ಮರಿತ್ತಿಯಮ್ಮಾಳ್ ಕಲ್ಲರೈ ಕೋವಿಲ್ ತಮಿಳು ನಾಡಿನ ತಿರುವಾರೂರ್ ಜಿಲ್ಲೆಯ ತಿರುತುರೈಪೂಂಡಿ ಸಮೀಪ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿ ಪೂರ್ವ ಕರಾವಳಿ ಮುಖ್ಯ ರಸ್ತೆಯಲ್ಲಿ ಮರಿತ್ತಿಯಮ್ಮಾಳ್ ಸಮಾಧಿ ದೇವಾಲಯವಿದೆ. ಜಾತಿ-ಧರ್ಮಗಳ ಭೇದವಿಲ್ಲದೆ ಎಲ್ಲ ವರ್ಗದ ಜನರೂ ಈ ಸಮಾಧಿ ದೇವಾಲಯಕ್ಕೆ ಭೇಟಿ ನೀಡಿ ವಿವಿಧ ಬೇಡಿಕೆಗಳನ್ನು ಸಲ್ಲಿಸಿ ಹರಕೆ ಮಾಡಿಕೊಳ್ಳುತ್ತಾರೆ. ಅವರ ಹರಕೆ ಈಡೇರುವುದಾಗಿ ಅನೇಕರು ಸಾಕ್ಷ್ಯ ನುಡಿಸುತ್ತಾರೆ. ಈ ಸಮಾಧಿ ದೇವಾಲಯ ರೂಪುಗೊಂಡ ಬಗ್ಗೆ ಕೆಲವು ಐತಿಹ್ಯಗಳಿವೆ.

ಹಿಂದಿನ ಕಾಲದಲ್ಲಿ ತಿರುತುರೈಪೂಂಡಿ ಸುತ್ತಮುತ್ತ ಜಮೀನ್ದಾರಿ ಪದ್ಧತಿ ರೂಢಿಯಲ್ಲಿತ್ತು. ಎನ್.ಎಸ್. ರಾಮಲಿಂಗ ಮೊದಲಿಯಾರ್ ಎಂಬುವವರಿಗೆ ಸಾವಿರಾರು ಎಕರೆ ಜಮೀನು ಇತ್ತು. ಅವರು ಬಹಳ ದೊಡ್ಡ ಜಮೀನ್ದಾರರಾಗಿ ಪ್ರಸಿದ್ಧರಾಗಿದ್ದರೆಂದು ತಿಳಿದು ಬರುತ್ತದೆ. ಇವರ ಜಮೀನಿನಲ್ಲಿ ಬಡವರು, ದಲಿತರು, ನಾಡಾರ್‌ಪಂಗಡದವರು ಜೀತದಾಳುಗಳಾಗಿ ಕೆಲಸ ಮಾಡುತ್ತಿದ್ದರು. ಮಳೆಯಾಗಿ, ನದಿಯಲ್ಲಿ ಸಾಕಷ್ಟು ನೀರು ಹರಿಯುತ್ತಿದ್ದಾಗ ಕೃಷಿ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿತ್ತು. ಆಗ ಅವರ ಜಮೀನಿನಲ್ಲಿ ಕೆಲಸ ಮಾಡಲು ತಮಿಳುನಾಡಿನ ವಿವಿಧ ಭಾಗಗಳಿಂದ ಕೆಲಸದಾಳುಗಳನ್ನು ಕರೆತಂದು ತುಸು ಎತ್ತರವಾದ ಸ್ಥಳದಲ್ಲಿ ವಾಸ್ತವ್ಯ ಹೂಡುವಂತೆ ಮಾಡಿರುವುದು ಕಂಡು ಬರುತ್ತದೆ. ಆ ಸ್ಥಳಗಳೇ ಈಗ ಸಣ್ಣ ಪುಟ್ಟ ಗ್ರಾಮಗಳಾಗಿ ಕಂಡು ಬರುತ್ತವೆ. ಎನ್.ಎಸ್. ರಾಮಲಿಂಗ ಮೊದಲಿಯಾರ್ ಎಂಬ ಜಮೀನ್ದಾರರ ಬಳಿ ಸ್ಥಳೀಯರು ಹಾಗೂ ಹೊರಗಿನಿಂದ ಬಂದ ಜನರು ಕೂಲಿ ಕೃಷಿ ಕಾರ್ಮಿಕರಾಗಿ ಕೆಲಸ ಮಾಡಿದ್ದಾರೆ. ಕಾರ್ಮಿಕರು ಜಮೀನ್ದಾರರನ್ನು ನೋಡಿ ನಡುಗುತ್ತಿದ್ದ ಕಾಲಘಟ್ಟ ಅದು. ಕೆಲಸ ಮುಗಿದ ಮೇಲೆ ಸಂಜೆ ಯಜಮಾನರ ಅನುಮತಿ ಇಲ್ಲದೆ ಬೀದಿಗಳಲ್ಲಿ ಸ್ವತಂತ್ರವಾಗಿ ತಿರುಗಾಡಲು ಸಹ ಸ್ವಾತಂತ್ರ‍್ಯವಿರಲಿಲ್ಲ.

ಈ ಕಾಲಘಟ್ಟದಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಂದ ಕ್ಯಾಥೋಲಿಕ್ ಕ್ರೈಸ್ತರ ಯಾತ್ರಾ ಸ್ಥಳವಾದ ವೇಳಾಂಗಣಿಗೆ ಜನರು ಪಾದಯಾತ್ರೆ ಕೈಗೊಳ್ಳುತಿದ್ದರು. ಹಾಗೆಯೇ, ಒಬ್ಬ ವೃದ್ಧ ಹಾಗೂ ಮರಿಯಮ್ಮಾಳ ಎಂಬ ಯುವತಿಯೂ ವೇಳಾಂಗಣಿಗೆ ಪಾದಯಾತ್ರೆ ಕೈಗೊಂಡಿದ್ದರು. ಆಗ ಸರಿಯಾದ ರಸ್ತೆ ಸೌಕರ್ಯವಿಲ್ಲದ ಕಾರಣ ಕಾಲುದಾರಿಗಳು ಹಾಗೂ ಗದ್ದೆ ಬಯಲುಗಳಲ್ಲಿ ಕಾಲ್ನಡಿಗೆಯಲ್ಲೇ ಪ್ರಯಾಣ ಮಾಡಬೇಕಾಗಿತ್ತು. ಹಾಗೆ ನಡೆದು ಬರುವಾಗ, ಸಿಡುಬು ರೋಗ ಬಂದು ಆ ಯುವತಿ ದಾರಿಯಲ್ಲೇ ಮರಣ ಹೊಂದುತ್ತಾಳೆ. ಮಳೆ ಸುರಿಯುತ್ತಿದ್ದರಿಂದ ಹಾಗೂ ಶವವನ್ನು ಬಹಳ ದೂರ ಹೊತ್ತೊಯ್ಯಲು ಸಾಧ್ಯವಿಲ್ಲದ ಕಾರಣ, ಯಾರಿಗೂ ತಿಳಿಯದಂತೆ ಎನ್‌ಎಸ್. ರಾಮಲಿಂಗ ಮೊದಲಿಯಾರ್‌ರವರ ಜಮೀನಿನಲ್ಲಿ ಒಂದು ಮೂಲೆಯಲ್ಲಿ ತರಾತುರಿಯಲ್ಲಿ ಗುಂಡಿ ತೋಡಿ ಹೂತು ಮಣ್ಣು ಹಾಕಿ ಮುಂದೆ ಸಾಗಿದರು. ಸಮಾಧಿಯ ಹಾಗೆ ಮಣ್ಣು ಗುಡ್ಡೆ ಮಾಡಿದ್ದ ಆ ಸ್ಥಳದಲ್ಲಿ ಒಂದು ಶಿಲುಬೆಯನ್ನು ನೆಟ್ಟಿದ್ದರು. ಆದ್ದರಿಂದ ಸತ್ತ ಯುವತಿ ಕ್ರೈಸ್ತ ಧರ್ಮೀಯಳಾಗಿರಬಹುದು ಎಂದು ಊಹಿಸಲಾಗಿದೆ.

ಈ ಘಟನೆ ನಡೆದು ಹಲವು ದಿನಗಳ ಅನಂತರ, ಒಂದು ದಿನ ಎನ್.ಎಸ್. ರಾಮಲಿಂಗ ಮೊದಲಿಯಾರ್ ತನ್ನ ಮಹಡಿ ಮನೆಯಲ್ಲಿ ಕುರ್ಚಿಯಲ್ಲಿ ಕುಳಿತು ತಮ್ಮ ಜಮೀನಿನ ಸುತ್ತಮುತ್ತ ದೃಷ್ಟಿ ಹರಿಸುತ್ತಿದ್ದರು. ಅದು ಸಾಯಂಕಾಲದ ವೇಳೆ. ದೂರದಲ್ಲಿದ್ದ ಜಮೀನಿನ ಒಂದು ಮೂಲೆಯಲ್ಲಿ ದೀಪ ಉರಿಯುತ್ತಿದ್ದಂತೆ ಕಾಣಿಸಿತು. ಆ ಬೆಳಕು ಸ್ವಲ್ಪ ಹೊತ್ತಿನವರೆಗೆ ಇದ್ದು ಅನಂತರ ಮರೆಯಾಗುತ್ತಿತ್ತಂತೆ. ಇದನ್ನು ಆ ಜಮೀನ್ದಾರರು ಹಲವು ಬಾರಿ ನೋಡಿ ವಿಸ್ಮಯಗೊಂಡಿದ್ದರು.

ಅದೇ ಕಾಲಕ್ಕೆ ಆ ಜಮೀನ್ದಾರರ ವಿರುದ್ಧ ಚೆನ್ನೈ ನ್ಯಾಯಾಲಯದಲ್ಲಿ ಒಂದು ವ್ಯಾಜ್ಯ ನಡೆಯುತ್ತಿತ್ತು. ಆ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು ಹೊರ ಬರುವ ದಿನಾಂಕ ಸಮೀಪಿಸುತ್ತಿತ್ತು. ತೀರ್ಪು ನನ್ನ ಪರವಾಗಿ ಇರುವುದೇ ಅಥವಾ ವಿರುದ್ಧವಾಗಿರುವುದೇ ಎಂಬ ಆತಂಕದಲ್ಲಿ ಅವರು ನಿದ್ರೆ ಹೋದರು. ಅವರ ಕನಸಿನಲ್ಲಿ ಒಬ್ಬ ಯುವತಿ ಪ್ರತ್ಯಕ್ಷಳಾಗಿ, ‘ಅಂಜದಿರಿ ತೀರ್ಪು ನಿಮ್ಮ ಪರವಾಗಿಯೇ ಬರುತ್ತದೆ. ಆದರೆ ನೀವು ಒಂದು ಕೆಲಸ ಮಾಡಬೇಕು. ನಾನು ಬಿಸಿಲಿನಲ್ಲಿ ಬಸವಳಿಯುತ್ತಿದ್ದೇನೆ. ಮಳೆ ಬಂದರೆ ನೆನೆಯುತ್ತೇನೆ. ಆದ್ದರಿಂದ ನನ್ನ ಸಮಾಧಿಗೆ ಒಂದು ಕಟ್ಟಡವನ್ನು ಕಟ್ಟಬೇಕು’ ಎಂದು ನುಡಿದು ಮರೆಯಾದಳು. ಕನಸಿನಲ್ಲಿ ಪ್ರತ್ಯಕ್ಷಳಾದ ಆ ಯುವತಿ ಹೇಳಿದಂತೆಯೇ ಜಮೀನ್ದಾರರಿಗೆ ತೀರ್ಪು ಅವರ ಪರವಾಗಿ ಬಂತು.

ಇದರಿಂದ ಸಂತಸಗೊಂಡ ಜಮೀನ್ದಾರರು, ಆ ಬೆಳಕು ಕಾಣಿಸಿಕೊಂಡ ಸ್ಥಳವನ್ನು ನೋಡಬೇಕು, ಅಲ್ಲಿ ಏನಿದೆ ಎಂದು ತಿಳಿದುಕೊಳ್ಳಬೇಕು ಎಂದು ಬಯಸಿದರು. ಆಗ ಆ ಸ್ಥಳದಿಂದ ಜಮೀನ್ದಾರರ ಬಳಿ ಜೀತದಾಳಾಗಿ ದುಡಿಯುತ್ತಿದ್ದ ನಾಡಾರ್ ಒಬ್ಬರನ್ನು ಕರೆದು ‘ಆ ಮೂಲೆಯಲ್ಲಿ ಯಾವುದಾದರೂ ಸಮಾಧಿ ಇದೆಯಾ ಎಂದು ನೋಡಿ ಬ’ ಎಂದು ಹೇಳಿದಂತೆ. ಕೂಡಲೇ ಆತ ಆ ಸ್ಥಳಕ್ಕೆ ಹೋಗಿ ಸಮಾಧಿ ಇರುವುದನ್ನು ಖಚಿತ ಪಡಿಸಿಕೊಂಡು ಜಮೀನ್ದಾರರಿಗೆ ಸುದ್ದಿಯನ್ನು ಮುಟಿಸಿದನು. ಜಮೀನ್ದಾರರು ಅಲ್ಲಿ ಪುಟ್ಟದೊಂದು ಸಮಾಧಿ ಕಟ್ಟಡ ನಿರ್ಮಿಸುವಂತೆ ಆದೇಶಿಸುತ್ತಾರೆ. ಆ ಸ್ಥಳದಲ್ಲಿ ಒಂದು ಕಟ್ಟಡವನ್ನು ಕಟ್ಟಿದ ಮೇಲೆ ಅದನ್ನು ಹಾಗೇ ಬಿಟ್ಟು ಬಿಡುತ್ತಾರೆ.

ದಿನಗಳು ಉರುಳಿದವು. ಆ ಮಾರ್ಗವಾಗಿ ಹೋಗುವ – ಬರುವವರೆಲ್ಲರೂ ಈ ಸಮಾಧಿಯ ಮೇಲೆ ಹೂ ಎಸೆದು ಹೋಗುತ್ತಿದ್ದರು. ಆ ಮಾರ್ಗವಾಗಿ ಸಂತೆಗೆ ಹೋಗುವವರು ಈ ಸಮಾಧಿ ಮುಂದೆ ನಿಂತು ಪ್ರಾರ್ಥನೆ ಮಾಡಿ ಹೋದರೆ ಕುರಿ, ದನಗಳು ಒಳ್ಳೆಯ ಬೆಲೆಗೆ ಮಾರಾಟವಾಗುತ್ತಿದ್ದುವಂತೆ. ಮತ್ತೆ ಆ ಮಾರ್ಗವಾಗಿ ಹಿಂದಿರುಗುವಾಗ ಕೃತಜ್ಞತಾಪೂರ್ವಕವಾಗಿ ಹೂವನ್ನು ತಂದು ಹಾಕುತ್ತಿದ್ದರು. ಇದು ಅನೇಕ ದಿನಗಳವರೆಗೆ ಮುಂದುವರಿಯಿತು. ಬಳಿಕ, ಜನರು ಹೂವಿನೊಂದಿಗೆ ಕಾಸುಗಳನ್ನು ಹಾಕ ತೊಡಗಿದರು. ಈ ಕಾಸುಗಳನ್ನು ಸಂಗ್ರಹಿಸುತ್ತಾ, ಆ ಜಾಗವನ್ನು ಸ್ವಚ್ಛಗೊಳಿಸುತ್ತ ಒಬ್ಬ ವೃದ್ಧೆ ಅಲ್ಲೇ ತಂಗಿದ್ದಳು. ಕಾಲಾಂತರದಲ್ಲಿ ಆ ವೃದ್ಧೆಯೂ ಮರಣ ಹೊಂದಿದಳು.

ತದನಂತರ ಕಳ್ಳಿಕುಡಿ ಗ್ರಾಮದಲ್ಲಿರುವ ನಾಡಾರ್ ಜನರೂ ಈ ಸಮಾಧಿಗೆ ಬಂದು ಪೂಜೆ, ಪ್ರಾರ್ಥನೆ ಮಾಡತೊಡಗಿದರು. ಬಳಿಕ ಎರಡು ಮೂರು ತಲೆಮಾರುಗಳಿಂದ ಕಳ್ಳಕುಡಿ ಗ್ರಾಮಸ್ಥರು ಒಂದು ಕಾರ್ಯಕಾರಿ ಸಮಿತಿಯನ್ನು ರಚಿಸಿ, ಈ ಸಮಾಧಿ ದೇವಾಲಯಕ್ಕೆ ಅಗತ್ಯವಾದ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತಾ ಬಂದಿದ್ದಾರೆ. ತಿರುಕುರೈ ಪೂಂಡಿ ಗ್ರಾಮದ ಚರ್ಚ್‌ಪಾದ್ರಿಯ ಬೆಂಬಲ ಮತ್ತು ಅನುಮಿಯನ್ನು ಪಡೆದು ವರ್ಷಕ್ಕೆ ಒಮ್ಮೆ ಹಬ್ಬವನ್ನು ಆಚರಿಸುತ್ತಿದ್ದಾರೆ. ಸಂಪ್ರದಾಯದಂತೆ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಗಂಜಿ ಕಾಯಿಸಿ ವಿತರಣೆ ಮಾಡಲಾಗುತ್ತದೆ.

ಸಾಮಾನ್ಯವಾಗಿ ಎಲ್ಲ ಜಾತಿ, ಧರ್ಮಿಯರೂ ಇಲ್ಲಿಗೆ ಬಂದು ತಮ್ಮ ಅಗತ್ಯಗಳಿಗಾಗಿ ಹರಕೆ ಮಾಡಿ ಹೋಗುತ್ತಾರೆ. ಯಾವ ಹರಕೆ ಹೊತ್ತರೂ ಅದು ಈಡೇರುತ್ತದೆಂದು ಭಾವಿಸಲಾಗಿದೆ. ಅದರಲ್ಲೂ ಆ ಸಮಾಧಿಯನ್ನು ಮೂರು ಬಾರಿ ಪ್ರದಕ್ಷಿಣೆ ಮಾಡುವುದು ರೂಢಿ. ಹಾಗೆ ಪ್ರದಕ್ಷಿಣೆ ಮಾಡುವಾಗ ಸಮಾಧಿಯ ಮೇಲಿರುವ ಹೂವಿನ ಹಾರದಿಂದ ಯಾವುದಾದರೂ ಒಂದು ಹೂವನ್ನು ಕಿತ್ತರೆ ಅದು ಯಾವುದೇ ತೊಡಕಿಲ್ಲದೆ ಸುಲಭವಾಗಿ ಕೈಗೆ ಬರಬೇಕು. ಹಾಗಾದರೆ ಮನಸ್ಸಿನಲ್ಲಿ ಅಂದು ಕೊಂಡ ಕೆಲಸ ಖಂಡಿತವಾಗಿಯೂ ನೆರವೇರುತ್ತದೆ. ಒಂದು ವೇಳೆ ಆ ಹೂವು ಸುಲಭವಾಗಿ ಕೈಗೆ ಬಾರದಿದ್ದರೆ ಆ ಕೆಲಸ ನೆರವೇರುವುದಿಲ್ಲ ಎಂದು ಜನರು ನಂಬುತ್ತಾರೆ.

ಈ ಸಮಾಧಿ ದೇವಾಲಯದೊಂದಿಗೆ ನಿಕಟ ಸಂಬಂಧ ಹೊಂದಿರುವ ಅಂತೋಣಿ ಎಂಬವರು ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ. “ಹಲವು ವರ್ಷಗಳಿಂದ ದೃಷ್ಟಿ ಕಳೆದುಕೊಂಡಿದ್ದ ನನ್ನ ಮಗನಿಗೆ ದೃಷ್ಟಿ ಬರಬೇಕೆಂದು ಮರಿತ್ತಿಯಮ್ಮಾಳ್‌ರವನ್ನು ಬೇಡಿಕೊಂಡೆ. ಸಮಾಧಿಯನ್ನು ಪ್ರದಕ್ಷಿಣೆ ಮಾಡಿ ಹಾರದಿಂದ ಹೂವನ್ನು ಕಿತ್ತೆ. ಹೂವು ಬಹಳ ಸುಲಭವಾಗಿ ನನ್ನ ಕೈಗೆ ಬಂತು. ಕೂಡಲೇ ನನ್ನ ಮಗನಿಗೆ ದೃಷ್ಟಿ ಬರುತ್ತದೆ ಎಂದು ಬಲವಾಗಿ ನಂಬಿದೆ. ಹಾಗೆಯೇ, ವೈದ್ಯರು ಕೈಚೆಲ್ಲಿದ ಪರಿಸ್ಥಿತಿಯಲ್ಲಿ ನನ್ನ ಮಗನನ್ನು ಕೊನೆಯದಾಗಿ ಪಾಂಡಿಚೇರಿಯಲ್ಲಿರುವ ಅರವಿಂದ ಕಣ್ಣಾಸ್ಪತ್ರೆಯಲ್ಲಿರುವ ನೇತ್ರತಜ್ಞರಿಗೆ ತೋರಿಸಿದೆ. ಶಸ್ತ್ರ ಚಿಕಿತ್ಸೆಯ ಮೂಲಕ ಮತ್ತೆ ದೃಷ್ಟಿಯನ್ನು ಬರಿಸಬಹುದು ಎಂದು ಹೇಳಿದರು. ತಕ್ಷಣವೇ ಮರಿತ್ತಿಯಮ್ಮಳ್ ರವರಿಗೆ ಕೃತಜ್ಞತೆ ಸಲ್ಲಿಸಿದೆ” ಎಂದು ಭಾವಪೂರ್ಣವಾಗಿ ಹೇಳಿದರು. ತಮ್ಮ ಆರೋಗ್ಯ ಸರಿಯಾಗಬೇಕೆಂದು ಅನೇಕರು ಪ್ರಾರ್ಥಿಸುತ್ತಾರೆ. ವ್ಯಾಪಾರ ಮತ್ತು ಹೊಸ ಪ್ರಯತ್ನಗಳಿಗೆ ಜಯವಾಗಬೇಕೆಂದು ಕೋರಿಕೆ ಸಲ್ಲಿಸುತ್ತಾರೆ. ಅಲ್ಲದೆ ಪ್ರತಿ ಭಾನುವಾರ ಸಾಯಂಕಾಲ ಮುಸ್ಲಿಂ ಧರ್ಮಕ್ಕೆ ಸೇರಿದ ಯುವತಿಯರು ತಮಗೆ ಅಡೆತಡೆಯಿಲ್ಲದೆ ಮದುವೆಯಾಗಬೇಕೆಂದು ಪ್ರಾರ್ಥನೆ ಮಾಡುತ್ತಾರೆ. ಅದು ನೆರವೇರುತ್ತದೆಂದೂ ಹೇಳುತ್ತಾರೆ.

ಈ ಸಮಾಧಿ ದೇವಾಲಯದ ಐತಿಹಾಸಿಕ ಹಿನ್ನೆಲೆಯನ್ನು ವಿಶ್ಲೇಷಿಸಿ ನೋಡಿದಾಗ ಅನೇಕ ಸತ್ಯಗಳು ಗೋಚರವಾಗುತ್ತಿವೆ. ಇಲ್ಲಿ ಸಮಾಧಿ ಮಾಡಲ್ಪಟ್ಟ ಯುವತಿ ಸಿಡುಬು ರೋಗದಿಂದ ಮರಣ ಹೊಂದಿರಬೇಕು. ಅಂದರೆ ಇನ್ನೂ ಹಲವು ಕಾಲ ಬದುಕಬೇಕಾದವಳು, ಅನೇಕ ಕನಸುಗಳು ನೆರವೇರದೆ ಮರಣ ಹೊಂದಿದಳು. ಮಾತ್ರವಲ್ಲದೆ, ಯಾವುದೇ ಪಾಪ ಪುಣ್ಯವನ್ನು ಅರಿಯದವಳಾಗಿ ಮರಣಿಸಿ. ಬಂಧು ಬಳಗದವರು ಹತ್ತಿರವಿಲ್ಲದ ಪರಿಸ್ಥಿತಿಯಲ್ಲಿ ಅನಾಥಳಾಗಿ ಸಮಾಧಿ ಮಾಡಲ್ಪಟ್ಟಳು.

ಆದ್ದರಿಂದ ಸಾವಿನ ಅನಂತರವೂ ಆಕೆಯ ಬಯಕೆ ಮತ್ತು ಕನಸುಗಳು ಇತರರ ಬದುಕಿನ ಮೂಲಕ ಈಡೇರಿಸಲ್ಪಡುತ್ತಿವೆ. ದೈಹಿಕ ಕಾಯಿಲೆಯ ಯಾತನೆಯನ್ನು ಅನುಭವಿಸಿ ಮರಣ ಹೊಂದಿದ ಮರಿತ್ತಿಯಮ್ಮಾಳ್, ತನ್ನ ಬಳಿ ಬರುವವರಿಗೆ ದೈಹಿಕ ಆರೋಗ್ಯ ನೀಡುವವಳಾದಳು. ಸಾಯುವಾಗ ಹಾಗೂ ಸಮಾಧಿ ಮಾಡುವಾಗ ಹೆಚ್ಚು ಕಡಿಮೆ ಅನಾಥಳಾಗಿ ಸಮಾಧಿ ಮಾಡಲ್ಪಟ್ಟಿದ್ದರಿಂದ, ಆ ಪ್ರದೇಶದಲ್ಲಿದ್ದವರ ಕನಸಿನಲ್ಲಿ ಪ್ರತ್ಯಕ್ಷವಾಗಿ ತನಗೆ ಸಂಬಂಧಗಳನ್ನು ಹುಡುಕಿಕೊಳ್ಳುತ್ತಿದ್ದಾಳೆ. ಆದ್ದರಿಂದ ಕಳ್ಳಿಕುಡಿ ಗ್ರಾಮಸ್ಥರು, ‘ಮರಿತ್ತಿಯಮ್ಮಾಳ್ ಸಮಾಧಿ ದೇವಾಲಯ ನಮ್ಮ ಪೂರ್ವಜರು ಬಿಟ್ಟು ಹೋದ ಸ್ಮಾರಕ. ಇದು ನಮ್ಮ ಕುಲದೈವದ ಆರಾಧನೆಯಾಗಿದೆ. ಇದು ನಮ್ಮ ಬದುಕಿನ ಮುಖ್ಯ ಸಂಕೇತವಾಗಿದೆ. ಈ ಸಮಾಧಿ ದೇವಾಲಯ ನಮ್ಮ ರಕ್ತ ಮತ್ತು ಭಾವನೆಗಳಲ್ಲಿ ಬೆರೆತು ಹೋಗಿದೆ. ಇದಿಲ್ಲದೆ ನಾವಿಲ್ಲ’ ಎಂದು ದೃಢವಾಗಿ ನುಡಿಯುತ್ತಾರೆ.

ಈ ಸಮಾಧಿ ದೇವಸ್ಥಾನದ ಅಭಿವೃದ್ಧಿಯಲ್ಲಿ ಅನೇಕ ಎಡರು ತೊಡರು, ಅಡೆತಡೆಗಳಿವೆ. ಹಿಂದಿನ ದಿನಗಳಲ್ಲಿ ಈ ದೇವಾಲಯಕ್ಕೆ ಸಂಬಂಧಿಸಿದಂತೆ ಎರಡು ವ್ಯಾಜ್ಯಗಳು. ನ್ಯಾಯಾಲಯದ ಮೆಟ್ಟಿಲೇರಿವೆ. ಎರಡರಲ್ಲೂ ತೀರ್ಪು ಪ್ರಕಟವಾಗಿದೆ. ಮೊದಲ ವ್ಯಾಜ್ಯ ೧೯೭೮ ರಲ್ಲಿ ದಾಖಲಾಯಿತು. ಪಾಕ್ಯಸ್ವಾಮಿ ನಾಡಾರ್ ಎಂಬುವವರು ಈ ದೇವಾಲಯ ನನಗೆ ಸೇರಬೇಕು ಎಂದು ನ್ಯಾಯಾಲಯದ ಮೊರೆ ಹೋದರು. ವಿಚಾರಣೆ ಮುಗಿದು ೧೯೮೩ ರಲ್ಲಿ ‘ಈ ದೇವಾಲಯ ಎಲ್ಲರಿಗೂ ಸೇರಿದ್ದು, ಆದ್ದರಿಂದ ಕಾರ್ಯಕಾರಿ ಸಮಿತಿಯೊಂದಿಗೆ ಇದನ್ನು ನಿರ್ವಹಿಸಬೇಕು’ ಎಂದು ನ್ಯಾಯಾಲಯ ತೀರ್ಪು ನೀಡಿತು. ಇದರಿಂದ ಕುಪಿತಗೊಂಡ ಪಾಕ್ಯಸ್ವಾಮಿ ನಾಡಾರ್, ಆ ಪ್ರದೇಶದಲ್ಲಿರುವ ಹಿಂದೂಗಳನ್ನು ಪ್ರಚೋದಿಸಿ ಈ ಸಮಾಧಿ ದೇವಾಲಯ ಕ್ರೈಸ್ತರಿಗೆ ಸೇರಿದ್ದಲ್ಲ ಎಂದು ಹೊಸ ವಿವಾದವನ್ನು ಹುಟ್ಟುಹಾಕಿದರು. ಕೂಡಲೆ ಹಿಂದೂಗಳು ಕಾವಡಿ ಹೊತ್ತು ಬಂದು ಮರಿತ್ತಿಯಮ್ಮಳ್ ಸಮಾಧಿಯನ್ನು ಆಕ್ರಮಿಸಿದರು. ಅವರು ‘ಇದು ಮರಿತ್ತಿಯಮ್ಮಾಳ್ ಅಲ್ಲ, ಮಾರಮ್ಮಾಳ್’ ಎಂದು ವದಿಸಿದರು. ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು. ನ್ಯಾಯಾಲಯ, ಇದು ಕ್ರೈಸ್ತರಿಗೆ ಸೇರಿದ್ದು ಎಂದು ತೀರ್ಪು ನೀಡಿತು.

ಈ ದೇವಸ್ಥಾನ ಪೂರ್ವ ಕರಾವಳಿ ಹೆದ್ದಾರಿಯ ಮೇಲಿರುವುದರಿಂದ, ಅದನ್ನು ತೆರವುಗೊಳಿಸಬೇಕಾದ ಪರಿಸ್ಥಿತಿ ಎದುರಾಯಿತು. ಇದರಿಂದ ಆ ಪ್ರದೇಶದ ಜನರು ಆತಂಕಗೊಂಡರು. ಹೆದ್ದಾರಿ ನಿರ್ಮಾಣಖ್ಕೆ ಸ್ಥಳ ಪರಿಶೀಲನೆ ಮಾಡಲು ಬಂದಿದ್ದ ಸರ್ಕಾರಿ ಅಧಿಕಾರಿಗಳು ಈ ಸಮಾಧಿಯನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕೆಂದು ಸುಲಭವಾಗಿ ಹೇಳಿದಾಗ, ಕಳ್ಳಿಕುಡಿ, ನೆಡುಂಬಾಲಂ ಗ್ರಾಮಗಳ ಜನರು ರಾಜಕೀಯ ಪಕ್ಷಗಳು ಹಾಗೂ ಜನಪ್ರತಿನಿಧಿಗಳಿಗೆ ಪತ್ರ ಬರೆದು, ಅವರ ಮೂಲಕ ಉನ್ನತ ಅಧಿಕಾರಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಕೂಡಲೆ ‘ಇದು ಜನರ ಭಾವನೆಗಳಿಗೆ ಧಕ್ಕೆ ತರಬಹುದು’ ಎಂದು ಮನವರಿಕೆ ಮಾಡಿಕೊಂಡ ಅಧಿಕಾರಿಗಳು. ಮರಿತ್ತಿಯಮ್ಮಾಳ್ ಸಮಾಧಿಗೆ ಚ್ಯುತಿಯಾಗದಂತೆ ಹೆದ್ದಾರಿಯ ದಿಕ್ಕನ್ನೇ ಬದಲಾಯಿಸಲು ತೀರ್ಮಾನಿಸಿದರು. ಈಗಲೂ ಈ ಸಮಾಧಿ ಜನರು ಸುಲಭವಾಗಿ ಬಂದು ಹೋಗುವ ರೀತಿಯಲ್ಲಿ ಹೆದ್ದಾರಿಯ ಮೇಲೆ ಗಂಭೀರವಾಗಿ ನಿಂತಿದೆ.

ಈ ದೇವಸ್ಥಾನ ಇತ್ತೀಚೆಗೆ ಇನ್ನಷ್ಟು ಪ್ರಸಿದ್ಧಿಗೆ ಬಂದಿದೆ. ಸೆಪ್ಟೆಂಬರ್ ತಿಂಗಳಲ್ಲಿ ವೇಳಾಂಗಣಿಗೆ ಪಾದಯಾತ್ರೆ ಕೈಗೊಳ್ಳುವ ಭಕ್ತರು ಈ ಸಮಾಧಿ ದೇವಾಲಯದಲ್ಲಿ ಉಳಿದು ವಿಶ್ರಾಂತಿ ಪಡೆದು, ಪ್ರಾರ್ಥನೆ ಸಲ್ಲಿಸಿ ಹೋಗುತ್ತಾರೆ. ಬಹಳ ದೂರದಿಂದ ಇಲ್ಲಿಗೆ ಬಂದು ಹರಕೆ ಹೊತ್ತು ಅನ್ನದಾನ ಮಾಡಿ ಹೋಗುತ್ತಾರೆ.

ಪ್ರಸ್ತುತ ಕಳ್ಳಿಕುಡಿ ಗ್ರಾಮದ ಕ್ರೈಸ್ತರಿಂದ ರಚಿತವಾದ ಕಾರ್ಯಕಾರಿ ಸಮಿತಿ ಈ ದೇವಾಲಯದ ನಿರ್ವಹಣೆ ಹಾಗೂ ಲೆಕ್ಕ ಪತ್ರಗಳನ್ನು ನೋಡಿ ಕೊಳ್ಳುತ್ತಿದೆ. ಪ್ರತಿ ವರ್ಷ ಮೇ ತಿಂಗಳು ಕೊನೆಯ ವಾರದಲ್ಲಿ ಕ್ರೈಸ್ತ ಗುರುಗಳ ನೆರವಿನಿಂದ ವಾರ್ಷಿಕ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಹಬ್ಬದ ಸಂದರ್ಭದಲ್ಲಿ ಬರುವ ಅದಾಯದಿಂದ ದೇವಾಲಯದಿಂದ ಹತ್ತಿರ ಸ್ವಲ್ಪ ಜಮೀನನ್ನು ಖರೀದಿಸಲಾಗಿದೆ. ಈ ಪ್ರದೇಶದ ಜನರ ಕುಲ ದೈವವಾಗಿರುವ ‘ಮರಿತಿಯಮ್ಮಾಳ್ ಸಮಾಧಿ ದೇವಾಲಯ’ ಮುಂದಿನ ಹಲವು ತಲೆಮಾರುಗಳ ನೆನಪಿನಂಗಳದಲ್ಲಿ ಹಸಿರಾಗಿ ಉಳಿಯುವುದರಲ್ಲಿ ಅನುದಾನವಿಲ್ಲ.

.ಇ. ಅನುವಾದ ಐ.ಎಸ್.

 

ಮರುಮಕ್ಕತ್ತಾಯಂ ಕೇರಳದ ಒಂದು ಕುಟುಂಬ ವ್ಯವಸ್ಥೆ. ಪ್ರತಿಯೊಂದು ಜಾತಿ ಸಮುದಾಯಗಳೂ ತಮ್ಮದೇ ಆದ ಆಚಾರ ವಿಚಾರಗಳನ್ನು ರೂಪಿಸಿಕೊಳ್ಳುತ್ತವೆ. ವ್ಯಕ್ತಿ, ಕುಟುಂಬ ಮತ್ತರು ಸಮಾಜದ ಮಧ್ಯೆ ಇಂತಹ ಆಚಾರ ವಿಚಾರಗಳು ರೂಪುಗೊಂಡಾಗ ಅವುಗಳು ವ್ಯವಸ್ಥೆಗಳಾಗುತ್ತವೆ. ಕೇರಳ ಸಮಾಜದ ಇಂತಹ ಒಂದು ಕೌಟುಂಬಿಕ ವ್ಯವಸ್ಥೆಯನ್ನು ಮರುಮಕ್ಕತ್ತಾಯಂ ಎಂದು ಕರೆಯುತ್ತಾರೆ.

ಕೌಟುಂಬಿಕ ಸ್ವರೂಪದ ಎರಡು ಮುಖ್ಯ ಘಟಕಗಳು ಮಾತೃಪ್ರಧಾನ ವ್ಯವಸ್ಥೆ ಮತ್ತು ಪಿತೃಪ್ರಧಾನ ವ್ಯವಸ್ಥೆ. ಹೆಣ್ಣು ಪ್ರಧಾನವಾಗಿರುವ ಕುಟುಂಬ ವ್ಯವಸ್ಥೆ ಮಾತ್ರ ಪ್ರಧಾನವಾದರೆ, ಗಂಡು ಪ್ರಧಾನವಾಗಿರುವ ಕುಟುಂಬ ವ್ಯವಸ್ಥೆ ಪಿತೃಪ್ರಧಾನವಾಗಿದೆ. ಪ್ರಾಚೀನ ಕಾಲದಿಂದಲೇ ಈ ಎರಡು ಕುಟುಂಬ ವ್ಯವಸ್ಥೆಗಳೂ ಮಾನವ ಸಮಾಜದಲ್ಲಿ ನೆಲೆಯೂರಿದ್ದವು. ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಕ್ರಮೇಣ ಪಿತೃಪ್ರಧಾನ ಕುಟುಂಬ ವ್ಯವಸ್ಥೆಯಾಗಿ ಬದಲಾಗಿರುವುದನ್ನು ಮಾನವನ ಇತಿಹಾಸವನ್ನು ಗಮನಿಸಿದರೆ ಮನಗಾಣಬಹುದು. ಒಂದು ಸಮಾಜದ ಉತ್ಪಾದನೆಯ ಹಿನ್ನೆಲೆ ಮತ್ತು ಭೂಮಿ ಮತ್ತು ಕುಟುಂಬದ ಒಡೆತನಗಳೇ ಇಂತಹ ಬದಲಾವಣೆಗಳಿಗೆ ಕಾರಣ. ಕೇರಳದ ಮರುಮಕ್ಕತ್ತಾಯ ಪದ್ಧತಿಯು ಮಾತೃಪ್ರಧಾನ ಕುಟುಂಬ ವ್ಯವಸ್ಥೆಯ ಭಾಗವಾಗಿದ್ದು, ಕೇರಳದ ಸಾಮಾಜಿಕ ವೈಶಿಷ್ಟ್ಯವಾಗಿದೆ. ಇಂದಿಗೂ ಮರುಮಕ್ಕತ್ತಾಯ ಪದ್ಧತಿಯ ಕುರುಹುಗಳು ಅನೇಕ ಸಮುದಾಯಗಳಲ್ಲಿ ಕಂಡುಬರುತ್ತವೆ.

ಅಳಿಯ ಅಥವಾ ಸಹೋದರಿಯ ಮಕ್ಕಳ ಮೂಲಕ ಆಸ್ತಿಯ ಹಕ್ಕು ಮುಂದುವರಿಯುವುದೇ ಮರುಮಕ್ಕತ್ತಾಯದ ಲಕ್ಷಣ. ಆಸ್ತಿಯ ಹಕ್ಕು ಮಕ್ಕಳ ಮೂಲಕ ಮುಂದುವರಿದರೆ ಅದು ಮುಕ್ಕತ್ತಾಯ ಪದ್ಧತಿ. ತುಳುನಾಡಿನ ಅಳಿಯ ಸಂತಾನ ಪದ್ಧತಿ ಮತ್ತು ಮಕ್ಕಳ ಕಟ್ಟಿಗೆ ಈ ಸಂಪ್ರದಾಯಗಳು ಸಂವಾದಿಯಾಗಿವೆ. ಮರುಮಕ್ಕತ್ತಾಯ ಪದ್ಧತಿಯು ಹೆಣ್ಣಿಗೆ ಪ್ರಾಧಾನ್ಯ ನೀಡುತ್ತಿದ್ದು, ಮಾತೃಪ್ರಾಧಾನ್ಯ ಕುಟುಂಬ ವ್ಯವಸ್ಥೆಯನ್ನು ಪೋಷಿಸುತ್ತದೆ. ಆದರೆ ವರ್ತಮಾನದ ಕಾಲದಲ್ಲಿ ಕೇರಳದಲ್ಲಿ ಎರಡೂ ಬಗೆಯ ಪದ್ಧತಿಗಳು ಬಳಕೆಯಲ್ಲಿರುವುದನ್ನು ಕಾಣಬಹುದು.

ಅನೇಕ ಆದಿವಾಸಿ ಬುಡಕಟ್ಟು ವಿಭಾಗಗಳಲ್ಲಿ, ನಾಯರ್, ತೀಯ, ಈಳವ ಜಾತಿಗಳಲ್ಲಿ ಮರುಮಕ್ಕತ್ತಾಯ ಪದ್ಧತಿ ಕಂಡುಬರುತ್ತದೆ. ರಾಜವಂಶಗಳ ಅಧಿಕಾರ, ಆಳ್ವಿಕೆಗಳು ಈ ಪದ್ಧತಿಯ ಮೂಲಕವೇ ಮುಂದುವರಿಯುತ್ತಿದ್ದುವು. ಕಣ್ಣೂರಿನ ಅರಯ್ಕಲ್ ರಾಜಮನೆತನವು ಮುಸ್ಲಿಂ ಸಂಪ್ರದಾಯಕ್ಕೆ ವಿರುದ್ಧವಾಗಿದ್ದರೂ ಈ ಪದ್ಧತಿಯನ್ನು ಅನುಸರಿಸುತ್ತಿದ್ದುದು ವಿಶಿಷ್ಟವಾಗಿತ್ತು. ತಲಶ್ಶೇರಿಯ ಶ್ರೀಮಂತ ಜಮೀನ್ದಾರರೂ ಈ ಕುಟುಂಬ ಪದ್ಧತಿಯನ್ನು ಪಾಲಿಸುತ್ತಿದ್ದರು.

ಒಂದು ಹಳ್ಳಿಯ ಅತಿ ಚಿಕ್ಕ ಪ್ರಾದೇಶಿಕ ಘಟಕವನ್ನು ‘ತರ’ ಎಂದು ಕರೆಯುತ್ತಿದ್ದರು. ಅದರ ಆಡಳಿತ ಅಧಿಕಾರವಿರುವ ಕುಟುಂಬವನ್ನು ‘ತರವಾಡು’ ಎನ್ನುತ್ತಿದ್ದರು. ತರವಾಡು ಎಂಬ ಸಂಸ್ಥೆಗೆ ದೇಶ, ದೇಶಾಧಿಪತ್ಯ ದೇವಸ್ಥಾನ ಮೊದಲಾದ ಅಧಿಕಾರಗಳಿದ್ದುವು. ಮರುಮಕ್ಕತ್ತಾಯ ಪದ್ಧತಿ ಸ್ತ್ರೀ ಪ್ರಧಾನವಾದರೂ ತರವಾಡಿನ ಯಜಮಾನ ಹಿರಿಯ ಪುರುಷನೇ ಆಗಿದ್ದ. ಅವನಿಗೆ ಕಾರ್ನವರ್ ಎಂದು ಹೆಸರು. ಕುಟುಂಬದ ಜನರ ಮೇಲ್ವಿಚಾರಿಕೆ ಅವನಿಗೆ ಸೇರಿದ್ದಾಗಿತ್ತು. ನಾಡಿನ ಒಡೆತನ, ಕುಟುಂಬದ ಒಡೆತನಗಳೆಲ್ಲ ಕಾರ್ನವರಿಗೆ ಸೇರಿದ್ದಾಗಿತ್ತು. ಆರಾಧನೆ ಮೊದಲಾದ ಆಚರಣೆಗಳಲ್ಲಿಅವನಿಗೆ ಮುಖ್ಯ ಸ್ಥಾನವಿತ್ತು. ಅಳಿಯಂದಿರನ್ನು ‘ಅನಂತರವನ್’ ಎಂದು ಕರೆಯುತ್ತಿದ್ದರು. ಇದರ ಅರ್ಥ ಉತ್ತರಾಧಿಕಾರಿ ಎಂದು. ಕಾರ್ನವರನ್ನು ಅನುಸರಿಸಿ ಕುಟುಂಬದ ಏಳಿಗೆಯನ್ನು ಮಾಡುವುದು ಇವರ ಕರ್ತವ್ಯ. ಒಂದು ಕುಟುಂಬದ ಓಣಂ, ವಿಷು ಮೊದಲಾದ ಹಬ್ಬಗಳು, ಮದುವೆ, ಸಂಸ್ಕಾರ ವಿಧಿಗಳೆಲ್ಲ ಕಾರ್ನವರ ನೇತೃತ್ವದಲ್ಲಿ ನಡೆಯುತ್ತಿದ್ದುವು. ಬ್ರಿಟಿಷರ ಕಾಲದಲ್ಲಿ ತರವಾಡಿಗೆ ಸಂಬಂಧಿಸಿದ ನ್ಯಾಯಾಲಯದ ಪ್ರಕರಣಗಳಲ್ಲಿ ಕಾರ್ನವರ್ ಪ್ರತಿನಿಧಿಯಾಗಿದ್ದ. ನ್ಯಾಯಾಲಯ ತೀರ್ಪುಗಳು ಏನೇ ಆದರೂ ಎಲ್ಲ ಸದಸ್ಯರು ಸ್ವೀಕರಿಸಬೇಕಾಗಿತ್ತು. ತರವಾಡಿನ ಹಿರಿಮೆ, ಅಂತಸ್ತು, ಪ್ರತಿಷ್ಠೆ, ಗೌರವ, ಆರ್ಥಿಕ ಹಿನ್ನೆಲೆಯನ್ನು ಗಟ್ಟಿಗೊಳಿಸಿ ಉಳಿಸಬೇಕಾದುದು ಕಾರ್ನವರ್ ಮತ್ತು ಕುಟುಂಬ ಸದಸ್ಯರ ಕರ್ತವ್ಯವಾಗಿತ್ತು.

ಕೆ.ಕೆ.ಎನ್.ಕೆ. ಅನುವಾದ ಎನ್.ಎಸ್.

 

ಮರ್ಮ ಚಿಕಿತ್ಸೆ ಕೇರಳದ ಕಳರಿ ಯೋಧಕಲೆಯ ಚಿಕಿತ್ಸಾರೀತಿ ನೆಲೆ ನಿಂತಿರುವುದು ಮರ್ಮದ ಆಧಾರದಲ್ಲಿ. ಕೇರಳಾದ್ಯಂತ ಈ ಚಿಕಿತ್ಸಾಕ್ರಮ ಜ್ಯಾರಿಯಲ್ಲಿದೆ. ದೇಹದ ಕೆಲವು ನಿರ್ದಿಷ್ಟ ಜಾಗಗಳಲ್ಲಿ ಬೀಳುವಿಕೆ, ಏಟುತಗಲುವುದು ಮುಂತಾದುವುಗಳ ಕಾರಣವಾಗಿ ಜಜ್ಜುವಿಕೆ, ಗಾಯಗಳುಂಟಾದರೆ ಅಂಗವಿಕಲತೆಗೋ ತೀವ್ರವಾದ ವೇದನೆಗೋ ಈಡಾಗಬಹುದು ಅಥವ ಸಾವೇ ಸಂಭವಿಸಬಹುದು. ಇಂಥ ಜಾಗಗಳನ್ನು ಮರ್ಮಗಳು ಎನ್ನಲಾಗುತ್ತದೆ. ಕಳರಿ ತರಬೇತಿಯ ಮಧ್ಯೆ ಅಥವಾ ಪ್ರದರ್ಶನದ ವೇಳೆ ಬೀಳುವಿಕೆ, ಏಟುಗಳು ದೇಹಕ್ಕೆ ತಗಲುವ ಅಪಾಯ ಹೆಚ್ಚು. ಕೇರಳದಲ್ಲಿ ಮರ್ಮ ಚಿಕಿತ್ಸೆ ಬೆಳೆದು ಬರುವುದಕ್ಕೆ ಕಳರಿಯೇ ಮುಖ್ಯ ಆಧಾರ.

ಮರ್ಮಗಳು : ದೇಹದಲ್ಲಿ ನೂರ ಏಳು ಮರ್ಮಗಳಿವೆ. ಪ್ರತಿಯೊಂದು ಕೈ, ಕಾಲುಗಳಲ್ಲಿ ಹನ್ನೊಂದರಂತೆ ಒಟ್ಟು – ನಲವತ್ತು ನಾಲ್ಕು; ಹೊಟ್ಟೆಯಲ್ಲಿ ಮೂರು; ಎದೆಯಲ್ಲಿ ಒಂಬತ್ತು; ಹೆಗಲಲ್ಲಿ ಹದಿನಾಲ್ಕು; ಕೊರಳು ಮತ್ತು ತಲೆಯಲ್ಲಿ ಮೂವತ್ತೇಳು ಮರ್ಮಸ್ಥಾನಗಳಿವೆ. ಇವುಗಳನ್ನು ನಲವತ್ತ ಮೂರು ಹೆಸರುಗಳಿಂದ ಗುರುತಿಸಲಾಗುತ್ತದೆ. ಶಾಖಾಮರ್ಮಗಳು ನಲುವತ್ತನಾಲ್ಕು, ಕೋಷುಮರ್ಮಗಳು ಮೂರು, ಉರೋಮರ್ಮಗಳು ಒಂಬತ್ತು, ಪೃಷ್ಠಮರ್ಮಗಳು ಹದಿನಾಲ್ಕು, ಊರ್ಧ್ವಾಂಗ ಮರ್ಮಗಳು ಮೂವತ್ತೇಳು – ಒಟ್ಟು ನೂರ ಏಳು.

ಮರ್ಮಗಳನ್ನು ಸ್ಥೂಲವಾಗಿ ಆರು ವಿಭಾಗಗಳಲ್ಲಿ ವಿಂಗಡಿಸಬಹುದು –

೧. ಮಾಂಸಮರ್ಮ – ಮಾಂಸ ಪೇಶಿಗಳು ಪರಸ್ಪರ ಸೇರುವಲ್ಲಿನವು.

೨. ಅಸ್ಥಿಮರ್ಮ – ಎಲುಬುಗಳು ಜೋಡಣೆಯಾಗುವಲ್ಲಿ.

೩. ಸ್ನಾಯುಮರ್ಮ – ಸ್ನಾಯುಗಳು ಸಂಧಿಸುವಲ್ಲಿ.

೪. ಧನುನಿಮರ್ಮ – ಧಮನಿಯ ಸಂಗಮವಾಗುವಲ್ಲಿ

೫. ಸಿರಾಮರ್ಮ – ಸಿರಗಳ ಸಂಗಮ ಸ್ಥಳದಲ್ಲಿ

೬. ಸಂಧಿ ಮರ್ಮ – ಸಂಧಿಗಳಲ್ಲಿನ ಮರ್ಮಗಳಲ್ಲಿ

ಮರ್ಮಗಳಿಗೆ ಏಟು ಬಿದ್ದರೆ ರಕ್ತವಾಹಿನಿಗಳಾದ ಸಿರಾಗಳೂ ಧಮನಿಗಳೂ ‘ಕತ್ತರಿಸಲ್ಪಟ್ಟು ರಕ್ತವು ತೀವ್ರವಾಗಿ ಒಸರುತ್ತದೆ. ಅದರಿಂದ ದೇಹದ ಧಾತುಗಳಿಗೆ ವ್ಯತ್ಯಯವುಂಟಾಗಿ ಸಾವು ಸಂಭವಿಸಿಬಿಡಲೂ ಬಹುದು. ಮರ್ಮಕ್ಷತದಿಂದ ಉಂಟಾಗುವ ದೇಹದ ಅಸ್ವಸ್ಥತೆಗೂ ಪ್ರಜ್ಞೆ ತಪ್ಪುವಿಕೆಗೂ ಒಂದು ಪ್ರತಿವಿಧಿ ಎಂಬಂತೆ ಚಿಕಿತ್ಸಾವಿಧಿಗಳೂ ‘ಮರುತಟ್ಟು’ಗಳೂ (ಮ.) ಇವೆ.

ಮರ್ಮಸ್ಥಾನಗಳಲ್ಲಿ ಉಂಟಾಗುವ ಏಟುಗಳಿಗೆ ಕೂಡಲೆ ಪ್ರತಿವಿಧಿ ಮಾಡುವುದು ಅಗತ್ಯ. ಔಷಧ ಚಿಕಿತ್ಸೆಯಲ್ಲದೆ ನಿಯಂತ್ರಿತ ರೀತಿಯಲ್ಲಿ ಹೊಡೆತ ನೀಡಲಾಗುವ ಪ್ರತಿಮರ್ಮ ಸ್ಥಾನಗಳಿವೆ. ಅಂಥಕ್ರಿಯೆಗಳನ್ನು ‘ಮರುಕ್ಕೆ ಪ್ರಯೋಗಂ’ ಎಂದು ಕರೆಯುವರು. ಉದಾಹರಣೆಗಾಗಿ ತೋರುಬೆರಳಿನ ಮಧ್ಯದ ‘ಕೂರ್ಮಂ’ ಎಂಬ ಮರ್ಮಸ್ಥಾನಕ್ಕೆ ಆಘಾತವುಂಟಾದರೆ ಕೈ, ಚಲನೆಯನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಹೆಬ್ಬೆರಳನ್ನು ತಿಕ್ಕಿದರೆ ಸಾಕು.

ಮರ್ಮಾಘಾತದಿಂದ ಪ್ರಜ್ಞಾಹಿನತೆಯೋ ಅಥವಾ ಯಾವ ಜಾಗಕ್ಕೆ ಏಟು ಬಿದ್ದಿದೆಯೆಂದು ಚಿಕಿತ್ಸಕನಲ್ಲಿ ಹೇಳಲಾರದ ಸ್ಥಿತಿ ಉಂಟಾದರೆ ಎಲ್ಲ ದೋಷಗಳನ್ನೂ ಪರಿಹರಿಸಲು ಸಾಧ್ಯವಾಗುವಂತೆ ನಡೆಸುವ ಒಂದು ದೋಷಹರಿಹಾರಕ್ರಿಯೆ ಅಥವಾ ಮರುಕ್ಕೆ ಪ್ರಯೋಗವೇ ಶಿರೋಧ್ವಾನವಿಧಿ.

ಮಾಂಸಮರ್ಮಗಳಿಗೆ ಏಟುಬಿದ್ದರೆ ರಕ್ತವು ಧಾರೆಯಾಗಿ ಬಸರುತ್ತದೆ. ಕೂಡಲೆ ನಿವಾರಣೆ ಮಾಡದಿದ್ದರೆ ಸಾವೇ ಸಂಭವಿಸಬಹುದು. ಚಂದನ, ಬೆಣ್ಣೆ, ಜೀರಿಗೆ, ಮೊಲೆಹಾಲು ಇತ್ಯಾದಿಗಳನ್ನು ಔಷಧವಾಗಿ ಪ್ರಯೋಗಿಸುವುದು ಇದರ ಪ್ರತಿವಿಧಿ ಚಿಕಿತ್ಸೆ.

ಸ್ನಾಯುಮರ್ಮಗಳಿಗೆ ಏಟು ತಗಲಿದರೆ ನರಗಳ ಸೆಳೆತ, ಜ್ವರ, ಬಾವು, ಕೈಕಾಲು ಬಳಲುವುದು ಇತ್ಯಾದಿ ಕಾಣಿಸಿಕೊಳ್ಳಬಹುದು. ಇದಕ್ಕೆ ಮೊಲೆಹಾಲು, ಬೆಣ್ಣೆ, ಕಲ್ಲು ಬಾಳೆಯ ರಸ ಇವುಗಳನ್ನು ನಿಶ್ಚಿತ ಪ್ರಮಾಣದಲ್ಲಿ ನೀಡಲಾಗುತ್ತದೆ. ಸ್ನಾಯು ಮರ್ಮಾಘಾತಕ್ಕೆ ತ್ರಿಫಲ, ತಿರತಾಳಿ (ಮ.) ಇತ್ಯಾದಿಗಳನ್ನೂ ಆಘಾತಕ್ಕೆ ಅನುಸಾರವಾಗಿ ಪ್ರಯೋಗಿಸಲಾಗುತ್ತದೆ. ಸಂದುಗಳಲ್ಲಿನ ಏಟಿಗೆ ‘ಉಜ್ಜುವಿಕೆ’ ನಡೆಸಲಾಗುತ್ತದೆ. ಉಜ್ಜುವಾಗ ಎಣ್ಣೆಹಾಕಿ ಇಲ್ಲವೇ ಹಾಕದೆ ಉಜ್ಜುವುದು ರೂಢಿಯಲ್ಲಿದೆ. ಕಾಲಕ್ಕೆ ಅನುಸಾರವಾಗಿ ಈ ಚಿಕಿತ್ಸೆ ನಡೆಸಲಾಗುತ್ತದೆ. ತುಪ್ಪ, ಬೆಣ್ಣೆ, ಮೊಲೆಹಾಲು, ರಾಮಚ್ಚ, ಜೀರಿಗೆ, ಚಂದನ, ಹಾಲು, ಕಲ್ಲು ಬಾಳೆಯ ರಸ, ತ್ರಿಫಲ, ಹರಳಿನ ಬೀಜ, ಶತಾವರಿಗಡ್ಡೆ, ಎಳ್ಳೆಣ್ಣೆ, ತೆಚ್ಚಿ (ಮ.) ಇತ್ಯಾದಿಗಳನ್ನೂ ಆಘಾತಕ್ಕೆ ಅನುಸಾರವಾಗಿ ಪ್ರಯೋಗಿಸಲಾಗುತ್ತದೆ. ಸಂದುಗಳಲ್ಲಿನ ಏಟಿಗೆ ‘ಉಜ್ಜುವಿಕೆ’ ನಡೆಸಲಾಗುತ್ತದೆ. ಉಜ್ಜುವಾಗ ಎಣ್ಣೆಹಾಕಿ ಇಲ್ಲವೇ ಹಾಕದೆ ಉಜ್ಜುವುದು ರೂಢಿಯಲ್ಲಿದೆ. ಕಾಲಕ್ಕೆ ಅನುಸಾರವಾಗಿ ಈ ಚಿಕಿತ್ಸೆ ನಡೆಸಲಾಗುತ್ತದೆ. ತುಪ್ಪ, ಬೆಣ್ಣೆ, ಮೊಲೆಹಾಲು, ರಾಮಚ್ಚ, ಜೀರಿಗೆ, ಚಂದನ, ಹಾಲು, ಕಲ್ಲುಬಾಳೆಯರಸ, ತ್ರಿಫಲ, ಹರಳಿನ ಬೀಜ, ಶತಾವರಿಗಡ್ಡೆ, ಎಳ್ಳೆಣ್ಣೆ ತೆಚ್ಚಿ (ಮ.) (ಒಂದು ಹೂವಿನ ಮೊಗ್ಗು) ಮುಂತಾದುವುಗಳನ್ನು ಮುಖ್ಯವಾಗಿ ಮರ್ಮಚಿಕಿತ್ಸೆಗೆ ಬಳಸಿಕೊಳ್ಳಲಾಗುತ್ತದೆ.

ಉಜ್ಜುವುದು, ತಡವುವುದು, ನಸ್ಯ, ಧಾರೆ ಮುಂತಾದ ಚಿಕಿತ್ಸಾ ರೀತಿಗಳನ್ನು ಮರ್ಮ ಚಿಕಿತ್ಸೆಯಲ್ಲಿ ಬಳಸಿಕೊಳ್ಳಲಾಗುತ್ತದೆ. ಮರ್ಮಚಿಕಿತ್ಸಕನ ಕೌಶಲ ಮತ್ತು ಸಾಮಯಿಕವಾಗಿ ಮಾಡುವ ಚಿಕಿತ್ಸೆ ರೋಗಿಯನ್ನು ಕಾಪಾಡುತ್ತದೆ.

ಇಂದು ಮರ್ಮಚಿಕಿತ್ಸೆಯು ಕಳರಿ ತರಬೇತಿಯ ಸಂದರ್ಭದಲ್ಲಿ ಪ್ರಯೋಗಿಸುವ ಒಂದು ಚಿಕಿತ್ಸಾಕ್ರಮವಾಗಿ ಸಂಕೋಚಗೊಂಡಿದೆ. ಶಿಷ್ಯರಿಗೆ ಕ್ರಮಪ್ರಕಾರ ಕಲಿಸುವ, ಅದೇ ಹೊತ್ತಿಗೆ, ಉಳಿದವರ ಕೈಯಿಂದ ಇದನ್ನು ಗುಟ್ಟಾಗಿ ಉಳಿಸಿಕೊಳ್ಳುವುದು – ಈ ವಿದ್ಯೆಯು ಹೆಚ್ಚು ಪ್ರಚಾರದಲ್ಲಿ ಉಳಿಯದಿರಲು ಕಾರಣವಾಗಿದೆ.

ಆರ್. ರಾಜೀವ ಗುರುಕ್ಕಳ್ ಅವರ ‘ಕಳರಿಯುಳಿಚ್ಚಲುಂ ಮರ್ಮ ಚಿಕಿತ್ಸಯುಂ’; ಡಾ. ಸಿ.ಎಸ್. ಸುಜಿತರ ‘ಮರ್ಮಶಾಸ್ತ್ರಂ’ ಎಂಬ ಕೃತಿಗಳಲ್ಲಿ ಇದರ ಕುರಿತು ಮುಖ್ಯ ಅಧ್ಯಯನಗಳನ್ನು ನಡೆಸಲಾಗಿದೆ.

ಟಿ.ಟಿ.ಕೆ.ಎಂ. ಅನುವಾದ ಕೆ.ಕೆ.

 

ಮಲಕೂತ್‌ ಕೇರಳದ ಇಡುಕ್ಕಿ ಜಿಲ್ಲೆಯ ಬುಡಕಟ್ಟು ವಿಭಾಗವಾದ ಊರಾಳಿಗಳು ನಡೆಸುವ ಕಲಾಪ್ರದರ್ಶನವೇ ಮಲಕೂತ್ ಅಥವಾ ಊರಾಳಿಕೂತ್‌. ಇಡುಕ್ಕಿ ಜಿಲ್ಲೆಯ ಮುಳ್ಳುರಿಂಗಾಡ್‌, ನಾಡುಕಣಿ, ಕಾಂಚಿಯಾರ್, ಅಯ್ಯಪ್ಪಕೋವಿಲ್ ಪ್ರದೇಶಗಳಲ್ಲಿ ಊರಾಳಿಗಳು ಹೇರಳ ಸಂಖ್ಯೆಯಲ್ಲಿ ವಾಸವಾಗಿದ್ದಾರೆ. ಸಂಕ್ರಮಣ, ಕೊಯ್ಲು, ಮದುವೆ ಮೊದಲಾದ ವಿಶೇಷ ಸಂದರ್ಭಗಳಲ್ಲಿ ಅವರು ಈ ಕಲಾಪ್ರದರ್ಶನವನ್ನು ನಡೆಸುತ್ತಾರೆ.

ಅಭಿನಯ ಪ್ರಾಧಾನ್ಯವಿರುವ ಒಂದು ಕಲೆಯಾಗಿದೆ ಮಲಕೂತ್. ಹಾಡಿಗೆ ಅನುಗುಣವಾಗಿ ಕಥಾಪಾತ್ರಗಳು ರಂಗಕ್ಕೆ ಬರುತ್ತವೆ. ಇದರಲ್ಲಿ ಮಹಿಳೆಯರು ಮಾತ್ರ ವೇಷ ಧರಿಸುತ್ತಾರೆ. ಪುರುಷ ವೇಷಗಳನ್ನು ಸಹಿತ ಅವರು ನಿರ್ವಹಿಸುತ್ತಾರೆ. ಅಪರೂಪದ ಕೆಲವು ಸಂದರ್ಭಗಳಳ್ಲಿ ಮಾತ್ರ ಪುರುಷರು ವೇದಿಕೆಗೆ ಬರುತ್ತಾರೆ. ಊರಾಳಿ ಕೂತ್ ಪ್ರದರ್ಶನಕ್ಕೆ ಸಂಬಂಧಿಸಿದಂತೆ ಬೇರೆ ಯಾವುದೇ ವಿಧಿ ಆಚರಣೆಗಳಿಲ್ಲ. ರಾತ್ರಿಯ ಹೊತ್ತು ಆರಂಭವಾಗುವ ಪ್ರದರ್ಶನ ಬೆಳಗ್ಗಿನವರೆಗೆ ಮುಂದುವರಿಯುತ್ತದೆ.

ಮಲಕೂತಿಗೆ ವಿಶೇಷವಾದ ವರ್ಣಗಾರಿಕೆ ಹಾಗೂ ವೇಷ ಭೂಷಣಗಳಿವೆ. ವರ್ಣರಂಜಿತವಾದ ವೇಷಭೂಷಣಗಳನ್ನು ಇವರು ಧರಿಸುತ್ತಾರೆ. ಉದ್ದದ ಸೀರೆಯನ್ನು ಮಡಿಚಿ, ನೆರಿಗೆ ಹಾಕಿ ಉಡುತ್ತಾರೆ. ಸೊಂಟಕ್ಕೆ ಕೃತಕ ಸೊಂಟಪಟ್ಟಿಯನ್ನು, ಕೈಗಳಿಗೆ ಬಳೆ, ಕಾಲಿಗೆ ಗೆಜ್ಜೆ, ಕೊರಳಿಗೆ ಹರಳಿನ ಮಾಲೆಗಳನ್ನು ಧರಿಸುತ್ತಾರೆ. ಮುಖಕ್ಕೆ ಬಣ್ಣ ಬಳಿದು, ಕಣ್ಣಿಗೆ ಕಾಡಿಗೆ ಹಾಕಿ, ತುಟಿಗಳಿಗೆ ಕೆಂಪು ಬಣ್ಣ ಹಚ್ಚಿರುತ್ತಾರೆ. ಆಯಾ ಕಥಾಪಾತ್ರಗಳು ವೇದಿಕೆಗೆ ಬರುವಾಗ ತಾವು ಬಳಸುವ ಉಪಕರಣಗಳೊಂದಿಗೆ ಬರುತ್ತವೆ. ಉದಾಹರಣೆಗೆ ಬೇಟೆಗಾರನ ವೇಷವು ದೊಣ್ಣೆ ಹಾಗೂ ಕತ್ತಿಯೊಂದಿಗೆ, ಹೆಂಗಸರ ವೇಷವು ಗೆರಸೆ, ಹಿಡಿಸೂಡಿಗಳೊಂದಿಗೆ ರಂಗಕ್ಕೆ ಬರುವುದು.

ವೈವಿಧ್ಯ ಆಶಯಗಳೊಂದಿಗೆ ಮಲಕೂತ್ ಪ್ರದರ್ಶನಗೊಳ್ಳುವುದು. ಕೋವಲನ್ ಮಾಧವಿ, ಕನ್ನಗಿ ಮೊದಲಾದವರು ಮಲಕೂತಿನಲ್ಲಿ ಮುಖ್ಯ ಪಾತ್ರಗಳಾಗಿವೆ. ಕನ್ನಗಿ, ಮಾಧವಿ ಎಂಬವರನ್ನು ನೋಡಲು ಕೋವಲನ್ ದೇವಲೋಕಕ್ಕೆ ಹೊರಟಾಗ ಅವನ ತಾಯಿ ವಿರೋಧಿಸುತ್ತಾಳೆ. ಆದರೆ ತಾಯಿಯ ಮಾತನ್ನು ಮೀರಿ ದೇವಲೋಕಕ್ಕೆ ಹೋದ ಕೋವಲನನ್ನು ಅಪಮಾನಿಸಿ ವಸ್ತ್ರವನ್ನು ಸೆಳೆಯುತ್ತಾರೆ. ಹೀಗೆ ಅಪಮಾನಿತನಾದ ಅವನು ಮನೆಗೆ ಹಿಂದಿರುಗಿ ಮರವೇರಿ ಕುಳಿತುಕೊಳ್ಳುವನು. ಕೊನೆಯಲ್ಲಿ ಕೋವಲನ ತಾಯಿ ವಸ್ತ್ರಗಳನ್ನು ನೀಡಿ ಸಮಾಧಾನಪಡಿಸುವಳು. ಮತ್ತಾಳ, ಕೈ ಮಣಿ, ಚಿಲಂಗ ಮೊದಲಾದ ವಾದ್ಯೋಪಕರಣಗಳನ್ನು ಈ ಪ್ರದರ್ಶನದಲ್ಲಿ ಬಳಸಲಾಗುತ್ತದೆ.

ಮಲಕೂತನ್ನು ನಿಯಂತ್ರಿಸುವ ಮುಖ್ಯ ಮಹಿಳೆಗೆ ಆಶಾತ್ತಿ ಎಂದು ಹೆಸರು. ಅವಳು ಹಾಡುವ ಹಾಡುಗಳಿಗೆ ಉಳಿದವರು ದನಿಗೂಡಿಸುತ್ತಾರೆ. ಕಾಡು ಹಾಗೂ ಊರಿನ ಅನುಭವಗಳನ್ನು ಕಥಾಗಾನವಾಗಿ ಇವರು ಹಾಡುತ್ತಾರೆ. ಮಲಕೂತಿನಲ್ಲಿ ಕುರವ ಮತ್ತು ಕುರೆತ್ತಿ ಎಂಬ ಪಾತ್ರಗಳಿವೆ. ತಾನು ಹೊರಗಡೆ ಕೆಲಸಕ್ಕೆ ಹೋಗುವಾಗ ಮನೆಯಲ್ಲಿ ನಿರ್ವಹಿಸಬೇಕಾದ ಕೆಲಸಗಳ ಕುರಿತು ಕುರವ ಕುರತ್ತಿಗೆ ಉಪದೇಶವನ್ನು ನೀಡುವನು. ಈ ಪ್ರದರ್ಶನದಲ್ಲಿ ಹಾಡುವ ಪೊಲಿಪಾಟಿನಲ್ಲಿ ಕಾಡಿನ ಸಂಕಷ್ಟಗಳ ವರ್ಣನೆಯಿದೆ. ನಾರಾತುಂಡನ್ ಎಂಬ ಮೂಕ ಈ ಪ್ರದರ್ಶನದ ಇನ್ನೊಂದು ಪಾತ್ರ. ಇಂತಹ ಪಾತ್ರಗಳು ರಂಗ್ಕೆ ಬರುವಾಗ ಮಕ್ಕಳು, ಮಹಿಳೆಯರು ತುಂಬ ಉತ್ಸಾಹಗೊಳ್ಳುವರು.

ಅನೇಕ ಕಥನಗೀತೆಗಳು ಒಂದುಗೂಡಿ ನಾಟಕದ ರೂಪವನ್ನು ಪಡೆದ ರಂಗ ಪ್ರದರ್ಶನವೇ ಮಲಕೂತ್. ಒಬ್ಬ ವ್ಯಕ್ತಿ ತನ್ನ ಅನುಭವವನ್ನು ಇನ್ನೊಬ್ಬನಿಗೆ ಹೇಳುವಂತೆ ಇದರ ಹಾಡುಗಳಿವೆ. ಊರಾಳಿ ಸಮುದಾಯದ ನಿತ್ಯ ಬದುಕಿನ ವಿವರಣೆಗಳೇ ನಾಟಕದ ವಸ್ತುವಾಗಿದೆ. ಆದುದರಿಂದಲೇ ಇದಕ್ಕೆ ಊರಾಳಿಕೂತ್‌ ಎಂಬ ಹೆಸರು ಬಂದಿದೆ.

ಮಹಿಳೆಯರು ಮುಖ್ಯವಾಗಿ ಭಾಗವಹಿಸುವ ಒಂದು ಕಲೆ ಮಲಕೂತ್. ವರ್ತಮಾನ ಕಾಲದಲ್ಲಿ ಕೂತ್‌ಪಾಟ್ ತಿಳಿದಿರುವ ಆಶಾತ್ತಿಗಳು ತುಂಬ ವಿರಳ. ಪರಂಪರಾಗತ ಕಲೆಗಳನ್ನು ತಿರಸ್ಕರಿಸುವ ಜಾಯಮಾನ ಊರಾಳಿಗಳಲ್ಲಿ ಕಂಡುಬರುತ್ತದೆ. ಅನೇಕ ಸಮಿತಿಗಳನ್ನು ರಚಿಸಿ, ಈ ಕಲೆಯನ್ನು ಉಳಿಸಿ ಬೆಳೆಸುವ ಪ್ರಯತ್ನಗಳು ನಡೆಯುತ್ತಿದೆ.

ಪಿ.ವಿ.ಎಂ. ಅನುವಾದ ಎನ್.ಎಸ್.