ಕರ್ನಾಟಕದ ಆಧುನಿಕ ಚರಿತ್ರೆಯಲ್ಲಿ ಕರ್ನಾಟಕ ಏಕೀರಣ ಒಂದು ಮಹತ್ವಪೂರ್ಣ ಐತಿಹಾಸಿಕ ಘಟನೆ. ಹಾಗೆಯೇ ಕನ್ನಡ ವಿಶ್ವವಿದ್ಯಾಲಯದ ಸ್ಥಾಪನೆಯೂ ಮತ್ತೊಂದು ಮಹತ್ವದ ಘಟನೆ. ಕನ್ನಡ-ಕನ್ನಡಿಗ-ಕರ್ನಾಟಕ ಸಂಸ್ಕೃತಿಯ ಕಲ್ಪನೆಯಡಿಯಲ್ಲಿ ಅಸ್ತಿತ್ವಕ್ಕೆ ಬಂದ ಕನ್ನಡ ವಿಶ್ವವಿದ್ಯಾಲಯದ ಹರವು ವಿಸ್ತಾರವಾದದ್ದು. ಈ ಕಾರಣದಿಂದ ವಿಶ್ವವಿದ್ಯಾಲಯದ ಆಶಯ ಮತ್ತು ಗುರಿ ಇತರ ವಿಶ್ವವಿದ್ಯಾಲಯಗಳಾಗಿಂತ ಭಿನ್ನ ಹಾಗೂ ಪ್ರಗತಿಪರ. ಕನ್ನಡದ ಸಾಮರ್ಥ್ಯವನ್ನು ಎಚ್ಚರಿಸುವ ಕಾಯಕವನ್ನು ಉದ್ದಕ್ಕೂ ಅದು ನೋಂಪಿಯಿಂದ ಮಾಡಿಕೊಂಡು ಬಂದಿದೆ. ಕರ್ನಾಟಕದ ‘ವಿಕಾಸ’ ಈ ವಿಶ್ವವಿದ್ಯಾಲಯದ ಮಹತ್ತರ ಆಶಯವಾಗಿದೆ.

ಕನ್ನಡ ಅಧ್ಯಯನ ಮೂಲತಃ ಶುದ್ಧ ಜ್ಞಾನದ, ಕಾಲ, ದೇಶ, ಜೀವನ ತತ್ವದ ಪರವಾಗಿರುವುದರ ಜೊತೆಗೆ ಅಧ್ಯಯನವನ್ನು ಒಂದು ವಾಗ್ವಾದದ ಭೂಮಿಕೆ ಎಂದು ನಾವು ಭಾವಿಸಬೇಕಾಗಿದೆ. ಕನ್ನಡ ಬದುಕಿನ ಚಿಂತನೆಯ ಭಾಗವೆಂದೇ ಅದನ್ನು ರೂಪಿಸಿ ವಿವರಿಸಬೇಕಾಗಿದೆ. ಅಂದರೆ: ದೇಸೀ ಬೇರುಗಳ ಗುರುತಿಸುವಿಕೆ ಕನ್ನಡ ಅಧ್ಯಯನದ ಮುಖ್ಯ ಭಿತ್ತಿಯಾಗಬೇಕಾಗಿದೆ. ಕನ್ನಡ ಸಂಸ್ಕೃತಿಯು ಬಹುತ್ವದ ನೆಲೆಗಳನ್ನು ಆಧರಿಸಿ ರೂಪುಗೊಂಡಿದೆ. ಸಮಾಜಮುಖಿ ಚಿಂತನೆಗಳ ವ್ಯಾಪಕ ಅಧ್ಯಯನ ಬದುಕಿನ ಸಂಕೀರ್ಣ ಲಕ್ಷಣಗಳ ಸ್ವರೂಪವನ್ನು ಪರಿಚಯಿಸುತ್ತದೆ. ನಾವು ಇದನ್ನು ಎಲ್ಲ ವಲಯಗಳಲ್ಲಿ ಕನ್ನಡದ ಅನುಷ್ಠಾನದ ಮೂಲಕ ಉಳಿಸಿ, ಬೆಳೆಸಬೇಕಾಗಿದೆ. ಆಗ ಕನ್ನಡ ಸಂಸ್ಕೃತಿಯು ವಿಶ್ವಪ್ರಜ್ಞೆಯಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ‘ಕನ್ನಡದ್ದೇ ಮಾದರಿ’ಯ ಶೋಧ ಇಂದಿನ ಮತ್ತು ಬರುವ ದಿನಗಳ ತೀವ್ರ ಅಗತ್ಯವಾಗಿದೆ.

ಕನ್ನಡ ಸಂಸ್ಕೃತಿಯ ಭಾಗವಾಗಿರುವ ಕನ್ನಡ ಅಧ್ಯಯನವುಕಾಲದಿಂದ ಕಾಲಕ್ಕೆ ಹೊಸ ತಿಳಿವಳಿಕೆಯನ್ನು ತನ್ನ ತೆಕ್ಕೆಗೆ ಜೋಡಿಸಿಕೊಳ್ಳುತ್ತ ಬಂದಿದೆ. ಹೀಗಾಗಿ ವಿದೇಶಿ ಮತ್ತು ದೇಶಿ ವಿದ್ವಾಂಸರು ತೊಡಗಿಸಿಕೊಂಡ ಈ ವಿದ್ವತ್ ಕ್ಷೇತ್ರದಲ್ಲಿ ಮುಂದಿನ ವಿದ್ವಾಂಸರು ಕಾಲದಿಂದ ಕಾಲಕ್ಕೆ ಹೊಸಬೆಳೆಯನ್ನು ತೆಗೆಯುತ್ತ ಬಂದಿದ್ದಾರೆ. ಕನ್ನಡ ಅಧ್ಯಯನ ಪಳೆಯುಳಿಕೆಯ ಶಾಸ್ತ್ರವಾಗಿದೆ, ಬದಲಾಗುತ್ತಿರುವ ಕಾಲಮಾನದಲ್ಲಿ ಎದುರಾಗುತ್ತಿರುವ ಆಹ್ವಾನಕ್ಕೆ ತಕ್ಕಂತೆ ತನ್ನ ಗತಿಯನ್ನು ಬದಲಾಯಿಸಿಕೊಳ್ಳುತ್ತ ಬಂದಿರುವುದು ಗಮನಿಸತಕ್ಕ ಅಂಶ. ಸಾಂಪ್ರದಾಯಿಕ ಚಿಂತನೆಗಳು ಆಧುನೀಕರಣದ ಕಾಲಘಟ್ಟದಲ್ಲಿ ಸಕಾಲಿಕಗೊಳ್ಳುವುದು ಅನಿವಾರ್ಯವಾಗಿದೆ. ಮಾಹಿತಿ ತಂತ್ರಜ್ಞಾನದ ಮೂಲಕ ಜಗತ್ತಿನ ಜ್ಞಾನಪ್ರವಾಹವೇ ನಮ್ಮ ಅಂಗೈಯೊಳಗೆ ಚುಳುಕಾಗುವ ಸಂದರ್ಭದಲ್ಲಿ ಕನ್ನಡದ ಚಹರೆ ಮತ್ತು ಕನ್ನಡ ಭಾಷೆಯ ಚಲನಶೀಲತೆಯನ್ನು ಶೋಧಿಸಲಿಕ್ಕೆ ಭಾಷಾ ಆಧುನೀಕರಣ ಮತ್ತು ಪ್ರಮಾಣೀಕರಣದ ಪ್ರಕ್ರಿಯೆಗಳ ನೆಲೆಯಲ್ಲಿ ಅಧ್ಯಯನದ ಹೊಸ ಸಾರ್ಧಯತೆಗಳನ್ನು ಅನುಲಕ್ಷಿಸಿ, ಭಾಷಾನೀತಿ, ಭಾಷಾಯೋಜನೆ ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯವಾಗಿದೆ. ಆಗ ಅಧ್ಯಯನದ ಸ್ವರೂಪದ ಹಾಗೂ ಬಳಕೆಯ ವಿಧಾನದಲ್ಲಿ ಪರಿವರ್ತನೆ ಸಾಧ್ಯವಾಗುತ್ತದೆ.

ನಮ್ಮೆದುರು ನುಗ್ಗಿ ಬರುತ್ತಿರುವ ಜಾಗತೀರಕಣಕ್ಕೆ ಪ್ರತಿರೋಧವಾಗಿ ನಮ್ಮ ದೇಶೀಯ ಜ್ಞಾನಪರಂಪರೆಯನ್ನು ಮರುಶೋಧಿಸಿ ಆ ಮೂಲಕ ಕುಸಿಯುತ್ತಿರುವ ನಮ್ಮ ಬೇರುಗಳನ್ನು ಬಲಗೊಳಿಸಿಕೊಳ್ಳಬೇಕಾಗಿದೆ. ಭಾಷೆ, ಸಾಹಿತ್ಯ, ವ್ಯಾಕರಣ, ಛಂದಸ್ಸು, ಚರಿತ್ರೆ, ಕೃಷಿ, ವೈದ್ಯ, ಪರಿಸರ ಮುಂತಾದ ಅಧ್ಯಯನ ವಿಷಯಗಳನ್ನು ಹೊಸ ಆಲೋಚನೆಯ ನೆಲೆಯಲ್ಲಿ ವಿಶ್ಲೇಷಿಸಬೇಕಾಗಿದೆ. ಆಧುನಿಕ ವಿಜ್ಞಾನ, ತಂತ್ರಜ್ಞಾಣೇ ‘ಜ್ಞಾನ’ ಎಂದು ರೂಪಿಸಿರುವ ಇಂದಿನ ಆಲೋಚನೆಗೆ ಪ್ರತಿಯಾಗಿ ಈ ಜ್ಞಾನಶಾಖೆಗಳಲ್ಲಿ ಹುದುಗಿರುವ ದೇಶಿ ಪರಂಪರೆಯ ಜ್ಞಾನದ ಹುಡುಕಾಟ ನಡೆಯಬೇಕಾಗಿದೆ. ಅಂತಹ ಪ್ರಯತ್ನಗಳಿಗೆ ಬೇಕದ ಮಾರ್ಗದರ್ಶಕ ಸೂತ್ರಗಳ ಹಾಗೂ ಆಕರ ಪರಿಕರಗಳ ನಿರ್ಮಾಣದ ನೆಲೆ ತುಂಬ ಮುಖ್ಯವಾಗಿದೆ. ಕನ್ನಡ ವಿಶ್ವವಿದ್ಯಾಲಯವು ಕಳೆದ ಹದಿನಾರು ವರ್ಷಗಳಿಂದ ನಾಲ್ಕು ಕೆಲಸಗಳನ್ನು ಹಲವು ಯೋಜನೆಗಳ ಮೂಲಕ ರೂಪಿಸಿಕೊಂಡಿದೆ, ರೂಪಿಸಿಕೊಳ್ಳುತ್ತಿದೆ. ಇದೊಂದು ಚಲನಶೀಲ ಪ್ರಕ್ರಿಯೆಯಾಗಿದೆ. ಸಮಕಾಲೀನ ಭಾಷಿಕ, ಸಾಂಸ್ಕೃತಿಕ ಸಮಸ್ಯೆಗಳಿಗೆ ಮುಖಾಮುಖಿಯಾಗುತ್ತ ಕನ್ನಡ ನಾಡುನುಡಿಯನ್ನು ಹೊಸದಾಗಿ ಶೋಧಿಸುತ್ತಾ, ವಿವರಿಸುತ್ತಾ ಬಂದಿದೆ. ಅಂದರೆ: ಕನ್ನಡದ ಅರಿವಿನ ವಿಕೇಂದ್ರೀಕರಣವೇ ವರ್ತಮಾನದ ಹೊಸ ಬೆಳವಣಿಗೆ. ಇದು ಕನ್ನಡ ವಿಶ್ವವಿದ್ಯಾಲಯದ ಜೀವಧಾತುವಾಗಿದೆ. ಕನ್ನಡ ವಿಶ್ವವಿದ್ಯಾಲಯ ಹಮ್ಮಿಕೊಂಡಿರುವ ಹಲವಾರು ಕಾರ್ಯಕ್ರಮಗಳಲ್ಲಿ ಪುಸ್ತಕ ಪ್ರಕಟಣೆ ಮುಖ್ಯವಾದುದು. ಜ್ಞಾನ ಪ್ರಸಾರಕ್ಕಾಗಿ ಅಕ್ಷರಾರ್ಚನೆ ಕೈಗೊಳ್ಳುವುದು ವಿಶ್ವವಿದ್ಯಾಲಗಳ ಕರ್ತವ್ಯ. ಈ ನಿಟ್ಟಿನಲ್ಲಿ ಕನ್ನಡ ವಿಶ್ವವಿದ್ಯಾಲಯ ಗಣನೀಯ ಪ್ರಗತಿ ಸಾಧಿಸಿ. ಕನ್ನಡದ ಮೂಲಕ ವಿಶ್ವಪ್ರಜ್ಞೆಯನ್ನು ಮೂಡಿಸುವ ಕೆಲಸವನ್ನು ಈ ವಿಶ್ವವಿದ್ಯಾಲಯ ಯಶಸ್ವಿಯಾಗಿ ನಿರ್ವಹಿಸುತ್ತಾ ಬಂದಿದೆ.

‘ಜನವಾಣಿ ಬೇರು ಕವಿವಾಣಿ ಹೂವು’ ಎಂಬುದು ಅರ್ಥಪೂರ್ಣವಾದ ಹೇಳಿಕೆ. ಜನಜೀವನದ ಸಮಗ್ರ ಚಿತ್ರವನ್ನು, ಸಾಂಸ್ಕೃತಿಕ ಮಹತ್ತ್ವವನ್ನು, ಆಚರಣೆಗಳ ವೈವಿಧ್ಯವನ್ನು, ಕಲಾತ್ಮಕ ವೈಭವವನ್ನು ಅಭಿವ್ಯಕ್ತಿಗೊಳಿಸುವ ಸಾಮರ್ಥ್ಯ ಜಾನಪದಕ್ಕಿದೆ. ಜಾನಪದದ ಮೂಲಕ ನಾಡು-ನುಡಿಗಳ ವೈಶಿಷ್ಟ್ಯ. ಆಚಾರ ವ್ಯವಹಾರಗಳ ಸ್ವರೂಪ, ಸಾಂಸ್ಕೃತಿಕ ವಸ್ತುನಿರ್ಮಾಣದ ಕೌಶಲ. ಕಲಾಭಿವ್ಯಕ್ತಿಯ ನೈಪುಣ್ಯ ತಿಳಿದುಬರುತ್ತವೆ. ಈಗಾಗಲೇ ಕನ್ನಡ ವಿಶ್ವವಿದ್ಯಾಲಯ ಜಾನಪದಕ್ಕೆ ಸಂಬಂಧಿಸಿದ ಅನೇಕ ಅಮೂಲ್ಯ ಗ್ರಂಥಗಳನ್ನು ಪ್ರಕಟಿಸಿದೆ. ಜನಪದ ಕಲೆಗಳು, ಬುಡಕಟ್ಟುಗಳು, ಆಚರಣೆಗಳು, ಮಹಾಕಾವ್ಯಗಳು ಮುಂತಾದವುಗಳ ಸಂಗ್ರಹಣೆ, ಸಂಶೋಧನೆ ಮತ್ತು ಪ್ರಕಟಣೆಗಳಿಂದ ಈಕ್ಷೇತ್ರದಲ್ಲಿ ಸೇವೆ ಸಲ್ಲಿಸಿದೆ.

ಕರ್ನಾಟಕ ಸರ್ಕಾರ ಶಾಸ್ತ್ರೀಯ ಭಾಷೆಯಾಗಿ ಕನ್ನಡದ ಸಾಧನೆಯನ್ನು ಪ್ರಕಟಗೊಳಿಸುವ ಸಲುವಾಗಿ ನೂರಾರು ಯೋಜನೆಗಳಿಗೆ ಆರ್ಥಿಕ ಸಹಾಯವನ್ನು ನೀಡಿ ಸ್ಫೂರ್ತಿ ತುಂಬಿದೆ. ಕನ್ನಡ ಸತ್ತ್ವ, ಪ್ರಾಚೀನತೆ, ಸಾಂಸ್ಕೃತಿಕ ಮಹತ್ತ್ವ ತಿಳಿಯಬೇಕಾದರೆ ಜಾನಪದ ಅಧ್ಯಯನ ಅತ್ಯಗತ್ಯ. ಕನ್ನಡದ ಬಹುಮುಖ ವಿಕಾಸವನ್ನು ಪ್ರಕಟ ಮಾಡಬಲ್ಲ ಅನೇಕ ಯೋಜನೆಗಳ ಜತೆಗೆ ದಕ್ಷಿಣ ಭಾರತೀಯ ಜಾನಪದದ ಸ್ವರೂಪವನ್ನು ತಿಳಿಸುವ ಈ ಬೃಹತ್ ಯೋಜನೆಯನ್ನು ದಕ್ಷಿಣ ವಿಶ್ವವಿದ್ಯಾಲಯದ ಜತೆಗೆ ಕೈಗೊಂಡಿದೆ. ಇದು ಬರಹದಾಕಾರದ ಯೋಜನೆ ಮಾತ್ರವಲ್ಲ; ವಿಶಿಷ್ಟ ಯೋಜನೆ ಕೂಡ. ದಕ್ಷಿಣ ಭಾರತದ ಭಾಷೆಗಳ ಮೂಲಕ ಪ್ರಚಲಿತವಾಗಿರುವ ಜಾನಪದದ ಸ್ವರೂಪವನ್ನು ತಿಳಿಸುವುದರ ಜತೆಗೆ ಈ ಅಧ್ಯಯನದಿಂದ ಜಾನಪದ ಕ್ಷೇತ್ರದಲ್ಲಿ ಕನ್ನಡದ ಸ್ಥಾನವೂ ತಿಳಿದುಬರುತ್ತದೆಂಬುದು ಗಮನಿಸತಕ್ಕ ವಿಷಯ. ಇಂತಹ ತುಲನಾತ್ಮಕ ಅಧ್ಯಯನಗಳಿಂದ ದ್ರಾವಿಡ ಅಧ್ಯಯನಕ್ಕೂ ಪ್ರೇರಣೆ-ಪೋಷಣೆ ಲಭಿಸುವುದರಲ್ಲಿ ಸಂದೇಹವಿಲ್ಲ.

ದಕ್ಷಿಣ ಭಾರತೀಯ ಜಾನಪದದ ವೈವಿಧ್ಯ ಅಚ್ಚರಿಗೊಳಿಸುತ್ತದೆ. ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿರುವ ಜನಪದ ಮಹಾಕಾವ್ಯಗಳು, ವೀರಕಾವ್ಯಗಳು, ತಮಿಳಿನ ವಿಲ್ಲುಪ್ಪಾಟ್ಟು. ಕೇರಳದ ಆಚರಣೆಗಳು, ದಕ್ಷಿಣ ಭಾರತದ ಎಲ್ಲಾ ಪ್ರಾಂತ್ಯಗಳಲ್ಲೂಕಂಡುಬರುವ ಹಬ್ಬಗಳು, ಆಟಗಳು, ಅಡುಗೆಗಳು, ಪ್ರದರ್ಶನ ಕಲೆಗಳು ಅಧ್ಯಯನ ಶೀಲರ ಗಮನ ಸೆಳೆಯುತ್ತವೆ. ಒಂದೊಂದು ಭಾಷೆಗೆ ಸಂಬಂಧಿಸಿದ ನೂರಾರು ಲೇಖನಗಳನ್ನು ಪರಿಶೀಲಿಸಿದಾಗ ಈ ಭಾಷೆಗಳ ಮೂಲಕ ವ್ಯಕ್ತವಾದ ಸಾಂಸ್ಕೃತಿಕ ಸತ್ತ್ವದ ಅರಿವಾಗುತ್ತದೆ.

ಇಂತಹ ಮೂಲ ಸಂಸ್ಕೃತಿಯ ನಿರೂಪಣೆಗೆ ನೀಡಿರುವ ಕರ್ನಾಟಕ ಸರ್ಕಾರದ ನೆರವನ್ನು ನೆನೆಯಲೇಬೇಕು. ಈ ಸಂಪುಟಗಳನ್ನು ಸಿದ್ಧಪಡಿಸುವಲ್ಲಿ ನಿಷ್ಠೆಯಿಂದ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಸಲ್ಲುತ್ತವೆ.

ಈ ಗ್ರಂಥವನ್ನು ಅಚ್ಚುಕಟ್ಟಾಗಿ ಹೊರತರುತ್ತಿರುವ ಪ್ರಸಾರಾಂಗದ ನಿರ್ದೇಶಕರಾದ ಡಾ. ಎ.ಸುಬ್ಬಣ್ಣ ರೈ, ಸಹಾಯಕ ನಿರ್ದೇಶಕರಾದ ಬಿ.ಸುಜ್ಞಾನಮೂರ್ತಿ ಮತ್ತು ಪ್ರಸಾರಾಂಗದ ಎಲ್ಲಾ ಸಿಬ್ಬಂದಿ ವರ್ಗದವರಿಗೆ ಆಭಾರಿಯಾಗಿದ್ದೇನೆ.

ಡಾ. ಎ.ಮುರಿಗೆಪ್ಪ
ಕುಲಪತಿ