ಮಲವಾಯಿಯಾಟ್ಟಂ ನೀಲಿ ಎಂಬುದು ಮಧ್ಯಕೇರಳದಲ್ಲಿ ನಡೆಸುವ ಒಂದು ಆರಾಧನ ರೂಪ. ಕರಿನೀಲಿ, ಚೆರುನೀಲಿ, ಮಲವಾಯಿ ಮುಂತಾದ ಹಲವು ಹೆಸರುಗಳಿಂದ ಇದರ ದೇವತೆಯು ಹೆಸರುವಾಸಿಯಾಗಿದೆ. ಪಾಣನ್, ಪರಯನ್, ವೇಲನ್ ಮುಂತಾದ ಜನವರ್ಗದವರು ನೀಲಿಯನ್ನು ಮುಖ್ಯವಾಗಿ ಆರಾಧಿಸುವ ಜನ ವರ್ಗಗಳು. ಕರಿನೀಲಿ ಉಗ್ರಮೂರ್ತಿ. ಕಲ್ಲಡಿಕೋಡ್ ಐತಿಹ್ಯದೊಂದಿಗೆ ತಳಕು ಹಾಕಿಕೊಂಡು ಕರಿನೀಲಿಯ ಆರಾಧನೆ ನಡೆಯುತ್ತದೆ. ಸಮುದ್ರವೂ ಭೂಮಿಯು ಸೃಷ್ಟಿಯಾದ ಬಳಿಕ ಭೂಮಿಯಲ್ಲಿ ನಲವತ್ತೆರಡು ಮಲೆಗಳು ಸೃಷ್ಟಿಯಾದುವಂತೆ. ಅವುಗಳಲ್ಲಿ ಅತಿಶ್ರೇಷ್ಠವಾದುದು ಕಲ್ಲಡಿಕ್ಕೋಡ್ ಮಲೆ. ಬಹಳ ಹಿಂದಿನಿಂದಲೇ ಕಲ್ಲಡಿಕ್ಕೋಡ್ ಮಲೆ ಮತ್ತು ಕರಿನೀಲಿಗಳಿಗೆ ಸಂಬಂಧಿಸಿದ ಐತಿಹ್ಯಗಳು ಪರಯನ್‌, ಪಾಣನ್, ಮಣ್ಣೂನ್ ಮುಂತಾದವರಲ್ಲಿ ಚಾಲ್ತಿಯಲ್ಲಿವೆ.

ಮಲವಾಯಿ ಆಟದಲ್ಲಿ ಬರುವ ಮಲವಾಳಿಯು ಪರಯನರ ಫಲವಂತಿಕೆಯ ದೇವತೆ. ಅದು ಅವರ ಕುಲದೈವ ಕೂಡ. ಇನ್ನು ಕೆಲವರು ಆ ದೇವತೆಯನ್ನು ರಣದೇವತೆಯನ್ನಾಗಿಯೂ ಆರಾಧಿಸುತ್ತಾರೆ. ತ್ರಿಶ್ಶೂರು ಜಿಲ್ಲೆಯ ತಲಪ್ಪಿಳ್ಳಿ ತಾಲ್ಲೂಕಿನ ಪಶ್ಚಿಮ ಭಾಗಗಳಲ್ಲಿ ತಲಪ್ಪಿಳ್ಳಿಯ ಇನ್ನು ಕೆಲವು ಭಾಗಗಳಲ್ಲೂ ಜನಪದ ನಾಟಕ ರೂಪವಾದ ಮಲವಾಳಿ ಆಟ್ಟಂ ಅಥವಾ ಮಲವಾಯಿಯಾಟ್ಟ ಪ್ರದರ್ಶನಗೊಳ್ಳುತ್ತದೆ. ಈ ಪ್ರದೇಶಗಳ ಹೊರಗೆ ಮಲವಾೞೆ ಆಟವು ಹರಕೆಯ ರೂಪದಲ್ಲಿ ನಡೆಯುತ್ತದೆ. ಆದರೆ ಅದನ್ನು ನಡೆಸಿಕೊಡುವವರು ಇವರೇ.

ಪರಯರ ತರವಾಡು (ಕುಟುಂಬದ ಮೂಲಮನೆ) ಗಳಲ್ಲಿಯೂ ಮಲವಾಯಿತ ದೈವಕ್ಕೆ ಕಟ್ಟೆ ಅಥವಾ ಗುಡಿ ಇರುತ್ತದೆ. ಮನೆಯ ಅಂಗಳದ ಮಧ್ಯದಲ್ಲಿ ಕಟ್ಟೆಯನ್ನು ನಿರ್ಮಿಸುತ್ತಾರೆ. ಮನೆಯ ಮೂಡುಭಾಗದಲ್ಲಿ ನಿರ್ಮಾಣವಾಗುವ ಕಟ್ಟೆಯಲ್ಲಿ ಮಲವಾೞೆ ಮತ್ತು ಇತರ ಮೂರ್ತಿಗಳ ಸಂಕೇತವಾಗಿ ಕಗ್ಗಲ್ಲ ತುಂಡುಗಳನ್ನು ನಾಟುತ್ತಾರೆ. ಮಲವಾಯಿ ಕಟ್ಟೆಗೆ ‘ಮುಲ್ಲತ್ತರ’ (ಮಲ್ಲಿಗೆ ಕಟ್ಟೆ) ಎಂಬ ಹೆಸರಿದೆ. ಸಾಮಾನ್ಯವಾಗಿ ಅಲ, ಕಳ್ಳಿಹಾಲೆ, ಏಳೆಲೆ ಹಾಲೆ ಮುಂತಾದ ಮರಗಳು ಬೆಳೆದಿರುವ ಜಾಗದಲ್ಲಿ ಮಲವಾಯಿ ಕಟ್ಟೆ ನಿರ್ಮಾಣವಾಗುತ್ತದೆ. ಬಳಿಯಲ್ಲೇ ಬಿದಿರ ಹಿಂಡಿಲು ಕೂಡ ಇರುತ್ತದೆ.

ಆಟ ನಡೆಯುವುದು ಮಲವಾಯಿ ಕಟ್ಟೆಯ ಸುತ್ತ. ಆಟ ಪ್ರಾರಂಭದ ಕೆಲವು ದಿನಗಳ ಮೊದಲೇ ಸಿದ್ಧತೆ ಮಾಡಿಕೊಳ್ಳುತ್ತಾರೆ. ನಾಲ್ಕು ಕೋಲೆತ್ತರದ (ಕೋಲು = ೨೮ ಇಂಚು) ಚಪ್ಪರ ಸಿದ್ಧವಾಗುತ್ತದೆ. ಮಲವಾಯಿ ಕಟ್ಟೆಯ ಸುತ್ತಮುತ್ತ ಸೆಗಣಿಯಿಂದ ಸಾರಿಸುತ್ತಾರೆ. ತೆಂಗಿನ ಎಳೆಯ ಗರಿಗಳಿಂದ ತೋರಣ ಕಟ್ಟಿ ಉಸವದ ವಾತಾವರಣ ನಿರ್ಮಾಣವಾಗಿ ಪರಿಸರವೇ ಬದಲಾಗಿ ಬಿಡುತ್ತದೆ. ಪ್ರೇಕ್ಷಕರಲ್ಲಿ ಹೆಚ್ಚಿನವರೂ ಪರಯನ್ನರೇ.

ಆರಂಭದಲ್ಲಿ ನಡೆಯುವುದು ‘ಊಟ್ಟರಿಯಿಕ್ಕಲ್’ ಎಂಬ ಕಾರ್ಯಕ್ರಮ. ಇದು ಮಲವಾಯಿ ಆಟ ನಡೆಯುತ್ತಿದೆ ಎಂದು ಸಾರುವ ಕಾರ್ಯಕ್ರಮ. ಇದರ ಅಂಗವಾಗಿ ಒಂದು ‘ತೋಟ್ಟಂ’ (ದೈವ ಸಂಬಂಧಿ ಹಾಡು) ಹಾಡಲಾಗುತ್ತದೆ. ಚೆಂಡೆ, ಮರಂ (ಒಂದು ಬಗೆಯ ವಾದ್ಯ), ಕಿರುಕೊಳಲುಗಳನ್ನು ಇದರ ಜತೆ ಬಳಸುತ್ತಾರೆ. ಬಳಿಕ ಕಟ್ಟೆಯಲ್ಲಿ ನಾನಾ ‘ಕಳಂ’ (ಬಣ್ಣದ ಪುಡಿಗಳಿಂದ ರಚಿಸುವ ವಿನ್ಯಾಸ) ಬರೆಯುತ್ತಾರೆ. ಪೂಜಾದ್ರವ್ಯಗಳನ್ನೂ ಒಂದು ಶೀಷೆ ಸೇಂದಿಯನ್ನೂ ಇಡುತ್ತಾರೆ. ಬಳಿಕ ‘ಕಳಶಮಾಡೆಲ್’ (ಕಳಶಂ + ಆಡೆಲ್ = ಕುಣಿತ) ಕಾರ್ಯಕ್ರಮ ಆರಂಭವಾಗುತ್ತದೆ.

ಮಲವಾಯಿಯ ವೇಷದಲ್ಲಿ ಆರಂಭದಲ್ಲಿ ರಂಗದಲ್ಲಿ ಕಾಣಿಸಿಕೊಳ್ಳುವುದು ತರವಾಡಿನ ಯಾವನಾದರೊಬ್ಬ ಸದಸ್ಯ. ಕಾರ್ಯಕ್ರಮ ಪ್ರಾರಂಭದ ಮೊದಲು ತರವಾಡಿನ ಪುರುಷರೆಲ್ಲ ಕಟ್ಟೆಯ ಸುತ್ತ ನೆರೆದು ನಿಲ್ಲುತ್ತಾರೆ. ಆಟದಲ್ಲಿ ಅಭಿನಯಿಸುವವರೆಲ್ಲ ಪುರುಷರು. ‘ತಲಶೀಲ’ವನ್ನು (ಹಮಾಲು) ತಲೆಯಲ್ಲಿ ಇಡುವುದರಿಂದ ಮಲವಾೞೆಯ ವೇಷಧಾರಣೆ ಪ್ರಾರಂಭವಾಗುತ್ತದೆ. ಈ ಮೂಲಕ ವೇಷಧಾರಿ ಅಲೌಕಿಕ ನೆಲೆಗೆ ತಲುಪುತ್ತಾನೆಂದು ನಂಬುತ್ತಾರೆ. ಬಳಿಕ ಮರದ ನೆರಳಿನಲ್ಲಿ ಆತನನ್ನು ಕುಳ್ಳಿರಿಸಿ ಇತರ ವೇಷ ಭೂಷಣಗಳನ್ನು ತೊಡಿಸುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟುತ್ತಾರೆ. ಮೈಗೆ ಆಭರಣಗಳನ್ನು ಹಾಕುತ್ತಾರೆ. ಬಲಕೈಗೆ ಖಡ್ಗವನ್ನೂ ಕಂಕುಳಿಗೆ ಕುಕ್ಕೆಯನ್ನೂ ಕೊಡುತ್ತಾರೆ. ವಾದ್ಯಗಳು ತಾರಕಕ್ಕೇರುತ್ತಿರುವಂತೆ ಮಲವಾಯಿಯು ಕಟ್ಟೆಯ ಸುತ್ತ ಕುಣಿಯತೊಡಗುತ್ತದೆ.

ಮಲವಾಯಿಯ ಕುಣಿತ ತಾರಕಕ್ಕೇರುವಾಗ ಒಳಗಿನಿಂದ ‘ಮುಕ್ಕಾನ್ ಚಾತ್ತನ್’ ವೇಷಧರಿಸಿ ಬರುತ್ತಾನೆ. ಅವನದು ಪ್ರೇಕ್ಷಕರನ್ನು ಮರುಳು ಮಾಡುವ ಅಭಿನಯ. ಈ ಮಧ್ಯೆ ಹಲವು ರೀತಿಯ ಹಾಡುಗಳು ಇರುತ್ತವೆ. ಬಳಿಕ ಮಲವಾಯಿ ಆಟದ ಪ್ರಧಾನ ಕಾರ್ಯಕ್ರಮದ ‘ನಂಜುಂ ನಾಯಾಟ್ಟುಂ’ (ಬೇಟೆ) ಕಾರ್ಯಕ್ರಮ. ಹಿಂದೆ ಮಲವಾಯಿಯ ವೇಷಹಾಕಿದ್ದವ ಕುಣಿತ ನಿಲ್ಲಿಸುತ್ತಾನೆ, ಪ್ರಧಾನ ಮಲವಾಯಿಯ ವೇಷ ಸಿದ್ಧವಾಗಿರುತ್ತದೆ. ಮುಂದಿನ ದೃಶ್ಯ ಯುದ್ಧರಂಗ. ಯುದ್ಧದ ಮಧ್ಯೆ ಮಲವಾಯಿಯ ಕ್ರೋಧ ತುರೀಯ ತಲಪಿದಾಗ ವಾದ್ಯದವರು ಭಿನ್ನ ತಾಳದಲ್ಲಿ ಬಾರಿಸತೊಡಗುತ್ತಾರೆ. ಮಲವಾಯಿಯು ಕೋಪಶಮನಕ್ಕೆ ತಲೆಯ ಬಟ್ಟೆಯನ್ನು ಬದಲಿಸುತ್ತಾನೆ. ರಂಗದಲ್ಲಿ ಉಳಿದ ಇಬ್ಬರೂ ವಿಸ್ತಾರವಾಗಿ ಬೇಟೆಯ ದೃಶ್ಯವನ್ನೂ ಪ್ರದರ್ಶಿಸುತ್ತಾರೆ.

ಮಲವಾಯಿ ಆಟವು ಬೇಸಾಯ ಮತ್ತು ಮಾತೃದೇವತಾ ಸಂಕಲ್ಪಗಳನ್ನೊಳಗೊಂಡ ರಂಗಪ್ರದರ್ಶನ. ಕಾಡು ಕಡಿಯುವ, ಬೀಜಬಿತ್ತುವ, ನೆಲವನ್ನು ಉಳುವ, ಕೊಯ್ಲಿನ ಕೆಲಸಗಳನ್ನು ಆಟದ ಅಂಗವಾಗಿ ಅಭಿನಯಿಸಲಾಗುತ್ತದೆ. ಮುಂದಿನದು ‘ಕರಿತಿರಿ’ ಮತ್ತು ‘ಕುಳಿಕುರಿ’ ಕಾರ್ಯಕ್ರಮಗಳು. ಮಲವಾಯಿ ಪಾಟ್ಟ್ (ಹಾಡು)ನೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಮಲವಾಯಿ ಆಟದ ದೃಶ್ಯಗಳೂ ಹಾಡುಗಳೂ ಮುಡಿಯಾಟವೂ (ಕೇಶನರ್ತನ) ಭೂಮಿ ಸಂಬಂಧವಾದ ಕಾರ್ಯಕ್ರಮಗಳಾಗಿವೆ. ಪರಯನ್ ವರ್ಗದವರಲ್ಲಿ ಚಾಲ್ತಿಯಲ್ಲಿರುವ ಗೂಢಭಾಷೆಯನ್ನು ಪ್ರದರ್ಶನ ಮಧ್ಯದಲ್ಲಿ ಪ್ರೇಕ್ಷಕರೂ ದೈವನರ್ತಕರೂ ಪರಸ್ಪರ ಪ್ರಯೋಗಿಸುವುದಿದೆ. ಆಟದ ಅಂಗವಾಗಿದ್ದ ‘ಮುಡಿಯಾಟ’ದಲ್ಲಿ ಹಿರಿಯ ಕಿರಿಯ ಹೆಂಗಸರು ಪಾಲ್ಗೊಳ್ಳುತ್ತಾರೆ.

ಮಲವಾಯಿ ಆಟದ ಐತಿಹ್ಯ, ಹಾಡುಗಳು, ಪ್ರದರ್ಶನಗಳಲ್ಲಿ ಪ್ರಾದೇಶಿಕ ವ್ಯತ್ಯಾಸಗಳಿವೆ. ಮಲಪ್ಪುರಂ ಜಿಲ್ಲೆಯ ಪೊನ್ನಾನಿ ತಾಲ್ಲೂಕಲ್ಲೂ ಪರಿಸರದಲ್ಲೂ ಕರಿನೀಲಿ ಆಟ್ಟ/ಚೆರುನೀಲಿ ಆಟ್ಟ ಎಂಬ ಹೆಸರಲ್ಲಿ ಈ ಕಲೆ ಪ್ರದರ್ಶಿತವಾಗುತ್ತದೆ. ಪರಯನರ ಅಸ್ಮಿತೆಯ ಕಾರ್ಯಕ್ರಮವಾದುದರಿಂದಲೇ ಇರಬೇಕು, ಇಂದೂ ಅನೇಕ ಪರಯನ್ ತರವಾಡುಗಳಲ್ಲಿ ಮಲವಾೞೆ ಆಟ ಸಕಲ ಧಾರ್ಮಿಕ ವಿಧಿಗಳೊಂದಿಗೆ ನಡೆಯುತ್ತದೆ.

.ಕೆ. ಎನ್. ಅನುವಾದ ಕೆ.ಕೆ.

 

ಮಲಾರ ವಸ್ತು ಸಂಸ್ಕೃತಿಗೆ ಸೇರಿದ ನಂಬಿಕೆ. ಇದನ್ನು ಬಳೆಯ ಮಲಾರ ಎಂದು ಕರೆಯುತ್ತಾರೆ. ಹಳೆಯದಾದ ಬಿಳಿ ಬಟ್ಟೆಯಿಂದ ಮಾಡಿದ ತುಂಬ ದೊಡ್ಡದಾದ ಚೀಲ. ಇದು ಒಂದು ಪ್ರತ್ಯೇಕವಾದ ಆಕಾರದಲ್ಲಿ ಮೂರು ಅಡಿಯಷ್ಟು ಅಗಲ ಎರಡು ಅಡಿಯಷ್ಟು ಉದ್ದವಿರುತ್ತದೆ. ಮಲಾರಕ್ಕಾಗಿಯೇ ಇದನ್ನು ಸಿದ್ಧಪಡಿಸುತ್ತಾರೆ. ಇದರಲ್ಲಿ ಹೆಂಗಸರು ತೊಡುವ ಕೈಬಳೆಗಳನ್ನು ದಿಂಡುಗಳಿಗೆ ತೊಟ್ಟು, ಆ ದಿಂಡುಗಳನ್ನು ಈ ಸಂಚಿಯಲ್ಲಿಡುತ್ತಾರೆ. ಇದನ್ನು ಬಳೆಗಾರಶೆಟ್ಟಿ ಹೊತ್ತುಕೊಂಡು ಗ್ರಾಮಗಳಿಗೆ ತೆರಳಿ ಬಳೆ ಮಾರಾಟಮಾಡುತ್ತಾನೆ. ಬಳಗಾರ ಶೆಟ್ಟಿ ಎಂಬುವು ಬಣಜಿಗ ಎಂಬ ಜಾತಿಗೆ ಸೇರಿದವನು. ಇವರನ್ನೇ ಬಳೆ ಬಣಜಿಗ ಎಂದೂ ಕರೆಯುತ್ತಾರೆ. ಈ ಬಳೆಗಾರ ಶೆಟ್ಟಿ ಊರಿನೊಳಗೆ ಬಂದು ‘ಬಳೇ-ಬಳೇ’ ಎಂದು ಕೂಗುತ್ತಲೇ ಮನೆಯೊಳಗಿಂದ ಮುತ್ತೈದೆಯರು ಹೊರಗೆ ಬಂದು ಬಳೆ ಶೆಟ್ಟಿಯನ್ನು ಪಡಸಾಲೆ ಒಳಗೆ ಕರೆಯುತ್ತಾರೆ. ಸಾಧಾರಣವಾಗಿ ಮುತ್ತೈದೆಯರಲ್ಲದವರು ಇವರನ್ನು ಕರೆಯುವುದಿಲ್ಲ. ಹಾಗೆ ಕರೆಯುವುದು ತಪ್ಪೆಂದು ನಂಬಿಕೆ. ಬಳೆಗಾರ ಆಗ ಒಳಗೆ ಬರುತ್ತಾನೆ. ಬಳಗಾರಶೆಟ್ಟಿ ಮಲಾರವನ್ನು ಮನೆಯೊಳಗೆ ತಂದು ಕೆಳಗಿಡುತ್ತಲೇ ಬಳೆ ತೊಡಿಸಿಕೊಳ್ಳಲು ಬಂದ ಮುತ್ತೈದೆ ಮೊದಲು ಈ ಮಲಾರಕ್ಕೆ ನಮಸ್ಕರಿಸಿ ಅದರ ಮುಂದೆ ಕುಳಿತುಕೊಳ್ಳುತ್ತಾಳೆ. ಅನಂತರ ಶೆಟ್ಟಿಯೂ ಮಲಾರಕ್ಕೆ ನಮಸ್ಕರಿಸಿ ಆ ಮನೆ ಒಡತಿಯ ಕೈಯನ್ನು ಹಿಡಿದುಕೊಳ್ಳುತ್ತಾನೆ. ಸಾಧಾರಣವಾಗಿ ಯಾವ ಅಪರಿಚಿತ ಪುರುಷನು ಬಂದು ಮನೆಯ ಒಡತಿಯ ಕೈಯನ್ನು ಹಿಡಿದುಕೊಳ್ಳುವುದು ಮುಟ್ಟುವುದು ಅಸಾಧ್ಯವಾದುದು. ಅದು ತುಂಬ ದೋಷವೂ ದುರ್ಮಾರ್ಗವೂ ಆಗಹುತ್ತದೆ. ಆದರೆ ಬಳೆಗಾರಶೆಟ್ಟಿ ಕೈ ಹಿಡಿದುಕೊಂಡರೆ ತಪ್ಪಾಗುವುದಿಲ್ಲ. ಮುತ್ತೈದೆಯ ಭಾಗ್ಯದ ಒಂದು ಭಾಗವೆಂದು ಭಾವಿಸುತ್ತಾರೆ. ಅನಂತರ ಬಳೆಗಾರ ಆಕೆಯ ಅಂಗೈಯನ್ನು ಮೆತ್ತಗೆ ಒತ್ತಿ ಕೈಗೆ ಬಳೆಗಳನ್ನು ತೊಡುತ್ತಾನೆ. ಹೀಗೆ ತೊಡುವಾಗ ಎರಡು ಮೂರು ಬಳೆಗಳು ಒಡೆದುಹೋಗಬಹುದಾದರೂ ಹೆಚ್ಚು ಬಳೆಗಳು ಸೇರುತ್ತವೆ. ಎಷ್ಟು ಬಳೆ ಒಡೆದು ಹೋದರೂ ಕೇವಲ ತೊಟ್ಟ ಬಳೆಗಷ್ಟೇ ಒಂದು ಡಜನ್‌ಗೆ ಇಷ್ಟು ಎಂದು ಲೆಕ್ಕಮಾಡಿಕೊಡಬೇಕಾದ ಹಣವನ್ನು ಮನೆ ಒಡತಿಗೆ ಹೇಳುತ್ತಾನೆ. ಹಾಗೆ ಎರಡು ಕೈಗಳಿಗೂ ಬಳೆ ತೊಟ್ಟಾದ ಮೇಲೆ ಆ ಮನೆಯ ಒಡತಿಯಾಗಲಿ ಕನ್ಯೆಯಾಗಲಿ ಎದ್ದುನಿಂತು ಮಲಾರಕ್ಕೂ, ಬಳೆಗಾರ ಶೆಟ್ಟಿಗೂ ನಮಸ್ಕರಿಸುವಳು. ಆಗ ಆ ಶೆಟ್ಟಿ ದೀರ್ಘಕಾಲ ಮುತ್ತೈದೆಯಾಗಿರು ತಾಯಿ ಎಂದು ಆಶೀರ್ವದಿಸುತ್ತಾನೆ. ಅನಂತರ ಮನೆಯ ಒಡತಿ ಮನೆಯೊಳಗೆ ಹೋಗಿ ಹಣವನ್ನೋ ದವಸವನ್ನೋ ತಂದು ಶೆಟ್ಟಿಗೆ ಕೊಡುತ್ತಾಳೆ. ಇಲ್ಲಿ ಮಲಾರ ಎನ್ನುವುದು ಒಂದು ಚೀಲವಾಗಿ ಅಥವಾ ಒಂದು ವಸ್ತುವಾಗಿ ಕಂಡುಬರುವುದಿಲ್ಲ. ಇದರ ಹಿಂದೆ ಒಂದು ನಂಬಿಕೆಯ ವ್ಯವಸ್ಥೆಯೇ ಇದೆ.

ಮಲಾರವನ್ನು ಮುತ್ತೈದೆತನ ಕಾಪಾಡುವ ಪವಿತ್ರವಾದ ವಸ್ತುವಾಗಿ ಭಾವಿಸುತ್ತಾರೆ. ಬಳೆಗಳನ್ನು ತೊಡಿಸಿಕೊಳ್ಳುವುದು ಕೂಡ ಒಂದು ಪವಿತ್ರಕಾರ್ಯ. ಹೀಗೆ ಬಳೆಗಳನ್ನು ತೊಡಿಸಿಕೊಳ್ಳುವ ಸ್ತ್ರೀಯರಲ್ಲಿ ಕೆಲವರಿಗೆ, ಅಂಗೈಗಳಲ್ಲಿ ಅಡ್ಡಮೂಳೆಎಂದು ಕರೆಯುವ ಗಟ್ಟಿಮೂಳೆಗಳಿರುತ್ತವೆ. ಇಂತಹ ಸ್ತ್ರೀಯರಿಗೆ ಕೈಗೆ ಹತ್ತುವ ಬಳೆಗಳು ಕಡಿಮೆ. ಒಡೆದು ಹೋಗುವ ಬಳೆಗಳೇ ಹೆಚ್ಚು. ನಾಲ್ಕು ಬಳೆಗಳು ಹತ್ತಿದರೆ ಇಪ್ಪತ್ತು ಬಳೆಗಳು ಒಡೆದುಹೋಗುತ್ತವೆ. ಆದರೆ ಶೆಟ್ಟಿಗೆ ತೊಟ್ಟ ಬಳೆಗಳಿಗಷ್ಟೇ ಹಣ ಸಿಗುತ್ತದೆ. ಹೀಗೆ ನಷ್ಟ ಹೊಂದಿದ ಶೆಟ್ಟಿ ಊರ ಹೊರಗೆ ಹೋಗಿ ‘ಇವಳ ಮುತ್ತೈದೆತನ ಗಂಗೆಯಲ್ಲಿ ಬೆರೆಯಲಿ’ ಎಂದು ಬೈಯುತ್ತಾನಂತೆ, ಹಾಗೆ ಬೈಯುವುದರಿಂದ ಆ ಸ್ತ್ರೀ ವಿಧವೆಯಾಗುವ ಸಂಭವ ಇರುತ್ತದೆಯಂತೆ. ಹಾಗೆ ಬೈಯ್ಯದಂತೆ ಸ್ತ್ರೀಯರು ಶೆಟ್ಟಿಗೆ ನಮಸ್ಕರಿಸಿ, ಕೇಳಿದ್ದಕ್ಕಿಂತ ಹೆಚ್ಚು ಹಣ ಕೊಡುವುದುಂಟು. ಸ್ತ್ರೀಯರಿಗೆ ಹೀಗೆ ಅಡ್ಡಮೂಳೆ ಇರುವುದು ಅಪಶಕುನವೆಂದು ಭಾವಿಸುತ್ತಾರೆ. ಜನಪದ ಸಂಸ್ಕೃತಿಯಲ್ಲೂ ನಂಬಿಕೆಗಳ ವ್ಯವಸ್ಥೆಯೊಳಗೂ ಇದು ಬೇರ್ಪಡಿಸಲಾರದ ಭಾಗ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ಮಲ್ಲಿಕಾಸುಲ ಆಟ ಇದು ಆಂಧ್ರದ ಜನಪದ ಪ್ರದರ್ಶನ ಕಲೆ. ಇದು ಭಕ್ತಿ ಪ್ರಧಾನವಾದುದು. ಈ ಕಲೆಯನ್ನು ಭಿಕ್ಷಾಟನೆಯ ಗಾಯಕರು ಅಥವಾ ವ್ಯಕ್ತಿ ಕಲಾವಿದರು ಪ್ರದರ್ಶಿಸುತ್ತಾರೆ. ಇವರು ಶೈವ ಭಕ್ತರು. ಮಲ್ಲಿ ಕಾರ್ಜುನನ್ನು ಪೂಜಿಸುವ ಸಂಚಾರಿ ಗಾಯಕ ಭಿಕ್ಷುಕರಾದ ಮಲ್ಲಿಕಾಸುಲು ಎಂಬ ಕುಲದವರು ಶೈವ ಸಂಬಂಧವಾದ ಗೀತೆಗಳನ್ನು ಹಾಡುತ್ತಾರೆ.

ಹೀಗೆ ಕಥೆಯನ್ನು ಗಾಯನ ಮಾಡುತ್ತಾ ರಾತ್ರಿ ವೇಳೆ ಪ್ರದರ್ಶಿಸುವ ಮನರಂಜನಾ ಪ್ರಧಾನವಾದ ಆಟಗಳನ್ನೇ ಮಲ್ಲಿಕಾಸುಲ ಆಟಗಳು ಎನ್ನುತ್ತಾರೆ. ಮಲ್ಲಿಕಾಸುಲ ಜಾತಿಯವರು ಪ್ರದರ್ಶಿಸುವದರಿಂದ ಈ ಆಟಗಳು ಅವರ ಹೆಸರಿನಲ್ಲಿ ಉಳಿವಿದೆ. ಗ್ರಾಮೀಣ ಪ್ರಾಂತ್ಯಗಳಲ್ಲಿ ಇವರನ್ನು ಮಲ್ಲಿಕಾಸುಲ ವಾಳ್ಳು (ಮಲ್ಲಿಕಾಸುಲದವರು) ಎಂದು ಕರೆಯುತ್ತಾರೆ. ಇವರು ಮಲ್ಲಿಕಾಸುರನ ಶಿಖರವನ್ನು ತೆಗೆದುಕೊಂಡು ಮನೆ ಮನೆ ಮುಂದೆ ಹೋಗುತ್ತಾರೆ. ಹೆಂಗಸರು ಮನೆಯಲ್ಲೆ ಉಳಿಯುತ್ತಾರೆ. ಗಂಡಸರು ಮಾತ್ರ ಜಮಿಡಿಕ (ಗುಮ್ಮಟಿ) ವಾದ್ಯವನ್ನು ಬಡಿಯುತ್ತಾ ಕಥನ ಗೀತೆಗಳನ್ನು ಹಾಡುತ್ತಾ ಮನೆಮನೆ ತಿರುಗಿ ಭಿಕ್ಷೆ ಬೇಡುತ್ತಾರೆ. ಜಮಿಡಿಕ ವಾದ್ಯವನ್ನು ‘ಜೋಡಿ ಗುಮ್ಮಟಲು’ ಎಂದು ಕರೆಯುತ್ತಾರೆ. ಇವರು ವರ್ಷಕ್ಕೆ ಒಮ್ಮೆ ಮಾತ್ರ ಗ್ರಾಮಗಳಿಗೆ ಹೋಗುತ್ತಾರೆ. ವಾರ ಹತ್ತು ದಿನಗಳಿಗಿಂತ ಹೆಚ್ಚು ಒಂದು ಊರಿನಲ್ಲಿ ಇರುವುದಿಲ್ಲ. ಇವರು ಹೇಳುವ ಕಥೆಗಳಲ್ಲಿ ಗಂಗೆ ಗೌರಿ ಕಥೆ, ವಿಪ್ರ ನಾರಾಯಣ ಕಥೆ, ಮರಾಠ ಬತ್ತುಡು ಕಥೆ ಮುಖ್ಯವಾದವು. ಪ್ರತಿದಿನ ರಾತ್ರಿ ಕಥೆ ಹೇಳಿ ಕೊನೆಯ ದಿನ ರಾತ್ರಿ ವಿಶೇಷವಾದ ಆಟವನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನದಲ್ಲಿ ಪುರುಷ, ಮಹಿಳೆಯರಿಬ್ಬರೂ ಇರುತ್ತಾರೆ. ಮಹಿಳೆಯರಿಗೆ ಪ್ರತ್ಯೇಕವಾದ ವೇಷ ಭೂಷಣಗಳೇನೂ ಇರುವುದಿಲ್ಲ. ಹೆಂಗಸರು ಹಿಮ್ಮೇಳ ಹಾಡಲು ಮಾತ್ರ ಸಹಕರಿಸುತ್ತಾರೆ. ಗಂಡಸರು ತಲೆಗೆ ಬಣ್ಣ ಬಣ್ಣದ ರುಮಾಲನ್ನು ಸುತ್ತಿಕೊಳ್ಳುತ್ತಾರೆ. ಕಿವಿಗಳಲ್ಲಿ ದೊಡ್ಡದಾದ ಕುಂಡಲಗಳಿರುತ್ತವೆ. ಬಣ್ಣದ ಲುಂಗಿಯನ್ನು ಕಟ್ಟಿಕೊಂಡು ಅಂಗಿ ಧರಿಸಿ ಬಲಭುಜದ ಮೇಲೆ ಬಣ್ಣದ ಸಾಲನ್ನು ಹೊದ್ದಿರುವರು. ಜೋಡಿ ಗುಮ್ಮಟಗಳನ್ನು ಕೊರಳಿಗೆ ನೇತು ಹಾಕಿಕೊಂಡು ಅವುಗಳನ್ನು ಬಡಿಯುತ್ತಾ ಪ್ರದರ್ಶನ ನೀಡುತ್ತಾರೆ. ತಾಳಗಳನ್ನೂ ಬಳಸುವರು. ಇವರ ಪ್ರದರ್ಶನದಲ್ಲಿ ಗಮನ ಸೆಳೆಯುವಂಥದ್ದು ಮರಗಾಲು, ಎರಡು ಮರದ ತುಂಡುಗಳನ್ನು ಕಾಲಿಗೆ ಕಟ್ಟಿಕೊಂಡು ನಡೆಯುವುದು. ಇದನ್ನು ‘ಮರಗಾಲು ನಡಿಗೆ’ ಎನ್ನುತ್ತಾರೆ. ಮರಗಾಲು ಎಂದರೆ ಮರದ ತುಂಡಿನಿಂದ ಮಾಡಿದ ಕಾಲುಗಳು ಎಂದು ಅರ್ಥ. ಉದ್ದನೆಯ ಎರಡು ಕೊರಡುಗಳನ್ನು ತೆಗೆದುಕೊಂಡು ಅವುಗಳ ಕೆಳಭಾಗದಲ್ಲಿ ಪಾದನಿಲ್ಲುವಂತೆ ಸಣ್ಣಚಕ್ಕೆಗಳನ್ನು ತೆಗೆದುಕೊಂಡು ಅವುಗಳ ಕೆಳಭಾಗದಲ್ಲಿ ಪಾದನಿಲ್ಲುವಂತೆ ಸಣ್ಣಚಕ್ಕೆಗಳನ್ನು ಕೂರಿಸುತ್ತಾರೆ. ಅದರ ಮೇಲೆ ಪಾದವಿಟ್ಟು ಹಗ್ಗದಿಂದ ಕಟ್ಟಿಸಿಕೊಂಡು ಉದ್ದನೆಯ ಗಳು ಒಂದರ ಸಹಾಯದಿಂದ ಎದ್ದು ನಿಂತು ವಾದ್ಯಗಳಿಗೆ ಅನುಗುಣವಾಗಿ ನೃತ್ಯ ಮಾಡುತ್ತಾ ಅನೇಕ ವಿನ್ಯಾಸಗಳಲ್ಲಿ ನಡೆಯುತ್ತಾರೆ. ಈ ನಡೆ ನವಿಲು ನಾಟ್ಯದಂತಿರುತ್ತದೆ. ಇವರ ಮನೆಯ ಹೆಸರುಗಳಲ್ಲಿ ‘ಜಕ್ಕಲ’ (ಯಕ್ಷರು)ನವರು ಎಂಬುದು ಹೆಚ್ಚಾಗಿರುತ್ತದೆ. ಸಾಹಿತ್ಯದಲ್ಲಿ ಇವರ ಪ್ರಸ್ತಾಪವಿದೆ.

ಇವರ ಹೆಸರುಗಳಲ್ಲಿ ಮಲ್ಲಮ್ಮ, ಮಲ್ಲಪ್ಪ, ಎಂಬವೇ ಹೆಚ್ಚಾಗಿರುತ್ತವೆ. ವೀರಶೈವ ಮತ ಪ್ರಚಾರಕ್ಕಾಗಿ ವಲಸೆ ಬದುಕನ್ನು ರೂಢಿಸಿಕೊಂಡಿರುವ ಸಂಚಾರಿ ವೃತ್ತಿ ಕಲಾವಿದರು ಪ್ರದರ್ಶಿಸುವ ಈ ಕಲೆ ಈಗ ಕಣ್ಮರೆಯಾಗುವ ಸ್ಥಿತಿಯಲ್ಲಿದೆ.

ಟಿ.ಎಸ್.ಎನ್. ಅನುವಾದ ಎನ್.ಆರ್.

 

ಮಹಾಲಯ ಅಮಾವಾಸ್ಯ ಭಾದ್ರಪದ ಮಾಸದಲ್ಲಿ ಬರುವ ಅಮಾವಾಸ್ಯೆಯನ್ನು ಮಹಾಲಯ ಅಮಾವಾಸ್ಯೆ ಎಂದು, ಪಿತೃ ಅಮಾವಾಸ್ಯೆ ಎಂದು ಕರೆಯುತ್ತಾರೆ. ಪಿತೃ ಅಮಾವಾಸ್ಯೆಯನ್ನೇ ತೆಲುಗರು ವ್ಯವಹಾರದಲ್ಲಿ ‘ಪಿತರ‍್ಲ’ ಪಿತೃಗಳ ಅಮಾವಾಸ್ಯೆ, ಪೆತ್ತರ ಅಮಾವಾಸ್ಯೆ (ದೊಡ್ಡರ ಅಮಾವಾಸ್ಯೆ) ಎನ್ನುತ್ತಾರೆ. ಮಹಾಲಯವೆಂದರೆ ‘ವಿನಾಶ’, ‘ಮರಣ’. ಮರಣಿಸಿದ ಕುಟುಂಬ ಸದಸ್ಯರಿಗೆ ಮಹಾಲಯ ಅಮಾವಾಸ್ಯೆಯಂದು ಎಳ್ಳು ನೀರನ್ನು ಬಿಡುತ್ತಾರೆ. ಮಹಾಲಯ ಅಮಾವಾಸ್ಯೆ ಬರುವ ಮುಂಚೆ ಹದಿನೈದು ದಿನಗಳನ್ನು ‘ಮಹಾಲಯ ಪಕ್ಷ’ ಎನ್ನುತ್ತಾರೆ. ಈ ಪಕ್ಷಗಳಲ್ಲಿ ಸತ್ತವರಿಗೆ ಶ್ರಾದ್ಧ ಕರ್ಮಗಳನ್ನು ಮಾಡುತ್ತಾರೆ. ಭಾದ್ರಪದದಲ್ಲಿನ ಬಹುಳಪಾಡ್ಯಮಿಯನ್ನು ಪಿತೃಪಕ್ಷತರ್ಪಣಾರಂಭ ದಿನವೆಂದು ಕರೆಯುತ್ತಾರೆ. ಈ ದಿನದಿಂದ ಅಮಾವಾಸ್ಯೆಯವರೆಗು ಸತ್ತವರಿಗೆ ತರ್ಪಣಗಳನ್ನು ಬಿಡುತ್ತಾರೆ.

ಬ್ರಾಹ್ಮಣರು ಸತ್ತವರಿಗೆ ಮಂತ್ರಪೂರ್ವಕವಾಗಿ ತರ್ಪಣಗಳನ್ನು ಬಿಡುತ್ತಾರೆ. ಬ್ರಾಹ್ಮಣೇತರರು ಮಂತ್ರ ರಹಿತವಾಗಿ ತರ್ಪಣಕಾರ್ಯಗಳನ್ನು ನಿರ್ವಹಿಸುತ್ತಾರೆ. ಈ ಮಹಾಲಯ ಅಮಾವಾಸ್ಯೆಯಂದು ಪಿತೃದೇವತೆಗಳಿಗೆ ತರ್ಪಣಗಳನ್ನು ಬಿಡುವ ಆಚಾರವು ಎಲ್ಲ ಜಾತಿಗಳಲ್ಲಿ ಕಾಣಿಸದು. ತೆಲಂಗಾಣದಲ್ಲಿ ಪಿತೃಗಳಿಗೆ ತರ್ಪಣಗಳನ್ನು ಬಿಡುವುದನ್ನು ‘ದೊಡ್ಡವರಿಗೆ ಅಕ್ಕಿ ಕೊಡುವುದು’ ಎಂದು ವ್ಯವಹರಿಸುವರು. ಸತ್ತರಿಗೆ ವರ್ಷಪೂರ್ತಿ ಮಾಸಿಕಗಳನ್ನು ಮಾಡದವರು ಮಹಾಲಯ ಅಮಾವಾಸ್ಯೆಯಂದು ತಪ್ಪದೇ ‘ಅಕ್ಕಿ ಕೊಡುತ್ತಾರೆ.

ರಾಯಲಸೀಮೆಯಲ್ಲಿ ಮಹಾಲಯ ಪಕ್ಷವನ್ನು ‘ಪೆದ್ದಲದಿನಂ’ (ದೊಡ್ಡವರ ದಿನ) ಎಂದು ಲೆಕ್ಕಸುತ್ತಾರೆ. ಅಮಾವಾಸ್ಯೆಯಂದು ತರ್ಪಣಗಳನ್ನು ಬಿಟ್ಟು ದೊಡ್ಡವರಿಗೆ ಬಟ್ಟೆ ಇಡುತ್ತಾರೆ. ಮಹಾಲಯ ಪಕ್ಷಗಳಲ್ಲಿ ಮನೆಯ ಮುಂದೆ ರಂಗೋಲಿ ಹಾಕುವುದಿಲ್ಲ, ಮನೆಗೆ ತೋರಣಗಳು ಕಟ್ಟುವುದಿಲ್ಲ. ಮಹಾಲಯ ಅಮಾವಾಸ್ಯೆಯಂದು ತರ್ಪಣಗಳನ್ನು ಬಿಡುವ ಆಚಾರ ಕೆಲವೆ ಜಾತಿಗಳಲ್ಲಿ ಕಂಡುಬರುತ್ತದೆ.

ತೆಲಂಗಾಣದಲ್ಲಿ ಸ್ತ್ರೀಯರ ಮುಖ್ಯವಾದ ಹಬ್ಬ ‘ಬತುಕಮ್ಮ’ – ಈ ಹಬ್ಬ ಮಹಾಲಯ ಅಮಾವಾಸ್ಯೆಯಿಂದಲೇ ಆರಂಭವಾಗುತ್ತದೆ. ‘ಬತುತಮ್ಮ’ ಹಬ್ಬಕ್ಕೆ ಮುಂಚೆ ಭಾದ್ರಪದ ಬಹುಳ ಪಂಚಮಿ ದಿನದಿಂದ ಮಹಾಲಯ ಅಮಾವಾಸ್ಯೆಯವರೆಗೂ ಒಂಬತ್ತು ದಿನ ‘ಬೊಡ್ಡೆಮ್ಮ’ ಹಬ್ಬವನ್ನು ಬಾಲಿಕೆಯರು ನಡೆಸಿಕೊಳ್ಳುತ್ತಾರೆ. ಬೊಡ್ಡೆಮ್ಮ ಹಬ್ಬ ಮುಗಿದ ನಂತರ ‘ಬತುಕಮ್ಮ’ ಹಬ್ಬ ಶುರುವಾಗಿ ಆಶ್ವೀಜನವಮಿ ಹೊತ್ತಿಗೆ ಮುಗಿಯುತ್ತದೆ.

ಈ ಒಂಬತ್ತು ದಿನಗಳು ಹೂಗಳಿಂದ ‘ಬತುಕಮ್ಮ’ನನ್ನು ಆಡುತ್ತಾ, ಹಾಡುತ್ತಾ ನೀರಲ್ಲಿ ನಿಮ್ಮಜ್ಜನ ಮಾಡುತ್ತಾರೆ. ಮಹಾಲಯ ಅಮಾವಾಸ್ಯೆ ಅಥವಾ ‘ಪೆತ್ತರ ಅಮಾಸೆ’ಯಂದು ಮಾಡುವ ಬತುಕಮ್ಮನನ್ನು ಎಂಗಿಲಿಪೂವು (ಎಂಜಲಿ ಹೂ) ಬತುಕಮ್ಮ ಎಂದು ಕರೆಯುತ್ತಾರೆ. ಇಂದು ಸ್ತ್ರೀಯರು ಅಡಿಗೆ ಮಾಡಿ ಊಟವಾದ ನಂತರ ಬತುಕಮ್ಮನನ್ನು ಹೂಗಳಿಂದ ಶೃಂಗರಿಸಿ ಪೂಜಿಸುತ್ತಾರೆ. ಎಂಜಲು ಪೂವು ಬತುಕಮ್ಮನನ್ನು ಸೇರಿಸಿ ಗೌರಮ್ಮನನ್ನು ಪೂಜಿಸುತ್ತಾರೆ. ಆದ್ದರಿಂದ ಎಂಗಿಲಿ ಪೂವು ಬತುಕಮ್ಮ ಎಂದು ಕರೆಯುತ್ತಾರೆ. ಹಬ್ಬಕ್ಕೆ ಒಂದು ದಿನ ಮುಂಚೆ ಹೂಗಳಿಂದ ಬತುಕಮ್ಮನನ್ನು ತಯಾರು ಮಾಡಿದ್ದರಿಂದ ಎಂಜಲಿ ಹೂಗಳ ಬತುಕಮ್ಮ ಆಗಿದೆ ಎಂದು ಹೇಳುತ್ತಾರೆ. ಸಾಯಂಕಾಲ ಹೆಂಗಸರೆಲ್ಲರು ಸೇರಿ ಬತುಕಮ್ಮ ಸುತ್ತಲೂ ತಿರುಗುತ್ತಾ ಕೈಗಳನ್ನು ತಿರುವುತ್ತಾ ಹಾಡುಗಳನ್ನಾಡುತ್ತಾರೆ. ಅನಂತರ ಬತುಕಮ್ಮರನ್ನು ಕೆರೆಯಲ್ಲಾಗಲಿ, ಕಾಲುವೆಯಲ್ಲಾಗಲಿ, ನಿಮ್ಮಜ್ಜನ ಮಾಡುತ್ತಾರೆ. ಈ ರೀತಿ ಒಂಬತ್ತು ದಿನಗಳು ಬತುಕಮ್ಮರನ್ನು ಆಡಿ ಹಾಡುತ್ತಿರುತ್ತಾರೆ. ಆದರೇ ಮೊದಲನೆಯ ದಿನ ‘ಪೆತ್ತರ ಅಮಾವಾಸ್ಯೆಯಂದು’ ಆಡುವ ಬತುಕಮ್ಮನಿಗೂ ಕಡೆಯ ದಿನದ ಬತುಕಮ್ಮನಿಗೂ ಜಾಸ್ತಿ ಪ್ರಾಧಾನ್ಯವಿರುತ್ತದೆ.

‘ಮಹಾಲಯ ಅಮಾವಾಸ್ಯೆ’ ಅಥವಾ ‘ಪೆತ್ತರ ಅಮಾವಾಸ್ಯೆ’ ಪಿತೃದೇವತೆಗಳ ಹಬ್ಬವಾಗಿ ಗೌರೀದೇವಿಯ ಪ್ರತಿರೂಪವಾದ ಬತುಕಮ್ಮನನ್ನು ಆರಾಧಿಸುವ ಆರಂಭ ದಿನವಾಗಿ ಎರಡು ವಿಭಿನ್ನ ಆರಾಧನೆಗಳು ಮಿಶ್ರಣ ದಿನವಾಗಿ ವಿಶಿಷ್ಟತೆಯನ್ನು ಪಡೆದುಕೊಂಡಿದೆ.

ಆರ್.ಪಿ. ಅನುವಾದ ಎ.ಎ.

 

ಮಾಡ ಕೇರಳದಲ್ಲಿ ಕಾಣುವ ಹುಲ್ಲಿನ ಗುಡಿಸಲು. ಕೇರಳದಲ್ಲಿ ಜಮೀನ್ದಾರಿ ಪದ್ಧತಿ ಜಾರಿಯಲ್ಲಿರುವಾಗ, ಅಂತಹ ಜಮೀನ್ದಾರರ ಹೊಲಗಳನ್ನು ಕಾಯುತ್ತಿದ್ದವರು ಪುಲಯರು ಎಂಬ ದಲಿತ ವಿಭಾಗಕ್ಕೆ ಸೇರಿದವರಾಗಿದ್ದರು (ಇವರನ್ನು ಚೆರುಮರ್, ಪೆಲಯನ್, ವಳ್ಳುವನ್ ಮುಂತಾದ ಹೆಸರುಗಳಿಂದಲೂ ಗುರುತಿಸುವುದಿದೆ). ನೂರಾರು ಎಕರೆ ಹೊಲಗಳಲ್ಲಿ ಜಮೀನ್ದಾರರು ಭತ್ತದ ಕೃಷಿ ಮಾಡಿಸುತ್ತಿದ್ದರೆ ಅದನ್ನು ಮಾಡುವ ರೈತರೆಲ್ಲರೂ ಪುಲಯರಾಗಿರುತ್ತಿದ್ದರು. ಬೆಳಗಿನಿಂದ ಸಂಜೆಯವರೆಗೂ ನೀರು ಹಾಯಿಸುತ್ತಾ, ಪೈರು ನೆಡುತ್ತಾ, ಕಳೆ ತೆಗೆಯುತ್ತಾ, ಹಕ್ಕಿಗಳೋ ಜಾನುವಾರುಗಳೋ ಬಂದರೆ ಓಡಿಸುತ್ತಾ ಪೈರುಗಳಲ್ಲಿ ಚಿನ್ನದ ತೆನೆಗಳನ್ನು ಮೂಡಿಸುವವರು ಈ ಪುಲಯರೇ ಆಗಿದ್ದರು. ಪ್ರಕೃತಿಯಿಂದ ಸಹಜವಾಗಿ ದೊರೆಯುವ ವಸ್ತುಗಳನ್ನು ಮಾತ್ರ ಬಳಸಿಕೊಂಡು ಅವರೇ ಕಟ್ಟಿಕೊಳ್ಳುತ್ತಿದ್ದ ಗುಡಿಸಲುಗಳಲ್ಲಿ ಪುಲಯರು ವಾಸಿಸುತ್ತಿದ್ದರು. ಇಂಥ ಗುಡಿಸಲನ್ನು ‘ಮಾಡ’ ಎನ್ನುವರು. ಅದನ್ನು ‘ಚೆಟ್ಟಕುಡಿಲ್’ (ಚಿಕ್ಕಗುಡಿಸಲು) ಎಂತಲೂ ಕರೆಯುವುದಿದೆ. ತೆಂಗಿನ ಮಂಡಲುಗಳನ್ನು ಹೆಣೆದು ಇಂತಹ ಗುಡಿಸಲುಗಳನ್ನು ಕಟ್ಟಲಾಗುತ್ತದೆ. ಹುಲ್ಲಿನ ಗುಡಿಸಲು ಎಂದರೆ ಬರೇ ಹುಲ್ಲು ಮಾತ್ರವಲ್ಲ. ಹೆಣೆದ ತೆಂಗಿನ ಮಡಲನ್ನು ಮೊದಲು ಹಾಸಿ ಅದರ ಮೇಲೆ ಬೈಹುಲ್ಲನ್ನು ಹೊದೆಸಲಾಗುತ್ತದೆ.

ಹೀಗೆ ಬೈಹುಲ್ಲನ್ನು ಹೊದೆಸಿದ ಗುಡಿಸಲು ‘ಮಾಡ’ದ ಗೋಡೆಗಳೂ ಮಡಲಿನವೇ ಆಗಿರುತ್ತಿತ್ತು. ಹೊಲಗಳಿಂದ ಕೊಯ್ದು ತಂದ ಭತ್ತದ ಪೈರುಗಳಿಂದ ಭತ್ತವನ್ನು ಬೇರ್ಪಡಿಸಿ ಉಳಿಯುವ ಹುಲ್ಲು ಬೈಹುಲ್ಲು ಎನಿಸಿಕೊಳ್ಳುತ್ತದೆ. ಆದರೆ ಎಲ್ಲಾ ಬೈಹುಲ್ಲುಗಳೂ ಗುಡಿಸಲಿಗೆ ಹೊದಿಸಲು ಯೋಗ್ಯವೆನಿಸುವುದಿಲ್ಲ. ‘ಮುಂಡಕ’ ಎಂಬ ತಳಿಯ ಭತ್ತದ ಪೈರಿನ ಬೈಹುಲ್ಲನ್ನು ಹೆಚ್ಚಾಗಿ ಬಳಸುತ್ತಾರೆ. ಇವನ್ನಲ್ಲದೆ ಚಿಟ್ಟೇನಿ, ಇಟ್ಟಕಂಡಪ್ಪನ್, ತವಳಕಣ್ಣನ್ ಇತ್ಯಾದಿ ತಳಿಗಳ ಬೈಹುಲ್ಲುಗಳು ಸಾಕಷ್ಟು ಉದ್ದವೂ ದಪ್ಪವೂ ಆಗಿರುವುದರಿಂದ ಅವುಗಳನ್ನೂ ಬಳಸುತ್ತಾರೆ. ಅಂದಿನ ವ್ಯವಸ್ಥೆಯಂತೆ ಹೊದಲ ಯಾವುದಾದರೂ ಒಂದು ಭಾಗದ ಭತ್ತದ ಪೈರನ್ನು ದುಡಿದ ರೈತರಿಗೆ ಎಂದು ಮೀಸಲಿಡುವುದಿತ್ತು. ಇದಕ್ಕೆ ‘ಮಾಡಿ’ ನೀಡುವುದು ಎನ್ನುವರು. ಅದು ಕೃಷಿಯನ್ನು ಅದುವರೆಗೆ ನೋಡಿಕೊಂಡ ಕಾರ್ಯಸ್ಥನಿಗೆ ನೀಡುವ ದಾನ. ಈ ಕಾರ್ಯಸ್ಥನು ಪುಲಯ ಗುಂಪಿನ ನಾಯಕನಾಗಿರುತ್ತಾನೆ. ಹೀಗೆ ಸಿಕ್ಕಿದ ಪೈರಿನ ಬೈಹುಲ್ಲು ಮತ್ತು ಜಮೀನ್ದಾರ ಮಾಲಿಕನು ದಾನ ರೂಪದಲ್ಲಿ ನೀಡುವ ಇತರ ಬೈಹುಲ್ಲುಗಳನ್ನು ಸೇರಿಸಿ ಗುಡಿಸಲಿಗೆ ಹೊದೆಸುವ ಹುಲ್ಲನ್ನು ಸಂಗ್ರಹಿಸುತ್ತಾರೆ. ಬೈಹುಲ್ಲುಗಳನ್ನು ಮೂರು ದಿನಗಳ ಕಾಲ ಬಿಸಿಲಲ್ಲಿಟ್ಟು ಒಣಗಿಸಿ, ಬಿದಿರಿನ ಕೋಲೋಂದರಲ್ಲಿ ಬಡಿದು ಅದರಲ್ಲಿ ಉಳಿದಿರಬಹುದಾದ ತೆನೆಗಳನ್ನೂ ಜಾಳುಗಳನ್ನೂ ತೆಗೆದು ಸ್ವಚ್ಛಗೊಳಿಸಿದ ಬೈಹುಲ್ಲನ್ನು ಸಿದ್ಧವಾಗಿಡುತ್ತಾರೆ. ಹೀಗೆ ಹದಮಾಡಿದ ಬೈಹುಲ್ಲನ್ನು ಮಾಡಿನ ಮೇಲೆ ಒಂದು ನಿರ್ದಿಷ್ಟ ದಪ್ಪದಲ್ಲಿ ಹರಡುತ್ತಾರೆ. ಅತ್ತಿತ್ತ ಜಾರದಂತೆ ಹಗ್ಗದಿಂದ ಕಟ್ಟಿ ಭದ್ರೊಗೊಳಿಸುತ್ತಾರೆ.

ಗೆದ್ದಲು ಹಿಡಿಯದ ನಿರ್ದಿಷ್ಟ ಜಾತಿಯ ಮರದ ಕಾಂಡವನ್ನು ಕಡಿದು ಮಾಡಿದ ಮೂಲಕಂಬವೊಂದನ್ನು ಮೊದಲು ನೆಟ್ಟು ‘ಮಾಡ’ದ ಕೆಲಸವನ್ನು ಪ್ರಾರಂಭಿಸುತ್ತಾರೆ. ಮುಂದೆ ನಿರ್ದಿಷ್ಟ ಅಂತರದಲ್ಲಿ ಇತರ ಕಂಬಗಳನ್ನೂ ನೆಟ್ಟು ಅಡಿಕೆ ಮರದ ಕಾಂಡವನ್ನೋ ಬಿದಿರನ್ನೋ ಸೀಳಿ ಮಾಡಿದ ಸಲಾಕೆಗಳಿಂದ ಅವುಗಳನ್ನು ಜೋಡಿಸಿ ಬಿಗಿಯಾಗಿ ಕಟ್ಟುತ್ತಾರೆ. ಹೀಗೆ ಕಟ್ಟುವುದಕ್ಕೆ ಹುರಿಹಗ್ಗದ ಜತೆ ತಾಳೆ ಮರದ ಹಗ್ಗ ಅಥವಾ ಇತರ ಬಳ್ಳಿಗಳನ್ನು ಬಳಸುತ್ತಾರೆ.

ಮೇಲ್ವರ್ಗದ ನಾಯರ್ ಮುಂತಾದವರನ್ನು ‘ಮೇಲೋನ್’ ಎಂತಲೂ ಈಳವ ಮುಂತಾದ ಕೆಳವರ್ಗದವರನ್ನು ‘ಚೇಣಾರ್’ ಎಂತಲೂ ಪುಲಯರು ಕರೆಯುತ್ತಾರೆ. ಅಂತಹ ಮೇಲೋನ್ ಅಥವಾ ಚೇಣಾರರ ಹೊಲಗಳಲ್ಲೇ ಪುಲಯರಿಗೆ ಕೆಲಸ.

ಇಂತಹ ಮಾಡಗಳನ್ನು ವರ್ಷ ವರ್ಷವೂ ಬದಲಾಯಿಸಬೇಕಾಗುತ್ತದೆ. ಹಳೆಯ ಗುಡಿಸಲನ್ನು ಮುರಿದು ತೆಗೆದು ಮತ್ತೆ ಹೊಸ ಹುಲ್ಲು ಮಡಲುಗಳಿಂದ ಮತ್ತೆ ಕಟ್ಟುತ್ತಾರೆ. ಹಾಗೆ ಬದಲಾಯಿಸುವ ಕಾಲಕ್ಕೆ ಹಳೆಯ ಗುಡಿಸಲಿನ ಮಡಲು, ಹುಲ್ಲುಗಳು ಹೊಗೆ ಹಿಡಿದು ಕಪ್ಪಾಗಿರುವುದು. ಮಡಲುಗಳೆಲ್ಲಾ ಮೂಲರೂಫವನ್ನು ಕಳೆದು ಬರೇ ಕಡ್ಡಿಗಳು ಮಾತ್ರವಾಗಿರುತ್ತಿದ್ದುವು.

ಹೀಗೆ ಜಮೀನ್ದಾರರಿಗೆ ಸೇರಿದ ಪಾಳುಭೂಮಿಯಲ್ಲಿ ಹುಲ್ಲು, ಮಡಲುಗಳಿಂದ ಗುಡಿಸಲು ಕಟ್ಟಿ ಬದುಕುತ್ತಾ ಬಂದವರು ಕೇರಳದ ದಲಿತ ಸಮುದಾಯಕ್ಕೆ ಸೇರಿದ ಪುಲಯರು.

ಕೆ.ಯು.ಎಚ್. ಅನುವಾದ ವಿ.ಸಿ.

 

ಮಾಪ್ಪಿಳಪ್ಪಾಟ್ಟ್‌       ಕೇರಳದ ಮಲಬಾರ್‌ನಲ್ಲಿರುವ ಮುಸ್ಲಿಮರನ್ನು ಮಾಪ್ಪಿಳೆಗಳೆಂದು ಒಂದು ಕಾಲದಲ್ಲಿ ಗುರುತಿಸುತ್ತಿದ್ದರೂ ಇಂದು ಕೇರಳದ ಎಲ್ಲ ಮುಸ್ಲಿಮರನ್ನು ಮಾಪ್ಪಿಳೆಗಳೆಂದೇ ಕರೆಯುತ್ತಾರೆ. ಮಾಪ್ಪಿಳಪಾಟ್ಟು ಈ ಮುಸ್ಲಿಮರಲ್ಲಿ ಪ್ರಚಾರದಲ್ಲಿರುವ ಹಾಡುಗಳ ಒಂದು ಪ್ರಕಾರ. ಮುಸ್ಲಿಂ ಸಮುದಾಯದ ಪರಂಪರೆಯನ್ನು ಕೂಡ ಮಾಪ್ಪಿಳಪಾಟ್ಟು ನಿರ್ದೇಶಿಸುತ್ತದೆ.

ಕೇರಳದ ಮುಸ್ಲಿಮರಲ್ಲಿ ಪ್ರಚಾರದಲ್ಲಿದ್ದ ವಿಶಿಷ್ಟವಾದ ಒಂದು ಲಿಪಿಪರಂಪರೆ ಅರಬಿ-ಮಲಯಾಳ ಲಿಪಿಯೆಂದು ಪ್ರಚುರವಾಗಿದೆ. ಮಾಪ್ಪಿಳಪಾಟ್ಟುಗಳನ್ನು ಈ ಲಿಪಿಯಲ್ಲಿ ರಚಿಸಲಾಗುತ್ತದೆ. ವಿನೋದಕ್ಕಾಗಿ ವಿಭಿನ್ನ ಕಲಾರೂಪವಾಗಿ, ಕೆಲಸ ಮಾಡುವಾಗ, ಒಂದು ಜೀವನ ವಿಧಾನದ ಅಂಗವಾದ ಆಚರಣೆಗಳಲ್ಲಿ, ಹರಕೆ, ಮೌಲೂದ್ ಮುಂತಾದ ಧಾರ್ಮಿಕ ಕಾರ್ಯಕ್ರಮಗಳಲ್ಲಿ – ಹೀಗೆ ಎಲ್ಲ ಸಂದರ್ಭದಲ್ಲಿ ಹಾಡುಗಳಿವೆ. ಇಂಥ ಸಂದರ್ಭಗಳಲ್ಲಿ ಅರಬಿ- ಮಲಯಾಳದಲ್ಲಿ ಬರೆದ ಹಾಡುಗಳು ಆಗಿಂದಾಗಲೇ ರಚಿಸಿದ ಹಾಡುಗಳು ಬಳಕೆಗೆ ಬರುತ್ತವೆ. ಹಾಡುಗಳೂ ಹಲವು ವೇಳೆ ಕಂಠಗತವಾಗಿಯೂ ಇರುವುದರಿಂದ ಅವನ್ನು ಲಿಖಿತ ಪರಂಪರೆಯವು ಎನ್ನುವಂತೆ ಮೌಖಿಕ ಪರಂಪರೆಯವು ಎಂದೂ ಗುರುತಿಸಬೇಕಾಗಿದೆ.

ಮಾಪ್ಪಿಳೆಪಾಟ್ಟು ಪ್ರಯೋಗಕ್ಕಾಗಿಯೇ ಇರುವಂಥದು ಎನ್ನುವುದು ಅದರ ಇನ್ನೊಂದು ವೈಶಿಷ್ಟ್ಯ. ಲಯಕ್ಕೆ ತುಂಬ ಪ್ರಾಧಾನ್ಯವಿರುವ ಈ ಹಾಡುಗಳ ಹಾಡುವಿಕೆಯಲ್ಲಿಯೇ ಅದರ ಸತ್ವ ಅಡಗಿದೆ. ಕಲಾರೂಪದಿಂದಾಗಲಿ ವ್ಯಕ್ತಿಶಃ ಉದ್ದೇಶಕ್ಕಾಗಲಿ ಹಾಡಿದಾಗ ಸಮುದಾಯವೊಂದರ ವ್ಯಕ್ತಿಗಳನ್ನು ಗುರಿಯಲ್ಲಿರಿಸಿ ಪ್ರದರ್ಶಿತವಾಗುವುದರಿಂದ ಇದನ್ನು ಒಂದು ಪ್ರದರ್ಶನ ಕಲೆಯೆಂದು ಕರೆದರೆ ತಪ್ಪಿಲ್ಲ.

ಇದರ ಲಿಖಿತ ಪರಂಪರೆಯಲ್ಲಿ ಉಪಲಬ್ಧ ಪ್ರಾಚೀನ ಕೃತಿಯೆಂದರೆ ಖಾಸಿ ಮುಹಮ್ಮದ್ ರಚಿಸಿದ ‘ಮುಹ್ಯುದ್ದೀನ್ ಮೂಲ’. ಇದು ಕೊಲ್ಲಂ ಶಕ ೭೮೨ ರಲ್ಲಿ ರಚಿತವಾಯಿತು. ಮಲಬಾರಿನ ಮುಸ್ಲಿಮರ ಧಾರ್ಮಿಕ ಓದಿನ ಭಾಗವಾಗಿಯೂ ಇದು ಸ್ವೀಕೃತವಾಗಿತ್ತು. ಪ್ರಸವ ಸಂದರ್ಭದಲ್ಲಿ ಮುಹ್ಯುದ್ದೀನ್ ಮೂಲವನ್ನು ನಫೀಸತ್ ಮೂಲವನ್ನೂ ಕೇಳಿಸಿದರೆ ಸುಖಪ್ರಸವವಾಗುತ್ತದೆಂದು ನಂಬುಗೆಯಿದೆ. ಆದುದರಿಂದ ಹೆರಿಗೆ ಕೋಣೆಯ ಹೊರಗೆ ಹೆಂಗಸರು ಗುಂಪಾಗಿ, ಈ ಹಾಡನ್ನು ಹಾಡುವ ಸಂಪ್ರದಾಯವಿತ್ತು. ‘ನೂಲ್‌ಮದ್ದು’ವನ್ನೂ ‘ಕಪ್ಪಪ್ಪಾಟ್ಟ’ನ್ನೂ ರಚಿಸಿದ ಕುಂಞೂಯಿಲ್ ಮುಸ್ಲಿಯಾರ್; ಬದರುಲ್ ಮುನೀರ್ ಹುಸ್ನುಲ್ ಜಮಾಲ್, ಬದಲರ್‌ಪ್ಪಡಪ್ಪಾಟ್ಟ್ ಮುಂತಾದುವನ್ನು ರಚಿಸಿದ ಮೋಯಿನ್‌ಕುಟ್ಟಿ ವೈದ್ಯರ್, ಜನಪ್ರಿಯ ಹಾಡುಗಳ ಕರ್ತೃವಾದ ಪುಲಿಕೋಟ್ಟಿಲ್ ಹೈದರ್ ಮುಂತಾದವರು ಈ ಕ್ಷೇತ್ರದಲ್ಲಿ ಹೆಚ್ಚು ಹೆಸರುವಾಸಿಯಾಗಿದ್ದಾರೆ. ಸಾಕಷ್ಟು ಹೆಂಗಸರೂ ಮಾಪ್ಪಿಳೆಪ್ಪಾಟ್ಟು ಕ್ಷೇತ್ರದಲ್ಲಿ ಪ್ರಖ್ಯಾತರಾಗಿದ್ದರು. ಪಿ.ಕೆ. ಹಲೀಮ, ಡಿ.ಎಚ್. ಕುಂಞೂಯಿಷ, ವಿ. ಆಯಿಷಕುಟ್ಟಿ ಮೊದಲಾದವರು ಪ್ರಮುಖರು.

ಪ್ರತಿಪಾದ್ಯ ವಿಷಯವನ್ನಾಧರಿಸಿ ಹಾಡುಗಳನ್ನು ಬೇರೆ ಬೇರೆಯಾಗಿ ವಿಭಾಗಿಸಬಹುದು. ಪುಣ್ಯಾತ್ಮರ ಸಾಮರ್ಥ್ಯಗಳನ್ನು ಹಾಡಿಹೊಗಳುವ ‘ಮೂಲಪಾಟ್ಟು’ಗಳು, ಪೈಗಂಬರ್ ಮತ್ತು ಅವರ ಅನುಯಾಯಿಗಳು ಮಾಡಿದ ಧರ್ಮಯುದ್ಧಗಳನ್ನು ವಿವರಿಸುವ ‘ಪಡಪಾಟ್ಟು’ಗಳು, ಮದುವೆಯ ಹಾಡುಗಳು, ಪ್ರವಾಸ ಕಥನವನ್ನೊಳಗೊಂಡ ಸರ್ಕೀಟ್ ಹಾಡುಗಳು, ಕಥಾಗಾನಗಳಾದ ‘ಕಿಸ್ಸುಪಾಟ್ಟು’ಗಳು, ‘ಕತ್ತುಪ್ಪಾಟ್ಟು’ಗಳು, ಹಾಸ್ಯಗಾನಗಳು – ಇವೆಲ್ಲ ಅವಗಳಲ್ಲಿ ಕೆಲವು ಅಷ್ಟೆ. ಬದುಕಿನ ಯಾವುದೇ ಅನುಭವಗಳ ಕುರಿತು, ಸಮಸ್ಯೆಗಳ ಕುರಿತು ಆಗಿಂದಾಗ ಮಾಪ್ಪಿಳ ಪಾಟ್ಟುಗಳನ್ನು ಬರೆಯುವ ರೂಢಿ ಇತ್ತು. ನೆರೆಯ ಕುರಿತೂ, ಮಲಬಾರ್‌ದಂಗೆಯ ಕುರಿತೂ ಇರುವ ಹಾಡುಗಳು ಪ್ರಸಿದ್ಧವಾಗಿವೆ.

ಮಾಪ್ಪಿಳಪಾಟ್ಟಲ್ಲಿ ಅತಿಮುಖ್ಯ ಅದರ ಲಯ. ಇದನ್ನು ಇಶಲ್ ಎನ್ನುತ್ತಾರೆ. ತೊಕ್ಕಲ್, ಕೊಂಬ್, ಒಪ್ಪನಪಾಟ್ಟ್, ಆಕಾಶ, ಭೂಮಿ, ಒಪ್ಪನಚಾಯಲ್, ಒಪ್ಪನ ಮುರುಕ್ಕಂ, ವಿರುತ್ತಂ ಇತ್ಯಾದಿ ಹೆಸರುಗಳಿಂದ ಕರೆಯಲ್ಪಡುವ ನೂರಾರು ಸಂಖ್ಯೆಯ ಇಶಲ್‌ಗಳಿವೆ. ಅರೇಬಿಯನ್ ಗಾನರೀತಿಯೂ ದ್ರಾವಿಡ ತಾಳವೂ ಸೇರಿ ಉಂಟಾದುವು – ಇಶಲ್‌ಗಳು.

ಅರಬ್ಬೀ ಪದಗಳನ್ನು ಸ್ವತಂತ್ರವಾಗಿಯೂ, ಮಲಯಾಳ ವಿಭಕ್ತಿ ಸಮೇತವಾಗಿಯೂ ಎಗ್ಗಿಲ್ಲದೆ ಬಳಸಲಾಗುತ್ತದಲ್ಲದೆ ತಮಿಳು, ಕನ್ನಡ, ಉರ್ದು, ಹಿಂದಿ ಪದಗಳನ್ನೂ ಕಾಣಬಹುದು. ಮಾಪ್ಪಿಳಪ್ಪಾಟ್ಟಿನಲ್ಲಿ ಬಳಕೆಯಾಗುತ್ತಿದ್ದ ವಿಶಿಷ್ಟ ಶೈಲಿಯ ಭಾಷೆ ಇಂದು ತುಂಬ ಬದಲಾವಣೆಗೊಂಡಿದೆ. ಕಂಬಿ, ಕಳುತ್ತ್‌ಮುಂತಾದ ಪ್ರಾಸ ರೀತಿಗೆ ಹೊಸ ಹಾಡುಗಳು ಮಣೆ ಹಾಕಿಲ್ಲ. ಆದರೂ ಅದರ ವಿಶೇಷ ಹಾಡುವ ಕ್ರಮಕ್ಕೆ ಬಾಧೆ ತಟ್ಟಿಲ್ಲ. ಸಿನೆಮಾ, ಟಿ.ವಿ. ಕಾರ್ಯಕ್ರಮಗಳಲ್ಲಲ್ಲದೆ ಆಲ್ಬಂಗಗಳಲ್ಲೂ ಮಾಪ್ಪಿಳಪಾಟ್ಟುಗಳಿಗೆ ಒಳ್ಳೆಯ ಪ್ರಚಾರವಿದೆ. ಹಾಗೆ ಅಂತಾರಾಷ್ಟ್ರೀಯ ಖ್ಯಾತಿಗಳಿಸಿದ ಒಂದು ಹಾಡು ‘ಫಾತ್ತಿಮ’. ಮಾಪ್ಪಿಳಪ್ಪಾಟ್ಟಿನ ಚರಿತ್ರೆಯಲ್ಲೂ ಮಾಪ್ಪಿಳ ಕಲೆಗಳಿಗೆ ಸಾಮಾನ್ಯವಾಗಿಯೂ ಇರುವ ಮೂರು ಘಟ್ಟಗಳು ಇವು-

೧. ಸಾಂಪ್ರದಾಯಿಕ ಸಂದರ್ಭಗಳಲ್ಲಿ ಸಾಂಪ್ರದಾಯಿಕವಾಗಿಯೂ ಹಾಡುತ್ತಿದ್ದವು

೨. ಸಿನೆಮ, ಟಿ.ವಿ. ಮುಂತಾದ ಮಾಧ್ಯಮಗಳಲ್ಲಿ ಸಾಂಪ್ರದಾಯಿಕ ಕ್ರಮವನ್ನು ತ್ಯಜಿಸಿ ಕೇರಳದ ಸಾಮಾನ್ಯ ಪರಂಪರೆಯೊಂದಿಗೆ ರಾಜಿಮಾಡಿಕೊಂಡವು.

೩. ಹೊಸ ಮಾಧ್ಯಮಗಳ ಮೂಲಕ ಸಮಾಜದ ಬದಲಾವಣೆಗಳಿಗೆ ಸ್ಪಂದಿಸುತ್ತ ಮತ್ತೆ ಸಮುದಾಯ ಭಾಗವಾಗುತ್ತಿರುವಂಥವು

.ಕೆ.ಎಸ್. ಅನುವಾದ ಕೆ.ಕೆ.