕಕ್ಕೆ ಬರುತ್ತದೆ.

ಭೂತವೈದ್ಯರೆಂದರೆ ಸಾಮಾನ್ಯವಾಗಿ ಎಲ್ಲರೂ ಹೆದರುತ್ತಾರೆ. ಇವರಿಗೆ ದೆವ್ವಗಳನ್ನು ಓಡಿಸುವುದರ ಜೊತೆಗೆ ಮಾಟ ಮಂತ್ರ, ಬಾನಾಮತಿಯು ಸಹಾ ಗೊತ್ತಿರುತ್ತದೆ ಎಂದು ಜನ ನಂಬುತ್ತಾರೆ. ಆದ್ದರಿಂದಲೇ ಇವರೆಂದರೆ ಜನರಿಗೆ ಭಯ. ಸಾಮಾನ್ಯವಾಗಿ ಭೂತವೈದ್ಯರು ದೊಡ್ಡದಾದ ಮೀಸೆ, ರೆಟ್ಟೆಗೆ ತಾಮ್ರದ ಕಡಗ, ತಾಯಿತ ಕಟ್ಟಿಕೊಂಡು ಯಾರ ಜೊತೆಯೂ ಬೆರೆಯದೆ, ನಿಯಮ ನಿಷ್ಠೆಗಳಿಂದ ರಹಸ್ಯ ಜೀವನವನ್ನು ನಡೆಸುತ್ತಾರೆ. ಭೂತವೈದ್ಯನು ದೆವ್ವ ಹಿಡಿದವರನ್ನು ಅವರ ನೆಂಟರ ಜೊತೆ ಯಾವುದಾದರೂ ಒಂದು ವನಕ್ಕೆ ಕರೆದುಕೊಂಡು ಹೋಗುತ್ತಾನೆ. ವಿವಿಧ ಬಣ್ಣಗಳಿಂದ ಹಾಕಿರುವ ಬೀಜಾಕ್ಷರಗಳಿರುವ ರಂಗೋಲಿಯ ಮೇಲೆ ದೆವ್ವ ಹಿಡಿದವರನ್ನು ಕೂರಿಸುತ್ತಾರೆ. ಬೇವಿನ ಸೊಪ್ಪಿನಿಂದ ಭೂತವೈದ್ಯನು ಮುಟ್ಟಿದ ತಕ್ಷಣ ದೆವ್ವದ ಆವಾಹನೆ ಆಗುತ್ತದೆ. ಕಣ್ಣು ದೊಡ್ಡದಾಗಿ ಮಾಡುವುದು, ಹಾಗೆ ಹೀಗೆ ತೂರಾಡುವುದಂತಹ ಲಕ್ಷಣಗಳು ಕಾಣಿಸುತ್ತವೆ. ಭೂತ ವೈದ್ಯನು ‘ನೀನ್ಯಾರು? ಯಾಕೆ ಇವರನ್ನು ಹಿಡೆದಿದ್ದಿಯಾ’ ಎಂದು ಕೇಳುತ್ತಾನೆ. ಯಾವುದಾದರೂ ಬಯಕೆಗಳಿದ್ದರೆ ಹೇಳಬೇಕೆಂದು ಕೇಳುತ್ತಾನೆ. ದೆವ್ವ ಇಂಥವರ ಪ್ರೇತಾತ್ಮ ತಾನೆಂದು, ಇವರನ್ನು ಸಾಯಿಸಿ ತನ್ನ ಜೊತೆ ಕರೆದುಕೊಂಡು ಹೋಗುವುದಕ್ಕೆ ಹಿಡಿದಿದ್ದೇನೆಂದು ಹೇಳುತ್ತದೆ. ಭೂತವೈದ್ಯನು ಹುಣಿಸೆ ಕಡ್ಡಿಗಳಿಂದ ಹೊಡೆಯುವುದಕ್ಕೆ ತೊಡುಗುತ್ತಾನೆ. ಹೆದರಿದ ದೆವ್ವ ಬಿಟ್ಟು ಹೋಗುತ್ತೇನೆಂದು ಹೇಳುತ್ತದೆ. ಅದಕ್ಕೆ ಬೇಕಾದ ಆಹಾರವನ್ನು ಇಟ್ಟು, ತಿನ್ನುತ್ತಿರುವಾಗ ತಲೆಯ ಕೂದಲನ್ನು ಕತ್ತರಿಸುತ್ತಾನೆ. ಆ ಕೂದಲನ್ನು ದೊಡ್ಡದಾದ ಕಬ್ಬಿಣದ ಮೊಳೆಗೆಸುತ್ತಿ ಮರಕ್ಕೆ ಹೊಡೆಯುತ್ತಾನೆ. ಬಿಟ್ಟು ಹೋಗಿರುವುದಕ್ಕೆ ನಿದರ್ಶನವೇನೆಂದು ಕೇಳದಿ ತಕ್ಷಣ ಮರದ ಒಂದು ಭಾಗ ಮುರಿದು ಹೋಗುತ್ತದೆ. ದೆವ್ವವನ್ನು ಬಿಡಿಸಿದ ನಂತರ ಮತ್ತೆ ದೆವ್ವ ಹಿಡಿಯುವುದೇ ಇರುವುದಕ್ಕೆ ತಾಯ್ತವನ್ನು ಕಟ್ಟುತ್ತಾರೆ.

ಭೂತವೈದ್ಯರು ಬಾನಾಮತಿ ಮಾಡುವುದು, ಮೋಡಿ ಹಾಕುವುದು, ಎತ್ತುವುದು, ಗಿಡಮೂಲಿಕೆಗಳಿಂದ ವೈದ್ಯ ಮಾಡುವುದು ಮುಂತಾದವುಗಳಿಮದ ಗ್ರಾಮದಲ್ಲಿ ವಿಶೇಷ ವ್ಯಕ್ತಿಗಳಿಗೆ ಮನ್ನಣೆ ಪಡೆಯುತ್ತಾರೆ. ದೆವ್ವ ಹಿಡಿದವರಿಗೆ ಭೂತವೈದ್ಯರಲ್ಲದೆ ಗ್ರಾಮದೇವತೆಗಳ ಪೂಜಾರಿಗಳು ಕೂಡ ದೇವತೆ ಆವಾಹನೆಯಾದಾಗ ವಾಸಿ ಮಾಡುತ್ತಾರೆ. ಕೆಲವು ಗ್ರಾಮದೇವತೆಗಳ ದೇವಸ್ಥಾನಗಳು ದೆವ್ವಗಳನ್ನು ಬಿಡಿಸುವುದರಲ್ಲಿ ಪ್ರಖ್ಯಾತಿ ಹೊಂದಿರುತ್ತದೆ.

ಟಿ.ಎನ್.

 

ಭೂತಾರಾಧನೆ ಕರ್ನಾಟಕದ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪ್ರದೇಶವನ್ನೂ, ಕೇರಳದ ಕಾಸರಗೋಡು ಜಿಲ್ಲಾ ಪ್ರದೇಶವನ್ನೂ ಒಟ್ಟಾಗಿ ‘ತುಳುನಾಡು’ ಎಂದು ಕರೆಯಲಾಗುತ್ತದೆ. ಐತಿಹಾಸಿಕವಾದ ಈ ಪರಿಕಲ್ಪನ ಭಾಷಿಕ ಹಾಗೂ ಸಾಂಸ್ಕೃತಿಕ ಸಂದರ್ಭದಲ್ಲೂ ಪ್ರಸ್ತುತವೆನಿಸುತ್ತದೆ. ಈ ತುಳುನಾಡಿನ ಒಂದು ವಿಶಿಷ್ಟ ಆರಾಧನಾ ಸಂಪ್ರದಾಯವೇ ಭೂತಾರಾಧನೆ. ಜಾನಪದ ಅಧ್ಯಯನದಲ್ಲಿ ಇದನ್ನು ‘ಜನಪದ ರಂಗಭೂಮಿ’ಯ ಒಂದು ಪ್ರಭೇದವಾಗಿ ಪರಿಗಣಿಸಲಾಗುತ್ತದೆ. ‘ಆರಾಧನಾ ರಂಗಭೂಮಿ’ ‘ಆರಾಧನಾ ಕಲೆ’ ಇತ್ಯಾದಿಯಾಗಿಯೂ ಕರೆಯಲಾಗುತ್ತದೆ. ಇವರಲ್ಲಿಯ ಸಂಕೀರ್ಣತೆಯನ್ನು ಗುರುತಿಸಿರುವ ವಿದೇಶಿ ಜಾನಪದ ವಿದ್ವಾಂಸರು ಅದೇ ರೀತಿ ರಂಗಭೂಮಿ ತಜ್ಞರು ಭೂತಾರಾಧನೆಯನ್ನು ಒಂದು ‘ಪರಿಪೂರ್ಣ ರಂಗಭೂಮಿ’ ಎಂದು ಕರೆದಿರುತ್ತಾರೆ. ಭೂತಾರಾಧನೆಯನ್ನು ಹೋಲುವ ಆರಾಧನಾ ಪದ್ಧತಿ ಅಥವಾ ನೃತ್ಯ ಸಂಪ್ರದಾಯ ವಿಶ್ವದ ಇತರೆಡೆಗಳಲ್ಲೂ ಇದೆ. ಆದರೆ ಸಮೀಪದ ಕೇರಳದಲ್ಲಿಯ ‘ತೆಯ್ಯ’ ಸಂಪ್ರದಾಯ ಇದಕ್ಕೆ ತೀರಾ ಹತ್ತಿರವಾದುದು.

‘ಭೂತ’ ಪದಕ್ಕೆ ಹಿಂದಿನದು ದೆವ್ವ, ಪಿಶಾಚಿ, ಪ್ರೇತ ಮುಂತಾದ ಅರ್ಥಗಳಿರುವುದರಿಂದ ‘ಭೂತಾರಾಧನೆ’ ಎಂದರೆ ಗತಿಸಿ ಹೋದವರ ಆರಾಧನೆ. ಪ್ರೇತ, ಪಿಶಾಚಿ, ದೆವ್ವಗಳ ಆರಾಧನೆ ಎಂದು ಅರ್ಥೈಸಿಕೊಂಡವರಿದ್ದಾರೆ. ಆದರೆ ಇದನ್ನು ಅಷ್ಟು ಸರಳೀಕರಿಸಿ ಅರ್ಥೈಸಲಾಗದು. ಮಾತ್ರವಲ್ಲದೆ ತುಳುನಾಡಿನಲ್ಲಿ ಸತ್ತವರ ಆರಾಧನೆಯನ್ನು ಆಯಾ ಕುಟುಂಬಗಳ ನೆಲೆಯಲ್ಲಿ ಪ್ರತ್ಯೇಕವಾಗಿ ನಡೆಸಲಾಗುತ್ತದೆಂಬುದನ್ನು ನಾವಿಲ್ಲಿ ಮರೆಯಲಾಗದು. ಹಾಗಂತ ಈ ಭೂತಗಳಲ್ಲಿ ಸತ್ತವರು ಇಲ್ಲವೇ ಇಲ್ಲವೆಂದು ಇದರ ಅರ್ಥವಲ್ಲ. ಆದರೆ ಅವರು ಸಾಮಾನ್ಯ ರೀತಿಯಲ್ಲಿ ಅಥವಾ ಸಹಜವಾಗಿ ಸತ್ತವರಾಗಿರುವುದಿಲ್ಲ. ನಿರ್ದಿಷ್ಟ ಕಾರಣಗಳಿಗಾಗಿ ಅಸಾಮಾನ್ಯವಾದ ರೀತಿಯಲ್ಲಿ ಸತ್ತವರಾಗಿರುತ್ತಾರೆ. ಭೂತಾರಾಧನೆಯ ಪರಿಭಾಷೆಯಲ್ಲಿ ಅದನ್ನು ‘ಮಾಯ’ವಾಗುವುದು ಎನ್ನುತ್ತಾರೆ. ವಾಸ್ತವವಾಗಿ ನೋಡಿದರೆ ಕೆಲವರು ಆತ್ಮಾಹುತಿಗಳಿಂದಾಗಿ, ಮತ್ತೆ ಕೆಲವರು ಯುದ್ಧದಲ್ಲಿ ಸತ್ತು ಸಾಮಾನ್ಯವಾಗಿ ಭೂತಗಳಾದುದೂ ಉಂಟು. ಹೀಗೆ ಯಾವುದೇ ರೀತಿಯಿಂದ ಸತ್ತಿದ್ದನೂ ಸಾಮಾನ್ಯಾರ್ಥದಲ್ಲಿ ‘ಸತ್ತು ಭೂತವಾಗುವ’ ಪರಿಕಲ್ಪನೆಗೂ, ಭೂತಾರಾಧನವು ಪರಿಪ್ರೇಕ್ಷ್ಯದಲ್ಲಿ ‘ಮಾಯಕ್ಕೊಳಗಾಗಿ’ ಭೂತವಾಗುವ ಪರಿಕಲ್ಪನೆಗಳಿಗೂ ಸಾಕಷ್ಟು ವ್ಯತ್ಯಾಸವಿದೆ. ಇವೆಲ್ಲವನ್ನು ಗಮನಿಸಿದಾಗ ಪ್ರಸ್ತುತ ‘ಭೂತ’ ವೆಂದರೆ ತುಳುನಾಡಿನಲ್ಲಿ ಆರಾಧನೆಗೊಳ್ಳುವ ವಿಶಿಷ್ಟ ಪ್ರಕಾರದ ದೈವ ಎಂದು ಅರ್ಥೈಸಿಕೊಳ್ಳಬಹುದಾಗಿದೆ. ಜಾನಪದ ಸಂದರ್ಭದಲ್ಲಿ ಈ ಭೂತಗಳನ್ನು ‘ಗ್ರಾಮದೇವತೆ’, ‘ಜನಪದ ದೈವ’ ಮುಂತಾದ ಪರಿಭಾಷೆ, ಪರಿಕಲ್ಪನೆಗಳಿಂದ ಗುರುತಿಸಲಾಗುತ್ತದೆ ಇಲ್ಲಿ ಭೂತದ ಪರಿಕಲ್ಪನೆಯಲ್ಲಿರುವಂತೆ ಅದರ ಆರಾಧನಾ ಸ್ವರೂಪದಲ್ಲೂ ವೈಶಿಷ್ಟ್ಯವಿದೆ. ನಮ್ಮಲ್ಲಿ ಕೆಲವು ದೈವಗಳನ್ನು ನಿರಾಕಾರ ಸ್ವರೂಪದಿಂದ, ಮತ್ತೆ ಕೆಲವನ್ನು ಮೂರ್ತಿ ರೂಪದಲ್ಲಿ, ಇನ್ನು ಕೆಲವನ್ನು ಚಿತ್ರಗಳಲ್ಲಿ ಪಡಿಮೂಡಿಸಿ ಆರಾಧಿಸಲಾಗುತ್ತದೆ. ಆದರೆ ತುಳುನಾಡಿನ ಈ ಭೂತಗಳನ್ನು ಇಲ್ಲಿ ವಿವರಿಸಿದ ಯಾವುದೇ ವಿಧಾನದಿಂದಲೂ ಆರಾಧಿಸದೆ ನಿದಿಷ್ಟ ಸಮುದಾಯದ ಕಲಾವಿದರು ಧರಿಸುವ ವೇಷಗಳಿಗೆ ಆಯಾ ಭೂತಗಳನ್ನು ಆವಾಹಿಸಿ ಕೊಳ್ಳುವುದರ ಮೂಲಕ ಆರಾಧಿಸಲಾಗುತ್ತದೆ. ಹಾಗಾಗಿಯೇ ಏಕಕಾಲಕ್ಕೆ ಇದು ಒಂದು ಆರಾಧನಾ ಸಂಪ್ರದಾಯವಾಗಿಯೂ, ರಂಗಭೂಮಿ ಕಲೆಯಾಗಿಯೂ ಗಮನ ಸೆಳೆಯುತ್ತದೆ. ಅಧ್ಯಯನಕಾರರಿಗೆ ಭೂತಾರಾಧನೆ ಹೀಗೆ ವಿಭಿನ್ನ ಆಯಾಮಗಳಿಂದ ಗೋಚರವಾದರೂ ಅದರಲ್ಲಿ ನಂಬಿಕೆಯುಳ್ಳ ಭಕ್ತರಿಗೆ ಅದು ಶ್ರದ್ಧಾಭಕ್ತಿಗಳ ಮೂಲವಾದ ಒಂದು ಆರಾಧನಾ ಪದ್ಧತಿ. ‘ಭೂತ’ವೆಂದರೆ ಅವರಿಗೆ ಕಲಾವದ ಧರಿಸುವ ಬರಿಯ ವೇಷ ಮಾತ್ರವಲ್ಲ. ಅದೊಂದು ‘ದೈವೀಶಕ್ತಿ’. ಅವರು ನಂಬಿದ ಸತ್ಯ.

ಇಂತಹ ಭೂತಾರಾಧನೆಯನ್ನು ಬೇರೆ ಬೇರೆ ಹೆಸರುಗಳಿಂದ ಗುರುತಿಸಲಾಗುತ್ತದೆ. ಈ ಹೆಸರುಗಳು ಭೂತಾರಾಧಕೆಯ ವಿವಿಧ ಪ್ರಭೇದಗಳನ್ನು ಸೂಚಿಸುತ್ತವೆ. ಕೋಲ, ನೇಮ, ಬಂಡಿ-ಜಾತ್ರೆ, ಮೈಮೆ, ದೊಂಪದ ಬಲಿ, ಮೆಚ್ಚಿ, ಜಾಲಾಟ, ಪಾಗಾರಾಟ, ಒತ್ತಕೋಲ – ಕೆಂಡ ಸೇವೆ, ಬೈಲಕೋಲ, ಕಾಳಿಯಾಟ್ಟ, ಬೆಲ್ಲಾಟ ಮುಂತಾದುವು ನಿರ್ದಿಷ್ಟ ದೈವಗಳ ವೇಷ ಧರಿಸಿ ನಡೆಸುವ ಆರಾಧನೆ ಉತ್ಸವಗಳು. ಇವುಗಳಲ್ಲಿ ಪಾಣಾರಾಟ ಕುಂದಾಪುರ ಪ್ರದೇಶದ ಆರಾಧನಾ ಸಂಪ್ರದಾಯವಾದರೆ ಒತ್ತೆಕೋಲ, ಬೈಲಕೋಲ, ಕಳಿಯಾಟ್ಟ, ಬೆಲ್ಲಾಟಗಳು ಕೇರಳದ ಗಡಿ ಪ್ರದೇಶಗಳಲ್ಲಿ ಪ್ರಚಲಿತವಿರುವ ಮಲಯಾಳಿ ದೈವಗಳ ಆರಾಧನಾ ಪದ್ಧತಿಗಳು ಒಟ್ಟಾರೆಯಾಗಿ ಎಲ್ಲವೂ ತುಳುನಾಡಿನ ಭೂತಾರಾಧನಾ ಸಂಪ್ರದಾಯಗಳೇ ಆಗಿವೆ ಇವಲ್ಲವೆ ಭೂತದ ವೇಷಗಳನ್ನು ಧರಿಸದೆ ನೆರವೇರಿಸುವ ತಂಬಿಲ, ಅಗೆಲ್, ಮುಂತಾದ ಆಚರಣೆಗಳೂ ರೂಢಿಯಲ್ಲಿವೆ.

ಭೂತಾರಾಧನೆಯ ಬಗೆಗೆ ವಿದೇಶಿ ಹಾಗೂ ದೇಶಿ ವಿದ್ವಾಂಸರಿಂದ ಹಲವಾರು ಅಧ್ಯಯನಗಳು ನಡೆದಿವೆ. ಇದುವರೆಗೆ ನಡೆದಿರುವ ಅಂತಹ ವಿವಿಧ ಅಧ್ಯಯನ ಸಮೀಕ್ಷೆಗಳ ಆಧಾರದಿಂದ ಸುಮಾರು ೪೦೦ ರಷ್ಟು ಭೂತಗಳನ್ನು ಪಟ್ಟಿ ಮಾಡಬಹುದಾಗಿದೆ. ಇವುಗಳಲ್ಲಿ ಕೆಲವು ಪ್ರಧಾನ ದೈವಗಳಾದರೆ ಮತ್ತೆ ಕೆಲವು ಆರ್ಥಿಕ ಅಥವಾ ಸೇರಿಗೆಯ ದೈವಗಳು. ಇನ್ನು ಕೆಲವು ಪ್ರಧಾನ ದೈವಗಳ ವಿವಿಧ ಪ್ರಭೇದಗಳು. ಕೆಲವು ಗಂಡು ದೈವಗಳಾದರೆ ಮತ್ತೆ ಕೆಲವು ಹೆಣ್ಣು ದೈವಗಳು. ಈ ಎಲ್ಲಾ ದೈವಗಳನ್ನು ವಿವಿಧ ಮಾನದಂಡಗಳಿಂದ ಇನ್ನಷ್ಟು ಬಗೆಗಳಲ್ಲಿ ವರ್ಗೀಕರಿಸಿಕೊಳ್ಳಲು ಸಾಧ್ಯವಾಗುತ್ತದೆ. ಭೂತಾರಾಧನೆಯ ಬಗೆಗೆ ಅಧ್ಯಯನ ನಡೆಸಿದ ವಿದ್ವಾಂಸರು ಈಗಾಗಲೇ ಭೂತಗಳನ್ನು ಬಗೆಬಗೆಯಾಗಿ ವರ್ಗೀಕರಿಸುವ ಪ್ರಯತ್ನ ಮಾಡಿದ್ದಾರೆ. ಎ.ಸಿ. ಬರ್ಕೆಲ್, ರೆವರೆಂಡ್ ಎ. ಮ್ಯಾನರ್, ಪಿ. ಗುರುರಾಜ ಭಟ್ಟ, ಅಮೃತ ಸೋಮೇಶ್ವರ, ಯು.ಪಿ. ಉಪಾಧ್ಯಾಯ, ಬಿ.ಎ. ವಿವೇಕ ರೈ, ಕೆ. ಚಿನ್ನಪ್ಪ ಗೌಡ ಮೊದಲಾದ ವಿದ್ವಾಂಸುರ ವಿವಿಧ ಮಾನದಂಡಗಳಿಂದ ಭೂತಗಳನ್ನು ವರ್ಗೀಕರಿಸಿ ಕೊಂಡು ಅಧ್ಯಯನ ನಡೆಸಿದ್ದಾರೆ. ರೆವರೆಂಡ್ ಎ. ಮ್ಯಾನರ್ ಅವರು ಭೂತಗಳ ಉಗಮ, ವಾಸಸ್ಥಾನ, ಸ್ವರೂಪ ಹಾಗೂ ಆರಾಧನಾ ವಿಧಾನಗಳನ್ನನುಸರಿಸಿ ಒಟ್ಟು ೧೭ ಪ್ರಭೇದಗಳನ್ನು ಗುರುತಿಸಿದ್ದಾರೆ (ಚಿನ್ನಪ್ಪ ಗೌಡ. ಕೆ; ೧೯೯೦, ೪೩-೪೪). ಪಿ.ಗುರುರಾಜ ಭಟ್ಟರು ಈ ಕೆಳಗಿನಂತೆ ಭೂತಗಳನ್ನು ವರ್ಗೀಕರಿಸಿಕೊಂಡಿದ್ದಾರೆ.

31_70A_DBJK-KUH

೧. ಕುಲಬಾಂಧವ ಮತ್ತು ಉಗಮದಲ್ಲಿ ಪ್ರಾಣಿ ಸಂಬಂಧವನ್ನು ಹೊಂದಿರುವ ಭೂತಗಳು ಉದಾ : ಭೂತನಾಗ, ಪಿಲಿಭೂತ, ಪಂಜುರ್ಲಿ, ನಂದಿಗೋಣೆ, ಇತ್ಯಾದಿ.

೨. ಉಗಮದಲ್ಲಿ ಮನುಷ್ಯ ಸಂಬಂಧವನ್ನು ಪಡೆದಿರುವ ಭೂತಗಳು (ಬೇರೆ ಬೇರೆ ಕಾರಣಗಳಿಂದ ಬೇರೆ ಬೇರೆ ಸಂದರ್ಭಗಳಲ್ಲಿ ಸತ್ತು ಭೂತಗಳಾದವರು) ಉದಾ : ಅಣ್ಣಪ್ಪ, ಅಬ್ಬಗ ದಾಂಗೆ, ಬೊಬ್ಬಯ್ಯ, ಕೋಟಿ ಚೆನ್ನಯ, ದೇವ ಪುಂಜ, ಕೊರಗ, ಕಲ್ಕುಡ ಕಲ್ಲುರ್ಟಿ, ಜೋಗಿ ಪುರುಷ ಇತ್ಯಾದಿ.

೩. ಪುರಾಣ ಲೋಕದ ಭೂತಗಳು. ಉದಾ; ಬೆರ್ಮ (ಬ್ರಹ್ಮ), ಜುಮಾಡಿ (ಧೂಮಾವತಿ), ಲೆಕ್ಕಿಸಿರಿ (ರಕ್ತೇಶ್ವರಿ), ಕ್ಷೇತ್ರಪಾಲ, ಕಾಲರಾತ್ರಿ, ವಿಷ್ಣುಮೂರ್ತಿ ಇತ್ಯಾದಿ.

೪. ನಿಶ್ಚಿತ ಪ್ರದೇಶಕ್ಕೆ ಸಂಬಂಧಪಟ್ಟ ಭೂತಗಳು. ಉದಾ : ಮಲೆರಾಯ, ಮಲೆಚಾಮುಂಡಿ, ಕನಕಪಡಿತ್ತಾಯ, ಕೊಡವಣಿತ್ತಾಯ ಇತ್ಯಾದಿ (ಅದೇ. ಪು. ೪೪೧), ಅಮೃತ ಸೋಮೇಶ್ವರ ಅವರು ಪ್ರಾಣಿ ಸಂಬಂಧವನ್ನು ಹೊಂದಿದ ಭೂತಗಳು, ವ್ಯಕ್ತಿಗಳು ಸತ್ತು ಭೂತಗಳುದುದು, ಪುರಾಣ ಲೋಕದಿಂದ ಇಳಿದು ಬಂದ ಭೂತಗಳು ಈ ರೀತಿಯ ವರ್ಗಗಳಲ್ಲದೆ ಘಟ್ಟದ ಮೇಲಿಂದ ಬಂದ ಭೂತಗಳು (ಉದಾ: ತೊಡಕಿ ನಾಸ್, ಚಾರಿದಾಯ, ಮಾಚದಾಯ, ಶಿರಾಡಿ ಭೂತ, ಕಿನ್ನಿಚೂರ್, ಪೂಮಾನ್ ಇತ್ಯಾದಿ) ಹಾಗೂ ಕೇರಳದ ಕಡೆಯಿಂದ ಬಂದ ಭೂತಗಳು (ಉದಾ : ಮಲಯಾಳಿ ಚಾಮುಂಡಿ) ಎಂಬ ಪ್ರಭೇದಗಳನ್ನೂ ಗುರುತಿಸುತ್ತಾರೆ (ಅದೇ). ಯು.ಪಿ. ಉಪಾಧ್ಯಾಯ ಮತ್ತು ಸುಶೀಲ ಉಪಾಧ್ಯಾಯ ಅವರು ಪ್ರಾಣಿ ವರ್ಗದ ಭೂತಗಳು, ಪುರಾಣ ಯುಗದ ಭೂತಗಳು, ನ್ಯಾಯಕ್ಕಾಗಿ ಹೋರಾಡಿದ ಯೋಧರು ಮಡಿದು ಆದ ಭೂತಗಳು, ನಾಗಸಂಬಂಧಿ ಭೂತಗಳು – ಹೀಗೆ ಐದು ಬಗೆಗಳಲ್ಲಿ ಭೂತಗಳನ್ನು ವರ್ಗೀಕರಿಸಿಕೊಳ್ಳುತ್ತಾರೆ (ಅದೇ. ಪು. ೪೫).

ಬಿ.ಎ. ವಿವೇಕ ರೈ ಅವರು ಪ್ರಧಾನ ಸಾಹಿತ್ಯವನ್ನು ಗಮನದಲ್ಲಿರಿಸಿ ಕೊಂಡು ಭೂತಗಳನ್ನು ಅವುಗಳ ಉಗಮಕ್ಕೆ ಸಂಬಂಧಿಸಿದಂತೆ ಮೂರು ವಿಧಗಳಲ್ಲಿ ಗುರುತಿಸಿದ್ದಾರೆ.

೧. ಪ್ರಾಣಿ ಭೂತಗಳಾಗಿ ಪರಿವರ್ತನೆಗೊಂಡ ವರ್ಗ.
೨. ಮನುಷ್ಯರು ಆತ್ಮಹತ್ಯೆ, ಕೊಲೆ ಅಥವಾ ಇತರ ರೀತಿಯಲ್ಲಿ ಅಕಾಲ ಮರಣವನ್ನು ಹೊಂದಿ ಭೂತಗಳಾಗಿ ಪರಿವರ್ತನೆಗೊಂಡ ವರ್ಗ.
೩. ಭೂತಗಳ ಸಂಪರ್ಕದಿಂದ ಮನುಷ್ಯನು ಭೂತಗಳಾಗಿ ಪರಿವರ್ತನೆಗೊಂಡ ವರ್ಗ (ಅದೇ)

ಕೆ. ಚಿನ್ನಪ್ಪಗೌಡ ಅವರು ಆರಾಧನೆಯ ವಿಧಿವಿಧಾನಗಳನ್ನು ಗಮನದಲ್ಲಿಟ್ಟುಕೊಂಡು ಭೂತಗಳನ್ನು ೧) ಪ್ರಧಾನವಾಗಿ ಆರಾಧನೆ ಹೊಂದುವ ಭೂತಗಳು ಮತ್ತು ೨) ಸೋರಿಗೆಯ ಭೂತಗಳಾಗಿದ್ದು, ಕಯ್ಯಾಕಟ್ಟಳೆಯ ರೂಪದಲ್ಲಿ ಆರಾಧನೆ ಹೊಂದುವ ಭೂತಗಳು ಎಂಬುದಾಗಿಯೂ, ಆರಾಧನೆಗೊಳ್ಳುವ ಪ್ರದೇಶಗಳ ಆಧಾರದಿಂದ ೧) ಉಡುಪಿ ಕಾರ್ಕಳ ವಲಯ ೨) ಮಂಗಳೂರು – ಬಂಟ್ವಾಳವಲಯ ಮತ್ತು ೩) ಬೆಳ್ತಂಗಡಿ ಪುತ್ತೂರು – ಸುಳ್ಯ ವಲಯ ಎಂಬುದಾಗಿಯೂ, ಭೂತಗಳು ಮಾತೃ ಭಾಷೆಗಳ ಆಧಾರದಿಂದ ೧) ತುಳು ಮಾತನಾಡುವ ಭೂತಗಳು, ೨) ಕನ್ನಡ – ಗೌಡ ಕನ್ನಡ ಮಾತನಾಡುವ ಭೂತಗಳು ಮತ್ತು ೩) ಮಲಯಾಳಂ ಮಾತನಾಡುವ ಭೂತಗಳು ಎಂಬುದಾಗಿಯೂ, ಭೂತ ಕಲಾವಿದರ ಜಾತಿಯನ್ನು ಗಮನದಲ್ಲಿಟ್ಟುಕೊಂಡು ೧) ನಲಿಕೆಯವರು ಭೂತಗಳು ಹಾಗೂ ೨) ಪರವ – ನಂಬವರು ಕಮ್ಮಟ ಭೂತಗಳು ಎಂಬುದಾಗಿಯೂ ವರ್ಗೀಕರಿಸಿಕೊಳ್ಳುತ್ತಾರೆ. (ಅದೇ, ಪು. ೪೫-೪೮)

ವಿವಿಧ ವರ್ಗಗಳ ಈ ಭೂತಗಳನ್ನು ಮತ್ತೊಮ್ಮೆ ಸ್ಥೂಲವಾಗಿ ಹೀಗೆ ವರ್ಗೀಕರಿಸಿಕೊಳ್ಳಬಹುದು : ೧) ಬೇರೆ ಬೇರೆ ವೃತ್ತಿ ಸಮುದಾಯ ಗಳಿಗೆ ಸೇರಿದ ವ್ಯಕ್ತಿಗಳು ನಿರ್ದಿಷ್ಟ ಕಾರಣಗಳಿಗಾಗಿ ಆತ್ಮಾಹುತಿಗೈದು, ಮರಣಹೊಂದಿ ಅಥವಾ ಮಾಯವಾಗಿ ಉಂಟಾದ ಭೂತಗಳು. ೨) ಪುರಾಣ ಮೂಲದ ಭೂತಗಳು ಹಾಗೂ ೩) ಪ್ರಕೃತಿ ಅಥವಾ ಪ್ರಾಣಿ ರೂಪಿ ಭೂತಗಳು. ಉದಾಹರಣೆಗೆ ಕೋಟಿ ಚೆನ್ನಯರಲ್ಲಿ ಕೋಟಿಯು ಮೋಸದ ಯುದ್ಧಕ್ಕೆ ಬಲಿಯಾಗುತ್ತಾನೆ. ಅಣ್ಣನ ಅಗಲಿಕೆಯ ನೋವನ್ನು ತಾಳಲಾರದೆ ಚೆನ್ನಯನು ಆತ್ಮಾಹುತಿಗೀಡಾಗುತ್ತಾನೆ. ಆಮೇಲೆ ಅವರಿಬ್ಬರೂ ಅವಳ ದೈವಗಳಾಗುತ್ತಾರೆ. ಅಣ್ಣ ತಂಗಿಯವರಾದ ಕಲ್ಕುಡ-ಕಲ್ಲುರ್ಟಿಯಲ್ಲಿ ಅರಸನ ಉಪಟಳವನ್ನು ಸಹಿಸಲಾರದೆ ಆತ್ಮಾಹುತಿಗೀಡಾಗಿ ದೈವಗಳಾದವರು. ಹೀಗೆ ಪೂರ್ವಜನ್ಮದಲ್ಲಿ ಸಾಮಾನ್ಯ ಅಥವಾ ಅಸಾಮಾನ್ಯ ‘ವ್ಯಕ್ತಿ’ಗಳಾಗಿದ್ದು ಮರಣಾನಂತರ ‘ಶಕ್ತಿ’ಗಳಾದ ಅನೇಕ ದೈವಗಳನ್ನು ನಾವು ಕಾಣಬಹುದು. ಭೂತಾರಾಧನೆಯ ಸಂಧಿ ಪಾಡ್ದನಗಳಲ್ಲಿ ಎಲ್ಲ ವಿವರಗಳು ಲಭ್ಯವಾಗುತ್ತವೆ. ಭೂತಾರಾಧನೆಯ ಪರಿಭಾಷೆಯಲ್ಲಿ ಅವರು ವ್ಯಕ್ತಿಗಳಾಗಿದ್ದ ಜೀವಿತಾವಧಿಯನ್ನು ‘ಜೋಗಿ’ ಎಂದೂ, ಭೂತಗಳಾಗಿ ಪರಿವರ್ತಿತವಾದ ಅನಂತರದ ಅವಧಿಯನ್ನು ‘ಮಾಯ’ ಎಂದೂ ಪರಿಗಣಿಸಲಾಗುತ್ತದೆ. ವಿಷ್ಣುಮೂರ್ತಿ, ರಕ್ತೇಶ್ವರಿ, ಚಾಮುಂಡಿ, ಜುಮಾಗಿ, (ಧೂಮಾವತಿ), ಜಟಾಧಾರಿ ಮೊದಲಾದವು ಪುರಾಣ ಮೂಲದ ದೈವಗಳು. ಪಂಜುರ್ಲಿ, ಮೇಘಾಲಯ, ನಂದಿಗೋಕರ್ಣ ಪಿಲಿ ಭೂತ (ಪಿಲಿಬಾಂಡಿ) ಗುಳಿಗೆ ಮುಂತಾದವು ಪ್ರಕೃತಿ ಅಥವಾ ಪ್ರಾಣಿ ರೂಪಿ ದೈವಗಳು. ಇನ್ನು ಗಂಡು ದೈವ ಮತ್ತು ಹೆಣ್ಣು ದೈವಗಳೆಂದು ಪ್ರತ್ಯೇಕಿಸಿ ವರ್ಗೀಕರಿಸುವುದೂ ಸಾಧ್ಯವಾಗುತ್ತದೆ. ಈ ಪ್ರಭೇದಗಳಲ್ಲಿ ಕೆಲವು ಭೂತಗಳನ್ನಿಲ್ಲಿ ಉದಾಹರಿಸಬಹುದಾಗಿದೆ.

ಗಂಡು ಭೂತಗಳು

೧. ಅಣ್ಣಪ್ಪಭೂತ
೨. ಅರಸು ಮಂಜಿಪ್ಣಾರ್
೩. ಆಲಿಭೂತ
೪. ಕಂಡಕೋಳತ್
೫. ಕನ್ನಲ್ಲಾಯ
೬. ಕಲ್ಕಡ
೭. ಕಳಲ
೮. ಕಿನ್ನಿಮಾಣಿಂ
೯. ಕೊಡಮರ್‌ತ್ತಾಯ
೧೦. ಕೊರಗತನಿಯ
೧೧. ಕೋಟೆ
೧೨. ಗಿಳ್ಳಿಂದಾಯ
೧೩. ಗುಲಿಗ
೧೪. ಚೆಂಬರ ಕಾಕತ್ತಾಯ
೧೫. ಚೆನ್ನಯ
೧೬. ಜಟಾಧಾರಿ
೧೭. ಜಾರಂದಾಯ
೧೮. ಜೋಗಿಪುರಷ
೧೯. ಪಂಜುರ್ಲಿ
೨೦. ಪಿಲಿಕರಡನ್
೨೧. ಪೂಮಾಣ್
೨೨. ಬಚ್ಚನಾಯಕ
೨೩. ಚಾರ‍್ನಾಳ್ವ
೨೪. ಬೊಬ್ಬಯ
೨೫. ಮೈಣಿಕದಾಯ

ಹೆಣ್ಣು ಭೂತಗಳು

೧. ಅಕ್ಕಮುದೆಯ್ಯಾರು
೨. ಅಕ್ಕೆರಸು ಪೂಂಜೆನಿ
೩. ಅದ್ಕದ ಭಗವತಿ
೪. ಅಬ್ಬಗೆ ದಾರಗೆ
೫. ಆಯಿರತ್ತಿರಿ
೬. ಉಳ್ಳಾಲ್ತಿ
೭. ಕಲ್ಲುಟ್ಟ್
೮. ಕಾಡೆದಿ
೯. ಕಿನ್ನಿದಾರು
೧೦. ಕೊರತಿ
೧೧. ಕ್ಯೊಮರಾಟ್ಟಿ
೧೨. ಚಾಮುಂಡಿ
೧೩. ಜುಮಾದಿ
೧೪. ತಂಬುರಾಟ್ಟೆ
೧೫. ದೇಯಿಬೈದ್ಯೆತಿ
೧೬. ಪಿಲಿ ಚಾಮುಂಡಿ
೧೭. ಬಾಕುಡ್ತಿ
೧೮. ಬ್ರಾಣ್ತಿಭೂತ
೧೯. ಮಮ್ಮಾಯಿ
೨೦. ಮಾಂಕಾಳಿ
೨೧. ಮಾಯಂದಾಲ್
೨೨. ರಕ್ತೇಶ್ವರಿ
೨೩. ಲೆಕ್ಕೊಕಿಲಿ

ಭೂತಾರಾಧನೆಯೆಂಬ ಸಮಷ್ಟಿ ಕಲೆಯನ್ನು ಒಂದು ಸಾಮೂಹಿಕ ಪಾಲ್ಗೊಳ್ಳುವಿಕೆಯ ಆರಾಧನೆಯೆಂದು ಪರಿಗಣಿಸಬೇಕಾಗುತ್ತದೆ. ಅದರಲ್ಲಿ ಭೂತ ಕಟ್ಟುವ ಕಲಾವಿದರಿರುತ್ತಾರೆ. ಭೂತದ ಪಾತ್ರಿಗಳಿರುತ್ತಾರೆ. ಭೂತದ ‘ಮಾನಿ’ಯಿರುತ್ತಾರೆ. ತೆಂಬರೆ ಅಥವಾ ಇತರ ವಾದ್ಯ ಪರಿಕರಗಳನ್ನು ನುಡಿಸುತ್ತಾ ಭೂತದ ಸಂಧಿ-ಪಾಡ್ದನಗಳನ್ನು ಹಾಡುವ ಕಲಾವಿದರ ಬಳಗದವರಿರುತ್ತಾರೆ. ವಾಲಗ ಅಥವಾ ಹಿಮ್ಮೆಳನದರಿರುತ್ತಾರೆ. ಭೂತಾರಾಧನೆಯನ್ನು ಆಯೋಜಿಸುವ ಮನೆಯ ಯಜಮಾನರು, ಊರಿನ ಮುಖಂಡರು ಅಥವಾ ಭೂತಸ್ಥಾನದ ಆಡಳಿತ ವರ್ಗ ಮಾತ್ರ ಸೇರಿರುತ್ತಾರೆ. ಎಲ್ಲಕ್ಕಿಂತಲೂ ಮುಖ್ಯವಾಗಿ ಭೂತಗಳನ್ನು ನಂಬಿ, ಆರಾಧಿಸುವ ಭಕ್ತ ಸಮೂಹದವರಿರುತ್ತಾರೆ. ಇವರೆಲ್ಲರ ಸಕ್ರಿಯ ಪಾಲ್ಗೊಳ್ಳುವಿಕೆಯಿಂದ ಭೂತಾರಾಧನೆಯು ಅರ್ಥವನ್ನು ಪಡೆದುಕೊಳ್ಳುತ್ತದೆ. ತುಳುನಾಡಿನ ಜಾತಿ ವ್ಯವಸ್ಥೆಯನ್ವಯ ಸಾಮಾಜಿಕ ಪಾಲ್ಗೊಳ್ಳುವಿಕೆಯು ಇಲ್ಲಿ ಮುಖ್ಯವೆನಿಸುತ್ತಿದೆ. ಬ್ರಾಹ್ಮಣರು, ಬಂಟರು, ಜೈನರು, ಬಲ್ಲಾಳರು, ಬಿಲ್ಲವರು, ಮೊಗವೀರರು, ವಿಶ್ವಕರ್ಮರು, ಮಡಿವಾಳರು, ಕ್ಷೌರಿಗಳು ಹೀಗೆ ಪ್ರತಿಯೊಂದು ಸಮುದಾಯದವರೂ ಭೂತಾರಾಧನೆಯಲ್ಲಿ ಪಾಲ್ಗೊಳ್ಳುತ್ತಾರೆ. ಕೆಲವು ಸಮುದಾಯಗಳವರು ಭೂತಾರಾಧನೆಯಲ್ಲಿ ನಿರ್ವಹಿಸಬೇಕಾಗ ನಿರ್ದಿಷ್ಟ ಕರ್ತವ್ಯಗಳಿರುತ್ತವೆ. ಒಂದರ್ಥದಲ್ಲಿ ಇದು ಸಾಮಾಜಿಕ, ಶ್ರೇಣೀಕರಣ ವ್ಯವಸ್ಥೆಯನ್ನು ಪೋಷಿಸಿಕೊಂಡು ಬರುವ ಆಚರಣೆಯೆಂದರೂ ಸಲ್ಲುತ್ತದೆ. ವಿಪರ್ಯಾಸವೆಂದರೆ ಭೂತ ಕಟ್ಟುವ ಕಲಾವಿದರು ಸ್ವತಃ ದಲಿತರಾಗಿದ್ದರೂ ಅವರನ್ನು ಮತ್ತು ಅವರ ಬಳಗದವರನ್ನು ಬಿಟ್ಟು ಉಳಿದ ದಲಿತ ಸಮುದಾಯದವರು ನಿಗದಿಪಡಿಸಿದ ಸ್ಥಳದಲ್ಲಿ ನಿಂತು ಭೂತಾರಾಧನೆಯನ್ನು ವೀಕ್ಷಿಸಬೇಕು. ಆಧುನಿಕ ಸಂದರ್ಭದಲ್ಲಿ ಸ್ವಲ್ಪ ಸುಧಾರಣೆಯನ್ನು ತಂದಿದ್ದರೂ ಕೆಲವರೆ ಪರಂಪರೆಯ ಹೆಸರಲ್ಲಿ ಇಂದಿಗೂ ಉಳಿದು ಬಂದಿರುವುದಿದೆ. ಇದೇ ಸಂದರ್ಭದಲ್ಲಿ ಕೆಲವು ನಿರ್ದಿಷ್ಟ ಸಮುದಾಯಗಳಿಗಷ್ಟೇ ಸೀಮಿತವಾದ ದೈವಗಳಿರುವದನ್ನು ನಾವಿಲ್ಲಿ ಗಮನಿಸಬೇಕಾಗುತ್ತದೆ. ಉದಾಹರಣೆಗೆ ತುಳುನಾಡಿನ ದಲಿತ ಸಮುದಾಯಗಳಲ್ಲೊಂದಾದ ಮೊರ ಅಥವಾ ಮಹರರು ತಮ್ಮದೇ ದೈವಗಳಾದ ಮುದ್ದ- ಕುಳಲರನ್ನು ‘ಮುಗೋರ‍್ಲೆ ಕೋಲ’ದ ಮೂಲಕ ಆರಾಧಿಸುತ್ತಾರೆ. ಅವಳ ವೀರರಾದ ಕೋಟಿ ಚೆನ್ನಯರು ಬಿಲ್ಲವ ಸಮುದಾಯದವರಾದರೂ, ಆ ದೈವಗಳ ಆರಾಧನೆಯನ್ನು ‘ಬೈದ್ಯರ‍್ಲೆ ನಾಮ’ ಎಂದು ಕರೆದರು. ತುಳು ನಾಡಿನ ಬಂಟ ಸಮುದಾಯದ ವ್ಯಕ್ತಿಗಳು ದೈವಗಳಾಗಿ ಆರಾಧನೆಗೊಳ್ಳುತ್ತಿರುವುದುಂಟು. ಬೀರಣ್ಣಾಳ ದೈವವನ್ನು ಇಲ್ಲಿ ಉದಾಹರಿಸಬಹುದು. ಈಗಾಗಲೇ ಪ್ರಸ್ತಾವಿಸಲಾದ ‘ಕಲ್ಕುಡ-ಕಲ್ಲುರ್ಟಿಯರು ವಿಶ್ವಕರ್ಮ ಅಥವಾ ಶಿಲ್ಪಿ ಸಮುದಾಯಕ್ಕೆ ಸೇರಿದವರು. ಮುಸಲ್ಮಾನ ವ್ಯಕ್ತಿಗಳೂ ಭೂತಗಳಾದ ಉದಾಹರಣೆಗಳಿವೆ. ಅಲಿಭೂತ ಒಬ್ಬಯ್‌ಭೂತಗಳನ್ನು ಇಲ್ಲಿ ಹೆಸರಿಸಬಹುದು. ವಿಶೇಷವೆಂದರೆ ಈ ದೈವಗಳಿಗೆ ಹೆಚ್ಚಾಗಿ ನಡೆದುಕೊಳ್ಳುವವರು ಹಿಂದೂ ಧರ್ಮೀಯರು. ಹೀಗೆ ಭೂತಾರಾಧನೆಯು ಕೋಮುಸೌಹಾರ್ದತೆಯ ಸಂಕೇತವಾಗಿದೆ ಎನ್ನಬಹುದು.

ಭೂತಾರಾಧನೆಯಲ್ಲಿ ಭೂತದ ವೇಷವನ್ನು ಧರಿಸುವ ಪ್ರಕ್ರಿಯೆಯನ್ನು ‘ಭೂತ ಕಟ್ಟುವುದು’ ಎನ್ನುತ್ತಾರೆ. ಭೂತ ಕಟ್ಟುವ ಕಲಾವಿದರ ಪಾತ್ರವು ಇಲ್ಲಿ ಮಹತ್ವದ್ದಾಗಿರುತ್ತದೆ. ಸಾಮಾಜಿಕವಾಗಿ ದಲಿತ ವರ್ಗಕ್ಕೆ ಸೇರಿದ ಈ ಕಲಾವಿದರು ಭೂತಾರಾಧನೆಯ ಸಂದರ್ಭದಲ್ಲಿ ವಿವಿಧ ಬಗೆಯ ದೈವಗಳಾಗಿ ರೂಪ ತಳೆಯುತ್ತಾರೆ. ತುಳುನಾಡಿನಲ್ಲಿ ನಲಿಕೆಯವರು, ಪರವರು, ಸಂಬಂಧ, ಪಾಣಾರರು, ಮಲಯರು, ವಣ್ಣರು ಮುಂತಾದ ಸಮುದಾಯಗಳಿಗೆ ಸೇರಿದ ಭೂತ ಕಲಾವಿದರಿರುತ್ತಾರೆ. ಇವರಲ್ಲಿ ನಲಿಕೆಯವರು, ಪರವರು ಮತ್ತು ಪಂಬದರು ತುಳು ಮನೆ ಮಾತಿನವರಾದರೆ, ಕುಂದಾಪುರ ಪರಿಸರದ ಪಾಣಾರರು ಕನ್ನಡ ಮನೆ ಮಾತಿನವರು. ಇವರು ನಡೆಸುವ ‘ಪಾಣಾರಾಟ’ ಎಂಬ ವಿಶಿಷ್ಟ ಬಗೆಯ ಭೂತಾರಾಧನೆಯೂ ಅಲ್ಲಿ ಪ್ರಚಲಿತವಿದೆ. ಮಲಯರು, ವಣ್ಣರ್‌ಮತ್ತು ನೆಕ್ಕರರು ಕೇರಳದ ಗಡಿ ಪ್ರದೇಶದವರಾಗಿದ್ದು, ಮಲಯಾಳಂ ಮಾತನಾಡುತ್ತಾರೆ. ಇಂಥಿಂಥ ದೈವಗಳಿಗೆ ಇಂಥಿಂಥ ಸಮುದಾಯಗಳ ಕಲಾವಿದರೆ ಬೇಕೆಂಬ ನಿಯಮವಿದೆ. ಸಾಮಾನ್ಯವಾಗಿ ಕಲಾವಿದರ ಭಾಷೆಗಳ ದೈವ ಭಾಷೆಯೂ ಆಗಿರುವುದುಂಟು. ಕೆಲವೊಮ್ಮೆ ಕಾಸರಗೋಡು ಪ್ರದೇಶದ ನಲಿಕೆ ಸಮುದಾಯದವರು ತುಳು, ಮಲಯಾಳಂಗಳೆರಡರಲ್ಲೂ ವ್ಯವಹರಿಸುವುದುಂಟು. ಅದೇ ರೀತಿ ಪಾಣಾರರು ಕಮ್ಮಟ ಭೂತಗಳು ತುಳು ಮಿಶ್ರಿತ ಕನ್ನಡದಲ್ಲಿ ಮಾತನಾಡುವುದುಂಟು.

ಭೂತಾರಾಧನೆಯ ಸಂಬಂಧಪಟ್ಟ ಭೂತದ ಸ್ಥಾನದ ಎದುರುಗಡೆ ನಡೆಯಬಹುದು; ಅಥವಾ ಯಜಮಾನರ ಇಲ್ಲವೆ ನಡೆಸುವವರ ಮನೆಯ ಅಂಗಳದಲ್ಲಿ ಜರುಗಬಹುದು. ಕೋಟಿ ಚೆನ್ನಯರ ಸಂದರ್ಭದಲ್ಲಿ ದೈವಗಳ ಸ್ಥಾನವನ್ನು ‘ಗರೊಡಿ’ ಎಂದು ಕರೆಯುತ್ತಾರೆ. ‘ಬೈದರ್ಕಳ ನೇಮ’ ಸಾಮಾನ್ಯವಾಗಿ ಬೈದರ್ಕಳ ಗರೊಡಿ ಮುಂದೆಯೇ ನಡೆಯುತ್ತದೆ. ದೇವರುಗಳಿಗೆ ದೇವಸ್ಥಾನವಿದ್ದಂತೆ ಭೂಗಳಿಗೆ ಭೂತಸ್ಥಾನವಿರುತ್ತದೆ. ಆದರೆ ದೇವಸ್ಥಾನಗಳಲ್ಲಿ ದೇವರ ವಿಗ್ರಹ ಅಥವಾ ಲಿಂಗಗಳಿದ್ದಂತೆ ಭೂತಸ್ಥಾನಗಳಲ್ಲಿ ಭೂತಗಳ ವಿಗ್ರಹವಿರುವುದು ಕಡಿಮೆ. ಅಲ್ಲಿ ಸಂಬಂಧಪಟ್ಟ ಭೂತದ ಮೊಗ (ಮುಖವಾಡ), ಈಟಿ, ತ್ರಿಶೂಲ, ಬಿಲ್ಲು – ಬಾಣಗಳಂತೆ ಆಯುಧಗಳು, ಚೌವರಿ, ಗಂಟ ಮರದಿಂದ ಹುಲಿ ಮುಂತಾದ ಭೂತದ ವಾಹನ, ಬಂಡಿ, ಭೂತದ ಮಂಚ ಉಯ್ಯಾಲೆ, ಆಭರಣ ಇತ್ಯಾದಿ ಪರಿಕರಗಳಿರುತ್ತವೆ. ಇತ್ತಿಚಿನ ವಿಧಗಳು ದೇವಸ್ಥಾನಗಳ ಪ್ರಭಾವದಿಂದಲೋ ಏನೋ! ಕೆಲವೆಡೆ ಭೂತ ಸ್ಥಾನಗಳಲ್ಲಿ ಸಂಬಂಧಪಟ್ಟ ಭೂತಗಳ ಮೂರ್ತಿಗಳು ಇರುವುದುಂಟು. ಈ ಎಲ್ಲ ಪರಿಕರಗಳನ್ನು ಒಟ್ಟಾಗಿ ದೈವದ ‘ಭಂಡಾರ’ ಎನ್ನುತ್ತಾರೆ. ಸ್ಥಾನವಿರುವ ಜಾಗಕ್ಕಿಂತ ಸ್ವಲ್ಪ ದೂರದಲ್ಲಿ ಭೂತಾರಾಧನೆ ನಡೆಯುವ ಜಾಗಕ್ಕೆ ಅಲ್ಲಿಗೆ ಮಂಚ, ಉಯ್ಯಾಲೆ, ಮೂರ್ತಿ ಮುಂತಾದವುಗಳನ್ನು ಇತರೆ ಪರಿಕರಗಳನ್ನು ವಾದ್ಯಮೇಳಗಳೊಂದಿಗೆ ಕೊಂಡೊಯ್ಯುವ ಸಂಪರದಾಯವಿದೆ. ಇವನ್ನು ‘ಭಂಡಾರ ಹೋಗುವುದು’, ‘ಕೀರುವಾಳು ಇಳಿಯುವುದು’ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಈ ಭಂಡಾರ ಸಾಮಗ್ರಿಗಳನ್ನು ಇರಿಸಲು ಭೂತಾರಾಧನೆ ನಡೆಯುವ ಸ್ಥಳದಲ್ಲಿ ತಾತ್ಕಾಲಿಕ ಚಪ್ಪರವೊಂದನ್ನು ನಿರ್ಮಿಸುತ್ತಾರೆ. ಇದನ್ನು ‘ಕೊಡಿಯಾಡಿ’ ಎನ್ನುತ್ತಾರೆ. ಕೊಡಿಯಾಡಿಯಲ್ಲಿ ಮೂರ‍್ನಾಲ್ಕು ಅಂಕಣಗಳುಳ್ಳ ‘ಸಿಂಗರ್ದ’ ಎಂಬ ವಿಶಿಷ್ಟ ಪೀಠದ ಮೇಲೆ ಭಂಡಾರ ಸಾಮಗ್ರಿಗಳನ್ನು ಇರಿಸಲಾಗುತ್ತದೆ.

ಅದಕ್ಕೂ ಮುನ್ನ ಭೂತಾರಾಧನೆಗೆ ದಿನ ನಿಗದಿಪಡಿಸಿದ ಮೇಲೆ ನಿರ್ದಿಷ್ಟ ಅವಧಿಗೆ ಮುನ್ನ ಮುಹೂರ್ತ ನಿಶ್ಚಯಿಸಲಾಗುತ್ತದೆ. ಬಾಳೆಗೊನೆಯನ್ನು ವಿಧಿಪ್ರಕಾರ ಕಡಿಯುವುದರ ಮೂಲಕ ದಿನ ನಿಶ್ಚಯವಾಗುತ್ತದೆ. ಇದನ್ನು ತುಳು ಭಾಷೆಯಲ್ಲಿ ‘ನೈಲ್ ಕರ್ಡು’ (ಗೊನೆ ಕಡಿಯುವುದು) ಎನ್ನುತ್ತಾರೆ. ಸಾಮಾನ್ಯವಾಗಿ ಒಂಬತ್ತು, ಏಳು, ಅಥವಾ ಐದು ದಿನಗಳ ಮುಂಚಿತವಾಗಿ ಗೊನೆ ಕಡಿದು, ಭೂತಸ್ಥಾನದೊಳಗಡೆ ಕಟ್ಟುತ್ತಾರೆ. ಆ ವೇಳೆಯಲ್ಲಿ ಭೂತ ಸ್ಥಾನದ ಆಡಳಿತ ಮೊಕ್ತೇಸರರು ಅಥವಾ ಮನೆಯ ಯಜಮಾನರು, ಊರಿನ ಗುರ್ಕಾರರು, ಭೂತದ ಮಾನಿ ಮುಂತಾದವರು ಉಪಸ್ಥಿತರಿರುತ್ತಾರೆ. ಆ ಗೊನೆಯ ಹಣ್ಣನ್ನು ಭೂತಾರಾಧನೆಯ ದಿವಸ ಭೂತದ ಆಚರಣೆಗೆ ಹಾಗೂ ಪ್ರಸಾದಕ್ಕೆ ಬಳಸಲಾಗುತ್ತದೆ.

ಭೂತಾರಾಧನೆಯ ದಿನ ಯಜಮಾನ ಭೂತ ಕಲಾವಿದನಿಗೆ ‘ಎಣ್ಣೆ ಬೂಳ್ಯ’ (ಎಣ್ಣೆ-ವೀಳೆಯ) ಕೊಡುತ್ತಾನೆ. ಇದು, ಭೂತ ಕಟ್ಟಲು ಅನುಮತಿ ನೀಡುವ ಧಾರ್ಮಿಕ ವಿಧಿ. ಅದನ್ನು ಸ್ವೀಕರಿಸಿ, ಸ್ನಾನ ಮಾಡಿಕೊಂಡು ಬಂದ ಕಲಾವಿದ ಭೂತ ವೇಷ ಹಾಕಲು ಪ್ರಾರಂಭಿಸುತ್ತಾನೆ. ಮುಖಕ್ಕೆ ಬಣ್ಣ ಹಚ್ಚುವುದರಿಂದ ಇದು ಪ್ರಾರಂಭವಾಗುತ್ತದೆ. ಈ ಬಣ್ಣವನ್ನು ತುಳು ಸಂದರ್ಭದಲ್ಲಿ ‘ಅರ್ದಾಲ’ (ಅರದಾಳ) ಎನ್ನುತ್ತಾರೆ. ಕೇರಳ ಗಡಿ ಪ್ರದೇಶದ ಮಲಯಾಳಿ ದೈವಗಳಿಗೆ ಬೇರೆ ತೆರವಾದ ಬಣ್ಣವನ್ನು ಬಳಸಲಾಗುತ್ತದೆ. ಕೆಲವು ದೈವಗಳಿಗೆ ಮೈಮೇಲೆ ಕೆಂಪು ಬಣ್ಣದ ಅಂಗಿಯನ್ನು ತೊಡಿಸುತ್ತಾರೆ. ಸೊಂಟಕ್ಕೆ ಎಳೆಯ ತೆಂಗಿನ ಗರಿಯನ್ನು ಸಿಕ್ಕಿಸಿಕೊಳ್ಳುತ್ತಾರೆ. ಇದನ್ನು ‘ತಿರಿ’ ಎನ್ನಲಾಗುತ್ತದೆ. ಮುಂಗೈ ಮಣಿಕಟ್ಟುಗಳಿಗೂ ತಿರಿಯನ್ನು ಅಂದವಾಗಿ ಕತ್ತರಿಸಿ, ಜೋಡಿಸಿ ಕಟ್ಟಿಕೊಳ್ಳಲಾಗುತ್ತದೆ. ತಲೆಗೆ ಕಿರೀಟವಿರುತ್ತದೆ. ಕೆಲವು ದೈವಗಳಿಗೆ ಭುಜ ಇಲ್ಲವೆ ಬೆನ್ನಿನ ಭಾಗಕ್ಕೆ ಪ್ರಭಾವಳಿಯನ್ನು ಹೋಲುವ ದೊಡ್ಡದಾದ ‘ಅಣಿ’ಯನ್ನು ಕಟ್ಟುತ್ತಾರೆ. ಕಾಲುಗಳಿಗೆ ‘ಗಗ್ಗರ’ ಎಂಬ ಗೆಜ್ಜೆಗಳುಳ್ಳ ವಿಶಿಷ್ಟ ರೀತಿಯ ಕಡಗವನ್ನು ಧರಿಸಲಾಗುತ್ತದೆ. ಈ ಗಗ್ಗರ ಧರಿಸುವ ಕಾರ್ಯಕ್ರಮಕ್ಕೆ ಭೂತಾರಾಧನೆಯಲ್ಲಿ ವಿಶೇಷ ಮಹತ್ತ್ವವಿದೆ. ಕೆಲವು ದೈವಗಳ ಆರಾಧನೆಯಲ್ಲಿ ಗಗ್ಗರ ಧರಿಸುವ ಈ ವಿಶೇಷ ಸಂದರ್ಭವನ್ನು ‘ಗಗ್ಗರದೆಚ್ಚಿ’ ಎಂದು ಕರೆಯಲಾಗುತ್ತದೆ. ಗಗ್ಗರ ಧರಿಸಿ ದ್ದು ನಿಂತ ಭೂತಕ್ಕೆ ಯಜಮಾನರು ಭೂತದ ಮಾನಿ ಹಾಗೂ ಇತರರು ಪ್ರಾರ್ಥನೆ ಸಲ್ಲಿಸಿ, ‘ಪೂವರಿ’ (ಹೂ ಮತ್ತು ಅಕ್ಕಿ ಕಾಳು) ಎಸೆಯುತ್ತಾರೆ. ಆ ಘಟ್ಟದಲ್ಲಿ ಕಲಾವಿದನ ಮೇಲೆ ಭೂತದ ಆವಾಹನೆಯಾಗುತ್ತದೆ. ಇದನ್ನು ತುಳು ಭಾಷೆಯಲ್ಲಿ ‘ವಸಯೋ’ ಆಪುನಿ ಎನ್ನುತ್ತಾರೆ. ಭೂತಕ್ಕೂ, ಭೂತದ ಮಾನಿಗೂ ‘ದರ್ಶನ’ ಅಂದರೆ ನಡುಕದ ಆವೇಶ ಬರುತ್ತದೆ. ವಾದ್ಯಮೇಳದ ತಾಳಕ್ಕನುಗುಣವಾಗಿ ಹೆಜ್ಜೆ ಹಾಕಿ ಭೂತ ನರ್ತಿಸುತ್ತದೆ. ಭಕ್ತಾದಿಗಳು ತಮ್ಮ ಕಷ್ಟ ಕೋಟಲೆಗಳನ್ನು ಅಹವಾಲುಗಳನ್ನು ದೈವದ ಮುಂದೆ ತೋಡಿಕೊಳ್ಳುತ್ತಾರೆ. ದೈವ ಅವರ ಕಷ್ಟಗಳನ್ನೆಲ್ಲಾ ಪರಿಹರಿಸುವುದಾಗಿ ಅಭಯ ನೀಡುತ್ತದೆ. ಪ್ರಸಾದ ವಿತರಣೆಯಾಗುತ್ತದೆ. ಭೂತ ತನ್ನ ಕೈಯಾರ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ಸಂಪ್ರದಾಯವಿದೆ. ಸಾಮಾನ್ಯವಾಗಿ ಅರಿಶಿಣ ಪುಡಿ ಹಾಗೂ ಹೊಂಬಾಳೆ ಎಸಳನ್ನು ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ. ಕೆಲವೆಡೆ ಗಂಧ ಪ್ರಸಾದವಿರುವುದೂ ಉಂಟು. ಇದನ್ನು ತುಳುವಿನಲ್ಲಿ ಕೆಲವೆಡೆ ‘ಬೂಳ್ಯೊ’ ಎಂದೂ, ಮತ್ತೆ ಕೆಲವೆಡೆ ‘ಮಂಜಲ್ತ ಪೊಡಿ’ ಎಂದೂ ಕರೆಯುತ್ತಾರೆ. ಕೆಲವು ವಿಶೇಷ ಮನೆತನ ಹಾಗೂ ಸಮುದಾಯಗಳವರಿಗೆ ಭೂತವು ಪ್ರಸಾದ ಮತ್ತು ಮರ್ಯಾದೆಯ ರೂಪದಲ್ಲಿ ಎಳನೀರನ್ನು ನೀಡುವ ಸಂಪ್ರದಾಯವೂ ಇದೆ. ಈಗಾಗಲೆ ಗಮನಿಸಿದಂತೆ ಭೂತ ಕಟ್ಟುವವನ ಬಳಗದವರು ‘ತೆಂಬರೆ’ ನುಡಿಸುತ್ತಾ, ಭೂತದ ಹುಟ್ಟು, ಬೆಳವಣಿಗೆ, ಸಂಚಾರ, ನೆಲೆ, ಮಹಿಮೆ ಕಾರಣಿಕಗಳನ್ನು ವಿವರಿಸುವ ಸಂಧಿಪಾಡ್ದನಗಳನ್ನು ಹಾಡುತ್ತಿರುತ್ತಾರೆ. ಭೂತದ ಮಾನಿ ಭೂತ ಮತ್ತು ಭಕ್ತರ ನಡುವೆ ಮಧ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಾನೆ. ಆತ ಅಥವಾ ಇತರ ನಿಗದಿಪಡಿಸಿದ ವ್ಯಕ್ತಿ ಭೂತಕ್ಕೆ ಸಂಬಂಧಪಟ್ಟ ನುಡಿಗಟ್ಟುಗಳನ್ನು ಹೇಳುತ್ತಾರೆ. ಮಲಯಾಳಿ ದೈವಗಳಾದರೆ ತೆಂಬರೆ ಬದಲಿಗೆ ಬೊಂಬೆ ಹಾಗೂ ಚಕ್ರತಾಳಗಳಿರುತ್ತವೆ. ಅವುಗಳ ‘ಪಾಟ್ಟು’ ಕೂಡಾ ಮಲಯಾಳಂ ಭಾಷೆಯಲ್ಲಿರುತ್ತದೆ.

ಅದಾದ ಅನಂತರ ಭೂತ ‘ಬಾರ್ನೆ’ ಹೋಗುವ ಹಂತ. ಭೂತ ಆಹಾರ ಸೇವಿಸುವ ಆರೋಗಣೆ ಅಥವಾ ಪಾರಣೆಯ ಕ್ರಿಯೆಯನ್ನು ತುಳು ಭಾಷೆಯಲ್ಲಿ ‘ಬಾರ್ನೆ’ ಎನ್ನಲಾಗುತ್ತದೆ. ಸಾಮಾನ್ಯವಾಗಿ ಈ ‘ಬಾರ್ನೆ’ಯಲ್ಲಿ ಅರಳು (ಹೋದ್ಲು ಎಳನೀರು ಹಾಗೂ ಬಾಳೆಹಣ್ಣುಗಳಿರುತ್ತವೆ) ಕೆಲವು ದೈವಗಳಿಗೆ ಅನ್ನ ಮತ್ತು ಸಾಂಬಾರನ್ನು ಬಾರ್ನೆಗೆ ನಿವೇದಿಸುವುದಿದೆ. ಇನ್ನು ಕೆಲವು ದೈವಗಳಿಗೆ ಮದ್ಯವನ್ನರ್ಪಿಸಿ, ಕೋಳಿ ಬಲಿಕೊಡುವ ಸಂಪ್ರದಾಯವೂ ಇದೆ. ಬಾರ್ನೆಯ ಅನಂತರ ಗುರಿಕಾರರು, ಭೂತಾರಾಧನೆಯನ್ನು ನಡೆಸಿದ ಯಜಮಾನರು,ಮುಕ್ಕಾಲ್ಲಿ ಭೂತದ ಮಾನಿ ಹಾಗೂ ಭಕ್ತಾದಿಗಳು ಮತ್ತೊಮ್ಮೆ ಪ್ರಾರ್ಥಿಕ ‘ಪೂವರಿ’ ಎಸೆಯುವುದ ಮೂಲಕ ಭೂತ ‘ಬಿರಿಯುತ್ತದೆ’. ಅಂದರೆ ಕಲಾವಿದನ ಮೈಮೇಲೆ ಆವಾಹನೆಯಾಗಿದ್ದ ಭೂತ ಹೊರಟು ಹೋಗುತ್ತದೆ. ಅನಂತರ ವೇಷ ಕಳಚುವ ಸಂದರ್ಭ.

ಈಗಾಗಲೇ ಪ್ರಸ್ತಾವಿಸಿದಂತೆ ಭೂತದ ಭಂಡಾರದಲ್ಲಿಯ ಸಾಮಗ್ರಿಗಳು ಭೂತಾರಾಧನೆಯ ಸಂದರ್ಭದಲ್ಲಿ ಬಳಕೆಯಾಗುತ್ತವೆ. ಅಂದರೆ ಮೊಗ, ಆಯುಧ, ಚಲ್‌ರಿ ಇತ್ಯಾದಿಗಳನ್ನು ಆಯಾ ಭೂತಗಳ ವಿಶಿಷ್ಟತೆಗಳಿಗೆ ಅನುಗುಣವಾಗಿ ಬಳಸಲಾಗುತ್ತದೆ. ಕೆಲವು ದೈವಗಳಿಗೆ ಅಡಕೆ ಮರದ ಹಾಳೆಯಾದ ತಯಾರಿಸಿದ ಮೊಗ ಮತ್ತು ಕೆಲವು ದೈವಗಳಿಗೆ ಮರ ಅಥವಾ ಲೋಹದಿಂದ ತಯಾರಿಸಿದ ಮುಖವಾಡಗಳನ್ನು ಅಳವಡಿಸಲಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಶ್ರೀಮಂತ ಭಕ್ತಾದಿಗಳು ಬಂಗಾರದ ಮೊಗ ಅಥವಾ ಆಭರಣಗಳನ್ನು ಹರಕೆ ರೂಪದಲ್ಲಿ ಭೂತಕ್ಕೆ ಅರ್ಪಿಸುವುದಿದೆ. ಅವುಗಳನ್ನು ಭೂತಾರಾಧನೆಯ ಸಂದರ್ಭದಲ್ಲಿ ಧರಿಸಲಾಗುತ್ತದೆ. ಕೆಲವು ದೈವಗಳಿಗೆ ಮೈಮೇಲೆ ವೃತ್ತಾಕಾರದ ಸಣ್ಣ ಸುಣ್ಣದ ಚುಕ್ಕಿಗಳನ್ನು ಇರಿಸಲಾಗುತ್ತದೆ. ಕೆಲವು ಭೂತಗಳು ಒಣಗಿದ ತೆಂಗಿನ ಗರಿಗಳಿಂದ ತಯಾರಿಸಿದ ‘ಸೂಟೆ’ ಅಥವಾ ದೊಂದಿಗಳನ್ನು ಉರಿಸಿ ಕೈಗಳಲ್ಲಿ ಹಿಡಿದುಕೊಂಡು ಅವುಗಳ ಬೆಳಕನ್ನು ಸಾಂಕೇತಿಕವೆಂಬಂತೆ ನಾಲ್ಕು ದಿಕ್ಕುಗಳಿಗೂ ತೋರಿಸುತ್ತದೆ. ಸೂಟೆಯ ಬೆಂಕಿಯನ್ನು ತಮ್ಮ ಮೈಗೆ ಹಿಡಿದುಕೊಳ್ಳುವುದು ಉಂಟು. ಕೆಲವು ದೈವಗಳು ಅಗ್ನಿ ಕುಂಡ ಹಾಯುವ, ಅದೇ ರೀತಿ ಸಾಂಕೇತಿಕವಾಗಿ ಬೇಟೆಯಾಡುವ ಆಚರಣೆ ಇದೆ. ಕೇರಳದ ಗಡಿ ಪ್ರದೇಶದಲ್ಲಿ ವಿಷ್ಣು ಮೂರ್ತಿ ದೈವಕ್ಕೂ ‘ಒತ್ತಕೋಲ’ವೆಂಬ ವಿಶೇಷ ಕೊಂಡ ಸೊವೆ (ಬೆಂಕಿ ಕೊಂಡ ಹಾಯುವ ಆಚರಣೆ)ಯನ್ನು ನೆರವೇರಿಸಲಾಗುತ್ತದೆ.

ಹೀಗೆ ಚಿತ್ರ ಬಣ್ಣಗಾರಿಕೆ, ವೇಷ ಭೂಷಣ, ಹಾಡು, ಹಿಮ್ಮೇಳ, ಸಂಗೀತ, ಕುಣಿತ, ಸಂಭಾಷಣೆ, ನಂಬಿಕೆ, ಆರಾಧನೆಗಳ ಸಮ್ಮಿಲನದಿಂದ ಭೂತಾರಾಧನೆ ಗಮನ ಸೆಳೆಯುತ್ತದೆ. ಹಾಗಾಗಿಯೇ ಅದನ್ನು ಒಂದು ಸಮಷ್ಟಿಕಲೆ, ಪರಿಪೂರ್ಣ ರಂಗಭೂಮಿ ಎಂದು ವಿದ್ವಾಂಸರು ಗುರುತಿಸಿದ್ದಾರೆ. ಇಂತಹ ಈ ವಿಶಿಷ್ಟ ಕಲೆಗೆ ಸಂಬಂದಪಟ್ಟಂತೆ ಸಾಕಷ್ಟು ವಿಚಾರಗಳನ್ನು ಹೆಳಬಹುದು. ಭೂತಾರಾಧನೆಯೊಂದಿಗೆ ಹಾಸುಹೊಕ್ಕಾಗಿರುವ ಸಾಮಾಜಿಕ, ಧಾರ್ಮಿಕ ನಂಬಿಕೆ, ವಿಧಿ ನಿಷೇಧಗಳನ್ನು ವೈಚಾರಿಕೆಯ ದೃಷ್ಟಿಯಿಂದ ಪರಿಶೀಲಿಸಬಹುದು. ವಿಶೇಷವಾಗಿ ಹೆಣ್ಣುಮಕ್ಕಳ ವಿಷಯದಲ್ಲಿ ಪ್ರಚಲಿತವಿರುವ ವಿಧಿ – ನಿಷೇಧಗಳ ಬಗೆಗೆ ಚಿಂತನೆ ನಡೆಸಬಹುದು, ಭೂತಾರಾಧನೆಯು ಪಾರಂಪರಿಕವಾಗಿ ಪೋಷಿಸಿಕೊಂಡು ಬಂದಿರುವ ನಾಡಿನ ಸಾಮಾಜಿಕ, ಆರ್ಥಿಕ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಬಗೆಗೆ ಚಿಕಿತ್ಸಿಕ ದೃಷ್ಟಿಯನ್ನು ಹರಿಸಬಹುದು. ಈಗಾಗಲೆ ವಿದ್ವಾಂಸರು ಭೂತಗಳ ಸಂಧಿ ಪಾಡ್ದನ ಪಾಟ್ಟುಗಳನ್ನೂ ಆಚರಣಾ ವಿಧಿ ವಿಧಾನಗಳನ್ನೂ ಉದ್ಯಮಕ್ಕೊಳಪಡಿಸಿ, ಅದರ ಹಿಂದಿರುವ ಐತಿಹಾಸಿಕ, ಸಾಮಾಜಿಕ, ಅರ್ಥಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಸಂಗತಿಗಳನ್ನೂ ವಿಶ್ಲೇಷಿಸಿದ್ದಾರೆ. ಅದೇನೇ ಇದ್ದರೂ ಭೂತಾರಾಧನೆಯ ಪ್ರತ್ಯಕ್ಷ ಅನುಭವವಾದ ಧಾರ್ಮಿಕ ನಂಬಿಕೆ, ಆರಾಧನೆ ಹಾಗೂ ಕಲೆಯ ನೆಲೆಯಿಂದ ಜನ ಇಂದಿಗೂ ಅದನ್ನು ಶ್ರದ್ಧಾಭಕ್ತಿಗಳಿಂದ ಪೋಷಿಸಿಕೊಂಡು ಬಂದಿದ್ದಾರೆ.

.ಎಸ್.ಆರ್.

 

ಭೂತೇರು ‘ಭೂತೇರು’ ಎಂಬುದು ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಒಂದು ವೃತ್ತಿ ಗಾಯಕ ಸಂಪ್ರದಾಯ. ‘ಭೂತ್ಯಾಗಳು’ ಎಂಬ ರೂಪವೂ ಇದೆ. ಇವರಿಗೆ ಈ ಹೆಸರು ಹೇಗೆ ಬಂದಿತು ಎಂಬ ಬಗ್ಗೆ ಸ್ಪಷ್ಟ ಉತ್ತರ ಸಿಗುವುದಿಲ್ಲ. ೧. ನಮ್ಮ ಪದ್ಧತಿ ಹೀಗಿದೆ, ಅದಕ್ಕೇ ಈ ಹೆಸರು. ೨. ನಾವು ಭೂತೇರು, ನಮಗೆ ಅದೇ ಹೆಸರು, ಅದೇ ನಮ್ಮ ಜಾತಿ. ೩. ನಾವು ಲಿಂಗಾಯಿತರು ಹೀಗೆ ಇರುತ್ತದೆ ಅವರ ಉತ್ತರ. ‘ಬೂತು’ ಎಂಬ ಶಬ್ದದಿಂದ ಈ ‘ಭೂತೇರು’ ಶಬ್ದ ನಿಷ್ಪತ್ತಿಯಗಿರುವಂತೆ ತೋರುತ್ತದೆ. ಈ ಶಬ್ದವನ್ನು ಹೀಗೆ ವಿವರಿಸಬಹುದು : ಯಾವುದಾದರೊಂದು ನಿರ್ದಿಷ್ಟ ದೈವಕ್ಕೆ ತಮ್ಮನ್ನು ತಾವೇ ಅರ್ಪಿಸಿಕೊಳ್ಳುವವರನ್ನು ಅಥವಾ ಅರ್ಪಿಸಲ್ಪಟ್ಟವರನ್ನು, ಭೂತೇರು ಎಂದು ಕರೆಯಲಾಗುತ್ತವೆ.

ಅಂಥವರು ಆ ದೈವದ ಹೆಸರಿನಲ್ಲಿಯೇ ಬದುಕಬೇಕಾದುದು ಪದ್ಧತಿ. ಇವರ ನೃತ್ಯವನ್ನು ‘ಗೊಂದಲ ಹಾಕುವುದು’ ಎಂದೇ ಕರೆಯಲಾಗುತ್ತದೆ. ಗೊಂದಲಿಗರಿಗೂ ಭೂತೇರಿಗೂ ಅನೇಕ ಸಾಮ್ಯಗಳು ಕಂಡುಬರುತ್ತದೆ. ಆದರೆ ಇವರು ಗೊಂದಲಿಗರಲ್ಲ. ಆಚಾರ ವಿಚಾರಗಳಲ್ಲಿ ಹಾಡುವ ಕಾವ್ಯಗಳಲ್ಲಿ ಭೂತೇರು ತಮ್ಮದೇ ಆದ ರೀತಿ ನೀತಿಗಳನ್ನು ಅನುಸರಿಸುತ್ತಾರೆ. ಆರಾಧಿಸುವ ದೈವ, ಹಾಡುವ ಕಾವ್ಯ ಇತ್ಯಾದಿಗಳು ಕೂಡ ಗೊಂದಲಿಗರಿಗಿಂತ ಭಿನ್ನವಾಗಿರುತ್ತವೆ.

ಕುಟುಂಬದಲ್ಲಿ ಯಾರಿಗಾದರೂ ಸಾವು ಬದುಕಿನ ನಡುವೆ ಹೋರಾಟ ಮಾಡುವಷ್ಟು ಅನಾರೋಗ್ಯ ಉಂಟಾದರೆ ‘ಈ ಮಗುವನ್ನು ನಿನಗೆ ಭೂತೇರು ಬಿಡುತ್ತೇವೆ’ ಎಂದು ಮನೆಯ ಹಿರಿಯರು ಎಲ್ಲಮ್ಮನಿಗೆ ಹರಕೆ ಕಟ್ಟಿಕೊಳ್ಳುತ್ತಾರೆ. ಅನಂತರ ಆ ದೇವತೆಯದೇ ಪ್ರಭಾವವೋ ಎಂಬಂತೆ ಮಗು ಗುಣವಾಗಿ ಬದುಕಿ ಉಳಿಯುತ್ತದೆ. ಅಲ್ಲಿಂದಾಚೆಗೆ ಆ ಮಗು ಎಲ್ಲಮ್ಮನ ಸೊತ್ತು. ಗಂಡು ಮಗುವಾದರೆ ಜೀವನವಿಡೀ ಭಕ್ತನಾಗಿ ಅವಿವಾಹಿತನಾಗಿ ಇದ್ದು ಬಿಡಬೇಕು. ಹೆಣ್ಣುಮಗು ಆಗಿದ್ದರೆ ಭೂತೇರನ್ನಾಗಿ ದೇವಿಗೆ ಮೀಸಲು ಬಿಟ್ಟಿರುವ ವಿಷಯ ತಿಳಿದೂ ಮದುವೆಯಾಗಲು ಯಾರು ಮುಂದೆ ಬರುತ್ತಾರೋ ಅವನಿಗೆ ಮದುವೆ ಮಾಡಿಕೊಡಬಹುದು. ಆ ಹೆಣ್ಣು ಮಗಳು ಅಲ್ಲಿಂದ ಮುಂದಕ್ಕೆ ‘ಭೂತೇರು’ ಆಗಿ ಮುಂದುವರಿಯಲೇಬೇಕು ಎಂಬ ನಿಯಮವಿಲ್ಲ. ವಯಸ್ಕರಿಗೆ ರೋಗ ಬಂದು ಹೀಗೆ ಗುಣವಾದರೆ, ಗಂಡನು ತನ್ನ ಹೆಂಡತಿ ಮಕ್ಕಳ ಹೊಣೆಯನ್ನು ಹೊರಬೇಕಾಗುತ್ತದೆ. ಆದರೆ ಲೈಂಗಿಕ ಸಂಬಂಧವನ್ನು ಮುಂದುವರಿಸುವಂತಿಲ್ಲ. ಹೆಣ್ಣು ಮಗಳಾಗಿದ್ದರೆ ‘ಹರದಿ’ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತ, ಗಂಡ ಮಕ್ಕಳ ಯೋಚನೆ ಬಿಟ್ಟು ತನ್ನ ಪಾಡಿಗೆ ತಾನು ಎಲ್ಲಮ್ಮನಿಗೆ ಪೂರ್ಣಾವಧಿಯ ಸೇವೆ ಸಲ್ಲಿಸಬೇಕಾಗುತ್ತದೆ. ಇಲ್ಲಿಯೂ ಅಷ್ಟೆ, ಲೈಂಗಿಕ ಸಂಬಂಧ ನಿಷಿದ್ಧ. ಕೈ ಹಿಡಿದವಳೇ ಆದರೂ ಸಾಕ್ಷಾತ್ ಎಲ್ಲಮ್ಮನೇ ಎಂಬ ದೃಷ್ಟಿಯಲ್ಲಿ ಗಂಡನು ಆಕೆಯನ್ನು ಕಾಣಬೇಕಾಗುತ್ತದೆ.

‘ಭೂತೇರ ಆಟ’ ಎಂದು ಕರೆಸಿಕೊಳ್ಳುವ ಇವರ ‘ಗೊಂದಲ’ದಲ್ಲಿ ಒಟ್ಟು ಐದು ಮಂದಿ ಇರುತ್ತಿದ್ದರು. ಮುಖ್ಯ ಕಥೆಗಾರರು ಇಬ್ಬರು, ಸಂಬಾಳ ನುಡಿಸಲು ಒಬ್ಬ, ಚೌಡಿಕೆ ನುಡಿಸಲು ಒಬ್ಬ, ಪತ್ತ (ತಾಳ) ಹಾಕಲು ಒಬ್ಬ. ಕಾಲ ಮತ್ತು ಸಂದರ್ಭಗಳು ಕಾರಣವಾಗಿ ಈಗ ಇಬ್ಬರೇ ಎಲ್ಲವನ್ನೂ ತೂಗಿಸುತ್ತಾರೆ. ಇವರು ಚೌಡಿಕೆಯನ್ನು ‘ಟುಂಟುಣಿ’ ಎಂದು ಕರೆಯುತ್ತಾರೆ. ಸಂಬಾಳ ಟುಂಟುಣಿ ಎರಡನ್ನೂ ನುಡಿಸಿದರೆ ಎಲ್ಲಮ್ಮನ ಕಿವಿ ತೆರೆಯುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಕತ್ತಿನಿಂದ ಕಾಲಿನವರೆಗೆ ಇಳಿಬಿದ್ದಿರುವ ಜಿಡ್ಡಿನಿಂದ ಕಪ್ಪಾಗಿರುವ ಫ್ರಾಕಿನಂಥ ಅಂಗಿ ‘ಝಗ’, ಎದೆಯ ಮೇಲೆ ‘X’ ಆಕಾರಕ್ಕೆ ಇರುವ ಕವಡೆ ಪೋಣಿಸಿದ ಪಟ್ಟಿಗಳ ಎದೆಹಾರ ‘ಛಾತಾ’, ಛಾತಾಕ್ಕೆ ಸೇರಿದಂತೆ ನಡುವಿನವರೆಗೆ ಇಳಿಬಿದ್ದಿರುವ ನಾಲ್ಕಾರು ಒಂಟೆಳೆಯ ಕವಡೆ ಸರಗಳು, ಚುಂಚುರು ಮಾಪುರು, ತುಳುಜಾಪುರ, ಸವದತ್ತಿ ಈ ನಾಲ್ಕು ಊರುಗಳ ದೇವತೆಗಳ ಉಬ್ಬು ಚಿತ್ರಗಳನ್ನುಳ್ಳ ಮೂರು ಬೆರಳಿನಗಲದ ಹಿತ್ತಾಳೆ ತಗಡುಗಳ ಸರ ‘ರತಿ’ ಕತ್ತಿನಲ್ಲಿ, ಎಡಹೆಗಲಿನಿಂದ ಇಳಿಬಿದ್ದು ಬಲ, ಸೊಂಟದ ಬಳಿ ನೇತಾಡುವ ಪುಟ್ಟದೊಂದು ‘ಭಂಡಾರದ ಚೀಲ’, ಕೆನ್ನೆ ಸರಪಳಿಯಂತೆ ಹಾಕಿಕೊಳ್ಳುವ ‘ಸರಪುಳು’, ಅದರ ಕೆಳಗೆ ‘ಝುಮ್ಕಿ’, ಕವಡೆಗಳ ಅಲಂಕಾರವುಳ್ಳ ‘ಕೈಪಟ್ಟಿ’, ಕಾಲಿಗೆ ಗೆಜ್ಜೆ ಇವು ಭೂತೇರ ವೇಷಭೂಷಣಗಳು.

ಕರ್ನಾಟಕದ ಯಾವುದೇ ವೃತ್ತಿಗಾಯಕರು ತಮ್ಮ ಪ್ರಧಾನ ಕಾವ್ಯದೊಡನೆ ಇತರ ಕೆಲವು ಕಾವ್ಯಗಳನ್ನೂ ಹಾಡುತ್ತಾರೆ. ಆದರೆ ವೃತ್ತಿಗಾಯಕರ ಈ ಬಗೆಯ ಜಾಯಮಾನದಿಂದ ಭೂತೇರು ಭಿನ್ನವಾಗಿ ನಿಲ್ಲುತ್ತಾರೆ. ಯಾಕೆಂದರೆ, ಇವರು ಎಲ್ಲಮ್ಮನನ್ನು ಕುರಿತು ಹಾಡುವುದೇ ಪ್ರಧಾನ ಕಾವ್ಯ ಮತ್ತು ಏಕೈಕ ಕಾವ್ಯ. ಆದರೆ ಇಲ್ಲಿನ ಕಾವ್ಯರೀತಿ ವಿಶಿಷ್ಟ ಹಾಡಿನ ರೂಪದಲ್ಲಿ ಪ್ರಾರಂಭವಾಗಿ, ನಡುನಡುವೆ ಪಾತ್ರಗಳ ಸಂಭಾಷಣೆ ಇರುತ್ತದೆ ಮತ್ತೆ ಹಾಡಿನ ರೂಪದಲ್ಲಿ ಮುಂದುವರಿಯುತ್ತ ಹಾಡಿನ ರೂಪದಲ್ಲೆ ಮುಕ್ತಾಯವಾಗುತ್ತದೆ.

ಭಿಕ್ಷಾಟನೆಯ ಸಮಯದಲ್ಲಿ ಪ್ರತಿಯೊಂದು ಮನೆಯ ಮುಂದೆಯೂ ಅಷ್ಟಷ್ಟು ಹಾಡಿ ನಿಲ್ಲಿಸಬೇಕಾಗುತ್ತದೆ. ಎಲ್ಲಮ್ಮ ಕಾವ್ಯವನ್ನು ಹಾಗೆ ತುಂಡು ಮಾಡುವಂತಿಲ್ಲ. ಹಾಗೆ ಮಾದರೆ ಹಾಡಿದವರಿಗೂ ಕೇಳಿದವರಿಗೂ ಅಮಂಗಳ ಎಂಬ ನಂಬಿಕೆ ಇವರಲ್ಲಿದೆ. ಈ ನಂಬಿಕೆಯ ಪ್ರತೀಕವೇ ಇವರು ಹಾಡುವ ಬಿಡಿ ಗೀತೆಗಳು.

ಕೆ.ಆರ್.

 

ಭೈರವಾರಾಧನೆ ಕರಾವಳಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ ಮತ್ತು ಕೇರಳದ ಕಾಸರಗೋಡು ತಾಲೂಕುಗಳಲ್ಲಿ ಮರಾಟಿ-ನಾಯ್ಕರು ಆಚರಿಸುವ ಜಾನಪದೀಯ ಆಚರಣೆಯೇ ಭೈರವಾರಾಧನೆ. ಮೂಲತಃ ಬುಡಕಟ್ಟು ಸಮುದಾಯಕ್ಕೊಳಪಟ್ಟ ಮರಾಟಿ-ನಾಯ್ಕರ ಆರಾಧನೆಯ ದೈವಗಳಲ್ಲಿ ಭೈರವನಿಗೆ ಪ್ರಥಮ ಪ್ರಾಶಸ್ತ್ಯ. ಭೈರವನನ್ನು ತಮ್ಮ ಆರಾಧ್ಯ ದೇವತೆಯಾದ ಮಹಮ್ಮಾಯಿ (ದೇವಿ, ಅಂಬಾಭವಾನಿ)ಯ ಭಂಟನೆಂದು ನಂಬಿರುವ ಇವರು ಅಸುರಕ್ರಿಯೆ (ಬಲಿಪದ್ಧತಿ)ಯ ಮೂಲಕ ಆರಾಧಿಸುತ್ತಾರೆ. ಭೈರವನಿಗೆ ಯಾವುದೇ ರೀತಿಯ ಧೈವಸ್ಥಾನವಾಗಲೀ ಮೂರ್ತಿ ಪೂಜೆಯಾಗಲೀ ಇಲ್ಲ. ಬದಲಾಗಿ ತಮ್ಮ ತಮ್ಮ ಜಮೀನುಗಳಲ್ಲಿ ಭೈರವ ಬನವನ್ನು ಸ್ಥಾಪಿಸಿರುತ್ತಾರೆ. ಪುರಾತನ ಕಾಲದಿಂದಲೂ ವೃಕ್ಷಗಳು, ಶಿಲೆಗಳು, ಹುತ್ತಗಳು ದೈವದೇವರ ವಿಕಾಸಕ್ಕೆ ಕಾರಣವಾಗಿವೆ. ಅದರ ಬೆನ್ನೆಲುಬಾಗಿ ಆಚರಣೆ ಸಂಪ್ರದಾಯಗಳು ನಿಂತಿವೆ. ಈ ಹೇಳಿಕೆಯನ್ನು ಭೈರವಾರಾಧನೆ ಪುಷ್ಟೀಕರಿಸುತ್ತದೆ. ಭೈರವ ಬನವು ಕಾಸರಕನ, ಹಾಲೆ ಮರಗಳನ್ನು ಮತ್ತು ಇನ್ನಿತರ ಎಲ್ಲಾ ಜಾತಿಯ ಗಿಡಮರಗಳನ್ನು ಹೊಂದಿದ್ದು, ಮರದ ಬುಡದಲ್ಲಿ ಸ್ಥಾಪಿತ ಕಲ್ಲುಗಳೇ ಭೈರವನ ಪ್ರತೀಕವಾಗಿರುತ್ತದೆ. ಇದನ್ನು ‘ಭೈರವನ ಕಲ್ಲು’ ಎಂದು ಕರೆಯುತ್ತಾರೆ. ಮರಾಟಿ-ನಾಯ್ಕ ಸಮುದಾಯಕ್ಕೆ ಸೇರಿದ ಪ್ರತಿಯೊಂದು ಜಮೀನಿನಲ್ಲಿಯೂ ಈ ಬನವನ್ನು ಕಾಣಬಹುದು. ಸಣ್ಣಪುಟ್ಟ ಕೃಷಿಕರಾಗಿ, ಕೂಲಿಕಾರರಾಗಿ ಜೀವನ ಸಾಗಿಸುವ ಮರಾಟಿ-ನಾಯ್ಕ ಕುಟುಂಬಗಳು ತಮ್ಮ ಸುಖ ಸಂಸಾರ, ಬೆಳೆ-ಜಾನುವಾರುಗಳ ಯೋಗಕ್ಷೇಮ ಹಾಗೂ ಜಮೀನಿನ ಗಡಿ ರಕ್ಷಣೆಯನ್ನು ಭೈರವನು ಸದಾ ಮಾಡುತ್ತಾನೆಂದು ನಂಬುತ್ತಾರೆ. ನಾಗನ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುವನೆಂಬ ವಿಶಿಷ್ಟವಾದ ನಂಬಿಕೆಯಿದೆ.

ಗುರುಗಳಿಂದ ದೀಕ್ಷೆ ಪಡೆದವರು (ಪುರುಷ) ಮಾತ್ರ ಭೈರವನ ಪೂಜೆ ಮಾಡಲು ಅರ್ಹರಿರುತ್ತಾರೆ. ಪೂಜಾರಿಯು ಪೂಜಾ ದಿನದ ಮುಂಚಿತವಾಗಿ ಒಂದು ಮಡಿಯಲ್ಲಿರುತ್ತಾನೆ. ಅಕ್ಕಿಯಿಂದ ತಯಾರಿಸಿದ ಉಪಾಹಾರ ಸೇವನೆಗೆ ನಿಷೇಧವಿರುತ್ತದೆ. ಮಧ್ಯಾಹ್ನ ಭೈರವ ಬನಕ್ಕೆ ಹೋಗಿ ಸ್ವಚ್ಛಗೊಳಿಸಿ, ಬಲಿಕೊಡಬೇಕಾಗಿರುವ ಕೋಳಿಗಳಿಗೆ ಅನ್ನಾಹಾರ ನೀಡಿ ತಾನು ಆಹಾರ ಸ್ವೀಕರಿಸುತ್ತಾನೆ. ವಿಶೇಷವಾಗಿ ಅಕ್ಕಿರೊಟ್ಟಿ, ಅನ್ನ, ಮೀನಿನ ಸಾರು (ಹುರುಳಿ + ತೊರಕೆಜಾತಿ ಮೀನು) ಇತ್ಯಾದಿ ಆಹಾರಗಳನ್ನು ಪುರುಷರಿಬ್ಬರು ತಯಾರಿಸುತ್ತಾರೆ. ಸೂರ್ಯಾಸ್ತಮಾನದ ಅನಂತರವೇ ಬನಕ್ಕೆ ಆಮಂತ್ರಿತರೆಲ್ಲರೂ ಹೋಗುತ್ತಾರೆ. ಸ್ಥಾಪಿತ ಕಲ್ಲಿನ ಮೇಲೆ ಭಕ್ತಿಯಿಂದ ಅಕ್ಕಿ, ತೆಂಗಿನಕಾಯಿಯನ್ನಿಟ್ಟು ಆರಂಭಿಕ ಪ್ರಾರ್ಥನೆ ಮಾಡುತ್ತಾರೆ. ಭಕ್ತಾಧಿಗಳು ಭಕ್ತಿಪೂರ್ವಕ, ಸೇವಾಪೂರ್ವಕವಾಗಿ ಮತ್ತು ಹರಕೆಯ ರೂಪದಲ್ಲಿ ಅಗರಬತ್ತಿ, ತೆಂಗಿನಕಾಯಿ, ಸಾರಾಯಿ ಬಾಟಲಿಗಳನ್ನು ಅರ್ಪಿಸುತ್ತಾರೆ. ತುಳುನಾಡಿನ ಜಾನಪದೀಯ ಮದ್ಯಪಾನೀಯ ಗೋಡಂಬಿ ಹಣ್ಣಿನ ಸಾರಾಯಿಯನ್ನು ಈ ರೀತಿಯ ಆಚರಣೆಗಳಲ್ಲಿ ವಿಶೇಷವಾಗಿ ಅರ್ಪಿಸಲಾಗುವುದನ್ನು ನಾವು ಗಮನಿಸಬಹುದು. ಅನಂತರ ಮತ್ತೊಂದು ಸಾರಿ ಭೈರವ ಕಲ್ಲಿಗೆ ಅನ್ನ, ರೊಟ್ಟಿಯ ಎಡೆಯಿಟ್ಟು ಕೋಳಿಗಳ ರಕ್ತತರ್ಪಣವನ್ನು ನೀಡಲಾಗುತ್ತದೆ. ಭಕ್ತಿಪೂರ್ವಕವಾಗಿ ತಂದಂಥ ತೆಂಗಿನಕಾಯಿಗಳನ್ನು ಪೂಜಾರಿ ಭೈರವನ ಹೆಸರಿನಲ್ಲಿ ಒಡೆದು ಭಕ್ತರಿಗೆ ಆಶೀರ್ವಾದ ಮಾಡುತ್ತಾನೆ. ತೀರ್ಥಪ್ರಸಾದವಾಗಿ ಶೇಂದಿ, ಸಾರಾಯಿ ಮತ್ತು ಬೇಯಿಸಿದ ಹುರುಳಿ ಕಾಳನ್ನು ನೀಡಲಾಗುತ್ತದೆ. ಅಂತಿಮವಾಗಿ ಬನದ ಸ್ವಲ್ಪ ದೂರದಲ್ಲಿ ಲಘುಭೋಜನ ಮಾಡುವುದರೊಂದಿಗೆ ಆಚರಣೆ ಕೊನೆಗೊಳ್ಳುತ್ತದೆ. ಹರಕೆಯ ನಿಮಿತ್ತ ತಂದು ಬಲಿಕೊಟ್ಟ ಕೋಳಿಗಳನ್ನು ಅವರವರಿಗೆ ನೀಡಲಾಗುತ್ತದೆ. ಆಚರಣೆಯಲ್ಲಿ ಕೆಲವೊಂದು ವಿಧಿ-ನಿಷೇಧಗಳನ್ನು ಮರಾಟಿ-ನಾಯ್ಕರು ತಪ್ಪದೇ ಪಾಲಿಸುತ್ತಾರೆ.

೧. ಭೈರವನ ಪೂಜೆ ಮಾಡಲು ಮರಾಟಿ-ನಾಯ್ಕರ ಹೊರತು ಇತರೆ ಜಾತಿಯವರಿಗೆ ನಿಷೇಧವಿದೆ.

೨. ಬನದ ಯಾವುದೇ ಗಿಡ-ಮರಗಳನ್ನು ಕಡಿಯುವಂತಿಲ್ಲ.

೩. ಬನಕ್ಕೆ ಸ್ತ್ರೀಯರಿಗೆ ಪ್ರವೇಶವಿಲ್ಲ.

೪. ಪೂಜಾ ನಂತರದ ಅಡುಗೆಯನ್ನು ಮನೆಯೊಳಗೆ ತರುವಂತಿಲ್ಲ. ಹೊರಗಡೆಯೇ ಮುಗಿಸಬೇಕು.

ಒಟ್ಟು ಭೈರವಾರಾಧನೆಯನ್ನು ಕೂಲಂಕಷವಾಗಿ ಗಮನಿಸಿದಾಗ ಭೈರವ ಓರ್ವ ಜನಪದ ದೈವವಾಗಿ ಕಂಡುಬರುತ್ತಾನೆ. ಶೈವಾರಾಧನೆಯ ಪ್ರಾಕ್‌ರೂಪ ಎಂದು ಹೇಳಬಹುದು. ಬನದಲ್ಲಿ ಕಾಣಬರುವ ಕಾಸರಕನ, ಹಾಲೆಮರಗಳಿಗೆ ತುಳು ಸಂಸ್ಕೃತಿಯಲ್ಲಿ ವಿಶೇಷ ಮಹತ್ವವಿದೆ. ಕಾಸರಕನ ಮರ ದುಷ್ಟಶಕ್ತಿಗಳನ್ನು ನಿಗ್ರಹಿಸುವ ಮರ ಮತ್ತು ಹಾಲು ಒಸರುವ ಹಾಲೆಮರ ಸಮೃದ್ಧಿಯ ಸೂಚಕ. ಹಾಗಾಗಿ ಭೈರವ ದುಷ್ಟಶಕ್ತಿಗಳ ನಿಗ್ರಹ ಮತ್ತು ಸಮೃದ್ಧಿಯ ಪರಿಕಲ್ಪನೆಯ ಆಶಯವನ್ನು ಪ್ರಕಟಿಸುವ ಜನಪದ ದೈವ.

ಎಸ್.ಎಂ.