ವೆಂಗಲರಾಜನ್ ಕದೈ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಾದ ತಿರುನೆಲ್ವೇಲಿ, ತೂತ್ತುಕುಡಿ ಮತ್ತು ಕನ್ಯಾಕುಮಾರಿ ಜಿಲ್ಲೆಯಲ್ಲಿ ರೂಢಿಯಲ್ಲಿರುವ ಕಥನ ಗೀತೆಗಳಲ್ಲಿ ಒಂದು ವೆಂಗಲರಾಜನ ಕಥೆ. ಇದು ಆರುಮುಗನಾಯರ್ ಎಂಬುವರಿಂದ ವಿಲ್ಲುಪಾಟ್ಟು ಎಂಬ ಪ್ರದರ್ಶಕ ಕಲೆಯಲ್ಲಿ ಬಳಸುವ ಹಾಡು.

ವಿಲ್ಲುಪಾಟ್ಟಿನಲ್ಲಿ ಹಾಡುವ ವೆಂಗರಾಜನ ಕಥೆಯಲ್ಲಿ ೨೪೦೦ ಸಾಲುಗಳಿವೆ. ನಾಡಾರ್ ಜನರ ಉಗಮದ ಪುರಾಣ, ಭದ್ರಕಾಳಿಯಮ್ಮನ್ ಪುರಾಣ, ವಲಂಗೈಯರ್ ಉಗಮ ಮತ್ತು ವಲಂಗೈ ಮೂಲದ ವೆಂಗರಾಜನ್ ಎಂಬ ರಾಜನ ಕಥೆ ಮುಂತಾದ ಉಪಕಥೆಗಳಿವೆ. ವೆಂಗರಾಜನ ಕಥೆ ಹೀಗಿದೆ :

ಪರಮೇಶ್ವರಿ ಎಂಬ ಮಹಾಕಾಳಿ ಭೂಲೋಕವನ್ನು ರಾಜ್ಯಭಾರ ಮಾಡುತ್ತಿದ್ದ ವೇಳೆ, ಸ್ವರ್ಗಲೋಕದಿಂದ ಸಪ್ತಕನ್ಯೆಯರು ಏಲಾಸಿನಿ ಎಂಬ ಸರೋವರದಲ್ಲಿ ಸ್ನಾನಗೈಯಲು ಬಂದರು. ಇದನ್ನು ನೋಡಿದ ವಿದ್ಯಾಧರ ಎಂಬ ಋಷಿ ಏಳು ಕನ್ನಿಕೆಯರನ್ನು ಯಕ್ಷಿಣಿ ವಿದ್ಯೆಯಿಂದ ಒಲಿಸಿಕೊಳ್ಳಲು, ಏಳು ಮಂದಿ ಬಾಲಕರು ಹುಟ್ಟಿದರು. ಬಾಲಕರೊಂದಿಗೆ ಸ್ವರ್ಗಲೋಕಕ್ಕೆ ಹಿಂದಿರುಗಲಾಗದೆ ಆ ಕನ್ಯೆಯರು ತಮ್ಮ ಮಕ್ಕಳನ್ನು ಕಾಳಿಯ ಬಳಿ ಬಿಟ್ಟು ಹೋದರು. ಕಾಳಿ ಏಳು ಬಾಲಕರಿಗೂ ಹಾಲುಣಿಸಿ ಸಾಕಿ ಸಕಲ ವಿದ್ಯಾ ಪಾರಂಗತರನ್ನಾಗಿ ಮಾಡಿದಳು. ಬೆಳೆದ ಬಾಲಕರು (ವಲಂಗೈಯರ್) ಏಳು ಹೆಣ್ಣುಗಳನ್ನು ವರಿಸಿ, ತಮ್ಮ ತಂದೆ ವಿದ್ಯಾಧರನನ್ನು ಸ್ಮರಿಸುತ್ತಾ ಭೂಮಿಯಲ್ಲಿ ಅಭಿವೃದ್ಧಿಯಾದರು. ಚೋಳರಾಜ ಇವರ ವೀರ ಧೀರ ಕಾರ್ಯಗಳನ್ನು ಕೇಳಿ ತನ್ನ ಸೇನಾಧಿಪತಿಗಳನ್ನಾಗಿ ಮಾಡಿಕೊಂಡ.

ಒಂದು ದಿನ ಕಾವೇರಿ ನದಿಯಲ್ಲಿ ಪ್ರವಾಹ ಉಕ್ಕಿ ಹರಿದಾಗ ಚೋಳ ರಾಜ ವಲಂಗೈಯರನ್ನು (ಏಳುಮಂದಿ) ಕರೆದು ಮಣ್ಣು ಹೊತ್ತು ತಂದು ಕಾವೇರಿಯ ದಂಡೆಯನ್ನು ಮುಚ್ಚುವಂತೆ ಆಜ್ಞಾಪಿಸಿದ. ಆದರೆ ಅವರಾದರೋ ರಾಜ ಏನು ಹೇಳಿದರೂ ಮಾಡುತ್ತೇವೆ, ಆದರೆ ಮಂಕರಿ ಹೊತ್ತು ಮಣ್ಣು ಹೊರುವ ಕಾರ್ಯ ಮಾಡುವುದಿಲ್ಲ ಎಂದು ನಿರಾಕರಿಸಿದರು. ಕೋಪಗೊಂಡ ರಾಜ ಏಳು ಮಂದಿಯನ್ನು ಹತ್ಯೆಗೈಯುವಂತೆ ಆದೇಶಿಸಿದ. ರಾಜನ ಸೇವಕ ವಲಂಗೈಯರ್ ನಾಯಕರಲ್ಲೊಬ್ಬನ ತಲೆಯನ್ನು ಕಡಿಯುವಾಗ, ಕಡಿದ ತಲೆ “ರಾಜಾ ! ಗುಡುಗುಡು ಎಂದರೂ ಮಂಕರಿಯನ್ನು ಮುಟ್ಟೇವು” ಎಂದು ಹೇಳಿತು. ಬಳಿಕ ಮತ್ತೊಬ್ಬ ನಾಯಕನ ತಲೆಯನ್ನು ಕಡಿದಾಗಲೂ, ಕಡಿದ ಮೇಲೆ ಹಾಗೆಯೇ ಧ್ವನಿ ಮಾಡಿತು. ಇದನ್ನು ಆಲಿಸಿದ ರಾಜ ಉಳಿದ ವಲಂಗೈನಾಯಕರಲ್ಲಿ ಐವರನ್ನು ಬಿಡುಗಡೆ ಮಾಡಿದ.

ವಲಂಗೈಯರ್ ನಾಯಕರಲ್ಲಿ ಒಬ್ಬನಾದ ವೆಂಗಲರಾಜನ್ ದಕ್ಷಿಣಾಭಿಮುಖವಾಗಿದ್ದ ಲಂಕೆಗೆ ಹೋಗಿ ದೊಡ್ಡ ಪಡೆಯನ್ನು ಕಟ್ಟಿದ. ವಲಂಗೈಯರ ತಂದೆ ವಿದ್ಯಾಧರ ಅಲ್ಲಿಗೆ ತೆರಳಿ ಕಬ್ಬಿಣದ ವಸ್ತುಗಳನ್ನು ಚಿನ್ನವನ್ನಾಗಿಸುವ ವನಸ್ಪತಿ ರಸವನ್ನು ನೀಡಿದ. ವಲಂಗೈ ನಾಯಕ ವೆಂಗಲರಾಜನ್ ಕಬ್ಬಿಣದ ವಸ್ತುಗಳನ್ನು ಚಿನ್ನವನ್ನಾಗಿಸಿ ದೊಡ್ಡ ಪ್ರಮಾಣದಲ್ಲಿ ಹಣ ಸಂಪಾದನೆ ಮಾಡಿದ. ಇದನ್ನು ತಿಳಿದ ಬ್ರಿಟಿಷರು ವೆಂಗಲರಾಜನ್ ನಾಯಕನನ್ನು ಹಿಡಿಯಲು ಉಪಾಯ ಹೂಡಿದರು. ವೆಂಗಲರಾಜನ್‌ಗೆ ಈ ವಿಷಯ ತಿಳಿದು, ಲಂಕೆಯಿಂದ ತಪ್ಪಿಸಿಕೊಂಡು ಮತ್ತೆ ತಮಿಳುನಾಡಿಗೆ ಬಂದು, ಕನ್ಯಾಕುಮಾರಿ ಜಿಲ್ಲೆ ಪರಕ್ಕೈ ಸಮೀಪದಲ್ಲಿ ಒಂದು ಕೋಟೆಯನ್ನು ನಿರ್ಮಿಸಿ ವಾಸ ಮಾಡತೊಡಗಿದ.

ವೆಂಗಲರಾಜನ್‌ನ ಇಬ್ಬರು ಪುತ್ರಿಯರು ಹತ್ತಿರದಲ್ಲಿ ನಡೆಯುತ್ತಿದ್ದ ಉತ್ಸವವನ್ನು ನೋಡಲು ಹೋಗುತ್ತಾರೆ. ಇವರಿಬ್ಬರ ಸೌಂದರ್ಯಕ್ಕೆ ಮಾರು ಹೋದ ವಾಂಜಿರಾಜ ವೆಂಗಲರಾಜನ್ ಬಳಿ ಹೆಣ್ಣು ಕೇಳಲು ಬರುವನು. ಹೆಣ್ಣು ಕೊಡಲು ವೆಂಗಲರಾಜ ನಿರಾಕರಿಸಲು, ವಾಂಜಿಯ ರಾಜ ಅವನೊಂದಿಗೆ ಯುದ್ಧ ಮಾಡುವನು. ಸೈನ್ಯ ಬಲವಿಲ್ಲದ ವೆಂಗಲರಾಜನ್ ಮಗಳ ಕೋರಿಕೆಯಂತೆ ಆಕೆಯ ತಲೆಯನ್ನು ಕಡಿದು ಕೋಟೆಯ ಹೊರಗೆಸೆಯಲು, ಅದನ್ನು ತೆಗೆದುಕೊಂಡು ವಾಂಜಿಯ ರಾಜ ಅರಮನೆಗೆ ಹಿಂದಿರುಗುತ್ತಾನೆ.

ವಾಂಜಿ ರಾಜನ ಕಿರುಕುಳಕ್ಕೆ ಅಂಜಿದ ವೆಂಗಲರಾಜನ್ ತನ್ನ ಮತ್ತೊಬ್ಬ ಮಗಳೊಂದಿಗೆ ಕುರುಂಬೂರ್ ಎಂಬ ಸ್ಥಳಕ್ಕೆ ಹೋಗಿ ನೆಲೆಸುತ್ತಾನೆ. ಕುರುಂಬೂರು ರಾಜ, ವೆಂಗಲರಾಜನ ಎರಡನೆಯ ಮಗಳ ಕೇಶ ಸೌಂದರ್ಯಕ್ಕೆ ಮರುಳಾಗಿ ಸೆಯ್‌ಕಿಡಾಯ್‌ಕಾರನ್‌ ಎಂಬ ದುಷ್ಟ ದೇವತೆಯನ್ನು ಒಲಿಸಿ ಮಾವಿನ ಹಣ್ಣಿನ ರೂಪದಲ್ಲಿ ವೆಂಗಲರಾಜನ ಮಗಳ ಕೊಡದೊಳಗೆ ಪ್ರವೇಶಿಸುವಂತೆ ಮಾಡುತ್ತಾನೆ. ಕೊಡದಲ್ಲಿ ಮಾವಿನ ಹಣ್ಣನ್ನು ಕಂಡ ರಾಜನ ಸೇವಕರು ಆಕೆಯನ್ನು ಮಾವಿನ ಹಣ್ಣು ಕದ್ದ ಕಳ್ಳಿ ಎಂದು ಆರೋಪ ಹೊರಿಸುತ್ತಾರೆ. ಈ ಅವಮಾನದಿಂದ ವೆಂಗಲರಾಜನ್ ಕೋಟೆಯೊಳಗೆ ಪ್ರಾಣಬಿಡುತ್ತಾನೆ. ರಾಜನ ನಿಂದನೆಯ ಮಾತುಗಳನ್ನು ಕೇಳಲಾರದೆ ಶಂಖ ಮುಖದ ಸುಂದರಿ ಈಶ್ವರನನ್ನು ಪ್ರಾರ್ಥಿಸುತ್ತಾ ಪ್ರಾಣ ಬಿಡುತ್ತಾಳೆ.

ಈ ಕಥನ ಗೀತೆ ತಮಿಳು ಕಥನ ಗೀತೆಗಳಲ್ಲಿ ಸಾಮಾನ್ಯವಾಗಿ ಕಂಡು ಬರುವ ಜನನ ಮತ್ತು ಮರಣ ಗೀತೆಗಳ ಪ್ರಕಾರಕ್ಕೆ ಸೇರಿದೆ. ಸಾಮಾಜಿಕ ಎಡರು ತೊಡರುಗಳನ್ನು ಎದುರಿಸಲಾರದ ಕಥಾ ಪಾತ್ರಗಳು ಮರಣಕ್ಕೆ ಶರಣಾಗುತ್ತವೆ. ಈ ಬಗೆಯ ಕಥಾ ಪ್ರಕಾರದಲ್ಲಿ ದಕ್ಷಿಣ ತಮಿಳುನಾಡಿನ ಅನೇಕ ಕಥನ ಗೀತೆಗಳ ಸಂಪ್ರದಾಯ ಮತ್ತು ಜನಪದರ ಪೂಜಾ ಸಂಪ್ರದಾಯಗಳ ಪ್ರಭಾವವನ್ನು ಕಾಣಬಹುದು.

ವೆಂಗಲರಾಜನ್ ಆರಾಧನೆ ವಲಂಗೈನಾಯಕ ಸ್ಥಳಾಂತರಗೊಂಡಿದ್ದನೆಂದು ಕಥೆಯಲ್ಲಿ ಹೇಳಲಾದ ಪ್ರದೇಶಗಳಲ್ಲಿ ರೂಢಿಯಲ್ಲಿದೆ. ಕನ್ಯಾಕುಮಾರಿ ಜಿಲ್ಲೆಯ ಪರಕ್ಕೈ ಮತ್ತು ಚಿದಂಬರನಾರ್ ಜಿಲ್ಲೆಯ ಕುರುಂಬೂರ್ ಪ್ರದೇಶದಲ್ಲಿ ವೆಂಗಲರಾಜನ್ ಜನಪದರ ಆರಾಧ್ಯ ದೈವವಾಗಿದ್ದಾನೆ. ಅಲ್ಲದೆ ದಕ್ಷಿಣ ತಮಿಳುನಾಡಿನ ಜನಪದ ದೈವವಾದ ಸುಡಲೈಮಾಡನ್ ಪೂಜೆಯ ಮೇಲೆ ಈ ಕಥನ ಗೀತೆ ಹೆಚ್ಚು ಪ್ರಾಭಾವ ಬೀರಿದೆ. ವೆಂಗಲರಾಜನನ್ನು ದೈವವಾಗಿ ಪೂಜಿಸುವ ದೇವಸ್ಥಾನಗಳಲ್ಲಿ ಸುಡಲೈ ಮಾಡನ್ ಪೂಜೆಯೂ ನಡೆಯುತ್ತದೆ.

ಎನ್. ಜೆ.ಎಸ್. ಅನುವಾದ ಐ.ಎಸ್.

 

ವೇಟ್ಟುವರ್ ಕೇರಳದ ಆದಿವಾಸಿ ಬುಡಕಟ್ಟು ಸಮುದಾಯಗಳಲ್ಲಿ ಅನನ್ಯ ವಿಭಾಗವೇ ವೇಟ್ಟುವರ್. ಕೇರಳದ ಬೇರೆ ಬೇರೆ ಕಡೆಗಳಲ್ಲಿ ಈ ಸಮುದಾಯ ಕಂಡುಬಂದರೂ, ಅವರ ಆಚಾರ ವಿಚಾರಗಳಲ್ಲಿ ವ್ಯತ್ಯಾಸಗಳಿವೆ.

ವೇಟ್ಟುವರರದು ಚಿಕ್ಕ ಸಮಾಜ. ಕಣ್ಣೂರು ಜಿಲ್ಲೆಯ ಗುಡ್ಡಗಾಡು ಪ್ರದೇಶಗಳಾದ ಪೊನ್ನಂಪಾರ, ಪುಳಿಮಣ್ಣ, ರಾಜಗಿರಿ, ಕಾನಂವಯಲ್, ಪೆರಿಂಗಾಲ, ಅರಂಡ, ಆಲಕೋಡ್, ಕುಕ್ರ ಹಾಗೂ ಕಾಸರಗೋಡು ಜಿಲ್ಲೆಯ ಎಳೇರಿ, ಚುಕ್ಕಳಿ, ಉದಯಪುರ ಮೊದಲಾದ ಪ್ರದೇಶಗಳಲ್ಲಿ ಇವರು ವಾಸವಾಗಿದ್ದಾರೆ. ಕುಮರಿ ಕೃಷಿ, ಬೇಟೆ, ಗೊರಬೆ, ಬುಟ್ಟಿ ಮೊದಲಾದ ವಸ್ತುಗಳ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ಇವರು ತೊಡಗಿಕೊಂಡಿದ್ದಾರೆ. ಇವರ ಸಂಸ್ಕೃತಿ, ಜೀವನ ವಿಧಾನ, ಕುಟುಂಬ ವ್ಯವಸ್ಥೆಗಳೆಲ್ಲ ವಿಶಿಷ್ಟವಾಗಿವೆ. ಆರಾಧನೆ, ನಂಬಿಕೆ, ಆಚರಣೆಗಳಲ್ಲಿ ವೈವಿಧ್ಯತೆ ಇದೆ.

ಧಾರ್ಮಿಕ ಹಾಗೂ ಆಚರಣಾತ್ಮಕ ಕಲಾರೂಪಗಳು ವೇಟ್ಟುವರಲ್ಲಿವೆ. ಅನೇಕ ಜನಪದ ಹಾಡುಗಳೂ, ಕುಣಿತಗಳೂ ಇವರಲ್ಲಿ ರೂಢಿಯಲ್ಲಿವೆ. ತಮ್ಮದೇ ಸಾಮುದಾಯಿಕ ವ್ಯವಹಾರಿಕ ಭಾಷೆಯನ್ನು ಆಡುತ್ತಾರೆ. ವೇಟ್ಟುವರ ಮನೆ, ಬೇಟೆ, ಕೃಷಿಗಳೆಲ್ಲ ಇತರರಿಗಿಂತ ಭಿನ್ನವಾಗಿವೆ. ವಸ್ತ್ರಧಾರಣೆ ಹಾಗೂ ಆಭರಣಗಳು ವಿಶಿಷ್ಟವಾಗಿವೆ. ಆಹಾರ ಪದ್ಧತಿಯೂ ಇತರರಿಗಿಂತ ಭಿನ್ನ. ವಿಷಮದ್ದು ಅಥವಾ ಮಂತ್ರವಾದ ಚಿಕಿತ್ಸೆಯಲ್ಲಿ ವೇಟ್ಟುವರು ಪ್ರಸಿದ್ಧರು.

ವೇಟ್ಟುವರು ಮಾಡುವ ನಾಟಿ ವೈದ್ಯವು ಬುಡಕಟ್ಟು ಚಿಕಿತ್ಸಾ ಪದ್ಧತಿಯ ಸಮಗ್ರ ಮುಖವನ್ನು ಅನಾವರಣಗೊಳಿಸುತ್ತದೆ. ರೋಗನಿರ್ಣಯ ಮತ್ತು ಚಿಕಿತ್ಸೆಗೆ ಇವರು ಬೇರೆಯವರನ್ನು ಆಶ್ರಯಿಸುತ್ತಿರಲಿಲ್ಲ. ಅನೇಕ ರೋಗಗಳಿಗಿರುವ ಗಿಡಮೂಲಿಕೆಗಳ ವೈದ್ಯ ಇವರಿಗೆ ಪರಂಪರೆಯ ಜ್ಞಾನವಾಗಿ ಲಭಿಸಿತ್ತು. ಕಾಡಿನ ಗಿಡಮೂಲಿಕೆಗಳೊಂದಿಗೆ ಬದುಕುತ್ತಿರುವ ವೇಟ್ಟುವರು ಗಿಡಮೂಲಿಕೆಗಳ ಔಷಧಿ ಪ್ರಯೋಗದಲ್ಲಿ ನಿಷ್ಣಾತರಾಗಿದ್ದರು.

ವೇಡನ್ ಅಥವಾ ವೇಟ್ಟಕಾರನ್ ಎಂಬ ಪದದಿಂದ ವೇಟ್ಟುವನ್ ಶಬ್ದವು ನಿಷ್ಪನ್ನವಾಗಿರಬೇಕೆಂದು ವಿದ್ವಾಂಸರು ಊಹಿಸಿದ್ದಾರೆ. ವೇಟ್ಟುವರ ಸೃಷ್ಟಿ ಪುರಾಣವು ಬೇಟೆ ಸಂಸ್ಕೃತಿಗೆ ಸಂಬಂಧಿಸಿರುವುದಾಗಿದೆ. ಕಿರಾತ ವೇಷದಲ್ಲಿ ಶಿವ ಮತ್ತು ಪಾರ್ವತಿ ಕಾಡಿನಲ್ಲಿ ಸಂಚರಿಸುತ್ತಾ ಸಂಗಮಿಸಿ ಹೆಣ್ಣು ಮಗುವನ್ನು ಪಡೆಯುತ್ತಾರೆ. ಆ ಸ್ತ್ರೀಯಿಂದ ವೇಟ್ಟುವರು ಹುಟ್ಟಿದರೆಂದು ಐತಿಹ್ಯ. ಕಾಸರಗೋಡು ಜಿಲ್ಲೆಯ ಬೇಳೂರು, ಕರಿಂದಳ, ವೆಳ್ಳೆರಿಕುಂಡು, ಎಳೇರಿ, ಕುತ್ತಿತಾನ್, ಕಿನಾನೂರು, ಚುಳ್ಳಿಕೆರೆ, ದೇಲಂಪಾಡ, ಪಡಿಮರುತ್ ಮೊದಲಾದ ಪ್ರದೇಶಗಳಲ್ಲಿ ಇಂದಿಗೂ ಇವರು ವಾಸವಾಗಿದ್ದಾರೆ.

ವೇಟ್ಟುವರು ಇಲ್ಲಂ, ಗೋತ್ರ ಎಂಬ ವ್ಯವಸ್ಥೆಯಲ್ಲಿ ಕೌಟುಂಬಿಕ ಬದುಕನ್ನು ರೂಪಿಸುತ್ತಾರೆ. ಇವರಲ್ಲಿ ಎರಡು ವಿಭಾಗಗಳನ್ನು ಕಾಣಬಹುದು. ಕಣ್ಣೂರು ಜಿಲ್ಲೆಯ ಪೆರಂಗಾಲ ಪ್ರದೇಶದಲ್ಲಿ ವಾಸವಾಗಿರುವ ಪೆರಿಂಗಾಲ ವೇಟುವರು ಮತ್ತು ಕಾಸರಗೋಡು ಜಿಲ್ಲೆಯಲ್ಲಿ ವಾಸವಾಗಿರುವ ಕುಡಿವೇಟುವರು. ಈ ಎರಡು ವಿಭಾಗಗಳಲ್ಲಿ ಸಾದೃಶ್ಯಗಳಿರುವಂತೆ, ಅನೇಕ ವೈದೃಶ್ಯಗಳೂ ಇವೆ. ಪೆರಿಂಗಾಲ ವೇಟ್ಟುವರಿಗೆ ೧೪ ಇಲ್ಲಂಗಳು. ಕುಡಿವೇಟುವರಿಗೆ ೭ ಇಲ್ಲಂ. ಬಿದಿರು ಹಾಗೂ ಮುಳಿಹುಲ್ಲಿನಿಂದ ನಿರ್ಮಿಸಿದ ಗುಡಿಸಲುಗಳಲ್ಲಿ ಇವರು ವಾಸವಾಗುತ್ತಾರೆ. ಸಾಮಾಜಿಕ, ಕೌಟುಂಬಿಕ ವ್ಯವಸ್ಥೆಗಳಲ್ಲಿ ಈ ಎರಡು ವಿಭಾಗಗಳಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.

ವೇಟ್ಟುವರ ಸಾಮಾಜಿಕ ವ್ಯವಸ್ಥೆಯಲ್ಲಿ ಓರ್ವ ಯಜಮಾನ ಇರುತ್ತಾನೆ. ಅವನಿಗೆ ‘ಕಿರಾನ’ ಎಂದು ಹೆಸರು. ಮರುಮಕ್ಕತ್ತಾಯ (ಅಳಿಯ ಸಂತಾನ) ಪದ್ಧತಿಯಂತೆ ಈ ಪದವಿಯು ಲಭಿಸುವುದು. ಜೀವನಾವರ್ಥ ಸಂಸ್ಕಾರ ವಿಧಗಳಾದ ಋತುಮತಿ ಮದುವೆ, ಮದುವೆ, ಕಿವಿ ಚುಚ್ಚುವುದು ಮೊದಲಾದ ಆಚರಣೆಗಳನ್ನು ವಿಜೃಭಣೆಯಂದ ನೆರವೇರಿಸುತ್ತಿದ್ದರು.

ಕೆ.ವಿ.ಎಫ್. ಅನುವಾದ ಎನ್.ಎಸ್.

 

ವೇಲರು ವೇಲರು ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ವಾಸವಾಗಿರುವ ಆದಿವಾಸಿ ಬುಡಕಟ್ಟು ವಿಭಾಗಕ್ಕೆ ಸೇರಿದವರು. ಇವರು ವಿಶಿಷ್ಟ ಸಾಂಸ್ಕೃತಿಕ ಹಿನ್ನೆಲೆಯನ್ನು ಹೊಂದಿದವರಾಗಿದ್ದಾರೆ. ವೇಲ್, ವೇಲ ಎಂಬ ಶಬ್ದಗಳಿಂದ ವೇಲರ್ ಎಂಬ ಪದ ಸೃಷ್ಟಿಯಾಯಿತೆಂದು ಥರ್ಸ್ಟನ್ ಅಭಿಪ್ರಾಯಪಡುತ್ತಾನೆ. ಶ್ರೀಕೃಷ್ಣನನ್ನು ಕಾಡಿದ ಜ್ವರಬಾಧೆಯನ್ನು ನಿವಾರಿಸಲು ಶಿವ ಹಾಗೂ ಪಾರ್ವತಿ ವೇಲರ ವೇಷ ಧರಿಸಿದರೆಂದೂ, ತಾವು ಶಿವ ಪಾರ್ವತಿಯರ ವಂಶದವರೆಂದೂ ಅವರು ಹೇಳುತ್ತಾರೆ. ಉತ್ತರ ಭಾಗದ ವೇಲರು ತಾವು ಶಬರಿಮಲೆ ಅಯ್ಯಪ್ಪನ ಕುಟುಂಬದವರೆಂದು ನಂಬಿದ್ದಾರೆ. ಪಾಂಡವರ ಪತ್ನಿ ಪಾಂಚಾಲಿ ಋತುಮತಿಯಾಗುವಾಗ ಅವಳ ವಸ್ತ್ರಗಳನ್ನು ಒಗೆಯಲು ಶಿವನು ಸೃಷ್ಟಿಸಿದ ಸಮುದಾಯವೇ ವೇಲ ಜನಾಂಗವೆಂದು ಉತ್ತರದ ವೇಲರು ನಂಬಿದ್ದಾರೆ. ವೇಲರು ಒಗೆದರೆ ಮಾತ್ರ ಬಟ್ಟೆಗಳು ಶುದ್ಧಿಯಾಗುವುದೆಂದು ನಂಬಿಕೆಗೆ ಇದು ಕಾರಣ.

ಕಣ್ಣೂರು ಜಿಲ್ಲೆಯ ತಳಪರಂಬ ತಾಲೂಕಿನ ವೆಣ್ಣೂರು, ಪೇರೂರ್, ಚಂದೇರಾ, ಕುಂಞಿಮಂಗಲಂ, ಚಾಕೊಟ್‌ನಡ, ಚಂದಪುರ, ಅಂದರ್, ಕಂಡಂಗಾಳಿ, ಹರಿಕೋಡ್, ಪುಳಿಪರಂಬ ಹಾಗೂ ಕಣ್ಣೂರು ತಾಲೂಕಿನ ಅಝಿಕೋಡ್, ಪುದಿಯತೆರು, ಚೆರುತಾಳಂ ಪ್ರದೇಶಗಳಲ್ಲಿ ವೇಲರು ಹೇರಳ ಸಂಖ್ಯೆಯಲ್ಲಿ ವಾಸವಾಗಿದ್ದಾರೆ.

ಸಾಮಾಜಿಕ ವ್ಯವಸ್ಥೆ : ಉತ್ತರ ಕೇರಳದ ವೇಲರು ತೆಯ್ಯಂ ಕಲಾವಿದರಾಗಿದ್ದಾರೆ. ವಣ್ಣಾನ್, ಮಲಯನ್ ಮೊದಲಾದ ತೆಯ್ಯಂ ಕಲಾವಿದರಿಗಿಂತ ಜಾತಿಯಲ್ಲಿ ಹಿಂದುಳಿದವರು ವೇಲರು. ಕೋಲತ್ತಿರಿಯ ಬ್ರಹ್ಮ ಪ್ರತಿಷ್ಠೆ ಸಂಬಂಧವಾಗಿ ಇವರು ಕೋಲತ್ತುನಾಡಿಗೆ ಬಂದವರು. ವಣ್ಣಾನ್, ಮಲಯ ಸಮುದಾಯದ ತೆಯ್ಯಂಗಳು ಆವರಣದ ಒಳಗೆ ಜರುಗಿದರೆ, ವೇಲರದು ಆವರಣದ ಹೊರಗೆ ಜರುಗುತ್ತದೆ. ಇದು ಅವರ ಸಾಮಾಜಿಕ ಸ್ಥಾನಮಾನವನ್ನು ಸೂಚಿಸುತ್ತದೆ. ವೇಲ ಮಹಿಳೆಯರು ತೆಯ್ಯಂ ಸಂದರ್ಭದಲ್ಲಿ ಡೋಲು ಬಡಿದು, ತೋಟ್ಟಂ ಹಾಡಿ ಸಹಕರಿಸುತ್ತಾರೆ.

ವೇಲರು ಏಳು ಇಲ್ಲಂ (ಬಳಿ)ಗಳನ್ನು ಹೊಂದಿದ್ದಾರೆ. ಸರಳವಾದ ವೇಷವನ್ನು ಧರಿಸುತ್ತಾರೆ. ಪುರುಷರು ಧೋತಿಯನ್ನು ಉಡುತ್ತಾರೆ. ಹಿಂದಿನ ಕಾಲದಲ್ಲಿ ಸ್ತ್ರೀಯರು ಸೊಂಟದ ಮೇಲೆ ವಸ್ತ್ರವನ್ನು ಧರಿಸುತ್ತಿರಲಿಲ್ಲ. ವೇಲರಿಗೆ ಬೇರೆ ಬೇರೆ ದೈವಗಳಿವೆ. ಅಝಿಕೋಡು ಪ್ರದೇಶದವರಿಗೆ ಪರವ ಚಾಮುಂಡಿ, ಇನ್ನು ಕೆಲವರಿಗೆ ಕುಂಚಾರು ಚಾಮುಂಡಿ ಮುಖ್ಯ ದೈವ. ಕಣ್ಣೂರು ಸಮೀಪದ ಪುದಿಯ ತೆರುವಿನ ಅರವಿಲಕಂಡಿ ಚಾಮುಂಡೇಶ್ವರಿ ದೈವಸ್ಥಾನ ಇರುವ ಮುಖ್ಯ ಆರಾಧನ ಕೇಂದ್ರ. ಇವರು ಬಿದಿರು ಹಾಗೂ ಮುಳಿಹುಲ್ಲಿನಿಂದ ನಿರ್ಮಿಸಿದ ಗುಡಿಸಲುಗಳಲ್ಲಿ ವಾಸವಾಗಿದ್ದರು.

ವೇಲರ ಸಾಮಾಜಿಕ ವ್ಯವಸ್ಥೆಯಲ್ಲಿ ಓರ್ವ ಮುಖಂಡನಿರುತ್ತಾನೆ. ಅವನಿಗೆ ‘ಮಾಪನ್’ ಎಂದು ಹೆಸರು. ಸಮುದಾಯದಲ್ಲಿ ಸಮಸ್ಯೆಗಳು ತಲೆದೋರಿದರೆ ನಿವಾರಿಸುವುದು, ಸಂಸ್ಕಾರ ವಿಧಿಗಳಿಗೆ ನೇತೃತ್ವ ನೀಡುವುದು, ತೆಯ್ಯಂ ಕಲಾವಿದರನ್ನು ನಿರ್ಧರಿಸುವುದು ಇವನ ಕರ್ತವ್ಯಗಳು. ವೇಲರು ‘ಮರುಮಕ್ಕತ್ತಾಯ’ (ಅಳಿಯ ಸಂತಾನ) ಪದ್ಧತಿಯನ್ನು ಅನುಸರಿಸುತ್ತಾರೆ. ವೇಲರಲ್ಲಿ ಅಂಞೂಟಾನ್, ಮುನ್ನೂಟಾನ್, ತೆಕ್ಕನ್ ವೇಲರ್ ಎಂಬ ವಿಭಾಗಗಳಿವೆ.

ವೈದ್ಯವೃತ್ತಿ, ತೆಯ್ಯಂ ಇವುಗಳನ್ನು ಮುಖ್ಯ ಕಸುಬು ಮಾಡಿದವರು ಅಂಞೂಟಾನ್. ಮುತ್ತಪ್ಪನ್ ಇವರ ಮುಖ್ಯ ತೆಯ್ಯಂ. ಎಲ್ಲರಿಗೂ ವೈದ್ಯ ಚಿಕಿತ್ಸೆಯನ್ನು ನೀಡುತ್ತಿದ್ದರು. ಕೊಟ್ಟಾಯಂ ತಂಬೂರಾನ್ ಇವರಿಗೆ ಅಂಞಾಟಾನ್ ಪದವಿ ನೀಡಿದನಂತೆ. ವೈದ್ಯ ಮತ್ತು ಬಟ್ಟೆ ಒಗೆಯುವ ವೃತ್ತಿಯಲ್ಲಿ ತೊಡಗಿಕೊಂಡವರು ತೆಕ್ಕನ್‌ವೇಲರು. ಪುರುಷರೂ ಮಹಿಳೆಯರೂ ಬಟ್ಟೆ ಒಗೆಯುತ್ತಿದ್ದರು. ಕೆಲವು ಜಾತಿಗಳಲ್ಲಿ ಇವರು ನೀಡುವ ಶುದ್ಧಿ ವಸ್ತ್ರಕ್ಕೆ ವಿಶೇಷ ಮಹತ್ವವಿತ್ತು.

ಗರ್ಭ, ಪ್ರಸವ, ನಾಮಕರಣ, ಸಾವು ಮೊದಲಾದ ಸಂದರ್ಭಗಳಲ್ಲಿ ಅನೇಕ ಸಂಸ್ಕಾರ ವಿಧಿಯಾಚರಣೆಗಳು ವೇಲರಲ್ಲಿವೆ. ಮನೆತುಂಬಿಸುವುದು, ಹೊಸ ಅಕ್ಕಿ ಊಟ, ಪೂರಂ, ವಿಷು ಮೊದಲಾದ ಆಚರಣೆಗಳನ್ನೂ, ಹಬ್ಬಗಳನ್ನೂ ವಿಶೇಷವಾಗಿ ನಡೆಸುವರು.

ಪಿ.ವಿ.ಎ. ಅನುವಾದ ಎನ್.ಎಸ್.

 

ವ್ಯಕ್ತಿನಾಮ ನಾಮ ವಿಜ್ಞಾನ ಕ್ಷೇತ್ರದಲ್ಲಿ ವ್ಯಕ್ತಿನಾಮ ಅತ್ಯಂತ ಮಹತ್ವದ್ದು ಹಾಗೂ ಅರ್ಥಪೂರ್ಣವಾದುದು. ವ್ಯಕ್ತಿಗಳಿಗೆ ಸೂಚಿಸಿದ ಹೆಸರುಗಳನ್ನೇ ‘ವ್ಯಕ್ತಿನಾಮ’ ಎಂದು ಕರೆಯುತ್ತಾರೆ. ಭಾರತ ದೇಶದಲ್ಲಿಯೇ ವ್ಯಕ್ತಿನಾಮಗಳ ಇತಿಹಾಸ ಪುರಾತನವಾದುದು. ಪ್ರಾಚೀನವೆಂದು ಪರಿಗಣಿಸಲಾದ ವೇದಗಳಲ್ಲಿಯೂ ಕೂಡ ವ್ಯಕ್ತಿನಾಮಗಳ ಉಲ್ಲೇಖವಿದೆ. ವ್ಯಕ್ತಿನಾಮಗಳು ಆಯಾ ಸಮಾಜ, ಭಾಷೆ, ಸಂಸ್ಕೃತಿ, ಜಾನಪದ, ಪರಿಸರ, ನಾಗರಿಕತೆ ಮುಂತಾದ ಅಂಶಗಳನ್ನು ಅವಲಂಬಿಸಿ ವಿಶಿಷ್ಟವಾಗಿರುತ್ತವೆ. ಇದುವರೆಗೂ ವ್ಯಕ್ತಿನಾಮಗಳನ್ನು ಕುರಿತ ಅಧ್ಯಯನಗಳು ಹೆಚ್ಚಿನ ಪ್ರಮಾಣದಲ್ಲಿ ನಡೆದಿಲ್ಲ. ಅಲ್ಲಲ್ಲಿ, ಅಲ್ಪಸ್ವಲ್ಪ ಅಧ್ಯಯನ ನಡೆಸಿರುವ ನಾಮಾಧ್ಯಯನಕಾರರು ಹೆಸರುಗಳು ಮನುಷ್ಯನ ರೂಪ, ಗುಣಗಳಿಗೆ ಅನುಗುಣವಾಗಿದ್ದು; ವ್ಯಕ್ತಿಯ ಶಾರೀರಿಕ ಲಕ್ಷಣ ಮತ್ತು ಅವನ ಗುಣಸ್ವಭಾವಗಳಿಗೆ ಅನುಗುಣವಾಗಿ ಅನ್ವರ್ಥ ನಾಮಗಳನ್ನಿಡುತ್ತಾರೆ ಎಂದು ಅಭಿಪ್ರಾಯಪಡುತ್ತಾರೆ.

ವ್ಯಕ್ತಿಯು ಆಕಾರದಲ್ಲಿ ದೊಡ್ಡವನಾಗಿದ್ದರೆ ದೊಡ್ಡಪ್ಪ, ಸಣ್ಣವನಾಗಿದ್ದರೆ ಸಣ್ಣಪ್ಪ, ಕೆಂಪಗಿದ್ದರೆ ಕೆಂಚಪ್ಪ, ಕಪ್ಪಗಿದ್ದರೆ ಕರಿಯಪ್ಪ, ಹಾಲು ಮಾರುವವನಾಗಿದ್ದರೆ ಹಾಲಪ್ಪ ಎಂದು ಇಡುತ್ತಿದ್ದರು. ಇಂದು ವ್ಯಕ್ತಿನಾಮಗಳು ಸಾಂಸ್ಕೃತಿಕ ಆಯಾಮಗಳನ್ನು ಪಡೆದುಕೊಳ್ಳಲು ಬದಲಾಗುತ್ತಿರುವ ಜೀವನ ಶೈಲಿಯೇ ಕಾರಣವಾಗಿದೆ. ಒಂದು ಜಾತಿ ಅಥವಾ ಜನಾಂಗದ ವಲಸೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಅಂತಸ್ತು, ಮಾನಸಿಕ ಸ್ಥಿತಿ, ಜೀವನಕ್ರಮ, ವೃತ್ತಿ ಮುಂತಾದ ವಿಭಿನ್ನ ಆಯಾಮಗಳು ವ್ಯಕ್ತಿನಾಮಗಳ ವೈವಿಧ್ಯತೆಯನ್ನು ಅನಾವರಣಗೊಳಿಸುತ್ತವೆ. ಹೀಗೆ ವ್ಯಕ್ತಿನಾಮಗಳು ಆಕಾರ, ಬಣ್ಣ, ಸ್ತ್ರೀಯರು, ಪುರುಷರು, ದೇವರು ಎನ್ನುವ ಕಲ್ಪನೆಗಳಿಂದ ಹುಟ್ಟಿಕೊಳ್ಳುತ್ತವೆ. ವ್ಯಕ್ತಿನಾಮಗಳಿಂದ ಸಮಾಜ, ಸಂಸ್ಕೃತಿ, ಸಂಸ್ಕಾರ ಹಾಗೂ ವೈಶಿಷ್ಟ್ಯವನ್ನು ಗುರುತಿಸಲು ಹಾಗೂ ಪ್ರತ್ಯೇಕತೆಯನ್ನು ಕಾಯ್ದುಕೊಳ್ಳಲು ಸಾಧ್ಯವಾಗುತ್ತದೆ. ವ್ಯಕ್ತಿನಾಮಗಳು ಜಾತಿ, ಕುಲ, ಧರ್ಮ, ವೃತ್ತಿ, ಪರಿಸರ ಹಾಗೂ ತಾವು ನಂಬಿಕೊಂಡು ಬಂದ ದೇವಾನುದೇವತೆಗಳ ಹೆಸರುಗಳಿಂದ ಪ್ರತಿಬಿಂಬಿಸಲ್ಪಡುತ್ತವೆ.

ವ್ಯಕ್ತಿನಾಮಗಳ ಅಧ್ಯಯನ ಹೆಚ್ಚು ಕುತೂಹಲಕಾರಿಯಾದುದು. ಈ ಕಾರಣಕ್ಕಾಗಿಯೇ ಭಾಷಾವಿಜ್ಞಾನಿಗಳು, ನಾಮ ವಿಜ್ಞಾನಿಗಳು ಮತ್ತು ಜಾನಪದ ವಿದ್ವಾಂಸರು ಹೆಚ್ಚು ಆಸಕ್ತಿಯಿಂದ ವ್ಯಕ್ತಿನಾಮಗಳ ಅಧ್ಯಯನ, ಸಂಶೋಧನೆ ಮತ್ತು ವಿಶ್ಲೇಷಣೆ ಮಾಡುತ್ತಾ ಬಂದಿದ್ದಾರೆ. ವ್ಯಕ್ತಿಯನ್ನು ಸಮೂಹದಿಂದ ಗುರುತಿಸುವ ಹಿನ್ನೆಲೆಯಲ್ಲಿ ವ್ಯಕ್ತಿನಾಮ ಅಧ್ಯಯನ ಬಹಳ ಅನಿವಾರ್ಯವಾದುದಾಗಿದೆ. ಹಿಂದೂ ಸಂಪ್ರದಾಯದ ಪ್ರಕಾರ ಒಂದು ಹೆಸರಿನಲ್ಲಿ ಮನೆದೇವರು, ಜನ್ಮನಕ್ಷತ್ರ, ಮಾಸಗಳ ಹೆಸರು ಮತ್ತು ದಿನಬಳಕೆಯ ಹೆಸರುಗಳೆಂಬ ನಾಲ್ಕು ಆಯಾಮಗಳಿರುತ್ತವೆ. ನಿಜನಾಮದ ಜೊತೆಗೆ ಮುದ್ದಾದ ಹೆಸರೊಂದನ್ನು ಕಟ್ಟಿಕೊಳ್ಳಬಹುದು. ‘ಉಪೇಂದ್ರ’ ಎಂಬುದು ‘ಉಪ್ಪಿ’ ಆಗುತ್ತದೆ. ಕೃಷ್ಣ ಎಂಬುದು ‘ಕಿಟ್ಟು’ ಆಗುತ್ತದೆ. ಭೂತ ಪ್ರೇತಗಳ ಕಾಟವನ್ನು ತಪ್ಪಿಸಿಕೊಳ್ಳಲು ಮಕ್ಕಳಿಗೆ ತಿರುಕ, ದುಂಡ, ಗುಂಡ, ಕರಿಯ ಮೊದಲಾದ ಹೆಸರುಗಳಿಡುತ್ತಿದ್ದರು. ಹುಟ್ಟಿದ ಮಕ್ಕಳೆಲ್ಲ ಸತ್ತು ಹೋಗುತ್ತಿದ್ದರೆ ಮಕ್ಕಳನ್ನು ಉಳಿಸಿಕೊಳ್ಳುವ ಸಲುವಾಗಿ, ಜವರಯ್ಯ, ಜವರ, ಕಾಡಯ್ಯ, ಅಮಾವಾಸಯ್ಯ ಎಂಬ ಹೆಸರುಗಳನ್ನಿಡುತ್ತಿದ್ದರು. ಯಮನ ಹೆಸರಿಟ್ಟರೆ ಚಿತ್ರಗುಪ್ತ ಆ ಮಗುವನ್ನು ಮುಟ್ಟುವುದಿಲ್ಲ ಎಂಬ ನಂಬಿಕೆ ಜನಸಾಮಾನ್ಯರಲ್ಲಿ ಈಗಲೂ ಬೇರೂರಿದೆ.

ವ್ಯಕ್ತಿನಾಮಗಳಿಗೆ ವಿಭಿನ್ನ ನೆಲೆಗಳಿವೆ. ಒಂದೊಂದು ನೆಲೆಯನ್ನು ವಿಶ್ಲೇಷಣೆಗೆ ಒಳಪಡಿಸಿದರೆ, ವೈವಿಧ್ಯಮಯ ಸಾಂಸ್ಕೃತಿಕ ಸಂರಚನೆಗಳು ತೆರೆದುಕೊಳ್ಳುತ್ತವೆ. ವ್ಯಕ್ತಿನಾಮವನ್ನು ವಿದ್ವಾಂಸರು ಎರಡು ಗುಂಪುಗಳಾಗಿ ನೋಡಿದ್ದಾರೆ. ಮೊದಲನೆಯದು ‘ನಿರ್ದಿಷ್ಟ’ ಎಂತಲೂ ಎರಡನೆಯದು ‘ವಾರ್ಗಿಕ’ ಎಂತಲೂ ವಿಭಾಗಿಸಿದ್ದಾರೆ. ಇವುಗಳಲ್ಲಿ ನಿರ್ದಿಷ್ಟವೇ ನಿಜನಾಮವಾಗಿ, ವಾರ್ಗಿಕ ಸಂಬಂಧ ವಾಚಿಯಾಗಿಯೋ ಅಥವಾ ವರ್ಗವಾಚಿಯಾಗಿಯೋ ಕಂಡುಬರುತ್ತದೆ. ಉದಾಹರಣೆಗೆ ಮಾದೇಗೌಡ, ರಾಜಕುಮಾರ, ದೇವಯ್ಯ, ಶಂಕರಪ್ಪ, ಕೃಷ್ಣಮೂರ್ತಿ ಹೆಸರುಗಳನ್ನು ಗಮನಿಸಿ. ಇಲ್ಲಿ ಮಾದ, ರಾಜ, ದೇವ, ಶಂಕರ, ಕೃಷ್ಣ ಇವೆಲ್ಲ ನಿರ್ದಿಷ್ಟಗಳು. ಗೌಡ, ಕುಮಾರ, ಅಯ್ಯ, ಅಪ್ಪ, ಮೂರ್ತಿಗಳು ವಾರ್ಗಿಕಗಳು. ಇವುಗಳಲ್ಲಿ ಮೊದಲನೇ ಘಟಕಗಳಾದ ಮಾದ, ರಾಜ, ದೇವ, ಶಂಕರ, ಕೃಷ್ಣಗಳೇ ನಿಜನಾಮಗಳಾಗಿವೆ. ಗೌಡ, ಕುಮಾರ, ಅಯ್ಯ, ಅಪ್ಪ, ಮೂರ್ತಿಗಳಿಗೆ ತಮ್ಮದೇ ಆದ ಅಸ್ತಿತ್ವಗಳಿಲ್ಲದೆ ಇವುಗಳು ಸಂಬಂಧವಾಚಿಗಳಾಗಿ ಹಾಗೂ ವೃತ್ತಿ ಅಥವಾ ವರ್ಗವಾಚಿಗಳಾಗಿರುತ್ತವೆ. ಇನ್ನು ಕೆಲವು ವ್ಯಕ್ತಿನಾಮಗಳಲ್ಲಿ ವಾರ್ಗಿಕಗಳಿರುವುದಿಲ್ಲ. ಉದಾಹರಣೆಗೆ ಅಶೋಕ್, ಸಂತೋಷ್, ಚೇತನ, ಪ್ರಕಾಶ್ ಮುಂತಾದ ಹೆಸರುಗಳನ್ನು ಎರಡು ಘಟಕಗಳನ್ನಾಗಿ ಒಡೆಯಲು ಸಾಧ್ಯವಿಲ್ಲ. ಅವು ಯಾವಾಗಲೂ ಪೂರ್ಣ ಘಟಕಗಳಾಗಿಯೇ ಇರುತ್ತವೆ. ಹೆಸರಿನ ನಿರ್ದಿಷ್ಟ ಭಾಗದಿಂದ ಧರ್ಮ, ಲಿಂಗ, ಜಾತಿಯಂತಹ ವಿಷಯಗಳು ಕಂಡುಬಂದರೆ ಹೆಸರಿನ ವಾರ್ಗಿಕ ಭಾಗದಿಂದ ವ್ಯಕ್ತಿಯ ಜಾತಿ, ಸಾಮಾಜಿಕ ಸ್ಥರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ.

ಜಗತ್ತಿನಲ್ಲಿ ಹೆಸರಿಲ್ಲದ ವ್ಯಕ್ತಿ ಯಾರೂ ಇಲ್ಲ. ಈ ಭೂಮಿಯಲ್ಲಿ ಜನಿಸಿದ ವ್ಯಕ್ತಿ ಮೇಲ್ಜಾತಿ ಇರಲಿ, ಕೆಳಜಾತಿ ಇರಲಿ ಹೆಸರು ಇದ್ದೇ ಇರುತ್ತದೆ. ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಯಾವುದಾದರೊಂದು ಹಿನ್ನೆಲೆಯಿಂದ ಹೆಸರು ಇರುತ್ತದೆ. ಪ್ರಾಚೀನ ಕಾಲದಲ್ಲಿ ವ್ಯಕ್ತಿನಾಮಗಳು ಆಧುನಿಕ ಕಾಲಕ್ಕಿಂತ ಭಿನ್ನವಾದ ನೆಲೆಯಲ್ಲಿ ಕಾಣಿಸಿಕೊಳ್ಳುತ್ತಿದ್ದವು. ಅಬ್ಬಣಬ್ಬೆ, ಚಂದಲಕಬ್ಬೆ, ತೈಲಪಕಂತಿ, ಅರಿಕೇಸರಿ, ಬಿಜ್ಜಳ, ಗಜಗ, ಅಂಬಾಲಿಕ, ಚೇರಮದಂಥ ವ್ಯಕ್ತಿನಾಮಗಳು ಇಂದು ಕಣ್ಮರೆಯಾಗಿವೆ. ರಾಮಾಯಣ, ಮಹಾಭಾರತದಲ್ಲಿಯ ಪಾತ್ರಗಳ ಹೆಸರುಗಳು, ಪುರಾಣ ಪುಣ್ಯ ಪುರುಷರ, ಸಾಧು ಸಂತರ, ಋಷಿಮುನಿಗಳ ಹೆಸರುಗಳನ್ನು ಇಟ್ಟುಕೊಂಡಿರುವುದು ಭಾರತೀಯ ಜನಸಮುದಾಯಗಳ ಸಂಸ್ಕೃತಿಯ ಸಂಕೇತಗಳಾಗಿವೆ. ಈ ಹಿನ್ನೆಲೆಯಲ್ಲಿ ರಾಮ, ಕೃಷ್ಣ, ಪರಶುರಾಮ, ಸೀತೆ, ಲಕ್ಷ್ಮಿ, ಸರಸ್ವತಿ, ಅರ್ಜುನ, ಭೀಮ, ಲಕ್ಷ್ಮಣ, ಹನುಮಂತ, ಧರ್ಮರಾಯ, ವಾಲ್ಮೀಕಿ, ಭೀಷ್ಮ, ನಕುಲ, ಸಹದೇವ ಇಂತಹ ಅನೇಕ ಉದಾಹರಣೆಗಳನ್ನು ನೀಡಬಹುದು.

ಅನೇಕ ವ್ಯಕ್ತಿನಾಮಗಳು ಸ್ಥಳ, ಪ್ರಾಣಿ, ಪಕ್ಷಿ, ಸಸ್ಯ, ಗ್ರಹ, ಬಣ್ಣ, ದಿಕ್ಕು, ನದಿ, ಹೂವು, ಪರ್ವತ, ನಕ್ಷತ್ರ, ಋತು, ಜಾತಿ, ಧರ್ಮ, ಕುಲ, ವೃತ್ತಿ ಮುಂತಾದ ಪ್ರಾಕೃತಿಕ ಮತ್ತು ಸಾಂಸ್ಕೃತಿಕ ಪರಿಸರಕ್ಕೆ ಸಂಬಂಧಿಸಿದಂತೆ ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಬೆಟ್ಟಪ್ಪ, ಪರ್ವತಪ್ಪ, ಕಲ್ಲಪ್ಪ, ಹಾವಪ್ಪ, ನಾಗಪ್ಪ, ಬಸಪ್ಪ, ಸಂಪಿಗೆ, ಮಲ್ಲಿಗೆ, ಸೇವಂತಿ, ಕಮಲ, ಕಪಿಲಾ, ಕಾವೇರಿ, ಗಂಗಾ, ತುಂಗಾ, ನೇತ್ರಾವತಿ, ಕರಿಯಪ್ಪ, ಬೆಳ್ಳಿಯಪ್ಪ, ಬಂಗಾರಪ್ಪ, ಚಂದ್ರು, ಗುರು, ಗುರಮ್ಮ, ಭೂಮಿಕಾ, ಸೂರ್ಯ, ಶಶಾಂಕ, ವರ್ಷ, ದಕ್ಷಿಣಾಮೂರ್ತಿ, ಅಶ್ವಿನಿ, ರೋಹಿಣಿ, ರೇವತಿ, ಫಾತಿಮಾ, ಅಂಥೋನಿ, ನೂರ್‌ಬೇಗಂ, ಫರಾನಾ, ಸಾನಿಯಾ, ಗೌತಮ್, ಸಿದ್ಧಾರ್ಥ, ಸಂಘಮಿತ್ರ, ಮಹಮ್ಮದ್, ಅಮೀರ್‌ಖಾನ್ ಮುಂತಾದವು, ವ್ಯಕ್ತಿನಾಮಗಳು ಆಯಾ ಪ್ರದೇಶದ ಪರಿಸರ, ಧರ್ಮ, ಜಾತಿ, ನಂಬಿಕೆಗಳನ್ನು ಸಂಕೇತಿಸುತ್ತವೆ. ಇಂತಹ ಸಾಂಸ್ಕೃತಿಕ ಹಿನ್ನೆಲೆಯಿಂದ ವ್ಯಕ್ತಿನಾಮಗಳನ್ನು ವಿಭಿನ್ನ ದೃಷ್ಟಿಕೋನಗಳಿಂದ ತಿಳಿಯಲು ಸಾಧ್ಯವಾಗುತ್ತದೆ.

ವ್ಯಕ್ತಿನಾಮಗಳು ಪ್ರಾದೇಶಿಕವಾಗಿ, ಸಾಮಾಜಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಬದಲಾಗುತ್ತಾ ಹೋಗುತ್ತವೆ. ಈ ವ್ಯಕ್ತಿನಾಮಗಳು ದೈವ, ಪುರಾಣ, ಚರಿತ್ರೆ, ನಿಸರ್ಗ, ದೇಶಿಯತೆ, ಸಾಮಾಜಿಕ ಶ್ರೇಣೀಕರಣ, ಕುಟುಂಬ, ಸಂಬಂಧ, ಸಮಕಾಲೀನತೆ, ಮೌಲ್ಯ ಮೂಲಗಳಿಂದ ಅಸ್ತಿತ್ವ ಪಡೆದಿರುತ್ತವೆ. ಇಂತಹ ವಿಭಿನ್ನ ಆಯಾಮಗಳಿಂದ ಹುಟ್ಟಿಕೊಂಡ ಅವು ಸಮಾಜದಲ್ಲಿ ಹೆಚ್ಚು ಜನಪ್ರಿಯವಾಗಿವೆ. ವ್ಯಕ್ತಿನಾಮಗಳಲ್ಲಿ ಹೊಸ ಹೊಸ ರೂಪಗಳು ಕಂಡು ಬಂದು ತಮ್ಮ ಸಂಸ್ಕೃತಿಯ ನೆಲೆಯನ್ನು ಮೀರಿ ಮುನ್ನಡೆಯುತ್ತಿರುವುದು ಇಂದಿನ ಸಮಾಜದ ಗುಣಧರ್ಮವಾಗಿದೆ. ಒಟ್ಟಿನಲ್ಲಿ ವ್ಯಕ್ತಿನಾಮಗಳು ಆಯಾ ಕಾಲದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಮತ್ತು ಭಾಷಿಕ ಸ್ಥಿತಿಗತಿಗಳಿಗೆ ಅನುಗುಣವಾಗಿ ಜನರ ಸಂಸ್ಕಾರಗಳಿಗೆ ತಕ್ಕಂತೆ ಬದಲಾವಣೆಯಾಗುತ್ತಾ ಹೋಗುತ್ತವೆ. ಅವುಗಳ ಇನ್ನಷ್ಟು ವೈವಿಧ್ಯತೆಯನ್ನು ತಿಳಿಯಲು ಮುಂದಿನ ದಿನಗಳಲ್ಲಿ ಸಂಶೋಧನೆಯನ್ನು ಅಗತ್ಯವಾಗಿ ನಡೆಸಬೇಕಾಗಿದೆ.

ಎಂ.ಎನ್.ಎಚ್.

 

ವ್ಯಾಸ ಮಹಾಸಮುದ್ರಂ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಕುಂದುಕೂರು ಎಂಬ ಊರಿಗೆ ಐದು ಕಿ.ಮೀ. ದೂರದಲ್ಲಿ ಕರ್ನಾಟಕ ರಾಜ್ಯದ ಗಡಿ ಪ್ರದೇಶವಾಗಿರುವ ವ್ಯಾಸ ಮಹಾಸಮುದ್ರ ಎಂಬ ಕೆರೆಗೆ ಸಂಬಂಧಿಸಿದಂತೆ ಐತಿಹ್ಯಗಳಿವೆ. ಇದನ್ನು ಕುಂದುಕೂರು ಕೆರೆ ಎಂದು ಕೂಡ ಕರೆಯುತ್ತಾರೆ. ಹಿಂದೆ ಶ್ರೀಕೃಷ್ಣ ದೇವರಾಯ ಆಳುತ್ತಿದ್ದಾಗ ಆಸ್ಥಾನ ಯೋಗಿಗಳು ಆ ರಾಜನಿಗೆ ಗಂಡಾಂತರವಿದೆ ಎಂದರು. ಇದನ್ನು ತಪ್ಪಿಸಿಕೊಳ್ಳಲು ಮಾರ್ಗವನ್ನು ಹುಡುಕಲು ಎಲ್ಲಾ ದಿಕ್ಕುಗಳಿಗೂ ಭಟರನ್ನು ಕಳುಹಿಸಲಾಯಿತು. ಉತ್ತರ ದಿಕ್ಕಿಗೆ ಹೋದವರು ವೇದಗಿರಿಯ ಮೇಲಿದ್ದ ವ್ಯಾಸರಾಯರನ್ನು ನೋಡಿ ನಮಸ್ಕರಿಸಿ ಗಂಡಾಂತರವನ್ನು ತಪ್ಪಿಸುವಂತೆ ಕೋರಿದರು. ವ್ಯಾಸರಾಯರು ಶ್ರೀಕೃಷ್ಣ ದೇವರಾಯನ ಬಳಿ ಬಂದು ‘ನಿನಗಿರುವ ಸರ್ಪಗಂಡಾಂತರವನ್ನು ನಾನು ತಪ್ಪಿಸುತ್ತೇನೆ. ಆದರೆ ನನಗೆ ನಿನ್ನ ರಾಜ್ಯವನ್ನು ಕೊಡಬೇಕು’ ಎಂದರಂತೆ. ಆಗ ರಾಜ ‘ನನ್ನ ಪ್ರಾಣಕ್ಕಿಂತ ರಾಜ್ಯ ದೊಡ್ಡದಲ್ಲ’ ಎಂದು ಹೇಳಿ ತನ್ನ ರಾಜ್ಯವನ್ನು ವ್ಯಾಸರಾಯರಿಗೆ ಕೊಟ್ಟ.

ಸಿಂಹಾಸನದ ಮೇಲೆ ಇದ್ದ ವ್ಯಾಸರಾಯರ ಬಳಿ ಒಂದು ನಾಗರ ಹಾವು ಬಂದು ಬುಸುಗುಟ್ಟುತ್ತ ಇನ್ನೇನು ಕಚ್ಚಬಹುದು ಎಂದಾಗ ವ್ಯಾಸರಾಯರು ಒಂದು ಬಟ್ಟೆಯನ್ನು ಹಾವಿನ ಮೇಲೆ ಎಸೆದರು. ಬಟ್ಟೆ ಬಿದ್ದ ಕೂಡಲೇ ಹಾವು ಭಸ್ಮವಾಯಿತು. ಆಗ ವ್ಯಾಸರಾಯರು ಶ್ರೀಕೃಷ್ಣ ದೇವರಾಯನನ್ನು ಕರೆದು ‘ನಿನ್ನ ಗಂಡಾಂತರ ತಪ್ಪಿ ಹೋಯ್ತು. ಈಗ ನಿನಗೆ ಭಯವಿಲ್ಲ. ನನಗೆ ಈ ರಾಜ್ಯವೇಕೆ ಎಂದು ಹೇಳಿ ರಾಜ್ಯವನ್ನು ಶ್ರೀಕೃಷ್ಣ ದೇವರಾಯನಿಗೆ ಹಿಂದಿರುಗಿಸಿದರಂತೆ. ಆದರೆ ರಾಜ ಏನಾದರೂ ಉಡುಗೊರೆಯನ್ನು ಸ್ವೀಕರಿಸಲೇ ಬೇಕೆಂದು ಪಟ್ಟು ಹಿಡಿದ. ಆಗ ವ್ಯಾಸರಾಯರು ಒಂದು ಕೆರೆಯನ್ನು ನಿರ್ಮಿಸಲು ಸ್ಥಳವನ್ನು ಕೇಳಿದರು. ಆ ಸ್ಥಳದಲ್ಲಿ ಕಷ್ಟದಿಂದ ಕೆರೆಯನ್ನು ನಿರ್ಮಿಸಿದರಾದರೂ ಭಾರಿ ಮಳೆಯಿಂದಾಗಿ ಕೆರೆ ತುಂಬಿ ಕಟ್ಟೆ ಹೊಡೆದು ಹರಿಯಲಾರಂಭಿಸಿತು. ನೀರನ್ನು ನಿಲ್ಲಿಸಲು ದನಕಾಯುವ ಹುಡುಗನೊಬ್ಬ ವ್ಯಾಸರಾಯರ ಮಂತ್ರದಿಂದ ಬಂದ ಕೋಣವನ್ನು ಕೆರೆಯ ತೂಬಿನಂತೆ ನಿಲ್ಲಿಸಿದ. ಎರಡು ಸಾವಿರ ಎಕರೆಗಳಷ್ಟು ವಿಸ್ತಾರವಾದ ಕೆರೆ ಈಗಲೂ ೧೭೦೦ ಎಕರೆಗಳಷ್ಟು ಗದ್ದೆಗಳಿಗೆ ನೀರನ್ನು ನೀಡುತ್ತಿದೆ. ಸಮುದ್ರದಂತಿರುವ ಈ ಕೆರೆ ಇಂದಿಗೂ ವ್ಯಾಸರಾಯರ ಹೆಸರನ್ನು ನೆನಪಿಸಿಕೊಳ್ಳುವಂತೆ ಮಾಡಿದೆ.

ಎಂ.ಆರ್.ಎನ್. ಅನುವಾದ ಎ.ಎಂ.ಡಿ.

 

ಶನಿಯಾಟ್ಟ್ ಮನೆಗಳಲ್ಲೂ ತರವಾಡುಗಳಲ್ಲೂ ಉಂಟಾಗುವ ಶನಿದೋಷವನ್ನು ನಿವಾರಿಸಲು ತ್ರಿಶ್ಯೂರು ಜಿಲ್ಲೆಯ ಪಾಕನಾರ್ ಪಂಗಡದವರು ನಡೆಸುವ ಧಾರ್ಮಿಕ ಕಲೆ ಶನಿಯಾಟ್ಟ್. ಕಪ್ಪು, ಬಿಳಿ, ಹಳದಿ ಬಣ್ಣಗಳಿಂದ ಕೋಲ್ ಕಳಂ (ಮ) ಬರೆದು ಅದರ ಮುಂದೆ ಕೋಲ್‌ಕಳಗಳು ಬರೆಯುತ್ತಾರೆ. ಹದಿನಾರು ಕೋಣೆಗಳ ಕಳಂ ಶನಿದೇವರಿಗೆ, ಒಂಬತ್ತು ಕೋಣೆಗಳ ಕಳಂ ಕಾಲ (ಯಮ)ನಿಗೆ, ಐದು ಕೋಣೆಗಳ ಕಳಂ ತೇವಾರಕ್ಕೆ (ಮುತ್ತಪ್ಪನ್‌ಗೆ) ಬರೆಯಲಾಗುತ್ತದೆ. ಈ ಕಳಂಗಳ ಮುಂದೆ ಶನಿ, ಪೂದನ್, ಮಾಣಿಗಳ್ (ಸಹಾಯಕರು), ತೇವಾರಂ ಮುಂತಾದ ವೇಷಗಳು ಬಂದು ಹಾಡುಗಳ ಮತ್ತು ವಾದ್ಯಗಳ ಹಿನ್ನೆಲೆಯೊಂದಿಗೆ ಕುಣಿತವನ್ನು ಪ್ರದರ್ಶಿಸಿ ಶನಿದೋಷವನ್ನು ನಿವಾರಿಸಿಕೊಳ್ಳುವುದು ಶನಿಯಾಟ್ಟ್‌ನ್ಕ್ರಮ.

ಸೂರ್ಯನಿಗೆ ದಾಸೀ ಪತ್ನಿಯಲ್ಲಿ ಜನಿಸಿದ ಮಗ ಶನೀಶ್ವರ. ಶನಿಯು ಮನುಷ್ಯರನ್ನು ಮಾತ್ರವಲ್ಲ ದೈವಗಳನ್ನೂ ಬಾಧಿಸಿದ್ದಾಗಿಯೂ ಪರಶಿವನು ಕೂಡ ಶನಿಬಾಧೆಗೆ ಒಳಗಾಗಿದ್ದುದಾಗಿಯೂ ಪಾಕ್ಕನಾರ್ ಹಾಡುಗಳಲ್ಲಿದೆ. ಶನಿಕಾಟ ಉಂಟಾಗಬಹುದೆಂದು ಮುಂದಾಗಿಯೇ ತಿಳಿದ ಶಿವನು ಅದರಿಂದ ಪಾರಾಗಲು ಕಪ್ಪೆಯಾಗಿ ಬಂದು ಬಯಲ ಬಿಲವೊಂದರಲ್ಲಿ ಅಡಗಿದನೆಂದೂ ಬಯಲಿಗೆ ಬರುವ ನೀರು ತಡೆಯಲ್ಪಟ್ಟಿತ್ತೆಂದೂ ಹಾಗೆ ತಡೆಯಲ್ಪಟ್ಟಾಗ ಭೂಮಾಲೀಕನ ನಿರ್ದೇಶಾನುಸಾರವಾಗಿ ಕೋಲಿನಿಂದ ಚುಚ್ಚಿ ಕಪ್ಪೆಯು ಹೊರನೆಗೆಯುವಂತೆ ಮಾಡಲಾಯಿತೆಂದೂ ಹಾಗೆ ಶಿವನಿಗೆ ಶನಿಕಾಟ ತಗುಲಿತೆಂದೂ ಶನಿಯನ್ನು ಹೊಗಳುವ ಹಾಡೊಂದರಲ್ಲಿ ವರ್ಣಿತವಾಗಿದೆ. ಶಿವನ ಶನಿದೋಷವು ಭೂಮಾಲೀಕನನ್ನು ಬಾಧಿಸಿದ್ದಾಗಿಯೂ ಜ್ಯೋತಿಷ್ಯರ ನಿರ್ದೇಶಾನುಸಾರವಾಗಿ ಪಾಕ್ಕನಾರರಿಂದ ಶನಿಯಾಟ್ಟ್ ಕಾರ್ಯಕ್ರಮ ನಡೆಸಿ ಶನಿಕಾಟದಿಂದ ವಿಮೋಚನೆ ಪಡೆದುದಾಗಿಯೂ ಹಾಡಿನಲ್ಲಿ ಮುಂದುವರಿದು ಹೇಳಿದೆ. ಶನಿಯಾಟ್ಟು ನಡೆಸುವಾಗ ಈ ಉತ್ಪತ್ತಿ ಕಥೆಯನ್ನು ಕೂಡ ಹಾಡಲಾಗುತ್ತದೆ.

ಶನಿಯಾಟ್ಟ್‌ನ್ನುಸಾಮಾನ್ಯವಾಗಿ ಮೂರು ವರ್ಷಗಳಿಗೊಮ್ಮೆ ನಡೆಸಲಾಗುತ್ತದೆ. ಎರಡೂವರೆ ವರ್ಷಗಳ ಕಾಲ ಶನಿ ಒಂದೇ ರಾಶಿಯಲ್ಲಿ ನಿಲ್ಲುವುದರಿಂದ ಹೀಗೆ ಮಾಡುತ್ತಾರೆ. ಯಾವುದಾದರೂ ತಿಂಗಳ ಮೊದಲ ಶನಿವಾರ ಶನಿಯಾಟ್ಟು ನಡೆಸಲಾಗುತ್ತದೆ. ಸೂರ್ಯನು ಅಸ್ತಮಿಸಿದ ಬಳಿಕ ಇಪ್ಪತ್ತಮೂರು ಘಳಿಗೆ ಹೊತ್ತು (ಒಂಬತ್ತು ಗಂಟೆಗಳ ಕಾಲ) ಶನಿಯಾಟ್ಟ್‌ನಪ್ರದರ್ಶನ ಕಾಲಾವಧಿ. ಕಳಂ (ಬಣ್ಣದ ಪುಡಿಗಳಿಂದ ಮಾಡುವ ವಿವಿಧ ವಿನ್ಯಾಸಗಳು), ಹಾಡು, ಕುಣಿತ – ಇವುಗಳನ್ನು ಈ ಧಾರ್ಮಿಕ ಕಲೆಯಲ್ಲಿ ಅಳವಡಿಸಲಾಗಿದೆ. ಶನಿಯಾಟ್ಟ್ ನಡೆಸುವ ಮೂಲಕ ಕುಟುಂಬದ ಮತ್ತು ಆಯಾ ಸಮುದಾಯದ ಶನಿದೋಷವೂ ಗ್ರಹಚಾರದೋಷವೂ ದೂರವಾಗಿ ಸಕಲ ಸನ್ಮಂಗಲಗಳೂ ಉಂಟಾಗುವುದೆಂದು ನಂಬುತ್ತಾರೆ.

ತರವಾಡು ಮನೆಗಳ ಅಂಗಳದಲ್ಲಿ ಸಾಯಂಕಾಲವಾಗುತ್ತಲೆ ಮೊದಲಾಗಿ ಶನಿದೇವರಿಗೆ ಹದಿನಾರು ಕೋಣೆಗಳ ಕಳವನ್ನು ಬರೆದು ಮಧ್ಯದಲ್ಲಿ ಬಲಿದಂಡವನ್ನು ನಾಟಲಾಗುತ್ತದೆ. ಇದನ್ನು ಮೂರು ಹಾಗೆ ಭತ್ತದಿಂದ ಕಳದ ಮಧ್ಯೆ ಗಟ್ಟಿಗೊಳಿಸಲಾಗುವುದು. ಬಲಿದಂಡವನ್ನು ನಾಟುವುದು ಶನಿದೇವರನ್ನು ಆಹ್ವಾನಿಸುವುದಕ್ಕೆ ಬಳಿಕ ಕಳಂನ ಮುಂದೆ ಕುಳಿತು ಶನಿದೇವರಿಗೆ ಸಂಬಂಧಿಸಿದ ಹಾಡುಗಳನ್ನು ಹಾಡುತ್ತಾರೆ. ಮರಂ, ಚೆಂಡೆ, ಕೊಳಲು ಮುಂತಾದ ವಾದ್ಯಗಳಿರುತ್ತವೆ.

ಕಳಂಬರೆದು ಹಾಡುಗಳು ಪ್ರಾರಂಭವಾದಾಗ ಶನಿದೇವನು ಕಾಣಿಸಿಕೊಂಡು ನೃತ್ಯ ಮಾಡಲಾರಂಭಿಸುತ್ತಾನೆ. ಕಪ್ಪು ಬಿಳಿ ಹಳದಿಗಳಿಂದ ಮುಖವರ್ಣಿಕೆ ಮಾಡಿಕೊಂಡು ಕಲ್ಲು ಮಾಲೆ (ಮಣಿಸರ) ಕೈಬಳೆ, ಸೊಂಟದ ಮಣಿ, ಕಾಲ್ಗೆಜ್ಜೆ ಮುಂತಾದವುಗಳಿಂದ ಅಲಂಕರಿಸಿಕೊಂಡು ಸೊಂಟಕ್ಕೆ ಕೆಂಪು ರೇಷ್ಮೆಯುಟ್ಟು ಬಿಳಿ ಪಂಚೆಯನ್ನು ಕಚ್ಚೆ ಹಾಕಿ ಉಟ್ಟು ತಲೆಯ ಮೇಲೆ ನೀಳವಾದ ಕಿರೀಟವನ್ನು ಧರಿಸಿಕೊಂಡ ಶನಿ ಮತ್ತು ಹಾಡಿನಲ್ಲಿ ಪೂದನ್‌ನ ಭಾಗವು ಬರುವಾಗ ಪೂದನ್ ಕೂಡ ರಂಗಪ್ರವೇಶ ಮಾಡಿ ಕುಣಿಯ ತೊಡಗುತ್ತಾರೆ. ಶನಿದೇವರ ಭೂತಗಣಗಳಲ್ಲಿ ಪೂದನ್ ಕೂಡ ಒಂದು. ಕಂಗಿನ ಹಾಳೆಯ ಮುಖವಾಡ ಧರಿಸಿ ಎದೆಯ ಕೆಳಗೆ ದೊಡ್ಡದೊಂದು ಕೊಡವನು ಕಟ್ಟಿಕೊಳ್ಳಲಾಗುತ್ತದೆ. ಪಂಚೆಯುಟ್ಟು ಸೊಂಟಕ್ಕೆ ರೇಷ್ಮೆ ಬಟ್ಟೆಯನ್ನು ಸುತ್ತಿಕೊಳ್ಳುತ್ತಾನೆ. ಹಾಡಿಗನುಸಾರವಾಗಿ ಶನಿಯು ಪೂದನೂ ಜತೆ ಜತೆಗೆ ನೃತ್ಯ ಮಾಡುತ್ತಾರೆ. ಇವರ ಕುಣಿತದ ಬಳಿಕ ಕಳಂ ಬರೆದುದನ್ನು ಅಳಿಸಿ ಹಾಕಿ ಬಲಿದಂಡವನ್ನು ಕಿತ್ತು ಹಾಕಿ ಶನಿಯನ್ನು ಕಳಸಿಕೊಡಲಾಗುತ್ತದೆ. ಬಳಿಕ ಒಂಬತ್ತು ಕೋಣೆಗಳುಳ್ಳ ಕಳಂ ಅನ್ನು ಕಾಲ (ಯಮ)ನಿಗೋಸ್ಕರ ಬರೆಯಲಾಗುತ್ತದೆ. ಕಾಲನೂ ಇಬ್ಬರು ಮಾಣಿಗಳೂ ರಂಗಪ್ರವೇಶಿಸಿ ಹಾಡಿಗನುಸಾರವಾಗಿ ಕುಣಿಯಲಾರಂಭಿಸುತ್ತಾರೆ. ಮಾಣಿಗಳು ಹಾಸ್ಯ ಕಥಾಪಾತ್ರಗಳು. ಕಾಲನಿಗೆ ಮುಖವರ್ಣಿಕೆ, ವೇಷ ಭೂಷಣಗಳು ಕಂಗಿನ ಹಾಳೆಯಿಂದ ನಿರ್ಮಿಸಿದ ವಟ್ಟ ಮುಡಿ (ವೃತ್ತಾಕಾರದ ಕಿರೀಟ)ಗಳಿರುತ್ತವೆ. ನೃತ್ಯದ ಬಳಿಕ ಕಳವನ್ನು ಅಳಿಸಿ ಕಾಲನನ್ನು ಕಳಿಸಿಕೊಡಲಾಗುತ್ತದೆ. ಹಾಲೆಮರ ಅಥವಾ ಆಲದ ಮರಕ್ಕೆ ಮೊಳೆ ಹೊಡೆದು ಕಾಲನನ್ನು ಉದ್ವಾಸನ ಮಾಡಲಾಗುತ್ತದೆ. ಇದರ ಬಳಿಕ ತೇವಾರಂ (ಮುತ್ತಪ್ಪ)ನಿಗೆ ಬೇಕಾದ ಐದು ಕೋಣೆಗಳ ಕಳಂ ಬರೆಯಲಾಗುವುದು. ಶನಿದೋಷವೂ ಗ್ರಹಚಾರ ದೋಷವೂ (ಕಾಲಕ್ಕೇಡ್) ನಿವಾರಣೆಗೊಂಡು ಶುದ್ಧಗೊಂಡ ಸ್ಥಳದಲ್ಲಿ ತೇವಾರಂ ಪ್ರತ್ಯಕ್ಷವಾಗುತ್ತದೆ. ಎರಡು ತುದಿಯು ಉರಿಯುತ್ತಿರುವ ಪಂಜನ್ನು ಕಚ್ಚಿಕೊಂಡು ತೇವಾರಂ ಪೀಠವನ್ನೇರಿ ಕುಣಿಯುತ್ತದೆ. ಕೋನೆಗೆ ಅನುಗ್ರಹವಾಕ್ಯಗಳನ್ನಾಡಿ ಫಲಶ್ರುತಿಯೊಂದಿಗೆ ಕಾರ್ಯಕ್ರಮಗಳು ಮುಕ್ತಾಯವಾಗುತ್ತವೆ. ಅಷ್ಟಾಗುವಾಗ ಸೂರ್ಯೋದಯದ ಹೊತ್ತಾಗಿರುತ್ತದೆ. ಇತ್ತೀಚಿಗೆ ಅಪೂರ್ವವಾಗಿಯೇ ಶನಿಯಾಟ್ಟ್ ಪ್ರದರ್ಶಿಸಲ್ಪಡುತ್ತದೆ.

ಪಿ.ಆರ್.ಕೆ. ಅನುವಾದ ಕೆ.ಕೆ.

 

ಶಿಕಾರಿವಾಳ್ಳು ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಬೋಯಕೊಂಡ ಹತ್ತಿರದ ಕಾಡಿನಲ್ಲಿ ಶಿಕಾರಿಪಾಳ್ಯ ಎಂಬ ಊರಿದೆ. ಆ ಊರಿನಲ್ಲಿರುವವರೆಲ್ಲ ಶಿಕಾರಿಗಳೇ (ಹಕ್ಕಿಪಿಕ್ಕಿ). ಇವರನ್ನು ಶಿಕಾರಿಗಳು, ಗುವ್ವಲವಾಳ್ಳು, ನಕ್ಕಲವಾಳ್ಳು ಮುಂತಾದ ಹೆಸರುಗಳಿಂದ ಕರೆಯುತ್ತಾರೆ. ಇವರು ಬೇಟೆಗಾರರು. ಇವರು ಹೆಚ್ಚಿಗೆ ಗುವ್ವ (ಹಕ್ಕಿ)ಗಳನ್ನು ಬೇಟೆಯಾಡುವುದರಿಂದ ಗುವ್ವಲವಾಳ್ಳು ಎಂಬ ಹೆಸರು ಬಂದಿದೆ. ಇವರನ್ನು ಕನ್ನಡದಲ್ಲಿ ಹಕ್ಕಿಪಿಕ್ಕಿ ಎಂದು, ತಮಿಳಿನಲ್ಲಿ ನರಿಕಾರನ್, ಕುರುವಿಕಾರನ್ ಎಂದು ಹೇಳುತ್ತಾರೆ.

ಶಿಕಾರಿ ಪಾಳ್ಯದಲ್ಲಿ ಸುಮಾರು ೩೦-೪೦ ಮನೆಗಳಿವೆ. ಇವರು ‘ನಕ್ಕಲ ಸಂಘಂ’ (ನರಿಗಳ ಸಂಘ) ಎಂಬ ಹೆಸರಿನ ಸಂಘ ಮಾಡಿಕೊಂಡಿದ್ದಾರೆ. ಇವರು ಮಣಿಗಳನ್ನು ಬೇರೆ ಬೇರೆ ಪ್ರದೇಶಗಳಿಗೆ ತೆಗೆದುಕೊಂಡು ಹೋಗಿ ಮಾರುತ್ತಾರೆ. ಮುದುಕರು, ಮಕ್ಕಳು ಹತ್ತಿರದ ಬೋಯಕೊಂಡ ಗಂಗಮ್ಮನನ್ನು ಪೂಜಿಸಲು ಬಂದ ಭಕ್ತರನ್ನು ಭಿಕ್ಷೆ ಬೇಡುತ್ತಾರೆ. ಈ ಕಾರಣದಿಂದ ಇವರನ್ನು ‘ಶಿಕಾರಿ ಬಿಕಾರಿ’ ಎಂದು ಕರೆಯುತ್ತಾರೆ.

ಶಿಕಾರಿ ಹೆಣ್ಣು ಮಕ್ಕಳು ಕೆಲವೊಮ್ಮೆ ಚಿಕ್ಕ ಮಕ್ಕಳನ್ನು ಕಂಕುಳಲ್ಲಿ ಎತ್ತಿಕೊಂಡು ಹಳ್ಳಿ ಹಳ್ಳಿ ತಿರುಗಾಡಿ ಸೂಜಿ, ದಬ್ಬಣ, ಕಪ್ಪುದಾರ, ಮಣಿ, ಬಾಚಣಿಗೆ, ಕನ್ನಡಿ ಮುಂತಾದವನ್ನು ಮಾರುತ್ತಾರೆ.

ಶಿಕಾರಿ ಜನ ಹಕ್ಕಿಗಳನ್ನು ಬೇಟೆಯಾಡುವಾಗ ಆ ಹಕ್ಕಿ ಕೂಗುವಂತೆಯೇ ಕೂಗುತ್ತಾ ಅದು ಹತ್ತಿರ ಬಂದಾಗ ‘ಕ್ಯಾಟರ್‌ಪಿಲ್ಲರ್’ ಎಂಬ ಸಾಧನದಿಂದ ಕಲ್ಲು ಹೊಡೆದು ಸಾಯಿಸುತ್ತಾರೆ. ಅಲ್ಲದೆ ಬಲೆ, ಉರಿ, ನಾಟಿ ಬಾಂಬ್ ಬಳಸಿ ಕೂಡ ಹಕ್ಕಿಗಳನ್ನು, ಪ್ರಾಣಿಗಳನ್ನು ಕೊಲ್ಲುತ್ತಾರೆ.

ಶಿಕಾರಿಗಳ ಮಾತೃಭಾಷೆ ಗುಜರಾತಿ, ರಾಜಸ್ತಾನಿ ಮತ್ತು ಮರಾಠಿ ಭಾಷೆಗಳ ಮಿಶ್ರಣ. ಇವರು ತಾವು ವಾಸ ಮಾಡುವ ಸ್ಥಳಗಳಲ್ಲಿರುವ ಭಾಷೆಯನ್ನೇ ಕಲಿಯುತ್ತಾರೆ. ಇವರು ಅಲೆಮಾರಿಗಳಾಗಿರುವುದರಿಂದ ಸಾಮಾನ್ಯವಾಗಿ ಹೆಚ್ಚು ಭಾಷೆಗಳನ್ನು ಅರ್ಥಮಾಡಿಕೊಳ್ಳಬಲ್ಲರು, ಮಾತನಾಡಬಲ್ಲರು. ಇವರ ಭಾಷೆಗೆ ಲಿಪಿ ಇಲ್ಲ. ಸಾಮಾನ್ಯವಾಗಿ ಶಿಕಾರಿ ಜನರಲ್ಲಿ ಗಂಡಸರ ಹೆಸರಿನ ತುದಿಯಲ್ಲಿ ‘ಸಿಂಗ್’ ಎಂದೂ ಹೆಂಗಸರ ಹೆಸರಿನ ತುದಿಯಲ್ಲಿ ‘ಬಾಯಿ’ ಎಂದೂ ಇರುತ್ತದೆ. ಮಾನಿಕ್ ಸಿಂಗ್, ರಾಮನ್ ಸಿಂಗ್, ಮೆಂತಾಲ್ ಸಿಂಗ್, ಲಕ್ಷ್ಮೀಬಾಯಿ, ದುರ್ಗಾಬಾಯಿ, ಗೋರಿ ಬಾಯಿ ಮುಂತಾದವು ಇವರ ಹೆಸರುಗಳು.

67_70A_DBJK-KUH

ಶಿಕಾರಿಗಳಿಗೂ ಸುಗಾಲಿ (ಬಂಜಾರಾ)ಗಳಿಗೂ ಸಂಬಂಧವಿದೆ ಎಂದು ಹೇಳುತ್ತಾರೆ. ಇವರು ಹೇಳುವ ಐತಿಹ್ಯದ ಪ್ರಕಾರ ಇವರ ವಂಶದ ಮೂಲಪುರುಷನಿಗೆ ಇಬ್ಬರು ಹೆಂಡತಿಯರಂತೆ. ಮೊದಲನೆಯ ಹೆಂಡತಿಯ ಮಕ್ಕಳು ಶಿಕಾರಿಗಳು, ಎರಡನೆಯ ಹೆಂಡತಿಯ ಮಕ್ಕಳು ಸುಗಾಲಿಗಳು ಎಂದು ಹೇಳುತ್ತಾರೆ. ಶಿಕಾರಿಗಳಲ್ಲಿ ಎರಡು ಪಂಗಡಗಳಿವೆ. ಮೊದಲನೆಯ ಪಂಗಡದಲ್ಲಿ ಗುಜರಾತಿಯೋ, ಪೊವ್ವಾಗ್ ಎಂಬ ಎರಡು ಉಪಪಂಗಡಗಳಿವೆ. ಎರಡನೆಯ ಪಂಗಡದಲ್ಲಿ ಕಾಳಿವಾಲ, ನಾಗವಾಲ, ರಾಣವಾಲ, ಮೇವಾಡ ಎಂಬ ಉಪವರ್ಗಗಳಿವೆ.

ಶಿಕಾರಿಗಳು ದುರ್ಗ, ಎಲ್ಲಮ್ಮ, ಕಾಳಿ, ಪೋಲೇರಮ್ಮ ಮೊದಲಾದ ಹಿಂದು ದೇವತೆಗಳನ್ನು ಪೂಜೆ ಮಾಡುತ್ತಾರೆ. ಇವರ ಆಚಾರದಂತೆ ಗಂಡಸರು ತಲೆ ಕೂದಲನ್ನು ತೆಗೆಯಬಾರದು, ಬಾಚಣಿಗೆ ಬಳಸಬಾರದು. ಆದರೆ ಮುಖ ಕ್ಷೌರ ಮಾಡಿಕೊಳ್ಳಬಹುದು. ಇವರು ವಿಧವಿಧವಾದ ಪೇಟಗಳನ್ನು ಧರಿಸುತ್ತಾರೆ. ಕೆಲವರು ಪೇಟ ಧರಿಸಿ, ಕೌಪೀನ ಮಾತ್ರ ಇಟ್ಟುಕೊಂಡು ಅರೆಬೆತ್ತಲೆಯಾಗಿರುತ್ತಾರೆ. ಹೆಂಗಸರು ಕೈಗೆ ಕನ್ನಡಿ ಬಳೆಗಳನ್ನು ಹಾಕಿಕೊಳ್ಳುತ್ತಾರೆ. ಮದುವೆಯಾದವರು ಕರಿಮಣಿ ಧರಿಸುತ್ತಾರೆ.

ಸೋದರ ಮಾವ ಅಥವಾ ಸೋದರತ್ತೆಯ ಮಗಳನ್ನು ಮದುವೆಯಾಗುವ ಪದ್ದತಿ ಇವರಲ್ಲಿದೆ. ಹೆಣ್ಣು ಗಂಡ ಸತ್ತ ಮೇಲೆ ಇನ್ನೊಬ್ಬರನ್ನು ಮದುವೆಯಾಗಬಹುದು. ಅಣ್ಣ ಸತ್ತು ಹೋದರೆ ತಮ್ಮ ಅತ್ತಿಗೆಯನ್ನು ಮದುವೆ ಮಾಡಿಕೊಳ್ಳಬಹುದು. ಶಿಕಾರಿಗಳಲ್ಲಿ ವರದಕ್ಷಿಣೆ ಪದ್ಧತಿ ಇಲ್ಲ. ಮದುವೆಯ ಖರ್ಚುಗಳನ್ನು ಮದುಮಗನೇ ಭರಿಸಬೇಕು. ಮದುವೆ ಮೂರು ದಿನ ನಡೆಯುತ್ತದೆ. ಮದುಮಗ ಸಂಜೆ ಪೂಜೆ ಮಾಡಿ ಮನೆಯ ದೇವರಿಗೆ ಏಳು ಸಲ ಕುಂಕುಮ ಬೊಟ್ಟು ಇಡುತ್ತಾನೆ. ಆ ಕುಂಕುಮದಿಂದಲೇ ಮದುಮಗ ಮತ್ತು ಮದುಮಗಳಿಗೆ ಏಳು ಸಲ ಹಣೆಯ ಮೇಲೆ ಬೊಟ್ಟು ಇಡುತ್ತಾರೆ. ಅನಂತರ ಮದುಮಗ ಕರಿಮಣಿ ಸರ ಕಟ್ಟುತ್ತಾನೆ.

ಮದುವೆಯಾದ ಮೇಲೆ ಮನೆ ದೇವತೆಗಳಾದ ದುರ್ಗ, ಕಾಳಿ, ಎಲ್ಲಮ್ಮ, ಪೋಲೇರಮ್ಮ ಅವರಿಗೆ ಪೂಜೆ ಮಾಡುತ್ತಾರೆ. ಎಮ್ಮೆ ಅಥವಾ ಮೇಕೆ ಬಲಿ ಕೊಡುತ್ತಾರೆ. ಎಮ್ಮೆಯನ್ನು ಹೊಟ್ಟೆಯವರೆಗೆ ಭೂಮಿಯಲ್ಲಿ ಹೂತಿಟ್ಟು ಕತ್ತಿಯಿಂದ ತಿವಿದು ಹಸಿ ನೆತ್ತರನ್ನು ಕುಡಿಯುತ್ತಾರಂತೆ.

ಶಿಕಾರಿಗಳು ಮಣಿ ಶಾಸ್ತ್ರವನ್ನು ನಂಬುತ್ತಾರೆ. ಯಾವುದೇ ಕೆಲಸ ಮಾಡಬೇಕಾದರೆ, ಮದುವೆ ಮಾಡಬೇಕಾದರೆ ದೇವರಿಗೆ ಪೂಜೆ ಮಾಡಿ ಕೆಂಪು ಮಣಿಗಳಿಂದ ಶಾಸ್ತ್ರ ಕೇಳುತ್ತಾರೆ. ಇವುಗಳನ್ನು ಕೆಲವು ವಿಶೇಷವಾದ ಮರಗಳಿಂದ ಸಂಗ್ರಹಿಸುತ್ತಾರೆ. ಒಂದೊಂದು ಕುಟುಂಬದ ಬಳಿ ಕೊನೆಯ ಪಕ್ಷ ಇನ್ನೂರು ಮಣಿಗಳಿರುತ್ತವೆ. ದೇವತಾ ವಿಗ್ರಹ ಇರುವ ಪೆಟ್ಟಿಗೆ ಮುಂದೆ ಮೇಕೆ ಚರ್ಮವನ್ನು ಹಾಸಿ ಅದರ ಮೇಲೆ ಮಣಿಗಳನ್ನು ಸುರಿಯುತ್ತಾರೆ. ಮನೆಯ ಯಜಮಾನ ನಾಲ್ಕು ನಾಲ್ಕು ಮಣಿಗಳನ್ನು ಇಡುತ್ತಾ ಇರುತ್ತಾನೆ. ಹಾಗೆ ಮೂರು ಸಲ ಮಾಡುತ್ತಾನೆ. ಮೂರೂ ಸಲ ಕೊನೆಗೆ ಎರಡೆರಡು ಮಣಿ ಉಳಿದರೆ ದೇವತೆ ವರ ಕೊಟ್ಟಂತೆ.

ಶಿಕಾರಿಗಳಲ್ಲಿ ಪಂಚಾಯ್ತಿ ನಡೆಸುವ ಸಂಪ್ರದಾಯವಿದೆ. ಎಲ್ಲ ವಿಷಯಗಳು ತಿಳಿದವರನ್ನು ಮುಖ್ಯಸ್ಥರೆಂದು ಪರಿಗಣಿಸಿ ಅವರು ಹೇಳಿದಂತೆ ಕೇಳುತ್ತಾರೆ. ಯಾರಾದರೂ ತಪ್ಪು ಮಾಡಿದರೆ ಅಂಥವರ ತಲೆ ಬೋಳಿಸಿ ಚೆಡ್ಡಿ ಬಿಟ್ಟು ಉಳಿದ ಬಟ್ಟೆಗಳೆಲ್ಲ ಬಿಚ್ಚಿ ಊರೆಲ್ಲ ಮೆರವಣಿಗೆ ಮಾಡುತ್ತಾರೆ.

ಶಿಕಾರಿಗಳು ಅಥವಾ ಹಕ್ಕಿಪಿಕ್ಕಿಗಳು ಚಿತ್ತೂರು ಜಿಲ್ಲೆಯ ಮೂರು ನಾಲ್ಕು ಶಿಕಾರಿಗಳಲ್ಲಿ ಮಾತ್ರವಲ್ಲದೆ ಚಿತ್ತೂರು ಪಟ್ಟಣ, ಪಲಮನೇರು, ತಿರುಪತಿ, ವಾಯಲ್ಪಾಡು, ರಾಯಚೋಟಿ, ನೆಲ್ಲೂರು ಮುಂತಾದ ಕಡೆ ಇರುತ್ತಾರೆ. ಅಲ್ಲದೆ ಕರ್ನಾಟಕದ ಹಕ್ಕಿಪಿಕ್ಕಿ ಕಾಲೋನಿಗಳಲ್ಲಿ ಮತ್ತು ಇನ್ನೂ ಅನೇಕ ಪ್ರದೇಶಗಳಲ್ಲಿ ವಾಸ ಮಾಡುತ್ತಾರೆ. ತಮಿಳುನಾಡಿನಲ್ಲೂ ಅನೇಕ ಪ್ರದೇಶಗಳಲ್ಲಿ ಇವರು ವಾಸ ಮಾಡುತ್ತಿದ್ದಾರೆ. ಕರ್ನಾಟಕ ಮತ್ತು ತಮಿಳು ನಾಡುಗಳಲ್ಲಿ ಇವರನ್ನು ಪರಿಶಿಷ್ಟ ಪಂಗಡಗಳಲ್ಲಿ ಸೇರಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಹಿಂದುಳಿದ ಜಾತಿಯೆಂದು ಪರಿಗಣಿಸಿದ್ದಾರೆ.

ಎಂ.ಆರ್.ಎನ್. ಅನುವಾದ ಎ.ಎಂ.ಡಿ.