ಯಕ್ಷಗಾನಂ ಸಾಮಾನ್ಯವಾಗಿ ಯಕ್ಷಗಾನವೆಂದರೆ ಯಕ್ಷರ ಗಾನ ಎಂದು ಅರ್ಥ ಹೇಳಬಹುದು. ಯಕ್ಷರೆಂಬ ಜಾತಿಯ ಪ್ರಸಕ್ತಿ ವೈದಿಕ, ಬೌದ್ಧ, ಜೈನ ಸಾಹಿತ್ಯಗಳ ಕಾಲದಿಂದಲೂ ಸಂಸ್ಕೃತ ಪ್ರಾಕೃತಗಳಲ್ಲಿದೆ. ಮಾನವ ಗೃಹ್ಯಸೂತ್ರದಲ್ಲಿ ಯಕ್ಷರು ರೋಗ ಗ್ರಹಾವೇಶ ಶಕ್ತಿಗಳು. ಬೌದ್ಧ ಸಾಹಿತ್ಯದಲ್ಲಿ ‘ಯಕ್ಖರು’ ನೀತಿ ಬೋಧಕರು, ರಕ್ಷಕ ಶಕ್ತಿಗಳು. ಇಷ್ಟಿದ್ದರೂ ಅತಿ ಪ್ರಾಚೀನ ವಾಙ್ಮಯದಲ್ಲಿ ಯಕ್ಷರಿಗೆ ಗಂಧರ್ವ ಕಿನ್ನರರಂತೆ ಗಾನಕಲಾ ಪ್ರಾವೀಣ್ಯವಿರುವಂತೆ ಕಾಣುವುದಿಲ್ಲ. ಕಾಳಿದಾಸನ ಮೇಘ ಸಂದೇಶದಲ್ಲೂ, ಭಟ್ಟಕಾವ್ಯದಲ್ಲೂ ಯಕ್ಷರ ಗಾನವನ್ನು ಕುರಿತು ಸೂಚನೆಗಳಿರುತ್ತವೆ. ವಾತ್ಸಾಯನ ಕಾಮಸೂತ್ರಲ್ಲಿ ‘ಯಕ್ಷರಾತ್ರಿ’ ಎಂಬುದನ್ನು ಕ್ರೀಡಾ ವಿಶೇಷವೆಂದು ಹೇಳಿದೆ.

ಜಕ್ಕರೆಂಬವರು ಮಾಡುವ ಕಲಾಪ್ರದರ್ಶನವಾದ್ದರಿಂದ ಅದು ಯಕ್ಷಗಾನವೆಂದು ಕೆಲವರ ಅಭಿಪ್ರಾಯವಾಗಿದೆ. ಆದರೆ ಇನ್ನೂ ಕೆಲವರು ಯಕ್ಷಗಾನವನ್ನು ಪ್ರದರ್ಶಿಸುವವರಲ್ಲಿ ಕೆಲವರಿಗೆ ಜಕ್ಕರೆಂಬ ಹೆಸರು ಬಂದಿದೆ ಎಂದು ಹೇಳುವರು. ‘ಜಕ್ಕುಲು’ ಎಂಬುವರು ಇಂದಿಗೂ ಆಧ್ರದ ಗುಂಟೂರು, ಗೋದಾವರಿ ಮುಂತಾದ ಪ್ರದೇಶಗಳಲ್ಲಿ ವಾಸ ಮಾಡುತ್ತಿದ್ದಾರೆ. ಇವರು ಕಲಾವಿದರಾಗಿಯೇ ಇದ್ದಾರೆ. (“Jakkula – Described as an inferior caste of prostitutes, mostly of the Balija Caste; and as wizards and a dancing and theatrical caste. At Tenali in the Krishna district, it was customary for each family to give up one girl for prostitution”) ಆಂಧ್ರದಲ್ಲಿ ಜಕ್ಕಸಾನಿ ಕುಂಟ್ಲ, ಜಕ್ಕುಲ ಚೆರುವು, ಜಕ್ಕ ಸಮುದ್ರಮು ಮುಂತಾದ ಗ್ರಾಮಗಳನೇಕವಿದ್ದು ಆ ಜಾತಿಯವರ ಅಸ್ತಿತ್ವವನ್ನು ಪ್ರಕಟಪಡಿಸುತ್ತವೆ. ತಿರುಮಲ ದೇವಸ್ಥಾನದಲ್ಲಿ ‘ಜಕ್ಕುಲ ಕುನ್ನಾಯಿ’ ಎಂಬವಳು ೯-೭-೧೪೮೧ರಂದು ಹಾಕಿಸಿದ ಒಂದು ಶಾಸನ ಆಂಧ್ರದಲ್ಲಿ ಜಕ್ಕರ ವೈಭವವನ್ನು ಸಾರುತ್ತದೆ. ಈ ಮೇಲಿನ ಆಧಾರಗಳಿಂದ ಆಂಧ್ರಪ್ರದೇಶಕ್ಕೂ ಯಕ್ಷಗಾನಕ್ಕೂ ನಿಕಟವಾದ ಸಂಬಂಧವಿದೆ ಎಂಬುದು ಪ್ರಕಟವಾಗುತ್ತದೆ.

ಯಕ್ಷಗಾನದ ಉಗಮ : ಆಂಧ್ರದಲ್ಲಿ ಕಲಾಕುಶಲರಾದ ‘ಜಕ್ಕುಲು, ಬವಿನೀಡುಲು’ ಮುಂತಾದವರು ಅತಿ ಪ್ರಾಚೀನ ಕಾಲದಿಂದಲೂ ಇದ್ದಾರೆಂದೂ ಅವರು ವೀರ ನಾರೀಮಣಿಗಳನ್ನು ಕುರಿತು ಹಾಡುತ್ತಿದ್ದರೆಂದೂ ಆಡುತ್ತಿದ್ದರೆಂದೂ ಪಂಚಾಗ್ನುಲ ಆದಿನಾರಾಯಣಶಾಸ್ತ್ರಿ ಅವರು ಹೇಳಿದ್ದಾರೆ. ಈ ಜಕ್ಕರ ಗಾನವೇ ಯಕ್ಷಗಾನವಾಯಿತೆಂದು ಇವರ ವಾದ.

ವೇಟೂರು ಪ್ರಭಾರಕಶಾಸ್ತ್ರಿ ಅವರು ಕುರವಂಜಿಗಳೇ ಯಕ್ಷಗಾನಗಳಾದುವೆಂದು ಅಭಿಪ್ರಾಯ ಪಟ್ಟಿದ್ದಾರೆ. ಕುರವರ (ಕೊರವರು) ಅಂಜೆ (ಹೆಜ್ಜೆ) ಕುರುವಂಜಿ ಅಥವಾ ಕೊರವಂಜಿಯಾಯಿತೆಂದು ಅವರ ಅಭಿಪ್ರಾಯ. ಆದರೆ ಕೊರವಂಜಿ ಸಂಪ್ರದಾಯದ ರೂಪಕಗಳು ಹದಿನೇಳನೆಯ ಶತಮಾನದವರೆಗೂ ಕಂಡುಬರುವುದಿಲ್ಲ. ತಂಜಾವೂರನ್ನು ಆಳಿದ ಶಹಾಜೀ ಆಸ್ಥಾನಕವಿ ದರ್ಭಾ ಗಿರಿ ರಾಜಕವಿ (ಕ್ರ.ಶ. ೧೬೮೪ – ೧೭೧೨) ‘ರಾಜಮೋಹನ ಕೊರವಂಜಿ’ಯನ್ನು ಬರೆದಿದ್ದಾನೆ. ಇವೇ ‘ಕೊರವಂಜಿ’ ಎಂಬ ಹೆಸರಲ್ಲಿ ಮೊದಲು ಹೊರಬಂದ ತೆಲುಗು ರೂಪಕಗಳು. ಕೊರವಂಜಿ ಪಾತ್ರವುಳ್ಳ ಯಕ್ಷಗಾನಕ್ಕೇ ‘ಕೊರವಂಜಿ’ ಎಂಬ ಹೆಸರಿದೆ ಎಂದೂ ಹೇಳಬಹುದು.

ನೇಲಟೂರಿ ವೆಂಕಟರಮಣಯ್ಯ ಅವರು ಗೊಂಬೆಯಾಟವೇ ಯಕ್ಷಗಾನವಾಯಿತೆಂದು ಹೇಳುತ್ತಾ, “ಯಕ್ಷಗಾನಗಳು ಮತ ಪ್ರಚಾರಕ್ಕಾಗಿ ಹುಟ್ಟಿದುವೇ ಹೋರತು ವಿನೋದಕ್ಕಾಗಿ ಅಲ್ಲ…ಮತ ಪ್ರಬೋಧಕ್ಕಾಗಿ ನಮ್ಮ ಪ್ರಾಚೀನರು ಅನುಸರಿಸಿದ ಮಾರ್ಗಗಳಲ್ಲಿ ಪುರಾಣ, ಇತಿಹಾಸಾದಿಗಳ ಕಥೆಗಳನ್ನು ಜನಸಾಮಾನ್ಯಕ್ಕೆ ಕಣ್ಣಿಗೆ ಕಟ್ಟಿದಂತೆ ಪ್ರದರ್ಶಿಸಿ ತೋರಿಸುವುದೊಂದು…. ಇಂತಹ ಪ್ರದರ್ಶನಗಳು ಮೊದಲು ದಾರುಗೊಂಬೆಗಳಿಂದಲೂ ನಡೆಯುತ್ತಿದ್ದವು… ಕಾಲಕ್ರಮದಲ್ಲಿ ಗೊಂಬೆಗಳ ಬದಲಾಗಿ ಮನುಷ್ಯರೇ ಪ್ರದರ್ಶಿಸಿದರೆ ಹೆಚ್ಚು ಪ್ರಯೋಜನಶೀಲವೆಂಬ ಅಭಿಪ್ರಾಯ ಏರ್ಪಟ್ಟಿತು…” (ಮಧುರ ತಂಜಾವೂರು ನಾಯಕ ರಾಜುಲ ನಾಟಿ ಆಂಧ್ರ ವಾಙ್ಮಯ ಚರಿತ್ರ – ೫ನೆಯ ಪ್ರಕರಣ). ಆದರೆ ಗೊಂಬೆಯಾಟಗಳ ಪ್ರದರ್ಶನಗಳನ್ನು ಕಾಣಬಹುದು. ಈ ಎರಡಕ್ಕೂ ಜನ್ಯ ಜನಕ ಸಂಬಂಧವಿದೆ ಎಂದು ಹೇಳಿದರೆ ಯಕ್ಷಗಾನ ಶಬ್ದದ ವ್ಯುತ್ಪತ್ತಿಯ ರಹಸ್ಯವನ್ನೂ ಅದು ಬಿಡಿಸಲಾರದು.

ಸಂಸ್ಕೃತ ರೂಪಕಗಳೇ ಯಕ್ಷಗಾನಕ್ಕೆ ಮೂಲವೆಂದೂ ಕೆಲವರ ಅಭಿಪ್ರಾಯವಾಗಿದೆ. ಹರಿಕಥೆಯಿಂದ ಯಕ್ಷಗಾನ ಉತ್ಪತ್ತಿ ಆಯಿತೆಂದು ಇನ್ನೂ ಕೆಲವರ ಅಭಿಪ್ರಾಯ. ಕಥಕ್ಕಳಿಯಿಂದ ಯಕ್ಷಗಾನ ಹುಟ್ಟಿದೆ ಎಂದು ಕೆಲವರು ಹೇಳಿರುವರು. ಈ ಅನೇಕ ಅಭಿಪ್ರಾಯಗಳಲ್ಲಿ ಜಕ್ಕರ ಗಾನವೇ ಯಕ್ಷಗಾನವಾಯಿತೆಂಬ ವಾದವೇ ಬಹುಮಟ್ಟಿಗೆ ಸಮಂಜಸವಾಗಿ ತೋರುತ್ತಿದೆ.

ದೇಸಿ ನಾಟಕ : ಯಕ್ಷಗಾನ ಒಂದು ದೇಸಿ ನಾಟಕ. ತೆಲುಗು ಯಕ್ಷಗಾನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ದ್ವಿಪದಿ ಅಚ್ಚ ತೆಲುಗು ಛಂದಸ್ಸು ಆಗಿದೆ. ಯಕ್ಷಗಾನವನ್ನೇ ತೆಲುಗಿನಲ್ಲಿ ಅನೇಕ ನಾಮಗಳಿಂದ ಕರೆಯಲಾಗುತ್ತಿದೆ. ಕೆಲವರು ನಾಟಕವೆಂದೂ, ಕೆಲವರು ಪ್ರಬಂಧವೆಂದೂ, ಕುರವಂಜಿ ಎಂದೂ, ಪಲ್ಲಕ್ಕಿ ಸೇವಾ ಪ್ರಬಂಧವೆಂದೂ ಯಕ್ಷಗಾನವನ್ನು ಕರೆದಿದ್ದಾರೆ. ಇವು ‘ಮಧುರ ಕವಿತೆ’ಗೆ ಸೇರಿದ ಪ್ರಕಾರಗಳೆಂದು ಲಕ್ಷಣಕಾರರು ತೆಲುಗಿನಲ್ಲಿ ಹೇಳಿರುತ್ತಾರೆ. ಯಕ್ಷಗಾನಗಳಲ್ಲಿ ಬಳಕೆಯಾಗುವ ವಿಷಯಗಳನ್ನು ಕುರಿತು ಶ್ರೀ ಪ್ರಭಾಕರ ಶಾಸ್ತ್ರಿ ಅವರು ಹೀಗೆ ಹೇಳಿದ್ದಾರೆ. “ಯಕ್ಷಗಾನಗಳಲ್ಲಿ ನಾವು ಕಾಣುವ ಪ್ರಧಾನ ಗೇಯ ರಚನೆಗಳು ದೇಸಿ ಪದಗಳಾದ ರಗಳೆಗಳನ್ನು ಕೊಂಚ ಮಾರ್ಪಡಿಸಿ ತ್ರಿಪುಟೆ, ಜಂಪೆ, ಏಕ, ಅಟ ಎಂಬ ತಾಳಗಳಿಗೆ ಅನುಗುಣವಾಗಿ ಹೇಳಿದರೂ ಅವುಗಳಿಗೆ ಬೇರೆ ಬೇರೆ ಹೆಸರುಗಳನ್ನು ತಿಳಿಸಲಿಲ್ಲ. ಮೇಲಿನ ರಚನೆಗಳೇ ಅಲ್ಲದೆ ಯಕ್ಷಗಾನಗಳಲ್ಲಿ ಇನ್ನೂ ಅನೇಕ ವಿಧವಾದ ದೇಸಿ ರಚನೆಗಳು ಸೇರಿದುವು. ಏಳೆ, ಚೌಪದಿ, ಷಟ್ಪದಿ, ಮಂಜರಿ, ಜಕ್ಕುಲರೇಕು ಮುಂತಾದುವು.” ಮೇಲೆ ಹೆಸರಿಸಿದುವುಗಳೇ ಅಲ್ಲದೆ ಸೀಸ, ಕಂದ, ರಚ್ಚರೇಕು ಮುಂತಾದುವೂ ಸಹ ಯಕ್ಷಗಾನಗಳಲ್ಲಿ ಸ್ಥಾನವನ್ನು ಪಡೆದಿವೆ.

ಯಕ್ಷಗಾನ ಚರಿತ್ರೆಯಲ್ಲಿ ಕ್ರಿ.ಶ. ಹದಿನೇಳನೆಯ ಶತಮಾನಕ್ಕೆ ಹಿಂದಿನದಕ್ಕೆ ಅಜ್ಞಾತ ಯುಗವೆಂದು ಹೇಳಬಹುದು. ಗಾನರೂಪವಾದ ಜಕ್ಕರ ಪ್ರದರ್ಶನಗಳಿಂದ ಆ ಕಾಲದಲ್ಲಿ ಅದು ಇತ್ತೆಂದು ಊಹಿಸಲು ಸಾಧ್ಯತೆಯಿದೆ. ಇದರೊಂದಿಗೆ ಆಟದ ಪ್ರಸಕ್ತಿ ಮೊಟ್ಟ ಮೊದಲು ಬರುವುದು ಪಾಲ್ಕುರಿಕೆ ಸೋಮನಾಥನ ಪಂಡಿತಾರಾಧ್ಯ ಚರಿತ್ರೆಯಲ್ಲಿ. ಆ ಕಾಲದಲ್ಲಿ ನಾಟಕಗಳು, ಬಹುರೂಪಗಳು, ಗೊಂಬೆಯಾಟಗಳು ಇದ್ದುವೆಂದು ಪಂಡಿತಾರಾಧ್ಯ ಚರಿತ್ರೆಯಿಂದ ತಿಳಿಯುತ್ತದೆ. ತ್ರಿಪುರ ವಿಜಯ, ಕಾಮದಹನ, ಅರ್ಧನಾರೀಶ್ವರ, ಅಂಧಕ ಗಂಧಗಜಾಸುರ ವಧೆ, ದಕ್ಷಾದ್ವರ ಧ್ವಂಸ, ಕ್ಷೀರ ಸಾಗರ ಮಥನ, ಸಿರಿಯಾಳ ಚರಿತ್ರೆ ಮುಂತಾದುವು ಅಂದಿನ ನಾಟಕಗಳ ಕಥಾಂಶಗಳೆಂದು ಪಾಲ್ಕುರಿಕೆ ಸೋಮನಾಥನೇ ಬಸವಪುರಾಣದಲ್ಲಿ ಹೇಳಿರುತ್ತಾನೆ. ಇವೆಲ್ಲ ಪಂಡಿತಾರಾಧ್ಯ ಚರಿತ್ರೆಯಿಂದ ತಿಳಿಯುತ್ತದೆ. ಇವೆಲ್ಲ ವಿಧಿನಾಟಕಗಳೆಂದು (ಬಯಲಾಟ) ಊಹಿಸಲು ಸಾಧ್ಯತೆಯಿದೆ. ‘ಕ್ರೀಡಾಭಿರಾಮ’ ಎಂಬ ಗ್ರಂಥದಲ್ಲಿ (೧೫ನೆಯ ಶತಮಾನ) ಮಾಚಲ್ದೇವಿ ಚರಿತ ನಾಟಕವೂ ಒಂದು ಬಯಲಾಟವೇ.

ತೆಲುಗಿನಲ್ಲಿ ಮೊದಲನೆಯ ಯಕ್ಷಗಾನ : ಕ್ರಿ.ಶ. ಹದಿನೈದನೆಯ ಶತಮಾನದ ಉತ್ತರಾರ್ಧದಲ್ಲಿ ಪ್ರೋಲುಗಂಟಿ ಚೆನ್ನಶೌರಿ ಎಂಬುವನು ‘ಸೌಭರಿ ಚರಿತಮು’ ಎಂಬ ‘ಜಕ್ಕುಲ ಕಥ’ ಬರೆದಿದ್ದಾನೆ. ಈ ಹೆಸರಿನಲ್ಲಿ ಇನ್ನು ಯಾವ ಸಾಹಿತ್ಯ ಪ್ರಕಾರವೂ ಇಲ್ಲದಿರುವುದರಿಂದ ‘ಸೌಭರಿ ಚರಿತೆ’ ಯಕ್ಷಗಾನವೆಂದೇ ಊಹಿಸಬಹುದಾಗಿದೆ. ಹದಿನೈದನೆಯ ಶತಮಾನದಲ್ಲೇ ತೆಲುಗಿನಲ್ಲಿ ಯಕ್ಷಗಾನಗಳಿವೆ ಎಂದು ಹೇಳಲು ಮತ್ತೊಂದು ಆಧಾರವೂ ಸಿಕ್ಕಿದೆ. ಕ್ರಿ.ಶ. ೧೫೦೦ ಪ್ರಾಂತದವನಾದ ವೆಲ್ಲಂಕಿ ತಾತಂಭಟ್ಟು ‘ಕವಿ ಚಿಂತಾಮಣಿ’ ಎಂಬ ತನ್ನ ಲಕ್ಷಣ ಗ್ರಂಥದಲ್ಲಿ “ಲಕ್ಷ್ಮೀ ಕಲ್ಯಾಣದಿಂದ ಒಂದು ರೇಕು” ಎಂದು ಉದಾಹರಣೆಯನ್ನು ಕೊಟ್ಟಿರುತ್ತಾನೆ. ‘ರೇಕುಗಳೆಂಬ ರಚನೆಗಳು ಕೇವಲ ಯಕ್ಷಗಾನಗಳಲ್ಲಿ ಮಾತ್ರ ಬಳಸಲ್ಪಟ್ಟಿವೆ. ಆದುದುರಿಂದ ಲಕ್ಷ್ಮೀ ಕಲ್ಯಾಣ ಯಕ್ಷಗಾನವೇ ಆಗಿರಬೇಕು. ಆದರೆ ಅದೂ ಲಭಿಸಿಲ್ಲ. ಹದಿನಾರನೆಯ ಶತಮಾನದ ಪೂರ್ವಭಾಗದಲ್ಲಿದ್ದ ಚಿತ್ರ ಕವಿ ಪೆದ್ದನ ತನ್ನ ‘ಲಕ್ಷಣ ಸಾರ ಸಂಗ್ರಹ’ದಲ್ಲೇ ಯಕ್ಷಗಾನದಲ್ಲಿ ಬಳಸಲಾಗುವ ‘ತ್ರಿಪುಟರೇಕು’, ‘ರಚ್ಚರೇಕು’ ಮುಂತಾದವುಗಳ ಲಕ್ಷಣಗಳನ್ನು ಹೇಳಿರುತ್ತಾನೆ. ಈ ಮೇಲಿನ ಎಲ್ಲ ವಿಚಾರಗಳಿಂದ ಹದಿನೈದನೆಯ ಶತಮಾನದಲ್ಲೇ ತೆಲುಗಿನಲ್ಲಿ ಯಕ್ಷಗಾನ ಪ್ರಚಾರವಾಗಿತ್ತೆಂದು ಹೇಳಬಹುದು.

ಲಕ್ಷ್ಯ ಯಕ್ಷಗಾನಗಳು : ತೆಲುಗಿನಲ್ಲಿ ಇದುವರೆಗೂ ಲಭ್ಯವಾದ ಯಕ್ಷಗಾನಗಳಲ್ಲಿ ಚಕ್ರಪುರಿ ರಾಘವಾಚಾರ್ಯನ ‘ವಿಪ್ರನಾರಾಯಣ ಚರಿತ್ರೆ’ ಮೊದಲನೆಯದೆಂದು ಹೇಳಬಹುದು. ಕಂದುಕೂರಿ ರುದ್ರ ಕವಿ ಎಂಬುವರು ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಬರೆದ ‘ಸುಗ್ರೀವ ವಿಜಯಮು’ ಮೊದಲ ಯಕ್ಷಗಾನ ಎಂದು ತೆಲುಗಿನಲ್ಲಿ ಪಂಡಿತರು ಹೇಳುತ್ತಿದ್ದರು. ಆದರೆ ‘ವಿಪ್ರನಾರಾಯಣ ಚರಿತ್ರ’ವೇ ಮೊದಲನೆಯದು. ರಾಘವಾಚಾರ್ಯರು ೧೫೧೦-೪೫ ಕಾಲದವರು. ಈ ಯಕ್ಷಗಾನದಲ್ಲಿ ಹನ್ನೆರಡು ಜನ ಆಳ್ವಾರರಲ್ಲಿ ಒಬ್ಬರಾದ ವಿಪ್ರನಾರಾಯಣ ಚರಿತ್ರೆ ವರ್ಣಿಸಲ್ಪಟ್ಟಿದೆ.

ಪೆದಕೆಂಪರಾಯನು (ಹಿರಿಯ ಕೆಂಪೇಗೌಡ) ರಚಿಸಿದ ‘ಗಂಗಾ ಗೌರೀ ವಿಲಾಸ’ವೆಂಬ ತೆಲುಗು ಯಕ್ಷಗಾನ ಲಭ್ಯವಾಗಿದೆ. ತಾನೇ ಪ್ರತಿಷ್ಠಾಪನೆ ಮಾಡಿದ ಸೋಮೇಶ್ವರ ಸ್ವಾಮಿಗೆ ಈ ಯಕ್ಷಗಾನವನ್ನು ಅವನು ಅರ್ಪಿಸಿದ್ದಾನೆ. ಇವನೇ ಬೆಂಗಳೂರು ನಗರವನ್ನು ನಿರ್ಮಿಸಿದ ಹಿರಿಯ ಕೆಂಪೇಗೌಡ. ಗಂಗಾ ಗೌರೀ ವಿಲಾಸವನ್ನು ಬರೆದವನು ಇವನ ಮೊಮ್ಮಗನಾದ ಇಮ್ಮಡಿ ಕೆಂಪೇಗೌಡನೆಂದು ಕೆಲವರು ಹೇಳುವರು. ಆದರೆ ಆ ಯಕ್ಷಗಾನದಲ್ಲಿ ಎಲ್ಲೂ ‘ಇಮ್ಮಡಿ’ ಎಂಬ ಹೆಸರಿಲ್ಲ. ಅದೂ ಅಲ್ಲದೆ ಸೋಮೇಶ್ವರ ಸ್ವಾಮಿಯನ್ನು ಪ್ರತಿಷ್ಠಾಪಿಸಿದವನು ಹಿರಿಯ ಕೆಂಪೇಗೌಡನೇ ಹೊರತು ಇಮ್ಮಡಿ ಕೆಂಪೇಗೌಡ ಅಲ್ಲ. ಗಂಗಾ ಗೌರೀ ವಿಲಾಸ ಅಸಂಪೂರ್ಣವಾಗಿದೆ.

ಲಭ್ಯವಾಗಿರುವ ಯಕ್ಷಗಾನಗಳಲ್ಲಿ ಮುದ್ರಿತವಾದ ಮೊದಲನೆಯ ಯಕ್ಷಗಾನ ಕಂದುಕೂರಿ ರುದ್ರ ಕವಿ ಬರೆದ ‘ಸುಗ್ರೀವ ವಿಜಯಮು’ ರುದ್ರ ಕವಿ ಶ್ರೀಕೃಷ್ಣ ದೇವರಾಯನ ಆಸ್ಥಾನದಲ್ಲಿದ್ದನೆಂದು ಹಲವರು ಹೇಳಿರುವರು. ಇಬ್ರಾಹೀಂ ಷಾ ಎಂಬುವನಿಂದ ಚಿಂತಲಪಾಲೆಂ ಎಂಬ ಅಗ್ರಹಾರವನ್ನು ಪಡೆದ ರುದ್ರಕವಿ ಇವನೇ ಆದ್ದರಿಂದ ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲಿ ಇದ್ದನೆಂಬುದೇ ಬಹಳ ಜನರ ಅಭಿಪ್ರಾಯವಾಗಿದೆ. ಸೀತಾನ್ವೇಷಣಪರರಾದ ರಾಮ ಲಕ್ಷ್ಮಣರು ಸುಗ್ರೀವನೊಡನೆ ಸ್ನೇಹ ಮಾಡಿ, ವಾಲಿಯನ್ನು ವಧಿಸಿ ಸುಗ್ರೀವನಿಗೆ ಪಟ್ಟಾಭಿಷೇಕ ಮಾಡುವುದು ಇದರಲ್ಲಿರುವ ಕಥೆ. ಈ ಯಕ್ಷಗಾನದಲ್ಲಿ ದ್ವಿಪದಿಗಳು, ಏಳೆಗಳು, ದರವುಗಳು, ಅರ್ಧಚಂದ್ರಿಕೆಗಳು ಬಳಸಲ್ಪಟ್ಟಿವೆ. ನೇಲಟೂರಿ ವೆಂಕಟರಮಣಯ್ಯ ಅವರು “ರಚನಾವಿಧಾನವನ್ನು ನೋಡಿದರೆ ಅದು ಆರಂಭ ರಚನೆಯಲ್ಲ ಎಂದು ಹೇಳಬೇಕು. ಪರಿಪೂರ್ಣತೆ ಇಲ್ಲದಿದ್ದರೂ ರಚನಾ ಸಂಪ್ರದಾಯ ಚೆನ್ನಾಗಿ ಏರ್ಪಟ್ಟಿದೆ” ಎಂದು ಬರೆದಿದ್ದಾರೆ.

ಆಂಧ್ರಪ್ರಾಂತ್ಯದ ಯಕ್ಷಗಾನಗಳು : ಆಂಧ್ರಪ್ರದೇಶವನ್ನು ಸಾಮಾನ್ಯವಾಗಿ ಆಂಧ್ರ, ತೆಲಂಗಾಣ, ರಾಯಲಸೀಮ ಎಂದು ಮೂರು ವಿಭಾಗಗಳಿಂದ ಕರೆಯುವುದುಂಟು. ಯಕ್ಷಗಾನಗಳು ಹೆಚ್ಚಾಗಿ ಬೆಳೆದದ್ದು ತಂಜಾವೂರಿನಲ್ಲಿ. ಹದಿನೇಳನೆಯ ಶತಮಾನದಿಂದ ಆಂಧ್ರ ಸಾಹಿತ್ಯ ತಂಜಾವೂರು, ಮಧುರೆಗಳಲ್ಲೇ ಬೆಳೆದು ಅದಕ್ಕೆ ದಕ್ಷಿಣಾಂಧ್ರ ವಾಙ್ಮಯ ಎಂದು ಹೆಸರು ಬಂದಿದೆ. ವಿಜಯನಗರದ ನಾಯಕ ರಾಜರು ಅಲ್ಲಿ ನೆಲೆಸಿದ್ದರು. ಮಹಾರಾಷ್ಟ್ರ ರಾಜರು ಸಹ ತೆಲುಗಿಗೆ ಹೆಚ್ಚು ಪ್ರೋತ್ಸಾಹವನ್ನು ಕೊಟ್ಟರು.

ಯಕ್ಷಗಾನಗಳನ್ನು ತೆಲುಗಿನಲ್ಲಿ ಸ್ಥೂಲವಾಗಿ ಆಂಧ್ರ ಯಕ್ಷಗಾನಗಳು, ದಕ್ಷಿಣಾಂಧ್ರ ಯಕ್ಷಗಾನಗಳು, ತೆಲಂಗಾಣಾ ಯಕ್ಷಗಾನಗಳು ಎಂದು ವಿಭಜಿಸಿಕೊಳ್ಳಬಹುದು. ಆಂಧ್ರದ ಯಕ್ಷಗಾನಗಳಲ್ಲಿ ಸುಗ್ರೀವ ವಿಜಯದ ಅನಂತರ ಪ್ರಶಸ್ತವಾದಂಥ ಅನೇಕ ಯಕ್ಷಗಾನಗಳು ಹೊರಬಂದಿವೆ. ಅಹೋಬಲ ಕವಿ ಬರೆದ ಗರುಡಾಚಲ ವಿಲಾಸವೆಂಬ ಯಕ್ಷಗಾನ ಅತ್ಯಂತ ಪ್ರಸಿದ್ಧವಾಗಿದ್ದು ಅನೇಕ ತಲೆಮಾರುಗಳಿಂದ ಪ್ರದರ್ಶನಗಳನ್ನು ಹೊಂದುವ ಅದೃಷ್ಟವನ್ನು ಪಡೆದಿದೆ. ಹದಿನಾರನೆಯ ಶತಮಾನದ ಉತ್ತರಾರ್ಧದಲ್ಲೇ ವೆಂಕಟಾದ್ರಿ ರಚಿತ ವಾಸಂತಿಕಾ ಪರಿಣಯ, ಬಾಲಪಾಪಾಂಬ ವಿರಚಿತ ಅಕ್ಕಮಹಾದೇವಿ ಚರಿತ್ರೆ ಹೊರಬಂದವು.

ಕ್ರಿ.ಶ. ೧೫೭೫-೧೬೩೨ ಕಾಲದವನಾದ ಕಂಕಂಟಿ ಪಾಪರಾಜು ವಿಷ್ಣುಮಾಯಾ ವಿಲಾಸವೆಂಬ ಅತಿಪ್ರಸಿದ್ಧ ಯಕ್ಷಗಾನವನ್ನು ಬರೆದಿದ್ದಾನೆ. ಪಾಪರಾಜನ ಸಮಕಾಲೀನನೇ ಆದ ತೇಕುಮಳ್ಳ ರಂಗಶಾಯಿ ‘ಜಾನಕೀ ಪರಿಣಯ’ವೆಂಬ ಯಕ್ಷಗಾನವನ್ನು ಬರೆದಿದ್ದಾನೆ. ಚೆನ್ನಶೌರಿ, ಅಹೋಬಲಕವಿ ರಾಯಲಸೀಮಾದವರು. ಕಂದುಕೂರಿ ರುದ್ರಕವಿ, ಪಾಪರಾಜು, ರಂಗಶಾಯಿ ಆಂಧ್ರ ಪ್ರಾಂತ್ಯದ ನೆಲ್ಲೂರಿನವರು.

ಹದಿನೇಳನೆಯ ಶತಮಾನದಿಂದ ಹೆಚ್ಚಾಗಿ ಯಕ್ಷಗಾನ ತಂಜಾವೂರು ಮಧುರೆಗಳ ಆಶ್ರಯದಲ್ಲಿ ಬೆಳೆದಿದೆ. ೧೫೫೦ ಪ್ರಾಂತ್ಯದಲ್ಲಿ ತಂಜಾವೂರು ಮಧುರೆಗಳಲ್ಲಿ ವಿಜಯ ನಗರದ ಅರಸರ ಸಾಮಂತರಾದ ನಾಯಕರ ಪ್ರಭುತ್ವ ಆರಂಭವಾಯಿತು. ಕ್ರಿ.ಶ.೧೫೬೫ರಲ್ಲಿ ಜರುಗಿದ ‘ರಕ್ಷಸತಂಗಡಿ’ ಯುದ್ಧದ ಪರ್ಯವಸಾನವಾಗಿ ವಿಜಯ ನಗರ ಆಸ್ಥಾನದ ಆಶ್ರಿತರಾದ ಕವಿಗಳು, ಕಲಾವಿದರೆಲ್ಲರೂ ದಕ್ಷಿಣ ದೇಶಕ್ಕೆ ಹೊರಟರು. ಅನಂತರ ಅಲ್ಲಿ ಆಂಧ್ರ ಸಾಹಿತ್ಯ ದಿನದಿನ ಪ್ರವರ್ಧಮಾನವಾಯಿತು.

ದಕ್ಷಿಣಾಂಧ್ರದ ಯಕ್ಷಗಾನಗಳು : ತಂಜಾವೂರಿನಲ್ಲಿ ಯಕ್ಷಗಾನಕ್ಕೆ ರಾಜಯೋಗ ಪ್ರಾಪ್ತವಾಯಿತು. ಆ ಕಾಲ ಯಕ್ಷಗಾನದ ಸ್ವರ್ಣಯುಗವೆಂದು ಕರೆಯಲಾಗಿದೆ. ಆ ಕಾಲದ ಯಕ್ಷಗಾನಗಳು ನಾಟಕಗಳೆಂಬ ಹೆಸರನ್ನು ಪಡೆದುವು. ‘ನಟ್ಟುವ ಮೇಳ’ದವರಿಂದ ಅವು ಪ್ರದರ್ಶಿತವಾಗುತ್ತಿದ್ದವು. ‘ದರುವು’ಗಳಿಗೆ ಪ್ರಾಧಾನ್ಯ ಕಡಿಮೆಯಾಗಿದ್ದಾಗ ಯಕ್ಷಗಾನಕ್ಕೆ ಪ್ರಾಧಾನ್ಯ ಹೆಚ್ಚಿತು. ಪದಗಳು, ಜನಪದ ಗೀತೆಗಳು ಹೆಚ್ಚಾಗಿ ಸೇರಿದವು. ಗದ್ಯಭಾಗವೂ ಹೆಚ್ಚಾಯಿತು. ಸಂಭಾಷಣಾತ್ಮಕ ಶೈಲಿ ಆರಂಭವಾಯಿತು. ರಂಗಪ್ರಯೋಗ ಸೂಚನೆಗಳೂ ಇಲ್ಲಿ ಸಿಕ್ಕುತ್ತವೆ. ಸಮಕಾಲೀನ ವೃತ್ತಾಂತಗಳು ಕಥಾವಿಷಯಗಳಾದವು. ವಿಜಯ ರಾಘವ ಮುಂತಾದ ಅರಸರ ವಿವಾಹಗಳು, ಶೃಂಗಾರ ವೃತ್ತಾಂತಗಳು ಪ್ರಧಾನ ವಿಷಯಗಳಾದುವು.

ನಾಯಕ ರಾಜರಲ್ಲಿ ಮೊದಲ ರಾಜ ಕವಿ ರಘುನಾಥನಾಯಕ (ಕ್ರಿ.ಶ. ೧೬೦೦-೧೬೩೧) ಅನೇಕ ತೆಲುಗು ಗ್ರಂಥಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಗಜೇಂದ್ರ ಮೋಕ್ಷ, ರುಕ್ಮಿಣೀ ಕೃಷ್ಣ ವಿವಾಹ, ಜಾನಕೀ ಪರಿಣಯವೆಂಬ ಯಕ್ಷಗಾನಗಳೂ ಇವೆ. ಆದರೆ ಇವು ಲಭ್ಯವಾಗುತ್ತಿಲ್ಲ.

ರಘುನಾಥ ನಾಯಕನ ಮಗ ವಿಜಯರಾಘವ ನಾಯಕ (೧೬೩೩-೧೬೭೩). ಇವನ ಕಾಲ ತೆಲುಗು ಯಕ್ಷಗಾನಗಳ ಸುವರ್ಣ ಯುಗ. ಈತ ಅನೇಕ ಯಕ್ಷಗಾನಗಳನ್ನು ಬರೆದದ್ದೇ ಅಲ್ಲದೆ ತನ್ನ ಸಭಾಸ್ಥಾನದಲ್ಲಿ ಯಕ್ಷಗಾನಗಳನ್ನು ಪ್ರಯೋಗಿಸಿದವನು. ವಿಜಯರಾಘವ ಬರೆದ ಅನೇಕ ಯಕ್ಷಗಾನಗಳಲ್ಲಿ ಈಗ ಐದು ಮಾತ್ರ ಲಭಿಸುತ್ತಿವೆ. ೧. ಕಾಳಿಯ ಮರ್ದನ, ೨. ರಘುನಾಥಾಭ್ಯುದಯ, ೩. ವಿಪ್ರನಾರಾಯಣ ಚರಿತ್ರಮು, ೪. ಪೂತನಾ ಹರಣಮು, ೫. ಪ್ರಹ್ಲಾದ ಚರಿತ್ರಮು ಇನ್ನೂ ರಾಜಗೋಪಾಲವಿಲಾಸ, ಚೆಂಗಮಲವಲ್ಲೀ ಪರಿಣಯ, ರತಿಮನ್ಮಥವಿಲಾಸ, ಪಾರಿಜಾತಾಪಹರಣ, ಉಷಾಪರಿಣಯ, ಕೃಷ್ಣವಿಲಾಸ ಮುಂತಾದ ಯಕ್ಷಗಾನಗಳನ್ನೂ ಅವನು ರಚಿಸಿದನೆಂದು ಪ್ರಹ್ಲಾದ ಚರಿತ್ರೆಯಿಂದ ತಿಳಿದುಬರುತ್ತದೆ. ವಿಜಯರಾಘವನೇ ಯಕ್ಷಗಾನ ಸಾಹಿತ್ಯದ ಪಿತಾಮಹನೆಂದು ಕೆಲವರು ಹೇಳುವಷ್ಟು ಮಟ್ಟಿಗೆ ಅವನು ಈ ಸಾಹಿತ್ಯವನ್ನು ಪೋಷಿಸಿದ. ಈತ ಯಕ್ಷಗಾನಗಳನ್ನು ರಚಿಸುವುದೇ ಅಲ್ಲದೆ ತನ್ನ ಆಸ್ಥಾನದಲ್ಲಿ ಹಲವಾರು ಯಕ್ಷಗಾನಗಳು ರಚಿತವಾಗಲು ಪ್ರೋತ್ಸಾಹವನ್ನು ಕೊಟ್ಟಿರುತ್ತಾನೆ. ರಂಗಾಜಮ್ಮ, ಕೋನೇಟಿ ದೀಕ್ಷಿತುಡು, ಪುರುಷೋತ್ತಮ ದೀಕ್ಷಿತುಡು, ಕಾಮರಸು ವೆಂಕಟಪತಿ, ಮನ್ನಾರು ದೇವುಡು ಮುಂತಾದವರು ವಿಜಯರಾಘವನ ಪ್ರೋತ್ಸಾಹದಿಂದಾಗಿ ಯಕ್ಷಗಾನಗಳನ್ನು ರಚಿಸಿದ್ದಾರೆ.

ವಿಜಯರಾಘವನ ‘ನಾಟಕ’ಗಳಲ್ಲಿ ವಿಪ್ರನಾರಾಯಣ ಚರಿತ್ರೆ ಆತನ ವಿಷ್ಣುಭಕ್ತಿಯ ಪ್ರದರ್ಶನ, ಹನ್ನೆರಡು ಜನ ಆಳ್ವಾರಲ್ಲಿ ಒಬ್ಬನಾದ ತೊಂಡರಡಿಪ್ಪೊಡಿ ಆಳ್ವಾರನಿಗೇ ವಿಪ್ರನಾರಾಯಣನೆಂದು ಹೆಸರು. ವಿಜಯರಾಘವನು ಈ ಕಥೆ ನಡೆದ ಶ್ರೀರಂಗವನ್ನು ಮನ್ನಾರುಗುಡಿಗೆ ಮಾರ್ಪಡಿಸಿದ. ಮನ್ನಾರುಗುಡಿ ತಂಜಾವೂರು ಬಳಿಯಿರುವ ಪುಣ್ಯ ಕ್ಷೇತ್ರ. ಮೂಲಕಥೆಯಲ್ಲಿ ಬರುವ ಚೋಳರಾಜನ ಸ್ಥಾನವನ್ನು ವಿಜಯರಾಘವನೇ ಆಕ್ರಮಿಸಿದ.

ವಿಜಯರಾಘವನ ರಘುನಾಥನಾಯಕಾಭ್ಯುದಯದಲ್ಲಿ ಆತನ ತಂದೆಯಾದ ರಘುನಾತನ ದಿನಚರಿ ವರ್ಣಿತವಾಗಿದೆ. ಆ ಕಾಲದ ನಾಯಕ ರಾಜರ ಜೀವನವನ್ನು ಇದು ಪ್ರತಿಬಿಂಬಿಸುತ್ತದೆ. ಸೀಸ, ಕೈವಾರ, ದ್ವಿಪದಿ, ದರುವು, ವಚನಗಳು ಇತ್ಯಾದಿ ಈ ಯಕ್ಷಗಾನ ನಾಟಕದಲ್ಲಿದೆ. ವಿಜಯರಾಘವನ ಕಾಲಕ್ಕೆ ತೆಲುಗು ಯಕ್ಷಗಾನ ನಾಟಕವೆಂಬ ಹೆಸರನ್ನು ಪಡೆಯಿತು. ವಿಜಯರಾಘವ ಮುಂತಾದವರು ತಮ್ಮ ರಚನೆಗಳನ್ನು ನಾಟಕಗಳೆಂದೇ ಕರೆದಿದ್ದಾರೆ. ಇವರೆಲ್ಲ ಸಂಸ್ಕೃತ ನಾಟಕ ಸಂಪ್ರದಾಯಗಳನ್ನು ಚೆನ್ನಾಗಿ ಅರಿತವರಾದುದರಿಂದ ಕೆಲವನ್ನು ತಮ್ಮ ಯಕ್ಷಗಾನಗಳಲ್ಲೂ ಸೇರಿಸಿ ಅವುಗಳಿಗೆ ನಾಟಕಗಳೆಂದು ಹೆಸರಿಟ್ಟಿದ್ದಾರೆ. ಈ ರೂಪಕಗಳ ವೈಶಿಷ್ಟ್ಯಗಳನ್ನು ನಿಡದವೋಲು ವೆಂಕಟರಾವು ಮುಂತಾದವರು ಕೆಳಗಿನ ಅಭಿಪ್ರಾಯಗಳಿಂದ ಸೂಚಿಸಿದ್ದಾರೆ. ೧. ನಾಯಕ ರಾಜರ ಕಾಲದ ಯಕ್ಷಗಾನಗಳು ಪ್ರದರ್ಶನಯೋಗ್ಯವಾದುವು. ೨. ಸಂಸ್ಕೃತ ನಾಟಕಗಳಲ್ಲಿ ಸಂಸ್ಕೃತ ಪ್ರಾಕೃತಗಳು ಬಳಕೆಯಾದ ಸ್ಥಳಗಳಲ್ಲಿ ಗ್ರಾಂಥಿಕ ಮತ್ತು ವ್ಯವಹಾರ ಭಾಷೆಗಳನ್ನು ಬಳಸಿದ್ದಾರೆ. ೩. ನಾಂದೀ ಪ್ರಸ್ಥಾವನೆಗಳ ಬದಲಾಗಿ ಕೈವಾರವಿದೆ. ೪. ಇಷ್ಟದೇವತಾ ಸ್ತುತಿ ಇರುತ್ತದೆ. ೫. ಕೆಲವು ರೂಪಕಗಳಲ್ಲಿ ಭರತ ವಾಕ್ಯವಿದೆ.

ವಿಜಯರಾಘವನ ಆಸ್ಥಾನದಲ್ಲಿ ರಂಗಾಜಮ್ಮ ಎಂಬುವಳು ‘ಮನ್ನಾರುದಾಸ ವಿಲಾಸ’ವೆಂಬ ಅತ್ಯಂತ ಪ್ರಸಿದ್ಧ ಯಕ್ಷಗಾನವನ್ನು ಬರೆದಿದ್ದಾಳೆ. ಆಕೆ “ವಿಚಿತ್ರತರ ಪತ್ರಿಕಾಶತ ಲಿಖಿತ ವಾಚಿಕಾರ್ಥಾವಗಾಹನ ಪ್ರವೀಣ, ತತ್ಪ್ರತಿ ಪತ್ರಿಕಾ ಶತ ಸ್ವಹಸ್ತ ಲೇಖನ ಪ್ರಶಸ್ತ ಕೀರ್ತಿ, ಶೃಂಗಾರ ರಸ ತರಂಗಿತ ಪದಕವಿತ್ವ ಮಹನೀಯ ಮತಿಸ್ಫೂರ್ತಿ, ಅತುಲಿತ ಅಷ್ಟ ಭಾಷಾಕವಿತ ಸರ್ವಂಕಷ ಮನೀಷಾ ವಿಶೇಷ ವಿಶಾರದ, ರಾಜನೀತಿ ವಿದ್ಯಾ ವಿಶಾರದ, ವಿಜಯರಾಘವ ಮಹೀಪಾಲ ವಿರಚಿತ ಕನಕಾಭಿಷೇಕ, ವಿದ್ವಿತ್ಕವಿಜನಸ್ತವನೀಯ ವಿವೇಕ…” ಎಂದು ಹೇಳಲಾಗಿದೆ. ಮನ್ನಾರುದಾಸ ವಿಲಾಸದಲ್ಲಿ ಕಾಂತಿಮತಿಯೊಡನೆ ವಿಜಯರಾಘವನ ವಿವಾಹವನ್ನು ರಂಗಾಜಮ್ಮ ವರ್ಣಿಸಿದಳು. ಈ ರೂಪದಲ್ಲಿ ಇವಳು ತನ್ನ ಪಾಂಡಿತ್ಯವನ್ನು ಪ್ರದರ್ಶಿಸುವ ಸಲುವಾಗಿ ಅಪಭ್ರಂಶ, ಪ್ರಾಕೃತ, ಪೈಶಾಚಿ, ಶೌರಸೇನಿ, ಮಾಗಧಿ, ದೇಸಿ ಎಂಬ ಭಾಷಾ ವಿಶೇಷಗಳನ್ನು ಬಳಸಿದಳು.

ವಿಜಯರಾಘವನ ಕಾಲದಲ್ಲಿ ಹೊರಬಂದ ನಾಟಕಗಳಲ್ಲಿ ಕಾಮರಸು ವೆಂಕಟಪತಿ ರಚಿಸಿದ ವಿಜಯರಾಘವನ ಚಂದ್ರಿಕಾ ವಿಹಾರ, ಕೋನೇಟಿ ದೀಕ್ಷಿತನ ವಿಜಯರಾಘವ ಕಲ್ಯಾಣ, ಪುರುಷೋತ್ತಮ ದೀಕ್ಷಿತನ ತಂಜಾವೂರು ಅನ್ನದಾನ ಮಹಾನಾಟಕ ಹೆಸರಿನ ತಕ್ಕವು. ವಿಜಯರಾಘವನ ಪುತ್ರನಾದ ಮನ್ನಾರುದೇವನೂ ಯಕ್ಷಗಾರಕಾರನೇ. ಇವನು ಹೇಮಾಬ್ಜನಾಯಿಕಾ ಪರಿಣಯವೆಂಬ ಯಕ್ಷಗಾನವನ್ನು ಬರೆದಿದ್ದಾನೆ. ಇದರಲ್ಲಿ ಪದಗಳು, ದವಳಗಳು, ದ್ವಿಪದಿಗಳು, ಪದ್ಯಗಳು, ವಚನಗಳು ಬಳಸಲ್ಪಟ್ಟಿವೆ.

ನಾಯಕ ರಾಜರಾದ ಮೇಲೆ ತಂಜಾವೂರನ್ನು ಮಹಾರಾಷ್ಟ್ರ ರಾಜರು ಆಳಿದರು. ಅವರ ಕಾಲದಲ್ಲೂ ಅನೇಕ ಯಕ್ಷಗಾನಗಳು ರಚಿತವಾಗಿವೆ. ಶಹಾಜೀ ವಿಜಯರಾಘವನಿಗೆ ತುಲ್ಯನಾದವನು. ಇವನು ಯಕ್ಷಗಾನಗಳನ್ನು ಅನೇಕ ವಿಧವಾಗಿ ಬಳಸಿಕೊಂಡು ವೈವಿಧ್ಯಪೂರ್ಣವಾದ ಸಾಹಿತ್ಯವನ್ನು ಸೃಷ್ಟಿಸಿದ್ದಾನೆ. ಇವನು ಬರೆದ ಯಕ್ಷಗಾನಗಳು ಇವು : ೧. ಕಿರಾತ ವಿಲಾಸ, ೨. ಕೃಷ್ಣಲೀಲಾ ವಿಲಾಸ, ೩. ಗಂಗಾಪಾರ್ವತೀ ಸಂವಾದ, ೪. ಜಲಕ್ರೀಡಲು, ೫. ತ್ಯಾಗರಾಜ ವಿನೋದ ಚಿತ್ರಪ್ರಬಂಧ ನಾಟಕ, ೬. ದ್ರೌಪದೀ ಕಲ್ಯಾಣ, ೭. ಪಂಚರತ್ನ ಪ್ರಬಂಧ, ೮. ಪಾರ್ವತೀ ಕಲ್ಯಾಣ, ೯. ರತೀ ಕಲ್ಯಾಣ, ೧೦. ರಾಮ ಪಟ್ಟಾಭಿಷೇಕ, ೧೧. ರುಕ್ಮಿಣೀ ಸತ್ಯಭಾಮಾ ಸಂವಾದ, ೧೨. ವಲ್ಲೀ ಕಲ್ಯಾಣ, ೧೩. ವಿಘ್ನೇಶ್ವರ ಕಲ್ಯಾಣ, ೧೪. ವಿಷ್ಣು ಪಲ್ಲಕಿ ಸೇವಾ ಪ್ರಬಂಧ, ೧೫. ಶಂಕರ ಪಲ್ಲಕಿ ಸೇವಾ ಪ್ರಬಂಧ, ೧೬. ಶಚೀ ಪುರಂದರಮು, ೧೭. ಶಾಂತಾ ಕಲ್ಯಾಣ, ೧೮. ಸತಿದಾನ ಶೂರಮು, ೧೯. ಸತೀಪತಿದಾನ ವಿಲಾಸ, ೨೦. ಸೀತಾ ಕಲ್ಯಾಣ, ೨೧. ಭಕ್ತವತ್ಸಲ ನಾಟಕ.

ಶಹಾಜೀ ನಾಟಕಗಳು ಪ್ರಯೋಗಕ್ಕೆ ಅನುಕೂಲವಾದುವು. ಗ್ರಂಥದ ಆರಂಭದಲ್ಲಿ ದ್ವಿಪದಿಗಳಲ್ಲಿ ಕಥೆ ಸಂಕ್ಷಿಪ್ತವಾಗಿರುತ್ತದೆ. ಪಾತ್ರಗಳಿಗೆ ಉಚಿತವಾದ ಭಾಷೆ ಬಳಸಲಾಗಿದೆ. ತ್ಯಾಗ ವಿನೋದ ಚಿತ್ರ ಪ್ರಬಂಧ ನಾಟಕದಲ್ಲಿ ಅಂಕ ವಿಭಾಗವೂ ಇದೆ.

ಶಹಾಜೀ ಆಸ್ಥಾನದಲ್ಲಿ ಗಿರಿರಾಜಕವಿ ಇದ್ದ. ಇವನು ೧. ಶಾಹೇಂದ್ರ ವಿಜಯ, ೨. ರಾಜಮೋಹನ ಕೊರವಂಜಿ, ೩. ಲೀಲಾವತೀ ಕಲ್ಯಾಣ, ೪. ವಾದಚಯ, ೫. ಸರ್ವಾಂಗ ಸುಂದರೀ ವಿಲಾಸ ಮುಂತಾದ ಯಕ್ಷಗಾನಗಳನ್ನು ಬರೆದಿದ್ದಾನೆ. ಈ ಕಾಲದಲ್ಲೇ ಮಥುರ ರಾಜ್ಯದ ವಿಜಯರಂಗ ಚೊಕ್ಕನಾಥನ ಆಸ್ಥಾನದಲ್ಲಿ ತಿರುಮಲಕವಿ ಚಿತ್ರಕೂಟ ಮಹಾತ್ಮ್ಯವನ್ನು ಬರೆದಿದ್ದಾನೆ.

ಮೈಸೂರು ರಾಜ್ಯದಲ್ಲೂ ತೆಲುಗು ಯಕ್ಷಗಾನಗಳು ಬಹಳವಾಗಿ ರಚಿತವಾಗಿವೆ. ಮೈಸೂರು ರಾಜ್ಯದಲ್ಲಿ ಕಂಠೀರವ ರಾಜ (ಮೂಕರಸು) ಇವರಲ್ಲಿ ಮುಖ್ಯನು. ತೆಲುಗಿನಲ್ಲಿ ಸುಮಾರು ೧೪ ಯಕ್ಷಗಾನಗಳನ್ನು ಇವನು ರಚಿಸಿದ್ದಾನೆ. ೧. ಕೊರವಂಜಿ ಕಟ್ಲೆ, ೨. ಪಂಚಾಯುಧ ಕಟ್ಲೆ, ೩. ವಸಂತೋತ್ಸವ ವಿಲಾಸ, ೪. ಕಲಾವಾಣೀ ವಿಲಾಸ, ೫. ನಾಟ್ಯವಿದ್ಯಾ ವಿಲಾಸ, ೬. ವಸಂತೋತ್ಸವ ವಿಲಾಸ, ೭. ವಿಭಕ್ತಿ ಕಾಂತಾ ವಿಲಾಸ, ೮. ಅಷ್ಟ ದಿಕ್ಪಾಲಕ ವಿಲಾಸ, ೯. ಜಾನಕಿ ನಾಟಕ, ೧೦. ವೈವಸ್ವತ ನಾಟಕ, ೧೧. ನೈರುತಿ ನಾಟಕ, ೧೨. ವಾರುಣಿ ನಾಟಕ, ೧೩. ವಾಯವಿ ನಾಟಕ, ೧೪. ಕೌಬೇರಿ ನಾಟಕ ಇವನ ರಚನೆಗಳು.

ತೆಲಂಗಾಣಾ ಯಕ್ಷಗಾನ : ೧೭೮೦ರ ಶೇಷಾಚಲಕವಿ ವಿರಚಿತ ಧರ್ಮಪುರಿ ರಾಮಾಯಣ, ರಾಪಾಕ ಶ್ರೀರಾಮಕವಿ ವಿರಚಿತ ಆಧ್ಯಾತ್ಮ ರಾಮಾಯಣ ತೆಲಂಗಾಣಾ ಪ್ರಾಂತ್ಯದ ತೆಲುಗು ಯಕ್ಷಗಾನಗಳಲ್ಲಿ ಮೊದಲನೆಯವು. ೧೮೦೦ ಸುಮಾರು ಕಾಲದಲ್ಲಿ ವೀರಶೈವ ಯಕ್ಷಗಾನಗಳು ಕೆಲವು ಲಭಿಸುತ್ತವೆ. ಇಪ್ಪತ್ತನೆಯ ಶತಮಾನದಲ್ಲಿ ಮಾತ್ರ ತೆಲಂಗಾಣ ಪ್ರಾಂತ್ಯದಲ್ಲಿ ಶತಾಧಿಕ ಯಕ್ಷಗಾನಗಳು ರಚಿತವಾಗಿವೆ. ಇಂದಿಗೂ ತೆಲುಗು ಯಕ್ಷಗಾನ ತೆಲಂಗಾಣ ಪ್ರಾಂತ್ಯದಲ್ಲೇ ಸಜೀವವಾಗಿದೆ. ಚೆರ್ವಿರಾಲ ಭಾಗಯ ಅವರು ಮೂವತ್ತು ನಾಲ್ಕು ಯಕ್ಷಗಾನಗಳನ್ನು ಬರೆದಿದ್ದಾರೆ. ಇವು ಪುರಾಣ, ಐತಿಹಾಸಿಕ, ಕಾಲ್ಪನಿಕ ವಸ್ತುಗಳನ್ನು ಒಳಗೊಂಡಿವೆ. ಇವರ ಯಕ್ಷಗಾನಗಳು ವೈವಿಧ್ಯದಿಂದ ಕೂಡಿವೆ. ತೆಲಂಗಾಣಾದಲ್ಲಿ ಹೊರಬಂದ ಯಕ್ಷಗಾನಗಳು ಹೆಚ್ಚಾಗಿ ಪ್ರದರ್ಶನ ಯೋಗ್ಯವಾದುವು. ಅವುಗಳನ್ನು ಪ್ರದರ್ಶಿಸಲು ‘ಮೇಳ’ಗಳೂ ಅಲ್ಲಿವೆ.

ಯಕ್ಷಗಾನದ ಸಾಂಪ್ರದಾಯಿಕ ಪಾತ್ರಗಳು : ತೆಲುಗು ಯಕ್ಷಗಾನಗಳಲ್ಲಿ ಸರ್ವೇಸಾಮಾನ್ಯವಾಗಿ ಕಂಡುಬರುವ ಕೆಲವು ಪಾತ್ರಗಳಿವೆ. ಸಾಮಾನ್ಯವಾಗಿ ಅವು ವಿನೋದ ಪ್ರಧಾನವಾದಂಥವು. ಈ ಪಾತ್ರಗಳ ಹಾಸ್ಯ ಪ್ರವೃತ್ತಿಯಲ್ಲಿ ಸಾಮಾನ್ಯ ಜೀವನದ ಅನುಭವಗಳು ತುಂಬಿರುತ್ತವೆ. ಈ ಕೆಳಗಿನವು ಅಂತಹ ಸಂಪ್ರದಾಯ ಪಾತ್ರಗಳಲ್ಲಿ ಕೆಲವು :

೧. ಸಿಂಗಿ ಸಿಂಗಡು : ಕೊರವ ಎಂಬ ಬೆಟ್ಟದ ಜಾತಿಯವರಾದ ದಂಪತಿಗಳಿವರು. ಗರುಡಾದ್ರಿ ನಾರಸಿಂಹನ ವಂಶದವರೆಂದು ಅವರ ನಂಬಿಕೆ. ಸಿಂಗನಿಗೆ ಬೇಟೆ ವೃತ್ತಿ. ಸಿಂಗಿ ಜ್ಯೋತಿಷ್ಯ ಹೇಳುವಳು. ಕೊರವಂಜಿ ಎಂಬ ಯಕ್ಷಗಾನದಲ್ಲಿ ಕೊರವ ಸ್ತ್ರೀ ಪಾತ್ರ ತಪ್ಪದೆ ಇರುತ್ತದೆ. ಜ್ಯೋತಿಷ್ಯ ಹೇಳುವಾಗ ಎಲ್ಲ ದೇವತೆಗಳ ಹೆಸರುಗಳಲ್ಲಿ ಕೊಲ್ಹಾಪುರದ ಲಕ್ಷ್ಮಿ ಹೆಸರು ಖಂಡಿತ ಇರುತ್ತದೆ. ಅವಳು ಜ್ಯೋತಿಷ್ಯ ಹೇಳಿ ಮುಗಿಸಿದೊಡನೆ ಸಿಂಗ ಬರುತ್ತಾನೆ. ಅವರಿಬ್ಬರಿಗೂ ಸಂವಾದ ಇರುತ್ತದೆ. ಇದು ಹಾಸ್ಯನಯವಾದದ್ದು.

೨. ಮಂತ್ರಸಾನಿ : ಪ್ರಹ್ಲಾದ, ಮಾರ್ಕಂಡೇಯ, ಧರ್ಮಾಂಗದ, ಕೃಷ್ಣ ಮುಂತಾದವರ ಜನ್ಮ ಕಾಲದಲ್ಲಿ ಇವನು ಬರುತ್ತಾನೆ.

೩. ಮಾಧವಿ : ಇದೂ ಒಂದು ಗಂಡು ಪಾತ್ರ. ಭಾಮಾಕಲಾಪಗಳಲ್ಲಿ ತಪ್ಪದೆ ಇರುತ್ತಾನೆ. ಪಾರಿಜಾತಾಪಹರಣ ಕಥೆಯಲ್ಲಿ ಇದ್ದೇ ಇರುವನು. ಸೂತ್ರಧಾರನಂಥವನು ವಿದೂಷಕನಂತೆ ಹಾಸ್ಯ ಪ್ರಸಂಗಗಳು ಮಾಡುತ್ತಾನೆ. ಪಾತ್ರಗಳನ್ನು ಪ್ರೇಕ್ಷಕರಿಗೆ ಪರಿಚಯ ಮಾಡುತ್ತಾನೆ. ನಾಯಿಕಾ ನಾಯಕರಿಗೆ ಶೃಂಗಾರ ಸಹಾಯಕನೂ ಆಗಿರುವನು.

೪. ಸುಂಕರಿ ಕೊಂಡಡು : ಗೊಲ್ಲ ಕಲಾಪಗಳಲ್ಲಿ ಇವನದು ಪ್ರತ್ಯೇಕ ಪಾತ್ರ. ಮೊಸರು ಮಾರುವುದಕ್ಕೆ ಬಂದ ‘ಗೊಲ್ಲ ಭಾಮೆ’ಯನ್ನು ಸುಂಕ ಕಟ್ಟಬೇಕೆಂದೂ ಇಲ್ಲದಿದ್ದರೆ ಚುಂಬನ ಕೊಡಬೇಕೆಂದೂ ಕಾಡಿಸುವನು. ಇಬ್ಬರಿಗೂ ವಿವಾದ ನಡೆಯುತ್ತದೆ. ಸುಂಕರಿ ಕೃಷ್ಣ ಪಾತ್ರದ ಸಂಕೇತ.

ಇನ್ನು ಕೇತಿನಾಯುಡು, ಹಾಸ್ಯಗಾಡು, ಜೋಸಿ, ಸುಯಿಣಿ ಮುಂತಾದವರೂ ಇದ್ದಾರೆ. ‘ನಾಟಕ ಪಾತ್ರಲು’ ಎಂಬ ಗ್ರಂಥ ತಂಜಾವೂರಿನ ಸರಸ್ವತೀ ಮಹಲು ಗ್ರಂಥಾಲಯದಲ್ಲಿದೆ. ಇದರಲ್ಲಿ ಯಕ್ಷಗಾನಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಪಾತ್ರಗಳ ವಿಚಾರವಿದೆ.

ಯಕ್ಷಗಾನ ರಚನೆ – ವಿವಿಧ ಅಂಗಗಳು : ಯಕ್ಷಗಾನದಲ್ಲಿ ಹೆಚ್ಚಾಗಿ ರಗಳೆ, ದ್ವಿಪದಿ ಬಳಸಲ್ಪಟ್ಟಿವೆ. ತೆಲುಗಿನಲ್ಲಿ ಲಕ್ಷಣಕಾರರು ಒಂಬತ್ತು ವಿಧವಾದ ರಗಳೆಗಳನ್ನು ಹೇಳಿದ್ದಾರೆ. ಈ ರಗಳೆಗಳನ್ನು ಹೋಲುವ ರಚನೆಗಳನ್ನೇ ಯಕ್ಷಗಾನಗಳಲ್ಲಿ ಬಳಸಲಾಗಿದೆ. ಪ್ರಧಾನವಾಗಿ ಯಕ್ಷಗಾನದಲ್ಲಿ ಬಳಕೆಯಾಗುವ ರಚನಾಂಗಗಳನ್ನು ರೇಕು, ದರುವು, ದ್ವಿಪದಿ, ಪದ್ಯ, ಗದ್ಯ, ಪದ ಎಂದು ಹೇಳಬಹುದು. ರೇಕುಗಳಲ್ಲಿ ತ್ರಿಪುಟ ರೇಕು, ಜಂಪೆರೇಕು, ರಚ್ಚರೇಕು, ಏಕತಾಳ, ಅಟತಾಳಮು, ಆದಿತಾಳರೇಕು, ಮಟಿಮೆರೇಕು, ನಡರೇಕು ಮುಂತಾದುವಿದೆ. ದರುವುಗಳಲ್ಲಿ ಕೊರವಂಜಿ ದರುವು, ಜಕ್ಕಿಣೀ ದರುವು, ಕೋಲಾಟ ದರುವು, ವೃತ್ತ ದರುವು ಮುಂತಾದುವಿದೆ. ಇವೆಲ್ಲ ದೇಸಿ ರಚನೆಗಳಾಗಿದ್ದು ಯಕ್ಷಗಾನಕ್ಕೆ ದೇಸಿ ಸಾಹಿತ್ಯದಲ್ಲಿರುವ ಸ್ಥಾನವನ್ನು ಪ್ರಕಟಗೊಳಿಸುತ್ತವೆ.

ಆಂಧ್ರ ಸಾಹಿತ್ಯದ ಅನೇಕ ಪ್ರಕಾರಗಳಲ್ಲಿ ಯಕ್ಷಗಾನವೂ ಒಂದು ವೈಶಿಷ್ಟ್ಯಪೂರ್ಣ ಸ್ಥಾನವನ್ನು ಪಡೆದಿದೆ. ಲಭ್ಯವಾಗಿರುವ ಯಕ್ಷಗಾನಗಳೇ ಸುಮಾರು ಆರುನೂರು ತೆಲುಗಿನಲ್ಲಿವೆ. ಹೆಸರು ಗೊತ್ತಿದ್ದು ಅಲಭ್ಯವಾಗಿರುವ ಯಕ್ಷಗಾನಗಳ ಸಂಖ್ಯೆ ಮುನ್ನೂರು. ತಿಳಿಯದ ಯಕ್ಷಗಾನಗಳಿಗೆ ಆ ಸಾಹಿತ್ಯದಲ್ಲಿ ಮಹತ್ವಪೂರ್ಣ ಸ್ಥಾನವನ್ನು ಕೊಡಲು ಸಂಶಯವಿರಬೇಕಾಗಿಲ್ಲ. “ಆಧ್ರ ಯಕ್ಷಗಾನ ವಾಙ್ಮಯ ಚರಿತ್ರ” ಎಂಬ ಮಹಾ ಪ್ರಬಂಧವನ್ನು ಸಲ್ಲಿಸಿ ಎಸ್ಟೀ. ಜೋಗಾರಾವ್ ಪಿಎಚ್.ಡಿ ಪಡೆದಿದ್ದಾರೆ. ಇನ್ನೂ ಅನೇಕರು ಈ ಕ್ಷೇತ್ರದಲ್ಲಿ ದುಡಿದಿದ್ದಾರೆ; ದುಡಿಯುತ್ತಿದ್ದಾರೆ.

ಆರ್.ವಿ.ಎಸ್.

57_70A_DBJK-KUH

ಯಕ್ಷಗಾನ ಕರ್ನಾಟಕದ ಯಕ್ಷಗಾನ – ಬಯಲಾಟಗಳಲ್ಲಿ ಪ್ರಾದೇಶಿಕವಾಗಿ ಅನೇಕ ಪ್ರಭೇದಗಳನ್ನು ಗುರುತಿಸಬಹುದು. ಕರಾವಳಿ ಯಕ್ಷಗಾನ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಪ್ರಚಲಿತವಿರುವ ಒಂದು ರಂಗ ಸಂಪ್ರದಾಯ. ಇದು ಕೇವಲ ಕರ್ನಾಟಕಕ್ಕೆ ಸಂಬಂಧಿಸಿದಂತೆ ಇರುವ ರಂಗ ಸಂಪ್ರದಾಯವಲ್ಲ. ಇಂತಹುದೇ ರಂಗ ಸಂಪ್ರದಾಯಗಳು ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೇರಳಗಳಲ್ಲಿ ದೊರೆಯುತ್ತವೆ. ಆಂಧ್ರದ ‘ವಿಧಿನಾಟಕಮು’, ತಮಿಳುನಾಡಿನ ‘ತೆರುಕ್ಕೂತ್ತು’ ಮತ್ತು ಕೇರಳದ ‘ಕಥಕ್ಕಳಿ’ – ಇವು ಯಕ್ಷಗಾನವನ್ನೇ ಹೋಲುವಂಥವು. ಕಥಕ್ಕಳಿಯ ವೇಷಭೂಷಣ ಹಿಮ್ಮೇಳ ಇವು ಯಕ್ಷಗಾನಕ್ಕೆ ತೀರಾ ಸಮೀಪವಾದವು. ಕಥಕ್ಕಳಿಯಲ್ಲಿ ಯಕ್ಷಗಾನದಂತೆ ಮಾತುಗಳಿಲ್ಲ; ಮುದ್ರೆಗಳಿವೆ. ತೆಲುಗಿನ ‘ಭಾಮಾ ಕಲಾಪಮು’ ಪ್ರಸಂಗದಲ್ಲಿ ಭಾಗವತರು ಮತ್ತು ಸತ್ಯಭಾಮೆ ನಡೆಸುವ ಸಂಭಾಷಣೆಗೂ ಯಕ್ಷಗಾನಕ್ಕೂ ಹೋಲಿಕೆ ಇದೆ. ಕೂಚಿಪುಡಿ ನೃತ್ಯದಲ್ಲೂ ಯಕ್ಷಗಾನದ ಗತ್ತನ್ನು ಗುರುತಿಸಬಹುದಾಗಿದೆ. ಭರತನ ನಾಟ್ಯ ಶಾಸ್ತ್ರದಲ್ಲಿ ಬರುವ ಉಲ್ಲೇಖಗಳಿಂದ ಯಕ್ಷಗಾನವು ಪ್ರಾಚೀನ ಕಲಾಪ್ರಕಾರಗಳಲ್ಲೊಂದು ಎನ್ನಬಹುದು. ಶಿವರಾಮ ಕಾರಂತರು ಯಕ್ಷಗಾನ ರಂಗಭೂಮಿ ಕ್ರಿ.ಶ. ೧೪೦೦-೧೫೦೦ ಅವಧಿಯಲ್ಲಿ ಹುಟ್ಟಿರಬಹುದೆಂದು ಊಹಿಸಿದ್ದಾರೆ.

58_70A_DBJK-KUH

ಕರಾವಳಿ ಯಕ್ಷಗಾನದಲ್ಲಿ ಪ್ರಾದೇಶಿಕ ಪ್ರಭೇದಗಳಿವೆ. ಇದಕ್ಕೆ ‘ತಿಟ್ಟು’ ಎಂದು ಹೆಸರು. ಕರಾವಳಿ ಯಕ್ಷಗಾನದಲ್ಲಿ ಮುಖ್ಯವಾಗಿ ತೆಂಕುತಿಟ್ಟು, ಬಡಗುತಿಟ್ಟು, ಬಡಬಡಗುತಿಟ್ಟು ಎಂದು ಮೂರು ಶೈಲಿಗಳಿವೆ. ಯಕ್ಷಗಾನಕ್ಕೆ ದಶಾವತಾರ, ಬಯಲಾಟ, ಭಾಗವತರಾಟ ಎಂಬ ಹೆಸರುಗಳಿವೆ.

ಆಟ ಆಡಿಸುವ ಸ್ಥಳ ರಂಗಸ್ಥಳ. ನಾಲ್ಕು ಬಿದಿರು ಅಥವಾ ಕಂಬಗಳನ್ನು ಕಟ್ಟಿ ಮಾವಿನ ತೋರಣಗಳಿಂದ ಅಲಂಕರಿಸಲಾಗುತ್ತದೆ. ಹಿಮ್ಮೇಳದವರಿಗೆ ಕುಳಿತುಕೊಳ್ಳಲು ಒಂದು ಮಂಚ ಅಥವಾ ಮೇಜು, ಪಾತ್ರಧಾರಿಗಳಿಗೆ ಕುಳಿತುಕೊಳ್ಳಲು ಒಂದು ಕುರ್ಚಿ ಇಡಲಾಗುವುದು. ಯಕ್ಷಗಾನಕ್ಕೆ ಹಿಮ್ಮೇಳ ಒದಗಿಸುತ್ತಿರುವ ವಾದ್ಯ ಪರಿಕರಗಳೆಂದರೆ ಚಂಡೆ, ಮದ್ದಳೆ, ಶ್ರುತಿ, ತಾಳ ಇಲ್ಲವೆ ಜಾಗಟೆ. ತೆಂಕು ತಿಟ್ಟಿನದು ಅಬ್ಬರದ ಮದ್ದಳೆ. ಅದರ ಗಾತ್ರವೂ ದೊಡ್ಡದು. ಚಂಡೆಯನ್ನು ತೆಂಕಿನಲ್ಲಿ ನಿಂತೇ ಬಾರಿಸುವುದು ಪದ್ಧತಿ.

ಯಕ್ಷಗಾನದಲ್ಲಿ ಬಳಸುವ ವೇಷಭೂಷಣಗಳೆಲ್ಲ ಒಂದೇ ಮಾದರಿಯವು. ಬಡಗುತಿಟ್ಟಿನಲ್ಲಿ ಚೌಕಳಿ ಬಟ್ಟೆಯ ಬಳಕೆಯುಂಟು. ಪಗಡೆಯನ್ನು ಅಟ್ಟೆಯಿಂದ ಕಟ್ಟಿ ಜರಿ ಸುತ್ತುವರು. ತಲೆಗೆ ಹಿಂಭಾಗದಲ್ಲಿ ತ್ರಿಕೋನಾಕೃತಿಯಲ್ಲಿ ಶಲ್ಲಿ ಇಳಿಬಿಡಲಾಗುವುದು. ಕೇರಳದ ಕಥಕ್ಕಳಿಯ ವೇಷಭೂಷಣಗಳಿಗೆ ತೆಂಕುತಿಟ್ಟಿನ ವೇಷಭೂಷಣಗಳು ತೀರ ಸಮೀಪ. ಬಡಗಿನಲ್ಲಿ ಕಿರೀಟಗಳಿಗೆ ಕೇದಗೆ ಬಳಸಿದರೆ ತೆಂಕಿನಲ್ಲಿ ಅದಿಲ್ಲ. ಕನ್ನಡಿ ಹರಳುಗಳ ಮತ್ತು ಮುತ್ತಿನ ಹರಳುಗಳ ಬಳಕೆ ತೆಂಕಿನಲ್ಲಿದ್ದರೆ ಮರದ ಆಭರಣಗಳಿಗೆ ಬೇಗಡೆ ಹಚ್ಚಿ ಬಳಸುವುದು ಬಡಗಿನಲ್ಲಿ ರೂಢಿಯಲ್ಲಿದೆ. ತೆಂಕಿನಲ್ಲಿ ಅರ್ಥಗಾರಿಕೆಗೆ ಪ್ರಾಧಾನ್ಯ ಹೆಚ್ಚು. ಬಡಗಿನಲ್ಲಿ ಕುಣಿತ, ಅಭಿನಯಕ್ಕೆ ಪ್ರಾಧಾನ್ಯ. ಬಡಗಿನ ವೈಷಿಷ್ಟ್ಯ ಚಕ್ರಮಂಡಿ ಕುಣಿತ, ದೊಡ್ಡ ದೊಡ್ಡ ಹೆಜ್ಜೆ ಹಾಕಿ ಗಿರಕಿ ಹೊಡೆಯುವುದು ತೆಂಕಿನ ವೈಶಿಷ್ಟ್ಯ.

ಗಾನ ಅಥವಾ ಹಾಡುಗಾರಿಕೆ ಯಕ್ಷಗಾನದ ಪ್ರಮುಖ ಅಂಗ. ಹಾಡುಗಾರಿಕೆ ಇಲ್ಲಿ ಮುಮ್ಮೇಳದ ಕುಣಿತ ಮತ್ತು ಅಭಿನಯಕ್ಕೆ ಪೂರಕ. ಕರ್ನಾಟಕ ಸಂಗೀತದ ದಟ್ಟ ಪ್ರಭಾವವನ್ನು ಹಾಡುಗಾರಿಕೆಯಲ್ಲಿ ಕಾಣಬಹುದು. ಯಕ್ಷಗಾನದ ಪ್ರಮುಖ ಅಂಗ ಕುಣಿತ. ಕುಣಿತಕ್ಕೆ ತಕ್ಕಂತೆ ಅಭಿನಯವಿರಬೇಕಾದದ್ದು ಅನಿವಾರ್ಯ. ಜಿಗಿತ, ಮೈಚಲನೆ, ಅಂಗಚಲನೆ, ಹುಬ್ಬುಗಳ ಚಲನೆ ಇವುಗಳಿಂದ ಪ್ರೇಕ್ಷಕ ತನ್ಮಯನಾಗುವಂತೆ ಮಾಡುವ ಶಕ್ತಿ ಯಕ್ಷಗಾನಕ್ಕಿದೆ. ಯಕ್ಷಗಾನ ಕುಣಿತದಲ್ಲಿ ನವರಸಗಳನ್ನು ಅಭಿವ್ಯಕ್ತಿಸಲು ಅವಕಾಶವಿದೆ. ಅದರಲ್ಲೂ ವೀರ, ಶೃಂಗಾರ, ಹಾಸ್ಯ ಮತ್ತು ಶೋಕ ರಸಗಳ ಬಳಕೆಯೇ ಹೆಚ್ಚು. ಕರಾವಳಿ ಯಕ್ಷಗಾನದಲ್ಲಿ ಲಿಖಿತ ಸಂಭಾಷಣೆಗಳಿಲ್ಲ. ರಾಮಾಯಣ, ಮಹಾಭಾರತ, ಭಾಗವತಗಳಿಂದ ಆಯ್ದುಕೊಂಡ ಆಖ್ಯಾನವನ್ನು ಯಕ್ಷಗಾನದಲ್ಲಿ ಹಾಡಲಾಗುತ್ತದೆ. ಇದಕ್ಕೆ ಪ್ರಸಂಗಗಳೆಂದು ಹೆಸರು.

ಯಕ್ಷಗಾನದ ಪ್ರಾರಂಭದಲ್ಲಿ ಚಂಡೆ ಬಡಿಯಲಾಗುವುದು. ಇದಕ್ಕೆ ಅಬ್ಬರದ ಬಿಡ್ತಿಗೆ ಎಂದೇ ಹೆಸರು. ಇದು ಒಂದು ಊರಿನಲ್ಲಿ ಯಕ್ಷಗಾನ ನಡೆಯಲಿದೆ ಎಂಬುದರ ಸೂಚನೆ. ಚಂಡೆ ಮದ್ದಳೆಗಳ ಝೇಂಕಾರ ಕೇಳಿದೊಡನೆ ಸುತ್ತಲೂ ಇರುವ ಹಳ್ಳಿಗರು ಅಂದಿನ ಆಟವನ್ನು ನೋಡಲು ಸಿದ್ಧರಾಗಿ ಹೊರಡುತ್ತಾರೆ. ಯಕ್ಷಗಾನವೆಂದರೆ ಬೆಳಗಿನವರೆಗೂ ಪ್ರೇಕ್ಷಕರನ್ನು ಮಂತ್ರಮುಗ್ಧರನ್ನಾಗಿಸುವ ಅಪೂರ್ವ ಶಕ್ತಿಯುಳ್ಳ ಕಲೆ.

ರಂಗಸ್ಥಳದ ಸಮೀಪವಿರುವ ನೇಪಥ್ಯವೇ ಚೌಕಿ ಅಥವಾ ಬಣ್ಣದ ಮನೆ. ಭಾಗವತ ಇಲ್ಲಿಗೆ ಹಿಮ್ಮೇಳ ಹಾಗೂ ಪಾತ್ರಧಾರಿಗಳೊಂದಿಗೆ ಆಗಮಿಸುತ್ತಾನೆ. ಯಕ್ಷಗಾನದ ವೇಷಧಾರಿಗಳಿಗೆಲ್ಲ ಅವರವರದೇ ವೇಷಭೂಷಣದ ಪೆಟ್ಟಿಗೆಗಳಿರುತ್ತವೆ. ಇದೇ ಬಣ್ಣದ ಪೆಟ್ಟಿಗೆ ಅಥವಾ ಚಿನ್ನದ ಪೆಟ್ಟಿಗೆ. ಭಾಗವತ ಪಾತ್ರಗಳನ್ನು ಹಂಚಿಯಾದ ಬಳಿಕ ಕಲಾವಿದರೆಲ್ಲ ಅವರವರ ವೇಷಭೂಷಣಗಳನ್ನು ತೆಗೆಯುತ್ತಾರೆ. ತಮ್ಮ ತಮ್ಮ ಬಣ್ಣಗಳನ್ನು ತಾವೇ ಹಚ್ಚಿಕೊಳ್ಳುವುದರಲ್ಲಿ ಇವರೆಲ್ಲ ನಿಪುಣರು. ಸಕೇತು (ಬಿಳಿಬಣ್ಣ), ಅರದಾಳ (ಹಳದಿ ಮಿಶ್ರಿತ ಬಣ್ಣ), ಇಂಗ್ಲಿಕ (ಕೆಂಪು, ಕಪ್ಪು), ಚಿಟ್ಟೆಹಿಟ್ಟು, ಕುಂಕುಮ ಇವೆಲ್ಲ ಯಕ್ಷಗಾನದಲ್ಲಿ ಬಳಸುವ ಬಣ್ಣಗಳು. ಕಲಾವಿದರು ಗೆಜ್ಜೆ ಕಟ್ಟುವ ಮುನ್ನ ಗಣಪತಿಯ ಪೂಜೆಯಾಗಬೇಕು. ದೇವರ ಎದುರು ಹಣ್ಣು ಕಾಯಿ ಗೆಜ್ಜೆಗಳನ್ನಿಡುತ್ತಾರೆ. ಕೋಡಂಗಿ ಆರತಿ ಎತ್ತಿ ಭಾಗವತ ಮತ್ತು ಮದ್ದಳೆಗಾರನಿಗೆ ನೀಡುತ್ತಾನೆ. ಪ್ರಸಾದವನ್ನು ಪಾತ್ರಧಾರಿಗಳಿಗೆ ತಲುಪಿಸುತ್ತಾನೆ. ಅನಂತರ ಇಬ್ಬರು ಕೋಡಂಗಿಗಳ ರಂಗಪ್ರವೇಶವಾಗುವುದು.

ಕೋಡಂಗಿಗಳು ಮನಬಂದಂತೆ ಕುಣಿದು ಕುಪ್ಪಳಿಸಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಕೋಡಂಗಿಗಳ ನಿರ್ಗಮನದ ಬಳಿಕ ಭಾಗವತರಿಂದ ಸಭಾವಂದನೆ. ಅನಂತರ ಇಬ್ಬರು ಕಿರಿಯ ವೇಷಧಾರಿಗಳು ರಂಗದ ಎಡಬಲದಿಂದ ಆಗಮಿಸುವರು. ಇವರು ಬಾಲಗೋಪಾಲರು. ಇವರನ್ನು ಬಲರಾಮ ಕೃಷ್ಣರೆಂದು ಕರೆಯಲಾಗಿದೆ.

ಯಕ್ಷಗಾನದ ಪೂರ್ವರಂಗ ಎಂದು ಕರೆಯಲಾಗುವ ಬಾಲಗೋಪಾಲ, ಸ್ತ್ರೀವೆಷಗಳ ಉದ್ದೇಶ ಮುಂದಿನ ಕಥಾಪ್ರಸಂಗಕ್ಕೆ ಪ್ರೇಕ್ಷಕರನ್ನು ಮಾನಸಿಕವಾಗಿ ಅಣೀಗೊಳಿಸುವುದೇ ಆಗಿದೆ. ಅವರನ್ನು ಧಾರ್ಮಿಕ ಲೋಕಕ್ಕೆ ಕರೆದೊಯ್ಯಲು ಮಾಡುವ ಪೂರ್ವ ಸಿದ್ಧತೆ ಅದು. ಇದಾದ ಬಳಿಕ ಪುನಃ ವಿವಿಧ ದೇವತಾ ಸ್ತುತಿ. ಅನಂತರ ಒಡ್ಡೋಲಗ. ಯಾವ ಆಖ್ಯಾನ ನಡೆಯುವುದೋ, ಅದಕ್ಕೆ ಸಂಬಂಧಿಸಿದ ಒಡ್ಡೋಲಗ ನಡೆಯುವುದು. ರಾಮಾಯಣದಲ್ಲಿ ರಾಮನ ಒಡ್ಡೋಲಗವಾದರೆ, ಮಹಾಭಾರತದ ಪ್ರಸಂಗಗಳಲ್ಲಿ ಪಾಂಡವರ ಒಡ್ಡೋಲಗ, ಭಾಗವತದ್ದಾದರೆ ಶ್ರೀಕೃಷ್ಣನ ಒಡ್ಡೋಲಗ ನಡೆಯುವುದು. ಇದಲ್ಲದೆ ಪ್ರಸಂಗದ ಮಧ್ಯೆ ರಾಕ್ಷಸರ ಒಡ್ಡೋಲಗ, ಕಿರಾತನ ಒಡ್ಡೋಲಗವೂ ಬರುವುದುಂಟು. ಈ ಸಂದರ್ಭಗಳಲ್ಲಿ ಪಾತ್ರಗಳ ಪರಿಚಯವನ್ನು ಪಾತ್ರಗಳೇ ಮಾಡಿಕೊಳ್ಳುತ್ತವೆ. ಒಡ್ಡೋಲಗದಲ್ಲಿ ಕಿರಿಯರಿಂದ ಕುಣಿತ ಪ್ರಾರಂಭವಾಗುವುದು. ಪಾಂಡವರ ಒಡ್ಡೋಲಗದಲ್ಲಿ ಸಹದೇವನಿಂದ ಪ್ರಾರಂಭ. ನೆಲಮುಟ್ಟಿ ಭಾಗವತರಿಗೆ, ಅನಂತರ ರಂಗಸ್ಥಳಕ್ಕೆ ವಂದಿಸಿ ಕುಣಿಯುವರು. ಒಬ್ಬೊಬ್ಬರ ಕುಣಿತದ ಬಳಿಕ ಎಲ್ಲರೂ ತೆರೆಯ ಹಿಂದೆ ಪ್ರೇಕ್ಷಕರಿಗೆ ಬೆನ್ನು ತೋರಿಸಿ ಕುಣಿಯುವರು. ಬಳಿಕ ಒಬ್ಬೊಬ್ಬರೇ ಕುಣಿದು ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವರು. ಪಾಂಡವರ ಒಡ್ಡೋಲಗದಲ್ಲಿ ಹಾಸ್ಯಗಾರ ಅಥವಾ ಹನುಮನಾಯಕ ಬಂದು ಒಬ್ಬೊಬ್ಬರನ್ನಾಗಿ ಹೊಗಳುವುದೂ ಉಂಟು.

ಯಕ್ಷಗಾನದಲ್ಲಿ ನವರಸಗಳನ್ನು ಪ್ರದರ್ಶಿಸಲು ಅವಕಾಶವಿದೆ. ಆದರೆ ವೀರ, ಶೃಂಗಾರ, ಹಾಸ್ಯ, ಶೋಕ ಇವುಗಳಿಗೆ ಹೆಚ್ಚು ಒತ್ತು. ಅದರಲ್ಲೂ ಯಕ್ಷಗಾನವೆಂದರೆ ವೀರರಸ ಪ್ರಧಾನವಾದದ್ದು. ಕುಣಿತದಲ್ಲೂ ಶೃಂಗಾರ, ಹಾಸ್ಯ, ವೀರ ಅಥವಾ ರೌದ್ರ ಎಂದು ವಿಭಾಗಿಸಬಹುದು. ತಮ್ಮ ಶೌರ್ಯದ ಸ್ವಪ್ರಶಂಸೆ ಅಥವಾ ಪರಾಕ್ರಮ ಪ್ರದರ್ಶಿಸುವುವು ಪುರುಷ ವೇಷಗಳು. ಅರ್ಜುನ – ವೃಷಕೇಶು, ವಲಲ – ಭೀಮ ಇತ್ಯಾದಿ. ಯಕ್ಷಗಾನದಲ್ಲಿ ಹೆಚ್ಚಿನ ಪ್ರಸಂಗಗಳೆಲ್ಲ ಕಾಳಗಗಳು, ಕಲ್ಯಾಣಗಳು ಮತ್ತು ವಧೆ. ಅಲಲ್ಲಿ ಪ್ರಹ್ಲಾದ ಚರಿತೆಯಂತಹ ಪ್ರಸಂಗಗಳು ಬರುವುದುಂಟು.

ಕೃಷ್ಣಾರ್ಜುನರ ಕಾಳಗ, ಕರ್ಣಾರ್ಜುನರ ಕಾಳಗ, ಬಭ್ರುವಾಹನ ಕಾಳಗ, ಸುಧನ್ವಾರ್ಜುನ ಕಾಳಗಳಲ್ಲಿ ನಡೆಯುವ ವಾಗ್ವಾದಗಳಲ್ಲಿ ಪರಸ್ಪರರನ್ನು ಹಳಿಯುವ ಪದ್ಯಗಳು ಬರುತ್ತವೆ. ಸ್ತ್ರೀ ಪುರುಷರ ಪರಸ್ಪರ ಆಕರ್ಷಣೆ ಪ್ರೇಮ. ಇದೇ ರತಿ. ಇದು ಸಕಲ ಹೃದಯ ಸಂವಾದಿ. ಆದ್ದರಿಂದಲೇ ಯಕ್ಷಗಾನದಲ್ಲಿ ಇದಕ್ಕೆ ಬಹುಮುಖ್ಯ ಸ್ಥಾನ. ಪ್ರೇಮಿಸಿದವರು ಪರಸ್ಪರ ಕೂಡುವುದು ಒಂದಾದರೆ ಇನ್ನೊಂದು ಅಗಲುವಿಕೆಯಲ್ಲಿ ತೋಡಿಕೊಳ್ಳುವ ಶೃಂಗಾರ ಭಾವ.

ಶೃಂಗಾರರಸವೇ ಪ್ರಧಾನವಾಗಿ ಇರುವ ಪ್ರಸಂಗಗಳಲ್ಲಿ ಚಂದ್ರಾವಳಿ, ರತಿಕಲ್ಯಾಣ, ರತ್ನಾವಳಿ ಕಲ್ಯಾಣ ಮೊದಲಾದವು ಉಲ್ಲೇಖನೀಯ. ಇದಲ್ಲದೆ ಮಧ್ಯ ಬರುವ ಶೃಂಗಾರ ಪ್ರಸಂಗಗಳು ಅನೇಕವಿವೆ. ಭಸ್ಮಾಸುರ ಮೋಹಿಸಿಯನ್ನು ಕಂಡಾಗ ಅವನಲ್ಲಿ ಉಂಟಾಗುವ ತುಮುಲ, ಕೀಚಕ ಸೈರಂಧ್ರಿಯನ್ನು ನೋಡಿದಾಗ ಬಣ್ಣಿಸುವ ಪರಿ, ರಾವಣ ಸೀತೆಯ ಸೌಂದರ್ಯದ ಪ್ರಶಂಸೆಯನ್ನು ಸಹೋದರಿ ಶೂರ್ಪನಖಿಯಿಂದ ಕೇಳಿದಾಗ ಅವನಲ್ಲಿ ಉಂಟಾಗುವ ಭಾವನೆಗಳು ಸೊಗಸಾಗಿವೆ. ಜಲಕ್ರೀಡೆ, ವನವಿಹಾರ, ಋತುವರ್ಣನೆ ಇವೆಲ್ಲ ಶೃಂಗಾರ ಭಾವಗಳು ಪ್ರಕಟವಾಗುವ ಪ್ರಸಂಗಗಳು.

ಹಾಸ್ಯ ಯಕ್ಷಗಾನದ ಎಲ್ಲ ಪ್ರಸಂಗಗಳಲ್ಲೂ ಸಾಮಾನ್ಯವಾಗಿ ಬರುತ್ತದೆ. ನಾರದ, ಕುಬ್ಜೆ, ಪುರೋಹಿತ, ಮಡಿವಾಳ, ಚಾರಕ, ಹನುಮನಾಯಕ, ಬ್ರಾಹ್ಮಣ, ಕೊರವಂಜಿ, ಜೋಯಿಸ, ಕ್ಷೌರಿಕ, ಅಕ್ಕಸಾಲಿ, ಅಂಬಿಗ, ವನಪಾಲಕ ಮೊದಲಾದ ಪಾತ್ರಗಳಲ್ಲಿ ಹಾಸ್ಯ ಕಾಣಿಸಿಕೊಳ್ಳುವುದು.

ಒಂದೆಡೆ ದೈವಿಕತೆಯ ಕಲ್ಪನೆ ಇರುವ ಕತೆ ಇದ್ದರೆ ಇನ್ನೊಂದೆಡೆ ಸಾಮಾಜಿಕ ಅಂಶಗಳಿರುವ ಪಾತ್ರಗಳಿವೆ. ಇದು ಯಕ್ಷಗಾನದ ವೈಶಿಷ್ಟ್ಯ. ಅದ್ಭುತ ವೇಷಗಳ ಜೊತೆಗೆ ಬ್ರಾಹ್ಮಣ, ಮಡಿವಾಳರಂತಹ ಸಾಮಾನ್ಯ ವೇಷಗಳೂ ಬರುತ್ತವೆ.

ಯಕ್ಷಗಾನದಲ್ಲಿ ಗಂಡುವೇಷ, ರಾಕ್ಷಸವೇಷ, ಸ್ತ್ರೀವೇಷ, ವಿದೂಷಕ – ಹೀಗೆ ವಿಭಾಗಿಸಲಾಗಿದೆ. ಭಾಗವತನೇ ಮೊದಲ ವೇಷವೆಂದು ಕರೆಸಿಕೊಂಡರೆ, ಪುರುಷವೇಷ, ಮುಂಡಾಸು ವೇಷಗಳು ಗಂಡು ವೇಷಗಳೆಂದು ಪರಿಗಣಿಸಲಾಗಿದೆ. ಅಭಿಮನ್ಯು, ಬಭ್ರುವಾಹನ, ವೃಷಕೇತು ಮೊದಲಾದ ಎಳೆಯ ಹುಡುಗರ ವೇಷಗಳನ್ನು ಪುಂಡುವೇಷಗಳೆಂದೇ ಕರೆಯಲಾಗಿದೆ. ಸ್ತ್ರೀವೇಷಗಳಲ್ಲೂ ಸಿರಿವೇಷ, ಕಸೆವೇಷಗಳೆಂದು ಎರಡು ವಿಧ. ಪಾರ್ವತಿ, ಶಬರಿವೇಷಗಳಿಗೆ ಉಡುಗುಬ್ಬೆವೇಷ ಎಂದು ಹೆಸರು. ಪ್ರಮೀಳೆ, ಮೀನಾಕ್ಷಿ, ಶಶಿಪ್ರಭಾ ಇವರೆಲ್ಲ ಯುದ್ಧ ಮಾಡುವವರು. ಇವೆಲ್ಲ ಕಸೆ ಸ್ತ್ರೀವೇಷಗಳು. ಉಲೂಪಿ, ದೂತಿ, ಭ್ರಮರಕುಂತಳೆ, ಸಖಿಯರು ಸಹಾಯಕ ಪಾತ್ರಗಳು. ಮಾಯಾಮೃಗ, ಜಟಾಯು, ನರಸಿಂಹ ಮೊದಲಾದ ಪಾತ್ರಗಳಿಗೆ ಮುಖವಾಡಗಳ ಬಳಕೆಯೂ ಇದೆ.

ಯಕ್ಷಗಾನದಲ್ಲಿ ತುಂಬ ಕಲಾತ್ಮಕವಾದದ್ದು ಬಣ್ಣದ ವೇಷ. ಈ ಬೃಹತ್ ವೇಷಗಳು ಸಾಮಾನ್ಯವಾಗಿ ಬರುವುದು ನಡುರಾತ್ರಿಯಲ್ಲಿ. ಅರೆನಿದ್ರೆಯಲ್ಲಿರುವ ಪ್ರೇಕ್ಷಕರನ್ನು ರಾಕ್ಷಸರ ಕೂಗು ಬಡಿದೆಬ್ಬಿಸುತ್ತದೆ. ಮೂರು ಬಾರಿ ಅಬ್ಬರಿಸುತ್ತವೆ. ಅವುಗಳ ಅಬ್ಬರವನ್ನು ಚೌಕಿಯಿಂದಲೇ ಕೇಳಬಹುದು. ಅದಕ್ಕೆ ಸರಿಯಾಗಿ ಚಂಡೆಯ ಬಡಿತ. ರಾಕ್ಷಸ ವೇಷಗಳು ಒಮ್ಮೊಮ್ಮೆ ಪ್ರೇಕ್ಷಕರ ಮಧ್ಯದಿಂದ ರಂಗ ಪ್ರವೇಶಿಸುವುದುಂಟು. ಅವು ಬರುವಾಗ ಎರಡು ದೀವಟಿಗೆಗಳನ್ನು ಹಿಡಿದು ರಾಳದ ಪುಡಿಯನ್ನು ಎರಚಿ ಜ್ವಾಲೆ ಎಬ್ಬಿಸಿ ಭಯಾನಕ ವಾತಾವರಣ ಉಂಟುಮಾಡುವುದಿದೆ. ಬಣ್ಣದ ವೇಷಗಳಲ್ಲಿಯೂ ಹೆಣ್ಣು ಮತ್ತು ಗಂಡು ಎಂದು ಎರಡು ಬಗೆ. ರಾವಣ, ಘಟೋತ್ಕಜ, ಕಾಲಜಂಗ, ಹಿಡಿಂಬ, ಬಕ – ಇವರೆಲ್ಲ ಗಂಡು ಬಣ್ಣದ ವೇಷಗಳು. ಶೂರ್ಪನಖಿ, ಲಂಕಿಣಿ, ಹಿಡಿಂಬಿ, ವ್ರತಜ್ವಾಲೆ ಇವೆಲ್ಲ ಹೆಣ್ಣು ಬಣ್ಣದ ವೇಷಗಳು.

ರಾಕ್ಷಸನ ಒಡ್ಡೋಲಗದ ಕುಣಿತ ಆಕರ್ಷಣೀಯ. ಅಭ್ಯಂಜನ, ಮಧುಪರ್ಕ ಮತ್ತು ಶಿವಪೂಜೆಯನ್ನು ಆತ ತನ್ನ ಅಪೂರ್ವ ಅಭಿನಯದಿಂದ ತೋರಿಸುವನು. ಕರಾವಳಿಯ ಬಣ್ಣದ ವೇಷದಲ್ಲಿ ತೆಂಕುತಿಟ್ಟಿನ ಸಾಧನೆ ಅಪೂರ್ವವಾದದ್ದು.

ರಾಕ್ಷಸನ ಉಗ್ರತೆಯನ್ನು ರಂಗದ ಮೇಲೆ ತೋರಿಸಬೇಕಾದ್ದು ಅತಿಸೂಕ್ಷ್ಮ ಬಣ್ಣಗಾರಿಕೆಯಿಂದ. ಕಣ್ಣಿನ ರೆಪ್ಪೆಯ ಮೇಲೆ ಕಪ್ಪು ಬರೆದು ಅದನ್ನು ಮರೆಸಿ ಹಣೆಯ ಮೇಲೆ ಕಣ್ಣು ಬರೆಯಲಾಗುವುದು. ಅನಂತರ ಅಕ್ಕಿ ಹಿಟ್ಟಿನ ಕುಚ್ಚಿನಿಂದ ಲೇಪಿಸಿದ ಚಿತ್ರಗಳನ್ನು ಬರೆಯಲಾಗುವುದು. ಮುಳ್ಳಿನಂತಹ ಚಿಟ್ಟೆಗಳು ರಾಕ್ಷಸನ ಭಯಾನಕತೆಯನ್ನು ಕಲ್ಪಿಸುವಲ್ಲಿ ಯಶಸ್ವಿಯಾಗಿವೆ. ಈ ವೇಷಕ್ಕೆ ಬಳಸುವ ಬಣ್ಣಗಳು ಕೆಂಪು, ಕಪ್ಪು, ಹಸಿರು, ಹತ್ತಿಯ ಎರಡು ಉಂಡೆಗಳನ್ನು ಮೂಗಿನ ಮೇಲಿಟ್ಟು ಕೃತಕತೆ ಸೃಷ್ಟಿಸಲಾಗುವುದು. ಕೋರೆಹಲ್ಲು ಬರೆಯುವುದು ತುಟಿಯ ಪಕ್ಕದಲ್ಲಿ. ಕಿರಾತ ವೇಷದಲ್ಲಿ ಲೇ ಲೇ ಲೇ ಎಂದು ಕೇಕೆ ಹಾಕಲಾಗುವುದು. ರಾವಣನಂತಹ ಬಣ್ಣದ ವೇಷ ರಂಗಕ್ಕೆ ಬಂದಾಗ ಅವನ್ನು ಭಾಗವತ ಪರಿಚಯಿಸುವುದುಂಟು.

ಕರಾವಳಿ ಯಕ್ಷಗಾನದಲ್ಲಿ ಕೆಲವು ಪಾತ್ರಗಳು ಸ್ವತಃ ಪರಿಚಯ ಮಾಡಿಕೊಂಡರೆ ಇನ್ನು ಕೆಲವನ್ನು ಭಾಗವತನೇ ಮಾಡಿಕೊಡುತ್ತಾನೆ. ಪಾತ್ರಗಳು ತಮ್ಮ ದುಃಖವನ್ನು ಭಾಗವತರೊಂದಿಗೆ ತೋಡಿಕೊಳ್ಳುವುದೂ ಉಂಟು.

ಪುರಾಣ ಪ್ರಸಂಗಗಳನ್ನು ಸಂದರ್ಭೋಚಿತವಾಗಿ ಬಳಸಿ ನೀತಿಬೋಧನೆ ಮಾಡುವ ಮುಕ್ತ ವಿಶ್ವವಿದ್ಯಾಲಯ ಯಕ್ಷಗಾನ. ಇದು ಜನರಲ್ಲಿ ರಾಜಕೀಯ, ಧಾರ್ಮಿಕ ಮತ್ತು ನೀತಿಪ್ರಜ್ಞೆಗಳನ್ನು ಬೆಳೆಸಬಲ್ಲದು. ಯಕ್ಷಗಾನದ ಸಾಮಾನ್ಯ ಸಂದೇಶ ದುಷ್ಟನಿಗ್ರಹ, ಶಿಷ್ಟಪರಿಪಾಲನೆ. ಹಿಂದಿನ ನಮ್ಮ ಜೀವನ ಪರಂಪರೆ ಇವುಗಳನ್ನು ಇಂದಿನದಕ್ಕೆ ಹೋಲಿಸುವುದರಿಂದ ಯಕ್ಷಗಾನ ಜನಸಾಮಾನ್ಯರ ಹೃದಯವನ್ನು ನೇರವಾಗಿ ತಟ್ಟಬಲ್ಲುದು. ಜನತೆಗೆ ತಿಳಿವನ್ನುಂಟು ಮಾಡುವ ಗುರುಮನೆಯಾಗಿ ಯಕ್ಷಗಾನ ರೂಪುಗೊಂಡಿತು. ಯಕ್ಷಗಾನ ಪ್ರಸಂಗ ರಚಿಸಿದ ಕವಿಗಳು ಜನಸಾಮಾನ್ಯರು. ಜನಪದರ ದಿನಬಳಕೆಯ ಮಾತುಗಳನ್ನು, ಗಾದೆಗಳನ್ನು, ಲೋಕೋಕ್ತಿಗಳನ್ನು ಸೊಗಸಾಗಿ ತಮ್ಮ ಪ್ರಸಂಗಗಳಲ್ಲಿ ಅವರು ಬಳಸಿಕೊಂಡರು. ರಾಮಾಯಣ ಮಹಾಭಾರತದ ಹಲವು ಪ್ರಸಂಗಗಳಲ್ಲಿ ನೀತಿಪದ್ಯಗಳು ಹೇರಳವಾಗಿವೆ.

ಯಕ್ಷಗಾನ ಕರಾವಳಿಯ ಉದ್ದಗಲಕ್ಕೂ ಸುಶಿಕ್ಷಿತ ವರ್ಗವನ್ನೂ ಆಕರ್ಷಿಸಿದೆ. ಆದ್ದರಿಂದಲೇ ಅದು ಅನೇಕ ಬದಲಾವಣೆ ಪ್ರಯೋಗಗಳನ್ನು ಕಂಡಿದೆ. ಕಡಲ ತೀರದ ಭಾರ್ಗವ ಶಿವರಾಮ ಕಾರಂತರು ಯಕ್ಷಗಾನಕ್ಕೆ ಒಂದು ಹೊಸ ಆಯಾಮ ನೀಡಿದರು. ಅದರ ಕಾಯಕಲ್ಪಕ್ಕೆ ಕಾರಣೀಭೂತರಾದರು.

ಕನ್ನಡನಾಡಿನ ಈ ವಿಶಿಷ್ಟ ಜನಪದ ಕಲೆಯನ್ನು ಸೀಮೋಲ್ಲಂಘನ ಮಾಡಿಸಿದರು. ಕಲೆ ಉಳಿಯಬೇಕಾದಲ್ಲಿ ಅದು ಅಂತರಾಷ್ಟ್ರೀಯವಾಗಬೇಕೆಂಬುದು ಅವರ ಹಂಬಲ. ಅನೇಕ ಹೊಸ ಪ್ರಯೋಗಗಳನ್ನು ಕಂಡರೂ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಬದಲಾವಣೆಗಳನ್ನು ಮಾಡಿಕೊಳ್ಳುವುದರೊಂದಿಗೆ ಹಳೆಯ ಸಂಪ್ರದಾಯಗಳನ್ನು ಉಳಿಸಿಕೊಳ್ಳಲು ಯಕ್ಷಗಾನ ಹೆಣಗುತ್ತಿದೆ.

ಜಿ.ಎಸ್.ಬಿ.

 

ಯಾನಾದಿ ಯಾನಾದಿಗಳು ಮುಖ್ಯವಾಗಿ ಆಂಧ್ರದ ನೆಲ್ಲೂರು, ಪ್ರಕಾಶಂ ಮತ್ತು ಚಿತ್ತೂರು ಜಿಲ್ಲೆಗಳಲ್ಲಿ ಅಧಿಕವಾಗಿ ವಾಸವಾಗಿದ್ದಾರೆ. ಇವರ ಸ್ವಸ್ಥಳ ಶ್ರೀಹರಿಕೋಟ. ಯಾನಾದಿ ಎಂಬ ಹೆಸರು ಸಂಸ್ಕೃತ ಪದವಾದ ಅನಾದಿಯಿಂದ ಬಂದಿದೆಯೆಂದು ಥರ್ ಸ್ಟನ್ (೧೯೦೯) ವಿವರಿಸುತ್ತಾರೆ. ಇವರು ಇತರ ಸಮುದಾಯದೊಂದಿಗೆ ಸಹಜೀವನ ನಡೆಸುತ್ತಿದ್ದಾರೆ. ಮಾತೃಭಾಷೆ ತೆಲುಗು. ಯಾನಾದಿಗಳಲ್ಲಿಯೂ ಅನೇಕ ಭೇದಗಳಿವೆ. ಯಾನಾದಿಗಳು ಮಾಂಸಾಹಾರಿಗಳು. ಮೊಲ, ಕೋಳಿ, ಆಡು, ಕುರಿ, ಮೀನು ಮುಂತಾದವನ್ನು ತಿನ್ನುತ್ತಾರೆ. ದನದ ಮಾಂಸ ಇವರಲ್ಲಿ ನಿಷೇಧ. ಬಹಳಷ್ಟು ಮಂದಿ ಬೇಸಾಯದ ಕೂಲಿ ಕೆಲಸ ಮಾಡುವುದು, ಕೆರೆಗಳಲಿ ಮೀನು ಹಿಡಿಯುವುದು, ರೈತರ ಹೊಲಗಳನ್ನು ಕಾಯುವುದು, ತೋಟಗಳಿಗೆ ನೀರು ಹಾಯಿಸುವುದು, ಹೊಲ ಕಾಯುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ವಿಧವಾ ವಿವಾಹಕ್ಕೆ ಮನ್ನಣೆಯಿದೆ. ಚಿಕ್ಕ ಕುಟುಂಬಗಳೇ ಹೆಚ್ಚು. ಕುಲದ ಮುಖಂಡತ್ವ ವಂಶಪಾರಂಪರ್ಯವಾಗಿ ಬರುತ್ತದೆ. ಇವರಲ್ಲಿ ಕೂಸು ಹುಟ್ಟಿದ ಹದಿಮೂರು ದಿನಕ್ಕೆ ಹೆಸರಿಡುತ್ತಾರೆ. ಅತ್ತಿಗೆಯನ್ನು ಮದುವೆಯಾಗುವ ಸಂಪ್ರದಾಯವಿದೆ. ಮದುವೆಯಾಗದವರು ತೀರಿಕೊಂಡರೆ ಹೂಳುತ್ತಾರೆ. ಮದುವೆಯಾಗಿದ್ದವರು ಸತ್ತರೆ ಸುಡುತ್ತಾರೆ. ಹನ್ನೊಂದನೆಯ ದಿನ ದೊಡ್ಡ ಕರ್ಮ ಮಾಡುತ್ತಾರೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ.

ಪ್ರತಿ ಯಾನಾದಿ ಸಮುದಾಯದಲ್ಲಿಯೂ ದೈವದವರಿರುತ್ತಾರೆ. ವ್ಯಭಿಚಾರ, ಭೂಮಿಯ ತಗಾದೆಗಳನ್ನು ಗಂಭೀರವಾಗಿ ಪರಿಗಣಿಸುತ್ತಾರೆ. ಪ್ರೇಮ ವಿವಾಹಗಳಿವೆ. ಶಿಕ್ಷೆ ಅನುಭವಿಸುವ ವ್ಯಕ್ತಿ ಹೆಂಡ ಇಲ್ಲವೆ ಕಲ್ಲು ಮತ್ತು ಔತಣವನ್ನೇರ್ಪಡಿಸಿ ಗ್ರಾಮದ ಜನರನ್ನು ಸಂತೃಪ್ತಿ ಪಡಿಸಬೇಕು. ಯಾನಾದಿಗಳು ತಮ್ಮ ಕ್ಷೇಮಕ್ಕಾಗಿ ಚಿಂಚೋರಮ್ಮ, ಪೋತೀರಮ್ಮ, ಮಹಾಲಕ್ಷ್ಮಿ ಮುಂತಾದ ದೇವತೆಗಳನ್ನು ಪೂಜಿಸಿ ಆಡು, ಕೋಳಿ ಮುಂತಾದವನ್ನು ಬಲಿ ಕೊಡುತ್ತಾರೆ. ವೆಂಕಟೇಶ್ವರ, ವಿನಾಯಕ, ರಾಮ, ಆಂಜನೇಯ, ಶಿರಡಿ ಸಾಯಿಬಾಬಾ ಮುಂತಾದವರನ್ನು ಆರಾಧಿಸುತ್ತಾರೆ. ದಸರಾ, ಸಂಕ್ರಾಂತಿ, ದೀಪಾವಳಿ, ಯುಗಾದಿಯಂತಹ ಹಬ್ಬಗಳನ್ನು ಆಚರಿಸುತ್ತಾರೆ. ಇವರ ಪ್ರಗತಿಗಾಗಿ ಆಂಧ್ರ ಸರ್ಕಾರ ನೆಲ್ಲೂರಿನಲ್ಲಿ I.T.D.A. (Intergrated Tribal Development Agency)ಯನ್ನು ಏರ್ಪಡಿಸಿದೆ.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ಯಾನಾದಿಗಳು ಆಂಧ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಕಂಡುಬರುವ ಬುಡಕಟ್ಟು ಜನ. ಯಾನಾದಿಗರಲ್ಲಿ ‘ಮಂಚಿ ಯಾನಾದಿ’, ‘ಚಲ ಯಾನಾದಿ’, ‘ಅಡವಿ ಯಾನಾದಿ’ ಎಂಬ ಶಾಖೆಗಳನ್ನು ಗುರುತಿಸಬಹುದು. ಯಾನಾದಿಗಳು ಕರ್ನೂಲು, ನೆಲ್ಲೂರು ಮತ್ತು ಚಿತ್ತೂರು ಜಿಲ್ಲೆಯ ಕಾಡು ಬೆಟ್ಟಗಳಿಂದ ಬಂದವರು. ಕೆಲವು ವರ್ಷಗಳ ಕಾಲ ಶ್ರೀ ಹರಿಕೋಟದಲ್ಲಿದ್ದು ಅನಂತರ ತಮಿಳುನಾಡಿನ ಉತ್ತರ ಅರ್ಕಾಟ್ ಜಿಲ್ಲೆಗೆ ಕೆಲವರು, ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆ, ಅನಂತಪುರಂ ಜಿಲ್ಲೆಗಳಿಂದ ಕರ್ನಾಟಕಕ್ಕೆ ಕೆಲವು ಜನ ವಲಸೆ ಬಂದಿದ್ದಾರೆ. ಕರ್ನಾಟಕದಲ್ಲಿ ಬೆಟ್ಟ, ಕಾಡು ಇರುವ ಕಡೆ ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ನೀಲಗಿರಿ ಬೆಟ್ಟಗಳು, ಚಿಕ್ಕಮಗಳೂರು ಜಿಲ್ಲೆಯ ಹಳ್ಳಿಗಳಿಗೆ ವಲಸೆ ಬಂದಿದ್ದಾರೆ.

ಆಂಧ್ರದಿಂದ ಕರ್ನಾಟಕಕ್ಕೆ ವಲಸೆ ಬಂದ ಇವರು ಬೇಟೆಯಾಡಿ ಜೀವನವನ್ನು ನಡೆಸುತ್ತಿದ್ದರು. ತಮ್ಮದೇ ಆದ ಜೀವನ ಕ್ರಮ, ಆಚಾರ, ಭಾಷೆಯನ್ನು ಹೊಂದಿದ್ದಾರೆ. ಇವರು ಸಮಾಜದೊಂದಿಗೆ ಬೆರೆಯದೆ, ಊರುಗಳಿಂದ ದೂರ ಇದ್ದು, ತಮ್ಮದೇ ನಿಯಮ ನಿಬಂಧನೆಗಳೊಳಗೆ ಜೀವಿಸಲು ಇಷ್ಟಪಡುತ್ತಾರೆ.

ಬೇಟೆಯಾಡುವುದು ಇವರ ಪ್ರಮುಖ ಆಹಾರ ಸಂಗ್ರಹ ಕ್ರಮ. ನವಿಲು, ಕೋಳಿ, ಹಕ್ಕಿಗಳು, ಮೊಟ್ಟೆ, ಜಿಂಕೆ, ಹಂದಿ, ಮೀನು ಹಾಗೂ ಕೆಲವು ತೊಪ್ಪಲು ಇವರ ಪ್ರಮುಖ ಆಹಾರಗಳು. ಅಲ್ಲದೆ ಕಾಡಿನ ಉತ್ಪನ್ನಗಳನ್ನು ಶೇಖರಿಸುತ್ತಾರೆ. ಬೇಟೆ ಇಲ್ಲದ ಸಮಯದಲ್ಲಿ ಬೇಸಾಯ ಮಾಡುವ ರೈತರ ಹತ್ತಿರ ಹೋಗಿ ಗಂಡಸರು ಮತ್ತು ಹೆಂಗಸರು ಕೂಲಿ ಕೆಲಸ ಮಾಡುತ್ತಾರೆ.

ಕಾಡಿನ ಉತ್ಪನ್ನಗಳೂ ಇವರ ಜೀವನೋಪಾಯಕ್ಕೆ ಸಹಕಾರಿಯಾಗಿವೆ. ಕಾಡಿನಲ್ಲಿ ಸಿಗುವ ಕೆಲವು ಗಿಡಗಳ ಎಲೆಗಳನ್ನು ಸಂಗ್ರಹಿಸಿ ನೆರಳಲ್ಲಿ ಒಣಗಿಸಿ, ಊಟದ ಎಲೆಯಂತೆ ಮಾಡಿ ಮಾರುತ್ತಾರೆ. ಅಣಬೆ, ಅಂಟು, ಅಳಲೆಕಾಯಿ, ಅಂಟವಾಳಕಾಯಿ, ವನಮೂಲಿಕೆಗಳನ್ನು ಸಂಗ್ರಹಿಸಿ ಅಂಗಡಿಗೆ ತಂದು ಮಾರುತ್ತಾರೆ. ಬಣ್ಣ ಬಣ್ಣದ ಹಕ್ಕಿಗಳ ಪುಕ್ಕಗಳನ್ನು ಶೇಖರಿಸುತ್ತಾರೆ. ಜೇನುತೆಗೆಯುವುದು, ಅವುಗಳ ಮೇಣವನ್ನು ತಂದು ಮಾರುವುದು ಇವರ ಮತ್ತೊಂದು ಕಸುಬು.

59_70A_DBJK-KUH

ಮಾಂಸ ಇವರ ಪ್ರಮುಖ ಆಹಾರ. ಮಾಂಸವನ್ನು ಸಲಾಕೆಗಳಿಗೆ ಸಿಕ್ಕಿಸಿ ಹಾಗೆ ತಿನ್ನುವುದುಂಟು. ಒಂದು ಬಂಡೆಯ ಮೇಲೆ ಮೆಣಸಿನಕಾಯಿ ಮತ್ತು ಧನಿಯಾವನ್ನು ನುಣ್ಣಗೆ ಅರೆಯಲು ಬಂಡೆಕಲ್ಲನ್ನು ಉಪಯೋಗಿಸುತ್ತಾರೆ. ವಿಶೇಷವಾದ ಆಹಾರವನ್ನು ತಯಾರಿಸುವುದು ಕೆಲವು ವಿಶೇಷ ಸಂದರ್ಭಗಳಲ್ಲಿ ಮಾತ್ರ. ಯುಗಾದಿ, ಮದುವೆ, ಋತುಮತಿ, ನಾಮಕರಣದ ದಿನಗಳು ಇತ್ಯಾದಿ ಸಮಯಗಳಲ್ಲಿ ಹೋಳಿಗೆ, ದೋಸೆ, ಅನ್ನ ಸಾರು, ಪಾಯಸಗಳನ್ನು ವಿಶೇಷ ಭಕ್ಷ್ಯಗಳಾಗಿ ಮಾಡುವರು.

ಹೆಂಗಸರಿಗೂ ಚಿಕ್ಕ ಹೆಣ್ಣು ಮಕ್ಕಳಿಗೂ ಎಲೆ ಅಡಕೆ, ಹೊಗೆಸಪ್ಪು, ಕಡ್ಡಿಪುಡಿಯ ಅಭ್ಯಾಸ ಉಂಟು. ಹೆಂಡ ಮತ್ತು ಸಾರಾಯಿಗಳು ಮದುವೆಯ ಸಂದರ್ಭದಲ್ಲಿ ಇರಲೇಬೇಕು. ಇವರು ಗುಡಿಸಲುಗಳಲ್ಲಿ ವಾಸಿಸುತ್ತಾರೆ.

ಗಂಡಸರು ‘ಗೋಚಿ’ (ಕೌಪೀನ) ರೀತಿಯಲ್ಲಿ ಪಂಚೆಯನ್ನು ಕಟ್ಟುತ್ತಾರೆ. ಹೆಣ್ಣುಮಕ್ಕಳಲ್ಲಿ ಚಿಕ್ಕವರು ಗೌನಿನಂತಹ ಉಡುಪು ಧರಿಸಿರುತ್ತಾರೆ. ಮದುವೆಯಾದ ಬಳಿಕ ಸೀರೆ ಉಡುತ್ತಾರೆ. ಮುದುಕಿಯರು ಸೀರೆಯನ್ನು ಉಡುತ್ತಾರೆ.

ಹೆಂಗಸರು ವಿಶೇಷವಾದಂತಹ ಯಾವ ಆಭರಣಗಳನ್ನು ಧರಿಸುವುದಿಲ್ಲ. ಮದುವೆಯಾದ ಹೆಣ್ಣು ಮಕ್ಕಳಲ್ಲಿ ಕೈಬಳೆ, ಕಾಲುಗಳಲ್ಲಿ ಕಡಗ ಮತ್ತು ಕಾಲು ಬೆರಳುಗಳಲ್ಲಿ ಕಾಲುಂಗುರ, ಮಣಿಸರಗಳನ್ನು ಧರಿಸಿರುತ್ತಾರೆ. ಕೈಗಳ ಮೇಲೆ ಗಂಡಸರು ಹೆಂಗಸರು ಇಬ್ಬರೂ ಹಚ್ಚೆ ಹಾಕಿಸಿಕೊಂಡಿರುತ್ತಾರೆ.

ಇವರದು ಪಿತೃ ಪ್ರಧಾನ ಕುಟುಂಬ ವ್ಯವಸ್ಥೆ. ಅವಿಭಕ್ತ ಕುಟುಂಬ ವ್ಯವಸ್ಥೆ ಇಲ್ಲಿ ಇಲ್ಲ. ಗಂಡು ಮಕ್ಕಳು ಮದುವೆ ಆದ ಮೇಲೆ ಬೇರೆ ಇರುತ್ತಾರೆ. ವಿಶೇಷ ಕಾರ್ಯಕ್ರಮದ ಸಂದರ್ಭಗಳಲ್ಲಿ ಮಾತ್ರ ಎಲ್ಲರೂ ಒಟ್ಟಾಗಿ ಸೇರುತ್ತಾರೆ. ಸಾಮಾನ್ಯವಾಗಿ ಭಾವ ಬಾವಮೈದುನ ಇವರೆಲ್ಲ ಒಂದೇ ಕಡೆ ಇರುವುದಕ್ಕೆ ಇಚ್ಛಿಸುತ್ತಾರೆ.

ತಮ್ಮ ಗುಂಪುಗಳ ನಿಯಮಗಳನ್ನು ಉಲ್ಲಂಘಿಸಿದವರಿಗೆ ಶಿಕ್ಷೆಯನ್ನು ನೀಡಲಾಗುತ್ತದೆ. ಮದುವೆ, ವಿಚ್ಛೇದನ, ಪುನರ್ವಿವಾಹ ಇವೆಲ್ಲವೂ ಗುಂಪಿನ ಮುಖ್ಯಸ್ಥನೊಂದಿಗೆ ಚರ್ಚಿಸಿ ನಡೆಯಬೇಕು. ಕುಲ ಪಂಚಾಯಿತಿ ನಡೆಸಿ, ತಪ್ಪಿತಸ್ಥರಿಗೆ ದಂಡ ವಿಧಿಸಲಾಗುತ್ತದೆ. ಗುಂಪಿನ ಮುಖ್ಯಸ್ಥ ಸಾಟಮ್ಮ ಪೂಜಾರಿ ಆಗಿರುತ್ತಾನೆ. ಅವರ ಕುಲದೇವತೆ ಸಾಟಮ್ಮ, ಇವನ ಮೈಮೇಲೆ ಬರುತ್ತದೆಂದು ನಂಬುತ್ತಾರೆ.

ಮಾವನ ಮಗಳನ್ನು ಮದುವೆಯಾಗುವುದು ಯಾನಾದಿಗಳ ಆಚಾರ. ಹೆಣ್ಣಿಗೆ ೧೨ ಗಂಡಿಗೆ ೧೮ ವರ್ಷದೊಳಗೆ ಮದುವೆ ಮಾಡುತ್ತಾರೆ. ಒಂದೇ ಗೋತ್ರದವರು ಮದುವೆಯಾಗುವುದಿಲ್ಲ. ವಿಚ್ಛೇದನ ಪಡೆಯಬೇಕಾಗಿರುವವರು ಸರಿಯಾದ ಕಾರಣವನ್ನು ನೀಡಿ, ಪಂಚಾಯಿತಿಯಲ್ಲಿ ತೀರ್ಮಾನ ಆದ ಪ್ರಕಾರ ದಂಡ ಕಟ್ಟಿ ವಿಚ್ಛೇದನ ಪಡೆಯಬಹುದು.

ಹೆಂಡತಿ ಸತ್ತಾಗ ಅವನು ಇನ್ನೊಂದು ಮದುವೆಯಾಗಬಹುದು. ಸತ್ತ ಹೆಂಡತಿಯ ತಂಗಿ ಇದ್ದರೆ ಅವಳನ್ನು ಮದುವೆಯಾಗುತ್ತಾರೆ. ಹೆಂಗಸರು ಕೂಡ ಗಂಡ ಸತ್ತ ಮೇಲೆ ಎರಡನೇ ಮದುವೆಯಾಗಬಹುದು.

ಯಾನಾದಿಗಳಲ್ಲಿ ಗೋತ್ರಗಳು ದೇವರ ಹೆಸರಿನಲ್ಲಿ ಇರುತ್ತವೆ. ಸಾಟಮ್ಮ ಗೋತ್ರ, ಧರ್ಮರಾಜು ಗೋತ್ರ, ಶ್ರೀ ವೆಂಕಟೇಶ್ವರ ಸ್ವಾಮಿ ಹೆಸರಲ್ಲಿ ಪೆರುಮಾಳ್ ಗೋತ್ರ ಇತ್ಯಾದಿ ಹನ್ನೆರಡು ಗೋತ್ರಗಳಿವೆಯೆಂದು ಹೇಳುತ್ತಾರೆ.

ಯಾನಾದಿಗಳ ಮಾತೃಭಾಷೆ ತೆಲುಗು. ಕೆಲವರು ತಮಿಳು ಮಾತನಾಡುತ್ತಾರೆ. ಕರ್ನಾಟಕಕ್ಕೆ ನೇರ ಬಂದು ನೆಲೆಸಿರುವವರು ಕನ್ನಡ ಭಾಷೆಯನ್ನು ಮಾತ್ರ ಮಾತನಾಡುತ್ತಾರೆ.

ತೆಲುಗಿನಲ್ಲಿ ಇವರ ಸಾಹಿತ್ಯ ಸ್ವಲ್ಪ ಸಿಗುತ್ತದೆ. ಇತ್ತೀಚಿನವರು ಕನ್ನಡದಲ್ಲಿ ಸಹ ಕೆಲವು ಹಾಡುಗಳನ್ನು ಹಾಡುತ್ತಾರೆ. ಇವರು ಸಾಹಿತ್ಯದಲ್ಲಿ ಬಳಸುವ ಪದಗಳ ಸಂಖ್ಯೆ ತೀರಾ ಕಡಿಮೆ ಇರುತ್ತದೆ. ಗೀತೆಗಳು, ಕತೆಗಳು, ಗಾದೆಗಳು ಮತ್ತು ಒಗಟುಗಳು ಹೆಚ್ಚಾಗಿ ಕಂಡುಬರುತ್ತವೆ. ಇವರ ಕತೆಗಳಲ್ಲಿ ಅಮಾನುಷ ಶಕ್ತಿಗಳು, ಹಕ್ಕಿಗಳು ಮತ್ತು ಜಂತುಗಳಿವೆ. ಶೃಂಗಾರ, ಸೋಬಾನ, ಶ್ರಮಿಕ, ಹಾಸ್ಯ, ಪುರಾಣ ಸಂಬಂಧ ಗೀತೆಗಳು, ಉಯ್ಯಾಲೆ ಹಾಡು, ಬಾಂಧವ್ಯ ಗೀತೆ, ಬೇಟೆ ಮತ್ತು ಪ್ರಾಣಿ ಸಂಬಂಧದ ಗೀತೆಗಳು – ಇತ್ಯಾದಿಗಳನ್ನು ಇವರು ಹಾಡುವರು.

ಯಾನಾದಿಗಳಲ್ಲಿ ಮಗು ಜನಿಸಿದ ಬಳಿಕ ಮೂರು ದಿನಗಳ ತನಕ ತಾಯಿ ಹಾಲನ್ನು ಕೊಡುವುದಿಲ್ಲ. ಬದಲು ಬಾಯಿಗೆ ಹರಳೆಣ್ಣೆಯನ್ನು ಸ್ವಲ್ಪ ಸಕ್ಕರೆ ನೀರನ್ನು ಹಾಕುತ್ತಾರೆ. ಮಗುವನ್ನು ಹೆತ್ತ ಹೆಂಗಸು ಹೆರಿಗೆಯ ಅನಂತರ ಒಂದು ದಿವಸ ಉಪವಾಸವಿರಬೇಕು. ಅನಂತರ ದಿನಕ್ಕೆರಡು ಸಲ ಅನ್ನವನ್ನು ನೀಡುತ್ತಾರೆ. ಮಕ್ಕಳು ಹುಟ್ಟಿದ ಆರು ತಿಂಗಳಾದ ಮೇಲೆ ಕೂದಲು ತೆಗೆದು ನಾಮಕರಣ ಮಾಡುತ್ತಾರೆ.

ಯಾನಾದಿ ಹೆಣ್ಣು ಮಕ್ಕಳು ಋತುಮತಿಯಾದರೆ ತಾಯಿಯ ಒಡಹುಟ್ಟಿದ ಅಣ್ಣ ಅಥವಾ ತಮ್ಮ ಬಂದು ಎಂಟು ತರಹದ ಸೊಪ್ಪನ್ನು ತಂದು ಮನೆಯ ಮುಂದೆ ಗುಡಿಸಲನ್ನು ಹಾಕುತ್ತಾರೆ. ಹುಡುಗಿಯನ್ನು ಗುಡಿಸಲೊಳಗೆ ಕೂರಿಸಿ ಕರ್ಪೂರದಾರತಿ ಮಾಡಿ, ಕೋಳಿ ಮೊಟ್ಟೆ, ಎಳ್ಳು ಮತ್ತು ಎಳ್ಳೆಣ್ಣೆಯಿಂದ ಮಾಡಿದ ಅಡುಗೆಯನ್ನು ಸಿಹಿ ತಿಂಡಿಗಳನ್ನು ನೀಡುತ್ತಾರೆ.

ಮದುವೆಗಳು ಇವರಲ್ಲಿ ಸರಳವಾಗಿರುತ್ತವೆ. ಬಂಧು ಬಳಗಕ್ಕೆ ವೀಳ್ಯವನ್ನು ನೀಡುತ್ತಾರೆ. ಗಂಡು ಹೆಣ್ಣಿಗೆ ಅರಿಶಿಣದಾರ ಕಟ್ಟಿ ಅವರನ್ನು ಮನೆಗೆ ಕರೆದುಕೊಂಡು ಹೋಗುತ್ತಾರೆ. ಕೆಲವರು ಮದುವೆಗೆ ಮುಂಚೆ ಗಂಡು ಹೆಣ್ಣನ್ನು ಕಾಡಿಗೆ ಕಳುಹಿಸುತ್ತಾರೆ. ಒಂದು ಶಾಖೆಯ ಯಾನಾದಿಗಳು ಎಲ್ಲ ರೀತಿಯ ಮದುವೆಯ ಆಚಾರಗಳನ್ನು ಮಾಡುತ್ತಾರೆ.

ಯಾನಾದಿಗಳಲ್ಲಿ ಪೂಜಾರಿ ಸತ್ತಾಗ ಒಂದು ರೀತಿಯಲ್ಲಿ, ಸಾಮಾನ್ಯ ಜನ ಮರಣಿಸಿದಾಗ ಬೇರೆ ರೀತಿಯಲ್ಲಿ ಮಣ್ಣು ಮಾಡುತ್ತಾರೆ.

ಹಬ್ಬದ ಸಂದರ್ಭಗಳಲ್ಲಿ ಪೂಜಾರಿಯ ಮೇಲೆ ದೇವರು ಬಂದು ದಪ್ಪನೆಯ ಕೋಲಿನ ಮೇಲೆ ನಿಂತು ಭವಿಷ್ಯ ಹೇಳುವುದುಂಟು. ಈತ ನಾಮಕರಣ ಮಾಡುವುದು, ಬೆಂಕಿ ತುಳಿಯುವುದು ಮತ್ತು ನರ್ತಿಸುವುದು ಇದರೊಂದಿಗೆ ಪವಾಡ ಮಾಡಿ ತೋರಿಸುವುದು ಒಂದು ವಿಶೇಷ.

ಇವರಲ್ಲಿ ಮಂತ್ರ ತಂತ್ರದಿಂದ ವೈದ್ಯ ಮಾಡುವುದು, ಗಿಡಮೂಲಿಕೆಗಳಿಂದ ವೈದ್ಯ ಮಾಡುವುದು ಇದೆ.

ಕರಗ, ಕೋಲು ತಿರುಗಿಸುವುದು, ಕೋಲಾಟ, ದೊಣ್ಣೆ ವರಸೆ, ತಮಟೆ ಬಾರಿಸುವುದು (ತಮಟೆಯನ್ನು ‘ಚಿಟ್ಟ ಪಲಕ’ ಎನ್ನುತ್ತಾರೆ), ಮರಗಾಲು ಕುಣಿತ – ಇವು ವಿಶೇಷವಾದಂಥವು. ಒಮ್ಮೊಮ್ಮೆ ಗಂಡಸರು ಹೆಂಗಸರಂತೆ ಸೀರೆ ರವಿಕೆ ಹಾಕಿಕೊಂಡು ನರ್ತಿಸುತ್ತಾರೆ. ತಮಟೆ ಮತ್ತು ಡೋಲು ಇವರು ಬಳಸುವ ವಾದ್ಯ ವಿಶೇಷಗಳು.

ಹೆಣ್ಣು ಮಕ್ಕಳು ತುಂಬ ದೊಡ್ಡದಾಗಿ ರಂಗೋಲಿ ಹಾಕುತ್ತಾರೆ. ಸೆಗಣಿಯಿಂದ ಸಾರಿಸಿದ ನೆಲದ ಮೇಲೆ, ಗೋಡೆಗಳ ಪಕ್ಕದಲ್ಲಿ ಚುಕ್ಕಿ ಅಥವಾ ಎಳೆ ರಂಗೋಲಿ ಕಂಡುಬರುತ್ತದೆ.

ದೊಡ್ಡವರು ಕಬಡ್ಡಿ, ಉಪ್ಪರಪಟ್ಟಿ, ಹುಲಿ ಮತ್ತು ಮೇಕೆ ಆಟ ಆಡಿದರೆ, ಚಿಕ್ಕವರು ಕುಂಟಾಟ, ಪಿನ್ನಾಟ, ಪಾಲಪೂಸಲದಂತ ಆಟ, ಆಲಂಗೋಲಿ ಆಟ, ಮಳ್ಳವಂದು ಗಿಲ್ಲಿ ಪೋ ಆಟ, ನೆಮಿಲೀಕ ತಡಿಕಿ, ಡೆಬ್ಬಾಯಿಲ ಮೇಕ ಅನ್ನುವ ಆಟಗಳನ್ನು ಆಡುವರು. ಹೆಣ್ಣು ಮಕ್ಕಳು ಕೂಡ ಆಲಂಗೋಲಿ ಆಟ, ಮೂಗು ಚೂಟುವ ಆಟ, ನೆಮಲೀಕ ತಡಿಕೆ, ಡೆಬ್ಬಾಯಿಲ ಮೇಕ ಇವುಗಳನ್ನು ಆಡುತ್ತಾರೆ.

ಕಾಡಿನಲ್ಲಿರುವ ಇವರು ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಅಷ್ಟೇನೂ ಆಸಕ್ತಿ ಹೊಂದಿಲ್ಲ. ಕಾಡಿನ ಉತ್ಪನ್ನಗಳು ಸಿಗದಾದಾಗ ಬೇರೆಡೆ ವಲಸೆ ಹೋಗುತ್ತಾರೆ. ಕುಟುಂಬ ಯೋಜನೆಯನ್ನು ಅನುಸರಿಸದೆ ಇರುವುದರಿಂದ ಇವರಿಗೆ ಮನೆ ತುಂಬಾ ಮಕ್ಕಳು. ಯಾನಾದಿಗಳಿಗೆ ಸಮಾಜದಲ್ಲಿ ತುಂಬಾ ಕೆಳ ಸ್ಥಾನವಿದೆ.

ಸರ್ಕಾರ ಅಥವಾ ಸರ್ಕಾರೇತರ ಸಂಘ ಸಂಸ್ಥೆಗಳು ಇಂಥ ಬುಡಕಟ್ಟುಗಳ ಅಭೀವೃದ್ಧಿಯತ್ತ ಗಮನಹರಿಸಬೇಕಾಗಿದೆ.

ಸಿ.ಎಸ್.ಪಿ.