ಮುಖದೊರ ಆಂಧ್ರದ ವಿಶಾಖ, ಶ್ರೀಕಾಕುಳಂ, ಪೂರ್ವ ಗೋದಾವರಿ, ವಿಜಯನಗರಂ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಿದ್ದಾರೆ. ಮುಖದೊರೆಗಳನ್ನು ‘ನೂಕದೊರ’, ‘ರಾಚರೆಡ್ಡಿ’, ‘ಮುಕರಾಜು’, ‘ಸಬರ‍್ಲು’ ಎಂದು ಕರೆಯಲಾಗುತ್ತಿತ್ತು. ಪಾಡೇರು ಪ್ರಾಂತದಲ್ಲಿ ಇವರನ್ನು ‘ರೆಡ್ಡಿದೊರ’ ಎಂದು ಕರೆಯುತ್ತಾರೆ. ಚಿಂತಪಲ್ಲಿಯ ಪ್ರಾಂತಗಳಲ್ಲಿ ಇವರನ್ನು ನೂಕರೆಡ್ಡಿ, ರಾಚರೆಡ್ಡಿ ಎಂದು ಕರೆಯುತ್ತಾರೆ. ಅರುಕನಲ್ಲಿ ‘ಸಬರ‍್ಲು’ ಎಂದು ಕರೆಯುತ್ತಾರೆ. ಇವರಲ್ಲಿ ಬಹಳಷ್ಟು ಜನರ ಮಾತೃ ಭಾಷೆ ತೆಲುಗು. ಒಡಿಯ ಭಾಷೆಯನ್ನು ಮಾತನಾಡಬಲ್ಲರು. ಬಹಳಷ್ಟು ಮಂದಿ ಒಣ ಬೇಸಾಯವನ್ನು ಅವಲಂಬಿಸಿದ್ದಾರೆ. ಕಾಡಿನ ಉತ್ಪನ್ನಗಳನ್ನು ಸಹ ಶೇಖರಿಸುತ್ತಾರೆ. ಕೊರ‍್ರ, ಗಮ್ಮೆಲ, ಕಾಕರ, ಸುಗ, ಕಿಂಚೋಯಿ ಮುಂತಾದ ಗೋತ್ರಗಳಿವೆ. ಬಹುಪತ್ನಿತ್ವ ಕಾಣಿಸುತ್ತದೆ. ಪ್ರೇಮ ವಿವಾಹಗಳು, ಓಡಿ ಹೋಗಿ ಮದುವೆ ಮಾಡಿಕೊಳ್ಳುವುದು ಮುಂತಾದವು ಇವೆ.

ಪ್ರತಿವರ್ಷ ಆಗಸ್ಟ್‌ನಲ್ಲಿ ಜಾಕ್ರಾ ದೇವತೆಯನ್ನು ಪೂಜಿಸುತ್ತಾರೆ. ಪ್ರಾಣಿ ಬಲಿಯನ್ನು ಕೊಡುತ್ತಾರೆ. ಮಾಂಸವನ್ನು ಅಡುಗೆ ಮಾಡಿವ ಅವರ ಎಲುಬುಗಳನ್ನು ಮಾತ್ರ ಬಳಗಕ್ಕೆ ಹಂಚುತ್ತಾರೆ. ಅವುಗಳನ್ನು ಹೊಲದಲ್ಲಿ ಇಟ್ಟುಕೊಂಡರೆ ಬೆಳೆ ಚೆನ್ನಾಗಿ ಬರುತ್ತದೆಯೆಂಬುದು ಅವರ ನಮಬಿಕೆ. ತೀರಿಕೊಂಡ ಸೋದರನ ಹೆಂಡತಿಯನ್ನು, ಹೆಂಡತಿ ತೀರಿಕೊಂಡಾಗ ಆಕೆಯ ಸೋದರಿಯನ್ನು ಮದುವೆಯಾಗಲು ಒಪ್ಪಿಗೆಯಿದೆ. ಇವರಲ್ಲಿ ಕೊರ‍್ರ, ಗಮ್ಮೆಲ, ಕಾಕರ, ಸುಗ ಕೊಂಚೊಯಿ ಮೊದಲಾದ ಗೋತ್ರಗಳಿವೆ. ಗೋತ್ರನಾಮವನ್ನು ವ್ಯಕ್ತಿಗಳ ಹೆಸರಿನ ಮುಂದೆ ಸೇರಿಸಲಾಗುತ್ತದೆ. ಮುಖ ದೊರ ಸಮುದಾಯದಲ್ಲಿಯ ಹಿರಿಯ ತಲೆಮಾರಿನವರು ಜನಿವಾರ ರುದ್ರಾಕ್ಷಿಗಳನ್ನು ಧರಿಸುತ್ತಾರೆ. ಮುಖದೊರೆಗಳಿಗೆ ‘ಚೈತ್ರ ಪಂಡುಗ’ (ಹಬ್ಬ) ಅತಿ ಮುಖ್ಯವಾದುದು. ಜೋಳ, ರಾತ್ರಿ, ಬತ್ತ, ತೊಗರಿ, ನೆಲಗಡಲೆ ಬೆಳೆಯುತ್ತಾರೆ. ವಿಶಾಖ ಜಿಲ್ಲೆಯ ‘ಮುಖ ದೊರ’ಗಳು ಸಾಮಾಜಿಕವಾಗಿ ಭಗತರಿಗಿತಂಗಲೂ ತಾವು ಒಂದು ಮೆಟ್ಟಿಲು ಕೆಳಗೆಂದು ಭಾವಿಸುತ್ತಾರೆ. ಮೂಲಿಕಾ ವೈದ್ಯವನ್ನು ಅವರು ಇಂದಿಗೂ ಅನುಸರಿಸುತ್ತಾರೆ.

೨೦೦೧ ರ ಜನಗಣತಿಯ ಪ್ರಕಾರ ಅವರ ಒಟ್ಟು ಜನಸಂಖ್ಯೆ ೩೭,೯೮೩. ಅಂದರೆ ಶೇಕಡಾ ೦.೭೬.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಮುಗ್ಗು ರಂಗೋಲಿಗೆ ತೆಲುಗಿನಲ್ಲಿ ‘ಮುಗ್ಗು’ ಎನ್ನುತ್ತಾರೆ. ಹೆಣ್ಣುಮಕ್ಕಳ ಚಿತ್ರಕಲಾ ನೈಪುಣ್ಯಕ್ಕೆ, ಸಾಂಪ್ರದಾಯಿಕ ಜ್ಞಾನಕ್ಕೆ, ವಿವಿಧ ಶಾಸ್ತ್ರಾಂಶಗಳ ತಿಳಿವಳಿಕೆಗೆ ಪ್ರತೀಕವಾಗಿ ಇರುವಂಥವು ರಂಗೋಲಿಗಳು. ೬೪ ಕಲೆಗಳಲ್ಲಿ ಒಂದಾಗಿರುವ ಚಿತ್ರಲೇಖನದಲ್ಲಿ ಬಿಂದುಜ (ಚುಕ್ಕಿಗಳಿಂದ ಹುಟ್ಟಿದ್ದು) ವಿಭಾಗಕ್ಕೆ ಸೇರಿದ್ದು ಮುಗ್ಗು. ಇದನ್ನೇ ರಂಗವಲ್ಲಿ, ಪಟ್ಟು, ಪರಿಕ, ಪೋತ ಮುಂತಾದ ಹೆಸರುಗಳಿಂದಲೂ ಕರೆಯುತ್ತಾರೆ. ಸಾಮಾನ್ಯವಾಗಿ ಮನೆಯ ಬಾಗಿಲುಗಳಲ್ಲಿ ಬಿಡಿಸುವ ಬಿಳಿ ರಂಗೋಲಿಯನ್ನು ‘ಮುಗ್ಗು’ ಎಂದು ಬಣ್ಣ-ಣ್ಣದ ರಂಗೋಲಿಯನ್ನು ರಂಗವಲ್ಲಿ ಎಂದು ಕರೆಯುತ್ತಾರೆ. ಬಿಳಿ ರಂಗೋಲಿ ಪುಡಿಯನ್ನು (ಮುಗ್ಗುಪಿಂಡಿ) ಬೀದಿಗಳಲ್ಲಿ ತಂದು ಮಾರುತ್ತಾರೆ. ಪೂಜಾ ಮಂದಿರದಲ್ಲಿ ಮತ್ತು ಹಬ್ಬದ ಸಂದರ್ಭದಲ್ಲಿ ಅಕ್ಕಿಯ ಹಿಟ್ಟಿನಿಂದ ಮುಗ್ಗು ಹಾಕುತ್ತಾರೆ. ದುಷ್ಟಶಕ್ತಿಗಳನ್ನು ದೂರ ಇಡಲು ಮತ್ತು ಗೃಹಾಲಂಕಾರಣದ ಒಂದು ಭಾಗವಾಗಿ ಈ ರಂಗೋಲಿ ಮೂಡಿಬಂದಿದೆ.

ಮುಗ್ಗುಗಳಲ್ಲಿ ಮೂರು ಬಗೆಗಳಿವೆ : ಗೆರೆಯ ಮುಗ್ಗು, ಚುಕ್ಕಿಯ ಮುಗ್ಗು, ರಂಗವಲ್ಲಿ. ಗೆರೆಯ ಮುಗ್ಗು ಬಿಡಿಸುವಾಗ ಬಲಗೈಯ ತೋರುಬೆರಳು ಮತ್ತು ಹೆಬ್ಬೆರಳ ಮಧ್ಯದಲ್ಲಿ ಬಿಳಿ ರಂಗೋಲಿ ಪುಡಿಯನ್ನು ಹಿಡಿದು ಅದನ್ನು ಗೆರೆಯ ರೂಪದಲ್ಲಿ ಸುರಿಸುತ್ತಾ ವಿವಿಧ ರೂಪುಗಳನ್ನು ಚಿತ್ರಿಸುವುದು ಮೊದಲನೆಯ ಬಗೆ. ಈ ರೀತಿ ಗೆರೆಗಳನ್ನು ಬರೆಯುವುದನ್ನು ಸೂಚಿಸಲು ತಮಿಲಿನಲ್ಲಿ ‘ಕೋಲಂ’ (ಗೆರೆ) ಎಂದು ಕರೆಯುತ್ತಾರೆ. ರಂಗೋಲಿ ಪುಡಿಯನ್ನು ಅಂಗೈಯಲ್ಲಿ ತೆಗೆದುಕೊಂಡು ಮಡಚಿದ ಬೆರಳುಗಳ ಮಧ್ಯದಿಂದ ಪುಡಿಯನ್ನು ಬಿಡುತ್ತಾ ಎರಡು ಅಥವಾ ನಾಲ್ಕು ಗೆರೆಗಳಿಂದ ವಿವಿಧ ಆಕಾರಗಳನ್ನು ರೂಪಿಸುವುದು ಇದರಲ್ಲಿಯೇ ಇನ್ನೊಂದು ಬಗೆ.

ಬಿಳಿ ರಂಗೋಲಿಯ ಪುಡಿಯಿಂದ ಚಿಕ್ಕ ಚುಕ್ಕಿಗಳನ್ನಿಟ್ಟು ಅವುಗಳನ್ನು ಕೂಡಿಸುತ್ತಾ ಅನೇಕ ರೂಪಗಳನ್ನು ಮೂಡಿಸುವುದನ್ನು ಚುಕ್ಕಿ ರಂಗೋಲಿ ಎನ್ನುತ್ತಾರೆ. ಚುಕ್ಕಿಗಳ ಸುತ್ತ ಮುತ್ತುಗಳಂತೆ ರೂಪಿಸಿದರೆ ಮುತ್ತಿನ ರಂಗೋಲಿ ಎಂದು , ಅನೇಕ ಕೋನಗಳಿಂದ ಬಹುಮುಖವಾಗಿ ಕಾಣಿಸುವ ರಂಗೋಲಿಯನ್ನು ರತ್ನದ ರಂಗೋಲಿ ಎಂದು ಹೇಳುತ್ತಾರೆ.

ಸಾಂದರ್ಭಿಕವಾಗಿ ರಂಗೋಲಿ ಮೂಡಿ ಬರುತ್ತದೆ. ಸೂರ್ಯೋದಯಕ್ಕೆ ಮೊದಲೇ ಮನೆಯ ಮುಂಭಾಗದಲ್ಲಿ ಉದ್ದನೆಯ ಮತ್ತು ದೊಡ್ಡ ರಂಗೋಲಿಗಳು ಕಾಣಿಸಿಕೊಂಡರೆ ಸಂಜೆ ಸೂರ್ಯಾಸ್ತಮಯ ಸಂಕೇತವಾಗಿ ಚಿಕ್ಕ ರಂಗೋಲಿಗಳಿರುತ್ತವೆ. ಕೆಲವೆಡೆ ಸಂಜೆಯ ವೇಳೆ ಚಂದ್ರನ ಸ್ಥಿತಿಯನ್ನು ಸೂಚಿಸುವಂತೆ ದೊಡ್ಡ ಅಥವಾ ಚಿಕ್ಕ ರಂಗೋಲಿಗಳನ್ನು ಬಿಡಿಸುತ್ತಾರೆ. ಅಮಾವಾಸ್ಯೆಯ ದಿನ ನಕ್ಷತ್ರದ ರಂಗೋಲಿ ಕಾಣಿಸಿಕೊಳ್ಳುತ್ತದೆ.

36_70A_DBJK-KUH

ತೆಲುಗು ನಾಡಿನ ಹೆಣ್ಣು ಮಕ್ಕಳು ದಿನ, ವಾರಗಳನ್ನು ಸೂಚಿಸುವ ದೇವತಾ ಪ್ರತೀಕಗಳನ್ನು ರಂಗೋಲಿಗಳಲ್ಲಿ ತೋರಿಸುತ್ತಾರೆ. ಪೂಜಾ ಮಂದಿರದಲ್ಲಿ ಸೋಮವಾರದಂದು ಶಿವಪೀಠ, ಮಂಗಳವಾರದಂದು ಕಾಳೀಪೀಠ, ಬುಧವಾರದಂದು ಸ್ವಸ್ತಿಕ್, ಗುರುವಾರದಂದು ನಕ್ಷತ್ರ, ಶುಕ್ರವಾರದಂದು ಕಮಲ, ಶನಿವಾರದಂದು ತಾರೆ ಮತ್ತು ಭಾನುವಾರದಂದು ಸೂರ್ಯಪದ್ಮ ರಂಗೋಲಿಗಳನ್ನು ಬಿಡಿಸುತ್ತಾರೆ. ಅಲ್ಲದೆ ಮುಂಬಾಗಿಲಲ್ಲಿ ಬಿಡಿಸುವ ರಂಗೋಲಿಗಳಿಗೂ ಪೂಜಾ ಮಂದಿರದ ರಂಗೋಲಿಗಳಿಗೂ ತುಳಸಿಗಿಡದ ಬಳಿಯ ರಂಗೋಲಿಗಳಿಗೂ ವ್ಯತ್ಯಾಸವಿರುತ್ತದೆ. ಕಣಜಗಳ ಸುತ್ತ, ಊಟ ಮಾಡುವ ಸ್ಥಳದಲ್ಲಿ, ಮೊಸರು ಕಡೆಯುವ ಕಡೆ, ಬೀಸುವ ಕಲ್ಲಿನ ಬಳಿ, ನೀರಿನ ಮಡಕೆಗಳ ಹತ್ತಿರ, ಒಲೆಯ ಗೋಡೆಯ ಸುತ್ತ ರಂಗೋಲಿಗಳನ್ನು ಬಿಡಿಸುತ್ತಾರೆ. ವಿವಿಧ ಹಬ್ಬಗಳ ಸಂದರ್ಭದಲ್ಲಿ ಬೇರೆ ಬೇರೆ ರಂಗೋಲಿಗಳನ್ನು ಬಿಡಿಸುತ್ತಾರೆ. ಕಾರ್ತಿಕ ಮಾಸದಲ್ಲಿ ಚಂದ್ರನ ರಂಗೋಲಿ, ಕೃತ್ತಿಕಾಪದ್ಮಾ ರಂಗೋಲಿಗಳನ್ನು ಬಿಡಿಸಿ ತುಳಸಿ ಕಟ್ಟೆಯ ಬಳಿ ದೀಪದ ರಂಗೋಲಿಯಿಂದ ಅಲಂಕರಿಸುತ್ತಾರೆ. ಧನುರ್ಮಾಸದಲ್ಲಿ ಬರುವ ಸಂಕ್ರಾಂತಿ ರಂಗೋಲಿಗಳ ಹಬ್ಬ. ಆಗ ಆಂಧ್ರದ ಎಲ್ಲ ಪ್ರದೇಶಗಳು ರಂಗೋಲಿಗಳಿಂದ ಕಣ್ಣಿಗೆ ಹಬ್ಬವಾಗಿರುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಹೆಚ್ಚಿಗೆ ಗೆರೆಯ ರಂಗೋಲಿಗಳನ್ನೇ ಬಿಡಿಸುತ್ತಾರೆ. ಸೂರ್ಯನ ಉತ್ತರಾಯಣ ಪ್ರವೇಶದ ಸೂಚನೆಯಂತೆ ರಥದ ರಂಗೋಲಿ, ಪುಣ್ಯಲೋಕಗಳು ತೆರೆದುಕೊಳ್ಳುತ್ತವೆಂಬ ನಂಬಿಕೆಯಿಂದ ವೈಕುಂಠದ ಬಾಗಿಲು ಎಂಬ ರಂಗೋಲಿಯನ್ನು ಬಿಡಿಸುವುದು ಸಂಪ್ರದಾಯ. ಕಬ್ಬು, ಕುಂಬಳಕಾಯಿ, ಕಳಶ, ಹಾವು, ಮೀನು ಮುಂತಾದವನ್ನು ರಂಗೋಲಿಗಳಲ್ಲಿ ಚಿತ್ರಿಸುತ್ತಾರೆ. ನಾಗರಚೌತಿ ಹಬ್ಬದಂದು ಹುತ್ತಗಳ ಬಳಿ ಹಾವಿನ ರೂಪಗಳನ್ನು ಮೂಡಿಸುತ್ತಾರೆ. ಶ್ರೀಕೃಷ್ಣಜನ್ಮಾಷ್ಟಮಿಯಂದು ಬಾಗಿಲಿಂದ ಪೂಜಾ ಮಂದಿರದವರೆಗೂ ಬಾಲಕೃಷ್ಣನ ಪಾದಗಳನ್ನು ಚಿತ್ರಿಸಿ ಕೃಷ್ಣನು ತೂಗಲೆಂದು ಬಾಗಿಲಿನಲ್ಲಿ ಉಯ್ಯಾಲೆಯನ್ನು ಚಿತ್ರಿಸುತ್ತಾರೆ. ನವರಾತ್ರಿಯ ವೇಳೆ ಒಂಬತ್ತು ಅಡ್ಡ ಚುಕ್ಕಿಗಳನ್ನು ದೀಪಾವಳಿಯಂದು ದೀಪದ ರಂಗೋಲಿ, ರಥಸಪ್ತಮಿಯಂದು ರಥದ ರಂಗೋಲಿಗಳನ್ನು ಬಿಡಿಸುತ್ತಾರೆ. ಹೋಳಿ ಹಬ್ಬದಂದು ವಸಂತಾಗಮನದ ಗುರುತಾಗಿ ವಸಂತನ ವಾಹನವಾದ ಗಿಳಿಯನ್ನು ಚಿತ್ರಿಸುತ್ತಾರೆ.

ಮದುವೆ ಮುಂತಾದ ಸಂದರ್ಭದಲ್ಲಿ ಅನೇಕ ರೀತಿಯ ರಂಗೋಲಿಗಳಿಂದ ಅಲಂಕರಿಸುತ್ತಾರೆ. ಮದುವೆಯ ಭಾಗವಾದ ಬೂಮದ ಸಂದರ್ಭದಲ್ಲಿ ಬೀಗರನ್ನು ಪರಿಹಾಸ ಮಾಡುತ್ತಾ ಹಾವು, ಚೇಳು ಮುಂತಾದವನ್ನು ಚಿತ್ರಿಸುತ್ತಾರೆ.

ರಂಗೋಲಿಗಳು ಹೆಣ್ಣುಮಕ್ಕಳ ಶಾಸ್ತ್ರ ಜ್ಞಾನವನ್ನು ತಿಳಿಸುಂತಿರುತ್ತವೆ. ಯೋಗಶಾಸ್ತ್ರದ ಸಪ್ತ ಚಕ್ರಗಳು, ಸಹಸ್ರದಳ ಪದ್ಮ, ಕುಂಡಲಿನೀಶಕ್ತಿ, ಸರ್ಪದ ಆಕೃತಿ ಮಂಡಲಗಳು, ಚಕ್ರಗಳು ಮುಂತಾದವು ಕಂಡುಬರುತ್ತವೆ. ವಿವಿಧ ಧರ್ಮಗಳಿಗೆ ಸೇರಿದ ಸಂಕೇತಗಳು ರಂಗೋಲಿಗಳಲ್ಲಿ ಕಾಣಿಸಿಕೊಳ್ಳುತ್ತವೆ. ಶಂಖ, ಚಕ್ರ, ಗರುಡ, ಲಕ್ಷ್ಮೀದೇವಿಯ ಪಾದ, ಕೃಷ್ಣಪಾದ ಮುಂತಾದವು ವೈಷ್ಣವ ಧರ್ಮದ ಸಂಕೇತಗಳು. ಬಿಲ್ವಪತ್ರೆ, ಹಾವು, ನಂದಿ, ಶಿವಲಿಂಗ ಮುಂತಾದವು ಶೈವಮತ ಸಂಬಂಧಿಗಳು. ಸ್ವಸ್ತಿಕ್ ಜೈನಮತವನ್ನು, ಪದ್ಮ ಬೌದ್ಧ ಮತವನ್ನು ಸೂಚಿಸುತ್ತವೆ. ಕಮಲ, ಕಳಶ, ತ್ರಿಕೋನ ಶಕ್ತಿದೇವತೆಯ ಪ್ರತೀಕವಾಗಿವೆ.

ಸಾಂಪ್ರದಾಯಿಕವಾದ ರಂಗೋಲಿಗಳು ಅಂದ, ಆರೋಗ್ಯ ಮತ್ತು ಆಚಾರ ಎಂಬ ಮೂರನ್ನು ಒಳಗೊಂಡಂಥ ಕಲೆ. ಇತ್ತೀಚಿನ ಕಾಲದಲ್ಲಿ ರಂಗೋಲಿಗಳನ್ನು ಬಿಡಿಸಲು ಅನೇಕ ಉಪಕರಣಗಳು ಬಂದಿವೆ. ಕಲಾತ್ಮಕವಾಗಿ ಕೈಯಿಂದ ಬಿಡಿಸುವ ಕ್ರಿಯೆ ಮರೆಯಾಗುತ್ತಿದೆ. ತಕ್ಷಣದಲ್ಲೇ ನೆಲಕ್ಕೆ ಅಂಟಿಕೊಳ್ಳುವ ಅಂಟುರಂಗೋಲಿಗಳೂ ಅಂಗಡಿಯಲ್ಲಿ ಸಿಕ್ಕುತ್ತಿವೆ. ಒಂದು ಕಲೆಯಾಗಿ ‘ಮುಗ್ಗು’ ಇನ್ನೂ ಹಳ್ಳಿಗಳಲ್ಲಿ ಜೀವಂತವಾಗಿವೆ.

ಆರ್.ಪಿ. ಅನುವಾದ ಎ.ಎಂ.ಡಿ.

 

ಮುಟ್ಟುಂವಿಳಿ ಕೇರಳದ ಮುಸ್ಲಿಮರ ಮಸೀದಿಗಳ ಉರೂಸು ನೇರ್ಚೆಯ ಅನುಬಂಧವಾಗಿ ಮೆರೆವಣಿಗೆಯಲ್ಲಿ ನಡೆಸುವ ವಾದ್ಯಮೇಳವನ್ನು ಮುಟ್ಟುಂವಿಳಿ ಎನ್ನುವರು. ಮೆರೆವಣಿಗೆಯ ಮುಖ್ಯ ಆಕರ್ಷಣೆ ಇದಾಗಿದೆ. ಇದಕ್ಕಾಗಿ ಮೂರು ವಾದ್ಯೋಪಕರಣಗಳನ್ನು ಬಳಸುತ್ತಾರೆ. ಚೀನಿ ಎಂಬ ಕೊಳವೆಯಾಕಾರದ ವಾದ್ಯ ಇದರಲ್ಲಿ ಮುಖ್ಯ. ‘ಮಾಪಿಳ ಶಹನಾಯ್’ ಎಂದೇ ಇದು ಪ್ರಸಿದ್ಧವಾಗಿದೆ.

ಚೆಂಡೆ, ಮುರಿಶ್ ಎಂಬ ಚಿಕ್ಕ ಚೆಂಡೆ ಮತ್ತು ಚೀನಿ ಎಂಬ ವಾದ್ಯ ಮುಟ್ಟುಂವಿಳಿಯ ವೈಶಿಷ್ಟ್ಯ. ಚೀನಿಯನ್ನು ಊದುವಾಗ ತಾಳವನ್ನು ಅನುಸರಿಸಿ ಚೆಂಡೆ ಬಡಿಯುತ್ತಾರೆ. ಹಳೆಯ ಪ್ರಸಿದ್ಧ ಮಾಪಿಳ ಹಾಡುಗಳನ್ನು ಇದಕ್ಕೆ ಬಳಸುತ್ತಾರೆ. ಈ ತಾಳಕ್ಕೆ ಅನುಗುಣವಾಗಿ ನೃತ್ಯವಾಡುತ್ತಾ ಸಾಗುವ ತಂಡಗಳು ಮೆರೆವಣಿಗೆಗೆ ಕಳ ಏರಿಸುತ್ತವೆ. ಚೀನಿ ಎಂಬ ವಾದ್ಯವನ್ನು ಊದಲು ಪ್ರತ್ಯೇಕ ತರಬೇತಿ ಅಗತ್ಯ. ಚೀನಿ ವಾದ್ಯ ಊದುವರ ಸಂಖ್ಯೆ ಈಗ ಕಡಿಮೆಯಾಗಿದೆ.

ಒಂದು ಕಾಲದಲ್ಲಿ ಉರೂಸು ನೇರ್ಚೆಯ ಭಾಗವಾಗಿ ನಡೆಯುತ್ತಿದ್ದ ಮುಟ್ಟುಂವಿಳಿ ಈವತ್ತು ಮರೆಯಾಗಿದೆ. ಆದರೆ ಈಗ ಸಾಂಸ್ಕೃತಿಕ ಮೆರೆವಣಿಗೆ, ರಾಜಕೀಯ ಪಕ್ಷಗಳ ಜಾಥಾಗಳಲ್ಲಿ ಇದನ್ನು ಬಳಸುತ್ತಾರೆ. ಚೀನಿಯ ಮೂಲಕ ಚಲನಚಿತ್ರ ಗೀತೆಗಳನ್ನು ಹಾಡುತ್ತಾರೆ.

.ಕೆ.ಎಸ್. ಅನುವಾದ ಎನ್.ಎಸ್.

 

ಮುಡಿಯೆಡುಪ್ಪ್ ಓಣೂಟ್ಟುಕರ (ಓಡನಾಡ್) ಎಂಬ ಸಾಂಸ್ಕೃತಿಕ ಹಿನ್ನೆಲೆಯ ಕೆಲವು ಭದ್ರಕಾಳಿ ಕ್ಷೇತ್ರಗಳಲ್ಲಿ ನಡೆದು ಬರುತ್ತಿರುವ ಧಾರ್ಮಿಕ ಸ್ವರೂಪದ ಒಂದು ಉತ್ಸವ. ‘ಮುಡಿಯೆಳುನ್ನಳ್ಳತ್ತ್’ (ಮುಡಿಮೆರೆವಣಿಗೆ) ಎಂದೂ ಇದಕ್ಕೆ ಹೆಸರಿದೆ. ಆಲಪ್ಪುಳ ಜಿಲ್ಲೆಯ ಕಾರ್ತಿಕಪಳ್ಳಿ ತಾಲೂಕಿನ ತೀರಪ್ರದೇಶದಲ್ಲಿ ಇರುವ, ಈಳವ ಜಾತಿಯ ಸಂಘಟನೆಗಳ ಅಧೀನದಲ್ಲಿರುವ ದೇವಾಲಯಗಳಲ್ಲಿ ಮಾತ್ರ ಮುಡಿಯೆಡುಪ್ಪ್ ಎಂಬ ಧಾರ್ಮಿಕ ಕಲೆ ರಂಗವೇರುತ್ತದೆ.

ಮುದುಕುಳಂ ಈರಯಿಲ್ ದೇವಸ್ಥಾನ, ಕುರುಂಬಕರ ದೇವಾಲಯ, ಚಿಂಙೋಲಿ ಕರಿಮುರತ್ತಂಗಲ್ ದೇವಸ್ಥಾನ, ಕೂಟ್ಟಂತರ ದೇವಾಲಯ, ಕಂಡಲ್ಲೂರ್ ವಡಕ್ಕನ್ ಕೋಯಿಕ್ಕಲ್ ದೇವಾಲಯ, ವರಂಬತ್ತ್ ದೇವಾಲಯ, ತೆಂಕುಮೂಡಂಬಿಲ್ ದೇವಾಲಯ; ಕಾಯಂಕುಳಂ ಪುದುಪ್ಪಳ್ಳಿ ಇಡಮರತ್ತರಲ್ ದೇವಾಲಯ ಮುಂತಾದೆಡೆ ಮುಡಿಯೆಡ್‌ಪ್ಪು ಹೆಚ್ಚು ಪ್ರಚಾರದಲ್ಲಿದೆ. ಕುಂಭ, ಮೀನ ತಿಂಗಳುಗಳ ಭರಣಿ ದಿನ ಮುಡಿಯೆಡ್‌ಪ್ಪ್‌ ನಡೆಯುತ್ತದೆ. ಈ ದೇವಾಲಯಗಳ ಅತ್ಯಂತ ಪ್ರಧಾನವಾದ ಜಾತ್ರೆಯೂ ಇದೇ ಆಗಿದೆ. ಮುಡಿ ಎಂದರೆ ಭದ್ರಕಾಳಿಯ ರೂಪವನ್ನು ಕೆತ್ತಿರಿಸಿದ ಕಿರೀಟ. ಹಲಸಿನ ಹಲಗೆಯಲ್ಲಿ ರಚಿಸಿದ ಮುಡಿಯಲ್ಲಿ ಕಾಳೀರೂಪದ ಜತೆಗೆ ‘ಸರ್ಪಕಟ್ಟು’ಗಳೂ ಖಂಡಿರಸಲ್ಪಡುತ್ತವೆ. ಇದು ಪ್ರಸಿದ್ಧ ಧಾರ್ಮಿಕ ರಂಗಭೂಮಿಯಾದ ಮುಡಿಯೇಟ್ಟ್‌ನ ಕಿರುರೂಪ. ಮುಡಿಯನ್ನು ತಲೆಗೇರಿಸಿ ಮೆರೆವಣಿಗೆ ಮಾಡಿಸಿ ದೈವ ಮಾಧ್ಯಮವಾಗಿ ಮಾರ್ಪಾಡುವಾತ ‘ಮುಡಿಪ್ಪಣಿಕ್ಕರ್’ ಎಂದು ಕರೆಯಲ್ಪಡುತ್ತಾನೆ. ವಾತ್ತಿ/ ಈಳವಾತ್ತಿ (ಕ್ಷೌರಿಕ) ಸಮುದಾಯದಿಂದ ನಿಯೋಜಿಸಲ್ಪಟ್ಟ ವ್ಯಕ್ತಿಯೇ ಮುಡಿಪ್ಪಣಿಕ್ಕರ್‌ ಆಗುವಾತ. ಪ್ರತೀ ದೇವಾಲಯದಲ್ಲೂ ಮುಡಿ ತೆಗೆಯಲು ಹಕ್ಕುಳ್ಳ ಈಳವಾತ್ತಿ ಕುಟುಂಬಗಳಿವೆ. ದೇವಾಲಯದ ಆಡಳಿತ ಈಳವ ಸಮುದಾಯದವರ ಕೈಯಲ್ಲಿದೆ. ಈ ಹಬ್ಬ ಗ್ರಾಮದ ಒಳಿತಿಗಾಗಿ ನಡೆಯುವ ಧಾರ್ಮಿಕ ಸ್ವರೂಪದ ಉತ್ಸವ. ಶತ್ರುಬಾಧಾ ನಿವಾರಣೆ, ನಿರ್ದಿಷ್ಟ ಕಾರ್ಯಸಿದ್ಧಿ ಮುಂತಾದವುಗಳಿಗೆ ಹರಕೆಯಾಗಿಯೂ ಇದು ಆಚರಣೆಯಲ್ಲಿದೆ.

ದೇವಾಲಯದ ಜಾತ್ರೆಗೆ ಸಂಬಂಧಿಸಿಯೇ ಇರುವ ಧ್ವಜಾರೋಹಣ ಕಳೆದು ನಾಲ್ಕನೆಯ ದಿನ ‘ಮುಡಿಪ್ಪುರ’ ದಿಂದ ಮುಡಿಯನ್ನು ಹೊರತೆಗೆಯುತ್ತಾರೆ. ಈ ದಿನವನ್ನು ‘ಪುರಪ್ಪಾಡ್‌ದಿವಸಂ’ (ಹೊರಡುವ ದಿವಸ) ಎಂದು ಸಮುದಾಯ ಹೆಸರಿಸಿದೆ. ದೇವತೆ ತನ್ನ ಪ್ರಜೆಗಳನ್ನು ಕಾಣಲು ಹೊರಡುವುದು ಎಂಬುದೇ ಇದರ ಅರ್ಥ.

ಹರಕೆಯ ಆಚರಣೆಯಾಗಿ ಮುಡಿಯೆಡ್‌ಪ್ಪ್ ನಡೆಸುವ ಮನೆಯಾತ ಆ ದಿನ ದೇವಾಲಯಕ್ಕೆ ಬಂದು ಮುಡಿಪಣಿಕ್ಕನನ್ನು ಕರೆದೊಯ್ಯಬೇಕು. ರೇಷ್ಮೆಯುಟ್ಟು ತಲೆಯಲ್ಲಿ ಮುಡಿಯನ್ನು ಹೊತ್ತ, ಕೈಯಲ್ಲಿ ಖಡ್ಗವನ್ನು ಹಿಡಿದ ಮುಡಿಪಣಿಕ್ಕನ ಹಿಂದೆಯೇ ಜನಸಾಮಾನ್ಯರೂ ಹರಕೆ ಹೊತ್ತವನ ಮನೆಗೆ ಹೋಗುತ್ತಾರೆ. ಮನೆಯ ನೈಋತ್ಯ ಮೂಲೆಯಲ್ಲಿ ಪ್ರತ್ಯೇಕವಾಗಿ ತಯಾರಿಸಲಾದ ಚಪ್ಪರದ ಪೀಠದಲ್ಲಿ ಮುಡಿಯನ್ನು ಇಳುಹಲಾಗುತ್ತದೆ. ಬಳಿಕ ಕುರುದಿ ಕೊಡುವುದು (ದೈವಗಳಿಗೆ ಕೊಡುವ ಆಹಾರ/ಬಲಿ) ಎಂಬ ಕಾರ್ಯಕ್ರಮವೂ ನಡೆಯುತ್ತದೆ. ಹಿಂದಿನ ಕಾಲದಲ್ಲಿ ಕೋಳಿಯನ್ನು ಕುರುದಿಯಾಗಿ ಕೊಡುತ್ತಿದ್ದರು. ಇಂದು ಕುಂಬಳಕಾಯಿ ಕುಯ್ಯುವುದು ರೂಢಿ.

ಕುರುದಿ ಕೊಡುವ ಕಾರ್ಯಕ್ರಮ ಮುಗಿದರೆ ಮುಡಿಪಣಿಕ್ಯವು ಮುಡಿಯನ್ನು ಪುನಃ ತಲೆಗೇರಿಸುತ್ತಾನೆ. ಅದೇ ಹೊತ್ತಿಗೆ ದೇವಿಯ ‘ಮುಕುರಬಿಂಬ’ದ ಮೆರೆವಣಿಗೆ ವೆಳಿಚ್ಚಪ್ಪಾಡ್ (ದೈವಾವೇಶಗೊಂಡ ಪಾತ್ರಿ)ನೊಂದಿಗೆ ಅಲ್ಲಿಗೆ ತಲುಪುತ್ತದೆ. ಮುಕುರಬಿಂಬ ದೇವಿಯ ಶಾಂತರೂಪದ ಪ್ರತೀಕ ಮತ್ತು ಮುಡಿ ರೌದ್ರರೂಪದ ಪ್ರತೀಕ ಎಂಬುದು ಜನರ ನಂಬುಗೆ. ಮುಡಿಪಣಿಕ್ಕನೂ ವೆಳಿಚ್ಚಪ್ಪಾಡನೂ ಮುಖಾಮುಖಿಯಾಗುತ್ತಲೇ ಇಬ್ಬರೂ ಆವೇಶಭರಿತರಾಗಿ ಕುಣಿಯತೊಡಗುತ್ತಾರೆ. ಬಳಿಕ ಅವರು ದೇವಾಲಯಕ್ಕೆ ಸಾಗುತ್ತಾರೆ. ನಡೆದು ಹೋಗುವ ದಾರಿಯ ಬದಿಯಲ್ಲಿ ಗೊನೆ ಹಾಕಿದ ಬಾಳೆಗಳನ್ನು ಕಟ್ಟಿರುತ್ತಾರೆ. ಮುಡಿಪಣಿಕ್ಕನು ತನ್ನ ಕೈಯ ಖಡ್ಗದಿಂದ ಇಬ್ಬದಿಯ ಬಾಳೆಗಳನ್ನು ತುಂಡರಿಸಿಕೊಂಡು ಮುಂದುವರಿಯುತ್ತಾನೆ. ಇದಕ್ಕೆ ‘ಗೊನೆ ಬಾಳೆ ತುಂಡರಿಸುವುದು’ ಎಂದು ಹೆಸರು. ದಾರಿಕಾಸುರನ ಅನುಚರರಾದ ಸೈನಿಕರನ್ನು ಈ ಗೊನೆಬಾಳೆಗಳು ಪ್ರತಿನಿಧಿಸುತ್ತವೆ. ಆದುದರಿಂದ ದಾರಿಕ ನಿಗ್ರಹಕ್ಕೆ ಮುಂಚಿತವಾಗಿ ಸೈನಿಕರನ್ನು ಒಬ್ಬರುಳಿಯದಂತೆ ಕತ್ತರಿಸಿ ಹಾಕಲಾಗುತ್ತದೆ.

ದೇವಾಲಯಕ್ಕೆ ತಲುಪಿದ ಮುಡಿಪಣಿಕ್ಕನು ಆವೇಶ ನರ್ತನ ಮಾಡುತ್ತಾನೆ. ಆಗ ಮುಡಿಪಣಿಕ್ಕನ ತಲೆಯಲ್ಲಿರುವ ಮುಡಿಯನ್ನು ದೇವಾಲಯದ ಅಧಿಕೃತರು ಇಳಿಸಿ ಕೆಳಗೆ ಇಡುತ್ತಾರೆ. ಬಳಿಕ ದಾರಿಕನ ಪ್ರವೇಶ. ಈಶವತ್ತಿ ಸಮಾಜದ ಒಬ್ಬಾತನೇ ದಾರಿಕ ವೇಷವನ್ನೂ ಧರಿಸುತ್ತಾನೆ. ಉಡುವುದು ರೇಷ್ಮೆ ಬಟ್ಟೆಗಳನ್ನು. ಮುಖಕ್ಕೆ ಮುಖವಾಡ ಧರಿಸಲಾಗುತ್ತದೆ. ಎರಡು ದಂಡಗಳನ್ನು ಪರಸ್ಪರ ಬಡಿಯುತ್ತ ದೇವಾಲಯದ ಮುಂಭಾಗಕ್ಕೆ ಬಂದ ದಾರಿಕನು ಕುಣಿಯತೊಡಗುತ್ತಾನೆ.

ದಾರಿಕನ ಕುಣಿತ ನಡೆಯುವಾಗ ಗಣಕ ಸಮುದಾಯದ ಒಬ್ಬಾತ ಹಾಡಲಾರಂಭಿಸುತ್ತಾನೆ. ಹಾಡಿನ ವಸ್ತು ಕಾಳೀ-ದಾರಿಕ ಸಂವಾದ. ಹಾಡುಗಾರನು ಕೈತಾಳವನ್ನು ಮಾತ್ರ ಉಪಯೋಗಿಸುತ್ತಾನೆ. ಈ ಕಾರ್ಯಕ್ರಮವನ್ನು ‘ಮುಡಿಪ್ಪೇಚ್ಚ್’ ಎಂದು ಕರೆಯುತ್ತಾರೆ.

ಕೆಲವು ಕಾಳೀ ದೇವಾಲಯಗಳಲ್ಲಿ ಎತ್ತರವಾಗಿ ಕಟ್ಟಿದ ಅಟ್ಟದ ಮೇಲೆ ಮುಡಿಪ್ಪೇಚ್ಚ್ ನಡೆಯುತ್ತದೆ. ಅದರಿಂದಲೇ ಇರಬೇಕು ಇದಕ್ಕೆ ‘ತಟ್ಟೇಪೇಚ್ಚ್’ ಎಂದೂ ಹೆಸರಿದೆ. ಮುಡಿಪ್ಪೇಚ್ಚ್ ನಡೆಯುವಾಗ ಮುಡಿಯನ್ನು ತಲೆಯಲ್ಲಿ ಹೊತ್ತು ಮುಡಿಪಣಿಕ್ಕನು ಎದ್ದು ನಿಲ್ಲುತ್ತಾನೆ. ಆಗ ಚಕಿತನಾದ ದಾರಿಕನು ದೇವಾಲಯದ ಹಿಂಭಾಗಕ್ಕೆ ಓಡುತ್ತಾನೆ. ಕೊನೆಗೆ ದಾರಿಕನನ್ನು ಗುರಿಯಾಗಿರಿಸಿ ಮುಡಿಪಣಿಕ್ಕನು ತ್ರಿಶೂಲವನ್ನು ಎಸೆಯುತ್ತಾನೆ. ಇದರೊಂದಿಗೆ ದಾರಿಕ ನಿಗ್ರಹ ಎಂಬ ಸಂಕಲ್ಪ ಪೂರ್ತಿಯಾಗುತ್ತದೆ. ವೇಷವನ್ನೂ ಶಿರೋಭೂಷಣವನ್ನೂ ಬಿಚ್ಚಿ, ದಾರಿಕವೇಷ ಕಟ್ಟಿದ ವ್ಯಕ್ತಿ ಕೈಯಲ್ಲಿದ್ದ ದಂಟುಗಳೊಂದಿಗೆ ಬಂದು ಮುಡಿಪಣಿಕ್ಕನಿಗೆ ನಮಸ್ಕರಿಸುತ್ತಾನೆ. ಇದರೊಂದಿಗೆ ಮುಡಿಯೆಡ್‌ಪ್ಪು ಕಾರ್ಯಕ್ರಮ ಪೂರ್ತಿಯಾಗುತ್ತದೆ.

ಮುಡಿಯೇಟ್ಟ್‌ನಂತೆ ಮುಡಿಯೆಡ್‌ಪ್ಪ್‌ನಲ್ಲೂ ಕಾಳೀದಾರುಕ ವೃತ್ತಾಂತವೇ ಪುನರುಚ್ಚರಿತವಾಗುತ್ತದೆ. ಮುಡಿಯೇಟ್ಟ್‌ನೊಂದಿಗೆ ಹೋಲಿಕೆ ಒಂದಷ್ಟು ಇದ್ದರೂ ಒಂದು ಜನಪದ ಪ್ರಕಾರವಾಗಿಯೇ ‘ಮುಡಿಯೆಡುಪ್ಪ’ನ್ನು ತಿಳಿಯುವುದು ಒಳ್ಳೆಯದ.

ಕಾಲಕ್ಕೆ ಅನುಸಾರವಾಗಿ ಮುಡಿಯೆಡ್‌ಪ್ಪ್‌ನ ವಿವಿಧ ಹಂತಗಳಲ್ಲಿ ಬದಲಾವಣೆಗಳು ಸೇರಿಕೊಂಡಿವೆ. ಹಿಂದಿನ ಕಾಲದಲ್ಲಿ ಪ್ರಕೃತಿದತ್ತವಾದ ಸಹಜ ಬಣ್ಣಗಳನ್ನು ಬಳಸಿ ಮುಡಿಯನ್ನು ಅಲಂಕರಿಸಲಾಗುತ್ತಿತ್ತು. ಮುಡಿಯೆಡ್‌ಪ್ಪ್‌ನ ಭಾಗವಾಗಿ ನಡೆಯುವ ‘ಕುರುದಿ ನೀಡುವುದು’ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದುದು ಈಳವ ಸಮುದಾಯದವರು. ಇಂದು ಬಹುತೇಕ ಎಲ್ಲ ದೇವಾಲಯಗಳಲ್ಲೂ ಬ್ರಾಹ್ಮಣ ಪುರೋಹಿತರು ಅದನ್ನು ನಡೆಸುತ್ತಾರೆ. ‘ಮುಡಿಯೆಡುಪ್ಪ’ನ್ನು ಇನ್ನಷ್ಟು ಜನಾಕರ್ಷಕವಾಗಿಸುವುದಕ್ಕಾಗಿ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೃತ್ತಿಪರ ತಂಡಗಳು ಇದರ ಜತೆ ನಡೆಸುತ್ತವೆ.

.ಕೆ.ಎನ್. ಅನುವಾದ ಕೆ.ಕೆ.

 

ಮುಡಿಯೇಟ್ ಮಧ್ಯಕೇರಳದ ಕೊಚ್ಚಿ ಹಾಗೂ ತಿರುವಾಂಕೂರಿನ ಉತ್ತರ ಭಾಗಗಳಲ್ಲಿ ಇಂದಿಗೂ ನಡೆಯುತ್ತಿರುವ ಆರಾಧನ ಜನಪದ ಕಲೆ. ಪ್ರಾಚೀನ ಕಾಲದಲ್ಲಿ ಕೇರಳದ ೨೨೮ ಕಾವುಗಳಲ್ಲಿ ಮುಡಿಯೇಟ್ ನಡೆಯುತ್ತಿತ್ತೆಂದು ತಿಳಿದುಬರುತ್ತದೆ. ಆಧುನಿಕ ಕಾಲದಲ್ಲಿ ಈ ಸಂಖ್ಯೆ ಬಹಳಷ್ಟು ಕಡಿಮೆಯಾಗಿದೆ. ಭಗವತಿ ಕ್ಷೇತ್ರಗಳಲ್ಲಿ ವಾರ್ಷಿಕವಾಗಿ ಅಥವಾ ಹರಕೆಯ ರೂಪದಲ್ಲಿ ಮುಡಿಯೇಟ್ ನಡೆಸುತ್ತಾರೆ. ಜಾತಿ ಶ್ರೇಣೀಕೃತ ವ್ಯವಸ್ಥೆಯ ತುತ್ತತುದಿಯಲ್ಲಿರುವ ನಾಯರ್ ಮೊದಲಾದ ಸಮುದಾಯಗಳ ಆಧೀನದಲ್ಲಿರುವ ಭಗವತೀ ಕ್ಷೇತ್ರಗಳಲ್ಲಿ ಈ ಆಚರಣೆ ಕಂಡುಬರುತ್ತದೆ. ಈ ಆರಾಧನ ರಂಗಕಲೆಯಲ್ಲಿ ವಿಧಿಯಾಚರಣೆಗಳನ್ನು ನಡೆಸಿ, ವೇಷ ಧರಿಸಿ ಆಡುವವರು ಎರಡು ಜಾತಿಗಳಿಗೆ ಸೇರಿದವರಾಗಿದ್ದಾರೆ. ಕೊಚ್ಚಿ ಪ್ರದೇಶದಲ್ಲಿ ಕುರುಪ್ಪರು ಹಾಗೂ ತಿರುವಾಂಕೂರು ಪ್ರದೇಶದಲ್ಲಿ ಮಾರಾರ್‌ಗಳು.

37_70A_DBJK-KUH

ಪುರಾಣ : ದಾರುಮತಿ ಮತ್ತು ದಾನವತಿ ಎಂಬ ಇಬ್ಬರು ರಾಕ್ಷಸಿಗಳಿದ್ದರು. ದಾರುಮತಿಗೆ ದಾರಿಕಾಸುರ ಹಾಗೂ ದಾನವತಿಗೆ ದಾನವೇಂದ್ರ ಎಂಬ ಹೆಸರಿನ ಮಕ್ಕಳು ಹುಟ್ಟುವರು. ಪರಾಕ್ರಮಿಗಳಾದ ಅವರು ಬ್ರಹ್ಮನನ್ನು ತಪಸ್ಸು ಮಾಡಿ ಯಾರಿಂದಲೂ ಸೋಲಿಲ್ಲದೆ, ಸಾವಿಲ್ಲದ ವರವನ್ನು ಪಡೆದುಕೊಳ್ಳುತ್ತಾರೆ. ಆದರೆ ಹೆಣ್ಣಿನಿಂದ ಸಾವಿಲ್ಲದ ವರವನ್ನು ಕೇಳಿರಲಿಲ್ಲ. ವರಬಲದಿಂದ ಗರ್ವಿಷ್ಠರಾದ ಅವರು ಮೂರು ಲೋಕಗಳನ್ನು ವಶಪಡಿಸಿಕೊಂಡು ನೆಮ್ಮದಿಯನ್ನು ಹಾಳುಮಾಡುವರು. ಭೂಲೋಕ ಸಂಚಾರಿಯಾದ ನಾರದ ಅಸುರರ ಉಪಟಳವನ್ನು ಕಂಡು ಹೆದರಿದ. ಈ ವಿಷಯವನ್ನು ಶಿವನಿಗೆ ತಿಳಿಸುತ್ತಾನೆ. ಪರಿಹಾರದ ಭರವಸೆ ನೀಡಿದ ಶಿವ ತನ್ನ ಮೂರನೇ ಕಣ್ಣಿನಿಂದ ಭಗವತಿಯನ್ನು ಸೃಷ್ಟಿಸುತ್ತಾನೆ. ಯುದ್ಧಕ್ಕಾಗಿ ಆಹ್ವಾನಿಸುವ ದಾರಿಕ ಮತ್ತು ದಾನವೇಂದ್ರನನ್ನು ಭಗವತಿಯು ಸಂಹರಿಸುವಳು. ಕೋಪೋದ್ರಿಕ್ತಳಾದ ಕಾಳಿಯನ್ನು ಸಾಂತ್ವನ ಪಡಿಸಲು ಶಿವನು ದಾರಿಯಲ್ಲಿ ಮಲಗುವನು. ಶಿವನನ್ನು ಕಂಡ ಕಾಳಿಗೆ ಸಿಟ್ಟು ಶಮನವಾಗುತ್ತದೆ. ಮುಡಿಯೇಟ್‌ನಲ್ಲಿ ಈ ಪುರಾಣದ ಕಥೆಯನ್ನು ಬಳಸಿಕೊಳ್ಳಲಾಗಿದೆ.

ಆರಾಧನೆಯ ರೀತಿ : ಮೇಲೆ ಹೇಳಿದ ಪುರಾಣಕಥೆಯ ರಂಗದ ಆವಿಷ್ಕಾರ ಮುಡಿಯೇಟ್ ಆದರೂ ಅದಕ್ಕೆ ಮುಂಚಿತವಾಗಿ ಅನೇಕ ವಿಧಿಯಾಚರಣೆಗಳಿವೆ. ‘ಕಳಂ’ ರಚನೆಯೊಂದಿಗೆ ಮುಡಿಯೇಟ್ ಆರಂಭಗೊಳ್ಳುವುದು. ಅಲಂಕರಿಸಿದ ಮಂಟಪದಲ್ಲಿ ದೇವತಾಸ್ತುತಿ, ಪೂಜೆಯೊಂದಿಗೆ ಕಳಂ ಚಿತ್ರವನ್ನು ಬರೆಯುವರು. ಪಂಚವರ್ಣದ ಹುಡಿಗಳಿಂದ ನಾಲ್ಕರಿಂದ ಹದಿನಾರು ಕೈಗಳವರೆಗಿನ ಕಾಳಿಯ ಚಿತ್ರವನ್ನು ಬರೆಯುವುದು ಕ್ರಮ. ಅನಂತರ ಮುಡಿಯೇಟ್ ನಡೆಸುವ ಕಲಾವಿದ ಚಿತ್ರ ಬರೆದ ಕಲಾವಿದನಿಂದ ‘ಕಳಂ ಸ್ವೀಕರಿಸುವ’ ವಿಧಿ ನಡೆಯುತ್ತದೆ. ಅನಂತರ ‘ಕಳಂಪೂಜೆ’ ನಡೆಯುವುದು. ಅಕ್ಕಿ, ಭತ್ತ ಎಡೆ ಇರಿಸಿ, ದೀಪ ಬೆಳಗಿಸಿ ಕಳಾ ಹಾಗೂ ಮುಡಿಯೇಟ್ ಕಲಾವಿದನನ್ನು ದೀಪದಿಂದ ನಿವಾಳಿಸುವರು. ಅನಂತರ ‘ಕಳಂಪಾಟ್’ ನಡೆಯುವುದು. ಗಣಪತಿ ಸ್ತುತಿ, ಭದ್ರಕಾಳಿಯ ಪಾದಾದಿಕೇಶ ಮತ್ತು ಕೇಶಾದಿ ಪಾದವರ್ಣನೆ, ಚಪ್ಪರ ವರ್ಣನೆಗಳು ಈ ಹಾಡಿನ ವಿಷಯ. ಶಾಸ್ತಾರ ಮೊದಲಾದ ಇತರ ದೇವತೆಗಳಿದ್ದರೆ ಅವುಗಳ ಹಾಡುಗಳಿರುತ್ತವೆ. ಚೆಂಡೆ, ಚಕ್ರತಾಳಗಳನ್ನು ಹಾಡಿಗೆ ಹಿಮ್ಮೇಳವಾಗಿ ಬಳಸುತ್ತಾರೆ. ಅನಂತರ ತೆಂಗಿನಗರಿಗಳಿಂದ ಕಾಳಿಯ ಚಿತ್ರದ ಮುಖದ ಭಾಗವನ್ನು ಬಿಟ್ಟು ಉಳಿದ ಭಾಗವನ್ನು ಉಜ್ಜುತ್ತಾರೆ.

ನಾಟಕ ರೂಪ : ಮುಡಿಯೇಟ್ ನಡೆಸುವ ವ್ಯಕ್ತಿ ಬಣ್ಣದ ಮನೆಯಿಂದ (ಅಣಿಯರ) ರಂಗಕ್ಕೆಬಂದು ದೀಪವನ್ನು ಬೆಳಗಸಿವುದರೊಂದಿಗೆ ಮುಡಿಯೇಟ್ ಎಂಬ ಆರಾಧನ ರಂಗಕಲೆಗೆ ಚಾಲನೆಯಾಗುವುದು. ಚೆಂಡೆ, ಮಿಕ್ಕುಚೆಂಡೆ, ಚಕ್ರತಾಳಗಳನ್ನು ಬಳಸಿ ‘ಕೇಳಿ’ ಬಾರಿಸುತ್ತಾರೆ. ಹಿಮ್ಮೇಳದವರು ರಂಗದ ಮಧ್ಯೆ ಇರುವ ದೀಪದ ಹಿಂಭಾಗದಲ್ಲಿ ನಿಂತಿರುತ್ತಾರೆ.

ಕೇಳಿಯ ನಂತರ ‘ಅರಂಗು ವಾಳ್ತಲ್‌’ ಎಂಬ ವಿಧಿ. ತೆರೆಯನ್ನು ಹಿಡಿದು, ಅದರ ಹಿಂದೆ ಒಬ್ಬ ಹಾಡುತ್ತಾನೆ. ಹಿಮ್ಮೇಳದವರು ತಾಳ ಬಡಿಯುವರು. ಶಿವ ಮತ್ತು ನಾರದರು ತೆರೆಯ ಹಿಂದೆ ಪ್ರತ್ಯಕ್ಷ ರಾಗುತ್ತಾರೆ. ಶಿವನ ವಾಹನ ನಂದಿಯನ್ನು ತೆರೆಯಲ್ಲಿ ಚಿತ್ರಿಸುತ್ತಾರೆ. ಬಿಳಿವಸ್ತ್ರಧರಿಸಿ, ತಲೆಗೆ ಬಿಳಿವಸ್ತ್ರದ ಕಿರೀಟ ಹಾಗೂ ಕೈಯಲ್ಲಿ ಓಲೆಗ್ರಂಥವನ್ನು ಹಿಡಿದು ನಾರದ ಪ್ರವೇಶಿಸುತ್ತಾನೆ. ಶಿವನಿಗೆ ಪ್ರತ್ಯೇಕ ಮುಖವರ್ಣಿಕೆ ಇಲ್ಲ. ಕಣ್ಣಿಗೆ ಮಸಿ ಬಳಿದು, ಗೋಪಿಚಂದನ ಧರಿಸುತ್ತಾನೆ. ಕಥಕ್ಕಳಿಯಂತೆ ಚಿಕ್ಕ ಕಿರೀಟ ಧರಿಸುತ್ತಾನೆ. ನಾರದ ಹಾಗೂ ಶಿವ ಹೆಜ್ಜೆ ಹಾಕುತ್ತಿರುವಂತೆ, ಹಿಮ್ಮೇಳದವರು ದಾರಿಕಾಸುರನ ಹಾವಳಿಯನ್ನು ಹಾಡಿನ ಮೂಲಕ ಪ್ರಸ್ತುತಪಡಿಸುತ್ತಾರೆ. ಅನಂತರ ಶಿವನ ಪ್ರಶ್ನೆಗಳಿಗೆ ನಾರದ ಓಲೆಗ್ರಂಥ ನೋಡಿ ಉತ್ತರ ಹೇಳುವ ಸನ್ನಿವೇಶವಿದೆ. ಈ ಸಂದರ್ಭದಲ್ಲಿ ಚೆಂಡೆ ಹಾಗೂ ಚಕ್ರತಾಳವನ್ನು ಬಳಸುತ್ತಾರೆ.

ಮುಂದಿನ ದೃಶ್ಯ ದಾರಿಕಾಸುರನ ಪ್ರವೇಶ. ದಾರಿಕಾಸುರನ ವೇಷ ಕಥಕಳಿಯ ಕತ್ತಿವೇಷದ ಹಾಗಿರುತ್ತದೆ. ಚಾಕ್ಯಾರ್‌ಕೂತ್ತಿನ ವೇಷ ಭೂಷಣಗಳು, ಎಡಗೈಯಲ್ಲಿ ಕಡಗದ ಜತೆಗೆ ಕಿಸ್ಕಾರ ಹೂವಿನ ಅಲಂಕಾರಗಳಿರುತ್ತವೆ. ಎರಡು ಕೈಗಳಲ್ಲಿ ಖಡ್ಗ, ಹಲಸಿನ ಮರದ ಹಲಗೆಯಿಂದ ನಿರ್ಮಿಸಿದ, ಕೆಂಪುಬಟ್ಟೆ ಹಾಗೂ ನವಿಲು ಗರಿಗಳಿಂದ ಅಲಂಕರಿಸಿದ ಕಿರೀಟವನ್ನು ಧರಿಸುತ್ತಾನೆ. ‘ತಿರನೋಟ’ದ ನಂತರ ಅಸನದಲ್ಲಿ ಕುಳಿತು ತನ್ನ ದಿಗ್ವಿಜಯದ ವೃತ್ತಾಂತವನ್ನು ಅರುಹುತ್ತಾನೆ. ಅನಂತರ ನಾಲ್ಕು ದಿಕ್ಕುಗಳ ಪರ್ವತಗಳನ್ನೇರಿ ಯುದ್ಧಕ್ಕೆ ಕರೆಯುವಂತೆ ಅಭಿನಯಿಸುತ್ತಾನೆ.

ಈ ಸಂದರ್ಭದಲ್ಲಿ ಕಾಳಿಯ ರಂಗಪ್ರವೇಶಕ್ಕೆ ಸಿದ್ಧತೆಗಳಾಗಿರುತ್ತವೆ. ಮುಖಕ್ಕೆ ಮಸಿ ಬಳಿದು, ಅಕ್ಕಿಹಿಟ್ಟು ಹಾಗೂ ಸುಣ್ಣ ಚುಟ್ಟಿಯನ್ನು ಇಡುತ್ತಾರೆ. ಮೇಲ್ಭಾಗದ ಒಂದು ಸಾಲು ಸುಣ್ಣ ಹಾಗೂ ಅರಸಿನ ಮಿಶ್ರಿತ ಕೆಂಪುಬಣ್ಣದಿಂದ ಕೂಡಿರುತ್ತದೆ. ಕಿವಿಗೆ ವೃತ್ತಾಕಾರದ ‘ತೋಡ’ ಎಂಬ ಆಭರಣ, ತೆಂಗಿನಗರಿಯಿಂದ ತಯಾರಿಸಿದ ‘ದಂಷ್ಟ್ರ’ವನ್ನು ಬಾಯಿಯಿಂದ ಹೊರಗೆ ಕಾಣುವಂತೆ ಧರಿಸುತ್ತಾರೆ. ಮಡಿವಸ್ತ್ರದ ಉಡುಪು, ಎದೆಯಲ್ಲಿ ‘ಮುಲಪಡಂ’, ಹೂ ಮಾಲೆಗಳನ್ನು ಧರಿಸುವರು. ಸೊಂಟಕ್ಕೆ ಒಡ್ಯಾಣ, ಕೈಗಳಿಗೆ ಬಳೆ, ಕೈಗಳಲ್ಲಿ ಬಾಗಿದ ಖಡ್ಗ, ಮೂರು ಅಡಿ ಉದ್ದ ಹಾಗೂ ಅಗಲವಿರುವ ವೃತ್ತಾಕಾರದ ಕಿರೀಟವನ್ನು ಧರಿಸುವರು. ಹಲಸಿನ ಮರದಿಂದ ತಯಾರಿಸಿದ ಈ ಕಿರೀಟದಲ್ಲಿ ವರ್ಣರಂಜಿತ ಕುಸುರಿ ಕೆತ್ತನೆಗಳಿರುತ್ತವೆ. ಹೀಗೆ ವೇಷಭೂಷಣಗಳಿಂದ ಅಲಂಕೃತವಾದ ಕಾಳಿಯು ಎರಡು ಕಾಳಿಯು ಎರಡು ಪಂಜುಗಳನ್ನು ಹಿಡಿದುಕೊಂಡು ರಂಗಪ್ರವೇಶ ಮಾಡುವಳು.

ಮುಡಿಯೇಟ್ ಎಂಬ ಆರಾಧನ ಕಲೆಯಲ್ಲಿ ಮುಡಿ ಏರಿಸುವ ಕ್ರಿಯೆ ಮುಖ್ಯವಾದುದು. ಅಲಂಕಾರ ಪೂರ್ಣಗೊಂಡ ಕಾಳಿಯ ವೇಷಧಾರಿ ವಾದ್ಯಘೋಷಗಳೊಂದಿಗೆ ದೇವಸ್ಥಾನದ ಬಾಗಿಲಿಗೆ ಬಂದು, ಅರ್ಚಕನಿಂದ ಪ್ರಸಾದವನ್ನು ಸ್ವೀಕರಿಸಿ, ಖಡ್ಗ ಹಾಗೂ ಮಾಲೆಯನ್ನು ಧರಿಸುತ್ತಾನೆ. ಅನಂತರ ವಾದ್ಯಘೋಷಗಳೊಂದಿಗೆ, ಕಿರೀಟವನ್ನು ಧರಿಸುತ್ತಾನೆ. ಕಿರೀಟವನ್ನು ಧರಿಸಿದ ಕಾಳಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು, ಯುದ್ಧಕ್ಕೆ ಆಹ್ವಾನ ಕೊಡುತ್ತಾ ರಂಗವನ್ನು ಪ್ರವೇಶಿಸುವುದು. ಕಾಳಿಯು ‘ತಿರನೋಟ’ದ ನಂತರ ಪೀಠದಲ್ಲಿ ಕುಳಿತು ದಾರಿಕಾಸುರನನ್ನು ಯುದ್ಧಕ್ಕೆ ಕರೆಯುತ್ತಾಳೆ. ಈ ಸಂದರ್ಭದಲ್ಲಿ ಕೋಯಿಂಬಡ ನಾಯರ್ ಎಂಬ ಪಾತ್ರ ಪ್ರವೇಶಿಸುತ್ತದೆ. ಕಾಳಿಗೆ ಸಹಾಯ ಮಾಡಲು ನದಿಕೇಶ್ವರನು ವೇಷ ಮರೆಸಿ ಬಂದಿರುವುದಾಗಿ ನಂಬಿಕೆ. ಕೋಯಿಂಬಡ ನಾಯರದ್ದು ಸರಳ ವೇಷ. ಬಿಳಿ ವಸ್ತ್ರ ಧರಿಸಿ, ತಲೆ ಮುಂಡಾಸುಕಟ್ಟೆ, ಹಣೆಗೆ ತಿಲಕವಿರಿಸಿ ಕೈಯಲ್ಲಿ ಗುರಾಣಿ ಹಾಗೂ ತೆಂಗಿನಗರಿಗಳನ್ನು ಧರಿಸಿ ರಂಗ ಪ್ರವೇಶಿಸುತ್ತಾನೆ. ಇದೊಂದು ಹಾಸ್ಯ ಕಥಾಪಾತ್ರವಾಗಿದೆ. ಅನಂತರ ದಾನವೇಂದ್ರನ ರಂಗಪ್ರವೇಶ, ದಾರಿಕಾಸುರನ ಅದೇ ವೇಷಭೂಷಣಗಳು ಈ ವೇಷದ್ಧಾಗಿದೆ.

ಕಾಳಿಯ ಪರಿವಾರದಲ್ಲಿ ಕೂಳಿ ಎಂಬ ವೇಷವೂ ಇದೆ. ಕೇರಳದ ಧಾರ್ಮಿಕ ಕಲೆಗಳಲ್ಲಿ ಪೊರಾಟ್ ಸಾಮಾನ್ಯ. ಮುಡಿಯೇಟ್ ಕೂಡಾ ಪೊರಾಟ್ ಲಕ್ಷಣವನ್ನು ಹೊಂದಿದೆ. ಮುಖಕ್ಕೆ ಮಸಿ ಬಳಿದು, ಕಿವಿಗಳಿಗೆ ದೊಡ್ಡ ಕುಂಡಲವನ್ನು ಧರಿಸಿ, ಎದೆಗೆ ಗೆರಟೆ ಅಥವಾ ವಸ್ತ್ರದ ಮೊಲೆಗಟ್ಟನ್ನು ಧರಿಸಿ ಕೂಳಿಯ ಪ್ರವೇಶವಾಗುತ್ತದೆ. ಪ್ರೇಕ್ಷಕರನ್ನು ನಗಿಸುವುದೇ ಕೂಳಿಯ ಉದ್ದೇಶ. ರಂಗದಲ್ಲಿ ತುಂಬ ಸ್ವಾತಂತ್ರ‍್ಯವಿರುವ ಪಾತ್ರವಾಗಿದೆ ಕೂಳಿಯದ್ದು.

ಮುಂದೆ ಕಾಳಿ-ದಾರಿಕ-ದಾನವೇಂದ್ರರ ಯುದ್ಧ ಪ್ರಸಂಗಗಳು ಈ ಯುದ್ಧದ ಸಂದರ್ಭದಲ್ಲಿ ಕೂಳಿಯ ಹಾಸ್ಯ ನಗುವನ್ನು ಉಕ್ಕಿಸುತ್ತದೆ. ಕಾಳಿಯನ್ನು ಎದುರಿಸಲಾಗದೆ ರಾಕ್ಷಸರು ಓಡಿ ಹೋಗಿ ಪಾತಾಳದಲ್ಲಿ ಅಡಗುತ್ತಾರೆ. ಅಲ್ಲಿ ಕಾಳಿ ಹಾಗೂ ದಾರಿಕದಾನವೇಂದ್ರರೊಂದಿಗೆ ವಾಗ್ವಾದ ನಡೆಯುತ್ತದೆ. ಇದಕ್ಕೆ ‘ಪೇಶಲ್’ ಎಂದು ಹೆಸರು. ಕೋಯಿಂಬಡ ನಾಯರ್ ಸಹಿತ ನಾಲ್ಕು ಪಾತ್ರಗಳು ರಂಗದ ದೀಪದ ಸುತ್ತ ಸಂವಾದ ನಡೆಸುತ್ತದೆ. ಅನಂತರ ಯುದ್ಧ ಆರಂಭವಾಗುತ್ತದೆ. ಕಾಳಿ ದಾರಿಕಾಸುರ ಮತ್ತು ದಾನವೇಂದ್ರ ತಲೆಯನ್ನು ಕತ್ತರಿಸುತ್ತಾಳೆ. ದೀಪಕ್ಕೆ ನಿವಾಳಿಸುತ್ತಾಳೆ. ಅನಂತರ ಅವರ ಮುಡಿಯನ್ನು ಭಕ್ತರಿಗೆ ನಿವಾಳಿಸುವಳು. ಹೀಗೆ ಮುಡಿಯೇಟ್ ಎಂಬ ರಂಗನಾಟಕ ಕೊನೆಗೊಳ್ಳುತ್ತದೆ.

ಆರ್.ಪಿ. ಅನುವಾದ ಎನ್.ಎಸ್.