ಹಸಲರು :ಕರ್ನಾಟಕ ರಾಜ್ಯದ ಉತ್ತರ ಕನಡ, ದಕ್ಷಿಣ ಕನ್ನಡ ಉಡುಪಿ, ಶಿವಮೊಗ್ಗ, ಬಳ್ಳಾರಿ, ಬೆಳಗಾವಿ ಜಿಲ್ಲೆಗಳಲ್ಲಿರುವ ಒಂದು ಬುಡಕಟ್ಟು. ಇವರು ಸದಾ ಬಿಲ್ಲುಬಾಣಗಳನ್ನು ಇಟ್ಟುಕೊಂಡಿರುತ್ತಾರೆ. ಪ್ರಕೃತಿಯ ಮಕ್ಕಳಾಗಿ ಕಾಡಿನಲ್ಲಿ ಸಂಚರಿಸುವುದರಿಂದ ‘ಭಿಲ್ಲಕ್ಷತ್ರಿಯ’ ಎಂಬ ಹೆಸರೂ ಬಂದಿದೆ. ಹಲಸರ ಸಾಂಸ್ಕೃತಿಕ ನಾಯಕ ಹೊನ್ನಯ್ಯ. ಈತ ಗರುಡಗಂಬವನ್ನು ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಪ್ರತಿಷ್ಠಾಪಿಸಿದ. ಅವನ ಸಾಹಸಕ್ಕೆ ಮೆಚ್ಚಿದ ಜನ ಅವನಿಗೆ ಹೊನ್ನನ್ನೇ ಸುರಿಯಲು ಬಯಸಿದರು.”ಹೊನ್ನ ಹಿಡಿ ಹೊನ್ನಯ್ಯ” (ಹೊನ್ನಯ್ಯ ಬಂಗಾರ ತೆಗೆದುಕೊ) ಎನ್ನುತ್ತಾ ಅವನ ಹಿಂದೆ ಬರಹತ್ತಿದ್ದರು. ಆದರೆ ಜನ ತನ್ನನ್ನು ಹಿಡಿಯಲು ಬರುತ್ತಿದ್ದಾರೆಂದು ಹೊನ್ನಯ್ಯ ಭಾವಿಸಿದ. ಹೀಗೆ ತಪ್ಪು ತಿಳಿವಳಿಕೆಯಿಂದ ಭಯಪಟ್ಟು ಆತ ಕಾಡಿಗೆ ಓಡಿ ಹೋದ. ಅಲ್ಲಿ ಆತ ಶರಣರ ಜೀವನ ನಡೆಸಿದ ಎಂದು ಹೇಳಲಾಗಿದೆ.

ಹಸಲರಲ್ಲಿ ಬೆಳ್ಳಿ ಹಲಸರು ಅಥವಾ ಬೆಳ್ಳಾಲರು, ಬಗ್ಗಾಲಿನ ಹಸಲರು ಅಥವಾ ಅಂತರ್ಗಾಲು ಹಸಲರು, ನಾಡ ಹಸಲರು, ಮಲೆ ಹಸಲರು, ಕರ ಎಳೆಯುವ ಹಸಲರು ಎಂಬ ಒಳ ಪಂಗಡಗಳಿವೆ.

ಆಹಾರ ಪದ್ಧತಿ : ಮೊಲ, ಕಬ್ಬೆಕ್ಕು, ಬರ್ಕ, ಮುಳ್ಳುಹಂದಿ, ಮುಂಗುಸಿ, ಕಾಡುಕೋಳಿ ಇತ್ಯಾದಿಗಳನ್ನು ತಿನ್ನುತ್ತಾರೆ. ಎಲ್ಲ ತರಹದ ಮೀನುಗಳು ಅವರಿಗೆ ಪ್ರಿಯವಾದ ಆಹಾರ. ಇದಲ್ಲದೆ ಕಾಡು ಹಕ್ಕಿಗಳನ್ನು ತಿನ್ನುವುದುಂಟು. ಇವರು ಮುಖ್ಯವಾಗಿ ಅಕ್ಕಿ, ರಾಗಿ ಜೋಳಗಳನ್ನು ಉಪಯೋಗಿಸುವರು. ಇವರ ವಿಶೇಷ ಸಾರು ಚಿಗಳಿ ಸಾರು, ಮರದ ಮೇಲೆ ಗೂಡು ಕಟ್ಟಿದ ಕೆಂಜಿಗಗಳಿಗೆ ಉಪ್ಪು ಹಾಕಿ ಅವನ್ನು ಗೂಡಿನಿಂದ ಅಲ್ಲಾಡಿಸಿ ಮೊರಕ್ಕೆ ತುಂಬಿ ಅನಂತರ ಉಪ್ಪನ್ನು ನೀರಿಗೆ ಹಾಕಿ ತೇಲುವ ಇರುವೆಗಳನ್ನು ಆರಿಸಿ ಖಾರ ಹಾಕಿ ಸಾರು ಮಾಡುತ್ತಾರೆ.

ವಸತಿ ವ್ಯವಸ್ಥೆ : ಹಸಲರು ಒಂದು ಕಾಲದಲ್ಲಿ ಅರಣ್ಯ ಸಂಚಾರಿಗಳಾಗಿದ್ದರು. ಅವರು ಏಕಾಂತ ಪ್ರಿಯರು, ಮಲೆನಾಡಿನ ಪ್ರಕೃತಿಯ ರಮ್ಯತಾಣದ ಮಧ್ಯೆ ಪ್ರಶಾಂತವಾದ ಸ್ಥಳಗಳನ್ನು ಇವರು ತಮ್ಮ ವಸತಿಗಾಗಿ ಆರಿಸಿಕೊಳ್ಳುತ್ತಿದ್ದರು. ಇವರ ಮನೆ ೨೦ ಅಡಿ ಉದ್ದ ೧೦ ಅಡಿ ಅಗಲವಿರುವ ಸ್ಥಳದಲ್ಲಿರುತ್ತದೆ. ಮನೆಯ ಹತ್ತಿರದ ನೆಲದಲ್ಲಿ ಒದು ಹೊಂಡ ತೋಡಿ ಆದರಲಿ ಬೆಂಕಿ ಹಾಕಿರುತ್ತಾರೆ. ಇದಕ್ಕೆ ‘ಹೊರಸಲು’ ಎಂದು ಹೆಸರು. ಇದರಲಿ ರಾತ್ರಿ ಹೊತ್ತು ಚಳಿ ಕಾಯಿಸಿಕೊಳ್ಳುವುದುಂಟು.

ಹಲಸರ ಗುಡಿಸಲು ತ್ರಿಕೋನಾ ಆಕೃತಿಯದು. ಗುಡಿಸಲುಗಳಿಗೆ ಹುಲ್ಲು ಮತ್ತು ಎಲೆಗಳನ್ನು ಹೆಣೆದು ಹೊದಿಸಲಾಗಿರುತ್ತದೆ. ಒಂದೇ ಬಾಗಿಲಿರುವ ಗುಡಿಸಲಿನಲ್ಲಿ ಒಬ್ಬ ವ್ಯಕ್ತಿ ಮಾತ್ರ ಒಳಗೆ ಪ್ರವೇಶಿಸಬಹುದು.

ಉಡುಗೆ ತೊಡಿಗೆಗಳು :ಹಸಲರು ವೇಷಭೂಷಣಗಳಲ್ಲಿ ಉಳಿದ ಬುಡಕಟ್ಟುಗಳಿಗಿಂತ ಭಿನ್ನರಲ್ಲ. ಹಿಂದೆ ಹಸಲರ ಗಂಡಸರು ಕಚ್ಚೆ ತೊಟ್ಟು ಭೈರಸು (ಚಕ್ಕಮುಂಡು )ತೊಡುವುದು ಪದ್ಧತಿಯಾಗಿತ್ತು. ಇಂದು ಒಳಗೆ ಲಂಗೋಟಿ ಹಾಕಿ ಮುಂಡು ಸುತ್ತಿಕೊಳ್ಳುವುದುಂಟು. ಆರು ಮೊಳದ ಕುರುಗೋಡು ಪಂಚೆಯನ್ನು ಹಸಲರು ಉಡುತ್ತಾರೆ. ಮೇಲೆ ಕಪ್ಪು ಬಣ್ಣದ ಅಂಗಿ. ಅಧುನಿಕತೆ ಹಸಲರ ಬದುಕಿನಲ್ಲೂ ಹೊಸ ಪರಿವರ್ತನೆ ತಂದಿದೆ.

ಸ್ತ್ರೀಯರು ಕಿವಿಗೆ ಬೆಂಡೋಲೆ, ಬುಗುಡಿ, ಕೈಗಳಿಗೆ ಬೆಳ್ಳಿ ಕೋಲ್ಕಡಗ, ದುಂಡುಗಳು, ಸೊಂಟಕ್ಕೆ ಗೆಜ್ಜೆ ಪಟ್ಟಿ ಧರಿಸುವರು,. ಗಂಡಸರು ಕೂಡಾ ಕಿವಿಗೆ ಕಡುಕು ಅಥವಾ ಒಂಟಿ ಬಂಗಾರದ ಆಭರಣ ಧರಿಸುವುಂಟು.

ಹಚ್ಚೆ ಹಾಕಿಸಿಕೊಳ್ಳುವುದರಿಂದ ತಮ್ಮ ಸೌಂದರ್ಯ ವರ್ಧಿಸುತ ದೆಂಬುದು ಹಸಲ ಸ್ತ್ರೀಯರ ಭಾವನೆ ಇದರಿಂದ ಹಚ್ಚೆ ಹಾಕಿಸಿಕೊಳ್ಳುವುದರಲ್ಲಿ ಅವರಿಗೆ ವಿಶೇಷ ಒಲವು. ಹಸಲರ ಹೆಂಗಸರು ಹಾಕಿಸಿಕೊಳ್ಳುತ್ತಿದ್ದ ವಿವಿಧ ಹಚ್ಚೆ ಚಿತ್ರಗಳು ಹೀಗಿವೆ : ಜೋಗಿ ಜಡೆ, ಎಲೆ ಕವಳಿಗೆ, ಎಲೆ ಬಳ್ಳಿ, ಸೀತೆ ಮುಡಿ, ಕೌಳಿಮುಟ್ಟಿ, ಲತ್ತು, ಗಿಂಡಿ.

ಕಸಬು : ಹಸಲರ ಮುಖ್ಯ ಕಸಬು ತೋಟದಲ್ಲಿ ಕೂಲಿ ಕೆಲಸ. ಮಲೆನಾಡಿನ ಅಡಿಕೆ ಮತ್ತು ಕಾಫಿ ತೋಟಗಳಲ್ಲಿ ಇವರು ದುಡಿಯುತ್ತಿದ್ದಾರೆ. ಹಿಂದೆ ಹಸಲರು ಜೀತದಾಳುಗಳಾಗಿದ್ದರು. ಇವರಿಗೆ ಹುಟ್ಟಾಳುಗಳೆಂದೂ ಕರೆಯಲಾಗುತ್ತಿತ್ತು. ಆರಣ್ಯದಲ್ಲಿ ಮರ ಕಡಿಯುವುದು, ಬುಟ್ಟಿ ಹೆಣೆಯುವುದು, ಮೀನುಗಾರಿಕೆ, ಜೇನು ಸಂಹ್ರಹಣೆ ಇವರ ಇತರ ಕಸಬುಗಳು.

ಅಡಕೆ ಕೊಯ್ಯಲು ಮರ ಹತ್ತುವುದರಲ್ಲಿ ಹಸಲರು ನಿಷ್ಣಾತರು. ತುಂಬಾ ನಿರಾತಂಕವಾಗಿ ಆಡಕೆ ಮರ ಹತ್ತುವುದಲ್ಲದೆ ಒಂದು ಮರದಿಂದ ಇನ್ನೊಂದು ಮರಕ್ಕೆ ಜಿಗಿಯುತ್ತಾರೆ. ಅಡಕೆ ಗೊನೆ ಕೊಯ್ಯುವಲ್ಲಿ ಅವರು ತೋರಿಸುವ ಕೈಚಳಕ ಆಶ್ಚರ್ಯವನ್ನುಂಟು ಮಾಡುವಂಥದ್ದು.

ಒಳಾಡಳಿತ ವ್ಯವಸ್ಥೆ : ಹಸಲರಲ್ಲಿ ಸಾಮಾಜಿಕ ನಿಯಂತ್ರಣ ಮೊದಲು ಇರುತ್ತಿದ್ದುದು ಬುಡಕಟ್ಟು ಪಂಚಾಯಿತಿಯಲ್ಲಿ. ಆದರೆ ಈಗ ಅದು ಯಜಮಾನನ ಕೈಯಲಿದೆ. ಪೂಜಾರಿ ಅಥವಾ ಗಾರುಡಿಗನಿಗೆ ಮಹತ್ತರ ಸ್ಥಾನ ಕಲ್ಪಿಸಲಾಗಿದೆ. ಅವನು ಅತಿಮಾನುಷ ಶಕ್ತಿಯೊಂದಿಗೆ ಸಂಪರ್ಕವಿರಿಸಿಕೊಂಡಿದ್ದಾನೆಂಬುದು ಹಸಲರ ಆಚಲ ನಂಬಿಕೆ.

ಜನನ : ತಿಂಗಳ ಋತುಚಕ್ರದ ಮೇಲೇ ಗರ್ಭೀಣಿಯನ್ನು ಗುರುತಿಸಲಾಗುವುದು. ಏಳನೆಯ ತಿಂಗಳಲ್ಲಿ ಗರ್ಭಿಣಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಮಾಡಿ ಉಣಬಡಿಸಲಾಗುವುದು.ಅಂದು ಬಂಧುಬಾಂಧವರು ಮನೆಗೆ ಆಗಮಿಸಿ ಅವಳಿಗೆ ಕಾಣಿಕೆ ನೀಡುವರು ಈ ಸಮಾರಂಬಕ್ಕೆ ‘ಬಯಕೆ ಸಂಮಾನ’ ಎಂದು ಹೆಸರು.

ಚೌಲ : ಐದು, ಏಳು, ಒಂಭತ್ತನೆಯ ವರ್ಷಗಳಲಿ ಇವರು ಚೌಲದ ಶಾಸ್ತ್ರ ಮಾಡುವರು. ದೇವರಿಗೆ ಮುಡಿಕೊಡುವ ಪದ್ಧತಿಯೂ ಉಂಟು.

ಋತುಮತಿ : ಹೆಣ್ಣು ಪ್ರಥಮ ಬಾರಿಗೆ ಋತುಮತಿಯಾದಾಗ ಆ ಸುದ್ದಿಯನ್ನು ಸೋದರಮಾವನಿಗೆ ತಲುಪಿಸಿ ‘ಒಸಗೆ ಕೊಟ್ಟೆ’ ಕೊಟ್ಟು ಬರುವರು. ಇಸಗೆ ಕೊಟ್ಟೆಯಲ್ಲಿ ಅಡಕೆ, ಹಿಂಗಾರದ ಕೊಟ್ಟೆ ಮೊದಲಾದವು ಇರುವುವು.

ಮದುವೆ : ವಿವಾಹಪೂರ್ವ ಸಂಪರ್ಕ ಪಾಪವೆಂದು ಹಸಲರ ನಂಬಿಕೆ. ಇವರಲ್ಲಿ ಬಾಲ್ಯ ವಿವಾಹ ಪದ್ಧತಿ ಇಲ್ಲ. ವಿವಾಹಿತ ಸ್ತ್ರೀ ವ್ಯಭಿಚಾರ ನಡೆಸುವುದನ್ನು ಗಂಭೀರವಾಗಿ ಪರಿಗಣಿಸುವರು. ಹೆಣ್ಣು ಋತುಮತಿಯಾದ ಬಳಿಕ ಅಥವಾ ಅದಕ್ಕೂ ಸ್ವಲ್ಪ ಪೂರ್ವದಲ್ಲಿ ವಿವಾಹ ಮಾಡುವುದುಂಟು. ಹಿರಿಯಕ್ಕನ ಮಗಳನ್ನು ವಿವಾಹವಾಗುವ ಪದ್ಧತಿ ಇವರಲ್ಲುಂಟು. ಬಹುಪತ್ನಿತ್ವ ಪದ್ಧತಿ ಇಲ್ಲ. ಮೊದಲ ಪತ್ನಿಗೆ ಮಕ್ಕಳಾಗದಿದ್ದಲ್ಲಿ ಮರುಮರುವೆ ಮಾಡಿಕೊಳ್ಳಲು ಸಮ್ಮತಿ ಇದೆ.

ಶೋಭನ : ಶೋಭನ ನಡೆಯುವುದು ಗಂಡಿನ ಮನೆಯಲಿ. ಹಿಂದೆ ಶೋಭನ ವಿವಾಹದ ಒಂದು ಅಂಗವಾಗಿತ್ತು. ಅದಕ್ಕೆ ಪ್ರತ್ಯೇಕವಾದ ಕಾರ್ಯಕ್ರಮವಿರುತ್ತಿರಲಿಲ್ಲ. ಯಾವಾಗ ವಿವಾಹ ನಡೆದರೂ ಗಂಡು ಹೆಣ್ಣು ಕೂಡಲು ದೀಪಾವಳಿ ತನಕ ಕಾಯಬೇಕಿತ್ತು. ಬೂರೆಹಬ್ಬದ (ನರಕ ಚರುರ್ದಶಿ) ದಿನ ಗಂಡು ಹೆಣ್ಣು ಕೂಡುವುದು ಸಂಪ್ರದಾಯ.

ಮರುಮದುವೆ : ಹಸಲರಲ್ಲಿ ಪುನರ್ವಿವಿವಾಹ ಪದ್ಧತಿ ಇದೆ. ಗಂಡಿನ ಸೋದರನನ್ನುಳಿದಂತೆ ಬೇರೆ ಯಾರನ್ನಾದರೂ ವಿವಾಹವಾಗಬಹುದು. ಬ್ರಹ್ಮಚಾರಿಯನ್ನು ವಿಧವೆ ವಿವಾಹವಾಗಲು ಅವಕಾಶವಿಲ್ಲ. ಆದರೆ ಅವನು ಅವಳನು ಪ್ರೀತಿಸಿ, ಅವಳನ್ನೇ ವಿವಾಹವಾಗ ಬಯಸಿದರೆ ಮೊದಲಿಗೆ ಅವನ ವಿವಾಹವನ್ನು ಎಕ್ಕದ ಗಿಡದೊಂದಿಗೆ ಮಾಡಲಾಗುತ್ತದೆ. ಅನಂತರ ವಿಧವೆಯೊಂದಿಗೆ ವಿವಾಹ. ಹೀಗೆ ವಿವಾಹ ಮಾಡಿಕೊಂಡಾಗ ತೆರೆಬೇಕಾದ ದಂಡ ೨೦ ರೂಪಾಯಿಗಳು. ವಿಧವಾ ಪುನರ್ವಿವಿವಾಹಕ್ಕೆ ‘ಕೂಡಿಕೆ’ ಅಥವಾ ‘ಸೀರುಡಿಕೆ’ ಎನ್ನುವರು. ವಿಧುರ ವಿಧವೆಯರ ವಿವಾಹ ಕಾರ್ಯದಲ್ಲಿ ಮುತ್ತೈದಯರು ಭಾಗವಹಿಸುವುದಿಲ್ಲ.

ವಿವಾಹ ವಿಚ್ಛೇದನ : ಹಸಲರಲ್ಲಿ ವಿವಾಹ ವಿಚ್ಛೇದನಕ್ಕೂ ಅವಕಾಶವಿದೆ. ವಿವಾಹ ವಿಚ್ಛೇದನ ಪಡೆಯುವಾತ ತನ್ನ ಜಾತಿ ಜನರನ್ನೂ ಹಿರಿಯರನ್ನೂ ಸೇರಿಸಿ ಹೆಂಡತಿಯನ್ನು ಬಿಡುವುದಕ್ಕೆ ಕಾರಣವನ್ನು ತಿಳಿಸಬೇಕು. ಜಾತಿ ಜನರಿಂದ ಮತ್ತು ಹಿರಿಯರಿಂದ ಒಪ್ಪಿಗೆ ಪಡೆದ ಬಳಿಕ ಮಾತ್ರ ವಿಚ್ಛೇದನ ಮಾಡಿಕೊಳ್ಳಬಹುದು.

ಶವಸಂಸ್ಕಾರ : ಹಸಲರಲ್ಲಿ ಸತ್ತವರನ್ನು ಹುಗಿಯುವ ಮತ್ತು ಸುಡುವ ಎರಡೂ ಪದ್ಧತಿಗಳಿವೆ. ಕೆಲವು ಪ್ರದೇಶಗಳಲ್ಲಿ ವಿವಾಹಿತರು ಸತ್ತರೆ ಸುಡುವುದು ಅವಿವಾಹಿತರು ಸತ್ತರೆ ಹೂಳುವುದು ರೂಢಿಯಲ್ಲಿದೆ. ಬದುಕಿದ್ದಾಗ ಎಲ್ಲಮ್ಮನ ಅಥವಾ ಗುತ್ತಮ್ಮ ದೇವರ ಮಣಿಯನ್ನು ಧರಿಸಿಕೊಂಡವರನ್ನು ಸತ್ತ ಮೇಲೆ ಸುಡುತ್ತಾರೆ.

ಹಲಸರಲ್ಲಿ ಯಾರಾದರೂ ನಿಧನರಾದರೆ ಅದಕ್ಕೆ ಭೂತದ ಚೇಷ್ಟಯೇ ಕಾರಣ ಎಂದು ಅವರು ಭಾವಿಸುತ್ತಾರೆ. ಆಗ ಮಂತ್ರವಾದಿ ಅಥವಾ ಜ್ಯೋತಿಯ ನೆರವು ಪಡೆಯುತ್ತಾರೆ. ಆತ ನೆರೆಮನೆಯ ಯಾವನನ್ನಾದರೂ ಭೂತದ ಕಳ್ಳನೆಂದು ಹೆಸರಿಸುತ್ತಾನೆ. ಕೂದಲು ಕಿತ್ತೆಸೆಯುವುದರ ಮೂಲಕ ಮೃತನ ಆತ್ಮಕ್ಕೆ ಶಾಂತಿ ಸಿಗುತ್ತದೆಂದು ನಂಬಿಕೆ. ಸಂಬಂಧಿಕರಿಗೆ ಭೂತದ ಚೇಷ್ಟೆ ನಿವಾರಿಸಿಕೊಳ್ಳಲು ಹಂದಿ ಮತ್ತು ಹದ್ದನ್ನು ಕಾಣಿಕೆ ನೀಡಲಾಗುವುದು, ಬಳಿಕೆ ಭೂತದ ಬಿಡುಗಡೆಯಾಯಿತೆಂದು ಭಾವಿಸಬಹುದು.

ಹಬ್ಬಗಳು : ಹಿಂದೂ ಹಬ್ಬಗಳಾದ ಉಗಾದಿ, ನಾಗರಪಂಚಮಿ, ಗೌರಿಹಬ್ಬ, ಭೂಮಿ ಹುಣ್ಣಿಮೆ, ಸಂಕ್ರಾಂತಿ, ದೀಪಾವಳಿಗಳನ್ನು ಆಚರಿಸುತ್ತಾರೆ. ಹಸಲರಿಗೆ ದೀಪಾವಳಿ ಬಹುದ ದೊಡ್ಡ ಹಬ್ಬ. ಉತ್ಸಾಹ, ಸಡಗರ, ಸಂಭ್ರಮಗಳಿಂದ ಈ ಹಬ್ಬವನ್ನು ಆಚರಿಸುತ್ತಾರೆ. ದೀಪಾವಳಿ ಪಾಡ್ಯ, ಕರಿ, ವರ್ಷದ ತೊಡಕು ಈ ಮೂರ ದಿನಗಳು ಹಸಲರಿಗೆ ಮಹತ್ತರ ದಿನಗಳು. ಪಾಂಡ್ಯದಿಂದ ಮೂರು ದಿವಸಗಳವರೆಗೆ ರಾತ್ರಿ ಹಸಲರು ಸಾಂಪ್ರದಾಯಿಕವಾಗಿ ಹಚ್ಚಿಕೊಂಡ ಜ್ಯೋತಿಯನ್ನು ಮನೆಮನೆಗೆ ಮುಟ್ಟಿಸಿ ಹಾಡುವ ಸಂಪ್ರಾದಯಕ್ಕೆ ಹಬ್ಬ ಹಾಡುವುದು ಎಂದು ಹೆಸರು.

ಧಾರ್ಮಿಕ ಆಚರಣೆ ಮತ್ತು ಕಲೆ : ಒಂದು ಕಾಲದಲ್ಲಿ ಹಸಲರ ನಂಬಿಕೆಯಿದ್ದದ್ದು ಸರ್ವಚೇತನವಾದದಲ್ಲಿ. ಆದರೆ ಈಗ ಅವರ ಸಂಪ್ರದಾಯಗಳೆಲ್ಲ ಸಂಪೂರ್ಣವಾಗಿ ಹಿಂದೂಗಳದ್ದೇ ಆಗಿದೆ. ಹಸಲರು ಆತ್ಮದ ಅಸ್ತಿತ್ವದಲ್ಲಿ ದೃಢ ವಿಶ್ವಾಸವುಳ್ಳವರು. ರಸಸುರಿಸುವ ಗಿಡದ ಬುಡದಲ್ಲಿ ತಮ್ಮ ಪಿತೃಗಳ ಹೆಸರಿನಲ್ಲಿ ಸುಗಂಧ ದ್ರವ್ಯಗಳನ್ನು ಲೇಪಿಸಿ ಪೂಜಿಸುವರು. ಪಿತೃಗಳ ಆತ್ಮವನ್ನು ಪೂಜಿಸುವುದು ಸಂಪ್ರದಾಯ. ಪ್ರತಿವರ್ಷವೂ ಪಿತೃಗಳನ್ನು ಆಹ್ವಾನಿಸದಿದ್ದಲ್ಲಿ ಮನೆಯಲ್ಲಿ ಯಾರಾದರೂ ಕಾಯಿಲೆಗೆ ತುತ್ತಾಗುವರೆಂಬುದು ಇವರ ನಂಬಿಕೆ.

ಹಲವು ದೈವಗಳನ್ನು ಇವರು ಆರಾಧಿಸುತ್ತಾರೆ, ತಿರುಪತಿ ತಿಮ್ಮಪ್ಪ, ಚಂದ್ರಗುತ್ತಿ ಎಲ್ಲಮ್ಮ, ಯಕ್ಷಿ, ಭೂತ, ಚೌಡಿ, ಮಾಸ್ತಿ ಮೊದಲಾದವುಗಳಿಗೆ ಇವರು ನಡೆದುಕೊಳ್ಳುವರು.

ಮನೆಯಲ್ಲಿ ಯಾರಾದರೂ ಕಾಯಿಲೆ ಬಿದ್ದರೆ, ಹಸು ಹಾಲು ಕರೆಯದಿದ್ದಲ್ಲಿ, ದನಕರುಗಳು ಕಳವಾದಲ್ಲಿ ಗದ್ದೆಯ ಬದಿಯ ಯಕ್ಷಿ, ಭೂತರಾಯಗಳಿಂದಾಗಿ ಹೀಗೆ ಆಗಿರಬಹುದೆಂದು ಭಾವಿಸಿ ಅವಕ್ಕೆ ಕೋಳಿ ಬಲಿಕೊಡುವುದುಂಟು.

ನಂಬಿಕೆಗಳು : ಶೂನ್ಯ ಮಾಸದಲ್ಲಿ ಇವರು ಶುಭಕಾರ್ಯ ಮಾಡುವುದಿಲ್ಲ. ಬೆಕ್ಕು ಮತ್ತು ಹಾವು ಬಲದಿಂದ ಎಡಕ್ಕೆ ಹೋಗುವುದು ಅಪಶಕುನವೆಂಬುದು ಇವರ ಭಾವನೆ. ಇವರ ಇತರ ಕೆಲವು ನಂಬಿಕೆಗಳನ್ನ : ಸೌದೆಯನ್ನು ಹೊತ್ತವರು ಎದುರು ಬರಬಾರದು, ಎಲ್ಲಿಗಾದರೂ ಹೊರಟಾಗ ಪೊರಕೆ ಹಿಡಿದು ಬರಬಾರದು, ಕನಸಲ್ಲಿನಲ್ಲಿ ಪೋಲೀಸರು ಕಾಣಬಾರದು, ಯಮನ ವಾಹನ ಕೋಣ ಅಥವಾ ಎಮ್ಮೆ ಕನಸಿನಲ್ಲಿ ಬರಬಾರದು, ವಿವಾಹವಾದಂತೆ ಕನಸು ಕಂಡರೆ ಅಶುಭ, ಕನಸಿನಲ್ಲಿ ಅಗ್ನಿ ಕಂಡರೆ ಶುಭ, ರಜಸ್ವಲೆಯಾದ ಹೆಣ್ಣು ಎದುರಾದರೆ ಶುಭ, ಬತ್ತ ತುಂಬಿದ ಕಣಜ ಕನಸಿನಲ್ಲಿ ಕಂಡರೆ ಸಂಪತ್ತು ಬರುತ್ತದಂತೆ, ಪ್ರಯಾಣಬೆಳಸಿದಾಗ ‘ಎಲ್ಲಿಗೆ’ ಎಂದು ಕೇಳಬಾರದು, ಕಾಗೆ, ಹದ್ದು, ಹಲ್ಲಿ ಮುಂತಾದವು ತಲೆಗೆ ಕುಕ್ಕಿದರೆ ಅಶುಭ.

ರುಬ್ಬುವ ಕಲ್ಲು ಶಿವನ ಪ್ರತಿರೂಪ ಎಂದು ಭಾವಿಸಿ ಅದನ್ನು ಒರಳಿನಿಂದ ಪ್ರತ್ಯೇಕಿಸುವುದಿಲ್ಲ. ಒರಳುಕಲ್ಲಿನ ಮೇಲೆ ಕುಳಿತುಕೊಳ್ಳುವುದಿಲ್ಲ. ಅದನ್ನು ದಾಟುವುದಿಲ್ಲ. ಸಂಜೆ ವೇಳೆ ಒಲೆ ಬೂದಿ ತೆಗೆಯುವುದಿಲ್ಲ.

ಕ್ರೀಡೆಗಳು ಹಾಗೂ ಮನರಂಜನೆ : ಬೇಟೆ ಅವರಿಗೆ ಅತ್ಯಂತ ಪ್ರಿಯವಾದ್ದು. ಕಾಡು ಹಕ್ಕಿ, ಜೀಂವಾರಿ ಇವುಗಳ ಬೇಟೆಯಾಡಲು ತಮ್ಮೊಂದಿಗೆ ನಾಯಿಗಳನ್ನು ಕರೆದೊಯ್ಯುತ್ತಾರೆ. ಕೋಳಿ ಅಂಕ ಇವರಿಗೆ ಮನರಂಜನೆ ಒದಗಿಸುತ್ತದೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೋರಿ ಓಡಿಸುವ ಸ್ಪರ್ಧೆಯನ್ನು ಇವರು ಸಂತೋಷದಿಂದ ನೋಡುತ್ತಾರೆ. ಹಾಗೆಯೇ ಕಂಬಳದ ವೀಕ್ಷಣೆ ಇವರಿಗೆ ಪ್ರಿಯ. ಇವರಿಗೆ ಯಕ್ಷಗಾನ ಬಯಲಾಟವೆಂದರೆ ತುಂಬ ಇಷ್ಟ.

ಜಿ. ಎಸ್‌. ಬಿ.

 

ಹಾಲಕ್ಕಿ ಒಕ್ಕಲಿಗರು ಕರ್ನಾಟಕ ಬುಡಕಟ್ಟುಗಳಲ್ಲಿ ಒಂದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಇವರು ನೆಲಸಿದ್ದಾರೆ. ಇವರು ಕರಾವಳಿ ಪ್ರದೇಶಕ್ಕೆ ಬಂದ ಮೊದಲ ವಲಸಿಗರೆಂದು ಹೆಳಲಾಗಿದೆ. ಇವರ ಕುಲದೈವ ತಿರುಪತಿ ತಿಮ್ಮಪ್ಪ. ಆದ್ದರಿಂದ ತಿರುಪತಿ ಕಡೆಯಿಂದ ಬಂದಿರಬಹುದೆಂಬುದು ಒಂದು ಊಹೆ. ಹಾಲಕ್ಕಿ ಒಕ್ಕಲಿಗರ ಜನಪದ ಗೀತೆಗಳಲ್ಲಿ ಮೂಡಣ ಸಮುದ್ರವನ್ನು ಬಣ್ಣಿಸಲಾಗಿದೆ. ಇವರು ಹಾಲಿನಂತಹ ಅಕ್ಕಿ ಬೆಳೆಯುವುದರಿಂದ ಹಾಲಕ್ಕಿ ಎಂಬ ಹೆಸರು ಬಂದಿರಬಹುದು. ಇವರ ಪ್ರಧಾನ ಕಸುಬ ವ್ಯವಸಾಯ ಮತ್ತು ಹೈನುಗಾರಿಕೆ ಇವರು ಹವ್ಯಕರ ಮದುವೆ ಸಂದರ್ಭದಲ್ಲಿ ಮದುಮಗ ದಿಬ್ಬಣ ಹೊರಟಾಗ ದಾರಿಯುದ್ದಕ್ಕೂ ಅಕ್ಕಿ ಚೆಲ್ಲುತ್ತಿದ್ದುದರಿಂದ ಇವರಿ ಹಾಲಕ್ಕಿ ಎಂಬ ಹೆಸರು ಬಂದದ್ದಾಗಿ ಹೇಳಲಾಗಿದೆ.

ಉಡುಗೆ ತೊಡುಗೆ : ಪುರುಷರು ಕಚ್ಚೆ ರುಮಾಲು ಮತ್ತು ಹೆಗಲಿಗೆ ಕಂಬಳಿ ಧರಿಸುವರು. ಸ್ತ್ರೀಯರು ಕುಪ್ಪಸ ತೊಡುವುದಿಲ್ಲ. ಸೊಂಟಕ್ಕೆ ಸೀರೆ ಸುತ್ತಿ ಎದೆ ಮುಚ್ಚುವಂತೆ ಸೆರಗೆಳೆದುಕೊಂಡು ಕೊರಳಿಗೆ ಗಂಟು ಹಾಕಿಕೊಳ್ಳುವರು. ಕತ್ತು ಬಾಗುವಷ್ಟು ಕರಿಮಣಿ ಸರಗಳು ಇವರ ಕೊರಳನ್ನು ಅಲಂಕರಿಸಿರುತ್ತದೆ. ಬೆಳ್ಳಿ ಬಳೆಗಳು ತೋಳು ಕಡಗ, ಮುಗುತಿ, ಕುಡುಕು ಇತರ ಆಭರಣಗಳು.

ಇವರು ಮಾಂಸಹಾರಿಗಳು. ಆದರೆ ತಮ್ಮ ‘ಬಳಿ’ಗೆ ಸಂಬಂಧಿಸಿದ ಪ್ರಾಣಿಗಳ ಮಾಂಸ ತಿನ್ನುವುದಿಲ್ಲ. ಅಕ್ಕಿ, ಹಾಲು, ಮೀನು ಇವರ ಮುಖ್ಯ ಆಹಾರ, ಊಟದಲ್ಲಿ ಖಾರದ ಬಳಕೆ ಹೆಚ್ಚು. ಮದ್ಯಪಾನ ಮಾಡುವುದಿಲ್ಲ.

ಸಂಸ್ಕಾರ ಸಂಪ್ರದಾಯಗಳು : ಇವರಿಗೆ ಭೂತ ಪ್ರೇತಗಳ ಅಸ್ತಿತ್ವದಲ್ಲಿ ನಂಬಿಕೆ. ಪ್ರಸವ ವಿಳಂಬವಾದರೆ ಅದಕ್ಕೆ ಭೂತದ ಪೀಡೆ ಎಂದು ಭಾವಿಸುವರು. ಕುಮಾರ ಪೈಕ ಇವರ ಮಂತ್ರವಾದಿ. ಮಗುವಿನ ನಾಮಕರಣವನ್ನು ಮಾಡುವವರು ಮನೆಯ ಹಿರಿಯ ಯುಜಮಾನ ಅಥವಾ ಯಜಮಾನತಿ. ಗಂಡು ಮಗುವಿಗೆ ಬಿರ ಹಾಗೂ ತಿಮ್ಮ ಶುಕ್ರ, ಇಡ್ಕು, ಶಂಭು, ಹುಲಿಯ ಇತ್ಯಾದಿ ಹೆಸರಿಡುತ್ತಾರೆ. ಹೆಣ್ಣು ಮಕ್ಕಳಿಗೆ ತಿಮ್ಮಿ, ಪುಟ್ಟಿ, ನಾಗಿ, ಮಾರಿ, ಇಡ್ಕಿ, ಬಾಗಿಮ್ಮಿ, ಗಂಗೆ ಮೊದಲಾದ ಹೆಸರು ಇಡುವರು. ಗಂಡಸರ ಹೆಸರಿನ ಹಿಂದೆ ಗೌಡ ಉಪಪದದ ಬಳಕೆ ಉಂಟು.

ಹೆಣ್ಣು ಮಕ್ಕಳಿಗೆ ಆರು ಅಥವಾ ಏಳು ತುಂಬಿದಾಗ ಬೊಟ್ಟು ಕಟ್ಟುವುದು ಎಂಬ ಶಾಸ್ತ್ರ ಮಾಡುವರು. ಕುಂಕುಮ ಹಚ್ಚುವ ಭಾಗವನ್ನು ಮುಳ್ಳಿನಿಂದ ಚುಚ್ಚಿ ಬಳಿಕ ಕಾಲಿಗೆ ಸವರುತ್ತಾರೆ. ಮಗುವನ್ನು ದೇವರ ಮುಂದೆ ಕೂಡಿಸಿ ಅವಳಿಗೆ ತಲೆಬಾಚಿ ಹೂ ಮುಡಿಸುತ್ತಾರೆ. ಹೆಂಗಸರೆಲ್ಲ ತಮ್ಮ ಕೊರಳಿಂದ ಒಂದೊಂದು ಕರಿಮಣಿ ಸರವನ್ನು ಅವಳ ಕೊರಳಿಗೆ ಹಾಕುತ್ತಾರೆ. ಇದಕ್ಕೆ ಗೇಟಿ ಕಟ್ಟುವ ಸಂಪ್ರದಾಯ ಎಂದು ಹೆಸರು.

72_70A_DBJK-KUH

ಮದುವೆ : ಹಿಂದೆ ಇವರಲ್ಲಿ ಬಾಲ್ಯ ವಿವಾಹ ಇತ್ತು. ಇಂದು ಅದು ಕಡಿಮೆಯಾಗಿದೆ. ಇವರಲ್ಲಿ ಹೆಣ್ಣಿಗೆ ಹೆಣ್ಣು ಪದ್ಧತಿ ಇದೆ. ಹಾಲಕ್ಕಿಗಳಲ್ಲಿ ಸ್ತ್ರೀಯರ ಸಂಖ್ಯೆ ಕಡಿಮೆ. ಒಂದು ಕುಟುಂಬಕ್ಕೆ ಗಂಡಿಗೆ ಹೆಣ್ಣು ಕೊಡುವಾಗ ಆ ಕುಟುಂಬದ ಹೆಣ್ಣೊಂದನ್ನು ತಮ್ಮ ಮನೆಗೆ ತುಂಬಿಸಿಕೊಳ್ಳುವುದೇ ಹೆಣ್ಣಿಗೆ ಹೆಣ್ಣು ಪದ್ಧತಿ. ಒಂದು ಹೆಣ್ಣು ಹೊರಕ್ಕೆ ಹೋದರೆ ಇನ್ನೊಂದು ಹೆಣ್ಣು ಮನೆಯ ಒಳಗೆ ಬರಬೇಕು. ವಧುದಕ್ಷಿಣೆ ಇವರಲ್ಲಿದೆ. ವಿವಾಹ ನಿಶ್ಚಯವಾದ ಬಳಿಕ ಊರ ಗೌಡನ ಮುಂದಾಳತ್ವದಲ್ಲಿ ಜವಳಿ ತರಲು ಹೋಗುತ್ತಾರೆ. ಪ್ರತಿ ಮನೆಗೆ ಒಬ್ಬರಂತೆ ಗಂಡಸರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ವರನಿಗೆ ಬಾಸಿಂಗ ಕಟ್ಟುವವರು ಊರಗೌಡ. ಅನಂತರ ದಿಬ್ಬಣ ವಧುವಿನ ಮನೆಗೆ ಹೊರಡುವುದು. ದಿಬ್ಬಣ ಅರ್ಧ ದಾರಿ ಕ್ರಮಿಸಿದಾಗ ವರನ ಕಡೆಯ ಇಬ್ಬರು ಹೆಣ್ಣಿನ ಮನೆಗೆ ತೆರಳುವರು. ಅಲ್ಲಿ ಹೆಣ್ಣಿನ ಮನೆಯವರಿಗೆ ದಿಬ್ಬಣ ಹೊರಟ ಸಂಗತಿ ಹೇಳುತ್ತಾರೆ. ಬಳಿಕ ಪರಸ್ಪರ ಹೆಣ್ಣು ಗಂಡಿನ ಹೆಸರು ಕೇಳಿಕೊಳ್ಳುತ್ತಾರೆ. ಗಂಡಿನವರು ಬೇರೆ ಕಡೆ ದಿಬ್ಬಣ ಒಯ್ಯಬಾರದೆಂಬ ಕಾರಣಕ್ಕಾಗಿ ಈ ಪದ್ಧತಿ ಇದೆ. ಇದಕ್ಕೆ ಹೆಸರೂಟ ಎಂದ ಹೆಸರು.

ಮಲ್ಲಿಗೆ ಹೂ ಅರೆದು ಸಿದ್ಧಪಡಿಸಿದ ತಿರುಗಟ್ಟು, ತಿಕ್ಕೋನ ಮಲ್ಲಿ ಈ ಮಿಶ್ರಣವನ್ನು ಗಂಡ ಹೆಂಡತಿಯ ಭುಜಕ್ಕೂ ಹೆಂಡತಿ ಗಂಡನ ಭುಜಕ್ಕೂ ಬಳಿಯುತ್ತಾರೆ. ಹಾಲಕ್ಕಿಗಳ ಉಡುಗರೆ ಶಾಸ್ತ್ರಕ್ಕೆ ಮರಗಟ್ಟು ಶಾಸ್ತ್ರ ಎನ್ನಲಾಗಿದೆ. ಹೆಣ್ಣು ಗಂಡನ ಮನೆಗೆ ತೆರಳುವಾಗ ತೆಂಗು ಅಡಕೆ ಸಸಿ ಮತ್ತು ಮಣ್ಣಿನ ಪಾತ್ರೆಗಳನ್ನು ಬಳುವಳಿಯಾಗಿ ನೀಡಲಾಗುವುದು. ತೆಂಗು ಅಡಕೆಗಳು ಫಲ ಬಿಟ್ಟಾಗ ಮಗಳು ತವರನ್ನು ನೆನೆಯಲಿ ಎಂಬುದೇ ಇದರ ಹಿಂದಿನ ಆಶಯ. ಇವರು ಯುಗಾದಿ, ಸಂಕ್ರಾಂತಿ, ಹೋಳಿ ಹಬ್ಬಗಳನ್ನು ಸಂಭ್ರಮದಿಂದ ಆಚರಿಸುತ್ತಾರೆ. ತಿರುಪತಿ ಯಾತ್ರೆ ಮಾಡಿ ಬಂದವರಿಗೆ ದಾಸ ಎನ್ನತ್ತಾರೆ.

ಮಣ್ಣಿನ ಗೋಡೆ ಮತ್ತು ಹುಲ್ಲಿನ ಚಾವಣಿಗಳಿಂದ ಮನೆ ಕಟ್ಟುತ್ತಾರೆ. ಮನೆಯ ಹಿಂದೆ ಅಥವಾ ಮುಂದೆ ಒಂದು ಕೈ ತೋಟವಿರುತ್ತದೆ. ಅಂಗಳದಲ್ಲಿ ತುಳಸಿ ಕಟ್ಟೆ ಇದ್ದು. ಅದರಲ್ಲಿ ವೆಂಕಟರಮಣನನ್ನು ಪ್ರತಿಷ್ಠಾಪಿಸುತ್ತಾರೆ. ಇವರ ಮನೆಯ ನೆಲ ನುಣುಪಾಗಿ ಹೊಳೆಯುತ್ತಿರುತ್ತದೆ.

ಹಾಲಕ್ಕೆ ಒಕ್ಕಲಿಗರಿಗೆ ಅವರದೇ ಆದ ಆಡಳಿತ ಪದ್ಧತಿ ಇದೆ. ಉತ್ತರ ಕನ್ನಡದ ಹಾಲಕ್ಕಿ ಒಕ್ಕಲಿಗರಲ್ಲಿ ಏಳು ಸೀಮೆಗಳಿವೆ. ಈ ಸೀಮೆಯಲ್ಲಿ ಮಾಗಣೆ ಕೊಪ್ಪಗಳೆಂಬ ವಿಭಾಗಗಳಿವೆ. ಹಾಲಕ್ಕಿ ಸಮಾಜದ ಹಿರಿಯ ಊರ ಗೌಡ ಹಲವು ಗ್ರಾಮಗಳ ಸಮುದಾಯದ ಹಿರಿಯ ಸೀಮೆ ಗೌಡ. ಹಲವು ಸೀಮೆಗಳ ಮೇಲೆ ಅರಸು ಗೌಡನು ಇರುತ್ತಾನೆ. ಅರಸು ಗೌಡನಿಗೆ ಸಹಾಯಕನಾಗಿರುವಾತ ಪ್ರಧಾನಿ ಗೌಡ. ಧಾರ್ಮಿಕ ಆಚರಣೆಗೆ ಸಂಬಂಧಿಸಿದಂತೆ ಸಲಹೆ ನೀಡುವಾತ ಗುರುಗೌಡ. ಜನಮನಗೌಡ ಸೀಮೆ ಬುದವಂತ ಸೀಮೆ ಕೋಲಕಾರ ಇವರ ಇತರ ಅಧಿಕಾರಿಗಳು.

ಜನಪದ ವೈದ್ಯ : ಇವರ ಕೊಪ್ಪಗಳಲ್ಲಿ ಪಶುಗಳಿಗೆ ಔಷಧಿ ನೀಡುವ ವೈದ್ಯರಿದ್ದಾರೆ. ಕಾಡಿನ ವನಸ್ಪತಿ ತಂದು ಔಷಧಿ ಸಿದ್ಧಪಡಿಸುವರು. ಅಂಕೋಲೆಯ ಬೆಳಂಬಾರದ ಬೊಮ್ಮೇಗೌಡನ ಮನೆತನ ಪಕ್ಷವಾತಕ್ಕೆ ನೀಡುವ ಔಷಧಿ ಪದ್ಧತಿ ಪ್ರಸಿದ್ಧವಾದದ್ದು. ತೊಡೂರಿನ ಹಾಲಕ್ಕಿ ಗೌಡ ಮನೆತನ ಎಲುಬಿನ ಕಾಯಿಲೆಗಳಿಗು ವಡಗೆರೆ ಕೊಪ್ಪದ ಮನೆತನ ಮಕ್ಕಳ ಕಾಯಿಲೆಗೂ ನೀಡುವ ಔಷಧಿ ಪ್ರಸಿದ್ಧವಾದದ್ದು.

ಜನಪದ ಸಾಹಿತ್ಯ : ಹಾಲಕ್ಕಿ ಒಕ್ಕಲಿಗರಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿದೆ. ಇವರಲ್ಲಿ ಹಾಡುಬಾರದ ಹೆಂಗಸರಿಲ್ಲ. ಪದ ಬಾರದ ಗಂಡಸರಿಲ್ಲ. ಜನಪದ ಕಥೆ, ಗೀತೆ, ಒಗಟು, ಗಾದೆಗಳ ವಿಪುಲವಾಗಿವೆ.

ಜನಪದ ಕಲೆಗಳು : ಹಾಲಕ್ಕಿ ಗಂಡಸರು ಗುಮಟೆ ವಾದನದೊಂದಿಗೆ ಹೇಳುವ ಪದಗಳು ಗುಮಟೆಪಾಂಗು, ಗುಮಟೆ ಹಿಡಿದು ಸಾಮುಹಿಕವಾಗಿ ಹಾಡು ಹೇಳುತ್ತಾರೆ. ಮಣ್ಣಿನ ಮಡಕೆಯಿಂದ ತಯಾರಿಸಿದ ವಾದ್ಯ ಗುಮಟೆ. ಈ ವಾದ್ಯದ ಒಂದು ಬದಿ ತೆರೆದಿದ್ದು ಇನ್ನೊಂದು ಬದಿಗೆ ಉಡದ ಅಥವಾ ಕಾನುಕುರಿಯ ಚರ್ಮಬಿಗಿದಿರುವರು. ಹುಂಬಳ್ಳಿಯನ್ನು ಎರಡು ಬದಿಗೆ ಕಟ್ಟಿಕೊಂಡು ಕೊರಳಿಗೆ ಹಾಕಿಕೊಂಡಿರುವರು.

ಸುಗ್ಗಿ ಕುಣಿತ ಹಾಲಕ್ಕಿ ಒಕ್ಕಲಿಗರಿಗೆ ಸಿದ್ಧಿಸಿದೆ. ಸಾಮಾನ್ಯವಾಗಿ ಕಾಮನ ಹುಣ್ಣಿಮೆಯ ಸಂದರ್ಭದಲ್ಲಿ ಫಾಲ್ಗುಣ ಶುದ್ಧ ದಶಮಿಯಿಂದ ಹುಣ್ಣಿಮೆಯವರೆಗೆ ಸುಗ್ಗಿಪದಗಳದೇ ಸುಗ್ಗಿ. ಸುಗ್ಗಿಯಲ್ಲಿ ಹಿರಿ ಸುಗ್ಗಿ, ಕಿರಿಸುಗ್ಗಿ ಎಂಬ ಎರಡು ವಿಧ. ಬಣ್ಣ ಬಣ್ಣದ ಬೇಗಡೆಸುತ್ತಿದ್ದ ತುರಾಯಿಗಳಿಂದ ಆಕರ್ಷಕವಾಗಿರುವುದು ಹಿರಿ ಸುಗ್ಗಿ. ಕಿರಿಸುಗ್ಗಿಗೆ ತುರಾಯಿ ಕೋಲು ಕುಂಚಗಳು ಇರುವುದಿಲ್ಲ. ತಲೆಗೆ ಮುಂಡಾಸು ಇಳಿಬಿಡಲು ಹೂದಂಡೆ ಇದ್ದರೆ ಸಾಕು. ಆದ್ಧರಿಂದಲೇ ಇದಕ್ಕೆ ಬೋಳು ಸುಗ್ಗಿ ಎಂದು ಹೆಸರು.

ಸುಗ್ಗಿ ಕುಣಿತಕ್ಕೆ ಗುಮಟೆ ವಾದ್ಯದೊಂದಿಗೆ ತಾಲ ಮದ್ಧಲೆಗಳು ಇರುವುವು. ಸುಗ್ಗಿ ಕುಣಿಯುವವರು ಕಾಲಿಗೆ ಗೆಜ್ಜೆ ಕಟ್ಟಿ ಸೀರೆ ಅಥವಾ ಧೋತ್ರಗಳನ್ನು ಉಡುತ್ತಾರೆ. ಹಸಿರು ಅಥವಾ ಕೆಂಪುಬಣ್ಣದ ಅಂಗಿ ಧರಿಸುವರು. ಕೊರಳಿಗೆ ಮುತ್ತಿನ ಇಲ್ಲವೆ ಹೂವಿನ ಹಾರ ತುರಾಯಿಯನ್ನು ಇಳಿಬಿಡಲು ಬೆಂಡಿನ ಕಾಗದ ಬಳಸುವರು. ಕುಣಿತಕ್ಕೆ ಎಂಟು ಅಥವಾ ಹನ್ನೆರಡು ಜನ ಇರುತ್ತಾರೆ. ಸುಗ್ಗಿ ಕುಣಿತದೊಂದಿಗೆ ಹಾಲಕ್ಕಿ ಒಕ್ಕಲಿಗರು ಅಲಾದಿಕುಣಿತ ಮಾಡುತ್ತಾರೆ.

ಹಾಲಕ್ಕಿಗಳ ಹಗರಣ ವಿಶಿಷ್ಟವಾದದ್ದು. ಇವರು ಜಾತ್ರೆ ಸುಗ್ಗಿ ಸಂದರ್ಭದಲ್ಲಿ ಈ ಹಗರಣ ಮಾಡುತ್ತಾರೆ. ಮದುವೆಯ ಮಾರನೆಯ ದಿನ ಗೃಹ ಪ್ರವೇಶದ ದಿನ ದೇವಕಾರ್ಯದ ದಿನ ಹಗರಣ ಏರ್ಪಡಿಸುತ್ತಾರೆ. ಹಗರಣದಲ್ಲಿ ಹಾಸ್ಯವೇಷ, ಪೋಲೀಸ್‌ ಕಳ್ಳನ್ನು ಬಂಧಿಸುವ ದೃಶ್ಯ ಕೋಡಂಗಿ, ಕುಡುಕ, ಸಿಂಹ ಮೊದಲಾದವು ಬರುತ್ತವೆ. ಹಾಲಕ್ಕಿಗಳು ಅಪರೂಪಕ್ಕೆ ಪುಗಡಿಕುಣಿತ ಮಾಡುತ್ತಾರೆ. ಕೈಯಲ್ಲಿ ಬರಿದಾದ ಕೊಡ ಹಿಡಿದು ಹೆಂಗಸರು ಹಾಡಿನ ಗತ್ತಿಗೆ ತಕ್ಕಂತೆ ಕುಣಿಯುವರು. ಕೊಡದ ಬಾಯಲ್ಲಿ ಅಭಾಸಾ ಎಂದು ಗಾಳಿಯಾಡುವುದು. ಮಳೆ ಬಾರದಾಗ ಹಾಲಕ್ಕಿ ಹೆಂಗಸರು ತಾರ್ಲೆ ಹಾಡು ಹೇಳುತ್ತಾರೆ. ಏಳು ರಾತ್ರಿ ಏಳು ಹಗಲು ಸತತವಾಗಿ ಹಾಡಿದರೆ ಮಳೆ ಬರುತ್ತದೆಂಬುದು ಇವರ ನಂಬಿಕೆ.

ಸಂಸ್ಕಾರ : ಮರಣ ಸಮೀಪಿಸಿದೆ ಎಂದು ತಿಳಿದಾಗ ಕುಟುಂಬದ ಹಿರಿಯರು ಅಥವಾ ದಾಸರು ಹರಿಗೋವಿಂದ ಭಜನೆ ಮಾಡುವರು. ಮೃತರನ್ನು ಸುಡುವುದು ಪದ್ಧತಿ. ಸತ್ತವರ ಆತ್ಮವನ್ನು ಶ್ಮಶಾನದಿಂದ ತಂದು ಒಂದು ಸ್ಥಳದಲ್ಲಿ ನಿಲ್ಲಿಸುವ ಕೆಲಸ ಮಾಟಗಾರನದು. ಸತ್ತವರ ಆತ್ಮವೆಂದು ಒಂದು ಪುಟ್ಟ ಕಲ್ಲನ್ನು ಶ್ಮಶಾನದಿಂದ ತಂದು ಅದಕ್ಕೆ ನೈವೇದ್ಯ ಮಾಡುತ್ತಾರೆ. ಇಪ್ಪತ್ತನೆಯ ದಿನ ಭೋಜನ.

ಹಾಲಕ್ಕಿ ಒಕ್ಕಲಿಗರಲ್ಲಿ ಕಥೆ ಮತ್ತು ಬೈಟಕುಗಳಿವೆ. ಸಂಗ್ಯಾಬಾಳ್ಯಾ ಗುಂಡಬರಮನ ನಾಟಕಗಳನ್ನು ಆಡುವುದುಂಟು. ಕಥನ ಕವನ, ಗಾದೆ, ಒಗಟು, ಜನಪದ ಕಥೆಗಳು, ಇವುಗಳ ಸಮೃದ್ಧ ಕಣಜವೇ ಇವರಲ್ಲಿದೆ. ಹಾಲಕ್ಕಿ ಹೆಂಗಸರು ಹಲಿ (ರಂಗೋಲಿ) ಬರೆಯುತ್ತಾರೆ. ಹಾಲಕ್ಕಿ ಗರತಿಗೆ ಹಾಡು ಹೇಳಲು ಬರಬೇಕು ಹಾಗೂ ಸೇಡಿ ಬರೆಯಲು ಬರಬೇಕು. ಬೇಟೆ ಮತ್ತು ಕೋಳಿ ಅಂಕಗಳು ಇವರ ಮನರಂಜನೆಗಳಾಗಿವೆ.

ಜಿ. ಎಸ್‌. ಬಿ.

 

ಹುಲಿವೇಷ ಹುಲಿವೇಷ ಹಾಕುವುದು ಸಾಮಾನ್ಯವಾಗಿ ಕರ್ನಾಟಕದ ತುಂಬೆಲ್ಲ ಕಂಡು ಬರುತ್ತದೆ. ಮೊಹರಂ ಮತ್ತು ಬಾಬಯ್ಯನ ಹಬ್ಬದ ಸಂದರ್ಭದಲ್ಲಿ ಈ ವೇ ಹೆಚ್ಚಾಗಿ ಹಾಕುತ್ತಾರೆ. ಉರುಸು, ಜಾತ್ರೆ ಹಬ್ಬಗಳಲ್ಲಿಯೂ ಹುಲಿವೇಷ ಧರಿಸುತ್ತಾರೆ. ಮನರಂಜನೆಗಾಗಿ ಹೊಟ್ಟೆಪಾಡಿಗಾಗಿ ಹುಲಿವೇಷ ಧರಿಸುವ ಕಲಾವಿದರೂ ಇದ್ದಾರೆ. ಬಿಸಿಲು, ಮಳೆ ಚಳಿಯಲ್ಲಿ ಬರಿಮೈಯಲ್ಲಿ ನಿಂತು ಸಹಿಸಿಕೊಂಡು ಕುಣಿದು ಕುಪ್ಪಳಿಸುವ ಶಕ್ತಿಯುಳ್ಳ ಯಾವ ವರ್ಗದ ವ್ಯಕ್ತಿಯಾದರೂ ಹುಲಿವೇಷ ಹಾಕಬಹುದು. ಹುಲಿವೇಷ ಹಾಕುವವರು ಸಾಮಾನ್ಯವಾಗಿ ೧೭ ರಿಂದ ೨೮ ವಯಸ್ಸಿನವರಿರುತ್ತಾರೆ. ಹರಕೆ ಹೊತ್ತವರೂ ವೇಷ ಧರಿಸುತ್ತಾರೆ. ಧಾರವಾಡ ಜಿಲ್ಲೆ ಮತ್ತು ಬೆಳಗಾಂವ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ಕೆಲಭಾಗಗಳಲ್ಲಿ ಹುಲಿ ಮತ್ತು ಮರಿ ವೇಷಗಳನ್ನು ಹಾಕುತ್ತಾರೆ. ಇವೆರಡರ ಕುಣಿತ ವೈವಿಧ್ಯಪೂರ್ಣವಾಗಿರುತ್ತದೆ.

ಹುಲಿವೇಷಗಾರರಿಗೆ ಕುಂಪು ಮಿಶ್ರಿತ ಹಳದಿ ಬಣ್ಣವನ್ನು ಇಡೀ ದೇಹಕ್ಕೆ ಹಚ್ಚಿರುತ್ತಾರೆ. ವೇಷಗಾರ ಚಡ್ಡಿಯನ್ನು ಮಾತ್ರ ಧರಿಸಿರುತ್ತಾನೆ. ತಲೆಗೆ ಬಿಗಿಯಾಗಿ ಕುಳಿತುಕೊಳ್ಳುವ ಟೊಪ್ಪಿಗೆಯನ್ನು ಧರಿಸಿರುತ್ತಾನೆ. ಟೊಪ್ಪಿಗೆಗೂ ಹಳದಿ ಬಣ್ಣ ಹಚ್ಚಿರುತ್ತಾರೆ. ಟೊಪ್ಪಿಗೆ ರಡ್ಡಿನಿಂದ ಕಿವಿಗಳನ್ನು ಮಾಡಿ ಜೋಡಿಸಿರುತ್ತಾರೆ. ಕೆಲವರು ತಲೆಗೆ ಹುಲಿಯ ಕಿವಿಯಾಕಾರವನ್ನು ಕಟ್ಟಿಕೊಳ್ಳುತ್ತಾರೆ. ಹಳದಿ ಬಣ್ಣದ ಮೇಲೆ ಹಳದಿ ಕಪ್ಪು ಮಿಶ್ರಿತ ಹುಲಿ ಚರ್ಮದ ಮೇಲಿನ ಪಟ್ಟಿಗೆಗಳನ್ನು ಮಾಡಿರುತ್ತಾರೆ. ಅರಿವೆಯಿಂದ ಬಾಲವನ್ನು ಮಾಡಿರುತ್ತಾರೆ. ಕೆಲವರು ರಟ್ಟಿನಿಂದ ಹುಲಿಯ ಮುಖವಾಡ ಮಾಡಿಸಿ ಮುಖಕ್ಕೆ ಕಟ್ಟಿಕೊಂಡಿರುತ್ತಾರೆ. ಉದ್ದವಾದ ಚೂಪಾದ ಉಗುರುಗಳನ್ನು ಕೈಯ ಬೆರಳುಗುರುಗಳಿಗೆ ಹಾಕಿಕೊಂಡಿರುತ್ತಾರೆ. ಹುಲಿವೇಷಗಾರರು ಒಳ್ಳೆಯ ಕಲಾವಿದನ ಹತ್ತಿ ಹೋಗಿ ಬಣ್ಣ ಬರೆಯಿಸಿಕೊಂಡು ಬರುತ್ತಾರೆ. ಬಣ್ಣ ಹಾಕಿದ ಮೇಲೆ ವೇಷಗಾರನಿಗೆ ಏನೂ ಆಗಬಾರದೆಂದು ರಟ್ಟೆಗೆ ನಿಂಬೆಹಣ್ಣು, ಕರಿದಾರ ಕಟ್ಟಿರುತ್ತಾರೆ.

ಹುಲಿವೇಷ ಧರಿಸಿದವರು ಮುಂಜಾನೆ ಮತ್ತು ಸಾಯಂಕಾಲದ ಸಮಯದಲ್ಲಿ ಪ್ರದರ್ಶನ ನೀಡುತ್ತಾರೆ. ಹುಲಿವೇಷಧಾರಿಗೆ ಹೆಜ್ಜೆಗಾರಿಕೆಯ ಪರಿಚಯ ಇರಬೇಕಾಗಿರುತ್ತದೆ. ಇಲ್ಲದೆ ಹೋದರೆ ಹುಲಿ ಕುಣಿತಕ್ಕೆ ಕಳೆ ಬರುವುದಿಲ್ಲ. ಹಲಗೆ ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಕಳೆ ಬರುವುದಿಲ್ಲ. ಹಲಗೆ ತಮಟೆಯ ವಾದ್ಯಗಳ ಗತ್ತಿಗೆ ತಕ್ಕಂತೆ ಹುಲಿ ವೇಷಧಾರಿ ಕುಣಿಯುತ್ತಾನೆ. ಮರಿ ಹುಲಿ ಜೊತೆಗಿದ್ದರೆ, ಕುಣಿತಕ್ಕೆ ಹೆಚ್ಚಿನ ಕಳೆ ಬರುತ್ತದೆ. ಮೇಲಿಂದ ಮೇಲೆ ಗಿರಿಕಿ ಹೊಡೆಯುತ್ತಾ, ಹುಲಿಯಂತೆ ನಟನೆ ಮಾಡುತ್ತ ಕೆಲವರು ಮೇಲೇರಿ ಹೋಗುವಂತೆ ಮಾಡಿ ಅಂಜಿಸುತ್ತ ಜನರನ್ನು ರಂಜಿಸುತ್ತಾರೆ. ವಾದ್ಯಗಳ ಬಡಿತ ತೀವ್ರವಾದಂತೆ ಕುಣಿತ ತೀವ್ರವಾಗುತ್ತದೆ.

ಇವರು ಊರುಗಳೆಲ್ಲ ಸುತ್ತುತ್ತ ಮನೆಮನೆಗೆ ಹೋಗಿ ತಮ್ಮ ಕುಣಿತದಿಂದ ಜನರನ್ನೂ ರಂಜಿಸಿ ಸಂಭಾವನೆ ಪಡೆದುಕೊಳ್ಳುತ್ತಾರೆ. ಕಿರಾಣಿ, ಸಾರಾಯಿ ಅಂಗಡಿಗಳಲ್ಲಿ ಇವರ ಕುಣಿತ ಹೆಚ್ಚು, ಕೆಲವು ಕಡೆ ಹುಲಿ ವೇಷಧಾರಿಯ ಸೊಂಟಕ್ಕೆ ಪಟ್ಟಿಯೊಂದನ್ನು ಕಟ್ಟಿ ಅದಕ್ಕೆ ಹಗ್ಗವನ್ನು ಸೇರಿಸಿ, ಇಬ್ಬರು-ಮೂರು ಜನ ಹಿಡಿದಿರುತ್ತಾರೆ. ಮುಂದೆ ಹುಲಿ ಆಡಿಸುವ ವ್ಯಕ್ತಿ ಇರುತ್ತಾನೆ. ಅವನು ಸರ್ಕಸ್ಸಿನ ರಿಂಗ್‌ ಮಾಸ್ಟರನಂತೆ ಹುಲಿಯನ್ನು ಆಡಿಸುತ್ತಾನೆ.

ಎಚ್‌. ಸಿ. ಬಿ.

 

ಹೆಜ್ಜೆ ಮೇಳ ಉತ್ತರ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಅದರಲ್ಲೂ ವಿಶೇಷವಾಗಿ ರಾಯಚೂರು ಜಿಲ್ಲೆಯಲ್ಲಿ ಮೊಹರಂ ಹಬ್ಬದ ಸಂದರ್ಭದಲ್ಲಿ ಹೆಜ್ಜೆಮೇಳ ಪ್ರದರ್ಶನವಾಗುತ್ತದೆ. ಇದು ಇಂಥದ್ದೇ ಕೋಮಿನ ಜನರಿಗೆಂದು ಮೀಸಲಾಗಿಲ್ಲ. ಬಂದೊಂದು ಪ್ರದೇಶದಲ್ಲಿ ಒಂದೊಂದು ಕೋಮಿನವರು ಹಾಗೂ ಕೆಲವೊಮ್ಮೆ ಎಲ್ಲ ಕೋಮಿನವರೂ ಸೇರಿ ಈ ಕುಣಿತವನ್ನು ಮಾಡುತ್ತಾರೆ.

ಹೆಜ್ಜೆ ಮೇಳಕ್ಕೆ ಸಮಸಂಖ್ಯೆಯ ಕಲಾವಿದರು ಬೇಕು. ಬಿಳಿಯ ಅಂಗಿ, ಮೊಣಕಾಲಿನವರೆಗೆ ಬರುವ ಕಾಸೆಪಂಚೆ, ಸೊಂಟಕ್ಕೆ ಕಟ್ಟಿದ ಬಣ್ಣದ ವಸ್ತ್ರ, ತಲೆಗೆ ಕೆಂಪು ರುಮಾಲು, ಬಲಗಾಲಿಗೆ ಗೆಜ್ಜೆ, ಬಲಗೈಯಲ್ಲಿ ಕೋಲು, ಎಡಗೈಯಲ್ಲಿ ಹಳದಿ ಕರವಸ್ತ್ರ ಇವಿಷ್ಟು ಕಲಾವಿದರ ವೇಷಭೂಷಣ. ಎರಡು ಹಲಗೆ, ಒಂದು ದಿಮ್ಮ, ಒಂದು ಕುಣಿ, ಎರಡು ಶಹಾನಾಯೀಯನ್ನು ವಾದ್ಯಗಳಾಗಿ ಬಳಸುತ್ತಾರೆ. ಆದರೆ ಕೆಲವು ಪ್ರದೇಶಗಳಲ್ಲಿ ಹಾರ್ಮೋನಿಯಂ ತಬಲ ಮತ್ತು ತಾಳ ಬಳಸುವುದೂ ಕಂಡುಬರುತ್ತದೆ. ಮುಖ್ಯ ಹಾಡುಗಾರ ಕೈಯಲ್ಲಿ ತಾಳ ತಟ್ಟುತ್ತಾ ಪದ ಹೇಳಿಕೊಡುತ್ತಾನೆ. ಉಳಿದವರೆಲ್ಲ ಹಾಡಿನ ಗತ್ತಿಗೆ ತಕ್ಕಂತೆ ಹೆಜ್ಜೆ ಹಾಕಿ ಕುಣಿಯುತ್ತಾರೆ.

ಕುಣಿತದಲ್ಲಿ ಅನೇಕ ಪ್ರಕಾರಗಳಿವೆ. ಒಂದ್ಹೆಜ್ಜೆ, ಎರಡ್ಹೆಜ್ಜೆ, ಮೂರ್ಹೆಜ್ಜೆ, ಸಾದಾಹೆಜ್ಜೆ, ಸುತ್ತು ಕೋಲ್ಹೆಜ್ಜೆ ಮುಂತಾಗಿ ವಿವಿಧ ಎಣಿಕೆಯ ಹೆಜ್ಜೆಗಳಿವೆ. ಸನಾದಿಯ ತಾಳದ ಗತ್ತನ್ನು ಅನುಸರಿಸಿ ರಣ ಹಲಗೆಯನ್ನು ಬಾರಿಸುತ್ತ ಹೆಜ್ಜೆ ಮೇಳ ನಡೆಸುವುದೂ ವಾಡಿಕೆಯಲ್ಲಿದೆ. ಒಂದು, ಎರಡು, ಮೂರು, ತಾಳದ ಹೆಜ್ಜೆ ಮೇಳದಲ್ಲಿ ಎಂಟು ಮಂದಿ ಕಲಾವಿದರಿರುತ್ತಾರೆ. ಇಬ್ಬಿಬ್ಬರು ಜೊತೆಗೂಡಿಕೊಂಡು ಒಟ್ಟೊಟ್ಟಿಗೆ ನೆಗೆದು ಜಿಗಿತ ಮಾಡುತ್ತಾರೆ. ಒಂದು ಗುಂಪು ನೆಗೆತ ಮಾಡುವಾಗ ಇನ್ನೊಂದು ಗುಂಪು ಹೆಜ್ಜೆ ಹಾಕುತ್ತಿರುತ್ತದೆ. ಈ ಕುಣಿತ ಬೇರೆ ಬೇರೆ ಕಾಲಕ್ಕೆ ಅನುಗುಣವಾಗಿ ನಡೆಯುತ್ತದೆ.

ಹೆಜ್ಜೆ ಮೇಳದ ವೈವಿಧ್ಯಪೂರ್ಣ ಪ್ರಕಾರವೆಂದರೆ ‘ಹದಿನಾರು ಬೈಸಾಕೆ’. ಸಾದಾ ಹೆಜ್ಜೆಯಲ್ಲಿ ಸಾಮಾನ್ಯವಾಗಿ ಇಬ್ಬಿಬ್ಬರು ಗುಂಪಾದರೆ ಹದಿನಾರು ಬೈಸಾಕಿಯಲ್ಲಿ ನಾಲ್ಕು ನಾಲ್ಕು ಜನ ಗುಂಪಾಗುತ್ತಾರೆ. ಪ್ರಾರಂಭದಲ್ಲಿ ನಿಂತಲ್ಲಿಯೇ ಒಂದಾದ ಬಳಿಕ ಒಂದು ಹೆಜ್ಜೆಯನ್ನು ಎತ್ತಿ ಇಡುತ್ತ ಅದಕ್ಕೆ ತಕ್ಕಂತೆ ಎಡ ಮತ್ತು ಬಲಭಾಗಗಳಿಗೆ ಮುಖ ತಿರುಗಿಸುತ್ತಾರೆ. ಕೈಗಳನ್ನು ಬೀಸುತ್ತಾರೆ. ಅನಂತರ ನಾಲ್ವರ ಪ್ರತಿ ಗುಂಪಿನಲ್ಲೂ ಇಬ್ಬರು ಕುಳಿತು ಅವರ ಮೇಲೆ ಉಳಿದಿಬ್ಬರು ಹಿಂದಿನಿಂದ ಜಿಗಿಯುತ್ತಾರೆ. ಜಿಗಿದವನೆ ದಿಕ್ಕು ಬದಲಿಸಿ ಕುಳಿತುಕೊಳ್ಳುತ್ತಿದ್ದಂತೆ ಮೊದಲು ಕುಳಿತಿದ್ದವನು ಅವನ ಮೇಲೆ ಜಗಿಯುತ್ತಾನೆ. ಹೀಗೆ ನಾಲ್ಕು ಐದು ಸಾರಿ ಜಿಗಿದ ಮೇಲೆ ಮೊದಲನೇ ಸ್ಥಿತಿಗೇ ಬಂದು ಸಾದಾ ಹೆಜ್ಜೆ ಹಾಕುತ್ತಾರೆ. ಹದಿನಾರು ಬೈಸಾಕಿಯಲ್ಲಿ ನಡೆಯುವ ಜಿಗಿತ ತುಂಬಾ ಚುರುಕಿನದ್ದು, ಇಷ್ಟೆಲ್ಲ ಜಿಗಿದು ಕುಣಿದರೂ ತಾಳ ತಪ್ಪುವುದಿಲ್ಲ. ಅದೇ ಹೆಜ್ಜೆ ಮೇಳದ ವಿಶೇಷ.

‘ಸುತ್ತು ಕೋಲು ಹೆಜ್ಜೆ’ ಈ ಮೇಳದ ಇನ್ನೊಂದು ಪ್ರಕಾರ. ಬಲಗೈಯಲ್ಲಿ ಹಿಡಿದಿರುವ ಕೋಲನ್ನು ಗತ್ತಿಗೆ ತಕ್ಕಂತೆ ತಿರುಗಿಸುತ್ತಾ ಮಧ್ಯ ಮಧ್ಯ ಪರಸ್ಪರ ಕೋಲಿಗೆ ಮೂರು ನಾಲ್ಕು ಹೊಡೆತ ಕೊಡುತ್ತಾ ಹೆಜ್ಜೆಗೆ ಇಳಿಯುವುದು ಸುತ್ತು ಕೋಲಿನ ವಿನ್ಯಾಸ. ಎರಡು ಸಾಲುಗಳಲ್ಲಿ ನಿಂತ ಕಲಾವಿದರೂ ಗತ್ತಿನ ನಡುವೆಯೇ ಆಚೆ ಈಚೆ ಸಾಲು ಬದಲಾಯಿಸಿ ಕೋಲು ಹಾಕುತ್ತಾರೆ. ಒಮ್ಮೆ ಉದ್ದ ಸಾಲಾದರೆ ಮತ್ತೊಮ್ಮೆ ಅಡ್ಡ ಸಾಲಿನಲ್ಲಿ ಕುಣಿಯುತ್ತಾರೆ. ಕೆಲವು ಕಡೆ ಹಗ್ಗವನ್ನು ಹಿಡಿದುಕೊಂಡು ಹೆಜ್ಜೆ ಹಾಕುತ್ತಾ ಜಡೆ ಹೆಣೆಯುತ್ತಾರೆ. ಇದು ಜಡೆಕೋಲನ್ನು ಹೋಲುತ್ತದೆಯಾದರೂ ಜಡೆ ಕೋಲಾಟದ ರೀತಿಯಲ್ಲಿ ಹಗ್ಗವನ್ನು ಮೇಲಕ್ಕೆ ಕಟ್ಟಿರುವುದಿಲ್ಲ. ಸಾಲಿನ ಮೊದಲ ಇಬ್ಬರು ಸ್ಥಿರವಾಗಿ ನಿಂತು ಹೆಣೆತದ ಹಗ್ಗವನ್ನು ಹಿಡಿದುಕೊಂಡಿರುತ್ತಾರೆ. ಉಳಿದವರು ಜಡೆ ಹೆಣಿಕೆಗೆ ತಕ್ಕ ವಿನ್ಯಾಸದಲ್ಲಿ ಅತ್ತಿತ್ತ ಹೆಜ್ಜೆ ಹಾಕುತ್ತಾ ಸ್ಥಳ ಬದಲಾಯಿಸುತ್ತಾರೆ. ಅದೇ ಹೆಜ್ಜೆಗಳನ್ನು ಹಿಮ್ಮುಖವಾಗಿ ಹಾಕುತ್ತಾ ಜಡೆಯನ್ನು ಬಿಚ್ಚುತ್ತಾರೆ.

ಹಿಂದೆ ಎರಡು ಸಾಲುಗಳ ಮಧ್ಯೆ ಒಂದು ಜಾತಿಯ ಮುಳ್ಳಿನ ಕೋಲುಗಳನ್ನಿಟ್ಟು ಆ ಕೋಲಿಗೆ ತಾಕಿಸದಂತೆ ಹೆಜ್ಜೆಯನ್ನು ಹಾಕುತ್ತಾ ಕುಣಿಯುವ ಒಂದು ಪದ್ಧತಿ ಇತ್ತು. ಇತ್ತೀಚೆಗೆ ಇದರ ಪ್ರದರ್ಶನ ಕಡಿಮೆಯಾಗಿದೆಯಾದರೂ ಮುಳ್ಳಿನ ಬದಲಿಗೆ ಗಾಜಿನ ಚೂರು ಬಳಸಿ ಕುಣಿಯುವ ಹೊಸ ರೀತಿ ಬಂದಿದೆ. ಚಾಕಚಕ್ಯತೆ ಮತ್ತು ಆತ್ಮ ವಿಶ್ವಾಸ ಇಲ್ಲಿ ಮುಖ್ಯ. ಸ್ವಲ್ಪ ತಪ್ಪಿದರೂ ಗಾಜು ಕಾಲಿಗೇರುತ್ತದೆ. ಉತ್ತರ ಕರ್ನಾಟಕದ ಹಲವು ಭಾಗಗಳಲ್ಲಿ ಮೊಹರಂ ಹಬ್ಬದ ವಿಶೇಷಗಳಲ್ಲಿ ಒಂದಾದ ಈ ಕಲೆ ಭಾವೈಕ್ಯದ ಸಂಕೇತ. ಹಿಂದೂ ಮುಸ್ಲಿಂ ಬಾಂಧವರ ಹಾಡು ಕುಣಿತ ಭಾವನಾತ್ಮಕವಾಗಿರುತ್ತದೆ, ಕೇಳಲು ಇಂಪಾಗಿರುತ್ತದೆ.

ಎಚ್‌. ಸಿ. ಬಿ.

 

ಹೆಣ್ಣುಮಕ್ಕಳ ಜನಪದ ಆಟಗಳು ಕೇರಳದ ಜನಪದ ಆಟಗಳಲ್ಲಿ ಪ್ರಾಯ, ಲಿಂಗ, ಪ್ರಾದೇಶಿಕ ಸ್ಥಳಗಳಿಗೆ ಅನುಸರಿಸಿ ವ್ಯತ್ಯಾಸಗಳನ್ನು ಕಾಣಬಹುದು. ಹುಡುಗಿಯರು ಹಾಗೂ ಮಹಿಳೆಯರ ಆಟ ಎಂಬ ವಿಭಜನೆ ಜನಪದ ಆಟಗಳಲ್ಲಿವೆ. ಲಿಂಗತಾರತಮ್ಯದ ದೃಷ್ಟಿಕೋನಗಳನ್ನು ಪ್ರತಿಯೊಂದು ಸಮುದಾಯಗಳಲ್ಲಿ ಕಾಣಬಹುದು. ಮಹಿಳೆಯರಿಗೆ ಮನೆ ಹಾಗೂ ಸಮಾಜದಲ್ಲಿ ಜನಪದರು ನೀಡಿರುವ ಸ್ಥಾನಮಾನಗಳನ್ನು ಅವರ ಆಟಗಳಲ್ಲಿಯೂ ಗುರುತಿಸಬಹುದು.

ಕೊತ್ತಕಲ್ಲ್‌, ತಟ್ಟಾಪೂಟ್‌, ಕಾಕಕಳಿ, ನಾರಂಙಪಾಲೆ, ಪೆಣ್ಣಿನೆ ತರುಮೋ, ಕರುಕರುಮೆಚ್ಚಂ, ಈರ್ಕಿಲ್‌ಕಳಿ, ಆಕಾಶಂ ಭೂಮಿ, ಒಳಚ್ಚುಕಳಿ, ಕಣ್ಣುಂಪೊತ್ತಿಕಳಿ, ಚೆಂಬಳಕಾಕಳಿ, ಹೀಗೆ ಹುಡುಗಿಯರು, ಹೆಂಗಸರು ಆಡುವ ಆಟಗಳು ಹಲವು. ಈ ಆಟಗಳೆಲ್ಲ ಹೆಣ್ಣಿಗೆ ಸ್ತ್ರೀತ್ವದ ತರಬೇತಿ ನೀಡುವ ಆಟಗಳಂತಿವೆ.

ದೈಹಿಕ ಪರಿಶ್ರಮವಿರುವ ಆಟಗಳು ಮಹಿಳೆಯರಲ್ಲಿ ಅತಿಕಡಿಮೆ. ಕಾಕಕಳಿ, ಒಳಿಚ್ಚುಕಳಿ, ಆಕಾಶಂ ಭೂಮಿ ಈ ಆಟಗಳನ್ನು ಹುಡುಗಿಯರು ಸ್ವಲ್ಪ ದೊಡ್ಡವರಾಗುವಾಗ ಬಿಟ್ಟು ಬಿಡುತ್ತಾರೆ. ಸದ್ದಿಲ್ಲದೇ ಆಡುವ ಆಟಗಳಲ್ಲಿ ಅವಳು ತಲ್ಲೀನಳಾಗುತ್ತಾಳೆ. ಕೊತ್ತಕಲ್ಲ್‌ (ಕಲ್ಲಾಟ) ಮಹಿಳೆಯರ ನೆಚ್ಚಿನ ಆಟಗಳಲ್ಲಿ ಒಂದು. ಅದರಲ್ಲಿಯೂ ಅವಳು ಹೆಚ್ಚು ಭಾಗಿಯಾಗುವುದನ್ನು ಸಮಾಜ ಸಹಿಸುತ್ತಿರಲಿಲ್ಲ. ‘ಕಲ್ಲಾಟದ ಅಂಗಳದಲ್ಲಿ ಬತ್ತವಿಲ್ಲ’ ಎಂಬ ಗಾದೆ ಮಾತು ಈ ಹಿನ್ನೆಲೆಯಲ್ಲಿ ಹುಟ್ಟಿರಬೇಕು. ಕಲ್ಲಾಟವಾಡಿದರೆ ಮನೆಯ ಸಂಪತ್ತು ಹಾಳಾಗುವುದು ಎಂಬ ನಂಬಿಕೆ ಹಿರಿಯರಲ್ಲಿದೆ.

ಮನೆ, ಕೃಷಿ, ಕೌಟುಂಬಿಕ ಬದುಕು ಇವುಗಳಿಗೆ ಸಂಬಂಧಿಸಿದ ಆಟಗಳನ್ನು ಹುಡುಗಿಯರು ಹೆಚ್ಚಾಗಿ ಆಡುತ್ತಾರೆ. ಬಾಲಕೃಷ್ಣ ಮಣ್ಣಿನಲ್ಲಿ ತಿಂಡಿಮಾಡಿ, ಅನ್ನಪದಾರ್ಥಗಳನ್ನು ಮಾಡಿ ಆಟವಾಡುವುದನ್ನು ಹುಡುಗಿಯರು ಎಳಮೆಯಲ್ಲಿ ಅನುಕರಿಸುತ್ತಾರೆ. ತಟ್ಟಾಪೂಟ್‌ ತರಿಪೂಸ್‌ ಎಂಬುದು ಕಾಣೆ ಹಾಗೂ ಮರಿಗಳ ಕಥೆಯಿರುವ ಒಂದು ಅಭಿನಯ ಗೀತೆಯಾಗಿದೆ. ಕಾಲು ನೀಡಿ ಸಾಲಾಗಿ ಕುಳಿತಿರುವ ಮಕ್ಕಳ ಕಾಲುಗಳು ಒಲೆಯಾಗಿಯೂ, ಬತ್ತ ಒಣಗಿಸುವ ಅಂಗಳವಾಗಿಯೂ ಬದಲಾಗುತ್ತ ಹೆಣ್ಣಿಗೆ ಬದುಕಿನ ಅರಿವನ್ನು ಮೂಡಿಸುವ ಆಟವಾಗಿದೆ.

ಒಬ್ಬಳು ಹುಡುಗಿಯರನ್ನು ಮಧ್ಯದಲ್ಲಿ ಕೂರಿಸಿ ಎರಡು ಪಂಗಡಗಳು ಮುಖಾಮುಖಿಯಾಗಿ ಆಡುವ ಆಟ ‘ಪೆಣ್ಣಿನೆ ತರುಮೋ’, ಹೆಣ್ಣು ಕೇಳುವ ಹಾಡಿನೊಂದಿಗೆ ಆಟ ಆರಂಭವಾಗುತ್ತದೆ. ಆಟ ಮುಂದುವರಿದಂತೆ ತಾಳಗತಿ ವೇಗವಾಗುತ್ತಾ ಹೋಗುತ್ತದೆ. ಕೊನೆಗೆ ಹೆಣ್ಣಿಗಾಗಿ ಜಗಳವೇ ನಡೆಯುತ್ತದೆ. ಕೆಲವು ವ್ಯತ್ಯಾಸಗಳೊಂದಿಗೆ ಈ ಆಟವು ಮುಸ್ಲಿಂ ಸಮುದಾಯದಲ್ಲಿಯೂ ಕಂಡುಬರುತ್ತದೆ. ‘ತುಂಬಿಕಳಿ’ ಎಂಬುದು ಇಂತಹುದೇ ಆಟವಾಗಿದೆ. ದುಂಬಿಯಾಗಿ ನಿಲ್ಲುವ ಹುಡುಗಿ ತಪ್ಪಿಸಿಕೊಂಡು ಓಡುತ್ತಾಳೆ. ಅವಳನ್ನು ಉಳಿದವರು ಹಿಡಿಯಲು ಪ್ರಯತ್ನಿಸುತ್ತಾರೆ.

ಮಹಳೆಯರು ಪಗಡೆ, ಚದುರಂಗ ಮೊದಲಾದ ಆಟಗಳಲ್ಲಿ ತೊಡಗಿಕೊಳ್ಳುತ್ತಿದ್ದರು ಎಂಬ ಮಾಹಿತಿ ಕೇರಳದ ಜನಪದ ಹಾಡುಗಳಲ್ಲಿವೆ. ಕಲ್ಲಾಟ, ಈರ್ಕಿಲ್‌ಕಳಿ ಮೊದಲಾದವು ಒಳಾಂಗಣ ಆಟಗಳಾಗಿವೆ. ಕಲ್ಲಾಟಕ್ಕೆ ಸಣ್ಣ ಐದು ಕಲ್ಲುಗಳು ಸಾಕು. ಈ ಕಲ್ಲುಗಳನ್ನು ಅಂಗೈ ಹಾಗೂ ಬೆರಳುಗಳಲ್ಲಿ ಸಮತೋಲನಗೊಳಿಸಿ, ಮೇಲಕ್ಕೆಸೆದು ಆಡುವ ಆಟವಿದು. ಕೇರಳದ ಇಂತಹ ಜನಪದ ಆಟಗಳು ಇಂದು ಮರೆಯಾಗುತ್ತಿವೆ. ಆಧುನಿಕ ಬದುಕಿನ ಪರಿಣಾಮವಾಗಿ ವಿಭಕ್ತ ಕುಟುಂಬಳಾಗುತ್ತಿದ್ದು, ಆಟವಾಡುವ ಸಮಪ್ರಾಯದ ಮಕ್ಕಳು ಒಂದೇ ಕಡೆ ಸೇರುವ ಪರಿಸ್ಥಿತಿ ಇಂದು ವಿರಳವಾಗಿದೆ ಜನಪದ ಆಟಗಳನ್ನು ಸ್ಥಾನವನ್ನು ಇಂದು ಕಂಪ್ಯೂಟರ್ ಗೇಮ್‌ಗಳಂತಹ ಆಧುನಿಕ ಆಟಗಳು ಆಕ್ರಮಿಸಿಕೊಂಡಿವೆ.

ಪಿ. ವಿ. ಕೆ. ಅನುವಾದ ಎನ್‌. ಎಸ್‌.