ವಿಶ್ವಕರ್ಮ ಪುರಾಣಂ ವಿಶ್ವಕರ್ಮದ ಕುಲಕಥೆಯೇ ತೆಲುಗಿನ ವಿಶ್ವಕರ್ಮ ಪುರಾಣ. ಬಡಗಿ, ಅಕ್ಕಸಾಲಿಗ, ಕಂಚರಿ, ಶಿಲ್ಪಿ, ಕಮ್ಮರ ಎಂಬ ಐದು ಕುಲದವರನ್ನು ವಿಶ್ವಕರ್ಮರು, ವಿಶ್ವಬ್ರಾಹ್ಮಣರು, ವಿಶ್ವಕರ್ಮಬ್ರಾಹ್ಮಣರು, ಪಂಚಾಣರು, ಪಂಚಾನದವರು ಅಯಿದ್ದಾಯರು ಎಂದು ವ್ಯವಹರಿಸುತ್ತಾರೆ. ಸಮಸ್ತ ಸೃಷ್ಟಿಗೆ, ಸರ್ವಕರ್ಮಗಳಿಗೆ, ಮೂಲವಾದ ವಿಶ್ವಕರ್ಮ ಇವರ ಕುಲದೇವತೆ. ಇವರ ಮಹಿಮೆಯನ್ನು ವಿವರಿಸುವುದು ಪಂಚಾಣದವರ ಔನ್ನತ್ಯವನ್ನು ಕೀರ್ತಿಸುವುದು ‘ವಿಶ್ವಕರ್ಮ ಪುರಾಣ’ದ ಮುಖ್ಯೋದ್ದೇಶ. ಪರಂಪರೆಯಿಂದ ವಿಶ್ವಕರ್ಮರ ಆಶ್ರಿತ ಕುಲಸ್ಥರಾದ ರುಂಜ, ಪನಸರು ವಿಶ್ವಕರ್ಮ ಪುರಾಣ ಕಥೆಯನ್ನು ಹೇಳುತ್ತ ವಿಶ್ವಕರ್ಮ ಕುಲವೃತ್ತಿಗಳ ಪ್ರಾಧಾನ್ಯವನ್ನು ಆಚಾರ ಸಂಪ್ರದಾಯಗಳನ್ನು ಕಾಪಾಡುತ್ತಿದ್ದಾರೆ.

ಕಥಾವಸ್ತು : ಸೃಷ್ಟಿಗೆ ಪೂರ್ವ ವಿಶ್ವಕರ್ಮ ಸ್ವಯಂಭುವಾಗಿ, ಪಂಚಮುಖಗಳಿಂದ ಆವಿರ್ಭವಿಸುತ್ತಾನೆ. ಅವನ ಪಂಚಮುಖಗಳಿಂದ, ಮನು, ಮಯ, ತ್ವಷ್ಟ, ಶಿಲ್ಪಿ, ವಿಶ್ವಜ್ಞ ಬ್ರಹ್ಮರುದ್ಭವಿಸಿ ಕಮ್ಮಾರ, ಬಡಗಿ, ಅಕ್ಕಸಾಲಿಗ, ಕಂಚರಿ, ಶಿಲ್ಪಿ ಕುಲದವರು ಮೂಲ ಪುರುಷರಾಗುತ್ತಾರೆ. ವಿಶ್ವಕರ್ಮ ಸಮಸ್ತ ಸೃಷ್ಟಿಯನ್ನು ಸೃಷ್ಟಿಸಿದ ನಂತರ ತಾರಕಾಸುರ ರೌಂಜಕಾಸುರ ಮತ್ತು ೧೬ ಜನ ರಾಕ್ಷಸರು ದೇವತೆಗಳನ್ನು ಮಾನವರನ್ನು ಅನೇಕ ರೀತಿಯಲ್ಲಿ ಹಿಂಸಿಸುತ್ತಿದ್ದರು. ಅವರ ದುರ್ಮಾರ್ಗಗಳನ್ನು ಅಂತ್ಯ ಮಾಡಿ ತಮ್ಮನ್ನು ಕಾಪಾಡಿ ಎಂದು ದೇವತೆಗಳು ವಿಶ್ವಕರ್ಮನನ್ನು ಬೇಡಿಕೊಳ್ಳುತ್ತಾರೆ. ವಿಶ್ವಕರ್ಮ ಅವರಿಗೆ ಅಭಯವನ್ನು ನೀಡುತ್ತಾನೆ.

ದಕ್ಷಯಜ್ಞದ ಸಂದರ್ಭದಲ್ಲಿ ಹೆತ್ತ ತಂದೆ ದಕ್ಷನು ಮಾಡಿದ ಅವಮಾನವನ್ನು ಸಹಿಸಲಾಗದೆ ಸತೀದೇವಿ ಪ್ರಾಣತ್ಯಾಗ ಮಾಡುತ್ತಾಳೆ. ಪುನರ್ಜನ್ಮದಲ್ಲಿ ಹಿಮವಂತನ ಮಗಳಾಗಿ ಜನಿಸುತ್ತಾಳೆ. ಬೆಳೆದು ದೊಡ್ಡವಳಾಗುತ್ತಾಳೆ. ಪರಮೇಶ್ವರನೊಡನೆ ಆಕೆಗೆ ವಿವಾಹ ನಿಶ್ಚಯವಾಗುತ್ತದೆ. ವಿಶ್ವಕರ್ಮನು ಮದುವೆಯ ಯಜಮಾನನಾಗಿ ವ್ಯವಹರಿಸಬೇಕೆಂದು ದೇವತೆಗಳು ಬೇಡಿಕೊಳ್ಳುತ್ತಾರೆ. ಅವನು ಅವರ ಕೋರಿಕೆಯನ್ನು ಅಂಗೀಕರಿಸುತ್ತಾನೆ.

ಪಾರ್ವತೀದೇವಿ ನ್ಯಾಯ (ವಧುವನ್ನು ನ್ಯಾಯವಾಗಿ ದೊಡ್ಡವರ ಸಮಕ್ಷಮದಲ್ಲಿ ಕೇಳುವುದು), ಗುರ್ತು (ವಿವಾಹದ ಚಿಹ್ನೆಯಾಗಿ ಮಂಗಳಸೂತ್ರ, ಕಾಲುಂಗುರ), ಸಾಕ್ಷಿ (ಮದುವೆಯಾಗುತ್ತಿದೆ ಎನ್ನಲಿಕ್ಕೆ ಸಾಕ್ಷಿಯಾಗಿ ವಾದ್ಯ ಧ್ವನಿ) ಮತ್ತು ಪಂಚಾಂಗಗಳನ್ನು ಸಿದ್ಧಮಾಡಿ ಶುಭಕಾರ್ಯವನ್ನು ನಡೆಸಿಕೊಡಿ ಎಂದು ಪಾರ್ವತಿ ವಿಶ್ವಕರ್ಮನನ್ನು ಕೇಳುತ್ತಾಳೆ. ಅವನು ತಕ್ಷಣ ಪಂಚಾಂಗವನ್ನು ಸೃಷ್ಟಿಸಿ ಮುಹೂರ್ತ ನಿಶ್ಚಯಿಸುತ್ತಾನೆ. ವಿಶ್ವಕರ್ಮ ಪಂಚಾಂಗವನ್ನು ಸೃಷ್ಟಿಸಿದ ಅನಂತರ ವಾದ್ಯ ನಿರ್ಮಾಣಕ್ಕೆ ಪಾಪಾತ್ಮನ ಶರೀರಾವಯವಗಳನ್ನು ಬಳಸಿಕೊಳ್ಳಬೇಕೆಂದು ದಿವ್ಯ ದೃಷ್ಟಿಯಿಂದ ನೋಡಿದಾಗ ರೌಂಜಕಾಸುರನು ಕಾಣಿಸುತ್ತಾನೆ. ರೌಂಜಕಾಸುರ ತ್ರಿಮೂರ್ತಿಗಳ ವರಪ್ರಸಾದದಿಂದ ಸಿಂಹಬಲನಾಗಿ ೩೩ ಕೋಟಿ ದೇವತೆಗಳನ್ನು ಬಂಧಿಸಿ ಹಿಂಸೆ ಮಾಡುತ್ತಿರುತ್ತಾನೆ. ವಿಶ್ವಕರ್ಮ ರೌಂಜಕಾಸುರನ ಮೇಲೆ ಧಾಳಿ ಮಾಡುತ್ತಾನೆ. ಆದರೆ ಅವನ ರಕ್ತ ಬಿಂದುವು ನೆಲದ ಮೇಲೆ ಬಿದ್ದಾಕ್ಷಣ ಸಾವಿರಾರು ರಾಕ್ಷಸರು ಹುಟ್ಟುತ್ತಿರುತ್ತಾರೆ. ವಿಶ್ವಕರ್ಮ ತನ್ನ ಮನೋಬಲದಿಂದ ಶಕ್ತಿ ಸ್ವರೂಪಿಣಿಯಾದ ತ್ರಿಪುರ ಸುಂದರಿಯನ್ನು ಸೃಷ್ಟಿಸುತ್ತಾನೆ. ಆಕೆ ರಾಕ್ಷಸನ ರಕ್ತಬಿಂದುಗಳು ನೆಲದ ಮೇಲೆ ಬೀಳದಂತೆ ನಾಲಗೆಯನ್ನು ಚಾಚಲು ವಿಶ್ವಕರ್ಮ ಸೂರ್ಯಕಿರಣಗಳಿಂದ ಲೋಲಾಚಕ್ರವನ್ನು ನಿರ್ಮಿಸಿ ರೌಂಜಕಾಸುರನನ್ನು ಸಂಹರಿಸುತ್ತಾನೆ. ಆ ಪರಾತ್ಪರನು, ರೌಂಜಕಾಸುರನ ವಿವಿಧ ಅವಯವಗಳಿಂದ ವಾದ್ಯವನ್ನು ತಯಾರು ಮಾಡುತ್ತಾನೆ.

ಅದೇ ‘ರುಂಜ’ ವಾದ್ಯ. ಅದನ್ನು ಬಾರಿಸಲಿಕ್ಕೆ ತನ್ನ ಬೆವರಿನ ಬಿಂದುಗಳಿಂದ ಬಾಲಕನನ್ನು ಸೃಷ್ಟಿಸಿ ವಾದ್ಯವನ್ನು ನುಡಿಸೆನ್ನುತ್ತಾನೆ. ಆ ವಾದ್ಯವನ್ನು ನುಡಿಸಿದೊಡನೆ ಸಪ್ತ ಸಾಗರಗಳು ಉಕ್ಕುತ್ತವೆ. ಭೂಮಿ ಕಂಪಿಸುತ್ತದೆ. ಆಕಾಶ ತತ್ತರಿಸುತ್ತದೆ. ದೇವತೆಗಳು ಭಯಪಡುತ್ತಾರೆ. ರುಂಜ ಧ್ವನಿಯನ್ನು ತಗ್ಗಿಸು ಎಂದು ವಿಶ್ವಕರ್ಮ ಬೇಡಿಕೊಂಡಾಗ ಧ್ವನಿಯನ್ನು ತಗ್ಗಿಸುತ್ತಾನೆ.

65_70A_DBJK-KUH

೩೨ ವಾದ್ಯಗಳಿಗೆ ಸಮನಾದ ರುಂಜ ವಾದ್ಯವನ್ನು ರುದ್ರನ ವಿವಾಹ ಸಂದರ್ಭದಲ್ಲಿ ಬಾರಿಸಲಿಕ್ಕೆ ಜನಿಸಿದ ಬಾಲಕನು ರುದ್ರಾಂಗನು ಅಥವಾ ರುದ್ರ ಮಹೇಶ್ವರನಾದನು. ಅವನೇ ರುಂಜ ಕುಲ ಮೂಲ ಪುರುಷನಾದ. ವಿಶ್ವಕರ್ಮ ಅವನನ್ನು ವಿಶ್ವಬ್ರಾಹ್ಮಣರನ್ನಾಶ್ರಯಿಸಿ, ಅವರ ಕುಲ ಕಥೆಯನ್ನು ಪ್ರದರ್ಶಿಸುತ್ತಾ ಜೀವಿಸು ಎನ್ನುತ್ತಾನೆ. ಮೇರು ಪರ್ವತಕ್ಕೆ ಹೋಗಿ ಮಂಗಳಸೂತ್ರವನ್ನು, ಬೆಳ್ಳಿ ಬೆಟ್ಟಕ್ಕೆ ಹೋಗಿ ಬೆಳ್ಳಿ ಉಂಗುರವನ್ನು ತಯಾರುಮಾಡಿಸಿಕೊಂಡು ತಂದು ವಿಶ್ವಕರ್ಮ ಪಾರ್ವತೀ ಪರಮೇಶ್ವರರ ಮದುವೆ ಮಾಡಿಸುತ್ತಾನೆ.

ವಿವಾಹದ ಅನಂತರ ಪಾರ್ವತೀ ಪರಮೇಶ್ವರರ ಮಧ್ಯೆ ಸೌಂದರ್ಯದ ವಿಷಯದಲ್ಲಿ ಜಗಳ ಬರುತ್ತದೆ. ವಿಶ್ವಕರ್ಮನನ್ನು ನ್ಯಾಯ ಮಾಡಿ ಎಂದು ಕೋರುತ್ತಾರೆ. ಅವನು ಸೂರ್ಯಕಿರಣಗಳಿಂದ ಕನ್ನಡಿಯನ್ನು ತಯಾರಿಸಿ ಇಬ್ಬರ ಮಧ್ಯೆ ಇಡುತ್ತಾನೆ. ಕನ್ನಡಿಯಲ್ಲಿ ತಮ್ಮ ಪ್ರತಿಬಿಂಬಗಳನ್ನು ನೋಡಿಕೊಂಡು ಇಬ್ಬರು ಸಂತೋಷಪಡುತ್ತಾರೆ. ಅತಿ ಸುಲಭವಾಗಿ ತಮ್ಮ ಜಗಳ ನಿಲ್ಲಿಸಿದ್ದಕ್ಕೆ ವಿಶ್ವಕರ್ಮನನ್ನು ಏನಾದರು ವರ ಬೇಡಿಕೋ ಎಂದು ಶಿವ ಕೇಳುತ್ತಾನೆ. ತನ್ನ ಕೈ, ಕಾಲು ಮುಟ್ಟದ ವಸ್ತುವನ್ನು ಕೊಡೆಂದು ಕೇಳಿದಾಗ ಪರಮೇಶ್ವರನು ತನ್ನ ತಲೆಯ ಮೇಲಿರುವ ದರಿದ್ರದೇವತೆಯನ್ನು ಕೊಡುತ್ತಾನೆ. ಆಗ ವಿಶ್ವಕರ್ಮ ಕೋಪದಿಂದ ನೀನು ಒರಳುಕಲ್ಲು ಆಕಾರದಲ್ಲಿ ಶಿಲೆಯಾಗುತ್ತೀಯ ಎಂದು ಶಾಪ ನೀಡುತ್ತಾನೆ. ಅನಂತರ ಪಾರ್ವತಿ ಬೇಡಿಕೊಂಡಾಗ ಇತರರಿಗೆ ಲಿಂಗರೂಪದಲ್ಲಿ ಕಾಣಿಸಿದರೂ ನಿನಗೆ ಮಾತ್ರ ಶರೀರದಲ್ಲಿಯೇ ಕಾಣಿಸುತ್ತೇನೆಂದು ಅನುಗ್ರಹಿಸುತ್ತಾನೆ.

ಕೈಲಾದಲ್ಲಿ ರುಂಜವಾದ್ಯವನ್ನು ನುಡಿಸಿದಾಗ ತ್ರಿಮೂರ್ತಿಗಳು ತನ್ಮಯದಿಂದ ನಾಟ್ಯವಾಡುತ್ತಾರೆ. ವಿವಿಧ ವಾದ್ಯಗಳು ಉದ್ಭವಿಸುತ್ತವೆ. ತಾಳಗಳು, ಸ್ವರಗಳು ಕೂಡ ಹುಟ್ಟುತ್ತವೆ. ವಿಶ್ವಕರ್ಮನ ಅನುಗ್ರಹದಿಂದ ರುಂಜ ಕಲೆಗಾರರು ರುಂಜವಾದ್ಯದಿಂದ ವಿವಿಧ ಸಂಗೀತ ಸ್ವರಗಳನ್ನು ಪ್ರಚಾರಕ್ಕೆ ತಂದರು.

ವಿಶ್ವಕರ್ಮ ಪುರಾಣ ಕಥೆಗಾರರು : ವಿಶ್ವಬ್ರಾಹ್ಮಣರಿಗೆ ಆಶ್ರಿತ ಕುಲದವರಾದ ರುಂಜರು, ಪನಸರು ವಿಶ್ವಕರ್ಮ ಪುರಾಣ ಕಥೆಯನ್ನು ಪ್ರವಚನ ಮಾಡುತ್ತಿರುತ್ತಾರೆ. ಅವರಲ್ಲಿ ರುಂಜಕಥೆಗಾರ ಕಥಾನುಸಾರವಾಗಿ ‘ರುಂಜ’ ವಾದ್ಯವನ್ನು ವಿವಿಧ ಧ್ವನಿಗಳಿಂದ ನುಡಿಸುತ್ತಾ ಅಭಿನಯ ಪೂರ್ವಕವಾಗಿ ಶ್ಲೋಕ, ವಚನ, ಗೇಯ, ಪದ್ಯರೂಪಗಳಿಂದ ಕಥೆಯನ್ನು ಪ್ರದರ್ಶಿಸುತ್ತಾನೆ. ಪನಸರು ಮಾತ್ರ ವಾದ್ಯವಿಲ್ಲದೇ ಪುರಾಣ ಪ್ರವಚನ ಮಾಡುತ್ತಾರೆ. ‘ವಿಶ್ವಕರ್ಮ ಪುರಾಣ’ ಮೌಖಿಕ ರೂಪದಲ್ಲೇ ಅಲ್ಲದೆ ಗ್ರಂಥ ರೂಪದಲ್ಲಿಯೂ ಲಭಿಸುತ್ತಿದೆ.

ಆರ್.ಪಿ. ಅನುವಾದ ಎ.ಎ.

 

ವಿಷು ಕೇರಳದ ಕೃಷಿ ಸಂಬಂಧಿ ಹಬ್ಬ. ಮಾಘ ಮಾಸದ ಒಂದರಂದು ನಡೆಯುವ ಈ ಹಬ್ಬಾಚರಣೆಯು ಹೊಸ ವರ್ಷದ ಆಚರಣೆಯಾಗಿಯೂ ಉತ್ತರ ಕೇರಳದಲ್ಲಿ ಪ್ರಸಿದ್ಧವಾಗಿದೆ. ಮನೆಗಳಲ್ಲಿ ಹಾಗೂ ದೈವಸ್ಥಾನಗಳಲ್ಲಿ ವಿಷು ಆಚರಣೆ ನಡೆಯುತ್ತದೆ. ಸೂರ್ಯನು ಉತ್ತರಾಯಣಕ್ಕೆ ಪ್ರವೇಶಿಸುವ ಮಾಘ ಮಾಸದ ಒಂದರಂದು ಹಗಲು ಮತ್ತು ರಾತ್ರಿಗಳು ಸಮಾನ ಅವಧಿಯಾಗಿರುತ್ತವೆ. ಆದುದರಿಂದಲೇ ಈ ಹಬ್ಬಕ್ಕೆ ವಿಷು ಎಂಬ ಹೆಸರು ಬಂತೆಂದು ಜನಪದರು ಹೇಳುತ್ತಾರೆ. ಇಲ್ಲಿನ ರೈತಾಪಿ ಜನರು ಮಾಘ ಮಾಸ ಒಂದರಿಂದ ಬೇಸಾಯದ ಕೆಲಸಗಳನ್ನು ಆರರಂಭಿಸುತ್ತಿದ್ದರು. ಹಿಂದಿನ ಕಾಲದಲ್ಲಿ ಸೂರ್ಯನ ಸಂಚಾರ ಪಥವನ್ನು ನೋಡಿಕೊಂಡು ಕಾಲವನ್ನು ತಿಳಿಯುತ್ತಿದ್ದರು. ಜ್ಯೋತಿಶ್ಯಾಸ್ತ್ರ ಮತ್ತು ಕೃಷಿ ಸಂಸ್ಕೃತಿಯ ಸಂಬಂಧವನ್ನು ತಿಳಿಸುವ ವಿಷು ಹಬ್ಬವು ಧನಧಾನ್ಯ ಸಮೃದ್ಧಿಯ ಆಶಯವನ್ನು ಹೊಂದಿದೆ.

ವಿಷುವಿಗೆ ಸಂಬಂಧಿಸಿದ ಅನೇಕ ಪುರಾಣ ಕಥೆಗಳಿವೆ. ರಾವಣನು ತನ್ನ ಅರಮನೆಯಲ್ಲಿ ಕುಳಿತಿದ್ದಾಗ, ತೀಕ್ಷ್ಣವಾದ ಸೂರ್ಯಕಿರಣಗಳು ಕಾಡುತ್ತವೆ. ಬಲಶಾಲಿಯೂ, ಅಹಂಕಾರಿಯೂ ಆಗಿರುವ ರಾವಣನು ತನ್ನ ಅರಮನೆಯ ಕಡೆಗೆ ಬಾರದಿರುವಂತೆ ಸೂರ್ಯನಿಗೆ ಆಜ್ಞಾಪಿಸಿದ. ಅಂದಿನಿಂದ ಸೂರ್ಯ ಪೂರ್ವ ದಿಕ್ಕಿನಲ್ಲಿ ಉದಯಿಸಲು ಹೆದರಿದ. ರಾವಣನನ್ನು ಶ್ರೀರಾಮನು ವಧಿಸಿದ ನಂತರ ಸೂರ್ಯನು ಯಥಾಕ್ರಮ ಉದಯಿಸತೊಡಗಿದ. ಈ ದಿನದ ನೆನಪಿಗಾಗಿ ವಿಷು ಹಬ್ಬ ಎಂದು ಕೆಲವರು ಹೇಳುತ್ತಾರೆ. ಇನ್ನೊಂದು ಕಥೆಯ ಪ್ರಕಾರ, ಶ್ರೀಕೃಷ್ಣನು ನರಕಾಸುರನನ್ನು ವಧಿಸಿದ ದಿವಸವನ್ನು ವಿಷು ಹಬ್ಬವಾಗಿ ಆಚರಿಸುತ್ತಾರೆ. ಇಂತಹ ಕಥೆಗಳಿಗಿಂತಲೂ ಹೆಚ್ಚಾಗಿ ವಿಷು ಹಬ್ಬವು ಕೃಷಿ ಸಂಸ್ಕೃತಿಯ ಒಂದು ಹಬ್ಬವಾಗಿ ಕಾಣಿಸಿಕೊಳ್ಳುತ್ತದೆ.

ಆಚರಣೆಗಳು : ವಿಷು ಹಬ್ಬದ ಹಿಂದಿನ ರಾತ್ರಿ ಕುಟುಂಬದ ಯಜಮಾನ ಹಾಗೂ ಹಿರಿಯರು ಸೇರಿಕೊಂಡು ಮರುದಿವಸ ‘ಕಣಿ’ (ಪ್ರಥಮ ದರ್ಶನ) ನೋಡುವ ಫಲವಸ್ತುಗಳನ್ನು ಇರಿಸುವರು. ಕಂಚಿನ ಪಾತ್ರೆಯಲ್ಲಿ ಭತ್ತ ಹಾಗೂ ಅಕ್ಕಿಯನ್ನು ತುಂಬಿಸುವರು. ದೀಪ ಬೆಳಗಿಸಿ ಕರ್ಪೂರ ಊದುಬತ್ತಿ ಉರಿಸುವರು. ಶ್ರೀಕೃಷ್ಣ ವಿಗ್ರಹ ಅಥವಾ ಭಾವಚಿತ್ರದ ಮುಂದೆ ಇವುಗಳನ್ನಿರಿಸಿ, ಕೊಂದೆ ಹೂಗಳಿಂದ ಅಲಂಕರಿಸುವರು. ಕೊಂದೆಹೂ ವಿಷು ಹಬ್ಬದಲ್ಲಿ ಮುಖ್ಯವಾದುದು. ಅನಂತರ ಹಲಸು, ಮಾವು, ತೆಂಗಿನಕಾಯಿ, ಸೌತೆ, ನವಧಾನ್ಯಗಳು, ವೀಳ್ಯ ಮೊದಲಾದ ವಸ್ತುಗಳನ್ನಿರಿಸುವರು. ಚಿನ್ನ ಅಥವಾ ಬೆಳ್ಳಿಯ ನಾಣ್ಯಗಳನ್ನು ಇರಿಸುವ ಸಂಪ್ರದಾಯವಿದೆ. ದೇವರಕೋಣೆಯನ್ನು ಹಿಂಗಾರ ಹಾಗೂ ತೋರಣಗಳಿಂದ ಅಲಂಕರಿಸುವರು. ಹೀಗೆ ರಾತ್ರಿಯೇ ‘‘ಕಣಿದರ್ಶನ’ದ ವಸ್ತುಗಳನ್ನು ದೇವರ ಕೋಣೆಯಲ್ಲಿ ಪೇರಿಸಿಡುವರು.

ಮರುದಿವಸ ಅಂದರೆ ಮಾಘಮಾಸ ಒಂದರಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಮನೆಯ ಯಜಮಾನ ಎದ್ದು, ಕೈಕಾಲು ಮುಖ ತೊಳೆದು, ದೇವರ ಕೋಣೆಯನ್ನು ಪ್ರವೇಶಿಸಿ ದೀಪ ಬೆಳಗಿಸುವನು. ಪ್ರತಿಯೊಂದು ವಸ್ತುವನ್ನು ದೀಪದ ಬೆಳಕಿನಲ್ಲಿ ನೋಡಿ, ಉಳಿದವರನ್ನು ಕರೆಯುವನು. ಮಕ್ಕಳೆಲ್ಲ ಕಣ್ಣು ತೆರೆಯದೆ, ಗಿಂಡಿನೀರಿನಲ್ಲಿ ಮುಖ ಶುದ್ಧಿ ಮಾಡಿ ‘ಕಣಿದರ್ಶನ’ ಮಾಡುವರು. ಅನಂತರ ಹಟ್ಟಿಯಲ್ಲಿ ಜಾನುವಾರುಗಳಿಗೆ ಕಣಿದರ್ಶನದ ಆಚರಣೆ. ಸೌತೆ, ಹಲಸು ಮೊದಲಾದ ಫಲವಸ್ತುಗಳನ್ನು ಗೆರಸೆಯಲ್ಲಿ ಹಾಕಿ, ದೀಪದೊಂದಿಗೆ ಹಟ್ಟಿಗೆ ಬರುತ್ತಾರೆ. ಜಾನುವಾರುಗಳನ್ನು ದೀಪ ಬೆಳಗಿಸಿ ಪೂಜಿಸಿ ನಂತರ ಫಲವಸ್ತುಗಳನ್ನು ಜಾನುವಾರುಗಳಿಗೆ ನೀಡುವರು. ಅನಂತರ ಮನೆಯ ಯಜಮಾನ ಎಲ್ಲರಿಗೂ ‘ಕೈನೀಟಂ’ ಕೊಡುವ ಸಂಪ್ರದಾಯವಿದೆ. ಯಜಮಾನ ಮನೆಯ ಮಂದಿಗೆ ಹಣ ಕೊಡುವುದನ್ನು ‘ಕೈನೀಟಂ’ ಎನ್ನುವರು. ಕಿರಿಯರು ಹಿರಿಯರ ಕಾಲು ಮುಟ್ಟಿ ಆಶೀರ್ವಾದ ಪಡೆಯುತ್ತಾರೆ. ಅನಂತರ ‘ಕಾರೇಲಪ್ಪಂ’ ಎಂಬ ಸಿಹಿತಿಂಡಿಯನ್ನು ಹಂಚಿ ತಿನ್ನುತ್ತಾರೆ. ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಕಣಿದರ್ಶನದ ನಂತರ ಮನೆಯ ಯಜಮಾನ ಯುವಕರನ್ನು ಕರೆದುಕೊಂಡು ಗದ್ದೆ ಬಯಲಿಗೆ ಹೋಗುತ್ತಾನೆ. ಗದ್ದೆಯ ಈಶಾನ್ಯ ದಿಕ್ಕಿನ ಮೂಲೆಯಲ್ಲಿ ಸ್ಥಳಶುದ್ಧ ಮಾಡಿ, ಗಣಪತಿಗೆ ಅವಲಕ್ಕಿ, ಬೆಲ್ಲ, ಬಾಳೆಹಣ್ಣು, ಕಲ್ಲು ಸಕ್ಕರೆ ಅರ್ಪಿಸುತ್ತಾನೆ. ಅನಂತರ ಕಾಸರಕ ಮರದ ಎಲೆಯಲ್ಲಿ ಭತ್ತದ ಬೀಜಗಳನ್ನಿಟ್ಟು ಶುದ್ಧಿ ಮಾಡಿ, ಗದ್ದೆಯ ಮೂಲೆಯಲ್ಲಿ ಬಿತ್ತುವನು. ಮುಂದೆ ನಡೆಯಲಿರುವ ಭತ್ತ ಬೇಸಾಯದ ಆರಂಭ ವಿಷುವಿನ ದಿವಸ ತೊಡಗುತ್ತದೆ. ಇದನ್ನು ‘ಪೊದುಕೊಳ್ಳಲ್’ ಎಂದು ಹೇಳುವರು. ಸೂರ್ಯೋದಯಕ್ಕೂ ಮುಂಚಿತವಾಗಿ ನಡೆಯುವ ಕಣಿದರ್ಶನ, ಪೊದುಕೊಳ್ಳಲ್ ಆಚರಣೆಗಳು ವಿಷು ಹಬ್ಬದಲ್ಲಿ ಮುಖ್ಯವಾಗಿವೆ. ಮಧ್ಯಾಹ್ನ ಭೂರಿಭೋಜನ ಏರ್ಪಡಿಸುವರು.

ಮನೆಗಳಲ್ಲಿ ವಿಷು ಆಚರಣೆಗಳು ನಡೆಯುವಂತೆ ದೇವಸ್ಥಾನಗಳಲ್ಲಿ, ಕಾವುಗಳಲ್ಲಿ ಆಚರಣೆಗಳಿವೆ. ವಿಷು ದೇವಾಲಯಗಳಲ್ಲಿ ಸೂರ್ಯೋದಯಕ್ಕೂ ಮೊದಲೇ ದೇವರಿಗೆ ಕಣಿದರ್ಶನ ಮಾಡುವ ಸಂಪ್ರದಾಯವಿದೆ. ಕಾವುಗಳಲ್ಲಿ ‘ಅಂದಿತಿರಿಯನ್’ (ದೀಪ ಬೆಳಗಿಸುವ ನಿರ್ದಿಷ್ಟ ವ್ಯಕ್ತಿ) ‘ತಣ್ಣೀನಮೃತ’ (ಅಕ್ಕಿ, ಬೆಲ್ಲ, ಎಳ್ಳು, ಬಾಳೆಹಣ್ಣು ಸೇರಿಸಿ ಮಾಡುವ ಭಕ್ಷ್ಯ)ವನ್ನು ಭಗವತಿಗೆ ನಿವೇದಿಸುವನು. ಅನಂತರ ಮುಂಜಾನೆ ದೇವರಿಗೆ ಪೂಜೆ ನಡೆಯುವುದು. ಹಲಸು, ಮಾವು, ತೆಂಗಿನಕಾಯಿ, ಸೌತೆಕಾಯಿ, ಅಕ್ಕಿ, ಧಾನ್ಯಗಳ ಕಣಿದರ್ಶನ ನಡೆಯುವುದು. ಕಣಿದರ್ಶನಕ್ಕೆ ಬಂದ ಭಕ್ತರಿಗೆ ‘ತಣ್ಣೀನಮೃತ’ವನ್ನು ಪ್ರಸಾದ ರೂಪದಲ್ಲಿ ಹಂಚುವರು.

ಆಧುನಿಕ ಕಾಲದಲ್ಲಿ ವಿಷು ಆಚರಣೆ ಕೇರಳದಲ್ಲಿ ಉಳಿದುಕೊಂಡಿದೆ. ಆದರೆ ಕೃಷಿ ಸಂಸ್ಕೃತಿಗೆ ಸಂಬಂಧಪಟ್ಟ ‘ಪೊದುಕೊಳ್ಳಲ್’ ಎಂಬ ಆಚರಣೆ ಮರೆಗೆ ಸಂದಿದೆ. ವಿಷು ಹಬ್ಬದ ಕುರಿತು ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಎಂ.ವಿ. ವಿಷ್ಣು ನಂಬೂದಿರಿ ಅವರ ಫೋಕ್ಲೋರ್ ನಿಘಂಟುವಿನಲ್ಲಿ ವಿಷು ಹಬ್ಬದ ಮಾಹಿತಿ ಇದೆ.

ವಿ.ಎಂ.ಯು. ಅನುವಾದ ಎನ್.ಎಸ್.

 

ವಿಳ್ಳೈಯಾಟ್ಟು ಪ್ಪಾಡಲ್ ಮಕ್ಕಳು, ಹುಡುಗ ಹುಡುಗಿಯರು ಆಟವಾಡುವಾಗ ಆಯಾ ಆಟಕ್ಕೆ ತಕ್ಕಂತೆ ಹಾಡುವ ಹಾಡು. ಇವುಗಳಲ್ಲಿ ಕೆಲವು ಹಾಡುಗಳನ್ನು ಆಟವಿಲ್ಲದೆ ಕುಳಿತಿರುವಾಗಲೂ ಹಾಡಲಾಗುತ್ತದೆ. ಹುಡುಗರು ಮಾತ್ರವಲ್ಲದೆ ದೊಡ್ಡವರು ಸಹ ಕೆಲವು ಆಟಗಳನ್ನಾಡುವ ಸಂದರ್ಭದಲ್ಲಿ ಹಾಡುವುದುಂಟು. ಈ ಹಾಡುಗಳಲ್ಲಿ ಅನೇಕ ಸಂದರ್ಭಗಳಲ್ಲಿ ಅರ್ಥವಾಗಲೀ ಸಾರಾಂಶವಾಗಲೀ ಪ್ರಮುಖವಲ್ಲ. ಸಂತೋಷವುಂಟು ಮಾಡುವ ಕೆಲವು ಶಬ್ದಗಳು ಇಲ್ಲಿ ಪ್ರಮುಖವೆನಿಸುತ್ತದೆ. ಮಕ್ಕಳಿಗೆ ಸಮೂಹದಲ್ಲಿ ಹೊಂದಿಕೊಂಡು ಬದುಕಲು ಇಂತಹ ಕೆಲವು ಹಾಡುಗಳು ಪಾಠ ಕಲಿಸುತ್ತವೆ. ಮೂರು – ನಾಲ್ಕು ವಯಸ್ಸಿನ ಮಕ್ಕಳಿಗೆ ಸಂತೋಷವನ್ನುಂಟುಮಾಡಲು ಪೋಷಕರು ಹಾಗೂ ಹಿರಿಯರು ಇಂತಹ ಕೆಲವು ಆಟಗಳನ್ನಾಡುತ್ತಾರೆ. ಉದಾ :

            ಕಿಚ್ಚು ಕಿಚ್ಚಾಂಡಿ
ಕೀರ ತಂಡಾಂಡಿ
ನಟ್ಟು ವಚ್ಚಾಂಡಿ
ಪಟ್ಟು ಪೋಚ್ಚಾಂಡಿ
ಕಿಚ್ಚು ಕಿಚ್ಚು ಕಿಚ್ಚು

ಅಳುತ್ತಿರುವ ಮಗುವನ್ನು ಸಮಾಧಾನ ಪಡಿಸಲು ಮೇಲೆ ಇಂತಹ ಕಚಗುಳಿಯಿಡುವ ಹಾಡನ್ನು ಹೇಳಲಾಗುತ್ತದೆ. ಮಗು ಅಳು ನಿಲ್ಲಿಸಿ ನಗಲು ಪ್ರಾರಂಭ ಮಾಡಿದ ಕೂಡಲೆ

            ಅಳುವ ಮಗು ನಗುತ್ತಂತೆ
ಕತ್ತೆ ಹಾಲು ನೆಕ್ಕುತ್ತಂತೆ

ಎಂದು ಹಾಡನ್ನು ಮುಗಿಸುತ್ತಾರೆ.

ಆರರಿಂದ ಹನ್ನೆರಡು ವಯಸ್ಸಿನ ಮಕ್ಕಳಿಗಾಗಿಯೇ ಕೆಲವು ಆಟಗಳಿವೆ. ಅವುಗಳಲ್ಲಿ ಹೆಣ್ಣು ಮಕ್ಕಳಿಗೆ ಮಾತ್ರ ಕೆಲವು; ಮತ್ತೆ ಕೆಲವು ಆಟಗಳು ಎಲ್ಲಾ ಮಕ್ಕಳು ಸೇರಿಕೊಂಡು ಆಡುವಂತಹವು. ಎರಡು ತಂಡಗಳಾಗಿ ಎದುರು ಬದಿರು ಕುಳಿತು ಆಡುವಾಗ ಒಂದು ತಂಡ ‘ಹೂ ಬಿಡಿಸಲು ಬರ‍್ತೇವೆ’ ಎಂದು ಪ್ರಾರಂಭಿಸುತ್ತದೆ. ಈ ತಂಡದಲ್ಲಿರುವ ಮಕ್ಕಳು ಪ್ರತಿಯೊಂದು ಸಾಲನ್ನು ಎರಡು ಬಾರಿ ಉಚ್ಚರಿಸುತ್ತಾರೆ. ಉದಾ :

ಮೊದಲನೆಯ ತಂಡ

            ಹೂ ಬಿಡಿಸಲು ಬರ‍್ತೀವಿ
ರೋಜಾ ಹೂವು ಬಿಡಿಸ್ತೀವಿ

            ಮಣಿ ಮನೆಗೆ ಕಳಿಸ್ತೀವಿ
ಹೂ ಬಿಡಿಸಲು ಬರ‍್ತೀವಿ
ಆಷಾಢ ಮಾಸದಲ್ಲಿ ಬರ‍್ತೀವಿ
ಉಮಾ ಮನೆಗೆ ಕಳಿಸ್ತೀವಿ

ಎರಡನೆಯ ತಂಡ

ಯಾವ ಹೂ ಬಿಡಿಸ್ತೀರಿ ?
ಯಾರ ಮನೆಗೆ ಕಳಿಸ್ತೀರಿ ?
ಯಾವ ತಿಂಗಳು ಬರ‍್ತೀರಿ ?
ಯಾರ ಮನೆಗೆ ಕಳಿಸ್ತೀರಿ ?

ಹೀಗೆ ಆಟ ಪ್ರಶ್ನೋತ್ತರ ರೂಪದಲ್ಲಿ ಮುಂದುವರಿಯುತ್ತದೆ.

ಹುಡುಗರು ವೃತ್ತಾಕಾರದಲ್ಲಿ ಕುಳಿತು ಆಡುವ ಆಟದಲ್ಲಿ ಒಬ್ಬ ಹುಡುಗ ಮಾತ್ರ ವೃತ್ತಾಕಾರದಲ್ಲಿ ಸುತ್ತುತ್ತಾನೆ. ಒಮ್ಮೆ ಅವನು ಕುಳಿತುಕೊಳ್ಳುತ್ತಾನೆ. ಹೀಗೆ ಒಬ್ಬರಿಂದ ಮತ್ತೊಬ್ಬರು ಬದಲಾಯಿಸಿಕೊಂಡು ಹೇಳುವುದನ್ನು ಕೇಳಲು ಮತ್ತು ನೋಡಲು ತಮಾಷೆಯಾಗಿರುತ್ತದೆ.

ಪದಗಳನ್ನು ಸರಪಳಿಯಂತೆ ಸೇರಿಸುತ್ತಾ ಹೇಳುವ ಹಾಡುಗಳು ಮಕ್ಕಳನ್ನು ರಂಜಿಸುತ್ತವೆ. ಇಂತಹ ಸರಪಳಿ ರಚನೆಯ ಹಾಡುಗಳು ಬಹುತೇಕ ಎಲ್ಲಾ ಭಾಷೆಗಳಲ್ಲಿಯೂ ಕಂಡುಬರುತ್ತವೆ. ಉದಾ :

            ಕಡುಬೇ ಕಡುಬೇ
ಯಾಕೆ ಬೇಯಲಿಲ್ಲ
?
ಒಲೆ ಉರೀಲಿಲ್ಲ ನಾನು ಬೇಯಲಿಲ್ಲ;
ಒಲೆಯೇ ಒಲೆಯೇ
ಯಾಕೆ ಉರೀಲಿಲ್ಲ ?
ಮಳೆಯಿಂದ ಒದ್ದೆಯಾಯ್ತು ಉರೀಲಿಲ್ಲ;
ಮಳೆಯೇ ಮಳೆಯೇ
ಯಾಕೆ ಒದ್ದೆ ಮಾಡ್ದೆ ?
ಹುಲ್ಲು ಬೆಳೆಯೋಕೆ ಒದ್ದೆ ಮಾಡ್ದೆ.
ಹುಲ್ಲೇ ಹುಲ್ಲೇ
ಯಾಕೆ ಬೆಳೆದೆ ?
ದನಗಳ ಮೇವಿಗೆ ನಾನು ಬೆಳ್ದೆ.
ದನವೇ ದನವೇ
ಯಾಕೆ ತಿಂದೆ ?

ಹೀಗೆ ಮುಂದುವರಿಯುತ್ತದೆ ಸರಪಳಿ.

ಇಂತಹುದೇ ಮತ್ತೊಂದು ಉದಾ :

            ಎಲ್ಲಿಗೆ ಹೋಗಿದ್ದೆ ?
ಊರಿಗೆ ಹೋಗಿದ್ದೆ
ಯಾವೂರು ?
ಮಯಿಲಾಪ್ಪೂರು
ಯಾವ ಮಯಿಲು ?
ಕಾಡು ಮಯಿಲು
ಯಾವ ಕಾಡು ?
ಆರ್ಕಾಡು
ಯಾವ ಆರು ?
ಪಾಲಾರು
ಯಾವ ಪಾಲು ?
ಕಳ್ಳಿ ಪಾಲು

ಹೀಗೆ ಸರಪಳಿ ಮುಂದುವರಿಯುತ್ತದೆ.

ಇಬ್ಬರು ಹುಡುಗಿಯರು ಕೈಗಳನ್ನು ಜೋಡಿಸಿ ಮೇಲೆತ್ತಿ ನಿಂತಿರುವಾಗ, ಉಳಿದ ಹುಡುಗಿಯರು ಒಬ್ಬೊಬ್ಬರಾಗಿ ಅವರ ಕೈಗಳ ಕೆಳಗೆ ಒಳಹೊಕ್ಕು ಹೊರಬರುವುದು ಒಂದು ಹುಡುಗಿಯರ ಆಟ. “ಒಂದು ಕೊಡ ನೀರು ಸುರಿದು ಒಂದು ಹೂವು ಬಿಟ್ಟಿತು” ಎಂದು ಒಬ್ಬೊಬ್ಬರಾಗಿ ಹೋಗುತ್ತಾರೆ. ಹೀಗೆ ಇದು ಎರಡು…ಮೂರು…ನಾಲ್ಕು ಎಂದು ಹತ್ತು ಸಂಖ್ಯೆವರೆಗೆ ಮುಂದುವರಿಯುತ್ತದೆ. ಒಮ್ಮೆಲೇ ಒಬ್ಬ ಹುಡುಗಿಯನ್ನು ನಿಂತಿರುವ ಇಬ್ಬರು ಹುಡುಗಿಯರು ತಡೆದು ನಿಲ್ಲಿಸಿಕೊಳ್ಳುತ್ತಾರೆ. ಆಗ ಅವಳ ಮೊಳಕಾಲು, ಮುಂಗಾಲು, ತೊಡೆ, ಸೊಂಟ, ಎದೆ, ತೋಳು, ತಲೆ ಮುಂತಾಗಿ ಪ್ರತಿಯೊಂದನ್ನು ಮುಟ್ಟಿ ಅದಕ್ಕೆ ಸಮನಾಗಿ ಹಣವನ್ನು ಕೊಡಲು ಕೇಳುತ್ತಾರೆ. ಕೊನೆಗೆ ಅಷ್ಟು ಹಣವನ್ನೂ ಕೊಡುವುದಾಗಿ ಆ ಹುಡುಗಿ ಅವರಿಂದ ಬಿಡಿಸಿಕೊಳ್ಳುತ್ತಾಳೆ.

ಕಣ್ಣು ಮುಚ್ಚಾಲೆ ಆಟದಲ್ಲಿ ಹುಡುಗ ಅಥವಾ ಹುಡುಗಿಯನ್ನು ಹತ್ತಿರ ಕರೆದು ಕಣ್ಣು ಕೈಯಿಂದ ಅಥವಾ ಬಟ್ಟೆಯಿಂದ ಮುಚ್ಚುತ್ತಾರೆ. ಅನಂತರ ಉಳಿದವರೆಲ್ಲರೂ ಅವಿತುಕೊಳ್ಳುತ್ತಾರೆ. ಕಣ್ಣುಗಳನ್ನು ಮುಚ್ಚಿದವನೂ ಅಡಗಿಕೊಳ್ಳುತ್ತಾನೆ. ಅನಂತರ ಈ ಕೆಳಗಿನಂತೆ ಹೇಳುತ್ತಾರೆ.

            ಕಣ್ಣಾ ಮುಚ್ಚಿ ರೇ ರೇ ರೇ
ಕಾಟ್ಟು ಮೂಚ್ಚಿ ರೇ ರೇ ರೇ
ನನಗೊಂದು ಹಣ್ಣು ನಿನಗೊಂದು ಹಣ್ಣು
ತಗೊಂಡು ಓಡೋಡಿ ಬಾ

ಕಣ್ಣು ಕಟ್ಟಿಸಿಕೊಂಡವನು ಕಣ್ಣು ಬಿಚ್ಚಿ ಹಾಕಿ ಅವಿತುಕೊಂಡಿರುವವರನ್ನು ಹುಡುಕಾಡಬೇಕು. ಈ ಆಟದಲ್ಲಿಯೂ ಬೇರೆ ಬೇರೆ ರೀತಿಗಳಿವೆ.

ಐದು ಅಥವಾ ಏಳು ಒಂದೇ ಅಳತೆಯ ಕಲ್ಲುಗಳನ್ನು ಬಳಸಿಕೊಂಡು ಆಡುವ ಅಚ್ಚಣ್ಣೆಕಲ್ಲು ಆಟ ತಮಿಳುನಾಡಿನಲ್ಲಿಯೂ ರೂಢಿಯಿದೆ. ಆಟವಾಡುವಾಗ ಕೆಲವು ಹಾಡುಗಳನ್ನು ಹೇಳುತ್ತಾರೆ. ಯಾವುದೇ ಆಟವಾಡದೆ ಕೇವಲ ಹಾಡನ್ನು ಹೇಳುವ ತಮಾಷೆ ಹಾಡುಗಳು ಸಹ ಸಾಕಷ್ಟು ಕೇಳಬಹುದು. ಉದಾ :

            ತಿರುಪತಿಗೆ ಹೋಗಿ ಬಂದೆ ನಾರಾಯಣ
ತಲೆ ಗುಂಡು ಹೊಡೆಸಿದೆ ನಾರಾಯಣ
ಅಲ್ಲೊಂದು ಕಮ್ಮಾರ ಕುಲುಮೆ ನಾರಾಯಣ
ಅದರಲ್ಲೊಂದು ಆರೆ ಕಾಲು ಮುರಿದೆ ನಾರಾಯಣ
ಅದನಲ್ಲಿ ಕಮ್ಮಾರ ಕಂಡು ಹಿಡಿದ ನಾರಾಯಣ
ಕೋಲಿಂದ ಬಾರಿಸಿದ ನಾರಾಯಣ

ಈ ಮೇಲಿನ ಹಾಡಿನಲ್ಲಿ ಅರ್ಥವಿದೆಯಾದರೂ ಯಾವುದೇ ಆಟ ಇದಕ್ಕೆ ಸಂಬಂಧಿಸಿಲ್ಲ. ತಮಾಷೆಗಾಗಿ ಮಾತ್ರ ಇರುವಂತಹವು.

ಯುವಕರು ಆಡುವ ಚಡುಗುಡು ಆಟ ಹಾಗೂ ಅದರಲ್ಲಿ ಹಾಡುವ ಹಾಡುಗಳು ಸಹ ವೈಶಿಷ್ಟ್ಯವಾಗಿವೆ. ಎರಡು ತಂಡಗಳನ್ನು ವಿಂಗಡಿಸಿಕೊಂಡು ಆಡುವ ಈ ಆಟದಲ್ಲಿ ಒಬ್ಬ ಯುವಕ ಹಾಡುತ್ತಾ ಎದುರು ತಂಡದಲ್ಲಿರುವವರನ್ನು ಮುಟ್ಟಿ ಅವರ ಹಿಡಿತಕ್ಕೆ ಸಿಲುಕದಂತೆ ತನ್ನ ಸರಹದ್ದಿಗೆ ಹಿಂತಿರುಗಬೇಕು. ಹಾಡುವುದನ್ನು ನಿಲ್ಲಿಸದೆ ಎಂದರೆ ಉಸಿರನ್ನು ಹಿಡಿಡದು ಹಿಂತಿರುಗಬೇಕು. ಅದಕ್ಕೆ ತಕ್ಕಂತಹ ಸುಲಭ ಉಚ್ಚಾರಣೆಯ ಪದಗಳನ್ನು ಬಳಸಿ ಹಾಡುಗಳನ್ನು ರಚಿಸಿಕೊಂಡಿರುವುದನ್ನು ಗಮನಿಸಬಹುದು.

ಎಸ್.ವಿ. ಅನುವಾದ ವಿ.ಜಿ.

 

ವೀಣಾದಿ ವೀಣನ್ ಕದೈ ವೇಳಾಳರ್ ಕುಲದಲ್ಲಿ ಹುಟ್ಟಿ ಅನಾಥನಾಗಿ ಬೆಳೆದ ಕಥೆಯೇ ಈ ವೀಣಾದಿ ವೀಣನ ಕತೆ. ಕತೆಗಳಲ್ಲಿ ಹಲವು ಪ್ರಕಾರಗಳಿದ್ದು, ಅವುಗಳಲ್ಲಿ ನೀತಿಕತೆಗಳಿಗೆ ವಿಶೇಷ ಮಹತ್ವವಿದೆ. ಇವು ಅಬಾಲ ವೃದ್ಧರಾದಿಯಾಗಿ ಎಲ್ಲರನ್ನು ಮನಸೆಳೆಯುತ್ತವೆ. ಅಂತಹದ್ದೇ ಒಂದು ಕತೆ ತಮಿಳುನಾಡಿನ ಜನರ ಬಾಯಲ್ಲಿ ಹರಿದಾಡುತ್ತಿದೆ. ಆ ಕತೆಯೇ ವೀಣಾದಿ ವೀಣನ ಕತೆ.

ವೀಣಾದಿ ವೀಣನು ಬಾಲ್ಯದಲ್ಲಿಯೇ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥನಾದನು. ಚಿಕ್ಕವನಾದ್ದರಿಂದ ಸಂಬಂಧಿಕರ ಬಳಿ ಆಶ್ರಯ ಪಡೆಯಲು ಹೋಗಿ ಅವರಿಂದಲೂ ಬೀದಿಗೆ ತಳ್ಳಲ್ಪಟ್ಟನು. ದಿಕ್ಕು ಕಾಣದೆ ಅಲೆಯುತ್ತಾ ವಳ್ಳಿಯೂರಿಗೆ ಹೋಗಿ ತನ್ನ ಜೀವನೋಪಾಯಕ್ಕಾಗಿ ಜನರನ್ನು ಭಯಪಡಿಸಿ ಮೋಸದಿಂದ ಹಣವನ್ನು ಸಂಪಾದಿಸಿ ಶ್ರೀಮಂತನಾದನು. ಮುಂದೆ ತನ್ನ ಚಾತುರ್ಯ ಮತ್ತು ಸಮಯ ಪರಿಪಾಲನೆಯಿಂದಾಗಿ ಐತಿಹಾಸಿಕ ಪಾಂಡ್ಯ ಅರಸರಲ್ಲಿ ಮಂತ್ರಿ ಪದವಿಯನ್ನು ಅಲಂಕರಿಸಿದನೆಂದು ಈ ಕತೆ ಹೇಳುತ್ತದೆ.

ವೀಣಾದಿ ವೀಣನ ಕತೆ ಮೂಲತಃ ಒಂದು ಹಾಡಿನ ಮಟ್ಟು. ಐವರು ರಾಜರುಗಳ ಕತೆಯ ಹಾಡಿನ ಮಧ್ಯದಲ್ಲಿಯೋ ಅಥವಾ ಕೊನೆಯಲ್ಲಿಯೋ ಈ ಕತೆ ಹಾಡಿನ ರೂಪದಲ್ಲಿ ಮೂಡಿ ಬಂದಿದೆ. ಆದರೆ ಈ ಹಾಡನ್ನು ೧೯೬೭ ರಲ್ಲಿ ಕ್ಷೇತ್ರಕಾರ್ಯದ ಮೂಲಕ ಸಂಗ್ರಹಿಸಿದ ನಾ. ವಾನಮಾಮಲೈ ಅವರು ಈ ಕತೆ ಐವರು ರಾಜರ ಕತೆಗೆ ಸಂಬಂಧಿಸಿದ್ದಲ್ಲ, ಇದೊಂದು ಪ್ರತ್ಯೇಕ ಕತೆ. ಆದರೆ ಕಾಲಾಂತರದಲ್ಲಿ ಇದು ಈ ಐವರು ರಾಜರುಗಳ ಕತೆಯೊಂದಿಗೆ ಸೇರಿ ಹೋಗಿದೆ ಎಂದು ಅಭಿಪ್ರಾಯಿಸುತ್ತಾರೆ.

ಸಾಮಾನ್ಯವಾಗಿ ಕವಿಯಾಗಲಿ, ಕತೆಗಾರನಾಗಲಿ, ಮಹಾಕವಿಯಾಗಲಿ ಆರಂಭದಲ್ಲಿ ಇಷ್ಟದೇವತಾ ಸ್ತುತಿ ಮಾಡುವುದು ಸಂಪ್ರದಾಯ. ಅಂತೆಯೇ ಈ ವೀಣಾದಿ ವೀಣನ ಹಾಡು ಕೂಡ ‘ಗಣಪತಿ’ಯ ಪ್ರಾರ್ಥನೆಯ ಮೂಲಕವೇ ಆರಂಭವಾಗುತ್ತದೆ. ಇದರಲ್ಲಿ ಒಟ್ಟು ೯೦೬ ಸಾಲುಗಳಿದ್ದು ಹಾಡಿನ ರೂಪದಲ್ಲಿ ಮೂಡಿ ಬಂದಿದೆ. ಬಹುತೇಕ ಜನಪದ ಅಜ್ಞಾತ ಕರ್ತೃಗಳಂತೆ ಇದರ ರಚನಾಕಾರನೂ ಯಾರೆಂದು ತಿಳಿದು ಬಂದಿಲ್ಲ. ಆದರೆ ರಚನಾಕಾರನೇ ನಾಂಜಿನಾಟ್ಟು ಪುದುವೈಯೂರ್ ಸುಬ್ರಹ್ಮಣ್ಯನ್ ಮಹಾರಾಜನನ್ನು ತನ್ನ ಗುರು ಎಂದು ಗುರುತಿಸುತ್ತಾನೆ.

ಇಂದಿಗೂ ಜನರ ಬಾಯ್ಮಾತಿನಲ್ಲಿ ವೀಣಾದಿ ವೀಣನು ಪಾಂಡ್ಯಂ ಮಂತ್ರಿಯಾಗಿ ವಳ್ಳಿಯೂರಿನಲ್ಲಿದ್ದನೆಂದೂ ಆತನ ಸ್ವಂತ ಊರು ‘ವೇಂಬನೂರ್’. ಇವನು ವೇಳಾಳರ್ ಕುಲಕ್ಕೆ ಸೇರಿದವನೆಂದೂ ಪ್ರಚಲಿತದಲ್ಲಿದೆ. ಆದರೆ ವಳ್ಳಿಯೂರಿನವರು ಇವನು ‘ಪಣಕುಡಿಯನ್ ಹಾಗೂ ವೇಪಲಾಂಗುಳಂ’ನವನಾಗಿದ್ದು ವಳ್ಳಿಯೂರಿನ ಕೋಟೆಯಲ್ಲಿ ಬದುಕಿದ್ದ ದಲಿತನಾಗಿದ್ದನೆಂದು ಹೇಳುತ್ತಾರೆ.

ಈ ಮಾತಿಗೆ ಪುಷ್ಟಿ ನೀಡುವಂತೆ ವೀಣಾದಿ ವೀಣನು ಕಟ್ಟಿ, ರಕ್ಷಿಸಿ ನೋಡಿಕೊಂಡ ಎಂದೆನಿಸಿದ ಎರಡು ಶಿವದೇವಾಲಯಗಳು ವಳ್ಳಿಯೂರಿನಲ್ಲಿವೆ. ಅವುಗಳಲ್ಲಿ ಚೊಕ್ಕನಾಧರ್ ಮೀನಾಕ್ಷಿ ಸುಂದರೇಶ್ವರ ದೇಗುಲ ಹಾಳಾಗಿತ್ತು. ಅರಸನ ಅಧೀನದಲ್ಲಿದ್ದ ಈ ದೇಗುಲದ ಹೊರ ಆವರಣದಲ್ಲಿ ಇರುವ ಮರದ ಕೆಳಗೆ ಸುಮಾರು ೭೦ ಸೆಂ.ಮೀ. ಎತ್ತರವಿರುವ ವೀಣಾದಿ ವೀಣನ ಕಲ್ಲಿನ ಶಿಲ್ಪವಿದೆ. ಮುಖದಲ್ಲಿ ದಪ್ಪ ಮೀಸೆ,ಎದೆಯಲ್ಲಿ ಮುತ್ತಿನ ಚಕ್ರ, ಸೊಂಟದಲ್ಲಿ ಉದ್ದದ ಖಡ್ಗ, ಅರ್ಧತೋಳಿನ ಅಂಗಿ, ಕಾಲಿನಲ್ಲಿ ಕಾಲ್ಕಡಗ ಮುಂತಾದವನ್ನು ಧರಿಸಿದ್ದು, ಆತನದು ಆಕರ್ಷಕವಾದ ಗಂಭೀರ ರೂಪು. ಆದರೆ ಇಂದು ಅದು ರಕ್ಷಣೆ ಇಲ್ಲದೆ ಹಾಳಾಗುತ್ತಿದೆ. ಹಿಂದೆ ಅದಕ್ಕೆ ಜನರಿಂದ ಪೂಜೆ ನಡೆಯುತ್ತಿತ್ತು. ಇಂದು ಭಗ್ನ ಮೂರ್ತಿಗೆ ಪೂಜೆ ಇಲ್ಲವಾಗಿದೆ.

ಚೊಕ್ಕನಾಧರ್ ದೇಗುಲದಲ್ಲಿ ಗರ್ಭಗುಡಿಯವರೆಗೂ ‘ಅರ್ಧಮಂಟಪ’ ಮುಖಮಂಟಪ ಇದ್ದು ಗರ್ಭಗುಡಿಯ ರಚನೆಯ ಶೈಲಿ ಕ್ರಿ.ಶ. ೧೨ನೆಯ ಶತಮಾನಕ್ಕೆ ಸೇರಿದ್ದು ಎಂದು ಊಹೆ ಮಾಡಬಹುದಾಗಿದೆ. ದೇಗುಲದ ಮುಖಮಂಟಪದಲ್ಲಿ ವೀಣಾದಿ ವೀಣನು ಕೈಬೀಸಿ ಹಣ ವಸೂಲಿ ಮಾಡಿ ಕಟ್ಟಿಸಿದ್ದನ್ನು ಗುರುತು ಮಾಡಿದೆ. ‘ಕೈಬೀಸಿ ಹಣ’ ಎಂದರೆ ಕೈಬೀಸಿಕೊಂಡು ಹೋಗುವವರ ಹತ್ತಿರ ಹಣ ಕಸಿದುಕೊಂಡು ಬದುಕುವವನು ಎಂದು ಕೆಟ್ಟ ಹೆಸರು ಇಟ್ಟು ಆ ರೀತಿ ಗಳಿಸಿದ ಹಣವೇ ಕೈ ಬೀಸಿದ ಹಣ ಎನ್ನಲಾಯಿತು.

ವೀಣಾದಿ ವೀಣನೇ ಸ್ವತಃ ಪೂಜೆ ಮಾಡುತ್ತಿದ್ದನೆಂದು ಹೇಳಲಾಗುವ ದೈವಪಾಂಡ್ಯಸ್ವಾಮಿ (ಶಿವ) ದೇವಾಲಯ ಚೊಕ್ಕನಾಧರ್ ದೇವಾಲಯದ ಬಳಿಯೇ ಇದೆ. ಇದು ಸಹ ಅತ್ಯಂತ ಪ್ರಾಚೀನ ದೇವಾಲಯ. ಈಗ ಇದರ ನಿರ್ವಹಣೆಯನ್ನು ಶ್ರೀವತ್ಸಾಂಕಿತ ಗೋತ್ರದ ಬ್ರಾಹ್ಮಣ ಕುಟುಂಬ ಮಾಡುತ್ತಿದೆ. ಇಲ್ಲಿ ಮೂಲವಾಗಿ ನೆಲೆಸಿರುವ ಮಹಿಷಾಸುರ ಮರ್ದಿನಿಗೆ (ವನದುರ್ಗಾ) ವೀಣಾದಿ ವೀಣನಿಂದ ದಿನವೂ ಪೂಜೆ ನಡೆಯುತ್ತಿತ್ತು ಎಂಬ ವಿಚಾರ ಮೌಖಿಕವಾಗಿ ಇಂದೂ ಲಭ್ಯವಿರುವ ಮಾಹಿತಿ.

ವೀಣಾದಿ ವೀಣನ ಕತೆಯ ಸಂಕ್ಷಿಪ್ತ ರೂಪ : ವೀಣಾದಿ ವೀಣನನ್ನು ಪಾಂಡ್ಯರು ಸೆರೆಹಿಡಿದು ವಿಚಾರಿಸಿದ್ದು, ಅವನು ತನ್ನ ಸಂಪತ್ತನ್ನು ರಾಜನಿಗೆ ಒಪ್ಪಿಸಿದ್ದನು. ಅದರಿಂದ ರಾಜ ಅವನನ್ನು ಮಂತ್ರಿಯಾಗಿಸಿದಾಗಿಯೂ ಇರುವ ವಿಷಯವನ್ನು ಹೇಳುವ ಜೊತೆಗೆ ಹಾಡು ಮುಗಿಯುತ್ತದೆ. ಅವನು ಮಂತ್ರಿಯಾದ ಅನಂತರ ಜನರ ಬಳಿ ಪಡೆದ ಗೌರವ ಅವನು ಮಾಡಿದ ಕಾರ್ಯ ಇವುಗಳನ್ನು ಸಹ ಮೌಖಿಕ ರೂಪದಲ್ಲಿ ಪಡೆಯಲು ಸಾಧ್ಯವಿದೆ.

ವೆಂಬನೂರಿನಲ್ಲಿ ‘ವೇಳಾಳರ್’ ಜಾತಿಗೆ ಸೇರಿದ ‘ಆತ್ತಿಕುಟ್ಟಿ’ ಎಂಬ ಶ್ರೀಮಂತ ಇದ್ದನು. ಆತನ ಹೆಂಡತಿ ಪೂಮಾಲೈ. ಇವರಿಗೆ ಬಹುಕಾಲದಿಂದ ಮಕ್ಕಳೇ ಇರಲಿಲ್ಲ. ಅದಕ್ಕಾಗಿ ಈ ಇಬ್ಬರೂ ತಪಸ್ಸು ಮಾಡಿ, ಅದರ ಫಲವಾಗಿ ಒಂದು ಗಂಡುಮಗುವನ್ನು ಪಡೆದರು. ಆದರೆ ವಿಪರ್ಯಾಸ ಆ ಮಗು ಚಿಕ್ಕಂದಿನಲ್ಲಿಯೇ ತನ್ನ ತಂದೆ – ತಾಯಿಯನ್ನು ಕಳೆದುಕೊಂಡು ಅನಾಥವಾಯಿತು. ಚಿಕ್ಕವನಾದುದರಿಂದ ಸಂಬಂಧಿಕರ ಮನೆಯ ಆಶ್ರಯ ಪಡೆದ. ಅವನು ಬೆಳೆಯುತ್ತಾ ಹೋದಂತೆ ಸಂಬಂಧಿಕರಲ್ಲಿ ತಮ್ಮ ತಂದೆ – ತಾಯಿಗಳ ಆಸ್ತಿಯನ್ನು ಕೇಳಿದನು. ಅದಕ್ಕೆ ಅವರು ಅವನನ್ನು ತಮ್ಮ ಊರಿಂದಲೇ ಹೊರಕ್ಕೆ ಹಾಕಿದರು. ಆಗ ಈತ ವೆಂಬನೂರಿನಿಂದ ವಳ್ಳಿಯೂರಿಗೆ ವಲಸೆ ಬಂದನು. ಅಲ್ಲಿ ತನ್ನ ಬದುಕಿಗಾಗಿ ಭಿಕ್ಷುಕನಂತೆ ಅಲೆದಾಡಿದನು.

ಆದರೆ ಭಿಕ್ಷೆ ಬೇಡುವುದು ಅವನಿಗೆ ಇಷ್ಟವಿರಲಿಲ್ಲ. ಆದರೂ ಭಿಕ್ಷೆ ಬೇಡಲು ಹೋದ. ಒಬ್ಬ ತಾಯಿ ‘ಏ ಹೋಗು ದಡಿಯನ ಹಾಗೆ ಇದ್ದೀಯಾ ದುಡಿದು ತಿನ್ನು’ ಎಂದು ಬೈದು ಕಳಿಸಿದಳು. ಮುಂದೆ ವೀಣಾದಿ ವೀಣನು ಒಬ್ಬ ಅಗಸನ ಬಳಿ ‘ಅಯ್ಯ ನಾನು ಹಸಿವಿನಿಂದ ಸಾಯುತ್ತಿದ್ದೇನೆ. ನನಗೆ ಒಂದು ಕೆಲಸ ಕೊಡು, ನಿನ್ನ ಜಾತಿಗೆ ನಾನು ಬದಲಾಗುತ್ತೇನೆ’ ಎಂದನು. ಆ ಅಗಸನೋ ‘ನೀನು ಉತ್ತಮವಾಗಿ ಕಾಣುತ್ತೀಯ. ನೀನು ಖಂಡಿತ ಉತ್ತಮ ಸ್ಥಾನಕ್ಕೆ ಬರುತ್ತೀಯ. ನಿನ್ನನ್ನು ನನ್ನ ಜಾತಿಗೆ ಸೇರಿಸಿಕೊಂಡರೆ ತಪ್ಪಾಗುತ್ತದೆ’ ಎಂದನು. ವೀಣನಿಗೆ ಹಸಿವೋ ಹಸಿವು. ಅವನು ಕಾಡಿಗೆ ಹೋಗಿ ಹಣ್ಣು ಹಂಪಲು ಕಿತ್ತು ತಂದು ಮಾರಿ ಬದುಕು ನಡೆಸುತ್ತೇನೆ ಎಂದು ಯೋಚಿಸಿದನು. ಅಂತೆಯೇ ಕಾಡಿಗೂ ಹೋದನು. ಹಸಿರಾಗಿರುವ ಕೀರೆಸೊಪ್ಪು ಮತ್ತು ಹಣ್ಣುಗಳನ್ನು ಕಿತ್ತು ತಿಂದು, ನೀರು ಕುಡಿದ. ಸ್ವಲ್ಪ ಉತ್ಸಾಹ ಉಕ್ಕಿ ಬಂತು. ಮುಂದುವರಿದು ತೊಂಡೆಕಾಯಿ, ನುಗ್ಗೇಕಾಯಿ ಮುಂತಾದ ಅಡಿಗೆಗೆ ಬೇಕಾದ ತರಕಾರಿಗಳನ್ನು ಕಿತ್ತು ಮೂಟೆ ಕಟ್ಟಿಕೊಂಡು ವಳ್ಳಿಯೂರು ಕೋಟೆ ಕಡೆಗೆ ಬಂದನು. ಅಲ್ಲಿ ಒಬ್ಬ ಕಾವಲುಗಾರ ಎರಡು ನುಗ್ಗೇಕಾಯಿಗಳನ್ನು ವೀಣನ ಅನುಮತಿಯಿಲ್ಲದೆಯೇ ತೆಗೆದುಕೊಂಡನು. ಮುಂದೆ ಈತ ಮತ್ತೊಂದು ಬೀದಿಗೆ ಬಂದಾಗ ಒಬ್ಬ ಹೆಂಗಸು ಬಂದು ಎಲ್ಲ ತರಕಾರಿಗಳನ್ನು ತೆಗೆದುಕೊಂಡಳು. ವೀಣನು ನೀನು ದುಡ್ಡು ಕೊಡು ಎಂದನು. ಆಕೆ ನಾನು ಕಾವಲುಗಾರನ ಮನೆಯ ಕೆಲಸದವಳು. ನನ್ನ ಬಳಿಯೇ ಹಣ ಕೇಳುತ್ತೀಯಾ ? ಎಂದು ಗದರಿಸಿದಳು. ಇಂಥ ಮಾತುಗಳನ್ನು ಕೇಳಿ ರೋಸಿ ಹೋಗಿದ್ದಂತಹ ವೀಣನು ನೀನು ಯಾರಾಗಿದರೇನು ? ನನಗೆ ಹಣ ನೀಡು ಎಂದನು. ಅದಕ್ಕೆ ಅವಳು ಈತ ನನ್ನನ್ನು ಹಿಡಿದು ಹಿಂಡುತ್ತಿದ್ದಾನೆ ಎಂದು ಕೂಗಿಕೊಂಡಳು.

ಹೆಣ್ಣಿನ ದನಿ ಕೇಳಿ ಓಡಿಬಂದ ಅಕ್ಕಪಕ್ಕದ ಜನ ವೀಣನನ್ನೇ ಅನ್ಯಾಯವಾಗಿ ಹೊಡೆದು ಚಚ್ಚಿದರು. ಇಷ್ಟಾದರೂ ಅವನಿಗೆ ಭಿಕ್ಷೆ ಬೇಡಲು ಬಯಕೆ ಬರಲಿಲ್ಲ. ಪುನಃ ತಾನು ಕಾಡಿಗೆ ಹೋಗಿ ಮರ ಕಡಿದು ಮಾರಿ ಬದುಕುತ್ತೇನೆ ಎಂದುಕೊಂಡನು.

ಕಾಡಿಗೆ ಹೋಗಿ ಹಣ್ಣುಹಂಪಲು ತಿಂದು, ಸೌದೆ ಕಡಿದು ಹೊರೆ ಹೊತ್ತುಕೊಂಡು ವಳ್ಳಿಯೂರು ಕೋಟೆ ಕಡೆಗೆ ಬಂದನು. ಅಲ್ಲಿಯ ಕಾವಲುಗಾರ “ವೀಣನೇ ಕಾಡು ನಿನಗೆ ಸ್ವಂತದ್ದೆ. ಹಾಗಾಗಿ ಮಾರಿ ಬರುವ ಅರ್ಧವನ್ನು ನನಗೆ ನೀಡಬೇಕು” ಎಂದನು. ವೀಣನು ಇನ್ನೂ ಸೌದೆಯನ್ನು ಮಾರಲೇ ಇಲ್ಲ. ಇನ್ನು ಹಣವೆಲ್ಲಿ ? ಎನ್ನಲು, ಹಾಗಾದರೆ ಸುಂಕದ ತೀರುವಿಕೆಗಾಗಿ ಸ್ವಲ್ಪ ಸೌದೆ ಹಾಕು ಎಂದನು. ಕಾವಲುಗಾರನಿಗೆ ಸೌದೆ ನೀಡಿ ಮಾರಲು ಬೇರೊಂದು ಬೀದಿಗೆ ಹೋದನು.

ವೀಣನನ್ನು ‘ಓ ಸೌದೆಗಾರ ಬಾ’ ಎಂದು ಒಬ್ಬ ಹೆಂಗಸು ಕರೆದಳು. ‘ನೋಡು ತಂದಿರುವ ಎಲ್ಲಾ ಸೌದೆಯನ್ನು ಮನೆಯ ಹಿಂದುಗಡೆ ಹಾಕು’ ಎಂದಳು. ಸೌದೆ ಹಾಕಿ ಬಂದ ವೀಣ ಹಣ ಕೇಳಲು, ಆಕೆ ನನ್ನನ್ನೇ ಹಣ ಕೇಳುತ್ತೀಯಾ ? ಎಂದಳು. ನನಗೆ ಹಸಿವು ಎಂದು ವೀಣ ಹೇಳಿದನು. ಆಗ ಅವಳು ಈತ ತನ್ನ ಕೈಹಿಡಿದು ಎಳೆದನು ಎಂದು ಕಿರುಚಿಕೊಂಡಳು. ಸುತ್ತು ಮುತ್ತಿನ ಜನರು ಓಡಿ ಬಂದು ಇವನನ್ನು ಕಟ್ಟಿ ಹಾಕಿ ಹೊಡೆದು ಬಡಿದರು.

ಹೀಗಿರುವಾಗ ಮನೆಯಿಂದ ಬಂದ ಒಬ್ಬ ಮುದುಕಿ ಇವನನ್ನು ‘ಯಾರಪ್ಪ ನೀನು’ ಎಂದಾಗ ವೀಣನು ತನ್ನ ವೃತ್ತಾಂತವೆಲ್ಲವನ್ನು ಹೇಳಿದನು. ಆಗ ಅವಳು ವೀಣನಿಗೆ ಹೊಟ್ಟೆ ತುಂಬ ಊಟ ಹಾಕಿದಳು. ವೀಣಾದಿ ವೀಣನು ಮರುದಿವಸ ಕಾಡಿಗೆ ಹೋಗಿ ಸೌದೆ ತಂದು ಮಾರಿ ಬಂದ ಹಣವನ್ನು ಮುದುಕಿಗೆ ನೀಡುತ್ತಿದ್ದನು. ಅವಳು ಸಹ ಇವನಿಗೆ ಒಳ್ಳೆಯ ಊಟ ಬಟ್ಟೆ ಚಿನ್ನಾಭರಣ ನೀಡುತ್ತಿದ್ದಳು. ಹೀಗಿರಲು ಇವನು ಶುದ್ಧವಾಗಿ ಕ್ಷೌರ ಮಾಡಿಕೊಂಡು ಉದ್ದನೆಯ ಕೋಲು ಹಿಡಿದು ವಳ್ಳಿಯೂರಿಗೆ ಬಂದು ‘ನಾನು ಪಾಂಡ್ಯಕುಲಶೇಖರನ ದಾಯಾದಿ; ಸುಂಕ ಪಡೆಯುವ ಅಧಿಕಾರ ನನಗುಂಟು’ ಎಂದು ಹೇಳಿಕೊಂಡನು.

ಇದರಿಂದ ವೀಣನಿಗೆ ಒಳ್ಳೆಯದೆ ಆಯಿತು. ಅವನು ಮದುವೆ, ಸಾವು ಮುಂತಾದ ಎಲ್ಲ ಕಾರ್ಯಗಳಲ್ಲೂ ಸುಂಕ ಪಡೆದು ಬಹುಬೇಗ ಶ್ರೀಮಂತನಾದನು ಮತ್ತು ತನ್ನದೇ ಆದ ಒಂದು ಚಿಕ್ಕ ಸೈನ್ಯವನ್ನು ಹೊಂದಿದನು.

ಹೀಗೆ ಇದು ನಡೆಯುತ್ತಿದ್ದಾಗ ಮದುರೈನಲ್ಲಿದ್ದ ಪಾಂಡ್ಯರ ಕುಲಶೇಖರನಿಗೆ ಈ ಅನ್ಯಾಯವಾದ ಶುಲ್ಕ ವಸೂಲಿ ಮಾಡುತ್ತಿರುವುದರ ಬಗ್ಗೆ ಮಾಹಿತಿ ತಿಳಿಯಿತು. ಆಗ ರಾಜ ಆತನನ್ನು ಬಂಧಿಸುವಂತೆ ಹೇಳಿದ. ಸೈನಿಕರಿಂದ ಬಂಧಿಸಿದರು. ‘ನಿನಗೆ ಸುಂಕ ವಸೂಲಾತಿ ಮಾಡಲು ಅನುಮತಿ ಕೊಟ್ಟವರಾರು ?’ ಎಂದು ರಾಜ ಕೇಳಿದನು. ಆಗ ವೀಣನು ರಾಜನ ಹತ್ತಿರ ‘ಪಾಂಡ್ಯ ರಾಜನೇ ಭಿಕ್ಷೆ ಬೇಡಿ ಅವಮಾನ ಅನುಭವಿಸಿದ್ದೇನೆ. ದುಡಿದು ಉಣ್ಣಲು ಪ್ರಯತ್ನಿಸಿದೆ. ನಿನ್ನ ಅಧಿಕಾರಿಗಳು ಆ ಕೆಲಸ ಮಾಡಲು ಬಿಡಲಿಲ್ಲ. ಹಾಗಾಗಿ ಜನರಿಗೆ ಮೋಸ ಮಾಡಿ ಬದುಕಲು ನಿರ್ಧರಿಸಿ ಕೆಟ್ಟ ಹಾದಿ ಹಿಡಿದೆ. ಬಂದ ಲಾಭದಲ್ಲಿ ನಿನ್ನ ಅಧಿಕಾರಿಗಳಿಗೂ ಭಾಗ ಕೊಟ್ಟಿದ್ದೇನೆ ಎಂದು ಹೇಳಿದನು. ಹೀಗೆ ನಾನು ಗಳಿಸಿದ ಹಣದಿಂದ ಈಗ ಶ್ರೀಮಂತನಾಗಿದ್ದೇನೆ. ಇದರಲ್ಲಿ ನನಗೆ ನೆರವಾದ ಅಜ್ಜಿಗೆ ಸಹಾಯ ಮಾಡಿದ್ದೇನೆ. ನಾನು ಗಳಿಸಿರುವ ಎಲ್ಲ ಹಣವನ್ನು ನಿನಗೆ ಒಪ್ಪಿಸುತ್ತೇನೆ ಸ್ವೀಕರಿಸು ಎಂದನು.

ವೀಣನ ಮಾತುಗಳನ್ನು ರಾಜ ಬಹುತಾಳ್ಮೆಯಿಂದ ಕೇಳಿ ವೀಣನೇ ‘ನೀನೂ ಸಹ ನನ್ನ ಮಂತ್ರಿಗಳಲ್ಲಿ ಒಬ್ಬನಾಗಿ ನನ್ನೊಡನೆ ಇದ್ದುಬಿಡು’ ಎಂದನು. ಅದಕ್ಕೆ ಸರಿಯಾಗಿ ವೀಣನು ರಾಜನ ಬಳಿ ಹಲವು ವರ್ಷಗಳ ಕಾಲ ಕೆಲಸ ಮಾಡಿ ವಯಸ್ಸಾಗಿ ಸತ್ತ ಅನಂತರ ಬ್ರಹ್ಮನ ವರದಿಂದ ದೇವರಾದನು ಎಂಬ ಕಥೆ ಜನರ ಬಾಯಲ್ಲಿ ಇಂದಿಗೂ ಲಭ್ಯವಿದೆ.

ಎ.ಕೆ.ಪಿ. ಅನುವಾದ ಆರ್.ಎಸ್.