ವಡಕ್ಕನ್ ಪಾಟುಗಳ್ ಉತ್ತರ ಕೇರಳದಲ್ಲಿ ಪ್ರಚಲಿತದಲ್ಲಿರುವ ಕಥನ ಗೀತೆಗಳನ್ನು ‘ವಡಕ್ಕನ್ ಪಾಟುಗಳು’ ಎಂದು ಕರೆಯುತ್ತಾರೆ. ಇವುಗಳು ವೃತ್ತಿ ಸಂಬಂಧಿ ಹಾಡುಗಳು. ವೀರ ಪರಾಕ್ರಮಿಗಳಾದ ಪುರುಷರ ಮತ್ತು ವೀರ ಮಹಿಳೆಯರ ಕಥೆಗಳನ್ನು ಈ ಹಾಡುಗಳು ನಿರೂಪಿಸುತ್ತವೆ. ಗದ್ದೆ ಬಯಲುಗಳಲ್ಲಿ ಕೆಲಸ ಮಾಡುವ ರೈತಾಪಿ ಜನರು ಈ ಹಾಡುಗಳನ್ನು ಹಾಡುತ್ತಾರೆ. ಮಲಯಾಳಂ ಜನಪದ ಸಾಹಿತ್ಯದ ಮುಖ್ಯ ವಾಹಿನಿಯಲ್ಲಿ ಸೇರಿಕೊಂಡಿರುವ ವಡಕ್ಕನ್ ಪಾಟುಗಳು ಇತಿಹಾಸ, ಐತಿಹ್ಯ, ಸತ್ಯಘಟನೆಗಳನ್ನು ತುಂಬಿಕೊಂಡಿವೆ.

ಪ್ರಾದೇಶಿಕ ಹಿನ್ನೆಲೆಯಲ್ಲಿ ಜನಪದ ಹಾಡಿನ ಈ ಪ್ರಕಾರಕ್ಕೆ ‘ವಡಕ್ಕನ್ ಪಾಟ್’ ಎಂಬ ಹೆಸರು ಬಂತು. ೧೮೭೨ರಲ್ಲಿ ಪ್ರಕಟವಾದ ಗುಂಡರ್ಟ್ ನಿಘಂಟಿನಲ್ಲಿ ಈ ಪದವನ್ನು ಕಾಣಬಹುದು. ‘ತಚ್ಚೋಳಿ ಪಾಟ’ನ್ನು ಅವರು ವಡಕ್ಕನ್ ಪಾಟ್ ಎಂದು ಕರೆದರು. ವಿಲಿಯಮ್ ಲೋಗನ್ ‘ಮಲಬಾರ್ ಮಾನ್ಯುವಲ್’ ಕೃತಿಯಲ್ಲಿ ತಚ್ಚೋಳಿ ಪಾಟ್‌ನ ಕುರಿತು ವಿವರಿಸುತ್ತಾನೆ. ಆದರೆ ಇದನ್ನು ವಡಕ್ಕನ್ ಪಾಟ್ ಎಂದು ಕರೆದಿಲ್ಲ. ಪಿ. ಗೋವಿಂದ ಪಿಳೈ, ಆರ್. ನಾರಾಯಣ ಪಣಿಕ್ಕರ್ ಮೊದಲಾದ ಸಾಹಿತ್ಯ ಚರಿತ್ರಕಾರರು ತಚ್ಚೋಳಿ ಪಾಟ್‌ಗಳನ್ನು ವಡಕ್ಕನ್ ಪಾಟ್‌ಗಳೆಂದು ಕರೆದರು. ಕೇರಳ ಸಾಹಿತ್ಯ ಚರಿತ್ರೆಯನ್ನು ಬರೆದ ಮಹಾಕವಿ ಉಳ್ಳೂರ್ ಅವರು ಪುತ್ತೂರಂ ಪಾಟ್ ಗಳನ್ನು ವಡಕ್ಕನ್ ಪಾಟ್‌ಗಳೆಂದು ಕರೆದರು. ಹೀಗೆ ವಿದ್ವಾಂಸರು ಮಲಯಾಳಂ ಜನಪದ ಹಾಡುಗಳಲ್ಲಿ ಕೆಲವನ್ನು ವಡಕ್ಕನ್ ಪಾಟ್‌ಗಳು ಎಂದು ಕರೆದರು.

ವಡಕ್ಕನ್ ಪಾಟ್‌ಗಳು ರಚನೆಯಾದ ಕಾಲವನ್ನು ಗುರುತಿಸಲು ಕಷ್ಟ. ಏಕೆಂದರೆ ಆಯಾ ಕಾಲ ಮತ್ತು ಪ್ರದೇಶಗಳಿಗೆ ಅನುಸಾರವಾಗಿ ಈ ಹಾಡುಗಳಲ್ಲಿ ಅನೇಕ ಪ್ರಕ್ಷೇಪಗಳು ಸೇರಿಕೊಂಡಿವೆ. ಆದರೆ ಕೇರಳದ ಆಂತರಿಕ ಸಂಘರ್ಷ, ಅರಸೊತ್ತಿಗೆ, ಯುದ್ಧ ಮೊದಲಾದ ಇತಿಹಾಸ ಮತ್ತು ಅನೇಕ ಐತಿಹ್ಯಗಳು ಈ ಹಾಡುಗಳಲ್ಲಿದ್ದು ಇದರ ರಚನೆಯ ಕಾಲವನ್ನು ಕ್ರಿ.ಶ. ಸುಮಾರು ಹದಿನೈದನೆ ಶತಮಾನದ್ದೆಂದು ವಿದ್ವಾಂಸರು ಊಹಿಸಿದ್ದಾರೆ.

ಹೆಚ್ಚಿನ ವಡಕ್ಕನ್ ಪಾಟುಗಳ್ ವಸ್ತು ಸ್ಥಳೀಯ ವೀರರ ಇತಿಹಾಸಗಳಾಗಿವೆ. ವೀರರ ಪರಾಕ್ರಮ ಮತ್ತು ಹೋರಾಟ ವಡಕ್ಕನ್ ಪಾಟ್‌ಗಳ ಮುಖ್ಯ ವಸ್ತುಗಳಾಗಿವೆ. ವೀರರ ಪ್ರೀತಿ, ಪ್ರೇಮ, ಸ್ಪರ್ಧೆ ಇತ್ಯಾದಿಗಳು ವಡಕ್ಕನ್ ಪಾಟ್‌ಗಳಲ್ಲಿವೆ. ಹೋರಾಟವನ್ನೇ ವೃತ್ತಿಯನ್ನಾಗಿಸಿದ ಚೆಗವರ ವೀರ ಕತೆಗಳೇ ಪುತ್ತೂರಂ ಪಾಟ್‌ಗಳು. ಕಣ್ಣ ಪಚ್ಚೆಗವರ್ ಆರೋಮಲ್ ಚೆಗವರ್, ಉಣ್ಣಿಯಾರ್ಚೆ ಮೊದಲಾದವರ ವೀರ ಕತೆಗಳು ಎಂಟು ಹಾಡುಗಳಲ್ಲಿ ನಿರೂಪಿತವಾಗಿವೆ. ತಚ್ಚೋಳಿ ಒದೇನನ ವೀರರ ಪರಾಕ್ರಮದ ಕತೆಗಳು ಸುಮಾರು ಎಂಬತ್ತು ತಚ್ಚೋಳಿ ಪಾಟ್‌ಗಳಲ್ಲಿ ವರ್ಣಿತವಾಗಿವೆ. ಇನ್ನೂ ಅನೇಕ ವಡಕ್ಕನ್ ಪಾಟ್‌ಗಳಲ್ಲಿ ಸ್ಥಳಿಯ ವೀರರ ಕುರಿತಾದ ಹಾಡುಗಳು ನಿರೂಪಿತವಾಗಿವೆ. ತೆಕ್ಕನ್ ಪಾಟ್‌ಗಳಿಗೆ ಸಮಾನವಾದ ಇಂದು ಬಳಕೆಯಲ್ಲಿಲ್ಲದ ವಿಶಿಷ್ಟ ರೀತಿಯ ಭಾಷೆಯು ವಡಕ್ಕನ್ ಪಾಟ್‌ಗಳಲ್ಲಿ ಬಳಕೆಯಲ್ಲಿದೆ. ಇದು ಉತ್ತರ ಕೇರಳದಲ್ಲಿ ಒಂದು ಕಾಲದ ವ್ಯವಹಾರಿಕ ಭಾಷೆಯಾಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ.

ವಸ್ತು, ರೂಪ ಮೊದಲಾದ ಘಟಕಗಳ ಆಧಾರದಲ್ಲಿ ವಡಕ್ಕನ್ ಪಾಟ್‌ಗಳನ್ನು ವರ್ಗೀಕರಿಸಬಹುದು. ಹಾಡಿನ ಗಾತ್ರಕ್ಕೆ ಹೊಂದಿಕೊಂಡು ಕಥಾಗಾನಂ, ಕಥಾಗಾನಚಕ್ರ, ಜಾನಪದ ಇತಿಹಾಸ ಎಂದು ವಿಭಜಿಸಬಹುದು. ಕಥಾಗಾನ ಚಕ್ರವೆಂದರೆ ಒಬ್ಬ ನಾಯಕನನ್ನು ಕೇಂದ್ರವಾಗಿರಿಸಿ ಕಾಲಾನುಕ್ರಮವಿಲ್ಲದೆ ಅನೇಕ ಘಟಕಗಳನ್ನು ವಿವರಿಸುವ ಕಥನ ಗೀತೆಗಳಾಗಿವೆ. ತಚ್ಚೋಳಿ ಪಾಟ್ ಇದಕ್ಕೆ ಉದಾಹರಣೆಯಾಗಿದೆ. ಒಬ್ಬ ಅಥವಾ ಒಬ್ಬರಿಗಿಂತ ಹೆಚ್ಚು ನಾಯಕರಿರುವ ಕಾಲಾನುಕ್ರಮವಾಗಿ ಘಟನೆಗಳ ನಿರೂಪಣೆಯಿರುವ ಹಾಡುಗಳು ಜಾನಪದ ಇತಿಹಾಸಗಳಾಗಿವೆ. ಪುತ್ತೂರಂ ಪಾಟ್ ಇದಕ್ಕೆ ಉದಾಹರಣೆಯಾಗಿದೆ. ಕಥನ ಗೀತೆಗಳೆಂದರೆ ಒಂದೇ ಹಾಡಿನಲ್ಲಿ ಒಂದು ಕಥೆ ಮುಗಿಯುವಂಥದ್ದು. ಕಥನ ಗೀತೆಗಳ ಪಾತ್ರಗಳು ಆ ಹಾಡಿಗೆ ಮಾತ್ರ ಸೀಮಿತವಾಗಿವೆ.

ಜಾನಪದದ ಸಾಮಾನ್ಯ ಸಂಹಿತೆಗಳು ವಡಕ್ಕನ್ ಪಾಟುಗಳಿಗೂ ಅನ್ವಯವಾಗುತ್ತವೆ. ವೃತ್ತಿಯ ಹಿನ್ನೆಲೆಯಲ್ಲಿ ಹಾಡುವ ಪಾಟುಗಳು ದುಡಿಮೆಯ ಶ್ರಮವನ್ನು ನೀಗಿಸುತ್ತವೆ. ಇಂತಹ ಪಾಟುಗಳು ಸಮಾಜದ ನೈತಿಕತೆ , ಧರ್ಮ, ನಿಷ್ಠೆ, ಸಾಮಾಜಿಕ ಆಚಾರ ವಿಚಾರಗಳನ್ನು ನಿರಕ್ಷರ ಜನರಿಗೆ ತಲುಪಿಸುವಲ್ಲಿ ಪ್ರಧಾನ ಪಾತ್ರವನ್ನು ವಹಿಸುತ್ತವೆ.

ಹಾಡುವ ಸಂದರ್ಭ : ವಡಕ್ಕನ್ ಪಾಟುಗಳನ್ನು ಸಾಮಾನ್ಯವಾಗಿ ಬೇಸಾಯದ ಸಂದರ್ಭದಲ್ಲಿ, ನೇಜಿ ಕಿತ್ತು ನೆಡುವ ಹಂತದಲ್ಲಿ ಹಾಡುತ್ತಾರೆ. ಆದುದರಿಂದ ಇದನ್ನು ‘ಞಾಟಿಪಾಟು’ (ನಾಟಿ ಹಾಡು) ಎಂದು ಕರೆಯುತ್ತಾರೆ. ನೇಜಿ ನೆಡುವ ಮಹಿಳೆಯ ದುಡಿಮೆಯ ಶ್ರಮವನ್ನು ಈ ಹಾಡುಗಳು ನೀಗಿಸುತ್ತವೆ. ಹಾಡಿನ ಲಯಕ್ಕನುಗುಣವಾಗಿ ನೇಜಿ ನೆಡುವ ಕ್ರಿಯೆ ಜರುಗುತ್ತದೆ. ಅದೇ ರೀತಿ, ಎತ್ತಿನ ಗಾಡಿ ಓಡಿಸುವಾಗಲೂ ಮದುವೆ ಮುಂತಾದ ಸಮಾರಂಭಗಳಲ್ಲಿ, ಬೆಳೆಗಳಿಗೆ ನೀರು ಹಾಯಿಸುವಾಗಲೂ ವಡಕ್ಕನ್ ಪಾಟುಗಳನ್ನು ಹಾಡುತ್ತಿದ್ದರು. ಆದರೆ ಆಯಾ ಕೆಲಸಕ್ಕೆ ಹೊಂದಿಕೊಂಡು ಹಾಡಿನ ತಾಳಗತಿ ಬದಲಾಗುವುದು ಕೋಲಾಟದ ರೀತಿಯಲ್ಲಿ ಕಡತ್ತನಾಡನ್ ಪ್ರದೇಶದಲ್ಲಿ ಪ್ರಚಲಿತವಾಗಿರುವ ತಚ್ಚೋಳಿಕಳಿಯಲ್ಲಿ ತಚ್ಚೋಳಿ ಪಾಟುಗಳನ್ನು ಬಳಸುತ್ತಾರೆ.

ವಡಕ್ಕನ್ ಪಾಟು ಜನಪದ ಹಾಡಿನ ಪ್ರಕಾರವಾದುದರಿಂದ ಬದಲಾವಣೆ ಸಹಜ. ಹಾಡುವ ಸಮಾಜದ ಕಾಲ ಹಾಗೂ ಪ್ರಾದೇಶಿಕ ಹಿನ್ನೆಲೆ ಪಾಟುಗಳಲ್ಲಿ ಪ್ರತಿಫಲನಗೊಳ್ಳುತ್ತದೆ. ಅನೇಕ ಪ್ರಾದೇಶಿಕ ವರ್ಣನೆಗಳು, ನುಡಿಗಟ್ಟುಗಳು ವಡಕ್ಕನ್ ಪಾಟುಗಳಲ್ಲಿವೆ. ‘ಪಿಡಕೋಳಿ ಕೊತ್ತಿಪಿರಿಯು ಪೋಲೆ’ (ಹೆಂಟೆಗಳು ಜಗಳವಾಡುವಂತೆ) ಮೊದಲಾದ ನುಡಿಗಟ್ಟುಗಳು ಬಳಕೆಯಾಗಿವೆ. ವೀರಾಳಿ ಪಾಟ್, ರಾಮಾಯಣ ಕೆತ್ತಿದ ಬಳೆ, ಉತ್ತಮ ಹೊಗೆಸಪ್ಪು ಮೊದಲಾದ ವಿಶೇಷಣಗಳು ಸಂದರ್ಭಾನುಸಾರವಾಗಿ ಬಂದಿದೆ.

ಸಂದರ್ಭಾನುಸಾರವಾಗಿ ವಡಕ್ಕನ್ ಪಾಟುಗಳನ್ನು ಕಟ್ಟುವ ಕೌಶಲ್ಯ ಜನಪದರಿಗಿತ್ತು. ಇದನ್ನು ‘ಕವಿತ್ತಂ’ (ಕವಿತೆ) ಎನ್ನುತ್ತಿದ್ದರು. ಪುತ್ತೂರಂಪಾಟಿನಲ್ಲಿ ಉಣ್ಣಿಕೋರನಾರನ ಪ್ರಶ್ನೆಯಂತೆ ಉಣ್ಣಿಯಾರ್ಚೆಯು ನಾದಾಪುರಂ ಕುರಿತು ಪ್ರಶ್ನಿಸುತ್ತಾಳೆ. ಹೀಗೆ ಕೆಲವು ಪುನರಾವರ್ತನೆಯ ಪದಗಳು ವಡಕ್ಕನ್ ಪಾಟುಗಳಲ್ಲಿ ಸಾಮಾನ್ಯವಾಗಿದೆ.

ದೈನಂದಿನ ಬದುಕಿನೊಂದಿಗೆ ನಿಕಟವಾದ ಸಂಬಂಧವಿರುವ, ಪ್ರಕೃತಿಯೊಂದಿಗೆ ತಾದಾತ್ಮ್ಯ ಹೊಂದಿರುವ ವಡಕ್ಕನ್ ಪಾಟುಗಳು ಮಲೆಯಾಳ ಜನಪದ ಸಾಹಿತ್ಯದ ಅನನ್ಯತೆಯಾಗಿವೆ. ವಸ್ತು, ಭಾಷೆ, ಶೈಲಿ, ವರ್ಣನೆ, ಅಲಂಕಾರಗಳಲ್ಲಿ ವಡಕ್ಕನ್ ಪಾಟುಗಳು ಶ್ರೀಮಂತವಾಗಿವೆ. ಜನಪದ ಕಲಾವಿದರು ತಮ್ಮದೇ ಶೈಲಿಯಲ್ಲಿ ಹಾಡುವಾಗ ಈ ವಡಕ್ಕನ್ ಪಾಟುಗಳು ಸರಳ ಸುಭಗತೆ, ಸಹಜತೆ ವ್ಯಕ್ತವಾಗುತ್ತದೆ.

ವಡಕ್ಕನ್ ಪಾಟುಗಳನ್ನು ಹಾಡುವ ಜನಪದ ಗಾಯಕರು ಒಂದು ನಿರ್ದಿಷ್ಟ ಕಥಾವಸ್ತುವಿಗೆ ತಮ್ಮದೇ ಭಾಷೆಯಲ್ಲಿ ರೂಪವನ್ನು ನೀಡುತ್ತಾರೆ. ಹೀಗೆ ಸಂದರ್ಭಾನುಸಾರವಾಗಿ ಹಾಡುವವರ ಮನೋಧರ್ಮವೂ ಇದರಲ್ಲಿ ಸೇರುತ್ತದೆ. ಗದ್ದೆ ಬಯಲುಗಳ ಸಮೃದ್ಧಿಯನ್ನು, ನೆರಳಿನಲ್ಲಿ ವಿಶ್ರಾಂತಿ ಪಡೆಯುವ ಭೂಮಾಲೀಕರನ್ನೂ ದುಡಿಯುವ ಕಾರ್ಮಿಕರನ್ನೂ ಆಕರ್ಷಿಸುವಂತೆ ಜನಪದ ಕವಿಗಳು ವಡಕ್ಕನ್ ಪಾಟುಗಳನ್ನು ರಚಿಸಿದ್ದಾರೆ.

ಒಂದು ‘ಪಾಟು ಕಥೆ’ಯ ‘ಮಾನಸಿಕ ಪಠ್ಯ’ (Mental text)ವನ್ನು ಆಧಾರವಾಗಿರಿಸಿ, ಜನಪದರು ವಡಕ್ಕನ್ ಪಾಟುಗಳನ್ನು ಸೃಷ್ಟಿಸಿದ್ದಾರೆ. ಕಥೆಯನ್ನು ತಿಳಿದ ಒಬ್ಬ ವ್ಯಕ್ತಿ ಮೊದಲು ಹಾಡುತ್ತಾನೆ. ಉಳಿದವರು ಅದಕ್ಕೆ ದನಿಗೂಡಿಸುವರು. ಹೀಗೆ ದನಿಗೂಡಿಸುವ ಹಾಡುಗಾರರು ಮೂರು ಸಲ ಪುನರಾವರ್ತನೆ ಮಾಡುವಾಗ ಮುಂದಿನ ಸಾಲನ್ನು ಮುಖ್ಯ ಗಾಯಕ/ಕಿ ಸಿದ್ಧಪಡಿಸುವರು. ಸಾವಿರಾರು ಸಾಲುಗಳಿರುವ ವಡಕ್ಕನ್ ಪಾಟುಗಳನ್ನು ಯಾರೂ ಕೂಡಾ ಬಾಯಿ ಪಾಠ ಮಾಡಿರುವುದಿಲ್ಲ. ಒಂದು ಕಥಾತಂತುವಿನ ಆಧಾರದಲ್ಲಿ ಸ್ವತಃ ಭಾಷಿಕ ರಚನೆಯನ್ನು ಮಾಡುತ್ತಾ ಸಾಹಿತ್ಯದ ಪುನರ್ ಸೃಷ್ಟಿ ನಡೆಯುತ್ತದೆ. ಹೀಗೆ ಸಾಮೂಹಿಕ ಪುನರ್ ಸೃಷ್ಟಿ ಆಗುವುದರಿಂದ ಪ್ರತಿಯೊಂದು ಸಂದರ್ಭದ ಹಾಡುಗಳೂ ನವೀನವಾಗಿರುತ್ತವೆ. ಸಂದರ್ಭಕ್ಕೆ ಅನುಗುಣವಾಗಿ ವಡಕ್ಕನ್ ಪಾಟುಗಳ ಲಯ ಹಾಗೂ ತಾಳದಲ್ಲಿ ವ್ಯತ್ಯಾಸಗಳಾಗುತ್ತವೆ. ನೇಜಿ ನೆಡುವಾಗ ಹಾಡುವ ಹಾಡಿಗೂ ಮದುವೆ ಸಂದರ್ಭದಲ್ಲಿ ಹಾಡುವ ಹಾಡಿಗೂ ತಚ್ಚೋಳಿ ಕಳಿಯಂತಹ ಸಂದರ್ಭದಲ್ಲಿ ಹಾಡುವ ಹಾಡಿಗೂ ವಸ್ತು ಒಂದೇ ಆಗಿದ್ದರೂ ಲಯದಲ್ಲಿ ವ್ಯತ್ಯಾಸ ಕಂಡುಬರುವುದು.

ಕೇರಳದಲ್ಲಿ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಜನಪದ ಸಾಹಿತ್ಯದ ಸಂಗ್ರಹ ಕಾರ್ಯ ಆರಂಭವಾಯಿತು. ವಿದೇಶಿ ವಿದ್ವಾಂಸರಾದ ಗುಂಡರ್ಟ್‌, ಲೋಗನ್, ಡಯಸ್ ಮೊದಲಾದವರು ಆರಂಭ ಹಂತದಲ್ಲಿ ಮಲಯಾಳಂ ಜನಪದ ಸಾಹಿತ್ಯವನ್ನು ಸಂಗ್ರಹಿಸಿದರು. ಗುಂಡರ್ಟ್ ಸಂಗ್ರಹಿಸಿದ ವಡಕ್ಕನ್ ಪಾಟುಗಳನ್ನು ೧೯೧೪ರಲ್ಲಿ ಪ್ರಕಟಿಸಲಾಗಿದೆ. ಲೋಗನ್ ಸಂಗ್ರಹಿಸಿದ ವಡಕ್ಕನ್ ಪಾಟುಗಳು ಆಂಗ್ಲಲಿಪಿಯಲ್ಲಿದೆ. ೧೯೧೩ ರಿಂದ ೧೯೧೯ರ ವರೆಗೆ ತಲಕ್ಕೇರಿಯ ಅಡಿಯೊಡಿ ಕುಂಞಿರಾಮನ್ ಎಂಬುವರ ಸಹಾಯದೊಂದಿಗೆ ಪೆರ್ಸಿಮಕ್ವೀನ್ ಎಂಬುವರು ಉತ್ತರ ಕೇರಳದ ತುದಿಯಿಂದ ಕೊಡಂಗಲ್ಲೂರುವರೆಗೆ ಸಂಚರಿಸಿ ವಡಕ್ಕನ್ ಪಾಟುಗಳನ್ನು ಸಂಗ್ರಹಿಸಿದ್ದಾರೆ. ಅನಂತರ ಚೆಲನಾಡ್ ಅಚ್ಯುತ ಮನೋನ್ ಎಂಬ ದೇಶೀ ವಿದ್ವಾಂಸರು Ballads in North Malabar ಎಂಬ ಕೃತಿಯನ್ನು ಪ್ರಕಟಿಸಿದರು. ಮೂರು ಸಂಪುಟಗಳಲ್ಲಿ ಈ ಕೃತಿಯನ್ನು ಪ್ರಕಟಿಸಲಾಗಿದೆ. ಅದಕ್ಕಿಂತ ಹಿಂದೆಯೇ ತ್ರಿಶ್ಯೂರಿನ ಭಾರತ ವಿಲಾಸ ಹಾಗೂ ಕುಂದುಮಂಗಲದ ದೇಶಾಭಿಮಾನಿ ಪತ್ರಿಕೆಗಳು ವಡಕ್ಕನ್ ಪಾಟುಗಳನ್ನು ಪ್ರಕಟಿಸಿವೆ. ಎಂ.ಸಿ.ಅಪ್ಪುಣ್ಣೀ ನಂಬ್ಯಾರ್, ಟಿ.ಎಚ್.ಕುಂಞಿರಾಮನ್ ನಂಬ್ಯಾರ್, ಡಾ. ಎಂ. ವಿಷ್ಣು ನಂಬೂದಿರಿ ಮೊದಲಾದವರು ವಡಕ್ಕನ್ ಪಾಟುಗಳನ್ನು ಪ್ರಕಟಿಸಿದ್ದಾರೆ. ಅನೇಕ ವಡಕ್ಕನ್ ಪಾಟುಗಳು ಇನ್ನೂ ಸಂಗ್ರಹವಾಗದೆ ಮರೆಯಾಗಿದೆ.

ಡಾ. ಚೇಲನಾಡ್ ಅಚ್ಯುತ ಮೆನೋನ್ ಅವರ Ballads of North Malabar ಕೃತಿಯ ಮುನ್ನುಡಿಯಲ್ಲಿ ವಡಕ್ಕನ್ ಪಾಟುಗಳನ್ನು ಗಂಭೀರವಾಗಿ ಅಧ್ಯಯನಕ್ಕೆ ಒಳಪಡಿಸುವ ಪ್ರಯತ್ನಗಳಿವೆ. ಪಿ. ಗೋವಿಂದನ್ ಪಿಳ್ಳೆ ಮೊದಲಾದ ಸಾಹಿತಿಗಳೂ ವಡಕ್ಕನ್ ಪಾಟುಗಳ ಕುರಿತು ಅಧ್ಯಯನ ನಡೆಸಿದ್ದಾರೆ. ಎಂ.ಆರ್. ರಾಘವ ವಾರಿಯರ್, ಡಾ. ಎಂ.ವಿ. ವಿಷ್ಣು ನಂಬೂದಿರಿ, ಎಂ.ಕೆ. ಪಣಿಕೊಟ್ಟಿ ಮೊದಲಾದವರು ವಡಕ್ಕನ್ ಪಾಟುಗಳ ಅಧ್ಯಯನ ನಡೆಸಿದ್ದಾರೆ. ಡಾ. ರಾಘವನ್ ಪಯ್ಯನಾಡು ಅವರು ಕಲ್ಲಿಕೋಟೆ ವಿಶ್ವವಿದ್ಯಾನಿಲಯದ ಜಾನಪದ ಅಧ್ಯಯನ ಕೇಂದ್ರದಿಂದ ಪ್ರಕಟಿಸಿದ ವಡಕ್ಕನ್ ಪಾಟುಗಳ ಸಂಶೋಧನ ಕೃತಿಯು ಈ ನಿಟ್ಟಿನಲ್ಲಿ ಮುಖ್ಯವಾದುದು. ಅನೇಕ ಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ವಡಕ್ಕನ್ ಪಾಟುಗಳ ಅಧ್ಯಯನ ಲೇಖನಗಳು ಪ್ರಕಟವಾಗಿವೆ.

ವಡಕ್ಕನ್ ಪಾಟು ಇಂದು : ವಡಕ್ಕನ್ ಪಾಟುಗಳನ್ನು ಅದರ ಸಹಜವಾದ ಶೈಲಿಯಲ್ಲಿ ಹಾಡುವ ಸಂದರ್ಭ ಇಂದು ಅಪೂರ್ವವಾಗಿದೆ. ಹಾಡುಗಳು ಸಹಜವಾಗಿಯೇ ಹುಟ್ಟಿಕೊಳ್ಳುವ ಭತ್ತದ ಗದ್ದೆ ಬಯಲುಗಳು ಇಂದು ವಿರಳವಾಗುತ್ತಿರುವುದು ಇದಕ್ಕೆ ಕಾರಣ. ಮಾತ್ರವಲ್ಲ, ಆಧುನಿಕ ಸಾಕ್ಷರ ಜನಾಂಗ ಜನಪದ ಹಾಡುಗಳನ್ನು ಗಮನಿಸುವುದಿಲ್ಲ. ಕಳೆದ ಕೆಲವು ದಶಕಗಳಿಂದ ವಡಕ್ಕನ್ ಪಾಟುಗಳ ಕಥಾವಸ್ತುಗಳು ನಾಟಕವಾಗಿ, ಕಥಾ ಪ್ರಸಂಗವಾಗಿ, ಸಿನಿಮಾ ಕಥೆಯಾಗಿ ಪ್ರದರ್ಶನಗೊಳ್ಳುತ್ತಿವೆ. ಆದರೆ ವರ್ತಮಾನ ಕಾಲದಲ್ಲಿ, ಒಂದು ಸಮಾಜದ ಸಾಂಸ್ಕೃತಿಕ ಚಹರೆಯಾಗಿ ಉಳಿದುಕೊಂಡು ಬಂದಿರುವ ವಡಕ್ಕನ್ ಪಾಟುಗಳು ಮರೆಯಾಗುತ್ತಿರುವುದು ಸುಳ್ಳಲ್ಲ. ಒಂದು ಸಮಾಜದ ಸಂಸ್ಕೃತಿಯನ್ನು ಬಿಂಬಿಸುವ ಮೌಖಿಕ ಇತಿಹಾಸವನ್ನು ಉಳಿಸುವುದು ಇಂದಿನ ಅಗತ್ಯವಾಗಿದೆ.

ಪಿ.ವಿ.ಎಂ. ಅನುವಾದ ಎನ್.ಎಸ್.

 

ವಣ್ಣಾನರು ಉತ್ತರ ಕೇರಳದ ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ತೆಯ್ಯಂ (ಮಲಯಾಳಿ ಭೂತಾರಾಧನೆ) ಕಟ್ಟುವುದು; ಹುಟ್ಟಿನ ಅಮೆ, ಸಾವಿನ ಸೂತಕ, ಮುಟ್ಟು ಮುಂತಾದ ಸಂದರ್ಭಗಳ ಕಾಲದಲ್ಲಿ ಉಂಟಾಗುವ ಅಶೌಚವನ್ನು ನಿವಾರಿಸಲು ಮಡಿವಸ್ತ್ರ ನೀಡುವುದು ಮುಂತಾದ ಪರಂಪರಾಗತ ಹಕ್ಕಿನ ಕಸುಬನ್ನು ಮಾಡುತ್ತ ಬದುಕುತ್ತಿರುವ ಜನವರ್ಗ. ಇವರದು ಅಳಿಯಕಟ್ಟು ಸಂಪ್ರದಾಯ. ಮುನ್‌ಪಂಗಾಡನ್, ಮಣಕ್ಕಾಡನ್ (ಮಾಂಗಾಡನ್), ತಳಿಯಿಲ್, ಆರಾಂಙೋಡನ್, ನೆಲ್ಲಿಯೋಡನ್, ಕುರುವಾಡನ್, ಕಂಡನ್ ಚೊಕ್ಕನ್ (ಲ್), ಅಡುಕ್ಕಾಡನ್ ಎಂಬ ಹೆಸರುಗಳ ಎಂಟು ಮೂಲಮನೆಯವರು ಇವರು. ಇವರ ಮನೆಗಳನ್ನು ‘ವಣ್ಣಾಪುರ’ (ವಣ್ಣಾನ್‌ನ ಮನೆ)ಗಳೆಂದು ಕರೆಯುತ್ತಾರೆ.

ನಟರಾಜನಾದ ಶಿವನ ತಾಂಡವ ನೃತ್ಯಕ್ಕೆ ನೇಪಥ್ಯದ ಮುಖವರ್ಣಿಕೆ ಇತ್ಯಾದಿಗಳನ್ನು ಮಾಡಿಕೊಟ್ಟವರು ವಣ್ಣಾನರಂತೆ. ‘ವಣ್ಣಾತ್ತಿ’ ಎಂಬ ಹೆಸರಿನಿಂದ ಕರೆಯಿಸಿಕೊಳ್ಳುವ ಇವರ ಹೆಂಗಸರು ಪಾರ್ವತಿಯ ಬಟ್ಟೆ ಮಡಿಮಾಡುವ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಂತೆ. ಪರಸ್ಪರ ಪ್ರೇಮ ಪಾಶಕ್ಕೆ ಸಿಲುಕಿದ ಈ ಆದಿ ವಣ್ಣಾನ್ ವಣ್ಣಾತಿಗಳು ಶಿವನ ಅಪ್ಪಣೆಯಂತೆ ಭೂಮಿಯಲ್ಲಿ ಹುಟ್ಟಿದರು ಎಂದು ಇವರ ಕುರಿತಾದ ಸೃಷ್ಟಿ ಪುರಾಣ ತಿಳಿಸುತ್ತದೆ. ತಮ್ಮ ಪರಂಪರಾಗತ ಕಸುಬಾದ ತೆಯ್ಯಂಕಟ್ಟುವುದು ಮತ್ತು ವಸ್ತ್ರ ಮಡಿಮಾಡುವ ಕೆಲಸಗಳನ್ನು ವೈಭವೀಕರಿಸುವ ಒಂದು ಪ್ರಯತ್ನದ ಅಂಗವಾಗಿ ಈ ಕಥೆಯನ್ನು ಪರಿಗಣಿಸಿದರೆ ಸಾಕು.

ತಮ್ಮದೇ ಆದ ವಿಶಿಷ್ಟ ಆಚಾರಗಳು ಮತ್ತು ಸಂಸ್ಕೃತಿಯನ್ನು ವಣ್ಣಾನರು ಕಾಪಾಡಿಕೊಂಡು ಬರುತ್ತಿದ್ದಾರೆ. ಗರ್ಭಾಧಾನದಿಂದ ಅಂತ್ಯ ಸಂಸ್ಕಾರದವರೆಗಿನ ವೈಶಿಷ್ಟ್ಯ ಪೂರ್ಣ ಆಚರಣೆಗಳನ್ನು ಹೀಗೆ ಸಂಗ್ರಹಿಸಿ ಹೇಳಬಹುದು.

ಮದುವೆ : ಮುಟ್ಟಿನ ಮದುವೆ, ಚಪ್ಪರ ಮದುವೆ, ಕಲ್ಯಾಣ – ಹೀಗೆ ಮೂರು ತೆರನ ಮದುವೆಗಳು ವಣ್ಣಾನರಲ್ಲಿವೆ. ಹೆಣ್ಮಕ್ಕಳು ಮೊದಲ ಬಾರಿ ರಜಸ್ವಲೆಯಾದಾಗ ನಡೆಸುವುದು ಮುಟ್ಟಿನ ಮದುವೆ. ಮೂರು ರಾತ್ರಿಗಳ ಕಾಲ ಅಶೌಚವನ್ನು ಆಚರಿಸಿ ನಾಲ್ಕನೆಯ ದಿನ ಬೆಳಗ್ಗೆ ಮಿಂದು ಶುಚಿಯಾಗುತ್ತಾರೆ. ಇದರ ಅಂಗವಾಗಿ ಔತಣವನ್ನು ಏರ್ಪಡಿಸಲಾಗುತ್ತದೆ.

ಮದುವೆಯಾಗದಿರುವ ಕನ್ಯೆಯರಿಗಾಗಿ ನಡೆಸುವ ಇನ್ನೊಂದು ಕಾರ್ಯಕ್ರಮ ಚಪ್ಪರ ಮದುವೆ. ಉಳಿದ ತರವಾಡು (ಕುಟುಂಬದ ಮೂಲಮನೆ)ಗಳಿಂದ ‘ಇಣಂಙಮ್ಮಾರ್’ ಎಂದು ಕರೆಯಲ್ಪಡುವ ಬಂಧುಗಳಲ್ಲೊಬ್ಬರು ಕಾರ್ಯಕ್ರಮಗಳ ನೇತೃತ್ವ ವಹಿಸುತ್ತಾರೆ. ಕನ್ಯೆ ಮಿಂದು, ಈಗಾಗಲೆ ವಿಶೇಷವಾಗಿ ಹೊಲಿದು ಸಿದ್ಧಪಡಿಸಿದ ಬಟ್ಟೆ ಉಟ್ಟು ಚಪ್ಪರಕ್ಕೆ ಬಂದು ನಿಲ್ಲುತ್ತಾಳೆ. ಬಳಿಕ ವೀಳ್ಯದೆಲೆ, ಹಣ್ಣಡಕೆ ಮುಂತಾದವುಗಳ ಮೂಲಕ ಶಕುನ ನೋಡುವ ಕಾರ್ಯಕ್ರಮ ನಡೆಯುತ್ತದೆ. ಅದ್ಧೂರಿಯ ಔತಣವನ್ನು ಏರ್ಪಡಿಸಲಾಗುತ್ತದೆ.

ಕಲ್ಯಾಣ ಎಂದರೆ ವಿವಾಹ ಕಾರ್ಯಕ್ರಮ. ವಧುವಿನ ಮನೆಯ (ಪಡುಕೋಣೆ – ದೇವರ ಕೋಣೆ) ಪಡಿಞಾಟ್ಟದಲ್ಲಿ ಇದನ್ನು ನಡೆಸುತ್ತಾರೆ. ಅತ್ತೆಯು ವಧುವನ್ನು ವರನ ಬಳಿಗೆ ಕರೆತರುತ್ತಾಳೆ. ಪುಡವ (ಹೊಸಬಟ್ಟೆ) ಕೊಟ್ಟು ನಡೆಸುವ ವಿವಾಹ ಕಾರ್ಯಕ್ರಮವನ್ನು ಹಿಂದೆ ಅನುಸರಿಸುತ್ತಿದ್ದರು. ಹನ್ನೊಂದೂ ಕಾಲು ‘ಹಣ’ವನ್ನು ಒಂದು ಜೋಡಿ ಪುಡವದ ಒಂದು ಮೂಲೆಯಲ್ಲಿ ಕಟ್ಟಿ ವಧುವಿಗೆ ಉಡುಗೊರೆ ಕೊಡಲಾಗುತ್ತದೆ. ಕೆಲವು ಕಡೆ ಈ ಹಣವನ್ನು ವರನ ಮಾವಂದಿರಿಗೆ (ಹಿರಿಯನಿಗೆ) ನೀಡಲಾಗುತ್ತದೆ ಎನ್ನುತ್ತಾರೆ. ಇದನ್ನು ಪ್ರಾದೇಶಿಕ ವ್ಯತ್ಯಾಸವೆಂದು ತಿಳಿಯಬೇಕು.

ಸೀಮಂತ : ಗರ್ಭಿಣಿಯರಿಗೆ ಏಳನೆಯ ತಿಂಗಳಲ್ಲಿ ನಡೆಸುವ ಸೀಮಂತ ವಿಧಿಗಳಿಗೆ ‘ಪೊಂಙಲ್’ ಎಂದು ಹೆಸರು. ಗಂಡನ ಮನೆಯಲ್ಲಿ ನಡೆಯುವ ಈ ಕಾರ್ಯಕ್ರಮಕ್ಕೆ ಬಂಧುಮಿತ್ರರನ್ನು ಆಮಂತ್ರಿಸಿ ಔತಣ ನೀಡುತ್ತಾರೆ. ಇದರ ಅಂಗವಾಗಿ ‘ಕೇಂದ್ರೋನ್ ಪಾಟ್ಟ್’ (ಗಂಧರ್ವನ ಹಾಡು) ಎಂಬ ಗರ್ಭಬಲಿ ಕರ್ಮವನ್ನೂ ಹಿಂದಿನ ಕಾಲದಲ್ಲಿ ನಡೆಸಲಾಗುತ್ತಿತ್ತು.

ಅಂತ್ಯಸಂಸ್ಕಾರ (ಪ್ರೇತಕ್ರಿಯೆ) : ಹಿಂದಿನ ಕಾಲದಲ್ಲಿ ಶವವನ್ನು ಹೂಳಲಾಗುತ್ತಿತ್ತು. ಬಳಿಕ ಹದಿಮೂರು ದಿನಗಳ ಅಶೌಚಾಚರಣೆ. ಮೃತಿ ಹೊಂದಿದ ಐದನೇ ದಿನ ಅಥವಾ ಒಂಬತ್ತನೇ ದಿನ ಅಂತ್ಯಸಂಸ್ಕಾರ ಮಾಡಿದ ಜಾಗದಲ್ಲಿ ಅಕ್ಕಿ ಹಾಕಿ ವಂದಿಸಿ ಬರುತ್ತಾರೆ. ಸತ್ತ ದಿನದಂದೇ ಎಳನೀರಿನಿಂದ ಒಂದು ಕಿರುವೇದಿಕೆಯನ್ನು ಮನೆಯ ಅಂಗಳದಲ್ಲಿ ರಚಿಸುತ್ತಾರೆ. ಕೊನೆಯ ದಿನ ಈ ವೇದಿಕೆಯನ್ನು ತೆಗೆದು ಎಳನೀರುಗಳನ್ನು ಒಡೆದು ದೀಪವುರಿಸಿ ಕೆಲವು ಕ್ರಿಯೆಗಳನ್ನು ಮಾಡುತ್ತಾರೆ. ಪಿಂಡ ಇಡುವುದು ರಾತ್ರಿಯ ವೇಳೆ. ಆ ಬಳಿಕ ಬಲಿ ಅರ್ಪಿಸಿದ ವಸ್ತುಗಳನ್ನೆಲ್ಲ ನದಿಯಲ್ಲಿ ಹರಿಯ ಬಿಡುವುದರೊಂದಿಗೆ ಅಂತ್ಯ ಸಂಸ್ಕಾರ ಕ್ರಿಯೆಗಳು ಮುಗಿಯುತ್ತವೆ.

ಆಚಾರಪ್ಪಡಲ್ (ಕುಲಕಸುಬಿಗೆ ವಿಧ್ಯುಕ್ತ ಅಂಗೀಕಾರ) : ಕುಲ ವೃತ್ತಿಯಾದ ತೆಯ್ಯ ಕಟ್ಟುವುದರ ಬಗೆಗಿನ ಪ್ರಾವೀಣ್ಯದ ಆಧಾರದಲ್ಲಿ ರಾಜರು ಮತ್ತು ಆಯಾ ಪ್ರದೇಶದ ಪ್ರಮುಖ ವ್ಯಕ್ತಿಗಳು ಸಾಂಕೇತಿಕವಾಗಿ ವಣ್ಣಾನ್ ಪುರುಷರನ್ನು ರೇಶ್ಮೆ ಬಟ್ಟೆ ಮತ್ತು ಬಳೆ (ಚಿನ್ನ / ಬೆಳ್ಳಿ) ನೀಡಿ ಗೌರವಿಸುವ ಕ್ರಮ ಹಿಂದೆ ಇತ್ತು. ‘ಆಚಾರಪ್ಪಡಲ್’ ಎಂಬ ಹೆಸರಿನ ಈ ಕಾರ್ಯಕ್ರಮದ ಬಳಿಕ ಮನೆಗೆ ಮರಳಿ ಬರುವಾಗ ಬಂಧುಗಳು ಸೇರಿ ದೀಪ, ಆರತಿಗಳೊಂದಿಗೆ ಬಂದು ಗೌರವಾದರಗಳೊಂದಿಗೆ ಒಳಗೆ ಕರೆದೊಯ್ಯುತ್ತಿದ್ದರು. ಬಳಿಕ ಬಂಧು ಮಿತ್ರರಿಗೆಲ್ಲ ಔತಣ. ಅಧಿಕಾರ ಹೊಂದಿದ / ಅಂಗೀಕಾರ ಪಡೆದ ವಣ್ಣಾನ್ ಆಯಾ ಪ್ರದೇಶದ ದೇವಾಲಯಗಳಿಗೂ ದೈವೀ ವನಗಳಿಗೂ ಹೋಗಿ ‘ಹಣ’ವನ್ನು ಇಟ್ಟು ವಂದಿಸುವುದಕ್ಕೆ ‘ಕೞಕ್ಕೊಪ್ಪಿಕ್ಕುಗ’ ಎಂದು ಕರೆಯುತ್ತಾರೆ. ಅಧಿಕಾರ ಹೊಂದಿದವನನ್ನು ಪೆರುವಣ್ಣಾನ್, ಮಣಕ್ಕಾಡನ್, ನೇಂಡಿಕ್ಕಂ, ಚಿಂಗಂ, ಪಲ್ಲೂರಾನ್, ಆಲಪ್ಪಡಂಬನ್, ಏರಮಂಗಲನ್ ಮುಂತಾಗಿ ದೇಶಭೇದಾನುಸಾರವಾದ ವಿಶೇಷಣಗಳನ್ನು ಸೇರಿಸಿ ಹೆಸರು ಕರೆಯಲಾಗುತ್ತದೆ. ವೇಟ್ಟಕ್ಕೊರು ಮಗನ್, ತಾಯಿಪರದೇವತ, ಕ್ಷೇತ್ರಪಾಲನ್ ಮುಂತಾದ ದೈವಗಳನ್ನು ಕಟ್ಟುವುದಕ್ಕೆ ಈ ರೀತಿ ವಿಧ್ಯುಕ್ತ ಅಂಗೀಕಾರ ಸಿಕ್ಕವರಿಗೆ ಮಾತ್ರ ಅವಕಾಶವಿರುತ್ತದೆ.

ಕುಲವೃತ್ತಿಗಳು : ವಣ್ಣಾನರು ಪರಂಪರಾನುಗತವಾಗಿ ತೆಯ್ಯ ಕಟ್ಟುವುದು, ಮಂತ್ರವಾದ, ಮಡಿವಸ್ತ್ರ ನೀಡುವುದು, ವೈದ್ಯ ಇತ್ಯಾದಿಗಳಲ್ಲಿ ತೊಡಗಿಕೊಳ್ಳುತ್ತಾರೆ. ಜನಪದ ವೈದ್ಯ – ಅದರಲ್ಲಿ ಶಿಶುವೈದ್ಯದಲ್ಲಿ ಇವರಿಗೆ ವಂಶೀಯ ವೈದಗ್ಧ್ಯವಿದೆ. ಜತೆಗೆ ಮಾಂತ್ರಿಕ ಚಿಕಿತ್ಸೆಯನ್ನೂ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ಹೊಲಿಗೆಯ ಕೆಲಸವನ್ನು ಇವರು ನಿರ್ವಹಿಸುತ್ತಿದ್ದರು. ಕೊಡೆ (ಓಲೆಕೊಡೆ), ಹಾಸಿಗೆ ಮುಂತಾದವುಗಳನ್ನು ಹೊಲಿದು ಕೊಡುವುದರಲ್ಲಿ ಇವರಿಗೆ ವಿಶೇಷ ಪ್ರಾವೀಣ್ಯವಿತ್ತು. ತೆಯ್ಯಗಳಿಗೆ ಬೇಕಾದ ವೇಷಭೂಷಣಗಳನ್ನು ಇವರು ಸ್ವತಃ ಹೊಲಿದು ಸಿದ್ಧಪಡಿಸುತ್ತಾರೆ. ಸ್ತ್ರೀಯರು ಮಡಿವಸ್ತ್ರ ನೀಡಿಕೆಯ ತಮ್ಮ ಕುಲವೃತ್ತಿಯನ್ನು ಮಾಡುತ್ತಾರೆ. ಹುಟ್ಟು, ಸಾವು, ಋತುಕಾಲ, ಬಾಣಂತಿ ಅವಧಿಗಳಲ್ಲಿ ಅಶೌಚವನ್ನು ಹೋಗಲಾಡಿಸಲು ಇವರಿಂದ ಮಡಿವಸ್ತ್ರಗಳನ್ನು ಪಡೆದುಕೊಳ್ಳುವುದು ಅನೇಕ ಜಾತಿಯವರಿಗೆ ಅನಿವಾರ್ಯವಾಗಿತ್ತು. ಮೇಲ್ಜಾತೀಯ ಸ್ತ್ರೀಯರ ಮುಟ್ಟು ಬಟ್ಟೆಗಳನ್ನು ವಣ್ಣಾನ್ ಸ್ತ್ರೀಯರು ಮಡಿಮಾಡಿ ಕೊಡುತ್ತಿದ್ದರು.

ತುಲಾ ತಿಂಗಳ ಹತ್ತನೆಯ ದಿನದಿಂದ ಮೇಷ ತಿಂಗಳ ಹತ್ತನೆಯ ದಿನದವರೆಗಿನ ತೆಯ್ಯ ಕಾರ್ಯಕ್ರಮಗಳ ಕಾಲಾವಧಿಯಲ್ಲಿ ಇವರು ಅದರಲ್ಲಿ ಪೂರ್ಣವಾಗಿ ತೊಡಗಿಕೊಳ್ಳುತ್ತಾರೆ. ಉಳಿದ ಕಾಲದಲ್ಲಿ ಇವರು ಮುತ್ತಪ್ಪನ್ ಎಂಬ ತೆಯ್ಯಂ ಅನ್ನು ಕಟ್ಟುತ್ತಾರೆ. ಕರ್ಕಾಟಕ ತಿಂಗಳಲ್ಲಿ ಈತಿಬಾಧೆಗಳನ್ನು ದೂರಮಾಡುವುದಕ್ಕಾಗಿ ಮನೆಮನೆಗಳಿಗೆ ಹೋಗಿ ಅಡಿತೆಯ್ಯಂಅನ್ನು (ಕರ್ಕಿಡೋತ್ತಿ.ಮ.), ಸಿಂಹಮಾಸದಲ್ಲಿ ಓಣತ್ತಾರ್ ಎಂಬ ತೆಯ್ಯಂ ಅನ್ನು ಕುಣಿಸುತ್ತಾರೆ. ಇವೆಲ್ಲವನ್ನು ಗಮನಿಸಿದರೆ ಇವರು ವರ್ಷದ ಎಲ್ಲ ಕಾಲಗಳಲ್ಲಿಲ್ಲೂ ವಿಭಿನ್ನ ವಿಭಾಗದ ಜನರೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳುವ ಜನರೆಂದು ತಿಳಿಯುತ್ತದೆ. ಅಲ್ಲದೆ ಮಕ್ಕಳಿಗೆ ಬರುವ ಹಕ್ಕಿರೋಗವನ್ನು, ಬಾಲಗ್ರಹವನ್ನು ನಿವಾರಿಸುವುದು, ಅಗನಾಳ್‌ನೀಕ್ಕ್ (ಕೆಟ್ಟ ದಿನಗಳ ಬಾಧಾನಿವಾರಣೆ?), ಕುರುಂದಿನಿ ಪಾಟ್ಟ್, ಕಳಂಪಾಟ್ಟ್, ಕೇಂದ್ರೋನ್ ಪಾಟ್ಟ್ ಮುಂತಾದ ಮಂತ್ರವಾದ ಮಿಶ್ರಿತ ಕ್ರಿಯೆಗಳನ್ನು ಇತರ ಜನರಿಗಾಗಿ ನಡೆಸಿಕೊಡುತ್ತಾರೆ. ಇಂಥ ಸಂದರ್ಭಗಳಲ್ಲಿ ಆಯಾ ಕಾರ್ಯಕ್ರಮಗಳಿಗಾಗಿ ಸಿದ್ಧಪಡಿಸಿದ ವಸ್ತುಗಳಲ್ಲಿ ವಣ್ಣಾನರು ತಮ್ಮಪಾಲಿಗೆ ಸಂದಾಯವಾಗಬೇಕಾದುವನ್ನು ಪಡೆದುಕೊಳ್ಳುತ್ತಾರೆ. ಹಿಂದೆ ಈ ರೀತಿಯ ಸಂಪಾದನೆಯಿಂದಲೇ ಅವರ ಬದುಕು ಸಾಗಬೇಕಿತ್ತು. ಈಗ ಬದಲಾಗಿದೆ.

ವೈದ್ಯ, ಮಂತ್ರವಾದ ಮುಂತಾದ ಹಳೆಯ ರೀತಿಗಳು ಹೊಸ ಕಾಲಕ್ಕೆ ಅಪ್ರಸ್ತುತವಾಗುತ್ತಿವೆ. ಆದರೆ ತೆಯ್ಯಂ ಕೆಟ್ಟ್‌ನಂಥವು ಹೊಸ ಸಾಧ್ಯತೆಗಳೊಂದಿಗೆ ಬೆಳೆದಿವೆ. ಹೊಸ ತಲೆಮಾರು ಇದರಲ್ಲಿ ಆಸಕ್ತಿ ವಹಿಸದಿರುವ ಸಮಸ್ಯೆಯೂ ತಲೆದೋರಿದೆ. ಆಧುನಿಕ ಶಿಕ್ಷಣವೂ ಅದರ ಆಧಾರದಲ್ಲಿ ರೂಪು ಪಡೆದ ಔದ್ಯೋಗಿಕ ಕ್ಷೇತ್ರ ಅವರನ್ನು ಆಕರ್ಶಿಸಿದೆ ಮತ್ತು ಇದು ಪಾರಂಪರಿಕ ಕಸುಬಿನ ಕುರಿತಾದ ಅನಾದರಕ್ಕೆ ಕಾರಣವಾಗಿದೆಯೆಂದು ಹೇಳಬಹುದು.

ವಣ್ಣಾನ್ ಜನವರ್ಗದ ಕುರಿತು ‘ಬದುಕು ಮತ್ತು ಸಂಸ್ಕೃತಿ’ ಎಂಬ ಕೃತಿಯನ್ನು ಫೋಕ್‌ಲೋರ್ ಅಕಾಡೆಮಿಯು ಹೊರತಂದಿದ್ದು ಅದರ ಎರಡನೆಯ ಸಂಪುಟದಲ್ಲಿ ಎಂ.ವಿ. ವಿಷ್ಣು ನಂಬೂದಿರಿಯವರ ಒಂದು ಬರಹವಿದೆ. ವಣ್ಣಾನರು ಮತ್ತು ಕೇದ್ರೋನ್ ಪಾಟ್ಟ್ ಎಂಬ ಅವರ ಇನ್ನೊಂದು ಕೃತಿಯಲ್ಲಿ ವಣ್ಣಾನರ ಸಾಂಸ್ಕೃತಿಕ ಬದುಕಿನ ಕುರಿತು ವಿವರಗಳಿವೆ. ವಣ್ಣಾನರ ಕುರಿತು ಉಲ್ಲೇಖನೀಯ ವಿಸ್ತೃತ ಅಧ್ಯಯನಗಳು ನಡೆದಿದೆಯೋ ಎಂಬುದು ತಿಳಿದು ಬರುತ್ತಿಲ್ಲ.

ವಿ.ಎಂ.ಯು. ಅನುವಾದ ಕೆ.ಕೆ.

 

ವಣ್ಣಾರ್‌ಗಳ್ ತಮಿಳುನಾಡಿನಲ್ಲಿ ಹಲವಾರು ಜಾತಿಗಳನ್ನು ಕಾಣಲಾಗುತ್ತದೆ. ಅವರ ಸಂಸ್ಕೃತಿಯನ್ನು ಪುರಾಣ, ಹಾಡು, ಕಥೆ, ಆಚರಣೆ ಮತ್ತು ಶಾಸನಗಳು ಮೊದಲಾದವುಗಳ ಮೂಲಕ ತಿಳಿದುಕೊಳ್ಳಬಹುದು. ಆ ರೀತಿಯಲ್ಲಿ ಪುರಾಣಗಳ ಮೂಲಕ ತಿಳಿದುಕೊಳ್ಳಬಹುದಾದ ಜಾತಿಗಳಲ್ಲಿ ವಣ್ಣಾರ್ (ಅಗಸ) ಜಾತಿಯೂ ಒಂದು. ಬಟ್ಟೆ ಒಗೆದು ಮಡಿ ಮಾಡುವುದು ಇವರ ಕೆಲಸ.

ಬಟ್ಟೆಗಳನ್ನು ಒಗೆದು ಅವುಗಳಿಗೆ ಬಣ್ಣ ಸೇರಿಸುವುದರಿಂದ ಅವರನ್ನು ‘ವಣ್ಣಾರ್’ ಎಂದು ಕರೆಯುತ್ತಾರೆ. ಇವರನ್ನು ಪ್ರಾರಂಭದಲ್ಲಿ ಏಕಾಲಿ, ದಾಸರ್, ಕಾಳಿಯರ್ ಮೊದಲಾದ ಹೆಸರುಗಳಿಂದ ಕರೆಯಲಾಗುತ್ತಿತ್ತು. ಹೆಂಗಸರನ್ನು ‘ವುಲೈತ್ತಿ’ ಎಂಬ ಹೆಸರಿನಿಂದ ಕರೆಯುತ್ತಿದ್ದರು. ವಣ್ಣಾರ್‌ಗಳು ತಮಿಳುನಾಡಿನಾದ್ಯಂತ ಕಾಣಸಿಗುತ್ತಾರೆ. ಇವರು ಇಂದು ನಾಲ್ಕು ವಿಭಾಗಗಳಾಗಿದ್ದಾರೆ. ೧. ಈರಂಗುಳಿ ವಣ್ಣಾರ್‌, ೨. ಪಾಂಡಿಯ ವಣ್ಣಾರ್‌, ೩. ಮಲೈಯಾಳ ವಣ್ಣಾರ್‌, ೪. ಪುದಿರೈ ವಣ್ಣಾರ್‌(ದಲಿತ ಜನರಿಗೆ ಬಟ್ಟೆ ಒಗೆಯುವವರು). ಇವಲ್ಲದೆ ಸೂರ್ಯ ಕುಲಂ, ಚಂದ್ರಕುಲಂ ಎಂಬ ಪಂಗಡಗಳೂ ಇವೆ. ಬೇರೆ ಬೇರೆ ಪ್ರದೇಶಗಳಲ್ಲಿ ಏರ್ಪ ರೆಡ್ಡಿವಣ್ಣಾರ್‌, ಕೋರವ ವಣ್ಣಾರ್‌, ವಡುವ ವಣ್ಣಾರ್‌, ತೆಲುಂಗು ವಣ್ಣಾರ್‌ಮೊದಲಾದ ವಿಭಾಗಗಳನ್ನೂ ವಣ್ಣಾರ್‌ನಲ್ಲಿ ಕಾಣಬಹುದಾಗಿದೆ.

ಇವರು ಮೊದಲು ಇಸ್ತ್ರಿ ಕೆಲಸವನ್ನು ನಿಸರ್ಗದತ್ತವಾದ ವೆಳ್ಳಾವಿ, ಉವರ್‌ಮಣ್ (ಒಂದು ಬಗೆಯ ಮಣ್ಣು), ಮಾಟ್ಟುಚ್ಚಾಣಮ್ (ಬೆರಣಿ) ಮೊದಲಾದವುಗಳನ್ನು ಉಪಯೋಗಿಸಿ ಮಾಡುತ್ತಿದ್ದರು. ಬಹುಶಃ ನವೀನ ರೀತಿಯಲ್ಲಿ ಇದ್ದಿಲನ್ನು ಬಳಸಿಕೊಂಡು ಈ ಕೆಲಸವನ್ನು ಮಾಡುತ್ತಿದ್ದರು. ಇವರು ಬಟ್ಟೆ ಒಗೆಯುವುದರ ಜೊತೆಗೆ ಇತರ ಕೆಲಸಗಳನ್ನು ನಿರ್ವಹಿಸುತ್ತಾರೆ. ಅದೇನೆಂದರೆ ಬೇರೆ ಜಾತಿಯವರ ಹುಟ್ಟು, ಋತುಮತಿ ಕಾರ್ಯ, ಮದುವೆ, ಸಾವು ಮೊದಲಾದ ಸಂದರ್ಭಗಳಲ್ಲಿ, ಹಬ್ಬ ಹರಿದಿನಗಳಲ್ಲಿ ಇವರ ಸಹಾಯ ಬಹುಮುಖ್ಯವಾಗಿರುತ್ತದೆ.

ವಣ್ಣಾರ್‌ಗಳು ತಮ್ಮನ್ನು ವೀರ ಪಥದಲ್ಲಿ ಹುಟ್ಟಿದವರೆಂದು, ವೀರಭದ್ರ ತಮ್ಮ ಮನೆ ದೇವರೆಂದು ಹೇಳಿಕೊಳ್ಳುತ್ತಾರೆ. ಅವರು ‘ತುರೈ’ ಎಂಬ ಒಂದು ರೂಪವಿಲ್ಲದ ದೇವರನ್ನು ಮತ್ತು ಬಟ್ಟೆ ಒಗೆಯುವ ಕಲ್ಲುಗಳನ್ನು ಪೂಜಿಸುತ್ತಾರೆ. ಇವರ ಹಿರಿಮೆಯನ್ನು ಜನಪದ ಹಾಡೊಂದು ಹೀಗೆ ಕೊಂಡಾಡುತ್ತದೆ :

            ವಣ್ಣಾರ ನೆಲ್ಲಿಯರೇ ತಾಯಿ ನೆಲ್ಲಿಯರ್
ವಡುವ ವಣ್ಣಾನ್ ಮೊಮ್ಮಗಳೇ ತಾಯೇ ಮೊಮ್ಮಗಳೇ
ಕೆಂಪು ಸಮುದ್ರದ ದಡದಲ್ಲಿ ತಾಯೇ ದಡದಲ್ಲಿ
ಸೀರೆ ಒಗೆಯುವ ಜಾತಿ ವಣ್ಣಾನ್ ತಾಯೇ ಜಾತಿ ವಣ್ಣಾನ್

ಎಂದು ಮತ್ತಿತರ ಕೆಲವು ಜಾತಿಗಳನ್ನು ಬಿಟ್ಟು ತಮ್ಮದು ಉನ್ನತ ಜಾತಿ ಎಂಬುದನ್ನು ಹೇಳುತ್ತದೆ. ಅಗಸರಿಂದ ತಮಿಳುನಾಡಿನ ಜನಪದ ಕ್ಷೇತ್ರ ಸಂಪದ್ಭರಿತವಾಗಿದೆ ಎಂದು ಹೇಳಬಹುದು. ಈ ಸಮಾಜದವರು ವೇದ, ಜ್ಯೋತಿಷ್ಯ, ವಿದ್ಯಾಭ್ಯಾಸ, ಪಂಚಾಂಗ ಮೊದಲಾದ ಜ್ಞಾನ ಕ್ಷೇತ್ರದಲ್ಲಿ ಪಾಲ್ಗೊಳ್ಳುವುದನ್ನು ನಾವು ಕಾಣಬಹುದು.

ಜಿ.ಎಸ್.ಕೆ. ಅನುವಾದ ಆರ್.ಎಸ್.

 

ವಯನಾಟು ಕುಲವನ್ ತೋಟ್ಟಂಪಾಟು, ಆರಾಧನೆ ಹಾಗೂ ಮೌಖಿಕ ಸಂಪ್ರದಾಯಗಳಲ್ಲಿ ಉತ್ತರ ಕೇರಳದಲ್ಲಿ ವಯನಾಟು ಕುಲವನ ಪುರಾಣ ಕಥೆ ಪ್ರಚಲಿತವಾಗಿದೆ.

ಶಿವ ಮತ್ತು ಪಾರ್ವತಿ ಕಾಡಿನಲ್ಲಿ ಬೇಟೆಯಾಡುತ್ತಾ ಕಾಲ ಕಳೆಯುತ್ತಿದ್ದರು. ಒಂದು ದಿವಸ ಶಿವನಿಗೆ ಅಕಾಲದಲ್ಲಿ ಪಾರ್ವತಿಯ ಮೇಲೆ ಮೋಹ ಹುಟ್ಟಿಕೊಳ್ಳುತ್ತದೆ. ಆದರೆ ಪಾರ್ವತಿ ಸಂಭೋಗಕ್ಕೆ ಒಪ್ಪಲಿಲ್ಲ. ಇಂದ್ರಿಯ ಸ್ಖಲನಗೊಂಡು ಶಿವನ ವೀರ್ಯವು ನೆಲಕ್ಕೆ ಬಿದ್ದು, ಮೂರು ವೃಕ್ಷಗಳು ಹುಟ್ಟಿಕೊಳ್ಳುತ್ತವೆ. ಅವುಗಳಿಗೆ ಕರಿಮಗಳ್, ತೇನ್‌ಮಗಳ್, ತಿರುಮಗಳ್ ಎಂದು ಹೆಸರಿಡುತ್ತಾನೆ. ತೇನ್‌ಮಗಳ್ ಎಂಬ ವೃಕ್ಷದ ಬುಡದಿಂದ ಹರಿದು ಬರುತ್ತಿದ್ದ ‘ಮಧುರಸ’ವನ್ನು ಶಿವನು ಕುಡಿಯುತ್ತಾನೆ. ಹೀಗೆ ಮತ್ತನಾದ ಶಿವನನ್ನು ಕಂಡು ಹೆದರಿದ ಪಾರ್ವತಿ ಬುಡದಿಂದ ಹರಿಯುತ್ತಿದ್ದ ‘ಮಧು’ವನ್ನು ತನ್ನ ಕೈಗಳಿಂದ ತಡವಿ ವೃಕ್ಷದ ಕೊಂಬೆಗೇರಿಸುವಳು. ಮರುದಿವಸ ಮಧುಸಿಗದ ಶಿವನು ಕುಪಿತನಾಗಿ, ತನ್ನ ಕೈಗಳಿಂದ ತೊಡೆಗೆ ಬಡಿಯುತ್ತಾನೆ. ಆಗ ಒಬ್ಬ ಮನುಷ್ಯ ಹುಟ್ಟಿಕೊಳ್ಳುತ್ತಾನೆ. ಅವನಿಗೆ ದಿವ್ಯನೆಂಬ ಹೆಸರನ್ನಿಟ್ಟು, ಮರದ ಕೊಂಬಿನಿಂದ ಮಧು ತೆಗೆಯುವ ಕೆಲಸಕ್ಕೆ ನಿಯೋಗಿಸುತ್ತಾನೆ.

ಕ್ರಮೇಣ ದಿವ್ಯನ್ ಕೂಡ ಮಧು ಕುಡಿದು ಮತ್ತನಾಗುತ್ತಿದ್ದ. ಎಲ್ಲರೂ ಶಿವನ ಬಳಿಗೆ ಹೋಗಿ ಮಂತ್ರಗಳನ್ನು ಸ್ವೀಕರಿಸುತ್ತಿದ್ದರು. ದಿವ್ಯನ್ ಕೂಡಾ ದಿವ್ಯ ಮಂತ್ರಗಳಿಗಾಗಿ ಶಿವನ ಬಳಿಗೆ ಹೋಗುವನು. ಆದರೆ ಮಧು ಕುಡಿದಿರುವ ಕಾರಣ ಶಿವನು ಮಂತ್ರಗಳನ್ನು ದಯಪಾಲಿಸುವುದಿಲ್ಲ. ಇನ್ನು ಮುಂದೆ ಮಧು ಕುಡಿಯುವುದಿಲ್ಲ ಎಂದು ಭರವಸೆ ಕೊಟ್ಟ ದಿವ್ಯನಿಗೆ ಕದಳಿ ಎಂಬ ಮಧುವನದಲ್ಲಿ ಬೇಟೆಯಾಡದಿರು ಎಂಬ ಎಚ್ಚರಿಕೆಯೊಂದಿಗೆ ಮಂತ್ರಗಳನ್ನು ನೀಡುವರು. ಆದರೆ ಎಚ್ಚರಿಕೆಯನ್ನು ಮೀರಿದ ಆತ ಕದಳಿವನದಲ್ಲಿ ಬೇಟೆಯಾಡಿ, ಅಲ್ಲಿ ಪೂಜಿಸಿ ಇರಿಸಿದ್ದ ನೂರೆಂಟು ಮಧು ಪಾತ್ರೆಗಳಲ್ಲಿ ಒಂದನ್ನು ಬರಿದು ಮಾಡುವನು. ದಿವ್ಯನ ಎರಡು ಕಣ್ಣುಗಳು ಕೊಡದಲ್ಲಿ ಬೀಳುತ್ತವೆ. ಕಣ್ಣು ಕಾಣದ ದಿವ್ಯ ಮತ್ತೆ ಶಿವನ ಬಳಿಗೆ ಬರುವನು. ನೂರೆಂಟು ದೀಪಿಕ ಕೋಲಿನಿಂದ ಒಂದನ್ನು ತೆಗೆದುಕೊಟ್ಟು, ಮುಂದೆ ಬಿದಿರಿನ ಸೂಟೆ (ಪಂಜ) ಬಳಸಿಕೊಳ್ಳುವಂತೆ ಹೇಳುವನು. ದಿವ್ಯನಿಗೆ ‘ಹುಸಿಕಣ್ಣ’ಗಳನ್ನು ಒದಗಿಸಿ, ಭೂಲೋಕಕ್ಕೆ ಕಳುಹಿಸುವನು. ಕಣ್ಣು ಕಾಣಿಸದವನಿಗೆ ಪಂಜಿನಿಂದ ಪ್ರಯೋಜನವಿಲ್ಲ. ಸಿಟ್ಟಿನಿಂದ ದಿವ್ಯನ್ ಕಣ್ಣುಗಳನ್ನೂ, ಪಂಜನ್ನೂ ಎಸೆಯುತ್ತಾನೆ. ಅದು ಆದಿಪರಂಬನ್ ಕಣ್ಣನ್ ಎಂಬುವನ ಅಂಗಳದ ಮಧ್ಯೆ ಬೀಳುತ್ತದೆ. ಹೆದರಿದ ಕಣ್ಣನಿಗೆ ಕನಸಿನಲ್ಲಿ ಬಂದ ದಿವ್ಯನ್ ಆ ಕಣ್ಣುಗಳನ್ನೂ, ಪಂಜನ್ನೂ ಮನೆಯ ಈಶಾನ್ಯ ದಿಕ್ಕಿನ ಕೋಣೆಯಲ್ಲಿರಿಸಿ ಪೂಜಿಸುವಂತೆ ಸೂಚಿಸುವನು. ಹೀಗೆ ದಿವ್ಯನ್ ಆದಿಪರಂಬನ್ ಕಣ್ಣನಿಂದ ಪೂಜಿಸಲ್ಪಡುತ್ತಾನೆ.

ಕೆಲವು ಕಾಲದ ನಂತರ ಮೊಟ್ಟಂಪಳ್ಳಿ, ಕಡಗಂಪಳ್ಳಿ, ತಿಯ್ಯಂಜೇರಿ ಇಲ್ಲಂ ಅಗಂಬಡಿ, ನರಿಯನ್ ಕೋರನ್ ಪಣಿಕ್ಕರ್, ಕೊಲ್ಲಚೇನ್‌ಕೋಡಿ, ತುಮಿರಿಕನಲಾಡಿ ಎಂಬ ಆರುಮಂದಿ ಮಲೆನಾಡಿನಿಂದ ವಯನಾಡಿಗೆ ಹೋದರು. ವಯನಾಟು ಕುಲವನ ‘ವೆಳ್ಳಾಟ’ದ ಸಂದರ್ಭದಲ್ಲಿ ಅವರು ಅಲ್ಲಿಗೆ ತಲುಪುವರು. ಆಗ ತಿಯ್ಯಂಜೇರಿ ಹೇಳುತ್ತಾನೆ – ‘ಒಳ್ಳೆಯ ದೈವ ವಯನಾಟು ಕುಲವನ್. ಈ ದೈವ, ನಮ್ಮೊಂದಿಗೆ ಮಲೆನಾಡಿಗೆ ಬಂದಿದ್ದರೆ ಒಳ್ಳೆಯದಿತ್ತು.’ ಇದನ್ನು ಕೇಳಿದ ದೈವ ‘ಹೆದರಬೇಡಿ, ನಿಮ್ಮ ಜತೆ ಬರುವುದಕ್ಕೆ ಸಿದ್ಧನಿದ್ದೇನೆ’ ಎಂದು ಹೇಳಿತು. ಆದರೆ ಆದಿಪರಂಬನ್ ಕಣ್ಣನ್ ಆಕ್ಷೇಪಿಸುವನು. ಕಣ್ಣನಿಗೆ ಆಶ್ವಾಸನೆಯನ್ನು ನೀಡಿ, ಆರುಮಂದಿಯೊಂದಿಗೆ ಮಲೆನಾಡಿಗೆ ಪ್ರಯಾಣಿಸುವನು.

ಹೀಗೆ ಪ್ರಯಾಣಿಸಿದ ವಯನಾಟು ಕುಲವನ್ ಆಂದಿರಿಮಾಡದಲ್ಲಿ ನೆಲೆಯಾಗುವನು. ಕೋಟವಾದುಕ್ಕಲ್ ಎಂಬಲ್ಲಿ ವಯನಾಟು ಕುಲವನಿಗೆ ಯೋಗ್ಯ ಉಪಚಾರಗಳು ದೊರಕಲಿಲ್ಲ. ಕರ್ಮಿಯಲ್ಲಿ ಸಿಟ್ಟುಗೊಂಡ ವಯನಾಟು ಕುಲವನ್ ತಂಬೂರಾನನಿಗೆ ದೂರು ಕೊಡುವನು. ಅಂತಹ ಕಾರಣಿಕ ದೈವವಾಗಿದ್ದರೆ, ತನ್ನ ಶಕ್ತಿಯನ್ನು ಪ್ರದರ್ಶಿಸಲಿ ಎಂದು ತಂಬೂರಾನ್ ಸವಾಲು ಹಾಕುವನು. ಬೇಟೆಯಾಡಿ ಊನವಿಲ್ಲದ ಹುಲಿತೊಗಲನ್ನು ರಾಜನಿಗೆ ಕಾಣಿಕೆಯಾಗಿ ನೀಡಬೇಕು ಇಲ್ಲದಿದ್ದರೆ ದೈವಕೋಲವನ್ನು ಕಟ್ಟಿದ ಕನಲಾಡಿಗೆ ಗಲ್ಲು ಶಿಕ್ಷೆ ದೈವ ಸವಾಲಿನಲ್ಲಿ ಗೆದ್ದರೆ ತಂಡಯಾನ್ ಹಾಗೂ ತುಮಿರಿ ಕನಲಾಡಿಗೆ ಬಂಗಾರದ ಬಳೆಯ ಸನ್ಮಾನ. ಹೀಗೆ ಸವಾಲು ಹಾಕಿ ವಯನಾಟು ಕುಲವನ್ ತಿಯ್ಯಾಂಜೇರಿ ಅಗಂಬಕಿಯೊಂದಿಗೆ ಬೇಟೆಯಾಡುವನು. ಕಿವಿಗೆ ಗುರಿಯಿಟ್ಟು ಹೊಡೆದು, ಊನವಿಲ್ಲದ ಹುಲಿ ಚರ್ಮವನ್ನು ರಾಜನಿಗೆ ಸಮರ್ಪಿಸುವನು. ನಂಬಬಹುದಾದ ದೈವ ಎಂದು ತಂಬೂನ್ ನಾಲ್ಕು ಅಳತೆಯ ಅಕ್ಕಿ (ನಾನ್ನಾಳಿ) ಕೊಟ್ಟು ತಂಬೂರಾನ್ ಗೌರವಿಸುವನು. ವಯನಾಟು ಕುಲವನ್ ದೈವದ ಪುರಾಣ ಪೂರ್ಣದಲ್ಲಿ ಬೇಕಾದರೆ ಉಪದೈವವಾದ ಕಂಡನಾರ್ ಕೇಳನ್ ದೈವದ ಪುರಾಣವೂ ಬೇಕು. ಅದು ಹೀಗಿದೆ.

ಕಣ್ಣಚಾರ್ ವಲಯ ತಂಬೂರಾನ್ ಹಾಗೂ ಮೇಲೆ ಡತ್‌ಚಕ್ಕಿ ಎಂಬುವರ ಸೇವಕನೇ ಕೇಳನ್, ಎರಡು ಕುಡ್ತೆ ಮದ್ಯ ಹಾಗೂ ಮೂರು ಕುಡ್ತೆ ಸೇಂದಿ ಕೊಟ್ಟು ಕೇಳನನ್ನು ಕುಮರಿ ಕೃಷಿಗೆ ಕಳುಹಿಸುತ್ತಾರೆ. ಕೇಳನ್ ಕಾಡು ಕಡಿದು ಬೆಂಕಿ ಹಚ್ಚುವನು. ಬೆಂಕಿಯ ನಡುವೆ ಸಿಲುಕಿದ ಕೇಳನ್ ಜೀವ ಉಳಿಸಿಕೊಳ್ಳಲು ಮಧ್ಯೆ ಇರುವ ನೆಲ್ಲಿ ಮರವನ್ನು ಏರುವನು. ಅದೇ ಸಂದರ್ಭದಲ್ಲಿ ಜೀವ ಉಳಿಸಿಕೊಳ್ಳಲು ಕಾಳಿ ಮತ್ತು ಕರಾಳಿ ಎಂಬ ಎರಡು ಸರ್ಪಗಳು ಅದೇ ಮರವೇರಿ ಕೇಳನನ್ನು ಕಡಿಯುತ್ತವೆ. ಹಾವುಗಳೂ, ಕೇಳನೂ ಬೆಂಕಿಯಲ್ಲಿ ಬೆಂದು ಬೂದಿಯಾಗುತ್ತಾರೆ.

ಬೇಟೆಯಾಡುತ್ತಾ ಆ ಹಾದಿಯಲ್ಲಿ ಬಂದ ಕುಲವನ್ ದಣಿವಾರಿಸಲು ನೆಲ್ಲಿ ಮರದ ಕಡೆಗೆ ಬರುತ್ತಾನೆ. ತನ್ನ ಬಿಲ್ಲಿನ ತುದಿಯಿಂದ ಮನುಷ್ಯ ರೂಪದ ಬೂದಿಯನ್ನು ಸ್ಪರ್ಷಿಸುತ್ತಾನೆ. ಮಂತ್ರಶಕ್ತಿಯಿಂದ ಕೇಳನ್ ಎದ್ದು ನಿಲ್ಲುವನು. ಹೀಗೆ ಆತ ಕಂಡನಾರ್ ಕೇಳನ್ ಆಗುತ್ತಾನೆ. ವಯನಾಟು ಕುಲವನ್ ಅವನ ಜತೆ ಸೇರಿಕೊಂಡು, ತನಗೆ ಸ್ಥಾನ ಸಿಕ್ಕಿದ ಕಡೆಗಳಲ್ಲಿ ಕೇಳನಿಗೂ ಸ್ಥಾನವನ್ನು, ಆರಾಧನೆಯನ್ನು ಕೊಡಿಸುವನು.

ಎಂ.ಎ.ಆರ್. ಅನುವಾದ ಎನ್.ಎಸ್.

 

ವಳಿನಡೈ ಪಾಟ್ಟು ತಮಿಳುನಾಡಿನ ಪ್ರಯಾಣದ ಹಾಡು. ಸಾರಿಗೆ ವಾಹನಗಳು ಇಲ್ಲದ ಕಾಲದಲ್ಲಿ ಜನರು ಎತ್ತಿನ ಗಾಡಿಗಳಲ್ಲಿ ದೂರದ ಪ್ರಯಾಣಗಳನ್ನು ಕೈಗೊಳ್ಳುತ್ತಿದ್ದರು. ಸಾಮಾನ್ಯ ಜನರು, ಬಡಬಗ್ಗರು ಗುಂಪು ಗುಂಪಾಗಿ ಕಾಲ್ನಡಿಗೆಯ ಮೂಲಕ ಪ್ರಯಾಣ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಪ್ರಯಾಣದ ಆಯಾಸವನ್ನು ಮರೆಯಲು ಹಾಡುಗಳನ್ನು ಕಟ್ಟಿ ಹಾಡಬಲ್ಲವರು ಕೆಲವು ಹಾಡುಗಳನ್ನು ಹಾಡಿದರು. ಇಂತಹ ಹಾಡುಗಳನ್ನು ‘ವಳಿನಡೈ ಪಾಟ್ಟು’ (ಹಾದಿ ಹಾಡು / ಮಾರ್ಗಪದ) ಎಂದು ಕರೆಯುತ್ತಾರೆ. ಎತ್ತಿನ ಗಾಡಿಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದ ಕಾಲದಲ್ಲಿ ಇಂತಹ ಹಾದಿ ಹಾಡುಗಳನ್ನು ಹಾಡುತ್ತಿದ್ದರು.

ಸಾರಿಗೆ ವ್ಯವಸ್ಥೆ ಅಭಿವೃದ್ಧಿಗೊಂಡು ವಿವಿಧ ವಾಹನಗಳು ಬಂದ ಮೇಲೆ ಜನರು ಕಾಲ್ನಡಿಗೆ ಪ್ರಯಾಣವನ್ನು ಕೈಬಿಟ್ಟರು. ಆದರೆ ಇಂದಿಗೂ ಹರಕೆ ಹೊತ್ತು ದೇವಸ್ಥಾನಗಳಿಗೆ ಕಾಲ್ನಡಿಗೆ ಪ್ರಯಾಣ ಕೈಗೊಳ್ಳುವವರು ಇದ್ದಾರೆ. ಹಾಗೆ ಕಾಲ್ನಡಿಗೆ ಪ್ರಯಾಣವನ್ನು ಕೈಗೊಳ್ಳುವಾಗಲೂ ಆಯಾಸವನ್ನು ಮರೆಯಲು ಕೆಲವು ಹಾಡುಗಳನ್ನು ಹಾಡುತ್ತಾರೆ. ಇವು ಕೂಡ ಹಾದಿ ಹಾಡುಗಳೇ.

ಸಾಮಾನ್ಯ ಜನರು ಮಾತ್ರವಲ್ಲದೆ ಮೇಲುವರ್ಗದ ಜಮೀನ್ದಾರರೂ ದೇವರಿಗೆ ಹರಕೆ ಮಾಡಿಕೊಂಡು ಕಾಲ್ನಡಿಗೆ ಪ್ರಯಾಣ ಮಾಡುತ್ತಿದ್ದರು. ಸಂಸ್ಥಾನಗಳಲ್ಲಿ ಜಮೀನ್ದಾರರ ಆಳ್ವಿಕೆ ನಡೆಯುತ್ತಿದ್ದ ಕಾಲದಲ್ಲಿ ದಕ್ಷಿಣ ತಮಿಳುನಾಡಿನಲ್ಲಿರುವ ಕೞುಗುಮಲೈ ಎಂಬ ಸಂಸ್ಥಾನವನ್ನು ಆಳುತ್ತಿದ್ದ ಇರುದಾಲಯ ಮರುದಪಾಂಡ್ಯನ್ ಎಂಬ ಜಮೀನ್ದಾರರು. ಕೞುಗುಮಲೈನಿಂದ ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಹರಕೆ ಹೊತ್ತು ಕಾಲ್ನಡಿಗೆ ಪ್ರಯಾಣ ಕೈಗೊಂಡರು. ಆಗ ಜಮೀನ್ದಾರರ ಜೊತೆ ಸಾರ್ವಜನಿಕರಲ್ಲಿ ಕೆಲವರು ಸಂಸ್ಥಾನದ ಆಸ್ಥಾನ ಕವಿಯಾಗಿದ್ದ ಚೆನ್ನಿಕುಳಂ ಅಣ್ಣಾಮಲೈಚೆಟ್ಟಿಯನ್ನು ಕರೆದರು. ಆತ ಮಾರ್ಗಾಯಾಸ ಮರೆಯಲು ಕೆಲವು ಸಿಂದು ಹಾಡುಗಳನ್ನು ಹಾಡಿದ. ಇವು ಕೂಡ ಹಾದಿ ಹಾಡುಗಳೇ.

ಅಣ್ಣಾಮಲೈ ಚೆಟ್ಟಿಯಾರ್ ಹಾಡಿದ ಹಾದಿ ಹಾಡುಗಳಲ್ಲಿ ಒಂದು ಹೀಗಿದೆ :

            ಅರುಣಗಿರಿ ನಾಲಿಗೆಗೆ ಪರಿಚಯ
ಅದರ ಕೀರ್ತಿಯ ಜಯಕಾರ – ಹಲವು
ಭಕ್ತರ ನಾಲಿಗೆಯಿಂದ ಹೊರಟು
ಅಮರಾವತಿ ಎಳವೆಯರ ಕಿವಿಗಡಚಿಕ್ಕುವುದು
ಬ್ರಹ್ಮಾಂಡ ಒಡೆವುದು

ಸುತ್ತಾನ್‌ಕುಳಂ ಸುತ್ತಮುತ್ತ ಇರುವ ಜನರು ತಿರುಚೆಂದೂರ್ ಮುರುಗನ್ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲಿ ಹೋಗುವುದು ರೂಢಿ. ಹಾಗೆ ನಡೆಯುವಾಗ –

            ನಡೆದು ಬಾ ಹೆಣ್ಣೇ ತಿರುಚೆಂದೂರಿಗೆ
ನಡೆದು ಬಾ ಹೆಣ್ಣೇ
ನಡೆದು ಬಾ ತಿರುಚೆಂದಿಲಾಧಿಪನ ತಿರುಪಾದ
ನಂಬುವ ಭಕ್ತರಿಗೆ ಕೇಡೇನೂ ಬಾರದು

ಎಂದು ಪ್ರಾರಂಭಗೊಳ್ಳುವ ಹಾಡುಗಳನ್ನು ಹಾಡಲಾಗುತ್ತದೆ.

ದೇವಸ್ಥಾನಗಳಿಗೆ ಧ್ವಜಸ್ತಂಭ ನೆಡಲು ಉದ್ದವಾದ ದೊಡ್ಡ ಬಿದುರುಗಳನ್ನು ಪಶ್ಚಿಮಘಟ್ಟದ ಬೆಟ್ಟದ ತಪ್ಪಲಿನಿಂದ ಕಡಿದು ತರುತ್ತಿದ್ದರು.

ಹಾಗೆ ಕಡಿದು ತರುವಾಗ ವಾಹನಗಳಲ್ಲಿ ತರುತ್ತಿರಲಿಲ್ಲ. ಭಕ್ತರು ಹಲವರು ಸೇರಿ ತಾವೇ ಹೆಗಲ ಮೇಲೆ ಹೊತ್ತು ತರಬೇಕು ಎಂಬುದೊಂದು ನಂಬಿಕೆ. ಕೆಲವರು ಧ್ವಜಕಂಬವನ್ನು ಹೊರುವುದಾಗಿ ಹರಕೆ ಮಾಡಿಕೊಳ್ಳುವುದು ಉಂಟು. ಹಾಗೆ ಧ್ವಜಸ್ತಂಭವನ್ನು ಕಾಲ್ನಡಿಗೆಯಲ್ಲಿ ಹೊತ್ತು ತರುವಾಗ ಹೊರೆಯ ಆಯಾಸವನ್ನು ಮರೆಯಲು ಹಾದಿ ಹಾಡುಗಳನ್ನು ಹಾಡುತ್ತ ನಡೆಯುತ್ತಿದ್ದರು.

ಈಗಿನ ಕಾಲದಲ್ಲಿ ರಾಜಕೀಯ ಮುಖಂಡರು ವಿವಿಧ ಉದ್ದೇಶಗಳಿಗಾಗಿ ದೀರ್ಘಾವಧಿಯ ಕಾಲ್ನಡಿಗೆ ಯಾತ್ರೆಯನ್ನು ಕೈಗೊಳ್ಳುವಾಗ ಹಾದಿ ಹಾಡುಗಳನ್ನು ಹಾಡಲಾಗುತ್ತದೆ. ಸಾರಿಗೆ ವಾಹನಗಳು ಇಲ್ಲದ ಕಾಲದಿಂದ ಪ್ರಾರಂಭಗೊಂಡು ಇಂದಿನವರೆಗೂ ಹಾದಿ ಹಾಡುಗಳು ಸಾಮಾನ್ಯ ಜನರಲ್ಲಿ ಬಳಕೆಯಲ್ಲಿವೆ.

ಕೆ.ಯು. ಅನುವಾದ ಐ.ಎಸ್.