ವಿಲ್ಲುಪಾಟ್ಟು ಬಿಲ್ಲು, ಡಮರುಗ, ಘಟ, ಕಂಚಿನ ತಾಳ, ಮರದ ತುಂಡು ಮುಂತಾದ ವಾದ್ಯಗಳೊಂದಿಗೆ ನಡೆಸುವ ವೃಂದ ಗಾಯನವನ್ನು ‘ವಿಲ್ಲುಪಾಟ್ಟು’ (ಬಿಲ್ಲು ಹಾಡು) ಎಂದು ಕರೆಯಲಾಗುತ್ತದೆ. ಈಗ ಹಾರ್ಮೋನಿಯಂ, ತಬಲ ಮುಂತಾದ ವಾದ್ಯಗಳನ್ನೂ ಬಳಸುವುದುಂಟು. ಜನಪದರ ದೈವಾರಾಧನೆ ಸಂದರ್ಭಗಳಲ್ಲಿ ನಡೆಸುವ ಉತ್ಸವಗಳಲ್ಲಿ ಇದೊಂದು ಆಚರಣೆಯಾಗಿದೆ. ಅಲ್ಲದೆ ಸಾರ್ವಜನಿಕ ಸಮಾರಂಭಗಳ ವೇದಿಕೆಗಳಲ್ಲೂ ಇದನ್ನು ವಿರಳವಾಗಿ ನಡೆಸುವುದುಂಟು. ಇದಕ್ಕೆ ‘ವಿಲ್ಲುಪಾಟ್ಟು’, ‘ವಿಲ್ಲು’, ‘ವಿಲ್ಲಡಿಚಾನ್ ಪಾಟ್ಟು’, ‘ವಿರ್ಪಾಟ್ಟು’ ಮುಂತಾದ ಹೆಸರುಗಳೂ ಇವೆ (ವಿಲ್ಲು – ಗೆಜ್ಜೆಗಳನ್ನು ಕಟ್ಟಿದ ಬಿಲ್ಲಿನ ಆಕಾರದ ಸಾಧನ).

ಈ ಕಲೆ ತಮಿಳುನಾಡಿನ ತಿರುನೆಲ್ವೇರಿ, ಕನ್ಯಾಕುಮಾರಿ, ತೂತ್ತುಕುಡಿ ಮುಂತಾದ ಮೂರು ಜಿಲ್ಲೆಗಳಲ್ಲೂ, ರಾಮನಾಥಪುರಂ ಜಿಲ್ಲೆಯ ದಕ್ಷಿಣ ಭಾಗದಲ್ಲೂ ರೂಢಿಯಲ್ಲಿದೆ. ಕೇರಳದ ತಿರುವನಂತಪುರಂ, ಕಳಕೂಡಂ, ನೆಡುಮಂಗಾಡು, ಕೊಲ್ಲಂ ಮುಂತಾದ ಸ್ಥಳಗಳಲ್ಲೂ ಅಲ್ಪ ಪ್ರಮಾಣದಲ್ಲಿ ರೂಢಿಯಲ್ಲಿದೆ. ದೊಡ್ಡ ಪ್ರಮಾಣದಲ್ಲಿ ರೂಢಿಯಲ್ಲಿರುವ ಪ್ರದೇಶದ ಜನರು ಚೆನ್ನೈ, ಮುಂಬೈ ಮುಂತಾದ ಮಹಾ ನಗರಗಳಿಗೆ ವಲಸೆ ಹೋಗಿ ಅಲ್ಲಿ ತಮ್ಮ ದೇವಸ್ಥಾನಗಳನ್ನು ನಿರ್ಮಿಸಿ ಪೂಜಿಸುವಾಗ ವಿಲ್ಲುಪಾಟ್ಟು ನಡೆಸುವುದುಂಟು.

ವಿಲ್ಲುಪಾಟ್ಟು ತಂಡದಲ್ಲಿ ೫ ರಿಂದ ೧೧ ಮಂದಿ ಇರುತ್ತಾರೆ. ಒಬ್ಬ ಪ್ರಧಾನ ಗಾಯಕ ಇರುತ್ತಾನೆ. ಇವನನ್ನು ಅಣ್ಣಾವಿ ಅಥವಾ ಗುರು ಎಂದು ಕರೆಯಲಾಗುತ್ತದೆ. ಘಟ, ಡಮರುಗ, ಕಂಚಿನ ತಾಳ, ಮರದ ತುಂಡು ನುಡಿಸುವವರು ಹಿಮ್ಮೇಳದವರಾಗಿರುತ್ತಾರೆ. ಹಿಮ್ಮೇಳ ಹಾಡಲು ಪ್ರತ್ಯೇಕವಾಗಿ ಒಬ್ಬರು ಅಥವಾ ಇಬ್ಬರನ್ನು ನೇಮಿಸುವುದುಂಟು. ವಿಲ್ಲುಪಾಟ್ಟು ಪ್ರಾರಂಭಿಸುವ ಮುನ್ನ ವಾದ್ಯಗಳಿಗೆ ಪೂಜೆ ಮಾಡಲಾಗುತ್ತದೆ. ಕಲಾವಿದರು ಕರ್ಪೂರದ ತಟ್ಟೆ ಮತ್ತು ವಾದ್ಯಗಳನ್ನು ಮುಟ್ಟಿ ನಮಸ್ಕರಿಸುವರು. ಗುರು ವೇದಿಕೆಯಲ್ಲಿ ಕುಳಿತ ಅನಂತರವೇ ಇತರ ಕಲಾವಿದರು ಕುಳಿತುಕೊಳ್ಳುವರು. ಕಲಾವಿದರು ಕುಳಿತ ಬಳಿಕ ಎಲ್ಲ ಕಲಾವಿದರೂ ತಮ್ಮ ವಾದ್ಯಗಳನ್ನೂ ಒಟ್ಟಿಗೆ ವೇಗವಾಗಿ ನುಡಿಸುವರು. ಇದನ್ನು ರಾಜಮೇಳ ಎಂದು ಕರೆಯಲಾಗುತ್ತದೆ.

ರಾಜಮೇಳವನ್ನು ಮುಂದುವರಿಸಿ ದೈವ ಸ್ತುತಿ, ಗುರುವಂದನೆ, ಸಭಾವಂದನೆ ಹಾಡಲಾಗುತ್ತದೆ. ಬಳಿಕ ಗುರು ಕಲಾವಿದರನ್ನು ಪರಿಚಯಿಸುವರು. ಈ ಪ್ರಾರಂಭಿಕ ಹಂತದ ಕಾರ್ಯಕ್ರಮದ ಬಳಿಕ ಕಥೆಗಳನ್ನು ಹಾಡುವರು. ಮೊದಲು ಶಾಸ್ತ್ರ ಕಥೆಯನ್ನು ಹಾಡುವುದು ಸಂಪ್ರದಾಯ. ಬಳಿಕ ಉತ್ಸವ ನಡೆಯುವ ದೇವಸ್ಥಾನದ ಪ್ರಧಾನ ದೈವದ ಕಥೆಯನ್ನು ಹಾಡುವರು. ಮುಂದುವರಿದು ಆ ದೇವಸ್ಥಾನದ ಉತ್ಸವದ ಕಾಲಾವಧಿಯನ್ನು ಗಣನೆಗೆ ತೆಗೆದುಕೊಂಡು ಇತರ ದೈವಗಳ ಕಥೆಗಳನ್ನು ಹಾಡುವರು. ಕಾರ್ಯಕ್ರಮವನ್ನು ಮಂಗಳ ಹಾಡಿ ಮುಗಿಸುವರು.

ವಿಲ್ಲುಪಾಟ್ಟು ಕಾರ್ಯಕ್ರಮ ಹಾಡು, ವಚನ, ಸಂಭಾಷಣೆಗಳನ್ನು ಒಳಗೊಂಡಿರುತ್ತದೆ. ಪ್ರಧಾನ ಗಾಯಕರು ಕಥೆಯ ಭಾಗಗಳನ್ನು ಹಾಡಿದರೆ, ಹಿಮ್ಮೇಳದವರು ಅದಕ್ಕೆ ಉತ್ತರ ರೂಪದಲ್ಲಿ ಹಾಡುವರು. ಡಮರುಗ, ಕಂಚಿನ ತಾಳ ನುಡಿಸುವವರು ನಡುನಡುವೆ ‘ಹೌದು’ ಎಂದು ಧ್ವನಿಗೂಡಿಸುತ್ತಾ ಅಡ್ಡ ಪ್ರಶ್ನೆಗಳನ್ನು ಕೇಳುತ್ತಾ ಸಂಭಾಷಣೆ ಮುಂದುವರಿಯಲು ಅನುವು ಮಾಡಿಕೊಡುವರು. ಸ್ವಲ್ಪ ಭಾಗ ಹಾಡಿದ ಬಳಿಕ ಪ್ರಧಾನ ಗಾಯಕ ಹಾಡಿದ ಭಾಗವನ್ನು ವಿವರಿಸಿ ಕಥೆಯನ್ನು ವಚನದ ರೂಪದಲ್ಲಿ ವ್ಯಾಖ್ಯಾನಿಸುವರು. ಹೀಗೆ ವ್ಯಾಖ್ಯಾನಿಸುವಾಗ ಇತರ ಕಲಾವಿದರು ಹಾಸ್ಯಕ್ಕಾಗಿ ಅಡ್ಡ ಪ್ರಶ್ನೆಗಳನ್ನು ಎತ್ತುವರು. ಇದಕ್ಕೆ ಪ್ರಧಾನ ಹಾಡುಗಾರ ಉತ್ತರಿಸುತ್ತಾ ಕಥೆಯನ್ನು ಮುನ್ನಡೆಸುವರು. ಹೀಗೆ ಸಮಯವನ್ನು ಆಧರಿಸಿ ಸಂಭಾಷಣೆ, ವಚನ, ಹಾಡು ಮುಂತಾದವುಗಳನ್ನು ವಿಸ್ತಾರವಾಗಿ ಅಥವಾ ಸಂಕ್ಷಿಪ್ತವಾಗಿ ನಡೆಸಿಕೊಡುವರು.

ಪ್ರಧಾನ ಹಾಡನ್ನು ಹಾಡುವ ವ್ಯಕ್ತಿಯೇ ಸಾಮಾನ್ಯವಾಗಿ ಬಿಲ್ಲನ್ನು ನುಡಿಸುತ್ತಾರೆ. ಘಟವನ್ನು ಬೇರೊಬ್ಬರು ನುಡಿಸುವರು. ಬಿಲ್ಲಿಗೆ ಕಟ್ಟಲಾದ ತಂತಿಯನ್ನು ಬೀಸುಗೋಲಿನಿಂದ ಬಡಿದು ಗೆಜ್ಜೆಗಳ ಧ್ವನಿಯನ್ನುಂಟು ಮಾಡಲಾಗುತ್ತದೆ. ಬೀಸುಗೋಲನ್ನು ಬಳಸುವ ವಿಧಾನ ಬಿಲ್ಲು ಬಾರಿಸುವವರ ವೈಯಕ್ತಿಕ ಪ್ರತಿಭೆಯ ಮೇಲೆ ನಿಂತಿದೆ. ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದ ಬೀಸುಗೋಲನ್ನು ತಿರುಗಿಸುತ್ತಾ ಅಭಿನಯಿಸುವಂತೆ ನಟಿಸುತ್ತಾ ಬಾರಿಸುವುದುಂಟು.

ವಿಲ್ಲುಪಾಟ್ಟು ಸಾಮಾನ್ಯವಾಗಿ ವೃತ್ತಿಪರ ಕಲಾವಿದರಿಂದ ನಡೆಸಲ್ಪಡುತ್ತದೆ. ಇವರು ವೃತ್ತಿಪರ ಕಲಾವಿದರಾಗಿರುವುದರಿಂದ ಒಂದೇ ತಂಡದಲ್ಲಿ ಖಾಯಂ ಆಗಿರುವುದಿಲ್ಲ. ಒಪ್ಪಂದದ ಮೇರೆಗೆ ಬೇರೆ ಬೇರೆ ತಂಡಗಳಲ್ಲಿ ಕೆಲಸ ಮಾಡುತ್ತಾರೆ. ಸಾಮಾನ್ಯವಾಗಿ ಪ್ರಧಾನ ಹಾಡು ಹಾಡಲು ಗೊತ್ತಿರುವ ವ್ಯಕ್ತಿಯಿಂದ ತಂಡ ರಚನೆಯಾಗುತ್ತದೆ. ವೃತ್ತಿಪರರಲ್ಲದ ಕಲಾವಿದರು ನಿರ್ದಿಷ್ಟ ದೇವಸ್ಥಾನಗಳಲ್ಲಿ ಮಾತ್ರ ಹಾಡುತ್ತಾರೆ. ಕೆಲವು ದೇವಸ್ಥಾನಗಳಲ್ಲಿ ನಿರ್ದಿಷ್ಟ ತಂಡ ಅಥವಾ ನಿರ್ದಿಷ್ಟ ಕುಟುಂಬಕ್ಕೆ ಸೇರಿದವರು ಮಾತ್ರ ವಿಲ್ಲುಪಾಟ್ಟು ನಡೆಸಬೇಕೆಂಬ ನಿಯಮವಿದೆ. ಕೆಲವು ವಿಲ್ಲುಪಾಟ್ಟಿನಲ್ಲಿ ಹಾಡಬೇಕಾದ ಕಥೆ ತಾಳೆಗರಿಯ ರೂಪದಲ್ಲಿ ದೇವಸ್ಥಾನದಲ್ಲಿರುತ್ತದೆ.

ವಿಲ್ಲುಪಾಟ್ಟಿನಲ್ಲಿ ತರಬೇತಿ ಪಡೆಯಲು ಬಯಸುವವರು ಒಬ್ಬ ಗುರುವಿನ ಬಳಿಗೆ ಗುರುಕುಲ ಮಾದರಿಯಲ್ಲಿ ಕಥೆಯನ್ನು ಕಲಿಯಲು ಬರುತ್ತಾರೆ. ಬಳಿಕ ವಿಲ್ಲುಪಾಟ್ಟು ತಂಡದಲ್ಲಿ ಹಿಮ್ಮೇಳ ಹಾಡುಗಾರರಾಗುತ್ತಾರೆ. ಕಥೆಯಲ್ಲಿ ಪರಿಣತಿ ಹಾಗೂ ಬಿಲ್ಲನ್ನು ನಿರ್ವಹಿಸುವ ಸಾಮರ್ಥ್ಯವನ್ನು ಪಡೆದ ಮೇಲೆ ಪ್ರಧಾನ ಹಾಡು, ಹಾಡುವ ಅವಕಾಶವನ್ನು ಆಗಾಗ ನೀಡಲಾಗುವುದು. ಗುರುವಿಗೆ ತೃಪ್ತಿಯಾಗುವಂತೆ ಪರಿಣತಿ ಪಡೆದ ಮೇಲೆ ಅರಂಗ್ರೇಟಂ ನಡೆಯುತ್ತದೆ.

ವಿಲ್ಲುಪಾಟ್ಟಿನಲ್ಲಿ ಹಾಡುವ ಕಥೆಗಳು ತಾಳೆಗರಿಗಳಲ್ಲಿ ಹಸ್ತಪ್ರತಿಗಳ ರೂಪದಲ್ಲಿವೆ. ಪ್ರಸ್ತುತ ಬಹುತೇಕ ಕಲಾವಿದರು ಕಥೆಗಳನ್ನು ನೋಟು ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ. ವಿಲ್ಲುಪಾಟ್ಟಿನಲ್ಲಿ ಪೌರಾಣಿಕ ಕಥೆಗಳು, ಚಾರಿತ್ರಿಕ ಕಥೆಗಳು, ಸಾಮಾಜಿಕ ಕಥೆಗಳಿವೆ. ದಕ್ಷಿಣ ತಮಿಳುನಾಡಿನಲ್ಲಿ ಕಂಡು ಬರುವ ಬಹುತೇಕ ಗಂಡು ಹೆಣ್ಣು ದೈವಗಳ ಉಗಮದ ಕಥೆಗಳು ವಿಲ್ಲುಪಾಟ್ಟು ರೂಪದಲ್ಲಿವೆ. ಕಥೆಯನ್ನು ವಿಲ್ಲುಪಾಟ್ಟಿನಲ್ಲಿ ನಡೆಸಿಕೊಡುವಾಗ ಹಸ್ತಪ್ರತಿಯಲ್ಲಿರುವಂತೆ ಯಥಾವತ್ ನಡೆಸುವುದಿಲ್ಲ. ಪ್ರಧಾನ ಗಾಯಕರು ಆಗಿನ ಸಂದರ್ಭಕ್ಕೆ ಅನುಗುಣವಾಗಿ ಸಂಭಾಷಣೆಗಳು, ಹಾಸ್ಯ, ಕಥೆಗಳನ್ನು ಸೇರಿಸಿಕೊಂಡು ನಡೆಸಿಕೊಡುತ್ತಾರೆ. ಕೆಲವು ದೈವಗಳ ಕಥೆಗಳು ವಿಲ್ಲುಪಾಟ್ಟು ರೂಪದಲ್ಲಿರುವುದಿಲ್ಲ. ಆ ದೈವಗಳಿಗೆ ವಿಲ್ಲುಪಾಟ್ಟು ಕಥೆಗಳನ್ನು ಗುರುಗಳೇ ರಚಿಸಿಕೊಳ್ಳುತ್ತಾರೆ.

ವಿಲ್ಲುಪಾಟ್ಟು ಆಚರಣೆಗೆ ಸಂಬಂಧಿಸಿದ ಕಲೆ ಎಂಬುದೇ ಅದರ ವೈಶಿಷ್ಟ್ಯ. ಈ ಕಾರಣದಿಂದಲೇ ಈ ಕಲೆ ಸ್ಥಿರವಾಗಿ ಉಳಿದುಕೊಂಡಿದೆ. ಜನಪದ ದೈವಗಳ ದೇವಸ್ಥಾನಗಳಲ್ಲಿ ದೈವಗಳನ್ನು ಒಲಿಸಿಕೊಳ್ಳಲು ವಿಲ್ಲುಪಾಟ್ಟು ಅನಿವಾರ್ಯ ಎಂಬ ನಂಬಿಕೆ ಇದೆ. ಕೆಲವು ಜನಪದ ದೈವಗಳು ನೆಲೆಗೊಳ್ಳುವಾಗ ವಿಲ್ಲುಪಾಟ್ಟು ನಡೆಸಿ ಉತ್ಸವ ಮಾಡಬೇಕೆಂದು ಕೇಳುತ್ತವೆ ಎನ್ನಲಾಗುತ್ತದೆ. ಆದ್ದರಿಂದ ಬಹುತೇಕ ಜನಪದ ದೈವಗಳಿಗೆ ವಿಲ್ಲುಪಾಟ್ಟು ಏರ್ಪಡಿಸಲಾಗುತ್ತದೆ. ವಿಲ್ಲುಪಾಟ್ಟಿನಲ್ಲಿ ದೈವಗಳ ಕಥೆಗಳನ್ನು ಕೇಳುವುದು ಪವಿತ್ರವಾದದ್ದು ಎಂಬ ನಂಬಿಕೆ ಇದೆ. ದೇವರನ್ನು ಆವಾಹನೆ ಮಾಡಿಕೊಂಡವರನ್ನು ಒಕ್ಕಣೆ ಕೇಳಲು ಜನ ಬರುವುದುಂಟು. ದೈವವನ್ನು ಆವಾಹನೆ ಮಾಡಿಕೊಳ್ಳಲು ವಿಲ್ಲುಪಾಟ್ಟು ಅನಿವಾರ್ಯವಾಗಿದೆ. ದೇವಸ್ಥಾನ ಉತ್ಸವಗಳಲ್ಲಿ ನಡೆಯುವ ಆಚರಣೆಗಳೂ ಕಥೆಗಳ ಘಟನೆಗಳಿಗೂ ಹೊಂದಾಣಿಕೆ ಇರುತ್ತದೆ. ವಿಲ್ಲುಪಾಟ್ಟು ಮತ್ತು ದೇವಸ್ಥಾನದ ಆಚರಣೆಗಳಿಗೆ ಇಂತಹ ಅವಿನಾಭಾವ ಸಂಬಂಧಗಳಿರುವುದರಿಂದ ಇಂತಹ ಉತ್ಸವಗಳಲ್ಲಿ ವಿಲ್ಲುಪಾಟ್ಟು ಅನಿವಾರ್ಯ ಕಲೆಯಾಗಿ ಉಳಿದಿದೆ.

ಜೆ.ಎಸ್.ಎನ್. ಅನುವಾದ ಐ.ಎಸ್.

 

ವಿಶ್ವಕರ್ಮಗಳ್ ತಮಿಳುನಾಡಿನ ಕರಕುಶಲ ಕಲೆಗೆ (ಮರ, ಲೋಹ) ಪ್ರಸಿದ್ಧರಾದವರು. ಇವರು ತಮ್ಮನ್ನು ‘ವಿಶ್ವಬ್ರಾಹ್ಮಣರು’ ಎಂದೂ ಕರೆದುಕೊಳ್ಳುವರು. ಇವರನ್ನು ಬ್ರಾಹ್ಮಣರು ಎಂದು ಹೆಸರುಳ್ಳ ಬೇರೆ ಸಮುದಾಯದವರನ್ನು ‘ಗೋ ಬ್ರಾಹ್ಮಣರು’ ಎಂಬ ಹೆಸರಿನಿಂದ ಪ್ರತ್ಯೇಕಿಸಿ ತೋರಿಸುತ್ತಾರೆ.

‘ವಿಶ್ವ’ ಎನ್ನುವ ಸಂಸ್ಕೃತ ಪದಕ್ಕೆ ಜಗತ್ತು, ಆಕಾಶ, ಅಳೆಯಲಾಗದ, ಬಹುದೊಡ್ಡ ಎಂಬುದಾಗಿ ಹಲವು ಅರ್ಥಗಳಿವೆ. ‘ಕರ್ಮ’ ಎಂಬ ಪದಕ್ಕೆ ಸೃಷ್ಟಿಸುವವನು, ರಚಿಸುವವನು ಮತ್ತು ಕೆಲಸಗಾರ ಮುಂತಾದ ಹಲವು ಅರ್ಥಗಳಿವೆ. ಆದ್ದರಿಂದ ವಿಶ್ವಕರ್ಮ ಎಂದರೆ ಜಗತ್ತನ್ನು ಸೃಷ್ಟಿಸಿದವನು ಎಂದು ತಿಳಿದುಬರುತ್ತದೆ.

ಜಗತ್ತನ್ನು ಸೃಷ್ಟಿಸಿದ ವಿಶ್ವಕರ್ಮನು ಐದು ಮುಖಗಳನ್ನು ಹೊಂದಿದ್ದನು ಎಂದೂ ಈ ಐದು ಮುಖಗಳಿಂದ ಐವರು ಋಷಿಗಳು ಜನಿಸಿದರೆಂದೂ ಕೃಷ್ಣ ಯಜುರ್ವೇದದಲ್ಲಿ ಹೇಳಿದೆ.

ಈ ಐದು ಋಷಿಗಳ ಮಾನಸಿಕ ಸಂಕಲ್ಪದಿಂದ (ಮಾನಸಿಕ ಸಂಬಂಧ) ಇವರ ವಂಶದವರಂತೆ ನೂರ ಇಪ್ಪತ್ತೈದು ಮುನಿಗಳು ಸೃಷ್ಟಿಗೊಂಡರೆಂದೂ ಇವರ ವಂಶವೇ ವಿಶ್ವಕರ್ಮರಾಗಿ ಸೃಷ್ಟಿಗೊಂಡರೆಂದೂ ‘ಬೃಹದಾರಣ್ಯಕೋಪನಿಷತ್’ ಹೇಳುತ್ತದೆ.

ಜಗತ್ತನ್ನು, ದೇವರನ್ನು ಸೃಷ್ಟಿಸಿದ ವಿಶ್ವಕರ್ಮನ ಐದು ಮುಖಗಳಿಂದ ತಾವು ನೇರವಾಗಿ ಜನಿಸಿದವರೆಂದು ವಿಶ್ವಕರ್ಮ ಸಮುದಾಯದವರು ತಿಳಿಸುತ್ತಾರೆ ಎಂದು ದಕ್ಷಿಣ ಭಾರತದ ‘ಕುಲಗಳು ಕುಡಿಗಳು’ ಎನ್ನುವ ಗ್ರಂಥದಲ್ಲಿದೆ.

ವಿಶ್ವಕರ್ಮ ಜನಾಂಗದವರು ತಮ್ಮನ್ನು ವಿಶ್ವಕರ್ಮ ವಂಶದವರೆಂದು ಕರೆದುಕೊಳ್ಳುತ್ತಿರುವುದನ್ನು ‘ಸೆಪ್ರೋಯೂಲ್’ ಎಂಬ ಊರಿನ (ಕ್ರಿ.ಶ. ೧೧೧೮) ಶಿಲಾ ಶಾಸನದಿಂದಲೂ, (ಕ್ರಿ.ಶ. ೧೧೪೧) ‘ನಾಟಿಂಟ್ಲಾ’ ಎಂಬ ಊರಲ್ಲಿ ದೊರೆತ ಶಿಲಾ ಶಾಸನದಿಂದಲೂ, (ಕ್ರಿ.ಶ.ಸು. ೧೧೪೭) ತೊಲ್ಲಾಪೂರ್ ಶಿಲಾ ಶಾಸನದಿಂದಲೂ ತಿಳಿದುಬರುತ್ತದೆ.

ವಿಶ್ವಕರ್ಮನ ಐದು ಮುಖಗಳಿಂದ ಹುಟ್ಟಿದ ಐವರು ಋಷಿಗಳು, ಸನಾತನ ಋಷಿ, ಅಮಿವನಸ ಋಷಿ, ಪ್ರತೆಜೈ ಋಷಿ ಮತ್ತು ಸುಪನರಸ ಋಷಿ ಮೊದಲಾದವರಾಗಿದ್ದಾರೆ. ಇವರ ವಂಶದವರೆಂಬ ಕಾರಣದಿಂದ ಮೇಲೆ ತಿಳಿಸಿದ ಐವರು ಋಷಿಗಳ ಹೆಸರಿನಿಂದಲೇ ತಮ್ಮ ಗೋತ್ರಗಳನ್ನು ವಿಶ್ವಕರ್ಮ ಸಮುದಾಯದವರು ಇಟ್ಟುಕೊಂಡರೆಂದು ಕಡಪಾ ಶಿಲಾ ಶಾಸನ ಹೇಳುತ್ತದೆ. ಈ ಐವರು ಮುನಿಗಳು ‘ಗೋತ್ರ ಋಷಿಗಳು’ ಎಂದು ಕರೆಯಲ್ಪಟ್ಟರು ಎಂಬುದಾಗಿ ‘ಬೃಹದಾರಣ್ಯಕೋಪನಿಷತ್’ ಹೇಳುತ್ತದೆ. ಹೀಗೆ ಇವರ ವಂಶದವರನ್ನು ‘ಪಂಚ ಋಷಿ ಗೋತ್ರಧಾರಿಗಳು’ ಎಂದು ಕರೆಯಲಾಯಿತು. ಈ ಕುರಿತ ವಿವರಗಳನ್ನು (ಕ್ರಿ.ಶ. ೧೬೦೦) ತಿರುಪತಿಯಲ್ಲಿ ದೊರೆತ ಶಿಲಾಶಾಸನವೂ, (ಕ್ರಿ.ಶ. ೧೭೪೮) ನಂದಿಯಾಲಂ ಪೇಟೈ ಎಂಬ ಊರಲ್ಲಿ ಕಂಡು ಹಿಡಿದ ಶಿಲಾ ಶಾಸನವೂ ತಿಳಿಸುತ್ತದೆ.

ಹಿಂದಿನ ಕಾಲದಲ್ಲಿ ಬಾಳಿದ ಅರಸರು ನಮಗೆ ಬೇರೆ ಬೇರೆ (ಹುಲಿಯ ಧ್ವಜ, ಮೀನಿನ ಧ್ವಜ, ಬಿಲ್ಲಿನ ಧ್ವಜ ಎನ್ನುವಂತೆ) ಗುರುತಿನ ಧ್ವಜಗಳನ್ನು ಇಟ್ಟುಕೊಂಡಿದ್ದರು. ಅರಸರ ಆಳ್ವಿಕೆಗೆ ಒಳಪಟ್ಟು ಪ್ರಜೆಗಳು ತಮ್ಮ ಜನಾಂಗಕ್ಕೆಂದು ಬೇರೆಯೇ ಧ್ವಜಗಳನ್ನು ಇಟ್ಟುಕೊಂಡಿರಲಿಲ್ಲ. ಆದರೆ ಆಶ್ಚರ್ಯವೆನ್ನುವಂತೆ ವಿಶ್ವಕರ್ಮ ಸಮಾಜದವರು ಮಾತ್ರ ತಮ್ಮ ಸಮುದಾಯಕ್ಕೆನ್ನುವಂತೆ ‘ಅನುಂಕ್ಕೊಡಿ’ ಎಂಬ ಧ್ವಜವನ್ನು ಚಿಹ್ನೆಯಾಗಿ ಇಟ್ಟುಕೊಂಡಿದ್ದರು.

ಕ್ರಿ.ಶ. ೧೭೪೮ನೇ ವರ್ಷಕ್ಕೆ ಸೇರಿದ ನಂದಿಯಾಲಂ ಪೇಟೈ ಶಿಲಾಶಾಸನ ತೆಲುಗು ಭಾಷೆಯಲ್ಲಿ ಬರೆಯಲಾದ ‘ಯೋಗಾಸಕ್ತ ಪರಿಣಯಂ’ ಎಂಬ ಪುಸ್ತಕ ಮತ್ತು ಸಂಸ್ಕೃತ ಭಾಷೆಯಲ್ಲಿ ಬರೆಯಲಾದ ‘ಸ್ಕಂದ ಪುರಾಣ’ ಮುಂತಾದವುಗಳಿಂದ ಈ ಧ್ವಜವನ್ನು ಕುರಿತ ವಿವರಗಳನ್ನು ತಿಳಿಯಬಹುದು. ರಾಜರು, ಪಾಳೆಯಗಾರರು ತಮಗೆಂದು ಕೋಟೆಗಳನ್ನು ರಚಿಸಿಕೊಂಡಂತೆ ವಿಶ್ವಕರ್ಮ ಜನಾಂಗದವರು ತಮ್ಮದೆಂದು ಒಂದು ಕೋಟೆಯನ್ನು ರಚಿಸಿಕೊಂಡಿದ್ದರೆಂದೂ, ಆ ಕೋಟೆಯೊಳಗೆ ಇದ್ದ ನಗರಕ್ಕೆ ‘ಮುಂದೈ ನಗರ’ ಎಂದು ಹೆಸರಿಟ್ಟುಕೊಂಡಿದ್ದರೆಂದೂ ಬೆರ್‌ಟೋಕ್ಕೆ ಎಂಬ ವಿಶ್ವ ಯಾತ್ರಿಕನೂ, ಬಪೆನ್ನೆಂಟ್ ಎಂಬ ಆಂಗ್ಲ ಸಾಹಿತಿಯೂ, ಪಲ್ಲಾಡಿಯಸ್ ಎಂಬ ಗ್ರೀಕ್ ಸಾಹಿತಿಯೂ ಈ ಬಗ್ಗೆ ಪುಸ್ತಕದಲ್ಲಿ ತಿಳಿಸಿರುತ್ತಾರೆ. ಸಂಘ ಕಾವ್ಯಗಳಲ್ಲಿಯೂ ಈ ಬಗ್ಗೆ ವಿವರಗಳು ಅಲ್ಲಲ್ಲಿ ಕಂಡುಬರುತ್ತವೆ. ವಿಶ್ವಕರ್ಮ ಸಮಾಜದ ಉಮಾದೇವಿಯನ್ನು ಕಾಳಿಕಾಂಬ ಎಂಬ ಹೆಸರಿನಲ್ಲಿ ಕುಲದೈವವಾಗಿಯೇ ಪೂಜಿಸುತ್ತಾರೆ. ಈ ವಿವರವನ್ನು ಜಟಿಕಾ ನಂದಿಯಾಲಂ ಪೇಟೈ, ಅಮರಾವತಿ ಮುಂತಾದ ಊರುಗಳಲ್ಲಿ ದೊರಕಿದ ಶಿಲಾ ಶಾಸನಗಳು ದೃಢಪಡಿಸುತ್ತವೆ.

ನಾಲ್ಕು ವೇದಗಳು, ಇತಿಹಾಸಗಳು ಮತ್ತು ಪುರಾಣಗಳು ತಿಳಿಯ ಹೇಳುವ ವಿಶ್ವಕರ್ಮರ ಚರಿತ್ರೆಯಂತೆ ವಿವರವಾಗಿ ಬೇರೆ ಯಾವ ಜನರ ಬಗ್ಗೆಯೂ ಹೇಳಿಲ್ಲವೆಂದು ಕ್ರಿ.ಶ. ೧೯೮೫ರಲ್ಲಿ ತಮಿಳುನಾಡಿಗೆ ಆಗಮಿಸಿ ವಿಶ್ವಕರ್ಮರನ್ನು ಕುರಿತು ಸಂಶೋಧನೆ ನಡೆಸಿದ ಕ್ಯಾಲಿಪೋರ್ನಿಯಾ ವಿಶ್ವವಿದ್ಯಾನಿಲಯದ ಪ್ರಾಚಾರ್ಯ ಮಾರ್ಟಿನ್ ಸೈಮನ್ಸ್ ಎಂಬುವರು ಉಲ್ಲೇಖಿಸುತ್ತಾರೆ. ವಿಶ್ವಕರ್ಮ ಅಥವಾ ವಿಶ್ವಬ್ರಾಹ್ಮಣ ಮುಂತಾದ ಹೆಸರುಗಳು ಕಮ್ಮಾರರನ್ನು ಕುರಿತ ಬೇರೆ ಪದಗಳೆಂದು ಎಡ್ಗರ್ ಥರ್ಸ್ಟನ್ ಹೇಳುತ್ತಾರೆ.

ಈ ಮುಂ, ಕಮ್ಮುಂ ಎಂಬವು ಕಾಯಕವನ್ನು ಕುರಿತಿರುವ ಹೆಸರುಗಳೆಂದು ತೊಲ್‌ಕಾಪ್ಪಿಯಂ ಹೇಳುತ್ತದೆ.

ಆದ್ದರಿಂದ ಕಂ+ಆಳರ್ = ಕಮ್ಮಾಳರ್ (ಕಾಯಕವನ್ನು ಆಳುವವರು), ಕಂ+ಮಾಲರ್ = ಕಮ್ಮಾಳರ್ (ಕಾಯಕದಲ್ಲಿ ಏಳ್ಗೆ ಹೊಂದಿದವರು) ಎಂಬ ಕಾರಣಕ್ಕಾಗಿ ಕಮ್ಮಾಳರ್ ಎಂಬ ಪದ ಬಂದಿರಬಹುದೆಂಬುದು ಎಲ್ಲರ ಅಭಿಪ್ರಾಯ. ಆದ್ದರಿಂದ ‘ಕಮ್ಮಾಳರ್’ ಎಂಬುದು ವ್ಯಾಕರಣದ ಆಧಾರದಲ್ಲಿ ಕಾರಣಾರ್ಥ ಹೆಸರೆಂಬುದಾಗಿ ಕಮ್ಮಾಳರ್ ಎಂಬ ಪದ ಬಂದಿರಬಹುದು.

ಕಣ್ಣಾಳನ್ ಅಥವಾ ಕಣ್ಣಾಳರ್ ಎಂಬುದು ಕಮ್ಮಾಳನ್ ಎಂಬುದರ ಮೂಲವಾಗಿರಬೇಕು. ಕಣ್ಣಾಳನ್ ಎಂಬ ಪದಕ್ಕೆ ಕಣ್ಣನ್ನು ಆಳುವವನು ಅಥವಾ ಕಣ್ಣನ್ನು ನೀಡುವವನು ಎಂದು ಅರ್ಥ. ಈ ಎರಡು ಪದಗಳು ತೊಂಡೈಮಂಡಲ ಶತಕದಲ್ಲೂ, ಕಂಬರ್ ಹಾಡಿದರೆನ್ನಲಾದ ಏಳುಪದಿಯಲ್ಲೂ ಇದೆ. ಒಂದು ಶಿಲೆ ಮಾಡಿ ಮುಕ್ತಾಯಗೊಂಡಾಕ್ಷಣ ಅದನ್ನು ಪುನೀತವಾಗಿಸುವುದಕ್ಕಾಗಿ ಒಂದು ಶಾಸ್ತ್ರ ಕ್ರಿಯೆ ದೇವಾಲಯದಲ್ಲಿ ನಡೆಯುತ್ತದೆ. ಆ ಕಾರ್ಯ ಮುಗಿಯುವಷ್ಟರಲ್ಲಿ ಅದನ್ನು ಮಾಡಿದ ಶಿಲ್ಪಿಯು ಮುಂದೆ ಬಂದು ಆ ಶಿಲೆಗೆ ಕಣ್ಣುಗಳನ್ನು ಕೆತ್ತುವನು. ಈ ಪದ ಜನರ ಕಣ್ಣುಗಳಿಗೆ ಹಬ್ಬವೆನ್ನುವಂತೆ ‘ಅಂದವಾದ ವಸ್ತುಗಳನ್ನು ಸೃಷ್ಟಿಸುವವನು’ ಎಂಬ ಅರ್ಥವನ್ನು ನೀಡುತ್ತದೆ ಎಂದು ಎಡ್ಗರ್ ಥರ್ಸ್ಟನ್ ಹೇಳುತ್ತಾರೆ.

ಈ ಶಾಸ್ತ್ರ ಕ್ರಿಯೆಗೆ ‘ನೇತ್ರ ಮಾಂಗಲ್ಯಂ’ ಎಂದು ಗೌರವದಿಂದ ಸಂಸ್ಕೃತದಲ್ಲಿ ಹೇಳಲಾಗುತ್ತದೆ.

ಕಮ್ಮಾಳರ್ ಜನಾಂಗದವರನ್ನು ಕುರಿತು ಕಣ್ಣು ಸೃಷ್ಟಿಸುವವ ಕಮ್ಮಿಯರ್, ಕಂಜಕಾರರ್ ಮುಂತಾದ ಹಲವಾರು ಹೆಸರುಗಳನ್ನು ಚೂಡಾಮಣಿ ನಿಘಂಟು ಹೇಳುತ್ತದೆ.

ವೀರಮಾಮುನಿಯರ್ ರಚಿಸಿದ ಚತುರಕಾರಾದಿಯಲ್ಲೂ ವಿಶ್ವಕರ್ಮ ಜನಾಂಗವನ್ನು ಹೇಳುವ ಹಲವಾರು ಹೆಸರುಗಳನ್ನು ತಿಳಿಸಿರುವರು.

ವಿಶ್ವಕರ್ಮನ ಐದು ಮುಖಗಳಿಂದ ತೋರಿದ ಋಷಿಗಳ ವಂಶದಿಂದ ಬಂದರೆನ್ನುವಂತೆ ಹೇಳಲಾದ ಕಮ್ಮಾರರು ಅಕ್ಕಸಾಲಿಗ, ಬಡಗಿ, ಶಿಲ್ಪಿ (ಸ್ಥಪತಿ), ಕನ್ನಾರ್‌, ಕರುಮಾರ್ ಎಂದು ಐದು ವಿಭಾಗಗಳವರಾಗಿ ಪ್ರಸಿದ್ಧರಾಗಿದ್ದಾರೆ. ಹೀಗೆ ಐದು ವಿಭಾಗಗಳಾಗಿ ಪ್ರಸಿದ್ಧರಾದ ಇವರಿಗೆ ‘ಪಂಚಾಶತ್ತಾರ್’ (ಐದು ಕಾಯಕದವರು) ಎಂಬ ಹೆಸರೂ ಇದೆ. ಅಂದಿನಿಂದಲೂ ಆಸಾರಿ ಅಥವಾ ಆಚಾರಿ ಎಂಬ ಹೆಸರಿನಿಂದ ಇವರನ್ನು ಕರೆಯಲಾಗುತ್ತದೆ.

ತೆಲುಗು ಭಾಷೆಯನ್ನು ಮಾತನಾಡುವ ಕಮ್ಮಾಳರ್‌ಗಳಲ್ಲಿ ಕಂಸಾರಿ, ಕಂಚಾರಿ ಅಥವಾ ಮೂಸಾರಿ (ಕನ್ನಾನ್), ವಡ್ರಂಗಿ (ತಚ್ಚರ್), ಕಾಸಿ ಅಥವಾ ಶಿಲ್ಪಿ (ಸ್ಥಪತಿ), ಕಮ್ಮರರ್ (ಕೊಲ್ಲರ್) ಎಂದು ಐದು ವಿಭಾಗದವರಿದ್ದಾರೆ. ಮಲಯಾಳ ಕಮ್ಮಾಳರ್‌ಗಳನ್ನು ಆಸಾರಿ ಅಥವಾ ಮರಕೆಲಸಗಾರರು, ಕಲ್ಲನ್ ಅಥವಾ ಕಲ್ಲಾಚಾರಿ, ಮೂಸಾನ್, ತಜ್ಜಾನ್, ಕೊಲ್ಲನ್ ಎಂಬ ಐದು ಬಗೆಯಲ್ಲಿ ಕರೆಯಲಾಗುತ್ತದೆ. ಆಚಾರಿ ಎಂಬ ಹೆಸರಿನಿಂದ ತಮಿಳುನಾಡಿನಲ್ಲಿ ಕರ್ನಾಟಕದಲ್ಲಿ ಆಚಾರಿ, ಆಚಾರ್, ಆಚಾರ್ಯರು, ದೀಕ್ಷಿತ್ ಎಂದು ಹಲವಾರು ಹೆಸರುಗಳಿಂದ ಕರೆಯಲಾಗುತ್ತದೆ.

ಐದು ಬಗೆಯ ಕಾಯಕವನ್ನು ಮಾಡುವರು ಕಾರ್ಖಾನೆಗಳು ಬೇರೆ ಬೇರೆಯಾಗಿಯೇ ಹೆಸರನ್ನು ಪಡೆದಿದ್ದರೂ ಸಾಮಾನ್ಯ ಹೆಸರಾಗಿ ಕಮ್ಮಾವಾಲಯಂ ಅಥವಾ ಕಮ್ಮಾಲೈ ಎಂಬ ಒಂದು ಹೆಸರಿನಿಂದಲೇ ಕಾರ್ಯವೆಸಗುತ್ತವೆ.

ಕಮ್ಮಾರರ್‌ಗಳು ತಮಗೆ ಪೌರೋಹಿತ್ಯ ಮಾಡಲು ತರಬೇತಿ ಹೊಂದಿದ ತಮ್ಮ ಜಾತಿಯ ಪುರೋಹಿತರನ್ನು ಇಟ್ಟುಕೊಂಡಿದ್ದಾರೆ. ವಿಶ್ವ ಬ್ರಾಹ್ಮಣರು ಎಂದು ಕರೆದುಕೊಳ್ಳುವ ಕಮ್ಮಾಳರರುಗಳಿಗೂ, ಇವರಿಂದ ಗೋಬ್ರಾಹ್ಮಣರು ಎಂದು ಬೇರಯೇ ಹೆಸರಿಟ್ಟು ಕರೆಯಲಾಗುವ ಬ್ರಾಹ್ಮಣರ ನಡುವೆ ಮದುವೆ, ಬ್ರಹ್ಮೋಪದೇಶ, ಕಿವಿ ಚುಚ್ಚುವುದು, ಪ್ರಾಯಕ್ಕೆ ಬಂದ ಹೆಣ್ಣಿಗೆ ಮಾಡಲಾಗುವ ಎಲ್ಲ ಕಾರ್ಯಗಳನ್ನು ಯಾರು ಮಾಡುವುದು ಎಂಬ ಹೋರಾಟದಲ್ಲಿ ವಿಶ್ವಕರ್ಮ ಸಮುದಾಯದವರೇ ಜಯಶಾಲಿಗಳಾದರೆಂದು ಚಿತ್ತೂರು ಜಿಲ್ಲಾ ಕೋರ್ಟು ನೀಡಿದ ತೀರ್ಪು, ಸೇಲಂ ಜಿಲ್ಲಾ ತೀರ್ಪು, ವೇಲೂರು ತೀರ್ಪು ಮುಂತಾದ ನ್ಯಾಯಾಲಯಗಳ ತೀರ್ಪುಗಳಿಂದ ತಿಳಿಯುತ್ತೇವೆ.

ನೋಕ್ಕಿನಾರ್ ಕಣ್ಣುಗಳನ್ನು ತಮ್ಮ ಕಾಯಕದಲ್ಲೇ ಇಟ್ಟಿರುತ್ತಾರೆ. ಆದ್ದರಿಂದ ಕಮ್ಮಾಳರ್‌ಗಳನ್ನು ‘ಕಣ್ಣರ್ ವಿನೈಞರ್’ ಎಂದು ಪ್ರಶಂಸೆಯಿಂದ ಹೇಳಲಾಗುತ್ತದೆ.

ಕುಶಲ ಕೆಲಸಗಾರರ ಸಮಾಜ ಎಂದು ಕರೆಯುವ ವಿಶ್ವಕರ್ಮ ಜನರ ಬಗೆಗಿನ ವಿಚಾರಗಳನ್ನು ಇದುವರೆಗೆ ಹೇಳಲಾಯಿತು.

ಇವರ ಉಪಜಾತಿಗಳಾದ ಅಕ್ಕಸಾಲಿಗ, ಬಡಗಿ, ಕಮ್ಮಾರ (ಕೊಲ್ಲರ್), ಕನ್ನಾರ್ (ತಾಮ್ರ, ಹಿತ್ತಾಳೆ ಕೆಲಸದವರು), ಸ್ಥಪತಿ ಮುಂತಾದವರ ಬಗೆಗಿನ ವಿಚಾರಗಳನ್ನು ಸ್ವಲ್ಪ ವಿವರವಾಗಿ ತಿಳಿಯೋಣ.

ಪೊರ್‌ಕೊಲ್ಲರ್ (ಅಕ್ಕಸಾಲಿಗ) : ಅಡಗಂ, ಕಿಳಿಬ್ಬರೈ, ಸಂಬುನತಂ, ಸಾದರೂಪಂ ಎಂದು ವಿಂಗಡಿಸಲಾದ ನಾಲ್ಕು ಬಗೆಯ ಚಿನ್ನಗಳಲ್ಲಿ ಆಭರಣಗಳನ್ನು ಮಾಡುವುದು ಮುಂತಾದ ಕಾಯಕದಲ್ಲಿ ನಿಪುಣರಾಗಿ ಕೆಲಸ ಮಾಡುವವರನ್ನು ಪೊರ್‌ಕೊಲ್ಲರೆನ್ನಲಾಗುತ್ತದೆ. ಇವರು ಸುಪರ್ನಸ ಗೋತ್ರದವರು ಅಥವಾ ವಿಶ್ವಜ್ಞ ಗೋತ್ರದವರಾಗಿರುತ್ತಾರೆ.

ಇವರಿಗೆ ತಟ್ಟಾರ್, ಚಿನ್ನದ ಆಚಾರಿ, ಚಿನ್ನಕಾಯಕಜನ, ಚಿನ್ನದ ಕೆಲಸ ಮಾಡುವವರು, ಚಿನ್ನ ಮಾಡುವ ಕೊಲ್ಲರ್, ಚಿನ್ನಾಭರಣ ಮಾಡುವ ಪಂಡಿತರು ಮುಂತಾದ ಹಲವಾರು ಹೆಸರುಗಳೂ ಇವೆ.

ಚಿನಿವಾರರು ಚಿನ್ನವನ್ನು ಕರಗಿಸಿ ಕಂಬಿಯನ್ನಾಗಿಯೂ, ತಗಡನ್ನಾಗಿಯೂ ಮಾಡಿ ಕಲ್ಲುಗಳನ್ನು ಜೋಡಿಸಿ ತಮ್ಮ ಕಾಯಕಕ್ಕೆ ಉಪಯೋಗಿಸುವರು. ಚಿನ್ನವನ್ನು ಕರಗಿಸಿ ಮಾಡುವ ತಗಡು ‘ಪೊನ್ನಡರ್’ ಎಂದೂ, ಮದುವೆಗೆ ತಾಳಿ ಮಾಡಿದ ತರುವಾಯ ಲೇಪನಗಳ ಬಳಿಕ ಮಂಗಳಕರವಾದ ಒಂದು ತಟ್ಟೆಯಲ್ಲಿ ಆ ತಾಳಿಯನ್ನಿಟ್ಟು ತೆಗೆದುಕೊಂಡು ಹೋಗಿ ಯಜಮಾನರಿಗೆ ಒಪ್ಪಿಸುವರೆಂದೂ, ಆ ತಟ್ಟೆಯನ್ನು ‘ಚಿನ್ನದ ತಟ್ಟೆ’ ಎಂದು ಕರೆಯಲಾಗುತ್ತದೆ ಎಂದೂ ಚಿನಿವಾರರೂ ಹೇಳುವರು.

ತಟ್ಟರ್‌ಗಳು ಬಾಳುವ ಭಾಗ ‘ತಟ್ಟಾಕ್ಕುಡಿ’ ಎಂದೆನಿಸುವ ತಿರುನೆಲ್ಟೀರಿಯಲ್ಲಿ ಚಿನ್ನ ತಟ್ಟುಕ್ಕುಡಿ ಬೀದಿ ಎಂದು ಹೆಸರಿರುವ ಎರಡು ರಸ್ತೆಗಳಿವೆ. ತಟ್ಟರ್ ಕುಲದ ಹೆಣ್ಣುಗಳನ್ನು ‘ತಟ್ಟತ್ತಿ’ ಎಂದು ಕರೆಯಲಾಯಿತು.

ಆ ಕಾಲದಲ್ಲಿ ಚಿನಿವಾರರಿಗೆಂದು ವಿಧಿಸಲಾದ ವೃತ್ತಿ ತೆರಿಗೆಯನ್ನು ‘ತಟ್ಟಾರ್ ಪಾಟ್ಟಂ’ ಎಂದು ಕರೆದರು. ಅಕ್ಕಸಾಲಿಗರು ತಮ್ಮ ಕಾಯಕಕ್ಕೆ ಉಪಯೋಗಿಸಿದ ಉಪಕರಣಗಳನ್ನು ‘ತಟ್ಟಾನ್ ಉಪಕರಣಗಳು’ ಎನ್ನಲಾಯಿತು.

ಸುತ್ತಿಗೆ, ಕರಿ, ವಿವೀ, ತಲಾಸು, ಅಡಿಗಲ್ಲು, ಕಂಬೀಟ್ಟು, ಇಕ್ಕಳ, ಚಿಮಟಿ, ಊದುಕೊಳವೆ, ಅಡಿಗಲ್ಲು ಕಟ್ಟೆ, ನೀರಕಾರ್, ಕುಂಬಿಡು ಚಟ್ಟಿ, ವಿಮಿ ಜಾಡು, ಪೂಂದಿಕೊಟ್ಟೈ, ಒಲೆ ಇಕ್ಕುಳ, ಮೆಟ್ಟಲು, ಕುನ್ರಿಮಣಿ, ಅರ, ರಾವಿ, ಕತ್ತಿ, ಬರ್ಮಾ, ವೈರಸು, ನೀರುತೊಟ್ಟೆ, ಕರಿತೊಟ್ಟಿ, ಪೂಟ್ಟೂಸು, ಮೂಸ್ರೆ, ಕದಿರು, ಕರಗಿಸುವ ಕಲ್ಲು, ಹೊಳೆಯಿಸುವ ತೊಗಲು, ಹಿತ್ತಾಳೆ ಪುರುಸು, ಬೆಳಕು, ಬಿಜ್ಜುವ ಅಡಿಗಲ್ಲು, ಪಾಮೀತಿಮ್ಮೈ, ಪೇರಾತಿಮ್ಮೈ, ಮೆಟ್ಟುಕತ್ತಿ, ಕಡಿಕತ್ತಿ, ಮಣಿಯಿಟ್ಟು ಕತ್ತರಿಸುವ ಸಲಕರಣೆ, ಕೈಸಾಣಿ, ಪೆರುಪಾಳೈ, ಪಾದೂಣಂ, ಕರಸಾಣೈ ಮುಂತಾದವು ಚಿನಿವಾರರು ತಮ್ಮ ಕೆಲಸಕ್ಕೆ ಬಳಸುವ ಸಾಧನಗಳಾಗಿವೆ.

ಅಕ್ಕಸಾಲಿಗರಲ್ಲಿ ಕೆಲವರು ಸಂಘ ಕಾಲದಲ್ಲಿ ಪ್ರಸಿದ್ಧ ಕವಿಗಳಾಗಿಯೂ ಇದ್ದರು.

ತಂಗಾಲ್ ಪೊರ್‌ಕೊಲ್ಲರ್, ಮದುರೈ ಪೊರ್‌ಕೊಲ್ಲನ್, ವೆಣ್ಣಗನಾರ್ ಮೊದಲಾದವರು ಇದಕ್ಕೆ ಉದಾಹರಣೆಯಾಗಿದ್ದಾರೆ.

ಅಕ್ಕಸಾಲಿಗರು ತಮ್ಮ ಕಾಯಕವನ್ನು ಸರಿಯಾಗಿ ಮಾಡದಿದ್ದರೆ ಅವರ ಜೀವನ ಹಾಳಾಗುವುದು ಎಂಬುದನ್ನು,

            ತಟ್ಟಿದರೆ ತಟ್ಟಾನ್
ತಟ್ಟದಿದ್ದರೆ ಕೆಟ್ಟಾನ್

ಎನ್ನುವ ಗಾದೆ ಮಾತಿನಿಂದಲೇ ತಿಳಿಯುತ್ತೇವೆ.

ಇವರಲ್ಲಿ ಐದು ಉಪಜಾತಿಗಳಲ್ಲಿ ಅಕ್ಕಸಾಲಿಗರೇ ಚೆನ್ನಾಗಿ ಜೀವನ ಸಾಗಿಸುವ ಶ್ರೀಮಂತರಾಗಿದ್ದಾರೆ. ಆದರೆ ಇಂದು ಈ ಕಾಯಕದಲ್ಲಿ ಯಂತ್ರಗಳು ಬಂದಿರುವುದರಿಂದಲೂ, ಚಿನ್ನದ ಬೆಲೆ ಬಹಳ ಅಧಿಕವಾಗಿರುವುದರಿಂದಲೂ, ಬೇರೆ ಸಮುದಾಯದವರು ಈ ಕಾಯಕದಲ್ಲಿ ತೊಡಗಿರುವುದರಿಂದಲೂ ಪರಂಪರೆಗೂ ಅಕ್ಕಸಾಲಿಗರ ಜೀವನ ಪ್ರಶ್ನಾರ್ಥಕವಾಗಿದೆ.

ಮೇಲೆ ಹೇಳಿರುವಂತೆ ಅಕ್ಕಸಾಲಿಗರ ಜೀವನಾಧಾರ ಕುಂಠಿತವಾಗಿರುವುದರಿಂದ ತಮ್ಮ ಮಕ್ಕಳನ್ನು ಇತರ ಬೇರೆ ಹಲವಾರು ಶೈಕ್ಷಣಿಕ ಕ್ಷೇತ್ರದಲ್ಲಿ ಪದವಿಗಳನ್ನು ಪಡೆಯುವಂತೆಯೂ ಬೇರೆ ಉದ್ಯೋಗಕ್ಕೆ ಬೇಕಾದ ಸ್ಥಿತಿಯನ್ನು ಹೊಂದುವಂತೆಯೂ ಮಾಡುವುದರಲ್ಲಿ ಹೆಚ್ಚಿನವರು ತೊಡಗಿದ್ದಾರೆ.

ತಟ್ಟರ್ (ಬಡಗಿ) : ಪಂಚ ಕಾಯಕರು ಎನ್ನುವವರಲ್ಲಿ ಮರ ಕೆಲಸ ಮಾಡುವವರು ಬಡಗಿಳು. ಇವರು ಸನಾತನ ಗೋತ್ರ (ಅಥವಾ ಮಯ ಗೋತ್ರ) ಎನ್ನುವ ವರ್ಗಕ್ಕೆ ಸೇರಿದವರಾಗಿದ್ದಾರೆ. ಕ್ಷತ್ರಿಯರ, ಬ್ರಾಹ್ಮಣರ ಜತೆಯಲ್ಲಿ ಹುಟ್ಟಿದವರು ತಟ್ಟನ್ ಎನ್ನುವವರು ಎಂದು ಅರುಣಗಿರಿ ಪುರಾಣ ಹೇಳುವುದೆಂದು ಅಭಿಧಾನ ಚಿಂತಾಮಣಿ ಎನ್ನುವ ಪುಸ್ತಕದಲ್ಲಿ (ಪುಟ ೭೭೧ರಲ್ಲಿ) ಹೇಳಲಾಗಿದೆ. ಮರ ಕೆಲಸ ಮಾಡುವ ತಟ್ಟಿ ಕಾಯಕದ ಬಡಗಿಗಳಿಗೆ ಮರಕೆಲಸಗಾರರು, ತಟ್ಟು ಕೆಲಸಗಾರರು ಮುಂತಾದ ಬೇರೆ ಹೆಸರುಗಳೂ ಇವೆ. ಆಚಾರಿ ಅಥವಾ ಆಚ್ಚಾರಿ ಎನ್ನುವ ಹೆಸರು ಮಲಬಾರ್ ಭಾಗದಲ್ಲಿ ಬಡಗಿಯ ಕೆಲಸ ಮಾಡುವವರಿಗೆ ಮಾತ್ರವೇ ಹೇಳುವುದಾಗಿದೆ. ಮರ ತುಂಡರಿಸುವುದು ಮತ್ತು ಅವುಗಳನ್ನು ಕತ್ತರಿಸುವುದು ಮೊದಲಾದ ಕಾಯಕವನ್ನು ಮಾತ್ರ ಮಾಡುವವರಿದ್ದರು. ಅವರನ್ನು ‘ಈರ್ಚ ಕೊಲ್ಲರ್’ ಎಂಬ ಹೆಸರಿನಿಂದ ಕರೆಯಲಾಯಿತು. ಮರದ ಆಚಾರಿಗಳು ಕೆಲಸ ಮಾಡುವ ಸ್ಥಳ ಆ ಕಾಲದಲ್ಲಿ ‘ತಟ್ಟವಾಡಿ’ ಎಂಬ ಹೆಸರನ್ನು ಹೊಂದಿತ್ತು. ಇಂದು ಮರ ಕಾರ್ಖಾನೆ, ಮರ ಕೈಗಾರಿಕೆ, ಮರ ಕೆಲಸ ಮಾಡುವ ಸ್ಥಳ ಮೊದಲಾದ ಹಲವಾರು ಹೆಸರುಗಳಿಂದ ಕರೆಯಲಾಗುತ್ತಿದೆ.

ಮರ ಕೆಲಸಕ್ಕೆ ಸಂಬಂಧಿಸಿದ ಚರಿತ್ರೆಯ ಪುಸ್ತಕಕ್ಕೆ ‘ತಟ್ಟನೂತ್’ ಎಂಬ ಹೆಸರಿದೆ. ತಟ್ಟರ್ ಕುಲ ಸ್ತ್ರೀಯರನ್ನು ತಟ್ಟರ್ತಿ, ತಟ್ಟತ್ತಿ, ತಟ್ಟಚ್ಚಿ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ರಾಮಾಯಣದಲ್ಲಿ ಉಲ್ಲೇಖವಾದ ರಾವಣನ ಲಂಕಾ ನಗರ, ಮಹಾಭಾರತದಲ್ಲಿ ಉಲ್ಲೇಖಿಸಲಾದ ಇಂದ್ರ ಪ್ರಸ್ಥ ಮುಂತಾದ ನಗರಗಳನ್ನು ‘ಮಯ’ ಎಂಬ ದೇವಶಿಲ್ಪಿ ನಿರ್ಮಾಣ ಮಾಡಿದುದಾಗಿ ಆ ಕಾವ್ಯಗಳು ಉಲ್ಲೇಖಿಸುತ್ತವೆ.

ಮರ ಕೆಲಸಗಾರರು ಎಂದು ಹೇಳುವ ತಟ್ಟರ್‌ಗಳು ತಾವು ಕಾರ್ಯ ಕೈಗೊಳ್ಳುವ ಸಲಕರಣೆಗಳನ್ನಾಗಿ ಉಳಿ, ಕತ್ತಿ, ತಟ್ಟುಕೋಲು, ಮರಕ್ಕೊತ್ತಿ, ತಮರುಸಿ, ಚಿಕ್ಕವಿಳಿ, ಕೊಟ್ಟವಿಳಿ, ಇಡುಕ್ಕಿ, ಇಕ್ಕುಳ, ವಿಳಿ, ಸುತ್ತಿ, ಅರ, ತೊರಪ್ಪಣಂ, ತೊಪ್ಪಣ ಕೋಲು, ಕಡೈಕುಲ್ ಚಕ್ರ, ಮೂಲೆ ಮಟ್ಟಂ, ಅಳತೆಗೋಲು ಮೊದಲಾದುವುಗಳನ್ನು ಉಪಯೋಗಿಸುತ್ತಿದ್ದಾರೆ. ಇವುಗಳಲ್ಲಿ ತಟ್ಟ ಕೋಲು ಎಂಬುದು ಮೂವತ್ತಮೂರು ಅಂಗುಲವಿರುತ್ತದೆ. ಇದನ್ನು ತಟ್ಟು ಮೊರ, ತಟ್ಟುಕೋಲು ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ.

ಬೃಹತ್ ದೇವಾಲಯಗಳನ್ನು ನಿರ್ಮಾಣ ಮಾಡಿದವರನ್ನು ‘ದೊಡ್ಡ ಬಡಗಿ’ ಎಂಬ ಹೆಸರನ್ನಿಟ್ಟು ವಿಶೇಷ ಗೌರವ ನೀಡಿದರೆಂಬುದಾಗಿ ತಿಳಿಯುತ್ತದೆ. ತಂಜೈ ಬೃಹತ್ ದೇವಾಲಯದೊಡನೆ ಸಂಬಂಧವಿರುವ ‘ರಾಜ ರಾಜ ಪೆಲಂ ತಟ್ಟರ್’ ಎಂಬ ಪದ ಇದನ್ನು ಸಮರ್ಥಿಸುತ್ತದೆ.

ಹೊಸ ಮನೆ ಕಟ್ಟಿ ಮುಗಿದೊಡನೆ ಗೃಹಪ್ರವೇಶಕ್ಕೆ ಮೊದಲು (ಭೂತವನ್ನೋಡಿಸಲು) ತಟ್ಟರು ಮಾಡುವ ಒಂದು ಬಗೆಯ ಶಾಸ್ತ್ರ ವಿಧಿಗೆ ‘ತಚ್ಚು ಕಳೆಯುವುದು’ ಎಂದು ಹೆಸರು.

ತಮಿಳುನಾಡಿನಲ್ಲಿ ಬೃಹತ್ ರಥಗಳಾಗಿರುವ ತಿರುವಾರೂರ್ ರಥ, ಶ್ರೀ ವಿಲ್ಲಿ ಪುತ್ತೂರು ರಥ, ತಿರುನೆಲ್ವೇಲಿ, ನೆಲ್ಲೆಯಪ್ಪರ್ ದೇಗುಲದ ತೇರುಗಳನ್ನು, ಅವುಗಳಲ್ಲಿರುವ ಕೆತ್ತನೆಗಳು ಬಹಳ ಆಶ್ಚರ್ಯ ಉಂಟುಮಾಡುತ್ತವೆ. ತಿರುಪ್ಪಡೈ ಮರುದೂರಲ್ಲಿರುವ ಶಿವಾಲಯದಲ್ಲಿ ಒಂದರ ಮೇಲೊಂದು ಪಂಕ್ತಿಯಲ್ಲಿರುವ ಶಿಲ್ಪ ವೈಭವವನ್ನು ಮಾಡಿದ ಬಹುಶ್ರೇಷ್ಠ ಶಿಲ್ಪಿಗಳನ್ನು ಹೊಗಳದೆ ಇರಲು ಅಸಾಧ್ಯ.

ರಾಜನಾದ ಮರುದು ಪಾಂಡಿಯಾರ್ ಅವರ ದೇಹಾರೋಗ್ಯಕ್ಕಾಗಿ ಆ ತೇರನ್ನು ಮಾಡಿದ ನಾಗಮುತ್ತು ಎಂಬ ಆಚಾರಿ ರಥವನ್ನು ಎಳೆಯುವ ದಿನದಂದು ತಮ್ಮ ಉಸಿರನ್ನು ತ್ಯಾಗ ಮಾಡಿದ. ತ್ಯಾಗ ಚರಿತ್ರೆ ಶಿವಶಂಗೈ ಜಿಲ್ಲೆ ರಾಶೈಯಾರ್ ದೇಗುಲದ ಸಮೀಪ ಇನ್ನು ಪ್ರಚಾದಲ್ಲಿರುವುದನ್ನು ತಿಳಿಯಬಹುದು.

ಆ ಕಾಲದಲ್ಲಿ ತಟ್ಟರ್ ತಮ್ಮ ಕೆಲಸದಲ್ಲಿ ತಮ್ಮನ್ನು ಬಹಳ ತೊಡಗಿಸಿಕೊಂಡವರಾಗಿಯೂ, ಸತ್ಯವಂತರಾಗಿಯೂ, ಕಠಿಣವಾಗಿ, ನಯವಾಗಿ, ಶ್ರಮಜೀವಿಗಳಾಗಿ ತಮ್ಮ ಸಾಮರ್ಥ್ಯವನ್ನು ಬಹಿರಂಗ ಗೊಳಿಸುವುದರಲ್ಲಿ ನಿಪುಣರಾಗಿಯೂ ಇದ್ದರು.

ಚೆಟ್ಟಿನಾಡು ಭಾಗದಲ್ಲಿರುವ ಮಹಡಿಗಳಲ್ಲಿರುವಂತಹ ಮುರದ ಕೆಲಸಗಳು ಮುಂದೆ ಬರುವ ಕಾಲದಲ್ಲಿ ಕಾಣಲು ಅಸಾಧ್ಯ ಎಂಬುದು ಎಲ್ಲರ ಅಭಿಪ್ರಾಯ.

ತಟ್ಟರ್ ಜಾತಿಗೆ ಸೇರಿದ ಕಮ್ಮಾಶರರಲ್ಲಿ ಕೆಲವರು ಸಂಘ ಪಂಡಿತರುಗಳಾಗಿ ಪ್ರಸಿದ್ಧಿಗೊಂಡಿದ್ದರು ಎಂಬುದು ಸಂತೋಷವನ್ನು ತರುವ ವಿಷಯ.

ಇಳಂದಟ್ಟನ್ ಮತ್ತು ಕಟ್ಟಿಪೇಳ್ವು ಪೆರುಂದಚ್ಚನ್ ಮುಂತಾದ ಪಂಡಿತರು ಹಾಡಿದ ಹಾಡು ಎಟ್ಟುತ್ತೊಗೈ ಕೃತಿಯಲ್ಲಿ ಒಂದಾಗಿರುವ ನಟ್ರಿಣೈಯಲ್ಲಿ ಕಂಡು ಬರುವ ವಿವರಗಳು ಇದಕ್ಕೆ ಉದಾಹರಣೆ. ಆ ಕಾಲದಲ್ಲಿ ಕಮ್ಮಾರರು ಮಾತ್ರ ಮರದ ಕೆಲಸದಲ್ಲಿ ತೊಡಗಿದ್ದರು. ಕಾಲ ಚಕ್ರದಲ್ಲಿ ಬದಲಾದ ಕಾರಣಗಳಿಂದ ಇಂದಿನ ದಿನಗಳಲ್ಲಿ (ಕಾಯಕ ಮತ್ತು ಸಂಪಾದನೆಯ ಆಧಾರದಲ್ಲಿ) ಹಲವಾರು ಜನಾಂಗಕ್ಕೆ ಸೇರಿದವರೂ ಮರಗೆಲಸದಲ್ಲಿ ತೊಡಗಿದ್ದಾರೆ. ಮಾತ್ರವಲ್ಲದೆ ಮರಗೆಲಸದಲ್ಲಿ ಯಂತ್ರಗಳ ಉಪಯೋಗವೂ ಅಧಿಕವಾಗತೊಡಗಿದೆ. ವೈಜ್ಞಾನಿಕ ಮುನ್ನಡೆಯಿಂದಾಗಿ ಕಾಂಕ್ರೀಟ್ ಮಹಡಿ, ಕಾಂಕ್ರೀಟ್ ಕಿಟಕಿ, ಕನ್ನಡಿ ಬಾಗಿಲುಗಳು, ಕಬ್ಬಿಣದಿಂದ ಮಾಡಲಾದ ಬಾಗಿಲು, ಮಹಡಿಗಳ ಉಪಯೋಗ, ಪ್ಲಾಸ್ಟಿಕ್ ಬಾಗಿಲುಗಳೂ ಮರದ ಕೆಲಸವನ್ನು ಕುಂಠಿತಗೊಳಿಸಿದೆ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ.

ಈ ಕಾರಣಗಳಿಂದ ಮರದ ಕೆಲಸ ಮಾಡುವವರ ಜೀವನಾಧಾರಕ್ಕೆ ತೊಂದರೆಯುಂಟಾಗಿದೆ. ಆದ್ದರಿಂದ ಮರದ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಕಮ್ಮಾರರು ಬೇರೆ ಕೆಲಸವನ್ನು ಹುಡುಕತೊಡಗಿದರು. ಗ್ರಾಮಗಳಿಂದ ನಗರದೆಡೆಗೆ ಆಗಮಿಸಿದ ಮರದ ಕೆಲಸ ಮಾಡುತ್ತಿದ್ದ ಕುಟುಂಬದವರು ತಮ್ಮ ಮಕ್ಕಳನ್ನು ಈಗಿನ ಜೀವನಕ್ಕೆ ತಕ್ಕುದಾದ ಪದವಿ, ಸ್ನಾತಕೋತ್ತರ ಪದವಿಗಳನ್ನು ಗಳಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಬೇರೆ ಕೆಲಸಗಳಲ್ಲಿ ತೊಡಗುವಂತೆ ಏರ್ಪಾಡುಗಳನ್ನು ಮಾಡುತ್ತಿದ್ದಾರೆ ಎಂಬುದು ಸತ್ಯ ವಿಷಯಗಳಾಗಿವೆ.

ಕೊಲ್ಲರ್ (ಕಮ್ಮಾರರು) : ಕಬ್ಬಿಣಕ್ಕೆ ಸಂಬಂಧಿಸಿದ ಕೆಲಸವನ್ನು ಮಾಡುವ ಇವರನ್ನು ಕೊಲ್ಲರ್ ಎನ್ನುವರು. ಇವರನ್ನು ಸಾಣದ ಗೋತ್ರದವರು (ಅಥವಾ ಮನು ಗೋತ್ರದವರು) ಎಂದು ಕರೆಯಲಾಗುತ್ತದೆ.

ಇವರಿಗೆ ಕೊಲ್ಲರ್‌ಗಳನ್ನು ಕರುಮಾನ್, ಕರುಮಶಾರರ್, ಕಮ್ಮಿಯಾರ್ ಎಂಬ ಹೆಸರುಗಳೂ ಇವೆ. ಸಾಮಾನ್ಯವಾಗಿ ಕಮ್ಮಾರರು ಎಲ್ಲರೂ ಕಬ್ಬಿಣಕ್ಕೆ ಸಂಬಂಧಿಸಿದ ಕಾಯಕವನ್ನೇ ಮಾಡಿದರೂ ಇವರೊಳಗೆ ‘ಕಬ್ಬಿಣ ಕೊಲ್ಲರ್’ ಎಂದು ಒಂದು ಉಪಜಾತಿಯೂ ಇದೆ ಎನ್ನಲಾಗಿದೆ.

ಕೊಲ್ಲಟ್ಟಿ ಅಥವಾ ಕೊಲ್ಲತ್ತಿ ಎಂಬುದು ಕೊಲ್ಲರ್ ಕುಲಸ್ತ್ರೀಯರಿಗೆ ಇರುವ ಹೆಸರು.

ಕೊಲ್ಲರ್ ಹಿಂದೆ ಯುದ್ಧಕ್ಕೆ ಬೇಕಾದ ಕತ್ತಿ, ಖಡ್ಗ, ಈಟಿ, ಕವಚ, ಕಬ್ಬಿಣದ ಸರಪಳಿ ಮುಂತಾದವುಗಳನ್ನು, ಮನೆಯಲ್ಲಿ ಉಪಯೋಗಿಸುವ ದೋಸೆ ಕಲ್ಲು, ಸಟ್ಟುಗ, ಕಬ್ಬಿಣದ ಸೌಟು, ಕಬ್ಬಿನ ರಸವನ್ನು ಕಾಯಿಸುವ ಕಬ್ಬಿಣದ ಕೊಪ್ಪರಿಗೆ, ಮದುವೆ ಮತ್ತು ಜಾತ್ರೆಯ ಸಮಯಗಳಲ್ಲಿ ಉಪಯೋಗಿಸುವ ಕಬ್ಬಿಣದ ಪಾತ್ರೆ ಮುಂತಾದವುಗಳನ್ನು ಹೆಚ್ಚಾಗಿ ತಯಾರಿಸಿದರು.

ಅಂದು ಕೊಡಲಿ, ಹಾರೆ, ತರಾಸು, ಬೀಗ, ಚಿಲಕ, ಸುತ್ತಿಗೆ ಮುಂತಾದ ಕಬ್ಬಿಣದ ಸಾಮಾನುಗಳನ್ನು ತಯಾರಿಸುವುದರಲ್ಲಿ ನಿಸ್ಸೀಮರಾಗಿದ್ದರು.

ಇವುಗಳನ್ನೆಲ್ಲ ಮಾಡುವುದಕ್ಕೆ ಇವರಿಗೆ ಪ್ರಯೋಜನವಾಗುವ ಸಾಧನಗಳು, ಸಮ್ಮಟ್ಟಿ, ಊದು ಕೊಳವೆ, ತುದುತ್ತಿ, ಪಟ್ಟೈ, ಒಲೆ, ಅಡಿಕೋಲು, ಬಿಸಿಕೋಲು, ಕುರಡು, ದೊಡ್ಡ ಸುತ್ತಿಗೆ, ಚಿಕ್ಕ ಸುತ್ತಿಗೆ, ಕುರುಕು, ನೀರ್ವಾಶಿ ಮೊದಲಾದವು.

ಅಂಜನ್ ಪಾಷಾಣಂ ಎಂಬ ಹೆಸರುಳ್ಳ ಒಂದು ಕಲ್ಲನ್ನು ಕೊಲ್ಲನ್ ಪಣೈ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು ಎಂದು ತಿಳಿದು ಬಂದಿದೆ.

ಕಮ್ಮಾರರು ಕೆಲಸ ಮಾಡುವ ಜಾಗ ಕಮ್ಮಾರ ಶಾಲೆ, ಕೊಲ್ಲನ್ ಒಲೆ ಸ್ಥಳ, ಕೊಲ್ಲನ್ ಒಲೆ ಜಾಗ, ಕೊಲ್ಲನ್ ಕಮ್ಮಾಲೈ ಮುಂತಾದ ಹಲವು ಹೆಸರುಗಳಿಂದ ಕರೆಯಲಾಗುತ್ತದೆ.

ತೆಲುಗು ಮಾತನಾಡುವ ಕಮ್ಮಾಶರುಗಳಲ್ಲಿ ಕೊಲ್ಲರ್ ಜಾತಿಯವರನ್ನು ‘ಕಮ್ಮರ್’ ಎಂದು ಹೇಳಲಾಗುತ್ತದೆ. ಬೇರೆ ಊರುಗಳಿಂದ ಬಂದ ಕಮ್ಮಾರರನ್ನು ‘ಬೈಟ್ಟಕಮ್ಮರ್’ ಎಂದು ಊರಿನವರು ಹೇಳುತ್ತಾರೆಂಬುದನ್ನು ಇಲ್ಲಿ ತಿಳಿಸಲೇಬೇಕು.

ಮಲೆಯಾಳ ಭಾಷೆ ಮಾತನಾಡುವ ಕಮ್ಮಾಶರ ಉಪಜಾತಿಯವರಾದ ಕೊಲ್ಲರ್‌ಗಳನ್ನು ‘ಕೊಲ್ಲ ಕುರುಪ್ಪು’ ಎಂದು ಹೇಳುತ್ತಾರೆಂದು ಮಲಬಾರ್ ಜಿಲ್ಲೆಯ ವಿವರಗಳು ತಿಳಿಸುತ್ತವೆ. ಕೇರಳ ಕೊಲ್ಲರುಗಳಲ್ಲಿ ತೀಕೊಲ್ಲನ್, ಇರುಂಬು ಕೊಲ್ಲನ್, ಪೆರುಂಕೊಲ್ಲನ್ ಹಾಗೂ ತೀಟೆಂರುಂಕೊಲ್ಲನ್ ಎನ್ನುವವರು ಮುಖ್ಯವಾದವರೆಂದು ಪರಿಗಣಿಸಲಾಗಿದೆ. ಕಡೈಚರ್ ಕೊಲ್ಲನ್ ಮತ್ತು ತೋರ್ ಕೊಲ್ಲನ್ ಮೊದಲಾದ ಎರಡು ವಿಭಾಗದವರು ಇದ್ದಾರೆ. ಅವರು ಮಾಡುವ ಕೆಲಸದ ಕಾರಣಕ್ಕಾಗಿ ಇವರನ್ನು ಸ್ವಲ್ಪ ಕೀಳು ಜಾತಿಯವರೆಂದು ಹೇಳುತ್ತಾರೆ.

ಏಳು ಊರುಗಳಿಗೆ ಸಾಮಾನ್ಯವಾಗಿ ಒಂದು ‘ಕಮ್ಮಾರರ ಜಾತಿ’ ಆ ದಿನಗಳಲ್ಲಿ ಇತ್ತೆಂದು ಸಂಘ ಕಾವ್ಯಗಳ ಮೂಲಕ ತಿಳಿದುಬರುತ್ತದೆ. ಮಾತ್ರವಲ್ಲದೆ ಬಹಳ ದೊಡ್ಡ ಆಯುಧ ಕಾರ್ಖಾನೆಗಳೂ, ರಿಪೇರಿ ಮಾಡುವ ಶಾಲೆಗಳೂ ಇದ್ದವೆಂಬುದನ್ನು ಸಂಘ ಕಾವ್ಯಗಳು ನಮಗೆ ತಿಳಿಸುತ್ತವೆ.

ಕಮ್ಮಾರರ ಜಾತಿಯಲ್ಲಿ ಕೊಲ್ಲನ್ ಅಳಿಸಿ, ಮದುರೈ ಕೊಲ್ಲನ್ ಪುಲ್ಲನ್, ಮದುರೈ ಪೆರುಂಗೊಲ್ಲನ್ ಮೊದಲಾದ ಪಂಡಿತರು ಹಾಡಿರುವ ಹಾಡುಗಳು ಸಂಘ ಕಾವ್ಯಗಳಲ್ಲಿ ಒಂದಾದ ಕುರುಂದೊಗೈಯಲ್ಲಿ ಕಂಡುಬರುತ್ತದೆ.

ಕೊಲ್ಲರು ತಯಾರಿಸಿದ ಆ ಕಾಲದ ಯುದ್ಧದ ಅಸ್ತ್ರಗಳು ಅಧಿಕವಾಗಿ ಉಪಯೋಗಿಸಲ್ಪಟ್ಟ ಕವಚ, ಖಡ್ಗ, ಈಟಿ ಮೊದಲಾದವುಗಳು ಈ ಕಾಲದ ಯುದ್ಧಗಳಲ್ಲಿ ಉಪಯೋಗಿಸುವುದಿಲ್ಲ. ವ್ಯವಸಾಯದಲ್ಲಿ ಉಪಯೋಗಿಸುವ ಸಾಮಗ್ರಿಗಳೂ ಮನೆಯಲ್ಲಿ ಉಪಯೋಗಿಸುವ ಸಲಕರಣೆಗಳೂ ಈ ಕಾಲದಲ್ಲಿ ಯಂತ್ರಗಳ ಮೂಲಕ ಹೆಚ್ಚಾಗಿ ತಯಾರಿಸಲಾಗುತ್ತದೆ. ಆದ್ದರಿಂದ ಕೊಲ್ಲರುಗಳ ಕಾಯಕ ಸಾಮಾನ್ಯವಾಗಿ ನಶಿಸಿ ಹೋಗಿದೆ. ಈ ಕಾರಣದಿಂದ ಪರಂಪರೆಯಾಗಿ ಕೊಲ್ಲರ್ ಜಾತಿಗೆ ಸೇರಿದ ಕಮ್ಮಾಳರು ತಮ್ಮ ಕಬ್ಬಿಣದ ಕೆಲಸವನ್ನು ತ್ಯಜಿಸಿ ತಮ್ಮ ಜೀವನಾಧಾರಕ್ಕಾಗಿ ಬೇರೆ ಉದ್ಯೋಗಗಳಿಗೆ ಹೋಗಲು ತೊಡಗಿರುವುದನ್ನು ಕಾಣುತ್ತೇವೆ.

ಕನ್ನಾರ್ : ಕಮ್ಮಾಳರ್ ಎನ್ನುವ ವಿಶ್ವಕರ್ಮ ಸಮುದಾಯದವರಲ್ಲಿ ತಾಮ್ರ, ಹಿತ್ತಾಳೆ ಮುಂತಾದ ಲೋಹಗಳನ್ನು ಉಪಯೋಗಿಸಿ ಲೋಹ ಕೆಲಸ ಮಾಡುವವರನ್ನು ಕನ್ನಾರ್ ಎನ್ನಲಾಗುತ್ತದೆ. ಇವರ ಗೋತ್ರ ಅಡಿವಸೈ (ಅಥವಾ ದುವಸ್ಟಾ) ಗೋತ್ರ. ಕಂಜರ‍್ಯಾರದ್, ಕನ್ನುವರ್ ಮೊದಲಾದ ಹೆಸರುಗಳೂ ಇವರಿಗಿದೆ.

ಕಞ್ ಕುಲಸ್ತ್ರೀಯರನ್ನು ಕನ್ನಾತ್ತಿ, ಕನ್ನಾಚ್ಚಿ ಮೊದಲಾದ ಹೆಸರುಗಳಿಂದ ಕರೆಯುತ್ತಾರೆ.

ಕನ್ನಾರ್ ಕೆಲಸ ಮಾಡುವ ಸ್ಥಳವನ್ನು ಕಮ್ಮಾರ್ ಎಂದು ಕರೆಯಲಾಗುತ್ತದೆ.

ದೊಡ್ಡ ಸುತ್ತಿಗೆ, ಲೋಹ ಕತ್ತರಿ, ಕಬ್ಬಿಣ ಕುತ್ತೂಸಿ, ಪಟ್ಟೆ ಚರ್ಮ, ಸಣ್ಣ ಕೊರಡು, ಅಚ್ಚು ಮತ್ತು ಮೇಣ ಮೊದಲಾದುವುಗಳನ್ನು ಇವರು ತಮ್ಮ ಕೆಲಸಕ್ಕೆ ಸಹಕರಿಸುವ ಸಾಧನವಾಗಿ ಉಪಯೋಗಿಸುತ್ತಾರೆ.

ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಮನ್ನಾರ್ ಕೋಯಿರ್, ನಾಗೈಕ್ಕುಳಂ, ಬ್ರಹ್ಮದೇಶಂ ಮೊದಲಾದ ಊರುಗಳಲ್ಲಿ ಪಾತ್ರೆಗಳನ್ನು ಮಾಡುವ ಕನ್ನಾರ್‌ಗಳು ಅಧಿಕವಾಗಿ ಇದ್ದಾರೆ. ತಿರುವಾರೂರು ಜಿಲ್ಲೆಯಲ್ಲಿರುವ ನಾಟ್ಟಿಯಾರ್ ದೇಗುಲ, ತಂಙೈ ಜಿಲ್ಲೆಯಲ್ಲಿರುವ ಕುಂಭಕೋಣಂ, ಸ್ವಾಮಿಮಲೈ ಮೊದಲಾದ ಊರುಗಳಲ್ಲಿ, ವಿರುಪ್ಪುರಂ ಜಿಲ್ಲೆಯ ಅನಂತಪುರಂ ಮೊದಲಾದ ಊರುಗಳಲ್ಲೂ ಹಿತ್ತಾಳೆ ಮತ್ತು ತಾಮ್ರ ಮೊದಲಾದ ಲೋಹಗಳಿಂದ, ಪಂಚಲೋಹ ಎನ್ನುವ ಲೋಹದಿಂದಲೂ ಸ್ವಾಮೀ ಮತ್ತು ಅಮ್ಮನ್ ಶಿಲೆಗಳನ್ನು, ದೈವಗಳಿಗೆ ವಾಹನಗಳಾಗಿರುವ ವಿಗ್ರಹಗಳು, ಗೋಪುರಗಳ ಮೇಲೆ ಇಡುವ ಕಲಶಗಳು ಮುಂತಾದವುಗಳನ್ನು ವಿಶೇಷವಾಗಿ ಮಾಡುವ ಕನ್ನಾರ್ ಎನ್ನುವ ಕಮ್ಮಾಳರು ಅಧಿಕವಾಗಿದ್ದಾರೆ. ಇದು ಮಾತ್ರವಲ್ಲದೆ ಇವರು ದೀಪ, ಹಣತೆ, ಕಾಮಾಕ್ಷಿ ದೀಪ, ಬಾಳೆ ದೀಪ ಮೊದಲಾದ ಬಗೆ ಬಗೆಯ ದೀಪಗಳನ್ನು ಮಾಡುವುದರಲ್ಲಿಯೂ ಬಹಳ ಪ್ರಸಿದ್ಧರಾಗಿದ್ದಾರೆ.

ಹೀಗೆಯೇ ಕೇರಳ ರಾಜ್ಯದಲ್ಲಿರುವ ಕುಂಶಿ ಮಂಗಲಂ, ಚೆರುಪತ್‌ಚೇರಿ ಮುಂತಾದ ಊರುಗಳಲ್ಲಿ ಬಹಳ ಅಂದವಾಗಿ ಲೋಹ ಪಾತ್ರೆಗಳನ್ನು ತಯಾರಿಸುವ ಕಇರುಗಳು ಇದ್ದಾರೆ. ಇವರನ್ನು ‘ಮೂಚಾರಿ’ ಎಂಬ ಹೆಸರಿನಿಂದ ಕರೆಯುತ್ತಾರೆ.

ಜಗದ ಎಲ್ಲರೂ ಆಶ್ಚರ್ಯ ಪಡುವಂತೆ ಲೋಹದಿಂದ ಮಾಡಲಾದ ನಟರಾಜ ವಿಗ್ರಹಗಳೂ, ನುಣುಪಾದ ಕಾರ್ಯದಿಂದ ಕೂಡಿದ ಅಮ್ಮನ್ ವಿಗ್ರಹಗಳೂ ಆಶ್ಚರ್ಯದಿಂದ ಕೂಡಿದ ದೀಪದ ಬಗೆಗಳೂ ಕನ್ನಾರುಗಳ ಕಲಾ ವೈಭವಕ್ಕೆ ಚಾಕಚಕ್ಯತೆಗೆ ಉದಾಹರಣೆಗಳಾಗಿವೆ.

ಮುಂದೆ ಆಂಗ್ಲರ ಆಳ್ವಿಕೆಯಲ್ಲಿ ವಿದೇಶಗಳಿಂದ ಎನಾಮಲ್ ಪಾತ್ರೆಗಳನ್ನೂ ಅಲ್ಯೂಮಿನಿಯಂ ಪಾತ್ರೆಗಳನ್ನೂ ಕನ್ನಡಿ ವಿದ್ಯುದ್ದೀಪಗಳನ್ನು ಅಧಿಕವಾಗಿ ಆಮದು ಮಾಡಲಾಯಿತು. ಸ್ಟೀಲ್ ಪಾತ್ರೆಗಳು, ಅಲ್ಯೂಮಿನಿಯಂ ಪಾತ್ರೆಗಳು, ವಿದ್ಯುದ್ದೀಪಗಳು ಅಧಿಕವಾಗಿರುವುದರಿಂದ ಕಲಾ ನೈಪುಣ್ಯತೆಯಿಂದ ಕೂಡಿದ್ದ ತಾಮ್ರ ಹಾಗೂ ಪಂಚಲೋಹಗಳಿಂದ ಮಾಡಲಾದ ಪಾತ್ರೆಗಳನ್ನು, ದೀಪಗಳನ್ನು ಮತ್ತು ಕಲಾವಸ್ತುಗಳನ್ನು ಉಪಯೋಗಿಸುವುದು ಕುಂಠಿತಗೊಂಡಿತು. ಆದ್ದರಿಂದ ಕನ್ನಾರರ ಕಸುಬು ಕುಂಠಿತವಾಯಿತು. ಎಲ್ಲವೂ ಯಂತ್ರಮಯವಾಗಿರುವ ಈ ಕಾಲದಲ್ಲಿ ಕೈ ಸಾಮರ್ಥ್ಯವನ್ನು ನಂಬಿ ಬಾಳಿದ ಇವರಲ್ಲಿ ಹಲವರು ತಮ್ಮ ಪಾರಂಪರಿಕ ಕಸುಬನ್ನು ಬಿಟ್ಟು ಬೇರೆ ಹಲವು ಕಸುಬುಗಳನ್ನು ಹುಡುಕಿ ಹೋದರು ಎಂದು ತಿಳಿದು ಬರುತ್ತದೆ.

ಶಿಲ್ಪಿ (ಸ್ಥಪತಿ) : ಕಲ್ಲಿನಲ್ಲಿ ಶಿಲ್ಪ ಕೆಲಸವನ್ನು ಮಾಡುವ ಕಮ್ಮಾಳರುಗಳಿಗೆ ‘ಶಿಲ್ಪಿಗಳು’ ಎಂದು ಹೆಸರು. ಸಂಸ್ಕೃತದಲ್ಲಿ ಇವರನ್ನು ‘ಸ್ಥಪತಿ’ ಎಂದು ಕರೆಯಲಾಗುತ್ತದೆ. ‘ತಪತಿ’ ಎನ್ನುವ ಪದಕ್ಕೆ ಸ್ಥಳ ನಿರ್ಮಾಣ ಮೊದಲಾದವುಗಳನ್ನು ಮಾಡುವ ಶಾಸ್ತ್ರಿ ಎಂದು ಅರ್ಥವಿದೆ ಎಂದು ಹೇಳುವರು.

ಕಲ್ಲಿನ ಕೆಲಸಗಾರರು, ಕಲ್ಟಿನೈಯರ್, ಶಿಲ್ಪಾಸಿರಿಯರ್, ಮಣ್ಣೀಪ್ಚಾಶರ್, ಕ್ರಮ ತಿಳಿದವರು ಮುಂತಾದ ಬೇರೆ ಹಲವು ಹೆಸರುಗಳೂ ಶಿಲ್ಪಿ ಎನ್ನುವ ಸ್ಥಪತಿಗೆ ಇವೆ.

ಶಿಲ್ಪ ಕಸುಬು ಮನೆ ಕಟ್ಟುವುದು, ದೇವಾಲಯ ನಿರ್ಮಾಣ ಮುಂತಾದ ಕಲ್ಲು ಶಿಲ್ಪ ಕೆಲಸ, ಕೆತ್ತುವ ಕೆಲಸ, ಕಲ್ಲು ಕೆಲಸ ಮುಂತಾದ ಹಲವನ್ನು ದೊಂದಿದ್ದಾಗಿರುತ್ತದೆ.

ಶಿಲ್ಪ ಕಸುಬಿಗೆ ಸಲಕರಣೆಗಳಾಗಿ ಕಪ್ಪು ಕಲ್ಲು, ಮರ, ಮಣ್ಣು, ಲೋಹ, ಇಟ್ಟಿಗೆ, ಸುಣ್ಣ, ದಂತ, ಬಣ್ಣ, ಖಂಡ ಸಕ್ಕರೆ, ಮೇಣ, ಸೀಲೈ ಮುಂತಾದವುಗಳಾಗಿವೆ.

ಶಿಲ್ಪಿಗಳು ಜೀವಿಸುವ ಬೀದಿಯನ್ನು   ‘ಆವೇಸನಂ’ ಎಂದು ಕರೆಯುತ್ತಾರೆ. ಶಿಲ್ಪಿಗಳು ಕೆಲಸ ಮಾಡುವ ಕಸುಬಿನ ಸ್ಥಳಕ್ಕೆ ‘ಶಿಲ್ಪಿಶಾಲೆ’ ಎಂದು ಕರೆಯಲಾಗುತ್ತದೆ. ಶಿಲ್ಪಿಗಳಲ್ಲಿ ಕಲ್ಲು ತಚ್ಚರ್ ಅಥವಾ ಕಲ್ಲಾಚಾರಿ ಎಂಬ ಉಪಜಾತಿಯಿದೆ. ಇವರು ಅಮ್ಮಿ, ಅರೆಯುವ ಕಲ್ಲು, ಕುತ್ತು ಕಲ್ಲು ಮುಂತಾದವರೂ ಇದ್ದಾರೆ. ತಿರುನೆಲ್ವೇಲಿ ಜಿಲ್ಲೆಯ ಅಂಬಾಸಮುದ್ರಂ, ತೂತ್ತುಕ್ಕುಡಿ ಜಿಲ್ಲೆಯ ಕಳುದು ಮಲೈ ಮತ್ತು ಮದುರೈ ಪಕ್ಕದ ಪಶುಬುಲೈ ಮುಂತಾದ ಭಾಗಗಳಲ್ಲಿ ಹಲವು ಜನರಿದ್ದಾರೆ.

ಶಿಲ್ಪ ಶಾಸ್ತ್ರವನ್ನು ಅರಿತು ಶಿಲ್ಪಗಳನ್ನು ಕೆತ್ತುವ ಶಿಲ್ಪಿಗಳಿಗೂ ಇವರಿಗೂ ನಡುವೆ ಭೇದವಿದೆ ಎಂದು ತಿಳಿಯುತ್ತದೆ.

ಶಿಲ್ಪ ಶಾಸ್ತ್ರಗಳು ಎಂದು ಹೆಸರಿರುವ ಹಲವು ಪುಸ್ತಕಗಳು ದೇವಾಲಯ ಮುಂತಾದವುಗಳನ್ನು ಕಟ್ಟುವ ಕಲಾ ಜ್ಞಾನದ ಕುರಿತು ಹಲವು ವಿವರಗಳನ್ನು ಹೊಂದಿರುತ್ತವೆ. ಶಿಲ್ಪ ಪುಸ್ತಕ ಅಥವಾ ಶಿಲ್ಪ ಶಾಸ್ತ್ರವನ್ನು ‘ಗಮ್ಮಿಯ ನೂರ್’ ಎಂದೂ ಕರೆಯುತ್ತಾರೆ. ಈ ಬಗೆಯ ಶಿಲ್ಪ ಶಾಸ್ತ್ರ ಪುಸ್ತಕಗಳು ಒಟ್ಟು ೩೨ ಇವೆ.

ಈ ಪುಸ್ತಕಗಳು ಮಯ ಮತ್ತು ವಿಶ್ವಕರ್ಮನಿಂದಲೂ ಇನ್ನೂ ಹಲವರಿಂದಲೂ ಹೇಳಲ್ಪಟ್ಟವು ಎಂದು ತಿಳಿದುಬರುತ್ತದೆ. ಇವುಗಳಲ್ಲಿ ಪ್ರಥಮ ಪುಸ್ತಕ ‘ಶಿವಾನಮಂಗಳ್’ ಎಂದು ಹೇಳಲಾಗುತ್ತದೆ.

ತಮಿಳುನಾಡಿನಲ್ಲಿ ಮಹಾಬಲಿಪುರಂ ಗುಹಾಂತರ ದೇವಾಲಯಗಳು ಮತ್ತು ತಂಜೈ, ಮದುರೈ, ತಿರುನೆಲ್ವೇಲಿ, ಶ್ರೀವಿಲ್ಲಿಪುತ್ತೂರು, ತಿರುಚೆಂದೂರ್ ಖಾಲೈಯಾರ್ ಕೋಯಿಲ್, ತಿರುವಣ್ಣಾಮಲೈ ಮುಂತಾದ ಸ್ಥಳಗಳಲ್ಲಿರುವ ದೊಡ್ಡ ದೇವಾಲಯಗಳು ಹಾಗೂ ಗೋಪುರಗಳು ಮೊದಲಾದುವು ಶಿಲ್ಪಿಗಳ ಕೈಚಳಕವನ್ನು ಆಶ್ಚರ್ಯಗೊಳಿಸುವಂತಹ ವಿಷಯಗಳಾಗಿವೆ.

ಇತ್ತೀಚಿನ ರಚನೆಗಳಾದ ಚೆನ್ನೈಯಲ್ಲಿರುವ ವಳ್ಳುವರ್ ಕೋಟ್ಟಂ, ಕನ್ಯಾಕುಮಾರಿಯಲ್ಲಿರುವ ತಿರುವಳ್ಳುವರ್ ಪ್ರತಿಮೆ ಮುಂತಾದುವು ಆಶ್ಚರ್ಯಗೊಳಿಸುವ ಶಿಲ್ಪ ಕಲೆಗೆ ಉದಾಹರಣೆಗಳಾಗಿವೆ.

ತಮಿಳುನಾಡು ಸರಕಾರ ಮಾಮಲ್ಲಪುರದಲ್ಲಿ ಶಿಲ್ಪ ಕಾಲೇಜು ಒಂದನ್ನು ಸ್ಥಾಪಿಸಿ ಶಿಲ್ಪ ಕಲೆಯನ್ನು ವಿಶೇಷವಾಗಿ ಬೆಳೆಸುತ್ತಿರುವುದೂ, ಅದರಲ್ಲಿ ಶಿಲ್ಪಿ (ಸ್ಥಪತಿ) ಕುಟುಂಬಕ್ಕೆ ಸೇರಿದ ಹಲವರು, ಬೇರೆ ಜಾತಿಯವರೂ ಕಲಾಚಾತುರ್ಯದ ನಿಟ್ಟಿನಲ್ಲಿ ಶಿಲ್ಪ ಕಲೆ ಕಲಿಯುವುದನ್ನು ಇಲ್ಲಿ ತಿಳಿಸಲೇಬೇಕು.

ಮಾನವ ಜೀವನಕ್ಕೆ ಮೂಲಾಧಾರಗಳಾಗಿರುವ ಆಹಾರ ತಯಾರಿಕೆಗೆ ಬೇಕಾದ (ಕಂಚು ಮತ್ತು ಹಿತ್ತಾಳೆ) ಪಾತ್ರೆಗಳನ್ನು ಕತ್ತಲೆಯನ್ನು ಮರೆಮಾಡುವ ದೀಪಗಳನ್ನು ಕನ್ನಾರ್ ತಯಾರಿಸಿದರು. ವಾಸಿಸುವ ಮನೆಗೆ ಬೇಕಾದ ತೊಲೆ, ಕಿಟಕಿ ಮತ್ತು ಬಾಗಿಲುಗಳನ್ನು ವ್ಯವಸಾಯಕ್ಕೆ ಬೇಕಾದ ನೇಗಿಲು ಮುಂತಾದವುಗಳನ್ನು ಬಡಗಿಗಳು ತಯಾರಿಸಿದರು. ವೀರ, ಕೀಲು, ಆಣಿ, ಸುತ್ತಿಗೆ, ಹಾರೆ, ದೋಸೆಕಲ್ಲು, ಸಟ್ಟುಗ ಮತ್ತು ಕೊಟ್ಟರಿಗಗಳು ಮುಂತಾದವುಗಳನ್ನು ಕಮ್ಮಾರರು ತಯಾರಿಸಿದರು. ಮನಸ್ಸು ಶಾಂತಿಯಿಂದಿರಲು ಬೃಹದಾಕಾರದ ದೇವಾಲಯಗಳನ್ನು, ಕಲ್ಲಿನ ಶಿಲ್ಪಗಳನ್ನು ಶಿಲ್ಪಿಗಳು ಮಾಡಿದರು. ಒಟ್ಟಾರೆಯಾಗಿ ಜನರ ಜೀವನಾಧಾರವಾಗಿ ‘ಕರಕುಶಲ ಕಲೆಗಾರರು’ ಎಂದು ವಿಶೇಷವಾಗಿ ಹೇಳುವ ವಿಶ್ವಕರ್ಮರು ಪ್ರಸಿದ್ಧರು.

ಆದರೆ ಕಾಲಾಂತರದಲ್ಲಿ ಏರ್ಪಟ್ಟ ಬದಲಾವಣೆಗಳಿಂದ ವಿಶ್ವಕರ್ಮ ಸಮುದಾಯವು ತಮ್ಮ ಕಸುಬನ್ನು ಬೇರೆ ಬೇರೆ ಕಾರಣಗಳಿಂದಾಗಿ ಶಾಸ್ತ್ರೀಯವಾಗಿ ಕಲಿಯುವುದನ್ನು ಬಿಟ್ಟು ಬಡತನದಿಂದ ಹಲವರು ಬೇರೆ ಕಸುಬನ್ನು ಹುಡುಕಿ ಹೋದರು ಎಂಬುದು ಲೋಕ ತಿಳಿದ ಸತ್ಯವಾಗಿದೆ.

ಕೆ.ಎಸ್.ಎನ್. ಅನುವಾದ ಕೆ.ಕೆ.ಎ.