ವೀಧಿ ನಾಟಕಂ ಆಂಧ್ರಪ್ರದೇಶದಲ್ಲಿ ಅದರಲ್ಲೂ ಮುಖ್ಯವಾಗಿ ರಾಯಲಸೀಮೆ ಪ್ರದೇಶದಲ್ಲಿ ಪ್ರದರ್ಶಿಸಲ್ಪಡುವ ಕಲಾರೂಪದಲ್ಲಿ ‘ವೀಧಿ ನಾಟಕ’ ಎಂಬುದು ಬಹಳ ಕಾಲದಿಂದಲೂ ಪ್ರಾಚುರ್ಯದಲ್ಲಿದೆ. ನಾಟಕಗಳ ಬಗೆಗೆ ಬರೆದ ಪ್ರಾಚೀನ ವಿದ್ವಾಂಸರು ‘ವೀಧಿ’ ಒಂದು ರೂಪಕವೆಂದು ತಿಳಿಸಿದ್ದಾರೆ. ಆದರೆ ಜನಪದ ವೀಧಿ ನಾಟಕ ಇದಕ್ಕೆ ಭಿನ್ನವಾಗಿ ಕಂಡುಬರುತ್ತದೆ. ಬೀದಿಗಳಲ್ಲಿ ಪ್ರದರ್ಶಿಸಲ್ಪಡುವುದರಿಂದ ಇವು ವೀಧಿ ನಾಟಕಗಳು ಆಗಿರಬಹುದು (ವೀಧಿ = ಬೀದಿ). ಇದು ದೇಶಿ ನಾಟಕ ಸಂಪ್ರದಾಯಕ್ಕೆ ಸೇರುತ್ತದೆ. ಇಂತಹ ರೂಪಕವನ್ನು ಶೈವ ಕವಿಗಳು ಧರ್ಮ ಪ್ರಚಾರೋದ್ದೇಶದಿಂದ ಬೆಳಕಿಗೆ ತಂದರು. ಇಂತಹ ಬಯಲು ರಂಗಭೂಮಿಯ ಪ್ರದರ್ಶನವೇ ಯಕ್ಷಗಾನಗಳ ಉಗಮಕ್ಕೆ ಕಾರಣವಾಗಿರಬಹುದು.

ಬೀದಿ ನಾಟಕಗಳನ್ನು ಪ್ರದರ್ಶಿಸುವವರಿಗೆ ‘ಭಾಗವತುಲು’ ಎಂದು ಕರೆಯುವುದುಂಟು. ಈ ನಾಟಕಗಳಲ್ಲಿ ಸ್ತ್ರೀ ಪಾತ್ರಗಳನ್ನು ಪುರುಷರೇ ಧರಿಸುತ್ತಾರೆ. ಹಾರ್ಮೋನಿಯಂ, ತಬಲಾ ಮುಂತಾದ ಸಂಗೀತ ವಾದ್ಯಗಳು ಬಳಕೆಯಾಗುತ್ತವೆ.

ಆಂಧ್ರಪ್ರದೇಶದಲ್ಲಿ ಚಿತ್ತೂರು ಜಿಲ್ಲೆಯ ಕುಪ್ಪಂ ವೀಧಿ ನಾಟಕಗಳಿಗೆ ಹೆಸರಾಗಿದೆ. ಭಾರತ, ರಾಮಾಯಣ, ಭಾಗವತಾದಿ ಇತಿವೃತ್ತಗಳನ್ನು ಬಳಸಿ ವೀಧಿ ನಾಟಕಗಳನ್ನು ಪ್ರದರ್ಶಿಸುವುದರಲ್ಲಿ ಕುಪ್ಪಂ ಕಲಾವಿದರು ಸಿದ್ಧ ಹಸ್ತರು. ಈ ಪ್ರದೇಶದ ಕಲಾವಿದರಿಗೆ ‘ಕಂಗುಂದಿ’ ಕಲಾಕಾರರೆಂಬ ಹೆಸರು ಬಂದಿದೆ. ರುಕ್ಮಿಣಿ ಕಲ್ಯಾಣಂ, ವಾಮನ ಚರಿತ್ರೆ, ಅಂಬರೀಷನ ಕತೆ, ಗಜೇಂದ್ರ ಮೋಕ್ಷ, ಶ್ರೀಕೃಷ್ಣ ಲೀಲೆ, ಲಂಕಾದಹನ, ರಾವಣ ವಧೆ, ದ್ರೌಪದೀ ವಸ್ತ್ರಾಪಹರಣ ಮುಂತಾದ ಪೌರಾಣಿಕ ಇತಿವೃತ್ತವುಳ್ಳ ವೀಧಿ ನಾಟಕಗಳನ್ನು ಕಂಗುಂದಿ ಕಲಾವಿದರು ಪ್ರದರ್ಶಿಸುತ್ತಾರೆ.

ಹಬ್ಬ ಹರಿದಿನಗಳಲ್ಲಿ, ಜಾತ್ರೆಯ ಸಂದರ್ಭಗಳಲ್ಲಿ ಬೀದಿ ನಾಟಕಗಳನ್ನು ಪ್ರದರ್ಶಿಸುತ್ತಾರೆ. ಈ ಪ್ರದರ್ಶನ ರಾತ್ರಿ ಹತ್ತು ಗಂಟೆಯಿಂದ ಬೆಳಗಿನ ಜಾವ ೫ ಗಂಟೆಯ ತನಕ ನಡೆಯುತ್ತದೆ. ‘ವೀಧಿ ನಾಟಕಂ’ ಮತ್ತು ‘ವೀಧಿ ಭಾಗವತಂ’ ಹೆಚ್ಚು ಕಡಿಮೆ ಒಂದೇಯಾಗಿವೆ. ಕೆಲವು ಕಡೆ ವೀಧಿ ನಾಟಕವೇ ವೀಧಿ ಭಾಗವತವಾಗಿ ಕರೆಯಲ್ಪಡುತ್ತಿದೆ. ಕರ್ನಾಟಕದಲ್ಲಿ ಪ್ರಚಲಿತವಾಗಿರುವ ‘ಬಯಲಾಟ’ ತಮಿಳುನಾಡಿನ ‘ತೆರುಕ್ಕೂತ್ತು’ ಎಂಬ ನಾಟಕಗಳು ವೀಧಿ ನಾಟಕವನ್ನು ಹೋಲುತ್ತವೆ.

ಜಿ.ಎಸ್.ಎಂ.

 

ವೀಧಿ ಭಾಗವತಂ ಆಂಧ್ರಪ್ರದೇಶದ ಜನಪದ ರೂಪಕ. ಜನಪದರ ಬಾಯಲ್ಲಿ ಇದು ‘ವೀಧಿ ಬಾಗೋತಂ’ ಎಂದು ಕರೆಯಲ್ಪಡುತ್ತಿದೆ. ಇದು ಅಪ್ಪಟ ಜನಪದ ರೂಪಕ. ಆಂಧ್ರದ ಕಡಲುತೀರ ಪ್ರದೇಶಗಳಲ್ಲಿ ಇದು ಇಂದಿಗೂ ಸಜೀವವಾಗಿಯೇ ಉಳಿದಿದೆ. ಕರ್ನಾಟಕದ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿರುವ ‘ಕೇಳಿಕೆ’ ಇದನ್ನು ಹೋಲುತ್ತದೆ.

ಮಿಕ್ಕ ಎಲ್ಲ ಜನಪದ ರೂಪಕಗಳಂತೆಯೇ ಇದೂ ಸಹ ಒಂದು ಸಮಾಹಾರ ಕಲೆ. ಗೀತ, ಸಂಗೀತ, ನೃತ್ಯ, ಅಭಿನಯಗಳೊಂದಿಗೆ ಇದು ಪ್ರದರ್ಶಿಸಲ್ಪಡುತ್ತದೆ. ಲೌಕಿಕ ಇತಿವೃತ್ತಗಳು ಮತ್ತು ಪಾರಮಾರ್ಥಿಕ ಇತಿವೃತ್ತಗಳೊಂದಿಗೆ ಕೂಡಿದ ಪಾತ್ರಗಳು ೧೨ ರಿಂದ ೧೫ ರವರೆಗೂ ಇರುತ್ತವೆ. ಮನುಷ್ಯ ಪಾತ್ರಗಳೇ ಅಲ್ಲದೆ ದೈವಸಂಬಂಧವಾದ ಪಾತ್ರಗಳೂ ಸಹ ಪ್ರಮುಖವಾಗಿರುತ್ತವೆ. ಬಯಲಾಟಗಳಲ್ಲಿ ಇರುವಂತೆಯೇ ಸ್ತ್ರೀ ಪಾತ್ರಗಳನ್ನು ಪುರುಷರೇ ಧರಿಸುವುದುಂಟು.

ವೀಧಿ ಭಾಗವತದಲ್ಲಿ ಗೀತ, ವಚನ, ವಚನ ಪದ್ಯಭಾಗ ಎಂಬ ಮೂರು ಭಾಗಗಳಿರುತ್ತವೆ. ವೀಧಿ ಭಾಗವತಗಳನ್ನು ರಾತ್ರಿ ಸಮಯಗಳಲ್ಲೇ ಪ್ರದರ್ಶಿಸುತ್ತಾರೆ. ಸುಮಾರು ಒಂಬತ್ತು, ಹತ್ತು ಗಂಟೆಯ ಸಮಯದಲ್ಲಿ ಪ್ರಾರಂಭ ಮಾಡಿ ಮಾರನೆಯ ದಿನ ಬೆಳಗಿನ ಜಾವದ ತನಕ ಪ್ರದರ್ಶಿಸುತ್ತಾರೆ. ಎರಡು, ಮೂರು ರಾತ್ರಿಗಳು ಸಹ ವೀಧಿ ಭಾಗವತಗಳು ಮುಂದುವರಿಯುತ್ತವೆ. ಹರಿಶ್ಚಂದ್ರ, ಸಾರಂಗಧರ, ಗಯೋಪಾಖ್ಯಾನ, ವಿರಾಟಪರ್ವ, ಚಂದ್ರಹಾಸ ಮುಂತಾದ ಇತಿವೃತ್ತವುಳ್ಳ ವೀಧಿ ಭಾಗವತಗಳನ್ನು ಪ್ರದರ್ಶಿಸುತ್ತಾರೆ.

ರಂಗಭೂಮಿಯ ವೇದಿಕೆಯ ನಾಲ್ಕು ದಿಕ್ಕುಗಳಲ್ಲಿಯೂ ಒಂಬತ್ತು ಅಡಿಗಳ ಉದ್ದವಿರುತ್ತದೆ. ಮುಂದುಗಡೆ ಎರಡು ಕಂಬಗಳನ್ನು ನೆಟ್ಟು, ಬೇವಿನ ಎಲೆ ಅಥವಾ ಮಾವಿನ ಎಲೆಗಳಿಂದ ತೋರಣಗಳನ್ನು ಕಟ್ಟುತ್ತಾರೆ. ಯಕ್ಷಗಾನದ ಒಂದು ಪ್ರಭೇದವೆಂದು ಹೇಳಬಹುದಾದ ವೀಧಿ ಭಾಗವತಮು (ಬೀದಿ ಭಾಗವತ) ಕನ್ನಡದ ಶ್ರೀಕೃಷ್ಣ ಪಾರಿಜಾತವನ್ನು ಹೋಲುವಂಥದು. ಆದರೆ ವೀಧಿ ಭಾಗವತದಲ್ಲಿ ಲೌಕಿಕ, ಧಾರ್ಮಿಕ ಮತ್ತು ಪೌರಾಣಿಕ ವಸ್ತುಗಳೆಲ್ಲ ಕಂಡುಬರುತ್ತವೆ. ತುಂಬ ಸರಳವಾದ ವೇಷಧಾರಣೆ ಮತ್ತು ವಾದ್ಯ ಸಂಗೀತದ ನೆರವು ಕಂಡುಬರುತ್ತದೆ.

ಜಿ.ಎಸ್.ಎಂ.

 

ವೀರಗಾಸೆ ಕುಣಿತ ಸಾಮೂಹಿಕ ನೃತ್ಯವನ್ನೊಳಗೊಂಡ ಕರ್ನಾಟಕದ ಒಂದು ಜನಪದ ಕಲೆ. ಶೈವ ಸಂಪ್ರದಾಯದ ವೀರರಸ ಪ್ರಧಾನವಾದ ಧಾರ್ಮಿಕ ಕುಣಿತ. ಇಬ್ಬರಿಂದ ಮೂವತ್ತರವರೆಗೆ ಕಲಾವಿದರ ಸಂಖ್ಯೆ ಇರುತ್ತದೆ. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಧಾರವಾಡ, ಬಳ್ಳಾರಿ ಜಿಲ್ಲೆಗಳಲ್ಲಿ ಈ ನೃತ್ಯ ಪ್ರಚಲಿತವಿದೆ. ಇದರಲ್ಲಿ ಪಂಚವಾದ್ಯಗಳು ಬಳಕೆಯಾಗುತ್ತವೆ : ತಾಲ, ಶ್ರುತಿ, ಸಂಬಾಳ, ಮೋರಿ ಹಾಗೂ ಕರಡೆವಾದ್ಯ. ಈ ಕಲೆಗೆ ಹಿನ್ನೆಲೆಯಾಗಿ ಒಂದು ಪೌರಾಣಿಕ ಕಥೆ ಇದೆ : ದಕ್ಷಬ್ರಹ್ಮನು ಆಚರಿಸಿದ ಒಂದು ಯಾಗಕ್ಕೆ ಶಿವನೊಬ್ಬನನ್ನು ಬಿಟ್ಟು ಉಳಿದೆಲ್ಲ ದೇವಾನುದೇವತೆಗಳನ್ನು ಆಹ್ವಾನಿಸುತ್ತಾನೆ. ತನ್ನ ತಂದೆ ಉದ್ದೇಶಪೂರ್ವಕವಾಗಿ ಗಂಡನನ್ನು ಅವಮಾನಿಸಿದ್ದಾನೆ ಎಂದು ಭಾವಿಸಿದ ಪಾರ್ವತಿಯು ವ್ಯಗ್ರಳಾಗಿ ತಂದೆಯಲ್ಲಿ ನ್ಯಾಯ ಕೇಳಲು ಗಂಡ ಬೇಡವೆಂದರೂ ಕೇಳದೆ ದಕ್ಷಬ್ರಹ್ಮನಲ್ಲಿಗೆ ಬರುತ್ತಾಳೆ. ಮಗಳೆಂಬ ಮಮತೆಯನ್ನು ತೊರೆದು ದಕ್ಷಬ್ರಹ್ಮ ಪಾರ್ವತಿಯ ಎದುರಿನಲ್ಲಿಯೇ ಶಿವನನ್ನು ನಿಂದಿಸುತ್ತಾನೆ. ಪತಿನಿಂದೆಯನ್ನು ಸಹಿಸಲಾರದ ಪಾರ್ವತಿ ಅಗ್ನಿಕುಂಡದಲ್ಲಿ ಬಿದ್ದು ಅಸುನೀಗುತ್ತಾಳೆ. ಈ ಘಟನೆಯಿಂದ ಕೋಪಗೊಂಡ ಶಿವ ಉಗ್ರನಾಗಿ ತಾಂಡವ ನೃತ್ಯದಲ್ಲಿ ತೊಡಗುತ್ತಾನೆ. ಕೋಪದಿಂದ ಹಣೆಯ ಬೆವರನ್ನೂ ಬೆರಳುಗಳಿಂದ ಬಾಚಿ ನೆಲಕ್ಕೆ ಅಪ್ಪಳಿಸುತ್ತಾನೆ. ಆಗ ೧೦೧ ಆಯುಧಗಳನ್ನು ಧರಿಸಿದ ವೀರಭದ್ರನ ಅವತಾರವಾಗುತ್ತದೆ. ಆ ವೀರಭದ್ರ ದಕ್ಷಬ್ರಹ್ಮನ ಯಾಗ ಶಾಲೆಗೆ ಬಂದು ಎಲ್ಲವನ್ನು ನಾಶ ಪಡಿಸುವಾಗ ತೋರಿದ ಪ್ರತಾಪದ ಪ್ರತೀಕವೇ ವೀರಗಾಸೆ ಕುಣಿತ.

ಇದರಲ್ಲಿ ಭಾಗವಹಿಸುವ ಕಲಾವಿದರ ವೇಷಭೂಷಣಗಳು ಹೀಗಿರುತ್ತವೆ : ಬಿಳಿಯ ಪಂಚೆಯ ವೀರಗಚ್ಚೆ, ತಲೆಗೆ ಅರಿಶಿನ ಅಥವಾ ನೀಲಿ ಬಣ್ಣದ ರುಮಾಲು, ಕಾವಿ ಬಣ್ಣದ ಕಸೆಯಂಗಿ, ಕೊರಳಲ್ಲಿ ರುದ್ರಾಕ್ಷಿ ಸರ, ಹಣೆಗೆ ವಿಭೂತಿ, ಕಿವಿಯಲ್ಲಿ ಕುಂಡಲ, ಸೊಂಟಕ್ಕೆ ಸೊಂಟಪಟ್ಟಿ, ಕೈಯಲ್ಲಿ ಬಿಚ್ಚುಗತ್ತಿ, ಕಾಲಲ್ಲಿ ಗೆಜ್ಜೆ.

“ಉಲ್ಲಾಸಭರಿತರಾಗಿ ಕುಳಿತಿರುವ ಎಲ್ಲಾ ಜನಗಳು ಸುಲಲಿತವಾಗಿ ಗುಲ್ಲು ಮಾಡದೆ ನೀವು ಕೇಳಿರಿ, ‘ಅಹ ರುದ್ರಾ ಅಹಹಾ ದೇವಾ…” ಎಂದು ವೀರಗಾಸೆಯ ನರ್ತಕ ಹೇಳುವ ಒಡಪಿನೊಂದಿಗೆ ಕುಣಿತ ಪ್ರಾರಂಭವಾಗುತ್ತದೆ. ನಾಲ್ಕೈದು ಗತಿಗಳಿರುವ ವೀರಗಾಸೆ ಕುಣಿತದಲ್ಲಿ ಒಂದೊಂದು ಗತಿಯ ಕುಣಿತದ ಅನಂತರ ಯಾರದರೊಬ್ಬ ನರ್ತಕ ಒಡಪು ಹೇಳುತ್ತಾನೆ. ಒಡಪು ಮುಗಿಯುತ್ತಿದ್ದಂತೆ ವಾದ್ಯಗಳ ಭೋರ್ಗರೆತದದೊಂದಿಗೆ ಮತ್ತೆ ಮುಂದಿನ ಗತಿಯ ಕುಣಿತ ಪ್ರಾರಂಭವಾಗುತ್ತದೆ. ಹಬ್ಬ ಹರಿದಿನಗಳಲ್ಲಿ, ತೇರು ಜಾತ್ರೆಗಳಲ್ಲಿ, ಮದುವೆ ಮನೆದೇವರ ಉತ್ಸವಗಳಲ್ಲಿ ವೀರಗಾಸೆ ಕುಣಿತವನ್ನು ಏರ್ಪಡಿಸುವ ಸಂಪ್ರದಾಯವಿದೆ.

ಕೆ.ಆರ್.

 

ವೀರನಾಟ್ಯಂ ಇದು ಭಕ್ತಿ ಪ್ರಧಾನವಾದ ಪ್ರದರ್ಶನ. ವೀರಗಾಸೆಯನ್ನು ಹೋಲುವಂಥದು. ವೀರಶೈವಕ್ಕೆ ಸಂಬಂಧಿಸಿದ್ದಾಗಿದ್ದು ವೀರರು ಮಾಡುವ ನೃತ್ಯವಾದುದರಿಂದ ವೀರ ನಾಟ್ಯವೆನಿಸಿದೆ. ಇದಕ್ಕೆ ಪೌರಾಣಿಕ ಕಥೆಯ ಆಧಾರವಿದೆ. ಶಿವನ ಕುಮಾರ ವೀರಭದ್ರ ದಕ್ಷಯಜ್ಞವನ್ನು ದ್ವಂಸಮಾಡಲು ಹೊರಡುವಾಗ ಬೆವರಿನ ಹನಿಗಳ ಮೂಲಕ ಹುಟ್ಟಿದವನೇ ವೀರಭದ್ರ. ಇವನು ಸೈನ್ಯ ಸಮೇತ ಹೊರಟು ದಕ್ಷಯಜ್ಞವನ್ನು ದ್ವಂಸ ಮಾಡಿದ. ಆಗ ಮಾಡಿದ ನಾಟ್ಯವೇ ವೀರನಾಟ್ಯವಾಯಿತು. ಈ ವೀರನಾಟ್ಯ ಜಾನಪದ ಪ್ರದರ್ಶನ ಕಲೆಯ ರೂಪವಾಗಿ ಆಂಧ್ರಪ್ರದೇಶದಲ್ಲಿ ನೆಲೆಯೂರಿತು. ವೀರನಾಟ್ಯವನ್ನು ವೀರಂಗಂ, ಶೂಲನೃತ್ಯಂ, ಖಡ್ಗನೃತ್ಯಂ ಮುಂತಾಗಿ ಕರೆಯುತ್ತಾರೆ. ಇಷ್ಟೊಂದು ಹೆಸರು ಬರಲು ಕಾರಣ ಅವರು ಪ್ರದರ್ಶನದಲ್ಲಿ ಉಪಯೋಗಿಸುವ ವಾದ್ಯ ಅಥವಾ ವಸ್ತುಗಳು.

ಇಲ್ಲಿ ಉಪಯೋಗಿಸುವ ವಾದ್ಯ ವೀರಣಂ. ಇದು ಅತಿ ಪ್ರಧಾನವಾದುದು. ‘ವೀರಣಂ’ಯಿಲ್ಲದೆ, ವೀರನಾಟ್ಯ ನಡೆಯುವುದಿಲ್ಲ. ವೀರಮುಷ್ಟಿಯವರು, ವೀರಭಟರು, ಪದ್ಮಶಾಲಿಯರು, ದಲಿತರು ಈ ನೃತ್ಯಗಳನ್ನು ಪ್ರದರ್ಶಿಸುತ್ತಾರೆ. ಇದನ್ನು ವೀರಭದ್ರನ ಹಬ್ಬ ಮತ್ತು ಅಮ್ಮನವರ ಜಾತ್ರೆಯಲ್ಲೂ ಪ್ರದರ್ಶಿಸುತ್ತಾರೆ. ವೀರನಾಟ್ಯದಲ್ಲಿ ಕಲಾವಿದರು ಬಗೆ ಬಗೆಯ ಶೂಲಗಳನ್ನು ನಾಲಿಗೆಗೂ ಚುಚ್ಚಿಕೊಂಡು ರೌದ್ರ, ವೀರ ರಸಗಳಿಂದ ವಾದ್ಯಗಳಿಗನುಗುಣವಾಗಿ ನೃತ್ಯ ಮಾಡುತ್ತಾರೆ. ಶೂಲಗಳಿಗೆ ಬಟ್ಟೆ ಸುತ್ತಿ ಅವುಗಳ ಮೇಲೆ ಎಣ್ಣೆ ಸುರಿದು ಬೆಳಗಿಸಿ, ಆ ಬೆಳಕು ಚಿಮ್ಮುವ ಕಾಂತಿಯಲ್ಲಿ ಹೆಜ್ಜೆ ಹಾಕುತ್ತಾ ಎಲ್ಲರನ್ನು ಆಕರ್ಷಿಸುತ್ತಾರೆ. ವೀರರಸ ಪ್ರಧಾನವಾದ ದಂಡಕಗಳನ್ನು ಓದುತ್ತಾ ಬಲಗೈಯಲ್ಲಿ ದೊಡ್ಡ ಖಡ್ಗವನ್ನು, ಎಡಗೈಯಲ್ಲಿ ಕೋಲನ್ನು ಹಿಡಿದುಕೊಂಡು ಯುದ್ಧ ವೀರನಂತೆ ತಮಟೆ ಧ್ವನಿಗನುಗುಣವಾಗಿ ಕುಣಿಯುವರು. ಇವರು ಬಳಸುವ ಶೂಲಗಳನ್ನು ‘ನಾರಸಾಲು’ ಎನ್ನುತ್ತಾರೆ. ಅವು ಏಕನಾರಸಂ, ಕಂಠನಾರಸಂ, ಕೊರಳು ನಾರಸಂ, ಶಿರೋನಾರಸಂ, ಶೂಲನಾರಸಂ ಎಂಬೈದು ನಾರಸಾಲುಗಳನ್ನು ಹನ್ನೊಂದು – ಹನ್ನೆರಡನೆಯ ಶತಮಾನಗಳಲ್ಲಿ ವೀರಶೈವರು ಪ್ರದರ್ಶಿಸುತ್ತಿದ್ದರೆಂದು ಪ್ರಾಚೀನ ಕವಿಗಳ ರಚನೆಗಳಲ್ಲಿ ಉಲ್ಲೇಖಗಳಿವೆ. ಹಿಂದಿನ ಕಾಲದಲ್ಲಿ ನಾರಸಾಲು ಸೂಜಿಗಳನ್ನು ಕಣ್ಣು ರೆಪ್ಪೆಗಳ ಮೇಲೆ ಕೊರಳಿನ ಮೇಲೆ ತಲೆಯ ಮೇಲೆ ಚುಚ್ಚಿಕೊಂಡು ನಾಟ್ಯವಾಡುತ್ತಿದ್ದುದರಿಂದ ಆ ಹೆಸರು ಬಂದಿದೆ. ಕಲಾವಿದರು ತಮ್ಮ ಸ್ಥಾಯಿಗೆ ತಕ್ಕಂತೆ ಶೂಲಗಳನ್ನು ಹಾಕಿಕೊಂಡು ಪ್ರದರ್ಶಿಸುತ್ತಾರೆ. ಇವುಗಳನ್ನು ಹಾಕಿಕೊಳ್ಳುವ ಕಲಾವಿದರು ಕಡ್ಡಾಯವಾಗಿ ಉಪವಾಸವಿರಬೇಕು. ಗುರು ಅವನ ನಾಲಗೆಯ ಮೇಲೆ ವಿಭೂತಿ ಹಚ್ಚಿ ಶೂಲದ ತುದಿಯನ್ನು ಮೆಲ್ಲಗೆ ಇಳಿಸುತ್ತಾನೆ. ಆಗ ಶರಭಾಶರಭ ಅಬ್ಬೆರಗ ಶರಭ ಎನ್ನುತ ಜೊತೆಯಲ್ಲಿರುವ ಕಲಾವಿದರು ದೀರ್ಘ ಶ್ರುತಿಯಿಂದ ಧ್ವನಿಗೂಡಿಸುತ್ತಾರೆ. ಈ ಪ್ರದರ್ಶನಗಳಲ್ಲಿ ಹಾಕುವ ಹೆಜ್ಜೆಗಳಲ್ಲಿ ಮುಖ್ಯವಾಗಿ ಹೆಸರಿಸುವಂಥವು – ಹೆಜ್ಜೆ, ಎದುರೆಜ್ಜೆ, ಕತ್ತರಿ ಹೆಜ್ಜೆ, ವಿಷ್ಣು ಚಕ್ರ ಹೆಜ್ಜೆ, ಉಜ್ಜಿ ಹೆಜ್ಜೆ, ಚಕ್ರದ ಹೆಜ್ಜೆ ಹೆಚ್ಚು ಮೊದಲಾದವು. ಕಾಕತೀಯರ ಕಾಲದಲ್ಲಿ ವೀರಶೈವ ಮತ ಹೆಚ್ಚು ಪ್ರಚಾರದಲ್ಲಿದ್ದು ಇದು ಪ್ರಧಾನ ನೃತ್ಯವಾಗಿ ಬೆಳೆಯಿತು. ಪಶುಪತಿ ಸಂಪ್ರದಾಯವು ಇತ್ತು. ವೇಟೂರಿ ವೀರಭಟ್ಟರು ಮಾಡುವ ವಿನ್ಯಾಸಗಳು ಈ ಸಂಪ್ರದಾಯದ ಮುಂದುವರಿದ ಭಾಗವೇ, ವಲ್ಲಭರಾಯನ ಕ್ರೀಡಾಭಿರಾಮದಲ್ಲಿ ಇವುಗಳ ಪ್ರಸ್ತಾಪವಿದೆ. ಉಭಯ ಗೋದಾವರಿ ಜಿಲ್ಲೆಗಳಲ್ಲಿ ಇಂದಿಗೂ ಶೂಲ ನೃತ್ಯ ಪ್ರದರ್ಶನವನ್ನು ಕಾಣಬಹುದು.

ಟಿ.ಎಸ್.ಎನ್. ಅನುವಾದ ಎನ್.ಆರ್.

 

ವೀರಭದ್ರ ಕುಣಿತ ಕರ್ನಾಟಕದಲ್ಲಿರುವ ಶೈವ ಸಂಪ್ರದಾಯಕ್ಕೆ ಸೇರಿದ ಒಂದು ಜನಪದ ಧಾರ್ಮಿಕ ವೀರನೃತ್ಯ. ದಕ್ಷಿಣ ಕರ್ನಾಟಕದಲ್ಲಿ ಲಿಂಗಭೇದ, ಲಿಂಗಧೀರ, ಲಿಂಗವೀರ ಕುಣಿತವೆಂದೂ, ಉತ್ತರ ಕರ್ನಾಟಕದಲ್ಲಿ ಪುರವಂತರ ಕುಣಿತವೆಂದೂ ಗುರುತಿಸಲ್ಪಡುತ್ತದೆ. ವೀರಶೈವ ಸಮಾಜಕ್ಕೆ ಸೇರಿದವರು ವಂಶಪಾರಂಪರ್ಯವಾಗಿ ಈ ಕುಣಿತವನ್ನು ನಡೆಸಿಕೊಂಡು ಬರುತ್ತಿದ್ದಾರೆ. ವೀರಗಾಸೆಯ ನೃತ್ಯದಂತೆ ವೀರಭದ್ರನ ಕುಣಿತವೂ ಸಾಮೂಹಿಕ ನೃತ್ಯವಾಗದೆ ಏಕವ್ಯಕ್ತಿಯ ಕುಣಿತವಾಗಿದೆ.

66_70A_DBJK-KUH

ವೀರಭದ್ರನ ವೇಷಭೂಷಣಗಳು ಹೀಗಿರುತ್ತವೆ : ತಲೆಗೆ ಚಮರಿ ಮೃಗದ ಚೌರಿ, ಎರಕದ ನೂರೊಂದು ಲಿಂಗಗಳು, ಹಣೆಗೆ ಭಸ್ಮ ಗಂಧ ಕುಂಕುಮಗಳ ಅಲಂಕಾರ, ಕಿವಿಗಳಿಗೆ ರುದ್ರಾಕ್ಷಿ ಸೇರಿಸಿದ ಕುಂಡಲಗಳು, ಕೊರಳಿಗೆ ರುದ್ರಾಕ್ಷಿ ಮಾಲೆ, ಎರಡು ಭುಜಗಳಿಗೆ ನಾಗಾಭರಣ, ಬಲಗೈಯಲ್ಲಿ ಹಿಡಿಯ ಭಾಗದಲ್ಲಿ ಸಣ್ಣ ಸಣ್ಣ ನಾಲಗೆಯನ್ನು ಜೋಡಿಸಿದ್ದು ಝಳಪಿಸಿದರೆ ಶಬ್ದ ಬರುವ ಖಡ್ಗ. ಈ ಖಡ್ಗಕ್ಕೆ ‘ತೋಪಡ’ ಎಂದು ಹೆಸರು. ಎಡಗೈಯಲ್ಲಿ ಮುಳ್ಳಂಬು ಎಂಬ ವಿಶೇಷವಾದ ಚಾಕು, ಸೊಂಟದ ಮಧ್ಯದಲ್ಲಿ ಕೀರ್ತಿಮುಖ, ಎರಡು ಪಕ್ಕಗಳಿಗೆ ರುಂಡಮಾಲೆ ದಕ್ಷಬ್ರಹ್ಮನ ಶಿರಸ್ಸು, ಸರಪಳಿ, ಹೊಕ್ಕಳ ಗಂಟೆ, ಮಂಡಿಗಳಿಗೆ ಐದೈದು ಜಂಗುಗಳು, ಕಾಲುಗಳಿಗೆ ಕಿರುಗೆಜ್ಜೆ ಗಗ್ಗರ ಮತ್ತು ಕಾಲ್ಬಂಧಿಗಳು, ಮೈಮೇಲೆ ಕಾವಿಯ ನಿಲುವಂಗಿ ಕಾವಿಯ ಚಲ್ಲಣ ಅಥವಾ ಕೆಂಪು ನಿಲುವಂಗಿ ಮತ್ತು ಕೆಂಪು ಚಲ್ಲಣ.

ಓಲಗ, ತಮಟೆ, ವಾದ್ಯಗಳ ಸದ್ದಿಗೆ ತಕ್ಕಂತೆ ವೀರಭದ್ರನು ಆಡುವ ಮಾತುಗಳನ್ನು ಖಡ್ಗ ಎಂದು ಕರೆಯುತ್ತಾರೆ. ಉತ್ತರ ಕರ್ನಾಟಕದಲ್ಲಿ ಈ ಮಾತನ್ನು ಒಡಪು ಎಂದು ಕರೆಯುತ್ತಾರೆ. ಈ ಕಲಾವಿದನು ವೀರಾವೇಶದಿಂದ ನರ್ತಿಸುವಾಗ ಆಡುವ ಖಡ್ಗಕ್ಕೆ ಉತ್ತರ ರೂಪವಾಗಿ ಅನುಯಾಯಿ ಒಬ್ಬ ‘ಭಲರೇ ವೀರ, ಹರೋಹರಾ’ ಎಂದು ಕಾಕು ಹೇಳುತ್ತಾ ಜಾಗಟೆ ಬಡಿಯುತ್ತಾ ನಿಧಾನವಾಗಿ ವೀರಭದ್ರನ ಸುತ್ತ ತಿರುಗುತ್ತಾನೆ.

ಈ ಕುಣಿತದಲ್ಲಿ ಕೆಲವು ಪವಾಡಗಳು ಪ್ರವೇಶಿಸುತ್ತವೆ. ಅಂಗೈ ಹಾಗೂ ನಾಲಗೆಯ ಮೇಲೆ ಉರಿಯುವ ಕರ್ಪೂರವನ್ನು ಇಟ್ಟುಕೊಳ್ಳುವಿಕೆ, ನೀರು ತುಂಬಿದ ಚೊಂಬನ್ನು ಹೊತ್ತು ನೀರು ಚೆಲ್ಲದಂತೆ ಸುತ್ತಿಸುವಿಕೆ, ಅಕ್ಕಿ ತುಂಬಿದ ಚೊಂಬನ್ನು ಅಕ್ಕಿ ಚೆಲ್ಲದಂತೆ ತಿರುಗಿಸುವಿಕೆ ಮುಂತಾದ ಪವಾಡಗಳು ಇರುತ್ತವೆ. ಕೊಂಡ ಹಾಯುವ ಸಂದರ್ಭವು ಇರುತ್ತದೆ.

ಕೆ.ಆರ್.

 

ವೀರಭದ್ರುನಿ ಪಳ್ಳೆಂ ತೆಲುಗರ ಶೈವ ಮತಾಚಾರಗಳಲ್ಲಿ ಇನ್ನೂ ಜನಪ್ರಿಯವಾಗಿರುವಂಥದು, ಈ ವೀರಭದ್ರುನಿ ಪಳ್ಳೆಂ. ವೀರಭದ್ರನಿಗೆ ಎಡೆ ಇಡುವುದು ಎಂಬ ಆಚರಣೆ ಇದು.

ಇದು ತೆಲುಗಿನವರಾದ ವಿಶ್ವ ಬ್ರಾಹ್ಮಣ ಕುಟುಂಬಗಳಲ್ಲಿ ಇನ್ನೂ ಪ್ರಚಲಿತದಲ್ಲಿದೆ. ವೈಶ್ಯರು ಮತ್ತಿತರ ಕುಲದವರೂ ಇದನ್ನು ಪಾಲಿಸುವ ವಿಶ್ವಕರ್ಮ ಕುಲದವರೊಂದಿಗೆ ಶ್ರದ್ಧೆಯಿಂದ ಇನ್ನೂ ಮಾಡುತ್ತಿದ್ದಾರೆ. ವಿಶ್ವಬ್ರಾಹ್ಮಣ ಕುಲದಲ್ಲಿ ಪ್ರಧಾನವಾಗಿ ಲಿಂಗಧಾರುಲು, ನಾಮಧಾರುಲು ಎನ್ನುವವರು ಶೈವಾಚಾರ ಸಂಪನ್ನರು. ನಾಮಧಾರಿಗಳು ಎಂದರೆ ವೈಷ್ಣವರು. ದೇಶೀಯರು ಎಂದರೆ ಮೊದಲಿನಿಂದ ಇರುವವರು. ಶಾಖಾಹಾರ ಮುಂತಾದ ಬ್ರಾಹ್ಮಣೋಚಿತವಾದ ಆಚರಣೆಗಳನ್ನು ಪಾಲಿಸುವ ವಿಶ್ವ ಬ್ರಾಹ್ಮಣರಲ್ಲಿ ಲಿಂಗಧಾರಣೆ ಮಾಡುವ ಅನೇಕ ಜನ ಈ ಆಚಾರಗಳನ್ನು ಇನ್ನೂ ಚೆನ್ನಾಗಿ ಪಾಲಿಸುತ್ತಿದ್ದಾರೆ. ಈ ಲಿಂಗಧಾರಣೆ ಶಾಖೆಯವರ ಮನೆಗಳಲ್ಲಿ ವೀರಭದ್ರುನಿ ಪಳ್ಳೆಂ ಎತ್ತಡಂ (ವೀರಭದ್ರನಿಗೆ ಎಡೆ ಇಡುವುದು) ಎಂಬ ಆಚರಣೆ ಇದೆ. ಶಿವಾಂಶ ಸಂಭೂತನಾದ ವೀರಭದ್ರನಿಗೆ ಮಾಡುವ ಹಬ್ಬ ಅಥವಾ ಸೇವೆ ಇದು. ಲಿಂಗಧಾರಣೆಯವರಾದ ವಿಶ್ವಬ್ರಾಹ್ಮಣರ ಮನೆಗಳಲ್ಲಿ ಶಿವಪೂಜೆ ಪೆಟ್ಟಿಗೆ ಎಂಬುದು ಪ್ರತ್ಯೇಕವಾಗಿರುತ್ತದೆ. ಇದರಲ್ಲಿ ಶಿವನ ಲಿಂಗ, ನಂದಿ, ಚಿಕ್ಕ ಚಿಕ್ಕ ಕತ್ತಿಗಳು, ವಿಭೂತಿ ಉಂಡೆ ಮತ್ತಿತರ ಪೂಜಾ ಸಾಮಗ್ರಿಗಳು ಇರುತ್ತವೆ. ಈ ಪೆಟ್ಟಿಗೆಯನ್ನು ಮೈಲಿಗೆ ಸೋಕದಂತೆ ಪ್ರತ್ಯೇಕವಾಗಿ ಎತ್ತರದಲ್ಲಿ ಕಟ್ಟಿ ಇಡುತ್ತಾರೆ. ಅವರ ಮನೆಗಳಲ್ಲಿ ಪ್ರತಿದಿನ ಅವರು ದೇವರ ಗುಡಿಯಲ್ಲಿರುವ ದೇವರ ಪಟಗಳಿಗೆ ಮಾತ್ರ ಪೂಜೆ ಮಾಡುವರು. ಆದರೆ ಪ್ರತ್ಯೇಕವಾಗಿ ಪೂಜೆ ಮಾಡುವ ಸಂದರ್ಭದಲ್ಲಾಗಲಿ ಮನೆಗಳಲ್ಲಿ ಮದುವೆಯಂತಹ ಶುಭಕಾರ್ಯಗಳು ನಡೆದಾಗ ಆಗಲಿ ವೀರಭದ್ರುನಿ ಪಳ್ಳೆಂ ಎತ್ತಡಂ ಎಂಬ ಸೇವೆ ಮಾಡಿದ ಅನಂತರವೇ ಶುಭಕಾರ್ಯವನ್ನು ಮಾಡುವರು. ಶೈವಾಚಾರ ಇರುವ ಮನೆಗಳಲ್ಲಿ ವಿವಾಹಗಳು ನಡೆದರೆ ಖಡ್ಡಾಯವಾಗಿ ವೀರಭದ್ರುನಿ ಪಳ್ಳೆಂ ಎತ್ತಡಂ ಸೇವೆ ನಡೆಯಲೇಬೇಕು. ಹೀಗೆ ವೀರಭದ್ರನ ಪಳ್ಳೆಂ ಮಾಡಬೇಕೆಂದುಕೊಂಡಾಗ, ಮನೆಯವರು ಆ ಮನೆಗೆ ಸಂಬಂಧಿಸಿದ ಬಂಧುಗಳನೆಲ್ಲರನ್ನು ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು, ಅಳಿಯಂದಿರು, ಗಂಡುಮಕ್ಕಳು, ಸೊಸೆಯಂದಿರು ಎಲ್ಲರನ್ನು ಕರೆಸಿಕೊಳ್ಳುತ್ತಾರೆ. ಅವರು ಬಂದ ಅನಂತರ ಮೊದಲ ದಿನ ಸಂಜೆ ಶಿವಪೂಜೆಯ ಪೆಟ್ಟಿಗೆಯನ್ನು ಮೇಲಿಂದ ಕೆಳಕ್ಕೆ ಇಳಿಸಿ ಅದರಲ್ಲಿರುವ ಪೂಜಾ ಸಾಮಗ್ರಿ, ಲಿಂಗ, ನಂದಿ ಇತ್ಯಾದಿಗಳನ್ನೆಲ್ಲ ತೊಳೆಯುತ್ತಾರೆ. ಮಾರನೆಯ ದಿನ ಬೆಳಗ್ಗೆ ಪ್ರತ್ಯೇಕವಾಗಿ ರೂಪಿಸಿದ ಪೂಜಾ ಸ್ಥಳದಲ್ಲಿ ಇವುಗಳನ್ನು ಇಡುವರು. ಮೊದಲು ಅವುಗಳಿಗೆ ಪೂಜೆ ಮಾಡಿ, ಆ ಮೇಲೆ ಆ ಊರಿನ ವೀರಭದ್ರನ ಗುಡಿಗಾಗಲಿ, ಶಿವನ ಗುಡಿಗಾಗಲಿ, ಇಲ್ಲವೆ ಊರಿನ ಮತ್ತೊಂದು ದಾರಿಯಲ್ಲಿ ವೀರಭದ್ರನ ಬೊಂಬೆಯನ್ನು ಮಣ್ಣಿನಿಂದ ಮಾಡಿ ಇಟ್ಟುಕೊಳ್ಳುವರು. ಇತ್ತ ಮನೆಯಲ್ಲಿ ಪೂಜೆಯಾದ ಮೇಲೆ ಮನೆಗೆ ಬಂದ ನೆಂಟರಲ್ಲಿರುವ ಹೆಣ್ಣು ಮಕ್ಕಳೆಲ್ಲ ಸೇರಿ ದೊಡ್ಡದೊಂದು ಊಟದೆಲೆಯನ್ನು ಹೊಲಿಯುತ್ತಾರೆ. ಎಷ್ಟು ದೊಡ್ಡದನ್ನು ಹೊಲಿಯಲು ಸಾಧ್ಯವೋ ಅಷ್ಟು ದೊಡ್ಡದನ್ನು ಹೊಲಿಯುತ್ತಾರೆ. ವೀರಭದ್ರನಿಗಾಗಿ ಮಾಡಿದ ನೈವೇದ್ಯ ಪದಾರ್ಥಗಳನ್ನು ಈ ಎಲೆಯಲ್ಲಿಡುವರು. ಈ ದೊಡ್ಡ ಎಲೆಯ ಎಡೆಯನ್ನು ವೀರಭದ್ರನ ಎಡೆ ಎನ್ನುವರು. ಮನೆಯಲ್ಲಿ ಪೂಜೆಯಾದ ಮೇಲೆ ಈ ಎಡೆ ನೈವೇದ್ಯವನ್ನು ಎತ್ತಿಕೊಂಡು ಮೆರವಣಿಗೆ ಮಾಡುತ್ತಾ ಊರಿಗೆ ಮತ್ತೊಂದು ದಿಕ್ಕಿನಲ್ಲಿ ಮಾಡಿ ಇಟ್ಟಿದ್ದ ವೀರಭದ್ರನ ಬೊಂಬೆಯ ಬಳಿ ಹೋಗುತ್ತಾರೆ. ಈ ಮೆರವಣಿಗೆಯಲ್ಲಿ ವೀರಭದ್ರನ ಅವತಾರದಲ್ಲಿರುವ ವೀರಂಗಂವೇಷದ ಕಲೆಗಾರರು ಇರುತ್ತಾರೆ.

ಅವರ ಮೇಳಕ್ಕೆ ತಕ್ಕಂತೆ ಖಡ್ಗಗಳು ಎಂದು ಕರೆಯುವ ಚರಣಗಳನ್ನು ಓದುತ್ತಾ ಮಧ್ಯೆ ಮಧ್ಯೆ ನಿಂತು ದಕ್ಷಯಜ್ಞ ಪ್ರಸಂಗವನ್ನು ಹಾಡುತ್ತಾ ಶೂಲಗಳನ್ನು ದವಡೆಗಳಲ್ಲೂ ನಾಲಗೆ ಮೇಲೂ ಗಂಟಲಲ್ಲೂ ಚುಚ್ಚಿಕೊಳ್ಳುತ್ತಾ ಭಯಂಕರ ಆಕಾರದಲ್ಲಿ ಭಯಂಕರವಾಗಿ ಕಿರುಚುತ್ತಾ ಮೆರವಣಿಗೆ ಸಾಗುತ್ತದೆ. ಹೀಗೆ ಮೆರವಣಿಗೆ ಮಾಡುತ್ತಾ ನೆಲೆಗೊಂಡ ವೀರಭದ್ರನ ವಿಗ್ರಹದ ಬಳಿಗೆ ಹೋಗುವರು. ಅಲ್ಲಿ ವಿಗ್ರಹದ ಎದುರು ಈ ನೈವೇದ್ಯದ ಎಲೆಯ ಎಡೆಯನ್ನು ಇಡುತ್ತಾರೆ. ಶಿವಾಲಯದಲ್ಲಾದರೆ ಶಿವಲಿಂಗದ ಮೇಲೆ ಮಾವಿನ ಎಲೆ ಮತ್ತು ಹೂವುಗಳನ್ನು ಇಡುವರು. ವೀರಭದ್ರನ ವಿಗ್ರಹವಾದರೆ ತಲೆಯ ಮೇಲೆ ಇಡುತ್ತಾರೆ. ಮದುವೆಯಾಗಬೇಕಾದ ಗಂಡಾಗಲಿ, ಹೆಣ್ಣಾಗಲಿ, ಪೂಜೆ ಮಾಡುವ ಪ್ರಧಾನವಾದ ವ್ಯಕ್ತಿಯಾಗಲಿ ಅಲ್ಲಿ ಸೆರಗು ಹಿಡಿದು ನಿಲ್ಲುತ್ತಾರೆ. ಬಳಿಕ ವೀರಂಗವೇಷದವರು ವೀರಾಲಾಪನೆಯಿಂದ ವೀರಭದ್ರಕಾಂಡಗಳನ್ನು ಓದುತ್ತಾ ದಕ್ಷಯಜ್ಞ ಪ್ರಸಂಗವನ್ನು ವರ್ಣಿಸುತ್ತಾರೆ. ಡೋಲು, ನಾಗಸ್ವರ, ಮೇಳ, ತಾರಸ್ಥಾಯಿಯಲ್ಲಿ ಸಾಗುತ್ತಿರುತ್ತವೆ. ವಿಗ್ರಹದ ಮೇಲೆ ಇದ್ದ ಹೂಗಳು, ಎಲೆಗಳು ಜಾರಿ ಪೂಜೆ ಮಾಡುವ ವ್ಯಕ್ತಿಯ ಸೆರಗಿನಲ್ಲಿ ಬೀಳಬೇಕು. ಅಲ್ಲಿಗೆ ಪೂಜೆ ಪೂರ್ತಿಯಾದಂತೆ. ಅನಂತರ ಮೆರವಣಿಗೆಯಲ್ಲಿ ಮನೆಗೆ ಮರಳುತ್ತಾರೆ. ಅಲ್ಲಿ ಸಾಯಂಕಾಲದಲ್ಲಿ ಪೂಜೆ ಇರುತ್ತದೆ. ಇಲ್ಲವೆ ಐದು ಸೇರು ಅಕ್ಕಿಯನ್ನು ಅಳೆದು ಶಿವನ ಲಿಂಗದ ಮುಂದೆ ಸುರಿಯುತ್ತಾರೆ. ಅನಂತರ ವೀರಲಿಂಗದವರು ವೀರಾಲಾಪನೆ ಓದಿ ದಕ್ಷಯಜ್ಞ ಹಾಡುವರು. ಇದು ಪೂರ್ಣಗೊಂಡ ಮೇಲೆ ಇದಕ್ಕೆ ಮೊದಲು ಅಳೆದ ಅಕ್ಕಿ, ಮತ್ತೆ ಅಳೆದರೆ ಮೊದಲಿಗಿಂತ ಹೆಚ್ಚು ಬರಬೇಕು. ಕನಿಷ್ಠ ಸ್ವಲ್ಪ ಆದರೂ ಹೆಚ್ಚಾಗಬೇಕು.

ಅನೇಕ ಸಾರಿ ಹೀಗೆ ಆಗಿದೆ ಎಂದು ತಿಳಿದು ಬಂದಿದೆ. ಇದರೊಂದಿಗೆ ವೀರಭದ್ರನ ಎಡೆ ಇಡುವ ಕಾರ್ಯ ಪೂರ್ಣವಾಗುತ್ತದೆ. ಅನಂತರ ಮದುವೆಗಳಾಗಲಿ ಇತರ ಶುಭಕಾರ್ಯಗಳಾಗಲಿ ನಡೆಯುತ್ತದೆ. ವೀರಭದ್ರನ ಎಡೆ ಎತ್ತುವುದರಲ್ಲಿ ಇನ್ನು ಅನೇಕ ಪದ್ಧತಿಗಳು ಕಂಡುಬರುತ್ತವೆ. ವೀರಭದ್ರನ ಎಡೆ ಇಡುವಾಗ ಶೈವಾಚಾರಗಳು ಇದ್ದು ವೀರಭದ್ರನನ್ನು ಪೂಜೆ ಮಾಡುವವರು ಎಡೆ ಎತ್ತುವ ಆಚಾರದವರು ಅದಕ್ಕೆ ಸಂಬಂಧಪಟ್ಟ ಯಾರು ಇದ್ದರೂ ಯಾವ ಕುಲದವರಿದ್ದರೂ ಆ ಪೂಜೆಗೆ ಕರೆಯಬೇಕಾಗುತ್ತದೆ. ನಿಜವಾಗಿ ಈ ಆಚಾರದವರು ಕರೆಯಬೇಕೆಂದು ಕಾಯುವುದಿಲ್ಲ. ಅವರ ಪಾಡಿಗೆ ಅವರು ಪೂಜೆ ನಡೆಯುವ ಸ್ಥಳ, ಮೆರವಣಿಗೆಯ ಹತ್ತಿರ ಬಂದು ಸೇರುತ್ತಾರೆ. ಇಲ್ಲಿ ಜಾತಿ ಭೇದ ಇರುವುದಿಲ್ಲ. ವೀರಭದ್ರನ ಆಚಾರದವರೆಲ್ಲರೂ ಒಂದೇ ಎಂಬ ಭಾವನೆ ಇರುತ್ತದೆ. ವೀರಂಗಂ ಮೆರವಣಿಗೆ ಸಾಗುವಾಗ ಶರಭ ಶರಭ ಶರಭ ಎಂದು ಆವೇಶದಿಂದ ಹೇಳುವಾಗ ಈ ಆಚರಣೆಯುಳ್ಳ ಯಾರಿಗಾದರೂ ವೀರಾವೇಶ ಬರುತ್ತದೆ. ಅಂಥವರು ವಾರಸಾಲು (ಕಂಬಿ) ಹಾಕಿಕೊಳ್ಳುವರು ಅಶ್ಶರಭ ಶರಭ ಅಲಲಲಲಾ, ಅಗಗಗಗಗಾ, ಧಾಂ, ದೂಂ, ಶರಭ ಎನ್ನುತ್ತಾ ಖಡ್ಗ ಹೇಳುವರು. ವೀರಶೈವರಲ್ಲಿಯ ವೀರಾವತಾರಗಳು ವೀರಾಚಾರಗಳು ಇಲ್ಲಿ ಚೆನ್ನಾಗಿ ಕಾಣಿಸಿಕೊಳ್ಳುತ್ತವೆ. ಇನ್ನು ವೀರಂಗಂ ವೇಷ ಹಾಕುವವರೆಲ್ಲರೂ ವಿಶ್ವ ಬ್ರಾಹ್ಮಣ ಕುಲಕ್ಕೆ ಸೇರಿದ ಲಿಂಗಧಾರಿ ಶಾಖೆಯವರು. ಇವರು ವೃತ್ತಿಪರರಾಗಿ ಸದಾ ಇದೇ ಕೆಲಸವನ್ನು ಮಾಡುವವರು. ಮದುವೆಗಳಲ್ಲಿ ಉತ್ಸವಗಳಲ್ಲಿ ಇವರು ವೀರಂಗಂ ಹಾಕುತ್ತಿರುತ್ತಾರೆ. ಇವರ ವೃಂದದಲ್ಲಿ ಹತ್ತು ಜನ ಮೇಲ್ಪಟ್ಟು ವೀರಭದ್ರರಿರುತ್ತಾರೆ. ಇವರೊಂದಿಗೆ ನಾಲ್ಕು ಜನ ಅಥವಾ ಆರು ಜನ ಮೇಳದವರು ಇರುತ್ತಾರೆ. ಇವರಲ್ಲಿ ಎರಡು ಅಥವಾ ನಾಲ್ಕು ಡೋಲುಗಳು ಎರಡು ನಾಗಸ್ವರಗಳು ಇರುತ್ತವೆ. ಇವರು ಬೇರೆ ಜಾತಿಗೆ ಸೇರಿದವರು. ಇವರು ವೀರಂಗಂನಲ್ಲಿ ಬಾರಿಸಬೇಕಾದ ವರಸೆಗಳು ವಿಭಿನ್ನವಾಗಿದ್ದು ವೀರಾವೇಶದಿಂದ ಕೂಡಿರುತ್ತವೆ. ಈ ವೀರಭದ್ರನ ವೇಷ ಸಹ ವಿಶಿಷ್ಟವಾದುದು. ಪಂಚೆ ಕಟ್ಟಿರುತ್ತಾರೆ. ಜಮ್ಮಟದಂತೆ ವೇಷ ವಿಶೇಷವಾಗಿರುತ್ತದೆ. ಅವರ ಮೇಲೆ ಯಾವುದೇ ಅಂಗಿಯಾಗಲಿ ಇತರ ವಸ್ತ್ರವಾಗಲಿ ಇರುವುದಿಲ್ಲ. ದಪ್ಪ ಜನಿವಾರವಿರುತ್ತದೆ. ಎದೆ, ಹಣೆ, ಕೈ, ಹೊಟ್ಟೆಯ ಮೇಲೆ ವಿಭೂತಿಯ ಅಡ್ಡ ಪಟ್ಟೆಗಳಿರುತ್ತವೆ. ಹಣೆಯಲ್ಲಿ ಕೆಂಪು ಬೊಟ್ಟು ಇರುತ್ತದೆ. ಕಾಲಿನಲ್ಲಿ ಗೆಜ್ಜೆ ಇರುತ್ತದೆ. ದಟ್ಟವಾಗಿ ನೃತ್ಯ ಮಾಡುವಾಗ ವೃತ್ತಾಕಾರದಲ್ಲಿ ಸುತ್ತುತ್ತ ಭಿನ್ನ ಭಿನ್ನ ವರಸೆಗಳಲ್ಲಿ ದಕ್ಷಯಜ್ಞವನ್ನು ಹಾಡುತ್ತಾ ಕುಣಿಯುತ್ತಾರೆ. ಇನ್ನು ಸಲಾಕೆ ಹಾಕಿಕೊಳ್ಳುವ ಮೊದಲು ಇಬ್ಬರು ವೀರಭದ್ರರು ಎದುರುಬದುರಾಗಿದ್ದು ಡೋಲಿನ ವರಸೆಗೆ ಅನುಗುಣವಾಗಿ ಕಾಂಡಗಳನ್ನು ಹೇಳುತ್ತಾ ಕೇಕೆ ಹಾಕುತ್ತಾರೆ. ಕೊನೆಯದಾಗಿ ಸಲಾಕೆ ಹಾಕಿಕೊಳ್ಳುತ್ತಾರೆ. ಈ ನೃತ್ಯವನ್ನು, ಈ ಕಾಂಡಗಳನ್ನು ಓದುವುದದನ್ನು, ಸಲಾಕೆ ಹಾಕಿಕೊಳ್ಳುವುದನ್ನು, ಸಂಗೀತ ವರಸೆಗಳನ್ನು ಒಟ್ಟಾಗಿ ಸೇರಿಸಿ ವೀರಗಾಸೆ ಹಾಕುವುದು ಎನ್ನುವರು. ವೀರಭದ್ರನ ಎಡೆ ಎನ್ನುವ ಆಚರಣೆಯಲ್ಲಿ ವೀರಂಗಂ ಎಂಬುದು ನೃತ್ಯ, ಸಂಗೀತ, ಸಾಹಿತ್ಯ, ಕಲೆಗಳನ್ನೊಳಗೊಂಡ ಅವಿಭಾಜ್ಯವಾದ ಭಾಗ. ವೀರಭದ್ರನ ಎಡೆ – ಗುಂಟೂರು, ಕೃಷ್ಣಾ ಜಿಲ್ಲೆಗಳಲ್ಲಿ ಇನ್ನೂ ಜನಪ್ರಿಯ ಭಾಗವಾಗಿ, ಜೀವಂತ ಕಲೆಯಾಗಿ ಪ್ರಚಲಿತದಲ್ಲಿದೆ. ಇತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಾಡಿದರೂ ಅಷ್ಟು ಪ್ರಚಲಿತದಲ್ಲಿಲ್ಲ.

ಪಿ.ಎಸ್.ಸಿ. ಅನುವಾದ ವಿ.ಆರ್.

 

ವೀರ ವಿದ್ಯಾವಂತರು ತೆಲುಗುನಾಡಿನ ವೃತ್ತಿಗಾಯಕರಲ್ಲಿ ಪ್ರಮುಖರು. ತೆಲುಗಿನ ಅತ್ಯಂತ ಮಹತ್ವದ ಜನಪದ ಮಹಾಕಾವ್ಯವಾದ ಪಲನಾಡಿನ ವೀರರ ಚರಿತ್ರೆಯನ್ನು ನಿರಂತರವಾಗಿ ಅನೇಕ ರಾತ್ರಿಗಳ ಕಾಲ ಗಾನಮಾಡುವ ಮಹಾನ್ ಗಾಯಕರು ವೀರ ವಿದ್ಯಾವಂತರು. ಇವರನ್ನೇ ಪಲನಾಡಿನವರು ಎಂದು ಕೂಡ ಕರೆಯುತ್ತಾರೆ. ಇವರು ದಲಿತರು. ಗುಂಟೂರು ಜಿಲ್ಲೆಯ ಕಾರೆಂಪೂಡಿ ಎಂಬ ಪ್ರದೇಶದಲ್ಲಿರುವ ವೀರಾಚಾರ ಪೀಠಾಧೀಪತಿಗಳು ‘ಪಿಡುಗುವಾರು’ (ಸಿಡಿಲಿನವರು) ಇವರಿಗೆ ಗುರುಗಳು. ಕಾರೆಂಪೂಡಿಯಲ್ಲಿ ಪ್ರತಿ ವರ್ಷ ಕಾರ್ತಿಕ ಮಾಸದ ಅಮಾವಾಸ್ಯೆಯ ದಿನದ ರಾತ್ರಿ ಮೊದಲು ಮಾಡಿ ಐದು ದಿನಗಳ ಕಾಲ ವೀರೋತ್ಸವ ನಡೆಯುತ್ತದೆ. ಆಗ ಈ ವೀರ ವಿದ್ಯಾವಂತರು ಫಲನಾಡಿನ ವೀರರ ಚರಿತ್ರೆಯ ಕೆಲವು ಭಾಗಗಳನ್ನು ಹಾಡಿ ಪ್ರದರ್ಶಿಸುತ್ತಾರೆ.

ಪಲನಾಡಿನ ವೀರರ ಚರಿತ್ರೆ ತೆಲುಗಿನ ಅತ್ಯಂತ ಮಹತ್ವದ ಜನಪದ ಇತಿಹಾಸ. ಇದನ್ನು ಸಂಪೂರ್ಣವಾಗಿ ಹಾಡಲು ಒಂದು ತಿಂಗಳು ಬೇಕಾಗುತ್ತದೆ. ಪ್ರಪಂಚದ ಅತ್ಯಂತ ಅಪರೂಪವಾದ ಈ ಜನಪದ ಮಹಾಕಾವ್ಯ ಸುಮಾರು ಏಳುನೂರು ವರ್ಷಗಳಿಂದ ಆಂಧ್ರದಲ್ಲಿ ಜನಪ್ರಿಯವಾಗಿದೆ. ಇವರ ಗಾನವನ್ನು ಕುರಿತು ತೆಲುಗು ಸಾಹಿತ್ಯದಲ್ಲಿ ೧೪-೧೫ ಶತಮಾನದಿಂದಲೂ ಉಲ್ಲೇಖಗಳು ಕಂಡು ಬರುತ್ತವೆ. ಈ ಮಹಾಕಾವ್ಯವನ್ನು ಹಾಡುವವರನ್ನೇ ಪ್ರತ್ಯೇಕ ವೃತ್ತಿಗಾಯಕರೆಂದು ಪರಿಗಣಿಸುತ್ತಾರೆ.

ಪಲನಾಡಿನ ವೀರರ ಕತೆಗಳನ್ನು ಗಾನ ಮಾಡುವಾಗ ವೀರಜೋಡು ಅಥವಾ ಪಂಬಜೋಡು ಎಂಬ ಚರ್ಮವಾದ್ಯವನ್ನು ಬಳಸುತ್ತಾರೆ. ಎರಡು ಗಂಟೆ ತಾಳ ಕತ್ತಿ ಡಾಳು ಕೂಡ ಉಪಯೋಗಿಸುತ್ತಾರೆ. ಕಥಾಗಾನವನ್ನು ಮಾಡುವ ಪ್ರಧಾನ ವ್ಯಕ್ತಿ ಪಲನಾಡಿನ ವೀರರಂತೆಯೇ ವೇಷ ಧರಿಸುತ್ತಾನೆ. ಇವನು ಕಚ್ಚೆ ಪಂಚೆ, ಪೇಟ, ಅಂದುಗೆ, ಕತ್ತಿ, ಡಾಳು, ತಾಳ ಮುಂತಾದ ೧೨ ಬಿರುದುಗಳನ್ನು ಧರಿಸಬೇಕೆಂಬ ನಿಯಮವಿದೆ. ಇವರ ವೇಷ ತುಂಬ ಆಕರ್ಷಕವಾಗಿರುತ್ತದೆ. ಬಲಗೈಯಲ್ಲಿ ದೊಡ್ಡ ಕತ್ತಿ, ೧೨ ಮೊಳ ಉದ್ದದ ಪೇಟ, ಅದರ ಮೇಲೊಂದು ಚಂದ್ರರೇಖೆ, ಹಣೆಯಲ್ಲಿ ಮತ್ತು ಎದೆಯ ಮೇಲೆ ತಿರುಮಣಿ (ಎರಡು ಕಡೆ ಬಿಳುಪು ಮಧ್ಯದಲ್ಲಿ ಕೆಂಪು), ಎಡಗಡೆ ಎದೆಯ ಮೇಲೆ ಏಳು ಮೊಳ ಉದ್ದದ ಎರಡು ಬಣ್ಣದ (ಬಿಳುಪು, ಕೆಂಪು) ಬಟ್ಟೆ, ಶರಾಯಿ, ಜನಿವಾರ ಮುಂತಾದವು ಪಲನಾಡಿನ ವೀರಕಥಾಗಾಯಕರ ಉಡುಗೆ ತೊಡುಗೆಗಳಾಗಿರುತ್ತವೆ. ೧೨ ಬಿರುದುಗಳನ್ನು ಧರಿಸಿ ಕತ್ತಿಯನ್ನು ತಿರುಗಿಸುತ್ತ ವೀರ ವೇಷದಿಂದ ಕತೆಯನ್ನು ಹಾಡುತ್ತಿದ್ದರೆ ಶತಮಾನಗಳ ಹಿಂದಿನ ವೀರರೇ ಇಳೆಗೆ ಇಳಿದು ಬಂದು ಹಾಡುತ್ತಿರುವಂತೆ ಭಾಸವಾಗುತ್ತದೆ.

ಈ ವೀರಾವೇಶ ಕೇವಲ ಗಾಯಕರಲ್ಲಿ ಮಾತ್ರವಲ್ಲದೆ ಒಮ್ಮೊಮ್ಮೆ ಪ್ರೇಕ್ಷಕರಲ್ಲೂ ಕಾಣಿಸಿಕೊಳ್ಳುತ್ತದೆ. ಪಲನಾಡಿನ ವೀರರ ಕತೆಗಳನ್ನು ಆವೇಶದಿಂದ ಗಾನ ಮಾಡುವಾಗ, ಅದರಲ್ಲೂ ಮುಖ್ಯವಾಗಿ ಕನ್ನಮದಾಸನೆಂಬ ವೀರನ ಕತೆಯನ್ನು ಹೇಳುವಾಗ, ಆತನ ಯುದ್ಧ ಕೌಶಲವನ್ನು ವರ್ಣನೆ ಮಾಡುವಾಗ ಪ್ರೇಕ್ಷಕರು ಕೆಲವರಿಗೆ ಮೈಮೇಲೆ ಬರುತ್ತದೆ. ಆಗ ಗಾಯಕನ ಕೈಯಲ್ಲಿ ಇರುವ ಕತ್ತಿಯನ್ನು ಆ ಪ್ರೇಕ್ಷಕನ ಕೈಗೆ ಕೊಡುತ್ತಾರೆ. ಆತ ಕತ್ತಿಯಿಂದ ತನ್ನ ಎದೆ ಸೀಳಿಕೊಳ್ಳುತ್ತಾನೆ. ರಕ್ತ ಸುರಿಯುತ್ತಿದ್ದಾಗ ಅವನಿಗೆ ಪ್ರಜ್ಞೆ ಬರುತ್ತದೆ.

ಪಲನಾಡಿನ ವೀರರ ಕಥಾಗಾನದಲ್ಲಿ ಪ್ರಧಾನ ಗಾಯಕನ ಜೊತೆಗೆ ಮೂವರು ಸಹಗಾಯಕರು ಇರುತ್ತಾರೆ. ಅವರ ಕೈಯಲ್ಲಿ ವೀರಜೋಡು, ಕತ್ತಿ, ತಾಳ ಎಂಬ ಮೂರು ವಾದ್ಯಗಳಿರುತ್ತವೆ. ಈ ವೀರಗಾನದಲ್ಲಿ ಸ್ವಲ್ಪ ಮಟ್ಟಿಗೆ ಅಭಿನಯ, ಸ್ವಲ್ಪ ಕುಣಿತ ಕೂಡ ಇರುತ್ತದೆ. ಈ ಗಾನ ಹೆಚ್ಚಿಗೆ ಏಕತಾಳದಲ್ಲಿ ನಡೆಯುತ್ತದೆ. ಸಂದರ್ಭಕ್ಕೆ ತಕ್ಕಂತೆ ಅಟ್ಟತಾಳ ಆದಿತಾಳ ಕೂಡ ಇರುತ್ತವೆ. ಈ ಕಥಾಗಾನವನ್ನು ಹೆಚ್ಚಿಗೆ ರಾತ್ರಿ ಹೊತ್ತು ಬೆಳ್ದಿಂಗಳಲ್ಲಿ ಮಾಡುತ್ತಾರೆ. ದೀಪಗಳ ಕಾಂತಿ ಅಗತ್ಯವಿಲ್ಲ. ಈ ಸಂಪ್ರದಾಯ ಏಕೆ ಬಂದಿತೆಂಬುದು ತಿಳಿಯದು.

ಪಲನಾಡಿನ ವೀರರ ಕತೆಗಳನ್ನು ಗಾನ ಮಾಡುವ ವೀರವಿದ್ಯಾವಂತರು ಮೊದಲು ತಮ್ಮ ಮನೆದೇವರಾದ ಚೆನ್ನಕೇಶವನಿಗೆ ಪ್ರಾರ್ಥನೆ ಸಲ್ಲಿಸುತ್ತಾರೆ. ಅನಂತರ ಆದಿಶಕ್ತಿಯನ್ನು ಅಂಕಾಳದೇವಿಯನ್ನು ಪ್ರಾರ್ಥಿಸುತ್ತಾರೆ. ಆಮೇಲೆ ೯೯ ಜನ ವೀರನಾಯಕರನ್ನು ಪ್ರಾರ್ಥಿಸುತ್ತಾರೆ. ಕೆಲವರು ದೈವಾಂಶದಿಂದ ಹುಟ್ಟಿದ ಕುದುರೆ ಹಸುಗಳನ್ನು ಪ್ರಾರ್ಥಿಸುತ್ತಾರೆ. ಈ ಸ್ತುತಿಗಳಲ್ಲಿ ೯೯ ಜನ ವೀರರನ್ನು ಪ್ರಾರ್ಥನೆ ಮಾಡುವುದು ಅತ್ಯಂತ ಆವೇಶದಿಂದ, ವೀರ ರಸದಿಂದ ಕೂಡಿದ್ದು ಸ್ತೋತ್ರಗಳ ಹೃದಯಕ್ಕೆ ಭೇರಿ ನಿನಾದದಂತೆ ತೋರುತ್ತದೆ. ಪಲನಾಡಿನ ವೀರ ವಿದ್ಯಾವಂತರು ಗುಂಟೂರು, ಪ್ರಕಾಶಂ ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸುತ್ತಾರೆ.

ತೆಲುಗುನಾಡಿನ ವೃತ್ತಿಗಾಯಕ ಸಂಪ್ರದಾಯ ಬಹಳ ವೈವಿಧ್ಯದಿಂದ ಕೂಡಿದೆ. ಇವರಲ್ಲಿ ಅನೇಕರು ದಲಿತರು. ಪ್ರದರ್ಶನ ಕಲೆಗಳನ್ನು ಹಾಡುಗಾರಿಕೆಯನ್ನು ಅನನ್ಯವಾದ ಜನಪದ ಕಲಾ ಸಂಪ್ರದಾಯವನ್ನು ಇವರು ಕಾಪಾಡಿಕೊಂಡು ಬಂದಿರುವುದು ಪ್ರಶಂಸಾರ್ಹವಾದುದು. ಪಲನಾಡಿನ ವೀರರ ಚರಿತ್ರೆಯಂಥವು ಸಾಮಾನ್ಯವಾದ ಲಾವಣಿಗಳಿಗಿಂತ ಭಿನ್ನವಾಗಿದ್ದು ಒಂದು ಮಹಾಕಾವ್ಯ ಪರಂಪರೆಗೆ ಸೇರಿದವಾಗಿವೆ. ಕಥಾಗಾನದ ಜೊತೆಗೆ ಇವುಗಳ ಸಂಪ್ರದಾಯ ಜನಜೀವನದಲ್ಲಿ ಅನೇಕ ರೀತಿಯಲ್ಲಿ ಬೆರೆತಿರುವುದನ್ನು ಗಮನಿಸಬಹುದು.

ಟಿ.ವಿ.ಎಸ್. ಅನುವಾದ ಎ.ಎಂ.ಡಿ.