ಸಿರಿ ಆರಾಧನೆ ಕರ್ನಾಟಕದ ಒಂದು ವಿಶಿಷ್ಟ ಆರಾಧನೆ. ತುಳುನಾಡಿನ ಇತರ ಆರಾಧನಾ ಪ್ರಕಾರಗಳಾದ ಭೂತಾರಾಧನೆ, ನಾಗಾರಾಧನೆ ಹಾಗೂ ಶಿಷ್ಟದೇವತೆಗಳ ಜಾತ್ರೆಗಳೊಂದಿಗೆ ಹೋಲಿಸಿದರೆ ಸಿರಿ ಆರಾಧನೆಯ ವಿಶಿಷ್ಟತೆ ಮತ್ತು ಅನನ್ಯತೆಗಳು ಸ್ಪಷ್ಟವಾಗುತ್ತವೆ. ಮಹಿಳೆಯರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಳ್ಳುವುದು, ಸಾಮೂಹಿಕ ಆವೇಶಕ್ಕೆ ಒಳಗಾಗುವುದು, ಅಪರಿಚಿತರಾಗಿರುವ ವಿಭಿನ್ನ ಜಾತಿ ವರ್ಗದ ಮಹಿಳೆಯರು ಆವೇಶಿತರಾದಾಗ ವೈಯಕ್ತಿಕತೆಯನ್ನು ಕಳೆದುಕೊಂಡು ಸಿರಿಕುಟುಂಬದ ಸದಸ್ಯರಾಗಿ ರೂಪಾಂತರಗೊಳ್ಳುವುದು, ಅಲೌಕಿಕ ಮಧ್ಯಂತರ ಜಗತ್ತಿನಲ್ಲಿ ಉಂಟಾಗುವ ಪರ್ಯಾಯ ಬಂಧುತ್ವ, ವಾಸ್ತವ ಬದುಕಿನ ನೋವು ಒತ್ತಡಗಳಿಗೆ ಬಿಡುಗಡೆ ಒದಗಿಸುವುದು, ಮಹಿಳೆಯರ ವಾಸ್ತವ ಬದುಕಿಗೂ ಆರಾಧನೆಗಳೂ ಇರುವ ಅಂತಃಸಂಬಂಧ ಹಾಗೂ ಸಿರಿ ಮೈದುಂಬುವ ಹೆಣ್ಣು ಗಳಿಸುವ ಕೌಟುಂಬಿಕ ಸಾಮಾಜಿಕ ಗೌರವ ಮನ್ನಣೆಗಳು-ಹೀಗೆ ಹಲವು ನಿಟ್ಟಿನಿಂದ ಸಿರಿ ಆರಾಧನೆ ಸಂಕೀರ್ಣತೆಯನ್ನು ಪಡೆದುಕೊಂಡು ಸೂಕ್ಷ್ಮ ಅಧ್ಯಯನವನ್ನು ಬಯಸುತ್ತದೆ.

ಲೌಕಿಕ-ಅಲೌಕಿಕವನ್ನು ಒಂದುಗೂಡಿಸುವ, ಬದುಕಿನ ಒತ್ತಡಕ್ಕೆ ಒಳಗಾದ ನೂರಾರು ಮಹಿಳೆಯರು ಆವೇಶಗೊಳ್ಳುವ, ಅಲ್ಲಿ ಸೃಷ್ಟಿಯಾಗುವ ಪರ್ಯಾಯ ಬಂಧುತ್ವ ಹಾಗೂ ಆ ಮೂಲಕ ಪಡೆಯುವ ಸಮಾಧಾನ, ಬಿಡುಗಡೆಗಳನ್ನು ಸಿರಿ ಆರಾಧನಾ ಪ್ರಪಂಚವನ್ನು ಬಹಳ ಸುಲಭವಾಗಿ ಅರ್ಥೈಸಲಾಗದು ಆಗದು. ಅದನ್ನು ಜಾತ್ರೆಯ ‘ಬೃಹತ್‌ ಪಠ್ಯ’ ದೊಂದಿಗೆ ಜಾತ್ರೆಯ ಹೊರಗಿನ ಸಾಮಾಜಿಕ, ಕೌಟುಂಬಿಕ, ಸಾಂಸ್ಕೃತಿಕ, ಆರ್ಥಿಕ ಸಂದರ್ಭಗಳ ಗ್ರಹಿಕೆಯ ಹಿನ್ನೆಲೆಯಲ್ಲಿ ಕಂಡುಕೊಳ್ಳಬೇಕಾಗುತ್ತದೆ. ಅದಕ್ಕೆ “ಉತ್ಸವರೂಪದಲ್ಲಿ ನಡೆಯುವ ಮಹಿಳೆಯರ ಆವೇಶ ಮತ್ತು ಸಿರಿ ಸಂದಿಯ ಹಾಡುವಿಕೆ ಈ ವ್ಯವಸ್ಥೆಯ ಒಂದು ಮುಖವಾದರೆ, ಸಿರಿ ಹೆಂಗಸರ ವೈಯಕ್ತಿಕ ಬದುಕಿನ ಇತಿಹಾಸ, ಕುಟುಂಬ ಪದ್ಧತಿ, ಸಿರಿ ಬಳಗದ ಸದಸ್ಯೆಯಾಗಿ ನೇಮಕಗೊಳ್ಳುವವರ ಸೇವೆ, ನಿತ್ಯ ಜೀವನದಲ್ಲಿ ಅನುಸರಿಸಬೇಕಾದ ವಿಧಿ ನಿಯಮಗಳು, ಅನುಭವಿ ಸಿರಿ ಹೆಂಗಸರಿಂದ ಮತ್ತು ಕುಮಾರನ ಸಹಾಯದಿಂದ ಸಿರಿ ಸಂದಿಯನ್ನು ಕಲಿತುಕೊಳ್ಳುವ ಬಗೆ – ಇವುಗಳು ಈ ವ್ಯವಸ್ಥೆಯ ಆಧಾರ ಮುಖಗಳಾಗಿವೆ ಎನ್ನುವ ವಿಸ್ತಾರದ ಅರಿವಿರಬೇಕಾಗುತ್ತದೆ.

ಸಿರಿ ಪಾಡ್ದನದಲ್ಲಿ ಸಿರಿಯ ಕೌಟುಂಬಿಕ, ಸಾಮಾಜಿಕ ಸಂದರ್ಭ, ವಿಚ್ಛೇದನ, ಮರುಮದುವೆ, ಉತ್ತರಾಧಿಕಾರತ್ವ, ಸ್ತ್ರೀತ್ವ ಮತ್ತು ಪರಿಶುದ್ಧತೆಯ ಪರಿಕಲ್ಪನೆಗಳು, ಗಂಡಿನ ಮೋಸ, ಅನ್ಯಾಯ, ಪುರುಷ ಪ್ರಭುತ್ವದ ಹೇರಿಕೆಯ ಪ್ರಯತ್ನಗಳು, ಅದರ ವಿರುದ್ಧ ಹೆಣ್ಣಿನ ಹೋರಾಟ ಮತ್ತು ವಿಜಯಗಳು ದಾಖಲಾಗಿವೆ. ಇದರಿಂದಾಗಿ ಬಂಟ ಸಮುದಾಯದ ಮೂಲ ಹೆಣ್ಣೆಂದು ಗ್ರಹೀತಳಾದ ಸಿರಿಯೊಂದಿಗೆ ತುಳುನಾಡಿನ ಎಲ್ಲ ಮಾತೃರೂಪಿ ಕುಟುಂಬದ ಹೆಣ್ಣುಗಳು ತಮ್ಮ ಸಂಬಂಧವನ್ನು ಕಂಡುಕೊಳ್ಳುತ್ತಾರೆ. ಸಿರಿ (ಪಾಡ್ದನ) ಪುರಾಣದೊಂದಿಗೆ ಗಾಢವಾದ ಸಂಬಂಧವಿರುವ ತುಳುವ ಮಹಿಳೆಯರಿಗೆ ಸಿರಿಯ ಬದುಕು ಮತ್ತು ಹೋರಾಟಗಳು ಆದರ್ಶ ಮಾದರಿಯಾಗಿರುವಲ್ಲಿ ಸಿರಿ ಪಾಡ್ದನವು ಸಿರಿ ಜಾತ್ರೆಗೊಂದು ಸಂಹಿತೆಯಾಗಿ ಕಾರ್ಯ ನಿರ್ವಹಿಸುತ್ತದೆ. ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಅನೇಕ ಶೈವದೇವಾಲಯಗಳಲ್ಲಿ ಸಿರಿ ಆರಾಧನೆ ವಾರ್ಷಿಕ ಜಾತ್ರೆಯ ಸ್ವರೂಪದಲ್ಲಿ ನಡೆಯುತ್ತದೆ. ಉಡುಪಿ ಜಿಲ್ಲೆಯ ಪಾಂಗಾಳ, ಕವತ್ತಾರು, ಹಿರಿಯಡಕ, ಬೊಳ್ಯೊಟ್ಟು, ನಂದಳಿಕೆ, ದಕ್ಷಿಣ ಕನ್ನಡ ಜಿಲ್ಲೆಯ ಕಂಡೇವು, ಆತ್ರಿಜಾಲ್‌, ಹುರುಂಬಿದೊಟ್ಟು, ಕುತ್ರೊಟ್ಟು, ನಿಡಿಗಲ್ಲ್‌, ಉರ್ಕಿದೊಟ್ಟು, ಜರೆಗುಡ್ಡೆಗಳು ಪ್ರಮುಖ ಸಿರಿ ಆರಾಧನಾ ಕೇಂದ್ರಗಳು. ಮಾರ್ಚ್‌, ಏಪ್ರಿಲ್‌, ಮೇ ತಿಂಗಳು ಹುಣ್ಣಿಮೆಯ ರಾತ್ರಿ ಸಿರಿ ಜಾತ್ರೆ ಜರಗುವುದು. ಬಹುತೇಕ ಸಿರಿಜಾತ್ರೆಗಳು ಶೈವ ದೇವಾಲಯಗಳಲ್ಲಿ ನಡೆಯುವುವಾದರೂ ಶಿಷ್ಟದೇವರಿಗೂ ಸಿರಿಗೂ ಯಾವುದೇ ಸಂಬಂಧವಿಲ್ಲ. ಈ ದೇವಾಲಯಗಳು ಮೂಲತಃ ಆಲಡೆ ಅಥವಾ ಬೆರ್ಮಸ್ಥಾನಗಳಾಗಿವೆ. ಸಿರಿಯ ಆರಾಧನಾ ಕೇಂದ್ರಗಳು ಸಂಕೀರ್ಣ ಸ್ವರೂಪದ್ದಾಗಿರುತ್ತವೆ. ಒಂದೆಡೆ ಶೈವ ದೇವಾಲಯ ಹಾಗೂ ಪರಿವಾರ ದೇವತೆಗಳು, ಇನ್ನೊಂದೆಡೆ ಸ್ಥಳದ ಭೂತಗಳು, ಮತ್ತೊಂದು ಸ್ಥರದಲ್ಲಿ ಸಿರಿಗುಂಡ, ಸಿರಬಡಗದ ಮೂರ್ತಿಗಳು. ಹೀಗಾಗಿ ಸಿರಿಜಾತ್ರೆಯ ಆವರಣ ಹಾಗೂ ಆರಾಧನಾ ಪ್ರಕ್ರಿಯೆಗಳು ಸಂಕೀರ್ಣತೆಯನ್ನು ಪಡೆದುಕೊಳ್ಳುತ್ತವೆ. ಡಾ. ಪೀಟರ್ ಕ್ಲಾಸ್‌ ಗುರುತಿಸುವಂತೆ “ಇಲ್ಲಿನ ಶಿವಾರಾಧನೆ ಸಿರಿಯ ಆರಾಧನೆಯನ್ನು ಅತಿಕ್ರಮಿಸಿ ಜರುಗುತ್ತದೆಯೇ ಹೊರತು ಸಿರಿ ಆರಾಧನೆಯ ಒಂದು ಅಂಗವಾಗಿ ನಡೆಯುತ್ತಿಲ್ಲ. ಇದನ್ನು ಒಂದು ಖಾಯಂ ಆರಾಧನಾ ಬಳಗವಾಗಿ ಮಾನ್ಯ ಮಾಡದೆ ದೇವಾಲಯದೊಂದಿಗೆ ಸಂಬಂಧವಿರಿಸಿಕೊಂಡ ಹಲವಾರು ದೈವಗಳಲ್ಲಿ ಸಿರಿ ಒಂದು ಎಂಬುದಾಗಿ ಭಾವಿಸುತ್ತಾರೆ” (ಕ್ಲಾಸ್‌, ಅನು : ನಾವಡ, ಸುಭಾಶ್ಚಂದ್ರ ೧೯೮೭ : ೧೦೬). ಇಷ್ಟೊಂದು ವ್ಯಾಪಕ ನೆಲೆಯಲ್ಲಿ ಆರಾದಿಸಲಾಗುವ ಸಿರಿ ಅಧೀನ ದೈವವಾಗಿ ಆರಾಧಿಸಲ್ಪಡುವ ಸಂಗತಿ ಅನೇಕ ಪ್ರಶ್ನೆಗಳನ್ನು ಎತ್ತುತ್ತದೆ.

ಮತಾಚರಣೆ : ಜಾತ್ರೆಯಂದು ಮುಸ್ಸಂಜೆ ಹೊತ್ತಿಗೆ ಸಿರಿಭಕ್ತರು ಹಾಗೂ ಅವರ ಬಂಧುಗಳು ಸಿರಿಗುಡಿಗೆ ಬಂದು ಕಾಣಿಕೆ ಒಪ್ಪಿಸುತ್ತಾರೆ. ಬ್ರಾಹ್ಮಣ ತಂತ್ರಿಯಿಂದ ಪೂಜೆ ಸಲ್ಲುತ್ತದೆ. ಸಿರಿ ಮತ್ತು ಕುಮಾರ ಮೈದುಂಬುವ ವ್ಯಕ್ತಿಗಳು ಅಂದು ಶೌಚದಲ್ಲಿರಬೇಕು. ಸ್ನಾನ, ಮಡಿಬಟ್ಟೆ, ನಡೆಹಾಸು, ವೇಷಭೂಷಣ, ಹಿಂಗಾರ, ಹುಣ್ಣಿಮೆ ರಾತ್ರೆ, ವಾದ್ಯಮೇಳಗಳ ಮೂಲಕ ಅವರನ್ನು ‘ಪ್ರತ್ಯೇಕ’ ಗೊಳಿಸಲಾಗುವುದು. ದೈಹಿಕ ಹಾಗೂ ಮಾನಸಿಕವಾದ ಈ ಪ್ರತ್ಯೇಕೀಕರಣ ಪೂರ್ವಸಿದ್ಧತೆಗಳು ಆವೇಶಕ್ಕೆ ಪೂರಕವಾಗಿ ದುಡಿಯುತ್ತವೆ. ಪ್ರತಿಯೊಂದು ಸಿರಿ ಆರಾಧನಾ ಕೇಂದ್ರಕ್ಕೆ ಸಂಬಂಧಪಟ್ಟಂತೆ ನಿಗದಿಯಾದ ಮೂಲಕುಮಾರ ಅಥವಾ ಸ್ಥಳಕುಮಾರ ಮತ್ತು ಅವನ ಅಧೀನ ಕುಮಾರರು ಹಾಗೂ ಸಿರಿಗಳು ಇದ್ದು ಹೆಣ್ಣೊಬ್ಬಳು ಸಿರಿಯಾಗುವ ಪ್ರಕ್ರಿಯೆ ಹೀಗಿರುತ್ತದೆ : ಸಾಮಾನ್ಯವಾಗಿ ಹೆಣ್ಣು ಎಳೆಹರೆಯದಿಂದ ಮಧ್ಯವಯಸ್ಸಿನ (೧೪ ರಿಂದ ೩೫) ಗುಂಪಿನಲ್ಲಿ ಸಿರಿ ಆಕರ್ಷಣೆಗೆ ಒಳಗಾಗುತ್ತಾಳೆ. ಒಬ್ಬಾಕೆಯಲ್ಲಿ ದೈಹಿಕ / ಮಾನಸಿಕ ಅಸ್ವಸ್ಥತೆಯ ಚಹರೆಗಳು ಕಂಡುಬಂದಾಗ ಅದು ‘ದುಷ್ಟಶಕ್ತಿ’ಯ ಕಾಟ, ಉಪದ್ರವವೆಂದು ಪರಿಹಾರೋಪಾಯಗಳನ್ನು ನಡೆಸಲಾಗುವುದು. ಆಗಲು ಫಲ ಕಂಡುಬಾರದಿದ್ದಲ್ಲಿ ಸಿರಿ ಜಾತ್ರೆಗೆ ಹೋಗಿ ‘ದಲಿಯ’ ಸೇವೆ ಮಾಡುವುದಾಗಿ ಹರಕೆ ಹೇಳಿಕೊಳ್ಳುತ್ತಾರೆ. ಅದರಂತೆ ಕುಮಾರನನ್ನು ಮನೆಗೆ ಕರೆಯಿಸಿ ಅಥವಾ ಕುಮಾರನಲ್ಲಿಗೆ ಹುಡುಗಿಯನ್ನು ಕರೆದೊಯ್ದು ಅಥವಾ ವಾರ್ಷಿಕ ಸಿರಿಜಾತ್ರೆಗೆ ಕರೆತಂದು ದಲಿಯ ಮಾಡಿಸುತ್ತಾರೆ. ಹೊಸದಾಗಿ ದಲಿಯ ಸೇವೆಗೆ ಕರೆತಂದ ಹೆಣ್ಣನ್ನು ಸಿರಿತಂಡದೊಂದಿಗೆ ಸೇರಿಸುತ್ತಾರೆ. ಆರಾಧನಾ ಪ್ರಕ್ರಿಯೆಯೊಳಗೆ ಆವೇಶಿತಳಾಗುವ ಈ ಹೆಣ್ಣನ್ನು ಕುಮಾರ ಸಿರಿ ಪಾಡ್ದನದ ಭಾಗಗಳನ್ನು ಹಾಡುವ ಮೂಲಕ ಮಧ್ಯಂತರ ಜಗತ್ತಿಗೆ ಪ್ರವೇಶಿಸುವಂತೆ ಪ್ರಚೋದಿಸಲಾಗುತ್ತದೆ. ಈ ಪ್ರವೇಶ ಸಾಧ್ಯವಾಗಿ ಆಕೆ ಸಿರಿ ಬಳಗದ ಯಾವುದಾದರೊಂದು ಪಾತ್ರವಾಗಿ ತನ್ನನ್ನು ಕಂಡುಕೊಳ್ಳುತ್ತಾಳೆ. ಆವೇಶದ ನಿರಂತರ ಸ್ಥಿತಿಯಲ್ಲಿ ಆಕೆಯನ್ನು ಅನುಭವಿ ಸಿರಿಗಳು ಹಾಗೂ ಕುಮಾರ ‘ಬಾಯಿಬಡಿಸುವ’ ಕಾರ್ಯ ಮಾಡುತ್ತಾರೆ. ಆಗ ಆಕೆ ತಾನು ಸಿರಿ ಬಳಗದ ಸೊನ್ನೆಯೋ ಅಬ್ಬಗ ದಾರಗಳೆಂದೋ ಹೇಳಿ ಕುಮಾರನೊಂದಿಗೆ ಪಾಡ್ದನ ಧಾಟಿಯಲ್ಲಿ ಸಂಭಾಷಿಸುವಲ್ಲಿ ಆಕೆ ಸಿರಿ ಬಳಗದ ನಿರ್ದಿಷ್ಟ ಸದಸ್ಯೆಯಾಗಿ ನಾಮಕರಣ ಹೊಂದುತ್ತಾಳೆ. ಮತ್ತಾಕೆ ವರ್ಷ ವರ್ಷವೂ ಜಾತ್ರೆಗೆ ಬಂದು ಸೇವೆ ಸಲ್ಲಿಸಲು ನಿಬದ್ಧಳಾಗುತ್ತಾಳೆ. ದೇಹ ಮತ್ತು ಮನಸ್ಸಿನ ಪರಿಶುದ್ಧ ಸ್ಥಿತಿಯಲ್ಲಿ ಮಾತ್ರ ಸಿರಿ ಮೈದುಂಬುವುದು ಸಾಧ್ಯ ಎಂಬ ಬಲವಾದ ನಂಬಿಕೆಯಿದೆ. ಹೀಗಾಗಿ ಹೆಣ್ಣೊಬ್ಬಳಿಗೆ ಸಿರಿಯಾಗುವುದು ಅವಳ ಸಚ್ಚಾರಿತ್ರ್ಯ ಮತ್ತು ಪಾವಿತ್ರ್ಯದ ಸಂಕೇತವೆಂದು ಭಾವಿಸಲಾಗುವುದು. ಇದರಿಂದ ಸಿರಿಯಾಗುವ ಮುನ್ನಿನ ಹಾಗೂ ಮತ್ತಿನ ಅವಳ ಸ್ಥಾನಮಾದಲ್ಲಿ ಬಹಳಷ್ಟು ವ್ಯತ್ಯಾಸ ಗೋಚರಿಸುತ್ತದೆ.

ಜಾತ್ರೆಯಲ್ಲಿ ತಂತ್ರಿಯಿಂದ ತೀರ್ಥ ಪ್ರಸಾದ ಸ್ವೀಕರಿಸಿದ ಸಿರಿಗಳು ಮತ್ತು ಕುಮಾರರು ಎದುರುಬದುರಿಗೆ ಸಾಲಾಗಿ ಅಥವಾ ಸುತ್ತುವರಿದು ನಿಲ್ಲುವರು. ಸಿರಿ ಪಾಡ್ದನದ ಹಂದರವು ಅನಾವರಣಗೊಳ್ಳುತ್ತ ಹೋದಾಗ ಲೌಕಿಕ ಜಗತ್ತಿನ ಆ ವ್ಯಕ್ತಿಗಳು ಅಲೌಕಿಕ ಜಗತ್ತನ್ನು ಪ್ರವೇಶಿಸುತ್ತಾರೆ. ಮಧ್ಯಂತರ ಜಗತ್ತಿನ ಪಾತ್ರಗಳಾಗಿ ರೂಪಾಂತರಗೊಳ್ಳುತ್ತಾರೆ. ಆಗ ಅವರು ಸಿರಿ-ಕುಮಾರ, ಕುಮಾರ-ಸೊನ್ನೆ, ಕುಮಾರ-ಅಬ್ಬಗ ದಾರಗರಾಗಿ ಪರಸ್ಪರ ಸಂಬಂಧವನ್ನು ಸ್ಥಾಪಿಸಿಕೊಂಡು ಪಾಡ್ದನದ ಮೂಲಕ ಉತ್ತಮ ಪುರುಷರಲ್ಲಿ ಸಂವಾದ ನಡೆಸುತ್ತಾರೆ. ತುಳುವ ಬಂಧುತ್ವ ವ್ಯವಸ್ಥೆಯಲ್ಲಿ ಈ ಜೋಡಿಗಳು ರಕ್ತಬಾಂಧವ್ಯ ಘಟಕವಾಗಿದ್ದು ಅವು ತಾಯಿ-ಮಗ, ಅಣ್ಣ-ತಂಗಿ, ಸೋದರಮಾವ-ಸೊಸೆಯದಾಗಿವೆ. ಮಾತೃರೂಪಿ ತುಳುವ ಸಂಸ್ಕೃತಿಯಲ್ಲಿ ತಾಯಿಯ ಬಳಗವು ‘ಕುಟುಂಬ’ ವೆಂದು ಪರಿಗಣಿತವಾಗುವುದರಿಂದ ಸೋದರ ಮಾವ ಕುಟುಂಬದ ಸದಸ್ಯನಾಗಿದ್ದು, ಸೋದರಮಾವ-ಸೊಸೆಯು ಒಂದೇ ಬಳಿ ಹೊಂದಿದ್ದು ಅವರೊಳಗಿನ ವಿವಾಹ ನಿಷಿದ್ಧವಾದುದು. ಈ ತಿಳುವಳಿಕೆ ಸಿರಿಜಾತ್ರೆಯನ್ನು ಸಂತಾನಾಪೇಕ್ಷಿ ಮೇಳವೆಂಬ ಗ್ರಹಿಕೆಯನ್ನು ಮರುವಿಮರ್ಶೆಗೆ ಒಡ್ಡಲು ಒತ್ತಾಯಿಸುತ್ತದೆ.

ಸಿರಿಜಾತ್ರೆಯ ಸಂದರ್ಭದಲ್ಲಿ ಇಡಿಯ ಸಿರಿ ಪಾಡ್ದನವನ್ನು ಹಾಡಲಾಗುವುದಿಲ್ಲ. ಕೆಲವೊಂದು ಉತ್ಕಟ ಸಂದರ್ಭದ ಘಟನಾವಳಿಗಳನ್ನಷ್ಟೇ ಪ್ರದರ್ಶಿಸಲಾಗುವುದು. ಪಾಡ್ದನದೊಳಗಿನ ಘಟನೆಗಳ ವಿವರಗಳು ಉತ್ಕಟಸ್ಥಿತಿಯನ್ನು ತಲುಪುವಲ್ಲಿ ಆವೇಶವೂ ತೀವ್ರಗೊಳ್ಳುತ್ತದೆ. ಹೀಗೆ ಪಾಡ್ದನ ಹಾಡುತ್ತ. ಆವೇಶ ತೀವ್ರಗೊಳ್ಳುತ್ತ ಹೋದಂತೆ ತಮ್ಮ ವೈಯಕ್ತಿಕತೆಯನ್ನು ಕಳೆದುಕೊಳ್ಳುತ್ತ ಸಿರಿಕುಟುಂಬದ ಪಾತ್ರಗಳಲ್ಲಿ ಒಂದಾಗುತ್ತಾರೆ. ಆಗ ಅಲ್ಲಿ ಒಂದು ಬಗೆಯ ಅನುಭಾವಿಕ ರಕ್ತಬಾಂಧವ್ಯ ಏರ್ಪಡುತ್ತದೆ. ಪಾಡ್ದನದ ಮಾತೃರೂಪಿ ಕುಟುಂಬವೊಂದರ ಮೂರು ತಲೆಮಾರುಗಳ ಹೆಣ್ಣುಗಳು ತಮ್ಮ ಬದುಕಿನುದ್ದಕ್ಕೂ ಸನ್ನಿವೇಶಕ್ಕೂ ಸಾಮ್ಯ ಏರ್ಪಟ್ಟಾಗ ಅವರು ತೀವ್ರತರವಾದ ಆವೇಶಕ್ಕೆ ಒಳಗಾಗುತ್ತಾರೆ. ಜೊತೆಗೆ ಸಿರಿ ಹಾಗೂ ಅವಳ ಸಂತಾನ ಸಂಘರ್ಷವನ್ನು ಎದುರಿಸಿದ ಬಗೆ ಅವರಲ್ಲಿ ಒಂದು ಆತ್ಮ ವಿಶ್ವಾಸ ಮತ್ತು ಹೊಸ ಶಕ್ತಿಯನ್ನು ಹುಟ್ಟುಹಾಕುತ್ತದೆ. ಹೀಗೆ ಸಿರಿ ಪಾಡ್ದನಕ್ಕೂ ಆಚರಣೆಗೂ ಆವೇಶಿತ ಮಹಿಳೆಯರಿಗೂ ತ್ರಿಕೋನ ಮಾದರಿಯ ಒಂದು ಅಂತಃಸಂಬಂಧ ಸ್ಥಾಪಿತವಾಗುತ್ತದೆ. ಸಿರಿ ಆಚರಣೆ ಪರ್ಯಾಯ ತಾತ್ಕಾಲಿಕ ಕುಟುಂಬವೊಂದನ್ನು ಒದಗಿಸಿಕೊಟ್ಟ ದಮನಕ್ಕೊಳಗಾದ – ನೊಂದ ಮಹಿಳೆಯರಿಗೆ ತಮ್ಮ ಒತ್ತಡ ಸಂಘರ್ಷಗಳಿಗೊಂದು ಹೊರಹರಿವಿನ ಕಿಂಡಿಯಾಗಿ ಕಾರ್ಯನಿರ್ವಹಿಸುತ್ತದೆ. ನಾಟಿಗದ್ದೆಯಲ್ಲಿ ಸಿರಿ ಜಾತ್ರೆಯಲ್ಲಿ ಪ್ರದರ್ಶಿತಗೊಳ್ಳುವ ಪಾಡ್ದನದ ಘಟನಾವಳಿಗಳನ್ನು ಹಾಡದಿರುವುದು, ಜಾತ್ರೆಯಲ್ಲಿ ಪಾಡ್ದನ ಪಠ್ಯದ ಕೆಲವು ಘಟನಾವಳಿಗಳನ್ನಷ್ಟೇ ಎತ್ತಿ ಪ್ರದರ್ಶನಗೊಳಿಸುವುದು ಹಾಗೂ ಮಹಿಳೆಯರು ಆವೇಶಗೊಳ್ಳುವ ಪ್ರಕ್ರಿಯೆಯ ಅಂತಃಸಂಬಂಧವನ್ನು ಈ ನೆಲೆಯಲ್ಲಿ ಶೋಧಿಸಬೇಕಾಗಿದೆ. ಸಿರಿ ಆವೇಶಿತರಾದ ಮಹಿಳೆಯರು ಅಲೌಕಿಕ ಜಗತ್ತಿನ ಸಿರಿ ಬಳಗವಾಗಿ ರೂಪಾಂತರಗೊಂಡು ಅವರು ಎದುರಿಸಿದ ಸಂಘರ್ಷವನ್ನು ಪ್ರಕಟಪಡಿಸುತ್ತಲೇ ತಮ್ಮ ಲೌಕಿಕ ಬದುಕಿಗೂ ಪ್ರತಿಕ್ರಿಯಿಸಿ ವಾಸ್ತವದ ಒತ್ತಡಗಳಿಂದ ಪಾರಾಗುವ, ಪುರುಷ ವ್ಯವಸ್ಥೆಯನ್ನು ಪ್ರತಿರೋಧಿಸುವ ಪ್ರಯತ್ನವಾಗಿ ಸಿರಿಜಾತ್ರೆಯನ್ನು ಗಮನಸಿಬೇಕು. ಆದರೆ ಲೌಕಿಕಕ್ಕೆ ಪರ್ಯಾಯಾಗಿಯೇ ಅಲೌಕಿಕ ಜಗತ್ತನ್ನು ಅರ್ಥೈಸಿಕೊಳ್ಳಬೇಕಾಗಿದೆ. ಅಸ್ತಿತ್ವದ ಹುಡುಕಾಟದ ಪ್ರಶ್ನೆಯಲ್ಲಿ ಇಂತಹ ಅಲೌಕಿಕ ಜಗತ್ತಿನ ಸೃಷ್ಟಿ ಪ್ರಕ್ರಿಯೆ ಎನ್ನುವುದು ವಾಸ್ತವಕ್ಕೆ ನೀಡುವ ಒಂದು ಪ್ರತಿರೋಧವೇ ಆಗಿರುತ್ತದೆ. ಹೀಗಾಗಿ ಇಂತಹ ಸಿರಿ ಆಚರಣೆಯು ಈ ಮಧ್ಯಂತರ ಜಗತ್ತಿನಲ್ಲಿ ತೆರೆದುಕೊಳ್ಳುವ ತಾತ್ಕಾಲಿಕ ಸಂಬಂಧಗಳಿಗೆ ವಿಶೇಷ ಅರ್ಥವಿದೆ. ಲೌಕಿಕ ವ್ಯಕ್ತಿಯೊಬ್ಬಳು ಮಧ್ಯಂತರ ಜಗತ್ತಿನಲ್ಲಿ ಪಡೆದುಕೊಳ್ಳುವ ವ್ಯಕ್ತಿತ್ವ, ಅಲೌಕಿಕ ವ್ಯಕ್ತಿಗಳೊಂದಿಗೆ ಅಭೇದ್ಯಳಾಗಿ ಸ್ಥಾಪಿಸಿಕೊಳ್ಳುವ ಸಾಧ್ಯತೆಯನ್ನು ಭ್ರಮಾತ್ಮಕ ಎಂದು ತಳ್ಳಿಹಾಕಬರುವುದಿಲ್ಲ. ಈ ಕಾರಣದಿಂದಲೇ ಆವೇಶಿತ ಸಿರಿಗಳನ್ನು ಗ್ರಹಿಸುವ ಮತ್ತು ಅರ್ಥೈಸುವ ನೆಲೆಯನ್ನು ಹೆಣ್ಣೊಬ್ಬಳಿಗೆ ಎದುರಾಗುವ ಇಕ್ಕಟ್ಟುಗಳ ಬಿಡುಗಡೆಯ ಅವಕಾಶವಾಗಿ, ಪ್ರತಿರೋಧದ ಶಕ್ತಿ ಸಂಚಯವಾಗಿ ಕಂಡುಕೊಳ್ಳುವ ಅಗತ್ಯವಿದೆ.

ಪಾಡ್ದನ ಹಾಡಿಕೆ ಉತ್ಕಟ ಬಿಂದು ತಲುಪಿದಾಗ ಸಮಾನಾಂತರವಾಗಿ ಸಿರಿಗಳ ಆವೇಶ ತೀವ್ರತೆಯನ್ನು ಪಡೆದುಕೊಳ್ಳುತ್ತದೆ. ಪಾಡ್ದನ ಹಾಡುವ, ತಲೆ, ಸೊಂಟವನ್ನು ವೃತ್ತಾಕಾರದಲ್ಲಿ ತಿರುಗಿಸುವ, ಆಳುವ, ಯಾತನೆಯ ಅಟ್ಟಹಾಸ ಮಾಡುವ, ಹಿಂಗಾರವನ್ನು ಮುಖಕ್ಕೆ ಉಜ್ಜಿಕೊಳ್ಳುವ, ಸ್ಸೊಸೋ…. . ಎಂದು ನಿಟ್ಟುಸಿರು ಬಿಡುವ, ಮೈಕೈ ಸೆಟೆದು ಕಣ್ಣು ತಿರುಗಿಸುವ ಕೆಲವೊಮ್ಮೆ ನೆಲಕ್ಕೆ ಬೀಳುವ ಕ್ರಿಯೆಗಳಲ್ಲಿ ಆವೇಶ ಇಡೀ ರಾತ್ರಿ ನಡೆಯುತ್ತದೆ. ತೀವ್ರ ದೇವಾವೇಶದಿಂದ ಬಿಡುಗಡೆಗೊಂಡಾಗ ಪಾಡ್ದನ ಹಾಡಿಕೆ ಪುನರಾರಂಭವಾಗುತ್ತದೆ. ಪಾಡ್ದನ ಹಾಡಿಕೆ – ತೀವ್ರ ಆವೇಶ – ಬಿಡುಗಡೆ – ಈ ಆವರ್ತದ ಹಲವು ಹಂತಗಳಲ್ಲಿ ನಡೆಯುತ್ತದೆ.

ಸಿರಿ ಪಾಡ್ದನದೊಳಗಿನ ಹೆಣ್ಣು ಪ್ರಪಂಚಕ್ಕೂ ಆರಾಧನಯೊಳಗಿನ ಹೆಣ್ಣು ಪ್ರಪಂಚಕ್ಕೂ ತೀರಾ ವೈರುಧ್ಯವೆನ್ನಬಹುದಾದ ಸ್ಥಿತಿಯಿದೆ. ಪಾಡ್ದನದಲ್ಲಿ ಸಿರಿ ಪುರುಷಾಧಿಕಾರವನ್ನು ಪ್ರಶ್ನಿಸುವ, ಪ್ರತಿರೋಧಿಸುವ ಆ ಮೂಲಕ ಹೆಣ್ಣಿನ ಅಂತಸ್ಸತ್ವದ ಪ್ರತೀಕವಾಗಿ ದಾಖಲಾಗಿದ್ದಾಳೆ. ಮಗ ಕುಮಾರ ತನ್ನ ಮರುಮದುವೆಗೆ ತೋರುವ ಆತಂಕವನ್ನು ಮೀರಿಯೇ ಸಿರಿ ಮರುವಿವಾಹವಾಗುತ್ತಾಳೆ. ಹೀಗೆ ಸ್ತ್ರೀ ಸತ್ವಕ್ಕೊಂದು ಪ್ರತಿಮೆಯಾಗಿ ಕಾಣಿಸುವ ಸಿರಿ ಆಚರಣೆಯೊಳಗೆ ಕುಮಾರನ ನಿರ್ದೇಶನ ಹಾಗೂ ಪೂರ್ಣ ನಿಯಂತ್ರಣಕ್ಕೆ ಒಳಪಟ್ಟಿರುವುದು ಕುತೂಹಲಕರವಾದುದು. ಇಡಿಯ ಸಿರಿ ಪಾಡ್ದನ ಸ್ತ್ರೀ ಚೈತನ್ಯದ ಒಂದು ಸಂಕಥನವಾಗಿ ಕಂಡುಬಂದರೆ ಆಚರಣೆಯಲ್ಲಿ ಪುರುಷ ಪ್ರಾಬಲ್ಯದ ಪ್ರತಿನಿಧಿಯಾಗಿ ಕುಮಾರ ವರ್ತಿಸುತ್ತಾನೆ. ಇಷ್ಟಾಗಿಯೂ ಕೂಡ ತನ್ನ ಒತ್ತಿಟ್ಟ, ಹತ್ತಿಕ್ಕಿದ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ ಇಲ್ಲಿಯ ಸಿರಿಗಳು ಶಕ್ತಿಯುತವಾಗಿಯೇ ಪ್ರತಿಕ್ರಿಯಿಸುತ್ತಾರೆ. ದೈನಂದಿನ ವಾಸ್ತವ ಬದುಕಿನ ಅಧೀನ ಸಂದರ್ಭಕ್ಕಿಂತ ಭಿನ್ನವಾಗಿ ಪ್ರಕಟವಾಗು‌ತ್ತಾರೆ.

ಎ. ವಿ. ಎನ್‌.

 

ಸಿರುತೊಂಡರ್ ನಾಟಕಂ ‘ಸಿರುತೊಂಡರ್ ಕಥೆ’ (ಭಕ್ತಿಸಿರಿಯಾಳ ಕಥೆ) ತಮಿಳು ಶೈವಭಕ್ತರಾದ ಅರವತ್ತುಮೂರು ನಾಯನ್ಮಾರರ ಚರಿತ್ರೆಯನ್ನು ತಿಳಿಸುವ ಹನ್ನೆರಡನೇ ಶತಮಾನಕ್ಕೆ ಸೇರಿದವರೆನ್ನಲಾದ ಶೇಕ್ಕಿಳಾರ್ ಅವರ ಪೆರಿಯಪುರಾಣಂ ತಿರುತೊಂಡರ್ ಕಥೆ ವಿವರವಾಗಿ ಬರುತ್ತದೆ. ನಾಯನ್ಮಾರರ ಕಥೆಗಳು ಶೇಕ್ಕಿಳಾರ್ ಕಾಲಕ್ಕೆ ಮೊದಲು ಮತ್ತು ಅನಂತರ ವಾಕ್ಸಂಪ್ರದಾಯದ ಮೂಲಕ ಪ್ರಚಲಿತವಿದ್ದಿರಬೇಕು. ತಮಿಳುನಾಡು ಗಡಿಯನ್ನು ದಾಟಿ ಕರ್ನಾಟಕ, ಆಂಧ್ರ, ಮಹಾರಾಷ್ಟ್ರ ರಾಜ್ಯಗಳಿಗೂ ಅವು ವ್ಯಾಪಿಸಿವೆ.

ಸಿರುತೊಂಡರ್ ಅವರ ನಿಜನಾಮ ಪರಂಜ್ಯೋತಿ, ಕಾಡವರ್ ಕೋನ ಎಂಬ ಪಲ್ಲವ ದೊರೆಯ ಸೇನಾಧಿಪತಿ, ವಾತಾಪಿಯ ವಿರುದ್ಧ ಪಲ್ಲವರು ನಡೆಸಿದ ಯುದ್ಧಕ್ಕೆ ನಾಯಕತ್ವ ವಹಿಸಿದವರು ಇವರೇ. ವಾತಾಪಿಯನ್ನು ಗೆದ್ದು ಹಿಂದಿರುಗಿದ ಬಳಿಕ ದೊರೆ ಅವರನ್ನು ಮಹಾಶಿವಭಕ್ತ ಎಂದು ಅರಿತು ಅವರಿಗೆ ದೊಡ್ಡ ಪ್ರಮಾಣದಲ್ಲಿ ಕಾಣಿಕೆಗಳನ್ನು ನೀಡಿ ಅವರು ತಮ್ಮ ಕಾಯಕಗಳನ್ನು ಮುಂದುವರೆಸಲು ಅವಕಾಶ ಮಾಡಿಕೊಡುತ್ತಾನೆ. ಪರಂಜ್ಯೋತಿ ಪತ್ನಿ ವೆಣ್‌ಕಾಟ್ಟುನಂಗೈ ಮತ್ತು ಸೇವಕಿ ಚಂದನನಂಗೈ ಎಂಬುವರೊಂದಿಗೆ ಶಿವಭಕ್ತರಿಗೆ ಅನ್ನದಾನ ಮಾಡುವ ಕಾಯಕವನ್ನು ಮಾಡುತ್ತಿರುತ್ತಾರೆ. ಅವರಿಗೆ ಸೀರಾಳನ್‌ ಎಂಬ ಮಗು ಜನಿಸುತ್ತದೆ. ಆಗ ಅವರ ಭಕ್ತಿಯನ್ನು ಪರೀಕ್ಷಿಸಲು ಬಯಸಿದ ಶಿವ, ಗಂಗಾಳರ (ಹಣ್ಣು ಹಣ್ಣು ಮುದುಕ) ರೂಪ ತಾಳಿ ಭೂಲೋಕಕ್ಕೆ ಬರುತ್ತಾನೆ.

ಸಿರುತೊಂಡರ್ ಗಂಗಾಳರನ್ನು ಊಟಕ್ಕೆ ಆಹ್ವಾನಿಸುತ್ತಾನೆ. ‘ನನಗೆ ಬೇಕಾದ ಆಹಾರವನ್ನು ನಿನ್ನಿಂದ ನೀಡಲು ಸಾಧ್ಯವಿಲ್ಲ’ ಎಂದು ಗಂಗಾಳರ್ ಹೇಳಲು ‘ಏನು ಬೇಕಾದರೂ ಕೊಡುತ್ತೇನೆ ಕೇಳಿ ಎನ್ನುತ್ತಾನೆ ಸಿರುತೊಂಡರ್. ಆಗ ಐದು ವರ್ಷ ವಯಸ್ಸಿನ ಬಾಲಕನೋರ್ವನನ್ನು ತಾಯಿ ಹಿಡಿದುಕೊಳ್ಳಲು, ತಂದೆ ಕಡಿದು ಮನಃಪೂರ್ವಕವಾಗಿ ಅಡುಗೆ ಮಾಡಿದ ಮಗುವಿನ ಮಾಂಸವೇ ತನಗೆ ಬೇಕಾದ ಆಹಾರ ಎನ್ನುತ್ತಾನೆ ವೃದ್ಧ. ಅದಕ್ಕೆ ಒಪ್ಪಿಕೊಂಡ ಸಿರುತೊಂಡರ್ ಮನೆಗೆ ಬಂದು ತನ್ನ ಪತ್ನಿಗೆ ವಿಷಯವನ್ನು ತಿಳಿಸಿ, ತನ್ನ ಮಗ ಸೀರಾಳನನ್ನೇ ಕಡಿದು ಅಡುಗೆ ಮಾಡಲು ತೀರ್ಮಾನಿಸಿರುವುದಾಗಿ ಹೇಳುತ್ತಾರೆ. ಆಕೆಯೂ ಒಪ್ಪಿಕೊಳ್ಳುತ್ತಾಳೆ. ಗುರುಕುಲಕ್ಕೆ ಹೋಗಿ ಮಗನನ್ನು ಕರೆತಂದು ತಾಯಿ-ತಂದೆ ಸೇರಿ ಅವನನ್ನು ಕಡಿದು ಬಗೆ ಬಗೆಯ ಆಹಾರವನ್ನು ತಯಾರಿಸುತ್ತಾರೆ. ತಲೆಯನ್ನು ಬೇಡವೆಂದು ಚಂದನನಂಗೈಗೆ ಕೊಟ್ಟುಬಿಡುತ್ತಾರೆ. ಆಕೆ ಅದನ್ನೂ ಗಂಗಾಳರ್ ಕೇಳಬಹುದೆಂದು ಬಗೆದು ಅಡುಗೆ ಮಾಡಿಡುತ್ತಾಳೆ.

ಗಂಗಾಳರ್ ಊಟ ಮಾಡಲು ಕುಳಿತುಕೊಳ್ಳುತ್ತಾನೆ. ಆಗ ತನ್ನೊಂದಿಗೆ ಬೇರೊಬ್ಬ ಭಕ್ತರು ಉಂಡರೆ ಮಾತ್ರ ತಾನೂ ಊಟ ಮಾಡಲು ಸಾಧ್ಯ ಎನ್ನುತ್ತಾರೆ. ಅನ್ಯಮಾರ್ಗವಿಲ್ಲದೆ ಸಿರುತೊಂಡರ್ ಊಟ ಮಾಡಲು ಕುಳಿತುಕೊಳ್ಳುತ್ತಾನೆ. ಊಟ ಮಾಡುವಾಗ ಗಂಗಾಳರ್ ತಲೆಮಾಂಸವನ್ನು ಕೇಳುತ್ತಾನೆ. ವೆಣ್‌ಕಾಟುನಂಗೈ ತಬ್ಬಿಬ್ಬಾಗಲು, ಅದನ್ನು ಅಡುಗೆ ಮಾಡಿಟ್ಟಿದ್ದ ಚಂದನನಂಗೈ ತೆಗೆದುಕೊಂಡು ಬಂದು ಬಡಿಸುತ್ತಾಳೆ. ಆಗ ಗಂಗಾಳರ್ ಮತ್ತೆ ಸಿರುತ್ತೊಂಡರಿಗೆ ‘ಮಗುವಿಲ್ಲದ ಮನೆಯಲ್ಲಿ ಊಟ ಮಾಡುವುದು ಮಹಾಪಾಪ. ಆದ್ದರಿಂದ ನಿನ್ನ ಮಗನನ್ನು ಕರೆ’ ಎನ್ನುತ್ತಾನೆ. ಆಗ ವೆಣ್‌ಕಾಟ್ಟುನಂಗೈ ತಳಮಳಗೊಂಡು ತನ್ನ ಮಗನನ್ನು ಕರೆಯಲು, ಸೀರಾಳನು ಶಾಲೆಯಿಂದ ಬರುವ ಮಗುವಿನಂತೆ ಓಡಿ ಬರುತ್ತಾನೆ. ಈ ನಡುವೆ ಗಂಗಾಳರು ಮರೆಯಾಗಲು ಆತಂಕಗೊಂಡ ಸಿರುತೊಂಡರಿಗೆ ಶಿವ ಪ್ರತ್ಯಕ್ಷನಾಗುತ್ತಾನೆ.

ಈ ಕಥೆ ತಮಿಳುನಾಡಿನ ಅನೇಕ ಭಾಗಗಳಲ್ಲಿ ಸಮುದಾಯ ನಾಟಕವಾಗಿ ಆಡಲ್ಪಡುತ್ತದೆ. ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಹಾಗೂ ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ವೃತ್ತಿಪರ ಸಂಗೀತ ನಾಟಕ ಕಂಪೆನಿಗಳು ಈ ನಾಟಕವನ್ನು ಆಡಿಸಿದ್ದಾರೆ. ಪ್ರಸ್ತುತ ತಂಜಾವೂರು ಸುತ್ತಮುತ್ತ ಕಥೆ ನಡೆಯಿತೆಂದು ಹೇಳಲಾಗುವ ತಿರುಚೆಂಗಾಟ್ಟು ಕುಡಿ ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಊರುಗಳಲ್ಲಿ ಈ ನಾಟಕವನ್ನು ಆಡಿಸಲಾಗುತ್ತದೆ. ಈ ಊರುಗಳಲ್ಲಿ ಬೇರೆ ಕೆಲವು ನಾಯನ್ಮಾರರ ಹಾಗೆ ಸಿರುತೊಂಡರ್ ಹೆಸರಿನಲ್ಲಿ ಮಠಗಳು ಇವೆ. ಅನೇಕ ಅಚ್ಚಿಗೇರಿದ ಅಥವಾ ಅಚ್ಚಿಗೇರದ ನಾಟಕದ ಹಸ್ತಪ್ರತಿಗಳ ಆಧಾರದ ಮೇಲೆ ಈ ನಾಟಕಗಳನ್ನು ಆಡಿಸುತ್ತಾರೆ. ರಂಗನಾಥ ವಾದ್ಯಾರ್ ಎಂಬುವರು ಬರೆದ ಸಿರುತೊಂಡ ನಾಯನ್ಮಾರ್ ನಾಟಕ ಇವುಗಳಲ್ಲಿ ಮುಖ್ಯವಾದದ್ದು.

ಸಿರುತೊಂಡರ್ ಕಥೆಯನ್ನು ನಾಡಕವಾಡುವ ಅನೇಕ ಊರುಗಳಲ್ಲಿ ಅನ್ನದಾನ ಮತ್ತು ವೈರವಪೂಜೆ ಎಂಬ ಕಾರ್ಯಕ್ರಮಗಳು ನಡೆಯುತ್ತವೆ. ಇವೆರಡೂ ಮೂಲತಃ ಸಾಮೂಹಿಕ ಔತಣಗಳಾಗಿವೆ. ಅನ್ನದಾನ ಎರಡನೇ ದಿನ ಬೆಳಗ್ಗೆ ನಡೆಯುತ್ತದೆ. ಊರಿನಲ್ಲಿ ದಾನವಾಗಿ ಪಡೆದ ಆಹಾರ ಪದಾರ್ಥಗಳನ್ನು ದೈವಕ್ಕೆ ಅರ್ಪಿಸಿ, ಬಳಿಕ ಊರಿನ ಮಂದಿಯೇ ಸೇರಿ ಊಟ ಮಾಡುವ ದೊಡ್ಡ ಕಾರ್ಯಕ್ರಮ ಇದು. ಔತಣ ನಡೆಯುವ ಸಂದರ್ಭದಲ್ಲಿ ಸಂತಾನ ಪ್ರಾಪ್ತಿಗಾಗಿ ಹರಕೆ ಹೊತ್ತುಕೊಂಡವರು ಮಡಿಲು ಭಿಕ್ಷೆ ಹರಕೆ ಹೊತ್ತ ಕುಟುಂಬ ಒಂದರಲ್ಲಿ ನಡೆಯುವ ವೈರವಪೂಜೆ ಎಂಬ ಮತ್ತೊಂದು ಆಚರಣೆ. ಮೂರು ವರ್ಷಗಳ ಕಾಲ ನಿರಂತರವಾಗಿ ನಡೆಯುವ ಈ ವೈರವಪೂಜೆಗೆ ಊರಿನ ಮುಖ್ಯಸ್ಥರನ್ನು ಮತ್ತು ಹತ್ತಿರದ ಸಂಬಂಧಿಗಳನ್ನು ಮಾತ್ರ ಆಹ್ವಾನಿಸುತ್ತಾರೆ. ಒಂದು ಕಡೆ ಈ ಪೂಜೆ ನಡೆಯುತ್ತಿದ್ದರೆ, ಇನ್ನೊಂದು ಕಡೆ ಆ ರಾತ್ರಿ ನಾಟಕಕ್ಕೆ ಸಂಬಂಧಿಸಿದ ಕೆಲಸಗಳೂ ನಡೆಯುತ್ತಿರುತ್ತವೆ. ನಾಟಕದಲ್ಲಿ ಸ್ವಾಮಿ (ಗಂಗಾಳರ್) ವೇಷ ಹಾಡುವ ವ್ಯಕ್ತಿ ಮಾತ್ರ ಪೂಜೆ ನಡೆಯುವ ಮನೆಯಲ್ಲಿ ಅಲಂಕಾರ ಮತ್ತು ವಸ್ತ್ರಗಳನ್ನು ಧರಿಸುತ್ತಾರೆ. ಒಂದು ಕುರ್ಚಿಯಲ್ಲಿ ಆತ ಕುಳಿತಿದ್ದರೆ, ಎಡಭಾಗದಲ್ಲಿ ಅನೇಕ ಬಗೆಯ ಸಸ್ಯಾಹಾರ ಅಡುಗೆಗಳನ್ನು ಬಡಿಸಲಾಗುತ್ತದೆ. ಮಧ್ಯೆ ಒಂದು ಪರದೆಯನ್ನು ಕಟ್ಟಿ, ಬಲಭಾಗದಲ್ಲಿ ಮಾಂಸಾಹಾರದ ಅಡುಗೆಗಳನ್ನು ಬಡಿಸಲಾಗುತ್ತದೆ. ದೀಪಧೂಪಗಳನ್ನು ತೋರಿಸುವಾಗ ಪರದೆಯನ್ನು ಕೊಂಚ ಮೇಲಕ್ಕೆ ಎತ್ತಲಾಗುತ್ತದೆ. ಪೂಜೆ ಮುಗಿದು ಹರಕೆ ಹೊತ್ತುಕೊಂಡ ದಂಪತಿಗಳು ಸ್ವಾಮಿ ವೇಷ ಧರಿಸಿದವರ ಕಾಲಿಗೆರಗಿ ನಮಸ್ಕರಿಸಿದ ಮೇಲೆ ಔತಣಕೂಟ ನಡೆಯುತ್ತದೆ. ಆ ವೇಳೆಗೆ ನಾಟಕ ಆಗಲೇ ಪ್ರಾರಂಭವಾಗಿ ಬಿಡುವುದರಿಂದ, ಪೂಜೆಯಲ್ಲಿ ಭಾಗವಹಿಸಿದವರೆಲ್ಲರೂ ಮೆರವಣಿಗೆಯಲ್ಲಿ ನಾಟಕದ ವೇದಿಕೆಗೆ ಹೋಗುತ್ತಾರೆ. ದಾರಿಯುದ್ದಕ್ಕೂ ಮನೆಗಳ ಅಂಗಳದಲ್ಲಿ ಸ್ವಾಮಿ ವೇಷಧಾರಿಗೆ ಗೌರವ ಸಲ್ಲಿಸಲಾಗುತ್ತದೆ.

ನಾಟಕಕ್ಕೆ ಸಂಬಂಧಿಸಿದ ಕೆಲವು ಔತಣಕೂಟದ ಸಂದರ್ಭಗಳನ್ನು ಇಲ್ಲಿ ಉಲ್ಲೇಖಿಸಬೇಕು.ಶಿವಭಕ್ತರನ್ನು ಕರೆತಂದು ಸಿರುತೊಂಡರ್ ಮತ್ತು ಅವರ ಪತ್ನಿ ಊಟ ಬಡಿಸುವ ದೃಶ್ಯವೊಂದರಲ್ಲಿ ರಂಗದ ಮೇಲೆ ಒಂದು ಪುಟ್ಟ ಔತಣಕೂಟ ನಡೆಯುತ್ತದೆ. ಪರದೇಶಿಗಳಂತೆ ವೇಷ ಧರಿಸಿದ ಕೆಲವರೊಂದಿಗೆ ಊರಿನ ಹಿರಿಯರು ಮತ್ತು ಮಕ್ಕಳು ಕೆಲವರು ಈ ಔತಣಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ಮಾತ್ರವಲ್ಲದೆ ನಾಟಕದ ಕೊನೆಯ ಭಾಗದಲ್ಲಿ ಸಿರುತೊಂಡರ್ ತನ್ನ ಮಗುವನ್ನು ಕಡಿದು ಮಾಂಸದಡುಗೆ ತಯಾರಿಸಲು ಮುಂದಾಗುವಾಗ ಮಗುವಿನ ಸಂಕೇತವಾಗಿ ಮದ್ದು (ಔಷಧಿ) ಎಂದು ಕರೆಯಲಾಗುವ ಒಂದು ಬಗೆಯ ಆಚರಣೆಗೆ ಸಂಬಂಧಿಸಿದ ಆಹಾರ ಸ್ಥಾನ ಪಡೆಯುತ್ತದೆ. ಇಪ್ಪತ್ತಕ್ಕೂ ಹೆಚ್ಚು ಮೂಲಿಕೆಗಳಿಂದ ವಿಶೇಷವಾಗಿ ತಯಾರಿಸಿದ ಈ ಮದ್ದನ್ನು ದೇವರಿಗೆ ಅರ್ಪಿಸಿ, ಗ್ರಾಮಸ್ಥರೆಲ್ಲರಿಗೂ ಸಣ್ಣ ಪ್ರಮಾಣದಲ್ಲಿ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಇದನ್ನು ಮಕ್ಕಳಾಗದವರು ತಿಂದರೆ ಸಂತಾನಭಾಗ್ಯ ಲಭಿಸುತ್ತದೆ ಎಂದು ನಂಬಲಾಗಿದೆ. ನಾಟಕ ಬೆಳಗ್ಗೆ ಮುಕ್ತಾಯಗೊಂಡ ಮೇಲೆ ನಾಟಕದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲರೂ ರಾತ್ರಿ ವೈರವ ಪೂಜೆ ನಡೆದ ಮನೆಗೆ ಊಟಕ್ಕೆ ಆಮಂತ್ರಿತರಾಗಿರುತ್ತಾರೆ.

ಕಾಲಭೈರವ ಆರಾಧನೆ ಹಾಗೂ ಕಾಪಾಲಿಕರು ಮುಂತಾದ ತೀವ್ರಗಾಮಿ ಶೈವರೊಂದಿಗೆ ಸಂಬಂಧ ಹೊಂದಿದರೆ ಬಹಳ ಹಿಂದೆಯೇ ಹುಟ್ಟಿಕೊಂಡ ಸಿರುತೊಂಡರ ಕಥೆ ಅದಾಗಲೇ ರೂಢಿಯಲ್ಲಿದ್ದ ಶಿವಾರಾಧನೆ ವಿಧಾನಗಳೊಂದಿಗೆ ಮಿಳಿತಗೊಂಡಿರುವುದು ಅದರ ಇಂದಿನ ರೂಪದಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ. ಅನ್ನದಾನದಂತಹ ಕಾರ್ಯಕ್ರಮಗಳು ತಮಿಳುನಾಡಿನ ಬೇರೆ ಹಲವು ಪೂಜಾ ಸಂಪ್ರದಾಯಗಳಲ್ಲೂ ಕಂಡುಬರುತ್ತವೆ. ಮಾತ್ರವಲ್ಲದೆ ಭೈರವ ಪೂಜೆಯಲ್ಲಿ ಕಂಡುಬರುವ ನೈವೇದ್ಯ ಮತ್ತು ಔತಣಕೂಟ ಈ ಮಾದರಿಯ ಪ್ರಭಾವವನ್ನು ವ್ಯಕ್ತಪಡಿಸುತ್ತದೆ.

ಶಿವನಿಗೆ ಸಸ್ಯಾಹಾರಿ ಮತ್ತು ಮಾಂಸಾಹಾರಿ ಆಹಾರವನ್ನು ಒಟ್ಟಿಗೆ ಅರ್ಪಿಸುವುದನ್ನು ಇಲ್ಲಿ ಮುಖ್ಯವಾಗಿ ಉಲ್ಲೇಖಿಸಬೇಕು. ಎರಡು ಬಗೆಯ ಆಹಾರಗಳ ಮಧ್ಯೆ ಇರುವ ಪರದೆ ಅಭಿಪ್ರಾಯ ಭೇದವನ್ನು ಸೂಚಿಸುವುದು ನಿಜವಾಗಿದ್ದರೂ (ದೇವಸ್ಥಾನಗಳಲ್ಲಿ ಪ್ರಾಣಿಬಲಿ ನೀಡುವಾಗ ಅಂತಹ ಬಲಿಯನ್ನು ಸ್ವೀಕರಿಸದೆ- ಮಾಂಸಾಹಾರ ಸ್ವೀಕರಿಸಿದ ದೈವಗಳ ಮುಂದೆ ಇಂತಹ ಪರದೆಯನ್ನು ಹಾಕುವ ಪದ್ಧತಿ ಅನೇಕ ಕಡೆ ಕಂಡುಬರುತ್ತದೆ.) ಮಾಂಸಾಹಾರವನ್ನು ಅರ್ಪಿಸುವುದು ತದನಂತರ ಔತಣಕೂಟದಲ್ಲಿ ಅದನ್ನು ವಿತರಿಸುವುದು ಮುಂತಾದ ಘಟನೆಗಳಲ್ಲಿ ಸಾಧ್ಯವಾಗುವ ಸೂಚ್ಯಕ ಸ್ಥಳಾಂತರಗಳನ್ನು (Semiotic displacements) ಇಲ್ಲಿ ಮುಖ್ಯವಾಗಿ ಗಮನಿಸಬೇಕು.

ಈ ಸಂಬಂಧ ಉಲ್ಲೇಖಿಸಬೇಕಾದ ಮತ್ತೊಂದು ವಿಷಯ – ಕಥೆಯಲ್ಲಿ ಗಂಗಾಳರು ಮಾಂಸಾಹಾರವನ್ನು ತಿನ್ನಲು ಮುಂದಾಗಿದ್ದರೂ ನಾಟಕದಲ್ಲಿ ಮಾಂಸಾಹಾರಕ್ಕೆ ಬದಲಾಗಿ ಮದ್ದು ಎಂಬ ಮೂಲಿಕೆ ವಸ್ತುವನ್ನು ಬಳಸುವುದಿದೆ. ಮೂಲಿಕೆಗಳಿಂದ ತಯಾರಿಸುವ ಈ ಮದ್ದು ಮಗುವಿನ ಮಾಂಸದ ಸಂಕೇತವಾಗುವ ಅದೇ ವೇಳೆ ತನ್ನದೇ ಆದ ಔಷಧೀಯ ಗುಣವಿರುವ ವಸ್ತುವೂ ಆಗಿರುತ್ತದೆ. ನರಬಲಿಗಳನ್ನು ನಿಷೇಧಿಸಿದ ಒಂದು ಕಾಲಘಟ್ಟದಲ್ಲಿ ಕೇವಲ ನರಮಾಂಸಕ್ಕೆ ಬದಲಿಯಾಗಿ ಸ್ಥಾನ ಪಡೆದ ಮಾಂಸರಹಿತ ಆಹಾರ ಎಂದು ಅದನ್ನು ಭಾವಿಸಲಾಗದು. ಅದು ಮಗುವಿನ ಮಾಂಸದ ಸಂಕೇತವಾಗಿದ್ದು ಮಕ್ಕಳ ವರವನ್ನು ಬೇಡುವ ಸ್ತ್ರೀಯರ ದೇಹದಲ್ಲಿ ಸಂತಾನ ಭಾಗ್ಯವನ್ನು ನೀಡುವ ಶಕ್ತಿಯನ್ನು ಹೊಂದಿದೆ. ಮಾಂಸದಿಂದ ಮಾಂಸ ಬೆಳೆಯುತ್ತದೆ ಎಂಬ ಜನಪದ ತರ್ಕವೇ ಇದು. ಆದರೆ ಇಲ್ಲಿ ಮಧ್ಯಸ್ಥ ಸ್ಥಿತಿಯನ್ನು ಸೂಚಿಸುವ ಮಾಧ್ಯಮವಾಗಿ ಒಂದು ನಿಜವಾದ ಔಷಧಿ ಸ್ಥಾನವನ್ನು ಪಡೆದಿರುವುದು ಈ ತರ್ಕದಲ್ಲಿ ಒಂದು ಬದಲಾವಣೆಯನ್ನು ಸೂಚಿಸುತ್ತದೆ.

ಶಿವನಿಗಾಗಿ ಶಿವಧರ್ಮಕ್ಕಾಗಿ ಯಾವುದೇ ತೀವ್ರತರವಾದ ಸ್ಥಿತಿಗೆ ಭಕ್ತರ ಭಕ್ತಿ ಕೊಂಡೊಯ್ಯಬಹುದು ಎಂಬುದನ್ನು ಉದಾಹರಣೆಯ ಮೇಲೆ ಉದಾಹರಣೆಯಾಗಿ ವಿವರಿಸುವುದೇ ಪೆರಿಯಪುರಾಣದ ಉದ್ದೇಶ. ಪುತ್ರಹತ್ಯೆ, ನರಬಲಿ ಇತ್ಯಾದಿಗಳನ್ನು ಶಿವನ ಪ್ರಯುಕ್ತ ಕೈಗೊಳ್ಳುವುದನ್ನು ಸಮರ್ಥಿಸುವುದೇ ಇದರಲ್ಲಿ ಬರುವ ಸಿರುತೊಂಡರ್ ಕಥೆಯ ಏಕೈಕ ಉದ್ದೇಶ. ಆದರೆ ಗ್ರಾಮಗಳಲ್ಲಿ ನಡೆಸುವ ಸಿರುತೊಂಡರ್ ನಾಟಕವಾದರೂ, ಅನೇಕ ಬದಲಾವಣೆಗಳೊಂದಿಗೆ ಸಂಪೂರ್ಣ ಭಿನ್ನ ಆಯಾಮಗಳಿಗೆ ಅನುವು ಮಾಡಿಕೊಡುವುದನ್ನು ಕಾಣಬಹುದು.

ಎಸ್‌. ಕೆ. ಯು. ಅನುವಾದ ಐ. ಎಸ್‌.

 

ಸಿರುವೀಟ್ಟು ಪೊಂಗಲ್‌ ದಕ್ಷಿಣ ತಮಿಳುನಾಡಿನಲ್ಲಿ ಜನವರಿ ತಿಂಗಳಲ್ಲಿ ಪೊಂಗಲ್‌ ಹಬ್ಬದೊಂದಿಗೆ ಆಚರಿಸುವ ಒಂದು ಬಗೆಯ ಹಬ್ಬ ಸಣ್ಣಮನೆ ಪೊಂಗಲ್‌ ಹೆಣ್ಣು ಮಕ್ಕಳು ಇರುವ ಮನೆಗಳಲ್ಲಿ ಮಾತ್ರ ಈ ಪೊಂಗಲ್‌ ಆಚರಣೆ ಮಾಡುವುದು ರೂಢಿ. ಸಿರುವೀಟ್ಟು ಪೊಂಗಲ್‌ ಬಾಲಕಿಯರು ಮತ್ತು ಯುವತಿಯರಿಗಾಗಿ ಆಚರಿಸುವ ಪೊಂಗಲ್‌ ಹಬ್ಬ.

ಈ ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಒಂದು ತಿಂಗಳು ಮುನ್ನವೇ ಪ್ರಾರಂಭವಾಗುತ್ತದೆ. ಧನುರ್ಮಾಸದಲ್ಲಿ ಮುಂಜಾನೆಯೇ ಎದ್ದು ಮನೆಯ ಅಂಗಳದಲ್ಲಿ ಗುಡಿಸಿ ಸಗಣಿಯಿಂದ ಸಾರಿಸಿ, ರಂಗೋಲಿ ಹಾಕಿ, ಆ ರಂಗೋಲಿಯ ಮೇಲೆ ಸಗಣಿ ಉಂಡೆಗಳನ್ನು ಇಟ್ಟು ಪರಂಗಿ ಹೂವನ್ನು ಇಡುತ್ತಾರೆ. ಈ ಸಗಣಿ ಉಂಡೆಗಳು ಬೆಸ ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳುತ್ತಾರೆ. ಕೆಲವರು ಒಂದೇ ಒಂದು ಸಗಣಿ ಉಂಡೆಯನ್ನು ಇಡುವುದುಂಟು.

ಸಂಜೆ ವೇಳೆ ಸಗಣಿ ಉಂಡೆಗಳನ್ನು ಸೇರಿಸಿ ಬೆರಣಿ ತಟ್ಟಿ ಒಣಗಿಸುವರು. ಈಗ ಪರಂಗಿ ಹೂವಿನ ಬದಲು ಚೆಂಡು ಹೂ ಮುಂತಾದ ಹೂಗಳನ್ನು ಸಗಣಿ ಉಂಡೆಗಳ ಮೇಲೆ ಇಡುತ್ತಾರೆ. ಧನುರ್ಮಾಸ ಪೂರ್ತಿ ಮನೆ ಮುಂದೆ ರಂಗೋಲಿ ಹಾಕಿ ಹೂವು ಇಡುತ್ತಾರೆ.

ಪೊಂಗಲ್ ಹಬ್ಬದ ದಿನ ಮನೆಯನ್ನು ಸ್ವಚ್ಛಗೊಳಿಸಿ ಸುಣ್ಣ ಬಣ್ಣಗಳನ್ನು ಬಳಿದು ಕೆಂಬಣ್ಣ ಲೇಪಿಸುವಾಗ ಮನೆಯ ಮುಂದೆ ಒಂದು ಬದಿಯಲ್ಲಿ ಸಣ್ಣ ಮನೆಯನ್ನು ನಿರ್ಮಿಸಿ ಅಥವಾ ಕೆಂಬಣ್ಣ ಮತ್ತು ಸುಣ್ಣದ ನೀರಿನಿಂದ ಒಂದು ಮನೆಯನ್ನು ಬಿಡಿಸುತ್ತಾರೆ. ಅದಕ್ಕೊಂದು ಪುಟ್ಟ ಬಾಗಿಲಿಟ್ಟು ಅದರ ಮುಂದೆ ರಂಗೋಲಿ ಬಿಡುತ್ತಾರೆ. ಹೀಗೆ ಸಣ್ಣ ಮನೆಪೊಂಗಲ್ ಸಿದ್ಧತೆಗಳು ನಡೆಯುತ್ತವೆ.

ಕೆಲವು ಮನೆಗಳಲ್ಲಿ ಸಂಕ್ರಾತಿ ಪೊಂಗಲ್ ದಿನದಂದೇ ಸಣ್ಣ ಮನೆ ಪೊಂಗಲನ್ನು ಸೇರಿಸಿ ಮಾಡುವುದುಂಟು. ಬಹುತೇಕ ಮನೆಗಳಲ್ಲಿ ಪುಷ್ಯ ಮಾಸದ ಮೊದಲ ದಿನ ಸಂಕ್ರಾತಿ ಪೊಂಗಲ್ ಆಚರಿಸಿ, ಅನಂತರ ಬೆಳದಿಂಗಳಲ್ಲಿ ಬರುವ ಅಷ್ಟಮಿ, ನವಮಿ ಹೊರತು ಪಡಸಿ ಇತರ ಯಾವುದಾದರೊಂದು ದಿನವನ್ನು ಗೊತ್ತು ಮಾಡುತ್ತಾರೆ. ಇಂದು ಹೆಣ್ಣು ಮಕ್ಕಳಿಗೆ ಅನುಕೂಲವಾಗುವಂತಹ ರಜಾ ದಿನಗಳನ್ನು ಆಯ್ಕೆ ಮಾಡಲಾಗುತ್ತದೆ. ಗೊತ್ತು ಮಾಡಿದ ದಿನದಂದು ಹೆಣ್ಣು ಮಕ್ಕಳು ಮುಂಜಾನೆದ್ದು ಸ್ನಾನ ಮಾಡಿ ಹೊಸ ಬಟ್ಟೆಯುಟ್ಟು, ಸಣ್ಣ ಮನೆಯ ಮುಂದೆ ಒಲೆ ಹಚ್ಚಿ ಪೊಂಗಲ್ ತಯಾರಿಸುತ್ತಾರೆ.

ಪೊಂಗಲ್ ತಯಾರಿಸಿದ ಮೇಲೆ ಅದನ್ನು ಸೂರ್ಯನಿಗೆ ಅರ್ಪಿಸುತ್ತಾರೆ. ಬಳಿಕ ಸಕ್ಕರೆ ಪೊಂಗಲ್, ಕಬ್ಬು ಬಾಳೆಹಣ್ಣು, ವೀಳ್ಯದೆಲೆ, ಕರ್ಪೂರ, ಬೆರಣಿ ಉಂಡೆ ಎಲ್ಲವನ್ನು ತೆಗೆದು ಕೊಂಡು ನದಿ – ಕಾಲುವೆಗೆ ಅಂದರೆ ಜಲನಿಧಿಗೆ ಅರ್ಪಿಸಿ, ನೀರಿನಲ್ಲಿ ತೇಲಿಸಿ ಬಿಡುತ್ತಾರೆ. ಆನಂತರ ದಡದಲ್ಲಿ ಕುಳಿತು ಬಂಧು – ಬಳಗದವರೊಂದಿಗೆ ಪೊಂಗಲನ್ನು ಹಂಚಿ ತಿಂದು ಮನೆಗೆ ಮರಳುತ್ತಾರೆ.

ಹಿಂದೆ ಹೆಣ್ಣು ಮಕ್ಕಳು ಹಿಂದಿನ ದಿನ ಸಂಜೆಯೇ ಸಣ್ಣ ಸಣ್ಣ ಗುಂಪುಗಳಾಗಿ ಮರುದಿನ ರಂಗೋಲಿ ಮೇಲಿಡುವ ಹೂವುಗಳಿಗಾಗಿ ಮನೆ ಮನೆಗಳಿಗೆ ಅಲೆದಾಡುತ್ತಿದ್ದರು. ಈಗ ಎಲ್ಲರೂ ಶಾಲೆಗೆ ಹೋಗುವುದರಿಂದ ಮನೆಗಳಿಗೆ ಮಾಮೂಲಿಯಂತೆ ಹೂ ತಂದು ಕೊಡುವವರೇ, ರಂಗೋಲಿಗೆ ಬೇಕಾದ ಹೂವುಗಳನ್ನು ತಂದು ಕೊಟ್ಟು ಹಣ ಪಡೆದು ಕೊಂಡು ಹೋಗುತ್ತಾರೆ. ಧನುರ್ಮಾಸದ ಮೊದಲ ದಿನದಿಂದ ಸಣ್ಣ ಮನೆ ಪೊಂಗಲ್ ಮಾಡುವವರೆಗೂ ಮನೆ ಮುಂದೆ ರಂಗೋಲಿಯಿಟ್ಟು ಸಗಣಿ ಉಂಡೆಗಳ ಮೇಲೆ ಹೂವುಗಳನ್ನು ಇಡಬೇಕು.

ಸಣ್ಣ ಮನೆ ಪೊಂಗಲ್ ಸಂದರ್ಭದಲ್ಲಿ ಪುಟ್ಟ ಹೆಣ್ಣು ಮಕ್ಕಳೇ ಮುಂದೆ ನಿಂತು ಆಸಕ್ತಿಯಿಂದ ರಂಗೋಲಿ ಹಾಕುವುದು, ಸಣ್ಣ ಮನೆ ನಿರ್ಮಿಸುವುದು, ಕಬ್ಬನ್ನು ಅಲಂಕಾರಿಕವಾಗಿ ನಿಲ್ಲಿಸುವುದು ಮುಂತಾದ ಕೆಲಸಗಳನ್ನು ಮಾಡುತ್ತಾರೆ. ಮೊದಲು ಹಾಲು, ಕಾಯಿ, ಅದರೊಂದಿಗೆ ಬೆಲ್ಲವನ್ನು ಸೇರಿಸಿ ಸ್ನೇಹಿತರಿಗೆ ನೀಡಿ ಸಂಭ್ರಮಿಸುತ್ತಾರೆ. ಬಳಿಕ ಅವರ ತಾಯಂದಿರ ನೆರವಿನೊಂದಿಗೆ ಪೊಂಗಲ್ ತಯಾರಿಸುತ್ತಾರೆ. ತಿರುಲ್ವೇಲಿ ಜಿಲ್ಲೆಯಲ್ಲಿ ವ್ಯಾಪಕವಾಗಿ ಈ ಆಚರಣೆ ರೂಢಿಯಲಿದೆ.

ಇಂದು ತಂದೆ – ತಾಯಿಗಳಿಬ್ಬರೂ ದುಡಿಯುವ ವಾತಾವರಣದಲ್ಲಿ ಪೊಂಗಲ್‌ಗೆ ಹಿಂದಿನ ಮೂರು ದಿನಗಳು ಮನೆಯಂಗಳದಲ್ಲಿ ಹೂವುಗಳನ್ನಿಟ್ಟು ಸಂಕ್ರಾತಿ ಪೊಂಗಲ್ ದಿನದಂದು ಸಣ್ಣಮನೆ ಪೊಂಗಲ್ ಅನ್ನು ಸೇರಿಸಿಯೇ ಮಾಡುತ್ತಾರೆ. ಆದರೆ ಅಂದು ಅಷ್ಟಮಿ, ನಮಮಿ ದಿನಗಳಾದರೆ ಬೇರೊಂದು ದಿನ ಸಣ್ಣಮನೆ ಪೊಂಗಲ್ ಆಚರಣೆ ಮಾಡಲಾಗುತ್ತದೆ.

ಪಿ.ಎಸ್.ಟಿ. ಅನುವಾದ ಐ.ಎಸ್.

 

ಸುಗ್ಗಿ ಕುಣಿತ : ದವಸ ಧಾನ್ಯಗಳನ್ನು ಮನೆ ತುಂಬಿಸಿಕೊಳ್ಳುವಾಗ ರೈತರು ತಮ್ಮ ಸಂತೋಷ ಅಭಿವ್ಯಕ್ತಿಸಲು ಮಾಡುವ ಕುಣಿತ. ಕರ್ನಾಟಕದ ಎಲ್ಲಾ ಭಾಗಗಳಲ್ಲಿಯೂ ಈ ಕುಣಿತ ಆಚರಣೆಯಲ್ಲಿದೆ. ಆದರೆ ವಿಶೇಷತಃ ಉತ್ತರ ಕನ್ನಡ ಜಿಲ್ಲೆಯ ಹಾಲಕ್ಕಿ ಒಕ್ಕಲಿಗರಿಗೆ ಈ ಕಲೆ ಸಿದ್ಧಿಸಿದೆ.

ಸುಗ್ಗಿ ಕುಣಿತಕ್ಕೆ ಸಂಬಂಧಿಸಿದಂತೆ ದಂತಕತೆಯೊಂದಿದೆ. ತ್ರಿಮೂರ್ತಿಗಳು ಸುಗ್ಗಿ ಕುಣಿತವನ್ನು ಆರಂಭಿಸುತ್ತಾರೆ. ಶಿವ ಗುಮಟೆ ವಾದ್ಯವನ್ನು ಬ್ರಹ್ಮ ಜಾಗಟೆಯನ್ನು ಬಡಿಯುತ್ತ ಶ್ರೀಮನ್ ನಾರಾಯಣನ ಮನೆಗೆ ಬರುತಾರೆ. ಶಿವ, ಬ್ರಹ್ಮರನ್ನು ಲಕ್ಷ್ಮೀ ಊಟಕ್ಕೆಆಹ್ವಾನಿಸುತ್ತಾಳೆ. ಊಟಕ್ಕೆ ಕುಳಿತಾಗ ಹಾಲಕ್ಕಿ ಹುಡಗನೊಬ್ಬ ಬಂದು ಗುಮಟೆ ವಾದ್ಯ ಎತ್ತಿಕೊಂಡು ಹೋಗಿ ಬಾರಿಸುತ್ತಾನೆ. ಆ ವಾದ್ಯವನ್ನು ಅಷ್ಟು ಮಧುರವಾಗಿ ಬಾರಿಸಿದ ಆ ಬಾಲಕನಿಗೆ ಆ ವಾದ್ಯವನ್ನು ಕೊಟ್ಟು ನಿಮ್ಮ ಜಾತಿಯವರೇ ಪ್ರತಿವರ್ಷ ಸುಗ್ಗಿ ಹೊರಡಿಸಿ ಇದನ್ನು ಬಾರಿಸಬೇಕು ಎಂದು ಆಶೀರ್ವದಿಸುತ್ತಾರೆ. ಈ ಕತೆ ಪಾಂಡವರಿಗೆ ಸಂಬಂಧಿಸಿದ್ದು, ಆದ್ದರಿಂದ ಏನಾದರೂ ಪ್ರಮಾದವಾದಲ್ಲಿ ಆದು ಪಾಂಡವರಿಗೆ ಎಂದು ಹೇಳುವುದಿದೆ.

ದೇವಲೋಕದಲ್ಲಿ ಮೂವತ್ಮೂರು ಕೋಟಿ ದೇವತೆಗಳು ಸುಗ್ಗಿ ಕಟ್ಟಲು ಏಳು ರಾತ್ರಿ ಹಗಲು ನಿರ್ಧರಿಸಿ ಮದ್ದಲೆ ಹೊಡೆಯಲು ಮಾದೇವನಿಗೆ, ಗುಮಟೆ ಹಿಡಿಯಲು ದೇವೇಂದ್ರನಿಗೆ, ಹೈಲ ಹಾಕಲು ಗೋವಿಂದ ರಾಯನಿಗೆ ಆಮಂತ್ರಣವಿತ್ತರಂತೆ. ಆದರೆ ಸುಗ್ಗಿ ಕುಣಿತ ಮಾಡುವುದು ದೇವತೆಗಳಿಗೆ ಸಾಧ್ಯವಾಗಲಿಲ್ಲ. ಈ ಕಲೆ ‘ತಮಗಲ್ಲ’ ಎಂದು ಭಾವಿಸಿದ ಅವರು ಪಾಲಲ್ಲುಟ್ಟಿದ ಹಾಲಕ್ಕಿ ಗೌಡಗೆ ಈ ಸುಗ್ಗಿ ಕೊಡಬೇಕೆಂಬುದರ ನಿರ್ಣಾಯಕ್ಕೆ ಬಂದರು. ಹೀಗೆ ಹಾಲಕ್ಕಿಗಳಿಗೆ ಸುಗ್ಗಿ ಕೊಟ್ಟರು ಎನ್ನಲಾಗಿದೆ. ಬ್ರಿಟಿಷ್ ಅಧಿಕಾರಿಯೊಬ್ಬ ಅಂಕೋಲ ಭಾಗದ ಸುಗ್ಗಿಗೆ ಮಾರು ಹೋಗಿ ತಾಲ್ಲೂಕು ಕಚೇರಿ ಎದುರಿಗೆ ಪ್ರತಿವರ್ಷ ಸುಗ್ಗಿ ಕುಣಿತ ಏರ್ಪಡಿಸಬೇಕೆಂದು ಶಾಸನವನ್ನೇ ಮಾಡಿದನಂತೆ.

ಸುಗ್ಗಿ ಕುಣಿತ ನಡೆಯುವುದು ಸಾಮಾನ್ಯವಾಗಿ ಕಾಮನ ಹುಣ್ಣಿಮೆ ಸಂದರ್ಭದಲ್ಲಿ . ಫಾಲ್ಗುಣಶುದ್ಧ ದಶಮಿಯಿಂದ ಹುಣ್ಣಿಮೆಯವರೆಗೆ ಸುಗ್ಗಿ .ಸುಗ್ಗಿ ಏರ್ಪಡಿಸುವುದರ ಬಗ್ಗೆ ಊರಿನ ಮುಖಂಡರೆಲ್ಲ ಕುಳಿತು ಒಂದು ನಿರ್ಣಯ ಕೈಗೊಳ್ಳುವರು. ಸಂಕ್ರಾತಿ ಅಮಾವಾಸ್ಯೆ ರಾತ್ರಿಯಂದು ಕೋಲು ಕುಡಿದು ತಂದು ಕರಿದೇವರ ತಳದಲ್ಲಿ ಕೋಲು ಹೊಡೆದು ಬರುವುದು ಸಂಪ್ರದಾಯ. ಅಂದಿನಿಂದ ಕೋಲಾಟದ ಅಭ್ಯಾಸದಲ್ಲಿ ತೊಡಗುತ್ತಾರೆ. ಸುಗ್ಗಿಯನ್ನು ಫಾಲ್ಗುಣ ಶುದ್ಧ ಏಕಾದಶಿಯಂದು ಕೆಲವು ಕಡೆ ದಶಮಿಯಂದು ಹೊರಡಿಸುವರು.

ಸುಗ್ಗಿ ಕಟ್ಟುವ ಸ್ಥಳ : ‘ಕರಿಕಣ’ ಮಧ್ಯದಲ್ಲಿರುವುದೇ ಸುರಗಿ ಕಂಬ. ಈ ಕಂಬಕ್ಕೆ ಹಿಂದಿನ ರಾತ್ರಿ ಕಲಾವಿದೆರೆಲ್ಲ ಕೋಲು ಕುಂಚಗಳನ್ನು ನೇತು ಹಾಕುವರು. ಕರೀದೇವರನ್ನು ಪ್ರತಿಷ್ಠಾಪಿಸಿ ದೀಪ ಹಚ್ಚಿ ನೈವೇದ್ಯವನ್ನಿಡುವರು. ಸುಗ್ಗಿ ಕುಣಿತದ ಪ್ರಾರಂಬದ ದಿನ ತಂಡದ ನಾಯಕ ‘ಕರಿಅಕ್ಕಿ’ ಮಂತ್ರಸಿ ಭಾಗಾಳುಗಳಿಗೆಲ್ಲ ನೀಡುತ್ತಾನೆ. ಆನಂತರ ಕಲಾವಿದರೆಲ್ಲ ಕಾಲಿಗೆ ಗೆಜ್ಜೆ ಕಟ್ಟಿ, ಬೆಂಡು ಬೇವುಗಳಿಂದ ಅಲಂಕರಿಸಿದ ತುರಾಯಿ, ಹಾರಗಳನ್ನು ಧರಿಸುತ್ತಾರೆ. ಕೈಯಲ್ಲಿ ಕೋಲು – ಕುಂಚಗಳನ್ನು ಹಿಡಿದಿರುತ್ತಾರೆ. ಸುಗ್ಗಿಯ ತಂಡದ ಎದುರು ಕರಡಿ ವೇಷದವನೊಬ್ಬನಿರುತ್ತಾನೆ. ಕೆಲವು ಕಡೆ ಹನುಮಂತನಿರುವುದೂ ಉಂಟು. ಇವಲ್ಲದೇ ಯಕ್ಷಗಾನದ ವೇಷಗಳು, ಕಳ್ಳ ಪೋಲೀಸ ಹಾಗೂ ಮರಕಾಲು ವೇಷದವರು ಇರುತ್ತಾರೆ. ಕಣದಿಂದ ಸುಗ್ಗಿಮೇಳ ಹೊರಟಿತು ಎಂಬುದನ್ನು ತಿಳಿಸಲು ವಾದ್ಯವೊಂದನ್ನು ಊದಲಾಗುವುದು – ಇದೇ ಜಿಟ್ಕುಂಡೆ. ಇದನ್ನು ಮರದಿಂದ ಸಿದ್ಧಪಡಿಸುತ್ತಾರೆ. ಕರಿದೇವರ ಎದುರು ‘ಮಹದೇವರಾಯನ’ ಹಾಡನ್ನು ಮೊದಲಿಗೆ ಹಾಡಲೇಬೇಕು. ಅನಂತರ ಊರಗೌಡ, ಗಾವಂಕಾರ, ತುಳಸಿ ಎದುರು ಕುಣಿದು ಸುಗ್ಗಿಯವರು ಉಳಿದ ಮನೆಗಳಿಗೆ ತೆರಳಬೇಕು. ಸುಗ್ಗಿ ಕುಣಿತದ ತಂಡದವರನ್ನೆಲ್ಲ ಕೊಪ್ಪದ ಒಕ್ಕಲು ಆರತಿ ಬೆಳಗಿ ಬರಮಾಡಿಕೊಳ್ಳಬೇಕು. ಮನೆಯ ತುಳಸಿ ಎದುರು ಕುಣಿದು ಯಜಮಾನನಿಂದ ಕಾಣಿಕೆ ಪಡೆದು ಅವನಿಗೆ ಶುಭ ಹಾರೈಸಿ ತಂಡ ಮುಂದಿನ ಮನೆಗೆ ತೆರಳುವುದು.

ಸುಗ್ಗಿಯಲ್ಲಿ ಹಿರಿ ಸುಗ್ಗಿ ಮತ್ತು ಕಿರಿ ಸುಗ್ಗಿ ಎಂದು ಎರಡು ವಿಧ. ಬಣ್ಣಬಣ್ಣದ ಬೇಗಡೆ ಸುತ್ತಿದ್ದ ತುರಾಯಿಗಳಿಂದ ಆಕರ್ಷವಾಗಿರುವುದು ಹಿರಿ ಸುಗ್ಗಿ. ಇದಕ್ಕೆ ಖರ್ಚು ವೆಚ್ಚಗಳೂ ಆಪಾರ. ಕಿರಿ ಸುಗ್ಗಿಗೆ ತುರಾಯಿ ಕೋಲು – ಕುಂಚಗಳ ಆಗತ್ಯವಿಲ್ಲ. ತಲೆಗೆ ಮುಂಡಾಸು ಇಳಿಬಿಡಲು ಹೂದಂಡೆ ಇಷ್ಟಿದ್ದರೆ ಸಾಕು. ಆದ್ದರಿಂದಲೇ ಇದಕ್ಕೆ ಬೋಳು ಸುಗ್ಗಿ ಎಂದು ಹೆಸರುಂಟು. ಸುಗ್ಗಿ ಕುಣಿತಕ್ಕೆ ಗುಮಟೆ ವಾದ್ಯದೊಂದಿಗೆ ತಾಳ, ಮದ್ದಳೆಗಳೂ ಇರುವುದು. ಸುಗ್ಗಿ ಕುಣಿಯುವವರು ಕಾಲಿಗೆ ಗೆಜ್ಜೆಕಟ್ಟಿ ಸೀರೆ ಅಥವಾ ಧೋತರವನ್ನುಡುತ್ತಾರೆ. ಹಸಿರು ಅಥವಾ ಕೆಂಪು ಬಣ್ಣದ ಅಂಗಿ ಧರಿಸುವರು. ಕೊರಳಿಗೆ ಮುತ್ತಿನ ಇಲ್ಲವೇ ಹೂವಿನ ಹಾರ ತುರಾಯಿಯನ್ನು ಇಳಿಬಿಡಲು ಬೆಂಡಿನ ಕಾಗದ ಬಳಸುವರು. ಕುಣಿತಕ್ಕೆ ಎಂಟು ಅಥವಾ ಹನ್ನೆರಡು ಜನ ನಿಲ್ಲುವರು. ಸುಗ್ಗಿಯ ಕುಣಿತಕ್ಕೆ ಗತ್ತಿಗೆ ತಕ್ಕಂತಹ ಪದ್ಯಗಳಿವೆ. ಈ ಪದಗಳಲ್ಲಿ ಹೆಚ್ಚಿನವು ದೇವರ ಸ್ತುತಿ.

ನವಿಲುಗರಿಯ ಕುಂಚವನ್ನು ಕೈಯಲ್ಲಿ ಹಿಡಿದು ‘ಚೋ ಹೋ ಚೋ………’ ‘ಸೋ ಹೋ ಸೋ…….’ ‘ಜಾವೋಸೋ’ ಎಂದು ಕುಣಿಯುವರು. ‘ಜೋಹ ಚೋಹ’ ಎಂದರೆ ‘ವೇಷ’ ಎಂದು ಎಲ್. ಆರ್. ಹೆಗಡೆಯವರು ಹೇಳಿದರೆ, ಎನ್. ಆರ್. ನಾಯಕ ಅವರು ಚೋ ಹೋ ಚೋ ಹೋ ಎನ್ನುವುದಕ್ಕೆ ‘ಎಂಥ ಸೊಗಸು’ ಎಂದು ಅರ್ಥೈಸಿದ್ದಾರೆ. ಹೋಳಿ ಹುಣ್ಣಿಮೆ ರಾತ್ರಿ ಕಾಮದಹನಕ್ಕೆ ಪೂರ್ವದಲ್ಲಿ ಸುಗ್ಗಿ ಕುಣಿತದವರು ತಮ್ಮ ವೇಷ ಭೂಷಣ ಕಳಚುತ್ತಾರೆ. ಬಳಿಕ ಮಾದೇವರಾಯನ ಪದದಂಥವನ್ನು ಹೇಳುವರು. ಕಸುಪದ ಹೇಳುವುದು ಸುಗ್ಗಿಯ ಆಚರಣೆ ಕುರಿತಂತೆ. ಇದಕ್ಕೆ ಪಾಂಡವರ ಕಮಿ ಮತ್ತು ಸೀತೆ ಕಮಿಗಳೆಂದು ಹೇಳುವುದುಂಟು. ಎಲ್. ಜಿ. ಭಟ್ಟರು ಸೀತೆಕಮಿಯನ್ನು ಪ್ರಕಟಿಸಿದ್ದಾರೆ. ಕಮಿ ಹೇಳುವವರು ಇಬ್ಬರಿರುತ್ತಾರೆ. ಉಳಿದವರು ಕುಣಿಯುತ್ತಾರೆ ನಡು ನಡುವೆ ಕಮಿ ಪದ ಹೇಳಿದ್ದ ಸೊಲ್ಲನ್ನೆ ಪುನಃ ಹೇಳುತ್ತಾರೆ.

ಹಾಲಕ್ಕಿ ಕೊಪ್ಪದಲ್ಲಿ ಸೂತಕವಿದ್ದಲ್ಲಿ ಸುಗ್ಗಿ ಕಟ್ಟುವುದಿಲ್ಲ. ಸುಗ್ಗಿ ಕಟ್ಟಿದ ಬಳಿಕ ಯಾರಾದರೂ ನಿಧನರಾದರೆ ಸುಗ್ಗಿಯನ್ನು ವಿಸರ್ಜಿಸಲಾಗುವುದು. ಸುಗ್ಗಿಯಲ್ಲಿ ಸ್ತ್ರೀಯರು ಭಾಗವಹಿಸುವುದಿಲ್ಲ. ಕಾಲಕಾಲಕ್ಕೆ ಮಳೆ ಬಂದು ನಾಡು ಸಮೃದ್ಧಿ ಹೊಂದಲೆಂದು ಸುಗ್ಗಿಯನ್ನು ಕಟ್ಟುವುದುಂಟು ಸುಗ್ಗಿಯನ್ನು ಯಾವ ಊರಿನಲ್ಲಿ ಕಟ್ಟುವರೋ ಆ ಊರಿಗೆ ಒಳ್ಳೆಯದಾಗುತ್ತದೆ ಎಂಬ ದೃಢ ನಂಬಿಕೆ ಹಾಲಕ್ಕಿ ಒಕ್ಕಲಿಗರದಾಗಿದೆ.

ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಸುಗ್ಗಿ ಕುಣಿತವನ್ನು ರಂಗದ ಕುಣಿತ ಮಾರಿಕುಣಿತ ಎಂದು ಕರೆಯುವುದುಂಟು. ಕೊಡಗಿನ ಎರವರು ಸುಗ್ಗಿ ಕುಣಿತ ಮಾಡುತ್ತಾರೆ. ಈ ಕುಣಿತದಲ್ಲಿ ರಾತ್ರಿ ಬೆಂಕಿ ಹಾಕಿಕೊಂಡು ಅದರ ಸುತ್ತಲು ಕುಣಿಯುವುದುಂಟು ಅವರು ಈ ಕುಣಿತಕ್ಕೆ ಬಳಸುವ ವಾದ್ಯಗಳು ದುಡಿ ಮತು ಚೀನಿ. ಜೇನು ಕುರುಬರು ಕಾಡು ಕುರುಬರು ಮತ್ತು ಸೋಲಿಗರು ಸುಗ್ಗಿ ಕುಣಿತ ಮಾಡುತ್ತಾರೆ.

ದಕ್ಷಿಣ ಕನ್ನಡ ಮತ್ತು ಉಡಪಿ ಜಿಲ್ಲೆಗಳಲ್ಲಿಯೂ ಸುಗ್ಗಿ ಕುಣಿತವಿದ್ದು ಅದನ್ನು ಅವರು ದಸರಾ ಸಂದರ್ಭದಲ್ಲಿ ಮಾಡುತ್ತಾರೆ. ಹಾಸನ ಜಿಲ್ಲೆಯ ಸುಗ್ಗಿ ಕುಣಿತದಲ್ಲಿ ಕಲಾವಿದರು ಪಂಜು ಹಿಡಿದು ನರ್ತಿಸುತ್ತಾರೆ.

ಉತ್ತರ ಕನ್ನಡ ಜಿಲ್ಲೆಯ ಗೊಂಡರು ಶಿವರಾತ್ರಿ ದಿನದಂದು ಸುಗ್ಗಿ ಕುಣಿತ ಮಾಡುತ್ತಾರೆ. ಅದಕ್ಕೆ ಅವರು ಬಳಸುವುದು ಧಡ ವಾದ್ಯವನ್ನು.

ಜಿ.ಎಸ್. ಬಿ.