ಮಾರಡಿಪ್ಪಾಡಲ್ ಸಾವಿನ ಮನೆಯಲ್ಲಿ ಹೆಣವನ್ನು ಎದ್ದು ಕಾಣುವ ರೀತಿಯಲ್ಲಿ ಒಂದು ಮೂಲೆಯಲ್ಲಿರಿಸಿ ಇಡೀ ರಾತ್ರಿ ಎಚ್ಚರಗೊಂಡಿರಲು ಹೇಳುವ ಹಾಡು. ಎದೆಯನ್ನು ಚಚ್ಚಿಕೊಂಡು ಈ ಹಾಡುಗಳನ್ನು ಹೇಳುವುದರಿಂದ ಇದಕ್ಕೆ ಮಾರಡಿ ಪ್ಪಾಡಲ್ (ಎದೆಚಚ್ಚು ಹಾಡುಗಳು) ಎಂದು ಹೆಸರು. ವಯಸ್ಸಾದ ನಂತರ ಸಹಜವಾಗಿ ಮೃತರಾಗುವ ಹಿರಿಯರಿಗೆ ಮಾತ್ರ ಈ ಹಾಡನ್ನು ಹೇಳಲಾಗುವುದು. ಎದೆ ಬಡಿದುಕೊಂಡು ಹಾಡುವ ಹಾಡುಗಳು ಶೋಕ ಗೀತೆಗಳ ವರ್ಗಕ್ಕೆ ಸೇರಿದರೂ ಕೇಳುವವರಿಗೆ ಹಾಗೂ ನೋಡುವವರಿಗೆ ಒಂದು ರೀತಿಯಲ್ಲಿ ಸಂತೋಷದಾಯಕವಾಗಿಯೇ ಇರುತ್ತದೆ. ಇದಕ್ಕಾಗಿಯೇ ಪ್ರತ್ಯೇಕವಾದ ಕಾಲವನ್ನು ಅಳವಡಿಸಿಕೊಂಡಿರಲಾಗುತ್ತದೆ. ಆದ್ದರಿಂದ ವಿಷಯ ದುಃಖಕರವಾಗಿದ್ದರೂ ಹಾಡುವ ರೀತಿ ಇಂಪಾಗಿರುತ್ತದೆ. ಮಹಿಳೆಯರು ಇಡೀ ರಾತ್ರಿ ಈ ಹಾಡುಗಳನ್ನು ಹಾಡುತ್ತಾ ಎದೆಯನ್ನು ಹೊಡೆದುಕೊಂಡು ಅಳುತ್ತಾ ಸಮಯವನ್ನು ಕಳೆಯುತ್ತಾರೆ. ಪ್ರಾಸಬದ್ಧವಾಗಿಯೂ ತಾಳಬದ್ಧವಾಗಿಯೂ ಪ್ರತಿಯೊಂದು ಸಾಲನ್ನು ಹಾಡುವಾಗ ‘ತಾನೇ ತಾನೇ ತನ್ನಾನನೇ’ ಎಂದು ತಾಳ ರೂಪುಗೊಳ್ಳುತ್ತದೆ.

ಪ್ರಾರಂಭ ‘ಅತ್ತಾಡಿಯೋ, ಅತ್ತಾಡಿಯೋ’ ಅಥವಾ ‘ಅಮ್ಮಾಡಿಯೋ ಅಮ್ಮಾಡಿಯೋ’ ಎಂದು ಇರುತ್ತದೆ. ಇದರಲ್ಲಿ ವಯಸ್ಸಾದ ಒಬ್ಬ ಹೆಂಗಸು ಒಂದು ಸಾಲನ್ನು ಹಾಡಿದಾಗ ಅದನ್ನು ಅನುಸರಿಸಿ ಉಳಿದೆಲ್ಲ ಹೆಂಗಸರು ಎದೆಯನ್ನು ಬಡಿದುಕೊಳ್ಳುತ್ತಾ ‘ಆತ್ತಾಡಿಯೋ, ಆತ್ತಾಡಿಯೋ’ ಎಂದು ಸಾಮೂಹಿಕವಾಗಿ ಹಾಡುತ್ತಾರೆ. ಉದಾ:

ಅರ್ಜುನನಿಗೆ ಬಾವನೇ
ಆತ್ತಾಡಿಯೋ ಆತ್ತಾಡಿಯೋ

ಶೋಕಗೀತೆಗಳಲ್ಲಿ ಕಾಣುವ ಎರಡು ಬಗೆಯಾದ ಒಪ್ಪಾರಿ ಮತ್ತು ಎದೆಚಚ್ಚು ಹಾಡುಗಳಲ್ಲಿರುವಂತೆಯೇ ಛಂದಸ್ಸು ಮತ್ತು ತಾಳ ಇದರಲ್ಲಿಯೂ ಇರುತ್ತದೆ. ಕೆಲವು ಸಾಲುಗಳನ್ನು ಇಲ್ಲಿ ಕೊಡಲಾಗಿದೆ. ಪ್ರತಿಯೊಂದು ಸಾಲಿನ ‘ಆತ್ತಾಡಿಯೋ ಆತ್ತಾಡಿಯೋ’ ಎಂದು ಪುನರಾವರ್ತಿಸಿ ಹಾಡಲಾಗುತ್ತದೆ.

ಈ ಹಾಡಿನಲ್ಲಿರುವ ಮುಖ್ಯವಾದ ಅಂಶವೆಂದರೆ ಮೃತರಾದವರು ಅನಾರೋಗ್ಯದಿಂದ ಹಾಸಿಗೆ ಹಿಡಿದದ್ದು, ಅವರ ಮಗ ಅಸಲೂರು ವೈದ್ಯರನ್ನು ಕರೆಸಿಕೊಳ್ಳುವುದು, ಅವರು ವರ್ತಮಾನ ತಿಳಿದ ಕೂಡಲೇ ಬಂದದ್ದು, ಕೆಲವು ಔಷಧಿಗಳ ಬಗೆಗೆ ಹೇಳುವುದು, ವೈದ್ಯರು ನಾಡಿ ಪರೀಕ್ಷಿಸಿ ಇನ್ನು ಪ್ರಯೋಜನವಿಲ್ಲವೆಂದು ಹೇಳುವುದು, ನಾಲ್ಕು ದಿಕ್ಕುಗಳಿಗೆ ಆಳುಗಳನ್ನು ಕಳುಹಿಸಿ ನಂಟರಿಷ್ಟರನ್ನು ಬರಮಾಡಿಕೊಳ್ಳುವುದು, ಸುಂದರವಾದ ರಥದಂತಹ ಚಟ್ಟವನ್ನು ನಿರ್ಮಿಸುವದು, ತಲೆಮೇಲೆ ನೀರು ಸುರಿಯುವುದು ಮುಂತಾದ ವಿಚಾರಗಳನ್ನು ಕಣ್ಣಿಗೆ ಕಟ್ಟುವಂತೆ ಒಂದು ಸಣ್ಣ ನಾಟಕದ ಪ್ರದರ್ಶನದಂತೆ ಹಾಡಲಾಗುತ್ತದೆ.

ಒಪ್ಪಾರಿ ಹಾಡುಗಳಲ್ಲಿಯ ಮುಖ್ಯವಾದ ಲಕ್ಷಣವೆಂದರೆ ಒಂದೇ ಅರ್ಥವುಳ್ಳ ಪದಗಳನ್ನು ಮತ್ತೆ ಮತ್ತೆ ಪುನರುಚ್ಚಾರಣೆ ಮಾಡುವುದು. ಅಂತಹುದೇ ದಾಟಿಯಲ್ಲಿ ಇವನ್ನೂ ಹಾಡಲಾಗುತ್ತದೆ. ಇವನ್ನು ಹಾಡುವವರು ಬಹುಮಟ್ಟಿಗೆ ಹಿಂದುಳಿದ ವರ್ಗಕ್ಕೆ ಸೇರಿದ ಹೆಂಗಸರು. ಒಪ್ಪಾರಿ ಹಾಡುಗಳನ್ನು ಎಲ್ಲಾ ವರ್ಗದ ಜನರೂ ಹಾಡುತ್ತಾರೆ. ಆದರೆ ಎದೆಚಚ್ಚು ಹಾಡುಗಳನ್ನು ಮಾತ್ರ ಕೆಲವರು ಹಾಡುತ್ತಾರೆ. ಇದು ಇತರ ಜನರಲ್ಲಿ ಅಭ್ಯಾಸವಿಲ್ಲ. ಹೆಚ್ಚು ಜನ ಈ ಹಾಡುಗಳನ್ನು ಕಲಿಯುವುದಿಲ್ಲ.

ಗ್ರಾಮೀಣ ಪ್ರದೇಶದಲ್ಲಿ ರೂಢಿಯಲ್ಲಿರುವ ಹಲವು ಬಗೆಯ ಔಷಧೋಪಚಾರಗಳ ಬಗೆಗೂ ಈ ಜನರಿಗೆ ಅಭಿಮಾನವಿದೆ. ಗ್ರಾಮ ವೈದ್ಯರಲ್ಲಿ ರೂಢಿಯಲ್ಲಿರುವ ಕೆಲವು ಆಚಾರಗಳು ಇವರ ಹಾಡುಗಳಲ್ಲಿ ಸ್ಥಾನ ಪಡೆದಿರುತ್ತವೆ. ಹಾಲಿನಲ್ಲಿ ಹತ್ತಿಯನ್ನು ನೆನೆಸಿ ಬಾಯಲ್ಲಿಡುವುದು, ರೇಷ್ಮೆ ಬಟ್ಟೆಯನ್ನು ಕೈಯಲ್ಲಿಟ್ಟು ನಾಡಿ ಪರೀಕ್ಷೆ ಮಾಡುವುದು ಮುಂತಾದವುಗಳನ್ನು ಅವರ ಹಾಡುಗಳಲ್ಲಿ ಕಾಣಬಹುದು.

ತೇರಿನಂತಹ ಚಟ್ಟವನ್ನು ನಿರ್ಮಿಸುವುದು ಸಹ ಒಂದು ಕಲೆ. ಅದನ್ನು ಹಾಡಿನಲ್ಲಿ ವರ್ಣಿಸಲಾಗುತ್ತದೆ. ಮಧ್ಯೆ ಆಗಾಗ್ಗೆ ‘ಹರಹರಾ’, ‘ಗೋವಿಂದಾ’ ಎಂದು ಉದ್ಗಾರ ಮಾಡುತ್ತಾ ಹಾಡು ಮುಂದುವರಿಯುತ್ತದೆ.

ಎಸ್.ವಿ.ಅನುವಾದ ವಿ.ಜಿ.

 

ಮಾರಮ್ಮ ಚಿತ್ತೂರು ಜಿಲ್ಲೆ ಮತ್ತು ಆಂಧ್ರಪ್ರದೇಶದ ಅನೇಕ ಕಡೆಗಳಲ್ಲಿ ಈ ದೇವತೆಯ ಆರಾಧನೆ ಕಂಡುಬರುತ್ತದೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಮಕ್ಕಳನ್ನು ಕೆಲವು ವ್ಯಾಧಿಗಳು ಪೀಡಿಸುತ್ತವೆ. ಈ ವ್ಯಾಧಿಗಳಿಂದ ಗುಣಮುಖರಾದ ಮಕ್ಕಳು ಸೊಂಟದ ಸುತ್ತ ಬೇವಿನ ರೆಂಬೆಗಳನ್ನು ಸುತ್ತಿಕೊಂಡು ಮುಖಕ್ಕೆ ಕಪ್ಪು ಮತ್ತು ಬಿಳಿ ಚುಕ್ಕೆಗಳನ್ನು ಇಟ್ಟಿಕೊಂಡು ‘ಮಾರಮ್ಮನಿಗೆ ಭಿಕ್ಷೆ ಕೊಡಿ’ ಎಂದು ಕೂಗುತ್ತಾ ಮನೆ ಮನೆಗೂ ಹೋಗಿ ಭಿಕ್ಷೆ ಬೇಡತ್ತಾರೆ. ಸಂಗ್ರಹಿಸಿದ ಅಕ್ಕಿಯನ್ನು ಮಾರಮ್ಮನ ದೇವಸ್ಥಾನಕ್ಕೆ ಸಮರ್ಪಿಸುತ್ತಾರೆ. ಬೇರೆ ಗ್ರಾಮದೇವತೆಗಳಿಗೆ ಪೂಜೆ ಮಾಡುವ ರೀತಿಯಲ್ಲೆ ಮಾರಮ್ಮನಿಗೂ ಸದಾ ಬೆಲ್ಲದನ್ನದ ನೈವೇದ್ಯ (ಪೊಂಗಲ್) ಮಾಡಿ, ಹುಂಜ, ಟಗರುಗಳನ್ನು ಬಲಿಕೊಡುತ್ತಾರೆ. ಆದರೆ ಈ ಪ್ರಾಂತದಲ್ಲಿ ಮಾರಮ್ಮನಿಗೆ ಕೋಣವನ್ನು ಬರಿ ಕೊಡುವುದಿಲ್ಲ. ಮಾರಮ್ಮನಿಗೆ ಸಂಬಂದಪಟ್ಟಂತಹ ಎರಡು ಕಥೆಗಳು ಈ ರೀತಿ ಇವೆ.

ಭೃಗುಮಹರ್ಷಿಗಳ ಮಡದಿ ನಾಗಾವಳಿ ಪತಿವ್ರತೆ ಮತ್ತು ರೂಪವಂತಳು ಆಗಿದ್ದಳು. ಒಂದು ದಿನ ಭೃಗುಮಹರ್ಷಿಗಳು ಮನೆಯಲ್ಲಿ ಇಲ್ಲದ ಸಮಯದಲ್ಲಿ ಆಕೆಯ ಪಾತಿವ್ರತ್ಯವನ್ನು ಪರೀಕ್ಷಿಸುವುದಕ್ಕೆ ತ್ರಿಮೂರ್ತಿಗಳು ಮನೆಯ ಒಳಗಡೆ ನುಗ್ಗಿದರು. ಅವರ ಬಗ್ಗೆ ಅರಿಯದ ನಾಗಾವಳಿ ಅವರನ್ನು ಮಕ್ಕಳನ್ನಾಗಿ ಮಾರ್ಪಡಿಸುತ್ತಾಳೆ. ಇದರಿಂದ ಕುಪಿತಗೊಂಡ ತ್ರಿಮೂರ್ತಿಗಳು ಆಕೆಯ ಮುಖ ಕುರೂಪಿಯಾಗಬೇಕೆಂದು ಶಪಿಸುತ್ತಾರೆ. ಮನೆಗೆ ಬಂದ ಭೃಗು ಕುರೂಪಿಯಾಗಿರುವ ಮಡದಿಯನ್ನು ಮನೆಯಿಂದ ಹೊರಗೆ ದಬ್ಬುತ್ತಾನೆ. ಮುಂದಿನ ಜನ್ಮದಲ್ಲಿ ಮನುಷ್ಯರ ಮುಖವನ್ನು ವಿಕೃತಗೊಳಿಸುವ ವ್ಯಾಧಿ ರಾಕ್ಷಿಸಿಯಾಗಿ ಮಾರಿಯಾಗಿ ಜನಿಸಬೇಕೆಂದು ಶಪಿಸುತ್ತಾನೆ. (‘ಮಾರಿ’ ಅಂದರೆ ನಾಶ ಮಾಡುವವಳು, ನಷ್ಟವನ್ನುಂಟು ಮಾಡುವವಳು) ಆಕೆ ಅನಂತರದ ಕಾಲದಲ್ಲಿ ‘ಮಾರಮ್ಮ ದೇವತೆ’ಯಾಗಿ ಪ್ರಸಿದ್ಧಳಾದಳು.

ಇನ್ನೊಂದು ಕಥೆಯ ಪ್ರಕಾರ ಮಾರಮ್ಮ ಜಮದಗ್ನಿ ಋಷಿಗಳ ಮಡದಿ ರೇಣುಕೆ. ಈಕೆ ಮಹಾಪತಿವ್ರತೆ, ಈಕೆ ತನ್ನಲ್ಲಿರುವ ಪಾತಿವ್ರತ್ಯದ ಮಹಿಮೆಯಿಂದ ನೀರನ್ನು ಮೂಟೆಯನ್ನಾಗಿ ಕಟ್ಟಿಕೊಂಡು, ಕೈಯಲ್ಲಿ ಇಟ್ಟುಕೊಂಡು ಬರುವವಳು. ಒಗೆದ ಬಟ್ಟೆಗಳು, ಗಾಳಿಯಲ್ಲೆ ತೇಲಾಡುತ್ತಾ ಒಣಗುತ್ತವೆ. ಕೆಳಗಡೆ ಬೀಳುವುದಿಲ್ಲ. ರೇಣುಕೆ ಒಂದು ದಿನ ಎಂದಿನಂತೆ ನದಿಯಲ್ಲಿ ಸ್ನಾನ ಮಾಡಿ ಮನೆಗೆ ಬರುತ್ತಿದ್ದಳು. ಆ ಸಮಯದಲ್ಲಿ ಗಂಧರ್ವರು ಆಕಾಶದಲ್ಲಿ ಹೋಗುತ್ತಿದ್ದರು. ಆಕೆಗೆ ಅವರ ಪ್ರತಿಬಿಂಬ ನೀರಿನಲ್ಲಿ ಕಾಣಿಸಿತು. ರೇಣುಕೆ ಅವರ ಸೌಂದರ್ಯಕ್ಕೆ ಒಂದು ಕ್ಷಣ ಮುಗ್ಧಳಾಗುತ್ತಾಳೆ. ಈ ಯೋಚನೆ ಆಕೆಯ ಮನದಲ್ಲಿ ಬಂದ ತಕ್ಷಣವೆ ಪಾತಿವ್ರತ್ಯದ ಮಹಿಮೆ ಕಡಿಮೆಯಾಗಿ ಕೈಯಲ್ಲಿರುವ ನೀರು ಕೆಳಗೆ ಚೆಲ್ಲುತ್ತದೆ. ತೇಲಾಡುತ್ತಿರುವ ವಸ್ತ್ರಗಳು ಕೆಳಗೆ ಬೀಳುತ್ತವೆ. ರೇಣುಕ ಒಣಗದ ಬಟ್ಟೆಯನ್ನುಟ್ಟು ನೀರಿಲ್ಲದ ಮನೆಗೆ ಹೋಗುತ್ತಾಳೆ. ಜಮದಗ್ನಿಗೆ ವಿಷಯ ಗೊತ್ತಾಗುತ್ತದೆ. ಮಗನಾದ ಪರಶುರಾಮನನ್ನು ಕರೆದು, ರೇಣುಕೆಯನ್ನು ಕಾಡಲ್ಲಿ ವಧಿಬೇಕೆಂದು ಹೇಳುತ್ತಾಳೆ. ವಧ್ಯಸ್ಥಳದಲ್ಲಿ ರೇಣುಕೆಯನ್ನು ಒಬ್ಬ ಶೂದ್ರ ಹೆಂಗಸು ಭೇಟಿಯಾಗುತ್ತಾಳೆ. ವಿಷಯ ತಿಳಿದು, ರೇಣುಕೆಯನ್ನು ದುಃಖದಿಂದ ಅಪ್ಪಿಕೊಳ್ಳುತ್ತಾಳೆ. ಆ ಸಮಯದಲ್ಲಿ ಪರಶುರಾಮನು ಅವರಿಬ್ಬರ ತಲೆಗಳನ್ನು ಒಂದೇ ಸಲ ಕಡಿಯುತ್ತಾನೆ.

ತನ್ನ ಆಜ್ಞೆಯನ್ನು ಪಾಲಿಸಿದ ಪರಶುರಾಮನಿಗೆ ಯಾವುದಾದರೂ ಒಂದು ವರಬೇಡಬೇಕೆಂದು ಜಮದಗ್ನಿ ಹೇಳಿದ. ತನ್ನ ತಾಯಿಯನ್ನು ಮತ್ತೆ ಜೀವಂತವಾಗಿ ನೋಡಬೇಕೆಂದು ಪರಶುರಾಮನು ಬೇಡುತ್ತಾನೆ. ಅದಕ್ಕೆ ಒಪ್ಪಿಕೊಂಡ ಜಮದಗ್ನಿ ಕಮಂಡಲ ಮತ್ತು ಮಂತ್ರದಂಡವನ್ನು ಕೊಡುತ್ತಾನೆ. ಇವುಗಳಿಂದ ರೇಣುಕೆಯನ್ನು ಬದುಕಿಸಬೇಕೆಂದು ಹೆಳುತ್ತಾನೆ. ಆದರೆ ಅಚಾತುರ್ಯದಿಂದ ರೇಣುಕೆ ರುಂಡವನ್ನು ಶೂದ್ರಸ್ತ್ರೀ ಮುಂಡಕ್ಕೆ, ಶೂದ್ರಸ್ತ್ರೀ ರುಂಡವನ್ನು ತನ್ನ ತಾಯಿಯ ಮುಂಡಕ್ಕೆ ಜೋಡಿಸಿ ಮಂತ್ರದಂಡ ಮತ್ತು ಕಮಂಡಲುವಿನಿಂದ ಬದುಕಿಸುತ್ತಾನೆ. ಅಂದಿನಿಂದ ರೇಣುಕೆ ರುಂಡ ಶೂದ್ರಸ್ತ್ರೀ ಮುಂಡ ಇರುವ ಆಕೆ ‘ಮಾರಮ್ಮ’ನಾಗಿ, ರೇಣುಕೆಯ ಮುಂಡ ಶೂದ್ರಸ್ತ್ರೀ ರುಂಡ ಇರುವ ಆಕೆ ‘ಎಲ್ಲಮ್ಮ’ಳಾಗಿ ಪೂಜೆಯನ್ನು ಸ್ವೀಕರಿಸುತ್ತಿದ್ದಾರೆ. ಎಲ್ಲಮ್ಮನಿಗೆ ಹುಂಜ, ಟಗರು, ಕೋಣಗಳನ್ನು ಬಲಿ ಕೊಡುತ್ತಾರೆ. ಮಾರಮ್ಮನಿಗೆ ಕೋಣವನ್ನು ಬಲಿ ಕೊಡುವುದಿಲ್ಲ.

ಹೀಗೆ ಪ್ರಖ್ಯಾತಿ ಹೊಂದಿದ ಮಾರಮ್ಮ ಅಗ್ನಿ ಮಾರಮ್ಮ, ದಂಡುಮಾರಮ್ಮ, ಮುತ್ತುಮಾರಮ್ಮ, ವಿರೂಪಾಕ್ಷಮಾರಮ್ಮ ಎಂಬ ಹೆಸರುಗಳಿಂದ ಚಾಲ್ತಿಯಲ್ಲಿದ್ದಾಳೆ.

ಟಿ.ಎನ್.

 

ಮಾರಿ ಕುಣಿತ ಕರ್ನಾಟಕದಲ್ಲಿ ಪ್ರಚಲಿತದಲ್ಲಿರುವ ಒಂದು ಜನಪದ ಕುಣಿತ. ಮಾರಿ ಹಬ್ಬದ ಸಂದರ್ಭದಲ್ಲಿ ಕುಣಿಯುವುದರಿಂದ ಇದು ಮಾರಿಕುಣಿತ ಆಗಿದೆ. ಇದಕ್ಕೆ ರಂಗದ ಕುಣಿತ ಎಂದೂ ಕರೆಯುತ್ತಾರೆ. ಸಾಮಾನ್ಯವಾಗಿ ಮಾರಿ ಹಬ್ಬ ಬರುವುದು ಫೆಬ್ರವರಿ ಅಥವಾ ಮಾರ್ಚ್ ತಿಂಗಳಲ್ಲಿ. ಈ ಕುಣಿತ ಮೈಸೂರು, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ಪ್ರಚಲಿತ. ಮಾರಿ ಒಂದು ಜನಪದ ದೇವತೆ. ಈಕೆ ಪಾರ್ವತಿಯ ಒಂದು ರೂಪ. ಇವಳ ಆರಾಧನೆಯನ್ನು ಹಬ್ಬ ಮತ್ತು ಜಾತ್ರೆಯ ರೂಪದಲ್ಲಿ ವಿಶೇಷವಾಗಿ ನಡೆಸುತ್ತಾರೆ. ತ್ರಿಪದಿಗಳಲ್ಲಿರುವ ಹಾಡುಗಳನ್ನು ಹೇಳಿಕೊಂಡು ಸಂಭ್ರಮದಿಂದ ಕುಣಿಯುತ್ತಾರೆ. ದುಷ್ಟಶಕ್ತಿಗಳನ್ನು ದಮನ ಮಾಡಿದ ಸಂತೋಷಕ್ಕಾಗಿ ವೀರ ಮಕ್ಕಳೊಡನೆ ಕುಣಿಯುತ್ತಾ ಬಂದುದರ ಸಂಕೇತವಾಗಿ ಈ ಕುಣಿತ ರೂಪುಗೊಂಡಿದೆ.

ಮಾರಿ ಹಬ್ಬವನ್ನು ಮೂರು ದಿನಗಳವರೆಗೂ ಆಚರಿಸುತ್ತಾರೆ. ಮಾರಿಹಬ್ಬಕ್ಕೆ ಮಂಗಳವಾರ ಶ್ರೇಷ್ಠ. ಊರಿನ ಮುಖಂಡರು ಗುಡಿ ಮುಂದೆ ಚಪ್ಪರ ಹಾಕಿ, ಮಧ್ಯಾಹ್ನದ ವೇಳೆ ತಂಪಿನ ಸೇವೆ ಸಲ್ಲಿಸಿದ ಅನಂತರ ಸಂಜೆ ಮೆರವಣಿಗೆ ನಡೆಯುತ್ತದೆ. ರಾತ್ರಿ ಏಳೆಂಟು ಗಂಟೆಗೆ ಮಾರಿ ಕುಣಿತ ಆರಂಭವಾಗುತ್ತದೆ. ಕಲಾವಿದರು ಸಾಲಿನಲ್ಲಿ ಕುಣಿಯುವುದೇ ಹೆಚ್ಚು ಪ್ರಚಲಿತ. ಕೆಲವು ಕಡೆ ವೃತ್ತಾಕಾರದಲ್ಲೂ ಮತ್ತು ಎರಡು ಅಥವಾ ನಾಲ್ಕು ಸಾಲು ಮಾಡಿಕೊಂಡು ಕುಣಿಯುವುದು ಉಂಟು. ಈ ಕುಣಿತದಲ್ಲಿ ಎಷ್ಟು ಜನರಾದರೂ ಭಾಗವಹಿಸಬಹುದು ಕಾಲಿನ ಚಲನೆಯಿಂದ ಪ್ರಾರಂಭವಾಗುವ ಕುಣಿತವನ್ನು ವಾದ್ಯಗಳ ಮೇಳದೊಂದಿಗೆ ತ್ವರಿತಗೊಳಿಸುತ್ತಾರೆ. ಈ ಕುಣಿತದ ಒಂದೊಂದು ವರಸೆಗೂ ಒಂದೊಂದು ಹೆಸರಿದೆ. ಪ್ರತಿ ಹೆಜ್ಜೆಗೂ ಇಂತಿಷ್ಟೆ ಹೆಜ್ಜೆಗಳನ್ನು ಹಾಕಬೇಕೆಂಬ ನಿಯಮವಿದೆ. ಉದಾ : ಮಾರಮ್ಮನ ಗತಿ, ತಿರಗಣಿಗತಿ, ನಂದಿಕಂಬದ ಗತಿ, ಬಾಬಯ್ಯನಗತಿ, ತಂಬಿಡಿಗತಿ, ದೊಡ್ಡ ಹೆಜ್ಜೆ, ಚಿಕ್ಕಹೆಜ್ಜೆ.

ಮಾರಮ್ಮನಗತಿ ಪ್ರಾರ್ಥನಾಗತಿಯಿದ್ದಂತೆ. ಇದರಲ್ಲಿ ಮೂರು ಹೆಜ್ಜೆ ಹಾಕಿದರೆ ತಿರುಗಣಿಯಲ್ಲಿ ಆರು ಹೆಜ್ಜೆ ಹಾಕುತ್ತಾರೆ. ಎಡದಿಂದ ಬಲಕ್ಕೆ ಮೂರು ಹೆಜ್ಜೆ ಹಾಕಿಕೊಂಡು ಮತ್ತೆ ಮೂರು ಹೆಜ್ಜೆಗಳೊಂದಿಗೆ ಬಲದಿಂದ ಎಡಕ್ಕೆ ತಿರುಗುವುದೇ ತಿರುಗಣಿಗತಿ. ನಂದಿ ಕಂಬದ ಗತಿಯಲ್ಲಿ ಎಡದ ಕಾಲನ್ನು ಮೂರು ಸಾರಿ ಬಲದ ಕಾಲನ್ನು ಮೂರು ಸಾರಿ ನೆಲಕ್ಕೆ ಕುಟ್ಟುತ್ತಾರೆ. ಕುಣಿತದಲ್ಲಿ ಒಂದು, ಎರಡು ಮತ್ತು ಮೂರನೆಯ ಕಾಲಿಗಳಿರುತ್ತವೆ. ಆರಂಭದ ಕುಣಿತ ಒಂದನೆಯ ಕಾಲ, ಅನಂತರ ತ್ವರಿತಗೊಂಡು ಎರಡನೆಯ ಕಾಲಕ್ಕೆ ಬರುತ್ತದೆ. ಮೂರನೆಯ ಕಾಲದಲ್ಲಿ ಆವೇಶಭರಿತವಾಗಿ ಮುಕ್ತಾಯದ ಹಂತಕ್ಕೆ ಬರುತ್ತದೆ. ಪ್ರತಿಯೊಂದು ಹಂತದಲ್ಲೂ ಹಲವಾರು ಗತಿಗಳನ್ನು ತೋರಿಸಬಹುದು. ಕುಣಿಯುವ ಮಧ್ಯೆ ಕಲಾವಿದರು ‘ಹೋ’ ಎಂಬ ಘೋಷಣೆ ಮಾಡುತ್ತಾರೆ. ಅದು ಕುಣಿತದ ಗತಿಯ ಬದಲಾವಣೆಗೆ ನೀಡುವ ಸೂಚನೆಯೂ ಆಗಿರುತ್ತದೆ. ಕುಣಿತಕ್ಕೆ ವಾದ್ಯದ ಹಿಮ್ಮೇಳವಿರುತ್ತದೆ. ವಾದ್ಯಗಳ ಬಡಿತ ಕುಣಿತಕ್ಕೆ ಸ್ಫೂರ್ತಿ ನೀಡುತ್ತದೆ. ಇದಕ್ಕೆ ಬಳಸುವ ವಾದ್ಯಕ್ಕೆ ಚಕ್ರವಾದ್ಯ ಎನ್ನುವರು ಹಾಗೂ ಎರಡು ಅಥವಾ ಮೂರು ತಮಟೆಗಳನ್ನು ಬಳಸುತ್ತಾರೆ. ಕಲಾವಿದರು ಕಾಲಿಗೆ ಗೆಜ್ಜೆ ಕಟ್ಟಿಕೊಂಡಿರುತ್ತಾರೆ. ಒಂದೇ ಬಗೆಯ ಅಂಗಿ ಏರುಗಟ್ಟಿದ ಪಂಚೆ ಧರಿಸುತ್ತಾರೆ. ಇತ್ತೀಚೆಗೆ ಸಮಾಜ ಕಲ್ಯಾಣ ಇಲಾಖೆಯ ಸೂಚನೆಯ ಮೇರೆಗೆ ಸಮವಸ್ತ್ರ ಹಾಕಿರುತ್ತಾರೆ. ಕೆಲವು ಕಡೆ ಕುಣಿತಕ್ಕೆ ಮೇಳವಾಗಿ ಡೋಲು, ಶ್ರುತಿ, ಓಲಗ, ಕೈತಾಳ, ಗಿಡಿ ಮೊದಲಾದ ವಾದ್ಯಗಳನ್ನು ಬಳಸುತ್ತಾರೆ. ಕುಣಿತದಲ್ಲಿ ಭಾಗವಹಿಸುವವರಿಗೆ ವಯೋಮಿತಿಯೇನೂ ಇಲ್ಲ. ಕುಣಿತ ಕ್ರಮವಾಗಿರಬೇಕಾದರೆ ಪೂರ್ವ ತರಬೇತಿ ಬೇಕು. ಆದ್ದರಿಂದಲೆ ಒಂದೆರಡು ತಿಂಗಳಿರುವಾಗಲೆ ಈ ಕುಣಿತದ ಅಭ್ಯಾಸ ಆರಂಭಿಸುತ್ತಾರೆ.

ಮಾರಿ ಕುಣಿತ ನಿಂತ ಮೇಲೆ ಮಾರಿ ಮೇಲಿನ ಕೆಲವು ವಿನೋದದ ಹಾಡುಗಳನ್ನು ಹೇಳುವುದುಂಟು. ಇವುಗಳು ಬಹುತೇಕ ತ್ರಿಪದಿಗಳಲ್ಲಿರುತ್ತವೆ.

ಪಿ.ಇ.

 

ಮಾರ್ಕಂಡೇಯ ಪುರಾಣಂ ತೆಲುಗು ಪದ್ಮಶಾಲಿಯವರ ಕುಲಕಥೆಗೆ ಪದ್ಮಪುರಾಣ, ಮಾರ್ಕಂಡೇಯ ಪುರಾಣ ಭಾವನಾರ್ಷಿ ಪುರಾಣ, ಭಾವನಾಮಹರ್ಷಿ ಪುರಾಣ, ಮಾರ್ಕಂಡೇಯೋಪಾಖ್ಯಾನ ಎಂಬ ಪರ್ಯಾಯ ಪದಗಳಿವೆ. ಭಾವನಾರ್ಷಿ ಪದ್ಮಶಾಲಿಯವರ ಕುಲಕ್ಕೆ ೧೦೧ ಗೋತ್ರದವರಿಗೂ ಮೂಲಪುರುಷ. ಇವನ ಕಥೆಯನ್ನು, ಮಹಿಮೆಯನ್ನು, ಪದ್ಮಶಾಲೆ ಕುಲೋತ್ಪತ್ತಿ ವಿಧಾನವನ್ನು, ಕುಲಪ್ರಾಧಾನ್ಯವನ್ನು ವರ್ಣಿಸುವುದೇ ಮಾರ್ಕಂಡೇಯ ಪುರಾಣಕಥೆಯ ಮುಖ್ಯೋದ್ದೇಶ. ಮಾರ್ಕಂಡೇಯ ಪುರಾಣ ಕಥೆಯನ್ನು ಪದ್ಮಶಾಲಿಯವರ ಆಶ್ರಿತಕುಲವಾದ ಕೂನಪುಲಿಯವರು ಪಟದ ಕಥೆಯಂತೆ (ಬಟ್ಟೆಯ ಮೇಲೆ ಚಿತ್ರಗಳ ಮೂಲಕ ತೋರಿಸುವುದು) ಪುರಾಣ ಪ್ರವಚನದಂತೆ ನಿರೂಪಿಸುತ್ತಾರೆ. ಪದ್ಮಶಾಲಿ ಕುಲಪುರಾಣಕ್ಕೆ ಮೂಲ ‘ಮಾರ್ಕಂಡೇಯಪುರಾಣ’ ಎಂದು ಕೂನಪುಲಿ (ಕೂನಹುಲಿ) ಯವರು (ಕಲಾವಿದರು) ವಿವರಿಸುತ್ತಾರೆ.

ಕಥಾವಸ್ತು : ಆದಿಶಕ್ತಿ ಸಕಲಚರಾಚರ ಸೃಷ್ಟಿಯ ಜೊತೆಯಲ್ಲಿ ತ್ರಿಮೂರ್ತಿಗಳನ್ನು ಕೂಡ ಸೃಷ್ಟಿಸುತ್ತಾಳೆ. ತ್ರಿಮೂರ್ತಿಗಳಲ್ಲಿ ಒಬ್ಬನಾದ ಬ್ರಹ್ಮದೇವನು ಭೃಗು ಮಹರ್ಷಿಯನ್ನು ಸೃಷ್ಟಿಸಿದರೆ, ಅವನಿಗೆ ಕರ್ದಮ ಪ್ರಜಾಪತಿ ಮಗಳಾದ ಖ್ಯಾತಿಯಿಂದ ಧಾತ, ವಿಧಾತ ಎಂಬ ಪುತ್ರರು ಮತ್ತು ಶ್ರೀದೇವಿ ಮಗಳಾಗಿ ಜನಿಸುತ್ತಾರೆ. ಶ್ರೀದೇವಿ ವಿಷ್ಣುವಿಗೆ ಅರ್ಧಾಂಗಿಯಾಗುತ್ತಾಳೆ. ಭೃಗನ ದೊಡ್ಡಮಗ ಧಾತುವಿಗೆ ಮೃಕಂಡನು ಹುಟ್ಟುತ್ತಾನೆ. ಅವನಿಗೆ ಮಾರ್ಕಂಡೇಯ ಜನಿಸುತ್ತಾನೆ. ಮಾರ್ಕಂಡೇಯ ಅಲ್ಪಾಯುಷ್ಯನಾದರೂ ತನ್ನ ಭಕ್ತಿ ತತ್ಪರತೆಯಿಂದ ಶಿವನ ಅನುಗ್ರಹದಿಂದ ದೀರ್ಘಾಯುಷ್ಯನಾಗುತ್ತಾನೆ.

ಸೃಷ್ಟ್ಯಾದಿಯಲ್ಲಿ ಮಾನವರು, ದೇವತೆಗಳು ದಿಗಂಬರರಾಗಿದ್ದರು. ಆ ಕಾಲದಲ್ಲೇ ಕಾಲುವಾಸುರನೆಂಬ ರಾಕ್ಷಸನು ದೇವತೆಗಳನ್ನು ಮಾನವರನ್ನೂ ಹಿಂಸಿಸುತ್ತಿದ್ದನು. ಅವರೆಲ್ಲಾ ಸೇರಿ ಬ್ರಹ್ಮನನ್ನು ಬೇಡಿಕೊಂಡಾಗ, ಬ್ರಹ್ಮ ವಿಷ್ಣುವನ್ನು ಸಲಹೆ ಕೇಳುತ್ತಾನೆ. ವಿಷ್ಣುವು ಮಾರ್ಕಂಡೇಯನಿಗೆ ಧೂಮ್ರಾವತಿಯೊಡನೆ ವಿವಾಹ ಮಾಡಿದರೆ ಅವರಿಗೆ ಹುಟ್ಟುವ ಮಗನೇ ದೇವತೆಗಳಿಗೂ ಮಾನವರಿಗೂ ಉಡುಪುಗಳನ್ನು ತಯಾರಿ ಮಾಡಿಕೊಡುವನೆಂದೂ, ಕಾಳಾಸುರನನ್ನು ಸಂಹರಿಸುವನೆಂದೂ ಹೇಳುತ್ತಾನೆ.

ದೇವತೆಗಳು, ಮಾರ್ಕಂಡೇಯನಿಗೂ, ಧೂಮ್ರವತಿಗೂ ಮದುವೆ ಮಾಡಿಸುತ್ತಾರೆ. ಆ ದಂಪತಿಯರಿಗೆ ಪಂಚವಟಿ, ಭಾವನಾರಾಯಣನೆಂಬ ಕುಮಾರರು ಹುಟ್ಟುತ್ತಾರೆ.

ಭಾವನಾರಾಯಣನೇ ಬೆಳೆದು ದೊಡ್ಡವನಾಗಿ ಶಿವಾನುಗ್ರಾಹದಿಂದ ವಸ್ತ್ರನಿರ್ಮಾಣ ವಿದ್ಯೆಯನ್ನು ಕಲಿಯುತ್ತಾನೆ. ವಿಷ್ಣುವಿನ ನಾಭಿ ಕಮಲದಿಂದ ನೂಲನ್ನು ಗ್ರಹಿಸಿ ದೇವತೆಗಳೆಲ್ಲರಿಗೂ ರೇಷ್ಮೆವಸ್ತ್ರಗಳನ್ನೂ ತಯಾರು ಮಾಡಿಕೊಳ್ಳುತ್ತಾನೆ. ಶಿವನು ಮಾತ್ರ ತನಗೆ ವಸ್ತ್ರಗಳು ಅಗತ್ಯವಿಲ್ಲವೆಂದು ಹುಲಿಚರ್ಮಬೇಕೆಂದು ಕೇಳುತ್ತಾನೆ. ಭಾವನಾರ್ಷಿ ಭದ್ರಾವತೀದೇವಿ (ಭಾರ್ಗವೀದೇವಿ) ಬಳಿ ಇರುವ ಹುಲಿಗಳನ್ನು ತಂದು, ಹುಲಿಚರ್ಮವನ್ನು ಶಿವನಿಗೆ ಅರ್ಪಿಸಿ ಭದ್ರಾವತಿಯನ್ನು ಪರಿಣಯವಾಗುತ್ತಾನೆ. ಸಂತಾನಕ್ಕಾಗಿ ಪುತ್ರ ಕಾಮೇಷ್ಟಿ ಯಾಗ ಮಾಡಿ ೧೦೧ ಜನ ಪುತ್ರರನ್ನು ಪಡೆಯುತ್ತಾನೆ. ಭೂಲೋಕದಲ್ಲಿರುವರಿಗೆಲ್ಲ ಸರಿಹೋಗುವ ವಸ್ತ್ರಗಳಿಗಾಗಿ ಪದ್ಮತಂತಿಗಳನ್ನು ಪ್ರಸಾದಿಸು ಎದು ವಿಷ್ಣುವನ್ನು ಬೇಡಿಕೊಳ್ಳುತ್ತಾನೆ. ವಿಷ್ಣುಭಗವಾನನು ‘ಪದ್ಮತಂತೀ ಬೀಜಗಳನ್ನು’ ಪ್ರಸಾದಿನಿ ಹತ್ತಿಬೆಳೆಸಿ ಅದರಿಂದ ಎಳೆಗಳನ್ನು ತಯಾರಿಸಿ ವಸ್ತ್ರಗಳನ್ನು ತಯಾರಿಸಬೇಕೆಂದು ಆದೇಶಿಸುತ್ತಾನೆ. ಆ ಬೀಜಗಳನ್ನು ಕಾಳುವಾಸುರನು ಅಪಹರಿಸುತ್ತಾನೆ. ಭಾವನಾರ್ಷಿ ‘ಪದ್ಮವಂತುಬೀಜಗಳಿ’ಗಾಗಿ ಕಾಳವಾಸುರನ ಮೇಲೆ ದಾಳಿ ಮಾಡುತ್ತಾನೆ. ಯುದ್ಧದಲ್ಲಿ ಎಷ್ಟು ಸಾರಿ ಭಾವನಾರ್ಷಿ ಕಾಳಾಸುರನನ್ನು ಕೊಂದರೂ ಅವನ ರಕ್ತಬಿಂದುಗಳು ನೆಲದ ಮೇಲೆ ಬಿದ್ದಾಕ್ಷಣ ಪುನರ್ಜೀವಿತನಾಗುತ್ತಿರುತ್ತಾನೆ. ಭದ್ರಾವತಿ ಹತ್ತಿರ ಇರುವ ಹುಲಿಗಳನ್ನು ಯುದ್ಧರಂಗಕ್ಕೆ ಭಾವನಾರ್ಷಿ ಕರೆತಂದಾಗ ಅವು ರಾಕ್ಷಸನ ರಕ್ತವನ್ನು ಭೂಮಿಯ ಮೇಲೆ ಬೀಳದಂತೆ ಕುಡಿಯುತ್ತವೆ. ಕಡೆಗೂ ಕಾಳಾಸುರನನ್ನು ಭಾವನಾರ್ಷಿ ಸಂಹರಿಸಿ, ಅವನ ಶರೀರಾವಯವಗಳಿಂದ ವಸ್ತ್ರಗಳನ್ನು ನೇಯಲಿಕ್ಕೆ ಅಗತ್ಯವಾದ ಸಾಮಗ್ರಿಯನ್ನು ತಯಾರು ಮಾಡಿ ಅವುಗಳನ್ನು ತನ್ನ ೧೦೧ ಜನ ಪುತ್ರರಿಗೊಪ್ಪಿಸಿ ಹೆಂಡತಿಯೊಂದಿಗೆ ತಪಸ್ಸು ಮಾಡಲಿಕ್ಕೆ ಹೋಗುತ್ತಾನೆ. ಅಂದಿನಿಂದ ಭಾವನಾರ್ಷಿ ಸಂತತಿಯವರೇ ವಸ್ತ್ರಗಳನ್ನು ತಯಾರು ಮಾಡುತ್ತಿದ್ದಾರೆ.

ವಿಷ್ಣುನಾಭಿ ಪದ್ಮತಂತುಗಳಿಂದ ವಸ್ತ್ರಗಳನ್ನು ಮಾಡುವುದನ್ನೇ ಕುಲವೃತ್ತಿಯನ್ನಾಗಿಸಿ ಕೊಂಡವರನ್ನು ಪದ್ಮಶಾಲಿಯವರೆಂದು, ಪದ್ಮ ಬ್ರಾಹ್ಮಣರೆಂದು ಕರೆಯುತ್ತಾರೆ. ಮಾರ್ಕಂಡೇಯನ ವಂಶಕ್ಕೆ ಸೇರಿದವರಾಗಿದ್ದರಿಂದ ಮಾರ್ಕಂಡೇಯ ವಂಶಸ್ಥರಾದರು. ಭಾವನಾರ್ಷಿ ೧೦೧ ಪುತ್ರರೊಡನೆ ೧೦೧ ಗೋತ್ರಗಳು ಹುಟ್ಟಿವೆ. ಅವರಿಂದಲೇ ಪದ್ಮಸಾಲಿಯರ ಕುಲವು ಕೂಡ ಅಭಿವೃದ್ದಿಯಾಗಿದೆ.

ಮಾರ್ಕಂಡೇಯ ಪುರಾಣದ ಕಥೆಗಾರರಾದ ಕೂನವುಲಿಯವರ ಪ್ರದರ್ಶನಾ ಪದ್ಧತಿ : ಭಾವನಾರ್ಷಿ ತನ್ನ ಬೆವರಿನಿಂದ ಉದ್ಭವಿಸಿದ ಕೂನಪುಲಿ ಮೂಲಪುರುಷನನ್ನು ಉದ್ದೇಶಿಸಿ “ನೀನು ಪದ್ಮಶಾಲೆಯರ ಜನ್ಮ ವೃತ್ತಾಂತವನ್ನು ಕಥೆಯಾಗಿ ಹೇಳಬೇಕು. ಹೆಡೆಗಳನ್ನೆತ್ತಿಕೊಂಡು ಶಾಸ್ತ್ರವನ್ನು ತಿಳಿಸುತ್ತಾ ‘ಹೆಡೆಯರಾಜನಂತೆ’ ಪದ್ಮಶಾಲಿಯರು ಕೊಡುವ ಬಟ್ಟೆಗಳನ್ನು ಉಟ್ಟುಕೊಂಡು, ಅವರು ಕೊಡುವ ಆಹಾರದಿಂದ ಜೀವಿಸಬೇಕು” ಎಂದು ಶಾಸನ ಮಾಡುತ್ತಾನೆ. ಅಂದಿನಿಂದ ಪದ್ಮಶಾಲಿಯರು ಕೂನಪೂಲಿಯವರನ್ನು ಆದರಿಸುತ್ತಿದ್ದಾರೆ. ಕೂನಪುಲಿಯವರು ಕೂಡ ಮಾರ್ಕಂಡೇಯ ಪುರಾಣ ಕಥೆಯನ್ನು ಚಿತ್ರಿಸಿದ ಪಟವನ್ನು ಪ್ರದರ್ಶಿಸುತ್ತಾ ಆನುವಂಶಿಕವಾಗಿ ಬರುತ್ತಿರುವ ತಮ್ಮ ಮಿರಾಸಿ (ವಂಶಪಾರಂಪರ್ಯ ಹಕ್ಕು) ಹಕ್ಕುಗಳಿಂದ, ಪದ್ಮಶಾಲಿಯರು ಕೊಡುವ ಪದಾರ್ಥಗಳಿಂದ ಬದುಕುತ್ತಿದ್ದಾರೆ.

ಪಟ ಪ್ರದರ್ಶನ : ‘ಕೂನಪುಲಿ’ಯ ಹುಲಿಧ್ವಜ, ವಾದ್ಯಗಳು, ಚಾಮರಗಳಿಂದ ಗ್ರಾಮದಲ್ಲಿನ ಪದ್ಮಶಾಲಿಯ ಕುಲ ನಾಯಕನ ಬಳಿಗೆ ಹೋಗಿ ಪಟ ಪ್ರದರ್ಶನಕ್ಕೆ ಅನುಮತಿಯನ್ನು ಕೇಳುತ್ತಾರೆ. ಪಟಪ್ರದರ್ಶನದಲ್ಲಿ ಐದು ಜನ ಭಾಗವಹಿಸುವರು. ತಬಲಾ, ಹಾರ್ಮೋನಿಯಂ, ತಾಳ, ಢಂಕಾ, ವಾದ್ಯಗಳನ್ನು ಉಪಯೋಗಿಸುವರು. ಪ್ರಧಾನ ಕಥೆಗಾರ ಎಡಗೈಯಿಂದ ಚಿಕ್ಕಮರದ ಹಲಗೆಗಳಿಂದ ವಾದನ ಮಾಡುತ್ತಾ ಬಲಗೈ ತೋರುಬೆರಳಿಂದ ಪಟದಲ್ಲಿನ ಬೊಂಬೆಗಳನ್ನು ತೋರಿಸುತ್ತಾ ಅಭಿನಯಾತ್ಮಕವಾಗಿ ಕಥೆಯನ್ನು ಹೇಳುತ್ತಾರೆ. ಕಥಾನುಸಾರವಾಗಿ ವಚನ, ಪದ್ಯ, ಗೇಯರೂಪದಲ್ಲಿ ಕಥೆಯನ್ನು ಹೇಳುತ್ತಾರೆ. ಕಥಾ ಪರದರ್ಶನದ ಅನಂತರ ಕೂನ ಪುಲಿಯವರು ಮನೆಮನೆಗೆ ಹೋಗಿ ಅವರನ್ನು ಆಶೀರ್ವದಿಸಿ ಅವರು ಕೊಟ್ಟ ಭತ್ಯೆಯನ್ನು ಸ್ವೀಕರಿಸಿ ಹೊರಟುಹೋಗುತ್ತಾರೆ.

ಮಾರ್ಕಂಡೇಯ ಪುರಾಣ ಮೌಖಿಕ ರೂಪದಲ್ಲೇ ಅಲ್ಲದೇ ಲಿಖಿತರೂಪದಲ್ಲಿಯೂ ಲಭ್ಯವಾಗುತ್ತದೆ. ‘ಭಾರ್ಗವೀ ಪರಿಣಯಂ’ ‘ಪದ್ಮಪುರಾಣ’ ಪದ್ಮಶಾಲೀಯರ ಕುಲಯಾಚಕ ಪುರಾಣ’ ಎಂಬ ಹೆಸರುಗಳಿಂದ ಲಿಖಿತ ಪುರಾಣಗಳು ದೊರಕುತ್ತವೆ.

ಆರ್.ಪಿ. ಅನುವಾದ ಎ.ಎ.

 

ಮಾರ್ಗಂಕಳಿ ಕೇರಳದ ಸಿರಿಯನ್ ಕ್ರೈಸ್ತರ ಒಂದು ಕಲೆಯಾಗಿದೆ ಮಾರ್ಗಂಕಳಿ. ಏಸುಕ್ರಿಸ್ತನ ಶಿಷ್ಯನಾದ ಮಾರ್ತೋಮನ ರಂಗಪ್ರವೇಶ ಹಾಗೂ ಮತಾಂತರದ ಪ್ರಕ್ರಿಯೆಗಳು ಮಾರ್ಗಂಕಳಿಯ ಹಾಡುಗಳ ವಸ್ತು. ದೇಶರಕ್ಷಣೆಗಾಗಿ ಆಯುಧವನ್ನು ಹಿಡಿದ ಕ್ರೈಸ್ತರು ಮನರಂಜನೆಗಾಗಿ ಈ ಕಲೆಯನ್ನು ಆವಿಷ್ಕರಿಸಿದರೆಂದೂ ಹೇಳುತ್ತಾರೆ. ಕೇರಳದ ಇನ್ನೊಂದು ಕಲೆಯಾದ ಸಂಘಕಳಿಗೂ ಮಾರ್ಗಂಕಳಿಗೂ ಸಾಮ್ಯಗಳಿವೆ. ಸಿರಿಯನ್ ಕ್ರೈಸ್ತರ ಮದುವೆ ಸಮಾರಂಭಗಳಲ್ಲಿ ಹಿಂದೆ ಮಾರ್ಗಂಕುಳಿ ಅವಿಭಾಜ್ಯ ಅಂಗವಾಗಿತ್ತು. ಕ್ರೈಸ್ತರಲ್ಲಿ ಕ್ನಾನಾಯ ವಿಭಾಗದವರು ಈ ಕಲೆಯನ್ನು ಬಹಳಷ್ಟು ಪೋಷಿಸಿದ್ದಾರೆ. ಅವರು ತಮ್ಮ ಜನಾಂಗಿಕ ವ್ಯಕ್ತಿತ್ವದ ಅಂಗವಾಗಿ ಈ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ.

ಕೇರಳದ ವಿವಿಧ ಪ್ರದೇಶಗಳಲ್ಲಿ ಇಂದಿಗೂ ಮಾರ್ಗಂಕಳಿ ಪ್ರಚಾರದಲ್ಲಿದೆ. ಹಿಂದಿನ ಕಾಲದಲ್ಲಿ ಮದುವೆಗಳಲ್ಲಿ ಮಾರ್ಗಂಕಳಿ ಅನಿವಾರ್ಯ ಘಟಕವಾಗಿದ್ದರೂ, ಇಂದು ಕಡಿಮೆಯಾಗುತ್ತಿದೆ. ಇಂದು ಯುವಜನೋತ್ಸವ ವೇದಿಕೆಗಳಲ್ಲಿ, ಮೆರವಣಿಗೆಗಳಲ್ಲಿ ಮಾತ್ರ ಈ ಕಲೆ ಉಳಿದುಕೊಂಡು ಬಂದಿದೆ. ಹಿಂದಿನ ಕಾಲದಲ್ಲಿ ಪುರುಷರು ಈ ಕಲೆಯನ್ನು ಪ್ರದರ್ಶಿಸುತ್ತಿದ್ದರೆ, ವರ್ತಮಾನ ಕಾಲದಲ್ಲಿ ಅದು ಹುಡುಗಿಯರ ಕಲೆಯಾಗಿ ಮಾತ್ರ ಉಳಿದುಕೊಂಡಿದೆ.

ಮೊದಲಿಗೆ ಏಸುಕ್ರಿಸ್ತನ ಪ್ರತೀಕವಾಗಿ ಒಂದು ದೀಪ ಬೆಳಗಿಸುತ್ತಾರೆ. ಅದರ ಸುತ್ತಲೂ ಹನ್ನೆರಡು ಪುರುಷರು ಹಾಡುತ್ತಾ, ಹೆಜ್ಜೆ ಹಾಕುತ್ತಾರೆ. ಕಲಾವಿದರು ಧೋತಿಯನ್ನುಟ್ಟು, ತಲೆಗೆ ಮುಂಡಾಸು ಕಟ್ಟಿರುತ್ತಾರೆ. ಕೆಲವು ತಂಡಗಳಲ್ಲಿ ಮುಂಡಾಸಿಗೆ ನವಿಲುಗರಿಯನ್ನು ಸಿಕ್ಕಿಸುವುದೂ ಇದೆ. ಹಾಡಿನ ಕುಣಿತದ ನಂತರ ಕೈಯಲ್ಲಿ ಕತ್ತಿ, ಗುರಾಣಿ ಹಿಡಿದು ಹೆಜ್ಜೆ ಹಾಕುವುದೂ ಮಾರ್ಗಂಕಳಿಯಲ್ಲಿತ್ತು. ಪರಂಪರೆಯ ಮಾರ್ಗಂಕಳಿ ಸಿರಿಯನ್ ಕ್ರೈಸ್ತರ ಮನರಂಜನೆ, ಕ್ರೀಡಾಮನೋಭಾವ ಹಾಗೂ ಧಾರ್ಮಿಕ ನಿಷ್ಠೆಗೆ ಕನ್ನಡಿಯಾಗಿತ್ತು.

35_70A_DBJK-KUH

ಮಾಗಂರ್ಕಕಳಿಗೆ ಪ್ರತ್ಯೇಕ ಹಾಡುಗಳಿವೆ. ಬರ್ದಾಸ ಸಿರಿಯ್ ವಿದ್ವಾಂಸ ಬರೆದ Acta Thoma ಎಂಬ ಕೃತಿಯ ಕಥೆಯನ್ನು ಮಾರ್ಗಂಕಳಿ ಪಾಟುಗಳಲ್ಲಿ ಅಳವಡಿಸಲಾಗಿದೆ. ಮಾರ್ಗ ಎಂಬ ಪದಕ್ಕೆ ಏಸುಕ್ರಿಸ್ತ ತೋರಿದ ದಾರಿ ಅಥವಾ ಕ್ರೈಸ್ತ ಪಂಥದ ಪ್ರಚಾರಕ್ಕಾಗಿ ರಚಿಸಿದ ಹಾಡುಗಳಿಂದ ಇದಕ್ಕೆ ‘ಮಾರ್ಗಂಕಳಿ’ ಎಂದು ಹೆಸರು ಬಂದಿರಬೇಕು.

ಕ್ರೈಸ್ತ ಧರ್ಮಕ್ಕೆ ಸಂಬಂದಪಡದ ಅನೇಕ ವಿಷಯಗಳು ಮಾರ್ಗಂಕಳಿಯ ಹಾಡುಗಳಲ್ಲಿವೆ. ಕ್ರೈಸ್ತರು ಹೆಚ್ಚಾಗಿ ವಾಸವಾಗಿರುವ ಪ್ರದೇಶಗಳಲ್ಲಿ ಕ್ರೈಸ್ತಮತ ಸಂಬಂಧವಾದ ಹಾಡುಗಳೇ ಹೆಚ್ಚಿವೆ. ಆದರೆ ಮಧ್ಯ ತಿರುವಿದಾಂಕೂರು ಸಮೀಪದ ಹರಿಪಾಡ್ ಪಳ್ಳಿಪಾಡ್ ಪ್ರದೇಶಗಳಲ್ಲಿ ಪ್ರಚಲಿತವಾಗಿರುವ ಮಾರ್ಗಂಕಳಿಪಾಟುಗಳಲ್ಲಿ ನಾಟಿವೈದ್ಯ, ಗಿಡಮೂಲಿಕೆಗಳ ವಿವರಗಳಿವೆ. ನಾದಾಪುರಂ ಅಂಗಡಿ ಹಾಡು, ರಾಜನ ಸ್ತುತಿಪದ್ಯಗಳು, ಮಲಯಾಟೂರು ಚರ್ಚ್‌‌ನ ವಿವರಗಳಿರುವ ಹಾಡುಗಳು ಸಾಕಷ್ಟಿವೆ.

ಹೆಚ್ಚಾಗಿ ಕ್ರೈಸ್ತರು ಮಾರ್ಗಂಕಳಿಯನ್ನು ಪ್ರದರ್ಶಿಸುತ್ತಿದ್ದರು. ಆದರೆ ಕೆಲವು ಪ್ರದೇಶಗಳಲ್ಲಿ ಇತರ ಸಮುದಾಯದವರು ಭಾಗವಹಿಸುತ್ತಿದ್ದರು. ಒಬ್ಬ ಗುರುವಿನಿಂದ ಈ ಕಲೆಯನ್ನು ಕಲಿತು ಪ್ರದರ್ಶಿಸುವ ಪರಿಹಾಠ ಹಿಂದೆ ಇತ್ತು. ಆದರೆ ಆಧುನಿಕತೆಯ ಪ್ರಭಾವದಿಂದ ಇಂದು ಮಾರ್ಗಂಕಳಿ ಕ್ರಮೇಣ ಮರೆಯಾಗುತ್ತಿದೆ. ಹಿಂದೆಯೇ ತಿಳಿಸಿದಂತೆ ಕಲೋತ್ಸವ ವೇದಿಕೆಗಳಲ್ಲಿ ಎಂಟು ನಿಮಿಷಗಳ ಅವಧಿಯ ಒಂದು ಸ್ಪರ್ಧೆಯಾಗಿ ಈ ಸಾಂಸ್ಕೃತಿಕ ಕಲೆ ಉಳಿದುಕೊಂಡಿದೆ. ದೀಪ ಬೆಳಗಿಸಿ, ಎಂಟರಿಂದ ಹತ್ತು ಹುಡುಗಿಯರು ಕ್ರಿಶ್ಚಿಯನ್ ಮಹಿಳೆಯರ ವೇಷವನ್ನು ಧರಿಸಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ.

.ಕೆ.ಎನ್. ಅನುವಾದೆನ್.ಎಸ್.

 

ಮಾಲಮಸ್ಟೀಡಿ ಆಟಲು ಇದು ಮನರಂಜನಾ ಪ್ರಧಾನವಾದ ಪ್ರದರ್ಶನ ಕಲೆ. ಇದನ್ನು ‘ಮಾಲಮಸ್ಟೀಡುಲು’ ಎಂಬ ಸಂಚಾರಿ ಜಾತಿಗೆ ಸೇರಿದ ಕಲಾವಿದರು ಪ್ರದರ್ಶಿಸುತ್ತಾರೆ. ಹೊಲೆಯರನ್ನು ಯಾಚಿಸಿ ಅವರ ಮನೆಗಳ ಹತ್ತಿರವೇ ಇದ್ದು ಎರಡು ಮೂರು ತಿಂಗಳು ಕಳೆದ ಮೇಲೆ ಮತ್ತೊಂದು ಸ್ಥಳಕ್ಕೆ ಹೊರಡುವ ಮುನ್ನಾದಿನ ಕೃತಜ್ಞತಾ ಪೂರ್ವಕವಾಗಿ ಪ್ರದರ್ಶಿಸುವ ಆಟವೇ ಹೊಲೆಯ ಮಾಸ್ಟಿಕರ ಆಟ. ಈ ಪ್ರದರ್ಶನದಲ್ಲಿ ಹೆಜ್ಜೆಹೆಜ್ಜೆಗೂ ಎಲ್ಲರನ್ನು ಆಶ್ಚರ್ಯಪಡಿಸುವ ಬಹಳ ವಿನ್ಯಾಸಗಳು ಕಂಡುಬರುತ್ತವೆ. ಪ್ರದರ್ಶನದಲ್ಲಿ ಮಕ್ಕಳು ದೊಡ್ಡವರು ಸೇರಿ ಒಟ್ಟು ಮೂವತ್ತು ಕಲಾವಿದರವರೆಗೆ ಇರುತ್ತಾರೆ. ಎಲ್ಲರೂ ಗಂಡಸರೇ. ಇವರ ಕುಲ ಸಂಪ್ರದಾಯದ ಪ್ರಕಾರ ಹನುಮಂತ ಸಂಜೀವಿನಿಯನ್ನು ತರುತ್ತಿರುವಂತೆ ಭಾಸವಾಗುವ ಚಿತ್ರವನ್ನುಳ್ಳ ಒಂದು ದೊಡ್ಡ ಧ್ವಜವನ್ನು ಒಂದು ಕಡೆ ನೆಟ್ಟು ಎರಡು ಮೂರು ‘ನಗಾರಿ’ ಧ್ವನಿಗಳೊಂದಿಗೆ ಪ್ರದರ್ಶನವನ್ನು ಪ್ರಾರಂಭಿಸುತ್ತಾರೆ. ಈ ಕಲಾವಿದರು ದೃಢಕಾಯರಾಗಿ, ವಸ್ತ್ರಾದಿಗಳ ಹಾಗೆ ದಷ್ಟಪುಷ್ಟವಾಗಿ ಯುದ್ಧಕ್ಕೆ ಸನ್ನದ್ಧರಾದ ವೀರರಂತೆ, ಬಾಣಗಳು, ಕತ್ತಿಗಳು, ಕಠಾರಿಗಳನ್ನು ಹಿಡಿದುಕೊಂಡು ನಗಾರಿ ವಾದ್ಯಗಳೊಂದಿಗೆ ಬಗೆಬಗೆಯ ವಿನ್ಯಾಸಗಳನ್ನು ಮಾಡುತ್ತಾರೆ. ವೇಷಭೂಷಣಗಳನ್ನು ನೋಡಿದರೆ ಮೈಲಾರ ವೀರಭಟರು ನೆನಪಿಗೆ ಬರುತ್ತಾರೆ. ಇವರಲ್ಲಿ ಅಥವಾ ಜನ ವಸ್ತಾದಿಗಳಾಗುತ್ತಾರೆ. ಇವರು ಮಾಡುವ ಸಾಹಸ ಭಂಗಿಗಳಲ್ಲಿ ಹಲವಿವೆ. ತಮಟೆ ವಾದ್ಯಗಳಿಗೆ ಅನುಗುಣವಾಗಿ ಇವರು ತೋಳ್ಬಲವನ್ನು ಪ್ರದರ್ಶಿಸಿ ಸುತ್ತುಹೆಜ್ಜೆ ಹಾಕಿ ಮೀಸೆ ತೀಡುತ್ತಾರೆ. ಇವರ ಪ್ರದರ್ಶನಗಳಲ್ಲಿ ಐದು ವಿಧಗಳಿವೆ.

೧. ಬಸ್ಕಿಗಳು – ದಂಡಗಳ ಪ್ರದರ್ಶನ, ೨. ಕತ್ತಿಸಾಮು – ಕರ‍್ರಸಾಮು (ಕತ್ತಿವರಸೆ ದೊಣ್ಣೆವರಸೆ) ೩. ಮೊಗ್ಗಲ ವಿನ್ಯಾಸಾಲು (ದೈಹಿಕ ವಿನ್ಯಾಸ) ೪. ಸಾಸಹ ಭಂಗಿಗಳು, ೫. ಟಗರುಗಳ ಕಾಳಗ ಮೊದಲಾದವು. ಮೊದಲು ಬಸ್ಕಿ ದಂಡ ಹೊಡೆದು, ಅನಂತರ ೫ ಗಜ ಉದ್ದ ೨ ಗಜ ಅಗಲ ಇರುವಂತೆ ಒಂದು ಕಂದಕ ತೋಡುತ್ತಾರೆ. ದೂರದಿಂದ ಓಡಿಬಂದು ತಲೆಕೆಳಗಾಗಿ ಕಂದಕದೊಳಗೆ ದುಮುಕಿ ಆಶ್ಚರ್ಯವನ್ನುಂಟುಮಾಡುತ್ತಾರೆ. ಕೆಲವರು ಸಣ್ಣ ಸಣ್ಣ ಕತ್ತಿಗಳನ್ನು ಸೊಂಟದ ಸುತ್ತಕಟ್ಟಿಕೊಂಡು ತಲೆಕೆಳಗಾಗಿ ಬೋರಲು ಬಿದ್ದು ಸಾಹಸ ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲದೆ ಬಗೆಬಗೆಯ ಕತ್ತಿಗಳಿಂದ ಕತ್ತಿ ವರಸೆ ತೋರಿಸುತ್ತಾರೆ.

ಸಾಹಸ ವಿನ್ಯಾಸಗಳನ್ನು ಹೆಸರಿಸತಕ್ಕವು. ಬಂಕಿಚಕ್ರದ ಕಾಲುಗಳ ಮಧ್ಯೆ ತಲೆತೂರಿಸಿ ಮೊಣಕಾಲುಗಳ ಮೇಲೆ ಚಕ್ರವನ್ನಿಟ್ಟುಕೊಂಡು ಕುಳಿತು, ಚಕ್ರದ ಮೇಲೆ ಮಕ್ಕಳು ದೊಡ್ಡವರು ಒಳಗೊಂಡಂತೆ ಐದಾರು ಮಂದಿಯನ್ನು ಕೂರಿಸಿಕೊಂಡು ಚಾಕಚಕ್ಯತೆಯಿಂದ ಮೇಲೆದ್ದು ನಿಲ್ಲುವುದು. ನಿಂತ ಮೇಲೆ ಚಕ್ರವನ್ನು ವಿಷ್ಣು ಚಕ್ರದ ಹಾಗೆ ಗರಗರ ತಿರುಗಿಸುವುದು, ಎರಡೂ ಕಡೆಗಳಿಂದ ಚಕ್ರವನ್ನು ಲೀಲಾಜಾಲವಾಗಿ ಮೇಲೇಳುವಂತೆ ಮಾಡಿ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಅಷ್ಟೇ ಅಲ್ಲದೆ ೨೫ ಕೆ.ಜಿ., ೫೦ ಕೆ.ಜಿ. ತೂಕವುಳ್ಳ ಕಲ್ಲುಗಳನ್ನು ಬುಟ್ಟಿಯಂತೆ ಕಟ್ಟಿಕೊಂಡು ತಮಟೆ ವಾದ್ಯಗಳಿಗೆ ಅನುಗುಣವಾಗಿ ನೃತ್ಯಮಾಡುವುದು ೫೦ ಕೆ.ಜಿ. ೨೫ ಕೆ.ಜಿ. ತೂಕವುಳ್ಳ ಕಲ್ಲುಗಳನ್ನು ಮೇಲಕ್ಕೆ ಎಸೆದು ಭುಜವನ್ನೊಡ್ಡುವುದು ಮುಂತಾದ ಸಾಹಸಗಳನ್ನು ಮಾಡುತ್ತಾರೆ. ಇವುಗಳಲ್ಲದೆ ಕಬ್ಬಿಣದ ಸರಳುಗಳನ್ನು ಜಡೆಯಂತೆ ಹೆಣೆಯುವುದು ತಂತಿಗಳನ್ನು ಕಂಠದ ಬಳಿ ಇಟ್ಟುಕೊಂಡು ಬಗ್ಗಿಸುವುದು, ತೆಂಗಿನಕಾಯಿಯನ್ನು ಮೇಲಕ್ಕೆ ಎಸೆದು ತಲೆಯನ್ನು ಒಡ್ಡುವುದು, ಕೂದಲಿಗೆ ಹಗ್ಗವನ್ನು ಕಟ್ಟಿಕೊಂಡು ಬಂಡಿಗಳನ್ನು ಟ್ರ‍್ಯಾಕ್ಟರ್‌‌ಗಳನ್ನು ಎಳೆಯುವುದು, ಕೊನೆಗೆ ಟಗರುಗಳೊಂದಿಗೆ ಗುದ್ದಾಡಿ ಅವನ್ನು ನಿಯಂತ್ರಣಕ್ಕೆ ತರುವುದು ಇಂತಹ ಸಾಹಸಗಳನ್ನು ಪ್ರದರ್ಶಿಸುತ್ತಾರೆ. ಹೀಗೆ ಹೊಲೆಯ ಮಾಸ್ಟಿಕರು ಸಾಹಸ ಪ್ರದರ್ಶನಗಳನ್ನು ಮಾಡುವಾಗ ಕೆಲವು ಸಲ ಪ್ರಮಾದಳೂ ಉಂಟಾಗುತ್ತವೆ. ಇವರು ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಹೆಚ್ಚಾಗಿರುತ್ತಾರೆ.

ಟಿ.ಎಸ್.ಎನ್. ಅನುವಾದ ಎನ್. ಆರ್.