ಮಂಗನಾಟ ಮಂಗನಾಟ ಜನಪದ ಕಲೆಗಳಲ್ಲಿ ಒಂದು. ಇದಕ್ಕೆ ಯಾವುದೇ ಆರಾಧನೆ ಅಥವಾ ಭಕ್ತಿಯ ಹಿನ್ನೆಲೆ ಇರುವುದಿಲ್ಲ. ದೊಂಬರಾಟದಂತೆ ಇದೂ ಒಂದು ಮನರಂಜನೆಯ ಕಲೆ. ಬೇರೆಲ್ಲ ಜನಪದ ಕಲೆಗಳಂತೆ ಇದು ತುಂಬ ವ್ಯಾಪಕವಾದ ಮತ್ತು ಹೆಚ್ಚು ಜನರು ಅವಲಂಬಿಸಿರುವ ಕಲೆಯದಲ್ಲ. ಇದು ಒಬ್ಬೊಬ್ಬರೇ ಮಾಡುವಂಥದ್ದು. ಜಾತ್ರೆಯಲ್ಲೋ, ಸಾಮಾನ್ಯ ದಿನಗಳಲ್ಲೋ ಮಂಗನಾಟದ ಪ್ರದರ್ಶನ ಇರಬಹುದು. ಆಂಜನೇಯನಿಗೂ ರಾಮಾಯಣಕ್ಕೂ ಒಂದು ಸಂಬಂಧ ಗೊತ್ತೆ ಇದೆ. ಅಂದರೆ ಕಿಷ್ಕಿಂಧಾಕಾಂಡದ ಅನಂತರ ಆಂಜನೇಯನ ಪಾತ್ರ ಪ್ರಮುಖವಾಗಿ ಕಂಡುಬರುತ್ತದೆ. ಸೀತೆಯನ್ನು ಹುಡುಕುವಲ್ಲಿ ಆಂಜನೇಯನ ಪಾತ್ರ ಹಿರಿದು. ರಮಾಯಣ ಕರ್ತೃವಾದ ವಾಲ್ಮೀಕಿಯೂ ಆಂಜನೇಯನ ಪಾತ್ರಕ್ಕೆ ಇನ್ನಿಲ್ಲದ ಘನತೆಯನ್ನು ಸೃಷ್ಟಿಸಿದ್ದಾನೆ. ಅದರಂತೆ ಎಲ್ಲ ಗ್ರಾಮಗಳಲ್ಲೂ ಆಂಜನೇಯನ ಗುಡಿ ಇದ್ದೇ ಇರುತ್ತದೆ. ಗ್ರಾಮವನ್ನು ಹೆಣ್ಣು ದೇವತೆಯಾಗಿ ಊರ ಮಧ್ಯೆ ಇದ್ದುಕೊಂಡು ಕಾಯುವನು ಮಾರಿದೇವತೆ. ಹಾಗೆ ಗ್ರಾಮವನ್ನು ಊರ ಹೊರಗೆ ಇದ್ದು ಕಾಯುವವನು ಹನುಮಂತ. ಆದರೆ ಈ ಎಲ್ಲ ಭಾವನೆಗಳೂ ಮಂಗನಾಟದಲ್ಲಿ ಇಲ್ಲದೆ ಹೋದರೂ ಮಂಗನನ್ನು ಆಡಿಸುವವರು ಆಟ ಮುಗಿದ ಮೇಲೆ ಆಂಜನೇಯ ದೇವರ ಹೆಸರಿನಲ್ಲಿ ಅವನ ಹೊಟ್ಟೆ ತುಂಬಿಸಲಿಕ್ಕೆ, ಭಿಕ್ಷೆಯನ್ನು ಕೇಳುತ್ತಾನೆ. ಅಲ್ಲದೆ ಮಂಗನಾಟ ಆಡಿಸುವಾಗೆಲ್ಲ, ‘ಸೀತೆಯನ್ನು ಹುಡುಕುವಾಗ ಆಂಜನೇಯ ಸಮುದ್ರವನ್ನು ಹೇಗೆ ಹಾರಿದನೋ’ ಎಂದು ಆಡಿಸುವವ ಕೈಯ್ಯ ದೊಣ್ಣೆಯನ್ನು ಮೇಲೆತ್ತಿ ಹಿಡಿದು ಮಂಗ ಹಾರುವಂತೆ ತೋರಿಸುತ್ತಾನೆ. ‘ರಾಮನನ್ನು ಕಂಡಾಗ ಸೀತೆ ಹೇಗೆ ನಾಚಿಕೊಂಡಳೊ ಹನುಮಂತ’ ಎಂದರೆ, ಮಂಗ ಆಟದವನ ಟವೆಲ್ಲನ್ನೆ ಮುಖಕ್ಕೆ ಮುಚ್ಚಿಕೊಂಡು ನಾಚಿದಂತೆ ಮಾಡುತ್ತದೆ. ಹೀಗೆ ಮಂಗನನ್ನು ಆಡಿಸುವವನು ರಾಮಾಯಣದ ಒಂದೆರಡು ಪ್ರಸಂಗಗಳನ್ನೇ ಮಂಗನ ಮೂಲಕ ತೋರಿಸುವುದಂಟು. ಪ್ರೇಕ್ಷಕರು ಸಹ ರಾಮಾಯಣದ ಹನುಮಂತ ಇಲ್ಲವೇ ತಂತಮ್ಮ ಊರಿನ ಹನುಮಂತ ದೇವರನ್ನೇ ನೆನೆದು ಕಾಸು ಮತ್ತು ದವಸ ಧಾನ್ಯದ ಸಹಾಯ ಮಾಡುತ್ತಾರೆ.

ಕೆ.ಎಚ್.

ಮಂಗಲಂ ಕಳಿ ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ವಾಸಿಸುವ ಮಾವಿಲನ್ ಬುಡಕಟ್ಟು ಜನಾಂಗದವರ ಪರಂಪರಾಗತ ಕುಣಿತ – ಮಂಗಲಂ ಕಳಿ. ಕಾಸರಗೋಡು ಜಿಲ್ಲೆಯ ಪುತ್ತಿಗೆ, ಬೇಕಲ, ಚೆಮ್ನಾಡು, ಬೇಡಡ್ಕ, ಚೆರ್ಕಳ, ಕಾರಡ್ಕ, ಬಳಾಲ್, ಕೋಡೋಂಬೇಳೂರ್, ಈಸ್ಟ್‌ಎಳೇರಿ, ವೆಸ್ಟ್ ಎಳೇರಿ, ಕರಿಂದಳಂ, ಅಜಾನೂರ್, ಚೀಮೇನಿ, ಪಿಲಿಕ್ಕೋಡ್ – ಎಂಬ ಪಂಚಾಯತಿಗಳಲ್ಲಿ ಮತ್ತು ಕಣ್ಣೂರು ಜಿಲ್ಲೆಯ ಕಾಕ್ಕೋಲ್ – ಆಲಪ್ಪಡಂಬ್, ಪೆರಿಂಙೋವಯಕ್ಕಂ, ನಡುವಿಲ್, ಉದಯಗಿರಿ, ಪಯ್ಯಾವೂರ್‌, ಶ್ರೀಕಂಠಾಪುರಂ, ಎರುವಲಕ್ಕೇರಿ ಪಂಚಾಯಿತಿಗಳಲ್ಲಿ ಮಾವಿಲರು ವಾಸಮಾಡುತ್ತಿದ್ದಾರೆ.

ಮಾವಿಲರು ಮದುವೆಯನ್ನು ಮಂಗಲಂ, ಮದ್ಮೆ ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಮಂಗಲಂ ಕಳಿಯು ವಿವಾಹಕ್ಕೆ ಸಂಬಂಧಪಟ್ಟ ಒಂದು ವಿನೋದ ಕಲಾರೂಪ. ಸಾಮಾನ್ಯವಾಗಿ ಮದುವೆಯಲ್ಲಿ ಪರಸ್ಪರ ಮಾಹಿತಿ ಪೂರೈಕೆ, ಒಪ್ಪಿಗೆ, ನಿಶ್ಚಯ, ಮದುವೆ- ಎಂಬ ನಾಲ್ಕು ಹಂತಗಳಿರುತ್ತವೆ. ಮದುವೆ ನಿಶ್ಚಯವಾಯಿತೆಂದರೆ ಗಂಡಿನ ಮನೆಯಲ್ಲಿ ಎಲ್ಲ ದಿನ ಸಂಜೆ ಮಂಗಲಂ ಕಳಿ ರಂಗವೇರುತ್ತದೆ. ತಲಾಂತರದಿಂದ ಭೂಮಾಲೀಕರ ಕೈಕೆಳಗೆ ಅವರಿಗಾಗಿ ಕುಮರಿಕೃಷಿ ಮಾಡುತ್ತ ಬಂದಿರುವ ಮಾವಿಲರು ಮದುವೆ ಮುಗಿದ ದಿನ ನವವಧುವನ್ನು ಕರೆದುಕೊಂಡು ಧನಿಗೆ ತೋರಿಸಲು ಹೋಗುವ ಕಾರ್ಯಕ್ರಮ ಆಚರಣೆಯಲ್ಲಿತ್ತು. ದನಿಯನ್ನು ಖುಷಿಪಡಿಸುವುದಕ್ಕಾಗಿ ಅವನ ಮುಂದೆ ಮಂಗಲಂ ಕಳಿಯ ಪ್ರದರ್ಶನ ಮಾಡುತ್ತಿದ್ದರು. ಜಮೀನ್ದಾರಿ ಪದ್ಧತಿ ಜಾರಿಯಲ್ಲಿದ್ದ ಕಾಲದಲ್ಲಿ, ಮುಖ್ಯವಾಗಿ ಮಾವಿಲರಲ್ಲಿ, ಈ ಮಂಗಲಂ ಕಳಿ ಜಾರಿಯಲ್ಲಿತ್ತು.

32_70A_DBJK-KUH

ಮದುವೆಗೆ ಸಂಬಂಧಿಸಿ ವರನೂ ಬಂಧು ಮಿತ್ರಾದಿಗಳೂ ಮದುವೆಗೆ ಮುನ್ನಾದಿನ ಕಿರಾನನ (ಹಿರಿಯನ) ನೇತೃತ್ವದಲ್ಲಿ ವಧುವಿನ ಮನೆಗೆ ಹೋಗುತ್ತಾರೆ. ಅಂದು ಮುಂಜಾನೆ ವಧುವಿನ ನೆತ್ತಿಯಲ್ಲಿ ಎಣ್ಣೆ ಅರಸಿಣಗಳನ್ನು ಹಚ್ಚಿ ನೀರಿನಿಂದ ಧಾರೆ ಎರೆಯುತ್ತಾರೆ. ಇದರ ಅಧಿಕಾರ ತಾಯಿ, ತಂದೆ, ಮಾವ, ಹಿರಿಯ- ಇವರದು. ಇದರ ಬಳಿಕ ವಧುವನ್ನು ಮನೆಯೊಳಗೆ ಸಿದ್ಧತೆಗಾಗಿ ಒಯ್ದ ಬಳಿಕ ವಧೂವರರ ಬಂಧು ಮಿತ್ರಾದಿಗಳೆಲ್ಲ ಸೇರಿ ‘ಮಂಗಲಂಕಳಿ’ಯನ್ನು ಆರಂಭಿಸುತ್ತಾರೆ. ಸ್ತ್ರೀಪುರುಷರು ಸಮಾನವಾಗಿ ಸೇರಿ ಆಚರಿಸುವ ಈ ಕಾರ್ಯಕ್ರಮದಲ್ಲಿ ಹಾಡುವ ಕೆಲಸ ಮತ್ತು ವಾದ್ಯ ಸಮೂಹದ ನಿಯಂತ್ರಣ ಹಿರಿಯನದಾಗಿರುತ್ತದೆ. ಕುಟುಂಬ ದೈವವು ವಧುವಿನ ಕೊರಳಲ್ಲಿ ಒಂದು ಕರಿಮಣಿ ಸರವನ್ನು ಕಟ್ಟುವುದರೊಂದಿಗೆ ಮಂಗಲವು ಮುಗಿಯುತ್ತದೆ. ಆ ಮೇಲೆ ವರನನ್ನು ವಧುವನ್ನೂ ಕರೆದುಕೊಂಡು ಮಂಗಲಂಕಳಿ ಪರಿವಾರವು ತಾವು ದುಡಿಯುವ ಧನಿಯ ಮನೆಗೆ ಹೋಗಿ ಕುಣಿಯುತ್ತಾರೆ. ಧನಿಯು ಉಡುಗೊರೆಯಾಗಿ ಪಂಚೆ, ಭತ್ತ, ತೆಂಗಿನಕಾಯಿ, ತೆಂಗಿನ ಎಣ್ಣೆ ಮುಂತದುವನ್ನು ನೀಡುತ್ತಾನೆ. ಆಮೇಲೆ ಜಾತಿ ವ್ಯವಸ್ಥೆಯ ಅಂತಸ್ತಿಗೆ ಅನುಸಾರವಾಗಿ ನಾಯರ್, ತೀಯ, ಮುಸ್ಲಿಂ ಮುಂತಾದ ಜಾತಿಗಳವರ ಮನೆಗಳಿಗೆ ಹೋಗಿ ಮಂಗಲಂ ಕಳಿ ನಡೆಸುತ್ತಾರೆ.

ಮೈನೆರೆದ ಮದುವೆ, ಮದುವೆ ಮುಂತಾದ ಸಂದರ್ಭಗಳ ಆಚರಣೆಯು ಸಂತಸಪ್ರದ ಕೂಡ ಆಗಲೆಂದು ಇಂತಹ ಕಾರ್ಯಕ್ರಮಗಳ ಅಂಗವಾಗಿ ಮಂಗಲಂ ಕಳಿಯನ್ನು ನಡೆಸಲಾಗುತ್ತಿತ್ತು. ವ್ಯಕ್ತಿ ಸಂಬಂಧವು ಹೆಚ್ಚು ಗಟ್ಟಿಯಾಗುವುದಕ್ಕೂ ಮಂಗಲಂ ಕಳಿ ಸಹಾಯಕವಾಗುತ್ತಿತ್ತು. ಮದುವೆ ನಿಶ್ಚಿತವಾದರೆ ಗಂಡಿನ ಮನೆಯಲ್ಲಿ ಎಲ್ಲ ದಿನಗಳಲ್ಲೂ ಸಂಜೆಹೊತ್ತಲ್ಲಿ ಮಂಗಲಂ ಕಳಿಯನ್ನು ನಡೆಸುತ್ತಾರೆ. ತುಂಬ ಹೊತ್ತು ಮುಂದುವರಿಯುವ ಈ ಕಾರ್ಯಕ್ರಮದಲ್ಲಿ ವಾದ್ಯಬಾರಿಸುವವರು ಗಂಡಸರು; ಕುಣಿಯುವವರು ಹೆಂಗಸರು. ಕುಣಿತದಲ್ಲಿ ವಿವಾಹಿತ ಸ್ತ್ರೀಯರು ಮಾತ್ರ ಪಾಲ್ಗೊಳ್ಳುತ್ತಾರೆ. ಮಂಗಲಂಕಳಿಯ ಹಾಡು ಹೇಳಿ ದುಡಿ ಬಾರಿಸಲು ಆರಂಭಿಸುವವನು ಗಾಯಕ ಮುಂದಾಳು, ಮೇಳ ದುಡಿಯನ್ನು ಬಾರಿಸಿ ಹಾಡನ್ನು ಆವರ್ತಿಸುವವರು ಹಿಂಬಾಲಕ ಗಾಯಕ ಮೇಳ. ವಧುವನ್ನು ಚಪ್ಪರಕ್ಕೆ ಕರೆತರುವಾಗ, ವಧೂವರರ ಕೈಗಳಿಗೆ ನೀರಧಾರೆ ಎರೆಯುವಾಗ, ವರನೂ ಸಂಗಡಿಗರೂ ಚಪ್ಪರಕ್ಕೆ ಬರುವಾಗ, ವಧೂವರರು ಜತೆಯಾಗಿ ತೋಡಿಗೆ ಜತೆಯಾಟಕ್ಕೆ ಹೋಗುವಾಗ – ಹೀಗೆ ಸಂದರ್ಭಾನುಸಾರವಾಗಿ ಹಾಡು ಮತ್ತು ದುಡಿ ಬಾರಿಸುವಿಕೆ ಇದ್ದೇ ಇರುತ್ತದೆ.

ಪಿ.ವಿ.ಎಂ. ಅನುವಾದ ಕೆ.ಕೆ.

 

ಮಂಟೇಸ್ವಾಮಿ ಕಲ್ಯಾಣದ ಕ್ರಾಂತಿಯ ಬಳಿಕ ಜಡ ಗೊಂಡಿದ್ದ ವೀರಶೈವ ಸಂಸ್ಕೃತಿಗೆ ಪರ್ಯಾಯವಾದ, ಚಲನಶೀಲವಾದ ಸಾಂಸ್ಕೃತಿಕ ನೆಲೆಗಟ್ಟನ್ನು ಕಟ್ಟಲು ಆದಿಕಲ್ಯಾಣದಿಂದ ಮೈಸೂರಿನವರೆಗೂ ಬಂದ ಜಂಗಮರೂಪಿ, ಆಧ್ಯಾತ್ಮ ಚಿಂತನೆಯ ಹರಿಕಾರ ಮಂಟೇಸ್ವಾಮಿ. ಇವರು ಹನ್ನೆರಡನೆಯ ಶತಮಾನದ ಅಲ್ಲಮನ ಪ್ರತಿನಿಧಿ. ಹದಿನೈದನೆಯ ಶತಮಾನದ ಕೊಡೆಕಲ್ ಬಸವಣ್ಣನ ಸಮಕಾಲೀನರು. ಹನ್ನೆರಡನೆಯ ಶತಮಾನದ ಚಳವಳಿಯ ಆಶಯಗಳಾದ ಜಾತ್ಯತೀತ ಮನೋಭಾವ, ಜಂಗಮಪ್ರವೃತ್ತಿ ಮುಂತಾದವುಗಳು ಕಣ್ಮರೆಯಾಗಿ ಮಠ ಮಾನ್ಯಗಳ ರೂಪದಲ್ಲಿ ಸ್ಥಾವರಗೊಂಡದ್ದನ್ನು ಮತ್ತು ವೀರಶೈವ ಧರ್ಮದ ಆಚಾರ ಮಾರ್ಗದಿಂದ ತಳವರ್ಗದ ಕಾಯಕಜೀವಿಗಳು ಹಾಗೂ ಕುಶಲಕರ್ಮಿಗಳು ಹೊರಗುಳಿದದ್ದರ ಪರಿಣಾಮವಾಗಿ ಈ ವರ್ಗದ ಸಾಂಸ್ಕೃತಿಕ ನಾಯಕರಾದ ಮಂಟೇಸ್ವಾಮಿಯವರು ಈ ಜನರ ಆರಾಧ್ಯ ದೈವವಾಗಿದ್ದಾರೆ.

ಸಾಂಸ್ಕೃತಿಕ ನಾಯಕರಾದ ಮಂಟೇಸ್ವಾಮಿ ಶ್ರೇಣೀಕೃತ ಸಮಾಜ ವ್ಯವಸ್ಥೆಯ ಕೆಳವರ್ಗದಲ್ಲಿ ಹುಟ್ಟಿದವರಾದರೂ ತಮ್ಮ ಶಕ್ತಿ ಮತ್ತು ವಿಶಿಷ್ಟಗುಣದಿಂದಾಗಿ ದೈವತ್ವಕ್ಕೇರಿದ ಮಹಾಪುರುಷ. ದುಡಿಯುವ ದಲಿತ ಸಮುದಾಯಗಳ ಗರ್ಭದಲ್ಲಿ ಮರುಹುಟ್ಟು ಪಡೆದ ದೈವ ಹಾಗೂ ಸಾಂಸ್ಕೃತಿಕ ನಾಯಕರಿವರು. ಅಂತೆಯೇ ಇವರನ್ನು ಧರೆಗೆ ದೊಡ್ಡವರು, ಪ್ರಭುಸ್ವಾಮಿ, ಪ್ರಭುದೇವರು, ಅಲ್ಲಮಪ್ರಭುಗಳು, ಪರಂಜ್ಯೋತಿ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ಧರೆಗೆ ದೊಡ್ಡವರು ಎಂದಿದ್ದ ಇವರಿಗೆ ಒಂದು ವಿಶೇಷ ಸಂದರ್ಭದಲ್ಲಿ ಮಂಟೇಸ್ವಾಮಿ ಎಂದು ಹೆಸರಾಗುತ್ತದೆ. ಬಳೆಮುದ್ದಮ್ಮ ಎನ್ನುವವರು ಹಾಲು ಕರೆಯುತ್ತಿದ್ದಾಗ ಧರೆಗೆ ದೊಡ್ಡವರು ಅವಳ ಮನೆಗೆ ಭಿಕ್ಷಕ್ಕೆ ಹೋದರು. ಅವರ ಜಾಗಟೆ ಸದ್ದು ಕೇಳಿ ಹಸು ಬೆದರಿತು. ಮುದ್ದಮ್ಮ ಸಿಟ್ಟಿನಿಂದ ‘ಹಾಳಾದ ಮಂಟೇದಯ್ಯ’ ಎಂದಳು. ಧರೆಗೆ ದೊಡ್ಡವರು ನಗುತ್ತಾ ‘ಮಂಟೇದಯ್ಯ’ ಎಂಬ ಹೆಸರನ್ನೇ ಸ್ವೀಕರಿಸಿದರು.

ಓಂಕಾರಮಯ ಸ್ವರೂಪನಾದ ಮಂಟೇಸ್ವಾಮಿಗಳು ಭೂಮಿಯನ್ನು ಸೃಷ್ಟಿಮಾಡಿ, ಆ ಭೂಮಿಗೆ ಜ್ಯೋತಿಯನ್ನು ತಂದು ಜ್ಯೋತಿರ್ಲಿಂಗ ನಾದುದು ರೋಚಕವಾದ ವಿಚಾರವಾಗಿದೆ. ಅದಕ್ಕಾಗಿ ಅವರು ಕಾಲಜ್ಞಾನದ ಬುಕ್ಕು, ಕಂಡುಗ ಜ್ಞಾನದ ಬುಕ್ಕು, ತಾಮ್ರದ ಚಪ್ಪೋಡು ಮುಂದಿಟ್ಟುಕೊಂಡು ಅಭ್ಯಾಸ ಮಾಡಿ ಇಡೀ ಜಗತ್ತನ್ನು ಸೃಷ್ಟಿಸಿದರು. ಕಾರಣ, ಪರ್ಯಾಯ ಸಂಸ್ಕೃತಿಯೊಂದನ್ನು ಹುಟ್ಟು ಹಾಕುವ ಉದ್ದೇಶದಿಂದ. ಈ ಸಂಪ್ರದಾಯದಲ್ಲಿ ಜ್ಯೋತಿ ಮತ್ತು ಬೆಳಕಿಗೆ ಸಾಂಕೇತಿಕ ಅರ್ಥಗಳಿವೆ. ಅನೇಕ ಆಚರಣೆಗಳ ಸಂದರ್ಭದಲ್ಲಿ ಜ್ಯೋತಿ ಬೆಳಕು – ಸಿದ್ಧರಾದ ಮಂಟೇಸ್ವಾಮಿ, ಸಿದ್ಧಪ್ಪಾಜಿಯವರನ್ನು ಸಂಕೇತಿಸುತ್ತವೆ. ಈ ಭೂಮಿಗೆ ಜ್ಯೋತಿ ಬರುವ ಕಥೆ ಹೀಗಿದೆ. ಇಂದ್ರಾದಿ ದೇವತೆಗಳು ಮಂಟೇಸ್ವಾಮಿಯವರನ್ನು ನಿಮ್ಮ ಪೂಜೆ ಮಾಡ್ಕಳ್ತಿವಿ, ಕೈಲಾಸದಲ್ಲೇ ಇರಿ ಎಂದಾಗ, ಧರೆಗೆ ದೊಡ್ಡವರು, ನಾನು ಉತ್ತರ ಕಾಂಡದಲ್ಲಿ ಉದ್ಭವ ಆಗಿದ್ದೀನಿ, ಇನ್ನೂ ಕತ್ತಲ ರಾಜ್ಯದ ನರಮುಂಡಾ ಮಕ್ಕಳಗಾ ನಾಳ ಬೆಳಕ ತರಬೇಕು ಅಂತೇಳಿ ಕೈಲಾಸವನ್ನು ಬಿಟ್ಟು ಭೂಲೋಕಕ್ಕೆ ಬರುತ್ತಾರೆ. ಬಂದು ಜಲಜಲನ ಬೆವ್ತು ಬೆವರನ್ನು ತೆಗೆದು ಭೂಮಿಗಿಟ್ಟಿದ್ದಾರ, ಇಟ್ಟಂತ ಬೆವರು ಚಿಟ್ಟಳ್ಳು ಮರವಾಗಿ, ಅಳ್ಳನ್ನು ಅಂಗೈಲಿ ಒಸ್ನಿ, ಎಣ್ಣೆ ತೆಗೆದು, ಕಾವಿಬಟ್ಟೆಯಲ್ಲಿ ಬತ್ತಿ ಮಾಡಿ, ಚಕಮಕಿ ಒಡ್ಡು, ಜ್ಯೋತಿ ಅಸ್ಸಿ ಕತ್ತಲರಾಜ್ಯದಲ್ಲಿ ಬೆಳಕಾಗುವ ಮೂಲಕ ಪರಂಜ್ಯೋತಿ, ಜ್ಯೋತಿರ್ಲಿಂಗಯ್ಯ ಎಂಬ ಹೆಸರು ಪಡೆಯುತ್ತಾರೆ.

ಮಂಟೇಸ್ವಾಮಿಯವರು ಬಸವಣ್ಣ, ನೀಲಮ್ಮ ಮತ್ತು ಕಳ್ಳಜಂಗಮರನ್ನು ಪರೀಕ್ಷಿಸುವ ಬಗೆ ಗಮನಾರ್ಹವಾದುದು. ಮಾಯ್ಕಾರ ಮಂಟೇಸ್ವಾಮಿಗಳು ಕುಷ್ಠರೋಗಿಯಾಗಿ, ಸತ್ತೆಮ್ಮೆ ಕರಹೊತ್ತು, ಹೆಂಡದ ಕಡಿಗೆ ಕೈಯಲ್ಲಿ ಹಿಡಿದು, ಕಿವಿಯಲ್ಲಿ ಭಂಗಿ ಚಿಲುಮೆ ಸಿಕ್ಕಿಸಿಕೊಂಡು ಮಹಾಮನೆಯ ಬಾಗಿಲಿಗೆ ಬರುತ್ತಾರೆ. ಅಲ್ಲಿಯ ಜಂಗಮಯ್ಯಗಳು ಇವರನ್ನು ಕಲ್ಯಾಣದೊಳಗೆ ಸೇರಿಸುವುದಿಲ್ಲ. ಏಕೆಂದರೆ ಕೊರಳಲ್ಲಿ ಲಿಂಗವಿಲ್ಲ. ಹಣೆಯಲ್ಲಿ ವಿಭೂತಿಯಿಲ್ಲ. ನೀನೆಂತಹ ಜಂಗಮ. ನೀನ್ಯಾಕೆ ಬಂದೆ ಎನ್ನುತ್ತಾರೆ. ಆದರೆ ಮಂಟೇಸ್ವಾಮಿಗಳು, ಕುಲೇಳು ಹದಿನೆಂಟು ಜಾತಿಗಳೆಲ್ಲ ಒಂದೇ ಎಂದು, ಆಷಾಡಭೂತಿಗಳಿಗೆಲ್ಲಾ ಬಸವಣ್ಣ ಕಟ್ಟಿದ್ದ ಲಿಂಗಗಳನ್ನೆಲ್ಲಾ ಮಾಯಮಾಡಿ, ಇಷ್ಟಲಿಂಗದ ಆಚರಣೆಯನ್ನು ಧಿಕ್ಕರಿಸಿ, ಆತ್ಮಲಿಂಗವ ತೋರಿಸಿ, ಒಂಬತ್ತು ಜನ ಕಾಯಕ ಜೀವಿಗಳಿಗೆ ಮಾತ್ರ ಲಿಂಗಧಾರಣೆ ಮಾಡಿ, ಕಾಯಕ ತತ್ವದ ಮಹತ್ವವನ್ನು ಮೆರೆದಿದ್ದಾರೆ.

ಮಂಟೇಸ್ವಾಮಿಗಳು ಉತ್ತರದ ಕಡೆಯಿಂದ ದಕ್ಷಿಣದ ಕಡೆಗೆ ಪವಾಡ ಮೆರೆಯುತ್ತಾ ಚಲಿಸುವಾಗ ಅಪಾರ ಸಂಖ್ಯೆಯ ಸಿಸುಮಕ್ಕಳನ್ನು ಹಾಗೂ ಒಕ್ಕಲನ್ನು ಪಡೆಯುತ್ತಾರೆ. ಮೊದಲಿಗೆ ಅವರು ಕೈಲಾಸದಿಂದ ಬಂದು ಧರೆಯನ್ನು ಸೃಷ್ಟಿಸಿ, ಧರೆಗೆ ದೊಡ್ಡವರಾಗಿ, ಆದಿಕಲ್ಯಾಣದಲ್ಲಿ ಅಲ್ಲಮನಾಗಿ, ಕೊಡೇಕಲ್ಲನ್ನು ತಲುಪಿ, ಅಲ್ಲಿ ಕೊಡೇಕಲ್ಲು ಬಸವಣ್ಣನ ಮಗ ರಾಚಪ್ಪಯ್ಯನನ್ನು ಪಡೆಯುತ್ತಾರೆ. ಮುಂದೆ ಕಾಗಿನೆಲೆಯಿಂದ ದೊಡ್ಡಮ್ಮತಾಯಿಯನ್ನು ಪಡೆದು ರಾಚಪ್ಪಾಜಿಯವರಿಗೆ ಲಗ್ನ ಮಾಡಿಸುತ್ತಾರೆ. ನಂತರ ವಿಜಯನಗರದ ಗಾರುಡಿಗರನ್ನು ಗೆದ್ದು ಚೆನ್ನಾಜಮ್ಮನನ್ನು ಪಡೆದು, ಸಖರಾಯಪಟ್ಟಣದ ರಾಜಕುಮಾರರನ್ನು ಸಿಸುಮಕ್ಕಳನ್ನಾಗಿ ಮಾಡಿಕೊಂಡು, ಬೊಪ್ಪೇಗೌಡನ ಪುರದಲ್ಲಿ ಕುರಿದೊಡ್ಡಿಯು ಅವರಿಗೆ ಚಂದ್ರಶಾಲೆಯಾಗಿ, ಮಾಚಯ್ಯನ ಕತ್ತೆ ಕೊಟ್ಟಿಗೆಯನ್ನು ಉರಿಗದ್ದುಗೆಯಾಗಿ ಪಡೆಯುತ್ತಾರೆ. ಆಮೇಲೆ ನಿಡುಘಟ್ಟದ ಮುದ್ದೋಜಿ ಮಗ ಕೆಂಪಾಚಾರಿ ಪಡೆದು ಅವನನ್ನು ಸಿದ್ದಪ್ಪಾಜಿ ಮಾಡಿ, ಅವನಿಂದ ಕಬ್ಬಿಣ ತರಿಸಿಕೊಂಡು ಮಠಮನೆ ಮಾಡಿ, ತನ್ನ ಶಿಷ್ಯರಿಗೆಲ್ಲ ನೇಮಕಟ್ಟುಗಳನ್ನು ಮಾಡಿ, ಕಲಿಯನ್ನು ಕಂಡು, ಮಠಮನೆಯ ಪಾತಾಳ ಬಾವಿಯಲ್ಲಿ ಬಾರಿ ಗುಂಡನ್ನು ಬಾಚಿಕೊಂಡು ಕಣ್ಮರೆಯಾಗುತ್ತಾರೆ. ಇವರ ಗದ್ದುಗೆ ಬೊಪ್ಪೇಗೌಡನ ಪುರದಲ್ಲಿದೆ. ಇವರ ಶಿಷ್ಯ ಸಿದ್ದಪ್ಪಾಜಿಯ ಗದ್ದುಗೆ ಚಿಕ್ಕಲ್ಲೂರಿನಲ್ಲಿದೆ. ಇನ್ನೊಬ್ಬ ಶಿಷ್ಯ ರಾಚಪ್ಪಾಜಿಯ ಗದ್ದುಗೆ ಸಮಾಧಿ ಇರುವುದು ಕೆ.ಆರ್. ನಗರ ತಾಲ್ಲೂಕಿನ ಕಪ್ಪಡಿಯಲ್ಲಿ. ಸಿದ್ದಪ್ಪಾಜಿ ಶಿಷ್ಯರಾದ ನಿಂಗಮ್ಮ ಚನ್ನಯ್ಯರ ನೆಲೆ ಇರುವುದು ಕೊಳ್ಳೇಗಾಲದ ಬಿಳಿಯ ಕುರುಬನ ಕಟ್ಟೆಯಲ್ಲಿ. ಆದರೆ ಇವರು ಐಕ್ಯಗೊಂಡಿರುವ ಗದ್ದುಗೆಗಳೆಲ್ಲ ಸೂಫಿ ಸಮಾಧಿಗಳ ಹಾಗೆ ಉತ್ತರ ದಕ್ಷಿಣಕ್ಕೆ ಮಲಗಿರುವ ಆಕಾರದಲ್ಲಿವೆ. ಈ ಸಂತರ ಗದ್ದುಗೆಗಳ ಮೇಲೆ ಮಸ್ಲಿಲಿನ ಬಟ್ಟೆ ಹೊದಿಸುವುದು, ಲೋಬಾನ ಉರಿಸುವುದು, ಹಸಿರು ನಿಶಾನೆಗಳನ್ನು ಹಾರಿಸುವುದು ಕಂಡುಬರುತ್ತದೆ. ಆದ್ದರಿಂದ ಕೆಲವು ಮಹಮ್ಮದೀಯರು ಮಂಟೇಸ್ವಾಮಿ ಗದ್ದುಗೆಯ ಎದುರು ನಮಾಜು ಮಾಡಿ ಹೋಗುವುದುಂಟು.

ಮಂಟೇಸ್ವಾಮಿ ಶಿಷ್ಯರನ್ನು ನೀಲಗಾರರು ಎಂದು ಕರೆಯುತ್ತಾರೆ. ಈ ನೀಲಗಾರರು ವೃತ್ತಿಗಾಯಕರಾದ್ದರಿಂದ ಮಂಟೇಸ್ವಾಮಿ, ಸಿದ್ದಪ್ಪಾಜಿ ಹಾಗೂ ರಾಚಪ್ಪಾಜಿಯವರ ಪವಾಡಗಳನ್ನು ಕಥನಮಾಡಿ, ಆ ಪರಂಪರೆಯನ್ನು ಕಟ್ಟಿ ಬೆಳಸಿ, ಉಳಿಸುತ್ತಾ ಬಂದಿದ್ದಾರೆ. ಆದರೆ ಇಂದು ಸಿದ್ಧಪುರುಷರಾದ ಮಂಟೇಸ್ವಾಮಿಯವರ ಸಾಧನೆಯ ಲೋಕ ಮರೆತು ಹೋಗಿ, ಅಂತಹ ಸಿದ್ಧಿ ಸಾಧನೆಯನ್ನು ಮಾಡದೆ, ಕೇವಲ ಆಚರಣೆಯಲ್ಲಿ ಉಳಿಸಿಕೊಂಡು, ಸಾಂಸ್ಕೃತಿಕ ನಾಯಕರಾದ ಇವರನ್ನು ದೇವರನ್ನಾಗಿ ಮಾಡಿಕೊಂಡು ಹೋಗುತ್ತಿರುವ ಆಚರಣ ಲೋಕವಿರುವುದು ವಿಪರ್ಯಾಸವೇ ಸರಿ.

ಎಂ.ಬಿ.ಎಸ್.

 

ಮಣ್‌ಬಾಂಡತ್ತೊಳಿಲ್ ತಮಿಳುನಾಡಿನಲ್ಲಿ ಬೇರೆ ಬೇರೆ ಕಡೆಗಳಲ್ಲಿ ಪರಂಪರಾನುಗತವಾಗಿ ಬೇರೆ ಬೇರೆ ಕುಲಕಸುಬುಗಳನ್ನು ನಡೆಸಿಕೊಂಡು ಬಂದ ಗುಂಪುಗಳಿವೆ. ಅಂತಹವುಗಳಲ್ಲಿ ಮಣ್‌ಬಾಂಡತ್ತೊಳಿಲ್ (ಕುಂಬಾರಿಕೆ) ಒಂದು. ಈ ವೃತ್ತಿಯವರನ್ನು ಕುಲಾಲರು, ಕುಯವರು, ಕೊಶವರು ಎಂದೂ ಕರೆಯುತ್ತಾರೆ. ಮೇಲಾಳರು ಎಂದೂ ಕರೆಯುವುದುಂಟು. ಇವರುಗಳಲ್ಲಿ ಕೆಲವರು ತಾವು ಬ್ರಹ್ಮನ ಮಗನಾದ ಕುಲಾಲನ ವಂಶದವರು ಎಂದು ಹೇಳಿಕೊಳ್ಳುವುದುಂಟು. ಈ ವೃತ್ತಿಯನನು ಕುರಿತಂತೆ ತಿರುನೆಲ್ವೇಲಿ ಜಿಲ್ಲೆಯ ಆದಿಚ್ಚನಲ್ಲೂರಿನಲ್ಲಿ ಹೆಚ್ಚು ಮಾಹಿತಿ ದೊರಕುತ್ತದೆ. ‘ಮುದುಮಕ್ಕಳ್ ತಾಳ್’ ಎಂಬ ಹೆಸರಿನ ಮಣ್ಣಿನ ಮಡಿಕೆಗಳಲ್ಲಿ ಇಂತಹ ಕುಲಸಂಬಂಧಿ ವಿವರಗಳನ್ನು ಇಟ್ಟು, ಮಣ್ಣು ಭೂಮಿಯೊಳಗೆ ಹುಗಿದಿಟ್ಟಿರುತ್ತಾರೆ. ಅದನ್ನು ‘ಮುದುಮಕ್ಕಳ್ ತಾಳ್’ ಎಂದು ನಾಡುನುಡಿಯಲ್ಲಿ ಬಳಸುತ್ತಾರೆ.

ಮಣ್ಣಿನ ಬೃಹದಾಕಾರದ ಭಾಂಡಗಳನ್ನು ಮಾಡಲು ಚಕ್ತ (ತಿಗರಿ), ಮಣ್ಣನ್ನು ಸದೆಯಲು ಬಳಸುವ ಕಟ್ಟಿಗೆಯ ತುಂಡು, ದಬ್ಬಳ, ಹಾರೆ, ಗುದ್ದಲಿ, ತುಂಡುಬಟ್ಟೆ ಮುಂತಾದವುಗಳನ್ನು ಬಳಸುತ್ತಾರೆ. ಕೊಳ, ಕೆರೆಗೆ ಹಾಗೂ ಏರಿಗಳಲ್ಲಿಂದ ಮಣ್ಣನ್ನು ಕಡಿದು ತೆಗೆಯುವ ಜೇಡಿಮಣ್ಣನ್ನು ಬಿಸಿಲಲ್ಲಿ ಆರಲು ಹಾಕಿ, ಕಲ್ಲು, ದೂಳು, ಗಲೀಜುಗಳನ್ನು ಅದರಿಂದ ಬೇರೆ ಮಾಡಿ, ಶುದ್ಧಪಡಿಸಿದ ಮಣ್ಣನ್ನು ಗುಡ್ಡೆ ಹಾಕಿ, ನೀರಿನಲ್ಲಿ ಕಲೆಸಿ ನೆನೆಹಾಕಿ, ಅದನ್ನು ಕಾಲುಗಳಿಂದ ತುಳಿದು ಹದಮಾಡಿ ಅನಂತರ ಎರಡು ಮೂರು ದಿನ ಹುದುಗು ಬರಲು ಬಿಟ್ಟು ಸಿದ್ಧವಾಗಲು ಬಿಡುತ್ತಾರೆ. ಹಾಗೆ ಹುದುಗು ಬರಲು ಬಿಟ್ಟ ಮಣ್ಣು ಹದವಾಗಿ ಬೇಕಾದಂತೆ ಆಕಾರ ಕೊಡಲು ಸಿದ್ಧವಾಗುತ್ತದೆ. ಅನಂತರ ಬೇಕಾದ ಮಣ್ಣು ಭಾಂಡಗಳನ್ನು ತಯಾರಿಸಲು ತಿಗರಿ ಎಂದೂ ಕರೆಯಲಾಗುವ ಚಕ್ರದಲ್ಲಿಟ್ಟು ತಿರುಗಿಸುತ್ತಾರೆ. ಹಾಗೆ ಸುತ್ತಿಸಿ ತಿರುಗಿಸಲ್ಪಟ್ಟ ಮಣ್ಣು ಕುಂಬಾರನ ಕೈಯಲ್ಲಿ ಮಡಕೆ, ಕುಡಿಕೆ ಇತ್ಯಾದಿ ರೂಪಗಳಲ್ಲಿ ಸಿದ್ಧಗೊಳ್ಳುತ್ತದೆ.

ಈ ರೀತಿ ಸಿದ್ದಗೊಳಿಸುವುದನ್ನು ‘ಮಡೈದಲ್’ ಎಂದೂ ‘ವನೈದಲ್’ (ಮಣ್ಣಿಂದ ಮಾಡಲ್ಪಟ್ಟ) ಎಂದೂ ಕರೆಯುತ್ತಾರೆ. ಮಣ್ಣಿನ ಭಾಂಡವನ್ನು ಸಿದ್ಧಗೊಳಿಸುವಾಗ ಮೊದಲು ‘ಬಾಯಿ’ಯ ಭಾಗ ತಯಾರಾಗುತ್ತದೆ. ಬಾಯಿ ಮತ್ತು ಮೈಯ ಭಾಗಗಳನ್ನು ಅಂದಗೊಳಿಸುವುದಕ್ಕಾಗಿ ನೇಗಿಲಿನ ತುಂಡೊಂದನ್ನು ಬಳಸುತ್ತಾರೆ. ಭಾಂಡಗಳ ಉದ್ದ ಮತ್ತು ಅಗಲಗಳನ್ನು ಗುರುತಿಸಿಕೊಳ್ಳುವುದಕ್ಕಾಗಿ ಕೆಲವರು ಅಳತೆ ಪಟ್ಟಿ ಬಳಸಿದರೆ, ಮತ್ತೆ ಕೆಲವರು ಕೈಯಳತೆ, ಕಣ್ಣಳತೆಗಳಲ್ಲೇ ಲೆಕ್ಕಹಾಕಿ ನಿರ್ಧರಿಸುವುದುಂಟು. ಭಾಂಡಗಳು ಸಿದ್ಧಗೊಳ್ಳುತ್ತಿದ್ದಂತೆ ಕಬ್ಬಿಣದ ದಬ್ಬಳ ಅಥವಾ ಸೂಜಿಗಳಿಂದ ನಿರ್ಧರಿತ ಅಳತೆಗೆ ತಕ್ಕಂತೆ ತಿಗರಿಯಿಂದ ಮಣ್ಣಿನ ಭಾಂಡಗಳನ್ನು ಕತ್ತರಿಸಿ ತೆಗೆದು ಒಣಗಲಿಡುತ್ತಾರೆ. ಬೆಳಗಿನ ನಸುಬೆಚ್ಚಗಿನ ಬಿಸಿಲಿಗೆ ಕಾಯಲಿಟ್ಟ ಅನಂತರ ಅವುಗಳ ತಳಭಾಗವನ್ನು ಸದೆಯ ಬಳಸುವ ಕೋಲಿನಿಂದ ತಟ್ಟಿ ಸಮಗೊಳಿಸುತ್ತಾರೆ. ಹಾಗೆ ತಟ್ಟುತ್ತಲೇ ಭಾಂಡಗಳ ಒಳಭಾಗವನ್ನು ನಯವಾದ ಕಲ್ಲಿನಿಂದ ಮೃದುವಾಗಿ ತಟ್ಟುತ್ತ ಒಳಗೆ ಅಂದಗೆಡದಂತೆ ಹದಗೊಳಿಸುವುದು ಪರಂಪರಾನುಗತವಾಗಿ ಬಂದ ವಿಧಾನ. ಈ ಸದೆಗೋಲುಗಳನ್ನು ಸಾಗುವಾನಿ ಮತ್ತು ಇತರ ಸ್ಥಳೀಯ ಮರಗಳಿಂದ (ಪೂವರಸು, ಮಂಜನತ್ತಿ) ತಯಾರಿಸಿಕೊಳ್ಳುತ್ತಾರೆ. ಈ ರೀತಿ ಹದಗೊಳಿಸುವುದಕ್ಕೆ ‘ಪಕ್ಕದಟ್ಟು’ವುದು ಎನ್ನುತ್ತಾರೆ. ಅನಂತರ ಮಡಕೆ ಕುಡಿಕೆ ಭಾಂಡಗಳನ್ನು ಸಾಲಾಗಿ ಅಂದವಾಗಿ ಜೋಡಿಸಿ ಕಾಯಲಿಡುತ್ತಾರೆ. ಅನಂತರ ಅವುಗಳ ಒಳ ಹೊರಭಾಗಗಳನ್ನು ಕಾವಿಮಣ್ಣಿನಿಂದ ಸಾರಿಸಿ ಅಂದಗೊಳಿಸಿ ಆರಲಿಡುತ್ತಾರೆ.

ಹೀಗೆ ಒಣಗಿದ ಮಡಕೆ ಕುಡಿಕೆಗಳು ಇತ್ಯಾದಿ ಮಣ್ಣಿನ ವಸ್ತುಗಳನ್ನು ಸಣ್ಣ ಅಗ್ಗಿಷ್ಟಿಕೆಯಲ್ಲಿ ಸುಡುತ್ತಾರೆ. ಮಣ್ಣಿನ ಭಾಂಡಗಳನ್ನು ಸುಡುವ ಸ್ಥಳವನ್ನು ತಮಿಳಿನಲ್ಲಿ ‘ಶೂಳೈ’ ಎಂದು ಕರೆಯುತ್ತಾರೆ. ಅಂದರೆ ‘ಮಡಕೆಗಳನ್ನು ಸುಡುವ ಸ್ಥಳ’ ಎಂದರ್ಥ. ಸಿದ್ಧಗೊಂಡ ಮಡಕೆಗಳನ್ನು ‘ಅಗ್ನಿಮೂಲೆ’ ಅಥವಾ ‘ಕನ್ನಿಮೂಲೆ’ಗಳಲ್ಲಿಡಲಾಗುತ್ತದೆ.

ಚೆನ್ನಾಗಿ ಸುಟ್ಟು ಸಿದ್ಧಗೊಂಡ ಮಣ್ಣಿನ ಮಡಕೆಗಳನ್ನು ಅಂದವಾಗಿ ಜೋಡಿಸಿ, ನಡುನಡುವೆ ಕವೆಗೋಲು, ಕಟ್ಟಿಗೆ ಇತ್ಯಾದಿಗಳನ್ನು ತೂರಿಸಿ ಅಲ್ಲಲ್ಲೇ ಹಸಿಮಣ್ಣಿನಿಂದ ಸಾರಿಸುತ್ತಾರೆ. ತಳಭಾಗದಲ್ಲಿ ಬೆಂಕಿ ಹೊತ್ತಿಸಿ ಕಾಯಿಸಲನುವಾಗುವಂತೆ ಮೂರು ನಾಲ್ಕು ಸಂದಿಗಳನ್ನು ಬಿಟ್ಟುಕೊಳ್ಳುತ್ತಾರೆ.

‘ಶೂಳೈ’ ಸ್ಥಳವನ್ನು ಶುದ್ಧಪಡಿಸಿ ನಂಬಿದ ದೈವವನ್ನು ಪೂಜಿಸಿದ ಅನಂತರ ಅಗ್ನಿಯನ್ನು ಹೊತ್ತಿಸುತ್ತಾರೆ. ಈ ಸ್ಥಳವಿಡೀ ಚೆನ್ನಾಗಿ ಕಾದು ಹದವಾಗಿ ಬೆಚ್ಚಗಾದ ಅನಂತರ ಮರುದಿನ ಅಥವಾ ಅದರ ಮರುದಿನ ಅಗ್ನಿಯನ್ನು ನಂದಿಸುತ್ತಾರೆ. ಅನಂತರ ಇಲ್ಲಿ ಹಣತೆಗಳಿಂದ ಹಿಡಿದು ದೊಡ್ಡ ದೊಡ್ಡ ಮಣ್ಣಿನ ಭಾಂಡಗಳವರೆಗೆ ಎಲ್ಲ ರೀತಿಯ ಕುಂಬಾರಿಕೆಯ ವಸ್ತುಗಳನ್ನು ತಯಾರಿಸಲಾಗುತ್ತದೆ. ಅಡುಗೆಯ ಪಾತ್ರೆಗಳಿಂದ ಅಲಂಕಾರಕ್ಕಾಗಿ ಬಳಸುವ ಸಾಧನಗಳವರೆಗೆ ಎಲ್ಲ ವಸ್ತುಗಳನ್ನೂ ಒಯ್ದು ಸಗಟಾಗಿ ಅಥವಾ ಚಿಲ್ಲರೆಯಾಗಿ ಸಂತೆಗಳಲ್ಲಿ ಮಾರಲಿಡುತ್ತಾರೆ.

ಹಿಂದೆಲ್ಲ ಮಣ್ಣಿನ ಪಾತ್ರೆಗಳು ಮತ್ತು ಕುಂಬಾರಿಕೆಯ ಸಕಲವಸ್ತುಗಳು ಎಲ್ಲ ಕೆಲಸಕಾರ್ಯಗಳಿಗೂ ಆವಶ್ಯಕವಾಗಿದ್ದುದರಿಂದ ಹೆಚ್ಚಾಗಿ ಬಳಕೆಯಾಲ್ಲಿತ್ತು. ಈಗ ಲೋಹದ ಅಗತ್ಯ ವಸ್ತು ಬಳಕೆಗಳಿಂದ ಕುಂಬಾರಿಕೆಯ ವಸ್ತುಗಳ ಬಳಕೆ ಕಡಿಮೆಯಾಗಿದ್ದರೂ ಪೊಂಗಲ್ ಮತ್ತಿತರ ಹಬ್ಬಗಳಲ್ಲಿ ಅವನ್ನು ಅವಶ್ಯವಾಗಿ ಬಳಸಲಾಗುತ್ತದೆ. ಗೋಡೆಗಳು ಮತ್ತು ವರಾಂಡಾಗಳಲ್ಲಿ ಇಡುವ ಅಲಂಕಾರ ಸಾಮಗ್ರಿಗಳಾಗಿ, ದೇವಸ್ಥಾನಗಳಲ್ಲಿಯ ಪವಿತ್ರ ಕಾರ್ಯಗಳಿಗಾಗಿ, ಕುದುರೆ, ಆನೆ, ಹಾವು, ಮನು, ಪವಿತ್ರ ಕಾರ್ಯಗಳಿಗಾಗಿ ಬಳಸುವ ಪೂರ್ತಿ ಮತ್ತಿತರ ವಸ್ತುಗಳು, ಶಕ್ತಿ, ಗಾಳಿ ಮುಂತಾದ ಮೂರ್ತಿಗಳನ್ನು ಕುಂಬಾರರು ತಯಾರಿಸುವುದನ್ನು ಕುಂಬಾರಕಲೆಯ ಉಪಕಸುಬುಗಳನ್ನಾಗಿ ಉಳಿಸಿಕೊಳ್ಳಲಾಗಿದೆ.

ಪಿ.ಯು. ಅನುವಾದ ಜಿ.ಎನ್.

 

ಮಣ್ಣಾಪ್ಪೇಡಿ ಕೇರಳದ ಗ್ರಾಮಗಳಲ್ಲಿ ನೆಲೆನಿಂತಿದ್ದ ಒಂದು ಆಚರಣೆಯಾಗಿದೆ. ಮಣ್ಣಾಪ್ಪೇಡಿ, ಪುಲಪ್ಪೇಡಿ, ಕೆಲವೆಡೆಗಳಲ್ಲಿ ‘ಪರಪ್ಪೇಡಿ’ ಎಂಬ ಆಚರಣೆಯು ಅಸ್ತಿತ್ವದಲ್ಲಿತ್ತು. ಈ ಆಚಾರವು ಮಣ್ಣಾಪ್ಪಿಡಿ, ಪುಲಪ್ಪಿಡಿ, ‘ಪಯುತ್ತಯೇರ್’ ಎಂಬಿತ್ಯಾದಿ ಹೆಸರುಗಳಿಂದ ತಿಳಿಯಲ್ಪಡುತ್ತಿತ್ತು. ‘ಮಣ್ಣಾನ್’ ಹಿಡಿದುಕೊಂಡು ಹೋದಾನು ಎಂಬ ಭಯವೇ ‘ಮಣ್ಣಾಪ್ಪೇಡಿ’. ಮಣ್ಣಾನ್, ಪುಲಯನ್, ಪರಯನ್ ಮುಂತಾದ ಜಾತಿಯವರಿಗೆ ವರ್ಷಕ್ಕೊಮ್ಮೆ ಊರ ಅರಸನ ಅನುಮತಿಯಂತೆ ಕೆಲವು ಪ್ರತ್ಯೇಕ ಸ್ವಾತಂತ್ರ‍್ಯವನ್ನು ನೀಡಲಾಗುತ್ತಿತ್ತು. ಆ ಕಾಲಗಳಲ್ಲಿ ಇವರು ದಾರಿಯಲ್ಲಿ ಕಾಣುವ ಮೇಲ್ಜಾತಿಯ ಸ್ತ್ರೀಯರನ್ನು ಮುಟ್ಟಲು ಶ್ರಮಿಸುತ್ತಿದ್ದರು. ಇಂತಹ ಸ್ತ್ರೀಯರು ಮುಂದೆ ಜಾತಿಯಿಂದ ಹೊರಹಾಕಲ್ಪಡುತ್ತಾರೆ ಮತ್ತು ಅವರು ಕೆಳಜಾತಿಯವರ ಜೊತೆಯಲ್ಲಿ ಹೋಗಬೇಕಾಗಿತ್ತು. ಕೈಯಿಂದ ಮುಟ್ಟುವುದರ ಬದಲು ಕೋಲು, ಕಲ್ಲು, ಅಡಕೆಯನ್ನೆಸೆದು ತಾಗಿಸಿದರೆ ಆ ಸ್ತ್ರೀಗೆ ಭ್ರಷ್ಟತೆಯನ್ನು ಕಲ್ಪಿಸಲಾಗುತ್ತದೆ.

ಇಳಂಕುಳಂ ಕುಂಞನ್‌ಪಿಳ್ಳ ಈ ಆಚಾರದ ಕುರಿತು ಹೀಗೆ ವಿವರಿಸುತ್ತಾರೆ :

“ದಕ್ಷಿಣ ತಿರುವಿದಾಂಕೂರಿನಲ್ಲಿ ‘ಮಣ್ಣಾಪ್ಪೇಡಿ’ ಎಂದು ಕರೆಯುತ್ತಾರೆ. ಉತ್ತರದಲ್ಲಿ ಪುಲಪ್ಪೇಡಿ, ಪರಪ್ಪೇಡಿ ಎಂಬಿತ್ಯಾದಿ ಹೆಸರುಗಳಿಂದ ಈ ಆಚಾರವು ಕರೆಯಲ್ಪಡುತ್ತದೆ. ಗುಂಡಾರ್ಟ್‌‌ನ ಪ್ರಕಾರ ‘ಪುಲಪ್ಪೇಡಿ’ಯು ಕರ್ಕಟಕ ಮಾಸದಲ್ಲಿ ಮಾತ್ರ ಇರುತ್ತವೆ ಎಂದು ಹೇಳಿದ್ದಾನೆ. ಆ ಕಾಲದಲ್ಲಿ ಮುಸ್ಸಂಜೆ ಕಳೆದ ಬಳಿಕ ನಾಯರ್ ಸ್ತ್ರೀಯರು ಪುರುಷನ ಸಹಾಯವಿಲ್ಲದೇ ಮನೆಯಿಂದ ಹೊರಬರುತ್ತಿರಲಿಲ್ಲ. ಒಬ್ಬ ಮಣ್ಣಾನ್ ಎಲ್ಲಿಯಾದರೂ ಅಡಗಿ ನಿಂತು ‘ಕಂಡೇಕಂಡೇ’ (ಕಂಡೆನು ಕಂಡೆನು) ಎಂದು ಕೂಗಿ ಕರೆದರೆ ನಾಯರ್ ಸ್ತ್ರೀಗೆ ಭ್ರಷ್ಟತೆ ಆಗುತ್ತದೆ. ಆದರೆ ಕೆಲವೆಡೆಗಳಲ್ಲಿ ಕೋಲು ಅಥವಾ ಕಲ್ಲು ಎಸೆದು ತಾಗಿಸಬೇಕು ಅಥವಾ ಕೈಯಿಂದ ಮುಟ್ಟಬೇಕು ಎಂಬ ಆಚಾರವಿತ್ತು. ಏನೇ ಆದರೂ ಆ ಸ್ತ್ರೀ ಮರಳಿ ಮನೆಗೆ ಬರಬಾರದು. ಆಕೆ ಮಣ್ಣಾನ್ ಜೊತೆಯಲ್ಲಿಯೇ ಹೋಗಬೇಕಾಗಿತ್ತು. ಅಲ್ಲದಿದ್ದರೆ ಆಕೆಯ ಸಂಬಂಧಿಕರು ಅವಳನ್ನು ಕೊಲ್ಲಲು ಮುಂದಾಗುತ್ತಿದ್ದರು. ಆದುದರಿಂದ ಆಕೆಗೆ ಮಣ್ಣಾನ್ ಅಥವಾ ಪುಲಯನ್‌ನ ಜೊತೆಯಲ್ಲಿ ಹೋಗದೇ ಅನ್ಯಮಾರ್ಗವಿರಲಿಲ್ಲ.”

ಸಾಧಾರಣವಾಗಿ ‘ಮಣ್ಣಾಪ್ಪೇಡಿ’ಗೆ ಬಲಿಯಾಗುತ್ತಿದ್ದುದು ನಾಯರ್ ಸ್ತ್ರೀಯರೇ ಆಗಿದ್ದರು. ಈ ವಿಚಾರವು ಕಾವು ಉತ್ಸವಗಳು ನಡೆಯುವ ತಿಂಗಳಲ್ಲಿ ನಡೆಯುತ್ತಿದ್ದವು ಮತ್ತು ಕರ್ಕಟಕ ಮಾಸದಲ್ಲಿ ನಡೆಯುತ್ತಿದ್ದವು ಎಂಬ ಎರಡು ಅಭಿಪ್ರಾಯಗಳಿವೆ. ಮಣ್ಣಾಪ್ಪೇಡಿ ಮತ್ತು ಪುಲಪ್ಪೇಡಿಯು ಮುಸ್ಸಂಜೆಯ ಬಳಿಕ ಅಸ್ತಿತ್ವಕ್ಕೆ ಬರುತ್ತಿತ್ತು.

ಪೇಡಿ ಆಚರಣೆಯ ಸ್ವರೂಪವನ್ನು ವೇನಾಡ ಆಳುತ್ತಿದ್ದ ಉಣ್ಣೆಕೇರಳವರ್ಮನು ಕೊಲ್ಲ ವರ್ಷ ೮೭೧ (ಕ್ರಿ.ಶ. ೧೬೯೬) ರಲ್ಲಿ ಈ ಆಚಾರವನ್ನು ನಿಲ್ಲಿಸಿದನು. ಕೊಚ್ಚಿಯಲ್ಲಿ ಮತ್ತು ಮಲಬಾರಿನಲ್ಲಿ ಬ್ರಿಟಿಷರ ಆಳ್ವಿಕೆ ಬರುವುದರ ಮೂಲಕ ಪೇಡಿ ಆಚಾರವು ಕೊನೆಗೊಂಡಿತು.

ಎಸ್.ಕೆ. ಅನುವಾದ ಎನ್.ಎಸ್.