ಮಲಯಾಳ ಜನಪದ ಸಾಹಿತ್ಯ ದಕ್ಷಿಣ ಭಾರತ ಪ್ರಮುಖ ಭಾಷೆಗಳಾದ ತಮಿಳು, ಕನ್ನಡ, ತೆಲುಗು ಹಾಗೂ ಮಲಯಾಳ ಭಾಷೆಗಳ ಜನಪದ ಸಾಹಿತ್ಯಗಳಲ್ಲಿ ಹೆಚ್ಚಿನ ಹೋಲಿಕೆಯಿರುವುದು ಕಂಡುಬರುತ್ತದೆ. ಮಲಯಾಳದಲ್ಲಿರುವ ವೈವಿಧ್ಯ ಪೂರ್ಣವೂ ವಿಶಾಲವೂ ಆದ ಜನಪದ ಸಾಹಿತ್ಯವನ್ನು ಸಂಗ್ರಹಿಸಿ, ಆ ಬಗೆಗೆ ಅಧ್ಯಯನ ನಡೆಸಿದವರಲ್ಲಿ ಸಿ.ಪಿ. ಗೋವಿಂದ ಪಿಳ್ಳೆ, ಪರ್ಸಿಮೆಕ್ಷೀವಾ, ವಾ. ಚೇಲನಾಟ್ಟು ಅಚ್ಯುತ ಮೆನೋನ್‌, ಎಸ್.ಕೆ.ನಾಯರ್, ಜಿ. ಭಾರ್ಗವ ಪಿಳ್ಳೆ, ವೆಟ್ಟಿಯಾರ್ ಪ್ರೇಮನಾಥ್, ಚಿರಯ್ಕಲ್‌ಟಿ. ಬಾಲಕೃಷ್ಣನ್, ಎಂ.ವಿ. ವಿಷ್ಣು ನಂಬೂದಿರಿ-ಮೊದಲಾದವರು ಪ್ರಮುಖರು. ಇವರ ಕೃತಿಗಳಿಂದ ಪ್ರಾಚೀನ ಕೇರಳೀಯ ನಾಗರಿಕತೆಯ ದರ್ಶನವಾಗುವುದರಲ್ಲಿ ಸಂದೇಹವಿಲ್ಲ.

ಮಲಯಾಳ ಜನಪದ ಸಾಹಿತ್ಯ ವಿವಿಧ ರೂಪಗಳಲ್ಲಿ ದೊರೆಯುತ್ತದೆ. ಜನಪದ ಸಾಹಿತ್ಯವನ್ನು ಮಲಯಾಳದಲ್ಲಿ ‘ನಾಡೋಡಿ ಸಾಹಿತ್ಯಂ’, ‘ಗ್ರಾಮೀಣ ಸಾಹಿತ್ಯಂ’ ಅಥವಾ ‘ನಾಡೋಡಿ ವಿಜ್ಞಾನೀಯಂ’ ಎಂದು ಹೇಳುತ್ತಾರೆ. ವಿಶಿಷ್ಟವೂ ವೈವಿಧ್ಯಮಯವೂ ಆದ ಕೇರಳದ ಜನಪದ ಸಾಹಿತ್ಯವನ್ನು ಮುಖ್ಯವಾಗಿ ಜನಪದ ಗೀತೆಗಳು, ಜನಪದ ನಾಟಕಗಳು, ಜನಪದ ಕಥೆಗಳು, ಜನಪದ ಗಾದೆಗಳು ಹಾಗೂ ಒಗಟುಗಳು ಎಂದು ವಿಭಾಗಿಸಬಹುದು.

) ಜನಪದ ಗೀತೆಗಳು (ನಾಡೋಡಿ ಪಾಟ್ಟುಗಳ್) : ಜನಪದ ಗೀತೆಗಳನ್ನು ಮಲಯಾಳದಲ್ಲಿ ‘ನಾಡೋಡಿ ಪಾಟ್ಟುಗಳ್‌’ ಅಥವಾ ‘ನಾಡನ್ ಪಾಟ್ಟುಗಳ್’ ಎಂದು ಕರೆಯುತ್ತಾರೆ. ಭಾಷೆ ಹಾಗೂ ಸಾಹಿತ್ಯದಲ್ಲಿ ಹೆಚ್ಚಿನ ಪಾಂಡಿತ್ಯವಿಲ್ಲದ, ಆದರೆ ನೈಸರ್ಗಿಕ ಸೌಂದರ್ಯದ ಜ್ಞಾನವಿರುವ ಜನಸಾಮಾನ್ಯರ ಸಹಜವೂ ಸುಂದರವೂ ತಾಳಬದ್ಧವೂ ಆದ ರಚನೆಗಳೇ ನಾಡಪದಗಳು. ಈ ಹಾಡುಗಳಿಗೂ ದೇಶದ ಭೂ ಪ್ರಕೃತಿ, ಕಾಲಾವಸ್ಥೆ, ಜನರ ಸ್ವಭಾವ ವಿಶೇಷತೆ, ಆಚಾರಾನುಷ್ಠಾನ, ವೃತ್ತಿ, ಭಾಷೆಯ ಬೆಳೆವಣಿಗೆ ಮೊದಲಾದುವುಗಳಿಗೂ ಪರಸ್ಪರ ಸಂಬಂಧವಿದೆ. ಒಂದು ಪ್ರದೇಶದ ಭಾಷೆಯ ಶೈಶವಾವಸ್ಥೆಯಿಂದ ತೊಡಗಿ, ಅದರ ಬೆಳವಣಿಗೆಯ ಉನ್ನತಸ್ಥಿತಿಯವರೆಗಿನ ವಿವಿಧ ಘಟ್ಟಗಳ ಪ್ರತ್ಯೇಕ ವೈಶಿಷ್ಟ್ಯಗಳನ್ನು ಅಲ್ಲಿಯ ಜಾನಪದ ಗೀತೆಗಳಲ್ಲಿ ಗುರುತಿಸಬಹುದು. ಕೇರಳನಾಡಿನ ಜನರ ಜೀವನಸೌಂದರ್ಯ ಹಾಗೂ ಅನುಭವಗಳನ್ನು ಕಾಲಕಾಲಕ್ಕೆ ಸವಿದು-ಬೆಳೆದ ಜನಪದ ಗೀತೆಗಳು, ಅಲ್ಲಿನ ಜನರ ಜೀವನ ರಂಗದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ವಿಚಾರಗಳನ್ನೊಳಗೊಂಡು ಪರಿಪುಷ್ಟವಾಗಿವೆ. ಕೇರಳದ ನಾಡಪದಗಳ ರಚನೆಯ ಆರಂಭ ಎಂದಾಯಿತೆಂದು ಹೇಳುವುದು ಕಷ್ಟಸಾಧ್ಯ. ಆದರೂ ಮಲಯಾಳ ಒಂದು ಸ್ವತಂತ್ರ ಭಾಷೆಯಾಗಿ ಬೇರ್ಪಟ್ಟ ಕಾಲದಿಂದಲೂ ಕೇರಳದಲ್ಲಿ ಮಲಯಾಳೀ ಜನಪದ ಗೀತೆಗಳು ಪ್ರಚಾರದಲ್ಲಿವೆ.

ಈ ನಾಡಿನ ಹಬ್ಬ ಹರಿದಿನಗಳಿಗೆ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ, ವ್ಯವಸಾಯ, ವಾಣಿಜ್ಯ, ರಾಜಕೀಯ ಕ್ಷೇತ್ರಗಳಿಗೆ ಸಂಬಂಧಿಸಿದ ಅನೇಕ ಗೀತೆಗಳು ವೀರಗೀತೆಗಳೂ ಸಾಕಷ್ಟು ಇವೆ. ಇವುಗಳೆಲ್ಲ ಹೆಚ್ಚಾಗಿ ಬೇರೆ ಭಾಷೆಯ ಸಂಪರ್ಕವಿಲ್ಲದೆ, ಜನರಾಡುವ ದೈನಂದಿನ ವ್ಯವಹಾರ ಭಾಷೆಗೆ ಅತಿ ಹತ್ತಿರವಾಗಿದ್ದು ಹಾಡಲು ಅನುಕೂಲವಾಗಿದೆ. ಕಟ್ಟುನಿಟ್ಟಾಗಿ ಛಂದೋನಿಯಮವನ್ನು ಪಾಲಿಸದಿದ್ದರೂ ಅವು ನಾದಮಯವಾಗಿಯೂ ಲಯಬದ್ಧವಾಗಿಯೂ ಇವೆ. ಈ ಜಾನಪದ ಹಾಡುಗಳು ಕ್ರಿ.ಶ. ಸುಮಾರು ನಾಲ್ಕನೆಯ ಶತಮಾನದಿಂದ ಹತ್ತನೆಯ ಶತಮಾನದ ಮಧ್ಯಕಾಲದಲ್ಲಿ ಪ್ರಚಲಿತವಾಗಿದ್ದಿರಬೇಕೆಂದು ವಿದ್ವಾಂಸರು ಹೇಳುತ್ತಾರೆ. ಕಾಲದಿಂದ ಕಾಲಕ್ಕೆ ಅವುಗಳಲ್ಲಿ ಅಲ್ಪಸ್ವಲ್ಪ ಪರಿವರ್ತನೆ ಉಂಟಾಗಿರಬಹುದಾದರೂ ಅವು ತಮ್ಮ ಕಾಲದ ಭಾಷಾಸ್ಥಿತಿಯನ್ನು ಪ್ರತಿಬಿಂಬಿಸುತ್ತವೆ.

ಕೇರಳದ ಜನಪದ ಗೀತೆಗಳನ್ನು ಮಲಯಾಳ ವಿಶ್ವಕೋಶದಲ್ಲಿ ತೊಳಿಲ್‌ರಂಗಂ, ವಿನೋದರಂಗಂ, ಕಲ್ಯಾಣರಂಗಂ, ಭಕ್ತಿಮಾರ್ಗಂ, ವೀರಾರಾಧನ, ತತ್ತ್ವೋಪದೇಶಂ, ಯಕ್ಷಿಪ್ರೇತ ಕಥೆಗಳ್ ಮತ್ತು ಸೌಂದರ್ಯಾರಾಧನ- ಎಂದು ವಿಭಾಗ ಮಾಡಲಾಗಿದೆ. ಜಿ. ಶಂಕರ ಪಿಳ್ಳೆ ಅವರು ಇವುಗಳನ್ನು ಮೊದಲು ‘ಗಾನಂಗಳ್’ ಎಂದೂ ‘ಕಥಾಗಾನಂಗಳ್’ ಎಂದೂ ವಿಭಾಗಿಸಿದ್ದಾರೆ.

ವೃತ್ತಿಪರ ಹಾಡುಗಳು : ಮಲಯಾಳದ ಜನಪದ ಗೀತೆಗಳಲ್ಲಿ ಕೆಲಸಗಾರರಿಗೆ ಸಂಬಂಧಿಸಿದ ವೃತ್ತಿಪರವಾದ ಹಾಡುಗಳು ಹೇರಳವಾಗಿವೆ. ಮತಪರವಾದ ಹಾಗೂ ಅನುಷ್ಠಾನಪರವಾದ ಹಾಡುಗಳಿಗಿಂತಲೂ ಇವು ಸಾಮಾನ್ಯ ಜನರ ಜೀವನಕ್ಕೆ ಹೆಚ್ಚು ಹತ್ತಿರವೂ ಪ್ರಸಿದ್ಧವೂ ಆಗಿವೆ. ಇವುಗಳಲ್ಲಿ ಕೃಷಿಪಾಟ್ಟುಗಳ್ ಅಥವಾ ನಾಟ್ಯ ಪಾಟ್ಟುಗಳ್ (ಸುಗ್ಗಿಯ ಹಾಡುಗಳು), ವಂಜಿಪ್ಪಾಟ್ಟುಗಳ್ (ದೋಣಿಯ ಹಾಡು), ನೆಯ್‌ತ್ತುಪ್ಪಾಟ್ಟುಗಳ್ (ನೇಯುವ ಹಾಡುಗಳು), ನಾಯಾಟ್ಟು ಪಾಟ್ಟುಗಳ್ (ಬೇಟೆಯ ಹಾಡುಗಳು) ಮೊದಲಾದ ಅನೇಕ ವಿಧಗಳಿವೆ. ಕೃಷಿ ಸಂದರ್ಭದಲ್ಲಿ ಮಾಡುವ ವಿವಿಧ ಕೆಲಸಗಳಿಗೆ ಸಂಬಂಧಿಸಿದಂತೆ ಕೃಷಿಯ ಹಾಡುಗಳಲ್ಲಿ ಞೌಟ್ಟು ಪಾಟ್ಟ್‌, ಕಟ್ಟಪ್ಪಾಟ್ಟ್, ಕೋದಾಮೂರಿ ಪ್ಪಾಟ್ಟ್, ಆಂಡುಂಪಳ್ಳುಂ ಪ್ಪಾಟ್ಟ್, ಪಾಡತ್ತಿಲೆಪಾಟ್ಟುಗಳ್, ವೆಟ್ರಿಲಪ್ಪಾಟ್ಟುಗಳ್ ಮೊದಲಾದ ಹಾಡುಗಳಿವೆ.

ದೋಣಿ ನಡೆಸುವ ಅಂಬಿಗರ ಹಾಡನ್ನು ಮಲಯಾಳದಲ್ಲಿ ‘ವಳ್ಳಪ್ಪಾಟ್ಟು’ಗಳೆಂದೂ ‘ವಂಚಿಪ್ಪಾಟ್ಟು’ಗಳೆಂದೂ ಹೇಳುವರು. ಪ್ರೇಮಗೀತೆಗಳಿಂದ ತೊಡಗಿ ವಿನೋದ ಗೀತೆಗಳವರೆಗೆ ಅನೇಕ ವಿವಿಧ ಹಾಡುಗಳು ಅಂಬಿಗರ ದೋಣಿ ಹಾಡುಗಳಲ್ಲಿವೆ.

ಅನ್‌ಬನುಕ್ಕು ಏಲೇಲೋ
ಅನ್‌ಬನೆಡಿ ಏಲೇಲೋ… ಎಂದೂ
ಕಾಳಿಯನ್ನು ಪೇರುಮಿಟ್ಟು ತಿತ್ತೈ ತಕ ತೈ ತೈತಾ
ಕಾಳಿಯನ್ನು ಪೇರುಮಿಟ್ಟು ವಳರ್ತು ಮುಕ್ಕೋನವಳೇ

ಎಂದು ಆರಂಭವಾಗುವ ವಳ್ಳಪ್ಪಾಟುಗಳಿವೆ.

ಬಂಡಿ ಅಥವಾ ಗಾಡಿಗಳನ್ನು ಹೊಡೆಯುವಾಗ ಹಾಡುವಂಥವುಗಳೇ ‘ವಂಡಿಪಾಟ್ಟು’ಗಳು. ಗಾಡಿಯನ್ನು ಮುಂದಕ್ಕೆ ತಳ್ಳುವಾಗಲೂ ಭಾರವಾದ ಮರದ ದಿಂಡುಗಳನ್ನು ಉರುಳಿಸುವಾಗಲೂ ‘ಹಾಯೆ ಮಾಲಿ ಏಲೇ ಸಾ. ಒತ್ತುಪ್ಪಿಡಿ ಏಲೇ ಸಾ’ ಎಂದು ಮುಂತಾಗಿ ತಾಳಬದ್ಧವಾಗಿಯೂ ಹೇಳುವ ಶ್ರಮಪರಿಹಾರದ ಹಾಡುಗಳಿಂದ ಅವರಿಗೆ ಹೊಸ ಹುರುಪು, ನವಚೈತನ್ಯ ಉಂಟಾಗುತ್ತದೆ. ವೃತ್ತಿಪರಗೀತೆಗಳಲ್ಲಿ ‘ನಾಯಾಟ್ಟು ಪಾಟ್ಟು’ಗಳು ಅಥವಾ ಬೇಟೆಯ ಹಾಡುಗಳು ಪ್ರಧಾನವಾಗಿವೆ. ಇವುಗಳು ವೀರರಸದಿಂದ ಕೂಡಿರುತ್ತವೆ. ‘ಆನಪ್ಪಾಟು’ಗಳು ಅಥವಾ ಆನೆಯನ್ನು ಕುರಿತ ಹಾಡುಗಳು ಈ ವಿಭಾಗಕ್ಕೆ ಸೇರುತ್ತವೆ.

ಬೇಟೆಗಾರರ ಆನಪ್ಪಾಟ್ಟುಗಳು ವೀರ, ಸಾಹಸ ಹಾಗೂ ಭಯಾನಕ ವರ್ಣನೆಗಳಿಂದ ಕೂಡಿರುತ್ತವೆ. ಮಲೆವರ್ಗದವರ ಮಲೆ ದೇವತೆಯಾದ ‘ಮಲಂಕುರತ್ತಿ’ ಒಂದು ಕಾಡಾನೆಯ ಗುಂಪನ್ನು ಕೊಂದು ಹಾಕಿ ರಣ ತಾಂಡವವಾಡಿದ ಕಥೆಯನ್ನು ಹೇಳುವ ಒಂದು ‘ಆನಪ್ಪಾಟ್ಟ್’ ಬೀಭತ್ಸ ಹಾಗೂ ಭಯಾನಕ ರಸದಿಂದ ಕೂಡಿದೆ. ಬುಟ್ಟಿ ಹೆಣೆಯುವುದು, ಚಾಪೆ ನೇಯುವುದು ಮೊದಲಾದ ನೇಯುವ ಕೆಲಸಗಳಿಗೆ ಸಂಬಂಧಿಸಿದ ‘ನೆಯ್‌ತ್ತುಪ್ಪಾಟ್ಟು’ಗಳಲ್ಲಿ ‘ವಟ್ಟಿ ಕೆಟ್ಟ್‌ಪ್ಪಾಟ್ಟು’ಗಳೂ ಸೇರುತ್ತವೆ. ಈ ಹಾಡುಗಳಲ್ಲಿ ಆ ಕೆಲಸಗಾರರ ಕೈಚಳಕ ಹಾಗೂ ಕರಕೌಶಲಗಳನ್ನು ಕುರಿತ ವರ್ಣನೆಗಳಿವೆ.

ಮದುವೆಯ ಹಾಡುಗಳು (ಕಲ್ಯಾಣ ಪಾಟ್ಟುಗಳ್) : ವಿವಾಹ ಮಾನವ ಜೀವನದ ಹಾದಿಯಲ್ಲಿ ಒಂದು ಮೈಲುಗಲ್ಲು. ಅದರ ಪ್ರಾಧಾನ್ಯವನ್ನನುಸರಿಸಿಯೇ ತುಂಬ ಹಾಡುಗಳು ರಚಿತವಾಗಿವೆ. ಸಮಾಜ, ಸಂಪ್ರದಾಯ ಎಂಬ ನೆಲೆಯಲ್ಲಿ ರೂಪಭೇದ ಹೊಂದಿದ ಅನೇಕ ಹಾಡುಗಳಿವೆ. ಮದುವೆಗೆ ಸಂಬಂಧಿಸಿ ನಡೆಯುವ ವಿವಿಧ ರೀತಿಯ ಆಚರಣೆಗಳಿಗೆ ಹಾಡುವ ಮದುವೆಯ ಹಾಡುಗಳು ಕೇರಳದಲ್ಲಿ ಪ್ರಚಾರದಲ್ಲಿವೆ. ಮದುವೆಯ ಹಾಡುಗಳಲ್ಲಿ ರಾಮಾಯಣ ಮೊದಲಾದ ಪುರಾಣ ಕಾವ್ಯಗಳಿಂದ ಆರಿಸಿದ ಕಥಾಂಶಗಳಿರುವ ಹಾಡುಗಳೇ ಅಧಿಕ. ಪಂದಲ್‌ವರ್ಣನಪ್ಪಾಟ್ಟುಗಳ್, ಮಂಗವರ್ಣನಪ್ಪಾಟ್ಟುಗಳ್‌, ನೀರಾಟ್ಟಪ್ಪಾಟ್ಟುಗಳ್‌, ಮೈಲಾಂಚಿಪ್ಪಾಟ್ಟುಗಳ್, ಅಂದಂ ಚಾರ್ತುಪ್ಪಾಟ್ಟುಗಳ್, ಅಮ್ಮಾವಿಪ್ಪಾಟ್ಟುಗಳ್, ಪಾದಿಲ್‌ತುರಪ್ಪಾಟ್ಟು’ ಗಳ್-ಎಂದು ಮದುವೆಯ ಹಾಡುಗಳಲ್ಲಿ ಅನೇಕ ವಿಧಗಳಿವೆ. ಈ ಹಾಡುಗಳು ನವದಂಪತಿಗಳಿಗೆ ಸ್ನೇಹ ಸೌಹಾರ್ಧಗಳ ಪ್ರೇಮ ಸಂದೇಶವನ್ನು ನೀಡುತ್ತವೆ. ಮದುಮಕ್ಕಳನ್ನು ಅಲಂಕರಿಸುವ ಹಾಡುಗಳು ರಸವತ್ತಾಗಿವೆ.

ಅಪ್ಪಾ ಪಿಳ್ಳೇಮ್ಮಗನ್ ಶುಪ್ಪಾಪಿಳ್ಳೇ
ಮ್ಮಗನ್ ಚುಂಡೆಲಿ ರಾಜನುಕ್ಕು ಕಲ್ಯಾಣಮಾಂ

ಎನ್ನುವ ಚುಂಡೆಲಿರಾಜನ ಮದುವೆಯನ್ನು ವರ್ಣಿಸುವ ಹಾಡು ತುಂಬ ಸೊಗಸಾಗಿವೆ. ದೇವಸ್ಥಾನದೊಳಗೆ ಅಥವಾ ಮನೆಯಲ್ಲಿ ನಡೆಸುವ ಮದುವೆಗಳಿಗೆ ಸಂಬಂಧಿಸಿದ ಯಾತ್ರ ನಂಬೂದಿರಿಗಳ ‘ಯಾತ್ರಕ್ಕಳಿ’ ಅಥವಾ ಸಂಘಕ್ಕಳಿಪ್ಪಾಟ್ಟು’ಗಳು ಹಾಸ್ಯರಸಪೂರ್ಣವಾಗಿವೆ. ಹಿಂದುಗಳಲ್ಲಿರುವಂತೆಯೇ ಕ್ರೈಸ್ತರಲ್ಲಿಯೂ ‘ವಾದಿಲ್‌ತುರಪ್ಪಾಟ್ಟ್’ ಅತವಾ ‘ಬಾಗಿಲು ತೆರೆವಹಾಡು’ಗಳಿವೆ.

ಮಂಗ ತಂಗುಂ ಮಣವರಯಿಲ್ ಮಣವಾಳನ್ ಕಡಗಡಚ್ಚು
ಎಂಗುಂ ಪುಗಳ್ ಪೆಟ್ರವನೆ ಎನ್ನುಡೆಯೆ ಮಣವಾಳಾ
……………….
ಎನ್‌ಮಗನೆ ಮಣವಾಳಾ ಮಣವರದಲ್‌ವಾದಲ್‌ತುರ

ಎಂಬುದೊಂದು ‘ವಾದಿಲ್‌ತುರಪ್ಪಾಟ್ಟ್‌’. ಇದೇ ರೀತಿ ವಿವಾಹದ ಇತರ ಸಂದರ್ಭಗಳಲ್ಲಿಯೂ ಹಾಡುವ ಮದುವೆ ಹಾಡುಗಳು ಅನೇಕ ಇವೆ.

ಮತಪರವಾದ ಅಥವಾ ಭಕ್ತಿಪರ ಹಾಡುಗಳು: ಮತಪರವಾದ ಹಾಡುಗಳನ್ನು ಪೂರ್ಣ ಮತಪರ ಮತ್ತು ಅರ್ಧ ಮತಪರ ಎಂದು ಎರಡಾಗಿ ವಿಭಾಗಿಸುತ್ತಾರೆ. ಈ ಹಾಡುಗಳು ದೇವತಾರಾಧನೆಯನ್ನು ಕುರಿತ ಭಕ್ತಿಸ್ತೋತ್ರಗಳು. ಕ್ಷುದ್ರದೇವತಾ ಕೀರ್ತನೆಗಳು, ಸರ್ಪಪಾಟ್ಟುಗಳು, ಭದ್ರಕಾಳಿಪಾಟ್ಟುಗಳು ಅಥವಾ ತೋಟ್ರಂಪಾಟ್ಟುಗಳು, ಚಾಟ್ರುಪಾಟ್ಟುಗಳು, ದೇವಮಾಹಾತ್ಮ್ಯೆ, ಕ್ಷೇತ್ರಮಹಾತ್ಮ್ಯೆ ಮತ್ತು ಪುಣ್ಯ ದಿನ ಮಾಹಾತ್ಮ್ಯೆಗಳು ಮೊದಲಾದ ಅನೇಕ ರೀತಿಯ ಸ್ತೋತ್ರಪರ ಹಾಡುಗಳು ಕೆರಳದಲ್ಲಿ ಪ್ರಚಲಿತವಾಗಿವೆ. ಕೇವಲ ಕ್ಷುದ್ರವಾದ ದುರ್ದೇವತೆಯ ಆರಾಧನೆಯಿಂದ ತೊಡಗಿ ನಿಷ್ಕಾಮ ಭಕ್ತಿಯವರೆಗಿನ ವಿವಿಧ ಹಂತಗಳಲ್ಲಿ ಕೇರಳದ ಪೂರ್ವಿಕರು ಹಾಡುವ ಪರಂಪರಾಗತವಾದ ಹಾಡುಗಳು ಅವರ ದೈವಭಕ್ತಿಯ ಮಹತ್ತ್ವವನ್ನು ತಿಳಿಸುತ್ತವೆ. ಕೇರಳದ ಮಲೆನಾಡಿನ ನಿವಾಸಿಗಳ ಜೀವನದ ಮುಖ್ಯ ಅಂಶ ದೇವತಾರಾಧನೆ. ಸೂರ್ಯ, ಮಲೆದೇವತೆಗಳಾದ ಚಾಮುಂಡಿ, ಚಾವೇರ್, ಮಲಮುತ್ತನ್, ಆಯಿರವಲ್ಲಿ, ಅಪ್ಪೂಪ್ಪನ್, ಕೋಟ್ಟಯಪ್ಪನ್ ಮೊದಲಾದ ಪರದೈವಗಳನ್ನು ಸ್ತುತಿಸಿ ಅವರ ಹಾಡುವ ಹಾಡುಗಳಲ್ಲಿ ಹೆಚ್ಚಿನವು ‘ಚಾಟ್ರುಪ್ಪಾಟ್ಟುಗಳ್’ ಎಂಬ ಹೆಸರನ್ನು ಪಡೆದಿವೆ. ಮಲೆ ದೈವಗಳ ಒಡತಿಯಾದ ಚಾಮುಂಡಿಯನ್ನು ಅವರು ‘ಮಾರಿಯಮ್ಮ’ ಎಂದೂ ‘ಕಾಳಿ’ಯೆಂದೂ ಎರಡು ಹೆಸರಿನಿಂದ ಪೂಜಿಸುವರು.

ಕಾಳಿ ಕಾಳಿಯೆಂಡೆ ಪೇಯುಂ
ನೀಲಿ ನೀಲಿ ಯೆಂಡೆ ಪೇಯುಂ
ಓಮಣ್ಣಾನ್ ಪೇರುಂದುವರುಂ
ಮಲ್ಲಂ ಕರುಂ ಕಾಳೀ

ಎಂಬುದು ಕಾಳಿಯನ್ನು ಕುರಿತು ಮಲೆವರ್ಗದವರು ಹಾಡುವ ಹಾಡು. ಸುಸಂಸ್ಕೃತ ವರ್ಗದವರು ಕಾಳಿಯನ್ನು ಸ್ತುತಿಸಿ ಹಾಡುವಂಥವುಗಳೇ ‘ತೋಟ್ರಂ ಪಾಟ್ಟುಗಳು’ ಅಥವಾ ‘ಭದ್ರಕಾಳೀ ಪಾಟ್ಟು’ಗಳು. ಕಾಳಿಯ ಗುಡಿಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಇವುಗಳನ್ನು ಹಾಡುತ್ತಾರೆ. ‘ದಾರಿಕಾವಧ’ ಎಂಬ ಕಾಳಿದೇವಿಯನ್ನು ಕುರಿತಾದ ಹಾಡೂ ‘ತೋಟ್ರಂ ಪಾಟ್ಟಿ’ನ ಜಾತಿಗೇ ಸೇರಿದುದಾಗಿದೆ. ಕಾಲಿಯ ಸೇವೆ ಮಲಯನ್, ಪಾಣನ್ ಮೊದಲಾದವರಲ್ಲಿ ಹುಟ್ಟಿ ಮಣ್ಣಾನ್, ತೀಯನ್ ಎಂಬುವರಲ್ಲಿ ಕುಡಿಯೊಡೆದು ಬೆಳದು, ಮುಂದೆ ನಾಯರ್, ನಂಬೂದಿರಿ ಮೊದಲಾದವರಲ್ಲಿ ಪೂರ್ಣ ವಿಕಾಸವಾಯಿತು.

ಸರ್ಪಾರಾಧನೆಯು ಕೇರಳದ ಆದಿನಿವಾಸಿಗಳ ಅತಿ ಪ್ರಾಚೀನವಾದ ಆರಾಧನಾ ಸಂಪ್ರದಾಯವಾಗಿದೆ. ಬಹಳ ಹಿಂದಿನ ಸರ್ಪಾರಾಧಕರು ‘ಪುಳ್ಳುವನ್’ ಎಂಬ ಜನರಾದುದರಿಂದ ‘ಸರ್ಪ ಪಾಟ್ಟು’ಗಳಿಗೆ ‘ಪುಳ್ಳುವನ್ ಪಾಟ್ಟ್’ ಎಂಬ ಹೆಸರೂ ಇದೆ. ನಾಗಪೂಜೆಯ ಪದ್ಧತಿ ಈಗಲೂ ಕೇರಳದಲ್ಲಿ ಪ್ರಚಲಿತವಾಗಿದೆ. ನಾಗನನ್ನು ಮಲ್ಲಿಗೆ ಹೂವಿನಿಂದ ಅರ್ಚಿಸುವ ಹಾಡುವ ಈ ರೀತಿ ಇದೆ.

ಒನ್ನರವಟ್ಟಾವಿಲೋ ತೊಯ್ ದಿಟ್ಟ ಮುಲ್ಲಪ್ಪೂವೋ
ಅಪ್ಪೂವೆದಂ ಕೊಳ್ಳಟ್ಟೆ ತನಗಲ್ಲನಾಗುತ್ತಾನೆ

‘ತೀಯಾಟ್ಟ್‌ಪಾಟ್ಟು’ ದೇವತಾರಾಧನೆಗೆ ಸಂಬಂಧಿಸಿದ ಇನ್ನೊಂದು ಹಾಡು. ‘ತೆಯ್ಯಾಟ್’ ಎಂಬುದರ ತದ್ಭವವೇ ತೀಯಾಟ್ಟ್‌, ತೆಯ್ಯ್‌ಎಂದರೆ ದೈವ ಎಂದರ್ಥ. ಭದ್ರಕಾಳಿ ಹಾಗೂ ಅಯ್ಯಪ್ಪನ ಸಂಬಂಧವಾಗಿ ತೀಯಾಟ್ಟನ್ನು ನಡೆಸುತ್ತಾರೆ. ದೇವಸ್ಥಾನಗಳಲ್ಲಿ ತೀಯಾಟ್ಟುಣ್ಣಿಗಳೆಂಬ ಜನ ವರ್ಗದವರೇ ಅದನ್ನು ನಡೆಸುವ ಹಕ್ಕನ್ನು ಹೊಂದಿರುವರು. ಭದ್ರಕಾಳಿಯ ಅಂಗಾಂಗಗಳನ್ನು ವರ್ಣಿಸುವ ಒಂದು ಸ್ತೋತ್ರ ಹೀಗಿದೆ :

ಕಾರಿರುಳ್ ನಿರಮೊತ್ತ ತಿರುಮುಡಿ ತೊಳುನ್ನೇನ್
ಕನಲ್ ಕಣ್ಣಂ ತಿರುನೆಟ್ರಿ ತಿಲಕಂ ಕೈ ತೊಳುನ್ನೇನ್
ವಿಲಸುನ್ನ ವಿಳಿಯುಂ ನಾಸಿಕ ಕವಿಳ್‌ತೊಳುನ್ನೇನ್
ವಳಞ್ಞಳೊರೆ ಕೀರುಂ ಪಲ್ಲೊಡು ನಾವುಂ ತೊಳುನ್ನೇನ್‌

(ಇಲ್ಲಿ ಕಾಳಿಯ ಮುಡಿ, ಕಣ್ಣು, ಹಣೆ, ಮೂಗು, ಹಲ್ಲು, ನಾಲಗೆ ಮುಂತಾದ ಅಂಗಗಳ ವರ್ಣನೆಯಿದೆ)

ಭದ್ರಕಾಳಿ ದೇವಸ್ಥಾನಗಳಲ್ಲಿಯೂ ಬನಗಳಲ್ಲಿಯೂ ಉತ್ಸವ ಸಂಬಂಧವಾಗಿ ನಡೆಸುವ ‘ಕುತ್ತಿಯೋಟ್ಟಂ’ ಸಮಯದಲ್ಲಿ ಹಾಡುವ ಹಾಡುಗಳೇ ಕುತ್ತಿಯೋಟ್ಟಪಾಟ್ಟುಗಳು. ಇವುಗಳಲ್ಲಿ ಹೆಚ್ಚಿನವು ಭದ್ರಕಾಳಿಯ ಸ್ತುತಿಗಳೇ ಆಗಿವೆ. ನಾವೇಟ್ರುಪ್ಪಾಟ್ಟ್‌, ವೇಲಿನಪ್ಪಾಟ್, ಚಾಟ್ರುಪ್ಪಾಟ್, ಬ್ರಾಹ್ಮಣಿಪ್ಪಾಟ್ಟ್, ಸಂಘಕ್ಕಳಿಪ್ಪಾಟ್ಟ್ ಮೊದಲಾದುವು ಅರ್ಧ ಮತಪರವಾದುವು. ದೃಷ್ಟಿ ದೋಷ ಮೊದಲಾದ ತೊಂದರೆಗಳ ನಿವಾರಣೆಗಾಗಿ ಹಾಡುವ ಹಾಡುಗಳು ನಾವೇಟ್ರುಪಾಟ್ಟುಗಳು. ಇದನ್ನು ಹಾಡುವವಳು ಪುಳ್ಳುವತ್ತಿ. ವೇಲಿನ್‌ಮಾರ್‌ಎಂಬ ಜನ ಸಮೂಹ ಮನೆಯಲ್ಲಿಯ ದೋಷ, ದೇಹ ಸಂಬಂಧವಾದ ದೋಷಗಳನ್ನು ನಿವಾರಿಸಲು ಹೇಳುವ ಹಾಡುಗಳು ವೇಲನ್‌ಪ್ಪಾಟ್ಟುಗಳು. ದೈವಕ್ಕೆ ಬರುವ ದೃಷ್ಟಿ ದೋಷವನ್ನು ಪರಿಹರಿಸಲು ಹೇಳುವ ಹಾಡುಗಳು ಚಾಟ್ರುಪ್ಪಾಟ್ಟುಗಳು. ಇವುಗಳಲ್ಲಿ ‘ಪಡಿಪ್ಪುಮಾರಣ ಚಾಟ್ರು’ ಮತ್ತು ‘ಕಾಲವಾಯ್ ಚಾಟ್ರು’ ಎಂದು ಎರಡು ವಿಧಗಳಿವೆ. ತಾಳಿ ಕಟ್ಟುವ ಮದುವೆಗೆ ಸಂಬಂಧಿಸಿದ ಆಚಾರದ ಹಾಡಾದರೂ ‘ಬ್ರಾಹ್ಮಣಿಪ್ಪಾಟ್ಟು’ಗಳು ಸಾಮಾನ್ಯವಾಗಿ ದೇವಿಸ್ತುತಿಪರವಾದ ಹಾಡುಗಳಾಗಿವೆ. ಯಾತ್ರಕ್ಕಳಿ, ಸತ್ರಕ್ಕಳಿ, ಜಾತ್ತಿರಕ್ಕಳಿ, ಪಾನಕ್ಕಳಿ – ಎಂಬ ಹಲವು ಹೆಸರುಗಳಲ್ಲಿ ಪ್ರಸಿದ್ಧವಾದ ಒಂದು ವೈದಿಕಾಚರಣೆ ‘ಸಂಘಕ್ಕಳಿ’. ಅನ್ನಪ್ರಾಶನ, ಉಪನಯ, ಸಮಾವರ್ತನ, ಮದುವೆ, ಹನ್ನೆರಡನೇ ತಿಂಗಳು ಮೊದಲಾದ ಆಚರಣೆಗಳಲ್ಲಿ ಹಾಡುವ ಸ್ತೋತ್ರಗೀತೆಗಳೇ ಸಂಘಕ್ಕಳಿಪ್ಪಾಟ್ಟುಗಳು. ಶಾಸ್ತಾಂಪಾಟ್ಟ್, ವೇಟ್ಟಕ್ಕುರಿ ಮಗನ್‌ಪಾಟ್ಟ್, ವೈರಿ ಜಾತನ್‌ಪಾಟ್ಟ್ ಮೊದಲಾದುವು ಇತರ ಸ್ತುತಿಪರಗೀತೆಗಳು.

ಅನುಷ್ಠಾನಪರ ಗೀತೆಗಳು : ತಾರಾಟ್ಟು ಪಾಟ್ಟುಗಳ್ ಅಥವಾ ಜೋಗುಳ ಹಾಡುಗಳು, ಓಣಪ್ಪಾಟ್ಟುಗಳ್, ತಿರುವಾದಿರಪಾಟ್ಟುಗಳ್‌ಮೊದಲಾದುವು ಅನುಷ್ಠಾನಪರ ಗೀತೆಗಳಲ್ಲಿ ಮುಖ್ಯವಾದುವು.

ತಾಯಿ ತನ್ನ ಮಗುವನ್ನು ತೊಟ್ಟಿಲಲ್ಲಿ ಮಲಗಿಸಿ ಹಾಡುವ ಜೋಗುಳ ಹಾಡುಗಳೇ ತಾರಾಟ್ಟು ಪಾಟ್ಟುಗಳು. ತಾಯಿ ತನ್ನ ಮಗನನ್ನು ನಿದ್ದೆಮಾಡೆಂದು ಹೇಳುತ್ತಾ, ತೊಟ್ಟಿಲು ತೂಗುವ ಹಾಡೊಂದು ಈ ರೀತಿ ಇದೆ :

ಎನ್‌ಮಗನೊರಾ ಜಮೊರೊಙು
ಕಣ್ಮಣಿಯೊರೊ ಙಮೊರೊಙು
ನೇರಮೊಟ್ಟು ಪಾದಿರಾಯಿ
ಭೂತ ಸಂಚಾರವುಮಾಯಿ
ಪಕ್ಷಿಗಳೊರಕ್ಕುಮಾಯಿ
ಪೊನ್ಮಗನೊರ ಙಮೊರಙು

(ಇಲ್ಲಿ ತಾಯಿ ಹೊತ್ತು ಮಧ್ಯರಾತ್ರಿಯಾಯಿತು, ಭೂತ ಸಂಚಾರ ಆರಂಭವಾಗಿದೆ, ಹಕ್ಕಿಗಳು ನಿದ್ರಿಸಿವೆ, ಬಂಗಾರದಂತಹ ಮಗನೇ ನಿದ್ರಿಸು ಎನ್ನುತ್ತಾಳೆ.)

‘ಕರೆಯೆಂಡ ಮೋಳೆ ವಿಳಿಕ್ಕೆಂಡ ಮೋಳೆ ನಿನ್ನೆಕ್ಕೆಟ್ಟು ಕಲ್ಯಾಣತ್ತಿನ್ ಪನ್ರಂಡಾನ ಚಮಞ್ಞವರುಂ’ ಎನ್ನುವ ಒಂದು ತಾರಾಟ್ಟು ಪಾಟ್ಟು ಮಲಬಾರಿನಲ್ಲಿ ಪ್ರಚಾರದಲ್ಲಿದೆ. ಮಗುವನ್ನು ಕೃಷ್ಣನೆಂದು ವರ್ಣಿಸುವ ಅನೇಕ ಜೋಗುಳ ಪದಗಳು ಮಲಯಾಳದಲ್ಲಿಯೂ ಇವೆ.

ಓಣಂ ಕೇರಳದ ರಾಷ್ಟ್ರೀಯ ಹಬ್ಬ. ಈ ಹಬ್ಬದ ಸಂದರ್ಭದಲ್ಲಿ ಹಾಡುವ ಅನೇಕ ರೀತಿಯ ‘ಓಣಪ್ಪಾಟ್ಟು’ಗಳು ಸುಂದರವಾಗಿವೆ. ಮಹಾ ಬಲಿಯನ್ನು ಕುರಿತಾದ ‘ಮಾವೇಲಿ ಪ್ಪಾಟ್ಟು’ಗಳಲ್ಲಿ ಸುಖ ಸಂಪದ್ಭರಿತವಾದ ಹಿಂದಿನ ಕಾಲದ ಸ್ಮರಣೆಗಳು ಪ್ರತಿಬಿಂಬಿಸುತ್ತವೆ.

ಅಮ್ಮಾವನಂ ವನ್ನೀಲ ಪತ್ತಾಯ ತುರನ್ನೀರಾ
ಎಂದೆಂಡೆ ಮಾವೇಲಿ ಓಣಂವನ್ನೇ
ಅಮ್ಮಾಯಿ ವನ್ನಿಲ್ಲ ನೆಲ್ಲೊಟ್ಟು ವೆಚ್ಚಿಲ್ಲ
ಎಂದೆಂಡೆ ಮಾವೇಲಿ ಓಣಂ ವನ್ನೇ

ಎನ್ನುವ ಮಾವೇಲಿ ಪ್ಪಾಟ್ಟಿನಲ್ಲಿ ‘ಓಣಂ ಬಂತು ಮಾವ ಬಂದಿಲ್ಲ, ಪತ್ತಾಯ ತೆರೆದಿಲ್ಲ, ಅತ್ತೆ ಬಂದಿಲ್ಲ, ಬತ್ತವನ್ನು ರಾಶಿ ಹಾಕಿಲ್ಲ. ಮಹಾಬಲಿಯ ಓಣಂ ಬಂತು’ ಎಂಬ ವರ್ಣನೆಯಿದೆ.

ತಿರುವಾದಿರ ಕೇರಳದ ಇನ್ನೊಂದು ಜನಪ್ರಿಯ ಉತ್ಸವ. ಅನಂಗೋತ್ಸವವೆಂದು ಪ್ರಸಿದ್ಧವಾಗಿರುವ ಈ ಹಬ್ಬದಂದು ಕೇರಳದ ಕನ್ನೆಯರು ಹಾಡು, ದುಡಿ, ಅಷ್ಟಮಾಂಗಲ್ಯದೊಂದಿಗೆ ಘೋಷಣೆ ಮಾಡುತ್ತಾ ಸಂತೋಷಪಡುತ್ತಾರೆ. ಆ ಸಂದರ್ಭದಲ್ಲಿ ಹಾಡುವ ಹಾಡುಗಳೇ ‘ತಿರುವಾದಿರಪ್ಪಾಟ್ಟುಗಳು’ ಪಂಕಜಾಕ್ಷನೂ ಸಾಗರವರ್ಣನೂ ಆದ ಕೃಷ್ಣನನ್ನು ವರ್ಣಿಸುವ ಹಾಡು ಈ ರೀತಿ ಇದೆ :

ಪಂಕಜಾಕ್ಷನ್ ಕಡಲ್ ವರ್ಣನ್ ವಾಸುದೇವನ್ ಜಗನ್ನಾಥನ್
ನಾರದಾದಿ ಮುನಿವೃಂದ ವಂದಿತನ್ ಕೃಷ್ಣನ್

ತಿರುವಾದಿಪ್ಪಾಟ್ಟುಗಳಿಗೆ ಜನಪದ ಗೀತೆಗಳಲ್ಲಿ ಪ್ರಾಧಾನ್ಯ ಕಡಿಮೆ. ಕಳಂಪಾಟ್ಟ್, ಗಂಧರ್ವನ್ ಪ್ಪಾಟ್ಟ್, ಕುರುದಿಂನಿಪಾಟ್ಟ್, ಅಕ್ಕಮ್ಮ ಪಾಟ್ಟ್, ಪಾಪ್ಪಿಣಿಪ್ಪಾಟ್ಟ್ ಮೊದಲಾದುವು ಅನುಷ್ಠಾನಪರವಾದ ಇತರ ಗೀತೆಗಳು.

ವಿನೋದಪರವಾದ ಹಾಡುಗಳು : ಅನುಷ್ಠಾನಪರವಾದ ಹಾಡುಗಳಲ್ಲಿ ವಿನೋದಪರವಾದಂಥವೂ ಇವೆ. ಓಣಪ್ಪಾಟ್ಟುಗಳಲ್ಲಿಯೂ ರಸಭರಿತವಾದ ಅನೇಕ ವಿನೋದಪರ ಹಾಡುಗಳಿವೆ.

ಇಂಚಿತ್ತಾರೇ ಪೆಣ್ಣುಂಡೋ
ಇಲುಂಬಿಚ್ಚಿತ್ತಾರೇ ಪೆಣ್ಣುಂಡೋ

ಹೆಣ್ಣಿದೆಯೋ ಎಂದು ನಾಟಕೀಯವಾಗಿ ಹೇಳುವ ಈ ಹಾಡು ಎಂದು ವಿನೋದಪರ ಗೀತೆಯಾಗಿದೆ. ಕುತ್ತಿಯೋಟ್ಟಪ್ಪಾಟ್ಟ್, ಕಾಕ್ಕಳಿಪ್ಪಾಟ್ಟ್, ತೆಯ್ಯಾಟ್ಟಂಪ್ಪಾಟ್ಟ್, ಮುಡಿಯಾಟ್ಟಪ್ಪಾಟ್ಟ್, ಕೋಲಾಟಪ್ಪಾಟ್ಟ್, ಪಡೇನಿಪ್ಪಾಟ್ಟ್, ವೆಟ್ಟುಂತಡಪ್ಪಾಟ್ಟ್, ಪುರಂಪೋಕ್ಕುಕ್ಕಳಿಪ್ಪಾಟ್ಟ್, ಪೂರಕ್ಕಳಿಪ್ಪಾಟ್ಟ್, ಮೊದಲಾದ ಜನಪದ ನೃತ್ಯಗಳು ವಿನೋದಪರವೂ ಆಗಿವೆ. ಆದರೆ ಇವುಗಳಲ್ಲಿ ಹೆಚ್ಚಿನವು ಇಂದು ಕಣ್ಮರೆಯಾಗಿವೆ. ಸಣ್ಣ ಮಕ್ಕಳನ್ನು ಸಂತೋಷಪಡಿಸಲು ಅಜ್ಜಿಯಂದಿರು ಹೇಳುವ ‘ನುಣಪ್ಪಾಟ್ಟು’ಗಳೂ, ‘ಪಾಟ್ಟುಂಕಥ’ಗಳೂ ಈ ವಿಭಾಗಕ್ಕೆ ಸೇರುತ್ತವೆ. ತಮಾಷೆ ಹಾಗೂ ವಿನೋದಕ್ಕಾಗಿ ನಡೆಯುವ ಇತರ ನೃತ್ಯ ಗೀತೆಗಳು – ಪವರ್‌ಕ್ಕಳಿಪ್ಪಾಟ್ಟ್ ಅಥವಾ ಪವರ್‌ನಾಟಕಂ, ಏಳಾಮತ್ತುಕ್ಕಳಿ, ದೇಶತ್ತುಕ್ಕಳಿ, ಕೆಸ್ಸು ಪಾಟ್ಟುಗಳ್‌, ಕೋಲ್‌ಕ್ಕಳಿಪ್ಪಾಟ್ಟ್, ಕುಮ್ಮಟ್ಟಿಕ್ಕಳಿ ಪ್ಪಾಟ್ಟ್, ಕೈಕೊಟ್ಟಿಕ್ಕಳಿಪ್ಪಾಟ್ಟ್, ತೀಯಾಟ್ಟ್‌ಪ್ಪಾಟ್ಟ್, ಪರಿಶಮುಟ್ಟಿಕ್ಕಳಿ ಪ್ಪಾಟ್ಟ್, ತಟ್ಟಿನ್‌ಮೇಲ್‌ಕ್ಕಳಿಪ್ಪಾಟ್ಟ್, ವಿಲ್ಲಿಡಿಚ್ಚಾಂಪ್ಪಾಟ್ಸ್, ಉಞ್ಞಾಲ್‌ಪ್ಪಾಟ್ಟ್‌, ವಂಚಿಪ್ಪಾಟ್ಟ್, ಅಥವಾ ವಳ್ಳಂಕ್ಕಳಿಪ್ಪಾಟ್ಟ್ ಮೊದಲಾದುವು. ಇವುಗಳಲ್ಲಿ ಹೆಚ್ಚಿನವು ಜನಪದ ನಾಟಕ ವಿಭಾಗಕ್ಕೆ ಸೇರುತ್ತವೆ.

ಈಳವರೂ ಚೆರುಮರೂ ವೇಟ್ಟುವರೂ ನಡೆಸುವ ಐದು ಮಂಗಗಳ ಸಂಭಾಷಣಾ ರೂಪವಾಗಿರುವ ಆಟವೇ ಐವರ್‌ಕ್ಕಳಿ ಅಥವಾ ಐವರ್‌ನಾಟಕಂ. ದೇಶತ್ತುಕ್ಕಳಿ ಪಾಲ್ಫಾಟ್ ಪ್ರದೇಶದಲ್ಲಿ ಪ್ರಚಾರದಲ್ಲಿದೆ. ಮೂರು ದಿನಗಳಲ್ಲಿ ಮುಗಿಯುವ ಈ ವಿನೋದ ಸಂಪ್ರದಾಯದಲ್ಲಿ ಆಂಡಿಕ್ಕುತ್ತ್, ವಳ್ಳೋಪ್ಪಾಟ್ಟು ಮತ್ತು ಮಲಪ್ಪಾಟ್ಟ್‌ಎಂಬ ಮೂರು ಪ್ರಭೇದಗಳಿವೆ. ಮುಸ್ಲಿಮರು ಕೋಲಾಟಕ್ಕೆ ಹಾಡುವ ಹಾಡುಗಳೇ ಕೆಸ್ಸುಪಾಟ್ಟುಗಳು. ಇದರಲ್ಲಿ ‘ಎನ್ನುಡೆ ಪೆಣ್ಣಾಳೆ ಕಂಡುರುಂಡೋ’ ಎಂದು ಹೇಳಿ ತನ್ನ ಹೆಂಡತಿಯನ್ನೇ ನೆನೆದು ವರ್ಣಿಸುವ ‘ಕಾಕ್ಕಾನ ಹಾಡು’ ವಿನೋದಪರವಾಗಿದೆ.

ಜಾತಿಪರವಾದ ಹಾಡುಗಳು : ಪ್ರತಿಯೊಂದು ಜಾತಿಗೂ ಪ್ರತ್ಯೇಕವಾದ ಹಾಡುಗಳಿವೆ. ಹಾಡನ್ನು ಹಾಡುವವರ ಜಾತಿಯ ಹೆಸರನ್ನೇ ಆ ಹಾಡುಗಳು ಹೊಂದಿರುತ್ತವೆ. ಇವುಗಳಲ್ಲಿ ಪುಳ್ಳುವನ್‌ಪ್ಪಾಟ್ಟು, ಪಾಣಪ್ಪಾಟ್ಟ್, ಪುಲೇರ್‌ಪ್ಪಾಟ್ಟ್, ವೇಲರ್‌ಪ್ಪಾಟ್ಟ್, ಮಲೇರ‍್ಪ್ಪಾಟ್ಟ್, ವಣ್ಣಾನ್‌ಪ್ಪಾಟ್ಟ್, ಕುರವರ್‌ಪ್ಪಾಟ್ಟ್, ಕುರತ್ತಿಪ್ಪಾಟ್ಟ್, ಕಮ್ಮಾಳನ್‌ಪ್ಪಾಟ್ಟ್, ಕುರುಪ್ಪನ್‌ಪ್ಪಾಟ್ಟ್, ಕಣಿಯನ್‌ಪ್ಪಾಟ್ಟ್‌, ಬ್ರಾಹ್ಮಣಿಪ್ಪಾಟ್ಟ್‌, ಅಕ್ಕಮ್ಮ ಪ್ಪಾಟ್ಟ್, ಮಾಪಿಳ್ಳಪ್ಪಾಟ್ಟ್‌ಮೊದಲಾದುವು ಕೇರಳದ ವಿವಿಧ ವರ್ಗದ ಜನರ ಹಾಡುವ ಜನಪದ ಗೀತೆಗಳಾಗಿವೆ. ಇವುಗಳಲ್ಲಿ ಕೆಲವು ಇತರ ವಿಭಾಗಗಳಿಗೂ ಸೇರುತ್ತದೆ.

ಯಕ್ಷಿ ಪ್ರೇತ ಕಥೆಗಳು ಹಾಡುಗಳು : ಅತಿಮಾನುಷ ಕಥೆಗಳ ಹಾಡುಗಳೂ ಕೇರಳದಲ್ಲಿ ಪ್ರಚಲಿತವಾಗಿವೆ. ಪಂಚವಂಕಾಟ್ಟು ನೀಲಿ ಮೊದಲಾದ ಕಥೆಗಳನ್ನು ವಿವರಿಸುವ ಹಾಡುಗಳು ಈ ರೀತಿಯವು. ಅಜ್ಜಿಯಂದಿರು ಮಕ್ಕಳನ್ನು ಸಂತೋಷಪಡಿಸುವುದಕ್ಕಾಗಿ ಹೇಳುವ ಕೆಲವು ನುಣಪ್ಪಾಟ್ಟುಗಳೂ ಈ ವಿಭಾಗಕ್ಕೆ ಸೇರುತ್ತವೆ.

ತತ್ತ್ವೋಪದೇಶದ ಹಾಡುಗಳು : ಜನಪದ ಗೀತೆಗಳನ್ನು ರಚಿಸಿದವರು ಪಂಡಿತರೂ, ವಿದ್ವಾಂಸರೂ ಅಲ್ಲವಾದರೂ ನೀತಿ ಹಾಗೂ ತತ್ತ್ವ ಚಿಂತನಪರವಾದ ಹಾಡುಗಳೂ ಜನಪದ ಗೀತೆಗಳಲ್ಲಿ ಸಾಕಷ್ಟಿವೆ. ಸ್ತ್ರೀಯರು ಹಾಡುವ ತಾರಾಟ್ಟುಪ್ಪಾಟ್ಟುಗಳಲ್ಲಿ ನೀತಿ ಹಾಗೂ ತತ್ತ್ವವಿರುವ ಹಾಡುಗಳಿವೆ. ಲೋಕಮಾತೆಯರಾದ ರಮೆ ಹಾಗೂ ಉಮೆಯರ ಪರಸ್ಪರ ಸಂವಾದವನ್ನು ಒಂದು ‘ತತ್ತಕ್ಕಿಳಿ’ಯ ಹೆಸರಿನಲ್ಲಿ ಹಾಡುತ್ತಾರೆ. ಇದೂ ಉಪದೇಶದಿಂದ ಕೂಡಿದೆ :

ಪೂವಾಯಾನ್ ಮಣಂ ವೇಣಂ
ಪುಮಾನಾಯಾಲ್ ಗುಣಂ ವೇಣಂ
ಮಾನಿನಿ ಮಾರ್ಗಳಾಯಾಲೋ
ಅಡಕ್ಕಂ ವೇಣಂ

(ಹೂವನ್ನಾರಿಸಲು ಪರಿಮಳ ಬೇಕು. ಪುರುಷನಾದರೆ ಗುಣವಿರಬೇಕು. ಮಾನಿನಿಯಾದರೆ ಪಾತಿವ್ರತ್ಯರಬೇಕು.)

ಬ್ರಹ್ಮನನ್ನು ಒಬ್ಬ ಬಡಗಿಗೆ ಹೋಲಿಸಿ ಹಾಡುವ ‘ತಚ್ಚನ್‌ಪ್ಪಾಟ್ಟ್’ ತಾತ್ತ್ವಿಕವಾದ ಒಂದು ಉತ್ತಮ ಹಾಡು.

ಸೌಂದರ್ಯಾರಾಧನೆಯ ಹಾಡುಗಳು : ಸೌಂದರ್ಯಾರಾಧನೆಯನ್ನು ಜನರಲ್ಲಿ ಉಂಟು ಮಾಡಬಲ್ಲ ಹಳ್ಳಿಯ ಹಾಡುಗಳು ಕೇರಳದಲ್ಲಿ ಅನೇಕ ಇವೆ. ಪೂಪಾಟ್ಟುಗಳು, ಪಾಲ್‌ಪ್ಪಾಟ್ಟುಗಳು, ತುಂಬಿಪ್ಪಾಟ್ಟುಗಳು, ಕಿಳಿಪ್ಪಾಟ್ಟುಗಳು ವರಿವಂಡಿನ್‌ಪ್ಪಾಟ್ಟುಗಲು ಮೊದಲಾದುವು ಕೇವಲ ಬಾಹ್ಯ ಸೌಂದರ್ಯವನ್ನು ಮಾತ್ರವಲ್ಲದೆ ಆಂತರಿಕ ಸೌಂದರ್ಯವನ್ನು ಚಿತ್ರಿಸುತ್ತವೆ. ಉದಾಹರಣೆಗೆ ಒಂದು ಹಾಡನ್ನು ನೋಡಬಹುದು :

ಕರುತ್ತ ಪೆಣ್ಣೇ ಕರಿಂಕುಳಲೀ
ನಿನಕ್ಕೊರುತ್ತನ್‌ಕಿಳಕ್ಕುದಿಚ್ಚು
ಕಾಡು ವೆಟ್ಟಿತ್ತಿನವಿದಚ್ಚು
ತಿನತಿನ್ನಾನ್‌ಕಿಳಿಯರಙೆ
ಕಿಳಿಯಾಟ್ಟಾನ್‌ಪೆಣ್ಣಿರಙೆ
ಕಿಳಿಯಡಿಚ್ಚುವಳ ಕುಲುಙೆ
ವಳ ಕಿಲುಙೆ ಕ್ಕಿಳಿಪರನ್ನು
ಕಿಳಿಯೋಳಿ ಮಲಕಡನ್ನು

(ಕರಿ ಹುಡುಗಿಯೇ, ಕರಿ ಕೊರಳಿನವಳೇ ನಿನಗೊಬ್ಬ ಪೂರ್ವದಲ್ಲಿ ಹುಟ್ಟಿದ. ಕಾಡು ಕಡಿದು ತೆನೆ ಬೆಳೆಸಿದ. ತೆನೆ ತಿನ್ನಲು ಗಿಳಿ ಬಂತು. ಗಿಳಿಯನ್ನೋಡಿಸಲು ಹೆಣ್ಣು ಬಂದಳು. ಗಿಳಿಯೋಡಿಸಲು ಕೈಬೀಸಿದಾಗ ಕೈ ಬಳೆ ಕುಲುಕಿತು. ಬಳೆ ಕುಲುಕಿಗೆ, ಗಿಳಿ ಹಾರಿತು. ಗಿಳಿಯೋಡಿ ಬೆಟ್ಟವನ್ನು ದಾಟಿತು) ಈ ಹಾಡಿನ ಭಾವನೆ ತುಂಬ ಸುಂದರವಾಗಿದೆ.

ಇವಲ್ಲದೆ ಕೇರಳದಲ್ಲಿ ಕಣ್ಣೇಟ್ರ್‌ಪ್ಪಾಟ್ಟ್, ನಾವೇಟ್ರ್‌ಪ್ಪಾಟ್ಟ್, ಕೊದಿಪ್ಪಾಟ್ಟ್, ಬಾಧಪ್ಪಾಟ್ಟ್ ಮೊದಲಾದ ಮಂತ್ರ ಪರವಾದ ಗೀತೆಗಳೂ ಪ್ರೇಮ ಗೀತೆಗಳೂ ದೇಶ ಭಕ್ತಿಯ ಗೀತೆಗಳೂ ಇವೆ.

ಕಥನ ಗೀತೆಗಳು : ಕಥನ ಗೀತೆಗಳನ್ನು ಮಲಯಾಳದಲ್ಲಿ ‘ಕಥಾ ಗಾನಂಗಳ’ ಎನ್ನುತ್ತಾರೆ. ಈ ಕಥನ ಗೀತೆಗಳನ್ನು ಮುಖ್ಯವಾಗಿ ‘ವಡಕ್ಕನ್ ಪಾಟ್ಟು’ಗಳೆಂದೂ ‘ತೆಕ್ಕನ್ ಪಾಟ್ಟು’ಗಳೆಂದೂ ವಿಭಾಗಿಸುತ್ತಾರೆ. ಕಥನ ಗೀತೆಗಳನ್ನು ವೀರ ಕಥಾ ಗಾನಗಳು, ಮತಪರ ಕಥಾ ಗಾನಗಳು, ಐತಿಹ್ಯಾಧಿಷ್ಠಿತ ಗಾನಂಗಳ್, ಅತಿಮಾನುಷಿಕ ಗಾನಗಳು ಮತ್ತು ಪ್ರೇಮಕಥಾ ಗಾನಗಳೆಂದು ವಿಂಗಡಿಸುತ್ತಾರೆ.

ವೀರ ಕಥಾ ಗಾನಗಳಲ್ಲಿ ವಡಕ್ಕನ್ ವಾಟ್ಟುಗಳು ಅತ್ಯಂತ ಪ್ರಧಾನವಾದಂಥವು. ಇವು ಉತ್ತರ ಕೇರಳದ ಪ್ರಾಚೀನ ವೀರಗೀತೆಗಳು. ಕೇವಲ ಗ್ರಾಮ್ಯ ಸಂಭಾಷಣಾ ಶೈಲಿಯಲ್ಲಿ ರಚಿತವಾಗಿದ್ದರೂ ಇವುಗಳಿಗೆ ಕೇರಳದ ಜನಪದ ಸಾಹಿತ್ಯದಲ್ಲಿ ಶಾಶ್ವತ ಸ್ಥಾನವಿದೆ. ವಡಕ್ಕನ್ ಪಾಟ್ಟುಗಳಲ್ಲಿ ಹೆಚ್ಚಿನವು ಮಲಬಾರಿನ ನಾಯನ್ಮಾರರ ಹಾಗೂ ತೀಯರ ವೀರ ಶೌರ್ಯಗಳನ್ನು ವಿವರಿಸುತ್ತವೆ. ಇವುಗಳಲ್ಲಿ ‘ತಚ್ಚೋಳಿ ಪಾಟ್ಟು’ಗಳೆಂದೂ ‘ಪುತ್ತೂರಂಪಾಟ್ಟು’ಗಳೆಂದೂ ಎರಡು ವಿಭಾಗಗಳಿವೆ. ಚೇಕವರ್ ಕುಟುಂಬದ ಆರೋಮನ್ ಚೇಕವರ್‌ನ ಸಾಹಸಗಳ ವರ್ಣನೆ ಪುತ್ತೂರಂಪಾಟ್ಟುಗಳಲ್ಲಿದೆ. ಪುತ್ತೂರಂ ಪಾಟ್ಟುಗಳು ವಡಕ್ಕನ್ ಪಾಟ್ಟುಗಳಲ್ಲೇ ಹೆಚ್ಚು ಪ್ರಾಚೀನವಾದವು. ತಚ್ಚೋಳಿ ಒದೇನನ ಶೌರ್ಯ ಸಾಹಸಗಳ ವರ್ಣನೆ ತಚ್ಚೋಳಿ ಪಾಟ್ಟುಗಳಲ್ಲಿದೆ.ಉತ್ತರ ಮಲಬಾರಿನ ಕೋಲತ್ತುನಾಟ್ಟು, ಕಡತ್ತನಾಟ್ಟು, ವಯನಾಟ್ಟು, ವಡಗರ ಮೊದಲಾದ ಪ್ರದೇಶಗಳೇ ವಡಕ್ಕನ್ ಪಾಟ್ಟುಗಳು ಕಥಾ ನಾಯಕರ ವಿಹಾರ ರಂಗ. ಆದಿಮಹಾರಾಜವಿಂಡೆ ಕಥ, ಆಲುಂಗೋಟ್ಟು ವೀಟ್ಟಿಲ್ ಕುಞ್ಞೂನು ಕ್ಕುಂಡೆ ಕಥ, ತ್ರಕ್ಕಯಿಕ್ಕನ್ನುವಾಣತಂಬುರಾಂಡೆ ಕಥ, ಬಾಲಯುಡೆ ಕಥ, ಕನ್ಯಾಪರಂಬಿಲ್ ಕಣ್ಣಂಡೆ ಕಥ, ಪಾಲಾಟ್ಟು, ಕೊಮ್ಮಂಡೆ ಕಥ, ತಚ್ಚೋಳಿಚ್ಚಂದುವಿಂಡೆ ಕಥ, ಪುದುನಾಡನ್ ಕೇಳುವಿಂಡೆ ಕಥ ಮೊದಲಾದ ಅನೇಕ ವಡಕ್ಕನ್ ಪಾಟ್ಟುಗಳು ಚಾರಿತ್ರಿಕ ಮಹತ್ತ್ವ ವುಳ್ಳವಂಥವೂ ಶೃಂಗಾರ, ವೀರ, ರೌದ್ರ ರಸಪೂರಿತವಾದಂಥವೂ ಆಗಿವೆ.

ವಡಕ್ಕನ್ ಪಾಟ್ಟುಗಳಂತೆಯೇ ಮನೋಹರವೂ ವೀರ ಶೃಂಗಾರಾದಿ ರಸಪ್ರಧಾನವೂ ಆದ ಉತಮ ಕಥನ ಗೀತೆಗಳು ಮಾಪ್ಪಿಳ್ಳ ಪ್ಪಾಟ್ಟುಗಳು, ಇಡನಾಡನ್‌ಪ್ಪಾಟ್ಟ್, ಹರಿಜನರ ಆರಾಧ್ಯದೇವತೆಯಾದ ಜೆಙನ್ನೂರ್ ಆದಿಯನ್ನು ಕುರಿತು ಹಾಡು, ಆದಿಯೂರು ಪಿಳ್ಳೆಯುಡೆ ಕಥೆ, ವೀರ ಪನಯರನ್ನು ಕುರಿತ ಹಾಡು ಮೊದಲಾದ ಅನೇಕ ವೀರ ಕಥನ ಗೀತೆಗಳು ಮಲಯಾಳ ಜನಪದ ಗೀತೆಗಳ ಮಹತ್ತ್ವವನ್ನು ಹೆಚ್ಚಿಸಿವೆ. ದಾರಿಕನ ವಧೆಯನ್ನು ಕುರಿತ ತೋಂಟ್ರಂಪ್ಪಾಟ್ಟ್, ಭದ್ರಕಾಳಿಪ್ಪಾಟ್ಟ್, ಚಾಮುಂಡಿ ಕಥ, ಅಯ್ಯಪ್ಪನ್‌ಪ್ಪಾಟ್ಟ್, ಮತಿಲಗತ್ತು ಕಥ, ವಿಲ್ಲಡಿಚ್ಚಾನ್‌ಪ್ಪಾಟ್ಟು ಮೊದಲಾದವು ಧರ್ಮಸಂಬಂಧವಾದ ಕಥನ ಗೀತೆಗಳು. ರಾಮಾಯಣ, ಮಹಾಭಾರತ, ಭಾಗವತ ಮೊದಲಾದ ಇತಿಹಾಸ ಪುರಾಣ ಕಥೆಗಳಿಗೆ ಸಂಬಂಧಿಸಿದ ಅನೇಕ ಕಥನ ಗೀತೆಗಳಿವೆ. ಮಾವಾರತಂ, ನಿಳಲ್ ಕತ್ತುಪ್ಪಾಟ್ಟು, ಭೀಮನ ಕಥೆ, ಭಾರತಪ್ಪೋರ್‌, ಪಾರ್ವತೀ ಚರಿತಂ, ವಾದಲ್‌ತುರಪ್ಪಾಟ್, ಕುರಳ್ತಿಪ್ಪಾಟ್ಟ್‌, ಸೀತಾ ಸ್ವಯಂವರಂ, ಐವರ್ ನಾಟಕಂ, ಬ್ರಾಹ್ಮಣಿಪ್ಪಾಟ್ಟ್, ಉತ್ತರ ರಾಮಾಯಣಂ, ಶ್ರೀಕೃಷ್ಣ ಲೀಲ, ಲಕ್ಷ್ಮಣೋಪದೇಶ, ವಂಚಿಪ್ಪಾಟ್ಟ್, ದೇವಯಾನೀ ಚರಿತಂ, ಕಲ್ಯಾಣಕ್ಕಳಿಪ್ಪಾಟ್ಟ್, ವಾಲಿ ವಧಂ, ಕೋಲಡಿಕ್ಕಳಿಪ್ಪಾಟ್ಟ್ ಮೊದಲಾದುವು ಈ ರೀತಿಯ ಜನಪದ ಹಾಡುಗಳಾಗಿವೆ.

ಇರವಿಕುಟ್ಟಿಪ್ಪಿಳ್ಳಪ್ಪಾಟ್ಟ್ ಅಂಜು ತಂಬುರಾನ್‌ಪ್ಪಾಟ್, ಉಲಕುಡಪೆರುಮಾಳ್‌ಪ್ಪಾಟ್ಟ್, ವಲಿಯತಂಬಿ ಕುಂಚುತಂಬಿ ಕಥ, ತಂಬುರಾನ್‌ಪ್ಪಾಟ್ಟ್, ಧರ್ಮರಾಜಾವಿಂಡೆ ರಾಮೇಶ್ವರಯಾತ್ರ ಮೊದಲಾದವು ಚಾರಿತ್ರಿಕ ವ್ಯಕ್ತಿಗಳಿಗೆ ಸಂಬಂಧಿಸಿದ ಗೀತೆಗಳು. ಕನ್ನಡಿಯನ್ ಪೋರ್, ಪುರುಷಾ ದೇವಿಯೆ ಪಟ್ರಿ, ರಾಜ ಕುಟುಂಬತ್ತೆ ಪಟ್ರಿರಂಡುಪ್ಪಾಟ್ಟುಗಳ್, ಪಡಪ್ಪಾಟ್ಟುಗಳ್, ಪಟ್ಟಾಣಿ ಕಥ, ಪಾಣನ್‌ವರವೂಪ್ಪಾಟ್ಟುಂ, ಮಾರ್ಗಕ್ಕಳಿಪ್ಪಾಟ್ಟ್‌ ಮೊದಲಾದುವು ಐತಿಹ್ಯ ಪ್ರಧಾನ ಕಥನ ಗೀತೆಗಳು. ಯಕ್ಷ ಯಕ್ಷಿಣಿಯರನ್ನೂ ದುರ್ದೇವತೆಗಳನ್ನು ಕುರಿತ ಕಥೆಗಳಿಂದ ಕೂಡಿ ಹಾಗೂ ಕಲ್ಪಿತ ಕಥೆಗಳುಳ್ಳವು ಅತಿಮಾನುಷ ಕಥನ ಗೀತೆಗಳಾಗಿವೆ. ಪ್ರೇಮ ಸಂಬಂಧವಾದ ಕಥನ ಗೀತೆಗಳಲ್ಲಿ ‘ತಂಬುರಾನುಂ ಚೆರುಮಿಯುಂ’ ‘ಕೊಚ್ಚಳಗನುಂ ಕುಞ್ಞೆ ಲಕ್ಷ್ಮಿಯುಂ’, ‘ಕೋಯಿಕ್ಕಲ್‌ಮಿಟ್ರತ್ತು ತೈಲೇ ರಾಜಾಂಡೆ ಮಗಂಡೆ ಕಲ್ಯಾಣಂ’ ಮೊದಲಾದವು ಮುಖ್ಯವಾಗಿವೆ.

. ಜನಪದ ನಾಟಕಗಳು : (ನಾಡೋಡಿ ನಾಟಕಂಗಳ್‌) ಕೇರಳದ ಅಭಿನಯ ಕಲೆಗಳೆಲ್ಲವೂ ವಿವಿಧ ಸಾಹಿತ್ಯ ಪ್ರಸ್ಥಾನಗಳ ಹುಟ್ಟಿಗೂ ಅಭಿವೃದ್ಧಿಗೂ ಕಾರಣವಾಗಿವೆ. ಕೇರಳದ ಜನಪದ ನಾಟಕಗಳಿಗೆ ಅವುಗಳದ್ದೇ ಆದ ಸಾಹಿತ್ಯವಿದೆ. ಭಕ್ತಿ, ಭಯ, ಶೃಂಗಾರ, ಶೌರ್ಯ ಮೊದಲಾದ ರಸಭಾವಗಳಿಂದ ಒಡಗೂಡಿದ ಸಾಹಿತ್ಯವಾಗಿದೆ. ಇಲ್ಲಿಯ ನಾಡೋಡಿ ನಾಟಕಗಳ ಸಾಹಿತ್ಯ ದೇವಸ್ಥಾನದ ಅಂಗಣಗಳಲ್ಲಿಯೂ ಬನಗಳಲ್ಲಿಯೂ ದೇವ ಸಂಪ್ರೀತಿಗಾಗಿ ನಡೆಸುವ ಅನುಷ್ಠಾನ ಪರವಾದ ಜನಪದ ನಾಟಕಗಳೂ ಕೇವಲ ವಿನೋದಕ್ಕೆಂದೇ ಇರುವ ನಾಟಕಗಳೂ ಕೇರಳದಲ್ಲಿ ಪ್ರಚಾರದಲ್ಲಿವೆ. ಮುಡಿಯೇಟ್ರ್, ತೀಯಾಟ್ಟಂ, ಸಂಘಕ್ಕಳಿ, ತಿರಯಾಟ್ಟಂ ಮೊದಲಾದವು ಅನುಷ್ಠಾನ ಪರವಾದವುಗಳೂ ಪುರಾಟ್ಟ್ ನಾಟಕಂ, ಕಾಕಾಲಿಚ್ಚಿ ನಾಟಕಂ, ಏಳಾಮತ್ತುಕ್ಕಳಿ, ಚವಿಟ್ಟುನಾಟಕಂ, ಕುರತ್ತಿಯಾಟ್ಟಂ ಮೊದಲಾದವು ವಿನೋದಪರ ವಾದುವೂ ಆಗಿವೆ. ನಾಡೋಡಿ ನಾಟಕಗಳ ಸಂಭಾಷಣೆ ಹೆಚ್ಚಾಗಿ ಹಾಡಿನ ರೂಪದಲ್ಲಿರುತ್ತದೆ. ಮಧ್ಯೆ ಮಧ್ಯೆ ಕೆಲವು ಗದ್ಯ ಸಂಭಾಷೆಣೆ ಗಳಿರುವುದೂ ಇದೆ. ಸಂಭಾಷಣೆಗಳು ಸುಂದರವೂ ಗ್ರಾಮ್ಯವೂ ಆದ ಆಡುಮಾತಿನಲ್ಲಿರುತ್ತವೆ.

ಮುಡಿಯೇಟ್ರಿನಲ್ಲಿ ದಾರಿಕನ ಅಹಂಕಾರವನ್ನು ಮುರಿದು, ದಾರಿಕನನ್ನುಕೊಂದು ಅವನ ಕಿರೀಟವನ್ನು ಧರಿಸುವ ಕಾಳಿಯ ಕಥೆಯನ್ನು ದೃಶ್ಯ ರೂಪದಲ್ಲಿ ಅಭಿನಯಿಸುತ್ತಾರೆ. ‘ಮುಡಿ’ ಎಂದರೆ ಕಿರೀಟ, ಇದರಲ್ಲಿ ಐದು ‘ಅರಂಗ’ ಅಥವಾ ದೃಶ್ಯಗಳಿವೆ. ಶಿವ, ದಾನವ, ಕೋಯಿಂಪಿಡಾರ್, ಬೇತಾಳ, ಕೂಳಿ, ಕಾಳಿ, ದಾರಿಕ ಮೊದಲಾದವು ಇತರ ಪಾತ್ರಗಳು. ಹಿಮ್ಮೇಳದವರ ಹಾಗೂ ಕೋಯಿಂಫಿಡಾರ್‌ಅವರೊಳಗಿನವಾದವು ಪ್ರಶ್ನೋತ್ತರ ರೂಪದ ಗದ್ಯದಲ್ಲಿರುತ್ತವೆ. ‘ತೀಯಾಟ್‌’ನಲ್ಲಿ ಅಯ್ಯಪ್ಪನ್‌ತೀಯಾಟ್ಟ್‌ಮತ್ತು ಕಾಳಿ ತೀಯಾಟ್ಟ್‌ಎಂದು ಎರಡು ವಿಧಗಳಿವೆ. ಇವುಗಳನ್ನು ಬನಗಳಲ್ಲೂ ಕೆಲವೊಮ್ಮೆ ಪ್ರೇತಬಾಧೆಯನ್ನು ಉಚ್ಛಾಟಿಸಲು ಮತ್ತು ಸಂತಾನ ಸಂಪತ್ತನ್ನು ಪಡೆಯುವುದಕ್ಕಾಗಿ ಮನೆಗಳಲ್ಲಿಯೂ ನಡೆಸುತ್ತಾರೆ. ಕಾಳಿಯ ಪಾದಾಗಿ ಕೇಶಾಂತ ವರ್ಣನೆಯ ಒಂದು ಸ್ತೋತ್ರವು ಕಾಳಿ ತೀಯಾಟ್ಟಿನ ಪ್ರಧಾನ ಸಾಹಿತ್ಯ ಭಾಗವಾಗಿದೆ. ಕಾಳಿ ತೀಯಾಟ್ಟಿನ ಕಥೆಯು ಕಾಳಿ ಹಾಗೂ ದಾರಿಕರೊಳಗಿನ ಯುದ್ಧ ವರ್ಣನೆಯೇ ಆಗಿದೆ. ದೇವಸ್ಥಾನಗಳಲ್ಲಿಯೂ ಮನೆಗಳಲ್ಲಿಯೂ ನಡೆಸುವ ಇನ್ನೊಂದು ಜನಪದ ನೃತ್ಯನಾಟಕ ‘ತಿರಯಾಟ್ಟಂ’. ಇದಕ್ಕೆ ಕಳಿಯಾಟ್ಟಂ, ತೆಯ್ಯಂ ಎಂಬ ಹೆಸರೂ ಇದೆ. ಇದು ದ್ರಾವಿಡ ದೈವಗಳನ್ನು ಕುರಿತ ಭೂತ ಕೋಲ. ತಿರಯಾಟ್ಟಂನಲ್ಲಿ ವೆಳ್ಳಾಟ್ರಂ ಮತ್ತು ಗುಳಿಗನ್‌ತಿರ ಎರಡನ್ನೂ ನಡೆಸುತ್ತಾರೆ. ಇಲ್ಲಿ ಭೂತ ಕಟ್ಟುವವರು ‘ಪಣಿಕ್ಕರ್‌’ ಎಂಬ ವರ್ಗದವರು. ದಕ್ಷಿಣ ಕನ್ನಡದಲ್ಲಿ ಭೂತಕೋಲದ ಹಾಡುಗಳು ‘ಪಾಡ್ದನ’ಗಳೆಂದು ಪ್ರಸಿದ್ಧವಾಗಿವೆ.

ಕೇವಲ ವಿನೋದವನ್ನುಂಟುಮಾಡುವ ಜನಪದ ನಾಟಕವಾದ ‘ಏಳಾ ಮತ್ತುಕ್ಕಳಿ’ಯು ಈಗ ಸಂಪೂರ್ಣ ನಾಮಾವಶೇಷವಾಗಿದೆ. ಮನೆಯ ಅಂಗಳಕ್ಕೆ ಚಪ್ಪರ ಹಾಕಿ ಹತ್ತರಿಂದ ಮೂವತ್ತು ಜನರು ಸೇರಿ ಪ್ರಶ್ನೋತ್ತರ ರೂಪದಲ್ಲಿ ಆಡುವ ಆಟವಿದು. ಪ್ರಶ್ನೋತ್ತರದಲ್ಲಿ ಸೋತವರು ವೇಷ ಹಾಕಿ ಕುಣಿಯಬೇಕು. ಅವರು ಹೆಚ್ಚಾಗಿ ಕಳ್ಳು ಕುಡಿದವನ ವೇಷಧರಿಸಿ ಅಭಿನಯಿಸುತ್ತಾರೆ. ನಂಬೂದಿರಿಗಳು ತಮ್ಮ ಮನೆಯಲ್ಲಿ ನಡೆಸುವ ಅನುಷ್ಠಾನಪರವೂ ವಿನೋದಪರವೂ ಆದ ಜನಪದ ನಾಟಕ ‘ಯಾತ್ರಕ್ಕಳಿ’ ಅಥವಾ ಸಂಘಕ್ಕಳಿ. ಒಳ್ಳೆಯ ಸಾಹಿತ್ಯ ಗುಣವಿರುವ ಹಾಡುಗಳು ಈ ನಾಟಕದಲ್ಲಿವೆ. ‘ಇಟ್ಟಿಕ್ಕಂಡಪ್ಪ ಕೈಮಳ್’ ಈ ನಾಟಕದ ಒಂದು ಪ್ರಧಾನ ಪಾತ್ರವಾಗಿದೆ. ‘ಚವಿಟ್ಟು ನಾಟಕಂ’ ಹೆಚ್ಚು ಹಳೆಯದಲ್ಲವಾದರೂ ವೇದ ಕಥೆಗಳನ್ನೋ ಕ್ರೈಸ್ತ ಧರ್ಮದ ಕಥೆಗಳನ್ನೋ ಪಾಶ್ಚಾತ್ಯ ಚರಿತ್ರ ಕಥೆಗಳನ್ನೋ ಹೊಂದಿದ ಜನಪದ ನಾಟಕ, ನಾಟಕವನ್ನಿಡೀ ಗೀತೆಗಳಲ್ಲಿಯೇ ಅಭಿನಯಿಸುತ್ತಾರೆ. ಚರಿತ್ರಪ್ರಧಾನವಾದ ‘ಕಾರಲ್‌ಮಾನ್ ನಾಟಕ’ ಇವುಗಳಲ್ಲಿ ಮುಖ್ಯವದುದು. ಚವಿಟ್ಟು ನಾಟಕದಲ್ಲಿ ೫೦ ರಿಂದ ೮೦ ರಷ್ಟು ಪಾತ್ರಗಳಿರುತ್ತವೆ. ವಿಶಾಲವಾದ ವಿವಿಧ ಹಂತಗಳಿರುವ ರಂಗಸ್ಥಳದಲ್ಲಿ ಪಾತ್ರಗಳು ಹಾಡುತ್ತಾ ಹೆಜ್ಜೆಮೆಟ್ಟುವುದು ಅಥವಾ ಕುಣಿಯುವುದು ಇದರ ವೈಶಿಷ್ಟ್ಯ. ಮೀನಾಕ್ಷಿ ನಾಟಕಂ ಹಾಗೂ ಕಂಸ ನಾಟಕಗಳು ಹೆಚ್ಚು ಪ್ರಾಚೀನವಲ್ಲದ ಇತರ ಪ್ರಚಲಿತ ಜನಪದ ನಾಟಕಗಳು. ಕೇವಲ ವಿನೋದಕ್ಕಾಗಿರುವ ನಾಟಕಗಳಲ್ಲಿ ಪುರಾಟ್ಟು ನಾಟಕಂ, ಕಾಕಾ ಲಿಚ್ಚಿ ನಾಟಕಂ, ಕುರತ್ತಿಯಾಟ್ಟಂಗಳು ಪ್ರಧಾನವಾಗಿವೆ.

‘ಪುರಾಟ್ಟು ನಾಟಕಂ’ಗೆ ತೆಕ್ಕತ್ತಿ ನಾಟಕಂ, ಪಾಣ್‌ಕ್ಕಳಿ, ದೇಶಕ್ಕಳಿ, ಪೊರೊಟ್ಟು ನಾಟಕಂ ಮೊದಲಾದ ಇತರ ಹೆಸರುಗಳೂ ಇವೆ. ಪಾಲ್ಘಾಟ್ ತಾಲ್ಲೂಕು, ವಡಕ್ಕಾಂಚೇರಿ, ವಳ್ಳುವನಾಡ್ ಮೊದಲಾದ ಕಡೆಗಳಲ್ಲಿ ಇದು ಹೆಚ್ಚು ಪ್ರಚಾರದಲ್ಲಿದೆ. ಅಗಸ-ಅಗಸಿತಿ, ಕುರವ-ಕುರತ್ತಿ ಮೊದಲಾದವರು ಇದರಲ್ಲಿ ಅಭಿನಯಿಸುತ್ತಾರೆ. ಇದರ ಸಾಹಿತ್ಯ ಗದ್ಯಪದ್ಯ ಸಮ್ಮಿಶ್ರಿತವಾಗಿದೆ. ರಸಭರಿತವಾದ ಪಾತ್ರಗಳ ಮೂಲಕ ಸಮಾಜ ವಿಮರ್ಶೆಯನ್ನು ಮಾಡುವ ಕಲಾರೂಪವಿದು. ಕೊರವನೂ ಕೊರತ್ತಿಯೂ ಸೇರಿ ಮಾಡುವ ಅಭಿನಯ ರೂಪಕವೇ ‘ಕೊರತ್ತಿಪ್ಪುರಾಟ್ಟ್’. ಕುರವನಿಗೆ ತನ್ನ ಇಬ್ಬರು ಹೆಂಡಿರಲ್ಲಿರುವ ಪ್ರಣಯ ಕಲಹವೇ ಇದರ ವಸ್ತು. ಇದರಲ್ಲಿ ಗದ್ಯ ಸಂಭಾಷಣೆಯೂ ಇದೆ. ಹಾಡುಗಳಲ್ಲಿ ರಾಮಾಯಣದ ಕಥಾಭಾಗಗಳೂ ಬರುತ್ತವೆ.

ಶ್ರೀರಾಮ ಲಕ್ಷ್ಮಣನಾರುಂಸೀತ
ಪರ್ಣಶಾಲ ವಾಳುಂ ಕಾಲಂ
ಮಾರೀಚನ್ ಪೊನ್ಮಾನಾಯ್‌ವನ್ನ್
ಮುಂಬಿಲುಂ ಕಳಿಚ್ಚು

(ರಾಮ, ಸೀತೆ, ಲಕ್ಷ್ಮಣರು ಪರ್ಣಶಾಲೆಯಲ್ಲಿ ಬಾಳುತ್ತಿದ್ದಾಗ ಮಾರೀಚ ಹೊನ್ನ ಜಿಂಕೆಯಾಗಿ ಬಂದು ಮುಂಭಾಗದಲ್ಲಿ ಕುಣಿದ).

‘ಕಾಕ್ಕಾಲಿಚ್ಚಿ ನಾಟಕಂ’ಗೆ ಕಾಕ್ಕಾಲ ನಾಟಕಂ, ಕಾಕ್ಕಾರ್‌ಶಿ ನಾಟಕಂ ಎಂದೂ ಹೆಸರುಗಳಿವೆ. ಮಧ್ಯ ತಿರುವಾಂಕೂರಿನ ಹಲವೆಡೆ ಪ್ರಚಾರದಲ್ಲಿರುವ ಇದನ್ನು ಪೊರಾಟ್ಟ್ ನಾಟಕದ ಒಂದು ಪ್ರಭೇದವೆಂದು ಹೇಳಬಹುದು. ಕಾಕ್ಕಾ ಮತ್ತು ಕಾಕ್ಕಾತ್ತಿಯರೊಳಗಿನ ಪ್ರಣಯ ಕಲಹವೇ ಇದರ ವಸ್ತು. ಹಾಡುಗಳಿಂದ ಕೂಡಿದ ಸಂಭಾಷಣೆ ರಸವತ್ತಾಗಿದೆ. ದೇವಸ್ಥಾನಗಳಲ್ಲಿ ಉತ್ಸವದ ಸಂದರ್ಭಗಳಲ್ಲಿ ನಡೆಯುವ ಇನ್ನೊಂದು ವಿನೋದ ನಾಟಕ ‘ಕುರತ್ತಿಯಾಟ್ಟಂ’. ಕುರವನೂ ಕುರತ್ತಿಯೂ ಇದರಲ್ಲಿ ಅಭಿನಯಿಸುವವರು. ಇಬ್ಬರು ಕುರತ್ತಿಯರು ಲಕ್ಷ್ಮಿ ಹಾಗೂ ಪಾರ್ವತಿಯಾಗಿ ಅಭಿನಯಿಸಿ ಪರಸ್ಪರ ವಾದಮಾಡುವ ಸನ್ನಿವೇಶ ಸುಂದರವಾಗಿದೆ. ಐವರ್‌ಕ್ಕಳಿ, ದೇಶತ್ತುಕ್ಕಳಿ ಮೊದಲಾದವು ಇತರ ಪ್ರಧಾನ ಜನಪದ ನಾಟಕಗಳಿದ್ದರೂ ಸಾಹಿತ್ಯದ ದೃಷ್ಟಿಯಿಂದ ಅವು ಮುಖ್ಯವಾದಂಥವಲ್ಲ.

. ಜನಪದ ಕಥೆಗಳು : ಜನಪದ ಕಥೆಗಳನ್ನು ಮಲಯಾಳದಲ್ಲಿ ‘ನಾಡೋಡಿ ಕೃಥಗಳ್’ ಎನ್ನುತ್ತಾರೆ. ಇವುಗಳಲ್ಲಿ ಹೆಚ್ಚಿನವೂ ಕಾಲ್ಪನಿಕ ಕಥೆಗಳು. ಜೀವನದ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಜನಪದ ಕಥೆಗಳು ಕೇರಳದಲ್ಲಿ ಪ್ರಚಲಿತವಾಗಿವೆ. ಮನುಷ್ಯರು ಮಾತ್ರವಲ್ಲದೆ ಯಕ್ಷಿ, ಪ್ರೇತ, ಪಿಶಾಚಿ, ಮೃಗ, ಪಕ್ಷಿ, ಸರ್ಪ ಮೊದಲಾದವುಗಳಿಗೆ ಸಂಬಂಧಿಸಿದ ಜನಪದ ಕಥೆಗಳೂ ಇವೆ. ಮಲಯಾಳದ ಜನಪದ ಕಥೆಗಳನ್ನು ಅತಿಮಾನುಷ ಕಥೆಗಳು, ವೀರ ಸಾಹಸದ ಕಥೆಗಳು, ಐತಿಹ್ಯ ಕಥೆಗಳು, ಕಲ್ಪಿತ ಪುರಾಣ ಕಥೆಗಳು, ಮತಪರವಾದ ಕಥೆಗಳು ಮತ್ತು ಲಘು ಕಥೆಗಳೆಂದು ವಿಭಾಗಿಸುತ್ತಾರೆ. ಅತಿಮಾನುಷ ಕಥೆಗಳಲ್ಲಿ ಯಕ್ಷಿ, ಪ್ರೇತ, ಭೂತ ಮೊದಲಾದವುಗಳಿಗೆ ಸಂಬಂಧಿಸಿದ ಕಥೆಗಳೂ ಮಾಂತ್ರಿಕ ಕಥೆಗಳೂ ಇವೆ. ಈ ಕಥೆಗಳು ಸತ್ಯಕ್ಕೆ ತುಂಬ ದೂರವಾದಂಥವು. ವೀರ ಸಾಹಸಿಕ ಕಥೆಗಳಲ್ಲಿ ಬೇಟೆಯ ಕಥೆಗಳು, ಸಾಹಸ ಸಂಚಾರ ಕಥೆಗಳು ಹಾಗೂ ಇತರ ಅನೇಕ ವೀರ ಸಾಹಸಿಗಳ ಕಥೆಗಳು ಸೇರುತ್ತವೆ. ಚಾರಿತ್ರಿಕ ವ್ಯಕ್ತಿಗಳನ್ನೋ ಘಟನೆಗಳನ್ನೋ ಚರಿತ್ರ ಪ್ರಧಾನವಾದ ಸ್ಥಳಗಳನ್ನೋ ಶತ್ರುಗಳೊಂದಿಗಿನ ಹೋರಾಟವನ್ನೋ ಚಿತ್ರಿಸುವಂಥವುಗಳೇ ಚಾರಿತ್ರಿಕ ವ್ಯಕ್ತಿಗಳನ್ನೋ ಘಟನೆಗಳನ್ನೋ ಚರಿತ್ರ ಪ್ರಧಾನವಾದ ಸ್ಥಳಗಳನ್ನೋ ಶತ್ರುಗಳೊಂದಿಗಿನ ಹೋರಾಟವನ್ನೋ ಚಿತ್ರಿಸುವಂಥವುಗಳೇ ಚಾರಿತ್ರಿಕ ಕಥೆಗಳು. ಮತಪರವಾದ ಕಥೆಗಳ ವ್ಯಾಪ್ತಿ ದೊಡ್ಡದು. ಜಾತಕ ಕಥೆಗಳು, ಕ್ರೈಸ್ತರ ಕಥೆಗಳು ಹಾಗೂ ಇತರ ಮತಗಳಿಗೆ ಸಂಬಂಧಿಸಿದ ಕಥೆಗಳು ಈ ವಿಭಾಗಕ್ಕೆ ಸೇರುತ್ತವೆ. ಇತಿಹಾಸ ಪುರಾಣ ಕಥೆಗಳನ್ನು ಈ ವಿಭಾಗಕ್ಕೇ ಸೇರಿಸಬಹುದು. ಮೃಗ ಪಕ್ಷಿ ಹಾವು ಮೊದಲಾದ ತಿರ್ಯಕ್‌ಗಳಿಗೆ ಸಂಬಂಧಿಸಿದ ಕಥೆಗಳೂ ಮಕ್ಕಳಿಗೆ ನೀತಿಯನ್ನು ಬೋಧಿಸುವ ಕಲ್ಪಿತ ಕಥೆಗಳೂ ಲಘು ಕಥೆಗಳಾಗಿವೆ. ವ್ಯಕ್ತಿಗಳನ್ನೂ ಜೀವಿಗಳನ್ನೂ ಸ್ಥಳಗಳನ್ನೂ ಘಟನೆಗಳನ್ನೂ ಕುರಿತ ಐತಿಹ್ಯ ಕಥೆಗಳು ಮಲಯಾಳದಲ್ಲಿ ಸಾಕಷ್ಟಿವೆ.

ಸೂರ್ಯ, ಚಂದ್ರ, ನಕ್ಷತ್ರ, ಪಾತಾಳ, ಸ್ವರ್ಗ ಮೊದಲಾದವುಗಳಿಗೆ ಸಂಬಂಧಿಸಿದ ಕಾಲ್ಪನಿಕ ಕಥೆಗಳೂ, ದೇವತೆಗಳು, ತಿರ್ಯಕ್ ಜಾತಿಗಳು ಮತ್ತು ಯಕ್ಷ ಗಂಧರ್ವಾದಿಗಳನ್ನೊಳಗೊಂಡ ದಂತ ಕಥೆಗಳೂ, ಭೂತಕೋಲಗಳಿಗೆ ಸಂಬಂಧಿಸಿದ ಕಥೆಗಳೂ ಕೇರಳದಲ್ಲಿ ಅನೇಕ ಇವೆ. ಅಯ್ಯಪ್ಪನ್ ಮಹಾವಿಷ್ಣು, ಶಿವ, ಭದ್ರಕಾಳಿ, ಗಣಪತಿ ಮೊದಲಾದ ಪುರಾಣ ಪ್ರಸಿದ್ಧ ದೇವ ದೇವಿಯರನ್ನು ಕುರಿತು ಕಟ್ಟು ಕಥೆಗಳು ಹಳ್ಳಿಯ ಜನರಲ್ಲಿ ಪರಚಾರದಲ್ಲಿವೆ. ಗಣಪತಿಯ ದಾಡೆ ಮುರಿದು ಹೋದ ಕಥೆ ಇದಕ್ಕೊಂದು ನಿದರ್ಶನ. ಪೂರಕ್ಕಳಿ, ಕೋಲ್‌ಕ್ಕಳಿ, ತಿರುವಾದಿರಕ್ಕಳಿ, ಕೃಷ್ಣನಾಟ್ಟಂ ಕಥಕ್ಕಳಿ, ತುಳ್ಳನ್‌ಕ್ಕಳಿ ಮುಂತಾದ ಜನಪದ ಹಾಗೂ ಪರಿಷ್ಕೃತ ಕಲೆಗಳ ಹುಟ್ಟಿನ ಕುರಿತಾದ ಕಲ್ಪಿತ ಕಥೆಗಳಿವೆ. ಓಣಂ, ವಿಷ್ಣು ಸಂಕ್ರಮಣ, ಪುತ್ತರಿ, ದೀಪಾವಳಿ, ಶಿವರಾತ್ರಿ ಮೊದಲಾದ ಪರಂಪರಾಗತವಾಗಿ ಬಂದ ಹಬ್ಬದಾಚರಣೆಗಳಿಗೆ ಸಂಬಂಧಿಸಿದ ಕಥೆಗಳೂ ದೇವಸ್ಥಾನ ಆರಾಧನಾ ಕ್ಷೇತ್ರ ಮೊದಲಾದವುಗಳಿಗೆ ಸಂಬಂಧಿಸಿದ ಕಥೆಗಳೂ ಸ್ಥಳ ಪುರಾಣಗಳೂ ಕೇರಳದಲ್ಲಿ ಪ್ರಚಲಿತವಾಗಿವೆ. ಮಲಯನ್, ವಣ್ಣಾನ್, ಪುಳ್ಳುವನ್, ಪಾಣನ್, ತೀಯನ್, ತೆಯ್ಯಂಪಾಡಿ, ತೀಯಾಡಿ ಮೊದಲಾದ ಹಲವ ಜನಸಮುದಾಯಗಳ ಹುಟ್ಟನ್ನು ಕುರಿತು ಹೇಳುವ ಕಥೆಗಳೂ ಅಲೌಕಿಕವಾದ ಮತ್ತು ಭಕ್ತಿರಸ ಪ್ರಧಾನವಾದ ಕಥೆಗಳೂ ಕೇರಳದ ಜನಪದ ಸಾಹಿತ್ಯದಲ್ಲಿವೆ. ಮಲಯಾಳದಲ್ಲಿ ಜನಪದ ಕಥೆಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಸಂಗ್ರಹಕಾರ್ಯ ಹಾಗೂ ಆ ಕುರಿತ ಅಧ್ಯಯನ ನಡೆದಿಲ್ಲವೆಂದೇ ಹೇಳಬಹುದು.

. ಗಾದೆಗಳು : ಜನಪದ ಗೀತೆ, ಕಥೆ, ನಾಟಕಗಳು ಉದಯವಾಗುವುದಕ್ಕೆ ಮೊದಲೇ ಗಾದೆಗಳು ಜನರ ಬಾಯಲ್ಲಿ ಪ್ರಚಲಿತವಾಗಿದ್ದಿರಬೇಕು. ‘ಗಾದೆಗಳು ಮತ್ತು ಒಗಟುಗಳು ಪ್ರಾಚೀನ ಭಾಷಾ ರೀತಿಯ ಲಕ್ಷಣಗಳನ್ನು ಅಳವಡಿಸಿಕೊಂಡು ಬಂದಿರುವ ಶೈಲಿಗಳು. ಅವುಗಳು ಮಲಯಾಳದ ಆದಿಕಾಲದ ನೈಜ ಮೌಲ್ಯಗಳೆಂದು ಭಾವಿಸಬಹುದು” ಎಂದು ಪಿ.ಕೆ. ಪರಮೇಶ್ವರನ್ ನಾಯರ್ ಹೇಳಿದ್ದಾರೆ. (ಮಲಯಾಳ ಸಾಹಿತ್ಯ ಚರಿತ್ರೆ – ಅನು : ಕಯ್ಯಾರ ಕಿಞ್ಞಣ್ಣರೈ, ೧೯೭೬ ಪು ೧೩). ಹಿಂದಿನವರು ಹೇಳಿದ ಅರ್ಥವತ್ತಾದ ಮಾತುಗಳು ಅಥವಾ ಲೋಕನೀತಿ ಅಡಗಿದ ಸೂಕ್ತಿಗಳೇ ಗಾದೆಗಳು. ಗಾದೆಗಳನ್ನು ಮಲಯಾಳ ಭಾಷೆಯಲ್ಲಿ ‘ಪಳಂ ಚೊಲ್ಲುಗಳ್’ ಎನ್ನುತ್ತಾರೆ. ಸ್ವತಂತ್ರವಾದ ಗಾದೆಗಳಲ್ಲದೆ ಅನ್ಯಭಾಷೆಯ ಪ್ರಭಾವದಿಂದ ಹುಟ್ಟಿಕೊಂಡ ಅನೇಕ ಗಾದೆಗಳೂ ಇವೆ. ಗಾದೆಗಳು ಸಂಕ್ಷಿಪ್ತವಾಗಿಯೂ, ಸ್ಪಷ್ಟವಾಗಿಯೂ ಸರಳವಾಗಿಯೂ ಲಾಲಿತ್ಯಪೂರ್ಣವಾಗಿಯೂ ಇರುವ ಅರ್ಥಪೂರ್ಣವಾದ ಮಾತುಗಳು. ಭಾಷಾರೀತಿ ಹಾಗೂ ಚಾರಿತ್ರಿಕ ಮಹತ್ತ್ವಗಳಿಂದ ಮಲಯಾಳದ ಗಾದೆಗಳು ತಮಿಳು ಗಾದೆಗಳಿಗೆ ಹತ್ತಿರವಾಗಿವೆ. ‘ಶರೀರಮಾದ್ಯಂ ಖಲು ಧರ್ಮ ಸಾಧನಂ, ವಿನಾಶಕಾಲೇ ವಿಪರೀತ ಬುದ್ಧಿಃ’ ಮೊದಲಾದ ಸಂಸ್ಕೃತದ ಅನೇಕ ಕವಿ ವಾಕ್ಯಗಳು ಮಲಯಾಳದಲ್ಲಿ ಗಾದೆಗಳಾಗಿವೆ. ಒಂದೇ ಗಾದೆಗೆ ಬೇರೆ ಪಾಠ ಭೇದಗಳಿರುವುದೂ ಇದೆ. ಇತರ ಭಾಷೆಗಳ ಗಾದೆಗಳಲ್ಲಿರುವ ಹೆಚ್ಚಿನ ಎಲ್ಲಾ ಗುಣವಿಶೇಷಗಳು ಇಲ್ಲಿಯ ಗಾದೆಗಳಲ್ಲಿಯೂ ಇವೆ. ಯಾವುದಾದರೊಂದು ಸಾಮಾನ್ಯ ತತ್ತ್ವೋ ಉಪದೇಶವೋ ಒಳಗೊಂಡಿದ್ದು ಹೇಳುವ ರೀತಿಯಲ್ಲಿ ಹೊಸತನವೂ ಪ್ರತಿಭಾವಿಲಾಸವೂ ಹೆಚ್ಚಿನ ಗಾದೆಗಳಲ್ಲಿರುವುದು ಕಂಡು ಬರುತ್ತದೆ. ಕೆಲವು ಅಲಂಕಾರಗಳಿಂದ ಕೂಡಿದ್ದರೆ ಮತ್ತೆ ಕೆಲವು ಗಾದೆಗಳು ಯಥಾರ್ಥತೆಯ ನಗ್ನ ಚಿತ್ರಗಳಾಗಿವೆ. ಅನುಪ್ರಾಸ, ಲಯ, ಪ್ರಸಾದಗುಣ, ಲಾಲಿತ್ಯಗಳಿಂದ ಕೂಡಿದ ಮಲೆಯಾಳ ಗಾದೆಗಳು ಕೇಳುವುದಕ್ಕೂ ಇಂಪಾಗಿರುತ್ತವೆ. ಪ್ರಾಚೀನ ಸಾಮಾಜಿಕ ಜೀವನ, ಬೇಸಾಯ, ಹಣದ ಮಹತ್ತ್ವ, ಗೃಹಸ್ಥ ಜೀವನ, ಸೈನ್ಯ, ವ್ಯಾಪಾರ, ವೈದ್ಯ, ಜ್ಯೋತಿಷ್ಯ ಮುಂತಾದ ಅನೇಕ ಕ್ಷೇತ್ರಗಳ ರೀತಿನೀತಿಗಳನ್ನು ತಿಳಿಸುವ ಗಾದೆಗಳು ಮಲಯಾಳದಲ್ಲಿ ತುಂಬಾ ಇವೆ. ‘ಪಳಂಚೊಲ್ಲಿಲ್‌ಪದಿರಿಲ್ಲ’ (ಗಾದೆ ಸುಳ್ಳಾಗದು) ಎಂಬುದು ಗಾದೆಯ ಮಹತ್ತ್ವವನ್ನು ತಿಳಿಸುವ ಮಾತು. ಉದಾಹರಣೆಗೆ ಕೆಲವು ಗಾದೆಗಳನ್ನು ನೋಡಬಹುದು.

೧. ಅಗತ್ತು ಕತ್ತಿಯುಂ ಪುರತ್ತು ಪತ್ತಿಯುಂ (ಒಳಗೆ ಕತ್ತಿ ಹೊರಗೆ ಹತ್ತಿ)

೨. ಮುಟ್ಟತ್ತೆ ಮುಲ್ಲಯ್ಕ್‌ಮಣಮಿಲ್ಲ (ಅಂಗಳದ ಮಲ್ಲಿಗೆಗೆ ಪರಿಮಳವಿಲ್ಲ)

೩. ವಿತ್ತಾಳಂ ಚೆನ್ನಾಲ್ ಪತ್ತಾಯಂ ನಿರೈಯುಂ (ಬೀಜ ಆಳಕ್ಕೆ ಹೋದರೇ ಉಗ್ರಾಣ ತುಂಬೀತು)

೪. ಮುಳಯಿಲರಿಯಾಂ ವಿಳ (ಬೆಳೆಯಸಿರಿ ಮೊಳಕೆಯಲ್ಲೇ ನೋಡು)

೫. ಮಿನ್ನುನ್ನದೆಲ್ಲಾ ಪೊನ್ನಲ್ಲ (ಹೊಳೆಯುವುದೆಲ್ಲಾ ಹೊನ್ನಲ್ಲ)

೬. ಅರಯನ್ ಚತ್ತಾಲ್ ಪಡಯಿಲ್ಲ (ಅರಸ ಸತ್ತರೆ ಯುದ್ಧವಿಲ್ಲ)

೭. ಪಣಮಿಲ್ಲಾತ್ತವನ್ ಪಿಣಂ (ಹಣವಿಲ್ಲದವನು ಹೆಣ)

೮. ಅಕ್ಕರೆ ನಿಲ್ಕುಂಬೋಳ್ ಇಕ್ಕರೆ ಪಚ್ಚ (ಆಚೆ ದಡದಲ್ಲಿ ನಿಂತು ನೋಡಿದರೆ ಈಚೆ ದಡ ಹಸುರು)

೯. ಅತಿಮೋಹಂ ಪೆರುಂಚೇದಂ (ಅತಿಮೋಹ ಒಳ್ಳೆಯದಲ್ಲ)

೧೦. ಉಪ್ಪುತಿನ್ನವನ್ ವೆಳ್ಳಂಕುಡಿಕ್ಕು (ಉಪ್ಪು ತಿಂದವ ನೀರು ಕುಡಿದಾನು)

ಕೇರಳದ ಜನಪದ ಸಾಹಿತ್ಯದ ಅಮೂಲ್ಯ ನಿಧಿಯಾದ ವಡಕ್ಕನ್‌ಪ್ಪಾಟ್ಟುಗಳಲ್ಲಿ ಮಲಯಾಳದ ಉತ್ತಮ ಗಾದೆಗಳಿವೆ. ಮಲಯಾಳದಲ್ಲಿ ಗಾದೆಗಳ ಸಂಗ್ರಹದ ಅನೇಕ ಕೃತಿಗಳು ಪ್ರಕಟವಾಗಿವೆ. ಅನೇಕರು ಗಾದೆಗಳು ಸಂಗ್ರಹಕ್ಕಾಗಿ ದುಡಿದಿದ್ದಾರೆ.

. ಒಗಟುಗಳು : ಒಗಟುಗಳಿಗೆ ಮಲಯಾಳದಲ್ಲಿ ಕಡಂ ಕಥಗಳ್ ಎಂದು ಹೆಸರು. ಸಂಸ್ಕೃತದಲ್ಲಿ ಇದನ್ನು ‘ಪ್ರಹೇಳಿಕಾ’ ಎನ್ನುತ್ತಾರೆ. ಮಾನಸಿಕ ವಿನೋದಕ್ಕೂ ಬುದ್ಧಿಯ ಬೆಳವಣಿಗೆಗೂ ಇವು ಸಹಾಯ ಮಾಡುತ್ತವೆ. ಹೃದಯಕ್ಕೆ ಆನಂದವನ್ನು, ಬುದ್ಧಿಶಕ್ತಿಗೆ ತೀಕ್ಷ್ಣತೆಯನ್ನು, ಸಾಹಿತ್ಯ ವಿಷಯದಲ್ಲಿ ಅಭಿರುಚಿಯನ್ನು ಒಗಟುಗಳು ಉಂಟುಮಾಡುತ್ತವೆ. ಸ್ವರೂಪಾರ್ಥವನ್ನು ಬರಿಸಿ ಯಾವುದೋ ಒಂದು ಕಥೆಯಲ್ಲಿ ಪ್ರಶ್ನೆಗಳ ರೂಪದಲ್ಲಿರುವ ಗೂಢಾರ್ಥ ವಾಕ್ಯಗಳೇ ಕಡಂ ಕಥಗಳ್ ಅಥವಾ ಒಗಟುಗಳು. ತಮಿಳಿನ ಮೊದಲ ವ್ಯಾಕರಣ ಗ್ರಂಥವಾದ ‘ತೊಲ್‌ಕ್ಕಾಪ್ಪಿಯಂ’ನಲ್ಲೂ ಕಡಂ ಕಥಗಳ್ ಬಗ್ಗೆ ಉಲ್ಲೇಖವಿದೆ. ಒಗಟುಗಳೂ ಗಾದೆಗಳಂತೆಯೇ ಸಾಮಾನ್ಯವಾಗಿ ವ್ಯಾವಹಾರಿಕ ಭಾಷೆಯ ಸೂತ್ರಪ್ರಾಯವಾದ ವಾಕ್ಯಗಳಾಗಿವೆ. ದೃಷ್ಟಿ ದೋಷ, ನಾಲಗೆಯ ದೋಷ ಮೊದಲಾದುವನ್ನು ನಿವಾರಿಸಲು ಮಾಂತ್ರಿಕರು ಪ್ರಯೋಗಿಸುತ್ತಿದ್ದ ಮಂತ್ರವಾಕ್ಯಗಳಲ್ಲಿ ಹಲವು ಒಗಟಿನ ರೂಪದಲ್ಲಿವೆ. ಕೇರಳೀಯರ ಜೀವನದ ವಿವಿಧ ಚಿತ್ರಗಳನ್ನು ಅಲ್ಲಿಯ ಒಗಟುಗಳಲ್ಲಿ ಕಾಣಬಹುದು. ಗೃಹಸ್ಥ ಜೀವನದ ಅನುಭವ ವಿಶೇಷಗಳು ಒಗಟುಗಳಲ್ಲಿ ವ್ಯಕ್ತವಾಗುತ್ತದೆ.

ಒಗಟುಗಳನ್ನು ವಿವರಣಾತ್ಮಕ, ವಿನೋದಪರ, ಬೌದ್ಧಿಕ, ವಿಷಮ ಪ್ರಶ್ನೆಗಳು, ಹಾಸ್ಯಾನುಕರಣ ಎಂದು ಹಲವು ರೀತಿಯಲ್ಲಿ ವಿಭಾಗಿಸುತ್ತಾರೆ. ಪ್ರಕೃತಿ, ಹಳ್ಳಿಯ ಜೀವ ಮತ್ತು ಕೃಷಿಕರ ಜೀವನಕ್ಕೆ ಸಂಬಂಧಿಸಿದ, ಗೃಹಸ್ಥ ಜೀವನ, ಶರೀರದ ಅಂಗಾಂಗಗಳಿಗೆ ಪ್ರಾಣಿಗಳಿಗೆ ಸಂಬಂಧಿಸಿದ ಅನೇಕ ಒಗಟುಗಳಿವೆ.

ಕೆಲವು ಉದಾಹರಣೆಗಳು:

೧. ಆಯಿರಂ ಕೊಚ್ಚರಿಯಲ್ ಒರು ನೆಡೆಯರಿ
(ಸಾವಿರ ಸಣ್ಣಕ್ಕಿಗಳಲ್ಲಿ ಒಂದು ದೊಡ್ಡಕ್ಕಿ-ಚಂದ್ರ)

೨. ಮುಟ್ಟತ್ತೆ ಕನ್ಯಕ ನಿನ್ನು ಪೆಟ್ರು
(ಅಂಗಳದ ಕನ್ಯೆ ನಿಂತು ಹೆತ್ತಳು -ಬಾಳೆ)

೩. ಅಗತ್ತು ಚತ್ತಾಲ್ ಪುರತ್ತುನಾರುಂ
(ಒಳಗೆ ಸತ್ತರೆ ಹೊರಗೂ ನಾರುತ್ತದೆ-ಹಲಸಿನ ಹಣ್ಣು)

೪. ರಂಡು ಕಿಣರಿನೊರು ಪಾಲಂ
(ಎರಡು ಬಾವಿಗೆ ಒಂದೇ ಸಂಕ-ಮೂಗು)

೫. ಕಂಡಾಲ್‌ವಂಡಿ ತೊಟ್ಟಾಲ್ ಚಕ್ರಂ
(ನೋಡಿದರೆ ಬಂಡಿ ಮುಟ್ಟಿದರೆ ಚಕ್ರ-ಶತಪದಿ)

೬. ಕಾಟ್ಟಿಲ್‌ಕಿಡನ್ನವನ್ ಕೊಟ್ಟಾಯಿವನ್ನು
(ಕಾಡಿನಲ್ಲಿ ಬಿದ್ದಿದ್ದವನು ಜೊತೆಗಾರನಾಗಿ ಬಂದ- ಊರುಗೋಲು)

೭. ಉಳ್ಳಿಲ್‌ಚೆನ್ನಾಲ್ ಕೊಳ್ಳೆಕ್ಕಾರನ್
(ಒಳಗೆ ಹೋದರೆ ಕೊಳ್ಳೆಗಾರ-ಮದ್ಯ)

೮. ಆನೆ ಕೇರಾಮಲ ಅಡ್ ಕೇರಾಮಲ
ಆಯಿರಂ ಕಾಂತಾರಿ ಪೂತ್ತಿರಙ್ಞೆ
(ಆನೆ ಹತ್ತದ ಬೆಟ್ಟ, ಆಡು ಹತ್ತದ ಬೆಟ್ಟ ಸಾವಿರ ಗಾಂಧಾರಿ ಹೂ ಬಿಟ್ಟಿತು – ನಕ್ಷತ್ರ)

ಪದ್ಯರೂಪದಲ್ಲಿರುವ ಅನೇಕ ಒಗಟುಗಳೂ ಇವೆ.

ವೈವಿಧ್ಯವೂ, ವಿಸಾಲವೂ ಆದ ಮಲಯಾಳೀ ಜನಪದ ಸಾಹಿತ್ಯ ಭಾಷೆ, ಸಾಹಿತ್ಯ ಹಾಗೂ ಸಂಸ್ಕೃತಿಯ ದೃಷ್ಟಿಯಿಂದ ತುಂಬಾ ಮಹತ್ತ್ವವುಳ್ಳಂಥದ್ದು. ಮಲಯಾಳ ಭಾಷೆಯ ಬೆಳೆವಣಿಗೆಯ ವಿವಿಧ ಹಂತಗಳನ್ನು, ಸಾಹಿತ್ಯದ ವೈವಿಧ್ಯಮಯ ಬೆಳವಣಿಗೆಯನ್ನು, ಕೇರಳದ ಜನರ ಜನಜೀವನ ಹಾಗೂ ಸಂಸ್ಕೃತಿ ಮೊದಲಾದವುಗಳನ್ನು ಅಲ್ಲಿಯ ಜನಪದ ಸಾಹಿತ್ಯದ ಅಧ್ಯಯನದಿಂದ ತಿಳಿಯಬಹುದಾಗಿದೆ.

.ಎಸ್.ಬಿ.