ಮುಡುಕುತೊರೆ ಮಲ್ಲಿಕಾರ್ಜುನ ಕರ್ನಾಟಕದಲ್ಲಿ ಮಲ್ಲಿಕಾರ್ಜುನ ದೇವಾಲಯಗಳು ಹಲವಾರು ಕಡೆಗಳಲ್ಲಿ ಇದ್ದರೂ ಮುಡುಕುತೊರೆಯ ಮಲ್ಲಿಕಾರ್ಜುನ ಪ್ರಸಿದ್ಧವಾದುದು. ಕಾವೇರಿ ನದಿ ಪ್ರಶ್ಚಿಮದ ಕಡೆಯಿಂದ ಉತ್ತರದಿಕ್ಕಿಗೆ ಹರಿದು ಪೂರ್ವದಿಕ್ಕಿನ ಕಡೆ ತಿರುಗಿ ದಕ್ಷಿಣಕ್ಕೆ ಪ್ರವಹಿಸಿದ ಕಾರಣ ಈ ಹೆಸರು ಬಂದಿತೆಂದು ಹೇಳುವರು. ಭೌಗೋಳಿಕವಾಗಿ ಮೈಸೂರು ಜಿಲ್ಲೆಯ ಟಿ. ನರಸೀಪುರ ತಾಲ್ಲೂಕಿನಲ್ಲಿ ಮುಡುಕುತೊರೆಯು ತಲಕಾಡಿಗೆ ಮೂರು ಮೈಲು ಅಂತರದಲ್ಲಿದೆ. ತಲಕಾಡಿನ ಪ್ರಸಿದ್ಧ ಪಂಚಲಿಂಗಗಳ ಗುಂಪಿಗೆ ಮುಡುಕುತೊರೆ ಮಲ್ಲಿಕಾರ್ಜುನ ಲಿಂಗವೂ ಸೇರುತ್ತದೆ. ಮಲ್ಲಿಕಾರ್ಜುನಲಿಂಗ ಮತ್ತು ಇದರ ಪಕ್ಕದಲ್ಲಿರುವ ಭ್ರಮರಾಂಬ ದೇವಿಯನ್ನು ಕುರಿತು ಅನೇಕ ಪೌರಾಣಿಕ ಕಥೆಗಳಿವೆ. ಮಲ್ಲಿಕಾರ್ಜುನ ಲಿಂಗದ ಶಿರೋಭಾಗ ಮಟ್ಟಸವಾಗಿರುವುದಕ್ಕೆ ಹಾಲೆರೆಯುತ್ತಿದ್ದ ಗೋವಿಗೆ ಹೊಡೆದ ಏಟು ಕೈತಪ್ಪಿ ಲಿಂಗಕ್ಕೆ ಬಿದ್ದುದೇ ಕಾರಣವೆಂದು ಹೇಳಲಾಗುತ್ತದೆ. ಈ ಕುರಿತು ಐತಿಹ್ಯಗಳೂ ಇವೆ.

ಮುಡುಕುತೊರೆ ಮಲ್ಲಕಾರ್ಜುನ ಮತ್ತು ಪಾರ್ವತಿಯರನ್ನು ಕುರಿತಂತೆ ಜನಪದಕಾವ್ಯಗಳು ರಚಿತವಾಗಿವೆ. ಮೈಸೂರು ಮಂಡ್ಯ ಬೆಂಗಳೂರು ಜಿಲ್ಲೆಗಳಲ್ಲಿ ನೀಲಗಾರರು ಮತ್ತು ಕಂಸಾಳೆಯವರು ಈ ದೇವರ ಮಹಿಮೆಯನ್ನು ವೃತ್ತಿಗಾಯಕ ಸಂಪ್ರದಾಯದಲ್ಲಿ ಹಾಡುತ್ತ ಪ್ರಚುರಗೊಳ್ಳಲು ಕಾರಣರಾಗಿದ್ದಾರೆ. ಗೊರವರು ಮುಡುಕುತೊರೆ ಮಲ್ಲಿಕಾರ್ಜುನನ ಭಕ್ತರು. ಇವರನ್ನು ‘ಪಾರ್ವತಿಗೊರವರು’ ಎಂದೂ ಕರೆಯುವುದುಂಟು. ಶಿವನು ಪಾರ್ವತಿಯನ್ನು ಗೊರವರ ವೇಷದಲ್ಲಿ ಬಂದು ಪರೀಕ್ಷಿಸಿದ ಕಥೆ ಕಂಸಾಳೆಯವರು, ನೀಲಗಾರರು ಮತ್ತು ಪಾರ್ವತಿ ಗೊರವರಲ್ಲಿ ಬಹಳ ಜನಪ್ರಿಯವಾಗಿದ್ದು ಅವರಲ್ಲಿ ಇದೊಂದು ಧಾರ್ಮಿಕ ಕಥೆಯಾಗಿ ಬೆಳೆದುಬಂದಿದೆ.

ಮುಡುಕುತೊರೆ ಮಲ್ಲಿಕಾರ್ಜುನನ ಕುರಿತ ಕಾವ್ಯದಲ್ಲಿ ‘ಮಡದಿ ಪಾರ್ವತಿಯ ದೃಢವ’ ನೋಡಬೇಕೆಂಬುದೇ ಆಶಯ. ಶಿವಭಿಕ್ಷೆಗೆ ಹೋಗಿ ಬರುವೆನೆಂದು ಹೇಳಿ ಪಾರ್ವತಿಯನ್ನು ಪರೀಕ್ಷಿಸಲೋಸುಗ ಗೊರವರ ವೇಷದಲ್ಲಿ ಬರುತ್ತಾನೆ. ಪಾರ್ವತಿ ಭಿಕ್ಷೆ ನೀಡಲು ಬಂದಾಗ ಆಕೆಯೊಂದಿಗೆ ಚರ್ಚೆಗೆ ನಿಂತು ‘ನಿನ್ನ ಗಂಡ ಮಲಗುವ ಮಂಚದ ಮೇಲೆ ದಾಯ ಆಡೋಣ’ ಎನ್ನುತ್ತಾನೆ. ಪಾರ್ವತಿ ಇದಕ್ಕೆ ಒಪ್ಪದೆ ಮನೆಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ಕುಳಿತುಕೊಳ್ಳುತ್ತಾನೆ. ಆತ ಬೆಳಗಾಗುವ ಹೊತ್ತಿಗೆ ನಿಜರೂಪದಲ್ಲಿ ಕಾಣಿಸಿಕೊಳ್ಳುತ್ತಾನೆ. ಈ ಕಾರ್ಯದಲ್ಲಿ ಮೂರು ಘಟ್ಟಗಳಿವೆ – ಪಾರ್ವತಿಯ ಪರೀಕ್ಷೆ, ಮಲ್ಲಿಕಾರ್ಜುನ ಗಂಗೆಯನ್ನು ಒಲಿಸಿಕೊಳ್ಳುವುದು ಮೂರನೆಯದು ಸೂತಕದ ಪ್ರಸಂಗ. ಈ ರೀತಿಯಲ್ಲಿ ಕಥೆ ಬೆಳೆಯುತ್ತದೆ. ಕಂಸಾಳೆ ಮಹಾದೇವಯ್ಯನವರು ಹಾಡುವ ಕಾವ್ಯದ ಪ್ರಕಾರ ಶಿವ ಕೈಲಾಸದಿಂದ ಶ್ರೀಶೈಲ ಹಾಗೂ ಹಿರೇಮೈಲಾರ ಮಾರ್ಗವಾಗಿ ಮುಡುಕುತೊರೆಗೆ ಹೋಗಿ ನೆಲಸುತ್ತಾನೆ. ಈತನನ್ನು ಶ್ರೀಶೈಲದ ಪರಮೇಶ್ವರ, ಹಿರೇಮೈಲಾರದಲ್ಲಿ ಮೈಲಾರಸಿಂಗಸ್ವಾಮಿ ಎಂಬ ಹೆಸರಿನಿಂದ ಕರೆಯುತ್ತಾರೆ. ಈತನಿಗೆ ಹಲವು ಸಮುದಾಯಗಳಲ್ಲಿ ಭಕ್ತರಿದ್ದಾರೆ. ಹಾಗೆ ಉಪ್ಪಲಿಗರಿಗೂ ಆರಾಧ್ಯದೈವವಾದ ಕಥೆಯನ್ನು ಜನಪದರು ನಿರೂಪಿಸುತ್ತಾರೆ.

ಮುಡುಕುತೊರೆಯಲ್ಲಿ ಮಲ್ಲಿಕಾರ್ಜುನನಿಗೆ ನಿತ್ಯಪೂಜೆಯ ಜೊತೆಗೆ ವಿಶೇಷವಾದ ಹಬ್ಬ ಉತ್ಸವಗಳು ಜರಗುತ್ತವೆ. ಅವುಗಳ ಪೈಕಿ ಮಲ್ಲಿಕಾರ್ಜುನನ ಜಾತ್ರೆ ವಿಶಿಷ್ಟವಾಗಿದ್ದು ಮೈಸೂರು ಭಾಗದ ಪ್ರಸಿದ್ಧ ಜಾತ್ರೆಗಳಲ್ಲೊಂದಾಗಿದೆ. ಜನವರಿ ಫೆಬ್ರವರಿ ತಿಂಗಳಿನಲ್ಲಿ ಬರುವ ಈ ಜಾತ್ರೆ ಹದಿನೇಳು ದಿನ ನಡೆಯುತ್ತದೆ. ಶಿಷ್ಟಪೂಜೆಯಂತೆ ಬೇರೆ ಬೇರೆ ಉತ್ಸವಗಳು ನಡೆಯುತ್ತವೆ. ವ್ಯವಸಾಯ ಪ್ರಧಾನವಾದ ನಮ್ಮ ನಾಡಿನಲ್ಲಿ ದೇವರ ಜಾತ್ರೆಯೊಂದಿಗೆ ದನಗಳ ಜಾತ್ರೆಯೂ ನಡೆಯುವುದಕ್ಕೆ ಈ ಜಾತ್ರೆಯು ಹೊರತಲ್ಲ. ಜೊತೆಗೆ ಇದರಲ್ಲಿ ‘ಪರ್ವತ ಪರೀಕ್ಷೆ’ಯೂ ಸೇರಿಕೊಂಡಿದೆ. ಜನಪದರಿಗೆ ಈ ಜಾತ್ರೆಯೆಂದರೆ ಅದು ಮೂರು ದಿನದ ಕಾರ್ಯಕ್ರಮವಾಗಿರುತ್ತದೆ. ಮೊದಲನೇ ದಿನ ತೇರು, ಎರಡನೇ ದಿನ ಹೆಡಗೆ, ಮೂರನೇ ದಿನ ತೆಪ್ಪ, ಜಾತ್ರೆ ಸಮಯದಲ್ಲಿ ಗೊರವರು, ಕಂಸಾಳೆಯವರು ಮತ್ತು ಉಪ್ಪಲಿಗರು ತಮ್ಮದೇ ಆದ ಸಂಪ್ರದಾಯಗಳನ್ನು ಹೊಂದಿದ್ದಾರೆ. ಅನ್ನ, ಎಸರು, ಪಾಯಸ, ಕಜ್ಜಾಯ ಮೊದಲ ದಿನದ ವಿಶೇಷ. ಕುರುಬರು ದೇವರಿಗೆ ಎಡೆಯಿಕ್ಕಿ ಗುಡ್ಡಗಳಿಗೆ ಊಟ ಹಾಕುತ್ತಾರೆ.

‘ಹೆಡಗೆ ಸೇವೆ’ಯ ದಿನ ದೂರದ ಊರುಗಳಲ್ಲಿರುವ ಮಲ್ಲಿಕಾರ್ಜುನನ ಭಕ್ತರು ಅಕ್ಕಿ, ರಾಗಿ, ಕಾಳು ಕಡ್ಡಿ, ಅಡುಗೆ ಸಾಮಾನುಗಳನ್ನು ಗಾಡಿಯಲ್ಲಿ ಹೇರಿಕೊಂಡು ಬಂದು ಮುಡುಕುತೊರೆಯಲ್ಲಿ ಬೀಡುಬಿಟ್ಟು ಅಲ್ಲಿಯೇ ಅಡುಗೆ ಮಾಡಿ ತಂತಮ್ಮ ಜಾತಿಯವರಿಗೆ ಅನ್ನ ಸಂತರ್ಪಣೆ ಮಾಡುತ್ತಾರೆ. ಈ ಜಾತ್ರಯೆಲ್ಲಿ ಮೂರುತೇರು ಕಟ್ಟುವರು. ಜನಪದ ಕಲಾತಂಡಗಳು ಆಗಮಿಸಿ ತಮ್ಮ ಸೇವೆ ಸಲ್ಲಿಸುವರು. ಮೂರನೇ ದಿನ ತೆಪ್ಪ ನಡೆಯುವಾಗ ಗೊರವರು ಕುಣಿತ ಮಾಡುತ್ತಾರೆ.

ಮುಡುಕುತೊರೆ ಜಾತ್ರೆಯ ವಿಶಿಷ್ಟ ಭಾಗ ‘ಪರ್ವತ ಪರೀಕ್ಷೆ’ ಜಾತ್ರೆಯಾದ ಬಳಿಕ ನಿರ್ದಿಷ್ಟ ದಿನ ನಿಗದಿಪಡಿಸಿಕೊಂಡು ಶ್ರೀಶೈಲಕ್ಕೆ ಪರಿಷೆ ಹೋಗುತ್ತಾರೆ. ಶಿವರಾತ್ರಿಯಲ್ಲಿ ಪರಿಷೆ ಹೊರಟರೆ ಹಿಂದಿರುಗುವಾಗ ಯುಗಾದಿ ಹಬ್ಬ ಕಳೆದಿರುತ್ತದೆ. ಈ ಸುತ್ತಲ ಹಳ್ಳಿಗಳಲ್ಲಿ ದೇವರ ಹೆಸರಿನಲ್ಲಿ ಬಸವಗಳನ್ನು ಬಿಟ್ಟಿರುತ್ತಾರೆ. ಈ ಪೈಕಿ ಪರಿಷೆಗೆ ಆಯ್ಕೆಯಾಗುವುದು ಒಂದು ಬಸವ ಮಾತ್ರ. ತಮಟೆ ಬಾರಿಸಿದಾಗ ಯಾವ ಬಸವ ಮೊದಲು ಹೋಗಿ ಉತ್ಸವ ಮೂರ್ತಿಯ ಮುಂದೆ ನಿಲ್ಲುವುದೋ ಅದಕ್ಕೆ ಪರಿಷೆಯ ಸರದಿ. ಇದನ್ನು ದೇವಸ್ಥಾನದಲ್ಲಿ ಪೂಜಿಸಿ ಮಾಲೆ ಹಾಕುವರು. ಇದರೊಡನೆ ನೂರಾರು ಭಕ್ತರು ಶ್ರೀಶೈಲದ ಕಡೆಗೆ ಕಾಲ್ನಡಿಗೆಯಲ್ಲಿ ಹೊರಡಲು ಸಿದ್ದರಾಗುವರು. ಲಿಂಗಾಯಿತರು ಕುರುಬರು ಹರಿಜನರು ಮೊದಲಾದ ಹಲವು ಸಮುದಾಯದವರು ಜಾತಿಮತ ಭೇದವಿಲ್ಲದೆ ಪರಿಷೆ ಹೊರಡುವುದು ವಿಶೇಷ. ಹೀಗೆ ಹೊರಟವರು ಆಹಾರ ವಿಚಾರದಲ್ಲಿ ಕೆಲವೊಂದು ನಿಯಮಗಳಿಗೆ ಬದ್ಧರಾಗಿರಬೇಕಾಗುತ್ತದೆ. ಮದ್ದೂರು, ಚನ್ನಪಟ್ಟಣ, ಬೆಂಗಳೂರು, ನಂದ್ಯಾಲ ಮೂಲಕ ಪರಿಷೆ ಸಾಗಿ ಯುಗಾದಿಯಂದು ಶ್ರೀಶೈಲ ತಲುಪುವುದು. ಅಲ್ಲಿಯ ಜನ ಈ ಪರಿಷೆಗೆ ‘ಮೈಸೂರಿನ ಪರಿಷೆ’ ಎಂದು ಕರೆಯುವರು. ಅಲ್ಲಿ ಪರಿಷೆ ಮಿಂದು ಭ್ರಮರಾಂಬ ಮತ್ತು ಮಲ್ಲಿಕಾರ್ಜುನ ದೇವರಿಗೆ ಪೂಜೆ ಸಲ್ಲಿಸುತ್ತ ದೇವಸ್ಥಾನದವರ ಗೌರವಕ್ಕೆ ಪಾತ್ರರಾಗುವರು. ಪರಿಷೆ ಹೋದ ಮಾರ್ಗದಲ್ಲಿಯೇ ಪಾರ್ವತಿ ತನ್ನ ಗಂಡನ ಮನೆ ಮುಡುಕುತೊರೆಯಿಂದ ತವರಿಗೆ ಹೋದಳೆಂಬ ಪ್ರತೀತಿಯಿದೆ. ಪರಿಷೆ ಹಿಂದಿರುಗಿದಾಗ ಮುಡುಕುತೊರೆಯಲ್ಲಿ ಚಿಕ್ಕ ಜಾತ್ರೆ ನಡೆಯುತ್ತದೆ. ಪರಿಷೆ ಸಂಪ್ರದಾಯವು ಕರ್ನಾಟಕ ಮತ್ತು ಆಂಧ್ರಪ್ರದೇಶದ ಬಾಂದವ್ಯದ ಕುರುಹಾಗಿದೆ. ಜಾತಿ ಮತ, ಮೇಲು ಕೀಳು, ಸೀಮೆ, ಗಡಿಗಳ ಭೇದ ಭಾವವಿಲ್ಲದೆ ವಿಶಾಲ ದೃಷ್ಟಿಯಿಂದ ನಡೆಯುವ ಪರಿಷೆ ಜನಪದ ಜಾತ್ರೆಗಳಲ್ಲಿಯೇ ವಿಶಿಷ್ಟವಾದುದು.

ಚಿಕ್ಕ ಜಾತ್ರೆಯ ಮುಡುಕುತೊರೆಯಲ್ಲಿ ಮೂರು ದಿನಗಳ ಕಾಲ ನಡೆಯುತ್ತದೆ. ‘ಬಟ್ಟಲ ಪೂಜೆ’ ಎಂದು ಸಂಪ್ರದಾಯ ಈ ಜಾತ್ರೆಯ ವಿಶೇಷ. ಇದು ಮೊದಲ ದಿನ ಜರುಗುವುದು. ಭ್ರಮರಾಂಬದೇವಿ ತ್ರಿವಿಧರೂಪದಲ್ಲಿರುವಳೆಂಬುದು ಭಕ್ತರ ಭಾವ. ಹಾಗಾಗಿ ಹೆಂಗಳೆಯರು ಬಟ್ಟಲಪೂಜೆಯ ಅಂಗವಾಗಿ ಮುತ್ತೈದೆಯರಿಗೆ ಪಾದಪೂಜೆ ಮಾಡುವರು. ಒಟ್ಟಿನಲ್ಲಿ ಮುಡುಕುತೊರೆಯ ಮಲ್ಲಿಕಾರ್ಜುನ ಜಾತ್ರೆ ಲಿಂಗವರ್ಣ ವರ್ಗಭೇದಗಳಿಗೆ ಅವಕಾಶ ನೀಡದೆ ಸರ್ವರೂ ಸಮಾನರೆಂಬ ಭಾವನೆಗೆ ಇಂಬು ನೀಡುತ್ತದೆ. ದೇವಾಲಯದ ಬಾಹ್ಯ ಪೂಜೆಗಳಲ್ಲಿ ಶಿಷ್ಟತೆ ಕಂಡುಬಂದರೂ ಜಾತ್ರೆ ಮಾತ್ರ ತನ್ನ ಮೂಲರೂಪವನ್ನು ಬಿಟ್ಟುಕೊಡದೆ ಜಾನಪದ ಜಾತ್ರೆಯಾಗಿಯೇ ತನ್ನ ಆಕರ್ಷಣೆಯನ್ನು ಉಳಿಸಿಕೊಂಡಿದೆ. ಕರ್ನಾಟಕ ಮತ್ತು ಆಂಧ್ರ ನಡುವಿನ ಭಾಷಾ ಬಾಂಧವ್ಯಕ್ಕೂ ಉತ್ತಮ ನಿದರ್ಶನವಾಗಿದೆ. ಜಾತ್ರೆ ಎಂಬುದು ಧಾರ್ಮಿಕ ಮೂಲದಿಂದ ಹುಟ್ಟಿ ಬಂದ ವ್ಯವಸ್ಥೆಯಾಗಿರುವುದರಿಂದ ಮುಡುಕುತೊರೆ ಮಲ್ಲಿಕಾರ್ಜುನನ ಮಹಿಮೆಯ ವಾಹಕವಾಗಿದೆ. ಜನಪದ ದೇವತೆ ಶಿಷ್ಟದೇವತೆಯಾಗುವ ಸ್ಥಿತ್ಯಂತರಗಳನ್ನೂ ಇಲ್ಲಿ ಗುರುತಿಸಬಹುದು.

ವೈ.ಸಿ.ಬಿ.

 

ಮುತ್ಯಾಲಮುಕ್ಕರ ತೆಲುಗು ಮಹಿಳೆಯರ ಆಭರಣ (ಮುತ್ತಿನ ಮೂಗುತಿ). ಮಂಗಳ ಸೂತ್ರ, ಕರಿಮಣಿ, ಕಾಲುಂಗರ, ಪಿಲ್ಲಿ (ಕಾಲುಂಗುರದ ಬೆರಳ ಪಕ್ಕದ ಬೆರಳಿಗೆ ತೊಡುವ ಆಭರಣ), ಮೂಗುತಿ ಇವು ಸ್ತ್ರೀಗೆ ಸೌಭಾಗ್ಯ ಸೂಚಕಗಳು. ಇವು ಕಳೆದು ಹೋಗುವುದು ಅಶುಭ ಸೂಚಕವೆಂದು ನಮ್ಮ ಸಂಸ್ಕೃತಿ ವಿವರಿಸುತ್ತದೆ. ಆದ ಕಾರಣ ಜನರು ‘ಆಯಾಯ ವಸ್ತುಗಳನ್ನು ಜಾಗ್ರತೆಯಾಗಿ ಕಾಪಾಡಿಕೊಳ್ಳಬೇಕ’ ಎಂಬ ವಿಶ್ವಾಸ ಏರ್ಪಡುವುದರಲ್ಲಿ ಸಂದೇಹವಿಲ್ಲ.

ಮುತ್ತೈದೆಯರು ಮೂಗಿಗೆ ಮೂಗುತಿ, ಮೂಗುತಿ ಇಲ್ಲದಿದ್ದರೆ ಮೂಗಿಗೆ ದಾರವನ್ನಾಗಲಿ ಇಲ್ಲದೇ ವ್ರತಗಳನ್ನು ಮಾಡಿದರೂ, ಕನ್ಯಾದಾನ ಮಾಡಿದರೂ ಫಲದಕ್ಕುವುದಿಲ್ಲ ಎಂಬ ನಂಬಿಕೆ ಇದೆ. ಮೂಗುತಿ ಎಂದರೆ ಉತ್ಸಾಹವಿಲ್ಲದಿದ್ದರೂ ಈ ನಂಬಿಕೆಗೆ ಹೆದರಿ ಕಟ್ಟುಪಾಡು ಪಾಲಿಸುವ ಮಹಿಳೆಯಲ್ಲಿ ಕೆಲವರು ವ್ರತಫಲ, ಕನ್ಯಾದಾನ ಫಲ ಎಲ್ಲಿ ದಕ್ಕುವುದಿಲ್ಲವೊ ಎಂದು ಕಾರ್ಯಕ್ರಮ ಪೂರ್ಣಗೊಳ್ಳುವವರೆಗೆ ಮೂಗುತಿಯನ್ನು ಧರಿಸಿ ತದನಂತರ ತೆಗೆದು ಹಾಕುವವರೂ ಇದ್ದಾರೆ. ನಾಗರಿಕತೆಗಭಿಮುಖವಾಗಿರುವ ಕೆಲವರು ‘ವಸ್ತು ತಮ್ಮ ಜೊತೆ ಇದ್ದರೆ ಸಾಕು’ ಎನ್ನುವ ಉದ್ದೇಶದಿಂದ ಅದನ್ನು ‘ಕರವಸ್ತ್ರದಲ್ಲಿ’ ಸುತ್ತಿಕೈಯಲ್ಲಿ ಹಿಡಿದುಕೊಳ್ಳುವುದೂ, ಇಲ್ಲವೇ ಆ ಆಭರಣವನ್ನು ತಲೆಯಲ್ಲಿ ಶಿರೋಭೂಷಣವಾಗಿ ಧರಿಸುವುದೂ ನಡೆಯುತ್ತದೆ. ಇದೆಲ್ಲವನ್ನೂ ಗಮನಿಸಿದರೆ ಇನ್ನು ಸ್ವಲ್ಪ ಕಾಲಕ್ಕೆ ‘ಮೂಗುತಿ’ ಎನ್ನುವ ಒಡವೆ ಕಣ್ಣಿಗೆ ಕಾಣಿಸದೆ ಹೋಗುತ್ತದೆ ಎಂಬುದರಲ್ಲಿ ಆಶ್ಚರ್ಯವಿಲ್ಲ.

ತೆನಾಲಿರಾಮಕೃಷ್ಣ ಕವಿ ರಚಿಸಿದ ಪಾಂಡುರಂಗ ಮಾಹಾತ್ಮ್ಯದಲ್ಲಿ ವಿಶಿಷ್ಟ ಪಾತ್ರವಾದರೂ ಅನಾಮಿಕಳಾಗಿ ಉಳಿದುಹೋದ ‘ನಿಗಮಶರ್ಮ ಅಕ್ಕ’ ದುಷ್ಟವರ್ತನೆ ಹೊಂದಿದ ತನ್ನ ತಮ್ಮನಾದ ನಿಗಮಶರ್ಮನನ್ನು ಸನ್ಮಾರ್ಗಕ್ಕೆ ತರಬೇಕೆಂದು ಮಾಡಿದ ಪ್ರಯತ್ನಗಳೆಲ್ಲವೂ ವ್ಯರ್ಥವಾಗಿ ಹೋಗುತ್ತವೆ. ಕೊನೆಗೆ ನಿಗಮ ಶರ್ಮ ಒಂದು ದಿನ ‘ಆಕೆ’ಯ ಒಡವೆಯನ್ನೇ ಕಳುವು ಮಾಡಿ ಮೂಟೆಕಟ್ಟಿಕೊಂಡು ಓಡಿಹೋಗುತ್ತಾನೆ. ಆ ಒಡವೆಗಳನ್ನು ಆಕೆ ಹೊಸದಾಗಿ ಮಾಡಿಸಿಕೊಂಡ ಮೂಗುತಿ ಸಹಾ ಇತ್ತು. ಎಷ್ಟೋ ಒಡವೆಗಳು ಹೋದರೂ ದುಃಖಿಸದ ನಿಗಮಶರ್ಮನ ಅಕ್ಕ ಒಂದು ಚಿಕ್ಕ ಮೂಗುತಿಗಾಗಿ ಪರಿತಪಿಸುತ್ತಿರುತ್ತಾ ಆಳುತ್ತಾಳೆ ಎಂದು ವಿಕಟಕವಿ ತೆನಾಲಿರಾಮಕೃಷ್ಣನ ವರ್ಣನೆ. ಆದರೆ ಆಕೆಯ ದೃಷ್ಟಿಯಲ್ಲಿ ವಸ್ತು ಚಿಕ್ಕದಾದರೂ ಆಮೂಲ್ಯವಾದುದು, ಪವಿತ್ರವಾದುದು ಎಂಬ ವಿಷಯ ಮಾತ್ರ ಇಲ್ಲಿ ಗಮನಿಸಬೇಕು. ತೆನಾಲಿರಾಮಕೃಷ್ಣನ ಪರಿಹಾಸ ಧೋರಣೆಯನ್ನು ತಿಳಿಸುತ್ತಾ ರಾಳ್ಳಪಲ್ಲಿ ಅನಂತಕೃಷ್ಣಶರ್ಮ ಅವರು “ಪರಿಹಾಸ ಪವಿತ್ರವಸ್ತುವನ್ನು ಕೂಡ ಗಮನಿಸದೇನೋ” ಎಂದಿದ್ದಾರೆ. ಆರುದ್ರ ಅವರು ಸಹಾ ಇದನ್ನು ಸಮರ್ಥಿಸಿದ್ದಾರೆ. ಆಚಾರ ಪಾರಾಯಣತ್ವದಲ್ಲಿ ಮೂಗುತಿಗೆ ಇಷ್ಟು ಪ್ರಾಧಾನ್ಯಕೊಡುವುದರಲ್ಲಿಯ ಅಂತರಂಗವನ್ನು ಪರಿಶೀಲಿಸುವುದಾದರೆ ಅದರಲ್ಲಿ ಬೆರೆತು ಹೋಗಿರುವ ಆರೋಗ್ಯ ಸೂತ್ರಗಳು ಬಹಿರಂಗಗೊಳ್ಳುತ್ತವೆ.

ಬಂಗಾರ ರಕ್ತಪರಿಚಲನೆಯನ್ನು ಸರಿಪಡಿಸಿ ಹೃದಯ ಕಾಯಿಲೆ ಬರದಂತೆ ಕಾಪಾಡುತ್ತದೆ ಎಂದು ಆಯುರ್ವೇದ ಶಾಸ್ತ್ರ ತಿಳಿಸುತ್ತದೆ. ಪುರುಷರು ಕೂಡ ಅಲಂಕರಣಗೊಂಡು ಹೊರಹೋಗಲು ಉಂಗುರಗಳನ್ನು, ಕುತ್ತಿಗೆಯಲ್ಲಿ ಸರಗಳನ್ನು ಧರಿಸುವುದಿದೆ. ಮೂಗು, ಕಿವಿಗಳನ್ನು ಚುಚ್ಚಿ ರಂಧ್ರಗಳ ಮೂಲಕ ಬಂಗಾರ ಶರೀರಕ್ಕೆ ತಾಕುತ್ತಿದ್ದರೆ ರಕ್ತ ಪರಿಚಲನೆ ಮತ್ತಷ್ಟೂ ಚೆನ್ನಾಗಿ ನಡೆಯುತ್ತದೆ ಎಂಬುದು ಪ್ರಸಿದ್ಧ. ಅಷ್ಟೇ ಅಲ್ಲದೆ ರೋಗ ನಿವಾರಣೆಗೆ, ಅತಿಮೂತ್ರರೋಗ ಮೊದಲಾದ ವ್ಯಾಧಿಗಳಲ್ಲಿ ಔಷಧಿಯ ರೂಪದಲ್ಲಿ ಸುವರ್ಣ ಭಸ್ಮವನ್ನು ಬಳಸುತ್ತಾರೆ. ನಿಗಮಶರ್ಮನ ಅಕ್ಕ ಹೊಸದಾಗಿ ಮಾಡಿಸಿಕೊಂಡ ಮೂಗುತಿಯಲ್ಲಿ ಮುತ್ತು ಇತ್ತೋ ಇಲ್ಲವೋ ತಿಳಿಯದು. ಆದರೆ ಜಾನಪದರು ಹೇಳಿದ ‘ಮೂಗಿಗೆ ಮೂಗುತಿ ಚೆಂದ, ಮೂಗುತಿಗೆ ಮುತ್ತು ಚೆಂದ’ದಲ್ಲಿಯ ಮಹತ್ತ್ವವನ್ನು ಪರಿಶೀಲಿಸೋಣ. ಮೂಗುತಿ, ಬುಲಾಕು, ನತ್ತು, ಮೂಗುತಿದಾರ, ಮೂಗುಬಳೆ, ಮೂಗುಕಡ್ಡಿ ಅನ್ನುವ ಮೂಗಿನ ಆಭರಣಗಳನ್ನು ಬಡವರು ಸಹಿತ ಬಂಗಾರದಲ್ಲಿಯೇ ಮಾಡಿಸಿಕೊಳ್ಳುವರು. ಇವುಗಳಿಗೆ ಸ್ವಲ್ಪವೇ ಬಂಗಾರ ಹಿಡಿಯುತ್ತದೆ ಎಂದು ಅದಕ್ಕೆ ಜೊತೆಯಾಗಿ ಬಂಗಾರವನ್ನು ಮೈಮೇಲೆ ಧರಿಸಿರುವ ತೃಪ್ತಿ ಅವರಿಗಿರುತ್ತದೆ. ಇದಕ್ಕೆ ಜೊತೆಯಾಗಿ ಮೂಗುತಿ ಅಂದವಾಗಿ ಕಾಣಿಸಲು ಮೂಗುತಿ ಕೊನೆಗೆ ಒಂದು ಮುತ್ತನ್ನು ಹೊಂದಿಸಲು ಪ್ರಯತ್ನಿಸುತ್ತಾರೆ.

ಮುತ್ತಿನಲ್ಲಿ ಸುಣ್ಣದ ಹಾಲು (ಕ್ಯಾಲ್ಸಿಯಂ) ವಿಶೇಷವಾಗಿ ಇರುತ್ತದೆ. ತಾಂಬೂಲ ಸೇವನೆಯಲ್ಲಿ ಮುದ್ದು, ಪಳನಿ ‘ರಾಧಿಕಾ ಸಾಂತ್ವ’ ದಲ್ಲಿ ‘ಹೊಸ ಮುತ್ತಿನ ಸಣ್ಣಗಿನ ಸುಣ್ಣ’ವನ್ನು; ಕೂಚಿಮಂಚಿ ತಿಮ್ಮಕವಿ ‘ರಸಿಕ ಜನಮನೋಭಿರಾಮ’ದಲ್ಲಿ, ‘ಮುತ್ತಿನ ಸುಣ್ಣವನ್ನು’ ಪ್ರಶಂಸಿಸಿದ್ದಾರೆ. ಈ ಪ್ರಯೋಗಗಳೇ ಮುತ್ತಿನ ಸುಣ್ಣ ಎಂದು ಎನ್ನುವುದರಲ್ಲಿ ಮುತ್ತಿನಂತೆ ಬಿಳಿಯ ಸುಣ್ಣವೆಂದು ಆಲಂಕರಿಕವಾಗಿ ಹೇಳಿದ್ದರೂ ಒಳ್ಳೆಯ ಮುತ್ತುಗಳನ್ನು ಚೆನ್ನಾಗಿ ಸುಣ್ಣದಲ್ಲಿ ಕುಟ್ಟಿಹಾಕಿ ತಾಂಬೂಲ ಸೇವಿಸುವುದನ್ನು ಸೂಚಿಸುತ್ತದೆ. ಸಾಮಾನ್ಯರು ಬಳಸುವ ತಿಳಿ ಸುಣ್ಣಕ್ಕೆ ಬದಲಾಗಿ ಮಹಾರಾಜರು ತಾಂಬೂಲದಲ್ಲಿ ಮುತ್ತಿನ ಸುಣ್ಣವನ್ನು ಬಳಸುವುದು ಪ್ರಸಿದ್ಧಿ.

ಸುಣ್ಣಕ್ಕೆ ಕಾರ್ಬನ್ ಡೈ ಆಕ್ಸೈಡ್‌ನ್ನು ಜೀರ್ಣಿಸಿಕೊಳ್ಳುವ ಶಕ್ತಿ ಇದೆಯೆಂದು ವಿಜ್ಞಾನಿಗಳ ಅಭಿಪ್ರಾಯ. ಸುಣ್ಣದ ತಿಳಿಯ ಮೇಲೆ ಕಾರ್ಬನ್ ಡೈ ಆಕ್ಸೈಡ್‌ನ್ನು ಕಳಿಸಿದರೆ ಸುಣ್ಣದ ತಿಳಿ ಅದನ್ನು ಪರಿಶುದ್ಧವಾಗಿ ಮಾರ್ಪಡಿಸುತ್ತದೆಂಬುದನ್ನು ಪ್ರಯೋಗ ಮೂಲಕವಾಗಿ ಶಾಸ್ತ್ರಜ್ಞರು ನಿರೂಪಿಸಿದ್ದಾರೆ. ಮುತ್ತಿನಲ್ಲಿ ಸುಣ್ಣದ ಹೆಚ್ಚಾಗಿ ಇರುವ ಕಾರಣದಿಂದ ಮೂಗುತಿಯಲ್ಲಿಯ ಮುತ್ತು ಮೂಗುತಿಗೆ ಸಮೀಪದಲ್ಲಿರುವ ಗಾಳಿಯನ್ನು ಪರಿಶುದ್ಧಗೊಳಿಸಿ ಇರಿಸುತ್ತದೆ. ಮುತ್ತಿನ ಮೇಲಿನಿಂದ ನೀರು ಶರೀರದ ಮೇಲೆ ಬಿದ್ದರೆ ಚರ್ಮವ್ಯಾಧಿಗಳು ತೊಲಗಿ ಹೋಗುತ್ತವೆ. ಮುಖ್ಯವಾಗಿ ಸ್ತ್ರೀಯರಿಗೆ ಋತುಕ್ರಮ ದೋಷಗಳನ್ನು ನಿವಾರಿಸುತ್ತದೆ ಎಂದು ನಂಬಿಕೆ. ಮುತ್ತುಗಳನ್ನು ಹಾರಗಳಾಗಿ ಧರಿಸುವ ಶಕ್ತಿಯಿಲ್ಲದ ಬಡವರಿಗೆ ಮುತ್ತು ಹೊಂದಿಸಲಾದ ಮೂಗುತಿಯೇ ಶ್ರೇಷ್ಠ.

ಪ್ರಕೃತಿಬದ್ಧವಾಗಿ ‘ಸುಕುಮಾರವಾದ ಶರೀರ ತತ್ತ್ವವುಳ್ಳ’ ಸ್ತ್ರೀಯರು ನಿತ್ಯಜೀವನದಲ್ಲಿ ಒಲೆಯ ಜ್ವಾಲೆಗಳಿಂದ ಹೊರಬರುವ ಹೊಗೆಯಲ್ಲಿ ಅಡುಗೆ ಕೆಲಸಗಳನ್ನು ಮಾಡುವುದು, ಧೂಳಿನಲ್ಲಿ ಆಲಸ್ಯವನ್ನು ಉಂಟು ಮಾಡುವ ಗೃಹಕೃತ್ಯಗಳನ್ನು ನಿರ್ವಹಿಸುವುದು, ಶೃಂಗಾರ ಕ್ರೀಡೆಯಲ್ಲಿ ಪ್ರಿಯನ ವಿಶ್ವಾಸದಲ್ಲಿ ಹೊರಬರುವ ಕಾರ್ಬನ್‌ಡೈ ಆಕ್ಸೈಡ್‌ ಅನ್ನು ಹೀರಿಕೊಳ್ಳುವುದು, ಇಂತಹ ವಿಶೇಷವಾದ ಪರಿಶ್ರಮಕ್ಕೆ ಪಾಲುದಾರಳಾಗಿ ಅನಾರೋಗ್ಯಕ್ಕೆ ಗುರಿಯಾಗದಂತೆ, ಮುತ್ತು ಕಾರ್ಬನ್ ಡೈ ಆಕ್ಸೈಡನ್ನು ಪರಿಶುದ್ಧ ಮಾಡುತ್ತಾ ಪ್ರಾಣ ವಾಯುವನ್ನು ಸುನಾಯಾಸವಾಗಿ ಎಟುಕುವಂತೆ ಮಾಡಿ ಅವರನ್ನು ಕಾಪಾಡುತ್ತದೆ ಎಂದು ಹೇಳಬಹುದು. ಪೂರ್ವಿಕರು ‘ಮುತ್ತಿನಿಂದ ಕೂಡಿದ ಮೂಗುತಿ’ಯನ್ನು ಸ್ತ್ರೀಯ ಮುಖ್ಯಾಭರಣಗಳಲ್ಲಿ ಒಂದಾಗಿ ಸೇರಿಸಿರುತ್ತಾರೆ. ಶ್ರೋತೃಗಳನ್ನು ಆಕರ್ಷಿಸಲು ‘ಮೂಗಿಗೆ ಮೂಗುತಿ ಅಂದ, ಮೂಗುತಿಗೆ ಮುತ್ತೇ ಚಂದ’ ಎನ್ನುವ ಚರಣಗಳಲ್ಲಿ ಹೊಂದಿಸಿರುತ್ತಾರೆ. ಇದಕ್ಕಾಗಿ ಜಾನಪದರು ಪ್ರಶಂಸಾಹ್ರು. ಇಂದಿನ ನಾಗರಿಕತೆಯ ಕಾಲದಲ್ಲಿ, ಮೂಗುತಿಯನ್ನು ಧರಿಸು ಎಂದು ಹೇಳುವುದು ಅಲ್ಲ ಇದರ ಉದ್ದೇಶ. ಸ್ತ್ರೀಯರು ಮೂಗುತಿಯನ್ನು ಧರಿಸುವ ಆಚಾರವನ್ನು ನಮ್ಮ ಪೂರ್ವಿಕರು ಏಕೆ ಸೇರಿಸಿರುತ್ತಾರೋ? ಎಂದು ಪರಿಶೀಲಿಸುವುದೇ ಇಲ್ಲಿಯ ಉದ್ದೇಶ. ಗಾಳಿಯನ್ನು ಪರಿಶುಭ್ರಗೊಳಿಸುವಲ್ಲಿ, ಕಸ ತೆಗೆದು ಹಾಕಲು, ಎಕ್ಸಾಸ್ಟ್‌ ಫ್ಯಾನ್ಸ್‌, ಎ.ಸಿ.ಗಳು, ವ್ಯಾಕ್ಯೂಮ್‌ ಕ್ಲೀನರ್ಸ್ ಬಂದಿರುವ ಈ ಆಧುನಿಕ ಕಾಲದಲ್ಲಿ ಮುತ್ತು, ಬಂಗಾರ ಎಂದು ಮುತ್ತಿನ ಮೂಗುತಿಯನ್ನು ಇಷ್ಟು ಪ್ರಶಂಸಿಸುವುದು ಸರಿಕಾಣುವುದಿಲ್ಲವೇನೋ ! ಆದರೂ ಮುತ್ತಿನ ಮೌಲ್ಯವನ್ನು, ಬಂಗಾರದ ಮೌಲ್ಯವನ್ನು ಇಲ್ಲವೆನ್ನಲಾಗುವುದಿಲ್ಲ ಅಲ್ಲವೇ !

ಸಿ.ವಿ. ಅನುವಾದ ಎಸ್.ಎಲ್.ಡಿ.

 

ಮುತ್ಯಾಲಮ್ಮ ಆಂಧ್ರ ಪ್ರದೇಶದಲ್ಲಿ ಅನೇಕ ಪ್ರಾಂತ್ಯಗಳಲ್ಲಿ ಇರುವ ಗ್ರಾಮದೇವತೆ ಮುತ್ಯಾಲಮ್ಮ. ಮುತ್ಯಾಲಮ್ಮ ಎನ್ನುವ ಹೆಸರು ಈ ದೇವತೆಗೆ ಕೃಷ್ಣಾಜಿಲ್ಲೆ ಮತ್ತು ಖಮ್ಮಂ ಜಿಲ್ಲೆಗಳಲ್ಲಿ ಕಾಣಿಸುತ್ತದೆ. ಇವಳಿಗೆ ಬೇರೆ ಬೇರೆ ಪ್ರಾಂತ್ಯಗಳಲ್ಲಿ ಭಿನ್ನ ಭಿನ್ನ ಹೆಸರುಗಳಿವೆ. ಗ್ರಾಮಗಳಲ್ಲಿ ಈ ದೇವತೆಯನ್ನು ತುಂಬ ಭಯ ಭಕ್ತಿಯಿಂದ ಆರಾಧಿಸುತ್ತಾರೆ.

ಸಾಧಾರಣವಾಗಿ ಮುತ್ಯಾಲಮ್ಮ ಕಲ್ಲಿನ ವಿಗ್ರಹದ ರೂಪದಲ್ಲಿರುತ್ತದೆ. ಕೇವಲ ಒಂದು ಚೂಪಾದ ಕಲ್ಲನ್ನು ಸಹ ಮುತ್ಯಾಲಮ್ಮನೆಂದು ಭಾವಿಸುವುದನ್ನು ಕಾಣುತ್ತೇವೆ. ಮನೆಯಲ್ಲಿ ಮುತ್ಯಾಲಮ್ಮನನ್ನು ಇಟ್ಟುಕೊಂಡು ಪೂಜೆ ಮಾಡಬೇಕೆಂದುಕೊಂಡಾಗ ಮೂರು ಹಿಡಿಯಷ್ಟು ದಪ್ಪವಿರುವ ಕಲ್ಲುಗಳನ್ನು ತಂದು ಅವುಗಳನ್ನು ಪೂಜೆ ಮಾಡುವ ಕಡೆ ಇಟ್ಟು ಅವುಗಳಿಗೆ ಅರಿಸಿನ ಉಜ್ಜಿ ಕುಂಕುಮದ ಬೊಟ್ಟು ಇಟ್ಟರೆ ಅವು ಮೂರು ಸೇರಿ ಮುತ್ಯಾಲಮ್ಮನಾಗುತ್ತಾಳೆ. ಮುತ್ಯಾಲಮ್ಮನ ಗುಡಿಗಳಿಗೆ ಸಾಧಾರಣವಾಗಿ ಮೇಲ್ಭಾಗದಲ್ಲಿ ಛಾವಣಿ ಇರುವುದಿಲ್ಲ. ಸುತ್ತು ಚಿಕ್ಕ ಗೋಡೆ ನಾಲ್ಕು ಅಡಿಗಳಷ್ಟು ಎತ್ತರವಿರುತ್ತದೆ. ಮುತ್ಯಾಲಮ್ಮನ ಗುಡಿಯಲ್ಲಿ ಅಗಸರ ಕುಲದವರು ಪೂಜಾರಿಗಳಾಗಿರುತ್ತಾರೆ. ಮುತ್ಯಾಲಮ್ಮನಿಗೆ ವರ್ಷಕ್ಕೊಮ್ಮೆ ಸೇವೆ ಸಲ್ಲಿಸುತ್ತಾರೆ. ಆಗ ಅಗಸರ ಪೂಜಾರಿಗಳೊಂದಿಗೆ ಇತರ ಕುಲದವರು ಸಹ ಪಾಲ್ಗೊಳ್ಳುವರು. ಕುಂಬಾರ ಕುಲದವರು ಮಡಕೆಗಳನ್ನು ಒದಗಿಸುತ್ತಾರೆ. ಹರಿಜನರು ದೊಡ್ಡ ವಾದ್ಯವನ್ನು ಬಾರಿಸಲು ಬರುತ್ತಾರೆ. ಇವರೊಂದಿಗೆ ಅವರೆಲ್ಲ ಸೇರಿ ಸೇವೆ ಸಲ್ಲಿಸುತ್ತಾರೆ. ಆದ ಖರ್ಚುಗಳನ್ನು ಎಲ್ಲರೂ ಹಂಚಿಕೊಳ್ಳುತ್ತಾರೆ. ಮುತ್ಯಾಲಮ್ಮ ತುಂಬಾ ಶಕ್ತಿವಂತಳಾದ ದೇವತೆಯೆಂದು ನಂಬಿಕೆ ಇದೆ. ಮಕ್ಕಳಿಗೆ ಅಮ್ಮ (ಸಿಡುಬುರೋಗ) ಬಂದರೆ ಈಕೆ ವಾಸಿ ಮಾಡುತ್ತಾಳೆ ಎಂಬ ದೃಢ ವಿಶ್ವಾಸ ಇವರದು. ದನಗಳಿಗೆ ಬರುವ ಗಾಳಿ ಕುಂಟು, ದೊಮ್ಮ ಎನ್ನುವ ವ್ಯಾಧಿಗಳನ್ನು ಸಹ ಈಕೆ ವಾಸಿ ಮಾಡುತ್ತಾಳೆ ಎನ್ನುತ್ತಾರೆ. ವರ್ಷಕ್ಕೊಮ್ಮೆ ಸೇವೆಯನ್ನು ಮಾಡದಿದ್ದರೆ, ಆಕೆಯನ್ನು ಮರೆತಂತೆ ವರ್ತಿಸಿದರೆ, ಆಕೆಗೆ ಕೋಪ ಬಂದು ಈ ರೋಗಗಳನ್ನು ಉಂಟುಮಾಡುತ್ತಾಳೆಂದು ಭಾವಿಸುತ್ತಾರೆ. ಹೀಗೆ ಮನುಷ್ಯರಿಗೆ, ಪಶುಗಳಿಗೆ ರೋಗ ಬಂದ ದಿನಗಳಲ್ಲಿ ಅಮ್ಮನವರು ತುಂಬಾ ಉಗ್ರಳಾಗಿದ್ದಾಳೆಂದು ರಾತ್ರಿ ಸಮಯದಲ್ಲಿ ಆಕೆ ಜಡೆಗಳನ್ನು ಬಿಚ್ಚಿಕೊಂಡು, ನಾಲಿಗೆ ಚಾಚಿಕೊಂಡು, ಕೆಂಗಣ್ಣು ಬಿಟ್ಟುಕೊಂಡು, ಕೈಯಲ್ಲಿ ಬೇವಿನ ಸೊಪ್ಪನ್ನು ಹಿಡಿದು, ಊರಿನ ಎಲ್ಲ ಬೀದಿಗಳಲ್ಲಿ ತಿರುಗುತ್ತಾಳೆ ಎಂದುಕೊಳ್ಳುತ್ತಾರೆ. ಊರಿನಲ್ಲಿ ಈ ರೋಗಗಳು ಇದ್ದ ದಿನಗಳಲ್ಲಿ ಜನರು ಮಧ್ಯರಾತ್ರಿ ಸಮಯದಲ್ಲಿ ಹೊರಗೆ ಓಡಾಡುವುದಿಲ್ಲ.

ಈಕೆಗೆ ಸೇವೆಯನ್ನು ಸಲ್ಲಿಸುವಾಗ, ಕೋಳಿಗಳನ್ನು ಮೇಕೆಗಳನ್ನು ಬಲಿ ನೀಡುತ್ತಾರೆ. ಅಲ್ಲಿ ಬಲಿ ಕೊಡುವ ಜವಾಬ್ದಾರಿ ಅಲ್ಲಿರುವ ಅಗಸರ ಪೂಜಾರಿಗಳದ್ದೆ. ಮಾಂಸಾಹಾರವನ್ನು ಮಾಡದ ಕುಲಕ್ಕೆ ಸೇರಿದವರು ಸಹ ಈ ಗ್ರಾಮದೇವತೆಯನ್ನು ಪೂಜಿಸುವುದುಂಟು. ಅವರು ಈ ಗುಡಿಯ ಬಳಿಗೆ ಬಂದು ಪೂಜೆ ಮಾಡುವುದಿಲ್ಲ. ಆದರೆ ಮನೆಯ ಬಳಿಯೇ ಒಂದು ಕಲ್ಲನ್ನು ಇಟ್ಟುಕೊಂಡು ಆಕೆಗೆ ಪೂಜೆ ಮಾಡಿ ಅಲ್ಲಿ ಪಾಯಸ ಮಾಡಿ ಅದನ್ನು ಅಗಸಗಿತ್ತಿಗೆ ಕೊಟ್ಟು ಮುತ್ಯಾಲಮ್ಮನ ಗುಡಿಯ ಬಳಿಯ ಬಳಿ ಕಳುಹಿಸುತ್ತಾರೆ. ಮನೆಯವರು ಎಮ್ಮೆಗಳು, ಹಸುಗಳು ಈದಾಗ ಹೊಸದಾಗಿ ವ್ಯವಸಾಯ ಆರಂಭವಾದ ಸಂದರ್ಭಗಳಲ್ಲಿ ಸಹ ಮುತ್ಯಾಲಮ್ಮನಿಗೆ ನಡೆದುಕೊಳ್ಳುತ್ತಾರೆ. ಇದರಿಂದ ಎಮ್ಮೆಗೆ ಆರೋಗ್ಯ ಚೆನ್ನಾಗಿದ್ದು ಬೆಳೆ ಚೆನ್ನಾಗಿರುತ್ತದೆಂದು ಇವರ ನಂಬಿಕೆ. ಮುತ್ಯಾಲಮ್ಮನಿಗೆ ವರ್ಷಕ್ಕೊಮ್ಮೆ ಆಷಾಢ ಮಾಸದಲ್ಲಿ ಸಲ್ಲಿಸುವ ಸೇವೆಗಳೇ ಅಲ್ಲದೆ ಕೆಲವು ಪ್ರತ್ಯೇಕವಾದ ಪೂಜೆಗಳು ಇರುತ್ತವೆ. ಮುಖ್ಯವಾಗಿ ಬರಗಾಲ ಬಂದು ಮಳೆ ಬೀಳದೆ ವಾತಾವರಣ ಕೆಟ್ಟು ಹೋದಾಗ ಅದನ್ನು ಸಹ ಅಮ್ಮನ ಕೋಪದಿಂದಲೇ ಎಂದು ಭಾವಿಸುತ್ತಾರೆ. ಮುತ್ಯಾಲಮ್ಮನಿಗೆ ನೀರು ಹಾಕಿದರೆ ಮಳೆಗಳು ಬೀಳುತ್ತವೆ ಎಂಬ ದೃಢ ವಿಶ್ವಾಸ. ಒಂದು ಒಳ್ಳೆಯ ದಿನ ನೋಡಿಕೊಂಡು ಭಾನುವಾರದಂದು ಪ್ರತ್ಯೇಕವಾಗಿ ಮುತ್ಯಾಲಮ್ಮನಿಗೆ ನೀರು ಹಾಕುತ್ತಾರೆ. ಬಾವಿಗಳಿಂದ ಆಗತಾನೆ ತಂದ ನೀರಿನಿಂದ ಗ್ರಾಮದ ಎಲ್ಲ ಕುಲದವರೂ ನೀರು ಹಾಕುತ್ತಾರೆ. ಗಂಡಸರೂ ನೀರು ಹಾಕಬಹುದು. ಹೆಂಗಸರಲ್ಲಿ ಮುತ್ತೈದೆಯರು, ಮದುವೆ ಆಗದ ಹೆಣ್ಣು ಮಕ್ಕಳು ಪಾಲ್ಗೊಳ್ಳುತ್ತಾರೆ. ಹೀಗೆ ನೀರು ಹಾಕಿದರೆ ಹಾಕಿದವರಿಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ. ಹೀಗೆ ಸುರಿದ ನೀರು ಊರಿನ ಬೀದಿಗಳಲ್ಲಿ ಹರಿಯುವಂತೆ ಸುರಿಯುತ್ತಾರೆ. ನೀರು ಸುರಿದಾದ ಮೇಲೆ ಅಗಸರ ಪೂಜಾರಿ ತೇವ ಆರಿದ ಅನಂತರ ಮುತ್ಯಾಲಮ್ಮನಿಗೆ ಅರಿಸಿನ ಉಜ್ಜಿ ಕುಂಕುಮ ಬೊಟ್ಟು ಇಡುತ್ತಾನೆ. ಅಲ್ಲಿಗೆ ಈ ಕಾರ್ಯಕ್ರಮ ಮುಗಿದಂತೆ.

ಹೀಗೆ ನೀರು ಸುರಿಯುವುದರಿಂದ ಮಳೆ ಬೀಳುತ್ತದೆ ಎಂಬ ದೃಢವಾದ ನಂಬಿಕೆ. ಅಷ್ಟೇ ಅಲ್ಲ, ಹೀಗೆ ಸುರಿದ ಅನೇಕ ಸಂದರ್ಭಗಳಲ್ಲಿ ಅದೇ ದಿನ ಇಲ್ಲವೆ ಒಂದೆರಡು ದಿನಗಳ ಅನಂತರವಾದರೂ ಮಳೆ ಬಿದ್ದಿದೆ ಎಂದು ವಿವರಿಸುವವರು ಇದ್ದಾರೆ. ಹೀಗೆ ಪ್ರತ್ಯೇಕ ಸಂದರ್ಭಗಳಲ್ಲೇ ಅಲ್ಲದೆ ಮಾಮೂಲಾಗಿ ಭಾನುವಾರದಂದು ಪೂಜೆ ಮಾಡಲಾಗುತ್ತದೆ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ಮುತ್ತುಪಟ್ಟನ್ ಕದೈ ಮುತ್ತುಪಟ್ಟನ್ ಕಥನ ಕವನವನ್ನು ಬಿಲ್ಲು ಸಂಗೀತ (ವಿಲ್ಲು ಪಾಟ್ಟು) ಮೇಳದಲ್ಲಿ ಹಾಡಲಾಗುತ್ತದೆ. ಬ್ರಾಹ್ಮಣ ಕುಲದಲ್ಲಿ ಜನಿಸಿದ ಮುತ್ತುಪಟ್ಟನ್ ಸಕ್ಕಿಲಿಯ ಕುಲ ಸ್ತ್ರೀಯರನ್ನು ಮದುವೆಯಾಗುವುದು, ಪಶುಗಳನ್ನು ಅಪಹರಿಸಿದ ವನ್ನಿಯರ್ ಗಳನ್ನು ವಿರೋಧಿಸಿ ಮಡಿದದ್ದು, ಅವನ ಹೆಂಡತಿಯರು ಅವನೊಂದಿಗೆ ಸತಿ ಸಹಗಮನ ಪದ್ಧತಿಯಂತೆ ಉರಿಯುವ ಶವದೊಂದಿಗೆ ತಮ್ಮನ್ನು ಉರಿಸಿಕೊಳ್ಳುವ ಘಟನೆಯನ್ನು ಹೇಳುವ ಕತೆ ಇದು. ತೂತ್ತುಕ್ಕುಡಿ, ಕನ್ಯಾಕುಮಾರಿ, ತಿರುನೆಲ್ ವೇಲಿ ಜಿಲ್ಲೆಗಳಲ್ಲಿ ಈ ಕತೆ ಇಂದಿಗೂ ಜನಜನಿತವಾಗಿದೆ.

ತಿರುನಲ್ ವೇಲಿ ಜಿಲ್ಲೆಯ ಪಾಪನಾಶಂ ಸೂರಿ ಮುತ್ತೈಯನ್ ದೇಗುಲದಲ್ಲಿ ಉಪದೈವವಾಗಿ ಪೂಜಿಸುವ ಪಟ್ಟವ ರಾಯನ್ ಇರುವ ದೇಗುಲವೂ, ಕಾರೈಯಾರು ಅಣೆಕಟ್ಟಿನ ಸಮೀಪ ಇರುವ ಪಟ್ಟವರಾಯನ್ ದೇಗುಲವೂ ಈ ಕತೆಯೊಂದಿಗೆ ಹೆಣೆದುಕೊಂಡಿದೆ. ಕನ್ಯಾಕುಮಾರಿ, ತಿರುನೆಲ್ ವೇಲಿ, ತೂತ್ತುಕ್ಕುಡಿಯಲ್ಲಿರುವ ಕೆಲವು ನಾಡಾರ್ ದೈವ ದೇಗುಲಗಳಲ್ಲಿ ಪಟ್ಟವರಾಯನ್ ಉಪ ದೈವವಾಗಿ ಪೂಜಿಸಲಾಗುತ್ತದೆ. ಈ ದೇಗುಲಗಳಲ್ಲಿಯೂ ಮುತ್ತುಪಟ್ಟನ್ ಕತೆಯನ್ನು ಒಂದು ಘಂಟೆ ಕಾರ್ಯಕ್ರಮವಾಗಿ ಹಾಡಲಾಗುತ್ತದೆ.

ಮುತ್ತುಪಟ್ಟನ್ ಕತೆ ಹಾಡನ್ನು ಮುತ್ತಯ್ಯ ಪಿಳ್ಳೈ (೧೯೨೧-೧೯೨೫), ರಾಮಲಿಂಗ ಗುರು (೧೯೩೨), ಮಲಪೆರುಮಾಳ್ ನಾಡಾರ್ (೧೯೩೬), ಕು. ಆರ‍್ಮುಗ ಪೆರುಮಾಳ ನಾಡಾರ್ (೧೯೬೯), ನಾ. ವಾನಮಾಮಲೈ (೧೯೭೧) ಮೊದಲಾದವರು ಮುದ್ರಿಸಿದ್ದಾರೆ. ಸಂಗಂ ಪುಸ್ತಕಾಲಯವು ಇದನ್ನು ಪ್ರಕಟಿಸಿದೆ. ಈ ಪ್ರಕಟಣೆಗಳಲ್ಲಿ ವಾನಮಾಮಲೈ ಮುದ್ರಣ ಮಾತ್ರ ಸಂಶೋಧನಾತ್ಮಕವಾಗಿದೆ. ಮುತ್ತುಪಟ್ಟನ್ ಕತೆಯಲ್ಲಿ ೫೨೫ ಸಾಲುಗಳಿವೆ. ಮುದ್ರಣದಿಂದ ಮುದ್ರಣಕ್ಕೆ ಕತೆ ಬದಲಾಗಿದೆ. ದಕ್ಷಿಣ ಜಿಲ್ಲೆಗಳಲ್ಲಿ ಈ ಕತೆಯ ರಚನಾ ಕ್ರಮವನ್ನು ಈಗಲೂ ಕಾಣಬಹುದು.

ಮುತ್ತುಪಟ್ಟನ್ ಕತೆ ಕ್ರಿ.ಶ. ೧೬ನೇ ಶತಮಾನದ ಕೊನೆಯಲ್ಲೂ ಕ್ರಿ.ಶ. ೧೭ನೇ ಶತಮಾನದ ಪ್ರಾರಂಭದಲ್ಲೂ ನಡೆದಿರಬಹುದು ಎಂದು ಇದರ ಬಗ್ಗೆ ದೀರ್ಘವಾಗಿ ಸಂಶೋಧಿಸಿದ ವಾನಮಾಮಲೈ ಅವರ ಅಭಿಪ್ರಾಯ.

ಮುತ್ತುಪಟ್ಟನ್ನನ ಪತ್ನಿಯರಾದ ಬೊಮ್ಮಕ್ಕ ತಿಮ್ಮಕ್ಕ ಇಬ್ಬರೂ ಸಕ್ಕಿಲಿಯ ಜಾತಿಗೆ ಸೇರಿದವರು. ಆದ್ದರಿಂದ ಸಕ್ಕಿಲಿಯರು ತಮಿಳುನಾಡಿಗೆ ಆಗಮಿಸಿದ ಕಾಲದಲ್ಲಿ (೧೬೫೮-೧೭೩೮) ಈ ಕತೆಯು ನಡೆದಿರಬಹುದೆಂದು ನಾ. ವಾನಮಾಮಲೈ ಹೇಳುತ್ತಾರೆ.

ಮುತ್ತುಪಟ್ಟನ್ ಕತೆಯಲ್ಲಿ ಸಿಂಗಂಪಟ್ಟಿ ಜಮೀನು ಬಗ್ಗೆ ವಿವರವಿದೆ. ಈ ಜಮೀನು ಮಾತ್ರವಲ್ಲದೆ ಬೇರೆ ಜಮೀನುಗಳೂ (ಪಾಳೆಯಗಾರರು) ತಮಿಳುನಾಡಿನಲ್ಲಿ ಉದ್ಭವಿಸಿದ್ದು ೧೫೩೫ರ ಬಳಿಕ. ಆದ್ದರಿಂದ ಈ ಕಾಲದ ಬಳಿಕವೇ ಮುತ್ತುಪಟ್ಟನ್ ಕತೆ ನಡೆದಿದೆ ಎಂದು ಹೇಳಬಹುದು.

ಈ ಕತೆಯಲ್ಲಿ ತಮಿಳುನಾಡು ಕೇರಳ ಗಡಿಭಾಗದಲ್ಲಿರುವ ಆರ್ಯಂಗಾವ್ ಹಾದಿಯ ಬಗ್ಗೆಯೂ ವಿವರವಿದೆ. ಈ ಹಾದಿ ತಯಾರುಗೊಂಡದ್ದು ಕ್ರಿ.ಶ. ೧೭ನೇ ಶತಮಾನದಲ್ಲಿ. ಆದ್ದರಿಂದ ಈ ಕತೆ ಈ ಕಾಲದಲ್ಲಿಯೇ ನಡೆದಿರಬಹುದು.

ಮುತ್ತುಪಟ್ಟನ್ ಕತೆಯ ಮುದ್ರಣಗಳಲ್ಲಿ ಕೆಲವು ಮಾರ್ಪಾಡುಗಳನ್ನು ಕಂಡುಕೊಳ್ಳಬಹುದು. ವಿಲ್ಲುಪಾಟ್ಟು ಶ್ರೋತೃಗಳಿಗೆ ತಕ್ಕಂತೆ ಈ ಕತೆಯನ್ನು ಹಾಡಿರುವುದರಿಂದ ಈ ಮಾರ್ಪಡುಗಳು ಬಂದಿವೆ.

ಸಕ್ಕಿಲಿಯ ಸ್ತ್ರೀಯರಾದ ಬೊಮ್ಮಕ್ಕ ತಿಮ್ಮಕ್ಕರನ್ನು ಬ್ರಾಹ್ಮಣನಾದ ಮುತ್ತುಪಟ್ಟನ್ ಮದುವೆಯಾದ ಎನ್ನುವ ಕತೆ, ಉಚ್ಚಕುಲ ಸಭಿಕರ ಮುಂದೆ ಹಾಡಲಾರದ ನೆಲೆಯಲ್ಲಿ ಹಾಡುವ ಕಲಾವಿದರು ಕತೆಯನ್ನು ಬದಲಾಯಿಸುವ ಮಟ್ಟಿಗೆ ಪ್ರಚೋದಿಸಲಾಯಿತು. ಬೊಮ್ಮಕ್ಕ ತಿಮ್ಮಕ್ಕರು ಹುಟ್ಟಿನಿಂದ ಬ್ರಾಹ್ಮಣರೇ. ಇವರನ್ನು ಹುಟ್ಟಿದೊಡನೆ ಕಾಡಿನಲ್ಲಿ ಬಿಡಲಾಯಿತು. ಮುಂದೆ ಇವರನ್ನು ಸಕ್ಕಿಲಿಯ ಜಾತಿಯವರಾದ ವಾಲಪ್ಪಕಡೈ ಎಂಬುವರು ಸಾಕಿದರು. ಇದರಿಂದ ಮುತ್ತುಪಟ್ಟನ್ ಬ್ರಾಹ್ಮಣ ಸ್ತ್ರೀಯರನ್ನೇ ಮದುವೆಯಾಗುವ ರೀತಿಯಲ್ಲಿ ವಿಲ್ಲುಪಾಟ್ಟು ಸಂಗೀತಗಾರರು ಚಿತ್ರಿಸಿದ್ದಾರೆ. ಕನ್ಯಾಕುಮಾರಿ ಜಿಲ್ಲೆಯಲ್ಲಿ ದೊರೆತ ಒಂದು ಪ್ರತಿ ಈ ಘಟನೆಯನ್ನೇ ವಿವರವಾಗಿ ತಿಳಿಸುತ್ತದೆ.

ಮುತ್ತುಪಟ್ಟನ್ ಮದುವೆಯಾದೊಡನೆ ಅವನನ್ನು ಕೊಲ್ಲಲಾಯಿತು ಎಂದು ಮುದ್ರಣಗೊಂಡ ಕಥನ ಕವನ ಹೇಳುತ್ತದೆ. ಆದರೆ ಓಲೆಗರಿ ಗ್ರಂಥದಲ್ಲಿ ವಾಲಪ್ಪಕಡೈ ಸತ್ತು ಮೂರು ವರ್ಷಗಳ ಬಳಿಕ ಮುತ್ತುಪಟ್ಟನ್ ಸತ್ತ ಎಂದು ಹೇಳುತ್ತದೆ. ಮುತ್ತುಪಟ್ಟನ್ ವಾಲಪ್ಪಕಡೈಗೆ ಚಪ್ಪಲಿ ಹೊಲಿಯುವ ಕೆಲಸದಲ್ಲಿ ಸಹಕರಿಸಿದನೆಂದೂ ದನ ಮೇಯಿಸಿದನೆಂದೂ ಮುದ್ರಣ ಪ್ರತಿಯಲ್ಲಿ ಹೇಳಲಾಗಿದೆ. ಬ್ರಾಹ್ಮಣ ಜಾತಿಯ ಮುತ್ತುಪಟ್ಟನ್ ಈ ಉದ್ಯೋಗವನ್ನು ಮಾಡಿದನೆಂದು ಸಭಿಕರಲ್ಲಿ ಹೇಳಲು ಕೆಲವರು ಇಚ್ಛಿಸಲಿಲ್ಲ ಎಂಬ ಕಾರಣಕ್ಕಾಗಿ ಕತೆ ಬದಲಾಗಿರುತ್ತದೆ.

ಮುತ್ತುಪಟ್ಟನ್ ಕತೆಯ ಸಾರಾಂಶ ಕೇರಳದ ನೆಂಡುಗಾಡು ಹತ್ತಿರವಿರುವ ಆರ್ಯಂಗಾವಿನಲ್ಲಿ ಜೀವಿಸುತ್ತಿದ್ದ ಏಳು ಜನ ಬ್ರಾಹ್ಮಣ ಸಹೋದರರಲ್ಲಿ ಮುತ್ತುಪಟ್ಟನ್ ಒಬ್ಬ. ಇವನು ಯುದ್ಧ ವಿದ್ಯಾ ಪ್ರವೀಣ. ಒಂದು ಬಾರಿ ಸಹೋದರರೊಳಗಿನ ವೈಮನಸ್ಯದಿಂದಾಗಿ ಕೊಟ್ಟಕ್ಕರೈ ಅರಸರಲ್ಲಿ ಕೆಲಸಕ್ಕೆ ಸೇರಿದ. ಸಹೋದರರು ಅವನಿರುವ ಸ್ಥಳವನ್ನು ತಿಳಿದು ಅವನನ್ನು ಮನೆಗೆ ಕರೆದುಕೊಂಡು ಹೋದರು. ಹೋಗುವ ದಾರಿಯಲ್ಲಿ ಸಹೋದರರನ್ನು ಕಳುಹಿಸಿ, ಮುತ್ತುಪಟ್ಟನ್ ಸಕ್ಕಿಲಿಯ ಕುಲವನ್ನು ಹೊತ್ತ ವಾಲಪ್ಪಕಡೈ ಎಂಬುವರ ಮಕ್ಕಳಾದ ಬೊಮ್ಮಕ್ಕ ತಿಮ್ಮಕ್ಕರನ್ನು ಸಂಧಿಸಿದರು. ಅವರ ಮಧುರವಾದ ಹಾಡಿಗೆ ಹಾಗೂ ದೇಹಕ್ಕೆ ಮರುಳಾದರು.

ಆ ಸ್ತ್ರೀಯರೋ ನಮ್ಮ ಕುಲದಲ್ಲಿ ನೀವು ಮದುವೆಯಾಗಬಾರದು ಎಂದು ವಿರೋಧಿಸಿ ತಿಳಿವಳಿಕೆ ಹೇಳಿದರು. ಮುತ್ತುಪಟ್ಟನ್ ಮಾತ್ರ ಕೇಳದಾದ. ಆ ಸ್ತ್ರೀಯರು ತಂದೆ ವಾಲಪ್ಪಕಡೈಯಲ್ಲಿ ಮೊರೆಯಿಟ್ಟರು. ತಂದೆಯು ಮುತ್ತುಪಟ್ಟನ್ ನನ್ನು ಸಂಧಿಸಿ ‘ನೀವು ಬ್ರಾಹ್ಮಣರು. ನಾನು ಸಿಕ್ಕಿಲಿಯನ್ ಈ ಮದುವೆ ನಡೆಯಲಾರದು. ನನ್ನಂತೆ ನೀನು ಆಗಲು ಅಸಾಧ್ಯ’ ಎಂದನು.

ಮುತ್ತುಪಟ್ಟನ್ ವಾಲಪ್ಪಕಡೈಯಲ್ಲಿ ‘ನಾಲ್ಕು ಜನ ತಿಳಿಯುವಂತೆ ಅವರನ್ನು ಮದುವೆಯಾಗುತ್ತೇನೆ’ ಎಂದನು. ಅದಕ್ಕೆ ವಾಲಪ್ಪಕಡೈ –

ನಾಯಿಯಲ್ಲವೋ ನಮ್ಮ ಕುಲ ಓ ಯಜಮಾನ
ನಾತವಿರುವ ಮಾಂಸವ ಕೊಡುವೆ ಓ ಯಜಮಾನ
ಸತ್ತ ದನವ ಕತ್ತರಿಸಬೇಕು ಓ ಯಜಮಾನ
ಕೇರಿಗೆಲ್ಲಾ ಹಂಚಬೇಕು ಓ ಯಜಮಾನ
ಅಡಿಯ ಕತ್ತರಿಸುವೆವು ಅಂಗಡಿ ಅಂಗಡಿಗೆ ಮಾರುವೆವು

ಎಂದು ಹೇಳಿದನು. ಆದರೆ ಮುತ್ತುಪಟ್ಟನೇ ನಿನ್ನ ಜಾತಿಯ ಜನರನ್ನು ನೀನು ನೋಡಿಕೋ ಎನ್ನುವನು. ಅದಕ್ಕೆ ವಾಲಪ್ಪಕಡೈ ‘ನಮ್ಮಂತೆ ಚರ್ಮದ ಚಪ್ಪಲಿಯನ್ನು ಹಾಕಿ, ಜುಟ್ಟನ್ನು ಜನಿವಾರವನ್ನು ತೆಗೆದುಹಾಕಿ ಬರಬೇಕು. ಬಂದರೆ ನನ್ನ ಮಕ್ಕಳನ್ನು ನಿನಗೆ ಕೊಡುವೆ’ ಎಂದನು.

ಮುತ್ತುಪಟ್ಟನ್ ವಿಕ್ರಮಸಿಂಗಪುರದಲ್ಲಿದ್ದ ತನ್ನ ಸಹೋದರರಲ್ಲಿ ಸಮಗಾರ ಸ್ತ್ರೀಯರನ್ನು ಮದುವೆಯಾಗಲು ಅನುಮತಿ ಕೇಳಿದನು. ಅವರು ನಿನಗೆ ಹುಚ್ಚೇ ಎಂದು ಕೇಳಿ ನೆಲಮಹಡಿಯಲ್ಲಿ ಬಂಧಿಸಿದರು. ಮುತ್ತುಪಟ್ಟನ್ ಅಲ್ಲಿಂದ ತಪ್ಪಿಸಿಕೊಂಡು ಓಡಿದನು. ವಿಕ್ರಮಸಿಂಗಪುರದ ಸಂತೆಯಲ್ಲಿ ಚರ್ಮದ ಚಪ್ಪಲಿಯನ್ನು ಕೊಂಡು ಹಾಕಿಕೊಂಡನು. ಜನಿವಾರವನ್ನು ಕತ್ತರಿಸಿಕೊಂಡನು. ಜುಟ್ಟನ್ನು ತೆಗೆದುಹಾಕಿ ಕಡೆಯ ಮನೆಗೆ ಬಂದನು.

ವಾಲಪ್ಪಕಡೈಗೆ ಬೇರೆ ದಾರಿ ಕಾಣಲಿಲ್ಲ. ಮದುವೆಗೆ ಬೇಕಾದ ಏರ್ಪಾಡುಗಳನ್ನು ಮಾಡಿದನು. ಮುತ್ತುಪಟ್ಟನ್ ವಾಲಪ್ಪಕಡೈಯ ಮಕ್ಕಳನ್ನು ಮದುವೆಯಾದ. ವಾಲಪ್ಪಕಡೈ ತನ್ನ ಮಕ್ಕಳಿಗೆ ಪಶುಗಳನ್ನು ಬಳುವಳಿಯಾಗಿ ನೀಡಿದನು. ಮದುವೆ ಮುಗಿದ ತರುವಾಯ ಇಬ್ಬರು ಪತ್ನಿಯರ ತೊಡೆಗಳಲ್ಲಿ ತಲೆಯಿಟ್ಟು ಮಲಗಿದ ಮುತ್ತುಪಟ್ಟನ್. ಅವರಿಬ್ಬರೂ ಮಧುರವಾಗಿ ಹಾಡಿಕೊಂಡಿದ್ದರು.

ಈ ಸಮಯದಲ್ಲಿ ಟೋಪಿ ಹಾಕಿಕೊಂಡಿದ್ದ ಒಬ್ಬನು ಬಂದನು. ‘ಅಣ್ಣಾ, ನಿಮ್ಮ ಪಶುಗಳನ್ನು ವನ್ನಿಯರ್ ತೆಗೆದುಕೊಂಡು ಹೋಗುತ್ತಿದ್ದಾರೆ’ ಎಂದನು. ಮುತ್ತುಪಟ್ಟನ್ ಕೋಪದಿಂದ ಎದ್ದನು. ಈಗಲೇ ಉಪ್ಪಶಂಗೋಟೈ ಮರವರ್ ಗಳನ್ನು ಕೊಂದು ಪಶುಗಳನ್ನು ತರುವೆ’ ಎಂದನು.

ಪತ್ನಿಯರು ಮುತ್ತುಪಟ್ಟನನ್ನು ತಡೆದರು. ಆದರೆ ಅವನು ಪೂಜ್ಜಿ ಎಂಬ ಹೆಸರುಳ್ಳ ನಾಯಿಯೊಂದಿಗೆ ವನ್ನಿಯರರನ್ನು ವಿರೋಧಿಸಲು ಹೋದನು. ಅವರೊಂದಿಗೆ ಹೋರಾಡಿ ಅವರನ್ನು ಹಿಮ್ಮೆಟ್ಟಿಸಿದನು. ಪಶುಗಳನ್ನು ಮುಕ್ತಗೊಳಿಸಿದನು. ಬಳಿಕ ಪಾಪನಾಶನಂ ಬೆಟ್ಟದಲ್ಲಿರುವ ಆಣೆಕಟ್ಟಿನಲ್ಲಿ ರಕ್ತ ಸಿಕ್ತ ಕತ್ತಿಯನ್ನು ತೊಳೆಯುತ್ತಿದ್ದಾಗ ವನ್ನಿಯನ್ ಒಬ್ಬ ಮುತ್ತುಪಟ್ಟನ್ನನ ಬೆನ್ನಿಗೆ ಇರಿದು ಕೊಂದ.

ಮುತ್ತುಪಟ್ಟನ್ ಸತ್ತ ಸುದ್ದಿ ಪೂಚ್ಚಿ ನಾಯಿಯ ಮುಖಾಂತರ ತಿಳಿದುಕೊಂಡ ಬೊಮ್ಮಕ್ಕ ತಿಮ್ಮಕ್ಕರು ಅವನು ಸತ್ತ ಸ್ಥಳಕ್ಕೆ ಹೋದರು.

ಮುಖಕ್ಕೆ ಮುಖವಿಟ್ಟು ಮುತ್ತು ಕೊಟ್ಟು ಅತ್ತರು
ನಾಲ್ಕು ದಿನ ಕಳೆಯಲಿಲ್ಲವೇ ನಾಲ್ಕು ನೀರು ಕೂಡಿಲ್ಲವೇ
ಏಳು ದಿನವೂ ಕಳೆದಿಲ್ಲವೇ ಏಳನೇ ನೀರು ಕೂಡಿಲ್ಲವೇ
ತಾಳಿಕೊಂಡು ಬಂದ ಕಟ್ಟಾನೂಂ ಹೋಗಿಲ್ಲವೇ
ಹೊಂದಿಕೊಂಡಿದ್ದೆವಲ್ಲಾ ಮಕ್ಕಳನ್ನು ಹಡೆದೆವಲ್ಲಾ

ಎಂದು ಹೇಳಿ ಅತ್ತರು.

ಮುತ್ತುಪಟ್ಟನ್ ಸತ್ತ ಬಳಿಕ ಅವರ ಪತ್ನಿಯರೂ ಜೀವದಿಂದಿರಲು ಆಸೆಪಡಲಿಲ್ಲ. ಅವನೊಂದಿಗೆ ಜೀವದಹನ ಮಾಡಿಕೊಳ್ಳಲು ಇಚ್ಛಿಸಿದರು. ಅವನ ಮೃತ ದೇಹವನ್ನು ಸಿಂಗಂಪಟ್ಟಿ ಅರಮನೆಗೆ ತೆಗೆದುಕೊಂಡು ಹೋದರು. ಮುತ್ತುಪಟ್ಟನನ್ನು ಹೊತ್ತಿಸುವಾಗ ಬೆಂಕಿಯಲ್ಲಿ ತಮ್ಮನ್ನು ದಹಿಸಿಕೊಳ್ಳಲು ಅನುಮತಿ ಕೇಳಿದರು. ಸಿಂಗಂಪಟ್ಟಿ ಜಮೀನುದಾರರು ಮೊದಲಲ್ಲಿ ಅದಕ್ಕೆ ಅನುಮತಿ ಕೊಡಲಿಲ್ಲ. ಆ ಹೆಣ್ಣುಗಳಿಗೆ ಬಾಳನ್ನು ನೀಡುವೆನೆಂದು ಹೇಳಿದರು. ಆ ಸ್ತ್ರೀಯರೋ ಬೆಂಕಿಯಲ್ಲಿ ಹಾರಿ ಜೀವ ಕಳೆದುಕೊಳ್ಳುವ ತಯಾರಿಯಲ್ಲಿದ್ದರು. ಜಮೀನುದಾರರು ಬೇರೆ ದಾರಿಯಿಲ್ಲದೆ ಅವರು ಸತಿ ಸಹಗಮನ ಮಾಡಲು ಸಹಕರಿಸಿದರು. ಮುತ್ತುಪಟ್ಟನ್ ಹಾಗೂ ಇಬ್ಬರು ಪತ್ನಿಯರೂ ಸತ್ತ ಬಳಿಕ ಶಿವನಲ್ಲಿ ವರವನ್ನು ತೆಗೆದುಕೊಂಡು ದೈವ ಸ್ಥಾನಕ್ಕೇರಿದರು.

.ಎಸ್.ಪಿ. ಅನುವಾದ ಕೆ.ಕೆ.ಎ.ಈ