ಮಲಯನ್ ಕೆಟ್ಟ್‌ ಕೇರಳದ ತರವಾಡುಗಳಲ್ಲಿನ ಸಂತತಿ ಪರಂಪರೆಗೆ ಶ್ರೇಯಸ್ಸಾಗುವಂತೆ ಅನೇಕ ಆಚರಣೆಗಳನ್ನು ಹಿಂದೆ ನಡೆಸಲಾಗುತ್ತಿತ್ತು. ಅವಿಭಜಿತ ಕುಟುಂಬ ವ್ಯವಸ್ಥೆಯಲ್ಲಿ ಗರ್ಭಿಣಿಯರ ಆಯುರಾರೋಗ್ಯವನ್ನು ಕಾಪಾಡುವುದಕ್ಕೆ ಹಳೆಯ ಜನವಿಭಾಗಗಳು ಹೆಚ್ಚು ಶ್ರದ್ಧೆ ವಹಿಸಿದ್ದುವು. ಅದರಂತೆಯೇ ಮದುವೆಯಾಗಿಯೂ ಗರ್ಭಧರಿಸದಿರುವುದಕ್ಕೆ ದೇವತಾ ಕೋಪವು ಕಾರಣವೆಂದು, ಅಥವಾ ದುರ್ದೇವತೆಗಳ ಬಾಧೋಪದ್ರವ ಕಾರಣವೆಂದು ಜನರು ನಂಬಿದ್ದರು. ಅಕಾಲ ಪ್ರಸವ, ಗರ್ಭಪಾತ, ಮುಂತಾದುವಕ್ಕೆ ದುರ್ಮೂರ್ತಿಗಳ ಬಾಧೆಯ ಕಾರಣ ಎಂಬ ನಂಬುಗೆಯೂ ಅವರಲ್ಲಿತ್ತು. ಬಾಧೆಯ ಪರಿಹಾರಕ್ಕೂ ಆಯುರಾರೋಗ್ಯಾದಿಗಳಿಗೂ ತರವಾಡುಗಳಲ್ಲಿ ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲಿ ಮುಖ್ಯವಾದುದು ಮಲಯನ್‌ಕೆಟ್ಟ್ ಆಗಿತ್ತು.

ತರವಾಡಿನ ಹಿರಿಯ, ಊರಿನ ಕಣಿಯ (ಜ್ಯೋತಿಷಿ)ನನ್ನು ಬರಮಾಡಿಸಿ ಜ್ಯೋತಿಷ ಪ್ರಶ್ನೆ ಇಡುತ್ತಾನೆ. (ಪ್ರಶ್ನೆ ಇಡುವುದು – ಕಣಿಯ ಕಣಿಶ ಮುಂತಾದ ಜ್ಯೋತಿಷರು ‘ಕಳಂ’ ಬರೆದು ಗ್ರಹಗಳನ್ನು ಸಂಕಲ್ಪಿಸಿ, ಕವಡೆಗಳನ್ನು ಹರಡಿ ಶುಭಾಶುಭಗಳನ್ನು ಹೇಳುವ ಕಾರ್ಯಕ್ರಮ.) ಸೂರ್ಯ, ಚಂದ್ರ, ರಾಹು, ಕೇತು, ಬುಧ, ಗುಳಿಗ, ಗುರು, ಮಂಗಳ, ಶನಿ ಮುಂತಾದ ಗ್ರಹಗಳು ಮುನ್ನೂರ ಅರುವತ್ತೈದು ದಿವಸವೂ ಅಯನ, ಗ್ರಹಸಂಚಾರ ಮುಂತಾದುವುಗಳ ಜತೆ ವ್ಯಕ್ತಿಯ ಬದುಕಿನಲ್ಲಿ ಏರುಪೇರುಗಳನ್ನು ಉಂಟುಮಾಡುತ್ತವೆ. ಅವುಗಳ (ಏರುಪೇರಿನ) ಸ್ವರೂಪ ಏನು – ಎನ್ನುವುದೇ ಪ್ರಶ್ನೆಯ ಪ್ರಧಾನ ಉದ್ದೇಶ. ಪ್ರಶ್ನೆ ಇರಿಸುವಾಗ ದಿನ, ನಕ್ಷತ್ರ, ಹುಟ್ಟಿದ ಸಮಯ ಮುಂತಾದುವನ್ನು ಗಮನಕ್ಕೆ ತೆಗೆದುಕೊಂಡು ಯಾವ ಬಾಧೆಗಳು ದೇಹವನ್ನು ಪ್ರವೇಶಿಸಿವೆ ಎಂದು ತಿಳಿದುಕೊಳ್ಳುತ್ತಾರೆ. ಪ್ರತಿ ಬಾಧೆಯನ್ನೂ ದೂರ ಮಾಡುವುದಕ್ಕೆ ಅಗತ್ಯವಾದ ಕರ್ಮಗಳನ್ನು ಪ್ರಶ್ನೆಯ ಕಾರ್ಯಕ್ರಮದಲ್ಲಿ ತೀರ್ಮಾನಿಸುತ್ತಾರೆ. ಉಚ್ಛಾಟನ ಕರ್ಮಗಳಲ್ಲೇ ಅತ್ಯಂತ ದೀರ್ಘವಾದುದು ಮತ್ತು ತುಂಬ ಖರ್ಚಿನ ಬಾಬ್ತು ಅಂದರೆ ಮಲೆಯನ್ ಕೆಟ್ಟು.

ಈ ಧಾರ್ಮಿಕ ಕಾರ್ಯಕ್ರಮವನ್ನು ನಡೆಸಿಕೊಡುವವರು ಉತ್ತರ ಕೇರಳದಲ್ಲಿರುವ ಮಲೆಯರು. ನೀರು ಮಂತ್ರಿಸುವುದು, ಬೆಣ್ಣೆ ಮಂತ್ರಿಸುವುದು, ಜಪಿಸಿ ಊದುವುದು, ನೂಲು ಮಂತ್ರಿಸುವುದು, ಜಪಿಸಿದ ಭಸ್ಮ ಧರಿಸುವುದು, ನಿವಾಳಿಸುವುದು (ಉಪ್ಪು, ಮೆಣಸು, ಸಾಸಿವೆ, ಭತ್ತ- ಇವುಗಳನ್ನು ಆಪಾದಮಸ್ತಕ ನಿವಾಳಿಸಿ ಉರಿಯುತ್ತಿರುವ ಬೆಂಕಿಯಲ್ಲಿ ಹಾಕುವುದು….. ಮೆಣಸಿನ ವಾಸನೆ ಬರದಿದ್ದರೆ ದೃಷ್ಟಿ ದೋಷ ನಿವಾರಣೆಯಾಯಿತೆಂಬ ನಂಬುಗೆ) ಮುಂತಾದ ಕಾರ್ಯಕ್ರಮಗಳನ್ನು ಬಾಧೆಗೊಳಗಾದ ಸ್ತ್ರೀಗಾಗಿ ಮುಂಚಿತವಾಗಿ ನಡೆಸುತ್ತಾರೆ. ಬಾಧಾನಿವೃತ್ತಿಗಾಗಿ ನಲುವತ್ತೊಂದರಷ್ಟು ದೇವತೆಗಳನ್ನು ಕಟ್ಟಿಸಿ ಆಡಿಸುತ್ತಾರೆ.

ಮನೆಯ ಮುಂದೆ ಚಪ್ಪರ ಹಾಕಿ, ಕಳಂ ಬರೆದು, ಅಲ್ಲಿ ಬಾಧೆಗೊಳಗಾದ ಸ್ತ್ರೀಯನ್ನು ಕುಳ್ಳರಿಸುತ್ತಾರೆ. ‘ಕನ್ನಲ್‌ಕಳಂಪಾಟ್ಟ್‌’ಲ್ಲೂ ‘ಕೇಂದ್ರೋನ್ ಪಾಟ್ಟ’ಲ್ಲೂ ನಡೆಸುವ ಒಂದಷ್ಟು ಕ್ರಿಯೆಗಳನ್ನು ಇಲ್ಲಿಯೂ ನಡೆಸಲಾಗುತ್ತದೆ. ಅಲಂಕೃತ ಚಪ್ಪರದಲ್ಲಿನ ಪೀಠದಲ್ಲಿನ ಬಾಧೆಗೊಳಗಾದ ಹೆಂಗಸು ಗೆಳತಿಯರ ಜತೆಗೋ, ಅತ್ತೆಯಂದಿರ ಜತೆಗೋ ಪ್ರತೀ ಕಾರ್ಯಕ್ರಮದಲ್ಲೂ ಕುಳಿತಿರಬೇಕು. ಮರೆಬಟ್ಟೆಯನ್ನು ಮುಂದೆ ಹಿಡಿದು, ಭಯಹುಟ್ಟುವ ಹಾಗೆ ಪ್ರತಿಯೊಂದು ಪ್ರದರ್ಶನವೂ ಇರುತ್ತದೆ. ‘ಕೊಟ್ಟಿತುಡಂಙಲ್’ ಚೆಂಡೆಯನ್ನೂ ಚಕ್ರತಾಳವನ್ನೂ ಚೀನಿಕೋಳಲನ್ನೂ ತೆಗೆದುಕೊಂಡು ಮಲಯರ ಗುಂಪು ವಾದ್ಯಮೇಳ ನಡೆಸುವ ಮೂಲಕ ಮೊದಲ ಕಾರ್ಯಕ್ರಮ ಪ್ರಾರಮಭ. ಚಪ್ಪರದಲ್ಲಿ ಬಾರಣೆಯ ವಸ್ತುಗಳೂ ತೋರಣವೂ ಇರುತ್ತದೆ. ಬಳಿಕ ಅಕ್ಕಿಹುಡಿ, ಮಸಿಯಹುಡಿ, ಹಳದಿ ಹುಡಿ, ಅಕ್ಕಿಹುಡಿ-ಹಳದಿಯನ್ನು ಮಿಶ್ರಮಾಡಿದ ಕೆಂಪುಹುಡಿ ಇವುಗಳಿಂದ ಬಾಧೆ ನೀಡುವ ದೈವದ ಧೂಳೀ ಚಿತ್ರವನ್ನು ರಚಿಸುತ್ತಾರೆ. ಜತೆಗೆ ತಗಡುಗಳಲ್ಲಿ (ತಾಮ್ರ, ಬೆಳ್ಳಿಗಳದು), ರೂಪವನ್ನು ಕೊರೆದು ಇಟ್ಟುಕೊಳ್ಳುತ್ತಾರೆ. ಬಾಧೆ ನೀಡುವ ದೈವದ ಆವಾಹನೆ ಮಾಡಿ ಒಯ್ಯುವುದೂ ಈ ಕಾರ್ಯಕ್ರಮದ ಅಂಗವೇ. ವೆಳ್ಳತೀನಿ, ಕರಕುಲುಕ್ಕಿ, ಯಕ್ಷ, ಯಕ್ಷಿ, ರಕ್ಷಚಾಮುಂಡಿ, ರಕ್ತೇಶ್ವರಿ, ಕುಕ್ಷಿಭೈರವನ್ ಕುಟ್ಟಿಚಾತ್ತನ್, ಕಲ್ಲುರ್ಟಿ, ಬಾಲಗಂಧರ್ವ, ಚುಡಲ ಭದ್ರಕಾಳಿ, ಎರಿದಾಹಮೇನಿ, ವಿಳಿಸಂಚಯಂ, ಗುಳಿಗನ್, ಮಾರಣಗುಳಿಗನ್ ಮುಂತಾದ ದೇವತೆಗಳನ್ನು ಕಟ್ಟಿಸಿ ಆಡಿಸುತ್ತಾರೆ. ಒಂದೊಂದು ದೈವವೂ ಆವೇಶಗೊಂಡು, ಅಕ್ಕಿ ಎರಚಿ, ತಮ್ಮಿಂದ ಬಾಧೆ ಉಂಟಾಗದು ಎಂಬಂತೆ ನರ್ತಿಸುತ್ತವೆ. ಇವುಗಳಲ್ಲಿ ತುಂಬ ಕೋಲಗಳು ಇಂಥ ಕಾರ್ಯಕ್ರಮಕ್ಕಷ್ಟೆ ನಿಗದಿಯಾಗಿರುವುದರಿಂದ ಅವುಗಳಿಗೆ ತಾತ್ಕಾಲಿಕವಾಗಿ ನಿರ್ಮಿಸಿಕೊಂಡ ವಸ್ತ್ರಾಭರಣಗಳಿರುತ್ತವೆ. ತೆಂಗಿನ ಹಿಂಗಾರ, ಕಂಗಿನ ಹಿಂಗಾರ, ತೆಂಗಿನ ಎಳೆಯಗರಿ, ಚೆಕ್ಕಿ ಹೂ, ತುಳಸಿ ಮುಂತಾದುವನ್ನುಪಯೋಗಿಸಿ ಕಾರ್ಯಕ್ರಮವನ್ನು ನಡೆಸುತ್ತಾರೆ. ಒಂದು ದಿನ ಮುಂಜಾನೆಯಿಂದ ಮರುದಿನ ಮುಂಜಾನೆಯವರೆಗೂ ಕಾರ್ಯಕ್ರಮಗಳು ನಡೆಯುತ್ತವೆ. ತರವಾಡಿನ ಎಲ್ಲರನ್ನೂ ಇಣಂಙನ್ (ಹೆಂಗಸರ ಗಂಡನ ಕಡೆಯವರು), ಇಣಂಙತ್ತಿ (ತರವಾಡಿನ ಹಿರಿಯರ ಹೆಂಡಿರು) ಯರನ್ನೂ ಈ ಕಾರ್ಯಕ್ರಮಕ್ಕೆ ಆಮಂತ್ರಿಸುತ್ತಾರೆ. ಮರುದಿನ ಮಧ್ಯಾಹ್ನ ಭೋಜನಕ್ಕೆ ಮುಂಚಿತವಾಗಿ ಬಾಧೆಗೊಳಗಾದ ಹೆಂಗಸನ್ನು ಸ್ನಾನ ಮಾಡಿಸಲು ಬೇಕಾದ ಎಣ್ಣೆಗಳ ಮಿಶ್ರಣವನ್ನು ವಣ್ಣಾನರೋ ಅಥವಾ ಪರಂಪರಾಗತ ವೈದ್ಯರೋ ಸಿದ್ಧಮಾಡಿಕೊಡುತ್ತಾರೆ. ಬಳಿಕ ಹಿರಿಯರಾದ ತರವಾಡಿನ ಸದಸ್ಯರು ಬಾಧೆಯುಳಿದ ಸ್ತ್ರೀಯರನ್ನು ಅಕ್ಕಿಕಾಳು ಎರಚಿ ಆಶೀರ್ವದಿಸುತ್ತಾರೆ. ಇದರೊಂದು ಕಾರ್ಯಕ್ರಮವು (ಮಲಯನ್ ಕೆಟ್ಟ್) ಮುಗಿಯುತ್ತದೆ.

.ವಿ.ಎ. ಅನುವಾದ ಕೆ.ಕೆ.

 

ಮಲಯರ್ ಮಲಯರ್ ಎಂಬ ಹೆಸರಿನಿಂದ ಕೇರಳದ ವಿವಿಧ ಪ್ರದೇಶಗಳಲ್ಲಿ ವಿಭಿನ್ನ ಪಂಗಡಗಳು ವಾಸವಾಗಿವೆ. ಕೇರಳದ ಪೂರ್ವಘಟ್ಟಗಳ ಅರಣ್ಯಪ್ರದೇಶಗಳಲ್ಲಿ, ತ್ರಿಶ್ಶೂರು, ಎರ್ನಾಕುಳಂ, ಪಾಲಕಾಡು ಜಿಲ್ಲೆಗಳಲ್ಲಿ ಆದಿವಾಸಿ ಬುಡಕಟ್ಟು ವಿಭಾಗಕ್ಕೆ ಸೇರಿದ ಮಲಯರಿದ್ದಾರೆ. ಇವರಲ್ಲಿ ಕೂಡಾ ಸೃಷ್ಟಿ ಪುರಾಣ, ಕುಟುಂಬ ವ್ಯವಸ್ಥೆ ಭಿನ್ನವಾಗಿರುವ ನಾಟುಮಲಯರು, ಕೊಂಗುಮಲಯರು ಎಂಬ ಎರಡು ವಿಭಾಗಗಳಿಗೆ. ಹಾಗೆಯೇ ಉತ್ತರ ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ವಾಸವಾಗಿರುವ ಇನ್ನೊಂದು ಜಾತಿಯಾದ ಮಲಯರು ನಿಣಬಲಿ, ಉಚ್ಚಬಲಿ, ತೀಯಾಟಂ, ಕುಕ್ಕುಟಬಲಿ ಮಂತ್ರವಾದ ಮೊದಲಾದ ಪ್ರವೃತ್ತಿಗಳಲ್ಲಿ ನಿಷ್ಣಾತರು.

ಆದಿವಾಸಿ ಬುಡಕಟ್ಟು ವಿಭಾಗಕ್ಕೆ ಸೇರಿದ ನಾಟುಮಲಯರು ಶಿವಪಾರ್ವತಿಯ ಮಕ್ಕಳೆಂದು ಹೇಳುತ್ತಾರೆ ಇವರು ‘ಮರುಮಕ್ಕತ್ತಾಯ (ಅಳಿಯಕಟ್ಟು) ಕುಟುಂಬ ಪದ್ಧತಿಯನ್ನು ಅನುಸರಿಸುವವರು. ‘ಮಕ್ಕತ್ತಾಯ’ (ಮಕ್ಕಳಕಟ್ಟು) ಕುಟುಂಬ ಪದ್ಧತಿಯ ಕೊಂಗು ಮಲಯರು ಶೂರ್ಪನಖಿಯ ವಂಶಜರೆಂದು ಹೇಳುತ್ತಾರೆ. ಇವರು ಕಾಡನ್ನು ಆಶ್ರಯಿಸಿ ಬದುಕವವರು. ಗಂಡ, ಹೆಂಡತಿ ಬೇಟೆ ನಾಯಿಯೊಂದಿಗೆ ಕಾಡಿನಲ್ಲಿ ಬೇಟೆಯಾಡಿ, ಸಿಕ್ಕಿದ ಪ್ರಾಣಿಗಳ ಮಾಂಸವನ್ನು ತಿಂದು ಬದುಕುತ್ತಾರೆ. ಬಿದಿರು, ಹುಲ್ಲಿನಿಂದ ಗುಡಿಸಲು ನಿರ್ಮಿಸಿ ವಾಸಿಸುವ ಇವರ ಯಜಮಾನನಿಗೆ ‘ಮೂಪನ್’ ಎಂದು ಹೆಸರು. ಮಂತ್ರವಾದ, ಚಿಕಿತ್ಸೆ ಮೊದಲಾದ ಸಿದ್ಧಿಗಳನ್ನು ಪಡೆದವನೇ ಮೂಪನ್. ಮಲೆದೇವತೆಗಳನ್ನೂ, ಕುಲದೇವತೆಗಳನ್ನೂ ಇವರು ಆರಾಧಿಸುತ್ತಾರೆ. ಯಾವುದೇ ಚಟುವಟಿಕೆಗಳನ್ನು ಇವರು ಆರಾಧನೆಯ ಮೂಲಕ ಆರಂಭಿಸುತ್ತಾರೆ. ಸತ್ತ ವ್ಯಕ್ತಿಗಳು ತಮ್ಮ ಸುತ್ತಲೂ ಆತ್ಮಗಳಾಗಿರುತ್ತವೆ ಎಂದು ನಂಬುವ ಇವರು ಆತ್ಮಗಳನ್ನು ಕಲ್ಲಿನಲ್ಲಿ ಆವಾಹಿಸಿ ಪೂಜಿಸುತ್ತಾರೆ. ಮುರಂ ಕಿಲುಕಪಾಟ್, ಕವರಕಳಿ, ಪೋಡುಕಳಿ, ಪೊಲಿಕಳಿ, ಕುಮ್ಮಿಕಳಿ, ಮುಡಿಯಾಟಪಾಟ್, ತಗರಪಾಟ್, ಕೃಷಿಪಾಟ್, ಕೈಕೊಟ್ಟಿ ಕಳಿಪಾಟ್‌ಗಳೆಲ್ಲ ಇವರ ವಿನೋದ ಕಲೆಗಳಾಗಿವೆ.

ಉತ್ತರ ಕೇರಳದ ಮಲಯರು ಪರಶಿವನ ಬಾಧೆಯನ್ನು ನಿವಾರಿಸಲು ಹುಟ್ಟಿದವರೇ ತಾವೆಂದು ಉತ್ತರ ಕೇರಳದ ಮಲಯರು ಹೇಳುತ್ತಾರೆ. ಶಿವನು ಕಾಡಿನಲ್ಲಿ ಸಂಚರಿಸುತ್ತಿರುವಾಗ ಪ್ರಾಣಿಗಳು ಸಂಗಮಿಸುವುದನ್ನು ಕಂಡು, ಇಂದ್ರಿಯಸ್ಖಲನಗೊಂಡನಂತೆ. ಭೂಮಿಗೆ ಬಿದ್ದ ವೀರ್ಯವನ್ನು ಮಣ್ಣಿನಿಂದ ಮರೆಮಾಚಿದಾಗ, ಆ ಸ್ಥಳದಲ್ಲಿ ಹುತ್ತ ಬೆಳೆಯಿತಂತೆ. ಬಹಳ ಕಾಲದ ನಂತರ ಶಿವನು ತನ್ನ ಸೌಂದರ್ಯವನ್ನು ನೋಡಲು ಬೆಳ್ಳಿ, ಕಬ್ಬಿಣ ಹಾಗೂ ಚಿನ್ನದ ಕನ್ನಡಿಗಳನ್ನು ಹಿಡಿದ. ಆದರೆ ತೃಪ್ತಿಯಾಗಲಿಲ್ಲ. ಕೊನೆಗೆ ಕಂಚಿನ ಕನ್ನಡಿಯನ್ನು ಹಿಡಿದು ನೋಡಿದಾಗ, ತನ್ನ ರೂಫವನ್ನು ಕಂಡು ದಿಗ್ಭ್ರಮೆಗೊಂಡನು. ತನ್ನ ‘ದೃಷ್ಟಿ’ ತನಗೆ ಬಡಿದು ಪ್ರಜ್ಞೆ ತಪ್ಪಿದ. ಈ ದೋಷವನ್ನು ನಿವಾರಿಸಲು ಋಷಿಮುನಿಗಳೂ, ದೇವ ಗಂಧರ್ವ ಯಕ್ಷ ಕಿನನರರೂ ತುಂಬ ಪ್ರಯತ್ನಿಸಿದರು. ಆದರೆ ಪ್ರಯೋಜನವಾಗಲಿಲ್ಲ. ಅನಂತರ ಜ್ಯೋತಿಷಿಯಾದ ಸುಬ್ರಹ್ಮಣ್ಯನಲ್ಲಿ ಜ್ಯೋತಿಷ ಪ್ರಶ್ನೆ ಕೇಳಿದರು. ಅಯೋನಿಜವಾದ ಒಬ್ಬ ವ್ಯಕ್ತಿಯಿಂದ ಮಾತ್ರ ಈ ದೋಷ ನಿವಾರಣೆ ಸಾಧ್ಯ ಎಂದು ಕಂಡುಬಂತು. ಶಿವನಿಂದಲೇ ಇಂತಹ ಸೃಷ್ಟಿ ಆಗಿದೆ ಎಂದು ಅರಿತ ಅವರು ಕಾಡಿಗೆ ತೆರಳಿ, ಹುತ್ತವನ್ನು ಕೆದಕಿದಾಗ, ಅದರಿಂದ ಒಬ್ಬ ಪರುಮಲಯ ಹಾಗೂ ಮಲಯತ್ತಿ ಹೊರಬಂದರಂತೆ. ಮಹಾವಿಷ್ಣುವಿನಿಂದ ಮಂತ್ರೋಪದೇಶವನ್ನು ಪಡೆದ ಅವರು ದಿವ್ಯ ಔಷಧಿಗಳಿಂದ ಶಿವನ ಬಾಧೆಗಳನ್ನು ನಿವಾರಿಸಿದರು. ಅನಂತರ ಭೂಮಿಯಲ್ಲಿ ಬಾಧೆಗೊಳಗಾಗುವ ಮನುಷ್ಯರಿಗೆ ಬಾಧೆ ನಿವಾರಿಸುವ ವರದೊಂದಿಗೆ ಭೂಮಿಗೆ ಬಂದರು. ಇದು ಉತ್ತರ ಕೇರಳದ ಮಲಯರ ಸೃಷ್ಟಿ ಪುರಾಣ.

ಸಮಾಜ ವ್ಯವಸ್ಥೆ : ಉತ್ತರ ಕೇರಳದ ಮಲಯರು ಒಂಬತ್ತು ‘ಇಲ್ಲಂ’ (ಗೋತ್ರ/ಬಳಿ)ಗಳಲ್ಲಿ ಗುರುತಿಸುತ್ತಾರೆ. ಕಲ್ಯಾಟು, ಪಾಲಾಂಗುಡಿ, ಕೋಟುಕುಡಿ, ವೆಳುಪಾನ್, ಚೇಣಿ, ಉತ್ರಾಣ್, ಚೇಣಾಂದಿ, ಕೋಟಿನ್, ಪಳ್ಳಿಪರತ್ತಿ ಎಂಬುದು ‘ಇಲ್ಲಂ’ ಹೆಸರುಗಳು. ‘ಇಲ್ಲಂ’ಗಳನ್ನು ‘ಕಿರಿಯಂ’ ಎಂದೂ ಹೇಳುವರು. ವೈದ್ಯ, ಮಂತ್ರವಾದ, ತೆಯ್ಯಂಕೋಲ ಕಟ್ಟುವುದು ಇವರ ಕುಲಕಸುಬು. ಪ್ರತಿಯೊಂದು ಹಳ್ಳಿಯಲ್ಲಿಯೂ ಈ ಕಸುಬಿನ ನಿರ್ವಹಣೆಗಾಗಿ ಆಯಾ ಮನೆತನದವರಿಗೆ ಹಕ್ಕು ಪರಂಪರೆಯಿಂದ ಬಂದಿರುತ್ತದೆ. ಓಣಂ, ವಿಷು ಮೊದಲಾದ ಹಬ್ಬಗಳ ವೇಳೆಯಲ್ಲಿ ಮನೆಮನೆಗೆ ತೆರಳಿ ಮಲಯರು ಅಕ್ಕಿ, ತರಕಾರಿಗಳನ್ನು ಸಂಗ್ರಹಿಸುತ್ತಾರೆ.

ಮಲಯರ ಮನೆಗಳನ್ನು ಮಲಯಕುಡಿ ಅಥವಾ ಮಲಯಪುರ ಎಂದು ಹೇಳುವರು. ಮನೆಯಲ್ಲಿ ಅಥವಾ ಮನೆಯ ಸಮೀಪದ ಗುಡಿ ಅಥವಾ ಹಾಲೆವೃಕ್ಷದ ಅಡಿಯಲ್ಲಿ ತಮ್ಮ ದೈವಗಳನ್ನು ಪ್ರತಿಷ್ಠೆ ಮಾಡುತ್ತಾರೆ. ಕುಟ್ಟಿಚಾತನ್, ಭೈರವನ್, ಪೊಟ್ಟನ್, ಗುಳಿಗನ್, ಉಚ್ಚಿಟ್ಟ ಮೊದಲಾದ ದೈವಗಳನ್ನು ಇವರು ಆರಾಧಿಸುತ್ತಾರೆ. ಕುರತ್ತಿ, ಕಂಠಕರ್ಣನ್, ವಿಷ್ಣುಮೂರ್ತಿ, ಮಡೆಯಿಲ್ ಚಾಮುಂಡಿ, ಮೂವಾಳಕುಳಿಂ ಚಾಮುಂಡಿ ಮೊದಲಾದ ದೈವಗಳನ್ನು ಆರಾಧಿಸುತ್ತಾರೆ.

ಮಲಯರಿಗೆ ಸ್ವತಂತ್ರವಾದ ಸಂಗೀತ ಪರಂಪರೆ ಇದೆ. ಚೆಂಡೆ, ಚೀನಿ ಕೊಳಲು ಇವರ ಪಾರಂಪರಿಕ ವಾದ್ಯಗಳಾಗಿವೆ. ಮಹಿಳೆಯರು ಒಳ್ಳೆಯ ಹಾಡುಗಾರ್ತಿಯರು. ಸಂಗೀತದೊಂದಿಗೆ ವಾಕ್ ಸಾಮರ್ಥ್ಯವೂ ಇವರಿಗಿದೆ. ಕೋದಾಮೂರಿಯಾಟಂ (ಧನ ಧಾನ್ಯ ಸಮೃದ್ಧಿಗಾಗಿ ನಡೆಸುವ ಧಾರ್ಮಿಕ ಕುಣಿತ, ಮಲಯನ್ ಕೆಟ್ಟ್ (ಗರ್ಭಬಲಿ ಸಂಬಂದ ಆಚರಣೆ), ಮಲಯಿಕೂತ್ (ವಿಶೇಷ ವೇಷಗಳೊಂದಿಗೆ ಪುರುಷರು ಮತ್ತು ಮಹಿಳೆಯರು ನಡೆಸುವ ಆಚರಣೆ), ಅಗನಾಳ್ ನೀಕ್ (ಕೆಟ್ಟ ಗಳಿಗೆಯಲ್ಲಿ ಸಾವು ಸಂಭವಿಸಿದರೆ ನಡೆಸುವ ಆಚರಣೆ), ಪುಳ್ಳುವಪಾಟ್ (ದುರ್ಮರಣ ನಡೆದ ಮನೆಗಳಲ್ಲಿ ಗರ್ಭಿಣಿಯರಿಗಾಗಿ ನಡೆಸುವ ಆಚರಣೆ), ಪಕ್ಷಿಪೀಡನನೀಕ್ (ಚಿಕ್ಕ ಮಕ್ಕಳಿಗಾಗಿ ನಡೆಸುವ ಮಾಂತ್ರಿಕ ಆಚರಣೆ), ಪಾನಿಯಕುಳಿಂ (ಮಾರಣ ಮೊದಲಾದ ಕ್ಷುದ್ರದೋಷಗಳಿಗೆ ನಡೆಸುವ ಮಾಂತ್ರಿಕ ಕ್ರಿಯೆ), ಕಣ್ಣೀರಪಾಟು (ದೃಷ್ಟಿ ನಿವಾರಣೆಗಾಗಿ ನಡೆಸುವ ವಿಧಿ), ಉಚ್ಚೇಲ್‌ಕೂತ್ (ಸಂಪತ್ತು ಸಮೃದ್ಧಿಗಾಗಿ ನಡೆಸುವ ವಿಶಿಷ್ಟ ಆಚರಣೆ) ಮೊದಲಾದುವು ಮಲಯರ ಆಚರಣೆಗಳಾಗಿವೆ. ಹಲವಾರು ತೆಯ್ಯಂ ಕೋಲಗಳನ್ನು ಮಲಯರು ಕಟ್ಟುತ್ತಾರೆ. ಕೆಂಡದ ರಾಶಿಯ (ಮೇಲೇರಿ) ಮೇಲೆ ಬೀಳುವ ವಿಷ್ಣುಮೂರ್ತಿಯ ಒತ್ತಿಕೋಲ, ಬೆಂಕಿಯಲ್ಲಿ ಕುಳಿತುಕೊಳ್ಳುವ ಪೊಟ್ಟನ್, ಸೊಂಟದಲ್ಲಿ ಪಂಜು ಉರಿಸಿ ಕುಣಿಯುವ ಕಂಠಕರ್ಣನ್, ಕೈಗಳಲ್ಲಿ ದೊಂದಿ ಹಿಡಿದು ಕುಣಿಯುವ ಕುಚ್ಚಿಚಾತನ್ ಇವುಗಳಲ್ಲಿ ಮುಖ್ಯವಾದವು. ತೆಯ್ಯಂ ಕಲೆಯ ನೈಪುಣ್ಯವನ್ನು ಕಂಡು ಊರವರು, ದೇವಸ್ಥಾನದ ಯಜಮಾನರು ಸೇರಿಕೊಂಡು ಸಂಬಂಧಪಟ್ಟ ರಾಜನಿಂದ ‘ಪಟ್ಟುವಳಯುಂ’ ಕೊಡುವ ಕ್ರಮವಿದೆ.

ಈ ಗೌರವ ಸಿಕ್ಕಿದ ಮಲಯನನ್ನು ಪಣಿಕ್ಕರ್ ಅಥವಾ ಪೆರುಮಲಯ ಎಂದು ಕರೆಯುವರು. ಈ ಹೆಸರಿಗೆ ಪ್ರಾದೇಶಿಕ ವ್ಯತ್ಯಾಸಗಳು ಕಂಡುಬರುತ್ತವೆ.

ಮಲಯರ ಕುರಿತು ಸಾಕಷ್ಟು ಅಧ್ಯಯನಳು ನಡೆದಿವೆ. ಎಂ.ವಿ. ವಿಷ್ಣುನಂಬೂದಿರಿ ಸಂಪಾದಿಸಿದ ಫೋಕ್ಲೋರ್‌ ನಿಘಂಟುವಿನಲ್ಲಿ ಮಲಯರ ಉಲ್ಲೇಖವಿದೆ. ಕೇರಳ ಜಾನಪದ ಅಕಾಡೆಮಿಯ ‘ಬದುಕು ಸಂಸ್ಕೃತಿ’ ಮಾಲಿಕೆಯ ಮೂರನೇ ಸಂಪುಟದಲ್ಲಿ ಮಲಯರ ಬದುಕು ಹಾಗೂ ಸಂಸ್ಕೃತಿಯ ವಿವರಗಳಿವೆ. ಡಾ. ಗೀತ ಪಿ. ಕೋದಮಂಗಲ ಮಲಯ ಸಮುದಾಯದ ಕುರಿತು ಸಂಶೋಧನೆ ನಡೆಸಿದ್ದು ಪುಸ್ತಕ ಪ್ರಕಟವಾಗಿದೆ.

ವಿ.ಎಂ.ಯು. ಅನುವಾದ ಎನ್. ಎಸ್

 

ಮಲಯಾಟ್ಟೂರ್ ಪಳ್ಳಿ ಕೇರಳದ ಬಹು ಪ್ರಸಿದ್ಧವಾದ ಒಂದು ಕ್ರೈಸ್ತ ಪುಣ್ಯಕ್ಷೇತ್ರ ಮಲಯಾಟ್ಟೂರ್‌ಪಳ್ಳಿ (ಮಸೀದಿ, ಇಗರ್ಜಿ ಎರಡಕ್ಕೂ ಮಲಯಾಳಂನಲ್ಲಿ ‘ಪಳ್ಳಿ’ ಎನ್ನುತ್ತಾರೆ. ಮುಸ್ಲಿಮರದ್ದು ಮುಸ್ಲಿಂ ಪಳ್ಳಿಯಾದರೆ ಕ್ರೈಸ್ತರದ್ದು ಕ್ರಿಶ್ಚಿಯನ್ ಪಳ್ಳಿ). ಏಸುವಿನ ನೇರ ಶಿಷ್ಯನೂ ಧರ್ಮಪ್ರವರ್ತಕ (apostle)ನೂ ಆದ ಸಂತ ಥೋಮಸನಿಗೆ ಸಂಬಂಧಿಸದ ಐತಿಹ್ಯ ಮತ್ತು ನಂಬಿಕೆಗಳೇ ಈ ಇಗರ್ಜಿಯ ಪ್ರಸಿದ್ಧಿಗೆ ಕಾರಣ.

ಕ್ರಿ.ಶ. ೫೨ರಲ್ಲಿ ಕೊಡುಂಗಲ್ಲೂರ್‌ಗೆ ಬಂದ ಸಂತ ಥೋಮಸನು ಕೇರಳ ತೀರದಲ್ಲಿ ಕ್ರೈಸ್ತಧರ್ಮ ಪ್ರಚಾರದಲ್ಲಿ ತೊಡಗಿದನು. ಏಸುವಿನ ಇತರ ಧರ್ಮಪ್ರವರ್ತಕರು ಮಧ್ಯಪೂರ್ವ ದೇಶಗಳಲ್ಲಿ ಧರ್ಮ ಪ್ರಚಾರಗಳನ್ನು ಕೈಗೊಳ್ಳುತ್ತಿದ್ದಾಗ ಸಂತ ಥೋಮಸನು ಆ ಗಡಿಗಳನ್ನೆಲ್ಲ ದಾಟಿ ಬಹುದೂರವೂ ಅನ್ಯವೂ ಆಗಿದ್ದ ಭಾರತವನ್ನು ತನ್ನ ಗುರಿಯನ್ನಾಗಿಸಿಕೊಂಡನು. ಕ್ರಿ.ಶ. ೭೨ ರಲ್ಲಿ ಚೆನ್ನೈ ಸಮೀಪದ ಚಿನ್ನಮಲೈ ಎಂಬಲ್ಲಿ ಹುತಾತ್ಮನಾಗುವವರೆಗಿನ ೨೦ ವರ್ಷಗಳ ಅವಧಿಯಲ್ಲಿ ಆತ ಇಲ್ಲಿ ಧರ್ಮಪ್ರಸಾರ ಕಾರ್ಯದಲ್ಲಿ ಮುಳುಗಿದ್ದನು. ಆತ ಕೇರಳದಲ್ಲಿ ಏಳು ಪಳ್ಳಿ (ಇಗರ್ಜಿ)ಗಳನ್ನು ಕಟ್ಟಿಸಿದನು. ಬ್ರಾಹ್ಮಣರೂ ತಾಂತ್ರಿಕರೂ ಸೇರಿದಂತೆ ಹಲವರನ್ನು ಕ್ರೈಸ್ತಧರ್ಮಕ್ಕೆ ಮತಾಂತರಿಸಿದನು.

ಸಮುದ್ರ ಮಟ್ಟಕ್ಕಿಂತ ೧೫೦೦ ಅಡಿ ಎತ್ತರದಲ್ಲಿರುವಮಲಯಾಟ್ಟೂರ್ ಪರ್ವತಶ್ರೇಣಿಯ ತುದಿಯಲ್ಲಿ ಸಂತ ಥೋಮಸನ ಸ್ಮಾರಕವಾಗಿರುವ ಈ ಇಗರ್ಜಿ ಇದೆ. ಇಲ್ಲಿರುವ ಸಂತನ ಅಳಿಸಿ ಹೋಗುವ ಹೆಜ್ಜೆಯ ಗುರುತುಗಳನ್ನು ಭಕ್ತರು ದರ್ಶಿಸಿ ಪುನೀತರಾಗುತ್ತಾರೆ. ಹಿಂದೆ ಜಾನುವಾರುಗಳನ್ನು ಮೇಯಿಸುತ್ತಾ ಇಲ್ಲಿಗೆ ಬಂದ ಹಳ್ಳಿಯ ಹೆಂಗಸರೂ ಮಕ್ಕಳೂ ಇಲ್ಲಿ ಚಿನ್ನದ ಶಿಲುಬೆಯೊಂದು ಉದ್ಭವವಾಗಿರುವ ಅದ್ಭುತವವನ್ನು ಕಂಡರಂತೆ! ಬೇಸಿಗೆಯಲ್ಲಿ ಜಲಕ್ಷಾಮವಿರುತ್ತಿದ್ದ ಇಲ್ಲಿ ಕ್ರಮೇಣ ಕಡುಬೇಸಿಗೆಯಲ್ಲೂ ಸಮೃದ್ಧವಾದ ನೀರಿನ ಒರತೆಗಳಿರುವುದು ಕಂಡುಬಂತು. ಈ ಪವಾಡಗಳನ್ನು ಕಂಡವರು ಪರ್ವತವನ್ನು ಇಳಿದು ಬಂದು ಉಳಿದವರಲ್ಲೂ ಅದನ್ನು ವರ್ಣಿಸಿದರು. ಜನ ತಂಡೋಪತಂಡವಾಗಿ ದುರ್ಗಮವಾದ ಈ ಕಾಡಿನ ಪ್ರಯಾಣವನ್ನೂ ಲಕ್ಷಿಸದೆ ಈ ಪವಾಡ ದರ್ಶನವನ್ನು ನೋಡಲೆಂದು ಬರಲಾರಂಭಿಸಿದರು. ಇದೇ ಮುಂದೆ ಮಲಯಾಟ್ಟೂರ್ ತೀರ್ಥಯಾತ್ರೆಯಾಗಿ ಪ್ರಸಿದ್ಧಿ ಪಡೆಯಿತು.

ಹಿಂದುಗಳ ಶಬರಿಮಲೆ ಯಾತ್ರೆಯ ಜತೆಗೆ ಮಲಯಾಟ್ಟೂರ್‌ಯಾತ್ರೆಗೆ ಹಲವು ಸಾಮ್ಯತೆಗಳಿವೆ. ಕಟ್ಟುನಿಟ್ಟಿನ ವ್ರತಾಚರಣೆ ಮಾಡಿ ಶುದ್ಧಮನಸ್ಸಿನಿಂದ ಮಲಯಾಟ್ಟೂರ್ ಬೆಟ್ಟ ಹತ್ತಿದರೆ ಇಷ್ಟಾರ್ಥಗಳು ಈಡೇರುವುವು ಎಂಬುದು ಜನರ ನಂಬಿಕೆಯಾಗಿದೆ. ಅಯ್ಯಪ್ಪ ಭಕ್ತರು ಅಯ್ಯಪ್ಪನಿಗೆ ಶರಣುಘೋಷ ಕೂಗುವಂತೆ ಇಲ್ಲೂ ಬೆಟ್ಟವೇರುವಾಗ ಶರಣುಘೋಷ ಕೂಗುವ ಸಂಪ್ರದಾಯವಿದೆ. ‘ಹೊನ್ನಿನ ಶಿಲುಬೆಯ ದರ್ಶನಕ್ಕಾಗಿ ಹೊನ್ನಿನ ಮಲೆಯೇರುವುದು’ ಎಂಬುದು ಆ ಘೋಷಣೆಯ ಸಾರ. ಏಸುವಿನ ಗೋಲ್ಗೊಥಾ ಬೆಟ್ಟವೇರುವ ಕತೆಯನ್ನು ವ್ರತಧಾರಿಗಳು ಈ ಯಾತ್ರೆಯ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ. ಏಸುವಿನ ಪುನರುತ್ಥಾನದ ದಿನವಾದ ಈಸ್ಟರ್ ಸಂಡೇಯನ್ನು ಇಲ್ಲಿ ಪ್ರಮುಖ ತಿರುನಾಳ್‌ದಿನವಾಗಿ ಆಚರಿಸಲಾಗುತ್ತದೆ. (ಕೇರಳದ ಚರ್ಚ್‌‌ಗಳಲ್ಲಿ ವಾರ್ಷಿಕ ಹಬ್ಬದ ದಿನವನ್ನು ತಿರುನಾಳ್ ಎಂದು ಕರೆಯುತ್ತಾರೆ). ಈಸ್ಟರ್‌ದಿನಗಳ ಹಿಂದು ಮುಂದಿನ ೧೫ ದಿನಗಳ ಕಾಲ ಇಲ್ಲಿಗೆ ದೇಶದ ವಿವಿಧ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಭಾರತಕ್ಕೆ ಏಸು ಕಳಿಸಿದ ಅಪಾಸಲ್ (apostle) ಎಂದು ಪ್ರಸಿದ್ಧನಾದ ಸಂತ ಥೋಮಸ್‌ನ ಹೆಸರಿನಲ್ಲಿರುವ ಈ ಇಗರ್ಜಿಯನ್ನು ಅಂತಾರಾಷ್ಟ್ರೀಯ ತೀರ್ಥಯಾತ್ರಾ ಸ್ಥಳವೆಂದು ಪೋಪ್ ಘೋಷಿಸಿರುವುದು ಇದರ ಪವಿತ್ರತೆ ಮತ್ತು ಪ್ರಸಿದ್ಧಿಗೆ ದ್ಯೋತಕವಾಗಿದೆ. ಕ್ರೈಸ್ತ ವಿಭಾಗಗಳಲ್ಲೊಂದಾದ ಮಾರ್ತೋಮಾ ಗುಂಪಿನ ಕ್ರೈಸ್ತರಿಗೆ ಇದು ಅತ್ಯಂತ ಪ್ರಮುಖವಾದ ಪುಣ್ಯಭೂಮಿಯಾಗಿದೆ.

ಬೆಟ್ಟಗುಡ್ಡಗಳಿಂದ ಕೂಡಿದ ಮಲಯಾಟ್ಟೂರ್ ಪ್ರದೇಶವು ಜಲಸಾಂದ್ರತೆಯಿಂದ ಕೂಡಿದ್ದರೂ ಇಲ್ಲಿ ಜನವಾಸ ಅಷ್ಟೇನೂ ಇಲ್ಲ. ಕಣಿವೆಯಿಂದ ಬೆಟ್ಟದ ತುದಿಯಲ್ಲಿರುವ ಇಗರ್ಜಿಯ ಕಡೆಗಿನ ಯಾತ್ರೆಯ ಮಧ್ಯೆ ೧೪ ಪ್ರಮುಖ ಜಾಗಗಳಿದ್ದು ಪ್ರತಿಯೊಂದು ಕಡೆಯೂ ಭಕ್ತರು ನಿಂತು ಮೋಂಬತ್ತಿಗಳನ್ನು ಉರಿಸಿ ಪ್ರಾರ್ಥಿಸಿ ಶರಣು ಘೋಷ ಕೂಗುತ್ತಾರೆ. ಏರುಹಾದಿಯು ದುರ್ಗಮವಾಗಿದ್ದಾಗಲೂ ಭಕ್ತಿಯ ಆವೇಶದಲ್ಲಿ ಭಕ್ತರಿಗೆ ಆಯಾಸವೆನಿಸುವುದಿಲ್ಲ. ಕೆಲವರು ಭಾರವಾದ ಶಿಲುಬೆಗಳನ್ನು ಹೆಗಲಿಗೇರಿಸಿ ಬೆಟ್ಟವೇರುವುದೂ ಇದೆ. ಮತ್ತೆ ಕೆಲವರು ಶಿಲುಬೆಗೆ ಬದಲಾಗಿ ಭಾರದ ಕಲ್ಲನ್ನು ಹೊತ್ತು ನಡೆಯುತ್ತಾರೆ. ಇನ್ನೂ ಕೆಲವರು ಮೊಣಕಾಲಿನಲ್ಲಿ ತೆವಳುತ್ತಲೇ ಬೆಟ್ಟ ಹತ್ತಿ ಹೋಗಿ ಹರಕೆಯನ್ನು ತೀರಿಸುತ್ತಾರೆ. ಬೆಟ್ಟದ ತುದಿ ತಲುಪಿದರೆ ತಾವು ಹೊತ್ತು ತಂದ ಹರಕೆ ವಸ್ತುಗಳನ್ನು ನಿರ್ದಿಷ್ಟ ಬಲಿವೇದಿಕೆಯಲ್ಲಿ ಸಮರ್ಪಿಸುತ್ತಾರೆ. ಸಾಮಾನ್ಯವಾಗಿ ಅಕ್ಕಿ, ಎಳ್ಳು, ಕಾಳುಮೆಣಸು, ಮೋಂಬತ್ತಿ, ಎಣ್ಣೆ, ಬೆಳ್ಳಿ, ಚಿನ್ನ ಇತ್ಯಾದಿಗಳನ್ನು ಹರಕೆಯಾಗಿ ಸಲ್ಲಿಸುತ್ತಾರೆ. ಹಣವನ್ನು ಕಾಣಿಕೆ ರೂಪದಲ್ಲಿ ಸಮರ್ಪಿಸುವುದು ಸರ್ವೇಸಾಮಾನ್ಯ.

ಬೆಟ್ಟದ ಮೇಲಿನ ಇಗರ್ಜಿಯಲ್ಲಿ ವಿವಿಧ ಭಾಷೆಗಳಲ್ಲಿ ಬಲಿಪೂಜೆಗಳು ನಿರಂತರವಾಗಿ ನಡೆಯುತ್ತಲೇ ಇರುತ್ತವೆ. ಸೀರೋ ಮಲಬಾರ್, ಸೀರೋ ಮಲಂಗರ, ಲ್ಯಾಟಿನ್ (ಇವೆಲ್ಲ ಕೇರಳದ ವಿವಿಧ ಕ್ರೈಸ್ತ ಪಂಗಡಗಳು) ಮುಂತಾದ ರೀತಿಗಳ ಆಚರಣೆಗಳೂ ಬಲಿಪೂಜೆಗಳು ಆವರ್ತನಾರೀತಿಯಲ್ಲಿ ಅಲ್ಲಿ ನಡೆಯುತ್ತವೆ. ಜಾತಿ, ಲಿಂಗ, ವಯಸ್ಸು ಇತ್ಯಾದಿ ಭೇದಭಾವಗಳನ್ನು ಇಲ್ಲಿ ಕಾಣಲು ಸಾಧ್ಯವಿಲ್ಲ. ಮುಂದೆ ಭಕ್ತರು ಸಂತೃಪ್ತ ಭಾವದಿಂದ, ಉದಾರ ಮನಸ್ಸಿನಿಂದ, ಬದುಕಿನ ಹೊಸ ನಿರೀಕ್ಷೆಗಳೊಂದಿಗೆ ಬೆಟ್ಟವಿಳಿಯುತ್ತಾರೆ. ಮತ್ತೆ ಇನ್ನೊಮ್ಮೆ ಬರುವ ಬಗ್ಗೆ ಯೋಚಿಸುತ್ತಾರೆ.

ಕೆ.ವಿ.ಎಫ್. ಅನುವಾದ ವಿ.ಸಿ.

 

ಮಲಯಾಳಂ ಒಗಟುಗಳು ಒಗಟುಗಳ ಧರ್ಮ ರಚನೆ, ವಿಷಯ ಮುಂತಾದವುಗಳ ಆಧಾರದಲ್ಲಿ ಅವನ್ನು ಹಲವು ರೀತಿಗಳಲ್ಲಿ ವರ್ಗೀಕರಿಸಬಹುದು. ಎಂ.ವಿ. ವಿಷ್ಣು ನಂಬೂದಿರಿಯವರು ಮಲಯಾಳದ ಒಗಟುಗಳನ್ನು ಅವುಗಳ ವಾಕ್ಯಗಳಲ್ಲಿ ಅಡಗಿರುವ ಕಾರ್ಯ ಕಾರಣ ಸಂಬಂಧ, ಧರ್ಮಗಳನ್ನು ತಳಹದಿಯಾಗಿರಿಸಿಕೊಂಡು ಹತ್ತು ತೆರನಾಗಿ ವಿಂಗಡಿಸಿದ್ದಾರೆ. ರಚನಾ ಪರವಾದ ವೈಶಿಷ್ಟ್ಯಗಳನ್ನು ಪರಿಗಣಿಸಿ ಲಘು, ಸಂಕೀರ್ಣ, ದೀರ್ಘ ಹೀಗೆ ಮೂರು ರೀತಿಯಲ್ಲಿ ವಿಂಗಡಿಸಿಕೊಂಡಿದ್ದಾರೆ. ಒಗಟುಗಳ ಸೂಚಕ, ಧರ್ಮ, ಸೂಚಿತ ಇವುಗಳನ್ನು ತಳಹದಿಯಾಗಿಟ್ಟುಕೊಂಡು ಒಂಬತ್ತು ತೆರನಾದ ಒಗಟುಗಳಿವೆ ಎನ್ನುತ್ತಾರೆ. ವಿಷಯ ವ್ಯಾಪ್ತಿಯ ಆಧಾರದಲ್ಲಿ ಕೃಷಿ ಸಂಬಂಧಿ, ಜೈವಿಕ, ಗೃಹ್ಯ, ಶಾರೀರಿಕ, ಪ್ರಾಕೃತಿಕ, ಸಂಕೀರ್ಣ – ಹೀಗೆ ವಿಭಾಗಗಳನ್ನು ಮಾಡಿಕೊಂಡಿದ್ದಾರೆ. ಒಗಟುಗಳ ಪ್ರಶ್ನೆ ವಿಭಾಗದ ರಚನೆಯನ್ನು ಆಧಾರವಾಗಿಟ್ಟುಕೊಂಡು ರಾಘವನ್ ಪಯ್ಯನಾಡರು ಒಗಟುಗಳನ್ನು ಪ್ರಶ್ನರೂಪ, ವಾಚಕರೂಪ, ದೀರ್ಘ ವಾಚಕರೂಪ, ಕಥಾರೂಪ, ಒಂದೇ ಮಾತಿನಲ್ಲಿರುವುದು, ಸಮಸ್ಯಾರೂಪ ಹೀಗೆ ವಿಭಾಗ ಮಾಡುತ್ತಾರೆ. ಪ್ರಶ್ನೆ ರೂಪವೆಂದರೆ ಪ್ರತ್ಯಕ್ಷವಾಗಿಯೇ ಪ್ರಶ್ನೆ ರೂಪದಲ್ಲಿರುವ ಒಗಟುಗಳು ಎಂದರ್ಥ. ಇವು ವಿರಳವಾಗಿದ್ದರೂ ಹೊಸ ಒಗಟುಗಳಲ್ಲಿ ಹಲವು ಪ್ರಶ್ನೆ ರೂಪದಲ್ಲೆ ಇವೆ. ಒಂದು ಉದಾಹರಣೆ :

ಕಪ್ಪಿಯಿಲಿಲ್ಲ ಕುಪ್ಪಿಯಿಲುಂಡ್ (ರಾಟೆಯಲ್ಲಿಲ್ಲ ಕುಪ್ಪುಯಲುಂಟು)
ಚೊವ್ವಯಿಲಿಲ್ಲ ತಿಂಗಳಿಲುಂಡ್ (ಮಂಗಳದಲ್ಲಿಲ್ಲ ತಿಂಗಳಲ್ಲುಂಟು)
ರವಿಯಿಲುಂಡ್ ಶಶಿಯಿಲಿಲ್ಲ (ರವಿಯಲ್ಲುಂಟು ಶಶಿಯಲ್ಲಿಲ್ಲ)
ಮೂನ್ನಕ್ಷರಮುಳ್ಳ ಞೂನಾರ್ (ಮೂರಕ್ಷರದ ನಾನ್ಯಾರು? ಕುದಿರೆ) ಕುದುರೆ

ಪ್ರಸ್ತಾವನೆ ರೀತಿಯಲ್ಲಿರುವ ವಸ್ತುವಿನ / ವಿಚಾರದ ವಿವರಣೆಯುಳ್ಳದ್ದು ವಾಚಕ ರೂಪ. ಉದಾ : ಕಪ್ಪು ಬಂಡೆಯಲ್ಲಿ ಬಿಳಿಯ ಬೇರು ಮೂಡಿತು (ಆನೆ ಮತ್ತು ಆನೆಯ ದಂತ.)

ಎರಡು ಅಥವಾ ಅದಕ್ಕಿಂತ ಹೆಚ್ಚು ವಾಕ್ಯಗಳಿರುವ ಒಗಟುಗಳೇ ದೀರ್ಘವಾಚಕರೂಪ. ಉದಾ: ಆನೆಯೇರದ ಮಲೆಯಲ್ಲಿ, ಆಳು ಏರದ ಮಲೆಯಲ್ಲಿ ಸಾವಿರ ಗಾಂಧಾರಿಗಳು ಒಂದು ತೆರನ ಮೆಣಸು? ಆಕಾಶದ ನಕ್ಷತ್ರಗಳು. ಕಥಾರೂಪದ ಒಗಟುಗಳಲ್ಲಿ ಹೆಚ್ಚಿನವು ಪ್ರಹೇಳಿಕಾ ಎಂಬ ವಿಭಾಗಕ್ಕೆ ಸೇರಿದವುಗಳು – ಭಾಷಾ ವೈಶಿಷ್ಟ್ಯಗಳನ್ನು ಒಳಗೊಂಡಿರುವ ಸಮಸ್ಯಾರೂಪದ ಒಗಟುಗಳು ಕೊನೆಯವು (ಸಮಸ್ಯಾರೂಪ). ಳ್ಳ ಎಂಬ ಮನುಷ್ಯ, ಳ್ಳದಲ್ಲಿ ಏರಿ, ಳ್ಳ ದಾಟಿ, – ಳ್ಳ ಮನೆಗೆ ಹೋದ – ಇದು ಒಂದು ಉದಾಹರಣೆ. ಇದಕ್ಕೆ ಅನುಕ್ರಮವಾಗಿ ಪಿ, ವ, ವೆ, ತ ಎಂಬ ಅಕ್ಷರಗಳನ್ನು ಸೇರಿಸಬೇಕು. ಆಗಪಿಳ್ಳ ಎಂಬ ಮನುಷ್ಯ ವಳ್ಳ (ದೋಣಿ)ದಲ್ಲಿ ಏರಿ ವೆಳ್ಳ (ನೀರು) ದಾಟಿ ತಳ್ಳ (ತಾಯಿ) ಮನೆಗೆ ಹೋದ – ಎಂದಾಗುತ್ತದೆ.

ಉತ್ತರದ ಭಾಗದ ರಚನೆಯ ಆಧಾರದಲ್ಲಿ ಒಗಟುಗಳನ್ನು ಒಂದೇ ಮತಿನಲ್ಲಿರುವುದು, ಶೈಲಿ ರೂಪದಲ್ಲಿರುವುದು, ವಾಕ್ಯ ರೂಪದಲ್ಲಿರುವುದು ಎಂದು ಮೂರು ರೀತಿಯಲ್ಲಿ ವಿಭಜಿಸಬಹುದು. ಹೆಚ್ಚಿನ ಒಗಟುಗಳ ಉತ್ತರವು ಒಂದೇ ಮಾತಿನಲ್ಲಿರುತ್ತದೆ. ಉದಾ : ಒಂದು ಗುಡ್ಡಕ್ಕೆ ಎರಡು ಹೊಂಡಗಳು – ಮೂಗು. ಕೆಲವು ಒಗಟುಗಳ ಉತ್ತರಗಳು ಯಾವುದಾದರೂ ಪ್ರವೃತ್ತಿ ಸೂಚಕವಾಗಿರುತ್ತದೆ. ಉದಾ : ಗೂನನು ಹೋಗಿ ಒಂದು ಕಾಲುವೆ ಮಾಡಿದ, ಪಲ್ಲನ್ (ಮ. = ಹಲಗೆ) ಬಂದು ಅದನ್ನು ನೆಲಸಮ ಮಾಡಿದ ನೆಲ ಮತ್ತು ಸಮತಟ್ಟಾಗಿಸುವುದು. ಒಗಟಿನ ಉತ್ತರವು ವಾಕ್ಯವಾದರೆ ಅದನ್ನು ವಾಚಕ (ವಾಕ್ಯ) ರೂಪ ಎಂಬ ವಿಭಾಗದಲ್ಲಿ ಸೇರಿಸಲಾಗುತ್ತದೆ. ಅದಕ್ಕೆ ಮಲಯಾಳದಲ್ಲಿ ಉದಾಹರಣೆಗಳು ಕಡಿಮೆ.

ಧರ್ಮವನ್ನು ಅನುಸರಿಸಿ ಒಗಟುಗಳನ್ನು ವಿನೋಧಪರ, ಸಾಹಿತ್ಯ ಪರಗಳೆಂದು ವಿಭಜಿಸಿಕೊಳ್ಳಬಹುದು. ಇದರಲ್ಲಿ ವಿನೋಧಕ್ಕೂ ಅನುಷ್ಠಾನಕ್ಕೂ (ಧಾರ್ಮಿಕ ವಿಧಿಗಳಿಗೆ) ಬಳಸುವ ಒಗಟುಗಳ ಬಗೆಗೆ ಹಿಂದೆ ಸೂಚಿಸಿದೆಯಷ್ಟೆ. ಸಂಸ್ಕೃತ ಸಾಹಿತ್ಯದಲ್ಲೂ ಇತರ ಪುರಾಣ ಕೃತಿಗಳಲ್ಲೂ ಕಂಡು ಬರುವ ‘ಪ್ರಹೇಳಿಕೆ’ಗಳನ್ನು ಸಾಹಿತ್ಯಪರ ಎಂಬ ವಿಭಾಗದಲ್ಲಿ ಮುಖ್ಯವಾಗಿ ಸೇರಿಸಲಾಗುತ್ತದೆ.

ವಿಶ್ಲೇಷಣೆ : ಒಗಟುಗಳಲ್ಲಿ ಮುಖ್ಯವಾಗಿ ಅಧ್ಯಾರೋಪಗಳನ್ನು ಬಳಸಿಕೊಳ್ಳಲಾಗುತ್ತದೆ. ‘ಬಾಯಿಲ್ಲದ ನಾಲಗೆ, ನಾಲಿಗೆಯ ಮೇಲೆ ಹಲ್ಲು – ತುರಿಮಣಿ’, ಈ ಒಗಟಿನಲ್ಲಿ ನಾಲಗೆ, ಹಲ್ಲು ಇವು – ಅಧ್ಯಾರೋಪಗಳು. ಕೆಲವೊಮ್ಮೆ ಒಗಟಿನ ಒಂದು ಭಾಗವು ವಾಸ್ತವವೂ ಇನ್ನೊಂದು ಭಾಗವು ಅಧ್ಯಾರೋಪವೂ ಆಗಿರುವುದುಂಟು. ಉದಾಹರಣೆಗಾಗಿ ‘ತೆಂಗಿನ ಕಾಯಿಯ ಒಳಗೆ ಸೌತೆ-ತೆಂಗಿನ ಕಾಯಿಯ ಭ್ರೂಣ’ ಎಂಬ ಒಗಟಿನಲ್ಲಿ ತೆಂಗಿನಕಾಯಿ ವಾಸ್ತವ, ಸೌತೆ ಅಧ್ಯಾರೋಪ. ಅಧ್ಯಾರೋಪಗಳನ್ನು ಬಳಸಿಕೊಳ್ಳುವ ಕಾರಣಕ್ಕೆ ಒಗಟುಗಳಿಗೆ ಕವಿತೆಗಳ ಅಲಂಕಾರಗಳ ಹೋಲಿಕೆಯಿದೆ. ಕಾರ್ಯ ಹೇತುವಿನ ಹೊಂದಾಣಿಕೆಯಲ್ಲಿನ ಕುಂದನ್ನು ಹೇಳುವ ಅಲಂಕಾರ ‘ವಿಷಮ’. ವೃತ್ತದಲ್ಲಿ ತುಳಿಯುವಾಗ ನೀಟವಾಗಿ ಓಡುತ್ತದೆ – ಸೈಕಲ್’ ಎಂಬ ಒಗಟಿಗೂ ವಿಷಮ ಎಂಬ ಅಲಂಕಾರದ ಸ್ವರೂಪವಿದೆ. ‘ಕಾಲಲ್ಲಿ ಹಿಡಕೊಂಡರೆ ಹೆಗಲನ್ನು ಏರುತ್ತದೆ – ಕೊಡೆ’ ಎಂಬ ಒಗಟಿನಲ್ಲಿ ಸಂಭಾವನ ಎಂಬ ಅಲಂಕಾರವಿದೆ. ಕಾರಣವಿದ್ದೂ ಕಾರ್ಯವು ನಡೆಯುವುದಿಲ್ಲ ಎಂಬ ರೀತಿಯ ಅಲಂಕಾರ ವಿಶೇಷೋಕ್ತಿ. ಇದನ್ನು ಒಗಟುಗಳಲ್ಲಿ ಕಾಣಬಹುದು. ಉದಾ : ‘ನನ್ನ ಅಮ್ಮ ನನಗೆ ಒಂದು ಚಾಪೆ ಕೊಟ್ಟಳು ಒದ್ದೆಮಾಡಿದರೂ ಅದು ಒದ್ದೆಯಾಗುತ್ತಿಲ್ಲ – ಕೆಸುವಿನ ಎಲೆ ಅಸಂಗತೀ ನಿಬಂಧನ ಎಂಬ ಅಲಂಕಾರದಲ್ಲಿ ಹೇತು ಬಲಗಳನ್ನು ಎರಡು ಕಡೆಯಲ್ಲಿ ಸಾಧಿಸಲಾಗುತ್ತದೆ. ಇದಕ್ಕೆ ಸಮಾನವಾದ ಉದಾಹರಣೆಗಳು ಒಗಟುಗಳಲ್ಲಿ ಇವೆ. ಉದಾ : ‘ಇಲ್ಲಿ ಮಂತ್ರಿಸಿದರೆ ಅಲ್ಲಿ ಬೊಬ್ಬಿಡುತ್ತದೆ ಮೈಕ್’. ಒಂದು ವಸ್ತು/ ವಾಸ್ತವದ ನಾನಾ ರೀತಿಯ ಸ್ವಭಾವ ವೈಶಿಷ್ಟ್ಯಗಳನ್ನು ಮೂಲಕ ಅತ್ಯಂತ ಮುಖ್ಯವಾದ ಕೆಲವನ್ನು ಆಯ್ದುಕೊಂಡು ಸಮಾನವಾದ ವಸ್ತು / ವಾಸ್ತವದ ವಿಚಾರವನ್ನು ಅಡಗಿಸಿ ಬಿಡುವುದು ಒಗಟುಗಳಲ್ಲಿ ನಡೆಯುವ ಒಂದು ಕಾರ್ಯ ಅಲಂಕಾರಗಳಲ್ಲಿ ಇದು ರೂಪಕಾತಿಶಯೋಕ್ತಿಗೆ ಸಮಾನವಾದುದು. ‘ಹಗ್ಗ ಸಮೇತ ಬಸವ ಮಲಗಿದೆ – ಚೀನೀಕಾಯಿ (ಸಿಹಿಕುಂಬಳ) ಎಂಬ ಒಗಟಿನಲ್ಲಿ ಚೀನೀಕಾಯಿ, ಬಳ್ಳಿ – ಇವುಗಳನ್ನು ಬಸವ – ಹಗ್ಗಗಳೊಂದಿಗೆ ಸಮೀಕರಿಸಿ ಯಥಾರ್ಥ ಸಂಗತಿಯನ್ನು ಪೂರ್ತಿಯಾಗಿ ಮರೆ ಮಾಚಲಾಗಿದೆ. ಸರೋಜಯುಗಳನ್ನು ನೋಡಿ ಶರಗಳು ಸುರಿಯುತ್ತಿವೆ’ ಎಂಬ ರೂಪಕಾತಿಶಯೋಕ್ತಿಯ ಉದಾಹರಣೆಯಿಂದ ಕಣ್ಣೆಂಬ ಸರೋಜಯುಗಳ ನೋಟವೆಂಬ ಶರಗಳನ್ನು ಸುರಿಯುತ್ತಿದೆ ಎಂದು ಹೇಳಬೇಕಾಗಿದ್ದಲ್ಲಿ ಕಣ್ಣು, ನೋಟ ಎಂಬ ಉಪಮೇಯಗಳನ್ನು ಮರೆಮಾಚಿ ಉಪಮಾನಗಳಾದ ಸರೋಜಯುಗಳ, ಶರಗಳು ಎಂಬವುಗಳನ್ನು ಮಾತ್ರ ನಿರ್ದೇಶಿಸಲಾಗಿದೆ. ಒಗಟುಗಳಲ್ಲಿಯೂ ನಡೆಯುವುದು ಇದಕ್ಕೆ ಸಮಾನವಾದ ಪ್ರಕ್ರಿಯೆಯೇ. ಆದರೆ, ರೂಪಕಾತಿಶಯೋಕ್ತಿ ಚಮತ್ಕಾರಾತ್ಮಕವಾದುದರಿಂದ ಸಾಹಿತ್ಯದ ಸಂಕೇತ ತಿಳಿದಿರುವ ಒಬ್ಬಾತನಿಗೆ ಅದು ಸಮಾಜದ ಎಲ್ಲರಿಗೂ ಪರಿಚಯವುಳ್ಳದ್ದಾಗಿರುತ್ತದೆ. ರೂಪಕಾತಿಶಯೋಕ್ತಿಯ ಕವಿಯ ಆತ್ಮನಿಷ್ಠವಾದ ಅನುಭವ. ಒಗಟುಗಳು ವಸ್ತು ನಿಷ್ಠವಾಗಿರುತ್ತವೆ.

ಸಜಾತೀಯ ಮತ್ತು ವಿಜಾತೀಯ ವಸ್ತು / ವಿಚಾರಗಳನ್ನು ಪರಸ್ಪರ ಸಂಬಂಧ ಹೊಂದಿಸಿ ಆಲೋಚಿಸುವ ಮತ್ತು ಹೋಲಿಸುವ ಹಾಗೂ ಅದರ ಕುರಿತು ಒಂದು ಸಾಮಾನ್ಯಾಭಿಪ್ರಾಯಕ್ಕೆ ಬರುವ ಪ್ರಾಥಮಿಕವಾದ ಮಾನಸಿಕ ಪ್ರಕ್ರಿಯೆಯೇ ರೂಪಕದ್ದು. ಅದೇ ಸ್ವಭಾವ ಒಗಟಿಗೂ ಇದೆ. ಚೀನೀಕಾಯಿ/ಬಸವ, ಬಳ್ಳಿ/ಹಗ್ಗ ಎಂಬ ದ್ವಂದ್ವಗಳಿಗೆ ಅಭೇದಗಳನ್ನು ಕಲ್ಪಿಸುವ ಮತ್ತು ಬಳಿಕ ಅವಕ್ಕೆ ದ್ವಂದ್ವ ಇದೆ ಎಂದು ಕೂಡ ತೋರಿಸಲಾಗುತ್ತದೆ. ಈ ಭೇದವೇ ಒಗಟಿನ ನಿಷೇಧ. ನಿಷೇಧವು ಕೆಲವೊಮ್ಮೆ ನೇರವಾಗಿ ಒಗಟಿನಲ್ಲಿ ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಅದು ಅರ್ಥಸ್ತರದಲ್ಲಿ ನಡೆಯಬಹುದು. ‘ಮುಳ್ಳಿದೆ ಹೊಂಗಾರೆಯಲ್ಲ, ಕಹಿಯಿದೆ ಹಾಗಲವಲ್ಲ’ ಎಂಬ ಒಗಟಲ್ಲಿ ಇದೆ/ಇಲ್ಲ ಎಂಬ ಈ ನಿಷೇಧವನ್ನು ಪ್ರತ್ಯಕ್ಷವಾಗಿಯೇ ಅಳವಡಿಸಲಾಗಿದೆ. ಆದರೆ ಬಸವ ಹಗ್ಗ ಸಮೇತ ಮಲಗಿದೆ ಎಂಬ ಒಗಟಲ್ಲಿ ನಿಷೇಧವು ಪ್ರತ್ಯಕ್ಷವಾಗಿಲ್ಲ. ಮಲಗಿರುವ ಬಸವನ ಹಗ್ಗ ಓಡುವುದಿಲ್ಲ ಎಂಬ ಅನುಭವ ಸತ್ಯದ ನಿಷೇಧವು ಇಲ್ಲಿದೆ ಅಷ್ಟೇ. ಇದು ಅರ್ಥಸ್ತರದಲ್ಲಿ ನಡೆಯುವ ನಿಷೇಧ. ನಿಜವಾದ ವಸ್ತು/ವಾಸ್ತವವು ಒಗಟಿನಲ್ಲಿ ಮರವೆಗೆ ಸಂದು ಹೊಸ ವಸ್ತು / ವಾಸ್ತವವು ರಂಗ ಪ್ರವೇಶ ಮಾಡುತ್ತದೆ. ಈ ಹೊಸ ವಸ್ತು /ವಾಸ್ತವದ ನಿಷೇಧವು ಪುನಃ ಯಥಾರ್ಥ ವಸ್ತು/ ವಾಸ್ತವದತ್ತ ನಮ್ಮನ್ನು ಒಯ್ಯುತ್ತದೆ. ಈ ಎರಡು ಪ್ರಕ್ರಿಯೆಗಳು ಸಮಾನಾಂತರವಾದ ಎರಡು ಮಾನಸಿಕ ಕ್ರಿಯೆಗಳಾಗಿವೆ. ಒಗಟುಕಾರನು ವಸ್ತುವಿಗೆ ರೂಪಕವನ್ನು ಕೊಟ್ಟು ಮಿಥ್ಯೆಯನ್ನು ಮುಂದೊಡ್ಡುತ್ತಾನೆ. ಉತ್ತರ ನೀಡುವಾತ ಮಿಥ್ಯೆಯಲ್ಲಿ ಅಡಗಿರುವ ನಿಷೇಧವನ್ನು ತಿಳಿದುಕೊಂಡು ನಿಷೇಧದ ಮೂಲಕ ಮಿಥ್ಯೆಯಿಂದ ವಸ್ತುವನ್ನು ತಿಳಿಯುತ್ತಾನೆ. ಕೆಲವು ಸಂದರ್ಭಗಳಲ್ಲಿ ಭಾಷೆಯ ಪ್ರತ್ಯಕ್ಷ ಸ್ತರದಲ್ಲೋ ಅರ್ಥಸ್ತರದಲ್ಲೋ ಈ ನಿಷೇಧವು ನಡೆಯಬೇಕೆಂದಿಲ್ಲ. ಉದಾ: ‘ಹಟ್ಟಿಯಲ್ಲಿನ ಬಿಳಿ ಬಸವ – ಹಲ್ಲು’ ಎಂಬಲ್ಲಿ ಅರ್ಥಸ್ತರದಲ್ಲಿ ಯಾವುದೇ ನಿಷೇಧವಿಲ್ಲ. ಯಾಕೆಂದರೆ, ಒಂದೇ ಹಟ್ಟಿಯಲ್ಲಿನ ಎಲ್ಲ ಎತ್ತುಗಳೂ ಬಿಳಿಯವು ಆಗಬಾರದೆಂದೇನೂ ಇಲ್ಲ. ಇಲ್ಲಿ ಒಗಟಿನ ಸಂದರ್ಭವು ಉತ್ತರಕೊಡುವವನಿಗೆ ನಿಷೇಧದ ಸೂಚನೆ ಕೊಡುತ್ತದೆ. ಕೇಳುತ್ತಿರುವುದು ಒಗಟು ಎಂಬ ಕಾರಣಕ್ಕಾಗಿ ಹಟ್ಟಿ ಸಾಧಾರಣ ಹಟ್ಟಿ ಅಲ್ಲವೆಂದೂ ಬಸವ / ಎತ್ತು ಸಾಧಾರಣ ಎತ್ತು ಅಲ್ಲವೆಂದೂ ಉತ್ತರ ಕೊಡುವವನು ಊಹಿಸುತ್ತಾನೆ. ಸಾಂದರ್ಭಿಕವಾಗಿ ಇಲ್ಲಿ ನಿಷೇಧವು ಸ್ವಯಂ ಕಲ್ಪಿತವಾಗಿದೆ.

ಒಗಟು ಹೇಳುವ ಸಂದರ್ಭವಲ್ಲದಿದ್ದರೆ ಮೇಲೆ ಸೂಚಿಸಿದ ವಾಕ್ಯವು ಒಂದು ಒಗಟು ಎಂದೇ ಗುರುತಿಸಲಾರದಷ್ಟು ಸಹಜವಾಗಿದೆ. ‘ಒಂದಕ್ಕೆ ಇನ್ನೊಂದರ ಜತೆಗಿನ ಸಾಮ್ಯದ ಕುರಿತು ಹೇಳುವ ರೀತಿಯಲ್ಲಾಗಲಿ ಒಂದರ ನಿಜಸ್ಥಿತಿಯ ಬಗ್ಗೆ ಹೇಳುವ ರೀತಿಯಲ್ಲೋ ಪಿಚ್ಚಿ (ಒಗಟು) ಇರಬಹುದು’ ಎಂದು ತೊಲ್ಕಾಪ್ಪಿಯದಲ್ಲಿ ಒಗಟನ್ನು ನಿರ್ವಹಿಸಿದೆ. ಒಂದು ವಸ್ತುವಿನ ಯಥಾರ್ಥಸ್ಥಿತಿಯ ಕುರಿತು ಹೇಳುವುದು ಒಟಾಗಿ ಬಿಡುವುದು ಪ್ರಸ್ತುತ ಸಂದರ್ಭದಲ್ಲಿ ಮಾತ್ರ.

ಒಂದು ವಸ್ತುವಿನ / ವಿಚಾರದ ಕುರಿತು ಸೃಷ್ಟಿಯಾಗುವ ಒಗಟು ವಸ್ತುವನ್ನು / ವಿಚಾರವನ್ನು ಪೂರ್ತಿಯಾಗಿ ಪ್ರಸ್ತುತ ಪಡಿಸುವುದಿಲ್ಲ. ಉತ್ತರಕ್ಕಾಗಿ ಒದಗಿ ಬರುವ ವಿರುದ್ಧ ಪ್ರಸ್ತಾವನೆ, ಅಪೂರ್ಣ ವಿಶದೀಕರಣ, ಅನಗತ್ಯ ವಿವರಣೆ ಎಂಬ ಘಟಕಗಳಲ್ಲಿ ಕೆಲವು ಒಗಟುಗಳಲ್ಲೇ ಇರುವುದನ್ನು ಕಾಣಬಹುದು. ಉತ್ತರದತ್ತ ಕೊಂಡೊಯ್ಯದೆ ದಾರಿತಪ್ಪಿಸಿ ನಿಲ್ಲುವ ಇಂತಹ ಸಂದಿಗ್ಧಗಳು ಭಾಷಿಕವೋ ಸಾಂಸ್ಕೃತಿಕವೋ ಆಗಬಹುದು. ಭಾಷಿಕವಾದ ಸಂದಿಗ್ಧಗಳು ಸ್ಟನಿಮಾ, ಧ್ವನಿಮಾ, ವಾಕ್ಯ ಎಂಬ ಮೂರು ರೀತಿಯಲ್ಲಿರಬಹುದು.

ಸಾಂಸ್ಕೃತಿಕವೂ ಭಾಷಿಕವೂ ಆದ ಘಟಕಗಳು ಒಗಟನ್ನು ಒಂದು ನಿರ್ದಿಷ್ಟ ಉತ್ತರದಲ್ಲಿ ಅಡಗಿಸಿ ನಿಲ್ಲಿಸುತ್ತವೆ. ಆದರೆ, ಈ ಘಟಕಗಳು ಇರುವಾಗ ಒಂದು ಒಗಟಿಗೆ ಹಲವು ಉತ್ತರಗಳು ಸಿಗಬಹುದು. ಆ ಉತ್ತರಗಳೆಲ್ಲ ಸರಿಯುತ್ತರಗಳೇ. ಉತ್ತರ ನೀಡುವವನು ಅವನ ಪರಿಮಿತ ಅನುಭವ ಪ್ರಪಂಚದಲ್ಲಿ ಅವಕ್ಕೆ ಉತ್ತರ ಹುಡುಕುತ್ತಾನೆ ಎಂಬ ಕಾರಣಕ್ಕೆ ಒಂದು ಒಗಟಿಗೆ ಒಂದು ಸರಿಯುತ್ತರ ಎಂಬ ಪರಿಮಿತಿ ಉಂಟಾಗುತ್ತದೆ. ಉದಾಹರಣೆಗೆ : ‘ಭಟ್ಟರ ಹೆಂಡತಿ ಮಿಂದು ಬರುವಾಗ ಬೆಳ್ಳಿ ಬಟ್ಟಲು ಕುಣಿ ಕುಣಿಯಿತು’ ಎಂಬ ಒಗಟಿಗೆ ಅನ್ನ ಕುದಿಯುವುದು ಮತ್ತು ಮೊಲೆಗಳು ಕುಣಿಯುವುದು ಎಂಬ ಎರಡು ಉತ್ತರಗಳು ಸಿಗಬಹುದು. ಅನ್ನ ಬೆಂದಾಗ ಬಸಿಯುವುದಕ್ಕಾಗಿ ಬಸಿ ಹಲಗೆಯನ್ನು ತೊಳೆದು ತರುತ್ತಾರೆ. ಬಸಿ ಹಲಗೆ ಮಿಂದು ಬರುವಾಗ ಅಕ್ಕಿ ಕುದಿಯುತ್ತ ಕುಣಿದಾಡುತ್ತದೆ. (ಗಂಜಿ ಬೇಯುವಾಗ ಉಂಟಾಗುವ ಗುಳ್ಳೆಗಳೇ – ಬೆಳ್ಳಿ ಬಟ್ಟಲು). ಸಾಧಾರಣವಾಗಿ ಹಲಸಿನ ಮರದಿಂದ ತಯಾರಿಸಿದ ಬಸಿ ಹಲಗೆ ಸಾಧಾರಣ ಹೊನ್ನಿನ ಬಣ್ಣದ್ದಾಗಿರುವುದರಿಂದ ಇರಬೇಕು, ಅದನ್ನು ಭಟ್ಟರ ಹೆಂಡತಿಯಾಗಿ ಕಲ್ಪಿಸಿದ್ದು, ಬಹಳ ಸೂಕ್ಷ್ಮವಾದೊಂದು ಸಾಂಸ್ಕೃತಿಕ ಅನುಭವ ಈ ಒಗಟಿನ ಮೂಲದಲ್ಲಿದೆ. ಈ ಅನುಭವಕ್ಕೆ ಭಿನ್ನವಾದ ಇನ್ನೊಂದು ಅನುಭವವೆಂದರೆ ಮೂಲೆಗಳನ್ನು ಮರೆ ಮಾಡಿಕೊಳ್ಳುವ ಭಟ್ಟರೆ ಹೆಂಡತಿ ಸ್ನಾನ ಮಾಡಿ ಬರುವುದು. ಮೊದಲಿನ ಉತ್ತರದಲ್ಲಿ ಹಲಗೆಯೂ ಬೆಳ್ಳಿ ಬಟ್ಟಲುಗಳೂ ಅಧ್ಯಾರೋಪಗಳಾಗಿದ್ದುವು (Metaphorical). ಎರಡನೆಯ ಉತ್ತರದಲ್ಲಿ ಭಟ್ಟರ ಹೆಂಡತಿ ಯಥಾರ್ಥ ವಾಸ್ತವವೂ ಬೆಳ್ಳಿಯ ಬಟ್ಟಲು ಅಧ್ಯಾರೋಪವು ಆಗಿವೆ. ಉತ್ತರಗಳು ಸರಿಯೋ ತಪ್ಪೋ ಎಂದು ತೀರ್ಮಾನಿಸುವುದು ಸಂಸ್ಕೃತಿಯ ಸೀಮೆ ಎಂಬುದು ಸಾರ.

ಯಾವುದೇ ಸಂಸ್ಕೃತಿಯನ್ನು ರೂಪಿಸುವುದು ದೇಶ ಮತ್ತು ಕಾಲ, ಪ್ರಾದೇಶಿಕವಾದ ವ್ಯತ್ಯಾಸಗಳು, ಭೂಪ್ರಕೃತಿ, ಹವಾಮಾನ, ಸಸ್ಯ ಜಾಲಗಳು, ಮನುಷ್ಯರು ಮತ್ತು ಮೃಗಗಳು ಆವಾಸ ಮುಂತಾದವುಗಳನ್ನೆಲ್ಲ ಬದಲಾಯಿಸಿ ಬಿಡುವಂಥದು. ಇದು ಒಗಟುಗಳಲ್ಲಿಯೂ ಬದಲಾವಣೆಗಳನ್ನುಂಟು ಮಾಡುತ್ತದೆ. ಉದಾ: ತೋಟದ ಅಮ್ಮನಿಗೆ ಉತ್ತರಿಸಿದರೆ ಮಲಬಾರು ಇತರ ಪ್ರದೇಶಗಳಲ್ಲಿರುವವರು ಈಂದು, ತೆಂಗು ಮುಂತಾಗಿ ಉತ್ತರಿಸುತ್ತಾರೆ. ಒಂದೊಂದು ಜನ ಸಮೂಹವೂ ಸೂಚಿತವನ್ನು ಗುರುತಿಸುವುದು ವಿಭಿನ್ನ ರೀತಿಯಲ್ಲಿ ಎಂಬುದು ಇದರಿಂದ ವಿದಿತ.

“ಒಬ್ಬಳು ಅಮ್ಮ ಹೆತ್ತ ಮಕ್ಕಳೆಲ್ಲ ಟೊಪ್ಪಿಗೆಯವರು” ಎಂಬ ಒಗಟಿಗೆ ಬೆಂಕಿ ಪೊಟ್ಟಣ, ಅಡಿಗೆ ಎಂದು ಎರಡು ಉತ್ತರ ಸಿಗುವುದು ಸಾಮಾನ್ಯ. ಕರಷಿ ವೃತ್ತಿಯಲ್ಲಿ ತೊಡಗಿಕೊಂಡವರಿಗಷ್ಟೆ ಅಡಿಕೆಗೆ ಟೊಪ್ಪಿ ಇರುವುದನ್ನು ಗಮನಿಸುವುದು ಸಾಧ್ಯ. ಆದರೆ ಬೆಂಕಿಪೊಟ್ಟಣ ಎಂಬ ಹೊಸ ವಸ್ತು ಪ್ರಚಾರದಲ್ಲಿ ಬಂದಾಗ ಕೃಷಿ ವೃತ್ತಿಯಿಂದ ನಿಧಾನವಾಗಿ ವಿಮುಖವಾಗುವ ಒಂದು ಸಮುದಾಯವು ಪ್ರಸ್ತುತ ಒಗಟಿಗೆ ಯೋಗ್ಯವಾದ ಉತ್ತರವಾಗಿ ‘ಬೆಂಕಿ ಪೊಟ್ಟಣ’ವನ್ನು ಕಲ್ಪಿಸಿಕೊಂಡಿರಬೇಕು. ಕಾಲಕ್ಕೆ ಸಂಬಂಧಿಸಿದಂತೆ ಒಗಟುಗಳಲ್ಲಿ ಬರಬಹುದಾದ ಉತ್ತರದ ವ್ಯತ್ಯಾಸ ಇದು ಎನ್ನಬಹುದು.

ಹೊಸ ಒಗಟುಗಳು : ಹೊಸ ಕಾಲದಲ್ಲಿ ಹೊಸ ಒಗಟುಗಳು ಹುಟ್ಟಿಕೊಳ್ಳುತ್ತದೆ. ವಿಜ್ಞಾನ ತಂತ್ರಜ್ಞಾನ ವಲಯಗಳಲ್ಲೂ ಭಾಷೆಯಲ್ಲೂ ಉಂಟಾಗುವ ಪರಿಣಾಮಗಳು, ಹಳೆಯ ಒಗಟುಗಳಲ್ಲಿ ಹಲವನ್ನು ತೆರೆಮರೆಗೆ ಸರಿಸಿ ಹೊಸ ಒಗಟುಗಳನ್ನು ಸೃಷ್ಟಿಸುತ್ತಿವೆ. ‘ಈ ವರ್ಷ ಮುಂಡಾಸು ಕಟ್ಟಿದರೆ ಮುಂದಿನ ವರ್ಷವೂ ಮುಂಡಾಸು ಕಟ್ಟುತ್ತದೆ’ ಎಂಬ ಒಗಟು ಮನೆಗೆ ಮುಳಿ ಹಾಕುವುದು / ಹುಲ್ಲು ಹೊದೆಸುವುದು ಎನ್ನುವುದನ್ನು ಹೇಳುವಂಥದು. ತೆಂಗಿನ ಗರಿ, ಮುಳಿ ಇತ್ಯಾದಿಗಳಿಂದ ಮನೆಯ ಮಾಡನ್ನು ನಿರ್ಮಿಸುವ ಕ್ರಮದ ಅರಿವು ಇರುವವರಿಗೆ ಮಾತ್ರ ಈ ಒಗಟು ಕೂಡ ಪರಿಚಯವಿದ್ದೀತು. ಮುಳಿ ಹಾಕುವ ಮನೆಗಳ ಬದಲಿಗೆ ಕಾಂಕ್ರೀಟು ಮನೆಗಳನ್ನಷ್ಟೇ ಕಂಡು ಪರಿಚಯವಿರುವ ಒಬ್ಬ ಹುಡುಗ ಹುಡುಗಿಗೆ ಈ ಒಗಟು ಸಂವಹನಗೊಳ್ಳದು. ಅದರ ಜತೆಗೆ ಹೊಸ ವಸ್ತುಗಳು/ವಾಸ್ತವ/ವಿಚಾರಗಳನ್ನು ಕುರಿತಾಗಿ ಹೊಸ ಒಗಟುಗಳನ್ನು ಹೊಸೆದು ಕೊಡಲೂ ಸಾಧ್ಯವಾಗುತ್ತದೆ. ‘ಕಣ್ಣು ಹಳದಿಯಾಗಿಸುವ ಬೆಳಕಲ್ಲಿ ಹುಟ್ಟಿತು. ಅದನ್ನು ಕಾಣುವುದು ಕಾರೆಂಬ ಕಗ್ಗತ್ತಲೆಯಲ್ಲಿ’ ಸಿನೆಮಾ ಎಂಬ ಅರ್ಥದ ಒಗಟು ತಮಿಳಲ್ಲಿದೆ. ಈ ತೆರನ ಒಗಟುಗಳಲ್ಲಿ ಹೊಸ ಆಶಯಗಳು ಅಡಗಿವೆ. ಮಲಯಾಳದಲ್ಲೂ ಇವಕ್ಕೆ ಉದಾಹರಣೆಗಳಿವೆ.

ಕೆಳಗೆ ಕುಟ್ಟಿದರೆ ತಲೆಯಲ್ಲಿ ಗಾಯ – ಟೈಪ್‌ರೈಟರ್

ಮೂಲೆಯಲ್ಲಿರುವ ಸುಂದರಿಯ ಮೂಗು ಹಿಂಡಿದರೆ ಹಾಡುತ್ತಾಳೆ – ರೇಡಿಯೋ. ಗಾಳಿಯಲ್ಲಿ ಓಡುತ್ತಾನೆ ಡೊಳ್ಳು ಹೊಟ್ಟೆಯುವ- ಬಲೂನು. ಹೊಕ್ಕುಳನ್ನು ಮುಟ್ಟಿದರೆ ಹಲ್ಲು ಕಿಸಿದು ತೋರುತ್ತಾನೆ – ಟಾರ್ಚ್‌. ಪುಟ್ಟ ಕಾಲು ಮೆಲ್ಲ ಮೆಲ್ಲ, ನೀಳಕಾಯ ಬೇಗ ಬೇಗ = ಗಡಿಯಾರದ ಮುಳ್ಳು. ಒಳ ಹೂರಣದಲ್ಲಿ ಮಾತ್ರವಲ್ಲ, ಒಗಟುಗಳ ರೂಪದಲ್ಲಿ ಕಾಲಾನುಸಾರಿಯಾದ ಬದಲಾವಣೆಗಳು ಉಂಟಾಗುತ್ತಲೇ ಇರುತ್ತವೆ. ಹೊಸರೀತಿ ಆಖ್ಯಾನ ಪರಂಪರೆಯನ್ನು ಒಗಟುಗಳಲ್ಲಿ ಕಂಡುಕೊಳ್ಳಲು ಸಾಧ್ಯ.

ಒಂದು ಗಂಡು ಮತ್ತು ಹೆಣ್ಣು ಸ್ಕೂಟರಲ್ಲಿ ಹೋಗುತ್ತಿದ್ದಾರೆ. ಹೆಂಗಸು ಕೇಳಿದಳು – ನಿನ್ನ ಹೆಸರೇನು? ರಘು, ಗಂಡಸು ಕೇಳಿದೆ – ನಿನ್ನ ಹೆಸರೇನು? ತಲೆ ತಿರುಗಿಸಿ ಓದಿದರೆ ನನ್ನ ಹೆಸರು ಸಿಕ್ಕೀತು (ಲತೆ, ಮಲಯಾಳದಲ್ಲಿ ಲತ – ತಲೆ ತಿರುಗಿಸುವ ಮೊದಲು ಅದು ತಲ = ತಲೆ).

ಈ ತೆರನ ವಿವರಣೆಯನ್ನು ಈಗ ಮಕ್ಕಳು ಒಗಟುಗಳೆಂದು ತಿಳಿದುಕೊಳ್ಳುತ್ತಾರೆ. ಜನಪದೀಯ ಒಗಟುಗಳಲ್ಲಿದ್ದ ತಾಳಲಯಗಳು ಈ ಒಗಟುಗಳಲ್ಲಿಲ್ಲ ಎಂಬುದು ಪ್ರತ್ಯೇಕ ಗಮನವಿರಿಸಬೇಕಾದ ಸಂಗತಿ. ಆಧುನಿಕ ಕಾಲದಲ್ಲಿ ಒಗಟನ್ನು ಒಂದು ಮೌಖಿಕ ಪ್ರಕಾರ ಎಂದು ಪರಿಗಣಿಸುತ್ತಿಲ್ಲ. ಮಾಧ್ಯಮ ರಂಗಗಳಲ್ಲಿ ಬಂದಿರುವ ಬದಲಾವಣೆಗಳೂ ಸಂಪೂರ್ಣ ಸಾಕ್ಷರತೆಯೂ ಜನಪದ ಸಂಸ್ಕೃತಿಯನ್ನು ಹಲವು ರೀತಿಯಲ್ಲಿ ಪ್ರಭಾವಿಸಿವೆ. ಮೌಖಿಕ ವಿಧಾನದಿಂದ ಮಾತ್ರವಲ್ಲ ಆಂಗಿಕಗಳು, ಚಿತ್ರಗಳು ಎಂಬ ಮಾಧ್ಯಮಗಳಲ್ಲೂ ಒಗಟುಗಳು ಚಾಲ್ತಿಯಲ್ಲಿವೆ. ‘ಡ್ರೂಡಿಲ್’ ಎಂಬ ಹೆಸರಲ್ಲಿ ಪಾಶ್ಚಿಮಾತ್ಯ ರಾಜ್ಯಗಳಲ್ಲಿ ಬಳಕೆಯಲ್ಲಿರುವ ಈ ತೆರನ ಒಗಟುಗಳು ಇಂದು ನಮ್ಮ ಮಕ್ಕಳಿಗೆ ನಿಯತ ಕಾಲಿಕೆಗಳಲ್ಲಿಯೂ ಲಭ್ಯವಿದೆ.

ಉಳಿದ ಇತರ ಯಾವುದೇ ಜನಪದ ಸಾಹಿತ್ಯದ ಹಾಗೆಯೇ ಒಗಟುಗಳೂ ಜನಸಮೂಹ ಸಾಂಸ್ಕೃತಿಕ ಬದುಕಿನಲ್ಲಿ ತಮ್ಮ ಬೇರುಗಳನ್ನು ಕಂಡುಕೊಂಡಿವೆ. ರೂಪದಲ್ಲಿ ತುಂಬ ಚಿಕ್ಕವಾಗಿದ್ದರೂ ಜನಸಮೂಹದ ಕುರಿತಾಗಿಯೂ ಆ ಜನ ಸಮೂಹದಲ್ಲಿ ಕಾಲ ದೇಶಾನುಸಾರವಾಗಿ ನಡೆಯುವ ಬದಲಾವಣೆಗಳ ಕುರಿತಾಗಿಯೂ ಸೂಕ್ಷ್ಮವಾದ ತಿಳಿವನ್ನು ನೀಡಲು ಒಗಟುಗಳಿಗೆ ಸಾಧ್ಯವಾಗುತ್ತದೆ. ಮಲಯಾಳಕ್ಕೆ ಸಂಬಂಧಿಸಿದಂತೆ ಒಗಟುಗಳ ಸಂಗ್ರಹ ಕಾರ್ಯವು ಕೆಲವು ವ್ಯಕ್ತಿಗತ ಪ್ರಯತ್ನದಿಂದ ಒಂದಿಷ್ಟು ಆಗಿರುವುದಾದರೂ ಅವುಗಳ ಕುರಿತಾಗಿ ಒಂದು ವಿಸ್ತೃತವಾದ ಸಾಂಸ್ಕೃತಿಕ ಅಧ್ಯಯನವು ಇದುವರೆಗೆ ನಡೆದಿಲ್ಲ.

ಕೆ.ಎಂ.ಎ. ಅನುವಾದ ಕೆ.ಕೆ.