ರಂಗದ ಕುಣಿತ ಕರ್ನಾಟಕ ರಾಜ್ಯದ ಒಂದು ಜನಪದ ಕಲೆ. ವಿಶೇಷವಾಗಿ ಮೈಸೂರು, ಮಂಡ್ಯ, ಬೆಂಗಳೂರು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಕಾಣಬಹುದು. ಈ ಕಲೆ ಊರಿನ ಪ್ರಮುಖ ದೇವಸ್ಥಾನದ ಮುಂಭಾಗದಲ್ಲಿ ನಡೆಯುತ್ತದೆ. ಇದು ಸುಗ್ಗಿಯ ಕಾಲದಲ್ಲಿ ನಡೆಯುವುದರಿಂದ ಸುಗ್ಗಿ ಕುಣಿತವೆಂತಲೂ ಕರೆಯುತ್ತಾರೆ. ಒಕ್ಕಣೆ ಮಾಡಿ ದವಸ ಧಾನ್ಯಗಳನ್ನು ಮನೆಗೆ ಕೊಂಡೊಯ್ಯುವ ಸಂದರ್ಭ ಮತ್ತು ಗ್ರಾಮ ದೇವತೆಗಳ ಹಬ್ಬದ ಸಂದರ್ಭದಲ್ಲಿ ನಡೆಯುತ್ತದೆ.

ಹಬ್ಬ ಹದಿನೈದು ದಿನ ಇರುವಾಗಲೇ ಊರಿನ ಮುಖಂಡರು ಚರ್ಚಿಸಿ ದಿನವನ್ನು ನಿರ್ಧರಿಸುತ್ತಾರೆ. ಮಾರೀ ಹಬ್ಬದ ಮೊದಲ ಶಾಸ್ತ್ರವಾಗಿ ಕಂಬ ತರುವುದು ಅಥವಾ ಕಂಬಿಕ್ಕುವುದು ಎನ್ನುವರು. ಈ ಶಾಸ್ತ್ರವನ್ನು ಮಂಗಳವಾರ ಅಥವಾ ಶುಕ್ರವಾರ ನದಿ ಅಥವಾ ಹೊಳೆಯ ಬಳಿಯಿಂದ ಕಳಸ ಸಮೇತವಾಗಿ ಅತ್ತಿಮರದ ಮೂರು ಕವಲುಗಳುಳ್ಳ ಎರಡು ಅಡಿ ಉದ್ದದ ಕೊಂಬೆಯ ಒಂದು ತುಂಡನ್ನು ಪೂಜಿಸಿ ತರುವುದರ ಮೂಲಕ ಆರಂಭಿಸುವರು. ಈ ಕಂಬಕ್ಕೆ ಹೂ ಮುಡಿಸಿ, ಐದು ಬಗೆಯ ಧಾನ್ಯಗಳನ್ನು ಕಟ್ಟಿದ ಅರಿಸಿನ ಬಟ್ಟೆಯ ಗಂಟು ಕಟ್ಟಿ ಅದನ್ನು ವಾದ್ಯ ಸಮೇತ ತಂದು ಊರ ದೇವತೆಯ ಗುಡಿ ಮುಂದೆ ಇರುವ ಬಲಿಕಂಬಕ್ಕೆ ಕಟ್ಟುತ್ತಾರೆ. ಈ ಕಂಬ ಆಲದ ಮರ ಅಥವಾ ಅತ್ತಿಯ ಮರದ್ದಾಗಿರುತ್ತದೆ.

ಊರಿನಲ್ಲಿ ಯಾರ ಮನೆಯಲ್ಲೂ ಯಾವುದೇ ರೀತಿಯ ಮೈಲಿಗೆ ಅಥವಾ ಸೂತಕವಾಗಬಾರದು ಅಂದರೆ ಸಾಯುವುದು, ಹುಟ್ಟುವುದು, ಮೈನೆರೆಯುವುದು, ಮಾಂಸ ಬೇಯಿಸುವುದು ಇಂಥವು ಸಂಭವಿಸಬಾರದು. ಒಂದು ವೇಳೆ ಆದರೆ ಆ ಮನೆಯವರು ಊರಿನ ಮುಖಂಡರಿಗೆ ತಿಳಿಸಬೇಕು. ಅವರು ಶಾಸ್ತ್ರೋಕ್ತವಾಗಿ ಕಂಬವನ್ನು ತೆಗೆದುಕೊಂಡು ಹೋಗಿ ಹೊಳೆಗೆ ಬಿಟ್ಟು ಹೊಸ ಕಂಬವನ್ನು ತರುತ್ತಾರೆ. ಅಲ್ಲಿಗೆ ಮೈಲಿಗೆ ಅಥವಾ ಸೂತಕ ಕಳೆದಂತಾಗುತ್ತದೆ. ರಂಗದ ಕುಣಿತಕ್ಕೆ ತಮಟೆ, ನಗಾರಿ ವಾದ್ಯಗಳು ಅಗತ್ಯ. ಕಲಾವಿದರು ಕುಣಿತಕ್ಕೆ ಮುನ್ನ ಕಂಬದ ಸುತ್ತ ಮೂರು ಸುತ್ತು ಸುತ್ತಿ ನಮಸ್ಕರಿಸುತ್ತಾರೆ. ಅನಂತರ ಮುಂದಿನ ಬಯಲಿಗೆ ಬಂದು ಉದ್ದಕ್ಕೆ ಸಾಲಾಗಿ ನಿಂತು ಕುಣಿಯುತ್ತಾರೆ. ಕಾಲಿಗೆ ಗೆಜ್ಜೆ ಕಟ್ಟಿರುತ್ತಾರೆ. ನಡುವಿಗೆ ಚೌಕ ಸುತ್ತಿಕೊಂಡು ಕೈಯಲ್ಲೊಂದು ಚೌಕ ಹಿಡಿದಿರುತ್ತಾರೆ. ಕುಣಿಯಲು ನಿರ್ದಿಷ್ಟ ಕಲಾವಿದರಿರಬೇಕೆಂಬ ನಿಯಮವಿಲ್ಲ. ಕಲಾವಿದರು ಹಾಕುವ ಹೆಜ್ಜೆಗಳ ಲೆಕ್ಕದಲ್ಲಿ ಮೂರು ಹೆಜ್ಜೆ, ಐದು ಹೆಜ್ಜೆ, ಏಳು ಹೆಜ್ಜೆ ಇತ್ಯಾದಿ ವರಸೆಗಳ ಕುಣಿತಗಳಿವೆ. ನಿಂತ ಜಾಗದಿಂದ ಬಿಟ್ಟು ಹಿಂದಕ್ಕೆ ಮುಂದಕ್ಕೆ ಎಷ್ಟು ಹೆಜ್ಜೆಗಳನ್ನು ಹಾಕುತ್ತಾರೋ ಅದರ ಮೇಲೆ ಲೆಕ್ಕ ಹಾಕುತ್ತಾರೆ. ಐದು ಹೆಜ್ಜೆಯ ಕುಣಿತಕ್ಕೆ ತಿರುಗಿ ಕುಣಿತ ಎಂದು ಕರೆಯುತ್ತಾರೆ. ಇದು ವೃತ್ತಾಕಾರದಲ್ಲಿ ನಡೆಯುತ್ತದೆ. ಕುಣಿಯುವಾಗ ಮಧ್ಯೆ ‘ಭೂ ಭಲಿರೇ ಆಹಾ’ ಎಂದೆಲ್ಲ ಕೂಗು ಹಾಕುತ್ತಾರೆ. ಹಲವಾರು ವಿಧದಲ್ಲಿ ಕುಣಿದು ಮಧ್ಯೆ ಮಧ್ಯೆ ಸ್ವಲ್ಪ ವಿಶ್ರಾಂತಿ ತೆಗೆದುಕೊಳ್ಳುವಾಗ ಊರ ದೇವತೆಯನ್ನು ಕುರಿತ ಹಾಡುಗಳನ್ನು ಹಾಡುತ್ತಾರೆ. ಈ ಹಾಡುಗಳಿಗೆ ‘ರಂಗದ ಪದ’ ಎಂದು ಕರೆಯುವರು. ಹೀಗೆ ಹಬ್ಬದ ದಿನದವರೆಗೆ ಕುಣಿದ ಜನರು ಹಬ್ಬ ಮುಗಿದ ಅನಂತರ ಕೊಂಡದ ಶಾಸ್ತ್ರದ ಮೂರನೆಯ ದಿನ ಈ ಕಂಬವನ್ನು ಕಳಸ, ವಾದ್ಯ ಸಮೇತ ತೆಗೆದುಕೊಂಡು ಹೋಗಿ ನೀರಿನಲ್ಲಿ ಬಿಡುವುದರೊಂದಿಗೆ ಕುಣಿತ ಮುಕ್ತಾಯವಾಗುವುದು.

ಪಿ.ಇ.

 

ರಂಗೋಲಿ ಭಾರತದ ಅನೇಕ ಪ್ರದೇಶಗಳಲ್ಲಿ ಜನಪ್ರಿಯವಾಗಿರುವ ವಿಶಿಷ್ಟವಾದ ಒಂದು ಸಾಂಪ್ರದಾಯಿಕ ಜನಪದ ಕಲೆ. ಗ್ರಾಮೀಣ, ನಗರ ಪ್ರದೇಶದ ಜನರು ಎಂಬ ಭೇದವಿಲ್ಲದೆಯೇ ಎಲ್ಲರಲ್ಲೂ ರೂಢಿಯಲ್ಲಿರುವಂಥದು. ಇದನ್ನು ಸಾಮಾನ್ಯವಾಗಿ ಗೃಹಿಣಿಯರು, ಹೆಣ್ಣು ಮಕ್ಕಳು ತಮ್ಮ ತಮ್ಮ ಮನೆಯ ಮುಂದುಗಡೆ ಹಾಕುವರು. ದೇವಸ್ಥಾನಗಳ ಅಂಗಳದಲ್ಲಿಯೂ ಇದಕ್ಕೆ ಸ್ಥಾನವಿದೆ. ತಮಿಳುನಾಡಿನಲ್ಲಿ ಕೋಲಂ, ಆಂಧ್ರದಲ್ಲಿ ಮುಗ್ಗುಲು, ಮಹಾರಾಷ್ಟ್ರದಲ್ಲಿ ರಂಗೋಳಿ, ಗುಜರಾಥದಲ್ಲಿ ಸಾಥ, ಬಂಗಾಳದಲ್ಲಿ ಅಲ್ಪನಾ, ಒರಿಸ್ಸಾದಲ್ಲಿ ಚಿತಾ, ರಾಜಸ್ಥಾನದಲ್ಲಿ ಮಂಡನಾ, ಉತ್ತರ ಪ್ರದೇಶದಲ್ಲಿ ಸಾಂಝ್ ಎಂಬ ವಿವಿಧ ಹೆಸರಿನಲ್ಲಿ ಕರೆಯುವುದು ರೂಢಿಯಲ್ಲಿದೆ. ಕರ್ನಾಟಕದಲ್ಲಿ ರಂಗೋಲಿಯನ್ನು ರಂಗವಲ್ಲಿ, ರಂಗವಲಿ, ರಂಗವಳಿ, ರಂಗವಾಲೆ, ರಂಗಾಲೆ, ರಂಗಾವಾಲಿ, ಮಂಡಲ ಬರೆಯುವುದು, ಶೇಡಿ ಬರೆಯುವುದು, ಜೋಕೊ ಬರೆಯುವುದು ಎಂಬ ಬಗೆ ಬಗೆಯ ಹೆಸರುಗಳು ಇವೆ.

 

ರಂಗೋಲಿ ಪದದ ಅರ್ಥವನ್ನು ‘ರಂಗ’ ಎಂದರೆ ‘ಬಣ್ಣ’ ಮತ್ತು ‘ವಲ್ಲಿ’ ಎಂದರೆ ‘ಬಳ್ಳಿ’ ಎಂದು ಕೋಶಗಳು ವ್ಯಾಖ್ಯಾನಿಸಿವೆ. ಇನ್ನು ಕೆಲವೊಮ್ಮೆ ರಂಗ ಎಂದರೆ ದೇವರು, ಒಲಿ ಎಂಬುದಕ್ಕೆ ಒಲಿಸಿಕೊಳ್ಳುವುದು ಎಂಬರ್ಥ. ಬಣ್ಣ ಬಣ್ಣದ ವಿನ್ಯಾಸ ರಚಿಸಿ ದೇವರನ್ನು ಒಲಿ60_70A_DBJK-KUHಸಿಕೊಳ್ಳುವುದು ಕೂಡ ರಂಗೋಲಿ ಕಲೆಯ ಮತ್ತೊಂದು ವೈಶಿಷ್ಟ್ಯವೇ ಸರಿ. ಭಾರತದ ಯಾವುದೇ ಹಿಂದೂ ಜನಸಮುದಾಯದಲ್ಲಿ ಧಾರ್ಮಿಕ, ಸಾಂಸ್ಕೃತಿಕ, ಸಾಂಪ್ರದಾಯಿಕ ಲಕ್ಷಣಗಳನ್ನು ರಂಗೋಲಿ ಕಲೆಯಲ್ಲಿ ಕಾಣಬಹುದು. ಗ್ರಾಮೀಣ ಮತ್ತು ವೈದಿಕ ಸಂಪ್ರದಾಯದಲ್ಲಿಯೂ ಇದರ ಪಾತ್ರ ಮಹತ್ವದ್ದಾಗಿದೆ.

ರಂಗೋಲಿ ಹಾಕುವುದು ಪಾವಿತ್ರ‍್ಯತೆಯ ಸಂಕೇತ ಎಂಬ ಭಾವನೆ ಇದೆ. ಶುಭ ಸಮಾರಂಭಗಳಾದ ವಿವಾಹ, ಹಬ್ಬ ಹರಿದಿನಗಳು, ಜಾತ್ರೆ ಇತ್ಯಾದಿ ಸಂದರ್ಭಗಳಲ್ಲಿ ರಂಗೋಲಿ ಬಿಡಿಸುವುದಿದೆ. ಬೆಳಗಾಗ ಎದ್ದು, ಮಿಂದು, ಮಡಿಯನ್ನುಟ್ಟು ಮನೆಯ ಮುಂದಿನ ಆವರಣವನ್ನು ಗುಡಿಸಿ, ಸಗಣಿ ನೀರಿನಿಂದ ಸಾರಿಸಿ ಅಂದವಾದ ಚೆಂದದ ವಿನ್ಯಾಸಭರಿತ ರಂಗೋಲಿ ಹಾಕುವುದು, ಅನಂತರ ಮನೆಗೆಲಸಗಳಲ್ಲಿ ತೊಡಗುವುದು ಸಾಂಪ್ರದಾಯಿಕತೆಯನ್ನು ಪ್ರತಿನಿಧಿಸುತ್ತದೆ.

ಮನೆಯ ಆವರಣಕ್ಕಷ್ಟೆ ಸೀಮಿತವಾಗದೆ ಅಡುಗೆ ಮಾಡುವ ಒಲೆಯ ಬಳಿ, ದೇವರ ಕೋಣೆ, ಮನೆಯ ಹೊಸ್ತಿಲುಗಳು, ಮುಂಬಾಗಿಲ ಹೊಸ್ತಿಲು ಮುಂತಾದೆಡೆಯಲ್ಲೂ ಇದನ್ನು ಹಾಕುವುದಿದೆ. ಆಲಂಕಾರಿಕ ಕಲೆಯಾಗಿಯೂ ರಂಗೋಲಿಯನ್ನು ಬಳಸುವುದಿದೆ. ಇದನ್ನು ಬಹುಪಾಲು ಹೆಣ್ಣುಮಕ್ಕಳೇ ಬಿಡಿಸುವುದರಿಂದ ಈ ಕಲೆಯಲ್ಲಿ ಅವರ ಕಲ್ಪನಾಶಕ್ತಿ, ವಿವಿಧ ಬಣ್ಣಗಳ ಸಂಯೋಜನೆ ಅವರಲ್ಲಿನ ಸೌಂದರ್ಯೋಪಾಸನೆಗೆ ಸಾಕ್ಷಿಯಾಗಿದೆ.

ರಂಗೋಲಿಯನ್ನು ಅಂದವಾಗಿ ಬಿಡಿಸಲು ಶುಭ್ರವಾದ ಬಿಳಿಬಣ್ಣದ ಕಲ್ಲಿನ ಪುಡಿ, ಅಕ್ಕಿಹಿಟ್ಟು ವಿವಿಧ ಬಣ್ಣಗಳು ಅಗತ್ಯ. ಚುಕ್ಕಿ ಮತ್ತು ಎಳೆಗಳಿಂದ ಹೆಣ್ಣುಮಕ್ಕಳು ರಂಗೋಲಿ ಬಿಡಿಸುತ್ತಾರೆ. ಅಕ್ಕಿಯನ್ನು ನೀರಿನಲ್ಲಿ ನೆನೆಸಿ, ರುಬ್ಬಿ ಆ ಮಿಶ್ರಣದಲ್ಲಿ ಹತ್ತಿ ಅಥವಾ ಸಣ್ಣ ಬಿಳಿ ಬಟ್ಟೆಯ ತುಂಡಿನಿಂದ ಅದ್ದಿಕೊಂಡು ಎಳೆಯನ್ನು ಎಳೆದು ಬಗೆಬಗೆಯ ವಿನ್ಯಾಸವನ್ನು ರೂಪಿಸಲಾಗುತ್ತದೆ. ಇತ್ತೀಚೆಗೆ ಈ ಪರಿಕರಗಳ ಜೊತೆಜೊತೆಯಲ್ಲಿಯೇ ಕುಂಕುಮ, ಅರಿಸಿನ, ಸುಣ್ಣ, ಉಪ್ಪು, ಜೇಡಿಮಣ್ಣು, ಧಾನ್ಯ, ಹೂವು, ತರಕಾರಿ, ಹಣ್ಣು ಹಂಪಲುಗಳನ್ನು ಬಳಸುವ ತಂತ್ರಗಾರಿಕೆಯೂ ಕಂಡುಬರುತ್ತದೆ. ಏಕಕಾಲಕ್ಕೆ ಕ್ರಮಬದ್ಧವಾಗಿ ಎರಡು ಎಳೆ ಎಳೆಯುವುದು, ಚುಕ್ಕಿ ಇಡುವುದು ಇನ್ನೊಂದು ಕ್ರಮ.

ರಂಗೋಲಿಯನ್ನು ವಿವಿಧ ಉದ್ದೇಶಗಳಿಗಾಗಿ ಬಳಸಲಾಗುತ್ತದೆ : ಮಾಟ – ಮಂತ್ರ, ದುಷ್ಟಶಕ್ತಿಗಳಿಂದ ಬಿಡುಗಡೆ ಹೊಂದುವುದು, ರಕ್ಷಿಸಿಕೊಳ್ಳುವುದು ಇತ್ಯಾದಿ. ರಂಗೋಲಿಯನ್ನು ಕುರಿತ ಪೌರಾಣಿಕ, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಮೂಲ ಆಕರಗಳು ಲಭ್ಯವಿವೆ. ಅವುಗಳಲ್ಲಿ ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತಗಳು ಉಲ್ಲೇಖಾರ್ಹ. ಸಾಹಿತ್ಯಿಕವಾಗಿ ರಂಗೋಲಿ ಗೀತೆಗಳಲ್ಲಿ ಸೋಬಾನೆ ರೂಪದ ಹಾಡುಗಳನ್ನು ಹೇಳುತ್ತಾ ಅಕ್ಕಿಯಲ್ಲಿ ಹಸೆ ಬರೆಯುವುದು ವಿವಾಹಕ್ಕೆ ಶುಭ ಚಾಲನೆಯನ್ನು ನೀಡುವುದು ಗಮನಾರ್ಹ. ಮನೆಯ ಮುಂದಿನ ರಂಗೋಲಿಯನ್ನು ಕೆಡಿಸುವುದಕ್ಕೆ ಕಂದನಿಲ್ಲ ಎಂದು ನಿಟ್ಟುಸಿರು ಬಿಡುವುದು ಕೂಡ ಜನಪದ ಮಹಿಳೆಯ ನೋವಿನ ದನಿಯೇ ಆಗಿದೆ. ಹೀಗೆ ರಂಗೋಲಿ ಹೆಣ್ಣು ಮಕ್ಕಳ ಬದುಕಿನಲ್ಲಿ ಒಂದು ನವುರಾದ ಭಾವನಾತ್ಮಕ ಸಂಬಂಧವನ್ನು ಬೆಸೆಯುತ್ತದೆ. ಗಾದೆ, ಒಗಟು, ನಂಬಿಕೆ, ಸಂಪ್ರದಾಯಗಳಲ್ಲೂ ರಂಗೋಲಿಯ ಉಲ್ಲೇಖವಿದೆ.

ಸಾಂಪ್ರದಾಯಿಕವಾಗಿ ರಂಗೋಲಿ ವಿವಿಧ ಸಂದರ್ಭಕ್ಕೆ ಅನುಗುಣವಾಗಿ ಬೇರೆ ಬೇರೆ ಸ್ವರೂಪ ಪಡೆಯುತ್ತದೆ. ಅವುಗಳಲ್ಲಿ ಉತ್ಸವ, ಉತ್ಸಾಹ, ವ್ರತ, ಪೂಜೆಗಳು ಪ್ರಧಾನವಾಗುತ್ತದೆ. ಧಾರ್ಮಿಕತೆಯ ಪ್ರವೇಶವೂ ಇಲ್ಲಿ ಆಗುವುದು ಒಂದು ವಿಶೇಷ ಸಂಗತಿ. ರಂಗೋಲಿ ಭಾರತೀಯ ಸಂಪ್ರದಾಯದ ಹಿನ್ನೆಲೆಯಲ್ಲಿ ಹೆಣ್ಣು ಮಕ್ಕಳ ಬದುಕಿನ ವಿವಿಧ ಹಂತದಲ್ಲಿಯ ಮೌಲ್ಯಗಳನ್ನು ತಿಳಿಸುವ ಒಂದು ಮಾಧ್ಯಮವೇ ಆಗಿದೆ. ಉದಾಹರಣೆಗೆ, ಸಾವು ಸಂಭವಿಸಿದ ಮನೆಗಳಲ್ಲಿ ರಂಗೋಲಿ ಹಾಕಬಾರದು. ಕೆಲವು ತಾಂತ್ರಿಕ ಗುಣಗಳನ್ನು ಬಿತ್ತರಿಸುವ ರಂಗೋಲಿಯನ್ನು ಹೆಣ್ಣುಮಕ್ಕಳು ಹಾಕಬಾರದು. ಕೆಲವು ವಿಶಿಷ್ಟ ರೀತಿಯ ಮಂಡಲರಂಗೋಲಿಗಳು ಕೂಡ ನಿಷಿದ್ಧ. ರಂಗೋಲಿ ಶುಭಕಾರಕ, ರಂಗೋಲಿಯು ಶುಭ್ರತೆ, ಶುಚಿತ್ವದ ಪ್ರತೀಕವೇ ಆಗಿದೆ. ಅಸಂಖ್ಯಾತ ನಂಬಿಕೆ ಮತ್ತು ಆಚರಣೆಗಳು ರಂಗೋಲಿ ಸುತ್ತ ಕೇಂದ್ರೀಕೃತವಾಗಿರುವುದಂತೂ ಇಲ್ಲಿ ಗಮನಾರ್ಹ.

ಎ.ಸಿ.ಎಲ್.

 

ರಣಿಯ ನಾಟಕಂ ತಮಿಳುನಾಡಿನ ರಂಗಭೂಮಿ ಪ್ರಕಾರ. ಹಿರಣ್ಯಕಶಿಪು, ಪ್ರಹ್ಲಾದ, ವಿಷ್ಣುವಿನ ನರಸಿಂಹಾವತಾರ ಈ ಮೂವರ ಕಥೆಯನ್ನು ವಿವರಿಸುವ ಹಿರಣ್ಯಕಶಿಪು ನಾಟಕ (ರಣಿಯ ನಾಟಕಂ) ತಮಿಳುನಾಡಿನ ವಿವಿಧೆಡೆಗಳಲ್ಲಿ ನಡೆಯುತ್ತದೆ. ‘ಕೂತ್ತು’ ಅಥವಾ ಸಂಗೀತ ನಾಟಕ ರೂಪದಲ್ಲಿ ನಡೆಯುವ ಈ ನಾಟಕ, ಉತ್ತರ ತಮಿಳುನಾಡಿನ ಜಿಲ್ಲೆಗಳಲ್ಲಿ ಹಲವೆಡೆ ವೃತ್ತಿಪರ ತಂಡಗಳಿಂದ ಅಥವಾ ಸಮುದಾಯ ನಾಟಕವಾಗಿ (Community Theatre) ಊರಿನ ಜನರಿಂದ ಆಡಿಸಲ್ಪಡುತ್ತದೆ. ಸಮುದಾಯ ನಾಟಕವಾಗಿ ನಡೆಸುವಾಗ, ನಾಟಕದಲ್ಲಿ ಧರಿಸುವ ನರಸಿಂಹನ ಮುಖವಾಡವನ್ನು ಪೂಜಾ ಪರಿಕರವಾಗಿ ಸಂರಕ್ಷಿಸುವುದು ಇದರ ಮುಖ್ಯ ಅಂಶಗಳಲ್ಲೊಂದು. ತಂಜಾವೂರ್ ಸುತ್ತಮುತ್ತಲಲ್ಲಿ ಈ ನಾಟಕವನ್ನು ಒಂದರಿಂದ ನಾಲ್ಕು ರಾತ್ರಿಗಳ ಕಾಲ ಆಡಿಸಲಾಗುತ್ತದೆ.

ಮೊದಲು ಈ ನಾಟಕದ ಕಥೆಯನ್ನು ಸಂಕ್ಷಿಪ್ತವಾಗಿ ನೋಡೋಣ. ಸ್ತುತಿಗೀತೆಯೊಂದಿಗೆ ನಾಟಕ ಪ್ರಾರಂಭವಾಗುತ್ತದೆ. ಬಳಿಕ ವಿಘ್ನೇಶ್ವರ ಪ್ರತ್ಯಕ್ಷನಾಗುತ್ತಾನೆ. ಅವನಿಗೆ ಪೂಜೆ ಮಾಡಲು ಇಬ್ಬರು ಬ್ರಾಹ್ಮಣರು ಪ್ರತ್ಯಕ್ಷರಾಗುತ್ತಾರೆ. ಬಳಿಕ ಸೂತ್ರಧಾರಿ ಪ್ರವೇಶಿಸಿ ಹಿರಣ್ಯಕಶಿಪುವಿನ ಆಗಮನವನ್ನು ಸಾರುತ್ತಾನೆ. ಅವನ ಮಾತನ್ನು ಪುಷ್ಟೀಕರಿಸುವಂತೆ ಹಿರಣ್ಯಕಶಿಪು ಆರ್ಭಟಿಸುತ್ತಾ ಪ್ರವೇಶಿಸುವನು. ಅಲ್ಲಿಗೆ ಆಗಮಿಸಿದ ಹಿರಣ್ಯಕಶಿಪು ತಾನು ತಪಸ್ಸಿಗೆ ಹೋಗಿದ್ದ ಸಂದರ್ಭದಲ್ಲಿ ತನ್ನ ಸಹೋದರ ಹಿರಣ್ಯಾಕ್ಷನನ್ನು ವಿಷ್ಣು ಕೊಂದಿರುವುದನ್ನು ಹಾಗೂ ತನ್ನ ಪತ್ನಿ ಲೀಲಾವತಿಯನ್ನು ಇಂದ್ರ ಅಪಹರಿಸಿಕೊಂಡು ಹೋಗಿರುವುದನ್ನು ಕೇಳಿ ತಿಳಿಯುತ್ತಾನೆ. ವಿಷ್ಣು ಜೊತೆ ಯುದ್ಧ ಮಾಡಲು ಸನ್ನದ್ಧನಾಗುತ್ತಾನೆ. ಮೊದಲು ತನ್ನ ಸೇವಕರನ್ನು ಕಳುಹಿಸಿ ವಿಷ್ಣುವನ್ನು ಸೆರೆಹಿಡಿದು ತರಲು ಆಜ್ಞಾಪಿಸುತ್ತಾನೆ. ಈ ನಡುವೆ ಈ ವಿಷಯದಲ್ಲಿ ನಾರದ ನಡುವೆ ಪ್ರವೇಶಿಸಿ ಲೀಲಾವತಿಯನ್ನು ಜೋಪಾನವಾಗಿ ಕರೆತಂದ ಸುದ್ದಿಯನ್ನು ಅರುಹುತ್ತಾನೆ. ವಾಪಸ್ಸು ಬಂದ ಲೀಲಾವತಿ ಗಂಡನನ್ನು ವಿಷ್ಣುವಿನೊಂದಿಗೆ ಯುದ್ಧ ಮಾಡುವುದು ಬೇಡ ಎಂದು ತಡೆಯುತ್ತಾಳೆ. ಹಿರಣ್ಯಕಶಿಪು ಅವಳ ಮಾತಿಗೆ ಬದ್ಧನಾಗುತ್ತಾನೆ. ಈ ಸಂದರ್ಭದಲ್ಲಿ ಗರ್ಭಿಣಿಯಾಗಿದ್ದ ಲೀಲಾವತಿ ಒಂದು ಗಂಡು ಮಗುವನ್ನು ಹಡೆಯುತ್ತಾಳೆ. ನಾರದ ಪ್ರತ್ಯಕ್ಷನಾಗಿ ಮಗುವನ್ನು ವಿದ್ಯಾಭ್ಯಾಸಕ್ಕೆ (ಗುರುಕುಲಕ್ಕೆ) ಕಳುಹಿಸಬೇಕೆಂದು ಹಿರಣ್ಯಕಶಿಪುವಿಗೆ ಸಲಹೆ ನೀಡುತ್ತಾನೆ. ಹಿರಣ್ಯಕಶಿಪು ಒಪ್ಪಿಕೊಂಡು ಲೀಲಾವತಿಯೊಂದಿಗೆ ಸಮಾಲೋಚಿಸಿ ರಾಜಗುರು ಶುಕ್ರಾಚಾರ್ಯರ ಮಗನಾದ ಚಂಡಮಾರುತನನ್ನು ಕರೆಯುತ್ತಾನೆ. ಹೀಗೆ ಪ್ರಹ್ಲಾದನಿಗೆ ವಿದ್ಯಾಭ್ಯಾಸ ಮಾಡಿಸಲಾಗುತ್ತದೆ. ವಿದ್ಯಾಭ್ಯಾಸದ ಕಾಲದಲ್ಲಿ ಪ್ರಹ್ಲಾದನಿಗಿದ್ದ ವಿಷ್ಣುವಿನ ಮೇಲಿನ ಭಕ್ತಿ ಪ್ರಕಟವಾಗುತ್ತದೆ. ತನ್ನ ಆಳ್ವಿಕೆಗೆ ಒಳಪಟ್ಟವರಾರೂ ವಿಷ್ಣುವಿನ ಹೆಸರನ್ನು ಉಚ್ಛಾರಣೆ ಮಾಡಬಾರದು ಎಂದು ಹಿರಣ್ಯಕಶಿಪು ಆಜ್ಞೆ ಹೊರಡಿಸಿರುವಾಗ, ಪ್ರಹ್ಲಾದ ವಿಷ್ಣುವಿನಲ್ಲಿ ಭಕ್ತಿಯನ್ನು ಬೆಳೆಸಿಕೊಳ್ಳುತ್ತಾನೆ. ಅವನ್ನು ಪರಿವರ್ತಿಸಲು ಪ್ರಯತ್ನಿಸಿದ ಚಂಡಮಾರುತನ (ಗುರುವಿನ) ಮಾತುಗಳು, ಹಿರಣ್ಯಕಶಿಪುವಿನ ಒತ್ತಡಗಳು ಪ್ರಹ್ಲಾದನಲ್ಲಿ ಯಾವ ಬದಲಾವಣೆಯನ್ನೂ ಉಂಟು ಮಾಡುವುದಿಲ್ಲ. ಕಡೆಗೆ ಹಿರಣ್ಯಕಶಿಪು ಪ್ರಹ್ಲಾದನನ್ನು ಕೊಲ್ಲುವಂತೆ ಸೇವಕರಿಗೆ ಆಜ್ಞೆ ಮಾಡುತ್ತಾನೆ. ಅವನನ್ನು ಕೊಲ್ಲಲು ಅನೇಕ ರೀತಿಯ ಪ್ರಯತ್ನಗಳಾದರೂ, ಬಾಲಕನಾದ ಪ್ರಹ್ಲಾದ ವಿಷ್ಣುವಿನಿಂದ ಸಂರಕ್ಷಿಸಲ್ಪಟ್ಟು ಸಾವನ್ನು ಜಯಿಸುತ್ತಾನೆ. ಈ ಕಿರುಕುಳಗಳಿಂದ ಯಾವುದೇ ಪ್ರಯೋಜನವಾಗದಿದ್ದಾಗ ಹಿರಣ್ಯಕಶಿಪು ತನ್ನ ಮಗುವಿಗೆ ವಿಷ್ಣುವನ್ನು ತೋರಿಸುವಂತೆ ಆಜ್ಞಾಪಿಸುತ್ತಾನೆ. ಆಗ ಪ್ರಹ್ಲಾದ ವಿಷ್ಣುವನ್ನು ಕುರಿತು ತಪಸ್ಸು ಮಾಡಲು ಅಲ್ಲಿ ನರಸಿಂಹ ಪ್ರತ್ಯಕ್ಷನಾಗುತ್ತಾನೆ. ನರಸಿಂಹ ಹಿರಣ್ಯಕಶಿಪುವಿನೊಂದಿಗೆ ದೀರ್ಘ ಸಂವಾದದಲ್ಲಿ ತೊಡಗುತ್ತಾನೆ. ಕೊನೆಯಲ್ಲಿ ನರಸಿಂಹನಿಂದ ಹಿರಣ್ಯಕಶಿಪು ಕೊಲ್ಲಲ್ಪಡುತ್ತಾನೆ. ಬಳಿಕ ಕಿರೀಟಧಾರಣೆಯನ್ನು ಸೂಚಿಸುವ ಪಟ್ಟಾಭಿಷೇಕ ಎಂಬ ಕಾರ್ಯಕ್ರಮ ನಡೆಯುತ್ತದೆ. ಸ್ವಾಮಿಗೆ ದೀಪಾರಾಧನೆ ಮಾಡಿ ಪ್ರಸಾದ ವಿತರಣೆ ಮಾಡಲಾಗುತ್ತದೆ. ರಂಗದ ಆವರಣದಲ್ಲಿ ತಂಬಿಟ್ಟು ದೀಪಗಳನ್ನು ಹಚ್ಚಿಡುತ್ತಾರೆ. ತದನಂತರ ನಟರು ಊರಿನ ಬೀದಿಗಳಲ್ಲಿ ಪ್ರದಕ್ಷಿಣೆ ಮಾಡುವಾಗ ಪ್ರತಿ ಮನೆ ಮುಂದೆಯೂ ಅವರಿಗೆ ಗೌರವ ವಂದನೆಯನ್ನು ಸಲ್ಲಿಸಲಾಗುತ್ತದೆ.

ತಂಜಾವೂರು ಸುತ್ತಮುತ್ತ ಪ್ರಚಲಿತವಿರುವ ಹಿರಣ್ಯಕಶಿಪು ನಾಟಕ ರಂಗವೇದಿಕೆಯನ್ನು ಆಧರಿಸಿ ಉದ್ದಕ್ಕೆ ಬೆಳೆದು ಚಲನಶೀಲತೆಯನ್ನು ಹೊಂದಿರುತ್ತದೆ. ಇಂತಹ ಕ್ರಿಯಾಶೀಲತೆ ತಂಜಾವೂರು ಶೈಲಿಯ ನಾಟಕಕ್ಕೆ ಮಾತ್ರ ಸೀಮಿತವಾಗಿದೆ. ಇದು ವೃತ್ತಾಕಾರ ವೇದಿಕೆಯ ಉತ್ತರ ತಮಿಳುನಾಡಿನ ನಾಟಕದಿಂದ ತಂಜಾವೂರು ನಾಟಕವನ್ನು ಬೇರ್ಪಡಿಸುತ್ತದೆ. ತಂಜಾವೂರು ನಾಟಕದ ಶೈಲಿಯ ಈ ನಾಟಕ ಬೇರೆ ಕೆಲವು ಸ್ಥಳಗಳಲ್ಲಿ ಪ್ರತ್ಯೇಕ ತಂತ್ರಗಳನ್ನು ಬಳಸಿ ಇನ್ನು ವಿಸ್ತಾರಗೊಳಿಸಲ್ಪಡುತ್ತದೆ. ಇಲ್ಲಿ ಪ್ರತಿಯೊಂದು ಪಾತ್ರವನ್ನು ಏಕಕಾಲದಲ್ಲಿ ಇಬ್ಬರು ನಟರು ವಹಿಸುತ್ತಾರೆ. ನಟರ ಚಲನೆ ರಂಗವೇದಿಕೆಯನ್ನು ದಾಟಿ ಪ್ರೇಕ್ಷಕರ ಪ್ರಾಂಗಣದವರೆಗೂ ಬೆಳೆಯುತ್ತದೆ. ಅಂದರೆ ರಂಗ ವೇದಿಕೆ ಮತ್ತು ಪ್ರೇಕ್ಷಕರ ಪ್ರಾಂಗಣ ಎಂಬ ವ್ಯತ್ಯಾಸ ಇಲ್ಲಿ ಅಸ್ಪಷ್ಟವಾಗಿ ಇರುವುದನ್ನು ಕಾಣಬಹುದು. ಇದು ರಂಗವೇದಿಕೆಯ ಘಟನೆಗಳಿಗೆ ನೆರವು ನೀಡುತ್ತದೆ.

ಮೂರು ಅಥವಾ ನಾಲ್ಕು ದಿನಗಳ ಕಾಲ ನಾಟಕ ನಡೆಯುವಾಗ ರಂಗವೇದಿಕೆಯ ಮೇಲೆ ನಡೆಯುವ ಘಟನೆಗಳು ಕಥೆಯ ತೀವ್ರತೆಗೆ ಅನುಗುಣವಾಗಿ ಬದಲಾಗುವುದನ್ನು ಕಾಣಬಹುದು. ರಂಗವೇದಿಕೆಯ ಮೇಲೆ ನಿರ್ದಿಷ್ಟ ಸ್ಥಳವಾದ ಸಿಂಹಾಸನದ ಮೇಲೆ ಕುಳಿತಿರುವ ಹಿರಣ್ಯಕಶಿಪುವಿನ ಪಾತ್ರ ಹಂತ ಹಂತವಾಗಿ ಉಗ್ರಗೊಳ್ಳುತ್ತದೆ. ಸಿಂಹಾಸನದಿಂದ ಧಾವಿಸಿ ಉಳಿದ ಪಾತ್ರಗಳನ್ನು ರಂಗವೇದಿಕೆಯ ಅಂಚಿನವರೆಗೆ ಹಿರಣ್ಯಕಶಿಪು ಅಟ್ಟಿಸಿಕೊಂಡು ಹೋಗುತ್ತಾನೆ. ಹೀಗೆ ಅಟ್ಟಿದ ಪಾತ್ರಗಳು ಪ್ರೇಕ್ಷಕರ ಪ್ರಾಂಗಣದೊಳಗೆ ಪ್ರವೇಶಿಸಬೇಕಾಗುತ್ತದೆ. ಆದ್ದರಿಂದ ನಾಟಕ ರಂಗವೇದಿಕೆಯನ್ನು ಬೆಳೆಸುವುದರ ಮೂಲಕ ತನ್ನ ಪಾತ್ರದ ವ್ಯಾಪ್ತಿಯನ್ನು ಹಿರಣ್ಯಕಶಿಪು ವಿಸ್ತಾರಗೊಳಿಸುತ್ತಾನೆ ಎಂದು ಭಾವಿಸಬಹುದು.

ಹೀಗೆ ಹಿರಣ್ಯಕಶಿಪು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತಾ ಹೋಗುವುದರ ತಾರ್ತಿಕತೆಯ ಮುಂದುವರಿದ ಭಾಗವಾಗಿ ನಾಟಕದ ಕೊನೆಯಲ್ಲಿ ನರಸಿಂಹ ಅವತರಿಸುತ್ತಾನೆ. ರಂಗವೇದಿಕೆಯ ಅಂಚಿನಲ್ಲಿ ಪ್ರೇಕ್ಷಕರಿಗೆ ಅಂಟಿಕೊಂಡಂತೆ ಹಿರಣ್ಯಕಶಿಪುವನ್ನು ನೋಡುತ್ತಾ ಬಂದು ಕುಳಿತುಕೊಳ್ಳುತ್ತಾನೆ ನರಸಿಂಹ. ತದನಂತರ ಇವರಿಬ್ಬರ ನಡುವೆ ನಡೆಯುವ ಯುದ್ಧದ ಸಂದರ್ಭದಲ್ಲಿ ಪರಸ್ಪರ ಇಬ್ಬರೂ ಆವೇಶಗೊಳ್ಳುತ್ತಾರೆ. ಆವೇಶಭರಿತ ನರಸಿಂಹನನ್ನು ಮೂರು – ನಾಲ್ಕು ಮಂದಿ ಸೇರಿ ಹಿಡಿದುಕೊಳ್ಳಬೇಕಾಗುತ್ತದೆ. ಇಬ್ಬರ ನಡುವಣ ಸ್ಥಳವನ್ನು ಹಗ್ಗದಂತೆ ಕಂಡುಬರುವ ಬಿಗಿದು ಹೆಣೆಯಲಾದ ಎರಡು ಪಂಚೆಗಳಿಂದ ಬೇರ್ಪಡಿಸಲಾಗುತ್ತದೆ. ಈ ತಡೆ ಇಲ್ಲದೆ ಹೋದರೆ ಆವೇಶಭರಿತರಾದ ನಟರು ಒಬ್ಬರ ಮೇಲೊಬ್ಬರು ಎರಗಿ ರಂಗವೇದಿಕೆ ಮೇಲೆ ನಿಜವಾದ ಕೊಲೆ ನಡೆಯಬಹುದೆಂದು ಗ್ರಾಮಸ್ಥರು ನಂಬುತ್ತಾರೆ. ನಾಟಕ ಮುಂದುವರೆಯುತ್ತಿದ್ದಂತೆ ನರಸಿಂಹ ಮುಂದೆ ಮುಂದೆ ಸರಿಯಲು ಇಬ್ಬರ ನಡುವಣ ಅಂತರ ಹಂತ ಹಂತವಾಗಿ ಕ್ಷೀಣಿಸುತ್ತದೆ. ಒಂದು ಹಂತದಲ್ಲಿ ಆವೇಶಭರಿತನಾಗಿ ಮೂರ್ಛೆ ಹೋದ ಹಿರಣ್ಯಕಶಿಪುವನ್ನು ರಂಗವೇದಿಕೆಯ ಹಿಂಬದಿಯಲ್ಲಿರುವ ಅಲಂಕಾರ ಕೋಣೆಗೆ ಹೊತ್ತೊಯ್ಯುತ್ತಾರೆ. ಈ ಹಂತ ತಲುಪುವುದಕ್ಕೆ ಸ್ವಲ್ಪ ಮುನ್ನ ಹಿರಣ್ಯಕಶಿಪುವನ್ನು ಹಿಡಿದುಕೊಂಡಿರುವ ವ್ಯಕ್ತಿಗಳೇ ನಿಧಾನವಾಗಿ ಅವನ ಮುಡಿಯನ್ನು ಅಲುಗಾಡಿಸಿ ಕಳೆಯುತ್ತಾರೆ. ಹಾಗೆ ಮುಡಿಯನ್ನು ಕಳೆದಾಕ್ಷಣ ಹಿರಣ್ಯಕಶಿಪು ಮೂರ್ಛೆ ಹೋಗುತ್ತಾನೆ. ಆದ್ದರಿಂದ ಹಿರಣ್ಯಕಶಿಪುವಿನ ಆ ಮುಡಿಯೇ ಅವನ ಅಧಿಕಾರದ ಗುರುತಾಗಿದೆ. ಆ ಮುಡಿಯನ್ನು ಕಳೆದುಕೊಳ್ಳುವುದು ಅವನು ತನ್ನ ಸಿಂಹಾಸನವನ್ನು ಕಳೆದುಕೊಂಡು ಸಾವನ್ನು ಎದುರಿಸುವುದಾಗಿದೆ.

ಆದ್ದರಿಂದ ಹಿರಣ್ಯಕಶಿಪು ಮತ್ತು ನರಸಿಂಹನ ನಡುವೆ ನಡೆಯುವ ಯುದ್ಧ ರಂಗಸ್ಥಳಕ್ಕೆ ಸಂಬಂಧಿಸಿದ ಅಧಿಕಾರಕ್ಕಾಗಿ ನಡೆಯುವ ಯುದ್ಧವಾಗಿದೆ. ನಾಟಕದ ಅಂತಿಮ ಘಟ್ಟದಲ್ಲಿ ವಾಸ್ತವ ಲೋಕ ಮತ್ತು ಪೌರಾಣಿಕ ಲೋಕವನ್ನು ಬೇರ್ಪಡಿಸುವ ಗಡಿಗಳು ಮುಸುಕಾಗಿ ಎರಡನೆಯದು ಮೊದಲನೆಯದರ ಮೇಲೆ ಮೇಲುಗೈ ಸಾಧಿಸುವುದನ್ನು ಕಾಣಬಹುದು. ಅಂದರೆ ನರಸಿಂಹನ ಹಾಜರಿಯಿಂದ ಎಲ್ಲಾ ಘಟನೆಗಳೂ ಭಾವಪೂರ್ಣವಾಗಿರುತ್ತವೆ. ರಂಗವೇದಿಕೆಯ ಮೇಲೆ ಪ್ರತ್ಯಕ್ಷನಾದ ನರಸಿಂಹ ಆವೇಶಭರಿತನಾಗಿ ಕಂಡುಬಂದರೆ, ಹಿರಣ್ಯಕಶಿಪು ಆವೇಶ ಮತ್ತು ಆಯಾಸ ಬೆರೆತ ಸ್ಥಿತಿಯಲ್ಲಿರುತ್ತಾನೆ. ಈ ಸಂದರ್ಭದಲ್ಲಿ ಹಿರಣ್ಯಕಶಿಪುವಿನ ಪಾತ್ರ ವಹಿಸುವ ನಟನಿಂದ ಹಾಡಲು ಮತ್ತು ಮಾತನಾಡಲು ಸಾಧ್ಯವಾಗುವುದಿಲ್ಲ. ಹಿಮ್ಮೇಳದಲ್ಲಿರುವ ಒಬ್ಬರು ಸಾಮಾನ್ಯವಾಗಿ ಹಿಂದೊಮ್ಮೆ ಹಿರಣ್ಯಕಶಿಪುವಿನ ಪಾತ್ರ ಮಾಡಿದವರು ಅಥವಾ ಬಹಳ ವರ್ಷ ನಟಿಸಿ ನಿವೃತ್ತಿ ಹೊಂದಿದ ವಯಸ್ಸಾದ ವ್ಯಕ್ತಿಯೊಬ್ಬ – ಈ ಹಾಡುಗಳನ್ನು ಹಾಡಿ ಸಂಭಾಷಣೆಗಳನ್ನು ಆಡುತ್ತಾನೆ. ಈ ವೇಳೆ ಪ್ರೇಕ್ಷಕರಲ್ಲಿ ಹೆಚ್ಚಿನವರು ಹಿಮ್ಮೇಳದವರೊಂದಿಗೆ ಸೇರಿ ಹಾಡತೊಡಗುತ್ತಾರೆ. ರಂಗ ವೇದಿಕೆಯ ಅಂತರ ಮತ್ತಷ್ಟು ಕ್ಷೀಣಿಸುತ್ತದೆ. ಪ್ರೇಕ್ಷಕರು ಎದ್ದು ನಿಂತು ಯುದ್ಧ ನಿರತರಾದ ಹಿರಣ್ಯಕಶಿಪು ಮತ್ತು ನರಸಿಂಹನನ್ನು ಸುತ್ತುವರಿದು ನಿಲ್ಲುತ್ತಾರೆ. ಈ ಸ್ಥಿತಿಯಲ್ಲಿ ಹಿರಣ್ಯಕಶಿಪು ಮೂರ್ಛೆ ಹೋಗಲು, ನರಸಿಂಹನು ಮುನ್ನಡೆದು ಹಿರಣ್ಯಕಶಿಪುವಿನ ಸಿಂಹಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಈಗ ರಂಗವೇದಿಕೆಯ ಅಂತರ ಮತ್ತಷ್ಟು ಕ್ಷೀಣಿಸಿ ಹಿರಣ್ಯಕಶಿಪುವಿನ ನಿಯಂತ್ರಣ ರೇಖೆಗಳನ್ನು ಮೀರಿ ಪ್ರೇಕ್ಷಕರು ಇಡೀ ರಂಗವೇದಿಕೆಯನ್ನು ಆಕ್ರಮಿಸಿಕೊಳ್ಳುತ್ತಾರೆ. ರಂಗಸ್ಥಳ ಆಚರಣೆಯ ಸ್ಥಳವಾಗುತ್ತದೆ. ನಟರ ಧ್ವನಿ ಮತ್ತು ಹಿಮ್ಮೇಳದವರ ಧ್ವನಿ ಈಗ ಇಡೀ ಗ್ರಾಮದ ಜನರ ಧ್ವನಿಯೊಂದಿಗೆ ಬೆರೆತು ಹೋಗುತ್ತದೆ. ನಟರು ನಟರಲ್ಲದವರ ನಡುವಣ ಅಂತರ ನಶಿಸಿ ಹೋಗಿ, ಅಲ್ಲೊಂದು ಸಮೂಹ ರೂಪುಗೊಳ್ಳುತ್ತದೆ.

ಹಿರಣ್ಯಕಶಿಪು ಮತ್ತು ನರಸಿಂಹನನ್ನು ಯುದ್ಧ ಮಾಡಲು ಹಾಗೂ ತಮ್ಮ ಪರಾಕ್ರಮವನ್ನು ತೋರಿಸಲು ಅನುಮತಿಸುವ ಗ್ರಾಮೀಣ ಸಮಾಜ, ಅದೇ ವೇಳೆ ಸಂಚಿತ ಪಾತ್ರವಾಗಿ (Collective role) ರೂಪುಗೊಂಡು, ಅವರ ನಡುವೆ ಮಧ್ಯಸ್ಥಿಕೆ ಮಾಡುವ ಶಕ್ತಿಯಾಗಿದ್ದು ಅವರಿಬ್ಬರನ್ನು ಪ್ರತ್ಯೇಕವಾಗಿಯೇ ಇಡುತ್ತದೆ. ಬಿಗಿದ ಪಂಚೆಯ ತಡೆಗೋಡೆಗಳು ಬರೀ ತಡೆಗೋಡೆಗಳಲ್ಲ. ಅವು ದೇವ ಮತ್ತು ದಾನವ ಒಂದು ಮತ್ತೊಂದರಲ್ಲಿ ಬೆರೆತು ಕರಗಿ ಹೋಗದಂತೆ ನೋಡಿಕೊಳ್ಳುವ ತಡೆಗಳು. ಆದ್ದರಿಂದ ನಾಟಕದ ಕೊನೆಯಲ್ಲಿ ಉಂಟಾಗುವ ದೇವ ಮತ್ತು ದಾನವ ಇವೆರಡೂ ಕರಗಿ ಮರೆಯಾಗುವ ಏಕತಾಭಾವನೆಯಿಂದ ಉಂಟಾಗುವ ಐಕ್ಯತೆಯಲ್ಲ. ಅಂದರೆ ಸಮಾಜ ಇಲ್ಲಿ ಸಮೂಹ ಸ್ಥಿತಿಯನ್ನು ತಲುಪುವಾಗ ತನ್ನ ಪ್ರಾತಿನಿಧ್ಯವನ್ನು ಕಳೆದುಕೊಳ್ಳುವುದಿಲ್ಲ. ಬದಲಾಗಿ ಸಮಾಜ ಇಲ್ಲಿ ಹೆಚ್ಚಿನ ಅಧಿಕಾರ ಮತ್ತು ಶಕ್ತಿಯನ್ನು ಪಡೆಯುತ್ತದೆ. ಅಂದರೆ ನಿಜವಾಗಿಯೂ ಯುದ್ಧದ ಕಡೆಯಲ್ಲಿ ಕಿರೀಟ ಧರಿಸುವುದು ಮತ್ತು ಸಿಂಹಾಸನವನ್ನೇರುವುದು ಸಮಾಜವೇ ಹೊರತು ದೇವರೂ ಅಲ್ಲ, ದಾನವನೂ ಅಲ್ಲ. ಸಮಾಜದವರೇ ಆದ ಹಿರಿಯ ಪುರುಷರು ಮತ್ತು ಸ್ತ್ರೀಯರು ಪಟ್ಟಾಭಿಷೇಕವನ್ನು ನೆರವೇರಿಸಿ ದೈವವಾದ ನರಸಿಂಹ, ರಾಕ್ಷಸನಾದ ಹಿರಣ್ಯಕಶಿಪು, ಪ್ರಹ್ಲಾದ ಮೂವರಿಗೂ ಆಶೀರ್ವಾದ ಮಾಡುತ್ತಾರೆ. ಅಂತಿಮವಾಗಿ ನೋಡಿದರೆ, ಸಮಾಜದ ಹೆಸರಿಲ್ಲದ ಮುಖಗಳೇ ನಾಟಕದ ನಿಜ ನಾಯಕರಾಗಿ ಕಂಡುಬರುತ್ತಾರೆ.

ಎಸ್.ಯು.ಕೆ. ಅನುವಾದ ಐ.ಎಸ್.

 

ರಾಕ್ ಕೇರಳದಲ್ಲಿ ದೇಸಿ ಮದ್ಯವನ್ನು ‘ರಾಕ್’ ಎಂದು ಹೇಳುತ್ತಾರೆ. ಆಹಾರಕ್ಕೆ ಉಪಯೋಗಿಸುವ ಕೆಲವು ವಸ್ತುಗಳನ್ನು ಹುಳಿ ಬರಿಸಿ, ಕುದಿಸಿ, ಅದರ ಆವಿಯನ್ನು ತಣಿಸಿ ರಾಕ್ ಉತ್ಪಾದಿಸುತ್ತಾರೆ. ಅನೇಕ ವಸ್ತುಗಳನ್ನು ಬಳಸಿಕೊಂಡು ರಾಕ್ ಉತ್ಪಾದಿಸುತ್ತಾರೆ.

ಬೆಲ್ಲ, ಗೇರುಹಣ್ಣು, ಅನನಾಸು, ದ್ರಾಕ್ಷಿ ಮೊದಲಾದ ವಸ್ತುಗಳನ್ನು ಬಳಸಿ ಈ ದೇಸಿ ಮದ್ಯವನ್ನು ತಯಾರಿಸುತ್ತಾರೆ. ಎಲ್ಲ ವಸ್ತುಗಳ ಜತೆಯಲ್ಲಿ ಬೆಲ್ಲ ಹಾಗೂ ಸೋಡಾಪುಡಿಯನ್ನು ಬಳಸುತ್ತಾರೆ. ನಿರ್ದಿಷ್ಟ ಪಾತ್ರೆಯಲ್ಲಿ ಗೇರುಹಣ್ಣು, ಬೆಲ್ಲ ಹಾಗೂ ಸೋಡಾಪುಡಿಯನ್ನು ಬೆರೆಸಿ, ಸುಮಾರು ಹತ್ತರಿಂದ ಹದಿನೈದು ದಿವಸಗಳವರೆಗೆ ಜೋಪಾನವಾಗಿರಿಸಿ ಹುಳಿ ಬರಿಸುತ್ತಾರೆ. ಗೇರು ಹಣ್ಣಿನ ಬದಲು ದ್ರಾಕ್ಷಿ ಅಥವಾ ಅನನಾಸು ಬಳಸುವವರು ಇದ್ದಾರೆ. ಈ ಹುಳಿ ಪದಾರ್ಥವನ್ನು ‘ವಾಷ್’ ಎಂದು ಹೇಳುತ್ತಾರೆ.

ನಿರ್ದಿಷ್ಟ ದಿವಸ ಈ ಹುಳಿರಸವನ್ನು ಹೊರತೆಗೆದು ದೊಡ್ಡ ಪಾತ್ರೆಯಲ್ಲಿ ಹಾಕಿ ಬೇಯಿಸುತ್ತಾರೆ. ಈ ಪಾತ್ರೆಯ ದ್ವಾರ ಅಗಲವಾಗಿದ್ದು, ಅದನ್ನು ಮುಚ್ಚುವಂತೆ ಒಂದು ಚಿಕ್ಕ ಪಾತ್ರೆಯನ್ನು ಇರಿಸಲಾಗುತ್ತದೆ. ಹುಳಿರಸವು ಬಿಸಿಯಾದಾಗ ಮೇಲೇರುವ ಆವಿಯು ಚಿಕ್ಕ ಪಾತ್ರೆಯಲ್ಲಿ ಹಾಕಿದ ತಣ್ಣೀರಿನ ಸ್ಪರ್ಶಕ್ಕೊಳಗಾಗಿ ಕೊಳವೆಯ ಮೂಲಕ ಹೊರಕ್ಕೆ ಬರುತ್ತದೆ. ಇದನ್ನು ಬಾಟ್ಲಿಗಳಲ್ಲಿ ಸಂಗ್ರಹಿಸುವರು. ಇದುವೇ ಅಮಲು ನೀಡುವ ದೇಸಿ ಮದ್ಯವಾಗಿದೆ.

ರಾಕ್ ಉತ್ಪಾದನೆಗೆ ವಿಶಿಷ್ಟ ರೀತಿಯ ದೊಡ್ಡ ಪಾತ್ರೆಯನ್ನು ಬಳಸುತ್ತಾರೆ. ಹಿಂದೆ ಮಣ್ಣಿನ ಪಾತ್ರೆಗಳನ್ನು ಬಳಸುತ್ತಿದ್ದರು. ಅದರ ಮೇಲೆ ಇರಿಸಿದ ಚಿಕ್ಕ ಪಾತ್ರೆಯಲ್ಲಿ ನಿರಂತರವಾಗಿ ತಣ್ಣೀರು ಬದಲಿಸುತ್ತಾ ಇರುತ್ತಾರೆ. ಮಾತ್ರವಲ್ಲ, ಹುಳಿರಸದ ಆವಿಯು ಹೊರಗೆ ಹರಿಯದಂತೆ ಒದ್ದೆ ಬಟ್ಟೆ ಅಥವಾ ಹಸಿಮಣ್ಣಿನಿಂದ ಪಾತ್ರೆಯ ಬದಿಗಳನ್ನು ಮುಚ್ಚುತ್ತಾರೆ. ಹೀಗೆ ಹುಳಿರಸದ ಆವಿಯು ಸಂಪೂರ್ಣ ಚಿಕ್ಕ ಪಾತ್ರೆಯ ತಣ್ಣೀರಿನಿಂದ ತಣ್ಣಗಾಗಿ, ಮದ್ಯವಾಗಿ ಬದಲಾಗುತ್ತದೆ.

ರಾಕ್ ಕೇರಳದ ಜನಪದ ಮದ್ಯವಾಗಿದೆ. ಈ ಮದ್ಯವನ್ನು ಜನರು ಕುಡಿಯುತ್ತಿದ್ದರು. ಮಾತ್ರವಲ್ಲ, ಆರಾಧನೆಯ ಸಂದರ್ಭಗಳಲ್ಲಿ ಬಳಸುತ್ತಿದ್ದರು. ಹಣ್ಣು ಹಾಗೂ ಧಾನ್ಯಗಳನ್ನು ಹುಳಿ ಬರಿಸಿ ತಯಾರಿಸುವ ಈ ಮದ್ಯವು ಜನಪದರ ದೇಸಿ ತಂತ್ರಜ್ಞಾನಕ್ಕೆ ನಿದರ್ಶನವಾಗಿದೆ.

ಜನಪದ ಸಮುದಾಯಗಳು ಅನೇಕ ದೇಸೀ ವಿದ್ಯೆಗಳನ್ನು ರೂಢಿಸಿಕೊಂಡಿವೆ. ತಮಗೆ ಬೇಕಾದ ವಸ್ತುಗಳನ್ನು ತಯಾರಿಸಲು ತಮ್ಮದೇ ಆದ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡಿದ್ದಾರೆ. ‘ರಾಕ್’ ಎಂಬುದು ಇಂತಹ ಜನಪದೀಯ ತಂತ್ರಜ್ಞಾನದ ಉತ್ಪಾದನೆಯಾಗಿದೆ.

ಟಿ.ಟಿ.ಕೆ.ಎಂ. ಅನುವಾದ ಎನ್.ಎಸ್.

 

ರಾಜನಾಲ ಬಂಡ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಚೌಡೇಪಲ್ಲಿಗೆ ಪಶ್ಚಿಮದಲ್ಲಿ ನಾಲ್ಕು ಕಿಲೋಮೀಟರ್ ದೂರದಲ್ಲಿ ದೊಡ್ಡದೊಂದು ಬಂಡೆ ಇದೆ. ಇದು ಸುಮಾರು ಎರಡು ಪರ್ಲಾಂಗ್ ಉದ್ದ ಮತ್ತು ಎರಡು ಪರ್ಲಾಂಗ್ ಅಗಲ ಇರುವ ಬಂಡೆ. ಇದು ಭೂಮಿಗೆ ಸಮತಲವಾಗಿಲ್ಲದೆ ಸ್ವಲ್ಪ ಎತ್ತರದಲ್ಲಿದೆ.

ಜನಪದರ ದೃಷ್ಟಿಯಲ್ಲಿ ಕೆಲವು ಬಂಡೆಗಳಿಗೆ ಮಹಿಮೆ ಇದೆ. ಈ ಬಂಡೆಗಳ ಮಹಿಮೆಗಳನ್ನು ತಿಳಿಸುವ ಅನೇಕ ಕತೆಗಳು ಪ್ರಚಾರದಲ್ಲಿವೆ. ಇಂಥ ಮಹಿಮಾನ್ವಿತ ಬಂಡೆಗಳಿಗೆ ಒಂದು ಹೆಸರು ಕೂಡ ಇರುತ್ತದೆ. ಪೆದ್ದಬಂಡ (ದೊಡ್ಡ ಬಂಡೆ), ಸತ್ರಂಬಂಡ (ಛತ್ರದ ಬಂಡೆ), ದೇವರ ಬಂಡ (ದೇವರ ಬಂಡೆ), ನಿಮಿಳ್ಳ ಬಂಡ (ನವಿಲು ಬಂಡೆ) ಮುಂತಾದ ಹೆಸರುಗಳಿವೆ. ಈ ಬಂಡೆಗಳು ಬೇರೆ ಬೇರೆ ರೀತಿ ಜನರಿಗೆ ಉಪಯುಕ್ತವಾಗುತ್ತವೆ. ಬಂಡೆಗಳ ಮೇಲೆ ಕೆಲವರು ಧಾನ್ಯಗಳನ್ನು ರಾಶಿ ಹಾಕುತ್ತಾರೆ. ಮಳೆ ಬಂದರೂ ಬಂಡೆಯ ಮೇಲೆ ತೇವಾಂಶ ಬೇಗನೆ ಒಣಗಿ ಹೋಗುವುದರಿಂದ ಧಾನ್ಯ ಮೊಳಕೆ ಒಡೆಯದೆ ಭದ್ರವಾಗಿರುತ್ತದೆ. ಆಹಾರ ಧಾನ್ಯಗಳು ಬಂಡೆಗಳ ಮೇಲೆ ಬೇಗನೆ ಒಣಗುವುದರಿಂದ ಜನರಿಗೆ ಇದರಿಂದ ಅನುಕೂಲವಾಗುತ್ತದೆ. ಬಂಡೆಯ ಮೇಲಿರುವ ಗುಳಿಗಳಲ್ಲಿ ಕಸ ಹಾಕಿಡುವುದರಿಂದ ಮಳೆ ಬಂದಾಗ ಈ ಕಸ ನೀರಿನಲ್ಲಿ ನೆನೆದು, ಕೊಳೆತು ಒಳ್ಳೆಯ ಗೊಬ್ಬರವಾಗುತ್ತದೆ. ಕೆಲವು ಪವಿತ್ರವಾದ ದೊಡ್ಡ ಬಂಡೆಗಳ ಮೇಲೆ ಜನ ಉತ್ಸವಗಳನ್ನು ಮಾಡುತ್ತಾರೆ. ಕೆಲವು ಬಂಡೆಗಳ ಮೇಲೆ ಕೊಳಗಳಿವೆ. ಆ ಕೊಳಗಳಲ್ಲಿ ಧಾನ್ಯ ಬಿದ್ದು ಅಲ್ಲೇ ಮೊಳಕೆಗಳು ಬರುವ ಸಂದರ್ಭಗಳಿವೆ. ಹೀಗೆ ಯಾರೂ ಪ್ರಯತ್ನ ಮಾಡದೆ ಬೆಳೆಯುವ ಧಾನ್ಯಗಳನ್ನು ರಾಜನಾಲ್ಕು ಎನ್ನುತ್ತಾರೆ. ಈ ಕಾರಣದಿಂದಲೇ ಚೌಡೇಪಲ್ಲಿ ಹತ್ತಿರದ ಬಂಡೆಗೆ ರಾಜನಾಲ ಬಂಡ ಎಂಬ ಹೆಸರು ಬಂದಿದೆ.

ಹಿಂದೆ ಗ್ರಾಮಗಳಲ್ಲಿ ವ್ಯಾಜ್ಯಗಳನ್ನು ಆ ಗ್ರಾಮದ ಹಿರಿಯರೇ ಇತ್ಯರ್ಥ ಮಾಡುತ್ತಿದ್ದರು. ಇಂಥ ಬಂಡೆಗಳ ಮೇಲೆ ಜನರೆಲ್ಲ ಕುಳಿತುಕೊಂಡು ಚರ್ಚೆ ಮಾಡುತ್ತಿದ್ದರು. ಕೊನೆಗೆ ರಾಜಿ ಮಾಡುತ್ತಿದ್ದರು. ಅದಕ್ಕೆ ಈ ಬಂಡೆ ರಾಜೀ ನ್ಯಾಯಗಳ ಬಂಡೆ ಎಂದು ಹೆಸರು ಬಂತು. ರಾಜನಾಲ ಬಂಡೆಯ ಮೇಲೆ ಒಂದು ಚಿಕ್ಕ ಗುಡಿಯನ್ನು ಕಟ್ಟಿ ಆಂಜನೇಯ ಸ್ವಾಮಿಯನ್ನು ಪ್ರತಿಷ್ಠಾಪನೆ ಮಾಡಿದ್ದಾರೆ. ಈ ಸ್ವಾಮಿ ತುಂಬ ಮಹಿಮೆಯುಳ್ಳವನೆಂದು ಹೇಳುತ್ತಾರೆ. ಚಿತ್ತೂರು ಜಿಲ್ಲೆಯಲ್ಲಿ ಪ್ರಮಾಣ ಮಾಡಲು ಇದು ಮುಖ್ಯ ಸ್ಥಳವೆಂದು ಹೆಸರುವಾಸಿಯಾದವು. ತರಿಗೊಂಡ ನರಸಿಂಹ ದೇವಸ್ಥಾನ, ಕಾಣಿಪಾಕಂ ವರಸಿದ್ಧಿ ವಿನಾಯಕ ದೇವಸ್ಥಾನ ಮತ್ತು ರಾಜನಾಲ ಬಂಡ.

ಪುಂಗನೂರು ಸಮೀಪದ ಗ್ರಾಮಗಳಲ್ಲಿ ಯಾರಾದರೂ ತಪ್ಪು ಮಾಡಿದರೆ, ಅಂಥವರನ್ನು ಪ್ರಮಾಣ ಮಾಡುವಂತೆ ರಾಜನಾಲ ಬಂಡೆಯ ಕಡೆಗೆ ಎಳೆದು ತರುತ್ತಾರೆ. ಸಾಮಾನ್ಯವಾಗಿ ತಪ್ಪು ಮಾಡಿದವನು ಬಂಡೆಯ ಹತ್ತಿರ ಬಂದ ಕೂಡಲೆ ತನ್ನ ತಪ್ಪು ಒಪ್ಪಕೊಳ್ಳುತ್ತಾನೆ. ಒಂದು ವೇಳೆ ಅವನು ತಪ್ಪನ್ನು ಒಪ್ಪಿಕೊಳ್ಳದಿದ್ದರೆ ಒಡವೆಗಳನ್ನು ಕಳೆದುಕೊಂಡವನು ರಾಜನಾಲ ಬಂಡೆಯ ಬಳಿ ಹೋಗಿ ಪೂಜಾರಿಗೆ ೧೧೬ ರೂಪಾಯಿಗಳನ್ನು ಕೊಟ್ಟು ಇಂಥ ದಿನ ಊರಿನ ಜನರೆಲ್ಲ ಬಂದು ಪ್ರಮಾಣ ಮಾಡಬೇಕೆಂದು ಹೇಳುತ್ತಾನೆ. ನಿಜವಾಗಿ ತಪ್ಪು ಮಾಡಿದವನು ಯಾವುದೋ ಒಂದು ರೀತಿ ಪ್ರಮಾಣ ಮಾಡಲು ಬರದೆ ತಪ್ಪಿಸಿಕೊಳ್ಳುತ್ತಾನೆ. ತಪ್ಪು ಮಾಡಿದವನು ದೇವರ ಮುಂದೆ ಸುಳ್ಳು ಹೇಳಿದರೆ ಅವನು ತಕ್ಷಣ ರಕ್ತ ಕಕ್ಕಿ ಸಾಯುತ್ತಾನೆ ಎಂದು ಜನರಿಗೆ ದೃಢವಾದ ನಂಬಿಕೆ ಇದೆ. ಒಂದು ವೇಳೆ ಅಲ್ಲೇ ಬಿದ್ದು ಸಾಯದಿದ್ದರೂ ಅವರ ಮನೆಯಲ್ಲಿ ಸಣ್ಣ ಮಕ್ಕಳು ಅಥವಾ ಹಸುಗಳು ಸತ್ತು ಹೋಗುವಂಥ ಕೇಡು ಉಂಟಾಗುತ್ತದೆ ಎಂದು ನಂಬಲಾಗಿದೆ.

ಪ್ರಮಾಣ ಮಾಡುವ ವಿಧಾನ : ಗ್ರಾಮದಲ್ಲಿ ಯಾವುದಾದರೂ ಕಳ್ಳತನ ನಡೆದರೆ ವಸ್ತುಗಳನ್ನು ಕಳೆದುಕೊಂಡವನು ರಾಜನಾಲ ಬಂಡೆಯ ಬಳಿಗೆ ಹೋಗಿ ಪೂಜಾರಿಗೆ ೧೧೬ ರೂಪಾಯಿ ಕಟ್ಟಿ ಮಾರನೆಯ ದಿನ ಜನರನ್ನು ಅಲ್ಲಿಗೆ ಕರೆದುಕೊಂಡು ಬರುತ್ತಾನೆ. ಎಲ್ಲರು ಕೊಳದಲ್ಲಿ ಸ್ನಾನ ಮಾಡಿ ಮೇಳ ತಾಳಗಳ ಸಮೇತ ಗುಡಿಯ ಸುತ್ತ ಮೂರು ಸಲ ಪ್ರದಕ್ಷಿಣೆ ಮಾಡುತ್ತಾರೆ. ಅನಂತರ ಗುಡಿಯೊಳಗೆ ಪ್ರವೇಶ ಮಾಡಿ ಆಂಜನೇಯನ ವಿಗ್ರಹದ ಮುಂದೆ ನಿಂತು ಆಕಾಶವಾಣಿ ಸಾಕ್ಷಿಯಾಗಿ ನರಸಿಂಹನ ಸಾಕ್ಷಿಯಾಗಿ ಆಂಜನೇಯನ ಸಾಕ್ಷಿಯಾಗಿ ಕಳ್ಳತನ ಮಾಡಿಲ್ಲವೆಂದು ಪ್ರಮಾಣ ಮಾಡುತ್ತಾರೆ. ಇಲ್ಲಿಗೆ ಬಹಳ ದೂರದ ಪ್ರದೇಶಗಳಿಂದಲೂ ಜನ ಬಂದು ಪ್ರಮಾಣ ಮಾಡುತ್ತಿರುತ್ತಾರೆ. ಒಂದೊಂದು ಭಾನುವಾರ ವಿಶೇಷವಾದ ಉತ್ಸವ ನಡೆಯುತ್ತದೆ. ಈ ಬಂಡೆಯ ಮೇಲೆ ಚಿಕ್ಕ ಮಕ್ಕಳು ನಡೆದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಇದೆ. ಈ ಬಂಡೆಯ ಮೇಲೆ ನೆಲೆಸಿರುವ ಆಂಜನೇಯ ಸ್ವಾಮಿ ಗುಡಿಯಲ್ಲಿ ಪೂಜಾರಿ ಆಗಬೇಕಾದರೆ ಮೊದಲು ಪೂಜಾರಿ ಆಗಿದ್ದವರ ಮನೆಯಲ್ಲಿ ಮದುವೆ ಆಗದವರಾಗಿದ್ದು ಭಕ್ತಿಯಿಂದ ದೇವರನ್ನು ಸೇವಿಸುವಂತಿರಬೇಕು. ಆತ ಬಂಡೆಯ ಮೇಲಿರುವ ಕೊಳದಲ್ಲಿ ಸ್ನಾನ ಮಾಡಿ ಗುಡಿಯ ಮುಂದೆ ಕುಳಿತು ತಾಂಬೂಲವನ್ನು ಬಾಳೆಯ ಹಣ್ಣನ್ನು ಕೈಯಲ್ಲಿ ಹಿಡಿದುಕೊಳ್ಳಬೇಕು. ಆಗ ಮೂರು ಎತ್ತುಗಳನ್ನು ಅವನ ಕಡೆ ಬಿಡುತ್ತಾರೆ. ಆ ಮೂರು ಎತ್ತುಗಳಲ್ಲಿ ಒಂದಾದರು ಬಂದು ಆತನ ತಾಂಬೂಲವನ್ನು ಮುಟ್ಟಬೇಕು. ಅಂಥವರನ್ನು ಪೂಜಾರಿಯನ್ನಾಗಿ ಮಾಡುತ್ತಾರೆ.

ಎಂ.ಆರ್.ಎನ್. ಅನುವಾದ ಎ.ಎಂ.ಡಿ.