ಮನ್ನೆದೊರ ಆಂಧ್ರ ಪ್ರದೇಶದ ವಿಶಾಖ, ಶ್ರೀಕಾಕುಳಂ, ಪೂರ್ವ ಗೋದಾವರಿ ಜಿಲ್ಲೆಗಳಲ್ಲಿ ಇವರು ವಾಸಿಸುತ್ತಿದ್ದಾರೆ. ಇವರ ಮಾತೃಭಾಷೆ ತೆಲುಗಾದರೂ ಒರಿಯಾ ಭಾಷೆಯನ್ನು ನಿರರ‍್ಗಳವಾಗಿ ಮಾತನಾಡಬಲ್ಲರು. ಇವರ ವೃತ್ತಿ ಬೇಸಾಯ. ಇದಲ್ಲದೆ ಕಾಡಿನಲ್ಲಿ ಸಿಗುವ ಕಟ್ಟಿಗೆ, ಗಡ್ಡೆ ಗೆಣಸು, ಗಿಡಮೂಲಿಕೆಗಳು, ಜೇನು ಮುಂತಾದವುವನ್ನು ತಂದು ವಾರಾಂತ್ಯದಲ್ಲಿ ಸಂತೆಯಲ್ಲಿ ಮಾರುತ್ತಾರೆ. ಇವರು ಮಾಂಸಾಹಾರಿಗಳು. ಜೋಳ, ರಾಗಿ, ಅಕ್ಕಿ ಮೊದಲಾದವನ್ನು ತಪ್ಪದೇ ಬಳಸುತ್ತಾರೆ. ಬಹಳಷ್ಟು ಜನ ತಂಬಾಕು ಸೇದುತ್ತಾರೆ. ಪಿತೃಪ್ರಧಾನ ವ್ಯವಸ್ಥೆಯಿದೆ. ಪಾಡೇರು ಪ್ರಾಂತ್ಯದಲ್ಲಿ ‘ಕುಲಂ’ ಎಂದು, ಇತರ ಪ್ರಾಂತಗಳಲ್ಲಿ ‘ಬಂಶೋ’ ಎಂದು, ಮತ್ತೆ ಕೆಲವು ಪ್ರಾಂತಗಳಲ್ಲಿ ‘ಗೋತ್ರಂ’ ಎಂದು ಕರೆಯುತ್ತಾರೆ. ಅವು ೧. ಕಿಲ್ಲೋ, ೨. ಮತ್ಸ್ಯ, ೩. ಗೊಲ್ಲರಿ ಇಲ್ಲವೆ ಹನುಮಾನ್ ೪. ರಂಬಿ, ೫. ಪಂಗಿ, ೬. ಕೊರ‍್ರ, ೭. ನಾಗ ಎಂದಿವೆ.

ಸೋದರ ಸೊಸೆ, ಸೋದರಳಿಯನನ್ನು ಮದುವೆಯಾಗುತ್ತಾರೆ. ಬಾಲ್ಯ ವಿವಾಹ ಮಾತುಕತೆಗಳ ಮೂಲಕ ಮದುವೆಗಳಾಗುತ್ತವೆ. ‘ಓಲಿ’ ವ್ಯವಸ್ಥೆಯಿದೆ. ಹೆಂಗಸರು ಗಂಡಸರೊಂದಿಗೆ ಸಮನಾಗಿ ದುಡಿಯುತ್ತಾರೆ. ಬೇಸಾಯದಲ್ಲಿ ಕಾಡಿನಲ್ಲಿ ಸಿಗುವ ಗಡ್ಡೆ ಗೆಣಸು, ತೊಪ್ಪಲು, ಹಣ್ಣುಗಳನ್ನು ತರುವಲ್ಲಿ ಸಹಾಯ ಮಾಡುತ್ತಾರೆ. ಬಳೆ, ಕಾಲುಂಗುರ, ತಾಳಿ ಮದುವೆಯಾದ ಹೆಣ್ಣಿಗೆ ಚಿಹ್ನೆಗಳು, ಬಹಳಷ್ಟು ಕುಟುಂಬಗಳು ಚಿಕ್ಕವು. ಪಿತೃಪ್ರಧಾನ ವ್ಯವಸ್ಥೆಯಿದೆ. ಕೊನೆಯ ಮಗನಿಗೆ ಆಸ್ತಿಯ ಹಂಚಿಕೆಯಲ್ಲಿ ಸ್ವಲ್ಪ ಹೆಚ್ಚಿನ ಭಾಗ ಕೊಡುವುದಿದೆ. ಮೈನೆರೆತ ಹುಡುಗಿಗೆ ಒಂಬತ್ತನೆಯ ದಿನ ಸ್ನಾನ ಮಾಡಿಸಿ ಸೋದರ ಮಾವ ತಂದ ಹೊಸಬಟ್ಟೆಗಳನ್ನು ಉಡಿಸುತ್ತಾರೆ. ಬಂಧು ಬಳಗಕ್ಕೆ ಔತಣವಿರುತ್ತದೆ. ಹೆರಿಗೆಯಾದ ಹೆಣ್ಣುಮಗಳು ಐದು ತಿಂಗಳವರೆಗೂ ಗಂಡನಿಂದ ದೂರವಿರುತ್ತಾರೆ. ಹುಟ್ಟಿದ ಕೂಸಿಗೆ ಐದನೆಯ ದಿನ ಹೆಸರಿಡುತ್ತಾರೆ. ವಿಚ್ಛೇದನಕ್ಕೆ ಅವಕಾಶವಿದೆ. ಗ್ರಾಮ ಪಂಚಾಯಿತಿಯಲ್ಲಿ ವ್ಯಾಜ್ಯಗಳನ್ನು ಬಗೆಹರಿಸಲಾಗುತ್ತದೆ. ‘ಮನ್ನೆ ದೊರ’ಗಳು ಜಾಕದ ದೇವತೆ, ಗಂಗಾ ದೇವತೆಗಳನ್ನು ಪೂಜಿಸುತ್ತಾರೆ. ನಶಾನ್ ಹಬ್ಬ, ಜಕರ ಹಬ್ಬ, ನಂದಿ ದೇವನ ಹಬ್ಬ, ಬೋಡೋ ದೇವತೆಯ ಹಬ್ಬ, ಗಂಗಾದೇವರ ಹಬ್ಬ- ಮುಂತಾದವನ್ನು ಆಚರಿಸುತ್ತಾರೆ. ಹೊಸ ಬೆಳೆ ಬಂದಾಗಲೂ ಹಬ್ಬಗಳನ್ನು ಆಚರಿಸುತ್ತಾರೆ. ಅಕ್ಷರಸ್ಥರ ಸಂಖ್ಯೆ ತುಂಬಾ ಕಡಿಮೆ. ವನಮೂಲಿಕೆಗಳಿಂದ ವೈದ್ಯ ಮಾಡಿಕೊಳ್ಳುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೧೩,೫೭೯. ಅಂದರೆ ಶೇಕಡಾ ೦.೨೭.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಮನ್ಮಥನ್ ಕೋಯಿಲ್ ವಳಿಪಾಡು ತಮಿಳುನಾಡಿನ ಆಚರಣೆ. ಕುಮಾರದೇವನ (ಷಣ್ಮುಖ) ಜನನದ ಪ್ರಯುಕ್ತ ತಪಸ್ಸಿನಲ್ಲಿ ಕುಳಿತಿದ್ದ ಶಿವನ ಮೇಲೆ ಕಾಮವನ್ನು ಉಂಟು ಮಾಡುವಂತೆ ಬ್ರಹ್ಮಾದಿ ದೇವರುಗಳು ಕಾಮನಲ್ಲಿ ಬೇಡಿಕೊಳ್ಳುತ್ತಾರೆ. ಇದರಿಂದ ದೇವರುಗಳ ಶಾಪಕ್ಕೆ ಅಂಜಿ ಕಾಮನು ಶಿವ ಯೋಗಸ್ಥಿತಿಯಲ್ಲಿ ಇರುವಾಗ ಕೈಲಾಸಕ್ಕೆ ತೆರಳಿ ತನ್ನ ಹೂ ಬಾಣವನ್ನು ಪ್ರಯೋಗಿಸುತ್ತಾನೆ. ಶಿವನು ತಪೋಭಂಗವಾಗಿ ಕೋಪದಿಂದ ಕಣ್ತೆರೆದು ನೋಡಿದಾಕ್ಷಣ ಅವನ ಕ್ರೋಧಾಗ್ನಿಗೆ ಕಾಮ ಸುಟ್ಟು ಭಸ್ಮವಾಗುತ್ತಾನೆ. ಇದನ್ನರಿತ ರತಿ ಶಿವನಲ್ಲಿ ಮೊರೆ ಇಡುತ್ತಾಳೆ. ಆಗ ಶಿವನು ಕನಿಕರಗೊಂಡು ರತಿಗೆ ‘ಈತ ನಿನಗೆ ಮಾತ್ರ ಕಾಣಿಸಲಿ, ಉಳಿದ ದೇವತೆಗಳಿಗೆ ಕಾಣಿಸದಿರಲಿ’ ಎಂದು ನುಡಿಯುತ್ತಾನೆ. ಆದ್ದರಿಂದ ಕಾಮನಿಗೆ ಅನಂಗ ಎಂಬ ಹೆಸರು ಬರುತ್ತದೆ. ಕಾಮ ನಿರಾಕಾರನಾದುದರಿಂದ ಅವನಿಗೆ ‘ಅದೃಶ್ಯರೂಪಿ’ ಎಂದು ಹೇಳುತ್ತಾರೆ.

ತನ್ನ ಗಂಡನನ್ನು ಮತ್ತೆ ನೋಡಲು ಬಯಸಿದ ರತಿಗೆ ಮನ್ಮಥನ ಮುಂದಿನ ಜನನದ ಬಗ್ಗೆ ಶಿವ ತಿಳಿಸಿದ ಎಂದು ಶಿವಪುರಾಣದ ಹೇಳುತ್ತದೆ. ದ್ವಾರಕೆಯಲ್ಲಿ ಕೃಷ್ಮ-ರುಕ್ಮಿಣಿಯರಿಗೆ ಪ್ರದ್ಯುಮ್ನ ಎಂಬ ಹೆಸರಿನಲ್ಲಿ ಮನ್ಮಥ ಮಗನಾಗಿ ಹುಟ್ಟುತ್ತಾನೆ. ಅವನನ್ನು ಶಂಬರಾಸುರ ಎಂಬ ರಾಕ್ಷಸ ಅಪಹರಿಸಿಕೊಂಡು ಹೋಗಿ ಸಮುದ್ರದಾಚೆ ಇರುವ ತನ್ನ ರಾಜಧಾನಿಯಲ್ಲಿ ಇಡುವನು. ಅದಕ್ಕೂ ಮುಂಚೆ ರತಿ ಶಂಬರಾಸುರನ ರಾಜ್ಯದಲ್ಲಿ ನೆಲಸಿರುತ್ತಾಳೆ. ಅದೇ ಊರಿನಲ್ಲಿ ಆಕೆ ಮನ್ಮಥನನ್ನು ಹೊಂದುವಳು. ಮನ್ಮಥ ಶಂಬರಾಸುರನನ್ನು ಯುದ್ಧದಲ್ಲಿ ಗೆದ್ದು, ಒಡವೆ – ವಸ್ತುಗಳೊಂದಿಗೆ ರತಿಯ ಜೊತೆಯಲ್ಲಿ ದ್ವಾರಕೆಗೆ ಬಂದು ಸುಖವಾಗಿ ಬದುಕುವನು ಎಂದು ಶಿವಪುರಾಣ ತಿಳಿಸುತ್ತದೆ. ರತಿ ಮನ್ಮಥನ ಕಥೆ ಅನೇಕ ಪುರಾಣಗಳಲ್ಲಿ ಕಂಡು ಬರುತ್ತದೆ. ಮನ್ಮಥ ಶಿವನಿಂದ ಭಸ್ಮವಾದ ಮೇಲೆ, ರತಿ ಶಿವನಲ್ಲಿ ಪತಿಭಿಕ್ಷೆ ಬೇಡಿದಾಗ, ಶಿವನು ಮನ್ಮಥ ಮುಂದಿನ ಜನ್ಮದಲ್ಲಿ ಅವಳ ಮಗನಾಗಿ ಹುಟ್ಟುವನು ಎಂಬ ವರ ನೀಡುತ್ತಾನೆ. ಅಂತೆಯೇ ರತಿ ಮುಂದಿನ ಜನ್ಮದಲ್ಲಿ ಮಾಯಾವತಿ ಎಂಬ ಹೆಸರಿನಲ್ಲಿ ಹುಟ್ಟಿ ಶಂಬರಾಸುರನ ಬಳಿ ಸೇವಕಿಯ ಕೆಲಸ ಮಾಡುತ್ತಾಳೆ. ಮನ್ಮಥ ಕೃಷ್ಣನ ಪ್ರಿಯಸತಿ ರುಕ್ಮಿಣಿಗೆ ಮಗನಾಗಿ ಜನಿಸುವನು. ಶಂಬರಾಸುರನ ಮನೆಗೆ ಸೇರಿಸಲ್ಪಟ್ಟ ಅವನನ್ನು ಮಾಯಾವತಿ ಸಾಕುವಳು. ಹಿಂದಿನ ಜನ್ಮದಲ್ಲಿ ಅವರಿಬ್ಬರೂ ಗಂಡ ಹೆಂಡತಿಯರಾಗಿದ್ದ ವಿಷಯವನ್ನು ನಾರದನ ಮೂಲಕ ತಿಳಿದು ರತಿ ಮನ್ಮಥರು ಮತ್ತೆ ಪತಿ ಪತ್ನಿಯರಾಗುತ್ತಾರೆ. ಅಲ್ಲಿ ಮನ್ಮಥ ಪ್ರದ್ಯುಮ್ನ ಎಂಬ ಹೆಸರಿನಲ್ಲಿ ರತಿಯೊಂದಿಗೆ ಸಂಸಾರ ಮಾಡುವನು.

ರತಿ ಹಾಲಿನ ಕಡಲಿನಲ್ಲಿ ಜನಿಸಿದವಳೆಂದು ಪುರಾಣಗಳು ಹೇಳುತ್ತವೆ. ರತಿ ತನ್ನ ಗಂಡ ಭಸ್ಮವಾದ ಬಳಿಕ ಶಿವನಲ್ಲಿ ಗಂಡನನ್ನು ಮತ್ತೆ ಬದುಕಿಸಿ ಕೊಡಬೇಕೆಂದು ಮೊರೆಯಿಟ್ಟಾಗ, ಶಿವ ಅವಳಿಗೆ ನಿನ್ನ ಗಂಡ ನಿನಗೆ ಮಾತ್ರ ಮೊದಲ ರೂಪದಲ್ಲೇ ಕಾಣಿಸಿಕೊಳ್ಳುತ್ತಾನೆ. ಉಳಿದವರಿಗೆ ನಿರಾಕರನಾಗಿದ್ದು, ಕೆಲವು ಕಾಲದ ನಂತರ ಅವನು ಕೃಷ್ಣನ ಮಗನಾಗಿ ಜನಿಸಿ ಸಾಕಾರ ಸ್ವರೂಪಾಯಿಗ ನಿನ್ನೊಂದಿಗೆ ಇರುವನು ಎಂದು ನುಡಿದ ಮಾತೇ ಅವಳಿಗೆ ವರವಾಗುತ್ತದೆ. ಕಾಮನ ಬಗ್ಗೆ ಪೌರಾಣಿಕ ಕಥೆಗಳು ಕಂಡು ಬರುತ್ತವೆ. ಅದರಲ್ಲಿ ಕಾಮ ಎಂಬುವನು ಯಾರು? ಅವನಿಗಾಗಿ ಆಚರಿಸಲ್ಪಡುವ ಹಬ್ಬಗಳು, ದೇವಸ್ಥಾನಗಳು ಮುಂತಾದವನ್ನು ನೋಡೋಣ.

ಕಾಮನು ಧರ್ಮನಿಗೆ ಶ್ರದ್ಧೆಯಲ್ಲಿ ಜನಿಸಿದ ಕುಮಾರ. ಅವರ ಪತ್ನಿ ರತಿ, ಅವನು ಪ್ರಜಾಪತಿಯ ಸೈನಿಕರಲ್ಲಿ ಒಬ್ಬನು ಎಂದು ಪ್ರಸ್ತಾವಿಸಲಾಗಿದೆ. ಶ್ರೀಕೃಷ್ಣ ರುಕ್ಮಿಣಿಗೆ ಹುಟ್ಟಿದ ಮಗುವೇ ಪ್ರದ್ಯುಮ್ನ. ಇವನು ಜನಿಸಿದ ಹತ್ತನೇ ದಿನ ಶಂಬರಾಸುರ ಇವನನ್ನು ಅಪಹರಿಸಿಕೊಂಡು ಹೋಗಿ ಸಮುದ್ರಕ್ಕೆ ಎಸೆದಾಗ ಒಂದು ಮೀನು ಪ್ರದ್ಯುಮ್ನನನ್ನು ನುಂಗುತ್ತದೆ. ಆ ಮೀನನ್ನುಒಬ್ಬ ಬೆಸ್ತ ಹಿಡಿಯುವನು. ಆ ಮೀನಿನ ಹೊಟ್ಟೆಯಲ್ಲಿದ್ದ ಕಂದನನ್ನು ಮಾಯಾವತಿ ಸಾಕುವಳು. ಈತ ಮುಂದೆ ಬೆಳೆದು ಶಂಬರಾಸುರನನ್ನು ಕೊಂದು ಮಾಯಾವತಿಯೊಂದಿಗೆ ದ್ವಾರಕೆಗೆ ಹೋಗಿ, ತನ್ನನ್ನು ಸಾಕಿದ ಮಾಯಾವತಿಯನ್ನು ಮದುವೆ ಮಾಡಿಕೊಳ್ಳುತ್ತಾನೆ. ಇವನು ಹಿಂದಿನ ಜನ್ಮದ ಮನ್ಮಥ, ಮಾಯಾವತಿ ರತಿದೇವಿಯಾಗಿದ್ದಳು. ಶಂಬರಾಸುರನನ್ನು ಕೊಂದ ಕಾರಣಕ್ಕೆ ಮನ್ಮಥನಿಗೆ ಶಂಬರಾದಾರಿ, ಶಂಬರ ಸಂಹಾರಿ ಎಂಬ ಹೆಸರುಗಳು ಬಂದುವು. ಮನ್ಮಥ ಮೀನಿನ ಉದರದೊಳಗೆ ಇದ್ದುದರಿಂದ ಅವನು ಮತ್ಸ್ಯಕೇತನ ಎಂಬ ಹೆಸರು ಪಡೆಯುತ್ತಾನೆ. ಒಂದು ರೀತಿಯಲ್ಲಿ ಮನ್ಮಥ ವಿಷ್ಣುವಿನ ಮಾನಸ ಪುತ್ರ.

ಮನ್ಮಥನ ಆತ್ಮಗಳಲ್ಲಿ ಕಾಮವನ್ನು ಉಂಟು ಮಾಡಿ ಪ್ರಜಾಭಿವೃದ್ಧಿ ಮಾಡುವವನು. ಈ ಕಾರ್ಯವನ್ನು ಮಾಡುವ ಸಲುವಾಗಿ ಕಾಮನು ಕಬ್ಬನ್ನು ಬಿಲ್ಲಾಗಿಯೂ ಅರವಿಂದ, ಅಶೋಕ, ಮಾವಿನ ಹೂವು, ಮಲ್ಲಿಗೆ, ನೀಲ ಮುಂತಾದ ಸುಮಗಳನ್ನು ಬಾಣಗಳನ್ನಾಗಿಯೂ ಸ್ತ್ರೀಯರನ್ನು ಸೈನ್ಯವನ್ನಾಗಿಯೂ ಹೊಂಬಾಳೆಯನ್ನು ಕಿರೀಟವನ್ನಾಗಿಯೂ ಗಿಣಿಯನ್ನು ಕುದುರೆಯನ್ನಾಗಿಯೂ ವಸಂತವನ್ನು ತೇರನ್ನಾಗಿಯೂ ಆನೆಯನ್ನು ನೆರಳನ್ನಾಗಿಯೂ ಸಾಗರವನ್ನು ಮದ್ದಲೆಯನ್ನಾಗಿಯೂ ಚಂದ್ರನನ್ನು ಬೆಳ್ಗೊಡೆಯನ್ನಾಗಿಯೂ ಮಾಡಿಕೊಂಡು ಲೋಕದವರೆಲ್ಲರನ್ನು ತನ್ನ ನಿಯಂತ್ರಣದಲ್ಲಿ ಇಟ್ಟುಕೊಂಡಿರುತ್ತಾನೆ. ಆಸಿರಿಯ ನಿಘಂಟು ಕಾಮನ ಆಯುಧಗಳ ಬಗ್ಗೆ ಹೀಗೆ ವಿವರಣೆ ನೀಡುತ್ತದೆ.

ದೇವತೆಗಳ ಮೇಲೆ ಪ್ರಯೋಗಿಸಲು ಹೂಬಿಲ್ಲು
ಮರ್ತ್ಯಲೋಕದವರ ಮೇಲೆ ಪ್ರಯೋಗಿಸಲು ಕಬ್ಬುಬಿಲ್ಲು

ಮನ್ಮಥ ಪ್ರಯೋಗಿಸುವ ಪಂಚಾಸ್ತ್ರಗಳೆಂದರೆ ಅರವಿಂದ, ಅಶೋಕ, ಚೂತ, ನವಮಲ್ಲಿಕಾ, ನೀಲೋತ್ಪಲ ಮುಂತಾದ ಹೂವುಗಳು.

ಉನ್ಮತ್ತ, ಮಿಲನಕ್ಕೆಒಪ್ಪುವಿಕೆ, ಮೋಹನ, ಸಂತಾಪ, ವಶೀಕರಣ ಮುಂತಾದವು ಬಾಣ ಪ್ರಯೋಗದ ಪರಿಣಾಮಗಳೆಂದು ಭಾವಿಸಲಾಗಿದೆ.

ಸುಪ್ರಯೋಗ – ಮಾತನಾಡುವ ಬಯಕೆ

ವಿಪ್ರಯೋಗ – ಏದುಸಿರುಬಿಟ್ಟು ಮರುಗುವುದು

ಶೋಕ – ದುಃಖಿಸಿ ಆಹಾರವನ್ನು ತ್ಯಜಿಸುವುದು

ಮೋಹ – ಅಳುವುದು ಮತ್ತು ಬಿಕ್ಕಳಿಸುವುದು

ಮರಣ – ಜೀವ ಸೋಲುವುದು ಮತ್ತು ಮೂರ್ಛೆ ಹೋಗುವುದು

ಇವೆಲ್ಲವೂ ಪಿಂಗಳ ನಿಘಂಟಿನಲ್ಲಿ ಹೇಳಲಾದ ಪಂಚಬಾಣಗಳ ಹೆಸರು ಮತ್ತು ಗುಣಗಳು.

ಕಾಮನಿಗೆ ದೇವಸ್ಥಾನ ನಿರ್ಮಿಸುವುದಿಲ್ಲ ಎಂಬುದನ್ನು ಈಗ ರೂಢಿಯಲ್ಲಿರುವ ಕಾಮನ ಹಬ್ಬಗಳ ಆಚರಣೆಯಿಂದ ತಿಳಿಯಬಹುದು.

ಕಡಲೂರ್ ಜಿಲ್ಲೆಯಲ್ಲಿ ಉತ್ತರ ಸಾತ್ತಿಯ ಪಟ್ಟು, ತಿರುವದಿಗೈ, ಮಾಂಬಟ್ಟು, ಮಾಣಿಗಂಪಟ್ಟು, ಕಾಟ್ವಲ್ ಪಾಳೈಯಂ, ಅಣ್ಣಂಗಾರಂಗುಪ್ಪಂ, ಪಾಳೂರ್‌, ಸೀರ್ಕಾಳಿ, ತಿಟ್ಟುಪಡುಗೈ, ತಿಟ್ಟೈ ನಲ್ಲವಿನಾಗಂಪುರಂ, ಪುವುಸು ಪೇಟ್ಟೈ, ವರುಸಪತ್ತು ತಂಜೈ, ಮಾನಂಬುಸಾವಡಿ ಮುಂತಾದ ಸ್ಥಳಗಳಲ್ಲಿ ಕಾಮನ ಹಬ್ಬ ನಡೆಯುತ್ತದೆ.

ಮಾಸಿ ತಿಂಗಳ (ಫೆಬ್ರವರಿ) ಅಮಾವಾಸ್ಯೆಯ ಐದನೇ ದಿನವಾದ ಪರಿಚಯ ತಿಥಿಯಿಂದ ಮುಂದಿನ ತಿಂಗಳಾದ ಪಂಗುಣಿ ಅಮಾವಾಸ್ಯೆ ಮೂರನೇ ದಿನದವರೆಗೆ ಕಾಮನ ಹಬ್ಬ ನಡೆಯುತ್ತದೆ. ಶಿವನ ಕೋಪಕ್ಕೆ ತುತ್ತಾಗಿ ರೂಪರಹಿತನಾದನು ಎಂಬುದನ್ನು ಗಮನದಲ್ಲಿಟ್ಟುಕೊಂಡು ಈ ಹಬ್ಬದಲ್ಲಿ ಕಾಮನನ್ನ ರೂಪಿಸಲಾಗುತ್ತದೆ.

ಬನ್ನಿಮರದ ಗೊಂಚಲು, ಅರಳಿಗಿಡ ಮುಂತಾದುವನ್ನು ಸೇರಿಸಿಕಟ್ಟಿದ ಕಟ್ಟನ್ನು ಕಾಮನೆಂದು ಭಾವಿಸುತ್ತಾರೆ. ಈ ಕಾಮನನ್ನು ಮಡುವಿನಿಂದ ಹೊತ್ತು ತರಲಾಗುತ್ತದೆ. ಹಾಗೆ ಹೊತ್ತು ತರುವವರು ಅವಿವಾಹಿತ ಯುವಕನಾಗಿರಬೇಕು. ಈ ಯುವಕ ಪಂಚಮಿ ತಿಥಿಯಂದು ಸಂಜೆ ಆರುಗಂಟೆಗೆ ಮಡುವಿನಲ್ಲಿ ಸ್ನಾನ ಮಾಡಿ ಅರಿಶಿಣದ ನೀತಿನಲ್ಲಿ ನೆನೆಸಿದ ವಸ್ತ್ರವನ್ನು ಧರಿಸಿ ಕೈಯಲ್ಲಿ ಕಂಕಣವನ್ನು ಕಟ್ಟಿಕೊಂಡು ಬಳಿಕ ಕಾಮನನ್ನುಹೊತ್ತು ತರುವನು. ಹೀಗೆ ತರುವಾಗ ಜೊತೆಯಲ್ಲಿ ಇಬ್ಬರು ಬಾಲಕರು ಕಾಮ – ರತಿಯರ ವೇಷಧರಿಸಿ ಅರಳಿ ಗಿಡದ ಕೊಂಬೆಯಿಂದ ಮಾಡಿಸಿದ ಬಿಲ್ಲನ್ನು ಹಿಡಿದುಕೊಂಡು ಬಾಣ ಪ್ರಯೋಗಿಸುವಂತೆ ನಟಿಸುತ್ತಾ ಬರುತ್ತಾರೆ. ಈ ಬಾಲಕರಿಗೂ ಸೇರಿಸಿ ಒಟ್ಟು ಮೂವರಿಗೆ ಕಂಕಣವನ್ನು ಕಟ್ಟಲಾಗುತ್ತದೆ.

ಕಾಮನನ್ನು ಪ್ರತಿಷ್ಠಾಪಿಸುವ ಹಳ್ಳಿತೋಡಿ ಅದರಲ್ಲಿ ಹಾಲೆರೆದು, ಹವಳ ಮುಂತಾದುವುಗಳನ್ನು ಹಾಕುವರು. ಊರಿನ ಜನರು ತಮ್ಮ ಬಲಿ ಇರುವ ಕಾಸುಗಳನ್ನು ಹಾಕುವರು. ತದನಂತರ ಕಾಮನನ್ನು ಪ್ರತಿಷ್ಠಾಪಿಸುವರು. ಕಾಮನನ್ನು ನೆಡುವಾಗ ಆ ಸ್ಥಳವನ್ನು ಶುದ್ಧೀಕರಣ ಮಾಡಲಾಗುತ್ತದೆ.

ಮಡುವಿನಿಂದ ಹೊತ್ತು ತರುವ ಪುಟ್ಟ ಕಾಮನನ್ನು ಹಾಗೆಯೇ ನೆಡುವುದಿಲ್ಲ. ಅದರೊಂದಿಗೆ ಕಬ್ಬು, ಹರಳು, ಬೆರಣಿ, ಅಶೋಕ ಎಲೆಯ ಗೊಂಚಲು ಇವೆಲ್ಲವನ್ನು ಸೇರಿಸಿ ಕಟ್ಟಿ ಅದರ ಮೇಲೆ ಮರುಗ, ವೀಳ್ಯದೆಲೆ, ಮೊಲ್ಲೆಹೂವು ಇವುಗಳನ್ನೆಲ್ಲ ಸುತ್ತಿ ಕಟ್ಟುವರು. ಈಗ ಕಾಮ ಸ್ವಲ್ಪ ದೊಡ್ಡದಾಗಿ ಕಾಣುತ್ತಾನೆ. ಈ ಕಾಮನನ್ನು ಶುದ್ಧೀಕರಿಸಿದ ಹಳ್ಳದಂತಹ ಸ್ಥಳದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಇದಕ್ಕೆ ತೆಂಗಿನ ಗರಿಯಿಂದ ಮೇಲ್ಛಾವಣಿ ನಿರ್ಮಿಸಲಾಗುತ್ತದೆ.

ಕಾಮನನ್ನು ಪ್ರತಿಷ್ಠಾಪಿಸಿದ ಹದಿನೈದನೇ ದಿನ ಕಾಮನಿಗೂ ರತಿಗೂ ಮದುವೆ ನಡೆಯುತ್ತದೆ. ಈ ಮದುವೆ ರಾತ್ರಿ ಎಂಟುಗಂಟೆಗೆ ನಡೆಯುತ್ತದೆ. ಪುರೋಹಿತರು ಮಂಗಳಸೂತ್ರ ಕೊಡಲು ಮದುವೆಯಾಗದ ಯುವತಿಯರು ಆ ಮಂಗಳ ಸೂತ್ರಕ್ಕೆ ಮೂರು ಗಂಟು ಹಾಕುವರು. ಹೀಗೆ ಕಟ್ಟುವುದರಿಂದ ಬೇಗನೇ ಮದುವೆಯಾಗುತ್ತದೆ ಎಂದು ನಂಬುತ್ತಾರೆ.

ಪಂಗುಣಿ ಅಮಾವಾಸ್ಯೆಯಂದು ಬೆಳಗ್ಗೆ ಕಾಮನನ್ನು ಸುಡುವ ಹಬ್ಬ ನಡೆಯುತ್ತದೆ. ಇದನ್ನು ಕಾಮದಹನ ಎಂದು ಕರೆಯುತ್ತಾರೆ. ಕಾಮನನ್ನು ದಹಿಸುವ ಹಿಂದಿನ ರಾತ್ರಿ ಕಾಮ ಮತ್ತು ರತಿಯರ ಚಿತ್ರಗಳನ್ನು ಹೊತ್ತುಕೊಂಡು ಬೀದಿಗಳಲ್ಲಿ ಮೆರೆವಣಿಗೆ ಮಾಡುವರು. ಆಗ ಪ್ರತಿ ಮನೆಯಿಂದಲೂ ಆರಾಧನೆ ಸಲ್ಲಿಸುವರು. ಅದೇ ವೇಳೆ ಕಾಮನನ್ನು ಪ್ರತಿಷ್ಠಾಪಿಸಿರುವ ದೇವಸ್ಥಾನದ ಬಳಿ ನಾಟಕವನ್ನು ನಡೆಸಿ ಕೊಡುತ್ತಾರೆ.

ಕಾಮನ ಹಬ್ಬದಲ್ಲಿ ಮುಖ್ಯ ಸ್ಥಾನ ಪಡೆಯುವ ಲಾವಣಿ ಹಾಡಾದ ದಹಿಸಿದ ಪಕ್ಷ ಮತ್ತು ದಹಿಸದ ಪಕ್ಷಗಳ ನಡುವೆ ವಾದ ನಡೆಯುತ್ತದೆ. ಊರಿನ ಜನರೆಲ್ಲರೂ ನೆರೆದಿರುವಾಗ ಈ ವಾದ ವಿವಾದ ಪ್ರಾರಂಭವಾಗುತ್ತದೆ. ಈ ಲಾವಣಿ ಹಾಡು ಸಂಗೀತದಿಂದ ಕೂಡಿರುತ್ತದೆ. ದಹಿಸಿದ ಪಕ್ಷ ವಹಿಸುವವರು ಪರಶಿವನ ಶೌರ್ಯ ಮತ್ತು ಮಹಾತ್ಮ್ಯೆಗಳನ್ನು ಎತ್ತಿ ಹೇಳುತ್ತಾನೆ. ದಹಿಸದ ಪಕ್ಷದವರು ಕಾಮನ ಮಹತ್ತ್ವವನ್ನು ಅಂದರೆ ಕಾಮ ಇಲ್ಲದಿದ್ದರೆ ಜೀವಿಗಳು ಹುಟ್ಟು ಇರುವುದಿಲ್ಲ. ಆದ್ದರಿಂದ ಕಾಮನೇ ಶ್ರೇಷ್ಠ ಎಂದು ವಾದಿಸುವರು. ವಿಷ್ಣುವಿನ ಸೃಷ್ಟಿಕಾರ್ಯವನ್ನು ಮಾಡುವವನು ಕಾಮ ಅವನೇ ಎಲ್ಲವೂ ಎಂದು ಹೇಳಿ ದಹಿಸದ ಪಕ್ಷದವರು ಕಾಮನ ಪರ ವಹಿಸುವರು. ಕಾಮ ಎಂಬಾತ ಹಿಂದಿನ ಜನ್ಮದಲ್ಲಿ ಸೋಮದತ್ತ ಎಂಬ ಬ್ರಾಹ್ಮಣನ ಮಗನಾಗಿ ಹುಟ್ಟಿ ಊರಿನ ಹೆಂಗಸರ ಮೇಲೆ ಮೋಹಗೊಂಡು ಮಹಿಳೆಯರ ಮೇಲೆ ಅತ್ಯಾಚಾರ ಮಾಡುವಷ್ಟು ಕೀಳಾದವನು. ವಿಷ್ಣುವಿನ ಬಳಿ ‘ನಾನು ಇರುವರೆಗೆ ಬಹಳ ದೊಡ್ಡ ತಪ್ಪುಗಳನ್ನು ಮಾಡಿಬಿಟ್ಟೆ. ಇನ್ನು ನಾನು ಒಳ್ಳೆಯ ನಡವಳಿಕೆಯಿಂದ ಬದುಕ ಬೇಕು. ನನ್ನನ್ನು ನಿನ್ನ ಮಗನಾಗಿ ಸ್ವೀಕರಿಸು’ ಎಂದು ಬೇಡಿಕೊಂಡ; ಆದ್ದರಿಂದ ಕೃಷ್ಣ ರುಕ್ಮಿಣಿಯರಿಗೆ ಮಗನಾಗಿ ಹುಟ್ಟಿದ ಎಂದು ಕಾಮನ ಪುರಾಣವನ್ನು ಹೇಳಿ ದಹಿಸಿದ ಪಕ್ಷದವರು ಕಾಮನ ಪಕ್ಷದವರನ್ನು ವಿರೋಧಿಸುವರು. ದಹಿಸದ ಪಕ್ಷದವರು ಶಿವನನ್ನು ಕೀಳಾಗಿ ಆಡುವರು. ಹೀಗೆ ಎರಡೂ ಪಕ್ಷದವರು ಬಿಟ್ಟುಕೊಡುವರು. ಹಾಗೇ ಬಿಟ್ಟು ಕೊಟ್ಟ ಬಳಿಕವೇ ಕಾಮನನ್ನು ದಹಿಸಲಾಗುವುದು.

ಕಾಮನನ್ನು ದಹಿಸುವ ಕಾರ್ಯಕ್ರಮ ಸಾಮಾನ್ಯವಾಗಿ ನಾಟಕೀಯತೆಯಿಂದ ಕೂಡಿರುತ್ತದೆ. ಕಾಮನ ಎದುರು ಶಿವನ ವೇಷಧಾರಿ ಒಬ್ಬರು ಧ್ಯಾನಮಗ್ನನಾಗಿರುವಂತೆ ನಟಿಸುವರು. ಕಾಮನ ವೇಷಧಾರಿಯಲ್ಲಿ ಒಬ್ಬರು ಕೈಯಲ್ಲಿ ಬಿಲ್ಲು ಹಿಡಿದು ಬಾಣಪ್ರಯೋಗ ಮಾಡುವಂತೆ ನಟನೆ ಮಾಡುವರು. ಈ ಸಂದರ್ಭದಲ್ಲಿ ನಟನೆಗೆ ಜೀವ ತುಂಬಲು ಕಾಮ ಪ್ರತಿಷ್ಠಾಪನೆಗೊಂಡ ಸ್ಥಳ ಮತ್ತು ಶಿವ ಕುಳಿತಿರುವ ಸ್ಥಳ ಇವುಗಳ ನಡುಮಧ್ಯೆ ಕಂಬಿಯನ್ನು ಕಟ್ಟಿ ಅದರ ಮೇಲೆ ಕಾಮ ಬಾಣ ಬಿಡುವಂತೆ ಮಾಡುವರು. ಈ ಬಾಣ ಮದ್ದಿನಿಂದ ಮಾಡಿಸಿದ ಸಾರಬಾಣವಾಗಿರುತ್ತದೆ. ಈ ಬಾಣಕ್ಕೆ ಬೆಂಕಿ ಹಚ್ಚಲಾಗುತ್ತದೆ. ಹಾಗೇ ಬೆಂಕಿ ಹಚ್ಚಿದ ಬಾಣ ಶಿವನ ಸಮೀಪ ಬಂದು ಬೀಳುತ್ತದೆ. ತನ್ನ ಧ್ಯಾನನಿಷ್ಠೆಯನ್ನು ಭಂಗಗೊಳಿಸಿದ್ದಕ್ಕಾಗಿ ಶಿವ ಕಾಮನನ್ನು ತನ್ನ ಹಣೆಗಣ್ಣಿನಿಂದ ಭಸ್ಮಗೊಳಿಸಿದ ಎಂಬ ಪೌರಾಣಿಕ ಕಥೆಯನ್ನು ಅನುಕರಿಸಲಾಗುತ್ತದೆ. ಶಿವನ ಮೇಲೆ ಬಿದ್ದ ಬಾಣ ಮತ್ತೆ ಕಾಮನತ್ತ ಬರುತ್ತದೆ. ಹಾಗೇ ಬಂದ ಬಾಣಗಳು ಕಾಮನ ಮೇಲೆ ಬೀಳುತ್ತವೆ. ಕಾಮ ಬೆಂಕಿ ಹತ್ತಿಕೊಂಡು ಉರಿಯುತ್ತಾನೆ.

ಈ ಹಂತದಲ್ಲಿ ರತಿಯ ವೇಷ ಧರಿಸಿದ ವ್ಯಕ್ತಿ (ಗಂಡು) ಉರಿವ ಕಾಮನ ಎದುರಿಗೆ ನಿಂತು ತನ್ನ ಎದೆ ಎದೆ ಬಡಿದುಕೊಂಡು ಗೋಳಿಡುತ್ತಾನೆ. ನಾನು ನಿಮ್ಮಂತೆ ಒಬ್ಬ ಹೆಣ್ಣಲ್ಲವೇ, ನನ್ನ ಗಂಡ ಸತ್ತು ಹೋದರಲ್ಲ ಎಂದು ಪ್ರಲಾಪಿಸುವನು. ಈ ರತಿ ವೇಷಧಾರಿ ನಾಟಕದ ಕಲಾವಿದರಾಗಿರುವುದರಿಂದ ಜನರ ಬಳಿ ಕಾಸು ಕೇಳುತ್ತಾನೆ. ಈ ಘಟನೆ ಮುಗಿದ ಬಳಿಕ ದಹನಗೊಂಡ ಕಾಮನ ಭಸ್ಮವನ್ನು ಎಲ್ಲರೂ ಹಣೆಗೆ ಹಚ್ಚಿಕೊಳ್ಳುತ್ತಾರೆ. ಕೆಲವರು ಆ ಬೂದಿಯನ್ನು ಮನೆಗೂ ಕೊಂಡೊಯ್ಯುತ್ತಾರೆ.

ಕಾಮನನ್ನು ದಹಿಸಿದ ಮಾರನೆಯ ದಿನ ರತಿಯ ಮೊರೆಗೆ ಮಣಿದ ಶಿವ ಕಾಮನಿಗೆ ಜೀವನೀಡಿ ಎಬ್ಬಿಸುವ ಪೌರಾಣಿಕ ಕಥೆಯ ಹಿನ್ನೆಲೆಯಲ್ಲಿ ಕಾಮನನ್ನು ಎಬ್ಬಿಸುವ ಕಾರ್ಯಕ್ರಮ ಈ ಹಬ್ಬದ ಕೊನೆಯಲ್ಲಿ ನಡೆಯುತ್ತದೆ. ನಾಲ್ಕು ಮೂಲೆಗಳಿಂದ ಕೂಡಿದ ಪೀಠದ ಮಧ್ಯೆ ಜೇಡಿ ಮಣ್ಣಿನಿಂದ ಮಾಡಿದ ಲಿಂಗವನ್ನಿಟ್ಟು ಅದರ ಸುತ್ತ ನಾಲ್ಕು ಮೂಲೆಗಳಲ್ಲೂ ಬ್ರಹ್ಮಪುತ್ರರ ಪ್ರತಿಮೆಗಳನ್ನು ಇಡಲಾಗುತ್ತದೆ. ಲಿಂಗದ ಎದುರಿಗೆ ನಂದಿ ಹಾಗೂ ಎಡಭಾಗದಲ್ಲಿ ಒಬ್ಬ ಋಷಿಯ ಪ್ರತಿಮೆ ಇರುತ್ತದೆ. ಎಲ್ಲಾ ಪ್ರತಿಮೆಗಳಿಗೂ ಹಾಲು ಮೊದಲಾದ ಪದಾರ್ಥಗಳಿಂದ ಅಭಿಷೇಕ ಮಾಡಿಸಲಾಗುತ್ತದೆ. ಹೀಗೆ ಮಾಡುವುದರಿಂದ ಕಾಮನಿಗೆ ಜೀವ ಬಂತು ಎಂದು ಭಾವಿಸುತ್ತಾರೆ.

ಮತ್ತೆ ಮುಂದಿನ ವರ್ಷ ಹಬ್ಬ ಪ್ರಾರಂಭವಾಗುವಾಗ ಆ ಗುಂಡಿಯಲ್ಲಿ ಹಾಕಿದ ಕಾಸುಗಳೆಲ್ಲವನ್ನು ಬೇರೆ ಹಣಕೊಟ್ಟು ಪಡೆದುಕೊಳ್ಳುತ್ತಾರೆ. ಆ ಕಾಸುಗಳನ್ನು ಮನೆಯಲ್ಲಿ ಜೋಪಾನ ಮಾಡುತ್ತಾರೆ. ಇದೇ ರೀತಿಯಲ್ಲಿ ಅನೇಕ ಕಡೆ ಕಾಮನ ಹಬ್ಬ ನಡೆಯುತ್ತದೆ. ಕೆಲವು ಸ್ಥಳಗಳಲ್ಲಿ ಕಾತ್ತವರಾಯನನ್ನು ನೇಣಿಗೇರಿಸುವ ಆಚರಣೆಯನ್ನು ಸೇರಿಸಿ ಮಾಡುತ್ತಾರೆ. ಇದು ಸ್ಥಳದಿಂದ ಸ್ಥಳಕ್ಕೆ ಬದಲಾಗುವುದನ್ನು ಕಾಣಬಹುದು.

ಕೆ.ಎಸ್.ವಿ. ಅನುವಾದ ಐ.ಎಸ್.

 

ಮಯಾನ ಕೊಳ್ಳೈ ಅಂಗಾಳಮ್ಮನ್ ಅಥವಾ ಅಂಗಾಳ ಪರಮೇಶ್ವರಿ ಆರಾಧನೆ ತಮಿಳುನಾಡಿನ ಕಡಲೂರ್, ವಿಳುಪ್ಪುರಂ, ಉತ್ತರ ಆರ್ಕಾಟ್, ಮದುರೈ, ತಿರುಚನಾಪಳ್ಳಿ, ಕೊಯಮತ್ತೂರು ಮತ್ತು ತಿರುವಾರೂರ್ ಜಿಲ್ಲೆಗಳಲ್ಲಿ ಕಂಡು ಬರುತ್ತದೆ. ಈ ಪೂಜಾ ವಿಧಿಯ ಅಂಗವಾಗಿ ಮಯಾನ ಕೊಳ್ಳೈ (ಶ್ಮಶಾನ ದರೋಡೆ) ಕಾರ್ಯಕ್ರಮ ನಡೆಯುತ್ತದೆ. ಆದರೆ ‘ದರೋಡೆ’ ಎಂಬುದನ್ನು ಇಲ್ಲಿ, ‘ಕಳವು’ ಎಂಬರ್ಥದಲ್ಲಿ ಬಳಸಿಲ್ಲ. ಪೂಜಾರಾಧನೆಗೆ ಸಂಬಂಧಿಸಿದ ಕಾರ್ಯಕ್ರಮವೊಂದಕ್ಕಾಗಿ ರೂಪಿಸುವ ಪ್ರತಿಕೃತಿಯನ್ನು ನಾಶಮಾಡಿ ಅದರ ಬೂದಿಯನ್ನು ಅಥವಾ ಅವಶೇಷಗಳನ್ನು ತೆಗೆಯುವುದು ಎಂಬರ್ಥದಲ್ಲಿ ಬಳಸಲಾಗಿದೆ.

ಇದಕ್ಕೆ ಸಂಬಂಧಿಸಿದಂತೆ ಕಥೆಯೊಂದು ಪ್ರಚಲಿತದಲ್ಲಿದೆ. ವಲ್ಲಾಳರಾಜನ್ ಎಂಬ ಶಿವಭಕ್ತ ದುಷ್ಟ ಅರಸನಾಗಿದ್ದನು. ಅಂಗಾಳಮ್ಮನ್ ವೃದ್ಧೆಯ ರೂಪದಲ್ಲಿ ಅವನ ಬಳಿಗೆ ಹೋಗಿ ಆಹಾರ ಕೇಳಿದಾಗ ಅವನು ಕೊಡಲಿಲ್ಲ. ಅವನ ಪತ್ನಿ ಗರ್ಭಿಣಿಯಾಗಿದ್ದಾಗ ಪ್ರಸವಕ್ಕೆ ಸೂಲಗಿತ್ತಿ ಸಿಗಲಿಲ್ಲ. ಅಂಗಾಳಮ್ಮನ್ ಸೂಲಗಿತ್ತಿಯಾಗಿ ಬಂದು ರಾಣಿಯ ಹೊಟ್ಟೆಯನ್ನು ಸೀಳಿ, ಕರುಳನ್ನು ತೆಗೆದು ಹಾರವಾಗಿ ಹಾಕಿಕೊಳ್ಳುವಳು. ಆಗ ರಾಣಿ ಸಾಯುತ್ತಾಳೆ. ದೇಶ ನಾಶವಾಗುತ್ತದೆ. ವಲ್ಲಾಳರಾಜನ್ ಅಂಗಾಳಮ್ಮನಿಗೆ ನಮಿಸುವನು.

ಮಹಾಶಿವರಾತ್ರಿಯಂದು ಮಧ್ಯಾಹ್ಮ ಶ್ಮಶಾನದಲ್ಲಿ ‘ಶ್ಮಶಾನ ದರೋಡೆ’ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಸುಟ್ಟ ಶವಗಳ ಬೂದಿ, ಮಣ್ಣು ಮುಂತಾದವುಗಳಿಂದ ಮೂರರಿಂದ ನಾಲ್ಕು ಮೀಟರ್ ಉದ್ದದ ಅಮ್ಮನ್ ಪ್ರತಿಕೃತಿಯನ್ನು ಶಯನ ಭಂಗಿಯಲ್ಲಿ ರೂಪಿಸಲಾಗುತ್ತದೆ. ಅಂದು ಸಂಜೆ ಅದನ್ನು ಅಲಂಕಾರ ಮಾಡಿ ರಾತ್ರಿಯಿಡೀ ಅಮ್ಮನ ಮೆರೆವಣಿಗೆ ಮಾಡಲಾಗುತ್ತದೆ. ಬಳಿಕ ಮುಂಜಾನೆ ಶ್ಮಶಾನಕ್ಕೆ ತೆರಳಿ ಅಮ್ಮನಿಗೆ ಕಣ್ಣು ತೆರೆಸಲಾಗುತ್ತದೆ. ಹಾಡುಗಾರರು ವಾದ್ಯ ನುಡಿಸುತ್ತ ಹಾಡುಗಳನ್ನು ಹಾಡುವರು. ಬೆಳಿಗ್ಗೆ ಬ್ರಾಹ್ಮಣ ಅರ್ಚಕರು ಹದಿನಾರು ಹಸ್ತಗಳ ಅಮ್ಮನಿಗೆ ಅಲಂಕಾರ ಮಾಡಿ ಸಿಂಹವಾಹನದಲ್ಲಿ ಅಮ್ಮನನ್ನು ಕೂರಿಸುವರು. ಹರಕೆ ಹೊತ್ತವರು ಕಾಳಿ ವೇಷ ಧರಿಸುತ್ತಾರೆ. ಅವರು ಸೀರೆಯುಟ್ಟು ಮುಖಕ್ಕೆ ಕೆಂಪು ಬಣ್ಣ ಲೇಪನದ ಅಲಂಕಾರ ಮಾಡಿಕೊಂಡಿರುತ್ತಾರೆ. ಅವರಲ್ಲೊಬ್ಬರು ಕುರಿಯ ಈಲಿಯನ್ನು ಬಾಯಲ್ಲಿ ಕಚ್ಚಿ ಹಿಡಿದುಕೊಂಡು ಅಗ್ಗಿಷ್ಟಿಕೆ (ಕೆಂಡದ ಮಡಕೆ)ಯನ್ನಮು ಹೊತ್ತು ಬರುವರು.

ಹುಂಜದ ಬಲಿ, ಪೂಜೆ, ಮೆರೆವಣಿಗೆ ಮುಂತಾದ ಆಚರಣೆಗಳು ಮುಗಿದ ಬಳಿಕ, ಮಣ್ಣಿನಿಂದ ಮಾಡಿದ ಶಯನ ಭಂಗಿಯಲ್ಲಿ ಇರುವ ಅಲಂಕೃತ ಅಮ್ಮನ್‌ರವರ ತಲೆಯ ಮೇಲೆ ಅರ್ಚಕರು ಆವೇಶಭರಿತವಾಗಿ ಬೀಳುವರು. ಅರ್ಚಕರು ಬಿದ್ದ ಕೂಡಲೇ ಅಲ್ಲಿ ನೆರೆದಿರುವ ಜನರು ತಾವು ತಂದಿರುವ ನುಗ್ಗೆಕಾಯಿ, ಅರಿಸಿನ, ಕಡುಬು ಮುಂತಾದವುಗಳನ್ನು ಆಕಾಶದತ್ತ ಎಸೆಯುವರು. ಅರ್ಚಕರು ತಮ್ಮನವರ ಮೇಲೆ ಬಿದ್ದ ಕೂಡಲೇ ಅಲ್ಲಿರುವ ಜನರು, ಅಮ್ಮನನ್ನು ರೂಪಿಸಲು ಬಳಸಿದ ಬೂದಿ, ಮಣ್ಣು ಮುಂತಾದವುಗಳನ್ನು ನೂಕಾಡುತ್ತಾ ಆಸಕ್ತಿಯಿಂದ ಕೊಳ್ಳೆ ಹೊಡೆಯುವಂತೆ ಕಳ್ಳತನದಿಂದ ತೆಗೆದುಕೊಂಡು ತಮ್ಮ ಮನೆಗೆ ಒಯ್ಯುವರು. ಅಲ್ಲಿಂದ ತೆಗೆದ ಬೂದಿ ಅಥವಾ ಮಣ್ಣು ದುಷ್ಟಶಕ್ತಿಗಳನ್ನು ಹಾಗೂ ರೋಗಗಳನ್ನು ನಿವಾರಿಸುತ್ತವೆ ಎಂದು ನಂಬುತ್ತಾರೆ. ಇದೇ ಶ್ಮಶಾನ ದರೋಡೆ ಉತ್ಸ.

ಟಿ.ಜಿ. ಅನುವಾದ ಐ.ಎಸ್.

 

ಮರಗಾಲು ಕರ್ನಾಟಕದ ಜನಪದ ಕಲಾಪ್ರಕಾರ. ದಕ್ಷಿಣ ಕನ್ನಡ ಜಿಲ್ಲೆ, ಕೋಲಾರ, ಚಿತ್ರದುರ್ಗ, ಮಂಡ್ಯ, ಮೈಸೂರು ಭಾಗಗಳಲ್ಲಿ ಕಂಡುಬರುತ್ತದೆ. ಊರದೇವತೆಯ ಜಾತ್ರೆ, ಹಬ್ಬ ಮತ್ತು ಉತ್ಸವಗಳಲ್ಲಿ ಮರಗಾಲಿನ ಮನರಂಜನೆ ಸರ್ವೇಸಾಮಾನ್ಯವಾಗಿರುತ್ತದೆ. ಈ ಕಲೆ ಯಾವುದೇ ಜಾತಿ ಮತದವರಿಗೆ ಸೀಮಿತವಾದುದಲ್ಲ. ಉತ್ಸಾಹ ಇರುವ ಯಾವನೇ ಯುವಕ ಇದರಲ್ಲಿ ಭಾಗವಹಿಸಬಹುದು. ನಡೆಯಲು ಉಪಯೋಗಿಸುವ ಮರ ಹಗುರವಾಗಿಯೂ ಗಟ್ಟಿಯಾಗಿಯೂ ಇರಬೇಕು. ಸಾಮಾನ್ಯವಾಗಿ ಮರಗಾಲಿನ ತಯಾರಿಗೆ ಹಾಲುವಾಣದ ಮರವನ್ನು ಉಪಯೋಗಿಸುತ್ತಾರೆ. ಹಾಲುವಾಣದ ಮರದ ಎರಡು ತುಂಡುಗಳ ಮೇಲೆ ಪಾದವೂರಲು ಅನುಕೂಲವಾಗುವಂತೆ ಇರುತ್ತದೆ. ಅಂಥ ಪುಟ್ಟ ಹಲಗೆಯ ಕೆಳಕ್ಕೆ ಮರಗಾಲು ಎಷ್ಟು ಉದ್ದಬೇಕಾದರೂ ಇರಬಹುದು. ಒಂದು ಅಡಿಯಿಂದ ಎರಡು ಮೂರು ಹೀಗೆ ಮರಗಾಲು ಆರೇಳು ಅಡಿಗಳವರೆಗಾದರೂ ಇರಬಹುದು. ಈ ಮರಗಾಲುಗಳಿಗೆ ನಡು ನಡುವೆ ಗೆಜ್ಜೆ ಕಟ್ಟಿರುತ್ತಾರೆ. ಮರಗಾಲನ್ನು ಕಟ್ಟಿಕೊಳ್ಳುವುದಕ್ಕೆ ಮೊದಲು ಮೊಣಕಾಲಿನವರೆಗೆ ಬಟ್ಟೆಸುತ್ತಿಕೊಳ್ಳುವರು. ಆ ಮೇಲೆ ಹಿಮ್ಮಡಿಯ ಮೇಲೆ ಹೆಜ್ಜೆ ಭಾರ ಬೀಳುವಂತೆ ಮರಗಾಲುಗಳ ಮೇಲೆ ನಿಂತು ಅದನ್ನು ಭದ್ರವಾಗಿ ಕಾಲಿಗೆ ಕಟ್ಟುತ್ತಾರೆ. ಕಟ್ಟಿಕೊಳ್ಳಲು ಸೆಣಬಿನ ದಾರ ಇಲ್ಲವೆ ಬಾಳೆಯ ಪಟ್ಟೆ ಬಳಸುತ್ತಾರೆ. ಮರಗಾಲು ಕುಣಿತ ಕಲಿಯುವ ಮೊದಲು ಸಹಾಯಕರು ಬೇಕೆಬೇಕು. ಇಲ್ಲದಿದ್ದರೆ ಅಪಾಯ ಇದ್ದೇ ಇರುತ್ತದೆ. ಕೆಲವು ಕಡೆ ಮರಗಾಲಿನ ಪುರುಷರು ಸ್ತ್ರೀವೇಷ ಹಾಕುವುದುಂಟು. ಮರಗಾಲಿನ ಹೆಣ್ಣು ಗಂಡು ಛತ್ರಿ ಹಿಡಿದು ನಡೆಯುವುದುಂಟು. ಛತ್ರಿಯು ನಡೆಯುವಾಗ ಸಮತೋಲನ ಕಾಪಾಡುತ್ತದೆ.

34_70A_DBJK-KUH

ವಾದ್ಯ ಸಮೂಹಗಳಲ್ಲಿ ಇವರು ನಡೆಯುತ್ತ ಮರಗಾಲಿನ ಮೇಲೆ ನಿಂತೇ ಕೆಲವು ಮನರಂಜನೆಯನ್ನು ಜನಕ್ಕೆ ಉಂಟುಮಾಡುತ್ತಾರೆ. ಬುಡಕಟ್ಟು ಸಮೂಹವಾದ ಹಾಲಕ್ಕಿ ಒಕ್ಕಲಿನವರಲ್ಲಿಯೂ ಮರಗಾಲು ಕುಣಿತ ಇರುತ್ತದೆ.

ಕೆ.ಎಚ್.

 

ಮರಪ್ಪಾವೈಕ್ಕೂತ್ತು ಮರದಿಂದ ತಯಾರಿಸಿದ ಗೊಂಬೆಗಳನ್ನು (ಪಾವೈಗಳ್) ಆಡಿಸುವ ಮೂಲಕ ಪ್ರದರ್ಶಿಸುವ ಕಲೆಯನ್ನು ‘ಮರಪ್ಪಾವೈ ಕ್ಕೂತ್ತು’ ಎಂದು ಕರೆಯಲಾಗುವುದು. ‘ಬೊಮ್ಮೆಯಾಟ್ಟಂ’ (ಗೊಂಬೆಯಾಟ, ಬೊಂಬೆಯಾಟ) ಎಂಬುದು ಇದರ ಇನ್ನೊಂದು ಹೆಸರು. ತೆಲುಗು, ಮಲಯಾಳಂ, ಕನ್ನಡ ಭಾಷೆಗಳಲ್ಲಿ ಇದನ್ನು ಕ್ರಮವಾಗಿ ‘ಬೊಮ್ಮಲಾಟ’, ‘ಬೊಮ್ಮೈಯಾಟ್ಟಂ’, ‘ಬೊಂಬೆಯಾಟ’ ಎಂದು ಕರೆಯಲಾಗುವುದು. ‘ಪೊಮ್ಮುದಲ್’ ಎಂಬ ಪದಕ್ಕೆ ಮದ್ರಾಸ್ ವಿಶ್ವವಿದ್ಯಾಲಯ ಪ್ರಕಟಿಸಿರುವ ಅಕಾರಾದಿ ನಿಘಂಟುವಿನಲ್ಲಿ ಪ್ರಕಾಶಮಾನವಾದುದು, ಹೊಳೆಯುವುದು ಎಂಬ ಅರ್ಥವನ್ನು ನೀಡಿದೆ. ವರ್ಣಮಯವಾದ, ಆಕರ್ಷಕವಾದ ಗೊಂಬೆಗಳ ಮೂಲಕ ದೈವ ಅಥವಾ ಮನುಷ್ಯರ ಕ್ರಿಯಾಚರಣೆಗಳು, ಭಾವಗಳು, ಸ್ವರೂಪ, ಮೌಖಿಕ ಸಾಹಿತ್ಯ ಮೊದಲಾದವುಗಳನ್ನು ಪ್ರೇಕ್ಷಕರ ಮುಂದೆ ಪ್ರದರ್ಶಿಸಲು ಬಳಸುವ ಮಾಧ್ಯಮ ಇದಾಗಿದೆ. ಕಥೆಯೊಂದನ್ನು ಆಧಾರವಾಗಿಟ್ಟುಕೊಂಡು, ಹಾಡುಗಳನ್ನು ಬೆರೆಸಿ, ಆಕರ್ಷಕ ಸಂಭಾಷಣೆಗಳೊಂದಿಗೆ ನಡೆಸುವ ಗೊಂಬೆಯಾಟ ಒಂದು ಜನಪ್ರಿಯ ಜನಪದ ಕಲಾಪ್ರಕಾರವಾಗಿದೆ.

ತಮಿಳುನಾಡಿನಲ್ಲಿ ಎರಡು ಬಗೆಯ ಜನಪದ ಕಲಾ ತಂಡಗಳನ್ನು ಗುರುತಿಸಬಹುದು. ಇವು ಕುಂಭಕೋಣಂ ಮತ್ತು ಸೇಲಂ ಪ್ರಾಂತ್ಯ ಗಳಲ್ಲಿ ಕಂಡು ಬರುವ ಪ್ರತ್ಯೇಕ ಕಲಾತಂಡಗಳಾಗಿವೆ. ಜಾತಿ ಭೇದ ವಿಲ್ಲದೆ ಕೇವಲ ಆಸಕ್ತಿ, ತರಬೇತಿ ಮತ್ತು ವೈಯಕ್ತಿಕ ಪ್ರತಿಭೆಗಳನ್ನು ಹೊಂದಿರುವ ಕೆಲವೇ ಕೆಲವು ಜನರು ಈ ತಂಡಗಳ ಸದಸ್ಯರಾಗಿರುತ್ತಾರೆ. ಕುಂಭಕೋಣಂ ಗೊಂಬೆಯಾಟ ತಂಡದ ಶಿಖರವೆಂಬಂತೆ ಕಾರ್ಯನಿರ್ವಹಿಸಿದವರು ಮಣಿಅಯ್ಯರ್ ಅವರ ಶಿಷ್ಟರಾದ ಸಿಂಗಾರನಾಥನ್. ಅವರ ಅನಂತರ ಅವರನನ್ನುಸರಿಸಿ ರವಿ, ಗೋಪಿ, ಮುರುಗನ್ ಮುಂತಾದವರು ಈ ಕಲಾ ಪ್ರಕಾರವನ್ನು ಶ್ರಮವಹಿಸಿ ಕಾಪಾಡಿಕೊಂಡು ಬರುತ್ತಿದ್ದಾರೆ.

ಗಂಡಸರೂ ಹೆಂಗಸರೂ ಸೇರಿದಂತೆ ಸುಮಾರು ಹನ್ನೆರಡು ಜನರ ಗುಂಪು ಗೊಂಬೆಯಾಟದ ಪ್ರದರ್ಶನದಲ್ಲಿ ತೊಡಗುತ್ತದೆ. ಇವರಲ್ಲಿ ಪ್ರಮುಖವಾದವರು ಗೊಂಬೆಗಳನ್ನು ಆಡಿಸುವವರೇ. ಉಳಿದವರು ಸಂಗೀತ ವಾದ್ಯಗಳನ್ನು ನುಡಿಸುವುದರಲ್ಲೂ, ಒಬ್ಬರು ಗೊಂಬೆಗಳನ್ನು ತೆಗೆದುಕೊಡುವ ಕ್ರಿಯೆಯಲ್ಲೂ ಪಾಲ್ಗೊಳ್ಳುತ್ತಾರೆ. ಮರದ ಗೊಂಬೆಗಳನ್ನು ಹಲವು ಬಗೆಯಲ್ಲಿ ತಯಾರಿಸಲಾಗುವುದು. ಪುರಾಣಗಳು, ಇತಿಹಾಸ ಮೊದಲಾದವುಗಳನ್ನಾಧರಿಸಿ ಇವುಗಳನ್ನು ನಿರ್ಮಿಸುತ್ತಾರೆ. ತಾವು ಆಯ್ದುಕೊಳ್ಳುವ ಕಥೆಗಳ ಪಾತ್ರಗಳಿಗೆ ತಕ್ಕಂತೆ ಗೊಂಬೆಗಳನ್ನು ತಯಾರಿಸಿಕೊಳ್ಳುತ್ತಾರೆ. ಸಾಮಾನ್ಯವಾಗಿ ಹಗುರವಾದ ಮರಗಳಾದ ನುಗ್ಗೆ ಇತ್ಯಾದಿ ಮರಗಳಿಂದ ಈ ಗೊಂಬೆಗಳನ್ನು ತಯಾರಿಸುತ್ತಾರೆ. ಸಾಮಾಜಿಕ ವಿಷಯಗಳಿಗೆ ತಕ್ಕಂತಹ, ಹಾಸ್ಯ ಪ್ರವೃತ್ತಿ ನಿರೂಪಿಸುವಂತಹ ಗೊಂಬೆಗಳನ್ನು ಕೂಡ ತಯಾರಿಸಿಟ್ಟುಕೊಳ್ಳುತ್ತಾರೆ. ಸಣ್ಣ ಪ್ರಮಾಣದ ವೇದಿಕೆಯ ನಿರ್ಮಾಣ, ಕಪ್ಪು ಬಣ್ಣದ ರಂಗ ಪರದೆ, ಬಣ್ಣಬಣ್ಣದ ದೀಪಗಳು, ಮೈಕ್, ಹಾರ್ಮೋನಿಯಂ, ತಬಲಾ, ಕಂಜಿರ ಮುಂತಾದ ಸಂಗೀತ ವಾದ್ಯಗಳನ್ನೂ; ಗೊಂಬೆಗಳನ್ನು ಆಡಿಸಲು ಅಗತ್ಯವಾದ ಹಗ್ಗ, ದಾರ, ಕಂಬಿಗಳು, ಕಡ್ಡಿಗಳು, ರಿಂಗ್‌ಗಳು ಮೊದಲಾದವುಗಳನ್ನು ಇವರು ಉಪಯೋಗಿಸಿಕೊಳ್ಳುತ್ತಾರೆ. ಆಶ್ಚರ್ಯಕರವಾದ ಕೆಲವು ಸನ್ನಿವೇಶಗಳನ್ನು ಪ್ರದರ್ಶಿಸುವ ಸಲುವಾಗಿ (ಉದಾಹರಣೆಗೆ ಶ್ರೀಲಂಕಾ ಹತ್ತಿ ಉರಿಯುತ್ತಿರುವಂತಹ ಸನ್ನಿವೇಶಗಳು) ತಗಡಿನ ತಟ್ಟೆಗಳನ್ನೂ ಕೂಡ ಉಪಯೋಗಿಸಿಕೊಳ್ಳುತ್ತಾರೆ.

ರಾಮಾಯಣ, ಮಹಾಭಾರತದ ಸನ್ನಿವೇಶಗಳನ್ನು ಜನರು ಸಾಮಾನ್ಯವಾಗಿ ಆಸಕ್ತಿಯಿಂದ ನೋಡುತ್ತಾರೆ. ಸೀತಾ ಕಲ್ಯಾಣ, ಭಾಮಾ ವಿಜಯ, ವಳ್ಳಿ ಕಲ್ಯಾಣ, ಆಂಡಾಳ್ ಕಲ್ಯಾಣ, ಭಕ್ತ ಪ್ರಹ್ಲಾದ, ಸಿರುತ್ತೊಂಡರ್ ಮೊದಲಾದ ಕಥೆಗಳನ್ನು ಗೊಂಬೆಯಾಟದಲ್ಲಿ ಪ್ರದರ್ಶಿಸಲಾಗುವುದು. ಕಥೆ, ಸಂಭಾಷಣೆಗಳನ್ನು ಜನರು ಆಸಕ್ತಿಯಿಂದ ನೋಡುವಂತೆ ರೂಪಿಸಲಾಗಿರುತ್ತವೆ. ಕೋಣಾಂಗಿ ಹಾಡುಗಳು, ಗಾನಾ ಹಾಡುಗಳನ್ನೂ ಕೂಡ ಗೊಂಬೆಯಾಟದಲ್ಲಿ ಬಳಸಿಕೊಳ್ಳುತ್ತಾರೆ. ಕಾಲಕ್ಕೆ ತಕ್ಕಂತೆ ಇವು ಪರಿವರ್ತಿತವಾಗುತ್ತಿರುವುದನ್ನುಈ ಮೂಲಕ ತಿಳಿಯಬಹುದು.

ಪುರುಷ ವೇಷದ ಗೊಂಬೆಗಳಿಗೆ ಇಂದಿನ ಪದ್ಧತಿಯ ಪ್ರಕಾರ ಪ್ಯಾಂಟ್, ಷರ್ಟ್‌‌ಗಳನ್ನು ತೊಡಿಸುತ್ತಾರೆ. ಅಗತ್ಯಕ್ಕೆ ತಕ್ಕಂತೆ ತಲೆಗೂದಲು, ಮೀಸೆ, ಉಡುಪುಗಳನ್ನು ಚಕ್ಕನೆ ಬದಲಾಯಿಸು ಮೂಲಕ ಒಂದೇ ಗೊಂಬೆಯನ್ನೇ ಹಲವು ಗೊಂಬೆಗಳೆಂಬಂತೆ ತೋರಿಸುತ್ತಾರೆ. ಗೊಂಬೆಗಳು ಸಾಮಾನ್ಯವಾಗಿ ಒಂದೂವರೆ ಅಡಿ ಎತ್ತರದಿಂದ ಆರು ಅಡಿಗಳ ಎತ್ತರದವರೆಗೂ; ಒಂದು ಕೆ.ಜಿ. ತೂಕದಿಂದ ಹಿಡಿದು ಹತ್ತು ಕೆ.ಜಿ.ಗಳವರೆಗೂ ಇರುವುದುಂಟು. ಸ್ಥಿರವಾದ ವೇದಿಕೆಗಳು ಗೊಂಬೆಯಾಟಕ್ಕೆ ಹೊಂದಿಕೆಯಾಗುವುದಿಲ್ಲ. ಗೊಂಬೆಗಳ ಉದ್ದ, ಎತ್ತರ, ಅಗಲಗಳು ಕ್ರಮವಾಗಿ ೬, ೪, ೩ ಮೀಟರ್‌ಗಳ ಪ್ರಮಾಣದಲ್ಲಿರುತ್ತವೆ. ವೇದಿಕೆಯ ಸುತ್ತಮುತ್ತಲಿನ ಸ್ಥಳಗಳನ್ನು ತೆರವಾಗಿಡದೆ ಮುಚ್ಚಲಾಗುತ್ತದೆ. ವೇದಿಕೆಯ ಮೇಲ್ಭಾಗವನ್ನು ಓಲೆಗರಿಗಳಿಂದ ಮುಚ್ಚಲಾಗಿರುತ್ತದೆ. ವೀಕ್ಷಕರ ಮುಂದೆ ಇರುವಂತೆ ಕಪ್ಪು ಬಣ್ಣದ ಪರದೆಯೊಂದನ್ನು ಕಟ್ಟಿರುತ್ತಾರೆ. ತಾವು ಪ್ರೇಕ್ಷಕರಿಗೆ ಕಾಣದಂತೆ, ಆ ತೆರೆಯ ಹಿಂದಿರುವ ವೇದಿಕೆಯಲ್ಲಿ ಕುಳಿತು, ಕೈಯಲ್ಲಿ ಹಿಡಿದುಕೊಂಡಿರುವ ದಾರಗಳನ್ನು ಆಡಿಸುವ ಮೂಲಕ ಗೊಂಬೆಗಳು ಚಲಿಸುವಂತೆ ಮಾಡುತ್ತಾರೆ. ಎಂದರೆ ಇವರಿಗೂ ಗೊಂಬೆಗಳಿಗೂ ನಡುವೆ ಕಪ್ಪು ಪರದೆ ಇರುತ್ತದೆ. ಸಾಮಾನ್ಯವಾಗಿ ರಾತ್ರಿಹೊತ್ತು ಹಲವು ಗಂಟೆಗಳ ಕಾಲ ಈ ಪ್ರದರ್ಶನ ನಡೆಯುತ್ತದೆ. ಗೊಂಬೆಗಳನ್ನು ಊರಿಂದ ಊರಿಗೆ ತೆಗೆದುಕೊಂಡು ಹೋಗಲು ಅನುಕೂಲವಾಗುವಂತೆ, ಅವುಗಳ ಕೈಕಾಲುಗಳನ್ನು ಮಡಿಚಲು ಸಾಧ್ಯವಾಗುವಂತೆ ತಯಾರಿಸಿರುತ್ತಾರೆ. ಇದರಿಂದ ಪ್ರದರ್ಶನದ ಸಂದರ್ಭದಲ್ಲಿ ಕೂಡ ಅವುಗಳನ್ನು ಆಡಿಸಲು ಸುಲಭವಾಗುತ್ತದೆ. ಗೊಂಬೆಗಳಿಗೆ ತೊಡಿಸುವ ಉಡುಪುಗಳು ಸಾಮಾನ್ಯವಾಗಿ ಹಸಿರು, ಕೆಂಪು, ನೀಲಿ, ಹಳದಿ, ಗುಲಾಬಿ ಬಣ್ಣಗಳಿರುತ್ತವೆ.

ವೇದಿಕೆಯ ನಿರ್ಮಾಣ, ಗೊಂಬೆಗಳ ತಲೆಗೂದಲು, ಸಂಗೀತ ವಾದ್ಯಗಳು, ದಾರಗಳು, ಪ್ರದರ್ಶನದಲ್ಲಿ ಪಾಲ್ಗೊಳ್ಳುವ ಕಲಾವಿದರ ಸಂಖ್ಯೆ, ಕಾಲಾವಧಿ, ಕಥಾಪ್ರಸಂಗ ಇತ್ಯಾದಿ ಎಲ್ಲ ದೃಷ್ಟಿಗಳಿಂದಲೂ ಕುಂಭಕೋಣಂ ಪ್ರಾಂತ್ಯದ ತಂಡದ ಪ್ರದರ್ಶನಗಳಿಗಿಂತ ಸೇಲಂ ತಂಡದ ಪ್ರದರ್ಶನ ಭಿನ್ನವಾಗಿರುತ್ತದೆ ಎಂದು ಖ್ಯಾತ ಜಾನಪದ ತಜ್ಞರಾದ ಸಿ.ಮ. ರವಿಚಂದ್ರನ್ (೧೯೮೪) ತಿಳಿಸುತ್ತಾರೆ. ಏನೇ ಆದರೂ, ಸಮಯ ಕಳೆಯಲು ಅಥವಾ ಮನರಂಜನೆಗಾಗಿ ಮಾತ್ರವೇ ಈ ಕಲೆಯನ್ನು ಪ್ರದರ್ಶಿಸದೆ, ಅದರ ಮೂಲಕ ಕೆಲವು ಸಾಮಾಜಿಕ ವಿಷಯಗಳನ್ನು ಜನರ ನಡುವೆ ಪ್ರಸಾರ ಮಾಡುವ ಮಾಧ್ಯಮವಾಗಿಯೂ ಇದು ಬಳಕೆಯಲ್ಲಿದೆ ಎಂಬ ಅಭಿಪ್ರಾಯದಲ್ಲೂ ಎರಡು ಮಾತಿಲ್ಲ.

.ಎಲ್. ಅನುವಾದ ಟಿ.ಎಸ್.