ಸೋಮನ ಕುಣಿತ ದಕ್ಷಿಣ ಕರ್ನಾಟಕದ ಮಂಡ್ಯ, ತುಮಕೂರು, ಹಾಸನ, ಬೆಂಗಳೂರು ಮುಂತಾದ ಅನೇಕ ಜಿಲ್ಲೆಗಳಲ್ಲಿ ಕಂಡುಬರುವ ಧಾರ್ಮಿಕ ನೃತ್ಯ. ಸೋಮರು ಸಾಮನ್ಯವಾಗಿ ಇಬ್ಬರಿರುತ್ತಾರೆ. ವಿರಳವಾಗಿ ತುಮಕೂರು ಜಿಲ್ಲೆಗೆ ಸೇರಿದಂತೆ ಕೆಲವು ಗ್ರಾಮಗಳಲ್ಲಿ ಮೂವರು ಸೋಮರು ಇರುತ್ತಾರೆ. ಸೋಮರು ಶಕ್ತಿದೇವತೆಯ ಅಂಗರಕ್ಷಕರೆಂದೇ ಪ್ರಸಿದ್ಧಿ. ಸಾಮಾನ್ಯವಾಗಿ ಇವರು ಗ್ರಾಮದೇವತೆಗಳೊಂದಿಗೆ ಅನನ್ಯತೆಯನ್ನು ಬೆಳಸಿಕೊಂಡವರು. ಗ್ರಾಮದೇವತೆಯ ಗರ್ಭಗುಡಿಯಲ್ಲಿ ಜಯ ವಿಜಯದಂತೆ ಅಚೀಚೆ ನಿಲ್ಲಿಸಿದ ಎರಡು ವಿಗ್ರಹಗಳಿರುತ್ತವೆ. ಇವನ್ನು ಜನಪದರು ಸೋಮರೆಂದೇ ನಂಬುತ್ತಾರೆ. ಅವರ ಪ್ರಕಾರ ಸೋಮರು ಗ್ರಾಮದೇವತೆಗಳ ಭಂಡರು, ಬೆಂಗಾವಲು ವೀರರು.

ಸೋಮನ ಕುಣಿತವನ್ನು ಎಲ್ಲಾ ಸಂದರ್ಭಗಳಲ್ಲಿ ಏರ್ಪಡಿಸುವಂತಿಲ್ಲ. ಗ್ರಾಮದೇವತೆಯ ಹಬ್ಬ, ಉತ್ಸವಾದಿ ಧಾರ್ಮಿಕ ಆಚರಣೆಯಲ್ಲಿ ಮಾತ್ರ ಬಳಸಲಾಗುವುದು. ಇದನ್ನು ಎಲ್ಲರೂ ಕುಣಿಯುವಂತಿಲ್ಲ. ಇದಕ್ಕೆ ಸಾಂಪ್ರದಾಯಿಕ ಮನೆತನಗಳಿರುತ್ತವೆ. ಏಕೆಂದರೆ ದೀಕ್ಷಾಬದ್ಧರಾದವರೇ ಸೋಮನನ್ನು ಧರಿಸಬೇಕು. ಸಾಮಾನ್ಯವಾಗಿ ಗ್ರಾಮದೇವತೆಯ ಪೂಜಾರಿ ಮನೆತನದವರೇ ಸೋಮನನ್ನು ಹೊರುತ್ತಾರೆ. ತುಂಬಾ ಶ್ರದ್ಧೆ ಭಕ್ತಿಯಿಂದ ಆಚರಿಸುವ ಧಾರ್ಮಿಕ ಕುಣಿತವಾದ ಇದು ನಿರ್ದಿಷ್ಟ ದೇವತೆಗೆ ಸಂಬಂಧಪಟ್ಟಿಲ್ಲವಾದರೂ ಶಕ್ತಿದೇವತಾ ಆರಾಧನೆಯ ಒಂದು ಭಾಗವಿದು.

ಸೋಮನ ಕುಣಿತ ಮುಖವಾಡ ಧರಿಸಿ ಕುಣಿಯುವ ಕಲೆ. ಇಲ್ಲಿ ಮುಖವಾಡವೇ ಪ್ರಮುಖ ಆಕರ್ಷಣೆ. ಇದನ್ನು ಭೂತಾಳೆ, ಹಾಲಿವಾಣ ಮುಂತಾದ ಹಗುರ ವಸ್ತುವಿನಿಂದ ತಯಾರಿಸುತ್ತಾರೆ. ಬೆತ್ತವನ್ನು ಬಗ್ಗಿಸಿ ಕಮಾನು ಆಕಾರವಾಗಿ ಮುಖವಾಡದ ತಲೆಯ ಮೇಲೆ ಕಟ್ಟುತ್ತಾರೆ. ಭೂತಾಳೆ ಮರದಲ್ಲಿ ದೇವರಿರುತ್ತದೆ ಎಂಬ ನಂಬಿಕೆ ದಕ್ಷಿಣ ಕರ್ನಾಟಕದ ಜನಪದರದ್ದು. ಈ ಮುಖ ಅಗಲವಾದ ಹಣೆ, ತಿದ್ದಿದ ದೊಡ್ಡ ಹಬ್ಬು, ವಿಶಾಲವಾದ ಕಣ್ಣು ಕಿವಿಗಳು, ದೊಡ್ಡ ಮೂಗು, ಕೋರೆ ಮೀಸೆ, ಕೋರೆ ಹಲ್ಲುಗಳನ್ನು ಹೊಂದಿರುತ್ತದೆ. ಇದಕ್ಕೆ ಬಣ್ಣ ಹಾಕುವದೇ ಒಂದು ಕಲೆ. ಕೆಂಪು, ಹಳದಿ, ಕಪ್ಪು, ನೀಲಿಬಣ್ಣಗಳಿಂದ ಇದನ್ನು ಸಿದ್ಧಪಡಿಸುತ್ತಾರೆ. ಇದು ಮನುಷ್ಯನ ತಲೆಯ ಮೂರು ಅಥವಾ ನಾಲ್ಕರಷ್ಟು ದೊಡ್ಡದಿರುತ್ತದೆ. ಮುಖವಾಡದ ಹಿಂಬದಿಗೆ ಪ್ರಭಾವಳಿಯಂತೆ, ಬಣ್ಣ ಬಣ್ಣದ ಬಟ್ಟೆಯನ್ನು ಕಟ್ಟುತ್ತಾರೆ. ಇದು ನಾಲ್ಕೈದು ಎಳೆಯಾಕಾರದಲ್ಲಿದ್ದು ಮುಖವಾಡದ ಹಿಂಬದಿಗೂ ವಿಶೇಷ ಮೆರಗನ್ನು ತಂದುಕೊಡುತ್ತದೆ. ಇದಕ್ಕೆ ಹರಕೆ ಬಂದ ಸೀರೆಗಳನ್ನು ಉದ್ದಕ್ಕೂ ಇಳಿಬಿಟ್ಟಿರುತ್ತಾರೆ. ಹೀಗೆ ಹಾಕಿದ ಸೀರೆಗಳು ಮುಖವಾಡದ ಎರಡೂ ಬದಿಯನ್ನು ವ್ಯಾಪಿಸುವುದರಿಂದ ಮುಖವಾಡದ ಭೀಕರತೆಯ ಜೊತೆಗಿವು ಪ್ರತಿಸ್ಪರ್ಧಿಸುವಂತೆ ಕಾಣುತ್ತದೆ. ಸೋಮನನ್ನು ಹೊರುವವನು, ಮುಖವಾಡದ ಸೊಳ್ಳೆಗಳ ಮೂಲಕ ನೋಡುವ ರೀತಿಯಲ್ಲಿ ಮುಖವಾಡವನ್ನು ಸಿದ್ಧಪಡಿಸಲಾಗಿರುತ್ತದೆ. ಸೋಮನನ್ನು ಹೊರುವವನು ತುಂಬಾ ಮಡಿಯ ಕಟ್ಟುನಿಟ್ಟಿನ ವ್ಯಕ್ತಿಯೇ ಆಗಿರಬೇಕು. ಈತ ದೇವರ ಸೀರೆಯಿಂದ ಕಚ್ಚೆ ಪಂಚೆ ಹಾಕಿ, ಕತ್ತಿಗೆ ದೇವರ ತಾಳಿಯನ್ನು ಹಾಕಿರುತ್ತಾನೆ. ಮೈಯ ಮೇಲುಬಾಗಕ್ಕೂ ಸೀರೆಯದ್ದೇ ವಸ್ತ್ರವನ್ನು ಧರಿಸುತ್ತಾನೆ. ವಲ್ಲಿಯ ರೀತಿಯಲ್ಲಿ ಎರಡೂ ಕಡೆಗೂ ಇಳಿಬಿಟ್ಟಿರುತ್ತಾನೆ. ಕಾಲಿಗೆ ಗೆಜ್ಜೆ, ಕೈಗೆ ಕೈಕಡಗ, ಸೊಂಟಕ್ಕೆ ದಪ್ಪ ಗೆಜ್ಜೆ ಧರಿಸಿರುತ್ತಾನೆ. ಮೈಗೆ ಗಂಧ, ವಿಭೂತಿ ಕುಂಕುಮ ಧರಿಸಿರುತ್ತಾನೆ.

ಕೆಂಪು ಬಣ್ಣದ ಸೋಮನನ್ನು ಕೆಂಪುರಾಯ ಅಥವಾ ಭೂತರಾಯ ಎಂದೂ ಹಳದಿ ಬಣ್ಣದ ಸೊಮನನ್ನು ಕೆಂಚರಾಯನೆಂದು ಕರೆಯುವ ಜನಪದರು ಈರಣ್ಣ, ಪಾಪಣ್ಣ ( = ದೂತರಾಯ) ಎಂಬ ಪರ್ಯಾಯ ಹೆಸರಿನಿಂದಲೂ ಕರೆಯುತ್ತಾರೆ. ಕೆಂಪರಾಯ (=ಈರಣ್ಣ) ಸಾತ್ವಿಕತೆಯ ಸಂಕೇತವಾದರೂ ಯುದ್ದಾದಿ ಕಲೆಯಲ್ಲಿ ಪರಿಣಿತಿ ಹೊಂದಿರುತ್ತಾನೆ. ಕೆಂಚರಾಯ (= ಪಾಪಣ್ಣ) ರೌದ್ರಾವತಾರಿ ತಾಮಸ ಗುಣದ ಸಂಕೇತವಾಗಿದ್ದಾನೆ. ಈ ಇಬ್ಬರಲ್ಲದೆ ‘ಸಾಯುವ ಸೋಮ’ನ ಕಲ್ಪನೆಯೂ ಇದೆ. ಇವನನ್ನು ಕರಿಸೋಮ ಎನ್ನುತ್ತಾರೆ. ಮೂರು ದಿನ ಆಚರಣೆಗೊಳ್ಳುವ ಸೋಮನಾಚರಣೆಯಲ್ಲಿ ಇವನು ಚಿನ್ನದ ಮೀಸೆಯಿಂದ ವಿಭಿನ್ನವಾಗಿ ಕಾಣಸಿಕೊಳ್ಳುತ್ತಾನೆ. ಕೊನೆಯ ದಿನ ದೇವಾಲಯವನ್ನು ಪ್ರವೇಶಿಸುವ ಕರಿಸೋಮ ಈಗಾಗಲೇ ಬರೆದಿರುವ ಮೂರು ಮಂಡಲಗಳನ್ನು ಕುಣಿಯುತ್ತಾ ದಾಟಿ, ಮೂರನೇ ಮಂಡಲಕ್ಕೆ ಬಂದಾಗ ಪ್ರಜ್ಞೆ ತಪ್ಪುತ್ತಾನೆ. ಇದನ್ನು ಸತ್ತನೆಂದು ಭಾವಿಸಲಾಗುತ್ತದೆ. ಆಗ ಗಂಗೆಯ ಮಕ್ಕಳಾದ ಬೆಸ್ತರು, ಗಂಗೆಸ್ನಾನ ಮಾಡಿದ ನೀರನ್ನು ತಂದು ಪ್ರೋಕ್ಷಣೆ ಮಾಡುತ್ತಾರೆ. ಆಗ ಹರಕೆ ತೊಟ್ಟ ಜನರು ಕರಿಸೋಮನಿಗೆ ಹರಕೆ ಒಪ್ಪಿಸಿ, ನೈವೇದ್ಯ ಸಲ್ಲಿಸಿ, ಪ್ರಸಾದ ಸ್ವೀಕರಿಸುತ್ತಾರೆ.

70_70A_DBJK-KUH

ಹೀಗೆ ಸಿಂಗಾರಗೊಂಡ ಸೋಮರು ಮೆರವಣಿಗೆಯ ಜೊತೆ ಕುಣಿಯುತ್ತಾ ಸಾಗುತ್ತಾರೆ. ಅರೆ, ದೋಣು, ತಮಟೆ, ನಗಾರಿ ವಾದ್ಯಗಳು ಹಿನ್ನೆಲೆಯಲ್ಲಿ ಶಬ್ದ ಮಾಡುತ್ತಿರುವಂತೆ, ಸೋಮಗಳು ನಿಧಾನವಾಗಿ ಅನಂತರ ವಾದ್ಯದ ಏರುವಿಕೆಯ ಜೊತೆಗೆ ಕುಣಿತವನ್ನು ತೀವ್ರಗೊಳಿಸುತ್ತವೆ. ಕುಣಿತ ತೀವ್ರಗೊಂಡಂತೆ ದೇವರು ಬಂದಂತೆ ಆವೇಶಭರಿತವಾಗುವ ಕಲಾವಿದ ಮತ್ತಷ್ಟು ದೊಡ್ಡ ಹೆಜ್ಜೆಗಳನ್ನು ಹಾಕುತ್ತಾ, ಭೂಮಿಯನ್ನು ಪಾದಗಳಿಂದ ಕಟ್ಟುತ್ತಾ, ಘಟ್ಟಿಸುತ್ತಾ ಹೋಗುತ್ತಾನೆ. ಸೋಮನ ಜೊತೆಯಲ್ಲಿರುವ ಪೂಜಾರಿ ಚಾಟಿ ತೆಗೆದುಕೊಂಡು ತನ್ನ ಬೆತ್ತಲ ಮೈ ಮೇಲೆ ಹೊಡೆದುಕೊಳ್ಳುತ್ತಾನೆ. ಇಲ್ಲಿ ಶಾಸ್ತ್ರೀಯ ಗತ್ತಿಲ್ಲ. ಈ ಧಾರ್ಮಿಕ ವಿಧಿಗೆ ಶಕ್ತಿದೇವತೆಯ ಸಂಬಂಧವಿರುವುದರಿಂದ ಕುಣಿಯುತ್ತಾ ಕುಣಿಯುತ್ತಾ ರೌದ್ರರಸವನ್ನು ತಲುಪುತ್ತದೆ.

ಒಟ್ಟಿನಲ್ಲಿ ಸೋಮನ ಕುಣಿತ ಮುಖವಾಡದ ಅಪರೂಪದ ಕಲೆ. ವಿಶಿಷ್ಟವಾದ ಗಂಡುಕಲೆ. ಹಾಗೆಯೇ ಉಡುಗೆ-ತೊಡುಗೆಗಳು ಜನಪದದ ಸಮನ್ವಯ ಸಂಸ್ಕೃತಿಯನ್ನು ಸೂಚಿಸುತ್ತದೆ. ಏಕಕಾಲದಲ್ಲಿ ವೈಷ್ಣವ ಸಂಪ್ರದಾಯದ ನಾಮ, ಶೈವ ಸಂಪ್ರದಾಯದ ವಿಭೂತಿ ಎರಡನ್ನು ನಾವು ಕಾಣಬಹುದು.

ಎಚ್‌. ಆರ್. ಸಿ.

 

ಸೋಲಿಗರು ಕರ್ನಾಟಕದ ಪ್ರಮುಖ ಬುಡಕಟ್ಟುಗಳ ಪೈಕಿ ಒಂದು. ಚಾಮರಾಜನಗರ ಜಿಲ್ಲೆ ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟ. ಕೊಳ್ಳೆಗಾಲ ತಾಲ್ಲೂಕಿನ ಮಹದೇಶ್ವರಬೆಟ್ಟ ಮೊದಲಾದೆಡೆ ಸೋಲಿಗರು ಕಂಡುಬರುತ್ತಾರೆ. ಸೋಲಿಗ, ಸೋಲಗ, ಶೋಲಿಗ, ಶೋಲಗ, ಸೈಲಿಗ ಮುಂತಾದ ಹೆಸರುಗಳಿಂದ ಗುರುತಿಸಲಾಗಿರುವ ಸೋಲಿಗರ ಹೆಸರಿನ ಮತ್ತು ಹುಟ್ಟಿನ ಮೂಲಗಳು ಪೌರಾಣಿಕ ಮತ್ತು ದಂತಕಥೆಗಳ ಗರ್ಭದಲ್ಲಿ ಅಡಗಿಹೋಗಿವೆ. ಇವರ ಇತಿಹಾಸವನ್ನು ಪುನಾರಚಿಸುವಲ್ಲಿ ಕೇವಲ ಊಹೆಗಳನ್ನೇ ಆಧರಿಸಬೇಕಾಗಿದೆ. ಇವರ ತಾಯ್ನುಡಿ ಸೋಲಿಗ ಕನ್ನಡ.

ಸೋಲಿಗರಲ್ಲಿ ಕುಲವನ್ನು ಬಿಟ್ಟು ಯಾರು ಬದುಕಲಾರರು ಕುಟುಂಬಕ್ಕೆ ಅಂಜದ ಸೋಲಿಗ ಕುಲಕ್ಕೆ ಹೆದರುತ್ತಾನೆ. ಬಿಳಿಗಿರಿರಂಗನಬೆಟ್ಟ ಸಾಲುಗಳಲ್ಲಿರುವ ಸೋಲಿಗರಲ್ಲಿ ಐದು ಕುಲಗಳಿದ್ದರೆ, ಇತರೆಡೆ ಏಳುಕುಲಗಳಿವೆ. ಕಾಳಿಕಾಂಬ ಕಾಲೋನಿ, ಕುಂಟುಗುಡಿ, ಗೋಡೆ ಮುಡುವು, ಪುಣಜೂರು, ಬಾಣವಾಡಿ, ಬೂದಿಪಡಗ, ಬೆಲ್ಲತ್ತ, ಭದ್ರೇಗೌಡನ ಪೋಡು, ಭೂತಣ್ಣಿಪೋಡು, ಮಾರಿಗುಡಿಪೋಡು, ಯತ್ತೇಗೌಡದೊಡ್ಡಿ, ಶನಿವಾರಮಂಟಿ, ಶ್ರೀನಿವಾಸಪುರಿಕಾಲೋನಿ, ಹಿತ್ತಲ ಗುಡ್ಡೆ ಮುಂತಾದೆಡೆ ಐದು ಕುಲದ ಸೋಲಿಗರಿದ್ದಾರೆ. ಚಾಮರಾಜನಗರದ ಮುನೇಶ್ವರ ಕಾಲೋನಿ ಮತ್ತು ಕೊಳ್ಳೇಗಾಲದ ಸಾಕಷ್ಟು ಪೋಡುಗಳಲ್ಲಿ ಏಳು ಕುಲದ ಸೋಲಿಗರಿದ್ದಾರೆ. ಅವರಲ್ಲಿರುವ ಕುಲಗಳಿವು :

i) ತೆನೆಯರ ಕುಲ (ತೆನೇರು ಕುಲ), ii) ಹೊಂಗೆಲರ ಕುಲ (ಸಳುಕರ/ಚಳುಕರ ಕುಲ), iii) ಸೂಯರ ಕುಲ (ಸೂರರ ಕುಲ), iv) ಬೆಲ್ಲರ ಕುಲ (ಬೆಳ್ಳರ ಕುಲ), v) ಹಾಲರ ಕುಲ (ಆಲರ ಕುಲ), vi) ಜೇನರ ಕುಲ, vii) ಕುಂಬುಳ ಕುಲ

ಇವರಲ್ಲಿ ಕುಲವಿಂಗಡಣೆಯೇ ಅಲ್ಲದೆ ಒಳಗುಂಪುಗಳೂ ಇವೆ. ಕಾಡುಸೋಲಿಗ, ಮರಸೋಲಿಗ, ಬುರುಡೆಸೋಲಿಗ, ದೇವರ ಸೋಲಿಗ, ಊರಾಳಿ ಸೋಲಿಗ, ಉದುಕತ್ತಿ ಸೋಲಿಗ ಎಂಬ ಪಂಗಡಗಳಿವೆ.

ಹಿಂದೆ ಇವರಲ್ಲಿ ಅಪಹರಣ ವಿವಾಹ, ಪಲಾಯನ ವಿವಾಹ, ಸೇವಾ ವಿವಾಹ ಪದ್ಧತಿ ಇತ್ತು. ಈಗ ಇವು ಚಾಲ್ತಿಯಲ್ಲಿಲ್ಲ. ಒಪ್ಪಿತ ವಿವಾಹ ಪದ್ಧತಿಯೇ ಪ್ರಧಾನವಾಗಿದೆ. ಬಿಳಿಗಿರಿರಂಗನಬೆಟ್ಟದ ಸೋಲಿಗರಿಗೆ ಬಿಳಿಗಿರಿರಂಗನಾಥಸ್ವಾಮಿಯೇ ಆರಾಧ್ಯದೈವ. ಸೋಲಿಗರ ಬೊಮ್ಮಗೌಡನ ಮಗಳು ಚೆಲುವೆ ಕುಸುಮಾಲೆಯನ್ನು ರಂಗನಾಥಸ್ವಾಮಿ ಮದುವೆಯಾಗಿದ್ದರಿಂದ ರಂಗನಾಥಸ್ವಾಮಿ ತಮ್ಮ ಭಾವನಾಗಬೇಕು ಎನ್ನುತ್ತಾರೆ. ಜಡೆಸ್ವಾಮಿ, ಮಾದೇಶ್ವರ, ಕಾರಯ್ಯ, ಬಿಲ್ಲಯ್ಯ ಮೊದಲಾದವು ಪೂಜ್ಯದೈವಳು, ಬೇಟೆ, ಬೇಸಾಯ, ಕಾಡಿನ ಉತ್ಪನ್ನಗಳಾದ ಕಾಯಿ ಹಣ್ಣುಗಳನ್ನು, ಗಿಡಮೂಲಿಕೆಗಳನ್ನು ಜೇನುತುಪ್ಪವನ್ನು ಸಂಗ್ರಹಿಸಿ ಮಾರುವುದು ಇವರ ಮುಖ್ಯ ವೃತ್ತಿಗಳು.

ಸೋಲಿಗರು ಆನೆಗಳನ್ನು ಹಿಡಿದು ಪಳಗಿಸುವುದರಲ್ಲಿ ನಿಷ್ಣಾತರು. ಅರಣ್ಯ ಇಲಾಖೆಯಲ್ಲಿ ಕೆಲವು ಸೋಲಿಗರು ಮಾವುತರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಬಿದಿರು ಬೆತ್ತದಿಂದ ಮೊರ, ಕುಕ್ಕೆ, ಚಂದ್ರಿಕೆ, ಬುಟ್ಟಿ ಮುಂತಾದವನ್ನು ಮಾಡಲು ಕಲಿತಿದ್ದಾರೆ. ಇವರ ಆರ್ಥಿಕ ಬದುಕಿನಲ್ಲಿ ಗಮನಾರ್ಹ ಬದಲಾವಣೆಗಳಾಗಿವೆ. ಪರಂಪರೆಯಿಂದ ಬಂದ ವ್ಯವಸಾಯ ಪದ್ಧತಿಯನ್ನು ಕೈಬಿಟ್ಟು ಎತ್ತುಗಳ ಸಹಾಯದಿಂದ ವ್ಯವಸಾಯ ಮಾಡುತ್ತಿದ್ದಾರೆ. ಕೆಲವು ವ್ಯವಸಾಯಕ್ಕೆ ಆಧುನಿಕ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಸರ್ಕಾರ ಕಟ್ಟಿಸಿಕೊಟ್ಟಿರುವ ಜನತಾ ಮನೆಗಳಲ್ಲಿ ವಾಸಿಸುತ್ತಿದ್ದಾರೆ. ಹಸು, ಆಡು, ಕುರಿ, ಕೋಳಿ ಸಾಕಣೆ ಮಾಡುವುದನ್ನು ಕಲಿತಿದ್ದಾರ. ರೇಷ್ಮೆ ಕೃಷಿಯಲ್ಲೂ ಕೆಲವರು ತೊಡಗಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬ್ಯಾಂಕುಗಳಿಂದ ಸಾಲಪಡೆದು ಬೇಸಾಯದ ಜೊತೆಗೆ ಹೈನುಗಾರಿಕೆ ಮಾಡುತ್ತಿದ್ದಾರೆ.

ರಾಗಿಹಬ್ಬ, ರೊಟ್ಟಿಹಬ್ಬ ಮತ್ತು ಕ್ಯಾತೆದೇವರ ಹಬ್ಬಗಳನ್ನು ಸಂಭ್ರಮ ಸಡಗರದಿಂದ ಆಚರಿಸುತ್ತಾರೆ. ಇವರ ಧಾರ್ಮಿಕ ವಿಧಿಗಳಲ್ಲಿ ಸೋಲಿಗರ ಪೂಜಾರಿಯಾದ ತಮ್ಮಡಿಗೆ ಪ್ರಾಶಸ್ತ್ಯ.

ಹಿಂದೆ ಇವರಲ್ಲಿ ವಿಧವಾ ವಿವಾಹ ಪದ್ಧತಿ ಇತ್ತು. ವಿಧವೆ ಮದುವೆಯಾಗುವ ಸಂಧರ್ಭದಲ್ಲಿ ಪೋಡಿನ ಹಿರಿಯರ ಎದುರಿನಲ್ಲಿ ಕಡ್ಡಿ ಮುರಿದು, ಆ ತುಂಡುಗಳನ್ನು ಗಂಡನ ಸಂಬಂಧಿಗಳಿಗೆ ತಾಳಿಯೊಡನೆ ಒಪ್ಪಿಸಿ ಬಿಡುತ್ತಾಳೆ. ಅವಳನ್ನು ಮದುವೆಯಾಗುವ ಪುರುಷ, ಅವಳ ಮುಂಚಿನ ಮಕ್ಕಳನ್ನು ಸಹ ಪ್ರೀತಿಯಿಂದ ಸಾಕಿ ಸಲಹುತ್ತಾನೆ. ಇತ್ತೀಚಿನ ದಿನಗಳಲ್ಲಿ ವಿಧವಾ ವಿವಾಹ ಕಡಿಮೆಯಾಗಿದೆ.

ಸೋಲಿಗರ ವ್ಯಕ್ತಿನಾಮಗಳು ವಿಶಿಷ್ಟವಾಗಿವೆ. ಉದಾಹರಣೆಗೆ ಕೇತೇಗೌಡ, ಸಂದೇಗೌಡ, ಬೇದೇಗೌಡ, ಕೊಲ್ಲೇಗೌಡ, ಮಾದೇಗೌಡ, ಮೊದಲಾದವು ಪುರುಷ ವ್ಯಕ್ತಿನಾಮಗಳಾದರೆ, ದೈತಮ್ಮ, ಪಂದಮ್ಮ, ಬೊಮ್ಮಮ್ಮ, ಮಸಣಮ್ಮ, ಹಲಗಮ್ಮ, ರಂಗಮ್ಮ ಮೊದಲಾದವು ಸ್ತ್ರೀ ವ್ಯಕ್ತಿನಾಮಗಳು. ಸೋಲಿಗರಲ್ಲಿ ಅಪಾರ ಜನಪದ ಸಾಹಿತ್ಯವಿದೆ. ಬೈಗುಳಗಳ ಖನಿಯೂ ಉಂಟು. ವಿವೇಕಾನಂದ ಗಿರಿಜನಕಲ್ಯಾಣ ಕೇಂದ್ರ ಸೋಲಿಗರ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಡಾ. ಎಚ್‌. ಸುದರ್ಶನ್‌ ಅವರು ಈ ಕೇಂದ್ರದ ನೇತಾರರು.

ಅರ್. ಆರ್.

ಹಂತಿ ಪದ ಉತ್ತರ ಕರ್ನಾಟಕ ಪ್ರದೇಶದಲ್ಲಿ ಸುಗ್ಗಿಯ ಕಣದಲ್ಲಿ ಹಂತಿ ಕಟ್ಟಿದಾಗ ಹೇಳುವ ಹಾಡುಗಳು. ಈ ಹಾಡುಗಳು ಹಂತಿ ಹೊಡೆಯುವಾಗಷ್ಟೆ ಅಲ್ಲ ಹಂತಿ ಮುಗಿದು ರಾಶಿಯ ಕಾಳು ಮನೆಗೆ ತಲುಪುವವರೆಗೆ ರೈತ ಗುಣಗುಣಿಸುತ್ತಾನೆ. ಈ ಹಾಡುಗಾರಿಕೆಗೆ ಒಳಗಾಗದ ವಸ್ತು ವಿಷಯಗಳೇ ಇಲ್ಲವೆನ್ನುವಷ್ಟು ಇದು ವ್ಯಾಪಕತ್ವವುಳ್ಳದ್ದಾಗಿದೆ.

ಹಂತಿ ಎಂದರೆ ಪಂಕ್ತಿ, ಸಾಲು, ಸರತಿ ಎಂಬ ನಾನಾ ಅರ್ಥಗಳಿವೆ. ದನಗಳನ್ನು ಕಣದ ಮಧ್ಯದಲ್ಲಿರುವ ಮೇಟಿಯ ಬದಿಯಿಂದ ಸಾಲಾಗಿ ನಿಲ್ಲಿಸಿ ಮೇಟಿಗೆ ಕಟ್ಟಿದ ಹಗ್ಗದಿಂದ ಅವುಗಳನ್ನು ಒಂದರಿಂದ ಮತ್ತೊಂದರ ಕೊರಳಿಗೆ ತಳಕುಹಾಕಿ ಕಟ್ಟಿದ ರೀತಿಯೇ ಪಂಕ್ತಿ ಎನಿಸಿಕೊಳ್ಳುತ್ತದೆ. ಹೀಗೆ ಕಟ್ಟುವುದನ್ನು ‘ದಾವಣಿ ಕಟ್ಟುವುದೆಂದು’ ಹೇಳುವುದುಂಟು. ಮೇಟಿಯ ಸುತ್ತ ಸಾಲಾಗಿ ಕಟ್ಟಿದ ದನಗಳನ್ನು ತಿರುಗಿಸಿದಾಗ ದನಗಳ ಕಾಲಿಗೆ ಸಿಕ್ಕ ತೆನೆ, ಹುಲ್ಲು ಯಾವುದಾದರೂ ಸರಿ ಕಾಳು ಬಿಚ್ಚುತ್ತದೆ. ಹೀಗೆ ದನಗಳಿಂದ ಕಣದಲ್ಲಿ ಕಾಳನ್ನು ಬೇರ್ಪಡಿಸಲು ವ್ಯವಸ್ಥಿತವಾಗಿ ಕಟ್ಟಿ ತುಳಿಸುವ ಈ ಕ್ರಮವನ್ನು ಹಂತಿ ಎಂದು ಕರೆಯುತ್ತಾರೆ. ಆ ನುರಿತ ತುಳಿತವನ್ನು ಕಾಲಾಡಿಸುತ್ತಾ ದನಗಳ ಪಂಕ್ತಿಯ ಹಿಂದೆ ತಿರುಗುವವನೇ ಹಂತಿ ಹೊಡೆಯುವವ; ಆತನು ಹಾಡುವ ಹಾಡೆ ಹಂತಿ ಪದ.

ಹಂತಿಯನ್ನು ಕಟ್ಟಲು ಇಂತಿಷ್ಟೇ ದನ ಬೇಕೆಂದನೂ ಇಲ್ಲ. ಅದು ರಾಶಿಯ ಪ್ರಮಾಣವನ್ನು ಅವಲಂಬಿಸಿರುತ್ತದೆ. ಬಡ ರೈತನ ಒಕ್ಕಲು ಸಣ್ಣದಾಗಿದ್ದರೆ ತನ್ನ ಎರಡು ಎತ್ತಿನಿಂದಲೇ ಹಂತಿಯ ಕೆಲಸ ಪೂರೈಸಬಹುದು. ಒಕ್ಕಲು ದೊಡ್ಡದಾದಲ್ಲಿ ಮೇಟಿಯ ಸುತ್ತ ಹದಿನಾರು ಎತ್ತಿನಂತೆ ಎರಡು ಪಂಕ್ತಿಗಳನ್ನು ಕಟ್ಟಬಹುದು. ಎತ್ತಿನ ಗುಣಧರ್ಮವನ್ನು ಅನುಸರಿಸಿ ಅವುಗಳನ್ನು ಒಂದು ಕ್ರಮಕ್ಕೆ ಅನುಸರಿಸಿ ಹಂತಿಗೆ ಕಟ್ಟುವುದುಂಟು. ಹಂತಿಯ ಒಂದು ಹಾಡಿನಲ್ಲಿ

            ಹಂಡ ಹವಳನ ಕಟ್ಟು ಗುಂಡ ಗೂಳ್ಯಾನ ಕಟ್ಟು
ಮಾಲಿಂಗನ ಕಟ್ಟು ಮೇಟ್ಯಾಗ
| ನಮ್ಮೆತ್ತ
ಕಾಡಿದರೆ ಕಟ್ಟೊಕಡಿಸುತ್ತ

ಹೀಗೆ ರೈತ ತನ್ನ ಎತ್ತುಗಳಿಗೆ ಗೌರವಯುತವಾಗಿ ಗೂಳ್ಯಾ, ಹವಳ, ಮಾಲಿಂಗ ಇತ್ಯಾದಿಯಾಗಿ ಒಂದೊಂದು ಹೆಸರು ಕೊಟ್ಟು ಗುರುತಿಸಿ ಕರೆಯುತ್ತಾ ಕ್ರಮವರಿತ ರೀತಿಯಲ್ಲಿ ವಯಸ್ಸಾದ ಎತ್ತುಗಳನ್ನು ಮೇಟಿಗೆ ಹಾಗೂ ಹರೆಯದ ಹೋರಿಯನ್ನು ಹಂತಿಗೆ ಕೊನೆಗೆ ಕಟ್ಟಿ ಹಂತಿಯನ್ನು ಸುಗಮ ಮಾರ್ಗದಲ್ಲಿ ನಡೆಸುತ್ತಾನೆ. ಈ ಹಂತಿಗೆ ಎತ್ತು ಮತ್ತು ಆಕಳಗಳು ಮಾತ್ರ ಅರ್ಹವಾದವುಗಳು. ಎಮ್ಮೆ, ಕೋಣಗಳಿಗೆ ಅವಕಾಶವಿಲ್ಲ. ಪ್ರಾಯಶಃ ಅವು ಕ್ರಮಬದ್ಧವಾಗಿ ಹಂತಿ ತಿರುಗಲಾರವೆಂಬುದಕ್ಕೆ ಹಂತಿಯಿಂದ ಹೊರಗಿಟ್ಟಿರಬಹುದು.

ಸಾಮಾನ್ಯವಾಗಿ ಹಂತಿಯ ತುಳಿಸುವ ಕಾರ್ಯ ಬೆಳಗಿನ ತನಕವೂ ನಡೆಯುವಂತಹದ್ದು. ಆ ಸಂದರ್ಭದಲ್ಲಿ ರೈತ ತನ್ನ ಹಾಡಿನ ಭಂಡಾರವನ್ನೇ ಬಿಚ್ಚಿ ಹಾಡಿ ಶ್ರಮ ಮರೆಯುವುದುಂಟು. ಈ ಹಾಡಿನ ಏರು ಇಳಿವಿನ ವೈಖರಿಗಳು ವಿಶಿಷ್ಟವಾದವು. ನಿಧಾನವಾಗಿ ಸಾಗುವ ಧ್ವನಿ ಆಲಾಪಕ್ಕೆ ಜೋಲಿ ಹಿಡಿಯುವಲ್ಲಿ ‘ಹುಲ್‌ ಹುಲ್ಲಿಗೊ’, ‘ಹೋಲೆನ್ನ ಹೋಲೋ’ ಎಂಬ ಪಲ್ಲವಿಗಳು ಸಹಾಯಕ್ಕೆ ಬರುತ್ತವೆ. ಈ ಪಲ್ಲವಿಯ ಪದಗಳ ಅರ್ಥವು ಸಹ ‘ರಾಶಿ’ ಹುಲಾಸಾಗಲಿ, ಸಮೃದ್ಧವಾಗಲಿ, ಮನೆತುಂಬ ಕಾಳು ಬರಲಿ ಎಂಬ ಆಶಯವನ್ನೇ ವ್ಯಕ್ತಪಡಿಸುತ್ತವೆ. ಇಲ್ಲಿ ‘ಹುಲ್ಲಿಗೆ’ ಎಂಬುದು ಸಸ್ಯದೇವತೆಯ ಸಂಕೇತವಾಗಿರಬಹುದು. ಒಟ್ಟಿನಲ್ಲಿ ಹಂತಿ ಹಾಡುಗಳು – ಅವುಗಳ ಪಲ್ಲವಿ ಹಾಗೂ ಹಾಡಿನ ವಿಶಿಷ್ಟವಾದ ಗತ್ತುಗಳಿಂದಲೇ ತಮ್ಮ ವೈಶಿಷ್ಟ್ಯವನ್ನು ಕಾಯ್ದುಕೊಂಡಿವೆ.

ಹಂತಿ ಪದಗಳಲ್ಲಿ ಸಾಮಾನ್ಯವಾಗಿ ಭೂತಾಯಿ, ಬಸವಣ್ಣ, ದೇವಾನುದೇವತೆಗಳು, ಶರಣರು, ಐತಿಹಾಸಿಕ – ಪೌರಾಣಿಕ ಪುರುಷರು, ರಾಕ್ಷಸ-ಭೂತ, ಆಧ್ಯಾತ್ಮ, ಪ್ರೇಮ-ಪ್ರಣಯದ ಹಾಸ್ಯ ಇತ್ಯಾದಿ ವಸ್ತು ವಿಷಯವನ್ನು ಕುರಿತ ಹಾಡುಗಳನ್ನು ಹಾಡುವುದುಂಟು. ಈ ಹಾಡುಗಳನ್ನು ತಾನೊಬ್ಬನೇ ಲೀಲಾಜಾಲವಾಗಿ ಹಾಡಿಕೊಳ್ಳಬಹುದು ಇಲ್ಲವೆ ಎರಡು ಗುಂಪುಗಳಾಗಿ ವಾದ-ವಿವಾದ (ಸವಾಲ್‌-ಜವಾಬ್‌) ರೂಪದಲ್ಲಿ ಅಥವಾ ಹಿಮ್ಮೇಳ-ಮುಮ್ಮೇಳವಾಗಿ ಹಾಡಬಹುದು. ಒಟ್ಟಾರೆ ಈ ಹಾಡುಗಳಲ್ಲಿ ಬಿಡಿ ತ್ರಿಪದಿ ಗೀತೆಗಳೇ ಪ್ರಾಧಾನ್ಯವಾಗಿರುತ್ತವೆ (ಕೆಲವೊಮ್ಮೆ ದ್ವಿಪತಿ, ಚೌಪದಿಯಂಥ ರೂಪಗಳು ಬಳಕೆಯಾಗುವುದುಂಟು).

            ಹಂತಿಯ ಹೊಡೆಬೇಕೆ ಸಂತಸಪಡಬೇಕ
ಹುಲಿಗೆಂಬ ಸೆಬುದ ನುಡಿಬೇಕ
| ನಂಬಸವ
ಪಾದಕ್ಕ ಶರಣು ಮಾಡಬೇಕ
ಪಾದಕ್ಕ ಶರಣು ಮಾಡಬೇಕ

ಎಂಬ ಹಾಡಿನಲ್ಲಿ ಹಂತಿ ಹಾಡಿನ ಉದ್ದೇಶವನ್ನೇ ಹೇಳಿದೆ. ಹಂತಿ ಹಾಡುಗಾರನಿಗೆ ಸಂಪೂರ್ಣ ಸ್ವಾತಂತ್ರ್ಯವುಂಟು. ಆತ ತನ್ನ ಫಸಲಿಗೆ ವರ್ಷದುದ್ದಕ್ಕೂ ಪ್ರತ್ಯಕ್ಷ ಇಲ್ಲವೆ ಪರೋಕ್ಷವಾಗಿ ಸಹಾಯ ಮಾಡಿದ ಎಲ್ಲ ಶಕ್ತಿಗಳನ್ನು ಮನಸಾರೆ ಕೊಂಡಾಡುತ್ತಾನೆ. ಆತನ ಪ್ರಾರ್ಥನೆಗೆ ಎಲ್ಲ ದೇವರು-ದಿಂಡಿರುಗಳು ಒಳಗಾಗುತ್ತಾವೆ. ಕಷ್ಟ ಜೀವಿಯಾದ ರೈತನ ಕಣ್ಣಿಗೆ ಕಂಡದ್ದೆಲ್ಲವು ದೈವಸ್ವರೂಪವಾಗಿವೆ. ತಾನು ಒಕ್ಕಲುತನಕ್ಕೆ ಬಳಸುವ ಕುಂಟೆ, ಕೂರಿಗೆ, ಚಕ್ಕಡಿ, ಸೆಳ್ಳೂ ಹೀಗೆ ಎಲ್ಲವು ದೇವರ ಸಮಾನ. ಅಂತೆಯೇ ಕಣದಲ್ಲಿ ಅವೆಲ್ಲವುಗಳ ಪೂಜೆ ನೆರವೇರುತ್ತದೆ. ಆತನಿಗೆ ಎತ್ತುಗಳು ಸಾಕ್ಷಾತ್‌ ಶಿವನ ವಾಹನ ನಂದಿಯಾಗಿ ಕಂಡಿವೆ. ಹೀಗಾಗಿ ಬಸವಣ್ಣ, ಆತನಿಗೆ ಪಂಚಪ್ರಾಣ, ಕಾಮಧೇನು, ಕಲ್ಪವೃಕ್ಷ ಹೀಗಾಗಿ ಅದರ ಪಾದಕ್ಕೆ ಶರಣು ಎನ್ನುತ್ತಾನೆ. ಆತನಿಗೆ ತನ್ನ ಆಪ್ತ ಸಂಗಾತಿಗಳಾದ ಎತ್ತುಗಳನ್ನು ಎಷ್ಟು ಕೊಂಡಾಡಿದರೂ ತೃಪ್ತಿಯಿಲ್ಲ ಆದ್ದರಿಂದಲೇ ಹಂತಿ ಹಾಡುಗಳಲ್ಲಿ ಎತ್ತನ್ನು ಕುರಿತ ರಾಶಿರಾಶಿ ಹಾಡುಗಳು ದೊರೆಯುತ್ತವೆ.

            ಮೂಡಲ ಹೋರಿಗೆ ಮುರಗೀಯ ಕೋಡಣಸು
ಸಣ್ಣಗೆಜ್ಜೆ ಕೊರಳ ಸರಪಳಿಯ
| ಕಟಿಗೊಂಡು
ಸವನಾಗಿ ಹಂತಿ ತುಳಿದಾನೋ

ಹಂತಿ ಹಾಡುಗಾರರು ನಿರಕ್ಷರಿಗಳು; ಯಾವ ಧರ್ಮ ಗ್ರಂಥಗಳನ್ನು ಓದಿದವರಲ್ಲ. ಕೇಳಿ ತಿಳಿದ ಕಂಡುಂಡ ಅನುಭವದ ಮೇಲೆಯೇ ಬದುಕಿನ ಸರ್ವಕಾಲ ಸತ್ಯವನ್ನು ನಿಷ್ಕರ್ಷಿಸಬಲ್ಲವರು. ಅರಿವೇ ಗುರು ಎಂಬ ತತ್ವಕ್ಕೆ ಬದ್ಧರಾದವರು. ತಾವು ಅರಿತ ದಾರ್ಶನಿಕ ನಿಲವು ಸರಳ ಅಷ್ಟೇ ಸುಸ್ಪಷ್ಟ.

            ಗಿಡದ ಮ್ಯಾಲಿನ ಹಕ್ಕಿ ಬುರ್ ನೇ ಹಾರಿತ್ತೊ
ಸ್ಥಿರವಲ್ಲೋ ಜೀವಾ ಎನಕೊಂಡೆ
| ಈ ಮಾತ
ನನ್ನೊಳಗ ನಾ ತಿಳಕೊಂಡೆ

ಹೀಗೆ ಮಾನವ ಬದುಕಿನ ಚಿದಂಬರ ರಹಸ್ಯವನ್ನೇ ಭೇದಿಸಿದ್ದಾರೆ. ಇಡಿ ರಾತ್ರಿ ಹಂತಿಯ ಕಾರ್ಯದ ಜೊತೆಗೆ ಹಾಡುತ್ತಾಯಿರುವ ರೈತ ವಾದದ ಪ್ರಸಂಗದಲ್ಲಿ ಪರಸ್ಪರ ಮೂದಲಿಸುವ, ಬೈಯುವ ಅತಿರೇಕಕ್ಕೆ ಹೋದರೂ ಬೆಳಗಿನ ಹೊತ್ತಿಗೆ ಅದು ಮತ್ತೆ ಸೌಹಾರ್ದವಾಗಿ ತಿರುಗುತ್ತದೆ.

ಹಂತಿ ಹಾಡುಗಳಲ್ಲಿ ನಡುನಡುವೆ ಹೇಳುವೆ ಒಡಗತೆಗಳು ಸ್ವಾರಸ್ಯಪೂರ್ಣವಾದವು. ಇವು ಪ್ರಶ್ನೋತ್ತರ ರೂಪದ ಚಕಮಕಿ. ಕೇಳುಗರಿಗೆ ಹುರುಪು ತರುತ್ತವೆ. ರೈತನ ರಾತ್ರಿಯ ನಿದ್ರೆಯ ಮಂಪರವನ್ನೂ ಓಡಿಸುತ್ತವೆ.

ಪ್ರಶ್ನೆ : ಸಣ್ಣವಗ ಸಣಕುಂಡಿ ದೊಡ್ಡವಗ ದೊಡಕುಂಡಿ ಒಬ್ಬ ಮಗ ಕುಂಡಿ ಮೊದಲಿಲ್ಲೊ | ಈ ಒಗಟ ವಾದ ಮಾಡವ ಒಡದ್ಹೇಳೋ

ಉತ್ತರ : ಸೂಜಿಗೆ ಸಣಕುಂಡಿ ಡಬ್ಬಣಕ ದೊಡಕುಂಡಿ ಕದರೀಗೆ ಕುಂಡಿ ಮೊದಲಿಲ್ಲೊ | ನೀ ತಿಳಿದು ನನ ವಾದ ಕೇಳಿ ಒಡದ್ಹೇಳೋ

ಹೀಗೆ ಒಬ್ಬರಿಗೊಬ್ಬರು ಒಗಟುಗಳನ್ನು ಹೇಳುತ್ತಾ ಹೋಗುವುದುಂಟು. ಕಣದಲ್ಲಿ ಕದಿರನ್ನು ತೆಗೆಯುವಾಗ ಕೈಕಾಲುಗಳಿಗೆ ಹೆಚ್ಚಿನ ಚಟುವಟಿಕೆ ಪ್ರಾರಂಭವಾಗುತ್ತದೆ. ಅಲ್ಲದೆ ಸುಂಕ ಮೈಯೆಲ್ಲಾ ಚುಚ್ಚುತ್ತಿರುತ್ತದೆ. ಆಗ ಚುಟುಕು ಪದ್ಯಗಳನ್ನು ಹೇಳುವುದು ವಿಶಿಷ್ಟವಾಗಿರುತ್ತದೆ.

ಯಾಕೋ ಬಸವಯ್ಯ ಮೈಯೆಲ್ಲಾ ರಾಡ್ಯೋ? ಎಂದು ಒಬ್ಬ ಕೇಳಿದರೆ

ಕಾಡಿಗಿ ಜ್ವಾಳಾ ಕಂಗೆಟ್ಟು ತಿಂದ್ಯೋ | ಎಂದು ಮತ್ತೊಬ್ಬ ಹೇಳುತ್ತಾನೆ.

ಈ ಪ್ರಶ್ನೋತ್ತರ ರೂಪದ ಸಂಭಾಷಣೆಗಳೆಲ್ಲ ರಸವತ್ತಾಗಿರುತ್ತವೆ. ಬೆಳಗಿನ ಜಾವ ಹಂತಿ ಬಿಡುವ ಸಮಯದಲ್ಲಿ ಕಡಿ ಎತ್ತಿನ ಸಗಣಿ (ಹೆಂಡಿ) ಹಿಡಿದು ಬೂದನನ್ನು ಮಾಡಿ ಕರಿಕಟ್ಟಿ ಕಣದ ಎಲ್ಲ ಪರಿಕಗಳ ಜೊತೆಗೆ ಬೂದಗನ್ನು ಪೂಜೆ ಮಾಡಿ ಹಂತಿ ಬಿಡುವುದುಂಟು. ಆ ಸಮಯದಲ್ಲಿ

            ಹಂತಿ ಹೊಡೆಯೋದ್‌ ಆಯ್ತು ಕಂಕಿ ಕಡಿಯಾಕ ಆಯ್ತು
ಕಡಿಯತ್ತಿನ ಹೆಂಡಿ ಹಿಡಿಯಬೇಕ
| ಬೂದಗನ ಮಾಡಬೇಕ
ಅವನ ಪದವೊಂದನುತ ಹಂತಿ ಬಿಡಬೇಕ

ಹೀಗೆ ಇಡಿ ರಾತ್ರಿಯುದ್ದಕ್ಕೂ ದಣಿವಿಲ್ಲದೆ ಹಾಡುವ ಹಾಡುಗಾರನ ಅದ್ಭುತ ಕಲ್ಪನಾ ಶಕ್ತಿ ಪ್ರತಿಭೆಗಳು ಮೇಲ್ಮಟ್ಟದವುಗಳಾಗಿವೆ. ಆದರೆ ಇಂದು ಟ್ರ್ಯಾಕ್ಟರ ರಾಶಿ, ರೋಡರಾಶಿ, ಯಂತ್ರರಾಶಿಗಳು ಬಂದು ಹಂತಿಯ ಪ್ರಕ್ರಿಯೆ ನಿಂತಿದೆ. ತದನಿಮಿತ್ತ ಆ ಸಂದರ್ಭದಲ್ಲಿ ಸೃಷ್ಟಿಗೊಳ್ಳುತ್ತಿರುವ ಸಾಹಿತ್ಯ ಮಾಯವಾಗುತ್ತಿರುವುದು ವಿಷಾದನೀಯ.

ವಿ. ಎಲ್‌. ಪಿ.

 

ಹಕ್ಕಿ ಪಿಕ್ಕಿ ಹಕ್ಕಿಪಿಕ್ಕಿ ಎಂಬುದೊಂದು ಅಲೆಮಾರಿ ಜನಸಮೂಹ. ಇದು ಒಂದು ಜಾತಿಯ ಹೆಸರು ಎಂಬುದಕ್ಕಿಂತ ಹಕ್ಕಿಪಕ್ಷಿಗಳನ್ನು ಹಿಡಿದು ಜೀವಿಸುವುದರಿಂದ ಈ ಸಮೂಹಕ್ಕಿ ಹಕ್ಕಿಪಿಕ್ಕಿ ಎಂಬ ಹೆಸರು ಬಂದಿದೆ. ಕರ್ನಾಟಕದಲ್ಲಿ ಪ್ರಾಣಿ ಪಕ್ಷಿಗಳನ್ನು ಹಿಡಿಯುವುದು, ಅವುಗಳನ್ನು ಮಾರುವುದು ಇಲ್ಲವೆ ಸಾಕುವುದು ಇವರ ವೃತ್ತಿ. ಮಳೆಗಾಲದಲ್ಲಾದರೆ ಪಾಳುಗುಡಿ, ಮಂಟಪಗಳಲ್ಲಿ ವಾಸಿಸುವರು. ಮತ್ತಿತರ ಕಾಲಗಳಲ್ಲಾದರೆ ಮರಗಳ ಕೆಳಗೆ ಇಲ್ಲವೆ ಬಟ್ಟೆಯ ಗುಡಾರ ಹಾಕಿಕೊಂಡು ಬಯಲಲ್ಲಿ ಕಾಲ ಕಳೆಯುತ್ತಾರೆ. ಕರ್ನಾಟಕಾದ್ಯಂತ ಇವರ ಅಲೆದಾಟ ಇದ್ದರೂ ಅಪಾರಸಂಖ್ಯೆಯಲ್ಲಿ ಇವರ ಸಮೂಹ ಇಲ್ಲ. ಇವರ ಮುಖ್ಯ ವೃತ್ತಿ ಸಣ್ಣಪುಟ್ಟ ಪಕ್ಷಿ ಮತ್ತು ಪ್ರಾಣಿಗಳನ್ನು ಬೇಟೆಯಾಡುವುದು. ದೊಡ್ಡ ಪ್ರಾಣಿಗಳ ಅರಣ್ಯ ಬೇಟೆ ಇವರದಲ್ಲ. ಅಳಿಲು, ಮೊಲ, ಗೀಜಗಪಕ್ಷಿ, ಗಿಳಿ, ನವಿಲು, ಕಾಡುಬೆಕ್ಕುಗಳನ್ನು ಹಿಡಿದು ತಾವೇ ಆಹಾರವಾಗಿ ಉಪಯೋಗಿಸುತ್ತಾರೆ; ಇತರ ಪ್ರಾಣಿ ಪ್ರಿಯರಿಗೆ ಮಾರುತ್ತಾರೆ. ಹಕ್ಕಿಯ ಬೇಟೆಗಾಗಿ ಸಣ್ಣಪುಟ್ಟ ಬಟ್ಟೆಗಳನ್ನು ಉಪಯೋಗಿಸುತ್ತಾರೆ. ಹಕ್ಕಿಬೇಟೆಯ ಸಂದರ್ಭದಲ್ಲಿ ಹಕ್ಕಿಗಳಂತೆಯೇ ಕೂಗಿ ಅವುಗಳನ್ನು ಆಕರ್ಷಿಸುವ ಚಾತುರ್ಯ ಇವರಿಗೆ ಇರುತ್ತದೆ. ಅಂದರೆ ಇವರು ಪಕ್ಷಿ ಪ್ರಾಣಿ ಬೇಟೆಯಲ್ಲದೆ ಪ್ರಾಣಿಗಳ ಸೂಕ್ಷ್ಮತೆಯನ್ನೇ ಮೀರಿಸುವ ನಿಪುಣತೆಯನ್ನು ಬೆಳೆಸಿಕೊಂಡಿರುತ್ತಾರೆ.

71_70A_DBJK-KUH

ಸಣ್ಣ ಪುಟ್ಟ ಪ್ರಾಣಿಗಳನ್ನು ಬೇಟೆಯಾಡುವುದರಿಂದ ಇವರಿಗೆ ಅದೇ ಆಹಾರವಾಗಿರುತ್ತದೆ. ಗಂಡಸರದು ನಿತ್ಯಬೇಟೆ ಕಾಯಕವಾದರೆ, ಹೆಂಗಸರದು ಬಾಚಣಿಗೆ ಚೌಲಿ ತಯಾರಿಸಿ ಮಾರುವುದು. ಇವರು ಅಲೆಮಾರಿಗಳಾದದ್ದರಿಂದ, ಒಂದು ಕಡೆ ನಿಲ್ಲದೆ ಇವರ ಮಕ್ಕಳೂ ತಮ್ಮ ಹಿರಿಯರ ವೃತ್ತಿಯನ್ನೇ ಕಲಿಯುವಂತಾಗುತ್ತದೆ. ಒಂದು ಕಡೆ ನಿಂತು ವಿದ್ಯಾಭ್ಯಾಸದ ಕಡೆಗೆ ಗಮನಹರಿಸುವುದು ಸಾಧ್ಯವಾಗದಿರುವುದರಿಂದ ಈಗಲೂ ಹಕ್ಕಿಪಿಕ್ಕಿ ಜನಸಮೂಹ ನಾಗರಿಕ ಜೀವನದ ಕಡೆಗೆ ಪರಿವರ್ತನೆಯಾಗುತ್ತಿಲ್ಲ.

ಕೆ. ಎಚ್‌.

ಹಗರಣ ಜನಪದ ರಂಗಭೂಮಿಯ ಕಲೆಗಳನ್ನು ಬಿಟ್ಟರೆ. ಉಳಿದೆಲ್ಲ ಜನಪದ ‘ಪ್ರದರ್ಶನ ಕಲೆಗಳು’ ಹಗಲು ಹೊತ್ತಿನಲ್ಲಿ. ಬೀದಿಯಲ್ಲಿ ಪ್ರದರ್ಶನಗೊಳ್ಳುವ ಕಲೆಗಳಾಗಿವೆ. ಅವೆಲ್ಲವೂ ವೇಷತೊಟ್ಟು ಪ್ರದರ್ಶಿಸುವ ಆಟಗಳು. ದುರುಗಮುರಗಿ, ಡೊಂಬ, ಕೋಲೆಬಸವ ಆಡಿಸುವವರು, ವೇಷಗಾರರು ಮುಂತಾದವುಗಳನ್ನು ಈ ದೃಷ್ಟಿಯಿಂದ ಗಮನಿಸಬಹುದು. ಇದನ್ನು ಹವ್ಯಾಸಿ ಮತ್ತು ವೃತ್ತಿಕಲೆಗಳು ಎಂದು ವಿಭಾಗಿಸಬಹುದು. ಆಗ ವೃತ್ತಿಕಲಾವಿದರು (ಅವರು ಅನಂತರದ ದಿನಗಳಲ್ಲಿ ಬೇರೆಬೇರೆ ವೃತ್ತಿಗಳನ್ನು ಅವಲಂಬಿಸಿರಬಹುದು) ಈ ಕಲಾಪ್ರದರ್ಶನಗಳಿಂದಲೇ ಹೊಟ್ಟೆ ಹೊರೆದು ಕೊಳ್ಳುವಂಥವರು. ಉಪಜೀವನವೇ ಕಲೆಯ ಮೇಲೆ ಅವಲಂಬಿಸಿರುವುದರಿಂದ ಊರೂರು ಅಲೆಯುವುದು ಇವರಿಗೆ ಅನಿವಾರ್ಯವಾಗಿ ಬಿಡುತ್ತದೆ.

ಕಲೆಯನ್ನೇ ಅವಲಂಬಿಸಿರಬೇಕಾದ ವೃತ್ತಿಕಲಾವಿದರಿಗೆ, ಜನರ ಗಮನವನ್ನು ತಮ್ಮತ್ತ ಸೆಳೆಯಲು, ಪ್ರಾರಂಭದಲ್ಲಿ ಧಾರ್ಮಿಕ ಅಂಶಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿರಬೇಕು. ಅನಂತರ ಧಾರ್ಮಿಕ ಸಂಗತಿಗಳು ಹಿಂದೆ ಸರಿದು, ಉಪಜೀವನವೇ ಇವರ ಮುಖ್ಯ ಉದ್ದೇಶವಾಗಿ, ಈ ಕಲೆಗಳು ಉಪಜೀವನದ ಕಲೆಗಳಾಗಿ ಮಾರ್ಪಡಲು ಕಾರಣವಾದಂತೆ ತೋರುತ್ತದೆ. ಮನರಂಜನೆಯೇ ಇಲ್ಲಿಯ ಮುಖ್ಯ ಉದ್ದೇಶ.

ಮೊದಲಿನಿಂದಲೂ ಹವ್ಯಾಸಿ ಕಲಾವಿದರಾಗಿ ಉಳಿದವರು ಆಯಾ ಗ್ರಾಮದ ಪ್ರತಿಭಾವಂತ ಕಲಾವಿದರು. ತಮ್ಮೂರಿನ ಹಬ್ಬ-ಹುಣ್ಣಿಮೆ, ಉತ್ಸವ ಮುಂತಾದ ಸಂಭ್ರಮದಲ್ಲಿ ನಾನಾ ವೇಷಗಳನ್ನು ತೊಟ್ಟು, ಕುಣಿದು, ಅಣಕಿಸಿ, ನಕ್ಕುನಗಿಸಿ ಈ ಹಬ್ಬಗಳ ಸಂಭ್ರಮವನ್ನು ಇವರು ಇನ್ನಷ್ಟು ಹೆಚ್ಚಿಸಿರಬೇಕೆನಿಸುತ್ತದೆ. ಈ ಹವ್ಯಾಸಿ ಕಲಾಪ್ರದರ್ಶನಗಳು ಆಗಾಗ ಪ್ರದರ್ಶನಗೊಳ್ಳುವ ಸಂಪ್ರದಾಯಗಳುಳ್ಳ ಗ್ರಾಮಗಳಿದ್ದಿರಬಹುದು.

ಹೀಗೆ ಆಯಾ ಊರಿಗೆ ಸೀಮಿತರಾದ ಕಲಾವಿದರು – ಹಬ್ಬ ಹುಣ್ಣಿಮೆ, ವಿಶೇಷ ಉತ್ಸವಗಳಲ್ಲಿ ವೇಷ ತೊಟ್ಟು, ಹಾಸ್ಯಮಯವಾಗಿ ಈ ಅಣಕು ಪ್ರದರ್ಶನಗಳನ್ನು ಪ್ರದರ್ಶಿಸುತ್ತಿದ್ದರು, ಚುಟುಕು ಪ್ರದರ್ಶನಗಳಾದ ಇವನ್ನು ‘ಹಗರಣ’ ಗಳೆಂದು ಕರೆದಂತೆ ತೋರುತ್ತದೆ. ಚೆನ್ನಬಸವಣ್ಣನವರು ಹೇಳುವ ‘ಕಾರ್ಹುಣವಿ ಹಗರಣ’ ಇವೇ ಆಗಿರಬೇಕೆನಿಸುತ್ತದೆ.

ಕಾರ್ಹುಣವಿ, ಹೋಳಿಹುಣ್ಣಿವಿ, ನಾಗರ ಪಂಚಮಿ ಇಂತಹ ಹಬ್ಬಗಳ ದಿನಗಳಂದು, ಅದೂ ಇಳಿಹೊತ್ತಿನಲ್ಲಿ (ಸಾಯಂಕಾಲ ಸುಮಾರು ೩.೩೦ ಅನಂತರ ಕಣ್ಣು ಸಾಕಾಗುವ ಅಂದರೆ ಸು. ೬.೩೦ ತನಕ) ಸೋಗುಗಳನ್ನು ಹಾಕುವುದು ರೂಢಿ. ಕಲಾವಿದರು ತಂಡತಂಡಗಳಲ್ಲಿ ಬಂದು, ಒಂದು ಗುಂಪಾದ ಮೇಲೆ ಇನ್ನೊಂದು ಗುಂಪಿನಂತೆ ನೆರೆದ ಜನರ ಎದುರಿಗೆ ಪ್ರದರ್ಶನ ಮಾಡುವುದು ರೂಢಿ. ಮನರಂಜನೆಯ ಇವುಗಳ ಮುಖ್ಯ ಗುರಿ.

ಹೀಗೆ ಆಯಾ ಗ್ರಾಮಗಳ ಕಲಾವಿದವರು, ತಮ್ಮೂರಿನ ಹಬ್ಬಹುಣ್ಣಿಮೆ ಉತ್ಸವಗಳನ್ನು ಇನ್ನಷ್ಟು ಸಂಭ್ರಮದಿಂದ ಕೂಡಿರುವಂತೆ ಮಾಡುವ ಈ ಕಲಾಪ್ರದರ್ಶನಗಳನ್ನು ‘ಸೋಗು ಹಾಕುವುದು’ ಎನ್ನುತ್ತಾರೆ. ಬಹುಶಃ ಈ ಕಲೆಗಳನ್ನೇ ‘ಪಗರಣ’ ಎನ್ನುವ ಪದದಿಂದ ಕರೆಯುತ್ತಿದ್ದರೆಂದು ತೋರುತ್ತದೆ. ಇದನ್ನೇ ಹಗರಣ ಎಂತಲೂ ಕರೆದಂತಿದೆ. (ಉಚ್ಚಾರಣೆಯಲ್ಲಿ ಪ>ಹ ಆಗಿದೆ ಅಷ್ಟೆ). ಆದರೆ ಇವು ಖಂಡಿತ ಸಂಸ್ಕ್ರತ ‘ಪ್ರಕರಣ’ಕ್ಕೆ ಸಂಬಂಧಿಸಿರುವಂತೆ ತೋರುವುದಿಲ್ಲ.

ಪಗರಣ>ಹಗರಣ ಇದರ ಅರ್ಥ ಬಹುಶಃ ರಂಜನೀಯವಾದ ಅಣಕು ಪ್ರದರ್ಶನ ಎಂದಿರಬೇಕೆನಿಸುತ್ತದೆ. ಏಕೆಂದರೆ ಇಲ್ಲಿಯ ವೇಷಗಾರಿಕೆಯು ತಮಗೆ ಅನುಕೂಲವಾಗುವ ರೀತಿಯಲ್ಲಿ, ಜನ ನೋಡಿದೊಡನೆ ನಗು ಬರುವಂತೆ ಇರುವುದು. ಯಾವುದೇ ಕಥೆ ಇಲ್ಲದೆ ಇರುವುದು ಇಲ್ಲಿಯ ಇನ್ನೊಂದು ಮುಖ್ಯ ಸಂಗತಿ. ಉದಾಹರಣೆಗೆ ಹೆಣದ ಅಣಕು, ಜ್ಯೋತಿಷಿಯ ವೇಷ ಹಾಕಿ ಭವಿಷ್ಯ ಹೇಳುವುದು, ಸುಡಗಾಡು ಸಿದ್ಧರ ವೇಷ, ಜೋಕುಮಾರನನ್ನು ಹೊತ್ತು ತರುವುದು. ತಮ್ಮೂರಿನ ಯಾರನ್ನಾದರೂ ಅಣಕಿಸುವ ವೇಷಗಳನ್ನು ಕೂಡ ಹಾಕಬಹುದು. ಗೌಡ, ಕುಲಕರ್ಣಿ, ಶ್ರೀಮಂತ, ವ್ಯಾಪಾರಿ, ಅಂಗವಿಕಲ, ಕುಂಟ ಹೀಗೆ ಯಾರನ್ನಾದರೂ ದೃಷ್ಟಿಯಲ್ಲಿಟ್ಟುಕೊಂಡು ಅವರು ಅಣಕು ವೇಷ ಹಾಕಬಹುದು. ಹೀಗಾಗಿ ಇವುಗಳಿಗೆ ಕಥೆಗಳು ಬೇಕಾಗಿಲ್ಲ. ನಗಿಸುವುದೇ ಇಲ್ಲಿಯ ಮುಖ್ಯ ಉದ್ದೇಶ.

ಕವಿರಾಜಮಾರ್ಗ ಮತ್ತು ವಡ್ದಾರಾಧನೆಗಳಲ್ಲಿ ದೊರೆಯುವ ಉದಾಹರಣೆಗಳು ಕೂಡ, ಹೀಗೆ ಗ್ರಾಮಗಳಲ್ಲಿ ಪ್ರದರ್ಶನಗೊಳ್ಳುವ, ಮನರಂಜನೆಯೇ ಮುಖ್ಯ ಉದ್ದೇಶವಾಗಿಸಿಕೊಂಡ, ಆಯಾ ಗ್ರಾಮದ ಕಲಾವಿದರಿಂದಲೇ ಪ್ರದರ್ಶನಗೊಳ್ಳುವ ಕಲೆಗಳು -ಸೋಗುಗಳು ಆಗಿವೆ ಎನಿಸುತ್ತದೆ. ಕವಿರಾಜಮಾರ್ಗದಲ್ಲಿ ಪಗರಣದ ಉಲ್ಲೇಖ ತೀರ ಪ್ರಾಸಂಗೀಕವಾಗಿ ಬರುತ್ತದೆ. ಶೃತಿದುಷ್ಟ, ಶೃತಿಕಷ್ಟ ಮುಂತಾಗಿ ದೋಷಗಳನ್ನು ಹೇಳುವಾಗ, ನಗಿಸುವ ಉದ್ದೇಶವುಳ್ಳ ಪಗರಣದಲ್ಲಿ ಅವುಗಳು ದೋಷಗಳೆನಿಸಲಾರವು ಎಂಬುದನ್ನು ಕವಿ ಹೀಗೆ ಹೇಳಿದ್ದಾನೆ :

            ಮಿಗೆ ದುಷ್ಕರ ಕಾವ್ಯಂಗಳೊ
ಗಳರ್ಹಿತಪ್ರಾಯಮಕ್ಕುಮಾ ಶ್ರುತಿಕಷ್ಟಂ
ಪಗರಣದೊಳುಱೆ ದ ಮೂಱುಂ
ನಗಿಸುಗುಮಪ್ಪುದಱೆ ನಲ್ಲಿ ಗಂತದದೋಷಂ

(ದುಷ್ಕರವೆನಿಸುವ ಚಿತ್ರಬಂಧ ಮೊದಲಾದ ಕಾವ್ಯಗಳಲ್ಲಿ ಮಾತ್ರ ಶ್ರುತಿಕಷ್ಟ ಕೂಡ ದೋಷವೆಂದು ನಿಂದ್ಯವಾಗದು. ಮಿಕ್ಕ ಮೂರೂ (ಶ್ರುತಿದುಷ್ಟ, ಅರ್ಥದುಷ್ಟ, ಕಲ್ಪನೋಕ್ತಿ) ಪ್ರಕರಣ (ಪಗರಣ) ಎಂಬಜಾತಿಯ ರೂಪಕ (= ನಾಟಕ ) ದಲ್ಲಿ ನಗಿಸುವುದಕ್ಕೆ ಸಹಾಯವಾಗುವುದರಿಂದ, ಅಲ್ಲಿ ಅವು ದೋಷವೆನಿಸವು.) – (ಕವಿರಾಜಮಾರ್ಗಂ. ಸಂ. ಕೆ. ಕೃಷ್ಣ ಮೂರ್ತಿ, ೧೯೮೩೦. ಇಲ್ಲಿ ನಮಗೆ ಪಗರಣ ನಗಿಸುವ ಒಂದು ಕಲೆ ಎಂಬುದು ಮುಖ್ಯ. ಮತ್ತು ಅಲ್ಲಿಯ ಭಾಷೆ ಕೂಡ ನಗಿಸಲು ಪ್ರಯತ್ನಿಸುವ ಭಾಷೆಯಾಗಿದೆ ಎಂಬುದೂ ಕೂಡ ಮುಖ್ಯ.

ವಡ್ಡಾರಾಧನೆ ಗ್ರಂಥದಲ್ಲಿ ಕಾರ್ತಿಕ ಋಷಿಯ ಕಥೆಯಲ್ಲಿ ಅರಸನಾದ ತಂದೆ ತನ್ನ ಮಗಳನ್ನೇ ಮದುವೆ ಮಾಡಿಕೊಳ್ಳುತ್ತಾನೆ. ಅವರ ಮಗ ಕಾರ್ತಿಕ ಋಷಿ. ಈ ಋಷಿಯ ತಂಗಿ ವೀರಶ್ರೀ. ಕಾರ್ತಿಕ ಋಷಿ ತಂಗಿಯಾ ಮನೆಯಾ ಅಂಗಳದಲ್ಲಿ ಭಿಕ್ಷೆಗೆ ಬಂದು ನಿಲ್ಲುತ್ತಾನೆ. ಆದರೆ ವೀರಶ್ರೀ ಗಂಡ ತನ್ನ ತಲೆಯನ್ನು ಅವಳ ತೊಡೆಯ ಮೇಲಿಟ್ಟು ಮಲಗಿರುವುದರಿಂದ, ಅವನ ತಲೆಯನ್ನು ಮೆಲ್ಲಗೆ ಸರಿಸಿ, ಕೆಳಗಿಟ್ಟು, ಭೀಕ್ಷೆ ನೀಡಲು ಬರುವಷ್ಟರಲ್ಲಿ ಸ್ವಲ್ಪ ತಡವಾಗುತ್ತದೆ. ಅಷ್ಟರಲ್ಲಿ ಅಣ್ಣ ತಿರುಗಿ ಹೊರಟಿರುತ್ತಾನೆ. ಅವನನ್ನು ತಡೆದು ಮಾತನಾಡಿಸುವಲ್ಲಿ, ಗಂಡ ಎದ್ದು ಬಂದು, ಆತ ಹೆಂಡತಿಯ ಅಣ್ಣ ಎಂಬುದನ್ನು ಅರಿಯದೆ ಅಪಾರ್ಥ ಕಲ್ಪಿಸಿಕೊಳ್ಳುತ್ತಾನೆ. ಇದರಿಂದ ಆಘಾತಗೊಂಡ ಆಕೆ ನಗುವನ್ನೇ ಕಳೆದುಕೊಳ್ಳುತ್ತಾಳೆ. ದುಃಖದಲ್ಲಿ ಮುಳುಗುತ್ತಾಳೆ. ಆಗ ಗಂಡನು ತನ್ನ ಹೆಂಡತಿಯನ್ನು ನಗಿಸಿದವರಿಗೆ ಬಹುಮಾನ ಘೋಷಿಸುತ್ತಾನೆ. ಅವಳನ್ನು ನಗಿಸಲು ಮಾಡಿದ ಪ್ರಯತ್ನಗಳನ್ನು ವಡ್ಡಾರಾಧನೆ ಹೀಗೆ ವಿವರಿಸುತ್ತದೆ :

‘ಅದಂ ಕೇಳ್ದು ಲೋಗರ್ ಪಗರಣಿಗರಾಗಿ ಎನಿತಾನುಂ ತೆಱದ ರೂಪುಗಳಂ ಕೈಕೊಂಡು ಮರಮೊಗಂಗಳನಿಟ್ಟು ಬಂದು ಮುಂದೆ ಪಾಡಿಯುಂ ನಗಿಸಿಯುವೆಂತುಮಱ್ಕೆ ಮಱ್ಗ ದಿರ್ದ್ದೊಡೊರ್ವ್ವಂ ಕರಿಯ ಕಚ್ಚುಟಮನುಟ್ಟು ಮೆಯ್ಯೆಲ್ಲಂ ಮಸಿಯಂ ಪೂಸಿ ವೋಱದಲೆವೆರಸು ಬಾಯೊಳ್ ಕವಡಿಕೆಗಳು ಪಲ್ಗಳಂತೆ ಮಾಡಿ ಕುಂಚಮುಂ ಗುಂಡಿಗೆಯುಮಂ ಪಿಡಿದು ಬರ್ಪ್ಪೊನನರಸಂ ಕಂಡಿಂತೆಂದಂ ಎಲೆಯರಸಿ ನಿನ್ನ ಸಹೋದರರಂಗಳಪ್ಪ ಭಟಾರರಾ ಬರ್ಪ್ಪೊರೆಯೆಂದು ಪೇಱ್ದಾಗಳೆಲ್ಲಿರ್ದರೆಂದೆರ್ವುದೆಱ್ದು ನೋಡಿ ಕಾಣದಾ ರೂಪಂ ಕಂಡು ನಕ್ಕು ದುಃಖಮಂ ಮಱೆದೊಳಾಗಳಾ ನಗಿಸಿದ ಪಗರಣಿಗಂಗೆ ಪಿರಿದು ಕಸವರಮನಿತ್ತೊಂ’ (ವಡ್ಡಾರಾದನೆ, ಪು. ೧೦೫, ಸಂ. ಹಂ. ಪಂ. ನಾಗರಾಜಯ್ಯ).

ಇದರಂತಹದೇ ಒಂದು ಕಥೆ ನಮಗೆ ಎರಡನೇ ಅಥವಾ ಮೂರನೇ ವರ್ಗದ ಕನ್ನಡ ಪಠ್ಯ ಪುಸ್ತಕದಲ್ಲಿ (೧೯೬೦) ಇತ್ತು. ಅಲ್ಲಿ ರಾಜಕುಮಾರಿಗೆ ನಗುವೇ ಇರಲಿಲ್ಲ . ಅರಸ ಮಗಳಿಗೆ ನಗಿಸಿದವನಿಗೆ ಅವಳನ್ನು ಕೊಟ್ಟು ಮದುವೆ ಮಾಡುವುದಾಗಿ ಡಂಗುರ ಸಾರಿಸಿದನು. ಆಗ ಒಬ್ಬ ದಡ್ಡ ಕತ್ತೆಯನ್ನು ಹೊತ್ತು ಬರುವುದನ್ನು ಕಂಡು ರಾಜಕುಮಾರಿ ನಕ್ಕಳು. ಅರಸ ರಾಜಕುಮಾರಿಯನ್ನು ಆ ದಡ್ದನಿಗೆ ಕೊಟ್ಟು ಮದುವೆ ಮಾಡಿದನು ಎಂದು ಓದಿದ ನೆನಪು. ಇವೆಲ್ಲ ಪಗರಣದ ಉದಾಹರಣೆಗಳೇ ಹೊರತು ವೇಷಗಾರರ ಉದಾಹರಣೆಗಳಲ್ಲ. ಮೇಲಿನ ಮೂರೂ ಉದಾಹರಣೆಗಳಲ್ಲಿ ನಗಿಸುವುದು ಸಾಮಾನ್ಯ ಉದ್ದೇಶವಾಗಿದೆ. ಈ ಸೋಗುಗಳೇ ಪಗರಣ ಇಲ್ಲವೆ ಹಗರಣಗಳೆನಿಸುತ್ತವೆ.

೧೯೬೦ ಮತ್ತು ೧೯೭೦ರ ವರ್ಷಗಳಲ್ಲಿ ನಮ್ಮೂರಿಗೆ ‘ಭೈರುಪ್ಪೇರು’ ಎಂಬ ಕಲಾವಿದರು ಬರುತ್ತಿದ್ದರು. ಇವರು ದಿನವೂ ಬೇರೆ ಬೇರೆ ವೇಶಗಳನ್ನು ಹಾಕಿಕೊಂಡು ಹಗಲು ಹೊತ್ತಿನಲ್ಲಿ – ಮುಂಜಾನೆ ವೇಳೆಯಲ್ಲಿ, (ಬೆಳಗ್ಗೆ ಸುಮಾರು ಏಳು ಅಥವಾ ಏಳುವರೆ ಗಂಟೆಯಿಂದ ಹನ್ನೊಂದು ಗಂಟೆಯ ತನಕ). ಊರಿನ ಬೇರೆ ಬೇರೆ ಸ್ಥಳಗಳಲ್ಲಿ ಪ್ರದರ್ಶನ ಮಾಡುತ್ತಿದ್ದರು. ರಾಮಾಯಣ. ಮಹಾಭಾರತ, ಸತ್ಯವಾನ ಸಾವಿತ್ರಿ ಇತ್ಯಾದಿ ಕಥಾ ದೃಶ್ಯಗಳನ್ನು ಪ್ರದರ್ಶೀಸುತ್ತಿದ್ದ ನೆನಪು. ಇವರನ್ನು ವೇಷಗಾರರು, ಜಾತಿಗಾರರು (ಜಾತಿಗಾರು > ಜಾತಗಾರು) ಎಂದೂ ಕರೆಯುತ್ತಿದ್ದರು. ಗಂಡಸರೇ ಹೆಂಗಸರ ವೇಷ ಹಾಕುತ್ತಿದ್ದರು. ಪ್ರದರ್ಶನ ಮುಗಿದ ಮೇಲೆ ಮತ್ತೆ ಇವರು ಮನೆಮನೆಗೆ ಭಿಕ್ಷೆಗೆ ಹೋಗುವಾಗ ತಾವು ಹಾಕಿದ ವೇಷದಲ್ಲಿ ಹಾಡುತ್ತಾ ಹೋಗುತ್ತಿದ್ದರು. ಹೀಗೆ ಹಾಡುವಾಗ ಅವರು ದಮಡಿ, ದಗ್ಗಾ, ತಾಳು, ತಂಬೂರಿ ಉಪಯೋಗಿಸುತ್ತಿದ್ದರು. ಮನೆಮನೆಗೆ ಭಿಕ್ಷೆಗೆ ಹೋಗುವಾಗ ಜೊತೆಗೆ ಹಾಡುತ್ತ ಹೆಂಗಸರೂ ಇರುತ್ತಿದ್ದರು. ಇವರನ್ನು ‘ಭೈರುಪ್ಪೇರು’ ಎಂದು ಸಾಮಾನ್ಯವಾಗಿ ಕರೆಯುತ್ತಿದ್ದರು. ಬಹುಶಃ ಇದು ‘ಬಹುರೂಪಿಗಳು’ ಎಂಬುದರ ಗ್ರಾಮ್ಯರೂಪ ಇದ್ದಂತೆ ತೋರುತ್ತದೆ.

ಇವರು ತಮ್ಮತಮ್ಮಲ್ಲಿ ತೆಲಗು ಭಾಷೆಯನ್ನು ಬಳಸುತ್ತಿದ್ದರು. ಇವರ ವೇಷಭೂಷಣಗಳು ವಿಶೇಷವಾಗಿ ಕಾಣುತ್ತಿದ್ದವು. ಹೀಗಾಗಿ ‘ವೇಷಗಾರರು’ ಎನ್ನುತ್ತಿದ್ದರೆಂದು ತೋರುತ್ತದೆ. ಇವರ ಉದ್ಯೋಗವೇ ವೇಶಹಾಕುವುದಾಗಿ ಇವರು ‘ವೇಶಗಾರರು’ ಎಂಬ ಹೆಸರು ಪಡೆದಂತೆ ತೋರುತ್ತದೆ. ಜಾನಪದ ರಂಗಭೂಮಿ ಕಥೆಗಳನ್ನು ತುಂಡು ತುಂಡಾಗಿ ಪ್ರದರ್ಶಿಸುವ, ಹಾಡುವ, ಕುಣಿಯುವ, ಬಾರಿಸುವ ಪದ್ಧತಿ ಹಗಲು ವೇಷಗಾರರಲ್ಲಿ – ಬಹುರೂಪಿಗಳ ಪ್ರದರ್ಶನಗಳು ಭಿನ್ನವಾಗಿರುವುದರಿಂದ ಇವೆರಡೂ ಒಂದೇ ಅಲ್ಲ ಎನಿಸುತ್ತದೆ. ಗ್ರಾಮದ ಕಲಾವಿದರ ಅಣಕು ಪ್ರದರ್ಶನಗಳನ್ನು ಪಗರಣಗಳೆಂದೂ ವೃತ್ತಿಕಲಾವಿದರ ತುಣುಕು ಕಥಾ ಪ್ರದರ್ಶನಗಳನ್ನು ವೇಷಗಾರರ ಆಟಗಳೆಂದೂ ನಾವು ಕರೆಯಬಹುದಾಗಿದೆ. ಇದರ ಪ್ರದರ್ಶನ ಮಾತ್ರ ಬೀದಿಯಲ್ಲೇ ಹಾಗೆ ನೋಡಿದರೆ ಹಗಲು ನಡೆಯುವ ಯಾವುದೆ ಬಗೆಯ ಪ್ರದರ್ಶನ ಬೀದಿಯಲ್ಲೇ ನಡೆಯುವುದು ಸಾಮಾನ್ಯ. ವೇಷಗಾರರಿಗೆ ಹಬ್ಬ -ಹುಣ್ಣಿಮೆ ಬೇಕಾಗಿಲ್ಲ, ಆದರೆ ಪಗರಣಗಳಿಗೆ ಹಬ್ಬ, ಹುಣ್ಣಿಮೆ, ವಿಶೇಷ ಉತ್ಸವಗಳು ಅಥವಾ ತಮ್ಮೂರಿನ ವಿಶೇಷ ಸಂದರ್ಭಗಳೇ ಪ್ರದರ್ಶನಗಳಿಗೆ ಕಾರಣಗಳು. ವೇಷಗಾರರ ಪ್ರದರ್ಶನಗಳು ಮುಂಜಾನೆ ವೇಳೆಯಲ್ಲಿ, ಪಗರಣಗಳ ಪ್ರದರ್ಶನಗಳು ಸಂಜೆ ಇಳಿಹೊತಿನಲ್ಲಿ.

ಕವಿರಾಜಮಾರ್ಗ ಮತ್ತು ವಡ್ಡರಾಧನೆ ಎಂಬ ಕನ್ನಡ ಕೃತಿಗಳಲ್ಲಿರುವ ಉಲ್ಲೇಖಗಳು ಪಗರಣದ ಉದಾಹರಣೆಗಳಾಗಿವೆ. ವೇಷಗಾರರ ಉದಾಹರಣೆಗಳು ಅಲ್ಲಿ ಇಲ್ಲವೆಂದು ತೋರುತ್ತದೆ. ಬಹುರೂಪಿ ಚೌಡಯ್ಯ ಮೂಲತಃ ವೇಷಗಾರನಾಗಿದ್ದು, ಅನಂತರ ಶರಣರ ವೇಷಗಳನ್ನು ಕಟ್ಟಿ ಪ್ರದರ್ಶಿಸುವ ಅಭ್ಯಾಸ ಹಾಕಿಕೊಂಡಿರ ಬೇಕೆನಿಸುತ್ತದೆ. ಹೀಗಾಗಿ ಅವನಿಗೆ ಜಾತಿಗಾರನೆಂದೂ ಕರೆದಿರುವ ಸಾಧ್ಯತೆ ಇದೆ. ಆದರೆ ಅವನದು ಖಂಡಿತ ಪಗರಣದ ವೇಷಗಾರಿಕೆಯಲ್ಲ. ವೇಷಗಾರರು ಎಂಬುದೊಂದು ಪಡೆನುಡಿಯಾಗಿ ಪ್ರಸಿದ್ಧವಾಗಿ ಬಳಕೆಯಾಗಿದೆ. ವಚನಕಾರರಂತೂ ಸಾಕಷ್ಟು ಸಲ ವೇಷಗಾರಿಕೆಯನ್ನು ಪಡೆನುಡಿಯಾಗಿ ಬಳಸಿದ್ದಾರೆ. ಅದು ಬಳಕೆಯಾದುದ್ದೆಲ್ಲ ಹೊಟ್ಟೆಹೊರೆದುಕೊಳ್ಳಲು ವೇಷ ಕಟ್ಟಿದ ನೆನಪು ನಮಗಾಗುತ್ತದೆ.

ವಿ. ಡಿ.