ಸುಗ್ಗಿ ಹಬ್ಬ : ಮಲೆನಾಡು ಕರ್ನಾಟಕದ ಒಂದು ಪ್ರದೇಶದಲ್ಲಿ ಪ್ರಚಲಿತವಿರುವ ವಿಶಿಷ್ಟವಾದ ಹಬ್ಬವೇ ಸುಗ್ಗಿ ಹಬ್ಬ. ಹಾಲಕ್ಕಿ ಓಕ್ಕಲಿಗರ ಸುಗ್ಗಿ ಹಬ್ಬಕ್ಕೂ ಇದಕ್ಕೂ ಯಾವ ಸಂಬಂಧವೂ ಇಲ್ಲ. ಸಾದೃಶ್ಯವೂ ಇಲ್ಲ. ಚಿಕ್ಕಮಗಳೂರು ಜಿಲ್ಲೆಯ ಚಿಕ್ಕಮಗಳೂರು, ಮೂಡಿಗೆರೆ ತಾಲ್ಲೂಕುಗಳು, ಹಾಸನ ಜಿಲ್ಲೆಯ ಬೇಲೂರು, ಸಲೇಶಪುರ ತಾಲ್ಲೂಕು, ಕೊಡಗಿನ ಸೋಮವಾರ ಪೇಟೆ ತಾಲ್ಲೂಕುಗಳಲ್ಲಿ ಸುಗ್ಗಿ ಹಬ್ಬ ನಡೆಯುತ್ತದೆ. ಶೈವ ಸಂಪ್ರದಾಯ ದಟ್ಟವಾಗಿರುವ ಮಲೆನಾಡಿನಲ್ಲಿ ಅದರಲ್ಲಿಯೂ ಪೂರ್ವೋಕ್ತ ಪ್ರದೇಶದ ಒಂದು ರೇಖೆಯಲ್ಲಿ ಇದು ಜೀವಂತವಾಗಿದೆ. ಸುಗ್ಗಿಹಬ್ಬದಲ್ಲಿ ಪೂಜೆಗೊಳ್ಳುವ ದೇವತೆಯೆಂದರೆ ದೇವಿರಮ್ಮ ಅಥವಾ ಈಶ್ವರ ದೇವಿರಮ್ಮ ಸಂಪ್ರದಾಯವೂ ಈ ಪ್ರದೇಶದಲ್ಲಿದೆ. ಅಲ್ಲದೆ ಬಹಳ ಪ್ರಾಚೀನವಾದಂಥ ದೇವಿರಮ್ಮನ ಗುಡಿಗಳು ಈ ಪರಿಸರದಲ್ಲಿರುವುದೂ ವಿಶೇಷ.

ಸುಗ್ಗಿ ಹಬ್ಬ ವ್ಯವಸಾಯಸಸಂಬಧಿ ಹಬ್ಬ. ಬಯಲುಸೀಮೆಯಲ್ಲಿ ಯುಗಾದಿಯಂದು ‘ಹೊನ್ನಾರು’ ಎಂದು ಎಂದು ಬೀಜ ಬಿತ್ತುವ ಕಾರ್ಯ ಸಾಂಕೇತಿಕವಾಗಿ ಜರುಗಿದರೆ ಮಲೆನಾಡಿನಲ್ಲಿ ಸುಗ್ಗಿ ಹಬ್ಬದಲ್ಲಿ ಹೊನ್ನಾರು ಕಟ್ಟುವ ಸಂಪ್ರಾದಯವಿದೆ. ಪ್ರತಿವರ್ಷ ಯುಗಾದಿಯ ಬಳಿಕ ಬಸವಜಯಂತಿಯವರೆಗೆ ಸುಗ್ಗಿ ಹಬ್ಬಗಳು ನಡೆಯುತ್ತವೆ. ಏಪ್ರಿಲ್ ಮತ್ತು ಜೂನ್ ನಡುವಿನ ಅವಧಿಯಲ್ಲಿ ಆಯಾ ಊರಿನಲ್ಲಿ ತೀರ್ಮಾನವಾದಂತೆ ಅನುಕೂಲಕರವಾದ ದಿನಗಳಲ್ಲಿ ಸುಗ್ಗಿ ಹಬ್ಬ ಏರ್ಪಡಿಸುವರು. ಇದು ಮೂರು ದಿನದಿಂದ ಹನ್ನೆರಡು ದಿನಗಳವರೆಗೆ ನಡೆಯುವುದು ಊರಹಬ್ಬ, ಬೇಟೆಸುಗ್ಗಿ, ಚೌತ, ಇರುಳು ಸುಗ್ಗಿ, ಮುಗಿಯೋ ಹಬ್ಬ, ಕೆಂಡ ಇತ್ಯಾದಿ ಒಂದೊಂದು ದಿನವೂ ಒಂದೊಂದು ಆಚರಣೆ ಇರುತ್ತದೆ. ಈ ಹಬ್ಬ ಈ ಭಾಗದಲ್ಲಿ ನೆಲಸಿರುವ ಒಕ್ಕಲಿಗರ ನೇತೃತ್ವದಲ್ಲಿ ಜರುಗಿದರೂ ಊರಿನ ಸಮಸ್ತರೂ ವಿವಿಧ ಮತದವರೂ ಇದರಲ್ಲಿ ಪಾಲ್ಗೊಳ್ಳುವರು.

ಮೂಡಿಗೆರೆ ಭಾಗದಲ್ಲಿ ದೇವವೃಂದದ ರಾಮೇಶ್ವರದೇವರ ತೇರು ಮುಗಿದ ಬಳಿಕ ಸುಗ್ಗಿ ಹಬ್ಬ ನಡೆಯುತ್ತದೆ. ಚಿಕ್ಕಮಗಳೂರು ಭಾಗದಲ್ಲಿ ಯುಗಾದಿಯ ಬಳಿಕ ಇಲ್ಲಿಯ ಅಂಗಡಿ, ಫಲ್ಗುಣಿ, ಗುತ್ತಿ, ಕೋಳೂರು ತ್ರಿಪುರ, ಕೊಟ್ರಕೆರೆ, ಬಣಕಲ್‌, ಬಾಳೂರು, ಮೂಡಿಗೆರೆ, ಆಣೂರು, ಹಂಚರವಳ್ಳಿ, ಹವ್ಬಳ್ಳಿ ಮೊದಲಾದೆಡೆ ಹಾಗೂ ಹಾಸನ ಜಿಲ್ಲೆಯ ಹೆತ್ತೂರು. ಗೊದ್ದು, ಚೀಕನಹಳ್ಳಿ, ಕೋಗೋಡು ಮುಂತಾದ ಊರುಗಳಲ್ಲಿ ನಡೆಯುವ ಸುಗ್ಗಿ ಹಬ್ಬ ಪ್ರಸಿದ್ಧವಾದುದು.

ಮಲೆನಾಡಿಗರು ಅತ್ಯಂತ ಶ್ರದ್ಧೆ ಭಕ್ತಿ, ನಿಷ್ಠೆಯಿಂದ ಆಚರಿಸುವ ಸುಗ್ಗಿ ಹಬ್ಬದಲ್ಲಿ ಬಹಳ ನಿಯಮಗಳಿರುತ್ತವೆ. ಉರಿನವರೆಲ್ಲಾ ಸೇರಿ ಹಬ್ಬದ ದಿನವನ್ನು ನಿಗದಿಪಡಿಸುತ್ತಾರೆ. ಅನಂತರ ದೇವರಗುಡಿ, ಸುಗ್ಗಿಕಟ್ಟೆ, ಸುಗ್ಗಿಮಂದೆಗಳನ್ನು ಶುಚಿಗೊಳಿಸುವರು. ಸುಗ್ಗಿಕಟ್ಟೆಯಲ್ಲಿ ದೇವರನ್ನು ಕುಳ್ಳಿರಿಸಿ ತೊಗಲೆಂದು ಉಯ್ಯಾಲೆ ಕಟ್ಟುವರು. ದೇವಸ್ಥಾನಗಳಿಸ ಸುಣ್ಣ ಬಣ್ಣ ಹಚ್ಚುವರು. ‘ಸುಗ್ಗಿ ಸಾರು’ ಹಾಕಿಸುವ ಮೂಲಕ ಹಬ್ಬವನ್ನು ಘೋಷಿಲಾಗುವುದು. ಇದಾದ ಬಳಿಕ ಮನೆಯಲ್ಲಿ ಹುರಿಯುವ ಕುಟ್ಟುವ, ರೊಟ್ಟಿ ಬೇಯಿಸುವ ಕೆಲಸ ಮಾಡುವಂತಿಲ್ಲ. ಊರಿಂದ ಬೇರೆ ಊರಿಗೆ, ಬೇರೆ ಊರಿನಿಂದ ಸುಗ್ಗಿ ಹಬ್ಬ ನಡೆಯುವ ಊರಿಗೆ ಹೋಗಿ ಬರುವಂತಿಲ್ಲ. ತಿಳಿಯದೆ ಬಂದರೆ ಊರಾಚೆಯೇ ಇರಬೇಕು. ಈ ಕಾರಣದಿಂದಾಗಿ ಅನೇಕ ಊರುಗಳಲ್ಲಿ ಸುಗ್ಗಿ ಹಬ್ಬ ಸ್ಥಗಿತವಾಗಿರುವುದೂ ಉಂಟು. ಹಬ್ಬದ ವೈಶಿಷ್ಟ್ಯವೆಂದರೆ ಉಪವಾಸ, ಮಾಂಸಹಾರ ನಿಷೇಧ, ಹೊನ್ನಾರು ಕಟ್ಟುವುದು, ದೇವರನ್ನು ಉಯ್ಯಾಲೆಯಲ್ಲಿಟ್ಟು ತೂಗುವುದು ಮುಂತಾದವು ಸ್ಥಳೀಯ ಸಂಪ್ರದಾಯಗಳು ಕೆಲವೊಮ್ಮೆ ಮಿಳಿತವಾಗುವುದರಿಂದ ಸುಗ್ಗಿ ಹಬ್ಬದ ಆಚರಣೆಯಲ್ಲಿ ಕೆಲವೊಂದು ವ್ಯತ್ಯಾಸಗಳೂ ಕಂಡುಬರುತ್ತವೆ.

ಸುಗ್ಗಿ ಪ್ರಾರಂಭವಾದ ಮೇಲೆ ಮೊದಲ ದಿನ ಊರ ಹಬ್ಬ ಎಂದು ಊರಿನ ದೇವಾಲಯಗಳಲ್ಲಿ ಪ್ರಮುಖವಾಗಿ ಸುಗ್ಗಿ ದೇವರಿಗೆ ಹಣ್ಣು ಕಾಯಿ ಮಾಡಿಸಿ ಎಲ್ಲವೂ ಸಾಂಗವಾಗಿ ನೆರವೇರುವಂತಾಗಲೆಂದು ಪ್ರಾರ್ಥಿಸಿಕೊಳ್ಳುವರು. ದೀರ್ಘವಾಗಿ ಹಬ್ಬ ಮಾಡುವುದಾದರೆ ಮಧ್ಯೆ ಬಿಡುವು ನೀಡಿ ನಾಲ್ಕನೇ ದಿನ ‘ಗಡಿಗೆ ಹಬ್ಬ’ ಎಂದು ಅಳಿದ ಹಿರಿಯರಿಗೆ ಎಡೆಯಿಟ್ಟು ಆಶೀರ್ವಾದ ಪಡೆಯುವರು. ಕೆಲವು ಊರುಗಳಲ್ಲಿ ಎರಡನೆಯ ದಿನ ಬಿಲ್ಲು ಸುಗ್ಗಿ ಎಂದು ಸುಗ್ಗಿ ಕಟ್ಟೆಯಲ್ಲಿ ಗಂಡಸರು ಬಿಲ್ಲು ಹಿಡಿದು ಸುಗ್ಗಿ ಕುಣಿಯುವರು. ಗಡಿಗೆ ಹಬ್ಬವಾದ ಬಳಿಕ ಮಂಗಳವಾರದಂದು ‘ಮಂಗಳವಾರ ಚೌತ’ ಎಂದು ಮಧ್ಯಾಹ್ನದವರೆಗೆ ಉಪವಾಸ ಮಾಡಿ ಶಿವ, ದೇವೀರಮ್ಮ, ಕುಮಾರ ವಿಗ್ರಹಗಳಿಗೆ ಪೂಜೆ ಸಲ್ಲಿಸಿ ಬಂದು ಅನಂತರ ಸಸ್ಯಾಹಾರ ಸ್ವೀಕರಿಸುವರು.

ಮಲೆನಾಡಿನ ಸುಗ್ಗಿ ಹಬ್ಬ ವ್ಯವಸಾಯದ ಹಬ್ಬವೂ ಆಗಿರುವುದರಿಂದ ‘ಹೊನ್ನಾರು ಸುಗ್ಗಿ’ ಎಂದು ಒಂದು ದಿನವನ್ನು ಇದಕ್ಕಾಗಿಯೇ ಮೀಸಲಿರಿಸುವರು. ಬಯಲು ಸೀಮೆಯಲ್ಲಿ ಹೊನ್ನಾರು ಕಟ್ಟುವುದಕ್ಕೂ ಇಲ್ಲಿಯ ರೀತಿಗೂ ವ್ಯತ್ಯಾಸವಿದೆ. ಅಂದು ನಿರ್ದಿಷ್ಟ ಕುಟುಂಬದ ಬಡಗಿ ಶುಚಿಭೂರ್ತವಾಗಿ ಅಮ್ಮನವರ ಬನಕ್ಕೆ ತೆರಳಿ ಮದ್ದರಸನಮರ ಕಡಿದು ಪುಟ್ಟ ನೇಗಿಲು, ಕೂರಿಗೆ ತಯಾರಿಸಿ ದೇವಾಲಯದಲ್ಲಿ ಪೂಜಿಸಿಕೊಂಡು ಸಂಜೆ ವೇಳೆಗೆ ಸುಗ್ಗಿ ಕಟ್ಟೆಗೆ ಕೊಂಡೊಯ್ಯುವನು. ದೇವರ ನೇಗಿಲೆಂಬ ಭಾವನೆಯಿಂದ ನೇಗಿಲಿಗೆ ರಥ ಎಂದು ಕರೆಯುವುದೂ ಉಂಟು. ಇದಕ್ಕೆ ಬಂಗಾರದ ಕುಳವನ್ನು ಆಳವಡಿಸುವುದುಂಟು. ಸುಗ್ಗಿ ಕಟ್ಟಿಗೆ ಅಮ್ಮನವರ ಉತ್ಸವ ಮೂರ್ತಿ ಮತ್ತು ಇತರ ದೇವರನ್ನು ತಂದಿಡುವರು. ಸಂಜೆಯಾಗುತ್ತಿದ್ದಂತೆ ದೈವ ಸಮ್ಮುಖದಲ್ಲಿ ನಿರಾಹಾರಿಗಳಾಗಿ ಗೌಡ ಶಾನುಬೋಗರು ಮತ್ತು ಪಟೇಲರು ಮೂರು ಸುತ್ತು ಉಳ್ಳುಮೆ ಮಾಡುವರು. ಬತ್ತವನ್ನು ಕೂರಿಗೆಯಲ್ಲಿ ಬಿತ್ತುವುದೂ ಕೆಲವಡೆ ಇದೆ. ಸುಗ್ಗಿ ಹಬ್ಬದಲ್ಲಿ ಉಳುಮೆ ಮಾಡುವ ವ್ಯವಸಾಯವನ್ನು ನವೀಕರಿಸಿಕೊಳ್ಳುತ್ತಾರೆ. ಆ ಸಂದರ್ಭದಲ್ಲಿ

            ಮೂಡು ಮುಂದಾಗಿ ಹೂಡ್ಯಾವೆ ಹೊನ್ನಾರು
ಹೂಡುತಲೆ ಕಂಡೆವಿದ ನಾವು
ಬಡಗು ಮುಂದಾಗಿ ನಡೆದಾವೆ ಹೊನ್ನಾರು
ನಡೆಯುತಲೆ ಕಂಡೆವಿದ ನಾವು

ಎಂಬ ಹಾಡು ಹೇಳುವರು. ಉಳಿಮೆ ಮಾಡಿದಾಗ ಮೇಲೆದ್ದ ಮಣ್ಣಿನ ಬಗ್ಗೆ ಬಹಳ ಪವಿತ್ರವಾದ ಭಾವನೆ ಇದೆ. ಅದನ್ನು ತಮ್ಮ ಗದ್ದೆ ತೋಟಗಳಿಗೆ ಸಿಂಪಡಿಸಿದರೆ ಬೇಳೆ ಹುಲುಸಾಗುವುದು, ಕ್ರಿಮೀಕೀಟ ಬಾಧೆ ಇರದೆಂಬ ನಂಬಿಕೆ ಇದೆ.

ಹೊನ್ನಾರು ಕಟ್ಟಿದ ಮರುದಿನ ‘ಇರುಳು ಸುಗ್ಗಿ’ ಅಂದು ಹಗಲು ಗುಡಿಯಲ್ಲಿ ಪೂಜೆ, ಹರಕೆ, ಮುಡಿ ಒಪ್ಪಿಸುವುದು ನಡೆಯುತ್ತದೆ. ಸಂಜೆ ಸುಗ್ಗಿ ಮಂದೆಯಲ್ಲಿ ಗಂಡಸರೆಲ್ಲ ಸೇರಿ ಜಾತಿ ಭೇದವಿಲ್ಲದಂತೆ ಸುಗ್ಗಿ ಕುಣಿಯುತ್ತಾರೆ. ಬೆಳಗಾದ ಬಳಿಕ ‘ಹಗಲು ಸುಗ್ಗಿ’ ಗೆ ಅಣಿಯಾಗುತ್ತಾರೆ. ಅಂದು ಮಧ್ಯಾಹ್ನದವರೆಗೆ ಉಪವಾಸ ದೇವರುಗಳು ಹಗಲು ಸುತ್ತಲ ಊರುಗಳಿಗೆ ಹೋಗಿ ಬರುತ್ತವೆ. ರಾತ್ರಿ ವೇಳೆಗೆ ಸುಗ್ಗಿ ಕಟ್ಟೆಯ ಉಯ್ಯಾಲೆಯಲ್ಲಿ ಅಮ್ಮನವರನ್ನು ಕೂರಿಸಿ ತೂಗುತ್ತಾರೆ. ಉಯ್ಯಾಲೆಯಾಡಿದ ಬಳಿಕ ಸುಗ್ಗಿ ಮುಕ್ತಾಯವಾದಂತೆಯೆ. ಕೆಲವು ಊರುಗಳಲ್ಲಿ ದೇವರುಗಳನ್ನು ದೇವರ ಬನಕ್ಕೆ ಕೊಂಡೊಯ್ದು ಅಲ್ಲಿ ಪೂಜಿಸುವುದುಂಟು. ‘ಚೌತ’ ಗಳೆಲ್ಲಾ ಮುಗಿದ ಬಳಿಕ ಉಪವಾಸ, ಸಸ್ಯಾಹಾರಗಳಲ್ಲಿದ್ದ ಜನರು ಮಾಂಸಾಹಾರವನ್ನು ಸ್ವೀಕರಿಸಿ ನಲಿಯುತ್ತಾರೆ.

ಸುಗ್ಗಿ ಹಬ್ಬದ ಆಚರಣೆಯ ಹಿನ್ನೆಲೆಯಲ್ಲಿ ಕೆಲವು ನಂಬಿಕೆಗಳು ಗೂಡು ಕಟ್ಟಿವೆ. ಇದರ ಆಚರಣೆಯಿಂದ ದೇವಿ ತೃಪ್ತಳಾಗಿ ಕಾಲಕಾಲಕ್ಕೆ ಮಳೆಯಾಗಿ ಬೇಳೆ ಹುಲುಸಾಗುತ್ತದೆ, ದವಸ ಧಾನ್ಯಗಳು ತುಂಬಿತುಳುಕುತ್ತವೆ, ರೋಗ ರುಜಿನ ದೂರವಾಗುತ್ತದೆ. ಊರಿನಲ್ಲಿ ಶಾಂತಿ ನೆಲಸುತ್ತದೆ ಎಂದು ದೃಢವಾಗಿ ಭಾವಿಸಲಾಗಿದೆ. ಸುಗ್ಗಿ ಹಬ್ಬ ಕೃಷಿಕ ವೃತ್ತಿಯ ಪಾವಿತ್ರ್ಯವನ್ನು ಮಾತೃಪ್ರಧಾನ ಪರಿಕಲ್ಪನೆಯನ್ನು ಎತ್ತಿಹಿಡಿಯುತ್ತದೆ. ಈ ಹಬ್ಬದಲ್ಲಿ ಮನೆಗಳಲ್ಲಿ ಆಡುಗೆ ಮಾಡಿದರೂ ಸಾಮೂಹಿಕವಾಗಿ ಆಚರಿಸುವುದರಿಂದ ಜನರಲ್ಲಿ ಸಮುದಾಯ ಭಾವನೆ ಉಂಟು ಮಾಡುತ್ತದೆ. ಪರಸ್ಪರರಲ್ಲಿ ಸಹಾಕಾರ ಸಂಬಂಧವನ್ನು ವೃದ್ಧಿಸುತ್ತದೆ. ಜಾತಿಮತ ಭೇದವಿಲ್ಲದೆ ಎಲ್ಲ ಜಾತಿಯವರೂ ಭಾಗವಹಿಸುವುದರಿಂದ ಉಚ್ಚ ನೀಚ ಭಾವನೆಯನ್ನು ಇಲ್ಲವಾಗಿಸುತ್ತದೆ. ಬಾಳಿನ ದುಃಖ ದುಮ್ಮಾನಗಳನ್ನು ಈ ಅವಧಿಯಲ್ಲಾದರೂ ಮರೆಯುವಂತೆ ಮಾಡುತ್ತದೆ. ಸುಗ್ಗಿಹಬ್ಬ ಮಾಂಸಾಹಾರಿಗಳ ಮಾಂಸ ಸೇವೆನೆಯನ್ನು ನಿಯಂತ್ರಿಸಬಲ್ಲದು.

ವೈ.ಸಿ.ಬಿ.

 

ಸುಡಲೈಮಾಡನ್ ತಮಿಳುನಾಡಿನಲ್ಲಿ ತಿರುನೆಲ್ವೇಲಿ ಮುಂತಾದ ಜಿಲ್ಲೆಗಳಲ್ಲಿರುವ ‘ನಾಟ್ಟಾರ್’ ಜನರ ಆರಾಧ್ಯದೈವಗಳಲ್ಲಿ ‘ಸುಡಲೈಮಾಡನ್ ‘, ಪ್ರಮುಖ ದೇವರು. ಈ ದೇವರನ್ನು ತಿರುನೆಲ್ವೇಲಿಯ ಸುಡುಗಾಡಿನಲ್ಲಿ ಅಥವಾ ಸುಡುಗಾಡಿನ ಪಕ್ಕದಲಿಟ್ಟು ಪೂಜಿಸುತ್ತಾರೆ. ಇದನ್ನು ಸುಡುಗಾಡಿನ ದೇವರೆಂದು ಕರೆಯುತ್ತಾರೆ. ಸುಡುಗಾಡಿನಲ್ಲಿ ದೇವರು ಇರುತ್ತದೆಂಬ ನಂಬಿಕೆ ತಮಿಳುನಾಡಿನಲ್ಲಿ ಹಿಂದಿನಿಂದಲೂ ಇವೆ. ಈ ದೈವಕ್ಕೆ ‘ಪಿಣಿಮಾಲೈಸೂಡಂ ಪೆರುಮಾಳ್ (ಹೆಣಗಳ ಅಸ್ಥಿಮಾಲೆ ಧರಿಸುವ ವಿಷ್ಣು)’, ‘ಮಯಾನಚ್ಚುಡಲೈ (ಶ್ಮಶಾನದೇವರು)’, ‘ಎಲುಂಬು ಸುಡಲೈ’ (ಎಲುಬಿನ ದೇವರು) ಎಂಬ ಹೆಸರುಗಳೂ ಉಂಟು.

ಬೇಸಿಕೆಕಾಲದಲಿ ಸುಡಲೈದೇವರು ಮೈಮೇಲೆ ಬಂದು ಆಡುವವರು, ಸ್ಮಶಾನಕ್ಕೆ ಹೋಗಿ ಎಲುಬುಗಳನ್ನು ಹೆಣದ ಭಾಗಗಳನ್ನು ತೆಗೆದುಕೊಂಡು ಬಂದು, ತಿಂದು ಸುಡಲೈಮಾಡನ್ ದೇವಸ್ಥಾನದಲ್ಲಿ ಕಾಲ ಜ್ಞಾನ ಭವಿಷ್ಯ ನುಡಿಯುತ್ತಾರೆ. ಸುಡಲೈಗೂ ಶಿವನಿಗೂ ಸುಡುಗಾಡು ಆವಾಸ ಸ್ಥಾನವಾಗಿರುದರಿಂದ ಜನರು ಅರಿಬ್ಬರೂ ಒಬ್ಬರೇ ಎಂದು ನಂಬುತ್ತಾರೆ. ಹೀಗಿದ್ದರೂ ಸುಡಲೈ ಶಿವನ ಮಗ ಎಂಬ ಅಭಿಪ್ರಾಯವೂ ಜನರಲ್ಲಿ ಬೇರೂರಿದೆ.

ಹಿಮಾಲಯದಲ್ಲಿ ಪಾರ್ವತಿಯ ಮೈದುನವಾಗಿ ಹುಟ್ಟಿದವನು ಸುಡಲೈ. ಅವನು ಹೆಣವನ್ನು ತಿನ್ನುತ್ತಿದ್ದುದರಿಂದ ಭೂಲೋಕದಲ್ಲಿ ಜನಿಸುವಂತಾದನು. ಅವನು ಕುಮಾರಿ ಭಗವತಿಯ ವಸ್ತುಗಳನ್ನು ಕಾವಲು ಕಾಯುತ್ತಿರುವಾಗ, ಮಲಯಾಳ ರಾಜ್ಯದಿಂದ ‘ಕಾಳಿಪ್ಪುಲೈಯನ್‌’ ಎಂಬ ಮಂತ್ರವಾದಿ ಭಗವತಿಯ ದೇವಸ್ಥಾನದಲ್ಲಿ ಹೇರಳವಾದ ವಸ್ತುಗಳಿವೆ ಎಂಬುದನ್ನು ಅಂಜನ (ಕಪ್ಪು) ವನ್ನು ಹಾಕಿ ಅರಿಯುತ್ತಾನೆ. ಅನಂತರ ಸುಡಲೈ ಹೊರಗಡೆ ಹೋಗಿರುವ ಸಂದರ್ಭವನ್ನು ನೋಡಿ, ಕಾಳಿಪ್ಪುಲೈಯನ್‌ ಅಲ್ಲಿದ್ದ ವಸ್ತುಗಳೆಲ್ಲವನ್ನು ಕೊಂಡೊಯ್ಯುತ್ತಾನೆ. ಸುಡಲೈ ಹಿಂತಿರುಗಿ ಬಂದು ದೇವಸ್ಥಾನದಲ್ಲಿ ನೋಡಿದಾಗ ವಸ್ತುಗಳೆಲ್ಲವು ಕಾಣದಿದ್ದುದರಿಂದ ವಿಸ್ಮತನಾದನು. ಅನಂತರ ಕದ್ದವನು ಕಾಳಿಪ್ಪುಲೈಯನೆಂಬುದನ್ನು ಅರಿತು ಅವನ ಮನೆಗೆ ಹೋಗಿ ಅವನ ಮಗಳ ಮೇಲೆ ಅತ್ಯಾಚಾರವನ್ನೆಸಗಿ ಕಾಳಿಪ್ಪುಲೈನನ್ನು ಕೊಂದು ಕುಟ್ರಾಲಮ್‌ ಮಾರ್ಗವಾಗಿ ಸೀವಲಪೇರಿ ಎಂಬ ಊರಿಗೆ ಬಂದನು. ಅಲ್ಲಿ ಐಕ್ಯಗೊಂಡು ಅವನಿಗೆ ದೇವಸ್ಥಾನ ಕಟ್ಟಿಸಲಾಯಿತು. ಶೀವಲಪ್ರೇರಿ ದೇವಸ್ಥಾನದಿಂದ ಹಿಡಿಮಣ್ಣನ್ನು ತೆಗೆದುಕೊಂಡು ಬಂದು ಪ್ರತಿಯೊಂದು ಊರಿನಲ್ಲೂ ಜನರು ಸುಡಲೈ ಮಾಡನ್‌ ದೇವಸ್ಥಾನವನ್ನು ಕಟ್ಟಿದ್ದರು.

ತಿರುನೆಲ್ವೇಲಿ ಜಿಲ್ಲೆಯಲ್ಲಿರುವ ಸುಡಲೈಮಾಡನ್‌ ದೇವಸ್ಥಾನಗಳಲ್ಲಿ ಬಹಳ ವಿಶೇಷ ಪ್ರಸಿದ್ಧವಾದದ್ದು ಶೀವಲಪ್ಪೇರಿ ಸುಡಲೈಮಾಡನ್‌ ದೇವಸ್ಥಾನವೇ. ಈ ಊರು ತಿರುನೆಲ್ವೇಲಿಯಿಂದ ಉತ್ತರ ಪೂರ್ವಾಭಿಮುಖವಾಗಿ ಹತ್ತು ಕಿ.ಮೀ. ದೂರದಲ್ಲಿದೆ. ಇಲ್ಲಿರುವ ಸುಡಲೈಗೂ ಇತಿಹಾಸವುಂಟು. ಕುಟ್ರಾಲಮ್‌ ಮಾರ್ಗವಾಗಿ ಬಂದ ಸುಡಲೈ ಸಣ್ಣ ಮಣ್ಣಿನ ಪಾತ್ರೆಯಲ್ಲಿ ಸೀವಲಪೇರಿಗೆ ಹೋಗಿ ನೆಲೆಸಿದನೆಂಬುದು ಐತಿಹ್ಯ. ರಾತ್ರಿಯಲ್ಲಿ ಕೆಲಸ ಮುಗಿಸಿಕೊಂಡು ಬಂದ ಗುಡ್ಡಪ್ಪ (ಪೂಜಾರಿ)ನ ಕಾಲಿಗೆ ಮಣ್ಣಿನ ಪಾತ್ರೆ ತಗುಲಿ ಅವನ ಮೈಮೇಲೆ ದೇವರು ಬಂದು ತನ್ನ ಮೇಲೆ ಸುಡಲೈ ಬಂದಿರುವುದಾಗಿಯೂ ಮಲಯಾಳಂ ರಾಜ್ಯದಿಂದ (ದೇಶದಿಂದ) ಬಂದಿರುವುದಾಗಿಯೂ ತನಗೆ ಈ ಸ್ಥಳದಲ್ಲಿ ದೇವಸ್ಥಾನ ಕಟ್ಟಿಸಿ ಪೂಜಿಸಬೇಕೆಂದು ಹೇಳಿದನು. ಕೂಡಲೇ ಪೂಜಾರಿಯ ವಂಶಸ್ಥರು ದೇವಸ್ಥಾನವನ್ನು ಕಟ್ಟಿಸಿ ಪೂಜಿಸಿದರು. ಕಾಲಕ್ರಮೇಣ ದೇವಸ್ಥಾನದ ಹಕ್ಕು ಬಾಧ್ಯತೆ ‘ವೇಳಾರ’ ಜನವರ್ಗದವರಿಗೆ ಹಸ್ತಾಂತರವಾಯಿತು. ಅನಂತರ ಅವರಿಂದ ‘ಕೋನಾರ್’ ಎಂಬ ಜನಾಂಗದವರಿಗೆ ಬಂದು ಸೇರಿತು.

ತಮಿಳುನಾಡಿನ ದಕ್ಷಿಣಭಾಗದಲ್ಲಿರುವ ‘ನಾಟ್ಟಾರ್’ ಅವರ ದೇವರಲ್ಲಿ ಸುಡಲೈಮಾಡನಿಗೆ ಪ್ರತ್ಯೇಕ ರೂಪವುಂಟು. ಈ ರೂಪ ಸುಡಲೈಮಾಡನ್‌ ರೂಪವನ್ನೇ ಹೆಚ್ಚುಕಡಿಮೆ ಹೋಲುತ್ತದೆ. ಇದು ಕೆಂಪು ಬಣ್ಣದಲ್ಲಿರುತ್ತದೆ. ಕೆಳಭಾಗದಿಂದ ಮೇಲ್ಬಾಗದೆಡೆಗೆ ಸ್ವಲ್ಪ ಗಿಡ್ಡವಾಗಿ ಸಾಗುವ ರಚನೆಯನ್ನು ಹೊಂದಿರುವ ಶಿಲೆಯ ತಲೆಯಭಾಗವು ಅರ್ಧಾಕಾರವಾಗಿ ನಿರ್ಮಾಣವಾಗಿರುತ್ತದೆ.

ಸುಡಲೈಮಾಡನ್‌ ದೇವಸ್ಥಾನದಲ್ಲಿ ನಡೆಯುವ ಹಬ್ಬದಲ್ಲಿ ಜನಪದ ಗೀತೆ, ಪೂಜಾರಿಗಳ ಕುಣಿತ ಮುಂತಾದ ಕಾರ್ಯಕ್ರಮಗಳು ಜರುಗುತ್ತವೆ. ಸುಡಲೈಮಾಡನನ್ನು ಮೇಲ್ಜಾತಿಯವರನ್ನು ಹೊರತುಪಡಿಸಿ ಉಳಿದೆಲ್ಲ ಜಾತಿಯವರೂ ಪೂಜಿಸುತ್ತಾರೆ. ಸುಡುಗಾಡಿನಲ್ಲಿರುವ ಸುಡಲೈಮಾಡನ್‌ ದೇವಸ್ಥಾನ ಆ ಸುಡುಗಾಡಿಗೆ ಹಕ್ಕು ಬಾಧ್ಯತೆಯುಳ್ಳ ಊರಿಗೆ ಸೇರಿರುತ್ತದೆ. ಒಂದು ಗ್ರಾಮದಲ್ಲಿ ಸುಡಲೈಮಾಡನ್‌ ದೇವಸ್ಥಾನ ಉಗಮವಾಗುವುದಕ್ಕೆ ಕೆಲವು ಕಾರಣಗಳಿವೆ. ಒಂದು ಊರಿನಲ್ಲಿ ನೆಲೆಸಿರುವ ಸುಡಲೈಮಾಡನ್‌ ದೇವರು ಶಕ್ತಿಯುಳ್ಳದ್ದು, ಕ್ರೂರ ಸ್ವಭಾವವನ್ನು ಹೊಂದಿರುವಂಥದ್ದು, ದೆವ್ವಗಳನ್ನು ಹೆದರಿಸಿ ಓಡಿಸುವಂಥದ್ದು ಎಂಬ ನಂಬಿಕೆಗಳು ಇವೆ. ಬಹುಪಾಲು ಸುಡಲೈಮಾಡನ್‌ಗೆ ಹಿಡಿಮಣ್ಣನ್ನು ಕೊಂಡೊಯ್ಯುವುದರ ಮೂಲಕವಾಗಿಯೇ ಪ್ರತಿಯೊಂದು ಊರಿನಲ್ಲೂ ದೇವಸ್ಥಾನ ಕಟ್ಟಿಸುವುದಾಗಿ ಇತಿಹಾಸ ಹೇಳುತ್ತದೆ.

ಜನರು ಒಂದು ಊರನ್ನು ಬಿಟ್ಟು ಇನ್ನೊಂದು ಊರಿಗೆ ಹೋಗುವಾಗ ಹಳೆಯ ಊರಿನಲ್ಲಿರುವ ಸುಡಲೈಮಾಡನ್‌ ದೇವರನ್ನೂ ಕೊಂಡೊಯ್ಯುತ್ತಾರೆ. ಅದೇ ಸಂದರ್ಭದಲ್ಲಿ ಹೊಸದಾಗಿ ನಿರ್ಮಾಣಗೊಳ್ಳುವ ಆ ಊರಿಗೆ ಸೀವಲ ಪೇರಿಯಿಂದ ಹಿಡಿಮಣ್ಣು ತೆಗೆದುಕೊಂಡು ಹೋಗಿ ಸುಡಲೈಗೆ ದೇವಸ್ಥಾನ ಕಟ್ಟುತ್ತಾರೆ.

ಸುಡಲೈಮಾಡನ್‌ ದೇವಸ್ಥಾನದಲ್ಲಿ ಸುಡಲೈಯೇ ಮುಖ್ಯ ದೈವವಾಗಿರುತ್ತದೆ. ಇಸಕ್ಕಿಯಮ್ಮನ್‌, ಈಶ್ವರಿ ಆಮ್ಮನ್‌, ಉಚ್ಚಿಮಹಾಕಾಳಿ ಅಮ್ಮನ್‌, ಪೇಚ್ಚಿ ಅಮ್ಮನ್‌ ಮುಂತಾದ ಹೆಣ್ಣು ದೇವತೆಗಳೂ ಕಳಮಾಡನ್‌, ಮುಂಡನ್‌, ಪುಲೈ ಮಾಡನ್‌ ಯಮನ್‌ ಮುಂತಾದ ಗಂಡು ದೈವಗಳೂ ಉಪದೇವರುಗಳಾಗಿರುತ್ತವೆ. ಅದೇ ಸಂದರ್ಭದಲ್ಲಿ ಹೆಣ್ಣು ದೇವತೆಯನ್ನು (ದೇವರನ್ನು) ಪ್ರಧಾನ ದೈವವಾಗಿ ಹೊಂದಿರುವ ದೇವಸ್ಥಾನಗಳಲ್ಲಿ ಸುಡಲೈ ಉಪದೈವವಾಗಿರುತ್ತದೆ. ಎಷ್ಟೇ ಉಪದೈವಗಳಿದ್ದರೂ ಸುಡಲೈಗೇ ಮಹತ್ತ್ವದ ಸ್ಥಾನ ಕೊಡಲಾಗುತ್ತದೆ.

ಸುಡಲೈಮಾಡನ್‌ ದೇವಸ್ಥಾನಕ್ಕೆ ಪ್ರತ್ಯೇಕವಾದ ಅಂಶ ಯಾವುದೂ ಇಲ್ಲ. ಎಲ್ಲ ನಾಟ್ಟಾರ್ ಜನರ ದೇವಸ್ಥಾನಗಳ ಸಹಜವಾದ ಸ್ವಾಭಾವಿಕ ಅಂಶಗಳನ್ನೇ ಈ ದೇವಸ್ಥಾನದಲ್ಲೂ ಕಾಣಬಹುದಾಗಿದೆ. ಬಹುಶಃ ಸುಡಲೈದೇವರ ರೂಪ ಬಯಲಿನಲ್ಲಿಯೇ ನಿರ್ಮಿತವಾಗಿರುತ್ತದೆ. ಕೆಂಪು ಬಣ್ಣದಿಂದ ಕೂಡಿರುವ ಇದರ ಆಕಾರವನ್ನು ಸುಣ್ಣದಿಂದಲೋ ಕಲ್ಲಿನಿಂದಲೋ ಸಿಮೆಂಟಿನಿಂದಲೋ ಮಣ್ಣಿನಿಂದಲೋ ಮಾಡಲಾಗಿರುತ್ತದೆ. ನಾಲ್ಕರಿಂದ ಏಳು ಕಾಲಗಳಲ್ಲಿ (ಸಂದರ್ಭಗಳಲ್ಲಿ) ಮಾತ್ರ ಅಕ್ಕಿ ಹಿಟ್ಟಿನಿಂದ ವಿಗ್ರಹ ಮಾಡಿ ಪೂಜಿಸುತ್ತಾರೆ. ಕೈಯಲ್ಲಿ ಕತ್ತಿ, ಭರ್ಜಿ, ಸೊಂಟದಲ್ಲೊಂದು ಕತ್ತಿ, ತಲೆಯಲ್ಲಿ ಎತ್ತರವಾದ ಟೋಪಿ, ದೊಡ್ಡದಾದ ಮೀಸೆ ಮುಂತಾದವುಗಳಿಂದ ಕೂಡಿರುವ ಸುಡಲೈಯ ಕಣ್ಣಿನ ನೋಟ ಭಯಪಡಿಸುವ ರೀತಿಯಲ್ಲಿ ಜೋಡಿಸಲ್ಪಟ್ಟಿರುತ್ತದೆ. ಸುಡಲೈಮಾಡನ್‌ ದೇವಸ್ಥಾನ ಸಾಮಾನ್ಯವಾಗಿ ಊರಿನ ದಕ್ಷಿಣ ಭಾಗದಲ್ಲಿಯೇ ನಿರ್ಮಿತವಾಗಿರುತ್ತದೆ.

ಸುಡಲೈಮಾಡನ್‌ ದೇವಸ್ಥಾನಗಳಲ್ಲಿ ಸಾಮಾನ್ಯವಾಗಿ ಪ್ರತಿದಿನ ಪೂಜೆ ನಡೆಯುವುದಿಲ್ಲ. ದೇವಸ್ಥಾನ ಅಥವಾ ದೇವಸ್ಥಾನಕ್ಕೆ ಸಂಬಂಧಿಸಿದವರ ಆರ್ಥಿಕ ಸ್ಥಿತಿಗತಿಗನುಗುಣವಾಗಿ ಪೂಜೆ ನಡೆಯುತ್ತದೆ. ಸಾಮಾನ್ಯವಾಗಿ ಎಲ್ಲ ಕೊನೆಯ ಶುಕ್ರವಾರಗಳಲ್ಲೂ, ಕಾರ್ತಿಕ ತಿಂಗಳು (ನವೆಂಬರ್ ೧೫ ರಿಂದ ಡಿಸೆಂಬರ್ ೧೫ರ ತನಕ) ಶುಕ್ರವಾರಗಳಲ್ಲೂ ಪೂಜೆ ನಡೆಯುವುದು ವಾಡಿಕೆ. ಪೂಜೆ ಮಾಡುವವರು ದೇವಸ್ಥಾನದೊಂದಿಗೆ ಸಂಪರ್ಕವನನ್ನು ಹೊಂದಿದವರಾಗಿರುತ್ತಾರೆ. ಬ್ರಾಹ್ಮಣರೋ ಶೈವ ವೇಳಾಳರೋ ಪೂಜೆ ಮಾಡುವ ಪದ್ಧತಿ ಇಲ್ಲ. ಸೀವಲಪೇರಿಯಂಥ ಕೆಲವು ಸುಡಲೈಮಾಡನ್ ದೇವಸ್ಥಾನಗಳಲ್ಲಿ ಇತರ ನೇರ್ಮೆಯುಳ್ಳ ದೇವಸ್ಥಾನಗಳಲ್ಲಿ ನಡೆಯುವಂಥ ಪೂಜೆಯಂತೆ ಇಲ್ಲಿಯೂ ನಡೆಯುತ್ತದೆ. ಅದನ್ನು ಹೊರತುಪಡಿಸಿ ಸಾಮಾನ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿರುವ ಸುಡಲೈಮಾಡನಿಗೆ ವರ್ಷಕ್ಕೊಂದು ಸಾರಿ ಹರಕೆಯ ಹಬ್ಬ ನಡೆಯುವ ಪದ್ಧತಿ ಇದೆ.

ಈ ಹರಕೆಯ ಹಬ್ಬ ಸಾಮಾನ್ಯವಾಗಿ ಗ್ರಾಮಗಳಲ್ಲಿ ಪಂಗುನಿ, ಚಿತ್ತಿರೈ (ಪಾಲ್ಗುಣ, ಚೈತ್ರ ) ತಿಂಗಳಲ್ಲಿ (ಮಾರ್ಚಿ ಕೊನೆಯವಾರದಿಂದ ಏಪ್ರಿಲ್ ಅಂತ್ಯದವರೆಗೆ) ನಡೆಯುತ್ತದೆ. ಈ ಹಬ್ಬವನ್ನು ಊರು ಪರವಾಗಿ ಅಥವಾ ಕೆಲವು ಇನ್ನಿತರ ಕುಟುಂಬಗಳ ಪರವಾಗಿಯೂ ನಡೆಸಲಾಗುತ್ತದೆ. ಹೇಗೆ ನಡೆದರೂ ಊರಿನಲ್ಲಿರುವ ಎಲ್ಲ ಜನರೂ ಭಾಗವಹಿಸುವರು. ಸುಡಲೈಮಾಡನ್ ಹರಕೆಯ ಹಬ್ಬದಲ್ಲಿ ಜನಪದ ಗೀತೆ ಹಾಡುವುದು ಪೂಜಾರಿ (ಗುಡ್ದಪ್ಪ) ಕುಣಿತಗಳನ್ನು ನಡೆಸುವುದರೊಂದಿಗೆ ಬಲಿ ಕೊಡುವುದು ಬಹಳ ಮುಖ್ಯವಾಗುತ್ತದೆ. ಹರಕೆಯ ಹಬ್ಬದಲ್ಲಿ ಬಲಿಕೊಡುವುದಕ್ಕಾಗಿಯೇ ಮನೆಗೊಂದು ಕಪ್ಪು ಹೊತ, ಕಪ್ಪು ಹುಂಜ ಅಥವಾ ಹಂದಿಯನ್ನು ಬಲಿಕೊಡುವ ಈ ಕಾರ್ಯಕ್ರಮದಲ್ಲಿ ಎಲ್ಲರೂ ಸ್ವ ಇಚ್ಛೆಯಿಂದ ಬೆರೆಯುತ್ತಾರೆ. ಸುಡಲೈಮಾಡನಿರುವ ಊರಲ್ಲಿ ಜನಸಂಖ್ಯೆಗನುಗುಣವಾಗಿ ಐವತ್ತರಿಂದ ನೂರು ಮೇಕೆಗಳನ್ನು ಹಂದಿಗಳನ್ನು ಬಲಿಕೊಡಲಾಗುತ್ತದೆ.

ಇಲ್ಲಿ ಸುಡಲೈಮಾಡನ್ ದೇವಸ್ಥಾನದ ಎದುರು ನಿಗದಿಪಡಿಸಿರುವ ಸ್ಥಳದಲ್ಲೇ ಬಲಿಕೊಡಲಾಗುತ್ತದೆ. ಸೀವಲಪೇರಿಯಂತಹ ದೇವಸ್ಥಾನಗಳಲ್ಲಿ ಶಾಶ್ವತವಾದ ಸ್ಥಳವೊಂದನ್ನು ನಿಗದಿಮಾಡಲಾಗಿದೆ. ಗ್ರಾಮೀಣ ಪ್ರದೇಶದ ದೇವಸ್ಥಾನಗಳಲ್ಲಿ ತಾತ್ಕಾಲಿಕವಾಗಿ ಒಂದು ಸ್ಥಳವನ್ನು ನಿಗದಿಪಡಿಸಿ ಅದರಲ್ಲಿ ಮೇಕೆ, ಹಂದಿಗಳನ್ನು ಬಲಿಕೊಡುವುದು ರೂಢಿಯಾಗಿ ಬಂದಿದೆ. ಬಲಿ ಕೊಡಲಾಗುವ ಮೇಕೆ, ಹಂದಿಗಳು ತಾವಾಗಿಯೇ ಮುಂದೆ ಬಂದು ಕಾಲುಗಳನ್ನು ಅಗಲಿಸುತ್ತವೆ ಎಂದು ಜನರು ನಂಬಿಕೆ. ಆಡು, ಕೋಳಿ, ಹಂದಿ ಮುಂತಾದವುಗಳನ್ನು ಬಲಿಕೊಟ್ಟು ಪೊಂಗಲ್‌ ಮಾಡಿಯೂ ಜನರು ತಂತಮ್ಮ ಹರಕೆಗಳನ್ನು ತೀರಿಸುತ್ತಾರೆ. ದವಸ ಧಾನ್ಯಗಳ ಬೆಳೆವಣಿಗೆ ಕುಂಠಿತಗೊಂಡಾಗ, ವಾಸಿಯಾಗದ ವ್ಯಾಧಿ, ಮಳೆ ಇಲ್ಲದಿರುವಿಕೆ, ದೆವ್ವಗಳ ಭಯ ಮುಂತಾದವುಗಳಿಗಾಗಿ ಹರಕೆ ಕಟ್ಟಿಕೊಳ್ಳುತ್ತಾರೆ.

ನಾಟ್ಟಾರ್ ಜನರ ಹರಕೆಯ ಹಬ್ಬಗಳಿಗಿಂತ ಸುಡಲೈಮಾಡನ್ ದೇವಸ್ಥಾನದ ಹಬ್ಬದ ಕಾರ್ಯಕ್ರಮಗಳು ಭಯವನ್ನುಂಟು ಮಾಡುವಂಥವುಗಳಾಗಿರುತ್ತವೆ. ಶುಕ್ರವಾರದ ರಾತ್ರಿ ನಡೆಯುವ ಕಾರ್ಯಕ್ರಮ ಮುಖ್ಯವಾದದ್ದು. ರಾತ್ರಿ ೧೧ ಗಂಟೆಗೆ ನೈಯಾಂಡಿ ಮೇಳ ತಮಟೆ ಮೊಳಗಲು ಗುಡ್ಡಪ್ಪಂದಿರೂ ಜನಪದ ಹಾಡುಗಾರನೂ ದೈವದ ಹೆಸರನ್ನು ಉಚ್ಚರಿಸಿ ಜೋರಾಗಿ ಹಾಡುತ್ತಿದ್ದಾಗ ಪೂಜಾರಿಗೆ ಮೈಮೇಲೆ ದೇವರು ಬರುತ್ತದೆ. ತಕ್ಷಣವೇ ದೇವರಿಗೆ ನೈವೇದ್ಯ, ಸಂತರ್ಪಣೆ ನೀಡಿದ ಮೇಲೆ ದೇವರು ಮೈಮೇಲೆ ಬಂದಿರುವ ಪೂಜಾರಿ ಬಲಿಕೊಡುವಂತೆ ಸಂಜ್ಞೆ ಮಾಡುವನು. ಬಲಿಕೊಡುವ ಕಾರ್ಯಕ್ರಮ ಮುಗಿದನಂತರ ದೇವರಾಡುತ್ತಾ ಸುಡುಗಾಡಿಗೆ ಹೋಗುವನು. ಈ ರೀತಿ ಹೋಗುವಾಗ ತನ್ನ ಕೈಯಲ್ಲಿ ಕತ್ತಿ, ಭರ್ಜಿ(ಈಟಿ), ಬಟ್ಟೆಯಿಂದ ಸುತ್ತಿರುವ ಪಂಜು, ಬಲಿಕೊಡುವುದಕ್ಕೆ ಕೆಲವರು ಟೋಪಿ, ಚಡ್ಡಿಗಳನ್ನು ಧರಿಸಿ ಹೋಗುವರು. ಅವರು ಸುಡುಗಾಡಿಗೆ ಹೋಗುವವಾಗ ಜೊತೆ ಯಾರೂ ಹೋಗಕೂಡದು. ಒಂದು ವೇಳೆ ಹೋದರೆ ಅವರ ಕಣ್ಣು ಕುರುಡಾಗುತ್ತದೆ ಎಂಬ ನಂಬಿಕೆ ಜನರಲ್ಲಿ ಬೇರೂರಿ ನಿಂತಿದೆ. ಸುಡಗಾಡಿಗೆ ಹೋಗುವ ಪೂಜಾರಿ (ಮೈಮೇಲೆ ದೇವರು ಬಂದಿರುವ ವ್ಯಕ್ತಿ) ಶ್ಮಶಾನವನ್ನು ಮೂರು ಬಾರಿ ಸುತ್ತಿ ಬಂದು ಅಲ್ಲಿರುವ ಎಲುಬಿನ ಚೂರುಗಳನ್ನು ತೆಗೆದುಕೊಂಡು ಬರುವನು. ಈ ಕಾರ್ಯಕ್ರಮ ಸಾಮಾನ್ಯವಾಗಿ ಸುಡಲೈಮಾಡನ್ ದೇವಸ್ಥಾನದಲ್ಲಿ ಅನುಷ್ಠಾನದಲ್ಲಿದೆ. ಕೆಲವು ದೇವಸ್ಥಾನಗಳಲ್ಲಿ ಈ ಪದ್ಧತಿ ಕಡಿಮೆಯಾಗುತ್ತಿದೆ. ಸುಡಗಾಡಿಗೆ ಹೋಗಿರುವ ಪೂಜಾರಿ ದೇವಸ್ಥಾನಕ್ಕೆ ಮರಳಿ ಬರುವವರೆಗೆ ದೇವಸ್ಥಾನದಲ್ಲಿ ಹಾಡುಗಾರನು ಪುಂಗಿಯನ್ನು ಮತ್ತು ನೈಯಂಡಿ ಮೇಳವನ್ನೂ ನುಡಿಸುತ್ತಾಲೇ ಇರಬೇಕು. ನುಡಿಸುವುದನ್ನು ನಿಲ್ಲಿಸಿದರೆ ಸಂಕಷ್ಟಗಳು ಬಂದೊದಗುತ್ತದೆಂದು ನಂಬುತ್ತಿದ್ದಾರೆ. ಸುಡಗಾಡಿಗೆ ಹೋಗಿ ಮರಳಿ ಬಂದು ಪೂಜಾರಿಗೆ ಮೈಮೇಲೆ ದೇವರು ಬಂದು ಕಾಲಜ್ಞಾನ ಹೇಳುವುದರೊಂದಿಗೆ ಹರಕೆಯ ಹಬ್ಬ ಮುಕ್ತಾಯವಾಗುತ್ತದೆ.

ಟಿ. ಜಿ. ಅನುವಾದ ಎಂ. ಆರ್.

 

ಸುಳಿ ಜನಪದರಲ್ಲಿ ಸುಳಿ ಅನ್ನುವುದಕ್ಕೆ ಅನೇಕ ಅರ್ಥಗಳಿವೆ. ಅದು ಮನುಷ್ಯ, ಪ್ರಾಣಿ, ಪಕ್ಷಿ, ಗಿಡ – ಮರ, ನೀರು, ಕಲ್ಲು, ಮಣ್ಣು, ಗಾಳಿ ಮುಂತಾದ ವಸ್ತುಗಳಲ್ಲಿ ಬೇರೆ ಬೇರೆ ಅರ್ಥಗಳನ್ನು ಪಡೆದುಕೊಂಡು ಜೀವಂತವಾಗಿದೆ. ಹಾಗಾಗಿ ‘ಸುಳಿ’ ಆ ವಸ್ತುವಿನ ಹಿನ್ನೆಲೆಯಲ್ಲಿ ವ್ಯಾಖ್ಯಾನಕ್ಕೆ ಒಳಗಾಗುತ್ತದೆ. ಮಾನವ ಮತ್ತು ಪ್ರಾಣಿಗಳ ದೇಹದ ಮೇಲಿನ ರೋಮಗಳು ಸಹಜವಾದ ರೀತಿಯಲ್ಲಿರದೆ ಉಂಗುರಾಕಾರದಲ್ಲಿದ್ದರೆ ಅದನ್ನು ಸುಳಿ ಎಂದು ಕರೆಯುತ್ತಾರೆ. ‘ವಂಶದ ಕುಡಿ’ ಎನ್ನುವ ಅರ್ಥದಲ್ಲೂ ಬಳಕೆ ಆಗುತ್ತಿದೆ. ‘ನಿನ್ನ ಸುಳಿ ಹಾಳಾಗ’ ಎಂದು ಬೈಯುವುದನ್ನು ಕಾಣಬಹುದು. ಅಂದರೆ ನಿನ್ನ ವಂಶ ನಾಶವಾಗಲಿ ಎಂದರ್ಥ, ಜೀವರಹಿತವಾದ ವಸ್ತುವಿನಲ್ಲಿ ಬೇರೆ ರೀತಿಯಲ್ಲಿ ಅರ್ಥವನ್ನು ಪಡೆದುಕೊಂಡಿದೆ. ಉದಾಹರಣೆ ನೀರು ಸಹಜ ರೀತಿಯಲ್ಲಿ ಹರಿಯದೆ ಚಕ್ರಕಾರವಾಗಿ ಅಥವಾ ಉಂಗುರಾಕಾರದಲ್ಲಿ ಹರಿದರೆ ಆ ಸ್ಥಳವನ್ನು ಸುಳಿ ಎಂದು ಕರೆಯುತ್ತಾರೆ. ಅದು ದೊಡ್ಡದಾದ ಆಕಾರವನ್ನು ಹೊಂದಿದ್ದರೆ ಅದನ್ನು ‘ತಿರುಗುಣಿ’ ಎಂದು ಕೆರೆಯುತ್ತಾರೆ. ಸಸ್ಯಗಳಲ್ಲಿ ಸುಳಿಗಳನ್ನು ಗುರುತಿಸುವ ವಿಧಾನ ಇನ್ನೂ ಭಿನ್ನ. ಬೆಳೆಗಳಿಗೆ ಸುಳಿ ಬಿದ್ದರೆ ಅದು ನಾಶವಾಗುತ್ತದೆ ಎನ್ನುವ ನಂಬಿಕೆ ಜನಪದರದು. ಸುಳಿಗಳನ್ನು ಹೊಂದಿರುವ ಮರಗಳನ್ನು ಕಡಿದರೆ ಕಡಿದವರು ಸತ್ತು ಹೋಗುತ್ತಾರೆ. ಅಲ್ಲದೆ ಅವರ ‘ಸುಳಿ’ (ವಂಶ) ನಾಶವಾಗುತ್ತದೆಂಬ ನಂಬಿಕೆ ಜನಪದರದಲ್ಲಿದೆ. ಸುಳಿ ಹಾನಿಕಾರಕ ಶಕ್ತಿಯಾಗಿ ಜನಪದರಲ್ಲಿ ಜೀವಂತವಾಗಿದೆ. ಆ ಕಾರಣಕ್ಕೆ ಸುಳಿ ಇರುವ ನೀರು, ಗಾಳಿ (ಸುಂಟರಗಾಳಿ) ಜೀವನಕ್ಕೆ ಹಾನಿಯನ್ನು ತರುತ್ತವೆ ಎಂದು ತಿಳಿದಿದ್ದಾರೆ. ಸುಂಟರಗಾಳಿಯಲ್ಲಿ ದೆವ್ವಗಳು ಚಲಿಸುತ್ತವೆ ಎನ್ನುವ ಕಥನಗಳು ಇವೆ. ಸುಂಟರಗಾಳಿಯಲ್ಲಿ ಚಲಿಸಲಾಗದು ಎನ್ನುವ ವೈಜ್ಞಾನಿಕ ಹಿನ್ನೆಲೆಯಿಂದ ಈ ನಂಬಿಕೆ ಜನ್ಮತಾಳಿರಬೇಕು.

ಸುಳಿ ಭಯಾನಕ ಪರಿಕಲ್ಪನೆಯಲ್ಲಿ ಅಲ್ಲದೆ ಲಾಭದ ಪರಿಕಲ್ಪನೆಯಲ್ಲೂ ಜೀವಂತವಾಗಿದೆ. ಅಂದರೆ ಸುಳಿ ‘ಒಳಿತು’, ‘ಕೆಡಕು’, ‘ಲಾಭ’ ಮತ್ತು ‘ನಷ್ಟ’ ವನ್ನು ಅಳೆಯುವ ಕೊಲಮಾನದ ಹಿನ್ನೆಲೆಯಲ್ಲಿ ರೂಪಗೊಂಡಿದೆ. ಸಾಕುಪ್ರಾಣಿಗಳಲ್ಲಿ ಇದನ್ನು ಯಥೇಚ್ಛವಾಗಿ ಕಾಣಬಹುದು, ‘ದಾವಣಿ ಸುಳಿ’ ಇರುವ ಎತ್ತನ್ನು ಕೊಂಡರೆ ಕೊಂಡವರ ದಾವಣಿಯಲ್ಲಿ ಯಾವಾಗಲೂ ದನಗಳಿರುತ್ತವೆ ಎಂದು ನಂಬುತ್ತಾರೆ. ಎತ್ತಿನ ಸುಳಿಗಳನ್ನು ಗುರುತಿಸುವ ವಿಧಾನಗಳು ಮತ್ತು ಅವುಗಳ ಬಗ್ಗೆ ಇರುವ ಕಥನಗಳು, ನಂಬಿಕೆಗಳು ಗಮನ ಸೆಳೆಯುತ್ತವೆ. ಎತ್ತಿನ ಹಿಂಗಾಲುಗುಟೆಲುಬಿನ ಹಿಂದೆ ಒಂದು ಧೂಮಕೇತುವಿನಂತೆ ಇರುವ ಸುಳಿಯನ್ನು ಹೊಂದಿರುವ ಎತ್ತನ್ನು ಯಾರೂ ತೆಗೆದುಕೊಳ್ಳುವುದಿಲ್ಲ. ಆ ಸುಳಿಯನ್ನು ‘ಕಸಬರಿಗೆಯ ಸುಳಿ, ಹೀನಗೈ ಸುಳಿ, ಬಾರಿಗೆ ಸುಳಿ’ ಎಂದು ಕರೆಯುತ್ತಾರೆ. ಇಂತಹ ಎತ್ತು ತನ್ನ ಒಡೆಯನ ಸಂಸಾರವನ್ನೇ ಉಡುಗಿ ಹಾಕುತ್ತದೆ. ಎತ್ತಿನ ಗುದದ್ವಾರದ ಕೆಳಗೆ ಒಂದೇ ಸುಳಿ ಇದ್ದರೆ ಅದನ್ನು ‘ಲಂಗಟ ಸುಳಿ’ ಎನ್ನುವರು. ಹೆಸರೇ ಹೇಳುವಂತೆ ಈ ಎತ್ತಿನ ಒಡೆಯನಿಗೆ ಲಂಗಟವೇ ಗತಿಯಾಗುತ್ತದಂತೆ. ಕಡುಬಡತನ ಬರುತ್ತದೆಯಂತೆ. ಅದೇ ಜಾಗದಲ್ಲಿ ಎರಡು ಸುಳಿಗಳಿದದ್ದರೆ ಬಹಳ ಒಳ್ಳೆಯದು. ಕೊಂಡವನು ಎತ್ತು ಅವನ ಮನೆತನ ಏಳ್ಗೆಯಾಗುತದೆ. ಎತ್ತಿನ ಮುಂಗಾಲಿನ ಗೊರಸಿನ ಮೇಲೆ ಸುಳಿಗಳಿದ್ದರೆ ಅದನ್ನು ‘ಬೇಡಿ ಸುಳಿ’ ಎಂದು ಕರೆಯಲಾಗುತ್ತದೆ. ಅಂತಹ ಎತ್ತನ್ನು ಕೊಂಡರೆ ಮನೆಯಲ್ಲಿ ಯಾರಾದರೂ ಬೇಡಿ ಹಾಕಿಸಿಕೊಳ್ಳುತ್ತಾರೆ. ಎತ್ತಿನ ಎರಡು ಕಣ್ಣುಗಳ ಹತ್ತಿರ ಎರಡು ಸುಳಿಗಳಿದ್ದರೆ ಕೆಟ್ಟದ್ದು, ಮೂರು ಸುಳಿಗಳಿದ್ದರೆ ಒಳ್ಳೆಯದು. ಅದನ್ನು ‘ಬಾಸಿಂಗ ಸುಳಿ’ ಎನ್ನುವರು. ಆ ಎತ್ತು ಕೊಂಡವವರ ಮನೆಯಲ್ಲಿ ಮದುವೆ ಕಾರ್ಯ ನಡೆಯುತ್ತದೆ ಎಂಬ ನಂಬಿಕೆ ಇದೆ. ಎದೆಗುಂಡಿಗೆ ಹತ್ತಿರ ಎರಡೂ ಕಡೆಗೆ ಎರಡು ಸುಳಿಗಳಿದ್ದರೆ ಅವುಗಳನ್ನು ಗುಂಡಿಗೆ ಸುಳಿ ಎಂದು ಕರೆಯುತ್ತಾರೆ. ಅಂತಹ ಎತ್ತುಗಳು ಒಳ್ಳೆಯವು. ಗುಂಡಿಗೆ ಸುಳಿ ಮೇಲುಗಡೆ ಎರಡಿಂಚು ಅಂತರದಲ್ಲಿ ಎರಡು ಸುಳಿಗಳಿದ್ದರೆ ಅದನ್ನು ‘ಎದುರುಪಾಮ’ ಎಂದು ಕರೆಯುವರು, ಇಂತಹ ಎತ್ತು ಬಲಿಷ್ಠವಾಗಿರುತ್ತದೆ. ವ್ಯವಸಾಯಕ್ಕೆ ಅನುಕೂಲಕರವಾಗಿದ್ದು. ಭುಜದ ಮೇಲೆ ನೇರವಾಗಿ ಸುಳಿ ಇದ್ದರೆ ಅದನ್ನು ‘ರಾಶಿ ಸುಳಿ’ ಎಂದು ಇಂತಹ ಎತ್ತು ಇರುವ ಮನೆ ರಾಶಿ ಏರಿದಂತೆ ಏರುತ್ತದೆ ಎನ್ನುವ ನಂಬಿಕೆ ಇದೆ. ಹೀಗೆ ಎತ್ತಿಗೆ ಇರುವ ಬೇಡಿಸುಳಿ, ಕಾಗಿಸುಳಿ, ಜೋಗಿಸುಳಿ, ಅಡಕಲು, ಪೊರಕೆ ಸುಳಿ, ಸಂಕಲಸುಳಿ, ಕಾಡು ಸುಳಿ, ಗೂಬೆ ಸುಳಿ, ಚಟ್ಟದ ಸುಳಿ, ಬೆನ್ನು ಸುಳಿ, ಮಸ್ತಕ ಸುಳಿ ಮುಂತಾದ ಸುಳಿಗಳ ಬಗ್ಗೆ ಅನೇಕ ಕಥೆಗಳು, ನಂಬಿಕೆಗಳು ಇವೆ. ಕುದುರೆ, ಆನೆ, ಒಂಟೆ ಮುಂತಾದ ಸಾಕುಪ್ರಾಣಿಗಳ ಸುಳಿಗಳನ್ನು ಗುರುತಿಸಿ ಒಳಿತು ಕೆಡಕುಗಳನ್ನು ಲೆಕ್ಕಾಚಾರ ಹಾಕುವ ವಿಧಾನ ಜನಪದರಲ್ಲಿದೆ.

ಈ ವಿಧಾನ ಹೆಣ್ಣನ್ನು ನೋಡುವ ದೃಷ್ಟಿಕೋನದಲ್ಲೂ ಚಲಾವಣೆಯಲ್ಲಿದೆ. ಹಾಗಾಗಿ ಹೆಣ್ಣು, ಸುಳಿ ಚೌಕಟ್ಟಿನೊಳಗೆ ಸಿಲುಕಿ ಉಪಬೋಗದ ವಸ್ತುವಾಗಿ ಪರಿಣಮಿಸಿದ್ದಾಳೆ. ಅವಳ ದೇಹದ ಮೇಲೆ ಇರುವ ಸುಳಿಗಳನ್ನು ಆಧರಿಸಿ ವ್ಯಕ್ತಿತ್ವವನ್ನು ಅಳೆಯುವ ಪದ್ಧತಿ ಇದೆ. ತಲೆಯಲ್ಲಿ ಕೂದಲು ಸುಳಿಯಿದ್ದರೆ ಮುಂಡೆಯೂ, ಹಣೆಯಲ್ಲಿ ಸುಳಿಯಿದ್ದರೆ ವ್ಯಭಿಚಾರಿಯೂ, ಮುಂಡೆಯೂ ಆಗುವಳು, ತೊಡೆಯಲ್ಲಿ ಸುಳಿ ಇದ್ದರೆ ಹಾದರಗಿತ್ತಿ ಆಗುವಳು ಎಂದು ನಂಬಲಾಗುತ್ತದೆ. ಇಂತಹ ಅನೇಕ ಬಗೆಯ ಸುಳಿಗಳನ್ನು ಗುರುತಿಸುವ ಪದ್ಧತಿ ಇದೆ. ಪುರುಷರಲ್ಲಿ ಇದೆಯಾದರೂ ತುಂಬಾ ಕಡಿಮೆ.

‘ಸುಳಿ’ ಹೀಗೆ ಹಲವು ಮುಖಗಳಿಂದ ನಂಬಿಕೆಯ ಲೋಕವನ್ನು ಕಟ್ಟಿಕೊಂಡಿದೆ. ಇವುಗಳನ್ನು ಆರ್ಥಿಕ ನೆಲೆಯಲ್ಲಿ ಆರೋಗ್ಯಕರ ನೆಲೆಯಲ್ಲಿ, ಮನೋವಿಶ್ಲೇಷಣಾತ್ಮಕ ನೆಲೆಯಲ್ಲಿ ಅಧ್ಯಯನಕ್ಕೆ ಒಳಪಡಿಸಬೇಕಾಗಿದೆ. ಸುಳಿಯ ಬಗ್ಗೆ ಈ ಬಗೆಯ ಅಧ್ಯಯನಗಳು ಆಗಿರುವುದು ತುಂಬಾ ಕಡಿಮೆ.

ಎಂ. ಬಿ.

 

ಸೇವೈಯಾಟ್ಟಂ ಸೇವಾಟಲ್, ಸೇವದಪ್ಪು, ಉರಮಿ ಕೋಮಾಳಿ ಆಟ್ಟಂ, ದಾದರಾಟ್ಟಂ ಮುಂತಾದ ಹೆಸರುಗಳಿಂದ ಕರೆಯುವ ‘ಸೇವೆಯಾಟ್ಟಂ’ (ಸೇವೆಯಾಟ) ಕಂಬಳದ ನಾಯಕರು ಆಡುವ ಜನಾಂಗಸಂಬಂಧಿ ಕಲೆಯಾಗಿದೆ. ಸೇವ್ಯೆ + ಆಟ್ಟಂ (ಸೇವ್ಯೆ – ಸೇವೆಗೈಯುವುದು, ನಮಿಸುವುದು, ಪೂಜಿಸಿವುದು) ದೇವರಿಗೆ ನಮಿಸುವುದಕ್ಕಾಗಿ ಆಡುವ ಆಟ ಎಂದು ಅರ್ಥವಾಗುತ್ತದೆ. ಕಂಬಳದ ನಾಯಕರ ದೇವರಾಟಕ್ಕೆ ಹೋಲಿಸದರೆ ಅಟದ ರೂಪ, ವೇಷಭೂಷಣ, ಹಾಡುಗಳು, ತಾಳ ವಿಧಾನಗಳಲ್ಲಿ ಸಂಪೂರ್ಣ ವಿಭಿನ್ನವಾಗಿದೆ. ಸೇವೆಯಾಟ.

ತೊಪ್ಪೈಕೂತ್ತಾಡಿ (ದಪ್ಪ ಹೊಟ್ಟೆಯ ವಿದೂಷಕ) ಎಂಬ ವಿದೂಷಕನನ್ನು ಪ್ರಧಾನವಾಗಿಟ್ಟುಕೊಂಡು ಹಾಡಿಗೆ ತಕ್ಕಂತೆ ದಪ್ಪುಲು ಎಂಬ ವಾದ್ಯವನ್ನು ಬಾರಿಸುತ್ತ ವೃತ್ತಕಾರವಾಗಿ ಸೇವೆಯಾಟವನ್ನು ಆಡಲಾಗುತ್ತದೆ. ವಿದೂಷಕನೊಂದಿಗೆ ಏಳು ಸಹಕಲಾವಿದರು ತಮ್ಮ ಮೊದಲರ್ಧ ಭಾಗವನ್ನು ಗಂಡಿನಂತೆ, ಕೆಳಗಿನ ಅರ್ಧಭಾಗವನ್ನು ಹೆಣ್ಣಿನಂತೆ ವೇಷಧರಿಸಿಕೊಂಡು ವೃತ್ತಕಾರವಾಗಿ ತಿರುಗುತ್ತಾ ಆಡುತ್ತಾರೆ.

ಈ ವೇಷಭೂಷಣಕ್ಕೆ ಕಾರಣವಾದ ಅಂಶ ಕುರಿತು ಪೌರಾಣಿಕ ಕಥೆಯೊಂದು ರೂಢಿಯಲ್ಲಿದೆ. ಶಿವನ ಬ್ರಹ್ಮಹತ್ಯಾ ದೋಷವನ್ನು ನಿವಾರಿಸಲು ವಿಷ್ಣು ವಿದೂಷಕನ ವೇಷ ಧರಿಸಿ ತನ್ನೊಂದಿಗೆ ಎಳು ಮಂದಿ ಸ್ತ್ರೀ ವೇಷಧಾರಿಗಳೊಂದಿಗೆ ಶಿವನ ಮುಂದೆ ನರ್ತಿಸಿದ್ದಾಗಿಯೂ, ಆಗ ದೋಷ ನಿವಾರಣೆಯಾಯಿತೆಂದೂ ಕಥೆ ತಿಳಿಸುತ್ತದೆ. ವಿಷ್ಣು ಆಡಿದ ಕುಣಿತವೇ ಕಂಬಳದ ನಾಯಕರು ಸೆವೆಯಾಟ ಎಂದು ಆಡುತ್ತಾರೆಂದು ಹೇಳಲಾಗುತ್ತದೆ. ಪೇರುಮಾಳ್ ಎಂಬ ಹೆಸರಿನಲ್ಲಿ ಪೂಜೆಗೊಳ್ಳುವ ವಿಷ್ಣು ದೇವಾಲಯಗಳಲ್ಲಿ ಸೇವೆಯಾಟ ತಪ್ಪದೆ ನಡೆಯುತ್ತದೆ. ಕಂಬಳದ ನಾಯಕರ ಪೂಜಾಚರಣೆಗೆ ಸಂಬಂಧಿಸಿದ ಆಟವಾಗಿ ಮಾತ್ರ ಸೇವೆಯಾಟ ಇಂದಿನವರೆಗೆ ನಡೆಯುತಿರುವುದು ಗಮನಾರ್ಹ.

ಸೇವೆಯಾಟವು ಹಾಡುಗಳನ್ನು ಆಧಾರವಾಗಿಟ್ಟುಕೊಂಡು ಆಡುವುದರಿಂದ ಆಟಗಾರರೇ ಹಾಡುಗಳನ್ನು ಅದಕ್ಕೆ ತಕ್ಕಂತೆ ದಪ್ಪ, ಕಂಚಿನ ತಾಳ ಮುಂತಾದ ವಾದ್ಯಗಳನ್ನು ನುಡಿಸುತ್ತ ಆಡುತ್ತಾರೆ. ಸೇವೆ ಹಾಡು , ರಾಮಾಯಾಣದ ಸೇವೆ ಹಾಡು, ಚೆಂಡ್ರಾಯ ಪೆರುಮಾಳ್ ಸೇವೆ ಹಾಡು, ವಿದೂಷಕ ಹಾಡು ಎಂದು ಕರೆಯಾಲಾಗುವ ಸೇವೆಯಾಟದ ಹಾಡುಗಳನ್ನು ತೆಲಗು ಮತ್ತು ತಮಿಳಿನಲ್ಲಿ ಹಾಡಲಾಗುತ್ತದೆ.

ಭಂಗಿ, ಹೆಜ್ಜೆ, ಹೊರಳುವುದು. ತಿರುಗುವುದು, ಮುಂದೆ ಹಿಂದೆ ಚಲಿಸುವುದು ಹೀಗೆ ವೃತ್ತಕಾರವಾಗಿ ಆಡುವ ಸೇವೆಯಾಟದ ವಿಧಾನಗಳು ಆಟದ ಕಲಾವಿದರ ಪ್ರತಿಭೆಯನ್ನೂ ಅಭಿವ್ಯಕ್ತಗೊಳಿಸುತ್ತದೆ.

ಓಂ, ಎಂ, ಅನುವಾದ ಐ. ಎಸ್.

 

ಸೋಬಾನೆ ಪದ ಮದುವೆಯ ಸಂದರ್ಭದಲ್ಲಿ ಹಾಡುವ ಪದಗಳೇ ಈ ಹೆಸರಿದೆ. ‘ಶುಭವೆನ್ನಿ’ ಎಂಬ ಮಾತು ಸೋಮಾನೆಯಾಗಿದೆ. ಸೋಬಾನೆ ಹಾಡುಗಳನ್ನು ಸಾಮಾನ್ಯವಾಗಿ ಹೆಚ್ಚಾಗಿ ಹೇಳುವವರು ಹೆಂಗಸರೇ. ಆದರೆ ಸೋಬಾನೆ ಪದಗಳನ್ನು ಹಾಡುವ ಗಂಡಸರು ಅಲ್ಲಲ್ಲಿ ವಿರಳವಾಗಿ ಕಾಣಿಸುತ್ತಾರೆ. ಮದುವೆಯ ವಿವಿಧ ಆಚರಣೆಗಳನ್ನು ಕ್ರಮಬದ್ಧವಾಗಿ ಹಾಡುವ ಪದಗಳೇ ಮದುವೆಯ ಪದಗಳು.

ಹಿಂದಿನ ಪದ್ಧತಿಯಂತೆ ಮದುವೆ ಕ್ರಮಬದ್ಧವಾಗಿ ನಡೆಯಬೇಕೆಂದು, ಆ ಕ್ರಮ ತಪ್ಪಿಹೋದರೆ ಗಂಡು ಹೆಣ್ಣಿನ ಜೀವನದಲ್ಲಿ ಮುಂದೆ ಅನಾಹುತ ಸಂಭವಿಸಬಹುದೆಂಬ ನಂಬಿಕೆ ಇವರಲ್ಲಿರುವುದರಿಂದ ಯಾವ ಶಾಸ್ತ್ರಾಚರಣೆಯೂ ತಪ್ಪಿಹೋಗದಂತೆ ಆರಂಭದಿಂದ ಕೊನೆಯವರೆಗೂ ನಡೆಯುವ ಎಲ್ಲ ಶಾಸ್ತ್ರಕ್ಕೂ ಸೋಬಾನೆ ಪದಗಳನ್ನು ಹಾಡುವರು.

ಅವು ಇಂತಿವೆ : ನಿಶ್ಚಿತಾರ್ಥ, ಗಟ್ಟಿಮಾತಿನ ಹಾಡು (ಒಪ್ಪುಮಾತು) ಮದುಮಗನ ಶಾಸ್ತ್ರದ ಹಾಡು , ದೇವರ ನೀರು ಹಾಕಿಸಿ ಹುತ್ತಕ್ಕೆ ಕರೆದೊಯ್ಯುವ ಹಾಡು, ಸುರಗಿ ಸುತ್ತುವ ಹಾಡು, ಉಗುರು ತೆಗೆಸುವ ಹಾಡು, ಒರಳಕ್ಕಿ ಕುಟ್ಟುವ ಹಾಡು, ಆರಿಶಿನ ಎಣ್ಣೆ ಹಚ್ಚುವ ಹಾಡು, ಮದುಮಗ – ಹೆಣ್ಣಿನ ಮನೆಗೆ ಹೊರಡುವಾಗಿನ ಹಾಡು, ಬೀಗರನ್ನು ಎದುರುಗೊಳ್ಳುವ ಹಾಡು, ಮಸಿಯಾಟದ ಹಾಡು, ಮದುವೆ ಮಂಟಪದಲ್ಲಿ ಗಂಡಿಗೆ ಆರತಿ ಮಾಡುವ ಹಾಡು ಧಾರಾಮಹೂರ್ತದ ಹಾಡು, ಕಾಲು ತೊಳೆಯುವ ಹಾಡು, ಜರಿಯುವ ಹಾಡು, ನಾಗೋಲೆ ಶಾಸ್ತ್ರದ ಹಾಡು ವಧುವನ್ನು ಮನೆಗೆ ತುಂಬಿಸಿಕೊಳ್ಳುವ ಹಾಡು, ವಧುವಿಗೆ ಶುಭವನ್ನು ಹಾರೈಸುವ ಹಾಡುಗಳವರೆಗೆ ಪಟ್ಟಿಮಾಡಬಹುದು. ಕೊನೆಯಲ್ಲಿ ಮಂಗಳಾರತಿ ಹೇಳುವುದರ ಮೂಲಕ ಎಲ್ಲ ಆಚರಣೆಗಳು ಕೊನೆಗೊಳ್ಳುತ್ತದೆ.

ಕೆಲವು ಸಮುದಾಯಗಳಲ್ಲಿ ಹೆಣ್ಣು – ಗಂಡುಗಳಿಗೆ ಮಜ್ಜನ ಮಾಡಿಸುವುದು ಹೆಣ್ಣಿಗೆ ಮಡಿಲು ತುಂಬಿಸಿವಿಕೆ, ತಾಳಿ ಕಟ್ಟುವಿಕೆ, ಹೆಣ್ಣು ಗಂಡುಗಳನ್ನು ಜರಿಯುವುದು ಭೂಮಿಕ್ಕುವಿಕೆ, ಎಂಜಲು ತೆಗೆಯುವಿಕೆ, ಗಂಧದ ಹುಡಿ ಎರಚಾಡುವುದು ನಾನಾ ಸಂದರ್ಭದಲ್ಲಿ ಹೆಣ್ಣು – ಗಂಡಿಗೆ ಸೇಸೆ ಇಡುವುದು. ಬಾಗಿಲು ತಡೆಯುವುದು, ಓಕಳಿ ಆಡುವುದು, ಸಸಿಗೆ ನೀರು ಹುಯ್ಯುವುದು – ಈ ಎಲ್ಲ ಸಂದರ್ಭಗಳ ವಿವರವನ್ನು ಸೋಬಾನೆ ಪದಗಳು ಬಿಡಿಬಿಡಿಯಾಗಿ ಸರಳವಾಗಿ ವಿವರಿಸುತ್ತವೆ.

ಸೋಬಾನೆ ಎಂಬ ಪದ ಅಥವಾ ಹಾಡು ಹುಟ್ಟಿದ ಬಗೆ ಹೇಗೆ ಮತ್ತು ಯಾರು ಹಾಡನ್ನು ಸೃಷ್ಟಿಸಿದರು ಹಾಗೂ ಯಾವ ಕುಲದಲ್ಲಿ ಹುಟ್ಟಿ ಕಾಲಾನಂತರ ಹೇಗೆ ಪ್ರಸಾರವಾಯಿತೆಂಬುದರ ಬಗ್ಗೆ – ಸೋಬಾನಾ ಎಂಬುದನ್ನು ಸೂರ್ಯದೇವನ ತಂಗಿ ಧರಣವ್ವ ಅಥವಾ ಮೇಲಿರುವ ಕೆಳ ವರ್ಗದಲ್ಲಿ ಆರಂಭಗೊಂಡಿತೆನ್ನುವ ಆಶಯ ಒಂದು ಹಾಡಿನಲ್ಲಿ ಅಂತರ್ಗತವಾಗಿರುವುದನ್ನು ಕಾಣಬಹುದು. ಉತ್ತರ ಕರ್ನಾಟಕದ ಪರಿಶಿಷ್ಟ ವರ್ಗವೆಂದು ಗುರುತಿಸಲ್ಪಟ್ಟು ಮಾದಿಗ ಸಮುದಾಯದ ಬೆಡಗುಗಳಲ್ಲಿ ‘ರಾಯರೈವಳಿ’ ಪುರದಲ್ಲಿ ಶೋಬಾನ ಹುಟ್ಟಿದವು ಎನ್ನಲಾಗಿದೆ.

ಮದುವೆಶಾಸ್ತ್ರದ ಬತ್ತ ಕುಟ್ಟುವ ಹಾಡುಗಳಲ್ಲಿ ಒನಕೆಯ ಸದ್ದಿನ ಲಯಕ್ಕೆ ಹೊಂದಿಕೆಯಾಗುವ ಸಾಮರಸ್ಯವನ್ನು ಕಾಣುತ್ತೇವೆ. ಹಸೆ ಬರೆಯುವ ಸಡಗರದ ಸಂದರ್ಭದಲ್ಲಿಯೂ ಸುಂದರ ಭಾವವಿರುವ ಅನೇಕ ಹಾಡುಗಳಿವೆ.

            ಹಸೆ ಬರೆಯೋರು ಹಸವಾಗಿ ಬರೀರಮ್ಮ
ಹೊಸ ಬೆರಳಿ ಕಡಗ ನಿಮಕೈಲಿ – ವೈದಾಬೆರಳು
ಹಸನಾಗಿ ಬರಲಿ ಮಾಡ ಮ್ಯಾಲಿ

ಮದುವೆಯ ಪದಗಳಲ್ಲಿ ಜರಿಯುವ ಪದಗಳು ಒಳ್ಳೆಯ ಮನರಂಜನೆಯನ್ನು ಒದಗಿಸುತ್ತದೆ. ಹೆಣ್ಣನ್ನು ಹೊಗಳಿ ಗಂಡನ್ನು ಜರಿಯುವ ಪದಗಳು ಹೀಗಿವೆ :

            ಆನೆಮ್ಯಾಲೆ ಬರುವೋನು ಜಾಣನೆನುತಿದ್ದೆ –
ಜಾಣಲ್ಲ ಕಾಣೆ ಜೋಲುದುಟಿ ಮದುವಣ್ಣ –
ನಮ್ಮ ಜಾಣೆಗೆ ನೀನೆಲ್ಲಿ ಒದಗಿದೋ –

ಹೀಗೆಯೇ ಹೆಣ್ಣನ್ನು ಜರಿದು ರೇಗಿಸುವ ಹಾಡುಗಳೂ ಇವೆ.

            ಏನೇ ಹೆಣ್ಣಮ್ಮ ಶೋಕಿ ಮಾಡುತೀಯ?

ಎಂದ ಪ್ರಶ್ನಸಿ, ಗಂಡನಾಗುವವನ ಗುಣಗಳನ್ನು ಹೇಳುತ್ತ

            ಆತ ಸೂಳಿಲ್ಲದೆ ದೂರಾಗಿ ಇರಲೊಲ್ಲ

ಎನ್ನುತ್ತಾರೆ.

ಗಂಡು ಹೆಣ್ಣು ಪರಸ್ವರ ಮುಖನೋಡಿ ಇನ್ನು ದಂಪತಿಗಳಾದೆವು ಎನ್ನು ಸಂದರ್ಭದಲ್ಲಿ ಕೂಡ ಸೋಬಾನೆ ಕೇಳಿ ಬರುತ್ತಿರುತ್ತದೆ. ಹಾಗೆ ಮುಖನೋಡಿಕೊಳ್ಳುವ ಇಬ್ಬರ ಮನಸ್ಸಿನಲ್ಲಿಯೂ ಇರುವ ಭಾವನೆಗಳನ್ನು ಸೋಬಾನೆ ಪದಗಳು ಹಿಡಿದಿಟ್ಟಿವೆ.

ವಿ. ಆರ್.