ವಳ್ಳಂಕಳಿ ವಳ್ಳಂಕಳಿ ಅಥವಾ ದೋಣಿ ಸ್ಪರ್ಧೆ ಕೇರಳದ ಒಂದು ಪ್ರಸಿದ್ಧ ಜನಪದ ಕ್ರೀಡೆ. ಕೇರಳದಲ್ಲಿ ಜಲಾಶಯಗಳು ಅಧಿಕವಾಗಿರುವುದರಿಂದ ಈ ಕ್ರೀಡೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ನದಿ, ತೋಡುಗಳು ಅಧಿಕ ಸಂಖ್ಯೆಯಲ್ಲಿರುವ ಕುಟ್ಟನಾಡು ಜಿಲ್ಲೆಯಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಕುಟ್ಟನಾಡು, ಆರಮ್ಮಳಗಳಲ್ಲಿ ಪಾರಂಪರಿಕ ಜಲೋತ್ಸವ ನಡೆದರೆ, ಹಲವೆಡೆಗಳಲ್ಲಿ ಹೊಸ ರೀತಿಯ ಜಲೋತ್ಸವಗಳು ನಡೆಯುತ್ತಿವೆ. ದೋಣಿ ಸ್ಪರ್ಧೆಗೆ ದೊರೆಯುತ್ತಿರುವ ಪ್ರಚಾರ, ಆದರಣೆ ಕೇರಳೀಯರಿಗೆ ಅದರಲ್ಲಿರುವ ಆಸಕ್ತಿಯನ್ನು ತೋರಿಸುತ್ತದೆ.

ಇದು ಕೇವಲ ಮನರಂಜನಾ ಕ್ರೀಡೆಯಾಗಿ ಉಳಿದಿಲ್ಲ. ಕ್ರೀಡಾ ವಿನೋದದ ಅಂಶಗಳು ಅದರಲ್ಲಿ ಕಂಡುಬಂದರೂ ಪಾರಂಪರಿಕ ವಳ್ಳಂಕಳಿಗಳಲ್ಲಿ ಯಾವುದಾದರೂ ಕ್ಷೇತ್ರ ಆಚಾರಗಳು, ಆಚರಣೆಗಳೊಂದಿಗಿನ ಸಂಬಂಧ ಕಾಣಿಸುತ್ತದೆ. ಹಿಂದೂ ಆಚಾರ, ಪದ್ಧತಿಗಳೊಂದಿಗೆ ಇದಕ್ಕೆ ಕೆಲವು ಸಂಬಂಧವಿದ್ದರೂ ಎಲ್ಲ ಮತ, ಜಾತಿಯವರು ಇದರಲ್ಲಿ ಪಾಲ್ಗೊಳ್ಳುವುದು ವಿಶೇಷ. ಒಂದು ಗ್ರಾಮದ, ಇಲ್ಲವೇ ಒಂದು ದಡದವರ (ಕರೆಯವರ) ಒಗ್ಗಟ್ಟು ಈ ವಳ್ಳಂಕಳಿಯ ಹಿಂದಿನ ಆಶಯವಾಗಿದೆ.

ಒಂದು ಗ್ರಾಮ ಅಥವಾ ಒಂದು ತೀರದವರಿಗೆ ಪ್ರತ್ಯೇಕ ಜಲಪ್ರದೇಶಗಳಿವೆ. ಅದರಲ್ಲಿ ಚುಂಡನ್ ವಳ್ಳಂ (ಚೂಪಾಗಿರುವ) ಇರುಟ್ಟುಕುತ್ತಿ (ಕಪ್ಪಾದ), ವೆಪ್ಪ್, ಚುರುಳನ್ (ಸುಳಿಯುವ) ಮುಂತಾದ ಪ್ರಬೇಧಗಳಿವೆ. ನೂರಕ್ಕಿಂತಲೂ ಅಧಿಕ ಹುಟ್ಟು ಹಾಕುವವರುಳ್ಳ ಚುಂಡನ್ ವಳ್ಳಂ (ಚೂಪಾದ ದೋಣಿ) ಒಂದೊಂದು ಸಮುದಾಯದ ಅಭಿಮಾನವಾಗಿದೆ. ಕಾರಿಚ್ಚಾಲ್, ಪಾಯಿಪ್ಪಾಟ್ಟು, ಆಯಾ ಪರಂಬ್, ಚೆರುತನ, ಚಂಬಕ್ಕುಳಂ, ಜವಹರ್ ತಾಯಾಂಕರಿ, ವಲಿಯ ದಿವಾನ್‌ಜಿ ಮೊದಲಾದುವು ಹೆಸರಾಂತ ಚೂಪು ದೋಣಿಗಳಾಗಿವೆ. ಒಂದು ಜಲೋತ್ಸವದಲ್ಲಿ ಇತರ ದೋಣಿಗಳಿಗೆ ಹೊರತಾಗಿ ಚೂಪು ದೋಣಿಗಳೂ ಸ್ಪರ್ಧಿಸುತ್ತವೆ. ಒಂದೊಂದು ದಡದ ಚೂಪು ದೋಣಿಗಳನ್ನು ಆಯಾಯ ದಡದವರು ನಡೆಸುವರು. ಅದರಿಂದಾಗಿ ಈ ಜಲೋತ್ಸವ ತಂಡಗಳ ನಡುವಣ ಆರೋಗ್ಯಕರ ಸ್ಪರ್ಧಾ ಉತ್ಸವವಾಗಿದೆ. ಉದ್ದವಾದ ಹುಟ್ಟನ್ನು ಬಳಸಿ ರೋವಿಂಗ್ ಪರೀಕ್ಷೆ ನಡೆಸಿದ ನಂತರ ಒಂದೊಂದು ತಂಡವೂ ದೋಣಿ ಸ್ಪರ್ಧೆಯಲ್ಲಿ ಭಾಗವಹಿಸುತ್ತವೆ. ಚುಂಡುವಳ್ಳ, ವೆಪ್ಪ್‌ವೆಳ್ಳ, ಇರುಟ್ಟುಕುತ್ತಿ ಇವುಗಳಿಗೆ ಪ್ರತ್ಯೇಕ ತಂಡಗಳಿವೆ. ಒಂದೊಂದು ತಂಡಕ್ಕೂ ಪ್ರತ್ಯೇಕ ನಾಯಕ (ಕಪ್ತಾನ)ರಿರುತ್ತಾರೆ. ಹೆಚ್ಚಾಗಿ ಆತನೇ ಮುಖ್ಯಸ್ಥನಾಗಿರುತ್ತಾನೆ.

62_70A_DBJK-KUH

ಚಂಬಕ್ಕುಳಂ, ಪಾಯಿಪ್ಪಾಟ್, ನೀರೆಟ್ಟುಪುರಂ ಕುಟ್ಟನಾಡಿನ ಪಾರಂಪರಿಕ ದೋಣಿ ಸ್ಪರ್ಧೆಗಳಾಗಿವೆ. ಈ ಮೂರೂ ಜಲೋತ್ಸವಗಳು ಒಂದೊಂದು ಕ್ಷೇತ್ರದ ಆಚರಣೆಯೊಂದಿಗೆ ಸಂಬಂಧ ಹೊಂದಿದೆ. ಓಣಂ ಕಾಲದಲ್ಲಿ ಹೆಚ್ಚಾಗಿ ಜಲೋತ್ಸವ ನಡೆಯುತ್ತದೆ. ಆರನ್ಮುಳದಲ್ಲಿ ತಿರುಓಣದಂದು ಇದು ನಡೆಯುತ್ತದೆ. ಆದರೆ, ಅಲ್ಲಿಯ ಪಾರ್ಥಸಾರಥಿ ಪ್ರತಿಷ್ಠಾ ದಿನದಂದು ಅದು ನಿಜವಾದ ಸಂಭ್ರಮದೊಂದಿಗೆ ನಡೆಯುವುದು ರೂಢಿ. ಅಂದು ವಿಶೇಷ ಅಡುಗೆಯೂ ಇರುತ್ತದೆ. ಚಂಬಕ್ಕುಳಂ ದೋಣಿ ಸ್ಪರ್ಧೆ ಮಿಥುನ ಮಾಸ ಮೂಲಾ ನಕ್ಷತ್ರದಂದು ನಡೆಯುತ್ತದೆ. ದೋಣಿ ನಡೆಸುವುದರ ಜತೆಗೆ ತಾಳ ಲಯಬದ್ಧವಾಗಿ ಹಾಡುಗಳನ್ನು (ವಂಜಿಪ್ಪಾಟ್ಟು) ಹಾಡುವುದು ಈ ಜಲೋತ್ಸವದ ವಿಶೇಷ. ೧೯೫೨ರಲ್ಲಿ ಜವಾಹರಲಾಲ್ ನೆಹರೂ ಕುಟ್ಟನಾಡಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ದೋಣಿ ಸ್ಪರ್ಧೆ ನೋಡಿ ಮೆಚ್ಚಿಕೊಂಡಿದ್ದರು. ಅವರ ಭೇಟಿಯ ನಂತರ ಕೇರಳದಲ್ಲಿ ವಳ್ಳಂಕಳಿ (ದೋಣಿ ಸ್ಪರ್ಧೆ)ಗೆ ಹೆಚ್ಚಿನ ಮನ್ನಣೆ ಸಿಕ್ಕಿತು. ಇದನ್ನು ದೇಶೀಯೋತ್ಸವವಾಗಿ ಪರಿಗಣಿಸಲಾಯಿತು. ಹಿಂದೆ ಇದನ್ನು ಮಾನ್ಯ ಮಾಡದ ಹಲವೆಡೆಗಳಲ್ಲಿ ಆರಂಭಿಸಲಾಯಿತು. ಆಲಪ್ಪುಳ ಪುನ್ನಮಡಕ್ಕಗಳಲ್ಲಿ ನಡೆಯುವ ನೆಹರೂ ಟ್ರೋಫಿ ಜಲೋತ್ಸವ ಅತ್ಯಂತ ಜನಪ್ರಿಯ ಹಾಗೂ ಮಹತ್ವಪೂರ್ಣವಾದುದು.

ಕಾಲ ಕ್ರಮೇಣ ದೋಣಿ ಸ್ಪರ್ಧೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈಗ ಚೂಪು ದೋಣಿಗಳನ್ನು ನಡೆಸುವವರು ಅದೇ ದಡದವರಾಗಬೇಕೆಂದಿಲ್ಲ. ದೋಣಿಗಳನ್ನು ಇನ್ನೊಂದು ತಂಡದವರಿಗೆ ಬಾಡಿಗೆಗೆ ಕೊಡುವರು. ಯಾವುದಾದರೂ ಬೋಟ್ ಕ್ಲಬ್‌ನವರು ಬಾಡಿಗೆಗೆ ಪಡೆಯುವರು. ಇವರಿಗೆ ಯಾವುದಾದರೂ ಕಂಪನಿಗಳ ಇಲ್ಲವೇ ಸಂಸ್ಥೆಗಳ ಪ್ರಾಯೋಜಕತ್ವ ಸಿಗುತ್ತದೆ. ಒಂದು ಬೋಟ್ ಕ್ಲಬ್‌ನ ನಾವಿಕರು ಒಂದೇ ಊರಿಗೆ ಸೇರಿರಬೇಕು ಎಂದೇನೂ ಇಲ್ಲ. ಯಾರು ನಡೆಸಿದರೂ ಯಾವ ದೋಣಿ ಜಯಿಸುತ್ತದೆ ಎಂಬುದೇ ಮುಖ್ಯ. ದೋಣಿ ಯಾವುದೇ ಆದರೂ ತಮ್ಮ ದಡದ ದೋಣಿ ಗೆಲ್ಲಬೇಕೆಂದು ವೀಕ್ಷಕರು ಉತ್ಸಾಹದಿಂದ ಕೇಕೆ ಹಾಕುವರು. ಈಗ ಮಹಿಳೆಯರೂ ದೋಣಿ ನಡೆಸುತ್ತಾರೆ. ಅವರಿಗಾಗಿ ಪ್ರತ್ಯೇಕ ಸ್ಪರ್ಧೆ ಏರ್ಪಡಿಸಲಾಗುತ್ತಿದೆ. ಆರನ್ಮುಳದ ಪರಂಪರಾಗತ ಜಲೋತ್ಸವ ಒಂದು ಸ್ಪರ್ಧೆಯಾಗಿರಲಿಲ್ಲ. ಕೇವಲ ದೋಣಿ ಆಟವಷ್ಟೇ ಆಗಿತ್ತು. ಈಗ ಅಲ್ಲಿಯೂ ಸ್ಪರ್ಧೆ ನಡೆಯುತ್ತಿದೆ. ಕುಟ್ಟನಾಡಿನ ಚೂಪು ದೋಣಿಗಳಿಗೆ ಬದಲಾಗಿ ಆರನ್ಮುಳದಲ್ಲಿ ‘ವಳ್ಳಿಯೋಡ’ಗಳಿವೆ. ಇವುಗಲ್ಲಿ ಸಾಮ್ಯತೆ ಕಂಡು ಬಂದರೂ ನಿರ್ಮಾಣದಲ್ಲಿ ಸ್ವಲ್ಪ ವ್ಯತ್ಯಾಸಗಳಿವೆ. ಚೂಪು ದೋಣಿಗಳ ಮುಂಭಾಗ ನೀರಿನಲ್ಲಿ ಸ್ವಲ್ಪ ಮುಳುಗಿ ನಿಲ್ಲುತ್ತದೆ. ವಳ್ಳಿಯೋಡ (ವಳ್ಳಿ ದೋಣಿ)ಗಳ ಮುಂಭಾಗ ನೀರಿನಿಂದ ಮೇಲ್ಮುಖವಾಗಿರುತ್ತದೆ.

ಕೇರಳದ ದೋಣಿಗಳು ಅಲ್ಲಿಯ ವಾಸ್ತುಶಿಲ್ಪ ಕಲೆಯ ದೃಷ್ಟಾಂತಗಳಾಗಿವೆ. ಪಾರಂಪರಿಕವಾಗಿ ಬಂದ ಕಮ್ಮಾರಿಕೆಯೇ ಒಂದೊಂದು ದೋಣಿಗೂ ರೂಪವನ್ನು ನೀಡುತ್ತದೆ. ವಳ್ಳಂಕಳಿಯು ಕಮ್ಮಾರಿಕೆ, ವಳ್ಳಪ್ಪಾಟ್ಟು, ವಾದ್ಯಘೋಷ, ಕೇಕೆ ಹಾಕುವಿಕೆ, ಸ್ಪರ್ಧಾ ಬುದ್ಧಿ, ಕ್ರೀಡಾ ಕ್ಷಮತೆ ಎಲ್ಲವೂ ಸೇರಿಕೊಂಡಿರುವ ಜನಪದ ಉತ್ಸವವಾಗಿದೆ. ಕೇರಳ ಪ್ರವಾಸೋದ್ಯಮ ಇಲಾಖೆಯು ಇದನ್ನು ಪ್ರವಾಸಿ ವೈಭವವಾಗಿ ಪರಿಗಣಿಸಿದೆ.

ಎ.ಕೆ.ಎನ್. ಅನುವಾದ ಬಿ.ಎಸ್.ಎಸ್.

 

ವಾಮನಗುಂಟಲು ಆಧ್ರಪ್ರದೇಶದ ಅತ್ಯಂತ ಜನಪ್ರಿಯ ವಿನೋದಗಳಲ್ಲಿ ಇದೊಂದು (ಅಳಿಗುಳಿಮನೆ). ೧೪ ಗುಳಿಗಳಿರುವ ಮೀನಿನ ಆಕಾರದ ಮನೆಯನ್ನು ವಾಮನಗುಂಟ ಎಂದು ಹೇಳುತ್ತಾರೆ. ಇದನ್ನು ತೆರೆಯಲು ಮತ್ತು ಮುಚ್ಚಲು ಅನುವಾದಂತೆ ತಯಾರು ಮಾಡಿರುತ್ತಾರೆ. ಒಂದು ಕಡೆ ೭ ಗುಳಿಗಳು ಇನ್ನೊಂದು ಕಡೆ ೭ ಗುಳಿಗಳು ಇರುತ್ತವೆ. ಇದನ್ನು ಇಬ್ಬರು ವ್ಯಕ್ತಿಗಳು ಆಡುತ್ತಾರೆ. ಕಾಲಕ್ಷೇಪಕ್ಕಾಗಿ ಒಬ್ಬರು ಕೂಡಾ ಆಡಿಕೊಳ್ಳಬಹುದು. ಇದಕ್ಕಾಗಿ ಹೆಚ್ಚಾಗಿ ಹುಣಸೆಬೀಜಗಳನ್ನು ಬಳಸುತ್ತಾರೆ. ಸಣ್ಣ ಸಣ್ಣ ಕಲ್ಲು ಅಥವಾ ಚಿಪ್ಪುಗಳನ್ನು, ಗುಲಗಂಜಿಗಳನ್ನು ಬಳಸುತ್ತಾರೆ. ಸಾಮಾನ್ಯವಾಗಿ ಒಂದೊಂದು ಗುಳಿಯಲ್ಲಿ ೧೩ ಬೀಜಗಳನ್ನು ಹಾಕುತ್ತಾರೆ. ಮಧ್ಯದಲ್ಲಿರುವ ಗುಳಿಗಳನ್ನು ಕಾಶಿ ಗುಳಿಗಳು ಎಂದು ಹೇಳುತ್ತಾರೆ.

63_70A_DBJK-KUH

ಆಟ ಆಡುವವರು ತಮ್ಮ ಕಡೆ ಇರುವ ಗುಳಿಗಳಲ್ಲಿ ಯಾವುದೋ ಒಂದು ಗುಳಿಯಿಂದ ೧೩ ಬೀಜಗಳನ್ನು ತೆಗೆದು ಎಡಗಡೆಗೆ ಒಂದೊಂದು ಗುಳಿಯಲ್ಲಿ ಒಂದೊಂದರಲ್ಲಿ ಒಂದರಂತೆ ಹಾಕುತ್ತಾ ಹೋಗುತ್ತಾರೆ. ಬೀಜಗಳನ್ನು ತೆಗೆದಾಗ ಆ (ಮನೆ) ಗುಳಿ ಖಾಲಿಯಾಗಿರುತ್ತದೆ. ೧೩ ಗುಳಿಗಳಲ್ಲಿ ೧೩ ಬೀಜಗಳನ್ನು ಹಾಕಿದಾಗ ಖಾಲಿ ಇರುವ ೧೪ನೆಯ ಗುಳಿಯ ಮೇಲೆ ಕೈಯಿಂದ ತಟ್ಟಿ ಅದರ ಪಕ್ಕದ ಗುಳಿಯ ಎಲ್ಲ ಬೀಜಗಳನ್ನು ಮತ್ತು ಎದುರಿಗೆ ಇರುವ ಬೇರೆಯವರ ಗುಳಿಯಲ್ಲಿರುವ ಬೀಜಗಳನ್ನು ಒಬ್ಬರೇ ತೆಗೆದುಕೊಳ್ಳುತ್ತಾರೆ. ಆಮೇಲೆ ಆ ಕಡೆ ಆಡುತ್ತಿರುವವರು ಇದೇ ರೀತಿ ಆಟ ಮುಂದುವರಿಸುತ್ತಾರೆ. ಈ ರೀತಿ ಎಲ್ಲ ಗುಳಿಗಳಲ್ಲಿರುವ ಬೀಜಗಳು ಖಾಲಿಯಾಗುವವರೆಗೆ ಆಡುತ್ತಾರೆ. ಯಾರು ಹೆಚ್ಚು ಬೀಜಗಳನ್ನು ಪಡೆದರೆ ಅವರು ಗೆದ್ದ ಹಾಗೆ. ಮತ್ತೆ ಆಟವನ್ನು ಪ್ರಾರಂಭಿಸುತ್ತಾರೆ. ಕಡಿಮೆ ಬೀಜಗಳಿರುವವರು ಎಷ್ಟು ಗುಳಿಗಳಿಗೆ ಬೀಜಗಳು ಕಡಿಮೆಯಾದವು ಎಂಬುದನ್ನು ಲೆಕ್ಕ ಮಾಡುತ್ತಾರೆ. ಈ ಆಟಗಳನ್ನು ಆಡುವಾಗ ಒಂದು ಗುಳಿಯಲ್ಲಿ ೪ ಬೀಜಗಳಿದ್ದರೆ ಅದನ್ನು ಆವು (ಹಸು) ಎಂದು ಹೇಳುತ್ತಾರೆ. ಆ ನಾಲ್ಕು ಬೀಜವನ್ನು ತೆಗೆದುಕೊಳ್ಳುತ್ತಾರೆ. ಹೋಮಕುಂಡದಲ್ಲಿ ತುಪ್ಪ ಮುಂತಾದವನ್ನು ಹಾಕುತ್ತ ಯಜ್ಞವನ್ನು ಮಾಡಿದಂತೆ ಒಂದೊಂದು ಗುಳಿಯಲ್ಲಿ ಒಂದೊಂದು ಹುಣಸೆ ಬೀಜವನ್ನು ಹಾಕುತ್ತ ಹೋಗುವುದರಿಂದ – ಇದಕ್ಕೆ ಜಮಗುಂಟಲು ಎಂಬ ಹೆಸರು ಬಂದು ಅನಂತರದ ಕಾಲದಲ್ಲಿ ಅದನ್ನು ಜಮನಗುಂಟಲು ಎಂದು ಹೇಳುತ್ತಿದ್ದರೆಂದು ಭಾವಿಸಲಾಗಿದೆ. ಕನ್ನಡದಲ್ಲಿ ಇದನ್ನು ಅಳಿಗುಳಿ ಮನೆ ಎಂದು ಹೇಳಿದರೆ ತಮಿಳಿನಲ್ಲಿ ಪಲ್ಲಾಂಗುಡಿ ಎನ್ನುತ್ತಾರೆ. ಪಲ್ಲಾಂಗುಡಿ ಎಂದರೆ ೧೪ ಗುಳಿಗಳು ಎಂದರ್ಥ.

ವಿ.ಎಸ್. ಅನುವಾದ ಎ.ಎಂ.ಡಿ.

 

ವಾಲ್ಮೀಕಿ ಇವರನ್ನು ಆಂಧ್ರಪ್ರದೇಶದ ಏಜೆನ್ಸಿ ಪ್ರಾಂತಗಳಲ್ಲಿ ಮಾತ್ರವೇ ಬುಡಕಟ್ಟುಗಳೆಂಬುದಾಗಿ ಗುರುತಿಸಲಾಗಿದೆ. ವಿಶಾಖ, ಶ್ರೀಕಾಕುಳಂ, ವಿಜಯನಗರಂ ಮತ್ತು ಪೂರ್ವ ಗೋದಾವರಿ ಜಿಲ್ಲೆಗಳಲ್ಲಿಯೂ ಇವರು ವಾಸವಾಗಿದ್ದಾರೆ. ಇವರ ಮಾತೃಭಾಷೆ ತೆಲುಗು. ಇವರು ರಾಮಾಯಣವನ್ನು ಬರೆದ ವಾಲ್ಮೀಕಿಯ ವಾರಸುದಾರರೆಂದು ಹೇಳುತ್ತಾರೆ. ಇವರ ಗೋತ್ರಗಳು ನಾಗ, ಚೌಸ್ (ನಾಗರ ಹಾವು), ಮತ್ಸ್ಯ (ಮೀನು), ಪಂಗಿ ಚೌಸ್ (ಮಂಗ), ಕೊರ‍್ರ ಚೌಸ್ (ಸೂರ್ಯ), ಭಲ್ಲು ಚೌಸ್ (ಕರಡಿ), ಚಿಲ್ಲಿ ಚೌಸ್ (ಆಡು) ಮುಂತಾಗಿವೆ. ಆದರೆ ಪೂರ್ವ ಗೋದಾವರಿ ಜಿಲ್ಲೆಯವರಿಗೆ ಈ ಗೋತ್ರಗಳಿಲ್ಲ. ಕೆಲವರು ಕ್ರೈಸ್ತ ಧರ್ಮವನ್ನು ಸ್ವೀಕರಿಸಿದ್ದಾರೆ. ಬಹಳಷ್ಟು ಜನ ಹಿಂದೂಗಳು. ವಾಲ್ಮೀಕಿಗಳು ಮಾಂಸಾಹಾರಿಗಳು. ದನದ ಮಾಂಸವನ್ನು ತಿನ್ನುತ್ತಾರೆ. ಬೇಸಾಯ ಪ್ರಧಾನ ವೃತ್ತಿ. ಕೂಲಿ ಕೆಲಸ ಮಾಡುತ್ತಾರೆ. ಮನೆತನದ ವಿವಾಹಗಳು, ಪ್ರೇಮ ವಿವಾಹಗಳು ಉಂಟು. ವರದಕ್ಷಿಣೆ ಪದ್ಧತಿ ಇದೆ.

ಬೇಸಾಯದಿಂದ ಇವರು ರಾಗಿ, ಬತ್ತ, ಜೋಳ, ತೊಗರಿ ಬೇಳೆಯುತ್ತಾರೆ. ಶೇಂಗಾ ಎಣ್ಣೆಯನ್ನು ಅಡುಗೆಗೆ ಬಳಸುತ್ತಾರೆ. ವಿಧವಾ ವಿವಾಹಕ್ಕೆ ಅವಕಾಶವಿದೆ. ಗಂಡಸರು ಸಿಗರೇಟ್, ಬೀಡಿ ಸೇದಿ, ಹೊಗೆ ಸೊಪ್ಪನ್ನು ಕೂಡಾ ಹಾಕುತ್ತಾರೆ. ಇವರು ಸಣ್ಣ ಪುಟ್ಟ ವ್ಯಾಪಾರ, ಬಡ್ಡಿ ವ್ಯಾಪಾರ, ಸಂತೆಗಳಲ್ಲಿ ಗಡಿಗೆಗಳನ್ನು ಮಾರುವುದು ಮುಂತಾದುವನ್ನು ಮಾಡುತ್ತಾರೆ.

೨೦೦೧ರ ಜನಗಣತಿಯ ಪ್ರಕಾರ ಇವರ ಒಟ್ಟು ಜನಸಂಖ್ಯೆ ೬೬,೮೧೪. ಅಂದರೆ ೧.೩೩%.

ಬಿ.ಕೆ.ಆರ್. ಅನುವಾದ ಕೆ.ಎಸ್.

 

ವಿನಾಯಕ ಚವಿತಿ ತೆಲುಗರು ಆಚರಿಸುವ ಹಬ್ಬಗಳಲ್ಲಿ ಅತಿ ಪ್ರಮುಖ ಹಾಗೂ ಪ್ರಸಿದ್ಧವಾದುದು. ಇದನ್ನು ಗಣೇಶ ಚತುರ್ಥಿ, ಪಿಳ್ಳಾರಿ ಹಬ್ಬ, ಪಿಳ್ಳಾರಿ ಜಾತಿ ಎಂಬ ಹೆಸರುಗಳಿಂದ ಕರೆಯುತ್ತಾರೆ. ವಿನಾಯಕನಿಗೆ ವಿಘ್ನೇಶ್ವರ, ಲಂಬೋದರ, ಗಣಪತಿ, ಗಣೇಶ, ಗಣನಾಯಕ, ಪಿಳ್ಳಾರಿ ಮುಂತಾದ ಅನೇಕ ಹೆಸರುಗಳಿವೆ.

ಪ್ರತಿವರ್ಷ ಭಾದ್ರಪದ ಶುದ್ಧ ಚೌತಿಯಂದು ಈ ಹಬ್ಬವನ್ನು ಆಚರಿಸುತ್ತಾರೆ. ಇದನ್ನು ವಿನಾಯಕ ವ್ರತ ಎಂದೂ ಕರೆಯುವರು. ಈ ಪೂಜಾ ವಿಧಾನವನ್ನು ವಿನಾಯಕ ವ್ರತಕಲ್ಪ ಎನ್ನುವರು.

ಹಬ್ಬದ ದಿನ ಮುಂಜಾನೆ ಅಭ್ಯಂಜನ ಸ್ನಾನ ಮಾಡಿ ಮನೆ ಸಾರಿಸಿ ಬಾಗಿಲಿಗೆ ತೋರಣ ಕಟ್ಟಿ ರಂಗೋಲಿಯನ್ನು ಹಾಕುತ್ತಾರೆ. ಅನಂತರ ಸಮತಟ್ಟಾಗಿ ಸಿದ್ಧಗೊಳಿಸಿದ ಸ್ಥಳದಲ್ಲಿ ವಿನಾಯಕನ ಮೂರ್ತಿ ಸ್ಥಾಪನೆ ಮಾಡುತ್ತಾರೆ. ಮಣ್ಣಿನಿಂದ ಮಾಡಿದ ಗಣಪತಿಗೆ ಬಣ್ಣ ತುಂಬಿ ಅಲಂಕರಿಸುತ್ತಾರೆ. ಈ ವಿಗ್ರಹವನ್ನು ಹಬ್ಬದ ದಿನ ಬೆಳಗ್ಗೆ ಕೊಂಡು ತರುವರು. ವಿಗ್ರಹದ ಸುತ್ತ ‘ಪಾಲವೆಲ್ಲಿ’ ಕಟ್ಟುತ್ತಾರೆ.

ಪಾಲವಲ್ಲಿ : ಎಂದರೆ ಬಿದಿರು ದಬ್ಬೆಗಳಿಂದ ಮಾಡಿದ ಮಂಟಪ. ದಬ್ಬೆಗಳನ್ನು ಲಂಬವಾಗಿ ಅಡ್ಡಲಾಗಿ ಇಟ್ಟು ದಾರದಿಂದ ಕಟ್ಟಿರುತ್ತಾರೆ. ಹಣ್ಣುಗಳನ್ನು ಕಟ್ಟಿ ವಿನಾಯಕನ ವಿಗ್ರಹದ ಮೇಲೆ ಬರುವಂತೆ ಇಳಿ ಬಿಟ್ಟಿರುತ್ತಾರೆ.

ವಿನಾಯಕನನ್ನು ಅರಿಸಿನ ಕುಂಕುಮದಿಂದಲೂ, ಪುಷ್ಪಗಳಿಂದಲೂ ಮತ್ತು ಚಂದನ, ವಿಭೂತಿಗಳಿಂದಲೂ ಅಲಂಕರಿಸುತ್ತಾರೆ. ಗಣೇಶನನ್ನು ಬ್ರಹ್ಮಚಾರಿ ಎಂದು ಭಾವಿಸಿ ಮೂರೆಳೆ ಜನಿವಾರವನ್ನು ಹಾಕುತ್ತಾರೆ. ಹೊಕ್ಕಳ ಮೇಲೆ ಒಂದು ರೂಪಾಯಿ ನಾಣ್ಯವನ್ನು ಚಂದನ ಹಚ್ಚಿ ಅಂಟಿಸುತ್ತಾರೆ. ವಿನಾಯಕನ ಮಂಟಪವನ್ನು ತೆನೆಗಳು ಕಬ್ಬು, ಬಾಳೆದಂಡು ಮೊದಲಾದವುಗಳಿಂದ ಅಲಂಕರಿಸುತ್ತಾರೆ. ಐದು ಬಗೆಯ ಹಣ್ಣುಗಳನ್ನು ನೈವೇದ್ಯಕ್ಕಿಡುತ್ತಾರೆ. ವಿನಾಯಕನ ವಿಗ್ರಹದ ಪಕ್ಕ ಪುಸ್ತಕಗಳನ್ನಿಟ್ಟು ಪೂಜಿಸುತ್ತಾರೆ.

ವಿನಾಯಕನ ವ್ರತದ ಕಥೆ ಓದುತ್ತಾ ಪೂಜೆ ಮಾಡುತ್ತಾರೆ. ಅವನ ಮಹಿಮೆಯನ್ನು ತಿಳಿಸುವ ಈ ಕಥೆಯನ್ನು ಒಬ್ಬ ವ್ಯಕ್ತಿ ಓದುತ್ತಿದ್ದರೆ ನೆರೆದವರೆಲ್ಲ ಕೇಳುತ್ತಾರೆ.

ಈ ಪೂಜಾವಿಧಾನ ವಿಶಿಷ್ಟವಾದುದು. ಇದರಲ್ಲಿ ವಿವಿಧ ಬಗೆಯ ಹೂಗಳು, ಪತ್ರೆಗಳು, ಪೂಜಾಸಾಮಗ್ರಿಗಳು ಇರುತ್ತವೆ. ಗಣಪತಿಯನ್ನು ೨೧ ಬಗೆಯ ಎಲೆಗಳಿಂದಲೂ ಗರಿಕೆಯಿಂದಲೂ ಪ್ರತ್ಯೇಕ ಪೂಜೆ ಮಾಡುತ್ತಾರೆ. ಈ ಪತ್ರೆಗಳಿಗೆ ಔಷಧಿಯ ಗುಣವಿದೆ. ಪೂಜೆ ಆದ ಮೇಲೆ ಆರತಿ ಬೆಳಗಿ ಸಾಷ್ಟಾಂಗ ನಮಸ್ಕಾರ ಮಾಡುವರು. ತಪ್ಪುಗಳಿದ್ದರೆ ಕ್ಷಮಿಸುವಂತೆ ಕೋರಿ ಬಸ್ಕಿ ಹೊಡೆದು ಕೆನ್ನೆಗೆ ಹೊಡೆದುಕೊಂಡು ಅನಂತರ ತೀರ್ಥ ಪ್ರಸಾದಗಳನ್ನು ಸ್ವೀಕರಿಸುತ್ತಾರೆ. ಮಕ್ಕಳು ಸುತ್ತಮುತ್ತಲಿನ ಮನೆಗಳಿಗೆ ಹೋಗಿ ಗಣೇಶನ ದರ್ಶನ ಮಾಡಿ ವಿನಯದಿಂದ ನಮಸ್ಕರಿಸುತ್ತಾರೆ.

ವಿನಾಯಕ ಚತುರ್ಥಿಗೆ ಮಾಡುವ ನೈವೇದ್ಯ ಸಹ ವಿಶೇಷವಾದುದು. ಹೂರಣ, ಕಡುಬು, ಉಂಡೆ, ಪಡ್ಡು ಇತ್ಯಾದಿ ಅಡುಗೆಗಳನ್ನು ಮಾಡುತ್ತಾರೆ.

ವಿನಾಯಕನ ಜನನಕ್ಕೆ ಸಂಬಂಧಿಸಿದ ಕಥೆಯೊಂದು ಪ್ರಚಾರದಲ್ಲಿದೆ. ಪಾರ್ವತಿದೇವಿ ಒಮ್ಮೆ ಸ್ನಾನಕ್ಕೆ ಹೊರಡುವಾಗ ಕೈಲಾಸದಲ್ಲಿ ಕಾವಲಿಗೆ ಒಬ್ಬನನ್ನು ನೇಮಿಸಬೇಕು ಎಂದುಕೊಳ್ಳುತ್ತಾಳೆ. ಆಗ ಅರಿಸಿನದಿಂದ ಗೊಂಬೆ ಮಾಡಿ ಜೀವ ತುಂಬುವಳು. ಆ ಹುಡುಗ ಶಕ್ತಿವಂತ. ಯಾರೂ ಒಳಗೆ ಬರದಂತೆ ಕಾವಲು ಕಾಯುತ್ತಾನೆ. ಶಿವ ಬಂದಾಗ ಕಾವಲು ಹುಡುಗ ಅವನನ್ನು ಒಳಗೆ ಬರಲು ಒಪ್ಪಿಗೆ ನೀಡಲಿಲ್ಲ. ಶಿವನಿಗೆ ಕೋಪ ಬಂತು. ಶೂಲದಿಂದ ಅವನ ತಲೆಯನ್ನು ಕತ್ತರಿಸಿದ. ಅಷ್ಟರಲ್ಲಿ ಸ್ನಾನ ಮುಗಿಸಿ ಬಂದ ಪಾರ್ವತಿ ಶಿವನನ್ನು ಪ್ರಾರ್ಥಿಸಿದಳು. ಶಿವ ಕರುಣೆ ತೋರಿ ಬಂದು ಆನೆಯ ತಲೆಯನ್ನು ತರಿಸಿ ಕೂಡಿಸಿದನು. ಈ ತಲೆಯನ್ನು ಹೊಂದಿದ ವ್ಯಕ್ತಿ ಗಣೇಶನಾದನು. ಗಣೇಶನ ಸುತ್ತ ಅನೇಕ ಕಥೆಗಳಿವೆ. “ಓ ಬೊಜ್ಜ ಗಣಪಯ್ಯ ನೀ ಬಂಟನೇನಯ್ಯ ಉಂಡ್ರಾಳ್ಳ ಮೀದಿಕಿ ದಂಡು ಪಂಪು” ಎಂಬಲ್ಲಿ ತಿನ್ನುವುದರಲ್ಲಿ ವಿನಾಯಕನಿಗಿರುವ ಪ್ರೀತಿಯ ಸಂಕೇತವಾಗಿ ಇದನ್ನು ಹೇಳಲಾಗುತ್ತದೆ. ಇವನನ್ನು ಮೋದಕ ಪ್ರಿಯನೆಂದು ಕೆಲವರು ಹೇಳುತ್ತಾರೆ. ಈತನ ಆಹಾರ ಪ್ರೇಮವನ್ನು ಕುರಿತು ಒಂದು ಐತಿಹ್ಯ ಈ ಹಬ್ಬದೊಂದಿಗೆ ತಳುಕು ಹಾಕಿಕೊಂಡಿದೆ.

ಒಮ್ಮೆ ವಿನಾಯಕ ಹೊಟ್ಟೆ ಬಿರಿಯುವಷ್ಟು ಕರಿದ ತಿಂಡಿಗಳನ್ನು ತಿಂದನಂತೆ, ಭಕ್ತರು ಸಮರ್ಪಿಸಿದ ನೈವೇದ್ಯದ ಹಣ್ಣುಗಳನ್ನೆಲ್ಲ ಸೇವಿಸಿದನಂತೆ. ಹೊಟ್ಟೆ ಒಡೆಯಿತಂತೆ, ಆಗ ಹಾವನ್ನು ಹಗ್ಗದಂತೆ ಹೊಟ್ಟೆ ಸುತ್ತ ಕಟ್ಟಿಕೊಂಡನಂತೆ, ಮೇಲಿನಿಂದ ಇದನ್ನು ಗಮನಿಸಿದ ಚಂದ್ರ ನಕ್ಕನಂತೆ. ಇದರಿಂದ ಕೋಪಗೊಂಡ ವಿನಾಯಕ “ನಿನ್ನ ನೋಡಿದವರಿಗೆ ಅಪನಿಂದೆ ಉಂಟಾಗುತ್ತದೆ” ಎಂದು ಶಾಪ ಕೊಟ್ಟನಂತೆ. ಆಗ ಚಂದ್ರ ಕೇಳಿಕೊಂಡದ್ದರಿಂದ “ನನ್ನನ್ನು ಪೂಜಿಸಿದವರಿಗೆ ಈ ದೋಷ ಇರುವುದಿಲ್ಲ” ಎಂದು ದೋಷ ನಿವಾರಣೋಪಾಯವನ್ನು ಸೂಚಿಸಿದನಂತೆ. ಆದ್ದರಿಂದಲೇ ಚೌತಿಯಂದು ಚಂದ್ರನನ್ನು ನೋಡಲು ಜನ ಹಿಂಜರಿಯುತ್ತಾರೆ. ವಿನಾಯಕ ಚೌತಿಯ ಪೂಜೆ ಮುಗಿಯುವವರೆಗೆ ಚಂದ್ರನನ್ನು ನೋಡದೆ ಮುಖ ಮರೆಮಾಡಿಕೊಳ್ಳುತ್ತಾರೆ.

ಪೂಜೆ ಮುಗಿದ ಮೇಲೆ ವಿಗ್ರಹವನ್ನು ನದಿ, ಕೆರೆ ಅಥವಾ ಬಾವಿಗಳಲ್ಲಿ ವಿಸರ್ಜನೆ ಮಾಡಿ ಬರುತ್ತಾರೆ. ಕೆಲವರು ಹಬ್ಬದ ದಿನವೇ ವಿಸರ್ಜನೆ ಮಾಡಿದರೆ, ಕೆಲವರು ಮೂರು ಅಥವಾ ಐದನೆಯ ದಿನದಂದು ವಿಸರ್ಜನೆ ಮಾಡುತ್ತಾರೆ. ಕೆಲವರು ಮಣ್ಣಿನ ಗಣೇಶ ಪ್ರತಿಮೆಗಳನ್ನು ಕಣಜಗಳಲ್ಲಿಟ್ಟಿರುತ್ತಾರೆ.

ಪಿ.ಆರ್.ಎಚ್. ಅನುವಾದ ವಿ.ಆರ್.

 

ವಿಪತ್ತುಪ್ಪಾಟ್ಟು ಚೆನ್ನೈನಿಂದ ಹೊರಟು ರಾಮೇಶ್ವರ ತಲುಪಬೇಕಾದ ರೈಲುಗಾಡಿ ಅರಿಯಲೂರ್ ಸೇತುವೆಯ ಮೇಲುಗಡೆ ಹೋಗುವಾಗ ಪ್ರವಾಹದಿಂದಾಗಿ ಅದು ವಿಪತ್ತಿಗೀಡಾಯಿತು ಎಂಬುದು ಒಂದು ವಾದ. ದುಷ್ಕೃತ್ಯದ ಕಾರಣದಿಂದಾಗಿ ಸೇತುವೆ ಮುರಿದು ಬಿದ್ದು ರೈಲು ಉರುಳಿತು ಎಂಬುದು ಮತ್ತೊಂದು ವಾದ. ಇದರ ಬಗೆಗೆ ಸತ್ಯಾಸತ್ಯ ಇದುವರೆಗೂ ಹೊರಗೆ ಬಂದಿಲ್ಲ. ಇದರ ಬಗೆಗೆ ಇನ್ನೂ ನ್ಯಾಯ ವಿಚಾರಣೆ ನಡೆಯುತ್ತಲೇ ಮುಂದುವರಿದಿದೆ. ಇಂತಹ ಘೋರವಾದ ದುರ್ಘಟನೆಯಲ್ಲಿ ಇನ್ನೂರಕ್ಕೂ ಮೇಲ್ಪಟ್ಟು ಜನರು ಸಾವಿಗೀಡಾದರು.

ತಿರುಚಿಗೆ ಸಮೀಪವಿರುವ ಅರಿಯಲೂರಿನಲ್ಲಿ ನಡೆದ ಈ ರೈಲು ಅಪಘಾತದಲ್ಲಿ ಅಪಾರ ಪ್ರಾಣ ಹಾನಿಯಾಗಿದ್ದು ಈ ದುರಂತ ಜನರ ಮನಸ್ಸನ್ನು ವಿಶೇಷವಾಗಿ ಕಲಕಿತು.

            ದೇವರ ದರ್ಶನಕ್ಕೆಂದು ಹೊರಟ
ಭಕ್ತಕೋಟಿ ಅರವತ್ತು ಮಂದಿ
ನಗನಾಣ್ಯ ಸಾಮಾನುಗಳೊಂದಿಗೆ
ನದಿಯಲ್ಲುರುಳಿ ಸಾವಿಗೀಡಾದರಯ್ಯಾ
ರಾಮೇಶ್ವರ ಭಕ್ತ ಸಮೂಹ
ನಡುದಾರಿಯಲ್ಲಿ ಪಲ್ಟಿ

ಅರವತ್ತು ಮಂದಿ ಸಾವಿಗೀಡಾದ ಸುದ್ದಿ ಇನ್ನೂರಕ್ಕೂ ಮೇಲ್ಪಟ್ಟು ಎಂದು ಕತೆಯಾಗಿ ವರ್ಣಿಸಲಾಗಿದೆ. ಅರವತ್ತು ಮಂದಿ ಹೆಂಗಸರೆಂದೂ ಇನ್ನುಳಿದವರು ಗಂಡಸರೆಂದೂ ಎಣಿಸಿಕೊಳ್ಳಲು ಅವಕಾಶವಿದೆ.

            ಕಟಕಟವೆಂದು
ಸರಸರ ಬಂದ ರೈಲು
ಮಡಮಡವೆಂದು ಮುರಿದ
ಸೇತುವೆಯಲ್ಲಿ ಪಲ್ಟಿ

ಎಂದು ಕತೆ ಪ್ರಾರಂಭವಾಗುತ್ತದೆ. ೧೯೮೩ರಲ್ಲಿ ನಡೆದ ಈ ದುರಂತವನ್ನು ಕತೆಯ ಹಾಡನ್ನಾಗಿ ಗ್ರಾಮೀಣ ಕಲಾ ಕಾರ್ಯಕ್ರಮಗಳಲ್ಲಿ ಕಲಾವಿದರು ಹಾಡಿ ಅಭಿನಯಿಸುತ್ತಾರೆ. ಈ ಕೆಳಗೆ ಕಾಣುವ ಹಾಡನ್ನು ಟಿ.ವಿ. ಪಚ್ಚೈಯಪ್ಪನ್ ಅವರು ರಚಿಸಿದ್ದಾರೆ.

            ಹಿರಿಯರೇ ಕಿರಿಯರೇ
ಪ್ರಿಯ ಸಭಿಕರೇ
ಅರಿಯಲೂರ್ ರೈಲು ದುರಂತ
ಅತಿಶಯ ಕತೆಯನು ಹೇಳುವೆ
ಅಳವಿಲ್ಲದ ನೋವು ಪಾಪ
ಅವರಿಗಾಯ್ತು ದುಃಖ ಹಲವರಿಗಾಯ್ತು
ಅಪಾರ ಹಾನಿ

ಹೀಗೆ ಪ್ರಾರಂಭವಾಗುತ್ತದೆ ಈ ವಿಪತ್ತಿನ ಕಥೆಯ ಹಾಡು. ಈ ಕತೆಯನ್ನು ಯಾರು ಯಾರಿಗೆ ಹೇಳುತ್ತಾರೆಂಬುದನ್ನು ಹೇಳಲಾಗುತ್ತದೆ. ಮದುರೆಗೆ ಸೇರಿದ ಟಿ.ವಿ. ಪಚ್ಚೈಯಪ್ಪನ್ ಎಂಬ ಓದು ಬರಹ ಬಲ್ಲ ಒಬ್ಬ ವ್ಯಕ್ತಿ ಹೇಳುತ್ತಾನೆ. ಈ ಕವಿ ಇದಲ್ಲದೆ ಬೇರೆ ಕೆಲವು ಕತೆಯ ಹಾಡುಗಳನ್ನು ಸಹ ರಚಿಸಿದ್ದಾನೆ.

ಮದುರೈ ಪ್ರದೇಶದ ಅನೇಕ ಜನಪದ ಕಲಾವಿದರು ಇವರ ಬಳಿ ತಮಗೆ ಬೇಕಾಗಿರುವ ಅನೇಕ ಹಾಡುಗಳನ್ನು ರಚಿಸಿಕೊಡುವಂತೆ ಕೇಳಿ ಪಡೆಯುವುದು, ಅದಕ್ಕೆ ಪ್ರತಿಫಲವಾಗಿ ಅವರಿಗೆ ಸಂಭಾವನೆ ಕೊಡುವುದು ರೂಢಿಯಲ್ಲಿದೆ. ಇವರು ವಾಸಿಸುವ ಸ್ಥಳ ಜನಪದ ಕಲಾವಿದರು ಹಲವು ಮಂದಿ ವಾಸಿಸುವ ಸ್ಥಳದಲ್ಲಿಯೇ ನಗರದ ಹೊರವಲಯದಲ್ಲಿದೆ. ಇವರು ರಚಿಸುವ ಹಾಡುಗಳನ್ನು ಜನಪದ ಸಂಗೀತಕ್ಕೆ ಹೊಂದಿಕೆಯಾಗುವ ಸಿಂಧು, ನೈಯಾಂಡಿ ಮುಂತಾದವುಗಳಿಗೆ ಅಳವಡಿಸಿಕೊಳ್ಳಲಾಗುತ್ತದೆ. ಅಲ್ಲದೆ ಜನಪದ ಕಲಾವಿದರನ್ನು ಹಾಡುವಂತೆ ಹೇಳಿ ಅವರು ಹಾಡುವ ಮಟ್ಟಿನಲ್ಲಿಯೇ ಅವರಿಗೆ ಅಗತ್ಯವಿರುವ ಹಾಡುಗಳನ್ನು ಸಹ ಅವರು ರಚಿಸಿಕೊಡುತ್ತಾರೆ. ಜನಪದರಿಗೆ ಸುಲಭವಾಗಿ ಹಾಡಲು ಅದಕ್ಕೆ ತಕ್ಕ ರೀತಿಯಲ್ಲಿ ಅವರು ಬಳಸುವ ಪದಗಳು, ರಾಗ, ತಾಳ ಮುಂತಾದವುಗಳನ್ನು ಬಳಸಿ ಅವರು ಹಾಡುಗಳನ್ನು ರಚಿಸುತ್ತಾರೆ. ಹಾಡುಗಳನ್ನು ಹಾಡಿ ತೋರಿಸಿ ಅದರಲ್ಲಿ ಸೂಕ್ತ ರೀತಿಯಲ್ಲಿ ಕಲಾವಿದರಿಗೆ ತರಬೇತಿಯನ್ನು ಸಹ ನೀಡುತ್ತಾರೆ.

ಇದೇ ರೀತಿಯಲ್ಲಿ ಜನಪದ ಕಲಾವಿದರಿಗೆ ಸಹಾಯಕವಾಗಿರುವ ಇನ್ನೊಬ್ಬ ಕವಿ ಪೆರುಮಾಳ್ ಕೋನಾರ್. ಕರಗದಾಟದ ಕಲಾವಿದರು, ರಾಜಾ ರಾಣಿ ಆಟದ ಕಲಾವಿದರು, ಕುರುವ ಕುರುವತ್ತಿ ಆಟದ ಕಲಾವಿದರು, ನೈಯಾಂಡಿ ಮೇಳದ ಕಲಾವಿದರು, ಕೋಮಾಳಿ (ಬಫೂನ್) ಮುಂತಾದ ಪಾತ್ರಧಾರಿಗಳು ಇವರಿಂದ ಸಹಾಯ ಪಡೆಯುತ್ತಾರೆ.

ಹಾಡುವುದರ ಮೂಲಕ ಮುಂದುವರಿಯುವ ಈ ಕತೆಯನ್ನು ಮಧ್ಯೆ ಆಗಾಗ್ಗೆ ನಿಲ್ಲಿಸಿ ವಚನವನ್ನು ಹೇಳುವುದರ ಮೂಲಕ ಹಾಗೂ ಅಭಿನಯದ ಮೂಲಕ ಜನರನ್ನು ಆಕರ್ಷಿಸಲಾಗುತ್ತದೆ.

ಹಾಡಿನ ಪಲ್ಲವಿಯನ್ನು ಮಧ್ಯೆ ಮಧ್ಯೆ ಹಾಡುತ್ತಾ ಸಭಿಕರ ಗಮನವನ್ನು ತನ್ನತ್ತ ಸೆಳೆಯುತ್ತಾನೆ ಗಾಯಕ. ಕತೆಯನ್ನು ಹಾಡುವ ಕಲಾವಿದ ಬಹಳ ಜಾಗರೂಕನಾಗಿ ಪ್ರೇಕ್ಷಕರ ಮನಸ್ಸನ್ನು ಅವಲೋಕಿಸುತ್ತಾನೆ. ಬೇರೆ ಬೇರೆ ಮಟ್ಟುಗಳಲ್ಲಿ ಘಟನೆಗಳಿಗೆ ತಕ್ಕಂತೆ ಅಭಿನಯಿಸುತ್ತಾ, ಹೇಳಿದ ಹಾಡಿನಲ್ಲಿರುವ ವಿಷಯವನ್ನು ಸ್ವಾರಸ್ಯಕರವಾಗಿ ಮತ್ತೆ ನಿರೂಪಿಸುವುದು, ಮಧ್ಯೆ ಘಟನೆಯನ್ನು ತನ್ನದೇ ಆದ ರೀತಿಯಲ್ಲಿ ವಿವರಿಸುವುದನ್ನು ಜನರ ಇಂಗಿತವನ್ನು ಅರ್ಥಮಾಡಿಕೊಂಡು ಕತೆಯನ್ನು ಮುಂದುವರಿಸುವುದು ಮುಂತಾಗಿ ಎಲ್ಲ ಬಗೆಯ ಉಪಾಯಗಳನ್ನು ಬಳಸಿ ಕತೆಯನ್ನು ಮುಗಿಸುತ್ತಾನೆ. ಪತ್ರಿಕೆಗಳಲ್ಲಿ ಈಗಾಗಲೇ ಸುದ್ದಿ ಪ್ರಚಾರವಾಗಿರುವುದರಿಂದ ಪ್ರೇಕ್ಷಕರು ಸಹಜವಾಗಿಯೇ ಕುತೂಹಲಿಗಳಾಗಿರುತ್ತಾರೆಂಬ ಅಂಶ ಕಲಾವಿದನಿಗೆ ತಿಳಿದಿರುತ್ತದೆ. ಅವರನ್ನು ಮತ್ತಷ್ಟು ಕುತೂಹಲಿಗಳನ್ನಾಗಿ ಮಾಡಲು ತನ್ನ ಕಲೆಯ ಹಿರಿಮೆಯನ್ನು ಅವರಿಗೆ ತಲುಪಿಸುವುದು ಈ ಕಲಾವಿದನ ಉದ್ದೇಶ. ಇದನ್ನು ಈಡೇರಿಸಿಕೊಳ್ಳಲು ಅವನು ಸಕಲ ಚಾತುರ್ಯಗಳನ್ನು ಈ ಸಂದರ್ಭದಲ್ಲಿ ಪ್ರಯೋಗಿಸುತ್ತಾನೆ.

ದುರಂತ ಎಲ್ಲಿ, ಯಾವಾಗ, ಹೇಗೆ ನಡೆಯಿತು ಎಂಬುದನ್ನು ಮತ್ತಷ್ಟು ವಿವರವಾಗಿ ವರ್ಣಿಸುತ್ತಾನೆ. ಈ ಎಲ್ಲಾ ವಿವರಗಳನ್ನು ತಿಳಿದುಕೊಳ್ಳಲು ಜನರು ಸಹಜವಾಗಿಯೇ ಕಾತುರರಾಗಿರುತ್ತಾರೆ. ಆಗ ಅವರು ಹೆಚ್ಚು ಶ್ರದ್ಧೆಯಿಂದ ಗಮನ ನೀಡುತ್ತಾರೆ. ತಮಗೆ ತಿಳಿಯದ ವಿವರಗಳೇನಾದರೂ ಕತೆಯಲ್ಲಿ ದೊರೆಯುತ್ತದೆಯೆ ಎಂಬ ಕುತೂಹಲ ಸಹಜವಾಗಿಯೇ ಪ್ರೇಕ್ಷಕರಲ್ಲಿರುತ್ತದೆ. ಇದನ್ನು ಈ ಸಂದರ್ಭದಲ್ಲಿ ಕಲಾವಿದ ಚೆನ್ನಾಗಿ ಬಳಸಿಕೊಳ್ಳುತ್ತಾನೆ. ಯಾರೆಲ್ಲಾ ಈ ದುರಂತದಲ್ಲಿ ಸಾವಿಗೀಡಾದರು ಅವರ ಬಳಿ ಇದ್ದ ನಗನಾಣ್ಯಗಳ ವಿವರ, ಅವರು ರಾಮೇಶ್ವರಕ್ಕೆ ಬೇರೆ ಯಾರೊಡನೆ ಹೊರಟಿದ್ದರು ಮುಂತಾದ ಮಾಹಿತಿಗಳನ್ನು ಈ ಕಲಾವಿದ ನೀಡುತ್ತಾನೆ. ಹೊಸದಾಗಿ ಮದುವೆಯಾದವರು, ಹೆಣ್ಣಿಗಾಗಿ ಹೊರಟವರು, ಏನೇನೋ ಕನಸು ಕಾಣುತ್ತಾ ಹೊರಟವರು ಇವರೆಲ್ಲರೂ ಮಾರ್ಗಮಧ್ಯೆ ಹೇಗೆ ನೀರುಪಾಲಾದರು. ಇಂತಹ ಸ್ವಾರಸ್ಯಕರವಾದ ವಿಷಯಗಳನ್ನು ಹೇಳುತ್ತಾ ಪ್ರೇಕ್ಷಕರನ್ನು ಜತೆಯಲ್ಲಿಯೇ ಕಲಾವಿದ ಒಯ್ಯುತ್ತಾನೆ. ಸಹಜವಾಗಿಯೇ ಕುತೂಹಲದಿಂದ ಪ್ರೇಕ್ಷಕರು ಕಲಾವಿದನಿಗೆ ಪ್ರೋತ್ಸಾಹ ನೀಡುತ್ತಾರೆ. ಹುಮ್ಮಸ್ಸಿನಿಂದ ಕತೆಯನ್ನು ಮುಂದುವರಿಸುತ್ತಾನೆ.

ರಾಮೇಶ್ವರದಲ್ಲಿ ಶ್ರೀ ರಾಮನಾಥ ಸ್ವಾಮಿ ಇದ್ದಾನೆ. ಈ ಸ್ಥಳ ರಾಮಾಯಣದಲ್ಲಿ ಪ್ರಸಿದ್ಧಿ ಪಡೆದ ಶ್ರೀರಾಮನು ಮೆಟ್ಟಿದ ಸ್ಥಳ. ರಾಮೇಶ್ವರಕ್ಕೆ ಹೊರಟಿದ್ದ ಎಕ್ಸ್‌ಪ್ರೆಸ್ ರೈಲು ಅಪಘಾತಕ್ಕೆ ಈಡಾದದ್ದು ಮಾತ್ರವಲ್ಲದೆ ಅದರಲ್ಲಿ ಪ್ರಯಾಣ ಮಾಡುತ್ತಿದ್ದ ನೂರಾರು ಮಂದಿ ಸಾವಿಗೀಡಾಗುವಂತಹ ಪ್ರಮಾದ ನಡೆದಿತ್ತು. ಕಲಾವಿದನ ದೃಷ್ಟಿಯಲ್ಲಿ ಈ ಕಥೆಯನ್ನು ವರ್ಣಿಸಲಾಗುತ್ತದೆ. ರಾಮೇಶ್ವರವೆಂದರೆ ಎಲ್ಲಾ ವರ್ಗದ ಜನರೂ ದೇವರಿಗೆ ಸೇವೆ ಮಾಡುವಂತಹ ಪುಣ್ಯ ತಿರ್ಥ. ಅದನ್ನು ಕಲಾವಿದ ಮತ್ತೆ ಮತ್ತೆ ಪುನರುಚ್ಚರಿಸುತ್ತಾನೆ.

            ರಾಮೇಶ್ವರ ಭಕ್ತ ಸಮೂಹ
ನಡುದಾರಿಯಲ್ಲಿ ಪಲ್ಟಿ
ರಾಮೇಶ್ವರ ಭಕ್ತ ಸಮೂಹ
ನಡುದಾರಿಯಲ್ಲಿ ಪಲ್ಟಿ

ಕೆ.ಎ.ಜಿ. ಅನುವಾದ ವಿ.ಜಿ.

 

ವಿಪ್ರವಿನೋದುಲು ಆಂಧ್ರದ ಒಂದು ಕಲಾ ಪ್ರಕಾರ. ವಿಪ್ರರನ್ನು, ಎಂದರೆ ಬ್ರಾಹ್ಮಣರನ್ನು ಮಾತ್ರ ವಿನೋದಗೊಳಿಸುವ ಒಂದು ಪಂಗಡವನ್ನು ‘ವಿಪ್ರವಿನೋದುಲು’ ಎಂದು ಕರೆಯುತ್ತಾರೆ. ಇವರು ಬ್ರಾಹ್ಮಣರನ್ನು ವಿನೋದಗೊಳಿಸಿ ಯಾಚನೆ ಮಾಡುತ್ತಾ ಜೀವನ ಸಾಗಿಸುವವರೇ ಹೊರತು ಇವರು ಬ್ರಾಹ್ಮಣರಲ್ಲ. ಈ ಪ್ರದರ್ಶನ ಮಾಡುವ ಕಲಾವಿದರು ತೀರಾ ವಿರಳವಾಗಿದ್ದಾರೆ. ತೆಲಂಗಾಣದಲ್ಲಿ ಕರೀಂನಗರ್, ಮೆದಕ್, ವರಂಗಲ್, ಆದಿಲಾಬಾದ್ ಜಿಲ್ಲೆಗಳಲ್ಲಿ, ಕೃಷ್ಣಾ, ಗುಂಟೂರು, ಪೂರ್ವ ಮತ್ತು ಪಶ್ಚಿಮ ಗೋದಾವರಿ ಜಿಲ್ಲೆಗಳಲ್ಲಿ ಇದ್ದರೆಂದು ತಿಳಿಯುತ್ತದೆ. ಈ ಪ್ರದರ್ಶನಕ್ಕೆ ಹೆಚ್ಚು ಸಮಯ ಬೇಕಾಗಿಲ್ಲ. ಕೇವಲ ಅರ್ಧ ಗಂಟೆ ಅಥವಾ ಒಂದು ಗಂಟೆ ಹಿಡಿಯುತ್ತದೆ. ಇವರ ಕೈಗಳಲ್ಲಿ ಎರಡು ಮೂರು ತಾಳೆಯೋಲೆ ಗ್ರಂಥಗಳು ಅಲಂಕಾರಪ್ರಾಯವಾಗಿರುತ್ತವೆ. ಐದು ಅಡಿಗಳ ಉದ್ದವಿರುವ ಬಿದಿರಿನ ಗಳುಗಳು, ಪರದೆಯಂತೆ ಉಪಯೋಗಿಸುವ ಬಣ್ಣಬಣ್ಣದ ವಸ್ತ್ರಗಳು ಇವರಲ್ಲಿರುತ್ತವೆ. ಒಂದು ತಬಲಾ ಅಥವಾ ‘ಮದ್ದೆಲ’, ಹಾರ್ಮೋನಿಯಂ, ತಾಳಗಳು ಇವರ ವಾದ್ಯ ಪರಿಕರಗಳು.

ಪ್ರದರ್ಶನ ಸಮಯದಲ್ಲಿ ವಿಪ್ರರ ಮನೆಗಳ ಮುಂದೆ ಖಾಲಿ ಸ್ಥಳದಲ್ಲಿ ನಾಲ್ಕು ಬಿದಿರಿನ ಗಳಗಳನ್ನು ನಾಲ್ಕು ಕಡೆ ನೆಟ್ಟು ಮಂಟಪದಂತೆ ಮಾಡಿ ಅದರ ಸುತ್ತ ಬಣ್ಣಬಣ್ಣದ ಪರದೆಗಳನ್ನು ಕಟ್ಟುತ್ತಾರೆ. ಇದರ ಮಧ್ಯಭಾಗದಲ್ಲಿ ಒಂದು ಮರದ ಪೀಠವನ್ನು ಇಡುತ್ತಾರೆ. ಅನಂತರ ಅವರಲ್ಲಿ ಕೆಲವರು ವಾದ್ಯಗಳನ್ನು ಬಾರಿಸುತ್ತಾ ಭಜನೆ ಕಾರ್ಯಕ್ರಮಗಳನ್ನು ಆರಂಭಿಸುತ್ತಾರೆ. ಒಬ್ಬ ಸ್ನಾನ ಮಾಡಿ ಬಂದು, ಮಂಟಪದ ಮುಂದೆ ಸಾರಿಸಿ, ರಂಗೋಲಿ ಹಾಕಿ, ಧ್ಯಾನ ನಿರ್ಮಿಲಿತ ನೇತ್ರವಾಗಿ ಜಪವನ್ನು ಮಾಡುತ್ತಾ ಪದ್ಮಾಸನದಲ್ಲಿ ಕುಳಿತುಕೊಳ್ಳುತ್ತಾನೆ. ಅರ್ಧಗಂಟೆಯ ನಂತರ ಸುಗಂಧ ದ್ರವ್ಯಗಳ ಪರಿಮಳ ವ್ಯಾಪಿಸುತ್ತಿದ್ದಂತೆಯೇ ಆ ಪರದೆಗಳನ್ನು ತೆಗೆಯುತ್ತಾನೆ. ಆ ಮಂಟಪದಲ್ಲಿ ಹಲವಾರು ದೇವತಾ ಮೂರ್ತಿಗಳು ಪುಷ್ಪಹಾರಗಳಿಂದ ಅಲಂಕರಿಸಲ್ಪಟ್ಟು ನಮಗೆ ಕಾಣಿಸಿಕೊಳ್ಳುತ್ತವೆ. ಪೂಜೆ, ಭಜನೆಯಾದ ಅನಂತರ, ದೇವರಿಗೆ ನಿವೇದಿಸಿದ ತೀರ್ಥ ಪ್ರಸಾದಗಳನ್ನು, ಎಲ್ಲರಿಗೂ ಹಂಚುತ್ತಾರೆ.

ಈ ಕಲಾರೂಪವು ಒಂದು ‘ಇಂದ್ರಜಾಲವಿದ್ಯೆ’ ತರಹದ್ದೆಂಬ ಅಭಿಪ್ರಾಯವಿದೆ. ಕೆಲವರು ವಿಪ್ರ ವಿನೋದರು ಪುರಾಣ ಪದ್ಧತಿಯಲ್ಲಿ ಹಾಸ್ಯ ಮಾಡುವುದು, ಇನ್ನು ಕೆಲವರು ಹರಿಕಥಾ ರೀತಿಯಲ್ಲಿ ಹರಿಕೀರ್ತನೆ, ಕಥಾಗಾನವನ್ನು ಮಾಡುವುದು ಕಂಡುಬರುತ್ತದೆ. ಇನ್ನೂ ಕೆಲವರು ಭಾಗವತಗಳಲ್ಲಿರುವಂತೆ ವೇಷಧಾರಣೆ ಮಾಡಿ ಆಂಗಿಕ, ಆಹಾರ್ಯ, ಹಾವ, ಭಾವಗಳೊಂದಿಗೆ ಪ್ರದರ್ಶನ ಕೊಡುವುದೂ ಉಂಟು. ಈ ವಿಪ್ರವಿನೋದರಲ್ಲಿ ಕೆಲವರು ಹಾವು, ಚೇಳು, ದುಡ್ಡು ಕಾಣಿಸುವಂತೆ ಇಂದ್ರಜಾಲವನ್ನು ಮಾಡುತ್ತಿದ್ದಂತೆ ತಿಳಿದುಬರುತ್ತದೆ. ಇನ್ನೂ ಕೆಲವರಲ್ಲಿ ಮಂತ್ರತಂತ್ರಗಳು, ಷಡ್ವಿದ್ಯೆಗಳಲ್ಲಿ ಪ್ರವೇಶವಿತ್ತೆಂದು ತಿಳಿಯುತ್ತದೆ.

ಬ್ರಾಹ್ಮಣರಂತೆ ಜನಿವಾರಗಳನ್ನು ಧರಿಸಿ, ವಿಭೂತಿಯನ್ನು ಹಚ್ಚಿಕೊಂಡು, ವಿಪ್ರರಂತೆ ವೇದ, ಆಶೀರ್ವಚನಗಳನ್ನು ಹೇಳುತ್ತಾ ಹಾವಭಾವಗಳನ್ನು ಪ್ರದರ್ಶಿಸುತ್ತಾ, ನೃತ್ಯವನ್ನು ಮಾಡುತ್ತಾ, ಎಲ್ಲರನ್ನೂ ನಗಿಸುತ್ತಾ ಹಾಸ್ಯ ಪ್ರಸಂಗಗಳನ್ನು ಮಾಡುವುದು ಒಂದು ವೈಶಿಷ್ಟ್ಯವಾಗಿದೆ.

ಜಿ.ಎಸ್.ಎಂ.

 

ವಿಲ್ಲಡಿಚ್ಚಾನ್ ಪಾಟ್ಟ್ ಕೇರಳದ ಗ್ರಾಮೀಣ ದೃಶ್ಯ ಶ್ರವ್ಯ ಕಲಾಪ್ರಕಾರ. ಕಥೆಯನ್ನು ಹೇಳುವ ಜನಪದ ಹಾಡುಗಳಲ್ಲಿ ಇದೂ ಒಂದು. ಇದನ್ನು ವಿಲ್ಲುಪ್ಪಾಟ್ಟು, ವಿಲ್ಲುಕೊಡಿಪಾಟ್ಟು, ವಿಲ್‌ಪಾಟ್ಟು, ವಿಲ್ಲಡಿಪಾಟ್ಟ್, ವಿಲ್ಲಡಿ, ವಿಲ್ಲ್ ಇತ್ಯಾದಿ ಹೆಸರುಗಳಿಂದ ಕರೆಯುತ್ತಾರೆ. ತಿರುವನಂತಪುರ ಜಿಲ್ಲೆಯ ತಿರುವನಂತಪುರ, ನೆಯ್ಯಾಂಟಿಕ್ಕರ ತಾಲ್ಲೂಕುಗಳಲ್ಲೂ, ಈಗಿನ ಕನ್ಯಾಕುಮಾರಿ ಜಿಲ್ಲೆಯ ತೋವಾಳ, ಅಗಸ್ತೀಶ್ವರಂ, ಕಲ್‌ಕೂಳ್, ವಿಳವಕ್ಕೋಡ್ ತಾಲೂಕುಗಳನ್ನು ಒಳಗೊಂಡ ಹಳೆಯ ದಕ್ಷಿಣ ತಿರುವಾಂಕೂರಿನಲ್ಲಿ ಇದು ಹೆಚ್ಚಾಗಿ ಪ್ರಚಲಿತದಲ್ಲಿತ್ತು.

ದಕ್ಷಿಣ ತಿರುವಾಂಕೂರಿನ ದೇವಿ ದೇವಸ್ಥಾನಗಳಲ್ಲೂ ದೇವರುಗಳ ದೇವಸ್ಥಾನಗಳಲ್ಲೂ ಸಾಧಾರಣ ಮನುಷ್ಯರು ಅವರ ದೇವತೆಗಳನ್ನು ಆರಾಧಿಸಲು ಹಾಗೂ ಅವರ ಐಕ್ಯತೆಯನ್ನು ಉತ್ಸವಗಳ ಮೂಲಕ ಇನ್ನಷ್ಟು ಸದೃಢಗೊಳಿಸಲು ಬಿಲ್ಲು ಹಾಡನ್ನು ಬಳಸುತ್ತಾರೆ. ಈ ಹಾಡುಗಳು ೧೪ ರಿಂದ ೧೮ನೇ ಶತಮಾನದ ನಡುವಣ ಅವಧಿಯಲ್ಲಿ ರೂಪುಗೊಂಡಿರಬೇಕೆಂದು ಅಂದಾಜು ಮಾಡಲಾಗಿದೆ.

ಬಿಲ್ಲು ಹಾಡು ರಚನಕಾರರನ್ನು ಆರಾನ್ ಎಂದು ಕರೆಯುತ್ತಾರೆ. ಜಾನಪದ ಕಥಾಗಾಯನಗಳಾದ ತೆಕ್ಕನ್‌ಪ್ಪಾಟ್ಟುಗಳು ಇದರ ರಚನೆಗೆ ಆಧಾರಗಳಾಗಿವೆ. ಆರಂಭ ಕಾಲದ ರಚನೆಗಳು ಸಾಮಾನ್ಯ ಜನರು ಸುಲಭವಾಗಿ ಹಾಡಬಹುದಾದ ಜೋಗುಳ, ಒಪ್ಪಾರಿ ಮೊದಲಾದ ರೀತಿಯಲ್ಲಿವೆ. ಅನಂತರ ಇದರಲ್ಲಿ ಚಿಂತ್, ಕುಮ್ಮಿ, ವೃತ್ತಂ, ಪಲ್ಲವಿ, ಚರಣ ಮೊದಲಾದವು ಸೇರತೊಡಗಿದವು. ಬಿಲ್ಲು ಹಾಡಿನ ಸಾಹಿತ್ಯದಲ್ಲಿ ಎರಡು ರೀತಿಗಳಿವೆ. ಆದಿ ಮತ್ತು ಅಂತ್ಯದಲ್ಲಿ ಹಾಡು, ಅದೇ ರೀತಿ ಗದ್ಯ ಪದ್ಯ ಮಿಶ್ರಿತವಾದುವು. ಗದ್ಯವನ್ನು ಕಥೆ ಹೇಳಲೂ, ಕಥೆಯ ಮಧ್ಯೆ ರಂಜನೆಗಾಗಿ ಹಾಡು ಹಾಡಲಾಗುವುದು. ಗದ್ಯ ಪದ್ಯ ಮಿಶ್ರಿತವಾದ ಒಂದು ಹಾಡು ಯಾವುದೇ ರೀತಿಯಲ್ಲಿ ದಾಖಲೆಗೊಂಡಿಲ್ಲ. ಗದ್ಯ ಭಾಗವನ್ನು ಹಾಡುಗಾರ ಸಂದರ್ಭಾನುಸಾರ ಬಳಸುವುದರಿಂದ ಅದಕ್ಕೊಂದು ನಿಶ್ಚಿತ ರೂಪವೆಂಬುದಿಲ್ಲ.

ಬಿಲ್ಲು ಹಾಡಿನಲ್ಲಿ ಮುಖ್ಯ ಗಾಯಕನನ್ನು ‘ಪುಲವರ್’ ಎನ್ನುತ್ತಾರೆ. ಪುಲವರ್‌ಗಳು ಶಬ್ದ ಸೌಕುಮಾರ್ಯ, ರಂಗತಾಳಗಲಲ್ಲಿ ಪರಿಣಿತರಾಗಿರುತ್ತಾರೆ. ದಕ್ಷಿಣ ತಿರುವಾಂಕೂರಿನಲ್ಲಿ ಹೆಚ್ಚಿನ ‘ಪುಲವರ್’ ಬಿಲ್ಲು ಹಾಡಿನ ರಚನೆ ಹಾಗೂ ಗಾಯನದಲ್ಲಿ ನಿಪುಣರಾಗಿದ್ದರು. ಕಿರಾತ್ತೂರು ಮಾದೇವನ್ ಪಿಳ್ಳೈ, ಆದಂಕೋಡ್ ಪೀಣಿ, ಪೂವಂಕೋಡ್ ಕುಮಾರನ್, ವಾವಂ ಅಪ್ಪಿಪಿಳ್ಳೈ ಮೊದಲಾದವರು ಈ ಕ್ಷೇತ್ರದಲ್ಲಿ ಪ್ರಸಿದ್ಧರಾಗಿದ್ದಾರೆ.

ಬಿಲ್ಲು, ಬೀಸುವ ಕೋಲು, ಉಡುಕ್ಕು, ಘಟ, ತಾಳಕಟ್ಟೆಗಳು, ಜಾಲರಿ ಮೊದಲಾದವು ಬಿಲ್ಲು ಹಾಡಿನಲ್ಲಿ ಬಳಸಲಾಗುವ ಪ್ರಾಚೀನ ಹಾಗೂ ಪ್ರಧಾನವಾದ ಸಂಗೀತ ಉಪಕರಣಗಳು. ಇದರಲ್ಲಿ ಬಹುಮುಖ್ಯವಾದ ಉಪಕರಣ ಬಿಲ್ಲು.

ಬಿಲ್ಲು ಹಾಡಿನಲ್ಲಿ ಒಟ್ಟು ಏಳು ಮಂದಿಯಿರುತ್ತಾರೆ. ಈ ಕೂಟದ ಮುಖ್ಯ ಹಾಡುಗಾರನಾದ ‘ಪಲವರ್’ ಆರಂಭದಲ್ಲಿ ಹಾಡುತ್ತಾನೆ. ಅವನನ್ನು ಅನುಸರಿಸಿ ಉಳಿದವರು ತಮ್ಮ ಸಂಗೀತ ಉಪಕರಣಗಳನ್ನು ಬಾರಿಸುತ್ತಾ ಹಾಡುತ್ತಾರೆ. ಸ್ವಲ್ಪ ಕಾಲ ಹಿಂದಿನವರೆಗೆ ಪುರುಷರು ಮಾತ್ರ ಇದರಲ್ಲಿ ಪಾಲ್ಗೊಳ್ಳುತ್ತಿದ್ದರು. ಈಗ ಮಹಿಳೆಯರು ಕೂಡಾ ಭಾಗವಹಿಸುತ್ತಾರೆ. ವೇದಿಕೆಯ ಮುಂಭಾಗದಲ್ಲಿ ಬಿಲ್ಲು, ಘಟ ಅದೇ ರೀತಿ ಅವರ ಹಿಂಭಾಗದಲ್ಲಿ ಮುಖ್ಯ ಹಾಡುಗಾರ, ತಾಳ ಹಾಕುವವನೂ ಇರುತ್ತಾರೆ. ಉಳಿದವರು ಅವರಿಗಿಂತ ಹಿಂದಿನ ಸಾಲಿನಲ್ಲಿರುತ್ತಾರೆ. ಮುಖ್ಯ ಗಾಯಕ ಹಾಗೂ ತಾಳ ಹಾಕುವವನು ತಲೆಗೆ ಉತ್ತರೀಯ ಸುತ್ತಿ ತಲ್ಲೀನರಾಗಿ ಭಾಗವಹಿಸುತ್ತಾರೆ. ಉಳಿದವರಿಗೆ ಸಾಧಾರಣ ಉಡುಗೆ ತೊಡುಗೆ.

64_70A_DBJK-KUH

ಈ ಕಲಾಪ್ರದರ್ಶನದ ಆರಂಭದಲ್ಲಿ ಸ್ತುತಿಯಿರುತ್ತದೆ. ಇದರ ಒಟ್ಟಾರೆ ಸ್ವರೂಪದಲ್ಲಿ ಪ್ರಸ್ತಾವನೆ, ಗುರುಸ್ತುತಿ, ಸಭಾವಂದನೆ, ದೇಶಸ್ತುತಿ, ಕಥಾವತರಣ, ಮಂಗಳವನ್ನು ಒಳಗೊಂಡಿರುತ್ತದೆ.

ಬಿಲ್ಲು ಹಾಡಿನಲ್ಲಿ ವಾದ ಹಾಡು, ಪ್ರಶ್ನೆ ಹಾಡು, ಶಾಸ್ತ್ರ ಹಾಡು ಹೀಗೆ ಮೂರು ಘಟ್ಟಗಳಿವೆ. ಕ್ಷೇತ್ರಗಳಲ್ಲಿ ಹಾಡುವುದನ್ನು ವಾದಪ್ಪಾಟ್ಟು ಎನ್ನುವರು. ಕ್ಷೇತ್ರಗಳಲ್ಲಿ ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳಲ್ಲಿ ಹಾಡುವುದನ್ನು ಕೇಳ್ವಿಪ್ಪಾಟ್ಟು (ಪ್ರಶ್ನಾ ಹಾಡು) ಎನ್ನುವರು. ಮರ್ಮಚಿಕಿತ್ಸೆ, ಆಯುಧ ವಿದ್ಯೆ ಬಗ್ಗೆ ಹೇಳುವುದೇ ಶಾಸ್ತ್ರಪ್ಪಾಟ್ಟು (ಶಾಸ್ತ್ರ ಹಾಡು).

ಇರವಿಕ್ಕುಟ್ಟಿಪ್ಪಿಳ್ಳಪ್ಪೋರ್, ದಿವಾನ್ ವೆಟ್ಟಿ, ಕುಚೇಲ ವ್ರತಂ, ನೀಲಿಕಥಾ, ಪೊನ್ನಿರತ್ತಾಳ್‌ಕಥೆ, ಮೂವೋಟ್ಟು ಮಲ್ಲನ್, ಅಮ್ಮನ್ ಕಥಾ, ಅಂಜು ತಂಬುದಾನ್, ಶಾಸ್ತಾಂಕಥ, ರಾಮೇಶ್ವರ ಯಾತ್ರ ಪ್ರಮುಖ ಬಿಲ್ಲು ಹಾಡುಗಳಲ್ಲಿ ಕೆಲವು.

ಕಾಲಕ್ರಮೇಣ ಬಿಲ್ಲು ಹಾಡಿನಲ್ಲಿ ಕೆಲವು ಪರಿಷ್ಕಾರಗಳಾದುವು. ತಿರುವಟ್ಟೂರ್ ಬಾಲನ್ ಪಿಳ್ಳೆ, ನೆಯ್ಯಾಟ್ಟಿಂಕರ ತಲೆಯಿಲ್ ಕೇಶವನ್ ನಾಯರ್ ಈ ಪರಿಷ್ಕರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ಬಿಲ್ಲಿನ ಒಂದು ತುದಿಯನ್ನು ಮಣ್ಣಿನ ಮಡಕೆಯ ಮೇಲೆ ಕಟ್ಟಿಡುವ ಸಂಪ್ರದಾಯವನ್ನು ಬದಲಾಯಿಸಿ ಬಿಲ್ಲನ್ನು ನೆಲದ ಮೇಲೆಯೇ ಇಡುವ ಸಂಪ್ರದಾಯ ಆರಂಭಿಸಿದರು. ರಂಗಸ್ಥಳದಲ್ಲೂ ಬದಲಾವಣೆ ಬಂತು. ಹಾಡುಗಾರರ ವೇಷಗಾರಿಕೆಯಲ್ಲೂ ಪರಿಷ್ಕರಣೆಯಾಯಿತು. ಗ್ರಾಮದೇವತೆಗಳ ಕಥೆಗಳು ಮೂಲೆಗೆ ಸರಿದು ಚಾರಿತ್ರಿಕ ವ್ಯಕ್ತಿಗಳ ಕಥೆಗಳಿಗೆ ಮನ್ನಣೆ ಸಿಕ್ಕಿತು. ವಿದ್ಯಾವಂತರು ಈ ಕಲಾಪ್ರದರ್ಶನವನ್ನು ನಡೆಸುತ್ತಿದ್ದಾರೆ. ಆದರೂ ಸಾಮಾನ್ಯ ಜನರಿಗೆ ಇಷ್ಟವಾಗಿರುವ ಇದಕ್ಕೆ ಸಾಕಷ್ಟು ಪ್ರಚಾರ ದೊರೆತಿಲ್ಲವೆನ್ನುವುದು ವಾಸ್ತವವಾಗಿದೆ.

ಪಿ.ಎಸ್.ಎಂ. ಅನುವಾದ ಬಿ.ಎಸ್.ಎಸ್.