ಮಾಲೀ ಆಂಧ್ರದ ವಿಶಾಖ, ವಿಜಯನಗರಂ, ಶ್ರೀಕಾಕುಳಂ ಜಿಲ್ಲೆಗಳಲ್ಲಿ ಕಾಣಿಸುತ್ತಾರೆ. ಅವರನ್ನು ‘ಮಹಲಿಗಳು’ ಇಲ್ಲವೆ ‘ಮಲ್ಲೀಲು’ ಎಂದು ಕರೆಯುತ್ತಾರೆ. ಹೂವಿನ ಗಿಡಗಳನ್ನು ಬೆಳೆಸುವುದು, ಹೂವಿನ ಹಾರಗಳನ್ನು ತಯಾರು ಮಾಡಿ ಮಾರುವುದು ಇವರ ಸಾಂಪ್ರದಾಯಿಕ ವೃತ್ತಿ. ಆದರೆ ಅವರು ಸದ್ಯ ಬೇಸಾಯದಲ್ಲಿ ನಿರತರಾಗಿದ್ದಾರೆ. ಅಲ್ಲದೆ ತರಕಾರಿ ಬೆಳೆದು ವಾರಾಂತ್ಯದ ಸಂತೆಗಳಲ್ಲಿ ಮಾರಾಟ ಮಾಡಿ ಹಣವನ್ನು ಸಂಪಾದಿಸುತ್ತಿದ್ದಾರೆ. ಇವರಲ್ಲಿ.

. ಬೋಡೋ ಮಾಲಿಗಳು

೧. ಭಾಂಡ್ಯಾ ಮಾಲಿ
೨. ಪೋಂಡ್ರಾ ಮಾಲಿ
೩. ಢಾಗೊರ್ ಮಾಲಿ

. ಸಾನೋ ಮಾಲಿಗಳು

೧. ಪನ್ನಾರಿ ಮಾಲಿ
೨. ಸೊರುಕತ ಮಾಲಿ
೩. ಡೋಂಗು ರಾಢೀಯಾ ಮಾಲಿ
೪. ಕೊಸಾಲ್ವಾ ಮಾಲಿ

ಎಂಬ ಭೇದಗಳಿವೆ.

ಇವರಲ್ಲಿ ಬೋಡೋ ಮಾಲಿಗಳಿಗೆ ಉನ್ನತ ಪಂಗಡವೆಂಬ ಮನ್ನಣೆಯಿದೆ. ಅವರಲ್ಲಿ ಸ್ತ್ರೀ, ಪುರುಷರಿಬ್ಬರೂ ಜನಿವಾರಗಳನ್ನು ಹಾಕಿಕೊಳ್ಳುತ್ತಾರೆ. ಉಳಿದ ಪಂಗಡಗಳಲ್ಲಿ ಕೇವಲ ಗಂಡಸರು ಮಾತ್ರವೇ ಜಂಧ್ಯೆಗಳನ್ನು ಹಾಕಿಕೊಳ್ಳುತ್ತಾರೆ. ಈ ಸಮುದಾಯದಲ್ಲಿ ಒಂದು ಕಾಲಕ್ಕೆ ‘ಕುಪ್ಪಲ’ ಎಂಬ ಹೆಸರಿನಲ್ಲಿ ಸಾಂಪ್ರದಾಯಿಕ ಸೂತ್ರಗಳಿರುತ್ತಿದ್ದವು. ಇವರಲ್ಲಿ ಪಿತೃ ಪ್ರಧಾನ ವ್ಯವಸ್ಥೆಯಿದೆ. ಮಗಳಿಗೆ ಆಸ್ತಿಯ ಹಂಚಿಕೆಯಲ್ಲಿ ಭಾಗವಿರುವುದಿಲ್ಲ. ಸೋದರಳಿಯ, ಸೋದರ ಸೊಸೆಯನ್ನು ಮದುವೆ ಮಾಡಿಕೊಳ್ಳುತ್ತಾರೆ. ವಿಧವಾ ವಿವಾಹ ಜಾರಿಯಲ್ಲಿದೆ.

‘ಓಲಿ’ ವ್ಯವಸ್ಥೆಯಿದೆ. ವರನ ಮನೆಯಲ್ಲಿ ಮದುವೆಯ ಊಟವಿರುತ್ತದೆ. ಗರ್ಭಿಣಿ ಹೆಣ್ಣಿಗೆ ತವರು ಮನೆಯಲ್ಲೇ ಹೆರಿಗೆ. ಒಂಬತ್ತನೆಯ ದಿನ ತಾಯಿಗೆ ಸ್ನಾನ ಮಾಡಿಸಿ ಹುಟ್ಟಿದ ಶಿಶುವಿಗೆ ನಾಮಕರಣ ಮಾಡಲಾಗುತ್ತದೆ. ಮೈನೆರೆತ ಹುಡುಗಿಗೆ ಅವಳ ಸೋದರ ಮಾವ ಹೊಸ ಬಟ್ಟೆಯನ್ನು ತರುತ್ತಾನೆ. ಔತಣವಿರುತ್ತದೆ. ಗಂಡಸರು ತಂಬಾಕು ಸೇದುತ್ತಾರೆ. ಸಾರಾಯಿ ಕುಡಿಯುತ್ತಾರೆ. ತೀರಿಕೊಂಡವರಿಗೆ ಸ್ನಾನ ಮಾಡಿಸಿ, ಅರಿಸಿನ, ಕುಂಕುಮ ಹಚ್ಚಿ ಹೊಸ ಬಟ್ಟೆ ಹಾಕುತ್ತಾರೆ. ಹಿರಿಯ ಮಗ ಅಂತ್ಯಕ್ರಿಯೆಗಳನ್ನು ನಡೆಸುತ್ತಾನೆ. ಇವರು ಗ್ರಾಮ ದೇವತೆಗಳಾದ ಬೋಡೋ ದೇವತೆ, ಕೊಂಡ ದೇವತೆ, ಸಂಕು ದೇವತೆ, ನೀಷಾನಿ ದೇವತೆಗಳನ್ನು ಪೂಜಿಸುತ್ತಾರೆ. ಮಾಲೀಗಳಲ್ಲಿ ಗಂಡಸರು ಹೆಂಗಸರೆನ್ನದೆ ಎಲ್ಲರೂ ಹಾಡುತ್ತಾರೆ. ಕುಲಪಂಚಾಯಿತಿಯ ಸದಸ್ಯರು ಗ್ರಾಮದ ಸಮಸ್ಯೆಗಳನ್ನು, ಆರ್ಥಿಕ ಸಮಸ್ಯೆಗಳನ್ನು ಕುರಿತು ನಿರ್ಣಯಗಳನ್ನು ತೆಗೆದುಕೊಂಡು ಸಮಸ್ಯೆಗಳನ್ನು ಪರಿಹರಿಸುತ್ತಾರೆ. ಅಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆ.

೨೦೦೧ ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೨,೫೧೩. ಅಂದರೆ ಶೇಕಡಾ ೦.೦೦೫.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಮಾವಿಲರ್ ಅತ್ಯುತ್ತರ ಕೇರಳದ ಪೂರ್ವದ ಮಲೆಪ್ರದೇಶಗಳಲ್ಲಿ ಹಿಂದೆ ವಾಸವಾಗಿದ್ದ ಒಂದು ಜನವರ್ಗ. ಕಣ್ಣುರು ಜಿಲ್ಲೆಯ ತಳಿಪ್ಪರಂಬ್ ತಾಲ್ಲೂಕಲ್ಲೂ ಕಾಸರಗೋಡು ಜಿಲ್ಲೆಯ ಕಾಸರಗೋಡು, ಹೊಸದುರ್ಗ ತಾಲೂಕುಗಳಲ್ಲಿಯೂ ಇವರು ಈಗ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಹಳೆಯ ತುಳು ಮಿಶ್ರಿತವಾದ ಮಲಯಾಳವನ್ನು ಮಾತನಾಡುವ ಇವರು ಕರ್ನಾಟಕ ಜಾತಿಯವರೆಂದೂ ಮಾವಿಲವ್ ಎಂಬ ಔಷಧ ಸಸ್ಯವನ್ನು ಶೇಖರಿಸಿ ಮಾರಾಟ ಮಾಡುವವರೆಂಬ ಅರ್ಥದಲ್ಲಿ ಇವರಿಗೆ ಈ ಹೆಸರು ಲಭ್ಯವಾಯಿತೆಂದೂ ಹೇಳಲಾಗುತ್ತದೆ. ಮಾವಿಲರಲ್ಲಿ ತುಳು ಮಾವಿಲರೆಂದೂ ಎಡೆಮಾವಿಲರೆಂದೂ ಎರಡು ಪಂಗಡಗಳಿವೆ. ಮಾವಿಲರ ಸೃಷ್ಟಿ ಪುರಾಣಗಳನ್ನು ಗಮನಿಸಿದರೆ ಕೊಡಗಿನೊಂದಿಗಿನ ಇವರ ಸಂಬಂಧಕ್ಕೆ ಹೆಚ್ಚಿನ ಒತ್ತು ಬಿದ್ದಿರುವುದು ಕಂಡುಬರುತ್ತದೆ. ಇಂದಿನ ಕರ್ನಾಟಕದಲ್ಲಿರುವ ಕುಂದಾಪುರ ಇವರ ಮೂಲ ಸ್ಥಾನವಾಗಿತ್ತು ಎಂಬುದನ್ನು ಸೂಚಿಸುವ ಹಾಡುಗಳೂ ಕಥೆಗಳೂ ಇವರಲ್ಲಿವೆ.

೧೮೯೧ ರಲ್ಲಿ ಮದರಾಸು ಸಂಸ್ಥಾನದ ಭಾಗವಾಗಿದ್ದ ಮಲಬಾರಿನ ಕುರಿತಾದ ಜನಗಣತಿ ವರದಿಯಲ್ಲಿ ಮಾವಿಲಿರ ಬಗೆಗೆ ಮೊದಲ ಉಲ್ಲೇಖಗಳು ಸಿಗುತ್ತವೆ. ೧೯೭೧ರ ಜನಗಣತಿ ಪಟ್ಟಿಯಲ್ಲಿ ಮಾವಿಲರನ್ನು ಪರಿಶಿಷ್ಟ ಜಾತಿ ವಿಭಾಗದಲ್ಲೂ ೨೦೦೨ ರಲ್ಲಿ ಸಂವಿಧಾನ ತಿದ್ದುಪಡಿ ಮಾಡಿದಾಗ ಇವರನ್ನು ಪರಿಶಿಷ್ಟವರ್ಗದಲ್ಲಿಯೂ ಸೇರಿಸಲಾಗಿದೆ. ಕುಮರಿ ಕೃಷಿಯ ಬಗೆಗಿನ ಇವರ ಸಂಬಂಧವನ್ನು ಸ್ಥಾಪಿಸುವ ಕೆಲವು ಜನಪದ ಹಾಡುಗಳಿವೆ. ಇವರನ್ನು ಅಸ್ಪೃಶ್ಯವರ್ಗದವರಾಗಿ ಸವರ್ಣೀಯರು ಕಾಣುತ್ತಿದ್ದರು. ಅವರು ತಯಾರಿಸುತ್ತಿದ್ದ ಕೃಷಿ ಉತ್ಪನ್ನಗಳನ್ನೂ ಗೃಹೋಪಕರಣಗಳನ್ನೂ ಮೇಲ್ಜಾತಿಯವರು ಸೆಗಣಿ ನೀರು ಚಿಮುಕಿಸಿ ಶುದ್ಧ ಮಾಡಿದ ಬಳಿಕ ಅಥವಾ ನೀರಲ್ಲಿ ಮುಳುಗಿಸಿದ ಬಳಿಕವಷ್ಟೆ ತಮ್ಮ ಮನೆಯೊಳಗೆ ಒಯ್ಯುತ್ತಿದ್ದರು.

ಜಾತಿಯ ಹಿರಿಯ/ಮುಖ್ಯಸ್ಥ ಎಂಬ ಸ್ಥಾನವನ್ನು ಮುಖ್ಯವಾಗಿಟ್ಟು ಕೊಂಡು ಆದಿವಾಸಿಗಳ ಸಾಮಾಜಿಕ ಬದುಕು ರೂಪಿತವಾಗುತ್ತಿತ್ತು. ಹಿರಿಯವ ಸಹಾಯಕರಾಗಿದ್ದ ಕುಟುಂಬ ಮುಖ್ಯಸ್ಥರು ಮತ್ತು ಹಿರಿಯ – ಇವರನ್ನೊಳಗೊಂಡ ಒಂದು ನಿಯಂತ್ರಣ ವ್ಯವಸ್ಥೆ ಮಾವಿಲರಲ್ಲಿದೆ. ಮಾವಿಲ ಜಾತಿಯ ಹಿರಿಯನು ಊರ್‌ರಾಯರು, ತಲಯಡಿಯನ್‌ಎಂಬ ಹೆಸರುಗಳಿಂದ ಕರೆಸಿಕೊಳ್ಳುತ್ತಾರೆ. ರಾಜ್ಯವಾಳುವ ಅರಸು ಊರ್‌ರಾಯರನ್ನು ಅಂಗೀಕರಿಸುವ ಒಂದು ಕಾರ್ಯಕ್ರಮ ಕೂಡ ಮಾವಿಲರಲ್ಲಿ ಮುಖ್ಯವಾದುದಾಗಿದೆ. ಊರ್‌ರಾಯರು ಅರಸನ ದರ್ಶನಕ್ಕಾಗಿ ಪರಿವಾರ ಸಮೇತ ಹೋದಾಗ ಅರಸನು ಊರ್‌ರಾಯನಿಗೆ ತೆಂಗಿನಕಾಯಿ, ಭತ್ತ ಹೊಸಪಂಚೆ ಮುಂತಾದುವನ್ನು ಕೊಟ್ಟು ‘ಊರ‍್ರಾಯರ್‌’ ಎಂದು ಮೂರು ಬಾರಿಗಟ್ಟಿಯಾಗಿ ಕರೆಯುತ್ತಾನೆ. ಕಾಸರಗೋಡು ಜಿಲ್ಲೆಯ ಮಾವಿಲರು ಒತ್ತೆಕ್ಕೋಲ (ಕೆಂಡಸೇವೆ)ದ ತೆಯ್ಯಂ ಕಲಾವಿದನನ್ನು ‘ಚಿಂಗಂ’ ಎಂಬ ಗೌರವಸೂಚಕ ಪದದಿಂದ ಕರೆಯುತ್ತಾರೆ.

ಇವರ ಕುಟುಂಬಗಳಿಗೆ ಅವರದೇ ಆದ ‘ಇಲ್ಲಂ’ಗಳಿವೆ. ಒಂದು ಇಲ್ಲಂನವರು ಒಂದು ಮೂಲ ಕುಟುಂಬಕ್ಕೆ ಸೇರಿದವರು. ಕಾಸರಗೋಡು ಜಿಲ್ಲೆಯ ಮಾವಿಲರು ಹತ್ತು ಇಲ್ಲಂಗಳಿಗೆ ಸೇರಿದವರು. ಇಲ್ಲಂಗಳ ಮೂಲಕ ಸಹೋದರ ಕುಟುಂಬಗಳು ಮತ್ತು ಸಹೋದರ ಕುಟುಂಬಗಳಲ್ಲದವು ಎಂದು ತಿಳಿಯಲು ಸಾಧ್ಯ. ರಕ್ತಸಂಬಂಧಿ ಇಲ್ಲಂಗಳಲ್ಲಿಯ ಸದಸ್ಯರಲ್ಲಿ ಪರಸ್ಪರ ವಿನಾಹ ನಿಷಿದ್ಧ. ಮಾವಿಲರು ಚಿಕ್ಕಚಿಕ್ಕ ಕುಟುಂಬಗಳಾಗಿ ವಾಸಿಸುತ್ತಾರೆ. ವಿವಾಹಿತರು ಬೇರೆ ಇಲ್ಲ್ (ಮ. ಪಟ್ಟಂ)ಗಳನ್ನು ಕಟ್ಟಿ ವಾಸಿಸುತ್ತಾರೆ.

ಇವರಲ್ಲಿ ಅನೇಕ ಜೀವಿತಾವರ್ತನ ಕ್ರಿಯೆಗಳಿವೆ. ಏಳನೆಯ ತಿಂಗಳಲ್ಲಿ ಗರ್ಭಿಣಿಗೆ ಪೂಂಙಲಂ (ಪೂಂಙ ಮಂಙಲಂ) ಕಾರ್ಯಕ್ರಮವನ್ನು ಜರುಗಿಸುತ್ತಾರೆ. ಗರ್ಭಿಣಿಯಾದ ಸ್ತ್ರೀಯನ್ನು ಗಂಡನ ಮನೆಯಿಂದ ಉಡಿತುಂಬಿಸಿ (ಮಡಿಲಲ್ಲಿ ಅಕ್ಕಿ ಹಾಕುವ ಕಾರ್ಯಕ್ರಮ) ಕರೆದುಕೊಂಡು ಬರುತ್ತಾರೆ. ಗಂಡನ ತಾಯಿ ಅತ್ತೆ ಎಂದರೆ ಗರ್ಭೀಣಿಯ ಉಟ್ಟಬಟ್ಟೆಯ ಸೆರಗಲ್ಲಿ ಮೂರು ಹಿಡಿ ಬೆಳ್ತಿಗೆ ಅಕ್ಕಿಯನ್ನು ಶುಭನುಡಿಗಳೊಂದಿಗೆ ಬಾಚಿ ಹಾಕುತ್ತಾಳೆ. ಉರಿಸಿದ ದೀಪದೊಂದಿಗೆ ಆ ಬಳಿಕ ಅವಳು ಗರ್ಭಿಣಿಯನ್ನು ಮನೆಯ ಹೊಸ್ತಿಲ ತನಕ ಕರೆದೊಯ್ದು ತವರು ಮನೆಗೆ ಕಳುಹಿಸಿ ಕೊಡುತ್ತಾಳೆ. ಗರ್ಭಿಣಿಯು ಪ್ರಸವಿಸಿದುದು ಗಂಡಾದರೆ ದುಡಿಬಾರಿಸಿಯೂ ಹೆಣ್ಣಾದರೆ ಬಟ್ಟಲಿಗೆ ಬಿದಿರಿನ ಕೋಲಿನಿಂದ ಬಾರಿಸಿ ಶಬ್ದ ಮಾಡುತ್ತಾರೆ. ಇದರಿಂದ ನವಜಾತಶಿಶುವಿಗೆ ಭಯ ನಿವಾರಣೆಯಾಗುವುದೆಂದೂ ಉಳಿದವರಿಗೆ ಮಗು ಹುಟ್ಟಿದ ವಿಷಯ ತಿಳಿಯುವಂತಾಗುವುದೆಂದೂ ಅವರ ಉದ್ದೇಶವಿದೆ. ಹೆಣ್ಣು ಅಥವಾ ಗಂಡು ಮಗು ಯಾವುದೇ ಇರಲಿ, ಮುಂದೆ ಅದಕ್ಕೆ ಕಿವಿ ಚುಚ್ಚುವುದು ಕಡ್ಡಾಯ. ‘ಕಿವಿ ಚುಚ್ಚಿದರೆ ಅಸಲು ಮಾಯಿಲ’ ಎಂಬುದೊಂದು ನುಡಿಗಟ್ಟೇ ಆಗಿದೆ. ಐದು ವರ್ಷ ಪ್ರಾಯ ಆಗುವ ಮುನ್ನ ಕಿವಿ ಚುಚ್ಚಿಯೇ ಬಿಡುತ್ತಾರೆ.

ಹುಡುಗಿ ಮೊದಲ ಬಾರಿ ರಸಜ್ವಲೆಯಾದಾಗ ಮುಟ್ಟಿನ ಮದುವೆ ನಡೆಸುತ್ತಾರೆ. ಮುಟ್ಟಾದ ಹುಡುಗಿಯನ್ನು ಪ್ರತ್ಯೇಕವಾದ ಜಾಗದಲ್ಲಿ ಕುಳ್ಳರಿಸುತ್ತಾರೆ. ಕಾಸರಗೋಡಿನ ಕೆಲವು ಭಾಗಗಳಲ್ಲಿ ‘ಜಿಕ್ಕಳ್‌ಮುಟ್ಟಿ’ ಎಂಬ ಪ್ರತ್ಯೇಕ ಕೋಣೆಯನ್ನು ಸಿದ್ಧಪಡಿಸಿ ಅವಳನ್ನು ಅಲ್ಲಿ ಕುಳ್ಳಿರಿಸುತ್ತಾರೆ. ಮುಟ್ಟಿನ ಮದುವೆಗೆ ಸಂಬಂಧಿಸಿ ಮೂರನೇ ಸ್ನಾನ ಮತ್ತು ಐದನೇ ಸ್ನಾನಗಳು ನಡೆಯುತ್ತವೆ. ಮೊದಲನೆಯದನ್ನು ನಡೆಸುವಾಗ ಬಂಧು ಮಿತ್ರದಿಗಳನ್ನು ಆಮಂತ್ರಿಸಲು ಹೋಗುತ್ತಾರೆ. ಐದನೆ ಸ್ನಾನದಂದು ಔತಣವನ್ನು ಏರ್ಪಡಿಸುತ್ತಾರೆ. ಮುಟ್ಟಿನ ಮದುವೆ ಕಳೆದ ಹೆಣ್ಣಿಗೆ ಮಾತ್ರ ‘ಮಾಯಿಲೆತ್ತಿ’ ಆಗಲು ಸಾಧ್ಯ. ಅದುವರೆಗೆ ಅವಳು ಅರೆಮಾಯಿಲೆತ್ತಿ ಎಂದು ಮಾತ್ರ ಪರಿಗಣಿತಳಾಗುತ್ತಳೆ. ಐದನೇ ದಿನದ ಕಾರ್ಯಕ್ರಮದಂದು ಉಳಿದ ಹೆಂಗಸರು ಸೇರಿ ‘ಮಂಗಳಂ ಕಳಿ’ ಕಾರ್ಯಕ್ರಮವನ್ನು ನಡೆಸುತ್ತಾರೆ.

ಮದುವೆಯನ್ನು ಮಂಗಲಂ, ಮದುವೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಹುಡಗನು ಮೂರು ‘ಪರೆ’ ಬತ್ತ (ಸು. ಮೂವತ್ತಾರು ಕಿಲೋ)ವನ್ನು ಹೆಗಲೇರಿಸಿಕೊಂಡು ಗುಡ್ಡವಳಿಯುವ ತಾಕತ್ತಿದ್ದರೆ ವಿವಾಹಯೋಗ್ಯನೆಂದು ಪರಿಗಣಿಸುತ್ತಾರೆ ಮುಟ್ಟಿನ ಮದುವೆ ನಡೆದ ಹುಡುಗಿ ಮಂಗಲಂ ಕಾರ್ಯಕ್ರಮಕ್ಕೆ ಪ್ರಾಯ ಬಂದವಳೆಂದು ಪರಿಗಣಿತಳಾಗುತ್ತಾಳೆ. ಮದುವೆಯಲ್ಲಿ ‘ಉಳ್ಳರಿಯಿಕ್ಕಲ್’ ‘ಸಮ್ಮದಂ’ ‘ನಿಶ್ಚಯಂ’ ‘ಕಲ್ಯಾಣಂ’ ಹೀಗೆ ನಾಲ್ಕು ಹಂತಗಳಿವೆ. ಯಾರಾದರೂ ಸತ್ತಾಗ ಶವವನ್ನು ಹೂಳುವ ಇಲ್ಲವೇ ಸುಡುವ ಪದ್ಧತಿ ಇದೆ. ಸಮಾಜದಲ್ಲಿ ಹಿರಿಯ ಸ್ಥಾನಮಾನದ ಕೀರಾನ್, ತಲಯಡಿಯಾನ್, ಚಿಂಗಂ ಮುಂತಾದವರ ಶವಗಳನ್ನು ಸುಡುತ್ತಾರೆ. ‘ಅಂಗೀಕಾರ’ ಪಡೆದ ಒಬ್ಬ ತೆಯ್ಯಂ ಕಲಾವಿದ ತೀರಿಕೊಂಡರೆ ಆತ ಕೊನೆಯ ಬಾರಿಗೆ ಕಟ್ಟಿ ಆಡಿದ ತೆಯ್ಯಾನ ಮುಖವರ್ಣಿಕೆ ಮರೆತು ವೇಷಭೂಷಣಗಳಿಂದ ಅಲಂಕರಿಸಿ ಶವವನ್ನು ಚಟ್ಟದಲ್ಲಿ ಏರಿಸಿ ಅರ್ಧದಾರಿ ಕ್ರಮಿಸಿದಾಗ ಚಟ್ಟವನ್ನು ಕೆಳಗಿಳಿಸುತ್ತಾರೆ. ಅಲ್ಲಿ ವೇಷಭೂಷಣಗಳನ್ನು ಶವದಿಂದ ಕಳಚಿ ಶ್ಮಶಾನಕ್ಕೆ ಒಯ್ಯುತ್ತಾರೆ. ಸತ್ತವರ ಕುರಿತು ಹದಿನಾಲ್ಕು ದಿನಗಳ ಸೂತಕ. ಸತ್ತವನನ್ನು ಪ್ರತಿನಿಧಿಸಿ ತರವಾಡಿನಲ್ಲಿ ಒಂದು ಪ್ರತ್ಯೇಕ ಮರದ ಹಲಗೆಯನ್ನು ಪವಿತ್ರವಾದ ಒಂದು ಜಾಗದಲ್ಲಿ ಸ್ಥಾಪಿಸುವ ಕ್ರಮ ಇತ್ತೀಚಿನವರೆಗೂ ರೂಢಿಯಲ್ಲಿತ್ತು.

ಭೂಮಿ, ಕೃಷಿ, ಬೀಜ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳು ಮಾವಿಲರಲ್ಲಿವೆ. ಪ್ರತಿ ಆಚರಣೆಯ ಹಿಂದೆ ಬೇರೆ ಬೇರೆ ದೇವತಾ ಸಂಕಲ್ಪವಿದೆ. ಕುಮರಿ ಬೇಸಾಯಕ್ಕೆ ಆಯ್ದುಕೊಂಡ ಕಾಡಿನ ನೈಋತ್ಯ ಭಾಗದ ಕಾಸರಕನ ಮರದ ಬುಡದಲ್ಲಿ ಮಲೆದೈವಕ್ಕೆ ನೈವೇದ್ಯ ನೀಡಿದ ಬಳಿಕವೇ ಕುಮರಿ ಕಡಿಯಲು ಆರಂಭವಾಗುತ್ತದೆ. ಕುಮರಿ ಬಿತ್ತುವ ಮೊದಲು ಕೃಷಿ ಮಾಡುವ ಜಾಗದಲ್ಲಿ ಕೊಡುವಾಳನ್ ದೈವವನ್ನು ಕಟ್ಟಿ ಆಡುತ್ತಾರೆ. ಈ ದೈವವನ್ನು ಮಾವಿಲರೇ ಕಟ್ಟಿ ಆಡುತ್ತಾರೆ. ಪ್ರಕೃತಿಯಿಂದ ದೊರಕುವ ವಸ್ತುಗಳಿಂದಲೇ ವೇಷದ ವಸ್ತುಗಳನ್ನೂ ಬಣ್ಣಗಳನ್ನೂ ತಯಾರಿಸಿಕೊಂಡು ಇವರು ತಾವೇ ತಮ್ಮ ಕಾವು (ಬನ)ಗಳಲ್ಲಿ ತೆಯ್ಯ ಕಟ್ಟಿ ಆಡುತ್ತಾರೆ. ಪುಳ್ಳಿಕ್ಕುರತ್ತಿ, ಮಲಂಕುರತ್ತಿ, ನಾಡನ್‌ಕುರತ್ತಿ, ಕುಂಞಾನ್‌ಕುರತ್ತಿ ಮುಂತಾದ ಭೂಸಂಬಂಧಿ ದೈವಗಳೂ ನರುಕಂಡನ್, ಚಿಂಗತ್ತನ್ ವೀರನ್, ವೀರಬಿನಾರ್ ಮುಂತಾದ ವೀರ ದೈವಗಳೂ ಕಾರಣೋನ್, ಮುತ್ತಾರನ್ ಮುಂತಾದ ಪಿತೃದೈವಗಳೂ ಮಾವಿಲರಲ್ಲಿವೆ. ಮಂಗಲಂಕಳಿ, ಎರುದ್‌ಕಳಿ ಮುಂತಾದ ಕಲಾರೂಪಗಳೂ ಚಾಲ್ತಿಲ್ಲಿದ್ದುವು. ಕಾಡುಗಳಿಂದ ಸಂಗ್ರಹಿಸಿದ ಓಟೆಬಿದಿರು, ಬಿದಿರು, ಬೆತ್ತ ಮುಂತಾದುವುಗಳಿಂದ ಕೃಷಿ ಉಪಕರಣಗಳು ಮತ್ತು ಗೃಹೋಪಕರಣಗಳನ್ನು ಇವರು ತಯಾರಿಸುತ್ತಿದ್ದರು. ದೊಡ್ಡ ದೊಡ್ಡ ಮರಗಳಲ್ಲಿ ಸಂಗ್ರಹಿತವಾಗುತ್ತಿದ್ದ ಜೇನನ್ನು ಇವರು ‘ಮೊಟ್ಟಂಬು’ ಎಸೆದು ಅಂಬಿಗೆ ಸುತ್ತಿದ ನೂಲಿನ ಮೂಲಕ ಅದು ಕೆಳಗಿಳಿಯುವಂತೆ ಮಾಡಿ ಕೆಳಗೆ ಇರಿಸಿದ ಪಾತ್ರೆಗಳಲ್ಲಿ ಸಂಗ್ರಹಿಸುತ್ತಾರೆ. ಕೊತ್ತು ಕೆಣಿ, ಚವಿಟ್ಟು ಕೆಣಿ, ಕುರಂಙ್ ಕೆಣಿ, ಬಲೆ ಮತ್ತು ಗೂಡು ಮುಂತಾದ ಉಪಾಯಗಳಿಂದ/ ತಂತ್ರಗಳಿಂದ/ ಉರುಳುಗಳಿಂದ ಮೃಗಪಕ್ಷಿಗಳನ್ನೂ ಮೀನುಗಳನ್ನೂ ಇವರು ಹಿಡಿಯುತ್ತಿದ್ದರು.

ಬುಡಕಟ್ಟು ಜನಾಂಗದ ವೈಶಿಷ್ಟ್ಯಗಳನ್ನು ಉಳಿಸಿಕೊಂಡಿರುವ ಮಾವಿಲರು ಪುರಾತನ ಆಸ್ಟ್ರೋಲೋಯ್ಡ್ ನಿಗ್ರಿಟೋ ವರ್ಗದ ಜನರ ಪೀಳಿಗೆಯವರೆಂದು ಭಾವಿಸಲಾಗಿದೆ.

ಪಿ.ವಿ.ಎಂ. ಅನುವಾದ ಕೆ.ಕೆ.

 

ಮಾಸ್ತಮ್ಮ ಜನಪದ ದೇವತೆಗಳಲ್ಲಿ ಒಬ್ಬಳು. ಇವಳನ್ನು ಗೃಹದೇವತೆ ಎಂದು ಗುರುತಿಸಲಾಗಿದೆ. ಪ್ರತಿಯೊಂದು ಊರಿನಲ್ಲಿಯೂ ಒಬ್ಬ ಗೃಹದೇವತೆಯನ್ನು ಆರಾಧಿದುಸುವುದು ನಮ್ಮ ಜನಪದರ ಸಂಪ್ರದಾಯ. ಮಾಸ್ತಮ್ಮ ದಕ್ಷಿಣ ಕರ್ನಾಟಕದ ಪ್ರದೇಶದಲ್ಲಿ ಆರಾಧಿಸಲ್ಪಡುವ ಒಬ್ಬ ಗೃಹದೇವತೆ ಎನಿಸಿದ್ದಾಳೆ. ಮಹಾ ಸತಿ+ಅಮ್ಮ ಎಂಬುದೇ ಮಾಸ್ತಮ್ಮ. ಜನಪದರ ಬಾಯಿಯಲ್ಲಿ ಇದು ಮುಂದೆ ಮಾಸ್ತಮ್ಮ ಎಂದು ಚಾಲ್ತಿಗೆ ಬಂತು. ಕೌಟುಂಬಿಕ ಇಲ್ಲವೆ ಸಾಮಾಜಿಕ ಕಾರಣಗಳಿಗಾಗಿ ಜೀವತ್ಯಾಗ ಮಾಡಿದ ಹೆಣ್ಣೊಬ್ಬಳ ಬಲಿದಾನದ ಕಥೆ ಇದರ ಹಿಂದೆ ಇದೆ ಎಂದು ನಂಬಲಾಗಿದೆ.

ಮಾಸ್ತಮ್ಮನ ಕುರಿತಂತೆ ಹಲವು ಕಥೆಗಳು ದಕ್ಷಿಣ ಕರ್ನಾಟಕದಲ್ಲಿವೆ. ಮಾಸ್ತಮ್ಮ ಸತಿಹೋದ ಕಥೆ ಮಂಡ್ಯ ಜಿಲ್ಲೆಯಲ್ಲಿ ಪ್ರಚಲಿತವಿದೆ. ಮಂಡ್ಯ ತಾಲ್ಲೂಕಿನ ಹೊಸಕೆರೆಯಲ್ಲಿ ಮಾಸ್ತಮ್ಮನ ಗುಡಿ ಇದೆ. ವಿವಾಹ ಸಂದರ್ಭ ಹಬ್ಬ ಹರಿದಿನಗಳಲ್ಲಿ ಮಾಸ್ತಮ್ಮನ ಒಕ್ಕಲಿನವರು ಅವಳಿಗೆ ಪೂಜೆ ಸಲ್ಲಿಸುವುದುಂಟು.

ಮಂಡ್ಯ ತಾಲ್ಲೂಕಿನ ಗುತ್ತಲು ಗ್ರಾಮದ ಸೊಸೆಯೊಬ್ಬಳ ದಾರುಣ ಕತೆಯ ಸ್ಮಾರಕವಾಗಿ ಇಲ್ಲೊಂದು ಮಾಸ್ತಿ ಗುಡಿ ಇದೆ. ಗಂಡ ದಂಡಿಗೆ ಹೋದಾಗ ಅತ್ತೆ ಮಾವ ನಾದಿನಿಯ ಹಿಂಸೆ ಸೊಸೆಗೆ ಹೆಚ್ಚಾಗುತ್ತದೆ. ಈ ಸಂದರ್ಭದಲ್ಲಿ ಮಾದಿಗನೊಬ್ಬ ಮನೆಯೊಳಗೆ ನುಗ್ಗಿ ಆಕೆಯಶೀಲವನ್ನು ಅಪಹರಿಸಲು ಯತ್ನಿಸಿದ. ಅವನ ಕೈಯಿಂದ ಬಿಡಿಸಿಕೊಂಡು ಊರ ಮುಂದಿನ ಕಾಳಮ್ಮನ ಗುಡಿ ಎದುರು ‘ಈ ಊರಿಗೆ ಬಂದ ಸೊಸೆಯರು, ಸುಖವಾಗಿರಲಿ ಈ ಊರಿಂದ ಹೋದ ಹೆಣ್ಣು ಮಕ್ಕಳು ಕಷ್ಟಕ್ಕೆ ಗುರಿಯಾಗಲಿ’ ಎಂದೂ ಅಗ್ನಿ ಪ್ರವೇಶ ಮಾಡಿದಳಂತೆ. ಆ ಮಹಾಸತಿಗೆ ಕಟ್ಟಿದ ಗುಡಿಯೇ ಈಗಲು ಇರುವ ಮಾಸ್ತಿಗುಡಿ.

ಮಂಡ್ಯ ತಾಲ್ಲೂಕು ದುದ್ದ ಹೋಬಳಿ ಮುದಗಂದೂರು ಹೊಸಹಳ್ಳಿಯಲ್ಲಿ ‘ಮಾಸ್ತಮ್ಮನ ಗುಡಿ’ ಇದೆ. ಗರುಡನ ಹಳ್ಳಿಯ ಹೆಣ್ಣು ಮಗಳೊಬ್ಬಳು ಹೊಸಹಳ್ಳಿಯ ಯುವಕನ ಜೊತೆ ಮದುವೆ ಆಗುತ್ತಿರುವಾಗ ಅಕಸ್ಮಾತ್ತಗಿ ಹೊಲದಲ್ಲಿ ದನಗಳಿಂದ ಸೂರೆಯಾಗುತ್ತಿದೆ ಎಂಬ ಸುದ್ದಿ ತಿಳಿದು ಹೊಲದ ಬಳಿ ಓಡಿ ಹೋಗುತ್ತಾನೆ. ಅಲ್ಲಿ ಹೇಗೋ ಏನೋ ಸಾವನ್ನಪ್ಪುತ್ತಾನೆ. ಆ ಸುದ್ದಿ ಕೇಳಿ ತಾನು ಚಿತೆಯೇರಿ ಮಹಾಸತಿಯಾಗುತ್ತಾಳೆ. ಅದರ ಪ್ರತೀಕವಾಗಿ ಮಾಸ್ತಮ್ಮನ ಗುಡಿ ನಿರ್ಮಾಣವಾಗಿ ಪೂಜಿಸಲ್ಪಡುತ್ತಿದೆ.

ಹೀಗೆ ಬೇರೆ ಬೇರೆ ಕಡೆಯಲ್ಲಿ ಬೇರೆ ಬೇರೆ ಕಥೆಗಳು ಮಾಸ್ತಮ್ಮನಿಗೆ ಸಂಬಂಧಪಟ್ಟಂತೆ ಇದ್ದರೂ ಮೂಲ ಆಶಯ ಒಂದೇ ಇರುವುದು ಗಮನಾರ್ಹ. ಗಂಡನಿಲ್ಲದೆ ಬದುಕುವುದು ಅಸಾಧ್ಯ ಎಂಬ ಮನೋಧರ್ಮದಿಂದ ಗಂಡಸತ್ತ ಮೇಲೆ ಹೆಂಡತಿ ಸಹಗಮನ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಸತಿ ಹೋಗುವವರ ನೆನಪಿಗೆ ಕಲ್ಲುಗಳನ್ನು ನೆಟ್ಟು ಗೌರವಿಸುವ ಹಾಗೆ ಗುಡಿಕಟ್ಟಿಯೂ ಗೌರವಿಸುತ್ತಾರೆ.

ಎಚ್.ಜೆ.ಎಸ್.

 

ಮೀನಪೂರಂ ಉತ್ತರ ಕೇರಳದಲ್ಲಿ ಕನ್ಯೆಯರು ನಡೆಸುವ ವಿಶಿಷ್ಟವಾದ ಒಂದು ಆಚರಣೆ. ಕಾರ್ತಿಕ ನಕ್ಷತ್ರದಲ್ಲಿ ಆರಂಭಗೊಂಡು ಮೀನಮಾಸದ ಪೂರಂ ದಿವಸ ಕಾಮನನ್ನು ಕಳುಹಿಸುವ ವಿಧಿಯೊಂದಿಗೆ ಈ ಆಚರಣೆ ಕೊನೆಗೊಳ್ಳುವುದು. ಸಾಮಾನ್ಯವಾಗಿ ಮಾರ್ಚ್ – ಏಪ್ರಿಲ್ ತಿಂಗಳಲ್ಲಿ ಮನೆ, ಕಾವು, ತಾನಗಳಲ್ಲಿ ಪೂರಂ ಆಚರಣೆ ನಡೆಯುತ್ತದೆ. ಇದು ಸ್ತ್ರೀ ಪ್ರಾಧಾನ್ಯವಿರುವ ಒಂದು ಆಚರಣೆಯಾಗಿದೆ.

ಕನ್ಯೆಯರು ‘ಹೂ ಹಾಕುವ’ ವಿಧಿಯೊಂದಿಗೆ ಪೂರಂ ಆರಂಭವಾಗುವುದು. ಈ ಕನ್ಯೆಯರನ್ನು ”ಪೂಕುಂಞೆ’ ಎಂದು ಕರೆಯುತ್ತಾರೆ. ತರವಾಡು ಮನೆಗಳ ಹಿರಿಯ ಮಹಿಳೆಯರು ಮಕ್ಕಳು ಹೂ ಹಾಕಲು ಸಹಾಯ ಮಾಡುವರು. ವ್ರತಾಚರಣೆಯೊಂದಿಗೆ ಈ ವಿಧಿಯನ್ನು ನೆರವೇರಿಸಬೇಕು. ವ್ರತಾಚರಣೆಯ ಕಾಲಾವಾಧಿ ವಿವಿಧ ಸಮುದಾಯಗಳಲ್ಲಿ ವ್ಯತ್ಯಸ್ತವಾಗಿದೆ. ನಕ್ಷತ್ರ ರಾಶಿಗೆ ಅನುಗುಣವಾಗಿ ಹೂ ಹಾಕುವ ಕ್ರಿಯೆ ಒಂಬತ್ತು, ಏಳು, ಐದು, ಮೂರು ದಿನಗಳಲ್ಲಿ ನಡೆಯುವುದು. ಕಾವುಗಳಲ್ಲಿ ನಡೆಯುವ ಪೂರಂ ಆಚರಣೆಯಲ್ಲಿ ಕೆಲವು ವ್ಯತ್ಯಾಸಗಳಿವೆ. ಅಲ್ಲಿ ಕ್ಷೇತ್ರ ಸ್ಥಾನಿಕರು ಹೂ ಹಾಕುವ ಕ್ರಮವಿದೆ. ತರವಾಡು ಹಾಗೂ ನಾಡಿನ ಸಮೃದ್ಧಿಗಾಗಿ ನಡೆಸುವ ಈ ಆಚರಣೆಯು ‘ಕಾಮಪೂಜೆ’ ಎಂದೇ ಪ್ರಸಿದ್ಧವಾಗಿದೆ.

ಆಚರಣೆ : ಮೀನಮಾಸದ ಕಾರ್ತಿಕ ನಕ್ಷತ್ರದಿಂದ ವ್ರತಾಚರಣೆ ಆರಂಭವಾಗುತ್ತದೆ. ಕನ್ಯೆಯರು ಈ ಅವಧಿಯಲ್ಲಿ ಮೀನು ಮಾಂಸಾದಿಗಳನ್ನು ತಿನ್ನಬಾರದು. ಎಣ್ಣೆ ಹಚ್ಚಿ ಸ್ನಾನ ಮಾಡಬಾರದು. ಹಗಲು ನಿದ್ದೆ ಮಾಡಬಾರದು. ಬೆಳಗ್ಗೆ ಮತ್ತು ಸಂಜೆ ಕೆರೆ ಅಥವಾ ಹೊಳೆಯಲ್ಲಿ ಸ್ನಾನ ಕಡ್ಡಾಯವಾಗಿದೆ.

ಪೂರಂ ಕನ್ಯೆಯರು ಮುಂಜಾನೆ ಎದ್ದು ‘ಪೂಕುರಿಯ’ದಲ್ಲಿ (ಹೂವಿನ ಬುಟ್ಟಿ) ಹೂವು ಸಂಗ್ರಹಿಸುವರು. ಹಿರಿಯರು, ಮಕ್ಕಳು ಹೂ ಕೊಯ್ಯಲು ಸಹಾಯ ಮಾಡುವರು. ಈ ಹೂಗಳಿಗೆ ‘ಪೂರಪೂಕಳ್’ ಎನ್ನುವರು. ಮುರಕ್ಕಿನ್‌ಪೂ, ಎರಿಕ್ಕಿನ್‌ಪೂ, ಕಡಪೂ, ಅದಿರಾಣಿಪೂ, ಪಾಲಪೂ, ಪಯರಪೂ, ಚೆಂಬಗಪೂ, ಇಲಞೆಪೂ, ಮುಲ್ಲಪ್ಪ, ಕೈದಪೂ, ಆಲೋತಿಲ್‌ಪೂ, ಕಿಳಿತಿನ್ನಿಪೂ ಎಂಬಿವು ‘ಪೂರಪೂಕಳ್’. ಹೂ ಕೊಯ್ದು ಸೂರ್ಯದೇವರನ್ನು ಸ್ಮರಿಸಿ ಬುಟ್ಟಿಯಲ್ಲಿ ತುಂಬಿಸುವರು.

ಕೆರೆಯ ದಡದಲ್ಲಿ ಹೂ ಹಾಕಲು ಆರಂಭಿಸುವರು. ಅನಂತರ ದಿವಸಗಳಲ್ಲಿ ಬಾವಿ, ಅಂಗಳ, ಮನೆಯ ದೇವರ ಕೋಣೆ ಎಂಬ ಸ್ಥಳಗಳಲ್ಲಿ ಹೂ ಹಾಕುವರು. ಮಣಿಯಾಣಿ ಸಮುದಾಯದವರು ಕೊಟ್ಟಿಗೆಯಲ್ಲಿ ಹೂ ಹಾಕುವರು ಅಥವಾ ಮನೆಯಂಗಳದಲ್ಲಿ ಚಪ್ಪರ ಹಾಕಿ ‘ಕಾಮಗೃಹ’ವನ್ನು ನಿರ್ಮಿಸಿ ಹೂ ಹಾಕುವರು. ನಾಯರ್ ಮತ್ತು ಮುರಾರಿ ಸಮುದಾಯದವರು ಕೆರೆದಡ, ಬಾವಿ ಹಾಗೂ ಮನೆಯ ದೇವರ ಕೋಣೆಯಲ್ಲಿ ಹೂ ಹಾಕುವರು. ತೀಯರು ಬಾವಿ ಹಾಗೂ ದೇವರ ಕೋಣೆಯಲ್ಲಿ ಹೂ ಹಾಕುವರು.

‘ಪೂರಕುಂಞೆ’ಗಳು ಸ್ನಾನ ಮಾಡಿ, ತಿಲಕ ಧರಿಸಿ ಬರುವಾಗ ಹಿರಿಯರು ದೀಪ, ಕಳಸ ಮೊದಲಾದ ಪೂಜಾಸಾಮಗ್ರಿಗಳನ್ನು ಸಿದ್ಧ ಮಾಡುವರು. ಪೂರ್ವಭಾಗಕ್ಕೆ ಮುಖ ಮಾಡಿ ನಿಲ್ಲುವ ಬಾಲಿಕೆಯರು ಭಸ್ಮ ಲೇಪಿಸಿದ ಹಲಗೆಯಲ್ಲಿ ಹೂ ಹಾಕುವರು. ಹೀಗೆ ಪ್ರತಿಯೊಬ್ಬ ಬಾಲಿಕೆಯೂ ಮೂರು ಬಾರಿ ನಿರ್ದಿಷ್ಟ ವಿಧಿವಿಧಾನಗಳೊಂದಿಗೆ ಹೂ ಹಾಕುವರು. ಅಲ್ಲಿ ಸೇರಿದವರು ಉದ್ಘೋಷ ಮಾಡುತ್ತಿರುತ್ತಾರೆ. ಸಂಜೆ ಕಾಮದೇವನಿಗೆ ‘ಹಸಿವಿದೆಯಾ, ಬಾಯಾರಿಕೆ ಇದೆಯಾ’ ಎಂದು ಕೇಳುತ್ತಾ ಮೂರು ಬಾರಿ ಹೂವಿಗೆ ನೀರು ಸಿಂಪಡಿಸುವರು. ಮರುದಿವಸ ಯಥಾಕ್ರಮ ಹಳೆಹೂವನ್ನು ತೆಗೆದು ಹೊಸ ಹೂವನ್ನು ಹಾಕುವರು.

ಪೂರಂ ದಿವಸ ಕಾಮದೇವನ ರೂಪವನ್ನು ಕೆಲವು ಸಮುದಾಯದವರು ರಚಿಸುವರು. ಮಣ್ಣು ಹಾಗೂ ಹೂವಿನಿಂದ ಕಾಮರೂಪವನ್ನು ರಚಿಸಿ ಪೂಜಿಸುವುದು ಕ್ರಮ. ಹಿರಿಯರ ಸಾನ್ನಿಧ್ಯದಲ್ಲಿ ಪೂರಂ ಬಾಲಿಕೆಯರು ಈ ಕೆಲಸವನ್ನು ಮಾಡುವಾಗ ಬಾಯಿಯಿಂದ ಉದ್ಘೋಷ ಮಾಡುವರು. ಕಾಮನನ್ನು ರಚಿಸಿದ ನಂತರ ‘ಪೂರಕಞೆ’ ಹಾಗೂ ‘ಪೂರಡ’ ಎಂಬ ತಿಂಡಿಗಳನ್ನು ಸಮರ್ಪಿಸುವರು. ತೆಂಗಿನ ಕಾಯಿ, ಬೆಲ್ಲ, ಬಾಳೆಹಣ್ಣು ಸೇರಿಸಿ ತಯಾರಿಸಿದ ಅಕ್ಕಿಯ ಪಾಯಸವೇ ಪೂರಕಞೆ. ಅಕ್ಕಿ ಪುಡಿಯನ್ನು ಕಲಸಿ, ಬೆಲ್ಲ, ತೆಂಗಿನಕಾಯಿ, ಬಾಳೆಹಣ್ಣು ಸೇರಿಸಿ ಎಎಯಲ್ಲಿ ಮಡಿಚಿಟ್ಟು ಆವಿಯಲ್ಲಿ ಬೇಯಿಸಿದ ವಿಶಿಷ್ಟ ತಿಂಡಿಯೇ ಪೂರಡ. ಕಾಮನ ರೂಪದ ಬಳಿಯಲ್ಲಿ ವೃತ್ತಾಕಾರವನ್ನು ಬರೆದು, ಅದರಲ್ಲಿ ಬೆಳ್ಳಿಗೆ ಹಾಗೂ ಕುಚ್ಚಿಲಕ್ಕಿಯನ್ನು ಇರಿಸುತ್ತಾರೆ. ಅನಂತರ ಅದಕ್ಕೆ ಪ್ರದಕ್ಷಿಣೆ ಬಂದು ನಮಸ್ಕರಿಸುವರು.

ಪೂರಂ ದಿವಸ ಸಂಜೆಯ ಹೊತ್ತು ಕಾಮನನ್ನು ಕಳುಹಿಸಿ ಕೊಡುವ ಆಚರಣೆ ಇದೆ. ಕಾಮನ ರೂಪವನ್ನು, ಹೂಗಳನ್ನು ಸಂಗ್ರಹಿಸಿ, ಹಾಲೆಮರದಡಿಯಲ್ಲಿ ಶುದ್ಧೀಕರಿಸಿದ ಸ್ಥಳದಲ್ಲಿರಿಸುತ್ತಾರೆ. ಹಣ, ತಿಂಡಿಯ ಜತೆಗೆ ಅಷ್ಟಮಂಗಲ ವಸ್ತುಗಳೊಂದಿಗೆ ಕಾಮನನ್ನು ಬೀಳ್ಕೊಡುತ್ತಾರೆ.

ಕಾಮಾ ಕಾಮಾ
ಮುಂದಿನ ವರ್ಷ
ಬೇಗನೆ ಮುಂಜಾನೆ
ಬರಬೇಕು ಕಾಮಾ
ದಕ್ಷಿಣ ದಿಕ್ಕಿಗೆ ಹೋಗ್ಬೇಡ ಕಾಮಾ
ದಕ್ಷಿಣದ ಹೆಂಗಳು
ವಂಚಕರು ಕಾಮಾ

ಹೀಗೆ ಹಾಡುವ ಕ್ರಮವೂ ಇದೆ.

ಪೂರಂ ಕಾವುಗಳಲ್ಲಿ ೯,೭, ಮತ್ತು ೫ ದಿವಸಗಳಲ್ಲಿ ವಿವಿಧ ಕಾವು (ಕ್ಷೇತ್ರ)ಗಳಲ್ಲಿ ಪೂರಂ ಆಚರಣೆ ನಡೆಯುವುದು. ಕೆಲವು ಕ್ಷೇತ್ರಗಳಲ್ಲಿ ಕನ್ಯೆಯಾಗಿರುವ ಬಾಲಿಕೆಯರು ಹೂ ಹಾಕುತ್ತಾರೆ. ಕ್ಷೇತ್ರದ ಪೂಜಾರಿ ಹೂ ಹಾಕುವ ಕ್ರಮವೂ ಇದೆ. ಹೂ ಹಾಕುವ ವ್ಯಕ್ತಿಗಳು ಮಡಿಬಟ್ಟೆ ಉಟ್ಟು, ಉತ್ತರೀಯವನ್ನು ಕಟ್ಟಿರಬೇಕು. ಬಾಲಕಿಯರು ಹೂ ಹಾಕುವಲ್ಲಿ ಪೂಜಾರಿ ದೀಪ ಹಿಡಿಯುವನು. ಮಣಿಯಾಣಿಗಳ ಕಾವುಗಳಲ್ಲಿ ಕನ್ಯೆಯರು ಕೆರೆಯ ದಡದಲ್ಲಿಯೂ ಪೂಜಾರಿ ಕ್ಷೇತ್ರದಲ್ಲಿಯೂ ಹೂ ಹಾಕುವರು. ತೀಯರ ಕಾವುಗಳಲ್ಲಿ ಕನ್ಯೆಯರು ಹಾಗೂ ಪೂಜಾರಿ ಸೇರಿಕೊಂಡು ಹೂ ಹಾಕುವರು. ಬಾವಿ, ಮೆಟ್ಟಿಲು, ದೇವತಾ ಪ್ರತಿಷ್ಠೆಗಳಲ್ಲಿ ಹೂ ಹಾಕುತ್ತಾರೆ. ಪೂರಕಳಿಗೆ ನಿರ್ಮಿಸಿದ ಚಪ್ಪರದ ಕಂಬದ ಬಳಿಯಲ್ಲಿಯೂ, ಕಳರಿ ಅಂಗಳದಲ್ಲಿಯೂ ಹಣ ಹಾಕುತ್ತಾರೆ. ಹೂ ಹಾಕಿ ನೀರು ಸಿಂಪಡಿಸಿದ ಅನಂತರ ಕನ್ಯೆಯರು ಉದ್ಘೋಷ ಮಾಡುವರು. ಸಂಜೆ ದೀಪ ಬೆಳಗಿಸಿ ಹೂವಿಗೆ ನೀರು ಸಿಂಪಡಿಸುವರು. ಅನಂತರ ಪೂಜಾರಿ ಶ್ರೀಗಂಧ ಹೂವು ಅರ್ಪಿಸುತ್ತಾನೆ.

ಕೆಲವು ಕ್ಷೇತ್ರಗಳಲ್ಲಿ ಪೂರಂ ಆಚರಣೆಯ ಅಂಗವಾಗಿ ‘ಪೂರಕಳಿ’ಯನ್ನು ನಡೆಸುವರು. ಈ ಕ್ಷೇತ್ರಗಳಲ್ಲಿ ಸಂಜೆ ಹೂವಿಗೆ ನೀರು ಸಿಂಪಡಿಸಿದ ಅನಂತರ ಪೂಜಾರಿ ವಾದ್ಯಘೋಷಗಳೊಂದಿಗೆ ಚಪ್ಪರಕ್ಕೆ ದೀಪವನ್ನು ತಂದು ಬೆಳಗಿಸುವುದರೊಂದಿಗೆ ಪೂರಕಳಿ ಆರಂಭವಾಗುವುದು. ಪೂರಕಳಿಯ ಅನಂತರ ಮಾತ್ರ ದೇವರಿಗೆ ನೈವೇದ್ಯ ಸಮರ್ಪಣೆ ಇರುವುದು. ಪೂರಂ ದಿವಸಗಳಲ್ಲಿ ಹಗಲು ಹೊತ್ತಿನಲ್ಲಿ ಪೂರಕಳಿ ನಡೆಯುವುದು. ಅನಂತರ ದೇವತಾವಿಗ್ರಹ, ಆಯುಧಗಳೊಂದಿಗೆ ದೇವಸ್ಥಾನದ ಕೆರೆಗೆ ಹೋಗಿ ‘ಪೂರಂಕಳಿ’ (ಪೂರಂಸ್ನಾನ) ನಡೆಯುವ ಕ್ರಮವೂ ಇದೆ.

ಪೂರಂ ಸ್ನಾನದ ಅನಂತರ, ಕೆಲವು ಕ್ಷೇತ್ರಗಳಲ್ಲಿ ಪೂಜಾರಿಗಳು ಆಯುಧಗಳನ್ನು ತೆಗೆದುಕೊಂಡು, ಮನೆ ಮನೆಗಳನ್ನು ಸಂದರ್ಶಿಸಿ ಅಭಯದ ನುಡಿಗಟ್ಟುಗಳನ್ನು ಹೇಳಿ ಹರಸುವ ಕ್ರಮ ಕಂಡುಬರುತ್ತದೆ. ಪೂರ ಆಚರಣೆಯಲ್ಲಿ ಆಧುನಿಕ ಕಾಲದಲ್ಲಿ ಅನೇಕ ವ್ಯತ್ಯಾಸಗಳು, ಬದಲಾವಣೆಗಳು ಕಂಡುಬರುತ್ತವೆ. ಮನೆಗಳಲ್ಲಿ ಹೂ ಹಾಕುವ ಕ್ರಮ ಕ್ರಮೇಣ ಕಡಿಮೆಯಾಗುತ್ತಿದೆ. ಈಗ ಕೇವಲ ತರವಾಡು ಮನೆಗಳಲ್ಲಿ ವಿರಳವಾಗಿ ಪೂರಾಚರಣೆ ಕಂಡು ಬರುತ್ತದೆ. ಕ್ಷೇತ್ರಗಳಲ್ಲಿ ಇಂದಿಗೂ ಪೂರಂ ಹಾಗೂ ಪೂರಂಕಳಿ ವೈಭವದಲ್ಲಿ ನಡೆಯುತ್ತಿವೆ. ಪೂರಾಚರಣೆಯ ಕುರಿತು ಸಮಗ್ರ ಸಂಶೋಧನೆ ಇನ್ನೂ ನಡೆದಿಲ್ಲ. ಕೆ.ಕೆ. ಕರುಣಾಕರನ್ ಅವರ ಸಂಶೊಧನೆ ನಿಬಂಧ, ವಿಷ್ಣು ನಂಬೂದಿರಿಯವರ ಕೃತಿಗಳು. ಸ್ವಾಮಿ ಗೋಪಾಲ್‌ಜಿ ಅವರ ಸಂಪಾದಿತ ಕೃತಿ, ಸಿ.ಎಂ.ಎಸ್. ಚಂದೇರಾ, ಕೆ.ಕೆ. ಪಣಿಕ್ಕರ್, ಚಿರಕ್ಕಲ್ ಬಾಲಕೃಷ್ಣನ್ ನಾಯರ್ ಎಂಬುವರ ಕೆಲವು ಲೇಖನಗಳು ಪೂರಂ ಆಚರಣೆಯ ಬಗ್ಗೆ ಬಂದ ಕೃತಿಗಳಾಗಿವೆ.

ವಿ.ಎಂ.ಯು ಅನುವಾದ ಎನ್.ಎಸ್.

 

ಮುಂಡ್ ಹೊಲಿಗೆ ಹಾಕದ ಬಿಡುಬಟ್ಟೆ ಮುಂಡು. ಕೋವಣ, ಕೋರ್ತ್‌‌ಮುಂಡ್‌, ಮುಂಡ್ ಮುಂತಾದ ವಸ್ತುಗಳು (ಬಟ್ಟೆಗಳು) ಕೇರಳೀಯ ಪುರುಷರ ಬಟ್ಟೆಬರೆಯ ಕ್ರಮಾನುಗತ ಬೆಳವಣಿಗೆಯ ಮೈಲಿಗಲ್ಲುಗಳಾಗಿವೆ. ಇಪ್ಪತ್ತನೆಯ ಶತಮಾನದಲ್ಲೂ ಕೇರಳದ ಸಾಮಾನ್ಯ ಜನ ತೋರ್ತ್‌(ಬೈರಾಸು) ಮಾತ್ರ ಉಟ್ಟು ಬದುಕಿದರು. ಜಾತಿ ಭೇದಕ್ಕೆ ಅನುಸಾರವಾಗಿ ಮುಂಡು ಉಡುವ ರೀತಿಗಳು ನಿಶ್ಚೈಸಲ್ಪಡುತ್ತಿದ್ದವು. ಅವರ್ಣೀಯ ಗಂಡಸು ಮೊಣಕಾಲು ಮುಚ್ಚದ ಹಾಗೆ ಮಾತ್ರ ಮುಂಡು ಉಟ್ಟುಕೊಳ್ಳುವ ಅನುಮತಿ ಇತ್ತು. ಈಳವಾದಿ ಹಿಂದುಳಿದ ವರ್ಗದವರಿಗೆ ಮೊಣಕಾಲು ಕಂಡೂ ಕಾಣದಂತೆ ಮುಂಡು ಉಡಲು ಸಮ್ಮತಿ ಲಭಿಸಿತ್ತು. ನಾಯರ್ ಮುಂತಾದ ಮೇಲ್ಜಾತಿಯವರಿಗೆ ಕಣಕಾಲವರೆಗೆ ಬರುವಂತೆ ಮುಂಡು ಉಡಬಹುದಾಗಿತ್ತು. ಬ್ರಾಹ್ಮಣರಿಗೆ ಮಾತ್ರ ಕಾಲಗಂಟಿನವರೆಗೆ ಬರುವಂತೆ ಮುಂಡು ಉಡುವ ಅವಕಾಶವಿತ್ತು.

ರಾಜರ ಆಡಳಿತವು ಬದಲಾಗಿ ಪ್ರಜಾಪ್ರಭುತ್ವವು ಜಾರಿಗೆ ಬಂದಾಗ ಹೆಚ್ಚು ಕಡಿಮೆ ಜಾತಿ ವ್ಯತ್ಯಾಸವಿಲ್ಲದೆ ಬಟ್ಟೆ ಧರಿಸುವ ಹಕ್ಕು ಲಭ್ಯವಾಯಿತು. ಮನೆಮಗ್ಗ/ಗುಡಿಕೈಗಾರಿಕೆಯ ಮಗ್ಗ/ ಗುಣಿಮಗ್ಗಗಳಲ್ಲಿ ತಯಾರಾದ ಮುಂಡುಗಳು ಧಾರಾಳವಾಗಿ ಉಪಯೋಗವಾದುವು. ಪ್ರಯಾಣದ ಸಂದರ್ಭಗಳಲ್ಲೂ ಕಾರ್ಯಕ್ರಮಗಳಲ್ಲೂ ಮುಂಡನ್ನಷ್ಟೇ ಧರಿಸುವ ರೂಢಿಯಾಯಿತು. ಮುಂಡಿನ ಜತೆ ಅಧಿಕಾರದ ಅಂತಸ್ತಿನ ಮೇಲುಸ್ತರದಲ್ಲಿದ್ದವರು ಇನ್ನೊಂದು ಮುಂಡನ್ನು ಹೆಗಲಿಗೆ ಹಾಕುವ ಸ್ಥಿತಿಯೂ ಉಂಟಾಯಿತು. ಮುಂಡಿನ ಜತೆ ಷರ್ಟನ್ನೂ ಧರಿಸುವ ಪದ್ಧತಿ ಇನ್ನಷ್ಟು ಕಾಲ ಸರಿದಾಗ ವ್ಯಾಪಕವಾಯಿತು. ಇದೆಲ್ಲ ಕಾಣಿಸಿಕೊಂಡದ್ದು ಸುಮಾರು ಐವತ್ತು ವರ್ಷಗಳ ಕಾಲಾವಧಿಯಲ್ಲಿ. ಮುಂಡು ಮತ್ತು ಷರ್ಟು ಕೇರಳದ ಪುರುಷರ ದೇಶೀಯ ಉಡುಪಾಗಿ ಪರಿಗಣಿತವಾಗಿ ಬಿಟ್ಟಿತು.

ಮುಂಡುಗಳು ಹಲವು ತೆರನಾಗಿವೆ. ಅಂಚುಗಳಲ್ಲಿ ಹಲವು ತೆರನ ವಿನ್ಯಾಸಗಳಿಂದ ಆಕರ್ಷಕವಗಿರುವ ಮುಂಡುಗಳು ಸಂತೆಯಲ್ಲಿ ಲಭ್ಯವಿವೆ. ಜರಿ ಅಂಚಿನ ಮುಂಡುಗಳಿವೆ. ಎರಡು ಪಾಳಿಗಳುಳ್ಳ ಜೋಡಿ ಮುಂಡುಗಳಿವೆ. ಜರಿ ಅಂಚಿನ ಮುಂಡುಗಳು ಮದುವೆಯ ಸಂದರ್ಭದಲ್ಲೂ ಓಣ ಮುಂತಾದ ಹಬ್ಬಗಳಲ್ಲಿ ಉಡುಗೊರೆಯಾಗಿ ಕೊಡುವುದಕ್ಕೂ ಉಪಯೋಗಿವಾಗುತ್ತವೆ. ಹತ್ತಿ, ಪಾಲಿಸ್ಟರ್‌ಗಳಿಂದ ಮುಂಡುಗಳನ್ನು ತಯಾರಿಸುತ್ತಾರೆ. ಕೇರಳದ ಕುತ್ತಾಂಬುಳ್ಳಿ, ಕಣ್ಣುರು, ಬಾಲರಾಮಪುರಂ ಮುಂಡುಗಳು ಪ್ರಖ್ಯಾತವಾಗಿವೆ. ಬಿಳಿ ಅನ್ನದ ಬಣ್ಣದ ಒಂಟಿ ಮುಂಡು ಹಿಂದೆ ಪ್ರಚಾರದಲ್ಲಿತ್ತು. ಅಂತಹ ಮುಂಡುಗಳಿಗೆ ಇಂದು ಅಷ್ಟೊಂದು ಪ್ರಚಾರವಿಲ್ಲ. ಮುಂಡಿನ ಅಂಚಿನ ಬಣ್ಣಕ್ಕೆ ಅನುಸಾರವಾದ ಷರ್ಟು ಧರಿಸುವ ರೀತಿಯೂ ಪ್ರಚಲಿತವಾಗಿದೆ.

ಮಹಿಳೆಯರು ಸಾಮಾನ್ಯವಾಗಿ ಒಂಟುಮುಂಡು ಉಡುತ್ತಾರೆ. ಹೆಚ್ಚಾಗಿ ಮಧ್ಯವಯಸ್ಸು ದಾಟಿದ, ಮನೆಯಲ್ಲಿ ಇರುವ ಹೆಂಗಸರು ಮುಂಡು ಮತ್ತು ಬೈರಾಸು ಉಪಯೋಗಿಸುತ್ತಾರೆ. ದೇವಾಲಯಗಳಿಗೆ ಹೋಗುವಾಗ, ಮನೆಯ ಒಕ್ಕಲು, ನಾಮಕರಣ ಮುಂತಾದ ಸಂದರ್ಭಗಳಲ್ಲೂ ಸೆಟ್ಟ್ ಮುಂಡನ್ನು ಮಹಿಳೆಯರು ಉಡುತ್ತಾರೆ. ಮೇಲ್ಜಾತಿಯ ಮನೆಯೊಡತಿಯರು ಸಾಮಾನ್ಯವಾಗಿ ಇಂತಹ ಉಡುಪನ್ನು ಇಷ್ಟಪಡುತ್ತಾರೆ. ಸಿನೆಮಾಗಳ ನಾಯಕರಿಯರು ಬಳಸಿ ಜನಪ್ರಿಯವಾಗಿಸುವ ಮುಂಡುಗಳಿಗೆ ಆ ನಿರ್ದಿಷ್ಟ ಕಾಲಾವಧಿಯಲ್ಲಿ ತುಂಬ ಬೇಡಿಕೆಯಿರುತ್ತದೆ. ತಮಿಳ್ನಾಡಿನ ನೆಯ್ಗೆ ಕೇಂದ್ರಗಳಲ್ಲಿ ತಯಾರಾಗುವ ಕಂಪೆನಿ ಮುಂಡುಗಳು ಈ ತೆರನ ಪ್ರಚಾರ ಪಡೆಯುತ್ತವೆ. ಮುಂಡು ಇತ್ತೀಚೆಗೆ ಪ್ರಾಶಸ್ತ್ಯ ಕಳೆದುಕೊಳ್ಳುತ್ತಿದೆ. ಕಚೇರಿಗಳಲ್ಲೂ, ಸಾರ್ವಜನಿಕ ಜಾಗಗಳಲ್ಲೂ ಪ್ಯಾಂಟ್ ಮತ್ತು ಷರ್ಟು ಮಾನ್ಯತೆ ಪಡೆದ ಉಡುಪು ಎನಿಸಿದೆ.

ಮುಂಡನ್ನು ಉಡುವ ರೀತಿ ನೋಡಿ ವಿಭಿನ್ನ ವಿಚಾರಗಳನ್ನು ತಿಳಿದುಕೊಳ್ಳಬಹುದು. ಎಡಭಾಗಕ್ಕೆ ಮುಂಡು ಸುತ್ತಿಕುತ್ತುವವರು ಮುಸ್ಲಿಮರು. ಹಿರಿಯರ ಮುಂದೆ ಮುಂಡನ್ನು ಮೇಲಕ್ಕೆ ಮಡಚಿ ಉಟ್ಟುಕೊಳ್ಳುವುದು ಮರ‍್ಯಾದೆಯ ಲಕ್ಷಣವಲ್ಲ. ಹಿರಿಯರನ್ನು ಕಂಡಾಗ ಹಾಗೆ ಉಟ್ಟುಕೊಂಡಿರುವುದನ್ನು ಬಿಚ್ಚಿ ಕೆಳಗೆ ಬಿಟ್ಟು ಗೌರವ ತೋರಬೇಕು. ಮುಂಡು ಉಡುವ ಹೆಂಗಸರು ಅದರ ಒಂದು ತುದಿಯನ್ನು ಸುತ್ತಿಕುತ್ತಿ ಇನ್ನೊಂದು ತುದಿಯನ್ನು ಹಾಗೆಯೇ ಇಳಿಬಿಡುತ್ತಾರೆ. ಗಂಡಸರು ಅದರ ಒಂದು ತುದಿಯನ್ನು ಸುತ್ತಿಕುತ್ತಿದ ಬಳಿಕ ಇನ್ನೊಂದು ತುದಿಯನ್ನು ಸುರುಟಿ ಇನ್ನೊಂದು ಬದಿಗೆ ಸಿಕ್ಕಿಸಿಕೊಳ್ಳುತ್ತಾರೆ. ಆ ಭಾಗವನ್ನು ಪರ್ಸ್‌‌ನಂತೆಯೂ ಬಳಸುತ್ತಾರೆ. ಅದಕ್ಕೆ ಮಡಿ ಎಂಬ ಹೆಸರಿಟ್ಟಿದ್ದಾರೆ. ಮುಸ್ಲಿಮರು ಕಾಲಗಂಟಿನ ಕೆಳಗಿನವರೆಗೆ ಬರುವಂತೆ ಮುಂಡು ಉಡುವುದು ನಿಷಿದ್ಧವಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ಯಾಂಟ್ ಮತ್ತು ಷರ್ಟನ್ನು ಯೂನಿಫಾರ್ಮಾಗಿ ನಿಗದಿಗೊಳಿಸುವುದರಿಂದಲೂ ಇತರ ಸಂದರ್ಭಗಳಲ್ಲಿ ಮುಂಡು ಉಡದಿರುವುದರಿಂದಲೂ ಹೊಸ ತಲೆಮಾರಿಗೆ ಮುಂಡು ಉಡುವ ಅಭ್ಯಾಸವೇ ತಪ್ಪಿಹೋಗುತ್ತಿದೆ. ಮದುವೆಯ ಸಂದರ್ಭದಲ್ಲಿ ಕೂಡ ಶರ್ವಾನಿ ಕುರ್ತಾಗಳನ್ನು ಎಲ್ಲ ಮತೀಯರೂ ಬಳಸಿಕೊಳ್ಳಲಾರಂಭಿಸಿದ್ದಾರೆ. ದೇವಾಲಯಗಳ ಧಾರ್ಮಿಕ ಕ್ರಿಯೆಗಳಲ್ಲಿ ಮಾತ್ರ ಬಳಸಲಾಗುವ ಬಟ್ಟೆಯಾಗಿ ಮುಂಡು ಉಳಿದು ಬಿಡಬಹುದು. ಹೆಚ್ಚಿನ ದೇವಾಲಯಗಳಲ್ಲಿ ಮುಂಡು ಉಟ್ಟವರಿಗೆ ಮಾತ್ರ ಪ್ರವೇಶ ಇದೆ. ಸಾಮಾಜಿಕ ಕಾರ್ಯಕರ್ತರಲ್ಲಿ ಹೆಚ್ಚಿನವರೂ ರಾಜಕೀಯ ನೇತಾರರೆಲ್ಲರೂ ಮುಂಡು ಷರ್ಟುಗಳನ್ನು ಉಪಯೋಗಿಸುತ್ತಾರೆ. ಕಾವಿಮುಂಡು, ಖದ್ದರ್ ಮುಂಡುಗಳನ್ನು ತುಂಬ ಮಂದಿ ಉಪಯೋಗಿಸುತ್ತಿದ್ದಾರೆ. ಬಿಳಿಗೆ ಸಂಬಂಧಿಸಿದ ಬಣ್ಣದ ಇಲ್ಲವೇ ಹೊನ್ನಿನ ಬಣ್ಣದ ಮುಂಡುಗಳು ಸಾಮಾನ್ಯವಾಗಿ ಪ್ರಚಾರದಲ್ಲಿವೆ.

ಕೈಲಿ, ಲುಂಗಿ, ಪೇಶ ಮುಂತಾಗಿ ಹೆಸರುಳ್ಳ (ಮಲೆಯಾಳಂನಲ್ಲಿ) ಮನೆಯಲ್ಲಿ ಬಳಸುವ ವಸ್ತ್ರವು ಮುಂಡಿನದೇ ಇತರ ಪ್ರಕಾರಗಳನ್ನೆಬಹುದು. ಧಾರ್ಮಿಕ ಕೆಲಸಗಳಲ್ಲಿ ಈ ಯಾವ ಬಟ್ಟೆಗಳನ್ನೂ ಉಟ್ಟುಕೊಳ್ಳಲು ಅನುಮತಿ ಇರುವುದಿಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಇವನ್ನು ಉಡುವವರನ್ನು ಕೆಳದರ್ಜೆಯವರೆಂದು ಪರಿಗಣಿಸಲಾಗುತ್ತದೆ. ಮೇಲ್ಜಾತಿಗಳಿಗೆ ಸೇರಿದವರು ಹಿಂದೆಲ್ಲ ಇವುಗಳನ್ನು ಉಡುತ್ತಲೇ ಇರಲಿಲ್ಲ. ಆಗ ಇದನ್ನು ಮುಸ್ಲಿಮರು ಉಡುವ ಬಟ್ಟೆ ಎಂದೇ ಕರೆಯುತ್ತಿದ್ದರು, ಪರಿಗಣಿಸುತ್ತಿದ್ದರು. ಕಪ್ಪು ಮುಂಡನ್ನು ಶಬರಿಮಲೆ ವ್ರತಧಾರಿಗಳು ಸಾಮಾನ್ಯವಾಗಿ ಉಡುತ್ತಾರೆ. ಕಾವಿ ಮುಂದನ್ನು ಆರ್.ಎಸ್.ಎಸ್. ಕಾರ್ಯಕರ್ತರು ಉಡುತ್ತಾರೆ ಎಂಬೊಂದು ಗ್ರಹಿಕೆ ಇದೆ. ಆದುದರಿಂದಲೇ ಮುಸ್ಲಿಮರೂ ಕ್ರಿಶ್ಚಿಯನ್ನರೂ ಕಾವಿಮುಂಡಿನ ವಿಚಾರದಲ್ಲಿ ಅಷ್ಟೊಂದು ಇಷ್ಟವುಳ್ಳವರಲ್ಲ. ದೇವಾಲಯಗಳಿಗೆ ಹೋಗಲು ಹಿಂದೂ ಮಹಿಳೆಯರು ಉಟ್ಟುಕೊಳ್ಳುವುದರಿಂದ ಸೆಟ್ಟ ಮುಂಡಿನ ಕುರಿತು ಕೂಡ ಮುಸ್ಲಿಮರು ಕ್ರಿಶ್ಚಿಯನ್ನರೂ ಆಸಕ್ತರಾಗಿಲ್ಲ.

ಬಿ.ಬಿ. ಅನುವಾದ ಕೆ.ಕೆ.