ಸಾವಿನ ಹಾಡುಗಳು ವ್ಯಕ್ತಿ ಸತ್ತ ಸಂದರ್ಭದಲ್ಲಿ ಆ ಹೆಣದ ಮುಂದೆ ಕುಳಿತು, ಬದುಕಿದ್ದಾಗ ಅವನು ಮಾಡಿದ ಕಾರ್ಯಗಳನ್ನೆಲ್ಲ ಹಾಡಾಗಿ ಹೇಳಿಕೊಂಡು ಅಳುವ ಪದ್ಧತಿಗಳನ್ನು ಮಂಡ್ಯ, ಚಾಮರಾಜ ನಗರ, ಚಿತ್ರದುರ್ಗ, ಕೊಡಗು ಮುಂತಾದೆಡೆಗಳಲ್ಲಿ ಕಾಣುತ್ತೇವೆ. ಹೀಗೆ ಸತ್ತ ವ್ಯಕ್ತಿಯನ್ನು ಕುರಿತು ಹಾಡುವ ಗೀತೆಗಳನ್ನು ಸಾವಿನ ಪದಗಳು ಎನ್ನಲಾಗುತ್ತದೆ. ಸಾಮಾನ್ಯವಾಗಿ ಇಂತಹ ಹಾಡುಗಳನ್ನು ಹಾಡುವ ಕುಟುಂಬದವರು ಅದನ್ನು ವಂಶಪಾರಂಪರ್ಯವಾಗಿ ಹಾಡುತ್ತಾರೆ. ಅದರಲ್ಲೂ ಗೌಡ ಜಾತಿಯವರು ಸತ್ತಾಗ ಹೀಗೆ ಹಾಡುವ ಪದ್ಧತಿ ಈ ಭಾಗಗಳಲ್ಲಿ ಕಂಡು ಬರುತ್ತದೆ. ಹಾಡುವವರು ದಲಿತ ವರ್ಗಕ್ಕೆ ಸೇರಿದವರು. ವ್ಯಕ್ತಿ ಸತ್ತಾಗ ಈ ಹಾಡುಗಾರರ ಕುಟುಂಬದವರಿಗೆ ಹೇಳಿ ಕಳಿಸಲಾಗುತ್ತದೆ. ಅವರಲ್ಲಿ ನಾಲ್ಕೈದು ಜನರು ಗುಂಪಾಗಿ ಬಂದು ರಾತ್ರಿಯೆಲ್ಲಾ ಹೆಣದ ಮುಂದೆ ಕುಳಿತು ಹಾಡಿ ಹಾಡಿ ದುಃಖಿಸುತ್ತಾರೆ. ಕೆಲವೊಮ್ಮೆ ವ್ಯಕ್ತಿ ಸತ್ತ ಹನ್ನೊಂದನೇ ದಿನ ಕೂಡ ಹೀಗೆ ಇವರನ್ನು ಕರೆಸಿ ಹಾಡಿಸುವುದನ್ನು ಮಂಡ್ಯದ ಕೆಲವೆಡೆಗಳಲ್ಲಿ ಕಾಣಬಹುದು. ಹೀಗೆ ಹಾಡಿದ್ದಕ್ಕಾಗಿ ಪ್ರತಿರೂಪದಲ್ಲಿ ಹಣ ನೀಡುವ ಪದ್ಧತಿ ಈಗ ಕಂಡು ಬರುತ್ತದೆಯಾದರೂ ಹಿಂದೆ ಈ ಪದ್ಧತಿ ಇದ್ದಂತೆ ಕಂಡು ಬರುವುದಿಲ್ಲ. ಸಾವನ್ನು ಎಷ್ಟು ಸಹಜವಾಗಿ ನಮ್ಮ ಜನಪದರು ಬರಮಾಡಿ ಕೊಳ್ಳುತ್ತಿದ್ದರು ಎಂಬುದು ಈ ಹಾಡುಗಳಲ್ಲಿ ವ್ಯಕ್ತವಾಗುತ್ತದೆ.

ಒಂದು ಕುಟುಂಬ ಅಥವಾ ಮನೆತನಕ್ಕೆ ಸಂಬಂಧಿಸಿದವರಿಗೆ ಮೀಸಲಾದ ಹಾಡುಗಳೂ ಇವೆ. ಉದಾಹರಣೆ :

ಯಾರ್ಯಾರ ಹಾಡಾಲಿ ಯಾರ್ಯಾರ ಹೊಗಳಲಿ
ಯಾರಾಡಿ ಯಾರಮರೆಯಲಿ – ಸತ್ತೀಗೌಡ
ಕಾಳೇಗೌಡಪ್ಪನೋರ ಪಾಲುತೇರಿಯಾ ಬಳಗಾವ

ಇದು ಸತ್ತೀಗೌಡನ ಮನೆತನಕ್ಕೆ ಸಂಬಂಧಿಸಿದ್ದು. ಬಹುಶಃ ಆತನ ಅನಂತರ ಇದನ್ನೇ ಅವನ ಕುಟುಂಬದವರಿಗೂ ಅನ್ವಯಿಸಿ ಮುಂದುವರಿಸಿರಬೇಕು. ಆತನ ಮನೆತನದ ಪಾರಂಪರ್ಯವನ್ನು ಸ್ಮರಿಸಿ ಹಾಡುವ ಹಾಡು ಇದು.

ಹಸಿದವರಿಗನ್ನವನ್ನಿಕ್ಕಿ ಸಿಸುವಿಗ್ಹಾಲು ಕೊಟ್ಟು
ಸೆರಿಯ ಹೋಗೋರಾ ಬಿಡುಸೋರೆ – ಸಂಜೇಗೌಡ್ರ
ಸೆರಿಯಾ ಹಿಡಿದವ್ನೆ ಯಮದೋನು

ಈ ಹಾಡಿನಲ್ಲಿ ಸಂಜೀಗೌಡನ ವ್ಯಕ್ತಿತ್ವ ಎಂತಹುದು ಎಂದು ವರ್ಣಿಸಲಾಗಿದೆ. ಆತ ಹಸಿದವರಿಗೆ ಅನ್ನ ಕೊಟ್ಟವನು. ಹಸುಗೂಸಿಗೆ ಹಾಲು ಕೊಟ್ಟವನು. ಅಷ್ಟೇ ಅಲ್ಲ. ಸೆರೆಯಾಗಿದ್ದ ಎಷ್ಟೋ ಜನರನ್ನು ಬಿಡಿಸಿದವನು. ಅಂತಹವನನ್ನು ಇಂದು ಯಮ ಸೆರೆ ಹಿಡಿದಿದ್ದಾನೆ. ವಿಧಿಯಾಟವನ್ನು ತಡೆಯಲು ಸಾಧ್ಯವೇ? ಈಗ ಯಮನಿಗೆ ಸೆರೆಯಾಗಿರುವ ಅವನನ್ನು ಯಾರೂ ಬಿಡಿಸಲಾರರು. ಇನ್ನೊಂದು ಹಾಡು :

ಎದ್ದು ಬಾರಯ್ಯಾ ಮುದ್ದುಳ್ಳೋ ನನ್ನಪ್ಪ
ಮುದ್ರೆಯುಂಗುರದ ದೊರೆ ಮಗನೆ – ದ್ಯಾವೇಗೌಡಪ್ಪ
ನೀನೆದ್ದು ತ್ಯಾಗಾವ ಕೊಡು ಬಾರೋ

            ಈರುಳ್ಳಿ ದಾನ ನೀರು ಮಜ್ಜಿಗೆ ದಾನ
ಅಂಬಲಿ ದಾನ ಅನುದಾನ – ಕಾಳೇಗೌಡಪ್ಪಾರ
ಮುಂದಲಾ ತೋಟದ ಎಲಿದಾನ

ದೂರದೂರಕ್ಕೆ ಪ್ರಯಾಣ ಮಾಡುವ ದಾರಿಹೋಕರಿಗಾಗಿ ನೀರು, ಮಜ್ಜಿಗೆಗಳನ್ನು ದಾನ ನೀಡುತ್ತಿದ್ದರು. ಅವರ ಬಾಯಾರಿಕೆ ನೀಗಲೆಂದು ಇವುಗಳನ್ನು ನೀಡಿದರೆ, ಮಜ್ಜಿಗೆಯ ರುಚಿ ಹೆಚ್ಚುವುದಕ್ಕಾಗಿ ಈರುಳ್ಳಿಯನ್ನು ನೀಡುತ್ತಿದ್ದ ಕಾಳೇಗೌಡ, ಅಷ್ಟೇ ಅಲ್ಲ, ಹಸಿದು ಬಂದವರಿಗೆ ಅಂಬಲಿಯನ್ನೂ ಆ ಅಂಬಲಿ ಕುಡಿಯುವುದಕ್ಕೆ ತಮ್ಮ ತೋಟದ ಎಲೆಯನ್ನು ದಾನ ನೀಡುತ್ತಿದ್ದನಂತೆ. ಇವುಗಳನ್ನು ಸ್ಮರಿಸಿ ಈ ಹಾಡನ್ನು ಕಟ್ಟಲಾಗಿದೆ.

ತಾಯಿ ಸತ್ತಾಗ ಮಗಳು ದುಃಖಿಸುವ ಪರಿ ಇದು:

ಊಟ ಮಾಡುವಳೆ ವೀಳ್ಯಾ ತಿದ್ದವಳೆ
ಮಂಚದ ಮೇಲೆ ಮಲಗವಳೆ ತಾಯಮ್ಮ
ಹಗ್ಗ ಹಾಕವನೆ ಯಮರಾಯ

            ಹಟ್ಟಿಯ ಕಟ್ಟವರೆ ಮಾಡಿಯಾ ಕಟ್ಟವರೆ
ಹಟ್ಟೀಲಿ ಮೂರ್ಕಾಲ ಬಾಳಲಿಲ್ಲ ತಾಯಮ್ಮ
ಮೊಮ್ಮಕ್ಕಳ ಕರೆದು ಮುದ್ದಾಡಲಿಲ್ಲ

            ಹೋಯ್ತೀನಿ ಬಂಧುವೇ ಹೋಯ್ತೀನಿ ಬಳಗಾವೆ
ಹೋಯ್ತೀನಿ ನನ್ನ ತವರಿಗೆ ಎಂದೆನುತ
ಹೋಗಿ ಸೇರವಳೆ ಹಿರಿಯವರ

ತಾಯಿಯೊಬ್ಬಳು ಹೆತ್ತ ಮಗನನ್ನು ಕಳೆದುಕೊಂಡಾಗ ಆಕೆಯ ದುಃಖ ಹೇಳತೀರದು. ಅವಳು ಗೋಳನ್ನು ವ್ಯಕ್ತಪಡಿಸುವ ರೀತಿ ಹೀಗಿದೆ:

            ಅಯ್ಯೋ ನನ್ನ ಮಗನೆ ನಿಂಗೇನು ಬಂತಪ್ಪಾ
ಎಲ್ಲಿಂದ ಬಂದ್ರೂ ಅವ್ವಾ, ಅವ್ವಾ ಅಂತೇಳಿ ಬತ್ತಿದ್ದಲ್ಲೋ
ಮೀಸೆ ಬಂದ ಮಗ ಅದಾನೆ ನಂಗಿನ್ನೇನು ಅಂತಿದ್ನಲ್ಲೋ
ಭಗುವಂತಾ ನಿನ್ನಂಗೆ ಕರ್ಕೊಂಡು ಹೋದ್ನೋ
ನೀನೇ ನನಗೆ ಎರಡು ಹಿಡಿ ಮಣ್ಣಾಕಿ ಹೋಗ್ತೀಯ ಅಂದ್ರೆ
ನನ್ನ ಕಣ್ಮುಂದೇನೇ ಹೋದಲ್ಲೋ ಮಗನೆ
ಇರುವೆ ಗೂಡಿಗೆ ಬೆಂಕಿ ಸುರ್ದಂಗೆ ಮಾಡ್ದೆಪ್ಪಾ ಭಗವಂತ
ಅಯ್ಯೋ, ನಿನ್ನ ಮನೆ ಹಾಳಾಗ
ನಿನಗೆ ಬರೋ ಸಾವು ನನಗಾರೆ ಬರಲಿಲ್ಲವಲ್ಲೋ ನನಮಗನೇ
ಅಯ್ಯೋ ಇದಿ ಮುಂಡೇ ನನ ಮಗನ ಹಣೇಲಿ ಏನು ಬರೆದೈ.
ಹೆಂಡ್ತಿ ಮಕ್ಕಳಿಗೆ ಯಾರಾದ್ರೂ ಏನಾರೆ ಅಂದ್ರೆ ಆಡಿದ್ರೆ
ಅವರ ಹುಟ್ಟಲಿಲ್ಲ ಅನ್ನಿಸ್ತಿದ್ಯಲ್ಲೋ ನನ್ನಪ್ಪ
ಅಣ್ಣ-ತೆಮ್ಮರು ರಾಮಲಕ್ಷ್ಮಣ ಇದ್ದಂಗಿದ್ರಲ್ಲಪ್ಪಾ
ಎಲ್ಲಿಂದ ಬಂದ್ರೂ ಹುಲಿ ಬಂದಂತೆ ಬರ್ತಿದ್ಯಲ್ಲೋ

ಎಂದು ತಾಯಿ ಸತ್ತ ಮಗನ ಗುಣಗಾನ ಮಾಡಿ ಅಳುತ್ತಾಳೆ.

ಇಂಥ ಹಾಡುಗಳನ್ನು ಹಾಡುವವರು ಸಾಮಾನ್ಯವಾಗಿ ಎಲ್ಲಿಗೆ ಹೋದರೂ ಅದೇ ಹಾಡುಗಳನ್ನು ಹೇಳುತ್ತಾರೆ. ಅವುಗಳಲ್ಲಿ ಬರುವ ಹೆಸರನ್ನು ಮಾತ್ರ ವ್ಯಕ್ತಿಗೆ ತಕ್ಕಂತೆ ಬದಲಿಸಿಕೊಳ್ಳುತ್ತಾರೆ. ತಾಯಿ, ತಂದೆ, ಮಗ, ಮಗಳು, ಗಂಡ, ಹೆಂಡತಿ ಹೀಗೆ ಯಾವುದೇ ಸಂಬಂಧವಾದರೂ ಅದಕ್ಕೆ ತಕ್ಕಂತಹ ಹಾಡುಗಳನ್ನು ಇವರು ಹಾಡುತ್ತಾರೆ.

ಕೊಡಗಿನಲ್ಲೂ ಹೀಗೆ ಸತ್ತಾಗ ಹಾಡುವ ಸಂಪ್ರದಾಯವಿದೆ. ಇವುಗಳನ್ನು ಕೊಡವ ಭಾಷೆಯಲ್ಲಿ ‘ಚಾವು ಪಾಟು’ ಎನ್ನುತ್ತಾರೆ. ಸತ್ತವನ ಆದರ್ಶಮಯ ಜೀವನದ ವರ್ಣನೆ ಇದರಲ್ಲಿರುತ್ತದೆ. ನಾಲ್ಕು ಮಂದಿ ಗಂಡಸರೂ ನಾಲ್ಕು ಮಂದಿ ಹೆಂಗಸರೂ ಮುಂದೆ ಕುಳಿತು ಇಡೀ ರಾತ್ರಿ ಹಾಡುತ್ತಾರೆ. ಅಜ್ಜ ಸತ್ತಾಗ ಹಾಡುವ ಒಂದು ಹಾಡು ಇಲ್ಲಿದೆ:

            ಕೆಟ್ಟಿರೋ ಅಜ್ಜಯ್ಯ ನಿಂಗ
ಅಟ್ಟನಕ ಕೇಟಲೇ ಅಜ್ಜಯ್ಯ
ಜೋತಿರೋ ಅಜ್ಜಯ್ಯ ನಿಂಗ
ಜೋತನಕೆ ಜೋತಿರೋ ಅಜ್ಜಯ್ಯ
ಬದ್ದರೋ ಅಜ್ಜಯ್ಯ ನಿಂಗ
ಚಾವಕಾಲ ಬದ್ದರೋ ಅಜ್ಜಯ್ಯ

(ಓ ಅಜ್ಜಯ್ಯ, ನೀವು ಸ್ವರ್ಗವಾಸಿಗಳಾದಿರಿ. ಆದರೆ ಕೆಟ್ಟ ಹೆಸರು ಪಡೆದುಕೊಂಡು ಸಾಯಲಿಲ್ಲ. ಜೀವನವೆಂಬ ಹೋರಾಟದಲ್ಲಿ ನೀವು ಸಾವಿಗೆ ಶರಣಾಗಬೇಕಾಯಿತು ಅಷ್ಟೇ !

ಹೀಗೆ ಮುಂದುವರಿಯುವ ಈ ಗೀತೆಯಲ್ಲಿ ಆತನ ಮೃತ್ಯುವಿಗೆ ಮೊದಲು ಕಂಡು ಬರುವ ಅಪಶಕುನಗಳು, ಆತನ ಬದುಕಿನಲ್ಲಿ ನಡೆದ ಹುಟ್ಟು, ಮದುವೆ ಮುಂತಾದ ಪ್ರಮುಖ ಘಟನೆಗಳು, ಆತನ ಶ್ರೀಮಂತಿಕೆಯಿಂದ ಕೂಡಿದ ಜೀವನ, ದಾನಗುಣ, ಪರೋಪಕಾರ ಮುಂತಾದ ವಿಷಯಗಳ ವರ್ಣನೆ ಬರುತ್ತದೆ. ಆ ವ್ಯಕ್ತಿ ತನ್ನ ಮಕ್ಕಳಿಗೆ ಹೇಳುವಂತಹ ಬುದ್ಧಿವಾದವೂ ಇದರಲ್ಲಿ ಬರುತ್ತದೆ.

ಹೀಗೆ ವ್ಯಕ್ತಿ ಸತ್ತಾಗ ಹಾಡುವ ಸಾವಿನ ಹಾಡುಗಳು ಪ್ರಪಂಚದ ಹಲವೆಡೆಗಳಲ್ಲಿ ಕಂಡು ಬರುತ್ತವೆ. ತಮಿಳುನಾಡಿನಲ್ಲಿ ಈ ಪದ್ಧತಿ ವ್ಯಾಪಕವಾಗಿ ಕಂಡುಬರುತ್ತದೆ. ಇದನ್ನು ಅವರು ‘ಒಪ್ಪಾರಿ’ ಎಂದು ಕೆರೆಯುತ್ತಾರೆ.

ಟಿ. ಎಸ್.

 

ಸಿಂದ್ ಮಾದಿಗರು ಆಂಧ್ರ ಪ್ರದೇಶದ ತೆಲಂಗಾಣ ಭಾಗದಲ್ಲಿ ಬಹುಸಂಖ್ಯೆಯಲ್ಲಿ ಕಾಣಬರುವ ಜನ ಸಮುದಾಯ. ಮಾದಿಗ ಜಾತಿಯ ಒಂದು ಉಪಪಂಗಡ. ಇವರು ಕರ್ನಾಟಕ – ಆಂಧ್ರಗಡಿ ಭಾಗಗಳಲ್ಲಿ, ಕಡಪ, ನೆಲ್ಲೂರು, ಕೋಲಾರದ ಮಾಲೂರು ಹಾಗೂ ತಮಿಳುನಾಡಿನಲ್ಲಿ ಚೆದುರಿದಂತೆ ಕಂಡುಬರುತ್ತಾರೆ. ಆರೆ ಅಲೆಮಾರಿಗಳಾದ ಇವರನ್ನು ಚಿನ್ನ ಮಾದಿಗಲು, ಸಿನ್ನ ಮಾದಿಗಲು, ಸಿಂದುವಾಳ್ಳು, ಸಿಂದೋಯಿಲು ಎಂಬ ಹಲವು ಹೆಸರುಗಳಿಂದ ಕರೆಯುತ್ತಾರೆ. ಇವರ ಜೀವನ ಹಾಸುಹೊಕ್ಕಾಗಿ ಕಲೆ ಮಿಳಿತವಾಗಿದೆ. ತಮ್ಮ ನಾಟಕ, ಹಾಡುಗಳಲ್ಲಿ ಪಾತ್ರಧಾರಿಗಳಾಗುವ ಮೂಲಕ, ಸಿಂದ್ ಕುಣಿಯುವ ಆಚರಣೆಗಳಿಂದ ಗಮನ ಸೆಳೆಯುವ ಇವರು ತಮ್ಮ ಮತಂಗ ಕುಲದ ಔನ್ನತ್ಯವನ್ನು ತಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯಿಂದ ಮೆರೆಸಿದ್ದಾರೆ. ಸಿಂದ್ ಕತೆ ಅಥವಾ ಆದಿ ಜಾಂಬವ ಪುರಾಣದ ಕತೆಗಳು ಹಾಗೂ ಎಲ್ಲಮ್ಮನ ಆಟ ಇವರಿಗೆ ಬಹು ಪ್ರಿಯವಾದವು.

ಸಿಂದ ಮಾದಿಗರು ತಮ್ಮ ಕತೆಯಲ್ಲಿ ಹೇಳಿಕೊಳ್ಳುವಂತೆ ಈ ಜಗತ್ತಿನ ಸೃಷ್ಟಿಕಾರ್ಯ ನಡೆದದ್ದು ಜಂಬು ನೇರಳೆ ಮರದ ಕೆಳಗೆ. ಜಂಬುವಿನಲ್ಲಿ ಹುಟ್ಟಿ, ಜಂಬುವಿನಲ್ಲಿ ಬೆಳೆದು ಈ ಜಗತ್ತನ್ನು ಜಂಬು ನೇರಳೆ ಕೆಳಗೆ ಜಾಂಬವಂತ ಇರಿಸಿದ ಎಂಬ ನಂಬಿಕೆಯಿದೆ. ಜಂಬುದ್ವೀಪಕ್ಕೂ ಜಂಜುವೃಕ್ಷಕ್ಕೂ ಇರುವಂಥ ಸಂಬಂಧವನ್ನು ಮಾದಿಗರು ತಮ್ಮ ಮದುವೆಯ ಆಚರಣೆಗಳಲ್ಲಿ ಈಗಲೂ ಉಳಿಸಿಕೊಂಡಿದ್ದಾರೆ.

ಸಿಂದ್ ಮಾದಿಗರು ಮಾದಿಗರನ್ನು ಆಶ್ರಯಿರಿಸಿಕೊಂಡೇ ಬದುಕುವವರು. ಆದ್ದರಿಂದ ಇವರಿಗೆ ಈ ಹೆಸರು ಬಂದಿರಬಹುದು. ಮಾದಿಗರು ಹೇಳಿಕೊಳ್ಳುವಂತಹ ಜಾಂಬವಂತನ ಕಥೆಯನ್ನು ತಮ್ಮ ಕಲೆಯ ಮೂಲಕ ಸುಂದರವಾಗಿ ಪ್ರದರ್ಶಿಸುತ್ತಾರೆ. ಸಿಂದ್ ಕತೆಯಲ್ಲಿ ಬರುವ ತಾತಾ ಆದಿಜಾಂಬವನಂತನಿಗೂ ಶಿಷ್ಟ ಪುರಾಣಗಳಲ್ಲಿ ಬರುವ ಜಾಂಬವಂತ ಇಬ್ಬರಿಗೂ ಹಲವು ಸಾಮ್ಯಗಳು ಹಾಗೂ ವ್ಯತ್ಯಾಸಗಳಿವೆ. ಇವರ ಜಾಂಬವಂತ ಭೂಮಿಗಿಂತ ಮೊದಲು ಹುಟ್ಟಿ ಹಿಂದು ಪುರಾಣಗಳನ್ನು ಸೃಷ್ಟಿಸಿದ; ಬ್ರಹ್ಮನ ಸೃಷ್ಟಿಕರ್ತನೂ ಇವನಾಗಿದ್ದಾನೆ.

ಸಿಂದ್ ಮಾದಿಗರು ತಂಗಡಿದ್ಯಾವ್ರು ಸಮಯದಲ್ಲಿ ಸಿಂದ್ ಕುಣಿತವನ್ನು ಆಚರಿಸುತ್ತಾರೆ. ಮದುವೆಯ ಸಂದರ್ಭದಲ್ಲಿ ಧಾರೆಯಾದ ಮರುದಿನ ಸಿಂದ್ ಕುಣಿತವನ್ನು ಆಚರಿಸುತ್ತಾರೆ. ಹೆಣ್ಣು ಮತ್ತು ಗಂಡಿನ ಕುಲದವರು ತಂಗಡಿ ಗಿಡಕ್ಕೆ ಪೂಜೆ ಸಲ್ಲಿಸಿದ ಮೇಲೆ ಈ ಕುಣಿತ ನಡೆಯುತ್ತದೆ. ಪೂಜೆಯ ನಂತರ ಸಿಂದ್ ಕುಣಿಯುವವರು ಆರಿಶಿನ – ಕುಂಕುಮವನ್ನು ಮುಖ, ಮೈಗೆ ಬಳಿದುಕೊಳ್ಳುತ್ತಾರೆ. ತಮ್ಮ ವೃತ್ತಿಯ ಅಂಗವಾದ ಅಂಗಾಳ ಪೆಟ್ಟಿಗೆ ತೆಗೆದು ಅದರಲ್ಲಿರುವ ಅಂಕಾಳಮ್ಮನ ಪ್ರತಿಮೆಗೆ ಹಾಗೂ ತಮ್ಮ ಕುಲದ ಚಿಹ್ನೆಗಳಾದ ಕೋರಮಿರೆ, ಕೊಂಗುವಾಲ ಕತ್ತಿಕನ್ನು, ಕಂದೆಣಾಲು, ಅಡ್ಡಗಂಧಾಲು ಮತ್ತು ಗಳಿಗೆಯನ್ನು ಪೂಜಿಸುತ್ತಾರೆ. ಸಿಂದ್ ಕುಣಿತಕ್ಕೆ ಹೆಮ್ಮೇಳವಾಗಿ ತಮಟೆ ಇಲ್ಲವೆ ಚೈಂಕಿಣಿ (ಚೌಡಿಕಿ) ಇರುತ್ತದೆ. ಆದರೆ ಅದು ಇರಬೇಕೆಂಬ ನಿಯಮವಿಲ್ಲ.

ಸಿ. ಎಸ್. ಪಿ.

 

ಸಿಡಿ ಗ್ರಾಮದೇವತೆಯ ಜಾತ್ರೆಯಲ್ಲಿ ದೇವರಿಗೆ ಸಲ್ಲಿಸುವ ಒಂದು ಬಗೆಯ ಆಚರಣೆ ‘ಸಿಡಿ’ ಎಂದರೆ ಚಿಮ್ಮು ಎನ್ನುವ ಅರ್ಥವಿದೆ. ತಮಿಳುನಾಡಿನಲ್ಲಿ ಕಾವಡಿಯನ್ನು ಹೊರುವ ಭಕ್ತರು ಈ ಸಿಡಿಯಾಚರಣೆಯನ್ನು ನಡೆಸುತ್ತಾರೆ. ಹರೋಹರ ಎಂದು ಭಕ್ತಿಯಿಂದ ಕುಣಿಯುತ್ತಾರೆ. ಸಿಡಿ, ಸಿಡಿಕಂಬ, ಸಿಡಿಮರ, ಸಿಡೀರಣ್ಣ , ಸಿಡಿ ಉಟ್ಲು ಎಲ್ಲವೂ ಸಿಡಿಯ ಆಚರಣೆಯಲ್ಲಿ ಬಳಕೆಯಲ್ಲಿರುವ ಪರ್ಯಾಯ ಪದಗಳು ಈ ಸಿಡೀರಣ್ಣ ಗ್ರಾಮದೇವತೆಯ ಮಗ. ಈತನಿಲ್ಲದೆ ಯಾವ ಆಚರಣೆಯೂ ಗ್ರಾಮದೇವಿಯ ಜಾತ್ರೆಯಲ್ಲಿ ನೆರವೇರುವುದಿಲ್ಲ. ಜಾತ್ರೆಯ ಎಲ್ಲಾ ಕಾರ್ಯಗಳಿಗೂ ಮುಂದಾಳತ್ವ ವಹಿಸುವ ಸಿಡೀರಣ್ಣನ ಹೆಸರಲ್ಲಿ ನಡೆಯುವ ಆಚರಣೆಯೇ ‘ಸಿಡಿಉಟ್ಲು’. ಊರಿನಲ್ಲಿ ಯಾರಿಗಾದರೂ ಕಾಯಿಲೆಯಾದರೆ ವಾಸಿಯಾಗಲು ಇಲ್ಲವೆ ಕಾಯಿಲೆ ಬರದಂತೆ ತಡೆಗಟ್ಟಲು ಮಕ್ಕಳಾಗದಿದ್ದರೆ ಮಕ್ಕಳಾಗಲು – ಹೀಗೆ ನಾನಾ ಕಾರಣಗಳಿಗೆ ಈ ಸಿಡಿಯ ಆಚರಣೆ ನೆರವೇರುತ್ತದೆ. ಇಲ್ಲಿ ಹರಕೆ ಹೊತ್ತವರು ಮಾತ್ರ ಸಿಡಿ ಆಡುತ್ತಾರೆ. ಹೀಗೆ ಸಿಡಿಯಾಡಲು ಒಂದು ಸರಿಯಾದ ದಿನವನ್ನು ಗೊತ್ತುಪಡೊಸಲಾಗುತ್ತದೆ. ಇಂತಹ ಸಿಡಿಯು ವಾರದ ಯಾವುದೇ ದಿನದಲ್ಲಿ ಬೇಕಾದರೂ ನಡೆಯಬಹುದು.

ಈ ಸಿಡಿಯಾಚರಣೆಯಲ್ಲಿ ಮೊದಲಿಗೆ ಸಿಡೀರಣ್ಣನನ್ನು ದೇವಾಲಯದ ಮುಂದೆ ಇರುವ ಕಂಬದ ಬಳಿ ತಂದು ಇರಿಸಲಾಗುತ್ತದೆ. ಅಡಿಕೆ ಮರ, ಮಾವಿನ ಮರ ಇಲ್ಲವೇ ಸರ್ವೆ ಮರದ ಉದ್ದನೆಯ ದಿಂಡನ್ನು ಸಿಡಿ ಕಂಬವಾಗಿ ನೆಟ್ಟಿರುತ್ತಾರೆ. ಇದನ್ನು ಸುಣ್ಣ ಬಣ್ಣಗಳಿಂದ ಅಲಂಕರಿಸಲಾಗಿರುತ್ತದೆ. ಕಂಬದ ಒಂದು ಬದಿಗೆ ತೊಟ್ಟಿಲನ್ನು ಕಟ್ಟಲಾಗಿದ್ದು. ಮತ್ತೊಂದು ಬದಿಗೆ ಮಡಕೆಯನ್ನು ಕಟ್ಟಿರುತ್ತಾರೆ. ಮಂಗಳ ದ್ರವ್ಯಗಳಿಂದ ‘ಸಿಡಿಕಂಬ’ ಪೂಜಿಸಿ ಮೊದಲು ಅಲ್ಲಿ ಊರಿನ ಇತರ ಯುವಕರು ಮಡಕೆಯನ್ನು ಒಡೆದು ಕೆಳಗುರುಳಿಸುತ್ತಾರೆ. ಹೀಗೆ ಮಾಡುವುದರಿಂದ ಕೆಟ್ಟದ್ದೇನಾದರೂ ಇದ್ದರೆ ಬಿಟ್ಟು ಹೋಗುವುದೆಂಬ ನಂಬಿಕೆ ಇದೆ. ಇದಾದ ಬಳಿಕ ಹರಕೆ ಹೊತ್ತವರು ತಮ್ಮ ಮಕ್ಕಳನ್ನು ಕೂಡಿಸಿ ಸಿಡಿ ಆಡಿಸುತ್ತಾರೆ. ಹಿರಿಯರಿಂದ ಕಿರಿಯರಾದಿಯಾಗಿ ‘ತೊಟ್ಟಿಲು ಸಿಡಿ’ ಆಡುತ್ತಾರೆ. ಹೀಗೆ ಕಟ್ಟು ಒಡೆಯುವುದು ಮುಗಿದ ಅನಂತರ ಊರಿಗೆ ಹಬ್ಬಕ್ಕಾಗಿ ಬಂದವರನ್ನು ಕಳುಹಿಸಿಕೊಡಬಹುದು. ಅಲ್ಲಿಯವರೆಗೆ ಜಾತ್ರೆಗೆ ಬಂದ ನೆಂಟರಿಷ್ಟರು ಹೋಗುವ ಹಾಗಿಲ್ಲ. ಹೀಗೆ ಸಿಡಿ ಆಡುವುದು ಒಂದು ವಿಶಿಷ್ಟ ಹರಕೆಯಾಗಿದೆ. ಇದು ಪ್ರದೇಶದಿಂದ ಪ್ರದೇಶಕ್ಕೆ ಸ್ವಲ್ಪ ಭಿನ್ನವಾಗಿದ್ದು, ರೋಮಾಂಚನಕಾರಿಯಾಗುತ್ತದೆ ಹಾಗೂ ಅನೇಕ ನಿಯಮಗಳಿಂದ ಕೂಡಿರುತ್ತದೆ. ಇದನ್ನು ಕೆಲವು ಕಡೆಗಳಲ್ಲಿ ವಂಶಪಾರಂಪರ್ಯಾವಾಗಿ ನಡೆಸಿಕೊಂಡು ಬರಲಾಗಿದೆ. ಹೀಗೆ ಸಿಡಿಯನ್ನು ಆಡಬೇಕಾದರೆ ಗ್ರಾಮದೇವಿಗೆ ಮೊದಲು ಪೂಜಿಸಲ್ಲಿಸಿ, ಪುರೋಹಿತನಿಂದ ತೀರ್ಥಪಡೆದು ಸಿಡಿಯಾಡಲು ಬರಬೇಕು. ಸಾಮಾನ್ಯವಾಗಿ ಇವರು ಕೆಂಪು ವಸ್ತ್ರಗಳನ್ನು ಧರಿಸುತ್ತಾರೆ. ಮೊದಲು ಸಿಡೀರಣ್ಣನನ್ನು ಸಿಡಿ ಆಡಿಸಿದ ಮೇಲೆ ಊರ ಪುರೋಹಿತ ಹಾಗೂ ಪ್ರಮುಖರು ಸಿಡಿ ಆಡುವ ರೂಢಿ ಇದೆ.

ಈ ಸಿಡಿಯಲ್ಲಿ ಆರು ವಿಧಗಳಿವೆ : (೧) ತೊಟ್ಟಿಲು ಸಿಡಿ (ತೊಟ್ಟಿಲಲ್ಲಿ ಮಕ್ಕಳನ್ನು ಕೂಡಿಸಿ ಆಡಿಸುವುದು), (೨) ಬೆನ್ನು ಸಿಡಿ (ಬೆನ್ನಿಗೆ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸಿ ಆಡುವ ಸಿಡಿ), (೩) ಬಟ್ಟೆ ಸಿಡಿ (ಹೊಟ್ಟೆಗೆ ಬಟ್ಟೆ ಕಟ್ಟಿ ಆಡುವ ಸಿಡಿ), (೪) ಗೊಂಬೆ ಸಿಡಿ (ಸಿಡೀರಣ್ಣ ಗೊಂಬೆಯನ್ನು ಕೂಡಿಸಿ ಆಡುವ ಸಿಡಿ), (೫) ಕೈಸಿಡಿ (ಸಿಡಿಕಂಬದ ಹಗ್ಗ ಕೈಯಲ್ಲಿ ಹಿಡಿದು ಆಡುವುದು). (೬) ತಲೆ ಸಿಡಿ (ಪ್ರಾಣವನ್ನೇ ತ್ಯಾಗ ಮಾಡುವುದು).

(೧) ತೊಟ್ಟಿಲು ಸಿಡಿ : ಚನ್ನಪಟ್ಟಣದ ಮಾರಮ್ಮನ ಸಿಡಿಯಲ್ಲಿ ಮೊದಲೇ ಸಿಡಿ ಮರವನ್ನು ಹರಾಜು ಹಾಕುವುದರಿಂದ ಸಿಡಿ ಆಡುವವರು ನಿಗದಿಪಡಿಸಿದ ಹಣಕ್ಕೆ ರಸೀದಿಯನ್ನು ಪಡೆದು ಸಿಡಿ ಆಡಬೇಕು. ಮಡಿಯಿಂದ ದೇವಸ್ತಾನದ ಬಳಿಗೆ ಬಂದು ಮಂಗಾಳಾರತಿ ಮಾಡಿಸಿ, ತೀರ್ಥ ಪಡೆಯುತ್ತಾರೆ. ಪೂಜಾರಿ ಅವರ ಕೊರಳಿಗೆ ಹೂವಿನ ಹಾರವನ್ನು ಹಾಕುವನು. ಆನಂತರ ‘ತೊಟ್ಟಿಲು ಸಿಡಿ’ ಆಡುತ್ತಾರೆ. ಅವರನ್ನು ತೊಟ್ಟಿಲಿನಲ್ಲಿ ಕೂರಿಸಿ ಮೂರು ಸುತ್ತು ಸುತ್ತಿಸುವುದೇ ಈ ಆಚರಣೆಯ ಮುಖ್ಯ ಕ್ರಿಯೆ.

(೨) ಬೆನ್ನು ಸಿಡಿ : ಬೆನ್ನು ಸಿಡಿಯಾಡುವ ಹರಕೆ ಹೊತ್ತ ಭಕ್ತ ಆ ದಿನ ಸ್ನಾನ ಮಾಡಿ ಮಡಿಯುಟ್ಟು ಸಂಜೆಯವರೆಗೆ ಉಪವಾಸವಿದ್ದು, ಸಂಜೆ ಹೊತ್ತಿಗೆ, ವೀರಗಚ್ಚೆಹಾಕಿ, ಕೋರೆಪೇಟೆ ಧರಿಸಿ, ಅಂಗವಸ್ತ್ರವನ್ನು ಹೊದ್ದು, ವೀರಗುಣಿತ ಕುಣಿಯುತ್ತಾ ದೇವಸ್ಥಾನದ ಹತ್ತಿರ ಬರುತ್ತಾನೆ. ರಾತ್ರಿ ಎಂಟು ಗಂಟೆಯ ಸುಮಾರಿಗೆ ಆತ ದೇವರಿಗೆ ಎದುರಾಗಿ ಅಂಗಾತ ಮಲಗಿಕೊಳ್ಳುತ್ತಾನೆ. ಆಗ ತಲೆಮಾರಿನಿಂದ ನಡೆದು ಬಂದ ಪರಿಪಾಠದಂತೆ ಆಯಾ ಕಾರ್ಯದ ವಂಶಸ್ಥರು ಮತ್ತು ಹಿರಿಯ ಪರಿಣತರು ಬೆನ್ನು ಸಿಡಿಯಾಡುವಾತನ ಬೆನ್ನನರವನ್ನು (ನರಹುರಿ ಅಥವಾ ಬೆನ್ನುಹುರಿ) ಹಿಡಿದು ಶಸ್ತ್ರದಿಂದ ಅದರ ಹಿಂದಿನ ಭಾಗಕ್ಕೆ ಚುಚ್ಚಿ ಕಬ್ಬಿಣದ ಕೊಕ್ಕೆಗಳನ್ನು ಸಿಕ್ಕಿಸುತ್ತಾರೆ. ಇದೇ ರೀತಿ ಇನ್ನೊಂದು ಭಾಗಕ್ಕೆ ಚುಚ್ಚಿದ ಅನಂತರ ಅವನ ಮೇಲೆ ದೇವರ ತೀರ್ಥ ಸಿಂಪಡಿಸುತ್ತಾರೆ. ಆತ ಎದ್ದು ಶ್ರದ್ಧಾಭಕ್ತಿಯಿಂದ ದೇವತೆಗೆ ನಮಸ್ಕರಿಸಿದ ಬಳಿಕ ಆತನ ಒಂದು ಕೈಗೆ ಆಡಕೆಯ ಹೊಂಬಾಳೆಯನ್ನು, ಇನ್ನೊಂದು ಕೈಗೆ ಕತ್ತಿಯನ್ನೂ ಕೊಟ್ಟು ಬೆನ್ನಿಗೆ ನಾಟಿಕೊಂಡಿರುವ ಕಬ್ಬಿಣದ ಕೊಕ್ಕೆಯನ್ನು ಹೊಂದಿಕೊಂಡಿರುವ ಸರಪಳಿಯನ್ನು ತುಸು ಬಿಗಿಯಾಗಿ ಹಿಡಿದುಕೊಂಡು ಮುನ್ನಡೆಸುವರು. ಧಗಧಗನೆ ಉರಿದು ಕೆಂಡವಾಗಿ ಸಿದ್ಧವಾಗಿರುವ ಕೊಂಡವನ್ನು ಆತನಿಂದ ಹಾಯಿಸಿದ ಆನಂತರ ಸಿಡಿಕಂಬವನ್ನು ನೆಲದತ್ತ ಬಗ್ಗಿಸುವರು. ಕಲ್ಲುಕಂಬದ ನಡುವೆ ಇಟ್ಟ ತಿರುಗಣಿಗೆ ಆಡ್ದಲಾಗಿ ಏತದ ಮರದಂತೆ ತೋರುವ ದಪ್ಪ ಮರದ ಮುಂದಿನ ತುದಿಗೆ ಸಿಕ್ಕಿಸಿದ ಕಬ್ಬಿಣದ ಕೊಂಡಿಗೆ ಸಿಡಿಯಾಡುವಾತನ ಬೆನ್ನ ಸರಪಳಿಗಳನ್ನು ಸಮಾಂತರವಾಗಿ ಕಟ್ಟಿ ಸಿಡಿ ಕಂಬವನ್ನು ಭೂಮಿಗೆ ಸಮಾನಾಂತರವಾಗಿ ಮೇಲಕ್ಕೆ ಏರಿಸುವರು. ಆಗ ಸಿಡಿಕಂಬಕ್ಕೆ ಬೆನ್ನುಹಿಂದಾಗಿ ನೇತುಬಿದ್ದು, ಸಿಡಿಯಾಡುವಾತ ಮರಕ್ಕೆ ಕಾಲು ಮೇಲಾಗಿ ನೇತು ಬಿದ್ದು ಬಾವಲಿಯಂತೆ ತೋರುತ್ತಿದ್ದು ತನಗಾದ ನೋವಿನ ಪರಿವೆಯೇ ಇಲ್ಲದೆ ಅಟ್ಟಹಾಸದಿಂದ ಕತ್ತಿಯನ್ನು ಎಡ ಹಾಗೂ ಬಲಕ್ಕೆ ಬೀಸುತ್ತಾ ದೇವತೆಗೆ ಕೈ ಎತ್ತಿ ಎತ್ತಿ ಮುಗಿಯುತ್ತಿರುತ್ತಾನೆ. ಅನಂತರ ಸಿಡಿಕಂಬ ಮೆಲ್ಲಗೆ ತಿರುಗಲಾರಂಬಿಸುತ್ತದೆ. ಎಡಗಡೆಯಿಂದ ಬಲಗಡೆ ಮೂರಾವರ್ತಿ ತಿರುಗಿದ ಮೇಲೆ ಸಿಡಿಯಾಡುವವನನ್ನು ಸಿಡಿಕಂಬದಿಂದ ಕೆಳಗಿಳಿಸುತ್ತಾರೆ. ಅಲ್ಲಿಂದ ಆತನನ್ನು ದೇವರೆದುರು ಕರೆದೊಯ್ದು ಅಲ್ಲಿ ಬೆನ್ನಿಗೆ ಸಿಕ್ಕಿಸಿದ ಕೊಂಡಿಗಳನ್ನು ತೆಗೆದು ಗಾಯಗಳಿಗೆ ದೇವರ ಭಂಡಾರವನ್ನು (ಆರಿಸಿನ ಕುಂಕುಮಗಳ ಮಿಶ್ರಣ) ಮೆತ್ತಿ ಬಿಳಿಯ ವಸ್ತ್ರದ ಪಟ್ಟು ಕಟ್ಟುತ್ತಾರೆ. ಗಾಯ ಅಲ್ಲಿಂದ ಒಂಭತ್ತು ದಿನಗಳಲ್ಲಿ ಸಂಪೂರ್ಣವಾಸಿಯಾಗುತ್ತದೆ. ಅನಂತರ ಯಥಾ ಪ್ರಕಾರ ಇನ್ನೊಬ್ಬ ಸಿಡಿಯಾಡುವಾತನಿಗೆ ಬೆನ್ನಿಗೆ ಚುಚ್ಚಿ ಅಣಿಗೊಳಿಸುತ್ತಾರೆ. ಸಿಡಿಯಾಡುವಾತ ಮಾರನೆಯ ದಿನ ಮದುವೆಯ ಗಂಡಿನಂತೆ ವೇಷಧರಿಸಿಕೊಂಡು ಮನೆ ಮನೆಗೆ ಭೀಕ್ಷಕ್ಕೆ ಬರುತ್ತಾನೆ. ಆಗ ಹಳ್ಳಿಯ ಸಮಸ್ತರು ಆತನಿಗೆ ತಮ್ಮ ಕೈಲಾದುದನ್ನು ನೀಡುತ್ತಾರೆ. ಇದನ್ನು ‘ಬೆನ್ನು ಸಿಡಿ’ ಎನ್ನುತ್ತಾರೆ. ಈ ಬೆನ್ನು ಸಿಡಿಯನ್ನು ಗಂಡಸರು ಮಾತ್ರ ಆಡುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ‘ಸಿರದಗಾಳ’ ಎಂಬ ಪದವನ್ನು ವಿದ್ವಾಂಸರು ಬಳಸುತ್ತಾರೆ. ತುಮಕೂರು ಜಿಲ್ಲೆಯ ಗುನ್ನಾಗೆರಯ ಎಲ್ಲಮ್ಮನ ಸಿಡಿ ಪ್ರಸಿದ್ಧವೂ ಭಯಾನಕವೂ ಆಗಿದೆ. ಊರಿನವರು ಸಿಡಿಯಾಡಿದಾತನ ಮನೆಯನ್ನು ಗಾಯ ವಾಸಿಯಾಗುವರೆಗೂ ಸಲಹುತ್ತಾರೆ. ಸಿಡಿ ಆಡಿದಾತ ಕೆಲವು ವಿಧಿ ನಿಷೇಧಗಳನ್ನು ಪಾಲಿಸಬೇಕಾಗುತ್ತದೆ. ಕಲಬುರ್ಗಿ ಜಿಲ್ಲೆಯ ಜೇವರ್ಗಿ ಆಪಜಲ್ಪುರ ತಲ್ಲೂಕಿನ ಭಾಗಮ್ಮ ನ ಜಾತ್ರೆಯಲ್ಲಿ ಸ್ತ್ರೀಯರೂ ಸಿಡಿಯಾಡುವುದು ಕಂಡುಬಂದಿದೆ.

(೩) ಬಟ್ಟೆ ಸಿಡಿ : ಬಟ್ಟೆ ಸಿಡಿಯನ್ನು ಕೆಂಪಮ್ಮನ ಜಾತ್ರೆಯಲ್ಲಿ ಕಾಣಬಹುದು. ಕೆಂಪಮ್ಮನನ್ನು ಸಿಡಿಯಾಡಿಸುವ ದಿನ ಮೆರವಣಿಗೆಯಲ್ಲಿ ಕರಿಯ ಮತ್ತು ಬಿಳಿಯ ಸೋಮಗಳು (ಸೋಮಗಳ ಮುಖವಾಡ ಧಾರಿಗಳು) ಶ್ವೇತಪತ್ರ ರೆಕ್ಕೆ ಹೂ ಹಿಡಿದು ಹೊತ್ತು ತರುತ್ತಾರೆ. ಚಾಮರದವರು ವಾದ್ಯಗಾರರು ಸಿಡಿಯಾಡುವವರು ಈ ಮೆರವಣಿಗೆಯಲ್ಲಿ ಇರುತ್ತಾರೆ. ಸಿಡಿಯಾಡುವವರನ್ನು ಊರಿನಲ್ಲಿಯ ಗುಡಿಯಲ್ಲಿ ಕೂಡಿಸಿ ಮೆರವಣಿಗೆ ಊರ ಹೊರ ದೇಗುಲಕ್ಕೆ ಹೋಗುತ್ತದೆ. ಇವರು ಮೂರು ಸುತ್ತು ಪ್ರದಕ್ಷಿಣೆ ಮಾಡಿ ಗುಡಿಯ ಪಕ್ಕದ ಬನ್ನಿಯ ಮರದ ಬಳಿ ಬಂದು ನಿಲ್ಲುತ್ತಾರೆ. ಅನಂತರ ಸಿಡಿ ಕಂಬಕ್ಕೆ ಅಡ್ಡಮರ ಹಾಕಿ ತೇರಿಗೆ ಕಳಸ ಇಟ್ಟು ಸಂಜೆ ದೇಗುಲಗಳ ಮಧ್ಯೆ ‘ಬಾನ ಬಂಡಿ’ ಎಳೆಯುತ್ತಾರೆ. ದೇವರಿಗೆ ನೈವೇದ್ಯ ಮಾಡಲು ಸಿದ್ಧಪಡಿಸಿದ ಅನ್ನ, ಎಡೆ, ನೈವೇದ್ಯವಾಗಿ ಅರ್ಪಿಸುವ ಅನ್ನವನ್ನು ಬಾನ ಎನ್ನುತ್ತಾರೆ. ಹೀಗೆ ಮಾಡಿ ಕರಿಚಾಮನಿಗೆ ಬಲಿಯಾಗುವಾಗ ಕೆಂಪಮ್ಮ ಮತ್ತು ಬಿಳಿ ಚಾಮರು ತಿರುಗಿ ನಿಲ್ಲುವರು. ಕರಿಚಾಮ ಉನ್ನತ ಸ್ಥಿತಿಯಲ್ಲಿ ಕುಣಿಯುವನು. ವೀರಗತ್ತಿಯವರೂ ಆವೇಶದಿಂದ ಕುಣಿಯುವರು. ಇದೇ ಸಮಯದಲ್ಲಿ ಬೇರೆ ಊರಿನವರು ಕಂಬದ ಹತ್ತಿರ ಬಲಿಕೊಡುವರು. ಸಿಡಿಗಂಬವನ್ನು ಪೂಜಿಸಿ ಮೂರು ಸಲ ಪ್ರದಕ್ಷಿಣೆ ಮಾಡಿ, ಹೊಟ್ಟೆಗೆ ಬಟ್ಟೆ ಕಟ್ಟಿ ಕೆಂಪಮ್ಮನ ಒಕ್ಕಲು ಮನೆಯ ಇಬ್ಬರನ್ನು ಒಬ್ಬರಾದ ಒಬ್ಬರಂತೆ ಸಿಡಿ ಆಡಿಸುವರು. ಎಡಗೈಯಲ್ಲಿ ಅಡಕೆ ಹೊಂಬಾಳೆ ಹಿಡಿದು ‘ಹೊಯ್‌’ ಎಂಬ ಶಬ್ದ ಮಾಡುತ್ತ ಸಿಡಿ ಆಡುವವ ಅಡ್ಡಮರದ ತುದಿಗೆ ಕಟ್ಟಿದ ಬಾಳೆಗೊನೆ ಹಣ್ಣುಗಳನ್ನು ಕತ್ತಿಯಿಂದ ಕಡಿಯುತ್ತಾನೆ. ಮೂರು ಸುತ್ತು ಸುತ್ತುತ್ತಾನೆ. ಬಾಳೆ ಹಣ್ಣನ್ನು ಪ್ರಸಾದವೆಂದು ನೆರೆದ ಜನ ತೆಗೆದುಕೊಳ್ಳುವುರು. ಹರಕೆ ಹೊತ್ತವರು, ವೀರಗತ್ತಿಯವರಿಗೆ, ಸಿಡಿ ಆಡಿದ ಇಬ್ಬರು ಪ್ರಜ್ಞೆ ತಪ್ಪಿರುತ್ತಾರೆ. ಗುಡಿಯಲ್ಲಿ, ಇವರಿಗೆ ನೀರು ಕೊಟ್ಟು ಪ್ರಜ್ಞೆ ಬರಿಸುವರು. ಕುರುಬರು ತಮ್ಮ ಕುರಿಗಳನ್ನು ತೊಳೆದು ಸಿಡಿ ಕಂಬಕ್ಕೆ ಮೂರು ಸುತ್ತು ಸುತ್ತಿಸುವರು. ಹೀಗೆ ಜಾತ್ರೆಗಳಲ್ಲಿ ಸಿಡಿ ಆಡಿದವರು ಪ್ರಜ್ಞೆ ತಪ್ಪಿ ಬೀಳುವುದು ಅವರು ಬಲಿಯಾದುದ್ದನ್ನು ಸಂಕೇತಿಸುತ್ತದೆ.

(೪) ಗೊಂಬೆ ಸಿಡಿ : ಕನಕಪುರದ ಕೊಲ್ಲಾಪುರದಮ್ಮನ ಹಬ್ಬದಲ್ಲಿ ಏತದ ರೀತಿಯಲ್ಲಿರುವ ಸಿಡಿಯನ್ನು ಅಲಂಕರಿಸುತ್ತಾರೆ. ಒಂದು ಕಡೆ ತೊಟ್ಟಿಲು, ಇನ್ನೊಂದು ಕಡೆ ಹಗ್ಗ ಇರುತ್ತದೆ. ಪುರೋಹಿತರು ಹೋಮ ಮಾಡಿದ ಅನಂತರ ಬಲಿ ಅನ್ನವನ್ನು ಊರಿನ ಎಲ್ಲ ಭಾಗದಲ್ಲೂ ಮೆರವಣಿಗೆ ಮಾಡುವರು. ಅನಂತರ ಬಲಿ ಅನ್ನವನ್ನು ಸಿಡಿಯ ಸುತ್ತಾ ಕಟ್ಟುವರು. ಈ ಊರಿನಲ್ಲಿ ಹರಕೆ ಕಟ್ಟಿಕೊಂಡವರು ಕೊಡುವ ಕಾಣಿಕೆಯನ್ನು ಪಡೆಯಲು ಸಿಡಿಯನ್ನು ಹರಾಜು ಹಾಕುವರು. ಆರಂಭದಲ್ಲಿ ದೇವತೆಯ ವಿಗ್ರಹವನ್ನು ತೊಟ್ಟಿಲಿನಲ್ಲಿಟ್ಟು ಸಿಡಿ ಆಡಿಸುವರು. ಅನಂತರ ಪೂಜಾರಿ ಮತ್ತು ಊರಿನ ಯಜಮಾನರು ಸಿಡಿ ಆಡುವರು. ಆಮೇಲೆ ಹರಸಿಕೊಂಡ ಭಕ್ತರು ಸಿಡಿ ಆಡುವರು. ಗಾವುಸಿಗಿಯುವ ಆಚರಣೆಯಲ್ಲಿ ಪೋತರಾಜನದು ಪ್ರಧಾನ ಪಾತ್ರವಾದಂತೆ ಸಿಡಿಯ ಆಚರಣೆಯಲ್ಲಿ ಸಿಡೀರಣ್ಣನದೇ ಮುಖ್ಯ ಪಾತ್ರ. ಸಿಡೀರಣ್ಣನ ಬೊಂಬೆಯನ್ನು ತೊಟ್ಟಿಲಲ್ಲಿಟ್ಟು ಇನ್ನೊಂದು ತುದಿಯ ಹಗ್ಗವನ್ನು ಎಳೆಯುತ್ತಾ ಸುತ್ತಿಸುವರು. ಸಿಡೀರಣ್ಣನನ್ನು ಗ್ರಾಮದೇವತೆಯ ಮಗನೆಂದು ಭಾವಿಸುತ್ತಾರೆ. ಈತನ ಗೊಂಬೆಯನ್ನು ಸುತ್ತಿಸುವುದರಿಂದ ಇದನ್ನು ‘ಗೊಂಬೆಸಿಡಿ’ ಎಂದೂ ಕರೆಯುವರು.

(೫) ಕೈ ಸಿಡಿ : ಹೊಸಕೋಟೆ ತಾಲ್ಲೂಕಿನ ಉಪ್ಪಾರಹಳ್ಳಿಯ ಮದ್ದೂರಮ್ಮನ ಜಾತ್ರೆಯಲ್ಲಿ ಕೈಸಿಡಿಯನ್ನು ಆಡುವ ಪದ್ಧತಿ ಇದೆ. ಪುರೋಹಿತ ದೇವಿಗೆ ಪೂಜೆ ಸಲ್ಲಿಸಿದ ಬಳಿಕ ಸಂಜೆ ಸಿಡಿ ಒಡೆಯುವ ‘ಗಳು’ವಿಗೆ (ಬಿದಿರಿನ ಕೋಲು, ದಂಡ) ಪೂಜಿಸುವರು. ಆಗ ಪೂಜಾರಿಗೆ ಹೂವಿನ ಹಾರ ಹಾಕಿ ಅರಿಸಿಣದ ಬಟ್ಟೆಯನ್ನು ಕಟ್ಟುವರು. ಸಿಡಿ ಒಡೆವಗಳನ್ನು ಹಿಡಿದು ಪೂಜಾರಿ ಮೂರು ಸುತ್ತು ದೇಗುಲದ ಸುತ್ತ ಪ್ರದಕ್ಷಿಣೆ ಹಾಕುವನು. ಅನಂತರ ಸಿಡಿ ಕಂಬದ ಒಂದು ತುದಿಗೆ ಕಟ್ಟಿದ ಹಗ್ಗ ಹಿಡಿದು ಕೈಸಿಡಿ ಹರಕೆ ಹೊತ್ತ ಯುವಕರು ಒಬ್ಬರಾದ ಮೇಲೆ ಒಬ್ಬರಂತೆ ತಿರುಗುತ್ತಿರುತ್ತಾರೆ. ಸಿಡಿಕಂಬದ ಇನ್ನೊಂದು ತುದಿಗೆ ತೆಂಗಿನಕಾಯಿ ಹಾಗೂ ಮಡಕೆಗಳನ್ನು ಕಟ್ಟಿರಲಾಗುತ್ತದೆ. ಅದನ್ನು ಪೂಜಾರಿ ಒಂದೇ ಏಟಿಗೆ ಒಡೆಯುವನು. ಇದೇ ರೀತಿಯ ಆಚರಣೆ ಕೋಲಾರ ಜಿಲ್ಲೆ ಮಾಲೂರು ತಾಲ್ಲೂಕು ತೊರ್ನಳ್ಳಿಯಲ್ಲಿ ಸಪ್ಪಲಮ್ಮ ಮತ್ತು ಭೀಮೇಶ್ವರ ದೇವರ ಜಾತ್ರೆ. ಸಂಕ್ರಾಂತಿಯ ದಿನ ನಡೆಯುತ್ತದೆ. ಹೊಸಕೋಟೆಯ ಅನೇಕ ಗ್ರಾಮೀಣ ಜನತೆ ಈ ಸಪ್ಪಲಮ್ಮನಿಗೆ ನಡೆದುಕೊಳ್ಳುವರು.

(೬) ತಲೆ ಸಿಡಿ : ಬಲಿಪದ್ಧತಿಯಲ್ಲಿ ಅತ್ಯಂತ ಗೂಢವಾದ ಮತ್ತು ಕ್ರೂರವೆನಿಸುವ ಆಚರಣೆ ಪಶುಬಲಿ ಅಥವಾ ನರಬಲಿ ಯಾವುದೇ ದೇವತೆಗೆ ಕುರಿ, ಕೋಣ, ಮುಂತಾದವುಗಳ ಬಲಿ ಕೊಡುವಾಗ ಅದು ಕೇವಲ ಕಾಣಿಕೆ, ಅರ್ಪಣೆ ಎಂದು ಜನಪದರು ಭಾವಿಸುವುದಿಲ್ಲ. ಬಲಿಯ ಮೂಲಕ ದೇವತೆಯನ್ನು ಸಂತೃಪ್ತಗೊಳಿಸುವುದು ಒಂದು, ಆ ದೇವರೊಂದಿಗೆ ತಾನು ಒಂದಾರೆ ಎನ್ನುವ ಶ್ರದ್ಧೆ ಮತ್ತೊಂದು ಹಂತವಾಗಿದೆ. ಬಲಿಪದ್ಧತಿಯಿಂದ ಶಕ್ತಿ ಚೆಲ್ಲಿದಾಗ ಆ ದೇವತೆಗೂ ತಮಗೂ ಒಂದು ಅವಿನಾಭಾವದ ರಕ್ತ ಸಂಬಂಧ ಎರ್ಪಡುತ್ತದೆ ಎನ್ನುವ ನಿಷ್ಠೆ ಇಲ್ಲಿ ಗಮನಾರ್ಹವಾಗಿದೆ. ಆಫ್ರಿಕಾದ ‘ಮೂಂಬೆಟ್ಟು’ ಬುಡಕಟ್ಟಿನಲ್ಲಿರುವ ಕಪ್ಪು ಜನ ರಕ್ತ ಚಿಮ್ಮುವವರೆಗೂ ಶಸ್ತ್ರಾಸ್ತ್ರಗಳಿಂದ ದ್ವೇಷರಹಿತವಾಗಿ ಹೊಡೆದಾಡುತ್ತಾರೆ. ನೆತ್ತರುಚಿಮ್ಮಿದಾಗ ನೆಕ್ಕುತ್ತಾರೆ. ಇದರಿಂದ ತಮ್ಮ ಸೋದರ ಸಂಬಂಧ ಗಟ್ಟಿಗೊಳ್ಳುವುದೆಂಬ ನಂಬಿಕೆ ಅವರಲ್ಲಿದೆ. ಮೈಲಾರನ ಭಕ್ತರಾದ ಗೊರವಪ್ಪಗಳು ಶಸ್ತ್ರ ಹಾಕಿಕೊಳ್ಳುವುದು, ಮೀನಗಂಡದಲ್ಲಿ ಸರಪಳಿ ಹಾಕಿ ಜಗ್ಗಿದಾಗ ನೆತ್ತರು ಚಿಮ್ಮಿದ ಭಾಗಕ್ಕೆ ಭಂಡಾರ ಹಚ್ಚುವುದು, ಮಾರಿಯಮ್ಮನ ಭಕ್ತರು ಗಾಳ ಹಾಕಿಕೊಂಡು ಸಿಡಿಯಾಡುವುದು, ಇವುಗಳಲ್ಲಿ ಪವಾಡದ ಅಂಶ ಸೇರಿಕೊಂಡಿದ್ದರೂ ಇವು ಆದಿಮಾನವನ ನಾಗರಿಕತೆಯ ವಿಕಾಸದ ವಿವಿಧ ಹಂತಗಳಲ್ಲಿ ಪರಿವರ್ತನೆಗೆ ಒಳಗಾಗುತ್ತ ಬಂದ ‘ನರಬಲಿ’ ಯ ಪಳೆಯುಳಿಕೆಗಳಾಗಿವೆ ಎಂದು ಊಹಿಸಬಹುದು.

ಜನ್ನನ ಯಶೋಧರ ಚರಿತೆಯ ಪದ್ಯದಲ್ಲಿ ‘ಸಿರದಗಾಳ’ ಎಂಬ ಪದಪ್ರಯೋಗವಿದೆ. ಈ ಪದ್ಯವನ್ನು ಗಮನಿಸಿದಾಗ ಇಲ್ಲಿಯೂ ತೂಗಾಡುವ ವೀರರ ಚಿತ್ರವುಂಟು. ಆದ್ದರಿಂದ ‘ಸಿರದಗಾಳ’ ಮತ್ತು ‘ನೆತ್ತಿಯಗಾಳ’ ಎರಡೂ ಅಭಿನ್ನವೇ ಅಥವಾ ಬೇರೆ ಬೇರೆಯೇ ಎಂಬುದು ವಿಚಾರಯೋಗ್ಯ, ಇಷ್ಟಂತೂ ನಿಶ್ಚಿತ : ‘ಸಿರದಗಾಳ’ ವೇ ಆಗಲಿ ‘ನೆತ್ತಿಯಗಾಳ’ ವೇ ಆಗಲಿ ತೂಗಾಡುತ್ತಿದ್ದವರು ಮನುಷ್ಯರೇ ವಿನಾ ಪ್ರಾಣಿಗಳಲ್ಲ. ಸಿರ ದ್ರಾವಿಡ ಪದವಾಗಿದ್ದು ಇಲ್ಲಿಯ ಸಿರದಗಾಳ ಕುತ್ತಿಗೆಯ ಹಿಂಭಾಗಕ್ಕೆ ಚುಚ್ಚುವ ಸಿಡಿಯನ್ನು ಸೂಚಿಸುವ ಸಾಧ್ಯತೆಯಿದೆ. ಜನಪದರಲ್ಲಿ ‘ನೆತ್ತಿಯಗಾಳ’ ‘ಬೆನ್ನ ಗಾಳ’ ‘ಗಂಟಲಗಾಳ’ ಎಂಬ ಪ್ರಯೋಗಗಳೂ ಇಂದಿಗೂ ಬಳಕೆಯಲ್ಲಿವೆ. ಈ ಮೇಲೆ ತಿಳಿಸಿದ ಸಿಡಿಯ ಜೊತೆಗೆ ಹಿಂದೆ ‘ಸಿಡಿದಲೆ’ ಬಳಕೆಯಲ್ಲಿದೆ. ಮೇಲೆ ತಿಳಿಸಿದ ಸಿಡಿಯ ಜೊತೆಗೆ ಹಿಂದೆ ‘ಸಿಡಿದಲೆ’ ಕೊಡುವ ಸಂಪ್ರದಾಯವು ಕರ್ನಾಟಕ ನಾನಾ ಭಾಗಗಳಲ್ಲಿ ರೂಢಿಯಲ್ಲಿತ್ತು ಎಂಬುದಕ್ಕೆ ಶಾಸನಾಧಾರವಿದೆ. ‘ಸಿಡಿದಲೆ’ ಯಾಗುವ ಹರಕೆ ಹೊತ್ತು ಜನ ಸಿಡಿಕಂಬಕ್ಕೆ ಕಟ್ಟಿರುತ್ತಿದ್ದ ಹಸಿ ಬಿದಿರಿನ ತುದಿಯನು ಬಗ್ಗಿಸಿ ತಮ್ಮ ತಲೆಯನ್ನು ಅದಕ್ಕೆ ಕಟ್ಟಿಕೊಂಡು ಕತ್ತನ್ನು ಕತ್ತರಿಸುವಂತೆ ಮಾಡಿ, ತಮ್ಮ ವೀರಭಕ್ತಿ ಹಾಗೂ ಸ್ವಾಮಿ ನಿಷ್ಠೆಯನ್ನು ಮೆರೆಯುತ್ತಿದ್ದರು. ಅವರನ್ನು ಕುರಿತು ಶಾಸನಗಳು ಪ್ರಶಂಸೆ ಮಾಡಿವೆ ಹಾಗೂ ಇತರ ಜನತೆ ವೀರದೀಕ್ಷೆ ತೊಡುವಂತೆ ಪ್ರೇರೇಪಿಸಿವೆ. ಹೀಗೆ ಅನೇಕ ಸ್ಥಳಗಳಲ್ಲಿ ಸಿಡಿಯಾಡುವ ಪದ್ಧತಿ ಸಾಮಾನ್ಯವಾಗಿದೆ. ಹೆಂಗಸರು, ಗಂಡಸರಿಬ್ಬರೂ ಸಿಡಿ ಆಡುತ್ತಾರೆ. ಮೂಲದ ನರಬಲಿ ಇತ್ತೀಚೆಗೆ ಬರಬರುತ್ತಾ ಸಿಡಿಯ ಸಾಂಕೇತಿಕ ರೂಪವನ್ನು ತಾಳುತ್ತಿದೆ. ಇದನ್ನು ‘ವೇಳೆವಾಳಿ’ ‘ವೇಳೆಗೊಳ್ಳು’ ಎಂಬ ಪದಗಳಿಂದ ಗುರುತಿಸುತ್ತಾರೆ. ಇದನ್ನು ಕ್ರಿ. ಶ. ೮೬೫ರ ಮೇವುಂಡಿ ಶಾಸನವು ತಿಳಿಸುತ್ತದೆ. ರಾಜನಿಗೆ ಮಕ್ಕಳಾಗದಿದ್ದರೆ, ರಾಜ ಅನಿರೀಕ್ಷಿತವಾಗಿ ದೈವಾಧೀನನಾದರೆ ರಾಜನ ಬಗ್ಗೆ ಇರುವ ಪ್ರೀತಿಯನ್ನು ಇವರು ತಮ್ಮ ಶಿರವನ್ನು ಬಲಿಕೊಡುವ ಮೂಲಕ ಸೂಚಿಸುತ್ತಿದ್ದರು.

ಬಾಯಿ ಸಿಡಿ : ಇದು ಇತ್ತೀಚಿನ ಪ್ರಕ್ರಿಯೆ. ಇತ್ತೀಚೆಗೆ ಕಾಳಮ್ಮದೇವಿಗೆ ಹರಕೆ ಸಲ್ಲಿಸುವ ಸಂಪ್ರದಾಯವನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿ ಪಟ್ಟಣದ ಕೋಟೆ ಮೀನುಗಾರ ಕಾಲೋನಿಯ ಮೀನುಗಾರ ಯುವಕರು ಸಾಹಸ ಪ್ರದರ್ಶನ ಮಾಡುವ ಮೂಲಕ ಸಲ್ಲಿಸಿದ್ದಾರೆ. ಇಲ್ಲಿಯ ಮೀನುಗಾರ ಯುವಕನೊಬ್ಬ ಬೆನ್ನು ಹಿಂದೆ ಕಬ್ಬಿಣದ ಕೊಕ್ಕೆ ಹಾಕಿಕೊಂಡು ನೈಲಾನು ಹಗ್ಗವನ್ನು ಮಾರುತಿ ಕಾರಿಗೆ ಕಟ್ಟಿ ಎರಡು ದವಡೆಗಳಲ್ಲಿ ಒಂಭತ್ತು ಅಡಿ ಕಬ್ಬಿಣದ ಶಸ್ತ್ರ ಸಿಕ್ಕಿಕೊಂಡು, ತುಂಗಭದ್ರಾ ನದಿಯ ದಡದಿಂದ ಸುಂಕ್ಲಮ್ಮ ದೇವಿಯ ಗುಡಿಯವರೆಗೆ ಎರಡು ತಾಸುಗಳ ಕಾಲ ಸುಮಾರು ಒಂದೂವರೆ ಕಿಲೋಮೀಟರ್ನಷ್ಟು ದೂರ ಕಾರು ಎಳೆದುಕೊಂಡು ಬಂದು ಹರಕೆ ತೀರಿಸಿದ್ದಾನೆ. ಅದೇ ರೀತಿಯಲ್ಲಿ ಕಬ್ಬಿಣದ ಶಸ್ತ್ರವನ್ನು ಬಾಯಲ್ಲಿ ಸಿಕ್ಕಿಸಿ ಇನ್ನೂ ಐವರು ಯುವಕರು ಬೆನ್ನ ಹಿಂದೆ ಚರ್ಮಕ್ಕೆ ಕಬ್ಬಿಣದ ಕೊಂಡಿ ಸಿಕ್ಕಿಸಿಕೊಂಡು ಮೂರು ಆಟೋಗಳನ್ನು ಎಳೆದರೆ ಮತ್ತೊಬ್ಬ ಕಬ್ಬಿಣದ ಗುಂಡು ಹಾಗೂ ಮತ್ತೊಬ್ಬ ದೇವಿಯ ತೇರನ್ನು ಎಳೆದಿದ್ದಾನೆ. ಪ್ರತಿವರ್ಷ ಮೀನುಗಾರ ಯುವಕರು ಈ ರೀತಿ ಹರಕೆ ತೀರಿಸುವುದು ಇಲ್ಲಿಯ ಸಂಪ್ರದಾಯ. ಹರಕೆ ತೀರಿಸುವ ಮುನ್ನ ಯುವಕರು ಹನ್ನೊಂದು ದಿನಗಳ ಪರ್ಯಂತ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ. ಬೆನ್ನು ಸಿಡಿ, ಬಟ್ಟೆ ಸಿಡಿ, ತೊಟ್ಟಿಲು ಸಿಡಿ, ಬೊಂಬೆ ಸಿಡಿ, ಕೈಸಿಡಿ, ತಲೆಸಿಡಿಗಿಂತ ಬಾಯಿ ಸಿಡಿ ಸ್ವಲ್ಪ ಭಿನ್ನ. ಇಲ್ಲಿ ಕಬ್ಬಿಣದ ಕೊಕ್ಕೆಯನ್ನು ಬಾಯಲ್ಲಿ ಸಿಕ್ಕಿಸಿಕೊಂಡು ವಸ್ತುಗಳನ್ನು ಎಳೆಯುತ್ತಾರೆ. ಆದ್ದರಿಂದ ಇದನ್ನು ‘ಬಾಯಿಸಿಡಿ’ ಎಂದು ಗುರುತಿಸಬಹುದು.

ಎಸ್.ಎಲ್. ಡಿ.

 

ಸಿದ್ದಿಯರು : ಕರ್ನಾಟಕ ರಾಜ್ಯದಲಿರುವ ಒಂದು ಬುಡಕಟ್ಟು ಸಮುದಾಯ ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುತ್ತಾರೆ. ಇವರನ್ನು ಹಿಂದುಳಿದ ಗುಂಪಿಗೆ ಸೇರಿಸಲಾಗಿದೆ. ಗುಜಾರಾತಿನಲ್ಲಿ ಪರಿಶಿಷ್ಟ ಪಂಗಡವೆಂದು ಗುರುತಿಸಲಾಗಿದೆ. ಇವರ ಮುಖಚರ್ಯೆ ದೇಹದ ಲಕ್ಷಣಗಳಿಂದ ನೀಗ್ರೋ ಗುಂಪಿಗೆ ಸೇರಿದವರೆಂಬುದು ತಿಳಿಯುತ್ತದೆ. ಇವರದು ದಪ್ಪನೆಯ ತುಟಿ. ಮೂಗು ಚಿಕ್ಕಹಣೆ, ಗುಂಗುರು ಕೂದಲು, ಕಪ್ಪು ಬಣ್ಣ , ಎತ್ತರದ ಮೈಕಟ್ಟು, ಅರಬ್ಬರು, ಡಚ್ಚರು, ಪೂರ್ಚುಗೀಸರು ಮತ್ತು ಇಂಗ್ಲಿಷರು ತಮ್ಮ ಜೊತೆಯಲ್ಲಿ ಭಾರತಕ್ಕೆ ಕರೆತಂದರು. ಕಾಂಗೋ, ಬೆಜಾ ಮುಂತಾದ ಗುಂಪಿಗೆ ಸೇರಿದವರೆಂಬುದು ವಿದ್ವಾಂಸರ ಊಹೆ. ಹರ್ಬರ್ಟ್ ರಿಸ್ಲೆ ಎಂಬ ವಿದ್ವಾಂಸನು ಸಿದ್ಧಿ ಎಂದರೆ ಕೂಲಿಕಾರರೆಂದು ಹೇಳಿದ್ದಾನೆ. ಸಿದ್ಧಿ ಎಂಬ ಹೆಸರು ಸಿದಿ ಎಂಬುದರಿಂದ ಬಂದಿರಬಹುದು. ಸಿದ್ದಿವಾಸ ಎಂಬಮೂಲ ದೇವರಿಂದ ಈ ಹೆಸರು ಬಂದಿದೆ ಎಂದು ಸಿದ್ದಿಗಳ ಅಭಿಪ್ರಾಯ. ಭಾಗಶಃ ಗುಜಾರಾತ್, ಗೋವ, ಕೇರಳ ರಾಜ್ಯದ ಗುಡ್ಡ ಪ್ರದೇಶಗಳಲ್ಲೂ ಕಂಡುಬರುತ್ತಾರೆ. ಗೋವದಿಂದ ಕರ್ನಾಟಕ್ಕೆ ಬಂದಂತೆ ತೋರುತ್ತದೆ. ಪೋರ್ಚುಗೀಸರು ತಮ್ಮ ಜೊತೆಯಲ್ಲಿ ಕೂಲಿ ಹಾಗೂ ಸೈನ್ಯಕ್ಕಾಗಿ ಕರೆತಂದಿದ್ದಾರೆ. ಪೋರ್ಚುಗೀಸರಿಂದ ತಪ್ಪಿಸಿಕೊಂಡು ಕರ್ನಾಟಕದ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ಸೇರಿದ್ದರು. ಈ ಮೂಲದ ಜನ ಉತ್ತರ ಕರ್ನಾಟಕ ಜಿಲ್ಲೆ, ಯಲ್ಲಾಪುರ, ಶಿರಸಿ, ಅಂಕೋಲ, ಮುಂಡಗೋಡು, ಹಳ್ಳಿಯುಶ ಮುಂತಾದ ಗುಡ್ಡ ಪ್ರದೇಶಗಳಲ್ಲಿ ವಾಸವಾಗಿದ್ದಾರೆ.

69_70A_DBJK-KUH

ಸಿದ್ದಿ ಸಮುದಾಯದಲ್ಲಿ ಮೂರು ಪಂಗಡಗಳಿವೆ. ಕ್ರಿಶ್ಚಿಯನ್ ಸಿದ್ಧಿ, ಮುಸ್ಲಿಮ್ ಸಿದ್ಧಿ, ಹಿಂದೂ ಸಿದ್ಧಿ. ಈ ಪಂಗಡಗಳಲ್ಲಿ ಹಬ್ಬ, ಆಚರಣೆ, ಭಾಷೆಯ ವ್ಯತ್ಯಾಸವನ್ನು ಬಿಟ್ಟರೆ ವಿಶೇಷ ಭಿನ್ನತೆ ಕಂಡುಬರುವುದಿಲ್ಲ. ಧರ್ಮದಿಂದ ಧರ್ಮಕ್ಕೆ ಸಂಪ್ರಾದಾಯ ಬದಲಾಗುತ್ತದೆ. ಯಾರ ಮನೆಗಳಲ್ಲಿ ಕೂಲಿ ಮಾಡುತ್ತಾರೋ ಅಲ್ಲಿಯ ಧರ್ಮವನ್ನು ಸುಲಭವಾಗಿ ಅನುಕರಿಸುತ್ತಾರೆ.

ಕ್ರಿಶ್ಚಿಯನ್ ಸಿದ್ಧಿಗಳು ಕನ್ನಡ ಮಿಶ್ರಿತ ಕೊಂಕಣಿ ಭಾಷೆಯನ್ನು ಮುಸ್ಲಿಮ್‌ ಸಿದ್ದಿಗಳು ಉರ್ದು ಭಾಷೆಯನ್ನು, ಹಿಂದೂ ಸಿದ್ದಿಗಳು ಮರಾಠಿ, ಕನ್ನಡ ಕೊಂಕಣಿಯ ಮಿಶ್ರ ಭಾಷೆಯನ್ನು ಬಳಸುತ್ತಾರೆ. ಇವರ ಮುಖ್ಯ ಆಹಾರ ಅನ್ನ, ಗಂಜಿ ಹಾಗೂ ಮಾಂಸಹಾರ. ಚಿಗರೆ, ಹಂದಿ, ಉಡ, ಮುಂಗಸಿ, ಕೋಳಿ, ಇಣಚಿ, ಏಡಿ, ಆಮೆ ಹಾಗೂ ಪಕ್ಷಿಗಳ ಮಾಂಸ ಪ್ರಿಯವಾದದ್ದು. ಜೇನು ಇಳಿಸುವುದರಲ್ಲಿ ಪಳಗಿದವರು. ಇವರ ಉಡುಗೆತೊಡುಗೆ ವಿಶಿಷ್ಟವಾದದ್ದು. ಕಸೆ ಅಂಗಿ ಕಚ್ಚೆ ಪಂಚೆ ರುಮಾಲು ಅಥವಾ ಟೋಪಿ ಧರಿಸುತ್ತಾರೆ. ಮಹಿಳೆಯರು ಸಾಂಪ್ರದಾಯಿಕವಾಗಿ ಸೀರೆ, ಕುಪ್ಪಸ, ಬೆಳ್ಳಿ ಬಂಗಾರದ ಆಭರಣಗಳನ್ನು ಧರಿಸುತ್ತಾರೆ. ಹಿಂದೂ, ಕ್ರೈಸ್ತ, ಮುಸ್ಲಿಮ್‌ ಸಿದ್ದಿಗಳಲ್ಲಿ ಪರಸ್ಪರ ವಿವಾಹ ಸಂಬಂಧವಿದೆ. ಮದುವೆಗಳಲ್ಲಿ ತೆರಕೊಡುವ ಪದ್ಧತಿ ಇಂದಿಗೂ ರೂಢಿಯಲ್ಲಿದೆ. ಹಿರಿಯ ವ್ಯಕ್ತಿಗಳಿಗೆ ಹಾಗೂ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯವಿದೆ. ಮದುವೆ ಶಾಸ್ತ್ರ ನೆರವೇರಿಸುವವನು ಕಾಜಿ. ಕ್ರಿಶ್ಚಿಯನ್‌ ಸಿದ್ದಿಗಳ ಮದುವೆ ಚರ್ಚಿನಲ್ಲಿ ನಡೆದರೂ ಉಳಿದ ಶಾಸ್ತ್ರ ತಮ್ಮ ಮನೆಗಳಲ್ಲಿಯೇ ನಡೆಯುತ್ತದೆ. ಸುಲಿದ ತೆಂಗಿನಕಾಯಿ ಇವರ ಮನೆದೇವರು, ಕುರಿ, ಕೋಳಿ, ಬಲಿಕೊಡುವ ಪದ್ಧತಿ ಇದೆ.

ಗಮಟೆ ಎಂಬ ಮಣ್ಣಿನ ಕೊಡ ನುಡಿಸುವ ಸಿದ್ದಿಯರು ಅದರ ತಾಳಕ್ಕೆ ತಕ್ಕಂತೆ ನರ್ತಿಸುತ್ತಾರೆ. ಡೋಲಿನ ರೀತಿಯ ಢಮಾಯಿ ಎಂಬ ವಾದ್ಯವನ್ನು ಗಂಡಸರು ನುಡಿಸುತ್ತಾರೆ. ಅದರ ಗತ್ತಿಗೆ ತಕ್ಕಂತೆ ಹೆಂಗಸರು ನರ್ತಿಸುತ್ತಾರೆ. ಮಹಿಳೆಯರಲ್ಲಿ ಪುಗಡಿ ನೃತ್ಯ ಕಂಡು ಬರುತ್ತದೆ. ಮುಸ್ಲಿಮ್‌ ಸಿದ್ದಿಯರಲ್ಲಿ ಅಲಾದಿನೃತ್ಯ ಮೊಹರಂ ಸಂದರ್ಭದಲ್ಲಿ ಕಂಡುಬರುತ್ತದೆ. ಮಹಾಲಯ ಅಮಾವಾಸ್ಯೆಯಂದು ತಾವೇ ತಯಾರಿಸಿದ ಮದ್ಯ ಸೇವಿಸಿ ಲಿಂಗ ಭೇದವಿಲ್ಲದೆ ಕುಣಿಯುತ್ತಾರೆ. ಅಂದು ಪಿತೃಗಳ ಆರಾಧನೆಯನ್ನು ನಡೆಸುತ್ತಾರೆ. ಶವಗಳನ್ನು ಹೂಳುತ್ತಾರೆ. ಸತ್ತವನು ಸಿದ್ದಿವಾಸ ಸೇರುತ್ತಾರೆಂಬ ನಂಬಿಕೆ ಇದೆ. ಸಂಪ್ರದಾಯದ ಕಟ್ಟುಪಾಡುಗಳು ಇವರಲ್ಲಿ ವಿರಳ.

ಪಿ. ಇ.