ವೃತ್ತಿ ಗಾಯಕರು ಕಥನಾತ್ಮಕ ಹಾಡುಗಳ ಹಾಡುಗಾರಿಕೆಯನ್ನೇ ವೃತ್ತಿಯಾಗಿ ಉಳ್ಳ ಕಥೋಪಜೀವಿಗಳು. ಕೆಲವೊಮ್ಮೆ ಒಬ್ಬನೇ ಗಾಯಕ ಹಾಡಬಹುದು. ಹಿಮ್ಮೇಳದವರನ್ನು ಜೊತೆ ಮಾಡಿಕೊಂಡು ಒಂದು ಗಾಯನ ಮೇಳವನ್ನೇ ನಡೆಸಬಹುದು. ತಲೆಮಾರಿನಿಂದ ತಲೆಮಾರಿಗೆ ಗುರುಮುಖೇನ ಹಾಡುಗಾರಿಕೆಯನ್ನು ಉಳಿಸಿಕೊಂಡಾಗ ಬರುವಾಗ ತಮ್ಮ ಪರಂಪರೆಗೆ ತಕ್ಕಂತೆ ಲಾಂಛನಗಳನದನು ಧರಿಸುವುದು, ವೇಷಭೂಷಣ ಧರಿಸುವುದು, ವಾದ್ಯ ವಿಶೇಷಗಳನ್ನು ಬಳಸುವುದು, ಭಸಿತ, ಗಂಧ ಅಥವಾ ನಾಮಗಳನ್ನು ಧರಿಸುವುದು ಒಂದು ಸಂಪ್ರದಾಯವಾಗಿಯೇ ಉಳಿದು ಬರುತ್ತದೆ.

ವೃತ್ತಿ ಗಾಯಕರಲ್ಲಿ ಧಾರ್ಮಿಕ, ಲೌಕಿಕ ಮತ್ತು ಅರೆ ವೃತ್ತಿಗಾಯಕರು ಎಂದು ಮೂರು ವಿಧ. ಈ ಒಂದೊಂದೂ ಸಂಪ್ರದಾಯದ ವೃತ್ತಿ ಗಾಯಕರು ಹತ್ತಕ್ಕೂ ಹೆಚ್ಚು ದೀರ್ಘ ಕಥನಕಾವ್ಯಗಳನ್ನು ಹಾಡಬಲ್ಲವರಾಗಿದ್ದು, ತಮ್ಮದೇ ಆದ ಒಂದೊಂದು ಕಾವ್ಯ ಸಂಪ್ರದಾಯವನ್ನು ಪೋಷಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಬಹುತೇಕ ಎಲ್ಲ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಈ ಗಾಯಕರು ವ್ಯಾಪಿಸಿದ್ದಾರೆ. ಇವರು ಹಾಡುವ ಎಲ್ಲ ರಚನೆಗಳೂ ಶುದ್ಧವಾಗಿ ಮೌಖಿಕ ಕಥನಗಳೇ ಆಗಿರುತ್ತವೆ.

ಧಾರ್ಮಿಕ ವೃತ್ತಿ ಗಾಯಕರು ತಾವು ಆರಾಧಿಸುವ ದೈವದ ಮಹಿಮೆಯನ್ನು ಪ್ರಸಾರ ಮಾಡಿ ಜನತೆಯಲ್ಲಿ ಶ್ರದ್ಧೆ, ಭಕ್ತಿ, ನಿಷ್ಠೆಗಳನ್ನೂ ತ್ಯಾಗಶೀಲತೆಯನ್ನೂ ಕಾಯ್ದುಕೊಂಡು ಬರುತ್ತಾರೆ. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಮಠವೊಂದರಲ್ಲಿ ದೀಕ್ಷೆ ಪಡೆದು ತಮ್ಮ ಆರಾಧ್ಯ ದೈವದ ಒಕ್ಕಲಿರುವ ಕಡೆಗಳಲ್ಲಿ ಅವರು ನಡೆಸುವ ಧಾರ್ಮಿಕ ಆಚರಣೆಗಳ ನೇತೃತ್ವ ವಹಿಸಿ ದೇವರ ಕಾರ್ಯಗಳನ್ನು ನಡೆಸಿಕೊಡುತ್ತಾರೆ. ದೇವರ ಪ್ರತಿನಿಧಿಯಂತೆ ಈ ಧಾರ್ಮಿಕ ಪ್ರತಿನಿಧಿಗಳನ್ನು ಆಯಾ ಒಕ್ಕಲುಗಳು ಗೌರವಿಸುತ್ತಾರೆ. ಈ ದೇವರ ಗುಡ್ಡರು ತಮ್ಮ ಅದಿ ದೈವದ ಲಾಂಛನಗಳನ್ನು ಧರಿಸಿ ಭಕ್ತರ ಮನೆಗಳಲ್ಲಿ ಭಿಕ್ಷೆ ಬೇಡಿ ಜೀವಿಸುತ್ತಾರೆ. ಇಂಥ ಕೆಲವು ದೇವರ ಗುಡ್ಡರನ್ನು ಹೊರತುಪಡಿಸಿದರೆ ದೇವರ ಲಾಂಛನಗಳನ್ನು ಧರಿಸಿ ತಮ್ಮ ವಾದ್ಯ ವಿಶೇಷವನ್ನು ಹಿಡಿದು ಕಥೆಯಲ್ಲಿ ಹಾಡಿನಲ್ಲಿ ಪ್ರಸ್ತುತಪಡಿಸುತ್ತ ಗಾಯಕ ಪರಂಪರೆಯನ್ನು ಸ್ಥಾಪಿಸಿರುವ ಅನೇಕ ಗಾಯಕ ವರ್ಗಗಳನ್ನು ಕಾಣುತ್ತೇವೆ. ಕಂಸಾಳೆಯವರು, ನೀಲಗಾರರು, ಚೌಡಿಕೆಯವರು, ಗೊರವರು, ಗಣೆಯವರು, ಗೊಂದಲಿಗರು ಇವರೇ ಮುಂತಾದವರು ಆ ಬಗೆಯ ಗಾಯಕ ವರ್ಗಗಳು.

ಯಾವ ದೈವ ಧರ್ಮದ ಚೌಕಟ್ಟಿಗೂ ಒಳಪಡದೆ ಸ್ವತಂತ್ರವಾಗಿ ತಾವು ಬಯಸಿದ ಕಥನಗಳನ್ನು ಶ್ರೋತೃಗಳ ಮುಂದೆ ಪ್ರಸ್ತುತ ಪಡಿಸುವ ಗಾಯಕರನ್ನು ಸ್ಥೂಲವಾಗಿ ಲೌಕಿಕ ವೃತ್ತಿ ಗಾಯಕರು ಎಂದು ಕರೆಯಲಾಗಿದೆ. ಮೊದಲನೆಯ ವರ್ಗದವರಿಗೂ ಇವರಿಗೂ ಇರುವ ಪ್ರಧಾನ ವ್ಯತ್ಯಾಸ ಕಥೆಗಾರಿಕೆಯಲ್ಲದಿದ್ದರೂ ದೈವ ಸಂಬಂಧವಾದುದು. ಧಾರ್ಮಿಕ ವೃತ್ತಿ ಗಾಯಕರು ತಮ್ಮ ದೈವದ ಪೂಜೆ ಉತ್ಸವ ಜಾತ್ರೆಗಳಲ್ಲಿ ಭಾಗವಹಿಸುವರಲ್ಲದೆ ಆಚರಣೆಗಳಲ್ಲಿ ಪ್ರಮುಖ ಸ್ಥಾನವನ್ನು ಹೊಂದಿರುತ್ತಾರೆ.ತಾವು ನಡೆದುಕೊಳ್ಳುವ ಕ್ಷೇತ್ರಕ್ಕೆ ನಿಗದಿತ ಕಾಣಿಕೆಯನ್ನು ಒಪ್ಪಿಸುತ್ತ, ನಿಯತ ಕಾಲದಲ್ಲಿ ತಮ್ಮ ದೈವದ ಕಥೆಗಳನ್ನು ಹಾಡುತ್ತ ಸಾಗುತ್ತಾರೆ. ಕೆಲವು ಗೊತ್ತಾದ ದಿನಗಳಲ್ಲಿ ದೇವರ ಹೆಸರಿನಲ್ಲಿ ಭಿಕ್ಷಾಟನೆ ನಡೆಸುತ್ತಾರೆ. ತಮ್ಮ ವಾದ್ಯಗಳನ್ನು ದೈವದ ಪ್ರತೀಕ ಎಂದು ಭಾವಿಸಿ, ಪೂಜಿಸುವ ಇವರು ತಮ್ಮ ದೈವದ ಒಕ್ಕಲುಗಳು ನೆಲೆಸಿರುವ ಪ್ರದೇಶದಲ್ಲಿ ಮಾತ್ರ ಪ್ರವಾಸ ಕೈಗೊಳ್ಳುತ್ತಾರೆ. ದೇವರ ಬಿರುದು ಬಾವಲಿಗಳನ್ನು ತಪ್ಪದೆ ಧರಿಸುತ್ತಾರೆ.

ಲೌಕಿಕ ಸಂಪ್ರದಾಯದ ವೃತ್ತಿಗಾಯಕರಿಗೆ ಈ ಬಗೆಯ ಯಾವುದೇ ನಿರ್ಬಂಧಗಳಿಲ್ಲದಿದ್ದರೂ ಪರಂಪರೆಯಿಂದ ಬಂದ ವಾದ್ಯಗಳನ್ನೇ ಹಿಡಿದು ಕಥಾ ಮೇಳಗಳನ್ನು ನಡೆಸುತ್ತಾರೆ; ಉಡುಗೊರೆಗಳನ್ನು ಸ್ವೀಕರಿಸುತ್ತಾರೆ. ಹಬ್ಬ ಹರಿದಿನ ಪೂಜೆ ಉತ್ಸವಗಳಲ್ಲಿ ಕಥಾಮೇಳ ನಡೆಸುವ ಅವಕಾಶ ಇಂದಿಗೂ ಇವರಿಗುಂಟು. ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ಇವರ ಅನೇಕ ಪರಂಪರೆಗಳನ್ನು ಗುರುತಿಸಬಹುದು. ದೊಂಬಿದಾಸರು, ಕರಪಾಲದವರು, ತಂಬೂರಿಯವರು, ಕಿನ್ನರಿ ಜೋಗಿಗಳು, ಹೆಳವರು, ಬುರ‍್ರಕಥಾದವರು ಇವರೇ ಮೊದಲಾದವರು ಈ ವರ್ಗಕ್ಕೆ ಸೇರುತ್ತಾರೆ.

ಈ ಲೌಕಿಕ ಸಂಪ್ರದಾಯದ ಹಾಡುಗಾರಿಕೆಯಲ್ಲಿ ಶಿಷ್ಟಮತಗಳ ಗಾಯಕರೂ ಕಂಡು ಬಂದಿದ್ದಾರೆ. ಕರಪಾಲ ಮೇಳದ ಮುಖ್ಯ ನಿರೂಪಕ ಒಬ್ಬ ಶರಣ. ‘ಕರಪಾಲ ಅಯ್ಯ’ ಎಂದೇ ಅವನನ್ನು ಕರೆಯುತ್ತಾರೆ. ಉಳಿದವರು ಯಾವ ವರ್ಗದವರಾದರೂ ಆಗಬಹುದು. ಅಂತೆಯೇ ತಂಬೂರಿ ಮೇಳಗಳಲ್ಲಿ ವೀರಶೈವರು ಪಾಲ್ಗೊಳ್ಳುವುದನ್ನು ನೋಡುತ್ತೇವೆ. ಆದರೆ ಕಿನ್ನರಿ ಜೋಗಿಗಳು, ದೊಂಬಿದಾಸರು, ತೆಲುಗು ಜಂಗಮರು, ಹೆಳವರು ಇಂಥ ಕೆಲವು ಹಾಡುಗಾರಿಕೆ ಸಂಪ್ರದಾಯಗಳಲ್ಲಿ ಒಂದೊಂದು ಸಮೂಹವೇ ಹಾಡುಗಾರಿಕೆಯ ವೃತ್ತಿಯನ್ನು ಅವಲಂಬಿಸಿರುವುದನ್ನು ಕಾಣುತ್ತೇವೆ. ತಮ್ಮ ಜೀವನೋಪಾಯಕ್ಕಾಗಿ ಕಥನ ಕಾವ್ಯಗಳನ್ನು ಕಲಿತು ಕಥೆ ಮಾಡುತ್ತಾರೆಯೇ ಹೊರತು ಯಾವ ದೈವದ ಸಂಬಂಧವೂ ಇವರಿಗೆ ಇರುವುದಿಲ್ಲ.

ಹೀಗೆ ಕರ್ನಾಟಕದಲ್ಲಿ ಹಲವು ಬಗೆಯ ವೃತ್ತಿ ಗಾಯಕ ಪರಂಪರೆಯನ್ನೇ ನೋಡುತ್ತೇವೆ. ಈ ಗಾಯಕರು ಆಹ್ವಾನ ದೊರೆತ ಕಡೆ, ಮನೆ ಮನೆಯ ಜಗಲಿಗಳಲ್ಲಿ ಕಥೆ ಮಾಡುತ್ತ, ಹಾಡು ಹಾಡುತ್ತ ಶ್ರೋತೃಗಳನ್ನು ತಣಿಸುವುದನ್ನು ನೋಡುತ್ತೇವೆ. ಆ ಪೈಕಿ ಮಲೆ ಮಹದೇಶ್ವರ, ಮಂಟೇಸ್ವಾಮಿ, ಎಲ್ಲಮ್ಮ, ಜುಂಜಮ್ಮ ಮತ್ತು ಮೈಲಾರಲಿಂಗ ವೃತ್ತಿ ಗಾಯಕ ಸಂಪ್ರದಾಯಗಳು ಮುಖ್ಯವಾದುವು.

ಮಲೆಮಹದೇಶ್ವರನನ್ನು ಕುರಿತು ಕಂಸಾಳೆ ವಾದ್ಯದ ಹಿನ್ನೆಲೆಯಲ್ಲಿ ಕಥೆ ಮಾಡುವ ಕಂಸಾಳೆ ದೇವರ ಗುಡ್ಡರು ಚಾಮರಾಜನಗರ, ಮೈಸೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ಕಂಡುಬಂದಿದ್ದಾರೆ. ಕಂಸಾಳೆಯ ‘ಕಣಿಕಣಿ’ ನಾದದಲ್ಲಿ ಬೇರೆ ಬೇರೆ ಗತ್ತುಗಳಲ್ಲಿ ಕಂಸಾಳೆ ಪದಗಳನ್ನು ಹಾಡಲಾಗುವುದು. ಆರೇಳು ರಾತ್ರಿಗಳ ಅವಧಿಯಲ್ಲಿ ಹಾಡಲಾಗುವ ಮಾದೇಶ್ವರ ಕಥೆಯನ್ನು ಕಂಸಾಳೆ ಗಾಯಕರು ಹಲವು ಕವಲುಗಳಾಗಿದ್ದು, ಅಂಥ ಒಂದೊಂದು ಕವಲನ್ನೂ ಒಂದೊಂದು ‘ಸಾಲು’ ಎಂದು ಕರೆದು ಪ್ರತ್ಯೇಕವಾಗಿ ಹಾಡುತ್ತಾರೆ. ಈ ಒಂದೊಂದು ಸಾಲೂ ಒಂದು ರಾತ್ರಿ ಹಾಡಬಹುದಾದ ಕಾವ್ಯ ಭಾಗ, ತಾಳುಗತೆ, ಸವಣದೊರೆಯ ಸಾಲು, ಜುಂಜೇಗೌಡನ ಸಾಲು, ಸಂಕಮ್ಮನ ಸಾಲು, ಇಕ್ಕೇರಿ ದೇವಮ್ಮನ ಸಾಲು, ಬೇವಿನಕಾಳಿಯ ಸಾಲು ಮತ್ತು ಸರಗೂರಪ್ಪನ ಸಾಲು ಎಂದು ಏಳು ಪ್ರಮುಖ ಸಾಲುಗಳಲ್ಲಿ ಕಥೆ ಉಳಿದು ಬಂದಿರುವುದನ್ನು ನೋಡುತ್ತೇವೆ.

ತಂಬೂರಿ ವಾದ್ಯದ ಹಿನ್ನೆಲೆಯಲ್ಲಿ ತಾಳಮೇಳಗಳೊಡನೆ ಕಥೆ ಮಾಡುವ ನೀಲಗಾರರು ಕೂಡ ಕಂಸಾಳೆಯವರಂತೆ ದೇವರ ಗುಡ್ಡರು. ಇವರನ್ನು ಮಂಟೇದೇವರು, ಮಂಟೇದಯ್ಯ, ಮಂಟೇಸ್ವಾಮಿಯವರು ಇವೇ ಮುಂತಾದ ಹೆಸರುಗಳಿಂದ ಗುರುತಿಸಲಾಗುತ್ತದೆ. ಇವರು ಮಳವಳ್ಳಿ ಗೊಪ್ಪಗೌಡನಪುರ, ಕಪ್ಪಡಿ, ಚಿಕ್ಕಲ್ಲೂರು – ಈ ಯಾವುದೇ ಕ್ಷೇತ್ರದಲ್ಲಿ ದೀಕ್ಷೆ ಪಡೆದು ಗುಡ್ಡರಾಗುವುದು ಸಾಮಾನ್ಯ. ತಂಬೂರಿ ವಾದ್ಯವನ್ನು ನುಡಿಸುತ್ತ, ಕಥೆ ಮಾಡುವ ನೀಲಗಾರರು ತಲೆಯ ಮೇಲೆ ಕೆಂಪು ಮುಂಡಾಸು, ಮೈಮೇಲೆ ಬಣ್ಣದ ನಿಲುವಂಗಿ, ಶುಭ್ರವಾದ ಕಚ್ಚೆಯ ಪಂಚೆ, ನಡುವಿಗೆ ಸುತ್ತಿದ ವಸ್ತ್ರಗಳೊಡನೆ ಅಲಂಕೃತರಾಗಿರುತ್ತಾರೆ. ಹಣೆಗೆ ಗಂಧ ವಿಭೂತಿ ಎರಡನ್ನೂ ಧರಿಸುತ್ತಾರೆ. ಕೊರಳಲ್ಲಿ ಮೂರು ರುದ್ರಾಕ್ಷಿ ಮಣಿಗಳನ್ನು ಹಾಕಿರುತ್ತಾರೆ.

ನೀಲಗಾರರ ಕಥೆಯನ್ನು ‘ಧರೆಗೆ ದೊಡ್ಡವರ ವಚನ’ ಎಂದೂ ಕರೆಯುವುದುಂಟು. ಧರೆಗೆ ದೊಡ್ಡವರೇ ತಂಬೂರಿಯನ್ನು ಹಿಡಿದು ಹಾಡಿಕೊಂಡು ಬಂದರು ಎಂಬ ಐತಿಹ್ಯವಿದೆ. ಧರೆಗೆ ದೊಡ್ಡವರ ಶಿಷ್ಯರಾದ ಸಿದ್ದಪ್ಪಾಜಿಯವರು ಹಲಗೂರು ಪವಾಡಕ್ಕೆ ಹೋದಾಗ ತಂಬೂರಿಯನ್ನು ಹಿಡಿದು ಹೋಗಿದ್ದರು. ಪವಾಡವನ್ನು ಗೆಲ್ಲಿಸಿದ ಆ ತಂಬೂರಿ ನೀಲಗಾರ ಪರಂಪರೆಗೂ ಬಂದಿತು ಎಂದೂ ಹೇಳುತ್ತಾರೆ. ಚಿಕ್ಕಲ್ಲೂರು ಕ್ಷೇತ್ರದ ಮುತ್ತತ್ತಿರಾಯನಿಂದ ಸಿದ್ದಪ್ಪಾಜಿಯವರಿಗೆ ಈ ತಂಬೂರಿ ಬಂದಿತೆಂದೂ ಇನ್ನೊಂದು ವಾದ ಉಂಟು. ಮುತ್ತತ್ತಿರಾಯ ಪರಮ ಭಾಗವತನಾದ ಆಂಜನೇಯ. ಸಿದ್ದಪ್ಪಾಜಿಯವರು ಆ ಕ್ಷೇತ್ರದಲ್ಲಿ ನೆಲಸಲು ಬಂದಾಗ ಮುತ್ತತ್ತಿರಾಯ ಮತ್ತು ಅವರ ನಡುವೆ ಕೆಲವು ಪವಾಡಗಳು ನಡೆಯುತ್ತವೆ. ತಮ್ಮಲ್ಲಿಗೆ ಬಂದವರು ‘ಹಲಗೂರು ಪವಾಡ ಗೆದ್ದ ಸಿದ್ದಪ್ಪಾಜಿ’ ಎಂಬ ವಿಷಯ ತಿಳಿದ ಕೂಡಲೆ ಮುತ್ತತ್ತಿರಾಯ ಶರಣಾಗಿ ಆ ಕ್ಷೇತ್ರವನ್ನು ಅವರಿಗೆ ಬಿಟ್ಟುಕೊಡುತ್ತಾನೆ. ಜೊತೆಗೆ ತನ್ನ ಬಿರುದಾದ ತಂಬೂರಿಯನ್ನು ಸಿದ್ದಪ್ಪಾಜಿಯವರಿಗೆ ಅರ್ಪಿಸುತ್ತಾನೆ ಎಂದು ಕಥೆ.

ನೀಲಗಾರರು ಹಾಡುವ ಮಂಟೇಸ್ವಾಮಿ ಕಥೆ ನಾಲ್ಕು ‘ಸಾಲು’ಗಳಲ್ಲಿ ಸಾಗುತ್ತದೆ : ೧. ಧರೆಗೆ ದೊಡ್ಡವರ ಸಾಲು, ೨. ಸಿದ್ದಪ್ಪಾಜಿ ಸಾಲು, ೩. ರಾಚಪ್ಪಾಜಿ ಸಾಲು, ೪. ಚಿಕ್ಕಲ್ಲೂರು ಸಾಲು.

ಧರೆಗೆ ದೊಡ್ಡವರ ಸಾಲಿನಲ್ಲಿ ಮಂಟೇಸ್ವಾಮಿ ಕಲ್ಯಾಣದಿಂದ ದಕ್ಷಿಣಾಭಿಮುಖವಾಗಿ ಹೊರಟು ಬೊಪ್ಪಗೌಡನಪುರದ ಮಡಿವಾಳ ಮಾಚಯ್ಯನ ಹುಬ್ಬೆ ಒಲೆಯಲ್ಲಿ ‘ಅಮೃತ ಮಣ್ಣ’ನ್ನು ಗುರುತಿಸಿ ಅಲ್ಲಿ ಮಠ ಮಾನ್ಯಗಳನ್ನು ಸ್ಥಾಪಿಸಿದ ವಿವರಗಳು ಬರುತ್ತವೆ.

‘ಸಿದ್ದಪ್ಪಾಜಿ ಸಾಲು’ ಸಿದ್ದಪ್ಪಾಜಿಯನ್ನು ಶಿಷ್ಯನನ್ನಾಗಿ ಪಡೆದು ತಮ್ಮ ದಳವಾಯಿಯನ್ನಾಗಿ ಧರೆಗೆ ದೊಡ್ಡವರು ಮಾಡಿಕೊಂಡದ್ದು; ಕಲಿಪುರುಷನ ಸುಳಿವು ಸಿಕ್ಕ ಕೂಡಲೇ ತಾವು ಪಾತಾಳ ಬಾವಿಯಲ್ಲಿ ಪವಡಿಸಲು ಇಚ್ಛಿಸಿ ತಕ್ಕ ವ್ಯವಸ್ಥೆ ಮಾಡಲು ಸಿದ್ದಪ್ಪಾಜಿಯನ್ನು ಕೇಳಿಕೊಳ್ಳುವುದು; ಸಿದ್ದಪ್ಪಾಜಿ ಹಲವಾರು ಪವಾಡವನ್ನು ಗೆದ್ದು ಅಲ್ಲಿಯ ಪಾಂಚಾಳರನ್ನು ಮಂಟೇಸ್ವಾಮಿ ಮಠದ ಶಿಷ್ಯರನ್ನಾಗಿ ಮಾಡಿದ್ದು ಇವೇ ಮುಂತಾದ ಘಟನೆಗಳನ್ನು ನಿರೂಪಿಸುತ್ತದೆ.

ರಾಚಪ್ಪಾಜಿ ಸಾಲು ರಾಚಪ್ಪಾಜಿಯವರ ಕಥೆಯನ್ನು ಸಂಗ್ರಹವಾಗಿ ಕಟ್ಟಿಕೊಡುತ್ತದೆ. ಗುರುವಿನ ಆದೇಶದಂತೆ ರಾಚಪ್ಪಾಜಿಯವರು ಬೊಪ್ಪಗೌಡನಪುರದಿಂದ ಹೊರಟು ದೊಡ್ಡಮ್ಮ ತಾಯಿ ಮುಟ್ಟನಹಳ್ಳಿಯ ತೋಪಿನ ಬಳಿ ಮುಟ್ಟಾದಾಗ ಅಲ್ಲಿಯೇ ನೆಲೆ ನಿಲ್ಲಿಸಿ ಮೈಸೂರು ಮೂಲಕ ಎಡತೊರೆಯ ಸಮೀಪದ ಕಪ್ಪಡಿ ಕ್ಷೇತ್ರಕ್ಕೆ ಬಂದು ನೆಲೆಸಿದ ವಿವರಗಳನ್ನು ಒದಗಿಸುತ್ತದೆ.

ಕೊನೆಯ ಚಿಕ್ಕಲ್ಲೂರು ಸಾಲು ಸಿದ್ದಪ್ಪಾಜಿಯವರು ಗುರುಮಂಟೇಸ್ವಾಮಿಯವರನ್ನು ಬೀಳ್ಕೊಟ್ಟು ಪೂರ್ವಾಭಿಮುಖವಾಗಿ ಹೊರಟು ಚಿಕ್ಕಲ್ಲೂರು ಕ್ಷೇತ್ರಕ್ಕೆ ಬಂದು, ಅಲ್ಲಿ ಅನೇಕ ಪವಾಡಗಳನ್ನೆಸಗಿ ಉತ್ತತ್ತಿರಾಯನ ಕ್ಷೇತ್ರವನ್ನು ಪಡೆದು ಅಲ್ಲಿಯೇ ಪಾದ ಊರಿದ ಚಿತ್ರಣವನ್ನು ನೀಡುತ್ತದೆ.

ಒಟ್ಟಿನಲ್ಲಿ ಕಲ್ಯಾಣದಿಂದ ಆರಂಭವಾಗುವ ಕಥೆ ಬೊಪ್ಪನಗೌಡನಪುರವನ್ನು ತಲುಪಿ ವಿವಿಧ ದಿಕ್ಕಿನಲ್ಲಿ ಸಾಗುವುದು ವಿಶೇಷ. ಈ ಕಥೆ ದಕ್ಷಿಣ ಕರ್ನಾಟಕ ಭಾಗದಲ್ಲಿ ಹೆಚ್ಚು ಪ್ರಚುರವಾಗಿ ಹಬ್ಬಿದೆ. ಮುಖ್ಯವಾಗಿ ಚಾಮರಾಜನಗರ, ಮೈಸೂರು, ಮಂಡ್ಯ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತದೆ.

ಕಂಸಾಳೆ, ನೀಲಗಾರ ಸಂಪ್ರದಾಯಗಳಂತೆ ಚೌಡಿಕೆ ಸಂಪ್ರದಾಯವೂ ದೇವರಗುಡ್ಡರದೇ. ಇವರು ಎಲ್ಲಮ್ಮನ ಗುಡ್ಡರು. ಇವರು ಎಲ್ಲಮ್ಮನ ಹೆಸರಿನಲ್ಲಿ ದೀಕ್ಷೆ ಪಡೆದಿರುತ್ತಾರೆ. ದೀಕ್ಷೆ ಪಡೆದವರಲ್ಲಿ ಪುರುಷವೇಷದ ಸ್ತ್ರೀಯರೂ ಸ್ತ್ರೀ ವೇಷದ ಪುರುಷರೂ ಕಾಣಸಿಗುತ್ತಾರೆ. ಇವರನ್ನು ಜೋಗಿತಿ – ಜೋಗಪ್ಪ ಎಂದು ಕರೆಯಲಾಗುತ್ತದೆ. ಜೋಗಿತಿ ದೇವಿಯ ‘ಅಡಿಗೆ’ಯನ್ನು ಹೊತ್ತು ಬಿಳಿಯ ಅರಿವೆಯನ್ನು ಉಟ್ಟು, ಕಾಲಿಗೆ ಗೆಜ್ಜೆ ಕಟ್ಟಿ, ಕೊರಳಲ್ಲಿ ಕವಡೆಸರ ಮತ್ತು ಐದು ಮುತ್ತನ್ನು ಧರಿಸಿ ದೇವಿಯನ್ನು ಸ್ತುತಿಸುತ್ತ ನೃತ್ಯ ಮಾಡುವರು. ಪುರುಷ ಹೆಣ್ಣಿನ ವೇಷ ಧರಿಸಿ, ಕವಡೆ ಸರ, ಮುತ್ತಿನ ಸರ, ಭಂಡಾರದ ಚೀಲವನ್ನು ಧರಿಸಿ ಕಾಲಿಗೆ ಗೆಜ್ಜೆ ಕಟ್ಟಿಕೊಳ್ಳುತ್ತಾನೆ. ದೇವಿಯ ಮುಖವಾಡವನ್ನು ಕಟ್ಟಿದ ಕೊಡವನ್ನು ನೆತ್ತಿಯಲ್ಲಿ ಹೊತ್ತು ಕಾಲಿಗೆ ಗೆಜ್ಜೆ ಕಟ್ಟಿ ದೇವಿಯನ್ನು ಸ್ತುತಿಸುತ್ತ ಕುಣಿಯುತ್ತಾನೆ. ಬಿಂದಿಗೆಯಿಲ್ಲದೆ ಕೆಲವೆಡೆ ಎಲ್ಲಮ್ಮನ ಮುಖವಾಡವನ್ನು ‘ಜಗ’ದಲ್ಲಿ ಇಟ್ಟು ಮೆರೆಸುವುದುಂಟು. ದುಂಡಾದ ಬಿದಿರು ಬುಟ್ಟಿಯೊಂದರ ನಡುವೆ ದೇವಿಯ ಮುಖವಾಡವನ್ನು ಇಟ್ಟು ಅಲಂಕರಿಸಿ ತಲೆಯಲ್ಲಿ ಹೊತ್ತು ಮೆರೆಸುವುದೇ ‘ಜಗ’.

ಎಲ್ಲಮ್ಮನ ಗುಡ್ಡರ ಸಂಪ್ರದಾಯದಲ್ಲಿ ಚೌಡಿಕೆ ಇವರನ್ನು ಗುರುತಿಸುವ ಮುಖ್ಯ ಸಾಧನ. ಎಲ್ಲಮ್ಮ ರೇಣುಕೆಯ ಅವತಾರವೆಂದು ನಂಬುವ ಇವರು ಚೌಡಿಕೆ ವಾದ್ಯಕ್ಕೆ ಪರಶುರಾಮನ ಸಂಬಂಧವನ್ನು ಕಲ್ಪಿಸುತ್ತಾರೆ. ಕಾರ್ತವೀರ್ಯಾರ್ಜುನನನ್ನು ಕೊಂದ ಪರಶುರಾಮ ಅವನ ಶರೀರವನ್ನೇ ಒಂದು ವಾದ್ಯವನ್ನಾಗಿ ಮಾಡಿಕೊಂಡು ಬಂದು ತಾಯಿಯ ಮುಂದೆ ಹಾಡಿ ಕುಣಿದ; ಅವಳ ಮಹಿಮೆಯನ್ನು ಹೊಗಳಿ ಪ್ರಸನ್ನಗೊಳಿಸಿಕೊಂಡ ಎಂಬುದು ಅದರ ಬಗ್ಗೆ ಇರುವ ಒಂದು ಕತೆ.

ಚೌಡಿಕೆ ಒಂದು ವಿಶೇಷ ಸ್ವರೂಪದ ವಾದ್ಯ. ಕೊಳಗದ ಆಕಾರದ ಕಂಚಿನ ಸಾಧನವೊಂದಕ್ಕೆ ಬಾತುಕೋಳಿಯ ಮೇತೆಯ (ಕುತ್ತಿಗೆ ಭಾಗದ) ಚರ್ಮವನ್ನು ಒಂದೆಡೆ ಅಂಟಿಸಲಾಗುವುದು. ತೆಂಗಿನ ಮರವನ್ನು ಕೊಳಗದಾಕಾರದಲ್ಲಿ ಕೊರೆದು ವಾದ್ಯಕ್ಕೆ ಬಳಸುವರು. ಬಾತುಕೋಳಿಯ ಚರ್ಮದ ನಡುವಿನಿಂದ ಕೊಳಗದ ಒಳಭಾಗಕ್ಕೆ ಸೇರಿದಂತೆ ಎರಡು ಮೊಳ ಉದ್ದದ ಕುರಿಯ ಕರುಳು ದಾರವನ್ನು ಕಟ್ಟಲಾಗುವುದು. ಬಿದಿರು ಗಳುವೊಂದನ್ನು ಕೊಳಗದ ಮೇಲಿನಿಂದ ಎಳೆದು ಕಟ್ಟಿ ಒಂದು ತುದಿಗೆ ಈ ದಾರವನ್ನು ಎಳೆದು ಬಿಗಿಪಡಿಸಲಾಗುವುದು. ಮರದ ಬೆಣೆಯೊಂದನ್ನು ಬಳಸಿ ಹೀಗೆ ಬಿಗಿಪಡಿಸಿದ ದಾರವನ್ನು ಮೀಟಿದರೆ ವಿಶಿಷ್ಟವಾದ ನಾದ ಹೊಮ್ಮುತ್ತದೆ. ಇದನ್ನು ಶ್ರುತಿಗೂ ಕೈಯಲ್ಲೇ ದಾರವನ್ನು ಎಳೆದು ನುಡಿಸುವ ಚೌಡಿಕೆ ವಾದ್ಯವನ್ನು ಮುಮ್ಮೇಳಕ್ಕೂ ಬಳಸಲಾಗುವುದು. ಇದನ್ನು ನುಡಿಸುತ್ತ ಕಲಾವಿದರು ಮೇಳ ನಡೆಸಿಕೊಡುತ್ತಾರೆ. ಆಯಾ ಪ್ರದೇಶದ ಭಾಷೆಯಲ್ಲಿಯೇ ಕಥೆ ಮಾಡಿಕೊಂಡು ಬರುವುದು ಇವರ ವಿಶೇಷ. ಕಥೆ ಮಾಡುವವರು ದೀಕ್ಷೆ ಹೊಂದಿರುತ್ತಾರೆ. ಸುಮಾರು ಹತ್ತು ಅಥವಾ ಹನ್ನೆರಡು ವರ್ಷದ ಹುಡುಗನಿಗೆ ದೀಕ್ಷೆಯನ್ನು ಕೊಡಲಾಗುತ್ತದೆ. ಮನೆಯಲ್ಲಿ ದೇವಿಯ ಕಲಶವನ್ನು ಪೂಜಿಸಿ ಮಂತ್ರಗಳನ್ನು ಹೇಳುವುದು ಕ್ರಮ. ಹುಡುಗನಿಗೆ ಹಳದಿ ಮಣಿ ಕಟ್ಟಿ ಕಿವಿಯಲ್ಲಿ ದೇವಿಯ ಮಂತ್ರಗಳನ್ನು ಹೇಳುವುದು ಕ್ರಮ.

ಚೌಡಿಕೆ ಮೇಳದಲ್ಲಿ ನೃತ್ಯಕ್ಕೆ ವಿಶೇಷ ಪ್ರಾಶಸ್ತ್ಯ ಉಂಟು. ಮುಖ್ಯ ನಿರೂಪಕ ಮಾತ್ರ ಕುಣಿತ ನಿರ್ವಹಿಸುವುದು ಇಲ್ಲಿಯ ವಿಶೇಷ. ಇಬ್ಬರು / ಮೂವರು ಹಿಮ್ಮೇಳದಲ್ಲಿರುತ್ತಾರೆ. ಮುಖ್ಯ ನಿರೂಪಕ ಕರಿಯ ನಿಲುವಂಗಿ, ನಡುವಿಗೆ ಕೆಂಪು ವಸ್ತ್ರ, ಕಚ್ಚೆಯ ಪಂಚೆ, ತಲೆಗೆ ಕೆಂಪು ರುಮಾಲು ಸುತ್ತಿ, ಕೊರಳಿಗೆ ಹಳದಿ ಮಣಿ ಧರಿಸಿ ತಮಗಾಗಿ ಸಿದ್ಧವಾದ ಚಪ್ಪರವೊಂದರಲ್ಲಿ ಚೌಡಿಕೆಯನ್ನು ಹಿಡಿದು ಹಾಡುತ್ತಾನೆ. ಎರಡು ಕಾಲನ್ನು ಜೋಡಿಸಿ ಅತ್ತ – ಇತ್ತ ಹಿಂದೆ – ಮುಂದೆ ಬಾಗಿ ಬಳುಕಿ ವಯ್ಯಾರದ ನೃತ್ಯ ಮಾಡುತ್ತಾನೆ. ಒಮ್ಮೆ ಒಂದು ಕಾಲನ್ನು ಮೇಲೆ ಮಾಡಿ ಇನ್ನೊಂದು ಕಾಲಿನಲ್ಲಿ ಕುಣಿಯುತ್ತಾನೆ. ಅತ್ಯಂತ ರಭಸಗತಿಯಲ್ಲಿ ಕಾಲುಗಳೆರಡನ್ನೂ ಎತ್ತಿ ಕುಪ್ಪಳಿಸುವ ಕುಣಿಯುವ ವೈಖರಿ ಅತ್ಯಂತ ಆಕರ್ಷಕವಾಗಿರುತ್ತದೆ. ಈ ಕುಣಿತದಲ್ಲಿ ಹಾಡು ಕುಣಿತ ಏಕಕಾಲದಲ್ಲಿ ಜೊತೆಜೊತೆಯಾಗಿ ಬರದಿರುವುದು ಗಮನಾರ್ಹ.

ಚೌಡಿಕೆಯವರು ಎಲ್ಲಮ್ಮನ ಮಹಿಮೆಯನ್ನು ಪ್ರಸಾರ ಮಾಡುವ ವಿಶಿಷ್ಟ ವರ್ಗದ ಕಲಾವಿದರಾಗಿ ಕಂಡುಬಂದಿದ್ದಾರೆ. ಇವರು ಹಾಡುವ ಹಾಡುಗಳನ್ನು ಧಾರ್ಮಿಕ ಹಾಗೂ ಲೌಕಿಕ ಎಂದು ವಿಂಗಡಿಸಿಕೊಳ್ಳಲಾಗಿದೆ. ರೇಣುಕೆಯ ಕತೆ ಮತ್ತು ಸರ್ಜಪ್ಪನಾಯಕನ ಕಥೆ – ಇವು ಎರಡು ಮಹತ್ವದ ಕಥೆಗಳು. ಪುರಾಣಮೂಲಕ್ಕಿಂತ ಭಿನ್ನವಾಗಿ ಇವರ ಕಥೆ ಹೊಸ ಸೃಷ್ಟಿಯನ್ನು ಪಡೆದುಕೊಂಡಂತೆ ಕಾಣುವುದಾದರೂ ಪುರಾಣ ಹಾಗೂ ಜಾನಪದ ಅಂಶಗಳ ಸಮಬೆರಕೆ ಒಂದರ ನೆಲಗಟ್ಟಿನ ಮೇಲೆ ಮತ್ತೊಂದು ರೂಪುಗೊಂಡಿರುವುದನ್ನು ಕಾಣುತ್ತೇವೆ. ಚೌಡಿಕೆಯವರ ರೇಣುಕೆ ಮುಗ್ಧೆ; ಪರಿಶುದ್ಧೆ, ಪರಮೇಶ್ವರನ ಮಗಳಾದರೂ ವಿಧಿಯ ಕೈವಾಡದಿಂದ ಅನಂತ ಕಷ್ಟಕ್ಕೆ ಗುರಿಯಾದವಳು. ಮಗನ ಕೈಯಿಂದಲೇ ತನ್ನ ತಲೆಯನ್ನು ಕಡಿಸಿಕೊಂಡವಳು. ಸತ್ಯವನ್ನೆ ನೆಚ್ಚಿಕೊಂಡು ಅದೊಂದರ ಬಲದಿಂದಲೇ ಬೆಳೆದ ಅವಳು ಕೊನೆಗೆ ಅದರಿಂದಲೇ ಮತ್ತೆ ಮತ್ತೆ ಬದುಕಿ ಸತ್ಯಕ್ಕೆ ಸಾವಿಲ್ಲ ಎಂಬುದನ್ನು ದೃಢಪಡಿಸುತ್ತಾಳೆ. ದೇವಿಯಾಗಿ, ತಾಯಿಯಾಗಿ, ಎಲ್ಲಮ್ಮನಾಗಿ ಎಲ್ಲರಿಂದ ಪೂಜಾರ್ಹವಾಗಿ ಚಿತ್ರಿತಳಾಗಿದ್ದಾಳೆ.

ವೃತ್ತಿಗಾಯಕ ಸಂಪ್ರದಾಯಗಳಲ್ಲಿ ಗಮನ ಸೆಳೆಯುವ ಮತ್ತೊಂದು ಗಾಯನ ಪರಂಪರೆ ‘ಜುಂಜಪ್ಪನ ಗಣೆಯವರದು’. ಜುಂಜಪ್ಪನ ಗಣೆಗಳನ್ನು ಹೊತ್ತು ಸಂಚರಿಸುವ ಕಾಣಿಕೆಯವರು ಈ ಹಾಡುಗಾರಿಕೆಯನ್ನು ನಡೆಸಿಕೊಡುತ್ತಾರೆ. ಇವರು ಬೆಂಗಳೂರು ಗ್ರಾಮಾಂತರ, ತುಮಕೂರು, ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಕಂಡುಬರುತ್ತಾರೆ.

ಗಣೆಯವರು ಬಳಸುವ ವಾದ್ಯ ಗಣೆ. ಮೂರು ಅಡಿ ಉದ್ದದ ಮೂರು ಗೆಣ್ಣಿನ ದೊಡ್ಡ ಆಕಾರದ ಕೊಳಲು ಇದು. ಅದನ್ನು ಊದಿಕೊಂಡು ಕೆಲವರು ಜುಂಜಪ್ಪನ ಕತೆಯನ್ನು ಮಾಡುತ್ತಾರೆ. ಇಬ್ಬರು ಮುಮ್ಮೇಳದಲ್ಲಿ ಕಥೆ ಮಾಡಿಕೊಂಡು ಹೋದರೆ, ಒಬ್ಬನು ಗಣೆಯನ್ನು ಊದುತ್ತಾ ಸಾಗುತ್ತಾನೆ. ಮಧುರವಾದ ನಾದ ಅದರಿಂದ ಹೊಮ್ಮಿ ಹಾಡುಗಾರಿಕೆಗೆ ವಿಶೇಷ ಮೆರಗು ತಂದು ಕೊಡುತ್ತದೆ. ಸುಮಾರು ನಾಲ್ಕು ಅಡಿ ಉದ್ದದ ಬಿದಿರಿನ ಕೋಲನ್ನೇ ಗಣೆ ಎನ್ನುತ್ತಾರೆ. ಈ ಕೋಲಿನ ಮಧ್ಯೆ ಎರಡು ಅಥವಾ ಮೂರು ಗೆಣ್ಣುಗಳು ಇರುತ್ತವೆ. ಕೋಲಿನ ಒಂದು ತುದಿಯಿಂದ ಮಧ್ಯದಲ್ಲಿರುವ ಗೆಣ್ಣುಗಳ ಕಾಂಡವನ್ನು ಕೊರೆದು ತೆಗೆದಿರುತ್ತಾರೆ. ಕೋಲಿನ ಇನ್ನೊಂದು ತುದಿ ಗೆಣ್ಣಿನ ಕಾಂಡವನ್ನು ಕೊರೆಯದ ಮುಚ್ಚಳಿಕೆಯ ರೀತಿಯಲ್ಲಿ ಹಾಗೆಯೇ ಇರುತ್ತದೆ. ಮಧ್ಯದ ಗೆಣ್ಣುಗಳ ಕಾಂಡ ತೆಗೆಯಲು ಸುಟ್ಟು ಹಾಕಿದ್ದ ಮೊದಲನೆಯ ಗೆಣ್ಣುವಿನ ಜಾಗವನ್ನು ಮೇಣದಿಂದ ಭದ್ರವಾಗಿ ಮುಚ್ಚುತ್ತಾರೆ. ಖಾಲಿ ಇರುವ ಗೆಣ್ಣುಗಳ ಮಧ್ಯದ ಒಂದು ತುದಿಯಲ್ಲಿ ತುಟಿ ಇಟ್ಟು ಗಾಳಿ ಊದಲು ಒಂದೇ ಒಂದು ರಂಧ್ರವನ್ನು ಕೊರೆದಿರುತ್ತಾರೆ. ಮತ್ತೊಂದು ತುದಿಯ ಮಧ್ಯಭಾಗದಲ್ಲಿ ಬೆರಳ ತುದಿಗಳಿಂದ ಮುಚ್ಚಿ ನುಡಿಸಲು ಅನುಕೂಲವಾಗುವಂತೆ ನಾಲ್ಕು ರಂಧ್ರಗಳನ್ನು ಕೊರೆದಿರುತ್ತಾರೆ. ಇದರಿಂದ ಇಂಪಾದ ನಾದ ಹೊರ ಹೊಮ್ಮುತ್ತದೆ. ಗಣೆ ದೈವದ ಪ್ರತೀಕವಾದುದರಿಂದ ಎಲ್ಲರೂ ಊದುವಂತಿಲ್ಲ. ಇಡೀ ಜೀವಮಾನವೆಲ್ಲ ಒಬ್ಬನೇ ವ್ಯಕ್ತಿ ಊದುವುದು ನಿಯಮ. ಅವನ ಮರಣಾನಂತರ ಗಣೆ ಊದಬೇಕಾದವನನ್ನು ‘ದೇವರೇ’ ಹೆಸರಿಸುವ ಸಂಪ್ರದಾಯವಿರುವುದಾಗಿ ತಿಳಿದು ಬರುತ್ತದೆ.

ಜುಂಜಪ್ಪನ ಹಾಡುಗಾರಿಕೆ ಸಂಪ್ರದಾಯದಲ್ಲಿ ಗಣೆಗೆ ವಿಶೇಷ ಮಹತ್ವ ಪ್ರಾಪ್ತವಾಗಿದೆ. ಕಥೆ ಮಾಡುವ ಸಂದರ್ಭದ ಮೊದಲಲ್ಲಿ, ಕೊನೆಯಲ್ಲಿ ಮತ್ತು ಮಧ್ಯೆ ಮಧ್ಯೆ ಮತ್ತೆ ಮತ್ತೆ ಗಣೆಗೆ ಪೂಜೆಯಾಗುತ್ತಿರುತ್ತದೆ. ಗಣೆಗೆ ವಿಭೂತಿ ಹಚ್ಚಿ ತಾವೂ ತೆಗೆದುಕೊಂಡು ಊದುಗಡ್ಡಿ ಹಚ್ಚಿ, ಕಾಯಿ ಒಡೆದು ಪೂಜೆ ಮಾಡುವ ಸಂಪ್ರದಾಯವಿದೆ. ಈ ಗಣೆಯನ್ನು ಹೊತ್ತು ಹಳ್ಳಿಗಳ ಮೇಲೆ ಜುಂಜಪ್ಪನ ಒಕ್ಕಲು ಇರುವೆಡೆಗಳಲ್ಲಿ ‘ಜುಂಜಪ್ಪನ ಕಾಣಿಕೆ’ ಎಂದು ಹರಳು, ಎಣ್ಣೆ, ಹಣ, ಭತ್ಯೆಯನ್ನು ವಸೂಲು ಮಾಡಿ ಹೊಟ್ಟೆ ಹೊರೆಯುತ್ತಾರೆ. ಇದಲ್ಲದೆ ಈ ಗಣೆಯೊಂದಿಗೆ ‘ಜುಂಜಪ್ಪನ ಬಸವ’ನನ್ನು ಅಲಂಕಾರ ಮಾಡಿಕೊಂಡು ಊರಾಡಲು ಹೋಗುತ್ತಾರೆ. ಹೀಗೆ ಎತ್ತಪ್ಪ, ಜುಂಜಪ್ಪ ಮುಂತಾಗಿ ಕಾಡುಗೊಲ್ಲ ವೀರರ ಕಥೆಗಳನ್ನು ಹಾಡಲು ಗಣೆ ಎಂಬ ವಿಶಿಷ್ಟ ವಾದ್ಯದ ಹಿನ್ನೆಲೆಯಲ್ಲಿ ನುಡಿಸುವ ಕಥನ ಪರಂಪರೆಯೇ ಕಾಡುಗೊಲ್ಲರ ಜುಂಜಪ್ಪನ ಗಣೆ ಸಂಪ್ರದಾಯ.

ಕಾಡುಗೊಲ್ಲರ ಗಣೆಗೆ, ಗಣೆಕತೆಗೆ ಹೆಸರು ಬಂದಿರುವುದು ಜುಂಜಪ್ಪನ ಕಥೆಯಿಂದಲೇ. ಜುಂಜಪ್ಪನ ಕಥೆಯನ್ನು ಹಾಡುವ ವೃತ್ತಿ ಗಾಯಕರಿಂದಲೇ. ಜೊತೆಗೆ ಗಣೆಯನ್ನು ಜುಂಜಪ್ಪ ಎಂದು ವೈಭವೀಕರಿಸಿರುವುದರಿಂದ ಇದು ‘ಜುಂಜಪ್ಪನ ಗಣೆ’ಯೂ ಆಗಿದೆ. ಕರಿಯ ಕಂಬಳಿ ಗದ್ದುಗೆ ಮೇಲೆ ಕುಳಿತು ಗಣಿಯಾಡುವವನು ಪದದ ಏರಿಳಿತಗಳಿಗೆ ಅನುಗುಣವಾಗಿ ಮಧುರವಾದ ಧ್ವನಿ ಹೊರಡಿಸುವಲ್ಲಿ ನಿರತನಾದರೆ, ಪದಗಾರ ಕಣ್ಣುಮುಚ್ಚಿ ಎರಡು ಕೈಗಳನ್ನು ಮಡಚಿ ಕಿವಿಯತ್ತ ತಂದು ಹಾಡತೊಡಗಿದ ಎಂದರೆ ಪ್ರಪಂಚವನ್ನೇ ಮರೆತು ಬಿಡುತ್ತಾನೆ. ಇಲ್ಲಿ ಕಥೆಗೇ ಒತ್ತು ಹೆಚ್ಚು. ಈ ಕಲೆಯಲ್ಲಿ ಇಬ್ಬರಿಗೆ ಮಾತ್ರ ಅವಕಾಶವಿರುತ್ತದೆ. ಒಬ್ಬ ಹಾಡುವವ, ಇನ್ನೊಬ್ಬ ಊದುವವ. ತಮ್ಮ ಎಂದಿನ ಸಹಜ ಉಡುಪಿನಲ್ಲೇ ಪ್ರದರ್ಶನ ನೀಡಬಹುದಾದ ಈ ಕಲೆ ವರ್ಣಮಯ ವೇಷಭೂಷಣವಿಲ್ಲದ, ವಾದ್ಯಗಳ ಅಬ್ಬರ ಇಲ್ಲದ, ನಾಟಕೀಯ ಸಂಭಾಷಣ ವೈಖರಿಗೆ ಆಸ್ಪದ ಇಲ್ಲದ, ವಿವಿಧ ಹಾವ – ಭಾವಗಳಿಗೆ ಅವಕಾಶವೇ ಇಲ್ಲದ, ಸದ್ದಿಲ್ಲದೆ ಮೂಲೆಯಲ್ಲಿ ಕೂತು ಕೇಳುವ ಕಥನ ಕಲೆ.

ಜುಂಜಪ್ಪನ ಕಥೆ ಕನ್ನಡ ಜನಪದ ಕಥನಗಳ ಸಾಲಿನಲ್ಲಿ ಒಂದು ಮಹತ್ವಪೂರ್ಣ ರಚನೆ. ಕಾಡುಗೊಲ್ಲ ಸಂಸ್ಕೃತಿಯ ನೈಜ ಚಿತ್ರಣವನ್ನು ನೀಡುವ ಈ ರಚನೆ ಅವರ ಪಾಲಿನ ಬದುಕಿನ ಚೌಕಟ್ಟಿನಲ್ಲಿಯೆ ಸಾಗುತ್ತದೆ. ಕುಲಕುಲದ ಸಂಘರ್ಷಗಳು, ಕಾಡಿನಲ್ಲೇ ನೆಲೆಸಿದ ಅರಣ್ಯ ಜೀವಿಗಳ ಕಲಹ – ದ್ವೇಷಾಸೂಯೆಗಳು ಆಚಾರ ವಿಚಾರ ನಂಬಿಕೆ ನಡಾವಳಿಗಳಿಂದ ಈ ಕಥನ ಸಮೃದ್ಧವಾಗಿದೆ.

ವೃತ್ತಿ ಗಾಯಕ ಸಾಲಿನಲ್ಲಿ ಮೈಲಾರಲಿಂಗನ ಗೊರವರು ಕೂಡ ಮುಖ್ಯರು. ಸಮಗ್ರ ರಾತ್ರಿ ನಡೆಯುವ ಇವರ ಮೇಳವನ್ನು ‘ಗೊರವರ ಮೇಳ’ ಎಂದೇ ಕರೆಯಲಾಗುತ್ತದೆ. ಇತರ ಮೇಳಗಳಂತೆ ಇಲ್ಲಿಯೂ ಮೂವರು ಗೊರವರು ಕಲೆತು ಮೇಳ ನಡೆಸುತ್ತಾರೆ. ಮಧ್ಯ ಕುಳಿತ ಮುಖ್ಯ ನಿರೂಪಕ ಡಮರುಗ ಆಡಿಸುತ್ತ ಕಥೆಯನ್ನು ನಿರೂಪಿಸಿಕೊಂಡು ಹೋದರೆ ಮಿಕ್ಕವರೂ ಹಾಗೆಯೇ ನುಡಿಸುತ್ತ ಹಿಮ್ಮೇಳ ಹಾಡುತ್ತಾರೆ. ಗೊರವರನ್ನು ಗೊರವ, ಗೊಗ್ಗಯ್ಯ, ಗಡಬಡಯ್ಯ ಎಂಬ ಹೆಸರುಗಳಲ್ಲಿ ಕರೆಯಲಾಗುತ್ತದೆ. ಉತ್ತರ ಕರ್ನಾಟಕದಲ್ಲಿ ವ್ಯಾಘ್ರ, ಗ್ವಾರಪ್ಪ ಮುಂತಾದ ಹೆಸರುಗಳು ರೂಢಿಯಲ್ಲಿವೆ.

ಗೊರವರ ವೇಷಭೂಷಣ ಆಕರ್ಷಕವಾದುದು. ಕಂಬಳಿಯ ನಿಲುವಂಗಿ, ಕೊರಳಲ್ಲಿ ಹುಲಿ ಚರ್ಮದ ಭಂಡಾರದ ಚೀಲ, ಕವಡೆಸರ, ಹೆಗಲಲ್ಲಿ ಭಿಕ್ಷಾ ಪಾತ್ರೆ, ಕೈಯಲ್ಲಿ ಡಮರುಗ ತ್ರಿಶೂಲ – ಇವು ಮುಖ್ಯವಾದುವು. ಇದರ ಜೊತೆಗೆ ಹಣೆ ಮತ್ತು ಕಣ್ಣುಗಳು ತುಂಬುವಂತೆ ವಿಭೂತಿ ಪಟ್ಟಿಗಳನ್ನು ಬಳಿದು ನಡುವೆ ಕುಂಕುಮವನ್ನು ಲೇಪಿಸುವರು. ವಿಭೂತಿ ಕುತ್ತಿಗೆಯನ್ನು ಆವರಿಸುತ್ತದೆ. ಬಿಲುಪು ಕೆಂಪು ಬಣ್ಣಗಳಿಂದ ತುಂಬಿದ ಮುಖ ನಾನಾ ರೀತಿಯ ಚಿತ್ರ ವಿಚಿತ್ರ ವೇಷಭೂಷಣಗಳಿಂದ ಗೊರವಯ್ಯನ ಆಕೃತಿಯೇ ಮೈನವಿರೇಳಿಸುವಂತಿರುತ್ತದೆ.

ಇತರ ಗಾಯಕರಂತೆ ಮೈಲಾರಲಿಂಗನ ಗೊರವರಿಗೂ ದೀಕ್ಷೆ ಕೊಡಲಾಗುತ್ತದೆ. ಸಾಮಾನ್ಯವಾಗಿ ಮನೆಯ ಹಿರಿಯ ಮಗ ಈ ದೀಕ್ಷೆಗೆ ಅರ್ಹನಾದವನು. ಹಾಲು ಮತದವರು, ಹರಿಜನರು ಮತ್ತು ಇತರ ಹಿಂದುಳಿದ ಸಮೂಹಗಳು ಈ ದೀಕ್ಷೆ ಪಡೆಯುತ್ತಾರೆ. ತಮ್ಮ ಗುರುವಿನಿಂದ ದೀಕ್ಷೆ ಪಡೆಯುವಾಗ ಇವರು ಕಾಲಿಗೆ ಮಿಂಚು, ಕೈಗೆ ಕಂಕಣ, ಪಂಚಕಲಶ, ಕರಿಕಂಬಳಿ ಗದ್ದುಗೆಗಳೊಡನೆ ತಮ್ಮ ದೇವರ ಹೆಸರಿನಲ್ಲಿ ಪ್ರಮಾಣ ಮಾಡಿರುತ್ತಾರೆ.

ಮೈಲಾರಲಿಂಗನ ಗೊರವರು ತಮ್ಮ ಆರಾಧ್ಯ ದೈವವಾದ ಮೈಲಾರಲಿಂಗನ ಕಥೆಯನ್ನು ಹಾಡುತ್ತಾರೆ. ಕಥೆ ಮಾಡುವಾಗ ಗಂಟೆ, ಡಮರುಗ ನುಡಿಸುವುದು ಕ್ರಮ. ಮೈಲಾರಲಿಂಗನ ಪದಗಳು ಎಂದು ಇವರು ಹಾಡುವ ಹಾಡುಗಳಲ್ಲಿ ಮೈಲಾರಲಿಂಗನ ಕುರಿತಂತೆ ಆತನ ಸಾಹಸ, ರೂಪ, ಪ್ರೇಮಕತೆ ಇತ್ಯಾದಿಗಳನ್ನು ನಿರೂಪಿಸುವ ಬಿಡಿ ಹಾಡುಗಳು ಮತ್ತು ಮಂಗಳಾರತಿ ಹಾಡುಗಳು ಅತಿ ಹೆಚ್ಚು ಬಳಕೆಯಲ್ಲಿವೆ. ಕೋಮಾಲಿಯ ಹಾಡು ಮೈಲಾರಲಿಂಗನ ಅವತಾರಕ್ಕೆ ಕಾರಣವೇನೆಂಬುದರಿಂದ ರಾಕ್ಷಸ ವಧೆ ಮಾಡಿ ತಾನು ಬಂದ ಕಾರ್ಯ ಕೈಗೂಡಿದ ಅನಂತರ ಭಕ್ತರ ಅಭಿಲಾಷೆಯಂತೆ ಸ್ವಯಂಭೂಲಿಂಗನಾಗಿ ನೆಲೆಗೊಳ್ಳುವವರೆಗಿನ ಕಥಾವಸ್ತು ಇದರಲ್ಲಿದೆ.

ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ಮೂರು ರಾಜ್ಯಗಳಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಈ ಸಂಪ್ರದಾಯ ಮೇಲು ನೋಟಕ್ಕೆ ಜಾತಿ ಚೌಕಟ್ಟನ್ನು ಮೀರಿ ಬೆಳೆದುದಾಗಿ ತೋರುತ್ತದೆ. ಬ್ರಾಹ್ಮಣರಿಂದ ಪರಿಶಿಷ್ಠ ಜಾತಿ / ಬುಡಕಟ್ಟುಗಳವರೆಗೆ ಎಲ್ಲ ಜಾತಿಯ ಜನರೂ ಮೈಲಾರನಿಂಗನ ಒಕ್ಕಲಾಗಿರುವುದು, ಎಲ್ಲ ಜಾತಿಯವರೂ ಗೊರವರಾಗಿರುವುದು ಜಾತಿ ಪದ್ಧತಿಗಿಂತ ಮಿಗಿಲಾದ ಸಾಮರಸ್ಯವನ್ನು ಇಲ್ಲಿ ಕಾಣಬಹುದು.

ಧಾರ್ಮಿಕ ವೃತ್ತಿ ಗಾಯಕ ಗುಂಪುಗಳಂತೆ ವಿಶಿಷ್ಟ ವಾದ್ಯವೊಂದನ್ನು ಹಿಡಿದು ಹಾಡುಗಾರಿಕೆಯನ್ನು ಅವಲಂಬಿಸಿ ಬದುಕತಕ್ಕ ಇತರ ಗಾಯಕ ತಂಡಗಳನ್ನು ಕಾಣಬಹುದು. ಯಾವ ದೈವ ಸಂಪ್ರದಾಯಕ್ಕೂ ಸೇರದ ಇವರು ಯಾವ ದೈವದ ಕಥೆಯನ್ನಾದರೂ ಹಾಡಬಹುದು. ಅಂತೆಯೇ ಪೌರಾಣಿಕ / ಚಾರಿತ್ರಿಕ ಹಾಗೂ ವಾಸ್ತವಿಕ ಕಥೆಗಳನ್ನೂ ಹಾಡಬಹುದು. ಹಾಡುವುದರ ಮೂಲಕ ಜೀವನೋಪಾಯಕ್ಕೆ ದಾರಿ ಕಂಡುಕೊಂಡವರು ಇವರು. ಮುಖ್ಯವಾಗಿ ಜನರ ಮನಸ್ಸನ್ನು ಸುಲಭವಾಗಿ ಆಕರ್ಷಿಸಬಲ್ಲ ಕಥೆಗಳನ್ನು ಜನಪದ ಮೂಲದಿಂದಲೇ ಎತ್ತಿಕೊಂಡು ಮೇಳದ ಸ್ವರೂಪಕ್ಕೆ ಅಳವಡಿಸಿಕೊಳ್ಳುತ್ತಾರೆ.

ಜೀವನೋಪಾಯಕ್ಕಾಗಿ ಜನಪದ ಕಥಾಭಂಡಾರವನ್ನು ಆಶ್ರಯಿಸಿ ಬಹುಮಟ್ಟಿಗೆ ಅದನ್ನು ಅವಲಂಬಿಸಿಯೇ ಜೀವನ ಮಾಡುತ್ತಿರುವವರ ಪೈಕಿ ಕಿನ್ನರಿ ಜೋಗಿಗಳು, ತಂಬೂರಿಯವರು, ಕರಪಾಲದವರು, ಬುರ‍್ರ ಕಥಾದವರು, ದೊಂಬಿ ದಾಸರು ಮತ್ತು ಹೆಳವರು ಮುಖ್ಯರು. ಹಾಡುಗಾರಿಕೆಯನ್ನೇ ಮುಖ್ಯ ವೃತ್ತಿಯನ್ನಾಗಿ ಅವಲಂಬಿಸಿ ಕಿನ್ನರಿ ವಾದ್ಯ ಹಿಡಿದು ಸದಾ ಸಂಚಾರಶೀಲರಾಗಿ ಊರಾಡಲು ಹೋಗುವ ಕಿನ್ನರಿ ಜೋಗಿಗಳು ಕಿನ್ನರಿ ನುಡಿಸುತ್ತ ಹಾಡುವುದರೊಂದಿಗೆ ಕುಣಿತವನ್ನೂ ಮಾಡುತ್ತಾರೆ. ಈ ಕುಣಿತ ಮನರಂಜನಾ ಪ್ರಧಾನವಾದುದು. ಕಿನ್ನರಿ, ದಂಬರಿಗೆ, ಪಿಳ್ಳಂಗೋವಿ, ಚಿಟಗಿ, ಗಗ್ಗರ, ಕಿರುಗೆಜ್ಜೆ ಇವು ಇವರು ಬಳಸುವ ಪ್ರಮುಖ ವಾದ್ಯಗಳು. ಇವರು ನಡೆಸುವ ಮೇಳದಲ್ಲಿ ಸಾಮಾನ್ಯವಾಗಿ ದೀಕ್ಷಾ ಬದ್ಧರಾದ ಮೂವರು / ಐದು ಮಂದಿ ಜೋಗಿಗಳು ಭಾಗವಹಿಸುತ್ತಾರೆ.ಕಿನ್ನರಿ ನುಡಿಸುವವನೇ ಪ್ರಧಾನ ಹಾಡುಗಾರ; ಅವನೇ ಪ್ರಧಾನ ನರ್ತಕನಾಗಿರುತ್ತಾನೆ; ಕಾಲಿಗೆ ಕಿರು ಗೆಜ್ಜೆ ಕಟ್ಟಿಕೊಂಡು ‘ಜೋಗಿ ಉಡುಪು’ ಧರಿಸುತ್ತಾನೆ. ಹಿಮ್ಮೇಳದವರು ಸಾಧಾರಣ ಉಡುಪು ಧರಿಸಿ ಕೈಯಲ್ಲಿ ಚಿಟಗಿ, ತಾಳ, ದಂಬರಿಗೆ ಹಿಡಿದು ಮುಖ್ಯ ಹಾಡುಗಾರನ ಹಾಡಿನ ಗತ್ತಿಗನುಗುಣವಾಗಿ ಸೊಲ್ಲು ಹೇಳುತ್ತ ನಾಟಕೀಯವಾಗಿ ಸಂಭಾಷಿಸುತ್ತ ಅಭಿನಯಪೂರ್ವಕವಾಗಿ ಕುಣಿತ ಮಾಡುತ್ತಾರೆ. ಕಾಲಿಗೆ ಕಿರುಗೆಜ್ಜೆ, ಹೆಬ್ಬೆರಳಿಗೆ ಗಗ್ಗರ ಹಾಕಿಕೊಂಡು ಸಂದರ್ಭಾನುಸಾರವಾಗಿ ಕಥೆ ಮಾಡುವವನೊಂದಿಗೆ ನರ್ತನ ಗೈಯುತ್ತಾರೆ. ಕುಣಿತ ಮತ್ತು ಹಾಡು ಕೈ ಕೈ ಹಿಡಿದು ಸಾಗುತ್ತವೆ.

ಮಹಾಭಾರತದ ವಿವಿಧ ಪರ್ವಗಳನ್ನು ಅನೇಕ ರಾತ್ರಿಗಳವರೆಗೆ ಹಾಡುವುದರೊಂದಿಗೆ ಭೈರವ ಮಾಳವ್ವರ ಕಥೆಯನ್ನೂ ಹಾಡುತ್ತಾರೆ. ಈ ಹಾಡುಗಳಲ್ಲದೆ ಸುದೀರ್ಘ ರಚನೆಯ ಕೆಲವು ರಮ್ಯ, ಅದ್ಭುತ, ವಾಸ್ತವಿಕ, ಅತಿ ಮಾನುಷ ಕಥಾವರ್ಗಗಳ ಸಾಲಿನಲ್ಲಿ ಬರುವ ಪ್ರಾಚೀನ ಜನಪದ ಕಥೆಗಳ ರಾಜರಾಣಿಯರನ್ನು ಕುರಿತೂ ಅತ್ಯಂತ ಸ್ವಾರಸ್ಯಪೂರ್ಣವಗಿ ಬೇರೆ ಬೇರೆ ಮಟ್ಟುಗಳಲ್ಲಿ ಹಾಡುತ್ತಾರೆ.

ಅರ್ಜುನಸ್ವಾಮಿ ಹಾಡು ಕಿನ್ನರಿ ಜೋಗಿ ವೃತ್ತಿ ಗಾಯಕ ಸಂಪ್ರದಾಯದ ಪ್ರಮುಖ ಕಾವ್ಯ. ಈ ಕಾವ್ಯವನ್ನು ಎರಡು ಸಂದಿಗಳಲ್ಲಿ ಹಾಡುತ್ತಿದ್ದು, ಮೊದಲ ಸಂದಿನಲ್ಲಿ ಅರ್ಜುನ ದ್ರೌಪದಿಯರ ಬಾಳು ಹಾಗೂ ಅರ್ಜುನ ಜೋಗಿಯಾಗುವ ಪ್ರಕರಣವನ್ನು, ಎರಡನೆಯ ಸಂದಿನಲ್ಲಿ ಅರ್ಜುನ ಜೋಗಿ ಮಣಿಪುರಕ್ಕೆ ಹೋಗಿ ಬರುವ ಸಂದರ್ಭವನ್ನು ಬಣ್ಣಿಸಲಾಗುವುದು. ಇಲ್ಲಿ ಕಿನ್ನರಿಯ ನಾದಕ್ಕನುಗುಣವಾದ ಒಂದು ವಿಶಿಷ್ಟ ಛಂದೋಧಾಟಿಯಲ್ಲಿ ನಿಧಾನವಾಗಿ ಹರಡಿಕೊಂಡಂತೆ ಕಥೆ ಬೆಳೆದುಕೊಂಡು ಹೋಗುತ್ತದೆ.

ಕರ್ನಾಟಕದ ಮತ್ತೊಂದು ವಿಶಿಷ್ಟ ವೃತ್ತಿ ಗಾಯಕ ವರ್ಗವೆಂದರೆ ಬುರ‍್ರಕಥಾ. ತೆಲುಗಿನ ಪ್ರಭಾವ ಹೆಚ್ಚಾಗಿರುವ ಬಳ್ಳಾರಿ, ರಾಯಚೂರು, ಚಿತ್ರದುರ್ಗ, ದಾವಣಗೆರೆ, ಕೋಲಾರ,ತುಮಕೂರು ಜಿಲ್ಲೆಗಳಲ್ಲಿ ಇವರು ಕಂಡುಬಂದಿದ್ದಾರೆ. ಇಬರಿಗೆ ಬುರ‍್ರಕಥೆ ಮಾಡುವುದೇ ಪ್ರಧಾನ ವೃತ್ತಿ. ನಾಡಿನ ಜನತೆಯ ಪರಿಚಯ, ರಾಜರ ಇತಿಹಾಸ, ಸಂಸ್ಕೃತಿಗಳನ್ನು ಪರಿಚಯಿಸುವುದು ಇವರ ಗುರಿ. ಕೃಷಿಕರ ಹಬ್ಬ, ಹರಿದಿನ, ಮದುವೆ, ಮುಂಜಿ, ಸಂಸ್ಕಾರ ಕಾರ್ಯಗಳಲ್ಲಿ ಭಾಗವಹಿಸಿವಿದಿ ಇವರ ಕಾಯಕ.

ಬುರ‍್ರ ಕಥೆಯಲ್ಲಿ ಸಾಮಾನ್ಯವಾಗಿ ಇವರು ಭಾಗವಹಿಸುತ್ತಾರೆ. ಅವರು ಹೆಣ್ಣು ಗಂಡು ಯಾರೇ ಆಗಿರಬಹುದು. ಮುಮ್ಮೇಳದಲ್ಲಿ ಒಬ್ಬರು ಹಿಮ್ಮೇಳದಲ್ಲಿ ಇಬ್ಬರು ಹಾಡುಗಾರರಿದ್ದ ಕಥೆಯ ಹಾಡಿಗೆ ತಕ್ಕಂತೆ ಹಿನ್ನೆಲೆ ವಾದ್ಯ ಬಾರಿಸುತ್ತಾರೆ. ಗುಮಟೆ, ಗಗ್ಗರಿ, ಡುಮಕಿ ಇವರ ಹಿನ್ನೆಲೆ ವಾದ್ಯಗಳು. ಮುಮ್ಮೇಳದಲ್ಲಿ ಹಾಡುವವರು ತಂಬೂರಿಯೊಡನೆ ಬೆರಳಿನಲ್ಲಿ ಗಗ್ಗರಿಯನ್ನು ಸಿಕ್ಕಿಸಿಕೊಂಡು ಏಕಕಾಲಕ್ಕೆ ಗಗ್ಗರಿ ತಂಬೂರಿಗಳೊಡನೆ ಕಥೆ ಹೇಳುತ್ತಾರೆ. ಇಲ್ಲಿ ಕಥೆ ಮಾಡುತ್ತಾರೆ ಎಂದರೆ ಕಥನವನ್ನು ಗದ್ಯ ಪದ್ಯವಾಗಿ ಹಾಡುತ್ತಾರೆ ಎಂದೇ ತಿಳಿಯಬೇಕು. ಇಲ್ಲಿ ಹಾಡಿನೊಂದಿಗೆ ಆಗಾಗ ಕುಣಿತವೂ ಮುಖ್ಯವಾಗಿರುತ್ತದೆ.

ಆಹ್ವಾನದ ಮೇರೆಗೆ ಊರುಗಳಲ್ಲಿ ಮೇಳಗಳನ್ನು ನಡೆಸುತ್ತ ಜನಪ್ರಿಯ ಕಥೆಗಳನ್ನು ಮಾಡುತ್ತ ಅನೇಕ ದಿನಗಳವರೆಗೆ ಪ್ರವಾಸ ಕೈಗೊಳ್ಳುವ ಕರಪಾಲ ಸಂಪ್ರದಾಯ ದಕ್ಷಿಣ ಕರ್ನಾಟಕ ಪ್ರದೇಶದಲ್ಲಿ ವಿರಳವಾಗಿ ಕಂಡು ಬರುವ ಕಲೆ. ಚೌಡಿಕೆ ಮೇಳದಂತೆ ಇದು ಕೂಡ ಸಾಹಿತ್ಯ, ಸಂಗೀತ, ನೃತ್ಯಗಳ ಒಂದು ಸಮ್ಮಿಶ್ರ ಕಲೆ. ಶಿವಕಥೆಗಳ ಪ್ರಾಚುರ್ಯ ಹಾಗೂ ಜಂಗಮರ ನಿರೂಪಣೆ ಇಲ್ಲಿಯ ವಿಶೇಷ. ಜಂಗಮನು ಎತ್ತಿ ಕೊಟ್ಟ ಸೊಲ್ಲನ್ನು ಮಂದುವರೆಸಿ ಹಾಡನ್ನು ಪೂರೈಸುವುದು, ತಾಳಕ್ಕನುಗುಣವಾಗಿ ಹಿಂದಕ್ಕೆ ಮುಂದಕ್ಕೆ ಸರಿಯುತ್ತ ಕುಣಿಯುವುದು ಹಿಮ್ಮೇಳದವರ ಕೆಲಸ. ಕರಪಾಲದ ಮುಖ್ಯ ನಿರೂಪಕ ಮಾತ್ರ ಕಿರೀಟಾಕೃತಿಯ ಕುಲಾವಿಯನ್ನು ಧರಿಸುತ್ತಾನೆ. ಅದಕ್ಕೆ ವಿಶಿಷ್ಟವಾದ ತುರಾಯಿ, ಕಿವಿಯಲ್ಲಿ ಕುಂಡಲಗಳು, ಕೊರಳಲ್ಲಿ ರುದ್ರಾಕ್ಷಿಸರ, ಕಾವಿಯ ನಿಲುವಂಗಿ, ಕಾವಿಯ ನಡುಪಟ್ಟಿ, ಕಾಸೆ, ಕಾಲಿಗೆ ಗೆಜ್ಜೆ, ಕೈಯಲ್ಲಿ ತಾಳ ಇವು ಅವನ ಬಿರುದುಗಳು. ಈ ವಿಶಿಷ್ಟ ಬಿರುದಾವಳಿಗಳು ಕರಪಾಲ ಮೇಳದ ಗಮನಾರ್ಹ ಅಂಶವೇ ಆದರೂ ಕೆಲವು ಕಡೆ ಕೇವಲ ಮುಂಡಾಸನ್ನು ಧರಿಸಿದ ಜಂಗಮಯ್ಯಗಳನ್ನು ಕಾಣಬಹುದು.

ಸಾಮಾನ್ಯವಾಗಿ ಕರಪಾಲ ಮೇಳದ ಸೂತ್ರಧಾರ ಒಬ್ಬ ಶರಣನಾಗಿರುತ್ತಾನೆ. ಇದರಲ್ಲಿ ಅವನೊಬ್ಬನೇ ಜೀವಾಳವಾಗಿರುತ್ತಾನೆ. ಕರಪಾಲ ಮೇಳವನ್ನು ನಡೆಸುವುದೇ ಅವನ ವೃತ್ತಿಯಾಗಿರುತ್ತದೆ. ಜೀವನೋಪಾಯಕ್ಕೆ ಬೇರೊಂದು ವೃತ್ತಿಯನ್ನು ಅವಲಂಬಿಸಿದರೂ ಉಪವೃತ್ತಿಯಾಗಿ ಕರಪಾಲ ಮೇಳವನ್ನು ನಂಬಿಕೊಳ್ಳುತ್ತಾನೆ. ಗೌರಿಯ ದಿನಗಳಲ್ಲಿ, ಸುಗ್ಗಿಯ ದಿನಗಳಲ್ಲಿ ಕರಪಾಲದ ತಂಡವು ಯಾತ್ರೆಯನ್ನು ಕೈಗೊಂಡು ಅನೇಕ ಗ್ರಾಮಗಳಲ್ಲಿ ಕರಪಾಲವನ್ನು ನಡೆಸಿ ಊರಿಗೆ ಮರಳುತ್ತದೆ.

ಕರಪಾಲದ ಪ್ರಧಾನ ವಾದ್ಯ ಗುಮ್ಮಟೆ. ಗುಮ್ಮಟೆ ಒಂದು ಮಣ್ಣಿನ ವಾದ್ಯ. ಎರಡೂ ಕಡೆಯೂ ತೆರವಾಗಿರುವ ಮಣ್ಣಿನ ಗುಂಭದ ಒಂದು ಕಡೆಯ ಬಾಯನ್ನು ಉಡದ ಚರ್ಮದಿಂದ ಬಿಗಿದು ಸಿದ್ಧಗೊಳಿಸಲಾಗುತ್ತದೆ. ಒಂದು ಕೈಯಿಂದ ಅದನ್ನು ಬಡಿಯುತ್ತ ಅದರ ಗತ್ತಿಗೆ ತಕ್ಕಂತೆ ನೃತ್ಯ ಮಾಡಲಾಗುತ್ತದೆ.

ಕರಪಾಲ ಮೇಳದಲ್ಲಿ ಮುಖ್ಯ ನಿರೂಪಕನಷ್ಟೇ ಮುಖ್ಯರಾದವರು ಹಿಮ್ಮೇಳದವರು. ಕುಣಿತ, ಹಾಡು, ಕಥೆಗಳು ಕಳೆಗಟ್ಟಲು ಇವರ ನೆರವು ಇದ್ದೇ ತೀರಬೇಕು. ಮುಖ್ಯ ನಿರೂಪಕನಂತೆ ವಿಶಿಷ್ಟ ಬಗೆಯ ವೇಷಭೂಷಣಗಳು ಇವರ ಪಾಲಿಗಿಲ್ಲವಾದರೂ ಬಿಳಿಯ ಮುಂಡಾಸು, ಕಾಸೆ, ನಡುವಿನ ವಸ್ತ್ರಗಳು ಇದ್ದೇ ಇರುತ್ತವೆ.

ಹಾಡುವುದನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಭಿಕ್ಷಾಟನೆಯನ್ನು ಅವಲಂಬಿಸಿ ಬದುಕುವವರ ಪೈಕಿ ದೊಂಬಿದಾಸರು ಗಮನಾರ್ಹ. ತುಮಕೂರು, ಬೆಂಗಳೂರು, ಮಂಡ್ಯ, ಕೋಲಾರ ಜಿಲ್ಲೆಗಳಲ್ಲಿ ಇವರು ಹೆಚ್ಚಾಗಿ ಕಂಡುಬರುತ್ತಾರೆ. ಅಲೆಮಾರಿಗಳಾದ ಇವರು ಸದಾ ಸಂಚಾರಶೀಲರಾದುದರಿಂದ ಹಳ್ಳಿಗರಿಗೆ ಇವರು ಚಿರಪರಿಚಿತರು. ನಡೆ ನುಡಿಗಳಲ್ಲಿ ಇವರು ಸಾಧಾರಣ ಹಳ್ಳಿಗರಾಗಿಯೇ ಉಳಿದಿದ್ದಾರೆ. ಇವರು ಅಲೆಮಾರಿಗಳು ಎಂಬುದನ್ನು ಬಿಟ್ಟರೆ ಇನ್ನು ಯಾವ ಅಂಶದಲ್ಲಿಯೂ ಪ್ರತ್ಯೇಕ ಮಾನವ ಗುಂಪಾಗಿ ಆಚಾರವಿಚಾರಗಳನ್ನು ಸಂರಕ್ಷಿಸಿಕೊಂಡು ಬಂದ ಜನ ಇವರಲ್ಲ. ಆಡುವ ಮಾತು ತೆಲುಗಾದರೂ ಹಾಡು ಕಥೆಗಳಿಗೆ ಕನ್ನಡದ ಮೊರೆ ಹೋಗಬೇಕಾಯಿತು. ಅದು ಅವರ ಜೀವನದ ಸಮಸ್ಯೆಯಾದುದರಿಂದ ಕನ್ನಡವನ್ನೂ ಅವಲಂಬಿಸಿ ಕನ್ನಡವನ್ನು ರಕ್ತಗತ ಮಾಡಿಕೊಂಡರು.

ದೊಂಬಿದಾಸರು ಚಾರಣರು ಎಂದೇ ಜನಪ್ರಿಯ. ಇವರ ಕಥೆಗಳೆಂದರೆ ಜನರಿಗೆ ಬಲು ಇಷ್ಟ. ಏಕತಾರಿಯನ್ನು ನುಡಿಸುತ್ತ ಚಿಟಗಿಯ ತಾಳದೊಡನೆ ಗಂಗೆಗೌರಿಯ ಕಥೆಯನ್ನು ಹಾಡಿದರೆಂದರೆ ಅವರ ಮಧುರ ಗಾಯನಕ್ಕೆ ಮನಸೋಲದವರೇ ಇಲ್ಲ. ಕಥೆ ಮಾಡಲು ಮೂವರು ಬೇಕೇ ಬೇಕು. ಮುಖ್ಯ ನಿರೂಪಕ ಏಕತಾರಿಯನ್ನು ಹಿಡಿಯುತ್ತಾನೆ. ಇದೇ ಇವರ ಮುಖ್ಯ ವಾದ್ಯ. ಒಂಟಿ ಸೋರೆ ಬುರುಡೆಯ ಈ ವಾದ್ಯ ಒಂದೇ ತಂತಿಯದು. ಬುರುಡೆಯನ್ನು ನೀರಿನಲ್ಲಿ ನೆನೆಸಿ ತಪ್ಪಲೆಯಂತೆ ಮಾಡಿಕೊಂಡು ಅದಕ್ಕೊಂದು ಅರ್ಧ ಮಾರು ಉದ್ದದ ಗಳುವನ್ನು ಅಳವಡಿಸಿ ತಂತಿಯನ್ನು ಬಿಗಿಯುತ್ತಾರೆ. ಇದು ಏಕತಾರಿ, ಇದರ ಶ್ರುತಿಗೆ ಜೊತೆಯವರ ದಮ್ಮಡಿ ಚಿಟಗಿಗಳ ಗತ್ತಿಗೆ ತಕ್ಕಂತೆ ಕಥೆಗಳನ್ನು ಮಾಡುತ್ತಾ ಇವರು ಜನರನ್ನು ರಂಜಿಸುತ್ತಾರೆ. ಇವರ ಮೇಳದಲ್ಲಿ ನೃತ್ಯ ಇರುವುದಿಲ್ಲ. ಮಾತಿನ ಮೂಲಕ ವಿವರಣೆಯೂ ಇಲ್ಲ. ಉದ್ದಕ್ಕೂ ಒಂದು ಗತ್ತಿನಲ್ಲಿ ಪಲ್ಲವಿಯೊಂದನ್ನು ಅನುಸರಿಸಿ ಹಾಡಿಕೊಂಡು ಹೋಗುತ್ತಾರೆ.

ಹಾಡುವುದನ್ನೇ ವೃತ್ತಿಯಾಗಿ ಮಾಡಿಕೊಂಡ ಇನ್ನೊಂದು ಮುಖ್ಯ ವೃತ್ತಿ ಗಾಯಕ ವರ್ಗವೆಂದರೆ ಹೆಳವರ ಸಂಪ್ರದಾಯ. ಒಕ್ಕಲು ಮಕ್ಕಳ ಕುಲಗೋತ್ರಗಳನ್ನು ವಂಶಾವಳಿಗಳನ್ನು ಹೇಳಿಕೊಂಡು ಜೀವನ ಮಾಡುವವರು ಇವರು. ಇವರ ಮುಖ್ಯ ವೃತ್ತಿ ಭಿಕ್ಷಾಟನೆ. ವರ್ಷಕ್ಕೊಮ್ಮೆಯಾದರೂ ಕೃಷಿಕರ ಮನೆಯಲ್ಲಿ ಭಿಕ್ಷೆ ಮಾಡಬೇಕಾದುದು ನಡೆದು ಬಂದ ಪದ್ಧತಿ. ತಮ್ಮ ಮೂಲಪುರುಷನಂತೆ ಎತ್ತಿನಮೇಲೆ ಕುಳಿತು ಕಾಲಿನ ಹೆಳವನ್ನು ಸೂಚಿಸುವಂತೆ ಬಟ್ಟೆಯನ್ನು ಮರೆಮಾಡಿಕೊಂಡು ಗಂಟೆಯನ್ನು ಬಾರಿಸಿಕೊಂಡು ಬರುವುದು ಇವರ ಕ್ರಮ. ಹೆಳವನಾಗಿದ್ದ ಇವರ ಮೂಲಪುರುಷ ಒಕ್ಕಲಿಗರ ಮೂಲಪುರುಷರಲ್ಲಿ ಒಬ್ಬನೆಂದೂ ಅಂಗವಿಕಲನಾಗಿ ಅಸಹಾಯಕನಾಗಿದ್ದುದರಿಂದ ಅವನು ಉಳಿದ ಸೋದರರನ್ನು ಆಶ್ರಯಿಸಿ ಜೀವಿಸಬೇಕಾಯಿತೆಂದೂ ಕಥೆಗಳಿವೆ. ಕ್ರಮೇಣ ಈ ಹೆಳವನ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಬೆಳೆದು ಒಂದು ಪ್ರತ್ಯೇಕ ವರ್ಗವಾಗಿಯೇ ಉಳಿದರು. ಅವರ ಮೂಲಪುರುಷನ ವೃತ್ತಿ ಇವರ ಪಾಲಿಗೂ ಮುಂದುವರಿಯಿತು.

ಹೆಳವರ ಗಂಟೆ ದೊಡ್ಡ ತೆಂಗಿನ ಕಾಯಿ ಗಾತ್ರದ ಲೋಹದ ಸಾಧನ. ಅದರ ಹಿಡಿಗೆ, ನಾಲ್ಕು ಬೆರಳು ಅಗಲಕ್ಕೆ ಮಂದವಾಗಿ ಬಟ್ಟೆಯನ್ನು ಜೋಡಿಸಿ ಅರ್ಧ ಅಡಿ ಉದ್ದಕ್ಕೆ ಅದನ್ನು ಹೊಲಿದುಕೊಳ್ಳುತ್ತಾರೆ. ಗಂಟೆಯನ್ನು ಬಾರಿಸುವಾಗ ಎಡಗೈಯಲ್ಲಿ ಈ ಬಟ್ಟೆಯನ್ನು ಹಿಡಿದು ಬಲಗೈಯಲ್ಲಿ ಗಂಟೆಯ ನಾಲಗೆಯನ್ನು ತಾಳಕ್ಕನುಗುಣವಾಗಿ ಬಾರಿಸುತ್ತ ಕಥೆ ಮಾಡುವುದು ಕ್ರಮ.

ಹೆಳವರ ಮೇಳದಲ್ಲಿ ಗಂಟೆಯನ್ನು ಹೊರತುಪಡಿಸಿ ಬೇರೆ ಯಾವ ವಾದ್ಯವನ್ನು ಬಳಸುವುದಿಲ್ಲ. ಇಬ್ಬರು ಅಥವಾ ಮೂವರು ಕುಳಿತು ಹಾಡುವಾಗ ತಾಳಕ್ಕನುಗುಣವಾಗಿ ಏಕಕಾಲದಲ್ಲಿ ಗಂಟೆಯನ್ನು ಬಾರಿಸುತ್ತಾ ಸಾಗುತ್ತಾರೆ. ಆಯಾ ವಂಶಕ್ಕೆ ಸಂಬಂಧಿಸಿದ ಹಾಡುಗಳನ್ನು ಹಾಡುವಾಗ ಮನೆದೇವರು, ಇತರ ದೇವರುಗಳು, ತಂದೆ, ಅವರ ತಂದೆ, ಅವರ ಮೂಲ ಮುಂತಾದ ವಿಷಯಗಳನ್ನು ಅಳವಡಿಸಿಕೊಂಡು ಹಾಡುವುದು ವಿಶೇಷ. ವಂಶಾವಳಿ ಹೇಳುವ ಹೆಳವನನ್ನು ಯೋಗ್ಯ ರೀತಿಯಲ್ಲಿ ಗೌರವಿಸುತ್ತಾರೆ. ವಂಶಾವಳಿಯನ್ನು ಹಾಡುವುದು, ಬಳುವಳಿಯನ್ನು ಪಡೆಯುವುದು ತಮ್ಮ ಹಕ್ಕು ಎಂಬಂತೆ ಹೆಳವರು ವರ್ತಿಸುವುದು ಸಾಮಾನ್ಯ. ಇತರ ವೃತ್ತಿ ಗಾಯಕರನ್ನು ಗೌರವಿಸುವಂತೆ ಇವರಿಗೆ ಮೊರದ ತುಂಬ ‘ಮುತ್ತಿನ ಭಿಕ್ಷೆ’ ಕೊಟ್ಟು ಬಟ್ಟೆ ಬರೆ – ದುಡ್ಡು ದುಗ್ಗಾಣಿಗಳನ್ನು ನೀಡಿ ಬೀಳ್ಕೊಡುವುದು ಕ್ರಮ.

ಮೇಲೆ ಗಮನಿಸಿದ ಬಹುತೇಕ ಎಲ್ಲ ವೃತ್ತಿ ಗಾಯಕ ಮೇಳಗಳಲ್ಲೂ ವಾದ್ಯಗಳು ಅನಿವಾರ್ಯ ಅಂಗವಾಗಿ ಉಳಿದು ಬಂದಿರುವುದನ್ನು ನೋಡುತ್ತೇವೆ. ಆ ವಾದ್ಯಗಳ ಪೈಕಿ ತಾಳವಾದ್ಯ, ತಂತೀ ವಾದ್ಯ, ಚರ್ಮವಾದ್ಯ ಇವೆಲ್ಲವೂ ಕಂಡುಬರುತ್ತವೆ. ಒಂದೊಂದು ಸಂಪ್ರದಾಯಕ್ಕೆ ಒಂದೊಂದು ಪ್ರಧಾನ ವಾದ್ಯವಿರುತ್ತದೆ. ವಾದ್ಯಗಳ ಬಳಕೆಯಂತೆಯೇ ಇತರ ಅಂಗಗಳಾದ ಅಭಿನಯ ಹಾಗೂ ಕುಣಿತಗಳು ಮೇಳಗಳ ಆಕರ್ಷಣೆಗಳಾಗಿವೆ. ಕುಣಿತ ಮತ್ತು ಅಭಿನಯ ಇದ್ದ ಕಡೆ ವೇಷಭೂಷಣಗಳು ಇರುತ್ತವೆ. ಕರಪಾಲ, ಚೌಡಿಕೆ, ಕಿನ್ನರಿ ಜೋಗಿ ಮೇಳ ಇವು ನೃತ್ಯ ಪ್ರಧಾನವಾದವು. ಈ ಮೂರರಲ್ಲಿಯೂ ಮುಖ್ಯ ನಿರೂಪಕರು ತಮ್ಮ ಪರಂಪರೆಗೆ ಸೇರಿದ ವಿಶಿಷ್ಟ ವೇಷಭೂಷಣಗಳನ್ನಲ್ಲದೆ ಬಿರುದುಗಳನ್ನು ಧರಿಸಿರುತ್ತಾರೆ.

ಸಾಮಾನ್ಯವಾಗಿ ವೃತ್ತಿ ಗಾಯಕ ಮೇಳಗಳಲ್ಲಿ ಇಬ್ಬರು ಅಥವಾ ಮೂವರು ಕಲಾವಿದರು ಭಾಗವಹಿಸುವುದು ವಾಡಿಕೆ. ಸಾಮಾನ್ಯವಾಗಿ ಮೂರು ವಾದ್ಯಗಳ ಬಳಕೆಯಿರುವುದರಿಂದ ಮೂರು ಮಂದಿ ಕಲಾವಿದರು ಭಾಗವಹಿಸುವುದು ಹೆಚ್ಚು. ದೊಂಬಿದಾಸರು, ತಂಬೂರಿಯವರು, ಕರಪಾಲದವರು, ಕಿನ್ನರಿಯರು, ಚೌಡಿಕೆಯವರು, ಕಂಸಾಳೆಯವರು ಇವರೆಲ್ಲ ತಮ್ಮ ಮೇಳಗಳಲ್ಲಿ ಮೂರು ಮಂದಿ ಕಲಾವಿದರನ್ನು ಹೊಂದಿರುತ್ತಾರೆ. ಹೆಳವರು, ಗಣೆಯವರು, ನೀಲಗಾರರು ಸಾಮಾನ್ಯವಾಗಿ ಇಬ್ಬರು ಕಲಾವಿದರಿಂದ ಕೂಡಿರುತ್ತಾರೆ.

ಬದಲಾದ ಸನ್ನಿವೇಶದಲ್ಲಿ, ಬಹುತೇಕ ವೃತ್ತಿ ಗಾಯಕ ಸಂಪ್ರದಾಯಗಳು ಅವನತಿಯ ಹಾದಿಯಲ್ಲಿವೆ. ಹೆಚ್ಚಿನವುಗಳಲ್ಲಿ ವಾದ್ಯಗಳು ಎಂದಿನಂತೆಯೇ ಉಳಿದು ಬಂದಿವೆ. ಹಾಗೆಂದ ಮಾತ್ರಕ್ಕೆ ಈ ಎಲ್ಲ ಹಾಡುಗಾರಿಕೆ ಸಂಪ್ರದಾಯಗಳು ತಮ್ಮ ಎಂದಿನ ಭವ್ಯ ಸ್ವರೂಪದಲ್ಲೇ ಉಳಿದುಬಂದಿವೆ ಎಂದಲ್ಲ. ಅವುಗಳಲ್ಲಿಯೂ ಅವನತಿಯ ಛಾಯೆಯನ್ನು ಗುರುತಿಸಬಹುದು. ಬದಲಾದ ವಿದ್ಯಮಾನಗಳಿಂದಾಗಿ ಜನರ ಆಸಕ್ತಿಗಳು ಬದಲಾಗುತ್ತಿವೆ; ಮನರಂಜನೆಯ ಮಾಧ್ಯಮಗಳು ಪಲ್ಲಟಗೊಳ್ಳುತ್ತಿವೆ. ಇನ್ನು ಕೆಲವೇ ವರ್ಷಗಳಲ್ಲಿ ಈ ವೃತ್ತಿ ಗಾಯಕ ಪರಂಪರೆ ಕಣ್ಮರೆಯಾಗಿ ಹೋಗುವ ಆತಂಕ ಎಲ್ಲೆಡೆ ಮೂಡುತ್ತಿದೆ. ಈ ಪರಂಪರೆಯನ್ನು ಹೇಗೆ ಉಳಿಸಿಕೊಳ್ಳುವುದು ಎಂಬುದರ ಬಗ್ಗೆ ತೀವ್ರವಾಗಿ ಯೋಚಿಸಬೇಕಾಗಿದೆ.

ಎ.ಎಚ್.