ಲಂಬಾಣಿ ಕುಣಿತ ಕರ್ನಾಟಕದ ಬುಡಕಟ್ಟಿನ ಲಂಬಾಣಿಗಳದ್ದು ಒಂದು ವಿಶಿಷ್ಟ ಸಂಸ್ಕೃತಿ. ರಂಗುರಂಗಿನ ಈ ಜನ ಶತಮಾನಗಳಿಂದ ತಮ್ಮ ವಿಶಿಷ್ಟ ಸಂಸ್ಕೃತಿ, ಪರಂಪರೆಯನ್ನು ಕಾಯ್ದುಕೊಂಡು ಬಂದಿದ್ದಾರೆ. ಕಾಡು – ಮೇಡುಗಳಲ್ಲಿ ವಾಸಿಸುವ ಈ ಜನ ಅತ್ಯಂತ ವರ್ಣರಂಜಿತ ಜೀವನ ಕ್ರಮವನ್ನು ರೂಢಿಸಿಕೊಂಡು ಬಂದಿದ್ದಾರೆ. ಒಂದು ಕಾಲಕ್ಕೆ ಅಲೆಮಾರಿಗಳಾಗಿದ್ದು, ಈಗ ದೇಶದ ಉದ್ದಗಲಕ್ಕೂ ನೆಲೆನಿಂತಿರುವ ಲಂಬಾಣಿ ಸಮುದಾಯ ಮೂಲತಃ ಉತ್ತರದ ರಾಜಸ್ಥಾನದಿಂದ ಬಂದವರು.

ಸುಂದರವಾದ ಮೈಕಟ್ಟು, ಮೈತುಂಬ ಆಭರಣ, ಕೈತುಂಬ ಸಾರಂಗದ ಕೋಡಿನ ಬಳೆಗಳು, ವರ್ಣರಂಜಿತ ವೇಷ ಭೂಷಣಗಳನ್ನು ಧರಿಸುವ ಲಂಬಾಣಿಗಳು ಪ್ರತಿಯೊಬ್ಬರನ್ನೂ ಆಕರ್ಷಿಸುತ್ತಾರೆ. ವಿಶಿಷ್ಟ ಸಂಸ್ಕೃತಿ – ಪರಂಪರೆಯನುಳ್ಳ ಇವರನ್ನು ಬಂಜಾರ, ಲಂಬಾಡಿ, ಲಂಬಾಣಿ, ಲಮಾಣಿ, ಸುಗಾಲಿ ಮೊದಲಾದ ಹೆಸರುಗಳಿಂದಲೂ ಕರೆಯುತ್ತಾರೆ. ಅವರು ತಮ್ಮ ವೇಷ – ಭೂಷಣ, ಆಚಾರ – ವಿಚಾರಗಳಿಂದ ಪ್ರತ್ಯೇಕತೆಯನ್ನು ಕಾಯ್ದುಕೊಂಡು ಗುಡ್ಡಗಾಡು ಪ್ರದೇಶಗಳಲ್ಲಿ ತಮ್ಮ ತಾಂಡಗಳನ್ನು ಕಟ್ಟಿಕೊಂಡು ತಮ್ಮದೇ ಆದ ಸಂಸ್ಕೃತಿಯನ್ನು ರಕ್ಷಿಸಿಕೊಂಡು ಬಂದಿದ್ದಾರೆ. ಶತಮಾನಗಳು ಗತಿಸಿದರೂ ಈ ಜನ ಇನ್ನೂ ಯಥಾಸ್ಥಿತಿಯಲ್ಲಿದ್ದಾರೆ.

ನರ್ತನ ಗೀತೆಗಳು ಲಂಬಾಣಿಗರ ಜೀವನದಲ್ಲಿ ಹಾಸುಹೊಕ್ಕಾಗಿ ಸೇರಿಕೊಂಡಿವೆ. ಅವರು ಎಷ್ಟು ಕಷ್ಟಜೀವಿಗಳೋ ಅಷ್ಟೇ ಸರಸಿಗಳು. ತಮ್ಮ ದಿನನಿತ್ಯದ ಕಷ್ಟ, ಸುಖ, ಸಮಸ್ಯೆಗಳನೆಲ್ಲ ಮರೆತು ನಗುಮುಖದಿಂದ ಹರ್ಷಚಿತ್ತರಾಗಿರುವ ದಿಟ್ಟ ಗಂಡಸರು, ಮೊದಮೊದಲು ಸ್ವಲ್ಪ ನಾಚಿಕೆ ತೋರಿದರೂ ರಸಿಕರಾದ ಹೆಂಗಸರು ತಮ್ಮ ನೃತ್ಯ, ಗೀತೆಗಳಿಂದ ನಿತ್ಯ ತೃಪ್ತಿಯನ್ನು ಪಡೆಯುವ ಆಶಾಜೀವಿಗಳಾಗಿದ್ದಾರೆ. ವೇಷ ಭೂಷಣಕ್ಕೆ ತಕ್ಕ ಹಾಗೆ ಲಂಬಾಣಿ ಸ್ತ್ರೀಯರ ಮೈಮಾಟ, ಕುಣಿತ. ಈ ಕುಣಿತದೊಂದಿಗೆ ಗೀತೆಯೂ ಸೇರಿಕೊಂಡರೆ ಹಾಲು ಜೇನು ಬೆರೆಸಿದ ಅನುಭವ. ಒಂದೊಂದು ಹಾಡಿನಲ್ಲೂ ಜೀವನದ ಸೌಂದರ್ಯಾನುಭವ, ರಸಿಕತನ, ಅಭಿನಯ ಪುಟಿಯುತ್ತ, ಪ್ರೇಕ್ಷಕರನ್ನು, ಶ್ರೋತೃಗಳನ್ನು ತನ್ನತ್ತ ಆಕರ್ಷಿಸುತ್ತದೆ. ಹಾಗೆಯೇ ಕುಣಿತದ ನಾನಾ ಭಂಗಿಗಳಿಂದ ಜೀವನದ ನೋವು – ನಲಿವು, ಹಿಗ್ಗು – ಉತ್ಸಾಹ, ಕೋಪ – ತಾಪ, ಮರುಕ – ಸಂತಾಪ ಮೊದಲಾದವುಗಳನ್ನು ಪ್ರದರ್ಶಿಸಿ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತಾರೆ.

ಲಂಬಾಣಿ ಸ್ತ್ರೀಯರ ಕುಣಿತದ ರೀತಿ ಬಹು ಆಕರ್ಷಣೀಯವಾಗಿರುತ್ತದೆ. ಮೈಯಿಂದ ಬೆವರು ಸರಿಯುವವರೆಗೂ ಈ ಜನ ಹಾಡುತ್ತಾರೆ, ಕುಣಿಯುತ್ತಾರೆ. ಸ್ತ್ರೀಯರ ಕುಣಿತಗಳಲ್ಲಿ ಅನೇಕ ವಿಧಿ – ವಿಧಾನ ಕ್ರಮಗಳಿವೆ. ವೃತ್ತಾಕಾರವಾಗಿ ನಿಂತು ವಿವಿಧ ಬಂಗಿಗಳಲ್ಲಿ ಕುಣಿಯುತ್ತಾರೆ. ಕೆಲವೊಮ್ಮ ಕುಣಿಯುವಾಗ ತಾವೇ ಲಯಬದ್ಧವಾಗಿ ಹಾಡಿಕೊಳ್ಳುತ್ತಾರೆ. ಯಾವ ಹಿಮ್ಮೇಳದ ಅವಶ್ಯಕತೆಯೂ ಇಲ್ಲಿಲ್ಲ. ಸಾಮಾನ್ಯವಾಗಿ ಪ್ರಾರ್ಥನೆಯೊಂದಿಗೆ ಇವರ ಸಾಮೂಹಿಕ ಕುಣಿತ ಆರಂಭಗೊಳ್ಳುತ್ತದೆ. ಅನಂತರ ಬೇರೆ ಬೇರೆ ಪೌರಾಣಿಕಾಂಶಗಳೊಂದಿಗೆ ದೇವಾದಿ – ದೇವತೆಗಳನ್ನು ಕುರಿತು ಹಾಡುತ್ತ ಕುಣಿಯುತ್ತಾರೆ. ಕಣಿತದಲ್ಲಿ ಕೈಕಾಲು, ಸೊಂಟಗಳಿಗೆ ಹೆಚ್ಚಿನ ಶ್ರಮವಿರುತ್ತದೆ. ಕೆಲವೊಮ್ಮೆ ಕುಣಿತಕ್ಕೆ ಹಿಮ್ಮೇಳವಾಗಿ ಹಲಗೆ, ನಗಾರಿ ಮೊದಲಾದ ವಾದ್ಯಗಳನ್ನು ಉಪಯೋಗಿಸುತ್ತಾರೆ.

[ಚಿತ್ರ ೬೧]

ಗೀತ, ನೃತ್ಯಗಳು ಲಂಬಾಣಿಗರಲ್ಲಿ ಹುಟ್ಟಿನೊಂದಿಗೆ ರಕ್ತಗತವಾಗಿ ಬೇಳೆದು ಬರುತ್ತವೆ. ಅವರಿಗೆ ಯಾವುದೇ ನಾಟ್ಯಶಾಲೆಯ ತರಬೇತಿಯ ಅಗತ್ಯವಿಲ್ಲ. ಅದು ಅವರ ಬದುಕಿನ ಪ್ರಕ್ರಿಯೆಯಾಗಿ, ಉಸಿರಾಗಿ ಬಂದಿರುತ್ತದೆ. ಯಾವ ಲಂಬಾಣಿ ಸ್ತ್ರೀಯರಿಗೂ ಗೀತ ನರ್ತನಗಳು ಬರುವುದಿಲ್ಲವೆನ್ನಲಾಗದು. ನೃತ್ಯಕ್ಕಾಗಿ ಪೂರ್ವಸಿದ್ಧತೆ ಇಲ್ಲವೆ ಅಲಂಕಾರದ ಅವಶ್ಯಕತೆ ಅವರಿಗೆ ಬೇಕಿಲ್ಲ. ಯಾವುದೇ ಸಮಯ, ಸಂದರ್ಭದಲ್ಲಾದರೂ ಅವರು ಸುಲಭವಾಗಿ ಅವುಗಳನ್ನು ಪ್ರದರ್ಶಿಸಬಲ್ಲರು. ಹೀಗೆ ಕುಣಿಯುವ ಸಂದರ್ಭದಲ್ಲಿ ಮೈಯ ತೂಕ ತಪ್ಪಗೊಡದೆ, ನೃತ್ಯ ಮಾಡುವ ಕೌಶಲ ರಂಜನೀಯವಾಗಿರುತ್ತದೆ. ಸಾಮಾನ್ಯವಾಗಿ ಅವರು ತಮ್ಮ ಹಬ್ಬ – ಉತ್ಸವ, ಜಾತ್ರೆ, ಮದುವೆ ಹಾಗೂ ಸಂತೋಷ ಸಮಾರಂಭಗಳಲ್ಲಿ ಗೀತೆ, ನೃತ್ಯಗಳನ್ನು ಮಾಡುತ್ತಾರೆ. ಲಂಬಾಣಿ ಸ್ತ್ರೀಯರ ವಿವಿಧ ಕುಣಿತಗಳನ್ನು ಸಾಮಾನ್ಯವಾಗಿ ಹೀಗೆ ಗುರುತಿಸಬಹುದು :

೧. ಮದುವೆ, ಮುಂಜಿ, ಸಂಸ್ಕಾರ ಸಂಬಂಧಿ ಕುಣಿತಗಳು, ೨. ತೀಜ್ ಕುಣಿತ, ೩. ಕೋಲಾಟದ ಕುಣಿತ, ೪. ಲೋಟಾ ಕುಣಿತ, ೫. ಮಳೆರಾಯನ ಕುಣಿತ, ೬. ಜಾತ್ರೆ – ಉತ್ಸವಗಳು ಹಾಗೂ ದೇವತಾ ಸಂಬಂಧಿ ಕುಣಿತ ಇತ್ಯಾದಿ.

ಲಂಬಾಣಿ ಸ್ತ್ರೀಯರು ಕುಣಿಯುವಾಗ ಕೈಕಾಲುಗಳಿಗೆ ಚಿಕ್ಕ ಚಿಕ್ಕ ಗೆಜ್ಜೆಸರಗಳನ್ನು ಧರಿಸುತ್ತಾರೆ. ಕುಣಿತಕ್ಕೆ ಸಾಮಾನ್ಯವಾಗಿ ವೃತ್ತಾಕಾರವಾಗಿ ಸರಿಸಂಖ್ಯೆಯಲ್ಲಿ ನಿಲ್ಲುತ್ತಾರೆ. ಈ ಕುಣಿತಗಳಲ್ಲಿ ೧೫-೨೦ ಜನರ ಗುಂಪುಗಳಿರುತ್ತವೆ. ಈ ಸುತ್ತು ಕುಣಿತದ ಭಂಗಿಗಳಿಗೆ ತನ್ನದೇ ಆದ ಅರ್ಥವಿದೆ. ಸಂದರ್ಭ ಸನ್ನಿವೇಶಕ್ಕೆ ತಕ್ಕ ಹಾಗೆ ವಿವಿಧ ಭಂಗಿಗಳಲ್ಲಿ ಗೀತ – ನೃತ್ಯವನ್ನು ಮಾಡುವ ಕಲೆಗಾರಿಕೆಯನ್ನು ಅವರಲ್ಲಿ ಕಾಣಬಹುದು. ಸಾಲುಸಾಲಾಗಿ ವೃತ್ತಾಕಾರವಾಗಿ ಹಲಗೆ ಇಲ್ಲವೆ ನಗಾರಿಗಳ ಗತ್ತಿಗನುಗುಣವಾಗಿ ಬಾಗಿ, ಬಳುಕಿ, ಕೈಗಳನ್ನು ಮೇಲಕ್ಕೆ ಕೆಳಕ್ಕೆ ಮಾಡುವಲ್ಲಿ ಸೊಂಟ ಬಗ್ಗಿಸಿ ಹೆಜ್ಜೆಯ ಮೇಲೆ ಹೆಜ್ಜೆ ಇಡುವ ಸನ್ನಿವೇಶ ಮನಸೂರೆಗೊಳ್ಳುವಂತಿರುತ್ತದೆ. ಹಾಡಿನ ಲಯಕ್ಕೆ ಹೊಂದಿಕೊಳ್ಳುವ ಕುಣಿತದ ವಿನ್ಯಾಸಗಳು, ಕಲಾತ್ಮಕವಾಗಿ ತಿರುಗುವಿಕೆಗಳು ಅವರ ಕುಣಿತಗಳ ವೈಶಿಷ್ಟ್ಯಗಳಾಗಿವೆ. ಮದುವೆ ಮೊದಲಾದ ಸಂಸ್ಕಾರ ಸಂಬಂಧಿ ಕಾರ್ಯಗಳಲ್ಲಿ ಶೃಂಗಾರ ಹಾಗೂ ಮಂಗಲಗೀತೆಗಳೊಂದಿಗೆ ಲಯಬದ್ಧವಾಗಿ ವಿವಿಧ ಭಂಗಿಗಳಿಂದ ಕುಣಿಯುತ್ತಾರೆ.

ಲಂಬಾಣಿ ಸ್ತ್ರೀಯರು ಎಲ್ಲ ಕಡೆಗೂ ಮಳೆ ಬೆಳೆ ಸಮೃದ್ಧವಾಗಿ ಕಂಡು ಬಂದ ಸಂದರ್ಭದಲ್ಲಿ ತಮಗಾದ ಸುಖ – ಸಂತೋಷವನ್ನು ಶ್ರೀಕೃಷ್ಣನ ಹೆಸರಿನಲ್ಲಿ ತೀಜ್ ಹಬ್ಬವನ್ನು ಆಚರಿಸುವುದರ ಮೂಲಕ ಗೀತ ನೃತ್ಯಗಳಿಂದ ನರ್ತನಗೈದು ಮನದಣಿಯುತ್ತಾರೆ. ಹೋಳಿ, ದೀಪಾವಳಿ, ದಸರಾ ಮೊದಲಾದ ಹಬ್ಬಾಚರಣೆಗಳ ಸಂದರ್ಭದಲ್ಲಿ ವಿಶಿಷ್ಟವಾದ ಕುಣಿತಗಳನ್ನು ಮಾಡುತ್ತಾರೆ. ಪೂಜೆ, ಪುನಸ್ಕಾರ ಹಾಗೂ ಜಾತ್ರೆ – ಉತ್ಸವಗಳಲ್ಲಿ ವಿವಿಧ ಬಗೆಯಿಂದ ಮಂಗಲಗೀತೆಗಳೊಂದಿಗೆ ನರ್ತನಗೈಯುತ್ತಾರೆ. ಮಳೆ ಸಕಾಲಕ್ಕೆ ಬಾರದೆ ಹೋದಾಗ ಉತ್ತರ ಕರ್ನಾಟಕದಲ್ಲಿ ಲಂಬಾಣಿ ಸ್ತ್ರೀಯರಿಂದ ಮಳೆರಾಯನ ವಿಶಿಷ್ಟವಾದ ಕುಣಿತಗಳನ್ನು ಮಾಡಿಸುವ ಮೂಲಕ ಮಳೆರಾಯನ ಹಾಡುಗಳನ್ನು ಹಾಡಿಸುತ್ತಾರೆ. ಈ ಕುಣಿತದ ಹಾಡಿನಿಂದ ಮಳೆ ಬರುತ್ತದೆಂದು ಬಲವಾಗಿ ನಂಬುತ್ತಾರೆ.

ಲಂಬಾಣಿ ಮಹಿಳೆಯರು ಮನದುಂಬಿ ಕುಣಿಯುವಾಗ ಕೇಳಿಬರುವ ಕಾಲು ಗೆಜ್ಜೆಯ ಸದ್ದು, ಕೈಯಾಡಿಸುವಾಗ ಕೇಳಿಬರುವ ದಂತದ ಬಳೆಗಳ ಸಪ್ಪಳ, ಗುಂಪು ಹಾಡಿಕೆಯ ಇಂಪುದನಿ, ಬಾಗಿ ಕುಣಿಯುವಾಗ ಇಳಿ ಬೀಳುವ ಮುಂಗೂದಲಿನ ಕುಚ್ಚುಗಳ ಸೊಗಸು, ಕೈಬೀಸಿ ಆಡುವಾಗ ಮೇಲು ಹೊದಿಕೆ ಹಾಗೂ ಕವಡೆ ಸರಗಳ ಚೆಲ್ಲಾಟ, ಹಾಡಿನ ಸೊಲ್ಲು ತಪ್ಪಿದಾಗ ನಾಯಕಿಯ ಮುಖದಲ್ಲಿ ಕಾಣುವ ನಸುಗೋಪ, ಸೊಲ್ಲು ಸರಿಯಾಗಿ ಎಲ್ಲರ ಮುಖದಲ್ಲೂ ಮಿಂಚುವ ನಗೆ ಇವನ್ನೆಲ್ಲ ಪ್ರತ್ಯಕ್ಷ ಕೇಳಿ, ನೋಡಿಯೇ ಆನಂದಿಸಬೇಕು (ಚನ್ನಬಸಪ್ಪ : ೧೯೭೭-೧೫೬).

ಲಂಬಾಣಿ ಪುರುಷರು ಜಾತ್ರೆ – ಉತ್ಸವ, ಹಬ್ಬ – ಹರಿದಿನ ಹಾಗೂ ವಿಶೇಷ ಸಣದರ್ಭಗಳಲ್ಲಿ ಮಾತ್ರ ಕುಣಿಯುತ್ತಾರೆ. ಇನ್ನುಳಿದ ಸಂದರ್ಭಗಳಲ್ಲಿ ವಿಶೇಷವಾಗಿ ಭಜನೆ, ಗೀತೆಗಳೊಂದಿಗೆ ತೃಪ್ತಿ ಪಡೆಯುತ್ತಾರೆ. ಪುರುಷರು ಹೋಳಿ ಹಬ್ಬದಾಚರಣೆಯಲ್ಲಿ ಮಾತ್ರ ಲೇಂಗಿ (ಶೃಂಗಾರ) ಹಾಡುಗಳೊಂದಿಗೆ ಕುಣಿಯುವುದನ್ನು ಬಿಟ್ಟರೆ, ಉಳಿದಂತೆ ಅವರು ಮಹಿಳೆಯರ ಹಾಡುಗಳೊಂದಿಗೆ ಕುಣಿಯುವುದು ಅಪರೂಪ. ಪುರುಷರ ಎಲ್ಲ ಬಗೆಯ ಕುಣಿತಗಳಿಗೆ ಪಕ್ಕ ವಾದ್ಯಗಳು ಅಗತ್ಯವಾಗಿವೆ. ಪಕ್ಕವಾದ್ಯಗಳ ತಾಳ ಗತ್ತುಗಳನ್ನು ಅನುಸರಿಸಿ ಅವರ ಕುಣಿತ, ಜಿಗಿತ, ಹಿನ್ನಡೆ, ಮುನ್ನಡೆ, ಕೈಬಳುಕು, ಮೈಬಳುಕು ನಡೆಯುತ್ತದೆ. ಇವರ ಹೋಳಿ ಕುಣಿತ, ಅಲಾವಿ ಕುಣಿತ ಹಾಗೂ ಕೋಲಾಟದ ಕುಣಿತಗಳು ತುಂಬಾ ಆಕರ್ಷಣೀಯವಾಗಿರುತ್ತವೆ. ಇವೆಲ್ಲ ಸಂದರ್ಭಗಳಲ್ಲಿ ಕುಣಿತದ ವಿನ್ಯಾಸಗಳು ತೀರಾ ಭಿನ್ನವಾಗಿವೆ. ಲಂಬಾಣಿ ಪುರುಷರ ಲೇಜಿಮ್ ಕುಣಿತ ಆಧುನಿಕ ಬೆಳವಣಿಗೆಯಾಗಿದೆ.

ಪಿ.ಕೆ.ಕೆ.

 

ಲಾಲಿ – ಜೋಲ ಜನಪದ ಸಾಹಿತ್ಯದಲ್ಲಿ ಮಕ್ಕಳ ಹಾಡುಗಳಿಗೆ ವಿಶಿಷ್ಟ ಸ್ಥಾನವಿದೆ. ಇವು ತುಂಬಾ ಜನಪ್ರಿಯವಾದವು. ಇಂತಹ ಜನಪ್ರಿಯ ಹಾಡುಗಳಲ್ಲಿ ತೆಲುಗಿನ ಲಾಲಿ – ಜೋಲ ಪ್ರಧಾನವಾಗಿದೆ.

ಮಾತೃತ್ವವೆಂಬುದು ಸ್ತ್ರೀ ಜೀವನದಲ್ಲಿ ಮುಖ್ಯ ಸ್ಥಾನವನ್ನು ಆಕ್ರಮಿಸುತ್ತದೆ. ವಿವಾಹ ಕ್ರಿಯೆ ಹಿಂದೂ ಸಂಪ್ರದಾಯದಲ್ಲಿ ಒಂದು ಸಂಸ್ಕಾರ. ವಂಶಾಭಿವೃದ್ಧಿಗೆ ಇದೊಂದು ಪ್ರಧಾನ ಲಕ್ಷ್ಯ. ಮಕ್ಕಳು ಮನೆಗೆ ಬೆಳಕಿದ್ದಂತೆ. ಅವರು ದೇವರ ಸಮಾನ. ಪುತ್ರನಾದರೆ ರಾಮನಂತೆಯೋ, ಕೃಷ್ಣನಂತೆಯೋ ಭಾವಿಸಿ ತಾಯಿ ಲಾಲಿಸಿ ಲಾಲಿ ಹಾಡುಗಳನ್ನು ಹಾಡುವಳು, ಜೋಗುಟ್ಟುವ ಜೋಗುಳ ಹಾಡುಗಳನ್ನು ಹಾಡುವಳು. ಮಗಳಾದರೆ ಸೀತೆ, ಶಕುಂತಲೆ ಇತ್ಯಾದಿ ಪುರಾಣ ಸ್ತ್ರೀಯರಂತೆ ಭಾವಿಸಿ ಲಾಲಿ ಜೋಗುಳದ ಹಾಡುಗಳನ್ನು ಹಾಡುವಳು.

‘ಶಿಶುರ್ವೇತ್ತಿ, ಪಶುರ್ವೇತ್ತಿ, ವೇತ್ತಿಗಾನ ರಸಃ ಫಣಿಃ’ ಎಂಬಂತೆ ಮಕ್ಕಳು ಗೀತ, ಸಂಗೀತ ಮಾಧುರ್ಯಗಳಿಗೆ ಆಕರ್ಷಿತರಾಗುತ್ತಾರೆ. ಲಾಲಿ – ಜೋಗುಳದ ಹಾಡುಗಳಲ್ಲಿ ಭಾವಕ್ಕಿಂತಲೂ ಲಯಕ್ಕೆ, ರಾಗಕ್ಕೆ ಅತ್ಯಧಿಕ ಪ್ರಾಧಾನ್ಯವಿರುವುದರಿಂದಲೇ, ಶಿಶುಗಳಿಗೆ ಶ್ರುತಿ ಶ್ರಾವ್ಯವಾಗಿದ್ದು ರಸಾನುಭವವನ್ನುಂಟು ಮಾಡುವುದು.

‘ಊರು ಮಂಚಿದಮ್ಮ ಉಭಯ ಕಾವೇರೀ
ನಾಡು ಮಂಚಿದಮ್ಮ ವೈಷ್ಣವುಲವಾಡ
ಅಪ್ಪಮಂಚಿವಾಡು ಶ್ರೀ ವೆಂಕಟ್ರಮಣ
ಅಮ್ಮ ಮಂಚಿದಮ್ಮ ಅಲಮೇಲು ಮಂಗಾ’
|| ಚಿಚ್ಚೊಳಲಲ ಹಾಯೀ ||
(ಊರು ಒಳ್ಳೆಯದು ಉಭಯ ಕಾವೇರಿ
ಪೇಟೆ ಒಳ್ಳೆಯದು ವೈಷ್ಣವರ ಪೇಟೆ
ಅಪ್ಪ ಒಳ್ಳೆಯವ ಶ್ರೀ ವೆಂಕಟ್ರಮಣ
ಅಮ್ಮ ಒಳ್ಳೆಯವಳು ಅಲಮೇಲು ಮಂಗ)

– ಕೃತಿಸುಭಗವಾದ ಈ ಹಾಡು ಒಂದು ಚಿಕ್ಕ ಮಗುವನ್ನೇ ಅಲ್ಲ, ದೊಡ್ಡವರನ್ನೂ ಸಹಿತ ಜೋಳಿಗೆಯಲ್ಲಿ ಹಾಕಿ ತೂಗಿದಂತೆ, ತನ್ಮಯತೆಯನ್ನು ಹೊಂದುವಂತೆ ಮಾಡುತ್ತದೆ. ನಾಲ್ಕು ಸಾಲುಗಳಲ್ಲಿ ಸಾಗುವ ಇಂತಹ ಲಾಲಿ ಹಾಡುಗಳು ಸ್ತ್ರೀಯರ ಸಾರಸ್ವತ ಲೋಕದಲ್ಲಿ ಅತಿ ಹೆಚ್ಚು.

ಜೋ ಅಚ್ಯುತಾನಂದ ಜೋಜೋ ಮುಕುಂದಾ
ಲಾಲಿಪರಮಾನಂದ ರಾಮಗೋವಿಂದ
|| ಲಾಲೀ ||

– ಇದು ಅನ್ನಮಾಚಾರ್ಯರು ರಚಿಸಿದ ಲಾಲಿ ಹಾಡು.

ಮಕ್ಕಳನ್ನು ಲಾಲಿಸುತ್ತಾ ಹಾಡು ಹಾಡಿ ಕೊನೆಯಲ್ಲಿ ‘ಚೆಚ್ಚೊಳಲ ಹಾಯೀ’, ‘ಹೊಜ್ಜೊಜ್ಜೀ’, ‘ಹೋವೀ ಹೋವೀ ರಂಗಯ್ಯ, ಹೋವಲ ಪಾಡೇ ರಂಗಯ್ಯ’, ‘ಲಾಲೀ’ ಎಂಬ ‘ಪಲ್ಲವಿ’ (ತೆಲುಗಿನಲ್ಲಿ ‘ಊತಪದಂ’ ಎನ್ನುತ್ತಾರೆ)ಯನ್ನು ರಾಗಪೂರ್ವಕವಾಗಿ, ದೀರ್ಘವಾಗಿ ಹೇಳುವರು. ಬಹುಶಃ ಈ ಮೇಲೆ ಹೇಳಿದ ಪಲ್ಲವಿಗಳ ಮೇಲೆ ಕನ್ನಡದ ಪ್ರಭಾವವಾಗಿರಬೇಕು.

ಕನ್ನಡದಲ್ಲಿಯು ‘ಚಿಚ್ಚೊಳಲ ಹಾಯೀ’ ಎಂಬ ಪಲ್ಲವಿಯನ್ನು ಬಳಸಿ ಹಾಡಿದ ಒಂದು ಲಾಲಿ ಹಾಡು ಹೀಗಿದೆ :

            ‘ಚೆಚ್ಚೊಳಲ ಹಾಯೀ ಹಾಯಮ್ಮ ಹಾಯಿ ದೆಲಾಯಿ
ಅತ್ತಾರೆ ಅಳಲಮ್ಮ ಅಳುವ ಕೂಸಿರಲಮ್ಮ
ಕೆಟ್ಟಾರೆ ಕೆಡಲಿ ಮನೆ ಕೆಲಸ
ಮನೆ ಕೆಲಸ ಕೆಟ್ಟಾರು ಮಕ್ಕಳಿರಲಮ್ಮ ಮನೆ ತುಂಬ
ಚೆಚ್ಚೊಳಲ ಹಾಯೀ’
||

ಅಳುತ್ತಿರುವ ಮಗುವನ್ನು ಸಂತೈಸುತ್ತಾ ಮಾತೃಹೃದಯವು ಹೀಗೆ ಹಾಡುತ್ತದೆ.

            ‘ಏಡೊದ್ದು ಏಡೊದ್ದು ಎರ‍್ರಿನಾತಂಡ್ರಿ
ಏಡಿಸ್ತೇ ನೀಕಳ್ಳು ನೀಲಾಲು ಕಾರು
ನೀಲಾಲುಕಾರಿತೇ ನೇ ಚೂಡಲೇನು
ಪಾಲಯಿನ ಕಾರವೇ ಬಂಗಾರುಕಳ್ಳ’
            (ಅಳಬೇಡ ಅಳಬೇಡ ನನ್ನ ಹುಚ್ಚ ತಂದೆ
ಅತ್ತರೆ ನಿನ್ನ ಕಣ್ಣಿಂದ ನೀಲಗಳು ಸುರಿಯುವವು
ನೀಲಗಳು ಸುರಿದರೆ ನಾ ನೋಡಲಾರೆ
ಹಾಲು ಸುರಿಯುವುದಿಲ್ಲವೆ ಚಿನ್ನದ ಕಣ್ಣಲ್ಲಿ)

ಅಂತೆಯೇ –

            ‘ಹಾಯಿ ಹಾಯಿ ರಾವೇ ಆಪದಲಕಾಯೀ
ಚಿನ್ನವಾಂಡ್ಲನು ಕಾಯಿ ಶ್ರೀರಂಗಕಾಯೀ’
|| ‘ಚೆಚ್ಚೊಳಲ ಹಾಯೀ’ ||

            ‘ಲಾಲಿಕೆ ವೆಯ್ಯೆಂಡ್ಲು ನೀಕು ವೆಯ್ಯೇಂಡ್ಲು
ನೀ ಯನ್ನದಮ್ಮುಲಕು ಜಾಲವೆಯ್ಯೇಂಡ್ಲು’
            || ಹೊಜ್ಜೊಜ್ಜೀ||

ಹೀಗೆ ಹಲವಾರು ಲಾಲಿ – ಜೋಗುಳದ ಹಾಡುಗಳು ಮಕ್ಕಳಿಗಾಗಿ ತಾಯಂದಿರು ಹಾಡುವುದುಂಟು. ಇಂತಹ ಹಾಡುಗಳನ್ನು ನಾಲ್ಕು ರೀತಿಯಲ್ಲಿ ವಿಂಗಡಿಸಬಹುದು.

೧. ಭಕ್ತಿ ಪೂರ್ವಕ, ೨. ವಾತ್ಸಲ್ಯ ಪೂರ್ವಕ, ೩. ಕವಿಕೃತ ಮತ್ತು ೪. ಇತರೆ – ಇದರಲ್ಲಿ ಪ್ರಬೋಧ, ವಿನೋದ, ಗೇಲಿ ಮುಂತಾದ ಲಾಲಿ ಹಾಡುಗಳನ್ನು ಸೇರಿಸಬಹುದು.

ಭಕ್ತಿ ಪೂರ್ವಕ ಹಾಡುಗಳಲ್ಲಿ ಶಿವ, ವಿಷ್ಣು ದೇವತೆಗಳಿಗೆ ಸಂಬಂಧಪಟ್ಟ ಹಾಡುಗಳೇ ಅಲ್ಲದೆ ಸಮಸ್ತ ದೇವತೆಗಳಿಗೂ ಸಂಬಂಧಪಟ್ಟ ಲಾಲಿಹಾಡುಗಳು ಬಳಕೆಯಲ್ಲಿವೆ.

ಭಕ್ತಿ ಪೂರ್ವಕ ಹಾಡುಗಳಲ್ಲಿ ದಶಾವತಾರಗಳ ಲಾಲಿ ಹಾಡು, ರಂಗನಾಥ, ದತ್ತಾತ್ರೇಯ, ಲವಕುಶ, ವೆಂಕಟೇಶ್ವರ, ಲಕ್ಷ್ಮೀ, ಸೀತೆ, ಶಿವ, ಗಣಪತಿ, ನಾಗಪ್ಪ, ಮಾರ್ಕಂಡೇಯ, ಮಾದೇಶ, ಬಸವೇಶ್ವರ, ಪಾರ್ವತಿ, ಗೌರಮ್ಮ, ಚೊಡ್ಡೆಮ್ಮ, ರೇಣು, ಗೋದಾವರಿ – ಹೀಗೆ ಹಲವಾರು ಲಾಲಿ ಹಾಡುಗಳನ್ನು ಸೇರಿಸಬಹುದು.

ಜಿ.ಎಸ್.ಎಂ.

 

ವಂಡಿಕ್ಕಾರನ್ ಪಾಟ್ಟು ತಮಿಳುನಾಡಿನ ಬಂಡಿ ಪದ. ಕೃಷಿ ಉತ್ಪನ್ನಗಳನ್ನು ರೈತ ಸಂತೆಗೆ ಒಯ್ದು ಮಾರಲು ಎತ್ತಿನ ಗಾಡಿಗಳು ನೆರವಾದವು. ಉತ್ಪತ್ತಿಯಾದ ವಸ್ತುಗಳನ್ನು ಹೊಲಗಳಿಂದ ಹಾಗೂ ಉತ್ಪಾದನಾ ಘಟಕಗಳಿಂದ ತಮಗೆ ಬೇಕಾದ ಸ್ಥಳಗಳಿಗೆ ಕೊಂಡೊಯ್ಯಲು ರೈತ ಎತ್ತಿನ ಗಾಡಿಗಳನ್ನು ಬಳಸುತ್ತಿದ್ದ. ಹಬ್ಬ ಹರಿದಿನಗಳಲ್ಲಿ ಜನರು ಪ್ರಯಾಣ ಮಾಡುವಾಗ ಹಾಗೂ ಬೇರೆ ಊರುಗಳಿಗೆ ತೆರಳುವಾಗ ಗ್ರಾಮೀಣ ಜನರು ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು.

ಗೂಡುಬಂಡಿ, ತಟ್ಟೆಬಂಡಿ, ಬಿಲ್ಲುಬಂಡಿ ಮುಂತಾದ ಹಲವು ಬಗೆಯ ಎತ್ತಿನ ಗಾಡಿಗಳನ್ನು ಬಳಸುತ್ತಿದ್ದರು. ಬಂಡಿ ಹಾಡುಗಳು (ವಂಡಿಕ್ಕಾರನ್ ಪಾಟ್ಟು – ಬಂಡಿಯವನ ಹಾಡು, ಬಂಡಿಹಾಡು) ಪ್ರದೇಶದಿಂದ ಪ್ರದೇಶಕ್ಕೆ ಬೇರ್ಪಡುತ್ತದೆ.

ಗೂಡು ಬಂಡೀ ಕಟ್ಟಿಕೊಂಡು – ನಾನು
ಕುಂಭಕೋಣಂಗೆ ಕೊಂಡು ಹೋದೆ
ಕುಂಭಕೋಣಂ ಡಾಕ್ಟ್ರು – ಅಲ್ಲಿ
ಆಗೋಲ್ಲ ಅಂದು ಬಿಟ್ರು
ತಟ್ಟೆ ಬಂಡೀ ಕಟ್ಟಿಕೊಂಡು – ನಾನು
ತಂಜಾವೂರಿಗೆ ಕೊಂಡು ಹೋದೆ
ತಂಜಾವೂರು ಡಾಕ್ಟ್ರು ಉಳಿಯೋಲ್ಲ ಅಂದುಬಿಟ್ರು
ಎತ್ತಿನ ಗಾಡಿ ಕಟ್ಟಿಕೊಂಡು – ನಾನು
ಮನ್ನಾರ್ ಗುಡಿಗೆ ಕೊಂಡು ಹೋದೆ
ಮನ್ನಾರ್ ಗುಡಿ ಡಾಕ್ಟ್ರು – ಹೌದು
ಮುಗಿದು ಹೋಯ್ತು ಅಂದು ಬಿಟ್ರು

ಮುಂತಾದ ಬಂಡಿ ಹಾಡಿನ ಮೂಲಕ ಅಂದು ತುರ್ತು ಸಂದರ್ಭಗಳಲ್ಲಿ ಎತ್ತಿನ ಗಾಡಿಗಳೇ ಹೆಚ್ಚು ನೆರವಿಗೆ ಬರುತ್ತಿದ್ದವು ಎಂಬುದನ್ನು ತಿಳಿಯಬಹುದು.

ಬಂಡೀ ಹಾಡುಗಳು ಪುರುಷ ಕೆಲಸಗಾರರು ಕಟ್ಟಿ ಹಾಡುವುದರಿಂದ ಹಾಡುಗಳು ಸಾಮಾನ್ಯವಾಗಿ ಪ್ರೀತಿ, ಶ್ರಮ, ಕುಟುಂಬ, ಬದುಕು, ಪ್ರಕೃತಿ, ಬೆಳೆಗಳನ್ನು ಕಟಾವು ಮಾಡುವಾಗ ತೆನೆಗಳನ್ನು ಬಂಡಿಗೇರಿಸಿ ಕೊಂಡೊಯ್ಯುವ ಬಂಡಿಯವನ ಹಾಡು ಸ್ವಾಭಾವಿಕವಾಗಿ ಇರುತ್ತದೆ. ಹಾಡಿನ ಪ್ರಧಾನ ವಸ್ತುವಾಗಿ ನಿರ್ದಿಷ್ಟ ವಿಷಯ ಇದ್ದರೂ, ಉಪ ವಿಷಯಗಳಾಗಿ ಬೇರೆ ಬೇರೆ ಸನ್ನಿವೇಶಗಳು, ಸಾಮಾಜಿಕ ಅಗತ್ಯಗಳು, ನಾಗರಿಕತೆಯ ಹಿನ್ನೆಲೆಗಳು, ಚಾರಿತ್ರಿಕ ಸಂಗತಿಗಳು, ಸಾಂಸ್ಕೃತಿಕ ಅಂಶಗಳು, ಜೀವನಾನುಭವಗಳು, ಬದುಕಿನ ನಿರೀಕ್ಷೆಗಳು ಮುಂತಾದ ಅನೇಕ ವಿಷಯಗಳೂ ಬಂಡಿಹಾಡುಗಳಲ್ಲಿ ಅನಿವಾರ್ಯವಾಗಿ ಪ್ರವೇಶ ಪಡೆಯುತ್ತವೆ. ಕಟಾವು ಸಂದರ್ಭದಲ್ಲಿ ಹಾಡುವ ಹಾಡೊಂದನ್ನು ನೋಡೋಣ. ಈ ಹಾಡು ರಾಮನಾಥಪುರಂ ಜಿಲ್ಲೆಯ ಕಮುದಿ ಸುತ್ತಮುತ್ತ ಪ್ರಚಲಿತದಲ್ಲಿದೆ.

            ಏರುವುದು ಏಲೇಲವುಲ ಕಮುದಕ್ಕುಡಿ
ಇಳಿಯುವುದು ಏಲೇಲವುಲ ಪರಮಕ್ಕುಡಿ
ಎಣ್ಣೆ ಯಾರಂ ಏಲೇಲವುಲ – ಹೋಗೋ ಬಂಡಿ
ಎಲ್ಲಿ ಹೋಗಿ ಏಲೇಲವುಲ – ಇಳಿಯೋ ಬಂಡಿ
ಕಬ್ಬಿನ ಜಲ್ಲೆ ಹೊತ್ತುಕೊಂಡು
ಅನತಿ ದೂರ ಹೋಗೋ ಬಂಡಿ
ಕಾಲುಗಳು ನಡೆಯದೆ
ಕಳ್ಳ ಹೆಜ್ಜೆ ಹಾಕುತ್ತಿವೆ.

ಎಂದು ಭಾರದ ಬಂಡಿಯನ್ನು ಎಳೆಯುವಾಗ ಹಾಡುವರು. ಕೆಲವೊಮ್ಮೆ ಹಾಡಿನ ಮಧ್ಯೆ ಎತ್ತುಗಳನ್ನು ಓಡಿಸುವ ಅರ್ಥವಿಲ್ಲದ ಶಬ್ದಗಳೂ ಸೇರಿಕೊಳ್ಳುವುದು ಸಹಜವಾಗಿದೆ.

ಕಟ್ಟಬೊಮ್ಮನ್ ಕಾಲದಿಂದಲೂ ಕಮುದಿ ಎಂಬ ಊರು ಪ್ರಸಿದ್ಧವಾಗಿದೆ. ಅನೇಕ ಜಾತಿಯ ಜನರು ಒಂದುಗೂಡುವ ಸ್ಥಳವಾದ್ದರಿಂದ ಗಲಭೆ ಸಂಭವಿಸಬಾರದೆಂಬ ಉದ್ದೇಶದಿಂದ ಬ್ರಿಟಿಷರ ಕಾಲದಿಂದಲೂ ಈ ಊರು ಗಮನಾರ್ಹವಾಗಿದೆ. ಈ ಬಂಡಿ ಹಾಡಿನಲ್ಲಿ ಕಮುದಿ ಸಂತೆ ಹಾಗೂ ಅಲ್ಲಿ ಆಂಗ್ಲ ದೊರೆಗಳು ಬಂದಿಳಿಯುವುದು ಉಲ್ಲೇಖಗೊಂಡಿದೆ.

            ಹಚ್ಚ ಹಸಿರಿನ ಗಿಳಿಯ ಹಾಗೆ
ಪ್ರಾಯದ ಬಿಳಿಯವ್ವ
ಪ್ರಾಯದ ಬಿಳಿಯವ್ವ
ಕೇಳೋರ ಮಾತು ಕೇಳಿ
ಟಕ್ಕು ಮುಕ್ಕು ಡಿಕ್ಕು ತಾಳ – ಈ
ಈ ಗಿಳಿಯನ್ನು ಮರೆತೆಯಲ್ಲಾ
ಟಕ್ಕು ಡಿಕ್ಕಿ ಡಿಕ್ಕು ತಾಳ

            ಬಾನು ಕಪ್ಪುಗುತಿಗೆ ಇರುಳು ಕವಿಯುತಿದೆ – ಈಗ
ಇರುಳು ಕವಿಯುತಿದೆ
ತಗ್ಗು ದಿಣ್ಣೆ ದಾರಿ ನೋಡಿ
ಟಕ್ಕು ಮುಕ್ಕು ಡಿಕ್ಕು ತಾಳ – ಈಗ
ದಾರಿ ನೋಡಿ ಸಾಗಬೇಕು
ಕಡೇಕು ಡಿಕ್ಕು ತಾಳ (ಹಚ್ಚ ಹಸಿರಿನ)

            ಚಂದನ ಕುಂಭದಲ್ಲಿ – ನಾನು
ಅನ್ನ ಹಾಕಿ ಉಣ್ಣುವಾಗ – ಪ್ರಿಯೆ
ನಿನ್ನ ನಾನು ನೆನೆಯುವಾಗ
ನಿನ್ನ ನಾನು ನೆನೆಯುವಾಗ
ಟಕ್ಕು ಮುಕ್ಕು ಡಿಕ್ಕುತಾಳ – ನಾನು
ಉಣ್ಣುವುದು ಅನ್ನವಲ್ಲ
ಕಡೇಕು ಡಿಕ್ಕು ತಾಳ (ಹಚ್ಚ ಹಸಿರಿನ)

            ಕಡಲೆ ಒಳ್ಳೆ ಬೆಲೆಗೆ ಹೋದ್ರೆ
ಓಲೆ ಮಾಡಿಸಿ ಹಾಕುತ್ತೇನೆ
ಓಲೆ ಮಾಡಿಸಿ ಹಾಕುತ್ತೇನೆ
ಕೇಳೋರ ಮಾತು ಕೇಳಿ
ಟಕ್ಕು ಮುಕ್ಕು ಡಿಕ್ಕಿ ತಾಳ – ಈಗ
ಗಿಳಿಯನ್ನು ಮರೆತೆಯಲ್ಲ
ಕಡೇಕು ಡಿಕ್ಕು ತಾಳ (ಹಚ್ಚ ಹಸಿರಿನ)

ಬಂಡಿಹಾಡು ಬಹುತೇಕ ಒಂಟಿ ಧ್ವನಿಯಾಗಿ ಮೂಡಿ ಬರುತ್ತದೆ. ಏಕೆಂದರೆ ಒಬ್ಬರೇ ಬಂಡಿ ನಡೆಸಿಕೊಂಡು ಹೋಗುವುದು ಸಾಮಾನ್ಯ. ಹಿಮ್ಮೇಳ ಮತ್ತು ಗುಂಪು ಗಾಯನ ಮಾದರಿಯಲ್ಲಿ ಬಂಡಿ ಪದಗಳನ್ನು ಹಾಡುವುದಿಲ್ಲ. ಬಂಡಿ ಶಬ್ದವನ್ನು ತಾಳವೆಂದು ಭಾವಿಸಿ ಹಾಡುವರು. ಬಹುತೇಕ ಹಾಡುಗಳು ‘ಇಳುವೈತೆಮ್ಮಾಂಗು’ ಎಂಬ ತಾಳವಿಲ್ಲದೆ ಮನಸ್ಸಿಗೆ ಬಂದಂತೆ ಮಟ್ಟನ್ನು ಎಳೆದು ಹಾಡುವ ರೀತಿಯಲ್ಲಿ ರೂಪುಗೊಂಡಿರುತ್ತವೆ.

ರಸ್ತೆ ಬದಿಯಲ್ಲಿರುವ ಮರಗಳ ಮೇಲೇರಿದ ಕಳ್ಳರು ಕೊಕ್ಕೆಹಾಕಿ ಬಂಡಿಯಲ್ಲಿರುವ ಮೂಟೆಗಳನ್ನು ಕಳವು ಮಾಡುವುದು ಅನೇಕ ಊರುಗಳಲ್ಲಿ ಕಂಡುಬರುವುದರಿಂದ ಬಂಡಿ ಚಾಲಕರು ಏರು ಧ್ವನಿಯಲ್ಲಿ ಹಾಡುತ್ತಾ ಹೋಗುವುದುಂಟು.

            ಎತ್ತುಗಳ ಬಂಡಿ ಕಟ್ಟಿ – ಗೆಣೆಕಾರ
ಕೈಯಲ್ಲಿ ಕೋಲು ಹಿಡಿದು
ಹಾದೀಲಿ ಹೋಗೋನೇ – ಈಗ
ಜೊತೇಲಿ ನಾನು ಬರಲೇನು

ಎಂದು ರಾಜ ರಾಣಿ ಆಟದಲ್ಲಿ ಬಂಡಿಹಾಡನ್ನು ಹಾಡುತ್ತಾರೆ. ದೆವ್ವ ಬಿಡಿಸುವ ಹಾಡಿನಲ್ಲಿ ದೆವ್ವದಂತೆ ಕುಣಿಯುವ ಸ್ತ್ರೀ ತಲೆಗೆ ರುಮಾಲು ಸುತ್ತಿಕೊಂಡು ಕೈಯಲ್ಲಿ ಕೋಲು ಹಿಡಿದು ಬಂಡಿ ನಡೆಸುವವ ಹಾಡುವುದನ್ನು ಕಾಣಬಹುದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕಲಾವಿದರು ಬಂಡಿಹಾಡಿನ ಕೆಲವು ಸಾಲುಗಳನ್ನು ಹಾಡುವುದರಿಂದ ಹಾಗೂ ಬಂಡಿಹಾಡನ್ನು ಕೇಳಿದ ಅನುಭವಗಳ ಪ್ರಭಾವದಿಂದ ಜನರು ಅದನ್ನು ತಮ್ಮ ಮೌಖಿಕ ಹಾಡುಗಳಲ್ಲಿ ಅಭಿವ್ಯಕ್ತಪಡಿಸುತ್ತಾರೆ.

            ಬಂಡಿ ಬರುತ್ತೆ ಬಂಡಿ ಬರುತ್ತೆ
ಸಹಸ್ರ ಸಹಸ್ರ ಬಂಡಿ ಬರುತ್ತೆ
ನನ್ನ ಗೆಳೆಯನ ಬಂಡಿಯಲ್ಲಿ
ನನಗೊಪ್ಪುವ ಹೆಣ್ಣು ಬರುತ್ತೆ

ಕೆಲಸದ ಹಾಡುಗಳಲ್ಲಿ ಕೆಳಗಿನ ಹಾಡನ್ನು ಉದಾಹರಿಸಬಹುದು.

            ಬಂಡಿ ಬರುತ್ತಿದೆ
ವಡುಗಪಟ್ಟಿ ಸಂತೆಯಲ್ಲಿ
ಕೊಂಡು ಬರುತಿದೆ
ದೇಗುಲಕ್ಕೆ ಬೇಕಾದದ್ದನ್ನು

ಬಂಡಿ ಹಾಡನ್ನು ಕೇಳಿದ ಮಾತ್ರಕ್ಕೆ ಆ ಹಾಡಿಗೆ ಪ್ರತಿಹಾಡು ಎಂಬ ಮಾದರಿಯಲ್ಲಿ ಈ ಹಾಡಿನ ಸಾಲುಗಳು ರೂಪುಗೊಂಡಿವೆ. ಬಂಡಿ ಹಾಡಿನ ಪ್ರಭಾವದಿಂದ ರೂಪುಗೊಂಡ ಹಾಡುಗಳಲ್ಲಿ ಇದು ಕೂಡ ಒಂದು.

            ಪುಟ್ಟ ಪುಟ್ಟ ಗೂಡು ಬಂಡಿ
ತಿಲ್ಲೇಲೇ ಲೇಲೋ – ಹಾಕು
ತನ್ನಾನೇ ನಾನೇ – ನಮ್ಮ
ಕಿರಿಯಣ್ಣ ಓಡಿಸೋ ಬಂಡಿ
ತಿಲ್ಲೇಲೇ ಲೇಲೋ – ಹಾಕು
ತನ್ನಾನೇ ನಾನೇ – ನಮ್ಮ
ದೊಡ್ಡ ದೊಡ್ಡ ಎತ್ತಿ ಬಂಡಿ
ತಿಲ್ಲೇಲೇ ಲೇಲೋ – ಹಾಕು
ತನ್ನನೇ ನಾನೇ – ನಮ್ಮ
ಹಿರಿಯಣ್ಣ ಓಡಿಸೋ ಬಂಡಿ
ತಿಲ್ಲೇಲೇ ಲೇಲೋ

ಕೆ.ಎ.ಜಿ. ಅನುವಾದ ಐ.ಎಸ್.

 

ವಂಡಿ ಮಲೈಚ್ಚಿಯಮ್ಮನ್ ತಮಿಳುನಾಡಿನಲ್ಲಿ ದಕ್ಷಿಣದ ತಿರುನಲ್ವೇಲಿ, ತೂತ್ತುಕುಡಿ, ಕನ್ಯಾಕುಮಾರಿ ಮೊದಲಾದ ಜಿಲ್ಲೆಗಳಲ್ಲಿ ವಂಡಿ ಮಲೈಚ್ಚಿಯಮ್ಮನ್ ಎಂಬ ಊರ ಧೇವತೆಯ ಆರಾಧನೆ ನಡೆಯುತ್ತದೆ. ಮೂರ್ತಿರೂಪದಲ್ಲಿರುವ ತಮಿಳುನಾಡಿನ ದೈವಗಳು ಹೆಚ್ಚಿನವು ಕುಳಿತ ಅಥವಾ ನಿಂತ ಭಂಗಿಗಳಲ್ಲಿ ಕಂಡುಬರುವುದು ಸಾಮಾನ್ಯ. ಆದರೆ ವಂಡಿ ಮಲೈಚ್ಚಿಯಮ್ಮನು ಇತರ ದೈವಗಳಿಗಿಂತ ಭಿನ್ನವಾಗಿ ಮಲಗಿರುವ ಭಂಗಿಯಲ್ಲಿರುತ್ತದೆ. (ದೊಡ್ಡ ದೈವಗಳಲ್ಲಿ ‘ತಿರುಮಾಲ್’ (ವಿಷ್ಣು) ಮಾತ್ರವೇ ಮಲಗಿರುವ ಭಂಗಿಯಲ್ಲಿರುತ್ತದೆ). ತಿರುಮಾಲನು ಮಲಗಿರುವ ಭಂಗಿಗೂ ವಂಡಿ ಮಲೈಚ್ಚಿಯಮ್ಮನು ಮಲಗಿರುವ ಭಂಗಿಗೂ ವ್ಯತ್ಯಾಸವಿದೆ. ತಿರುಮಾಲ್ ಅಂಗಾತ ಮಲಗಿದ್ದು ಮೇಲ್ಮುಖವಾಗಿ ನೋಡುತ್ತಿರುವ ಭಂಗಿಯಲ್ಲಿರುವುದಿಲ್ಲ, ಸ್ವಲ್ಪ ಬಾಗಿದ ಭಂಗಿಯಲ್ಲಿದ್ದು ಯಾವುದಾದರೊಂದು ದಿಕ್ಕನ್ನು ನೋಡುತ್ತಿರುವಂತಿರುತ್ತದೆ.

ವಂಡಿ ಮಲೈಚ್ಚಿಯಮ್ಮನ ಗುಡಿಯಲ್ಲಿ ವಂಡಿ ಮಲೈಚ್ಚಿ ತನ್ನ ಗಂಡನಾದ ವಂಡಿ ಮಲೈಯನೆಂದು ಕರೆಯಲಾಗುವ, ಗಂಡು ದೈವದೊಂದಿಗೆ ಮೇಲ್ದೆಸೆಯನ್ನು ನೋಡುತ್ತಿರುವ ಭಂಗಿಯಲ್ಲಿರುತ್ತದೆ. ವಂಡಿ ಮಲೈಯನ್ ಹಾಗೂ ವಂಡಿ ಮಲೈಚ್ಚಿ ಎಂಬ ಎರಡೂ ದೈವಗಳು ದಕ್ಷಿಣಕ್ಕೆ ತಲೆಯಿಟ್ಟು ಉತ್ತರ ದಿಕ್ಕನ್ನು ನೋಡುತ್ತ, ಕಾಲುಗಳನ್ನು ಚಾಚಿಕೊಂಡು ಮಲಗಿರುವುದೇ ಈ ದೈವಗಳ ಹೆಗ್ಗುರುತು. ಈ ದೈವಗಳ ಕಾಲುಗಳ ಕೆಳಭಾಗದಲ್ಲಿ ಸಿಂಹವೂ ಐದು ಹೆಡೆ ತಲೆಗಳುಳ್ಳ ನಾಗನೂ ಇದ್ದು, ತಲೆಗಳು ಸ್ವಲ್ಪ ಮೇಲಕ್ಕೆತ್ತಿದ ಸ್ಥಿತಿಯಲ್ಲೂ ಕಾಲುಗಳು ತಗ್ಗಿದ ನೆಲೆಯಲ್ಲೂ ಕಂಡುಬರುತ್ತವೆ. ಇದರಿಂದ ದೈವವು, ಅದರ ಕಾಲುಗಳ ಮೇಲೆ ನಿಂತುಕೊಂಡು ತಲೆಯನ್ನೆತ್ತಿ ನೋಡುತ್ತಿರುವಂತೆ ಕಾಣಿಸುತ್ತದೆ. ಪೂಜೆಗೊಳ್ಳಲು ಅನುಕೂಲವಾಗುವಂತಿದೆ. ವಂಡಿಮಲೆಯನು ತನ್ನ ಬಲಗೈಯಲ್ಲಿ ದಂಡಾಯುಧವನ್ನೂ ವಂಡಿ ಮಲೈಚ್ಚಿಯ ಬಲಗೈಯಲ್ಲಿ ಶೂಲಾಯುಧವನ್ನೂ ಧರಿಸಿಕೊಂಡಿರುತ್ತದೆ.

ಹಾವಿನ ವಾಸವಿರುವ ಹುತ್ತದ ಮಣ್ಣನ್ನು ತಂದು, ಅದರೊಂದಿಗೆ ಬೆಲ್ಲದ ಕುಳ ಅಥವಾ ಹೊಳೆಯ ಮಳಲನ್ನು ಸೇರಿಸಿ ಕಲಸಿ ಮಾಡಲಾಗಿದ್ದು, ಕಲ್ಲುಗಳೊಂದೂ ಇಲ್ಲದೆ ಮಳಲಿನಿಂದಲೇ ಕೊರೆದು ತಯಾರಿಸಿದ್ದು, ೧೦ ಅಡಿ ಉದ್ದವೂ, ೩ ಅಡಿ ಅಗಲವೂ ಇರುವ ಎರಡು ಮೂರ್ತಿಗಳನ್ನು ತಯಾರಿಸುತ್ತಾರೆ. ನಂತರ ಬಣ್ಣಗಳನ್ನು ಹಚ್ಚುತ್ತಾರೆ. ತಿರುನಲ್ವೇಲಿ ಭಾಗಗಳಲ್ಲಿ ವೇಳಾರ್ ಜನಾಂಗದವರು (ಮಣ್ಣಿನಿಂದ ಮಡಕೆಗಳನ್ನು ತಯಾರಿಸುವ ಕುಯವರ್ ಜಾತಿಯವರು) ಮೂರ್ತಿಯನ್ನು ತಯಾರಿಸಿ ಬಣ್ಣ ಹಚ್ಚುವವರು. ಹೆಣ್ಣು ಗೊಂಬೆಯು ಕಿವಿಯ ಆಭರಣಗಳು, ಮೂಗುತಿ ಮೊದಲಾದ ತೊಡುಗೆಗಳಿಂದ ಶೋಭಿಸುತ್ತದೆ. ವಂಡಿ ಮಲೈಚ್ಚಿಯಮ್ಮನ ಕಾಲಿನಲ್ಲಿ ದಂಡ, ಕೈ-ಭುಜಗಳಲ್ಲಿ ಸತ್ತಿಗೆಯನ್ನು ಯಾವತ್ತೂ ಧರಿಸಿಕೊಂಡಿರುತ್ತದೆ. ಪವಡಿಸಿರುವ ಈ ಮೂರ್ತಿಗಳ ಮೇಲೆ ಗಂಡುಡುಗೆಯಾದ ವೇಷ್ಠಿಯನ್ನೂ ಹೆಣ್ಣುಡುಗೆಯಾದ ಸೀರೆಯನ್ನೂ ಉಡಿಸಲಾಗಿರುತ್ತದೆ. ಈ ದೈವಗಳನ್ನು ತಿರುನೆಲ್ವೇಲಿ ಜಿಲ್ಲೆಯ ಅಂಬಾ ಸಮುದ್ರ, ಪಾಳಯಂಕೋಟೆ, ವೀರವನಲ್ಲೂರು, ಬಾಗೈಕುಳಮ್, ಪತ್ತಮಡೈ, ಚೇರನ್ ಮಹಾದೇವಿ ಮೊದಲಾದ ಊರುಗಳಲ್ಲಿ ಪ್ರತ್ಯೇಕ ದೈವಗಳಾಗಿ ಪೂಜಿಸಲಾಗುತ್ತದೆ. ಇವು ಅರ್ಧ ತೆರೆದಿರುವಂತೆಯೂ ಅರ್ಧ ಮುಚ್ಚಿರುವಂತೆಯೂ ಇರುತ್ತವೆ. ಈ ಊರುಗಳಲ್ಲಿ ಅಂಬಾಸಮುದ್ರದ ಕೋವಿಲು ಪ್ರಧಾನವಾದುದು ಎನ್ನಲಾಗಿದೆ. ಈ ಊರಿನಲ್ಲಿರುವ ದೊಡ್ಡ ದೈವವಿದು, ಗಾತ್ರದಲ್ಲೂ ದೊಡ್ಡ ಸ್ವರೂಪದ್ದಾಗಿದ್ದು, ಊರಿನ ನಡುವಿನಲ್ಲೇ ಎತ್ತರ ತಗ್ಗಿಲ್ಲದ ಬಯಲು ಪ್ರದೇಶದಲ್ಲಿದೆ.

ದಂತಕತೆ : ವಂಡಿಮಲೈಯವ್ – ವಂಡಿ ಮಲೈಚ್ಚಿ ದೈವಗಳು ಅಣ್ಣ – ತಂಗಿಯರೆಂಬುದು ನಂಬಿಕೆ. ಹಿಂದೊಂದು ಕಾಲದಲ್ಲಿ ಈ ಅಣ್ಣ – ತಂಗಿ ಇಬ್ಬರೂ ಕೋವಿಲ್ ಜಾತ್ರೆಯಲ್ಲಿ ಭಾಗವಹಿಸಿ ಹಿಂತಿರುಗುವಾಗ, ಪಾಳಯಂ ಕೋಟೆ (ಗುಡಿಯಿರುವ ಜಾಗ) ದಾರಿಯಾಗಿ ಬರುತ್ತಿದ್ದರು. ನಡವೆ, ರಾತ್ರಿಯಾದುದರಿಂದ ಸ್ವಲ್ಪಕಾಲ ಅಲ್ಲಿ ವಿಶ್ರಾಂತಿಗಾಗಿ ತಂಗಿದ್ದರು. ವಿಶ್ರಾಂತಿಯ ಬಳಿಕ ತಮ್ಮ ಪಯಣವನ್ನು ಮತ್ತೆ ಆರಂಭಿಸಿದಾಗ, ಅವರಿಗೆ ಆ ಜಾಗವನ್ನು ಬಿಟ್ಟು ಕದಲಲಾಗದಂಥ ಪರಿಸ್ಥಿತಿ ಏರ್ಪಟ್ಟಿತು. ಮಾತ್ರವಲ್ಲ, ತಕ್ಷಣವೇ ಆ ಜಾಗದಲ್ಲೇ ದೈವಗಳಾಗಿಬಿಟ್ಟರು. ಅನಂತರ ಜನರು ಆ ಇಬ್ಬರಿಗೂ ಆ ಜಾಗದಲ್ಲೇ ಪೀಠವನ್ನು ಸ್ಥಾಪಿಸಿ ಪೂಜೆಯನ್ನು ಸಲ್ಲಿಸಿದರು. ಅವರು ಪಯಣಿಸಿದ ಎತ್ತಿನ ಗಾಡಿ ಆ ಜಾಗದಲ್ಲಿ ತಡೆಹಿಡಿಯಲ್ಪಟ್ಟುದರಿಂದ ಅವರು ಬಂಡಿ ತಡೆಹಿಡಿದಮ್ಮ ಎಂಬುದಾಗಿಯೂ, ಅವರು ಮಲಗಿ ವಿಶ್ರಾಂತಿ ಪಡೆದ ಕಾರಣದಿಂದ ದೈವಗಳು ಮಲಗಿದ ಸ್ಥಿತಿಯಲ್ಲೇ ಸ್ಥಾಪನೆಯಾದವು ಎಂಬುದು ಇಲ್ಲಿ ಚಾಲ್ತಿಯಲ್ಲಿರುವ ದಂತಕತೆ.

ಪಾಳಯಂಕೋಟೆಯ ವಂಡಿ ಮಲೈಚ್ಚಿಯಮ್ಮನನ್ನು ವೆಳ್ಳಾಳ ಚೆಟ್ಟಿಯಾರ್ ಪೂಜಿಸುತ್ತಾರೆ. ಅವರು ಈ ದೈವದ ದಂತಕತೆಯನ್ನು ತಮ್ಮ ಸ್ಥಳಪುರಾಣವಾಗಿ ಹೇಳುತ್ತಾರೆ. ವೆಳ್ಳಾಳ ಚೆಟ್ಟಿಯಾರರು ಹಿಂದಿನ ಕಾಲದಲ್ಲಿ ಕಾವಿರಿ ಪೂಂಪಟ್ಟಣದಲ್ಲಿದ್ದವರು. ಆಗ ಆ ಭಾಗವನ್ನಾಳಿದರಸ ಈ ಕುಲದ ಹೆಣ್ಣೊಬ್ಬಳನ್ನು ಮದುವೆಯಾಗಲು ಬಯಸಿ ಹೆಣ್ಣು ಕೇಳಿದನು.

ಆ ಜನರು ಹೆಣ್ಣು ಕೊಡಲು ನಿರಾಕರಿಸಿ, ಆ ಹೆಣ್ಣನ್ನೇ ಕೊಲೆಗೈದು ಬೇರೆ ಊರಿಗೆ ಹೋಗಿಬಿಟ್ಟರು. ಅವರು ಅಲ್ಲಿ ಕೊಲೆಗೈದ ಹೆಣ್ನನ್ನೇ ಈಗ ವಂಡಿ ಮಲೈಚ್ಚಿಯಮ್ಮನಾಗಿ ಆರಾಧಿಸಿಕೊಂಡು ಬರುತ್ತಿರುವುದು – ಎಂಬುದಾಗಿ ವೆಳ್ಳಾಳ ಚೆಟ್ಟಿಯಾರ್ ಜನರು ಹೇಳುತ್ತಾರೆ. ಆಕೆಯ ಸಹೋದರನಾದ ವಂಡಿ ಮಲೆಯನೇ ಆ ಹೆಣ್ಣನ್ನು ಕೊಲೆ ಮಾಡಿದವನೆಂದೂ ಹೇಳುತ್ತಾರೆ.

ವಿಶೇಷ ವಿಚಾರ : ಈ ದೈವಗಳು ಮಣ್ಣಿನಿಂದ ಮಾಡಿರುವುದರಿಂದ ಅವಕ್ಕೆ ಹಾಲು ನೀರು ಮೊದಲಾದ ದ್ರವಗಳಿಂದ ಅಭಿಷೇಕಗಳಿಲ್ಲ. ವಿಗ್ರಹಗಳ ಮೇಲೆ ಚಿತ್ರಿಸಲಾಗಿರುವ ಬಣ್ಣಗಳು ದೀರ್ಘಕಾಲ ಬಾಳಿಕೆ ಬರಬೇಕು ಎಂಬುದಕ್ಕಾಗಿ ಅವುಗಳೆದುರು ಕರ್ಪೂರವನ್ನು ಬೆಳಗಿಸುವುದೂ ಇಲ್ಲವೆಂಬುದು ವಿಶೇಷವಾಗಿ ಗಮನಿಸಬೇಕಾದ ಅಂಶ.

ಹೊಸದಾಗಿ ತಯಾರಿಸುವ ದೈವದ ಮೂರ್ತಿಗಳಿಗೆ ‘ಕಣ್ಣುತೆರೆ’ಸುವುದು ಎಂಬ ವಿಶೇಷ ಕಾರ್ಯಕ್ರಮವನ್ನು ಮಾಡಲಾಗುತ್ತದೆ. ಊರಿನ ಗಣ್ಯರ ಸಮ್ಮುಖದಲ್ಲಿ ಈ ಕಣ್ಣು ತೆರೆಯಿಸುವ ಸಂಪ್ರದಾಯ ನಡೆಯುತ್ತದೆ. ಹೆಣ್ಣು ಮಕ್ಕಳಿಗೆ ಬದುಕಿನ ನಿತ್ಯ ಸಂಪ್ರದಾಯವಾದ ಬಳೆ ತೊಡಿಸುವ ಸಂದರ್ಭದಲ್ಲಿ, ಮೊದಲು ಬಳೆಯನ್ನು ಈ ದೈವಗಳಿಗೆ ತೊಡಿಸುವುದು ರೂಢಿ. ಶಿಶು ಜನಿಸಿದ ೧೬ನೇ ದಿನ ಅದಕ್ಕೆ ಕಪ್ಪುಬಳೆಗಳನ್ನು ತೊಡಿಸುವುದು ಪದ್ಧತಿ. ಜಾತ್ರೆಯಂದು ಈ ದೈವಕ್ಕೆ ಕಪ್ಪು ಬಳೆಗಳನ್ನು ತೊಡಿಸಿ ಪೂಜಿಸುತ್ತಾರೆ. ಮದುವೆ, ಹುಟ್ಟುಹಬ್ಬ ಮೊದಲಾದ ಆಚರಣೆಗಳಂದು ತೆಂಗಿನ ಕಾಯಿ ಒಡೆದು ಸಮರ್ಪಿಸುತ್ತಾರೆ. ಪ್ರತಿವರ್ಷವೂ ‘ಮುಳೈಪ್ಪಾರಿ’ ತೆಗೆಯುವ ಆಚರಣೆಯನ್ನು ಮಾಡುತ್ತಾರೆ. ಕೆಲವು ನಿರ್ದಿಷ್ಟ ಪರ್ವಗಳಲ್ಲಿ ಜಾತ್ರೆ – ಉತ್ಸವಗಳನ್ನು ನಡೆಸುತ್ತಾರೆ. ಭಕ್ತಾದಿಗಳು ದೈವಗಳಿಗೆ ವೇಷ್ಠಿ – ಸೀರೆ ಮೊದಲಾದುವನ್ನು ಹರಸಿಕೊಳ್ಳುತ್ತಾರೆ.

ಎನ್.ವಿ.ಕೆ. ಅನುವಾದ ಎಚ್.ಬಿ.