ಮುದುವನ್ನರು ಮದುರೈ, ಮಲಬಾರ್ ಮತ್ತು ತಿರುವಾಂಕೂರ್ ಗಳಲ್ಲಿರುವ ಮುದುವನ್ನರು ಕುಮರಿ ಬೇಸಾಯಗಾರರು. ಐತಿಹ್ಯದ ಪ್ರಕಾರ ಅವರು ಮೂಲತಃ ಮದುರೈ ಪ್ರದೇಶದಲ್ಲಿ ವಾಸವಾಗಿದ್ದವರು. ಆ ಕಾಲದ ಪಾಂಡ್ಯರಾಜನು ಯುದ್ಧದಲ್ಲಿ ತೊಂದರೆಗೆ ಒಳಗಾದಾಗ ಇವರು ಇನ್ನೊಂದು ವರ್ಗದ ಜನರಾದ ಮನ್ನನರ ಜತೆ ಊರು ಬಿಟ್ಟು ಗುಡ್ಡಗಾಡುಗಳನ್ನು ಸೇರಿಕೊಂಡರು. ಆಗ ಅವರು ಮದುರೈ ಮೀನಾಕ್ಷಿ ವಿಗ್ರಹವನ್ನು ಹೆಗಲ ಮೇಲೆ ಹೊತ್ತು ನೆರಿಯ ಮಂಗಲದ ಸಮೀಪದ ಕಾಡಿಗೆ ಒಯ್ದರಂತೆ. ಹಾಗಾಗಿ ಅವರನ್ನು ಮುದುವನ್ನರು (ಮುದುಲ್ – ಹೆಗಲು) ಎಂದು ಕರೆದರು. ಮನ್ನರು ಮತ್ತು ಪೊಲೆಯರು ಮುದುವನ್ನರನ್ನು ತಗಪ್ಪನ್ಮಾರ್ ಅಥವಾ ಅಪ್ಪಾ ಎಂದು ಕರೆದರು. ಮುದುವನ್ನರಿಗೆ ತಮ್ಮದೇ ಆದ ಉಪಭಾಷೆ ಇದೆ. ಅದು ಕೆಲವು ಮಲಯಾಳಂ ಪದಗಳನ್ನೊಳಗೊಂಡ ತಮಿಳಿನಂತಿದೆ. ಅವರ ಗಂಡಸರಿಗೆ ಕಂಜನ್, ಕರುಪ್ಪುಕೊಂಞಿ, ಕಾರ‍್ಮೇಗಂ ಮುಂತಾಗಿಯೂ ಹೆಂಗಸರಿಗೆ ಕರುಪ್ಪಾಯಿ, ಪೇಚ್ಚಿ (ಪಿಶಾಚ) ಮುಂತಾಗಿ ಹೆಸರಿಡುತ್ತಾರೆ.

ಕೇರಳದ ಇಡುಕ್ಕಿ ಜಿಲ್ಲೆಗೆ ಸೇರಿದ, ತಿರುವಾಂಕೂರಿನ ವಾಯವ್ಯದ ಎತ್ತರದ ಬೆಟ್ಟಸಾಲುಗಳಲ್ಲಿ ಇವರು ನೆಲೆಸಿದ್ದಾರೆ. ಮುದುವನ್ನ ಇನ್ನು ಕೆಲವರು ಮರುಯೂರು ಅಥವಾ ಮುನ್ನಾರ್, ಅಡಿಮಾಲಿಯ ಚಿನ್ನಪ್ಪಾರ ಮುಂತಾದೆಡೆ ದಟ್ಟಕಾನನಗಳಲ್ಲಿ ಇದ್ದಾರೆ. ‘ಕುಟಿ’ಯೊಂದರಲ್ಲಿ ಸು. ಮೂವತ್ತು ಗುಡಿಸಲುಗಳಿರುತ್ತವೆ. ಪ್ರತಿಯೊಂದು ‘ಹಂತಿ’ಯಲ್ಲೂ ಮುತ್ತುಕಮ್ಮಿ ಎಂದು ಕರೆಯಲ್ಪಡುವ ಮುಖ್ಯಸ್ಥನಿರುತ್ತಾನೆ. ಪೂಜಾರಿ ಮತ್ತು ಮಂದ್ರಕ್ಕಾರನ್ (ಮಂತ್ರವಾದಿ) ಅವನ ಕೈಕೆಳಗಿನ ಅಧಿಕಾರಿಗಳು. ಮಂದ್ರಕ್ಕಾರನು ಮುದುವ ಜನರಿಗೆ ಮರುದುವನ್ (ವೈದ್ಯ) ಆಗಿಯೂ ಕಾರ್ಯ ನಿರ್ವಹಿಸುತ್ತಾನೆ. ಮುದುವನರು ಮದುರೈ ಮೀನಾಕ್ಷಿ, ಮಾರಿ ಅಮ್ಮನ್, ಬೆಟ್ಟದೇವತೆಗಳು ಮತ್ತು ಪಿತ್ರಾರಾಧಕರು. ಮೂಪ ಮತ್ತು ‘ವಾಕನ್’ರ ಅಧಿಕಾರವು ಪರಂಪರೆಯಿಂದ ದೊರಕುವವು.

ಅವರು ಅಳಿಯಕಟ್ಟು ಸಂಪ್ರದಾಯದವರು – ಆಸ್ತಿಯ ಹಕ್ಕು ಹಿರಿಯಕ್ಕನ ಹಿರಿಮಗನಿಗೆ. ಒಳ್ಳೆಯ ಶಕುನಗಳ ಬಗೆಗೆ ಇವರಿಗೆ ತಿಳಿಯದು, ಆದರೆ ದುಶ್ಯಕುನಗಳ ಬಗೆಗೆ ಗಾಢನಂಬಿಕೆ. ಹುಡುಗರು ವಯಸ್ಸಿಗೆ ಬಂದಾಗ ಅವರ ಹೆತ್ತವರು ಊರಿಗೇ ಔತಣ ಕೊಡಿಸುತ್ತಾರೆ. ಹುಡುಗಿಯರ ವಿಚಾರದಲ್ಲೂ ಹೀಗೆಯೇ ಔತಣವಿದೆ. ಹುಡುಗಿ ಮೈನೆರೆದಾಗ ಇತರ ಹೆಂಗಸರಿಗೆ ಅಶೌಚಕಾಲದಲ್ಲಿ ಉಳಿದುಕೊಳ್ಳಲು ನಿರ್ಮಿಸಿದ ಗುಡಿಸಲಲ್ಲಿ ಇರಬೇಕು.

ಮುದುವನ್ ಹುಡುಗ ತನ್ನ ಮಾವನ ಮಗಳನ್ನೇ ಮದುವೆಯಾಗುತ್ತಾನೆ. ಬಹುಪತ್ನಿತ್ವ ಮತ್ತು ಬಹುಪತಿತ್ವ ಮುದುವನ್ನರಲ್ಲಿ ಆಚರಣೆಯಲ್ಲಿದೆ. ವಿಧವೆಯ ಪುನರ್ ವಿವಾಹ ಕೂಡ ಸಮ್ಮತವೇ. ವಿಧವೆಯರಿಗೆ ಪ್ರತ್ಯೇಕ ಬಟ್ಟೆಗಳನ್ನು ಧರಿಸಬೇಕೆಂಬ ಕಟ್ಟುಪಾಡು ಇಲ್ಲ. ಆದರೆ ಅವರು ಆಭರಣಗಳನ್ನು ಧರಿಸದಿರುವುದರಿಂದ ಗುರುತಿಸಲ್ಪಡುತ್ತಾರೆ.

ಸತ್ತವರನ್ನು ಮುಖ ಮೇಲಾಗಿಸಿ ತೆಂಕು ಬಡಗು ನೇರಕ್ಕೆ ಹೂಳಲಾಗುತ್ತದೆ. ಗೋರಿಗೆ ಹುಲ್ಲಿನ ಚಿಕ್ಕ ಮಾಡು ಇರುತ್ತದೆ. ಒಂದೊಂದು ಕಲ್ಲುಗಳನ್ನು ಶವದ ಕಾಲು ಮತ್ತು ತಲೆಯ ಭಾಗಕ್ಕೆ ಇರಿಸಲಾಗುತ್ತದೆ. ತಮಿಳು ಹಳ್ಳಿಗರಂತೆ ಗಂಡಸರು ಬಟ್ಟೆ ತೊಡುತ್ತಾರೆ. ಮುಂಡಾಸು ಸಾಮಾನ್ಯವಾಗಿ ಇದ್ದೇ ಇರುತ್ತದೆ. ಗಂಡು – ಹೆಣ್ಣು ಕಿವಿಗೆ ಆಭರಣ ಧರಿಸುತ್ತಾರೆ. ಸೊಂಟಕ್ಕೆ ಬಟ್ಟೆಯನ್ನು ಸುತ್ತಿಕೊಂಡ ಬಳಿಕ ಅದರ ಎರಡು ತುದಿಗಳನ್ನು ಒಳಕ್ಕಿಳಿಸಿ ಸಿಕ್ಕಿಸಿ ಇನ್ನೆರಡು ತುದಿಗಳನ್ನು ಬಲಭುಜದ ಮೇಲೆ ಗಂಟು ಕಟ್ಟಿಕೊಳ್ಳುತ್ತಾರೆ. ನೆಲದ ನಿಜವಾದ ಕೃಷಿಕರು ಮೂಲತಃ ತಾವೇ ಎಂದು ಮುದುವನರು ತಿಳಿಯುತ್ತಾರೆ. ತಮ್ಮನ್ನು ಪರಿಸರವೇ ಬೇಟೆಗಾರರನ್ನಾಗಿ ಮಾಡಿತೆಂದೂ ಕಾಡು ಸೇರಿಕೊಂಡ ಬಳಿಕ ತಾವು ಸೇಂದಿ ತೆಗೆಯುವವರಾದೆವೆಂದೂ ತಿಳಿಯುತ್ತಾರೆ. ಕಾಡನ್ನು ಸುಟ್ಟ ಬಳಿಕ ಅವರು ರಾಗಿ ಮತ್ತು ಕಾಡು ಬತ್ತವನ್ನು ಬಿತ್ತುತ್ತಾರೆ. ಅವರಿಗೆ ದನದ ಮಾಂಸ ನಿಷಿದ್ಧ. ಈಚಿನ ದಿನಗಳಲ್ಲಿ ಮುದುವನ್ನರು ಕೂಲಿ ಕೆಲಸಗಾರರೂ ಏಲಕ್ಕಿ ತೋಟದ ಕಾರ್ಮಿಕರೂ ಆಗಿದ್ದಾರೆ.

ಪೊಂಗಲ್ ನ ಕಾಲದಲ್ಲಿ ಮುದುವನ್ನರು ಕೊತ್ತು (ಒಂದು ಜಾನಪದ ನೃತ್ಯ ಪ್ರಕಾರ) ಪ್ರದರ್ಶಿಸುತ್ತಾರೆ. ವರ್ಷದ ಚಿತ್ರಾ, ಕಾರ್ತಿಕ್, ತೈ ತಿಂಗಳುಗಳಲ್ಲಿ ಅವರು ನಾನಾ ಹಬ್ಬಗಳನ್ನು ಆಚರಿಸುತ್ತಾರೆ. ತಾಯಿ ಹಬ್ಬವನ್ನು ಎಂಟುದಿನಗಳ ಪರ‍್ಯಂತ ಆಚರಿಸುತ್ತಾರೆ. ಮತ್ತು ವ್ರತದಲ್ಲಿರುತ್ತಾರೆ. ಸುಮಾರು ಅರುವತ್ತಕ್ಕಿಂತಲೂ ಅಧಿಕ ವಸತಿ ಕೇಂದ್ರಗಳಲ್ಲಿ ಕುಂತಲ, ಮೀನ್ ಕುತ್ತಿ, ಕುರುತ್ತಿಕುಟಿ, ನಚಿವಯಲ್, ವೆಲ್ಲಿಯಂಪಾರ, ವಟ್ಟವಟ, ಸೂರ್ಯನೆಲ್ಲಿ, ತಲಮಲೈಗಳು ಮುಖ್ಯವಾದುವು. ಕೂತ್ತು, ಕುಮ್ಮಯಡಿ, ಜೋಗುಳ ಹಾಡುಗಳು ಇವರ ಕಲಾ ಪ್ರಕಾರಗಳು. ಹಬ್ಬದ ರಾತ್ರಿಗಳಲ್ಲಿ ಅವರು ಕಣ್ಣಕಿ ಕೂತ್ತನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಲ್ಲಿ ಗಂಡಸರು ಮಾತ್ರ ಭಾಗವಹಿಸುತ್ತಾರೆ. ಕೆನ್ನಚ್ಚಿ ಅಟ್ಟಂನಲ್ಲಿ ಬಿಳಿಬಟ್ಟೆಗಳನ್ನು ಕೈಯಲ್ಲಿ ಹಿಡಿದುಕೊಂಡು ಹಿನ್ನೆಲೆಯ ಸಂಗೀತಕ್ಕೆ ಅನುಸಾರವಾಗಿ ವೃತ್ತಾಕಾರವಾಗಿ ಸುತ್ತುತ್ತ ಗಂಡಸರೂ ಹೆಂಗಸರೂ ಕುಣಿಯುತ್ತಾರೆ. ಮಯಿಲಾಟ್ಟಂ (ನವಿಲು ನೃತ್ಯ) ಎಂಬ ಕುಣಿತವನ್ನು ಇವರು ಪ್ರದರ್ಶಿಸುತ್ತಾರೆ.

ಮುದುವನ್ನರಿಗೆ ಆಧುನಿಕ ಶಿಕ್ಷಣ ಹೆಚ್ಚು ಲಭಿಸಿಲ್ಲ. ಏಕೆಂದರೆ ಶಾಲೆಗೆ ಹೋಗಲು ಅವರು ಎರಡೋ ಮೂರೋ ಕಿ.ಮೀ. ನಡೆಯಬೇಕಾಗುತ್ತದೆ.

ಪಿ.ಎನ್. ಅನುವಾದ ಕೆ.ಕೆ.

 

ಮುಯ್ಯಿ‘ಮುಯ್ಯಿ’ ಎಂದರೆ ‘ಉಡುಗೊರೆ’ ‘ಆಯ’ ಕೊಡುವುದು ಎಂದರ್ಥ. ಉಡುಗೊರೆ ಕೊಡು – ಉಡುಗೊರೆ ಪಡೆ ಎಂಬರ್ಥವೂ ಇದೆ. ಉಡುಗೊರೆ – ಮರು ಉಡುಗೊರೆ; ಕಾಣಿಕೆ – ಪ್ರತಿ ಕಾಣಿಕೆ ಕೊಡು ಹೀಗೆ. ಮುಯ್ಯಿಗೆ ಮುಯ್ಯಿ ಕೊಟ್ಟಾಗಲೇ ಇದಕ್ಕೆ ಸಂಪೂರ್ಣ ಅರ್ಥ ದೊರೆತಂತೆ ಇನ್ನೊಂದು ರೀತಿಯಲ್ಲಿ ಸೇಡಿಗೆ ಸೇಡು ಎನ್ನುವ ಅರ್ಥವಲ್ಲ. ಇಲ್ಲಿರುವುದು ಪರಸ್ಪರ ಪ್ರೀತಿ, ವಿಶ್ವಾಸ, ಅಭಿಮಾನಗಳ ಹಿಂದಿನ ಕೊಡುಗೆಯ ಬೆಸುಗೆ; ಜೊತೆಗೆ ಸಹಾಯದ ಸಹಕಾರ; ಸಾಂದರ್ಭಿಕ ಅವಶ್ಯಕತೆಗಳ ನೆರವು. ಹಾಗಾಗಿ ಮುಯ್ಯಿ ಒಬ್ಬರಿಂದ ಮತ್ತೊಬ್ಬರಲ್ಲಿ ಪ್ರೀತಿ ಹುಟ್ಟಿಸುತ್ತದೆ. ವಿಶ್ವಾಸ ಉಳಿಸುತ್ತದೆ. ಅಭಿಮಾನ ಬೆಳೆಸುತ್ತದೆ; ಆರ್ಥಿಕ ಸಹಾಯ ನೀಡುತ್ತದೆ; ಬದುಕಿಗೆ ಭದ್ರತೆಯೊದಗಿಸುತ್ತದೆ; ಮುಯ್ಯಿ ಸೇಡು ತೀರಿಸಿಕೊಳ್ಳುವುದಿಲ್ಲ; ಕೇಡು ಉಂಟುಮಾಡುವುದಿಲ್ಲ. ಅದೇ ಪ್ರೀತಿ, ವಿಶ್ವಾಸ, ಅಭಿಮಾನಗಳು ಪ್ರತಿ ಮುಯ್ಯಿ ಬಯಸುತ್ತವೆ.

ಮುಯ್ಯಿಗೆ – ಮುಯ್ಯಿ ಇಡು, ಮುಯ್ಯಿಕೊಡು, ಮುಯ್ಯಿಮಾಡು, ಮುಯ್ಯಿ ನೀಡು ಎಂದೆಲ್ಲ ಬಳಸುವುದಿದೆ. ‘ಮುಯ್ಯಿ’ ಸಂಪ್ರದಾಯ ಮೊದಲಿನಿಂದಲೂ ಇದೆ. ಇದು ಕಡ್ಡಾಯವಾಗಿ ಕೊಡಲೇಬೇಕೆಂಬ ಕಾನೂನಿನ ಚೌಕಟ್ಟಿಗೆ ಒಳಪಟ್ಟು ಬೆಳೆದು ಬಂದಿಲ್ಲ. ಒಬ್ಬರಿಗೊಬ್ಬರು ಪರಸ್ಪರ ಸಂಬಂಧ ಬೆಸೆದುಕೊಳ್ಳುವ, ನೆನಪಿನಲ್ಲಿ ಚಿರಕಾಲ ಸ್ಮರಿಸಿಕೊಳ್ಳುವ ಆರ್ಥಿಕ ಸಹಕಾರ ನೀಡುವುದರ ಸಂಕೇತವಾಗಿ ಉಳಿದುಕೊಂಡು ಬಂದಿದೆ. ಹನಿಹನಿಗೂಡಿದರೆ ಹಳ್ಳ ಎಂಬ ಮಾತಿದೆ. ಹಾಗೆಯೇ ಇದರ ಹಿಂದೆ ಆರ್ಥಿಕ ನೆರವಿನ ಭದ್ರತೆ ಇದೆ. ಹಾಗಾಗಿ ಇದು ಆರ್ಥಿಕ ಮೂಲ. ಇದು ಮನೆಯವರ ಖರ್ಚು ವೆಚ್ಚಗಳನ್ನು ತಕ್ಕಮಟ್ಟಿಗಾದರೂ ಕಡಿಮೆಗೊಳಿಸುತ್ತದೆ. ಹಾಗೆ ನೋಡಿದರೆ ಇದು ಬಡ್ಡಿ ಇಲ್ಲದ ಹಣ. ಮುಯ್ಯಿ ಪಡೆಯುವವರು ಸ್ವೀಕರಿಸಿ ಅಲ್ಲಿಗೆ ಮರೆತುಬಿಡುತ್ತಾರೆಂಬುದು ಸುಳ್ಳು. ಮುಯ್ಯಿ ಕೊಟ್ಟವರ ಪಟ್ಟಿಯೂ ಅವರಲ್ಲಿ ಸಿದ್ಧಗೊಂಡಿರುತ್ತದೆ. ಮೌಖಿಕವಾಗಿಯೂ ಲಿಖಿತವಾಗಿಯೂ ಎಂದಿಗೂ ಮರೆತು ಹೋಗದಂತೆ ಅವರ ನೆನಪಿನ ಶಕ್ತಿಯಲ್ಲಿ ಅಡಕಗೊಂಡಿರುತ್ತದೆ. ಯಾವುದೇ ಸಂದರ್ಭದಲ್ಲಾಗಲಿ ಕೊಟ್ಟ ಹಣ ವಸ್ತುಗಳಿಗೆ ತಕ್ಕಂತೆ ತಮ್ಮ ಶಕ್ತ್ಯಾನುಸಾರ ಪ್ರತಿ ಮುಯ್ಯಿ ನೀಡುತ್ತಾರೆ. ಪ್ರತಿ ಮುಯ್ಯಿ ಅವರ ಸಂಬಂಧ, ಸಹಕಾರಗಳನ್ನು ಇನ್ನಷ್ಟು ಕಾಲ, ತಲೆಮಾರುಗಳವರೆಗೂ ಮುಂದುವರಿಸಿಕೊಂಡು ಹೋಗುತ್ತದೆ. ಅನ್ಯೋನ್ಯತೆಯನ್ನು ಗಟ್ಟಿಗೊಳಿಸುತ್ತದೆ.

‘ಮುಯ್ಯಿ’ ಕೊಡುವ ಸಂದರ್ಭಗಳು ಹಲವಾರು. ಜನನ, ನಾಮಕರಣ, ಋತುಮತಿ, ಮದುವೆ, ಸೀಮಂತ, ಗೃಹಪ್ರವೇಶ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಮುಯ್ಯಿ ಕೊಡುತ್ತಾರೆ. ಮುಯ್ಯಿ ಕೊಡುವಾಗ ಹಣ, ವಸ್ತು, ಒಡವೆ ಇತ್ಯಾದಿಗಳನ್ನು ಕಾಣಿಕೆ ಅಥವಾ ಉಡುಗೊರೆಯಾಗಿ ಕೊಡುತ್ತಾರೆ.

ಮಗು ಜನಿಸಿ ತೊಟ್ಟಿಲಿಗೆ ಹಾಕುವ ಸಂದರ್ಭ ಬಂದಾಗ ಮುತ್ತೈದೆಯರು, ನೆಂಟರು ಇಷ್ಟರು, ಆಪ್ತ ಬಳಗವೆಲ್ಲ ಅಲ್ಲಿ ಸೇರುತ್ತಾರೆ. ಮಗುವಿನ ಬಗ್ಗೆ ಹಾಡಿ ಹೊಗಳಿ ಅದರ ಕೈಗೆ ಮುಯ್ಯಿ ಕೊಟ್ಟು ಬರುತ್ತಾರೆ. ಹಣ, ಬಟ್ಟೆ, ಕುಲಾವಿ, ಕಡಗ, ಗೆಜ್ಜೆ, ಸರ, ಚೈನು, ಬೆಚ್ಚನೆ ಉಡುಪು, ಆಟದ ವಸ್ತು ಇತ್ಯಾದಿ ಏನೇ ಆಗಬಹುದು. ಒಂದಲ್ಲ ಒಂದು ಬಗೆಯ ಪ್ರೀತಿಯ ಕಾಣಿಕೆ, ಉಡುಗೊರೆಗಳು ತುಂಬಿ ಹೋಗುತ್ತವೆ. ಹಾಗೆಯೇ ಋತುಮತಿಯಾದಾಗ ಲಂಗದಾವಣಿ, ಚೂಡಿದಾರ, ಸೀರೆ-ಜಾಕೀಟು, ಬಳೆ, ಸರ, ವಾಚು, ಉಂಗುರ, ಓಲೆ-ಮೂಗುಬೊಟ್ಟು, ಗೆಜ್ಜೆ ಇತ್ಯಾದಿಗಳನ್ನು ಹತ್ತಿರದವರು, ಬಂಧುಬಳಗದವರು, ಹಿತೈಷಿಗಳು ನೀಡುತ್ತಾರೆ. ಮದುವೆ ಸಂದರ್ಭದಲ್ಲಿ ‘ಮುಯ್ಯಿ’ ಕೊಡುವುದು ಅತ್ಯಂತ ಬೃಹತ್ತಾಗಿ ಬೆಳೆದುಬಿಟ್ಟಿದೆ. ಕೊಡುವವರು ಸಾಕಷ್ಟು ಸಂಖ್ಯೆಯಲ್ಲಿರುತ್ತಾರೆ. ಹಳ್ಳಿಗಳಲ್ಲಿ ಎಂತಹ ಬಡವರಾಗಲಿ, ಕೂಲಿ ಮಾಡುವವರಾಗಲಿ ತಮಗೆ ಬೇಕಾದವರಿಗೆ ಮುಯ್ಯಿ ಕೊಡದೆ ಬಿಡುವುದಿಲ್ಲ. ತಮ್ಮ ಅವರ ಸಂಬಂಧ ಸಹಕಾರಗಳಿಗನುಗುಣವಾಗಿ ಮುಯ್ಯಿ ನೀಡುವುದಿದೆ.

ಈಗೀಗ ಇದೊಂದು ಫ್ಯಾಷನ್ ಎಂಬ ರೀತಿಯಲ್ಲಿ ಎಲ್ಲ ಕಡೆಗೂ ಆವರಿಸಿಕೊಂಡಿದೆ. ಬರಿಗೈಯಲ್ಲಿ ಯಾವುದೇ ಕಾರಣಕ್ಕೂ ಹೋಗಬಾರದು ಎಂಬ ಭಾವನೆ ಉಂಟು ಮಾಡಿದೆ. ಶ್ರೀಮಂತರ ಮನೆಯ ಕಾರ್ಯಗಳಿಗೆ ಸಾಮಾನ್ಯರಾಗಿ ಹೋಗದೆ ಏನಾದರೊಂದು ‘ಮುಯ್ಯಿ’ ತೆಗೆದುಕೊಂಡು ಹೋಗಲೇಬೇಕೆಂಬ ಪ್ರತಿಷ್ಠೆ ಹೆಚ್ಚಿದೆ. ಇದನ್ನು ‘ಸಹಾಯ ಹಸ್ತ’ದ ನೆರವಿಗಿಂತಲೂ ‘ಸ್ವಾಭಿಮಾನ’ದ ಪ್ರತೀಕ ಎನ್ನುವಂತೆ ಬೆಳೆಸಿಕೊಂಡು ಬರಲಾಗುತ್ತಿದೆ. ಗೃಹಬಳಕೆಗೆ ಅಗತ್ಯವಾದ ಎಲ್ಲ ಬಗೆಯ ವಸ್ತುಗಳನ್ನೂ ಅಲ್ಲಿಯೇ ಪೂರೈಸಿ ಬಿಡುವಷ್ಟು ‘ಉಡುಗೊರೆ’ ಸಂಪ್ರದಾಯ ಬೆಳೆದಿದೆ.

ಹೆಣ್ಣು ಬಸುರಿಯಾಗಿ ಸೀಮಂತ ಮಾಡಿಸಿಕೊಳ್ಳುವಾಗ, ಹೆಣ್ಣಿನ ಆಸೆ ಆಕಾಂಕ್ಷೆಗೆ ತಕ್ಕದೆನ್ನಿಸುವ ಉಡುಗೊರೆಗಳನ್ನು ನೀಡಲಾಗುತ್ತದೆ. ಗೃಹಪ್ರವೇಶದ ಸಂದರ್ಭದಲ್ಲಿಯೂ ಇಂತಹ ‘ಮುಯ್ಯಿ’ ಕೊಡುವ ಕಾರ್ಯ ನಿರಂತರವಾಗಿ ಮುಂದುವರಿದಿದೆ. ಇನ್ನು ಕೆಲವು ಸಂದರ್ಭಗಳಲ್ಲಿಯೂ ಈ ಪದ್ಧತಿ ಇದೆ. ನಾಟಕದಲ್ಲಿ ಅಭಿನಯಿಸುವ ಪಾತ್ರಧಾರಿಗಳಿಗೆ ತಮ್ಮ ಇಚ್ಛಾನುಸಾರ ಹಣದ ‘ಮುಯ್ಯಿ’ ಕೊಡುತ್ತಾರೆ. ತಮ್ಮ ಮಕ್ಕಳು ಯಾವುದಾದರೂ ಕಲೆಗಳಲ್ಲಿ ಪ್ರತಿಭೆಯನ್ನು ತೋರಿದಾಗ ಬೇರೆಯವರು ಉತ್ತೇಜನ ನೀಡುವ ಸಲುವಾಗಿ ‘ನೆನಪಿನ ಕಾಣಿಕೆ’ಗಳನ್ನು ನೀಡುತ್ತಾರೆ. ಇಂದು ಸ್ಪರ್ಧಾ ಜಗತ್ತು ಆಗಿರುವ ಕಾರಣ ಪ್ರತಿಭೆಗೆ ತಕ್ಕ ಪುರಸ್ಕಾರಗಳು ಎಲ್ಲ ಕಡೆ ನಡೆಯುತ್ತಿರುವುದನ್ನು ನಾವು ಕಾಣಬಹುದಾಗಿದೆ. ಹಾಗೆಯೇ ಪ್ರತಿಭಾವಂತರನ್ನು ಗುರುತಿಸುವುದರ ಜೊತೆಗೆ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸುವ ಕಾರ್ಯವೂ ಆಗುತ್ತಿದೆ. ಹಣ, ವಸ್ತು, ಮೆಮೆಂಟೊ, ಪ್ರಮಾಣ ಪತ್ರ ಇತ್ಯಾದಿಗಳನ್ನು ಅಂತಹವರಿಗೆ ನೀಡುವ ಸತ್ಸಂಪ್ರದಾಯ ಒಂದು ಅರ್ಥದಲ್ಲಿ ‘ಮುಯ್ಯಿ’ ನೀಡುವ ಆಚರಣೆಯನ್ನೇ ಉಳಿಸಿಕೊಂಡು ಬಂದಿದೆ ಎಂತಲೇ ಹೇಳಬಹುದು.

‘ಮುಯ್ಯಿ’ ಕೊಡುವಾಗ ಏನನ್ನೇ ಆಗಲಿ ವೀಳ್ಯದೆಲೆ ಅಡಿಕೆಗಳೊಂದಿಗೆ ಕೊಡುವುದುಂಟು. ಮದುವೆ ಸಂದರ್ಭದಲ್ಲಿ ಗಂಡಿನ ಕಡೆಯ ನೆಂಟರು ಗಂಡಿಗೆ, ಹೆಣ್ಣಿನ ಕಡೆಯ ನೆಂಟರು ಹೆಣ್ಣಿಗೆ ಮುಯ್ಯಿ ಮಾಡುತ್ತಾರೆ. ಇತರ ಸಂದರ್ಭಗಳಲ್ಲಿಯೂ ಸಹ. ಏನೇ ಆಗಲಿ ‘ಮುಯ್ಯಿ’ ಒಂದು ಒಳ್ಳೆಯ ಸಂಪ್ರದಾಯ. ಇದು ಪರಸ್ಪರ ಸಂಬಂಧದ ಬೆಸುಗೆಯನ್ನು ತಂದುಕೊಡುತ್ತದೆ. ಪ್ರೀತಿ, ವಿಶ್ವಾಸಗಳನ್ನು ಗಟ್ಟಿಗೊಳಿಸುತ್ತದೆ. ಆರ್ಥಿಕ ಭದ್ರತೆಯೊದಗಿಸುತ್ತದೆ. ಯಾರೂ ಕೂಡ ಕೆಟ್ಟ ದೃಷ್ಟಿಯಲ್ಲಿ, ಇನ್ನೊಬ್ಬರನ್ನು ಅವಮಾನಿಸುವ ದೃಷ್ಟಿಯಲ್ಲಿ ನೋಡಬಾರದು. ಅವರು ಮುಯ್ಯಿ ಕೊಡಲಿಲ್ಲ ಇವರು ಮುಯ್ಯಿ ಮಾಡಲಿಲ್ಲ ಎಂಬ ಸಣ್ಣ ಆಲೋಚನೆ ಬರಬಾರದು. ಆಯಾ ವ್ಯಕ್ತಿಯ ಸಾಂದರ್ಭಿಕ ಪರಿಸ್ಥಿತಿಗಳನ್ವಯ ಮುಯ್ಯಿ ಸಂಪ್ರದಾಯ ವ್ಯಕ್ತಿಗಳನ್ನು ಇಕ್ಕಟ್ಟಿಗೆ ಸಿಕ್ಕಿಸಬಹುದು. ಆದರೆ ಅದನ್ನೇ ದೊಡ್ಡದು ಮಾಡಿಕೊಳ್ಳಬೇಕಿಲ್ಲ. ಇದು ಅವರವರ ವೈಯಕ್ತಿಕ ಸಾಮರ್ಥ್ಯದ ಪ್ರೀತಿ, ವಿಶ್ವಾಸ, ಅಭಿಮಾನಗಳ, ಅನ್ಯೋನ್ಯ ಸಂಬಂಧಗಳ ಪ್ರತೀಕ ಎಂದು ಹೇಳಬಹುದು.

ಜಿ.ಎಸ್.

 

ಮುಸ್ಲಿಂ ಪಳ್ಳಿ ಮುಸ್ಲಿಮರ ಆರಾಧನಾ ಕೇಂದ್ರಗಳನ್ನು ಕೇರಳದಲ್ಲಿ ‘ಮುಸ್ಲಿಂ ಪಳ್ಳಿ’ (ಮಸೀದಿ) ಎಂದು ಕರೆಯುತ್ತಾರೆ. (ಮಸೀದಿ – ಇಗರ್ಜಿ ಎರಡಕ್ಕೂ ಕೇರಳದಲ್ಲಿ ‘ಪಳ್ಳಿ’ ಎನ್ನುತ್ತಾರೆ. ಮುಸ್ಲಿಮರದ್ದು ಮುಸ್ಲಿಂ ಪಳ್ಳಿಯಾದರೆ ಕ್ರೈಸ್ತರದ್ದು ಕ್ರಿಶ್ಚಿಯನ್ ಪಳ್ಳಿ). ಪ್ರತಿಯೊಂದು ಪಳ್ಳಿಯೂ ಆಯಾ ಪ್ರದೇಶಗಳ ಮುಸ್ಲಿಮರ ಅಧಿಕಾರ ಕೇಂದ್ರವೂ ಹೌದು. ಪಳ್ಳಿಯ ಅಧಿಕಾರ ವ್ಯಾಪ್ತಿಯಲ್ಲಿ ಬರುವ ಪ್ರದೇಶವು ‘ಮೊಹಲ್ಲಾ’ ಎಂದು ಕರೆಯಲ್ಪಡುತ್ತದೆ. ಕೇರಳದಲ್ಲಿ ಮೊತ್ತ ಮೊದಲ ‘ಪಳ್ಳಿ’ ನಿರ್ಮಾಣವಾದುದು ಕೊಡುಂಗಲ್ಲೂರ್ ಎಂಬಲ್ಲಿ. ಚೇರಮನ್ ಪೆರುಮಾಳನ ಕಾಲದಲ್ಲಿ ಮಾಲಿಕ್ ಇಬನ್ ದೀನಾರನು ಅದನ್ನು ನಿರ್ಮಿಸಿದನು. ಮಾಲಿಕ್ ದೀನಾರನಿಗೆ ಕೊಡಂಗಲ್ಲೂರಿನಲ್ಲಿ ದೊರೆತ ಆದರಾಥಿತ್ಯಗಳಿಂದ ತೃಪ್ತನಾಗಿ ಆತ ಮುಂದೆ ಕೇರಳದ ಹಲವೆಡೆ ಪ್ರವಾಸ ಮಾಡಿ ಇನ್ನಷ್ಟು ಪಳ್ಳಿಗಳನ್ನು ನಿರ್ಮಿಸಿದನಂತೆ. ಕೊಲ್ಲಂ, ಮಾಡಾಯಿ, ಕಾಸರಗೋಡು, ಶ್ರೀಕಂಠಾಪುರಂ; ಪಂದಲಾಯಿನಿ, ಚಾಲಿಯಂ ಮುಂತಾದೆಡೆಗಳಲ್ಲಿ ಮಾಲಿಕ್ ದೀನಾರನು ನಿರ್ಮಿಸಿದ್ದರೆಂದು ಹೇಳಲಾಗುವ ಪಳ್ಳಿಗಳು ಇವೆ.

ಕೇರಳದ ಮುಸ್ಲಿಂ ಪಳ್ಳಿಗಳ ಕಟ್ಟಡ ರಚನಾ ವಿನ್ಯಾಸಗಳಿಗೆ ತನ್ನದೇ ಆದ ಅನನ್ಯತೆಯಿದೆ. ಇದರಲ್ಲಿ ಪರ್ಶಿಯನ್ ಶೈಲಿ ಮತ್ತು ಕೇರಳದ ದೇಶೀಯವಾದ ಶೈಲಿ ಎರಡರ ಮಿಶ್ರಣವಿದೆ. ಕೋಝಿಕ್ಕೋಡ್ ನಲ್ಲಿರುವ ಮಿಸ್ಕಾಲ್ ಪಳ್ಳಿ ಮತ್ತು ಒಟ್ಟಕ್ಕಾಲ್ ಪಳ್ಳಿಗಳು ತಮ್ಮ ಪ್ರಾಚೀನ ಶೈಲಿಗಳಿಂದಲೇ ಸಾಕಷ್ಟು ಪ್ರಸಿದ್ಧವಾಗಿವೆ.

ಪಳ್ಳಿಗಳ ನಿರ್ವಹಣೆಯಲ್ಲಿ ಸಾಮಾನ್ಯವಾಗಿ ಎರಡು ಸ್ಥಾನಗಳಿರುತ್ತವೆ. ಪಳ್ಳಿಗಳ ದೈನಂದಿನ ಚಟುವಟಿಕೆಗಳ ಮತ್ತು ಪ್ರಾರ್ಥನೆಗಳ ನೇತೃತ್ವವನ್ನು ವಹಿಸುವವನನ್ನು ಖತೀಬ್ ಎಂತಲೂ ಕಾಲಕಾಲಕ್ಕೆ ಪ್ರಾರ್ಥನಾ ಕರೆ (ಬಾಂಗ್)ಗಳನ್ನು ಮೊಳಗಿಸುವಾತನಿಗೆ ‘ಮುಕ್ರಿ’ ಎಂತಲೂ ಕರೆಯಲಾಗುತ್ತದೆ. ದಿನದಲ್ಲಿ ಐದು ಬಾರಿ ಸಮಯಕ್ಕೆ ಸರಿಯಾಗಿ ಪ್ರಾರ್ಥನೆಯ ಸಮಯವನ್ನು ಸಾರಿ ಹೇಳುವ ಕ್ರಮಕ್ಕೆ ‘ಬಾಂಗ್ ಕರೆ’ ಎನ್ನುತ್ತಾರೆ. ಇಡೀ ಮೊಹಲ್ಲಾದ ಅಧಿಕಾರವು ‘ಖಾಸಿ’ ಎಂದು ಕರೆಯಲ್ಪಡುವ ಮತ್ತೋರ್ವ ವ್ಯಕ್ತಿಯ ಕೈಯಲ್ಲಿರುತ್ತದೆ. ಈ ವ್ಯಕ್ತಿಯು ಪಳ್ಳಿಗಳ ಆಡಳಿತದಲ್ಲಿ ನೇರ ಹಸ್ತಕ್ಷೇಪ ಮಾಡುವುದಿಲ್ಲ. ಖತೀಬರನ್ನು ಖಾಸಿಗಳ ಪ್ರತಿನಿಧಿ ಎಂದು ಗುರುತಿಸಲಾಗುತ್ತದೆ.

ಸಾಮೂಹಿಕ ಪ್ರಾರ್ಥನೆಗೆ ಬೇಕಾದ ವಿಶಾಲವಾದ ಒಂದು ಕೋಣೆ ಮತ್ತು ‘ಮಿಂಬರ’ ಎಂಬ ಒಂದು ಚಿಕ್ಕ ವೇದಿಕೆ ಇವಿಷ್ಟೆ ಪಳ್ಳಿಗಳ ಒಳಗಿರುವುದು. ಪ್ರಾರ್ಥನೆಗೆ ನೇತೃತ್ವವನ್ನು ವಹಿಸುವ ವ್ಯಕ್ತಿಯು ಪ್ರಾರ್ಥನೆಯ ಬಳಿಕ ಧರ್ಮಬೋಧನೆ ಮಾಡಲು ನಿಲ್ಲುವ ಸ್ಥಳವೇ ‘ಮಿಂಬರ’… ಈ ಮತಧರ್ಮ ಬೋಧನೆಯನ್ನು ಖುತಿಬ್ ಎನ್ನುತ್ತಾರೆ. ಆ ವೇಳೆಯಲ್ಲಿ ಧರ್ಮಬೋಧನೆ ಮಾಡುವಾತನ ಕೈಯಲ್ಲಿ ಮರದಿಂದ ಮಾಡಿದ ಖಡ್ಗವೊಂದಿರುತ್ತದೆ. ಮನುಷ್ಯರನ್ನು ದಾರಿ ತಪ್ಪಿಸುವ ಸೈತನನ್ನು ಹೊಡೆದೋಡಿಸಲೆಂದು ಆ ಖಡ್ಗವನ್ನು ಹಿಡಿಯುತ್ತಾರೆ ಎಂದು ನಂಬಿಕೆ. ಪಳ್ಳಿಗಳಲ್ಲಿ ನಡೆಯುವ ಪ್ರಮುಖ ಪ್ರಾರ್ಥನೆಯನ್ನು ‘ಜುಮ್ಮಾ’ ಎನ್ನುತ್ತಾರೆ. ಶುಕ್ರವಾರಗಳಂದು ಮಧ್ಯಾಹ್ನ ನಡೆಯುವ ಪ್ರಾರ್ಥನೆಯನ್ನು ಎಲ್ಲಾ ಪುರುಷರೂ ಭಾಗವಹಿಸಬೇಕೆನ್ನುವುದು ಕಡ್ಡಾಯ ನಿಯಮ. ಈ ಪ್ರಾರ್ಥನೆಯ ಬಳಿಕ ಖುತುಲ್ ನಡೆಯುತ್ತದೆ.

ಮುಸ್ಲಿಂ ಮಹಿಳೆಯರಿಗೆ ಸಾಮಾನ್ಯವಾಗಿ ಪಳ್ಳಿಗಳಿಗೆ ಪ್ರವೇಶವಿಲ್ಲ. ಆದರೆ ಇಂದು ಹಲವು ಸಂಘಟನೆಗಳ ಹೋರಾಟದ ಫಲವಾಗಿ ಪಳ್ಳಿಗಳಲ್ಲಿ ಮಹಿಳೆಯರಿಗೆ ಪ್ರತ್ಯೇಕ ಜಾಗವನ್ನು ಮೀಸಲಿಟ್ಟಿರುವುದನ್ನು ಕಾಣಬಹುದು. ಸಂಪ್ರದಾಯವಾದಿ (traditional) ಗಳಾದ ಸುನ್ನಿ ವಿಭಾಗದವರು ಮಹಿಳೆಯರನ್ನು ಈ ವಿಚಾರವಾಗಿ ಒಪ್ಪಿಕೊಳ್ಳುವುದಕ್ಕೆ ಹಿಂದೇಟು ಹಾಕುತ್ತಿದ್ದರು. ಆದರೆ ಈಗ ಅವರಲ್ಲೂ ಬದಲಾವಣೆಗಳಾಗಿದ್ದು ಸಂಚಾರಿಗಳಾದ ಮಹಿಳೆಯರಿಗಾಗಿ ಅವರೂ ಪ್ರಾರ್ಥನಾ ಸ್ಥಳಗಳನ್ನು ನಿರ್ಮಿಸಲು ಪ್ರಾರಂಭಿಸಿದ್ದಾರೆ.

ಮೇಲೆ ಹೇಳಿದ ಪರಂಪರಾಗತವಾದ ರೀತಿಯಲ್ಲಿರುವ ಪಳ್ಳಿಗಳು ಹೆಚ್ಚಾಗಿ ಸುನ್ನಿ ವಿಭಾಗದವರಿಗೆ ಸೇರಿದವುಗಳೇ ಆಗಿವೆ. ಮುಜಾಹಿದ್, ಜಮಾಅತ್ ಇಸ್ಲಾಮಿ ಮುಂತಾದ ಇತರ ವಿಭಾಗದವರ ಪಳ್ಳಿಗಳಲ್ಲಿ ‘ಮಿಂಬರ’, ಖಡ್ಗ ಇತ್ಯಾದಿಗಳು ಕಾಣಸಿಗುವುದಿಲ್ಲ.

೧೯೨೧ರ ‘ಮಲಬಾರ್ ಕಲಾಪ’ (ಮಲಬಾರ್ ಕ್ರಾಂತಿ)ದ ಸಂದರ್ಭದಲ್ಲಿ ಜುಮ್ಮಾ, ಬಾಂಗ್, ಪಳ್ಳಿಗಳಲ್ಲಿ ಒಟ್ಟು ಸೇರುವುದು ಇವೆಲ್ಲವನ್ನೂ ಬ್ರಿಟಿಷರ ವಿರುದ್ಧದ ಆಶಯಗಳನ್ನು ಪ್ರಚಾರ ಮಾಡಲು ಮುಸ್ಲಿಮರು ಬಳಸಿಕೊಂಡದ್ದಿದೆ. ಅವೇಳೆಯಲ್ಲಿ ಸಾಮೂಹಿಕವಾಗಿ ಬಾಂಗ್ ಕೇಳಿಬಂದರೆ ಅದು ಅಪಾಯದ ಮುನ್ಸೂಚನೆ ಎಂದು ತಿಳಿಯಲಾಗುತ್ತಿತ್ತು. ಹೀಗೆ ಬ್ರಿಟಿಷರ ವಿರೋಧೀ ಆಶಯಗಳ ಚೈತನ್ಯದ ಸೆಲೆಯಾಗಿಯೂ ಅಂದಿನ ಪಳ್ಳಿಗಳು ಕಾರ್ಯನಿರ್ವಹಿಸುತ್ತಿದ್ದುವು.

ಇ.ಕೆ.ಎಸ್. ಅನುವಾದ ವಿ.ಸಿ.

 

ಮುಳೈಪ್ಪಾರಿಚ್ಚಡಂಗು ತಮಿಳುನಾಡಿನ ಧಾರ್ಮಿಕ ಆರಾಧನೆಯಲ್ಲಿ ಶಿಷ್ಟ ಮತ್ತು ಗ್ರಾಮದೇವತೆ ಎಂಬ ಎರಡು ಬಗೆಯ ಆರಾಧನೆ ಜನಜೀವನದಲ್ಲಿ ಹಾಸುಹೊಕ್ಕಾಗಿದೆ. ಗ್ರಾಮದೇವತೆಗಳಾದ ಕಾಳಿ, ಮಾರಿ, ಭದ್ರಕಾಳಿ ಮೊದಲಾದ ದೇವತೆಗಳ ಪೂಜೆ ರೂಢಿಯಲ್ಲಿದೆ. ಇದು ವಿಶೇಷವಾಗಿ ಹೆಂಗಸರಿಂದ ನಡೆಯುತ್ತದೆ. ಇದನ್ನು ‘ಮುಳೈಪ್ಪಾರಿಚ್ಚಡಂಗು’ ಎನ್ನುತ್ತಾರೆ. ಬಹಳ ಹಿಂದಿನಿಂದಲೂ ಇದು ಆಚರಣೆಯಲ್ಲಿದೆ. ಪ್ರತಿವರ್ಷ ನಿರ್ದಿಷ್ಟ ಮಾಸದ ನಿಗದಿತ ದಿನಗಳಲ್ಲಿ ಜಾತ್ರೆ ನಡೆಯುತ್ತದೆ. ಈ ಜಾತ್ರೆಯಲ್ಲಿ ಮೊಳಕೆಕಟ್ಟುವ ಶಾಸ್ತ್ರ ಪ್ರಮುಖ ಸ್ಥಾನ ಪಡೆದಿವೆ.

ಅಮ್ಮನ್ ಮೊದಲಾದ ಗ್ರಾಮದೇವತೆಗಳ ಹುಟ್ಟಿದ ದಿವಸದಂದೆ ಪ್ರತಿ ವರ್ಷವೂ ಇದು ನಡೆಯುತ್ತದೆ. ಸಾಮಾನ್ಯವಾಗಿ ಜಾತ್ರೆ ಚಿತ್ತಿರೈ (ಚೈತ್ರಮಾಸ) ತಿಂಗಳಿನಲ್ಲಿ ಆಚರಣೆಯಾಗುತ್ತದೆ. ಭದ್ರಕಾಳಿಯಮ್ಮ ಹುಟ್ಟಿದ್ದು ಕೂಡ ಚೈತ್ರಮಾಸದಲ್ಲಿಯೇ. ಅಲ್ಲದೆ ವಿವಿಧ ಗ್ರಾಮದೇವತೆಗಳ ಜಾತ್ರೆ ಚಿತ್ತಿರೈ (ಚೈತ್ರಮಾಸ), ವೈಕಾಶಿ (ವೈಶಾಖ ಮಾಸ), ಆನಿ (ಜ್ಯೋಷ್ಠ ಮಾಸ), ಆಡಿ (ಆಷಾಢ ಮಾಸ)ಗಳಲ್ಲಿ ಆಚರಣೆಯಲ್ಲಿದೆ.

ಜಾತ್ರೆ ಸಾಮಾನ್ಯವಾಗಿ ಮಂಗಳವಾರ ಮತ್ತು ಶನಿವಾರದಂದು ನಡೆಯುತ್ತದೆ. ಕಾರಣ ಮಂಗಳವಾರವನ್ನು ಅಮ್ಮನ ವಾರ ಎಂದು ಕರೆಯಲಾಗುತ್ತದೆ. ಈ ಜಾತ್ರೆ ಆರಂಭವಾಗುವ ಒಂದು ವಾರದ ಹಿಂದಿನ ಮಂಗಳವಾರದಿಂದ ಜಾತ್ರೆಯ ಕಾರ್ಯಕ್ರಮಗಳು ಆರಂಭ ಆಗುತ್ತವೆ. ಅಂದೇ ಮೊಳಕೆಕಟ್ಟುವ ಶಾಸ್ತ್ರ ಪ್ರಾರಂಭವಾಗುತ್ತದೆ.

ಮೊಳಕೆಕಟ್ಟುವ ಶಾಸ್ತ್ರ : ಈ ಶಾಸ್ತ್ರದಲ್ಲಿ ಹೊಸದಾದ ಒಂದು ಮಣ್ಣಿನ ಮಡಕೆ, ಮಣ್ಣಿನ ಕೊಡವನ್ನು ಬಳಸಲಾಗುತ್ತದೆ. ಅದರ ತಳಭಾಗವನ್ನು ಒಡೆದು ತಲೆಕೆಳಗಾಗಿ ಭೂಮಿಗೆ ನೆಟ್ಟಿರುತ್ತಾರೆ. ಗುಂಬವಾಗಿದ್ದರೆ ಅದರ ಅಕ್ಕಪಕ್ಕ ಎರಡು ಉದ್ದನೆಯ ಕೋಲುಗಳನ್ನು ಇಟ್ಟು ಅದರ ಮೇಲೆ ಚಿಕ್ಕ ಕಡ್ಡಿಗಳನ್ನು ಹರಡಲಾಗುತ್ತದೆ. ಈ ಆಕೃತಿ ಗುಣಾಕಾರದ ಚಿಹ್ನೆಯನ್ನು ಹೋಲುತ್ತದೆ. ಇದನ್ನು ಮುಳೈಪ್ಪಾನೈ (ಮೊಳಕೆಯ ಗುಂಬ), ಅಲ್ಲದೆ ಮುಳೈಕುಡಂ (ಮೊಳಕೆಯ ಕೊಡ) ಎನ್ನಲಾಗುತ್ತದೆ. ಆ ತಳಭಾಗಕ್ಕೆ ಆಡಿನ ಹಿಕ್ಕೆಯನ್ನು, ದನದ ಗೊಬ್ಬರವನ್ನು ಪುಡಿಮಾಡಿ ಹಾಕಲಾಗುತ್ತದೆ. ಸೋಮವಾರದಂದು ಒಂದು ಮಡಕೆಯಲ್ಲಿ ನವಧಾನ್ಯಗಳನ್ನು ಕಬ್ಬು, ಬತ್ತ ಮೊದಲಾದವನ್ನು ಇಟ್ಟು ಜಾತ್ರೆಗೆ ಈ ಶಾಸ್ತ್ರದ ಹೊಣೆಹೊತ್ತಿರುವವರ ಮನೆಯಲ್ಲಿ ಮುಳೈಪ್ಪಾನೈ ಮತ್ತು ಮುಳೈಕ್ಕುಡಂ ತಂದು ಇಟ್ಟಿರುತ್ತಾರೆ. ಮೊಳಕೆಕಟ್ಟುವ ಶಾಸ್ತ್ರಕ್ಕೆ ಅಗತ್ಯವಾದ ಮಡಕೆಗಳ ಸಂಖ್ಯೆ ಬೆಸಸಂಖ್ಯೆಯಿಂದ ಕೂಡಿರುತ್ತದೆ. ಅಂದರೆ ೧, ೩, ೫, ೭ ಈ ರೀತಿ. ಮಂಗಳವಾರದಂದು ಸಂಜೆಯಲ್ಲಿ ಹೆಂಗಸರು ಸ್ನಾನ ಮಾಡಿ ಮಡಿ ಸೀರೆಯನ್ನು ಉಟ್ಟು ನೀರಿನಲ್ಲಿ ನೆನೆಸಿದ ಧಾನ್ಯಗಳನ್ನು ಕೊಂಡು ಮೊಳಕೆಕಟ್ಟುವ ಸಲುವಾಗಿ ಮನೆಗೆ ಹೋಗುತ್ತಾರೆ. ಅಲ್ಲಿ ವಿಸ್ತಾರವಾದ ಬಯಲು ಪ್ರದೇಶದಲ್ಲಿ ಮೊಳಕೆ ಕಟ್ಟುಗಳನ್ನು ಸಾಲಾಗಿ ಇಟ್ಟು ಅವುಗಳಲ್ಲಿ ಧಾನ್ಯಗಳನ್ನು ಚೆಲ್ಲಿ ಅವುಗಳಿಗೆ ನೀರನ್ನು ಎರೆಯುತ್ತಾರೆ. ಅನಂತರ ಈ ಮೊಳಕೆ ಕಟ್ಟುವ ಮಡಕೆಗಳಿಗೆ ಕರ್ಪೂರದ ಆರತಿಯನ್ನು ಬೆಳಗಿ ಪೂಜೆ ಮಾಡಿಸುತ್ತಾರೆ. ಇದರೊಂದಿಗೆ ಎಲ್ಲ ಮಹಿಳೆಯರು ಅವುಗಳ ಸುತ್ತ ವೃತ್ತಾಕಾರವಾಗಿ ನಿಂತು ಚಪ್ಪಾಳೆ ತಟ್ಟುತ್ತಾ ಕುಮ್ಮಿ ಹಾಡನ್ನು ಹಾಡುತ್ತಾರೆ. ಈ ಹಾಡುಗಳಲ್ಲಿ ಈ ಮೊಳಕೆ ದಿನದಿಂದ ದಿನಕ್ಕೆ ಹೇಗೆ ವೃದ್ಧಿಯಾಗುತ್ತದೆ ಮತ್ತು ಮೊಳಕೆ ಬೇರ್ಪಡಿಸುವುದರಿಂದ ಆಗುವ ದುಃಖವನ್ನು ವಿವರಿಸುತ್ತಾರೆ.

ಮುಳೈಪ್ಪಾರಿಕುಮ್ಮಿ ಹಾಡಿನಲ್ಲಿ ಮಹಿಳೆಯರು ಆಲೋಚಿಸಿದಂತೆ ಧಾನ್ಯ ಹರಡುವ, ಮೊಳಕೆ ಚಿಗುರೊಡೆಯುವ ಮುಂತಾದ ವಿಚಾರಗಳು ಪ್ರಧಾನವಾಗಿರುತ್ತದೆ. ಅನಂತರ ಮೊಳೈಪ್ಪಾನೈ, ಮೊಳೈಕ್ಕುಡಂಗಳನ್ನು ಪುನಃ ಕೊಠಡಿಯಲ್ಲಿಟ್ಟು ಗಾಳಿ ಬೆಳಕು ಬರದಂತೆ ಕಿಟಕಿ ಬಾಗಿಲು ಮುಚ್ಚಲಾಗುತ್ತದೆ. ಇದನ್ನು ಜವಾಬ್ದಾರಿ ಹೊತ್ತ ಮನೆಯವರು ದಿನ ಬೆಳಗ್ಗೆ ಮಧ್ಯಾಹ್ನ ಸಂಜೆ ನೀರೆರೆದು ನೋಡಿಕೊಳ್ಳುತ್ತಾರೆ. ಈ ದಿನಗಳಲ್ಲಿ ಆ ಹೆಂಗಸರು ಸೂತಕದ ಮನೆಗಳಿಗೂ ಮೈಲಿಗೆಯ ಮನೆಗಳಿಗೂ ಹೋಗುವಂತಿಲ್ಲ. ಇವರು ಬೆಳತಿಗೆ ಅಕ್ಕಿ ಅನ್ನವನ್ನು ಊಟ ಮಾಡುತ್ತಾರೆ. ಹಾಲು ಹಣ್ಣುಗಳನ್ನು ಬಳಸುತ್ತಾರೆ. ತರಕಾರಿ ಸಾಂಬಾರು ಪದಾರ್ಥಗಳು ಮುಂತಾದವುಗಳ ಬಳಕೆ ನಿಷಿದ್ಧ. ಈ ದಿನಗಳಲ್ಲಿ ಗಂಡನೊಂದಿಗೆ ದೈಹಿಕ ಸಂಬಂಧವನ್ನು ಹೊಂದುವಂತಿಲ್ಲ. ಮುಳೈಪಾನೈ (ಮೊಳಕೆ ಮಡಕೆ)ಗಳನ್ನು ಇವರಲ್ಲದೆ ಮತ್ಯಾರು ನೋಡುವಂತಿಲ್ಲ. ಒಂದು ಕೊಡದಿಂದ ನೀರನ್ನು ಎರೆಯುತ್ತಾರೆ. ವೃತ್ತಾಕಾರವಾಗಿ ನಿಂತು ಕುಮ್ಮಿ ಹಾಡನ್ನು ಹಾಡುತ್ತಾರೆ. ತೆಂಗಿನ ಕಾಯಿ ಒಡೆದು ಪೂಜೆ ಸಲ್ಲಿಸುತ್ತಾರೆ.

ಮುಳೈಪ್ಪಾರಿಯ ಮುಕ್ತಾಯ : ಜಾತ್ರೆಯ ಕೊನೆಯ ದಿನದಂದು ಮಡಕೆ ಹೊರುವ ಹೆಂಗಸರು ಉಪವಾಸವಿದ್ದು ಗುಂಬಗಳಿಗೆ ಅರಿಸಿನ ದಾರವನ್ನು ಕಟ್ಟಿ ಬಯಲಿನಲ್ಲಿಟ್ಟು ಕುಮ್ಮಿ ಹಾಡುತ್ತಾ ಪೂಜಿಸುತ್ತಾರೆ. ಇದಾದ ಅನಂತರ ತಾಳಮೇಳಗಳೊಂದಿಗೆ ತಲೆಯ ಮೇಲೆ ಅವುಗಳನ್ನು ಹೊತ್ತು ಮೆರವಣಿಗೆ ಬಂದು ದೇವಾಲಯದಲ್ಲಿ ಇಳಿಸುತ್ತಾರೆ. ಅಂದಿನ ರಾತ್ರಿ ಮೊಳಕೆಕಟ್ಟಿನ ಸುತ್ತ ವೃತ್ತಾಕಾರವಾಗಿ ಕುಮ್ಮಿ ಹಾಡನ್ನು ಹಾಡುತ್ತಾರೆ. ಮರುದಿನ ಬೆಳಗ್ಗೆ ಈ ಮಡಕೆಗಳನ್ನು ಕೊಳದ ಬಳಿಗೆ ಕೊಂಡು ಹೋಗಿ ಆ ಮೊಳಕೆಕಟ್ಟನ್ನು ನೀರಿಗೆ ಹಾಕಿ, ಮಡಕೆ ಮತ್ತು ಕೊಡಗಳನ್ನು ಹಿಂದಕ್ಕೆ ತರುತ್ತಾರೆ.

ಮೊಳಕೆಕಟ್ಟಿನ ಶಾಸ್ತ್ರ ಸ್ಥಳದಿಂದ ಸ್ಥಳಕ್ಕೆ ವ್ಯತ್ಯಾಸ ಹೊಂದಿದೆ. ಈ ಕಟ್ಟುಗಳನ್ನು ಕೊಳ ಬಾವಿಗಳಿಗೆ ಹಾಕುತ್ತಾರೆ. ಕೆಲವು ಸಂದರ್ಭದಲ್ಲಿ ಈ ಮೊಳಕೆಕಟ್ಟಿನ್ನು ದೇವಸ್ಥಾನದ ಪೂಜಾರರು ನಿರ್ವಹಿಸುತ್ತಾರೆ. (ಎ.ಡು. ಒಟ್ಟಪ್ಪಿಡಾರಮ್ ಗ್ರಾಮದಲ್ಲಿ ನಡೆಯುವ ಮೊಳಕೆಕಟ್ಟುವ ಜಾತ್ರೆ) ಒಟ್ಳಪಿಡಾರಮ್ ಎಂಬ ಊರಿನಲ್ಲಿರುವ ಉಲಗಮ್ಮನ್ ಗ್ರಾಮ ದೇವತೆಯ ಜಾತ್ರೆ ಪ್ರತಿವರ್ಷ ಆಷಾಢ ಮಾಸದ ಕೊನೆಯ ಮಂಗಳವಾರ ನಡೆಯುತ್ತದೆ. ಒಂದು ವಾರದ ಮುಂಚೆ ನವಧಾನ್ಯ ಪಡೆಯಲು ಹೆಂಗಸರು ಐದು ರೂಪಾಯಿಗಳನ್ನು ಪುರೋಹಿತರಿಗೆ ಕೊಡುತ್ತಾರೆ. ಈ ರೀತಿ ಪುರೋಹಿತರು ಊರ ಜನರಿಂದ ನವಧಾನ್ಯಗಳನ್ನು ಶೇಖರಿಸುತ್ತಾರೆ. ತಾಮ್ರದ ಗುಂಬಗಳಲ್ಲಿ ಅವುಗಳನ್ನಿಟ್ಟು ನೀರೆರೆದು ನೋಡಿಕೊಳ್ಳುತ್ತಾರೆ. ಬೆಳಗ್ಗೆ ಮತ್ತು ಸಂಜೆ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ. ಗುಂಬದಲ್ಲಿ ಇಟ್ಟಿರುವ ಈ ದವಸಧಾನ್ಯಗಳಿಗೆ ಆಡಿನ ಹಿಕ್ಕೆಗಳನ್ನು ಹಾಕಿ ದೇವಾಲಯದ ಕೊಠಡಿಯಲ್ಲಿ ಹರಡಿರುತ್ತಾರೆ. ಇದನ್ನು ಪುರೋಹಿತರು ಅಲ್ಲದೆ ಬೇರೆ ಯಾರಿಗೂ ನೋಡಲು ಅನುಮತಿ ಇಲ್ಲ.

ಆಷಾಢ ಮಾಸದ ಕೊನೆಯ ಮಂಗಳವಾರ ಸಂಜೆ ಮೊಳಕೆಕಟ್ಟನ್ನು ತೆಗೆಯುತ್ತಾರೆ. ಅನಂತರ ದೇವರ ಮುಂದೆ ಅಗಲವಾದ ತಟ್ಟೆಗಳಲ್ಲಿ ಮೊಳಕೆ ಕಟ್ಟುಗಳನ್ನು ಇಡುತ್ತಾರೆ ಮತ್ತು ಪೂಜಿಸುತ್ತಾರೆ. ಅಂದು ರಾತ್ರಿ ದೇವಿಯನ್ನು ಊರಿನಲ್ಲಿ ಪ್ರದಕ್ಷಿಣೆ ಮಾಡಿಸುತ್ತಾರೆ. ಮೆರವಣಿಗೆ ದೇವಾಲಯ ತಲುಪಿದ ಅನಂತರ ಈ ಮೊಳಕೆಯ ತಟ್ಟೆಗಳನ್ನು ತಾಳಮೇಳಗಳೊಂದಿಗೆ ಉತ್ತರ ಭಾಗದಲ್ಲಿರುವ ಕೊಳಕ್ಕೆ ಬಿಡಲಾಗುತ್ತದೆ. ಕೊಳವಿಲ್ಲದಿದ್ದಲ್ಲಿ ಬಾವಿಗಳಿಗೆ ಹಾಕಲಾಗುತ್ತದೆ. ಅಲ್ಲಿಂದ ಸ್ವಲ್ಪ ಮೊಳಕೆಕಟ್ಟನ್ನು ಉಳಿಸಿ ತಂದು ಜನರಿಗೆ ಪ್ರಸಾದವಾಗಿ ನೀಡುತ್ತಾರೆ. ಸ್ವಲ್ಪವನ್ನು ಮನೆಯಲ್ಲಿ ಮತ್ತು ತಮ್ಮ ಹೊಲ ಗದ್ದೆಗಳಲ್ಲಿ ಎರಚುತ್ತಾರೆ. ಇದರಿಂದ ಫಸಲು ವೃದ್ಧಿಯಾಗುತ್ತದೆ ಎಂಬುದು ಜನಪದರ ನಂಬಿಕೆ. ಇಂದು ಮದುವೆ ಸಂಭ್ರಮಗಳಲ್ಲೂ ಮೊಳಕೆಕಟ್ಟಿನ ಶಾಸ್ತ್ರವನ್ನು ಮಾಡುತ್ತಾರೆ. ಕ್ರೈಸ್ತರ ಕ್ಯಾಥೋಲಿಕ್ ಪಂಥದವರು ಕೂಡ ಈ ಶಾಸ್ತ್ರವನ್ನು ಆಚರಿಸುತ್ತಾರೆ. ಜನಪದ ದೇವರುಗಳಿಗೆ ಮಾತೃಸ್ಥಾನದಲ್ಲಿರುವ ಶಿಷ್ಟದೇವತೆ ಗಾಂಧಿಮದಿಯಮ್ಮನ್, ಮೀನಾಕ್ಷಿಯಮ್ಮನ್ ದೇಗುಲಗಳಲ್ಲೂ ಮೊಳಕೆಕಟ್ಟು ಶಾಸ್ತ್ರ, ಜಾತ್ರೆ ನಡೆಯುತ್ತದೆ.

ಈ ಶಾಸ್ತ್ರ ರೂಢಿಯಲ್ಲಿದ್ದುದಕ್ಕೆ ಪ್ರಾಚೀನ ಸಾಹಿತ್ಯ ಗ್ರಂಥಗಳಲ್ಲಿ ಆಧಾರ ಸಿಕ್ಕುತ್ತದೆ. ‘ಪದಿನೆಣ್ ಕೀಳ್ ಕ್ಕಣಕ್ಕು’ ಗ್ರಂಥಗಳಲ್ಲಿ ಒಂದಾದ ‘ತಿನೈಮಾಲೈ ನೂಟ್ರೈಂಬದು’ ಎಂಬ ಗ್ರಂಥದಲ್ಲಿ (ಪದ್ಯ ಸಂ. ೫) ಶಿಲಪ್ಪದಿಗಾರಂ, ಮಣಿಮೇಗಲೈ, ತಿರುವಾಸಗಮ್, ಶೇಕ್ಕೀಳಾರನ ತಿರುತೊಂಡರ್ ಪುರಾಣ ಮೊದಲಾದವುಗಳಲ್ಲಿ ಕೂಡ ಈ ಶಾಸ್ತ್ರ ಕುರಿತ ವಿಚಾರದ ಪ್ರಸ್ತಾಪವಿದೆ.

ಎ.ಬಿ. ಅನುವಾದ ಆರ್.ಎಸ್.

 

ಮೂಡ ಕದೈ ಆಂಗ್ಲ ಭಾಷೆಯಲ್ಲಿ `Numskull Stories’ ಹಾಗೂ ‘Noodles Stories’ ಎನಿಸುವ          ‘ಮೌಢ್ಯರ ಕಥೆ’ಗಳು ತಮ್ಮದೇ ಆದ ಒಂದು ವಿಶಿಷ್ಟವಾದ ಮಹತ್ವವನ್ನು ಪಡೆದಿವೆ. ಈ ಬಗೆಯ ಕತೆಗಳನ್ನು ತಮಿಳುನಾಡು ಭಾಗಗಳಲ್ಲಿ ‘ಮೂಡ ಕದೈಎಂದೇ ಕರೆಯುತ್ತಾರೆ. ಈ ಮೂಢರ ಕತೆಗಳಲ್ಲಿ ಬರುವ ನಾಯಕರಿಗೂ ಅವರ ಕಾರ್ಯಗಳಿಗೂ ಸಂಬಂಧವೇ ಇರುವುದಿಲ್ಲ. ಈ ಎಲ್ಲದರಲ್ಲೂ ಇರುವ ಅಜ್ಞಾನವನ್ನು ಆಧರಿಸಿ ಇವನ್ನು ಮೌಢ್ಯ ಕತೆಗಳು ಎಂದು ಕರೆಯಲಾಗಿದೆ. ಈ ನಾಯಕರು ಮಂದ ಬುದ್ಧಿಯವರೆಂದೂ ಅಕಾರಣವಾಗಿ ಯೋಚನಾಮಗ್ನರಾಗಿರುತ್ತಾರೆಂದೂ ಎಲ್ಲದರ ಮೇಲೂ ಕಾರಣವಿಲ್ಲದೆ ಸಂಶಯ ಪಡುವವರೂ ಕೋಪಿಷ್ಠರೂ ಆಗಿದ್ದು ಮೂರ್ಖತನವೇ ಉತ್ತಮ ಗುಣ ಎಂಬಂತೆ ವರ್ತಿಸುತ್ತಾರೆ.

ಈ ಕಥೆಗಳು ಕೇವಲ ಯಾವುದೇ ಒಬ್ಬ ಮೂರ್ಖನನ್ನು ಉದ್ದೇಶಿತವಾಗಿರದೆ, ಮೂರ್ಖ ನಡೆನುಡಿಯ ಸಮೂಹವನ್ನೇ ಗೇಲಿ ಮಾಡುವ ಉದ್ದೇಶ ಹೊಂದಿರುತ್ತದೆ. ಇವುಗಳಲ್ಲಿನ ಸಂಭಾಷಣೆ, ಗಾದೆ, ನಾಣ್ಣುಡಿಯಂತೆ ಮಿತವಾದರೂ ಅವುಗಳ ಮೊನಚು ಬಹಳ ಹರಿತವಾಗಿರುತ್ತದೆ. ಆದ್ದರಿಂದ ಈ ಕಥೆಗಳು ಬಹಳಷ್ಟು ಜನರ ಸಮೂಹದ ಆಧಾರದ ಮೇಲೆ ರಚಿತವಾಗಿರುತ್ತವೆ. ಈ ಎಲ್ಲಾ ಕಥೆಗಳಿಗೂ ವೀರಮಾಮುನಿ (ವೀರ ಮಹಾ ಋಷಿ) ಪರಮಾರ್ಥ ಗುರು ಕಥೆಗಳು ವಿಶೇಷ ಆಧಾರಗಳಾಗಿವೆ. ಇದರಲ್ಲಿ ಮೊದಲಿಗೆ ಬರುವ ‘ಕುದುರೆ ಮೊಟ್ಟೆ ಪಡೆದ ಕಥೆ, ಸಮುದ್ರ ದಾಟಿದ ಕಥೆ ಮೊದಲಾದ ಕಥೆಗಳು ಲಿಥುವೇನಿಯಾ, ಸ್ವೀಡನ್, ಜರ್ಮನಿ, ಹಂಗೇರಿ ಇಂತಹ ಕಡೆಗಳಲ್ಲಿ ಸಹಜವೆಂಬಂತೆ ಈ ಕಥೆಗಳು ಉಳಿದಿವೆ. ಕಿ. ರಾಜಿನಾರಾಯಣ ಅವರ ‘ತಾತ್ತಾ ಚೊನ್ನ ಕದೈಗಳ್’ (ಅಜ್ಜ ಹೇಳಿದ ಕಥೆಗಳು) ಎಂಬ ಸಂಗ್ರಹದಲ್ಲಿ ಗುರುತಿಸಲಾದ ಕೋಮಟಿ ಶೆಟ್ಟರನ್ನು ಕುರಿತ ಕಥೆಗಳೆಲ್ಲ ಮೂಢರ ಕಥೆಗಳಾಗಿವೆ. ಎಸ್. ಷಣ್ಮುಖಸುಂದರ ಅವರ ‘ತಮಿಳ್ ನಾಟ್ಟುಪುರ ಕದೈಗಳ್’ ತಮಿಳು ಜನಪದ ಕಥೆಗಳು ಎಂಬ ಸಂಗ್ರಹದ ‘ಮೂಡರ್ ಕದೈಗಳು’ ಎಂಬ ಪ್ರತ್ಯೇಕ ವಿಭಾಗದಲ್ಲಿ ಹತ್ತು ಕಥೆಗಳು ಮೂಢರ ಮೂರ್ಖತನದ ವಸ್ತುವನ್ನು ಕುರಿತು ರಚಿತವಾದಂಥವು.

ನಾಟ್ಟುಪ್ಪುರ, ಕತೈಕಳಂಜಿಯಂ (ಜನಪದ ಕಥಾಗಣಿ) ೧೧ನೆಯ ಸಂಪುಟದಲ್ಲಿ ಸ್ಥಾನ ಪಡೆದಿರುವ ಕುನ್ನತ್ತೂರಾನ್ ಕಥೆಗಳು (ಜ್ಞಾ, ಸ್ಟೀಫನ್) ಬೇರೆಯ ಸಂಪುಟಗಳಲ್ಲಿ ಸ್ಥಾನ ಪಡೆದಿರುವ ಮೂಢರನ್ನು ಕುರಿತ ಕಥೆಗಳು ಈ ಬಗೆಗೆ ಸೇರಿದವಾಗಿವೆ.

ಕನ್ಯಾಕುಮಾರಿ ಜಿಲ್ಲೆಯ ವಿಳವಂಗೋಡು ತಾಲ್ಲೂಕಿನಲ್ಲಿ ಇರುವ ಕುನ್ನತ್ತೂರಾನ ಕಥೆಗಳು ಮೂಢರ ಕಥಾವರ್ಗಕ್ಕೆ ಸೇರಿದವು. ವಿಳವಂಗೋಡು ತಾಲ್ಲೂಕಿನಲ್ಲಿ ಕುನ್ನಿತ್ತೂರಾಸನ ಮೂಢತನವನ್ನು ಕುರಿತ ಕಥೆಗಳು ಹೆಚ್ಚು ಪ್ರಸಿದ್ಧಿ ಪಡೆದಿವೆ. ಈ ಊರಿನ ಹೆಸರನ್ನು ಹೇಳುವ ರೀತಿಯೇ ನಗುವಂತೆ ಮಾಡುತ್ತದೆ. ಇದನ್ನು ಆ ತಾಲ್ಲೂಕಿನಲ್ಲಿಯೇ ಕಾಣಬಹುದಾಗಿದೆ. ಲಿಂಡಾಡೇ ಅವರ ಅಭಿಪ್ರಾಯದಂತೆ ‘ಮೌಢ್ಯ ಕಥೆಗಳು’ ಯಾವುದೇ ಒಬ್ಬ ವ್ಯಕ್ತಿಯನ್ನು ಕುರಿತು ಹೇಳಿದ್ದಲ್ಲ. ಅದು ಮೌಢ್ಯಕ್ಕೆ ಒಳಗಾಗಿರುವ ವಿಶಾಲ ಸಮೂಹವನ್ನು ಕುರಿತಾದದ್ದು ಎಂಬುದರಿಂದ ಇವು ಈ ಮೌಢ್ಯವನ್ನೇ ಟೀಕಿಸುವ ಹಿನ್ನೆಲೆಯಲ್ಲಿ ರೂಪುಗೊಂಡಿದ್ದನ್ನು ತಿಳಿಯಬಹುದಾಗಿದೆ. ಕೇರಳದ ಭಾಗಗಳಲ್ಲಿ ಕೇಳಲು ಸಿಗುವ ‘ತೆಕ್ಕಂಪಾಗದ ಕತೆ’ ತಮಿಳುನಾಡಿನ ಕಡುಕ್ಕರೈಯಾನ್ ಕತೆ, ಕಪ್ಪಿಯರಯ್ಯಾ ಕತೆ, ಪೊತ್ತಪ್ಪಟ್ಟಿಯಾನ್ ಕತೆ ಮೊದಲಾದವು ನಿರ್ದಿಷ್ಟ ಪ್ರದೇಶಗಳಿಗೆ ಸಂಬಂಧಿಸಿದಂತೆ ರಚಿತವಾದ ಮೂರ್ಖರ ಕಥೆಗಳಾಗಿವೆ.

ಕೆ. ರಾಜನಾರಾಯಣ ಅವರು ಗುರುತಿಸುವಂತೆ ಕೋಮುಟಿ ಶೆಟ್ಟಿಯಾರ್, ವಿಳವಂಗೋಡು ತಾಲ್ಲೂಕಿನಲ್ಲಿ ರೂಢಿಯಲ್ಲಿರುವ ‘ಪಂಡಾರಂ ಪಣ್ಣೆಯಾರ್’ ಎಂಬಂತಹ ಕಥೆಗಳು ಮೂರ್ಖತನದಿಂದ ವರ್ತಿಸುವವರನ್ನು ಗೇಲಿ ಮಾಡುವ ಉದ್ದೇಶದಿಂದಲೇ ರಚಿತವಾದವು. ಈ ಮೂರ್ಖತನ ಜನರ ಪರಂಪರೆಯಿಂದಲೂ ಬಂದಿರುವ ವಿಚಿತ್ರ ಬಗೆ ಎಂದೂ, ಅದನ್ನು ಜನ ತೀಳಿಯದೇ ಅಜ್ಞಾನಿಗಳಾಗಿದ್ದಾರೆಂದೂ ಈ ಕಥೆಗಳು ಅವುಗಳನ್ನೆಲ್ಲ ವಿರೋಧಿಸುತ್ತವೆ ಎನ್ನುತ್ತಾರೆ.

ಮೊದಲೇ ಹೇಳಿದಂತೆ ಮೂಢರ ಕಥೆಗಳು ನಿರ್ದಿಷ್ಟ ವ್ಯಕ್ತಿ ಸಮೂಹವನ್ನು ಅವಲಂಬಿಸಿದೆ ಎಂಬ ಮಾತು ಒಂದರ್ಥದಲ್ಲಿ ಸರಿಯಲ್ಲ. ಏಕೆಂದರೆ ಇದರಲ್ಲಿ ಒಬ್ಬ ರೈತ, ಒಬ್ಬ ಹೆಂಗಸನ್ನು ಕುರಿತು ಕಥೆಗಳು ರಚಿತವಾಗುತ್ತವೆ. ಆದರೆ ಇವುಗಳ ಪ್ರಮಾಣ ತುಂಬಾ ಕಡಿಮೆ. ಕಥೆಗಳಲ್ಲಿ ಮೂಡಿಬಂದಿರುವ ಮೂಢತನದ ಚಿತ್ರಣವನ್ನು ಸಂಶೋಧನೆ ಮತ್ತು ತಾಳೆಯ ಮೂಲಕ ಪರಿಶೀಲಿಸಿದಾಗ ಕೆಲವು ಲಕ್ಷಣಗಳನ್ನು ದಾಖಲಿಸಬಹುದು.

೧. ಬಿತ್ತನೆ ಮಾಡುವವನು ತನ್ನ ಹೆಜ್ಜೆ ಗುರುತುಗಳು ಗದ್ದೆಯಲ್ಲಿ ಬೀಳುವುದನ್ನು ತಪ್ಪಿಸುವ ಸಲುವಾಗಿ ನಾಲ್ಕು ಜನ ಮಂಚವನ್ನು ಹೊತ್ತಿರುತ್ತಾರೆ. ಅವನು ಮಂಚದ ಮೇಲೆ ಕುಳಿತು ಬಿತ್ತನೆ ಮಾಡುವುದು (AT ೧೨೦೧ A).

೨. ಗದ್ದೆಯಲ್ಲಿನ ಕಳೆ ಕೀಳುವುದರಿಂದ ಅದರೊಂದಿಗಿರುವ ಬತ್ತ ಹೋಗುವುದೆಂದು ಕಳೆ ಕೀಳುವುದನ್ನೂ ನಿಲ್ಲಿಸಿ ಗೊಬ್ಬರ ಹಾಕುವುದು (AT ೧೨೦೩ B).

೩. ಹುಣಿಸೆಮರವನ್ನು ಕತ್ತರಿಸಿ ಕಾಯಿಗಳನ್ನು ಆಯುವುದು (AT ೧೨೦೪ A).

೪. ಬಾಯಾಡಿಸುತ್ತಿರುವ ಆಡನ್ನು ನೋಡಿ ತಪ್ಪಾಗಿ ಅರ್ಥೈಸಿಕೊಂಡು ಆಡನ್ನೇ ಸಾಯಿಸುವುದು (AT – ೧೨೧೧).

೫. ಎಮ್ಮೆಯ ಮೂಗಿನಲ್ಲಿ ಜೇನು ಇರುವುದೆಂದು ಭಾವಿಸಿ ಮೂಗನ್ನು ಕತ್ತರಿಸುವುದು (AT – ೧೨೧೧ A).

೬. ಬಾಳೆಹೂವಿನ ಗೊಂಚಲಿನಲ್ಲಿ ಕಾನೂನು – ಕಟ್ಟಳೆಗಳನ್ನು ಬರೆದಿಡುವುದು (AT ೧೨೧೬ A).

೭. ಹುಣಿಸೆಮರದ ಕೊಂಬೆಯೊಂದನ್ನು ಬಗ್ಗಿಸಿ ಅದರಲ್ಲಿ ಧ್ವಜ ಕಟ್ಟುವುದು (AT ೧೨೪೧ B).

೮. ಮರವನ್ನು ಕತ್ತರಿಸಿ ಬಂಡಿಯಲ್ಲಿ ಹಾಕುವುದು.

೯. ಗಡ್ಡೆ ಚಿಗುರಿದ್ದನ್ನು ಕಂಡು ಗೆಣಸು ಬಂದಿದೆಯೆಂದು ಶೋಧಿಸುವುದು (AT ೧೨೬೦ C).

೧೦. ಬಾವಿಯಲ್ಲಿ ಉಪ್ಪಿನಕಾಯಿ ಹಾಕುವುದು.

೧೧. ಇಲಿಗಳನ್ನು ಸಾಯಿಸಲು ತಾವೇ ವಾಸವಾಗಿರುವ ಮನೆಗೆ ಬೆಂಕಿ ಹಾಕುವುದು (AT ೧೨೮೨).

೧೨. ಬಿಂದಿಗೆಯಲ್ಲಿರುವ ಕುಂಬಳಕಾಯಿಯನ್ನು ಎತ್ತಲು ಸಾಧ್ಯವಾಗದೆ ಪರದಾಡುವುದು (AT ೧೨೯೪ C).

೧೩. ದೀಪದ ಸಹಾಯದಿಂದ ಬೆಂಕಿ ಹತ್ತಿಸುವುದು ತಿಳಿಯದೆ ಒದ್ದಾಡುವುದು (AT ೧೩೪೪ A).

ಈ ಮೇಲ್ಕಂಡ ಉದಾಹರಣೆಗಳು ಸಾಮಾನ್ಯನಿಗೂ ತಿಳಿಯಬಹುದಾದ ವಿಚಾರಗಳು. ಆದರೆ ಇಷ್ಟು ಸಣ್ಣದ್ದನ್ನೂ ಅರ್ಥ ಮಾಡಿಕೊಳ್ಳದೆ ಒದ್ದಾಡುವುದು, ಮೂಢರು ಮತ್ತು ಜನಸಾಮಾನ್ಯರ ಆಲೋಚನೆಗೂ ಇರುವ ವ್ಯತ್ಯಾಸ ತಿಳಿಯಬಹುದಾಗಿದೆ. ಆದ್ದರಿಂದ ಇಂತಹ ಮೂಢರು ಬದಲಾಗಬೇಕೆಂದು ಪರೋಕ್ಷವಾಗಿ ಈ ಕಥೆಗಳ ಮೂಲಕ ತಿಳಿಯಬಹುದಾಗಿದೆ.

ಈ ಮೂಢರ ಕತೆಗಳಲ್ಲಿ ಬರುವ ಮೂಢರು ಇತರರಂತೆಯೇ ಸಾಧಾರಣ ಮನಃಸ್ಥಿತಿಯುಳ್ಳ ಜಾಣರಂತೆ ಇರುತ್ತಾರೆ. ಆದರೆ ದಡ್ಡತನ ಅವರಲ್ಲಿ ತುಂಬಿರುತ್ತದೆ. ಇದನ್ನು ಕಥೆ ಮುಂದುವರಿದಂತೆ ವಿಸ್ತರಿಸಿ ಹೇಳಲಾಗುತ್ತದೆ. ಉದಾ : ಬತ್ತ ಬಿತ್ತುವ ಕುನ್ನತ್ತೂರನ್ (AT ೧೦೦೧ A) ಗದ್ದೆಯಲ್ಲಿ ಬತ್ತ ಬಿತ್ತಲು ಬರುವ ಇತರ ರೈತನಂತೆಯೇ ಈತನೂ ಬರುತ್ತಾನೆ. ಆದರೆ ಇನ್ನೇನೋ ಬತ್ತ ಬಿತ್ತುವಾಗ ಈತನ ಆಲೋಚನೆ ಹೆಡ್ಡತನದತ್ತ ಹೊರಳುತ್ತದೆ. ಅವನು ಮಂಚದ ಮೇಲೆ ಕುಳಿತು ಬತ್ತ ಬಿತ್ತುತ್ತಾನೆ. ಅಂದರೆ ಇಂತಹ ಜನರು ತಾವು ವಾಸವಿರುವ ಪರಿಸರ ಸಮಾಜದಲ್ಲಿ ದೊರೆಯುವ ಜ್ಞಾನವನ್ನು ಅರ್ಜಿಸಿಕೊಳ್ಳಲಾರದೆ ಪ್ರತ್ಯೇಕವಾಗಿ ಬೆಳೆದು ರೂಢಿಸಿಕೊಂಡ ಈ ನಡತೆಯೇ ಅವರನ್ನೂ ಸಮಾಜದ ಇತರ ಜನರಿಗಿಂತ ಪ್ರತ್ಯೇಕವಾಗಿ ನಿಲ್ಲಿಸಿ ಬಿಡುತ್ತದೆ. ಇದನ್ನು ಹೇಳುವುದೇ ಈ ಮೂಢ ಕತೆಗಳ ಒಟ್ಟು ಸಾರವಾಗಿದೆ.

ಜೆ.ಎಸ್.ಎನ್. ಅನುವಾದ ಆರ್.ಎಸ್.