ಮೆಟ್ಲೋತ್ಸವಂ ತೆಲುಗರು ಆಚರಿಸುವ ಉತ್ಸವಗಳಲ್ಲೊಂದು. ದಾರಿಯ ಮೆಟ್ಟಿಲುಗಳ ಮೇಲೆ ಆಚರಿಸುವ ಉತ್ಸವ ಮೆಟ್ಲೋತ್ಸವ. ಈ ಉತ್ಸವವನ್ನು ಪ್ರಧಾನವಾಗಿ ತಿರುಮಲ (ತಿರುಪತಿ) ಮೆಟ್ಟಿಲುಗಳ ದಾರಿಯಲ್ಲಿ ಗಮನಿಸಬಹುದು. ಮೆಟ್ಟಿಲುಗಳನ್ನು ಪೂಜಿಸುತ್ತಾ ಬೆಟ್ಟ ಹತ್ತುವುದು ಒಂದು ವ್ರತದಂತೆ ಆಚರಿಸುವುದನ್ನು ಇಲ್ಲಿ ನೋಡುತ್ತೇವೆ. ತಿರುಮಲ ಬೆಟ್ಟದ ಆರಂಭದಲ್ಲಿ ಮೆಟ್ಟಿಲಲ್ಲಿ ಅಂದರೆ ಪಾದದ ಬಳಿ ತಳಿರು ತೋರಣಗಳಿಂದ ಅಲಂಕರಿಸಿ ಅಲ್ಲಿರುವ ದಾಸರ ವಿಗ್ರಹವನ್ನು ಪೂಜಿಸುತ್ತಾರೆ. ಹಿಂದೆ ಪುರಂದರ ದಾಸರಿಗೆ ಈ ಬೆಟ್ಟದ ಮೆಟ್ಟಿಲುಗಳು ಸಾಲಿಗ್ರಾಮಗಳಂತೆ… ಕಾಣಿಸಿದವಂತೆ. ಅವರು ಈ ಮೆಟ್ಟಿಲುಗಳನ್ನು ಪೂಜಿಸುತ್ತಾ ಮೊಣಕಾಲುಗಳಲ್ಲಿ ನಡೆದು ಬೆಟ್ಟ ಹತ್ತಿದರಂತೆ. ಅಂದಿನಿಂದ ನಿರಂತರವಾಗಿ ಈ ಉತ್ಸವ ನಡೆಯುತ್ತಿದೆ.

ಪುರಂದರದಾಸರಿಂದ ಆರಂಭವಾದ ಈ ಉತ್ಸವವನ್ನು ಕನ್ನಡದ ಮಠಾಧಿಪತಿಗಳು ತಿರುಪತಿಗೆ ಬಂದು ಅದನ್ನು ಮುಂದುವರಿಸಿದರು. ಮೊದಲು ಮೆಟ್ಟಿಲಿಗೆ ಶಾಸ್ತ್ರೋಕ್ತವಾಗಿ ಪೂಜೆ ಮಾಡಿ ಅನಂತರ ಭಜನೆ ಮುಂದುವರಿಸುತ್ತಾರೆ. ಈ ಭಜನೆಯಲ್ಲಿ ಹಾಡುವ ಕೀರ್ತನೆಗಳೆಲ್ಲ ಕನ್ನಡದಲ್ಲಿವೆ. ಕನಕದಾಸರು, ಪುರಂದರದಾಸರಂತಹವರು ರಚಿಸಿದ ಭಕ್ತಿಪರವಾದ ಪದಗಳನ್ನು ಇಲ್ಲಿ ಹೆಚ್ಚಾಗಿ ಹಾಡುತ್ತಾರೆ. ಅನಂತರ ಮಠಾಧಿಪತಿಗಳು ಬೆಟ್ಟಕ್ಕೆ ನಡಿಗೆ ಪ್ರಾರಂಭಿಸುತ್ತಾರೆ. ಭಕ್ತವೃಂದ ಇವರನ್ನು ಹಿಂಬಾಲಿಸುತ್ತದೆ. ಅನೇಕ ಭಕ್ತರು ಪ್ರತಿ ಮೆಟ್ಟಿಲಿಗೂ ಪೂಜೆ ಮಾಡಿ ನಮಸ್ಕರಿಸಿ ಮುಂದೆ ಹೋಗುತ್ತಾರೆ. ಸಾಮಾನ್ಯವಾಗಿ ಡಿಸೆಂಬರ್, ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಈ ಉತ್ಸವಗಳನ್ನು ಆಚರಿಸುತ್ತಾರೆ. ಇದರಲ್ಲಿ ಕನ್ನಡಿಗರೇ ಹೆಚ್ಚಾಗಿ ಪಾಲ್ಗೊಳ್ಳುತ್ತಾರೆ.

ಪಿ.ಆರ್.ಎಚ್. ಅನುವಾದ ವಿ.ಆರ್.

 

ಮೇಲುಕೊಲುಪುಲು ಜನಪದ ಗೀತ ಪ್ರಕಾರ (ಸುಪ್ರಭಾತ ಗೀತೆ). ಭಕ್ತಿಗೀತೆಗಳು ಜನಪದ ವಾಙ್ಮಯದಲ್ಲಿ ಒಂದು ಶಾಖೆಯಾಗಿ ಗುರುತಿಸಿಕೊಂಡಿವೆ. ಸ್ತ್ರೀಯರು ಗೃಹಕೃತ್ಯಗಳನ್ನು ನಿರ್ವಹಿಸುವಾಗಲೂ ಭಗವಂತನನ್ನು ಕೀರ್ತಿಸುತ್ತಾ, ಅನೇಕ ಹಾಡುಗಳನ್ನು ಹಾಡುತ್ತಾ, ಇಹಪರಗಳಲ್ಲಿ ಮುಕ್ತಿಹೊಂದಲು ಪ್ರಯತ್ನಿಸುತ್ತಾರೆ. ಆದ್ದರಿಂದ ಸ್ತ್ರೀ ಸಾರಸ್ವತದಲ್ಲಿ ಭಕ್ತಿಗೀತೆಗಳಿಗೆ ಕೊಟ್ಟ ಪ್ರಾಧಾನ್ಯ ಮತ್ಯಾವ ಗೀತ ಪ್ರಕಾರಗಳಿಗೂ ಇಲ್ಲವೆಂದೇ ಹೇಳಬಹುದು.

ಭಕ್ತಿಗೀತೆಯ ಶಾಖೆಗೆ ಸಂಬಂಧಿಸಿದ್ದೇ ಸುಪ್ರಭಾತ ಸೇವೆ. ಈ ಸುಪ್ರಭಾತ ಸೇವೆ ಸರ್ವೇಸಾಧಾರಣವಾಗಿ ಭಗವಂತನನ್ನು ಸ್ತುತಿಸುವಂಥವು. ಷೋಡಶೋಪಚಾರಗಳಲ್ಲಿ ಈ ಸೇವೆಯೂ ಒಂದು. ಇದನ್ನು ದೇವಾಲಯಗಳಲ್ಲಿ ಪ್ರಾತಃಕಾಲದಲ್ಲಿ, ಸಾಮೂಹಿಕವಾಗಿ ಭಗವಂತನನ್ನು ನಿದ್ದೆಯಿಂದ ಎಚ್ಚರಿಸಲು ಗಾಯನ ಮಾಡುತ್ತಾರೆ. ಇದಕ್ಕೆ ಸ್ತ್ರೀ ಪುರುಷರೆಂಬ ಬೇಧವಿಲ್ಲದೆ ಎಲ್ಲರೂ ಹಾಡುತ್ತಾರೆ. ಆದರೆ ಸುಪ್ರಭಾತಗಳೆಲ್ಲವೂ ಸ್ತ್ರೀಯರ ಹಾಡುಗಳ ಪರಿಧಿಯಲ್ಲಿ ಬರುವುದಿಲ್ಲ. ದೇವಾಲಯಗಳಲ್ಲಿ ಹಾಡುವ ಸುಪ್ರಭಾತಗಳು ವ್ಯವಸ್ಥಾಪೂರ್ವಕವಾಗಿಯೂ ಸ್ತ್ರೀಯರು ಹಾಡುವ ಸುಪ್ರಭಾತಗಳು ಅವ್ಯವಸ್ಥಿತವಾಗಿ ಸ್ವಗೃಹಕ್ಕೆ ಪರಿಮಿತವಾಗಿರುತ್ತವೆ. ಸುಪ್ರಭಾತಗಳನ್ನು ಕುರಿತು ತೂಮಾಟಿ ದೋಣಪ್ಪನವರು ಈ ರೀತಿಯಲ್ಲಿ ವಿವರಿಸಿದ್ದಾರೆ. ಬೆಳಗಿನ ಜಾವ ಎಚ್ಚೆತ್ತು ತಮ್ಮ ಇಷ್ಟ ದೇವತಾ ಸಂಬಂಧವಾದ ಯಾವುದಾದರೂ ಸುಪ್ರಭಾತಗಳನ್ನು ಹಾಡಿಕೊಳ್ಳುವುದು ಸಹಾ ಅಭ್ಯಾಸಬಲದಿಂದ ಬಂದಿದೆ. ಕೆಲವು ಮಂದಿ ವೈಕುಂಠ ಏಕಾದಶಿಯ ದಿನ ಉಪವಾಸವಿದ್ದು ಅಂದು ಬೆಳಗಿನ ಜಾವ ಮಂಗಳಪ್ರದವಾದ ಸುಪ್ರಭಾತಗಳನ್ನು ಹಾಡುವುದೂ ಉಂಟು. ಧನುರ್ಮಾಸದಲ್ಲಿ ಪ್ರಭಾತ ಸಮಯದಲ್ಲಿ ಕೆಲವು ಪ್ರಾಂತ್ಯಗಳಲ್ಲಿ ನಡೆಸುವ ನಗರ ಸಂಕೀರ್ತನೆ ಸುಪ್ರಭಾತಗಳ ವಿಸ್ತೃತರೂಪವೆಂದು ಹೇಳಬಹುದು. ಸುಪ್ರಭಾತಗಳು ಸಕಲ ದೇವತಾಪರವಾಗಿ ರೂಢಿಯಲ್ಲಿ ಇರುವಂತೆ ಸ್ಪಷ್ಟವಾಗಿದೆ. ಮೊದಮೊದಲು ದೇವಾಲಯಗಳಲ್ಲಿ ಅಂಗರಂಗಭೋಗಗಳಲ್ಲಿ ಆಧರಿಸಲ್ಪಟ್ಟ ಸುಪ್ರಭಾತಗಳು ಬರುತ್ತಾ ದೇವಾಲಯಗಳ ಆರ್ಥಿಕ ಸ್ಥಿತಿ ಇಳಿಮುಖವಾದ ಕಾರಣದಿಂದಲೋ, ಹಳೆಯ ಸಂಪ್ರದಾಯಗಳನ್ನು ಕಾಪಾಡಿಕೊಳ್ಳಬೇಕೆಂಬ ಆಸಕ್ತಿ ಸಡಿಲಗೊಂಡ ಕಾರಣಕ್ಕೊ, ಎಲ್ಲಾ ಬೋಗಗಳೊಂದಿಗೆ ಕಾಣದಾಯಿತು. ಆದರೆ ರಾಷ್ಟ್ರ ಸಂಸ್ಕೃತಿಯ ಗಣಿಯಾದ ಜನಪದ ಸಾಹಿತ್ಯದಲ್ಲಿ ಸುಪ್ರಭಾತಗಳು ಕೆಲವು ಇನ್ನೂ ಉಳಿದಿವೆ.

ಲೌಕಿಕ ಸಂಸ್ಕೃತ ವಾಙ್ಮಯದಲ್ಲಿ ಮೊದಲ ಸುಪ್ರಭಾತವನ್ನು ಆದಿಕಾವ್ಯವಾದ ರಾಮಾಯಣದಲ್ಲಿ ಕಾಣಬಹುದು.

ಕೌಸಲ್ಯಾ ಸುಪ್ರಜಾರಾಮ ಪೂರ್ವಾಸಂಧ್ಯಾ ಪ್ರವರ್ತತೇ
ಉತ್ತಿಷ್ಠ ನರಶಾರ್ದೂಲ ಕರ್ತವ್ಯಂ ದೈವಮಾಹ್ನಿಕಮ್

ಎಂದು ವಿಶ್ವಾಮಿತ್ರ ಮಹರ್ಷಿ ಯಾಗ ರಕ್ಷಣೆಗೆಂದು ಕರೆದೊಯ್ದ ರಾಮಲಕ್ಷ್ಮಣರನ್ನು ದೈವೀ ಸಂಬಂಧವಾದ ಕಾರ್ಯಗಳನ್ನು ನಿರ್ವಹಿಸಲೋಸುಗ ಎಚ್ಚರಗೊಳ್ಳಿರೆಂದು ಹೇಳಿದ್ದಾನೆ.

ನಮಗೆ ತಿಳಿದಂತೆ ತೆಲುಗಿನಲ್ಲಿ ಪದಕವಿತಾ ಪಿತಾಮಹನಾದ ಅನ್ನಮಾಚಾರ್ಯ ರಚಿಸಿದ ಸುಪ್ರಭಾತಗಳೇ ಮೊಟ್ಟಮೊದಲಿನವು. ಅನ್ನಮಾಚಾರ್ಯರು ಸ್ತ್ರೀಯರು ಹಾಡಿಕೊಳ್ಳಲೆಂಬ ಉದ್ದೇಶದಿಂದ ರಚಿಸದೇ ಹೋದರೂ ಅವು ಸ್ತ್ರೀಯರು ಹಾಡಿಕೊಳ್ಳಲು ಅನುವಾಗಿಯೇ ಇವೆ.

ವಿನ್ನಪಾಲು ವಿನವಲೆ ವಿಂತ ವಿಂತಲೂ
ಪನ್ನಗಪು ದೋಮತೆರ ಪೈಕೆತ್ತನೇಲಯ್ಯಾ
ಮೆಲಮೆಲ್ಲನೆ ವಿಚ್ಚಿ ಮೇಲುಕೊನವೇಲಯ್ಯಾ
ಲೇನಿಭ್ರಮಲು ದಿಗಿಲೇವಯ್ಯಾ
ಲೇ ನಗುಮೋಮುತೋ ಲೇವಯ್ಯಾ

ಎಂಬುದು ಅನ್ನಮಾಚಾರ್ಯರ ಸುಪ್ರಭಾತಗಳಲ್ಲಿ ಪ್ರಸಿದ್ಧವಾದುದು. ಇವುಗಳನ್ನು ಗೃಹಿಣಿಯರು ಸಹಾ ನಿಸ್ಸಂಕೋಚವಾಗಿ ಹಾಡುವರು. ಸ್ತ್ರೀಯರು ಪ್ರಾತಃಕಾಲದಲ್ಲಿ ಗೃಹಕೃತ್ಯಗಳನ್ನು ನಿರ್ವಹಿಸುತ್ತಾ ಇವುಗಳನ್ನು ಹಾಡುವರು. ಜಾನಪದರು ಇದನ್ನು ಭೂಪಾಲರಾಗದಲ್ಲಿ ಹಾಡುವುದರಿಂದ ಇವನ್ನು ‘ಭೂಪಾಲ’ಗಳೆಂದು ಕರೆಯುವುದುಂಟು. ಶಾಸ್ತ್ರೀಯ ರೀತ್ಯ ಹಾಡುವ ಸಂಗೀತಗಾರರು ಬೌಳಿ ರಾಗದಲ್ಲಿ ಹಾಡುವರು. ಇವೆರಡೂ ರಾಗಗಳಿಗೆ ಹತ್ತಿರದ ಸಂಬಂಧವಿದೆ. ಮಲಯಮಾರುತ ಮುಂತಾದ ಬೇರೆ ಬೇರೆ ಉದಯರಾಗಗಳಲ್ಲೂ ಹಾಡಿದ್ದಾರೆ. ಹೆಚ್ಚು ಪ್ರಸಿದ್ಧವಾದುದು ಭೂಪಾಲವೇ.

ಸುಪ್ರಭಾತಗಳು ಭಗವದ್ವಿಭೂತಿಯನ್ನು ಕೀರ್ತಿಸುವಂತೆ ಇರುತ್ತವೆ. ಪ್ರಾತಃಕಾಲದಲ್ಲಿ ಭಗವಂತನನ್ನು ಧ್ಯಾನಿಸಿದ ಅನಂತರ ತಮ್ಮ ತಮ್ಮ ಕೆಲಸ ವಿಧಿಗಳನ್ನು ನಿರ್ವಹಿಸುತ್ತಾರೆ. ಬೆಳಗಿನ ಜಾವದಲ್ಲಿ ಪ್ರಕೃತಿಯೆಲ್ಲಾ ಆಹ್ಲಾದಕರವಾಗಿ ಇದ್ದು ಮನಸ್ಸಿನಲ್ಲಿ ಉತ್ತೇಜನವನ್ನು ಮೂಡಿಸುತ್ತಿರುತ್ತದೆ. ಅಂತಹ ಪ್ರಶಾಂತ ಸಮಯದಲ್ಲಿ ಸ್ತ್ರೀಯರು ತಮ್ಮ ಒಂಟಿತನವನ್ನು ಹೋಗಲಾಡಿಸುವ ಸಲುವಾಗಿ, ತಾವು ಮಾಡುವ ಕೆಲಸದಲ್ಲಿ ಶ್ರಮವನ್ನು ಮರೆಯಲು ಹಾಡುಗಳನ್ನು ಹಾಡಿಕೊಳ್ಳುತ್ತಾರೆ. ಭೇದವಿಲ್ಲದೆ ಎಲ್ಲ ದೇವಾನುದೇವತೆಗಳ ಮೇಲೂ ರಚಿಸಿರುವ ಸುಪ್ರಭಾತಗಳು ಎಷ್ಟೋ ಇವೆ. ಸೀತಾದೇವಿ, ಪಾರ್ವತೀ ದೇವಿ, ಅಲಮೇಲು ಮಂಗ, ಕಾಶೀ ಅನ್ನಪೂರ್ಣ ಪರವಾಗಿ ಇರುವ ಹಾಡುಗಳೂ ಇವೆ. ಇದಲ್ಲದೆ ಗಂಗಾ ದೇವಿಗೆ ಸಂಬಂಧಿಸಿದ, ಪ್ರಕೃತಿ ವರ್ಣನೆ ಮಾಡುತ್ತಿರುವ, ವೇದಾಂತ ಪರವಾದ ಸುಪ್ರಭಾತಗಳು ಹಲವು ಇವೆ. ವಸ್ತುವಿಗೆ ಅನುಗುಣವಾಗಿ ಇವುಗಳನ್ನು ಹತ್ತು ವಿಧಗಳಾಗಿ ವಿಭಜಿಸಬಹುದು: ಸೇವಾಭಾವನೆಯನ್ನು ವ್ಯಕ್ತಗೊಳಿಸುವ, ತಮ್ಮನ್ನು ರಕ್ಷಿಸೆಂದು ಪ್ರಾರ್ಥಿಸುವ, ಸ್ತೋತ್ರದ ರೂಪದಲ್ಲಿ ಇರುವ, ಜೀವನ ಗಾಥೆಯನ್ನು ತಿಳಿಸುವ, ವರ್ಣನಾತ್ಮಕವಾಗಿ ಇರುವ, ಶೃಂಗಾರ ಪರವಾಗಿ ಇರುವ, ಮಧುರ ಭಕ್ತಿಪೂರಿತವಾಗಿರುವ, ವೇದಾಂತ ಪರವಾಗಿ ಇರುವ, ಅತ್ತಿಗೆಯ ಮೇಲೆ ರಚಿಸಿರುವ ಹಾಸ್ಯ ಸುಪ್ರಭಾತಗಳು ಮತ್ತು ದೇಶಭಕ್ತಿ ಸುಪ್ರಭಾತಗಳನ್ನು ಕಾಣಬಹುದು.

ಸೇವಾಭಾವವನ್ನು ತಿಳಿಸುವ ಸುಪ್ರಭಾತಗಳಲ್ಲಿ ಕೃಷ್ಣನ ಪರವಾಗಿ ಇರುವ ಹಾಡುಗಳು ಪ್ರಖ್ಯಾತವಾಗಿವೆ.

ಬಂಗಾರು ಚೆಂಬುತೋ ಪನ್ನೀರು ಪಟ್ಟುಕ ಪಣತಿರುಕ್ಮಿಣಿವಚ್ಚೇ ಮೇಲುಕೋ
ರಂಗೈನ ಬಂಗಾರು ಕೆಂಗೀರ ಬೂನುಕ ತರುಣಿ ಸತ್ಯವಚ್ಚೇ ಮೇಲುಕೋ
ದಂತಕಾಷ್ಠಮು ಬೂನಿ ತಾಮರಸಾಕ್ಷಿ ಸುದತವಚ್ಚಿನಾದಿ ಮೇಲುಕೋ

ಅಷ್ಠಮಹಿಷಿಯರು, ಹದಿನಾರು ಸಾವಿರ ಪತ್ನಿಯರು, ಶ್ರೀಕೃಷ್ಣನಿಗೆ ಸೇವೆಗೈಯಲು ಸಿದ್ಧವಾಗಿ ಆತನನ್ನು ಎಚ್ಚರಗೊಳ್ಳೆಂದು ಪ್ರಾರ್ಥಿಸುತ್ತಿದ್ದಾರೆ.

ಭವಬಂಧಗಳಿಂದ ಕಾಪಾಡಿ ರಕ್ಷಿಸೆಂದು ಪರಿಪರಿ ವಿಧವಾಗಿ ಭಗವಂತನನ್ನು ಬೇಡಿಕೊಳ್ಳುವಂತೆ ರಚಿಸಿದ ಸುಪ್ರಭಾತಗಳು ಇವು.

ಘೋರಮೈನ ಸಂಸಾರ ಬಾಧಲ ಗಡತೇರಲೇರು ಜನುಲು ಮೋಲುಕೋ
ದಾರಿಜೂಪಿವಾರಿ ದರಿಜೇರ‍್ಜುಕುನ್ನ ನೆವ್ವಾರುಕ್ಕುಸ್ವಾಮಿ ಮೇಲುಕೋ
ಯಂತ ವೇಡುಕುನ್ನ ಸುಂತೈನಕೃಪಜೂಡ ವಿಂತಪರಾಕೇಲ ಮೇಲುಕೋ
ಚಿಂತಲುದೀರ ನೀಚೆಂತ ಜೇರಿನಾಮು ಪಂತಮುವಲದಿಕ ಮೇಲುಕೋ

ಇದಲ್ಲದೆ

ಕೇಶವಯನಿ ನಿನ್ನು ವಾಸಿಗಭಕ್ತು ಲುವರ್ಣಿಂ ಪುಚುನ್ನಾರುಲೇರಾ
ವಾಸವವಂದಿತ ವಸುದೇವನಂದನ ವೈಕುಂಠಪುರವಾಸ ಲೇರಾ

ಎಂಬ ಹಾಡುಗಳು ಕೇಶವನಾಮಗಳ ಸುಪ್ರಭಾತಗಳಾಗಿ ಪ್ರಸಿದ್ಧಿಯಾಗಿವೆ. ಸ್ತೋತ್ರರೂಪದಲ್ಲಿರುವವುಗಳಲ್ಲಿ ಇದು ಅಗ್ರಗಣ್ಯವಾದುದು.

ರಾಮಾಯಣದ ಕಥೆಯನ್ನು ವರ್ಣಿಸುವ ಸುಪ್ರಭಾತ ಸೇವೆಗಳು ಹಲವು ಇವೆ. ಇವುಗಳಲ್ಲಿ ಪುತ್ರಕಾಮೇಷ್ಟಿ ಸುಪ್ರಭಾತದಲ್ಲಿ ಶ್ರೀರಾಮ ಪುತ್ರಕಾಮೇಷ್ಟಿಯಿಂದ ಉದ್ಭವಿಸಿದ್ದು ಮೊದಲುಗೊಂಡು ಸೀತಾಕಲ್ಯಾಣದವರೆಗೆ ಇರುವ ಕಥೆಯೆಲ್ಲವೂ ಇದೆ.

            ಪುತ್ರಕಾಮೇಷ್ಟಿಯಂದು ಪುಟ್ಟಿನ ಶ್ರೀರಾಮ ಪುಂಡರಿಕಾಕ್ಷುಡ ಮೇಲುಕೋ
ಪುರುಡು ಪುಣ್ಯಮು ಪೊಂದುಗ ತೀರೆನು ಪುರುಷೋತ್ತಮರಾಮ ಮೇಲುಕೋ
ಬಾರಸಾಲ ಮೀಕುಬಾಗುಗ ಜೇಸೇರು ಪಟ್ಟಾಭಿರಾಮಯ್ಯ ಮೇಲುಕೋ
ನಾಮಕರಣಮು ವ್ರಾಸಿರಿ ನಯಮುತೋಡಶರಥುಲು ನಾರಾಯಣ ರಾಮಾ ಮೇಲುಕೋ
ರಾಮಲಕ್ಷ್ಮಣ ಭರತಶತೃಘ್ನಲನೇ ನಾಮಕರಣಂವ್ರಾಸಿ ಮೇಲುಕೋ
ಮುತ್ಯಾಲ ತೊಟ್ಟಿಲೋ ಮುದಮುತೋ ಕೌಸಲ್ಯಮುರಿಯುಚು ಮಿಮ್ಮುಂಚೆ ಮೇಲುಕೋ
ಬೋಟುಲಂದರು ಗೂಡಿಪಾಟಲು ಪಾಡೇರು ಭೋಗರಾಮಚಂದ್ರ ಮೇಲುಕೋ

ಎಂದು ಸೀತಾಕಲ್ಯಾಣದವರೆಗೆ ಇರುವ ಕಥೆಯನ್ನು ಮನೋಹರವಾಗಿ ವರ್ಣಿಸಲಾಗಿದೆ.

ವರ್ಣನಾತ್ಮಕವಾಗಿ ಇರುವ ಸಾವಿರಾರು ಸುಪ್ರಭಾತದಲ್ಲಿ ಪ್ರಕೃತಿ ವರ್ಣನೆ ಇರುವ ಹಾಡುಗಳು ಮನೋಜ್ಞವಾಗಿವೆ.

            ಕೋಳ್ಳು ಗೂಸೆನು ಅಲಸದೀರೆನು ಕೋಮಲುಲಕು
ತೆಲ್ಲನಾಯೆನು ತೇಜಮಣಗೆಸನು ದೀಪಮುಲಕು
ವೆಳ್ಳೆ ಚುಕ್ಕಲು ಗಾಂತಿ ತರಿಗೆಯ ಚಂದ್ರನಕುನು
ಪದ್ಮಮುಲೆಲ್ಲ ವಿರಿಸೆಚೆಟ್ಲಕು ನಚ್ಚೆ ಮಧುವು
ಉದಯಪರ‍್ವತಮಂದು ಸೂರ್ಯುಡುದಯಮಾಯೆನ್
ಲೋಕುಲು ಮುದಮು ಜೆಂದಿರಿ ಸಕಲದಿಕ್ಕುಲು ಪೊದಲೆ ಕಾಂತುಲ್

ಇದರಂತೆ ಪ್ರಕೃತಿ, ಸಮಾಜ ಸುಂದರವಾಗಿ ವರ್ಣಿತವಾಗಿವೆ. ಶೃಂಗಾರ ರಸಾತ್ಮಕವಾದ ಸುಪ್ರಭಾತಗಳೆಲ್ಲವೂ ಕೃಷ್ಣನ ಪರವಾಗಿ ಇವೆ. ಇವುಗಳನ್ನು ಗೃಹಿಣಿಯರು ಮನದುಂಬಿ ಮಧುರವಾಗಿ ಗಾಯನ ಮಾಡುವಂಥವು.

ಯಿರುಗುಪೊರುಗು ಸೊಮ್ಮು ಎರುವುತೆಚ್ಚುಕ ನೇನು ನೀನುಚೇರ ವಸ್ತಿನಿ ಲೇರಾ
ಬಲುವೈನ ಮುತ್ಯಾಲ ಬಾವಿಲಿ ಚೆವಿನಿಲೇದು ಪಾನ್ಪುವೆತಕವಲೆ ಲೇರಾ
ಕೃಷ್ಣಾ ತೆಲ್ಲವಾರವಚ್ಚೇನೂ ಅಗರುಗಂಧಮುಲು ವದ್ದನ್ನ ಪೂಸ್ತಿವಿ ಅವಿನೀಳ್ಳು ಕಡಗಾಲಿ ಲೇರಾ
ಚಿಗುರಾಕು ವಿಡಿಯಮ್ಮು ನೋರೆರ‍್ರನಾಯೆನು ಅತ್ತುಡುಚುಕೋವಾಲಿ ಲೇರಾ
ಕೃಷ್ಣಾ ತೆಲ್ಲವಾರವಚ್ಚೇನೂ

ವೇದಾಂತ ಪರವಾಗಿರುವ ಸುಪ್ರಭಾತಗಳಲ್ಲಿ ಜೀವವನ್ನು ಎಚ್ಚರಗೊಳ್ಳೆಂದು ಪ್ರಾರ್ಥಿಸುತ್ತಿದ್ದಾರೆ. ಇದರಲ್ಲಿ ಜೀವೇಶ್ವರೈಕ್ಯವು ಪ್ರತಿಪಾದಿಸಲ್ಪಟ್ಟಿದೆ.

ಮೇಲುಕೊನವೇ ಜೀವಹಂಸ ಮೇಲುಕೋನವೇ ಪರಮಹಂಸ
ಮೇಲುಕೊನಿ ಸದ್ಗುರು ಕರುಣನು ಮೇಲು ಜೆಂದೆದವೂ

ಎಂಬುದು ವೇದಾಂತ ಸುಪ್ರಭಾತಗಳಲ್ಲಿ ಪರಾಕಾಷ್ಠೆಯನ್ನು ಹೊಂದಿರುವುದು. ಈ ಹಾಡೆಲ್ಲವೂ ಶ್ಲೋಕ ಹಾಗೂ ತಾತ್ಪರ್ಯ ರೂಪದಲ್ಲಿ ಇದೆ.

ಸೀತಾದೇವಿ, ಅಲಮೇಲುಮಂಗ, ಪಾರ್ವತಿ ಮೊದಲಾದ ಸ್ತ್ರೀ ದೇವತೆಗಳ ಪರವಾಗಿ ಇರುವ ಸುಪ್ರಭಾತಗಳಲ್ಲಿ ಅವರನ್ನು ದೇವತೆಗಳೆಂದು ಆರಾಧಿಸುತ್ತಲೇ ಅವರಿಗೆ ಬುದ್ಧಿ ಹೇಳುವಂಥವೂ ಇವೆ. ಅಲಮೇಲು ಮಂಗೆಯ ಮೇಲೆ ರಚಿಸಿದ ಸುಪ್ರಭಾತವೊಂದು ಹೀಗಿದೆ :

ನೆಲತ ತನ ಪತಿಕನ್ನ ಮುಂದು ಮೇಲುಕೋನವಲೆ
ಜಲಜಾಕ್ಷಿ ಜಾಮಾಯನಮ್ಮ ಮೇಲುಕೋ

ಪತಿಗಿಂತಲೂ ಮುಂಚೆ ಎಚ್ಚರಗೊಳ್ಳುವುದು ಪತ್ನಿ ಧರ್ಮವೆಂದು ಆಕೆಗೆ ಬುದ್ಧಿ ಹೇಳಿದ್ದಾರೆ. ಸೀತಾದೇವಿ ಸುಪ್ರಭಾತದಲ್ಲಿ

ಅದಿಯೇಮೆ ಮಾಯಮ್ಮ ಅಲುಕ ಶಾಯರಾದು
ಅತ್ತವಾರಿಯಿಲ್ಲು ಲೇವೆ
ಪಲುಕವೇಮೇ ನಿನು ಬ್ರತಿಮಾಲುಕುಂಟಾನು
ಬುದ್ಧಕಿಂಚಕ ವೇಗಲೇತಿ

ಅತ್ತೆ ಮನೆಯಾದ್ದರಿಂದ ಸೊಂಬೇರಿತನ ಬಿಟ್ಟು ಬೇಗ ಏಳಬೇಕೆಂದು, ಹುಸಿಮುನಿಸು ಮಾಡಬಾರದೆಂದು ಆಕೆಯನ್ನು ಎಚ್ಚರಿಸಿದರು. ಈ ಹಾಡನ್ನು ಮದ್ದುಲ ವೆಂಕಟಾಚಲದಾಸ ರಚಿಸಿದನೆಂದು ತಿಳಿದುಬಂದಿದೆ.

ಇತ್ತೀಚಿನ ಕಾಲದಲ್ಲಿ ಚಲನಚಿತ್ರಗಳಲ್ಲಿ ಗ್ರಾಮೀಣ ವಾತಾವರಣವನ್ನು ಸೃಷ್ಟಿಸುವುದಕ್ಕೆ ಹಲವು ಸನ್ನಿವೇಶಗಳನ್ನು ಕಲ್ಪಿಸುತ್ತಿದ್ದಾರೆ. ಅವುಗಳಲ್ಲಿ ಹೆಸರಿಸತಕ್ಕವು ಸುಪ್ರಭಾತಗಳು. ಆದರೆ ಈ ಹಾಡುಗಳು ಸಂಪ್ರದಾಯ ಸಿದ್ಧವಾದ ಸುಪ್ರಭಾತಗಳೆಂದು ಗುರುತಿಸಲ್ಪಟ್ಟವಲ್ಲ.

ಎಸ್.ಎಲ್.ಎನ್. ಅನುವಾದ ಎಸ್.ಎಲ್.ಡಿ.

ಮೈನೆರೆದ ಹಾಡು ಹೆಣ್ಣು ಬೆಳೆದು ಪ್ರಾಯಕ್ಕೆ ಬರುತ್ತಲೇ ಋತುಮತಿಯಾದ ಸಂದರ್ಭದಲ್ಲಿ ಹೇಳುವುದು ಸೋಬಾನೆ ಹಾಡು ಅಥವಾ ಮೈನೆರೆದ ಹಾಡು. ಇದು ಮೇಳಗೀತ. ಋತುಮತಿಯಾದ ದಿನದಿಂದ ಇಪ್ಪತ್ತೊಂದು ದಿನಗಳವರೆಗೆ ಈ ಸಂಭ್ರಮ ನಡೆಯುತ್ತದೆ. ಆಗ ಮನೆಯ ಪ್ರಶಸ್ತ ಸ್ಥಳದಲ್ಲಿ ಬಣ್ಣಬಣ್ಣದ ಅರಿವೆ ಇಲ್ಲವೆ ಕಾಗದದ ಮಂಟಪ ಸಿದ್ಧಗೊಳ್ಳುತ್ತದೆ. ಪ್ರತಿದಿನ ಸಾಯಂಕಾಲ ಊರಿನ ಹೆಣ್ಣು ಮಕ್ಕಳೆಲ್ಲ ಆಹ್ವಾನಿತರಾಗಿ ಬಂದು ಮಂಟಪದ ಮುಂದೆ ಒಟ್ಟುಗೂಡುತ್ತಾರೆ. ಅಲಂಕೃತ ಋತುಮತಿಯನ್ನು ಮಂಟಪದೊಳಗೆ ವಿಶಿಷ್ಟ ಭಂಗಿಯಲ್ಲಿ ಕುಳ್ಳಿರಿಸಿ ‘ಸೋಬಾನ ಹಾಡು’ ಹೇಳುತ್ತಾರೆ. ಐದನೆಯದಾದ ಆರತಿ ಹಾಡು ಹೇಳಿ, ಆರತಿ ಬೆಳಗಿ ಮುತ್ತೈದೆಯರೆಲ್ಲ ತಮ್ಮ ಗಂಡಂದಿರ ಹೆಸರು ಹೇಳಿ ನಲಿಯುತ್ತಾರೆ. ಋತುಮತಿಯ ಮದುವೆಯಾಗಿದ್ದರೆ ಕೊನೆಯ ದಿನ ದಂಪತಿಗಳನ್ನು ಜತೆಯಾಗಿ ಕುಳ್ಳಿರಿಸಿ ಸೋಬಾನ ಹೇಳುತ್ತಾರೆ. ಇದಕ್ಕೆ ಮುಮ್ಮೇಳದಲ್ಲಿ ಇಬ್ಬರು, ಹಿಮ್ಮೇಳದಲ್ಲಿ ಇಬ್ಬರು ಬೇಕು. ಈ ಹಾಡುಗಳ ಛಂದಸ್ಸು ತ್ರಿಪದಿ; ಹಾಡುವಾಗ ಅದು ಚೌಪದಿಯಾಗಿ ಮಾರ್ಪಡುತ್ತದೆ.

ಉದಾ –

ಮುಮ್ಮೇಳ :

ಅರಸುತ್ತಿನ ದುರಗ | ಏರಿಸಿದ ಕಲ್ಲಗಸಿ |
ಅವರಪ್ಪರು ಕಟ್ಟಿಸಿದೊಂದರಮನಿಯ | ಸೋಬಾನವ
ಅವರಪ್ಪರು ಕಟ್ಟಿಸಿದೊಂದರಮನಿಯ
| ಮಂಟಪದಾಗ
ನಾರಿ ಮೈನೆರೆದ ಸೆಡಗರ
| ಸೋಬಾನವ

ಹಿಮ್ಮೇಳ :

ಮಂಟಪದಾಗ | ನಾರಿ ಮೈನೆರೆದ ಸೆಡಗರ | ಸೋಬಾನವ

ಮುಮ್ಮೇಳ :

ಉಪ್ಪರಗಿ ಮ್ಯಾಲ | ಹತ್ತು ಜ್ಯೋತಿ ತುಂಬಿ |
ಒಪ್ಪುಳ್ಳುವೆರಡು ಸಮೆಯವ ಸೋಬಾನವ
ಒಪ್ಪುಳ್ಳುವೆರಡು ಸಮೆಯವ
| ತುಂಬಿಟ್ಟಾರ
ಪುತ್ರ ಯೆಂಕಟರ ಮಡದೀಗೆ
| ಸೋಬಾನವ

ಹಿಮ್ಮೇಳ :

ತುಂಬಿಟ್ಟಾರ | ಪುತ್ರ ಯೆಂಕಟರ ಮಡದೀಗೆ | ಸೋಬಾನವ

ಸಾಮಾನ್ಯವಾಗಿ ಇವು ಶೃಂಗಾರದ ಹಾಡುಗಳು. ಭೋಗಜೀವನದ ವೈಭವವನ್ನು ಕಣ್ಣಿಗೆ ಕಟ್ಟುವ ಈ ಹಾಡುಗಳು ಕನ್ಯೆಯ ಮನಸ್ಸನ್ನು ಭೋಗಕ್ಕೆ ಹದಗೊಳಿಸುತ್ತವೆ. ಇಂಥ ವಸ್ತು, ಗಾನ ಪದ್ಧತಿ – ಇವು ಕಾರಣವಾಗಿ ಇಡೀ ವಾತಾವರಣಕ್ಕೆ ಒಂದು ರಮ್ಯ ಹಿನ್ನೆಲೆ ಸಿದ್ಧಗೊಳ್ಳುತ್ತದೆ. ‘ಸೋಬಾನs’ ಎಂಬ ಸೊಲ್ಲು ಪ್ರತಿ ಪದಕ್ಕೂ ತಿರುತಿರುಗಿ ಬಂದು ಬಿಡಿಬಿಡಿಯಾದ ಶೃಂಗಾರ ಚಿತ್ರಗಳಿಗೆ ಏಕಸೂತ್ರವನ್ನು ಸಾಧಿಸಿಕೊಡುತ್ತದೆ.

ಎಂ.ಎಂ.ಕೆ.

 

ಮೈಲಾರಲಿಂಗ ಸಂಪ್ರದಾಯ ಕರ್ನಾಟಕ ಮತ್ತು ಆಧ್ರಪ್ರದೇಶಗಳಲ್ಲಿ ಪ್ರಚಲಿತವಿರುವ ಮುಖ್ಯ ಸಂಪ್ರದಾಯಗಳಲ್ಲಿ ಒಂದು. ಮಹಾರಾಷ್ಟ್ರದಲ್ಲಿ ಇದಕ್ಕೆ ಖಂಡೋಬ ಸಂಪ್ರದಾಯವೆಂಬ ಹೆಸರಿದೆ.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಈ ಸಂಪ್ರದಾಯದ ಪ್ರಮುಖ ಕೇಂದ್ರ. ಮಲ್ಲಾಸುರ, ಮಣಿಕಾಸುರರೆಂಬ ರಕ್ಕಸರ ಸೊಕ್ಕಡಗಿಸಲು ಶಿವನು ಮಾರ್ತಾಂಡ ಭೈರವನ ರೂಪದಲ್ಲಿ ಭೂಮಿಯಲ್ಲಿ ಅವತರಿಸಿ ಲಿಂಗರೂಪದಲ್ಲಿ ನೆಲೆಗೊಂಡ ಪ್ರದೇಶ ಮೈಲಾರ ಎಂಬುದು ಭಕ್ತರ ನಂಬಿಕೆ. ಆಂಧ್ರದ ಮೀನಗೊಂದಿಯಲ್ಲಿ ನೆಲೆಸಿದ್ದ ‘ಒಡೆಯರ್’ ಎಂಬ ಪಂಗಡದವರು ಇಂದು ಮೈಲಾರಲಿಂಗ ಸಂಪ್ರದಾಯದಲ್ಲಿ ಗುರುಸ್ಥಾನದಲ್ಲಿದ್ದಾರೆ. ಮೈಲಾರಲಿಂಗನ ಭಕ್ತರನ್ನು ‘ಮೈಲಾರದ ಗುಡ್ಡರು’ ಎನ್ನುತ್ತಾರೆ. ಮೈಲಾರಲಿಂಗನ ಹೆಸರಿನಲ್ಲಿ ದೀಕ್ಷೆ ಪಡೆದ ಗಂಡಸರನ್ನು ಗೊರವರು ಎಂದೂ ಹೆಂಗಸರನ್ನು ಗೊರವಮ್ಮ ಎಂದೂ ಕರೆಯುತ್ತಾರೆ. ‘ಕಂಚಾವೀರರು’ ಎಂಬ ಪಂಗಡವೊಂದು ವಿಶಿಷ್ಟ ರೀತಿಯ ‘ಪವಾಡ’ ಸೇವೆಗಳನ್ನು ಮಾಡುವ ಮೂಲಕ ಈ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿದ್ದಾರೆ.

54_70A_DBJK-KUH

‘ಮೈಲಾರ ಲಿಂಗನ ಕಾವ್ಯ’ ಕರ್ನಾಟಕದ ಪ್ರಮುಖ ಜನಪದ ಮಹಾಕಾವ್ಯಗಳಲ್ಲಿ ಒಂದಾಗಿದೆ. ಹಿರೇಹಡಗಲಿ ಹುಚ್ಚಮ್ಮ, ಮೈಲಾರದ ಮಾಲತೇಶನಾಯಕ ಮೊದಲಾದ ಹಾಡುಗಾರರು ಹಲವು ರಾತ್ರಿಗಳ ಕಾಲ ಈ ಕಾವ್ಯವನ್ನು ಹಾಡಬಲ್ಲರು. ಇವಲ್ಲದೆ ‘ಬಿಡಿ ನುಡಿಗಳು’ ಎಂಬ ‘ಇಂದು ನಿಮ್ಮನೀಗೇ ಸ್ವಾಮಿ ಬಂದ… ಮೈಲಾರಲಿಂಗ’ ಮೊದಲಾದ ನೂರಾರು ಹಾಡುಗಳನ್ನು ಗೊರವಯ್ಯ – ಗೊರವಮ್ಮಗಳು ಹಾಡುತ್ತಾರೆ. ಮೈಲಾರನಿಗೆ ‘ಹುಣ್ಣಿಮೆ’ ಬಲುಶ್ರೇಷ್ಠ. ‘ಭಾರತ ಹುಣ್ಣಿಮೆ’ಯಂದು ಮೈಲಾರದಲ್ಲಿ ಜರುಗುವ ಜಾತ್ರೆ ಕರ್ನಾಟಕದಲ್ಲಿಯೇ ಅತಿ ಹೆಚ್ಚು ಜನ ಸೇರುವ ಜಾತ್ರೆ ಎಂದು ಪ್ರಸಿದ್ಧಿ ಪಡೆದಿದೆ. ಮಾಗಿ ಹುಣ್ಣಿಮೆ, ಕಾರ ಹುಣ್ಣಿಮೆ, ಬನದ ಹುಣ್ಣಿಮೆ ಹೀಗೆ ಪ್ರತಿ ಹುಣ್ಣಿಮೆಯ ದಿನದಂದೂ ಮೈಲಾರನ ಜಾತ್ರೆಗೆ ಸಂಬಂಧಿಸಿದ ಆಚರಣೆ ನಡೆಯುತ್ತದೆ.

‘ಕೋಮಾಲಿಯ ಕಥೆ’ ಮೈಲಾರನ ಸಾಹಸವನ್ನು ಬಿಂಬಿಸುವ ಕಥೆಯಾಗಿದೆ. ಕೋಮಾಲಿ ಎಂಬ ಹೆಣ್ಣಿಗಾಗಿ ಕುರುಬನಂತೆ ವೇಷಧಾರಿಯಾಗಿ ಶೀಲವಂತರ ಮನೆಯಲ್ಲಿ ಹಲವು ಕಾಲ ಆಳಾಗಿ ದುಡಿದು ‘ಅವಳನ್ನೇ ಅಪಹರಿಸಿ’ ಕೊನೆಗೆ ದಂಡೆತ್ತಿ ಬಂದ ಶೀಲವಂತರನ್ನು ಸೋಲಿಸಿದ ಮೈಲಾರ ಸಾಹಸ ಮೆರೆದ ಪರಿ ಚಾಣಾಕ್ಷತನದ್ದೇ ಹೊರತು ವೀರತನದ್ದಾಗಿ ಕಾಣುವುದಿಲ್ಲ. ತಿರುಪತಿ ತಿಮ್ಮಪ್ಪನ ಬಡ್ಡಿ ಆಸೆಗೆ ಮಣ್ಣು ಹಾಕಿದ ಮೈಲಾರನ ಕಥೆ ಕೂಡ ಅಷ್ಟೇ ಜನಪ್ರಿಯವಾದುದಾಗಿದೆ.

‘ಕಂಚಾವೀರರು’ ಮೈಲಾರನು ಮಲ್ಲಾಸುರನೊಂದಿಗೆ ಯುದ್ಧ ಮಾಡುವಾಗ ಸಹಾಯ ಮಾಡಿದರೆಂಬ ಕಾರಣಕ್ಕೆ ವಿಶೇಷವಾದ ಸ್ಥಾನಮಾನ ಹೊಂದಿದವರಾಗಿದ್ದಾರೆ. ಕಂಚಾವೀರ ಗಂಡು ಮಕ್ಕಳು ಮದುವೆಯಾಗುವ ಮುನ್ನ ಕಬ್ಬಿಣದ ಸರಳನ್ನು ಕಣಕಾಲಿನ ಮೂಲಕ ಹಾಯಿಸಿಕೊಳ್ಳುವ ಪವಾಡಕ್ಕೆ ‘ಕನ್ನ ಪವಾಡ’ ಎನ್ನುತ್ತಾರೆ.

ಮೈಲಾರಲಿಂಗ ಸಂಪ್ರದಾಯವು ಕೇವಲ ಒಂದು ಜಾತಿ ಅಥವಾ ಕುಲ ಹಾಗೂ ಸ್ತ್ರೀ ಅಥವಾ ಪುರುಷರಿಗೆ ಸೀಮಿತವಾಗಿಲ್ಲ. ಕರ್ನಾಟಕದ ಅತಿ ಪ್ರಾಚೀನ ಶೈವ ಸಂಪ್ರದಾಯಗಳಲ್ಲಿ ಮೈಲಾರಲಿಂಗ ಸಂಪ್ರದಾಯವೂ ಕೂಡ ಒಂದು.

‘ಮೈಲಾರಲಿಂಗ ಸಂಪ್ರದಾಯ’ಕ್ಕೆ ಸಂಬಂಧಿಸಿದ ಜನಪದ ಮಹಾಕಾವ್ಯದ ಪ್ರಕಾರ ಮೈಲಾರನು ಮಾರ್ತಾಂಡ ಭೈರವನ ಅವತಾರ. ಮೈಲಾರನಿಗೆ ಗುಡ್ಡದಯ್ಯ, ಮಾಲತೇಶ, ಖಂಡೋಬ, ಮಲ್ಲಣ್ಣ, ರಾವುತರಾಯ ಮೊದಲಾದ ಹೆಸರುಗಳಿವೆ. ಆತನ ಪತ್ನಿ ಗಂಗಿ ಮಾಳವ್ವ. ಮೈಲಾರನಿಗೆ ಕೋಮಾಲಿ, ಕುರುಬತಿಯರೆಂಬ ಉಪಪತ್ನಿಯರೂ ಇದ್ದಾರೆ. ದೊಡ್ಡಯ್ಯ – ಚಿಕ್ಕಯ್ಯ ಅಥವಾ ಚಿಕ್ಕಯ್ಯ – ಜುಂಜಯ್ಯರೆಂಬ ಇಬ್ಬರು ಮಕ್ಕಳು. ಗಂಗೆಮಾಳವ್ವ ತಿರುಪತಿ ತಿಮ್ಮಪ್ಪನ ತಂಗಿ. ಆ ಪ್ರಕಾರ ತಿರುಪತಿ ತಿಮ್ಮಪ್ಪ ಹಾಗೂ ಮೈಲಾರ ಭಾವನೆಂಟರು.

ಗೊರವರು ಮೈಲಾರಲಿಂಗನ ಭಕ್ತರು. ಚಿಕ್ಕ ವಯಸ್ಸಿನಲ್ಲಿಯೇ ಇವರಿಗೆ ‘ದೀಕ್ಷೆ ನೀಡಿ’ ಮೈಲಾರ ದೇವರ ಸೇವೆಗೆಂದು ಮೀಸಲು ಬಿಡುತ್ತಾರೆ. ಗೊರವರಲ್ಲಿ ಹಲವು ವಿಧಗಳಿವೆ. ಒಂದು ಸೇನೆಯ ಸೈನಿಕರು ನಿರ್ವಹಿಸುವ ಕಾರ್ಯಕ್ಕೆ ಸಂವಾದಿಯಾಗಿ ಗೊರವರ ಸೇವೆಗಳಿದ್ದು ಆ ಸೇವೆಗೆ ಅನುಗುಣವಾಗಿ ಗೊರವರ ವಿಧಗಳನ್ನು ಗುರುತಿಸುತ್ತಾರೆ. ಪಹಗೊರವ ಕಾವಲು ಕಾಯುತ್ತಾನೆ. ಕುದುರೆಗೊರವ ಕುದುರೆಯಂತೆ ಕುಣಿಯುತ್ತಾನೆ. ಸರಪ್ಯಾಗೊರವ ಸರಪಳಿಯಂತೆ ಹರಿದುಕೊಂಡು ಬರುತ್ತಾನೆ. ಕೈ ಕೋಲು ದೀವಟಿಗೆ ಗೊರವ ಕತ್ತಲ ರಾತ್ರಿಯಲ್ಲಿ ನಡೆಯಲು ಬೇಕಾದ ಕಂದೀಲು, ದೊಂದಿಗಳನ್ನು ಹಿಡಿದು ನಡೆಯುತ್ತಾನೆ. ನಾಯಿ ಗೊರವ ಬೇಟೆಯಲ್ಲಿ ಶಿಕಾರಿಗೆ ಹೊರಡುವವನಿಗೆ ನಾಯಿ ಹೇಗೆ ಬೆಂಗಾವಲಿಗೆ ಇರುತ್ತದೆಯೋ ಆ ರೀತಿ ದೇವರ ಬೆಂಗಾವಲಿಗೆ ನಿಂತವನಾಗಿರುತ್ತಾನೆ. ಕುದುರೆಗೊರವ ಸೈನಿಕರ ಸವಾರಿಗೆ ಅನುವು ಮಾಡುವ ಕುದುರೆಯಂತೆ ಸೇವೆ ಮಾಡುತ್ತಾನೆ. ಒಟ್ಟಾರೆಯಾಗಿ ಜಾತ್ರೆಯಲ್ಲಿ ಸೇರುವ ಬಹುಮಂದಿ ಭಕ್ತಾದಿಗಳು ತಾವು ಯುದ್ಧದ ಸೈನಿಕರಾಗಿ ದೇವರ ಸೇವೆಗೆ ಬಂದವರು ಎಂಬ ಭಾವನೆಯಲ್ಲಿರುತ್ತಾರೆ.

ವಲಸಿಗ ಪಶುಪಾಲಕರು ನೆಲೆಗೊಳ್ಳುವ ಸಂದರ್ಭ ಸ್ಥಳೀಕರೊಂದಿಗೆ ಹೊಂದಿದ ಸಂಘರ್ಷದ ಕುರುಹು ‘ಮೈಲಾರದ ಜಾತ್ರೆ’ಯಲ್ಲಿ ಕಾಣುತ್ತದೆ.

ಎಂ.ಎನ್.ವಿ.

 

ಮೊಗರಂ ಎತ್ತಡಂ ತೆಲುಗುನಾಡಿನ ಜನಪದ ಗೃಹನಿರ್ಮಾಣ ಕಲೆ, ವಾಸ್ತು. ಮನೆಕಟ್ಟುವುದರಲ್ಲಿ ಮೊದಲಿಗೆ ಉಪಯೋಗಕ್ಕೆ ಬರುವುದು ಕೂಸ (ಮೊಗರಂ), ಎಂದರೆ ಭೂಮಿಯಲ್ಲಿ ಉಳಿದ ಕಂಬ. ಇದನ್ನು ಗುಂಜ ಎಂದೂ ಕರೆಯುವರು. ಇದನ್ನು ಭೂಮಿಯಲ್ಲಿ ಒಂದು ಗಜದಷ್ಟು ಆಳಕ್ಕೆ ನೆಡುತ್ತಾರೆ. ಇದರ ಮೇಲೆ ಕೂಸದಂತೆ ಮಾಡಿರುತ್ತಾರೆ. ಆಕಡೆ ಒಂದು ಕಂಬ ಈ ಕಡೆ ಒಂದು ಕಂಬ ನೆಟ್ಟು ಅನಂತರ ಈ ಎರಡು ಕೂಸಗಳನ್ನು ಒಳಗೊಂಡಂತೆ ಅಡ್ಡವಾಗಿ ಒಂದು ತೊಲೆಯನ್ನು ಇಡುತ್ತಾರೆ. ಈ ತೊಲೆಯ ಮೇಲೆ ಲಂಬವಾಗಿ ಆಧಾರ ಕಂಬಗಳು ಬರುತ್ತವೆ. ಅದರ ಮೇಲೆ ತೊಲೆಗಳು ಬರುತ್ತವೆ.

ಸಾಧಾರಣವಾಗಿ ಇದಕ್ಕೆ ಬೇವಿನ ಮರಗಳನ್ನು ಉಪಯೋಗಿಸುತ್ತಾರೆ. ಇವನ್ನು ಕೊಳ್ಳುವ ಶಕ್ತಿ ಇಲ್ಲದವರು ಹತ್ತಿರದಲ್ಲಿ ದೊರೆಯುವ ಮರದ ಕೊಂಬೆಗಳನ್ನು ಕಂಬಗಳಂತೆ ಉಪಯೋಗಿಸುವುದುಂಟು. ಕಂಬ ನೆಡುವುದು ಎಂಬುವುದು ಜನಪದ ಗೃಹನಿರ್ಮಾಣದಲ್ಲಿ ಪಾಲಿಸುವ ಅನೇಕ ಆಚರಣೆಗಳಲ್ಲಿ ಒಂದು. ಕಂಬ ನೆಡುವುದು ಎಂದರೆ ಪೂಜೆ ಎಂದರ್ಥ. ಮನೆಯನ್ನು ಕಟ್ಟುವುದಕ್ಕೆ ಮಾಡುವ ಮೊದಲ ಪೂಜೆ. ಭವನಗಳನ್ನು ಕಟ್ಟುವವರು ಶಂಕುಸ್ಥಾಪನೆ ಹೇಗೆ ಮಾಡುತ್ತಾರೋ ಹಾಗೆಯೇ ಹುಲ್ಲಿನ ಗುಡಿಸಲು, ಗುಡಾರ ಕಟ್ಟಿಕೊಳ್ಳುವವರು ಕಂಬ ನೆಡುವುದನ್ನು ಮಾಡುತ್ತಾರೆ. ವಾಸ್ತು ಪಂಡಿತರು ಕಂಬ ನೆಡಲು ಯಾವಾಗ, ಯಾವ ಮುಹೂರ್ತದಲ್ಲಿ ಮಾಡಬೇಕೆಂಬುದನ್ನು ತಿಳಿಸುತ್ತಾರೆ. ಸಾಧಾರಣವಾಗಿ ಆ ಗ್ರಾಮದಲ್ಲಿರುವ ವಿಶ್ವ ಬ್ರಾಹ್ಮಣನೇ ಈ ಕೆಲಸವನ್ನು ಮಾಡುತ್ತಾನೆ. ಮುಹೂರ್ತದ ಹಿಂದಿನ ದಿನವೇ ವಿಶ್ವಬ್ರಾಹ್ಮಣನು ವಡ್ರಂಗಿ (ಬಡಗಿ) ಕಂಬವನ್ನು ತಯಾರಿಸುತ್ತಾನೆ. ಅದನ್ನು ಈ ಮನೆಯವರು ಬಂದು ತೆಗೆದುಕೊಂಡು ಹೋಗುತ್ತಾರೆ. ಕಂಬ ನೆಡುವ ಸಮಯಕ್ಕೆ ಅದನ್ನು ಮಾಡಿದ ವಿಶ್ವ ಬ್ರಾಹ್ಮಣನು ಅಲ್ಲಿಗೆ ಬರುತ್ತಾನೆ. ಆ ಮನೆಯ ಒಡತಿ, ಯಜಮಾನ ಇಬ್ಬರು ಸ್ನಾನ ಮಾಡಿ ಮಡಿ ಬಟ್ಟೆಗಳನ್ನು ಧರಿಸಿ ಮನೆಕಟ್ಟುವ ಸ್ಥಳಕ್ಕೆ ಬರುತ್ತಾರೆ. ಅಲ್ಲಿ ಮೊಗರಂ ಸಿದ್ಧವಾಗಿರುತ್ತದೆ. ಈಶಾನ್ಯದಲ್ಲಿ ಗುಂಡಿ ತೆಗೆಯುತ್ತಾರೆ. ಅನಂತರ ವಡ್ರಂಗಿ ಆ ಕಂಬಕ್ಕೆ ಅರಿಸಿನ ಉಜ್ಜಿ ಕುಂಕುಮ ಇಟ್ಟು ಕಂಕಣ ಕಟ್ಟುತ್ತಾನೆ. ತಾನು ವಾಸ್ತು ಪುರುಷನಿಗೆ ಪೂಜೆ ಮಾಡಿದ ಮೇಲೆ ಮನೆಯ ಒಡತಿ ಗಂಡನೊಂದಿಗೆ ಪೂಜೆ ಮಾಡುತ್ತಾಳೆ. ಕಂಬವನ್ನು ನೆಡುವ ಗುಂಡಿಯಲ್ಲಿ ನವಧಾನ್ಯಗಳನ್ನು ಹಾಕುವರು. ಹಾಗೆಯೇ ಸ್ವಲ್ಪ ನವಧಾನ್ಯವನ್ನು ಅರಿಸಿನ ಬಟ್ಟೆಯಲ್ಲಿ ಕಟ್ಟಿ ಅವನ್ನು ಕಂಬದ ಮೇಲ್ಭಾಗದಲ್ಲಿ ಕಟ್ಟುವರು. ಅನಂತರ ಕಂಬದ ಮೇಲ್ಭಾಗದಲ್ಲಿ ಪಕ್ಷಿಗಳು ಹಾರದಂತೆ ಸುತ್ತಿ ಸೊಪ್ಪಿನಿಂದ ಕಟ್ಟನ್ನು ಕಟ್ಟುತ್ತಾರೆ. ಆಗ ಆ ಮನೆಯ ಒಡತಿ, ಗಂಡ, ಆ ವಿಶ್ವಬ್ರಾಹ್ಮಣ ಸೇರಿ ಆ ಕಂಬವನ್ನು ಎತ್ತಿ ಗುಂಡಿಯಲ್ಲಿಟ್ಟು ತೂಕಕ್ಕೆ ಸರಿಯಾಗಿ ನಿಲ್ಲಿಸಿ ನೆಡುತ್ತಾರೆ. ಪೂಜಾಕಾರ್ಯಕ್ರಮಗಳನ್ನು ಒಟ್ಟಾಗಿ ಕಂಬ ನೆಡುವುದು ಎನ್ನುತ್ತಾರೆ.

ಇದು ಜಾನಪದ ಆಚರಣೆಗಳಲ್ಲೂ ಗೃಹನಿರ್ಮಾಣದಲ್ಲೂ ಒಂದು ಅಂಗ. ಇನ್ನು ಮೊಗರಂ ಎನ್ನುವ ಮಾತು ಗೃಹನಿರ್ಮಾಣದಲ್ಲೇ ನಿಂತು ಹೋಗಿಲ್ಲ. ಅದು ತೆಲುಗು ಆಡುನುಡಿಯಲ್ಲಿ ಸೇರಿಹೋಗಿದೆ. ಮೊಗರಂಎತ್ತು ಎಂದು ತುಂಬ ಎತ್ತರವಾಗಿರುವ ವ್ಯಕ್ತಿಗಳನ್ನು ಕುರಿತು ಹೇಳುವುದಕ್ಕೆ ಈ ಪದವನ್ನು ಬಳಸುತ್ತಾರೆ. ಎತ್ತರವಾಗಿರುವವನನ್ನು ಮೊಗರಂ ಎತ್ತು ಮನಿಷಿ (ಕಂಬದಂತೆ ಎತ್ತರವಾದ ಆಳು) ಎಂದೆನ್ನುವರು. ಇನ್ನು ಯಾವುದಾದರೂ ಎತ್ತರವಾದುದನ್ನು ಕುರಿತು ಹೇಳಬೇಕೆಂದಾಗ ಮೊಗರಂ ಎತ್ತು ಎಂದೂ ಕರೆಯುತ್ತಾರೆ. ಅಲುಗಾಡದೆ ಸ್ಥಿರವಾಗಿರುವುದನ್ನು ಸಹ ‘ಏನು ಹಾಗೆ ಕಂಬದಂತೆ ನಿಂತಿದ್ದೀಯ?’ ಎಂದೆನ್ನುವರು. ಗೃಹನಿರ್ಮಾಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲ ಪದಗಳು ಹೀಗೆ ಪಡೆನುಡಿಯಲ್ಲಿವೆ.

ಪಿ.ಎಸ್.ಸಿ. ಅನುವಾದ ವಿ.ಆರ್.