ಸಂಘಕಳಿ ಕೇರಳದ ಬ್ರಾಹ್ಮಣ, ಕ್ಷತ್ರಿಯ ಮನೆಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ನಡೆಸುವ ಒಂದು ಕಲಾರೂಪವೇ ಸಂಘಕಳಿ. ಈ ಕಲೆಗೆ ಯಾತ್ರಕಳಿ, ಸತ್ರಕಳಿ, ಚಾತಿರಕಳಿ, ಶಾಸ್ತ್ರಾಂಗ, ಕ್ಷಾತ್ರಾಂಗ, ಪಾನಕಳಿ, ಪಾನಂಗಳಿ ಮೊದಲಾದ ಹೆಸರುಗಳೂ ಇವೆ. ಗುಂಪು ಸೇರಿ ನಡೆಸುವ ಕಲಾ ಪ್ರದರ್ಶನವಾದುದರಿಂದ ಸಂಘಕಳಿ ಎಂಬ ಹೆಸರು ಬಂದಿರಬೇಕು. ‘ರಾಜ್ಯ, ಸೇನೆ, ಧರ್ಮ, ಸಮುದಾಯ ಮೊದಲಾದ ಸಂಗತಿಗಳೊಂದಿಗೆ ನೇರ ಸಂಬಂಧವಿರುವ ಒಂದು ಕಲೆ ಸಂಘಕಳಿ’ ಎಂದು ಎಲ್‌, ಕೆ. ಅನಂತಕೃಷ್ಣ ಅಯ್ಯರ್ ಹೇಳಿದ್ದಾರೆ. ತೃಕ್ಕಾರಿ ಯಾರ್ ದೇವಸ್ಥಾನದ ಐತಿಹ್ಯವೊಂದರ ಪ್ರಕಾರ ಶಿವಪಾರ್ವತಿಯರ ಸಂತುಷ್ಟಿಗಾಗಿ ಈ ಕಲೆಯನ್ನು ಪ್ರದರ್ಶಿಸುತ್ತಾರೆ.

ಉನ್ನತರಾದ ಬ್ರಾಹ್ಮಣ, ಕ್ಷತ್ರಿಯ ಕುಟುಂಬಗಳ, ಅನ್ನಪ್ರಾಶನ, ಉಪನಯನ, ಸಮಾವರ್ತನ, ಮದುವೆ ಮೊದಲಾದ ಸಂಸ್ಕಾರವಿಧಿಗಳ ಸಂದರ್ಭದಲ್ಲಿ ಸಂಘಕಳಿ ನಡೆಯುತ್ತದೆ. ಇದು ಕೇವಲ ಮನರಂಜನೆಗಾಗಿ ಮಾತ್ರ ನಡೆಸುವ ಕಲಾರೂಪವಲ್ಲ. ದೇವತಾಪ್ರೀತಿ ಹಾಗೂ ಇಷ್ಟಸಿದ್ಧಿಗಾಗಿ ನಡೆಸುವ ಪುಣ್ಯಕರ್ಮವಿದು. ಸಂತಾನ ಭಾಗ್ಯಕ್ಕಾಗಿ ಹರಕೆಯ ರೂಪದಲ್ಲಿ ಈ ಕಲೆಯನ್ನು ನಡೆಸುತ್ತಾರೆ. ಇದಕ್ಕೆ ‘ಸ್ವಸ್ತಿಪ್ರಾರ್ಥನೆ’ ಎಂದು ಹೆಸರು. ಇಷ್ಟ ಸಿದ್ಧಿಯಾದರೆ ವಿಜೃಂಭಣೆಯಿಂದ ಸಂಘಕಳಿ ನಡೆಸಿ ಪ್ರಸಾದವಿತರಣೆ ನಡೆಸುವುದಾಗಿ ಸ್ಪಷ್ಟವಾಗಿ ಪಾರ್ಥಿಸುತ್ತಾರೆ. ಬ್ರಾಹ್ಮಣ, ಕ್ಷತ್ರಿಯ ಮನೆಗಳ ಅಡುಗೆ ಕೋಣೆ, ಚಾವಡಿಗಳು ಈ ಕಲಾಪ್ರದರ್ಶನದ ರಂಗವೇದಿಕೆಗಳಾಗುತ್ತವೆ.

ಶ್ರೀಮಂತರಾದ ಬ್ರಾಹ್ಮಣರು ಹಾಗೂ ಕ್ಷತ್ರಿಯರು ಸಂಘಕಳಿಯನ್ನು ಹಿಂದೆ ನಡೆಸುತ್ತಿದ್ದರು. ಆದರೆ ಅದರಲ್ಲಿ ಭಾಗವಹಿಸುವ ಕಲಾವಿದರು ಕೇರಳದ ಬ್ರಾಹ್ಮಣರಲ್ಲ. ೧೮ ಗ್ರಾಮದ ಬಡವರಾದ ಬ್ರಾಹ್ಮಣ ಕಲಾವಿದರಾಗಿದ್ದರು. ೧೮ ಗ್ರಾಮಗಳಲ್ಲಿ ೧೦೮ ಕಳರಿಗಳಿದ್ದ ಇವರಿಗೆ ಆರು ಕಳರಿವಿದ್ಯೆಗಳು ತಿಳಿದಿದ್ದುವು. ೧೮ ಸಂಘಕಳಿ ತಂಡಗಳ ಹೆಸರುಗಳು ಇಂತಿವೆ, ೧. ಪುಲ್ಲೂರು ಚಾತ್ತರ್, ೨. ಕಂಟ್ರಾಮಾರ್, ೩. ಪುಲ್‌ಕುಳ ಚಾತ್ತರ್, ೪. ವೇಳಪರಂಬ್‌, ೫. ಪೊರಕುಡಞಮಾರ್, ೬. ಆಟುಪುರತ್ತ ಚಾತ್ತರ್, ೭. ಮುಂಡ್ಯತ್ತಾರ್, ೮. ನಾಟ್ಯಮಂಗಲಂ, ೯. ನೆಮ್ಮನ್ಯಾರ್, ೧೦. ತಾಮರಶ್ಯೇರ್ಯಾರ್, ೧೧. ಚೊವ್ವರಮಾರ್, ೧೨. ವೆಳ್ಳಯತಾರ್, ೧೩. ತಿಟ್ಟಪಳ್ಳಿಚಾತರ್, ೧೪. ಚಾಳಯಾಚ್‌, ೧೫. ಪಾಲಕಾಟ್‌ ಚಾತ್ತರ್, ೧೬. ಪಾಕ್ಯತ್ತಾರ್, ೧೭. ಕಿಳನ್ಯಾರ್, ೧೮. ತತ್ತಪಿಳ್ಳಿ.

ಪರಶುರಾಮನಿಂದ ಶಸ್ತ್ರಾಭ್ಯಾಸ ಪಡೆದು, ವೇದಗಳ ಅಧಿಕಾರವನ್ನು ಪಡೆದ ಬ್ರಾಹ್ಮಣರು ಈ ಕಲೆಯನ್ನು ಮುಂದುವರಿಸುತ್ತಿರುವರು. ಬ್ರಾಹ್ಮಣರು ಸಂಘಕಳಿಯ ಪ್ರದರ್ಶಕರಾದರೂ ಕ್ಷತ್ರಿಯರಿಗೆ ಇದರಲ್ಲಿ ಹಕ್ಕುಗಳಿವೆ. ಬೇರೆ ಸಮುದಾಯಗಳಿಗೆ ಈ ಕಲೆಯಲ್ಲಿ. ಪ್ರವೇಶವಿಲ್ಲ. ಬ್ರಾಹ್ಮಣರೊಂದಿಗೆ ನಿಕಟ ಸಂಪರ್ಕವಿರುವ ಸಮುದಾಯಗಳಿಗೆ ಮಾತ್ರ ಈ ಪ್ರದರ್ಶನವನ್ನು ನೋಡುವ ಅವಕಾಶವಿರುವುದು. ಉಳಿದ ಸಮುದಾಯಗಳಿಗೆ ಈ ಕಲೆಯಲ್ಲಿ ಯಾವುದೇ ರೀತಿಯಲ್ಲಿ ಭಾಗಿಯಾಗಿಲು ಸಾಧ್ಯವಿಲ್ಲ.

ಸಂಘಕಳಿಯ ಮುಖ್ಯ ವಿಧಗಳು : ಸಂಘಕಳಿ ಕಲಾವಿದರು ಸತ್ರಸ್ಥಳಕ್ಕೆ ಪ್ರವೇಶಿಸಿ, ‘ಕಕಾಮಿರಿಕ್ಕು’ ಎಂಬ ಆಚರಣೆ ಮಾಡುತ್ತಾರೆ. ಇದು ಆರಂಭಿಕ ಸಭೆ. ಅನಂತರ ಗಣಪತಿ ಪೂಜೆ ನಡೆಯುತ್ತದೆ. ಅನಂತರ ‘ಕೇಳಿ’ ಇದು ಸಂಘಕಳಿಯ ವಿವರವನ್ನು ಜನರಿಗೆ ತಿಳಿಸುವ ವಿಧಾನವಾಗಿದೆ. ಅದಕ್ಕಿಂತ ಮೊದಲು ಅನೇಕ ವ್ಯಂಜನಗಳಿಂದ ಕೂಡಿದ ಭೂರಿಭೋಜನವಿರುತ್ತದೆ. ಕೇಳಿಯ ನಂತರದ ಕಾರ್ಯಕ್ರಮ ‘ಆರ್ಕಲ್‌’. ಸಂಘಕಳಿ ಕಲಾವಿದರಲ್ಲಿ ಕೆಲವರು ತಾಮ್ರದ ಪಾತ್ರೆಯನ್ನು ಬಡಿದು ಭಗವತಿ ಸ್ತುತಿಯನ್ನು ಹಾಡುತ್ತಾರೆ. ಇನ್ನು ಕೆಲವರು ತಮ್ಮ ಜುಟ್ಟು ಬಿಚ್ಚಿ, ಗೆರಟೆಯ ಸೌಟು ತೆಗೆದು ಆವೇಶ ಬಂದವರಂತೆ ನಲಿಸುತ್ತಾರೆ.

ಸ್ನಾನ ಹಾಗೂ ಸಂಧ್ಯಾವಂದನೆ ಕಳೆದು ‘ನಾಲುಪಾದಂ’ ಎಂಬ ವಿಧಿ ನಡೆಯುತ್ತದೆ. ಸಂಘಕಳಿಯ ಪ್ರಧಾನ ಆಚರಣೆ ಇದಾಗಿದೆ. ಸಕಲ ಅಭೀಷ್ಟ ಸಿದ್ಧಿಗಾಗಿ ಶಿವ, ಪಾರ್ವತಿ ಹಾಗೂ ಇತರ ದೇವತೆಗಳನ್ನು ಸ್ತುತಿಸುವ ಹಾಡುಗಳನ್ನು ಈ ಸಂದರ್ಭದಲ್ಲಿ ಹಾಡುತ್ತಾರೆ ಸಂಘಕಳಿಯ ಅನುಬಂಧವಾಗಿ ರಾತ್ರಿ ವಿಶೇಷ ಔತಣಕೂಟ ನಡೆಯುತ್ತದೆ. ‘ಅತ್ತಾಯ ಸದ್ಯ ಮತ್ತು ಕರಿಶ್ಲೋಕ’ ಎಂಬ ಆಚರಣೆ ಇದೆ. ಊಟ ಮಾಡುವ ಸಂದರ್ಭದಲ್ಲಿ ಬಡಿಸಿದ ಪದಾರ್ಥ ವ್ಯಂಜನಗಳ ಮಹತ್ತ್ವವನ್ನು ವಿವರಿಸುವ ಹಾಡುಗಳನ್ನು ಹಾಡುವರು. ಔತಣದ ಕೊನೆಯಲ್ಲಿ ಇತಿಹಾಸ ಕಥಾನಕಗಳನ್ನು ಹಾಡುವ ಕ್ರಮವಿದೆ. ಇದಕ್ಕೆ ‘ನೀಟುಚೊಲ್ಲಲ್‌’ ಎಂದು ಹೆಸರು.

ಔತಣಕೂಟ ಕಳೆದು ನೆಲ ಸಾರಿಸಿ ಶುದ್ಧೀಕರಿಸುವಾಗ ಉತ್ಸಾಹ ಲಯದ ಕೆಲವು ಹಾಡುಗಳನ್ನು ಹಾಡುತ್ತಾರೆ. ಇದಕ್ಕೆ ದೋಣಿ ಹಾಡು ಅಥವಾ ವಂಜಿಪಾಟು ಎನ್ನುತ್ತಾರೆ. ಇದು ಊಟ ಮಾಡಿ ಜಡಗಟ್ಟಿದವರನ್ನು ಎಬ್ಬಿಸುವ ಹಾಸ್ಯಾತ್ಮಕ ಆಚರಣೆ. ಅನಂತರ ರಂಗದಲ್ಲಿ ‘ಪಾನ’ ಆರಂಭವಾಗುತ್ತದೆ. ಚಾಸ್ತಿರ ನಂಬೂದಿಗಳು ದೀಪ ಬೆಳಗಿಸಿ ಗಣಪತಿ ಸ್ತುತಿಯೊಂದಿಗೆ ಪಾನ ಆರಂಭಿಸುತ್ತಾರೆ. ಪಾನಪಾಟು ಕೊನೆಗೊಳ್ಳುವಾಗ ಕೈಮಳ್‌ ಅಥವಾ ಕಂಡಪ್ಪನ್‌ ಪ್ರವೇಶವಾಗುತ್ತದೆ. ಹಾಡುವವರ ಬಾಯಿ ಮುಚ್ಚಿಸುವ ಕಂಡಪ್ಪನ್‌ ಹಾಸ್ಯ ಚರ್ಯೆಗಳ ಮೂಲಕ ನಗಿಸುತ್ತಾನೆ.

ಮುಂದಿನ ಆಚರಣೆ ‘ಪೊಲಿ’ ಇದು ಕಾತರ ಸಮೃದ್ಧಿ ಆಚರಣೆಗಳಂತಿರುತ್ತದೆ. ಪೊಲಿ ಆಚರಣೆ ಕೊನೆಗೊಳ್ಳುವವರೆಗೆ ಸಂಘಕಳಿಯಲ್ಲಿ ಇತರ ಸಮುದಾಯದವರಿಗೆ ಪ್ರವೇಶವಿಲ್ಲ.

ಮುಂದಿನ ಭಾಗ ಕುರತ್ತಿಯಾಟಂ. ಕೈಯಲ್ಲಿ ಗೆರಸೆ ಹಿಡಿದು ನೃತ್ಯ ಮಾಡುವ ಕುರತ್ತಿ ಶಕ್ತಿ ಸ್ವರೂಪಣಿ ಎಂದು ನಂಬಿಕೆ. ಅನಂತರ ‘ಬಲ ಉಳಚ್ಚಿಲ್‌’ ಎಂಬ ಕಾರ್ಯಕ್ರಮ. ಇದು ಕುಟುಂಬದ ಬಾಧೆಗಳನ್ನು ದೂರೀಕರಿಸಲು ನಡೆಸುವ ಆಚರಣೆ. ದೊಂದಿಯನ್ನು ಹಿಡಿದು ನಿವಾಳಿಸುವುದು ಬಲಿಯಳಚ್ಚಿಲ್‌. ಇದೇ ಸಂದರ್ಭದಲ್ಲಿ ಪಾನಕ್ಕಾಗಿ ನಾಟಿದ್ದ ಹಾಲೆಯ ಗೆಲ್ಲನ್ನು ತೆಗೆಯುತ್ತಾರೆ. ಅನಂತರ ಕಲಾವಿದರು ವೃತ್ತಾಕಾರದಲ್ಲಿ ಕುಳಿತು ಹಾಸ್ಯಪ್ರಧಾನ ಹಾಡುಗಳನ್ನು ಹಾಡುತ್ತಾ ‘ವಟ್ಟಮಿರಿಪ್ಪುಕಳಿ’ ಎಂಬ ಆಚರಣೆಯನ್ನು ಮಾಡುತ್ತಾರೆ. ಅನಂತರ ನಡೆಯುವ ಸಂವಾದ ಮನೋಧರ್ಮ ಪ್ರಧಾನವಾದ ಮಾತುಕತೆಯಾಗಿದೆ.

ಚಪ್ಪಡಿ ವಿದ್ಯೆ ಎಂಬುದು ಅನಂತರದ ಕಾರ್ಯಕ್ರಮ. ಅನಂತರ ವಿಡ್ಡಿ ಪುರಪಾಡ್‌. ಈ ಸಂದರ್ಭದಲ್ಲಿ ಅಸಂಬದ್ಧ ಹಾಡುಗಳನ್ನು ಹಾಡುವರು. ಪೆದ್ದುತನವನ್ನು ಕಲಾವಿದರು. ಅಭಿನಯಿಸುವರು. ಭಟ್ಟ, ನಂಬೂದಿರಿ, ಕೊಂಕಣಿ, ಮದ್ಯಪಾನಿ ಮೊದಲಾದ ವಿದೂಷಕ ವೇಷಗಳು ರಂಗಕ್ಕೆ ಬರುತ್ತವೆ. ಕೊನೆಯ ಕಾರ್ಯಕ್ರಮ ಆಯುಧ ತೆಗೆಯುವುದು. ಇದು ಸಂಘಕಳಿಯ ಮುಖ್ಯ ಆಚರಣೆ. ಇದಕ್ಕೆ ವಿಶೇಷ ಆಬ್ಯಾಸ ಬೇಕು.

ಸಂಘಕಳಿ ವಿರಳವಾದರೂ ಇಂದಿಗೂ ಕೇರಳದ ಕೆಲವು ಬ್ರಾಹ್ಮಣ, ಕ್ಷತ್ರಿಯ ಮನೆತನಗಳಲ್ಲಿ ರೂಢಿಯಲ್ಲಿದೆ. ಕಾಞಿರತೋಟಂ ಶ್ರೀಧರ ನಂಬೂದಿರಿ ಹಾಗೂ ತಂಡದವರು ಇಂದಿಗೂ ಸಂಘಕಳಿ ನಡೆಸುವರು.

ಇ.ಕೆ.ಜಿ. ಅನುವಾದ ಎನ್‌. ಎಸ್‌.

 

ಸಂತೆ ಸಂತೆ ಎಂಬುದು ಪ್ರಾಚೀನ ಕಾಲದಿಂದಲೂ ಅಸ್ತಿತ್ವದಲ್ಲಿರುವ ರೈತರ ವಿನಿಮಯ ಕೇಂದ್ರ. ಇಲ್ಲಿ ರೈತರು ತಾವು ಬೆಳೆದ ಎಲ್ಲ ಪದಾರ್ಥಗಳನ್ನು ಮಾರಾಟ ಮಾಡುವುದು ಹಾಗೂ ಅಲ್ಲಿಂದ ತಮ್ಮ ಜೀವನೋಪಾಯಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡು ಕೊಳ್ಳುವುದು ಸರ್ವೇ ಸಾಮಾನ್ಯವಾಗಿ ಬೆಳೆದು ಬಂದಿದ್ದು ಇದು ರೈತರು ಮತ್ತು ದಳ್ಳಾಳಿಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ಕಾಣಬಹುದಾಗಿದೆ. ಪ್ರಾಚೀನ ಕಾಲದಿಂದಲೂ ರೈತರು ಈ ವ್ಯವಸ್ಥೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಇಂದಿಗೂ ಸಹ ಕಾಲಕ್ಕೆ ತಕ್ಕಂತೆ ಸಂತೆಗಳು ಮಾರುಕಟ್ಟೆಗಳಾಗಿ ಬದಲಾವಣೆ ಹೊಂದಿ ಅದಕ್ಕೆ ಪ್ರತ್ಯೇಕವಾಗಿ ಬೇಕಾದ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರವೇ ಒದಗಿಸಿಕೊಟ್ಟಿದೆ.

ಹಿಂದೆ ಸಾರಿಗೆ ಸಂಪರ್ಕ ವ್ಯವಸ್ಥೆ ಇಲ್ಲದೆ ಗ್ರಾಮೀಣ ಭಾಗದ ಜನರು ಸಂತೆಯ ಹಿಂದಿನ ದಿನವೇ ಅಲ್ಲಿಗೆ ತಲುಪಲು ಎತ್ತಿನ ಗಾಡಿಗಳಲ್ಲಿ ಹೋಗುತ್ತಿದ್ದರು. ತಾವು ಬೆಳೆದ ದವಸ ಧಾನ್ಯಗಳನ್ನು ಗಾಡಿಗಳಲ್ಲಿ ತುಂಬಿಕೊಂಡು ಹೋಗಿ ಮಾರಾಟ ಮಾಡಿ ಹಿಂದಿರುಗುತ್ತಿದ್ದರು. ರಾಜಮಹಾರಾಜರ ಕಾಲದಿಂದಲೂ ಇವು ಅಸ್ತಿತ್ವದಲ್ಲಿದ್ದು, ಆ ಸಂದರ್ಭದಲ್ಲಿ ಹಣದ ಬದಲಾಗಿ ದವಸ ಧಾನ್ಯಗಳನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರು. ಏಕೆಂದರೆ ಅಂದು ಹಣದ ಅವಶ್ಯಕತೆ ಗ್ರಾಮೀಣ ಭಾಗದ ಜನರಿಗೆ ಹೆಚ್ಚಾಗಿ ಕಂಡುಬರುತ್ತಿರಲಿಲ್ಲ. ಜೀತ ಪದ್ಧತಿ ಜಾರಿಯಲ್ಲಿದ್ದುದರಿಂದ ಉಳ್ಳವರ ಮನೆಯಲ್ಲಿ ದುಡಿದು ಅಲ್ಲಿಯೇ ತಿಂದು ಇವರು ಬೆಳೆದ ಬೆಳೆಗಳನ್ನು ಅವರಿಗೆ ನೀಡುವ ಪದ್ಧತಿ ಜಾರಿಯಲ್ಲಿತ್ತು. ಅವರು ನೀಡುತ್ತಿದ್ದ ಅಲ್ಪ ಸ್ವಲ್ಪ ಹಣದಲ್ಲಿ ತಮ್ಮ ಜೀವನ ಸಾಗಿಸುತ್ತಿದ್ದರು.

ಸಂತೆಯಲ್ಲಿ ರೈತರೇ ಅಲ್ಲದೆ ದಲ್ಲಾಳಿಗಳು ಸಹ ಕಂಡುಬರುತ್ತಾರೆ. ಇವರು ಸಂತೆಯಲ್ಲಿ ರೈತರ ಮಾರಾಟ ವಸ್ತುಗಳಿಗೆ ಗಿರಾಕಿಗಳನ್ನು ಹುಡುಕಿ, ಮಾರಿಸಿ ಆನಂತರ ತಮಗೆ ಬರಬೇಕಾದ ಪಾಲನ್ನು ತೆಗೆದುಕೊಂಡು ಹೋಗುತ್ತಾರೆ. ಇದು ಇವರ ಜೀವನ ಕ್ರಮವಾಗಿದೆ. ಇದರಿಂದ ಬರುವ ಆದಾಯದಿಂದ ದಲ್ಲಾಳಿಗಳು ತಮ್ಮ ಬದುಕನ್ನು ನಡೆಸುತ್ತಾರೆ. ಇವರು ಇಂದಿಗೂ ಗ್ರಾಮೀಣ ಭಾಗದಲ್ಲಿ ಕಂಡುಬರುತ್ತಾರೆ. ರೈತರು ದವಸ ಧಾನ್ಯಗಳ ಜೊತೆಗೆ ಹಸು, ಎಮ್ಮೆ, ಕುರಿ, ಕೋಳಿಗಳನ್ನು ಸಹ ಇಲ್ಲಿಯೇ ಮಾರಾಟ ಮಾಡುತ್ತಾರೆ. ತಾವು ಸಾಕಿದ ಪ್ರಾಣಿಗಳನ್ನು ಹಣದ ಆವಶ್ಯಕತೆ ಇದ್ದಾಗ ಸಂತೆಗಳಿಗೆ ತೆಗೆದುಕೊಂಡು ಹೋಗಿ ಮಾರಿ ಅದರಿಂದ ಬಂದ ಹಣದಿಂದ ಜೀವನ ಸಾಗಿಸುತ್ತಾರೆ. ಇದಕ್ಕಾಗಿಯೇ ಪ್ರಾಣಿಗಳನ್ನು ಸಾಕುತ್ತಾರೆ. ಇದಕ್ಕಾಗಿಯೇ ಪ್ರತ್ಯೇಕ ಕೋಣೆಗಳನ್ನು ಮನೆಗಳಲ್ಲಿ ನಿರ್ಮಿಸಿಕೊಂಡಿರುತ್ತಾರೆ. ಇವುಗಳನ್ನು ಸಾಕುವುದಕ್ಕಾಗಿ ಮನೆಯಲ್ಲಿ ಒಬ್ಬ ಹಿರಿಯ ವ್ಯಕ್ತಿಯನ್ನು ನೇಮಿಸಿ ಆತನೇ ಇವುಗಳ ಸೌಕರ್ಯವನ್ನು ನೋಡಿಕೊಳ್ಳುತ್ತಾನೆ.

ಸಂತೆಗಳು ರೈತರ ಜೀವನದಲ್ಲಿ ಪ್ರಾಚೀನ ಕಾಲದಿಂದಲೂ ಒಂದು ಅವಿಭಾಜ್ಯ ಅಂಗವಾಗಿ ಕಾರ್ಯನಿರ್ವಹಿಸುತ್ತವೆ. ಇವು ವಾರದ ಎಲ್ಲ ದಿನಗಳಲ್ಲಿಯೂ ಒಂದೊಂದು ದಿವಸ ನಡೆಯುತ್ತವೆ. ಸೋಮವಾರ ಟಿ. ನರಸೀಪುರದಲ್ಲಿ ಮಂಗಳವಾರ ಸಂತೆ ಮರಹಳ್ಳಿಯಲ್ಲಿ, ಬುಧವಾರ ನಂಜನಗೂಡಿನಲ್ಲಿ, ಶುಕ್ರವಾರ ತೆರಕಣಾಂಬಿಯಲ್ಲಿ ಹಾಗೂ ಶನಿವಾರ ಶ್ರೀರಂಗಪಟ್ಟಣ, ಕಿರುಗಾವಲಿನಲ್ಲಿ ನಡೆಯುತ್ತದೆ. ಈ ಎಲ್ಲ ದಿನಗಳಲ್ಲಿ ರೈತರು ತಾವು ಬೆಳೆದ ಬೆಳೆಗಳು, ಸಾಕು ಪ್ರಾಣಿಗಳನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಬರುತ್ತಾರೆ.

ಹಿಂದೆ ಸಂತೆಗಳಿಗೆ ಮಹಿಳೆಯರು ಹೋಗುವಂತಿರಲಿಲ್ಲ. ಮನೆಯಲ್ಲೇ ನಾಲ್ಕು ಗೋಡೆಗಳ ಮಧ್ಯೆ ಅವರ ಜೀವನ ಸಾಗುತ್ತಿದ್ದುದರಿಂದ. ಅವರು ಮನೆಯ ಹೊರಗಡೆ ಬರಲು ಸಹ ನಿರ್ಬಂಧವಿತ್ತು. ಆದರೆ ಇತ್ತೀಚೆಗೆ ಸಂತೆಗಳಿಗೆ ಪುರುಷರ ಜೊತೆ ಮಹಿಳೆಯರೂ ಹೋಗುತ್ತಾರೆ. ಅಲ್ಲಿಯ ಎಲ್ಲ ವಿಧದ ಕೆಲಸ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಸಂತೆಯಲ್ಲಿ ಅಗತ್ಯ ವಸ್ತುಗಳ ಮಾರಾಟವನ್ನು ಮಾಡುತ್ತಾ ಅದರಿಂದ ಬಂದಂತಹ ಆದಾಯದಿಂದ ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಹಿಂದೆ ತಿಳಿಸಿದಂತೆ ಪ್ರಾಚೀನ ಕಾಲದಲ್ಲಿ ಸಾರಿಗೆ ಸಂಪರ್ಕ ಬಹಳ ಕಡಿಮೆ. ಇದರಿಂದಾಗಿ ಗ್ರಾಮೀಣ ಭಾಗದ ಜನರು ಸಂತೆಗಳಿಗೆ ತೆರಳಲು ಎತ್ತಿನ ಗಾಡಿಗಳಲ್ಲಿ, ಅಲ್ಲದೆ ಕೆಲವರು ನಡೆಸಿಕೊಂಡೂ ಸಹ ತೆರಳುತ್ತಿದ್ದರು. ದವಸ – ಧಾನ್ಯಗಳು, ಆಹಾರ ಪದಾರ್ಥಗಳು, ಜೀವನಾವಶ್ಯಕ ಅಗತ್ಯ ವಸ್ತುಗಳನ್ನು, ತಾವು ಬೆಳೆದ ಬೆಳೆಗಳನ್ನು ಮಾರಾಟ ಮಾಡಲು ಮೂಟೆ ಕಟ್ಟಿ ಕತ್ತೆಗಳ ಮೇಲೆ ಹೇರಿ ಅವುಗಳ ಜೊತೆ ತಾವೂ ನಡೆದುಕೊಂಡು ತೆರಳುತ್ತಿದ್ದರು. ಅಲ್ಲಿ ತಮ್ಮ ಎಲ್ಲ ವಸ್ತುಗಳನ್ನು ಮಾರಿ ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಕೊಂಡುಕೊಂಡು ಕತ್ತೆಗಳ ಮೇಲೆ ಹೇರಿಕೊಂಡು ಬರುತ್ತಿದ್ದರು. ಈ ಮೇಲಿನ ಎಲ್ಲಾ ವಿಚಾರವನ್ನು ಗಮನಿಸಿದಾಗ ಸಂತೆಗಳು ರೈತರ ಜೀವನದಲ್ಲಿ ಪ್ರಮುಖ ಪಾತ್ರ ವಹಿಸಿದ್ದುವು ಎಂಬುದು ತಿಳಿದುಬರುತ್ತದೆ. ಜನಪದರ ಬದುಕಿನಲ್ಲಿ ಸಂತೆಗಳು ಎಷ್ಟು ಮಹತ್ವ ಪಡೆದಿವೆ ಎಂಬುದನ್ನು ಹಿಂದಿನ ವಿವರಣೆಯಿಂದ ತಿಳಿಯಬಹುದು. ಹಾಗೆಯೇ ಜನಪದ ಸಾಹಿತ್ಯ ಪ್ರಕಾರಗಳಾದ ಗಾದೆ, ಒಗಟು, ನುಡಿಗಟ್ಟುಗಳಲ್ಲೂ ಸಂತೆಯ ಉಲ್ಲೇಖವಿದೆ. ಗ್ರಾಮೀಣ ಭಾಗದ ಜನಪದರು ದಿನನಿತ್ಯ ಬಳಸುವ ತಮ್ಮ ಮಾತಿನಲ್ಲಿ, ಸಂಭಾಷಣೆಗಳಲ್ಲಿ ಈ ಕೆಲವು ಪ್ರಕಾರಗಳನ್ನು ಬಳಸುತ್ತಾರೆ.

            ತಾಯಿ ಪಾತಾಳಕ್ಕೆ
ತಂದೆ ಆಕಾಶಕ್ಕೆ
ಮಗಳು ತವರಿಗೆ
ಮಗ ಸಂತೆಗೆ

ಮೇಲಿನ ಒಗಟನ್ನು ಗಮನಿಸಿದಾಗ, ಇದರಲ್ಲಿ ತಾಯಿ ತಂದೆಯರ ಅನಂತರ ಸಂಸಾರದ ಜವಾಬ್ದಾರಿ ಮಗನ ಹೆಗಲಿಗೆ ಬೀಳುತ್ತದೆ ಎಂಬುದು ತಿಳಿದುಬರುತ್ತದೆ. ಹೀಗೆ ಮನೆಯ ಜವಾಬ್ದಾರಿಯನ್ನು ಹೊತ್ತ ಮಗ ತಂಗಿಯು ಮನೆಗೆ (ತವರಿಗೆ) ಬಂದಾಗ ಅವಳ ಉಪಚಾರಕ್ಕಾಗಿ ಬೇಕಾದ ಸಾಮಾಗ್ರಿಗಳನ್ನು ತರಲು ಅಣ್ಣನು ಸಂತೆಗೆ ಹೋಗುತ್ತಾನೆ ಎಂಬುದಾಗಿದೆ. ಈ ಒಂದು ಜವಾಬ್ದಾರಿಯನ್ನು ಜನಪದರು ಒಂದು ಒಗಟಿನ ಮೂಲಕ ತುಂಬ ಸುಂದರವಾಗಿ ಮನೋಜ್ಞವಾಗಿ ಹೇಳಿರುವುದನ್ನು ಗಮನಿಸಿದಾಗ ನಿಜವಾದ ಜಾನಪದದ ಸೊಗಡು ಇಲ್ಲಿ ಹುದುಗಿರುವುದು ಸ್ಪಷ್ಟವಾಗುತ್ತದೆ.

ಹಾಗೆಯೇ ಸಂತೆಗೆ ಸಂಬಂಧಿಸಿದ ಗಾದೆಗಳ ಕಡೆ ಗಮನ ಹರಿಸಿದಾಗ

            ಕಳ್ಳ ಕಳ್ಳರು ಸಂತೇಗೋದಂಗೆ
ಕಾಯಿ ಮಾರುವ ಸಂತೆಯಲ್ಲಿ ನಾಯಿಗೆ ಏನು ವ್ಯಾಪಾರ
ಚಿಂತೆ ಇಲ್ಲದವನಿಗೆ ಸಂತೇಲೂ ನಿದ್ದೆ
ಸಂತೆಯಲ್ಲಿ ಎಲ್ಲಿ ಕಂಡೆ ತುಂಡು ಅಂಗಿಯವನನ್ನ
ಸಂತೆಹೊತ್ತಿಗೆ ಮೂರು ಮೊಳ ನೇಯ್ದಂಗೆ

ಸಂತೆಗೆ ಸಂಬಂಧಿಸಿದ ನುಡಿಗಟ್ಟುಗಳು

            ಇವನ್ಯಾವ ಊರ ಸಂತೇನಾ,
ನೀನು ಯಾವ ಸಂತೆ ಕಂಡೆ ಹೋಗಯ್ಯ

ಜೆ. ಎಸ್‌.

 

ಸಗಣಿ ಹಬ್ಬ ಕೃಷಿ ಸಂಬಂಧಿತ ಒಂದು ಜನಪದ ಆಚರಣೆ. ಸಗಣಿ ಅಥವಾ ಕೋರೆಹಬ್ಬ ಎಂದು ಕರೆಯಲ್ಪಡುವ ಈ ಆಚರಣೆಯನ್ನು ಕರ್ನಾಟಕದ ಚಾಮರಾಜನಗರ ಮತ್ತು ತಮಿಳುನಾಡುಗಳ ಗಡಿಭಾಗದಲ್ಲಿರುವ ಗುಮಟಾಪುರ, ತಾಳವಾಡಿ ಹಾಗೂ ಸೋಮವಾರಪೇಟೆ (ಕೊಡಗುಜಿಲ್ಲೆ) ಗಳಲ್ಲಿ ಆಚರಿಸುತ್ತಾರೆ. ಈ ಹಬ್ಬದ ಐತಿಹ್ಯವೊಂದು ಹೀಗಿದೆ.

ಸುಮಾರು ಮುನ್ನೂರು ವರ್ಷಗಳ ಹಿಂದೆ ಗೌಡನ ಮನೆಯಲ್ಲಿ ಜೀತಕ್ಕಿದ್ದ ದೇವರಗುಡ್ಡನೊಬ್ಬ ಸತ್ತ ಬಳಿಕ ಅವನ ಪೂಜಾ ಸಾಮಗ್ರಿಗಳನ್ನು ಸಗಣಿ ಹಾಕುವ ತಿಪ್ಪೆಗುಂಡಿಗೆ ಎಸೆದರು. ಪ್ರತಿ ವರ್ಷದಂತೆ ಹೊಲಗದ್ದೆಗಳಿಗೆ ಸಗಣಿ ಹಾಕುವ ಸಂದರ್ಭದಲ್ಲಿ ಈ ವರ್ಷವೂ ರೈತರು ಗಾಡಿ ಕಟ್ಟಿದಾಗ ಒಬ್ಬನ ಎತ್ತಿನಗಾಡಿಯ ಚಕ್ರಕ್ಕೆ ಶಿವಲಿಂಗವೊಂದು ಸಿಕ್ಕಿ ರಕ್ತಹರಿಯಿತು. ದೇವರಗುಡ್ಡನ ಪೂಜಾ ಸಾಮಗ್ರಿಗಳೇ ಲಿಂಗರೂಪವಾಗಿ ಉದ್ಭವಿಸಿದ ಕಾರಣ ಬಾಲಕನೊಬ್ಬನ ಮೈಮೇಲೆ ದೇವರು ಬಂದು ‘ತನಗೊಂದು ದೇವಸ್ಥಾನ ನಿರ್ಮಿಸಿ ಪ್ರತಿವರ್ಷ ಬಲಿ ಪಾಡ್ಯಮಿಯ (ದೀಪಾವಳಿ) ಮಾರನೇಯ ದಿವಸ ಹಬ್ಬ ನೆಡೆಸುವಂತೆ ಗ್ರಾಮಸ್ಥರನ್ನು ಕೇಳಿತಂತೆ.’ ಅಂದಿನಿಂದಲೂ ಜಾತಿ, ಮತ ಭೇದವಿಲ್ಲದೆ, ವಯೋಮಾನದ ಅಂತರವಿಲ್ಲದೆ ಎಲ್ಲರೂ ಸೌಹಾರ್ದಯುತವಾಗಿ ಈ ಹಬ್ಬ ಆಚರಿಸುತ್ತಾ ಬಂದಿದ್ದಾರೆ.

ಆಚರಿಸುವ ವಿಧಾನ : ದೀಪಾವಳಿ ಸಂಭ್ರಮ ಮುಗಿದ ಮಾರನೆಯ ದಿನ ಎಲ್ಲಾ ವಯೋಮಾನದ ಗಂಡಸರೂ ತಳಿರು ತೋರಣಗಳಿಂದ ಅಲಂಕರಿಸಿದ ಎತ್ತಿನ ಗಾಡಿಗಳಲ್ಲಿ ತಿಪ್ಪೆ ಗುಂಡಿಗಳ ಕಡೆಗೆ ಹೋಗುತ್ತಾರೆ. ಹೊಸ ಬಟ್ಟೆಯನ್ನು ಧರಿಸಿರುವುದರ ಅರಿವೂ ಇಲ್ಲದೆ ಸಗಣಿ ಬಾಚಿ ಗಾಡಿಗಳಿಗೆ ತುಂಬಿಸಿ ಬೀರೇಶ್ವರನ ದೇವಸ್ಥಾನ ರಸ್ತೆಯಲ್ಲಿ ಮತ್ತು ಕೆರೆಯ ಅಂಗಳ ಹಾಗೂ ತಾರೇಶ್ವರ ದೇವಸ್ಥಾನದ ಬಳಿ ರಾಶಿ ಹಾಕುವರು. (ಕೆಲವರು ವಾರದಿಂದಲೂ ಸಗಣಿ ಸಂಗ್ರಹಿಸುತ್ತಾರೆ) ಆ ನಂತರ ಕೇವಲ ಚಲ್ಲಣ (ಚಡ್ಡಿ) ಧರಿಸಿದ ಹುಡುಗರು ಮನೆ ಮನೆಗೆ ತೆರಳಿ ದೇವರ ದೀಪಕ್ಕೆ ಹರಳೆಣ್ಣೆ ಸಂಗ್ರಹಿಸುತ್ತಾರೆ. ಅನಂತರ ಗುಡಿಯ ಪೂಜಾರಿಗೆ ಆ ಎಣ್ಣೆಯನ್ನು ಕೊಟ್ಟು ಕೆರೆಯ ಅಂಗಳ ಅಥವಾ ಊರ ಹೊರಗಿರುವ ತಾರೇಶ್ವರ ದೇವಾಲಯಕ್ಕೆ ಬಂದು ಪೂಜೆ ಸಲ್ಲಿಸುವರು. ಇಲ್ಲಿ ಪರಿಶಿಷ್ಟ ಜಾತಿಯವರೆ ಪ್ರಥಮ ಪೂಜೆ ಸಲ್ಲಿಸುವುದು ವಿಶೇಷ. ಅರ್ಚಕರು ದೇವರನ್ನು ಪೂಜಿಸಿದ ಬಳಿಕ ಸಗಣಿಯಿಂದ ಪಿಳ್ಳೇರಾಯ (ದೇವರ ಗುಡ್ಡನ ರೂಪ) ವನ್ನು ಮಾಡಿ ಅದರ ಮೇಲೆ ಗರಿಕೆಯನ್ನು ಸಿಕ್ಕಿಸುತ್ತಾರೆ. ಇದನ್ನು ಸಗಣಿ ರಾಶಿಯ ಪಕ್ಕದಲ್ಲಿಟ್ಟು ಮೊದಲು ಪಿಳ್ಳೇರಾಯನನ್ನು ಪೂಜಿಸಿ ಬಳಿಕ ರಾಶಿಗೆ ಪೂಜಿಸುತ್ತಾರೆ. ಸಗಣಿಯನ್ನು ಗೋಪುರಾಕಾರದ ಗುಡ್ಡೆ ಮಾಡಿ ಅದರ ಸುತ್ತ ಒಬ್ಬರ ಮೇಲೊಬ್ಬರು ನಿಂತು ಕೋಟೆಯನ್ನು ನಿರ್ಮಿಸುವರು. ಸಗಣಿ ಕುಸಿಯುವುದನ್ನೇ ಕಾಯುತ್ತಾ ಕುಸಿದ ತಕ್ಷಣ ಮುಗಿಬಿದ್ದು ಸಗಣಿಯಿಂದ ಓಕುಳಿಮಾಡಿ ಪರಸ್ಪರ ಎರಚಾಡಿ ಕೂಗಾಡುತ್ತಾ ಆಟ ಆರಂಭಿಸುವರು. ಇಲ್ಲಿ ಆಟ ಪ್ರಾರಂಭವಾದ ಆನಂತರ ಬೀರೇಶ್ವರನ ಗುಡಿಗೆ ಬಂದು ಪೂಜೆ ಸಲ್ಲಿಸಿ ಅಲ್ಲಿಯೂ ಸಗಣಿ ಎರಚಾಡುವರು. ವ್ಯಕ್ತಿಯೊಬ್ಬನ ತಲೆಯ ಮೇಲೆ ಸಗಣಿ ಉಂಡೆಯಿಟ್ಟು ಅದಕ್ಕೆ ಪಟಾಕಿ ಸಿಕ್ಕಿಸಿ ಹಾರಿಸುವರು. ಹೂವಿನ ಕುಂಡ ಹಚ್ಚಿ ಅದು ಸಿಡಿದಾಗ ಸಂತಸ ಸಂಭ್ರಮದಿಂದ ಕುಣಿದಾಡುವರು.

ಸಗಣಿಯನ್ನು ಮೈಗೆಲ್ಲ ಹಚ್ಚಿಕೊಂಡು ಮನೆಮನೆಗೆ ಹೋಗಿ ಹಣ ಕೇಳುವರು. ಅವರು ಕೊಡದಿದ್ದರೆ ಅವರನ್ನೇ ಅಪ್ಪಿಕೊಳ್ಳುವುದಾಗಿ ಹೆದರಿಸಿ ಕೆಲವರು ಸಾಕಷ್ಟು ಹಣವನ್ನು ಸಂಗ್ರಹಿಸುತ್ತಾರೆ. ಸಗಣಿ ಬಳಿದುಕೊಂಡ ವ್ಯಕ್ತಿಗಳಿಗೆ ಅವನ ಸಂಬಂಧಿಕರು ಉಡುಗೊರೆಯಾಗಿ ಹಣವನ್ನು ಕೊಡುತ್ತಾರೆ. ಜೊತೆಗೆ ತೊಪ್ಪೆ ನೀರನ್ನು ಕಲೆಸಿಟ್ಟುಕೊಂಡು ಅಂಥ ವ್ಯಕ್ತಿಗಳಿಗೆ ಅಭಿಷೇಕ ಮಾಡಿ ಮನರಂಜನೆ ಪಡೆಯುತ್ತಾರೆ. ಸಗಣಿ ಆಟ ಆಡುವವರು ಪ್ರೇಕ್ಷಕರಿಗೆ ಯಾವ ಬಗೆಯ ತೊಂದರೆಯನ್ನು ನೀಡದೆ ತಮ್ಮ ತಮ್ಮಲ್ಲೇ ಆಡ ಬೇಕೆಂಬ ನಿಯಮವಿಟ್ಟುಕೊಂಡಿದ್ದಾರೆ. ಮೂರ್ನಾಲ್ಕು ಗಂಟೆಗಳ ಕಾಲ ಈ ಆಚರಣೆ ನಡೆಯುತ್ತದೆ. ಅಪರೂಪಕ್ಕೊಮ್ಮೆ ಸ್ತ್ರೀಯರೂ ಇದರಲ್ಲಿ ಭಾಗವಹಿಸುವುದುಂಟು.

ಇದೇ ಸಂದರ್ಭದಲ್ಲಿ ವಿನೋದದಾಟವೂ ನಡೆಯುವುದಿದೆ. ಊರಿನಲ್ಲಿ ಚಾಡಿ ಹೇಳುವ ವ್ಯಕ್ತಿಯೊಬ್ಬನ ರೂಪವನ್ನು ಯುವಕನಿಗೆ ಹಾಕಿ ಹುಲ್ಲಿನಿಂದ ಮಾಡಿದ ಗಡ್ಡ ಮೀಸೆ ಅಂಟಿಸಿ ನಾಮ ಬಳಿದು ಕತ್ತೆಯ ಮೇಲೆ ಕೂರಿಸಿ ಊರೆಲ್ಲ ಮೆರವಣಿಗೆ ಮಾಡಿ ಮರಳಿ ದೇವಸ್ಥಾನದ ಹಿಂಭಾಗಕ್ಕೆ ಕರೆತಂದು ಕತ್ತು ಮಾತ್ರ ಮೇಲೆ ಕಾಣುವಂತೆ ಸಗಣಿ ರಾಶಿಯಲ್ಲಿ ಅವನನ್ನು ಹೂಳುವರು. ಮೆರವಣಿಗೆ ಸಂದರ್ಭದಲ್ಲಿ ದಾರಿಯುದ್ದಕ್ಕೂ ಜನ ಚಾಡಿಕೋರನನ್ನು ಅಶ್ಲೀಲ ಪದಗಳಿಂದ ಬಯ್ಯುವುದೂ ಉಂಟು. ಈ ಚಾಡಿಕೋರನ ಪ್ರತಿಕೃತಿಯನ್ನು ಹುಲ್ಲಿನಿಂದ ನಿರ್ಮಿಸಿ ತಲೆಗೆ ಮಡಕೆ ಕವುಚಿ ಅದನ್ನು ‘ಕೊಂಡೆಕಾರನ ಗುಡ್ಡ’ ಎಂದು ಕರೆಯುವರು. ಈ ಪ್ರತಿಕೃತಿಗೆ ಬೆಂಕಿ ಹಚ್ಚಿ ಜೀವಂತ ಕೋಳಿಯೊಂದನ್ನು ಅದರಲ್ಲಿ ಹಾಕಿ ಸುಡುತ್ತಾರೆ. ಹೀಗೆ ಮಾಡುವುದರ ಮೂಲಕ ಚಾಡಿಕೋರರಿಗೆ ಎಚ್ಚರಿಕೆ ನೀಡುವ ಈ ಆಚರಣೆ ವಿಶಿಷ್ಟವೂ ವಿಚಿತ್ರವೂ ಆದುದಾಗಿದೆ. ಇದೆಲ್ಲ ಮುಗಿದ ಮೇಲೆ ಸಗಣಿ ಆಟವಾಡಿದವರೆಲ್ಲ ಕೆರೆಯಲ್ಲಿ ಸ್ನಾನ ಮಾಡಿ ಮನೆಗೆ ಹಿಂತಿರುಗುವರು.

ಇದೊಂದು ಜಾತ್ರೆಯನ್ನು ಹೋಲುವಂಥ ಹಬ್ಬವಾಗಿದ್ದು ನಂಟರಿಷ್ಟರೆಲ್ಲ ಸೇರಿ ಈ ದಿನದ ಹಬ್ಬದ ವಿಶೇಷ ಅಡುಗೆಗಳನ್ನು ಮಾಡುವರು. ದೀಪಾವಳಿ ಸಂದರ್ಭದ ಈ ದಿನ ಸಗಣಿ ಎರಚಾಡಿ ಪರಸ್ಪರ ಬೈಯ್ದಾಡಿದರೆ ಬೈಸಿಕೊಂಡವರಿಗೆ ಶ್ರೇಯಸ್ಸು ಎಂಬ ನಂಬಿಕೆ ಈ ಜನಪದರಲ್ಲಿದೆ.

ಎನ್‌. ಆರ್.

 

ಸಣ್ಣಾಟ ಬಯಲಾಟ, ದೊಡ್ಡಾಟ, ಸಣ್ಣಾಟ – ಈ ಪದಗಳಲ್ಲಿ ‘ಆಟ’ ಎಂಬುದು ತಪ್ಪದೇ ಉಳಿದುಕೊಂಡು ಬಂದಿದೆ. ಹಳ್ಳಿಗಳಲ್ಲಿ ಈಗಲೂ ಎಲ್ಲ ಜಾನಪದ ದೃಶ್ಯ ಪ್ರಕಾರಗಳಿಗೆ ‘ಆಟ’ವೆಂದೇ ಕರೆಯುತ್ತಾರೆ. ಹೀಗಾಗಿ ಕನ್ನಡಿಗರು ಜಾನಪದ ದೃಶ್ಯ ಕಲೆಯನ್ನು ಮೊದಲ ಘಟ್ಟದಲ್ಲಿ ‘ಆಟ’ ವೆಂದೇ ಕರೆಯುತ್ತಿರಬೇಕೆನಿಸುತ್ತದೆ.

ಹಗಲು-ರಾತ್ರಿ, ಹವ್ಯಾಸಿ-ವೃತ್ತಿ, ಬೀದಿ-ವೇದಿಕೆ ಇತ್ಯಾದಿಗಳ ಹಿನ್ನೆಲೆಯಲ್ಲಿ ಜಾನಪದರಿಂದ ಪ್ರದರ್ಶಿಸಲ್ಪಡುತ್ತಿದ್ದ ರಂಗಭೂಮಿಗೆ ಸಮಾನಾಂತರವಾಗಿ, ಕಾಲ ಗತಿಸಿದಂತೆ, ಶಿಷ್ಟ ಸಮಾಜದ ಆಚ್ಛಾದಿತ (ಸಂಸ್ಕೃತ) ರಂಗಭೂಮಿಯೊಂದು ಹೊರಗಿನಿಂದ ಬಂದಿತು. ಅಂದಿನಿಂದ ಈ ಆಚ್ಛಾದಿತ ರಂಗಭೂಮಿಯಿಂದ ಬೇರ್ಪಡಿಸಲು ಜಾನಪದ ಅನಾಚ್ಛಾದಿತ ‘ಆಟ’ ವನ್ನು ‘ಬಯಲಾಟ’ ಎಂಬ ಹೆಸರಿನಿಂದ ಕರೆಯತೊಡಗಿದರೆಂದು ತೋರುತ್ತದೆ. ಆದುದರಿಂದ ಜಾನಪದ ರಂಗಭೂಮಿಯು ತನ್ನ ಮಗ್ಗುಲಿಗೆ ಬಂದು ನಿಂತ ಶಿಷ್ಟ ರಂಗಭೂಮಿಯಿಂದ ತನ್ನನ್ನು ಪ್ರತ್ಯೇಕಿಸಿಕೊಳ್ಳುವ ಅನುಕೂಲತೆಗಾಗಿ ತನ್ನ ಹೆಸರನ್ನು ಮಾತ್ರ ಬದಲಿಸಿಕೊಂಡಿತೇ ಹೊರತು, ರೂಪ ಬದಲಿಸಿಕೊಂಡು ಮುನ್ನಡೆಯಲಿಲ್ಲವೆಂದು ಹೇಳಬೇಕಾಗುತ್ತದೆ. ಹೀಗೆ ಏಕಕಾಲಕ್ಕೆ ಸಂಭವಿಸಿದ ಶಿಷ್ಟರೂಪದ ಆಗಮನ, ಜಾನಪದರೂಪದ ನಾಮಾಂತರ ಘಟನೆ ನಮ್ಮ ದೃಶ್ಯಕಲೆಯ ಇತಿಹಾಸದಲ್ಲಿ ಎರಡನೆಯ ಘಟ್ಟವೆನಿಸುತ್ತದೆ.

ಹೀಗೆ ‘ಬಯಲಾಟ’ ವೆಂಬ ಹೊಸ ಹೆಸರನ್ನು ಹೊತ್ತು ಮುನ್ನಡೆದ ಈ ಜಾನಪದ ದೃಶ್ಯ ಮಗ್ಗುಲಲ್ಲಿ, ದಿನಕಳೆದಂತೆ ಹೊಸ ಸಣ್ಣ ಪ್ರಕಾರವೊಂದು ಕವಲೊಡೆದು ನಿಂತಾಗ, ಇವೆರಡನ್ನೂ ವಿಂಗಡಿಸಿ ಕರೆಯುವ ಸೌಕರ್ಯಕ್ಕೋಸುಗ ಹಳೆಯ ಬಯಲಾಟವನ್ನು ‘ದೊಡ್ಡಾಟ’ ವೆಂದೂ, ಹೊಸ ಬಯಲಾಟವನ್ನು ‘ಸಣ್ಣಾಟ’ ವೆಂದೂ ಹೆಸರಿಸಿದರು. ಇದು ದೃಶ್ಯ ಕಲೆಯ ಇತಿಹಾಸದಲ್ಲಿ ಮೂರನೆಯ ಘಟ್ಟವಾಗಿದೆ. ಒಟ್ಟಿನಲ್ಲಿ, ಎರಡನೆಯ ಘಟ್ಟಕ್ಕೆ ಮಗ್ಗುಲಿಗೆ ಬಂದು ನಿಂತ ಶಿಷ್ಟರಂಗಭೂಮಿ ಕಾರಣವಾದರೆ, ಮೂರನೆಯ ಘಟ್ಟಕ್ಕೆ ಹೊಸದಾಗಿ ಹುಟ್ಟಿದ ಸಣ್ಣಾಟವೆಂಬ ಜಾನಪದ ರಂಗಭೂಮಿ ಕಾರಣವೆಂದು ಹೇಳಬಹುದು. ಈ ಸಣ್ಣಾಟದ ಜನನ ಕಾರಣ ಶೋಧ ಪ್ರಸ್ತುತ ಲೇಖನದ ಉದ್ದೇಶವಾಗಿದೆ.

ಕಾಲವಿಶಿಷ್ಟವಾದ ‘ಅವಸ್ಥಾಭೇದ’ ಶಿಷ್ಟಪದರ ಮೇಲೆ, ದೇಶವಿಶಿಷ್ಟವಾದ ‘ಪ್ರಾಂತಭೇಧ’ ಜಾನಪದರ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಹೀಗಾಗಿ ಶಿಷ್ಟಪದಕ್ಕಿಂತ ಜಾನಪದದಲ್ಲಿ ಬಹಳಷ್ಟು ಪ್ರಾಂತಭೇಧಗಳು ಮೈದಾಳುತ್ತವೆ. ಈ ಮೇರೆಗೆ ನಮ್ಮ ನಾಡಿನ ಪೂರ್ವ ಭಾಗದಲ್ಲಿ ‘ಮೂಡಲಪಾಯ’, ಪಶ್ಚಿಮ ಭಾಗದಲ್ಲಿ ‘ಪಡುವಲಪಾಯ’ ಎಂಬ ಬಯಲಾಟ ಪ್ರಾಂತಭೇಧಗಳನ್ನು ಸ್ಫುಟವಾಗಿ ಗುರುತಿಸಬಹುದಾಗಿದೆ. ಇವುಗಳಲ್ಲಿ ಪಶ್ಚಿಮ ಕರ್ನಾಟಕದ ಪಡುವಲಪಾಯ ಬಯಾಲಾಟ ಋತುಮಾ ಕಾರಣವಾಗಿ ಯಕ್ಷಗಾನ, ಪ್ರಸಂಗ ಎಂದು ಎರಡು ಹೋಳಾಗಿ ನಿಂತಿದೆ. ಯಕ್ಷಗಾನ ಬಡಗತಿಟ್ಟು, ತೆಂಕುತಿಟ್ಟು ಎಂಬ ಪ್ರಭೇಧಗಳನ್ನು ಸೃಷ್ಟಿಸಿಕೊಂಡಿದ್ದು ಇದಕ್ಕೆ ಭೌಗೋಳಿಕ ವ್ಯತ್ಯಾಸ, ನೆರೆಯ ಪ್ರಾಂತದ ಪ್ರಭಾವಗಳು ಕಾರಣವಾಗಿವೆ. ಇದೇ ರೀತಿ ಮೂಡಲಪಾಯ ಬಯಾಲಾಟವನ್ನು ಉತ್ತರ ಕರ್ನಾಟಕದ್ದು, ದಕ್ಷಿಣ ಕರ್ನಾಟಕದ್ದು, ಎಂದು ವಿಂಗಡಿಸಬಹುದಾಗಿದೆ. ಇವುಗಳಲ್ಲಿ ಉತ್ತರ ಕರ್ನಾಟಕದ ಮೂಡಲಪಾಯ ಬಯಲಾಟ ಯಾವುದೇ ಕಾರಣದಿಂದಾಗಿ ಸಣ್ಣಾಟ, ದೊಡ್ಡಾಟವೆಂಬ ಎರಡು ಪ್ರಕಾರಗಳಾಗಿ ನಿಂತಿತೆಂದು ತೋರುತ್ತದೆ. ಆ ಕಾರಣ ಯಾವುದೆಂಬುದು ನಮ್ಮ ಮುಂದಿರುವ ಪ್ರಶ್ನೆಯಾಗಿದೆ.

ಜೀವನದೃಷ್ಟಿ ಮತ್ತು ಜೀವನ ವ್ಯಾಪಾರಗಳಲ್ಲಿಯ ವ್ಯತ್ಯಾಸದಿಂದಾಗಿ ಭಾಷೆ ಮತ್ತು ಸಾಹಿತ್ಯಗಳಲ್ಲಿ ಅವಸ್ಥಾಭೇದ, ಪ್ರಾಂತಭೇಧಗಳು ತಲೆದೋರುತ್ತವೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಒಳಗೆ ಜನ ಜೀವನದಲ್ಲಿ ಆಗಾಗ ಸಂಭವಿಸಿದ ತೀವ್ರ ಬದಲಾವಣೆಗಳಿಂದಾಗಿಯೇ ಹೊರಗೆ ಭಾಷೆ ವೂರ್ವದ ಹಳಗನ್ನಡ – ಹಳಗನ್ನಡ – ನಡುಗನ್ನಡ – ಹೊಸಗನ್ನಡವಾಗುತ್ತ ಬಂದಿತು; ಸಾಹಿತ್ಯರೂಪ ಚಂಪೂ – ವಚನ – ರಗಳೆ – ಷಟ್ಟದಿ – ಭಾವಗೀತೆ – ನವ್ಯ ಕಾವ್ಯವಾಗುತ್ತ ಬೆಳೆಯಿತು. ಅಂದರೆ ಒಳಗಿನ ಆಶಯ ಹೊರಗಿನ ಆಕೃತಿಗಳು ಅವಿನಾಭಾವ ಸಂಬಂಧವುಳ್ಳವುಗಳಾಗಿದ್ದು, ಯಾವ ಕಾಲಕ್ಕೂ ಅಂತರಂಗದ ಸುಪ್ತ ಪರಿರ್ವತನೆ ಬಹಿರಂಗದ ಸ್ಟಷ್ಟ ಬದಲಾವಣೆಗೆ ದಾರಿ ಮಾಡಿಕೊಡುತ್ತದೆ. ಇದೇ ರೀತಿ ಕನ್ನಡಿಗರ ಜೀವನದಲ್ಲಿ ಸಂಭವಿಸಿದ ಯಾವುದೋ ಒಂದು ಅಂಥ ಬದಲಾವಣೆಯಿಂದಾಗಿ ಜಾನಪದ ದೃಶ್ಯಕಲೆಯಾದ ‘ಬಯಲಾಟ’ ದಲ್ಲಿಯೂ ಸಣ್ಣಾಟವೆಂಬ ಕವಲು ಕಾಣಿಸಿಕೊಂಡಿರಬೇಕು. ಆ ಬದಲಾವಣೆ ಯಾವುದು? ಈ ಪ್ರಶ್ನೆಗೆ ವಿದ್ವಾಂಸರು ನೀಡಿದ ಉತ್ತರಗಳು ಹೀಗಿವೆ:

“ದೊಡ್ಡಾಟಗಳು ರಂಗಸಜ್ಜಿಕೆ, ವೇಷಭೂಷಣ, ವಾದ್ಯಗಳ ದೃಷ್ಟಿಯಿಂದ ಹೆಚ್ಚು ವೆಚ್ಚದಾಯಕವಾದವುಗಳು…… ಆದರೆ ಸಣ್ಣಾಟಗಳಲ್ಲಿ ಇಂಥ ವೆಚ್ಚದ ಆಡಂಬರ ಇರುವುದಿಲ್ಲ…. . ಹೀಗೆ ಇದು ಬಡವರು ಸಹಜವಾಗಿ ಪ್ರಯೋಗಿಸಬಹುದಾದ ರೂಪಕವಾಗಿದ್ದುದರಿಂದ ಅವರ ಅನುಕೂಲಕ್ಕಾಗಿ ಹುಟ್ಟಿಕೊಂಡಿರಬೇಕು”

“ಸಣ್ಣಾಟಗಳು ಸಾಮಾಜಿಕ ಹಾಗೂ ನೈತಿಕ ಉದ್ದೇಶಕ್ಕಾಗಿ ಹುಟ್ಟಿದವುಗಳು. ಜಾನಪದ ಜೀವನಕ್ಕೆ ನಿತ್ಯವೂ ಬೇಕಾಗುವ ದೈವಭಕ್ತಿ, ಬೋಗ – ತ್ಯಾಗಗಳನ್ನು ಕುರಿತು ಆಡಂಬರ ರಹಿತ ಮಾತು, ಹಾಡುಗಳಲ್ಲಿ ನೀತಿ ಪಾಠವನ್ನೂ ಮನರಂಜನೆಯನ್ನೂ ಒದಗಿಸಲು ಅವು ಹುಟ್ಟಿಕೊಂಡವು” – ಬಿ. ಬಿ. ಹೆಂಡಿ.

“ಹಾಡು ಹೇಳುವ ಧಾಟಿ ಭಿನ್ನವಾದಂತೆ ಆಟದ ಪ್ರಕಾರಗಳು ತಲೆದೋರುತ್ತವೆ. ಈ ದೃಷ್ಟಿಯಿಂದ ಕನ್ನಡ ಬಯಲಾಟವನ್ನು ಪರಾಮರ್ಶಿಸಿದರೆ ಮುಖ್ಯವಾಗಿ ಎರಡು ಪ್ರಭೇದಗಳು ಒಡೆದು ಕಾಣುತ್ತವೆ. ೧. ದೊಡ್ಡಾಟ ೨. ಸಣ್ಣಾಟ.”

“ಬಯಲಾಟ ವೀರ – ರೌದ್ರ ಭಾವನೆಗಳನ್ನು ಮಾತ್ರ ವ್ಯಕ್ತಪಡಿಸಿದರೆ ಸಾಲದು. ಮಿಕ್ಕ ರಸಗಳೂ ಅಲ್ಲಿ ಓತಪ್ರೋತವಾಗಿ ಹರಿಯಬೇಕು. ಶೃಂಗಾರ, ಭಕ್ತಿ, ಕರುಣ, ಹಾಸ್ಯ ಮುಂತಾದ ರಸಗಳಿಗೂ ಪ್ರಾಧಾನ್ಯ ತರುವ ಮಾಧ್ಯಮವೊಂದನ್ನು ಹುಡುಕಲು ಅವರು ಯತ್ನಿಸಿದರು. ಅವರ ಪ್ರಯತ್ನದ ಫಲವಾಗಿ ಸಣ್ಣಾಟ ಹುಟ್ಟಿಕೊಂಡಿತು.” – ಡಾ. ಎಂ. ಎಸ್‌. ಸುಂಕಾಪುರ.

ಇಲ್ಲಿ ಡಾ. ಹೆಂಡಿ, ಡಾ. ಸುಂಕಾಪುರ ಅವರ ಒಂದನೆಯ ಅಭಿಪ್ರಾಯಗಳು ದೊಡ್ಡಾಟ, ಸಣ್ಣಾಟಗಳಲ್ಲಿ ತೋರುವ ವೆಚ್ಚ ಪ್ರಮಾಣ, ಮತ್ತು ಹಾಡಿನ ರೀತಿಗಳನ್ನು ಸೂಚಿಸುತ್ತಿವೆಯೇ ಹೊರತು ಸಣ್ಣಾಟ ಸೃಷ್ಟಿಯ ಮೂಲಭೂತ ಕಾರಣಗಳನ್ನು ಸೂಚಿಸುವುದಿಲ್ಲ. ಇದೇ ರೀತಿ ಎರಡನೆಯ ಹೇಳಿಕೆಗಳೂ ಸಣ್ಣಾಟ ಸೃಷ್ಟಿಯ ಕಾರಣಗಳಾಗಿರದೆ ಅದರ ಸ್ವರೂಪ ನಿರೂಪಣೆಗಳಾಗಿವೆ. ಏಕೆಂದರೆ ದೈವಭಕ್ತಿ, ನೀತಿಪಾಠ, ಮನರಂಜನೆ, ಕರುಣರಸ, ಹಾಸ್ಯರಸಗಳು ಈ ಹಿಂದಿನ ದೊಡ್ಡಾಟದಲ್ಲಿಯೂ ಎಡೆಪಡೆದಿದ್ದವು. ಹೀಗಾಗಿ ಸಣ್ಣಾಟ ಸೃಷ್ಟಿಯ ಪ್ರಬಲ ಕಾರಣ ಯಾವುದೆಂಬ ಪ್ರಶ್ನೆ ಮತ್ತೂ ಉಳಿದುಕೊಳ್ಳುತ್ತದೆ. ಅದು ಮತ್ತಾವುದೂ ಆಗಿರದೆ ಪ್ರಾಚೀನ ಕನ್ನಡ ಶಿಷ್ಟಸಾಹಿತ್ಯದ ಬದಲಾವಣೆಗೂ ಕಾರಣವಾದ ವೀರಸಂವೇದನೆಗೆ ಪ್ರತಿಯಾಗಿ ತಲೆಯೆತ್ತಿದ ೧೨ನೆಯ ಶತಮಾನದ ಭಕ್ತಿಸಂವೇದನೆಯೇ ಆಗಿದೆ. ಅಂದರೆ ಕನ್ನಡಿಗರು ‘ವೀರ’ಕ್ಕೆ ಬದಲು ‘ಭಕ್ತಿ’ಯನ್ನು ಒಂದು ಮೌಲ್ಯವೆಂದು ಪರಿಗಣಿಸುತ್ತಲೇ ಶಿಷ್ಟ ಸಾಹಿತ್ಯದಲ್ಲಿ ಚಂಪೂ ಹಿಂದೆ ಸುರಿದು, ವಚನ-ರಗಳೆ ಷಟ್ಪದಿ ಪ್ರಕಾರಗಳು ಮುಂದೆ ಬಂದಂತೆ, ಜಾನಪದ ಸಾಹಿತ್ಯದಲ್ಲಿಯೂ ದೊಡ್ಡಾಟದ ಮಗ್ಗುಲಲ್ಲಿ ಸಣ್ಣಾಟ ಸೃಷ್ಟಿಯ ಸಂಕಲ್ಪ ಅಂದೇ ಅಂಕುರಿಸಿತೆಂದು ಹೇಳಬಹುದು. ಆದರೆ ಜಾನಪದದಲ್ಲಿ ಪರಿವರ್ತನೆ ಯಾವ ಕಾಲಕ್ಕೂ ತೀರ ನಿಧಾನ. ಹೀಗಾಗಿ ತಾವು ಭೌತಿಕ ಬದುಕನ್ನು ಬಾಳುತ್ತಿದ್ದರೂ ಪರಂಪರಾಪ್ರಿಯರಾದ ಅವರು “ನೆಲೆಸಿದ ಕಾವ್ಯಂ ಕಾವ್ಯಕ್ಕೆ ಲಕ್ಷಣಂ” ಎಂಬಂತೆ ಆ ಪೂರ್ವದ ವೀರರಸ ಪ್ರಧಾನವಾದ ಬಯಲಾಟವನ್ನೇ ಮುಂದುವರೆಸಿಕೊಂಡು ಬಂದರು. ಇದರಿಂದಾಗಿ ಜೀವನರಂಗ ಮತ್ತು ನಾಟಕರಂಗಗಳಲ್ಲಿ ಹೊಂದಿಕೆ ತಪ್ಪುತ್ತ ನಡೆದು, ಕೊನೆಗೆ ವೀರರಸ ಪ್ರಧಾನವಾದ ಬಯಲಾಟಗಳ ಜೊತೆಗೆ ಭಕ್ತಿರಸ ಪ್ರಧಾನವಾದ ಬಯಲಾಟಗಳನ್ನೂ ಸೃಷ್ಟಿಸುವ ಹಂಬಲ ಹಣ್ಣಾಗಿರಬೇಕು. ಕನ್ನಡ ನಾಡಿನಲ್ಲಿ ವೀರಜೀವನವು ಹಾಗೂ ಹೀಗೂ ವಿಜಯನಗರದ ಕೊನೆಯವರೆಗೆ ಮುಂದುವರಿದ ಪ್ರಯುಕ್ತ ಈ ಹಂಬಲ ಸುಪ್ತವಾಗಿಯೇ ಪ್ರವಹಿಸಿತು. ೧೬ನೆಯ ಶತಮಾನದ ಸುಮಾರಿಗೆ ವಿಜಯನಗರ ಸಾಮ್ರಾಜ್ಯದ ಪತನದೊಂದಿಗೆ ಕನ್ನಡಿಗರ ಅಖಂಡ ವೀರಜೀವನ ತುಂಡುತುಂಡಾಗುವಲ್ಲಿ ಈ ಸುಪ್ತವಾದ ಭಕ್ತಿ ಜಾನಪದ ರಂಗಭೂಮಿಯನ್ನು ಪ್ರವೇಶಿಸಲು ಹವಣಿಸಿತು. ದಿನದಿಂದ ದಿನಕ್ಕೆ ಈ ಹವಣಿಕೆ ಒಂದು ಹದಕ್ಕೆ ಬಂದು, ೧೯ನೆಯ ಶತಮಾನದಲ್ಲಿ ಭಕ್ತಿರಸ ಪ್ರಧಾನವಾದ ಹೊಸಬಗೆಯ ಬಯಲಾಟ ಆವಿರ್ಭವಿಸಿತು. ಇದು ಎಲ್ಲಂದದಲ್ಲಿ ಮೊದಲಿನ ಬಯಲಾಟಕ್ಕಿಂತ ಸಣ್ಣದಾಗಿದ್ದುದರಿಂದ ‘ಸಣ್ಣಾಟ’ ವೆಂದು ಕರೆದರು. ಈ ಕಾರಣದಿಂದಾಗಿಯೇ ಮೊದಲಿನಿಂದಲೂ ಬಂದ ಬಯಲಾಟವನ್ನು ‘ದೊಡ್ಡಾಟ’ ವೆಂದು ಕರೆದರು. ಆದುದರಿಂದ ದೊಡ್ಡಾಟ, ಸಣ್ಣಾಟಗಳೆಂಬ ಕವಲುಗಳಿಗೆ ಕನ್ನಡಿಗರ ವೀರಜೀವನವು ಭಕ್ತಿಜೀವನವಾಗಿ ತಿರುವು ಪಡೆದುದೇ ಕಾರಣವಾಗಿದೆ. ಸಣ್ಣಾಟಗಳೆಲ್ಲ ಸಾಮಾನ್ಯವಾಗಿ ಭಕ್ತರಾದ ಶರಣರ, ಸಂತರ ಕಥೆಗಳೇ ಆಗಿರುವುದನ್ನು ನಾವು ಇಲ್ಲಿ ನೆನೆಯಬೇಕು. ಒಟ್ಟಿನಲ್ಲಿ ದೊಡ್ದಾಟ ವೀರಯುಗದ ಉತ್ಪತ್ತಿ, ಸಣ್ಣಾಟ ಭಕ್ತಿಯುಗದ ಉತ್ಪತ್ತಿ.

ಸಣ್ಣಾಟ ಪ್ರಕಾರದ ತವರುಮನೆ ಉತ್ತರ ಕರ್ನಾಟಕವೇ ಹೊರತು ಕರ್ನಾಟಕದ ಇತರ ಪ್ರದೇಶಗಳಲ್ಲ. ಇಂದಿಗೂ ಸಣ್ಣಾಟ ಒಂದು ಸಿದ್ಧಿಯನ್ನು ಮುಟ್ಟಿ ಹಲವು ಪ್ರಕಾರಗಳಲ್ಲಿ ಪ್ರಚಾರದಲ್ಲಿರುವುದು ಉತ್ತರ ಕರ್ನಾಟಕದಲ್ಲಿ ಮಾತ್ರ. ಇದಕ್ಕೆ ಕಾರಣಗಳು ಹಲವು : ೧. ಶರಣರ ಶಿವಭಕ್ತಿಯ ಅಂದೋಲನ, ದಾಸರ ಹರಿಭಕ್ತಿಯ ಆಂದೋಲನಗಳ ಕಾರ್ಯ ಕ್ಷೇತ್ರ ಉತ್ತರ ಕರ್ನಾಟಕ. ಇಂಥ ಆಳವಾದ ಅಂದೋಲನಗಳು ಕರ್ನಾಟಕದ ಇತರ ಭಾಗಗಳಲ್ಲಿ ಘಟಿಸಲಿಲ್ಲ. ೨. ವಿಜಯನಗರ ಪತನದ ತರುವಾಯ ದಕ್ಷಿಣ ಪಶ್ಚಿಮ ಕರ್ನಾಟಕಗಳಲ್ಲಿ ಅಸ್ತಿತ್ವಕ್ಕೆ ಬಂದ ಮೈಸೂರು ಕೆಳದಿ ಮೊದಲಾದ ಅರಸು ಮನೆತನಗಳಿಂದಾಗಿ ಅಲ್ಲಿ ವೀರಕ್ಕೆ ಪ್ರಧಾನಸ್ಥಾನ ಲಭಿಸಿ, ಭಕ್ತಿ ಮತ್ತೂ ಗೌಣಸ್ಥಾನ ಪಡೆಯಿತು. ಮೊದಲೇ ಶರಣರ ದಾಸರ ಭಕ್ತಿಯ ಆಂದೋಲನಗಳಿಂದ ಹದಗೊಂಡಿದ್ದ ಉತ್ತರ ಕರ್ನಾಟಕ ಮಾತ್ರ ವಿಜಯನಗರ ಪತನದ ತರುವಾಯ ಇದ್ದಷ್ಟೂ ವೀರ ಜೀವನಕ್ಕೆ ಎರವಾಗುವಲ್ಲಿ, ಭಕ್ತಿಗೆ ಇನ್ನೂ ಮುಕ್ತವಾಗಿ ಬೆಳೆಯುವ ಅವಕಾಶ ಅಲ್ಲಿ ಲಭಿಸಿತು. ೩. ಮುಸಲ್ಮಾನರ ಸಾಮಾಜಿಕ ದಬ್ಬಾಳಿಕೆಯಿಂದಾಗಿ ಇನ್ನೂ ಹತಾಶಗೊಂಡ ಪರಿಸ್ಥಿತಿಯಲ್ಲಿ, ನಿಜಗುಣರ ಅದ್ವೈತ ಅದಕ್ಕೆ ನೆಮ್ಮದಿಯ ನೆಲೆಯಾಗಿ ಬಂದಿತು. ಜೊತೆಗೆ ಸಿದ್ಧಾರೂಢ, ಶರೀಫಸಾಹೇಬ, ಗರಗದ ಮಡಿವಾಳಪ್ಪ ಮೊದಲಾದ ಅವಧೂತರ ಅಧ್ಯಾತ್ಮದ ಅಫೀಮು ಭಕ್ತಿಗೆ ಇನ್ನೂ ಬಣ್ಣ ಬಂದಿತು.

ಈಗ ತಾವು ಬದುಕುವುದು ವೀರಕ್ಕಿಂತ ಮಿಗಿಲಾಗಿ ಭಕ್ತಿಮೌಲ್ಯವನ್ನು; ತಮ್ಮ ಮನಸ್ಸನ್ನು ಆಳುವವರು ರಾಜಮಹಾರಾಜರಿಗಿಂತ ಮಿಗಿಲಾಗಿ ಶರಣಸಂತರು. ಇದಕ್ಕನುಗುಣವಾಗಿ ಶಿಷ್ಟರು ಸಾಹಿತ್ಯದಲ್ಲಿ ವಚನ – ರಗಳೆ – ಷಟ್ಟದಿಗಳ ಮೂಲಕ ಅಪೂರ್ವ ಪರಿವರ್ತನೆಯನ್ನು ಅಸ್ತಿತ್ವಕ್ಕೆ ತಂದಿದ್ದರು. ಪಂಪನಲ್ಲಿ ವೀರಕಾವ್ಯವಾದ ಭಾರತಕುಮಾರವ್ಯಾಸನಲ್ಲಿ ಭಕ್ತಿಕಾವ್ಯವಾಗಿ ಈ ಮೊದಲೇ ಹೊರಬಂದಿದ್ದಿತು. ಜಾನಪದ ಹಾಡುಗಳಲ್ಲಿ ಭಕ್ತಿಗೆ ಪ್ರವೇಶ ಲಭಿಸಿದ್ದಿತು. ಆದರೆ ಆ ಭಕ್ತಿ ಬಯಲಾಟದಲ್ಲಿ ಪ್ರವೇಶ ಪಡೆದಿರಲಿಲ್ಲ. ಆಗ ಭಕ್ತಿಯನ್ನು ಪ್ರತಿನಿಧಿಸುವ ಕಥಾ ಶೋಧ, ಪ್ರಕಾರ ಶೋಧ ನಡೆಸಿ, ‘ಸಣ್ಣಾಟ’ ಹೆಸರಿನಲ್ಲಿ ಜಾನಪದರು ಬಯಲಾಟ ಕೃತಿ ಮತ್ತು ಪ್ರದರ್ಶನ ಎರಡರಲ್ಲಿಯೂ ಹೊಸತನ್ನು ಸೃಷ್ಟಿಸಿದರು.

ಈ ಹಿನ್ನೆಲೆಯಲ್ಲಿ ಭಕ್ತಿಪ್ರಧಾನ, ಅಧ್ಯಾತ್ಮ ಪ್ರಧಾನವಾದ ನಿಜಗುಣ ಶಿವಯೋಗಿ, ತಿರುನೀಲಕಂಠ, ಅಲ್ಲಮಪ್ರಭು, ಹೇಮರೆಡ್ಡಿ ಮಲ್ಲಮ್ಮ, ಭಕ್ತ ಕಬೀರ, ಕನಕದಾಸ ಮೊದಲಾದ ಸಣ್ಣಾಟಗಳು ಒಂದೊಂದಾಗಿ ಹುಟ್ಟಿಕೊಂಡವು; ಜೀವನರಂಗ ಮತ್ತು ನಾಟಕರಂಗಗಳಲ್ಲಿ ಹೊಂದಿಕೆಯನ್ನು ಕಲ್ಪಿಸಿದವು.

ಆಗ ವೀರರಸಕ್ಕೆ ಅನುಗುಣವಾಗಿ ಆಕಾರ ಪಡೆದಿದ್ದ ‘ಆಂಗೀಕ’ ವೆನಿಸುವ ಕುಣಿತಮಣಿತ, ‘ವಾಚಿಕ’ ವೆನಿಸುವ ಮಾತು – ಗೀತು, ‘ಆಹಾರ್ಯ’ ವೆನಿಸುವ ವೇಷಭೂಷಣ, ‘ಸಾತ್ವಿಕ’ ವೆನಿಸುವ ಹಾವ – ಭಾವಗಳೆಂಬ ಅಭಿನಯದ ನಾಲ್ಕೂ ಘಟಕಗಳು ಈಗ ಭಕ್ತಿ ರಸಕ್ಕನುಗುಣವಾಗಿ ಆಕಾರ ಬದಲಿಸಬೇಕಾಯಿತು. ಅಂದರೆ ವೀರರಸಪ್ರಧಾನವಾದ ಆಟಗಳಲ್ಲಿ ಭೀಮ – ರಾವಣಾ ಮೊದಲಾದವರಿಗೆ ಒಪ್ಪುವ ವೀರೋಚಿತ ಕುಣಿತ – ಮಣಿತಗಳು, ವೇಷ – ಭೂಷಣಗಳು, ಮಾತು – ಗೀತುಗಳು, ಹಾವ -ಭಾವಗಳು ಭಕ್ತಿರಸ ಪ್ರಧಾನವಾದ ಈ ಆಟಗಳಲ್ಲಿ ಬಸವಣ್ಣ, ನಿಜಗುಣ ಶಿವಯೋಗಿ, ಕಬೀರ ಮೊದಲಾದವರಿಗೆ ಆಭಾಸವೆಸತೊಡಗಿದವು. ಆದುದರಿಂದ ಈ ನಾಲ್ಕು ಘಟಕಗಳು ಆವೇಶದಿಂದ ಸೌಮ್ಯಕ್ಕೆ, ಆಡಂಬರದಿಂದ ಸಹಜ ಇಳಿದವು. ಈಗ ದೊಡ್ಡದಾಗಿದ್ದ ಬಯಲಾಟದ ಎದುರು ಈ ಪ್ರಕಾರ ಎಲ್ಲಕ್ಕಿಂತ ಸಣ್ಣಾದಾಗಿ ಕಂಡಿತು. ಇವೆರಡನ್ನು ಪ್ರತ್ಯೇಕಿಸುವ ದೃಷ್ಟಿಯಿಂದ ಹಳೆಯ ಬಯಲಾಟವನ್ನು ದೊಡ್ಡಾಟವೆಂದು, ಹೊಸ ಬಯಲಾಟವನ್ನು ಸಣ್ಣಾಟವೆಂದು ಕರೆದರು. ಹೀಗಾಗಿ ಜಾನಪದದಲ್ಲಿ ಆಟ – ಬಯಲಾಟ- ದೊಡ್ಡಾಟ ಎಂಬಿವು ಹಳೆಯ ದೃಶ್ಯ ಪ್ರಕಾರವೊಂದರ ನಾಮಾಂತರಗಳು, ಸಣ್ಣಾಟ ಮಾತ್ರ ರೂಪಾಂತರವೆಂದೇ ಹೇಳಬೇಕು.

ಹೀಗೆ ಭಕ್ತಿ ಪ್ರಜ್ಞೆಯು ಏಳುನೂರು ವರ್ಷ ತಡೆದು ‘ಸಣ್ಣಾಟ’ ಹೆಸರಿನಲ್ಲಿ ಜಾನಪದ ರಂಗಭೂಮಿಯನ್ನು ಏರುವಷ್ಟರಲ್ಲಿ ಅದೇ ಆಗ ಕರ್ನಾಟಕದಲ್ಲಿ ಜಾಗೃತವಾಗಿದ್ದ ಸಾಮಾಜಿಕ ಪ್ರಜ್ಞೆಯೂ ಬೆನ್ನ ಹಿಂದೆಯೇ ರಂಗಭೂಮಿಯನ್ನೇರಿತು. ಇದರಿಂದಾಗಿ ದೃಶ್ಯ ಕೃತಿರಚನಾ ಚಟುವಟಿಕೆಯು ಭಾಕ್ತಿಕ ಸಣ್ಣಾಟ, ಸಾಮಾಜಿಕ ನಾಟಕವೆಂದು ಇಬ್ಭಾಗಗೊಂಡು, ವೀರರಸ ಪ್ರಧಾನವಾದ ದೊಡ್ಡಾಟದಷ್ಟು ಸಂಖ್ಯಾ ಪ್ರಮಾಣದಲ್ಲಿ ಭಕ್ತಿರಸಪ್ರಧಾನವಾದ ಸಣ್ಣಾಟಗಳು ಹುಟ್ಟಲಿಲ್ಲ. ಇಷ್ಟರಲ್ಲಿಯೇ ವೃತ್ತಿ ನಾಟಕ, ಸಿನೆಮಾಗಳು ಕರ್ನಾಟಕವನ್ನು ಪ್ರವೇಶಿಸಿದ ಕಾರಣ ಸಣ್ಣಾಟದ ಸಂಖ್ಯೆಯ ಬೆಳವಣಿಗೆ ಇನ್ನೂ ಕುಂಠಿತಗೊಂಡಿತು. ಮೇಲಾಗಿ ಮೂಲತಃ ಇದು ಕರ್ನಾಟಕ ವ್ಯಾಪ್ತಿಯ ಕಲೆಯಾಗದೆ, ಉತ್ತರ ಕರ್ನಾಟಕದಲ್ಲಿ, ಅದರಲ್ಲಿಯೂ ಬೆಳಗಾವಿ, ಧಾರವಾಡ, ವಿಜಾಪುರ ಜಿಲ್ಲೆಗಳ ತ್ರಿವೇಣಿ ಸಂಗಮದ ಸೀಮಿತಕ್ಷೇತ್ರದಲ್ಲಿ ಹುಟ್ಟಿ ಮಡುಗಟ್ಟಿದ್ದಿತು. ಇದೆಲ್ಲವನ್ನು ಲಕ್ಷಿಸಿದರೆ ‘ಸಣ್ಣಾಟ’ವು ಸಂಖ್ಯೆ, ಸಾರ್ವತ್ರಿಕತೆ ದೃಷ್ಟಿಯಿಂದಲೂ ‘ದೊಡ್ಡಾಟ’ದ ಎದರು ಸಣ್ಣದೆಂದೇ ಸ್ಪಷ್ಟವಾಗುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಕೆಲವು ಅಂಶಗಳಿವೆ. ದೊಡ್ಡಾಟ ಪೌರಾಣಿಕ ವಸ್ತುವನ್ನಾಧರಿಸಿದರೆ ಸಣ್ಣಾಟ ಭಕ್ತಿನಿಷ್ಠ ಐತಿಹಾಸಿಕ ವಸ್ತುವನ್ನು, ಆಮೇಲೆ ಕ್ವಚಿತ್ತವಾಗಿ ಶೃಂಗಾರನಿಷ್ಠ ಸಾಮಾಜಿಕ ವಸ್ತುವನ್ನು ಆಧರಿಸಿದೆ, ಹೀಗೆ ದೊಡ್ಡಾಟದ ಕವಚವನ್ನು ಉಳಿಸಿಕೊಂಡು ಸಾಮಾಜಿಕತೆಯತ್ತ ಹೆಜ್ಜೆ ಹಾಕಿದ ಇದು, ನಾಟಕಕ್ಕೆ ದಾರಿಮಾಡಿಕೊಟ್ಟ ಪ್ರಕಾರವಾಗಿದೆ. ಆದುದರಿಂದ ಸಣ್ಣಾಟವು ಕರ್ನಾಟಕದ ದೃಶ್ಯಕಲೆಯ ಇತಿಹಾಸದಲ್ಲಿ ದೊಡ್ಡಾಟ ಮತ್ತು ನಾಟಕಗಳ ಮಧ್ಯ ಸೇತುವೆಯೆನಿಸುತ್ತದೆ. ಇದರ ಇಂಥದೇ ಇನ್ನೊಂದು ಸಾಧನೆಯೆಂದರೆ, ದಾಸರು ಮೊದಲಾದ ಜಾನಪದ ವೃತ್ತಿಕಲಾವಿದರು ಪ್ರದರ್ಶಿಸುತಲಿದ್ದ ಬೀದಿ ರಂಗಭೂಮಿಗಳಿಗೆ ಉದ್ದಾರಮಾರ್ಗ ತೋರಿದುದು. ಕೇವಲ ಭಿಕ್ಷಾವೃತ್ತಿಯಲ್ಲಿದ್ದ ಈ ವೃತ್ತಿ ರಂಗಭೂಮಿಗಳು ಸಣ್ಣಾಟದ ಮಾದರಿಯಲ್ಲಿ ಹಿಗ್ಗಿನಿಂತು, ಒಂದು ವ್ಯವಸ್ಥಿತ ಚೌಕಟ್ಟು ಪಡೆದು ಪ್ರಸಾರಗೊಂಡವು. ಈಗ ಆ ಕಲಾವಿದರ ಸ್ಥಿತಿಯೂ ಸುಧಾರಿಸಿ ಅವು ರಾಜನಾಟ – ರಾಧಾನಾಟ ಇತ್ಯಾದಿಯಾಗಿ ಸಣ್ಣಾಟದ ಮಟ್ಟದಲ್ಲಿ ಶೋಭಿಸಿದವು.

ಸಣ್ಣಾಟ ಭಕ್ತಿ – ಶೃಂಗಾರರಸ ಪ್ರಧಾನವಾದ ಐತಿಹಾಸಿಕ ಸಾಮಾಜಿಕ ವಸ್ತುಗಳಿಗೆ ಒಪ್ಪುವ ಜಾನಪದ ಶಿಲ್ಪವಾಗಿದ್ದರೂ ಅದಕ್ಕೆ ‘ಐರಾವಣ – ಮೈರಾವಣ’, ‘ಇಂದ್ರಕೀಲ’ ದಂತಹ ವೀರರಸಪ್ರಧಾನ ಪೌರಾಣಿಕ ಕಥೆಗಳನ್ನೂ ಕೆಲವೆಡೆ ಬಳಸಿಕೊಳ್ಳಲಾಗಿದೆ. ಹೀಗೆ ಮಾಡಿದರೆ ಆ ಕಥೆಗಳ ವ್ಯಕ್ತಿತ್ವಕ್ಕೆ, ವೈಭವಕ್ಕೆ ಧಕ್ಕೆಯುಂಟಾಗುವ ಕಾರಣ ಸಣ್ಣಾಟಕ್ಕೆ ಪೌರಾಣಿಕ, ಅದರಲ್ಲಿಯೂ ವೀರರಸಪ್ರಧಾನ ವಸ್ತುವನ್ನು ಆರಿಸಿಕೊಳ್ಳುವುದು ತೀರ ಅಭಾಸ, ಅಸಂಗತವೆಂದೇ ಹೇಳಬೇಕು.

ಒಟ್ಟಿನಲ್ಲಿ ಸೀಮಿತ ಪ್ರದೇಶ, ಅಲ್ಪ ಆಯುಷ್ಯ, ಪರಿಮಿತ ಕೃತಿಸಂಖ್ಯೆ, ಭಕ್ತಿ – ಶೃಂಗಾರದಂಥ ಕೆಲವೇ ರಸ ನಿರೂಪಣೆ ಕಾರಣವಾಗಿ, ತನ್ನ ಎಲ್ಲ ಆಯಾಮಗಳನ್ನು ಬಿಚ್ಚಿಕೊಳ್ಳದೆ, ಹೆಸರಿಗೆ ತಕ್ಕಂತೆ ಇದು ಒಂದು ಸಣ್ಣ ಪ್ರಯೋಗಸ್ಥಿತಿಯಲ್ಲಿ ನಿಂತುಬಿಟ್ಟಿತೇ ಹೊರತು, ದೊಡ್ಡಾಟದಂತೆ ಪರಿಣಿತ ಸಿದ್ಧಿಗೇರಲಿಲ್ಲ; ಸಂಕೀರ್ಣವಾಗಿ ಬೆಳೆಯಲಿಲ್ಲ. ಹೀಗಿದ್ದು ಈ ವರ್ಗದ ಶ್ರೀಕೃಷ್ಣಪಾರಿಜಾತ ಮಾತ್ರ ‘ಸಣ್ಣಾಟಗಳ ರಾಜ’ ಎಂಬ ಬಿರುದು ಹೊತ್ತು, ತನ್ನ ಸಾಮರ್ಥ್ಯದ ಎಲ್ಲ ಸಾಧ್ಯತೆಗಳನ್ನು ಪ್ರಕಟಿಸಿತು.

ಎಂ. ಎಂ. ಕೆ.