ಹೆಳವರು ಕರ್ನಾಟಕದಲ್ಲಿ ವಾಸಿಸುತ್ತಿರುವ ಹೆಳವರು ಮೂಲತಃ ಆಂಧ್ರಪ್ರದೇಶದ ‘ಪಿಚ್ಚಕುಂಟಲ’ ಜಾತಿಗೆ ಸೇರಿದವರು. ಇವರು ಹನ್ನೊಂದು ಅಥವಾ ಹನ್ನೆರಡನೆಯ ಶತಮಾನದಲ್ಲಿ ಆಂಧ್ರದಿಂದ ಕನ್ನಡನಾಡಿಗೆ ವಲಸೆ ಬಂದವರೆಂದು ತಿಳಿದು ಬರುತ್ತದೆ. ಇವರನ್ನು ಹೆಳವ, ಹೆಳವರು, ಹೇಳುವರು, ಹೆಳವಯ್ಯ, ಹೆಳವಮಲ್ಲರು, ಒಕ್ಕುಲಭಂಗಿ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.

ಪ್ರಭಾವಶಾಲಿ ಮನೆತನಗಳ ವಂಶಾವಳಿಗಳನ್ನು ತಮ್ಮ ಮೌಖಿಕ ಪರಂಪರೆಯ ಮೂಲಕ ಕಾಲಾನಂತರ ಚಿಪ್ಪೋಡುಗಳಲ್ಲಿ ದಾಖಲೆಗೊಳಿಸಿ ಕಾಪಾಡಿಕೊಂಡು ಬಂದಿದ್ದಾರೆ. ಕುಲಕೊಂಡಾಡುವುದನ್ನೇ ತಮ್ಮ ಮುಖ್ಯವೃತ್ತಿಯನ್ನಾಗಿ ಸ್ವೀಕರಿಸಿದ ಹೆಳವರು, ತಮ್ಮ ಉಪಜೀವನಕ್ಕೆ ಈ ವೃತ್ತಿಯನ್ನೇ ಹೆಚ್ಚಾಗಿ ಅವಲಂಬಿಸಿದ್ದು ಕಂಡುಬರುತ್ತದೆ.

ಹೆಳವರು ಮೂಲತಃ ಒಂದೆ ಬುಡಕಟ್ಟಿನವರಾಗಿದ್ದು ಕಾಲಾಂತರದಲ್ಲಿ ಇವರು ತಮ್ಮ ಜೀವನೋಪಾಯಕ್ಕಾಗಿ ವಿವಿಧ ವೃತ್ತಿಗಳನ್ನು ಅವಲಂಬಿಸಿದುದರಿಂದ ವೃತ್ತಿಯನ್ನು ಆಧರಿಸಿ ಮೂರು ಪಂಗಡವಾದರು : ೧) ಎತ್ತಿನ ಹೆಳವರು ೨) ಗಂಟೆ ಹೆಳವರು ೩) ಚಾಪೆ ಹೆಳವರು. ಈ ಮೂರು ಪಂಗಡಗಳಿಂದ ಅನೇಕ ಉಪಪಂಗಡಗಳಾದವು. ಹಂದಿ ಹೆಳವರು, ದೂಡಿ ಹೆಳವರು, ತಿತ್ತಿನೆಳವರು, ಕೂಕಣಿ ಹೆಳವರು, ಮಂಡಲ ಹೆಳವರು, ಕಂಬಿ ಹೆಳವರು, ಅಡವಿ ಹೆಳವರು, ಊರ ಹೆಳವರು, ನಾಡು ಹೆಳವರು, ಜಾತಿ ಹೆಳವರು, ತಂಬೂರಿ ಹೆಳವರು.

ಬೆಡಗುಗಳು : ಹೆಳವರು ಬೆಡಗುಗಳಿಗೆ ಕುಲ, ಗೋತ್ರ, ಬಳಿ ಎಂದು ಕರೆಯುವುದುಂಟು. ಮದುವೆ ಮುಂತಾದ ಕಾರ್ಯಗಳನ್ನು ಬೆಡಗುಗಳ ಆಧಾರದ ಮೇಲೆ ಮಾಡುತ್ತಾರೆ. ಹೆಳವರು ಕುಲದೇವತಾ ಪದ್ಧತಿ ಉಳ್ಳವರು. ಉದಾ : ಅರಳಿಕುಲ, ಅವರಿಕುಲ, ಹೂವು ಕುಲ, ಆನೆಕುಲ ಇತ್ಯಾದಿ. ಹೆಳವರಲ್ಲಿ ಪ್ರಚಲಿತವಿರುವ ಕುಲಗೋತ್ರಗಳಿಗೆ ಒಂದೊಂದು ಪ್ರಾಣಿ, ಪಶುಪಕ್ಷಿ, ಗಿಡಮರ, ಹೂಬಳ್ಳಿ, ವ್ಯಕ್ತಿ, ದೇವರು ಮುಂತಾದವುಗಳ ಹೆಸರಿರುವುದು ಕಂಡುಬರುತ್ತದೆ. ಇವುಗಳಲ್ಲಿ ಒಂದರ ಜೊತೆಗೆ ವಿಶೇಷ ಸಂಬಂಧ ಇಟ್ಟುಕೊಂಡು ಆ ಕುಲಕ್ಕೆ ಸೇರಿದವರೆಲ್ಲರೂ ತಮ್ಮ ಮೂಲವನ್ನು ಅದರಿಂದಲೇ ಗುರುತಿಸುತ್ತಾರೆ.

ಹೆಳವರ ಮೂಲ ಪುರುಷನು ಒಕ್ಕಲಿಗನಿಗೆ ಹುಟ್ಟಿದ ‘ಹೆಳವ ಮಗನು’ ಅವನಿಗೆ ಬಲಗಾಲು ಊನವಾಗಿತ್ತೆಂದು ಅವರ ಪುರಾಣದ ಮುಖಾಂತರ ತಿಳಿದುಬರುತ್ತದೆ. ಹೆಳವರು ಎಂಬ ಹೆಸರು ತೆಲುಗಿನಲ್ಲಿ ‘ಚೆಪ್ಪ’ ಅಂದರೆ ಹೇಳು, ‘ಚೆಪ್ಪೋಡು’ ಅಂದರೆ ಹೇಳುವವ ಅಥವಾ ಹೇಳುವವರು ಎಂದರ್ಥ. ಇವರನ್ನು ‘ಹೆಳವಯ್ಯ’ ಎಂದು ಕರೆಯುವರು. ಸಾರುವಯ್ಯನಂತೆ ಹೇಳುವ ಅಯ್ಯನೇ ಹೆಳವಯ್ಯನಾಗಿ ಹೆಳವನಾಗಿರುವ ಸಾಧ್ಯತೆ ಇರಬಹುದು. ಶಿವಗಣದಲ್ಲಿರುವ ಒಕ್ಕಾಲಭೃಂತಿ ಹೆಳವರ ಮೂಲ ಪುರುಷನೆಂಬ ಒಂದು ದಂತಕತೆ ಇರುವುದರಿಂದ ಇವರನ್ನು ಒಕ್ಕಾಲಭೃಂಗಿ ಎಂದೂ ನಂದಿಯೇ ಇವರ ವಾಹನವಾಗಿರುವುದರಿಂದ ‘ನಂದಿವಾಲ’ ಎಂದೂ ಕರೆಯುತ್ತಾರೆ. ಶ್ರೀಶೈಲದಲ್ಲಿ ಇವರ ಮೂಲ ಮಠವಿರುವುದರಿಂದ, ಜನಪದ ಕತೆಯಂತೆ ಇವರ ಮೂಲಪುರುಷ ಶ್ರೀಶೈಲಕ್ಕೆ ಹೋಗಿ ಅಲ್ಲಿ ಗುರುವಿನಿಂದ ದೀಕ್ಷೆ ಆಶೀರ್ವಾದವನ್ನು ಪಡೆದು ಬಂದವನಾದ್ದರಿಂದ ‘ಮಲ್ಲಭಕ್ತಲು’ ಎಂದೂ ಬಹುಮಟ್ಟಿಗೆ ಒಕ್ಕಲು ಮಕ್ಕಳನ್ನು ಆಶ್ರಯಿಸಿ ಬದುಕುವುದರಿಂದ ಒಕ್ಕಲು ಮಕ್ಕಳಲ್ಲಿ ತಾವು ಭಾಗಿದಾರರೆಂದು ಹೇಳಿಕೊಳ್ಳುವುದರಿಂದ ಇವರಿಗೆ ಪ್ರತೀತಿಯಿಂದ ‘ಒಕ್ಕಲು ಮಗ’ ಎಂದು ಕರೆಯಲಾಗುತ್ತದೆ. ಪಿಚ್ಚಕುಂಟ ಈ ಹೆಸರು ಆಂಧ್ರಪ್ರದೇಶದಲ್ಲಿರುವ ಹೆಳವರಿಗೆ ಅನ್ವಯಿಸುತ್ತದೆ. ತೆಲುಗು ದೇಶದಲ್ಲೂ ಇವರು ಇರುವುದರಿಂದ ಇವರನ್ನು ‘ಪಿಚ್ಚಕುಂಟಲ ವಾಳ್ಳು’ ಎಂದು ಅಲ್ಲಿ ಕರೆಯುತ್ತಾರೆ. ತಮ್ಮನ್ನು ಅವರು ಮಲ್ಲಬತ್ಲು ಎಂದು ಕರೆದುಕೊಳ್ಳುತ್ತಾರೆ.

ಆಚರಣೆಗಳು : ಹೆಳವರಲ್ಲಿ ಮದುವೆಯಾದ ಹೆಣ್ಣು ಬಸುರಿಯಾದರೆ ಮುತ್ತೈದೆಯರು ಕೂಡಿಕೊಂಡು ಉಡಿ ತುಂಬುವ ಕಾರ್ಯಮಾಡುತ್ತಾರೆ. ಈ ಸಂದರ್ಭದಲ್ಲಿ ಹಾಡುವ ಗೀತೆಗಳು ಸಾಮಾನ್ಯವಾಗಿ ಶೃಂಗಾರಗೀತೆಗಳಾಗಿರುತ್ತವೆ. ಈ ಬಗೆಯ ಶೃಂಗಾರ ಗೀತೆಗಳನ್ನು ಹಾಡಿದರೆ ಬಸುರಿಹೆಣ್ಣು ಉಲ್ಲಸಿತಳಾಗುತ್ತಾಳೆ ಎಂಬ ಭಾವನೆ ಹೆಳವರದು. ಚೊಚ್ಚಲು ಹೆರಿಗೆ ತೌರೂರಿನಲ್ಲಿಯೇ ಮಾಡುತ್ತಾರೆ. ಏಳು ಅಥವಾ ಎಂಟು ತಿಂಗಳು ಕಳೆದ ಬಳಿಕ ಬಸುರಿಗೆ ತೌರಿಗೆ ಕರೆದುಕೊಂಡು ಹೋಗುವ ಸಂಪ್ರದಾಯವಿದೆ. ಬಸುರಿಯು ಬೇನೆಯಿಂದ ನರಳುತ್ತಿದ್ದರೆ ಸೂಲಗಿತ್ತಿಯರು ಬಂದು ಹೆರಿಗೆ ಮಾಡಿಸುತ್ತಾರೆ.

73_70A_DBJK-KUH

‘ಐದೇಶಿ’ ಕಾರ್ಯ ಮಾಡುವವರೆಗೆ ಬಾಣಂತಿಯ ಬಳಿ ಒಬ್ಬಳನ್ನು ಇಡುತ್ತಾರೆ. ಆಕೆ ಐದು ದಿನಗಳವರೆಗೆ ಬಾಣಂತಿಯ ಎಲ್ಲ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಾಳೆ. ಹದಿನೈದು ದಿನಗಳವರೆಗೆ ಬಾಣಂತಿ ಮತ್ತು ಮಗುವಿಗೆ ಪ್ರತಿದಿನ ಎರಡು ಹೊತ್ತು ಬಿಸಿನೀರಿನಿಂದ ಸ್ನಾನ ಮಾಡಿಸುತ್ತಾರೆ. ಬಾಣಂತಿಗೆ ಮಾಂಸಹಾರದ ಅಡುಗೆ ಮತ್ತು ಸಿಹಿ ಅಡುಗೆಯ ಜೊತೆಗೆ ಕೆಲವರು ಸಾರಾಯಿ ನೀಡುತ್ತಾರೆ.

ಮಗು ಹುಟ್ಟಿದ ಹದಿನೈದನೆಯ ದಿವಸಕ್ಕೆ ನಾಮಕರಣ ಕಾರ್ಯಮಾಡುತ್ತಾರೆ. ಮನೆಯ ಯಜಮಾನ ‘ಪುರೋಹಿತರ’ ಹತ್ತಿರ ಹೋಗಿ ‘ಜನ್ಮ ಕುಂಡಲಿ’ ಕೇಳಿಬರುತ್ತಾನೆ. ಪುರೋಹಿತರು ಹೇಳಿದ ಹೆಸರು ಔಪಚಾರಿಕವಾದದ್ದು. ಅದನ್ನು ‘ಜನ್ಮನಾಮ’ ಎಂದು ಕರೆಯುತ್ತಾರೆ. ಸತ್ತು ಹೋದ ಪೂರ್ವಿಕರ (ತಾತ, ಮುತ್ತಾತರ) ಹೆಸರಿಡುವುದು ರೂಢಿ.

ಮೈ ನೆರೆಯುವುದು : ಹೆಣ್ಣು ಮೈನೆರೆದಾಗ ಅವಳನ್ನು ಮನೆಯ ಹೊರಗಡೆ ಪ್ರತ್ಯೇಕ ಚಪ್ಪರ ಕಟ್ಟಿ ಮೂರು ದಿನಗಳವರೆಗೆ ಇಡುತ್ತಾರೆ. ಅವಳಿಗೆ ಹಾಸಿಗೆ ಮತ್ತು ಪ್ರತ್ಯೇಕ ತಾಟು ತಂಬಿಗೆಗಳನ್ನು ಕೊಟ್ಟಿರುತ್ತಾರೆ. ಅವಳ ತಾಟು ತಂಬಿಗೆಗಳನ್ನು ಯಾರೂ ಮುಟ್ಟುವುದಿಲ್ಲ. ದಿನಾಲು ಸಪ್ಪೆ ಆಹಾರ ಕೊಡುತ್ತಾರೆ. ಮಾಂಸಾಹಾರದ ಊಟ ಕೊಡುವುದು ನಿಷೇಧ. ಮೂರು ದಿನಗಳವರೆಗೆ ಪ್ರತಿದಿನ ಸಾಯಂಕಾಲ ಹಟ್ಟಿಯ ಹೆಣ್ಣು ಮಕ್ಕಳು ಆಹ್ವಾನಿತರಾಗಿ ಮನೆಗೆ ಬಂದು ಋತುವಾದವಳನ್ನು ಮಣೆಯ ಮೇಲೆ ಕುಳ್ಳಿರಿಸಿ ಸೋಬಾನೆ ಹಾಡುಗಳನ್ನು ಹೇಳುತ್ತಾರೆ. ನಾಲ್ಕನೆಯ ದಿವಸ ಮೈನೆರೆದವಳನ್ನು ಮನೆಯೊಳಗೆ ಕರೆದುಕೊಳ್ಳುತ್ತಾರೆ. ಅಂದು ಅವಳ ಅಂಗಾಂಗಳಿಗೆ ಅರಿಷಿಣ ಎಣ್ಣೆ ಹಚ್ಚಿ ನೀರೆರೆದು ಹೊಸ ಬಟ್ಟೆ ತೊಡಿಸಿ ಒಡವೆಗಂದ ಅಲಂಕರಿಸುತ್ತಾರೆ.

ಮದುವೆ : ಹೆಳವರು ಮದುವೆಯನ್ನು ಕೇವಲ ಲೈಂಗಿಕ ಸಂಬಂಧವೆಂದು ತಿಳಿಯದೆ. ಇದೊಂದು ಪವಿತ್ರವಾದ ಧಾರ್ಮಿಕಬಂಧನವೆಂದು ನಂಬಿಕೊಂಡಿದ್ದಾರೆ. ಮದುವೆ ಕೌಟುಂಬಿಕ ಜೀವನದ ಮಹತ್ವದ ಹಂತ. ವಯಸ್ಸಿಗೆ ಬಂದ ಗಂಡು ಹೆಣ್ಣಗಳನ್ನು ಮದುವೆಯ ವಿದಿವಿಧಾನಗಳ ಮೂಲಕ ಒಂದು ಗೂಡಿಸುವ ಒಂದು ಸಾಮಾಜಿಕ ಹೊಣೆಗಾರಿಕೆ.

ಹೆಳವರಲ್ಲಿ ಸಾಂಪ್ರದಾಯಕವಾದ ಮದುವೆ ಮೂರು ದಿನಗಳಕಾಲ ನಡೆಯುತ್ತದೆ. ಹಂದರ ಹಾಕುವ ಶಾಸ್ತ್ರ, ಎದುರುಗೊಳ್ಳುವುದು, ಅರಿಷಿಣ ಶಾಸ್ತ್ರ, ಹಾಲುಗಂಬ ತರುವ ಶಾಸ್ತ್ರ, ಐರಾಣಿ ತರುವ ಶಾಸ್ತ್ರ, ನೀರು ತರುವ ಶಾಸ್ತ್ರ, ವಧೂವರರನ್ನು ಹಂದರಕ್ಕೆ ಕೆರೆತರುವ ಶಾಸ್ತ್ರ, ನೈಯಣ್ಣೆ ಮತ್ತು ಅರಿಷಿಣ ಕಾರ್ಯ, ಅಕ್ಷತೆಯ ಕಾರ್ಯ ಕೊನೆಗೆ ವೀಳ್ಯ ಹಂಚುವ ಶಾಸ್ತ್ರದೊಂದಿಗೆ ಮದುವೆಯ ಕಾರ್ಯ ಮುಗಿಯುತ್ತದೆ.

ಮರಣ : ಹೆಳವರಲ್ಲಿ ಸತ್ತವರನ್ನು ಹೂಳುತ್ತಾರೆ. ಕುಷ್ಠರೋಗ ಬಂದು ಸತ್ತವರನ್ನು ಸುಡುತ್ತಾರೆ. ಲಿಂಗವಂತ ಧರ್ಮದಲ್ಲಿ ಆಚರಿಸುವ ರೂಢಿ ಪದ್ಧತಿಗಳು ಇವರಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ವ್ಯಕ್ತಿ ಸತ್ತ ಮೂರನೆಯ ದಿನ ಮೂರು ಕೊಳ ಶಾಸ್ತ್ರ ಮಾಡಿದರೆ, ಹದಿಮೂರನೆಯ ದಿನ ಕೊನೆಯ ತಿಥಿ ಆಚರಿಸುತ್ತಾರೆ. ಒಂದು ತಿಂಗಳು ಮುಗಿದ ಬಳಿಕ ಸತ್ತ ವ್ಯಕ್ತಿಯನ್ನು ದೈವದಂತೆ ಕಾಣುವ ಸಂಪ್ರದಾಯವಿದೆ.

ಹಬ್ಬ ಹರಿದಿನಗಳು : ಹಿಂದುಗಳಲ್ಲಿ ಪ್ರಚಲಿತವಿರುವ ಅನೇಕ ಹಬ್ಬ ಹರಿದಿನಗಳನ್ನು ಹೆಳವರು ಆಚರಿಸುತ್ತಾರೆ. ಅವುಗಳ ಜೊತೆಯಲ್ಲಿ ‘ಹಿರಿಯರ ಹಬ್ಬ’ ಮತ್ತು ‘ಮಾರಮ್ಮನ ಹಬ್ಬ’ ಗಳನ್ನು ಸಾಂಪ್ರದಾಯಿಕ ರೀತಿಯಲ್ಲಿ ಆಚರಿಸುತ್ತಾರೆ. ಕಾರಹುಣ್ಣಿಮೆ, ನಾಗರಪಂಚಮಿ, ದಸರಾ, ದೀಪಾವಳಿ, ಹೋಳಿ ಮತ್ತು ಯುಗಾದಿ ಇವುಗಳು ಹೆಳವರು ಆಚರಿಸುವ ಪ್ರಮುಖ ಹಬ್ಬಗಳು.

ಜೀವನ ವಿಧಾನ : ಕುಟುಂಬ ವ್ಯವಸ್ತೆ : ಪಿತೃಪ್ರಧಾನ ಕುಟುಂಬ ಪದ್ಧತಿ ಹೆಳವರಲ್ಲಿದೆ. ಮನೆಯ ಆಗು ಹೋಗುಗಳಿಗೆ ಕುಟುಬಂದ ಯಜಮಾನನೇ ಜವಾಬ್ದಾರನಾಗಿರುತ್ತಾನೆ. ಏಕಪತಿತ್ವ ಮತ್ತು ಏಕಪತ್ನಿತ್ವ ಕುಟುಂಬಗಳೇ ಇವರಲ್ಲಿ ಕಾಣಸಿಗುತ್ತವೆ. ಅಲ್ಲಲ್ಲಿ ಬಹುಪತ್ನಿತ್ವ ಪದ್ಧತಿ ಕಂಡುಬರುತ್ತದೆ. ಬಾಲ್ಯವಿವಾಹ ಪದ್ಧತಿಯನ್ನು ಅನುಸರಿಕೊಂಡು ಬಂದಿದ್ದರೂ ಇಂದು ಸಾಕಷ್ಟು ಕಡಿಮೆ ಆಗಿದೆ. ವಿಧವಾ ವಿವಾಹ ಕೆಲವೆಡೆ ಕಾಣಸಿಗುತ್ತದೆ.

ಹೆಳವರಲ್ಲಿ ಕೆಲರಿಗೆ ಚೂರು – ಚೂರು ಭೂಮಿಗಳಿರುವುದರಿಂದ ಬೇಸಾಯದಲ್ಲಿ ನಿರತರಾಗಿದ್ದಾರೆ. ಮತ್ತೆ ಕೆಲವರು ಹೊಲಗದ್ದೆಗಳಲ್ಲಿ ಕೂಲಿ ಕೆಲಸ, ಸಣ್ಣ ಪುಟ್ಟ ಉದ್ಯೋಗವನ್ನು ಆರಂಭಿಸಿದ್ದಾರೆ. ಮತ್ತೆ ಕೆಲವರು ಆಡು, ಕುರಿ, ಕೋಳಿ, ಎಮ್ಮೆ, ಆಕಳು, ಹಂದಿ ಇವುಗಳನ್ನು ಸಾಕಿ ಮಾರಿ ಜೀವನ ನಿರ್ವಹಣೆ ಮಾಡಿಕೊಂಡಿದ್ದಾರೆ.

ಹೆಳವರಲ್ಲಿ ಅನಕ್ಷರಸ್ಥರ ಸಂಖ್ಯೆ ಹೆಚ್ಚು. ಪ್ರತಿಹಟ್ಟಿಗಳಲ್ಲಿ ಕಡ್ಡಾಯ ಶಿಕ್ಷಣಕ್ಕೆ ಒಳಪಡುವ ಇಪ್ಪತ್ತು ಮೂವತ್ತು ಮಕ್ಕಳಿದ್ದರೂ ಅಲ್ಲಿ ಪ್ರಾಥಮಿಕ ಶಾಲೆಗಳ ಸೌಲಭ್ಯ ಇಲ್ಲ. ಇವರು ಗೊಡ್ಡು ಸಾಂಪ್ರದಾಯಗಳಿಗೆ ಅಂಟಿಕೊಂಡವರು, ಯಾವುದಾರೂ ಕಾಯಿಲೆ ಬಂದರೆ ದೇವರ – ದಿಂಡರುಗಳ ಹೆಸರಿನ ಮೇಲೆ ಹರಕೆ ಹೊತ್ತು ಅದಕ್ಕೆ ದುಂದುವೆಚ್ಚ ಮಾಡುತ್ತಾರೆ. ಹಬ್ಬ – ಹರಿದಿನ, ಗ್ರಾಮದೇವತೆಯ ಜಾತ್ರೆ ಇಂತಹ ಸಂದರ್ಭಗಳಲ್ಲಿ ಸಾಲ – ಸೋಲ ಮಾಡಿಯಾದರೂ ಕುರಿ ಮೇಕೆಗಳನ್ನು ಬಲಿಕೊಡುತ್ತಾರೆ. ಇವು ಇವರ ಬಡತನಕ್ಕೆ ಮೂಲ ಕಾರಣ.

ಹೆಳವರಿಗೆ ತಮ್ಮದೇ ಆದ ಕೆಲವು ಸಾಮಾಜಿಕ ಮತ್ತು ಧಾರ್ಮಿಕ ಸಂಪ್ರದಾಯಗಳು ಹಾಗೂ ಸಂಸ್ಕಾರಗಳು ರೂಢಿಯಲ್ಲಿವೆ. ಅವುಗಳನ್ನು ಸಮಾಜದವರೆಲ್ಲರೂ ಕುಡಿಕೊಂಡು ಬಲುಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ಹಟ್ಟಿಯ ಯಜಮಾನ ಆದೇಶದ ಮೇರೆಗೆ ಹಟ್ಟಿಯ ಪ್ರಮುಖ ಕಾರ್ಯಗಳು, ನ್ಯಾಯನಿರ್ಣಯಗಳು ನಡೆಯುತ್ತವೆ.

ಆಹಾರ ವಿಧಾನ : ಹೆಳವರು ಶಾಖಾಹಾರಿ ಮತ್ತು ಮಾಂಸಾಹಾರಿಗಳು. ಮೂಲದಲ್ಲಿ ಮಾಂಸಾಹಾರಾದ ಆಡುಗೆ ಮಾಡುತ್ತಿರಲಿಲ್ಲವಂತೆ ಇವರಲ್ಲಿ ‘ಸಾಧು ಹೆಳವರು’ ಎಂಬ ಪಂಗಡ, ಮಾಂಸ ಮತ್ತು ಹೆಂಡಗಳನ್ನು ಮುಟ್ಟುವುದಿಲ್ಲ. ಅವರು ಅಪ್ಪಟ ಸಸ್ಯಹಾರಿಗಳು.

ಭಾಷೆ : ಆಂಧ್ರ ಪ್ರದೇಶದಿಂದ ಕನ್ನಡನಾಡಿಗೆ ವಲಸೆ ಬಂದಿರುವ ಹೆಳವರ ಮನೆಮಾತು ತೆಲಗು. ಉತ್ತರ ಕರ್ನಾಟಕದ ಕೆಲವು ಹೆಳವರು ಕನ್ನಡ ಭಾಷೆಯನ್ನೇ ತಮ್ಮ ಮನೆಮಾತನ್ನಾಗಿ ರೂಢಿಸಿಕೊಂಡಿದ್ದಾರೆ. ಇವರು ತಮ್ಮ ವೃತ್ತಿಯ ಕಾರಣದಿಂದ ವಿವಿಧ ಭಾಷಾ ಪರಿಸರಕ್ಕೆ ವಲಸೆ ಹೋಗಿ ಹತ್ತಾರು ಕಡೆ ಸುತ್ತಾಡಿ ಅಲ್ಲಲ್ಲಿ ನೆಲಸಿದ ಕಾರಣ ಆಯಾ ಪ್ರದೇಶಗಳ ಭಾಷೆಗಳನ್ನೂ ಕಲಿತಿರುವುದುಂಟು. ಕನ್ನಡ, ಮರಾಠಿ, ಹಿಂದಿ, ಉರ್ದು, ತಮಿಳು ಭಾಷೆಗಳನ್ನು ಆಡುತ್ತಾರೆ. ಗಡಿಪ್ರದೇಶದಲ್ಲಿ ಆ ಭಾಷೆಗಳಲ್ಲಿಯೇ ಕುಲಕೊಂಡಾಡಿ ಜನರ ಮೆಚ್ಚುಗೆ ಪಡೆಯುತ್ತಾರೆ.

ಜನಪದ ಸಾಹಿತ್ಯ : ಹೆಳವರಲ್ಲಿ ಜನಪದ ಸಾಹಿತ್ಯ ಸಮೃದ್ಧವಾಗಿದೆ. ತಮ್ಮ ಕಡತಗಳಲ್ಲಿ ಮತ್ತು ಕಂಠಸ್ಥ ರೂಪದಲ್ಲಿ ಉಳಿಸಿಕೊಂಡು ಬಂದಿರುವುದೇ ಹೆಚ್ಚು ತಮ್ಮ ಗುಂಪಿನ ಕುಲದೆವತೆಗಳಾದ ಉಂಡಾಡ ಗೌಡ, ಬೀರಪ್ಪ, ರೇವಣಸಿದ್ಧ ಅಮೋಘ ಸಿದ್ಧ ಮಾಳಿಂಗರಾಯ ಈ ಪ್ರಮುಖ ದೇವತೆಗಳನ್ನು ಕುರಿತು ಸುದೀರ್ಘವಾಗಿ ತಾಸುಗಟ್ಟಲೆ ಹಾಡುತ್ತಾರೆ. ಮಾತ್ರವಲ್ಲ ಗದ್ಯದಲ್ಲಿಯೂ ಪ್ರಸ್ತಾಪ ಮಾಡುತ್ತಾರೆ.

ಹೆಳವರು ಬಿಡಿ ಹಾಡುಗಳ ಜೊತೆಗೆ ಜನಪದ ಕಾವ್ಯಗಳನ್ನು ಹಾಡುತ್ತಾರೆ. ಆಯಾ ಭಾಗದ ಕೆಲವು ಜನಪ್ರಿಯ ಕಥೆಗಳನ್ನೂ ಆಯಾ ಪ್ರದೇಶದ ದೈವಗಳನ್ನು ಕುರಿತ ಕಥೆಗಳನ್ನು ಇವರು ಹಾಡುತ್ತಾರೆ. ಉತ್ತರ ಕರ್ನಾಟಕದ ಹೆಳವರಿಗೆ ಒಕ್ಕಲು ಮನೆಗಳ ಕುಲಕೊಂಡಾಡುವುದನ್ನು ಬಿಟ್ಟರೆ , ಕಾವ್ಯಗಳನ್ನು ಹಾಡಲಿಕ್ಕೆ ಬರುವುದಿಲ್ಲ. ಕಥೆ, ಗಾದೆ, ಒಗಟು, ಹಾಸ್ಯ ನುಡಿಗಟ್ಟುಗಳನ್ನು ಹೇಳುತ್ತಾರೆ. ದಕ್ಷಿಣ ಕರ್ನಾಟಕದ ಹೆಳವರು ನಂಜುಂಡೇಶ್ವರ, ಮಾದೇಶ್ವರ, ಅಣ್ಣ ತಂಗಿ, ಬಂಜೆಯ ದುಃಖ, ಸ್ಯಾಸಿ ಚಿನ್ನಮ್ಮ, ಚಾಮುಂಡಿ ಮುಂತಾದ ದೇವತೆಗಳ ಮೇಲೆಯೂ ರಸವತ್ತಾಗಿ ಹಾಡಬಲ್ಲರು.

ಹೆಳವರಲ್ಲಿ ಪುರಾಣ, ಐತಿಹ್ಯಗಳು, ಕಾವ್ಯಗಳು ಮಾತ್ರವಲ್ಲದೆ ಅನೇಕ ಜನಪದ ಕಥೆಗಳು ಪ್ರಚಲಿತದಲ್ಲಿವೆ. ಹೆಳವರ ಹೆಂಗಸರು ಮನೆಗೆಲಸ, ವ್ಯವಸಾಯ, ಮದುವೆ, ಹಬ್ಬ ಹರಿದಿನ, ಜಾತ್ರೆ ಉತ್ಸವಗಳಲ್ಲಿ ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಅನೇಕ ಹಾಡುಗಳನ್ನು ಹಾಡುತ್ತಾರೆ. ಶಕುನಗಳಲ್ಲಿ, ಭೂತ ಪಿಶಾಚಿಗಳಲ್ಲಿ ಇವರಿಗೆ ಸಾಕಷ್ಟು ನಂಬಿಕೆ ಇದೆ. ಹೆಳವರಲ್ಲಿ ತಮ್ಮದೇ ಆದ ಕೆಲವು ವಿಧಿನಿಷೇಧಗಳೂ ಆಚರಣೆಗಳೂ ಇವೆ.

ಉಡುಗೆ-ತೊಡುಗೆಗಳು : ಇವರ ದಿನನಿತ್ಯದ ಉಡುಗೆ ಎಂದರೆ ಧೋತರ ಅಥವಾ ಚಲ್ಲಣ, ಉದ್ದನೆಯ ತೋಳಿನ ಅಂಗಿ. ಹೆಗಲ ಮೇಲೊಂದು ಟವಲ್‌ ಇರುತ್ತದೆ. ತಮ್ಮ ಒಕ್ಕಲಿನ ಮನೆಗೆ ಹೋಗುವುದಿದ್ದರೆ ಅಂಗಿ, ಧೋತರ, ತಲೆಗೆ ರುಮಾಲು ಒಕ್ಕಲಿನವರು ಕೊಟ್ಟಿರುವ ಕೋಟು, ಹೆಗಲ ಮೇಲೊಂದು ಶಾಲು ಇರುತ್ತದೆ. ಕೈ ಬೆರಳಲ್ಲಿ ಬೆಳ್ಳಿ ಇಲ್ಲವೆ ತಾಮ್ರದ ಉಂಗುರ, ಕಿವಿಯಲ್ಲಿ ಮುರ, ಕೆಲವರು ಕೊರಳಲ್ಲಿ ಜನಿವಾರ ಹಾಕಿರುತ್ತಾರೆ. ಒಕ್ಕಲು ಮನೆಗೆ ಹೋಗುವಾಗ ಹಣೆಗೆ ವಿಭೂತಿ ಕುಂಕುಮ ಹಚ್ಚಿಕೊಂಡು ಹೋಗುತ್ತಾರೆ. ಕುಲದವರು ಕೊಟ್ಟಿರುವ ಬೆಳ್ಳಿಯ ಕಡಗ ಕೈಯಲ್ಲಿ ಹಾಕಿರುತ್ತಾರೆ. ಮಕ್ಕಳು ಅಂಗಿ, ಚಲ್ಲಣ ತೊಡುತ್ತಾರೆ. ತಲೆಯ ಮೇಲೆ ಟೊಪ್ಪಿಗೆ ಹಾಕಿರುತ್ತಾರೆ. ಮುದುಕರು ತಲೆಗೆ ರುಮಾಲು ಮೈಮೇಲೆ ಅಂಗಿ, ಧೋತರ ತೊಟ್ಟಿರುತ್ತಾರೆ.

ಹೆಂಗಸರ ಬಟ್ಟೆಗಳು ಸಾಮಾನ್ಯವಾಗಿ ಒಕ್ಕಲಿನವರಿಂದ ಪಡೆದು ತಂದವುಗಳೇ ಅಧಿಕ. ಇವರ ಆಭರಣಗಳು ಬೆಳ್ಳಿ – ಹಿತ್ತಾಳೆಯದ್ದೆ ಆಗಿರುತ್ತವೆ. ಸ್ಥಿತಿವಂತರು ಬಂಗಾರದ ಆಭರಣಗಳನ್ನು ಹಾಕುವುದುಂಟು. ಕಿವಿಗಳಲ್ಲಿ ಬುಗುಡಿ, ಜುಮಕಿ, ಕೈತುಂಬ ಬಳೆಗಳು, ಕೊರಳಲ್ಲಿ ಕರಿಮಣಿಸರ, ಕಾಲಲ್ಲಿ ಬೆಳ್ಳಿಯ ಚೈನು, ಕಾಲುಂಗುರ ಇರುತ್ತದೆ. ಮುತ್ತೈದೆಯರು ಕೊರಳಲ್ಲಿ ಕರಿಮಣಿಯಿಂದ ಕೂಡಿರುವ ತಾಳಿಸರ, ಹಣೆಯಲ್ಲಿ ಕುಂಕುಮ; ಕೆನ್ನೆ, ಹಣೆ, ಗದ್ದ ಮತ್ತು ಮುಂಗೈಗಳ ಮೇಲೆ ವಿವಿಧ ವಿನ್ಯಾಸದ ಹಚ್ಚೆ ಹುಯ್ಸಿಕೊಂಡಿರುತ್ತಾರೆ.

ಹಟ್ಟಿಯ ರಚನೆ ಮತ್ತು ವಾಸಿಸುವ ಸ್ಥಳ : ಹೆಳವರು ವಾಸಿಸುವ ಸ್ಥಳಗಳನ್ನು ಹಟ್ಟಿ, ಹುಂಡಿ ಪಾಳ್ಯಗಳೆಂದು ಕರೆಯುತ್ತಾರೆ. ಇವರು ಹಳ್ಳಿ ನಗರಗಳಲ್ಲಿ ವಾಸಿಸುತ್ತಿದ್ದರೂ ಇತರ ಜನಪದ ಗುಂಪುಗಳೊಡನೆ ಕೂಡಿರದೆ ಪ್ರತ್ಯೇಕವಾಗಿಯೇ ಇರುತ್ತಾರೆ.

ಹೆಳವರು ಕರ್ನಾಟಕದ ಹದಿನೆಂಟು ಜಿಲ್ಲೆಗಳಲ್ಲಿ ವಾಸಿಸುತ್ತಿದ್ದಾರೆ. ಮಂಗಳೂರು ಮತ್ತು ಕೊಡಗು ಹೊರತುಪಡಿಸಿದರೆ ವರ್ಸಕ್ಕೊಮ್ಮೆ ಆ ಜಿಲ್ಲೆಗಳಲ್ಲಿಯ ಒಕ್ಕಲು ಮನೆಗಳಿಗೆ ಹೋಗಿಬುರತ್ತಾರೆ.

ಜನಪದ ಆಟಗಳು : ಹೆಳವರಲ್ಲಿ ಹುಡುಗರು ಲಗೋರಿ ಜಿಣಿಪಣಿ, ಗಿಡಬಡಕಿ, ಗೋಟಿ, ಸೂರಮನಿ ಆಟ, ಶಿವನಕುಣಿ ಆಟ, ಸಾದು – ಗೋದು ಆಟ ಮುಂತಾದ ಆಟಗಳನ್ನು ಆಡುತ್ತಾರೆ. ಹುಡುಗಿಯರು ಕೊರವಂಜಿ ಆಟ, ಕುಂಟಪಿಲ್ಲೆ, ಕಣ್ಣಮುಚ್ಚಾಲೆ, ಬಾರಕೋಲ ಬಿಗಿ ಆಟ, ಕುದರಿ ಆಟ, ಕಲ್ಲು ಮುಚ್ಚುವ ಆಟ ಹೀಗೆ ಅನೇಕ ಜನಪದ ಆಟಗಳನ್ನು ಆಡುತ್ತಾರೆ. ಗಂಡ ಹೆಂಡ್ತಿ ಆಟ, ಅಂದೋಲ ಬಂಡೋಲ ಕಾಯಿ ಆಟ, ಬಿಬಿ ಆಟ, ಗುಡಗುಡ ಇವಣಕ್ಕಿ ಆಟ, ಉಪ್ಪುಪ್ಪು ಈ ಕೆಲವು ಜನಪದ ಆಟಗಳನ್ನು ಹುಡುಗರು ಮತ್ತು ಹುಡುಗಿಯರು ಕೂಡಿಯೇ ಆಡುತ್ತಾರೆ.

ಜನಪದ ವೈದ್ಯ : ಹೆಳವರಲ್ಲಿ ಔಷಧಿಯನ್ನು ತಯಾರಿಸಿ ಮಾರುವ ಒಂದು ಪಂಗಡವೇ ಇದೆ. ಇವರಿಗೆ ‘ಮಂಡಲ ಹೆಳವರು’ ಎಂದು ಕರೆಯುತ್ತಾರೆ. ಇವರು ಗಿಡ ಮೂಲಿಕೆ ಔಷಧಿ ತಯಾರಿಸುವಲ್ಲಿ ನಿಪುಣರು. ಈ ಪಂಗಡದ ಹೆಳವರು ಪೇಟೆಗಳಲ್ಲಿ ಸುತ್ತಾಡಿ ಔಷಧಿ ಮಾಡುತ್ತಾರೆ. ಸಣ್ಣ ಪುಟ್ಟ ಕಾಯಿಲೆಗಳಿಗೆ ತಾವೇ ಔಷಧಿ ತಯಾರಿಸಿ ಚಿಕಿತ್ಸೆ ಮಾಡಿಕೊಳ್ಳುತ್ತಾರೆ. ಇವರಲ್ಲಿ ಕೆಲವರು ಪಶುಚಿಕಿತ್ಸೆಯನ್ನು ಮಾಡುತ್ತಾರೆ.

ವಿ. ಎಂ.

 

ಹೊಸಕ್ಕಿ ಹಬ್ಬ ಇದನ್ನೇ ‘ಹುತ್ತರಿ ಹಬ್ಬ’ ಎಂದೂ ಕರೆಯುವುದಿದೆ. ಕೊಡಗು ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ವಾಸಿಸುವ ಮೂಲನಿವಾಸಿಗಳು ಕೊಡವರು. ಅವರು ಆಚರಿಸುವ ಹಬ್ಬಗಳಲ್ಲಿ, ತಲಕಾವೇರಿಯಲ್ಲಿ ತೀರ್ಥೋದ್ಭವ ಆಗುವ ತುಲಾಸಂಕ್ರಮಣದ ಸಂದರ್ಭದಲ್ಲಿ ಆಚರಿಸಲಾಗುವ ‘ಕಾವೇರಿ ಸಂಕ್ರಮಣ’, ನಾಟಿ ಇತ್ಯಾದಿ ಗದ್ದೆ ಕೆಲಸಗಳೆಲ್ಲ ಮುಗಿದ ಮೇಲೆ ಆಯುಧ ಪೂಜೆಯ ಪ್ರತಿರೂಪವೋ ಎಂಬಂತೆ ಆಚರಿಸಲಾಗುವ ‘ಕೈಲ್‌ ಮುಹೂರ್ತ’, ಸುಗ್ಗಿಯ ಸಂಭ್ರಮೋತ್ಸಾಹಗಳ ಆಚರಣೆಯಾದ ‘ಹುತ್ತರಿ ಹಬ್ಬ’ ಇವು ಮುಖ್ಯವಾದುವು. ಇವಲ್ಲದೆ, ಊರ ದೇವರ ಇನ್ನಿತರ ಹಬ್ಬಗಳೂ ಇರುತ್ತವೆ.

ಕೊಡವರ ಮುಖ್ಯ ಹಬ್ಬಗಳಲ್ಲಿ ಒಂದು ‘ಹುತ್ತರಿ ಹಬ್ಬ’. ಹುತ್ತರಿ ಎಂದರೆ ಹೊಸ ಅಕ್ಕಿ ಎಂದು ಅರ್ಥ. ಕೊಡಗಿನ ಇಗ್ಗುತಪ್ಪ ದೇವರು ಕೇರಳದ ಓಣಂ ಹಬ್ಬದ ಹಕ್ಕನ್ನು ತಂದು ಹುತ್ತರಿ ಹಬ್ಬವನ್ನಾಗಿ ಆಚರಿಸುವಂತೆ ಕೊಡವರಿಗೆ ಬೋಧಿಸಿದ ಅಂಶವೂ ಇದೆ. ಕಥೆ ಏನೇ ಇರಲಿ. ಹವಾಮಾನಕ್ಕೆ ತಕ್ಕಂತೆ, ಬತ್ತದ ಫಸಲು ಬರುವು ಕಾಲವು. ಕೇರಳದ ಕರಾವಳಿ ಪ್ರದೇಶಕ್ಕೂ ಕೊಡಗಿನ ಸಾಲು ಮಲೆಗಳ ಪ್ರವೇಶಕ್ಕೂ ಮೂರು ತಿಂಗಳ ಅಂತರ ಬರುವುದರಿಂದ. ಓಣಂ ನಡೆದ ಮೂರು ತಿಂಗಳಿಗೆ ಸರಿಯಾಗಿ ಹುತ್ತರಿ ನಡೆಯುತ್ತದೆ.

ಜ್ಯೇಷ್ಠ-ಆಷಾಡ ಮಾಸದಲ್ಲಿ ಬಿತ್ತಿ ನಾಟಿ ಮಾಡಿದ ಬತ್ತದ ಪೈರು ಕಾರ್ತಿಕ ಮಾಸದಲ್ಲಿ ಕುಯ್ಲಿಗೆ ಬರುತ್ತದೆ. ಕಾರ್ತಿಕ ಮಾಸದ ಕೃತ್ತಿಕಾ-ರೋಹಿಣಿ ಮಹಾನಕ್ಷತ್ರದ ಶುಭದಿನದ ಶುಭ ಮುಹೂರ್ತದಲ್ಲಿ ಹುತ್ತರಿ ಆಚರಿಸಲ್ಪಡುತ್ತದೆ.

ಹಾಗೆ ಗೊತ್ತಾದ ದಿನಕ್ಕೆ ಏಳು ದಿನ ಮುಂಚೆ ‘ಈಡು’ ಪ್ರಾರಂಭವಾಗುತ್ತದೆ. ಹುತ್ತರಿಗೆ ಸಂಬಂಧಿಸಿದ ಆಚರಣೆಗಳನ್ನೂ ಮರೆತು ಹೋಗಿರಬಹುದಾದ ಹುತ್ತರಿಯ ಹಾಡುಗಳನ್ನೂ ಕುಣಿತಗಳನ್ನೂ ಮತ್ತೆ ಚೆನ್ನಾಗಿ ಅಭ್ಯಾಸ ಮಾಡಿಕೊಳ್ಳುವ ಆ ಏಳು ದಿನಗಳ ಅವಧಿಯನ್ನು ‘ಈಡು’ ಎಂದು ಕರೆಯುತ್ತಾರೆ. ಆಯಾ ಊರಿನ ‘ಮಂದ್‌’ನಲ್ಲಿ ಈಡು ನಡೆಯುತ್ತದೆ. ‘ಮಂದ್‌’ ಎಂದರೆ ಊರಿನವರೆಲ್ಲಾ ಕಲೆಯಬಹುದಾದಷ್ಟು ವಿಶಾಲವಾದ ಬಯಲು.

ಮಂದ್‌ನಲ್ಲಿ ಮುಖ್ಯಸ್ಥರು ‘ತಪ್ಪೋಡಕ’ ಕಟ್ಟುತ್ತಾರೆ. ಕಾವೇರಿಯಮ್ಮೆಯೇ ತಾಯಿ, ಇಗ್ಗುತಪ್ಪನೇ ತಂದೆ ಎಂದು ನಂಬಿರುವ ಕೊಡವರು ‘ನಾವು ಹಬ್ಬ ಮಾಡುತ್ತಿದ್ದೇವೆ. ನಮ್ಮಿಂದ ಏನೇ ತಪ್ಪು ಒಪ್ಪು ಘಟಿಸಿದರೂ ವಿಘ್ನವಾಗದಂತೆ, ಹಾನಿಯಾಗದಂತೆ, ನಡೆಸಿಕೊಡಬೇಕು’ ಎಂಬ ಸಾರಾಂಶವುಳ್ಳ ಮಾತುಗಳೊಂದಿಗೆ ಕಾವೇರಿಯಮ್ಮೆ ಇಗ್ಗುತಪ್ಪ ದೇವರುಗಳನ್ನು ಪ್ರಾರ್ಥಿಸಿಕೊಳ್ಳುವ ಕ್ರಿಯೆಯನ್ನು ‘ತಪ್ಪೋಡಕ ಕಟ್ಟುವಿಕೆ’ ಎಂದು ಕರೆಯುತ್ತಾರೆ. ಮುಂಗಡವಾಗಿ ಕ್ಷಮೆ ಕೋರುವ ಒಂದು ರೀತಿಯ ಕ್ರಿಯೆಯಿದು.

ತಪ್ಪೋಡಕ ಕಟ್ಟಿ ಆದ ಮೇಲೆ ‘ಚೆಂಡು ಕುತ್ತಿ’ ನೆಡುತ್ತಾರೆ. ಹಬ್ಬ ಮುಗಿಯುವವರೆಗೆ ಸರ್ವರೂ ಕಟ್ಟುನಿಟ್ಟುಗಳನ್ನು ಪಾಲಿಸಬೇಕೆಂಬ ನಿಯಮದ ಸಂಕೇತವಾಗಿ, ಒಂದು ತುದಿಯಲ್ಲಿ ಕಬ್ಬಿಣದ ಕೊಕ್ಕೆ ಇರುವ ದೊಣ್ಣೆಯನ್ನು ನೆಡುವುದಕ್ಕೆ ‘ಚೆಂಡು ಕುತ್ತಿ’ ಎಂದು ಕರೆಯುತ್ತಾರೆ. ಇಷ್ಟೆಲ್ಲ ಆದ ಮೇಲೆ ಹಾಡು ಕುಣಿತಗಳ ಅಭ್ಯಾಸ ಪ್ರಾರಂಭವಾಗುತ್ತದೆ. ಈ ಸಂದರ್ಭದಲ್ಲಿ ಮನೋರಂಜನೆಗಾಗಿ ಕೊರವ ಕೊರ್ತಿ ಮುಂತಾದ ವಿವಿಧ ವೇಷಗಳನ್ನು ಹಾಕುವುದಿದೆ. ಇದು, ಹುತ್ತಿರಿಗೆ ಮುಂಚಿನ ಏಳೂ ದಿನಗಳಲ್ಲಿ ಕೊಡವರು ಆಚರಿಸುವ ‘ಈಡು’. ಈ ಈಡು ರಾತ್ರಿ ಸುಮಾರು ಎಂಟು ಗಂಟೆಯಿಂದ ಮಧ್ಯರಾತ್ರಿಯವರೆಗೂ ನಡೆಯುತ್ತದೆ.

ಹುತ್ತರಿಗೆ ಒಂದು ದಿನ ಮುಂಚೆ ಇಗ್ಗುತಪ್ಪ ದೇವರ ಗುಡಿಯಲ್ಲಿ ‘ದೇವ್‌ಪೊಳ್ದ್‌’ ಆಚರಿಸುತ್ತಾರೆ. ‘ಪೊಳ್ದ್‌ಕುತ್ತಿ’ ಎಂದು ಬಿದಿರಂಡೆ’ ಬಿದಿರಿನ ಭಾಗದಿಂದ ಮಾಡಿಕೊಳ್ಳುವ ಪಾತ್ರೆ. ಅದರೊಳಕ್ಕೆ ಹಾಲನ್ನು ಹಾಕಿ, ಶಾಸ್ತ್ರಕ್ಕಾಗಿ ಒಂದೆರಡು ಕುಡುಗೋಲಗಳನ್ನು ಇಟ್ಟಿರುತ್ತಾರೆ. ನಾಲ್ಕು ಬಗೆಯ ಎಲೆಗಳು ಹಾಗೂ ಎರಡು ಬಗೆಯ ನಾರುಗಳನ್ನು ಸೇರಿಸಿದ ‘ನೆರೆ’ಯನ್ನು ಮಾಡಿಕೊಳ್ಳುತ್ತಾರೆ. ಈ ವಸ್ತುಗಳ ತಯಾರಿಗಾಗಿ ನಡೆಯುವ ಕಾರ್ಯಾಚರಣೆಯೇ ‘ದೇವ್‌ಪೊಳ್ದ್‌’, ಮರುದಿನದ ಹುತ್ತರಿಗೆ ದೈವಾಂಶಭೂತವಾದ ಪಾವಿತ್ರ್ಯವನ್ನು ಆರೋಪಿಸುವ ಉದ್ದೇಶವು ಈ ‘ದೇನ್‌ಪೊಳ್ದ್‌’ನಲ್ಲಿ ಕಂಡುಬರುತ್ತದೆ.

ದೇನ್‌ಪೊಳ್ದ್‌ನ ಮರುದಿನವೇ ಹುತ್ತರಿ. ಆ ದಿನ ಸಾಯಂಕಾಲ ಮನೆಮಂದಿಯೆಲ್ಲಾ ತಪ್ಪೊಡಕ ಕಟ್ಟಿ ಕಣಕ್ಕೆ ಹೊರಡುತ್ತಾರೆ. ಸಾಮಪ್ರದಾಯಿಕ ಉಡುಪು ತೊಟ್ಟ ಮನೆಯ ಯಜಮಾನನು ಪೊಳ್ದ್‌ಕತ್ತಿಯನ್ನು ಹೆಗಲ ಮೇಲೆ ಇಟ್ಟುಕೊಂಡು ಹೊರಟಾಗ ಇತರರು ಅವನನ್ನು ಅನುಸರಿಸಿ ಹೋಗುತ್ತಾರೆ. ದುಡಿ ಬಾರಿಸುತ್ತಾ. ಬಟ್ಟೆ ಪಾಟ್‌ ಹಾಡಿಕೊಳ್ಳುತ್ತಾ. ಮೇದಕೊಟ್ಟು ಸಮೇತ, ಅವರ ಪ್ರಯಾಣ ಸಾಗುತ್ತದೆ. ‘ಪೊಲಿಪೊಲಿ ದೇವ, ಪೊಲಿಯೇ ಬಾ’ ಎಂದು ಅವರೆಲ್ಲಾ ನಡನಡುವೆ ಘೋಷಣೆ ಹಾಕುತ್ತಾ ಸಾಗುತ್ತಾರೆ.

ಗದ್ದೆ ತಲುಪಿದ ಮೇಲೆ, ಗದ್ದೆಗೆ ಪೂಜೆ ಮಾಡಿ ಪೊಳ್ದ್‌ಕತ್ತಿಯಲ್ಲಿ ಹಾಕಿಟ್ಟಿದ್ದ ಹಾಲನ್ನು ಗದ್ದೆಗೆ ಸುರಿದು, ಮಾಡಿ ತಂದಿದ್ದ ನೆರೆಗಳಲ್ಲಿ ಒಂದನ್ನು ‘ಪೊಲಿ ಪೊಲಿ ದೇವ, ಪೊಲಿಯೇ ಬಾ’ ಎಂದು ಹೇಳುತ್ತಾ ಒಂದು ‘ನಾಟಿ’ಗೆ ಕಟ್ಟುತ್ತಾರೆ. ‘ನಾಟಿ’ ಎಂದರೆ ಪೈರುಗಳ ಗುಚ್ಛ, ತೆಂಡೆ. ಇಷ್ಟಾದ ಮೇಲೆ ನೆರೆ ಕಟ್ಟಿದ ನಾಟಿಯನ್ನು ಬಿಟ್ಟು, ಅಕ್ಕಪಕ್ಕದ ಕೆಲವು ನಾಟಿಗಳನ್ನು ಮೂರು ಐದು ಏಳು ಹೀಗೆ ವಿಷಮ ಸಂಖ್ಯೆಯಲ್ಲಿ ಕುಯ್ದುಕೊಳ್ಳುತ್ತಾರೆ. ಹಾಗೆ ಮೊದಲು ಕುಯ್ಯುವ ನಾಟಿಯನ್ನು ಕದಿರ್ ಕುಯ್ಯುವುದು ಎನ್ನುತ್ತಾರೆ. ‘ಪೊಲಿ ಪೊಲಿ ದೇವ, ಪೊಲಿಯೇ ಬಾ’ ಎಂಬ ಘೋಷಣೆ ನಿರಂತರವಾಗಿ ಸಾಗಿರುತ್ತದೆ. ಈ ಹಂತದಲ್ಲಿ, ಕದಿರ್ ಕುಯ್ಯುವಾಗ ಕೋವಿಯಿಂದ ಆಕಾಶಕ್ಕೆ ಗುಂಡು ಹಾರಿಸಲಾಗುತ್ತದೆ. ಭತ್ತದ ತೆನೆಗಳನ್ನು ಅಲ್ಲಿದ್ದವರಿಗೆಲ್ಲಾ ಹಂಚುತ್ತಾರೆ. ವಿಷಮ ಸಂಖ್ಯೆಯ ನಾಟಿಗಳನ್ನು ಪೊಳ್ದ್‌ಕುತ್ತಿಯೊಳಗೆ ನಿಲ್ಲಿಸಿ ಮನೆಯ ಯಜಮಾನ ಅದನ್ನು ಹೆಗಲ ಮೇಲಿಟ್ಟುಕೊಂಡು ಘೋಷಣೆ ಸಮೇತ ಊರಿನ ಗುಡಿಗೆ ಬುರತ್ತಾರೆ. ಅಲ್ಲಿ ಪೂಜೆ ಆದ ಮೇಲೆ ಮನೆಗೆ ಬರುತ್ತಾರೆ. ಮನೆಯ ತಲೆಬಾಗಿಲಲ್ಲಿ ಹೆಣ್ಣು ಮಕ್ಕಳು ಹಿಡಿದು ನಿಂತಿರುವ ಹಾಲನ್ನು ಕುಡಿದು ಮನೆಯನ್ನು ಪ್ರವೇಶಿಸುತ್ತಾರೆ.

ಮನೆಯನ್ನು ಪ್ರವೇಶಿಸಿ, ಪೊಳ್ಳ್‌ಕುತ್ತಿಯನ್ನೂ ನೆರೆಗುಚ್ಛಗಳನ್ನು ನೆಲ್ಲಕ್ಕಿಯ ಮುಂದೆ ಇಡುತ್ತಾರೆ. ಆಮೇಲೆ ಮನೆಯ ಎಲ್ಲಾ ಮುಖ್ಯ ಭಾಗಗಳಿಗೂ ನೆರೆ ಕಟ್ಟುತ್ತಾರೆ. ಮೊದಲನೆರೆಯ ಅರ್ಪಣೆ ನೆಲ್ಲಕ್ಕಿಗೆ ಮನೆಯ ಮಧ್ಯದ ಪ್ರಧಾನ ಗೋಡಯಮೇಲೆ ಮಾಡಿಕೊಂಡಿರುವ ದೇವರ ಗೂಡನ್ನು ‘ನೆಲ್ಲಕ್ಕಿ’ ಎನ್ನುತ್ತಾರೆ. ಎರಡನೆಯದು ‘ಕನ್ನಿಕಂಬ’ಕ್ಕೆ ಮನೆಗೆ ಆಧಾರ ಸ್ತಂಭವೆನಿಸಿದ ಮುಖ್ಯ ಕಂಬವೇ ಕನ್ನಿಕಂಬ. ಅಲ್ಲಿಂದ, ಅನ್ನದ ಪಾತ್ರೆ, ಭತ್ತದ ಕಣಜ, ಹತ್ತುವ ಏಣಿ, ನುಗ್ಗುವ ಹೆಬ್ಬಾಗಿಲು, ದನದ ಕೊಟ್ಟಿಗೆ ಹಾಗೂ ತಮ್ಮಲ್ಲಿರುವ ಎಲ್ಲಾ ವಾಹನಗಳಿಗು ನೆರೆ ಕಟ್ಟುತ್ತಾರೆ.

ಆಮೇಲೆ, ಪೊಳ್ದ್‌ಕುತ್ತಿಯಲ್ಲಿರುವ ಕದಿರ್ ನ ಗೊನೆಯಿಂದ ಭತ್ತದ ಕಾಳುಗಳನ್ನು ಉದುರಿಸಿಕೊಂಡು, ಸಿಪ್ಪೆ ಸುಲಿದು, ರಾತ್ರಿಯ ಊಟಕ್ಕಾಗಿ ತಯಾರಾಗಿರುವ ಪಾಯಸ ದೊಳಕ್ಕೆ ಆ ಹೊಸ ಅಕ್ಕಿಯ ನಾಲ್ಕಾರು ಕಾಳುಗಳನ್ನು ಹಾಕುತ್ತಾರೆ.

ಸಾಂಪ್ರದಾಯಿಕ ಉಡುಪು ತೊಟ್ಟಮನೆಯ ಯಜಮಾನ ಅಥವಾ ಯಜಮಾನನಿಂದ ಆಜ್ಞಾಪಿತರಾದವರು ‘ಏಳಕ್ಕಿ ಹಿಟ್ಟ’ನ್ನು ಮಾಡುತ್ತಾರೆ. ಬಾಳೆಹಣ್ಣು, ಅಕ್ಕಿಪುಡಿ. ಹಾಗಲಕಾಯಿ, ಬೆಲ್ಲ, ಭತ್ತ, ಏಳು ಚೂರು ಶುಂಠಿ ಮತ್ತು ಶಾಸ್ತ್ರಕ್ಕಾಗಿ ಏಳು ಚೂರು ಕಲ್ಲು – ಇವೇ ಆ ‘ಏಳಕ್ಕಿ’ಗಳು. ಇಷ್ಟನ್ನೂ ಸೇರಿಸಿ ಕೊಚ್ಚಿ ಕುಟ್ಟಿ ಒರಳಲ್ಲಿ ಆಡಿಸಿ ಹಿಟ್ಟು ತಯಾರಾದ ಮೇಲೆ, ನೆಲ್ಲಕ್ಕಿಗೆ ಅದರಿಂದ ನೈವೇದ್ಯಮಾಡಿ ಮೂರು ಆಲದ ಎಲೆಗಳ ಮೇಲೆ ಸ್ವಲ್ಪ ಸ್ವಲ್ಪ ಹಾಕಿ ಮನೆಯ ಸೂರಿಗೆ ಅಂಟಿಸುತ್ತಾರೆ. ಇದು ಆ ಮನೆಯಲ್ಲಿ ಬಾಳಿ ಬದುಕಿ ಕಾಲವಾದ ಹಿರಿಯರಿಗೆ ಏಳಕ್ಕಿ ಹಿಟ್ಟಿನ ಅರ್ಪಣೆ. ಉಳಿದುದನ್ನು ಎಲ್ಲರೂ ಹಂಚಿಕೊಂಡು ತಿನ್ನುತ್ತಾರೆ. ಈ ಎಲ್ಲಾ ಆದ ಮೇಲೆ ಹೊಸ ಅಕ್ಕಿ ಹಾಕಿದ ಪಾಯಸದ ಸೇವನೆಯೊಂದಿಗೆ ಹೊಸಕ್ಕಿ ಹಬ್ಬವು ಮುಗಿಯುತ್ತದೆ. ಅಂದಿನಿಂದ ಯಾವಾಗ ಬೇಕಾದರೂ ಕುಯ್ಲುಗೆಲಸವನ್ನು ಪ್ರಾರಂಭಿಸಬಹುದು.

ಕೆ. ಆರ್.

 

ಹೋಳಿ ಹುಣ್ಣಿಮೆ ಸಾಮಾನ್ಯವಾಗಿ ಭಾರತದ ಎಲ್ಲೆಡೆ ಆಚರಿಸುವ ಹಬ್ಬ. ಫಾಲ್ಗುಣ ಪೌರ್ಣಿಮೆಯಂದು ಬರುವ ಈ ಹಬ್ಬದಲ್ಲಿ ಅಂದು ಚಂದ್ರನನ್ನು ಕಂಡೊಡನೆ ಶಂಖವಾದ್ಯ ಮೊಳಗಿಸಿ, ಸಂತೋಷದಿಂದ ಕಾಮ ಅಥವಾ ಹೋಳಿಯನ್ನು ಸುಡುವುದಕ್ಕಾಗಿ ಕುಳ್ಳು, ಕಟ್ಟಿಗೆ ತರುತ್ತಾರೆ. ಊರ ಕಾಮನೆಂದರೆ ದಲಿತರ ಕೇರಿಯಲ್ಲಿರುವ ಕಾಮನೇ. ಎಲ್ಲರೂ ಹಲಿಗೆ ನುಡಿಸುತ್ತಾ ಅಶ್ಲೀಲವಾದ ಹಾಡನ್ನು ಹಾಡುತ್ತಾ ಗೋಪುರಾಕೃತಿಯಲ್ಲಿ ಒಟ್ಟಿ ದಹನ ಮಾಡುತ್ತಾರೆ. ಅವನಿಗೆ ಚಪ್ಪಲಿ ಏಟುಗಳನ್ನೂ ಹಾಕುತ್ತಾರೆ.

ಕಾಮನಿಗೆ ಬೆಂಕಿ ಹಚ್ಚುವವನು ಊರಗೌಡ. ಮಾದಾರರ ಮನೆಯಿಂದಲೇ ಬೆಂಕಿ ತರಬೇಕು. ಊರಿನ ದಲಿತರೆಲ್ಲ ಕಾಮನನ್ನು ಒಟ್ಟಿಡುವ ಸ್ಥಳದಲ್ಲಿ ಸುತ್ತಲೂ ಕಾವಲುಗಾರರಂತೆ ನಿಂತು ಬೆಂಕಿಯನ್ನು ಯಾರೂ ಕೊಂಡೊಯ್ಯದ ಹಾಗೆ ಕಾಯುತ್ತಿರುತ್ತಾರೆ. ಬೆಂಕಿ ತೆಗೆದುಕೊಂಡು ಹೋಗಲು, ಕಾಮನ ಸುಡಲು ಜನರಿಗೆ ಆತುರ, ನಾಮುಂದು, ತಾಮುಂದು ಎಂದು ಜನ ಮುನ್ನುಗ್ಗುತ್ತಾರೆ. ಆ ಸಮಯದಲ್ಲಿ ಉರಿಯ ಮೇಲೆ ಮಾಸ್ತಿ ಎಂಬ ಹೆಸರಿನಿಂದ ಹೆಣ್ಣು-ಕೋಳಿಗಳನ್ನು ಹಾರಿಸುತ್ತಾರೆ. ಕಬ್ಬಿನ ಗಣಿಕೆಯನ್ನು ಹಾರಿಸುವುದುಂಟು.

ಮಾರನೆಯ ದಿನ ಬೆಳಗ್ಗೆ ಮನೆಯಲ್ಲಿ ಒಲೆಹತ್ತಿಸುವುದು ಕಾಮನನ್ನು ದಹಿಸಿದ ಬೆಂಕಿಯಿಂದಲೇ. ಅಂದು ಕಡಲೆಯನ್ನು ಹುರಿದು ತಿನ್ನುತ್ತಾರೆ. ರಂಗಪಂಚಮಿಯಂದು ಐದು ದಿನಗಳವರೆಗೆ ಹೋಳಿಯಾಡುತ್ತಾರೆ. ಹುಣ್ಣಿಮೆ ದಿನ ಕರಿಯದಿನ ಎಂದು ಬೇಟೆಯಾಡಲು ಹೋಗಿ ಸಂಜೆ ತಮ್ಮ ಬೇಟೆಯನ್ನು ಮೆರವಣಿಗೆಯಲ್ಲಿ ತರುತ್ತಾರೆ. ಉತ್ತರ ಕನ್ನಡದ ಭಾಗಗಳಲ್ಲಿ ಈ ಸಮಯದಲ್ಲಿ ಕುಣಿತವೂ ಉಂಟು. ವಿಘ್ನಗಳನ್ನು ಹೊರಗೆ ಕಳುಹಿಸುವ ಸಂಪ್ರದಾಯವಿದ್ದು, ಊರ ಮುಖಂಡ ಮನೆಯವರು ಹಾಕಿದ ಕಸವನ್ನು ಬಿಚ್ಚುಗತ್ತಿ ಹಿಡಿದು ದಾಟುವ ಸಂಪ್ರದಾಯವಿದೆ. ಕಾಮದಹನಕ್ಕೆ ಸಂಬಂಧಿಸಿದಂತೆ ಪುರಾಣಗಳು ಇರುವ ಕಥೆ ಒಂದಾದರೆ ಜಾನಪದ ಕಥೆಯೇ ಬೇರೆಯಿದೆ. ವಸಂತ ಎಂಬಾತ ಬ್ರಾಹ್ಮಣ ಕುಲದವನು, ಹೋಳಿ ಎನ್ನುವವಳು ಶೂದ್ರ ಕುಲದವಳು. ವಸಂತ ಅವಳನ್ನು ಮೋಹಿಸಿ ಮನೆಯವರ ವಿರೋಧ ಕಟ್ಟಿಕೊಳ್ಳುತ್ತಾನೆ. ಮನೆಯಿಂದ ಸಮಾಜದಿಂದ ಬಹಿಷ್ಕಾರಕ್ಕೆ ಒಳಗಾಗುವ ಇವನನ್ನು ಹಣವಿಲ್ಲವೆಂದು ಹೋಳಿಯೂ ತಿರಸ್ಕರಿಸುತ್ತಾಳೆ. ಅದೇ ಚಿಂತೆಯಿಂದ ವಸಂತ ಸಾಯುತ್ತಾನೆ. ಇವನ ಶವವನ್ನು ಯಾರೂ ಮುಟ್ಟದಿರುವುದರಿಂದ, ಇವನ ಸ್ನೇಹಿತರು ಕಟ್ಟಿಗೆಗಳನ್ನು ಕದ್ದು ತಂದು ಬೆಂಕಿಗಾಗಿ ಹೋಳಿ ಮನೆಗೆ ಹೋಗಿ ಅಲ್ಲಿ ಅವಳನ್ನು ಎತ್ತಿಕೊಂಡು ಬೆಂಕಿಯನ್ನೂ ತರುತ್ತಾರೆ. ಒಂದೇ ಚಿತೆಯಲ್ಲಿ ವಸಂತನನ್ನೂ ಹೋಳಿಯನ್ನೂ ಸುಡುತ್ತಾರೆ.

ಹೋಳಿ ಹುಣ್ಣಿಮೆ – ಕಾಮದಹನ – ಹೋಳಿಹಬ್ಬ – ವಸಂತೋತ್ಸವ ಹೀಗೆ ಹಲವು ಬಗೆಯಲ್ಲಿ ಈ ಹಬ್ಬವನ್ನು ಆಚರಿಸುತ್ತಾರೆ. ಕಾಮನನ್ನು ದಹಿಸುವಂತೆ, ನಮ್ಮ ಮನಸ್ಸಿನ ಕೆಟ್ಟ, ಆಸೆಗಳನ್ನು ದಹಿಸುವುದು ಈ ಹಬ್ಬದ ಮೂಲ ಉದ್ದೇಶ. ಬಯಲಾಟದಲ್ಲಿ ಕಾಮನು ತನ್ನ ತಾಯಿಯನ್ನು ಸಂಭೋಗಿಸುವವ ಎನ್ನುವ ಮಾತು ಕೇಳಿಬರುತ್ತದೆ.

ಈ ದಹನದ ಹಬ್ಬದಲ್ಲಿ ಬರುವಂತಹ ಬೈಗುಳ, ಅಶ್ಲೀಲ ಪದಗಳು ಅನೈತಿಕ ಸಂಬಂಧಗಳ ವಿವರ ಅನಿಷ್ಟವಾದ ಪ್ರದರ್ಶನಗಳಾಗಿವೆ. ಪುರಾಣದ ಕಥೆಗಳಲ್ಲಿ ಬರುವ ಹೋಳಿ ಅಥವಾ ಕಾಮನ ದಹನಗಳು, ಅತಿಲಾಲಸೆ, ಭೋಗ, ಕಾಮುಕತೆಗಳ ವಿನಾಶದ ಪ್ರತಿನಿಧಿಗಳಾಗಿವೆ. ಸಮಾಜದಲ್ಲಿ ಅನಿಷ್ಟ ತೊಲಗಿ ಎಲ್ಲೆಲ್ಲೂ ಶಿಷ್ಟ ಆಚಾರ, ಸಾತ್ವಿಕ ವಿಚಾರಗಳು ಹರಡಿ ಮನಸ್ಸಿಗೆ ಸಂತೋಷ ಉಂಟುಮಾಡಲಿ ಎಂಬ ಆಶಯದೊಂದಿಗೆ, ವಸಂತ ಬಂದರೆ ಗಿಡ-ಮರಗಳ ಚಿಗುರು, ಹೊಸತು ಮನಸ್ಸಿಗೆ ಮುದ ಕಣ್ಣಿಗೆ ತಂಪನ್ನೀಯುವುದು. ಅದರಂತೆ ಒಳ್ಳೆಯ ವಿಚಾರಗಳನ್ನು ಸ್ವಾಗತಿಸೋಣ ಎಂಬ ಆಶಯದಿಂದ ವಸಂತೋತ್ಸವ ಅಥವಾ ಹೋಳಿ ಹುಣ್ಣಿಮೆಯನ್ನು ಆಚರಿಸುತ್ತಾರೆ.

ಸಿ. ಎಸ್‌. ಪಿ.