ಶಿಶುಪ್ರಾಸಗಳು ಮಕ್ಕಳ ಜಾನಪದದಲ್ಲಿ ಮುಖ್ಯವಾದಂಥವು ಶಿಶುಪ್ರಾಸಗಳು. ಉಳಿದ ಜನಪದ ಗೀತೆಗಳು ಹುಟ್ಟುವ ಮೊದಲೇ ‘ಶಿಶುಪ್ರಾಸ’ಗಳು ಹುಟ್ಟಿದವೆಂಬುದನ್ನು ವಿದ್ವಾಂಸರು ಅಲ್ಲಗಳೆಯುವುದಿಲ್ಲ. ಇವುಗಳ ಸೃಷ್ಟಿಯೇ ಬಾಲ್ಯದ ಮೊಟ್ಟ ಮೊದಲ ನುಡಿಯಾಗಿ ಮಗು ಆಡುವ ಮಾತಿನಿಂದ ಪ್ರಾರಂಭಗೊಳ್ಳುತ್ತದೆ; ಆಟವಾಡುತ್ತಲೇ ಶಬ್ದದ ಮೊರೆ ಹೋಗಿ, ಧ್ವನಿಯ ಸಂಪರ್ಕದೊಂದಿಗೆ ಹಾಡಲು ತೊಡಗಿಸಿಕೊಳ್ಳುತ್ತದೆ.

ನಮಗೆ ಅತ್ಯಂತ ಕುತೂಹಲ ಹುಟ್ಟಿಸುವ ಶಿಶುಗೀತೆಗಳಿಗೆ ವಿದ್ವಾಂಸರು ನಾನಾ ರೀತಿಯಲ್ಲಿ ಹೆಸರಿಟ್ಟಿದ್ದಾರೆ. ‘ಶಿಶುಗೀತೆ’, ‘ಶಿಶುಪದ’, ಶಿಶುಪ್ರಾಸ’, ‘ಮಕ್ಕಳ ಹಾಡು’, ‘ಚುಕ್ಕೋಳ ಪದ’ ಮುಂತಾಗಿ ಕರೆದಿದ್ದಾರೆ.

ಶಿಶುಪ್ರಾಸಗಳಲ್ಲಿ ಪ್ರಾಸವೇ ಹೆಚ್ಚು. ಅರ್ಥ ತೀರಾ ಕಡಿಮೆ. ವಸ್ತು, ರಚನೆ ನಾದಗಳಲ್ಲಿ ವೈವಿಧ್ಯಮಯತೆ ಕಡಿಮೆ. ಹಿಂದಿನಿಂದಲೂ ಮಕ್ಕಳು ಹೊತ್ತುತರುತ್ತಿರುವ ಈ ಪದ್ಯಗಳು ತಮಾಷೆ ಮತ್ತು ಚಮತ್ಕಾರದ ಭರದಲ್ಲಿ ಆದ ರಚನೆಗಳು. ಆಟದ ಬಯಲಿಗೆ ಸಂಬಂಧಿಸಿದವೇ ಹೆಚ್ಚಾಗಿವೆ. ಅನೇಕ ಸಲ ಅರ್ಥವಿಲ್ಲದ ಪದ ಪುಂಜಗಳ ಪ್ರಾಸದ ಗೀಳಿನ ಜೋಡಣೆ ಇರುತ್ತದೆ. ಆದರೆ ನಾದದ ಮಾಧುರ್ಯ ಮಾತ್ರ ಬೆಲೆಯುಳ್ಳದ್ದು. ಹಾಸ್ಯ, ವಿಡಂಬನೆ, ಚಮತ್ಕಾರ, ಅಣಕ, ಅನೌಚಿತ್ಯ, ಅಸಂಬದ್ಧತೆ, ಒಗಟು ಮೊದಲಾದ ರಂಜನೀಯ ವಿಷಯಗಳೆಲ್ಲ ಶಿಶುಪ್ರಾಸಗಳ ವಸ್ತುಗಳಾಗಿವೆ. ಕ್ರೀಡೋಲ್ಲಾಸದೊಳಗಿನ ಜಾಣ್ಮೆ, ಸ್ಥಳ, ವ್ಯಕ್ತಿ ಕುರಿತಂತೆ ಹೋಲಿಕೆ, ಪ್ರಕೃತಿ ಸೊಬಗಿನ ವರ್ಣನೆ, ಸಂಖ್ಯಾತ್ಮಕ ಗಣಿತ ಚಾತುರ್ಯ, ಪದ ಸಂಪತ್ತಿನೊಡನೆ ಕಸರತ್ತು ಮೊದಲಾದವು ಪ್ರಾಸಗಳ ವಿಂಗಡಣೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತವೆ.

ಶಿಶುಪ್ರಾಸಗಳ ಮೂಲ ಉದ್ದೇಶ ಲೇವಡಿ, ಕೀಟಲೆ, ಹಾಸ್ಯ, ವಿಡಂಬನೆ ಮಾಡುವುದಾಗಿದೆ. ಜೊತೆಯಲ್ಲಿದ್ದಕೊಂಡೇ ತಲೆಯ ಮೇಲೆ ಹೂ, ಕಾಗದ, ಕಡ್ಡಿ ಇನ್ನಿತರ ವಸ್ತುಗಳನ್ನಿಟ್ಟು ನಕ್ಕು ನಗಿಸುವ ಹಾಡು ಹಾಡುವುದುಂಟು.

            ಯಾರ‍್ದೋ ತಲೆ ಮೇಲೆ
ಗುಬ್ಬಚ್ಚಿ ಕೂತೈತೆ
ಏನೂಂತ ಯಾರೂ ಹೇಳಬೇಡಿ

ಅನ್ನುತ್ತಿರುವಾಗಲೇ ಎಲ್ಲರ ಕೈಗಳು ಅವರವರ ತಲೆ ಮೇಲೆ ಹೋಗಿರುತ್ತವೆ. ಆ ವಸ್ತು ಸಿಕ್ಕ ವ್ಯಕ್ತಿಗೆ ಏನೊ ಮುಜುಗರ, ಅವಮಾನ, ತಾನೂ ಹಾಗೆ ಮಾಡಲು ಹೋಗಿ ಸೋಲುತ್ತಾನೆ. ಅದಕ್ಕೆ ಸಮಯ ಬೇಕು.

ಮಕ್ಕಳ ಬೌದ್ಧಿಕ ಶಕ್ತಿ ಅಗಾಧವಾದುದು. ಪ್ರಾಸಮಯ ಚಮತ್ಕಾರ ನುಡಿಗಳಿಂದ ರಂಜಿಸುವ ಪ್ರೌಢಿಮೆ ತೋರಬಲ್ಲರು.

            ಕಾಗೆ ಕಾಗೆ ಕರ್ಯಣ್ಣ
ಕಸುಗುಡ್ಸು ನೀನಣ್ಣ
ಅಜ್ಜಾರದಲ್ ಬಣ್ಣ
ತಿನ್ಬೇಕಣ್ಣ
ಬಿತ್ತಿಲ್ದಣ್ಣ

ಈ ಪ್ರಾಸದ ಕೊನೆಯ ಮೂರು ಸಾಲುಗಳನ್ನು ಪ್ರತ್ಯೇಕಿಸಿದರೆ ಒಂದು ಒಗಟಾಗುತ್ತದೆ. ಉತ್ತರ ಗೆಣಸು ಎಂತಲೂ ಹೇಳಬಹುದು.

ಮಕ್ಕಳು ಎಷ್ಟೇ ಅನುಕರಣಶೀಲರಾದರೂ ತಮಗೆ ಸರಿಕಂಡದ್ದನ್ನು ನೇರವಾಗಿ ಆಡಿ, ಹಾಡಿ ತೋರಿಸದೆ ಬಿಡಲಾರರು.

            ಅಮ್ಮ ನೋಡೆ ಕಣ್‌ಬಿಟ್ಟು
ನಮ್ಮ ಶಾಲೆ ಉಪ್ಪಿಟ್ಟು
ಮೇಸ್ಟ್ರೂ ತಿಂತಾರೆ ಇಷ್ಟಿಷ್ಟು
ನಮಗೆ ಕೊಡ್ತಾರೆ ಇಟೀಟು

ತಮ್ಮ ಕೈಗಳನ್ನು ನಟನೆಗೆ ಬಳಸಿಕೊಂಡು ಇಂತಹ ಪ್ರಾಸಗಳನ್ನುಹೇಳುತ್ತಾರೆ.

ಮಕ್ಕಳಿಗೆ ಮಾವನ ಬಗ್ಗೆ ಅಪಾರವಾದ ಪ್ರೀತಿ. ಆದರೆ ಅಷ್ಟೇ ಮಾವನ ಮೇಲೆ ವ್ಯಂಗ್ಯವಾಡುವ ಹಂಬಲ.

            ಮಾವ ಮಾವ ಮಾತಾಡು
ಮಾವಿನ್ ಮರದಾಗೆ ಜೋತಾಡು
ಮಾವನ್‌ಗೇನು ಊಟ
?
ಬೀಸೆ ಕಲ್ ಗೂಟ !

ಹಾಗೆಯೇ ಬೀಗರ ಬಗ್ಗೆ ಮಕ್ಕಳ ಅಣಕು ಹಾಸ್ಯ ಹೀಗಿದೆ :

            ಬೀಗ್ರು ಬತ್ತಾರ್ ಉಣ್ಣಾಕ್
ಎಣ್ಣೇ ಜೋಗಿ ಎತ್ತಾಕೆ !

ಮನೆಗೆ ಬೇಕಾದ ವಸ್ತುಗಳನ್ನು ಮಾಡಿಕೊಡುವ ಬಡಿಗ್ಯರ ವ್ಯಕ್ತಿಯನ್ನು ಕುರಿತು :

            ಅಯ್ಯಯ್ಯಪ್ಪ ಹಳ್ಳಿ ತುಪ್ಪ
ಬಡಿಗ್ಯರ ಮಣೆ ಮೊಣಗಾಲು ದಪ್ಪ

ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಆಡುವಾಗ ತಮ್ಮ ಬಗೆಗಿನ ಅಭಿಮಾನವನ್ನು ಬಿಟ್ಟುಕೊಡಲಾರರು.

            ಆಡಾಣ…ಆಡಾಣ
ಆಡೊ ಗುಂಡಿ ತೋಡಾಣ

            ನಮ್ಮಜ್ಜಿ ಬಿಟ್ಟು
ನಿಮ್ಮಜ್ಜಿ ಹುಗಿಯಾಣ !

ಇದು ಹಾಸ್ಯಕ್ಕಾಗಿ ಮಾತ್ರ ಆಡಿಕೊಳ್ಳುವ ಪ್ರಾಸ.

ಮಾತಿಗೆ ಮಾತು ಬೆಳೆಸಿಕೊಂಡು ಹೋಗುವ ಚಮತ್ಕಾರ ತೋರುವ ಎಷ್ಟೋ ಪ್ರಾಸಗಳು ಶಿಶು ಪ್ರಾಸಗಳಲ್ಲಿವೆ. ಮಕ್ಕಳ ಬುದ್ಧಿ ಮತಿಗೆ ಸವಾಲು ಎಂಬ ಹಾಗೆ, ಒಂದು ವಸ್ತುವಿನಿಂದ ಮತ್ತೊಂದು ವಸ್ತುವಿಗೆ ಮಾತಿನ ಬಲೆ ಹೆಣೆಯುತ್ತಾ ಹೋಗಿ, ಆಟದ ಸೊಗಡಿನೊಂದಿಗೆ ಕೊನೆಯಲ್ಲಿ ಘೊಳ್ಳಂತ ನಗುವ ಮಂದಹಾಸ ಬೀರುವುದೇ ಇಲ್ಲಿ ಕಾಣಬರುವ ದೃಶ್ಯ. ಕೈಯ ಮುಷ್ಟಿಯನ್ನು ಹಿಡಿದು ಒಂದರ ಮೇಲೆ ಒಂದನ್ನಿಟ್ಟು ಕೊಂಡು ಹಾಡುವ ‘ಇದ್ಯಾತ್ರ ಮೂಟೆ ? ಅಕ್ಕಿ ಮೂಟೆ’ ಎಂಬ ಹಾಡು ದೀರ್ಘವಾಗಿ ಬೆಳೆದುಕೊಳ್ಳುತ್ತಾ ಹೋಗಿ ‘ಡೊಳ್ಳೇನ್ ಮಾಡ್ದೆ ? ಅಂದಾಗೆ ಕೆರೆಏರಿ ಮ್ಯಾಲೆ ಕೂತ್ಕೊಂಡು ಬಡಿತಿದ್ದೆ ಪಳ್ಳಂತು !’ ಎನ್ನುವ ಮಾತಿನಲ್ಲಿ ಕೊನೆಗೊಳ್ಳುತ್ತದೆ. ಎಲ್ಲರ ನಗು ಮುಗಿಲೆತ್ತರಕ್ಕೆ ಮುಟ್ಟಿರುತ್ತದೆ.

ಕಥನ ಕೌಶಲವುಳ್ಳ ಪ್ರಾಸಗಳು ಮಕ್ಕಳ ವಿಶಿಷ್ಟ ಕಲಾವಂತಿಕೆಯ ಪ್ರೌಢಿಮೆಯನ್ನು ಎತ್ತಿ ಹಿಡಿದರೆ ಸಾಂಪ್ರದಾಯಿಕ ನಂಬಿಕೆಯುಳ್ಳ ಜನರನ್ನು ಕುರಿತ ಅನೇಕ ಪ್ರಾಸಗಳು ದೊಡ್ಡವರ ಬದುಕನ್ನು ಲೇವಡಿಗೊಳಪಡಿಸುತ್ತ ಸಾಗುವುದನ್ನು ಪ್ರತಿಬಿಂಬಿಸುತ್ತದೆ. ಮಕ್ಕಳಿಗೆ ಕ್ರೀಡೆಗಳೆಂದರೆ ಬಹಳ ಇಷ್ಟ. ಕ್ರೀಡೋಲ್ಲಾಸದ ಪ್ರಾಸಗಳು ಸಾಕಷ್ಟಿವೆ. ಸ್ಥಳ – ವ್ಯಕ್ತಿ ಕುರಿತಂತೆ ಹೋಲಿಕೆಗಳ ಮೂಲವು ಗುಣಾವಗುಣಗಳನ್ನು ಎತ್ತಿ ಹೇಳುವ ಪ್ರಾಸಗಳು ಗಮನ ಸೆಳೆಯುತ್ತವೆ.

            ನಾಗಿ ನಾಗಿ ಸಣ್ಣೋಳು
ಪೆಪ್ಪರ ಮೆಂಟ ಸೀಪೋಳು.

ಪ್ರಕೃತಿಯ ವಿಷಯ ವಸ್ತಗಳನ್ನು ಕುರಿತಂತೆ, ಸಂಖ್ಯೆಗಳೊಂದಿಗಿನ ಹಾಡೂ ಆಟಗಳ ಬಗೆಗಿನ ಶಿಶುಪ್ರಾಸಗಳು ಲೆಕ್ಕವಿರದಷ್ಟು ಪ್ರಚಲಿತದಲ್ಲಿವೆ. ತಮ್ಮ ಬಾಲ್ಯದಿಂದ ಹಿಡಿದು ದೊಡ್ಡವರ ಬದುಕಿನ ಎಲ್ಲ ಮಜಲುಗಳ ನೋಟವನ್ನು ಶಿಶುಪ್ರಾಸಗಳಲ್ಲಿ ಕಾಣಲು ಸಾದ್ಯವಿದೆ. ಮಕ್ಕಳ ಬಾಯಿಂದ ಹೊರಡುವ ಶಿಶುಪ್ರಾಸಗಳನ್ನು ಕೇಳುವ ಪ್ರತಿಯೊಬ್ಬರೂ ಮಕ್ಕಳಿಗೆ ಹಿಂತಿರುಗಿ ಬೈಯಲು, ಹೊಡೆಯಲು ಮುಂದಾಗಲಾರರು. ಕೇಳಿ ದೂರ ಸರಿಯುವ, ತಪ್ಪಿದ್ದರೆ ತಿದ್ದಿಕೊಳ್ಳುವ ಹಂತದಲ್ಲಿ ಬದುಕು ಸಾಗಿಸುವ ಪ್ರಯತ್ನದಲ್ಲಿ ಶಿಶುಪ್ರಾಸಗಳ ಪಾತ್ರ ತಮ್ಮದೇ ಆದ ವೈಶಾಲ್ಯವನ್ನು ಪಡೆದುಕೊಂಡಿರುವುದು ಇಲ್ಲಿ ಕಂಡುಬರುತ್ತದೆ.

ಜಿ.ಎಸ್.

 

ಶ್ರೀಕೃಷ್ಣ ಪಾರಿಜಾತ ಇದು ಕರ್ನಾಟಕದ ಉತ್ತರ ಭಾಗದಲ್ಲಿ – ಬೆಳಗಾವಿ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ – ತುಂಬಾ ಪ್ರಚಾರದಲ್ಲಿರುವ ಒಂದು ಜನಪದ ನಾಟಕ. ೧೭೫೦ರ ಸುಮಾರಿಗೆ ರಾಯಚೂರು ಜಿಲ್ಲೆಯ ಅಪರಾಳ ತಮ್ಮಣ್ಣನೆಂಬ ಭಕ್ತಕವಿ ‘ಶ್ರೀಕೃಷ್ಣ ಪಾರಿಜಾತ’ ಎಂಬ ಯಕ್ಷಗಾನ ಕೃತಿಯನ್ನು (ಹಾಡುವ ಕಾವ್ಯ) ರಚಿಸಿದನು. ‘ಭಾಗವತ’ ಮತ್ತು ‘ಹರಿವಂಶ’ ಪುರಾಣಗಳು ತಮ್ಮಣ್ಣನಿಗೆ ಆಕರ. ಭಕ್ತಿ ಮತ್ತು ಶೃಂಗಾರ ರಸಗಳು ಪ್ರಧಾನವಾಗಿರುವ ‘ಶ್ರೀಕೃಷ್ಣ ಪಾರಿಜಾತ’ ಅಲ್ಪಾವಧಿಯಲ್ಲಿ ಕರ್ನಾಟಕದಾದ್ಯಂತ ಜನಪ್ರಿಯವಾಯಿತು. ಬ್ರಾಹ್ಮಣರ ಮನೆಗಳಲ್ಲಿ ಪಾರಾಯಣದ ಗೌರವವೂ ಅದಕ್ಕೆ ಲಭ್ಯವಾಯಿತು.

ಬೆಳಗಾವಿ ಜಿಲ್ಲೆಯ ಕುಲಗೋಡು ಗ್ರಾಮದ ತಮ್ಮಣ್ಣನೆಂಬ ಕಲಾವಿದನು ಪಾರಾಯಣ ಗ್ರಂಥವಾಗಿ ದೇವರ ಮನೆಗಳಲ್ಲಿ ಪೂಜೆಗೊಳ್ಳುತ್ತಿದ್ದ ಶ್ರೀಕೃಷ್ಣ ಪಾರಿಜಾತವನ್ನು ಓಣಿಗೆ ತಂದನು. ಪಕ್ಕದ ಮಹಾರಾಷ್ಟ್ರದ ಸಂಗೀತ ನಾಟಕಗಳಿಂದ ಪ್ರೇರಣೆ ಪಡೆದ ಕುಲಗೋಡ ತಮ್ಮಣ್ಣನು ಶ್ರೀಕೃಷ್ಣ ಪಾರಿಜಾತವನ್ನು ಒಂದು ರಂಗಕೃತಿಯನ್ನಾಗಿಸಿದನು. ಅವನ ರಂಗಕೃತಿ ಪೂರ್ತಿ ಮರಾಠಿ ಸಂಗೀತದ ಅನುಕರಣೆಯಾಗಲಿಲ್ಲ. ಸ್ಥಳೀಯ ಜನಪದ ರಂಗಪ್ರಕಾರಗಳ ಅಂಶಗಳು ಅವರಲ್ಲಿ ಸೇರ್ಪಡೆಗೊಂಡಿದ್ದರಿಂದ ಶ್ರೀಕೃಷ್ಣ ಪಾರಿಜಾತ ಶಿಷ್ಟ – ಜಾನಪದಗಳ ಒಂದು ವಿಶಿಷ್ಟ ರಸಪಾಕವಾಯಿತು.

68_70A_DBJK-KUH

ಕುಲಗೋಡ ತಮ್ಮಣ್ಣನು ಕೃತಿಯನ್ನು ರಂಗರೂಪಕ್ಕೆ ಅಳವಡಿಸಿಕೊಳ್ಳುವಾಗ ಅನೇಕ ಬದಲಾವಣೆಗಳನ್ನು ಮಾಡಿಕೊಂಡನು. ಮೂಲದ ದೀರ್ಘ ಹಾಡುಗಳನ್ನು ಸಂಕ್ಷೇಪಿಸಿಕೊಂಡನು. ಕೆಲವು ಹಾಡುಗಳನ್ನು ಕೈಬಿಟ್ಟನು. ಸಾಂದರ್ಭಿಕವಾಗಿ ಕೆಲವು ಹಾಡುಗಳನ್ನು ರಚಿಸಿ ಸೇರಿಸಿದನು. ಆರಂಭದಲ್ಲಿ ಬರುವ ಗೌಳಿಗಿತ್ತಿ ಪ್ರಸಂಗ ಸಂಪೂರ್ಣವಾಗಿ ಕುಲಗೋಡ ತಮ್ಮಣ್ಣನ ಸೃಷ್ಟಿ. ಇದು ಮರಾಠಿ ‘ತಮಾಷಾ’ದ ಅನುಕರಣೆ. ಇದು ಪೂರ್ವರಂಗ. ಗೌಳಿಗಿತ್ತಿಯೊಬ್ಬಳು ಹಾಲು ಮೊಸರು ಮಾರಲು ಬರುತ್ತಾಳೆ. ಅವಳನ್ನು ಬಾಲಗೋಪಾಲ ‘ಸುಂಕ’ ಕೊಡಲು ಪೀಡಿಸುತ್ತಾನೆ. ಅವಳು ಪ್ರೌಢೆ. ಇವನು ಬಾಲಕ. ಅವಳಿಂದ ಅವನು ಅಪೇಕ್ಷೆ ಪಡುವ ಸುಂಕವೆಂದರೆ ಕಾಮಕೇಳಿ. ಇದೊಂದು ಅಸಹಜವಾದ ಆದರೆ ತುಂಬಾ ರೋಚಕವಾದ ಪ್ರಸಂಗ. ಕೊನೆಗೆ ಗೌಳಿಗಿತ್ತಿ ಬಾಲಗೋಪಾಲನಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ. ಈ ಸನ್ನಿವೇಶದ ಹಾಡುಗಳನ್ನು ಕುಲಗೋಡ ತಮ್ಮಣ್ಣನೇ ರಚಿಸಿದ್ದಾನೆ. ಮುಂದಿನ ಸನ್ನಿವೇಶಗಳೆಂದರೆ : ಕೃಷ್ಣ ರುಕ್ಮಿಣಿಯರ ಸರಸ ಸಂವಾದ, ನಾರದನು ಪಾರಿಜಾತ ಪುಷ್ಪವನ್ನು ಕೃಷ್ಣನಿಗೆ ನೀಡುವುದು, ಕೃಷ್ಣ ಅದನ್ನು ರುಕ್ಮಿಣಿಗೆ ಮುಡಿಸುವುದು, ಈ ಸುದ್ದಿ ತಿಳಿದು ಸತ್ಯಭಾಮೆ ಸವತಿ ಮತ್ಸರದಿಂದ ತಳಮಳಗೊಂಡು ಆ ಪಾರಿಜಾತ ಪುಷ್ಪಕ್ಕಾಗಿ ಹಂಬಲಿಸುವುದು, ಅದಕ್ಕೆ ಕೃಷ್ಣನ ನಿರಾಕರಣೆ, ಶಕ್ತಿ ಆರಾಧನೆಯಿಂದ ಸತ್ಯಭಾಮೆ ಕೃಷ್ಣನ ಮನಸ್ಸು ತನ್ನೆಡೆಗೆ ಹರಿಯುವಂತೆ ಮಾಡುವುದು, ಕೃಷ್ಣನು ಕೊರವಂಜಿ ವೇಷದಲ್ಲಿ ಸತ್ಯಭಾಮೆಯನ್ನು ಭೆಟ್ಟಿಯಾಗಿ ಬರುವುದು, ಕೊನೆಗೆ ಶ್ರೀಕೃಷ್ಣನು ದೇವಲೋಕದಿಂದ ಪಾರಿಜಾತ ವೃಕ್ಷವನ್ನು ತಂದು ಸತ್ಯಭಾಮೆಯ ಅಂಗಳದಲ್ಲಿ ನೆಡುವುದು.

‘ಶ್ರೀಕೃಷ್ಣ ಪಾರಿಜಾತ’ ಒಂದು ಸ್ವತಂತ್ರ ರಂಗಪ್ರಕಾರವಾಗಿ ಬೆಳೆದು ಬಂದಿದೆ. ಅದನ್ನು ಬೆಳೆಸಿದವರು ಅಸಂಖ್ಯಾತ ಕಲಾವಿದರು. ಇಲ್ಲಿ ಲಿಖಿತ ಸಂಭಾಷಣೆಯಿಲ್ಲ. ಮೂಲ ಹಾಡುಗಳ ಪಠ್ಯಕ್ಕೆ ಕಲಾವಿದರು ಆಶಸಂಭಾಷಣೆ ಸೇರಿಸುತ್ತಾರೆ. ಪ್ರತಿಭಾವಂತರಾದ ನಟರು ತಮ್ಮ ವಿದ್ವತ್ತು ಜಾಣತನ ಸರಸ ಮಾತುಗಾರಿಕೆಯಿಂದ ಸಂಭಾಷಣೆಗಳು ರಸವತ್ತಾಗಿರುವಂತೆ ನೋಡಿಕೊಂಡಿದ್ದಾರೆ. ಪಾರಿಜಾತದ ವಿಶಿಷ್ಟ ಪಾತ್ರವೆಂದರೆ ‘ದೂತಿ’. ದೂತಿಯೆಂದರೆ ಸೇವಕಿ, ದಾಸಿ, ಸಂದೇಶ ವಾಹಕಿ, ಪಾರಿಜಾತದಲ್ಲಿ ಭಾಗವತ (ಮುಖ್ಯಸ್ಥ) ದೂತಿಯಾಗಿರುತ್ತಾನೆ. ದೂತಿ ಪಾತ್ರಕ್ಕೆ ಸ್ತ್ರೀವೇಷವಿರುವುದಿಲ್ಲ. ಪುರುಷ ವೇಷಧಾರಿ ನಟನನ್ನು ಪ್ರೇಕ್ಷಕರು ದೂತಿಯೆಂದು ಯಾವ ಗೊಂದಲ ವಿಲ್ಲದೇ ಒಪ್ಪಿಕೊಂಡಿರುತ್ತಾರೆ. ಪತ್ರಗಳನ್ನು ಪರಿಚಯಿಸುವ ಪ್ರಶ್ನಿಸುವ, ಹೇಳಿದ ಕೆಲಸ ನಿರ್ವಹಿಸುವ ಕೆಲಸ ದೂತಿಯದು. ಆದರೆ ಪ್ರದರ್ಶನದುದ್ದಕ್ಕೂ ಕಚಗುಳಿಯಿಟ್ಟಂತೆ ಹಾಸ್ಯ ಸೃಷ್ಟಿಸುತ್ತ ಸ್ಟೇಜನ್ನು ಲವಲವಿಕೆಯಿಂದ ಇಡುವ ದೂತಿ ಪಾತ್ರ ಪ್ರೇಕ್ಷಕರಿಗೆ ತೀರಾ ಅಚ್ಚುಮೆಚ್ಚಿನದಾಗಿದೆ.

ಪಾರಿಜಾತದ ಸಂಗೀತ ಹಲವು ಶೈಲಿಗಳ ಸಮ್ಮಿಶ್ರಣವಾಗಿದೆ. ಮೊದಲಿಗೆ ಕರ್ನಾಟಕಿ ಸಂಗೀತವೇ ಪಾರಿಜಾತವನ್ನು ಆವರಿಸಿತ್ತು. ೧೯೨೦ರ ಅನಂತರ ಹಿಂದುಸ್ತಾನಿ ಸಂಗೀತ ಪ್ರವೇಶಿಸಿತು. ಸ್ಥಳೀಯ ಜನಪದ ಸಂಗೀತದ ಅಂಶಗಳು ಇದರಲ್ಲಿ ಸೇರಿಕೊಂಡಿವೆ. ಪಾತ್ರಧಾರಿ ತನ್ನ ಹಾಡನ್ನು ತಾನೇ ಹಾಡುತ್ತಾನೆ. ಲೆಗ್‌ ಹಾರ್ಮೋನಿಯಂ ತಾಳ ತಬಲಾ ಇವು ಪಾರಿಜಾತದ ವಾದ್ಯಗಳು. ಪಾರಿಜಾತ ವೃತ್ತಿ ಮೇಳಗಳಿಂದ ತನ್ನ ಪರಂಪರೆ ಉಳಿಸಿಕೊಂಡು ಬಂದಿದೆ. ಇಂಥ ಪರಂಪರೆಯನ್ನು ಪ್ರಾರಂಭಿಸಿ ಅದನ್ನು ಗಟ್ಟಿಗೊಳಿಸಿದವಳು ಕೌಜಲಿಗಿ ನಿಂಗಮ್ಮ. ಅಲ್ಲಲ್ಲಿ ಹವ್ಯಾಸಿ ಮೇಳಗಳೂ ಇವೆ. ಇಂದು ಹತ್ತಾರು ವೃತ್ತಿ ಮೇಳಗಳು ಕಾರ್ಯನಿರತವಾಗಿವೆ.

ಬಿ. ಎಂ.

 

ಶ್ರೀರಾಮನವಮಿ ಶ್ರೀರಾಮನವಮಿ ಪ್ರತಿವರ್ಷ ಚೈತ್ರ ಶುದ್ಧ ನವಮಿಯನ್ನು ‘ಶ್ರೀರಾಮನವಮಿ’ ಪರ್ವ ದಿನವಾಗಿ ತೆಲುಗರು ಆಚರಿಸುತ್ತಾರೆ. ಅಂದು ಶ್ರೀರಾಮನ ಜನ್ಮದಿನ. ಪ್ರಪಂಚದ ಯಾವುದೇ ಭಾಗದಲ್ಲಿ ಭಾರತೀಯರು ನೆಲಸಿದ್ದರೂ ಶ್ರೀರಾಮನವಮಿಯನ್ನು ಆಚರಿಸುತ್ತಾರೆ. ಪಿತೃವಾಕ್ಯ ಪರಿಪಾಲಕನೂ, ನೀತಿಗೆ ನಿರಂತರವಾಗಿ ನೆರಳಾದವನೂ ರಕ್ಷಕನಾಗಿ ನಿಂತವನೂ ದುಷ್ಟ ಶಿಕ್ಷಕ, ಶಿಷ್ಟ ರಕ್ಷಕನೂ ಆದ ಶ್ರೀರಾಮನೆಂದರೆ ತೆಲುಗರಿಗೆ ಎಲ್ಲಿಲ್ಲದ ಪ್ರೀತಿ. ಈ ದಿನ ಮನೆ ತೊಳೆದು ರಂಗೋಲಿ ಹಾಕಿ ಬಾಗಿಲುಗಳಿಗೆ ತಳಿರು ತೋರಣಗಳಿಂದ ಸಿಂಗರಿಸುತ್ತಾರೆ. ಅಭ್ಯಂಜನ ಮಾಡುತ್ತಾರೆ. ಶ್ರೀರಾಮನ ಚಿತ್ರಪಟವನ್ನಾಗಲಿ. ವಿಗ್ರಹವನ್ನಾಗಲಿ ಪೂಜಿಸುತ್ತಾರೆ. ಪೂಜೆ ಪೂರ್ಣಗೊಳ್ಳುವವರೆಗೆ ಕೆಲವರು ಉಪವಾಸವಿರುವುದನ್ನು ಗಮನಿಸಬಹುದು.

ಶ್ರೀರಾಮ ನವಮಿಯ ದಿನ ಕೋಸಂಬರಿ, ಪಾನಕ ಮಾಡಿ ದೇವರಿಗೆ ನೈವೇದ್ಯವಾಗಿ ಸಮರ್ಪಿಸುತ್ತಾರೆ. ಕೆಲವು ಕಡೆ ಮಜ್ಜಿಗೆ ಸಹ ನೀಡುತ್ತಾರೆ. ಪೂಜೆ ಮುಗಿದ ಮೇಲೆ ಮುತ್ತೈದೆಯರನ್ನು. ಪುರುಷರನ್ನು ಮನೆಗೆ ಕರೆದು ತಾಂಬೂಲ ನೀಡಿ ಫಲಾಹಾರ ಕೊಟ್ಟು ಕಳುಹಿಸುತ್ತಾರೆ. ಗಂಡಸರಿಗೆ ತಾಂಬೂಲ ಬೀಸಣಿಗೆ ಕೊಡುವರು. ಮುತ್ತೈದೆಯರ ಕಾಲುಗಳಿಗೆ ಅರಿಸಿನ ಲೇಪಿಸುತ್ತಾರೆ. ಮನೆಗೆ ಬರುವವರಿಗೆ ಕೋಸಂಬರಿ, ಪಾನಕ, ಮಜ್ಜಿಗೆ ಪ್ರಸಾದವಾಗಿ ನೀಡುವರು.

ಶ್ರೀ ರಾಮನವಮಿ ಶ್ರೀರಾಮನು ಹುಟ್ಟಿದ ದಿನ. ಆದರೆ ಈ ದಿನ ಸೀತಾರಾಮರ ಕಲ್ಯಾಣೋತ್ಸವ ನಡೆಸುವುದಿದೆ. ಗೋದಾವರಿ ತೀರದ ಭದ್ರಾಚಲದಲ್ಲಿ ಪ್ರಸಿದ್ಧವಾದ ಶ್ರೀರಾಮಾಲಯವಿದೆ. ಅಲ್ಲಿ ಶ್ರೀರಾಮನವಮಿ ಉತ್ಸವವನ್ನು ತುಂಬ ವಿಜೃಂಭಣೆಯಿಂದ ಆಚರಿಸುತ್ತಾರೆ.

ಚೈತ್ರಶುದ್ಧ ಪೂರ್ಣಮಿಯೊಂದಿಗೆ ವರ್ಷ ಆರಂಭವಾಗುತ್ತದೆ. ಅದು ತೆಲುಗರ ಯುಗಾದಿ ಹಬ್ಬ. ಅಲ್ಲಿಂದ ಒಂಬತ್ತು ದಿನಗಳು ನವಮಿವರೆಗೆ ಹಬ್ಬ ಮಾಡುತ್ತಾರೆ. ಇದು ವಸಂತ ಮಾಸವಾದುದರಿಂದ ಇದನ್ನು ವಸಂ ನವರಾತ್ರಿಗಳು ಎನ್ನುತ್ತಾರೆ. ಕೊನೆಯ ದಿನ ಶ್ರೀರಾಮನವಮಿ. ಶ್ರೀರಾಮ ಪಟ್ಟಾಭಿಷೇಕಂ, ಶ್ರೀರಾಮ ಕಲ್ಯಾಣದಂತಹ ಉತ್ಸವಗಳನ್ನು ನಡೆಸುತ್ತಾರೆ. ಆ ಪದ್ಧತಿಯ ಪೂಜೆಗಳೇ ಬೇರೆ, ದಸರಾ ನವರಾತ್ರಿಯೇ ಬೇರೆ.

ಭಾರತೀಯ ಕಾಲಮಾನ ಪ್ರಕಾರ ವೈವಸ್ವತ ಮನ್ವಂತರ ಪಂಚಮ ತ್ರೇತಾಯುಗ, ನಾಲ್ಕನೆಯ ಭಾಗದಲ್ಲಿ ವಿಳಂಬನಾಮ ಸಂವತ್ಸರ ಚೈತ್ರಶುದ್ಧ ನವಮಿ ಬುಧವಾರದಂದು ಮಕರ ಲಗ್ನದಲ್ಲಿ ಪುನರ್ವಸು ನಕ್ಷತ್ರದಲ್ಲಿ ಶ್ರೀರಾಮ ಜನಿಸಿದನು. ಶ್ರೀರಾಮ ಎಷ್ಟು ಪ್ರಾಚೀನ ಎಂದರೆ ಋಗ್ವೇದದಲ್ಲೂ ಆತನ ಹೆಸರು ಪ್ರಸ್ತಾಪಿಸಲಾಗಿದೆ.

ಶ್ರೀರಾಮ ನವಮಿಯನ್ನು ಆಂಧ್ರದವರು ವಿಶೇಷವಾಗಿ ಆಚರಿಸಿಕೊಳ್ಳುತ್ತಾರೆ. ಅದಕ್ಕೆ ಇದರ ಹಿನ್ನೆಲೆಯನ್ನು ಕೆಲವರು ಹೀಗೆ ಹೇಳುತ್ತಾರೆ. ಶ್ರೀರಾಮನ ತಾಯಿ ಕೌಸಲ್ಯ ಕೋಸಲದೇಶದ ರಾಜನ ಮಗಳು. ಇದು ದಶರಥ ಆಳುತ್ತಿದ್ದ ಕೋಸಲವಲ್ಲ. ದಶರಥನದು ಉತ್ತರ ಕೋಸಲ. ಕೌಸಲ್ಯೆಯದು ದಕ್ಷಿಣ ಕೋಸಲ. ದಕ್ಷಿಣ ಕೋಸಲ ಎಂದರೆ ಒಂದು – ಕಾಲದಲ್ಲಿ ಆಂಧ್ರ ಪ್ರದೇಶದ ಉತ್ತರ ಭಾಗ. ಆದ್ದರಿಂದ ಕೌಸಲ್ಯ ಆಂಧ್ರರ ಮನೆ ಮಗಳು. ವನವಾಸದ ಸಮಯವನ್ನು ಶ್ರೀರಾಮನು ತನ್ನ ತಾಯಿಯ ತವರು ಮನೆಗೆ ಸೇರಿದ ಅರಣ್ಯಗಳಲ್ಲಿ ಕಳೆದನೆನ್ನುತ್ತಾರೆ. ಇದರಲ್ಲಿ ತರ್ಕಕ್ಕೆ ನಿಲುಕುವ ಅಂಶಗಳಿಲ್ಲದಿದ್ದರೂ ತೆಲುಗು ನೆಲದಲ್ಲಿ ಶ್ರೀರಾಮನ ಜನ್ಮದಿನವನ್ನು ಕಲ್ಯಾಣ ದಿನವನ್ನಾಗಿ ಆಚರಿಸುತ್ತಾರೆ. ಭದ್ರಾಚಲದ ದೇವಸ್ಥಾನದಲ್ಲಿ ಭಕ್ತ ರಾಮದಾಸರು ಮಾಡಿದ ಆಚರಣೆಯಲ್ಲಿ ಇದೂ ಒಂದು ಎನ್ನುತ್ತಾರೆ.

ಈ ಸಮಯದಲ್ಲಿ ತಿರುಪತಿ ಕೋದಂಡರಾಮಾಲಯದಲ್ಲೂ ಬ್ರಹ್ಮೋತ್ಸವಗಳನ್ನು ನಡೆಸುತ್ತಾರೆ. ನವಮಿಗೆ ಎರಡು ದಿನಗಳ ಮೊದಲು ಬ್ರಹ್ಮೋತ್ಸವಗಳನ್ನು ಮುಗಿಸುತ್ತಾರೆ. ವಿವಿಧ ವಾಹನಗಳಲ್ಲಿ ಶ್ರೀರಾಮನ ಮೆರವಣಿಗೆಯನ್ನು ಮಾಡುತ್ತಾರೆ. ರಥೋತ್ಸವದ ದಿನ ಜನಸ್ತೋಮ ಹೆಚ್ಚಾಗಿರುತ್ತದೆ. ರಥದ ಮೇಲೆ ಉಪ್ಪು ಮೆಣಸು ಎರಚುತ್ತಾರೆ.

ಸೀತಾಕಲ್ಯಾಣ ವೈಭೋಗಮೇ
ರಾಮ ಕಲ್ಯಾಣ ವೈಭೋಗಮೇ

ಮೊದಲಾದ ಹಾಡುಗಳನ್ನು, ಹರಿಕಥೆಗಳನ್ನು, ಭಜನೆ, ಕೋಲಾಟ ಮೊದಲಾದ ಕಲೆಗಳನ್ನು ಈ ಉತ್ಸವದ ಸಂದರ್ಭದಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾರೆ.

ಪಿ. ಆರ್. ಎಚ್‌. ಅನುವಾದ ವಿ. ಆರ್.

 

ಸಂಕ್ರಾಂತಿ ತೆಲುಗರ ದೊಡ್ಡ ಹಬ್ಬ (ಪೆದ್ದ ಪಂಡುಗ) ಎಂಬ ಹೆಸರಿನಲ್ಲಿದೆ. ಸೂರ್ಯ ದ್ವಾದಶರಾಶಿಗಳಲ್ಲಿ ಮಕರ ರಾಶಿಗೆ ಬಂದಾಗ ಆಚರಿಸುವ ಹಬ್ಬ. ತಿಂಗಳಿಗೊಂದು ರಾಶಿಯಲ್ಲಿರುತ್ತಾನೆ. ತಿಂಗಳು ಪೂರ್ತಿಯಾದ ಕೂಡಲೇ ಸೂರ್ಯ ಇನ್ನೊಂದು ರಾಶಿಗೆ ಪ್ರವೇಶಿಸುತ್ತಾನೆ. ಧನುರಾಶಿಯಿಂದ ಮಕರರಾಶಿಗೆ ಸೂರ್ಯನು ಪ್ರವೇಶಿಸುವ ದಿನಕ್ಕೆ ಮಕರ ಸಂಕ್ರಮಣ ಅಥವಾ ಮಕರ ಸಂಕ್ರಾಂತಿ ಎನ್ನುತ್ತಾರೆ. ಇಂದಿನಿಂದ ಸೂರ್ಯನ ಉತ್ತರಾಯಣ ಪುಣ್ಯಕಾಲ ಪ್ರಾರಂಭವಾಗುತ್ತದೆ. ಆದ್ದರಿಂದ ಮಕರ ಸಂಕ್ರಾಂತಿಯನ್ನು ಹಬ್ಬವಾಗಿ ಆಚರಿಸುತ್ತಾರೆ. ಸೌರಮಾನದ ಪ್ರಕಾರ ಸಂಕ್ರಾಂತಿ ಹಬ್ಬ ಜನವರಿ ೧೪ರಂದು ಬರುತ್ತದೆ. ಚಾಂದ್ರಮಾನದ ಪ್ರಕಾರ ಮಕರ ಸಂಕ್ರಾಂತಿ ಪುಷ್ಯ ಮಾಸದ ಕಡೆಯಲ್ಲಿ ಮಾಘ ಮಾಸ ಆರಂಭ ಆಗಲು ಒಂದು ವಾರ ಮುಂಚೆಯೇ ಬರುತ್ತದೆ. ಹೇಮಂತ ಋತುವಿನ ಕೊನೆಯಲ್ಲಿ ಬರುವ ಮಕರ ಸಂಕ್ರಾಂತಿ ಹೊತ್ತಿಗೆ ಪೈರು ಮನೆಗೆ ಬಂದು ಸೇರುತ್ತದೆ. ಪ್ರಕೃತಿಯು ಬಣ್ಣ ಬಣ್ಣದ ಹೂಗಳಿಂದ ಪ್ರಸನ್ನವಾದ ವಾತಾವರಣದಿಂದ ಆಹ್ಲಾದಕರವಾಗಿರುತ್ತದೆ. ಬೇಸಾಯವೇ ಪ್ರಧಾನವಾದ ಭಾರತದೇಶದಲ್ಲಿ ವಿವಿಧ ಭಾಗಗಳಲ್ಲಿರುವ ಜನರು ಮಕರ ಸಂಕ್ರಾಂತಿಯನ್ನು “ಸುಗ್ಗಿ ಹಬ್ಬ” ಎಂದು ಸಂತೋಷದಿಂದ ಆಚರಿಸಿಕೊಳ್ಳುತ್ತಾರೆ.

ತೆಲುಗು ಸೀಮೆಯಲ್ಲಿ ಸಂಕ್ರಾಂತಿಯನ್ನು ದೊಡ್ಡ ಹಬ್ಬವಾಗಿ ದೊಡ್ಡೋರ ಹಬ್ಬವಾಗಿ, ಅರಿಕೆಗಳ ಹಬ್ಬವಾಗಿ, ಸಿರಿ ಹಬ್ಬವಾಗಿ, ರೈತರ ಹಬ್ಬವಾಗಿ, ದನಗಳ ಹಬ್ಬವಾಗಿ, ರಂಗೋಲಿ ಹಬ್ಬವಾಗಿ, ಗಾಳಿಪಟ ಹಬ್ಬವಾಗಿ, ಆಬಾಲ ವೃದ್ಧರೆಲ್ಲಾ ಸಂಭ್ರಮವಾಗಿ ಆಚರಿಸುತ್ತಾರೆ. ಪ್ರಾಂತೀಯ ಭೇದಗಳನ್ನು ಅನುಸರಿಸಿ ಸಂಕ್ರಾಂತಿಯನ್ನು ೩, ೪, ದಿನಗಳ ಹಬ್ಬವಾಗಿ ಮಾಡಿಕೊಳ್ಳುತ್ತಾರೆ. ಮೊದಲನೆಯ ದಿನ ಭೋಗಿ, ಎರಡನೆಯ ದಿನ ಸಂಕ್ರಾಂತಿ, ಮೂರನೆಯ ದಿನ ಕನುಮ ಅಥವಾ ಹಬ್ಬ, ನಾಲ್ಕನೆಯ ದಿನ ಮುಕ್ಕಾನುಮ ಅಥವಾ ಕನುಮ ಹಬ್ಬ ಐದನೇ ದಿನ “ಬುಡಸಲ ಹಬ್ಬ” ಅಥವಾ ವರಸ ಹಬ್ಬ (ಈ ಹಬ್ಬವನ್ನು ಚಿತ್ತೂರು ಜಿಲ್ಲೆಯ ಪರಿಸರ ಪ್ರಾಂತಗಳಲ್ಲಿ ಆಚರಿಸುತ್ತಾರೆ) ಎಂದು ಆಚರಿಸುತ್ತಾರೆ. ಸಂಕ್ರಾಂತಿಗೆ ಒಂದು ತಿಂಗಳ ಮುಂಚೆಯೇ ಧನುರ್ಮಾಸೋತ್ಸವಗಳು ಆರಂಭವಾಗುತ್ತವೆ. ಧನುರ್ಮಾಸವನ್ನು ಹಬ್ಬದ ತಿಂಗಳು ಎನ್ನುತ್ತಾರೆ. ಈ ತಿಂಗಳೆಲ್ಲ ದೇವಾಲಯಗಳು “ತಿರುಪ್ಪಾವೈಪಾಶುರಗಳಿಂದ” ಮನೆಯಂಗಳಗಳು ರಂಗೋಲಿಯಿಂದ ಆಕಾಶ ಗಾಳಿಪಟಗಳಿಂದ ಕಂಗೊಳಿಸುತ್ತದೆ. ಧನುರ್ಮಾಸವೆಲ್ಲ ಗ್ರಾಮಗಳಲ್ಲಿ ವೈಷ್ಣವ ಭಕ್ತರು ಮುಂಜಾನೆಯೇ ಎದ್ದು ಭಜನೆ ಮಾಡುತ್ತಾ ಗ್ರಾಮ ಪ್ರದಕ್ಷಿಣೆ ಮಾಡುತ್ತಾರೆ. ಧನುರ್ಮಾಸದಲ್ಲೇ ಮನೆಗಳನ್ನು ಕಣಜಗಳನ್ನು ಶುಭ್ರಗಳಿಸಿ ಸುಣ್ಣ ಬಳಿಯುತ್ತಾರೆ. ಧನುರ್ಮಾಸಾರಂಭದಿಂದ ಕನುಮವರೆಗೂ ಹಬ್ಬದ ವಾತಾವರಣ ಹಳ್ಳಿಗಳಲ್ಲಿ ಹರಡಿರುತ್ತದೆ. ಆದ್ದರಿಂದ ವರ್ಷದಲ್ಲಿ ಇದೇ ದೊಡ್ಡ ಹಬ್ಬವಾದ್ದರಿಂದ ಸಂಕ್ರಾಂತಿಯನ್ನು ದೊಡ್ಡ ಹಬ್ಬವಾಗಿ ಪರಿಗಣಿಸುವರು. ಸ್ತ್ರೀಯರು ಧನುರ್ಮಾಸಾರಂಭದಿಂದ ಕನಮವರೆಗೂ ಪ್ರತಿದಿನ ಮನೆಯ ಮುಂದೆ ವಿಧ ವಿಧವಾದ ರಂಗೋಲಿಯನ್ನು ಹಾಕುತ್ತಾರೆ. ರಂಗೋಲಿಯಲ್ಲಿ ಸೂರ್ಯನ ಗುರುತು ರಥಗಳು, ನಾಗಬಂಧ, ವೈಕುಂಠ ಬಾಗಿಲು, ಗುಚ್ಛಬಂದ ಮುಂತಾದವುಗಳನ್ನು ಚಿತ್ರಿಸುತ್ತಾರೆ. ಸ್ತ್ರೀಯರಿಗೆ ಸಂಕ್ರಾಂತಿ ‘ರಂಗೋಲಿ ಹಬ್ಬ’ ಅವು ಅವರ ಚಿತ್ರ ಕಲಾನೈಪುಣ್ಯಕ್ಕೆ, ಸಂಪ್ರದಾಯಕ್ಕೆ ನಿದರ್ಶನಗಳು. ರಂಗೋಲಿ ಮಧ್ಯದಲ್ಲಿ ಗೋವು ಸಗಣಿಯಿಂದ ಮಾಡಿದ ‘ಗೊಬ್ಬೆಮ್ಮ’ ನನ್ನು ಅರಸಿನ ಕುಂಕುಮಗಳಿಂದ ಹೂಗಳಿಂದ ಸಿಂಗರಿಸಿ ಇಡುತ್ತಾರೆ. ಅವುಗಳ ಸುತ್ತಾ ತಿರುಗುತ್ತಾ ಲಯಬದ್ಧವಾಗಿ ಕೈಗಳನ್ನು ತಟುತ್ತಾ ಹಾಡುಗಳನ್ನು ಹಾಡುತ್ತಾರೆ. ನೈವೇದ್ಯಗಳನ್ನಿಡುತ್ತಾರೆ. ಪ್ರತಿದಿನ ಇದನ್ನು ಬೆರಣಿ ತಟ್ಟಿ ಬಿಸಿಲುಗಿಡುತ್ತಾರೆ. ತೀರಾಂಧ್ರ, ರಾಯಲಸೀಮೆಗಳಲ್ಲಿ ಕೇಳಿಸುವ ಗೊಬ್ಬಿಯ ಹಾಡುಗಳು ತೆಲಂಗಾಣದಲ್ಲಿ ಕೇಳಿಸವು. ರಂಗೋಲಿ ಪುಡಿಯಿಂದ, ಗೋಮಯದಿಂದ ಮಾಡಿದ ಗೊಬ್ಬಿಗಳಲ್ಲಿ ಆರೋಗ್ಯಾಂಶಗಳು ಅಡಗಿರುತ್ತವೆ. ಧನುರ್ಮಾಸದಲ್ಲಿ ಹವಾಮಾನ ತೇವದಿಂದ ಅಂಟುವ್ಯಾಧಿಗಳನ್ನು ಹರಡುವಂತೆ ಮಾಡಿ, ಕ್ರಿಮಿಗಳಿಂದ ಕೂಡಿರುತ್ತದೆ. ರಂಗೋಲಿಪುಡಿ, “ಗೊಬ್ಬಿಳ್ಳು” ಗೋವಿನ ಸಗಣಿಯ ನೀರಿಂದ ಚಿಮ್ಮಿದರೆ ಕ್ರಿಮಿಸಂಹಾರಕ ವ್ಯಾಧಿ ನಿರೋಧಕಗಳು ಕೆಲಸ ಮಾಡುತ್ತವೆ.

ಸಂಕ್ರಾತಿಗೆ ಹಿಂದಿನ ದಿನ ‘ಭೋಗಿ ಹಬ್ಬ’ ಧನುರ್ಮಾಸಕ್ಕೆ ಕಡೆಯ ದಿನ. ಗೋದಾದೇವಿ ಶ್ರೀರಂಗನಾಥರ ಕಲ್ಯಾಣ ನಡೆದ ದಿನ. ಬಲಿವಕ್ರವರ್ತಿ ಪಾತಾಳದಿಂದ ಭೂಲೋಕಕ್ಕೆ ಬರುವ ದಿನ. ಅವನಿಗೆ ಸ್ವಾಗತವಾಗಿ ಭೋಗಿ ಉರಿಗಳನ್ನು ಉರಿಸಬೇಕೆಂದು ಹೇಳುತ್ತಾರೆ. ಭೋಗಿಯ ದಿನ ಮುಂಜಾನೆಯೇ ಮನೆಯ ಮುಂದೆ ಗೊಬ್ಬಿಳ್ಳಿಂದ ಮಾಡಿದ ಬೆರಣಿಯಿಂದ ಭೋಗಿ ಉರಿಯನ್ನು ಹಾಕುತ್ತಾರೆ. ಅನಂತರ ಎಳ್ಳಣ್ಣೆಯನ್ನು ಶರೀರಕ್ಕೆ ಹಚ್ಚಿಕೊಂಡು, ಕಡಲೆ ಹಿಟ್ಟಿನಿಂದ ಉಜ್ಜಿಕೊಂಡು ಆಭ್ಯಂಗ ಸ್ನಾನ ಮಾಡುತ್ತಾರೆ. ಎಳ್ಳೆಣ್ಣೆ ಚರ್ಮ ಸೌಂದರ್ಯ ಪದಾರ್ಥ. ಉಜ್ಜುವುದರಿಂದ ರಕ್ತ ಪ್ರಸರಣ ಸಕ್ರಮವಾಗಿ ನಡೆಯುತ್ತದೆ. ಭೋಗಿ ದಿನ ಸಾಯಂಕಾಲ ಚಿಕ್ಕ ಮಕ್ಕಳಿಗೆ ದೃಷ್ಟಿ ಪರಿಹಾರಾರ್ಥ ಎಲಚಿ ಹಣ್ಣನ್ನು, ಭೋಗಿ ಹಣ್ಣನ್ನು ತಲೆಯ ಮೇಲೆ ಸುರಿಯುತ್ತಾರೆ. ಎಲಚಿ ಹಣ್ಣನ್ನು ಸಂಸ್ಕೃತದಲ್ಲಿ ‘ಬದರೀಫಲ’ ಎನ್ನುತ್ತಾರೆ. ನಾರಾಯಣನು ಬದರೀವನದಲ್ಲಿ ತಪಸ್ಸು ಮಾಡಿ ಬದರೀ ಹಣ್ಣನ್ನು ತಿಂದು ಬದರೀನಾರಾಯಣನಾದನು. ಎಲಚಿ ಹಣ್ಣನ್ನು ನಾರಾಯಣನ ಆಶೀರ್ವಾದವೆಂದು ಭಾವಿಸಿ ತಲೆಯ ಮೇಲೆ ಹುಯ್ಯುತ್ತಾರೆ. ಅಷ್ಟಲ್ಲದೆ ಎಲಚಿ ಹಣ್ಣು ಹೆಸರಲ್ಲಿಯೂ (ಅರ್ಕಫಲಮ್) ಬಣ್ಣದಲ್ಲಿಯೂ, ರೂಪದಲ್ಲಿಯೂ, ಸೂರ್ಯನನ್ನು ಹೋಲಿರುತ್ತದೆ. ಆದ್ದರಿಂದ ಸೂರ್ಯ ಶಕ್ತಿ ಮಕ್ಕಳಿಗೆ ಬರಬೇಕೆಂದು ಆಶಿಸಿ ಎಲಚಿಹಣ್ಣನ್ನು ಮಕ್ಕಳ ಮೇಲೆ ಹುಯ್ಯುತ್ತಾರೆ. ಬೊಂಬೆ ಮದುವೆ ಮಾಡಲು ಮುತ್ತೈದೆಯರನ್ನು ಕರೆಯುತ್ತಾರೆ.

ಭೋಗಿಯ ಮರುದಿನವೇ ಸಂಕ್ರಾತಿ. ಸೂರ್ಯ ಉತ್ತರಾಯಣಕ್ಕೆ ಪ್ರವೇಶಿಸುವ ಪುಣ್ಯ ದಿನ. ಸತ್ತವರಿಗೆ ಸ್ವರ್ಗ ಲೋಕ ದ್ವಾರಗಳು ತೆಗೆಯುವ ದಿನ. ಸ್ವಚ್ಛಂಧ ಮರಣ ವರಪ್ರಸಾದನಾದ ಭೀಷ್ಮನು ದೇಹ ಬಿಟ್ಟು ಪರಮಾತ್ಮನಲ್ಲಿ ಲೀನವಾದ ಪುಣ್ಯ ಕಾಲವೇ ಉತ್ತರಾಯಣ. ಉತ್ತರಾಯಣ ಮೊದಲ ದಿನವಾದ ಸಂಕ್ರಾತಿ ಪಿತೃ ಋಣವನ್ನು ತೀರಿಸಿ ಕೊಳ್ಳುವ ಹಬ್ಬದ ದಿನ. ದೊಡ್ಡವರು ಪುಣ್ಯ ಲೋಕ ಪ್ರಾಪ್ತಿಗಾಗಿ, ತರ್ಪಣ ಶ್ರಾದ್ಧ ದಾನಗಳನ್ನು ಮಾಡುತ್ತಾರೆ. ದೊಡ್ಡವರ ಹೆಸರಿನಲ್ಲಿ ಬಟ್ಟೆಗಳನ್ನು ನೀಡುತ್ತಾರೆ. ಮುತ್ತೈದೆ ಸ್ತ್ರೀಗಳಾದವರೇ ತಾಂಬೂಲ, ಸೀರೆಗಳನ್ನು ಹಂಚುತ್ತಾರೆ.

ಸಂಕ್ರಾತಿ ಹೊತ್ತಿಗೆ ಬೆಳೆದ ಪೈರಿನಿಂದ ತುಂಬಿದ ಕಣಜಗಳಿಂದ ರೈತರ ಮನೆಗಳು ಬೆಳಗುತ್ತಿರುತ್ತವೆ. ಬೆಳೆಗಳು ಬೆಳೆಯುವುದಕ್ಕೆ ಕಾರಣವಾದ ಸಾಕ್ಷಾತ್ ಭಗವಂತನಾದ ಸೂರ್ಯ ಭವನವನ್ನು ಆರಾಧಿಸುವ ಸಂಕ್ರಾತಿಯನ್ನು “ಪ್ರತ್ಯಕ್ಷ ಪರ್ವದಿನ” ಎಂದು ಹೇಳುತ್ತಾರೆ. ರೈತರು ಬೆರಣಿಯಿಂದ ಹಾಲನ್ನು ಕಾಯಿಸಿ. ಹೊಸ ಅಕ್ಕಿಯಿಂದ ಪಾಯಸವನ್ನು ಮಾಡಿ ಸೂರ್ಯ ದೇವರಿಗೆ ನಿವೇದಿಸುತ್ತಾರೆ. ರೈತರು ಬೆಳೆದ ಧ್ಯಾನ್ಯವನ್ನು ಕೆಲಸದವರಿಗೂ, ಬಡವರಿಗೂ ಅಲ್ಲದೆ ಹರಿದಾಸರಿಗೂ ಕೋಲೆ ಬಸವದವರಿಗೂ ಹಗಲು ವೇಷಧಾರರಿಗೂ ಬುಡಬುಡಿಕೆಯವರಂಥ ಜನಪದ ಕಲಾವಿದರಿಗೂ ಹಂಚುತ್ತಾರೆ. ದಾನ ಧರ್ಮ ಮಾಡುವ ರೈತರಿಗೆ ತೃಪ್ತಿಯನ್ನು ಕೊಡುವ ಸಂಕ್ರಾತಿಯನ್ನು ರೈತರ ಹಬ್ಬ ಎಂದು ಹೇಳುತ್ತಾರೆ. ಧಾನ್ಯವನ್ನು ಅಲ್ಲದೇ ಎಳ್ಳು, ಬೆಲ್ಲ, ಕುಂಬಳಕಾಯಿಗಳನ್ನು ದಾನ ಮಾಡುತ್ತಿರುತ್ತಾರೆ. ಶನಿದೇವರಿಗೆ ಎಳ್ಳು ಎಂದರೆ ಇಷ್ಟವಾದ್ದರಿಂದ ಎಳ್ಳನ್ನು ದಾನ ಮಾಡಿದರೆ ಶನಿ ಪೀಡಿಸದೇ ಅನುಗ್ರಹಿಸುವನೆಂದು ನಂಬುತ್ತಾರೆ. ತೆಲಂಗಾಣದಲ್ಲಿ ಬಿಳಿ ಎಳ್ಳು, ಬೆಲ್ಲ , ಪರಸ್ಪರ ಹಂಚಿಕೊಳ್ಳುತ್ತಾರೆ. ಎಳ್ಳು ಬೆಲ್ಲ ಸಿಹಿ ತಿಂದು ಸಿಹಿ ಮಾತಾಡಿ ನೂರು ವರ್ಷ ಬಾಳು ಎಂದು ಹಾರೈಸುತ್ತಾರೆ. ವರಾಹ ಸ್ವಾಮಿ ಭೂಮಿಯನ್ನುದ್ಧರಿಸಿದ್ದಕ್ಕೆ ಸಂಕೇತವಾಗಿ ಕುಂಬಳ ಕಾಯನ್ನು ದಾನ ಮಾಡುತ್ತಾರೆ. ಈ ದಾನ ಮಾಡುವುದರಿಂದ ಸಮಸ್ತ ಬ್ರಹ್ಮಾಂಡವನ್ನು ವಿಷ್ಣುವಿಗೆ ಸಮರ್ಪಿಸಿದಂತೆ ಆಗುವುದೆಂದು ಒಂದು ನಂಬಿಕೆ. ಸಂಕ್ರಾತಿಯ ದಿನ ಹೊಸ ವಸ್ತ್ರಗಳನ್ನು ಧರಿಸಿ ದೊಡ್ಡವರಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುವುದರಿಂದ “ಮೆಕ್ಕುಲ ಪಂಡುಗ” ಅಥವಾ “ಮುಗಿಯದ ಹಬ್ಬ” ಎನ್ನುತ್ತಾರೆ. ಸಂಕ್ರಾತಿಯ ದಿನ ಅಂಧ್ರದಲ್ಲಿ ಕಜ್ಜಾಯ, ಚಕ್ಕುಲಿ, ಎಳ್ಳುಂಡೆಗಳು ಮುಂತಾದವು ವಿಶೇಷ ಹಬ್ಬದ ಆಡುಗೆಗಳಾಗಿ ಮಾಡಿಕೊಳ್ಳುತ್ತಾರೆ.

ಸಂಕ್ರಾತಿಯ ಮಾರನೆಯ ದಿನ ‘ಕನುಮ’ ಅಥವಾ ದನಗಳ ಹಬ್ಬ ಎನ್ನುತ್ತಾರೆ. ತಮ್ಮ ಶ್ರಮದಾನದಿಂದ ಹೈನುಗಾರಿಕೆ ಅಭಿವೃದ್ಧಿಗೆ ಕಾರಣವಾದ ದನಗಳನ್ನು, ವ್ಯವಸಾಯಕ್ಕೆ ಬಳಸುವ ಉಪಕರಣಗಳನ್ನು ಶುದ್ಧಿ ಮಾಡಿ, ಅಲಂಕರಿಸಿ, ಅರಿಸಿನ ಕುಂಕುಮಗಳಿಂದ ಭಕ್ತಿ ಶ್ರದ್ಧೆಗಳಿಂದ ಪೂಜಿಸುವ ಹಬ್ಬ ಕನುಮ ದನಗಳ ಹಬ್ಬ ಎತ್ತುಗಳ ಕೊಂಬುಗಳಿಗೆ ಬಣ್ಣ ಬಳಿದು, ಕೊರಳಲ್ಲಿ ಹೂವಿನ ಮಾಲೆ ಹಾಕಿ ಕಾಲಿಗೆ ಗೆಜ್ಜೆಗಳನ್ನು ಅಲಂಕರಿಸುತ್ತಾರೆ. ದನಗಳ ಕೊಠಡಿಯಲ್ಲಿ ಅಕ್ಕಿ ಮತ್ತು ಹಾಲಿನಿಂದ ಪೊಂಗಲು ತಯಾರಿಸಿ, ಆ ಪೊಂಗಲ್ ಅನ್ನು ಪಶುಗಳ ಪೊಂಗಲಿ ಎಂದು ಸಂತೋಷವಾಗಿ ಕೇಕೆ ಹಾಕಿ, ಸೂರ್ಯನಿಗೂ, ಇತರ ದೇವತೆಗಳಿಗೂ ಸೇವಿಸುವರು. ಪೊಂಗಲಿಗೆ ಅರಿಸಿನ ಕುಂಕುಮ ಬೆರೆಸಿ ಹೊಲಗಳಲ್ಲಿ ಚೆಲ್ಲುತ್ತಾರೆ. ಇದನ್ನೇ “ಪೊಲಿಚೆಲ್ಲುವುದು” ಎನ್ನುತ್ತಾರೆ. ಕೆಂಪು ಕುಂಬಳ ಕಾಯಿಯನ್ನು ಹೊಲಕ್ಕೆ ದೃಷ್ಟಿ ತೆಗೆದು ನೆಲಕ್ಕೆ ಹೊಡೆಯುತ್ತಾರೆ. ಸಾಯಂಕಾಲ ಎತ್ತುಗಳನ್ನಲಂಕರಿಸಿ, ಮೇಳತಾಳಗಳಿಂದ ಮೆರವಣಿಗೆ ಮಾಡುವರು. ತೀರಾಂಧ್ರದಲ್ಲಿ ಊರಿನ ಸರಹದ್ದುಗಳಲ್ಲಿ ಎತ್ತಿನ ಪಂದ್ಯಗಳು, ಟಗರು ಪಂದ್ಯಗಳೂ, ಕೋಳಿ ಪಂದ್ಯಗಳೂ ನಡೆಸುತ್ತಾರೆ. “ಕನುಮ ನಾಡು ಕಾಕೈನ ಕದಲದು” ಎನ್ನುವ ಗಾದೆ (ಕನುಮ ದಿನ ಕಾಗೆಯು ಕದಲದು) ಕನುಮ ದಿನ ಪ್ರಯಾಣ ಮಾಡಬಾರದೆಂದು ಸೂಚಿಸುತ್ತದೆ .

ಬಂದ ನಂಟರು ಊರು ಬಿಡದೇ ಇರುತ್ತಾರೆ. ತೆಲಂಗಾಣದಲ್ಲಿ ‘ಕನುಮ’ ದಿನ ಅರಿಸಿನ ಬಟ್ಟೆಗಳು ತೊಡುತ್ತಾರೆ. ಇವು ಪೀಡೆಯನ್ನು ತೊಲಗಿಸುತ್ತವೆಂದು ನಂಬುತ್ತಾರೆ. ರಾಯಲಸೀಮೆ ಪ್ರಾಂತದಲ್ಲಿ ಚಿತ್ತೂರಿನಲ್ಲಿ ಹಬ್ಬದ ಮೂರನೆಯ ದಿನ ದನದ ಹಬ್ಬದಂದು ದನಗಳನ್ನು ಪೂಜಿಸಿ ಕಾಟಮರಾಜನನ್ನು ಪೂಜಿಸುವರು. ನಾಲ್ಕನೆಯ ದಿನ ‘ಕನುಮ’ ದಿನ ಗ್ರಾಮ ದೇವತೆಗಳನ್ನು ಪೂಜಿಸುವರು. ಜಾತ್ರೆಯನ್ನು ನಡೆಸುತ್ತಾರೆ. ಐದನೇ ದಿನದಂದು “ಬುಡುಸಲ” ಅಥವಾ “ವರಸೆ ಹಬ್ಬ” ಎಂದು ಕರೆಯುತ್ತಾರೆ. ಗ್ರಾಮ ದೇವತೆಗಳಿಗೆ ಬಲಿಕೊಟ್ಟು ಪ್ರಾಣಿಮಾಂಸಗಳಿಂದ ಹಬ್ಬ ಮಾಡಿಕೊಳ್ಳುತ್ತಾರೆ. ಈ ದಿನ ವರಸೆ ಇರುವ ನೆಂಟರೆಲ್ಲರೂ ಸೇರಿ ಹಬ್ಬ ಮಾಡಿಕೊಳ್ಳುತ್ತಾರೆ. ಆದ್ದರಿಂದ “ವರಸೆ ಹಬ್ಬ” ಎಂದು ವ್ಯವಹರಿಸುವುದು.

ಪ್ರಾಂತಗಳನ್ನು ಅನುಸರಿಸಿ ಸಂಕ್ರಾಂತಿ ಹಬ್ಬವನ್ನು ಮಾಡಿಕೊಳ್ಳುವ ಸಂಪ್ರದಾಯಗಳಲ್ಲಿ ಸ್ವಲ್ಪ ವೈವಿಧ್ಯ ಕಾಣಿಸಿದರೂ ತೆಲುಗಿನವರಿಗೆ ಇದು ಮುಖ್ಯವಾದ ಹಬ್ಬ.

ಆರ್. ಪಿ. ಅನುವಾದ ಎ.ಎ.

 

ಸಂಗೊಳ್ಳಿ ರಾಯಣ್ಣ ಕರ್ನಾಟಕದ ಒಬ್ಬ ಸ್ವಾತ್ರಂತ್ರ್ಯ ಹೋರಾಟಗಾರ. ಕಿತ್ತೂರನ್ನು ಆಳುತ್ತಿದ್ದ ದೇಸಾಯಿಯರ ಅಭಿಮಾನಿ. ಕಿತ್ತೂರು ರಾಣಿ ಚೆನ್ನಮ್ಮನ ನಂಬಿಗಸ್ಥ ಸೇವಕ. ಪ್ರಾರಂಭದಲ್ಲಿ ರಾಯಣ್ಣ ಎಲ್ಲರಂತೆ ಒಬ್ಬ ಸಾಮಾನ್ಯ ಪ್ರಜೆ. ಕಿತ್ತೂರಿನ ತಳವಾರಿಕೆ ಎಂಬ ನೌಕರಿಯಲ್ಲಿ ಇದ್ದವನು. ಬ್ರಿಟಿಷರ ವಿರುದ್ಧ ಆಗಾಗ ದಂಗೆಯೇಳುತ್ತ ಅವರ ನಿದೆಗೆಡಿಸಿದ್ದವನು. ಚೆನ್ನಮ್ಮ ಸೆರೆಸಿಕ್ಕ ಮೇಲೆ ಈತನ ಹೋರಾಟಗಳು ಹಿಂಸಾರೂಪ ತಾಳಿದ್ದುವು. ಮೊದಲ ಸಲ ದಂಗೆಯಲ್ಲಿ ಭಾಗವಹಿಸಿದ್ದಕ್ಕೆ ಪ್ರತಿಯಾಗಿ ತನ್ನ ಇನಾಮು ಭೂಮಿಯನ್ನು ಕಳೆದುಕೊಂಡಿದ್ದ.

ಸಣ್ಣ ಪುಟ್ಟ ದಂಗೆಗಳಿಂದ ಪ್ರಯೋಜನವಿಲ್ಲ ವೆನಿಸಿದ್ದರಿಂದ ತನ್ನ ಹೋರಾಟಗಳಿಗೆ ತಕ್ಕ ದಂಡು ಬೇಕಾಗಿತ್ತು. ಅಷ್ಟು ಹೊತ್ತಿಗಾಗಲೇ ಬ್ರಿಟಿಷರಿಂದ ನೊಂದಿದ್ದ ಸುರಪುರದ ಅರಸ ರಾಜಾ ವೆಂಕಟಪ್ಪ ನಾಯಕರಲ್ಲಿಗೆ ಹೋದ. ಇವನ ಶೌರ್ಯ ಸಾಹಸಗಳನ್ನು ಕೇಳಿ ತಿಳಿದಿದ್ದ ವೆಂಕಟಪ್ಪ ನಾಯಕ ರಾಯಣ್ಣನ ಅಪೇಕ್ಷೆಯಂತೆ ದಂಡನ್ನು ಕೊಟ್ಟ. ಆ ದಂಡನ್ನು ಕಾಡಿಗೆ ಒಯ್ದು ತನ್ನ ಕಲ್ಪನೆಯಂತೆ ಅವರಿಗೆ ತರಬೇತಿ ನೀಡಿದ.

ದಕ್ಕಿದ ದಂಡಿಗೆ ತಕ್ಕ ನಾಯಕನಾದ ರಾಯಣ್ಣ ಶಿಸ್ತಿಗೆ ಪ್ರಾಧಾನ್ಯ ನೀಡಿದರೂ ಅವರನ್ನೆಲ್ಲ ಪ್ರೀತಿಯಿಂದ ನಡೆಸಿಕೊಳ್ಳುತ್ತಿದ್ದ. ರಾಯಣ್ಣನನ್ನು ಹುಡುಕುತ್ತಾ ಬಂದ, ತಮಗಿಂತ ಅಧಿಕ ಸಂಖ್ಯೆಯಲ್ಲಿದ್ದ. ಎದುರಾಳಿ ಸೈನ್ಯವನ್ನು ‘ಗಿಡಕ ಜ್ಯಾಂವಿಗಿ ಕಟ್ಟುವುದರ’ ಮೂಲಕ ಮೋಸಗೊಳಿಸಿ ತರಿದು ಕೊಳ್ಳುವ ದೃಶ್ಯ, ಇಷ್ಟನ್ನೆಲ್ಲ ಕ್ಷಣಾರ್ಧದಲ್ಲಿ ಯೋಚಿಸಿ ನಿರ್ಧರಿಸಿ ಕಾರ್ಯರೂಪಕ್ಕಿಳಿಸುವ ರಾಯಣ್ಣನ ಮೇಧಾವಿತನ, ರೋಮಾಂಚನಕಾರಿ. ಎದುರು ದಂಡಿನಲ್ಲಿ ಮದ್ದು ಗುಂಡು ತೀರಿಹೋದ ಸುಳಿವು ಕಂಡೊಡನೆ ‘ಕುರಿ ಮಂದೆಯಲ್ಲಿ ತೋಳ ಹೊಕ್ಕಂತೆ’ ರಾಯಣ್ಣ ಆ ದಂಡಿನೊಳಗೆ ನುಗ್ಗುವ ಚಿತ್ರವೂ ‘ಮುರಮುರದ ವೊಗವೊಗದ ಹಿರಿಹಿರಿದ ಕಡದಾರ ಕತ್ತೀಲಿ’ ಎಂಬ ವರ್ಣನೆಯೂ ‘ಸುತ್ತು ಗಟ್ಟಿ ಕತ್ತಿ ಮಂದಿ ಯತ್ತೈತ್‌ ಹೋಗಗೊಡದ ಕಡದಾರ’ ಎಂಬ ಮಾತೂ ರಾಯಣ್ಣನ ಡಡೆಯ ಧೈರ್ಯ ಸಾಹಸಗಳ ಶಿಸ್ತಿನ ಸ್ಪಷ್ಟ ಚಿತ್ರವನ್ನು ಮೂಡಿಸುತ್ತವೆ.

ರಾಣಿ ಚೆನ್ನಮ್ಮನ ದತ್ತುಪುತ್ರನಾದ ಶಿವಲಿಂಗಪ್ಪನನ್ನು ಕಿತ್ತೂರಿನ ಸಿಂಹಾಸನಕ್ಕೆ ಏರಿಸುವ ಸಾಹಸ ಕೃತ್ಯಕ್ಕೆ ತೊಡಗಿ, ಬ್ರಿಟಿಷ್‌ ಆಡಳಿತವನ್ನು ದಿಕ್ಕರಿಸಿದ. ಶಮಸರಗಡಕ್ಕೆ ಹಾಕಿದ ಮೊದಲಮುತ್ತಿಗೆಯೇ ಎಷ್ಟು ಉಗ್ರ ಸ್ವರೂಪದ್ದಾಗಿತ್ತು ಎಂಬುದು ಅಲ್ಲಿಯ ಸುಭೆಯದಾರ ಉದ್ಗರಿಸಿದ ‘…. ನಮ್ಮ ನಾಡವಳಗ ಹಿಂತಾವರು ಯಾರ್ಯಾರು ಬಂದಿದ್ದಿಲ್ಲ….’ ಎಂಬ ಮಾತುಗಳಲ್ಲಿ ಕಂಡುಬರುತ್ತದೆ.

ಸುರಪುರದ ಅರಸರು ದಂಡನ್ನು ಕೊಡುವ ಮುಂಚೆ ರಾಯಣ್ಣ ಕೂಟಯುದ್ಧದಲ್ಲಿ ತೊಡಗಿದ್ದ. ಹಗಲನ್ನು ಕಾಡಿನಲ್ಲಿ ಕಳೆದು ರಾತ್ರಿಯಾಗುತ್ತಿದ್ದಂತೆಯೇ ಬ್ರಿಟಿಷರ ನೆಲೆಗಳ ಮೇಲೆ ದಾಳಿ ಮಾಡುತ್ತಿದ್ದ ರಾಯಣ್ಣನ ಹೋರಾಟ ಮುಂದುವರಿದಂತೆಲ್ಲ ಇಡೀ ಕಿತ್ತೂರಿನ ಪ್ರಜೆಗಳು ಇವನನ್ನು ಹಿಂಬಾಲಿಸಿದ್ದರು. ಜೊತೆಗೆ ಸುರಪುರದ ದಂಡೂ ಇತ್ತು. ಖಾನಾಪುರದಲ್ಲಿ ಸರ್ಕಾರಿ ಕಚೇರಿಗೆ ಬೆಂಕಿ ಇಟ್ಟ. ತನ್ನ ದಾಳಿಗಳಲ್ಲಿ ಎದುರಾದವರನ್ನೆಲ್ಲ ನಿರ್ದಾಕ್ಷಿಣ್ಯವಾಗಿ ಕೊಲ್ಲುತ್ತಿದ್ದ. ಸಂಪಗಾಂವದ ಮೇಲೂ ಅಲ್ಲಿಯ ಖಜಾನೆಯನ್ನು ಲೂಟಿ ಮಾಡಿ ಹೋರಾಟಗಳಿಗೆ ಬಳಸಿಕೊಂಡ.

ಹೀಗೆ ೧೮೨೯ರಲ್ಲಿ ರಾಯಣ್ಣ ನಾಲ್ಕು ತಿಂಗಳವರೆಗೆ ಸತತವಾಗಿ ಕಾಡಿದಾಗ ಬ್ರಿಟಿಷರು ಇವನನ್ನು ನೇರವಾಗಿ ಎದುರಿಸಿ ಗೆಲ್ಲುವುದು ಸಾಧ್ಯವಿಲ್ಲ ಎಂಬ ನಿರ್ಧಾರಕ್ಕೆ ಬಂದರು. ಕಪಟ ಜಾಲವೊಂದನ್ನು ಹೆಣೆದರು. ರಾಯಣ್ಣನಿಗೆ ಗೊತ್ತಿದ್ದವರನ್ನೇ ನೇಮಿಸಿ, ವಿಶ್ವಾಸಘಾತುಕತನದಿಂದ ರಾಯಣ್ಣನನ್ನು ಸೆರೆಹಿಡಿಯಬೇಕಾಯಿತು. ಕಾಡಿನಲ್ಲಿ ಪ್ರಯಾಣ ಮಾಡುತ್ತಿದ್ದಾಗ ಮೂವರು ಸ್ನೇಹಿತರ ಪ್ರಚೋದನೆಗೆ ಬಲಿಯಾಗಿ ಸ್ನಾನ ಮಾಡುವ ಸಂದರ್ಭದಲ್ಲಿ ರಾಯಣ್ಣ ಸೆರೆ ಸಿಕ್ಕಿದ. ರಾಯಣ್ಣನು ತನ್ನ ದಂಗೆಯನ್ನು ಉಗ್ರರೂಪಕ್ಕಿಳಿಸಿದ ರಾಯಣ್ಣನು ೧೮೨೯ರಲ್ಲಿ ಗಲ್ಲಿಗೇರಿಸಲ್ಪಟ್ಟ.

ಕೆ. ಆರ್.