ಮದಗದ ಕೆಂಚವ್ವ ಹದಿನೇಳು ಭಾಗಗಳ ಮದಗದ ಕೆಂಚವ್ವ ಎಂಬ ದೀರ್ಘ ಕಥನ ಗೀತೆ ಕರ್ನಾಟಕದ ಶಿವಮೊಗ್ಗ, ಚಿತ್ರದುರ್ಗ ಭಾಗಗಳಲ್ಲಿ ಹೆಚ್ಚು ಪ್ರಚಾರದಲ್ಲಿದೆ. ಮಾವ ಕಟ್ಟಿಸಿದ ಕೆರೆಗೆ ಬಲಿಯಾದ ಸೊಸೆಯ ಕಥೆ ಇದು. ಈ ಕಥೆ ಕನ್ನಡ ಜನಪದ ಕಥನ ಪ್ರಕಾರದಲ್ಲಿ ತುಂಬ ಪ್ರಸಿದ್ಧವಿರುವ ಕೆರೆಗೆಹಾರ ಗೀತೆಯ ಧಾಟಿಯಲ್ಲೇ ಬರುತ್ತದೆ. ಕೆರೆಗೆ ಹಾರ ಮೂರ‍್ನಾಲ್ಕು ಪುಟಗಳ ಪುಟ್ಟ ಕಥನಗೀತೆಯಾದರೆ ಮದಗದ ಕೆಂಚವ್ವ ಅತಿ ದೀರ್ಘ ಕಥನಗೀತೆ. ಗೀತೆಯ ಕೆಲವು ಭಾಗದ ನಿರೂಪಣೆ ತುಂಬ ತೆಳುವಾಗಿದ್ದು ಗದ್ಯದ ಧಾಟಿಯಲ್ಲೆಂಬಂತೆ ಬಂದರೂ ಮತ್ತೆ ಕೆಲವು ಕಡೆ ಸುಂದರ ಉಕ್ತಿಗಳೊಡನೆ ಕಾವ್ಯಾಂಶವೂ ಪ್ರಮುಖವಾಗಿ ಕಾಣಿಸುತ್ತದೆ.

ಶಿವಮೊಗ್ಗ ಮತ್ತು ಧಾರವಾಡ ಜಿಲ್ಲೆಗಳ ಗಡಿರೇಖೆಯಲ್ಲಿ ‘ಮಾಸೂರು’ ಗ್ರಾಮದಿಂದ ಎರಡು ಮೈಲುದೂರಕ್ಕೆ ಈಗಲೂ ಮದಗದ ಕೆಂಚವ್ವನ ಕೆರೆ ಇದೆ. ಅದು ಬಹಳ ವಿಸ್ತಾರವಾದ ಕೆರೆ. ಆ ಸುತ್ತಿನ ಜನ ಮದಗದ ಕೆಂಚವ್ವನ ಗುಡಿಯು ಕೆರೆಯ ನೀರಿನಲ್ಲಿ ಮುಳುಗಿ ಹೋಗದೆ ಎಂದು ತಿಳಿಸುತ್ತಾರೆ. ಕೆಂಚವ್ವನ ಹೆಸರಿನಲ್ಲಿ ಕೆರೆಯ ಏರಿಯ ಮೇಲಿರುವ ಮಂಟಪವೊಂದಕ್ಕೆ ಪೂಜೆ ನಡೆಯುತ್ಜತದೆ. ಆದರೆ ಅಲ್ಲಿರುವುದು ಬಸವಣ್ಣನ ವಿಗ್ರಹ ಮಾತ್ರ.

ಮದಗದ ಕೆಂಚಮ್ಮನ ಕಥೆ ಹೀಗಿದೆ. ಮಲ್ಲಯ್ಯಗೌಡನ ಮಗಳ ಹೆಸರು ಮಲಕಮ್ಮ ಎಂದು. ಈ ಮಗಳು ದೂರದಲ್ಲಿ ದೊರಕುವ ನೀರನ್ನು ಕೊಡದಿಂದ ಹೊತ್ತು ತರಲಾರಳು. ಕೆರೆಯನ್ನು ಕಟ್ಟಿಸುವಂತೆ ತಂದೆಗೆ ಹೇಳಿದಳು. ತಳವಾರನನ್ನು ಬರಹೇಳಲಾಯಿತು. ಬಂದ ತಳವಾರನಿಗೆ ಕಟ್ಟೆ ಹಳ್ಳಿಯ ವಡ್ಡರ ದ್ಯಾಮಣ್ಣನನ್ನು ಕರೆ ತರಲು ಅಪ್ಪಣೆ ಕೊಟ್ಟರು. ಬಂದ ದ್ಯಾಮಣ್ಣ ಹತ್ತು ಸಾವಿರ ವರಹಕ್ಕೆ ಕೆರೆ ಕಟ್ಟಲೊಪ್ಪಿಕೊಂಡ. ಮಣ್ಣು ಎತ್ತುವ ಸ್ಥಳದಲ್ಲಿ ಒಂದು ಸಾವಿರ ತೆಂಗಿನಕಾಯಿ, ಎರಡು ಸಾವಿರ ಬಾಳೆಯ ಹಣ್ಣು ಇಟ್ಟು ಪೂಜೆ ಮಾಡಿದರು.

ದ್ಯಾಮಣ್ಣ ತನ್ನ ಕುಲದ ಆಳುಗಳೊಡನೆ ಹೊತ್ತು ಹುಟ್ಟಿ ಮುಳುಗಿ ಏಳುತ್ತಿದ್ದಂತೆ ಅಡಿಮಣ್ಣನ್ನು ಬುಡಮೇಲು ಮಾಡಿದ. ಗಂಗಮ್ಮ ಕಾಣಿಸಿಕೊಂಡಳು. ಕಾಣಿಸಿಕೊಂಡ ಗಂಗಮ್ಮ ಕೆರೆ ಕಟ್ಟಿಸುತ್ತಿರುವ ಯಜಮಾನನ ಹೆಂಡತಿಯನ್ನು ಬಲಿ ಕೊಟ್ಟರೆ ಅಲ್ಲಿ ಬಹಳ ಕಾಲ ನಿಲ್ಲುವುದಾಗಿ ತಿಳಿಸಿದಳು. ಗೌಡ ದಿಗ್ಭ್ರಮೆಗೊಂಡ. ಹೆಂಡತಿಯನ್ನಲ್ಲದಿದ್ದರೂ ಮುತ್ತೈದೆ ಸ್ತ್ರೀಯೊಬ್ಬಳನ್ನು ಬಲಿ ಕೊಡಬೇಕಾಗಿ ಬಂತು. ಹೆಂಡತಿಯನ್ನು ಬಲಿಕೊಡುವುದಕ್ಕೆ ಆಕೆ, ತಾಳಿಕಟ್ಟಿ ಲಗ್ನವಾದ ಹೆಂಡತಿ. ಇವಳಿಲ್ಲವಾದರೆ ಮನೆಯ ಬದುಕು ನಡೆಯುವುದು ಕಷ್ಟ. ಮಗಳಾದರೂ ಅಷ್ಟೆ. ಹೊಟ್ಟೆಯಲ್ಲಿ ಹುಟ್ಟಿದ ಕುಡಿಯನ್ನು ಬಲಿಕೊಡುವುದು ಆಗದು. ಬಹಳ ಕಾಲ ಯೋಚಿಸಿ ಮಗ ಗೂಳೇಸನಿಗೆ ಸೊಸೆಯನ್ನು ತಂದು ಆಕೆಯನ್ನೇ ಕೆರೆಗೆ ಬಲಿಕೊಡುವುದೆಂದು ತೀರ್ಮಾನಿಸಿದ. ಮಲ್ಲಯ್ಯಗೌಡ ಹೆಗಲ ಮೇಲೆ ಶಲ್ಯ ಹೊದ್ದು ತಂಗಿಯ ಊರಿಗೆ ನಡೆದ. ಕೂಸು ಕೊಡುವಂತೆ ಕೇಳಿದ. ತಂಗಿಗೂ ತನ್ನ ಅಣ್ಣನ ಮಗನಿಗೆ ಹೆಣ್ಣು ಕೊಡುವುದು ಇಷ್ಟವೇ. ಮಾತುಕತೆಯಾದ ಮೇಲೆ ಗೂಳೇಸ ಕೆಂಚವ್ವ ಒಂದು ಶುಭ ಘಳಿಗೆಯಲ್ಲಿ ಗಂಡ ಹೆಂಡಿರಾದರು. ಮಲ್ಲಯ್ಯ ಗೌಡ ಒಂದು ದಿನ ಮಗನ ಮುಂದೆ ಮಾತು ತೆಗೆದ. ಲಗ್ನ ಮಾಡಿ ಮನೆತನ ಬಡವಾಯಿತು. ಹೊನ್ನುಬೆಳ್ಳಿ, ಮುತ್ತನ್ನು ದೇಶದ ಮೇಲೆ ಹೊರಟು ಸಂಪಾದಿಸಿ ಬಾ ಮಗನೆ, ದುಡಿಯುವ ಕೈ ನಿನ್ನದಾಗಲಿ ಎಂದ.

ಕೆಂಚವ್ವನನ್ನು ಮಾತನಾಡಿಸಲು ಬಂದ ಗಂಡನಿಗೆ ಹೇಳಿದಳು. ಲಗ್ನವಾಗಿ ಮೈಕೈಯ್ಯ ಅರಿಸಿನ ಇನ್ನೂ ಮಾಸಿಲ್ಲ. ಬಡತನ ಬಂದು ಬೇಕೆನ್ನುವಲ್ಲಿ ಅವು ಅಪ್ಪನಿಗೆ ಹೇಳಿ ಏರಿಸೇನು ಎಂದು ಹೇಳಿದಳು. ಭಂಗಕ್ಕೆ ಬರುವ ಹೊನನ್ನು ಒಪ್ಪದೆ, ಅದನ್ನು ಸಂಪಾದಿಸಿಯೇ ತರುವೆನೆಂದು ದೇಶದ ಮೇಲೆ ಹೊರಟ.

ಇತ್ತ ಮನೆಯಲ್ಲಿ ಗಂಗೆಯ ಪೂಜೆಗೆ ಸಿದ್ಧತೆಗಳು ನಡೆದವು. ಕೊಂಚಕಾಲದಲ್ಲಿಯೇ ಕೆಂಚಪ್ಪ ತಾನು ಗರ್ಭಿಣಿಯಾಗಿರುವುದನ್ನು ಅರಿತುಕೊಂಡಳು. ಮನೆಯವರು ಗಂಗಮ್ಮನ ಪೂಜೆಯನ್ನು ಕೊಂಚ ಮುಂದೆ ತಳ್ಳಲಾಗಿ ಒಂದು ಕೂಸಿನ ತಾಯಿ ಆದಳು. ಕೆಂಚವ್ವ ಬಳಿಕ ಒಂದು ಶುಭದಿನದಲ್ಲಿ ಅತ್ತೆ ಮಾವಂದಿರೊಡನೆ ಕಟ್ಟಿದ ಕೆರೆಯ ಕಡೆಗೆ ಪೂಜೆಗೆಂದು ಎಡೆ ಹಿಡಿದು ನಡೆದಳು. ಪೂಜೆಯಾದ ಬಳಿಕ ಕೆಂಚವ್ವ ಉಕ್ಕಿಬಂದ ನೀರಿನ ಪಾಲಾದಳು. ಕೆರೆಯ ದೇವತೆಯಾಗಿ ನೆಲೆಸಿದಳು. ದೇವತೆಯಾಗಿ ನೆಲೆಗೊಂಡ ಕೆಂಚವ್ವ ಗಂಡ ಗೂಳೇಸನ ಕನಸಿನಲ್ಲಿ ಹೋಗಿ ಎಚ್ಚರಿಸಲಾಗಿ ಆತ ಹನ್ನೆರಡು ಗಾವುದದಿಂದ ಬಂದ. ಅಪಶಕುನಗಳೂ ಆದವು. ಕೆರೆಯ ಮುಂದೆ ನಿಂತು ಕಣ್ಣೀರು ಹರಿಸಿದ. ಆ ಮೊದಲೇ ಕೆಂಚವ್ವ ನಾನು ಕೆರೆಗೆ ಬಲಿಯಾಗುವವಳು ಎಂದು ತಿಳಿದದ್ದೇ ತೌರುಮನೆಗೆ ಹೋಗಿ ಗಂಡನಿಗೆ ತಂಗಿಯನ್ನು ಗೊತ್ತು ಮಾಡಿ ಬಂದಿದ್ದಳು. ತನ್ನೊಬ್ಬಳಿಂದ ದೊಡ್ಡ ಮನೆಯ ಬದುಕನ್ನು ನೀಗಿಸುವುದು ಕಷ್ಟವೆಂದು ತಂಗಿಯನ್ನು ಯಜಮಾನನಿಗೆ ಕೊಡಬೇಕೆಂದು ಸುಳ್ಳು ನೆಪ ಹೇಳಿ ಒಪ್ಪಿಸಿ ಬಂದಿದ್ದಳು. ಅಂತೆಯೇ ದುಃಖಿತನಾದ ಗೂಳೇಸನೊಡನೆ ತಂಗಿಯ ಲಗ್ನವಾಯಿತು. ಸ್ತ್ರೀಪಾತ್ರವೇ ಪ್ರಧಾನವಾಗಿರುವ ಈ ಕಥನಗೀತೆಯಲ್ಲಿ ಕೆಂಚವ್ವನ ತ್ಯಾಗವೇ ಅತಿಮುಖ್ಯವಾಗಿ ಕಾಣಿಸುತ್ತದೆ. ಕರ್ನಾಟಕದಲ್ಲಿ ಬಹುದೊಡ್ಡ ಕೆರೆಕಟ್ಟೆಗಳು ಇರುವೆಡೆಯಲ್ಲೆಲ್ಲ ಈ ಬಗೆಯ ಕಥಾನಕಗಳು ಪ್ರಚಾರದಲ್ಲಿರುತ್ತವೆ.

ಕೆ.ಎಚ್.

 

ಮದುರೈವೀರನ್ ತಮಿಳುನಾಡಿನ ಮದುರೈ ವೀರನು ಹಲವು ಶತಮಾನದ ಹಿಂದೆ ಹಲವು ರಾಜರುಗಳ ಆಳ್ವಿಕೆಯಲ್ಲಿ ಹಿಂಸೆಗೊಳಗಾಗಿ ಸತ್ತನು. ಆದ್ದರಿಂದ ಮದುರೈವೀರನನ್ನು ದುಷ್ಟ ಕ್ರಿಯೆಗಳಿಗೆ ಬೆಂಬಲಿಸುವ ದೇವರಾಗಿ ಆರಾಧಿಸುವರು. ಈತನನ್ನು ಕಾವಲು ದೇವರಾಗಿಯೂ ಪೂಜಿಸುತ್ತಾರೆ. ಈತನ ದೇಗುಲಗಳು, ಮದುರೈ, ತೇನಿ, ತಿರುಚ್ಚಿ, ದಿಂಡುಕಲ್, ಈರೋಡು, ರಾಮನಾಥಪುರಂ, ಪುದುಕೋಟೈ ಮೊದಲಾದ ಜಿಲ್ಲೆಗಳ ಗ್ರಾಮಗಳಲ್ಲಿ ಕಾಣಸಿಗುತ್ತವೆ.

ಮದುರೈವೀರನ ಕತೆ: ಕಾಶಿ ಎಂಬ ನಗರವನ್ನು ‘ತುಳಸಿ’ ಎಂಬ ಮಹಾರಾಜ ಆಳ್ವಿಕೆ ಮಾಡುತ್ತಿದ್ದನು. ತುಳಸಿ ರಾಜ ಕರ್ಪೂರ ವಳ್ಳಿಯನ್ನು ಮಡದಿಯಾಗಿ ಪಡೆದಿದ್ದನು. ಇವನು ತಾಳ್ಮೆಯಲ್ಲಿ ಭೂಮಿಗೆ ಸಮಾನನಾಗಿಯೂ ಮನ್ಮಥನಂತೆ ಸೌಂದರ್ಯವುಳ್ಳವನಾಗಿಯೂ ಹರಿಶ್ಚಂದ್ರನಂತೆ ಸತ್ಯವಂತನೂ ಕರ್ಣನಂತೆ ದಾನಶೂರನೂ ಭೀಮನಂತೆ ವೀರನೂ ದಶರಥನಂತೆ ನೀತಿ ನಿಯಮವುಳ್ಳವನೂ ಆಗಿದ್ದನು. ಇವನು ಶ್ರೇಷ್ಠ ರೀತಿಯಲ್ಲಿ ಆಳ್ವಿಕೆ ಮಾಡುತ್ತಿದ್ದನು. ಬಡವರಿಗೆ ದಾನಧರ್ಮ ಮಾಡುತ್ತಿದ್ದನು. ಆದರೆ ಮಹಾರಾಜನಿಗೆ ಮಕ್ಕಳಿಲ್ಲದ ಒಂದು ಕೊರಗು ಮಾತ್ರ ಕಾಡುತ್ತಿತ್ತು. ಆತನ ಸುತ್ತ ಬ್ರಾಹ್ಮಣರು ಸುತ್ತುವರಿದಿದ್ದರು.

ದಶದಿಕ್ಕುಗಳಲ್ಲಿ ಖ್ಯಾತಿವೆತ್ತ ಪುರೋಹಿತರುಗಳೆಲ್ಲ ಕಲಿತ ವಿದ್ವಾಂಸರು. ಅರವತ್ನಾಲ್ಕು ಕಲೆಗಳನ್ನು ಬಲ್ಲವರು ಆಗಿದ್ದರು. ಮಕ್ಕಳಿಲ್ಲದ ಕೊರಗು ಮಹಾರಾಜನಿಗೆ ದಿನ ದಿನವೂ ಕಾಡುತ್ತಿತ್ತು. ಆಗ ತುಳಸಿ ಮಹಾರಾಜ ತನ್ನ ಆಸ್ಥಾನದಲ್ಲಿರುವ ಪುರೋಹಿತರುಗಳಿಗೆ ಸರಿಯಾದ ಮಾರ್ಗವನ್ನು ತೋರಿಸುವಂತೆ ಕೇಳಿದನು. ರಾಜನ ಮಾತನ್ನು ಆಲಿಸಿದ. ಪುರೋಹಿತರು ತಾವು ಗಂಗೆಯಲ್ಲಿ ಸ್ನಾನ ಮಾಡಿದರೆ ಬಯಸಿದ್ದು ಲಭಿಸುವುದು ಎಂದರು.

ರಾಜ ತಕ್ಷಣವೇ ಗಂಗಾ ನದಿಗೆ ಮಹಾರಾಣಿಯೊಡನೆ ಹೋಗಿ ಸ್ನಾನ ಮಾಡಿ ಪುರೋಹಿತರಿಗೆ ದಾನಧರ್ಮಗಳನ್ನು ಮಾಡಿದನು. ರಾಜನು ‘ಮಕ್ಕಳ ಭಾಗ್ಯವನ್ನು ದಯಪಾಲಿಸು ಭಗವಂತನೇ’ ಎಂದು ವಿಷ್ಣುವನ್ನು ಬೆಡಿದನು. ಅನಂತರ ರಾಜನು ವ್ರತಗಳನ್ನು ಮಾಡಿದನು; ಮಠ ಮಾನ್ಯಗಳನ್ನು ಮತ್ತು ದೇವಾಲಯಗಳನ್ನು ಕಟ್ಟಿದನು; ಅನ್ನದಾನ, ಭೂದಾನ, ಕನ್ಯಾದಾನ, ಜಲದಾನ, ಮಜ್ಜಿಗೆದಾನ ಮೊದಲಾದ ಧರ್ಮಕಾರ್ಯಗಳನ್ನು ನೆರವೇರಿಸಿದನು. ಇದರಿಂದ ಸಂತೃಪ್ತಿ ಹೊಂದಿದ ಭಗವಂತ ಮಕ್ಕಳ ಭಾಗ್ಯ ದಯಪಾಲಿಸಿದನು. ಮಹಾರಾಣಿ ಗರ್ಭಧರಿಸಿ ಹತ್ತು ತಿಂಗಳು ಕಳೆದ ಅನಂತರ ಸುಂದರವಾದ ಗಂಡು ಮಗುವೊಂದನ್ನು ಹೆತ್ತಳು. ದೇವರು ಆ ಬಾಲಕನನ್ನು ಹರಿಸಿದರು. ರಾಜನು ಮಗು ಹುಟ್ಟಿರುವುದು ತಿಳಿದು ಸಂತೋಷಗೊಂಡನು. ತಕ್ಷಣ ಹೆಂಡತಿ ಮತ್ತು ಮಗುವನ್ನು ನೋಡಲು ಓಡೋಡಿ ಬಂದನು. ಮಗುವನ್ನು ನೋಡಿ ಅತ್ಯಂತ ಸಂತೋಷಗೊಂಡನು. ಆದರೆ ಮಗು ಹೊಕ್ಕಳ ಬಳ್ಳಿ ಸುತ್ತಿ ಹುಟ್ಟಿದ ಸ್ಥಿತಿ ಕಂಡು ತುಂಬ ಚಿಂತೆಗೊಳಗಾದನು. ತಕ್ಷಣ ಸಭೆಗೆ ಒಬ್ಬ ಜ್ಯೋತಿಷ್ಯರನ್ನು ಆಹ್ವಾನಿಸಿದನು. ಮಗು ಹೊಕ್ಕಳ ಬಳ್ಳಿ ಸುತ್ತಿ ಹುಟ್ಟಿದನ್ನು ಜ್ಯೋತಿಷ್ಯರಿಗೆ ಹೇಳಿ ಫಲವನ್ನು ಕೇಳಿದನು. ಜ್ಯೋತಿಷ್ಯರು ಪಂಚಾಂಗವನ್ನು ತಿರುವಿ ನೋಡಿ ಮಗು ಹುಟ್ಟಿದ ಸಮಯ ಸರಿಯಿಲ್ಲ, ಮಗುವನ್ನು ಇಟ್ಟುಕೊಂಡರೆ ನಗರಕ್ಕೆ ಕೇಡು ಬರುವುದು, ಕುಲಕ್ಕೆ ಹಾನಿ ತರುವುದು, ಆದ್ದರಿಂದ ಕಾಡಿನಲ್ಲಿ ಎಸೆಯಿರಿ ಎಂದರು. ರಾಜ ಚಿಂತಿಸಿ ಬಹಳ ದುಃಖದಿಂದ ಮಗುವನ್ನು ಚಿನ್ನದ ಪೆಟ್ಟಿಗೆಯಲ್ಲಿಟ್ಟು ಕಾಡಿನಲ್ಲಿ ಬಿಟ್ಟು ಬರಲು ಸೇವಕರಿಗೆ ಹೇಳಿದನು. ಹಾಗೆಯೇ ಸೇವಕರು ಮಗುವನ್ನು ಕಾಡಿನಲ್ಲಿ ಬಿಟ್ಟುಬಂದರು. ಕಾಡಿನಲ್ಲಿ ನಾಗರ ಹಾವೊಂದು ಮಗುವಿಗೆ ಅಮೃತವನ್ನು ಉಣಿಸಿ ಬೆಳೆಸಿತು. ಅದು ಮಗುವಿಗೆ ಅಲಂಕಾರವೀರನೆಂದು, ವೀರಪ್ಪನ್ ಎಂಬ ಹೆಸರಿಟ್ಟು ರಕ್ಷಣೆ ನೀಡುತ್ತ ಬಂದಿತು. ನಾಗರಹಾವು ಮಗುವಿಗೆ ಹದಿನಾರನೆಯ ವಯಸ್ಸಿನಲ್ಲಿ ಸೈನ್ಯವನ್ನುಗೆಲ್ಲುವೆ, ಮಹಾವೀರನೆಂಬ ಹೆಸರನ್ನು ಪಡೆಯುವೆ, ಆದರೆ ಹೆಂಗಸರಿಂದಲೇ ನಿನಗೆ ನಾಶ ಬರುವುದೆಂದು ಹೇಳುತ್ತಾ ಬೆಳೆಸುತ್ತಾ ಬಂದಿತು.

ಒಂದು ದಿನ ದಲಿತನಾದ ಚಿನ್ನನ್ ಎಂಬುವನ ಹೆಂಡತಿ ಹೊನ್ನಾವರಿಕೆ ಗಿಡದ ಕಟ್ಟಿಗೆಗಳನ್ನು ಆಯಲು ಕಾಡಿಗೆ ಹೋಗಿದ್ದಳು. ಅಲ್ಲಿ ಸುಂದರವಾದ ಮಗು ಮತ್ತು ಭಯಂಕರವಾದ ಹಾವು ಕಂಡಳು. ತಕ್ಷಣ ಆಕೆ ಓಡೋಡಿ ಹೋಗಿ ಮಗುವನ್ನು ಎತ್ತಿ ತನ್ನ ಎದೆಗೆ ಅಪ್ಪಿಕೊಂಡಳು. ತಾಯಿಯ ಪ್ರೀತಿಯಿಂದ ಅವಳ ಎದೆಯಲ್ಲಿ ಹಾಕು ಉಕ್ಕಿತು. ತನ್ನ ಎದೆಯ ಹಾಲು ಕೊಟ್ಟು ಮಗುವಿನ ಅಳುವುದನ್ನು ನಿಲ್ಲಿಸಿದಳು.

ಇತ್ತ ಕಾಡಿಗೆ ದಲಿತ ಮಹಿಳೆ ಹೋಗಿ ಬಹಳ ಹೊತ್ತಾಯಿತು ಎಂದು ಭಾವಿಸಿ ಚಿನ್ನನು ತನ್ನ ಹೆಂಡತಿಯನ್ನು ಹುಡುಕಿಕೊಂಡು ಕಾಡಿಗೆ ಬರುತ್ತಾನೆ. ಹೆಂಡತಿಯ ಹತ್ತಿರ ಮಗುವನ್ನು ಕಂಡು ಸಂತೋಷಗೊಂಡನು. ಮಕ್ಕಳ ಭಾಗ್ಯ ಲಭಿಸಿತೆಂದು ಇಬ್ಬರು ಸಂತೋಷಗೊಂಡು ಮಗುವನ್ನು ಮುದ್ದಿನಿಂದ ಬೆಳೆಸಿದರು. ಆಚಾರಿಯನ್ನು ಕರೆಸಿ ಚಿನ್ನದಿಂದ ಗೊಂಬೆ ಮಾಡಿಸಿದರು. ಮೂರು ವರ್ಷಕ್ಕೆ ಕಿವಿ ಚುಚ್ಚಿಸಿದರು. ಜನರು ಮಾದಿಗಿತ್ತು ಮಗು ಬೆಳೆಸುತ್ತಿರುವುದನ್ನು ಕಂಡು ರಾಜನ ಹತ್ತಿರ ಹೇಳಲು ಹೋದರು. ಇದನ್ನು ಅರಿತ ಗಂಡಹೆಂಡರಬ್ಬರೂ ಮಗುವಿಗೆ ಆಪತ್ತು ಬಂದು ಬಿಡಬಹುದೆಂದು ಭಾವಿಸಿ ರಾತ್ರೋರಾತ್ರಿ ಬೊಮ್ಮಣ್ಣ ಎಂಬ ರಾಜನು ಆಳ್ವಿಕೆ ಮಾಡುವ ರಾಜ್ಯಕ್ಕೆ ಬಂದು ಸೇರಿದರು. ನಡೆದುದನ್ನೆಲ್ಲ ರಾಜನಿಗೆ ಹೇಳಿದರು. ರಾಜ ತಕ್ಷಣ ಚಿನ್ನನಿಗೆ ಅರಮನೆಯ ಸೇವಕನ ಕೆಲಸ ಕೊಟ್ಟು ಅಲ್ಲಿಯೇ ಇಟ್ಟುಕೊಂಡರು. ವೀರನು ಹದಿನಾರನೆಯ ವಯಸ್ಸಿನಲ್ಲಿ ಕಾಡಿನ ಕರಡಿ, ಹುಲಿಗಳನ್ನು ಬೇಟೆಯಾಡುವುದನ್ನು ರೂಢಿಸಿಕೊಂಡನು. ಮಾದಿಗನ ಮಾತನ್ನು ಕೇಳದೆ ಮಗನಾದ ವೀರನು ಬೆಳೆಯುತ್ತಾ ಬಂದನು. ಈ ರೀತಿಯಲ್ಲಿರುವಾಗ ಬೊಮ್ಮಣ್ಣ ರಾಜನ ಮಗಳು ಹನ್ನೆರಡನೆಯ ವಯಸ್ಸಿನಲ್ಲಿ ಋತುಮತಿಯಾದಳು. ಆಕೆಗೆ ಊರಿನ ಹೊರಗೆ ಗುಡಿಸಲು ಕಟ್ಟಿ ಅಲ್ಲಿ ಇರಿಸಿ ಚಿನ್ನನನ್ನು ಕಾವಲಿಗೆ ಕಳುಹಿಸಿದನು. ಒಂದು ದಿನ ದೊಡ್ಡಮಳೆಯಿಂದ ಚಿನ್ನನು ಒದ್ದೆಯಾಗಿ ಹುಷಾರು ತಪ್ಪಿದನು. ಆಗ ಚಿನ್ನನು ಕಾವಲಿಗೆ ವೀರನನ್ನು ಕಳುಹಿಸಿದನು. ವೀರ ಗುಡಿಸಲಿಗೆ ಬಂದು ತಾನು ಕಾವಲು ಕಾಯುವುದಾಗಿ ಆ ಹೆಣ್ಣಿಗೆ ಹೇಳಿದನು. ಆಗ ಭಾರೀ ಮಳೆ ಹುಯ್ಯುತ್ತಿತ್ತು. ವೀರನು ಮಳೆಯಲ್ಲಿ ನೆನೆದು ಗುಡಿಸಿಲಿನಲ್ಲಿ ಕೂರಲು ಸ್ಥಳಾವಕಾಶವನ್ನು ಕೇಳುವನು. ಕೆಳ ಜಾತಿಗೆ ಸೇರಿದವನಾದುದರಿಂದ ಬಹಳ ಕೆಟ್ಟ ಮಾತುಗಳಿಂದ ವೀರನಿಗೆ ಬೈದಳು. ಆಗ ವೀರನು ಆ ಹೆಣ್ಣಿಗೆ ತಾನು ಕಾಶಿ ಮಹಾರಾಜನ ಮಗನೆಂದು ಮುಂದೆ ನಡೆದುದುನ್ನೆಲ್ಲ ಸವಿವರವಾಗಿ ಹೇಳುವನು. ಅವನ ಮಾತನ್ನು ಕೇಳಿದ ಬೊಮ್ಮಿ ಅವನ ಮುಖವನ್ನು ನೋಡಿ ಅವನಿಗೆ ಮನಸ್ಸನ್ನು ಕೊಟ್ಟಳು. ಆಗ ಅವರಿಬ್ಬರು ಆ ರಾತ್ರಿ ಗುಡಿಸಲಿನಲ್ಲಿ ಒಂದುಗೂಡಿದರು. ಮರುದಿನವೂ ಹೀಗೇ ನಡೆಯಿತು. ಮೂರು ದಿನಗಳು ಕಳೆದ ಅನಂತರ ರಾಜ ಮಗಳಿಗೆ ಶಾಸ್ತ್ರ ಮಾಡಿ ಎಲ್ಲರಿಗೂ ಭೋಜನ ವ್ಯವಸ್ಥೆ ಮಾಡಿದನು. ಅಂದು ಎಲ್ಲರೂ ಸಂತೋಷಗೊಂಡರು. ವೀರನು ಔತಣ ಮಾಡಿ ರಾತ್ರಿ ತಂಗಿದನು. ವೀರನಿಗೆ ರಾತ್ರಿ ಹೊತ್ತು ನಿದ್ರೆಯೇ ಬರಲಿಲ್ಲ. ಬೊಮ್ಮಿಯನ್ನು ನೋಡಲು ಬಯಸಿ ಮನೆಯೊಳಗೆ ನುಗ್ಗಿದನು. ವೀರ ಮತ್ತು ಬೊಮ್ಮಿ ಮಾತನಾಡಿ ಮನೆಬಿಟ್ಟು ಹೋಗಲು ನಿರ್ಧರಿಸಿದರು. ಅದರಂತೆ ಬೊಮ್ಮಿ ಬಟ್ಟೆ ಮತ್ತು ಒಡವೆಗಳೊಂದಿಗೆ ತಮ್ಮ ಮನೆ ಮತ್ತು ಊರನ್ನು ಬಿಟ್ಟು ವೀರನ ಜತೆ ಹೋಗಿ ಮದುವೆಯಾದಳು. ರಾಜನು ಅವರಿಬ್ಬರನ್ನು ಹುಡುಕಲು ತನ್ನ ಸೈನ್ಯವನ್ನು ಕಳುಹಿಸುತ್ತಾನೆ. ಆದರೆ ಕೆಲವು ದಿನಗಳು ಕಳೆದ ಮೇಲೆ ಬೊಮ್ಮಣ್ಣನು ಸೈನ್ಯದೊಡನೆ ನಾಶವಾಗುತ್ತಾನೆ. ವೀರನು ತನ್ನ ಮಾವನಿಗೆ ಮಾಡಬೇಕಾದ ಶಾಸ್ತ್ರಗಳನ್ನು ಮಾಡಿ ಮುಗಿಸಿ ತಿರುಚ್ಚಿಯನ್ನು ಆಳುತ್ತಿದ್ದ ವಿಜಯರಂಗ ಚೊಕ್ಕಲಿಂಗಂ ರಾಜರ ಬಳಿ ಕಾವಲುಗಾರನಾಗಿ ಸೇರಿಕೊಂಡನು. ರಾತ್ರಿ ಹೊತ್ತು ಕಾವಲು ಕಾಯುವುದು; ಹೆಣ್ಣುಗಳನ್ನು ಕೆಡಿಸುವುದು, ರಂಗನಾಥನನ್ನು ವಂದಿಸುವುದು, ಬೇಟೆಯಾಡುವುದು ಇವು ವೀರನ ದಿನನಿತ್ಯದ ಕೆಲಸವಾಗಿತ್ತು.

ಆ ನಾಡಿನ ಜ್ಯೋತಿಷ್ಯರಾದ ಕೃಷ್ಣಪ್ಪನಾಯಕ ತಪಸ್ಸು ಮಾಡಿ ಒಂದು ಹೆಣ್ಣು ಮಗಳನ್ನು ಪಡೆದನು. ಅವಳ ಸಂತೋಷದ ಜೀವನಕ್ಕಾಗಿ ಒಂದು ಪ್ರತ್ಯೇಕ ಮಹಡಿಯನ್ನು ಕಟ್ಟಿದನು. ವೀರನು ಅವಳ ಸೌಂದರ್ಯವನ್ನು ನೋಡಿ ಮೋಹಿತನಾದನು. ಇದು ದಿನಕಳೆದಂತೆ ಪ್ರೇಮವಾಗಿ ಅರಳಿತು. ಅವನು ಪ್ರತಿರಾತ್ರಿ ಅವಳೊಂದಿಗೆ ಕೂಡುತಿದ್ದನು. ಈ ವಿಷಯ ತಿಳಿದ ಬೊಮ್ಮಿ ಪರಿತಪಿಸಿದಳು. ವೀರನು ಅವಳನ್ನು ಸಮಾಧಾನಪಡಿಸಿ ಅವಳೊಂದಿಗೆ ಕೂಡಿದನು. ಇಬ್ಬರು ಮಾತುಕತೆಯ ಅನಂತರ ಊಟ ಮಾಡಿದರು.

ಇತ್ತ ಮದುರೈಯಲ್ಲಿ ‘ಕಳ್ಳೂರ್’ ಜನಾಂಗದ ಹಾವಳಿ ಹೆಚ್ಚಾಗಿತ್ತು. ಮದುರೈಯನ್ನು ಆಳುತ್ತಿದ್ದ ತಿರುಮಲೈನಾಯಕರು ಕೊಳ್ಳೆಗಾರರನ್ನು ಹಿಡಿಯಲು ಸಾಧ್ಯವಾಗದೆ, ಅವರುಗಳನ್ನು ಬಂಧಿಸಲು ಸೈನ್ಯ ಬೇಡಿ ತಿರುಚ್ಚಿ ರಾಜನಿಗೆ ಓಲೆ ಕಳುಹಿಸಿದನು. ಆ ಒಲೆಯನ್ನು ನೋಡಿದ ತಿರುಚ್ಚಿರಾಜನು ವೀರನ ನೇತೃತ್ವದಲ್ಲಿ ಒಂದು ಸೈನ್ಯವನ್ನು ಕಳುಹಿಸಿಕೊಟ್ಟನು. ವೀರನು ಕುದುರೆಯ ಮೇಲೆ ಕುಳಿತು, ಬೊಮ್ಮಿ ಪಲ್ಲಕ್ಕಿಯಲ್ಲಿ ಕುಳಿತು ವಾದ್ಯ ಘೋಷಗಳೊಂದಿಗೆ ಮದುರೈ ಪಟ್ಟಣಕ್ಕೆ ಪಯಣ ಬೆಳೆಸಿದರು.

ಕೆಲವು ದಿನಗಳು ಕಳೆದ ಅನಂತರ ವೈಗೈನದಿಯ ದಡದಲ್ಲಿ ಒಂದು ಗುಡಾರವನ್ನು ಹಾಕಿ ನೆಲೆಗೊಂಡರು. ಕೋಟೆಯ ತಳವಾರ ಹೊಸದಾಗಿ ನಿರ್ಮಾಣವಾಗಿರುವ ಗುಡಾರವನ್ನು ನೋಡಿ ರಾಜನಿಗೆ ಸುದ್ದಿ ಮುಟ್ಟಿಸಿದನು. ರಾಜನು ವೀರನ ನೇತೃತ್ವದಲ್ಲಿ ಬಂದಿರುವ ಸೈನ್ಯವನ್ನು ಕಂಡು ಬಹಳ ಸಂತೋಷಗೊಂಡನು. ಮದುರೈನ ರಾಜ ವೀರನಿಗೆ ‘ಕಳ್ಳರ್’ ಜನರ ಬಗ್ಗೆ ಮಾಹಿತಿಯನ್ನು ಕೊಟ್ಟನು. ಇದನ್ನು ಕೇಳಿದ ವೀರನು ನಾನು ವಿಜಯದಿಂದ ತಿರುಗಿ ಬರುತ್ತೇನೆ ಎಂದು ಶಪಥ ಮಾಡಿ ಹೋದನು. ಯುದ್ಧದಲ್ಲಿ ‘ಕಳ್ಳರ್‌’ನ್ನು ಸೋಲಿಸಿ ಜಯಗಳಿಸುತ್ತಾನೆ. ಯುದ್ಧವೆಲ್ಲ ಮುಗಿದ ಮೇಲೆ ರಾಜನಿಗೆ ಒಬ್ಬ ದೂತನ ಮೂಲಕ ಸುದ್ದಿ ರವಾನಿಸಿದನು. ರಾಜನು ಅತಿ ಸಂಭ್ರಮಗೊಂಡು ಮೇಳದ ವಾದ್ಯ ಘೋಷಗಳೊಂದಿಗೆ ಆರತಿ ಎತ್ತಿ ವೀರನನ್ನು ಬರಮಾಡಿಕೊಳ್ಳುತ್ತಾನೆ. ಆ ಜನಸಂದಣಿಯಲ್ಲಿ ಗೋಚರವಾದ ‘ವೆಳ್ಳೈಯಮ್ಮಾಳ್‌’ನ ಸೌಂದರ್ಯವನ್ನು ಕಂಡು ಪರವಶನಾದನು. ರಾಜನ ಅತಿಥಿ ಸತ್ಕಾರವನ್ನು ಸ್ವೀಕರಿಸಿ ಬಿರುದು ಬಹುಮಾನಗಳನ್ನು ಪಡೆದುಕೊಂಡು ಮನೆಗೆ ಹೋಗುತ್ತಾನೆ. ಅಂದಿನ ರಾತ್ರಿ ವೀರನಿಗೆ ನಿದ್ರೆ ಬಾರದೆ ಪರತಪಿಸುತ್ತಿದ್ದೆ. ಇದಕ್ಕೆ ಕಾರಣ ವೆಳ್ಳೈಯಮ್ಮಾಳ ಸೌಂದರ್ಯ. ಅವಳನ್ನು ನೋಡಬೇಕು ಮತ್ತು ಕೂಡಬೇಕು ಎಂದು ಭಾವಿಸಿಕೊಂಡು ರಾತ್ರೋರಾತ್ರಿ ವೆಳ್ಳೈಯಮ್ಮಾಳ್ ಅರಮನೆಗೆ ವೀರನು ಕೋಟೆಯ ಗೋಡೆಯನ್ನು ದಾಟಿ ಬರುತ್ತಾನೆ. ಅವಳನ್ನು ಬಿಗಿದಪ್ಪಿ, ಬಾಯನ್ನು ಮುಚ್ಚಿ ಹೆಗಲ ಮೆಲೆ ಹೊತ್ತುಕೊಂಡು ಕೋಟೆಯಿಂದ ಹೊರಕ್ಕೆ ನೆಗೆಯುತ್ತಾನೆ. ಇದನ್ನು ಕಾವಲುಗಾರರು ನೋಡಿ ವೀರನನ್ನು ಕಳ್ಳನೇ ಇರಬಹುದೆಂದು ಹಿಡಿದು ರಾಜನಿಗೆ ಸುದ್ದಿ ಕಳುಹಿಸುತ್ತಾರೆ. ಈ ವಿಚಾರ ಅರಿತ ರಾಜ ಆತನ ಕೈಕಾಲು ತೆಗೆಯುವಂತೆ ಆಜ್ಞೆ ಹೊರಡಿಸುತ್ತಾನೆ. ಕಾವಲುಗಾರರು ಅಂತೆಯೇ ಮಾಡುತ್ತಾರೆ. ವೀರನು ತನ್ನ ದುರ್ವಿಧಿಯನ್ನು ನೆನೆದು ದುಃಖಿಸುತ್ತಾನೆ.

ಈ ವಿಚಾರ ಬೊಮ್ಮಿಯ ಕಿವಿಗೆ ಬೀಳುತ್ತದೆ. ಬೊಮ್ಮಿ ರಾಜನಿಗೆ ನಿಜಸಂಗತಿಯನ್ನು ಮುಟ್ಟಿಸುತ್ತಾಳೆ. ಇದನ್ನು ಕೇಳಿದ ತಿಳಿದ ರಾಜ ವೀರನತ್ತ ಓಡೋಡಿ ಬಂದು ತನ್ನ ಮಗಳಾದ ವೆಳ್ಳೈಯಮ್ಮಾಳನ್ನು ಕೇಳಿದರೆ ಕೊಟ್ಟು ವಿವಾಹ ಮಾಡುತ್ತಿದ್ದೆ ಎಂದರು. ಆದರೆ ಈ ರೀತಿ ಮಾಡಬಾರದಾಗಿತ್ತು ಎಂದು ಹೇಳಿ ಚಿಂತಿಸುತ್ತಾನೆ. ಈ ಅವಮಾನವನ್ನು ತಾಳಲಾರದೆ ವೀರನು ತನ್ನ ಕುಲದೇವರನ್ನು ಪೂಜಿಸಿ ತನ್ನ ಕತ್ತನ್ನು ತಾನೇ ಚೂರಿಯಿಂದ ಕುಯ್ದುಕೊಂಡು ಮೀನಾಕ್ಷಿ ತಾಯಿಯ ಪಾದಕಮಲಕ್ಕೆ ಬೀಳುವಂತೆ ಮಾಡಿದನು. ಈ ದೃಶ್ಯವನ್ನು ಕಣ್ಣಾರೆ ಕಂಡ ಜನ ಭಯಭೀತಿಗೊಳಗಾದರು.

ಮೂರು ದಿನಗಳು ಕಳೆದ ಮೇಲೆ ವೀರನು ರಾಜನ ಕನಸ್ಸಿನಲ್ಲಿ ಬಂದು ಭಯಪಡಿಸಿದನು. ಮರುದಿನ ಕುದುರೆಗಳು, ಆಡುಗಳು, ದನಕರುಗಳು ಸತ್ತು ಹೋದವು. ರಾಜ ಮೀನಾಕ್ಷಿ ಅಮ್ಮನವರ ಹತ್ತಿರ ಹೋಗಿ ಬೇಡಿಕೊಂಡನು. ಕನಸ್ಸಿನಲ್ಲಿ ಮೀನಾಕ್ಷಿ ಅಮ್ಮ ಬಂದು ವೀರನಿಗೆ ಮೂರ್ತಿ ಇಟ್ಟು ಪೂಜಿಸಲು ಹೇಳಿದಳು. ಅಂತೆಯೇ ರಾಜನ ಅವನ ಹೆಸರಿನಲ್ಲಿ ನಗರದ ಬೀದಿ ಬೀದಿಗಳಲ್ಲಿ ಮೂರ್ತಿಯನ್ನಿಟ್ಟು ಪೂಜಿಸಲು ಆಜ್ಞೆ ಹೊರಡಿಸಿದನು. ಜನರು ವೀರನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬೆಲ್ಲದ ಅನ್ನವಿಟ್ಟು ಪೂಜಿಸಿದನು.

ಕೋಟೆ ಜ್ಯೋತಿಷ್ಕ ಕುಮಾರ ಮುತ್ತುವಿನ ಮೇಲೆ ವೀರನು ಕೋಪಗೊಂಡನು. ತನ್ನ ಹೆಸರಿನಲ್ಲಿ ವಿಭೂತಿಕೊಟ್ಟರೆ ಕಷ್ಟಪರಿಹಾರವಾಗುವುದೆಂದು ಕನಸ್ಸಿನಲ್ಲಿ ಬಂದು ಹೇಳಿದನು. ಆ ರೀತಿಯೇ ಮಾಡಿ ಪೂಜಿಸಿದರು. ಕುಮಾರ ಮುತ್ತು ನಿರ್ನಾಮವಾದ ತನ್ನ ಸೈನ್ಯಕ್ಕೆ ಮತ್ತೆ ಜೀವ ಕೊಟ್ಟರೆ ಕಂಚಿನ ಪ್ರತಿಮೆಯಿಟ್ಟು ಪೂಜಿಸುವೆನೆಂದೂ ಮಗು ಹುಟ್ಟಿದರೆ ವೀರನೆಂದು ಹೆಸರಿಡುವೆನೆಂದೂ ಬೇಡಿಕೊಂಡನು. ಇದಾದನಂತರ ೫೦೦ ಗಾಡಿಗಳಲ್ಲಿ ಸಕ್ಕರೆ ತಂದು ದಾನಧರ್ಮಗಳನ್ನು ಮಾಡಿದನು. ತನ್ನನ್ನು ತನ್ನ ನಾಡನ್ನು ಕಾಪಾಡಬೇಕೆಂದು ವೀರನ್ನು ಬೇಡಿಕೊಂಡನು.

ಮದುರೈವೀರನ ದೇಗುಲವಿರುವ ಊರುಗಳು ಮತ್ತು ಪೂಜಿಸುವವರು: ಮದುರೈ ವೀರನನ್ನು ಹಲವು ಜಿಲ್ಲೆಗಳಲ್ಲಿ ಹಲವು ಸಮುದಾಯದವರು ಪೂಜಿಸುವರು. ಮದುರೈಯಲ್ಲಿ ವೇಳಾಳರ್, ಪಿಳ್ಳೈಯಾರ್, ಕಳ್ಳರ್, ಮರವರ್, ಅಗಮುಡೈಯಾರ್, ಅಂಬಲಕ್ಕಾರರ್, ಎಡಪಂಥೀಯರು, ಸೌರಾಷ್ಟ್ರಿಕರ್‌, ಅಂಬಟ್ಟೈಯಾರ್, ವಣ್ಣಾರ್ ಮೊದಲಾದವರು ಮತ್ತು ಅದರ ಒಳಪಂಗಡಕ್ಕೆ ಸೇರಿದವರು ಪೂಜಿಸಿಕೊಂಡು ಬರುತ್ತಿದ್ದಾರೆ. ದಿಂಡಿಕಲ್ಲಿನಲ್ಲಿ ವೇಳಾಳರ್, ಕ್ರೈಸ್ತ ಬಲಪಂಥೀಯರು, ಆಚಾರರು, ದಿಳ್ಳರ್‌, ನಾಡಾರ್, ವಡುಗರ್ ಮೊದಲಾದವರು, ತಿರುಚ್ಚಿಯಲ್ಲಿ ವೇಳಾಳರ್, ಕುಲಾಳರ್, ನಾಯ್ಡು ಮೊದಲಾದವರು, ಕೋವೈಯಲ್ಲಿ ಕೌಂಡರ್, ಮೊದಲಿಯಾರ್, ಅಗಮುಡೈಯಾರ್, ಶೆಟ್ಟರು ಮೊದಲಾದವರು ಪೂಜಿಸಿಕೊಂಡು ಬರುತ್ತಿದ್ದಾರೆ.

ಮದುರೈವೀರನ ರೂಪಗಳು ಮತ್ತು ಆಯುಧಗಳು : ಜನರು ಮದುರೈವೀರನ ಭಾವಚಿತ್ರವನ್ನು ತಮ್ಮ ಮನೆಗಳಲ್ಲಿಟ್ಟು ವೀರಕಲ್ಲುಗಳನ್ನಿಟ್ಟು ಪೂಜಿಸುತ್ತಾ ಬರುತ್ತಿದ್ದಾರೆ. ಕೆಲವು ಸ್ಥಳಗಳಲ್ಲಿ ಮೂರು ಕಲ್ಲುಗಳು, ತೊಲೆಗಳು, ಪುಣ್ಯಮರಗಳು, ನುಣ್ಣನೆಯ ಕಲ್ಲುಗಳು, ಮಣ್ಣಿನ ರೂಪಗಳು, ಶಿಲ್ಪಗಳನ್ನು ರಚಿಸಲಾಗಿದೆ. ಜಾತ್ರೆಯ ಸಮಯಗಳಲ್ಲಿ ಕತ್ತೆಯ ಮೇಲೆ ಹಳೆಯ ಮಣ್ಣಿನ ಮೂರ್ತಿಗಳನ್ನು ಎತ್ತಿಕೊಂಡು ಹೋಗಿ ನದಿಯಲ್ಲಿ ಬಿಟ್ಟು, ಹೊಸ ಮಣ್ಣಿನ ಪ್ರತಿಮೆಗಳನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಾರೆ. ಪೂಜೆಯಲ್ಲಿ ಕುಡುಗೋಲು, ತ್ರಿಶೂಲ, ಈಟಿ, ಶೂಲಾಯುಧ ಮೊದಲಾದ ವೀರತನವನ್ನು ಹೇಳುವ ಆಯುಧಗಳನ್ನು ಇಡುತ್ತಾರೆ.

ಮದುರೈವೀರನ ವೇಷಭೂಷಣಗಳು : ಮದುರೈವೀರನಿಗೆ ಕಚ್ಚೆ ಪಂಚೆ, ನಡುವಿಗೆ ನಡುಪಟ್ಟಿಯನ್ನು ಕಟ್ಟಿರುತ್ತಾರೆ. ಇವನ ರೂಪ ರಾಜನ ಕಾಲವನ್ನು ನೆನಪಿಸುವಂತಿದೆ. ತಲೆಯಲ್ಲಿ ಕಿರೀಟವೂ, ತೋಳಿನಲ್ಲಿ ತೋಳಬಂದಿಯೂ ಕಾಲಿನಲ್ಲಿ ಕಾಲ್ಗಡಗವೂ ಕತ್ತಿನಲ್ಲಿ ಹುಲಿಹಲ್ಲಿನ ಸರ ಇತ್ಯಾದಿಗಳು ವೀರತನವನ್ನು ತೋರಿಸುವ ರೀತಿಯಲ್ಲಿ ಆಭರಣಗಳನ್ನು ಧರಿಸಿರುತ್ತಾರೆ.

ಮದುರೈವೀರನ ಪರಿವಾರ ದೇವರಗಳು : ಇವನ ಪರಿವಾರ ದೇವರಾಗಿ ಹೆಂಡತಿಯರಾದ ಬೊಮ್ಮಿ ಮತ್ತು ವೆಳ್ಳೈಯಮ್ಮಾಳ್ ಇರುತ್ತಾರೆ. ಅವನು ಬೇಟೆಗಾರನೆಂಬುದನ್ನು ತೋರಿಸಲು ಕುದುರೆ ಮೇಲೆ ಕುಳಿತು ಯುದ್ಧಕ್ಕೆ ಹೋಗುವ ಮೂರ್ತಿಗಳಿವೆ. ಜೊತೆಗೆ ವೀರನ ಪಕ್ಕದಲ್ಲಿ ನಾಯಿಯ ಮೂರ್ತಿಯೊಂದು ಇರುತ್ತದೆ.

ಮದುರೈವೀರನ ಪೂಜಾವಿಧಾನಗಳು ಮತ್ತು ಆಚರಣೆಗಳು : ಇವನನ್ನು ಹಲವು ಬಗೆಗಳಿಂದ ಪೂಜಿಸುತ್ತಾರೆ. ಉಪವಾಸ, ಕರಗ ಎತ್ತುವುದು, ಪೊಂಗಲ್ ನೈವೇದ್ಯ ಮಾಡುವುದು, ಬಾಯಿಬೀಗದ ಪೂಜೆ ಮೊದಲಾದವುಗಳಿಂದ ವೀರನನ್ನು ಪೂಜಿಸುತ್ತಾರೆ.

ಜನರು ತಮ್ಮ ಬೇಡಿಕೆಯನ್ನು ನೆರವೇರಿಸಲು, ಕೊರತೆಗಳನ್ನು ನೀಗಿಸಲು, ನೋವುಗಳನ್ನು ಕಳೆಯಲು ವೀರನಿಗೆ ಹಲವು ಆಚರಣೆಗಳನ್ನು ಮಾಡುತ್ತಾರೆ. ಕೋಳಿ, ಕೋಣ, ಹಂದಿಗಳನ್ನು ಬಲಿ ಕೊಡುವುದು, ತಲೆ ಬೋಳಿಸುವುದು, ಕಿವಿ ಚುಚ್ಚುವುದು, ಮದುವೆ ಮಾಡುವುದು – ಈ ಮೊದಲಾದ ನಂಬಿಕೆಗೆ ಸೇರಿದ ಆಚರಣೆಗಳನ್ನು ಮಾಡುತ್ತಾರೆ.

ಪ್ರದರ್ಶಕ ಕಲೆಗಳು : ಮದುರೈವೀರನ ದೇವಸ್ಥಾನದಲ್ಲಿ ಜನಪದ ಕಲೆಯಾದ ವಿಲ್ಲುಪ್ಪಾಟ್ಟುನಾಡಗಂ (ಬಿಲ್ಲುಹಾಡಿನ ನಾಟಕ), ಕದಂಬ ನಿಗಲ್‌ವು, ಕರಗಾಟ ಮೊದಲಾದ ಪ್ರದರ್ಶನಳ ಮೂಲಕ ಮದುರೈವೀರನನ್ನು ನೆನಪಿಸುವ ರೀತಿಯಲ್ಲಿ ಕತೆ, ಹಾಡುಗಳನ್ನು ಹೇಳಲಾಗುತ್ತದೆ.

ಮದುರೈವೀರ ರಾಜನ ಮಗನಾಗಿ ಹುಟ್ಟಿದುದರಿಂದ ಮತ್ತು ದಲಿತರಿಂದ ಬೆಳೆದುದರಿಂದ ಮೇಲ್ವರ್ಗ ಮತ್ತು ಕೆಳವರ್ಗದ ಜನರು ಪೂಜಿಸುತ್ತಾರೆ. ಅದೇ ರೀತಿ ಬಹುಜನರ ದೇವರಾಗಿಯೂ, ನಾಡಿನ ನರದೇವರಾಗಿಯೂ ಇದ್ದಾನೆ. ವೀರನಿಗೆ ಹಲವು ದೇವಾಲಯಗಳು ನಿರ್ಮಾಣಗೊಂಡಿರುವುದನ್ನು ಕಾಣಬಹುದು. ಕೆಳವರ್ಗದ ಜನರಿಂದ ಬೆಳೆದುದರಿಂದ ಕಾಮಾವೇಶವುಳ್ಳವನಾಗಿಯೂ, ಮಾಂಸ ತಿನುವವನಾಗಿಯೂ ಚಿತ್ರಿಸಿದ್ದಾರೆ. ಈ ದೇವರು ರಾಜರ ಆಳ್ವಿಕೆ ಕಾಲದಲ್ಲಿ ಕೋಶ ಬಂದುದರಿಂದ ಎಲ್ಲ ಜನರು ಪೂಜಿಸುವುದರಿಂದ ನಾಡಿನ ಜನಾಂಗದ ದೇವರಾಯಿತು.

ಕೆ.ಆರ್.ಡಿ. ಅನುವಾದ ಆರ್.ಎಸ್.

 

ಮನ್ನನ್ ಕೇರಳದ ಐವತ್ತನಾಲ್ಕು ಗುಡ್ಡಗಾಡು ಜನವರ್ಗಗಳಲ್ಲಿ ಮನ್ನನ್‌ರಿಗೆ ವಿಶೇಷ ಸ್ಥಾನವಿದೆ. ಏಕೆಂದರೆ ಅವರು ಒಬ್ಬ ಅರಸನಿಂದ (ರಾಜಮನ್ನನ್) ಆಳಲ್ಪಡುತ್ತಾರೆ. ಸುಮಾರು ಇಪ್ಪತ್ತೆರಡು ವಾಸಸ್ಥಳಗಳಲ್ಲಿ ಹಂಚಿಹೋಗಿರುವ ಮನ್ನನರು ಸು. ಮೂರು ಸಾವಿರದಷ್ಟು ಜನರಿದ್ದಾರೆ. ಮೂಲತಃ ಅವರು ಮಧುರೈಯ ಪಾಂಡ್ಯ ಅರಸರ ಆಶ್ರಿತರೆನ್ನಲಾಗಿದೆ. ಮುಸಲ್ಮಾನರ ಆಕ್ರಮಣದಿಂದ ಪಾಂಡ್ಯರಾಜ್ಯವು ನೆಲಸಮವಾದಾಗ ಚೇರರಾಜ್ಯದ ಗುಡ್ಡಗಾಡುಗಳಿಗೆ ಇವರಲ್ಲಿಕೆಲವರು ವಲಸೆ ಹೋಗಿ ನೆರಿಯ ಮಂಗಲ, ಮನ್ನನ್ ಕಂಡ (ಕುಮಳಿ), ಉಡುಂಬಲ್ ಸೋಲ ಮತ್ತು ಕೋಗಿಮಲೈಗಳಲ್ಲಿ ನೆಲಸಿದರು.

ರಾಜಮನ್ನನನ್ನು ತನ್ನ ಪ್ರತಿನಿಧಿಯಾಗಿ ಗುಡ್ಡಗಾಡುಗಳನ್ನು ಆಳಲು ಪೂಂಜಾರ್ ರಾಜ ನೇಮಿಸಿದ. ಅವರು ಅಳಿಯಕಟ್ಟನ್ನು ಅನುಸರಿಸುತ್ತಾರೆ. ಅವರಲ್ಲಿ ಎರಡು ಮುಖ್ಯ ವಿಭಾಗಗಳಿವೆ – ಅರವಕುಡಿ ಮತ್ತು ಪನ್ನಿಕುಡಿ. ಇದು ಏಳು ವಿಭಾಗಗಳು ಒಂದಾದ ದೊಡ್ಡದೊಂದು ವಿಭಾಗವೆಂದು ಸಂಶೋಧಕರು ಅಭಿಪ್ರಾಯಪಡುತ್ತಾರೆ. ಅಯಿಲುಲವನ್ ಮತ್ತು ಗೌಂಡರ್ ಕೂಟಂಗಳಿಗೆ ಅವುಗಳಲ್ಲಿ ಉನ್ನತ ಸ್ಥಾನವಿದೆ. ಪಿಲಾತಿ, ತನ್ನ ಪತಿ, ಪೆರಿಯ ಕುಡಿಯನವನ್, ಇಳಂತಿಯಾರ್, ತಂಡಕ್ಕಾರನ್ ಮುಂತಾದುವು ಕುಡಿ, ಕನ್ನಿಕ್ಕಾರನ್‌ಗಳ ಮುಖ್ಯಸ್ಥನ ಕೈಕೆಳಗಿನ ಸ್ಥಾನಮಾನಗಳು. ಎಲ್ಲ ಕುಡಿಗಳು ರಾಜಮನ್ನನ್‌ನಿಂದ ಆಳಲ್ಪಡುತ್ತಾರೆ. ತಮಿಳುನಾಡಿನ ಮರವನ್ನರ ಹಾಗೆ ಇವರ ಸ್ತ್ರೀ ಪುರುಷ ವಸ್ತ್ರಧಾರಣೆ ಮಾಡುತ್ತಾರೆ. ಮನ್ನನ್‌ರ ಗುಡಿಸಲು ಬಿದಿರು,ಕಾಡುಹುಲ್ಲು ಮತ್ತು ಕಾಡು ಎಲೆಗಳಿಂದ ನಿರ್ಮಿತವಾಗಿ ಉದ್ದನೆಯ ಹುಲ್ಲುಗಳ (ಪೊದಿಯಪುಲ್) ಮಾಡನ್ನು ಒಳಗೊಂಡಿರುತ್ತವೆ.

ಕನ್ನಿಕಾರನನ ಗುಡಿಸಲ ಸಮೀಪವೇ ಎಲ್ಲ ಅಧಿಕೃತ ಕಾರ್ಯಕ್ರಮಗಳು ಮತ್ತು ಹಬ್ಬಗಳು ಆಚರಿಸಲ್ಪಡುತ್ತವೆ. ಮುಟ್ಟು ಮತ್ತು ಬಾಣಂತನದ ಹೊಲೆಗಳು ಅಷ್ಟೊಂದು ಕಟ್ಟುನಿಟ್ಟಾಗಿಲ್ಲ. ಮಗು ಹುಟ್ಟಿದ ಒಂದು ವರ್ಷದ ಬಳಿಕ ಕುಟುಂಬದ ಅತ್ಯಂತ ಹಿರಿಯ ಸದಸ್ಯನು ಮಗುವಿಗೆ ಒಂದು ಕಂಠಪದಕವನ್ನು ತೊಡಿಸಿ ಹೆಸರಿಡುತ್ತಾನೆ. ಹೆಸರು ಹಿರಿಯರ ಹೆಸರಿನ ಸಂಬಂಧ ಉಳ್ಳದ್ದು ಅಥವಾ ಪ್ರಕೃತಿ ಸಂಬಂಧಿ ಆಗಿರುತ್ತದೆ (ಉದಾ: ಸೂರ್ಯ, ಚಂದ್ರ ಇತ್ಯಾದಿ). ಮನ್ನನರು ಸತ್ತವರನ್ನು ಅವರವರ ಆಭರಣಗಳೊಂದಿಗೆ ಹೂಳುತ್ತಾರೆ. ಬಿದಿರು ಮತ್ತು ಕಾಡು ಹುಲ್ಲುಗಳಿಂದ ಚಟ್ಟವನ್ನು ನಿರ್ಮಿಸುತ್ತಾರೆ. ಶವಗುಳಿಯನ್ನು ಮುಚ್ಚುವ ಮುನ್ನ ಶವದ ಬಾಯಿಗೆ ಅಕ್ಕಿ ಹಾಕುತ್ತಾರೆ. ಸತ್ತವ್ಯಕ್ತಿಯ ಗೋರಿಯ ಮೇಲೆ ಒಂದು ಮಾಡನ್ನು ನಿರ್ಮಿಸಲಾಗುತ್ತದೆ. ಸಾವಿನ ಏಳನೆಯ ದಿನ ಶ್ಮಶಾನದಲ್ಲಿ ಆಹಾರ, ಸೇಂದಿ, ಒಂದು ಬೊಗಸೆ ನೀರು – ಇಷ್ಟನ್ನು ಇಡಲಾಗುತ್ತದೆ. ಒಂದು ವರ್ಷ ಕಳೆದ ಬಳಿಕ ಆಹಾರ ಮತ್ತು ನೀರಿನ ಬಲಿಯನ್ನು ಸತ್ತವ್ಯಕ್ತಿಗೆ ಕೊಡಲಾಗುತ್ತದೆ. ಮನ್ನನರು ತಮಿಳು, ಮಲಯಾಳ ಮತ್ತು ಅವರದೇ ಆದ ಭಾಷೆಯನ್ನು ಮಾತನಾಡುತ್ತಾರೆ (ಇದು ತಮಿಳಿಗೆ ಸಮೀಪವಾದ ಭಾಷೆ). ಚೆಂದಮಿಳು ಮತ್ತು ತೆಲುಗುಗಳ ಪದಗಳು ಇವರ ಭಾಷೆಯಲ್ಲಿವೆ.

ಮದುವೆಯಲ್ಲಿ ತಾಳಿಕಟ್ಟುವುದು ಮುಖ್ಯ ಅಂಗ. ಗಂಡ ಸತ್ತಾಗ ತಾಳಿಯನ್ನು ತೆಗೆಯಲಾಗುತ್ತದೆ. ಗಂಡು ಹೆಣ್ಣು ಮರುಮದುವೆಯಾಗಬಹುದು. ತನ್ನ ಸೋದರ ಮಾವನ ಮಗಳನ್ನು ಮನ್ನನ್ ಹುಡುಗ ಆಯ್ಕೆ ಮಾಡಿಕೊಳ್ಳುತ್ತಾನೆ. ಮದುವೆಯು ವರನ ಸೇವೆ ಅಥವಾ ಆನೆಯ ಮೂಲಕ ನಡೆಯುತ್ತದೆ. ಮನ್ನನರು ಮದುರೈ ಮೀನಾಕ್ಷಿ, ಶಬರಿಮಲೆ ಅಯ್ಯಪ್ಪ ಮತ್ತು ಮನ್ನನ್ ಪರಂಪರೆಯ ವನದೇವತೆಗಳನ್ನು ಆರಾಧಿಸುತ್ತಾರೆ.

ಆಹಾರದಲ್ಲಿ ಹಸುವಿನ ಮಾಂಸವು ಇವರಿಗೆ ನಿಷಿದ್ಧ. ಅವರು ರಾಗಿ, ತರತರದ ಅಕ್ಕಿ, ಗೆಡ್ಡೆಗೆಣಸುಗಳನ್ನು ಉಪಯೋಗಿಸುತ್ತಾರೆ. ಜೇನು, ಕೋಲುಮೆಣ, ಲವಂಗ ಪಟ್ಟೆ ಮುಂತಾದುವನ್ನು ಕಾಡಿನಿಂದ ಸಂಗ್ರಹಿಸುತ್ತಾರೆ. ಆಹಾರ ಪದಾರ್ಥಗಳಿಗೆ ಪ್ರತಿಯಾಗಿ ಇವನ್ನು ಪಟ್ಟಣಿಗರಿಗೆ ಕೊಡುತ್ತಾರೆ. ಮನ್ನನ್ ಜನಸಂಖ್ಯೆ ಇಳಿಮುಖವಾಗಿದೆ. ಅವರಿಗಾಗಿ ಸರಕಾರವು ಮನೆಗಳನ್ನು ಕಟ್ಟಿಕೊಡುತ್ತಿದೆ. ಆದರೆ ಅವರು ಅದರಲ್ಲಿ ವಾಸಿಸಲು ಇಷ್ಟಪಡುವುದಿಲ್ಲ. ಅವರ ಲೋಕದೃಷ್ಟಿ ಅಂಥದು.

ಮನ್ನನ್ ಕಂಡಂನ ಮನ್ನನರು ಮೀನುಗಾರಿಕೆ ಮತ್ತು ಬೇಟೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಬಿಲ್ಲು ಬಾಣಗಳು ಮತ್ತು ಬಲೆಗಳನ್ನುಪಯೋಗಿಸಿ ಅವರು ಹಕ್ಕಿಗಳನ್ನು ಬೇಟೆಯಾಡುತ್ತಾರೆ. ಅವರ ಗುಡಿಸಲುಗಳು ಚಿಕ್ಕವಾಗಿದ್ದು ಅಚ್ಚು ಕಟ್ಟಾಗಿವೆ. ತಮ್ಮ ಹಬ್ಬದ ದಿನಗಳಲ್ಲಿ (ತಾಯಿ ಮಾಸಂ) ಅವರು ‘ಕೂತ್ತು’ ಆಡುತ್ತಾರೆ. ಇನ್ನಷ್ಟು ಪರಿಷ್ಕೃತವಾದ ಇವರ ಕೂತ್ತು – ‘ಕೋವಿಲಗಂ ಚರಿತಿರಂ’. ಇದರಲ್ಲಿ ಕೋವಲನ್ ಕಾದಿಯರದೇ ಮುಖ್ಯ ಕಥಾವಸ್ತು. ಇಬ್ಬರು ಗಾಯಕರು ಹಾಡಿನ ಸಾಲುಗಳನ್ನು ಮತ್ತು ವೃತ್ತವನ್ನು ತಮಿಳು ನಾಡಿನ ವಿಲ್ಲುಪಾಟ್ಟಿನಂತೆ (ಬಿಲ್ಲುಹಾಡು) ಹಾಡುತ್ತಾರೆ. ಅವರು ಕೂತ್ತನ್ನು ಒಂದು ಸಂಜೆಯಿಂದ ಮರುದಿನ ಮುಂಜಾನೆಯ ತನಕ ಪ್ರದರ್ಶಿಸುತ್ತಾರೆ. ಕೂತ್ತುಕಳದ (ಕುಣಿತದ ಮಂಚ) ಸುತ್ತ ಕಾಡುಮರಗಳಿಂದ ಅವರು ದೊಡ್ಡ ಬೆಂಕಿಯನ್ನು ಉರಿಸುತ್ತಾರೆ. ಮನ್ನನ್, ಮುದುವನ್, ಊರಾಳಿ, ಪಳಿಯನ್ ಮತ್ತು ಕಾಣಿ ಜಾತಿಯವರು ಕನಕಿ ಕಾದಿಯ (ಕಣ್ಣಕಿ ಕಥೆ)ವನ್ನು ಕೂತ್ತು ಮಾಧ್ಯಮದಲ್ಲಿ ಪ್ರದರ್ಶಿಸುತ್ತಾರೆ. ಇದು ಪಾಂಡ್ಯನಾಡಿನೊಂದಿಗೆ ಅವರಿಗಿದ್ದ ಸಂಬಂಧವನ್ನು ಸಾರುತ್ತದೆ. ಕೋವಲನ್ ಕಣ್ಣಗಿಯರ ಸಾವಿನೊಂದಿಗೆ ಮುಕ್ತಾಯವಾಗುವ ಕೋವಲನ್ ಚರಿತಿರಂನಲ್ಲಿ ಕೊನೆಗೆ ಕೋವಲನ ದೇಹವನ್ನು ಚಿತೆಯಲ್ಲಿರಿಸಿದಾಗ ಮಾಧವಿಯು ಅದರ ಮೇಲೆ ಹಾರಿ ತನ್ನ ಪ್ರಾಣವನ್ನು ಕಳೆದುಕೊಳ್ಳುತ್ತಾಳೆ. ಕೆಲವು ರೋಗಗಳನ್ನು ಗುಣಪಡಿಸಲು ಮನ್ನನ್‌ರಿಗೆ ಅವರದೇ ಆದ ಔಷಧಗಳಿವೆ. ಕಾಡುಪ್ರಾಣಿಗಳಿಂದ ತಮ್ಮ ಪ್ರಾಣವನ್ನೂ ಬೆಳೆಗಳನ್ನೂ ಕಾಪಾಡಲು ಅವರಲ್ಲಿ ಮಂತ್ರವಾದವೂ ಬಳಕೆಯಲ್ಲಿದೆ. (ಪುಲಿಕೆಟ್ಟು ಮಂದಿರಂ, ಆನೆಕಟ್ಟು ಮಂದಿರಂ – ಮಂದಿರಂ = ಮಂತ್ರ). ಗೌರವಾರ್ಥವಾಗಿಯೂ ಹೊತ್ತು ಹೋಗುವುದಕ್ಕಾಗಿಯೂ ಅವರ ‘ಕಾಂಜ ಚಂದೈ’ಯನ್ನು ಏರ್ಪಡಿಸುತ್ತಾರೆ (ಕಾಂಜ ಚಂದೈ = ಗಾಂಜ ಸಂತೆ). ಇಬ್ಬರು ಮುದುಕರು ಗಾಂಜದ ಎಲೆಗಳನ್ನು ಹಿಡಿದುಕೊಂಡು ಮೌಖಿಕವಾಗಿ ತುಂಬ ಗೌರವಯುತವಾಗಿ ತಮ್ಮ ಹಿರಿಯನ ವಿಷಯವಾಗಿ ಜಗಳಾಡುತ್ತಾರೆ. ಬಾಲವಾಡಿಯಲ್ಲಿ ಕಲಿಯುತ್ತಿರುವ ಮನ್ಸನ್‌ರ ಮಕ್ಕಳು ನಿಧಾನವಾಗಿ ಶಾಲೆ ಬಿಟ್ಟು ಬಿಡುತ್ತಿದ್ದಾರೆ. ಪ್ರೌಢಶಾಲಾ ಶಿಕ್ಷಣವನ್ನು ಪಡೆಯುವ ಮನ್ನನ್ ಬಾಲಕರನ್ನು ಕಾಣುವುದು ಬಹಳ ಅಪೂರ್ವ.

ಪಿ.ಎನ್. ಅನುವಾದ ಕೆ.ಕೆ.

 

ಮನ್ನಾನ್‌ಕೂತ್ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ವಾಸವಾಗಿರುವ ಮನ್ನಾನ್ ಬುಡಕಟ್ಟು ಸಮುದಾಯದ ಕಲಾರೂಪ. ಕೇರಳದ ಉಡುಂಬನ್‌ಚೋಲ ತಾಲೂಕಿನ ಅಂಜುರುಳಿ, ವಲಿಯಕಂಡ, ವಲಿಯನೋವಾಳ, ಅಂಬಲಕವಲ, ನಾಂಗುತೊಟ್ಟಿ, ತಿಂಗಳ್‌ಕಾಡ್, ತವರಿ, ಮಾಂಗುತ್ತಿ, ತೂವಲ್‌ಮಾವಡಿ, ಪಾರತೋಡು, ತೊಡುಪುಳ ತಾಲೂಕಿನ ತೋಪ್ರಾಂಕುಡಿ, ವಾತ್ತಿಕುಡಿ, ಪದಿನಾರಾಂಕಂಡಂ, ಪೆರುಂಗಾಲ, ಮಣಿಯಾರನ್ ಕುಡಿ ಮಳುವಡಿ, ವಟ್ಟಮೇಡ, ಕಂಞೆಕುಳಿ, ಪೀರು ಮೇಡ ತಾಲೂಕಿನ ಕುಮಳಿ, ದೇವೀಕುಳಂ ತಾಲುಕಿನ ಪೆಟ್ಟಿಮುಡಿ, ತಲಮಾಲಿ, ಕೋಟ ಪಾರ, ಆನಚಾಲ್, ಚಾಟುಪಾಠ, ನೆಲ್ಲಿಪಾರ, ಮಚ್ಚಿಪ್ಲಾವ್, ಕೊಡಕಲ್ಲು, ತುಂಬಿಪಾರ, ಕಪ್ಪಾಯಂ, ವೆಲಿಯಪಾರ ಮೊದಲಾದ ಪ್ರದೇಶಗಳಲ್ಲಿ ಮನ್ನಾನ್ ಸಮುದಾಯದವರು ವಾಸವಾಗಿದ್ದಾರೆ.

33_70A_DBJK-KUH

ತಮ್ಮದೇ ಆದ ಜೀವನಶೈಲಿ, ಆಚಾರವಿಚಾರ, ನಂಬಿಕೆ, ಧಾರ್ಮಿಕ ಆಚರಣೆಗಳನ್ನು ರೂಢಿಸಿಕೊಂಡಿರುವ ಮನ್ನಾನ್ ಸಮುದಾಯದ ಧಾರ್ಮಿಕ ರಂಗಕಲೆಯಾಗಿದೆ ಮನ್ನಾನ್ ಕೂತ್‌. ಇವರ ಬದುಕು ಹಾಗೂ ಕೃಷಿ ವೃತ್ತಿಯನ್ನು ಈ ಕಲೆಯು ಆಳವಾಗಿ ಸ್ಪರ್ಶಿಸುತ್ತದೆ. ಬುಡಕಟ್ಟು ಸಮುದಾಯಗಳಲ್ಲಿ ಶ್ರೇಣೀಕೃತ ಆಡಳಿತ ವ್ಯವಸ್ಥೆ ಹಾಗೂ ಪದವಿಗಳಿರುವ ಒಂದೇ ಒಂದು ಸಮುದಾಯ ಮನ್ನಾನ್. ಕಾಡು ಕಡಿದು ಕುಮರಿ ಬೇಸಾಯವನ್ನು ನಡೆಸುವುದು ಇವರ ಪ್ರಧಾನ ಜೀವನ ಮಾರ್ಗವಾಗಿತ್ತು. ಕೊಯ್ಲು ಸಂದರ್ಭದಲ್ಲಿ ನಡೆಸುವ ಕಾಲಾವೂಟ್ ಉತ್ಸವದ ಅಂಗವಾಗಿ ಕೂತ್ ಕಲಾರೂಪವನ್ನು ನಡೆಸುತ್ತಾರೆ. ಕೊಯ್ಲಿನ ಅನಂತರ ಹೊಸ ಕೃಷಿ ಸ್ಥಳವನ್ನು ಪತ್ತೆ ಮಾಡುವ ಮಧ್ಯಂತರದಲ್ಲಿ ಸಾಮಾನ್ಯವಾಗಿ ಕೂತ್ ನಡೆಸುತ್ತಿದ್ದರು. ಪ್ರತಿಯೊಂದು ಊರಿನವರೂ ತಮ್ಮ ಕೇಂದ್ರಗಳಲ್ಲಿ ಪ್ರತ್ಯೇಕವಾಗಿ ಕೂತ್ ನಡೆಸುತ್ತಿದ್ದರೂ ರಾಜ ಸನ್ನಿಧಿಯಾದ ಕೋಯಿಮಲ ಎಂಬಲ್ಲಿ ನಡೆಸುವ ಕೂತ್‌ಮುಖ್ಯವಾಗಿದೆ.

ಪ್ರತಿಯೊಂದು ಮನ್ನಾನ್ ಕುಟುಂಬದವರು ತಮ್ಮ ಗುರಿಕಾರನ ಮನೆಯ ಪಕ್ಕದಲ್ಲಿ ಕೂತ್ ನಡೆಸುತ್ತಾರೆ. ಇದರ ವೆಚ್ಚವನ್ನು ಭರಿಸಲು ಪ್ರತಿ ಮನೆಯವರು ವಂತಿಗೆ ಕೊಡುತ್ತಾರೆ. ರಾಜಸನ್ನಿಧಿ ಕೋವಿಲ್‌ವಲದಲ್ಲಿ ಕೂತ್ ನಿಗದಿಯಾದರೆ, ಅದನ್ನು ಎಲ್ಲರಿಗೂ ತಿಳಿಸುವ ಜವಾಬ್ದಾರಿ ಆಡಳಿತದಲ್ಲಿ ರಾಜನಿಗೆ ಸಹಕಾರ ನೀಡುವ ತಂಡಕಾರನ್ ಮತ್ತು ತಣ್ಣಿಪಾತ ಎಂಬವರದ್ದು. ಕೂತ್ ನಡೆಸುವ ಅಂಗಳದ ಪಕ್ಕದಲ್ಲಿ ವಾದ್ಯದವರಿಗೂ, ಸಮುದಾಯದ ನಿರ್ದಿಷ್ಟ ವ್ಯಕ್ತಿಗಳಿಗೂ ಆಸನದ ವ್ಯವಸ್ಥೆ ಇರುತ್ತದೆ.

ಕೂತ್ ಕಲೆಯ ಮೂಲಕ ಕಳೆದ ವರ್ಷದ ಕೊಯ್ಲಿನ ಫಸಲನ್ನು ಕಾಡಿನ ದೈವಗಳಿಗೆ ಸಮರ್ಪಿಸಿ, ಮುಂದಿನ ವರ್ಷ ಸಮೃದ್ಧ ಬೆಳೆಯಾಗುವಂತೆ ಪ್ರಾರ್ಥಿಸುತ್ತಾರೆ. ಕಾಲಾವೂಟ್ ಉತ್ಸವವಲ್ಲದೆ ಇತರ ಸಂದರ್ಭಗಳಲ್ಲಿಯೂ ಕೂತ್ ನಡೆಯುತ್ತದೆ. ಒಬ್ಬ ವ್ಯಕ್ತಿ ತೀರಿ ಹೋದರೆ, ಮದುವೆಯ ಮೊದಲ ದಿವಸ ಕೂತ್ ನಡೆಸುವ ಕ್ರಮವಿದೆ. ಕೂತ್ ನಡೆದ ದಿವಸ ಎಲ್ಲರೂ ಜತೆಯಲ್ಲಿ ಕೂತು ಊಟ ಮಾಡುತ್ತಿದ್ದರು. ಹೀಗೆ ಕೂತ್ ಮನ್ನಾನ್ ಸಮುದಾಯದ ಬದುಕಿನ ಅವಿಭಾಜ್ಯ ಅಂಗವಾಗಿದೆ.

‘ಶಿಲಪ್ಪದಿಗಾರಂ’ ಕೃತಿಯ ಕೋವಲನ್ – ಕಣ್ಣಗಿ ಕಥೆಯ ಇನ್ನೊಂದು ರೀತಿಯ ಆವಿಷ್ಕಾರವನ್ನು ಕೂತ್ ಕಲೆಯಲ್ಲಿ ಕಾಣಬಹುದು. ಈ ಕಥೆಯನ್ನು ಹಾಡು ಹಾಗೂ ಕುಣಿತದ ಮೂಲಕ ಪ್ರದರ್ಶಿಸುತ್ತಾರೆ. ಏಳು ದಿವಸಗಳ ಕಾಲ ನಿರಂತರವಾಗಿ ನಡೆಯುತ್ತಿದ್ದ ಈ ಆಚರಣಾತ್ಮಕ ಕಲಾಪ್ರದರ್ಶನದಲ್ಲಿ ಪುರುಷರು ಮಾತ್ರ ವೇಷ ಹಾಕುತ್ತಿದ್ದರು. ಈ ವೇಷಗಳನ್ನು ಆಣ್‌ಕೂತಾಡಿ, ಪೆಣ್‌ಕೂತಾಡಿ ಮತ್ತು ಕೋಮಾಳಿ ಎಂದು ಕರೆಯುತ್ತಾರೆ. ಆಣ್ ಕೂತಾಡಿಗಳು ಧೋತಿ, ಉತ್ತರೀಯವನ್ನು ಧರಿಸಿ, ಮುಖಕ್ಕೆ ಬಣ್ಣ ಬಳಿಯುತ್ತಾರೆ. ಪುರುಷರು ಧರಿಸುವ ಪೆಣ್‌ಕೂತಾಡಿ ವೇಷಗಳು ಮುಖಕ್ಕೆ ಬಣ್ಣ ಹಾಕಿ, ಕಣ್ಣುಗಳಿಗೆ ಕಾಡಿಗೆಯನ್ನು ಬರೆಯುತ್ತಾರೆ. ಕೈಗಳಿಗೆ ಬಳೆ, ಸೀರೆ ಹಾಗೂ ರವಕೆ ಧರಿಸುತ್ತಾರೆ. ಕೋಮಾಳಿ ವೇಷಧಾರಿ ತಮಗೆ ಇಷ್ಟವಿರುವ ವೇಷಗಳನ್ನು ಧರಿಸಬಹುದಾದರೂ ಬಾಳೆಲೆಯ ಉಡುಗೆ, ತೆಂಗಿನ ಗರಿಗಳ ತೊಡುಗೆ ಹಾಗೂ ಮಾವಿನೆಲೆಗಳಿಂದ ನಿರ್ಮಿಸಿದ ಟೋಪಿ ಧರಿಸುವುದು ಕ್ರಮ. ಕೆಲವರು ಮುಖವಾಡಗಳನ್ನು ಧರಿಸುತ್ತಾರೆ. ಮುಖಕ್ಕೆ ಹಚ್ಚುವ ಬಣ್ಣಗಳನ್ನು ಸ್ವತಃ ಮನ್ನಾನ್ ಸಮುದಾಯದವರು ಸಿದ್ಧಪಡಿಸುತ್ತಿದ್ದರು. ಅರಿಸಿನ, ಕುಂಕುಮ, ಮಸಿ, ಅಕ್ಕಿ ಹುಡಿಗಳನ್ನು ಬಳಸಿ ವಿವಿಧ ಬಣ್ಣಗಳನ್ನು ಸಿದ್ಧಪಡಿಸುತ್ತಿದ್ದರು.

ಕೂತ್‌ನಲ್ಲಿ ಭಾಗವಹಿಸುವವರು ಏಳು ದಿವಸಗಳ ವ್ರತಾಚರಣೆಯಲ್ಲಿರಬೇಕಾದುದು ಕಡ್ಡಾಯ. ಪ್ರತಿ ದಿವಸ ಕೂತ್ ಪ್ರದರ್ಶನ ನಿಲ್ಲಿಸಬೇಕಾದ ಕಥಾ ಸಂದರ್ಭಗಳು ನಿರ್ದಿಷ್ಟವಾಗಿವೆ. ಮತ್ತಾಳ, ಚಾರಳಂ ಮೊದಲಾದ ವಾದ್ಯಗಳನ್ನು ಹಿನ್ನೆಲೆಯಾಗಿ ಬಳಸುತ್ತಾರೆ. ಮನ್ನಾನ್ ಕೂತ್ ಕಣ್ಣಗಿ – ಕೋವಿಲರ ಹುಟ್ಟಿನ ಕಥೆಯೊಂದಿಗೆ ಆರಂಭವಾಗುತ್ತದೆ. ನುಡಿಗಟ್ಟು ಹಾಗೂ ಹಾಡುಗಳ ಮೂಲಕ ಕಥೆ ಮುಂದುವರಿಯುತ್ತದೆ. ಆರಂಭದಲ್ಲಿ ದೇವತಾಸ್ತುತಿ, ಗುರುವಂದನೆ, ರಾಜವಂದನೆ ಮೊದಲಾದ ಭಾಗಗಳಿವೆ. ಕಣ್ಣಗಿ ಮತ್ತು ಕೋವಲನರ ಹುಟ್ಟು, ಬಾಲ್ಯ, ವಿವಾಹ, ಮಾಧವಿ – ಕೋವಲನ್ ಸಮಾಗಮ, ಕೋವಲನ ಹತ್ಯೆ, ಕಣ್ಣಗಿಯ ಶಾಪ ಮೊದಲಾದ ಅಂಶಗಳು ಹಾಡು, ನುಡಿಗಟ್ಟು ಮತ್ತು ಸಂಭಾಷಣೆಗಳ ಮೂಲಕ ಕೂತ್‌ನಲ್ಲಿ ಪ್ರದರ್ಶನಗೊಳ್ಳುವುದು.

ಮನ್ನಾನ್‌ಕೂತ್ ಆಧುನಿಕ ಕಾಲದ ಪ್ರಭಾವಗಳಿಗೆ ಸಿಲುಕಿ ನಷ್ಟವಾಗುತ್ತಿದೆ. ಕೂತ್ ಅದರ ನಿಜವಾದ ಸ್ವರೂಪದಲ್ಲಿ ಇಂದು ಪ್ರದರ್ಶನಗೊಳ್ಳುತ್ತಿಲ್ಲ. ಕೂತ್ ಕಲೆಯನ್ನು ಪ್ರದರ್ಶಿಸುವ ಕಲಾವಿದರೂ ಕಲಿಸುವ ಗುರುಗಳೂ ಇಂದು ಕಂಡುಬರುತ್ತಿಲ್ಲ. ಹಾಗಾಗಿ ಕೂತ್ ಕಲೆಯಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಎಲ್ಲ ಜನಪದ ಕಲೆಗಳ ಮೇಲೆ ಆಗಿರುವಂತೆ ಕೂತ್‌ನ ಮೇಲೆ ಆಗಿರುವ ಕಾಲದ ಪ್ರಭಾವವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ.

ಕಾಲವೂಚ್, ಕೊಯ್ಲು ಮೊದಲಾದ ಸಂದರ್ಭಗಳಲ್ಲಿ ಕೂತ್ ನಡೆಯುತ್ತದೆ. ಇದು ಕೂತ್ ಹಾಗೂ ಕೃಷಿಸಂಸ್ಕೃತಿಯ ಸಂಬಂಧವನ್ನು ಸೂಚಿಸುತ್ತದೆ. ಬೆಳೆ, ಸಮೃದ್ಧಿ, ಸಂತೃಪ್ತಿಗಾಗಿ ಕೂತ್ ನಡೆಸುತ್ತಿದ್ದರು. ಮನ್ನಾನ್ ಸಮುದಾಯದವರು ಒಟ್ಟು ಸೇರುವ ಒಂದು ಜಾತ್ರೆಯಾಗಿಯೂ ಕೂತ್ ಪ್ರಸಿದ್ಧವಾಗಿತ್ತು. ಸಾಮುದಾಯಿಕ ಒಗ್ಗಟ್ಟಿನ ಪ್ರತೀಕವಾಗಿ ಕೂತ್ ಹಿಂದಿನ ಕಾಲದಲ್ಲಿ ನಡೆಯುತ್ತಿತ್ತು.

ಪಿ.ವಿ.ಎಂ. ಅನುವಾದ ಎನ್.ಎಸ್.