ಮಲಯಾಳ ಗಾದೆಗಳುಬೊಗಳುವ ನಾಯಿ ಕಚ್ಚುವುದಿಲ್ಲ?’ – ಇದು ಮಲಯಾಳದಲ್ಲಿ ತುಂಬ ಪ್ರಚಾರವಿರುವ ಒಂದು ಗಾದೆ. ಇತರ ಯಾವುದೇ ಗಾದೆಗಳಿಗೆ ಇರುವಂತೆ ಪ್ರಯೋಗದ ವಿಚಾರವಾಗಿ ಈ ಗಾದೆಗೂ ಒಂದು ‘ಸನ್ನಿಹಿತ ಸಂದರ್ಭವೂ’ ‘ವಿಶಾಲ ಸಂದರ್ಭವೂ’ ಇದೆ. ಒಬ್ಬ ವ್ಯಕ್ತಿ ಯಾವುದಾದರೊಂದು ವಿಶೇಷ ಸಂದರ್ಭದಲ್ಲಷ್ಟೇ ಗಾದೆಯೊಂದನ್ನು ಪ್ರಯೋಗಿಸುತ್ತಾನೆ. ಆ ಸಂದರ್ಭವನ್ನು ಪ್ರಸ್ತುತ ಗಾದೆಯ ಸನ್ನಿಹಿತ ಸಂದರ್ಭ ಎನ್ನಬಹುದು. ಮೇಲೆ ಹೇಳಿದ ‘ಬೊಗಳುವ ನಾಯಿ ಕಚ್ಚುವುದಿಲ್ಲ’ ಎಂಬ ಗಾದೆಯ ಒಂದು ಸನ್ನಿಹಿತ ಸಂದರ್ಭವನ್ನು ಉದಾಹರಿಸೋಣ. ಇಬ್ಬರು ವ್ಯಕ್ತಿಗಳಿಗೆ ತಮ್ಮಲ್ಲಿ ಒಂದು ಗಡಿ ತಕರಾರಿದೆ. ಈ ಸಂದರ್ಭದಲ್ಲಿ ಒಂದನೆಯವನ ಕೆಲಸದಾಳು ಅವನ ನಿರ್ದೇಶನದಂತೆ ಆ ಜಾಗದಲ್ಲಿನ ಕಾಡು – ಕಸ – ಕಡ್ಡಿಗಳನ್ನು ತೆಗೆಯುತ್ತಾನೆ. ಕೋಪಗೊಂಡ ಎರಡನೆಯವನು ಕೆಲಸದಾಳನ್ನು ಗದರಿಸಿದ. ಹೆದರಿದ ಕೆಲಸದಾಳು ಮೊದಲನೆಯವನ ಬಳಿ ಹೋಗಿ ತನಗೆ ಈ ಕೆಲಸ ಮಾಡಲು ಸಾಧ್ಯವಾಗದು ಎನ್ನುತ್ತಾನೆ. ಆಗ ಆತನ ಉತ್ತರ ‘ಬೊಗಳುವ ನಾಯಿ ಕಚ್ಚುವುದಿಲ್ಲ’ ನೀನು ಹೋಗಿ ನಿನ್ನ ಕೆಲಸಮಾಡು’ ಈ ಸನ್ನಿಹಿತ ಸಂದರ್ಭದಲ್ಲಿ ಪ್ರಸ್ತುತ ಗಾದೆಯ ಅರ್ಥವನ್ನು ಹೀಗೆ ಸಂಕ್ಷೇಪಿಸಬಹುದು. ಹೆಚ್ಚು ಮಾತನಾಡುವವನು ಆಡುವುದನ್ನೆಲ್ಲ ಕೃತಿಯಲ್ಲಿ ತೋರಿಸುವುದಿಲ್ಲ. ಹಗೆ ತೀರಿಸಿಕೊಳ್ಳುತ್ತೇನೆ ಎಂದು ಬರಿಯ ಮಾತನಿಂದಷ್ಟೇ ಆಡುವವನಿಗೆ ಹೆದರಬೇಕಾಗಿಲ್ಲ.

ಈ ಗಾದೆಯನ್ನು ಒಬ್ಬನೇ ವ್ಯಕ್ತಿ ಹಲವು ಸಂದರ್ಭಗಳಲ್ಲಿ ಬಳಸಬಹುದು. ಅಂತೆಯೇ ಒಂದೆ ಗಾದೆಯನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ವ್ಯಕ್ತಿಗೂ ಬಳಸಬಹುದು. ಅವು ಪ್ರತಿಯೊಂದಕ್ಕೂ ವಿಭಿನ್ನ ಸನ್ನಿಹಿತ ಸಂದರ್ಭಗಳಿರುತ್ತವೆ. ಈ ಸಂದರ್ಭಗಳೇ ಗಾದೆಯ ಅರ್ಥವನ್ನು ನಿರ್ಣಯಿಸುವಂಥವು. ಪ್ರತಿಯೊಂದು ಸಂದರ್ಭದಲ್ಲೂ ಒಂದು ಗಾದೆಗೆ ಬೇರೆ ಬೇರೆ ಅರ್ಥಗಳಿರುವುದಾದರೂ ಅವುಗಳೆಲ್ಲ ಪೂರ್ತಿ ಬೇರೆಯೇ ಆದ ಅರ್ಥವನ್ನು ಸೂಚಿಸುತ್ತವೆ ಎಂದು ಹೇಳಲಾಗದು. ಒಂದು ಗಾದೆಯ ‘ಸನ್ನಿಹಿತ ಸಂದರ್ಭಗಳು’ ವಿಭಿನ್ನವಾಗಿರುವಾಗಲೇ ಅದಕ್ಕೆ ಸಮಾನತೆಯೂ ಇರುತ್ತದೆ. ಸಮಾನವಾದ ಈ ಸನ್ನಿಹಿತ ಸಂದರ್ಭಗಳನ್ನು ಸಾಧಾರಣೀಕರಣಗೊಳಿಸುವ ಮೂಲಕ ನಾವು ಒಂದು ಗಾದೆಯ ‘ವಿಶಾಲವಾದ ಸಂದರ್ಭ’ ದತ್ತ ಸಾಗುತ್ತೇವೆ. ಪ್ರತಿಯೊಂದು ಗಾದೆಯ ಸಮಾನ ಸನ್ನಿಹಿತ ಸಂದರ್ಭಗಳೆಲ್ಲವೂ ಹೊರಡಿಸುವ ಅರ್ಥವನ್ನು ನಾವು ಸಾಧಾರಣೀಕರಣಗೊಳಿಸುವ ಮೂಲಕ ಅದೇ ಗಾದೆಯ ವಿಶಾಲ ಸಂದರ್ಭವು ಹೊರಡಿಸುವ ಅರ್ಥದತ್ತಲೂ ಸಾಗುತ್ತೇವೆ.

ಒಂದೇ ಗಾದೆಯು ವಿಭಿನ್ನ ಸಂದರ್ಭಗಳಲ್ಲಿ ಬಳಕೆಯಾಗುತ್ತದೆ ಎನ್ನುವ ಹಾಗೆಯೇ ಒಂದೇ ಸಂದರ್ಭದಲ್ಲಿ ಬಳಕೆ ಮಾಡಬಹುದಾದ ಬೇರೆ ಬೇರೆ ಗಾದೆಗಳೂ ಇರಬಹುದು. ‘ಬೊಗಳುವ ನಾಯಿ ಕಚ್ಚುವುದಿಲ್ಲ’ ಎನ್ನುವುದಕ್ಕೆ ಹೆಚ್ಚು ಕಡಿಮೆ ಸಮಾನವಾದ ಗಾದೆ ಇದು ‘ವಾಕ್ಕೆತ್ತುನ್ನೋಂಡೇ ನೋಕ್ಕೆತ್ತೂಲ (ಮಾತು ತಗಲುವವನ ನೋಟ ತಲಪದು ನೋಟ ತಗಲುವವನ ಮಾತು ತಗಲದು), ಹೆಚ್ಚು ಮಾತು ಆಡುವಾಗ ಯಾವುದನ್ನು ಕುರಿತು ಮಾತಾಡಲಾಗುತ್ತದೋ ಅದರ ಕುರಿತು ಹೆಚ್ಚು ಗಮನವಿರದು. ಸ್ವಲ್ಪವೇ ಮಾತನಾಡುವವನು ಸಂಗತಿಗಳನ್ನು ಶ್ರದ್ಧೆಯಿಂದ ಗಮನಿಸುವವನಾಗಿರಬಹುದು ಎಂಬುದು ಈ ಗಾದೆಯ ಸಾಮಾನ್ಯವಾದ ಅರ್ಥ. ‘ಬೊಗಳುವ ನಾಯಿ ಕಚ್ಚುವುದಿಲ್ಲ’ ಎಂಬ ಗಾದೆಯ ನಾಯಿ, ಮಲಯಾಳಿಗೆ ಸಂಬಂಧಿಸಿದಂತೆ ಬಯ್ಯಲು ಉಪಯೋಗಿಸುವ ಒಂದು ಮಾತು. ಹಾಗಾಗಿ ಈ ಗಾದೆಯನ್ನು ಬಳಸುವ ಮೂಲಕ ಯಾರನ್ನು ಉದ್ದೇಶಿಸಿ ಈ ಗಾದೆ ಪ್ರಯೋಗವಾಯಿತೋ ಆ ವ್ಯಕ್ತಿಯನ್ನು ಬಯ್ದಂತೆಯೂ ಆಯಿತು. ಸುಮ್ಮನೆ ಬಗುಳಬೇಡ, ಯಾಕೆ ಬಗುಳುತ್ತಿ? ಯಾಕೆ ಬೊಗಳಿ ಬೊಗಳಿ ಕುಣಿಯುತ್ತಿ – ಮುಂತಾದ ಪ್ರಯೋಗಗಳು ಈ ಗಾದೆಗೆ ಸಮಾನವಾದ ಕೆಲವು ಮಾತುಗಳಾಗಿವೆ.

‘ಬೊಗಳುವ ನಾಯಿ ಕಚ್ಚುವುದಿಲ್ಲ’ ಎಂಬ ಗಾದೆಯ ವಿಪರೀತ ಅರ್ಥ ಕೊಡುವ ಗಾದೆ ‘ಮೌನಿ ಬೆಕ್ಕು ಮಡಕೆ ಒಡೆದೀತು’. ‘ಏನನ್ನು ಮಾತನಾಡದಾತ ಮನಸ್ಸಲ್ಲಿ ತೀರ್ಮಾನಿಸಿದ್ದನ್ನು ನಡೆಸಿಯೇ ಬಿಡುತ್ತಾನೆ’ ಎಂಬುದು ಈ ಗಾದೆಯ ಪ್ರಾಥಮಿಕ ಅರ್ಥ. ಆದರೆ, ಸದ್ದುಗದ್ದಲವಿಲ್ಲದೆ ಮೌನವಾಗಿ ಇರುವಾಗಲೇ ಮನಸ್ಸಲ್ಲಿನ ಕಪಟವನ್ನು ಕಾಪಿಡುತ್ತ ಇರುವ ಒಬ್ಬಾತನನ್ನು ಸೂಚಿಸುವುದಕ್ಕೂ ‘ಮೌನಿ ಬೆಕ್ಕು’ ಎಂಬ ಮಾತನ್ನು ಉಪಯೋಗಿಸಲಾಗುತ್ತದೆ. ‘ಅನಿರೀಕ್ಷಿತವಾಗಿ, ಸಂಕಟ ತಂದಿಡುವುದು’ ಎಂಬ ಅರ್ಥದಲ್ಲಿ ‘ಮೌನಿ ಬೆಕ್ಕು ಮಡಕೆ ಒಡೆದೀತು’ ಎಂಬ ಗಾದೆ ಪ್ರಯೋಗದಲ್ಲಿದೆ.

ಒಂದೇ ಗಾದೆಯ ಈ ರೀತಿಯ ಅರ್ಥ ವ್ಯತ್ಯಾಸಗಳನ್ನು ನಿರ್ಣೈಸುವುದು ಅದರ ಸನ್ನಿಹಿತ ಸಂದರ್ಭಗಳು. ಸರಿಯಾದ ಕ್ಷೇತ್ರ ಕಾರ್ಯದ ಮೂಲಕವಷ್ಟೇ ಈ ಸನ್ನಿಹಿತ ಸಂದರ್ಭಗಳನ್ನೂ ಅವು ಸೃಷ್ಟಿಸುವ ಅರ್ಥಗಳನ್ನೂ ಕಂಡುಕೊಳ್ಳಲು ಸಾಧ್ಯ. ಇದು ಅತ್ಯಂತ ಪ್ರಾಸದಾಯಕವಾದ ಒಂದು ಕೆಲಸ. ಒಬ್ಬಾತ ಒಂದು ಗಾದೆಯನ್ನು ಪ್ರಯೋಗಿಸುವುದು ಯಾವಾಗ ಎನ್ನುವುದನ್ನು ಭವಿಷ್ಯ ಹೇಳಲು ಸಾಧ್ಯವಿಲ್ಲ. ಪ್ರವಚನಾತೀತ ವಾದ ಇಂಥ ಸಂದರ್ಭಗಳು ಗಾದೆಗಳ ಕುರಿತಾದ ಕ್ಷೇತ್ರ ಕಾರ್ಯಕ್ಕೆ ಪ್ರತಿಕೂಲವಾಗುವ ಮುಖ್ಯ ಘಟಕವಾಗಿದೆ.

ಗಾದೆಯೊಂದರ ಜೀವ ಎಂದರೆ ಅದರ ಸಂದರ್ಭ. ಸಂದರ್ಭದಿಂದ ಗಾದೆಯನ್ನು ಪ್ರತ್ಯೇಕಿಸಿದರೆ ಗಾದೆ ಸಾಮಾನ್ಯವಾದ ಒಂದು ಪ್ರಸ್ತಾವನೆ ಮಾತ್ರ. ಆಡು ಮಲಗಿದ್ದಲ್ಲಿ ರೋಮ ಕಂಡೀತು’ (ಆಡ್ ಕಿಡನ್ನಡುತ್ತ್ ಪೂಡ ಕಾಣುಂ) ಎಂಬುದನ್ನು ಸಂದರ್ಭ ಬೇರೆ ನಿಲ್ಲಿಸಿದರೆ ಅದು ಕೇವಲ ಒಂದು ಸಾಮಾನ್ಯ ಪ್ರಸ್ತಾವನೆಯಾದೀತು. ಆದರೆ ಒಬ್ಬಾತ ಇನ್ನೊಬ್ಬನ ದುಷ್ಕೃತ್ಯಗಳನ್ನು ಟೀಕಿಸುವ ಸಂದರ್ಭದಲ್ಲಿ ಈ ಗಾದೆಯನ್ನು ಬಳಸುವುದಾದರೆ ಎಷ್ಟು ಮೆಮಾಚಲು ಪ್ರಯತ್ನಿಸಿದರೂ ಕಳ್ಳತನ ಬೆಳಕಿಗೆ ಬಾರದಿರದು ಎಂಬ ಅರ್ಥ ಇದರಿಂದ ಸಿಗುತ್ತದೆ. ಸಂದರ್ಭದ ಕುರಿತು ಸರಿಯಾದ ತಿಳುವಳಿಕೆ ಇಲ್ಲದಿದ್ದರೆ ಗಾದೆಯನ್ನು ಪ್ರಯೋಗಿಸುವುದು ಅಸಾಧ್ಯ. ಉಚಿತವಾದ ಸಂದರ್ಭದಲ್ಲಿ ಪ್ರಯೋಗಗೊಂಡಾಗ ಮಾತ್ರ ಗಾದೆಯ ಧರ್ಮ ನೆರವೇರಿಸಲ್ಪಡುತ್ತದೆ. ಹೇಳಿದ ವಿಷಯವನ್ನು ಪುಷ್ಟೀಕರಿಸುವುದು, ಕೇಳುವವನಿಗೆ ಹೀತೋಪದೇಶ ನೀಡುವುದು, ಹೇಳಿದ ವಿಷಯವನ್ನು ವಿಷದೀಕರಿಸುವುದು ಮುಂತಾದ ಅನೇಕ ಧರ್ಮಗಳು ಗಾದೆಗೆ ಇವೆ. ಈ ಧರ್ಮಗಳೆಲ್ಲವೂ ಗಾದೆ ಪ್ರಯೋಗವಾಗುವ ಸನ್ನಿಹಿತ ಸಂದರ್ಭವನ್ನು ಆಶ್ರಯಿಸುತ್ತದೆ.

ಮಲಯಾಳದ ಗಾದೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಕೇರಳದ ಸಾಮಾಜಿಕ ವ್ಯವಸ್ಥೆ, ಭೂಪ್ರಕೃತಿ, ಕೃಷಿ ಸಂಪ್ರದಾಯ, ಉದ್ಯೋಗ ಹೀಗೆ ವಿವಿಧ ವೈಶಿಷ್ಟ್ಯಗಳು ಅವುಗಳನ್ನು ರೂಪಿಸಿವೆ ಎಂದು ತಿಳಿದುಕೊಳ್ಳಲು ಸಾಧ್ಯ.

‘ಅಂಗವೂ ಕಾಣಾಂ ತಾಳಿಯುವೊಡಿಕ್ಕಾಂ
(ಅಂಕಣವನ್ನು ನೋಡಬಹುದು, ತಾಳಿಯನ್ನೂ ಕೀಳಿಸಬಹುದು).

‘ಅಂಗಂ ಪೊರುದ್ ಕುಡಿಪ್ಪಗ ಪೀಡಣರೆ’
(ಅಂಕದ ಹೋರಾಟ ಹಗೆತನ ಸಾಧಿಸಬೇಕು).

‘ಅಂಗಂ ವೆಟ್ಟಿಯೆ ನಾಡ್ ಪಿಡಿಕ್ಕುಂ’
(ಅಂಕಸಾಧಿಸಿಯೇ ರಾಜ್ಯ ಹಿಡಿಯಬೇಕು).

(ಅಂಗಂ = ಅಂಕ – ಯಾವುದಾದರೂ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಇಬ್ಬರಿಗಾಗಿ ಇಬ್ಬರು ನಡೆಸುವ ದ್ವಂದ್ವಕಾಳಗ. ತಾಳಿ = ಗುಂಪು – ಕೆಲವು ಮರಗಳ ಎಲೆಗಳಿಂದ ತಯಾರಿಸಲಾಗುವ ಜನಪದ ಷ್ಯಾಂಪು. ಕುಡಿಪ್ಪಗ = ಮುಂದುವರಿದ ಬಂದ ಪೂರ್ವಜರ ಹಗೆತನ) ದ್ವಂದ್ವ ಕಾಳಗದ ಕುರಿತಾದ ಮೇಲಿನ ಗಾದೆ ಮತುಗಳು ಯುದ್ಧ ಮತ್ತು ಹಳೆಯ ದ್ವೇಷ ಸಾಧನೆಗೂ ಮಹತ್ವಕೊಟ್ಟಿದ್ದ ಒಂದು ಪಾಳೆಯಗಾರಿಕೆ ಸಮುದಾಯದ ಸೃಷ್ಟಿ ಎನ್ನುವುದು ಸ್ಪಷ್ಟ. ‘ಅಂಥ ಭೋಜನ ಶಾಲೆಗೆ ಇಂಥ ಸಂಧ್ಯಾವಂದನ’ ಎಂಬ ಗಾದೆಯಲ್ಲಿ ಭೋಜನ ಶಾಲೆಯೂ ವಾರಾನ್ನವೂ ಎನ್ನುತ್ತ ನಡೆದಾಡಿದ್ದ ಕೇರಳದ ಬ್ರಾಹ್ಮಣರ ಶಬ್ದವನ್ನು ನಾವು ಕೇಳುತ್ತೇವೆ. ದೇವಾಲಯದ ಭೋಜನ ಶಾಲೆಯ ಊಟ ತೀರ ಕಳಪೆ. ಆಗ ಸಂಧ್ಯಾವಂದನೆಯೂ ಅದಕ್ಕನುಸಾರವಾಗಿ ಸಾಕು ಎಂಬುದು ಈ ಗಾದೆಯ ವ್ಯಾಪಕಾರ್ಥ. ಆದರೂ ಊಟಕ್ಕಾಗಿ ಸಂಧ್ಯಾವಂದನೆ ಎಂಬ ಧ್ವನಿ ಇಲ್ಲಿ ಮುಖ್ಯ.

‘ಆಣುಳ್ಳಪ್ಪೋಳ್ ಪೆಣ್ಣ್‌ಭಂಚ್ಚಾಲ್ ತೂಣುಳ್ಳಪ್ಪೋಳ್ ಪುರ ತಾಱೆ’ (ಗಂಡಸು ಇದ್ದಂತೆ ಹೆಂಗಸು ಆಳಿದರೆ ಕಂಬ ಇದ್ದಂತೆ ಮನೆ ಕುಸಿತ) ‘ಚಂದದ ಹೆಣ್ಣು ಕೆಲಸಕ್ಕಾಗದು’

‘ಅಡುಗೆ ಮನೆಯ ಹೆಣ್ಣಿಗೆ ಚಂದ ನೋಡಬೇಕೆ?’
‘ಇಂಜ (ನೊರೆಕಾಯಿ/ಸೀಗೆ?) ವೂ ಹೆಣ್ಣು ಜಜ್ಜಿದಷ್ಟೂ ಮೆತ್ತಗೆ?
‘ಇಟ್ಟಿ (ಸಿಗಡಿ) ಯಮ್ಮ ಹಾರಿದರೆ ಹೊಟ್ಟಿಯಂಬಲ (ಅಡುಗೆ ಮನೆ)ವರೆಗೆ’

ಈ ಗಾದೆಗಳೆಲ್ಲ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿ ಹೆಣ್ಣಿಗೂ ಗಂಡಿಗೂ ನೀಡಿರುವ ಮೌಲ್ಯಗಳು ಎಂಥವು ಎಂಬುದನ್ನು ಸೂಚಿಸುವಂಥವು. ಗಂಡು ಆಳಲು ಇರುವವನು, ಹೆಣ್ಣು ಮನೆಯೊಳಗೆ – ಇರಬೇಕಾದವಳು ಎಂದು ತಿಳಿದಿರುವ ಒಂದು ಸಮಾಜದಿಂದಷ್ಟೆ ಇಂಥ ಗಾದೆಗಳು ಮೂಡಿ ಬಂದಾವು. ಸಮಾಜದ ಉತ್ಪಾದನ ವ್ಯವಸ್ಥೆಯಲ್ಲಿ ಹೆಣ್ಣು ನೀಡುತ್ತಿದ್ದ ಕೊಡುಗೆಯನ್ನು ಮರೆಮಾಚುವಂಥವು ಇವು. ಸಮಾಜವ್ಯವಸ್ಥೆಯ ವೈರುಧ್ಯಗಳನ್ನು ಗಾದೆಗಳು ಒಳಗೊಂಡಿರುತ್ತವೆ ಎಂಬುದರಿಂದ ಗಾದೆಗಳನ್ನು ಮುಂದಿಟ್ಟು ಸ್ತ್ರೀವಾದಿ ಅಧ್ಯಯನಗಳು ನಡೆಯುತ್ತವೆ.

‘ಏಡಕ್ಕಿನಿ ಪೊಂದ್ಯಾಲ್ ತೆಕ್ಕಿನಿ ತಾವೂ’ (ಬಡಗುಮನೆ ಏರಿದರೆ ತೆಂಕು ಮನೆ ತಗ್ಗೀತು) ಎಂಬ ಗಾದೆ ಚೌಕಟ್ಟಿನ ಮನೆಯ ವಿನ್ಯಾಸವನ್ನು ಗಮನಿಸಿ ಉಂಟಾದುದು. ವಡಕ್ಕಿನಿ/ಬಡಗುಮನೆ ಸ್ತ್ರೀಯರಿಗೆ ಇರುವುದು; ತೆಕ್ಕಿನಿ / ತೆಂಕು ಮನೆ ಪುರುಷರಿಗೆ ಇರುವುದು. ಬಡಗುಮನೆ ಏರುವುದು ಎಂದರೆ ಸ್ತ್ರೀ ಆಡಳಿತ ನಡೆಸುವುದು ಎಂಬುದೇ ಅರ್ಥ. ಅದು ತರವಾಡನ್ನು ನಾಶಪಡಿಸೀತು ಎಂಬುದು ಸೂಚನೆ.

ಸ್ತ್ರೀಗೂ ಪುರುಷನಿಗೂ ಸಮಾಜವು ಒಂದೊಂದು ಬೆಲೆಯನ್ನು ಕಟ್ಟಿರುವಂತೆ ಪ್ರತಿಯೊಂದು ಜಾತಿಗೂ ಪ್ರತ್ಯೇಕ ಸ್ಥಾನವನ್ನೂ ನೀಡಿದೆ. ಜಾತಿ ವ್ಯವಸ್ಥೆಯಿಂದ ಪ್ರತ್ಯೇಕಿಸಲ್ಪಟ್ಟ ಕೇರಳೀಯ ಸಮಾಜದ ಚಿತ್ರಣವನ್ನೂ ಗಾದೆಗಳಲ್ಲಿ ಕಾಣಬಹುದು.

‘ಇಡಲ ಚುಡಲಕ್ಕಾಗ, ಶೂದ್ರನ್ ಒಟ್ಟುಮೊಗ’ (ಸಮಿತ್ತು ಅಡುಗೆಗಾಗದು, ಶೂದ್ರನ ಸಂಗ ಆಗದು).

‘ಸೀಮೆಯ ನಾಯರ್ ಹಾಗೂ ಎಳೆಯಗರಿಯ ಪಂಜು ಮಧ್ಯದಲ್ಲೇ ಕೈಕೊಟ್ಟಾರು’. (ನಾಯಕರ ಕೆಟ್ಟ ಸ್ವಭಾವವೊಂದನ್ನು ಗಾದೆ ಬಿಚ್ಚಿಡುತ್ತದೆ).

‘ಆಂಡಿಯ ಮಗನಿಗೆ ಶಂಖ ಊದಲು ಕಲಿಸಬೇಕಾಗಿಲ್ಲ’

‘ಜಾತಿಗುಣ ಗುಡಿಸಿದರೆ ಹೋದೀತೆ?’

‘ಜೀತದಾಳಿಗೆ ಕುಪ್ಪೆ’

‘ಅಧಿಕಾರಿಯ ಕೋಳಿ ಮೊಟ್ಟೆ ಕುಡಿಯನ / ಒಕ್ಕಲಿನ ಅರೆವ ಕಲ್ಲನ್ನು ಒಡೆದೀತು’

‘ಅವರಿಗೆ ಒಂದು ಚಿಗುರು, ವಡವ (ಬಡಗ?) ನಿಗೊಂದು ಗುಡಿಸಲು.

(ಅವರೆ ಚಿಗುರ ತೊಡಗಿದರೆ ಸಿಕ್ಕಸಿಕ್ಕಲ್ಲಿ ಹಬ್ಬಿ ಬಿಡುವಂತೆ ಬಡಗನಿಗೆ ಒಂದು ಗುಡಿಸಲು ಕಟ್ಟಿಕೊಳ್ಳುವ ಅವಕಾಶ ಸಿಕ್ಕಿದರೆ ಅವನ ಕಡೆಯವರು ಊರಿಡೀ ತುಂಬಿಕೊಳ್ಳುತ್ತಾರೆ ಎಂಬ ಭಾವ).

– ಮೇಲಿನ ಗಾದೆಗಳಂಥವು ಸಮಾಜದ ಒಂದೊಂದು ಜಾತಿಯನ್ನೂ ಗುರುತಿಸುವ ಕೆಲಸ ಮಾಡುತ್ತವೆ.

ಜಾತಿ – ಭೂಮಾಲಿಕ – ತುಂಡರಸ ವ್ಯವಸ್ಥೆಯ ಸಮಾಜದಲ್ಲಿ ಒಬ್ಬೊಬ್ಬನ ಸ್ವಭಾವವನ್ನು ಜಾತಿಯ ಆಧಾರದಲ್ಲೇ ಗುರುತಿಸುವ ಪದ್ಧತಿ ಇತ್ತು. ಸಮಾಜದ ಉದ್ಯೋಗ ವ್ಯವಸ್ಥೆ, ಅಧಿಕಾರ ವ್ಯವಸ್ಥೆ, ವರ್ಗ ಸಂಬಂಧಗಳು – ಮುಂತಾದುದನ್ನು ಸಂಬಂಧಿಸಿದ ಸ್ಪಷ್ಟವಾದ ಅಭಿಪ್ರಾಯವಿದ್ದಾಗಲಷ್ಟೆ ಈ ತೆರನ ಗಾದೆಗಳನ್ನು ಅರ್ಥವಿಸಿಕೊಳ್ಳುವುದು ಸಾಧ್ಯ.

‘ಕುಂಭದಲ್ಲಿ ಮಳೆ ಹೊಯ್ದರೆ ಕುಪ್ಪೆಯಲ್ಲೂ ಮಾಣಿಕ್ಯ’

‘ಸೇದುವ ಬಾವಿಯಲ್ಲೇ ಒರತೆ ಇರುವುದು’.

‘ಕಳೆಯಿಲ್ಲದ ಬೆಳೆಯಿಲ್ಲ’

‘ಕರ್ಕಟಕ ಕಳೆದರೆ ದುರ್ಘಟ (ಸಂಕಟ) ಕಳೆಯಿತು’.

‘ಬಂದಳಿಕೆ ಹಿಡಿದ ಮರ ಕೆಡದೆ ಇರದು’.

‘ಸಾವಿರ ಕುರುಂದೋಟಿ (ಒಂದು ಗೊಂಪಿನ ಗಿಡ) ಕುಡಿದರೆ ಹೊಟ್ಟು ಗೊತ್ತಾಗದೆ ಹೆತ್ತೀತು’ (?)

– ಮುಂತಾದ ಗಾದೆಗಳು ಕೇರಳೀಯ ಜನತೆಯ ತಮ್ಮ ಕಾಲಾವಸ್ಥೆ ಭೂಪ್ರಕೃತಿ, ಸಸ್ಯ ಜಾಲಗಳು ಮುಂತಾದುದ್ನು ಯಾವ ರೀತಿಯಲ್ಲಿ ತಿಳಿದುಕೊಂಡಿದ್ದರು ಎಂಬುದನ್ನು ಸೂಚಿಸುತ್ತವೆ.

ಪ್ರದೇಶ, ಜನತೆ, ಕಾಲ – ಇವು ಗಾದೆಗಳ ಸೂಚಕಗಳನ್ನು ನಿರ್ಣೈಸುವ ಘಟಕಗಳಾಗಿವೆ. ಆದುದರಿಂದಲೇ ಸಾಮಾಜಿಕ ಪರಿಣಾಮಗಳು ಗಾದೆಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನುಂಟುಮಾಡುತ್ತವೆ. ಜಾತೀಯ ಸಮಾಜದಿಂದ ಪ್ರಜಾಪ್ರಭುತ್ವ ಸಮಾಜಕ್ಕೆ ಬದಲಾದಾಗ ಜಾತಿಗಳನ್ನು ಕೇಂದ್ರೀಕರಿಸಿದ್ದ ಗಾದೆಗಳನ್ನೆಲ್ಲ ಮರೆತೇ ಹೋಗುವಂತೆ ಮಾಡಿದೆ. ಕೃಷಿ ಸಂಪ್ರದಾಯ, ಉದ್ಯೋಗ ವ್ಯವಸ್ಥೆ ಮುಂತಾದವುಗಳಲ್ಲಿ ಉಂಟಾಗುವ ಬದಲಾವಣೆಗಳು ಕೂಡ ಗಾದೆಗಳ ಬಳಕೆಯ ಮೇಲೆ ಪರಿಣಾಮಬೀರುತ್ತದೆ. ಗಾದೆಯನ್ನು ಹಿಂದಿನ ರೂಪದಲ್ಲೇ ಪ್ರಯೋಗಿಸುವುದಾದರೂ ವಿಭಿನ್ನ ಅರ್ಥದಲ್ಲಿ ಬಳಸುವುದಕ್ಕೆ ಮಲೆಯಾಳದಲ್ಲಿ ಉದಾಹರಣೆಗಳಿವೆ. ‘ಚಕ್ಕ್‌ನ್ ವೆಚ್ಚದ್ ಕೊಕ್ಕಿನ್ ಕೊಂಡು’ (ಚಕ್ಕ್‌(ಗಾಣ)ಗಾಗಿ ಇಟ್ಟಿದ್ದ ಮರದಿಂದ ಕೊಕ್ಕ್‌(ಕೀಲು) ಮಾತ್ರ ತಯಾರಿಸಲಾಯಿತು). ಈ ಗಾದೆ ಪರಂಪರಾನುಗತವಾಗಿ ಗಾಣದಿಂದ ಎಣ್ಣೆ ತೆಗೆಯುತ್ತಿದ್ದ ಸಮೂಹವೊಂದು ಸೃಷ್ಟಿಸಿಕೊಂಡದ್ದು. ಗಾಣ ತಯಾರಿಸಲು ಅಂದಾಜು ಮಾಡಿರಿಸಿದ್ದ ಮರದಿಂದ ಅದರ ಕೀಲಷ್ಟೆ ಸಿದ್ದವಾಯಿತು ಎಂಬುದು ಇದರ ಅರ್ಥ. ದೊಡ್ಡ ಕೆಲಸವೊಂದಕ್ಕೆ ಹೊರಟು ಸಣ್ಣ ಕಾರ್ಯ ಒಂದನ್ನು ಮಾತ್ರ ಸಾಧಿಸಿಕೊಂಡುದು – ಎಂಬ ಸೂಚಿತವನ್ನು ಹೇಳಲು ಈ ಗಾದೆ ಬಳಕೆಯಾಗುತ್ತಿತ್ತು. ಆದರೆ ‘ಕೊಕ್ಕ್‌’ ಎಂದರೆ ಏನೆಂದು ತಿಳಿಯಲಾರದ ಇಂದಿನ ಜನ – ‘ಒಂದಕ್ಕೆ ಗುರಿಯಿಟ್ಟಿದ್ದು ಇನ್ನೊಂದಕ್ಕೆ ತಾಗಿತು’ ಎಂಬ ಅರ್ಥದಲ್ಲಿ ಈ ಗಾದೆಯನ್ನು ಬಳಸುತ್ತಿದ್ದಾರೆ. ಸಾಮಾಜಿಕ ಬದಲಾವಣೆಗೆ ಅನುಸಾರವಾಗಿ ಗಾದೆಯ ರೂಪದಲ್ಲೂ ಬದಲಾವಣೆ ಕಂಡುಬರಬಹುದು. ಹಳೆಯ ಸೂಚಕಗಳಿಗೆ ಬದಲಾಗಿ ಹೊಸ ಸೂಚಕಗಳನ್ನು ಬಳಸಿಕೊಳ್ಳುವ ರೂಢಿ ಉಂಟಾಗುವುದು ಸ್ವಾಭಾವಿಕ ವಾದುದು. ವ್ಯಾಪಕವಾದ ಕ್ಷೇತ್ರ ಕಾರ್ಯದಿಂದಷ್ಟೇ ಇಂಥ ಬದಲಾವಣೆಗಳನ್ನು ಗುರುತಿಸಿಕೊಳ್ಳಲು ಸಾಧ್ಯ.

ಎಲ್ಲರಿಗೂ ತಿಳಿದಿರುವ ಒಂದು ಸಾಮಾನ್ಯದಿಂದ ವಿಶೇಷವಾದ ಒಂದನ್ನು ಗಾದೆ ವಿಶದೀಕರಿಸುತ್ತವೆ. ಅಲಂಕಾರ ಶಾಸ್ತ್ರದಲ್ಲಿ ಇದು ಅರ್ಥಾಂತರನ್ಯಾಸಕ್ಕೆ ಸಮಾನವಾದುದು. ಸೂಚಿತವನ್ನು ಸೂಚಕದಿಂದ ಮರೆ ಮಾಡುತ್ತದೆ. ಗಾದೆಯಲ್ಲಿ ಎರಡು ಸೂಚಕಗಳಿವೆ. ೧. ಉಂಡ ಅನ್ನ, ೨. ಕಲ್ಲು ಹಾಕುವುದು. ಇದರಲ್ಲಿ ಉಂಡ ಅನ್ನ ಉಪಕಾರ ಮಾಡಿದವನನ್ನು ಸೂಚಿಸುತ್ತದೆ. ಅಂತೆಯೇ ಕಲ್ಲು ಹಾಕುವುದು ಎಂಬ ಸೂಚಕವು ತೊಂದರೆ ಕೊಡುವುದು ಎಂಬ ನಿಜ ಸೂಚಿತವನ್ನು ಮರೆಗೊಳಿಸುತ್ತದೆ.

ಹಿರಿಯ ತಲೆಮಾರಿನಿಂದ ಹೊಸ ತಲೆಮಾರಿಗೆ ಗಾದೆಗಳ ಹರಿವು, ಹಿಂದೆಯಾರೋ ಹೇಳಿದಂತೆ ಎಂಬ ತೆರನ ಮುನ್ನುಡಿ ಮಾತುಗಳನ್ನು ಸೇರಿಸಿ ಮಾತನಾಡುವ ಕೆಲವು ಗಾದೆಗಳಂಥ ಪ್ರಯೋಗಗಳು ಮಲಯಾಳದಲ್ಲಿವೆ. ಗಾದೆಗಳಿಗೂ ಗಾದೆಗಳಗಂಥ ಪ್ರಯೋಗಗಳಿಗೂ ರಚನೆಯ ನೆಲೆಯಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ‘ಹಂದಿ ಗುಡ್ಡ ದಾಟಿದಂತೆ’, ‘ನೆಲಕ್ಕೆ ಬಿದ್ದ ಮೀನಿನ ಹಾಗೆ’ ಮುಂತಾದ ಗಾದೆ ಪ್ರಯೋಗಗಳು ಇದಕ್ಕೆ ಉದಾಹರಣೆಗಳು. ಈ ಹಿಂದೆಯೇ ಸೂಚಿಸಿದಂತೆ ಇರುವ ಮುನ್ನುಡಿ ಮಾತುಗಳನ್ನು ಹೇಳುವುದರಿಂದ ಗಾದೆಗೆ ಇನ್ನಷ್ಟು ಅಧಿಕಾರಕತೆ ಉಂಟಾಗುತ್ತದೆ. ಹಿರಿಯ ತಲೆ ಮಾರಿಗೆ ಎಳೆಯ ತಲೆಮಾರು ವಿಧೇಯತೆ ತೋರಿಸಬೇಕೆಂದು ಸಮಾಜವು ಶಾಸಿಸುತ್ತದೆ. ‘ಹಿರಿಯರ ಮಾತು ಮತ್ತು ಬೆಳೆದ ನೆಲ್ಲಿಕಾಯಿ ಮೊದಲು ಕಹಿ, ಆ ಮೇಲೆ ಸಿಹಿ’, ‘ಗಾದೆ ಸುಳ್ಳಾಗದು’ ಮುಂತಾದ ಗಾದೆಗಳೂ ಹಿರಿಯ ತಲೆಮಾರಿಗೆ ಎಳೆಯ ತಲೆಮಾರು ತೋರಿಸಬೇಕಾದ ವಿಧೇಯತೆಯನ್ನು ಒತ್ತಿ ಹೇಳುತ್ತವೆ. ಹಿಂದಿನ ತಲೆಮಾರಿನ ಅನುಭವ ಸಂಪತ್ತಿನಿಂದ ಪಾಠ ಕಲಿಯದವರಿಗೆ ಇರುವ ಎಚ್ಚರಿಕೆ ಅನೇಕ ಗಾದೆಗಳ ಮುಖ್ಯ ಲಕ್ಷಣ.

ಎಲ್ಲ ಸಂಸ್ಕೃತಿಗಳಿಗೂ ಒಂದೇ ರೀತಿ ಬಾಧಕವಾದ ಒಂದು ಘಟನೆಯನ್ನು ಕಂಡುಕೊಂಡು ಗಾದೆಯೊಂದನ್ನು ನಿರ್ವಹಿಸುವುದಕ್ಕೆ ಅಲೆನ್ ಡಂಡೆಸ್ ಪ್ರಯತ್ನಿಸಿದ್ದಾನೆ. ಇದಕ್ಕಾಗಿ ಆತ ಗಾದೆಗಳ ಘಟಕಗಳನ್ನು ವಿಪರೀತ ಸ್ವಭಾವದವು ಸಮಾನ ಸ್ವಭಾವದವು ಎಂದೂ ಎರಡಾಗಿ ವಿಭಜಿಸಿಕೊಂಡಿದ್ದಾನೆ. ಮಲಯಾಳದ ಕೆಲವು ಉದಾಹರಣೆಗಳ ಮೂಲಕ ಇದನ್ನು ವಿಶದ ಪಡಿಸಬಹುದು. ನಾರಿಯ ಆಧಿಪತ್ಯ ಇರುವಲ್ಲಿ, ಲಂಬೆ ನಟ್ಟಜಾಗ (ಎಲ್ಲವೂ ಹಾಳು) ಎಂಬ ಗಾದೆ ಸಮಾನ ಸ್ವಭಾವ ಉಳ್ಳ ಘಟಕಗಳನ್ನು ಒಳಗೊಂಡಿದೆ.

ಕಾರಣಕ್ಕೆ ಸರಿಯಾದ ಕಾರ್ಯ ನಡೆಯಿತೆಂದು ಸೂಚಿಸುವಾಗಲೂ ಸಮಾನ ಸ್ವಭಾವದ ಘಟಕಗಳನ್ನು ಕಾಣಲು ಸಾಧ್ಯ. ಉದಾ: ಹಟ್ಟಿಗೆ ಒರಗಿದರೆ ಸೆಗಣಿ ನಾರೀತು. ಹಟ್ಟಿಗೆ ಒರಗುವುದು = ಸೆಗಣಿ ನಾರುವುದು – ಹೀಗೆ ಸಮಾನ ಸ್ವಭಾವವಿರುವ ಘಟಕಗಳು ಈ ಗಾದೆಯಲ್ಲಿವೆ. ಒಂದರಿಂದ ಇನ್ನೊಂದು ಎಂಬಂತೆ ದೊಡ್ಡದು ಮಾಡಿ ತೋರಿಸುವ ಗಾದೆಗಳೂ ಸಮಾನ ಸ್ವಭಾವದ ಘಟಕಗಳನ್ನು ಒಳಗೊಂಡಿರುತ್ತದೆ ಎಂದು ಡಂಡೆಸ್ ಹೇಳುತ್ತಾನೆ. ಉದಾ: ಅಮ್ಮ ತೊರೆದಾಟಿದರೆ ಮಗಳು ಹೊಳೆ ದಾಟಿಯಾಳು ಎಂಬ ಗಾದೆಯನ್ನು ಈ ವಿಭಾಗಕ್ಕೆ ಸೇರಿಸಬಹುದು. ಇಲ್ಲಿಯೂ ಕಾರ್ಯ ಕಾರಣಗಳಿಗೆ ನೇರಕ್ಕೆ ನೇರವಾದ ಸಂಬಂಧ ಇದೆ. ಆದರೆ ‘ಕಾಗೆ ಮಿಂದರೆ ಕೊಕ್ಕರೆಯಾದೀತೆ?’ ಎಂಬ ಗಾದೆಯು ಕಾಗೆ, ಕೊಕ್ಕರೆ ಮೀಯುವುದು, ಬೆಳ್ಳಗಾಗದಿರುವುದು ಎಂಬ ಹಾಗೆ ವಿಪರೀತ ಸ್ವಭಾವದ ಘಟಕಗಳನ್ನು ಒಳಗೊಂಡಿದೆ. ಇಲ್ಲಿ ಕಾರ್ಯ ನಡೆದೂ ಕಾರಣ ಉಂಟಾಗಿಲ್ಲ (ಮಿಂದೂ ಬೆಳ್ಳಗಾಗಿಲ್ಲ). ಕೆಲವು ಸಂದರ್ಭಗಳಲ್ಲಿ ಈ ವಿಪರೀತ ಸ್ವಭಾವವು ಇನ್ನೊಂದು ರೀತಿಯಲ್ಲಿ ಕಾಣಿಸಿಕೊಳ್ಳಬಹುದು. ಉದಾ: ಬೊಗಳುವ ನಾಯಿ ಕಚ್ಚುವುದಿಲ್ಲ’ ಎಂಬ ಗಾದೆಯಲ್ಲಿ ‘ಬೊಗಳುವುದು’ ಎಂಬ ಸೂಚಕವು ಕಚ್ಚುವುದು ಎಂಬ ಸೂಚಕವನ್ನು ಹೊರದೂಡುತ್ತದೆ. ಒಂದು ನಡೆಯುವಾಗ ಇನ್ನೊಂದು ನಡೆಯುವುದಿಲ್ಲ (ಉರುಳುವ ಕಲ್ಲಿಗೆ ಹಾವಸೆ ಹಿಡಿಯದು ಎಂಬ ಗಾದೆ ಇದೇ ತೆರನಾದುದು). ಬೊಗಳುವ ನಾಯಿ, ಕಚ್ಚುವ ನಾಯಿ ಎಂಬ ಇದರಲ್ಲಿನ ವೈರುಧ್ಯವನ್ನು ಕಂಡುಕೊಳ್ಳಬಹುದು. ಇಲ್ಲಿ ಒಂದರ ಸಾನ್ನಿಧ್ಯವು = ಇನ್ನೊಂದಕೆ ಅಸಾನ್ನಿಧ್ಯ ಎನ್ನಬಹುದು. ಹೀಗೆ ಗಾದೆಗಳ ಘಟಕಗಳನ್ನು ‘ಸಮಾನ ಸ್ವಭಾವ ಉಳ್ಳವು’, ‘ವಿರುದ್ಧ ಸ್ವಭಾವ ಉಳ್ಳವು’ ಎಂದು ಎರಡಾಗಿ ವಿಭಜಿಸಿಕೊಂಡು ಡಂಡೆಸ್ ಗಾದೆಗಳ ರಚನೆಯನ್ನು ವಿವರಿಸಲು ಯತ್ನಿಸುತ್ತಾನೆ.

ರೂಪದಿಂದ ಗಾದೆಯೂ ಒಗಟೂ ಸಾಮ್ಯ ಉಳ್ಳವು. ಆದರೆ ಅವುಗಳ ಧರ್ಮ ಪೂರ್ತಿಯಾಗಿ ಬೇರೆ ಬೇರೆ, ಒಗಟುಗಳು ಮುಖ್ಯವಾಗಿ ಮಕ್ಕಳ ವಿನೋದ. ಆದರೆ ಗಾದೆಗಳು ಪ್ರೌಢರ ಮಾತುಕತೆಯಲ್ಲಿ ಸೇರಿಕೊಳ್ಳುವಂಥವು. ಆದರೆ ಗಾದೆಯನ್ನು ಪ್ರಸಕ್ತವಾಗಿಸುವುದು ಅದರ ಸಂದರ್ಭ. ಗಾದೆಗಳು ಸೂಚಿತಗಳು, ಹೆಚ್ಚಿನವು ಕೂಡ, ಸಮಾಜ ಮುಖಿಯಾದವು. ಒಗಟುಗಳ ಸೂಚಿತಗಳು ಪ್ರಕೃತಿಯ ವಸ್ತುಗಳೋ ಸಂಗತಿಗಳೋ ಆಗಿರುತ್ತವೆ. ಒಗಟುಗಳೂ ಗಾದೆಗಳಲ್ಲೂ ರೂಪಕ ನಿರ್ಮಾಣವಾಗುವುದಿದ್ದರೂ ಇದಕ್ಕೆ ತಮ್ಮೊಳಗೆ ಮೂಲ ಭೂತವಾಗಿ ಒಂದು ವ್ಯತ್ಯಾಸವಿದೆ. ಒಗಟುಗಳಲ್ಲಿನ ರೂಪಕ ನಿರ್ಮಾಣವು ಆಶಯವನ್ನು ಇನ್ನಷ್ಟು ಸ್ಪಷ್ಟ ಪಡಿಸುವ ಉದ್ದೇಶವುಳ್ಳದು.

‘ಹಲವರ ಜ್ಞಾನ ಒಬ್ಬನ ಚತುರೋಕ್ತಿ’ ಎಂದು ಗಾದೆಯನ್ನು ನಿರ್ವಚಿಸುವುದಿದೆ. ಹಲವರ ಅರಿವು ಎನ್ನುವುದರಿಂದ ಸಮಾಜದ ಅರಿವು ಎಂಬುದು ಲಕ್ಷ್ಯ. ಸಂದರ್ಭ ಯೋಗ್ಯವಾಗಿ ಒಬ್ಬಾತ ಉಪಯೋಗಿಸುವ ಮೂಲಕ ಗಾದೆಗೆ ಸ್ವಾರಸ್ಯವುಂಟಾಗುತ್ತದೆ. ಅದು ‘ಒಬ್ಬನ ಚತುರೋಕ್ತಿ’ ಎಂಬುದರಿಂದ ತಿಳಿದುಬರುವ ಸಂಗತಿ. ಭೂತಕಾಲದ ಆಳಗಳಿಗೆ ಬೇರು ಚಾಚಿದ ಸಾಮಾಜಿಕ ಅನುಭವಗಳ ಬೆಂಬಲದೊಂದಿಗೆ ಒಂದು ವಿಶಿಷ್ಟ ಜೀವನ ಸ್ಥಿತಿಯನ್ನು ವಿಶದ ಪಡಿಸಲು ಯವುದಾದರೂ ವ್ಯಕ್ತಿ ನಡೆಸುವ ಪ್ರಯತ್ನವೇ ಒಂದು ಗಾದೆ. ಆದುದರಿಂದಲೇ ಲಿಖಿತ ಕಟ್ಟು ಪಾಡುಗಳೂ ನ್ಯಾಯಾಲಯ ವ್ಯವಸ್ಥೆಯೂ ಇಲ್ಲದ ಸಮಾಜಗಳಲ್ಲಿ ತರ್ಕಕ್ಕೆ/ ವಿವಾದಕ್ಕೆ ಅಂತ್ಯ ಹಾಡುವುದಕ್ಕಾಗಿ ಗಾದೆಗಳನ್ನು ಬಳಸುತ್ತಾರೆ. ನೈಜೀರಿಯಾದಲ್ಲಿ ಅಪರಾಧದ ವಿಚಾರಗಳಿಗೂ ತೀರ್ಪು ನೀಡುವುದಕ್ಕೂ ಗಾದೆಗಳಿಗಿರುವ ಪ್ರಾಧಾನ್ಯ ತುಂಬ ಹೆಚ್ಚಿನದು ಎಂದು ರಿಚರ್ಡ್ ಎಂ. ಡೋರ್‌ಸನ್ ಹೇಳುತ್ತಾನೆ. ಸಂಕ್ಷೇಪಿಸಿ ಹೇಳುವುದಾದರೆ ಅನೇಕ ತಲೆಮಾರುಗಳ ಬದುಕಿನ ಅನುಭವಗಳ ಆಳಮಡುಗಳಿಂದ ವರ್ತಮಾನ ಬದುಕಿಗೆ ಸಾಂದರ್ಭಿಕವಾಗಿ ಮೇಲೆದ್ದು ಬಂದು ಕಾಣಿಸಿಕೊಳ್ಳುವವು – ಗಾದೆಗಳು.

ಕೆ.ಎಂ.ಎ. ಅನುವಾದ ಕೆ.ಕೆ.