ಕನ್ನಡ ವಿಶ್ವವಿದ್ಯಾಲಯ ಆರಂಭದಿಂದಲೂ ಬೇರೆ ಬೇರೆ ಶಾಸ್ತ್ರ, ಶಿಸ್ತುಗಳಲ್ಲಿ ವಿಶ್ವಕೋಶಗಳನ್ನು ಪ್ರಕಟಿಸುತ್ತಾ ಬಂದಿದೆ. ಶಾಸ್ತ್ರ ವಿಧಾನಗಳನ್ನು ನಿರ್ಮಾಣ ಮಾಡುವುದು ಕನ್ನಡ ವಿಶ್ವವಿದ್ಯಾಲಯದ ಮುಖ್ಯ ಕೆಲಸಗಳಲ್ಲಿ ಒಂದು. ಕನ್ನಡ ವಿಶ್ವವಿದ್ಯಾಲಯದ ಬಗೆಗೆ ಡಾ. ಚಂದ್ರಶೇಖರ ಕಂಬಾರರು ಹೇಳಿದ ಮಾತುಗಳು ಅರ್ಥಪೂರ್ಣವಾಗಿವೆ. “ಒಂದು ದೃಷ್ಟಿಯಿಂದ ಇದು ವಿದ್ಯೆಯನ್ನು ನಿರ್ಮಿಸುವ ಸಂಸ್ಥೆಯಾಗಿದೆ. ನಮ್ಮ ದೇಶದಲ್ಲಿ ಹಳೆಯ ಕಾಲದ ತಿಳುವಳಿಕೆಯೊಂದಿದೆ. ಅಲ್ಲದೆ ಪಶ್ಚಿಮದಿಂದ ಹರಿದು ಬರುತ್ತಿರುವ ಜ್ಞಾನ ಪ್ರವಾಹವೂ ಇದೆ. ಈ ಎರಡೂ ತಿಳುವಳಿಕೆಗಳು ಒಂದಕ್ಕೊಂದು ಸಂಧಿಸಿ ಬೆಳಕನ್ನು ಉಂಟುಮಾಡಿದೆ. ಜೊತೆಗೆ ದಿಗ್ಭ್ರಮೆಯನ್ನು ತಂದಿದೆ. ಈ ತಿಳುವಳಿಕೆಗಳ ವಿವೇಕದ ವಿನಿಯೋಗ ಇಂದು ಅಗತ್ಯವಾಗಿದೆ. ಇಂಥ ವಿನಿಯೋಗಕ್ಕಾಗಿ ಹೊಸ ಬಗೆಯ ಶಾಸ್ತ್ರ. ವಿಧಾನಗಳು ನಮಗಿಂದು ಬೇಕಾಗಿವೆ” ಲೋಕದ ಜ್ಞಾನದ ಬಗೆಗೆ ಅಪಾರ ಗೌರವವನ್ನು ತೋರುತ್ತಿದ್ದ ಅವರು ‘ಲೋಕದಲ್ಲಿನ ತಿಳುವಳಿಕೆಯನ್ನು ಸಂಗ್ರಹಿಸಿ ತಿರುಗಿ ಲೋಕಕ್ಕೆ ಗ್ರಂಥರೂಪದಲ್ಲಿ ದಾನಮಾಡಬೇಕು’ ಎನ್ನುತ್ತಾರೆ. ಅವರ ಲೋಕವ್ಯಾಪ್ತಿ ಕರ್ನಾಟಕವಾಗಬಹುದು. ಭಾರತವಾಗಬಹುದು ಅಥವಾ ಪ್ರಪಂಚವೇ ಆಗಬಹುದು. ಪ್ರಸ್ತುತ ವಿಶ್ವಕೋಶ ಅವರ ಆಶಯದ ವ್ಯಾಪ್ತಿಯ ಒಳಗೆ ಬರುತ್ತದೆ. ಸಹೋದರ ಭಾಷೆಗಳಾದ ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂಗಲ ಜಾನಪದವನ್ನು ಪರಿಚಯಿಸುವ ಕಾರ್ಯವನ್ನು ಮಾಡಿದೆ. ನಮ್ಮ ಸಂಸ್ಕೃತಿಯ ವಿಚಾರಗಳನ್ನು ಸಹೋದರ ಭಾಷಿಕರಿಗೆ ತಿಳಿಸಿ, ಅವರ ಸಂಸ್ಕೃತಿಯ ಶೋಧ, ವಿಮರ್ಶೆ ಮತ್ತು ಪ್ರಸಾರಕ್ಕೆ ಸಹಕಾರಿಯಾಗುತ್ತದೆ. ಕನ್ನಡ ಸಂಸ್ಕೃತಿಯ ಜೊತೆಗೆ, ಸಹೋದರ ಸಂಸ್ಕೃತಿಗಳ ವಿಚಾರಗಳು ಬೆರೆತುಗೊಂಡರೂ ಕನ್ನಡ ಜನಪದ ಮಸುಕಾಗದೇ “ಕನ್ನಡದ ಕನ್ನಡವ ಕನ್ನಡಿಸುತ್ತಿರಬೇಕು” ಎನ್ನುವುದನ್ನು ಪ್ರಜ್ವಲಿಸುವಂತೆ ಮಾಡಿದೆ. ವಿಸ್ಮೃತಿಗೊಂಡ ಪಾರಂಪರಿಕ ಜ್ಞಾನ, ಸ್ವದೇಶಿ ಹಾಗೂ ವಿದೇಶಿ ಸತ್ಯಗಳನ್ನು ಶೋಧಿಸಲು ಸಹಕಾರಿಯಾಗುತ್ತದೆ. ಡಾ. ಎಂ.ಎಂ.ಕಲಬುರ್ಗಿಯವರು “ಎಲ್ಲ ರಸ್ತೆಗಳು ರೋಮ್‌ದ ಕಡೆಗೆ ಎಂಬಂತೆ, ಕನ್ನಡದ ಎಲ್ಲ ಹಾದಿಗಳು ಹಂಪಿಯ ಕಡೆಗೆ ಕೇಂದ್ರೀಕರಣಗೊಳ್ಳುವ ಮತ್ತು ಇಲ್ಲಿಂದಲೇ ಜಗತ್ತಿನ ಅಂಚಿನತ್ತ ವಿಕೇಂದ್ರೀಕರಣಗೊಳ್ಳುವ ವಾತಾವರಣವನ್ನು ನಿರ್ಮಾಣ ಮಾಡಬೇಕಾಗಿದೆ” ಎಂಬ ತೂಕದ ಮಾತುಗಳಿಗೆ ಕೋಶದ ಕೆಲಸವು ಪೂರಕವಾಗಿದೆ.

ದಕ್ಷಿಣ ಭಾರತದ ಬೇರೆ ಬೇರೆ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಜಾನಪದ ವಿದ್ವಾಂಸರು ತಮ್ಮ ಅಧ್ಯಯನ ಮತ್ತು ಆಳವಾದ ಆಲೋಚನೆಗಳ ಮೂಲಕ ಚಿಂತಿಸಿ ಲೇಖನಗಳನ್ನು ಬರೆದಿದ್ದಾರೆ. ಅಲಕ್ಷಿತವಾಗಿರುವ ಅನೇಕ ಸಮುದಾಯಗಳ ಸಾಂಸ್ಕೃತಿಕ, ಸಾಮಾಜಿಕ, ಆರ್ಥಿಕ, ಶಾಸನ, ಕಾನೂನುಗಳ ಸಮಸ್ಯೆಗಳನ್ನು ಬಹುದೃಷ್ಟಿಕೋನಗಳಿಂದ ನೋಡಲಾಗಿದೆ. ತನ್ಮೂಲಕ ದಕ್ಷಿಣ ಭಾರತದ ಜಾನಪದದ ಭವಿಷ್ಯದ ಕುರಿತ ಹೊಸ ಚಿಂತನೆಗಳು ಪ್ರಥಮಬಾರಿಗೆ ನಡೆಯಲು ಸಾಧ್ಯವಾಗಿಸುತ್ತದೆ. ದಕ್ಷಿಣ ಭಾರತೀಯ ಆಯ್ದ ಜಾನಪದವನ್ನು ಒಂದೇ ಸೂರನಡಿ ತಂದು ತೌಲನಿಕ ಅಧ್ಯಯನಕ್ಕೆ ಅನುವು ಮಾಡಿಕೊಟ್ಟ ಮಾದರಿ ಸಂಪುಟವಿದು ಎಂದು ಹೇಳಲು ಹೆಮ್ಮೆ ಎನಿಸುತ್ತದೆ. ವಿಶ್ವಕೋಶವು ನೂರಾರು ಚಿಂತನ- ಮಂಥನಗಳನ್ನು ತಿಳಿಸುವ ಅಧ್ಯಯನ ಗ್ರಂಥದ ಜೊತೆಗೆ ಹೊಸ ದಿಕ್ಕಿನೆಡೆಗೆ ಜಾನಪದವನ್ನು ಆಲೋಚಿಸುವ ಮಾರ್ಗದರ್ಶಕ ದಿಕ್ಸೂಚಿ ಗ್ರಂಥವಾಗಿದೆ. ದಕ್ಷಿಣ ಭಾರತೀಯ ಜಾನಪದ ವಿದ್ವಾಂಸರ ಸಹಕಾರದಿಂದಾಗಿ ಪ್ರಸ್ತುತ ಕೃತಿಗೆ ಕರ್ನಾಟಕ ಸಾಂಸ್ಕೃತಿಕ ಜಗತ್ತಿನಲ್ಲಿ ಅನನ್ಯ ಸ್ಥಾನ ಲಭಿಸುವಂತಾಗಿದೆ.

ಕನ್ನಡ ವಿಶ್ವವಿದ್ಯಾಲಯದ ನಾಲ್ಕನೇ ಕುಲಪತಿಗಳಾದ ಡಾ. ಬಿ.ಎ. ವಿವೇಕ ರೈ ಅವರು ಕನ್ನಡ ವಿಶ್ವವಿದ್ಯಾಲಯದ ಆಶಯದ ಬಗೆಗೆ “ಕನ್ನಡ ಸಂಸ್ಕೃತಿಯ ಬಹುತ್ವದ ನೆಲೆಗಳನ್ನು ಹುಡುಕುವ, ಗಟ್ಟಿಗೊಳಿಸುವ, ಹರಡುವ ಕಾಯಕವನ್ನು ನೋಂಪಿಯಂತೆ ನಡೆಸಿಕೊಂಡು ಬಂದಿದೆ. ಕನ್ನಡ ಸಂಸ್ಕೃತಿಯನ್ನು ಮತ್ತೆ ಮತ್ತೆ ನಿರ್ವಚನ ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು ಆಡುಂಬೋಲವಾಗಿ ಕಾರ್ಯನಿರ್ವಹಿಸುತ್ತಿದೆ. ನಮಗೆ ಗೊತ್ತಿರುವ ಸಂಸ್ಕೃತಿಯ ಅರ್ಥಗಳ ಆಚೆಗೆ ಅನೂಹ್ಯ ಲೋಕಗಳ ಕಡೆಗೆ ತನ್ನನ್ನು ಮತ್ತು ಕನ್ನಡಿಗರನ್ನು ಒಯ್ಯುವ ಪ್ರಯಾಣದ ದಾರಿಗಳನ್ನು ರೂಪಿಸುವ ಮಹತ್ವದ, ಸಾಹಸದ ಹೆಜ್ಜೆಗಳು ಮೂಡಿಬಂದಿವೆ. ಇದು ನಿರಂತರ ನಡೆಯಬೇಕಾದ ಬಹುದಿನಗಳ ಮಹಾಯಾನ” ಎಂದಿದ್ದಾರೆ. ಅವರ ಆಶಯದ ವ್ಯಾಪ್ತಿಯನ್ನು ವಿಸ್ತರಿಸಿದ ಮೊದಲ ಪ್ರಯತ್ನ ಇದಾಗಿದೆ. ಭೌತಿಕ ಗಡಿರೇಖೆಗಳನ್ನು ಕಳಚಿಕೊಂಡು ಕನ್ನಡ ಜ್ಞಾನದ ಜೊತೆ ಜೊತೆಗೆ ಸಹೋದರ ಭಾಷೆಗಳ ಜ್ಞಾನವು ಕನ್ನಡ ವಿಶ್ವವಿದ್ಯಾಲಯದಲ್ಲಿ ರೂಪುಗೊಳ್ಳಲು ಸಹಕಾರಿಯಾಗಿದೆ.

ಕರ್ನಾಟಕ ಎಲ್ಲಾ ವಿಶ್ವವಿದ್ಯಾಲಯಗಳಿಗೂ ಒಂದು ವ್ಯಾಪ್ತಿಯಿದೆ. “ಆದರೆ ಕನ್ನಡ ವಿಶ್ವವಿದ್ಯಾಲಯಕ್ಕೆ ವ್ಯಾಪ್ತಿ ಅನ್ನುವುದು ಇಲ್ಲ. ಅದರ ವ್ಯಾಪ್ತಿ ಅಖಂಡವಾಗಿತ್ತು. ಕರ್ನಾಟಕ ಮಾತ್ರವಲ್ಲದೇ ಕನ್ನಡಿಗನಿರುವ ಸ್ಥಳ ಹಾಗು ಕನ್ನಡ ಸಂಸ್ಕೃತಿ ನೆಲೆಸಿರುವ ಎಲ್ಲಾ ದೇಶ ಮತ್ತು ವಿದೇಶಗಳ ವ್ಯಾಪ್ತಿಯನ್ನು ಹೊಂದಿದೆ. ವಿಶ್ವವಿದ್ಯಾಲಯದ ಹಲವು ವಿಭಿನ್ನ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಗಳಲ್ಲಿ ವಿಶ್ವಕೋಶದ ರಚನೆ ಮತ್ತು ಪ್ರಕಟಣೆಯು ಒಂದು. ಕನ್ನಡ ವಿಶ್ವವಿದ್ಯಾಲಯದ ಸಂಶೋಧನೆಯು ಕನ್ನಡ ನಾಡು, ನುಡಿ, ಸಂಸ್ಕೃತಿ ಮತ್ತು ಜನಜೀವನದ ಸರ್ವಮುಖಗಳ ವಿಶಿಷ್ಟವಾದ ಅಂತರಂಗ ಮತ್ತು ಬಹಿರಂಗ ಸಂಪತ್ತನ್ನು ಕುರಿತು ಅಧ್ಯಯನ ಮಾಡುವ, ಸಂಶೋಧಿಸುವ ಮತ್ತು ಅದರ ಅಧ್ಯಯನ ಫಲಿತಗಳನ್ನು ಜಗತ್ತಿನಾದ್ಯಂತ ಪ್ರಸಾರ ಮಾಡಿ ಕರ್ನಾಟಕದ ಬಗೆಗಿನ ಅರಿವನ್ನು ಜನಸಮುದಾಯದಲ್ಲಿ ವಿಸ್ತರಿಸುವ ಹಾಗೂ ಅನಂತ ವಿಶ್ವಜ್ಞಾನವನ್ನು ಕನ್ನಡ ಜ್ಞಾನವನ್ನಾಗಿ ಪರಿವರ್ತಿಸಿ ಅದು ಕನ್ನಡಿಗರೆಲ್ಲರಿಗೆ ದಕ್ಕುವಂತೆ ಮಾಡುವ ಮೂಲಭೂತ ಆಶಯದ ಪ್ರತಿನಿಧಿ” ಎಂದು ಕನ್ನಡ ವಿಶ್ವವಿದ್ಯಾಲಯದ ಮೂರನೆಯ ಕುಲಪತಿಗಳಾದ ಡಾ. ಹೆಚ್.ಜೆ.ಲಕ್ಕಪ್ಪಗೌಡರು “ಕನ್ನಡ ಪ್ರಜ್ಞೆಯನ್ನು ವಿಶ್ವಪ್ರಜ್ಞೆಯಾಗಿಸುವತ್ತ” ಮುನ್ನುಡಿಯಲ್ಲಿ ದಾಖಲಿಸಿದ್ದಾರೆ. ಅವರ ಆಶಯಕ್ಕೆ ಗರಿ ಮೂಡಿಸಿದ ವಿಶ್ವಕೋಶಗಳಲ್ಲಿ ಇದು ಒಂದು.

ದಕ್ಷಿಣ ಭಾರತದ ಜಾನಪದ ವಿದ್ವಾಂಸರು ಹಾಗು ಭಾಷಾಂತರಕಾರರ ಸಹಕಾರದಿಂದಾಗಿ ವಿಶ್ವಕೋಶವು ವಿಶಿಷ್ಟ ಹಾಗೂ ಅನನ್ಯತೆಯಿಂದ ಕೂಡಿ ಹೊರಬರಲು ಕಾರಣವಾಗಿದೆ. ತೆಲಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿನ ಮೂಲ ಲೇಖನಗಳನ್ನು ನೇರವಾಗಿ ಕನ್ನಡ ಭಾಷೆಗೆ ಭಾಷಾಂತರ ಹೊಂದಿರುವುದರಿಂದ ವಿಶ್ವಕೋಶಕ್ಕೆ ಘನತೆ ಹಾಗೂ ಗಾಂಭೀರ್ಯವನ್ನು ತಂದಿದೆ. ಬಣ್ಣದ ಚಿತ್ರಗಳು, ಕಪ್ಪು- ಬಿಳುಪು ಚಿತ್ರಗಳು ಹಾಗೂ ರೇಖಾಚಿತ್ರಗಳು ಲೇಖನಗಳನ್ನು ಅರ್ಥೈಸಲು, ಹೋಲಿಕೆ ಮತ್ತು ವ್ಯತ್ಯಾಸಗಳನ್ನು ಗುರುತಿಸಲು ಸಹಕಾರಿಯಾಗುತ್ತವೆ.

ಜಾನಪದ ಕ್ಷೇತ್ರಕ್ಕೆ ಮಹತ್ವದ ಕೃತಿಯೊಂದನ್ನು ನಾಡಿನ ವಿದ್ವಾಂಸರ ಜೊತೆ ಸೇರಿ ರಚಿಸಬೇಕೆಂಬ ಬಹುದಿನಗಳ ಬಯಕೆಯ ಫಲವಾಗಿ ಪ್ರಸ್ತುತ ಕೋಶ ಉದಯಿಸಿದೆ. ಕನ್ನಡ ನಾಡು-ನುಡಿ ಸಂಸ್ಕೃತಿಯ ಜೊತೆಗೆ ಸಂಸ್ಕೃತಿಗಳನ್ನು ನೋಡುವ ಬಗೆಗೆ ಚಿಂತಿಸುವಾಗ ಕೋಶದ ವ್ಯಾಪ್ತಿಯನ್ನು ನಿರ್ಧರಿಸಲು ಸಾಧ್ಯವಾಯಿತು. ಕೋಶ ತಯಾರಿಯ ವಿವರವಾದ ಪ್ರಸ್ತಾವನೆಯನ್ನು ಡಾ. ಆರ್.ವಿ.ಎಸ್. ಸುಂದರಂ ಅವರ ಜೊತೆ ಸೇರಿ ಸಿದ್ಧಪಡಿಸಲಾಯಿತು. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿದ ಹಿನ್ನೆಲಯಲ್ಲಿ ರಾಜ್ಯ ಸರಕಾರವು ಎಲ್ಲ ವಿಶ್ವವಿದ್ಯಾಲಯಗಳ ಕನ್ನಡ ವಿಭಾಗಗಳಿಗೆ ಆರ್ಥಿಕ ನೆರವು ನೀಡಿತ್ತು.

ದಕ್ಷಿಣ ಭಾರತೀಯ ಜಾನಪದ ಕೋಶ ಯೋಜನಾ ಪ್ರಸ್ತಾವವನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರೊಂದಿಗೆ ಚರ್ಚಿಸಿ, ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಲಾಯಿತು. ವಿಶ್ವಕೋಶದ ರಚನೆಗೆ ದೊಡ್ಡ ಮೊತ್ತ ವ್ಯಯವಾಗುವುದರಿಂದ ವಿಶ್ವವಿದ್ಯಾಲಯವು ಯಾವ ಸೂಚನೆಯನ್ನು ನೀಡಲಿಲ್ಲ ಮಹತ್ವದ ಯೋಜನಾ ಪ್ರಸ್ತಾವವನ್ನು ತಯಾರಿಸಿ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಹೇಗಾದರೂ ಮಾಡಿ ಯೋಜನೆಯನ್ನು ಪೂರ್ಣಗೊಳಿಸಿ, ಪ್ರಕಟಗೊಳ್ಳುವಂತೆ ಮಾಡುವ ಹಂಬಲದಿಂದ ದಕ್ಷಿಣ ಭಾರತದ ಎಲ್ಲ ವಿಶ್ವವಿದ್ಯಾಲಯಗಳ ಕುಲಪತಿಗಳೊಂದಿಗೆ ಚರ್ಚಿಸಲಾಯಿತು. ನಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ಆಸರೆಯಾಗಿ ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಿ.ರಮಣಯ್ಯ ಅವರು ಭರವಸೆ ನೀಡಿದರು.

ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳೊಂದಿಗೆ ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳು ಹೇಳಿದ ಕೋಶದ ರಚನೆಯ ವಿಚಾರಗಳನ್ನು ಚರ್ಚಿಸಿ, ಎರಡು ವಿಶ್ವವಿದ್ಯಾಲಯಗಳು ಜೊತೆ ಸೇರಿ ಮಾಡುವುದೆಂದು ನಿರ್ಧಾರ ಮಾಡಲಾಯಿತು. ಈ ವಿಚಾರವನ್ನು ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳಿಗೆ ದೂರವಾಣಿ ಮೂಲಕ ತಿಳಿಸ, ಕೋಶ ರಚನೆಗೆ ಹಸಿರು ನಿಶಾನೆ ತೋರಿದರು. ಮಾನ್ಯ ಕುಲಪತಿಗಳ ಪ್ರೀತಿ, ಪ್ರೋತ್ಸಾಹಗಳಿಂದ ಯೋಜನೆಯ ಕಾರ್ಯ ಆರಂಭವಾಯಿತು. ಯೋಜನೆಗೆ ಸಂಬಂಧಿಸಿದ ಒಂಡಂಬಡಿಕೆ ಮಾಡಿಕೊಳ್ಳಲು ದಿನಾಂಕ ೫-೫-೨೦೦೯ರಂದು ದ್ರಾವಿಡ ವಿಶ್ವವಿದ್ಯಾಲಯದ ಕುಲಪತಿಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಆಹ್ವಾನಿಸಲಾಯಿತು. ಒಡಂಬಡಿಕೆ ಸಭೆಯ ಅಧ್ಯಕ್ಷತೆಯನ್ನು ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳು ವಹಿಸಿಕೊಂಡರು. ಸಭೆಯಲ್ಲಿ ಮೈಸೂರು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರಾದ ಡಾ. ಆರ್.ವಿ.ಎಸ್. ಸುಂದರಂ, ಕನ್ನಡ ವಿಶ್ವವಿದ್ಯಾಲಯದ ಹಿಂದಿನ ಕುಲಸಚಿವರಾದ ಎಸ್.ಎಸ್.ಪೂಜಾರ್ ಹಾಗೂ ನಾನು ಭಾಗವಹಿಸಿ, ಯೋಜನೆಯ ಬಗೆಗೆ ಒಡಂಬಡಿಕೆಯನ್ನು ಸಿದ್ಧಪಡಿಸಲಾಯಿತು. ಅದರಂತೆ ಕನ್ನಡ ಹಾಗೂ ಮಲಯಾಳಂ ಭಾಷೆಯ ವಿಷಯ ಸಂಗ್ರಹ, ಲೇಖಕರ ಸಂಭಾವನೆ ಇತ್ಯಾದಿಗಳನ್ನು ಕನ್ನಡ ವಿಶ್ವವಿದ್ಯಾಲಯವು, ತೆಲಗು ಹಾಗೂ ತಮಿಳು ಭಾಷೆಯ ವಿಷಯ ಸಂಗ್ರಹ, ಲೇಖನ ಸಂಭಾವನೆಯನ್ನು ದ್ರಾವಿಡ ವಿಶ್ವವಿದ್ಯಾಲಯ ವಹಿಸಿಕೊಳ್ಳಬೇಕೆಂದು ಒಡಂಬಡಿಕೆಯಾಯಿತು. ಕೋಶದ ರಚನಾಕಾರ್ಯ ಎರಡು ವರ್ಷದಲ್ಲಿ ಪೂರ್ಣಗೊಳಿಸಬೇಕೆಂದು ನಿರ್ಧರಿಸಲಾಯಿತು. ಕನ್ನಡ ವಿಶ್ವವಿದ್ಯಾಲಯದ ಮಾನ್ಯ ಕುಲತಿಗಳಾದ ಡಾ. ಎ. ಮುರಿಗೆಪ್ಪ ಅವರ ಪ್ರೀತಿಯ ಒತ್ತಾಯ, ಪ್ರೋತ್ಸಾಹಗಳಿಂದ ಕೇವಲ ಒಂದು ವರ್ಷದಲ್ಲಿ ಯೋಜನೆ ಪೂರ್ಣವಾಯಿತು.

ಯೋಜನೆಯ ರೂಪುರೇಷೆಗಳ ಮೂಲ ಮೊದಲ ಕಾರ್ಯಾಗಾರವನ್ನು ದ್ರಾವಿಡ ವಿಶ್ವವಿದ್ಯಾಲಯದಲ್ಲೇ ಮಾಡಬೇಕೆಂದು, ಅದಕ್ಕೆ ತಗಲುವ ಖರ್ಚುವೆಚ್ಚವನ್ನು ದ್ರಾವಿಡ ವಿಶ್ವವಿದ್ಯಾಲಯ ಭರಿಸುತ್ತದೆಂದು ಮಾನ್ಯ ಕುಲಪತಿಗಳು ಪ್ರೀತಿಯ ಆಹ್ವಾನವಿತ್ತರು. ಜುಲೈ ೧೪ ರಿಂದ ೧೫, ೨೦೦೯ರಂದು ಕರ್ನಾಟಕದ ಸುಮಾರು ಇಪ್ಪತ್ತೈದು ಮಂದಿ ವಿದ್ವಾಂಸರು, ತೆಲುಗಿನ ಮೂವತ್ತು ಮಂದಿ ವಿದ್ವಾಂಸರು, ತಮಿಳಿನ ಹದಿನೈದು ಮಂದಿ ವಿದ್ವಾಂಸರು ಹಾಗೂ ಮಲಯಾಳಂನ ಸುಮಾರು ಹದಿನೆಂಟು ಮಂದಿ ವಿದ್ವಾಂಸರು ದ್ರಾವಿಡ ವಿಶ್ವವಿದ್ಯಾಲಯದಲ್ಲಿ ಸೇರಿ ಎರಡು ದಿನಗಳವರೆಗೆ ಯೋಜನೆಯ ಸ್ವರೂಪ, ಲೇಖನಗಳ ಆಯ್ಕೆ, ವಿದ್ವಾಂಸರ ಪಟ್ಟಿ ಇತ್ಯಾದಿಗಳ ಬಗೆಗೆ ಚರ್ಚಿಸಿ ಸಿದ್ಧಪಡಿಸಲಾಯಿತು. ವಿಶ್ವಕೋಶದ ಎರಡನೇ ರಚನೆಯ ಕಾರ್ಯಾಗಾರವನ್ನು ೧೭-೧೮ನೇ ಆಗಸ್ಟ್ ೨೦೦೯ರಂದು ಕನ್ನಡ ವಿಶ್ವವಿದ್ಯಾಲಯವು ಕುಪ್ಪಳಿಯ ಕುವೆಂಪು ಪ್ರತಿಷ್ಠಾನದಲ್ಲಿ ನಡೆಸಲಾಯಿತು. ಕಾರ್ಯಾಗಾರದಲ್ಲಿ ಕನ್ನಡ, ತೆಲಗು, ತಮಿಳು ಹಾಗೂ ಮಲಯಾಳಂ ಲೇಖಕರು ಭಾಗವಹಿಸಿ ಯೋಜನೆಯ ಸ್ವರೂಪ ಇತ್ಯಾದಿಗಳ ಬಗೆಗೆ ಚರ್ಚಿಸಲಾಯಿತು. ಅಲ್ಲಿಂತ ನಿರಂತರವಾಗಿ ಕಾರ್ಯಗಾರಗಳನ್ನು ಏರ್ಪಡಿಸಿ, ಯೋಜನೆಯ ಕಾರ್ಯಗಳು ತ್ವರಿತಗತಿಯಲ್ಲಿ ನಡಯುವಂತೆ ಮಾಡಲಾಯಿತು. ಈ ಕಾರ್ಯಗಾರರ ಫಲಶ್ರುತಿಯಾಗಿ ಎರಡು ವರ್ಷದ ಯೋಜನೆಯು ಒಂದೇ ವರ್ಷದಲ್ಲಿ ಮುಗಿಲಯ ಸಹಕಾರಿಯಾಯಿತು.

ಬೃಹತ್ ಹಾಗೂ ಅನನ್ಯವಾದ ದಕ್ಷಿಣ ಭಾರತೀಯ ಜಾನಪದ ಕೋಶ ಯೋಜನೆಗೆ ಸರ್ವರೀತಿಯಿಂದ ಸಹಕರಿಸಿ ಬೇಗ ಪೂರ್ಣಗೊಳಿಸುವಂತೆ ಪ್ರೀತಿಯಿಂದ ಒತ್ತಾಯಿಸಿ, ಪ್ರೋತ್ಸಾಹಿಸಿದ ಮಾನ್ಯ ಕುಲಪತಿಗಳಾದ ಡಾ. ಎ.ಮುರಿಗೆಪ್ಪ ಅವರಿಗೆ, ಯೋಜನೆಗೆ ಆಡಳಿತಾತ್ಮಕ ಒಪ್ಪಿಗೆ ನೀಡಿದ ಕನ್ನಡ ವಿಶ್ವವಿದ್ಯಾಲಯದ ಕಾರ್ಯಕಾರಿ ಸಮಿತಿಯ ಸದಸ್ಯರಿಗೆ, ಅಂದಿನ ಕುಲಸಚಿವರಾದ ಎಸ್.ಎಸ್. ಪೂಜಾರ್ ಹಾಗೂ ಇಂದಿನ ಕುಲಸಚಿವರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೆ, ಪ್ರಸಾರಾಂಗದ ನಿರ್ದೇಶಕರಾದ ಡಾ. ಎ. ಸುಬ್ಬಣ್ಣ ರೈ ಅವರಿಗೆ, ಸಹಾಯಕ ನಿರ್ದೇಶಕರಾದ ಬಿ. ಸುಜ್ಞಾನಮೂರ್ತಿ ಅವರಿಗೆ, ಸಲಹಾ ಸಮಿತಿಯ ಸದಸ್ಯರುಗಳಾದ ಡಾ. ಹಿ.ಚಿ. ಬೋರಲಿಂಗಯ್ಯ, ಡಾ. ಆರ್.ವಿ.ಎಸ್. ಸುಂದರಂ, ಡಾ. ಎ. ಸುಬ್ಬಣ್ಣ ರೈ, ಡಾ. ಡಿ. ಪಾಂಡುರಂಗಬಾವು, ಡಾ. ರಾಘವನ್ ಪಯ್ಯನಾಡು, ಡಾ. ಎ. ಧನಂಜಯನ್ ಅವರುಗಳಿಗೆ, ಕೋಶ ತಯಾರಿಕೆ ಕೆಲಸಕಾರ್ಯಗಳಲ್ಲಿ ಸಹಕರಿಸಿದ ಯೋಜನಾ ಸಹಾಯಕರುಗಳಾದ ಡಾ. ಚಂದ್ರಪ್ಪ ಸೊಬಟಿ, ಡಾ. ಪಿ. ಮಣಿ, ಡಾ. ಎಸ್. ಕೊಟ್ರೇಶ್ ಅವರುಗಳಿಗೆ, ಪ್ರಸಾರಾಂಗದ ಡಾ. ಎಸ್. ಮೋಹನ್ ಅವರಿಗೆ, ಮಲಯಾಳಂನಿಂದ ಕನ್ನಡಕ್ಕೆ ಭಾಷಾಂತರ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸಹಕರಿಸಿದ ಡಾ. ಕೆ. ಕಮಲಾಕ್ಷ ಹಾಗೂ ಎನ್.ಶ್ರೀಧರ ಏತಡ್ಕ ಅವರುಗಳಿಗೆ, ಯೋಜನೆಯ ಆರಂಭದಿಂದ ಪೂರ್ಣಗೊಳ್ಳುವ ಹಂತದವರೆಗೆ ಸಹಕರಿಸಿದ ನೂರಾರು ಜನ ವಿದ್ವಾಂಸರಿಗೆ ಕೃತಜ್ಞತೆಗಳು. ಡಾ. ಅಂಬಳಿಕೆ ಹಿರಿಯಣ್ಣ ಡಾ. ಡಿ.ಕೆ. ರಾಜೇಂದ್ರ, ಕ್ಯಾತನಹಳ್ಳಿ ರಾಮಣ್ಣ, ಡಾ. ಕೃಷ್ಣಮೂರ್ತಿ ಹನೂರು, ಡಾ. ಬಸವರಾಜ ಮಲಶೆಟ್ಟಿ, ಡಾ. ಎಂ.ಎನ್. ವೆಂಕಟೇಶ್, ಡಾ. ಕೃಷ್ಣರೆಡ್ಡಿ, ಡಾ. ವಿ.ಎಲ್. ಪಾಟೀಲ್, ಡಾ. ಅಕ್ಕಮಹಾದೇವಿ, ಡಾ. ಜ್ಯೋತಿ ಶಂಕರ್, ಕುಮಾರಿ ಪೂರ್ಣಿಮಾ, ಜಿ.ಎಸ್. ಭಟ್ ಅವರುಗಳಿಗೆ, ಡಿ.ಟಿ.ಪಿ ಹಾಗೂ ಪುಟವಿನ್ಯಾಸ ಮಾಡಿದ ಶ್ರೀಮತಿ ಮಂಜುಳ ಅವರಿಗೆ, ಅಂದವಾದ ಮುಖಪುಟ ರಚಿಸಿದ ಕಲಾವಿದ ಕೆ.ಕೆ. ಮಕಾಳಿಯವರಿಗೆ, ಸಕಾಲದಲ್ಲಿ ಲೇಖನಗಳನ್ನು ಬರೆದು ಸಹಕರಿಸಿದ ಎಲ್ಲಾ ವಿದ್ವಾಂಸರುಗಳಿಗೆ, ಭಾಷಾಂತರಕಾರರಿಗೆ, ಲೇಖನ ಪರಿಶೀಲಿಸಿದ ವಿದ್ವಾಂಸರಿಗೆ, ಕರಡು ತಿ‌ದ್ದಿದ ವಿದ್ವಾಂಸರಿಗೆ ಹಾಗೂ ಛಾಯಾಚಿತ್ರ ಒದಗಿಸಿದವರಿಗೆ, ವಿಶ್ವಕೋಶದ ರಚನೆಯಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ದುಡಿದ ಎಲ್ಲಾ ಮಹನೀಯರುಗಳಿಗೆ ಕೃತಜ್ಞತೆಗಳು.

.ಚಿ. ರಮೇಶ್