ಸಾಂಬವರು ಕೇರಳದ ಔದ್ಯೋಗಿಕ ದಾಖಲೆಗಳಲ್ಲಿ ಪರಯರ್ ಎಂದೂ ಸಾಂಬವರ್ ಎಂದೂ ಗುರುತಿಸಲಾದ ಒಂದು ಜನ ಸಮುದಾಯ. ಪರಯರ್ಗೆ ನಿಘಂಟುಗಳಲ್ಲಿ ಕುಡಿಯರಲ್ಲಿ ಒಂದು ಜಾತಿ, ಪರೆ ಕಟ್ಟುವವರು ಮುಂತಾದ ಅರ್ಥಗಳನ್ನು ಕೊಡಲಾಗಿದೆ. ಪಹೇರಿಯನ್‌ (ಪರ್ವತವಾಸಿ) ಎಂಬ ಸಂಸ್ಕೃತ ಪದದಿಂದಲೋ, ಪೊರೈಯರ್ (ಮಲೆನಾಡು ವಾಸಿಗಳು) ಎಂಬ ತಮಿಳು ಪದದಿಂದಲೋ ಪರಯರು ಎಂಬ ಪದದ ಹುಟ್ಟು ಆಯಿತು ಎಂದು ವಿಶ್ವವಿಜ್ಞಾನ ಕೋಶದಲ್ಲಿ ಹೇಳಿದೆ.

ಸಾಂಬವರ್ ಎಂಬ ಜಾತಿ ಹೆಸರನ್ನು ಸಾಮಾನ್ಯವಾಗಿ ಇವರು ಸ್ವೀಕರಿಸಿದ್ದಾರೆ. ತಮಿಳು ಸಂಘಂಕಾಲದಲ್ಲಿ ಮೂರನೆಯ ದೊಡ್ಡ ವರ್ಗ ಎಯಿನರ್ ಅಥವಾ ಪರಯರ್ ಆಗಿದ್ದರು ಎಂದೂ ಈ ವರ್ಗದ ಒಳಪಂಗಡಗಳೇ ಇಂದಿನ ಪುಲಯರ್, ಮಾಳರ್, ಮಡಿಗರ್, ಪಳ್ಳರ್, ಮುಂತಾದವರು ಎಂದೂ, ವಿಶ್ವ ವಿಜ್ಞಾನ ಕೋಶದಲ್ಲಿ ನಮೂದಿಸಿದೆ.

ಇವರ ಕುರಿತು ಮುಖ್ಯವಾಗಿ ಕೆಲವು ವಿಚಾರಗಳನ್ನು ಹೇಳುತ್ತಾರೆ. ಬತ್ತದ ಪೈರು ಇರುವ ಅಂಗಳಗಳಲ್ಲಿ ‘ಪೊಲಿ’ ಕರೆಯುವಾಗ ‘ಪೊಲಿ ಬಾ ಪೊಲಿ’ ಎಂದು ಪ್ರತಿಯೊಂದು ಬಾರಿಯೂ ಕರೆದು ಹೇಳುವವರು ಪರಯರು. ಹೇಳಲು (ಮ. ಪರಯನ್‌) ಕಲಿತವರು ಪರಯರು. ಪಾಕ್ಕನಾರ್ ನ ವಂಶದಲ್ಲಿ ಹುಟ್ಟಿದವರು ಪರವರಾದರು – ಇತ್ಯಾದಿ ವಿಚಾರಗಳು ವ್ಯಕ್ತವಾಗಿವೆ. ಹಿಂದಿನ ಕಾಲದಲ್ಲಿ ಪರಯನೆಂಬ ಹೆಸರು ನಿಂದ್ಯವಾಗಿತ್ತೆಂದೂ. ಆದರ ಸ್ಥಾನದಲ್ಲಿ ಸಾಂಬವನ್‌ ಎಂದು ಬದಲಾಯಿಸಬೇಕೆಂದೂ ಶ್ರೀಮೂಲಂ ಅರಸರ ಪ್ರಜಾಸಭೆಯಲ್ಲಿ ಆ ಸಮುದಾಯದ ನೇತಾರ ಪಳಿಕುಂ ಞೌಣಿ ಎಂಬಾತ ವಾದಿಸಿದ. ಇದರ ಪರಿಣಾಮವಾಗಿ ತನ್ನ ಹೆಸರನ್ನೇ ಶ್ರೀ ಸುಬ್ರಹ್ಮಣ್ಯ ಸಾಂಬವನ್‌ ಎಂದು ಬದಲಾಯಿಸಿಕೊಂಡರು. ಜಾತಿ ವ್ಯವಸ್ಥೆಯ ಶ್ರೇಣಿಯಲ್ಲಿ ಅತ್ಯಂತ ಕೆಳಗಿನವರಾಗಿ ಇತರ ಜಾತಿಯವರು ಇವರನ್ನು ಪರಿಗಣಿಸಿದರು. ಅಸ್ಪೃಶ್ಯತೆ ಮತ್ತು ಜೀತ ಜಾರಿಯಲ್ಲಿದ್ದ ಆ ಕಾಲದಲ್ಲಿ ಪರಯನೆಂದು ಹೇಳಲು ಸಂಕೋಚ ಪಟ್ಟುಕೊಳ್ಳುತ್ತಿದ್ದರು. ಆ ಕಾರಣಕ್ಕೆ ಇರಬೇಕು ವಿಧಾನಸಭೆಯಲ್ಲಿ ಹೆಸರನ್ನು ಬದಲಾಯಿಸಬೇಕೆಂದು ಅವರ ಪ್ರತಿನಿಧಿ ವಾದಿಸಿದುದು. ಹೆಸರಿನೊಂದಿಗೆ ಸೇರಿಸಿ ಯಾರೂ ಜಾತಿಯ ಹೆಸರನ್ನು ಉಪಯೋಗಿಸಿದುದು ಕಂಡು ಬರುತ್ತಿಲ್ಲ. ಔದ್ಯೋಗಿಕ ದಾಖಲೆಗಳಲ್ಲಿ ಸಾಂಬವನಾದರೂ ಪರಯ ಎಂದೇ ಈಗಲೂ ಸಾಮಾನ್ಯವಾಗಿ ಕರೆಸಿಕೊಳ್ಳುತ್ತಿದ್ದಾರೆ.

ಸಾಂಬವರ ಪರಂಪರಾಗತ ಬದುಕಿನ ವಿಚಾರಗಳು ಅಧ್ಯಯನ ಯೋಗ್ಯವಾಗಿವೆ. ಉಳಿದ ಜಾತಿಗಳಲ್ಲಿನಂತೆ ಸಾಂಬವರಲ್ಲಿ ಜೀವನ ಶೈಲಿಯಲ್ಲಿ ಪ್ರಾದೇಶಿಕ ಭಿನ್ನತೆಯಿದೆ. ವಿಭಿನ್ನ ಕಾಲಘಟ್ಟಗಳಲ್ಲಿನ ಜನ ಜೀವನ ಕ್ರಮಕ್ಕೆ ನಮ್ಮನ್ನು ಕೊಂಡೊಯ್ಯುವ ಸಂಗತಿಗಳಲ್ಲಿ ಜನಪದ ಸಾಹಿತ್ಯವೂ ಒಂದು. ಜನಪದ ಗೀತೆಗಳು, ಕಥೆಗಳು, ಐತಿಹ್ಯಗಳು, ಸೃಷ್ಟಿಪುರಾಣಗಳು, ಗಾದೆ -ಒಗಟುಗಳು, ಜನಪದ ಸಂಗೀತ ಇವೆಲ್ಲವೂ ಸಾಂಬವರ ಮೌಖಿಕ ಸಾಹಿತ್ಯದಲ್ಲಿ ಇವೆ.

ಬ್ರಾಹ್ಮಣ ಜಾತಿಯ ಒಂದು ವಿಭಾಗವೇ ಪರಯರಾದರು ಎಂಬ ಐತಿಹ್ಯವಿದೆ. ತಮ್ಮ ಹುಟ್ಟನ್ನು ಹೇಳುವಲ್ಲಿ ದಿವ್ಯತೆ, ವೈಭವ, ಅಂತಸ್ತು ಇತ್ಯಾದಿಗಳಿದ್ದ. ಪೂರ್ವಜರನ್ನು ಕಲ್ಪಿಸಿಕೊಂಡು ಕಥೆಕಟ್ಟುವ ಮತ್ತು ಅದನ್ನು ಹಾಡಿ ಹೊಗಳುವ ಹಲವು ಸಮುದಾಯದವರ ಜನಪದ ಸಾಹಿತ್ಯದ ಹಾಗೆಯೇ ಸಾಂಬವರ ಜನಪದ ಸಾಹಿತ್ಯವೂ ಇದೆ. ಪರವರ ಸೃಷ್ಟಿಪುರಾಣ ಐತಿಹ್ಯಗಳಲ್ಲಿ ಮೂಡಿಬರುವ ವ್ಯಕ್ತಿ ಪಾಕ್ಕನಾರ್. ಪಾಕ್ಕನಾರನ ಮಹತ್ವವನ್ನು ಹಾಡಿ ಹೊಗಳುವ ವಾಙ್ಮಯವು ಪ್ರಾದೇಶಿಕ ವ್ಯತ್ಯಾಸಗಳೊಂದಿಗೆ ಪರವರ ಮಧ್ಯೆ ಪರಂಪರಾಗತವಾಗಿ ಬಂದಿದೆ. ದಿವ್ಯ ಪರಂಪರೆಗೆ ಸೇರಿದವರು ತಾವೆಂದು ಸಮರ್ಥಿಸಿಕೊಳ್ಳಲು ಈ ತೆರನ ಪೂರ್ವ ವೃತ್ತಾಂತಗಳು ಮತ್ತು ಐತಿಹ್ಯಗಳು ಸಹಾಯಕವಾಗುತ್ತವೆ. ಅಸ್ಪೃಶ್ಯತೆಯನ್ನು ಹೇರಿ ಸಮಾಜದ ಮುಖ್ಯವಾಹಿನಿಯಿಂದ ಸಾಂಬವರನ್ನು ದೂರ ಸರಿಸಿದುದರ ಕಾರಣವು ಪೂರ್ವವೃತ್ತಾಂತ / ಸೃಷ್ಟಿಪುರಾಣಗಳಲ್ಲಿ ಸೂಚಿತವಾಗಿದೆ.

ಸಮಾಜ ವ್ಯವಸ್ಥೆಯಲ್ಲಿ ಹಿಂದೊಮ್ಮೆ ಎತ್ತರದ ಸ್ಥಾನವನ್ನು ಅಲಂಕರಿಸಿದವರೆಂದೂ ಅಸ್ಪೃಶ್ಯತೆ, ಜೀತ ಮುಂತಾದವುಗಳ ಮೂಲಕ ಸಾಮಾಜಿಕ ಸ್ಥಾನಮಾನಗಳನ್ನು ಕಳೆದು ಕೊಂಡು ಕೆಳಗಿನ ವರ್ಗದವರಾಗಿ ಬಿಟ್ಟವರೆಂದೂ ಇದರಿಂದ ಹೊಮ್ಮುವ ಒಟ್ಟಿನ ಆಶಯ. ಪರಯ ಸಮಾಜವು ಹಿಂದೆ ಉನ್ನತ ಪದವಿಯಲ್ಲಿ ಇತ್ತೆಂದೂ ಭೂಮಾಲೀಕರಾಗಿದ್ದವರೆಂದೂ ಸಾಂಬವರು ನಂಬುತ್ತಾರೆ. ಬಾಹ್ಯ ಶಕ್ತಿಗಳ ಪ್ರವೇಶದಿಂದ ತಮಗೆ ಅವನತಿ ಸಂಭವಿಸಿತೆಂದು ವ್ಯಾಪಕವಾಗಿ ಇವರ ನಂಬುಗೆ. ಕೃಷಿಯ ಜತೆ ತಮ್ಮ ಕುಲಕಸುಬಿನ ಕೆಲಸಗಳಾದ ಬೇರೆ ಬೇರೆ ವಸ್ತುಗಳನ್ನು ಬೆತ್ತ, ಬಿದಿರು, ಓಟೆಬಿದಿರು ಮುಂತಾದುವುಗಳಿಂದ ತಯಾರಿಸಿ ಉದರಂಭರಣ ಮಾಡಿಕೊಳ್ಳುತ್ತಾರೆ.

ವೆಳ್ಳಿಯನ್‌, ತೇಯಿಯನ್‌, ಕವರನ್‌, ಚರುನಾಡನ್‌ ಎಂಬ ಮುಖ್ಯ ನಾಲ್ಕು ಮನೆತನಗಳು ಸಾಂಬವಂಗಿವೆ. ಇವುಗಳಲ್ಲದೆ ಮೆಬ್ರಂಙಳ್‌, ತಚ್ಚನಿಲ್ಲಂ ಮುಂತಾದ ಮನೆಗಳು ಮೇಲೆ ಹೇಳಿದ ನಾಲ್ಕು ಮನೆತನಗಳಿಗಿಂತ ಕೆಳಗಿನವೆಂದು ಪರಿಗಣಿತವಾಗಿದೆ. ಮುಖ್ಯವಾದ ಆಗು ಹೋಗುಗಳಿಗೆ ನಾಲ್ಕು ಮನೆತನಗಳವರ ಪ್ರಾತಿನಿದ್ಯವು ಅನಿವಾರ್ಯ. ಅವುಗಳ ಪ್ರತಿನಿಧಿಗಳನ್ನು ಮುಂದಿಟ್ಟುಕೊಂಡೇ ಎಲ್ಲ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಒಂದೇ ಮನೆತನದವರಲ್ಲಿ ಪರಸ್ಪರ ವಿವಾಹವು ನಿಷಿದ್ಧವಾಗಿದೆ. ಅವರು ಪರಸ್ಪರ ಸಂಬಂಧದಲ್ಲಿ ಸಹೋದರರೆಂದು ಪರಿಗಣಿತವಾಗುತ್ತಾರೆ. ಇದು ಇಂದೂ ಆಚರಣೆಯಲ್ಲಿದೆ.

ಜೀತ ಮತ್ತು ಅಸ್ಪೃಶ್ಯತೆಗಳನ್ನು ಅದರ ಪೂರ್ಣ ಅರ್ಥದಲ್ಲಿ ಅನುಭವಿಸಬೇಕಾಗಿ ಬಂದ ಒಂದು ಜಾತಿ ಸಾಂಬವರದು. ಗುಲಾಮ ವ್ಯಾಪಾರಕ್ಕೂ ಇವರು ಬಲಿಯಾಗಬೇಕಾಯಿತು. ಮೇಲ್ಜಾತಿಯವರು ಬರುವಾಗ / ಸಾನ್ನಿಧ್ಯದಲ್ಲಿ ಇವರು ಎಷ್ಟು ದೂರ ತೊಲಗಿ ನಿಲ್ಲಬೇಕೆಂಬುದಕ್ಕೆ ಸಂಬಂಧಿಸಿದ ಅಂದು ರೂಢಿಯಲ್ಲಿದ್ದ ಕಟ್ಟುಪಾಡುಗಳನ್ನು ಇತರ ಜನವರ್ಗಗಳಂತೆ ಇವರೂ ಪಾಲಿಸಿದರು. ಪರಯರು ಅರುವತ್ತನಾಲ್ಕು ಹೆಜ್ಜಗಳಷ್ಟು ದೂರ ತೊಲಗಿ ನಿಲ್ಲಬೇಕೆಂಬುದು ಲೆಕ್ಕಾಚಾರವಾಗಿತ್ತು.

ಜಾತಿ ವ್ಯವಸ್ಥೆಯ ದುಷ್ಪರಿಣಾಮಗಳಾದ ಅಸ್ಪೃಶ್ಯತೆಯ ಆಚರಣೆ ಮತ್ತು ಜೀತ ಪದ್ಧತಿಯು ಈ ಸಮುದಾಯದವರು ಮತಾಂತರಗೊಳ್ಳಲು ಒಂದಿಷ್ಟು ಪ್ರೇರಣೆಯಾಯಿತು. ಕ್ರಿಶ್ಚಯನ್‌ ಮತ್ತು ಇಸ್ಲಾಂ ಮತಕ್ಕೆ ಅವರು ಒಲಿದರು. ಆದರೆ ಮತಾಂತರಗೊಂಡರೂ ಜಾತಿಪದ್ಧತಿಯ ಕೆಡಕುಗಳಿಂದ ಪಾರಾಗಲು ಇವರಿಗೆ ಸಾಧ್ಯವಾಗಿಲ್ಲ.

ಎ. ಕೆ. ಎ. ಅನುವಾದ ಕೆ. ಕೆ.

 

ಸಾಟ್ರುಪ್ಪಾಡು ತಮಿಳಿನ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಜೀವಿಸುವ ‘ಕಾಣಿಕ್ಕಾರರ್’ ಎನ್ನುವ ಆದಿವಾಸಿ ಜನರ ಹಾಡು. ‘ಸಾಟ್ರು’ ಎಂಬುದಕ್ಕೆ ಸಾರು, ಹೇಳು, ಹೊಗಳುವುದು ಎಂಬ ಅರ್ಥಗಳಿವೆ. ಈ ಪದ ಪೂಜೆ, ಉತ್ಸವ, ಆಚರಣೆಗಳೊಂದಿಗೆ ಸಂಬಂಧ ಹೊಂದಿದೆ. ‘ಸಾರುದಲ್‌’ (ಸಾರುವುದು) ಎಂಬುದಕ್ಕೆ ಧಾನ್ಯವನ್ನು ತೂರುವುದು, ನೆಲ ಕೆತ್ತುವುದು, ಸಾವಿನ ಮನೆಯಲ್ಲಿ ಸತ್ತವರಿಗೆ ಎಡೆ ಹಾಕುವುದು ಎಂಬ ಅರ್ಥವೂ ಬಳಕೆಯಲ್ಲಿದೆ. ಕಾಣಿಕ್ಕಾರರ್ ಕುಲಕ್ಕೆ ಸೇರಿದವರು ನಡೆಸುವ ಜಾತ್ರೆ ದೇವರು-ದೆವ್ವಗಳ ಪೂಜಾ ಸಂದರ್ಭದಲ್ಲೂ ಬೇಟೆ, ಬೇಸಾಯ, ಹುಟ್ಟು-ಸಾವಿನ ಆಚರಣೆಗಳ ಸಂದರ್ಭದಲ್ಲೂ ಸಾಟ್ರು ಹಾಡುಗಳನ್ನು ಹೇಳುತ್ತಾರೆ.

ಹಿಂದೆ, ಅಗಸ್ತ್ಯ ವಂಶಕ್ಕೆ ಸೇರಿದವರಲ್ಲಿ ಒಬ್ಬ ಮುದುಕಿಯನ್ನು ಹೊರತುಪಡಿಸಿ ಉಳಿದೆಲ್ಲರೂ ರೋಗರುಜಿನ ಬಂದು ಸತ್ತು ಹೋದರು. ಆಗ ಅಗಸ್ತ್ಯ ಮಹರ್ಷಿ ಬಂದು ಆ ಮುದುಕಿಗೆ ‘ಸಾಟ್ರು’ ಹಾಡನ್ನು ಹೇಳಿಕೊಟ್ಟರು. ಅದನ್ನು ಹಾಡಿದ ಮುದಕಿ ಗುಣ ಹೊಂದಿದಳು ಎಂಬುದು ಇವರ ನಂಬಿಕೆ. ರೋಗಗಳನ್ನು ಗುಣಪಡಿಸಲು ‘ಸಾಟ್ರುಪ್ಟಾಟ್ಟು’ ಹಾಡುವ ಪದ್ಧತಿ ಅಂದಿನಿಂದ ರೂಢಿಗೆ ಬಂತು. ನಾನಾ ಸನ್ನಿವೇಶ-ಸಂದರ್ಭಗಳಿಗೆ ತಕ್ಕಂತೆ ಹಲವು ಬಗೆಯ ಹಾಡುಗಳನ್ನು ಇವರು ಹಾಡುತ್ತಾರೆ. ಅವುಗಳಲ್ಲಿ ‘ತಾರ್ಕೀಕ ಸಾಟ್ರುಪ್ಟಾಟ್ಟು’ ಎಲ್ಲ ವಿಧದ ‘ಸಾಟ್ರುಪ್ಟಾಟ್ಟು’ ಗಳಿಗೂ ಮೂಲವೆಂದು ಇವರು ಹೇಳುತ್ತಾರೆ. ಆದುದರಿಂದ ಅದನ್ನು ‘ಮೂಲಹಾಡು’ ಎಂದು ಕರೆಯುವುದೂ ರೂಢಿಯಲ್ಲಿದೆ.

ಬೇಟೆಗೆ ಹೋಗುವ ಸಂದರ್ಭದಲ್ಲಿ ‘ನಾಯಿ’ಯನ್ನು ಕರೆದುಕೊಂಡು ಹೋಗುವುದು ಅನಿವಾರ್ಯ. ಹೀಗಾಗಿ ನಾಯಿಯ ಮೇಲೆ ಹಾಡುವ ‘ನಾಯಿ ಸಾಟ್ರು’ ಕೂಡ ಇದೆ. ವ್ಯವಸಾಯ ಮಾಡುವಾಗ ಬೆಳೆ ಸಮೃದ್ಧಿಯಾಗಲಿ ಎಂಬ ಉದ್ದೇಶದಿಂದ ‘ತೆನೆ/ಧಾನ್ಯ ಸಮೃದ್ಧಿ ಸಾಟ್ರು’ ಹಾಡುತ್ತಾರೆ. ಗರ್ಭಿಣಿ ಸ್ತ್ರೀಯರ ಹೆರಿಗೆ ಸಮಯದಲ್ಲಿ ಅವರ ನೋವು ಕಡಿಮೆಯಾಗಲಿ ಎಂಬ ಉದ್ದೇಶದಿಂದ ಹಾಡುವ ‘ವಯಿಟ್ರು ಪೊಂಗಾಲ್ವೆ ಸಾಟ್ರು’ (ಬಸಿರು ಉಕ್ಕುವ ಸಾಟ್ರು), ಸಾಮಾನ್ಯ ಕಾಲಿಯೆಗಳನ್ನು ಹೋಗಲಾಡಿಸಲು ‘ಪಿಣಿ ಸಾಟ್ರು’ (ರೋಗದ ಸಾಟ್ರು), ಬಹುದಿನಗಳಿಂದ ವಾಸಿಯಾಗದ ರೋಗಗಳನ್ನು ಹೋಗಲಾಡಿಸಲು ‘ಮಾಯಂಗೋವಿಲ್‌ ಸಾಟ್ರು’ (ಮಾಯದ ಆಲಯದ ಸಾಟ್ರು), ಇತ್ಯಾದಿಗಳನ್ನು ಹಾಡುತ್ತಾರೆ.

ದೆವ್ವ ಹಿಡಿದುಕೊಂಡರೆ, ಅದರಿಂದ ಬಿಡುಗಡೆ ಹೊಂದಲು ‘ಕೋಟ್ಟಪಿಣಿ ಸಾಟ್ರು’ (ದುಷ್ಟಶಕ್ತಿ ಸಾಟ್ರು) ‘ತೀಪ್ಪಿಣಿ ಸಾಟ್ರು’ (ಕೆಟ್ಟ ಶಕ್ತಿಗಳ ಸಾಟ್ರು) ಹಾಡನ್ನು ಹಾಡತ್ತಾರೆ. ಹಾಡುವ ಸ್ಥಳವನ್ನು ಮೊದಲು ಶುದ್ಧಪಡಿಸುತ್ತಾರೆ. ಹಾಗೆ ಶುಚಿಗೊಳಿಸುವ ಸಂದರ್ಭದಲ್ಲಿ ‘ವಿಳವಿಳಕ್ಕಿ ಸಾಟ್ರು’ (ಶುದ್ಧೀಕರಿಸುವ ಸಾಟ್ರು) ಹಾಡನ್ನೂ, ದೇವತೆಗಳು – ಹಾಗೂ ಪಿತೃಗಳಿಗೆ ಎಡೆ ಹಾಕುವ ಸಮಯದಲ್ಲಿ ‘ಕಪ್ಪಲಗೈ ಸಾಟ್ರು’ (ಕರಿಹಲಗೆ ಸಾಟ್ರು) ಹಾಡನ್ನು ಹಾಡುತ್ತಾರೆ. ಸಾಮಾನ್ಯವಾಗಿ ಈ ಜನರ ಜೀವನ ಕ್ರಮದ ಎಲ್ಲ ಹಂತಗಳಲ್ಲೂ, ನಾನಾ ಬಗೆಯ ಆಚರಣೆಯ ಸಂದರ್ಭದಲ್ಲೂ ಸಾಟ್ರು ಹಾಡನ್ನು ಹಾಡುವುದು ಒಂದು ಪ್ರಮುಖ ಆಚರಣೆಯಾಗಿದೆ.

‘ಕಾರ್ತೀಕ ಸಾಟ್ರು’ ಹಾಡಿನ ಆರಂಭ ಭಾಗದಲ್ಲಿ ಜಗತ್ತಿನ ಸೃಷ್ಟಿ, ಜಗದ ಜೀವಿಗಳ ಸೃಷ್ಟಿ, ದೇವತೆಗಳು, ಮನುಷ್ಯರ ಸೃಷ್ಟಿಯನ್ನು ಕುರಿತ ಭಾಗಗಳಿರುತ್ತವೆ. ಇದರಲ್ಲಿ, ‘ಕಾಣಿಕ್ಕಾರರ್’ ಕುಲದ ಸೃಷ್ಟಿ ಹೇಗಾಯಿತೆಂಬುದರ ವಿವರಣೆಗೆ ಹೆಚ್ಚಿನ ಆದ್ಯತೆ ನೀಡಿ, ಜಗದ ಜೀವರಾಶಿಯೂ ಅವರ ಸ್ಥಾನವೇನೆಂಬುದನ್ನು ನಿರೂಪಿಸಲಾಗವುದು. ದೇವದೂತನಾಗಿ ಆಯ್ಕೆಮಾಡಲಾದ ವ್ಯಕ್ತಿಯೊಬ್ಬ ಕಾಡಿಗೆ ಹೋಗಿ ಅಲ್ಲಿ ವ್ರತ ಉಪವಾಸ ಜಪ ತಪಗಳನ್ನು ಮಾಡಿ, ದೇವರಿಂದ ಸಾಟ್ರು ಹಾಡನ್ನು ಹಾಡುವ ವರ ಪಡೆದುಕೊಂಡನೆಂಬ ನಂಬಿಕೆ ಈ ಜನರಲ್ಲಿದೆ. ಈ ಹಾಡನ್ನು ಹಾಡುವ ಗುಂಪಿನ ಮುಖ್ಯಸ್ಥನನ್ನು ‘ಪಿಲಾತ್ತಿ’ (ದೇವಾಂಶ ಸಂಭೂತ) ನೆಂದು ಕರೆಯಲಾಗುವುದು. ಅವನೇ ಹಾಡನ್ನು ಮೊದಲು ಪ್ರಾರಂಭಿಸುವುದು. ಇವನನ್ನು ‘ಸಾಟ್ರುಕ್ಕಾರ’ ನೆಂದೂ ಕರೆಯಲಾಗುವುದು. ಅನಂತರ ಇವನೊಂದಿಗೆ ಇನ್ನೊಬ್ಬ ದನಿಗೂಡಿಸುತ್ತಾನೆ. ಅವನ ಗುಂಪಿನ ಇನ್ನೊಬ್ಬ ಮುಖ್ಯಸ್ಥನಾಗಿದ್ದು, ‘ಸಾಟ್ರುಕ್ಕಾರನ’ ಅನಂತರದ ಎರಡನೇ ಸ್ಥಾನ ಇವನದಾಗಿರುತ್ತದೆ. ಇವನನ್ನು ‘ಸಹ ಸಾಟ್ರುಕ್ಕಾರ’ ನೆಂದು ಕರೆಯಲಾಗುವುದು. ಆರೋಗ್ಯಕ್ಕೆ ಸಂಬಂಧಿಸಿದ ಸಾಟ್ರು ಹಾಡುಗಳನ್ನು ನಲವತ್ತು ವಯಸ್ಸಿನ ಅನಂತರದವರಷ್ಟೇ ಹಾಡಬೇಕು. ಮತ್ತು ಎಲ್ಲ ಬಗೆಯ ಸಾಟ್ರು ಹಾಡುಗಳನ್ನು ರಾತ್ರಿಯ ಹೊತ್ತು ಮಾತ್ರ ಹಾಡಬೇಕು. ಹಾಡುವವರು ಶುಚಿರ್ಭೂತರಾಗಿ, ವ್ರತವನ್ನು ಕೈಗೊಂಡಿರಬೇಕು. ಮಾಂಸಾಹಾರ ಸೇವಿಸರಬಾರದು. ಹೀಗೆ ಇದನ್ನು ಹಾಡುವವರು ಕೆಲವು ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ನಿರ್ದಿಷ್ಟವಾದ, ಇದನ್ನು ಹಾಡುವುದಕ್ಕೆಂದೇ ಸಿದ್ಧಪಡಿಸಲಾದ ಸ್ಥಳದಲ್ಲಷ್ಟೇ ಈ ಹಾಡುಗಳನ್ನು ಹಾಡಬೇಕು. ಆ ಸ್ಥಳವನ್ನು ‘ಸಾಟ್ರು ಕಳ’ ಎಂದೂ, ಮಂಟಪವನ್ನೂ ‘ಸಾಟ್ರು ಮಡಂ’ (ಮಡಲು) ಎಂದೂ ಕರೆಯಲಾಗುವುದು. ಈ ಹಾಡನ್ನು ಹೇಳುವ ಸಮಯದಲ್ಲಿ ‘ಕೊಕ್ರೆ’ ಎನ್ನುವ ಸಂಗೀತವಾದ್ಯವೊಂದನ್ನು ಬಳಸುತ್ತಾರೆ. ಈ ವಾದ್ಯದಿಂದ ‘ಕಚ್ಚಿಲಿ’, ‘ಪಿಳ್ಳಾಣಿ’, ‘ಕಮ್ಮಿಣಿ’ ಇತ್ಯಾದಿ ನಿರ್ದಿಷ್ಟ ಸ್ವರಗಳನ್ನು ನುಡಿಸಲಾಗುತ್ತದೆ. ಸಾಟ್ರು ಹಾಡನ್ನು ಹಾಡಿ ಮುಗಿಸಿದ ಮೇಲೆ ದೇವತೆಗಳಿಗೆ ಎಡೆ ಇಟ್ಟು, ನೈವೇದ್ಯ ಸಮರ್ಪಿಸಲಾಗುವುದು. ಹಾಡುವ ಸಂದರ್ಭದಲ್ಲಿ ‘ತೆಳ್ಳಿ’ ಎನ್ನುವ ಒಂದು ಬಗೆಯ ಭಂಗಿ ಸೇವನೆ ಮಾಡುವುದೂ ಉಂಟು.

ಹಾಡನ್ನು ಆರಂಭಿಸುವ ಸಮಯದಲ್ಲಿ ದೇವರು ಅಥವಾ ದೆವ್ವಗಳಿಗೆ ನಮಿಸಿ ಸ್ತುತಿಸುವ ರೀತಿಯಲ್ಲೆ, ಹಾಡಿನ ಅಂತ್ಯದಲ್ಲಿ ಆಯಾ ದೇವರು, ದೆವ್ವಗಳು ಹೆಸರುಗಳನ್ನೆಲ್ಲ ಹೇಳಿ ಮುಗಿಸುತ್ತಾರೆ. ‘ದೇವರುಗಳ ಹೆಸರನ್ನು ತಿಳಿಯದೆ ಹೇಳಿಬಿಟ್ಟೆವು. ನಮ್ಮನ್ನು ಕ್ಷಮಿಸಿ’ ಎನ್ನುವ ಬೇಡಿಕೆಯೂ ಹಾಡಿನ ಅಂತ್ಯದಲ್ಲಿರುವುದುಂಟು. ಸಾಟ್ರು ಹಾಡಿನಲ್ಲಿ ಒಂದರಿಂದ ಏಳರವರೆಗಿನ ಹಂತಗಳು (ಸ್ವರೂಪ) ಕಂಡುಬರುತ್ತವೆ.

ಪಿ. ಎನ್‌. ಅನುವಾದ ಟಿ. ಎಸ್‌.

 

ಸಾಧನಾಶೂರುಲು ಆಂಧ್ರಪ್ರದೇಶದ ಕಲಾವಿದರು. ‘ಸಾಧನ’ ಎಂದರೆ ಅಭ್ಯಾಸ. ಬಗೆಬಗೆಯ ಸಾಧನಗಳನ್ನು ಚೆನ್ನಾಗಿ ಅಭ್ಯಸಿಸಿ. ಹಲವಾರು ಉಪಕರಣಗಳಿಂದ ಸಾಧನಗಳಿಂದ ಪ್ರದರ್ಶನಗಳನ್ನು ಮಾಡುವ ಜನಪದ ಕಲಾಪ್ರದರ್ಶಕರನ್ನು ‘ಸಾಧನಾ ಶೂರ’ರೆಂದು ಆಂಧ್ರಪ್ರದೇಶದಲ್ಲಿ ಕರೆಯುತ್ತಾರೆ. ಇವರು ಅತ್ಯುತ್ತಮವಾದ ವ್ಯಾಯಾಮ ವಿದ್ಯಾ ನಿಪುಣರು. ಇಂದ್ರಜಾಲದಲ್ಲಿ ನುರಿತವರು. ಕಣ್ಕಟ್ಟು; ಮಾಯಮಾಡುವುದು; ಸಮ್ಮೋಹನ, ಅಗ್ನಿ, ವಾಯುಸ್ತಂಭನಗಳು ಮಾಡುವುದು; ಗಾರುಡಿ, ಆಕರ್ಷಣೆ ಮುಂತಾದ ವಿದ್ಯೆಗಳಲ್ಲಿಯು ಇವರು ಸಮರ್ಥರು.

ಆಂಧ್ರಪ್ರದೇಶದಲ್ಲಿ ತೆಲಂಗಾಣ, ಕೋಸ್ತಾ, ರಾಯಲಸೀಮೆ ಪ್ರಾಂತ್ಯಗಳಲ್ಲಿ ಇವರು ತಮ್ಮ ಪ್ರದರ್ಶನಗಳನ್ನು ಕೊಟ್ಟು ಜೀವನ ಮಾಡುತ್ತಿದ್ದಾರೆ. ಇವರು ತೆಲಗು ಮಾತನಾಡುವ ಪದ್ಮಶಾಲಿ ಎಂಬ ಸಾಮಾಜಿಕ ವರ್ಗಕ್ಕೆ ಸೇರಿದವರು. ಇವರನ್ನು ಯಾಚಿಸಿ ಜೀವಿಸುವ ಪಟಪ್ರದರ್ಶನ ಗಾಯಕರಂತೆಯೇ, ಸಾಧನಾಶೂರುಲು ಕೂಡ. ಇವರು ಯಾಚಿಸಿ ಸಾಹಸಪ್ರದರ್ಶನಗಳನ್ನು ಕೊಟ್ಟು ಸಂಚಾರಿಗಳಾಗಿ ಜೀವಿಸುತ್ತಿದ್ದಾರೆ. ಇವರಲ್ಲಿ ಕವಿತೆಯಾಗಲಿ, ವಾಚಕವಾಗಲಿ, ವರ್ಣನೆ ಮಾಡುವುದಾಗಲಿ, ಪದ್ಯಗಳನ್ನು ಓದುವುದಾಗಲೀ ಇರುವುದಿಲ್ಲ.

ಸಾಧನಾಶೂರರಲ್ಲಿ ಮಾರ್ಕಂಡೇಯ ಭಕ್ತರು ಹೆಚ್ಚು. ಇವರಲ್ಲಿ ಶೈವದರ್ಶನಕ್ಕೆ, ಶೈವಧರ್ಮಕ್ಕೆ ಸೇರಿದವರೇ ಹೆಚ್ಚಾಗಿ ಕಂಡುಬರುತ್ತಾರೆ. ನಾಮಧಾರಿಗಳು ಇವರಲ್ಲಿ ಹೆಚ್ಚಿನವರಿಲ್ಲ.

ಇವರ ಪ್ರದರ್ಶನಗಳಲ್ಲಿ ಪ್ರೇಕ್ಷಕರಿಗೆ ಬೇಸರ ಉಂಟಾಗದಂತೆ ಹಾಸ್ಯಮಾಡುವ ಪಾತ್ರ (ಹಾಸ್ಯಗಾರನ ಪಾತ್ರ) ಪ್ರಾಧಾನ್ಯವನ್ನು ಪಡೆದಿದೆ. ಪ್ರತಿ ಪ್ರದರ್ಶನದಲ್ಲಿಯೂ ಹಾಸ್ಯ ಮಾಡುವವನು ಪ್ರವೇಶಿಸಿ ‘ಲೋಕಾಭಿರಾಮ’ ವಿಷಯಗಳನ್ನು ಪ್ರಸ್ತುತ ವಿಷಯಗಳನ್ನು ಮಾತನಾಡುತ್ತಾ ಎಲ್ಲರನ್ನು ನಗೆಯಲ್ಲಿ ಮುಳುಗಿಸುತ್ತಾರೆ.

ಇವರ ಪ್ರದರ್ಶನ ವೃಂದದಲ್ಲಿ ೧೫-೨೦ ಬಲಶಾಲಿಗಳಿರುತ್ತಾರೆ. ೩-೪ ಗಂಟೆಗಳ ಕಾಲ ಸಹನೆಯಿಂದ ಪ್ರದರ್ಶನ ಕೊಡುವುದು ಇವರ ವೃತ್ತಿ. ವೈವಿಧ್ಯಮಯವಾದ ಪ್ರದರ್ಶನದಿಂದ ಪ್ರೇಕ್ಷಕರಿಗೆ ಮನರಂಜನೆ ಉಂಟುಮಾಡುವುದು ಇವರು ಮುಖ್ಯ ಕಾರ್ಯಕ್ರಮ.

ಜಿ. ಎಸ್‌. ಎಂ.

 

ಸಾಮೆತಲು ಗಾದೆಗೆ ತೆಲುಗಿನಲ್ಲಿ ಸಾಮೆತ, ಚಾಟುವ, ಸಾಟುವ, ಸಾಟವ, ನಾನುಡಿ, ಲೋಕೋಕ್ತಿ, ಶಾಸ್ತ್ರಂ, ಸುಭಾಷಿತಂ, ಮಾಟ ಎಂಬ ಪರ್ಯಾಯ ಪದಗಳು ವ್ಯವಹಾರದಲ್ಲಿವೆ. ಕರ್ನಾಟಕದ ಮಾಲೂರು ಪ್ರಾಂತ್ಯದಲ್ಲಿ ಕೆಲವು ಕಡೆ ಸಾಮೆತಗಳನ್ನು ‘ಸಾಕಲು’ ಎಂದು ಹೇಳುವುದುಂಟು.

ತೆಲುಗಿನಲ್ಲಿ ಸಾಮೆತ ‘ಸಾಮ್ಯ’ ದಿಂದ ನಿಷ್ಪತ್ತಿಯಾಗಿದೆಯೆಂದೂ ಈ ಸಾಮ್ಯ ಶಬ್ದಕ್ಕೆ ಸಾಮ್ಯತ ಎಂಬ ಅಸಾಧು ರೂಪವೇರ್ಪಟ್ಟು ‘ಸಾಮೆತ’ ಎಂದು ಬದಲಾಗಿ ಪ್ರಚಾರದಲ್ಲಿದೆಯೆಂದು ತೆಲುಗಿನ ಖ್ಯಾತ ಸಂಶೋಧಕರಾದ ದಿವಂಗತ ಡಾ. ಚಲಕೂರಿ ನಾರಾಯಣರಾವ್‌ ಅವರ ಅಭಿಪ್ರಾಯ. ತೆಲುಗಿನಲ್ಲಿ ಸಾಮೆತ ಎಂಬ ಪದವು ೧೫ ನೆಯ ಶತಮಾನದ ವರಾಹಪುರಾಣದಲ್ಲಿ ಮೊಟ್ಟಮೊದಲು ಪ್ರಯೋಗಿಸಲ್ಪಟ್ಟಿದೆ.

ಶಾಸ್ತ್ರವೆಂಬ ಪದವು ಆಂಧ್ರಪ್ರದೇಶದಲ್ಲಿಯ ರಾಯಲಸೀಮೆ ಮತ್ತು ಉತ್ತರ ಕರ್ನಾಟಕ ಪ್ರಾಂತ್ಯಗಳಲ್ಲಿ ವ್ಯವಹಾರದಲ್ಲಿದೆ. ರಾಯಲಸೀಮೆ ಜನರು ಮುಖ್ಯವಾಗಿ ಅನಂತಪುರ ಜಿಲ್ಲೆಯ ಪ್ರಜೆಗಳು ‘ಅದೇನೋ ಶಾಸ್ತ್ರಂ ಚೆಪ್ಪಿನಟ್ಲು’ (ಅದೇನೋ ಶಾಸತ್ತ್ರ ಹೇಳ್ತಾರಲ್ಲಾ ಹಾಗೆ).

ನಿತ್ಯ ಜೀವನದಲ್ಲಿ ಮಾನವನು ಸುಖದುಃಖಗಳೆರಡನ್ನೂ ಸಮಾನವಾಗಿ ಅನುಭವಿಸುತ್ತಾನೆ. ತಾನು ಅನುಭವಿಸಿರುವುದನ್ನು ಬೇರೆಯವರಿಗೆ ಉಪದೇಶಾತ್ಮಕವಾಗಿ ಸಂದೇಶರೂಪದಲ್ಲಿ ಚಿಕ್ಕವಾಕ್ಯಗಳಲ್ಲಿ ಹುದುಗಿಸುತ್ತಾನೆ ಅಲ್ಪಾಕ್ಷರಗಳಲ್ಲಿ ಅತ್ಯಲ್ಪಭಾವವನ್ನು, ಅನುಭವಗಳನ್ನು ವ್ಯಕ್ತ ಮಾಡುತ್ತಾನೆ.

ಗಾದೆಗಳ ವರ್ಗೀಕರಣ : ತೆಲುಗಿನಲ್ಲಿ ಗಾದೆಗಳು ಅನೇಕ ಬಗೆಗಳಾಗಿವೆ. ‘ಮೌಖಿಕ ಪ್ರಚಾರ ಮತ್ತು ಗ್ರಂಥಸ್ಥ’ ಗಳೆಂದು ಸ್ಥೂಲವಾಗಿ ಎರಡು ವಿಧವಾಗಿ ವಿಭಾಗಿಸಬಹುದು. ತೆಲುಗಿನಲ್ಲಿ ಧೂರ್ಜಟಿ ಶ್ರೀನಾಥ, ಪೆದ್ದನ, ನಾಚನ, ಸೋಮನ, ವೇಮನ, ಪಲ್ಕುರಿಕಿ – ಮುಂತಾದ ಕವಿಗಳೆಲ್ಲರೂ ತಮ್ಮ ತಮ್ಮ ಗ್ರಂಥಗಳಲ್ಲಿ ಗಾದೆಗಳನ್ನು ಬಳಸಿದ್ದಾರೆ. ಇವುಗಳನ್ನು ನಾವು ‘ಗ್ರಂಥಸ್ಥ ಗಾದೆಗಳು’ ಎಂದು ಹೇಳಬಹುದು. ವಿಷಯ ಪ್ರಾಧಾನ್ಯವನ್ನು ಗಮನದಲ್ಲಿಟ್ಟುಕೊಂಡು ಗಾದೆಗಳನ್ನು ವಿಭಾಗಿಸುವುದು ಸಮಂಜಸವಾಗಿದೆ.

೧. ಸೂತ್ರದ ಗಾದೆಗಳು : ಈ ವಿಧವಾದ ಗಾದೆಗಳಲ್ಲಿ ಗಾದೆಗಳು ಸೂತ್ರಪ್ರಾಯವಾಗಿ ಇರುವುದೇ ಅಲ್ಲದೇ ಯಾವುದಾದರೂ ಒಂದು ವಿಷಯದ ಸ್ಥಾಪನೆಯಾಗುತ್ತದೆ. ಉದಾಹರಣೆಗೆ ‘ಇಬ್ಬರ ನ್ಯಾಯ ಒಬ್ಬನ ಆಯ’ ಎಂಬ ಗಾದೆಯನ್ನು ತೆಗೆದುಕೊಂಡರೆ, ಇಲ್ಲಿ ಒಂದು ವಿಷಯವನ್ನು ಪ್ರತಿಪಾದಿಸಿದಂತೆ ನಮಗೆ ಸ್ಪಷ್ಟವಾಗುತ್ತದೆ. ತೆಲುಗಿನಲ್ಲಿಯೂ ಸಹ ‘ಇದ್ದರೂ ಪೋಟ್ಲಾಡಿತೆ ಮೂಡೋವಾಡಿಕಿ ಲಾಭಂ’ ಎಂಬ ನಾಣ್ಣುಡಿ ಪ್ರಚಾರದಲ್ಲಿ ಇದೆ. ಹಾಗೆಯೇ ‘ದುಷ್ಟನ ಕಂಡರೆ ದೂರ ಇರು’. ತೆಲುಗಿನಲ್ಲಿ ‘ದುಷ್ಟುನಿ ಚೂಚಿ ದೂರಮುಗಾ ಉಂಡು’ ಇಂತಹವು. ವಿಧಿನಿಷೇಧ ಗಾದೆಗಳು ಸಹ ಇವುಗಳಲ್ಲಿಯೇ ಸೇರುತ್ತವೆ.

ವಿಧಿ : ಉದಾ :ತೆ. ಎಡೈದಾನಿ ಎಡಮ ಚೇತಿಕಿಂದಾ ಕುಟ್ಟೇವಾನಿ ಕುಡಿಚೇತಿಕಿಂದಾ ಕೂರ್ಚೋರಾದು.
ಕ. ಅಳುವವನ ಎಡಕ್ಕೆ, ಹೊಲಿಯುವವನ ಬಲಕ್ಕೆ ಕೂಡಬೇಡ.

ನಿಷೇಧ : ಉದಾ : ತೆ. ಗಜ್ಜಿ ಉನ್ನವಾಡಿಕಿ ಲಜ್ಜ ಉಂಡದು.
ಕ. ಕಜ್ಜಿ ಇದ್ದವರಿಗೆ ಲಜ್ಜೆ ಇಲ್ಲ.

೨. ಉಪಮಾನ ರೂಪಕ ಗಾದೆಗಳು :‘ಅಂದಹಾಗೆ’, ‘ಹಾಗೆ’ ಎಂಬ ಪ್ರಯೋಗಗಳಿಂದ ಈ ರೀತಿಯ ಗಾದೆಗಳು ಕೂಡಿರುತ್ತವೆ. ತೆಲುಗಿನಲ್ಲಿಯೂ ‘ಅನ್ನಟ್ಲು’, ‘ಅಟ್ಲು’ ಎಂಬ ಪ್ರಯೋಗಗಳಿಂದ ಪ್ರಚಾರದಲ್ಲಿವೆ.

ಉದಾ :ತೆ. ಅಡಲೇಕ ಅಂಗಣಂ ವಂಕರ ಅನ್ನಟ್ಲು.
ಕ. ಕುಣಿಯಲು ಬಾರದ ಸೂಳೆ ನೆಲಡೊಂಕು ಅಂದಹಾಗೆ.

೩. ನೀತಿಬೋಧಕ ಗಾದೆಗಳು : ಈ ರೀತಿಯ ಗಾದೆಗಳಲ್ಲಿ ನೀತಿ ಪ್ರಧಾನ್ಯ ಕಾಣಬರುತ್ತದೆ. ಕಥೆಗಳಿಂದಲೂ ಕೂಡ ಈ ರೀತಿಯ ಗಾದೆಗಳು ಪ್ರಚಾರದಲ್ಲಿ ಇವೆ.

ಉದಾ : ತೆ. ಪುಲಿನಿ ಚೂಚಿ ನಕ್ಕ ವಾತ ಪೆಟ್ಟುಕೊನ್ನಟ್ಟು.
ಕ. ಹುಲಿ ನೋಡಿ ನರಿ ಬರೆ ಹಾಕಿಕೊಂಡಿತು.

೪. ಪೌರಾಣಿಕ ಗಾದೆಗಳು : ರಾಮಾಯಣ, ಭಾರತ, ಭಾಗವತಗಳಿಗೆ ಸಂಬಂಧಿಸಿದ ಎಷ್ಟೋ ಗಾದೆಗಳು ಪ್ರಚಾರದಲ್ಲಿ ಇವೆ.

ಉದಾ : ತೆ. ರಾತ್ರಂತಾ ರಾಮಾಯಣಂ ವಿನಿ ರಾಮನಿಕಿ ಸೀತ ಏಮಿ ಕಾಪಾಲನಿ ಅಡಿಗಾಡಟ.
ಕ. ರಾತ್ರಿಯೆಲ್ಲಾ ರಾಮಾಯಣ ಕೇಳಿ ರಾಮನಿಗೆ ಸೀತೆ ಏನಾಗಬೇಕೆಂದ.
ತೆ. ಅಂತೂ ಇಂತೂ ಕುಂತಿ ಕೊಡಕುಲುಕು ರಾಜ್ಯಂಲೇದು.
ಕ. ಅಂತೂ ಇಂತೂ ಕುಂತಿ ಮಕ್ಕಳಿಗೆ ರಾಜ್ಯವಿಲ್ಲ.

೫. ಪ್ರಶ್ನಾರ್ಥ ರೂಪಕ, ಪ್ರಶ್ನೋತ್ತರ ಗಾದೆಗಳು : ಈ ತರಹದ ಗಾದೆಗಳಲ್ಲಿ ಪ್ರಶ್ನೆಗಳಿಂದ ಕೂಡಿದವುಗಳೇ ಅಲ್ಲದೆ, ಒಬ್ಬರು ಪ್ರಶ್ನೆ ಹಾಕಿದ ಹಾಗೆ, ಮತ್ತೊಬ್ಬರು ಸಮಾಧಾನವನ್ನು ಹೇಳುವ ರಾತಿಯಲ್ಲಿ ಎಷ್ಟೋ ಗಾದೆಗಳು ಇವೆ. ಪ್ರಶ್ನೋತ್ತರ ಗಾದೆಗಳನ್ನು ಸಂವಾದ ರೂಪಕ ಗಾದೆಗಳೆಂದೂ ಸಂಭಾಷಣಾಪೂರ್ವಕ ಗಾದೆಗಳೆಂದೂ ಕರೆಯಬಹುದು.

ಪ್ರಶ್ನಾರ್ಥ ರೂಪಕ ಗಾದೆಗಳು : ಉದಾ : ತೆ. ಆವು ನಲುಪೈತೆ ಪಾಲುನಲುಪಾ?
ಕ. ಆಕಳು ಕಪ್ಪಾದರೆ ಹಾಲು ಕಪ್ಪೇ?
ಪ್ರಶ್ನೋತ್ತರ ಗಾದೆ : ಉದಾ :
ತೆ. ತಾತಾ! ಪೆಂಡ್ಲಾಡುತಾವಾ? ಅಂಟೀ ನಾ ಕೆವರಿಸ್ತಾರುರಾ ಅಬ್ಬಾಯಿ! ಅನ್ನಾಡಟ.
ಕ. ಅಜ್ಜಾ! ಮದುವೆಯೆಂದರೆ, ಯಾರಿಗೆ ನನಗಾ? ಎಂದ.

೬. ಸಾಂಘಿಕಾಚಾರ ವ್ಯವಹಾರಗಳು, ವಿಶ್ವಾಸ, ನಂಬಿಕೆಗಳು : ಸಂಘಜೀವಿಗಳ ಆಚಾರಗಳನ್ನು, ಅವರ ವಿಶ್ವಾಸಗಳನ್ನು, ನಂಬಿಕೆಗಳನ್ನು ತಿಳಿಸುವ ಗಾದೆಗಳು ಎಷ್ಟೋ ಇವೆ. ಹಬ್ಬ ಹರಿದಿನಗಳಿಗೆ ಸಂಬಂಧಿಸಿದ ಗಾದೆಗಳೂ ಸಹ ಇವುಗಳಲ್ಲಿಯೇ ಸೇರುತ್ತವೆ.

ಉದಾ : ತೆ. ಕತಿಕಿತೇ ಆತಕದು.
ಕ. ಗತುಕಿದ ಕಡೆ ಅದುಕುವುದಿಲ್ಲ.
ತೆ. ಅಶ್ವತ್ಥ ಪ್ರದಕ್ಷಿಣಂ ಚೇಸಿ ಕಡುಪು ಪಟ್ಟುಕೋನಿ ಚೂಚುಕೊನ್ನದಟ.
ಕ. ಆಶ್ವತ್ಥ ಸುತ್ತು ಬಂದ್ರೆ ಮಕ್ಕಳಾಗುತ್ತೆ ಎಂದ್ರೆ ಒಂದು ಸುತ್ತು ಬಂದು ಹೊಟ್ಟೆ ಮುಟ್ಟಿ ನೋಡಾಳಂತೆ.
ತೆ. ಉಂಟಿ ಉಗಾದಿ, ಲೇಕಪೋತೇ ಏಕಾದಶಿ.
ಕ. ಇದ್ದಾಗ ಹಿರಿಹಬ್ಬ, ಇಲ್ಲದಾಗ ತಿರಿಹಬ್ಬ.

೭. ಹಾಸ್ಯದ ಗಾದೆಗಳು : ಇವು ಪರಿಹಾಸ್ಯಗಳಿಂದ ಆಕ್ಷೇಪಣೆಗಳಿಂದ ಕೂಡಿರುತ್ತದೆ. ವೃತ್ತಿಯವರನ್ನು, ಜಾತಿಯವರನ್ನು ಅಪಹಾಸ್ಯ ಮಾಡುವ ಗಾದೆಗಳು ಸಹ ಇವುಗಳಲ್ಲಿಯೇ ಸೇರುತ್ತವೆ.

ಉದಾ : ತೆ. ಆರುನೆಲಲು ಸಾಮುಚೀಸಿ ಮೂಲನುನ್ನ ಮೂಸಲಿದಾನಿ ಕೊಟ್ಟನಟ್ಲು.
ಕ. ಹನ್ನೆರಡುವರ್ಷ ಸಾಧಕ ಮಾಡಿ ಮನೆ ಮುದುಕಿ ಸೊಂಟ ಮುರಿದಂತೆ.
ತೆ. ಬಾಪನ ಸೇದ್ಯಂ – ಬಾಲವೈದ್ಯಂ.
ಕ. ಬ್ರಾಹ್ಮಣ ಸೇದ್ಯ – ಬಾಲಕ ವೈದ್ಯ.
ತೆ. ಕಲ್ಲಿಪುಸ್ತಿ ಬಂಗಾರಮೈನಾ ಕಂಸಾಲಿವಾಡು ದೊಂಗಲಿಂಚಕ ಮಾನಡು.
ಕ. ಅಕ್ಕನ ಬಂಗಾರವಾದರೂ ಅಕ್ಕಸಾಲಿಗ ಬಿಡ.
ತೆ. ದೇವುಡು ವರಮಿಚೈನಾ ಪೂಜಾರಿ ವರಮೀಯುಡು.
ಕ. ದೇವರು ವರ ಕೊಟ್ಟರೂ ಪೂಜಾರಿ ವರಕೊಡನು.

೮. ವ್ಯವಸಾಯ ಸಂಬಂಧ ಗಾದೆಗಳು : ನಮ್ಮ ದೇಶ ಕೃಷಿ ದೇಶವಾಗಿರುವುದರಿಂದ ಈ ರೀತಿಯ ಗಾದೆಗಳು ಜನಪದರ ಬಾಯಲ್ಲಿ ಮಾಡಿಕೊಂಡಿವೆ.

ಉದಾ : ತೆ. ಸ್ವಾತಿವಾನ ಮುತ್ತೆ ಪುವಾನ.
ಕ. ಸ್ವಾತಿಮಳೆ ಮುತ್ತಿನ ಮಳೆ.
ತೆ. ಅಶ್ವಿನಿ ಕುರಿಸ್ತೆ ಅಂತಾನಷ್ಟಂ.
ಕ. ಅಶ್ವಿನಿ ಸಸ್ಯನಾಶಿನಿ.

೯. ಶಬ್ದಾರ್ಥಲಂಕಾರ ಗಾದೆಗಳು : ಈ ರೀತಿಯ ಗಾದೆಗಳು ಪ್ರಾಸಗಳಿಂದ, ಅನುಪ್ರಾಸಗಳಿಂದ, ಯಮಕ ಮೊದಲಾದುವುಗಳಿಂದ ಕೂಡಿ ಕೇಳುವುದಕ್ಕೆ ಇಂಪಾಗಿ ಇರುತ್ತವೆ.

ಉದಾ : ತೆ. ಸಾಮೆತ ಲೇನಿಮಾಟ ಅಮತಲೇನಿ ಇಲ್ಲು.
ಕ. ಗಾದೆ ವೇದಕ್ಕೆ ಸಮಾನ.
ತೆ. ಅನ್ನಿದಾನಮುಲಕಂಟೆನು ನಿದಾನಮೇ ಪ್ರಧಾನಂ.
ಕ. ದಾನದಾನಗಳಲೆಲ್ಲಾ ನಿಧಾನವೇ ದಾನ.
ತೆ. ಸಾಯಬು ಗಡ್ದಮು ಕಾಲಿ ಏಡುಸ್ತುಂಟೇ ಬೀಡಿ ಅಂಟಂಚುಕೊಂಟಾ ತಾಲು ಅನ್ನಾಡಟ.
ಕ. ಗಡ್ಡ ಹತ್ತಿ ಉರಿಯುವಾಗ ಬೀಡಿ ಹಚ್ಚಿಕೊಳ್ಳಲು ಬಂದ.
ತೆ. ಏನುಗುಲು ತಿನೇವಾಡಿಕಿ ಪೀನಗುಲು ಪಿಂಡಾಕೂಡು.
ಕ. ಮನೆ ತಿನ್ನೋರಿಗೆ ಕದ ಹಪ್ಪಳ ಸಂಡಿಗೆ.

ಉಪಮಾನ ಗಾದೆಗಳನ್ನು ‘ಹೋಲಿಕೆ ಗಾದೆಗಳು’ ಎಂದೂ ಕರೆಯಬಹುದು. ಒಂದು ವಸ್ತುವನ್ನು ಇನ್ನೊಂದು ವಸ್ತುವಿಗೆ ಹೋಲಿಸಿ ಹೇಳುವುದೇ ಇದರ ವಿಶೇಷ.

ಉದಾ : ತೆ. ತಲಮುಗ್ಗು ಬುಟ್ಟಲಾಗುಂದಿ. (ತಲೆಯ ಕೂದಲು ಬುಟ್ಟಿಯಂತೆ ಹೆಣೆದುಕೊಂಡಂತಿದೆ.)
ತೆ. ಗಾನುಗರೋಲುಲಾಂಟಿ ನಡುಮು. (ಎಣ್ಣೆಯ ಗಾಣದಂತಹ ಸೊಂಟ.)

ಮೇಲಿನ ಗಾದೆಯಲ್ಲಿ ಸೊಂಟವನ್ನು ಎಣ್ಣೆಯ ಗಾಣದಂತಹ ಸೊಂಟಕ್ಕೆ, ತಲೆಯ ಕೂದಲನ್ನು ಬುಟ್ಟಿಗೆ ಹೋಲಿಸಿರುವುದನ್ನು ಗಮನಿಸಬಹುದು. ಈ ಎರಡು ಗಾದೆಗಳನ್ನು ಶ್ರೀ ಟೇಕುಮಳ್ನ ಕಾಮೇಶ್ವರರಾವ್‌ ಅವರು ಹೆಸರಿಸಿದ್ದಾರೆ.

ಮೇಲೆ ತಿಳಿಸಿದ ಗಾದೆಗಳಲ್ಲದೆ ಈ ಕೆಳಗೆ ಕಂಡುಬರುವ ಗಾದೆಗಳೂ ಕೂಡ ನಮಗೆ ಕಾಣಿಸುತ್ತವೆ.

ಸ್ಥಳ ನಾಮಗಳು : ಸ್ಥಳವಿಶೇಷಗಳಿಂದಲೂ ಗಾದೆಗಳು ಪ್ರಚಾರದಲ್ಲಿವೆ.

ಉದಾ : ತೆ. ಹಂಪೀಕಿ ಪೋಯೇದಾನಿಕನ್ನ ಕೊಂಪಲೋ ವುಂಡೇದಿ ಮೇಲು.
ಕ. ಹಂಪಿಗೆ ಹೋಗುವುದಕ್ಕಿಂತಲೂ ಮನೆಯಲ್ಲಿರುವುದೇ ಲೇಸು.
ತೆ. ರಾಮೇಶ್ವರಾನಿಕಿ ಪೋಯಿನಾ ಶನೇಶ್ವರಂ ತಪ್ಪಲೇದು.
ಕ. ರಾಮೇಶ್ವರಕ್ಕೆ ಹೋದರೂ ಶನೀಶ್ವರ ಬಿಡ.

ಗೃಹಜೀವನ ಸಂಬಂಧಿ : ಇಂತಹ ಗಾದೆಗಳೂ ಸಹ ಪ್ರಚಾರದಲ್ಲಿವೆ.

ಉದಾ : ತೆ. ಅತ್ತ ಚಚ್ಚಿನ ಆರು ಮಾಸಾಲಕು ಕೋಡಲಿ ಕಂಟ್ಲೋ ನೀರು ವಚ್ಚಿಂದಟ.
ಕ. ಅತ್ತೆ ಸತ್ತ ಆರು ತಿಂಗಳ ಮೇಲೆ ಸೊಸೆ ಕಣ್ಣಲ್ಲಿ ನೀರು ಬಂತು.
ತೆ. ಅಲ್ಲುಡಲಿಗಿತೇ ಕೂತುರುನಿ ತೀನುಕುಪೋತಾಡು.
ಕ. ಅಳಿಯ ಮುನಿದರೇ ಮಗಳ ಕರಕೊಂಡು ಹೋದಾನು.

ನ್ಯಾಯ ಗಾದೆಗಳು : ಸಾಕ್ಷಿಗಳನ್ನು ವ್ಯಾಧಿಗಳನ್ನು, ನ್ಯಾಯನ್ಯಾಯಗಳನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಹೊರಟಂತಹವು.

ಉದಾ : ತೆ. ಸಾಕ್ಷಿ ಕಾಳ್ಳು ಪಟ್ಟುಕೋವಡಂಕನ್ನಾ, ವಾದಿ ಕಳ್ಳು ಪಟ್ಟುಕೋವಡಂ ಮಂಚಿದಿ.
ಕ. ಸಾಕ್ಷಿಗಾರನ ಕಾಲುಹಿಡಿಯುವುದಕ್ಕಿಂತ ವಾದಿಯ ಕಾಲುಹಿಡಿಯುವುದು ಲೇಸು.

ವೈದ್ಯ ಗಾದೆಗಳು : ಈ ತರಹದ ಗಾದೆಗಳು ತೆಲುಗಿನಲ್ಲಿ ಅಧಿಕವಾಗಿ ಪ್ರಚಾರದಲ್ಲಿ ಇದ್ದ ಹಾಗೆ ಕಾಣಿಸುವುದಿಲ್ಲ.

ಉದಾ : ತೆ. ರೋಗಿ ಕೋರಿಂದ ಪಾಲೆ, ವೈದ್ಯುಡು ಚೆಪ್ಪಿಂದಿ ಪಾಲೆ.
ಕ. ರೋಗಿ ಬಯಸಿದ್ದೂ ಹಾಲೇ ವೈದ್ಯ ಹೇಳಿದ್ದೂ ಹಾಲೇ.
ತೆ. ಲಂಘಣಂ ಪರಮೌಷಧಂ.
ಕ. ಲಂಘಣಂ ಪರಮೌಷಧಂ.

೧೮೬೮ರಲ್ಲಿ ಎಂ. ಡಬ್ಲ್ಯೂ. ಕಾರ್ ಎಂಬ ಆಂಗ್ಲೇಯನು ಕೆಲವು ತೆಲುಗು ಗಾದೆಗಳನ್ನು ‘ಆಂಧ್ರ ಲೋಕೋಕ್ತಿ ಚಂದ್ರಿಕ’ ಎಂಬ ಹೆಸರಿನಿಂದ ಪ್ರಕಟಿಸಿದ್ದಾನೆ. ಆತನಿಗೆ ಮೊದಲೇ ಕೆಲವರು ಗಾದೆಗಳ ಪುಸ್ತಕಗಳನ್ನು ಪ್ರಕಟಿಸಿದ್ದಾರೆಂದು ಆ ಪುಸ್ತಕದ ಪೀಠಿಕೆಯಿಂದ ತಿಳುದು ಬಂದರೂ ಅವುಗಳ ಲಭ್ಯವಾಗಿಲ್ಲ. ಆದುದರಿಂದ ಇದೇ ಮೊದಲನೆಯದೆಂದು ಅಭಿಪ್ರಾಯವಿದೆ. ಇದೇ ಪುಸ್ತಕವನ್ನು ಶ್ರೀ ನಂದಿರಾಜು ಚಲಪತಿರಾವು ಅವರು ೧೯೦೬ರಲ್ಲಿ ಪ್ರಕಟಿಸಿದ್ದರೆಂದು ತಿಳಿದುಬರುತ್ತದೆ. ೧೮೬೮ರಲ್ಲಿಯೇ ರಾವಿಪಾಟಿ ಗುರುಮೂರ್ತಿ ಎಂಬುವರು ತೆಲುಗು ಗಾದೆಗಳ ಸಂಗ್ರಹವನ್ನು ಪ್ರಕಟಿಸಿದ್ದಾರೆಂದು ತಿಳಿಯುತ್ತದೆ. ಡಾ. ಚಿಲುಕೂರಿ ನಾರಾಯಣರಾವ್‌ ರವರು ತೆಲುಗಿನಲ್ಲಿ ಒಂದು ಲಕ್ಷಗಾದೆಗಳನ್ನು ಸಂಗ್ರಹಿಸಿದ್ದಾರೆ. ಆದರೆ ಅವು ಪ್ರಕಟವಾಗಿಲ್ಲ. ಗಾದೆಗಳನ್ನು ಕುರಿತಂತೆ ತೆಲುಗಿನಲ್ಲಿ ಆಳವಾದ ಸಂಶೋಧನೆ ನಡೆದಿದೆ.

ಜಿ. ಎಸ್‌. ಎಂ.