ಸದ್ಯ ಹಲವು ವ್ಯಂಜನಗಳಿಂದೊಡಗೂಡಿದ ಕೇರಳದ ವಿಶೇಷ ಭೋಜನಕ್ಕೆ ‘ಸದ್ಯ’ ಎನ್ನುವರು. ಬೇಗನೆ ಎಂಬರ್ಥ ಬರುವ ಸಂಸ್ಕೃತದ ‘ಸದ್ಯ’ ಎಂಬ ಪದಕ್ಕೂ ಇದಕ್ಕೂ ಸಂಬಂಧವಿದೆಯೋ ತಿಳಿದಿಲ್ಲ. ದ್ರಾವಿಡ ಪದವಂತೂ ಅಲ್ಲ. ಎಲ್ಲಾ ತರದ ಅಭಿರುಚಿಯವರಿಗೂ ಬೇಗನೆ ಮುದ ನೀಡುವ ಆಹಾರ ಪದ್ಧತಿ ಎಂಬ ಅರ್ಥ ಬರುವಂತೆ ಸಂಸ್ಕೃತ ಪದವನ್ನು ಅರ್ಥ ವ್ಯತ್ಯಾಸ ಮಾಡಿ ಬಳಿಸಿರುವ ಸಾಧ್ಯತೆ ಇದೆ. ಖಾದ್ಯ, ಪೇಯ, ಲೇಹ, ತೋಷ್ಯ (ಹೀರಿ ಸವಿಯುವಂತದ್ದು) ಎಂಬ ನಾಲ್ಕು ರೀತಿಯ ಚತುರ್ ವಿಭವಗಳು ‘ಸದ್ಯ’ ಎನಿಸಿಕೊಳ್ಳುವ ಭೋಜನಕ್ಕೆ ಅಗತ್ಯ.

ಸಂದರ್ಭ : ಹುಟ್ಟಿನಿಂದ ಸಾವಿನವರೆಗಿನ ಎಲ್ಲಾ ವಿಶೇಷ ಸಂದರ್ಭಗಳಲ್ಲೂ ‘ಸದ್ಯ’ ನೀಡುವ ಪರಿಪಾಠವಿದೆ. ‘ಅನ್ನದಾನವು ಶ್ರೇಷ್ಠದಾನ’ ಎಂಬ ನಂಬಿಕೆಯಿಂದಲೇ ಈ ಕ್ರಮ ಹುಟ್ಟಿಕೊಂಡಿದೆ. ಮಗುವಿನ ನಾಮಕರಣ, ಕಿವಿಚುಚ್ಚುವ ಕ್ರಿಯೆಯಲ್ಲಿಂದಲೇ ಬದುಕಿನ ಮೊದಲ ‘ಸದ್ಯ’ ಪ್ರಾರಂಭವಾಗುತ್ತದೆ. ಆದರೆ ಇದನ್ನು ಮಗು ಉಣ್ಣುವುದಿಲ್ಲ! ಮಗುವಿಗೆ ಆರನೇ ತಿಂಗಳಾಗುವಾಗ ಮಾಡುವ ಅನ್ನಪ್ರಾಶನದಿಂದ ಅದು ಮುಂದುವರಿಯುತ್ತದೆ. ಮೊದಲನೇ ಹುಟ್ಟು ಹಬ್ಬವಂತೂ ವಿಶೇಷವೇ ಸರಿ. ಮುಂದೆ ಬದುಕಿನ ಉತ್ತರಾರ್ಧದಲ್ಲಿ ಬರುವ ಷಷ್ಠಬ್ದ, ಸಪ್ತತಿ, ಅಷ್ಟತಿ, ಸಹಸ್ರಚಂದ್ರದರ್ಶನ, ನವತಿ ಇಂಥ ವಿಶೇಷ ಸಂದರ್ಭಗಳಲ್ಲೆಲ್ಲಾ ‘ಸದ್ಯ’ ಅನಿವಾರ್ಯ ಘಟಕ. ಮದುವೆಯಂತೂ ‘ಸದ್ಯ’ಕ್ಕೆ ಅತಿ ಪ್ರಾಧಾನ್ಯವಿರುವ ಮತ್ತೊಂದು ವಿಶೇಷ ಸಂದರ್ಭವಾಗಿದೆ. ಮರಣಾನಂತರದ ಉತ್ತರಕ್ರಿಯೆ, ಶ್ರಾದ್ಧ ಇತ್ಯಾದಿಗಳಿಗೂ ‘ಸದ್ಯ’ ಬೇಕೇ ಬೇಕು.

ದೇವಸ್ಥಾನಗಳಲ್ಲಿ ಜಾತ್ರೆಗಳ ಸಂದರ್ಭದಲ್ಲಿ ಪ್ರಸಾದ ರೂಪದ ‘ಸದ್ಯ’ ನೀಡುವ ಪದ್ಧತಿಯಿದೆ. ತಿರುವನಂತಪುರದ ಪದ್ಮನಾಭಸ್ವಾಮಿ ದೇವಾಲಯದಲ್ಲಿ ಹಿಂದೆ ದಿನಾಲೂ ಭಕ್ತರಿಗೆ ‘ಸದ್ಯ’ ನೀಡಲಾಗುತ್ತಿತ್ತು. ಚೆರುಕನ್ನು ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ದಿನಾಲೂ ಮಧ್ಯಾಹ್ನ ಮತ್ತು ರಾತ್ರಿಗಳಲ್ಲಿ ಭೋಜನದ ವ್ಯವಸ್ಥೆಯಿದ್ದು, ಅದು ಯಾವಾಗ ಪ್ರಾರಂಭವಾಯಿತೋ ತಿಳಿದಿಲ್ಲ; ಇಂದೂ ಚೆನ್ನಾಗಿ ನಡೆದುಕೊಂಡು ಬರುತ್ತಿದೆ. ಬಂದ ಭಕ್ತರಿಗೆಲ್ಲಾ ಊಟದ ವ್ಯವಸ್ಥೆಯನ್ನು ಗುರುವಾಯೂರು ದೇವಸ್ಥಾನದಲ್ಲೂ ಮಾಡಲಾಗಿದೆ. ಪರಿಶ್ಶಿನಿಕಡವು ಶ್ರೀ ಮುತ್ತಪ್ಪನ್‌ ದೇವಾಲಯದಲ್ಲಿ ಭಕ್ತರಿಗೆ ‘ಸದ್ಯ’ ನೀಡುವ ಕ್ರಮವಿದೆ. ಭೂತದ ಕೋಲಗಳಲ್ಲೂ, ಕಳಿಯಾಟ (ಭೂತಾರಾಧನೆ ನಡೆಯುವ ದೇವಸ್ಥಾನಗಳ ವಾರ್ಷಿಕ ಜಾತ್ರೆ) ಗಳಲ್ಲೂ ‘ಸದ್ಯ’ ನೀಡುವ ಸಂಪ್ರದಾಯವಿದೆ.

ಹಿಂದೆ ಹಲವು ದೇವಾಲಯಗಳಲ್ಲಿ ಸಂಜೆಯ ವೇಳೆಗೆ ಆಹಾರ ನೀಡುವ ಪದ್ಧತಿಯಿತ್ತು. ಹೊಸ ಪೈರಿನ ಹೊಸ ಅಕ್ಕಿಯೂಟ – ಹೊಸ್ತಾರೋಗಣೆ – ಹಲವು ದೇವಾಲಯಗಳಲ್ಲಿತ್ತು. ಕ್ರಮೇಣ, ಭೂ ಮಸೂದೆಯ ನಂತರ ಜಮೀನ್ದಾರಿ ಕೃಷಿ ಪದ್ಧತಿಗಳೆಲ್ಲಾ ನಿಂತು ಹೋದಾಗ ಹಲವು ಕಡೆ ಇವು ನಿಂತುಹೋದವು. ಕೆಲವೆಡೆ ನಾಮಮಾತ್ರವಾಗಿ ‘ನಮಸ್ಕಾರ ಸದ್ಯ’ (ಪಾದ ಪ್ರಕ್ಷಾಳನ ಮಾಡಿ ಊಟ ಬಡಿಸುವ ಕ್ರಮ) ನಡೆಯುತ್ತದೆ. ವೈಕಂ ದೇವಸ್ಥಾನದಲ್ಲಿ ಬೆಳಗಿನ ಹೊತ್ತು ‘ಪ್ರಾತಃಸದ್ಯ’ ಪ್ರಧಾನವಾಗಿದೆ. ಪದ್ಮನಾಭಸ್ವಾಮಿ ದೇವಸ್ಥಾನದಲ್ಲಿನ ‘ಮುರಜಪ ಸದ್ಯ’ ಪ್ರಸಿದ್ಧವಾಗಿದೆ.

ಕೊಟ್ಟಾಯಂ ಜಿಲ್ಲೆಯ ಮಣ್ಣಾರ್ ಕಾಡ್ ಚರ್ಚ್ ನಲ್ಲೂ ವಿಶೇಷ ದಿನಗಳಲ್ಲಿ ಜಾತಿ ಮತ ಭೆದವಿಲ್ಲದೆ ಎಲ್ಲರಿಗೂ ‘ಸದ್ಯ’ ನೀಡುವ ಸಂಪ್ರದಾಯವಿದೆ. ಇಲ್ಲಿನ ‘ಸದ್ಯ’ ದಲ್ಲಿ ಮಾಂಸಾಹಾರವೂ ಸೇರಿರುವುದು. ಚರ್ಚ್ ನ ದೇವತೆ ಕನ್ಯಾಮಾತೆ ಮೇರಿಯ ಪಕ್ಕದ ದೇವಿಗುಡಿಯ ಭಗವತಿಯ ತಂಗಿಯೆಂಬ ಜನಸಾಮಾನ್ಯರ ನಂಬಿಕೆಯೇ ಇಲ್ಲಿನ ಸಾಮೂಹಿಕ ಭೋಜನವು ಜಾತಿ ಮತ ವ್ಯತ್ಯಾಸಗಳನ್ನೂ ಮೀರಿ ಪ್ರಸಿದ್ಧವಾಗಲು ಕಾರಣವಾಗಿದೆ.

‘ಸದ್ಯ’ ದ ವಿಶೇಷ ಖಾದ್ಯಗಳು : ‘ಸದ್ಯ’ ಕ್ಕೆ ಅನ್ನವೇ ಪ್ರಧಾನ. ದೇವಾಲಯಗಳಲ್ಲಿ ಬೆಳ್ತಿಗೆ ಅಕ್ಕಿಯನ್ನು ಬಳಸಿದರೆ ಮನೆಗಳಲ್ಲಿ ಕುಚ್ಚಿಲಕ್ಕಿಯನ್ನು ಬಳಸುತ್ತಾರೆ. ಅಕ್ಕಿಯ ಬಳಕೆಯಲ್ಲೂ ಸಾಕಷ್ಟು ಭೀನ್ನತೆಗಳಿವೆ. ಉತ್ತರ ಕೇರಳೀಯರಿಗೆ ಬಿಳಿ ಕುಚ್ಚಿಲಕ್ಕಿ ಇಷ್ಟವಾದರೆ ವಯನಾಡಿನವರು ಗಂಧಸಾಲೆಯಂತಹ ಪ್ರಭೇಧಗಳನ್ನು ಬಳಸುತ್ತಾರೆ. ಪಾಲಕ್ಕಾಡ್ ಜಿಲ್ಲೆಯಲ್ಲಿ ತಮಿಳು ಪ್ರಭಾವದಿಂದಲೋ ಏನೋ ಬೆಳ್ತಿಗೆ ಅಕ್ಕಿಯನ್ನೇ ಹೆಚ್ಚಾಗಿ ಬಳಸುತ್ತಾರೆ. ಉತ್ತರಕ್ರಿಯೆಯಂತಹ ಆಚರಣೆಗೆ ನಿರ್ದಿಷ್ಟ ತಳಿಯ ಅಕ್ಕಿಯನ್ನೇ ಬಳಸುವ ಪರಿಪಾಠವಿದೆ.

ಹೊಲಗಳ ಮಣ್ಣಿನ ಗುಣವನ್ನು ಆಧರಿಸಿ ಅಕ್ಕಿಯ ರುಚಿಯಲ್ಲಿ ವ್ಯತ್ಯಾಸಗಾಳಾಗುತ್ತವೆಂಬುದು ನಂಬಿಕೆ. ಒಟ್ಟಪಾಲಂ ಚುನಂಗಾಡನ್ ಪ್ರದೇಶದ ಹೊಲಗಳಲ್ಲಿ ಬೆಳೆಯುವ ಬತ್ತವನ್ನು ಒಂದೋ ಎರಡೋ ವರ್ಷ ಹಳತಾಗಿಸಿ ಬಳಸಿದರೆ ಅದರ ರುಚಿ ವರ್ಧಿಸುತ್ತದೆ ಎಂಬ ನಂಬಿಕೆ ಉತ್ತರದ ಪ್ರಭುವಂಶದವರ ನಂಬಿಕೆಯಾಗಿತ್ತಂತೆ. ಸಾಮೂದಿರಿ ವಂಶದವರೂ ಇದನ್ನೇ ಬಳಸುತ್ತಿದ್ದರಂತೆ. ಹಾಗೆಯೇ ಕೋಲತ್ತುನಾಡಿನವರು ಪಿಣರಾಯಿ ಬಯಲಿನ ಬತ್ತವನ್ನು ಕುಟ್ಟಿ ತೆಗೆದ ಅಕ್ಕಿಯನ್ನೇ ಸದ್ಯಗಳಿಗೆ ಬಳಸುತ್ತಿದ್ದರು. ಅಳ್ವಾಂಚೇರಿಯವರು ಮತ್ತೊಂದು ತರದ ನವಣೆಯಂತಹ ಬತ್ತವನ್ನು ಬಳಸುತ್ತಿದ್ದರು. ಕೆಲವು ಮನೆತನದವರು ಕೆಲವು ನಿರ್ದಿಷ್ಟ ಸಂದರ್ಭಗಳಿಗೆ ನಿರ್ದಿಷ್ಟ ತಳಿಗಳ ಅಕ್ಕಿಯನ್ನು ಉಪಯೋಗಿಸುತ್ತಿದ್ದರು.

‘ಸದ್ಯ’ ದಲ್ಲಿ ಬಳಸುವ ಪದಾರ್ಥಗಳು ಮತ್ತು ಮೇಲೋಗರಗಳು : ಅನ್ನದ ಮೇಲೆ ಹೊಯ್ಯುವ, ಬೆರಳುಗಳಲ್ಲಿ ಚಿವಿಟಿ ತೆಗೆದು ತಿನ್ನುವ, ಬೆರಳುಗಳಲ್ಲಿ ನೆಕ್ಕಿತಿನ್ನುವ, ಹಲ್ಲಲ್ಲಿ ಕಚ್ಚಿ ತುಂಡುಮಾಡಿ ತಿನ್ನುವ, ಹೀಗೆ ಮೇಲೋಗರಗಳು ನಾಲ್ಕು ವಿಧ. ಅನ್ನದ ಜತೆ ಕಲಸಿ ತಿನ್ನುವ ಮತ್ತು ಜತೆಯಲ್ಲಿ ತಿನ್ನುವ – ಈ ಎರಡೂ ವಿಭಾಗಗಳಿಗೆ ಸೇರಿದ ೬೪ ತರದ ಕರಿಗಳು (ಸಾರುಗಳು/ ಪದಾರ್ಥಗಳು) ಪೂರ್ಣ ಪ್ರಮಾಣದ ‘ಸದ್ಯ’ ಗಳಲ್ಲಿರುತ್ತಿತ್ತು.

ಪರಿಪ್ಪ್, ಕಾಳನ್, ಓಲನ್, ಎರಿಶ್ಶೇರಿ, ಅವಿಯಲ್, ಕುರುಕ್ಕುಕಾಳನ್, ವಿನ್ನಿಪುಳುಕ್ಕು (ಇವೆಲ್ಲ ಕೇರಳಿಯ ಊಟಗಳಲ್ಲಿ ಕಂಡು ಬರುವ ವಿವಿಧ ಬಗೆಯ ಖಾದ್ಯಗಳು) ಇತ್ಯಾದಿಗಳು ಮತ್ತು ಎಂಟು ತರದ ಸೊಪ್ಪಿನ ಸಾರುಗಳು, ಎಂಟು ತರದ ಪಾಯಸಗಳು, ತುಪ್ಪ, ಅಪ್ಪಂ, ವಡೆ, ಎಳ್ಳುಂಡೆ, ಎರಡು ತರದ ಹಪ್ಪಳಗಳು, ಉಪ್ಪಿನಕಾಯಿ, ಮಜ್ಜಿಗೆ – ಹೀಗೆ ೬೪ರಲ್ಲಿ ಕೆಲವನ್ನು ಪಟ್ಟಿಮಾಡಬಹುದು. ಕೇರಳದ ಪ್ರಮುಖ ಉತ್ಸವಗಳಾದ ತೃಪ್ಪಣಿತ್ತುರ ದೇವಸ್ಥಾನದ ‘ಅತ್ತಚಮಯಂ’, ಆರಮ್ಮಳದ ವಳ್ಳನ್ ಸದ್ಯ (ಇವುಗಳು ಓಣಂ ದಿನಗಳಲ್ಲಿ ನಡೆಯುವುದು), ಪದ್ಮ ನಾಭಸ್ವಾಮಿ ದೇವಸ್ಥಾನದ ಮುರಜಪ ಸದ್ಯ ಇತ್ಯಾದಿ ವಿಶೇಷ ಸಂದರ್ಭಗಳಲ್ಲಿ ನಡೆಯುವ ಭೋಜನಗಳಿಗೆ ಮೇಲೆ ಹೇಳಿದ ರೀತಿಯ ೬೪ ವಿಧದ ಪದಾರ್ಥಗಳು ಹಿಂದೆ ಕಡ್ಡಾಯವಾಗಿತ್ತು. ಈ ಎಲ್ಲಾ ೬೪ ವಿಧದ ಪದಾರ್ಥಗಳು ಸೇರಿಸಿ ಊಟ ಮಾಡಿದ, ಹಳೆಯ ನೆನಪುಗಳನ್ನು ಇಟ್ಟುಕೊಂಡ ಕೆಲವರು ಇನ್ನೂ ಇದ್ದಾರೆ.

‘ಸದ್ಯ’ ಕ್ಕೆ ತುಪ್ಪ ಬೇಕೇ ಬೇಕು. ಆದರೆ ಮಕ್ಕಳಿಗೆ ಬೆಣ್ಣೆಯನ್ನು ಕೊಡುತ್ತಿದ್ದರು. ತೊಗರಿ ಬೇಳೆಯನ್ನು ಚೆನ್ನಾಗಿ ಬೇಯಿಸಿ ಮಾಡಿದ ಖಾದ್ಯವೇ ಪರಿಪ್ಪ್‌ (ತೋವೆ). ಸ್ವಾದಿಷ್ಟವಾದ ಈ ಪರಿಪ್ಪ್‌ನ ಜತೆಗೆ ಉದ್ದಿನ ಹಪ್ಪಳವನ್ನು ಹುಡಿಮಾಡಿ, ಅದಕ್ಕೆ ತುಪ್ಪ ಸೇರಿಸಿ ಉಂಡೆಮಾಡಿ ತಿನ್ನುವುದು ವಾಡಿಕೆ. ಹಪ್ಪಳಗಳಲ್ಲೇ ಎರಡು ವಿಧ. ಒಂದು ದೊಡ್ಡ ಹಪ್ಪಳ; ಮತ್ತೊಂದು ಸಣ್ಣ ಹಪ್ಪಳ. ನೆಗಡಿ, ಜ್ವರ ಇರುವಂತವರಿಗೆ ಕಾಳುಮೆಣಸು ಹಾಕಿದ ಮೆಣಸಿನ ಹಪ್ಪಳವನ್ನು ಸುಟ್ಟು ಕೊಡುತ್ತಿದ್ದರು.

‘ಕಾಳನ್‌’ ಇದ್ದುದರಲ್ಲಿ ಖಾರದ ಖಾದ್ಯ. ಮೊಸರಿಗೆ ಹಸಿ ಮೆಣಸು ಹಾಕಿ ಇದನ್ನು ತಯಾರಿಸಲಾಗುತ್ತದೆ. ಜತೆಗೆ ಸ್ವಲ್ಪ ಅರಿಶಿನವನ್ನೂ ಬೆರೆಸುತ್ತಾರೆ. ‘ಕಾಳನ್‌’ ಜತೆಗಿರುವುದು ‘ಓಲನ್‌’. ಇದನ್ನು ಕುಂಬಳಕಾಯಿಂದ ತಯಾರಿಸಲಾಗುತ್ತದೆ. ‘ಎರಿಶ್ಶೇರಿ’ಗೆ ಹಲಸಿನಕಾಯಿ ಉತ್ತಮ. ಹಲಸಿನಕಾಯಿ ಇಲ್ಲದ ಕಾಲದಲ್ಲಿ ಹಲಸಿನ ಬೀಜ, ಮಾವಿನಕಾಯಿ, ನುಗ್ಗೆಕಾಯಿಗಳನ್ನು ಸೇರಿಸಿ ಇದನ್ನು ತಯಾರಿಸುತ್ತಾರೆ. ಕೇರಳ ಶೈಲಿಯ ಮತ್ತೊಂದು ಜನಪ್ರಿಯ ಖಾದ್ಯ ಅವಿಯಲ್‌. ಮಹಾಭಾರತ ಯುದ್ಧಕಾಲದಲ್ಲಿ ಪಾಂಡವರಿಗೆ ಸಹಾಯಕ್ಕೆಂದು ತೆರಳಿದ ಕೇರಳೀಯ ಸೈನಿಕರಿಗೆ ಭೀಮನು ಹೇಳಿಕೊಟ್ಟ ಖಾದ್ಯವೆಂದು ಇದರ ಐತಿಹ್ಯ. ಹೆಚ್ಚು ಕಡಿಮೆ ಎಲ್ಲಾ ದೇಶೀಯ ತರಕಾರಿಗಳನ್ನೂ ಇದಕ್ಕೆ ಬಳಸುತ್ತಾರಾದರೂ ದಕ್ಷಿಣ ಕೇರಳದಲ್ಲಿ ಹಾಗಲಕಾಯಿಯು ನಿಷಿದ್ಧ. ಉತ್ತರ ಕೇರಳದಲ್ಲಿ ಅದನ್ನೂ ಸೇರಿಸುತ್ತಾರೆ. ‘ಉಣ್ಣಿಯಪ್ಪಂ’ ಮತ್ತು ‘ಅಡ’ ಸದ್ಯದಲ್ಲಿ ಒಳಗೊಳ್ಳುವ ಎರಡು ಸಿಹಿತಿಂಡಿಗಳು. ಅಕ್ಕಿಹುಡಿಗೆ ಬೆಲ್ಲ ಮಿಶ್ರಣಮಾಡಿ ಒದ್ದೆಮಾಡಿ ಬಾಳೆಯೆಲೆಯಲ್ಲಿ ಮೆತ್ತಿ ಒಳಗೆ ತೆಂಗಿನ ತುರಿ, ಬೆಲ್ಲಗಳ ಮಿಶ್ರಣವನ್ನಿಟ್ಟು ಮಡಚಿ ಬೇಯಿಸಿ ತಯಾರಿಸುವ ಸಿಹಿತಿಂಡಿ ‘ಅಡ’. ಪಚ್ಚಡಿ ಮತ್ತು ಕಿಚ್ಚಡಿ – ಮತ್ತೆರಡು ಉಪಖಾದ್ಯಗಳು. ಪಚ್ಚಡಿಗೆ ಮಾವಿನಹಣ್ಣು ಉತ್ತಮವಾದರೆ ಕಿಚ್ಚಡಿಯನ್ನು ಸೌತೆಕಾಯಿಯಿಂದ ತಯಾರಿಸುತ್ತಾರೆ. ಉಪ್ಪು ಮತ್ತು ಕಾಳುಮೆಣಸು ಸೇರಿಸಿ ಮಾಡಿದ ಹಿಟ್ಟನ್ನು ಕಾಯಿಸಿ ಮಾಡುವುದು ವಡೆ. ಎಳ್ಳುಂಡೆಯ ಬದಲು ಕೆಲವೆಡೆ ರಾಗಿ ಉಂಡೆಯನ್ನು ಬಡಿಸುವುದೂ ಇದೆ. ಈಗಿನ ‘ಕೂಟ್ಟುಕರಿ’ ಎಂಬ ತಿನಿಸಿನ ಪೂರ್ವರೂಪವೇ ‘ಪುಳುಕ್ಕು’. ಇಂದು ‘ಪೆರುಕ್ಕು’ ಎಂದು ಕರೆಯಲ್ಪಡುವ ತಿನಿಸಿನ ಪೂರ್ವರೂಪವೇ ವೆನ್ನಿ.

‘ತೋರನ್‌’ ಒಂದು ರೀತಿಯ ಸೊಪ್ಪಿನ ಖಾದ್ಯ. ಹರಿವೆ ಸೊಪ್ಪು, ಕೆಸುವಿನ ಸೊಪ್ಪು, ಚೀನಿಕಾಯಿ ಬಳ್ಳಿಯ ಎಲೆ, ನುಗ್ಗೆ ಎಲೆ -ಇಂತಹ ಯಾವುದಾದರೂ ಸೊಪ್ಪನ್ನು ಬಳಸಿ ‘ತೋರನ್‌’ ತಯಾರಿಸುತ್ತಾರೆ. ಆಷಾಢ ಮಾಸದಲ್ಲಿ ನುಗ್ಗೆ ಎಲೆ ವರ್ಜ್ಯ. ಬಾಳೆಕಾಯಿ, ಸುವರ್ಣಗೆಡ್ಡೆ, ಹಲಸಿನಕಾಯಿ ಮುಂತಾದವುಗಳನ್ನು ‘ಉಪ್ಪೇರಿ’ (ಪಲ್ಯ) ಗೆ ಬಳಸುತ್ತಾರೆ. ಮೆಣಸು ಅಥವಾ ಹಾಗಲಕಾಯಿಯನ್ನು ಒಣಗಿಸಿ ಮಾಡಿದ ಬಾಳುಕವನ್ನು ಎಣ್ಣೆಯಲ್ಲಿ ಕರಿದು ಮಾಡುವ ‘ಕೊಂಡಾಟ’ ಮತ್ತೊಂದು ಬಗೆಯ ತಿನಿಸು. ಮಾವಿನಕಾಯಿ, ಅಂಬಟೆಕಾಯಿ, ನಿಂಬೆಹಣ್ಣು, ಶುಂಠಿ – ಇವುಗಳಿಂದ ತಯಾರಿಸಿದ ಉಪ್ಪಿನಕಾಯಿಯೂ ಇರುತ್ತಿತ್ತು. ಇದರ ಜತೆಗೆ ‘ಹುಳಿಮೆಣಸು’ ಎಂತಲೂ ಒಂದು ಇತ್ತು. ಪಾಲಕ್ಕಾಡ್‌ ಕಡೆ ಬೇವಿನಸೊಪ್ಪಿನ ತಿನಿಸುಗಳೂ ಇರುತ್ತಿದ್ದುವು.

ಪಾಯಸಗಳಲ್ಲಿ ಪಾಲ್‌ಪಾಯಸ (ಹಾಲುಖೀರು), ಅಡಪಾಯಸ, ಪಾಲಡಪ್ರಥಮನ್‌, ಕಡುಂಪಾಯಸಂ, ಚಕ್ಕಪಾಯಸಂ (ಹಸಲಿನ ಹಣ್ಣಿನ ಪಾಯಸ), ಹೆಸರುಬೇಳೆ ಪಾಯಸ ಮುಂತಾದ ಎಂಟು ಬಗೆಯ ಪಾಯಸಗಳು ಜನಪ್ರಿಯವಾದವುಗಳು. ನಂತರದ ದಿನಗಳಲ್ಲಿ ಗೋಧಿಪಾಯಸವೂ ಇದರ ಜತೆ ಸೇರಿಕೊಂಡಿತು. ದಕ್ಷಿಣ ಕೇರಳದಲ್ಲಿ ಪಾಯಸ ಕಳೆದು ಮೊಸರು ಅಥವಾ ಮಜ್ಜಿಗೆಯಾದರೆ, ಉತ್ತರ ಕೇರಳದಲ್ಲಿ ಮಜ್ಜಿಗೆ ಕಳೆದ ಮೇಲೆ ಪಾಯಸದೂಟ. ದಕ್ಷಿಣ ಕೇರಳದಲ್ಲಿ ಒಂದೊಂದು ಮೇಲೋಗರ ಬಡಿಸುವಾಗಲೂ ಅನ್ನ ವಿಚಾರಿಸುತ್ತಾ ಬಡಿಸುತ್ತಾರೆ.

ಸಾಂಬಾರ್, ರಸಂಗಳು ಹಿಂದೆ ಕೇರಳದಲ್ಲಿ ಇರಲಿಲ್ಲ. ಅವುಗಳನ್ನು ಹೊರಗಿನವುಗಳೆಂದೇ ತಿಳಿಯಲಾಗುತ್ತಿತ್ತು. ಹಾಗಾಗಿ ಇತ್ತೀಚಿನವರೆಗೂ ಕೇರಳದ ‘ಸದ್ಯ’ಗಳಿಗೆ ಇವು ಇರುತ್ತಿರಲಿಲ್ಲ. ಆದರೆ ಇಂದು ಸಾಂಬಾರೇ ಸದ್ಯದ ಮುಖ್ಯ ಘಟಕ. ‘ಸಾಂಬಾರ್ ಬಡಿಸಿದರೆ ಮತ್ತೆ ಊಟ ಶುರುಮಾಡಲು ತಂದೆಯನ್ನೂ ಕಾಯಬೇಕೆಂದಿಲ್ಲ’ ಎಂಬ ಗಾದೆಯೇ ಇದೆ. ಉತ್ತರಕೇರಳದಲ್ಲಿ ಇದು ಸದ್ಯದ ಅವಿಭಾಜ್ಯ ಅಂಗ. ‘ರಸಂ’ ಕೂಡಾ ಹೊರಗಿನದ್ದೇ. ಆದರೆ ಇಂದು ಅದೂ ಕೂಡಾ ಇಲ್ಲಿ ಜನಪ್ರಿಯವಾಗಿದೆ.

ಸಾಂದರ್ಭಿಕ ಭಿನ್ನತೆಗಳು, ಪ್ರಾದೇಶಿಕ ಭಿನ್ನತೆಗಳು ‘ಸದ್ಯ’ದಲ್ಲಿ ಸಾಕಷ್ಟಿವೆ. ಹುಟ್ಟುಹಬ್ಬದ ‘ಸದ್ಯ’ಕ್ಕೆ ಪಹ್ಪಳ ಬಡಿಸುವ ಕ್ರಮವಿಲ್ಲ. ಮರಣಾನಂತರದ ಉತ್ತರಕ್ರಿಯೆಗಳಿಗೂ ಹಪ್ಪಳ ನಿಷಿದ್ದ. ಉತ್ತರ ಕೇರಳದಲ್ಲಿ ‘ಕೊವೆಪಾಯಸ’ ಮಾಡುತ್ತಿದ್ದರು. ಶ್ರಾದ್ಧದ ಸದ್ಯಗಳಿಗೆ ಶುಂಠಿ ಕಡ್ಡಾಯವಾಗಿದೆ.

ತಿರುವನಂತಪುರದ ಕಡೆ ಹಾಲುಪಾಯಸದ ಜತೆ ‘ಸೋಳಿ’ (ಹೋಳಿಗೆಯ ತರಹದ್ದು) ಎಂಬ ಸಿಹಿತಿಂಡಿ ಬಡಿಸುತ್ತಿದ್ದರು. ಇದನ್ನು ಕಡ್ಲೆಹುಡಿಯಿಂದ ತಯಾರಿಸಲಾಗುತ್ತದೆ. ಇದನ್ನು ಪಾಯಸದ ಜತೆ ಸೇರಿಸಿ ತಿನ್ನುವುದು ಕ್ರಮ. ಪಾಯಸದೊಂದಿಗೆ ಬಾಳೆಹಣ್ಣನ್ನು ಬಡಿಸುತ್ತಿದ್ದರು. ಬಾಳೆಹಣ್ಣಿನ ಜತೆ ಹಪ್ಪಳವನ್ನು ಹುಡಿಮಾಡಿ ತಿನ್ನುವುದು ಹೆಚ್ಚು ಅಸ್ವಾದ್ಯವೆನಿಸುತ್ತಿತ್ತು.

ಪಚ್ಚಡಿಗೆ ಅನಾನಸು (ಪೈನ್‌ ಆಪಲ್‌) ಬಳಸುವ ಕ್ರಮ ಈಚಿನದ್ದು. ಅದರ ಜತೆ ದ್ರಾಕ್ಷಿಯೂ ಕಾಣಿಸಿಕೊಳ್ಳುವುದಿದೆ. ಉತ್ತರ ಕೇರಳದಲ್ಲಿ ಮುಳ್ಳುಸೌತೆಯ ಪಚ್ಚಡಿ ಜನಪ್ರಿಯವಾಗಿದೆ. ಊಟದ ಜತೆ ಕುಡಿಯಲು ಜೀರಿಗೆ ಹಾಕಿದ ಬಿಸಿ ನೀರನ್ನು ನೀಡುವುದು ಸಾಮಾನ್ಯವಾಗಿದೆ.

ಬಡಿಸುವ ಕ್ರಮ : ಬಾಳೆಯೆಲೆಯಲ್ಲಿ ಊಟ ಬಡಿಸುವುದು ಕೇರಳದ ಸಂಪ್ರದಾಯ ಬಾಳೆಗಿಡದಿಂದ ಬಾಳೆ ಎಲೆಯ ತುದಿಭಾಗವನ್ನು ಮಾತ್ರ ಮುರಿಯಬೇಕು. ಇಡೀ ಎಲೆಯನ್ನು ಕೊಯ್ದು ತರಬಾರದು ಎಂಬ ನಿಯಮವಿದೆ. ತುಂಡಾದ ಎಲೆಯನ್ನೋ ಹರಿದು ಹೋದ ಎಲೆಯನ್ನೋ ಬಳಸುವುದು ಉಚಿತವಲ್ಲವೆಂದು ತಿಳಿಯಲಾಗುತ್ತಿತ್ತು. ಕದಳಿ ಬಾಳೆಯಂಥ ಬಾಳೆಗಿಡದ ಎಲೆಗಳು ಉತ್ತಮವೆಂದು ನಂಬಿಕೆ. ನೇಂದ್ರ ಬಾಳೆಯ ಎಲೆಯು ವರ್ಜ್ಯ. ಮೈಸೂರು ಬಾಳೆಯಂಥ ಎಲೆಗಳಲ್ಲಿ ಪೊಟಾಶಿಯಂನ ಅಂಶವು ಹೆಚ್ಚಾಗಿರುವುದರಿಂದ ಅದರ ಬಳಕೆ ಹೆಚ್ಚಾದರೆ ಉದರಸಂಬಂಧೀ ರೋಗಗಳು ಕಾಣಿಸಿಕೊಳ್ಳಬಹುದು. ಬಿಸಿಯಾದ ಪಾಯಸವನ್ನು ಎಲೆಯಲ್ಲಿ ಬಡಿಸಿಕೊಂಡು ಸೇವಿಸಬೇಕು. ಅದರ ರುಚಿಯೂ ಪರಿಮಳವೂ ಪೂರ್ಣವಾಗುವುದು. ಆಗಲೆ!

ಊಟ ಬಡಿಸುವವರು ಶುಭ್ರವಸ್ತ್ರಧಾರಿಗಳಾಗಿರಬೇಕು. ಉಟ್ಟಪಂಚೆಯನ್ನು ಎತ್ತಿಕಟ್ಟಬಾರದು. ತಲೆಗೆ ಮುಂಡಾಸು ಧರಿಸಿರಬಾರದು. ಅನ್ನಬಡಿಸಲು ಬೆತ್ತದ ಬುಟ್ಟಿಗಳನ್ನೂ ಪಲ್ಯಗಳನ್ನು ಬಡಿಸಲು ಮರದ ಪಾತ್ರೆಗಳನ್ನೂ ಹಿಂದೆ ಬಳಸುತ್ತಿದ್ದರು. ಬೆತ್ತದ ಬುಟ್ಟಿಗಳು ಈಗಲೂ ಕಾಣಸಿಗುತ್ತವೆ. ಮರದ ಪಾತ್ರೆಗಳು ಕಣ್ಮರೆಯಾಗಿವೆ. ಊಟ ಮಾಡುವವರು ಕುಳಿತುಕೊಂಡ ಮೇಲಷ್ಟೇ ಎಲೆ ಹಾಕಬೇಕು. ಎಲೆಯ ತುದಿಭಾಗ ಊಟಮಾಡುವವರ ಎಡಭಾಗದಲ್ಲಿರತಕ್ಕದ್ದು. ಎಲೆಯ ಬಲಭಾಗದಲ್ಲಿ ಸತ್ವಗುಣಪ್ರಧಾನವಾದ ತಿನಿಸುಗಳಾದರೆ, ಮಧ್ಯವು ರಜೋಗುಣ ಪ್ರಧಾನವಾದವುಗಳ ಜಾಗ. ಎಡಬದಿಯ ಮೂಲೆಯಲ್ಲಿ ಹುಡಿಯುಪ್ಪು ಬಡಿಸುವುದು ಉತ್ತ ಕೇರಳದಲ್ಲಿ ಕಂಡುಬರುವ ಸಂಪ್ರದಾಯವಾಗಿದೆ. ದಕ್ಷಿಣ ಕೇರಳದಲ್ಲಿ ಇದೇ ಜಾಗದಲ್ಲಿ ಸಕ್ಕರೆ ಬಡಿಸುವ ಕ್ರಮವಿದೆ. ಉಪ್ಪಿನಕಾಯಿ, ಪಲ್ಯ, ಹಪ್ಪಳ ಇತ್ಯಾದಿಗಳು ಎಡಭಾಗದಲ್ಲಿರಬೇಕು. ತೋರನ್‌, ಕಿಚಡಿ ಇತ್ಯಾದಿಗಳು ಮಧ್ಯಭಾಗದಲ್ಲಿ ಬರುತ್ತವೆ. ಬಲತುದಿಯಲ್ಲಿ ಬಾಳೆಹಣ್ಣು ಬಡಿಸಬೇಕು. ಅನ್ನದ ಬಲಭಾಗಕ್ಕೆ ತುಪ್ಪ ಬಡಿಸಬೇಕು. ಪರಿಪ್ಪು (ತೊವೆ)ನ ಸ್ಥಾನವು ಅದೇ. ಪಲ್ಯ, ಉಪ್ಪಿನಕಾಯಿಗಳನ್ನು ಬಡಿಸಿದ ಬಳಿಕವಷ್ಟೇ ಅನ್ನ ಬಡಿಸಬೇಕು. ಹೊಯ್ದು ಬಡಿಸುವ ಘಟಕಗಳು ಹಿಂದಿನಿಂದ ಬರಬೇಕು. ಈ ಎಲ್ಲವನ್ನೂ ಬಡಿಸಿಯಾದ ಮೇಲೆ ಏಕಕಾಲದಲ್ಲಿ ಊಟ ಪ್ರಾರಂಭಿಸಬೇಕು. ಪ್ರತಿ ಸಾಲಿನ ತುದಿಯಲ್ಲೂ ಉಸ್ತುವಾರಿಗೆ ಹಿಂದೆ ಹಿರಿಯರು ಇರುತ್ತಿದ್ದರು. ಯಾರಿಗೂ ಯಾವುದೇ ವಸ್ತುವಿನ ಕೊರತೆಯಾಗದಂತೆ ಅವರು ನೋಡಿಕೊಳ್ಳುತ್ತಿದ್ದರು. ಊಟ ಮಾಡುವವರೂ ಬಡಿಸುವವರೂ ಮಾತು ಆದಷ್ಟು ಕಡಿಮೆ ಮಾಡಬೇಕು ಎಲ್ಲರದ್ದೂ ಊಟವಾದ ಮೇಲೆ ಒಟ್ಟಾಗಿ ಏಳುವುದು ಹಳೆಯ ಕ್ರಮವಾಗಿತ್ತು. ಇದು ಸಾಮಾನ್ಯವಾಗಿ ಮೇಲ್ಜಾತಿಯವರಲ್ಲಿ ವಾಡಿಕೆಯಾಗಿತ್ತು.

ಊಟದಲ್ಲಿನ ತಿನಿಸುಗಳ ಕ್ರಮಗಳಲ್ಲಿ ಕೆಲವು ಸಾಮಾಜಿಕ ಭಿನ್ನತೆಗಳು ಕಾಣಿಸಿಕೊಳ್ಳವುದಿದೆ. ಸಾಮಾಜಿಕ ಶ್ರೇಣಿಯಲ್ಲಿ ಕೆಳಗೆ ಬಂದಂತೆ ಮೀನು ಮಾಂಸಗಳ ಸೇರ್ಪಡೆಯಾಗುತ್ತದೆ. ಉತ್ತರ ಕೇರಳದ ಕೆಲವು ಸಮುದಾಯಗಳಲ್ಲಿ ಮದುವೆ ‘ಸದ್ಯ’ಕ್ಕೆ ಮೀನುಸಾರು ಕಡ್ಡಾಯವಾಗಿದೆ. ಕೋಳಿ, ಆಡುಗಳ ಮಾಂಸಗಳನ್ನು ಬಳಸುವುದಿದೆ. ಆದರೆ ದನ ಅಥವಾ ಎತ್ತುಗಳ ಮಾಂಸಗಳನ್ನು ಬಳಸಿದ ಉದಾಹರಣೆಗಳಿಲ್ಲ. ಕೆಲವೆಡೆ ಅನ್ನದ ಜತೆ ತೊಗರಿ ಪದಾರ್ಥ ಬಡಿಸುವ ಕ್ರಮವಿದೆ. ಕೆಲವು ದೇವಾಲಯಗಳಲ್ಲಿ ಇದು ಕಡ್ಡಾಯವಾಗಿದೆ.

ಹುಟ್ಟುಹಬ್ಬದ ದಿನ ದೀಪ ಉರಿಸಿ, ಹುಟ್ಟುಹಬ್ಬ ಆಚರಿಸುವವರನ್ನು ಅದರ ಎದುರು ಕುಳ್ಳಿರಿಸಿ ಉಣಿಸುವುದನ್ನು ಉತ್ತರ ಕೇರಳದಲ್ಲಿನ ವಾಡಿಕೆಯಾಗಿದೆ. ಮಾಂಸಾಹಾರಿಗಳೂ ಅಂದು ಸಸ್ಯಾಹಾರವನ್ನೇ ಬಳಸುವುದನ್ನು ಕಾಣಬಹುದಾಗಿದೆ. ಶ್ರಾದ್ಧ, ಬಲಿ ಇತ್ಯಾದಿಗಳ ‘ಸದ್ಯ’ ದಲ್ಲಿ ತೊಂಡೆಕಾಯಿಯ ವಿಭವಗಳು ವಿಶೇಷ ಸ್ಥಾನ ಪಡೆಯುತ್ತವೆ. ತೊಂಡೆಕಾಯಿ ಇಲ್ಲದಿದ್ದಲ್ಲಿ ಬಾಳೆಕಾಯಿಗೆ ಆ ಸ್ಥಾನ ಪ್ರಾಪ್ತವಾಗುತ್ತದೆ.

ಜಾತಿಮತಗಳು ಯಾವುದೇ ಇರಲಿ, ‘ಸದ್ಯ’ ದ ಊಟ ಮಾಡುವಾಗ ಕೆಲವು ಸಾಮಾನ್ಯ ನಿಯಮಗಳನ್ನು ಪಾಲಿಸತಕ್ಕದ್ದು. ಅಜಾಗ್ರತೆಯಿಂದ ತನ್ನ ಎಲೆಯಿಂದ ಅನ್ನವಾಗಲೀ ಇತರ ವಸ್ತುಗಳಾಗಲೀ ಹೊರಗೆ ರಟ್ಟದಂತೆ ನೋಡಿಕೊಳ್ಳಬೇಕು. ಬಡಿಸಿದ ವಸ್ತುಗಳು ಎಲೆಯಿಂದ ಹೊರಗೆ ಹೋಗದಂತೆಯೂ ನೋಡಿಕೊಳ್ಳಬೇಕು. ಊಟಕ್ಕೆ ಒಂದು ಕೈಯನ್ನು ಮಾತ್ರ ಬಳಸಬೇಕು. ಒಂದು ಎಲೆಯ ಮೇಲೆ ಮತ್ತೊಂದು ಎಲೆಯನ್ನು ಇಟ್ಟು ಉಣ್ಣುವ ಹಕ್ಕನ್ನು ಕೆಲವರು ಮಾತ್ರ ಪಡೆದಿರುತ್ತಾರೆ. ಅಂಥವರು ಮಾತ್ರ ಹಾಗೆ ಮಾಡಬಹುದಾಗಿದೆ.

ಒಂದೇ ಒಂದು ತುತ್ತನ್ನೂ ಕೂಡಾ ಬಿಡಬಾರದು ಎಂಬುದು ಹಳಬರ ನಂಬಿಕೆಯಾಗಿತ್ತು. ಒಂದು ತುತ್ತು ಎಸೆದರೆ ಒಂಬತ್ತು ದಿನ ಅನ್ನವಿಲ್ಲದೆ ಉಪವಾಸ ಬೀಳಬೇಕಾಗಿ ಬರುವುದು ಎಂಬ ನಾಣ್ಣುಡಿಯಿದೆ. ಊಟ ಮಾಡಿದ ಎಲೆಯನ್ನು ಕಂಡರೆ ಉಂಡ ಎಲೆಯೆಂದು ಗೊತ್ತೇ ಆಗದಂತಿರಬೇಕೆಂಬ ಮತ್ತೊಂದು ನಾಣ್ಣುಡಿಯೂ ಇದೆ.

ಊಟ ಮುಗಿದ ಮೇಲೆ ಅದರ ಗುಣದೋಷಗಳನ್ನು ಎತ್ತಿತೋರಿಸುವುದರಲ್ಲಿ ತಪ್ಪಿಲ್ಲ. ಆದರೆ ಉಂಡ ಊಟವನ್ನು ದೂರುವುದು ಕೆಟ್ಟ ಕೆಲಸವೆಂದು ಪರಿಗಣಿಸಲಾಗುತ್ತದೆ. ಹಾಗೆಯೇ ತಾನು ಮಾಡಿದ ಅನ್ನದಾನವನ್ನು ತಾನೇ ಹೊಗಳಿಕೊಳ್ಳುವುದೂ ತಪ್ಪು. ಅದು ಅನ್ನದಾನದ ಫಲವನ್ನೇ ಇಲ್ಲದೆ ಮಾಡುವುದಂತೆ. ಹಾಗಾಗಿ ಅತ್ಯಂತ ವಿನಯದಿಂದ ‘ಸದ್ಯ’ ನೀಡಬೇಕು. ಸ್ವೀಕರಿಸುವವರೂ ಆದರದಿಂದ ಸ್ವೀಕರಿಸಬೇಕು.

ಪ್ರಾದೇಶಿಕ ಭಿನ್ನತೆಗಳು ಸಾಕಷ್ಟಿದ್ದರೂ ಅನ್ನದ ಹಿಂದಿನ ಭಾವನೆಗಳು ಒಂದೇ ಆಗಿವೆ. ಉಣ್ಣುವವನು ತಾನು ಉಣ್ಣುವ ವಸ್ತುವನ್ನು ಉತ್ಪಾದಿಸಿದವನಿಗೂ, ಬೇಯಿಸಿದವನಿಗೂ ಬಡಿಸಿದವನಿಗೂ ಕೃತಜ್ಞಾಗಿರಬೇಕು ಎನ್ನುವುದು ಅವುಗಳಲ್ಲೊಂದಾಗಿದೆ.

ಕೆ. ಎಂ. ಪಿ. ಅನುವಾದ ವಿ. ಸಿ.

 

ಸಮ್ಮಕ್ಕ ಸಾರಕ್ಕ ಜಾತರ ಪ್ರತಿ ಎರಡು ವರ್ಷಕ್ಕೊಮ್ಮೆ ಮಾಘಶುದ್ಧ ಪೌರ್ಣಮಿ ದಿನದಂದು ಫೆಬ್ರವರಿ ತಿಂಗಳಲ್ಲಿ ವರಂಗಲ್‌ ಜಿಲ್ಲಾ ಮೇಡಾರದಲ್ಲಿ ನಡೆಯುವ ಸಮ್ಮಕ್ಕ – ಸಾರಕ್ಕ ಜಾತ್ರೆ ಪ್ರಧಾನವಾಗಿ ಗಿರಿಜನರಿಗೆ ಸಂಬಂಧಿಸಿದ್ದು. ಮುತ್ತೈದೆಯರು ನಡೆಸಿಕೊಡುವ ಈ ಹಬ್ಬ ಕಾಲಕ್ರಮೇಣ ಜಾತ್ರೆಯಾಗಿ ಪರಿಣಮಿಸಿತು. ಮಹಾರಾಷ್ಟ್ರದ ಗೊಂಡರು, ಲಂಬಾಣಿಗಳೂ, ಕೋಯರು, ಚತ್ತೀಸಗಡ್‌ ಬಲ್ಲಿಯರು, ರಪಿಸ್ತಾರ್ ಗೊಂಡರು, ಒಡಿಸ್ಸಾಗೆ ಸೇರಿದ ಸವರ ಆದಿವಾಸಿಗಳು ಸಮ್ಮಕ್ಕ ಸೌರಮ್ಮರನ್ನು ತಮ್ಮ ದೇವತೆಗಳೆಂದು ಭಾವಿಸಿದರು. ಜಾತ್ರೆಗೆ ಗಿರಿಜನರೇ ಅಲ್ಲದೆ ಗಿರಿಜನೇತರರೂ ಸೇರಿ ೫೦ ಲಕ್ಷ ಜನರವರೆಗೂ ಸೇರುತ್ತಾರೆಂದು ಊಹೆ. ಜಾತ್ರೆಗಾಗಿ ಸರ್ಕಾರ ನೂರಾರು ಬಸ್ಸುಗಳನ್ನು ಹಾಕಿ, ಸುಮಾರು ಕೋಟಿ ಮೀಸಲಿಟ್ಟು ರಸ್ತೆಗಳು, ನೀರಿನ ಟ್ಯಾಂಕುಗಳು, ಸ್ಯಾನಿಟರಿ ವ್ಯವಸ್ಥೆ ಮಾಡಿದ್ದಾರೆ. ಜಾತ್ರೆಯ ಆದಾಯವು ಕೂಡ ಕೋಟಿಗೆ ಮೀರುತ್ತೆ. ವಂಶಪಾರಂಪರ್ಯವಾಗಿ ಪೌರೋಹಿತ್ಯ ಮಾಡುತ್ತಿರುವ ೧೨ ಜನಕ್ಕೆ ಜಾತ್ರೆಯ ಆದಾಯದಲ್ಲಿ ಕೊಡುತ್ತಾರೆ. ಇಷ್ಟು ಪ್ರಾಧಾನ್ಯ ಪಡೆದ ಮೇಡಾರದಲ್ಲಿ ಒಂದು ಗುಡಿಯಿಲ್ಲ, ಒಂದು ವಿಗ್ರಹವೂ ಇಲ್ಲ. ದೈವಿಕ ಪ್ರಾಂಗಣಗಳಲ್ಲಿ ಕಾಣಿಸುವ ಗರ್ಭಗುಡಿ, ಧ್ವಜಸ್ತಂಭ, ಶಯ್ಯಾಸೇವೆ, ಸುಪ್ರಭಾತಸೇವೆಯಂಥ ಮಾತುಗಳೇನೂ ಕಿವಿಗೆ ಬೀಳುವುದಿಲ್ಲ. ಗಿರಿಜನರ ವಿಶ್ವಾಸವೇ ಜಾತ್ರೆಗೆ ಜೀವಾಳ, ಪೂಜೆ ನಡೆಯುವ ಸ್ಥಳದಲ್ಲಿ ಒಂದು ಒಂದು ಗದ್ದುಗೆ ಇರುತ್ತದೆ. ಮುಖ್ಯ ಪೂಜಾರಿ ರಹಸ್ಯವಾಗಿ ಚಿಲಕಲ ಗುಟ್ಟಕ್ಕೆ ಹೋಗಿ ಕಂಕಹೂಗಳನ್ನು ಒಂದು ಕುಂಕುಮಭರಣಿಯನ್ನು ತಂದು ಅಮ್ಮನವರನ್ನು ದೇವಿಯಾಗಿ ಪ್ರತಿಷ್ಠಾಪಿಸುತ್ತಾರೆ. ೧೨ ಜನ ಪೂಜಾರರು ಪೂಜೆಯನ್ನು ನಿರ್ವಹಿಸುತ್ತಾರೆ.

ಇವರಲ್ಲಿ ನಾಲ್ವರು ಹೆಣ್ಣು ಪೂಜಾರಿಗಳು. ಮೂರು ದಿನಗಳು ನಡೆಯುವ ಜಾತ್ರೆಯ ಕಾಲವೆಲ್ಲ ಈ ಪೂಜಾರಿಗಳು ಗುಂಡಿನ ಅಮಲಿನಲ್ಲೇ ಇರುತ್ತಾರೆ.

ಜಾತ್ರೆ ನಿರ್ವಹಣೆಗೆ ಸಂಬಂಧಿಸಿದಂತೆ ಮೊದಲನೆಯ ದಿನ ಸಾಯಂಕಾಲ ‘ಕನ್ನೆಪಲ್ಲಿ’ ಯಿಂದ ಸಾರಮ್ಮ ದೇವತೆಯನ್ನು ಕೊಂಬೆಯ ರೂಪದಲ್ಲಿ ತಂದು ಗದ್ದುಗೆಯ ಮೇಲೆ ಪ್ರತಿಷ್ಠಾಪಿಸುವರು. ಆ ಮರುದಿನದ ಸಾಯಂಕಾಲ ದೇವರಗುಡ್ಡದಿಂದ ಸಮ್ಮಕ್ಕ ದೇವತೆಯನ್ನು ಭರಣಿ ರೂಪದಲ್ಲಿ ತಂದು ಗದ್ದುಗೆಯ ಮೇಲೆ ಪ್ರತಿಷ್ಠಾಪಿಸುವರು. ಮೂರನೆಯ ದಿನ ಲಕ್ಷಾಂತರ ಭಕ್ತರು ಸಮಕ್ಕ – ಸಾರಮ್ಮ ಅಮ್ಮನವರನ್ನು ದರ್ಶಿಸಿ ಬಂಗಾರ, ಬೆಳ್ಳಿ, ಬೆಲ್ಲ, ಕೊಬ್ಬರಿ, ಸೀರೆಗಳು ಮುಂತಾದ ಹರಕೆಗಳನ್ನು ಸಮರ್ಪಿಸುವರು. ಕಡೆಯದಿನ ಸಾಯಂಕಾಲ ೭ ಗಂಟೆಗೆ ಅಮ್ಮನವರ ವನಪ್ರವೇಶದ ಮೂಲಕ ಜಾತ್ರೆ ಮುಗಿಯುತ್ತದೆ.

ಸಮ್ಮಕ್ಕ-ಸಾರಕ್ಕ ಜಾತ್ರೆಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಪ್ರಚಾರದಲ್ಲಿವೆ. ಆದಿವಾಸಿಗಳಿಗೂ ಕಾಕತೀಯ ರಾಜರಿಗೂ ಮಧ್ಯ ನಡೆದ ಯುದ್ಧದ ಹಿನ್ನೆಲೆಯಲ್ಲಿ ಸಾಗುವ ಈ ಸ್ಥಳ ಪುರಾಣಗಳ ನಡುವೆ ಸೂಕ್ಷ್ಮ ಭೇದಗಳಿವೆ. ಕೆಲವು ಕಥೆಗಳಲ್ಲಿ ಸಮ್ಮಕ್ಕ ಮರಣಿಸಿದಂತಿದ್ದರೇ, ಇನ್ನು ಕೆಲವು ಕಥೆಗಳಲ್ಲಿ ನೆತ್ತರು ಸುರಿಸುತ್ತ ಚಿಲಕಲ ಗುಡ್ಡೆ ಕಡೆ ಹೋದಂತಿದೆ. ಕೆಲವು ಕಥೆಗಳಲ್ಲಿ ಆದಿವಾಸಿಗಳಿಗೂ – ಕಾಕತೀಯರಿಗೂ ಮದ್ಯ ನಡೆದ ಘರ್ಷಣೆಗೆ ಕಪ್ಪ ಸಲ್ಲಿಸದೇ ಹೋದ ಕಾರಣವಾಗಿದ್ದರೆ, ಇನ್ನು ಕೆಲವು ಕತೆಗಳಲ್ಲಿ ಸಹಜ ವನಗಳ ಹಂಚಿಕೆಯ ವಿಷಯದಲ್ಲಿ ವಿವಾದ ಉಂಟಾದಂತಿದೆ. ಆದಿವಾಸಿಗಳಿಂದ, ಕಾಕತೀಯ ರಾಜರು ಕಪ್ಪ ವಸೂಲು ಮಾಡಿದಂತೆ ಚಾರಿತ್ರಿಕ ಆಧಾರಗಳಿವೆ. ಹೆಚ್ಚಿನ ಕಥೆಗಳಲ್ಲಿ ಕಪ್ಪವೇ ಯುದ್ಧಕ್ಕೆ ಮೂಲ ಕಾರಣ ಎಂದು ಹೇಳುತ್ತಿದೆ. ಈ ಸ್ಥಳ ಪುರಾಣಗಳಲ್ಲಿ ತುಂಬಾ ಪ್ರಚಾರಗೊಂಡ ಕಥೆ ಹೀಗಿದೆ:

ಏಳನೇ ಶತಮಾನದಲ್ಲಿ ತಮ್ಮ ವಾಸಸ್ಥಳವಾದ ಮೇಡಾರಂನಿಂದ ಕೋಯ ದೊರೆಗಳು ಬೇಟೆಗಾಗಿ ಕಾಡಿಗೆ ಹೋದಾಗ ಅಲ್ಲಿ ಹುಲಿಗಳ ಮಧ್ಯೆ ಒಂದು ಕರು ಕಾಣಿಸಿತು. ಆ ಕರುವನ್ನು ಕೋಯದೊರೆಗಳು ಕೊಪ್ಪಲಿಗೆ ತಂದಾಗಿನಿಂದ ಎಲ್ಲಾ ವಿಧವಾಗಿ ಶುಭವುಂಟಾಯಿತು. ಕೊಂಡದೇವತೆಯ (ಬೆಟ್ಟದ ತಾಯಿ) ತಮಗೆ ಶಿಶು ರೂಪದಲ್ಲಿ ಸಿಕ್ಕಿದೆಯೆಂದು ನಂಬಿ, ಕೋಯದೊರೆಗಳು ಮಾಘಶುದ್ಧ ಪೌರ್ಣಮಿದಿನದಂದು ಆ ಮಗುವಿಗೆ ಸುಮ್ಮಕ್ಕ ಎಂದು ಹೆಸರಿಟ್ಟರು. ಸಮ್ಮಕ್ಕನನ್ನು ಸಾಕಿದ ಕೋಯ ಚಕ್ರವರ್ತಿ ಮೇಡರಾಜು ತನ್ನ ಸೋದರಳಿಯನಾದ ಪಗಡಿದ್ದ ರಾಜನೊಡನೆ ಮದುವೆ ಮಾಡಿಸುತ್ತಾನೆ. ಈ ದಂಪತಿಗಳಿಗೆ ಸಾರಮ್ಮ, ನಾಗಲಮ್ಮ ಮತ್ತು ಜಂಪಣ್ಣ ಜನಿಸುತ್ತಾರೆ. ಆದರೆ ಮೇಡಾರವನ್ನು ಪಾಲಿಸುವ ಕೋಯ ದೊರೆಗಳು ಓರಗಲ್ಲು ರಾಜನಿಗೆ ಸಾಮಂತರಾಗಿದ್ದರು. ಒಂದು ವರ್ಷ ಬರ ಬಂದಿದ್ದರಿಂದ ಕೋಯದೊರೆಗಳು ಕಾಕತೀಯರಾಜರಿಗೆ ‘ಕಪ್ಪ’ ಕಟ್ಟದಿದ್ದುದರಿಂದ ಕಾಕತೀಯ ರಾಜನಾದ ಪ್ರತಾಪರುದ್ರನು ಗಿರಿಜನರ ಮೇಲೆ ಯುದ್ಧ ಸಾರುತ್ತಾನೆ. ಕಾಕತೀಯ ಸೇನೆಯನ್ನು ಗಿರಿಜನರು ಎದುರಿಸದೆ ಹೋದರು. ಪಗಡಿದ್ದರಾಜನೊಡನೆ ಅವನ ಮಕ್ಕಳಾದ ನಾಗಲಮ್ಮ, ಸಾರಮ್ಮ, ಅಳಿಯ ಗೋವಿಂದರಾಜು ವೀರಮರಣಹೊಂದಿದರು. ಪರಾಜಯವನ್ನು ಜೀರ್ಣಿಸಿಕೊಳ್ಳಲಾಗದ ಪಗಡಿದ್ದ ರಾಜನಾದ ಜಂಪಣ್ಣ ಮೋಡಾರಂ ಸಮೀಪದಲ್ಲಿರುವ ಸಂಪಂಗಿ ಹೊಳೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡನು. ಅಂದಿನಿಂದ ಸಂಪಂಗಿ ಹೊಳೆಗೆ “ಜಂಪಣ್ಣ ಹೊಳೆ” ಎಂದು ಹೆಸರು ಸ್ಥಿರವಾಯಿತು. ಈ ಹಿನ್ನೆಲೆಯಲ್ಲಿ ಸಮ್ಮಕ್ಕ ವಿಜೃಂಭಿಸಿ ಕಾಕತೀಯ ಸೇನೆಯನ್ನು ಅಂತ್ಯಗೊಳಿಸುತ್ತಿರುವಾಗ ಒಬ್ಬ ಸೈನಿಕ ಹಿಂದಿನಿಂದ ಬಂದು ಈಟಿಯಿಂದ ತಿವಿದನು. ಆ ಗಾಯದಿಂದ ಆಕೆ ನೆತ್ತರು ಸುರಿಸುತ್ತಾ ಈಶಾನ್ಯ ದಿಶೆಗಿರುವ ‘ಚಿಲಕಲಗುಟ್ಟ’ ಮೇಲಕ್ಕೆ ಹೋಗಿ ಮಾಯವಾದಳು. ಅವಳಿಗಾಗಿ ಹುಡುಕಿದ ಕೋಯ ದೊರೆಗೆ ಗುಡ್ಡದ ಮೇಲೆ ನಾಗ ವೃಕ್ಷದ ಹತ್ತಿರ ಒಂದು ಕುಂಕುಮಭರಣಿ ಸಿಕ್ಕಿತು. ಅವರು ಆ ಭರಣಿಯನ್ನು ಸಮ್ಮಕ್ಕ ಎಂದು ಭಾವಿಸಿ ಅವಳಿಗಾಗಿ ಅನೇಕ ದಿನಗಳು ಕಾದು ನೋಡಿದರು. ಅವಳು ಮರಳಿ ಬರಲೇ ಇಲ್ಲದ ಕಾರಣ ಕುಂಕುಮ ಭರಣಿ ಸಿಕ್ಕಿದ ಸ್ಥಳದಲ್ಲೇ ಎರಡು ವರ್ಷಕ್ಕೊಮ್ಮೆ ಮುತ್ತೈದೆಯರು ಹಬ್ಬವನ್ನು ಆಚರಿಸುತ್ತಿದ್ದಾರೆ. ಕಾಲಕ್ರಮೇಣ ಆ ಹಬ್ಬ ಜಾತ್ರೆಯಾಗಿ ಪರಿಣಮಿಸಿ ಅನೇಕ ಬದಲಾವಣೆಗಳಿಗೆ ಒಳಗಾಗಿ ಲಕ್ಷೋಪಲಕ್ಷ ಗಿರಿಜನೇತರ ಜನರು ಗಿರಿಜನ ಸಂಸ್ಕೃತಿಯಲ್ಲಿ ಭಾಗವಹಿಸುವಂತಾಗಿದೆ. ಆ ಸಂಸ್ಕೃತಿ ಕೂಡ ಎಲ್ಲರನ್ನು ತನ್ನವರೆಂದೇ ಭಾವಿಸಿಕೊಳ್ಳುತ್ತದೆ.

ಬಿ. ಕೆ. ಆರ್. ಅನುವಾದ ಎ. ವಿ. ಎ.

 

ಸರ್ವಾಯಿಪಾಪನಿ ಕಥ : ತೆಲಗಿನ ಅತ್ಯಂತ ಜನಪ್ರಿಯ ಕಥನಕಾವ್ಯಗಳಲ್ಲಿ ಇದು ಒಂದು. ಸರ್ವಾಯಿ ಪಾಪಡು ಹುಟ್ಟಿದ್ದು ‘ಪೊಲಗಾಮು (ಬೆಳಗಾವಿ ?), ಬೆಳೆದಿದ್ದು ತಾಟಿಕೊಂಡ. ವೃತ್ತಿ ಪಶುಪಾಲನೆ, ಕಳ್ಳು ಇಳಿಸುವುದು. ಇವನು ಈಡಿಗ ಜಾತಿಯವನು, ತಾಯಿಯ ಹೆಸರು ಸರ್ವಮ್ಮ. ಇದರಿಂದ ಇವನಿಗೆ ಸರ್ವಾಯಿಪಾಪಡು ಎಂಬ ಹೆಸರು ಬಂದಿತು. ಒಂದು ದಿನ ಇವನು ಹಸುಗಳನ್ನು ಕಾಡಿನಲ್ಲಿ ಮೇಯಿಸಲು ಬಿಟ್ಟು ಒಂದು ಮರದ ಕೆಳಗೆ ನಿದ್ದೆ ಹೋದ. ಆಗ ಹನ್ನೆರಡು ಹೆಡೆಗಳ ಸರ್ಪ ಹೆಡೆ ಎತ್ತಿ ಅವನಿಗೆ ಛತ್ರಿಯಂತೆ ನಿಂತಿತ್ತು. ಕಾಶಿಯಿಂದ ರಾಮೇಶ್ವರಕ್ಕೆ ಹೋಗುತ್ತಿದ್ದ ಬ್ರಾಹ್ಮಣರು ಈತನನ್ನು ನೋಡಿ ‘ಗೋಲ್ಕೊಂಡನನ್ನು ಆಳಲು ಈತನಿಗೆ ಶಕ್ತಿ ಇದೆ’. ಎಂದು ಹೇಳಿದರು. ಪಾಪಡು ಮನೆಗೆ ಬಂದು ತಾನು ಕುಲವೃತ್ತಿಯನ್ನು ಮಾಡುವುದಿಲ್ಲವೆಂದು, ಪಾಳೆಗಾರನಾಗುತ್ತೇನೆಂದು ಹೇಳುತ್ತಾನೆ. ತಾಯಿ ಕುಲವೃತ್ತಿಯನ್ನು ಬಿಡಬೇಡವೆಂದು ದಿಟ ಹೇಳುತ್ತಾಳೆ. ಆದರೆ ಅವನಿಗೆ ತಾಯಿ ಮಾತು ರುಚಿಸೋದಿಲ್ಲ. “ಊರನ್ನು ಹೊಡೆದರೆ ಏನು ಫಲ, ಹಳ್ಳಿಯನ್ನು ಹೊಡೆದರೆ ಏನು ಫಲ, ಹೊಡೆದರೆ ಗೋಲ್ಕೊಂಡವನ್ನೇ ಹೊಡೆಯಬೇಕು.” ಎನ್ನುತ್ತಾನೆ. ನೆಲ್ಲೂರು, ಕಡಪ, ಕಣ್ಣೂರು, ಮೈಸೂರು, ಚೆನ್ನಪಟ್ಟಣ ಹೊಡೆಯಬೇಕೆಂಬುದು ಅವನ ಆಸೆಯಾಗಿತ್ತು.

ಸರ್ವಾಯಿ ಪಾಪಡು ತಾಯಿ ಬಚ್ಚಿಟ್ಟಿದ್ದ ಹಣವನ್ನೆಲ್ಲ ಬಲಾತ್ಕಾರವಾಗಿ ತೆಗೆದುಕೊಂಡು ಸೈನ್ಯದಲ್ಲಿ ಮಿತ್ರರನ್ನು ಸೇರಿಸಿಕೊಂಡು ಭುವನಗಿರಿ, ಓರುಗಲ್ಲು ದುರ್ಗಗಳನ್ನು ವಶಪಡಿಸಿಕೊಂಡ. ಶಾಹಪುರ, ತಾಟಿಕೊಂಡ ಎಂಬ ಪ್ರದೇಶಗಳಲ್ಲಿ ಕಟ್ಟೆಗಳನ್ನು ನಿರ್ಮಿಸಿದ. ೧೨ ಸಾವಿರ ಸೈನ್ಯದೊಂದಿಗೆ ಗೋಲ್ಕೊಂಡದ ಮೇಲೆ ಯುದ್ಧಕ್ಕೆ ಹೋದ. ಅದನ್ನು ಗೆದ್ದು ಸ್ವಲ್ಪ ದಿನ ಆಳಿದ. ಅನಂತರ ದೆಹಲಿಯ ಸುಲ್ತಾನ್‌ ಕಳುಹಿಸಿದ ಯುಸಫ್‌ ಖಾನ್‌ ಎಂಬ ಸುಬೇದಾರನ ಕೈಯಲ್ಲಿ ಸೋತಿದ್ದಲ್ಲದೆ ಸತ್ತುಹೋದ.

ಸರ್ವಾಯಿ ಪಾಪನಿಗೆ ೧೨ ಜನ ಸ್ನೇಹಿತರು. ಇವರೆಲ್ಲ ಗೋಲ್ಕೊಂಡ ಗೆಲ್ಲಲು ಹೋಗುವಾಗ ವೀರಪಾನ ಮಾಡಬೇಕೆಂದು ಕೊಂಡರು. ಅವರಿಗೆ ಅನೇಕ ತರಹದ ಕಳ್ಳು ಸಿಕ್ಕಿತ್ತು. ಮಾತನಾಡುವ ಕಳ್ಳು, ಅಮಲೇರಿಸುವ ಕಳ್ಳು, ನಿದ್ದೆ ಮಾಡಿಸುವ ಕಳ್ಳು, ಜಗಳವಾಡುವ ಕಳ್ಳು ಇತ್ತು. ಆದರೆ ಅವನು ಯುದ್ಧಕ್ಕೆ ಹೋಗುತ್ತಿದ್ದುದರಿಂದ ಅವನಿಗೆ ಕತ್ತರಿಸುವ ಕಳ್ಳು ಬೇಕಾಗಿತ್ತು. ಆತ ಒಂದು ತಾಳೆ ಮರದ ಬಳಿ ಹೋಗಿ ‘ನನಗೆ ಕತ್ತರಿಸುವ ಕಳ್ಳು ಸುರಿ’ ಎಂದು ಗರ್ಜಸಿದನು. ಆಗ ಆ ಮರ ಹೆದರಿ ಆತನ ಬಾಯಲ್ಲಿ ಕತ್ತರಿಸುವ ಕಳ್ಳನ್ನು ಸುರಿಯಿತಂತೆ. ಸರ್ವಾಯಿಪಾಪಡು ಗೋಲ್ಕೊಂಡವನ್ನು ಗೆದ್ದದ್ದು, ಅನಂತರ ಬಂದಿಯಾಗಿ ಕೊನೆಗೆ ಸಾವನ್ನಪ್ಪಿದ್ದು ಈ ಕತೆಯಲ್ಲಿ ಅತ್ಯಂತ ಆಕರ್ಷಕವಾಗಿ ಮೂಡಿಬಂದಿದೆ.

ಟಿ. ವಿ. ಎಸ್‌. ಅನುವಾದ ಎ. ಎಂ. ಡಿ.

 

ಸವರಲು ಸವರಲು ಆಂಧ್ರದ ಶ್ರೀಕಾಕುಳಂ, ವಿಜಯನಗರಂ ಜಿಲ್ಲೆಗಳಲ್ಲಿಯೂ, ಓರಿಸ್ಸಾ ಪ್ರಾಂತದ ಕೆಲವು ಭಾಗಗಳಲ್ಲಿಯೂ ವಾಸಿಸುತ್ತಿದ್ದಾರೆ. ಬೆಟ್ಟದ ಇಳಿಜಾರುಗಳಲ್ಲಿ, ಬೆಟ್ಟದ ಝರಿಗಳ ಬಳಿ ಗುಡಿಸಲು ಕಟ್ಟಿಕೊಳ್ಳುತ್ತಾರೆ. ಸವರ ಭಾಷೆಯನ್ನು ಮಾತನಾಡುತ್ತಾರೆ. ಇದು ಪುರಾತನವಾದ ಆಸಿಯಾ ಭಾಷಾ ಕುಟುಂಬಕ್ಕೆ ಸೇರಿದ ಕೋಲ್‌ ಮುಂದಾ ಭಾಷಾ ಸಮುದಾಯಕ್ಕೆ ಸೇರಿದುದು. ಸಮಾಜದಲ್ಲಿ ನಾಯಕತ್ವವನ್ನು ಪಡೆಯಲು ಮೂರು ಮೂರು ರಂಗಗಳಿರುತ್ತವೆ. ೧. ಗಮಂಗ್‌, ೨. ಬುಯ್ಯ, ೩. ಪರ್ಜ.

ಗ್ರಾಮಕ್ಕೆ ‘ಗಮಂಗ್‌’ ಹಿರಿಯನಾದರೆ ‘ಬುಯ್ಯ’ ಧಾರ್ಮಿಕ ವಿಷಯಗಳಿಗೆ ಮುಖಂಡ. ಗಮಂಗ್‌ ಆಸ್ತಿಯ ವಿಷಯದಲ್ಲಿ ಸ್ಥಿತಿವಂತನಾಗಿರುತ್ತಾನೆ. ‘ದೇಸರಿ’ ಎಂಬ ಧಾರ್ಮಿಕ ಕಾರ್ಯನಿವಾಹಕ ಸಮರರ ಸಾಮಾಜಿಕ, ಧಾರ್ಮಿಕಪರವಾದ ವಿಧಿಗಳನ್ನು ನಿರ್ವಹಿಸುತ್ತಾನೆ. ಸವರರು ವಾಸಿಸುವ ಗ್ರಾಮವನ್ನು ‘ಗೋರ್ಜಾನ್‌’ ಎಂದು ಕರೆಯುತ್ತಾರೆ. ಒಣ ಬೇಸಾಯವನ್ನು ಅವಲಂಬಿಸಿದ್ದಾರೆ. ಆಗಸ್ಟನಿಂದ ಡಿಸೆಂಬರ್ ತಿಂಗಳವರೆಗೆ ನಾನಾ ಬಗೆಯ ಬೆಳೆಗಳನ್ನು ಬೆಳೆಯುತ್ತಾರೆ. ನೀರಾವರಿ ಕಡಿಮೆ. ಬತ್ತ, ಜೋಳ, ರಾಗಿ, ತೊಗರಿ ಮೊದಲಾದ ಬೆಳೆಗಳನ್ನು ಬೆಳೆಯುತ್ತಾರೆ. ಇವರು ಮಾಂಸಹಾರಿಗಳು. ಪಕ್ಷಿಗಳ, ಪ್ರಾಣಿಗಳ ಮಾಂಸವನ್ನೂ ದನದ ಮಾಂಸವನ್ನೂ ತಿನ್ನುತ್ತಾರೆ. ಜೇನನ್ನು ಶೇಖರಿಸುತ್ತಾರೆ. ವಿಧವಾ ವಿವಾಹ, ದೇವರ ನ್ಯಾಯ ವಿವಾಹ, ಭಾರ್ಯ ಭಗಿನೀ ನ್ಯಾಯ ವಿವಾಹಗಳಿವೆ.

‘ರುದನ್‌’ ಸ್ತೋತ್ರಗಳನ್ನು ಹೇಳಿ, ಆಚಾರಗಳನ್ನು ನಿರ್ವಹಿಸಿ ಬಲಿ ಕೊಡುತ್ತಾನೆ. ಆತ ‘ಕುದನ್‌ ಸಾಗ್ರಾಯ್‌’ ಎಂಬ ವಾದ್ಯ ಮತ್ತು ‘ಕುದನ್‌ ಬೋಯ್‌’ ಎಂಬ ಸಂಗೀತ ವಾದ್ಯವನ್ನು ಮೀಟುತ್ತಾ ಸ್ತೋತ್ರಗಳನ್ನು ಹಾಡುತ್ತಾನೆ. ಸವರರು ಅನೇಕ ಮಂದಿ ದೇವತೆಗಳನ್ನು, ಪೂರ್ವಿಕರನ್ನು ತೃಪ್ತಿಪಡಿಸುತ್ತಾರೆ. ಉದಾರ ಶಕ್ತಿಗಳು, ಕ್ಷುದ್ರ ಶಕ್ತಿಗಳು ಎರಡನ್ನೂ ನಂಬುತ್ತಾರೆ. ಉದಾರ ದೇವತೆಗಳಲ್ಲಿ ಭೂಮಿಗೆ, ಬೆಟ್ಟಕ್ಕೆ, ಗಡಿಗೆಗೆ, ಸೂರ್ಯನಿಗೆ, ಮಳೆಗೆ ಗಾಳಿಗೆ, ಜಲಪಾತಕ್ಕೆ ಸಂಬಂಧಿಸಿದ ದೇವರಗಳಿರುತ್ತಾರೆ. ಸವರರಿಗೆ ಎಷ್ಟು ರೋಗಗಳು ಗೊತ್ತಿವೆಯೋ ಅಷ್ಟು ಕ್ಷುದ್ರ ದೇವತೆಗಳಿದ್ದಂತೆಯೇ. ಸವರರು ಮನೆಯ ಗೋಡೆಯ ಮೇಲೆ ‘ಎಡಿಸಿಂಗ್‌’ ಎಂದು ಕರೆಯಲಾಗುವ ಆಕೃತಿಗಳನ್ನು ಬರೆಯುತ್ತಾರೆ ಅದನ್ನು ‘ಲಿಂಗೋರ್’ ಎಂದು ಕರೆಯುತ್ತಾರೆ. ಅವರು ಆ ಗೊಂಬೆಗಳನ್ನು ಸತ್ತವರ ಗೌರವಾರ್ಥ, ರೋಗರುಜಿನಗಳನ್ನು ತಡೆಯಲು ಕೆಲವು ಹಬ್ಬಗಳ ಸಂದರ್ಭದಲ್ಲಿ ಬರೆಯುತ್ತಾರೆ. ತಮ್ಮ ದೈನಂದಿನ ಜೀವನದಲ್ಲಿ ಕಾಣುವ ಸೂರ್ಯ, ಚಂದ್ರ, ಪ್ರಾಣಿಗಳು ಮುಂತಾದವೆಲ್ಲ ಆ ಚಿತ್ರಗಳಲ್ಲಿರುತ್ತವೆ.

ಬಿ. ಕೆ. ಆರ್. ಅನುವಾದ ಕೆ. ಎಸ್‌.