ರಾಜ-ರಾಣಿ ಆಟ್ಟಮ್ ಭಾರತದಾದ್ಯಂತ ಹಲವು ಬಗೆಯ ಪ್ರದರ್ಶಕ ಕಲೆಗಳು ಹಿಂದಿನಿಂದಲೂ ವಿವಿಧ ಉದ್ದೇಶಗಳ ಹಿನ್ನೆಲೆಯಲ್ಲಿ ಪ್ರದಶಧನಗೊಳ್ಳುತ್ತಾ ಬಂದಿವೆ. ಇದು ಆಯಾ ಸಮೂಹಗಳ ಮೂಲ ವೃತ್ತಿಯಾಗಿಯೂ ಅವರಲ್ಲಿರುವ ವಿಶಿಷ್ಟ ಕಲೆಯಾಗಿಯೂ ಬೆಳೆದು ಬಂದಿದೆ. ಅದೇ ರೀತು ತಮಿಳುನಾಡಿನಲ್ಲಿಯೂ ಹಲವು ಪ್ರದರ್ಶಕ ಕಲೆಗಳು ಇರುವುದು ಸಂಶೋಧನೆ, ಕ್ಷೇತ್ರಕಾರ್ಯದಿಂದ ತಿಳಿದುಬಂದಿದೆ. ಅಂತಹವುಗಳಲ್ಲಿ ರಾಜ-ರಾಣಿ ಆಟ ಕೂಡ ಒಂದು. ರಾಜನಂತೆಯೂ ರಾಣಿಯಂತೆಯೂ ವೇಷ ಧರಿಸಿಕೊಂಡು ನೋಡುಗರ ಮಧ್ಯೆ ಪ್ರದರ್ಶಿಸುವ ಆಟವೇ ರಾಜ-ರಾಣಿ ಆಟ.

ರಾಜ-ರಾಣಿ ಆಟ ತಮಿಳುನಾಡಿನ ಮಧುರೈ ಭಾಗಗಳಲ್ಲಿ ಉಗಮಗೊಂಡ ಜಾನಪದ ಪ್ರದರ್ಶಕ ಕಲೆ. ಅಲ್ಲಿಯ ಪರೆಯೂರು ತಾಲ್ಲೂಕು, ಸೂಲಪುರಂ, ಮಳ್ಳಪುರಂ, ಅತ್ತಾಂಗರೈ ಪಟ್ಟಿ, ತಿರುಮಾಣಿಕ್ಯಂ ಮೊದಲಾದ ಊರುಗಳಲ್ಲಿ ಅರುಂಧತಿಯಾರ್ (ಎಡಗೈ ಪಂಥ) ಗಳು ಮಾತ್ರ ಈ ರಾಜ-ರಾಣಿ ಆಟವನ್ನು ಪ್ರಾರಂಭ ಕಾಲದಿಂದಲೂ ಆಡುತ್ತಿದ್ದಾರೆಂದು ಸಾಬೀತಾಗಿದೆ. ಈ ಆಟದ ಪ್ರಾರಂಭಕ್ಕೂ ಮೊದಲು ಸೂಲಪುರ ಗ್ರಾಮದಲ್ಲಿ ೧೮೪೦ ರ ಆಸುಪಾಸಿನಲ್ಲಿ ಸುಬ್ಬನ್ (ಉದ್ದದ ನಾಗಸ್ವರ), ಕಂದನ್ (ದೊಡ್ಡ ಗರ್ಜನೆಯನ್ನು ಉಂಟು ಮಾಡುವ ವಾದ್ಯದ ಕಲಾವಿದ), ಕುರುಪ್ಪನ್ (ವಾದ್ಯ ಕಲಾವಿದೆ), ಸುಬ್ಬನ್ (ಕೊಳಲು ಕಲಾವಿದ), ಸೆಲ್ಲಾಂಡಿ (ಕೊರವಂಜಿ ಕಲಾವಿದ) – ಈ ರೀತಿಯ ವಾದ್ಯಗಳೊಡನೆ ಸೆಲ್ಲಾಂಡಿಯಮ್ಮನ್ ದೇವಸ್ಥಾನಕ್ಕೆ ಈ ಎಲ್ಲ ಅರುಂಧತಿಯರು ಪ್ರತಿ ಮಂಗಳವಾರ ಮತ್ತು ಶುಕ್ರವಾರದ ದಿನಗಳಲ್ಲಿ ಬರುತ್ತಿದ್ದರು. ಈ ಸಮಾಜದ ಜನ (ತೋಟಿ) ಊರಿನ ಸೇವೆಯಲ್ಲಿ ತೊಡಗಿರುತ್ತಿದ್ದರು. ಅಲ್ಲದೆ ಸಾವಿನ ಅನಂತರದ ಚಟುವಟಿಕೆಗಳಾದ ಚಟ್ಟ ಕಟ್ಟುವ ಕೆಲಸ, ಸಾವಿನ ಸುದ್ದಿ ಸಾರುವುದು ಹಾಗೂ ಅಧಿಕಾರಿಗಳ ಸೇವೆಯಲ್ಲಿ ತೊಡಗುತ್ತಿದ್ದರು. ಐತಿಹಾಸಿಕ ಉದಾಹರಣೆ ಎಂದರೆ ಸಾಪ್ಟೂರ್ ಜಮೀನ್ದಾರರ ಆಳ್ವಿಕೆ ಕಾಲದಲ್ಲಿ ಸೂಲಪುರಕ್ಕೂ ಪೂರ್ವದಲ್ಲಿ ಸೆಲ್ಲಾಯಿಪುರಕ್ಕು ದಕ್ಷಿಣಕ್ಕೆ ಒಂದು ಎಕರೆ ಅಳತೆಯಲ್ಲಿ ವ್ಯವಸಾಯ ಮಾಡಿಕೊಳ್ಲಲು ಈ ಕಲಾವಿದರಿಗೆ ಭೂಮಿ ಕೊಟ್ಟುದಾಗಿಯೂ ಮಹಾಲಿಂಗಂ ಅವರು ಹೇಳುತ್ತಾರೆ.

ಈ ಕಲಾವಿದ ವಂಶಸ್ಥರೆ ಮೊದಲು ಕೊರವಂಜಿ ಆಟ ಆಡಿಕೊಂಡು ಬರುತ್ತಿದ್ದರು. ಎಲ್ಲ ಊರುಗಳಲ್ಲಿಯೂ ಈ ಆಟ ಪ್ರಸಿದ್ಧಿ ಪಡೆದಿತ್ತು. ಇದನ್ನು ಆಡುತ್ತಿದ್ದ ಕೊರಗ ಜನಾಂಗವನ್ನು ಕೆಳಮಟ್ಟದಲ್ಲಿ ನೋಡುತ್ತಿದ್ದರೆಂದು, ಬೇಸರಗೊಂಡ ಕುಪ್ಪಯ್ಯ ಎಂಬುವರು ನ್ಯಾಯಾಲಯದಲ್ಲಿ ಮೊರೆಯಿಟ್ಟರು. ಇದಕ್ಕೆ ನ್ಯಾಯಾಲಯ ಯಾವುದೇ ಸಮಾಜ ಮತ್ತು ವ್ಯಕ್ತಿಯನ್ನು ಹೀನದೃಷ್ಟಿಯಲ್ಲಿ ನೋಡುವಂತಿಲ್ಲ ಎಂದು ತೀರ್ಪಿತ್ತಿತು. ಅದೇ ಕಾಲಾನಂತರದಲ್ಲಿ ‘ಕೊರವಂಜಿ ಆಟ’ ಎಂಬ ಹೆಸರು ಮರೆಯಾಗಿ ರಾಜ-ರಾಣಿ ಆಟ ಎಂದು ಪ್ರಸಿದ್ಧವಾಯಿತು ಎಂದು ಕಲಾವಿದರು ಹೇಳುತ್ತಾರೆ.

ಕೊರವ-ಕೊರತಿ ಆಟವನ್ನು ಮಾತ್ರವೇ ಹರಕೆಯ ಸಲುವಾಗಿ ಪ್ರದರ್ಶಿಸುತ್ತಿದ್ದ ಈ ಕಲಾವಿದರು ಮೊದಮೊದಲು ಈ ಆಟವನ್ನು ಹಬ್ಬ – ಹರಿದಿನಗಳಲ್ಲಿ ಆಡುತ್ತಿದ್ದರು. ಇತ್ತೀಚೆಗೆ ತ.ಪಿ. ಸೊಕ್ಕಲಾಲ್ ಬೀಡಿ ಕಂಪನಿ, ಹೊಗೆಸೊಪ್ಪಿನ ಕಂಪನಿ ಮೊದಲಾದ ಜಾಹೀರಾತುಗಳಿಗಾಗಿ ಪ್ರದರ್ಶಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ. ಅದಕ್ಕಾಗಿ ಇವರು ಅಲಂಕಾರಿಕ ಸಾಮಗ್ರಿಗಳನ್ನು ಬಳಸಿಕೊಳ್ಳುತ್ತಿದ್ದರು.

೧೯೪೦ರ ಕಾಲಘಟ್ಟದಲ್ಲಿ ರಾಜ-ರಾಣಿ ಆಟದಲ್ಲಿ ಮುಖ್ಯ ಪಾತ್ರಗಳಾದ ಸೂಲಪ್ಪುರಂ ಪೆರುಮ್ಮಾಳ್ (ರಾಣಿವೇಷ), ಮಳ್ಳಪುರಂ ಪರಮನ್ (ರಾಜವೇಷ), ನಲ್ಲು (ಕೊರಗವೇಷ), ನಾಗನ್ (ಹಾಸ್ಯ ಚಟಾಕಿಯ ಪಾತ್ರ), ಅತ್ತಾಂಗರೈಪಟ್ಟಿ ರಾಮನಾಥನ್ (ರಾಜವೇಷ), ತಿರುಮಾಣಿಕ್ಕಂ (ವಿಷ್ಣುವಿನ ವೇಷ), ಉಸಿಲಮ್ ಪಟ್ಟಿ ಮೊಕ್ಕೈಯನ್ (ರಾಣಿವೇಷ), ತೇನಿ ಕರುಪ್ಪಯ್ಯ (ರಾಣಿವೇಷ) ಈ ಮೊದಲಾದ ಕಲಾವಿದರು ಈ ಆಟಕ್ಕೆ ಜೀವ ತುಂಬಿದರು.

ರಾಜ-ರಾಣಿ ಆಟ ಮೀನುಗಾರರ ಬದುಕಿಗೆ ಹಿಡಿದ ಕೈಗನ್ನಡಿ. ಇಲ್ಲಿ ಎಲ್ಲ ಪಾತ್ರಗಳೂ ರಾಜ – ರಾಣಿ ವೇಷ ಧರಿಸಿಕೊಂಡು ವೇಷ ಭೂಷಣಗಳು ಹಾಗೂ ಕ್ಷತ್ರಿಯ ಕೂದಲ ಜಡೆ ಮುಂತಾದವನ್ನು ಬಳಸಿಕೊಂಡು ಪ್ರದರ್ಶನ ನೀಡುವುದು ಇದರ ವಿಶೇಷ. ಹಳ್ಳಿಗಳಲ್ಲಿ ಇದು ಪ್ರದರ್ಶನಗೊಳ್ಳುವಾಗ ಕಲಾವಿದರು ಜನರಿಗೆ ಸುಲಭವಾಗಿ ಅರ್ಥವಾಗುವುದಕ್ಕಾಗಿ ಗಂಡ-ಹೆಂಡಿರು ಮತ್ತು ಸಾಮಾನ್ಯ ಸಂಬಂಧಗಳಂತೆಯೇ ವೇಷ ಹಾಕಿಕೊಂಡು ಪ್ರಸ್ತುತ ಸಮಾಜದ ಆಗು-ಹೋಗುಗಳನ್ನು ಅಭಿನಯಿಸುತ್ತಾರೆ. ಕೌಟುಂಬಿಕ ಸಮಸ್ಯೆ, ವರದಕ್ಷಿಣೆಯ ಪಿಡುಗು, ಹೆಣ್ಣಿನ ಭ್ರೂಣ ಹತ್ಯೆ, ಲೈಂಗಿಕ ಸಮಸ್ಯೆಗಳು ಮುಂತಾದವುಗಳನ್ನು ತೋರಿಸುವುದರ ಜೊತೆಗೆ ಮಿಲಿಟರಿ ಕತೆಗಳು, ವಿವಾಹ, ತಿರುಪ್ಪರಂಗುಂಡ್ರಂ, ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಕ್ಕಳ ಭಾಗ್ಯ ಕೇಳುವ ಕತೆ, ವಿಷ್ಣು ದೇವಾಲಯಕ್ಕೆ ಹೋಗುವ ಕತೆ, ಮಧುರೈಯ ಪ್ರಯಾಣ ಗೀತೆಗಳು, ಒಂದು ಜಾತಿಯ ಹಾಡುಗಳು, ರಾಜರ ಹಾಡುಗಳು, ಮಣಿಕೊರವರ ಹಾಡು, ಪಾಲಮ್ಮಾಳ್ ಹಾಡು, ಮಧುರೈನ ಶಾಲೆಯೊಂದರ ಅಪಘಾತದ ಹಾಡು, ಪ್ರವಾಹದ ಹಾಡುಗಳು, ಸುನಾಮಿ ಹಾಡು, ಕುಂಭಕೋಣಂನಲ್ಲಿ ಮಗು ಒಂದಕ್ಕೆ ಸಂಭವಿಸಿದ ಅಪಘಾತದ ಹಾಡು, ವೀರನ ಹಾಡು (ಒಂಡಿ ವೀರನ್ ಪಾಟ್ಟು), ಕುರುವಾಯ ದೇವರ ಹಾಡು – ಈ ರೀತಿಯ ಸಂಗತಿಗಳನ್ನೂ ಕತೆಯನ್ನೂ ಹಾಡಾಗಿಸಿ ಅದನ್ನು ಆಟಕ್ಕೆ ತಕ್ಕಂತೆ ಬಳಸಿಕೊಂಡು ಕುಣಿದು ಕುಪ್ಪಳಿಸುವಂತೆ ಜನರನ್ನು ಪ್ರೇರೇಪಿಸುವಲ್ಲಿ ಮತ್ತು ಅವರನ್ನು ಗಂಭೀರ ಚಿಂತಕರನ್ನಾಗಿಸುವಂತೆ ಮಾಡುವಲ್ಲಿ ಈ ಕಲಾವಿದರು ನುರಿತವರಾಗಿದ್ದಾರೆ. ಇದು ಈ ಆಟದ ವಿಶೇಷ ಅಂಶವಾಗಿದೆ.

ಈ ಆಟವನ್ನು ತಮಿಳುನಾಡಿನ ವಿವಿಧ ಭಾಗಗಳಲ್ಲಿ ಅಂದರೆ ಮಧುರೈ, ತೇನಿ, ವಿರುದನಗರ್ – ಮೊದಲಾದ ಭಾಗಗಳಲ್ಲಿ ನರಿಕೊರತಿ, ಕೊರವ – ಕೊರತಿ ಆಟವೆಂದೂ ತಿರುನ್ವೇಲಿಯಲ್ಲಿ ಕದಂಬ ಪ್ರದರ್ಶನ, ತೆರುಕ್ಕೂತ್ತು ಎಂದೂ ದಿಂಡುಕಲ್ ಜಿಲ್ಲೆಯ ಪೂಲತ್ತೂರ್, ಪಣ್ಣೈಕಾಡು ಮೊದಲಾದ ಭಾಗಗಳಲ್ಲಿ ‘ನಾಲ್ಕು ಆಟ’, ಹಲವು ವೇಷಗಳೆಂದೂ ಬಗೆಬಗೆಯಾಗಿ ಈ ಕಲೆಯನ್ನು ಗುರುತಿಸುತ್ತಾರೆ.

ಈ ಕಲೆ ಮಧುರೈ, ತೇನಿ, ತಿರುನಲ್ವೇಲಿ, ವಿರುದನಗರ್, ಕನ್ಯಾಕುಮಾರಿ, ದಿಂಡುಕಲ್, ರಾಮನಾಥಪುರಂ ಮೊದಲಾದ ಕಡೆ ಹೆಚ್ಚಾಗಿ ಕಂಡುಬರುತ್ತದೆ. ಇವು ಹಬ್ಬ-ಹರಿದಿನ, ವಿವಾಹ, ಹೆಣ್ಣು ಋತುಮತಿಯಾದ ಸಂದರ್ಭ, ಸಾವಿನ ಮನೆಗಳು, ಕಿವಿಚುಚ್ಚುವ ಶಾಸ್ತ್ರದ ವೇಳೆ, ರಾಜಕಾರಣಿಗಳ ಆಗಮನದ ಸಂದರ್ಭ, ವಿದೇಶೀಯರ ಆಗಮನದ ವೇಳೆ, ಚುನಾವಣಾ ಪ್ರಚಾರ, ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು ಅಲ್ಲದೆ ಜನಸಮೂಹ, ಸಂಘ-ಸಂಸ್ಥೆಗಳು ಆಯೋಜಿಸಿದಾಗ ಪ್ರದರ್ಶನಗೊಳ್ಳುವುದನ್ನು ಕಾಣಬಹುದು.

ಕಲಾವಿದರು ಪ್ರದರ್ಶನಕ್ಕಾಗಿ ಬಳಸುವ ಅಲಂಕರಣ ಪ್ರಸಾಧನಗಳು ಇಂತಿವೆ. ಮುತ್ತು, ಕೆಂವು, ಹಳದಿ ಪುಡಿಗಳಿಂದ ಮುಖಕ್ಕೆ ಸಿಂಗರಿಸಿಕೊಳ್ಳುತ್ತಾರೆ. ಕತ್ತಿನಲ್ಲಿ ಬಿಳಿಯ ಮಣಿಸರ, ಕಿವಿಗೆ ಓಲೆ, ಕಾಲಿಗೆ ಮಣಿಯ ಕಾಲ್ಗೆಜ್ಜೆ, ಕೆಳಗೆ ಲಂಗದಂತಹ ಬಟ್ಟೆ, ಇವು ರಾಜನ ಅಲಂಕಾರ ಸಾಮಗ್ರಿಗಳು. ಇನ್ನು ರಾಣಿಯ ತಲೆಯಲ್ಲಿ ವೃತ್ತಾಕಾರದ ಜಡೆ, ಅದರ ಸುತ್ತ ಕಾಗದದ ಮಲ್ಲಿಗೆ ಹೂ, ಕಿವಿಗೆ ಓಲೆ, ಕತ್ತಿಗೆ ನೆಕ್ಲೆಸ್, ಜಾಕೆಟ್, ಲಂಗ, ಡಾಬು, ಕಾಲ್ಗೆಜ್ಜೆ ಇತ್ಯಾದಿ ಧರಿಸುತ್ತಾರೆ. ಇನ್ನು ಹಾಸ್ಯ ಕಲಾವಿದ ತಲೆಯಲ್ಲಿ ಟೋಪಿ, ನೆತ್ತಿಯಲ್ಲಿ ವೃತ್ತಾಕಾರದ ಬಿಳಿಬಣ್ಣ ಮತ್ತು ಕೆಂಪು ಬಣ್ಣದ ವೃತ್ತ ಹೂವಿನಂತಹ ಶರ್ಟ್, ಪ್ಯಾಂಟು, ಟವಲ್ಲು, ಕಾಲ್ಗೆಜ್ಜೆ ಇತ್ಯಾದಿಗಳನ್ನು ಬಳಸುತ್ತಾರೆ.

ಗ್ರಾಮದೇವತೆಯ ಪೂಜೆಗಾಗಿ ಚಂದಾ ಹಣವನ್ನು ವಸೂಲಿ ಮಾಡಿ ನಡೆಸುವುದು ವಾಡಿಕೆ. ಇಂಥ ಸಂದರ್ಭಗಳಲ್ಲಿ ಈ ನೃತ್ಯವನ್ನು ಸರ್ವೇಸಾಮಾನ್ಯವಾಗಿ ಕಾಣಲಾಗುತ್ತದೆ. ಇದಲ್ಲದೆ ಸಾವಿನ ಮನೆಗಳಲ್ಲೂ ಈ ನೃತ್ಯ ನಡೆಸುತ್ತಾರೆ, ಇದಕ್ಕೆ ಆ ಸಂಬಂಧಿಕರೇ ಹೊಣೆಯಾಗಿರುತ್ತಾರೆ. ಈ ಕಲಾವಿದರು ತಮ್ಮನ್ನು ಅಲಂಕರಿಸಿಕೊಳ್ಳುವುದಕ್ಕೆ ದೇವಾಲಯದ ಮಂಟಪ, ಕಲ್ಯಾಣ ಮಂಟಪ, ಶಾಲೆ, ಮನೆ, ಊರ ಯಜಮಾನರ ಮನೆಗಳಲ್ಲಿ ನಡೆಯುವುದಕ್ಕೆ ಅವಕಾಶ ನೀಡಲಾಗುತ್ತದೆ. ಪಂಗುನಿ (ಫಾಲ್ಗುಣ) (ಮಾರ್ಚ್-ಏಪ್ರಿಲ್), ಚಿತ್ತರೈ (ಚೈತ್ರಮಾಸ), ವೈಕಾಸಿ (ವೈಶಾಖಮಾಸ), ಆನಿ (ಜ್ಯೇಷ್ಠ ಮಾಸ), ಆಡಿ (ಆಷಾಢ ಮಾಸ), ಆವಣೆ (ಶ್ರಾವಣ-ಬಾದ್ರಪದ) ಮೊದಲಾದ ತಿಂಗಳುಗಳಲ್ಲಿ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಇದು ಹೆಚ್ಚು ಪ್ರಸಿದ್ಧಿ ಪಡೆದಿದೆ. ಆದರೆ ತಿರುಚ್ಚಿ, ತಂಜಾವೂರ್ ಗಳಲ್ಲಿ ಇದು ಬಳಕೆಯಲ್ಲಿಲ್ಲ. ಏಕೆಂದರೆ ಅಲ್ಲಿ ಕರಗ ಎಂಬ ಮತ್ತೊಂದು ಕಲೆ ತನ್ನ ಪ್ರಭಾವ ಬೀರಿದೆ. ಕರಗ ಆಟದಲ್ಲೂ ರಾಜ – ರಾಣಿ ಆಟದ ಪ್ರಸ್ತಾಪವಿದೆ, ಆದರೆ ಆ ಹೋಲಿಕೆ ಸರಿಯಲ್ಲ. ರಾಜ – ರಾಣಿ ಆಟಕ್ಕೆ ನಿರ್ದಿಷ್ಟ ಕಲಾವಿದರು, ಹಾಡುಗಳು, ಅಲಂಕಾರಗಳು, ರೀತಿ ನೀತಿ ಇದೆ. ಇಲ್ಲಿ ಎರಡು ಅಥವಾ ಮೂರು ರಾಜನ ಪಾತ್ರಗಳು, ಎರಡು ರಾಣಿ ಪಾತ್ರಗಳು, ಒಂದು ಹಾಸ್ಯ ಕಲಾವಿದ, ಒಂದು ಕೊರವ ವೇಷ, ಒಂದು ವಾದ್ಯ ಕಲಾವಿದ – ಹೀಗೆ ಎಂಟು ಪಾತ್ರಗಳು ರಂಗಕ್ಕೆ ಬರುತ್ತವೆ. ಸಂದರ್ಭ, ಸನ್ನಿವೇಶಕ್ಕೆ ತಕ್ಕಂತೆ ಕಲಾವಿದರ ಸಂಖ್ಯೆ ಹೆಚ್ಚಾಗಬಹುದು ಅಥವಾ ಕಡಿಮೆ ಆಗಬಹುದು.

ಇದು ಶುದ್ಧ ಜಾನಪದ ಆಟವೇ ಹೊರತು ಶಾಸ್ತ್ರೀಯ ಪ್ರಕಾರಕ್ಕೆ ಸೇರಿದುದಲ್ಲ. ತೂತ್ತುಕುಡಿ ಜಿಲ್ಲೆಯ ಕುಲಶೇಖರ ಪಟ್ಟಣದಲ್ಲಿ ಮುತ್ತಾರಮ್ಮನ ಹಬ್ಬಕ್ಕೆ ಈ ಪ್ರದರ್ಶನ ನಡೆಯುತ್ತದೆ. ಆ ಕಲಾವಿದರು ಹತ್ತು ದಿ ಉಪವಾಸವಿದ್ದು, ಕಾವಿಬಟ್ಟೆ ಧರಿಸಿ, ಕೈಗಡಗ ಹಾಕಿಕೊಂಡು, ಲೈಂಗಿಕ ಚಟುವಟಿಕೆಯಿಂದ ದೂರವಿದ್ದು, ಮಾಂಸಾಹಾರವಿಲ್ಲದೆ ಶುದ್ಧ ಮನಸ್ಸಿನಿಂದ ವೇಷ ಧರಿಸಿ ಅಮ್ಮನಿಗೆ ಹರಕೆ ಸಲ್ಲಿಸುತ್ತಾರೆ ಎಂಬ ವಿಚಾರ ಕ್ಷೇತ್ರಕಾರ್ಯದ ವೇಳೆಯಲ್ಲಿ (ಕುರುಂಬೂರ್ ೨೭-೦೯-೨೦೦೯) ದೊರೆತಿದೆ. ಈ ಆಟಕ್ಕೆ ಒಟ್ಟು ಇಬ್ಬರು ಸದಸ್ಯರು, ಎರಡು ತಬಲ, ಎರಡು ಚರ್ಮವಾದ್ಯ, ಒಂದು ಡೊಳ್ಳು ಕುಣಿತ, ಒಂದು ತಮಟೆ ಮುಂತಾದ ವಾದ್ಯಗಳ ಅಗತ್ಯವಿದೆ. ಈ ಪ್ರದರ್ಶನ ಮೊದಲಿಗೆ ಹಾಸ್ಯಗಾರನಿಂದಲೇ ಆರಂಭವಾಗುತ್ತದೆ. ಅವನಿಲ್ಲದಿದ್ದರೆ ಆಟವೇ ಇಲ್ಲ ಎನ್ನಬಹುದು. ಏಕೆಂದರೆ ಇಡೀ ರಾತ್ರಿ ಪ್ರೇಕ್ಷಕರನ್ನು ನಗಿಸುವ, ರಾಜ – ರಾಣಿ ವೇಷಧಾರಿ ಕಲಾವಿದರಿಗೂ ಕತೆಯನ್ನು ಕದಂಬ ಮಾಲೆಯಾಕಾರದಲ್ಲಿ ಹೊಸೆದು ದಾರಿ ತೋರುವವನು ಈ ಹಾಸ್ಯ ಕಲಾವಿದನೇ. ಇವನನ್ನು ‘ಬಬೂನ್’ ಎಂದೂ ಹೆಣ್ಣಿನ ಪಾತ್ರವನ್ನು ‘ಶ್ರೀಪಾಟ್’ ಎಂದೂ ಕರೆಯಲಾಗುತ್ತದೆ.

ರಾಜ – ರಾಣಿ ಆಟದಲ್ಲಿ ಪೋಷಕ ಆಟಗಳಾಗಿ ಕೊರವ-ಕೊರತಿ, ನಲ್ಲತಂಗಾಳ್ ವೇಷ, ಸ್ವಾಮಿ ಆಟ, ಭೂತದಾಟ, ಜಮೀನ್ದಾರರ ಆಟಗಳು ಪ್ರದರ್ಶನಗೊಳ್ಳುತ್ತವೆ. ಈ ಆಟ ಸಾಮಾನ್ಯವಾಗಿ ರಾತ್ರಿಯಲ್ಲಿ ನಡೆಯುತ್ತದೆ. ರಾತ್ರಿ ೧೦.೩೦ ರಿಂದ ೧.೩೦ ರವರೆಗೆ ರಾಜ – ರಾಣಿ ಆಟ, ೧.೩೦ ರೀದ ೩.೩೦ ರವರೆಗೆ ಕೊರವ – ಕೊರತಿ ಆಟ, ೩.೩೦ ರಿಂದ ೫.೦೦ ಗಂಟೆವರೆಗೆ ಮುಕ್ಕಾಯಿ ಆಟ, ೫.೦೦ ರಿಂದ ೬. ೦೦ ಗಂಟೆಯವರೆಗೆ ನಲ್ಲತಂಗಾಳ್ ವೇಷ, ಬೆಳಗ್ಗೆ ೬.೦೦ ರಿಂದ ೭.೦೦ ರವರೆಗೆ ಸ್ವಾಮಿ ಆಟ – ಹೀಗೆ ಮೊದಲ ದಿನ ಪ್ರಾರಂಭವಾಗಿ ಮರುದಿನ ಬೆಳಿಗ್ಗೆ ೭.೦೦ ಗಂಟೆವರೆಗೆ ನಡೆಯುತ್ತದೆ.

ಈ ಆಟ ಸಾಮಾನ್ಯವಾಗಿ ದೇವಾಲಯದ ಮುಂಭಾಗ, ಮೂರು ದಾರಿ ಸೇರುವ ಕವಲು ದಾರಿ, ನಾಲ್ಕು ದಾರಿ ಸೇರುವ ಕವಲು ದಾರಿ, ಜನಕೇಂದ್ರಿತ ಸ್ಥಳಗಳಲ್ಲಿ ಪ್ರದರ್ಶನಗೊಳ್ಳುತ್ತದೆ. ಅಲ್ಲಿಯ ನಾಲ್ಕು ಭಾಗದಲ್ಲಿ ಬಿದಿರಿನ ಕಂಬಗಳನ್ನು, ಮಧ್ಯಭಾಗದಲ್ಲಿ ಹಗ್ಗ ಒಂದನ್ನು ಕಟ್ಟಿ ಮೈಕ್ ನೇತು ಹಾಕುವರು. ಅಲ್ಲದೆ ಸ್ಟ್ಯಾಂಡ್ ಮೈಕ್ ಹಾಕಿಕೊಡುವರು. ಆ ಸ್ಥಳವೇ ಪ್ರದರ್ಶನ ನೀಡುವ ರಂಗವೇದಿಕೆಯಾಗುತ್ತದೆ.

ಸಾವಿನ ಮನೆಯಲ್ಲಿ ಈ ಆಟ ಪ್ರದರ್ಶಿಸುವಾಗ ಆ ಮನೆಯ ಮುಂದಿನ ಹಜಾರವೇ ರಂಗಸ್ಥಳವಾಗುತ್ತದೆ. ಮಧುರೈ ಉಸಿಲಾಂಬಟ್ಟಿ, ಅಯ್ಯನಾರ್ ಕುಳಂ, ವಿಕ್ಕೆರ ಮಂಗಲಮ್, ಏಳುಮಲೈ, ಸಾಪ್ಟೂರ್, ಅನೈಕ್ಕರೈಪಟ್ಟಿ, ಮೇಲಪಟ್ಟಿ, ಕೇಳಪಟ್ಟಿ, ಶೀಲ್ ನಾಯಕ್ಕನ್ ಪಟ್ಟಿ, ಮಂಗಲ್ ರೇವು, ನಾಗಯಪುರಮ್ – ಮೊದಲಾದ ಊರುಗಳಲ್ಲಿ ಸಾವಿನ ಮನೆಯ ಈ ಆಟ ಹೆಚ್ಚು ಆಯೋಜನೆಯಾಗುತ್ತದೆ. ಈ ಆಟವನ್ನು ಸಾವಿನ ಮನೆಯಲ್ಲಿ ಪ್ರದರ್ಶಿಸುವಾಗ ‘ತೆಂಗಿನಗರಿ ಹೆಣೆಯುವುದು’ ಎಂಬ ಹೆಸರಿನಿಂದ ಕರೆಯುತ್ತಾರೆ. ಆ ಸಂದರ್ಭದ ಎಲ್ಲ ಆಚರಣೆ ಮುಗಿಯುವವರೆಗೂ ಈ ಆಟ ನಡೆಯುತ್ತಿರುತ್ತದೆ. ಈ ವೇಳೆಯ ಹಾಡುಗಳು ಹಾಸ್ಯಭರಿತವಾಗಿರುವುದಿಲ್ಲ, ಬದಲಾಗಿ ಶೋಕ ತುಂಬಿರುತ್ತದೆ. ಅದರಲ್ಲಿಯೂ ಮುಖ್ಯವಾಗಿ ಎದೆ ಬಡಿದುಕೊಂಡು ಹಾಡುವ ಶೋಕಗೀತೆಗಳಿಂದ ದನಿ ಆಗಸ ಮುಟ್ಟುತ್ತದೆ.

ಎದೆ ಬಡಿದುಕೊಂಡು ಹಾಡುವ ಹಾಡು ಪ್ರಾರಂಭವಾಗುವಾಗ ವಾದ್ಯಕಲಾವಿದರ ಹಾಡಿಗೆ ತಕ್ಕಂತೆ ತಬಲ ಬಡಿಯಲಾಗುತ್ತದೆ. ಆಗ ಸತ್ತವರ ಹಣೆಗೆ ಒಂದು ರೂಪಾಯಿಯ ನಾಣ್ಯವನ್ನು ಅಂಟಿಸುತ್ತಾರೆ. ಸತ್ತವರ ಮನೆಗಳಲ್ಲಿ ಮರದ ಖುರ್ಚಿಯಲ್ಲಿ ಧಾನ್ಯ, ಹೂಮಾಲೆ ತಂದು ಆ ಕಲಾವಿದರನ್ನು ಹೆಣದಂತೆ ಕೂರಿಸಿ ಎದೆಬಡಿದು ಹಾಡುವ ಹಾಡನ್ನು ಹಾಡಲಾಗುತ್ತದೆ. ಅನಂತರ ಶೋಕಗೀತೆ ಹೆಚ್ಚಾದಂತೆ ಅಲ್ಲಿಗೆ ಬರುವ ಜನಸಂದಣಿಯೂ ಹೆಚ್ಚಾಗುತ್ತದೆ.

ರಾಜ – ರಾಣಿ ಆಟ, ಉತ್ತರದ ರಾಜ – ರಾಣಿ ಆಟ, ದಕ್ಷಿಣದ ರಾಜ – ರಾಣಿ ಆಟ ಎಂದು ಎರಡು ಬಗೆಯಲ್ಲಿ ವಿಂಗಡಣೆಗೊಂಡಿದೆ.

ಉತ್ತರದ ರಾಜ – ರಾಣಿ ಆಟ : ಮಧುರೈ ಜಿಲ್ಲೆ ಸೂಲಪ್ಪುರಮ್, ಮಳ್ಳಪುರಂ, ಅತ್ತಾಂಗರೈಪಟ್ಟಿ, ಪೇರೈಯಂಪಟ್ಟಿ, ಉಸಿಲಂಪಟ್ಟಿ, ವಗುರಣೆ, ವಡಕ್ಕಂಪಟ್ಟಿ, ಆಂಡಿಪಟ್ಟಿ, ಕೊಂಡಮನಾಯಕನ್ ಪಟ್ಟಿ, ತೇನಿ, ಅಲ್ಲಿನಗರಂ ಮೊದಲಾದ ಊರುಗಳಲ್ಲಿ ಇರುವ ರಾಜ – ರಾಣಿ ಆಟದ ಕಲಾವಿದರನ್ನು ಉತ್ತರದ ರಾಜ – ರಾಣಿ ಆಟದ ಕಲಾವಿದರು ಎನ್ನುತ್ತಾರೆ. ಇದು ಸೂಕ್ಷ್ಮಸ್ವರದಲ್ಲಿ ‘ತುತ್ತ ತುನ ತುತ್ತಂಗಡಿ ನುನ ತುತ್ತಂಗಡಿ’ ಎಂಬ ಮೂರನೇ ಬಗೆಯ ತಾಳದಲ್ಲಿ ನುಡಿಸುವುದನ್ನು ಕೇಳಬಹುದು. ಅಲಂಕಾರ, ಹಾಡುಗಳು, ಉಡುಪು ಮೊದಲಾದವು ಈ ಆಟಕ್ಕೆ ತಕ್ಕಂತೆ ಇರುತ್ತವೆ.

ದಕ್ಷಿಣದ ರಾಜ – ರಾಣಿ ಆಟ : ವಿರುದನಗರ ಜಿಲ್ಲೆಯ ರಾಜಪಾಳೈಯಂನ ಪಕ್ಕದಲ್ಲಿರುವ ಮಾಗುಂಡಿ, ಕಮಿಳಂಗಳಮ್, ವತ್ರಾಪ್ ಪುದುಪಟ್ಟಿ, ತಿರುನೆಲ್ವೆಲಿ ಜಿಲ್ಲೆಯ ಶಂಕರನ್ ದೇವಸ್ಥಾನ, ಆರಾಯಿಚ್ಚಿಕ್ಕಾರನ್ ಪಟ್ಟಿ, ರಾಮಲಿಂಗಪುರಮ್, ಮಲೈಪ್ಪಟ್ಟಿ, ತೂತ್ತುಕ್ಕುಡಿ ಜಿಲ್ಲೆಯ ಕುಳತ್ತೂರ್, ವಿಳಾತ್ತುಕುಳಂ ಮೊದಲಾದ ಭಾಗಗಳಲ್ಲಿ ಇರುವ ಕಲಾವಿದರನ್ನು ದಕ್ಷಿಣದ ರಾಜ – ರಾಣಿ ಆಟದ ಕಲಾವಿದರು ಎನ್ನುತ್ತಾರೆ.

ದಕ್ಷಿಣದ ರಾಜ – ರಾಣಿ ಆಟದಲ್ಲಿ ವಿಶೇಷವಾಗಿ ಕಾಣಬರುವ ಅಂಶವೆಂದರೆ ಕಲಾವಿದರು, ಅದರಲ್ಲಿಯೂ ಹೆಣ್ಣಿನ ಪಾತ್ರಧಾರಿಗಳು ಹೆಚ್ಚಾಗಿ ನಪುಂಸಕ ಲಿಂಗಿಗಳೇ (ಹಿಜಡಾ) ಆಗಿರುತ್ತಾರೆ. ಅಲ್ಲದೆ ಸಂಭಾಷಣೆಯಲ್ಲಿ ಹೋಗೆ ಬಾರೆ ಎಂದು ಉಚ್ಚರಿಸುತ್ತಾರೆ. ಇವರು ತಾಳಕ್ಕೆ ತಕ್ಕಂತೆ ವೇಗದ ನೃತ್ಯ ಮಾಡುವುದಿಲ್ಲ. ಕರಗ ಹೊತ್ತವರು ನರ್ತಿಸುವಂತೆ ನಿಧಾನವಾಗಿ ಹೆಜ್ಜೆ ಹಾಕುತ್ತಾರೆ. ಶುದ್ಧ ದೇಸಿ ಜಾನಪದದ ರೀತಿಯಲ್ಲಿಯೇ ಆಟ ಪ್ರಾರಂಭಿಸುತ್ತಾರೆ. ಇವರು ಜಾನಪದ ಹಾಡು, ಭೂತಾರಾಧನೆಗೆ ‘ಡಮರು’ ವಾದ್ಯ ಬಳಸುತ್ತಾರೆ. ಆದರೆ ಉತ್ತರದ ರಾಜ – ರಾಣಿ ಆಟದ ಕಲಾವಿದರು ‘ಡೋಲುವಾದ್ಯ’ ಬಳಸುತ್ತಾರೆ. ವಿಳಾರ್ತಿ ಕುಳಂ ಆಟದಲ್ಲಿ ತಂಡದವರು ನೈಯ್ಯಂಡಿ ಮೇಳಕ್ಕೆ ಬದಲಾಗಿ ಹಾರ್ಮೋನಿಯಂ, ತಬಲವನ್ನು ಸಂಗೀತದ ಪರಿಕರಗಳನ್ನಾಗಿ ಬಳಸಿಕೊಂಡು ಇಡೀ ರಾತ್ರಿ ಪ್ರದರ್ಶನ ನೀಡುತ್ತಾರೆ. ಆದರೆ ಉತ್ತರದ ರಾಜ – ರಾಣಿ ಆಟದಲ್ಲಿ ಪುರುಷ ಕಲಾವಿದರು ಹೆಣ್ಣಿನ ವೇಷ ಧರಿಸಿ ನೃತ್ಯ ಮಾಡುತ್ತಾರೆ. ಅಲ್ಲದೆ ಹಾಡು, ಸಂಗೀತಕ್ಕೆ ತಕ್ಕಂತೆ ತಮ್ಮ ನೃತ್ಯದ ವೇಗ ಹೆಚ್ಚು ಮಾಡುತ್ತಾರೆ.

ಈ ಉತ್ತರ – ದಕ್ಷಿಣದ ರಾಜ – ರಾಣಿ ಆಟದ ಕಲಾವಿದರಲ್ಲಿ ಕಂಡುಬರುವ ಸಾಮ್ಯವೆಂದರೆ ಪಾಲಮ್ಮಾಳ್ ಹಾಡು, ಶಾಲೆಯ ಅಪಘಾತದ ಹಾಡು, ಮಣಿ ಕೊರವರ ಹಾಡು ಮೊದಲಾದ ಹಾಡುಗಳನ್ನು ಹಾಡುವಾಗ ಒಂದೇ ಮಟ್ಟಿನಲ್ಲಿ ಹಾಡುತ್ತಾರೆ. ಈ ಆಟ ಪ್ರದೇಶದಿಂದ ಪ್ರದೇಶಕ್ಕೆ ಪರಿಸರದಿಂದ ಪರಿಸರಕ್ಕೆ ತಕ್ಕಂತೆ ಬದಲಾಗುತ್ತದೆ. ಇದನ್ನು ವೀಕ್ಷಿಸಿದ ಪ್ರೇಕ್ಷಕರು ಕುಣಿದು ಕುಪ್ಪಳಿಸುತ್ತಾರೆ. ಮಧುರೈ ಜಿಲ್ಲೆಯಲ್ಲಿ ಉಗಮವಾಗಿ ತೇನಿ, ವಿರುದುನಗರ್, ತಿರುನೆಲ್ವೆಲಿ ಮುಂತಾದ ಜಿಲ್ಲೆಗಳಲ್ಲೂ ಈ ಕಲೆ ಹಬ್ಬಿದೆ. ಮೊದಲೈಕುಳಂ ಪಾಲ್ ಸ್ವಾಮಿ, ಟಿ.ವಿ. ಪಚ್ಚೈಯಪ್ಪನ್, ಅವನೀಯಾಪುರಂ ಚೆನ್ನಾಂಡಿ, ಪೆರುಮಾಳ್ ಕೋನಾರ್ ಮೊದಲಾದವರು ಬರೆದ ಹಾಡುಗಳು ಈ ಆಟಕ್ಕೆ ರಕ್ಷಾಕವಚವಾಗಿವೆ.

ಈ ಆಟವನ್ನು ಎಡಪಂಥೀಯರು (ಮೋಚಿ) ಹೆಚ್ಚಾಗಿ ಅನಂತರ ಬಲಪಂತದವರು, ಮೂರನೆಯವರಾಗಿ ಪಳ್ಳಜಾತಿಯವರು ಪ್ರದರ್ಶಿಸುತ್ತಾ ಬರುತ್ತಿದ್ದಾರೆ. ಆದರೆ ಪ್ರಸ್ತುತ ವಾಣಿಜ್ಯ ಜಗತ್ತಿನಲ್ಲಿ ದೇವರ್, ನಾಯಕರ್ ಮೊದಲಾದ ಜಾತಿಯವರು ಕೂಡ ಈ ಆಟವನ್ನು ಪ್ರದರ್ಶನ ನೀಡುತ್ತಾ ಬರುತ್ತಿದ್ದಾರೆ.

ಎಸ್.ಪಿ. ಅನುವಾದ ಆರ್.ಎಸ್.

 

ರಾಣಾ ‘ರಾಣಾ’ ಎಂದರೆ ಯುದ್ಧವೆಂದು ಅರ್ಥ. ಇವರು ಆಂಧ್ರದ ವಿಶಾಖ, ವಿಜಯನಗರಂ ಜಿಲ್ಲೆಗಳಲ್ಲಿ ವಾಸಿಸುತ್ತಾರೆ. ಇವರನ್ನು ‘ರೆಣ’ ಎಂತಲೂ ಕರೆಯುತ್ತಾರೆ. ಒಡಿಯಾ ಭಾಷೆಯನ್ನು ಮಾತನಾಡುವರು. ಗುಡ್ಡಗಾಡುಗಳಲ್ಲಿ ಬೇಸಾಯ ಮಾಡಿಕೊಂಡಿದ್ದಾರೆ. ಸಂತೆ ಇತ್ಯಾದಿ ವ್ಯವಹಾರ ಸಂಬಂಧದಲ್ಲಿ ತೆಲುಗು ಮಾತನಾಡುತ್ತಾರೆ. ವ್ಯವಸಾಯ ಕೂಲಿಗಳಾಗಿಯೂ ಜೀವನ ನಡೆಸುತ್ತಿದ್ದಾರೆ. ಇದಲ್ಲದೆ ಗಂಡಸರು ಹೆಂಗಸರು ಕಾಡಿಗೆ ಹೋಗಿ ವಿಪ್ಪಪೂಲು (ಮಹುವ) ಸೀಗೆಕಾಯಿ, ಗೆಡ್ಡೆಗೆಣಸು, ಗಿಡಮೂಲಿಕೆಗಳು, ಬಿದಿರಿನಂತಹ ಉತ್ಪನ್ನಗಳನ್ನು ಶೇಖರಿಸಿ ಸಂತೆಗಳಲ್ಲಿ ಮಾರುತ್ತಾರೆ. ಜೋಳ ಇಷ್ಟವಾದ ಆಹಾರ, ಇವರು ಮಾಂಸಾಹಾರಿಗಳು. ಸರಾಯಿ, ಹೆಂಡ ಕುಡಿಯುತ್ತಾರೆ. ಬೀಡಿ ಸೇದುತ್ತಾರೆ. ರಾಣಾಗಳಲ್ಲಿ ಮತ್ಸ್ಯ (ಮೀನು), ಸೂರ್ಯ (ಸೂರ್ಯ), ಭಲ್ಲು (ಎತ್ತು), ಗೊಲ್ಲರಿ (ಮಂಗ), ಕೊರ‍್ರ (ನವಣೆ) ಮೊದಲಾದ ಗೋತ್ರಗಳಿವೆ. ಇವರಲ್ಲಿಯೂ ಓಲಿ ವ್ಯವಸ್ಥೆ ಇದೆ. ಸೋದರಳಿಯ ಸೋದರ ಸೊಸೆಯನ್ನು ಮದುವೆಯಾಗುವುದು ಸರ್ವೇಸಾಮಾನ್ಯ. ತೀರಿಕೊಂಡ ಸೋದರನ ಹೆಂಡತಿಯನ್ನು ಮದುವೆಯಾಗುವುದು, ತೀರಿಕೊಂಡ ಹೆಂಡತಿಯ ತಂಗಿಯನ್ನು ಮದುವೆಯಾಗುವುದು ಆಚಾರದಲ್ಲಿದೆ. ಓಲಿ ವ್ಯವಸ್ಥೆಯಲ್ಲಿ ಹೆಚ್ಚಾಗಿ ವಸ್ತುಗಳನ್ನೇ ಕೊಡುತ್ತಾರೆ. ವಿವಾಹ ವಿಚ್ಛೇದನಕ್ಕೆ ಅವಕಾಶವಿದೆ. ಪಿತೃಪ್ರಧಾನ ವ್ಯವಸ್ಥೆಯಿದೆ. ಮನೆಯ ಯಜಮಾನ ತಂದೆಯೆ. ಸಾಮಾನ್ಯವಾಗಿ ಸಣ್ಣ ಕುಟುಂಬಗಳೇ ಹೆಚ್ಚು. ಹೆರಿಗೆಯಾಗಿ ಕೂಸಿಗೆ ಒಂಬತ್ತನೆಯ ದಿನ ಹೆಸರಿಡುತ್ತಾರೆ. ಸತ್ತವರನ್ನು ಹೂಳುವ ಪದ್ಧತಿಯಿದೆ. ಹತ್ತನೆಯ ದಿನ ಕರ್ಮಗಳನ್ನು ಮಾಡುತ್ತಾರೆ. ಪೂರ್ವಿಕರನ್ನು ಪೂಜಿಸುವ ಸಂಪ್ರದಾಯವಿದೆ. ಗ್ರಾಮದ ಹಿರಿಯರನ್ನು ‘ನಾಯುಡು’ ಎಂದು ಕರೆಯುತ್ತಾರೆ. ನಾಯುಡುಗೆ ‘ಬಾರಿಕ ಮತ್ತು ಚಲ್ಲೋನಿ’ ಸಹಾಯಕರಾಗಿರುತ್ತಾರೆ. ಹಬ್ಬದ ಸಂದರ್ಭದಲ್ಲಿ ಇವರು ಗ್ರಾಮಸ್ಥರಿಂದ ಹಣವನ್ನು ವಸೂಲಿ ಮಾಡಿ ಸಾಮಾಜಿಕ, ಧಾರ್ಮಿಕ ಪರವಾದ ಕೆಲಸಗಳಿಗೆ ಉಪಯೋಗಿಸುತ್ತಾರೆ.

ಇವರು ನಂದಿ, ಗಂಗ, ಪೆದ್ದ ದೇವುಡು ಮುಂತಾದ ದೇವತೆಗಳನ್ನು ಪೂಜಿಸುತ್ತಾರೆ. ದೀಪಾವಳಿ, ಶಿವರಾತ್ರಿ, ಯುಗಾದಿಯಂತಹ ಹಿಂದೂ ದೇವತೆಗಳ ಹಬ್ಬಗಳನ್ನು ಆಚರಿಸುತ್ತಾರೆ. ಅಕ್ಷರಸ್ಥರು ತುಂಬಾ ಕಡಿಮೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೨೦೦ ಅಂದರೆ ಶೇಕಡಾ ೦.೦೦೩.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ರುಂಜ ಕಥ ತೆಲುಗುನಾಡಿನ ಪ್ರದರ್ಶನ ಕಲೆ. ತೆಲುಗಿನವರ ಪ್ರದರ್ಶನ ಕಲೆಗಳಲ್ಲಿ ವಿಲಕ್ಷಣವಾದುದು. ರುಂಜ ಎನ್ನುವುದು ವಾದ್ಯದ ಹೆಸರು. ರುಂಜ ಬಾರಿಸುತ್ತಾ ಹೇಳುವ ಕಥೆ ಆದ್ದರಿಂದ ಇದಕ್ಕೆ ರುಂಜ ಕಥೆ ಎನ್ನುವ ಹೆಸರು ಬಂದಿದೆ. ಕಥೆ ಹೇಳುವವರನ್ನು ರುಂಜಲವಾರು ಎನ್ನುತ್ತಾರೆ. ಹೀಗೆ ನುಡಿಸುವ ವಾದ್ಯಗಳ ಹೆಸರಿನಲ್ಲಿ ಕುಲಗಳ ಹೆಸರೂ ಸೇರಿಕೊಳ್ಳುವುದು ತೆಲುಗಿನಲ್ಲಿ ಸಹಜವಾದುದು. ರುಂಜವಾರು ಎನ್ನುವವರು ಆಂಧ್ರಪ್ರದೇಶದ ವಿಶ್ವಬ್ರಾಹ್ಮಣ ಕುಲದವರಿಗೆ ಎಂದರೆ ಬಡಗಿ, ಕುಂಬಕಾರ ವೃತ್ತಿ, ಅಕ್ಕಸಾಲಿಗ, ಹಿತ್ತಾಳೆ ಮತ್ತು ಇತರ ಶಿಲ್ಪಗಳ ಕೆಲಸ ಮಾಡುವ ಐದು ವೃತ್ತಿ ವರ್ಗದವರಿಗೆ ಆಶ್ರಿತ ಕುಲದವರಾಗಿದ್ದಾರೆ. ರುಂಜವಾರು, ವಿಶ್ವಬ್ರಾಹ್ಮಣ ಇಲ್ಲವೆ ವಿಶ್ವಕರ್ಮ ಕುಲದವರನ್ನು ಆಶ್ರಯಿಸಿಕೊಂಡು ಅವರಿಗೆ ಕಥೆಗಳನ್ನು ಹೇಳುತ್ತಾ ಅವರಿಂದ ದಾನಗಳನ್ನು ಸ್ವೀಕರಿಸುತ್ತಾ ಜೀವಿಸುತ್ತಾರೆ. ರುಂಜವಾರು ಬೇರೆಯವರ ಬಳಿ ಈ ಕಥೆಯನ್ನು ಹೇಳುವುದಿಲ್ಲ. ಕಥೆ ಹೇಳುವುದರ ಜೊತೆಗೆ, ಗೋತ್ರ, ಸೂತ್ರ, ಪ್ರವರ, ಶಾಖೆಗಳನ್ನು ಸಹ ಅವರಿಗೆ ವಿವರಿಸುತ್ತಾರೆ. ವರ್ಷಕ್ಕೊಮ್ಮೆ ಇವರಿಗೆ ವರ್ತನೆ ಇರುವ ಊರಿಗಳಲ್ಲಿ ಕುಟುಂಬಗಳ ಬಳಿ ಹೋಗಿ ರುಂಜ ಕಥೆಯನ್ನು ಪ್ರದರ್ಶಿಸಿ ಅವರಿಂದ ಧಾನ್ಯ, ಹಣ, ಬಟ್ಟೆ ಮತ್ತಿತರ ರೂಪದ ದಾನಗಳನ್ನು ಪಡೆಯುತ್ತಾರೆ. ಇವರು ಆಂಧ್ರಪ್ರದೇಶದ ಪ್ರಧಾನವಾದ ಮೂರು ಪ್ರಾಂತ್ಯಗಳಲ್ಲೂ ಇದ್ದಾರೆ. ಮೆದಕ್, ಶ್ರೀ ಕಾಕುಳಂ, ಗೋದಾವರಿ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ರುಂಜ ತುಂಬ ದೊಡ್ಡದಾದ ಚರ್ಮ ವಾದ್ಯ. ನಾಲ್ಕು ಅಡಿ ಎತ್ತರವಿದ್ದು, ಸ್ತೂಪದ ಆಕಾರದಲ್ಲಿರುತ್ತದೆ. ಮೇಲೆ ಎರಡು ಅಡಿ ಅಗಲದ ವೃತ್ತಾಕಾರದ ಮುಖವಿರುತ್ತದೆ. ಹಾಗೆಯೇ ಕೆಳಗಡೆ ಒಂದು ಅಡಿ ವೃತ್ತಾಕಾರದಲ್ಲಿರುತ್ತದೆ. ಕೆಳಗೆ ಖಾಲಿಯಾಗಿರುತ್ತದೆ. ರುಂಜ ವಾದ್ಯದ ಮೂಲಕ ಪ್ರಧಾನವಾಗಿ ವಿಶ್ವಕರ್ಮ ಪುರಾಣವನ್ನು ಪ್ರದರ್ಶಿಸುತ್ತಾರೆ. ಇದಲ್ಲದೆ ಮೂಲಸ್ಥಂಭ, ಪಾರ್ವತಿ ಕಲ್ಯಾಣ, ದಕ್ಷಯಜ್ಞ, ಭಾರತ ಕಥೆಗಳು ಮತ್ತೆ ಕೆಲವು ಅದ್ಭುತ ಕಥೆಗಳನ್ನು ಸಹ ವಾದ್ಯದ ಮೂಲಕ ಪ್ರದರ್ಶಿಸುತ್ತಾರೆ. ಈ ವಾದ್ಯ ಗಂಭೀರವಾದ ತುಂಬ ದೊಡ್ಡ ಶಬ್ದವನ್ನು ಮಾಡುತ್ತದೆ. ರುಂಜ ವಾದ್ಯದಲ್ಲೇ ವಾದ್ಯಗಾರರು ತುಂಬಾ ವಿಶೇಷವಾದ ಪ್ರತಿಭೆಯನ್ನು ತೋರ್ಪಡಿಸುತ್ತಾರೆ. ಒಂದೇ ವಾದ್ಯದಲ್ಲಿ ೩೨ ರೀತಿಯ ವಾದ್ಯಗಳನ್ನು ಕೇಳಿಸಿ ಆಶ್ಚರ್ಯಪಡಿಸುತ್ತಾರೆ. ವಿವಿಧ ಚರ್ಮ ವಾದ್ಯಗಳನ್ನು ಕೇಳಿಸುವುದಷ್ಟೇ ಅಲ್ಲದೆ ಕೋಲಾಟ, ಸೈನ್ಯ, ಮಾರ್ಚಿಂಗ್ ಶಬ್ದಗಳು, ಕುದುರೆ ಹೆಜ್ಜೆಯ ಶಬ್ದಗಳಂತಹ ವಿವಿಧ ದ್ವನಿಗಳನ್ನು ಮಾಡುತ್ತಾ ಪ್ರೇಕ್ಷಕರನ್ನು ಆಶ್ಚರ್ಯಚಕಿತರನ್ನಾಗಿಸುತ್ತಾರೆ. ಜಾನಪದ ವಾದ್ಯಗಳಲ್ಲಿ ಇಂತಹ ದೊಡ್ಡ ವಾದ್ಯ ಮತ್ತೊಂದಿಲ್ಲ. ಇವರಿಗೆ ರಾಗ, ತಾಳಗಳ ಅರಿವು ಇದೆ. ಈ ವಾದ್ಯದ ಮೇಲೆ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡುತ್ತಾರೆ. ವಿಶ್ವಕರ್ಮನು ರುಂಜಕಾಸುರನೆಂಬ ರಾಕ್ಷಸನನ್ನು ದೇವತೆಗಳ ಕೋರಿಕೆಯ ಮೇರೆಗೆ ಸಂಹರಿಸಿ ಅವರಿಗೆ ಸಹಾಯ ಮಾಡುತ್ತಾನೆ.

ಸಾಯುವ ಮೊದಲು ರಾಕ್ಷಸನು ಕೋರಿದ ಪ್ರಕಾರ ಆತನ ಶರೀರದ ವಿವಿಧ ಅವಯವಗಳಿಂದ ವಿಶ್ವಕರ್ಮನು ಈ ವಾದ್ಯವನ್ನು ತಯಾರು ಮಾಡಿದ್ದರಿಂದ ಇದಕ್ಕೆ ರೌಂಜ ವಾದ್ಯಂ ಇಲ್ಲವೆ ರುಂಜವಾದ್ಯ ಎನ್ನುವ ಹೆಸರುಗಳು ಬಂದಿವೆ. ಆಗ ಈ ವಾದ್ಯವನ್ನು ಬಾರಿಸಲು ರುದ್ರಾಂಗನೆಂಬ ಯುವಕನನ್ನು ಸಹ ವಿಶ್ವಕರ್ಮನು ಸೃಷ್ಟಿಸಿದನು. ಆತನ ವಾರಸುದಾರರೇ ರುಂಜವಾರು. ಆದ್ದರಿಂದಲೇ ಇವರಿಗೆ ‘ರುದ್ರಾಂಗುಲು’ ಎನ್ನುವ ಹೆಸರೂ ಇದೆ. ‘ನೀವು ವಿಶ್ವಬ್ರಾಹ್ಮಣ ಕುಲದವರನ್ನು ಆಶ್ರಯಿಸಿಕೊಂಡು ಅವರಿಗೆ ಕಥೆಗಳನ್ನು ಹೇಳಿಕೊಂಡು ಜೀವನ ಮಾಡಿ’ ಎಂದು ವಿಶ್ವಕರ್ಮನು ಆಜ್ಞೆ ಕೊಟ್ಟನು. ರುಂಜವಾರು ಎನ್ನುವವರು ಹೀಗೆ ಆಶ್ರಿತರಾಗಿ ವಿಶ್ವಬ್ರಾಹ್ಮಣ ಕುಲಗಳಿಗೆ ಕಥೆಗಳನ್ನು ಗೋತ್ರಗಳನ್ನು ಹೇಳುತ್ತಿದ್ದಾರೆ. ರುಂಜದವರು ವಿಶ್ವಕರ್ಮ ಕುಲದವರ ಮನೆಗಳಲ್ಲಿ ಕಥೆಗಳನ್ನು ಹೇಳುವುದಷ್ಟೇ ಅಲ್ಲದೆ ಅವರ ಮನೆಗಳಲ್ಲೆ ನಡೆಯುವ ಮದುವೆಗಳಂತಹ ಇತರ ಶುಭಕಾರ್ಯಗಳಲ್ಲೂ ರುಂಜವಾದ್ಯವನ್ನು ನುಡಿಸುತ್ತಾರೆ. ವಿಶ್ವಕರ್ಮ ದೇವಾಲಯಗಳಲ್ಲಿ, ವೀರಬ್ರಹ್ಮರ ದೇವಾಲಯದಲ್ಲಿ, ಇತರ ವಿಶ್ವಕರ್ಮ ಕುಲದವರ ಸಭೆ ಸಮಾರಂಭಗಳಲ್ಲಿ ರುಂಜವಾದ್ಯವನ್ನು ಪ್ರದರ್ಶಿಸಿ ಕಥೆಗಳನ್ನು ಹೇಳುತ್ತಾರೆ. ರುಂಜವಾದ್ಯ ತುಂಬಾ ಕಾಲದಿಂದ ಇದೆ ಎಂದು ಹೇಳಲು ಅನೇಕ ಆಧಾರಗಳಿವೆ. ಎರಡು ಸಾವಿರ ವರ್ಷಗಳ ಹಿಂದಿನವೆಂದು ಭಾವಿಸುವ ನಾಗಾರ್ಜುನ ಬೆಟ್ಟ ಶಿಲ್ಪಗಳಲ್ಲಿ ರುಂಜವಾದ್ಯದ ಚಿತ್ರ ಕೆತ್ತಲ್ಪಟ್ಟಿದೆ. ಆ ಕಾಲದಲ್ಲಿಯೇ ರುಂಜ ಶಿಲ್ಪವಿತ್ತು ಎಂದು ಹೇಳಲು ಅವಕಾಶವಿದೆ. ಅಷ್ಟೇ ಅಲ್ಲದೆ ನಾಗಾರ್ಜುನ ಬೆಟ್ಟದ ಹತ್ತಿರ ಇರುವ ಪೆಂದೋಟ ಪ್ರಾಂತ್ಯವನ್ನು ವಿಶ್ವಕರ್ಮ ಕುಲದವರು ಆಳಿದ್ದರೆಂದೂ, ಅದರಿಂದಲೇ ವಿಶ್ವಕರ್ಮವನ್ನು ‘ಪೆಂದೋಟ ಪುರವರಾಧೀಶ್ವರುಡು’ ಎಂದು ರುಂಜದವರು ಹೇಳುತ್ತಾರೆ. ರುಂಜವಾದ್ಯ ಆ ಕಾಲದಲ್ಲಿ ಇತ್ತೆಂದು ಹೇಳಿದರೂ ಆ ಕಾಲಕ್ಕೆ ರುಂಜಕುಲದವರು ಇದ್ದರೆಂದು ಹೇಳಲು ಬರುವುದಿಲ್ಲ.

ಅಷ್ಟೇ ಅಲ್ಲ, ಎರಡು ಸಾವಿರ ವರ್ಷಗಳದ್ದೆಂದು ಹೇಳುತ್ತಿರುವ ವಿಶ್ವಕರ್ಮ ಪುರಾಣವು ಸಂಸ್ಕೃತ ಪತ್ರಗಳಲ್ಲಿ ತಾಳೆಗರಿಗಳಲ್ಲಿ ಲಭಿಸುತ್ತದೆ. ಹದಿನಾಲ್ಕನೆಯ ಶತಮಾನದ ಕಾಲಕ್ಕೆ ಪಲ್ನಾಟಿ ವೀರ ಚರಿತ್ರೆ ಎಂಬ ಕಾವ್ಯದಲ್ಲಿ ರುಂಜವಾದ್ಯದ ಪ್ರಸ್ತಾಪ ಅನೇಕ ಕಡೆ ಕಂಡು ಬರುತ್ತದೆ. ಅನಂತರ ಬಂದ ಅನೇಕ ಕಾವ್ಯಗಳಲ್ಲಿ ರುಂಜ ವಾದ್ಯದ ಪ್ರಸ್ತಾಪ ಬಂದಿದೆ. ಹಾಗೆ ಆ ಕಾಲಕ್ಕೆ ಈ ಸಂಪ್ರದಾಯವಿತ್ತೆಂದು ಹೇಳಲು ಅವಕಾಶವಿದೆ. ಹೀಗೆ ಇದು ತುಂಬ ಪ್ರಾಚೀನ ಕಲೆಯಾಗಿ ನಮಗೆ ಕಾಣಿಸಿಕೊಳ್ಳುತ್ತಿದೆ. ರುಂಜವಾದ್ಯ, ರುಂಜಕಥೆ ಪ್ರದರ್ಶನ ಈ ಕಾಲದಲ್ಲೂ ಜೀವಂತವಾಗಿದೆ. ವಿಶ್ವಕರ್ಮದವರು ರುಂಜದವರನ್ನು ಈಗಲೂ ಚೆನ್ನಾಗಿ ಆದರಿಸಿ ಅವರಿಗೆ ದಾನಗಳನ್ನು ಕೊಡುತ್ತಲೇ ಇದ್ದಾರೆ. ಕೇವಲ ಹನ್ನೊಂದು ಹನ್ನೆರಡು ಕುಟುಂಬದವರು ಮಾತ್ರವೇ ಈ ಕಥಾ ಪ್ರದರ್ಶನವನ್ನು ಮಾಡುತ್ತಿದ್ದಾರೆ. ಇವರೆಲ್ಲರಿಗೂ ಅರವತ್ತೆಪ್ಪತ್ತು ವರ್ಷ ವಯಸ್ಸಾಗಿದೆ. ಯುವ ಪೀಳಿಗೆಯವರು ಯಾರೂ ರುಂಜಕಥೆಯನ್ನು ಕಲಿಯುವಂತೆ ಕಾಣುತ್ತಿಲ್ಲ. ದಾತೃ ಕುಲದವರು, ಹಿರಿಯ ತಲೆಮಾರಿನವರು ಇವರನ್ನು ಗೌರವಿಸಿದರೂ ಹೊಸ ಪೀಳಿಗೆಯವರು ಇವರನ್ನು ಅಷ್ಟಾಗಿ ಗೌರವಿಸುತ್ತಿಲ್ಲ. ಆದ್ದರಿಂದ ಈ ರುಂಜಕಥೆಯ ಪ್ರದರ್ಶನ ಅಂತ್ಯ ಕಾಣುವ ದೆಸೆಯಲ್ಲಿದೆ ಎಂದು ಹೇಳಬಹುದು.

ಪಿ.ಎಸ್.ಸಿ. ಅನುವಾದ ವಿ.ಆರ್.

 

ರೆಡ್ಡಿ ದೊರ ಆಂಧ್ರದ ವಿಶಾಖ ಜಿಲ್ಲೆಯಲ್ಲಿ ವಾಸಿಸುವ ಇವರನ್ನು ‘ಮೂಖ ದೊರ’ ಇಲ್ಲವೆ ‘ನೂಕ ದೊರ’ ಎಂದೂ ಕರೆಯುತ್ತಾರೆ. ಇತರ ಬುಡಕಟ್ಟುಗಳೊಂದಿಗೆ ಸೇರಿಕೊಂಡು ಜೀವನ ನಡೆಸುತ್ತಿದ್ದಾರೆ. ತೆಲುಗು ಮಾತೃಭಾಷೆ. ಒಡಿಯಾವನ್ನು ಸಹ ಮಾತನಾಡುತ್ತಾರೆ. ಗಂಡಸರು ಪಂಚೆಯನ್ನು, ಹೆಂಗಸರು ಸೀರೆಯನ್ನು ಉಡುತ್ತಾರೆ. ಮೂಗುತಿ, ಬಳೆ, ಕಾಲುಂಗುರ ಮೊದಲಾದವುಗಳನ್ನು ಧರಿಸುತ್ತಾರೆ. ಒಣ ಬೇಸಾಯ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇವರು ಮಾಂಸಾಹಾರಿಗಳು. ದನದ ಮಾಂಸ, ಹಂದಿಯ ಮಾಂಸ ನಿಷೇಧ. ರಾಗಿ, ಬತ್ತ ಮುಖ್ಯ ಆಹಾರ ಪದಾರ್ಥಗಳು. ಸಿಗರೇಟು, ಬೀಡಿಗಳನ್ನು ಗಂಡಸರು ಹೆಂಗಸರು ಸೇದುತ್ತಾರೆ. ಕಳ್ಳು ಕುಡಿಯುತ್ತಾರೆ. ಕೊರ‍್ರಾ, ಪಂಗಿ, ಜೆಮ್ಮೆಲ ಮೊದಲಾದ ಗೋತ್ರಗಳಿವೆ. ಕುಟುಂಬಕ್ಕೆ ಹೆಣ್ಣಿನ ಆಸರೆ ತುಂಬಾ ಇರುತ್ತದೆ. ಮನೆಯ ಯಜಮಾನ ತಂದೆಯೇ. ಅನಂತರ ಮಗ ಆ ಸ್ಥಾನವನ್ನು ಪಡೆಯುತ್ತಾನೆ. ಓಲಿ ವ್ಯವಸ್ಥೆಯಿದೆ. ಮಾತುಕತೆಯ ಮೂಲಕ, ಪರಸ್ಪರ ಪ್ರೀತಿ – ಪ್ರೇಮಗಳ ಮೂಲಕ ಮದುವೆಗಳು ನಡೆಯುತ್ತವೆ. ತಾಳಿ ಮತ್ತು ಕರಿಮಣಿಗಳು ಮದುವೆಯಾದ ಮಹಿಳೆಯನ್ನು ಸಂಕೇತಿಸುತ್ತವೆ. ಗರ್ಭಿಣಿಯಾದ ಹೆಂಗಸರು ಸೂರ್ಯ ಗ್ರಹಣ, ಚಂದ್ರ ಗ್ರಹಣಗಳ ಸಂದರ್ಭದಲ್ಲಿ ಹೊರಗೆ ಬರಬಾರದು. ಕೂಸು ಹುಟ್ಟಿದ ಐದನೆಯ ದಿನ ಔತಣವನ್ನೇರ್ಪಡಿಸುತ್ತಾರೆ. ಸೋದರಮಾವ ಕೂಸಿನ ಚವಳದ (ಮೊದಲ ಬಾರಿಗೆ ಕೂದಲು ತೆಗೆಯುವುದು) ಕಾರ್ಯವನ್ನು ನಿರ್ವಹಿಸುತ್ತಾನೆ.

ಮೈನೆರೆದ ಹುಡುಗಿಗೆ ಐದನೆಯ ದಿನ ಸ್ನಾನ ಮಾಡಿಸಿ ಮುತ್ತೈದೆಯರು ಅಕ್ಷತೆಯನ್ನು ಹಾಕಿ ಆಶೀರ್ವದಿಸುತ್ತಾರೆ. ವರನ ಮನೆಯಲ್ಲಿ ಮದುವೆ ನಡೆಯುತ್ತದೆ. ಆ ದಿನದ ‘ಜಮಿಡಾಮು’ ಸ್ಥಾನಿಕ ಪೂಜಾರಿ ನಡೆಸಿ ಕೊಡುತ್ತಾನೆ. ಇದು ನಡೆದಿಲ್ಲವೆಂದರೆ ಆ ಊರಿನ ಜನ ಮದುವೆಯ ಊಟ ಮಾಡುವುದಿಲ್ಲ. ಮದುವೆಗೆ ಮನ್ನಣೆ ಇರುವುದಿಲ್ಲ. ಮದುವೆಯ ದಿನ ಸಾರಾಯಿ ಹಂಚಲಾಗುತ್ತದೆ. ಹುಡುಗಿ ಕಾಲುಂಗುರವನ್ನು ಧರಿಸುತ್ತಾಳೆ. ಮದುವೆಯಾದವರು ತೀರಿಕೊಂಡರೆ ಸುಡುವುದು ಇಲ್ಲವೆ ಹೂಳುವುದು ಪದ್ಧತಿ. ಪೂಜಾರಿ ಗ್ಲಾಸಿನಲ್ಲಿ ಎರಡು ಕಾಳು ಅಕ್ಕಿಯನ್ನು ಹಾಕುತ್ತಾನೆ. ಆ ಗ್ಲಾಸು ಯಾರಿಗೆ ಬರುತ್ತದೆಯೋ ಅವರೇ ಅಂತ್ಯಕ್ರಿಯೆಗಳನ್ನು, ಇತರ ಕ್ರಿಯೆಗಳನ್ನು ಮಾಡಬೇಕಾಗುತ್ತದೆ. ಮೂರನೆಯ ದಿನ ತೀರಿಕೊಂಡವರಿಗೆ ಇಷ್ಟವಾದ ಅಡುಗೆಗಳನ್ನು ಮಾಡುತ್ತಾರೆ. ಹೂತಿಟ್ಟಲ್ಲಿ ಬಳಗವೆಲ್ಲಾ ಸೇರಿಕೊಂಡು ಮಾಡಿಟ್ಟ ಅಡುಗೆಯನ್ನು ಅಲ್ಲಿಡುತ್ತಾರೆ. ಇಪ್ಪತ್ತೊಂದನೆಯ ದಿನ ದೊಡ್ಡ ಕರ್ಮವನ್ನು ಮಾಡಿ ಎಲ್ಲರಿಗೂ ಮಾಂಸಾಹಾರವನ್ನು ನೀಡುತ್ತಾರೆ. ಗ್ರಾಮದ ಹಿರಿಯನಿಂದ ಆ ಗ್ರಾಮದ ವ್ಯಾಜ್ಯಗಳು ಪರಿಹರಿಸಲ್ಪಡುತ್ತವೆ. ಅಪರಾಧಕ್ಕೆ ತಕ್ಕ ಶಿಕ್ಷೆಗಳಿರುತ್ತವೆ. ಇವರು ಜಾಂಕ್ರಿ, ಗಂಗ ದೇವತೆಗಳನ್ನು ಪೂಜಿಸುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೧,೭೨೧ ಅಂದರೆ ಶೇಕಡಾ ೦.೦೩.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ರೆಡ್ಡೆಮ್ಮ ಆಂಧ್ರದ ದೇವತೆಗಳಲ್ಲಿ ಒಬ್ಬಳು. ಮದುವೆಯ ನಂತರ ಮಕ್ಕಳು ಇಲ್ಲದಿರುವುದು ಒಂದು ದೊಡ್ಡ ಸಮಸ್ಯೆ. ಈ ಸಮಸ್ಯೆಯನ್ನು ತನ್ನ ದರ್ಶನ ಪಡೆದ ನಂತರ ತಪ್ಪದೇ ನೀಗಿಸುವ ದೇವತೆಯೆಂದು ಹೆಸರಾದವಳು ರೆಡ್ಡೆಮ್ಮ ದೇವತೆ. ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ಪ್ರಾಂತಗಳಲ್ಲಿನ ಮಕ್ಕಳಿಲ್ಲದ ಅನೇಕ ಮಂದಿ ಈಕೆಯನ್ನು ಸಂತಾನಕ್ಕಾಗಿ ಬೇಡಿಕೊಳ್ಳುತ್ತಾರೆ.

ಆಂಧ್ರಪ್ರದೇಶ, ಚಿತ್ತೂರು ಜಿಲ್ಲೆ, ವಾಯಲ್ಪಾಡಿಗೆ ಹತ್ತಿರ ಇರುವ ಚೆರ‍್ಲೋಪಲ್ಲಿ ಎಂಬ ಗ್ರಾಮದಲ್ಲಿ ಸುಮಾರು ನೂರು ವರ್ಷಗಳ ಹಿಂದೆ ರೆಡ್ಡಿ ಜನಾಂಗದ ಒಂದು ಮನೆ ಇತ್ತು. ಈ ಮನೆಯ ಹೆಣ್ಣು ಮಗಳು ರೆಡ್ಡೆಮ್ಮ. ಆಕೆ ಕನ್ಯೆ, ವಿನಯವತಿ, ಸದಾಚಾರ ಸಂಪನ್ನಳು. ಪೂಜೆ ಮಾಡದೆ ಒಂದು ನೀರಿನ ಹನಿಯನ್ನು ಸಹಾ ಮುಟ್ಟುತ್ತಿರಲಿಲ್ಲ. ಮನೆಯ ಕೆಲಸದ ಜೊತೆಗೆ ಹೊಲದ ಕೆಲಸವನ್ನು ಸಹಾ ಮಾಡುತ್ತಿದ್ದಳು. ಎಂದಿನಂತೆ ಒಂದು ದಿನ ರೆಡ್ಡೆಮ್ಮ ಜೋಳದ ಹೊಲವನ್ನು ಕಾಯುವುದಕ್ಕೆ ಹೋದಳು. ಆ ಸಮಯದಲ್ಲಿ ಆ ಪ್ರಾಂತದಲ್ಲಿ ಮುಸಲ್ಮಾನರ ದಬ್ಬಾಳಿಕೆ ಜಾಸ್ತಿ ಇತ್ತು. ಇತಿ ಮಿತಿ ಇಲ್ಲದ ಅತ್ಯಾಚಾರಗಳನ್ನು ಮಾಡುತ್ತಿದ್ದರು. ಒಬ್ಬಂಟಿಯಾಗಿ ಜೋಳದ ಹೊಲವನ್ನು ಕಾಯುತ್ತಿದ್ದ ರೆಡ್ಡೆಮ್ಮ ಇವರ ಕಣ್ಣಿಗೆ ಬಿದ್ದಳು. ದುರುದ್ದೇಶದಿಂದ ಹತ್ತಿರ ಬರುತ್ತಿರುವ ಮುಸಲ್ಮಾನರನ್ನು ನೋಡಿ ಓಡಲಾರಂಭಿಸಿದಳು. ಅವರಿಂದ ತಪ್ಪಿಸಿಕೊಳ್ಳಲು ಪಕ್ಕದಲ್ಲೇ ಇರುವ ಬಂಡೆಯ ಬೆಟ್ಟವನ್ನು ಮೂರು ಸಲ ಸುತ್ತಿದರೂ ಮುಸಲ್ಮಾನರು ಆಕೆಯನ್ನು ಬಿಟ್ಟಿಲ್ಲ. ವಿಧಿ ಇಲ್ಲದೇ ದೀನ ಹೃದಯದಿಂದ ಬೆಟ್ಟವನ್ನು ಪ್ರಾರ್ಥಿಸಿದಳು. ಆಕೆಯ ಪ್ರಾರ್ಥನೆಯನ್ನು ಆಲಿಸಿದ ಬೆಟ್ಟದಲ್ಲಿನ ದೊಡ್ಡದಾದ ಬಂಡೆ ಎರಡಾಗಿ ಸೀಳು ಬಿಟ್ಟಿತು. ರೆಡ್ಡೆಮ್ಮ ಅದರಲ್ಲಿ ಪ್ರವೇಶಿಸಿ ಬೆಟ್ಟದಲ್ಲಿ ಲೀನವಾದಳು.

ಇದಾದ ಕೆಲವು ದಿನಗಳಿಗೆ ಇವರ ವಂಶದಲ್ಲಿನ ಒಬ್ಬರಿಗೆ ಮಕ್ಕಳಿಲ್ಲದೇ ನಿದ್ರೆ ಮಾಡುತ್ತಿರುವಾಗ, ರೆಡ್ಡೆಮ್ಮ ಆತನಿಗೆ ಕನಸಲ್ಲಿ ಕಾಣಿಸಿಕೊಂಡಳು. ಒಂದು ಗಿಡಮೂಲಿಕೆಯ ಹೆಸರು ಹೇಳಿದಳು. ತನ್ನನ್ನು ಪೂಜಿಸಿ, ಹೇಳಿದ ಗಿಡಮೂಲಿಕೆಯನ್ನು ಸೇವಿಸಿದರೆ ಮಕ್ಕಳಾಗುತ್ತದೆಂದು ಹೇಳುತ್ತಾಳೆ. ಆತ ಅದೇ ರೀತಿ ಮಾಡಿದ ನಂತರ ಮಕ್ಕಳಾದರು. ಈ ವಿಷಯ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ರೆಡ್ಡೆಮ್ಮ ಮಕ್ಕಳನ್ನು ಕೊಡುವ ಗ್ರಾಮದೇವತೆಯಾಗಿ ಪ್ರಸಿದ್ಧಳಾದಳು.

ಭಕ್ತರು, ಮಕ್ಕಳಿಲ್ಲದವರು, ಮಕ್ಕಳನ್ನು ಪಡೆದು ಹರಕೆ ತೀರಿಸುವವರು ಭಾನುವಾರ, ಮಂಗಳವಾರ, ಶುಕ್ರವಾರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪೂಜಿಸಿ, ನೈವೇದ್ಯವನ್ನು ಇಟ್ಟು, ಕಾಣಿಕೆಗಳನ್ನು ಸಮರ್ಪಿಸುತ್ತಾರೆ. ಕಥೆಯಲ್ಲಿ ಹೇಳಿದ ಹಾಗೆ ಬಂಡೆ ಸೀಳು ಬಿಟ್ಟಿರುವ ಕಡೆ ಗುಡಿ ಕಟ್ಟಿರುತ್ತಾರೆ. ಅಲ್ಲಿ ರೆಡ್ಡೆಮ್ಮ ವಿಗ್ರಹವನ್ನು ದರ್ಶನ ಮಾಡಿದ ನಂತರ ಗಿಡಮೂಲಿಕೆಯನ್ನು ಪಡೆದು ಹೇಳಿದ ರೀತಿಯಲ್ಲಿ ಅದನ್ನು ಸೇವಿಸಿ ಮಕ್ಕಳನ್ನು ಪಡೆಯುತ್ತಿದ್ದಾರೆ.

ಹೀಗೆ ಪಡೆದ ಗಂಡು ಮಕ್ಕಳಿಗೆ ರೆಡೆಪ್ಪ ಎಂದು, ಹೆಣ್ಣು ಮಕ್ಕಳಾದರೆ ಚಿಕ್ಕ ರೆಡ್ಡೆಮ್ಮ ದೊಡ್ಡ ರೆಡ್ಡೆಮ್ಮ ಎಂದು ಹೆಸರಿಡುತ್ತಾರೆ. ಗಂಡು ಮಕ್ಕಳಾದರೂ ಹೀಗೆ ಕರೆಯುತ್ತಾರೆ. ಇಲ್ಲಿನ ವಿಶೇಷವೆಂದರೆ ಮಕ್ಕಳಿಲ್ಲದ ಮುಸಲ್ಮಾನರು ಕೂಡ ಇಲ್ಲಿಗೆ ಬಂದು ಪೂಜಿಸಿ ಮಕ್ಕಳನ್ನು ಪಡೆದು ರೆಡ್ಡಪು ಭಾಷಾ, ಬೀಬಿ ರೆಡ್ಡೆಮ್ಮ ಎಂದು ಹೆಸರಿಡುತ್ತಾರೆ. ಈಕೆಯ ದರ್ಶನಕ್ಕೆ ಹೋಗುವವರು ನಿಯಮನಿಷ್ಠೆಗಳನ್ನು ಪಾಲಿಸಲೇ ಬೇಕು. ಇಲ್ಲದಿದ್ದರೆ ಜೇನಿನ ಹುಳುಗಳು ಅಟ್ಟಿಸಿಕೊಂಡು ಕಚ್ಚುತ್ತವೆ ಎಂದು ಹೇಳುತ್ತಾರೆ.

ಟಿ.ಎನ್.