ಮೋಡಿ ಆಂಧ್ರ ಪ್ರದೇಶದಲ್ಲಿ ಪ್ರಚಲಿತವಾಗಿರುವ ಚತುಷ್ಷಷ್ಟಿ ಕಲೆಗಳಲ್ಲಿ ಮೋಡಿಯೂ ಒಂದು ಯಂತ್ರ – ಮಂತ್ರ – ತಂತ್ರಗಳ ಸಮನ್ವಯವನ್ನು ಮೋಡಿ ಅನ್ನುತ್ತಾರೆ. ಈ ವಿದ್ಯೆಗಳಲ್ಲಿ ನಿಷ್ಣಾತರಾದ ಎರಡು ಗುಂಪುಗಳು (ಜನರ ಮಧ್ಯದಲ್ಲಿ) ಒಬ್ಬರ ಮೇಲೆ ಇನ್ನೊಬ್ಬರು ಮಂತ್ರ ತಂತ್ರ ಯಂತ್ರ ಪ್ರಯೋಗಗಳನ್ನು ಮಾಡುತ್ತಾ ತಮ್ಮ ಪ್ರಾಬಲ್ಯವನ್ನು ನಿರೂಪಿಸಿ ಜನರನ್ನು ಚಕಿತಗೊಳಿಸುವುದನ್ನು ಮೋಡಿ ಎನ್ನುತ್ತಾರೆ. ಒಂದು ಗುಂಪಿನವರು ಮೋಡಿ ಹಾಕಿದರೆ ಇನ್ನೊಂದು ಗುಂಪಿನವರು ಅದನ್ನು ಎತ್ತಬೇಕಾಗುತ್ತದೆ. ಮೊದಲನೇ ಗುಂಪಿನವರು ಮೋಡಿ ಹಾಕುವವರು, ಎರಡನೇ ಗುಂಪಿನವರು ಮೋಡಿ ಎತ್ತುವವರು. ಮೋಡಿ ಒಂದು ವಿನೋದಭರಿತವಾದ ಕಲೆ.

ಮೋಡಿ ಹಾಕುವ ಗುಂಪಿನವರು ಸುಮಾರು ಒಂದು ದಿವಸ ಮುಂಚಿತವಾಗಿ ಸ್ಥಳ ನಿರ್ಣಯ ಮಾಡುತ್ತಾರೆ. ಪೂರ್ವ ಮತ್ತು ಪಶ್ಚಿಮಕ್ಕೆ ಸುಮಾರು ಐವತ್ತು ಮೀಟರಿನಷ್ಟು ಉದ್ದ ಎಂಟು ಮೀಟರಿನಷ್ಟು ಅಗಲ ದೀರ್ಘ ಚತುರಸ್ರಾಕಾರವಾಗಿರುವ ಮಂಡಲ ರಚನೆ ಮಾಡುತ್ತಾರೆ. ಮೋಡಿ ಹಾಕುವುದಕ್ಕೆ ಬೇಕಾಗುವಷ್ಟು ಸಮಾನ ಅಳತೆಯುಳ್ಳ ಮನೆಗಳನ್ನು ಮಂಡಲದಲ್ಲಿ ವಿಭಜಿಸುತ್ತಾರೆ. ಇವು ಸಾಮಾನ್ಯವಾಗಿ ೮-೧೨-೧೬-೨೦ ಇರುತ್ತವೆ. ಮಂಡಲದ ಪಶ್ಚಿಮಕ್ಕೆ ಒಂದು ಚಿತ್ರವನ್ನು ಹಾಕಿ ಅದರ ಸುತ್ತ ದಪ್ಪನೆಯ ಪರದೆ ಕಟ್ಟುತ್ತಾರೆ. ಮೋಡಿ ಪ್ರದರ್ಶನಕ್ಕೆ ಬೇಕಾಗುವ ಎಲ್ಲ ಸಾಮಾನು ಇದರಲ್ಲಿ ಇಡುತ್ತಾರೆ. ಚಕ್ರದ ಮುಂದೆ ಚೌಡೇಶ್ವರಿ ದೇವಿಯ ಮಣ್ಣಿನ ವಿಗ್ರಹವನ್ನು ನಿಲ್ಲಿಸುತ್ತಾರೆ. ಇದು ಸುಮಾರು ಐದು ಅಡಿ ಎತ್ತರದಲ್ಲಿ ಇರುತ್ತದೆ. ವಿಗ್ರಹದ ಕತ್ತಿನಿಂದ ಬಂಡಿ ಚಕ್ರ ಯಾವ ರೀತಿಯ ಆಧಾರವು ಇಲ್ಲದೇ ನಿಂತ ಹಾಗೆ ತಂತ್ರ ಮಾಡುತ್ತಾರೆ. ಚೌಡೇಶ್ವರಿ ದೇವಿಯ ವಿಗ್ರಹ ಭಯಂಕರವಾಗಿ ಇರುವ ಹಾಗೆ ಮಾಡುತ್ತಾರೆ. ಚಕ್ರದಿಂದ ಉದ್ದನೆಯ ಕತ್ತಿಯ ತುದಿಯಿಂದ ಬಿಂದಿಗೆ ನೇತಾಡುವ ಹಾಗೆ, ಜೋಳದ ಕಡ್ಡಿ ಸಹಾಯದಿಂದ ಎರಡು ಬೀಸುವ ಕಲ್ಲು ನೇತಾಡುವ ಹಾಗೆ ತಂತ್ರ ಮಾಡುತ್ತಾರೆ.

ಮಂಡಲದ ಪೂರ್ವದಿಂದ ಪ್ರಾರಂಭವಾಗುವ ಪ್ರತಿ ಮನೆಯಲ್ಲೂ ಮೂರು ರೀತಿಯ ರಂಗೋಲಿ ಇರುತ್ತವೆ. ಮೊದಲನೆಯದು ಬೀಜಾಕ್ಷರಗಳಿಗೆ ಸಂಬಂಧಿಸಿದ ರಂಗೋಲಿ, ಎರಡನೆಯದು ಶಿವಲಿಂಗ, ತ್ರಿಶೂಲ ಅಥವಾ ಯಾವುದಾದರೂ ದೇವರಿಗೆ ಸಂಬಂಧಿಸಿದ ರಂಗೋಲಿ. ಮೂರನೆಯದು ಮೋಡಿ ಪಂದ್ಯಕ್ಕೆ ಸಂಬಂಧಿಸಿದ ರಂಗೋಲಿ. ಹೀಗೆ ಎಷ್ಟು ಮನೆಗಳಿದ್ದರೆ, ಅಷ್ಟು ಮನೆಗಳಲ್ಲಿ ರಂಗುರಂಗಿನ ರಂಗೋಲಿ ಪುಡಿಯಿಂದ ರಂಗೋಲಿ ಹಾಕುತ್ತಾರೆ. ಪ್ರತಿ ಮನೆಯಲ್ಲಿಯೂ ಮೋಡಿಗೆ ಸಂಬಂಧಿಸಿದ, ಎತ್ತಬೇಕಾಗಿರುವ ವಸ್ತುವನ್ನು ಇಡುತ್ತಾರೆ. ಮೋಡಿ ಹಾಕುವವರ ಗುಂಪಿನಲ್ಲಿ ಸುಮಾರು ೧೦-೧೨ ಜನ ಇರುತ್ತಾರೆ. ಇವರಿಗೆ ಒಬ್ಬ ನಾಯಕ ಇರುತ್ತಾನೆ. ಈತ ಮೋಡಿ ಹಾಕುವುದರಲ್ಲಿ ನಿಷ್ಣಾತನಾಗಿರುತ್ತಾನೆ. ಉಳಿದವರು ಈತ ಹೇಳಿದ ಹಾಗೆ ವರ್ತಿಸುತ್ತಾರೆ. ಮೋಡಿ ಹಾಕುವವರ ಕುಲದ ಆಧಾರದ ಮೇಲೆ ಅವರು ವಸ್ತ್ರ ಧರಿಸುವುದುಂಟು. ಕೆಂಚ ಗೊಲ್ಲರು ದಪ್ಪನೆಯ ಮೀಸೆ, ತಲೆಗೆ ಸುತ್ತಿ ಬಿಟ್ಟಿರುವ ಪೇಟ, ಕತ್ತಲ್ಲಿ, ಕೈಯಲ್ಲಿ ತಾಯಿತ ಮತ್ತು ಕಡಗ, ಕಾಲಿಗೆ ಕಡಗ, ಕಾಷಾಯ ವಸ್ತ್ರಗಳನ್ನು ಧರಿಸುತ್ತಾರೆ. ಕಮ್ಮಾರರಾಗಿದ್ದರೆ ಕಾಷಾಯ ಬಣ್ಣದ ಕಚ್ಚೆ ಪಂಚೆಯನ್ನುಟ್ಟು, ಮೇಲೆ ಕಾಷಾಯ ರಂಗಿನ ವಸ್ತ್ರವನ್ನು ಹೊದ್ದುಕೊಳ್ಳುತ್ತಾರೆ. ಕೈಯಲ್ಲಿ ದೊಡ್ಡದಾದ ತಟ್ಟೆ ಅದರಲ್ಲಿ ಮಂತ್ರಿಸಿದ ಅಕ್ಷತೆ, ಬೇವು, ನಿಂಬೆಹಣ್ಣು, ವಿಭೂತಿ, ಅರಿಸಿನ, ಕುಂಕುಮ, ಬೆತ್ತ, ಬೇವಿನ ರೆಂಬೆ, ಮೊಟ್ಟೆ ಇಟ್ಟುಕೊಂಡು ಮೋಡಿ ಹಾಕುವುದಕ್ಕೆ ಸಿದ್ಧರಾಗುತ್ತಾರೆ.

55_70A_DBJK-KUH

ಮೋಡಿ ಎತ್ತುವ ಗುಂಪಿನವರು ಮಂಡಲದ ಪೂರ್ವ ದಿಕ್ಕಿನಿಂದ ಬಹಳ ವಿಜೃಂಭಣೆಯಿಂದ ಬರುತ್ತಾರೆ. ತಮಟೆ ಸದ್ದಿನಲ್ಲಿ ಕೆಲವರು ಬೇವಿನ ರೆಂಬೆಗಳನ್ನು ಮೇಲಕ್ಕೆತ್ತಿ, ನೃತ್ಯ ಮಾಡುತ್ತಾ, ಜೋರಾಗಿ ಶಿಳ್ಳೆ ಹಾಕುತ್ತಾ ಅವರ ನಾಯಕನನ್ನು ಜೋಳದ ಕಡ್ಡಿಯಿಂದ ಮಾಡಿದ ಪಲ್ಲಕಿಯಲ್ಲಿ ಎತ್ತಿಕೊಂಡು ಬರುತ್ತಾರೆ. ಮೋಡಿ ಎತ್ತುವ ಗುಂಪಿನಲ್ಲಿ ನಾಯಕನು, ಆತನ ಸಹಾಯಕ್ಕೆ ಎಂಟರಿಂದ ಹತ್ತು ಜನ ಗಂಡಸರು, ಮೂರ‍್ನಾಲ್ಕು ಜನ ಹೆಂಗಸರು ಇರುತ್ತಾರೆ. ನಾಯಕನಾಗಿರುವವನು ಉದ್ದನೆಯ ಮೀಸೆ, ಕತ್ತಲ್ಲಿ ರಂಗುರಂಗಿನ ಮಣಿಗಳ ಸರ, ಬೆಳ್ಳಿಯ ಸರಕ್ಕೆ ನೇತಾಡುತ್ತಿರುವ ಪದಕ, ರೆಟ್ಟೆಗಳಿಗೆ ತಾಮ್ರದ ತಾಯಿತ, ಬಳೆಗಳು, ಬಲಗಾಲಿಗೆ ದೊಡ್ಡ ಗಗ್ಗರ, ಕಾಷಾಯ ರಂಗಿನ ಕಚ್ಚೆಪಂಚೆ, ಅದೇ ರಂಗಿನ ಅಂಗಿ, ಹಣೆಯಲ್ಲಿ ದೊಡ್ಡದಾದ ಕುಂಕುಮ ಬೊಟ್ಟನ್ನು ಇಟ್ಟುಕೊಂಡಿರುತ್ತಾನೆ. ಇವನ ಹಾವಭಾವ, ವಸ್ತ್ರಧಾರಣೆ, ಗಂಭೀರವಾದ ನಡಿಗೆಯನ್ನು ನೋಡಿದರೆ ಈತನೇ ನಾಯಕನೆಂದು ಸುಲಭವಾಗಿ ಗುರುತಿಸಬಹುದು. ಹೀಗೆ ಪ್ರವೇಶ ಮಾಡಿದ ಮೋಡಿ ಎತ್ತುವ ಗುಂಪಿನವರು ಪೂರ್ವ ದಿಕ್ಕಿನಲ್ಲಿ ಪರದಾ ಕಟ್ಟಿದ ಚಕ್ರದಲ್ಲಿ ತಮ್ಮ ದೇವರನ್ನು ಪ್ರತಿಷ್ಠಿಸಿ ಅವರ ವಸ್ತುಗಳನ್ನು ಅದರಲ್ಲಿಟ್ಟು ಆಚೆಗೆ ಬರುತ್ತಾರೆ.

ಎರಡು ಗುಂಪಿನವರು ಮಂಡಲದ ಮುಂದೆ ಗ್ರಾಮದ ಹಿರಿಯರ ಸಮಕ್ಷಮದಲ್ಲಿ ಮೋಡಿಗೆ ಸಂಬಂಧಿಸಿದ ನಿಯಮಗಳನ್ನು ಮಾತಾಡುತ್ತಾರೆ. ಈ ನಿಯಮಗಳು ಮೋಡಿಯ ಸ್ವರೂಪಕ್ಕೆ ತಕ್ಕ ಹಾಗೆ ಇರುತ್ತವೆ. ತಾವು ಹಾಕಿದ ಮೋಡಿಯನ್ನು ಎತ್ತಬೇಕೆಂದು ಮೋಡಿ ಹಾಕುವವರು, ಎತ್ತುವವರನ್ನು ವೀಳ್ಯದೆಲೆ ಕೊಟ್ಟು ಆಹ್ವಾನಿಸುತ್ತಾರೆ. ಹೀಗೆ ಹಾಕುವ ಮೋಡಿ ಮೂರು ರೀತಿ ಇರುತ್ತದೆ : ೧) ಖುಷೀ ಮೋಡಿ ೨) ರಾಜ ಮೋಡಿ ೩) ರಣ ಮೋಡಿ.

೧. ಖುಷೀ ಮೋಡಿ : ಇದು ವಿನೋದ ಪ್ರಧಾನವಾಗಿರುತ್ತದೆ. ಯಾವ ರೀತಿಯ ಅಪಾಯವೂ ಇಲ್ಲಿ ಇರುವುದಿಲ್ಲ. ಕಾಗದವನ್ನು ರೂಪಾಯಿ ನೋಟಾಗಿ ಮಾಡುವುದು, ಕಾಗದ ಬಾಣಲಿಯಲ್ಲಿ ಎಣ್ಣೆ ಹಾಕಿ ಬೆಂಕಿಯ ಮೇಲಿಟ್ಟು ಹಪ್ಪಳವನ್ನು ಸುಡುವುದು, ಸತ್ತ ಕೋಳಿಯನ್ನು ಬದುಕಿಸುವುದು, ಮಂತ್ರದಂಡ, ಪೊರಕೆ, ಎಕ್ಕಡವನ್ನು ತೆಗೆಯುವುದಕ್ಕೆ ಹೋದರೆ ಅವು ಹೊಡೆಯುವುದು, ರಂಗುರಂಗಿನ ಕಾಗದ ಬೂದಿಯನ್ನು ನುಂಗಿ ಮತ್ತು ರಂಗುರಂಗಿನ ಕಾಗದವನ್ನು ಆಚೆಗೆ ತೆಗೆಯುವುದು, ಮಾವಿನ ಓಟೆಯನ್ನು ಬಿತ್ತಿ ನೀರುಹಾಕಿ ಮರಬಂದು ಮಾವಿನ ಕಾಯಿ ಬಿಡುವ ಹಾಗೆ ಮಾಡುವುದು, ನಿಂಬೆಹಣ್ಣು ಗಾಳಿಯಲ್ಲಿ ತೇಲಾಡುವುದು, ನೀರಿಂದ ಒಣಗಿದ ಮಣ್ಣನ್ನು ತೆಗೆಯುವುದು ಮುಂತಾದ ವಿದ್ಯೆಗಳು ಖುಷೀ ಮೋಡಿಯಲ್ಲಿರುತ್ತವೆ. ಇದರಲ್ಲಿ ಕೈಚಳಕ, ಕಣ್ ಕಟ್ಟು, ತಂತ್ರ ಮಿಲಿನವಾಗಿರುತ್ತವೆ.

೨. ರಾಜ ಮೋಡಿ : ರಾಜ ಮೋಡಿ ಅಪಾಯಕರವಾಗಿ ಕಾಣಿಸಿದರೂ ಅಪಾಯವಿಲ್ಲ. ಹಾವು, ಚೇಳುಗಳನ್ನು ಸೃಷ್ಟಿಸುವುದು, ರಕ್ತವನ್ನು ಕಕ್ಕುವುದು, ಮರವನ್ನು ಹೊಡೆದರೆ ಬೆನ್ನಿನ ಮೇಲೆ ಬರೆ ಬರುವುದು, ಬೆಂಕಿ ಇರುವ ಹೆಂಚನ್ನು ಹೊಟ್ಟೆಯ ಮೇಲೆ ಇಟ್ಟುಕೊಂಡು ರೊಟ್ಟಿ ಮಾಡುವುದು, ಜ್ವಾಲೆಗಳನ್ನು ಸೃಷ್ಟಿಸಿ ಅದರಲ್ಲಿ ಹೋಗುವುದು, ನೀರಿನ ಬಾವಿಗೆ ಹಾರಿ ಮತ್ತೆ ನೇರ ಮೇಲಕ್ಕೆ ಬರುವುದು, ಚಕ್ರವನ್ನು ತಿರುಗಿಸಿದರೆ ಮನುಷ್ಯರು ಹಿಂದಕ್ಕೆ ಪಲ್ಟಿ ಹೊಡೆಯುತ್ತಾ ಹೋಗಿ ಮರಕ್ಕೆ ನೇತಾಡುವುದು, ತೆಂಗಿನಕಾಯಿಗಳನ್ನು ತಲೆಗೆ ಹೊಡೆದುಕೊಳ್ಳುವುದು, ಹಗ್ಗವನ್ನು ಮೂಗಿನಲ್ಲಿ ತೂರಿಸಿ ಬಾಯಲ್ಲಿ ತೆಗೆಯುವುದು, ಅದರಿಂದ ಸುಮಾರು ನೂರು ಕಿ.ಗ್ರಾಂ. ಭಾರ ಇರುವ ಕಲ್ಲನ್ನು ಎತ್ತುವುದು ಮುಂತಾದ ವಿದ್ಯೆಗಳು ರಾಜ ಮೋಡಿಯಲ್ಲಿ ಕಾಣಿಸುತ್ತವೆ.

೩. ರಣ ಮೋಡಿ : ಇದು ತುಂಬಾ ಅಪಾಯಕರವಾದದ್ದು. ಸ್ವಲ್ಪ ಎಚ್ಚರ ತಪ್ಪಿದರೆ ಪ್ರಾಣ ಹೋಗುವುದು ಖಂಡಿತ. ಆದ್ದರಿಂದ ರಣಮೋಡಿ ಪ್ರದರ್ಶಿಸುವುದಕ್ಕೆ ಎರಡು ಗುಂಪಿನವರು ಹಿರಿಯರ ಸಮಕ್ಷಮದಲ್ಲಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಯಾರಾದರೂ ಸತ್ತರೆ ಎರಡು ಗುಂಪಿನಲ್ಲಿ ಯಾರೂ ಜವಾಬ್ದಾರರಲ್ಲ ಎಂದು ಒಪ್ಪಂದದಲ್ಲಿ ಸಹಿ ಹಾಕುತ್ತಾರೆ. ಹಿಂದಿನ ದಿನಗಳಲ್ಲಿ ಜಿಲ್ಲಾಡಳಿತದಿಂದ ಅನುಮತಿ ಪಡೆದು ಪ್ರದರ್ಶಿಸುತ್ತಿದ್ದರಂತೆ. ರಣ ಮೋಡಿಯಲ್ಲಿ ಕಿರುಬೆರಳು ಗಾತ್ರದ ಸೂಜಿಯನ್ನು ಮೂಗಿನಲ್ಲಿ ತೂರಿಸಿ ಬಾಯಲ್ಲಿ ತೆಗೆಯುವುದು, ಸುಮಾರು ಒಂದುವರೆ ಅಡಿ ಇರುವ ಮೂರು ಕತ್ತಿಗಳನ್ನು ನುಂಗುವುದು, ತೆಂಗಿನ ಕಾಯನ್ನು ಹೊಡೆದರೆ ತಲೆ ಎರಡು ಹೋಳಾಗಿ ಮೆದುಳು ಈಚೆಗೆ ಬರುವುದು, ಮೊಟ್ಟೆಯನ್ನು ಹೊಡೆದರೆ ಕಣ್ಣಿನಗುಡ್ಡೆ ಈಚೆಗೆ ಬರುವುದು, ಬೆಂಕಿಯಂತೆ ಸುಟ್ಟಿರುವ ಕಬ್ಬಿಣದ ಗುಂಡನ್ನು ಬಾಯಿಂದ ಕಚ್ಚುವುದು, ವೇಗವಾಗಿ ಬರುತ್ತಿರುವ ಬಂದೂಕಿನ ಗುಂಡನ್ನು ಬಾಯಿಂದ ಹೊಡೆಯುವುದು, ಬಾಳೆಗಿಡವನ್ನು ತುಂಡು ಮಾಡಿದರೆ ಮುಂಡದಿಂದ ರುಂಡ ಬೇರಾಗುವುದು ಮತ್ತು ಎರಡನ್ನು ಒಂದಾಗಿಸುವುದು ಮುಂತಾದ ವಿದ್ಯೆಗಳು ಇದರಲ್ಲಿ ಇರುತ್ತಿದ್ದವು.

ಹಿಂದಿನ ದಿವಸಗಳಲ್ಲಿ ಮೇಲೆ ತಿಳಿಸಿರುವ ಮೋಡಿಯ ಪ್ರಕಾರಗಳನ್ನು ಬಿಡಿ ಬಿಡಿಯಾಗಿ ಪ್ರದರ್ಶಿಸುತ್ತಿದ್ದರು. ಆದರೆ ಈಗ ಇವೆಲ್ಲವನ್ನು ಒಂದಾಗಿ ಅಂದರೆ ಮೊದಲು ಖುಷೀ ಮೋಡಿ, ಅನಂತರ ರಾಜ ಮೋಡಿ, ಇದರ ಅನಂತರ ರಣ ಮೋಡಿಯನ್ನು ಒಂದೇ ಮಂಡಲದಲ್ಲಿ ಪ್ರದರ್ಶಿಸುವುದನ್ನು ನೋಡಬಹುದು.

ಮೋಡಿ ಹಾಕುವವರು ಎತ್ತುವವರಿಗೆ ವೀಳ್ಯದೆಲೆ ಕೊಟ್ಟು ಆಹ್ವಾನಿಸಿದ ಅನಂತರ ಮೊದಲನೆಯ ಮನೆಯಲ್ಲಿರುವ ಹೆಂಡದ ಮಡಕೆಯನ್ನು ಕೈಯಿಂದ ಮುಟ್ಟದೇ ಹೆಂಡವನ್ನು ಕುಡಿದು, ಪಕ್ಕದಲ್ಲೇ ಇರುವ ಸಣ್ಣ ಕಳ್ಳಿ (ಇದನ್ನು ತಿಂದರೆ ಹೊಟ್ಟೆಯಲ್ಲಿ ಉರಿ ಜಾಸ್ತಿ ಆಗುತ್ತದೆ)ಯನ್ನು ತಿನ್ನಬೇಕೆಂದು ಸವಾಲು ಹಾಕುತ್ತಾರೆ. ಇದನ್ನು ಘಟ ಪ್ರಯೋಗ ಎನ್ನುತ್ತಾರೆ. ನೋಡುವವರಿಗೆ ಇದೊಂದು ದೊಡ್ಡ ಸವಾಲೆನಿಸುವುದಿಲ್ಲ. ಆದರೆ ಮೋಡಿ ಎತ್ತುವವನು ತಮಟೆಗೆ ತಕ್ಕ ಹಾಗೆ ನೃತ್ಯ ಮಾಡುತ್ತಾ ಹೆಂಡದ ಮಡಕೆಯನ್ನು ಬಾಯಿಂದ ತೆಗೆಯುವುದಕ್ಕೆ ಬಗ್ಗುತ್ತಾನೆ. ಮೋಡಿ ಹಾಕುವವರು ಆ ಸಂದರ್ಭದಲ್ಲಿ ಬೇವಿನ ಸೊಪ್ಪು, ಅಕ್ಷತೆಗಳನ್ನು ಆತನ ಮೇಲೆ ಚೆಲ್ಲುತ್ತಾರೆ. ಯಾವುದೋ ಅದೃಶ್ಯ ಶಕ್ತಿ ಹಿಂದಕ್ಕೆ ತಳ್ಳಿದ ಹಾಗೆ ಎತ್ತುವವನು ಮೇಲಕ್ಕೆ ಕೆಳಕ್ಕೆ ಬೀಳುತ್ತಾ ಹಿಂದಕ್ಕೆ ಹೋಗುತ್ತಾನೆ. ಕೊನೆಯಲ್ಲಿ ತಿರುಗು ಮಂತ್ರವನ್ನು ಹಾಕಿ ಬಾಯಿಂದ ಹೆಂಡದ ಮಡಕೆಯಲ್ಲಿರುವ ಹೆಂಡವನ್ನು ಕುಡಿದು, ಮಡಕೆಯನ್ನು ಕಡಿದು ಉಗುಳುತ್ತಾನೆ. ಸಣ್ಣ ಕಳ್ಳಿಯನ್ನು ಕರಕರ ತಿನ್ನುತ್ತಾನೆ. ಮೊದಲನೇ ಮನೆಯಲ್ಲಿ ಗೆದ್ದ ನಂತರ ಮೋಡಿ ಎತ್ತುವ ಗುಂಪಿನಲ್ಲಿರುವ ಹೆಂಗಸರು, ಗಂಡಸರು ಶಿಳ್ಳೆ ಹಾಕುತ್ತಾ, ತೊಡೆತಟ್ಟುತ್ತಾ, ಮೀಸೆ ತಿರುಗಿಸುತ್ತಾ ಬೇವಿನ ರೆಂಬೆಗಳನ್ನು ಮೇಲಕ್ಕೆತ್ತಿ ನೃತ್ಯ ಮಾಡುತ್ತಾರೆ.

ಇದರ ಅನಂತರ ಎರಡನೇ ಮನೆಯಲ್ಲಿ ಪ್ರವೇಶ ಮಾಡಿ ಸತ್ತು ಬಿದ್ದಿರುವ ಕೋಳಿಯನ್ನು ಬದುಕಿಸುವಂತೆ ಮೋಡಿ ಹಾಕುವವರು ಸವಾಲು ಹಾಕುತ್ತಾರೆ. ಮೋಡಿ ಎತ್ತುವವರು ಎರಡನೇ ಮನೆಯ ಒಳಗಡೆ ಪ್ರವೇಶಿಸಿದ ತಕ್ಷಣ ಹಾಕುವವರು ಅಕ್ಷತೆ ಚೆಲ್ಲುತ್ತಾರೆ. ಮೋಡಿ ಎತ್ತುವವನು ಪ್ರಜ್ಞೆ ತಪ್ಪುತ್ತಾನೆ. ಅವನನ್ನು ಬಿಡಾರದ ಹೊರಕ್ಕೆ ಎತ್ತಿಕೊಂಡು ಹೋಗುತ್ತಾರೆ. ಅನಂತರ ಅವರ ನಾಯಕನು ತಮಟೆಯ ಸದ್ದಿಗೆ ತಕ್ಕ ಹಾಗೆ ನೃತ್ಯ ಮಾಡುತ್ತಾ ಸತ್ತು ಬಿದ್ದ ಕೋಳಿಯ ಬಾಯಿ ತೆಗೆದು ‘ಉಫ್’ ಎಂದು ಊದುತ್ತಾನೆ. ಕೋಳಿಗೆ ಪ್ರಾಣ ಬಂದು ಹಾರಿಬಿಡುತ್ತದೆ.

ಮೂರನೆಯ ಮನೆಯಲ್ಲಿ ಒಂದಡಿಯಷ್ಟು ಆಳ, ಎರಡಡಿಯಷ್ಟು ಅಗಲ ಇರುವ ಹಳ್ಳ, ಅದರಲ್ಲಿ ನೀರು ಇರುತ್ತದೆ. ಮೋಡಿ ಹಾಕುವವರು ಒಂದು ಮೊಟ್ಟೆಯನ್ನು ಹೊಡೆದು ಅದರಲ್ಲಿ ಹಾಕುತ್ತಾರೆ. ಸಣ್ಣ ಸಣ್ಣ ಕತ್ತಿಗಳನ್ನು ಸಹ ಇಡುತ್ತಾರೆ. ಎತ್ತುವವನು ಅದರಲ್ಲಿ ತಲೆ ಇಟ್ಟು ಎರಡಾಗಿರುವ ಮೊಟ್ಟೆಯನ್ನು ಒಂದೇ ಮೊಟ್ಟೆಯಾಗಿ ಬಾಯಿಂದ ತೆಗೆಯಬೇಕು. ಎತ್ತುವವರು ಎಲ್ಲಾ ಅಡ್ಡಿಗಳನ್ನು ಮಂತ್ರಬಲದಿಂದ ಹೀರಿ ಬಾಯಿಂದ ಒಡೆಯದೆ ಇರುವ ಮೊಟ್ಟೆಯನ್ನು ತೆಗೆಯುತ್ತಾರೆ.

ನಾಲ್ಕನೇ ಮನೆಯಲ್ಲಿ ಎಣ್ಣೆಯನ್ನು ಒಲೆಯ ಮೇಲೆ ಬಿಸಿ ಮಾಡುವುದಕ್ಕೆ ಏರ್ಪಾಟು ಮಾಡಿರುತ್ತಾರೆ. ಮೋಡಿ ಎತ್ತುವವರು ಎಷ್ಟು ಉರಿ ಹಾಕಿದರೂ ಎಣ್ಣೆ ಬಿಸಿ ಆಗುವುದಿಲ್ಲ. ಮೋಡಿ ಹಾಕುವವರು ಪ್ರಯೋಗ ಮಾಡಿರುವುದರಿಂದ ಎಣ್ಣೆ ಬಿಸಿ ಆಗದೆ ಹಾಗೆ ಇರುತ್ತದೆ. ಹೀಗೆ ಒಂದು ಗಂಟೆ ಆದ ಅನಂತರ ಅವರ ನಾಯಕನು ಬಂದು ಎಣ್ಣೆ ಕುದಿಯುವ ಹಾಗೆ ಮಾಡುತ್ತಾನೆ.

ಐದನೇ ಮನೆಯಲ್ಲಿ ಮೂರು ದೊಣ್ಣೆಗಳ ಮೇಲೆ ಎಲ್ಲ ಕಡೆ ತೂತುಗಳಿರುವ ಮಡಕೆಯನ್ನು ಇಟ್ಟಿರುತ್ತಾರೆ. ಅದರಲ್ಲಿ ನೀರು ಹಾಕಿದ ತಕ್ಷಣ ತೂತುಗಳಿಂದ ನೀರು ಬಂದು ಕ್ಷಣ ಮಾತ್ರದಲ್ಲಿ ಮಡಕೆ ಖಾಲಿ ಆಗುತ್ತದೆ. ಮೋಡಿ ಎತ್ತುವವರು ಶಿಳ್ಳೆ ಹಾಕುತ್ತಾ ಅಲ್ಲಿಗೆ ಬಂದು ನೀರು ಹಾಕಬೇಕೆಂದು ಹೇಳುತ್ತಾರೆ. ನೀರು ಹಾಕಿದ ತಕ್ಷಣ ಕೈಗಳನ್ನಿಟ್ಟು ಒಳಗಡೆ ತಿರುಗುತ್ತಾರೆ. ಆಶ್ಚರ್ಯ ತೂತುಗಳಿಂದ ಬರುತ್ತಿರುವ ನೀರು ನಿಂತು ಹೋಗುತ್ತದೆ. ಮಡಕೆ ತುಂಬುವಷ್ಟು ನೀರು ಹಾಕಿದರೂ ಒಂದು ಹನಿ ನೀರು ಸಹ ಈಚೆಗೆ ಬರುವುದಿಲ್ಲ.

ಆರನೇ ಮನೆಯಲ್ಲಿ ಒಂದು ಎಕ್ಕಡ, ಪೊರಕೆ, ಮಂತ್ರದಂಡ ಇರುತ್ತವೆ. ಇವನ್ನು ಒಂದೊಂದಾಗಿ ಎತ್ತುವವರು ತಮ್ಮ ಅಧೀನಕ್ಕೆ ತೆಗೆದುಕೊಳ್ಳಬೇಕು. ಆದರೆ ಎತ್ತುವವರು ಅವನ್ನು ಮುಟ್ಟುವುದಕ್ಕೆ ಹೋದ ತಕ್ಷಣ ಅವರನ್ನು ಅಟ್ಟಿಸಿ ‘ಟಪ್ ಟಪ್’ ಎಂದು ಹೊಡೆಯುತ್ತದೆ. ತುಂಬಾ ಪ್ರಯತ್ನದ ಅನಂತರ ನಾಯಕನು ಬಂದು ಅವನ್ನು ತನ್ನ ಅಧೀನಕ್ಕೆ ತೆಗೆದುಕೊಳ್ಳುತ್ತಾನೆ.

ಏಳನೇ ಮನೆಯಲ್ಲಿ ಮಾವಿನ ಓಟೆಯಿಂದ ಮರವನ್ನು ಸೃಷ್ಟಿಸಿ ಅದರಲ್ಲಿ ಕಾಯಿಗಳನ್ನು ಬಿಡಿಸುವ ದೃಶ್ಯ ಎಲ್ಲರನ್ನು ಆಶ್ಚರ್ಯ ಚಕಿತರನ್ನಾಗಿ ಮಾಡುತ್ತದೆ. ಈ ಮನೆಯಲ್ಲಿ ನೀರಿಂದ ಒಣಗಿದ ಮಣ್ಣು ತೆಗೆಯುವುದು, ರಂಗುರಂಗಿನ ಕಾಗದ ಬೂದಿಯನ್ನು ನುಂಗಿ ಮತ್ತೆ ರಂಗುರಂಗಿನ ಕಾಗದವನ್ನು ಹೊರ ತೆಗೆಯುವುದು ಮುಂತಾದ ಪ್ರಯೋಗಗಳು ಇರುತ್ತವೆ.

ಖುಷಿ ಮೋಡಿಯಲ್ಲಿ ಕಾಣಿಸುವ ಮೇಲಿನ ಪ್ರಯೋಗಗಳನ್ನು ಮೋಡಿ ಹಾಕುವವರು ಹಾಕುವಾಗ, ಎತ್ತುವವರು ಅದನ್ನು ಭೇದಿಸುವುದಕ್ಕೆ ಪ್ರಯತ್ನ ಮಾಡುತ್ತಾರೆ. ಅಂಥ ಸಂದರ್ಭಗಳಲ್ಲಿ ಮೋಡಿ ಹಾಕುವವರು ಎತ್ತುವವರ ಮೇಲೆ ಬೇವು, ಅಕ್ಷತೆ, ವಿಭೂತಿ, ಕುಂಕುಮಗಳನ್ನು ಚೆಲ್ಲುವುದು ಎಲ್ಲಾ ಪ್ರಯೋಗಗಳಲ್ಲೂ ಸರ್ವೇಸಾಮಾನ್ಯವಾಗಿ ಕಾಣಿಸುತ್ತದೆ. ಹಾಗೆಯೇ ಅವರ ಕೈಕಾಲುಗಳು ಸೊಟ್ಟಗೆ ಹೋಗುವುದು, ಹಿಂದಕ್ಕೆ ಬೀಳುವುದು, ಪ್ರಜ್ಞೆ ತಪ್ಪುವುದು, ಬಾಯಿಂದ ರಕ್ತ ಬರುವುದು ಮುಂತಾದವು ಖುಷೀ ಮೋಡಿಯಲ್ಲಿ ಸಂದರ್ಭಾನುಸಾರವಾಗಿ ಆಗುತ್ತವೆ.

ಏಳನೇ ಮನೆಯಲ್ಲಿ ಗುಂಡುಸೂಜಿಗಳು ಚುಚ್ಚಿದ ನಿಂಬೆಹಣ್ಣು ಇರುತ್ತದೆ. ಅದನ್ನು ಬಾಯಿಂದ ತೆಗೆದು ಅಗಿದು ನುಂಗಬೇಕು. ಮೋಡಿ ಎತ್ತುವವರು ನಿಂಬೆಯನ್ನು ಎತ್ತುವುದಕ್ಕೆ ಬಗ್ಗಿದ ತಕ್ಷಣ ಅವರ ಮೇಲೆ ಮೋಡಿ ಹಾಕುವವರು ಬೇವಿನ ಸೊಪ್ಪನ್ನು ಹಾಕುತ್ತಾರೆ. ಬೇವಿನ ಸೊಪ್ಪು ಚೇಳುಗಳಾಗಿ ಎತ್ತುವವರನ್ನು ಕಚ್ಚುವುದಕ್ಕೆ ಪ್ರಯತ್ನ ಮಾಡುತ್ತವೆ. ಎತ್ತುವವರು ಚೇಳುಗಳನ್ನು ಬಾಯಲ್ಲಿ ಹಾಕಿಕೊಂಡು ಕರಕರ ಅಗಿಯುತ್ತಾರೆ. ನಾಯಕನು ನಿಂಬೆಯನ್ನು ಬಾಯಿಂದ ಎತ್ತಿ ಅಗಿದು ನುಂಗುತ್ತಾನೆ.

ಎಂಟನೇ ಮನೆಯಲ್ಲಿ ಒಂದು ತೆಂಗಿನ ಕಾಯಿ ಇರುತ್ತದೆ. ಮೋಡಿ ಎತ್ತುವವರು ಅದನ್ನು ತಲೆಗೆ ಹೊಡೆಯಬೇಕು. ಹೀಗೆ ಮಾಡುವಾಗ ಪ್ರತಿ ಸಲ ತಲೆ ಇಂದ ರಕ್ತ ಬರುತ್ತದೆ. ಆದರೆ ತೆಂಗಿನ ಕಾಯಿ ಮಾತ್ರ ಚೂರಾಗುವುದಿಲ್ಲ. ಕೆಲವು ಸಲ ರಕ್ತವನ್ನು ಸಹ ವಾಂತಿ ಮಾಡುತ್ತಾರೆ. ಕೊನೆಯಲ್ಲಿ ನಾಯಕರ ಪ್ರವೇಶವಾದ ಅನಂತರ ಆತ ಎದುರು ತಂತ್ರ ಮಾಡಿ ತಲೆಯ ಮೇಲೆ ತೆಂಗಿನಕಾಯನ್ನು ಹೊಡೆದುಕೊಳ್ಳುತ್ತಾನೆ.

ಒಂಬತ್ತನೆ ಮನೆಯಲ್ಲಿ ಸುಮಾರು ಎರಡು ಮೀಟರಿನಷ್ಟು ಉದ್ದ, ಕಿರುಬೆರಳ ಗಾತ್ರದ ಹಗ್ಗ ಇರುತ್ತದೆ. ಮೋಡಿ ಎತ್ತುವವರು ಹಗ್ಗದ ಒಂದು ತುದಿಯನ್ನು ಮೂಗಲ್ಲಿ ತೂರಿಸಿ ಬಾಯಿಂದ ತೆಗೆಯಬೇಕು. ಅದಕ್ಕೆ ನೂರು ಕೆ.ಜಿ.ಯಷ್ಟು ಭಾರ ಇರುವ ಕಲ್ಲನ್ನು ಕಟ್ಟಿ ಮೇಲಕ್ಕೆ ಎತ್ತಬೇಕು. ಹೀಗೆ ಎತ್ತುವಾಗ ಮೋಡಿ ಹಾಕುವವರು ಹಾವುಗಳನ್ನು ಸೃಷ್ಟಿಸುತ್ತಾರೆ. ಎತ್ತುವವರು ಅವನ್ನು ಹಿಡಿದು ಬಾಯಲ್ಲಿ ಕಚ್ಚಿ ಜನರನ್ನು ಆಶ್ಚರ್ಯಚಕಿತರನ್ನಾಗಿ ಮಾಡುತ್ತಾರೆ. ಈ ಮನೆಯಲ್ಲೇ ಇನ್ನೊಂದು ಪ್ರಯೋಗ ಸಹ ಇರುತ್ತದೆ. ಕೆಂಡ ಇರುವ ಹೆಂಚನ್ನು ಹೊಟ್ಟೆಯ ಮೇಲೆ ಇಟ್ಟು ರೊಟ್ಟಿಯನ್ನು ಸುಡುವುದು. ಇದು ಅಗ್ನಿ ಸ್ತಂಭನೆಯಲ್ಲಿ ಒಂದು ತಂತ್ರವೆಂದು ಹೇಳುತ್ತಾರೆ.

ಹತ್ತನೇ ಮನೆಯಲ್ಲಿ ಒಣಗಿದ ಹುಲ್ಲಿಂದ ಹಾಕಿದ ಸಣ್ಣದಾದ ಗುಡಿಸಲು ಇರುತ್ತದೆ. ಅದರಲ್ಲಿ ಒಂದು ಕೋಳಿಯನ್ನು ದಾರದಿಂದ ಕಟ್ಟಿರುತ್ತಾರೆ. ಮೋಡಿ ಹಾಕುವವರು ಅದರ ಮೇಲೆ ಅಕ್ಷತೆಯನ್ನು ಹಾಕಿದ ತಕ್ಷಣ ಗುಡಿಸಲು ಉರಿಯುವುದಕ್ಕೆ ಶುರುವಾಗುತ್ತದೆ. ಮೋಡಿ ಎತ್ತುವ ವ್ಯಕ್ತಿ ಉರಿಯುತ್ತಿರುವ ಗುಡಿಸಲು ಒಳಗಡೆ ಹೋಗಿ ಕೋಳಿಯನ್ನು ಬಿಡಿಸಿಕೊಂಡು ಬರಬೇಕು. ಇದು ತುಂಬಾ ಅಪಾಯಕರವಾದದ್ದು. ಆದರೆ ಅಗ್ನಿ ಸ್ತಂಭನ ವಿದ್ಯೆಯನ್ನು ಕಲಿತವರು ಸುಲಭವಾಗಿ ಇದನ್ನು ಭೇದಿಸುತ್ತಾರೆ.

ಹನ್ನೊಂದನೇ ಮನೆಯಲ್ಲಿ ಇರುವ ಮರವನ್ನು ಮುಟ್ಟಿದ ತಕ್ಷಣ ಮೈತುಂಬ ಬರೆ ಬರುವುದು, ಹುಣಿಸೆ ಕಡ್ಡಿಗಳನ್ನು ತಿರುಗಿಸಿದರೆ ಮನುಷ್ಯರು ಅದರಂತೆ ತಿರುಗುವರು. ಚಕ್ರವನ್ನು ತಿರುಗಿಸಿದ್ದು ಮನುಷ್ಯರು ಹಿಂದಕ್ಕೆ ಪಲ್ಟಿ ಹೊಡೆಯುತ್ತಾ ಹೋಗಿ ಮರದಲ್ಲಿ ನೇತಾಡುವುದು ಮುಂತಾದ ಪ್ರಯೋಗಗಳು ಇರುತ್ತವೆ. ಈ ಪ್ರಯೋಗಗಳನ್ನು ಅನುಭವ ಉಳ್ಳವರು ಮಾತ್ರವೆ ಭೇದಿಸುತ್ತಾರೆ. ಖುಷೀ ಮೋಡಿಯಲ್ಲಿಯ ಪ್ರಯೋಗಗಳನ್ನು ಕೆಲವು ಸಲ ನಾಯಕನ ಶಿಷ್ಯರು ಸಹಾ ಭೇದಿಸುವುದುಂಟು.

ಹನ್ನೆರಡನೇ ಮನೆಯಿಂದ ಹಾಕುವ ಪ್ರಯೋಗಗಳು ರಣಮೋಡಿಗೆ ಸಂಬಂಧಪಟ್ಟಿರುವವಾಗಿರುತ್ತವೆ. ಇವು ತುಂಬಾ ಅಪಾಯಕರವಾಗಿರುತ್ತವೆ. ಈ ಮನೆಯಲ್ಲಿ ಕಿರುಬೆರಳ ಗಾತ್ರದ ಒಂದು ಮೀಟರಿನಷ್ಟು ಉದ್ದ ಇರುವ ಕಬ್ಬಿಣದ ಸಲಾಕೆ ಇರುತ್ತದೆ. ನೇರಕ್ಕೆ ಇರುವ ಸಲಾಕೆಯನ್ನು ಮೂಗಿನಲ್ಲಿ ತೂರಿಸಿ ಬಾಯಿಂದ ಈಚೆಗೆ ತೆಗಿಯಬೇಕು. ಈ ಪ್ರಯೋಗವನ್ನು ಭೇದಿಸುವಾಗ ಮೋಡಿ ಹಾಕುವವರು ನಾನಾ ರೀತಿಯ ಅವಾಂತರಗಳನ್ನು ಸೃಷ್ಟಿಸುತ್ತಾರೆ. ಆದರೆ ಇವೆಲ್ಲವನ್ನು ಮೀರಿ ಸಲಾಕೆಯನ್ನು ಮೂಗಿನಲ್ಲಿ ತೂರಿಸಿ ಬಾಯಲ್ಲಿ ತೆಗೆದಾಗ ಭಯಭೀತರಾಗುತ್ತಿರುವ ಜನರು ಆಶ್ಚರ್ಯಚಕಿತರಾಗುತ್ತಾರೆ.

ಹದಿಮೂರನೇ ಮನೆಯಲ್ಲಿ ಸುಮಾರು ಒಂದೂವರೆ ಅಡಿ ಉದ್ದದ ಕತ್ತಿಯನ್ನು ನುಂಗಬೇಕು. ಕೆಲವುಕಡೆ ಒಂದು ಕತ್ತಿಯನ್ನು ಮಾತ್ರ ನುಂಗುತ್ತಾರೆ. ಹಿಂದಿನ ದಿವಸಗಳಲ್ಲಿ ಮೂರ‍್ನಾಲ್ಕು ಕತ್ತಿಗಳನ್ನು ಒಂದಾದ ಮೇಲೆ ಇನ್ನೊಂದು ನುಂಗಿ ಅದೇ ರೀತಿ ಈಚೆಗೆ ತೆಗೆಯುತ್ತಿದ್ದರು. ಈ ಮನೆಯಲ್ಲೇ ಇನ್ನೊಂದು ಪ್ರಯೋಗ ಇರುತ್ತದೆ. ಬೇವಿನ ಸೊಪ್ಪು, ಮಧ್ಯದಲ್ಲಿರುವ ಮೊಟ್ಟೆಯನ್ನು ಬಾಯಿಂದ ತೆಗೆಯಬೇಕು. ಈ ಮೊಟ್ಟೆಯನ್ನು ಮೋಡಿ ಎತ್ತುವವರು ತೆಗೆಯುವ ಪ್ರಯತ್ನದಲ್ಲಿರುವಾಗ ಮೋಡಿ ಹಾಕುವವರು ಇನ್ನೊಂದು ಮೊಟ್ಟೆಯನ್ನು ನಿಂಬೆಹಣ್ಣನ್ನು ಹೊಡೆದ ತಕ್ಷಣ ಎತ್ತುವವರಲ್ಲಿ ಒಬ್ಬರಿಗೆ ಕಣ್ಗುಡ್ಡೆ ಈಚೆಗೆ ಬರುವುದು. ಎತ್ತುವವರು ಕುಪಿತರಾಗಿ ತಿರುಗು ಮಂತ್ರವನ್ನು ಹಾಕಿ ಮೋಡಿ ಹಾಕುವವರ ಗುಂಪಿನಲ್ಲಿ ಇಬ್ಬರಿಗೆ ಪ್ರಜ್ಞೆ ಇಲ್ಲದ ಹಾಗೆ ಮಾಡುತ್ತಾರೆ. ಹಾಕುವವರು ಪ್ರಜ್ಞೆ ಇಲ್ಲದವರನ್ನು ರಕ್ಷಿಸುವುದರ ಆತುರದಲ್ಲಿದ್ದಾಗ ಮೊಟ್ಟೆಯನ್ನು ಬಾಯಿಂದ ತೆಗೆದು ಜಯಶಾಲಿಗಳಾಗುತ್ತಾರೆ.

ಹದಿನಾಲ್ಕನೇ ಮನೆಯಲ್ಲಿ ರಂಗೋಲಿಗಳ ಮಧ್ಯದಲ್ಲಿ ಒಂದು ತೆಂಗಿನಕಾಯಿ ಇರುತ್ತದೆ. ಅದನ್ನು ಮೋಡಿ ಎತ್ತುವವರು ಒಡಿಯಬೇಕು. ಮೋಡಿ ಎತ್ತುವವರು ಮನೆ ಒಳಗಡೆ ಬಂದ ತಕ್ಷಣ ಮೋಡಿ ಹಾಕುವವರು ಇನ್ನೊಂದು ತೆಂಗಿನಕಾಯಿಯನ್ನು ನಿಂಬೆಯನ್ನು ಎಸೆದು ಅಕ್ಷತೆ, ವಿಭೂತಿ ಚೆಲ್ಲುತ್ತಾರೆ. ಎತ್ತುವವರ ಗುಂಪಿನಲ್ಲಿ ಕೆಲವರು ಕಿರುಚಾಡುವ ಸದ್ದು ಕೇಳಿಸುತ್ತದೆ. ಅವರಲ್ಲಿ ಒಬ್ಬೊಬ್ಬರಿಗೆ ತಲೆ ಒಡೆದು ರಕ್ತ ಬರುತ್ತಿರುತ್ತದೆ. (ಹಿಂದಿನ ಕಾಲದಲ್ಲಿ ಈ ಪ್ರಯೋಗ ಮಾಡುವಾಗ ತಲೆ ಒಡೆದು ಮೆದುಳು ಈಚೆಗೆ ಬರುತ್ತಿತ್ತಂತೆ) ತಕ್ಷಣ ಎತ್ತುವವರು ತಿರುಗು ಪ್ರಯೋಗ ಮಾಡುತ್ತಾರೆ. ಮೋಡಿ ಹಾಕುವವರ ಗುಂಪಿನಲ್ಲಿ ಒಬ್ಬರಿಬ್ಬರು ನೆತ್ತರನ್ನು ವಾಂತಿ ಮಾಡುತ್ತಾ ಪ್ರಜ್ಞೆ ಇಲ್ಲದೆ ಬಿದ್ದು ಹೋಗುತ್ತಾರೆ. ಸಮಯ ನೋಡಿ ಎತ್ತುವವರು ತೆಂಗಿನ ಕಾಯಿಯನ್ನು ಒಡೆದು ಬರುತ್ತಾರೆ.

ಹದಿನೈದನೇ ಮನೆಯಲ್ಲಿ ಎರಡು ಪ್ರಯೋಗಗಳಿರುತ್ತವೆ. ಮೊದಲನೆಯದು ಬೆಂಕಿ ಉಂಡೆಯಂತೆ ಬೆಂಕಿಯಲ್ಲಿ ಕಾದ ಕಬ್ಬಿಣದ ಗುಂಡನ್ನು ಬಾಯಿಂದ ಕಚ್ಚುವುದು. ಈ ಪ್ರಯೋಗವಾದ ಅನಂತರ ಬಂದೂಕಿನಿಂದ ಬರುವ ಗುಂಡನ್ನು ಬಾಯಿಂದ ಹಿಡಿಯುವ ಕಾರ್ಯಕ್ರಮ ಇರುತ್ತದೆ. ಇದು ತುಂಬ ಅಪಾಯಕರವಾದದ್ದು. ಮೋಡಿ ಎತ್ತುವವನು ಮೊದಲನೆಯ ಮನೆಯಲ್ಲಿ ಚೌಡಿ ವಿಗ್ರಹಕ್ಕೆ ನೇರಕ್ಕೆ ಮೊಳಕಾಲಿನ ಮೇಲೆ ಕೈಗಳನ್ನು ಪಕ್ಕಕ್ಕೆ ಚಾಚಿ ಬಾಯಿ ತೆಗೆದು ನಿಂತಿರುತ್ತಾನೆ. ಒಬ್ಬನು ಚೌಡಿ ವಿಗ್ರಹದ ಮುಂದೆ ನಿಂತು ಬಂದೂಕನ್ನು ಹಿಡಿದು ನಿಲ್ಲುತ್ತಾನೆ. ಏನಾಗುತ್ತದೋ ಎಂದು ಎಲ್ಲರಲ್ಲೂ ಆತಂಕ. ಬಂದೂಕನ್ನು ಗುರಿಯಿಟ್ಟು ಮೋಡಿ ಎತ್ತುವವನನ್ನು ಸುಡುತ್ತಾನೆ. ‘ಢಂ’ ಎಂದು ಶಬ್ದ. ಮೋಡಿ ಎತ್ತುವ ವ್ಯಕ್ತಿ ಪಕ್ಕಕ್ಕೆ ಬೀಳುವ ಸಮಯದಲ್ಲಿ ಆತನನ್ನು ಹಿಡಿದುಕೊಳ್ಳುತ್ತಾರೆ. ಆತನ ಬಾಯಿಂದ ರಕ್ತದ ಜೊತೆಗೆ ಬಂದೂಕಿನ ಗುಂಡು ಸಹ ಈಚೆಗೆ ಬರುತ್ತದೆ. ಈ ದೃಶ್ಯವನ್ನು ನೋಡುತ್ತಿರುವ ಜನ ಬೆರಗಾಗುತ್ತಾರೆ.

ಹದಿನಾರನೇ ಮನೆಯಲ್ಲಿ ಸಹ ಎರಡು ಪ್ರಯೋಗಗಳಿರುತ್ತವೆ. ಒಂದು ಈಚಲು ರೆಂಬೆಯನ್ನು ಮಣ್ಣಿನಲ್ಲಿ ನೆಟ್ಟಿರುತ್ತಾರೆ. ಇದನ್ನು ಯಾರು ಬೇಕಾದರೂ ಕಿತ್ತು ಹಾಕಬಹುದು. ಆದರೆ ಯಾರಿಗೂ ಸಾಧ್ಯವಾಗುವುದಿಲ್ಲ. ಇದೊಂದು ವಿನೋದಭರಿತವಾದ ಪ್ರಯೋಗ. ಎರಡನೆಯದು ಮತ್ತು ಕಟ್ಟಕಡೆಯ ಪ್ರಯೋಗವನ್ನು ಮಾಡುವಾಗ ಜನ ಭಯಭೀತರಾಗುತ್ತಾರೆ. ಇಲ್ಲಿ ಒಂದು ಬಾಳೇ ಗಿಡವನ್ನು ನೆಟ್ಟಿರುತ್ತಾರೆ. ಇದನ್ನು ಎತ್ತುವವರು ಕಿತ್ತು ಹಾಕಬೇಕು. ಹೀಗೆ ಮಾಡುವುದಕ್ಕೆ ಎತ್ತುವವರು ನೃತ್ಯ ಮಾಡುತ್ತಾ ಅಲ್ಲಿಗೆ ಬರುತ್ತಾರೆ. ಹಾಕುವವರು ಬಾಳೆಗಿಡವನ್ನು ಕಡಿಯುತ್ತಾರೆ. ಎತ್ತುವವರಲ್ಲಿ ಒಬ್ಬರಿಗೆ ರುಂಡದಿಂದ ಮುಂಡ ಬೇರ್ಪಟ್ಟು ಹೊಡೆದುಕೊಳ್ಳುತ್ತದೆ. ಅವರ ಗುಂಪಲ್ಲಿ ಎಲ್ಲರೂ ಅಳುತ್ತಿರುತ್ತಾರೆ. ಎತ್ತುವವರ ಗುಂಪಿನ ನಾಯಕನ ಹೆಂಡತಿ ತಿರುಗು ಪ್ರಯೋಗ ಮಾಡಿ ಹಾಕುವವರನ್ನೂ ನಿಶ್ಚೇಷ್ಟರನ್ನಾಗಿ ಮಾಡುತ್ತಾಳೆ. ಮಂತ್ರಬಲದಿಂದ ಬಾಳೆಗಿಡವನ್ನು ಕಿತ್ತೊಗೆಯುತ್ತಾರೆ. ಕೆಲವು ಕಡೆ ಈ ಪ್ರಯೋಗವನ್ನು ಮಾಡುವಾಗ ಮೋಡಿ ಹಾಕುವವರು ಎತ್ತುವವರಲ್ಲಿ ಒಬ್ಬರನ್ನು ಬಿಡಾರದ ಒಳಗೆ ಎತ್ತಿಕೊಂಡು ಹೋಗಿ ಆತನ ರುಂಡವನ್ನು ತಟ್ಟೆಯಲ್ಲಿಟ್ಟು ಜನರ ಮಧ್ಯೆ ಬಂದು ತೋರಿಸುತ್ತಾರೆ. ಕುಪಿತನಾದ ಎತ್ತುವವರ ನಾಯಕನು ಆ ತಟ್ಟೆಯನ್ನು ಕಿತ್ತುಕೊಂಡು ಮೋಡಿ ಹಾಕುವವರ ಬಿಡಾರಕ್ಕೆ ಹೋಗಿ ಅವರನ್ನೂ ಮೂರ್ಚಿತರನ್ನಾಗಿ ಮಾಡಿ, ರುಂಡ ಮುಂಡ ಒಂದಾಗಿ ಮಾಡಿ ಅವನ ಕೈಯಿಂದ ಬಾಳೆಗಿಡವನ್ನು ಕಿತ್ತೆಸೆಯುತ್ತಾನೆ.

ಇಲ್ಲಿಗೆ ಮೋಡಿ ಮುಗಿಯುತ್ತದೆ. ಮೋಡಿ ಹಾಕಿದವರು, ಎತ್ತಿದವರು ದುಡ್ಡು ತೆಗೆದುಕೊಂಡು, ಹಂಚಿಕೊಂಡು ಅಲ್ಲಿಂದ ಹೊರಡುತ್ತಾರೆ. ಆದರೆ ಮೋಡಿಯ ಹಿಂದೆ ಮುಂದೆ ಇರುವ ಸಂಗತಿಗಳನ್ನು ತಿಳಿದುಕೊಳ್ಳುವ ಕುತೂಹಲ ಕೆಲವರಲ್ಲಿ ಹಾಗೇ ಉಳಿದುಕೊಳ್ಳುತ್ತದೆ. ವಯಸ್ಸಾದವರು ಅವರು ನೋಡಿದ ಮೋಡಿ ಪ್ರದರ್ಶನಗಳ ವೆಶೇಷಗಳನ್ನು, ಮಂತ್ರ ತಂತ್ರದ ಅನುಭವಗಳನ್ನು ಹೇಳುತ್ತಿದ್ದರೆ ಬೆರಗಾಗಿ ನೋಡುವುದಷ್ಟೇ ನಮ್ಮ ಕೆಲಸವಾಗುತ್ತದೆ.

ಮೋಡಿ ಎಂಬುದು ಮಂತ್ರ – ಯಂತ್ರ – ತಂತ್ರದ ಸಮನ್ವಯವೆಂದು ಈಗಾಗಲೇ ಹೇಳಿಕೊಂಡಿದ್ದೇವೆ. ಮೋಡಿ ಹಾಕುವವರು ಸಹ ಇದನ್ನೇ ಹೇಳುತ್ತಾರೆ. ಸುಡುಗಾಡು ಸಿದ್ಧರು, ವಿಪ್ರವಿನೋದಿಗಳು, ಗಾರುಡಿ ಮಾಡುವವರು, ಇಂದ್ರ ಜಾಲದವರು ಇವರೆಲ್ಲ ಮಾಡುವ ವಿದ್ಯೆಗಳನ್ನು ಮೋಡಿ ಮಾಡುವವರು ಪ್ರದರ್ಶಿಸುತ್ತಾರೆ. ಆದರೆ ಗಾರುಡಿ, ಇಂದ್ರ ಜಾಲದವರಿಗೆ ಯಾರೂ ಪೈಪೋಟಿ ಇರುವುದಿಲ್ಲ.

ಒಂದೊಂದು ಪ್ರಾಂತದಲ್ಲಿ ಒಂದೊಂದು ಕುಲದವರು ಮೋಡಿ ವಿದ್ಯೆಯನ್ನು ಕುಲಕಸುಬನ್ನಾಗಿ ಸ್ವೀಕರಿಸಿ ಪ್ರದರ್ಶಿಸುತ್ತಿದ್ದರು. ಪೆದ್ದೇಟಿಗೊಲ್ಲರು, ಕೆಂಚಗೊಲ್ಲರು, ಕುಂಬಾರರು ಮುಖ್ಯವಾಗಿ ಇದರಲ್ಲಿ ಪ್ರವೀಣರಾಗಿದ್ದರು. ನಿಶಿತವಾಗಿ ನೋಡಿದರೆ ಇದರಲ್ಲಿ ಕೈಚಳಕ, ಕಣ್ ಕಟ್ಟು, ತಂತ್ರ, ಮಂತ್ರ ಇರುವುದೆಂದು ಗೊತ್ತಾಗುತ್ತದೆ. ಮಂತ್ರದ ಪ್ರಾಮುಖ್ಯ ಕೆಲವು ಕಡೆ ಮಾತ್ರ ಇರುತ್ತದೆ. ಪ್ರಕೃತಿಯಲ್ಲಿ ಎಷ್ಟೋ ರಹಸ್ಯಗಳು ಅಡಗಿವೆ. ವೈಜ್ಞಾನಿಕವಾಗಿ ಹೇಳಬೇಕಾದರೆ ಕೆಲವು ಎಲೆಗಳ ರಸ ಒಂದು ಇನ್ನೊಂದಕ್ಕೆ ಬೆರೆತಾಗ, ಕೆಲವು ಕೀಟಗಳು, ಪ್ರಾಣಿಗಳು ಬೇರೆ ಕೀಟಗಳನ್ನು ತಿಂದಾಗ ರಾಸಾಯನಿಕ ಮಾರ್ಪಾಟುಗಳು ಸಂಭವಿಸುತ್ತವೆ. ಈ ರಹಸ್ಯಗಳನ್ನು ತಿಳಿದುಕೊಂಡ ಕೆಲವು ಜಾತಿಗಳು ಇವನ್ನು ರಹಸ್ಯ ವಿದ್ಯೆಗಳನ್ನಾಗಿ, ತಂತ್ರಗಳಾಗಿ ಪರಿಗಣಿಸಿ ಅಭಿವೃದ್ಧಿ ಮಾಡಿರುತ್ತಾರೆ. ಇದರ ಗುಟ್ಟನ್ನು ಯಾರಿಗೂ ಹೇಳದೆ ತಮ್ಮ ವಂಶದವರಿಗೆ ಮಾತ್ರ ಹೇಳುತ್ತಾ ಬಂದಿದ್ದಾರೆ. ಇದರ ಜೊತೆಗೆ ಕೆಲವು ಮಂತ್ರಗಳನ್ನು ಸಹ ಕಲಿತು, ಗಾರುಡಿ, ಇಂದ್ರಜಾಲಗಳನ್ನೂ ಮಾಡುವುದುಂಟು. ಸುಡುಗಾಡು ಸಿದ್ಧರು ಮುಂತಾದವರು ಕೆಲವು ವಿದ್ಯೆಗಳಲ್ಲಿ ಕೆಲವು ವಿಶೇಷಗಳನ್ನು ಸ್ವೀಕರಿಸಿ ಮೋಡಿ ವಿದ್ಯೆಯನ್ನಾಗಿ ಅಭಿವೃದ್ಧಿ ಮಾಡಿರುತ್ತಾರೆ. ಹೀಗೆ ಈ ವಿದ್ಯೆಯನ್ನು ಅಭಿವೃದ್ಧಿ ಮಾಡಿರುವವರಲ್ಲಿ ಕೆಂಚ ಗೊಲ್ಲರು ಮತ್ತು ಪೆದ್ದೇಟಿ ಗೊಲ್ಲರು ಮುಖ್ಯರು ಎಂದು ಹೇಳಬಹುದು. ಇವರ ಕಸುಬು ಪಶುಪಾಲನೆ. ಕಾಡುಗಳಲ್ಲಿ ಹಸುಗಳು ಮೇಯುತ್ತಿದ್ದರೆ ಪ್ರಕೃತಿಯಲ್ಲಿ ಆಗುವ ರಾಸಾಯನಿಕ ಮಾರ್ಪಾಟುಗಳನ್ನು ನಿಶಿತವಾಗಿ ಗಮನಿಸುತ್ತಿರುವ ಇವರು ಅವನ್ನೇ ವಿನೋದಭರಿತವಾದ ಕಲೆಗಳಾಗಿ ಪರಿವರ್ತಿಸಿದ ಹಾಗೆ ನಾವು ಗಮನಿಸಬಹುದು. ಚೇಳು, ಹಾವು ಮುಂತಾದವುಗಳನ್ನು, ಮಾವಿನ ಮರವನ್ನು ಸೃಷ್ಟಿಸುವುದು ಇಂತಹ ತಂತ್ರಗಳಿಂದಲೇ ಎನ್ನುವ ವಿಷಯವನ್ನು ಗಮನಿಸಬಹುದು. ಕೆಲವು ಎಲೆಗಳ ರಸವನ್ನು ಮೈಗೆ ಹಚ್ಚಿಕೊಂಡರೆ ಬೆಂಕಿ ಉರಿಯಲ್ಲಿ ಸುಲಭವಾಗಿ ಪ್ರವೇಶಿಸಬಹುದು. ಸತ್ತಿರುವ ಕೋಳಿಯನ್ನು ಬದುಕಿಸುವುದು ಕೂಡ ಒಂದು ತಂತ್ರವಾಗಿದೆ. ತಂತ್ರದಲ್ಲಿ ಬೇವು ಮತ್ತು ನಿಂಬೆಗೆ ತುಂಬ ಪ್ರಾಮುಖ್ಯವಿದೆ. ಆದ್ದರಿಂದಲೆ ಬೇವಿನ ಸೊಪ್ಪಿನಿಂದ ಮಾತ್ರವೇ ಚೇಳನ್ನು ಸೃಷ್ಟಿಸುತ್ತಾರೆ.

ಆದರೆ ಅನಂತರದ ದಿನಗಳಲ್ಲಿ ಮೋಡಿ ವಿದ್ಯೆಯನ್ನು ತಿಳಿದವರು ದುಡ್ಡಿನ ಆಸೆಯಿಂದ ಈ ವಿದ್ಯೆಯನ್ನು ದುರುಪಯೋಗ ಮಾಡಿದ್ದರಿಂದ, ಇವರು ಜನರಿಗೆ ಕೇಡನ್ನು ಮಾಡುತ್ತಾರೆ ಎನ್ನುವ ಭಾವನೆ ಜನರಲ್ಲಿ ಬೇರೂರಿರುವುದರಿಂದ, ತಾಂತ್ರಿಕ ಪರಿಜ್ಞಾನ ಅಭಿವೃದ್ಧಿ ಆಗಿರುವುದರಿಂದ, ಕೆಲವು ಜಾತಿಗಳವರು ಮಾತ್ರವೆ ವಿದ್ಯೆಯನ್ನು ಬಲ್ಲವರಾಗಿರುವುದರಿಂದ ಮೋಡಿ ಎನ್ನುವ ಈ ವಿದ್ಯೆ ಪ್ರಸ್ತುತ ಸಂದರ್ಭದಲ್ಲಿ ಕೆಲವು ಕಡೆ ಮಾತ್ರವೇ ಉಳಿದುಕೊಂಡಿದೆ. ಅದಲ್ಲದೆ ರಣ ಮೋಡಿಯಲ್ಲಿ ಬರುವ ಕೆಲವು ಪ್ರಯೋಗಗಳನ್ನು ಖಚಿತವಾಗಿ ಮಾಡುವುದಕ್ಕೆ ಯಾರಿಗೂ ಸಾಧ್ಯವಾಗಿತ್ತಿಲ್ಲ.

ಹಳ್ಳಿಗಳಲ್ಲಿ ಮನೆಗಳ ಮೇಲೆ ಕಲ್ಲು ಬೀಳುವುದು, ಮಲ ಬೀಳುವುದು, ಅಕಸ್ಮಾತ್ತಾಗಿ ಬೆಂಕಿಯ ಜ್ವಾಲೆಗಳು ಬರುವುದು ಇವೆಲ್ಲವೂ ತಂತ್ರಗಳೆಂದು ಹೇಳುತ್ತಾರೆ. ಮೋಡಿ ಹಾಕುವವರು ಆಂಧ್ರದಲ್ಲಿ ಎಲ್ಲ ಕಡೆಯೂ ಇದ್ದರು. ಚಿತ್ತೂರು ಜಿಲ್ಲೆ, ಪಲಮನೇರು, ಕೇಲಪಟ್ಲ ಎಂಬ ಗ್ರಾಮದಲ್ಲಿ ಇದ್ದ ಗೊಲ್ಲರು, ಅನಂತಪುರ ಜಿಲ್ಲೆ ಮಡಕಶಿರ ಗ್ರಾಮದಲ್ಲಿ ಇದ್ದ ಕೆಂಚ ಗೊಲ್ಲರು, ಕರ್ನಾಟಕದ ತುಮಕೂರು ಅಂದನಕೆರೆ ಕರಿಯಣ್ಣ ಶೆಟ್ಟಿ, ಕೊಳ್ಳೇಗಾಲದ ಮೋಡಿ ಕೃಷ್ಣಪ್ಪ, ಪಾವಗಡ ತಾಲೂಕು ಹೊದನಕಲ್ಲು ಗ್ರಾಮದ ಕೇಶವಾಚಾರಿ, ಕ್ಯಾತಗಾನಹಳ್ಳಿ ಲಕ್ಷ್ಮಮ್ಮ, ಉತ್ತರ ಕರ್ನಾಟಕದ ಕರಿಯಣ್ಣ ಮುಂತಾದವರು ಈಗಲೂ ಮೋಡಿ ವಿದ್ಯೆಯನ್ನು ಪ್ರದರ್ಶಿಸುತ್ತಿದ್ದಾರೆ.

ಟಿ.ಎನ್.

ಮೋಡಿಯಾಟ್ಟಂ ತಮಿಳುನಾಡಿನ ಜನಪದ ಪ್ರದರ್ಶನ ಕಲೆಗಳಲ್ಲಿ ಮೋಡಿಯಾಟವೂ ಒಂದು. ಕೆಲವು ಪ್ರದರ್ಶನ ಕಲೆಗಳು ಎಲ್ಲೆಡೆ ಇದ್ದರೆ, ಇನ್ನು ಕೆಲವು ಕೆಲವೊಂದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರುತ್ತವೆ. ಇಂತಹ ಕೆಲವು ಪ್ರದರ್ಶನ ಕಲೆಗಳು ಕೆಲವೊಮ್ಮೆ ಒಂದು ಊರಿನಲ್ಲಷ್ಟೆ ಕಾಣಸಿಗುತ್ತವೆ. ಒಂದು ನಿರ್ದಿಷ್ಟ ಸಮುದಾಯದವರು ಮಾತ್ರ ಅದನ್ನು ಪ್ರದರ್ಶಿಸುವುದೂ ಇದೆ. ಈ ಬಗ್ಗೆ ಸಾಕಷ್ಟು ಅಧ್ಯಯನ ನಡೆಸಿದಾಗ ಮಾತ್ರ ಅವುಗಳ ಪರಿಚಯವಾಗುತ್ತದೆ.

ದಕ್ಷಿಣ ಅರ್ಕಾಟಿನ ಸೆಂಜಿಗೆ ಸೇರಿದ ಒಂದು ಗ್ರಾಮ ನಲ್ಲಾನ್ ಪಿಳ್ಳೈ ಪೆಟ್ರಾಳ್. ಈ ಊರಿನಲ್ಲಿ ವಿಶಿಷ್ಟವಾಗಿರುವ ಜಾನಪದ ಕಲೆಯೊಂದು ಹಲವಾರು ವರ್ಷಗಳಿಂದ ಪ್ರದರ್ಶನವಾಗುತ್ತಿದೆ. ಅದುವೇ ಮೋಡಿಯಾಟ್ಟಂ. ಬಹುತೇಕ ತೆರುಕ್ಕೂತ್ತಿನಂತೆ ಕಂಡುಬಂದರೂ ಈ ಕಲೆ ಪ್ರತ್ಯೇಕತೆಯನ್ನು ಸಾಧಿಸಿದೆ. ಪ್ರತಿ ವರ್ಷ ದೀಪಾವಳಿಯಂದು, ಅದರ ಮರುದಿನ ಇದನ್ನು ಪ್ರದರ್ಶಿಸಲಾಗುವುದು. ದೀಪಾವಳಿಯಂದು ಮಧ್ಯಾಹ್ನ ಊಟದ ಅನಂತರ ಊರ ಜನರು ಒಂದೆಡೆ ಸೇರುವರು. ಒಬ್ಬ ವ್ಯಕ್ತಿ ಆಧುನಿಕ ವಿದೂಷಕನಂತೆ ವೇಷ ಹಾಕುವನು. ಆತ ಖಾಕಿ ಬಣ್ಣದ ಉದ್ದತೋಳಿನ ಅಂಗಿ, ಮುಕ್ಕಾಲು ಪ್ಯಾಂಟು, ಶೂ ಹಾಕಿಕೊಳ್ಳುವನು. ಕೃತಕ ಗಡ್ಡ, ಮೀಸೆ ಇಟ್ಟುಕೊಳ್ಳುವನು. ಕೈಯಲ್ಲಿ ಒಂದು ಕೋಲು ಹಿಡಿದುಕೊಂಡು, ಆ ಕೋಲಿನ ಒಂದು ತುದಿಯಲ್ಲಿ ಬಟ್ಟೆಯಿಂದ ಮಾಡಿದ ಕುಟ್ಟಿಚ್ಚಾತ ಬೊಂಬೆಯನ್ನು ಕಟ್ಟುತ್ತಾನೆ. ಇನ್ನೊಂದು ಕೈಯಲ್ಲಿ ಕೊಡೆಯಿರುತ್ತದೆ. ಹೆಚ್ಚು ಕಮ್ಮಿ ಆತ ನೋಡಲು ಆಂಗ್ಲ ಕಥಾ ಪಾತ್ರ ಪೈಪರ್ (Piper) ನಂತಿರುತ್ತಾನೆ.

ಈಗ ಆತ ಊರನ್ನು ಸುತ್ತಾಡಿ ಬರಲು ಸಿದ್ಧನಾಗಿರುತ್ತಾನೆ. ಊರಿನ ವಾದ್ಯ ಮೇಳ ಮೊಳಗಿದಾಗ ಮೆರವಣಿಗೆ ಹೊರಡುತ್ತಾನೆ. ಬೀದಿಯಲ್ಲಿ ಹೋಗುವಾಗ ವಾದ್ಯ ಬಡಿತಕ್ಕೆ ತಕ್ಕಂತೆ ನೃತ್ಯ ಮಾಡುವನು. ಆತನ ಸುತ್ತಲೂ ಮಕ್ಕಳೂ, ಯುವಕರೂ ಕೇಕೆ ಹಾಕುತ್ತ ಹೋಗುವರು. ಒಂದೊಂದು ಬೀದಿಯ ಕೊನೆಯಲ್ಲಿ ನಿಂತು ಮಂತ್ರಶಕ್ತಿಯಿರುವ ಮೋಡಿಯನ್ನು ದೇವಸ್ಥಾನದ ಪಕ್ಕದಲ್ಲಿ ನೆಟ್ಟು ಅಲ್ಲಿಂದ ಮುಂದಕ್ಕೆ ಹೋಗುವುದು ಪದ್ಧತಿ. ಆ ಮೋಡಿಯನ್ನು ಶಕ್ತಿ, ಧೈರ್ಯವಿರುವವರು ಮರುದಿನ ಬಂದು ತೆಗೆಯಬಹುದು ಎಂದು ಆತ ಗಟ್ಟಿ ದನಿಯಲ್ಲಿ ಹೇಳುತ್ತಾನೆ. ಆತನೋದಿಗೆ ಬರುವವರು ಕೇಕೆ, ಆರ್ಭಟದೊಂದಿಗೆ ಬೊಬ್ಬಿಡುವರು. ಈ ರೀತಿ ಊರಿನ ಕೇರಿ ಕೇರಿಯೆಲ್ಲ ಸುತ್ತಾಡಿ ಬಂದು ದೇವಸ್ಥಾನದ ಎದುರಿನಲ್ಲಿರುವ ಬೀದಿಯಲ್ಲಿ ಕುಟ್ಟಿಚ್ಚಾತ್ತನ ಬೊಂಬೆಯಿರುವ ಕೋಲನ್ನು (ಅದುವೇ ಮೋಡಿ) ಸುಮಾರು ಒಂದು ಅಡಿ ಆಳ ಹೊಂಡ ತೆಗೆದು ಅದರಲ್ಲಿ ನೆಡುತ್ತಾನೆ. ದೀಪಾವಳಿಯ ಮೊದಲ ದಿನದಂದು ಈ ರೀತಿ ಕೋಲನ್ನು ನೆಡುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುವುದು.

ದೀಪಾವಳಿಯ ಮರುದಿನ ಮಧ್ಯಾಹ್ನ ಹಿಂದಿನ ದಿನದಂತೆ ಊರೆಲ್ಲ ಸುತ್ತಿ ಬಂದು, ಈಗ ಯಾರು ಬೇಕಾದರೂ ಮೋಡಿಯನ್ನು ತೆಗೆಯಬಹುದು ಎಂದು ಬೊಬ್ಬಿಡುತ್ತಾನೆ. ಊರಿನ ಮಂದಿಯೆಲ್ಲ ಅಲ್ಲಿ ಸೇರುತ್ತಾರೆ. ಆಗಲೇ ನಿಜವಾದ ಮೋಡಿ ಪ್ರದರ್ಶನ ಆರಂಭಗೊಲ್ಳುತ್ತದೆ.

56_70A_DBJK-KUH

ಊರಿನ ಮುಂದಾಳು, ತಾನು ನೆಟ್ಟಿರುವ ಮೋಡಿಗೆ ಮಂತ್ರ ಶಕ್ತಿ ಇದೆಯೆಂದೂ ತನ್ನ ಬಳಿಗೆ ಯಾರು ಬಂದರೂ ರಕ್ತ ಕಕ್ಕುತ್ತಾರೆಂದೂ ಹೇಳುತ್ತಾನೆ. ಅನಂತರ ಆಡುತ್ತ, ಹಾಡುತ್ತ, ಮಾತನಾಡುತ್ತ ಜನರನ್ನು ರಂಜಿಸುತ್ತಾನೆ. ಈಗ ಆಟದ ರಂಗ ಸಿದ್ಧವಾಗುತ್ತದೆ. ಒಂದು ಬದಿಯಲ್ಲಿ ಮರದ ಬೆಂಚಿನಲ್ಲಿ ಮದ್ದಳೆ, ಜಲ್ಲರಿ, ಹಾರ‍್ಮೋನಿಯಂ ಮುಂತಾದ ಸಂಗೀತ ಪರಿಕರಗಳೊಂದಿಗೆ ತಂಡವಿರುತ್ತದೆ. ಈಗ ಊರಿನ ಮುಂದಾಳು ನೆಟ್ಟಿರುವ ಮೋಡಿಯನ್ನು ತೆಗೆಯಲು ಒಂದು ಪ್ರದೇಶದ ಅರಸನ ಸಹೋದರರು ಒಬ್ಬೊಬ್ಬರಾಗಿ ನರ್ತನ ಮಾಡುತ್ತ ಬರುತ್ತಾರೆ. ಒಬ್ಬೊಬ್ಬರೂ ಮೋಡಿಯನ್ನು ತೆಗೆಯಲು ಪ್ರಯತ್ನಿಸಿದಾಗ ಅವರನ್ನು ಆತ ರಕ್ತ ಕಕ್ಕಿಸಿ ಕೆಳಕ್ಕೆ ಉರುಳಿಸುವ ಸನ್ನಿವೇಶ ಏರ್ಪಡುತ್ತದೆ. ಎಲ್ಲ ಸಹೋದರರು ಸತ್ತ ಸುದ್ದಿ ಕೇಳಿ ಕೊನೆಗೆ ಅವರ ಸಹೋದರಿ ಮಂತ್ರ ಶಿಖಾಮಣಿ ಮೋಡಿಯನ್ನು ತೆಗೆಯಲು ಬರುತ್ತಾಳೆ. ಮೋಡಿಯನ್ನು ತೆಗೆದು ಊರ ಮುಂದಾಳುವನ್ನು ಕೊಲ್ಲುತ್ತಾಳೆ ಎಂಬಲ್ಲಿಗೆ ಕಥೆ ಮುಗಿಯುತ್ತದೆ.

ಮೋಡಿಯಾಟ್ಟಂ ಎಂಬ ಈ ಮಂತ್ರದಿಂದ ಕೂಡಿರುವ ಪ್ರದರ್ಶನ ಕಲೆ ನಲ್ಲಾನ್ ಪಿಳ್ಳೈ ಪೆಟ್ರಾಳ್ ಎಂಬ ಊರಿನಲ್ಲಿ ಮಾತ್ರ ಪ್ರದರ್ಶನಗೊಳ್ಳುತ್ತಿದೆ.

ಎ.ಸಿ.ಪಿ. ಅನುವಾದ ಬಿ.ಎಸ್.ಎಸ್.